೦೬

[ಆರನೆಯ ಸರ್ಗ]

ಭಾಗಸೂಚನಾ

ಧನುರ್ಭಂಗ ಮತ್ತು ಸೀತಾಕಲ್ಯಾಣ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ವಿಶ್ವಾಮಿತ್ರೋಥ ತಂ ಪ್ರಾಹ ರಾಘವಂ ಸಹಲಕ್ಷ್ಮಣಮ್ ।
ಗಚ್ಛಾಮೋ ವತ್ಸ ಮಿಥಿಲಾಂ ಜನಕೇನಾಭಿಪಾಲಿತಾಮ್ ॥

(ಶ್ಲೋಕ - 2)

ಮೂಲಮ್

ದೃಷ್ಟ್ವಾ ಕ್ರತುವರಂ ಪಶ್ಚಾದಯೋಧ್ಯಾಂ ಗಂತುಮರ್ಹಸಿ ।
ಇತ್ಯುಕ್ತ್ವಾ ಪ್ರಯಯೌ ಗಂಗಾಮುತ್ತರ್ತುಂ ಸಹರಾಘವಃ ।
ತಸ್ಮಿನ್ಕಾಲೇ ನಾವಿಕೇನ ನಿಷಿದ್ಧೋ ರಘುನಂದನಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಅನಂತರ ವಿಶ್ವಾಮಿತ್ರರು ಲಕ್ಷ್ಮಣ ಸಹಿತ ಶ್ರೀರಾಮನಲ್ಲಿ ಹೇಳಿದರು-ವತ್ಸ! ಈಗ ನಾವು ಜನಕ ಮಹರಾಜನಿಂದ ಪಾಲಿತವಾದ ಮಿಥಿಲಾನಗರಕ್ಕೆ ಹೋಗೋಣ. ಅಲ್ಲಿ ನಡೆಯುವ ಯಜ್ಞೋತ್ಸವವನ್ನು ನೋಡಿ ಕೊಂಡು ಮತ್ತೆ ನೀನು ಅಯೋಧ್ಯೆಗೆ ಹೋಗಬಹುದು. ಹೀಗೆ ಹೇಳಿ ಅವರು ರಘುನಾಥನೊಂದಿಗೆ ಗಂಗೆಯನ್ನು ದಾಟಲು ಗಂಗಾತೀರಕ್ಕೆ ಬಂದಾಗ ನಾವಿಕನು ದೋಣಿಹತ್ತಲು ರಾಮನನ್ನು ತಡೆದನು. ॥1-2॥

(ಶ್ಲೋಕ - 3)

ಮೂಲಮ್ (ವಾಚನಮ್)

ನಾವಿಕ ಉವಾಚ

ಮೂಲಮ್

ಕ್ಷಾಲಯಾಮಿ ತವ ಪಾದಪಂಕಜಂ
ನಾಥ ದಾರುದೃಷದೋಃ ಕಿಮಂತರಮ್ ।
ಮಾನುಷೀಕರಣಚೂರ್ಣಮಸ್ತಿ ತೇ
ಪಾದಯೋರಿತಿ ಕಥಾ ಪ್ರಥೀಯಸೀ ॥

(ಶ್ಲೋಕ - 4)

ಮೂಲಮ್

ಪಾದಾಂಬುಜಂ ತೇ ವಿಮಲಂ ಹಿ ಕೃತ್ವಾ
ಪಶ್ವಾತ್ಪರಂ ತೀರಮಹಂ ನಯಾಮಿ ।
ನೋಚೇತ್ತರೀ ಸದ್ಯುವತೀ ಮಲೇನ
ಸ್ಯಾಚ್ಚೇದ್ವಿಭೋ ವಿದ್ಧಿ ಕುಟುಂಬಹಾನಿಃ ॥

(ಶ್ಲೋಕ - 5)

ಮೂಲಮ್

ಇತ್ಯುಕ್ತ್ವಾ ಕ್ಷಾಲಿತೌ ಪಾದೌ ಪರಂ ತೀರಂ ತತೋ ಗತಾಃ ।
ಕೌಶಿಕೋ ರಘುನಾಥೇನ ಸಹಿತೋ ಮಿಥಿಲಾಂ ಯಯೌ ॥

ಅನುವಾದ

ನಾವಿಕನು ಹೇಳಿದನು — ಒಡೆಯನೇ! ನಿನ್ನ ಚರಣಗಳಲ್ಲಿ ಮನುಷ್ಯನನ್ನಾಗಿಸುವ ಯಾವುದೋ ಚೂರ್ಣವಿದೆ ಯೆಂಬುದು ಪ್ರಸಿದ್ಧವಾಗಿದೆ. (ನೀನು ಈಗ ಕಲ್ಲನ್ನು ಹೆಣ್ಣಾಗಿಸಿದ್ದಿಯಂತೆ) ಕಲ್ಲು ಮರದಲ್ಲಿ ವ್ಯತ್ಯಾಸವೇನಿದೆ? ಕಲ್ಲು ಹೆಣ್ಣಾದಂತೆ ಈ ದೋಣಿಯು ಹೆಣ್ಣಾದರೆ ಎಂಬ ಭಯದಿಂದ ನೀನು ದೋಣಿ ಹತ್ತುವ ಮೊದಲೇ ನಿನ್ನ ಕಾಲನ್ನು ತೊಳೆಯುತ್ತೇನೆ. ಈ ಪ್ರಕಾರ ನಿನ್ನ ಚರಣಗಳನ್ನು ಧೂಳಿಲ್ಲದಂತೆ ಮಾಡಿ ನಾನು ನಿಮ್ಮನ್ನು ಗಂಗೆಯನ್ನು ದಾಟಿಸುವೆ. ಇಲ್ಲದಿದ್ದರೇ ಸ್ವಾಮಿ! ನಿನ್ನ ಚರಣರಜಸ್ಪರ್ಶದಿಂದ ನನ್ನ ದೋಣಿಯು ಸುಂದರ ಯುವತಿಯಾದರೆ ನನ್ನ ಕುಟುಂಬ ನಿರ್ವಹಣೆಯೇ ಕಷ್ಟವಾದೀತು. ಹೀಗೆ ಹೇಳಿ ನಾವಿಕನು ಶ್ರೀರಾಮನ ಚರಣಗಳನ್ನು ತೊಳೆದು ಬಳಿಕ ಗಂಗೆಯನ್ನು ದಾಟಿಸಿದನು. ಅಲ್ಲಿಂದ ರಾಮ-ಲಕ್ಷ್ಮಣರೊಂದಿಗೆ ವಿಶ್ವಾಮಿತ್ರರು ಮಿಥಿಲೆಯತ್ತ ನಡೆದರು. ॥3-5॥

(ಶ್ಲೋಕ - 6)

ಮೂಲಮ್

ವಿದೇಹಸ್ಯ ಪುರಂ ಪ್ರಾತರ್ಋಷಿವಾಟಂ ಸಮಾವಿಶತ್ ।
ಪ್ರಾಪ್ತಂ ಕೌಶಿಕಮಾಕರ್ಣ್ಯ ಜನಕೋಽತಿಮುದಾನ್ವಿತಃ ॥

(ಶ್ಲೋಕ - 7)

ಮೂಲಮ್

ಪೂಜಾದ್ರವ್ಯಾಣಿ ಸಂಗೃಹ್ಯ ಸೋಪಾಧ್ಯಾಯಃ ಸಮಾಯಯೌ ।
ದಂಡವತ್ಪ್ರಣಿಪತ್ಯಾಥ ಪೂಜಯಾಮಾಸ ಕೌಶಿಕಮ್ ॥

ಅನುವಾದ

ಪ್ರಾತಃಕಾಲದಲ್ಲಿ ವಿದೇಹ ನಗರಿಯನ್ನು ತಲುಪಿ ಋಷಿಗಳ ನಿವಾಸಸ್ಥಾನದಲ್ಲಿ ತಂಗಿದರು. ಅದೇ ಸಮಯದಲ್ಲಿ ವಿಶ್ವಾಮಿತ್ರರ ಆಗಮನವನ್ನು ತಿಳಿದ ಜನಕರಾಜನು ತುಂಬಾ ಸಂತೋಷಗೊಂಡು, ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಂಡು ಪುರೋಹಿತರೊಂದಿಗೆ ಅಲ್ಲಿಗೆ ಬಂದನು. ರಾಜನು ದಂಡವತ್ ನಮಸ್ಕಾರ ಮಾಡಿ ಮುನಿಶ್ರೇಷ್ಠರಾದ ವಿಶ್ವಾಮಿತ್ರರನ್ನು ಪೂಜಿಸಿದನು. ॥6-7॥

(ಶ್ಲೋಕ - 8)

ಮೂಲಮ್

ಪಪ್ರಚ್ಛ ರಾಘವೌ ದೃಷ್ಟ್ವಾ ಸರ್ವಲಕ್ಷಣಸಂಯುತೌ ।
ದ್ಯೋತಯಂತೌ ದಿಶಃ ಸರ್ವಾಶ್ಚಂದ್ರಸೂರ್ಯಾವಿವಾಪರೌ ॥

(ಶ್ಲೋಕ - 9)

ಮೂಲಮ್

ಕಸ್ಯೈತೌ ನರಶಾರ್ದೂಲೌ ಪುತೌ ದೇವಸುತೋಪಮೌ ।
ಮನಃ ಪ್ರೀತಿಕರೌ ಮೇಽದ್ಯ ನರನಾರಾಯಣಾವಿವ ॥

ಅನುವಾದ

ಸರ್ವ ಲಕ್ಷಣ ಸಂಪನ್ನರಾದ, ಸಾಕ್ಷಾತ್ ಪ್ರತಿಸೂರ್ಯ-ಚಂದ್ರರಂತೆ ತಮ್ಮ ಕಾಂತಿಯಿಂದ ಹತ್ತು ದಿಕ್ಕುಗಳನ್ನು ಬೆಳಗುತ್ತಿರುವ ರಘುಕುಲ ಕುಮಾರರನ್ನು ನೋಡಿ, ವಿಶ್ವಾಮಿತ್ರರಲ್ಲಿ ಜನಕನು ಕೇಳಿದನು - ಮುನಿವರ್ಯರೇ! ಈ ದೇವ ಪುತ್ರರಿಗೆ ಸಮಾನರಾದ, ಪುರುಷ ಸಿಂಹದಂತಿರುವ, ನರನಾರಾಯಣರಂತೆ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಇವರಿಬ್ಬರು ಯಾರು? ॥8-9॥

(ಶ್ಲೋಕ - 10)

ಮೂಲಮ್

ಪ್ರತ್ಯುವಾಚ ಮುನಿಃ ಪ್ರೀತೋ ಹರ್ಷಯನ್ ಜನಕಂ ತದಾ ।
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಆಗ ಆನಂದಿತರಾದ ಮುನಿವರ ವಿಶ್ವಾಮಿತ್ರರು ಜನಕಮಹಾರಾಜನಿಗೆ ಸಂತೋಷ ಪಡಿಸುತ್ತ ಹೇಳಿದರು- ಇವರಿಬ್ಬರೂ ಸಹೋದರರು ರಾಮ ಮತ್ತು ಲಕ್ಷ್ಮಣರು, ಕೋಸಲ ನರೇಶ ದಶರಥನ ಮಕ್ಕಳು. ॥10॥

(ಶ್ಲೋಕ - 11)

ಮೂಲಮ್

ಮಖಸಂರಕ್ಷಣಾರ್ಥಾಯ ಮಯಾನೀತೌ ಪಿತುಃ ಪುರಾತ್ ।
ಆಗಚ್ಛನ್ ರಾಘವೋ ಮಾರ್ಗೇ ತಾಟಕಾಂ ವಿಶ್ವಘಾತಿನೀಮ್ ॥

(ಶ್ಲೋಕ - 12)

ಮೂಲಮ್

ಶರೇಣೈಕೇನ ಹತವಾನ್ನೋದಿತೋ ಮೇಽತಿವಿಕ್ರಮಃ ।
ತತೋ ಮಮಾಶ್ರಮಂ ಗತ್ವಾ ಮಮ ಯಜ್ಞವಿಹಿಂಸಕಾನ್ ॥

(ಶ್ಲೋಕ - 13)

ಮೂಲಮ್

ಸುಬಾಹು ಪ್ರಮುಖಾನ್ ಹತ್ವಾ ಮಾರೀಚಂ ಸಾಗರೇಽಕ್ಷಿಪತ್ ।
ತತೋ ಗಂಗಾತಟೇ ಪುಣ್ಯೇ ಗೌತಮಸ್ಯಾಶ್ರಮಂ ಶುಭಮ್ ॥

(ಶ್ಲೋಕ - 14)

ಮೂಲಮ್

ಗತ್ವಾ ತತ್ರ ಶಿಲಾರೂಪಾ ಗೌತಮಸ್ಯ ವಧೂಃ ಸ್ಥಿತಾ ।
ಪಾದಪಂಕಜ ಸಂಸ್ಪರ್ಶಾತ್ಕೃತಾ ಮಾನುಷರೂಪಿಣೀ ॥

ಅನುವಾದ

ನಾನು ಇವರನ್ನು ಯಜ್ಞರಕ್ಷಣೆಗಾಗಿ ಅಯೋಧ್ಯೆಯಿಂದ ಕರೆತಂದಿರುವೆ. ದಾರಿಯಲ್ಲಿ ಬರುವಾಗ ನನ್ನ ಪ್ರೇರಣೆಯಿಂದ ಈ ಅತಿ ಪರಾಕ್ರಮಿಯಾದ ರಘುನಾಥನು ಒಂದೇ ಬಾಣದಿಂದ ವಿಶ್ವ ಘಾತಿನಿಯಾದ ತಾಟಕೆಯನ್ನು ಕೊಂದುಬಿಟ್ಟನು. ಬಳಿಕ ನನ್ನ ಆಶ್ರಮಕ್ಕೆ ತಲುಪಿ ನನ್ನ ಯಜ್ಞವನ್ನು ಕೆಡಿಸುತ್ತಿರುವ ಸುಬಾಹು ಮೊದಲಾದ ರಾಕ್ಷಸರನ್ನು ಕೊಂದು, ಮಾರೀಚನನ್ನು ಸಮುದ್ರದಲ್ಲಿ ಎಸೆದುಬಿಟ್ಟನು. ಅನಂತರ ಇವರು ಗಂಗಾತಟದಲ್ಲಿ ಮಹರ್ಷಿ ಗೌತಮರ ಪುಣ್ಯ ಆಶ್ರಮಕ್ಕೆ ಬಂದು ಅಲ್ಲಿ ಶಿಲಾರೂಪದಿಂದ ಇದ್ದ ಗೌತಮ ಪತ್ನೀ ಅಹಲ್ಯೆಯನ್ನು ತನ್ನ ಚರಣ-ಕಮಲಗಳ ಸ್ಪರ್ಶದಿಂದ ಮನುಷ್ಯಳನ್ನಾಗಿಸಿ ಉದ್ಧರಿಸಿದನು. ॥11-14॥

(ಶ್ಲೋಕ - 15)

ಮೂಲಮ್

ದೃಷ್ಟ್ವಾಹಲ್ಯಾಂ ನಮಸ್ಕೃತ್ಯ ತಯಾ ಸಮ್ಯಕ್ಪ್ರಪೂಜಿತಃ ।
ಇದಾನೀಂ ದ್ರಷ್ಟುಕಾಮಸ್ತೇ ಗೃಹೇ ಮಾಹೇಶ್ವರಂ ಧನುಃ ॥

ಅನುವಾದ

ಅಹಲ್ಯೆಯನ್ನು ಕಂಡು ರಾಮನು ಅವಳಿಗೆ ನಮಸ್ಕರಿಸಿ, ಬಳಿಕ ಅವಳಿಂದ ಪೂಜೆಯನ್ನು ಕೈಗೊಂಡು, ಈಗ ನಿನ್ನಲ್ಲಿಗೆ ಶಂಕರನ ಧನುಸ್ಸನ್ನು ನೋಡಲು ಬಂದಿರುವನು. ॥15॥

(ಶ್ಲೋಕ - 16)

ಮೂಲಮ್

ಪೂಜಿತಂ ರಾಜಭಿಃ ಸರ್ವೈರ್ದೃಷ್ಟಮಿತ್ಯನುಶುಶ್ರುವೇ ।
ಅತೋ ದರ್ಶಯ ರಾಜೇಂದ್ರ ಶೈವಂ ಚಾಪಮನುತ್ತಮಮ್ ।
ದೃಷ್ಟ್ವಾಯೋಧ್ಯಾಂ ಜಿಗಮಿಷುಃ ಪಿತರಂ ದ್ರಷ್ಟುವಿಚ್ಛತಿ ॥

ಅನುವಾದ

ನಿನ್ನ ವಂಶೀಯರಿಂದ ಆ ಧನುಷ್ಯದ ಪೂಜೆ ನಡೆಯುತ್ತಿದ್ದು, ಅನೇಕ ರಾಜರು ಅದನ್ನು ನೋಡಿ ಹೆದೆಯೇರಿಸದೆ ಹೋದರೆಂದು ಕೇಳಿದ್ದೇವೆ. ಆದ್ದರಿಂದ ಹೇ ರಾಜೇಂದ್ರ! ನೀನು ಉತ್ತಮವಾದ ಆ ಶೈವ ಧನುಸ್ಸನ್ನು ಇವರಿಗೂ ತೋರಿಸು; ಏಕೆಂದರೆ ಇವರು ಅದನ್ನು ನೋಡಿ ಬೇಗನೇ ಅಯೋಧ್ಯೆಗೆ ಹೋಗಿ ತಮ್ಮ ತಂದೆ-ತಾಯಿ ಯರನ್ನು ನೋಡಲಿಚ್ಛಿಸುತ್ತಾರೆ.॥16॥

(ಶ್ಲೋಕ - 17)

ಮೂಲಮ್

ಇತ್ಯುಕ್ತೋ ಮುನಿನಾ ರಾಜಾ ಪೂಜಾರ್ಹಾವಿತಿ ಪೂಜಯಾ ।
ಪೂಜಯಾಮಾಸ ಧರ್ಮಜ್ಞೋ ವಿಧಿದೃಷ್ಟೇನ ಕರ್ಮಣಾ ॥

ಅನುವಾದ

ಮುನಿಶ್ರೇಷ್ಠರಾದ ವಿಶ್ವಾಮಿತ್ರರು ಹೀಗೆ ಹೇಳಿದಾಗ, ಧರ್ಮಜ್ಞನಾದ ರಾಜಾ ಜನಕನು ರಾಮ-ಲಕ್ಷ್ಮಣರನ್ನು ಪೂಜನೀಯರೆಂದು ತಿಳಿದು ಅವರನ್ನು ವಿಧಿವತ್ತಾಗಿ ಪೂಜಿಸಿದನು.॥17॥

(ಶ್ಲೋಕ - 18)

ಮೂಲಮ್

ತತಃ ಸಂಪ್ರೇಷಯಾಮಾಸ ಮಂತ್ರಿಣಂ ಬುದ್ಧಿಮತ್ತರಮ್ ।

ಮೂಲಮ್ (ವಾಚನಮ್)

ಜನಕ ಉವಾಚ

ಮೂಲಮ್

ಶೀಘ್ರಮಾನಯ ವಿಶ್ವೇಶಚಾಪಂ ರಾಮಾಯ ದರ್ಶಯ ॥

ಅನುವಾದ

ಮತ್ತೆ ತನ್ನ ಬುದ್ಧಿವಂತನಾದ ಮಂತ್ರಿಗೆ ನೀನು ಶೀಘ್ರವಾಗಿ ವಿಶ್ವೇಶ್ವರನ ಧನುಸ್ಸನ್ನು ತಂದು ಶ್ರೀರಾಮನಿಗೆ ತೋರಿಸು ಎಂದು ಹೇಳಿದನು.॥18॥

(ಶ್ಲೋಕ - 19)

ಮೂಲಮ್

ತತೋ ಗತೇ ಮಂತ್ರಿವರೇ ರಾಜಾ ಕೌಶಿಕಮಬ್ರವೀತ್ ।
ಯದಿ ರಾಮೋ ಧನುರ್ಧೃತ್ವಾ ಕೋಟ್ಯಾಮಾರೋಪಯೇದ್ಗುಣಮ್ ॥

(ಶ್ಲೋಕ - 20)

ಮೂಲಮ್

ತದಾ ಮಯಾತ್ಮಜಾ ಸೀತಾ ದೀಯತೇ ರಾಘವಾಯ ಹಿ ।
ತಥೇತಿ ಕೌಶಿಕೋಽಪ್ಯಾಹ ರಾಮಂ ಸಂವೀಕ್ಷ್ಯಸಸ್ಮಿತಮ್ ॥

ಅನುವಾದ

ಮಂತ್ರಿಯು ಹೊರಟು ಹೋದ ಬಳಿಕ ಜನಕನು ಹೇಳಿದನು- ವಿಶ್ವಾಮಿತ್ರರೇ! ಒಂದು ವೇಳೆ ರಾಮನು ಈ ಧನುಸ್ಸನ್ನು ಎತ್ತಿ ಹೆದೆ ಏರಿಸಿದರೆ ನಿಶ್ಚಯವಾಗಿ ನಾನು ನನ್ನ ಮಗಳಾದ ಸೀತೆಯನ್ನು ರಾಮನಿಗೆ ವಿವಾಹಮಾಡಿ ಕೊಡುವೆನು. ಆಗ ವಿಶ್ವಾಮಿತ್ರರು ರಾಮನೆಡೆಗೆ ನೋಡಿ ಮುಗುಳ್ನಕ್ಕು ‘ಹಾಗೆಯೇ ಆಗಲೀ’ ಎಂದು ಹೇಳಿದರು.॥19-20॥

(ಶ್ಲೋಕ - 21)

ಮೂಲಮ್

ಶೀಘ್ರಂ ದರ್ಶಯ ಚಾಪಾಗ್ರ್ಯಂ ರಾಮಾಯಾಮಿತತೇಜಸೇ ।
ಏವಂ ಬ್ರುವತಿ ಮೌನೀಶ ಆಗತಾಶ್ಚಾಪವಾಹಕಾಃ ॥

(ಶ್ಲೋಕ - 22)

ಮೂಲಮ್

ಚಾಪಂ ಗೃಹೀತ್ವಾ ಬಲಿನಃ ಪಂಚಸಾಹಸ್ರಸಂಖ್ಯಕಾಃ ।
ಘಂಟಾಶತಸಮಾಯುಕ್ತಂ ಮಣಿವಜ್ರಾದಿಭೂಷಿತಮ್ ॥

ಅನುವಾದ

‘ಆ ಶ್ರೇಷ್ಠವಾದ ಧನುಸ್ಸನ್ನು ಅಪಾರ ತೇಜಸ್ಸುಳ್ಳ ರಾಮನಿಗೆ ತೋರಿಸು’ ಎಂದು ಮುನಿಗಳು ಹೇಳುವಾಗ, ಬಲಿಷ್ಠರಾದ ಐದು ಸಾವಿರ ಭಟರು ನೂರಾರು ಘಂಟೆಗಳಿಂದ ಕೂಡಿದ, ಮಾಣಿಕ್ಯ ವಜ್ರಾದಿಗಳಿಂದ ಅಲಂಕೃತವಾದ ಶಿವಧನುಸ್ಸನ್ನು ಹೊತ್ತುಕೊಂಡು ಬಂದರು. ॥21-22॥

(ಶ್ಲೋಕ - 23)

ಮೂಲಮ್

ದರ್ಶಯಾಮಾಸ ರಾಮಾಯ ಮಂತ್ರೀ ಮಂತ್ರಯತಾಂ ವರಃ ।
ದೃಷ್ಟ್ವಾ ರಾಮಃ ಪ್ರಹೃಷ್ಟಾತ್ಮಾ ಬದ್ಧ್ವಾ ಪರಿಕರಂ ದೃಢಮ್ ॥

(ಶ್ಲೋಕ - 24)

ಮೂಲಮ್

ಗೃಹೀತ್ವಾ ವಾಮಹಸ್ತೇನ ಲೀಲಯಾ ತೋಲಯನ್ ಧನುಃ ।
ಆರೋಪಯಾಮಾಸ ಗುಣಂ ಪಶ್ಯತ್ಸ್ವಖಿಲರಾಜಸು ॥

ಅನುವಾದ

ಆಗ ಮಂತ್ರಾಲೋಚನೆಯಲ್ಲಿ ಶ್ರೇಷ್ಠನಾದ ಮಂತ್ರಿಯು ಆ ಧನುಸ್ಸನ್ನು ರಾಮನಿಗೆ ತೋರಿಸಿದನು. ಪ್ರಸನ್ನ ಚಿತ್ತನಾದ ರಾಮನು ಆ ಧನುಸ್ಸನ್ನು ನೋಡುತ್ತಲೇ, ಸೊಂಟಕಟ್ಟಿ ಲೀಲಾಜಾಲವಾಗಿ ಎಡಗೈಯಿಂದ ಆ ಧನುವನ್ನು ಎತ್ತಿ ಅಲುಗಾಡಿಸುತ್ತಾ, ಎಲ್ಲ ರಾಜರು ನೋಡುತ್ತಿರುವಂತೆ ಹೆದೆಯೇರಿಸಿದನು.॥23-24॥

(ಶ್ಲೋಕ - 25)

ಮೂಲಮ್

ಈಷದಾಕರ್ಷಯಾಮಾಸ ಪಾಣಿನಾ ದಕ್ಷಿಣೇನ ಸಃ ।
ಬಭಂಜಾಖಿಲಹೃತಸಾರೋ ದಿಶಃ ಶಬ್ದೇನ ಪೂರಯನ್ ॥

ಅನುವಾದ

ಬಳಿಕ ಎಲ್ಲರ ಹೃದಯಾಂತರಾತ್ಮನಾದ ಶ್ರೀರಾಮನು ಅದನ್ನು ತನ್ನ ಬಲ ಕೈಯಿಂದ ಸ್ವಲ್ಪ ಜಗ್ಗಿದನು. ಆಗ ದಶದಿಕ್ಕುಗಳು ಮೊಳಗುವಂತೆ ಶಬ್ದ ಮಾಡುತ್ತಾ ಅದು ಮುರಿದು ಬಿತ್ತು. ॥25॥

(ಶ್ಲೋಕ - 26)

ಮೂಲಮ್

ದಿಶಶ್ಚ ವಿದಿಶಶ್ಚೈವ ಸ್ವರ್ಗಂ ಮರ್ತ್ಯಂ ರಸಾತಲಮ್ ।
ತದದ್ಭುತಮಭೂತ್ತತ್ರ ದೇವಾನಾಂ ದಿವಿ ಪಶ್ಯತಾಮ್ ॥

(ಶ್ಲೋಕ - 27)

ಮೂಲಮ್

ಆಚ್ಛಾದಯಂತಃ ಕುಸುಮೈರ್ದೇವಾಃ ಸ್ತುತಿಭಿರೀಡಿರೇ ।
ದೇವದುಂದುಭಯೋ ನೇದುರ್ನನೃತುಶ್ಚಾಪ್ಸರೋಗಣಾಃ ॥

ಅನುವಾದ

ಆ ಶಬ್ದವು ದಶದಿಕ್ಕುಗಳಲ್ಲಿ, ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿಯೂ ಮೊಳಗಿತು. ಸ್ವರ್ಗದಲ್ಲಿ ನೋಡುತ್ತಿದ್ದ ದೇವತೆಗಳಿಗೆ ಅದೊಂದು ಆಶ್ಚರ್ಯಕರವಾಗಿ ಕಂಡಿತು. ದೇವತೆಗಳೆಲ್ಲರೂ ಹೂಮಳೆಯಿಂದ ರಾಮನನ್ನು ಮುಚ್ಚಿಬಿಟ್ಟರು. ದೇವದುಂದುಭಿಗಳು ಮೊಳಗಿದವು. ದೇವತೆಗಳು ಸ್ತೋತ್ರಗಳನ್ನು ಹಾಡಿದರು. ಅಪ್ಸರೆಯರು ನರ್ತಿಸತೊಡಗಿದರು. ॥26-27॥

(ಶ್ಲೋಕ - 28)

ಮೂಲಮ್

ದ್ವಿಧಾ ಭಗ್ನಂ ಧನುರ್ದೃಷ್ಟ್ವಾ ರಾಜಾಲಿಂಗ್ಯ ರಘೂದ್ವಹಮ್ ।
ವಿಸ್ಮಯಂ ಲೇಭಿರೇ ಸೀತಾಮಾತರೋಽಂತಃ ಪುರಾಜಿರೇ ॥

ಅನುವಾದ

ಧನುಸ್ಸು ಎರಡು ತುಂಡಾದುದನ್ನು ಕಂಡ ಜನಕರಾಜನು ರಾಮನನ್ನು ಅಪ್ಪಿಕೊಂಡು ಆನಂದಿತನಾದನು. ಅಂತಃಪುರ ದಲ್ಲಿರುವ ಸೀತೆಯ ಮಾತೆಯರು ಹರಧನುರ್ಭಂಗದ ಧ್ವನಿಯನ್ನು ಕೇಳಿ ವಿಸ್ಮಯಗೊಂಡರು.॥28॥

(ಶ್ಲೋಕ - 29)

ಮೂಲಮ್

ಸೀತಾ ಸ್ವರ್ಣಮಯೀಂ ಮಾಲಾಂ ಗೃಹೀತ್ವಾ ದಕ್ಷಿಣೇ ಕರೇ ।
ಸ್ಮಿತವಕ್ತ್ರಾ ಸ್ವರ್ಣವರ್ಣಾ ಸರ್ವಾಭರಣಭೂಷಿತಾ ॥

(ಶ್ಲೋಕ - 30)

ಮೂಲಮ್

ಮುಕ್ತಾಹಾರೈಃ ಕರ್ಣಪತ್ರೈಃ ಕ್ವಣಚ್ಚರಣನೂಪುರಾ ।
ದುಕೂಲಪರಿಸಂವೀತಾ ವಸ್ತ್ರಾಂತರ್ವ್ಯಂಜಿತಸ್ತನೀ ॥

ಅನುವಾದ

ಸೀತೆಯು ಸರ್ವಾಲಂಕಾರ ಭೂಷಿತಳಾಗಿ, ಚಿನ್ನದಂತಹ ಹೊಂಬಣ್ಣದಿಂದೊಡಗೂಡಿದ್ದು, ಮುಗುಳ್ನಗುತ್ತ, ಮುತ್ತಿನ ಹಾರಗಳೂ, ಕಿವಿಯೋಲೆ, ಘಲು-ಘಲು ಗೈಯುವ ಕಾಲು ಗೆಜ್ಜೆಗಳು, ರೇಶ್ಮೆಯ ಉತ್ತಮ ಸೀರೆಯನ್ನುಟ್ಟು, ಲೋಕೋತ್ತರ ಸೌಂದರ್ಯವನ್ನು ಎಲ್ಲೆಡೆ ಹರಡುತ್ತಾ ಸ್ವರ್ಣವರ್ಣ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಗೆ ಬಂದಳು. ॥29-30॥

(ಶ್ಲೋಕ - 31)

ಮೂಲಮ್

ರಾಮಸ್ಯೋಪರಿ ನಿಕ್ಷಿಪ್ಯ ಸ್ಮಯಮಾನಾ ಮುದಂ ಯಯೌ ।
ತತೋ ಮುಮುದಿರೇ ಸರ್ವೇ ರಾಜದಾರಾಃ ಸ್ವಲಂಕೃತಮ್ ॥

(ಶ್ಲೋಕ - 32)

ಮೂಲಮ್

ಗವಾಕ್ಷಜಾಲರಂಧ್ರೇಭ್ಯೋ ದೃಷ್ಟ್ವಾ ಲೋಕವಿಮೋಹನಮ್ ।
ತತೋ ಬ್ರವೀನ್ಮುನಿಂ ರಾಜಾ ಸರ್ವಶಾಸ್ತ್ರವಿಶಾರದಃ ॥

ಅನುವಾದ

ಸೀತೆಯು ನಮ್ರತೆಯಿಂದ ಮುಗುಳ್ನಗುತ್ತಾ ಆ ಜಯಮಾಲೆ ಯನ್ನು ಶ್ರೀರಾಮಚಂದ್ರನಿಗೆ ತೊಡಿಸಿ ಸಂತೋಷ ಹೊಂದಿದಳು. ಆ ಸಮಯದಲ್ಲಿ ರಾಜನ ಎಲ್ಲ ರಾಣಿಯರು ಕಿಟಿಕಿಗಳಿಂದ ಸರ್ವಾಲಂಕಾರ ವಿಭೂಷಿತ ಭುವನಮನೋಹರ ಶ್ರೀರಾಮನ ರೂಪವನ್ನು ನೋಡಿ ಆನಂದಿತರಾದರು. ಬಳಿಕ ಸರ್ವಶಾಸ್ತ್ರಜ್ಞ ಮಹಾರಾಜಾ ಜನಕನು ಮುನಿಶ್ರೇಷ್ಠರಾದ ವಿಶ್ವಾಮಿತ್ರರಲ್ಲಿ ಹೀಗೆ ಹೇಳಿದರು. ॥31-32॥

(ಶ್ಲೋಕ - 33)

ಮೂಲಮ್

ಭೋ ಕೌಶಿಕ ಮುನಿಶ್ರೇಷ್ಠ ಪತ್ರಂ ಪ್ರೇಷಯ ಸತ್ವರಮ್ ।
ರಾಜಾ ದಶರಥಃ ಶೀಘ್ರಮಾಗಚ್ಛತು ಸಪುತ್ರಕಃ ॥

(ಶ್ಲೋಕ - 34)

ಮೂಲಮ್

ವಿವಾಹಾರ್ಥಂ ಕುಮಾರಾಣಾಂ ಸದಾರಃ ಸಹಮಂತ್ರಿಭಿಃ ।
ತಥೇತಿ ಪ್ರೇಷಯಾಮಾಸ ದೂತಾಂಸ್ತ್ವರಿತವಿಕ್ರಮಾನ್ ॥

ಅನುವಾದ

ಮಹಾಮುನಿ ಕೌಶಿಕರೇ! ದಶರಥ ಮಹಾರಾಜರು ತನ್ನ ಮಕ್ಕಳ ವಿವಾಹೋತ್ಸವಕ್ಕಾಗಿ ಪುತ್ರರು, ರಾಣಿಯರು, ಮಂತ್ರಿಗಳು, ಮಹರ್ಷಿಗಳೊಂದಿಗೆ ಇಲ್ಲಿಗೆ ಕೂಡಲೇ ಬರಲು ನೀವು ಅವರಿಗೆ ಪತ್ರ ಕಳಿಸಿರಿ. ಆಗ ವಿಶ್ವಾಮಿತ್ರರು ತುಂಬಾ ಒಳ್ಳೆಯದು ಎಂದು ಹೇಳಿ, ಶಿಘ್ರಗಾಮಿ ದೂತರನ್ನು ಕಳಿಸಿದರು.॥33-34॥

(ಶ್ಲೋಕ - 35)

ಮೂಲಮ್

ತೇ ಗತ್ವಾ ರಾಜಶಾರ್ದೂಲಂ ರಾಮಶ್ರೇಯೋ ನ್ಯವೇದಯನ್ ।
ಶ್ರುತ್ವಾ ರಾಮಕೃತಂ ರಾಜಾ ಹರ್ಷೇಣ ಮಹತಾಪ್ಲುತಃ ॥

ಅನುವಾದ

ದೂತರು ರಾಜಶಾರ್ದೂಲ ದಶರಥನ ಬಳಿಗೆ ಬಂದು ರಾಮನ ಶ್ರೇಯಸ್ಸನ್ನೂ, ಮಹತ್ಕಾರ್ಯವನ್ನು ತಿಳಿಸಿದರು. ರಾಮಚಂದ್ರನ ಅದ್ಭುತ ಕಾರ್ಯ ವೃತ್ತಾಂತವನ್ನು ಕೇಳಿ ಮಹಾರಾಜನು ಆನಂದ ಸಾಗರದಲ್ಲಿ ಮುಳುಗಿದನು. ॥35॥

(ಶ್ಲೋಕ - 36)

ಮೂಲಮ್

ಮಿಥಿಲಾಗಮನಾರ್ಥಾಯ ತ್ವರಯಾಮಾಸ ಮಂತ್ರಿಣಃ ।
ಗಚ್ಛಂತು ಮಿಥಿಲಾಂ ಸರ್ವೇ ಗಜಾಶ್ವರಥಪತ್ತಯಃ ॥

(ಶ್ಲೋಕ - 37)

ಮೂಲಮ್

ರಥಮಾನಯ ಮೇ ಶೀಘ್ರಂ ಗಚ್ಛಾಮ್ಯದ್ಯೈವ ಮಾ ಚಿರಮ್ ।
ವಸಿಷ್ಠಸ್ತ್ವಗ್ರತೋ ಯಾತು ಸದಾರಃ ಸಹಿತೋಽಗ್ನಿಭಿಃ ॥

(ಶ್ಲೋಕ - 38)

ಮೂಲಮ್

ರಾಮಮಾತೃಃ ಸಮಾದಾಯ ಮುನಿರ್ಮೇ ಭಗವಾನ್ ಗುರುಃ ।
ಏವಂ ಪ್ರಸ್ಥಾಪ್ಯ ಸಕಲಂ ರಾಜರ್ಷಿರ್ವಿಪುಲಂ ರಥಮ್ ॥

(ಶ್ಲೋಕ - 39)

ಮೂಲಮ್

ಮಹತ್ಯಾ ಸೇನಯಾ ಸಾರ್ಧಮಾರುಹ್ಯ ತ್ವರಿತೋ ಯಯೌ ।
ಆಗತಂ ರಾಘವಂ ಶ್ರುತ್ವಾ ರಾಜಾ ಹರ್ಷಸಮಾಕುಲಃ ॥

(ಶ್ಲೋಕ - 40)

ಮೂಲಮ್

ಪ್ರತ್ಯುಜ್ಜಗಾಮ ಜನಕಃ ಶತಾನಂದಪುರೋಧಸಾ ।
ಯಥೋಕ್ತಪೂಜಯಾ ಪೂಜ್ಯಂ ಪೂಜಯಾಮಾಸ ಸತ್ಕೃತಮ್ ॥

ಅನುವಾದ

ಬಳಿಕ ಮಿಥಿಲೆಗೆ ಹೊರಡಲು ಅವಸರಪಡಿಸುತ್ತ ಮಂತ್ರಿಗಳಲ್ಲಿ ಹೇಳಿದನು- ಆನೆ, ಕುದುರೆ, ರಥ-ಪದಾತಿಗಳೊಂದಿಗೆ ಎಲ್ಲರೂ ಮಿಥಿಲೆಗೆ ಹೊರಡಿರಿ. ನನ್ನ ರಥವನ್ನು ಸಿದ್ಧಗೊಳಿಸಿರಿ, ತಡ ಮಾಡಬೇಡಿ; ನಾನೂ ಇಂದೇ ಹೊರಡುತ್ತೇನೆ. ಅಗ್ನಿಗಳೊಂದಿಗೆ, ಅರುಂಧತಿ ಸಹಿತ ಗುರುಗಳಾದ ಮುನಿಶ್ರೇಷ್ಠ ವಸಿಷ್ಠರು, ರಾಮನ ತಾಯಂದಿರನ್ನು ಕರಕೊಂಡು ಎಲ್ಲರ ಮುಂದೆ ಹೋಗಲೀ. ಈ ಪ್ರಕಾರ ವ್ಯವಸ್ಥೆಗೈದು ಒಂದು ವಿಶಾಲ ರಥದಲ್ಲಿ ಆರೂಢನಾಗಿ ರಾಜರ್ಷಿ ದಶರಥನು ಹಿರಿದಾದ ಪರಿವಾರದೊಂದಿಗೆ ಲಗುಬಗೆಯಿಂದ ಮಿಥಿಲಾ ಪಟ್ಟಣಕ್ಕೆ ಹೊರಟನು. ರಘುಕುಲ ತಿಲಕ ದಶರಥನು ಬಂದಿರುವ ವಾರ್ತೆಯನ್ನು ಕೇಳಿ ಜನಕ ಮಹಾರಾಜನು ಹರ್ಷಾತಿರೇಕದಿಂದ ಪುರೋಹಿತ ಶತಾನಂದರನ್ನು ಮುಂದಿಟ್ಟುಕೊಂಡು ಅವರನ್ನು ಬರಮಾಡಿಕೊಳ್ಳಲು ಹೋದನು. ಪೂಜನೀಯನಾದ ರಾಜನನ್ನು ಯಥೋಚಿತ ಸತ್ಕಾರಗಳಿಂದ ಪೂಜಿಸಿದನು. ॥36-40॥

(ಶ್ಲೋಕ - 41)

ಮೂಲಮ್

ರಾಮಸ್ತು ಲಕ್ಷ್ಮಣೇನಾಶು ವವಂದೇ ಚರಣೌ ಪಿತುಃ ।
ತತೋ ಹೃಷ್ಟೋ ದಶರಥೋ ರಾಮಂ ವಚನಮಬ್ರವೀತ್ ॥

(ಶ್ಲೋಕ - 42)

ಮೂಲಮ್

ದಿಷ್ಟ್ಯಾ ಪಶ್ಯಾಮಿ ತೇ ರಾಮಮುಖಂ ಫುಲ್ಲಾಂಬುಜೋಪಮಮ್ ।
ಮುನೇರನುಗ್ರಹಾತ್ಸರ್ವಂ ಸಂಪನ್ನಂ ಮಮ ಶೋಭನಮ್ ॥

(ಶ್ಲೋಕ - 43)

ಮೂಲಮ್

ಇತ್ಯುಕ್ತ್ವಾಘ್ರಾಯ ಮೂರ್ಧಾನಮಾಲಿಂಗ್ಯ ಚ ಪುನಃ ಪುನಃ ।
ಹರ್ಷೇಣ ಮಹತಾವಿಷ್ಟೋ ಬ್ರಹ್ಮಾನಂದಂ ಗತೋ ಯಥಾ ॥

ಅನುವಾದ

ಅನಂತರ ಲಕ್ಷ್ಮಣನೊಂದಿಗೆ ಶ್ರೀರಾಮನು ತಂದೆಯ ಚರಣಗಳಲ್ಲಿ ವಂದಿಸಿದನು. ಆಗ ದಶರಥನು ರಾಮಾ! ಇಂದು ಪುಣ್ಯವಿಶೇಷದಿಂದ ನಿನ್ನ ಕೆಂದಾವರೆಯಂತೆ ಅರಳಿದ ಮುಖ ಕಮಲವನ್ನು ನಾನು ನೋಡುತ್ತಿದ್ದೇನೆ. ಮುನಿಶ್ರೇಷ್ಠರ ಅನುಗ್ರಹದಿಂದ ನನಗೆ ಎಲ್ಲ ಪ್ರಕಾರದಿಂದ ಮಂಗಳವೇ ಆಯಿತು ಎಂದು ಹೇಳುತ್ತಾ ಅವನು ಪುನಃ ಪುನಃ ರಾಮನನ್ನು ಅಪ್ಪಿಕೊಂಡು, ಶಿರವನ್ನು ಆಘ್ರಾಣಿಸಿ ಬ್ರಹ್ಮಾನಂದವನ್ನು ಪಡೆದವನಂತೆ ಅತಿ ಹರ್ಷದಿಂದ ಮೈಮರೆತನು. ॥41-43॥

(ಶ್ಲೋಕ - 44)

ಮೂಲಮ್

ತತೋ ಜನಕರಾಜೇನ ಮಂದಿರೇ ಸನ್ನಿವೇಶಿತಃ ।
ಶೋಭನೇ ಸರ್ವಭೋಗಾಢ್ಯೇ ಸದಾರಃ ಸಸುತಃ ಸುಖೀ ॥

ಅನುವಾದ

ಅನಂತರ ಮಹಾರಾಜಾ ಜನಕನು ದಶರಥನಿಗೆ ಸರ್ವಭೋಗ ಸಮೃದ್ಧವಾದ ಒಂದು ಪರಮ ಸುಂದರ ಅರಮನೆಯಲ್ಲಿ ಪತ್ನೀ-ಪುತ್ರರೊಂದಿಗೆ ಸುಖವಾಗಿ ಇರಲು ವ್ಯವಸ್ಥೆ ಮಾಡಿದನು. ॥44॥

(ಶ್ಲೋಕ - 45)

ಮೂಲಮ್

ತತಃ ಶುಭೇ ದಿನೇ ಲಗ್ನೇ ಸುಮುಹೂರ್ತೇ ರಘೂತ್ತಮಮ್ ।
ಆನಯಾಮಾಸ ಧರ್ಮಜ್ಞೋ ರಾಮಂ ಸಭ್ರಾತೃಕಂ ತದಾ ॥

(ಶ್ಲೋಕ - 46)

ಮೂಲಮ್

ರತ್ನಸ್ತಂಭಸುವಿಸ್ತಾರೇ ಸುವಿತಾನೇ ಸುತೋರಣೇ ।
ಮಂಡಪೇ ಸರ್ವಶೋಭಾಢ್ಯೇ ಮುಕ್ತಾಪುಷ್ಪಫಲಾನ್ವಿತೇ ॥

(ಶ್ಲೋಕ - 47)

ಮೂಲಮ್

ವೇದವಿದ್ಭಿಃ ಸುಸಂಬಾಧೇ ಬ್ರಾಹ್ಮಣೈಃ ಸ್ವರ್ಣಭೂಷಿತೈಃ ।
ಸುವಾಸಿನೀಭಿಃ ಪರಿತೋ ನಿಷ್ಕಕಂಠೀಭಿರಾವೃತೇ ॥

(ಶ್ಲೋಕ - 48)

ಮೂಲಮ್

ಭೇರಿದುಂದುಭಿನಿರ್ಘೋಷೈರ್ಗೀತನೃತ್ಯೈಃ ಸಮಾಕುಲೇ ।
ದಿವ್ಯರತ್ನಾಂಚಿತೇ ಸ್ವರ್ಣಪೀಠೇ ರಾಮಂ ನ್ಯವೇಶಯತ್ ॥

ಅನುವಾದ

ಬಳಿಕ ಶುಭದಿನ ಸುಮುಹೂರ್ತದಲ್ಲಿ ಒಂದು ಒಳ್ಳೆಯ ಲಗ್ನದಲ್ಲಿ ಧರ್ಮಜ್ಞನಾದ ಜನಕನು ಸಹೋದರರೊಂದಿಗೆ ಶ್ರೀರಾಮನನ್ನು ಕರೆತಂದನು. ರತ್ನಕಂಬಳಿಗಳಿಂದ ಅಲಂಕೃತವಾದ, ವಿಸ್ತಾರವೂ ಅಗಲವೂ ಆದ, ತೋರಣಗಳಿಂದ ಅಲಂಕೃತವಾದ, ಸರ್ವವಿಧ ಕಾಂತಿಯಿಂದೊಡಗೂಡಿದ, ಮುತ್ತುಗಳೂ, ಫಲ ಪುಷ್ಪಾದಿಗಳಿಂದ ಅಲಂಕೃತವಾದ ದಿವ್ಯ ಮಂಟಪದಲ್ಲಿ ವಿರಾಜಮಾನವಾಗಿರುವ ಸ್ವರ್ಣಪೀಠದಲ್ಲಿ ಕುಳ್ಳಿರಿಸಿದನು. ಆ ಪೀಠದ ಸುತ್ತಲೂ ಚಿನ್ನದ ಒಡವೆಗಳಿಂದ ಭೂಷಿತರಾದ ವೇದಜ್ಞರಾದ ಬ್ರಾಹ್ಮಣರೂ, ಚಿನ್ನದ ಕಂಠಾಭರಣಗಳಿಂದ ಅಲಂಕೃತರಾದ ಸುವಾಸಿನಿಯರೂ ನೆರೆದಿದ್ದರು. ಭೇರಿ, ದುಂದುಭಿ ಮೊದಲಾದ ವಾದ್ಯಗಳು ಮೊಳಗುತ್ತಿದ್ದುವು. ಸಂಗೀತ ನೃತ್ಯಗಳೂ ನಡೆಯುತ್ತಿದ್ದುವು. ॥45-48॥

(ಶ್ಲೋಕ - 49)

ಮೂಲಮ್

ವಸಿಷ್ಠಂ ಕೌಶಿಕಂ ಚೈವ ಶತಾನಂದಃ ಪುರೋಹಿತಃ ।
ಯಥಾಕ್ರಮಂ ಪೂಜಯಿತ್ವಾ ರಾಮಸ್ಯೋಭಯಪಾರ್ಶ್ವಯೋಃ ॥

(ಶ್ಲೋಕ - 50)

ಮೂಲಮ್

ಸ್ಥಾಪಯಿತ್ವಾ ಸ ತತ್ರಾಗ್ನಿಂ ಜ್ವಾಲಯಿತ್ವಾ ಯಥಾವಿಧಿ ।
ಸೀತಾಮಾನೀಯ ಶೋಭಾಢ್ಯಾಂ ನಾನಾರತ್ನವಿಭೂಷಿತಾಮ್ ॥

(ಶ್ಲೋಕ - 51)

ಮೂಲಮ್

ಸಭಾರ್ಯೋ ಜನಕಃ ಪ್ರಾಯಾದ್ರಾಮಂ ರಾಜೀವಲೋಚನಮ್ ।
ಪಾದೌ ಪ್ರಕ್ಷಾಲ್ಯ ವಿಧಿವತ್ತದಪೋ ಮೂರ್ಧ್ಯಧಾರಯತ್ ॥

(ಶ್ಲೋಕ - 52)

ಮೂಲಮ್

ಯಾ ಧೃತಾ ಮೂರ್ಧ್ನಿ ಶರ್ವೇಣ ಬ್ರಹ್ಮಣಾ ಮುನಿಭಿಃ ಸದಾ ।
ತತಃ ಸೀತಾಂ ಕರೇ ಧೃತ್ವಾ ಸಾಕ್ಷ ತೋದಕ ಪೂರ್ವಕಮ್ ॥

(ಶ್ಲೋಕ - 53)

ಮೂಲಮ್

ರಾಮಾಯ ಪ್ರದದೌ ಪ್ರೀತ್ಯಾ ಪಾಣಿಗ್ರಹವಿಧಾನತಃ ।
ಸೀತಾ ಕಮಲಪತ್ರಾಕ್ಷೀ ಸ್ವರ್ಣಮುಕ್ತಾದಿಭೂಷಿತಾ ॥

(ಶ್ಲೋಕ - 54)

ಮೂಲಮ್

ದೀಯತೇ ಮೇ ಸುತಾ ತುಭ್ಯಂ ಪ್ರೀತೋ ಭವ ರಘೂತ್ತಮ ।
ಇತಿ ಪ್ರೀತೇನ ಮನಸಾ ಸೀತಾಂ ರಾಮಕರೇಽರ್ಪಯನ್ ॥

(ಶ್ಲೋಕ - 55)

ಮೂಲಮ್

ಮುಮೋದ ಜನಕೋ ಲಕ್ಷ್ಮೀಂ ಕ್ಷೀರಾಬ್ಧಿರಿವ ವಿಷ್ಣವೇ ।
ಊರ್ಮಿಲಾಂ ಚೌರಸೀಂ ಕನ್ಯಾಂ ಲಕ್ಷ್ಮಣಾಯ ದದೌ ಮುದಾ ॥

ಅನುವಾದ

ಪುರೋಹಿತರಾದ ಶತಾನಂದರು ವಸಿಷ್ಠರನ್ನು, ವಿಶ್ವಾಮಿತ್ರರನ್ನು ಪೂಜಿಸಿ ರಾಮನ ಪಕ್ಕದಲ್ಲಿ ಕುಳ್ಳಿರಿಸಿದರು. ಬಳಿಕ ಅಲ್ಲಿಯೇ ಅಗ್ನಿ ಪ್ರತಿಷ್ಠಾಪನೆಗೈದು ಪ್ರಜ್ವಲನ ಮಾಡಿದರು. ಅನಂತರ ಜನಕನು ಪತ್ನಿಯೊಂದಿಗೆ ನಾನಾರತ್ನಗಳಿಂದ ಅಲಂಕೃತಳಾದ, ಕಾಂತಿಯುಕ್ತಳಾದ ಸೀತೆಯನ್ನು ರಾಮನ ಬಳಿಗೆ ಕರೆತಂದನು. ಕಮಲನೇತ್ರನಾದ ಶ್ರೀರಾಮನ ಎರಡೂ ಪಾದಗಳನ್ನು ತೊಳೆದು ಆ ಪವಿತ್ರವಾದ ಜಲವನ್ನು ಶಂಕರ, ಬ್ರಹ್ಮಾದಿಗಳೂ, ಋಷಿಗಳೂ ಸದಾ ಶಿರದಲ್ಲಿ ಧರಿಸುವಂತಹ ಪಾದತೀರ್ಥವನ್ನು ತಾನೂ ಶಿರದಲ್ಲಿ ಧರಿಸಿದನು. ಬಳಿಕ ಸೀತೆಯನ್ನು ಕೈಹಿಡಿದು ಕರೆತಂದು ಅವಳನ್ನು ಮಂತ್ರಾಕ್ಷತೆ ನೀರು ಸಹಿತ ಕನ್ಯಾದಾನಗೈದು ಪಾಣಿಗ್ರಹಣ ವಿಧಾನದಿಂದ ಪ್ರೀತಿಪೂರ್ವಕವಾಗಿ ರಾಮನಿಗೆ ಸಮರ್ಪಿಸಿದನು. -‘ರಘುಶ್ರೇಷ್ಠನೆ! ಕಮಲ ಪತ್ರದಂತೆ ಕಣ್ಣುಳ್ಳ, ಸ್ವರ್ಣ, ಮುತ್ತುಗಳಿಂದ ಭೂಷಿತಳಾದ ನನ್ನ ಮಗಳಾದ ಸೀತೆಯನ್ನು ನಿನಗೆ ಕೊಡುತ್ತಿದ್ದೇನೆ. ಸುಪ್ರೀತನಾಗು’ ಎಂದು ಹೇಳುತ್ತ ತೃಪ್ತನಾದ ಮನಸ್ಸಿನಿಂದ ಸೀತೆಯನ್ನು ಶ್ರೀರಾಮನ ಕರಕಮಲಗಳಲ್ಲಿ ಒಪ್ಪಿಸಿ-ಸಮುದ್ರರಾಜನು ವಿಷ್ಣುವಿಗೆ ಲಕ್ಷ್ಮಿಯನ್ನು ಒಪ್ಪಿಸಿದಾಗ ಆನಂದಗೊಂಡಂತೆ ಜನಕನು ಸಂತೋಷ ಪಟ್ಟನು. ಬಳಿಕ ತನ್ನ ಔರಸಪುತ್ರಿಯಾದ ಊರ್ಮಿಳೆಯನ್ನು ಸಂತೋಷದಿಂದ ಲಕ್ಷ್ಮಣನಿಗೆ ಧಾರೆಯೆರೆದು ಕೊಟ್ಟನು. ॥49-55॥

(ಶ್ಲೋಕ - 56)

ಮೂಲಮ್

ತಥೈವ ಶ್ರುತಕೀರ್ತಿಂ ಚ ಮಾಂಡವೀಂ ಭ್ರಾತೃಕನ್ಯಕೇ ।
ಭರತಾಯ ದದಾವೇಕಾಂ ಶತ್ರುಘ್ನಾಯಾಪರಾಂ ದದೌ ॥

ಅನುವಾದ

ಹಾಗೆಯೇ ತನ್ನ ಸಹೋದರನ ಹೆಣ್ಣು ಮಕ್ಕಳಾದ ಮಾಂಡವೀ ಮತ್ತು ಶ್ರುತಕೀರ್ತಿಯರನ್ನು ಕ್ರಮವಾಗಿ ಭರತನಿಗೂ, ಶತ್ರುಘ್ನನಿಗೂ ಮದುವೆಮಾಡಿ ಕೊಟ್ಟನು.॥56॥

(ಶ್ಲೋಕ - 57)

ಮೂಲಮ್

ಚತ್ವಾರೋ ದಾರಸಂಪನ್ನಾ ಭ್ರಾತರಃ ಶುಭಲಕ್ಷಣಾಃ ।
ವಿರೇಜುಃ ಪ್ರಭಯಾ ಸರ್ವೇ ಲೋಕಪಾಲಾ ಇವಾಪರೇ ॥

ಅನುವಾದ

ಸುಲಕ್ಷಣ ಸಂಪನ್ನರಾದ ನಾಲ್ವರು ಸಹೋದರರು ಪತ್ನಿಯರೊಂದಿಗೆ ಸಾಕ್ಷಾತ್ ಲೋಕಪಾಲಕರಂತೆ ತಮ್ಮ ಕಾಂತಿಯಿಂದ ವಿರಾಜಮಾನರಾಗಿದ್ದರು. ॥57॥

(ಶ್ಲೋಕ - 58)

ಮೂಲಮ್

ತತೋಽಬ್ರವೀದ್ವಸಿಷ್ಠಾಯ ವಿಶ್ವಾಮಿತ್ರಾಯ ಮೈಥಿಲಃ ।
ಜನಕಃ ಸ್ವಸುತೋದಂತಂ ನಾರದೇನಾಭಿಭಾಷಿತಮ್ ॥

ಅನುವಾದ

ಅನಂತರ ಮಿಥಿಲಾಧಿಪತಿ ಜನಕ ಮಹಾರಾಜನು ವಸಿಷ್ಠರಿಗೂ, ವಿಶ್ವಾಮಿತ್ರರಿಗೂ ನಾರದರು ಹೇಳಿದ ತನ್ನ ಮಗಳಾದ ಜಾನಕಿಯ ವೃತ್ತಾಂತವನ್ನು ತಿಳಿಸಿದನು. ॥58॥

(ಶ್ಲೋಕ - 59)

ಮೂಲಮ್

ಯಜ್ಞಭೂಮಿವಿಶುದ್ಧ್ಯರ್ಥಂ ಕರ್ಷತೋ ಲಾಂಗಲೇನ ಮೇ ।
ಸೀತಾಮುಖಾತ್ಸಮುತ್ಪನ್ನಾ ಕನ್ಯಕಾ ಶುಭಲಕ್ಷಣಾ ॥

ಅನುವಾದ

ಋಷಿಗಳೇ-ಒಮ್ಮೆ ನಾನು ಯಜ್ಞಕ್ಕಾಗಿ ಭೂಮಿಯನ್ನು ಶೋಧಿಸುವುದಕ್ಕಾಗಿ (ನೇಗಿಲಿನಿಂದ ಊಳುತ್ತಿರುವಾಗ ನೇಗಿಲಿನ ಅಗ್ರಭಾಗದಲ್ಲಿರುವ ಸೀತೆಯಿಂದ ನೆಗಿಲನ ತುದಿಗೆ ಇರುವ ಕಬ್ಬಿಣದ ಸಲಾಕೆ) ಶುಭಲಕ್ಷಣ ಸಂಪನ್ನಳಾದ ಕನ್ಯೆಯು ಪ್ರಕಟಳಾದಳು. ಅವಳ ಹೆಸರು ಸೀತೆ ಎಂದಾಯಿತು.॥59॥

(ಶ್ಲೋಕ - 60)

ಮೂಲಮ್

ತಾಮದ್ರಾಕ್ಷಮಹಂ ಪ್ರೀತ್ಯಾ ಪುತ್ರಿಕಾಭಾವಭಾವಿತಾಮ್ ।
ಅರ್ಪಿತಾ ಪ್ರಿಯಭಾರ್ಯಾಯೈ ಶರಚ್ಚಂದ್ರನಿಭಾನನಾ ॥

ಅನುವಾದ

ಆಗ ಮಗಳೆಂಬ ಭಾವನೆಯಿಂದ ಪ್ರೀತಿ ಉಂಟಾಗಿ ನಾನು ಶರತ್ಕಾಲದ ಚಂದ್ರನಂತೆ ಕಾಂತಿಯಿಂದ ಕೂಡಿದ ಮುಖವುಳ್ಳ ಈ ಮಗುವನ್ನು ನನ್ನ ಪ್ರಿಯಪತ್ನಿಗೆ ಒಪ್ಪಿಸಿದೆ. ॥60॥

(ಶ್ಲೋಕ - 61)

ಮೂಲಮ್

ಏಕದಾ ನಾರದೋಽಭ್ಯಾಗಾದ್ವಿವಿಕ್ತೇ ಮಯಿ ಸಂಸ್ಥಿತೇ ।
ರಣಯನ್ಮಹತೀಂ ವೀಣಾಂ ಗಾಯನ್ನಾರಾಯಣಂ ವಿಭುಮ್ ॥

ಅನುವಾದ

ಒಂದು ದಿನ ನಾನೊಬ್ಬನೇ ಏಕಾಂತದಲ್ಲಿ ಕುಳಿತಿರುವಾಗ ಮಹತೀ ಎಂಬ ವೀಣೆಯನ್ನು ನುಡಿಸುತ್ತ ಸರ್ವ ವ್ಯಾಪಕ ಶ್ರೀಹರಿಯ ಗುಣಗಾನ ಮಾಡುತ್ತ ನಾರದರು ಬಂದರು.॥61॥

(ಶ್ಲೋಕ - 62)

ಮೂಲಮ್

ಪೂಜಿತಃ ಸುಖಮಾಸೀನೋ ಮಾಮುವಾಚ ಸುಖಾನ್ವಿತಃ ।
ಶೃಣುಷ್ವ ವಚನಂ ಗುಹ್ಯಂ ತವಾಭ್ಯುದಯಕಾರಣಮ್ ॥

ಅನುವಾದ

ನನ್ನಿಂದ ಪೂಜಾದಿ ಸತ್ಕಾರಗಳನ್ನು ಸ್ವೀಕರಿಸಿ ಸುಖಾಸನದಲ್ಲಿ ಆಸೀನರಾಗಿ ಕುಳಿತು ಪ್ರಸನ್ನತೆಯಿಂದ ರಾಜನೇ! ನಿನ್ನ ಶ್ರೇಯಸ್ಸಿಗೆ ಕಾರಣವಾಗಿರುವ ರಹಸ್ಯವಾದ ನನ್ನ ಮಾತನ್ನು ಕೇಳು ಎಂದು ಹೇಳಲು ಉಪಕ್ರಮಿಸಿದರು.॥62॥

(ಶ್ಲೋಕ - 63)

ಮೂಲಮ್

ಪರಮಾತ್ಮಾ ಹೃಷೀಕೇಶೋ ಭಕ್ತಾನುಗ್ರಹ ಕಾಮ್ಯಯಾ ।
ದೇವಕಾರ್ಯಾರ್ಥಸಿದ್ಧ್ಯರ್ಥಂ ರಾವಣಸ್ಯ ವಧಾಯ ಚ ॥

(ಶ್ಲೋಕ - 64)

ಮೂಲಮ್

ಜಾತೋ ರಾಮ ಇತಿ ಖ್ಯಾತೋ ಮಾಯಾಮಾನುಷವೇಷಧೃತ್ ।
ಆಸ್ತೇ ದಾಶರಥಿರ್ಭೂತ್ವಾ ಚತುರ್ಧಾ ಪರಮೇಶ್ವರಃ ॥

ಅನುವಾದ

ಪರಮಾತ್ಮನಾದ ಹೃಷೀಕೇಶನು ದೇವತೆಗಳ ಕಾರ್ಯ ಸಿದ್ಧಿಗಾಗಿ ಹಾಗೂ ರಾವಣನ ವಧೆಗಾಗಿ ಮತ್ತು ಭಕ್ತರ ಉದ್ಧಾರಕ್ಕಾಗಿ ಮಾಯಾಮನುಷ್ಯವೇಷವನ್ನು ಧರಿಸಿ ದಶರಥನ ಪುತ್ರನಾಗಿ ಅವತರಿಸಿ ರಾಮನೆಂಬ ಅಭಿಧಾನದಿಂದ ಪ್ರಖ್ಯಾತನಾಗಿದ್ದಾನೆ. ಆ ಪರಮೇಶ್ವರನು ತನ್ನ ನಾಲ್ಕು ಅಂಶಗಳಿಂದ ದಶರಥನ ಪುತ್ರನಾಗಿ ಅಯೋಧ್ಯೆಯಲ್ಲಿ ಇರುತ್ತಾನೆ. ॥63-64॥

(ಶ್ಲೋಕ - 65)

ಮೂಲಮ್

ಯೋಗಮಾಯಾಪಿ ಸೀತೇತಿ ಜಾತಾ ವೈ ತವ ವೇಶ್ಮನಿ ।
ಅತಸ್ತ್ವಂ ರಾಘವಾಯೈವ ದೇಹಿ ಸೀತಾಂ ಪ್ರಯತ್ನತಃ ॥

(ಶ್ಲೋಕ - 66)

ಮೂಲಮ್

ನಾನ್ಯೇಭ್ಯಃ ಪೂರ್ವಭಾರ್ಯೈಷಾ ರಾಮಸ್ಯ ಪರಮಾತ್ಮನಃ ।
ಇತ್ಯುಕ್ತ್ವಾ ಪ್ರಯಯೌ ದೇವಗತಿಂ ದೇವಮುನಿಸ್ತದಾ ॥

ಅನುವಾದ

ಇತ್ತ ಯೋಗಮಾಯೆಯು ಸೀತೆಯ ರೂಪದಲ್ಲಿ ನಿನ್ನ ಮನೆಯಲ್ಲಿ ಪ್ರಕಟಳಾಗಿರುವಳು. ಆದ್ದರಿಂದ ನೀನು ಪ್ರಯತ್ನ ಪೂರ್ವಕವಾಗಿ ಈ ಸೀತೆಯನ್ನು ಶ್ರೀರಾಮನಿಗೆ ಕೊಡು. ‘ಈಕೆಯಾದರೋ ಪರಮಾತ್ಮನಾದ ಶ್ರೀರಾಮನ ಭಾರ್ಯೆಯೇ ಆಗಿದ್ದಾಳೆ.’ ಹೀಗೆಂದು ಹೇಳಿ ದೇವರ್ಷಿ ನಾರದರು ಆಕಾಶ ಮಾರ್ಗದಿಂದ ಹೊರಟು ಹೋದರು. ॥65-66॥

(ಶ್ಲೋಕ - 67)

ಮೂಲಮ್

ತದಾರಭ್ಯ ಮಯಾ ಸೀತಾ ವಿಷ್ಣೋರ್ಲಕ್ಷ್ಮೀರ್ವಿಭಾವ್ಯತೇ ।
ಕಥಂ ಮಯಾ ರಾಘವಾಯ ದೀಯತೇ ಜಾನಕೀ ಶುಭಾ ॥

(ಶ್ಲೋಕ - 68)

ಮೂಲಮ್

ಇತಿಚಿಂತಾಸಮಾವಿಷ್ಟಃ ಕಾರ್ಯಮೇಕಮಚಿಂತಯಮ್ ।
ಮತ್ಪಿತಾಮಹಗೇಹೇ ತು ನ್ಯಾಸಭೂತಮಿದಂ ಧನುಃ ॥

(ಶ್ಲೋಕ - 69)

ಮೂಲಮ್

ಈಶ್ವರೇಣ ಪುರಾ ಕ್ಷಿಪ್ತಂ ಪುರದಾಹಾದನಂತರಮ್ ।
ಧನುರೇತತ್ಪಣಂ ಕಾರ್ಯಮಿತಿ ಚಿಂತ್ಯ ಕೃತಂ ತಥಾ ॥

(ಶ್ಲೋಕ - 70)

ಮೂಲಮ್

ಸೀತಾಪಾಣಿಗ್ರಹಾರ್ಥಾಯ ಸರ್ವೆಷಾಂ ಮಾನನಾಶನಮ್ ।
ತ್ವತ್ಪ್ರಸಾದಾನ್ಮುನಿಶ್ರೇಷ್ಠ ರಾಮೋ ರಾಜೀವಲೋಚನಃ ॥

(ಶ್ಲೋಕ - 71)

ಮೂಲಮ್

ಆಗತೋಽತ್ರ ಧನುರ್ದ್ರಷ್ಟುಂ ಫಲಿತೋ ಮೇ ಮನೋರಥಃ ।
ಅದ್ಯ ಮೇ ಸಫಲಂ ಜನ್ಮ ರಾಮ ತ್ವಾಂ ಸಹ ಸೀತಯಾ ॥

(ಶ್ಲೋಕ - 72)

ಮೂಲಮ್

ಏಕಾಸನಸ್ಥಂ ಪಶ್ಯಾಮಿ ಭ್ರಾಜಮಾನಂ ರವಿಂ ಯಥಾ ।
ತ್ವತ್ಪಾದಾಂಬುಧರೋ ಬ್ರಹ್ಮಾ ಸೃಷ್ಟಿಚಕ್ರಪ್ರವರ್ತಕಃ ॥

(ಶ್ಲೋಕ - 73)

ಮೂಲಮ್

ಬಲಿಸ್ತ್ವತ್ಪಾದಸಲಿಲಂ ಧೃತ್ವಾಭೂದ್ದಿವಿಜಾಧಿಪಃ ।
ತ್ವತ್ಪಾದಪಾಂಸುಸಂಸ್ಪರ್ಶಾದಹಲ್ಯಾ ಭರ್ತೃಶಾಪತಃ ॥

(ಶ್ಲೋಕ - 74)

ಮೂಲಮ್

ಸದ್ಯ ಏವ ವಿನಿರ್ಮುಕ್ತಾ ಕೋಽನ್ಯಸ್ತ್ವತ್ತೋಽಧಿರಕ್ಷಿತಾ ॥

ಅನುವಾದ

ಅಂದಿನಿಂದಲೂ ನಾನು ಈ ಸೀತೆಯನ್ನು ಭಗವಾನ್ ವಿಷ್ಣುವಿನ ಪತ್ನಿಯೆಂದೇ ಭಾವಿಸಿದ್ದೆನು. ಆದರೆ ಶುಭಲಕ್ಷಣಳಾದ ಜಾನಕಿಯನ್ನು ರಘುನಾಥನಿಗೆ ಹೇಗೆ ಕೊಡುವುದು ಎಂದು ಚಿಂತಾಕುಲನಾಗಿ ಒಂದು ಉಪಾಯವನ್ನು ಆಲೋಚಿಸಿದೆ. ನನ್ನ ಅಜ್ಜನ ಮನೆಯಲ್ಲಿ ಹಿಂದೆ ತ್ರಿಪುರಾಸುರನ ಸಂಹಾರದ ಬಳಿಕ ಪರಮೇಶ್ವರನು ಇರಿಸಿದ್ದ ಈ ಧನುಸ್ಸು ಇತ್ತು. ಸೀತೆಯ ಪಾಣಿಗ್ರಹಣಕ್ಕೆ ಎಲ್ಲರ ಗರ್ವನಾಶಕ ಈ ಧನುಸ್ಸನ್ನೇ ಪಣವಾಗಿ ಇರಿಸುವುದು ಎಂದು ಯೋಚಿಸಿ ಹಾಗೇ ಮಾಡಿದೆನು. ಹೇ ಮುನಿಶ್ರೇಷ್ಠರೇ! ನಿಮ್ಮ ಅನುಗ್ರಹದಿಂದ ಕಮಲನಯನ ಶ್ರೀರಾಮನು ಧನುಸ್ಸನ್ನು ನೋಡಲು ಇಲ್ಲಿಗೆ ಬಂದನು. ಇದರಿಂದ ನನ್ನ ಮನೋರಥವು ನೆರೆವೇರಿತು. ಹೇ ರಾಮಾ! ಇಂದು ನನ್ನ ಜನ್ಮವು ಸಾರ್ಥಕವಾಯಿತು. ಏಕೆಂದರೆ ಸೀತೆಯೊಡನೆ ಒಂದೇ ಪೀಠದಲ್ಲಿ ಕುಳಿತಿರುವ, ಹಾಗೂ ಹೊಳೆಯುತ್ತಿರುವ ಸೂರ್ಯನಂತಿರುವ ನಿನ್ನನ್ನು ನೋಡುತ್ತಿದ್ದೇನೆ. ನಿನ್ನ ಪಾದೋದಕವನ್ನು ಶಿರದಲ್ಲಿ ಧರಿಸಿಯೇ ಬ್ರಹ್ಮನು ಸೃಷ್ಟಿ ಕಾರ್ಯವನ್ನು ನೇರವೇರಿಸುತ್ತಿದ್ದಾನೆ. ಬಲಿರಾಜನು ನಿನ್ನ ಪಾದ ಜಲ ಮಹಿಮೆಯಿಂದಲೇ ಇಂದ್ರಪದವನ್ನು ಪಡೆದುಕೊಂಡನು. ನಿನ್ನ ಪಾದಧೂಳಿಯು ಸೊಂಕಿದ್ದರಿಂದ ಅಹಲ್ಯೆಯ ತನ್ನ ಪತಿಯ ಶಾಪದಿಂದ ಮುಕ್ತಳಾದಳು. ಇನ್ನು ನಿನಗಿಂತಲೂ ಮಿಗಿಲಾದ ರಕ್ಷಕರು ನಮಗೆ ಬೇರೆ ಯಾರಿದ್ದಾರೆ? ॥67-74॥

(ಶ್ಲೋಕ - 75)

ಮೂಲಮ್

ಯತ್ಪಾದ ಪಂಕಜಪರಾಗಸುರಾಗಯೋಗಿ-
ವೃಂದೈರ್ಜಿತಂ ಭವಭಯಂ ಜಿತಕಾಲಚಕ್ರೈಃ ।
ಯನ್ನಾಮಕೀರ್ತನಪರಾ ಜಿತದುಃಖಶೋಕಾ
ದೇವಾಸ್ತಮೇವ ಶರಣಂ ಸತತಂ ಪ್ರಪದ್ಯೇ ॥

ಅನುವಾದ

ಯಾರ ಚರಣ ಕಮಲಗಳ ಪರಾಗದಲ್ಲಿ ಆಸಕ್ತರಾದ, ಕಾಲಗತಿಯನ್ನು ಗೆದ್ದಿರುವ ಯೋಗಿಗಳ ಸಮೂಹವು ಸಂಸಾರ ಭಯವನ್ನು ಗೆದ್ದುಕೊಂಡಿರುವರೋ, ಹಾಗೂ ದೇವತೆಗಳೂ ಯಾರ ನಾಮಕೀರ್ತನೆಯಲ್ಲಿ ತೊಡಗಿದ್ದು ದುಃಖ ಶೋಕಗಳನ್ನು ಗೆದ್ದುಕೊಂಡಿರುವರೋ ಅಂತಹ ನಿನ್ನನ್ನೇ ನಾನು ಯಾವಾಗಲೂ ಶರಣು ಹೋಗುತ್ತೇನೆ. ॥75॥

(ಶ್ಲೋಕ - 76)

ಮೂಲಮ್

ಇತಿ ಸ್ತುತ್ವಾ ನೃಪಃ ಪ್ರಾದಾದ್ರಾಘವಾಯ ಮಹಾತ್ಮನೇ ।
ದೀನಾರಾಣಾಂ ಕೋಟಿಶತಂ ರಥಾನಾಮಯುತಂ ತದಾ ॥

(ಶ್ಲೋಕ - 77)

ಮೂಲಮ್

ಅಶ್ವಾನಾಂ ನಿಯುತಂ ಪ್ರಾದಾದ್ಗಜಾನಾಂ ಷಟ್ ಶತಂ ತಥಾ ।
ಪತ್ತೀನಾಂ ಲಕ್ಷಮೇಕಂ ತು ದಾಸೀನಾಂ ತ್ರಿಶತಂ ದದೌ ॥

(ಶ್ಲೋಕ - 78)

ಮೂಲಮ್

ದಿವ್ಯಾಂಬರಾಣಿ ಹಾರಾಂಶ್ಚ ಮುಕ್ತಾರತ್ನಮಯೋಜ್ಜ್ವಲಾನ್ ।
ಸೀತಾಯೈ ಜನಕಃ ಪ್ರಾದಾತ್ಪ್ರೀತ್ಯಾ ದುಹಿತೃವತ್ಸಲಃ ॥

ಅನುವಾದ

ಹೀಗೆ ಸ್ತೋತ್ರಮಾಡಿ ಮಹಾರಾಜಾ ಜನಕನು ಮಹಾತ್ಮನಾದ ರಾಘವನಿಗೆ ಶತಕೋಟಿ ಸಂಖ್ಯೆಯ ಸುವರ್ಣನಾಣ್ಯಗಳನ್ನೂ, ಹತ್ತು ಸಾವಿರ ರಥಗಳನ್ನು, ಹತ್ತು ಲಕ್ಷ ಕುದುರೆಗಳನ್ನೂ, ಆರುನೂರು ಆನೆಗಳನ್ನು ಒಂದು ಲಕ್ಷ ಪದಾತಿಯನ್ನು ಕೊಟ್ಟನು. ಹಾಗೆಯೇ ಮಗಳಲ್ಲಿ ಪ್ರೇಮವುಳ್ಳ ಜನಕನು ಸೀತಾದೇವಿಗೆ ದಿವ್ಯವಾದ ವಸಗಳನ್ನು, ಮುತ್ತು ರತ್ನಗಳಿಂದ ಹೊಳೆಯುತ್ತಿರುವ ಆಭರಣಗಳನ್ನು ಮುನ್ನೂರು ಜನ ದಾಸಿಯರನ್ನೂ ಸಂತೋಷದಿಂದ ಕೊಟ್ಟನು. ॥76-78॥

(ಶ್ಲೋಕ - 79)

ಮೂಲಮ್

ವಸಿಷ್ಠಾದೀನ್ಸುಸಂಪೂಜ್ಯ ಭರತಂ ಲಕ್ಷ್ಮಣಂ ತಥಾ ।
ಪೂಜಯಿತ್ವಾ ಯಥಾನ್ಯಾಯಂ ತಥಾ ದಶರಥಂ ನೃಪಮ್ ॥

(ಶ್ಲೋಕ - 80)

ಮೂಲಮ್

ಪ್ರಸ್ಥಾಪಯಾಮಾಸ ನೃಪೋ ರಾಜಾನಂ ರಘುಸತ್ತಮಮ್ ।
ಸೀತಾಮಾಲಿಂಗ್ಯ ರುದತೀಂ ಮಾತರಃ ಸಾಶ್ರುಲೋಚನಾಃ ॥

(ಶ್ಲೋಕ - 81)

ಮೂಲಮ್

ಶ್ವಶ್ರೂಶುಶ್ರೂಷಣಪರಾ ನಿತ್ಯಂ ರಾಮಮನುವ್ರತಾ ।
ಪಾತಿವ್ರತ್ಯಮುಪಾಲಂಬ್ಯ ತಿಷ್ಠ ವತ್ಸೇ ಯಥಾಸುಖಮ್ ॥

ಅನುವಾದ

ಅನಂತರ ವಸಿಷ್ಠಾದಿಗಳನ್ನು ಚೆನ್ನಾಗಿ ಪೂಜಿಸಿ, ಭರತ, ಲಕ್ಷ್ಮಣ, ಶತ್ರುಘ್ನರನ್ನು ಮತ್ತು ದಶರಥನನ್ನು ಧನಾದಿಗಳಿಂದ ಯಥೋಚಿತವಾಗಿ ಸತ್ಕರಿಸಿ ದಶರಥರನನ್ನು ಬಿಳ್ಕೊಟ್ಟನು. ಬಳಿಕ ಅಳುತ್ತಿರುವ ಸೀತೆಯನ್ನು ಕಣ್ಣೀರಿನಿಂದ ಕೂಡಿದ ತಾಯಂದಿರು ಆಲಿಂಗಿಸಿಕೊಂಡು ‘ಮಗಳೇ! ನೀನು ಅತ್ತೆ ಮಾವಂದಿರ ಸೇವೆಯನ್ನು ಮಾಡುತ್ತಾ, ಯಾವಾಗಲೂ ಶ್ರೀರಾಮನನ್ನೇ ಅನುಸರಿಸಿಕೊಂಡಿರು. ಪಾತಿವ್ರತ್ಯ ಧರ್ಮವನ್ನು ಆಶ್ರಯಿಸಿ ಸುಖವಾಗಿ ಬಾಳು,’ ಎಂದು ಹರಸಿದರು. ॥79-81॥

(ಶ್ಲೋಕ - 82)

ಮೂಲಮ್

ಪ್ರಯಾಣಕಾಲೇ ರಘುನಂದನಸ್ಯ
ಭೇರೀ ಮೃದಂಗಾನಕತೂರ್ಯಘೋಷಃ ।
ಸ್ವರ್ವಾಸಿಭೇರೀಘನತೂರ್ಯಶಬ್ದೈಃ
ಸಂಮೂರ್ಚ್ಛಿತೋ ಭೂತಭಯಂಕರೋಽಭೂತ್ ॥

ಅನುವಾದ

ಶ್ರೀರಾಮನ ಪ್ರಯಾಣಕಾಲದಲ್ಲಿ ಭೇರಿ, ನಗಾರಿ, ಮೃದಂಗ, ಕೊಂಬು, ಕಹಳೆ ಮುಂತಾದವುಗಳ ಶಬ್ದದ ಜೊತೆಗೆ, ದೇವಲೋಕದಲ್ಲಿ ದೇವತೆಗಳು ನುಡಿಸುತ್ತಿದ್ದ ಭೇರಿ, ನಗಾರಿ ಮುಂತಾದವುಗಳ ಧ್ವನಿಗಳು ಒಂದುಗೂಡಿ ಪ್ರಾಣಿಗಳಲ್ಲಿ ಭಯವನ್ನುಂಟುಮಾಡುವಷ್ಟರವರೆಗೆ ತೀವ್ರವಾಗಿ ವ್ಯಾಪಿಸಿತು. ॥82॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ಷಷ್ಠಃ ಸರ್ಗಃ ॥6॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.