[ಐದನೆಯ ಸರ್ಗ]
ಭಾಗಸೂಚನಾ
ಮಾರೀಚ ಮತ್ತು ಸುಬಾಹುಗಳ ದಮನ ಹಾಗೂ ಅಹಲ್ಯೋದ್ಧಾರ
1
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ತತ್ರ ಕಾಮಾಶ್ರಮೇ ರಮ್ಯೇ ಕಾನನೇ ಮುನಿಸಂಕುಲೇ ।
ಉಷಿತ್ವಾ ರಜನೀಮೇಕಾಂ ಪ್ರಭಾತೇ ಪ್ರಸ್ಥಿತಾಃ ಶನೈಃ ॥
ಅನುವಾದ
ಶ್ರೀಮಹಾದೇವನು ಇಂತೆಂದನು — ಎಲೈ ಪಾರ್ವತಿ! ಬಳಿಕ ವಿಶ್ವಾಮಿತ್ರರೊಂದಿಗೆ ರಾಮ-ಲಕ್ಷ್ಮಣರು ಮುನಿಗಳಿಂದ ತುಂಬಿದ ರಮ್ಯವಾದ ಕಾಮಾಶ್ರಮವೆಂಬ ಕಾಡಿನಲ್ಲಿ ಅಂದಿನ ರಾತ್ರಿಯನ್ನು ಕಳೆದು, ಬೆಳಿಗ್ಗೆ ಬೇಗನೇ ಎದ್ದು ನಿಧಾನವಾಗಿ ಮುಂದಕ್ಕೆ ಹೊರಟರು.॥1॥
2
ಮೂಲಮ್
ಸಿದ್ಧಾಶ್ರಮಂ ಗತಾಃ ಸರ್ವೇ ಸಿದ್ಧಚಾರಣಸೇವಿತಮ್ ।
ವಿಶ್ವಾಮಿತ್ರೇಣ ಸಂದಿಷ್ಟಾ ಮುನಯಸ್ತನ್ನಿವಾಸಿನಃ ॥
3
ಮೂಲಮ್
ಪೂಜಾಂ ಚ ಮಹತೀಂ ಚಕ್ರೂ ರಾಮಲಕ್ಷ್ಮಣಯೊರ್ದ್ರುತಮ್ ।
ಶ್ರೀರಾಮಃ ಕೌಶಿಕಂ ಪ್ರಾಹ ಮುನೇ ದೀಕ್ಷಾಂ ಪ್ರವಿಶ್ಯತಾಮ್ ॥
(ಶ್ಲೋಕ - 4)
ಮೂಲಮ್
ದರ್ಶಯಸ್ವ ಮಹಾಭಾಗ ಕುತಸ್ತೌ ರಾಕ್ಷಸಾಧಮೌ ।
ತಥೇತ್ಯುಕ್ತ್ವಾಮುನಿರ್ಯಷ್ಟು ಮಾರೇಭೇ ಮುನಿಭಿಃ ಸಹ ॥
ಅನುವಾದ
ಅವರೆಲ್ಲರೂ ಸಿದ್ಧ-ಚಾರಣರಿಂದ ಸೇವಿತವಾದ ಸಿದ್ಧಾಶ್ರಮಕ್ಕೆ ಬಂದರು. ಅಲ್ಲಿ ವಾಸಿಸುತ್ತಿರುವ ಮುನಿಗಳು ವಿಶ್ವಾಮಿತ್ರರ ಅಪ್ಪಣೆಯಂತೆ ಲಗುಬಗೆಯಿಂದ ರಾಮ-ಲಕ್ಷ್ಮಣರನ್ನು ತುಂಬಾ ಸತ್ಕರಿಸಿದರು. ಅನಂತರ ಶ್ರೀರಾಮನು ವಿಶ್ವಾಮಿತ್ರರಿಗೆ ಮುನಿಗಳೇ! ‘ನೀವು ದೀಕ್ಷಾ ಬದ್ಧರಾಗಿರಿ’ ಎಂದು ಹೇಳಿದನು. ಮಹಾನುಭಾವರೇ! ಆ ರಾಕ್ಷಸಾಧಮರು ಎಲ್ಲಿದ್ದಾರೆ ಎಂದು ತೋರಿಸಿರಿ; ಎಂದಾಗ ಮುನಿವರರಾದ ವಿಶ್ವಾಮಿತ್ರರು ಹಾಗೆಯೇ ಆಗಲೆಂದು ಉಳಿದ ಮುನಿಗಳೊಡಗೂಡಿ ಯಜ್ಞಮಾಡಲಾರಂಭಿಸಿದರು. ॥2-4॥
(ಶ್ಲೋಕ - 5)
ಮೂಲಮ್
ಮಧ್ಯಾಹ್ನೇ ದದೃಶಾತೇ ತೌ ರಾಕ್ಷಸೌ ಕಾಮರೂಪಿಣೌ ।
ಮಾರೀಚಶ್ಚ ಸುಬಾಹುಶ್ಚ ವರ್ಷಂತೌ ರುಧಿರಾಸ್ಥಿನೀ ॥
ಅನುವಾದ
ಮಧ್ಯಾಹ್ನದ ಸಮಯ ರಕ್ತ ಮೂಳೆಗಳನ್ನು ಸುರಿಸುತ್ತಿರುವ ಮಾರೀಚ ಮತ್ತು ಸುಬಾಹು ಎಂಬ ಇಬ್ಬರು ಕಾಮ ರೂಪಿಗಳಾದ ರಾಕ್ಷಸರು ಕಂಡು ಬಂದರು.॥5॥
(ಶ್ಲೋಕ - 6)
ಮೂಲಮ್
ರಾಮೋಽಪಿ ಧನುರಾದಾಯ ದ್ವೌ ಬಾಣೌ ಸಂದಧೇ ಸುಧೀಃ ।
ಆಕರ್ಣಾಂತಂ ಸಮಾಕೃಷ್ಯ ವಿಸಸರ್ಜ ತಯೋಃ ಪೃಥಕ್ ॥
ಅನುವಾದ
ಧನುರ್ವಿದ್ಯಾನಿಪುಣನಾದ ಶ್ರೀರಾಮನು ಧನುಸ್ಸನ್ನು ಎತ್ತಿ ಎರಡು ಬಾಣಗಳನ್ನು ಹೂಡಿ, ಕಿವಿಯವರೆಗೆ ಜಗ್ಗಿ ಅವರಿಬ್ಬರಿಗೂ ಬೇರೆ-ಬೇರೆಯಾಗಿ ಪ್ರಯೋಗಿಸಿದನು.॥6॥
(ಶ್ಲೋಕ - 7)
ಮೂಲಮ್
ತಯೋರೇಕಸ್ತು ಮಾರೀಚಂ ಭ್ರಾಮಯನ್ ಶತಯೋಜನಮ್ ।
ಪಾತಯಾಮಾಸ ಜಲಧೌ ತದದ್ಭುತಮಿವಾಭವತ್ ॥
ಅನುವಾದ
ಅದರಲ್ಲಿ ಒಂದು ಬಾಣವು ಮಾರೀಚನನ್ನು ಆಕಾಶದಲ್ಲಿ ತಿರುಗಿಸುತ್ತ ನೂರು ಯೋಜನ ದೂರ ಸಮುದ್ರದಲ್ಲಿ ಕೆಡಹಿತು. ಇದೊಂದು ಬಹು ದೊಡ್ಡ ಆಶ್ಚರ್ಯವೇ ಆಯಿತು.॥7॥
(ಶ್ಲೋಕ - 8)
ಮೂಲಮ್
ದ್ವಿತೀಯೋಽಗ್ನಿಮಯೋ ಬಾಣಃ ಸುಬಾಹುಮಜಯತ್ ಕ್ಷಣಾತ್ ।
ಅಪರೇ ಲಕ್ಷ್ಮಣೇನಾಶು ಹತಾಸ್ತದನುಯಾಯಿನಃ ॥
ಅನುವಾದ
ಇನ್ನೊಂದು ಅಗ್ನಿಯಂತಿರುವ ಬಾಣವು ಕ್ಷಣ ಮಾತ್ರದಲ್ಲಿ ಸುಬಾಹುವನ್ನು ಭಸ್ಮಮಾಡಿ ಬಿಟ್ಟಿತು. ಉಳಿದ ಅವರ ಅನುಯಾಯಿಗಳನ್ನು ಲಕ್ಷ್ಮಣನು ಕ್ಷಣಾರ್ಧದಲ್ಲಿ ಕೊಂದು ಹಾಕಿದನು.॥8॥
(ಶ್ಲೋಕ - 9)
ಮೂಲಮ್
ಪುಷ್ಪೌಘೈರಾಕಿರನ್ ದೇವಾ ರಾಘವಂ ಸಹಲಕ್ಷ್ಮಣಮ್ ।
ದೇವದುಂದುಭಯೋ ನೇದುಸ್ತುಷ್ಟುವುಃ ಸಿದ್ಧಚಾರಣಾಃ ॥
ಅನುವಾದ
ಆ ಸಮಯದಲ್ಲಿ ದೇವತೆಗಳು ರಾಮ ಲಕ್ಷ್ಮಣರ ಪರಾಕ್ರಮವನ್ನು ನೋಡಿ ಅವರ ಮೇಲೆ ಪುಷ್ಪವೃಷ್ಟಿಗೈದರು. ದೇವ ದುಂದುಭಿಗಳು ಮೊಳಗಿದುವು. ಸಿದ್ಧರು ಚಾರಣರು ಅವರನ್ನು ಸ್ತುತಿಮಾಡಿದರು.॥9॥
(ಶ್ಲೋಕ - 10)
ಮೂಲಮ್
ವಿಶ್ವಾಮಿತ್ರಸ್ತು ಸಂಪೂಜ್ಯ ಪೂಜಾರ್ಹಂ ರಘುನಂದನಮ್ ।
ಅಂಕೇ ನಿವೇಶ್ಯ ಚಾಲಿಂಗ್ಯ ಭಕ್ತ್ಯಾ ಬಾಷ್ಪಾಕುಲೇಕ್ಷಣಃ ॥
ಅನುವಾದ
ವಿಶ್ವಾಮಿತ್ರರು ಪೂಜನೀಯನಾದ ರಘುನಂದನನನ್ನು ಪೂಜಿಸಿ, ಅವನನ್ನು ತೊಡೆಯಲ್ಲಿ ಕುಳ್ಳಿರಿಕೊಂಡು, ಭಕ್ತಿಯಿಂದುಂಟಾದ ಪ್ರೇಮಾಶ್ರುಗಳಿಂದ ರಾಮನನ್ನು ಆಲಿಂಗಿಸಿಕೊಂಡರು.॥10॥
(ಶ್ಲೋಕ - 11)
ಮೂಲಮ್
ಭೋಜಯಿತ್ವಾ ಸಹ ಭ್ರಾತ್ರಾ ರಾಮಂ ಪಕ್ವಫಲಾದಿಭಿಃ ।
ಪುರಾಣವಾಕ್ಯೈರ್ಮಧುರೈರ್ನಿನಾಯ ದಿವಸತ್ರಯಮ್ ॥
ಅನುವಾದ
ಬಳಿಕ ತಮ್ಮನಾದ ಲಕ್ಷ್ಮಣ ಸಹಿತ ಶ್ರೀರಾಮನಿಗೆ ಮಾಗಿದ ಚೆನ್ನಾದ ಫಲಗಳನ್ನು ತಿನ್ನಿಸಿ, ಪುರಾಣ ಮತ್ತು ಇತಿಹಾಸಾದಿ ಮಧುರ ಕಥೆಗಳನ್ನು ಹೇಳುತ್ತಾ ಮೂರು ದಿನ ಕಳೆದರು.॥11॥
(ಶ್ಲೋಕ - 12)
ಮೂಲಮ್
ಚತುರ್ಥೇಽಹನಿ ಸಂಪ್ರಾಪ್ತೇ ಕೌಶಿಕೋ ರಾಮಮಬ್ರವೀತ್ ।
ರಾಮ ರಾಮ ಮಹಾಯಜ್ಞಂ ದ್ರಷ್ಟುಂ ಗಚ್ಛಾಮಹೇ ವಯಮ್ ॥
(ಶ್ಲೋಕ - 13)
ಮೂಲಮ್
ವಿದೇಹರಾಜನಗರೇ ಜನಕಸ್ಯ ಮಹಾತ್ಮನಃ ।
ತತ್ರ ಮಾಹೇಶ್ವರಂ ಚಾಪಮಸ್ತಿ ನ್ಯಸ್ತಂ ಪಿನಾಕಿನಾ ॥
(ಶ್ಲೋಕ - 14)
ದ್ರಕ್ಷ್ಯಸಿ ತ್ವಂ ಮಹಾಸತ್ತ್ವಂ ಪೂಜ್ಯಸೇ ಜನಕೇನ ಚ ।
ಇತ್ಯುಕ್ತ್ವಾ ಮುನಿಭಿಸ್ತಾಭ್ಯಾಂ ಯಯೌ ಗಂಗಾಸಮೀಪಗಮ್ ॥
ಅನುವಾದ
ನಾಲ್ಕನೇ ದಿನ ವಿಶ್ವಾಮಿತ್ರರು ರಾಮನಲ್ಲಿ ಹೇಳಿದರು- ರಾಮನೇ! ಮಹಾತ್ಮನಾದ ಜನಕರಾಜನಲ್ಲಿ ಮಹಾಯಜ್ಞವನ್ನು ನೋಡಲು ನಾವು ಮಿಥಿಲೆಗೆ ಹೋಗೋಣ. ಅವನಲ್ಲಿ ಪಿನಾಕಿ ಶಂಕರನು ದಯಪಾಲಿಸಿದ ಭಾರೀ ಧನಸ್ಸು ಒಂದಿದೆ. ಆ ಸದೃಢವಾದ ಧನುಸ್ಸನ್ನೂ ನೀನು ನೋಡುವೆ; ಹಾಗೂ ಜನಕ ನಿಂದಲೂ ನಿನ್ನ ಸತ್ಕಾರವಾಗುವುದು. ವಿಶ್ವಾಮಿತ್ರರು ಹೀಗೆ ಹೇಳಿ ಮುನಿಗಳೊಂದಿಗೆ, ರಾಮ-ಲಕ್ಷ್ಮಣರನ್ನು ಕರೆದುಕೊಂಡು ಗಂಗಾ ನದಿಯ ಸಮೀಪದಲ್ಲಿರುವ ಆಶ್ರಮಕ್ಕೆ ಬಂದರು.॥12-14॥
(ಶ್ಲೋಕ - 15)
ಮೂಲಮ್
ಗೌತಮಸ್ಯಾಶ್ರಮಂ ಪುಣ್ಯಂ ಯತ್ರಾಹಲ್ಯಾ ಸ್ಥಿತಾ ತಪಃ ।
ದಿವ್ಯಪುಷ್ಪಲೋಪೇತಪಾದಪೈಃ ಪರಿವೇಷ್ಟಿತಮ್ ॥
(ಶ್ಲೋಕ - 16)
ಮೂಲಮ್
ಮೃಗಪಕ್ಷಿಗಣೈರ್ಹೀನಂ ನಾನಾಜಂತುವಿವರ್ಜಿತಮ್ ।
ದೃಷ್ಟ್ವೋವಾಚ ಮುನಿಂ ಶ್ರೀಮಾನ್ ರಾಮೋ ರಾಜೀವಲೋಚನಃ ॥
(ಶ್ಲೋಕ - 17)
ಮೂಲಮ್
ಕಸ್ಯೈತದಾಶ್ರಮಪದಂ ಭಾತಿ ಭಾಸ್ವಚ್ಛುಭಂ ಮಹತ್ ।
ಪತ್ರಪುಷ್ಟಫಲೈರ್ಯುಕ್ತಂ ಜಂತುಭಿಃ ಪರಿವರ್ಜಿತಮ್ ॥
(ಶ್ಲೋಕ - 18)
ಮೂಲಮ್
ಆಹ್ಲಾದಯತಿ ಮೇ ಚೇತೋ ಭಗವನ್ ಬ್ರೂಹಿ ತತ್ತ್ವತಃ ॥
ಅನುವಾದ
ಅಹಲ್ಯೆಯು ತಪಸ್ಸು ಮಾಡುತ್ತಿದ್ದ ದಿವ್ಯವಾದ, ಹೂ-ಹಣ್ಣುಗಳಿಂದ ಸಮೃದ್ಧವಾದ, ದಟ್ಟವಾದ ಮರಗಳಿಂದ ಸುತ್ತುವರಿದ, ಮುನಿಶ್ರೇಷ್ಠ ಗೌತಮರ ಪವಿತ್ರವಾದ ಆಶ್ರಮಕ್ಕೆ ಬಂದರು. ಕಮಲನಯನನೂ, ಸರ್ವಲಕ್ಷಣ ಸಂಪನ್ನನೂ ಆದ ಶ್ರೀರಾಮನು ಮೃಗ, ಪಕ್ಷಿಗಳು, ಇತರ ಯಾವುದೇ ಪ್ರಾಣಿಗಳಿಲ್ಲದೆ ಶೂನ್ಯವಾದ ಆ ಆಶ್ರಮವನ್ನು ನೋಡಿ ಮುನಿವರ ಕೌಶಿಕರಲ್ಲಿ ಕೇಳಿದನು- ಗುರುಗಳೇ! ಫಲ-ಪುಷ್ಪಾದಿಗಳಿಂದ ಸಮೃದ್ಧವಾದ, ಆದರೆ ಜೀವಶೂನ್ಯವಾದ, ಸುಂದರ-ರಮಣೀಯವಾಗಿ ಕಂಡುಬರುವ ಈ ಆಶ್ರಮವು ಯಾರದು? ಇದನ್ನು ನೋಡಿ ನನ್ನ ಮನಸ್ಸು ತುಂಬಾ ಆಹ್ಲಾದಿತವಾಗುತ್ತಿದೆ. ಇದರ ಎಲ್ಲ ವೃತ್ತಾಂತವನ್ನು ತಿಳಿಸಿರಿ.॥15-18॥
(ಶ್ಲೋಕ - 19)
ಮೂಲಮ್ (ವಾಚನಮ್)
ವಿಶ್ವಾಮಿತ್ರ ಉವಾಚ
ಮೂಲಮ್
ಶೃಣು ರಾಮ ಪುರಾ ವೃತ್ತಂ ಗೌತಮೋ ಲೋಕವಿಶ್ರುತಃ ।
ಸರ್ವಧರ್ಮಭೃತಾಂ ಶ್ರೇಷ್ಠಸ್ತಪಸಾರಾಧಯನ್ ಹರಿಮ್ ॥
ಅನುವಾದ
ವಿಶ್ವಾಮಿತ್ರರು ಹೇಳಿದರು — ರಾಮಾ! ಹಿಂದಿನ ಕಥೆಯನ್ನು ಕೇಳು. ಮೊದಲು ಈ ಆಶ್ರಮದಲ್ಲಿ ಲೋಕವಿಖ್ಯಾತರೂ, ಸರ್ವ ಧರ್ಮಗಳನ್ನು ಬಲ್ಲವರೂ ಆದ ಮುನಿಶ್ರೇಷ್ಠ ಗೌತಮರು ಶ್ರೀಹರಿಯನ್ನು ತಪಸ್ಸಿನಿಂದ ಆರಾಧಿಸುತ್ತ ಇರುತ್ತಿದ್ದರು.॥19॥
(ಶ್ಲೋಕ - 20)
ಮೂಲಮ್
ತಸ್ಮೈಬ್ರಹ್ಮಾ ದದೌ ಕನ್ಯಾಮಹಲ್ಯಾಂ ಲೋಕಸುಂದರೀಮ್ ।
ಬ್ರಹ್ಮಚರ್ಯೇಣ ಸಂತುಷ್ಟಃ ಶುಶ್ರೂಷಣಪರಾಯಣಾಮ್ ॥
ಅನುವಾದ
ಅವರ ಬ್ರಹ್ಮಚರ್ಯವ್ರತಕ್ಕೆ ಸಂತುಷ್ಟರಾದ ಬ್ರಹ್ಮದೇವರು ಸೇವಾ ಪರಾಯಣಳೂ, ಲೋಕಸುಂದರಿಯೂ ಆದ ಅಹಲ್ಯೆ ಎಂಬ ಕನ್ಯೆಯನ್ನು ಮದುವೆ ಮಾಡಿ ಕೊಟ್ಟಿದ್ದರು.॥20॥
(ಶ್ಲೋಕ - 21)
ಮೂಲಮ್
ತಯಾ ಸಾರ್ಧಮಿಹಾವಾತ್ಸೀದ್ಗೌತಮಸ್ತಪತಾಂ ವರಃ ।
ಶಕ್ರಸ್ತು ತಾಂ ಧರ್ಷಯಿತುಮಂತರಂ ಪ್ರೇಪ್ಸುರನ್ವಹಮ್ ॥
ಅನುವಾದ
ತಪಸ್ವಿಗಳಲ್ಲಿ ಶ್ರೇಷ್ಠರಾದ ಗೌತಮರು ಅಹಲ್ಯೆಯೊಡನೆ ಇಲ್ಲಿ ಇರುತ್ತಿದ್ದರು. ಇತ್ತ ದೇವರಾಜ ಇಂದ್ರನು ಅಹಲ್ಯೆಯ ರೂಪ-ಲಾವಣ್ಯಕ್ಕೆ ಮಾರುಹೋಗಿ ಅವಳೊಂದಿಗೆ ರಮಿಸಲು ಪ್ರತಿದಿನವು ಸಮಯ ಕಾಯುತ್ತಿದ್ದನು.॥21॥
(ಶ್ಲೋಕ - 22)
ಮೂಲಮ್
ಕದಾಚಿನ್ಮುನಿವೇಷೇಣ ಗೌತಮೇ ನಿರ್ಗತೇ ಗೃಹಾತ್ ।
ಧರ್ಷಯಿತ್ವಾಥ ನಿರಗಾತ್ತ್ವರಿತಂ ಮುನಿರಪ್ಯಗಾತ್ ॥
ಅನುವಾದ
ಒಮ್ಮೆ ಗೌತಮರು ಆಶ್ರಮದಿಂದ ಹೊರಗೆ ಹೋಗಿದ್ದಾಗ, ಇಂದ್ರನು ಗೌತಮರ ರೂಪದಿಂದ ಬಂದು ಅಹಲ್ಯೆಯೊಂದಿಗೆ ರಮಿಸಿ, ಲಗುಬಗೆಯಿಂದ ಹೊರಕ್ಕೆ ಬಂದನು. ಇದೇ ಸಮಯಕ್ಕೆ ಗೌತಮ ಋಷಿಗಳು ಅಲ್ಲಿಗೆ ಬಂದರು.॥22॥
(ಶ್ಲೋಕ - 23)
ಮೂಲಮ್
ದೃಷ್ಟ್ವಾ ಯಾಂತಂ ಸ್ವರೂಪೇಣ ಮುನಿಃ ಪರಮಕೋಪನಃ ।
ಪಪ್ರಚ್ಛ ಕಸ್ತ್ವಂ ದುಷ್ಟಾತ್ಮನ್ ಮಮ ರೂಪಧರೋಽಧಮಃ ॥
ಅನುವಾದ
ತನ್ನರೂಪದಿಂದಲೇ ಹೊರಕ್ಕೆ ಬರುತ್ತಿರುವ ಅವನನ್ನು ನೋಡಿ, ಗೌತಮರು-ಅತ್ಯಂತ ಕುಪಿತರಾಗಿ ಎಲೈ ದುಷ್ಟಾತ್ಮನೇ! ಅಧಮನೇ! ನನ್ನ ರೂಪವನ್ನು ಧರಿಸಿದ ನೀನು ಯಾರು? ಎಂದು ಕೇಳಿದರು. ॥23॥
(ಶ್ಲೋಕ - 24)
ಮೂಲಮ್
ಸತ್ಯಂ ಬ್ರೂಹಿ ನ ಚೇದ್ಭಸ್ಮ ಕರಿಷ್ಯಾಮಿ ನ ಸಂಶಯಃ ।
ಸೋಽಬ್ರವೀದ್ದೇವರಾಜೋಽಹಂ ಪಾಹಿ ಮಾಂ ಕಾಮಕಿಂಕರಮ್ ॥
(ಶ್ಲೋಕ - 25)
ಮೂಲಮ್
ಕೃತಂ ಜುಗುಪ್ಸಿತಂ ಕರ್ಮ ಮಯಾ ಕುತ್ಸಿತಚೇತಸಾ ।
ಗೌತಮಃ ಕ್ರೋಧತಾಮ್ರಾಕ್ಷಃ ಶಶಾಪ ದಿವಿಜಾಧಿಪಮ್ ॥
ಅನುವಾದ
ನಿಜವನ್ನು ಹೇಳು. ಇಲ್ಲವಾದರೆ ನಿನ್ನನ್ನು ಈಗ ಭಸ್ಮ ಮಾಡಿ ಬಿಡುವೆ, ಇದರಲ್ಲಿ ಸಂಶಯವೇ ಬೇಡ. ಆಗ ಅವನೆಂದ-ಮಹಾತ್ಮರೇ! ನಾನು ಕಾಮಕ್ಕೆ ವಶನಾದ ದೇವರಾಜ ಇಂದ್ರನಾಗಿದ್ದೇನೆ. ನನ್ನನ್ನು ಕಾಪಾಡಿರಿ. ಕೆಟ್ಟಮನಸ್ಸಿನಿಂದ ನಾನು ನಿಂದ್ಯವಾದ ಕಾರ್ಯವನ್ನು ಮಾಡಿರುವೆ. ಆಗ ಕೋಪದಿಂದ ಕೆಂಪಾದ ಕಣ್ಣುಗಳಿಂದ ಗೌತಮರು ದೇವೇಂದ್ರನಿಗೆ ಶಾಪ ವನ್ನಿತ್ತರು. ॥24-25॥
(ಶ್ಲೋಕ - 26)
ಮೂಲಮ್
ಯೋನಿಲಂಪಟ ದುಷ್ಟಾತ್ಮನ್ಸಹಸ್ರಭಗವಾನ್ಭವ ।
ಶಪ್ತ್ವಾ ತಂ ದೇವರಾಜಾನಂ ಪ್ರವಿಶ್ಯ ಸ್ವಾಶ್ರಮಂ ದ್ರುತಮ್ ॥
(ಶ್ಲೋಕ - 27)
ಮೂಲಮ್
ದೃಷ್ಟ್ವಾಹಲ್ಯಾಂ ವೇಪಮಾನಾಂ ಪ್ರಾಂಜಲಿಂ ಗೌತಮೋಽಬ್ರವೀತ್ ।
ದುಷ್ಟೇ ತ್ವಂ ತಿಷ್ಠ ದುರ್ವೃತ್ತೇ ಶಿಲಾಯಾಮಾಶ್ರಮೇ ಮಮ ॥
(ಶ್ಲೋಕ - 28)
ಮೂಲಮ್
ನಿರಾಹಾರಾ ದಿವಾರಾತ್ರಂ ತಪಃ ಪರಮಮಾಸ್ಥಿತಾ ।
ಆತಪಾನಿಲವರ್ಷಾದಿಸಹಿಷ್ಣುಃ ಪರಮೇಶ್ವರಮ್ ॥
(ಶ್ಲೋಕ - 29)
ಮೂಲಮ್
ಧ್ಯಾಯಂತೀ ರಾಮಮೇಕಾಗ್ರಮನಸಾ ಹೃದಿ ಸಂಸ್ಥಿತಮ್ ।
ನಾನಾಜಂತುವಿಹೀನೋಽಯಮಾಶ್ರಮೋ ಮೇ ಭವಿಷ್ಯತಿ ॥
ಅನುವಾದ
ಎಲೈ ದುಷ್ಟಾತ್ಮನೇ! ‘ನೀನು ಯೋನಿಲಂಪಟನಾದ ಕಾರಣ ನಿನ್ನ ಶರೀರದಲ್ಲಿ ಸಾವಿರ ಕಣ್ಣು (ಭಗ)ಗಳಾಗಲಿ’ ಈ ಪ್ರಕಾರ ದೇವೇಂದ್ರನಿಗೆ ಶಪಿಸಿ, ಮುನಿಯು ಆಶ್ರಮವನ್ನು ಪ್ರವೇಶಿಸಿ ನೋಡುತ್ತಾರೆ-ಅಹಲ್ಯೆಯು ಭಯದಿಂದ ನಡುಗುತ್ತ ಕೈ ಮುಗಿದು ನಿಂತಿದ್ದಳು. ಅವಳನ್ನು ನೋಡಿ ಗೌತಮರು ‘‘ಎಲೈ ದುಷ್ಟಳೇ! ಕೆಟ್ಟನಡತೆಯುಳ್ಳವಳೇ! ನೀನು ನಿರಾಹಾರಳಾಗಿ, ಹಗಲೂ ರಾತ್ರಿಯೂ ಹೆಚ್ಚಿನ ತಪಸ್ಸಾನ್ನಾಚರಿಸುತ್ತ ನನ್ನ ಆಶ್ರಮದಲ್ಲಿಯೇ ಶಿಲೆಯನ್ನಾಶ್ರಯಿಸಿಕೊಂಡಿರು. ಬಿಸಿಲು, ಮಳೆ, ಬೆಂಕಿ ಮುಂತಾದುವನ್ನು ಸಹಿಸುತ್ತಾ ಹೃದಯದಲ್ಲಿಯೇ ಇರುವ ಪರಮೇಶ್ವರನಾದ ಶ್ರೀರಾಮನನ್ನು ಏಕಾಗ್ರಚಿತ್ತಳಾಗಿ ಧ್ಯಾನಿಸುತ್ತಾ ಇರು. ಈಗಿನಿಂದ ನನ್ನ ಆಶ್ರಮವು ವಿವಿಧ ಪ್ರಕಾರದ ಜೀವ-ಜಂತುಗಳಿಂದ ರಹಿತವಾಗಲಿ. ॥26-29॥
(ಶ್ಲೋಕ - 30)
ಮೂಲಮ್
ಏವಂ ವರ್ಷಸಹಸ್ರೇಷು ಹ್ಯನೇಕೇಷು ಗತೇಷು ಚ ।
ರಾಮೋ ದಾಶರಥಿಃ ಶ್ರೀಮಾನಾಗಮಿಷ್ಯತಿ ಸಾನುಜಃ ॥
ಅನುವಾದ
ಇದೇ ಪ್ರಕಾರವಾಗಿ ಅನೇಕ ಸಾವಿರ ವರ್ಷಗಳು ಕಳೆದ ಬಳಿಕ, ದಶರಥನಂದನ ಶ್ರೀಮಾನ್ ರಾಮನು ತಮ್ಮನಾದ ಲಕ್ಷ್ಮಣ ನೊಂದಿಗೆ ಇಲ್ಲಿಗೆ ಬರುವನು.॥30॥
(ಶ್ಲೋಕ - 31)
ಮೂಲಮ್
ಯದಾ ತ್ವದಾಶ್ರಯಶಿಲಾಂ ಪಾದಾಭ್ಯಾಮಾಕ್ರಮಿಷ್ಯತಿ ।
ತದೈವ ಧೂತಪಾಪಾ ತ್ವಂ ರಾಮಂ ಸಂಪೂಜ್ಯ ಭಕ್ತಿತಃ ॥
(ಶ್ಲೋಕ - 32)
ಮೂಲಮ್
ಪರಿಕ್ರಮ್ಯ ನಮಸ್ಕೃತ್ಯ ಸ್ತುತ್ವಾ ಶಾಪಾದ್ವಿಮೋಕ್ಷ್ಯಸೇ ।
ಪೂರ್ವವನ್ಮಮ ಶುಶ್ರೂಷಾಂ ಕರಿಷ್ಯಸಿ ಯಥಾಸುಖಮ್ ॥
ಅನುವಾದ
ಅವನು ನೀನು ಆಶ್ರಯಿಸಿಕೊಂಡಿರುವ ಶಿಲೆಯಲ್ಲಿ ತನ್ನ ಎರಡೂ ಪಾದಗಳನ್ನಿರಿಸುವಾಗಲೇ ನೀನು ಪಾಪಮುಕ್ತಳಾಗಿ ಭಕ್ತಿಯಿಂದ ಶ್ರೀರಾಮಚಂದ್ರನನ್ನು ಪೂಜಿಸಿ ಅವನಿಗೆ ಪ್ರದಕ್ಷಿಣೆ ಬಂದು ನಮಸ್ಕಾರಗಳೊಂದಿಗೆ ಸ್ತುತಿಸಿ ಶಾಪದಿಂದ ಮುಕ್ತಳಾಗುವೆ. ಅನಂತರ ಹಿಂದಿನಂತೆ ನನ್ನ ಸೇವೆಯನ್ನು ಮಾಡಿಕೊಂಡು ಸುಖವಾಗಿರುವೆ. ॥31-32॥
(ಶ್ಲೋಕ - 33)
ಮೂಲಮ್
ಇತ್ಯುಕ್ತ್ವಾ ಗೌತಮಃ ಪ್ರಾಗಾದ್ಧಿಮವಂತಂ ನಗೋತ್ತಮಮ್ ।
ತದಾದ್ಯಹಲ್ಯಾ ಭೂತಾನಾಮದೃಶ್ಯಾ ಸ್ವಾಶ್ರಮೇ ಶುಭೇ ॥
(ಶ್ಲೋಕ - 34)
ಮೂಲಮ್
ತವ ಪಾದರಜಃಸ್ಪರ್ಶಂ ಕಾಂಕ್ಷತೇ ಪವನಾಶನಾ ।
ಆಸ್ತೇಽದ್ಯಾಪಿ ರಘುಶ್ರೇಷ್ಠ ತಪೋ ದುಷ್ಕರಮಾಸ್ಥಿತಾ ॥
ಅನುವಾದ
ಹೀಗೆ ಹೇಳಿ ಮಹರ್ಷಿ ಗೌತಮರು ಪರ್ವತಶ್ರೇಷ್ಠವಾದ ಹಿಮಾಲಯಕ್ಕೆ ಹೊರಟು ಹೋದರು. ಹೇ ರಘುಶ್ರೇಷ್ಠನೇ! ಅಂದಿನಿಂದ ಆ ಅಹಲ್ಯೆಯು ಗಾಳಿಯನ್ನು ಸೇವಿಸುತ್ತಾ ಕಠೋರ ತಪಸ್ಸನ್ನಾ ಚರಿಸುತ್ತಾ, ನಿನ್ನ ಚರಣ ರಜದ ಸ್ಪರ್ಶವನ್ನು ಬಯಸುತ್ತಾ, ಇಂದಿನವರೆಗೆ ಪ್ರಾಣಿಗಳಿಂದ ಅಲಕ್ಷಿತಳಾಗಿ ತನ್ನ ಶುಭವಾದ ಆಶ್ರಮದಲ್ಲಿ ಇದ್ದಾಳೆ.॥33-34॥
(ಶ್ಲೋಕ - 35)
ಮೂಲಮ್
ಪಾವಯಸ್ವ ಮುನೇರ್ಭಾರ್ಯಾಮಹಲ್ಯಾಂ ಬ್ರಹ್ಮಣಃ ಸುತಾಮ್ ।
ಇತ್ಯುಕ್ತ್ವಾ ರಾಘವಂ ಹಸ್ತೇ ಗೃಹೀತ್ವಾ ಮುನಿಪುಂಗವಃ ॥
(ಶ್ಲೋಕ - 36)
ಮೂಲಮ್
ದರ್ಶಯಾಮಾಸ ಚಾಹಲ್ಯಾಮುಗ್ರೇಣ ತಪಸಾ ಸ್ಥಿತಾಮ್ ।
ರಾಮಃ ಶಿಲಾಂ ಪದಾ ಸ್ಪೃಷ್ಟ್ವಾತಾಂ ಚಾಪಶ್ಯತ್ತಪೋಧನಾಮ್ ॥
ಅನುವಾದ
ಓ ರಾಮಾ! ಈಗ ನೀನು ಬ್ರಹ್ಮನಪುತ್ರೀ, ಗೌತಮರ ಪತ್ನೀ ಅಹಲ್ಯೆಯನ್ನು ಉದ್ಧರಿಸು. ಮುನಿಶ್ರೇಷ್ಠ ವಿಶ್ವಾಮಿತ್ರರು ಹೀಗೆ ಹೇಳಿ ರಘುನಾಥನ ಕೈ ಹಿಡಿದುಕೊಂಡು ಉಗ್ರ ತಪಸ್ಸಿನಲ್ಲಿ ಇರುವ ಅಹಲ್ಯೆಯನ್ನು ತೋರಿಸಿದರು. ಆಗ ಶ್ರೀರಾಮಚಂದ್ರನು ತನ್ನ ಚರಣದಿಂದ ಆ ಶಿಲೆಯನ್ನು ಸ್ಪರ್ಶಿಸಿ ತಪಸ್ವಿನೀ ಅಹಲ್ಯೆಯನ್ನು ಉದ್ಧರಿಸಿದನು. ॥35-36॥
(ಶ್ಲೋಕ - 37)
ಮೂಲಮ್
ನನಾಮ ರಾಘವೋಽಹಲ್ಯಾಂ ರಾಮೋಽಹಮಿತಿ ಚಾಬ್ರವೀತ್ ।
ತತೋ ದೃಷ್ಟ್ವಾ ರಘುಶ್ರೇಷ್ಠಂ ಪೀತಕೌಶೇಯವಾಸಸಮ್ ॥
(ಶ್ಲೋಕ - 38)
ಮೂಲಮ್
ಚತುರ್ಭುಜಂ ಶಂಖಚಕ್ರಗದಾಪಂಕಜಧಾರಿಣಮ್ ।
ಧನುರ್ಬಾಣಧರಂ ರಾಮಂ ಲಕ್ಷ್ಮಣೇನ ಸಮನ್ವಿತಮ್ ॥
(ಶ್ಲೋಕ - 39)
ಮೂಲಮ್
ಸ್ಮಿತವಕ್ತ್ರಂ ಪದ್ಮನೇತ್ರಂ ಶ್ರೀವತ್ಸಾಂಕಿತವಕ್ಷಸಮ್ ।
ನೀಲಮಾಣಿಕ್ಯಸಂಕಾಶಂ ದ್ಯೋತಯಂತಂ ದಿಶೋ ದಶ ॥
(ಶ್ಲೋಕ - 40)
ಮೂಲಮ್
ದೃಷ್ಟ್ವಾ ರಾಮಂ ರಮಾನಾಥಂ ಹರ್ಷವಿಸ್ಫಾರಿತೇಕ್ಷಣಾ ।
ಗೌತಮಸ್ಯ ವಚಃ ಸ್ಮೃತ್ವಾ ಜ್ಞಾತ್ವಾ ನಾರಾಯಣಂ ವರಮ್ ॥
(ಶ್ಲೋಕ - 41)
ಮೂಲಮ್
ಸಂಪೂಜ್ಯ ವಿಧಿವದ್ರಾಮಮರ್ಘ್ಯಾದಿಭಿರನಿಂದಿತಾ ।
ಹರ್ಷಾಶ್ರುಜಲನೇತ್ರಾಂತಾ ದಂಡವತ್ಪ್ರಣಿಪತ್ಯ ಸಾ ॥
ಅನುವಾದ
ಅವಳನ್ನು ನೋಡಿ ಭಗವಾನ್ ಶ್ರೀರಾಮನು ‘ನಾನು ರಾಮನಾಗಿದ್ದೇನೆ’ ಎಂದು ಹೇಳಿ ನಮಸ್ಕರಿಸಿದನು. ಆಗ ಅಹಲ್ಯೆಯು ರೇಶ್ಮೆ ಪೀತಾಂಬರವನ್ನು ಧರಿಸಿರುವ, ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿರುವ, ಹೆಗಲಲ್ಲಿ ಧನುರ್ಬಾಣಗಳುಳ್ಳ ಲಕ್ಷ್ಮಣನೊಂದಿಗಿರುವ, ಮುಗುಳ್ನಗೆಯಿಂದ ಶೋಭಿಸುವ ಕಮಲದಂತೆ ಮುಖವುಳ್ಳ, ತಾವರೆಯಂತೆ ಕಂಗಳುಳ್ಳ, ಶ್ರೀವತ್ಸಾಂಕಿತ ವಕ್ಷಃಸ್ಥಳವುಳ್ಳ, ತನ್ನ ನೀಲಮಣಿ ಸದೃಶ ದಿವ್ಯವಾದ ಅಂಗಕಾಂತಿಯಿಂದ ಹತ್ತು ದಿಕ್ಕುಗಳನ್ನು ಬೆಳಗುತ್ತಿರುವ ಲಕ್ಷ್ಮೀಪತಿ ಯಾದ ಶ್ರೀರಾಮಚಂದ್ರನನ್ನು ನೋಡಿದಳು. ಅವಳ ಕಣ್ಣುಗಳು ಹರ್ಷದಿಂದ ಅರಳಿದವು. ಆಗ ಅವಳಿಗೆ ಮುನಿಶ್ರೇಷ್ಠ ಗೌತಮರ ಮಾತು ನೆನಪಾಯಿತು. ಶ್ರೇಷ್ಠನಾದ ನಾರಾಯಣನೇ ಇವನೆಂದು ತಿಳಿದುಕೊಂಡು ಅನಿಂದ್ಯಳಾದ ಅವಳು ವಿಧಿ ಪೂರ್ವಕವಾಗಿ ಅರ್ಘ್ಯಪಾದ್ಯಾದಿಗಳಿಂದ ಅವನನ್ನು ಪೂಜಿಸಿ ಆನಂದಾಶ್ರುಗಳನ್ನು ಸುರಿಯುತ್ತಿರಲು ದಂಡವತ್ ನಮಸ್ಕರಿಸಿದಳು. ॥37-41॥
(ಶ್ಲೋಕ - 42)
ಮೂಲಮ್
ಉತ್ಥಾಯ ಚ ಪುನರ್ದೃಷ್ಟ್ವಾ ರಾಮಂ ರಾಜೀವಲೋಚನಮ್ ।
ಪುಲಕಾಂಕಿತಸರ್ವಾಂಗಾ ಗಿರಾ ಗದ್ಗದಯೈಲತ ॥
ಅನುವಾದ
ಬಳಿಕ ಎದ್ದು ನಿಂತು ರಾಜೀವಲೋಚನನಾದ ಭಗವಾನ್ ಶ್ರೀರಾಮನನ್ನು ಪುನಃ ನೋಡುತ್ತಾ, ಸರ್ವಾಂಗವು ಪುಳಕಿತಗೊಂಡು ಗದ್ಗದ ವಾಣಿಯಿಂದ ಅವನನ್ನು ಹೀಗೆ ಸ್ತುತಿಸ ತೊಡಗಿದಳು.॥42॥
(ಶ್ಲೋಕ - 43)
ಮೂಲಮ್ (ವಾಚನಮ್)
ಅಹಲ್ಯೋವಾಚ
ಮೂಲಮ್
ಅಹೋ ಕೃತಾರ್ಥಾಸ್ಮಿ ಜಗನ್ನಿವಾಸ ತೇ
ಪಾದಾಬ್ಜಸಂಲಗ್ನರಜಃ ಕಣಾದಹಮ್ ।
ಸ್ಪೃಶಾಮಿ ಯತ್ಪದ್ಮಜಶಂಕರಾದಿಭಿ-
ರ್ವಿಮೃಗ್ಯತೇ ರಂಧಿತಮಾನಸೈಃ ಸದಾ ॥
ಅನುವಾದ
ಅಹಲ್ಯೆಯು ಹೇಳಿದಳು — ಹೇ ಜಗನ್ನಿವಾಸಾ! ನಿನ್ನ ಚರಣ ಕಮಲ ರಜ ಕಣಗಳನ್ನು ಸ್ಪರ್ಶಿಸಿ ನಾನು ಇಂದು ಕೃತಾರ್ಥಳಾದೆ. ಯಾವ ಪಾದಾರವಿಂದಗಳನ್ನು ಬ್ರಹ್ಮ-ರುದ್ರಾದಿ ದೇವತೆಗಳು ಏಕಾಗ್ರಚಿತ್ತದಿಂದ ಸದಾಕಾಲ ಅನುಸಂಧಾನ ಮಾಡುತ್ತಿರುವರೋ, ಅವುಗಳನ್ನು ನಾನು ಇಂದು ಸ್ಪರ್ಶಿಸುತ್ತಿದ್ದೇನೆ. ಇದು ನನ್ನ ಸೌಭಾಗ್ಯವೇ ಆಗಿದೆ. ॥43॥
(ಶ್ಲೋಕ - 44)
ಮೂಲಮ್
ಅಹೋ ವಿಚಿತ್ರಂ ತವ ರಾಮ ಚೇಷ್ಟಿತಂ
ಮನುಷ್ಯಭಾವೇನ ವಿಮೋಹಿತಂ ಜಗತ್ ।
ಚಲಸ್ಯಜಸ್ರಂ ಚರಣಾದಿವರ್ಜಿತಃ
ಸಂಪೂರ್ಣ ಆನಂದಮಯೋಽತಿಮಾಯಿಕಃ ॥
(ಶ್ಲೋಕ - 45)
ಯತ್ಪಾದಪಂಕಜಪರಾಗಪವಿತ್ರಗಾತ್ರಾ
ಭಾಗೀರಥೀ ಭವವಿರಿಂಚಿಮುಖಾನ್ ಪುನಾತಿ ।
ಸಾಕ್ಷಾತ್ಸ ಏವ ಮಮ ದೃಗ್ವಿಷಯೋ ಯದಾಸ್ತೇ
ಕಿಂ ವರ್ಣ್ಯತೇ ಮಮ ಪುರಾಕೃತಭಾಗಧೇಯಮ್ ॥
ಅನುವಾದ
ಹೇ ರಾಮಾ! ನಿನ್ನ ಲೀಲೆಗಳು ತುಂಬಾ ವಿಚಿತ್ರವಾಗಿವೆ. ಈ ಜಗತ್ತೆಲ್ಲವು ನಿನ್ನ ಮಾನುಷಭಾವದಿಂದ ಮೋಹಿತವಾಗುತ್ತಿದೆ. ನೀನು ಪೂರ್ಣಾನಂದಮಯನೂ ಮತ್ತು ಅತಿ ಮಾಯಾವಿಯಾಗಿರುವೆ. ಏಕೆಂದರೆ, ಚರಣಾದಿ ಅವಯವಗಳಿಲ್ಲದೆಯೂ ನೀನು ನಿರಂತರ ಓಡಾಡುತ್ತಿರುವೆ. ಯಾರ ಪಾದಪದ್ಮಗಳ ಧೂಳಿನ ಕಣದಿಂದ ಪವಿತ್ರಳಾದ ಗಂಗೆಯು ಶಿವ ಮತ್ತು ಬ್ರಹ್ಮಾದಿ ಜಗದೀಶ್ವರರನ್ನು ಪವಿತ್ರಗೊಳಿಸುತ್ತಿರುವಳೋ, ಅಂತಹವನು ಇಂದು ನನ್ನ ಕಣ್ಣುಗಳಿಗೆ ಪ್ರತ್ಯಕ್ಷವಾಗಿ ಗೋಚರವಾಗುತ್ತಿರುವಾಗ, ನನ್ನ ಪೂರ್ವ ಪುಣ್ಯಗಳನ್ನು ನಾನು ಹೇಗೆ ವರ್ಣಿಸಲಿ? ॥44-45॥
(ಶ್ಲೋಕ - 46)
ಮೂಲಮ್
ಮರ್ತ್ಯಾವತಾರೇ ಮನುಜಾಕೃತಿಂ ಹರಿಂ
ರಾಮಾಭಿಧೇಯಂ ರಮಣೀಯದೇಹಿನಮ್ ।
ಧನುರ್ಧರಂ ಪದ್ಮವಿಶಾಲ ಲೋಚನಂ
ಭಜಾಮಿ ನಿತ್ಯಂ ನ ಪರಾನ್ ಭಜಿಷ್ಯೇ ॥
ಅನುವಾದ
ಮನುಷ್ಯಾವತಾರದಲ್ಲಿ ಪುರುಷರೂಪವನ್ನು ಧರಿಸಿ ರಾಮನೆಂಬ ಹೆಸರಿನಿಂದ ಕೂಡಿದ, ಸುಂದರಾಕಾರವುಳ್ಳ ಧನುರ್ಧರನೂ, ಕಮಲದಳಲೋಚನನೂ ಆದ ಶ್ರೀಹರಿಯನ್ನು ನಾನು ಯಾವಾಗಲೂ ಭಜಿಸುತ್ತೇನೆ. ಬೇರೆ ಯಾರನ್ನು ಭಜಿಸುವುದಿಲ್ಲ. ॥46॥
(ಶ್ಲೋಕ - 47)
ಮೂಲಮ್
ಯತ್ಪಾದಪಂಕಜರಜಃ ಶ್ರುತಿಭಿರ್ವಿಮೃಗ್ಯಂ
ಯನ್ನಾಭಿಪಂಕಜಭವಃ ಕಮಲಾಸನಶ್ಚ ।
ಯನ್ನಾಮಸಾರರಸಿಕೋ ಭಗವಾನ್ಪುರಾರಿ
ಸ್ತಂ ರಾಮಚಂದ್ರಮನಿಶಂ ಹೃದಿ ಭಾವಯಾಮಿ ॥
ಅನುವಾದ
ಯಾರ ಪಾದಪದ್ಮಗಳ ರಜವನ್ನು ಶ್ರುತಿಗಳೂ ಹುಡುಕುತ್ತಿವೆಯೋ, ಯಾರ ನಾಭಿಕಮಲದಿಂದ ಬ್ರಹ್ಮನು ಹುಟ್ಟಿರುವನೋ, ಪೂಜ್ಯನಾದ ಶಿವನು ಯಾರ ನಾಮರಸದಲ್ಲಿ ಆಸಕ್ತನಾಗಿರುವನೋ, ಅಂತಹ ಶ್ರೀರಾಮಚಂದ್ರನನ್ನು ಯಾವಾಗಲೂ ಹೃದಯದಲ್ಲಿ ಧ್ಯಾನಿಸುತ್ತೇನೆ. ॥47॥
(ಶ್ಲೋಕ - 48)
ಮೂಲಮ್
ಯಸ್ಯಾವತಾರಚರಿತಾನಿ ವಿರಿಂಚಿಲೋಕೇ
ಗಾಯಂತಿ ನಾರದಮುಖಾ ಭವಪದ್ಮಜಾದ್ಯಾಃ ।
ಆನಂದಜಾಶ್ರುಪರಿಷಿಕ್ತಕುಚಾಗ್ರಸೀಮಾ
ವಾಗೀಶ್ವರೀ ಚ ತಮಹಂ ಶರಣಂ ಪ್ರಪದ್ಯೇ ॥
ಅನುವಾದ
ಬ್ರಹ್ಮಲೋಕದಲ್ಲಿ ಯಾರ ಅವತಾರ ಚರಿತ್ರೆಗಳನ್ನು ನಾರದಾದಿ ದೇವರ್ಷಿಗಳೂ, ಶಿವ-ಬ್ರಹ್ಮಾದಿಗಳೂ ಗಾನ ಮಾಡುತ್ತಿರುವರೋ ಹಾಗೂ ಆನಂದಬಾಷ್ಪಗಳಿಂದ ತನ್ನ ಕುಚ-ಮಂಡಲಗಳು ನೆನೆದಿರುವ ಸರಸ್ವತಿಯೂ ಕೂಡ ಗಾನಮಾಡುತ್ತಿರುವಳೋ ಅಂತಹ ಶ್ರೀರಾಮನನ್ನು ನಾನು ಶರಣು ಹೊಕ್ಕಿರುವೆನು.॥48॥
(ಶ್ಲೋಕ - 49)
ಮೂಲಮ್
ಸೋಽಯಂ ಪರಾತ್ಮಾ ಪುರುಷಃ ಪುರಾಣ
ಏಕಃ ಸ್ವಯಂಜ್ಯೋತಿರನಂತ ಆದ್ಯಃ ।
ಮಾಯಾತನುಂ ಲೋಕವಿಮೋಹನೀಯಾಂ
ಧತ್ತೇ ಪರಾನುಗ್ರಹ ಏಷ ರಾಮಃ ॥
ಅನುವಾದ
ಆ ಪರಮಾತ್ಮನೂ, ಪುರಾಣ ಪುರುಷನೂ, ಅದ್ವಿತೀಯನೂ, ಸ್ವಯಂಜ್ಯೋತಿಃ ಸ್ವರೂಪನೂ, ಅನಂತನೂ, ಆದ್ಯನೂ ಆದ ಈ ಶ್ರೀರಾಮನು ಲೋಕವನ್ನೆಲ್ಲ ಮೋಹಗೊಳಿಸುವಂತಹ ಮಾಯಾಶರೀರವನ್ನು ಜಗತ್ತಿಗೆ ಪರಮಾನುಗ್ರಹ ಮಾಡಲೇ ಧರಿಸಿರುವನು.॥49॥
(ಶ್ಲೋಕ - 50)
ಮೂಲಮ್
ಅಯಂ ಹಿ ವಿಶ್ವೋದ್ಭವಸಂಯಮಾನಾ-
ಮೇಕಃ ಸ್ವಮಾಯಾಗುಣಬಿಂಬಿತೋ ಯಃ ।
ವಿರಿಂಚಿವಿಷ್ಣ್ವೀಶ್ವರ ನಾಮಭೇದಾನ್
ಧತ್ತೇ ಸ್ವತಂತ್ರಃ ಪರಿಪೂರ್ಣ ಆತ್ಮಾ ॥
ಅನುವಾದ
ಜಗತ್ತಿನ ಹುಟ್ಟು-ನಿಯಮನ ನಾಶ ಇವುಗಳಿಗಾಗಿ ತನ್ನ ಮಾಯಾಗುಣಗಳನ್ನು ಆಶ್ರಯಿಸಿ ಬ್ರಹ್ಮ-ವಿಷ್ಣು ಮಹೇಶ್ವರರೆಂಬ ನಾಮಭೇದಗಳನ್ನು ಧರಿಸಿರುವ ಸ್ವತಂತ್ರನೂ ಪರಿಪೂರ್ಣಾತ್ಮನೂ ನೀನೊಬ್ಬನೇ ಆಗಿರುವೆ. ॥50॥
(ಶ್ಲೋಕ - 51)
ಮೂಲಮ್
ನಮೋಽಸ್ತು ತೇ ರಾಮ ತವಾಂಘ್ರಿಪಂಕಜಂ
ಶ್ರಿಯಾ ಧೃತಂ ವಕ್ಷಸಿ ಲಾಲಿತಂ ಪ್ರಿಯಾತ್ ।
ಆಕ್ರಾಂತಮೇಕೇನ ಜಗತ್ರಯಂ ಪುರಾ
ಧ್ಯೇಯಂ ಮುನೀಂದ್ರೈರಭಿಮಾನವರ್ಜಿತೈಃ ॥
ಅನುವಾದ
ಹೇ ರಾಮಾ! ನಿನ್ನ ಯಾವ ಚರಣ ಕಮಲಗಳನ್ನು ಲಕ್ಷ್ಮಿದೇವಿಯು ತನ್ನ ವಕ್ಷಃಸ್ಥಳದಲ್ಲಿಟ್ಟುಕೊಂಡು ಉಪಚರಿಸುತ್ತಿರುವಳೋ, ಯಾರು ಹಿಂದೆ ಬಲಿಬಂಧನದ ಸಮಯದಲ್ಲಿ ಒಂದೇ ಹೆಜ್ಜೆಯಿಂದ ಸಂಪೂರ್ಣ ತ್ರಿಲೋಕವನ್ನು ಅಳೆದಿತ್ತೋ ಹಾಗೂ ಅಭಿಮಾನರಹಿತರಾದ ಮುನಿಗಳು ಯಾವುದನ್ನು ನಿರಂತರ ಧ್ಯಾನಮಾಡುತ್ತಾರೋ ಆ ನಿನ್ನ ಚರಣಕಮಲಗಳಿಗೆ ನಾನು ನಮಸ್ಕರಿಸುತ್ತೇನೆ.॥51॥
(ಶ್ಲೋಕ - 52)
ಮೂಲಮ್
ಜಗತಾಮಾದಿಭೂತಸ್ತ್ವಂ ಜಗತ್ತ್ವಂ ಜಗದಾಶ್ರಯಃ ।
ಸರ್ವಭೂತೇಷ್ವಸಂಯುಕ್ತ ಏಕೋ ಭಾತಿ ಭವಾನ್ಪರಃ ॥
ಅನುವಾದ
ಹೇ ಪ್ರಭುವೇ! ನೀನೇ ಜಗತ್ತಿನ ಆದಿಕಾರಣನಾಗಿರುವೆ, ನೀನೆ ಜಗದ್ರೂಪಿಯೂ, ಜಗತ್ತಿಗೆ ಆಶ್ರಯನೂ ಆಗಿರುವೆ. ಆದರೂ ನೀನು ಎಲ್ಲ ಪ್ರಾಣಿಗಳಲ್ಲಿ ಪ್ರವೇಶಿಸಿದ್ದರೂ ಬೇರೆಯಾಗಿಯೇ ಇದ್ದು, ಅದ್ವಿತೀಯ ಪರಬ್ರಹ್ಮ ರೂಪದಿಂದ ಪ್ರಕಾಶಿಸುತ್ತಿರುವೆ. ॥52॥
(ಶ್ಲೋಕ - 53)
ಮೂಲಮ್
ಓಂಕಾರವಾಚ್ಯಸ್ತ್ವಂ ರಾಮ ವಾಚಾಮವಿಷಯಃ ಪುಮಾನ್ ।
ವಾಚ್ಯವಾಚಕಭೇದೇನ ಭವಾನೇವ ಜಗನ್ಮಯಃ ॥
ಅನುವಾದ
ಹೇ ರಾಮಾ! ನೀನೇ ಓಂಕಾರ ವಾಚ್ಯನಾಗಿರುವೆ, ಹಾಗೂ ನೀನೇ ವಾಣಿಗೂ ಅಗೋಚರನಾದ ಪರಮ ಪುರುಷನಾಗಿರುವೆ, ಹೇ ಪ್ರಭೋ! ವಾಚ್ಯ-ವಾಚಕ (ಶಬ್ದ-ಅರ್ಥ) ಭೇದದಿಂದ ನೀನೇ ಸಂಪೂರ್ಣ ಜಗತ್ ರೂಪನಾಗಿರುವೆ. ॥53॥
(ಶ್ಲೋಕ - 54)
ಮೂಲಮ್
ಕಾರ್ಯಕಾರಣ ಕರ್ತೃತ್ವಫಲಸಾಧನಭೇದತಃ ।
ಏಕೋ ವಿಭಾಸಿ ರಾಮ ತ್ವಂ ಮಾಯಯಾ ಬಹುರೂಪಯಾ ॥
ಅನುವಾದ
ಹೇ ರಾಮಾ! ನೀನೊಬ್ಬನೇ ಅನೇಕ ರೂಪಮಯಿಯಾದ ಮಾಯೆಯ ಆಶ್ರಯದಿಂದ ಕಾರ್ಯ, ಕಾರಣ, ಕರ್ತೃತ್ವ, ಫಲ ಮತ್ತು ಸಾಧನೆಯ ಭೇದದಿಂದ ಅನೇಕ ರೂಪಗಳಲ್ಲಿ ಕಂಡು ಬರುತ್ತಿಯೆ. ॥54॥
(ಶ್ಲೋಕ - 55)
ಮೂಲಮ್
ತ್ವನ್ಮಾಯಾಮೋಹಿತಧಿಯಸ್ತ್ವಾಂ ನ ಜಾನಂತಿ ತತ್ತ್ವತಃ ।
ಮಾನುಷಂ ತ್ವಾಭಿಮನ್ಯಂತೇ ಮಾಯಿನಂ ಪರಮೇಶ್ವರಮ್ ॥
ಅನುವಾದ
ನಿನ್ನ ಮಾಯೆಯಿಂದ ಮೋಹಿತವಾದ ಬುದ್ಧಿಯುಳ್ಳ ಜನರು ನಿನ್ನ ವಾಸ್ತವಿಕ ರೂಪವನ್ನು ತಿಳಿಯಲಾರರು. ಅವರು ಮಾಯಾಪತಿ ಪರಮೇಶ್ವರನಾದ ನಿನ್ನನ್ನು ಸಾಧಾರಣ ಮನುಷ್ಯನೆಂದೇ ಭಾವಿಸುತ್ತಾರೆ. ॥55॥
(ಶ್ಲೋಕ - 56)
ಮೂಲಮ್
ಆಕಾಶವತ್ತ್ವಂ ಸರ್ವತ್ರ ಬಹಿರಂತರ್ಗತೋಽಮಲಃ ।
ಅಸಂಗೋ ಹ್ಯಚಲೋ ನಿತ್ಯಃಶುದ್ಧೋ ಬುದ್ಧಃ ಸದವ್ಯಯಃ ॥
ಅನುವಾದ
ನೀನು ಆಕಾಶದಂತೆ ಒಳ-ಹೊರಗೆ ಎಲ್ಲ ಕಡೆಗಳಲ್ಲಿ ವಿರಾಜಮಾನನಾಗಿರುವೆ, ನಿರ್ಮಲ, ಅಸಂಗ, ಅಚಲ, ನಿತ್ಯ, ಶುದ್ಧ, ಬುದ್ಧ, ಸತ್ಯಸ್ವರೂಪೀ ಹಾಗೂ ಅವ್ಯಯನಾಗಿರುವೆ. ॥56॥
(ಶ್ಲೋಕ - 57)
ಮೂಲಮ್
ಯೋಷಿನ್ಮೂಢಾಹಮಜ್ಞಾ ತೇ ತತ್ತ್ವ ತಂ ಜಾನೇ ಕಥಂ ವಿಭೋ ।
ತಸ್ಮಾತ್ತೇ ಶತಶೋ ರಾಮ ನಮಸ್ಕುರ್ಯಾಮನನ್ಯಧೀಃ ॥
ಅನುವಾದ
ನಾನಾದರೋ ಅಜ್ಞಳಾದ, ಏನೂ ಅರಿಯದ ಹೆಂಗಸಾಗಿರುವೆನು. ಹೇ ವಿಭುವೇ ! ನಿನ್ನ ತತ್ತ್ವವನ್ನು ಹೇಗೆ ತಾನೇ ತಿಳಿದೇನು? ಆದ್ದರಿಂದ ಹೇ ರಾಮನೇ! ನಿನಗೆ ಅನನ್ಯಭಾವದಿಂದ ನೂರಾರು ಬಾರಿ ನಾನು ನಮಸ್ಕರಿಸುವೆನು. ॥57॥
(ಶ್ಲೋಕ - 58)
ಮೂಲಮ್
ದೇವ ಮೇ ಯತ್ರ ಕುತ್ರಾಪಿ ಸ್ಥಿತಾಯಾ ಅಪಿ ಸರ್ವದಾ ।
ತ್ವತ್ಪಾದಕಮಲೇ ಸಕ್ತಾ ಭಕ್ತಿರೇವ ಸದಾಸ್ತು ಮೇ ॥
ಅನುವಾದ
ಹೇ ದೇವಾ! ನಾನು ಎಲ್ಲೆ ಇದ್ದರೂ ಅಲ್ಲಿಯೇ ನಿನ್ನ ಚರಣ ಕಮಲಗಳಲ್ಲಿ ಯಾವಾಗಲೂ ಆಸಕ್ತಿ ಪೂರ್ಣ ದೃಢವಾದ ಭಕ್ತಿಯು ನನಗೆ ಇರಲಿ.॥58॥
(ಶ್ಲೋಕ - 59)
ಮೂಲಮ್
ನಮಸ್ತೇ ಪುರುಷಾಧ್ಯಕ್ಷ ನಮಸ್ತೇ ಭಕ್ತವತ್ಸಲ ।
ನಮಸ್ತೇಸ್ತು ಹೃಷೀಕೇಶ ನಾರಾಯಣ ನಮೋಽಸ್ತು ತೇ ॥
ಅನುವಾದ
ಪುರುಷರಿಗೆಲ್ಲ ಒಡೆಯನೇ, ಭಕ್ತವತ್ಸನೇ, ಇಂದ್ರಿಯಗಳಿಗೆ ಒಡೆಯನಾದ ಹೃಷೀಕೇಶನೇ, ನಾರಾಯಣನೇ ನಿನಗೆ ಪುನಃ ಪುನಃ ನಮಸ್ಕಾರಗಳು.॥59॥
60
ಮೂಲಮ್
ಭವಭಯಹರಮೇಕಂ ಭಾನುಕೋಟಿಪ್ರಕಾಶಂ
ಕರಧೃತಶರಚಾಪಂ ಕಾಲಮೇಘಾವಭಾಸಮ್ ।
ಕನಕರುಚಿರವಸ್ತ್ರಂ ರತ್ನವತ್ಕುಂಡಲಾಢ್ಯಂ
ಕಮಲವಿಶದನೇತ್ರಂ ಸಾನುಜಂ ರಾಮಮೀಡೇ ॥
ಅನುವಾದ
ಪ್ರಪಂಚದ ಭಯವನ್ನು ದೂರಮಾಡುವವನೂ, ಕೋಟಿಸೂರ್ಯ ಪ್ರಕಾಶನೂ, ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿರುವವನೂ, ನೀಲಮೇಘದಂತೆ ಅಂಗಕಾಂತಿಯುಳ್ಳವನೂ, ಭಂಗಾರದಂತಿರುವ ಪೀತಾಂಬರವನ್ನು ಧರಿಸಿರುವವನೂ, ನವರತ್ನಗಳುಳ್ಳ ಕರ್ಣ ಕುಂಡಲಗಳನ್ನು ಧರಿಸಿರುವವನೂ, ಕಮಲದಂತೆ ವಿಶಾಲನೇತ್ರನೂ, ಲಕ್ಷ್ಮಣ ಸಹಿತ ಶ್ರೀರಾಮನಾದ ನಿನ್ನನ್ನು ನಾನು ಸ್ತೋತ್ರ ಮಾಡುವೆನು. ॥60॥
(ಶ್ಲೋಕ - 61)
ಮೂಲಮ್
ಸ್ತುತ್ವೈವಂ ಪುರುಷಂ ಸಾಕ್ಷಾದ್ರಾಘವಂ ಪುರತಃ ಸ್ಥಿತಮ್ ।
ಪರಿಕ್ರಮ್ಯ ಪ್ರಣಮ್ಯಾಶು ಸಾನುಜ್ಞಾತಾ ಯಯೌ ಪತಿಮ್ ॥
ಅನುವಾದ
ಈ ಪ್ರಕಾರ ಎದುರಿಗೇ ನಿಂತಿರುವ ಪುರುಷ ಶ್ರೇಷ್ಠನಾದ ಸಾಕ್ಷಾತ್ ಶ್ರೀರಾಮನನ್ನು ಸ್ತೋತ್ರಮಾಡಿ, ಪ್ರದಕ್ಷಿಣೆ- ನಮಸ್ಕಾರಾದಿಗಳನ್ನು ಮಾಡಿ ಅವಳು ರಾಮನ ಅಪ್ಪಣೆ ಪಡೆದು ಕೂಡಲೇ ಪತಿಯ ಬಳಿಗೆ ಹೊರಟು ಹೋದಳು.॥61॥
(ಶ್ಲೋಕ - 62)
ಮೂಲಮ್
ಅಹಲ್ಯಯಾ ಕೃತಂ ಸ್ತೋತ್ರಂ ಯಃ ಪಠೇದ್ಭಕ್ತಿಸಂಯುತಃ ।
ಸ ಮುಚ್ಯತೇಽಖಿಲೈಃ ಪಾಪೈಃ ಪರಂ ಬ್ರಹ್ಮಾಧಿಗಚ್ಛತಿ ॥
ಅನುವಾದ
ಅಹಲ್ಯೆಯು ಸ್ತುತಿಸಿದ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ಪರಬ್ರಹ್ಮವನ್ನೇ ಸೇರುವನು. ॥62॥
(ಶ್ಲೋಕ - 63)
ಮೂಲಮ್
ಪುತ್ರಾದ್ಯರ್ಥೇ ಪಠೇದ್ಭಕ್ತ್ಯಾ ರಾಮಂ ಹೃದಿ ನಿಧಾಯ ಚ ।
ಸಂವತ್ಸರೇಣ ಲಭತೇ ವಂಧ್ಯಾ ಅಪಿ ಸುಪುತ್ರಕಮ್ ॥
(ಶ್ಲೋಕ - 64)
ಮೂಲಮ್
ಸರ್ವಾನ್ಕಾಮಾನವಾಪ್ನೋತಿ ರಾಮಚಂದ್ರಪ್ರಸಾದತಃ ॥
ಅನುವಾದ
ಮಕ್ಕಳಿಲ್ಲದ ಸ್ತ್ರೀಯೂ ಕೂಡ ಪುತ್ರಾರ್ಥಿಯಾಗಿ ಶ್ರೀರಾಮಚಂದ್ರನನ್ನು ಹೃದಯದಲ್ಲಿ ನೆನೆಯುತ್ತಾ ಭಕ್ತಿಯಿಂದ ಇದನ್ನು ಪಠಿಸಿದರೆ ಒಂದುವರ್ಷದೊಳಗೆ ಸತ್ಪುತ್ರನನ್ನು ಪಡೆಯುವಳು ಹಾಗೂ ಶ್ರೀರಾಮಚಂದ್ರನ ಕೃಪೆಯಿಂದ ಎಲ್ಲ ಇಷ್ಟಾರ್ಥಗಳನ್ನೂ ಹೊಂದುವಳು. ॥63-64॥
(ಶ್ಲೋಕ - 65)
ಮೂಲಮ್
ಬ್ರಹ್ಮಘ್ನೋ ಗುರುಕಲ್ಪಗೋಽಪಿ ಪುರುಷಃ
ಸ್ತೇಯೀ ಸುರಾಪೋಽಪಿವಾ
ಮಾತೃಭ್ರಾತೃವಿಹಿಂಸಕೋಽಪಿ ಸತತಂ
ಭೋಗೈಕಬದ್ಧಾತುರಃ ।
ನಿತ್ಯಂ ಸ್ತೋತ್ರಮಿದಂ ಜಪನ್ ರಘುಪತಿಂ
ಭಕ್ತ್ಯಾ ಹೃದಿಸ್ಥಂ ಸ್ಮರನ್
ಧ್ಯಾಯನ್ಮುಕ್ತಿಮುಪೈತಿ ಕಿಂ ಪುನರಸೌ
ಸ್ವಾಚಾರಯುಕ್ತೊ ನರಃ ॥
ಅನುವಾದ
ಬ್ರಹ್ಮಹತ್ಯೆಯನ್ನು ಮಾಡಿದವನಾಗಲೀ, ಗುರುತಲ್ಪ ಗಮನ ಗೈದವನಾಗಲೀ, ಕಳ್ಳನಾಗಲೀ, ಮದ್ಯಪಾನ ಮಾಡುವವನಾಗಲೀ, ತಂದೆ-ತಾಯಿ-ಸಹೋದರಾದಿಗಳನ್ನು ಹಿಂಸೆ ಮಾಡಿದವನಾಗಲೀ, ನಿರಂತರ ಭೋಗಾಸಕ್ತನಾಗಿರುವವನಾಗಲೀ, ಇಂತಹ ಮಹಾಪಾಪೀ ಮನುಷ್ಯನೂ ಕೂಡ ಪ್ರತಿದಿನವೂ ಈ ಸ್ತೋತ್ರವನ್ನು ಜಪಿಸುತ್ತಾ ಹೃದಯದಲ್ಲಿರುವ ರಘುನಾಥನನ್ನು ನೆನೆಯುವನೋ ಅಂತಹವನು ಮುಕ್ತಿಯನ್ನು ಪಡೆಯುವನು. ಇನ್ನು ಸದಾಚಾರಯುಕ್ತನಾಗಿರುವ ಮನುಷ್ಯನು ಪಠಿಸಿದಲ್ಲಿ ಉದ್ಧಾರವಾಗುವುದರಲ್ಲಿ ಹೇಳುವುದೇನಿದೆ? ॥65॥
ಮೂಲಮ್ (ಸಮಾಪ್ತಿಃ)
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ಅಹಲ್ಯೋದ್ಧರಣಂ ನಾಮ ಪಂಚಮಃ ಸರ್ಗಃ ॥5॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲ ಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.