೦೪

[ನಾಲ್ಕನೆಯ ಸರ್ಗ]

ಭಾಗಸೂಚನಾ

ವಿಶ್ವಾಮಿತ್ರರ ಆಗಮನ, ರಾಮ-ಲಕ್ಷ್ಮಣರು ಅವರೊಂದಿಗೆ ಹೋಗುವುದು ಹಾಗೂ ತಾಟಕಾವಧೆ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಕದಾಚಿತ್ಕೌಶಿಕೋಽಭ್ಯಾಗಾದಯೋಧ್ಯಾಂ ಜ್ವಲನಪ್ರಭಃ ।
ದ್ರಷ್ಟುಂ ರಾಮಂ ಪರಾತ್ಮಾನಂ ಜಾತಂ ಜ್ಞಾತ್ವಾ ಸ್ವಮಾಯಯಾ ॥

ಅನುವಾದ

ಶ್ರೀಮಹಾದೇವನಿಂತೆಂದನು — ಒಮ್ಮೆ ಅಗ್ನಿಯಂತೆ ತೇಜಸ್ವಿಗಳಾದ ಮಹರ್ಷಿ ವಿಶ್ವಾಮಿತ್ರರು-ಪರಮಾತ್ಮನು ತನ್ನದೇ ಮಾಯೆಯಿಂದ ರಾಮರೂಪದಲ್ಲಿ ಪ್ರಕಟನಾಗಿರುವುದನ್ನು ತಿಳಿದು ಅವನ ದರ್ಶನಕ್ಕಾಗಿ ಅಯೋಧ್ಯೆಗೆ ಬಂದರು.॥1॥

2
ಮೂಲಮ್

ದೃಷ್ಟ್ವಾ ದಶರಥೋ ರಾಜಾ ಪ್ರತ್ಯುತ್ಥಾಯಾಚಿರೇಣ ತು ।
ವಸಿಷ್ಠೇನ ಸಮಾಗಮ್ಯ ಪೂಜಯಿತ್ವಾ ಯಥಾವಿಧಿ ॥

3
ಮೂಲಮ್

ಅಭಿವಾದ್ಯ ಮುನಿಂ ರಾಜಾ ಪ್ರಾಂಜಲಿರ್ಭಕ್ತಿನಮ್ರಧೀಃ ।
ಕೃತಾರ್ಥೋಽಸ್ಮಿ ಮುನೀಂದ್ರಾಹಂ ತ್ವದಾಗಮನಕಾರಣಾತ್ ॥

ಅನುವಾದ

ಅವರನ್ನು ನೋಡುತ್ತಲೇ ದಶರಥ ರಾಜನು ತತ್ ಕ್ಷಣ ಮೆಲಕ್ಕೆದ್ದು ವಸಿಷ್ಠರೊಂದಿಗೆ ಮುಂದೆ ಬಂದು ಅವರನ್ನು ಸ್ವಾಗತಿಸಿದನು. ಯಥಾವಿಧಿ ಪೂಜಿಸಿ ಅಭಿವಾದನಗೈದು ರಾಜನು ಭಕ್ತಿಯಿಂದ ವಿನಮ್ರನಾಗಿ ಕೈ ಜೋಡಿಸಿ ಮಹರ್ಷಿಗಳಲ್ಲಿ ಹೇಳಿದನು-ಪೂಜ್ಯರಾದ ಮುನೀಂದ್ರರೇ! ನಿಮ್ಮ ಶುಭಾಗಮನದಿಂದ ಇಂದು ನಾನು ಕೃತಕೃತ್ಯನಾದೆನು. ॥2-3॥

4
ಮೂಲಮ್

ತ್ವದ್ವಿಧಾ ಯದ್ ಗೃಹಂ ಯಾಂತಿ ತತ್ರೈವಾಯಾಂತಿ ಸಂಪದಃ ।
ಯದರ್ಥಮಾಗತೋಽಸಿ ತ್ವಂ ಬ್ರೂಹಿ ಸತ್ಯಂ ಕರೋಮಿ ತತ್ ॥

ಅನುವಾದ

ನಿಮ್ಮಂಥಹ ಮಹಾನುಭಾವರು ಯಾರ ಮನೆಗೆ ಆಗಮಿಸುತ್ತಾರೋ ಅಲ್ಲಿ ಸಕಲ ಸಂಪತ್ತುಗಳು ಬಂದು ಬಿಡುತ್ತವೆ. ನಿಮ್ಮ ಬರವಿವ ಕಾರಣವೇನು? ನಿಮ್ಮ ಶುಭಾಗಮನವು ಯಾವ ಉದ್ದೇಶದಿಂದಾಯಿತು? ತಿಳಿಸಿರಿ. ನಾನು ಸತ್ಯವಾಗಿ ಹೇಳುತ್ತೇನೆ. ನಿಮ್ಮ ಆಜ್ಞೆಯನ್ನು ಅವಶ್ಯವಾಗಿ ಪಾಲಿಸುತ್ತೇನೆ.॥4॥

5
ಮೂಲಮ್

ವಿಶ್ವಾಮಿತ್ರೋಪಿ ತಂ ಪ್ರೀತಃ ಪ್ರತ್ಯುವಾಚ ಮಹಾಮತಿಃ ।
ಅಹಂ ಪರ್ವಣಿ ಸಂಪ್ರಾಪ್ತೇ ದೃಷ್ಟ್ವಾ ಯಷ್ಟುಂ ಸುರಾನ್ ಪಿತೄನ್ ॥

6
ಮೂಲಮ್

ಯದಾರಭೇ ತದಾ ದೈತ್ಯಾ ವಿಘ್ನಂ ಕುರ್ವಂತಿ ನಿತ್ಯಶಃ ।
ಮಾರೀಚಶ್ಚ ಸುಬಾಹುಶ್ಚಾಪರೇ ಚಾನುಚರಾಸ್ತಯೋಃ ॥

ಅನುವಾದ

ಆಗ ವಿಶ್ವಾಮಿತ್ರರು ಪ್ರಸನ್ನರಾಗಿ ರಾಜನಲ್ಲಿ ಹೇಳಿದರು-ಎಂದಾದರು ಪರ್ವಕಾಲದಲ್ಲಿ ನಾನು ದೇವತೆಗಳ, ಪಿತೃಗಳ ಉದ್ದೇಶದಿಂದ ಯಜ್ಞವನ್ನು ಪ್ರಾರಂಭಿಸುತ್ತಲೇ ಮಾರೀಚ, ಸುಬಾಹು ದೈತ್ಯರು ಹಾಗೂ ಅವರ ಬೇರೆ ಬೇರೆ ಅನುಯಾಯಿಗಳೊಂದಿಗೆ ಬಂದು ಯಾವಾಗಲೂ ಅದರಲ್ಲಿ ವಿಘ್ನವನ್ನುಂಟು ಮಾಡುತ್ತಾರೆ.॥5-6॥

7
ಮೂಲಮ್

ಅತಸ್ತಯೋರ್ವಧಾರ್ಥಾಯ ಜ್ಯೇಷ್ಠಂ ರಾಮಂ ಪ್ರಯಚ್ಛ ಮೇ ।
ಲಕ್ಷ್ಮಣೇನ ಸಹ ಭ್ರಾತ್ರಾ ತವ ಶ್ರೇಯೋ ಭವಿಷ್ಯತಿ ॥

ಅನುವಾದ

ಆದುದರಿಂದ ಅವರ ವಧೆಯನ್ನು ಮಾಡಲು ನೀನು ನಿನ್ನ ಹಿರಿಯ ಪುತ್ರನಾದ ಶ್ರೀರಾಮನನ್ನು ಲಕ್ಷ್ಮಣನೊಂದಿಗೆ ನನಗೆ ಕೊಟ್ಟುಬಿಡು. ಇದರಿಂದ ನಿನಗೆ ಶ್ರೇಯಸ್ಸುಂಟಾಗುವುದು. ॥7॥

8
ಮೂಲಮ್

ವಸಿಷ್ಠೇನ ಸಹಾಮಂತ್ರ್ಯ ದೀಯತಾಂ ಯದಿ ರೋಚತೇ ।
ಪಪ್ರಚ್ಛ ಗುರುಮೇಕಾಂತೇ ರಾಜಾ ಚಿಂತಾಪರಾಯಣಃ ॥

ಅನುವಾದ

ಈ ವಿಷಯದಲ್ಲಿ ಗುರು ವಸಿಷ್ಠರೊಂದಿಗೆ ಸಮಾಲೋಚಿಸಿ ಒಂದು ವೇಳೆ ನಿನಗೆ ಒಪ್ಪಿಗೆಯಾದರೆ ನನಗೆ ಕುಮಾರರಿಬ್ಬರನ್ನು ಕೊಡು. ಆಗ ರಾಜನು ಚಿಂತಾಕುಲನಾಗಿ ಏಕಾಂತದಲ್ಲಿ ಗುರುಗಳೊಂದಿಗೆ ಕೇಳಿದನು.॥8॥

9
ಮೂಲಮ್

ಕಿಂ ಕರೋಮಿ ಗುರೋ ರಾಮಂ ತ್ಯಕ್ತುಂ ನೋತ್ಸಹತೇ ಮನಃ ।
ಬಹುವರ್ಷಸಹಸ್ರಾಂತೇ ಕಷ್ಟೇನೋತ್ಪಾದಿತಾಃ ಸುತಾಃ ॥

10
ಮೂಲಮ್

ಚತ್ವಾರೋಽಮರತುಲ್ಯಾಸ್ತೇ ತೇಷಾಂ ರಾಮೋಽತಿವಲ್ಲಭಃ ।
ರಾಮಸ್ತ್ವಿತೋ ಗಚ್ಛತಿ ಚೇನ್ನ ಜೀವಾಮಿ ಕಥಂಚನ ॥

ಅನುವಾದ

ಗುರುಗಳೇ! ಸಾವಿರಾರು ವರ್ಷಗಳು ಕಳೆದ ಬಳಿಕ ತುಂಬಾ ಕಷ್ಟದಿಂದ ನನಗೆ ಈ ದೇವತೆಗಳಂತಿರುವ ನಾಲ್ಕು ಪುತ್ರರು ದೊರಕಿರುವರು. ಇವರಲ್ಲಿ ರಾಮನು ನನಗೆ ಅತ್ಯಂತ ಪ್ರಿಯನಾಗಿರುವನು. ಅದರಿಂದ ಈಗ ನಾನೇನು ಮಾಡಲಿ? ನನ್ನ ಮನಸ್ಸು ರಾಮನನ್ನು ಕೊಡಲು ಒಪ್ಪುವುದಿಲ್ಲ. ಒಂದು ವೇಳೆ ರಾಮನು ಅಗಲಿ ಹೋದರೆ ನಾನು ಹೇಗೆ ಜೀವಿಸಿರಲೀ? ॥9-10॥

11
ಮೂಲಮ್

ಪ್ರತ್ಯಾಖ್ಯಾತೋ ಯದಿ ಮುನಿಃ ಶಾಪಂ ದಾಸ್ಯತ್ಯಸಂಶಯಃ ।
ಕಥಂ ಶ್ರೇಯೋ ಭವೇನ್ಮಹ್ಯಮಸತ್ಯಂ ಚಾಪಿ ನ ಸ್ಪೃಶೇತ್ ॥

ಅನುವಾದ

ಆದರೆ ನಾನು ಮುನಿಯ ಮಾತನ್ನು ಅಲ್ಲಗಳೆದರೆ, ತಿರಸ್ಕರಿಸಿದರೆ ನಿಶ್ಚಯವಾಗಿ ಅವರು ಶಪಿಸುವರು. ಆದುದರಿಂದ ಈಗ ನನ್ನ ಹಿತವು ಹೇಗಾದೀತು? ಹಾಗೂ ನಾನು ಅಸತ್ಯ ಭಾಷಣದಿಂದ ಹೇಗೆ ಬದುಕುಳಿಯುವೆನು? ಇದನ್ನು ತಿಳಿಸಿರಿ.॥ 11 ॥

12
ಮೂಲಮ್ (ವಾಚನಮ್)

ವಷಿಷ್ಠ ಉವಾಚ

ಮೂಲಮ್

ಶೃಣು ರಾಜನ್ ದೇವಗುಹ್ಯಂ ಗೋಪನೀಯಂ ಪ್ರಯತ್ನತಃ ।
ರಾಮೋ ನ ಮಾನುಷೋ ಜಾತಃ ಪರಮಾತ್ಮಾ ಸನಾತನಃ ॥

13
ಮೂಲಮ್

ಭೂಮೇರ್ಭಾರಾವತಾರಾಯ ಬ್ರಹ್ಮಣಾ ಪ್ರಾರ್ಥಿತಃ ಪುರಾ ।
ಸ ಏವ ಜಾತೋ ಭವನೇ ಕೌಸಲ್ಯಾಯಾಂ ತವಾನಘ ॥

14
ಮೂಲಮ್

ತ್ವಂ ತು ಪ್ರಜಾಪತಿಃ ಪೂರ್ವಂ ಕಶ್ಯಪೋ ಬ್ರಹ್ಮಣಃ ಸುತಃ ।
ಕೌಸಲ್ಯಾ ಚಾದಿತಿರ್ದೇವಮಾತಾ ಪೂರ್ವಂ ಯಶಸ್ವಿನೀ ।
ಭವಂತೌ ತಪ ಉಗ್ರಂ ವೈ ತೇಪಾಥೇ ಬಹುವತ್ಸರಮ್ ॥

15
ಮೂಲಮ್

ಅಗ್ರಾಮ್ಯವಿಷಯೌ ವಿಷ್ಣು ಪೂಜಾಧ್ಯಾನೈಕತತ್ಪರೌ ।
ತದಾ ಪ್ರಸನ್ನೋ ಭಗವಾನ್ ವರದೋ ಭಕ್ತವತ್ಸಲಃ ॥

16
ಮೂಲಮ್

ವೃಣೀಷ್ವ ವರಮಿತ್ಯುತ್ತೇ ತ್ವಂ ಮೇ ಪುತ್ರೋ ಭವಾಮಲ ।
ಇತಿ ತ್ವಯಾ ಯಾಚಿತೋಽಸೌ ಭಗವಾನ್ ಭೂತಭಾವನಃ ॥

17
ಮೂಲಮ್

ತಥೇತ್ಯುಕ್ತ್ವಾದ್ಯ ಪುತ್ರಸ್ತೇ ಜಾತೋ ರಾಮಃ ಸ ಏವ ಹಿ ।
ಶೇಷಸ್ತು ಲಕ್ಷ್ಮಣೋ ರಾಜನ್ ರಾಮಮೇವಾನ್ವಪದ್ಯತ ॥

ಅನುವಾದ

ವಸಿಷ್ಠರು ಹೇಳಿದರು — ಎಲೈ ರಾಜನೇ! ದೇವತೆಗಳಿಗೂ ರಹಸ್ಯವಾಗಿರುವ ಮತ್ತು ಪ್ರಯತ್ನ ಪೂರ್ವಕವಾಗಿ ಗೋಪ್ಯ ವಾಗಿಟ್ಟುಕೊಳ್ಳಬೇಕಾದ ವಿಷಯವೊಂದನ್ನು ಕೇಳು-ಈ ರಾಮನು ಮನುಷ್ಯನಲ್ಲ. ಸನಾತನನಾದ ಪರಮಾತ್ಮನು. ಭೂಭಾರವನ್ನು ಇಳಿಸುವುದಕ್ಕಾಗಿ ಹಿಂದೆ ಬ್ರಹ್ಮದೇವರ ಪ್ರಾರ್ಥನೆಯನ್ನು ನೆರವೇರಿಸಲೋಸುಗ ಆ ಪರಮೇಶ್ವರನು ಈಗ ನಿನ್ನ ಪತ್ನೀ ಕೌಸಲ್ಯೆಯಲ್ಲಿ (ತನ್ನ ಮಾಯೆಯಿಂದ) ಅವತರಿಸಿರುವನು. ಹೇ ಪುಣ್ಯಾತ್ಮನೆ! ಹಿಂದೆ ನೀನು ಬ್ರಹ್ಮ ಪುತ್ರನಾದ ಕಶ್ಯಪ ಪ್ರಜಾಪತಿಯಾಗಿದ್ದೆ. ಕೀರ್ತಿವಂತಳಾದ ಕೌಸಲ್ಯೆಯು ದೇವಮಾತೆ ಅದಿತಿಯಾಗಿದ್ದಳು. ನೀವಿಬ್ಬರೂ ಬಹಳ ವರ್ಷಗಳ ಕಾಲ ಗ್ರಾಮ್ಯವಿಷಯಗಳನ್ನು ತ್ಯಜಿಸಿ ಏಕಮಾತ್ರ ಭಗವಾನ್ ಶ್ರೀವಿಷ್ಣುವಿನ ಪೂಜೆ-ಧ್ಯಾನಾದಿಗಳಲ್ಲಿ ನಿರತರಾಗಿ ಉಗ್ರವಾದ ತಪಸ್ಸನ್ನು ಆಚರಿಸಿದಿರಿ. ಆಗ ಭಕ್ತವತ್ಸಲನೂ, ವರಪ್ರದನೂ ಆದ ಭಗವಾನ್ ನಾರಾಯಣನು ಪ್ರಸನ್ನನಾಗಿ ‘ವರವನ್ನು ಕೇಳು’ ಎಂದನು. ಆಗ ‘ನಿರಂಜನಾ! ನೀನೆ ನಮಗೆ ಮಗನಾಗು’ ಎಂದು ವರ ಬೇಡಿದಾಗ ಭೂತಭಾವನ ಭಗವಂತನು ‘ಹಾಗೆಯೇ ಆಗಲೀ’ ಎಂದು ಹೇಳಿ, ಈಗ ಅವನೇ ಶ್ರೀರಾಮ ರೂಪದಿಂದ ನಿಮಗೆ ಮಗನಾಗಿರುವನು. ರಾಜನೇ! ಅವನ ಸೇವೆ ಮಾಡಲು ಆದಿಶೇಷನೇ ಲಕ್ಷ್ಮಣನಾಗಿ ಅವತರಿಸಿ ರಾಮನನ್ನೇ ಅನುಸರಿಸುತ್ತಿರುವನು. ॥12-17॥

18
ಮೂಲಮ್

ಜಾತೌ ಭರತಶತ್ರುಘ್ನೌ ಶಂಖಚಕ್ರೇ ಗದಾಭೃತಃ ।
ಯೋಗಮಾಯಾಪಿ ಸೀತೇತಿ ಜಾತಾ ಜನಕನಂದಿನೀ ॥

ಅನುವಾದ

ಗದಾಧರನಾದ ವಿಷ್ಣುವಿನ ಶಂಖ ಚಕ್ರಗಳೇ ಭರತ ಶತ್ರುಘ್ನರಾಗಿ ಅವತರಿಸಿದ್ದಾರೆ. ಯೋಗ ಮಾಯೆಯು ಜನಕ ನಂದಿನಿ ಸೀತೆಯಾಗಿ ಅವತರಿಸಿರುವಳು. ॥18॥

19
ಮೂಲಮ್

ವಿಶ್ವಾಮಿತ್ರೋಽಪಿ ರಾಮಾಯ ತಾಂ ಯೋಜಯಿತುಮಾಗತಃ ।
ಏತದ್ಗುಹ್ಯತಮಂ ರಾಜನ್ ನ ವಕ್ತವ್ಯಂ ಕದಾಚನ ॥

20
ಮೂಲಮ್

ಅತಃ ಪ್ರೀತೇನ ಮನಸಾ ಪೂಜಯಿತ್ವಾಥ ಕೌಶಿಕಮ್ ।
ಪ್ರೇಷಯಸ್ವ ರಮಾನಾಥಂ ರಾಘವಂ ಸಹಲಕ್ಷ್ಮಣಮ್ ॥

ಅನುವಾದ

ವಿಶ್ವಾಮಿತ್ರರು ರಾಮನೊಡನೆ ಸೀತೆಯ ಸಂಯೋಗ ಮಾಡಿಸಲೆಂದೇ ಬಂದಿರುವರು. ರಾಜನೇ! ಇದು ಅತಿರಹಸ್ಯವಾದುದು, ಯಾರಿಗೂ ಹೇಳಬಾರದು. ಆದ್ದರಿಂದ ಕೌಶಿಕರನ್ನು ಪೂಜಿಸಿ, ಪ್ರಸನ್ನ ಚಿತ್ತದಿಂದ ಲಕ್ಷ್ಮೀಪತಿಯಾದ ಶ್ರೀರಾಮನನ್ನು ಲಕ್ಷ್ಮಣನೊಂದಿಗೆ ಕಳಿಸಿಕೊಡು. ॥19-20॥

21
ಮೂಲಮ್

ವಸಿಷ್ಠೇನೈವಮುಕ್ತಸ್ತು ರಾಜಾ ದಶರಥಸ್ತದಾ ।
ಕೃತಕೃತ್ಯಮಿವಾತ್ಮಾನಂ ಮೇನೇ ಪ್ರಮುದಿತಾಂತರಃ ॥

22
ಮೂಲಮ್

ಆಹೂಯ ರಾಮರಾಮೇತಿ ಲಕ್ಷ್ಮಣೇತಿ ಚ ಸಾದರಮ್ ।
ಆಲಿಂಗ್ಯ ಮೂರ್ಧ್ನ್ಯವಘ್ರಾಯ ಕೌಶಿಕಾಯ ಸಮರ್ಪಯತ್ ॥

ಅನುವಾದ

ವಸಿಷ್ಠರು ಈ ರೀತಿಯಾಗಿ ಹೇಳಿದಾಗ ದಶರಥ ಮಹಾರಾಜನು ತನ್ನನ್ನು ಕೃತಕೃತ್ಯನೆಂದು ತಿಳಿದು, ಸಂತೋಷ ಭರಿತನಾಗಿ ಪ್ರೇಮದಿಂದ ‘ರಾಮಾ! ರಾಮಾ! ಲಕ್ಷ್ಮಣಾ ಬನ್ನಿರಿ’ ಎಂದು ಆದರದಿಂದ ಕರೆದು, ಇಬ್ಬರನ್ನು ಆಲಂಗಿಸಿಕೊಂಡು ನೆತ್ತಿಯನ್ನು ಮೂಸಿ ವಿಶ್ವಾಮಿತ್ರರಿಗೆ ಒಪ್ಪಿಸಿದನು.॥21-22॥

23
ಮೂಲಮ್

ತತೋಽತಿಹೃಷ್ಟೋ ಭಗವಾನ್ವಿಶ್ವಾಮಿತ್ರಃ ಪ್ರತಾಪವಾನ್ ।
ಆಶೀರ್ಭಿರಭಿನಂದ್ಯಾಥ ಆಗತೌ ರಾಮಲಕ್ಷ್ಮಣೌ ॥

24
ಮೂಲಮ್

ಗೃಹೀತ್ವಾ ಚಾಪತೂಣೀರಬಾಣಖಡ್ಗಧರೌ ಯಯೌ ।
ಕಿಂಚಿದ್ದೇಶಮತಿಕ್ರಮ್ಯ ರಾಮಮಾಹೂಯ ಭಕ್ತಿತಃ ॥

25
ಮೂಲಮ್

ದದೌ ಬಲಾಂ ಚಾತಿಬಲಾಂ ವಿದ್ಯೇ ದ್ವೇ ದೇವನಿರ್ಮಿತೇ ।
ಯಯೋರ್ಗ್ರಹಣಮಾತ್ರೇಣ ಕ್ಷುತ್ ಕ್ಷಾಮಾದಿ ನ ಜಾಯತೇ ॥

ಅನುವಾದ

ಪೂಜ್ಯರೂ, ಪ್ರತಾಪಶಾಲಿಗಳೂ ಆದ ವಿಶ್ವಾಮಿತ್ರರು ಸಂತೋಷಗೊಂಡು ಅವರನ್ನು ಆಶೀರ್ವದಿಸಿದರು. ಧನುಷ್ಯ, ಬಾಣ, ಬತ್ತಳಿಕೆ ಮತ್ತು ಖಡ್ಗ ಮೊದಲಾದ ಆಯುಧಗಳನ್ನು ಧರಿಸಿ ತನ್ನ ಬಳಿಗೆ ಬಂದಿರುವ ರಾಮ-ಲಕ್ಷ್ಮಣರೊಂದಿಗೆ ಮುನಿಯು ಅಲ್ಲಿಂದ ಹೊರಟರು. ಸ್ವಲ್ಪದೂರ ಸಾಗಿದ ಬಳಿಕ ವಿಶ್ವಾಮಿತ್ರರು ಭಕ್ತಿಯಿಂದ ಶ್ರೀರಾಮನನ್ನು ಕರೆದು ಯಾವುದನ್ನು ಸ್ವೀಕರಿಸುವುದರಿಂದ ಹಸಿವು, ಬಳಲಿಕೆ, ಸಂಕಟಾದಿಗಳುಂಟಾಗುವುದಿಲ್ಲವೋ ಅಂತಹ ದೇವನಿರ್ಮಿತ ಬಲಾ ಮತ್ತು ಅತಿಬಲಾ ಎಂಬ ಎರಡು ವಿದ್ಯೆಗಳನ್ನು ಅನುಗ್ರಹಿಸಿದರು.॥23-25॥

26
ಮೂಲಮ್

ತತ ಉತ್ತೀರ್ಯ ಗಂಗಾಂ ತೇ ತಾಟಕಾವನಮಾಗಮನ್ ।
ವಿಶ್ವಾಮಿತ್ರಸ್ತದಾ ಪ್ರಾಹ ರಾಮಂ ಸತ್ಯಪರಾಕ್ರಮಮ್ ॥

27
ಮೂಲಮ್

ಅತ್ರಾಸ್ತಿ ತಾಟಕಾ ನಾಮ ರಾಕ್ಷಸೀ ಕಾಮರೂಪಿಣೀ ।
ಬಾಧತೇ ಲೋಕಮಖಿಲಂ ಜಹಿ ತಾಮವಿಚಾರಯನ್ ॥

ಅನುವಾದ

ಅನಂತರ ಅವರು ಗಂಗೆಯನ್ನು ದಾಟಿ ತಾಟಕಾವನಕ್ಕೆ ಬಂದರು. ಆಗ ವಿಶ್ವಾಮಿತ್ರರು ಸತ್ಯ ಪರಾಕ್ರಮಿಯಾದ ಶ್ರೀರಾಮನಲ್ಲಿ ಹೇಳಿದರು- ‘ಇಲ್ಲಿ ತಾಟಕೆ ಎಂಬ ಹೆಸರಿನ ಇಚ್ಛಾರೂಪವನ್ನು ಧರಿಸಬಲ್ಲ ರಾಕ್ಷಸಿಯು ವಾಸಿಸುತ್ತಾಳೆ. ಇವಳು ಎಲ್ಲ ಜನರಿಗೆ ತೊಂದರೆಯುಂಟು ಮಾಡುತ್ತಾಳೆ. ಇವಳನ್ನು ಹೆಂಗಸೆಂದು ಪರಿಗಣಿಸದೆ (ಕ್ರೂರಳೆಂದೇ ತಿಳಿದು) ನೀನು ಕೊಂದುಬಿಡು.’ ॥26-27॥

28
ಮೂಲಮ್

ತಥೇತಿ ಧನುರಾದಾಯ ಸಗುಣಂ ರಘುನಂದನಃ ।
ಟಂಕಾರಮಕರೋತ್ತೇನ ಶಬ್ದೇನಾಪೂರಯದ್ವನಮ್ ॥

29
ಮೂಲಮ್

ತಚ್ಛ್ರುತ್ವಾ ಸಹಮಾನಾ ಸಾ ತಾಟಕಾ ಘೋರರೂಪಿಣೀ ।
ಕ್ರೋಧಸಂಮೂರ್ಚ್ಛಿತಾ ರಾಮಮಭಿದುದ್ರಾವ ಮೇಘವತ್ ॥

ಅನುವಾದ

ಹಾಗೆಯೇ ಆಗಲೆಂದು ರಘುನಾಥನು ಬಿಲ್ಲಿಗೆ ಹೆದೆಯೇರಿಸಿ ಧನುಷ್ಟಂಕಾರ ಮಾಡಿದನು. ಆ ಶಬ್ದದಿಂದ ವನವೆಲ್ಲವು ಮೊಳಗಿತು. ಆ ಶಬ್ದವನ್ನು ಕೇಳಿ ಸಹಿಸಲಾರದೆ ಘೋರರೂಪಿಣಿ ತಾಟಕೆಯು ಕೋಪದಿಂದ ಹುಚ್ಚಿಯಾಗಿ ಕರಿಮೋಡದಂತೆ ರಾಮನೆಡೆಗೆ ನುಗ್ಗಿದಳು. ॥28-29॥

30
ಮೂಲಮ್

ತಾಮೇಕೇನ ಶರೇಣಾಶು ತಾಡಯಾಮಾಸ ವಕ್ಷಸಿ ।
ಪಪಾತ ವಿಪಿನೇ ಘೋರಾ ವಮಂತೀ ರುಧಿರಂ ಬಹು ॥

ಅನುವಾದ

ಭಗವಾನ್ ಶ್ರೀರಾಮನು ಕೂಡಲೇ ಒಂದು ಬಾಣವನ್ನು ಅವಳ ವಕ್ಷಃಸ್ಥಳಕ್ಕೆ ಹೊಡೆದನು. ಅದರಿಂದ ಆ ಘೋರ ರಾಕ್ಷಸಿಯು ಬಹಳವಾಗಿ ರಕ್ತವನ್ನು ಕಾರುತ್ತಾ ಕಾಡಿನಲ್ಲಿ ಸತ್ತು ಬಿದ್ದಳು.॥30॥

31
ಮೂಲಮ್

ತತೋಽತಿಸುಂದರೀ ಯಕ್ಷೀ ಸರ್ವಾಭರಣಭೂಷಿತಾ ।
ಶಾಪಾತ್ಪಿಶಾಚತಾಂ ಪ್ರಾಪ್ತಾ ಮುಕ್ತಾ ರಾಮಪ್ರಸಾದತಃ ॥

32
ಮೂಲಮ್

ನತ್ವಾ ರಾಮಂ ಪರಿಕ್ರಮ್ಯ ಗತಾ ರಾಮಾಜ್ಞಯಾ ದಿವಮ್ ॥

ಅನುವಾದ

ಹಿಂದೆ ಶಾಪದಿಂದ ಪಿಶಾಚಿ ಜನ್ಮವನ್ನು ಹೊಂದಿದ್ದ ಆ ತಾಟಕೆಯು ಶ್ರೀರಾಮನ ಕೃಪೆಯಿಂದ ಶಾಪ ಮುಕ್ತಳಾಗಿ ಅತ್ಯಂತ ಸುಂದರಿ ಯಾದ ಯಕ್ಷಸ್ತ್ರೀಯಾಗಿ ಸರ್ವಾಲಂಕಾರ ಭೂಷಿತಳಾಗಿ ಶ್ರೀರಾಮನಿಗೆ ಪ್ರದಕ್ಷಣೆ ಮಾಡಿ ನಮಸ್ಕರಿಸಿ ರಾಮನ ಅಪ್ಪಣೆಯಂತೆ ದೇವಲೋಕಕ್ಕೆ ಹೊರಟು ಹೋದಳು. ॥31-32॥

33
ಮೂಲಮ್

ತತೋಽತಿಹೃಷ್ಟಃ ಪರಿರಭ್ಯ ರಾಮಂ
ಮೂರ್ಧನ್ಯವ್ರಾಯ ವಿಚಿಂತ್ಯ ಕಿಂಚಿತ್ ।
ಸರ್ವಾಸ್ತ್ರಜಾಲಂ ಸರಹಸ್ಯಮಂತ್ರಂ
ಪ್ರೀತ್ಯಾಭಿರಾಮಾಯ ದದೌ ಮುನೀಂದ್ರಃ ॥

ಅನುವಾದ

ಆಗ ಮುನಿಶ್ರೇಷ್ಠರಾದ ವಿಶ್ವಾಮಿತ್ರರು ಮನಸ್ಸಿನಲ್ಲಿ ಬಹಳ ಸಂತೋಷಗೊಂಡವರಾಗಿ ರಾಮನನ್ನು ಆಲಿಂಗಿಸಿ, ಶಿರವನ್ನು ಆಘ್ರಾಣಿಸಿ, ಏನನ್ನೋ ಮನದಲ್ಲಿ ಆಲೋಚಿಸಿ* ರಹಸ್ಯ ಮಂತ್ರಗಳಿಂದ ಕೂಡಿದ ಎಲ್ಲ ಅಸ್ತ್ರ ಸಮೂಹವನ್ನೂ ಪ್ರೀತಿಯಿಂದ ಶ್ರೀರಾಮನಿಗೆ ದಯಪಾಲಿಸಿದರು. ॥33॥

ಟಿಪ್ಪನೀ
  • ವಿಶ್ವಾಮಿತ್ರರು ಹಿಂದೆ ಗಾಧಿರಾಜನಾಗಿದ್ದಾಗ ಶಿವನನ್ನು ಒಲಿಸಿ ಅವನಿಂದ ರಹಸ್ಯಮಯ ಸಮಸ್ತ ಅಸ್ತ್ರಗಳನ್ನು ಪಡೆದಿದ್ದರು. ಈಗ ಬ್ರಹರ್ಷಿಯಾದ ಬಳಿಕ ಅದರ ಉಪಯೋಗವಿಲ್ಲದೆ, ಅವೆಲ್ಲವನ್ನು ಶ್ರೀರಾಮಚಂದ್ರನಿಗೆ ಅರ್ಪಿಸುವುದರಿಂದ ಆ ಅಸ್ತ್ರಗಳು ಸಾರ್ಥಕವಾದಾವು. ಈ ಅಸ್ತ್ರಗ್ರಾಮವನ್ನು ಪಡೆಯುವಲ್ಲಿ ಶ್ರೀರಾಮನಿಗಿಂತ ಯೋಗ್ಯರಾದವರೂ ಬೇರೆ ಯಾರೂ ಇರಲಾರರು. ಇದರಿಂದ ನನ್ನಿಂದ ಕಿಂಚಿತ್ ಭಗವತ್ಸೇವೆಯೂ ನಡೆದಂತಾದೀತು. ಎಂದು ವಿಶ್ವಾಮಿತ್ರರು ಆಲೋಚಿಸಿದರು.
ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ಚತುರ್ಥಃ ಸರ್ಗಃ ॥4॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲಕಾಂಡದಲ್ಲಿ ನಾಲ್ಕನೆಯ ಸರ್ಗವು ಮುಗಿಯಿತು.