೦೩

[ಮೂರನೆಯ ಸರ್ಗ]

ಭಾಗಸೂಚನಾ

ಭಗವಂತನ ಅವತಾರ ಮತ್ತು ಬಾಲಲೀಲೆ

1
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಅಥ ರಾಜಾ ದಶರಥಃ ಶ್ರೀಮಾನ್ಸತ್ಯಪರಾಯಣಃ ।
ಅಯೋಧ್ಯಾಧಿಪತಿರ್ವೀರಃ ಸರ್ವಲೋಕೇಷು ವಿಶ್ರುತಃ ॥

2
ಮೂಲಮ್

ಸೋಽನಪತ್ಯತ್ವದುಃಖೇನ ಪೀಡಿತೋ ಗುರುಮೇಕದಾ ।
ವಸಿಷ್ಠಂ ಸ್ವಕುಲಾಚಾರ್ಯಮಭಿವಾದ್ಯೇದಮಬ್ರವೀತ್ ॥

ಅನುವಾದ

ಶ್ರೀಮಹಾದೇವನಿಂತೆಂದನು - ಒಮ್ಮೆ ಸಕಲ ಲೋಕ ಪ್ರಸಿದ್ಧನೂ, ಧೀಮಂತನೂ, ಸತ್ಯ ಪರಾಯಣನೂ, ವೀರನೂ, ಅಯೋಧ್ಯಾಧಿಪತಿಯಾದ ದಶರಥರಾಜನು ತನಗೆ ಪುತ್ರ ಸಂತಾನವಿಲ್ಲದೆ ಅತ್ಯಂತ ದುಃಖಿತನಾಗಿ ತನ್ನ ಕುಲಗುರುಗಳಾದ ಆಚಾರ್ಯ ವಸಿಷ್ಠರನ್ನು ಕರೆಸಿ ಅವರಿಗೆ ಪ್ರಣಾಮಗೈದು ಇಂತೆಂದನು ॥1-2॥

3
ಮೂಲಮ್

ಸ್ವಾಮಿನ್ ಪುತ್ರಾಃ ಕಥಂ ಮೇ ಸ್ಯುಃ ಸರ್ವಲಕ್ಷಣಲಕ್ಷಿತಾಃ ।
ಪುತ್ರಹೀನಸ್ಯ ಮೇ ರಾಜ್ಯಂ ಸರ್ವಂ ದುಃಖಾಯ ಕಲ್ಪತೇ ॥

ಅನುವಾದ

ಗುರುಗಳೇ! ಸರ್ವಸುಲಕ್ಷಣಗಳಿಂದ ಕೂಡಿದ ಪುತ್ರರು ನನಗೆ ಯಾವ ಪ್ರಕಾರದಿಂದ ಉಂಟಾದಾರು? ಇದನ್ನು ಹೇಳಿರಿ. ಏಕೆಂದರೆ ಪುತ್ರರಿಲ್ಲದೆ ಈ ಸಂಪೂರ್ಣ ರಾಜ್ಯವು ನನಗೆ ದುಃಖ ರೂಪದಂತೆ ಕಾಣುತ್ತಿದೆ.॥3॥

4
ಮೂಲಮ್

ತತೋಽಬ್ರವೀದ್ವಸಿಷ್ಠಸ್ತಂ ಭವಿಷ್ಯಂತಿ ಸುತಾಸ್ತವ ।
ಚತ್ವಾರಃ ಸತ್ತ್ವಸಂಪನ್ನಾ ಲೋಕಪಾಲಾ ಇವಾಪರಾಃ ॥

ಅನುವಾದ

ಆಗ ದಶರಥ ರಾಜನಲ್ಲಿ ವಸಿಷ್ಠರು ಹೇಳಿದರು - ನಿನಗೆ ಸಾಕ್ಷಾತ್ ಲೋಕಪಾಲಕರಂತೆ ಅತ್ಯಂತ ಶಕ್ತಿಸಂಪನ್ನರಾದ ನಾಲ್ಕು ಪುತ್ರರು ಜನಿಸುತ್ತಾರೆ. ॥4॥

5
ಮೂಲಮ್

ಶಾಂತಾಭರ್ತಾರಮಾನೀಯ ಋಷ್ಯ ಶೃಂಗಂ ತಪೋಧನಮ್ ।
ಅಸ್ಮಾಭಿಃ ಸಹಿತಃ ಪುತ್ರಕಾಮೇಷ್ಟಿಂ ಶೀಘ್ರಮಾಚರ ॥

ಅನುವಾದ

ನೀನು ತಪೋಧನರಾದ ಶಾಂತಾಳ ಪತಿ ಋಷ್ಯಶೃಂಗರನ್ನು* ಕರೆಸಿ ಬೇಗನೇ ನಮ್ಮನ್ನು ಜೋತೆಯಾಗಿಸಿ ಪುತ್ರಕಾಮೇಷ್ಟಿ ಯಜ್ಞದ ಅನುಷ್ಠಾನವನ್ನು ಮಾಡು. ॥5॥

ಟಿಪ್ಪನೀ
  • ಋಷ್ಯಶೃಂಗ ಮುನಿಗಳು ವಿಭಾಂಡಕರ ಪುತ್ರರಾಗಿದ್ದರು. ಒಂದು ಸಲ ವಿಭಾಂಡಕ ಮುನಿಗಳು ಒಂದು ನೀರಿನ ಕುಂಡದಲ್ಲಿ ಸಮಾಧಿಯಲ್ಲಿ ಕುಳಿತ್ತಿದ್ದರು. ಅದೇ ಸಮಯ ಅತ್ತಕಡೆಯಿಂದ ಅಪ್ಸರೆ ಊರ್ವಶಿಯು ಹೋಗುತ್ತಿದ್ದಳು. ಅವಳನ್ನು ನೋಡಿದ ಮುನಿಯ ವೀರ್ಯಸ್ಖಲಿತವಾಯಿತು. ಅದನ್ನು ನೀರಿನೊಂದಿಗೆ ಒಂದು ಹೆಣ್ಣು ಜಿಂಕೆಯು ಕುಡಿದು ಬಿಟ್ಟಿತು. ಅದರಿಂದ ಇವರ ಜನ್ಮವಾಯಿತು. ತಾಯಿಯಂತೆ ಇವರ ತಲೆಯ ಮೇಲೆ ಕೋಡುಗಳು ಮೂಡುವ ಸಂಭವವಿತ್ತು; ಅದಕ್ಕಾಗಿ ತಂದೆ ವಿಭಾಂಡಕರು ಇವರ ಹೆಸರು ಋಷ್ಯಶೃಂಗವೆಂದು ಇಟ್ಟರು. ಒಂದು ಸಲ ಅಂಗದೇಶದಲ್ಲಿ ಘೋರವಾದ ಕ್ಷಾಮತಲೆದೋರಿತು. ಆಗ ಮುನಿಗಳು ಅಂಗದೇಶದ ನರೇಶ ರೋಮಪಾದನಿಗೆ ಹೇಳಿದರು- ಒಂದು ವೇಳೆ ಬಾಲಬ್ರಹ್ಮಚಾರೀ ಋಷ್ಯಶೃಂಗನನ್ನು ಇಲ್ಲಿಗೆ ಕರೆತರಲು ಸಾಧ್ಯವಾದರೆ ಮಳೆ ಆಗುತ್ತದೆ. ರಾಜನ ಪ್ರಯತ್ನದಿಂದ ಅವರು ಬಂದರು. ಅವರು ಬರುತ್ತಲೇ ಅಂಗ ದೇಶದಲ್ಲಿ ಧಾರಾಳ ಮಳೆಯಾಯಿತು. ರಾಜನು ಅವರ ಇಂತಹ ಅದ್ಭುತ ಪ್ರಭಾವವನ್ನು ನೋಡಿ ಅವರಿಗೆ ತನ್ನ ಕನ್ಯೆ ಶಾಂತಾಳನ್ನು ವಿವಾಹಮಾಡಿಕೊಟ್ಟನು. ಕೆಲವು ಕಡೆ ಈ ಶಾಂತಾಳು ಮಹಾರಾಜಾ ದಶರಥನ ಮಗಳಾಗಿದ್ದಳು ಹಾಗೂ ಅವಳನ್ನು ರೋಮಪಾದನಿಗೆ ದತ್ತಕವಾಗಿ ಕೊಟ್ಟಿದ್ದನು ಎಂದೂ ಹೇಳುತ್ತಾರೆ.
6
ಮೂಲಮ್

ತಥೇತಿ ಮುನಿಮಾನೀಯ ಮಂತ್ರಿಭಿಃ ಸಹಿತಃ ಶುಚಿಃ ।
ಯಜ್ಞಕರ್ಮ ಸಮಾರೇಭೇ ಮುನಿಭಿರ್ವೀತಕಲ್ಮಷೈಃ ॥

ಅನುವಾದ

‘ಹಾಗೆಯೇ ಆಗಲಿ’ ಎಂದು ಹೇಳಿ ರಾಜನು ಮುನಿವರ ಋಷ್ಯಶೃಂಗರನ್ನು ಕರೆಸಿ, ಮಂತ್ರಿಗಳ ಸಹಿತ ಶುಚಿರ್ಭೂತನಾಗಿ ದೋಷರಹಿತ ಮುನಿಗಳ ಸಹಕಾರದಿಂದ ಯಜ್ಞಾನುಷ್ಠಾನವನ್ನು ಪ್ರಾರಂಭಿಸಿದನು. ॥6॥

7
ಮೂಲಮ್

ಶ್ರದ್ಧಯಾ ಹೂಯಮಾನೇಽಗ್ನೌ ತಪ್ತಜಾಂಬೂನದಪ್ರಭಃ ।
ಪಾಯಸಂ ಸ್ವರ್ಣಪಾತ್ರಸ್ಥಂ ಗೃಹೀತ್ವೋವಾಚ ಹವ್ಯವಾಟ್ ॥

ಅನುವಾದ

ಯಜ್ಞಾನುಷ್ಠಾನದಲ್ಲಿ ಅಗ್ನಿಗೆ ಶ್ರದ್ಧೆಯಿಂದ ಆಹುತಿಗಳನ್ನು ಕೊಡುತ್ತಿರಲು, ಪುಟವಿಟ್ಟ ಚಿನ್ನದಂತಹ ಕಾಂತಿಯಿಂದೊಡಗೂಡಿದ ಯಜ್ಞಪುರುಷನಾದ ಭಗವಾನ್ ಅಗ್ನಿದೇವನು ಒಂದು ಸ್ವರ್ಣಪಾತ್ರೆಯಲ್ಲಿದ್ದ ಪಾಯಸವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಕಟನಾಗಿ ಹೀಗೆ ಹೇಳಿದನು. ॥7॥

8
ಮೂಲಮ್

ಗೃಹಾಣ ಪಾಯಸಂ ದಿವ್ಯಂ ಪುತ್ರೀಯಂ ದೇವನಿರ್ಮಿತಮ್ ।
ಲಪ್ಸ್ಯಸೇ ಪರಮಾತ್ಮಾನಂ ಪುತ್ರತ್ವೇನ ನ ಸಂಶಯಃ ॥

ಅನುವಾದ

ಹೇ ರಾಜನೇ! ಇದೋ ದೇವತೆಗಳು ಸಿದ್ಧಗೊಳಿಸಿದ ಪುತ್ರ ಪ್ರದವಾದ ದಿವ್ಯ ಪಾಯಸವನ್ನು ತೆಗೆದುಕೋ, ಇದರಿಂದ ನೀನು ನಿಸ್ಸಂದೇಹವಾಗಿ ಸಾಕ್ಷಾತ್ ಪರಮಾತ್ಮನನ್ನು ಪುತ್ರರೂಪದಿಂದ ಪಡೆಯುವೆ. ॥8॥

9
ಮೂಲಮ್

ಇತ್ಯುಕ್ತ್ವಾ ಪಾಯಸಂ ದತ್ತ್ವಾ ರಾಜ್ಞೇ ಸೋಽಂತರ್ದಧೇಽನಲಃ ।
ವವಂದೇ ಮುನಿಶಾರ್ದೂಲೌ ರಾಜಾ ಲಬ್ಧಮನೋರಥಃ ॥

10
ಮೂಲಮ್

ವಸಿಷ್ಠಋಷ್ಯಶೃಂಗಾಭ್ಯಾಮನುಜ್ಞಾತೋ ದದೌ ಹವಿಃ ।
ಕೌಸಲ್ಯಾಯೈ ಸಕೈಕೇಯ್ಯೈ ಅರ್ಧಮರ್ಧಂ ಪ್ರಯತ್ನತಃ ॥

ಅನುವಾದ

ಎಂದು ಹೇಳಿ ಅಗ್ನಿಯು ಆ ಪಾಯಸವನ್ನು ರಾಜನಿಗೆ ಕೊಟ್ಟು ಅಂತರ್ಧಾನನಾದನು. ಅನಂತರ ಕೃತಕೃತ್ಯನಾದ ದಶರಥ ರಾಜನು ಮುನಿಶ್ರೇಷ್ಠ ವಸಿಷ್ಠ ಮತ್ತು ಋಷ್ಯ ಶೃಂಗರನ್ನು ವಂದಿಸಿದನು. ಅವರೀರ್ವರ ಆಜ್ಞೆಯಂತೆ ತುಂಬಾ ಎಚ್ಚರಿಕೆಯಿಂದ ಆ ಹವಿಸ್ಸನ್ನು ಮಹಾರಾಣಿ ಕೌಸಲ್ಯೆ ಮತ್ತು ಕೈಕೆಯರಿಗೆ ಅರ್ಧ-ಅರ್ಧ ಹಂಚಿದನು. ॥9-10॥

11
ಮೂಲಮ್

ತತಃ ಸುಮಿತ್ರಾ ಸಂಪ್ರಾಪ್ತಾ ಜಗೃಧ್ನುಃ ಪೌತ್ರಿಕಂ ಚರುಮ್ ।
ಕೌಸಲ್ಯಾ ತು ಸ್ವಭಾಗಾರ್ಧಂ ದದೌ ತಸ್ಯೈ ಮುದಾನ್ವಿತಾ ॥

ಅನುವಾದ

ಅನಂತರ ಪುತ್ರಪ್ರದವಾದ ಆ ಚರುವನ್ನು ಪಡೆಯುವ ಇಚ್ಛೆಯಿಂದ ಸುಮಿತ್ರಾ ದೇವಿಯು ಅಲ್ಲಿಗೆ ಬಂದಳು. ಆಗ ಕೌಸಲ್ಯೆಯು ಸಂತೋಷದಿಂದ ತನ್ನ ಭಾಗದಲ್ಲಿನ ಅರ್ಧವನ್ನು ಕೊಟ್ಟಳು. ॥11॥

12
ಮೂಲಮ್

ಕೈಕೇಯೀ ಚ ಸ್ವಭಾಗಾರ್ಧಂ ದದೌ ಪ್ರೀತಿಸಮನ್ವಿತಾ ।
ಉಪಭುಜ್ಯ ಚರುಂ ಸರ್ವಾಃ ಸ್ತ್ರಿಯೋ ಗರ್ಭಸಮನ್ವಿತಾಃ ॥

ಅನುವಾದ

ಹಾಗೆಯೇ ಕೈಕೆಯಿಯು ಪ್ರೀತಿಯಿಂದ ತನ್ನ ಭಾಗದಲ್ಲಿನ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಈ ಪ್ರಕಾರ ಆ ಪಾಯಸವನ್ನು ಸ್ವೀಕರಿಸಿ ಮೂವರೂ ರಾಣಿಯರು ಗರ್ಭವತಿಯರಾದರು. ॥12॥

13
ಮೂಲಮ್

ದೇವತಾ ಇವ ರೇಜುಸ್ತಾಃ ಸ್ವಭಾಸಾ ರಾಜಮಂದಿರೇ ।
ದಶಮೇ ಮಾಸಿ ಕೌಸಲ್ಯಾ ಸುಷುವೇ ಪುತ್ರಮದ್ಭುತಮ್ ॥

ಅನುವಾದ

ಆ ಮೂವರು ರಾಣಿಯರು ಆ ರಾಜಭವನದಲ್ಲಿ ತಮ್ಮ ಕಾಂತಿಯಿಂದ ದೇವತೆಗಳಂತೆ ಶೋಭಾಯಮಾನರಾದರು. ಮತ್ತೆ ಹತ್ತನೇ ತಿಂಗಳಲ್ಲಿ ಕೌಸಲ್ಯೆಯು ಓರ್ವ ಅದ್ಭುತ ಬಾಲಕನಿಗೆ ಜನ್ಮನೀಡಿದಳು. ॥13॥

14
ಮೂಲಮ್

ಮಧುಮಾಸೇ ಸಿತೇ ಪಕ್ಷೇ ನವಮ್ಯಾಂ ಕರ್ಕಟೇ ಶುಭೇ ।
ಪುನರ್ವ್ವೃಕ್ಷ ಸಹಿತೇ ಉಚ್ಚಸ್ಥೇ ಗ್ರಹಪಂಚಕೇ ॥

15
ಮೂಲಮ್

ಮೇಷಂ ಪೂಷಣಿ ಸಂಪ್ರಾಪ್ತೇ ಪುಷ್ಪವೃಷ್ಟಿಸಮಾಕುಲೇ ।
ಆವಿರಾಸೀಜ್ಜಗನ್ನಾಥಃ ಪರಮಾತ್ಮಾ ಸನಾತನಃ ॥

ಅನುವಾದ

ಚೈತ್ರಮಾಸದ ಶುಕ್ಲಪಕ್ಷ ನವಮಿಯದಿನ ಶುಭವಾದ ಕರ್ಕಾಟಕ ಲಗ್ನದಲ್ಲಿ ಪುನರ್ವಸು ನಕ್ಷತ್ರವಿದ್ದಾಗ, ಐದು ಗ್ರಹರು ಉಚ್ಚಸ್ಥಾನಗಳಲ್ಲಿರುವಾಗ ಹಾಗೂ ಸೂರ್ಯನು ಮೇಷರಾಶಿಯಲ್ಲಿರುವಾಗ ಮಧ್ಯಾಹ್ನ ಕಾಲದಲ್ಲಿ ಸನಾತನ ಪರಮಾತ್ಮನಾದ ಜಗನ್ನಾಥನ ಆವಿರ್ಭಾವವಾಯಿತು. ಆ ಸಮಯದಲ್ಲಿ ಆಕಾಶವು ದಿವ್ಯ ಪುಷ್ಪ ವೃಷ್ಟಿಯಿಂದ ತುಂಬಿ ಹೋಯಿತು. ॥14-15॥

16
ಮೂಲಮ್

ನೀಲೋತ್ಪಲದಲಶ್ಯಾಮಃ ಪೀತವಾಸಾಶ್ಚತುರ್ಭುಜಃ ।
ಜಲಜಾರುಣನೇತ್ರಾಂತಃ ಸ್ಫುರತ್ಕುಂಡಲಮಂಡಿತಃ ॥

ಅನುವಾದ

ಆ ಭಗವಂತನ ಸ್ವರೂಪವು - ಕನ್ನೈದಿಲೆಯ ಎಸಳಿನಂತೆ ನೀಲಮೇಘಶ್ಯಾಮ ವರ್ಣದಿಂದಲೂ, ಪೀತಾಂಬರವನ್ನು ಉಟ್ಟಿರುವ, ನಾಲ್ಕು ಭುಜಗಳಿಂದೊಡಗೂಡಿದೆ. ಕರ್ಣಗಳಲ್ಲಿ ಶೋಭಾಯಮಾನವಾದ ಕುಂಡಲಗಳು ಹೊಳೆಯುತ್ತಿವೆ, ಕಣ್ಣುಗಳ ಒಳಭಾಗವು ನಸುಗೆಂಪಾಗಿ ಕಮಲದಂತೆ ಸುಶೋಭಿತವಾಗಿದೆ.॥16॥

17
ಮೂಲಮ್

ಸಹಸ್ರಾರ್ಕಪ್ರತೀಕಾಶಃ ಕಿರೀಟೀ ಕುಂಚಿತಾಲಕಃ ।
ಶಂಖಚಕ್ರಗದಾಪದ್ಮವನಮಾಲಾವಿರಾಜಿತಃ ॥

ಅನುವಾದ

ಸಾವಿರಾರು ಸೂರ್ಯರಂತೆ ಪ್ರಕಾಶಮಾನನಾಗಿ, ಶಿರದಮೇಲೆ ಹೊಳೆಯುತ್ತಿರುವ ಕಿರೀಟ ಧರಿಸಿದ್ದು, ಗುಂಗುರು ಕುದಲುಗಳುಳ್ಳವನೂ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳಿದ್ದು ಕೊರಳಲ್ಲಿ ವೈಜಯಂತಿ ಮಾಲೆಯಿಂದ ವಿರಾಜಮಾನನಾಗಿದ್ದಾನೆ. ॥17॥

18
ಮೂಲಮ್

ಅನುಗ್ರಹಾಖ್ಯಹೃತ್ಸ್ಥೇಂದುಸೂಚಕಸ್ಮಿತಚಂದ್ರಿಕಃ ।
ಕರುಣಾರಸಸಂಪೂರ್ಣವಿಶಾಲೋತ್ಪಲಲೋಚನಃ ।
ಶ್ರೀವತ್ಸಹಾರಕೇಯೂರನೂಪುರಾದಿವಿಭೂಷಣಃ ॥

ಅನುವಾದ

ಮುಖ ಕಮಲದಲ್ಲಿ ಅನುಗ್ರಹರೂಪೀ ಚಂದ್ರನನ್ನು ಸೂಚಿಸುವಂತಿರುವ ಮುಗುಳು ನಗೆಯ ಕಾಂತಿಯು ಹೊಮ್ಮಿಸುತ್ತಿರುವನು. ಕರುಣಾರಸ ಪೂರ್ಣವಾದ ಕಣ್ಣುಗಳು ಕಮಲದಳಗಳಂತೆ ವಿಶಾಲವಾಗಿದ್ದು, ಶ್ರೀವತ್ಸ, ಹಾರ, ಕೇಯೂರ, ನೂಪುರಾದಿ ಆಭೂಷಣಗಳಿಂದ ಭೂಷಿತನಾಗಿದ್ದಾನೆ.॥18॥

19
ಮೂಲಮ್

ದೃಷ್ಟ್ವಾ ತಂ ಪರಮಾತ್ಮಾನಂ ಕೌಸಲ್ಯಾ ವಿಸ್ಮಯಾಕುಲಾ ।
ಹರ್ಷಾಶ್ರುಪೂರ್ಣನಯನಾ ನತ್ವಾ ಪ್ರಾಂಜಲಿರಬ್ರವೀತ್ ॥

ಅನುವಾದ

ಇಂತಹ ಪುತ್ರರೂಪದಿಂದ ಪ್ರಕಟನಾದ ಆ ಪರಮಾತ್ಮನನ್ನು ನೋಡಿ ಕೌಸಲ್ಯೆಯು ವಿಸ್ಮಯದಿಂದ ವ್ಯಾಕುಲಳಾಗಿ, ಕಣ್ಣುಗಳಲ್ಲಿ ಆನಂದಾಶ್ರುಗಳನ್ನು ತುಂಬಿಕೊಂಡು, ಕೈ ಮುಗಿದು ನಮಸ್ಕರಿಸುತ್ತ ಇಂತು ಪ್ರಾರ್ಥಿಸಿದಳು.॥19॥

20
ಮೂಲಮ್ (ವಾಚನಮ್)

ಕೌಸಲ್ಯೋವಾಚ

ಮೂಲಮ್

ದೇವದೇವ ನಮಸ್ತೇಽಸ್ತು ಶಂಖಚಕ್ರಗದಾಧರ ।
ಪರಮಾತ್ಮಾಚ್ಯುತೋಽನಂತಃ ಪೂರ್ಣಸ್ತ್ವಂ ಪುರುಷೋತ್ತಮಃ ॥

ಅನುವಾದ

ಕೌಸಲ್ಯೆ ಹೇಳಿದಳು — ಓ ದೇವ ದೇವಾ! ನಿನಗೆ ನಮಸ್ಕಾರವು, ಹೇ ಶಂಖ ಚಕ್ರಗದಾಧರ! ನೀನು ಅಚ್ಯುತನೂ, ಅನಂತನೂ, ಪರಮಾತ್ಮನೂ, ಸರ್ವತ್ರ ಪೂರ್ಣನಾದ ಪುರುಷೋತ್ತಮನೂ ಆಗಿರುವೆ.॥20॥

21
ಮೂಲಮ್

ವದಂತ್ಯಗೋಚರಂ ವಾಚಾಂ ಬುದ್ಧ್ಯಾದೀನಾಮತೀಂದ್ರಿಯಮ್ ।
ತ್ವಾಂ ವೇದವಾದಿನಃ ಸತ್ತಾಮಾತ್ರಂ ಜ್ಞಾನೈಕವಿಗ್ರಹಮ್ ॥

ಅನುವಾದ

ಮನ, ಬುದ್ಧಿಗಳಿಗೆ ನಿಲುಕದ ಅತೀಂದ್ರಿಯನಾದವನೆಂದೂ, ಕೇವಲ ಸತ್ತಾಮಾತ್ರನೆಂದೂ, ಜ್ಞಾನಸ್ವರೂಪಿಯೆಂದೂ ವೇದವಾದಿಗಳು ನಿನ್ನನ್ನು ಹೊಗಳುತ್ತಾರೆ.॥21॥

22
ಮೂಲಮ್

ತ್ವಮೇವ ಮಾಯಯಾ ವಿಶ್ವಂ ಸೃಜಸ್ಯವಸಿ ಹಂಸಿ ಚ ।
ಸತ್ತ್ವಾದಿಗುಣಸಂಯುಕ್ತಸ್ತುರ್ಯ ಏವಾಮಲಃ ಸದಾ ॥

ಅನುವಾದ

ನೀನೇ ನಿನ್ನ ಮಾಯೆಯಿಂದ ಸತ್ವ, ರಜ, ತಮ ಈ ಮೂರು ಗುಣಗಳಿಂದ ಒಡಗೂಡಿ ಈ ವಿಶ್ವದ ರಚನೆ, ಪಾಲನೆ ಮತ್ತು ಸಂಹಾರ ಮಾಡುತ್ತಿರುವೆ. ಆದರೂ ವಾಸ್ತವವಾಗಿ ನೀನು ಸದಾ ನಿರ್ಮಲ ತುರೀಯ ಪದದಲ್ಲಿ ಸ್ಥಿತನಾಗಿರುವೆ.॥ 22 ॥

23
ಮೂಲಮ್

ಕರೋಷೀವ ನ ಕರ್ತಾ ತ್ವಂ ಗಚ್ಛಸೀವ ನ ಗಚ್ಛಸಿ ।
ಶೃಣೋಷಿ ನ ಶೃಣೋಷೀವ ಪಶ್ಯಸೀವ ನ ಪಶ್ಯಸಿ ॥

ಅನುವಾದ

ನೀನು ಕರ್ತೃನಲ್ಲದಿದ್ದರೂ ಮಾಡುವವನಂತೆ ಕಂಡು ಬರುತ್ತೀಯೆ, ನಡೆಯುವುದಿಲ್ಲವಾದರೂ ನಡೆದಂತೆ ಕಂಡು ಬರುತ್ತೀಯೆ, ಕೇಳದೆಯೂ ಕೇಳಿದವನಂತೆ ಕಾಣುತ್ತಿಯೆ, ಹಾಗೂ ನೋಡದೆಯೂ ನೋಡಿದವನಂತೆ ಕಂಡು ಬರುತ್ತಿಯೆ.॥23॥

24
ಮೂಲಮ್

ಅಪ್ರಾಣೋ ಹ್ಯಮನಾಃ ಶುದ್ಧ ಇತ್ಯಾದಿ ಶ್ರುತಿರಬ್ರವೀತ್ ।
ಸಮಃ ಸರ್ವೇಷು ಭೂತೇಷು ತಿಷ್ಠನ್ನಪಿ ನ ಲಕ್ಷ್ಯಸೇ ॥

25
ಮೂಲಮ್

ಅಜ್ಞಾನಧ್ವಾಂತಚಿತ್ತಾನಾಂ ವ್ಯಕ್ತ ಏವ ಸುಮೇಧಸಾಮ್ ।
ಜಠರೇ ತವ ದೃಶ್ಯಂತೇ ಬ್ರಹ್ಮಾಂಡಾಃ ಪರಮಾಣವಃ ॥

26
ಮೂಲಮ್

ತ್ವಂ ಮಮೋದರಸಂಭೂತ ಇತಿ ಲೋಕಾನ್ವಿಡಂಬಸೇ ।
ಭತ್ತೇಷು ಪಾರವಶ್ಯಂ ತೇ ದೃಷ್ಟಂ ಮೇಽದ್ಯ ರಘೂತ್ತಮ ॥

ಅನುವಾದ

ಭಗವತಿ ಶ್ರುತಿಯೂ ನೀನು ‘ಪ್ರಾಣರಹಿತನು ಮತ್ತು ಮನಸ್ಸಿಲ್ಲದವನು ಹಾಗೂ ಶುದ್ಧನು’ ಆಗಿರುವೆ ಎಂದು ಹೇಳುತ್ತದೆ. (ಮುಂ. ಉ. 2/1/2) ನೀನು ಸಮಸ್ತ ಪ್ರಾಣಿಗಳಲ್ಲಿ ಸಮಾನಭಾವದಿಂದ ಸ್ಥಿತನಾಗಿದ್ದರೂ ಅಜ್ಞಾನದಿಂದ ಅಂತಃಕರಣವು ಮುಚ್ಚಲ್ಪಟ್ಟಿರುವವರಿಗೆ ನೀನು ಅಗೋಚರನಾಗಿರುವೆ. ಜ್ಞಾನವುಳ್ಳವರಿಗೇ ನಿನ್ನ ಸಾಕ್ಷಾತ್ಕಾರವಾಗುತ್ತದೆ. ಹೇ ಭಗವಂತನೇ! ನಿನ್ನ ಉದರದಲ್ಲಿ ಅನಂತ ಬ್ರಹ್ಮಾಂಡಗಳು ಪರಮಾಣುಗಳಂತೆ ಕಂಡು ಬಂದರೂ ನೀನು ನನ್ನ ಉದರದಿಂದ ಹುಟ್ಟಿದನೆಂದು ಜನರಿಗೆ ಪ್ರಕಟ ಪಡಿಸುತ್ತಿರುವೆ, ಅದರಿಂದ ನಾನು ಇಂದು ನಿನ್ನ ಭಕ್ತವತ್ಸಲತೆಯನ್ನು ಕಂಡುಕೊಂಡೆ.॥24-26॥

27
ಮೂಲಮ್

ಸಂಸಾರಸಾಗರೇ ಮಗ್ನಾ ಪತಿಪುತ್ರಧನಾದಿಷು ।
ಭ್ರಮಾಮಿ ಮಾಯಯಾ ತೇಽದ್ಯ ಪಾದಮೂಲಮುಪಾಗತಾ ॥

ಅನುವಾದ

ಎಲೈ ಪ್ರಭುವೇ! ನಾನು ನಿನ್ನ ಮಾಯೆಯಿಂದ ಮೋಹಿತಳಾಗಿ ಸಂಸಾರಸಾಗರದಲ್ಲಿ ಮುಳುಗಿದ್ದು ಪತಿ, ಪುತ್ರ, ಧನ ಮೊದಲಾದವುಗಳಲ್ಲಿ ಮುಳುಗಿದ್ದೆ; ಇಂದು ಪರಮ ಸೌಭಾಗ್ಯದಿಂದ ನಿನ್ನ ಚರಣಕಮಲಗಳಲ್ಲಿ ಶರಣಾಗತಳಾಗಿರುವೆ.॥27॥

28
ಮೂಲಮ್

ದೇವ ತ್ವದ್ರೂಪಮೇತನ್ಮೇ ಸದಾ ತಿಷ್ಠತು ಮಾನಸೇ ।
ಆವೃಣೋತು ನ ಮಾಂ ಮಾಯಾ ತವ ವಿಶ್ವವಿಮೋಹಿನೀ ॥

ಅನುವಾದ

ಹೇ ದೇವಾ! ನಿನ್ನ ಈ ಮನೋಹರ ಮೂರ್ತಿಯು ಸದಾ ನನ್ನ ಹೃದಯದಲ್ಲಿ ವಿರಾಜಮಾನವಾಗಿರಲಿ ಹಾಗೂ ನಿನ್ನ ವಿಶ್ವಮೋಹಿನೀ ಮಾಯೆಯು ನನ್ನನ್ನು ವ್ಯಾಪಿಸದಿರಲಿ.॥28॥

29
ಮೂಲಮ್

ಉಪಸಂಹರ ವಿಶ್ವಾತ್ಮನ್ನದೋ ರೂಪಮಲೌಕಿಕಮ್ ।
ದರ್ಶಯಸ್ವ ಮಹಾನಂದಬಾಲಭಾವಂ ಸುಕೋಮಲಮ್ ।
ಲಲಿತಾಲಿಂಗನಾಲಾಪೈಸ್ತರಿಷ್ಯಾಮ್ಯುತ್ಕಟಂ ತಮಃ ॥

ಅನುವಾದ

ಓ ವಿಶ್ವಾತ್ಮನೇ! ನಿನ್ನ ಈ ಅಲೌಕಿಕವಾದ ರೂಪವನ್ನು ಉಪಸಂಹಾರ ಮಾಡು ಹಾಗೂ ಪರಮಾನಂದದಾಯಕ ಸುಕೋಮಲ ಬಾಲರೂಪವನ್ನು ಧರಿಸಿಕೋ. ಅದರ ಅತಿಸುಖದ ಆಲಿಂಗನ, ಸಂಭಾಷಣಾದಿಗಳಿಂದ ನಾನು ಘೋರ ಅಜ್ಞಾನಾಂಧಕಾರವನ್ನು ದಾಟಿಹೋಗುವೆನು.॥29॥

30
ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯದ್ಯದಿಷ್ಟಂ ತವಾಸ್ತ್ಯಂಬ ತತ್ತದ್ಭವತು ನಾನ್ಯಥಾ ॥
(ಶ್ಲೋಕ - 31)
ಅಹಂ ತು ಬ್ರಹ್ಮಣಾ ಪೂರ್ವಂ ಭೂಮೇರ್ಭಾರಾಪನುತ್ತಯೇ ।
ಪ್ರಾರ್ಥಿತೋ ರಾವಣಂ ಹಂತುಂ ಮಾನುಷತ್ವಮುಪಾಗತಃ ॥

ಅನುವಾದ

ಭಗವಂತನು ಹೇಳಿದನು — ಎಲೈ ತಾಯೇ! ನೀನು ಏನೇನು ಬಯಸುವೆಯೋ ಹಾಗೆಯೇ ಆಗಲಿ, ಅದಕ್ಕೆ ವಿರುದ್ಧವಾಗಿ ಏನೂ ಆಗದಿರಲಿ. ಹಿಂದೆ ನನ್ನಲ್ಲಿ ಪೃಥ್ವಿಯ ಭಾರವನ್ನು ಇಳಿಸಲೋಸುಗ ಬ್ರಹ್ಮನು ಪ್ರಾರ್ಥಿಸಿದ್ದನು. ಆದುದರಿಂದ ರಾವಣಾದಿ ನಿಶಾಚರರನ್ನು ಕೊಲ್ಲಲು ನಾನೇ ಮನುಷ್ಯರೂಪದಿಂದ ಅವತರಿಸಿದ್ದೇನೆ. ॥30-31॥

32
ಮೂಲಮ್

ತ್ವಯಾ ದಶರಥೇನಾಹಂ ತಪಸಾರಾಧಿತಃ ಪುರಾ ।
ಮತ್ಪುತ್ರತ್ವಾಭಿಕಾಂಕ್ಷಿಣ್ಯಾ ತಥಾ ಕೃತಮನಿಂದಿತೇ ॥

ಅನುವಾದ

ಎಲೈ ಪುಣ್ಯಾತ್ಮಳೇ! ಹಿಂದೆ ದಶರಥ ಮಹಾರಾಜರ ಸಹಿತ ನೀನೂ ಕೂಡ ನನ್ನನ್ನು ಪುತ್ರರೂಪದಿಂದ ಪಡೆಯುವ ಇಚ್ಛೆಯಿಂದ ತಪಸ್ಸು ಮಾಡುತ್ತ ನನ್ನ ಆರಾಧನೆ ಮಾಡಿದ್ದೀಯೇ. ಅದನ್ನೆ ನಾನು ಈ ಸಮಯದಲ್ಲಿ ಪ್ರಕಟನಾಗಿ ಪೂರ್ಣಗೊಳಿಸಿರುವೆ. ॥32॥

33
ಮೂಲಮ್

ರೂಪಮೇತತ್ತ್ವಯಾ ದೃಷ್ಟಂ ಪ್ರಾಕ್ತನಂ ತಪಸಃ ಫಲಮ್ ।
ಮದ್ದರ್ಶನಂ ವಿಮೋಕ್ಷಾಯ ಕಲ್ಪತೇ ಹ್ಯನ್ಯದುರ್ಲಭಮ್ ॥

ಅನುವಾದ

ನೀನು ನಿನ್ನ ಹಿಂದಿನ ತಪಸ್ಸಿನ ಫಲದಿಂದಲೇ ನನ್ನ ಈ ದಿವ್ಯ ರೂಪವನ್ನು ನೋಡಿರುವೆ. ನನ್ನ ದರ್ಶನವು ಮೋಕ್ಷಪದವನ್ನು ಕೊಡುವಂತಹುದಾಗಿದೆ. ಪುಣ್ಯಹೀನ ಜನರಿಗೆ ಇದರ ದರ್ಶನವು ಅತ್ಯಂತ ದುರ್ಲಭವಾಗಿದೆ.॥33॥

34
ಮೂಲಮ್

ಸಂವಾದಮಾವಯೋರ್ಯಸ್ತು ಪಠೇದ್ವಾ ಶೃಣುಯಾದಪಿ ।
ಸ ಯಾತಿ ಮಮ ಸಾರೂಪ್ಯಂ ಮರಣೇ ಮತ್ಸೃತಿಂ ಲಭೇತ್ ॥

ಅನುವಾದ

ನಮ್ಮ ಈ ಸಂವಾದವನ್ನು ಓದುವವರು ಅಥವಾ ಕೇಳುವವರು ನನ್ನ ಸಾರೂಪ್ಯ ಮುಕ್ತಿಯನ್ನು ಪ್ರಾಪ್ತಮಾಡಿಕೊಳ್ಳುವರು ಹಾಗೂ ಮರಣಕಾಲದಲ್ಲಿ ಅವರಿಗೆ ನನ್ನ ಸ್ಮೃತಿಯು ಉಳಿಯುವುದು. ॥34॥

35
ಮೂಲಮ್

ಇತ್ಯುಕ್ತ್ವಾ ಮಾತರಂ ರಾಮೋ ಬಾಲೋ ಭೂತ್ವಾ ರುರೋದ ಹ ।
ಬಾಲತ್ವೇಪೀಂದ್ರನೀಲಾಭೋ ವಿಶಾಲಾಕ್ಷೋತಿಸುಂದರಃ ॥

ಅನುವಾದ

ತಾಯಿಯಲ್ಲಿ ಹೀಗೆ ಹೇಳಿ ಭಗವಂತನು ಬಾಲಕ ರೂಪನಾಗಿ ಅಳತೊಡಗಿದನು. ಅವನ ಬಾಲರೂಪವೂ ಇಂದ್ರನೀಲಮಣಿಯಂತೆ ಶ್ಯಾಮಲವರ್ಣವಾಗಿದ್ದು, ವಿಶಾಲವಾದ ಕಣ್ಣುಗಳಿದ್ದು ಅತಿ ಸುಂದರವಾಗಿತ್ತು.॥35॥

36
ಮೂಲಮ್

ಬಾಲಾರುಣಪ್ರತೀಕಾಶೋ ಲಾಲಿತಾಖಿಲ ಲೋಕಪಃ ।
ಅಥ ರಾಜಾ ದಶರಥಃ ಶ್ರುತ್ವಾ ಪುತ್ರೋದ್ಭವೋತ್ಸವಮ್ ।
ಆನಂದಾರ್ಣವಮಗ್ನೋಸಾವಾಯಯೌ ಗುರುಣಾ ಸಹ ॥

ಅನುವಾದ

ಅದು ಪ್ರಭಾತ ಕಾಲದ ಬಾಲ ಸೂರ್ಯನಂತೆ ಕೆಂಪಾದ ಕಾಂತಿಯಿಂದೊಡಗೊಂಡಿತ್ತು. ಭಗವಂತನು ಅವತರಿಸಿ ಆ ಸುಮನೋಹರ ಬಾಲರೂಪದಿಂದ ಎಲ್ಲ ಲೋಕಪಾಲಕರನ್ನು ಪರಮಾನಂದಿತರನ್ನಾಗಿಸಿದನು. ಅದಾದಬಳಿಕ ಮಹಾರಾಜಾ ದಶರಥನನು ಪುತ್ರೋತ್ಪತ್ತಿಯ ಉತ್ಸವದ ಶುಭ ಸಮಾಚಾರ ಕೇಳಿ ಆನಂದಸಾಗರದಲ್ಲಿ ಮುಳುಗಿದನು ಹಾಗೂ ಗುರು ವಸಿಷ್ಠರೊಂದಿಗೆ ರಾಜಭವನಕ್ಕೆ ಬಂದನು.॥36॥

37
ಮೂಲಮ್

ರಾಮಂ ರಾಜೀವಪತ್ರಾಕ್ಷಂ ದೃಷ್ಟ್ವಾ ಹರ್ಷಾಶ್ರುಸಂಪ್ಲುತಃ ।
ಗುರುಣಾ ಜಾತಕರ್ಮಾಣಿ ಕರ್ತವ್ಯಾನಿ ಚಕಾರ ಸಃ ॥

ಅನುವಾದ

ಅಲ್ಲಿಗೆ ಬಂದು ಕಮಲನಯನ ರಾಮನನ್ನು ನೋಡಿ ಅವರು ಆನಂದ ಬಾಷ್ಟಗಳಿಂದ ಕೂಡಿ ಗುರುಗಳ ಅಪ್ಪಣೆಯಂತೆ ಅವನ ಜಾತಕರ್ಮಾದಿ, ಅವಶ್ಯಕ ಸಂಸ್ಕಾರಗಳನ್ನು ಮಾಡಿದನು.॥37॥

38
ಮೂಲಮ್

ಕೈಕೇಯೀ ಚಾಥ ಭರತಮಸೂತ ಕಮಲೇಕ್ಷಣಾ ।
ಸುಮಿತ್ರಾಯಾಂ ಯಮೌ ಜಾತೌ ಪೂರ್ಣೆಂದುಸದೃಶಾನನೌ ॥

ಅನುವಾದ

ಅನಂತರ ಕಮಲ ನಯನೆಯಾದ ಕೈಕೆಯಲ್ಲಿ ಭರತನ ಜನ್ಮವಾಯಿತು ಮತ್ತು ಸುಮಿತ್ರೆಯಿಂದ ಪೂರ್ಣಚಂದ್ರನಂತೆ ಮುಖವುಳ್ಳ ಅವಳಿ-ಜವಳಿ ಮಕ್ಕಳಿಬ್ಬರು ಹುಟ್ಟಿದರು.॥38॥

39
ಮೂಲಮ್

ತದಾ ಗ್ರಾಮಸಹಸ್ರಾಣಿ ಬ್ರಾಹ್ಮಣೇಭ್ಯೋ ಮುದಾ ದದೌ ।
ಸುವರ್ಣಾನಿ ಚ ರತ್ನಾನಿ ವಾಸಾಂಸಿ ಸುರಭೀಃ ಶುಭಾಃ ॥

ಅನುವಾದ

ಆ ಸಮಯಲ್ಲಿ ದಶರಥ ಮಹಾರಾಜನು ಅತಿಯಾದ ಸಂತೋಷದಿಂದ ಸಾವಿರಾರು ಗ್ರಾಮಗಳನ್ನು, ಹೇರಳ ಸುವರ್ಣವನ್ನು, ಅನೇಕ ರತ್ನಗಳನ್ನು, ನಾನಾ ಪ್ರಕಾರದ ವಸ್ತುಗಳನ್ನು ಮತ್ತು ಶುಭಲಕ್ಷಣವುಳ್ಳ ಅನೇಕ ಗೋವುಗಳನ್ನು ಬ್ರಾಹ್ಮಣರಿಗೆ ದಾನಮಾಡಿದನು.॥39॥

40
ಮೂಲಮ್

ಯಸ್ಮಿನ್ ರಮಂತೇ ಮುನಯೋ ವಿದ್ಯಯಾಜ್ಞಾನವಿಪ್ಲವೇ ।
ತಂ ಗುರುಃ ಪ್ರಾಹ ರಾಮೇತಿ ರಮಣಾದ್ರಾಮ ಇತ್ಯಪಿ ॥

ಅನುವಾದ

ವಿಜ್ಞಾನದ ಮೂಲಕ ಅಜ್ಞಾನವು ನಷ್ಟವಾದ ಬಳಿಕ ಮುನಿ ಜನರು ಯಾವುದರಲ್ಲಿ ಕ್ರೀಡಿಸುತ್ತಿರುವರೋ ಅಥವಾ ಯಾರು ತನ್ನ ಸೌಂದರ್ಯದಿಂದ ಭಕ್ತಜನರ ಚಿತ್ತವನ್ನು ರಮಿಸುವನೋ (ಆನಂದ ಮಯ ಗೊಳಿಸುವನೋ) ಅವನ ಹೆಸರನ್ನು ಗುರುವಸಿಷ್ಠರು ‘ರಾಮ’ ಎಂದಿಟ್ಟರು. ॥40॥

41
ಮೂಲಮ್

ಭರಣಾದ್ಭರತೋ ನಾಮ ಲಕ್ಷ್ಮಣಂ ಲಕ್ಷಣಾನ್ವಿತಮ್ ।
ಶತ್ರುಘ್ನಂ ಶತ್ರುಹಂತಾರಮೇವಂ ಗುರುರಭಾಷತ ॥

ಅನುವಾದ

ಇದೇ ಪ್ರಕಾರ ಪ್ರಪಂಚವನ್ನು ಪೋಷಣ ಮಾಡುವವನಾದ್ದರಿಂದ ಎರಡನೇ ಪುತ್ರನ ಹೆಸರು ಭರತನೆಂದೂ, ಎಲ್ಲ ಸುಲಕ್ಷಣ ಸಂಪನ್ನನಾದ್ದರಿಂದ ಮೂರನೆಯವನ ಹೆಸರು ‘ಲಕ್ಷ್ಮಣ’ ಮತ್ತು ಶತ್ರುಗಳ ಘಾತಕನಾದ್ದರಿಂದ ನಾಲ್ಕನೆಯವನ ಹೆಸರು ‘ಶತ್ರುಘ್ನ’ ಎಂದಿಟ್ಟರು.॥41॥

42
ಮೂಲಮ್

ಲಕ್ಷ್ಮಣೋ ರಾಮಚಂದ್ರೇಣ ಶತ್ರುಘ್ನೋ ಭರತೇ ನ ಚ ।
ದ್ವಂದ್ವೀಭೂಯ ಚರಂತೌ ತೌ ಪಾಯಸಾಂಶಾನುಸಾರತಃ ॥

ಅನುವಾದ

ಕೌಸಲ್ಯೆ ಮತ್ತು ಕೈಕೆಯಿಯು ಕೊಟ್ಟ ಪಾಯಸಾಂಶಕ್ಕನುಸಾರವಾಗಿ ಲಕ್ಷ್ಮಣನು ರಾಮಚಂದ್ರನೊಂದಿಗೆ ಮತ್ತು ಶತ್ರುಘ್ನನು ಭರತನ ಜೊತೆ-ಜೊತೆಯಾಗಿ ಇರತೊಡಗಿದರು.॥42॥

43
ಮೂಲಮ್

ರಾಮಸ್ತು ಲಕ್ಷ್ಮಣೇನಾಥ ವಿಚರನ್ಬಾಲಲೀಲಯಾ ।
ರಮಯಾಮಾಸ ಪಿತರೌ ಚೇಷ್ಟಿತೈರ್ಮುಗ್ಧಭಾಷಿತೈಃ ॥

ಅನುವಾದ

ಲಕ್ಷಣನೊಡನೆ ವಿಚರಿಸುತ್ತ ಶ್ರೀರಾಮಚಂದ್ರನು ತನ್ನ ಬಾಲಲೀಲೆಗಳಿಂದ, ಚೇಷ್ಟೆಗಳಿಂದ ಮತ್ತು ತೊದಲು ಮಾತುಗಳಿಂದ ತಂದೆ-ತಾಯಂದಿರನ್ನು ಆನಂದಗೊಳಿಸುತ್ತಿದನು. ॥43॥

44
ಮೂಲಮ್

ಭಾಲೇ ಸ್ವರ್ಣಮಯಾಶ್ವತ್ಥಪರ್ಣಮುಕ್ತಾಫಲ ಪ್ರಭಮ್ ।
ಕಂಠೇ ರತ್ನಮಣಿವ್ರಾತಮಧ್ಯದ್ವೀಪಿನಖಾಂಚಿತಮ್ ॥

ಅನುವಾದ

ಶ್ರೀರಾಮನ ಹಣೆಯ ಮೇಲೆ ಮುತ್ತುಗಳಿಂದ ಅಲಂಕರಿಸಿದ ಕಾಂತಿಯುಳ್ಳ ಚಿನ್ನದ ಅರಳಿ ಎಲೆಗಳು, ಹಾಗೂ ಕೊರಳಲ್ಲಿ ರತ್ನಮಣಿ ಸಮೂಹದ ಜೊತೆಗೆ ಮಧ್ಯ-ಮಧ್ಯದಲ್ಲಿ ವ್ಯಾಘ್ರ ನಖಗಳು ಅಲಂಕರಿಸಿ ಪೋಣಿಸಿರುವ ಹಾರಗಳು ಶೋಭಿತವಾಗಿದ್ದವು.॥44॥

45
ಮೂಲಮ್

ಕರ್ಣಯೋಃ ಸ್ವರ್ಣಸಂಪನ್ನರತ್ನಾರ್ಜುನ ಸಟಾಲುಕಮ್ ।
ಶಿಂಜಾನಮಣಿಮಂಜೀರಕಟಿಸೂತ್ರಾಂಗದೈರ್ವೃತಮ್ ॥

ಅನುವಾದ

ಕಿವಿಯಲ್ಲಿ ಅರ್ಜುನ ವೃಕ್ಷದ ಎಳೆಯ ಕಾಯಿಗಳಂತೆ ರತ್ನಮಯವಾದ ಬಂಗಾರದ ಆಭೂಷಣಗಳು ತೂಗುತ್ತಿದ್ದುವು. ಝಣ-ಝಣ ಗುಟ್ಟುತ್ತಿರುವ ಮಣಿಮಯ ನೂಪೂರ, ಸ್ವರ್ಣಮೇಖಲೆ ಮತ್ತು ತೋಳುಬಂದಿಗಳಿಂದ ವಿಭೂಷಿತನಾಗಿದ್ದನು. ॥45॥

46
ಮೂಲಮ್

ಸ್ಮಿತವಕಾಲ್ಪದಶನಮಿಂದ್ರನೀಲಮಣಿಪ್ರಭಮ್ ।
ಅಂಗಣೇ ರಿಂಗಮಾಣಂ ತಂ ತರ್ಣಕಾನನು ಸರ್ವತಃ ॥

47
ಮೂಲಮ್

ದೃಷ್ಟ್ವಾ ದಶರಥೋ ರಾಜಾ ಕೌಸಲ್ಯಾ ಮುಮುದೇ ತದಾ ।
ಭೋಕ್ಷ್ಯಮಾಣೋ ದಶರಥೋ ರಾಮಮೇಹೀತಿ ಚಾಸಕೃತ್ ॥

48
ಮೂಲಮ್

ಆಹ್ವಯತ್ಯತಿಹರ್ಷೇಣ ಪ್ರೇಮ್ಣಾ ನಾಯಾತಿ ಲೀಲಯಾ ।
ಆನಯೇತಿ ಚ ಕೌಸಲ್ಯಾಮಾಹ ಸಾ ಸಸ್ಮಿತಾಸುತಮ್ ॥

49
ಮೂಲಮ್

ಧಾವತ್ಯಪಿ ನ ಶಕ್ನೋತಿ ಸ್ಪ್ರಷ್ಟುಂ ಯೋಗಿ ಮನೋಗತಿಮ್ ।
ಪ್ರಹಸನ್ಸ್ವಯಮಾಯಾತಿ ಕರ್ದಮಾಂಕಿತಪಾಣಿನಾ ।
ಕಿಂಚಿದ್ ಗೃಹೀತ್ವಾ ಕವಲಂ ಪುನರೇವ ಪಲಾಯತೇ ॥

ಅನುವಾದ

ಆ ಇಂದ್ರನೀಲ ಮಣಿಯ ಪ್ರಕಾಶವುಳ್ಳವನೂ, ಕಿರುಹಲ್ಲುಗಳಿಂದ ಮುಗುಳ್ನಗುತ್ತಿರುವ ಮುಖವುಳ್ಳ ಬಾಲಕನು ರಾಜಭವನದ ಅಂಗಳದಲ್ಲಿ ಕರುಗಳ ಹಿಂದೆ-ಹಿಂದೆ ಎಲ್ಲ ಕಡೆಗೆ ಬಾಲಗತಿಯಿಂದ ಓಡುತ್ತಿರುವುದನ್ನು ನೋಡಿ ಮಹಾರಾಜಾ ದಶರಥ ಮತ್ತು ತಾಯಿ ಕೌಸಲ್ಯೆಯರು ಅತಿ ಆನಂದಿತರಾಗುತಿದ್ದರು. ಊಟ ಮಾಡಲು ದಶರಥನು ಕುಳಿತಾಗ ‘ರಾಮಾ ಬಾರೋ’ ಎಂದು ಸಂತೋಷದಿಂದ ಪದೇ-ಪದೇ ಪ್ರೇಮ ಪೂರ್ವಕ ಕರೆಯುವನು. ಆದರೆ ರಾಮನು ಆಟದಲ್ಲಿ ತಲ್ಲೀನನಾಗಿ ಅವನು ಬಾರದಿರಲು, ಕೌಸಲ್ಯೆಯ ಬಳಿ ‘ಅವನನ್ನು ಹಿಡಿದು ತಾ’ ಎಂದು ಅವನನ್ನು ಎತ್ತಿಕೊಂಡು ಬರಲು ಹೇಳುವನು. ಯೋಗಿಜನರ ಚಿತ್ತದ ಏಕಮಾತ್ರ ಆಶ್ರಯನಾಗಿರುವಂತಹ ಮಗನನ್ನು ಹಿಡಿಯಲು ನಗುತ್ತ ಕೌಸಲ್ಯೆಯು ಓಡುವಳು. ಆದರೆ ಅವನನ್ನು ಹಿಡಿಯಲಾರದೆ ಕೊನೆಗೆ ತಾಯಿಯು ಬಳಲಿರುವುದನ್ನು ಕಂಡು ರಾಮನೇ ಸ್ವತಃ ಕೆಸರಾದ ಕೈಗಳಿಂದ ನಗುತ್ತ ಸಮೀಪಕ್ಕೆ ಬಂದು ಬಿಡುವನು. ಸ್ವಲ್ಪವೇ ತುತ್ತನ್ನು ತಿಂದು ಪುನಃ ಓಡಿ ಹೋಗುವನು.॥46-49॥

50
ಮೂಲಮ್

ಕೌಸಲ್ಯಾ ಜನನೀ ತಸ್ಯ ಮಾಸಿ ಮಾಸಿ ಪ್ರಕುರ್ವತೀ ।
ವಾಯನಾನಿ ವಿಚಿತ್ರಾಣಿ ಸಮಲಂಕೃತ್ಯ ರಾಘವಮ್ ॥

51
ಮೂಲಮ್

ಅಪೂಪಾನ್ಮೋದಕಾನ್ಕೃತ್ವಾ ಕರ್ಣಶಷ್ಕಲಿತಾಸ್ತಥಾ ।
ಕರ್ಣಪೂರಾಂಶ್ಚ ವಿವಿಧಾನ್ ವರ್ಷವೃದ್ಧೌ ಚ ವಾಯನಮ್ ॥

ಅನುವಾದ

ತಾಯಿ ಕೌಸಲ್ಯೆಯು ರಾಮನನ್ನು ಸುಂದರ ವಸ್ತ್ರಾಭೂಷಣಗಳನ್ನು ತೊಡಿಸಿ ಅಲಂಕರಿಸುತ್ತಿದ್ದಳು. ಪ್ರತಿ ತಿಂಗಳೂ ನಾನಾ ಪ್ರಕಾರದ ಭಕ್ಷ್ಯಗಳನ್ನು ಮಾಡಿ ಬಾಗಿನಗಳನ್ನು ಕೊಡುತ್ತಿದ್ದಳು. ವರ್ಷದ ಹುಟ್ಟು ಹಬ್ಬದಂದು ಕಡಬು, ಚಕ್ಕುಲಿ, ಮೋದಕ, ಉಂಡೆ ಮೊದಲಾದ ಅನೇಕ ತಿಂಡಿಗಳನ್ನು ಮಾಡಿ ಹಬ್ಬವನ್ನು ಆಚರಿಸುತ್ತ ವಾಯನ ನೀಡಿದಳು.॥ 50-51॥

52
ಮೂಲಮ್

ಗೃಹಕೃತ್ಯಂ ತಯಾ ತ್ಯಕ್ತಂ ತಸ್ಯ ಚಾಪಲ್ಯಕಾರಣಾತ್ ।
ಏಕದಾ ರಘುನಾಥೋಽಸೌ ಗತೋ ಮಾತರಮಂತಿಕೇ ॥

53
ಮೂಲಮ್

ಭೋಜನಂ ದೇಹಿ ಮೇ ಮಾತರ್ನಶ್ರುತಂ ಕಾರ್ಯಸಕ್ತಯಾ ।
ತತಃ ಕ್ರೋಧೇನ ಭಾಂಡಾನಿ ಲಗುಡೇನಾಹನತ್ತದಾ ॥

ಅನುವಾದ

ರಾಮನ ಚಪಲತೆಯ ಕಾರಣ ಕೌಸಲ್ಯೆಯು ಮನೆಕೆಲಸಗಳನ್ನೆಲ್ಲ ಬಿಟ್ಟು ಬಿಟ್ಟಿದ್ದಳು. ಒಂದು ದಿನ ರಾಮನು ತಾಯಿಯ ಬಳಿಯಲ್ಲಿ ಹೇಳಿದನು ಅಮ್ಮಾ! ನನಗೆ ತಿನ್ನಲು ಏನಾದರು ಕೊಡು! ಆದರೆ ಯಾವುದೋ ಕೆಲಸದಲ್ಲಿ ತೊಡಗಿದ್ದ ತಾಯಿಗೆ ಕೇಳಿಸಲಿಲ್ಲ. ಆಗ ಸಿಟ್ಟುಗೊಂಡ ರಾಮನು ಕೋಲಿನಿಂದ ಎಲ್ಲ ಪಾತ್ರೆಗಳನ್ನು ಒಡೆದು ಹಾಕಿದನು.॥52-53॥

54
ಮೂಲಮ್

ಶಿಕ್ಯಸ್ಥಂ ಪಾತಯಾಮಾಸ ಗವ್ಯಂ ಚ ನವನೀತಕಮ್ ।
ಲಕ್ಷ್ಮಣಾಯ ದದೌ ರಾಮೋ ಭರತಾಯ ಯಥಾಕ್ರಮಮ್ ॥

55
ಮೂಲಮ್

ಶತ್ರುಘ್ನಾಯ ದದೌ ಪಶ್ಚಾದ್ದಧಿ ದುಗ್ಧಂ ತಥೈವ ಚ ।
ಸೂದೇನ ಕಥಿತೇ ಮಾತ್ರೇ ಹಾಸ್ಯಂ ಕೃತ್ವಾ ಪ್ರಧಾವತಿ ॥

ಅನುವಾದ

ನೆಲವುಗಳ ಮೇಲಿಟ್ಟ ಹಾಲು-ಮೊಸರು ಬೆಣ್ಣೆಗಳನ್ನು ಚೆಲ್ಲಿ ಬಿಟ್ಟನು. ಹಾಗೂ ಅಲ್ಲಿ ಇಟ್ಟಿದ್ದ ಎಲ್ಲ ಹಾಲು ಮೊಸರನ್ನು ಕ್ರಮವಾಗಿ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಹಂಚಿಬಿಟ್ಟನು. ಆಗ ಅಡಿಗೆಯವರು ಹೋಗಿ ಕೌಸಲ್ಯೆಯ ಬಳಿ ಹೇಳಿದಾಗ ಅವಳು ನಗುತ್ತ ರಾಮನನ್ನು ಹಿಡಿಯಲು ಓಡಿ ಬಂದಳು.॥54-55॥

56
ಮೂಲಮ್

ಆಗತಾಂ ತಾಂ ವಿಲೋಕ್ಯಾಥ ತತಃ ಸರ್ವೈಃ ಪಲಾಯಿತಮ್ ।
ಕೌಸಲ್ಯಾ ಧಾವಮಾನಾಪಿ ಪ್ರಸ್ಖಲಂತೀ ಪದೇ ಪದೇ ॥

ಅನುವಾದ

ತಾಯಿಯು ಬರುತ್ತಿರುವುದನ್ನು ಕಂಡು ಎಲ್ಲ ಬಾಲಕರು ಓಡಿಹೋದರು. ಕೌಸಲ್ಯೆಯು ಹಿಂದೆಯೇ ಓಡತೊಡಗಿದಳು, ಆದರೆ ಹೆಜ್ಜೆ ಹೆಜ್ಜೆಗೆ ಎಡವುತ್ತಿದ್ದಳು. ॥56॥

57
ಮೂಲಮ್

ರಘುನಾಥಂ ಕರೇ ಧೃತ್ವಾ ಕಿಂಚಿನ್ನೋವಾಚ ಭಾಮಿನೀ ।
ಬಾಲಭಾವಂ ಸಮಾಶ್ರಿತ್ಯ ಮಂದಂ ಮದಂ ರುರೋದ ಹ ॥

ಅನುವಾದ

ಕೊನೆಗೆ ರಾಮನನ್ನು ಅವಳು ಹಿಡಿದು ಕೊಂಡಳು; ಆದರೆ ಏನೂ ಹೇಳಲಿಲ್ಲ. ಆ ಸಮಯದಲ್ಲಿ ರಾಮನು ಬಾಲ ಭಾವದಿಂದ ಮೆಲ್ಲನೆ ಅಳತೊಡಗಿದನು.॥57॥

58
ಮೂಲಮ್

ತೇ ಸರ್ವೇ ಲಾಲಿತಾ ಮಾತ್ರಾ ಗಾಢಮಾಲಿಂಗ್ಯ ಯತ್ನತಃ ।
ಏವಮಾನಂದಸಂದೋಹ ಜಗದಾನಂದಕಾರಕಃ ॥

59
ಮೂಲಮ್

ಮಾಯಾಬಾಲ ವಪುರ್ಧೃತ್ವಾ ರಮಯಾಮಾಸ ದಂಪತೀ ।
ಅಥ ಕಾಲೇನ ತೇ ಸರ್ವೇ ಕೌಮಾರಂ ಪ್ರತಿಪೇದಿರೇ ॥

ಅನುವಾದ

ಆಗ ಅವರೆಲ್ಲರೂ ಹೆದರಿದವರಂತೆ ಕಂಡು ತಾಯಿಯು ಅವರನ್ನು ಅಪ್ಪಿಕೊಂಡು ಮುದ್ದಿಸಿ ಪ್ರೀತಿಸಿದಳು. ಈ ಪ್ರಕಾರ ಜಗದಾನಂದ ಕಾರಕನಾದ ಆನಂದಘನ ಭಗವಾನ್ ರಾಮನು ಬಾಲರೂಪವನ್ನು ಧರಿಸಿ ರಾಜದಂಪತಿ ದಶರಥ ಮತ್ತು ಕೌಸಲ್ಯೆಯವರನ್ನು ಆನಂದಿತವಾಗಿಸಿದನು. ಅನಂತರ ಕೆಲವು ಕಾಲ ಕಳೆಯಲು ಆ ನಾಲ್ವರು ಸಹೋದರರು ಕೌಮಾರ ಅವಸ್ಥೆಯನ್ನು ಪ್ರವೇಶಿಸಿದರು. ॥58-59॥

60
ಮೂಲಮ್

ಉಪನೀತಾ ವಸಿಷ್ಠೇನ ಸರ್ವವಿದ್ಯಾವಿಶಾರದಾಃ ।
ಧರ್ನುರ್ವೇದೇ ಚ ನಿರತಾಃ ಸರ್ವಶಾಸ್ತ್ರಾರ್ಥವೇದಿನಃ ॥

61
ಮೂಲಮ್

ಬಭೂವುರ್ಜಗತಾಂ ನಾಥಾ ಲೀಲಯಾ ನರರೂಪಿಣಃ ।
ಲಕ್ಷ್ಮಣಸ್ತು ಸದಾ ರಾಮಮನುಗಚ್ಛತಿ ಸಾದರಮ್ ॥

62
ಮೂಲಮ್

ಸೇವ್ಯಸೇವಕಭಾವೇನ ಶತ್ರುಘ್ನೋ ಭರತಂ ತಥಾ ।
ರಾಮಶ್ಚಾಪಧರೋ ನಿತ್ಯಂ ತೂಣೀಬಾಣಾನ್ವಿತಃ ಪ್ರಭುಃ ॥

63
ಮೂಲಮ್

ಅಶ್ವಾರೂಢೋ ವನಂ ಯಾತಿ ಮೃಗಯಾಯೈ ಸಲಕ್ಷ್ಮಣಃ ।
ಹತ್ವಾ ದುಷ್ಟಮೃಗಾನ್ಸರ್ವಾನ್ಪಿತ್ರೇ ಸರ್ವಂ ನ್ಯವೇದಯತ್ ॥

ಅನುವಾದ

ಆಗ ವಸಿಷ್ಠರು ಅವರ ಉಪನಯನ ಸಂಸ್ಕಾರವನ್ನು ಮಾಡಿದರು. ಲೀಲೆಯಿಂದ ನರರೂಪವನ್ನು ಧರಿಸಿದ ಸಂಪೂರ್ಣ ಲೋಕಗಳ ಒಡೆಯರು (ನಾಲ್ಕು ಸಹೋದರರು) ಸಮಸ್ತ ಶಾಸ್ತ್ರಗಳ ಮರ್ಮವನ್ನು ತಿಳಿದವರಾಗಿ, ವಿಶೇಷವಾಗಿ ಧನುರ್ವೇದಾದಿ ವಿದ್ಯೆಗಳಲ್ಲಿ, ಪಾರಂಗತರಾದರು. ಲಕ್ಷ್ಮಣನು ಸೇವ್ಯ-ಸೇವಕ ಭಾವದಿಂದ ಆದರ ಪೂರ್ವಕ ಸದಾಕಾಲ ಶ್ರೀರಾಮಚಂದ್ರನನ್ನು ಅನುಸರಿಸುತ್ತಿದ್ದನು. ಹಾಗೂ ಶತ್ರುಘ್ನನು ಯಾವಾಗಲೂ ಭರತನ ಸೇವೆಯಲ್ಲಿ ತೊಡಗಿರುತ್ತಿದ್ದನು. ಭಗವಾನ್ ಶ್ರೀರಾಮನು ಪ್ರತಿದಿನ ಲಕ್ಷ್ಮಣನೊಂದಿಗೆ ಧನುಷ್ಯ-ಬಾಣ-ಬತ್ತಳಿಕೆಗಳನ್ನು ಧರಿಸಿಕೊಂಡು ಕುದುರೆ ಏರಿ ದುಷ್ಟ ಮೃಗಗಳನ್ನು ಬೇಟೆಯಾಡಿ ಬಂದು ತಂದೆಗೆ ಎಲ್ಲವನ್ನು ನಿವೇದಿಸುತ್ತಿದ್ದನು.॥60-63॥

64
ಮೂಲಮ್

ಪ್ರಾತರುತ್ಥಾಯ ಸುಸ್ನಾತಃ ಪಿತರಾವಭಿವಾದ್ಯ ಚ ।
ಪೌರಕಾರ್ಯಾಣಿ ಸರ್ವಾಣಿ ಕರೋತಿ ವಿನಯಾನ್ವಿತಃ ॥

ಅನುವಾದ

ಶ್ರೀರಾಮನು ಬೆಳಗಿನ ಜಾವದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ತಂದೆ-ತಾಯಂದಿರನ್ನು ವಂದಿಸಿ ಮತ್ತೆ ವಿನಯಪೂರ್ವಕ ನಗರ ವಾಸಿಗಳ ಹಿತಕ್ಕಾಗಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದನು. ॥64॥

65
ಮೂಲಮ್

ಬಂಧುಭಿಃ ಸಹಿತೋ ನಿತ್ಯಂ ಭುಕ್ತ್ವಾ ಮುನಿಭಿರನ್ವಹಮ್ ।
ಧರ್ಮಶಾಸ್ತ್ರರಹಸ್ಯಾನಿ ಶೃಣೋತಿ ವ್ಯಾಕರೋತಿ ಚ ॥

ಅನುವಾದ

ಅನಂತರ ತಮ್ಮಂದಿರೊಂದಿಗೆ ಭೋಜನ ಮಾಡಿ ಪ್ರತಿದಿನ ಮುನಿಗಳಿಂದ ಧರ್ಮ ಶಾಸ್ತ್ರಗಳ ಮರ್ಮಗಳನ್ನು ತಿಳಿದುಕೊಂಡು ಸ್ವತಃ ಅದರ ವ್ಯಾಖ್ಯೆ ಮಾಡುತ್ತಿದ್ದನು. ॥65॥

66
ಮೂಲಮ್

ಏವಂ ಪರಾತ್ಮಾ ಮನುಜಾವತಾರೋ
ಮನುಷ್ಯಲೋಕಾನನುಸೃತ್ಯ ಸರ್ವಮ್ ।
ಚಕ್ರೇಽವಿಕಾರೀ ಪರಿಣಾಮಹೀನೋ
ವಿಚಾರ್ಯಮಾಣೇ ನ ಕರೋತಿ ಕಿಂಚಿತ್ ॥

ಅನುವಾದ

ಈ ಪ್ರಕಾರ ವಿಕಾರವಿಲ್ಲದ ಮತ್ತು ಪರಿಣಾಮವಿಲ್ಲದ ಪರಮಾತ್ಮನು ಮನುಷ್ಯಾವತಾರವನ್ನು ಧರಿಸಿಕೊಂಡು ಮನುಷ್ಯರಂತೆ ಆಚರಣೆ ಮಾಡುತ್ತ ಸಮಸ್ತ ಕಾರ್ಯಗಳನ್ನು ಮಾಡಿದನು; ಆದರೆ ವಿಚಾರ ಮಾಡಿ ನೋಡಿದರೆ ಅವನು ಏನನ್ನು ಮಾಡುತ್ತಿರಲಿಲ್ಲ. ॥66॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ತೃತೀಯಃ ಸರ್ಗಃ ॥3॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲಕಾಂಡದಲ್ಲಿ ಮೂರನೆಯ ಸರ್ಗವು ಮುಗಿಯಿತು.