೦೧

[ಮೊದಲನೆಯ ಸರ್ಗ]

ಭಾಗಸೂಚನಾ

ಶ್ರೀರಾಮಹೃದಯ

1
ಮೂಲಮ್

ಯಃ ಪೃಥ್ವೀಭರವಾರಣಾಯ ದಿವಿಜೈಃ
ಸಂಪ್ರಾರ್ಥಿತಶ್ಚಿನ್ಮಯಃ
ಸಂಜಾತಃ ಪೃಥಿವೀತಲೇ ರವಿಕುಲೇ
ಮಾಯಾಮನುಷ್ಯೋಽವ್ಯಯಃ ।
ನಿಶ್ಚಕ್ರಂ ಹತರಾಕ್ಷಸಃ ಪುನರಗಾದ್
ಬ್ರಹ್ಮತ್ವಮಾದ್ಯಂ ಸ್ಥಿರಾಂ
ಕೀರ್ತಿಂ ಪಾಪಹರಾಂ ವಿಧಾಯ ಜಗತಾಂ
ತಂ ಜಾನಕೀಶಂ ಭಜೇ ॥

ಅನುವಾದ

ಚಿನ್ಮಯನೂ ಅವಿನಾಶೀಯೂ ಆದ ಪರಮಾತ್ಮನು ಪೃಥ್ವಿಯ ಭಾರವನ್ನು ಇಳಿಸಲೋಸುಗ ದೇವತೆಗಳ ಪ್ರಾರ್ಥನೆಯಂತೆ ಭೂಮಂಡಲದಲ್ಲಿ, ಸೂರ್ಯವಂಶದಲ್ಲಿ ಮಾಯಾ ಮಾನವ ರೂಪದಿಂದ ಅವತರಿಸಿ, ರಾಕ್ಷಸರ ಸಮೂಹವನ್ನು ನಿರ್ಮೂಲನೆ ಮಾಡಿ ತನ್ನ ಪಾಪವಿನಾಶಿನೀ ಶಾಶ್ವತವಾದ ಕೀರ್ತಿಯನ್ನು ಸ್ಥಾಪಿಸಿ ಮತ್ತೆ ಮೊದಲಿನ ಬ್ರಹ್ಮಸ್ವರೂಪದಲ್ಲಿ ಲೀನನಾದ ಆ ಶ್ರೀಜಾನಕೀನಾಥನನ್ನು ಭಜಿಸುತ್ತೇನೆ. ॥1॥

2
ಮೂಲಮ್

ವಿಶ್ವೋದ್ಭವಸ್ಥಿತಿಲಯಾದಿಷು ಹೇತುಮೇಕಂ
ಮಾಯಾಶ್ರಯಂ ವಿಗತಮಾಯಮಚಿಂತ್ಯಮೂರ್ತಿಮ್ ।
ಆನಂದಸಾಂದ್ರಮಮಲಂ ನಿಜಬೋಧರೂಪಂ
ಸೀತಾಪತಿಂ ವಿದಿತತತ್ತ್ವಮಹಂ ನಮಾಮಿ ॥

ಅನುವಾದ

ವಿಶ್ವದ ಉತ್ಪತ್ತಿ, ಸ್ಥಿತಿ, ಮತ್ತು ಲಯ ಮುಂತಾದವುಗಳ ಏಕಮಾತ್ರ ಕಾರಣನೂ, ಮಾಯೆಯ ಆಶ್ರಯನಾದರೂ ಕೂಡ ಮಾಯಾತೀತನಾಗಿರುವ ಅಚಿಂತ್ಯಸ್ವರೂಪನೂ, ಆನಂದಘನನೂ, ಉಪಾಧಿಕೃತ ದೋಷಗಳಿಂದ ರಹಿತನೂ ಹಾಗೂ ಸ್ವಯಂ ಪ್ರಕಾಶ ಸ್ವರೂಪನೂ ಆಗಿರುವ ಆ ತತ್ತ್ವವೇತ್ತನಾದ ಶ್ರೀಸೀತಾಪತಿಯನ್ನು ನಾನು ನಮಸ್ಕರಿಸುತ್ತೇನೆ. ॥2॥

3
ಮೂಲಮ್

ಪಠಂತಿ ಯೇ ನಿತ್ಯಮನನ್ಯಚೇತಸಃ
ಶೃಣ್ವಂತಿ ಚಾಧ್ಯಾತ್ಮಿಕಸಂಜ್ಞಿತಂ ಶುಭಮ್ ।
ರಾಮಾಯಣಂ ಸರ್ವಪುರಾಣಸಮ್ಮತಂ
ನಿರ್ಧೂತಪಾಪಾ ಹರಿಮೇವ ಯಾಂತಿ ತೇ ॥

ಅನುವಾದ

ಸರ್ವಪುರಾಣ ಸಮ್ಮತವಾದ ಈ ಪವಿತ್ರ ಅಧ್ಯಾತ್ಮರಾಮಾಯಣವನ್ನು ಏಕಾಗ್ರಚಿತ್ತದಿಂದ ಪ್ರತಿದಿನವೂ ಪಾರಾಯಣ ಮಾಡುವವರು, ಕೇಳುವವರು ಪಾಪರಹಿತರಾಗಿ ಶ್ರೀಹರಿಯನ್ನೇ ಪಡೆಯುತ್ತಾರೆ. ॥3॥

4
ಮೂಲಮ್

ಅಧಾತ್ಮರಾಮಾಯಣಮೇವ ನಿತ್ಯಂ
ಪಠೇದ್ಯದೀಚ್ಛೇದ್ಭವಬಂಧಮುಕ್ತಿಮ್ ।
ಗವಾಂ ಸಹಸ್ರಾಯುತಕೋಟಿದಾನಾತ್
ಫಲಂ ಲಭೇದ್ಯಃ ಶ್ರುಣುಯಾತ್ಸ ನಿತ್ಯಮ್ ॥

ಅನುವಾದ

ಸಂಸಾರ ಬಂಧನದಿಂದ ಮುಕ್ತರಾಗಬೇಕೆಂಬ ಇಚ್ಛೆ ಉಳ್ಳವರು ಅಧ್ಯಾತ್ಮ ರಾಮಾಯಣವನ್ನೇ ನಿತ್ಯವು ಪಾರಾಯಣ ಮಾಡಬೇಕು. ಇದನ್ನು ನಿತ್ಯವೂ ಶ್ರವಣಿಸುವವನು ಲಕ್ಷ-ಕೋಟಿ ಸಂಖ್ಯೆಯ ಗೋದಾನದ ಫಲವನ್ನು ಪಡೆದುಕೊಳ್ಳುವನು.॥4॥

5
ಮೂಲಮ್

ಪುರಾರಿಗಿರಿಸಂಭೂತಾ ಶ್ರೀರಾಮಾರ್ಣವಸಂಗತಾ ।
ಅಧ್ಯಾತ್ಮರಾಮಗಂಗೇಯಂ ಪುನಾತಿ ಭುವನತ್ರಯಮ್ ॥

ಅನುವಾದ

ಶ್ರೀಶಂಕರ ರೂಪೀ ಪರ್ವತದಿಂದ ಹೊರಟು ರಾಮರೂಪೀ ಸಮುದ್ರವನ್ನು ಸೇರುವಂತಹ ಈ ಅಧ್ಯಾತ್ಮರಾಮಾಯಣ ರೂಪೀ ಗಂಗೆಯು ಮೂರು ಲೋಕಗಳನ್ನು ಪವಿತ್ರಗೊಳಿಸುತ್ತಿದೆ.॥5॥

6
ಮೂಲಮ್

ಕೈಲಾಸಾಗ್ರೇ ಕದಾಜಿದ್ರವಿಶತವಿಮಲೇ
ಮಂದಿರೇ ರತ್ನಪೀಠೇ
ಸಂವಿಷ್ಟಂ ಧ್ಯಾನನಿಷ್ಠಂ ತ್ರಿನಯನಮಭಯಂ
ಸೇವಿತಂ ಸಿದ್ಧಸಂಘೈಃ ।
ದೇವೀ ವಾಮಾಂಕಸಂಸ್ಥಾ ಗಿರಿವರತನಯಾ
ಪಾರ್ವತೀ ಭಕ್ತಿನಮ್ರಾ
ಪ್ರಾಹೇದಂ ದೇವಮೀಶಂ ಸಕಲಮಲಹರಂ
ವಾಕ್ಯಮಾನಂದಕಂದಮ್ ॥

ಅನುವಾದ

ಒಮ್ಮೆ ಕೈಲಾಸ ಪರ್ವತದ ಮೇಲೆ ಕೋಟಿ ಸೂರ್ಯರ ಸಮಾನ ಪ್ರಕಾಶವುಳ್ಳ ಮಂದಿರದಲ್ಲಿ ರತ್ನಸಿಂಹಾಸನದ ಮೇಲೆ ಧ್ಯಾನಾವಸ್ಥಿತನಾಗಿ ಕುಳಿತಿರುವ, ಸಿದ್ಧ ಸಮೂಹಗಳಿಂದ ಕೂಡಿ ಅಭಯಮುದ್ರೆಯಿಂದಿರುವ, ನಿರ್ಭೀತನಾಗಿ, ಎಲ್ಲ ಪಾಪಗಳನ್ನು ಹರಿಸುವ ಆನಂದಕಂದ ದೇವದೇವನಾದ ಭಗವಾನ್ ಮುಕ್ಕಣ್ಣನಲ್ಲಿ ಅವನ ವಾಮಾಂಕದಲ್ಲಿ ವಿರಾಜಮಾನಳಾದ ಗಿರಿರಾಜಕುಮಾರೀ ಶ್ರೀಪಾರ್ವತಿಯು ಭಕ್ತಿಭಾವದಿಂದ ನಮ್ರಳಾಗಿ ಹೀಗೆ ಪ್ರಶ್ನಿಸಿದಳು -॥6॥

7
ಮೂಲಮ್ (ವಾಚನಮ್)

ಪಾರ್ವತ್ಯುವಾಚ

ಮೂಲಮ್

ನಮೋಽಸ್ತು ತೇ ದೇವ ಜಗನ್ನಿವಾಸ
ಸರ್ವಾತ್ಮದೃಕ್ ತ್ವಂ ಪರಮೇಶ್ವರೋಽಸಿ ।
ಪೃಚ್ಛಾಮಿ ತತ್ತ್ವಂ ಪುರುಷೋತ್ತಮಸ್ಯ
ಸನಾತನಂ ತ್ವಂ ಚ ಸನಾತನೋಽಸಿ ॥

ಅನುವಾದ

ಶ್ರೀಪಾರ್ವತೀ ದೇವಿಯು ಕೇಳಿದಳು — ಹೇ ದೇವಾ! ಹೇ ಜಗನ್ನಿವಾಸಾ! ನಿಮಗೆ ನಮಸ್ಕಾರವು. ನೀವು ಅಂತಃಕರಣದ ಸಾಕ್ಷಿ ಮತ್ತು ಪರಮೇಶ್ವರರಾಗಿದ್ದೀರೀ! ನಾನು ನಿಮ್ಮಲ್ಲಿ ಭಗವಾನ್ ಶ್ರೀಪುರುಷೋತ್ತಮನ ಸನಾತನ ತತ್ತ್ವವನ್ನು ಕೇಳಲು ಬಯಸುತ್ತೇನೆ, ಏಕೆಂದರೆ ನೀವು ಸನಾತನರಾಗಿದ್ದೀರಿ. ॥7॥

8
ಮೂಲಮ್

ಗೋಪ್ಯಂ ಯದತ್ಯಂತಮನನ್ಯವಾಚ್ಯಂ
ವದಂತಿ ಭಕ್ತೇಷು ಮಹಾನುಭಾವಾಃ ।
ತದಪ್ಯಹೋಽಹಂ ತವ ದೇವ ಭಕ್ತಾ
ಪ್ರಿಯೋಽಸಿ ಮೇ ತ್ವಂ ವದ ಯತ್ತು ಪೃಷ್ಟಮ್ ॥

ಅನುವಾದ

ಮಹಾನುಭಾವರಾದವರು ಅತ್ಯಂತ ಗೋಪನೀಯ ಹಾಗೂ ಯಾರಿಗೂ ಹೇಳಲೂ ಯೋಗ್ಯವಲ್ಲದ ವಿಷಯವನ್ನು ಕೂಡ ತಮ್ಮ ಭಕ್ತರಿಗೆ ಹೇಳಿ ಬಿಡುತ್ತಾರೆ. ಹೇ ದೇವಾ! ನಾನು ನಿಮ್ಮ ಭಕ್ತಳಾಗಿರುವೆ, ನನಗೆ ನೀವು ಅತ್ಯಂತ ಪ್ರಿಯರಾಗಿದ್ದೀರಿ. ಅದಕ್ಕಾಗಿ ನಾನು ಕೇಳುವುದನ್ನು ಸ್ಪಷ್ಟವಾಗಿ ವರ್ಣನೆ ಮಾಡಿರಿ. ॥8॥

9
ಮೂಲಮ್

ಜ್ಞಾನಂ ಸವಿಜ್ಞಾನಮಥಾನುಭಕ್ತಿ -
ವೈರಾಗ್ಯಯುಕ್ತಂ ಚ ಮಿತಂ ವಿಭಾಸ್ವತ್ ।
ಜಾನಾಮ್ಯಹಂ ಯೋಷಿದಪಿ ತ್ವದುಕ್ತಂ
ಯಥಾ ತಥಾ ಬ್ರೂಹಿ ತರಂತಿ ಯೇನ ॥

ಅನುವಾದ

ಮನುಷ್ಯರು ಸಂಸಾರ ಸಮುದ್ರದಿಂದ ದಾಟಿ ಹೋಗುವ ಭಕ್ತಿ ಮತ್ತು ವೈರಾಗ್ಯದಿಂದ ಪರಿಪೂರ್ಣ ಪ್ರಕಾಶಮಯ ವಿಜ್ಞಾನ ಸಹಿತ ಆತ್ಮಜ್ಞಾನವನ್ನು ನಾನು ಸ್ತ್ರೀಯಾಗಿದ್ದರೂ ನಿಮ್ಮ ವಚನಗಳನ್ನು ಸುಲಭವಾಗಿ ತಿಳಿಯುವಂತೆ ಸಂಕ್ಷೇಪವಾಗಿ ಸ್ವಷ್ಟವಾಗಿ ವರ್ಣಿಸಿರಿ. ॥9॥f

10
ಮೂಲಮ್

ಪೃಚ್ಛಾಮಿ ಚಾನ್ಯಚ್ಚ ಪರಂ ರಹಸ್ಯಂ
ತದೇವ ಚಾಗ್ರೇ ವದ ವಾರಿಜಾಕ್ಷ ।
ಶ್ರೀರಾಮಚಂದ್ರೇಽಖಿಲಲೋಕಸಾರೇ
ಭಕ್ತಿರ್ದೃಢಾ ನೌರ್ಭವತಿ ಪ್ರಸಿದ್ಧಾ ॥

ಅನುವಾದ

ಹೇ ಕಮಲಾಕ್ಷನೇ! ಇನ್ನೊಂದು ಪರಮರಹಸ್ಯವನ್ನು ಕೇಳ ಬಯಸುತ್ತೇನೆ, ಕೃಪೆ ಮಾಡಿ ಅದನ್ನೇ ಮೊದಲು ನೀವು ಹೇಳಿರಿ. ಸಮಸ್ತ ಲೋಕಗಳಿಗೂ ಸಾರವಾದ ಶ್ರೀರಾಮಚಂದ್ರನ ವಿಶುದ್ದ ಭಕ್ತಿಯು ಸಂಸಾರ ಸಾಗರವನ್ನು ದಾಟಲು ಪ್ರಸಿದ್ಧವಾದ ನೌಕೆಯಾಗಿದೆ ಎಂಬುದು ಪ್ರಸಿದ್ಧವಾಗಿದೆ.॥10॥

11
ಮೂಲಮ್

ಭಕ್ತಿಃ ಪ್ರಸಿದ್ಧಾ ಭವಮೋಕ್ಷಣಾಯ
ನಾನ್ಯತ್ತತಃ ಸಾಧನಮಸ್ತಿ ಕಿಂಚಿತ್ ।
ತಥಾಪಿ ಹೃತ್ಸಂಶಯಬಂಧನಂ ಮೇ
ವಿಭೇತ್ತುಮರ್ಹಸ್ಯಮಲೋಕ್ತಿ ಭಿಸ್ತ್ವಮ್ ॥

ಅನುವಾದ

ಸಂಸಾರದಿಂದ ವಿಮುಕ್ತನಾಗಲು ಭಕ್ತಿಯೇ ಪ್ರಸಿದ್ಧ ಉಪಾಯವಾಗಿದೆ, ಅದರಿಂದ ಬೇರೆಯಾದ ಯಾವಶ್ರೇಷ್ಠ ಸಾಧನೆಯೂ ಇಲ್ಲ; ಆದರೂ ನೀವು ನಿಮ್ಮ ವಿಶುದ್ಧ ವಚನಗಳಿಂದ ನನ್ನ ಹೃದಯದ ಸಂಶಯ - ಗ್ರಂಥಿಯನ್ನು ಕತ್ತರಿಸಿಬಿಡಿರಿ. ॥11॥

12
ಮೂಲಮ್

ವದಂತಿ ರಾಮಂ ಪರಮೇಕಮಾದ್ಯಂ
ನಿರಸ್ತಮಾಯಾಗುಣಸಂಪ್ರವಾಹಮ್ ।
ಭಜಂತಿ ಚಾಹರ್ನಿಶಮಪ್ರಮತ್ತಾಃ
ಪರಂ ಪದಂ ಯಾಂತಿ ತಥೈವ ಸಿದ್ಧಾಃ ॥

ಅನುವಾದ

ಶ್ರೀರಾಮಚಂದ್ರನನ್ನು ಪರಮ, ಅದ್ವಿತೀಯ, ಎಲ್ಲರ ಆದಿಕಾರಣ ಮತ್ತು ಪ್ರಕೃತಿಯ ಗುಣ ಪ್ರವಾಹದಿಂದ ಅತೀತನೆಂದು ಸಿದ್ಧರು ಹೇಳುತ್ತಾರೆ; ಹಾಗೂ ಅವರು ಅಹರ್ನಿಶಿ ಏಕಾಗ್ರತೆಯಿಂದ ಅವನ ಭಜನೆ ಮಾಡಿ ಪರಮಪದವನ್ನೂ ಪ್ರಾಪ್ತಮಾಡಿಕೊಳ್ಳುತ್ತಾರೆ. ॥12॥

13
ಮೂಲಮ್

ವದಂತಿ ಕೇಚಿತ್ಪರಮೋಽಪಿ ರಾಮಃ
ಸ್ವಾವಿದ್ಯಯಾ ಸಂವೃತಮಾತ್ಮಸಂಜ್ಞಮ್ ।
ಜಾನಾತಿ ನಾತ್ಮಾನಮತಃ ಪರೇಣ
ಸಂಬೋಧಿತೋ ವೇದ ಪರಾತ್ಮತತ್ತ್ವಮ್ ॥

ಅನುವಾದ

ಶ್ರೀರಾಮನು ಪರಬ್ರಹ್ಮನಾಗಿದ್ದರೂ ತನ್ನ ಮಾಯೆಯಿಂದ ಆವೃತನಾದ ಕಾರಣ ತನ್ನ ಆತ್ಮಸ್ವರೂಪವನ್ನು ಅರಿಯದೇ ಇದ್ದನೆಂದು, ಅದಕ್ಕಾಗಿ ಬೇರೆ (ವಸಿಷ್ಠಾದಿ)ಯವರ ಉಪದೇಶದಿಂದ ಅವನು ಆತ್ಮಜ್ಞಾನವನ್ನು ಅರಿತುಕೊಂಡನೆಂದು ಕೆಲ ಕೆಲವರು ಹೇಳುತ್ತಾರೆ. ॥13॥

14
ಮೂಲಮ್

ಯದಿ ಸ್ಮ ಜಾನಾತಿ ಕುತೋ ವಿಲಾಪಃ
ಸೀತಾಕೃತೇಽನೇನ ಕೃತಃ ಪರೇಣ ।
ಜಾನಾತಿ ನೈವಂ ಯದಿ ಕೇನ ಸೇವ್ಯಃ
ಸಮೋ ಹಿ ಸರ್ವೈರಪಿ ಜೀವಜಾತೈಃ ॥

15
ಮೂಲಮ್

ಅತ್ರೋತ್ತರಂ ಕಿಂ ವಿದಿತಂ ಭವದ್ಭಿಸ್ತದ್ ಬ್ರೂತ
ಮೇ ಸಂಶಯಭೇದಿ ವಾಕ್ಯಮ್॥

ಅನುವಾದ

ಒಂದು ವೇಳೆ ಆತ್ಮತತ್ತ್ವವನ್ನು ತಿಳಿದವನಾಗಿದ್ದರೆ ಆ ಪರಮಾತ್ಮನು ಸೀತೆಗಾಗಿ ವಿಲಪಿಸಿದುದು ಏಕೆ? ಅವನಿಗೆ ಆತ್ಮಜ್ಞಾನವಿಲ್ಲದಿದ್ದರೆ ಬೇರೆ ಸಾಮಾನ್ಯ ಜೀವಿಗಳಂತೆ ಆಗುವನಲ್ಲ! ಮತ್ತೆ ಅವನನ್ನು ಏಕೆ ಭಜಿಸಬೇಕು? ಈ ವಿಷಯದಲ್ಲಿ ನಿಮ್ಮ ವಿಚಾರವೇನು? ನನ್ನ ಸಂದೇಹವು ಕಳೆಯುವಂತಹ ಸ್ಪಷ್ಟವಾದ ವಾಕ್ಯಗಳಲ್ಲಿ ಹೇಳಿರಿ ಎಂದು ನಾನು ಪ್ರಾರ್ಥಿಸುತ್ತೇನೆ. ॥14-15॥

16
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಧನ್ಯಾಸಿ ಭಕ್ತಾಸಿ ಪರಾತ್ಮನಸ್ತ್ವಂ
ಯಜ್ಜ್ಞಾತುಮಿಚ್ಛಾ ತವ ರಾಮತತ್ತ್ವಮ್ ।
ಪುರಾ ನ ಕೇನಾಪ್ಯಭಿಚೋದಿತೋಽಹಂ
ವಕ್ತುಂ ರಹಸ್ಯಂ ಪರಮಂ ನಿಗೂಢಮ್ ॥

ಅನುವಾದ

ಶ್ರೀಮಹಾದೇವನಿಂತೆಂದನು — ಪಾರ್ವತಿ! ನೀನು ಧನ್ಯಳಾಗಿರುವೆ! ರಾಮತತ್ತ್ವವನ್ನು ತಿಳಿಯುವ ಇಚ್ಛೆ ನಿನಗುಂಟಾದುದರಿಂದ ನೀನು ಪರಮಾತ್ಮನ ಭಕ್ತಳಾಗಿರುವೆ. ಇದಕ್ಕಿಂತ ಮೊದಲು ಈ ಪರಮ ಗೂಢ ರಹಸ್ಯವನ್ನು ವರ್ಣಿಸಲು ಯಾರೂ ನನ್ನನ್ನು ಪ್ರೇರೇಪಿಸಿರಲಿಲ್ಲ.॥16॥

17
ಮೂಲಮ್

ತ್ವಯಾದ್ಯ ಭಕ್ತ್ಯಾ ಪರಿನೋದಿತೋಽಹಮ್
ವಕ್ಷ್ಯೇ ನಮಸ್ಕೃತ್ಯ ರಘೂತ್ತಮಂ ತೇ ।
ರಾಮಃ ಪರಾತ್ಮಾ ಪ್ರಕೃತೇರನಾದಿ-
ರಾನಂದ ಏಕಃ ಪುರುಷೋತ್ತಮೋ ಹಿ ॥

ಅನುವಾದ

ಇಂದು ನೀನು ನನ್ನಲ್ಲಿ ಭಕ್ತಿ ಪೂರ್ವಕವಾಗಿ ಪ್ರಶ್ನಿಸಿರುವೆ, ಅದಕ್ಕಾಗಿ ನಾನು ಶ್ರೀರಾಮಚಂದ್ರನನ್ನು ವಂದಿಸಿ ನಿನ್ನ ಪ್ರಶ್ನೆಯ ಉತ್ತರವನ್ನು ಕೊಡುತ್ತೇನೆ. ಶ್ರೀರಾಮಚಂದ್ರನು ನಿಃಸಂಶಯವಾಗಿ ಪ್ರಕೃತಿಯಿಂದಪರನೂ, ಪರಮಾತ್ಮನೂ, ಅನಾದಿಯೂ, ಆನಂದ ಘನನೂ, ಅದ್ವಿತೀಯನೂ ಆದ ಪುರುಷೋತ್ತಮನೇ ಆಗಿದ್ದಾನೆ. ॥17॥

18
ಮೂಲಮ್

ಸ್ವಮಾಯಯಾ ಕೃತ್ಸ್ನಮಿದಂ ಹಿ ಸೃಷ್ಟ್ವಾ
ನಭೋವದಂತರ್ಬಹಿರಾಸ್ಥಿತೋ ಯಃ ।
ಸರ್ವಾಂತರಸ್ಥೋಽಪಿ ನಿಗೂಢಆತ್ಮಾ
ಸ್ವಮಾಯಯಾ ಸೃಷ್ಟಮಿದಂ ವಿಚಷ್ಟೇ॥

ಅನುವಾದ

ಅವನು ತನ್ನ ಮಾಯೆಯಿಂದಲೇ ಈ ಸಮಸ್ತ ಜಗತ್ತನ್ನು ರಚಿಸಿ ಇದರ ಒಳ-ಹೊರಗೆ ಎಲ್ಲ ಕಡೆಯಲ್ಲಿ ಆಕಾಶದಂತೆ ವ್ಯಾಪ್ತನಾಗಿದ್ದಾನೆ. ಹಾಗೂ ಆತ್ಮರೂಪದಿಂದ ಎಲ್ಲರ ಅಂತಃಕರಣದಲ್ಲಿ ಸ್ಥಿತನಾಗಿದ್ದು ತನ್ನ ಮಾಯೆಯಿಂದ ಈ ವಿಶ್ವವನ್ನು ಪ್ರಕಾಶಿಸುತ್ತಿದ್ದಾನೆ.॥18॥

19
ಮೂಲಮ್

ಜಗಂತಿ ನಿತ್ಯಂ ಪರಿತೋ ಭ್ರಮಂತಿ
ಯತ್ಸನ್ನಿಧೌ ಚುಂಬಕಲೊಹವದ್ಧಿ ।
ಏತನ್ನ ಜಾನಂತಿ ವಿಮೂಢಚಿತ್ತಾಃ
ಸ್ವಾವಿದ್ಯಯಾ ಸಂವೃತಮಾನಸಾ ಯೇ ॥

ಅನುವಾದ

ಆಯಸ್ಕಾಂತದ ಬಳಿಯಿರುವ ಜಡ ಕಬ್ಬಿಣದಲ್ಲಿಯೂ ಗತಿ ಉಂಟಾಗುವಂತೆಯೇ ಅವನ ಸನ್ನಿಧಿ ಮಾತ್ರದಿಂದ ಈ ವಿಶ್ವವು ಸದಾ ತನ್ನ ಸೂತ್ತಲೂ ತಿರುಗುತ್ತಿದೆ ಅಂತಹ ಪರಮಾತ್ಮನಾದ ಶ್ರೀರಾಮನನ್ನು ಅಜ್ಞಾನದಿಂದ ಹೃದಯವು ಮುಚ್ಚಲ್ಪಟ್ಟಿರುವ ಮೂಢ ಜನರು ತಿಳಿಯಲಾರರು. ॥19॥

20
ಮೂಲಮ್

ಸ್ವಾಜ್ಞಾನಮಪ್ಯಾತ್ಮನಿ ಶುದ್ಧಬುದ್ಧೇ
ಸ್ವಾರೋಪಯಂತೀಹ ನಿರಸ್ತಮಾಯೆ ।
ಸಂಸಾರಮೇವಾನುಸರಂತಿ ತೇ ವೈ
ಪುತ್ರಾದಿಸಕ್ತಾಃ ಪುರುಕರ್ಮಯುಕ್ತಾಃ ॥

ಅನುವಾದ

ಅಂತಹ ಮೂಢರು ಆ ಮಾಯಾತೀತ ಶುದ್ಧ-ಬುದ್ಧ ಪರಮಾತ್ಮನಲ್ಲಿಯೂ ತನ್ನ ಅಜ್ಞಾನವನ್ನು ಆರೋಪಿಸುತ್ತಾರೆ. ಅರ್ಥಾತ್ ಅವನನ್ನೂ ಕೂಡ ತನ್ನಂತೆಯೇ ಅಜ್ಞಾನಿಯೆಂದು ತಿಳಿಯುತ್ತಾರೆ. ಆ ಪಾಮರ ಜೀವಿಗಳು ಸದಾಕಾಲ ಪತ್ನೀ ಪುತ್ರಾದಿಗಳಲ್ಲಿ ಆಸಕ್ತರಾಗಿ ಅನೇಕ ವಿಧವಾದ ಕರ್ಮಗಳಲ್ಲಿ ತೊಡಗಿದ್ದು ಸಂಸಾರ ಚಕ್ರದಲ್ಲಿ ಸಿಲುಕಿಕೊಂಡಿರುವರು. ॥20॥

21
ಮೂಲಮ್

ಜಾನಂತಿ ನೈವಂ ಹೃದಯೇ ಸ್ಥಿತಂ ವೈ
ಚಾಮೀಕರಂ ಕಂಠಗತಂ ಯಥಾಜ್ಞಾಃ ।
ಯಥಾಪ್ರಕಾಶೋ ನ ತು ವಿದ್ಯತೇ ರವೌ
ಜ್ಯೋತಿಃಸ್ವಭಾವೇ ಪರಮೇಶ್ವರೇ ತಥಾ ।
ವಿಶುದ್ಧವಿಜ್ಞಾನಘನೇ ರಘೂತ್ತಮೇಽ-
ವಿದ್ಯಾ ಕಥಂ ಸ್ಯಾತ್ಪರತಃ ಪರಾತ್ಮನಿ ॥

ಅನುವಾದ

ಆ ಅಜ್ಞಾನಿಗಳು ತಮ್ಮ ಕತ್ತಿನಲ್ಲಿರುವ ಚಿನ್ನದ ಸರವನ್ನು ಮರೆತಂತೆ ತಮ್ಮ ಹೃದಯದಲ್ಲೇ ಸ್ಥಿತನಾದ ಪರಮಾತ್ಮನಾದ ಶ್ರೀರಾಮನನ್ನು ಅರಿಯರು. (ಅದಕ್ಕಾಗಿ ಅವನಲ್ಲಿ ಅಜ್ಞಾನಾದಿಗಳನ್ನು ಆರೋಪಿಸುತ್ತಾರೆ) ವಾಸ್ತವವಾಗಿ ಜ್ಯೋತಿಃ ಸ್ವರೂಪಿಯಾದ ಸೂರ್ಯನಲ್ಲಿ ಅಂಧಕಾರವು ಎಂದೂ ಇರದಂತೆ ಪ್ರಕೃತ್ಯಾದಿಗಳಿಂದ ಅತೀತನೂ, ವಿಶುದ್ಧ ವಿಜ್ಞಾನಘನನೂ, ಆದ ಪರಮೇಶ್ವರ ಪರಮಾತ್ಮಾ ಶ್ರೀರಾಮನಲ್ಲಿಯೂ ಅವಿದ್ಯೆಯು ಇರಲಾರದು. ॥21॥

22
ಮೂಲಮ್

ಯಥಾ ಹಿ ಚಾಕ್ಷ್ಣಾ ಭ್ರಮತಾ ಗೃಹಾದಿಕಂ
ವಿನಷ್ಟದೃಷ್ಟೇರ್ಭ್ರಮತೀವ ದೃಶ್ಯತೇ ।
ತಥೈವ ದೇಹೇಂದ್ರಿಯಕರ್ತುರಾತ್ಮನಃ
ಕೃತಂ ಪರೇಽಧ್ಯಸ್ಯ ಜನೋ ವಿಮುಹ್ಯತಿ ॥

ಅನುವಾದ

ಗಿರಗಿರನೆ ತಿರುಗುತ್ತಿರುವಾಗ ಮನುಷ್ಯನಿಗೆ ಕಣ್ಣುಗಳು ತಿರುಗುತ್ತಿರುವುದರಿಂದ ಮನೆಯೇ ಮುಂತಾದವುಗಳು ಸುತ್ತುತ್ತಿರುವಂತೆ ಕಂಡು ಬರುತ್ತದೆ, ಅದೇ ಪ್ರಕಾರ ದೇಹ ಮತ್ತು ಇಂದ್ರಿಯಗಳಿಂದ ಜೀವಿಯಲ್ಲಿ ಕರ್ತೃತ್ವವಿದ್ದು ಮಾಡಿದಂತಹ ಕರ್ಮಗಳನ್ನು ಆತ್ಮನಲ್ಲಿ ಆರೋಪಿಸಿ ಮೋಹಿತರಾಗುತ್ತಾರೆ. ॥22॥

23
ಮೂಲಮ್

ನಾಹೋ ನ ರಾತ್ರಿಃ ಸವಿತುರ್ಯಥಾ ಭವೇತ್
ಪ್ರಕಾಶರೂಪಾವ್ಯಭಿಚಾರತಃ ಕ್ವಚಿತ್ ।
ಜ್ಞಾನಂ ತಥಾಜ್ಞಾನಮಿದಂ ದ್ವಯಂ ಹರೌ
ರಾಮೇ ಕಥಂ ಸ್ಥಾಸ್ಯತಿ ಶುದ್ಧಚಿದ್ ಘನೇ ॥

ಅನುವಾದ

ಎಂದೂ ಬೇರ್ಪಡದೆ ಇರುವ ಪ್ರಕಾಶ ಸ್ವರೂಪೀ ಸೂರ್ಯನಲ್ಲಿ ರಾತ್ರಿ-ಹಗಲಿನ ಯಾವ ಭೇದವೂ ಇಲ್ಲ. ಅವನು ಸರ್ವದಾ ಒಂದೇ ರೀತಿಯಿಂದ ಪ್ರಕಾಶಮಾನನಾಗಿರುತ್ತಾನೆ. ಹಾಗೆಯೇ ಶುದ್ಧ ಚಿದ್ಘನ ಭಗವಾನ್ ಶ್ರೀರಾಮನಲ್ಲಿ ಜ್ಞಾನ ಮತ್ತು ಅಜ್ಞಾನಗಳೆಂಬ ದ್ವೈಧೀ ಭಾವವು ಹೇಗೆ ಇರಬಲ್ಲದು? ॥23॥

24
ಮೂಲಮ್

ತಸ್ಮಾತ್ಪರಾನಂದಮಯೇ ರಘೂತ್ತಮೇ
ವಿಜ್ಞಾನರೂಪೇ ಹಿ ನ ವಿದ್ಯತೇ ತಮಃ ।
ಅಜ್ಞಾನಸಾಕ್ಷಿಣ್ಯರವಿಂದಲೋಚನೇ
ಮಾಯಾಶ್ರಯತ್ವಾನ್ನ ಹಿ ಮೋಹಕಾರಣಮ್ ॥

ಅನುವಾದ

ಆದ್ದರಿಂದ ಪರಮಾನಂದ ಸ್ವರೂಪೀಯೂ, ವಿಜ್ಞಾನಘನನೂ ಅಜ್ಞಾನಕ್ಕೆ ಸಾಕ್ಷಿಯೂ ಆದ ಕಮಲನಯನ ಭಗವಾನ್ ಶ್ರೀರಾಮನಲ್ಲಿ ಅಜ್ಞಾನವು ಲೇಶ ಮಾತ್ರವೂ ಇಲ್ಲ; ಏಕೆಂದರೆ ಅವನು ಮಾಯೆಯ ಅಧಿಷ್ಠಾನ ನಾಗಿದ್ದಾನೆ. ಅದರಿಂದ ಆ ಮಾಯೆಯು ಅವನನ್ನು ಮೋಹಿತವಾಗಿಸಲಾರಳು. ॥24॥

25
ಮೂಲಮ್

ಅತ್ರ ತೇ ಕಥಯಿಷ್ಯಾಮಿ ರಹಸ್ಯಮಪಿ ದುರ್ಲಭಮ್ ।
ಸೀತಾರಾಮಮರುತ್ಸೂನುಸಂವಾದಂ ಮೋಕ್ಷಸಾಧನಮ್ ॥

ಅನುವಾದ

ಹೇ ಪಾರ್ವತಿ! ಈ ವಿಷಯದಲ್ಲಿ ನಾನು ನಿನಗೆ ಸೀತೆ, ರಾಮ ಮತ್ತು ಹನುಮಂತರ ಅತ್ಯಂತ ಗೋಪನೀಯ ಹಾಗೂ ಪರಮ ದುರ್ಲಭವಾದ ಮೋಕ್ಷದ ಸಾಧನರೂಪೀ ಸಂವಾದವನ್ನು ಹೇಳುತ್ತೇನೆ. ॥25॥

26
ಮೂಲಮ್

ಪುರಾ ರಾಮಾಯಣೇ ರಾಮೋ ರಾವಣಂ ದೇವಕಂಟಕಮ್ ।
ಹತ್ವಾ ರಣೇ ರಣಶ್ಲಾಘೀ ಸಪುತ್ರಬಲವಾಹನಮ್ ॥

27
ಮೂಲಮ್

ಸೀತಯಾ ಸಹ ಸುಗ್ರೀವಲಕ್ಷ್ಮಣಾಭ್ಯಾಂ ಸಮನ್ವಿತಃ ।
ಅಯೋಧ್ಯಾಮಗಮದ್ರಾಮೋ ಹನೂಮತ್ಪ್ರಮುಖೈರ್ವೃತಃ ॥

ಅನುವಾದ

ಹಿಂದೆ ರಾಮಾವತಾರದಲ್ಲಿ ಯುದ್ಧಕೋವಿದನಾದ ಶ್ರೀರಾಮನು ದೇವತೆಗಳ ಕಕಂಟಕರೂಪೀ ರಾವಣನನ್ನು ಸಂತಾನ, ಸೇನೆ ಸಹಿತ ಯುದ್ಧದಲ್ಲಿ ಕೊಂದು ಸೀತಾ, ಸುಗ್ರೀವ, ಲಕ್ಷಣ ಸಹಿತ ಹನುಮಂತನೇ ಮುಂತಾದ ವಾನರರಿಂದ ಸುತ್ತುವರಿದು ಅಯೋಧ್ಯೆಗೆ ಬಂದನು.॥26-27॥

28
ಮೂಲಮ್

ಅಭಿಷಿಕ್ತಃ ಪರಿವೃತೋ ವಸಿಷ್ಠಾದ್ಯೈರ್ಮಹಾತ್ಮಭಿಃ ।
ಸಿಂಹಾಸನೇ ಸಮಾಸೀನಃ ಕೋಟಿಸೂರ್ಯಸಮಪ್ರಭಃ ॥

ಅನುವಾದ

ಹಾಗೂ ಅಲ್ಲಿ ಪಟ್ಟಾಭಿಷಿಕ್ತನಾಗಿ ವಸಿಷ್ಠಾದಿ ಮಹಾತ್ಮರಿಂದ ಸುತ್ತುವರಿದು ಕೋಟಿ ಸೂರ್ಯರಂತೆ ಪ್ರಕಾಶಿಸುತ್ತ ರತ್ನ ಸಿಂಹಾಸನದಲ್ಲಿ ವಿರಾಜಮಾನನಾದನು. ॥28॥

29
ಮೂಲಮ್

ದೃಷ್ಟ್ವಾ ತದಾ ಹನೂಮಂತಂ ಪ್ರಾಂಜಲಿಂ ಪುರತಃ ಸ್ಥಿತಮ್ ।
ಕೃತಕಾರ್ಯಂ ನಿರಾಕಾಂಕ್ಷಂ ಜ್ಞಾನಾಪೇಕ್ಷಂ ಮಹಾಮತಿಮ್ ॥

30
ಮೂಲಮ್

ರಾಮಃ ಸೀತಾಮುವಾಚೇದಂ ಬ್ರೂಹಿ ತತ್ತ್ವಂ ಹನೂಮತೇ ।
ನಿಷ್ಕಲ್ಮಷೋಽಯಂ ಜ್ಞಾನಸ್ಯ ಪಾತ್ರಂ ನೌ ನಿತ್ಯಭಕ್ತಿಮಾನ್ ॥

ಅನುವಾದ

ಆ ಸಮಯದಲ್ಲಿ ಸಮಸ್ತ ಕಾರ್ಯಗಳಲ್ಲಿ ಕೃತಕೃತ್ಯನಾಗಿ ನಿರಪೇಕ್ಷನಾಗಿರುವ ಮಹಾಮತಿ ಜ್ಞಾನಾಭಿಲಾಷಿಯಾದ ಆಂಜನೇಯನು ತನ್ನ ಮುಂದೆ ಕೈ ಮುಗಿದು ನಿಂತಿರುವುದನ್ನು ಕಂಡು ಶ್ರೀರಾಮಚಂದ್ರನು ಸೀತಾದೇವಿಗೆ - ‘ಸೀತೇ! ಈ ಹನುಮಂತನು ನಮ್ಮಿಬ್ಬರಲ್ಲಿ ಅತ್ಯಂತ ಭಕ್ತಿಯುಳ್ಳವನೂ, ಜ್ಞಾನವನ್ನು ಪಡೆಯಲು ಯೋಗ್ಯಪಾತ್ರನೂ ಆಗಿದ್ದಾನೆ. ಆದುದರಿಂದ ನೀನು ಇವನಿಗೆ ನನ್ನ ತತ್ತ್ವದ ಉಪದೇಶವನ್ನು ಮಾಡು’ ಎಂದು ಹೇಳಿದನು. ॥29-30॥

31
ಮೂಲಮ್

ತಥೇತಿ ಜಾನಕೀ ಪ್ರಾಹ ತತ್ತ್ವಂ ರಾಮಸ್ಯ ನಿಶ್ಚಿತಮ್ ।
ಹನೂಮತೇ ಪ್ರಪನ್ನಾಯ ಸೀತಾ ಲೋಕವಿಮೋಹಿನೀ ॥

ಅನುವಾದ

ಆಗ ಲೋಕ-ವಿಮೋಹಿನೀ ಜನಕನಂದಿನೀ ಸೀತೆಯು ರಾಮ ಚಂದ್ರನಲ್ಲಿ-ಹಾಗೆಯೇ ಆಗಲಿ ಎಂದು ಹೇಳಿ ಶರಣಾಗತ ಹನು ಮಂತನಿಗೆ ಭಗವಾನ್ ಶ್ರೀರಾಮನ ನಿಶ್ಚಿತವಾದ ತತ್ತ್ವವನ್ನು ಹೇಳಲುಪಕ್ರಮಿಸಿದಳು.॥31॥

32
ಮೂಲಮ್

ರಾಮಂ ವಿದ್ಧಿ ಪರಂ ಬ್ರಹ್ಮ ಸಚ್ಚಿದಾನಂದಮದ್ವಯಮ್ ।
ಸರ್ವೋಪಾಧಿವಿನಿರ್ಮುಕ್ತಂ ಸತ್ತಾಮಾತ್ರಮಗೋಚರಮ್ ॥

33
ಮೂಲಮ್

ಆನಂದಂ ನಿರ್ಮಲಂ ಶಾಂತಂ ನಿರ್ವಿಕಾರಂ ನಿರಂಜನಮ್ ।
ಸರ್ವವ್ಯಾಪಿನಮಾತ್ಮಾನಂ ಸ್ವಪ್ರಕಾಶಮಕಲ್ಮಷಮ್ ॥

ಅನುವಾದ

ಸೀತೆಯು ಹೇಳುತ್ತಾಳೆ — ವತ್ಸಾ ಮಾರುತಿ! ನೀನು ರಾಮನನ್ನು ಸಾಕ್ಷಾತ್ ಅದ್ವಿತೀಯ ಸಚ್ಚಿದಾನಂದಘನ ಪರಬ್ರಹ್ಮನೆಂದೂ, ನಿಃಸಂಶಯವಾಗಿ ಸಮಸ್ತ ಉಪಾಧಿಗಳಿಂದ ರಹಿತನೂ, ಸದ್ರೂಪನಾಗಿ ಮನಸ್ಸು ಮತ್ತು ಇಂದ್ರಿಯಗಳಿಗೆ ಅವಿಷಯನೂ, ಆನಂದಘನನೂ, ನಿರ್ಮಲನೂ, ಶಾಂತನೂ, ನಿರ್ವಿಕಾರನೂ, ನಿರಂಜನನೂ, ಸರ್ವವ್ಯಾಪಕನೂ, ಸ್ವಯಂಪ್ರಕಾಶನೂ ಮತ್ತು ದೋಷ ರಹಿತ ಪರಮಾತ್ಮನೇ ಆಗಿದ್ದಾನೆಂದು ತಿಳಿ. ॥32-33॥

34
ಮೂಲಮ್

ಮಾಂ ವಿದ್ಧಿ ಮೂಲಪ್ರಕೃತಿಂ ಸರ್ಗಸ್ಥಿತ್ಯಂತಕಾರಿಣೀಮ್ ।
ತಸ್ಯ ಸನ್ನಿಧಿಮಾತ್ರೇಣ ಸೃಜಾಮೀದಮತಂದ್ರಿತಾ ॥

ಅನುವಾದ

ನನ್ನನ್ನು ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯ ಮಾಡುವ ಮೂಲಪ್ರಕೃತಿಯೆಂದು ತಿಳಿ. ನಾನೇ ಇವರ ಸನ್ನಿಧಿ ಮಾತ್ರದಿಂದ ಎಚ್ಚರಿಕೆಯಿಂದ ಈ ವಿಶ್ವದ ರಚನೆಯನ್ನು ಮಾಡುತ್ತಿರುತ್ತೇನೆ. ॥34॥

35
ಮೂಲಮ್

ತತ್ಸಾನ್ನಿಧ್ಯಾನ್ಮಯಾ ಸೃಷ್ಟಂ ತಸ್ಮಿನ್ನಾರೋಪ್ಯತೇಽಬುಧೈಃ ।
ಅಯೋಧ್ಯಾನಗರೇ ಜನ್ಮ ರಘುವಂಶೇಽತಿನಿರ್ಮಲೇ ॥

36
ಮೂಲಮ್

ವಿಶ್ವಾಮಿತ್ರಸಹಾಯತ್ವಂ ಮಖಸಂರಕ್ಷಣಂ ತತಃ ।
ಅಹಲ್ಯಾಶಾಪಶಮನಂ ಚಾಪಭಂಗೋ ಮಹೇಶಿತುಃ ॥

37
ಮೂಲಮ್

ಮತ್ಪಾಣಿಗ್ರಹಣಂ ಪಶ್ಚಾದ್ಭಾರ್ಗವಸ್ಯ ಮದಕ್ಷಯಃ ।
ಅಯೋಧ್ಯಾನಗರೇ ವಾಸೋ ಮಯಾ ದ್ವಾದಶವಾರ್ಷಿಕಃ ॥

38
ಮೂಲಮ್

ದಂಡಕಾರಣ್ಯಗಮನಂ ವಿರಾಧವಧ ಏವ ಚ ।
ಮಾಯಾಮಾರೀಚಮರಣಂ ಮಾಯಾಸೀತಾಹೃತಿಸ್ತಥಾ ॥

39
ಮೂಲಮ್

ಜಟಾಯುಷೋ ಮೋಕ್ಷಲಾಭಃ ಕಬಂಧಸ್ಯ ತಥೈವ ಚ ।
ಶಬರ್ಯಾಃ ಪೂಜನಂ ಪಶ್ಚಾತ್ಸುಗ್ರೀವೇಣ ಸಮಾಗಮಃ ॥

40
ಮೂಲಮ್

ವಾಲಿನಶ್ಚ ವಧಃ ಪಶ್ಚಾತ್ಸೀತಾನ್ವೇಷಣಮೇವ ಚ ।
ಸೇತುಬಂಧಶ್ಚ ಜಲಧೌ ಲಂಕಾಯಾಶ್ಚ ನಿರೋಧನಮ್ ॥

41
ಮೂಲಮ್

ರಾವಣಸ್ಯ ವಧೋ ಯುದ್ಧೇ ಸಪುತ್ರಸ್ಯ ದುರಾತ್ಮನಃ ।
ವಿಭೀಷಣೇ ರಾಜ್ಯದಾನಂ ಪುಷ್ಪಕೇಣ ಮಯಾ ಸಹ ॥

42
ಮೂಲಮ್

ಅಯೋಧ್ಯಾಗಮನಂ ಪಶ್ಚಾದ್ರಾಜ್ಯೇ ರಾಮಾಭಿಷೇಚನಮ್ ।
ಏವಮಾದೀನಿ ಕರ್ಮಾಣಿ ಮಯೈವಾಚರಿತಾನ್ಯಪಿ ।
ಆರೋಪಯಂತಿ ರಾಮೇಽಸ್ಮಿನ್ ನಿರ್ವಿಕಾರೇಽಖಿಲಾತ್ಮನಿ ॥

ಅನುವಾದ

ಆದರೂ ಇವರ ಸನ್ನಿಧಿ ಮಾತ್ರದಿಂದ ಮಾಡಿದ ನನ್ನ ರಚನೆಯನ್ನು ಬುದ್ಧಿಹೀನರಾದ ಜನರು ಇವರಲ್ಲಿ ಆರೋಪಿಸುತ್ತಾರೆ. ಹೇಗೆಂದರೆ - ಅಯೋಧ್ಯಾನಗರದಲ್ಲಿ ಅತ್ಯಂತ ಪವಿತ್ರ ರಘುಕುಲದಲ್ಲಿ ಇವರು ಅವತರಿಸಿದ್ದು, ವಿಶ್ವಾಮಿತ್ರರ ಸಹಾಯಕ್ಕಾಗಿ ಅವರ ಯಜ್ಞರಕ್ಷಣೆ ಮಾಡಿದ್ದು, ಅಹಲ್ಯೆಯನ್ನು ಶಾಪ ಮುಕ್ತಳಾಗಿಸಿದ್ದು, ಶ್ರೀಮಹಾದೇವರ ಧನುಸ್ಸನ್ನು ಭಂಗಗೊಳಿಸಿದ್ದು, ನನ್ನನ್ನು ಪಾಣಿ ಗ್ರಹಣ ಮಾಡಿಕೊಂಡದ್ದು, ಪರಶುರಾಮರ ಗರ್ವಭಂಗ ಮಾಡಿದ್ದು, ಹಾಗೂ ಹನ್ನೆರಡು ವರ್ಷಗಳವರೆಗೆ ನನ್ನೊಂದಿಗೆ ಅಯೋಧ್ಯೆಯಲ್ಲಿ ಇದ್ದುದು, ಮತ್ತೆ ದಂಡಕಾರಣ್ಯಕ್ಕೆ ಹೋದದ್ದು, ವಿರಾಧನ ವಧೆ ಮಾಡಿದ್ದು, ಮಾಯಾ-ಮೃಗರೂಪೀ ಮಾರೀಚನನ್ನು ಕೊಂದದ್ದು, ಮಾಯಾ ಸೀತೆಯ ಹರಣವಾದುದು, ಜಟಾಯು ಹಾಗೂ ಕಬಂಧರನ್ನು ಮುಕ್ತರಾಗಿಸಿದುದು, ಶಬರಿಯ ಮೂಲಕ ಭಗವಂತನು ಪೂಜಿತನಾದುದು ಮತ್ತು ಸುಗ್ರೀವನೊಂದಿಗೆ ಮಿತ್ರತೆಯನ್ನು ಗೈದು, ವಾಲಿಯ ವಧೆ ಮಾಡಿದ್ದು, ಸೀತೆಯನ್ನು ಹುಡುಕಿದ್ದು, ಸಮುದ್ರಕ್ಕೆ ಸೇತುವೆ ಕಟ್ಟಿಸಿದುದು, ಲಂಕೆಯನ್ನು ಮುತ್ತಿದುದು, ಪುತ್ರಪರಿವಾರ ಸಹಿತ ದುರಾತ್ಮನಾದ ರಾವಣನನ್ನು ಯುದ್ಧದಲ್ಲಿ ಸಂಹರಿಸಿದುದು, ವಿಭೀಷಣನಿಗೆ ಲಂಕೆಯ ರಾಜ್ಯವನ್ನು ಕೊಟ್ಟಿದ್ದು, ಪುಷ್ಪಕವಿಮಾನದ ಮೂಲಕ ನನ್ನ ಜೊತೆಗೆ ಅಯೋಧ್ಯೆಗೆ ಮರಳಿದುದು, ಮತ್ತೆ ಶ್ರೀರಾಮದೇವರ ರಾಜ್ಯಾಭಿಷೇಕವಾದುದು ಇತ್ಯಾದಿ ಸಮಸ್ತ ಕರ್ಮಗಳು ನಾನೇ ಮಾಡಿದ್ದರೂ ಅಜ್ಞಾನೀ ಜನರು ಇವುಗಳನ್ನು ಈ ನಿರ್ವಿಕಾರ ಸರ್ವಾತ್ಮಾ ಭಗವಾನ್ ಶ್ರೀರಾಮನಲ್ಲಿ ಆರೋಪಿಸುತ್ತಾರೆ. ॥35-42॥

43
ಮೂಲಮ್

ರಾಮೋ ನ ಗಚ್ಛತಿ ನ ತಿಷ್ಠತಿ ನಾನುಶೋಚ
ತ್ಯಾಕಾಂಕ್ಷತೇ ತ್ಯಜತಿ ನೋ ನ ಕರೋತಿ ಕಿಂಚಿತ್ ।
ಆನಂದಮೂರ್ತಿರಚಲಃ ಪರಿಣಾಮಹೀನೋ
ಮಾಯಾಗುಣಾನನುಗತೋ ಹಿ ತಥಾ ವಿಭಾತಿ ॥

ಅನುವಾದ

ಈ ರಾಮನಾದರೋ ವಾಸ್ತವವಾಗಿ ನಡೆಯುವುದಿಲ್ಲ, ನಿಲ್ಲುವುದಿಲ್ಲ, ಶೋಕಿಸುವುದಿಲ್ಲ, ಇಚ್ಛಿಸುವುದಿಲ್ಲ, ತ್ಯಾಗ ಮಾಡುವುದಿಲ್ಲ ಮತ್ತು ಯಾವುದೇ ಬೇರೆ ಕ್ರಿಯೆಗಳನ್ನು ಮಾಡುವುದಿಲ್ಲ. ಇವನೂ ಆನಂದ ಸ್ವರೂಪನೂ, ಚಲನವಿಲ್ಲದವನೂ, ಬದಲಾವಣೆಯಿಲ್ಲದವನೂ ಆಗಿರುವನು. ಕೇವಲ ಮಾಯೆಯ ಗುಣಗಳಿಂದ ವ್ಯಾಪ್ತನಾದ ಕಾರಣದಿಂದಲೇ ಇದೆಲ್ಲ ಮಾಡಿದವನಂತೆ ಕಂಡು ಬರುತ್ತಾನೆ. ॥43॥

44
ಮೂಲಮ್

ತತೋ ರಾಮಃ ಸ್ವಯಂ ಪ್ರಾಹ ಹನೂಮಂತಮುಪಸ್ಥಿತಮ್ ।
ಶೃಣು ತತ್ತ್ವಂ ಪ್ರವಕ್ಷ್ಯಾಮಿ ಹ್ಯಾತ್ಮಾನಾತ್ಮಪರಾತ್ಮನಾಮ್ ॥

ಅನುವಾದ

ಅನಂತರ ಶ್ರೀರಾಮಚಂದ್ರನು ಸಮ್ಮುಖದಲ್ಲಿ ನಿಂತಿದ್ದ ಪವನ ಪುತ್ರ ಹನುಮಂತನಲ್ಲಿ ಸ್ವತಃ ಹೇಳಿದನು-ನಾನು ನಿನಗೆ ಆತ್ಮಾ, ಅನಾತ್ಮಾ ಮತ್ತು ಪರಮಾತ್ಮರ ತತ್ತ್ವವನ್ನು ಹೇಳುತ್ತೇನೆ. ಎಚ್ಚರದಿಂದ ಕೇಳು. ॥44॥

45
ಮೂಲಮ್

ಆಕಾಶಸ್ಯ ಯಥಾ ಭೇದಸ್ತ್ರಿವಿಧೋ ದೃಶ್ಯತೇ ಮಹಾನ್ ।
ಜಲಾಶಯೇ ಮಹಾಕಾಶಸ್ತದವಚ್ಛಿನ್ನ ಏವ ಹಿ ।
ಪ್ರತಿಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಂ ನಭಃ ॥

ಅನುವಾದ

ಒಂದೇ ಆಕಾಶದ ಮೂರು ಭೇದಗಳಾಗಿ ತೋರುವವು. ಮೊದಲನೆಯದು ‘ಮಹಾಕಾಶ’ (ಸರ್ವತ್ರ ವ್ಯಾಪ್ತವಾದುದು.), ಎರಡನೆಯದು ಜಲಾವಚ್ಛಿನ್ನ ಆಕಾಶ (ಕೇವಲ ಜಲಾಶಯದಲ್ಲಿಯೇ ಪರಿಮಿತವಾದುದು), ಮೂರನೆಯದು ಪ್ರತಿಬಿಂಬಾಕಾಶ (ನೀರಿನಲ್ಲಿ ಪ್ರತಿಬಿಂಬಿತವಾದುದು) ಹೀಗೆ ಆಕಾಶದ ಈ ಮೂರು ಭೇದಗಳು ಕಂಡು ಬರುತ್ತವೆ. ॥45॥

46
ಮೂಲಮ್

ಬುದ್ಧ್ಯವಚ್ಛಿನ್ನಚೈತನ್ಯಮೇಕಂ ಪೂರ್ಣಮಥಾಪರಮ್ ।
ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ ॥

ಅನುವಾದ

ಹಾಗೆಯೇ ಚೇತನವೂ ಮೂರು ಪ್ರಕಾರದ್ದಾಗಿದೆ. ಒಂದು ಸರ್ವತ್ರ, ಪರಿಪೂರ್ಣವಾದುದು, ಎರಡನೆಯದು ಬುದ್ಧಿಯೆಂಬ ಉಪಾಧಿಯಿಂದ ಪರಿಚ್ಛಿನ್ನವಾದ ಚೇತನ (ಬುದ್ಧಿಯಲ್ಲಿ ವ್ಯಾಪ್ತವಾದುದು). ಮೂರನೆಯದು ಬುದ್ಧಿ ಯಲ್ಲಿಯೇ ಪ್ರತಿಬಿಂಬಿತವಾದುದು. ಅದಕ್ಕೆ ಆಭಾಸ ಚೇತನವೆಂದು ಹೇಳುತ್ತಾರೆ. ॥46॥

47
ಮೂಲಮ್

ಸಾಭಾಸಬುದ್ಧೇಃ ಕರ್ತೃತ್ವಮ್ ಅವಿಚ್ಛಿನ್ನೇಽವಿಕಾರಿಣಿ ।
ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾಬುಧೈಃ ॥

ಅನುವಾದ

ಇವುಗಳಲ್ಲಿನ ಕೇವಲ ಆಭಾಸ ಚೇತನ ಸಹಿತ ಬುದ್ಧಿಯಲ್ಲಿಯೇ ಕರ್ತೃತ್ವವಿದೆ. ಅರ್ಥಾತ್ ಚಿದಾಭಾಸದ ಸಹಿತ ಬುದ್ಧಿಯೇ ಎಲ್ಲ ಕಾರ್ಯವನ್ನು ಮಾಡುತ್ತದೆ. ಆದರೆ ಅಜ್ಞ ಜನರು ಭ್ರಾಂತಿಗೆ ವಶರಾಗಿ ನಿರವಚ್ಛಿನ್ನ, ನಿರ್ವಿಕಾರ, ಸಾಕ್ಷೀ ಆತ್ಮನಲ್ಲಿ ಕರ್ತೃತ್ವದ ಮತ್ತು ಜೀವಾತ್ಮನ ಆರೋಪವನ್ನು ಮಾಡುತ್ತಾರೆ. ಅರ್ಥಾತ್ ಅದನ್ನೇ ಕರ್ತಾ-ಭೋಕ್ತಾ ಎಂದು ತಿಳಿಯುತ್ತಾರೆ. ॥47॥

48
ಮೂಲಮ್

ಆಭಾಸಸ್ತು ಮೃಷಾ ಬುದ್ಧಿರವಿದ್ಯಾಕಾರ್ಯಮುಚ್ಯತೇ ।
ಅವಿಚ್ಛಿನ್ನಂ ತು ತದ್ ಬ್ರಹ್ಮ ವಿಚ್ಛೇದಸ್ತು ವಿಕಲ್ಪತಃ ॥

ಅನುವಾದ

ಆಭಾಸ ಚೇತನವಾದರೋ ಮಿಥ್ಯೆಯಾಗಿದೆ (ಏಕೆಂದರೆ ಎಲ್ಲಾ ಆಭಾಸಗಳು ಮಿಥ್ಯೆಯೇ ಆಗಿರುತ್ತವೆ). ಬುದ್ಧಿಯು ಅವಿದ್ಯೆಯ ಕಾರ್ಯವಾಗಿದೆ ಮತ್ತು ಪರಬ್ರಹ್ಮ ಪರಮಾತ್ಮನು ವಾಸ್ತವವಾಗಿ ವಿಚ್ಛೆದರಹಿತನಾಗಿದ್ದಾನೆ. ಆದುದರಿಂದ ಅವನ ವಿಚ್ಛೇದವೂ ವಿಕಲ್ಪದಿಂದಲೇ ತಿಳಿದುಬರುತ್ತದೆ. ॥48॥

49
ಮೂಲಮ್

ಅವಚ್ಛಿನ್ನಸ್ಯ ಪೂರ್ಣೇನ ಏಕತ್ವಂ ಪ್ರತಿಪಾದ್ಯತೇ ।
ತತ್ತ್ವಮಸ್ಯಾದಿವಾಕ್ಯೈಶ್ಚ ಸಾಭಾಸಸ್ಯಾಹಮಸ್ತಥಾ ॥

ಅನುವಾದ

(ಈ ಪ್ರಕಾರ ಉಪಾಧಿಗಳನ್ನು ಬಾಧಿಸುತ್ತಿರುವಾಗ) ಸಾಭಾಸ ಅಹಂ ರೂಪೀ ಅವಚ್ಛಿನ್ನ ಚೇತನವು (ಜೀವ) ‘ತತ್ತ್ವಮಸಿ’ (ನೀನು ಅದೇ ಆಗಿರುವೆ) ಮೊದಲಾದ ಮಹಾವಾಕ್ಯಗಳ ಮೂಲಕ ಪೂರ್ಣ ಚೇತನ (ಬ್ರಹ್ಮ) ನೊಡನೆ ಏಕತೆಯನ್ನು ತಿಳಿಸಲಾಗುತ್ತದೆ.॥49॥

50
ಮೂಲಮ್

ಐಕ್ಯಜ್ಞಾನಂ ಯದೋತ್ಪನ್ನಂ ಮಹಾವಾಕ್ಯೇನ ಚಾತ್ಮನೋಃ ।
ತದಾವಿದ್ಯಾ ಸ್ವಕಾರ್ಯೈಶ್ಚ ನಶ್ಯತ್ಯೇವ ನ ಸಂಶಯಃ ॥

ಅನುವಾದ

ಮಹಾವಾಕ್ಯಗಳ ಮೂಲಕ ಜೀವಾತ್ಮಾ ಮತ್ತು ಪರಮಾತ್ಮರ ಐಕ್ಯತೆಯ ಜ್ಞಾನ ಉಂಟಾಗಿ ತನ್ನ ಕಾರ್ಯಗಳ ಸಹಿತ ಅವಿದ್ಯೆಯು ನಷ್ಟವಾಗಿ ಹೋಗುತ್ತದೆ ಇದರಲ್ಲಿ ಸಂದೇಹವೇ ಇಲ್ಲ. ॥50॥

51
ಮೂಲಮ್

ಏತದ್ವಿಜ್ಞಾಯ ಮದ್ಭಕ್ತೋ ಮದ್ಭಾವಾಯೋಪಪದ್ಯತೇ ।
ಮದ್ಭಕ್ತಿವಿಮುಖಾನಾಂ ಹಿ ಶಾಸ್ತ್ರಗರ್ತೇಷು ಮುಹ್ಯತಾಮ್ ।
ನ ಜ್ಞಾನಂ ನ ಚ ಮೋಕ್ಷಃ ಸ್ಯಾತ್ತೇಷಾಂ ಜನ್ಮಶತೈರಪಿ ॥

ಅನುವಾದ

ಈ ಮೇಲೆ ಹೇಳಿದ ತತ್ತ್ವವನ್ನು ತಿಳಿದವನಾದರೆ ನನ್ನ ಭಕ್ತನಾಗಿ ನನ್ನ ಸ್ವರೂಪವನ್ನೇ ಹೊಂದುವನು. ಆದರೆ ಯಾರು ನನ್ನ ಭಕ್ತಿಯನ್ನು ಬಿಟ್ಟು ಶಾಸ್ತ್ರರೂಪೀ ಹೊಂಡದಲ್ಲಿ ಬಿದ್ದುಕೊಂಡು ಅಲೆಯುತ್ತಿರುತಾರೋ. ಅವರಿಗೆ ನೂರಾರು ಜನ್ಮಗಳವರೆಗೆ ಜ್ಞಾನವಾಗಲಿ, ಮೋಕ್ಷವಾಗಲಿ ಉಂಟಾಗುವುದಿಲ್ಲ. ॥51॥

52
ಮೂಲಮ್

ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ ಸಾಕ್ಷಾತ್ಕಥಿತಂ ತವಾನಘ ।
ಮದ್ಭಕ್ತಿಹೀನಾಯ ಶಠಾಯ ನ ತ್ವಯಾ
ದಾತವ್ಯಮೈನ್ದ್ರಾದಪಿ ರಾಜ್ಯತೋಽಧಿಕಮ್ ॥

ಅನುವಾದ

ಹೇ ಪಾಪರಹಿತನೇ! ಈ ಪರಮ ರಹಸ್ಯವು ರಾಮನಾದ ನನ್ನ ಹೃದಯವಾಗಿದೆ; ಹಾಗೂ ಸಾಕ್ಷಾತ್ ನಾನೇ ನಿನಗೆ ಹೇಳಿದ್ದೇನೆ. ಒಂದು ವೇಳೆ ನಿನಗೆ ಇಂದ್ರನ ರಾಜ್ಯಕ್ಕಿಂತ ಹೆಚ್ಚಾದ ಸಂಪತ್ತು ದೊರಕಿದರೂ ನೀನು ನನ್ನ ಭಕ್ತಿ ರಹಿತನಾದ ಯಾವುದೇ ದುಷ್ಟ ಮನುಷ್ಯನಿಗೆ ಇದನ್ನು ಹೇಳಬಾರದು. ॥52॥

53
ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಏತತ್ತೇಽಭಿಹಿತಂ ದೇವಿ ಶ್ರೀರಾಮಹೃದಯಂ ಮಯಾ ।
ಅತಿಗುಹ್ಯತಮಂ ಹೃದ್ಯಂ ಪವಿತ್ರಂ ಪಾಪಶೋಧನಮ್ ॥

ಅನುವಾದ

ಶ್ರೀಮಹಾದೇವನು ಹೇಳಿದನು — ಪಾರ್ವತಿಯೇ! ನಾನು ನಿನಗೆ ಈ ಅತ್ಯಂತಗೂಢವಾದ, ಹೃದಯಂಗಮವಾದ, ಪರಮ ಪವಿತ್ರವೂ ಮತ್ತು ಪಾಪನಾಶಕವೂ ಆದ ‘ಶ್ರೀರಾಮಹೃದಯ’ವನ್ನು ಹೇಳಿರುವೆನು. ॥53॥

54
ಮೂಲಮ್

ಸಾಕ್ಷಾದ್ರಾಮೇಣ ಕಥಿತಂ ಸರ್ವವೇದಾಂತಸಂಗ್ರಹಮ್ ।
ಯಃ ಪಠೇತ್ಸತತಂ ಭಕ್ತ್ಯಾ ಸ ಮುಕ್ತೋ ನಾತ್ರ ಸಂಶಯಃ ॥

ಅನುವಾದ

ಸಮಸ್ತ ವೇದಾಂತದ ಸಾರ-ಸಂಗ್ರಹ ಸಾಕ್ಷಾತ್ ಶ್ರೀರಾಮಚಂದ್ರನಿಂದ ಹೇಳಲ್ಪಟ್ಟಿದೆ. ಇದನ್ನು ಭಕ್ತಿ ಪೂರ್ವಕ ಸದಾ ಪಠಿಸುವವನು ನಿಸ್ಸಂದೇಹವಾಗಿ ಮುಕ್ತನಾಗಿ ಹೋಗುತ್ತಾನೆ. ॥54॥

55
ಮೂಲಮ್

ಬ್ರಹ್ಮಹತ್ಯಾದಿಪಾಪಾನಿ ಬಹುಜನ್ಮಾರ್ಜಿತಾನ್ಯಪಿ ।
ನಶ್ಯಂತ್ಯೇವ ನ ಸಂದೇಹೋ ರಾಮಸ್ಯ ವಚನಂ ಯಥಾ ॥

ಅನುವಾದ

ಇದರ ಪಠಣಮಾತ್ರದಿಂದಲೇ ಅನೇಕ ಜನ್ಮಗಳಲ್ಲಿ ಸಂಚಿತ ಬ್ರಹ್ಮಹತ್ಯಾದಿ ಸಮಸ್ತ ಪಾಪಗಳು ನಿಸ್ಸಂಶಯವಾಗಿ ನಷ್ಟವಾಗುತ್ತವೆ, ಏಕೆಂದರೆ ಇವು ಶ್ರೀರಾಮನ ವಚನಗಳೇ ಆಗಿವೆ. ॥55॥

56
ಮೂಲಮ್

ಯೋಽತಿಭ್ರಷ್ಟೋಽತಿಪಾಪೀ ಪರಧನ ಪರ-
ದಾರೇಷು ನಿತ್ಯೋದ್ಯತೋ ವಾ
ಸ್ತೇಯೀ ಬ್ರಹ್ಮಘ್ನಮಾತಾಪಿತೃವಧನಿರತೋ
ಯೋಗಿವೃಂದಾಪಕಾರೀ ।
ಯಃ ಸಂಪೂಜ್ಯಾಭಿರಾಮಂ ಪಠತಿ ಚ ಹೃದಯಂ
ರಾಮಚಂದ್ರಸ್ಯ ಭಕ್ತ್ಯಾ
ಯೋಗೀಂದ್ರೈರಪ್ಯಲಭ್ಯಂ ಪದಮಿಹ ಲಭತೇ
ಸರ್ವದೇವೈಃ ಸ ಪೂಜ್ಯಮ್ ॥

ಅನುವಾದ

ಯಾವನಾದರೂ ಅತ್ಯಂತ ಭ್ರಷ್ಟನೂ, ಅತಿಶಯಪಾಪಿಯೂ, ಪರಧನ-ಪರಸ್ತ್ರೀಯರಲ್ಲಿ ಸದಾ ಪ್ರವೃತ್ತನಾಗುವವನೂ, ಕಳ್ಳನೂ, ಬ್ರಹ್ಮಹತ್ಯೆ ಗೈದವನೂ, ತಂದೆ-ತಾಯಿಗಳ ವಧೆಯಲ್ಲಿ ನಿರತನಾದವನೂ, ಯೋಗಿಜನರಿಗೆ ಅಹಿತ ಮಾಡುವವನೂ ಆದ ಮನುಷ್ಯನು ಇವೆಲ್ಲವನ್ನು ಹಿಂದೆ ಮಾಡಿದ್ದರೂ ಕೂಡ ಶ್ರೀರಾಮಚಂದ್ರನನ್ನು, ಪೂಜಿಸಿ ಈ ರಾಮ ಹೃದಯವನ್ನು ಭಕ್ತಿ ಪೂರ್ವಕ ಪಾರಾಯಣ ಮಾಡುವವನ ಹೃದಯ ಶುದ್ಧವಾಗಿ ಯೋಗಿ ಜನರಿಗೂ ಪರಮ ದುರ್ಲಭವಾದ ಆ ಪರಮಪದವನ್ನು ಇಲ್ಲಿಯೇ ಪಡೆಯುತ್ತಾನೆ. ॥56॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ಶ್ರೀರಾಮಹೃದಯಂ ನಾಮ ಪ್ರಥಮಃ ಸರ್ಗಃ ॥1॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲ ಕಾಂಡದಲ್ಲಿ ಶ್ರೀರಾಮ ಹೃದಯವೆಂಬ ಮೊದಲನೆಯ ಸರ್ಗವು ಮುಗಿಯಿತು.