ಮೂಲಮ್
‘‘ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ । ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ॥’’
ಅನುವಾದ
ಪರಬ್ರಹ್ಮ ಪರಮಾತ್ಮಾ ಶ್ರೀರಘುನಾಥನ ಚರಿತ್ರೆಯು ಅಪಾರ, ಅಗಾಧವಾಗಿದೆ. ಅಂತವಿಲ್ಲದ ಅನಂತನ ಕಥೆಯು ಅನಂತವೇ. ಶ್ರೀರಾಮಚಂದ್ರನ ಪರಮಭಕ್ತನೂ, ವೈಷ್ಣವಾಗ್ರಣಿಯೂ ಆದ ಶ್ರೀಶಿವನೇ ಮೊಟ್ಟಮೊದಲಿಗೆ ಶ್ರೀರಾಮಚರಿತ್ರೆಯನ್ನು ಪಾರ್ವತಿಗೆ ಉಪದೇಶಿಸಿದ್ದನು. ಬಳಿಕ ಅದು ಅನೇಕ ಕವಿ, ಮಹರ್ಷಿ, ಮಹಾನುಭಾವರಿಂದ ತ್ರಿಲೋಕಗಳಲ್ಲಿ ಪ್ರಕಟವಾಗಿ ಪ್ರಖ್ಯಾತವಾಯಿತು. ಶ್ರೀರಾಮ ಚರಿತವು ಭಾರತೀಯರ ಜನ ಜೀವನದಲ್ಲಂತೂ ಹಾಸುಹೊಕ್ಕಾಗಿ, ಸಾಂಸ್ಕೃತಿಕ ಸಂಪತ್ತಾಗಿ, ಎಲ್ಲ ಆದರ್ಶಗಳ ಮಾರ್ಗದರ್ಶಿಯಾಗಿ ವಿಜೃಂಭಿಸುತ್ತಿದೆ. ಜೀವನ-ಉಜ್ಜೀವನಕ್ಕೆ ದಾರಿದೀಪವಾಗಿದೆ.
ಈ ಅಧ್ಯಾತ್ಮರಾಮಾಯಣವು ಶ್ರೀಶಿವನಿಂದಲೇ ಉಪದಿಷ್ಟವಾದ ಶ್ರೀರಾಮಚಾರಿತ್ರ್ಯವು. ‘‘ಅಧ್ಯಾತ್ಮ ರಾಮಾಯಣ ಮೇತದದ್ಭುತಂ ವೈರಾಗ್ಯವಿಜ್ಞಾನಯುತಂ ಪುರಾತನಮ್’’ ಎಂದು ಇದೇ ಗ್ರಂಥದಲ್ಲಿ ಹೇಳಲಾಗಿದೆ. ‘‘ಇದಂ ಪವಿತ್ರಂ ಪಾಪಘ್ನಂ ಪುಣ್ಯಂ ವೇದೈಶ್ಚ ಸಮ್ಮಿತಮ್’’ ಎಂಬುದು ಕವಿವಾಣಿ. ಶ್ರೀಶಿವನಿಂದ ಪ್ರವೃತ್ತವಾದ ಈ ಅಧ್ಯಾತ್ಮರಾಮಾಯಣವನ್ನು ಶ್ರೀವೇದವ್ಯಾಸದೇವರು ಬ್ರಹ್ಮಾಂಡ ಪುರಾಣದ ಉತ್ತರಾಖಂಡದ ಅಂತರ್ಗತ ನಿರೂಪಿಸಿರುವರು.
ಸಾಧಾರಣವಾಗಿ ಶ್ರೀರಾಮನ ಕಥೆಯು ಎಲ್ಲ ಪುರಾಣಗಳಲ್ಲಿ, ಇತಿಹಾಸದಲ್ಲಿ ಪುನಃ ಪುನಃ ವರ್ಣಿತವಾಗಿದೆ. ಶ್ರೀರಾಮ ಕಥೆಯ ಮಹಿಮೆಯನ್ನು ಸಾರಲು ಅದರ ಲೋಕಪೂಜ್ಯತೆಗೆ ಇದೊಂದು ಸಾಕ್ಷಿಯಾಗಿದೆ. ಲೋಕದಲ್ಲಿ ಅನಂತ ರಾಮಾಯಣಗಳು ಸಂಸ್ಕೃತದಲ್ಲಿ ಪ್ರಕಟಗೊಂಡರೆ, ಪ್ರತಿಯೊಂದು ಲೋಕಭಾಷೆಯಲ್ಲಿಯೂ, ಜಾನಪದಗಳಲ್ಲಿಯೂ ಶ್ರೀರಾಮನ ಕಥೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿವೆ.
ಶ್ರೀರಾಮನ ಕಥೆಯೇ ರಸಮಯ ವಿಲಕ್ಷಣವಾದುದು. ಈ ಅಧ್ಯಾತ್ಮರಾಮಾಯಣವು ಇತರ ರಾಮಾಯಣಕ್ಕಿಂತ ಪಾರಮಾರ್ಥಿಕವಾಗಿ ವಿಶಿಷ್ಟ ಸ್ಥಾನ ಪಡೆದಿದೆ. ಇದರಲ್ಲಿ ಪರಮರಸಾಯನ ರಾಮಚರಿತ್ರದ ಜೊತೆ ಜೊತೆಗೆ ಭಕ್ತಿ, ಜ್ಞಾನ, ಉಪಾಸನೆ, ಲೋಕನೀತಿ, ಸದಾಚಾರಸಂಬಂಧೀ ದಿವ್ಯ ಉಪದೇಶಗಳು ಇದ್ದು ಅಧ್ಯಾತ್ಮತತ್ತ್ವದ ವಿವೇಚನೆ ಪ್ರಧಾನವಾಗಿ ಇರುವುದರಿಂದ ಇದಕ್ಕೆ ಅಧ್ಯಾತ್ಮರಾಮಾಯಣ ಎಂಬ ಹೆಸರು ಅನ್ವರ್ಥಕವಾಗಿದೆ. ಇದರ ವೈಶಿಷ್ಟ್ಯಗಳೆಂದರೆ-ಭಕ್ತಿಯಿಂದ ಸಂಸಾರವನ್ನು ದಾಟಿ ಮೋಕ್ಷವನ್ನು ಪಡೆಯಬಹುದೆಂಬ ಉಪದೇಶವೇ ಆಗಿದೆ. ಭಕ್ತಿರಹಿತ ಶಾಸ್ತ್ರಜ್ಞಾನವು ಕತ್ತಲೆಯ ಮಡುವೆಂದೂ, ಅದರಲ್ಲಿ ಬಿದ್ದವರಿಗೆ ಕೋಟಿ ಜನ್ಮಗಳಾದರೂ ಮೋಕ್ಷವು ಸಿಗಲಾರದೆಂದು ಸ್ಪಷ್ಟೋಕ್ತಿ ಇದೆ. (ಬಾಲ, 1-51) ಶ್ರೀರಾಮನ ಭಕ್ತಿಯೇ ಮುಕ್ತಿಯು, ಈ ಭಕ್ತಿಯೇ ಮುಕ್ತಿಯನ್ನು ಕೊಡುವುದು. (ಅರ-10/43-44) ಇಂತಹ ಅನೇಕ ವೈಶಿಷ್ಟ್ಯಗಳನ್ನು ಗುರುತಿಸಬಹುದು.
ಭಗವಾನ್ ಶ್ರೀರಾಮನು ಸಾಕ್ಷಾತ್ ಪರಬ್ರಹ್ಮ ಪರಮಾತ್ಮನೆಂಬುದನ್ನು ಪ್ರತಿಪಾದಿಸಿದ, ನಾರದರು, ವಸಿಷ್ಠರು, ವಿಭೀಷಣ, ಮಂಡೋದರಿ ಕೊನೆಗೆ ರಾವಣನು ಹೀಗೆ ಇವರ ಮಾತುಗಳು ಮನನೀಯವಾಗಿವೆ. ಅಗಸ್ತ್ಯರ ಉಪದೇಶವಂತು ಅಲೌಕಿಕವಾದುದು. ಇಷ್ಟೇ ಅಲ್ಲ ಇದರಲ್ಲಿ ಬರುವ ಅಹಲ್ಯೆ, ಸುತೀಕ್ಷ್ಣ, ಕಬಂಧ, ಶಬರಿ, ಮುಂತಾದವರು ಗೈದಿರುವ ಸ್ತೋತ್ರ ಭಾಗವಂತೂ ಭಕ್ತಿರಸದಿಂದ ತುಂಬಿ ತುಳುಕುತ್ತಿದೆ. ಅಲ್ಲದೆ ಭಗವಾನ್ ಶ್ರೀರಾಮಚಂದ್ರನೇ ಸ್ವತಃ ಲಕ್ಷ್ಮಣ-ಶಬರೀ-ತಾರಾದೇವಿ ಮುಂತಾದವರಿಗೆ ಮಾಡಿದ ತತ್ತ್ವೋಪ ದೇಶಗಳಂತೂ ಅದ್ವಿತೀಯವಾಗಿದೆ. ಹಿಂದಿಯ ಮೇರು ಕವಿಯಾದ, ವಿಶ್ವಕವಿ ಗೋಸ್ವಾಮಿ ತುಲಸೀದಾಸರು ಪ್ರಧಾನವಾಗಿ ಅನೇಕ ವೈಶಿಷ್ಟ್ಯಗಳಿಂದ ಕೂಡಿದ ಈ ಅಧ್ಯಾತ್ಮರಾಮಾಯಣವನ್ನೇ ಅನುಸರಿಸಿದ್ದಾರೆಂಬುದು ಲೋಕವಿದಿತ. ಪ್ರಿಯ ಓದುಗರು ಇದನ್ನು ತಮ್ಮದಾಗಿಸಿಕೊಂಡು ಓದಿ, ಮನನಗೈದು ಶ್ರೀರಾಮಚಂದ್ರನ ಕೃಪೆಗೆ ಪಾತ್ರರಾಗುವುದರಲ್ಲಿ ಸಂದೇಹವೇ ಇಲ್ಲ.