ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ
ಯದ್ವ್-ಅದ್ರೀಶ-ಪದಾಬ್ಜ-ಚಿಂತನ-ರತಂ ಸಂಪತ್ಕುಮಾರಾಭಿಧಾತ್
ಸ್ವಾಚಾರ್ಯಾತ್ ಯತಿರಾಜ-ಕಲ್ಪಿತ-ಮಠ-ಪ್ರಾಪ್ತಾಗಮಾಂತ-ದ್ವಯಂ |
ನಲ್ಲಾನ್-ವಂಶಜ-ಮೌಕ್ತಿಕಂ ಪ್ರತಿಕಲಂ ಶ್ರೀ-ವೈಷ್ಣವಾರಾಧಕಂ
ಶ್ರೀನಾರಾಯಣ-ಲಕ್ಷ್ಮಣಾಖ್ಯ-ಯಮಿನಂ ವನ್ದೇ ಸತಾಂ ರಕ್ಷಕಂ |
ವಿರೋಧ ಪೂರ್ವ-ಫಲ್ಗುನ್ಯಾಂ
ಸಿಂಹಮಾಸ ಕೃತೋದಯಂ |
ಯದ್ವದ್ರಿ-ಯತಿರಾಜಶ್ರೀ-
ನಾರಾಯಣ-ಮುಖಂ ಭಜೇ |
श्री श्री जगद्गुरु रामानुजाचार्य महासंस्थानम्
Sri Sri Jagadguru Ramanujacharya Mahasamstanam
ಶ್ರೀ ಶ್ರೀ ಜಗದ್ಗುರು ರಾಮಾನುಜಾಚಾರ್ಯ ಮಹಾಸಂಸ್ಥಾನಂ ಶ್ರೀ ಯದುಗಿರಿ ಯತಿರಾಜ ಮಠ
SRI YADUGIRI YATHIRAJA MUTT (Moola Stanam :- Tirunarayanapuram - Melukote-571431)
Founder Acharya : Sri Ramanujacharya
ಮಂಗಳಾಶಾಸನ
ಭೂತಂ ಸರಶ್ಚ ಮಹದಾಹ್ವಯ-ಭಟ್ಟನಾಥ-
ಶ್ರೀಭಕ್ತಿಸಾರ-ಕುಲಶೇಖರ-ಯೋಗಿನಾಥಾನ್ |
ಭಕ್ತಾಂಘ್ರಿರೇಣು-ಪರಕಾಲ-ಯತೀಂದ್ರಮಿಶ್ರಾನ್
ಶ್ರೀಮತ್ಪರಾಂಕುಶಮುನಿಂ ಪ್ರಣತೋಸ್ಮಿ ನಿತ್ಯಂ |
ಈ ಭಕ್ತಿಸಾಮ್ರಾಜ್ಯದಲ್ಲಿ ಆಳ್ವಾರರುಗಳ ಸ್ಥಾನ ತುಂಬಾ ಎತ್ತರವಾದದ್ದು. ಒಂದು ರೀತಿ ನಮ್ಮ ಭಾರತದಲ್ಲಿ ಭಕ್ತಿಯುಗ ಪ್ರಾರಂಭವಾಗಿದ್ದು ತಮಿಳುನಾಡಿನ ಆಳ್ವಾರರುಗಳಿಂದ, ಭಗವಂತನ ನಿರ್ಹೇತುಕ ಕೃಪೆಗೆ ಪಾತ್ರರಾಗಿ ನಮ್ಮ ಈ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಲು ಆಳ್ವಾರರುಗಳು ಅವತರಿಸಿದರು. ಶ್ರೀಮನ್ನಾರಾಯಣನು ಈ ಸಂತರೆಲ್ಲರಿಗೆ ಪ್ರತ್ಯಕ್ಷರಾಗಿ ಅವನ ಗುಣಾನುಭವವನ್ನು ಮಾಡುವಂತೆ ಆಜ್ಞಾಪಿಸಿದರು. ಈ ಅನುಭವದ ಧಾರೆಯೇ ದಿವ್ಯಪ್ರಬಂಧದ ಧಾರೆ. ಆಳ್ವಾರರುಗಳೆಲ್ಲಾ ದಿವ್ಯಸೂರಿಗಳು, ಅವರ ಹೃದಯಕಮಲದಿಂದ ಹೊರಹೊಮ್ಮಿದ್ದೇ ದಿವ್ಯಪ್ರಬಂಧ, ಭಗವಂತನಲ್ಲಿ ಭಕ್ತಿ, ಶ್ರದ್ಧೆ ಇಟ್ಟವರೆಲ್ಲಾ ಈ ದಿವ್ಯಪ್ರಬಂಧವನ್ನು ಅನುಸಂಧಾನ ಮಾಡಬಹುದೆಂದು ಜಗದಾಚಾರ್ಯರಾದ ರಾಮಾನುಜರ ನಿರ್ದೇಶನ. ಇದರಿಂದಾಗಿ ಈ ನೆಲದಲ್ಲಿ ದಿವ್ಯಪ್ರಬಂಧ ನಿರಂತರವಾಗಿ ಪ್ರವಹಿಸುತ್ತಿದೆ. ಇಂತಹ ದಿವ್ಯಪ್ರಬಂಧವನ್ನು ಅನೇಕರು ಅನೇಕ ರೀತಿ ಪ್ರಕಟಿಸುತ್ತಾ ಬಂದಿದ್ದಾರೆ.
ಈ ಪ್ರಕೃತ ಕಿ॥ಶೇ॥ ಶ್ರೀ ಗರಣಿ ಶ್ರೀನಿವಾಸನ್ರವರು ನಾಲಾಯಿರ ದಿವ್ಯಪ್ರಬಂಧವನ್ನು ಕನ್ನಡದಲ್ಲಿ ಅಭ್ಯಾಸಿಗಳಿಗೆ ಅನುಕೂಲವಾಗುವಂತೆ ಪದ, ಪದಗಳನ್ನು ಬಿಡಿಸಿ ಸರಳವಾಗಿ ಅರ್ಥವನ್ನು ಹೇಳಿ ರಚಿಸಿರುವುದು ಅತ್ಯಂತ ಉತ್ತಮ ಕೈಂಕರ್ಯ. ಆಳ್ವಾರರುಗಳ ಅವತಾರ, ಅವರ ಸ್ಥಳ, ಕಾಲ, ಅವರುಗಳು ರಚನೆ ಮಾಡಿರುವ ಪದ್ಯಗಳ ಸಂಖ್ಯೆ ಹೀಗೆ ವಿವರವಾಗಿ ನೀಡಿರುವುದು ಈ ಗ್ರಂಥದ ಹಿರಿಮೆ. ಕೀರ್ತಿಶೇಷರಾಗಿ ಭಗವಂತನಲ್ಲಿ ಸೇರಿರುವ ಶ್ರೀ ಗರಣಿ ಶ್ರೀನಿವಾಸನ್ ಅವರು ಶ್ರೀವೈಷ್ಣವ ಭಕ್ತ ಶಿರೋಮಣಿಗಳನ್ನು ಕನ್ನಡ ನಾಡಿಗೆ ಸುಂದರವಾಗಿ ಪರಿಚಯ ಮಾಡಿಸಿದ್ದಾರೆ. ಶ್ರೀವೈಷ್ಣವ ಸಾಮ್ರಾಜ್ಯದ ಮಹಾ ವಿದ್ವಾಂಸರಾದ ಉ॥ ವೇ॥ ಶ್ರೀ ಕಾಂಚಿ ಅಣ್ಣಂಗರಾಚಾರರ ಗ್ರಂಥಗಳನ್ನು ಅಧ್ಯಯನ ಮಾಡಿ ಅದನ್ನು ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ಪ್ರತಿಪದಾರ್ಥ, ವ್ಯಾಖ್ಯಾನಗಳನ್ನು ರಚಿಸಿರುವುದು ವಿಶೇಷ.+++(4)+++ ಇಷ್ಟೇ ಅಲ್ಲದೆ ಈ ದಿವ್ಯಪ್ರಬಂಧದ ಪ್ರಕಾಶನಕ್ಕೆ ಪೂರ್ವ ಭಾವಿಯಾಗಿ ಅನೇಕ ದಶಕಗಳು ತಮ್ಮಕೈ ಬರಹದಲ್ಲಿ ಹಸ್ತಪ್ರತಿಯನ್ನು ಸಿದ್ಧಗೊಳಿಸಿದ್ದಾರೆ. ಇಂತಹ ಅಮೂಲ್ಯ ಗ್ರಂಥವನ್ನು ಅವರ ಸುಪುತ್ರರಾದ ಶ್ರೀ ಗರಣಿ ರಾಧಾಕೃಷ್ಣನ್ ಅವರು ಹಸ್ತಪ್ರತಿಯ ರೂಪದಲ್ಲಿದ್ದ ಈ ದಿವ್ಯಪ್ರಬಂಧವನ್ನು ಮುದ್ರಣಕ್ಕೆ ಸಿದ್ಧಪಡಿಸಿ ಪ್ರಕಾಶನಗೊಳಿಸುತ್ತಿದ್ದಾರೆ. ಇಂತಹ ಅತ್ಯುತ್ತಮ ಸೇವೆಗಾಗಿ ಶ್ರೀವೈಷ್ಣವ ಸಮುದಾಯ ಅಭಿನಂದಿಸುತ್ತದೆ.
ನಮ್ಮ ಶ್ರೀಮಠದ ಆರಾಧ್ಯಮೂರ್ತಿಯಾದ ಶ್ರೀ ಲಕ್ಷ್ಮೀನೃಸಿಂಹ ಹಾಗೂ ಆಚಾರ ರಾಮಾನುಜರ ಪರಿಪೂರ್ಣ ಅನುಗ್ರಹ ಇವರುಗಳಿಗೆ ದೊರಕಲೆಂದು ಪ್ರಾರ್ಥಿಸುತ್ತೇವೆ. ಈ ಆಮೂಲ್ಯ ಗಂಥ ರತ್ನವು ಕನ್ನಡ ನಾಡಿನ ಮನೆ ಮನೆಗಳಲ್ಲಿ ನೆಲೆಗೊಳ್ಳಲಿ ಎಂಬುದು ನಮ್ಮ ಸದಿಚ್ಛೆ.
ಶ್ರೀರಾಮಾನುಜ ಪಾದುಕ ಸೇವಕಾ
ಯತಿರಾಜಃ