ರಾಜಗೋಪಾಲ-ವಾಕ್

ಶ್ರೀಮತೇ ರಾಮಾನುಜಾಯ ನಮಃ

ವಕುಳಾಭರಣಂ ವಂದೇ
ಜಗದಾಭರಣಂ ಮುನಿಂ
ಯಃ ಶ್ರುತೇರ್ ಉತ್ತರಂ ಭಾಗಂ
ಚಕ್ರೇ ದ್ರಾವಿಡಭಾಷೆಯಾ

ವಕುಳಾಲಂಕೃತಂ ಶ್ರೀಮತ್+
ಶಠಕೋಪಪದದ್ವಯಂ
ಅಸ್ಮತ್-ಕುಲಧನಂ ಭೋಗ್ಯಮ್
ಅಸ್ತು ಮೇ ಮೂರ್ಧ್ನಿ ಭೂಷಣಂ

ಈ ಶ್ಲೋಕವು ನಮ್ಮಾಳ್ವಾರರ ಸ್ತುತಿ ಶ್ಲೋಕಗಳಲ್ಲಿ ಒಂದು ಶ್ಲೋಕವು, ಕೃತಿಯ ಉತ್ತರ ಭಾಗವನ್ನು (ಉಪನಿಷತ್ತನ್ನು) ದ್ರಾವಿಡ ಭಾಷೆಯಲ್ಲಿ (ತಮಿಳು ಭಾಷೆಯಲ್ಲಿ) ಹೇಳಿದೆ. ಈ ಜಗತ್ತಿಗೆ ಆಭರಣದಂತಿರುವ ವಕುಳ ಪುಷ್ಪವನ್ನು ಧರಿಸಿರುವ ವಕುಳಾಭರಣರೆಂದೇ ಪ್ರಸಿದ್ಧರಾಗಿರುವ ಮುನಿಯನ್ನು (ನಮ್ಮಾಳ್ವಾರರನ್ನು) ವಂದಿಸುತ್ತೇನೆ. ನಮಗೆ ಭೋಗ್ಯವೂ ಕುಲಧನವೂ ಆಗಿರುವ ವಕುಳಪುಷ್ಪದಿಂದ ಅಲಂಕೃತವಾಗಿಯೂ ಭಕ್ತಿ, ಐಶ್ವರ್ಯದಿಂದ ಸಮೃದ್ಧವಾಗಿರುವ ಶಠಗೋಪರ ಎರಡೂ ಶ್ರೀಪಾದಗಳೂ ನಮ್ಮ ಶಿರಸ್ಸಿಗೆ ಭೂಷಣವಾಗಿರಲಿ. ನಮ್ಮಾಳ್ವಾರ್‌ರವರು ಶ್ರೀವೈಷ್ಣವರಿಗೆ ಪ್ರಥಮ ಆಚಾರ್ಯರು. ಆಳ್ವಾರರುಗಳು ಹತ್ತು ಮಂದಿ, ಪೆರಿಯಾಳ್ವಾರರ ಸಾಕುಮಗಳು ಆಂಡಾಳ್ ನಾಚ್ಚಿಯಾರ್ ಮತ್ತು ನಮ್ಮಾಳ್ವಾರರ ಶಿಷ್ಯರಾದ ಮಧುರಕವಿಗಳನ್ನೂ ಸೇರಿಸಿ ಹನ್ನೆರಡು ಮಂದಿ ಎಂದೂ ಹೇಳುತ್ತಾರೆ. ಜೀವಿಗಳಿಗೆ ಪರಮ ಪುರುಷಾರ್ಥ ಯಾವುದೆಂದರೆ, ಈ ಹುಟ್ಟು ಸಾವು ಚಕ್ರದಿಂದ ತಪ್ಪಿ ಆ ಪರಮಾತ್ಮನಲ್ಲಿ ಹೋಗಿ ಸೇರುವುದೇ ಆಗಿದೆ. ಅದುವೇ ಮೋಕ್ಷ. ಪರಮಾತ್ಮನಲ್ಲಿ ಹೋಗಿ ಸೇರಲು ಸರ್ವ ಜೀವಿಗಳಿಗೂ ಸಮಾನ ಅಧಿಕಾರ(ಹಕ್ಕು)ವಿದೆ ಮತ್ತು ಅವನನ್ನು ಸೇರಲು ಭಕ್ತಿಯೊಂದೇ ಸುಲಭಮಾರ್ಗವು ಎಂದು ಸಾಧಿಸಿದವರಲ್ಲಿ ಪ್ರಥಮರು ಆಳ್ವಾರರುಗಳು.

ಆಳ್ವಾರರುಗಳು ನಮ್ಮ ದೇಶದ ದಕ್ಷಿಣದ(ತಮಿಳು) ಸೀಮೆಯಲ್ಲಿ ಅವತರಿಸಿದವರು. ಆದುದರಿಂದ ಅವರ ಶ್ರೀಸೂಕ್ತಿಗಳು ತಮಿಳು ಭಾಷೆಯಲ್ಲಿಯೇ ಇವೆ.

ಆಳ್ವಾರರುಗಳು ಭಗವದ್ಭಕ್ತಿಯಲ್ಲೇ ಮುಳುಗಿ ಭಗವಂತನನ್ನು ಸಾಕ್ಷಾತ್ಕರಿಸಿ ಅವನ ದಿವ್ಯ ವಿಗ್ರಹ, ರೂಪ ಸೌಂದರ್ಯ ಲಾವಣ್ಯಗಳನ್ನು, ಅವನ ಅನಂತಾನಂತ ಕಲ್ಯಾಣ ಗುಣಗಳನ್ನು ಅನುಭವಿಸಿ ಆ ಬ್ರಹ್ಮಾನಂದದಿಂದ ತುಂಬಿ ತುಳುಕಿ, ಆ ಅನುಭವವು ತಮಗಾಗಿ ಮಾತ್ರವಲ್ಲ ಲೋಕದ ಇತರರಿಗೂ ಆಗಲೆಂದು ಶ್ರೀಸೂಕ್ತಿಗಳ ಮಾಲೆಯೇ ಮೂಲಕ ಹೊರಗೆಡಹಿ ಭೋದಿಸಿದರು. ಶ್ರೀಸೂಕ್ತಿಗಳ ‘ದಿವ್ಯಪ್ರಬಂಧ’ ವೆನ್ನುವುದು. ಅದಕ್ಕೆ ದ್ರಾವಿಡ ಪ್ರಬಂಧ, ಮಿಡೋಪನಿಷತ್, ದ್ರಾವಿಡ ವೇದ ಎಂದೆಲ್ಲಾ ಹೆಸರಿರುವುದು. ಈ ದಿವ್ಯ ಶ್ರೀಸೂಕ್ತಿಗಳು ನಾಲ್ಕು ಸಾವಿರವಿರುವುದರಿಂದ ನಾಲಾಯಿರ ದಿವ್ಯ ಪ್ರಬಂಧವೆಂದು ಪ್ರಸಿದ್ಧವಾಗಿದೆ.

ವೇದಗಳು ಜ್ಞಾನದ ಆಕರ. ಆದರೆ ಅದು ಸರ್ವರಿಗೂ ಲಭ್ಯವಿಲ್ಲ. ಅದರ ಭಾಷೆಯು ಕಠಿಣ. ಅದನ್ನು ಕಲಿಯಲು ಅನೇಕ ಕಟ್ಟುಪಾಡುಗಳು, ನಿಯಮಗಳು ಇವೆಯಾದುದರಿಂದ ಸಮಾಜದಲ್ಲಿ ಎಲ್ಲರಿಂದಲೂ ಕಲಿಯಲಸಾಧ್ಯ. ಆಳ್ವಾರರುಗಳು ವೇದಸಾರವನ್ನು ಪಾಮರರಿಗೂ ಅರ್ಥವಾಗುವಂತೆ ಆಡು ಭಾಷೆಯಲ್ಲಿಯೇ ಹೇಳಿರುವರಾದುದರಿಂದ ಅದು ಸರ್ವರಿಗೂ ವೇದ್ಯವಾಗಿದೆ. ಈ ಶ್ರೀಸೂಕ್ತಿಗಳಿಗೆ ಯಾವ ಕಟ್ಟುಪಾಡೂ ಇಲ್ಲ. ಇವುಗಳನ್ನು ಕಲಿಯಲು ಮತ್ತು ಹಾಡಲು ಸರ್ವರಿಗೂ ಅಧಿಕಾರವಿದೆ. ಆದುದರಿಂದ ಈ ದಿವ್ಯ ಸೂಕ್ತಿಗಳು ಸಮಾಜದಲ್ಲಿನ ಎಲ್ಲಾ ಸ್ಥರಗಳಲ್ಲಿನ ಜನರಲ್ಲೂ ಪ್ರಚಾರವಾಗಿ ವೇದಗಳ ತತ್ವಾರ್ಥಗಳು ಎಲ್ಲರಿಗೂ ತಲಪುವಂತೆ ಆಯಿತು. ಇದು ಒಂದು ಕ್ರಾಂತಿಕಾರಕ ಬದಲಾವಣೆ, ತಮಿಳುನಾಡಿನಲ್ಲಿ ಈಗಲೂ ಎಲ್ಲಾ ಶ್ರೇಣಿಯ ಜನರೂ ಈ ಸೂಕ್ತಿಗಳನ್ನು ಹಾಡಿ ನಲಿಯುತ್ತಾರೆ.

ಶ್ರೀವೈಷ್ಣವ ದೇವಸ್ಥಾನಗಳಲ್ಲಿ ದೇವತಾರ್ಚನೆಯನ್ನು ವೇದಮಂತ್ರಗಳ ಜೊತೆಯಲ್ಲಿ ದಿವ್ಯಪ್ರಬಂಧ ಸೂಕ್ತಿಗಳನ್ನು ಹಾಡಿ ಅರ್ಚಿಸುತ್ತಾರೆ. ದಿವ್ಯಪ್ರಬಂಧ ಪಠಣವಿಲ್ಲದೇ ದೇವತಾರ್ಚನೆಯು ಪೂರ್ಣವಾಗಲಾರದು. ಶ್ರೀ ವೈಷ್ಣವರಲ್ಲಿ ಎಲ್ಲಾ ಶುಭಕಾರ್ಯಗಳಲ್ಲೂ ಪ್ರಬಂಧ ಸೇವೆಯು ನಡೆಯಲೇಬೇಕು. ಅಲ್ಲದೆ ಅಂತ್ಯಸಂಸ್ಕಾರ-ಕರ್ಮಗಳನ್ನು ಮಾಡಿ ಕೊನೆಯದಾಗಿ ಹದಿಮೂರನೇ ದಿವ್ಯ ದಿವ್ಯಪ್ರಬಂಧ ಗೋಷ್ಠಿಯನ್ನು ನಡೆಯಿಸಿ ಶುಭ ಸ್ವೀಕಾರವೆಂದು ಮಂಗಳಕಾರ್ಯವನ್ನು ಮಾಡಿ ಜೀವಾತ್ಮನನ್ನು ವೈಕುಂಠಕ್ಕೆ ಸೇರಿಸಿದೆಯೆಂದು ಸಂಭ್ರಮದಿಂದ ಆಚರಿಸಿ ಮುಗಿಸುತ್ತಾರೆ.+++(5)+++ ಈ ರೀತಿಯಾಗಿ ದಿವ್ಯಪ್ರಬಂಧವು ಶ್ರೀವೈಷ್ಣವರ ಜೀವನದಲ್ಲಿ ಮೊದಲಿಂದ ಕೊನೆಯವರೆಗೂ ಅವಿಭಾಜ್ಯವಾಗಿ ಬೆರೆತುಹೋಗಿದೆ.

ಆದರೆ ಸ್ವಲ್ಪಮಟ್ಟಿಗಾದರೂ ತಮಿಳು ಭಾಷೆಯನ್ನು ಅಭ್ಯಾಸ ಮಾಡಿ ಆಳ್ವಾರರುಗಳ ಶ್ರೀಸೂಕ್ತಿಗಳಲ್ಲಿ ಅಡಗಿರುವ ತತ್ವಾರ್ಥಗಳನ್ನು ತಿಳಿದು, ದೈವ ರಸಾನುಭವವನ್ನು ಪಡೆದು ಸೇವೆಯನ್ನು ಮಾಡುವುದಾದರೆ ಅರ್ಥಪೂರ್ಣವಾಗಿರುವುದು. ಕರ್ನಾಟಕದಲ್ಲಿರುವ ಬಹಳಷ್ಟು ಶ್ರೀವೈಷ್ಣವರ ಮಾತೃಭಾಷೆ ವ್ಯಾವಹಾರಿಕ ಭಾಷೆಯಾಗಿದೆಯೇ ಹೊರತು ಅವರಿಗೆ ತಮಿಳುಭಾಷೆಯ ಅರಿವಿಲ್ಲವಾದುದರಿಂದ ಅವರಿಗೆ ದಿವ್ಯಪ್ರಬಂಧದ ಅರ್ಥವು ತಿಳಿದಿರುವುದಿಲ್ಲ. ಹೀಗೆ ಅರ್ಥ ಮಾಡಿ ತಿಳಿಸುವ ಬೃಹತ್ ಕಾರ್ಯವನ್ನು ಕೀರ್ತಿಶೇಷ ಗರಣಿ ಶ್ರೀನಿವಾಸನ್‌ರವರು ಮಾಡಿದ್ದಾರೆ. ಅವರು ತಮ್ಮ ಈ ಗ್ರಂಥದಲ್ಲಿ ನಾಲಾಯಿರ ದಿವ್ಯಪ್ರಬಂಧದ ಪ್ರತಿ ಪಾಶುರಕ್ಕೂ (ಶ್ರೀಸೂಕ್ತಿಗಳು) ಪ್ರತಿಪದಾರ್ಥ, ತಾತ್ಪರ್ಯ ಮತ್ತು ವಿವರಣೆಗಳನ್ನು ಕೊಟ್ಟಿರುತ್ತಾರೆ. ಮುನ್ನುಡಿಯಲ್ಲಿ ಭಕ್ತಿಪಂಥ, ವಿಷ್ಣುಪೂಜೆ, ಭಾಗವತರು, ಭಕ್ತಿ, ಆಳ್ವಾರರು, ಆಚಾರ್ಯರು, ಪ್ರಪತ್ತಿ ಇವುಗಳ ಬಗೆಗೆ ವಿಶದವಾಗಿ ಹಲವಾರು ಪುಟಗಳಷ್ಟು ಬರೆದಿರುತ್ತಾರೆ. ಅದೂ ಅಲ್ಲಂದೆ ತಮಿಳು ಭಾಷೆಯ ಲಿಪಿ, ಅವುಗಳ ವೈಶಿಷ್ಟ್ಯ, ಸ್ವರ, ವ್ಯಂಜನ ಇವುಗಳ ಬಗೆಗೆ ವಿಶದವಾಗಿ ಬರೆದಿರುವುದರಿಂದ ಹೊಸತಾಗಿ ಈ ಭಾಷೆಯನ್ನು ಕಲಿಯುವವರಿಗೆ ಸುಲಭವಾಗಿರುತ್ತದೆ. ಇವುಗಳೆಲ್ಲಾ ಸೇರಿ ಈ ಗ್ರಂಥವು ಕೈ ಬರಹದಲ್ಲಿ ಆರು ಸಾವಿರ ಪುಟಗಳಿಗೂ ಮೀರಿದ್ದಾಗಿರುತ್ತದೆ. ಇದು ಸುಲಭವಾದ ಕೆಲಸವಲ್ಲ. ಅಪಾರವಾದ ಶ್ರಮದಿಂದಲೂ ಮತ್ತು ಶ್ರದ್ಧೆಯಿಂದಲೂ ಹಲವಾರು ವರ್ಷ ಒಂದು ತಪಶ್ಚರ್ಯೆಯಂತೆ ಇದನ್ನು ಸಾಧಿಸಿದ್ದಾರೆ.

ಗ್ರಂಥಕರ್ತರು ಕಾಲವಾಗಿ 38 ವರ್ಷಗಳು ಕಳೆದಿದ್ದರೂ, ಕಾರಣಾಂತರಗಳಿಂದ ಅದು ಮುದ್ರಣವಾಗಿ ಪ್ರಕಾಶವಾಗದೇ ಇದ್ದಿತು. ಈಗ ಕಾಲಕೂಡಿ ಬಂದಿದೆಯೆಂದು ಕಾಣುತ್ತದೆ. ಶ್ರದ್ಧಾಭಕ್ತಿಯುಳ್ಳ ಕೆಲವರು ಸೇರಿ ಇದನ್ನು ಮುದ್ರಿಸಿ ಪ್ರಕಾಶಪಡಿಸಬೇಕೆಂದು ಹಠ ತೊಟ್ಟಿದ್ದಾರೆ. ಸುಮಾರು ಹಲವು ಸಂಪುಟಗಳಲ್ಲಿ ಪ್ರಕಾಶನಕ್ಕೆ ಬರುತ್ತದೆ ಎಂದಿದ್ದಾರೆ. ಅವರಲ್ಲಿ ನನಗೆ ಪರಿಚಿತರೂ, ಸ್ನೇಹಿತರೂ ಆಗಿರುವ ಶ್ರೀಮಾನ್ ಗರಣಿ ರಾಧಾಕೃಷ್ಣನ್‌ನವರು ಒಂದು ಮುನ್ನುಡಿಯನ್ನು ಬರೆದು ಕೊಡಬೇಕೆಂದು ಅಪೇಕ್ಷಿಸಿದ್ದರಿಂದ ನನ್ನ ಈ ನಾಲ್ಕು ನುಡಿಗಳು. ಅವರುಗಳ ಈ ಸಾಹಸಕ್ಕೆ ಶ್ರೀಮನ್ನಾರಾಯಣನ ಅಭಯ ಹಸ್ತವಿರುವುದೆಂದು ನಂಬಿದ್ದೇನೆ.

ಅಡಿಯೇನ್ ರಾಮಾನುಜ ದಾಸನ್
ವೇಲಾಂಬೂರ್ ಛಾಂದೋಗ್ಯಂ ರಾಜಗೋಪಾಲನ್
ಶ್ರೀ ಶೋಭಕೃತ್‌ ನಾಮ ಸಂವತ್ಸರ,
ಉತ್ತರಾಯಣ,
ಗ್ರೀಷ್ಮ ಋತು,
ಜ್ಯೇಷ್ಠ ಶುಕ್ಲ,
ತ್ರಯೋದಶಿ, ಶುಕ್ರವಾರ,
28.5.2023