ಕೃತಜ್ಞತೆಗಳು
ನನ್ನ ಪೂಜ್ಯ ಪಿತಾ ಅವರು ನನ್ನ ಗುರುವೂ, ಮಾರ್ಗದರ್ಶಕರೂ, ಆಗಿ ಸನ್ಮಾರ್ಗದಲ್ಲಿ ನಡೆಯಲು ದಾರಿ ದೀಪದಂತೆ ಇದ್ದವರು. ಅವರು ಹಲವಾರು ವರುಷಗಳ ಕಾಲ ಸತತ ಶ್ರದ್ದೆಯಿಂದ ಕನ್ನಡ ನಾಡಿನ ಶ್ರೀವೈಷ್ಣವ ಸಂಪ್ರದಾಯದ ಭಕ್ತರಲ್ಲಿ ತಮಿಳುಭಾಷೆಯ ಪರಿಚಯದ ಕೊರತೆಯನ್ನು ಅರಿತು, ದಿವ್ಯ ಪ್ರಭಂದವನ್ನು ಕನ್ನಡದಲ್ಲಿ ವಿಸ್ತಾರವಾಗಿ ಬರೆದು ಎಲ್ಲರ ಅಭಿಲಾಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರು ತನ್ನ ಉದ್ದಾರಕ್ಕಾಗಿ ಬರೆದ ಈ ಕೃತಿಯನ್ನು ಹೇಗಾದರೂ ಮಾಡಿ ಬೆಳಕಿಗೆ ತರಬೇಕೆಂಬ ಹಂಬಲ ಬಹಳ ದಿನಗಳಿಂದ ನನ್ನನ್ನು ಕಾಡುತ್ತಿತ್ತು. ಈ ಮಹತ್ ಕಾರ್ಯಕ್ಕೆ, ನಮ್ಮೆಲ್ಲರ ಗುರುವರ್ಯರಾದ ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ, ಪೀಠಾಧಿಪತಿಗಳಾದ ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮಿಗಳು ದಯಪಾಲಿಸಿದ ಮಂಗಳಾಶಾಸನ ನನ್ನನ್ನು ಈ ಕೈಂಕರ್ಯಕ್ಕೆ ಪ್ರೋತ್ಸಾಹ ನೀಡಿ ನನ್ನ ಉತ್ಸಾಹ ನೂರ್ಮಡಿ ಆಯಿತು. ಆವರಿಗೆ ನನ್ನ ಪ್ರಥಮ ಸಾಷ್ಟಾಂಗ ಪ್ರಣಾಮಗಳು.
ಈ ಕೃತಿಯು ನನ್ನ ತಂದೆಯವರು ಪರಮಪದವನ್ನು ಸೇರಿ ಬಹಳ ವರುಷಗಳ ನಂತರವೂ ಬೆಳಕು ಕಾಣದೆ ಇದ್ದಾಗ, ಡಾ|| ಲಕ್ಷ್ಮೀತಾತಾಚಾರ್ಯ ಅವರ ಪ್ರೋತ್ಸಾಹದ ಮೂಲಕ ಬೆಳಕಿಗೆ ಬಂತು. ಇದಕ್ಕಾಗಿ ಅವರ ಮತ್ತು ಅವರ ಸುಪುತ್ರ ಡಾ|| ಎಂ.ಎ. ಆಳ್ವಾರ್ ಮತ್ತು ಅವರ ಧರ್ಮಪತ್ನಿ ಅವರುಗಳಿಗೆ ನಾನು ಆಭಾರಿಯಾಗಿದ್ದೇನೆ.
ಕೊರೋನ ಮಹಾಮಾರಿಯು ಈ ಉದ್ದೇಶವನ್ನು ವಿಳಂಬಮಾಡಿದರೂ, ಶ್ರೀ ಆಳ್ವಾರ್ ದಂಪತಿಗಳ ಉತ್ಸಾಹದಿಂದ ಒಂದು ಹಂತಕ್ಕೆ ಬಂದು ತಲುಪಿತು. ಈ ಕೃತಿಯನ್ನು ಗಣಕೀಕೃತ ಮಾಡಿ, ಅದು ಜಾಲತಾಣದಲ್ಲಿ ಹರಿದಾಡುತ್ತಿದ್ದರೂ, ಶ್ರೀ ಛಾಂದೋಗ್ಯ ರಾಜಗೋಪಾಲ್ರವರು ಮತ್ತು ಕೃಷ್ಣಾಪುರ ಸಂತಾನ ಗೋಪಾಲಕೃಷ್ಣ ದೇವಾಲಯದ ಉಪಾಧ್ಯಕ್ಷರಾದ ಶ್ರೀ ಎ.ಜಿ. ರಘು ಅವರ ಪ್ರೋತ್ಸಾಹ ಶ್ರೀ ತಿರುಮಲೆ ತಾತಾಚಾರ್ಯ (ಶಾಮಣ್ಣ) ಮತ್ತು ಶ್ರೀನಿಧಿ ಪ್ರಿಂಟರ್ಸ್ ರೂವಾರಿಗಳಾದ ಶ್ರೀ ಗೋಪಿನಾಥ್ ಮತ್ತು ಶ್ರೀ ರವೀಂದ್ರನಾಥ್ ಸಹೋದರರು ಅವರ ಅವರ ಕೈಂಕರ್ಯದೊಂದಿಗೆ ಈ ಕೃತಿ ಮತ್ತೆ ಬೆಳಕು ಕಾಣುತ್ತಿದೆ. ತಮಿಳು ಲಿಪಿಯ ಗಣಕೀಕೃತ ಆಗದ ಕಾರಣ ಈ ಕಾರ್ಯ ವಿಳಂಬಗೊಂಡು ಶ್ರೀಮನ್ನಾರಾಯಣನ ಕೃಪೆಯಿಂದ ಮೇಲುಕೋಟೆ ಉವೇ॥ ಶ್ರೀ ಕೇಶವಭಟ್ಟರ ಅಪಾರ ಪರಿಶ್ರಮದಿಂದ ತಮಿಳು ಲಿಪಿಯನ್ನು ಸೇರಿಸುವ ಕಾರ್ಯವೂ ಸಫಲವಾಯಿತು. ಮೇಲೆ ಗುರುತಿಸಬಹುದಾದ ಎಲ್ಲಾ ಮಹನೀಯರಿಗೆ ನಾನು ಎಷ್ಟು ಋಣಿಯೋ ಅದನ್ನು ವರ್ಣಿಸಲು ಸಾಧ್ಯವಿಲ್ಲ.
ಮಹಾಲಕ್ಷ್ಮೀಯ ಕರುಣೆಯಿಂದ ಕರಡು ಪ್ರತಿಯನ್ನು ತಿದ್ದುಪಡಿ ಮಾಡಿದ ಶ್ರೀಮತಿ ಜಾನಕಿ ಶೇಷಾದ್ರಿ, ಕಿ॥ಶೇ॥ ಪ್ರೊ. ನಾರಾಯಣಾಚಾರರ ಸುಪುತ್ರಿ ಶ್ರೀಮತಿ ನಿರ್ಮಲಾಶರ್ಮ ಹಾಗೂ ಉವೇ ಶ್ರೀ ಕೇಶವಭಟ್ಟರ ಅವರ ಮರೆಯಲಾಗದ ಸಹಕಾರ ಈ ಕೃತಿಗೆ ಮೆರುಗು ಕೊಟ್ಟಿದೆ. ನನ್ನ ಈ ಉತ್ಸಾಹದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಮಹನೀಯರೆಲ್ಲರಿಗೂ ನನ್ನ ಕೃತಜ್ಞತೆಗಳು.
ಗಣಕೀಕೃತವಾದ ಅವರ ಉತ್ತಮ ಬರಹದ ಪ್ರತಿಯನ್ನು ಪಡೆದುಕೊಳ್ಳಲು ಕೆಳಕಂಡ ಲಿಂಕ್ ಅನ್ನು ಬಳಸಿ. https://archive.org/details/divya-prabandha-pratipadArtha
ಇತಿ ಸಜ್ಜನ ವಿಧೇಯ ಗರಣಿ ರಾಧಾಕಷ್ಣನ್