ಕೇಶವ-ಭಟ್ಟ-ವಾಕ್

|| ಶ್ರೀಮತೇ ರಾಮಾನುಜಾಯ ನಮಃ ||

ಶ್ರಿಯಃಪತಿಯಾದ ಶ್ರೀಮನ್ನಾರಾಯಣನು ಶ್ರೀಭೂನೀಳಾ ಸಮೇತನಾಗಿ ಪರಮಪದದಲ್ಲಿ ವಿರಾಜ ಮಾನನಾಗಿದ್ದಾನೆ. ಪರಮಾತ್ಮನ ಐದು ರೂಪಗಳು ಸುಪ್ರಸಿದ್ಧ. ಅವುಗಳೆಂದರೆ ಪರ, ವ್ಯೂಹ, ವಿಭವ, ಅಂತರ್ಯಾಮಿ ಮತ್ತು ಆರ್ಚಾವತಾರ. ಇವುಗಳಲ್ಲಿ ಅರ್ಚಾವತಾರವು ಪ್ರಧಾನವಾದುದು. ತಿರುಮಂಗೈ ಆಳ್ವಾರರು ಏರಾರ್ ಮುಯಲ್ ಎಟ್ಟುಕಕ್ಕೆ ಪಿನ್ ಪೋವದೇ ಎಂದು ತಮ್ಮ ಪ್ರಬಂಧದಲ್ಲಿ ಒತ್ತಿ ಹೇಳಿದ್ದಾರೆ. ಅಂದರೆ ಮೊಲದ ಹಿಂದೆ ಹೋಗುವುದನ್ನು ಬಿಟ್ಟು ಯಾರಾದರೂ ಕಾಗೆಯ ಹಿಂದೆ ಹೋಗುತ್ತಾರೆಯೇ ಎಂದು. ಇದರ ಅಂತರಾರ್ಥವೇನೆಂದರೆ, ಮೊಲದ ಮಾಂಸವು ಕಾಗೆಯ ಮಾಂಸಕ್ಕಿಂತ ರುಚಿಯಾಗಿರುತ್ತದೆ ಎಂದು. ಇಲ್ಲಿ ಮೊಲದ ಮಾಂಸ ಎಂದರೆ ಭೂಲೋಕದಲ್ಲಿರುವ ಅರ್ಚಾವತಾರ ದಿವ್ಯಕ್ಷೇತ್ರಗಳು. ಕಾಕ್ಕೆ ಎಂದರೆ, ನಿತ್ಯಸೂರಿಗಳು ಪ್ರತಿ ದಿನ ಅನುಭವಿಸುತ್ತಿರುವ ಶ್ರೀ ವೈಕುಂಠ, ಆಳ್ವಾರರ ಮನಸ್ಸಿನಲ್ಲಿ ಶ್ರೀ ವೈಕುಂಠಕ್ಕಿಂತ ಭೂಲೋಕದಲ್ಲಿರುವ ಅರ್ಚಾವತಾರದ ದಿವ್ಯಕ್ಷೇತ್ರಗಳನ್ನು ದರ್ಶಿಸಿ, ಪಾಶುರಗಳನ್ನು ಅರ್ಥಪೂರ್ಣವಾಗಿ ಹಾಡಿ ಅನುಭವಿಸುವುದೇ ಪುರುಷಾರ್ಥ ಎಂಬುದಾಗಿ ಅನುಗ್ರಹಿಸಿದ್ದಾರೆ. ಈ ಅರ್ಚಾವತಾರದ ಪರಮಾತ್ಮನನ್ನು ದರ್ಶಿಸಬೇಕಾದರೆ ಅಥವಾ ಅನುಭವಿಸಬೇಕಾದರೆ, ನಾವು ಶ್ರೀವೈಷ್ಣವ 108 ದಿವ್ಯಕ್ಷೇತ್ರಗಳಿಗೆ ಹೋಗಲೇಬೇಕು. ಈ ದಿವ್ಯಕ್ಷೇತ್ರಗಳಲ್ಲಿ ನೆಲೆಸಿರುವ ಅರ್ಚಾವತಾರ ದೇವರನ್ನು 12 ಆಳ್ವಾರರುಗಳು ಸಂದರ್ಶಿಸಿ ಈಗ ನಮಗೂ ದರ್ಶಿಸಲು ಅವಕಾಶ ಮಾಡಿಕೊಟ್ಟಿರುವ ಶ್ರೀ ರಂಗವೇ ಮೊದಲಾದ ದಿವ್ಯಕ್ಷೇತ್ರಗಳು.

ಅದಕ್ಕೆ ಮೂಲಕಾರಣವೇ 4000 ದಿವ್ಯಪ್ರಬಂಧ. ಆಳ್ವಾರರುಗಳ ದಿವ್ಯವಾಣಿಯಾದ 4000 ದಿವ್ಯಪ್ರಬಂಧವು ಮೂಲವಾಗಿ ತಮಿಳುಭಾಷೆಯಲ್ಲಿದೆ. ಆದ್ದರಿಂದ ಇದನ್ನು ತಮಿಳುನಾಡಿನಲ್ಲಿ ಶ್ರೀ ವೈಷ್ಣವರು ಅತಿಸುಲಭವಾಗಿ ಅರಿತು. ಅರ್ಥಮಾಡಿಕೊಂಡು ಅನುಭವಿಸುತ್ತಾರೆ. ನಮ್ಮ ಕರ್ನಾಟಕದಲ್ಲಿರುವ ಶ್ರೀ ವೈಷ್ಣವರಲ್ಲಿ ಕೆಲವೇ ಜನರಿಗೆ ಮಾತ್ರ ತಮಿಳು ಓದಲು ಬರೆಯಲು ಮತ್ತು ಕೆಲವು ಪಾರಿಭಾಷಿಕ ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದನ್ನು ಅರಿತ ಶ್ರೀಯುತ ಗರಣಿ ಶ್ರೀನಿವಾಸನ್ ಅವರು ಈ ನಾಲಾಯಿರ ದಿವ್ಯಪ್ರಬಂಧಕ್ಕೆ ಕನ್ನಡದಲ್ಲಿ ಪ್ರತಿಪದಾರ್ಥವನ್ನೂ, ಅದೇ ಕನ್ನಡದಲ್ಲಿಯೇ ಸರಳವಾದ ಸಾರಾಂಶವನ್ನೂ ಸುಮಾರು 40 ವರ್ಷಗಳ ಹಿಂದೆಯೇ ಶ್ರಮಪಟ್ಟು ಬರೆದಿದ್ದಾರೆ. ಆದರೆ ಕಾರಣಾಂತರಗಳಿಂದ ಇದು ಮುದ್ರಿತವಾಗಲಿಲ್ಲ.

ದೇವಾಲಯಗಳಲ್ಲಿ 4000 ದಿವ್ಯಪ್ರಬಂಧ ಪಾರಾಯಣ ಮಾಡುವವರು ಹಲವು ಮಂದಿ ಇದ್ದರೂ ಅದನ್ನು ಅಧ್ಯಯನ ಮಾಡಿ, ಅರ್ಥ ತಿಳಿದುಕೊಂಡು ಪಾರಾಯಣ ಮಾಡಿ ದೇವರನ್ನು ಅನುಭವಿಸುವವರು ಬಹಳ ಕಡಿಮೆ. ಕೇವಲ ಪಾಶುರಗಳನ್ನು ಕಲಿತು ಅಭ್ಯಾಸಮಾಡಿ, ಕಂಠಸ್ಥಮಾಡಿ ಗೋಷ್ಠಿಯಲ್ಲಿ ಪಾರಾಯಣ ರೂಪದಲ್ಲಿ ಮೂಲವನ್ನು ಅನುಸಂಧಾನ ಮಾಡುವುದೇ ವಾಡಿಕೆ. ಆದರೆ ಅದಕ್ಕೆ ಅರ್ಥವನ್ನೂ, ಆಯಾ ಪಾಶುರಗಳ ಸಾರಾಂಶವನ್ನೂ ತಿಳಿದುಕೊಂಡು ಸಾರಾಯಣ ಮಾಡುವವರು ಬಹಳ ಕಡಿಮೆ. ಅರ್ಥಮಾಡಿಕೊಂಡು ಪಾರಾಯಣ ಮಾಡಿದರೆ ಅದರ ಅನುಭವವೇ ಬೇರೆ, ಆನಂದವೇ ಬೇರೆ. ಆದ್ದರಿಂದ ಅದನ್ನು ಹೇಗಾದರೂ ಮಾಡಿ ಕರ್ನಾಟಕದ ಕನ್ನಡಿಗರಿಗೆ ಕೈಗನ್ನಡಿಯಂತೆ ನೀಡಬೇಕೆನ್ನುವುದು ಶ್ರೀಯುತ ಗರಣಿ ಶ್ರೀನಿವಾಸನ್ ಅವರ ಸುಪುತ್ರರಾದ ಶ್ರೀಮಾನ್ ಗರಣಿ ರಾಧಾಕೃಷ್ಣನ್ ಅವರ ಮಹದಭಿಲಾಷೆ ಮತ್ತು ಕಾತುರ,

ಈ ಕೃತಿಯಲ್ಲಿ ಇನ್ನೊಂದು ವಿಶೇಷವೇನೆಂದರೆ, ತಮಿಳು ಕಲಿಯಲು ಒಂದು ದಾರಿಯನ್ನು ಇದರಲ್ಲಿ ತೋರಿಸಿಕೊಟ್ಟಿರುವುದು. ನಮ್ಮ ಕನ್ನಡಿಗರು ತಮಿಳನ್ನು ಹೇಗೆ ಕಲಿಯಬೇಕು, ಕೆಲವು ಸ್ಥಳಗಳಲ್ಲಿ ಕನ್ನಡಲಿಪಿಯಲ್ಲಿ ಬರೆದರೂ ಅದರ ಉಚ್ಚಾರಣೆ ಹೇಗೆ ಎಂಬುದನ್ನು ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ. ಸ್ವಲ್ಪ ಪ್ರಯತ್ನ ಮಾಡಿದರೆ ತಮಿಳನ್ನು ಸುಲಭವಾಗಿಯೇ ಕಲಿಯಬಹುದು ಮತ್ತು ತಮಿಳು ಅಕ್ಷರಗಳನ್ನೂ ಕಲಿಯಬಹುದು. ಅಕ್ಷರಗಳು ಬಂದರೆ ಪದಗಳು ಬಂದಂತೆಯೇ, ಪದಗಳು ಬಂದ ಮೇಲೆ ವಾಕ್ಯ. ಇನ್ನೇನಿದೆ ಇದರ ಸುಲಭಸೋಪಾನ ಈ ಗ್ರಂಥದಲ್ಲಿದೆ.

ಶ್ರೀಯುತ ಗರಣಿ ರಾಧಾಕೃಷ್ಣನ್‌ರವರು ಈ ಕೃತಿಯಲ್ಲಿರುವ ತಮಿಳು ಪದಗಳನ್ನು ತಮಿಳು ಲಿಪಿಯಲ್ಲಿಯೂ ಮುದ್ರಿತವಾಗಬೇಕೆಂಬ ಮಹದಾಸೆಯಿಂದ ನನ್ನನ್ನು ಸಂಪರ್ಕಿಸಿದರು. ನಾನೂ ಕೂಡ ಅವರ ಆಸೆಯನ್ನು ಮತ್ತು ಈ ಕೃತಿಯ ಸದುಪಯೋಗವು ನಮ್ಮ ಕರ್ನಾಟಕದ ಶ್ರೀವೈಷ್ಣವರಿಗೂ ಲಭ್ಯವಾಗಬೇಕೆಂಬ ಬಯಕೆಯಿಂದ ಈ ಕೈಂಕರ್ಯದಲ್ಲಿ ಭಾಗಿಯಾಗಿದ್ದೇನೆ.

ಈ ಪ್ರಯತ್ನವು ಸಫಲವಾಗುವುದರಲ್ಲಿ ಸಂದೇಹವಿಲ್ಲ. ಶ್ರೀ ಗರಣಿ ರಾಧಾಕೃಷ್ಣನ್‌ರವರ ಈ ಸಂಕಲ್ಪವು ಯದುಗಿರಿಯಲ್ಲಿ ನೆಲೆಸಿರುವ ಶ್ರೀ ಯದುಗಿರಿ ನಾಯಿಕಾ ಸಮೇತನಾದ ಶ್ರೀಮನ್ನಾರಾಯಣನು ನಿರ್ವಿಘ್ನವಾಗಿ ನೆರವೇರಿಸಿ, ಕರ್ನಾಟಕದ ಪ್ರತಿಯೊಬ್ಬ ಶ್ರೀವೈಷ್ಣವರ ಕೈ ತಲುಪಿದರೆ ಈ ಮಹತ್ಕಾರ್ಯವು ಸಾರ್ಥಕವಾಗುತ್ತದೆಂದು ನನ್ನ ಭಾವನೆ. ಅವರ ಸತ್ಸಂಕಲ್ಪವು ನೆರವೇರಲಿ ಎಂದು ಪ್ರಾರ್ಥಿಸುತ್ತೇನೆ.

ಸಮಸ್ತ ಸನ್ಮಂಗಳಾನಿಭವನ್ತು
ಎಸ್‌. ಕೇಶವಭಟ್ಟ‌ ತಿರುನಾರಾಯಣಪುರಮ್ (ಮೇಲುಕೋಟೆ)
15-4-2023