ಕೃಷ್ಣದಾಸ-ವಾಕ್

ಯತ್-ಕೀರ್ತನಂ ಯತ್ಸ್ಮರಣಂ ಯದ್-ಈಕ್ಷಣಂ
ಯದ್ವಂದನಂ ಯಚ್ಛ್ರವಣಂ ಯದ್-ಅರ್ಹಣಮ್ |
ಲೋಕಸ್ಯ ಸದ್ಯೋ ವಿಧುನೋತಿ ಕಲ್ಮಷಂ
ತಸ್ಮೈ ಸುಭದ್ರಶ್ರವಸೇ ನಮೋ ನಮಃ ||
ಶ್ರೀಮದ್ಭಾಗವತ 2-4-15

ಜ್ಞಾನಿಗಳು ಯಾರ ದಿವ್ಯ ಚರಣಕಮಲಗಳಲ್ಲಿ ಶರಣಾಗತರಾಗಿ ತಮ್ಮ ಹೃದಯದಿಂದ ಇಹಲೋಕ- ಪರಲೋಕಗಳ ಆಸಕ್ತಿಯನ್ನು ಕಿತ್ತೊಗೆಯುವರೋ, ಯಾವುದೇ ಪರಿಶ್ರಮವಿಲ್ಲದೆ ಪರಮಪದವನ್ನು ಪಡೆದುಕೊಳ್ಳುವರೋ, ಆ ಮಂಗಳಕೀರ್ತಿಯಾದ ಭಗವಾನ್ ಶ್ರೀಕೃಷ್ಣನಿಗೆ ಅನೇಕ ಬಾರಿ ನಮಸ್ಕಾರಗಳು.

ಶ್ರೀಮದ್ಭಾಗವತದಲ್ಲಿ ಶ್ರೀ ಶುಕಾಚಾರ್ಯರು ಕಲಿಯುಗದಲ್ಲಿ ಶ್ರೀಮನ್ನಾರಾಯಣನನ್ನು ಆರಾಧಿಸುವ ಭಗವತ್ ಭಕ್ತರುಗಳು ತಮಿಳುನಾಡಿನ ತಾಮ್ರಪರ್ಣಿ, ಕೃತಮಾಲಾ, ಪಾಲಾರ್, ಕಾವೇರಿ ಮುಂತಾದ ಪವಿತ್ರನದಿಗಳ ತೀರದಲ್ಲಿ ಅವತರಿಸುತ್ತಾರೆ ಎಂದು ಹೇಳಿದ್ದಾರೆ. ಆಳ್ವಾರರುಗಳು ಎಲ್ಲ ಕಡೆ ವಿರಾಜಮಾನನಾಗಿರುವ ಶ್ರೀಮನ್ನಾರಾಯಣನನ್ನು ಕುರಿತು ನಾಲ್ಕು ಸಾವಿರ ದಿವ್ಯಪ್ರಬಂಧಗಳಲ್ಲಿ ಕೊಂಡಾಡಿದ್ದಾರೆ. ಕಿ|ಶೇ| ಶ್ರೀ ಗರಣಿ ಶ್ರೀನಿವಾಸನ್ ಅವರು ಆಳ್ವಾರುಗಳ ದಿವ್ಯಪ್ರಬಂಧವನ್ನು ಕನ್ನಡಕ್ಕೆ ಅನುವಾದಿಸಿದ್ದ ಹಸ್ತಪ್ರತಿಯನ್ನು ನನ್ನ ಪರಮಪೂಜ್ಯ ಆಚಾರರಾದ ಕೆ.ಎಸ್‌. ನಾರಾಯಣಾಚಾರರಿಗೆ ತೋರಿಸಿ ಅವರ ಆಶೀರ್ವಾದವನ್ನು (ಇದನ್ನು ಮುದ್ರಿಸಲು) ಅಪೇಕ್ಷಿಸಿದಾಗ, ಅವರು ಸಂತೋಷದಿಂದ ಆದಷ್ಟು ಶೀಘ್ರವಾಗಿ ಎಲ್ಲ ಶ್ರೀವೈಷ್ಣವರಿಗೆ ತಲುಪಲೆಂದು ಆಶೀರ್ವದಿಸಿದರು.

ಶ್ರೀ ಗರಣಿ ಶ್ರೀನಿವಾಸನ್ ಅವರ ಪುತ್ರ ಶ್ರೀ ಗರಣಿ ರಾಧಾಕೃಷ್ಣನ್ ಅವರು ಸಂತೋಷದಿಂದ ಪುಸ್ತಕವನ್ನು ಮುದ್ರಿಸಲು ಅನುಮತಿ ನೀಡಿದರು. ನಂತರ ನನ್ನ ಮಿತ್ರರಾದ ಶ್ರೀ ಶಾಮಣ್ಣನವರು ನನ್ನ ಪುತ್ರ ಮಧುಸೂದನ್ ಬಳಿ ಇದರ ಡಿ.ಟಿ.ಪಿಯನ್ನು ಪ್ರಾರಂಭಿಸಿದರು. ಆದರೆ ದೈವವಶಾತ್ ನನ್ನ ಪುತ್ರ ಪರಮಪದವಾಸಿಯಾದ ಕಾರಣ ಈ ಕಾರ್ಯವು ಸ್ಥಗಿತವಾಗಿತ್ತು. ಪ್ರಸ್ತುತ ಮೇಲುಕೋಟೆಯ ಶ್ರೀ ಕೇಶವಭಟ್ಟರ್ ಅವರನ್ನು ಪ್ರಾರ್ಥಿಸಲಾಗಿ ಡಿ.ಟಿ.ಪಿ ಕಾರ್ಯವನ್ನು ಅತ್ಯಂತ ಸಂತೋಷದಿಂದ ಶ್ರದ್ಧಾಭಕ್ತಿಗಳಿಂದ ಮುಂದುವರಿಸಿದರು. ಇದರ ಕರಡು ತಿದ್ದುಪಡಿಗಳನ್ನು ನಮ್ಮ ಆಚಾರರ ಪುತ್ರಿ ಶ್ರೀಮತಿ ನಿರ್ಮಲಶರ್ಮ ಅವರು ಹಾಗೂ ಮೈಸೂರಿನ ಶ್ರೀಮತಿ ಜಾನಕಿ ಶೇಷಾದ್ರಿ ಅವರುಗಳು ತುಂಬಾ ಶ್ರದ್ಧಾಭಕ್ತಿಗಳಿಂದ ಮಾಡಿಕೊಟ್ಟಿದ್ದಾರೆ.

ಭಾಗವತರುಗಳ ಅಪೇಕ್ಷೆ ಗುರುಪರಂಪರೆ ಆಶೀರ್ವಾದಗಳೊಡನೆ ಈ ಗ್ರಂಥಮಾಲೆಯು ಬೆಳಕು ಕಾಣುತ್ತಿದ್ದು ಭಗವಂತನ ಪಾದಾರವಿಂದಗಳಿಗೆ ಅರ್ಪಣೆಯಾಗುತ್ತಿರುವುದು ಆನಂದವನ್ನುಂಟುಮಾಡಿದೆ.

7-6-2023
ಇಂತು ಸಜ್ಜನ ವಿಧೇಯ
ಶ್ರೀಕೃಷ್ಣದಾಸ ಗೋಪಿನಾಥ್