[ಅರವತ್ತೇರಡನೇಯ ಅಧ್ಯಾಯ]
ಭಾಗಸೂಚನಾ
ಉಷಾ - ಅನಿರುದ್ಧರ ಮಿಲನ
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಬಾಣಸ್ಯ ತನಯಾಮೂಷಾಮುಪಯೇಮೇ ಯದೂತ್ತಮಃ ।
ತತ್ರ ಯುದ್ಧಮಭೂದ್ಘೋರಂ ಹರಿಶಂಕರಯೋರ್ಮಹತ್ ।
ಏತತ್ಸರ್ವಂ ಮಹಾಯೋಗಿನ್ ಸಮಾಖ್ಯಾತುಂ ತ್ವಮರ್ಹಸಿ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಮಹಾಯೋಗಿಗಳಾದ ಶುಕಮಹರ್ಷಿಗಳೇ! ಯದುವಂಶ ಶಿರೋಮಣಿ ಅನಿರುದ್ಧನು ಬಾಣಾಸುರನ ಮಗಳಾದ ಉಷೆಯೊಂದಿಗೆ ವಿವಾಹವಾದನು ಮತ್ತು ಈ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣನಿಗೂ ಹಾಗೂ ಶಂಕರನಿಗೂ ಘೋರವಾದ ಯುದ್ಧವು ನಡೆಯಿತೆಂದು ನಾನು ಕೇಳಿದ್ದೇನೆ. ತಾವು ದಯಮಾಡಿ ಈ ವೃತ್ತಾಂತವನ್ನು ವಿಸ್ತಾರವಾಗಿ ಹೇಳಿರಿ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಬಾಣಃ ಪುತ್ರಶತಜ್ಯೇಷ್ಠೋ ಬಲೇರಾಸೀನ್ಮಹಾತ್ಮನಃ ।
ಯೇನ ವಾಮನರೂಪಾಯ ಹರಯೇದಾಯಿ ಮೇದಿನೀ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತ ಮಹಾರಾಜ! ಮಹಾತ್ಮನಾದ ಬಲಿಯ ಕಥೆಯನ್ನು ನೀನು ಈಗಾಗಲೇ ಕೇಳಿರುವೆ. ಅವನು ವಾಮನರೂಪನಾದ ಭಗವಂತನಿಗೆ ಇಡೀ ಪೃಥಿವಿಯನ್ನೇ ದಾನಮಾಡಿದ್ದನು. ಬಲಿಚಕ್ರವರ್ತಿಗೆ ನೂರು ಮಂದಿ ಮಕ್ಕಳಿದ್ದರು, ಅವರಲ್ಲಿ ಹಿರಿಯವನೇ ಬಾಣಾಸುರ. ॥2॥
(ಶ್ಲೋಕ-3)
ಮೂಲಮ್
ತಸ್ಯೌರಸಃ ಸುತೋ ಬಾಣಃ ಶಿವಭಕ್ತಿರತಃ ಸದಾ ।
ಮಾನ್ಯೋ ವದಾನ್ಯೋ ಧೀಮಾಂಶ್ಚ ಸತ್ಯಸಂಧೋ ದೃಢವ್ರತಃ ॥
ಅನುವಾದ
ದೈತ್ಯರಾಜನಾದ ಬಲಿಯ ಔರಸ ಪುತ್ರನಾದ ಬಾಣಾಸುರನು ಶಿವನಭಕ್ತಿಯಲ್ಲೇ ಸದಾ ಕಾಲ ನಿರತನಾಗಿರುತ್ತಿದ್ದನು. ಅವನು ಸಮಸ್ತರಿಗೂ ಮಾನ್ಯನಾಗಿದ್ದನು; ಉದಾರಿಯಾಗಿದ್ದನು. ಅವನು ಮಹಾಬುದ್ಧಿಶಾಲಿಯೂ, ಸತ್ಯಸಂಧನೂ, ದೃಢವಾದ ವ್ರತಾನುಷ್ಠಾನ ಉಳ್ಳವನೂ ಆಗಿದ್ದನು. ॥3॥
(ಶ್ಲೋಕ-4)
ಮೂಲಮ್
ಶೋಣಿತಾಖ್ಯೇ ಪುರೇ ರಮ್ಯೇ ಸ ರಾಜ್ಯಮಕರೋತ್ಪುರಾ ।
ತಸ್ಯ ಶಂಭೋಃ ಪ್ರಸಾದೇನ ಕಿಂಕರಾ ಇವ ತೇಮರಾಃ ।
ಸಹಸ್ರಬಾಹುರ್ವಾದ್ಯೇನ ತಾಂಡವೇತೋಷಯನ್ಮೃಡಮ್ ॥
ಅನುವಾದ
ಆ ದಿನಗಳಲ್ಲಿ ಬಾಣಾಸುರನು ಪರಮರಮಣೀಯವಾದ ಶೋಣಿತಪುರದಲ್ಲಿ ರಾಜ್ಯವಾಳುತ್ತಿದ್ದನು. ಭಗವಾನ್ ಶಂಕರನ ವರಪ್ರಸಾದದಿಂದ ಇಂದ್ರಾದಿ ದೇವತೆಗಳು ಸೇವಕರಂತೆ ಅವನ ಸೇವೆ ಮಾಡುತ್ತಿದ್ದರು. ಅವನಿಗೆ ಸಾವಿರ ತೋಳುಗಳಿದ್ದವು. ಒಂದುದಿನ ಭಗವಾನ್ ಶಂಕರನು ತಾಂಡವನೃತ್ಯವನ್ನಾಡುತ್ತಿದ್ದಾಗ ಅವನು ತನ್ನ ಸಾವಿರ ಕೈಗಳಿಂದ ಅನೇಕ ವಿಧವಾದ ವಾದ್ಯಗಳನ್ನು ನುಡಿಸಿ ಮೃಡನನ್ನು ಪ್ರಸನ್ನಗೊಳಿಸಿದನು. ॥4॥
(ಶ್ಲೋಕ-5)
ಮೂಲಮ್
ಭಗವಾನ್ ಸರ್ವಭೂತೇಶಃ ಶರಣ್ಯೋ ಭಕ್ತವತ್ಸಲಃ ।
ವರೇಣಚ್ಛಂದಯಾಮಾಸ ಸ ತಂ ವವ್ರೇ ಪುರಾಧಿಪಮ್ ॥
ಅನುವಾದ
ಭಗವಂತನಾದ ಶಂಕರನು ನಿಜವಾಗಿಯೂ ಭಕ್ತವತ್ಸಲನೂ, ಶರಣಾಗತ ರಕ್ಷಕನೂ ಆಗಿದ್ದಾನೆ. ಸಮಸ್ತ ಪ್ರಾಣಿಗಳ ಏಕಮಾತ್ರ ಈಶನಾದ ಪ್ರಭುವು ಬಾಣಾಸುರನಲ್ಲಿ ಹೇಳಿದನು - ‘ನಿನಗೆ ಇಚ್ಛಿತವಾದ ವರವನ್ನು ಬೇಡು’. ಆಗ ಬಾಣಾಸುರನು - ‘ಭಗವಂತಾ! ನೀನು ನನ್ನ ನಗರವನ್ನು ರಕ್ಷಿಸುತ್ತಾ ಇಲ್ಲೆ ಇರಬೇಕೆಂಬುದು ನನ್ನ ಆಸೆ’ ಎಂದು ಪ್ರಾರ್ಥಿಸಿಕೊಂಡನು. ॥5॥
(ಶ್ಲೋಕ-6)
ಮೂಲಮ್
ಸ ಏಕದಾಹ ಗಿರಿಶಂ ಪಾರ್ಶ್ವಸ್ಥಂ ವೀರ್ಯದುರ್ಮದಃ ।
ಕಿರೀಟೇನಾರ್ಕವರ್ಣೇನ ಸಂಸ್ಪೃಶಂಸ್ತತ್ಪದಾಂಬುಜಮ್ ॥
ಅನುವಾದ
ಒಂದುದಿನ ಬಲ-ಪರಾಕ್ರಮದಿಂದ ಕೊಬ್ಬಿಹೋದ ಬಾಣಾಸುರನು ಪಕ್ಕದಲ್ಲಿಯೇ ಇದ್ದ ಪರಮೇಶ್ವರನ ಪಾದ ಕಮಲಗಳನ್ನು ಸೂರ್ಯನಂತೆ ಹೊಳೆಯುತ್ತಿರುವ ಕಿರೀಟದಿಂದ ಸ್ಪರ್ಶಿಸಿ ನಮಸ್ಕಾರಗೈದು ಹೀಗೆ ಹೇಳಿದನು. ॥6॥
(ಶ್ಲೋಕ-7)
ಮೂಲಮ್
ನಮಸ್ಯೇ ತ್ವಾಂ ಮಹಾದೇವ ಲೋಕಾನಾಂ ಗುರುಮೀಶ್ವರಮ್ ।
ಪುಂಸಾಮಪೂರ್ಣಕಾಮಾನಾಂ ಕಾಮಪೂರಾಮರಾಂಘ್ರಿಪಮ್ ॥
ಅನುವಾದ
ದೇವಾಧಿದೇವಾ! ನೀನು ಸಮಸ್ತ ಚರಾಚರ ಜಗತ್ತಿಗೆ ಗುರುವೂ, ಸ್ವಾಮಿಯೂ ಆಗಿರುವೆ. ನಾನು ನಿನಗೆ ನಮಸ್ಕರಿಸುತ್ತೇನೆ. ಯಾರ ಮನೋರಥಗಳು ಇದುವರೆಗೆ ಪೂರ್ಣಗೊಂಡಿಲ್ಲವೋ ಅಂತಹವರ ಮನೋರಥಗಳನ್ನು ಈಡೇರಿಸಿಕೊಡುವುದರಲ್ಲಿ ನೀನು ಕಲ್ಪವೃಕ್ಷದಂತೆ ಇರುವೆ. ॥7॥
(ಶ್ಲೋಕ-8)
ಮೂಲಮ್
ದೋಸ್ಸಹಸ್ರಂ ತ್ವಯಾ ದತ್ತಂ ಪರಂ ಭಾರಾಯ ಮೇಭವತ್ ।
ತ್ರಿಲೋಕ್ಯಾಂ ಪ್ರತಿಯೋದ್ಧಾರಂ ನ ಲಭೇ ತ್ವದೃತೇ ಸಮಮ್ ॥
ಅನುವಾದ
ಭಗವಂತಾ! ನೀನು ನನಗೆ ಸಾವಿರ ಬಾಹುಗಳನ್ನು ಕರುಣಿಸಿರುವೆ. ಆದರೆ ಅವು ನನಗೆ ಭಾರವೇ ಆಗುತ್ತಿವೆ. ಏಕೆಂದರೆ, ಮೂರು ಲೋಕಗಳಲ್ಲಿ ನಿನ್ನನ್ನು ಬಿಟ್ಟು ನನಗೆ ಸರಿಸಮಾನವಾಗಿ ನನ್ನೊಡನೆ ಯುದ್ಧಮಾಡುವಂತಹ ಯಾವ ಯೋಧನೂ ನನಗೆ ಸಿಕ್ಕಿಲ್ಲ. ॥8॥
(ಶ್ಲೋಕ-9)
ಮೂಲಮ್
ಕಂಡೂತ್ಯಾ ನಿಭೃತೈರ್ದೋರ್ಭಿರ್ಯುಯುತ್ಸುರ್ದಿಗ್ಗಜಾನಹಮ್ ।
ಆದ್ಯಾಯಾಂ ಚೂರ್ಣಯನ್ನದ್ರೀನ್ ಭೀತಾಸ್ತೇಪಿ ಪ್ರದುದ್ರುವುಃ ॥
ಅನುವಾದ
ಆದಿದೇವಾ! ಒಮ್ಮೆ ನನ್ನ ಬಾಹುಗಳಲ್ಲಿ ಯುದ್ಧ ಮಾಡುವ ತೀಟೆಯುಂಟಾಗಿ ಅದನ್ನು ತಡೆಯಲಾರದೆ ದಿಗ್ಗಜರೊಂದಿಗೆ ಯುದ್ಧ ಮಾಡಲು ಹೊರಟೆ. ಆದರೆ ಅವುಗಳು ಭಯದಿಂದ ಓಡಿಹೋದವು. ಆ ಸಮಯದಲ್ಲಿ ನಾನು ಬಾಹುಗಳ ಆಘಾತದಿಂದ ಅನೇಕ ಪರ್ವತಗಳನ್ನು ಪುಡಿ-ಪುಡಿಮಾಡಿದೆನು. ॥9॥
(ಶ್ಲೋಕ-10)
ಮೂಲಮ್
ತಚ್ಛ್ರುತ್ವಾ ಭಗವಾನ್ ಕ್ರುದ್ಧಃ ಕೇತುಸ್ತೇ ಭಜ್ಯತೇ ಯದಾ ।
ತ್ವದ್ದರ್ಪಘ್ನಂ ಭವೇನ್ಮೂಢ ಸಂಯುಗಂ ಮತ್ಸಮೇನ ತೇ ॥
ಅನುವಾದ
ಬಾಣಾಸುರನ ಈ ಪ್ರಾರ್ಥನೆಯನ್ನು ಕೇಳಿ ಶಿವನು ಸ್ವಲ್ಪ ಬೇಸರದಿಂದಲೇ ಹೇಳಿದನು - ಎಲೈ ಮೂರ್ಖ! ನಿನ್ನ ರಥದ ಧ್ವಜವು ಮುರಿದುಬಿದ್ದಾಗ ನನಗೆ ಸಮಾನನಾದ ಯೋಧನೊಂದಿಗೆ ನಿನ್ನ ಯುದ್ಧ ನಡೆಯುವುದು ಮತ್ತು ಆ ಯುದ್ಧವು ನಿನ್ನ ದರ್ಪವನ್ನು ನುಚ್ಚು ನೂರಾಗಿಸುವುದು. ॥10॥
(ಶ್ಲೋಕ-11)
ಮೂಲಮ್
ಇತ್ಯುಕ್ತಃ ಕುಮತಿರ್ಹೃಷ್ಟಃ ಸ್ವಗೃಹಂ ಪ್ರಾವಿಶನ್ನೃಪ ।
ಪ್ರತೀಕ್ಷನ್ ಗಿರಿಶಾದೇಶಂ ಸ್ವವೀರ್ಯನಶನಂ ಕುಧೀಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶಂಕರನ ಮಾತುಕೇಳಿ ಬುದ್ಧಿಕೆಟ್ಟು ಹೋಗಿದ್ದ ಅವನಿಗೆ ಹರ್ಷವುಂಟಾಗಿ ಮನೆಗೆ ಮರಳಿದನು. ಈಗ ಆ ಮೂರ್ಖನು ಪರಶಿವನ ಆದೇಶದಂತೆ ಅವನ ಬಲ-ಪರಾಕ್ರಮಗಳ ನಾಶವಾಗುವಂತಹ ಯುದ್ಧವನ್ನು ಇದಿರುನೋಡುತ್ತಿದ್ದನು.॥11॥
(ಶ್ಲೋಕ-12)
ಮೂಲಮ್
ತಸ್ಯೋಷಾ ನಾಮ ದುಹಿತಾ ಸ್ವಪ್ನೇ ಪ್ರಾದ್ಯುಮ್ನಿನಾ ರತಿಮ್ ।
ಕನ್ಯಾಲಭತ ಕಾಂತೇನ ಪ್ರಾಗದೃಷ್ಟಶ್ರುತೇನ ಸಾ ॥
ಅನುವಾದ
ಪರೀಕ್ಷಿತ ಮಹಾರಾಜ! ಬಾಣಸುರನಿಗೆ ಉಷಾ ಎಂಬ ಕನ್ಯೆಯೋರ್ವಳಿದ್ದಳು. ಅವಳು ಇನ್ನೂ ಕುಮಾರಿಯೇ ಆಗಿದ್ದಾಗ ಒಂದುದಿನ ಸ್ವಪ್ನದಲ್ಲಿ ಪರಮ ಸುಂದರ ಅನಿರುದ್ಧನೊಡನೆ ಅವಳ ಸಮಾಗಮವಾದಂತೆ ಕಂಡಳು. ಅಚ್ಚರಿಯ ವಿಷಯವೆಂದರೆ, ಅವಳು ಅದುವರೆಗೂ ಅನಿರುದ್ಧನನ್ನು ನೋಡಿರಲಿಲ್ಲ; ಅವನ ಹೆಸರೂ ಕೇಳಿರಲಿಲ್ಲ. ॥12॥
(ಶ್ಲೋಕ-13)
ಮೂಲಮ್
ಸಾ ತತ್ರ ತಮಪಶ್ಯಂತೀ ಕ್ವಾಸಿ ಕಾಂತೇತಿ ವಾದಿನೀ ।
ಸಖೀನಾಂ ಮಧ್ಯ ಉತ್ತಸ್ಥೌ ವಿಹ್ವಲಾ ವ್ರೀಡಿತಾ ಭೃಶಮ್ ॥
ಅನುವಾದ
ಸ್ವಪ್ನದಲ್ಲಿ ಅನಿರುದ್ಧನನ್ನು ಕಂಡು ಬಳಿಕ ಕಾಣದಿರುವಾಗ ‘ಪ್ರಾಣಪ್ರಿಯನೇ! ನೀನು ಎಲ್ಲಿರುವೇ?’ ಎಂದೆನ್ನುತ್ತಾ ಥಟ್ಟನೆ ಎದ್ದು ಕುಳಿತಳು. ತಾನು ಸಖಿಯರ ಮಧ್ಯದಲ್ಲಿರುವುದನ್ನು ತಿಳಿದು ಆಕೆಯು ಬಹಳವಾಗಿ ನಾಚಿಕೊಂಡಳು. ॥13॥
(ಶ್ಲೋಕ-14)
ಮೂಲಮ್
ಬಾಣಸ್ಯ ಮಂತ್ರೀ ಕುಂಭಾಂಡಶ್ಚಿತ್ರಲೇಖಾ ಚ ತತ್ಸುತಾ ।
ಸಖ್ಯಪೃಚ್ಛತ್ಸಖೀಮೂಷಾಂ ಕೌತೂಹಲಸಮನ್ವಿತಾ ॥
ಅನುವಾದ
ಪರೀಕ್ಷಿತನೇ! ಬಾಣಾಸುರನಿಗೆ ಕುಂಭಾಂಡನೆಂಬ ಮಂತ್ರಿಯಿದ್ದನು. ಅವನಿಗೆ ಚಿತ್ರಲೇಖಾ ಎಂಬ ಕನ್ಯೆಯೊಬ್ಬಳಿದ್ದಳು. ಉಷಾ ಮತ್ತು ಚಿತ್ರಲೇಖೆಯು ಪರಸ್ಪರ ಸಖಿಯರಾಗಿದ್ದರು. ಚಿತ್ರಲೇಖೆಯು ಕುತೂಹಲದಿಂದ ಉಷೆಯ ಬಳಿ ಕೇಳಿದಳು. ॥14॥
(ಶ್ಲೋಕ-15)
ಮೂಲಮ್
ಕಂ ತ್ವಂ ಮೃಗಯಸೇ ಸುಭ್ರೂಃ ಕೀದೃಶಸ್ತೇ ಮನೋರಥಃ ।
ಹಸ್ತಗ್ರಾಹಂ ನ ತೇದ್ಯಾಪಿ ರಾಜಪುತ್ರ್ಯುಪಲಕ್ಷಯೇ ॥
ಅನುವಾದ
ಸುಂದರಿಯೇ! ರಾಜಕುಮಾರಿಯೇ! ಇದುವರೆಗೂ ಯಾರೂ ನಿನ್ನ ಪಾಣಿಗ್ರಹಣವನ್ನೇ ಮಾಡಲಿಲ್ಲ. ನೀನು ಯಾರನ್ನು ಹುಡುಕುತ್ತಿರುವೆ? ನಿನ್ನ ಮನೋರಥವೇನು? ಎಲ್ಲವನ್ನೂ ಮರೆಮಾಚದೆ ನನಗೆ ಹೇಳು. ॥15॥
(ಶ್ಲೋಕ-16)
ಮೂಲಮ್ (ವಾಚನಮ್)
ಉಷೋವಾಚ
ಮೂಲಮ್
ದೃಷ್ಟಃ ಕಶ್ಚಿನ್ನರಃ ಸ್ವಪ್ನೇ ಶ್ಯಾಮಃ ಕಮಲಲೋಚನಃ ।
ಪೀತವಾಸಾ ಬೃಹದ್ಬಾಹುರ್ಯೋಷಿತಾಂ ಹೃದಯಂಗಮಃ ॥
ಅನುವಾದ
ಉಷೆಯು ಹೇಳಿದಳು — ಚಿತ್ರಲೇಖೆ! ನಾನು ಸ್ವಪ್ನದಲ್ಲಿ ಒಬ್ಬ ಅತೀವ ಸುಂದರನಾದ ಪುರುಷನನ್ನು ಕಂಡೆನು. ಅವನು ಶ್ಯಾಮಲವರ್ಣದವನಾಗಿದ್ದು, ಕಮಲಾಕ್ಷನಾಗಿದ್ದನು. ಪೀತಾಂಬರವನ್ನು ಉಟ್ಟಿದ್ದನು. ಆಜಾನುಬಾಹುವಾಗಿದ್ದನು. ಸ್ತ್ರೀಯರ ಮನಸ್ಸನ್ನು ಅಪಹರಿಸುವಷ್ಟು ಚೆಲುವನಾಗಿದ್ದನು. ॥16॥
(ಶ್ಲೋಕ-17)
ಮೂಲಮ್
ತಮಹಂ ಮೃಗಯೇ ಕಾಂತಂ ಪಾಯಯಿತ್ವಾಧರಂ ಮಧು ।
ಕ್ವಾಪಿ ಯಾತಃ ಸ್ಪೃಹಯತೀಂ ಕ್ಷಿಪ್ತ್ವಾ ಮಾಂ ವೃಜಿನಾರ್ಣವೇ ॥
ಅನುವಾದ
ಅವನು ಮೊದಲಿಗೆ ಅಧರಗಳ ಮಧುವನ್ನು ನನಗೆ ಕುಡಿಸಿದನು. ನಾನೂ ಅವನ ಅಧರಗಳ ಮಧುವನ್ನು ಕುಡಿಯಬೇಕೆನ್ನುವಷ್ಟರಲ್ಲಿ ನನ್ನನ್ನು ದುಃಖಸಾಗರದಲ್ಲಿ ಮುಳುಗಿಸಿ ಮಾಯವಾಗಿಬಿಟ್ಟನು. ಆ ನನ್ನ ಪ್ರಾಣವಲ್ಲಭನನ್ನು ಆಗಿನಿಂದಲೂ ಹುಡುಕುತ್ತಿದ್ದೇನೆ. ॥17॥
(ಶ್ಲೋಕ-18)
ಮೂಲಮ್ (ವಾಚನಮ್)
ಚಿತ್ರಲೇಖೋವಾಚ
ಮೂಲಮ್
ವ್ಯಸನಂ ತೇಪಕರ್ಷಾಮಿ ತ್ರಿಲೋಕ್ಯಾಂ ಯದಿ ಭಾವ್ಯತೇ ।
ತಮಾನೇಷ್ಯೇ ನರಂ ಯಸ್ತೇ ಮನೋಹರ್ತಾ ತಮಾದಿಶ ॥
ಅನುವಾದ
ಚಿತ್ರಲೇಖೆಯು ಹೇಳಿದಳು — ಸಖಿಯೇ! ನಿನ್ನ ಚಿತ್ತವನ್ನು ಅಪಹರಿಸಿದವನು ಮೂರುಲೋಕಗಳಲ್ಲಿ ಎಲ್ಲೇ ಇದ್ದರೂ, ನೀನು ಗುರುತಿಸುವೆಯಾದರೆ ನಾನು ನಿನ್ನ ವಿರಹವ್ಯಥೆಯನ್ನು ಕಳೆಯ ಬಲ್ಲೆನು. ನಾನು ಚಿತ್ರಗಳನ್ನು ಬರೆಯುತ್ತಾ ಹೋಗುತ್ತೇನೆ. ನೀನು ನಿನ್ನ ಇನಿಯನನ್ನು ಗುರುತಿಸಬೇಕು. ಮತ್ತೆ ಅವನು ಎಲ್ಲೇ ಇದ್ದರೂ ನಾನು ಅವನನ್ನು ನಿನ್ನ ಬಳಿಗೆ ಕರೆತರುವೆನು. ॥18॥
(ಶ್ಲೋಕ-19)
ಮೂಲಮ್
ಇತ್ಯುಕ್ತ್ವಾ ದೇವಗಂಧರ್ವಸಿದ್ಧಚಾರಣಪನ್ನಗಾನ್ ।
ದೈತ್ಯವಿದ್ಯಾಧರಾನ್ ಯಕ್ಷಾನ್ ಮನುಜಾಂಶ್ಚ ಯಥಾಲಿಖತ್ ॥
ಅನುವಾದ
ಹೀಗೆ ಹೇಳಿ ಚಿತ್ರಲೇಖೆಯು ಮಾತು-ಮಾತಿನಲ್ಲೇ ಬಹಳಷ್ಟು ದೇವತೆಗಳ, ಗಂಧರ್ವರ, ಸಿದ್ಧರ, ಚಾರಣರ, ಪನ್ನಗರ, ದೈತ್ಯರ, ವಿದ್ಯಾಧರರ, ಯಕ್ಷರ ಮತ್ತು ಮನುಷ್ಯರ ಚಿತ್ರಗಳನ್ನು ಬರೆದು ತೋರಿಸಿದಳು. ॥19॥
(ಶ್ಲೋಕ-20)
ಮೂಲಮ್
ಮನುಜೇಷು ಚ ಸಾ ವೃಷ್ಣೀನ್ ಶೂರಮಾನಕದುಂದುಭಿಮ್ ।
ವ್ಯಲಿಖದ್ರಾಮಕೃಷ್ಣೌ ಚ ಪ್ರದ್ಯುಮ್ನಂ ವೀಕ್ಷ್ಯ ಲಜ್ಜಿತಾ ॥
ಅನುವಾದ
ಮನುಷ್ಯರಲ್ಲಿ ಆಕೆಯು ವೃಷ್ಣಿವಂಶದ ಶೂರಸೇನ, ವಸುದೇವ, ಬಲರಾಮ ಮತ್ತು ಭಗವಾನ್ ಶ್ರೀಕೃಷ್ಣ ಇವರ ಚಿತ್ರಗಳನ್ನು ರಚಿಸಿದಳು. ಪ್ರದ್ಯುಮ್ನನ ಚಿತ್ರವನ್ನು ನೋಡುತ್ತಲೇ ಉಷೆಯು ನಾಚಿಕೊಂಡಳು. ॥20॥
(ಶ್ಲೋಕ-21)
ಮೂಲಮ್
ಅನಿರುದ್ಧಂ ವಿಲಿಖಿತಂ ವೀಕ್ಷ್ಯೋಷಾವಾಙ್ಮುಖೀ ಹ್ರಿಯಾ ।
ಸೋಸಾವಸಾವಿತಿ ಪ್ರಾಹ ಸ್ಮಯಮಾನಾ ಮಹೀಪತೇ ॥
ಅನುವಾದ
ಪರೀಕ್ಷಿತನೇ! ಆಕೆಯು ಅನಿರುದ್ಧನ ಚಿತ್ರವನ್ನು ನೋಡುತ್ತಲೇ ಲಜ್ಜೆಯಿಂದ ತಲೆತಗ್ಗಿಸಿದಳು. ತಗ್ಗಿಸಿದ ತಲೆ ಎತ್ತಲೇ ಇಲ್ಲ. ಮತ್ತೆ ಮಂದಹಾಸವನ್ನು ಬೀರುತ್ತಾ ಮೆಲ್ಲನೆ ಹೇಳಿದಳು - ‘ನನ್ನ ಪ್ರಿಯತಮನು ಇವನೇ ಆಗಿದ್ದಾನೆ, ಇವನೇ.’ ॥21॥
(ಶ್ಲೋಕ-22)
ಮೂಲಮ್
ಚಿತ್ರಲೇಖಾ ತಮಾಜ್ಞಾಯ ಪೌತ್ರಂ ಕೃಷ್ಣಸ್ಯ ಯೋಗಿನೀ ।
ಯಯೌ ವಿಹಾಯಸಾ ರಾಜನ್ ದ್ವಾರಕಾಂ ಕೃಷ್ಣಪಾಲಿತಾಮ್ ॥
ಅನುವಾದ
ಪರೀಕ್ಷಿದ್ರಾಜನೇ! ಯೋಗಿನಿಯಾದ ಚಿತ್ರಲೇಖೆಗೆ ಈ ಚಿತ್ರದಲ್ಲಿರುವವನು ಶ್ರೀಕೃಷ್ಣನ ಮೊಮ್ಮಗನೆಂದು ತಿಳಿದು ಹೋಯಿತು. ಆಕೆಯು ರಾತ್ರಿಯಲ್ಲೇ ಆಕಾಶಮಾರ್ಗದಿಂದ ಭಗವಾನ್ ಶ್ರೀಕೃಷ್ಣನಿಂದ ರಕ್ಷಿತವಾದ ದ್ವಾರಕೆಗೆ ಬಂದಳು.॥22॥
(ಶ್ಲೋಕ-23)
ಮೂಲಮ್
ತತ್ರ ಸುಪ್ತಂ ಸುಪರ್ಯಂಕೇ ಪ್ರಾದ್ಯುಮ್ನಿಂ ಯೋಗಮಾಸ್ಥಿತಾ ।
ಗೃಹೀತ್ವಾ ಶೋಣಿತಪುರಂ ಸಖ್ಯೈ ಪ್ರಿಯಮದರ್ಶಯತ್ ॥
ಅನುವಾದ
ಅಲ್ಲಿ ಅನಿರುದ್ಧನು ಅಂತಃಪುರದಲ್ಲಿ ಸುಂದರವಾದ ಮಂಚದಲ್ಲಿ ಪವಡಿಸಿದ್ದನು. ಯೋಗ ಸಿದ್ಧಿಯ ಪ್ರಭಾವದಿಂದ ಚಿತ್ರಲೇಖೆಯು ಅನಿರುದ್ಧನನ್ನು ಎತ್ತಿಕೊಂಡು ಶೋಣಿತಪುರಕ್ಕೆ ತಂದು ತನ್ನ ಗೆಳತಿಯಾದ ಉಷೆಗೆ ಆಕೆಯ ಪ್ರಿಯಕರನ ದರ್ಶನ ಮಾಡಿಸಿದಳು. ॥23॥
(ಶ್ಲೋಕ-24)
ಮೂಲಮ್
ಸಾ ಚ ತಂ ಸುಂದರವರಂ ವಿಲೋಕ್ಯ ಮುದಿತಾನನಾ ।
ದುಷ್ಪ್ರೇಕ್ಷ್ಯೇ ಸ್ವಗೃಹೇ ಪುಂಭೀ ರೇಮೇ ಪ್ರಾದ್ಯುಮ್ನಿನಾ ಸಮಮ್ ॥
ಅನುವಾದ
ತನ್ನ ಪರಮ ಸುಂದರ ಪ್ರಾಣವಲ್ಲಭನನ್ನು ಪಡೆದು ಆನಂದದಿಂದ ಉಷೆಯ ಮುಖವರಳಿತು. ಆಕೆಯು ಅನಿರುದ್ಧನೊಂದಿಗೆ ತನ್ನ ಅಂತಃಪುರದಲ್ಲಿ ವಿಹರಿಸ ತೊಡಗಿದಳು. ಪರೀಕ್ಷಿತನೇ! ಆಕೆಯ ಅಂತಃಪುರವು ಯಾವನೇ ಪುರುಷನು ಇಣಿಕಿನೋಡಲೂ ಕೂಡ ಸಾಧ್ಯವಿಲ್ಲದಷ್ಟು ಸುರಕ್ಷಿತವಾಗಿತ್ತು. ॥24॥
(ಶ್ಲೋಕ-25)
ಮೂಲಮ್
ಪರಾರ್ಧ್ಯವಾಸಃ ಸ್ರಗ್ಗಂಧಧೂಪದೀಪಾಸನಾದಿಭಿಃ ।
ಪಾನಭೋಜನಭಕ್ಷ್ಯೈಶ್ಚ ವಾಕ್ಯೈಃ ಶುಶ್ರೂಷಯಾರ್ಚಿತಃ ॥
(ಶ್ಲೋಕ-26)
ಮೂಲಮ್
ಗೂಢಃ ಕನ್ಯಾಪುರೇ ಶಶ್ವತ್ಪ್ರವೃದ್ಧಸ್ನೇಹಯಾ ತಯಾ ।
ನಾಹರ್ಗಣಾನ್ ಸ ಬುಬುಧೇ ಊಷಯಾಪಹೃತೇಂದ್ರಿಯಃ ॥
ಅನುವಾದ
ಉಷಾ-ಅನಿರುದ್ಧರ ಪರಸ್ಪರ ಪ್ರೀತಿಯು ದಿನ-ದಿನಕ್ಕೂ ವೃದ್ಧಿಹೊಂದುತಿತ್ತು. ಉಷೆಯು ಬಹುಮೂಲ್ಯ ವಸ್ತ್ರಗಳಿಂದಲೂ, ಪುಷ್ಪಹಾರಗಳಿಂದಲೂ, ಗಂಧ-ಧೂಪ-ದೀಪ, ಆಸನಾದಿಗಳಿಂದಲೂ, ಸುಮಧುರ ಪಾನೀಯಗಳಿಂದಲೂ, ಭಕ್ಷ್ಯ-ಭೋಜ್ಯ ಗಳಿಂದಲೂ, ಮೃದು-ಮಧುರ ಮಾತಿನಿಂದಲೂ, ಸೇವಾಶುಶ್ರೂಷೆಗಳಿಂದಲೂ ಅನಿರುದ್ಧ ನನ್ನು ಬಹಳವಾಗಿ ಸತ್ಕರಿಸಿದಳು. ಆಕೆಯು ತನ್ನ ಪ್ರೇಮದಿಂದ ಅನಿರುದ್ಧನ ಮನಸ್ಸನ್ನು ವಶಪಡಿಸಿಕೊಂಡಿದ್ದಳು. ಆಕೆಯ ಅಂತಃಪುರದಲ್ಲಿ ನಿಗೂಢನಾಗಿದ್ದ ಅನಿರುದ್ಧನು ತನ್ನನ್ನೇ ತಾನು ಮರೆತು ಬಿಟ್ಟಿದ್ದನು. ನಾನು ಇಲ್ಲಿಗೆ ಬಂದು ಎಷ್ಟು ದಿನಗಳಾದವು ಎಂಬುದನ್ನು ತಿಳಿಯದೆ ಹೋದನು. ॥25-26॥
(ಶ್ಲೋಕ-27)
ಮೂಲಮ್
ತಾಂ ತಥಾ ಯದುವೀರೇಣ ಭುಜ್ಯಮಾನಾಂ ಹತವ್ರತಾಮ್ ।
ಹೇತುಭಿರ್ಲಕ್ಷಯಾನ್ಚಕ್ರುರಾಪ್ರೀತಾಂ ದುರವಚ್ಛದೈಃ ॥
(ಶ್ಲೋಕ-28)
ಮೂಲಮ್
ಭಟಾ ಆವೇದಯಾನ್ಚಕ್ರೂ ರಾಜಂಸ್ತೇ ದುಹಿತುರ್ವಯಮ್ ।
ವಿಚೇಷ್ಟಿತಂ ಲಕ್ಷಯಾಮಃ ಕನ್ಯಾಯಾಃ ಕುಲದೂಷಣಮ್ ॥
ಅನುವಾದ
ಪರೀಕ್ಷಿತನೇ! ಯದುಕುಮಾರ ಅನಿರುದ್ಧನ ಸಹವಾಸದಿಂದ ಉಷೆಯ ಕನ್ಯತ್ವವು ನಷ್ಟವಾಗಿ ಹೋಗಿತ್ತು. ಆಕೆಯ ಶರೀರದಲ್ಲಿ ಕಾಣುತ್ತಿದ್ದ ಚಿಹ್ನೆಗಳು ಯಾವ ರೀತಿಯಿಂದಲೂ ಅಡಗಿಸಲಾರದಷ್ಟು ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದವು. ಉಷೆಯು ಬಹಳವಾಗಿ ಪ್ರಸನ್ನವಾಗಿ ಇರುತ್ತಿದ್ದಳು. ಇವಳಿಗೆ ಯಾರೋ ಪುರುಷನೊಂದಿಗೆ ಸಂಬಂಧವು ಖಂಡಿತವಾಗಿ ಉಂಟಾಗಿದೆ ಎಂದು ಕಾವಲುಗಾರರು ತಿಳಿದುಕೊಂಡರು. ಅವರು ಬಾಣಾಸುರನ ಬಳಿಗೆ ಹೋಗಿ ನಿವೇದಿಸಿಕೊಂಡರು - ಮಹಾರಾಜರೇ! ಕುಲಕ್ಕೆ ಕಳಂಕ ತರುವಂತಹ ನಿಮ್ಮ ಅವಿವಾಹಿತಳಾದ ರಾಜಕುಮಾರಿಯ ಚೇಷ್ಟೆಗಳನ್ನು ನಾವು ನೋಡಿದೆವು. ॥27-28॥
(ಶ್ಲೋಕ-29)
ಮೂಲಮ್
ಅನಪಾಯಿಭಿರಸ್ಮಾಭಿರ್ಗುಪ್ತಾಯಾಶ್ಚ ಗೃಹೇ ಪ್ರಭೋ ।
ಕನ್ಯಾಯಾ ದೂಷಣಂ ಪುಂಭಿರ್ದುಷ್ಪ್ರೇಕ್ಷಾಯಾ ನ ವಿದ್ಮಹೇ ॥
ಅನುವಾದ
ಪ್ರಭುಗಳೇ! ನಾವು ಕ್ರಮ ತಪ್ಪದೆ ಹಗಲೂ-ರಾತ್ರಿ ಕಾವಲು ಕಾಯುತ್ತಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ನಿಮ್ಮ ಮಗಳನ್ನು ಹೊರಗಿನ ಮನುಷ್ಯರು ನೋಡಲೂ ಕೂಡ ಸಾಧ್ಯವಿಲ್ಲ. ಹೀಗಿದ್ದರೂ ಅವಳು ಕಳಂಕಿತೆ ಹೇಗಾದಳು? ಇದರ ಕಾರಣ ನಮಗೆ ತಿಳಿಯದಾಗಿದೆ. ॥29॥
(ಶ್ಲೋಕ-30)
ಮೂಲಮ್
ತತಃ ಪ್ರವ್ಯಥಿತೋ ಬಾಣೋ ದುಹಿತುಃ ಶ್ರುತದೂಷಣಃ ।
ತ್ವರಿತಃ ಕನ್ಯಕಾಗಾರಂ ಪ್ರಾಪ್ತೋದ್ರಾಕ್ಷೀದ್ಯದೂದ್ವಹಮ್ ॥
ಅನುವಾದ
ಪರೀಕ್ಷಿದ್ರಾಜನೇ! ತನ್ನ ಕನ್ಯೆಯ ಚರಿತ್ರವು ದೂಷಿತವಾಗಿದೆ ಎಂಬ ಸಮಾಚಾರವನ್ನು ಕಾವಲುಗಾರರಿಂದ ತಿಳಿದ ಬಾಣಾಸುರನ ಹೃದಯದಲ್ಲಿ ಅತ್ಯಂತ ಪೀಡೆ ಉಂಟಾಯಿತು. ಅವನು ಲಗುಬಗೆಯಿಂದ ಆಕೆಯ ಅಂತಃಪುರಕ್ಕೆ ಹೋಗಿ ನೋಡಿದರೆ ಅಲ್ಲಿ ಅನಿರುದ್ಧನು ಕುಳಿತಿದ್ದನು.॥30॥
(ಶ್ಲೋಕ-31)
ಮೂಲಮ್
ಕಾಮಾತ್ಮಜಂ ತಂ ಭುವನೈಕಸುಂದರಂ
ಶ್ಯಾಮಂ ಪಿಶಂಗಾಂಬರಮಂಬುಜೇಕ್ಷಣಮ್ ।
ಬೃಹದ್ಭುಜಂ ಕುಂಡಲಕುಂತಲತ್ವಿಷಾ
ಸ್ಮಿತಾವಲೋಕೇನ ಚ ಮಂಡಿತಾನನಮ್ ॥
ಅನುವಾದ
ಪ್ರಿಯ ಪರೀಕ್ಷಿತನೇ! ಅನಿರುದ್ಧನು ಸಾಕ್ಷಾತ್ ಕಾಮದೇವರ ಅವತಾರನಾಗಿದ್ದ ಪ್ರದ್ಯುಮ್ನನ ಪುತ್ರನಾಗಿದ್ದನು. ಮೂರು ಲೋಕಗಳಲ್ಲಿಯೂ ಅವನಂತಹ ಸುಂದರನು ಯಾರೂ ಇರಲಿಲ್ಲ. ಶ್ಯಾಮಲ ಶರೀರದ ಮೇಲೆ ಪೀತಾಂಬರವು ಹೊಳೆಯುತ್ತಿತ್ತು. ಕಮಲದ ಎಸಳಿನಂತಹ ವಿಶಾಲ ಕೋಮಲ ಕಣ್ಣುಗಳು. ಆಜಾನುಬಾಹುಗಳು. ಕಪೋಲಗಳ ಮೇಲೆ ಮುಂಗುರುಳು ಮತ್ತು ಕುಂಡಲಗಳು ಝಗ-ಝಗಿಸುವ ಜ್ಯೋತಿ. ತುಟಿಗಳಲ್ಲಿ ಮಂದವಾದ ಮಂದಹಾಸ. ಕಡೆಗಣ್ಣ ನೋಟದಿಂದ ಅವನ ಮುಖದ ಶೋಭೆಯು ವಿಲಕ್ಷಣವಾಗಿತ್ತು. ॥31॥
(ಶ್ಲೋಕ-32)
ಮೂಲಮ್
ದೀವ್ಯಂತಮಕ್ಷೈಃ ಪ್ರಿಯಯಾಭಿನೃಮ್ಣಯಾ
ತದಂಗಸಂಗಸ್ತನಕುಂಕುಮಸ್ರಜಮ್ ।
ಬಾಹ್ವೋರ್ದಧಾನಂ ಮಧುಮಲ್ಲಿಕಾಶ್ರಿತಾಂ
ತಸ್ಯಾಗ್ರ ಆಸೀನಮವೇಕ್ಷ್ಯ ವಿಸ್ಮಿತಃ ॥
ಅನುವಾದ
ಆಗ ಅನಿರುದ್ಧನು ಸರ್ವಾಲಂಕಾರಗಳಿಂದ ಭೂಷಿತಳಾಗಿ ಕುಳಿತಿರುವ ಪ್ರಿಯತಮೆ ಉಷೆಯೊಂದಿಗೆ ಪಗಡೆಯಾಡುತ್ತಿದ್ದನು. ಆಕೆಯ ಕೊರಳಲ್ಲಿ ಸುಶೋಭಿತವಾದ ಮಲ್ಲಿಗೆಯ ಹೂವಿನ ಹಾರವು ಸ್ತನ ಮಂಡಲದ ಕುಂಕುಮದಿಂದ ಕೆಂಪಾಗಿ ಹೋಗಿತ್ತು. ಹೀಗೆ ಉಷೆಯ ಎದುರಿನಲ್ಲೇ ಕುಳಿತು ಆಟವಾಡುತ್ತಿದ್ದ ಅನಿರುದ್ಧ ನನ್ನು ಕಂಡು ಬಾಣಾಸುರನು ಚಕಿತನಾದನು. ॥32॥
(ಶ್ಲೋಕ-33)
ಮೂಲಮ್
ಸ ತಂ ಪ್ರವಿಷ್ಟಂ ವೃತಮಾತತಾಯಿಭಿ-
ರ್ಭಟೈರನೀಕೈರವಲೋಕ್ಯ ಮಾಧವಃ ।
ಉದ್ಯಮ್ಯ ವೌರ್ವಂ ಪರಿಘಂ ವ್ಯವಸ್ಥಿತೋ
ಯಥಾಂತಕೋ ದಂಡಧರೋ ಜಿಘಾಂಸಯಾ ॥ 33 ॥
ಅನುವಾದ
ತನ್ನನ್ನು ಕೊಲ್ಲುವುದಕ್ಕಾಗಿ ಆಯುಧಪಾಣಿಗಳಾದ ಸಾವಿರಾರು ರಾಜಭಟರೊಡನೆ ಬಾಣಾಸುರನು ಬಂದುದನ್ನು ನೋಡಿದ ಅನಿರುದ್ಧನು. ಒಡನೆಯೇ ಅವರೆಲ್ಲರನ್ನು ಸಂಹರಿಸುವ ಇಚ್ಛೆಯಿಂದ ಲೋಹಮಯವಾದ, ಅತಿ ಭಯಂಕರವಾಗಿದ್ದ ಪರಿಘಾಯುಧವನ್ನು ಹಿಡಿದು ಕಾಲ ದಂಡವನ್ನೆತ್ತಿಕೊಂಡು ಕಾಲಯಮನೇ ನಿಂತಿರುವನೋ ಎಂಬಂತೆ ಯುದ್ಧಸನ್ನದ್ಧವಾಗಿ ನಿಂತನು. ॥33॥
(ಶ್ಲೋಕ-34)
ಮೂಲಮ್
ಜಿಘೃಕ್ಷಯಾ ತಾನ್ಪರಿತಃ ಪ್ರಸರ್ಪತಃ
ಶುನೋ ಯಥಾ ಸೂಕರಯೂಥಪೋಹನತ್ ।
ತೇ ಹನ್ಯಮಾನಾ ಭವನಾದ್ವಿನಿರ್ಗತಾ
ನಿರ್ಭಿನ್ನಮೂರ್ಧೋರುಭುಜಾಃ ಪ್ರದುದ್ರುವುಃ ॥
ಅನುವಾದ
ಬಳಿಕ ನಾಯಿಗಳ ಗುಂಪನ್ನು ಧ್ವಂಸಮಾಡುವ ಕಾಡುಹಂದಿಯಂತೆ ಅನಿರುದ್ಧನು ತನ್ನನ್ನು ಹಿಡಿಯಲು ಮುನ್ನುಗ್ಗಿ ಬರುತ್ತಿದ್ದ ಸೈನಿಕರೆಲ್ಲರನ್ನು ಪರಿಘಾಯುಧದಿಂದ ಧ್ವಂಸಮಾಡಿ ಬಿಟ್ಟನು. ಅನಿರುದ್ಧನ ಪ್ರಹಾರದಿಂದ ಹಲವಾರು ಸೈನಿಕರ ತಲೆಗಳು, ಭುಜಗಳು, ತೊಡೆಗಳು ಮುರಿದು, ಕಳಚಿ ಬೀಳುತ್ತಿದ್ದವು. ಕೆಲವರು ಪ್ರಾಣದ ಆಸೆಯಿಂದ ಅಲ್ಲಿಂದ ಓಡಿ ಹೋದರು. ॥34॥
(ಶ್ಲೋಕ-35)
ಮೂಲಮ್
ತಂ ನಾಗಪಾಶೈರ್ಬಲಿನಂದನೋ ಬಲೀ
ಘ್ನಂತಂ ಸ್ವಸೈನ್ಯಂ ಕುಪಿತೋ ಬಬಂಧ ಹ ।
ಊಷಾ ಭೃಶಂ ಶೋಕವಿಷಾದವಿಹ್ವಲಾ
ಬದ್ಧಂ ನಿಶಮ್ಯಾಶ್ರುಕಲಾಕ್ಷ್ಯರೌದಿಷೀತ್ ॥
ಅನುವಾದ
ಅನಿರುದ್ಧನು ತನ್ನ ಸೈನಿಕರೆಲ್ಲರನ್ನು ಸಂಹಾರ ಮಾಡುತ್ತಿರುವುದನ್ನು ನೋಡಿದ ಬಾಣಾಸುರನು ಕ್ರೋಧೋನ್ಮತ್ತನಾಗಿ ನಾಗಪಾಶದಿಂದ ಅನಿರುದ್ಧನನ್ನು ಬಂಧಿಸಿಬಿಟ್ಟನು. ತನ್ನ ಪ್ರಿಯತಮನನ್ನು ಬಂಧಿಸಿರುವುದನ್ನು ಕೇಳಿದ ಉಷೆಯು ಅತ್ಯಂತ ಶೋಕ, ವಿಷಾದಗಳಿಂದ ವಿಹ್ವಲಳಾದಳು. ಆಕೆಯ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯುತ್ತಾ ಅಳುತ್ತಿದ್ದಳು. ॥35॥
ಅನುವಾದ (ಸಮಾಪ್ತಿಃ)
ಅರವತ್ತೆರಡನೆಯ ಅಧ್ಯಾಯವು ಮುಗಿಯಿತು. ॥62॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಅನಿರುದ್ಧಬಂಧೋ ನಾಮ ದ್ವಿಷಷ್ಟಿತಮೋಽಧ್ಯಾಯಃ ॥62॥