೫೪

[ಐವತ್ತನಾಲ್ಕನೇಯ ಅಧ್ಯಾಯ]

ಭಾಗಸೂಚನಾ

ಶಿಶುಪಾಲನ ಅನುಯಾಯಿಗಳ ಮತ್ತು ರುಕ್ಮಿಯ ಪರಾಜಯ - ಶ್ರೀಕೃಷ್ಣ ರುಕ್ಮಿಣಿಯರ ವಿವಾಹ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಸರ್ವೇ ಸುಸಂರಬ್ಧಾ ವಾಹಾನಾರುಹ್ಯ ದಂಶಿತಾಃ ।
ಸ್ವೈಃ ಸ್ವೈರ್ಬಲೈಃ ಪರಿಕ್ರಾಂತಾ ಅನ್ವೀಯುರ್ಧೃತಕಾರ್ಮುಕಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಹೀಗೆ ಹೇಳಿ-ಕೇಳಿ ಎಲ್ಲ ರಾಜರೂ ಕೋಪದಿಂದ ಕಿಡಿ-ಕಿಡಿಯಾದರು. ಕವಚಗಳನ್ನು ಧರಿಸಿ ವಾಹನಗಳನ್ನೇರಿದರು. ತಮ್ಮ ತಮ್ಮ ಸೈನ್ಯದೊಂದಿಗೆ ಧನಸ್ಸನ್ನೆತ್ತಿಕೊಂಡು ಶ್ರೀಕೃಷ್ಣನನ್ನು ಹಿಂಬಾಲಿಸಿದರು. ॥1॥

(ಶ್ಲೋಕ-2)

ಮೂಲಮ್

ತಾನಾಪತತ ಆಲೋಕ್ಯ ಯಾದವಾನೀಕಯೂಥಪಾಃ ।
ತಸ್ಥುಸ್ತತ್ಸಮ್ಮುಖಾ ರಾಜನ್ವಿಸ್ಫೂರ್ಜ್ಯ ಸ್ವಧನೂಂಷಿ ತೇ ॥

ಅನುವಾದ

ರಾಜೇಂದ್ರನೇ! ಶತ್ರುಗಳು ತಮ್ಮ ಮೇಲೆ ಆಕ್ರಮಿಸಿ ಬರುತ್ತಿರುವುದನ್ನು ನೋಡಿದ ಯದುವಂಶೀಯರಾದ ಸೇನಾಪತಿಗಳು ಹಿಂದಕ್ಕೆ ತಿರುಗಿ ಧನಸ್ಸುಗಳನ್ನು ಠೆಂಕರಿಸುತ್ತಾ ಶತ್ರುಸೈನ್ಯದ ಇದಿರಾಗಿ ಸಿದ್ಧರಾಗಿ ನಿಂತರು. ॥2॥

(ಶ್ಲೋಕ-3)

ಮೂಲಮ್

ಅಶ್ವಪೃಷ್ಠೇ ಗಜಸ್ಕಂಧೇ ರಥೋಪಸ್ಥೇ ಚ ಕೋವಿದಾಃ ।
ಮುಮುಚುಃ ಶರವರ್ಷಾಣಿ ಮೇಘಾ ಅದ್ರಿಷ್ವಪೋ ಯಥಾ ॥

ಅನುವಾದ

ಜರಾಸಂಧನ ಸೇನೆಯಲ್ಲಿ ಕೆಲವರು ಕುದುರೆಗಳ ಮೇಲೆ, ಕೆಲವರು ಆನೆಗಳ ಮೇಲೆ, ಕೆಲವರು ರಥದಲ್ಲಿ ಹತ್ತಿ ಕುಳಿತಿದ್ದರು. ಅವರೆಲ್ಲರೂ ಧನುರ್ವೇದದ ಮರ್ಮಜ್ಞರಾಗಿದ್ದರು. ಅವರು ಯದುವಂಶೀಯರ ಮೇಲೆ - ಮೇಘಗಳು ಪರ್ವತಗಳ ಮೇಲೆ ಮಳೆಗರೆಯುವಂತೆ ಬಾಣಗಳ ವೃಷ್ಟಿಯನ್ನೇ ಸುರಿಸಿಬಿಟ್ಟರು.॥3॥

(ಶ್ಲೋಕ-4)

ಮೂಲಮ್

ಪತ್ಯುರ್ಬಲಂ ಶರಾಸಾರೈಶ್ಛನ್ನಂ ವೀಕ್ಷ್ಯ ಸುಮಧ್ಯಮಾ ।
ಸವ್ರೀಡಮೈಕ್ಷತ್ತದ್ವಕಂ ಭಯವಿಹ್ವಲಲೋಚನಾ ॥

ಅನುವಾದ

ಪರಮ ಸುಂದರಿಯಾದ ರುಕ್ಮಿಣಿಯು ತನ್ನ ಪತಿಯಾದ ಶ್ರೀಕೃಷ್ಣನ ಸೇನೆಯು ಶತ್ರುಪಕ್ಷದವರ ಬಾಣಗಳ ವರ್ಷದಿಂದ ಮುಚ್ಚಿ ಹೋದುದನ್ನು ಕಂಡು ಲಜ್ಜೆಯೊಂದಿಗೆ ಭಯಗೊಂಡ ಕಣ್ಣುಗಳಿಂದ ಭಗವಾನ್ ಶ್ರೀಕೃಷ್ಣನ ಮುಖವನ್ನು ನೋಡಿದಳು. ॥4॥

(ಶ್ಲೋಕ-5)

ಮೂಲಮ್

ಪ್ರಹಸ್ಯ ಭಗವಾನಾಹ ಮಾ ಸ್ಮ ಭೈರ್ವಾಮಲೋಚನೇ ।
ವಿನಂಕ್ಷ್ಯತ್ಯಧುನೈವೈತತ್ತಾವಕೈಃ ಶಾತ್ರವಂ ಬಲಮ್ ॥

ಅನುವಾದ

ಭಗವಂತನು ನಗುತ್ತಾ ಹೇಳಿದನು- ಸುಂದರೀ! ಭಯಪಡಬೇಡ. ನಮ್ಮ ಕಡೆಯ ಸೈನ್ಯವು ಶತ್ರುಸೈನ್ಯವನ್ನು ಈಗಿಂದೀಗಲೇ ಧ್ವಂಸ ಮಾಡಿಬಿಡುತ್ತದೆ. ॥5॥

(ಶ್ಲೋಕ-6)

ಮೂಲಮ್

ತೇಷಾಂ ತದ್ವಿಕ್ರಮಂ ವೀರಾ ಗದಸಂಕರ್ಷಣಾದಯಃ ।
ಅಮೃಷ್ಯಮಾಣಾ ನಾರಾಚೈರ್ಜಘ್ನುರ್ಹಯಗಜಾನ್ ರಥಾನ್ ॥

ಅನುವಾದ

ಇತ್ತ ಗದ-ಸಂಕರ್ಷಣರೇ ಮೊದಲಾದ ಯದುವಂಶೀಯ ವೀರರು ಶತ್ರುಗಳ ಪರಾಕ್ರಮವನ್ನು ನೋಡಿ ಸಹಿಸದೆ ತಮ್ಮ ಬಾಣಗಳಿಂದ ಶತ್ರುಗಳ ಗಜಾಶ್ವರಥಗಳನ್ನು ತುಂಡರಿಸತೊಡಗಿದರು. ॥6॥

(ಶ್ಲೋಕ-7)

ಮೂಲಮ್

ಪೇತುಃ ಶಿರಾಂಸಿ ರಥಿನಾಮಶ್ವಿನಾಂ ಗಜಿನಾಂ ಭುವಿ ।
ಸಕುಂಡಲಕಿರೀಟಾನಿ ಸೋಷ್ಣೀಷಾಣಿ ಚ ಕೋಟಿಶಃ ॥

(ಶ್ಲೋಕ-8)

ಮೂಲಮ್

ಹಸ್ತಾಃ ಸಾಸಿಗದೇಷ್ವಾಸಾಃ ಕರಭಾ ಊರವೋಂಘ್ರಯಃ ।
ಅಶ್ವಾಶ್ವತರನಾಗೋಷ್ಟ್ರಖರಮರ್ತ್ಯಶಿರಾಂಸಿ ಚ ॥

ಅನುವಾದ

ಇವರ ಬಾಣಗಳಿಂದ ರಥ, ಕುದುರೆಗಳ ಮತ್ತು ಆನೆಗಳ ಮೇಲೆ ಕುಳಿತ ಪ್ರತಿಪಕ್ಷದ ವೀರರ ಕುಂಡಲ, ಕಿರೀಟ, ರುಮಾಲುಗಳಿಂದ ಸಮಲಂಕೃತವಾದ ಕೋಟಿ ಕೋಟಿ ತಲೆಗಳೂ, ಖಡ್ಗ, ಗದೆ, ಧನುಷ್ಯಗಳಿಂದ ಕೂಡಿದ ಕೈಗಳೂ, ತೊಡೆಗಳೂ, ಕಾಲುಗಳೂ ಕತ್ತರಿಸಲ್ಪಟ್ಟು ಭೂಮಿಗೆ ಬೀಳತೊಡಗಿದವು. ಹೀಗೆಯೇ ಕುದುರೆಗಳೂ, ಹೆಸರಕತ್ತೆಗಳೂ, ಒಂಟೆಗಳೂ, ಆನೆಗಳೂ, ಕತ್ತೆಗಳೂ ಮತ್ತು ಮನುಷ್ಯರ ತಲೆಗಳೂ ಲಕ್ಷ-ಲಕ್ಷ ಸಂಖ್ಯೆಯಲ್ಲಿ ನೆಲಕ್ಕುರುಳಿದವು. ॥7-8॥

(ಶ್ಲೋಕ-9)

ಮೂಲಮ್

ಹನ್ಯಮಾನಬಲಾನೀಕಾ ವೃಷ್ಣಿಭಿರ್ಜಯಕಾಂಕ್ಷಿಭಿಃ ।
ರಾಜಾನೋ ವಿಮುಖಾ ಜಗ್ಮುರ್ಜರಾಸಂಧಪುರಸ್ಸರಾಃ ॥

ಅನುವಾದ

ವಿಜಯಾಕಾಂಕ್ಷಿಗಳಾದ ಯಾದವರು ಶತ್ರುಸೈನ್ಯವೆಲ್ಲವನ್ನೂ ಧ್ವಂಸಮಾಡಿಬಿಟ್ಟರು. ಜರಾಸಂಧನೇ ಮೊದಲಾದ ರಾಜರೆಲ್ಲರೂ ಯುದ್ಧದಿಂದ ಪರಾಙ್ಮುಖರಾಗಿ ಪಲಾಯನ ಮಾಡಿದರು. ॥9॥

(ಶ್ಲೋಕ-10)

ಮೂಲಮ್

ಶಿಶುಪಾಲಂ ಸಮಭ್ಯೇತ್ಯ ಹೃತದಾರಮಿವಾತುರಮ್ ।
ನಷ್ಟತ್ವಿಷಂ ಗತೋತ್ಸಾಹಂ ಶುಷ್ಯದ್ವದನಮಬ್ರುವನ್ ॥

ಅನುವಾದ

ಅತ್ತ ಶಿಶುಪಾಲನು ತನ್ನನ್ನು ವಿವಾಹವಾಗಬೇಕಾಗಿದ್ದ ಭಾವೀಪತ್ನಿಯು ಕೈತಪ್ಪಿಹೋದ ಕಾರಣ ಅತೀವ ದುಃಖಿತನಾಗಿದ್ದನು. ಅವನ ಶರೀರದಲ್ಲಿ ಕಾಂತಿಯೂ, ಉತ್ಸಾಹವೂ ಉಡುಗಿಹೋಗಿತ್ತು. ಮುಖಬಾಡಿತ್ತು. ಜರಾಸಂಧನು ಅವನ ಬಳಿಗೆ ಹೋಗಿ ಸಮಾಧಾನ ಪಡಿಸುತ್ತಾ ಹೇಳಿದನು. ॥10॥

(ಶ್ಲೋಕ-11)

ಮೂಲಮ್

ಭೋ ಭೋಃ ಪುರುಷಶಾರ್ದೂಲ ದೌರ್ಮನಸ್ಯಮಿದಂ ತ್ಯಜ ।
ನ ಪ್ರಿಯಾಪ್ರಿಯಯೋ ರಾಜನ್ ನಿಷ್ಠಾ ದೇಹಿಷು ದೃಶ್ಯತೇ ॥

ಅನುವಾದ

ಶಿಶುಪಾಲನೇ! ನೀನಾದರೋ ಶ್ರೇಷ್ಠ ಪುರುಷನಾಗಿರುವೆ. ಈ ದುಃಖದ ಮನೋಭಾವವನ್ನು ತ್ಯಜಿಸು. ತನ್ನ ಮನಸ್ಸಿಗೆ ಅನುಕೂಲವಾಗಿರಲೀ, ಪ್ರತಿಕೂಲವಾಗಿರಲೀ ಯಾವುದೇ ಮಾತು ಸ್ಥಿರವಾಗಿ ಇರುವುದನ್ನು ಪ್ರಾಣಿಗಳ ಜೀವನದಲ್ಲಿ ಕಂಡುಬರುವುದಿಲ್ಲ. ॥11॥

(ಶ್ಲೋಕ-12)

ಮೂಲಮ್

ಯಥಾ ದಾರುಮಯೀ ಯೋಷಿನ್ನೃತ್ಯತೇ ಕುಹಕೇಚ್ಛಯಾ ।
ಏವಮೀಶ್ವರತಂತ್ರೋಯಮೀಹತೇ ಸುಖದುಃಖಯೋಃ ॥

ಅನುವಾದ

ಸೂತ್ರದ ಬೊಂಬೆಯು ಆಡಿಸುವವನ ಇಚ್ಛೆಗನುಸಾರವಾಗಿಯೇ ಕುಣಿಯುವಂತೆ, ಈ ಜೀವನೂ ಕೂಡ ಭಗವದಿಚ್ಛೆಗೆ ಅಧೀನನಾಗಿ ಸುಖ-ದುಃಖಗಳ ನಡುವೆ ಸಿಕ್ಕಿಕೊಂಡು ಪರಮಾತ್ಮನು ಕುಣಿಸಿದಂತೆ ಕುಣಿಯುತ್ತಾ ಇರುತ್ತಾನೆ. ॥12॥

(ಶ್ಲೋಕ-13)

ಮೂಲಮ್

ಶೌರೇಃ ಸಪ್ತದಶಾಹಂ ವೈ ಸಂಯುಗಾನಿ ಪರಾಜಿತಃ ।
ತ್ರಯೋವಿಂಶತಿಭಿಃ ಸೈನ್ಯೈರ್ಜಿಗ್ಯ ಏಕಮಹಂ ಪರಮ್ ॥

ಅನುವಾದ

ಇಪ್ಪತ್ತಮೂರು ಅಕ್ಷೌಹಿಣೀ ಸೈನ್ಯ ಸಮೇತನಾದ ನನ್ನನ್ನು ಶ್ರೀಕೃಷ್ಣನು ಹದಿನೇಳು ಬಾರಿ ಪರಾಜಯಗೊಳಿಸಿದನು. ಆದರೆ ನಾನು ಧೈರ್ಯಗೆಡಲಿಲ್ಲ. ಹದಿನೆಂಟನೆಯ ಬಾರಿ ನಾನು ಅವನನ್ನು ಸೋಲಿಸಲಿಲ್ಲವೇ! ॥13॥

(ಶ್ಲೋಕ-14)

ಮೂಲಮ್

ತಥಾಪ್ಯಹಂ ನ ಶೋಚಾಮಿ ನ ಪ್ರಹೃಷ್ಯಾಮಿ ಕರ್ಹಿಚಿತ್ ।
ಕಾಲೇನ ದೈವಯುಕ್ತೇನ ಜಾನನ್ ವಿದ್ರಾವಿತಂ ಜಗತ್ ॥

ಅನುವಾದ

ಹೀಗಿದ್ದರೂ ಇದಕ್ಕಾಗಿ ನಾನು ಎಂದೂ ಶೋಕಿಸುವುದಿಲ್ಲ, ಹರ್ಷಿತನಾಗುವುದಿಲ್ಲ. ಏಕೆಂದರೆ, ದೈವಕ್ಕೆ ವಶವಾದ ಕಾಲನಿಂದ ಈ ಜಗತ್ತು ನಡೆಸಲ್ಪಡುತ್ತದೆ ಎಂಬುದನ್ನು ನಾನು ಅರಿತಿದ್ದೇನೆ. ॥14॥

(ಶ್ಲೋಕ-15)

ಮೂಲಮ್

ಅಧುನಾಪಿ ವಯಂ ಸರ್ವೇ ವೀರಯೂಥಪಯೂಥಪಾಃ ।
ಪರಾಜಿತಾಃ ಲ್ಗುತಂತ್ರೈರ್ಯದುಭಿಃ ಕೃಷ್ಣಪಾಲಿತೈಃ ॥

ಅನುವಾದ

ನಾವುಗಳು ಮಹಾ-ಮಹಾ ವೀರ ಸೇನಾಪತಿಗಳಿಗೂ ಒಡೆಯರಾಗಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ಹೀಗಿದ್ದರೂ ಈಗ ಶ್ರೀಕೃಷ್ಣನಿಂದ ಸುರಕ್ಷಿತವಾದ ಯಾದವರ ಅಲ್ಪ ಸೇನೆಯೂ ನಮ್ಮನ್ನು ಸೋಲಿಸಿ ಬಿಟ್ಟಿದೆ. ॥15॥

(ಶ್ಲೋಕ-16)

ಮೂಲಮ್

ರಿಪವೋ ಜಿಗ್ಯುರಧುನಾ ಕಾಲ ಆತ್ಮಾನುಸಾರಿಣಿ ।
ತದಾ ವಯಂ ವಿಜೇಷ್ಯಾಮೋ ಯದಾ ಕಾಲಃ ಪ್ರದಕ್ಷಿಣಃ ॥

ಅನುವಾದ

ಈ ಸಲ ನಮ್ಮ ಶತ್ರುಗಳ ವಿಜಯವಾಗಿದೆ. ಏಕೆಂದರೆ, ಕಾಲವು ಅವರಿಗೆ ಅನುಕೂಲವಾಗಿತ್ತು. ಕಾಲವು ನಮಗೆ ಅನುಕೂಲವಾದಾಗ ನಾವುಗಳೂ ಕೂಡ ಅವರನ್ನು ಗೆಲ್ಲಬಲ್ಲೆವು. ॥16॥

(ಶ್ಲೋಕ-17)

ಮೂಲಮ್

ಏವಂ ಪ್ರಬೋಧಿತೋ ಮಿತ್ರೈಶ್ಚೈ ದ್ಯೋಗಾತ್ ಸಾನುಗಃ ಪುರಮ್ ।
ಹತಶೇಷಾಃ ಪುನಸ್ತೇಪಿ ಯಯುಃ ಸ್ವಂ ಸ್ವಂ ಪುರಂ ನೃಪಾಃ ॥

ಅನುವಾದ

ಪರೀಕ್ಷಿತನೇ! ಜರಾಸಂಧನೆ ಮೊದಲಾದ ಮಿತ್ರರು ಹೀಗೆ ಸಮಾಧಾನ ಹೇಳಿದಾಗ ಚೇದಿರಾಜ ಶಿಶುಪಾಲನು ತನ್ನ ಅನುಯಾಯಿಗಳೊಂದಿಗೆ ತನ್ನ ರಾಜಧಾನಿಗೆ ಮರಳಿದನು. ಸಾಯದೇ ಉಳಿದಿರುವ ಇತರ ಅವರ ಮಿತ್ರರಾಜರೂ ತಮ್ಮ-ತಮ್ಮ ನಗರಗಳಿಗೆ ಹಿಂದಿರುಗಿದರು.॥17॥

(ಶ್ಲೋಕ-18)

ಮೂಲಮ್

ರುಕ್ಮೀ ತು ರಾಕ್ಷಸೋದ್ವಾಹಂ ಕೃಷ್ಣದ್ವಿಡಸಹನ್ ಸ್ವಸುಃ ।
ಪೃಷ್ಠತೋನ್ವಗಮತ್ ಕೃಷ್ಣಮಕ್ಷೌಹಿಣ್ಯಾ ವೃತೋ ಬಲೀ ॥

ಅನುವಾದ

ರುಕ್ಮಿಣಿಯ ಹಿರಿಯಣ್ಣನಾದ ರುಕ್ಮಿಯು ಶ್ರೀಕೃಷ್ಣನನ್ನು ಬಹಳವಾಗಿ ದ್ವೇಷಿಸುತ್ತಿದ್ದನು. ತನ್ನ ತಂಗಿಯನ್ನು ಶ್ರೀಕೃಷ್ಣನು ಕದ್ದುಕೊಂಡು ಹೋಗಿ ರಾಕ್ಷಸವಿಧಿಯಿಂದ ವಿವಾಹವಾಗುವುದನ್ನು ಅವನಿಂದ ಸಹಿಸಲಾಗಲಿಲ್ಲ. ಪರಾಕ್ರಮಿಯಾದ ರುಕ್ಮಿಯು ಒಂದು ಅಕ್ಷೌಹಿಣಿ ಸೈನ್ಯದೊಂದಿಗೆ ಶ್ರೀಕೃಷ್ಣನನ್ನು ಹಿಂಬಾಲಿಸಿದನು. ॥18॥

(ಶ್ಲೋಕ-19)

ಮೂಲಮ್

ರುಕ್ಮ್ಯಮರ್ಷೀ ಸುಸಂರಬ್ಧಃ ಶೃಣ್ವತಾಂ ಸರ್ವಭೂಭುಜಾಮ್ ।
ಪ್ರತಿಜಜ್ಞೇ ಮಹಾಬಾಹುರ್ದಂಶಿತಃ ಸಶರಾಸನಃ ॥

ಅನುವಾದ

ಮಹಾಬಾಹುವಾದ ರುಕ್ಮಿಯು ಕ್ರೋಧದಿಂದ ಉರಿಯುತ್ತಾ, ಕವಚವನ್ನು ಧರಿಸಿ, ಧನುಸ್ಸನ್ನೆತ್ತಿಕೊಂಡು ಸಮಸ್ತ ರಾಜರ ಮುಂದೆ ಹೀಗೆ ಪ್ರತಿಜ್ಞೆ ಮಾಡಿದನು. ॥19॥

(ಶ್ಲೋಕ-20)

ಮೂಲಮ್

ಅಹತ್ವಾ ಸಮರೇ ಕೃಷ್ಣಮಪ್ರತ್ಯೂಹ್ಯ ಚ ರುಕ್ಮಿಣೀಮ್ ।
ಕುಂಡಿನಂ ನ ಪ್ರವೇಕ್ಷ್ಯಾಮಿ ಸತ್ಯಮೇತದ್ಬ್ರವೀಮಿ ವಃ ॥

ಅನುವಾದ

‘ಕೃಷ್ಣನನ್ನು ಯುದ್ಧದಲ್ಲಿ ಕೊಲ್ಲದೆ, ನನ್ನ ತಂಗಿಯಾದ ರುಕ್ಮಿಣಿಯನ್ನು ಹಿಂದಕ್ಕೆ ಕರೆತರದೆ ನಾನು ಕುಂಡಿನಪುರವನ್ನು ಪ್ರವೇಶಿಸುವುದಿಲ್ಲ’. ಸತ್ಯವಾದ ಈ ಮಾತನ್ನು ಪ್ರತಿಜ್ಞಾಪೂರ್ವಕ ನಿಮಗೆ ಹೇಳುತ್ತಿದ್ದೇನೆ. ॥20॥

(ಶ್ಲೋಕ-21)

ಮೂಲಮ್

ಇತ್ಯುಕ್ತ್ವಾ ರಥಮಾರುಹ್ಯ ಸಾರಥಿಂ ಪ್ರಾಹ ಸತ್ವರಃ ।
ಚೋದಯಾಶ್ವಾನ್ ಯತಃ ಕೃಷ್ಣಸ್ತಸ್ಯ ಮೇ ಸಂಯುಗಂ ಭವೇತ್ ॥

ಅನುವಾದ

ಪರೀಕ್ಷಿತನೇ! ಹೀಗೆ ಹೇಳಿ ಅವನು ರಥವನ್ನು ಹತ್ತಿ, ಸಾರಥಿಗೆ ಹೇಳಿದನು - ‘ಕೃಷ್ಣನಿರುವಲ್ಲಿಗೆ ನನ್ನ ರಥವನ್ನು ಬೇಗನೇ ಓಡಿಸು. ಇಂದು ನಾನು ಅವನೊಡನೆ ಯುದ್ಧಮಾಡಬೇಕಾಗಿದೆ. ॥21॥

(ಶ್ಲೋಕ-22)

ಮೂಲಮ್

ಅದ್ಯಾಹಂ ನಿಶಿತೈರ್ಬಾಣೈರ್ಗೋಪಾಲಸ್ಯ ಸುದುರ್ಮತೇಃ ।
ನೇಷ್ಯೇ ವೀರ್ಯಮದಂ ಯೇನ ಸ್ವಸಾ ಮೇ ಪ್ರಸಭಂ ಹೃತಾ ॥

ಅನುವಾದ

ನನ್ನ ತಂಗಿಯನ್ನು ಬಲಾತ್ಕಾರವಾಗಿ ಸೆಳೆದುಕೊಂಡು ಹೋದ ಆ ದುರ್ಬುದ್ಧಿಯಾದ ಗೋಪಾಲನ ಪರಾಕ್ರಮ ಮದವನ್ನು ತೀಕ್ಷ್ಣವಾದ ಬಾಣಗಳಿಂದ ತೊಡೆದುಹಾಕುತ್ತೇನೆ.’ ॥22॥

(ಶ್ಲೋಕ-23)

ಮೂಲಮ್

ವಿಕತ್ಥಮಾನಃ ಕುಮತಿರೀಶ್ವರಸ್ಯಾಪ್ರಮಾಣವಿತ್ ।
ರಥೇನೈಕೇನ ಗೋವಿಂದಂ ತಿಷ್ಠ ತಿಷ್ಠೇತ್ಯಥಾಹ್ವಯತ್ ॥

ಅನುವಾದ

ಪರೀಕ್ಷಿತ ಮಹಾರಾಜ! ಕುಬುದ್ಧಿಯವನಾಗಿದ್ದ ರುಕ್ಮಿಯು ಸರ್ವೇಶ್ವರನಾದ ಶ್ರೀಕೃಷ್ಣನ ಪ್ರಭಾವವೆಷ್ಟೆಂಬುದನ್ನು ತಿಳಿದವನಾಗಿರಲಿಲ್ಲ. ಅವನು ಮನಬಂದಂತೆ ಬಡಬಡಿಸುತ್ತಾ ರಥೈಕ ಸಹಾಯಕನಾಗಿ ಶ್ರೀಕೃಷ್ಣನ ರಥದ ಇದಿರಿಗೆ ಹೋಗಿ ನಿಲ್ಲು! ನಿಲ್ಲು! ಎಂದು ಹೇಳುತ್ತಾ ಅವನನ್ನು ಯುದ್ಧಕ್ಕೆ ಆಹ್ವಾನಿಸಿದನು. ॥23॥

(ಶ್ಲೋಕ-24)

ಮೂಲಮ್

ಧನುರ್ವಿಕೃಷ್ಯ ಸುದೃಢಂ ಜಘ್ನೇ ಕೃಷ್ಣಂ ತ್ರಿಭಿಃ ಶರೈಃ ।
ಆಹ ಚಾತ್ರ ಕ್ಷಣಂ ತಿಷ್ಠ ಯದೂನಾಂ ಕುಲಪಾಂಸನ ॥

(ಶ್ಲೋಕ-25)

ಮೂಲಮ್

ಕುತ್ರ ಯಾಸಿ ಸ್ವಸಾರಂ ಮೇ ಮುಷಿತ್ವಾ ಧ್ವಾಂಕ್ಷವದ್ಧವಿಃ ।
ಹರಿಷ್ಯೇದ್ಯ ಮದಂ ಮಂದ ಮಾಯಿನಃ ಕೂಟಯೋಧಿನಃ ॥

ಅನುವಾದ

ಅವನು ಸುದೃಢವಾದ ಧನುಸ್ಸನ್ನು ಬಲವಾಗಿ ಸೆಳೆದು ಶ್ರೀಕೃಷ್ಣನ ಮೇಲೆ ಮೂರು ಬಾಣಗಳನ್ನು ಪ್ರಯೋಗಿಸಿ, ಹೇಳಿದನು - ಯುದಕುಲ ಕಲಂಕನೇ! ಕ್ಷಣಕಾಲ ನಿಲ್ಲು. ಕಾಗೆಯು ಮಂತ್ರಪೂತವಾದ ಹವಿಸ್ಸನ್ನು ಎತ್ತಿಕೊಂಡು ಹೋಗುವಂತೆ, ನನ್ನ ತಂಗಿಯನ್ನು ಕದ್ದುಕೊಂಡು ಎಲ್ಲಿಗೆ ಹೋಗುತ್ತಿರುವೆ? ಕೂಟ ಯುದ್ಧ ಮಾಡುವುದರಲ್ಲಿ ನಿಷ್ಣಾತನಾದ, ಮಾಯಾವಿಯಾದ, ಮಂದ ಬುದ್ಧಿಯವನಾದ ನಿನ್ನ ಮದವನ್ನು ಕ್ಷಣಮಾತ್ರದಲ್ಲಿ ಅಡಗಿಸಿಬಿಡುತ್ತೇನೆ. ॥24-25॥

(ಶ್ಲೋಕ-26)

ಮೂಲಮ್

ಯಾವನ್ನ ಮೇ ಹತೋ ಬಾಣೈಃ ಶಯೀಥಾ ಮುಂಚ ದಾರಿಕಾಮ್ ।
ಸ್ಮಯನ್ ಕೃಷ್ಣೋ ಧನುಶ್ಛಿತ್ತ್ವಾ ಷಡ್ಭಿರ್ವಿವ್ಯಾಧ ರುಕ್ಮಿಣಮ್ ॥

ಅನುವಾದ

ನೋಡು, ನನ್ನ ಬಾಣಗಳಿಂದ ಹತನಾಗಿ ಭೂಮಿಯ ಮೇಲೆ ಮಲಗುವ ಮೊದಲೇ ನನ್ನ ತಂಗಿಯನ್ನು ಬಿಟ್ಟು ಹೋಗು. ರುಕ್ಮಿಯ ಮಾತನ್ನು ಕೇಳಿ ಭಗವಾನ್ ಶ್ರೀಕೃಷ್ಣನು ನಗುನಗುತ್ತಲೇ ಅವನ ಧನಸ್ಸನ್ನು ತುಂಡರಿಸಿ, ಅವನ ಮೇಲೆ ಆರು ಬಾಣಗಳನ್ನು ಎಸೆದನು. ॥26॥

(ಶ್ಲೋಕ-27)

ಮೂಲಮ್

ಅಷ್ಟಭಿಶ್ಚತುರೋ ವಾಹಾನ್ ದ್ವಾಭ್ಯಾಂ ಸೂತಂ ಧ್ವಜಂ ತ್ರಿಭಿಃ ।
ಸ ಚಾನ್ಯದ್ಧನುರಾದಾಯ ಕೃಷ್ಣಂ ವಿವ್ಯಾಧ ಪಂಚಭಿಃ ॥

ಅನುವಾದ

ಹಾಗೆಯೇ ಶ್ರೀಕೃಷ್ಣನು ಎಂಟು ಬಾಣಗಳನ್ನು ಕುದುರೆಗಳ ಮೇಲೆ, ಎರಡು ಬಾಣಗಳನ್ನು ಸಾರಥಿಗೆ ಹೊಡೆದು, ಮೂರು ಬಾಣಗಳಿಂದ ಅವನ ರಥದ ಧ್ವಜವನ್ನು ಕೆಡಹಿದನು. ಆಗ ರುಕ್ಮಿಯು ಮತ್ತೊಂದು ಧನುಸ್ಸನ್ನೆತ್ತಿಕೊಂಡು ಶ್ರೀಕೃಷ್ಣನಿಗೆ ಐದು ಬಾಣಗಳನ್ನು ಪ್ರಯೋಗಿಸಿದನು. ॥27॥

(ಶ್ಲೋಕ-28)

ಮೂಲಮ್

ತೈಸ್ತಾಡಿತಃ ಶರೌಘೈಸ್ತು ಚಿಚ್ಛೇದ ಧನುರಚ್ಯುತಃ ।
ಪುನರನ್ಯದುಪಾದತ್ತ ತದಪ್ಯಚ್ಛಿನದವ್ಯಯಃ ॥

ಅನುವಾದ

ಆ ಬಾಣಗಳು ಬರುತ್ತಿರುವಂತೆ ಶ್ರೀಕೃಷ್ಣನು ಅವನ್ನು ತುಂಡರಿಸಿ, ರುಕ್ಮಿಯ ಧನುಷ್ಯವನ್ನೂ ಕತ್ತರಿಸಿಬಿಟ್ಟನು. ಅವನು ಮತ್ತೊಂದು ಧನುಸ್ಸನ್ನು ಎತ್ತಿಕೊಂಡು ಹೆದೆಯೇರಿಸುವ ಮೊದಲೇ ಅದನ್ನೂ, ತುಂಡರಿಸಿಬಿಟ್ಟನು. ॥28॥

(ಶ್ಲೋಕ-29)

ಮೂಲಮ್

ಪರಿಘಂ ಪಟ್ಟಿಶಂ ಶೂಲಂ ಚರ್ಮಾಸೀ ಶಕ್ತಿತೋಮರೌ ।
ಯದ್ಯದಾಯುಧಮಾದತ್ತ ತತ್ ಸರ್ವಂ ಸೋಚ್ಛಿನದ್ಧರಿಃ ॥

ಅನುವಾದ

ಹೀಗೆ ರುಕ್ಮಿಯು ಪರಿಘ, ಪಟ್ಟಿಶ, ಶೂಲ, ಕತ್ತಿ-ಗುರಾಣಿ, ಶಕ್ತಿ ತೋಮರ ಮೊದಲಾದ ಶಸ್ತ್ರಗಳನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಅವೆಲ್ಲವನ್ನೂ ಪ್ರಹರಿಸುವ ಮೊದಲೇ ಭಗವಂತನು ಕತ್ತರಿಸಿ ಹಾಕಿದನು. ॥29॥

(ಶ್ಲೋಕ-30)

ಮೂಲಮ್

ತತೋ ರಥಾದವಪ್ಲುತ್ಯ ಖಡ್ಗಪಾಣಿರ್ಜಿಘಾಂಸಯಾ ।
ಕೃಷ್ಣಮಭ್ಯದ್ರವತ್ ಕ್ರುದ್ಧಃ ಪತಂಗ ಇವ ಪಾವಕಮ್ ॥

ಅನುವಾದ

ಆಗ ರುಕ್ಮಿಯು ಅತ್ಯಂತ ಕ್ರುದ್ಧನಾಗಿ ಕೈಯಲ್ಲಿ, ಖಡ್ಗವನ್ನು ಹಿಡಿದುಕೊಂಡು ರಥದಿಂದ ಧುಮುಕಿ ಕೃಷ್ಣನನ್ನು ಕೊಂದುಬಿಡಬೇಕೆಂಬ ಛಲದಿಂದ ಪತಂಗದ ಹುಳುವು ಬೆಂಕಿಯ ಕಡೆಗೆ ರಭಸದಿಂದ ಧಾವಿಸುವಂತೆ ಶ್ರೀಕೃಷ್ಣನ ಕಡೆಗೆ ನುಗ್ಗಿದನು. ॥30॥

(ಶ್ಲೋಕ-31)

ಮೂಲಮ್

ತಸ್ಯ ಚಾಪತತಃ ಖಡ್ಗಂ ತಿಲಶಶ್ಚರ್ಮ ಚೇಷುಭಿಃ ।
ಛಿತ್ತ್ವಾಸಿಮಾದದೇ ತಿಗ್ಮಂ ರುಕ್ಮಿಣಂ ಹಂತುಮುದ್ಯತಃ ॥

ಅನುವಾದ

ರುಕ್ಮಿಯು ತನ್ನ ಮೇಲೆ ಬೀಳಲು ರಭಸದಿಂದ ಮುನ್ನುಗ್ಗುತ್ತಿರುವುದನ್ನು ನೋಡಿದ ಭಗವಂತನು ತನ್ನ ಬಾಣಗಳಿಂದ ಕತ್ತಿ-ಗುರಾಣಿಗಳನ್ನು ನುಚ್ಚುನೂರಾಗಿಸಿದನು ಹಾಗೂ ಅವನನ್ನು ಕೊಂದೇ ಬಿಡಲು ಕೈಯಲ್ಲಿ ಖಡ್ಗವನ್ನೆತ್ತಿಕೊಂಡನು. ॥31॥

(ಶ್ಲೋಕ-32)

ಮೂಲಮ್

ದೃಷ್ಟ್ವಾ ಭ್ರಾತೃವಧೋದ್ಯೋಗಂ ರುಕ್ಮಿಣೀ ಭಯವಿಹ್ವಲಾ ।
ಪತಿತ್ವಾ ಪಾದಯೋರ್ಭರ್ತುರುವಾಚ ಕರುಣಂ ಸತೀ ॥

ಅನುವಾದ

ಭಗವಂತನು ತನ್ನ ಅಣ್ಣನಾದ ರುಕ್ಮಿಯನ್ನು ಕೊಂದೇಬಿಡುವನೆಂದು ನೋಡಿದ ರುಕ್ಮಿಣಿಯು ಭಯದಿಂದ ಕಳವಳಗೊಂಡು ಪ್ರಿಯತಮನಾದ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಬಿದ್ದು ಕರುಣಾಸ್ವರದಿಂದ ಇಂತೆಂದಳು. ॥32॥

(ಶ್ಲೋಕ-33)

ಮೂಲಮ್

ಯೋಗೇಶ್ವರಾಪ್ರಮೇಯಾತ್ಮನ್ ದೇವದೇವ ಜಗತ್ಪತೇ ।
ಹಂತುಂ ನಾರ್ಹಸಿ ಕಲ್ಯಾಣ ಭ್ರಾತರಂ ಮೇ ಮಹಾಭುಜ ॥

ಅನುವಾದ

‘‘ದೇವದೇವನೇ! ಜಗತ್ಪತಿಯೇ! ಯಾರಿಂದಲೂ ತಿಳಿಯಲಾಗದ ಆತ್ಮ ಸ್ವರೂಪವುಳ್ಳವನೇ! ಮಹಾಭುಜನೇ! ಕಲ್ಯಾಣಸ್ವರೂಪನೇ! ಪ್ರಭುವೇ! ನನ್ನ ಅಣ್ಣನನ್ನು ಸಂಹರಿಸುವುದು ನಿನಗೆ ಯೋಗ್ಯವಲ್ಲ.’’ ॥33॥

(ಶ್ಲೋಕ-34)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಯಾ ಪರಿತ್ರಾಸವಿಕಂಪಿತಾಂಗಯಾ
ಶುಚಾವಶುಷ್ಯನ್ಮುಖರುದ್ಧಕಂಠಯಾ ।
ಕಾತರ್ಯವಿಸ್ರಂಸಿತಹೇಮಮಾಲಯಾ
ಗೃಹೀತಪಾದಃ ಕರುಣೋ ನ್ಯವರ್ತತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಆ ಸಮಯದಲ್ಲಿ ರುಕ್ಮಿಣಿಯ ಒಂದೊಂದು ಅವಯವಗಳೂ ಭಯದಿಂದ ನಡುಗುತ್ತಿದ್ದವು. ಶೋಕ ಹೆಚ್ಚಳದಿಂದ ಮುಖವು ಬಾಡಿ, ಗಂಟಲು ಒಣಗಿಹೋಗಿತ್ತು. ಕಾತುರಳಾದ ಆಕೆಯ ಕೊರಳಿನ ಸ್ವರ್ಣಹಾರವು ಕೆಳಗೆ ಬಿದ್ದುಬಿಟ್ಟಿತು. ಇದೇ ಸ್ಥಿತಿಯಲ್ಲಿ ಭಗವಂತನ ಚರಣಗಳನ್ನು ಹಿಡಿದುಕೊಂಡಿದ್ದಳು. ಪರಮ ದಯಾಳುವಾದ ಭಗವಂತನು ಭಯಗೊಂಡಿರುವ ಆಕೆಯನ್ನು ನೋಡಿ ರುಕ್ಮಿಯನ್ನು ಕೊಲ್ಲುವ ವಿಚಾರವನ್ನು ಬಿಟ್ಟುಬಿಟ್ಟನು. ॥34॥

(ಶ್ಲೋಕ-35)

ಮೂಲಮ್

ಚೈಲೇನ ಬದ್ಧ್ವಾ ತಮಸಾಧುಕಾರಿಣಂ
ಸಶ್ಮಶ್ರುಕೇಶಂ ಪ್ರವಪನ್ ವ್ಯರೂಪಯತ್ ।
ತಾವನ್ಮಮರ್ದುಃ ಪರಸೈನ್ಯಮದ್ಭುತಂ
ಯದುಪ್ರವೀರಾ ನಲಿನೀಂ ಯಥಾ ಗಜಾಃ ॥

ಅನುವಾದ

ಹೀಗಿದ್ದರೂ ರುಕ್ಮಿಯು ಕೃಷ್ಣನ ಕುರಿತು ಪ್ರತೀಕಾರ ಮಾಡುವುದನ್ನು ಬಿಡಲಿಲ್ಲ. ಆಗ ಭಗವಾನ್ ಶ್ರೀಕೃಷ್ಣನು ಅವನ ವಲ್ಲಿಯಿಂದಲೇ ಅವನನ್ನು ಕಟ್ಟಿ ಗಡ್ಡ-ಮೀಸೆ-ತಲೆಗೂದಲು ಅಲ್ಲಲ್ಲಿ ಬೋಳಿಸಿ ಕುರೂಪಗೊಳಿಸಿದನು. ಅಷ್ಟರಲ್ಲಿ ಯಾದವವೀರರು ಶತ್ರು ಸೈನ್ಯವೆಲ್ಲವನ್ನೂ ಆನೆಯು ಕಮಲವನವನ್ನು ಧ್ವಂಸಮಾಡುವಂತೆ ನಿರ್ನಾಮಮಾಡಿದರು. ॥35॥

(ಶ್ಲೋಕ-36)

ಮೂಲಮ್

ಕೃಷ್ಣಾಂತಿಕಮುಪವ್ರಜ್ಯ ದದೃಶುಸ್ತತ್ರ ರುಕ್ಮಿಣಮ್ ।
ತಥಾಭೂತಂ ಹತಪ್ರಾಯಂ ದೃಷ್ಟ್ವಾ ಸಂಕರ್ಷಣೋ ವಿಭುಃ ।
ವಿಮುಚ್ಯ ಬದ್ಧಂ ಕರುಣೋ ಭಗವಾನ್ ಕೃಷ್ಣಮಬ್ರವೀತ್ ॥

ಅನುವಾದ

ಮತ್ತೆ ಅವರು ಮರಳಿ ಶ್ರೀಕೃಷ್ಣನ ಬಳಿಗೆ ಬಂದು ನೋಡುತ್ತಾರೆ ರುಕ್ಮಿಯು ಬಟ್ಟೆಯಿಂದ ಕಟ್ಟಲ್ಪಟ್ಟು, ಹತ ಪ್ರಾಯನಾಗಿಬಿದ್ದಿದ್ದನು. ಅವನನ್ನು ನೋಡಿದ ಭಗವಾನ್ ಬಲರಾಮನಿಗೆ ದಯೆ ಉಂಟಾಗಿ, ಅವನ ಬಂಧವನ್ನು ಬಿಡಿಸಿ ಶ್ರೀಕೃಷ್ಣನಲ್ಲಿ ಹೇಳಿದನು - ॥36॥

ಮೂಲಮ್

(ಶ್ಲೋಕ-37)
ಅಸಾಧ್ವಿದಂ ತ್ವಯಾ ಕೃಷ್ಣ ಕೃತಮಸ್ಮಜ್ಜುಗುಪ್ಸಿತಮ್ ।
ವಪನಂ ಶ್ಮಶ್ರುಕೇಶಾನಾಂ ವೈರೂಪ್ಯಂ ಸುಹೃದೋ ವಧಃ ॥

ಅನುವಾದ

ಕೃಷ್ಣ! ನೀನು ಮಾಡಿದುದು ಸರಿಯಲ್ಲ. ಇಂತಹ ನಿಂದಿತ ಕಾರ್ಯವೂ ನಮ್ಮಂತಹವರಿಗೆ ಯೋಗ್ಯವಲ್ಲ. ತಮ್ಮ ಸಂಬಂಧಿಕರ ಗಡ್ಡ-ಮೀಸೆ ಬೋಳಿಸಿ ವಿರೂಪಗೊಳಿಸುವುದು ಒಂದು ರೀತಿಯಿಂದ ವಧೆಯೆ ಆಗಿದೆ. ॥37॥

(ಶ್ಲೋಕ-38)

ಮೂಲಮ್

ಮೈವಾಸ್ಮಾನ್ ಸಾಧ್ವ್ಯಸೂಯೇಥಾ ಭ್ರಾತುರ್ವೈರೂಪ್ಯಚಿಂತಯಾ ।
ಸುಖದುಃಖದೋ ನ ಚಾನ್ಯೋಸ್ತಿ ಯತಃ ಸ್ವಕೃತಭುಕ್ ಪುಮಾನ್ ॥

ಅನುವಾದ

ಬಳಿಕ ಬಲ ರಾಮನು ರುಕ್ಮಿಣಿಯನ್ನು ಸಂಬೋಧಿಸಿ ಹೇಳಿದನು - ಸಾಧ್ವಿಯೇ! ಶ್ರೀಕೃಷ್ಣನು ನಿನ್ನಣ್ಣನನ್ನು ವಿರೂಪಗೊಳಿಸಿದನೆಂದು ನಮ್ಮ ಕುರಿತು ನೀನು ದೋಷವೆಣಿಸಬೇಡ. ಏಕೆಂದರೆ, ಜೀವನಿಗೆ ಸುಖ-ದುಃಖಗಳನ್ನು ಕೊಡುವವನು ಬೇರೆಯಾರೂ ಆಗಿರದೆ ತನ್ನ ಕರ್ಮಗಳನ್ನೇ ಭೋಗಿಸಬೇಕಾಗುತ್ತದೆ. ॥38॥

(ಶ್ಲೋಕ-39)

ಮೂಲಮ್

ಬಂಧುರ್ವಧಾರ್ಹದೋಷೋಪಿ ನ ಬಂಧೋರ್ವಧಮರ್ಹತಿ ।
ತ್ಯಾಜ್ಯಃ ಸ್ವೇನೈವ ದೋಷೇಣ ಹತಃ ಕಿಂ ಹನ್ಯತೇ ಪುನಃ ॥

ಅನುವಾದ

ಈಗ ಶ್ರೀಕೃಷ್ಣನನ್ನು ಸಂಬೋಧಿಸಿ ಹೇಳುತ್ತಾನೆ - ಕೃಷ್ಣಾ! ನಮ್ಮ ಸಂಬಂಧಿಯು ವಧಾರ್ಹವಾದ ಅಪರಾಧವನ್ನೇ ಮಾಡಿದ್ದರೂ ನಾವು ಅವನನ್ನು ವಧಿಸಬಾರದು. ಅವನನ್ನು ಬಿಟ್ಟಿಬಿಡಬೇಕು. ಅವನಾದರೋ ತನ್ನ ದೋಷದಿಂದಲೇ ಸತ್ತುಹೋಗಿರುವನು. ಅಂತಹವನನ್ನು ಪುನಃ ಸಾಯಿಸಲು ಹೋಗುವುದೇ? ॥39॥

(ಶ್ಲೋಕ-40)

ಮೂಲಮ್

ಕ್ಷತ್ರಿಯಾಣಾಮಯಂ ಧರ್ಮಃ ಪ್ರಜಾಪತಿವಿನಿರ್ಮಿತಃ ।
ಭ್ರಾತಾಪಿ ಭ್ರಾತರಂ ಹನ್ಯಾದ್ಯೇನ ಘೋರತರಸ್ತತಃ ॥

ಅನುವಾದ

ಮತ್ತೆ ರುಕ್ಮಿಣಿಗೆ ಹೇಳುತ್ತಾನೆ ಸಾಧ್ವಿಮಣಿಯೇ! ಧರ್ಮರಕ್ಷಣೆಗಾಗಿ ಕ್ಷತ್ರಿಯನಾದವನು ತನ್ನ ಸೋದರನನ್ನೇ ಕೊಲ್ಲಬೇಕಾಗುತ್ತದೆ. ಬ್ರಹ್ಮನೇ ಕ್ಷತ್ರಿಯರಿಗೆ ಈ ಧರ್ಮವನ್ನು ವಿಧಿಸಿದ್ದಾನೆ. ಅದಕ್ಕಾಗಿ ಈ ಕ್ಷತ್ರಿಯಧರ್ಮವು ಅತ್ಯಂತ ಘೋರವಾಗಿದೆ. ॥40॥

(ಶ್ಲೋಕ-41)

ಮೂಲಮ್

ರಾಜ್ಯಸ್ಯ ಭೂಮೇರ್ವಿತ್ತಸ್ಯ ಸಿಯೋ ಮಾನಸ್ಯ ತೇಜಸಃ ।
ಮಾನಿನೋನ್ಯಸ್ಯ ವಾ ಹೇತೋಃ ಶ್ರೀಮದಾಂಧಾಃ ಕ್ಷಿಪಂತಿ ಹಿ ॥

ಅನುವಾದ

ಪುನಃ ಶ್ರೀಕೃಷ್ಣನಲ್ಲಿ ಹೇಳಿದನು ತಮ್ಮ! ಧನಮದದಿಂದ ಅಂಧರಾದ ದುರಹಂಕಾರಿಗಳು ರಾಜ್ಯ, ಭೂಮಿ, ಧನ, ಸ್ತ್ರೀ, ಮಾನ, ತೇಜಸ್ಸು ಇವುಗಳಿಂದಲೋ ಅಥವಾ ಬೇರೆ ಯಾವುದೇ ಕಾರಣದಿಂದ ತನ್ನ ಬಂಧುಗಳನ್ನೇ ತಿರಸ್ಕರಿಸುತ್ತಾರೆ. ॥41॥

(ಶ್ಲೋಕ-42)

ಮೂಲಮ್

ತವೇಯಂ ವಿಷಮಾ ಬುದ್ಧಿಃ ಸರ್ವಭೂತೇಷು ದುರ್ಹೃದಾಮ್ ।
ಯನ್ಮನ್ಯಸೇ ಸದಾಭದ್ರಂ ಸುಹೃದಾಂ ಭದ್ರಮಜ್ಞವತ್ ॥

ಅನುವಾದ

ರುಕ್ಮಿಣಿಯ ಬಳಿ ಹೇಳುತ್ತಾನೆ - ಸಾಧ್ವಿ! ನಿನ್ನ ಬಂಧುಗಳು ಸಮಸ್ತ ಪ್ರಾಣಿಗಳ ವಿಷಯದಲ್ಲಿ ದುರ್ಭಾವನೆಯನ್ನಿಟ್ಟುಕೊಂಡಿರುವರು. ನಾವು ಅವರಿಗೆ ಒಳ್ಳೆಯದಾಗಲೆಂದೇ ಈ ಶಿಕ್ಷೆಯನ್ನು ವಿಧಿಸಿದ್ದೇವೆ. ಇದನ್ನು ನೀನು ಅಜ್ಞಾನಿಗಳಂತೆ ಅಮಂಗಳವೆಂದು ಭಾವಿಸಬೇಡ. ॥42॥

(ಶ್ಲೋಕ-43)

ಮೂಲಮ್

ಆತ್ಮಮೋಹೋ ನೃಣಾಮೇಷ ಕಲ್ಪ್ಯತೇ ದೇವಮಾಯಯಾ ।
ಸುಹೃದ್ದುರ್ಹೃದುದಾಸೀನ ಇತಿ ದೇಹಾತ್ಮಮಾನಿನಾಮ್ ॥

ಅನುವಾದ

ದೇವಿ! ಭಗವಂತನ ಮಾಯೆಯಿಂದ ಮೋಹಿತರಾಗಿ ದೇಹವನ್ನೇ ಆತ್ಮನೆಂದು ತಿಳಿದವರಿಗೆ ಇವನು ಮಿತ್ರನು, ಇವನು ಶತ್ರುವು, ಇವನು ಉದಾಸೀನ ಇಂತಹ ಆತ್ಮಮೋಹ ಉಂಟಾಗುತ್ತದೆ. ॥43॥

(ಶ್ಲೋಕ-44)

ಮೂಲಮ್

ಏಕ ಏವ ಪರೋ ಹ್ಯಾತ್ಮಾ ಸರ್ವೇಷಾಮಪಿ ದೇಹಿನಾಮ್ ।
ನಾನೇವ ಗೃಹ್ಯತೇ ಮೂಢೈರ್ಯಥಾ ಜ್ಯೋತಿರ್ಯಥಾ ನಭಃ ॥

ಅನುವಾದ

ಸಮಸ್ತ ದೇಹಧಾರಿಗಳ ಆತ್ಮವು ಒಂದೇ ಆಗಿದೆ. ಅದಕ್ಕೆ ಮಾಯೆಯ ಯಾವ ಸಂಬಂಧವೂ ಇಲ್ಲ. ನೀರು, ಘಟ ಮುಂತಾದವುಗಳ ಭೇದದಿಂದ ಒಂದೇ ಆಗಿರುವ ಸೂರ್ಯ, ಚಂದ್ರರೇ ಮೊದಲಾದ ಪ್ರಕಾಶಮಾನ ಪದಾರ್ಥಗಳು ಮತ್ತು ಆಕಾಶವು ಭಿನ್ನ-ಭಿನ್ನವಾಗಿ ಕಂಡುಬರುವಂತೆ ಮೂರ್ಖಜನರು ಶರೀರ ಭೇದದಿಂದ ಆತ್ಮನಲ್ಲಿ ಭೇದವನ್ನು ಭಾವಿಸುತ್ತಾರೆ. ॥44॥

(ಶ್ಲೋಕ-45)

ಮೂಲಮ್

ದೇಹ ಆದ್ಯಂತವಾನೇಷ ದ್ರವ್ಯಪ್ರಾಣಗುಣಾತ್ಮಕಃ ।
ಆತ್ಮನ್ಯವಿದ್ಯಯಾ ಕ್ಲೃಪ್ತಃ ಸಂಸಾರಯತಿ ದೇಹಿನಮ್ ॥

ಅನುವಾದ

ಈ ಶರೀರವು ಆದಿ-ಅಂತ್ಯವುಳ್ಳದ್ದು. ಪಂಚಭೂತಗಳು, ಪಂಚ ಪ್ರಾಣಗಳು, ಪಂಚತನ್ಮಾತ್ರೆಗಳು, ಮತ್ತು ತ್ರಿಗುಣಗಳೇ ಇದರ ಸ್ವರೂಪವಾಗಿದೆ. ಆತ್ಮನಲ್ಲಿರುವ ಅಜ್ಞಾನದಿಂದಲೇ ಈ ಶರೀರ ಕಲ್ಪಿತವಾಗಿದೆ. ಅದನ್ನೇ ‘ನಾನು-ನನ್ನದು’ ಎಂದು ತಿಳಿದು ಹುಟ್ಟು-ಸಾವಿನ ಸಂಸಾರ ಚಕ್ರದಲ್ಲಿ ಬೀಳುತ್ತಾನೆ. ॥45॥

(ಶ್ಲೋಕ-46)

ಮೂಲಮ್

ನಾತ್ಮನೋನ್ಯೇನ ಸಂಯೋಗೋ ವಿಯೋಗಶ್ಚಾಸತಃ ಸತಿ ।
ತದ್ಧೇತುತ್ವಾತ್ತತ್ಪ್ರಸಿದ್ಧೇರ್ದೃಗ್ರೂಪಾಭ್ಯಾಂ ಯಥಾ ರವೇಃ ॥

ಅನುವಾದ

ಸಾಧ್ವಿ! ನೇತ್ರ ಮತ್ತು ರೂಪ ಎರಡೂ ಸೂರ್ಯನಿಂದ ಪ್ರಕಾಶಿಸುತ್ತವೆ. ಸೂರ್ಯನೇ ಅವುಗಳ ಕಾರಣನಾಗಿದ್ದಾನೆ. ಅದರಿಂದ ಸೂರ್ಯನೊಂದಿಗೆ ನೇತ್ರ ಮತ್ತು ರೂಪ ಇವುಗಳ ಸಂಯೋಗ-ವಿಯೋಗ ಎಂದೂ ಆಗುವುದಿಲ್ಲ. ಹೀಗೆಯೇ ಸಮಸ್ತ ಪ್ರಪಂಚದ ಅಸ್ತಿತ್ವವು ಆತ್ಮನ ಅಸ್ತಿತ್ವದ ಕಾರಣದಿಂದಲೇ ಕಂಡುಬರುತ್ತದೆ. ಸಮಸ್ತ ಪ್ರಪಂಚದ ಪ್ರಕಾಶವು ಆತ್ಮವೇ ಆಗಿದೆ. ಹಾಗಿರುವಾಗ ಆತ್ಮನೊಂದಿಗೆ ಬೇರೆ ಅಸತ್ ಪದಾರ್ಥಗಳ ಸಂಯೋಗ-ವಿಯೋಗ ಹೇಗಾಗಬಲ್ಲದು? ॥46॥

(ಶ್ಲೋಕ-47)

ಮೂಲಮ್

ಜನ್ಮಾದಯಸ್ತು ದೇಹಸ್ಯ ವಿಕ್ರಿಯಾ ನಾತ್ಮನಃ ಕ್ವಚಿತ್ ।
ಕಲಾನಾಮಿವ ನೈವೇಂದೋರ್ಮೃತಿರ್ಹ್ಯಸ್ಯ ಕುಹೂರಿವ ॥

ಅನುವಾದ

ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಕುಗ್ಗುವುದು, ಸಾಯುವುದು - ಈ ವಿಕಾರಗಳೆಲ್ಲವೂ ಶರೀರದ್ದಾಗಿರುತ್ತವೆ, ಆತ್ಮನದಲ್ಲ. ಕೃಷ್ಣಪಕ್ಷದಲ್ಲಿ ಚಂದ್ರನ ಕಲೆಗಳದ್ದೇ ಕ್ಷಯವಾಗುತ್ತದೆ, ಚಂದ್ರನದ್ದಲ್ಲ. ಆದರೆ ಅಮಾವಾಸ್ಯೆಯ ದಿನ ಜನರು ವ್ಯವಹಾರದಲ್ಲಿ ಚಂದ್ರನದೇ ಕ್ಷಯವಾಯಿತೆಂದು ಹೇಳುತ್ತಾ-ಕೇಳುತ್ತಾ ಇರುತ್ತಾರೆ. ಹಾಗೆಯೇ ಹುಟ್ಟು-ಸಾವು ಮುಂತಾದ ವಿಕಾರಗಳೆಲ್ಲವೂ ಶರೀರದ್ದೇ ಆಗಿರುತ್ತವೆ. ಆದರೆ ಜನರು ಭ್ರಮೆಯಿಂದ ಆತ್ಮನದೇ ಎಂದು ಭಾವಿಸುತ್ತಾರೆ. ॥47॥

(ಶ್ಲೋಕ-48)

ಮೂಲಮ್

ಯಥಾ ಶಯಾನ ಆತ್ಮಾನಂ ವಿಷಯಾನ್ ಲಮೇವ ಚ ।
ಅನುಭುಂಕ್ತೇಪ್ಯಸತ್ಯರ್ಥೇ ತಥಾಪ್ನೋತ್ಯಬುಧೋ ಭವಮ್ ॥

ಅನುವಾದ

ಮಲಗಿರುವ ವ್ಯಕ್ತಿಯು ಯಾವುದೇ ಪದಾರ್ಥಗಳು ಇಲ್ಲದೆಯೇ ಸ್ವಪ್ನದಲ್ಲಿ ಭೋಕ್ತಾ, ಭೋಗ್ಯ ಮತ್ತು ಭೋಗರೂಪವಾದ ಫಲಗಳನ್ನು ಅನುಭವಿಸುತ್ತಾನೆ. ಹಾಗೆಯೇ ಅಜ್ಞಾನೀ ಜನರು ಮಿಥ್ಯೆಯೇ ಆದ ಸಂಸಾರ ಚಕ್ರವನ್ನು ಅನುಭವಿಸುತ್ತಾರೆ. ॥48॥

(ಶ್ಲೋಕ-49)

ಮೂಲಮ್

ತಸ್ಮಾದಜ್ಞಾನಜಂ ಶೋಕಮಾತ್ಮಶೋಷವಿಮೋಹನಮ್ ।
ತತ್ತ್ವಜ್ಞಾನೇನ ನಿರ್ಹೃತ್ಯ ಸ್ವಸ್ಥಾ ಭವ ಶುಚಿಸ್ಮಿತೇ ॥

ಅನುವಾದ

ಅದಕ್ಕಾಗಿ ಸಾಧ್ವಿಯೇ! ಅಜ್ಞಾನದಿಂದ ಉಂಟಾದ ಈ ಶೋಕವನ್ನು ತ್ಯಜಿಸು. ಅದು ಅಂತಃಕರಣವನ್ನು ಶೋಷಿಸಿಬಿಡುತ್ತದೆ; ಮೋಹಿತಗೊಳಿಸುತ್ತದೆ. ಆದುದರಿಂದ ಈ ಶೋಕವನ್ನು ಬಿಟ್ಟು ನೀನು ನಿನ್ನ ಸ್ವರೂಪದಲ್ಲಿ ಸ್ಥಿತನಾಗು. ॥49॥

(ಶ್ಲೋಕ-50)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಭಗವತಾ ತನ್ವೀ ರಾಮೇಣ ಪ್ರತಿಬೋಧಿತಾ ।
ವೈಮನಸ್ಯಂ ಪರಿತ್ಯಜ್ಯ ಮನೋ ಬುದ್ಧ್ಯಾ ಸಮಾದಧೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬಲರಾಮನು ಈ ಪ್ರಕಾರವಾಗಿ ಸಮಜಾಯಿಸಿದಾಗ ಪರಮ ಸುಂದರಿಯಾದ ರುಕ್ಮಿಣಿಯು ತನ್ನ ಮನಸ್ಸನ್ನು ಸಾಂತ್ವನ ಗೊಳಿಸಿ ವಿವೇಕ ಬುದ್ಧಿಯಿಂದ ಅದನ್ನು ಸಮಾಧಾನ ಗೊಳಿಸಿದಳು. ॥50॥

(ಶ್ಲೋಕ-51)

ಮೂಲಮ್

ಪ್ರಾಣಾವಶೇಷ ಉತ್ಸೃಷ್ಟೋ ದ್ವಿಡ್ಭಿರ್ಹತಬಲಪ್ರಭಃ ।
ಸ್ಮರನ್ ವಿರೂಪಕರಣಂ ವಿತಥಾತ್ಮಮನೋರಥಃ ॥

ಅನುವಾದ

ರುಕ್ಮಿಯ ಸೈನ್ಯ ಮತ್ತು ತೇಜವು ನಾಶವಾಗಿ ಹೋಗಿತ್ತು. ಕೇವಲ ಪ್ರಾಣಗಳು ಉಳಿದಿದ್ದವು. ಅವನ ಮನಸ್ಸಿನ ಎಲ್ಲ ಆಸೆ ಆಕಾಂಕ್ಷೆಗಳು ವ್ಯರ್ಥವಾಗಿ ಹೋಗಿದ್ದವು. ಶತ್ರುಗಳು ಅವನನ್ನು ಅವಮಾನಿತಗೊಳಿಸಿ ಬಿಟ್ಟುಬಿಟ್ಟಿದ್ದರು. ತನ್ನನ್ನು ವಿರೂಪಗೊಳಿಸಿದ ಕಷ್ಟದಾಯಕ ಸ್ಮೃತಿಯನ್ನು ಅವನಿಂದ ಮರೆಯಲಾಗಲಿಲ್ಲ. ॥51॥

(ಶ್ಲೋಕ-52)

ಮೂಲಮ್

ಚಕ್ರೇ ಭೋಜಕಟಂ ನಾಮ ನಿವಾಸಾಯ ಮಹತ್ ಪುರಮ್ ।
ಅಹತ್ವಾ ದುರ್ಮತಿಂ ಕೃಷ್ಣಮಪ್ರತ್ಯೂಹ್ಯ ಯವೀಯಸೀಮ್ ।
ಕುಂಡಿನಂ ನ ಪ್ರವೇಕ್ಷ್ಯಾಮೀತ್ಯುಕ್ತ್ವಾ ತತ್ರಾವಸದ್ದ್ರುಷಾ ॥

ಅನುವಾದ

‘ದುರ್ಬುದ್ಧಿಯಾದ ಕೃಷ್ಣನನ್ನು ಕೊಲ್ಲದೆ, ತಂಗಿಯನ್ನು ಮರಳಿ ತರದೆ ಕುಂಡಿನಪುರವನ್ನು ಪ್ರವೇಶಿಸುವುದಿಲ್ಲ’ ಎಂದು ಅವನು ಹಿಂದೆಯೇ ಪ್ರತಿಜ್ಞೆ ಮಾಡಿದ್ದನು. ಆದ್ದರಿಂದ ಅವನು ಭೋಜಕಟ ಎಂಬ ನಗರವನ್ನು ನಿರ್ಮಿಸಿಕೊಂಡು, ಅಲ್ಲಿಯೇ ಕ್ರುದ್ಧನಾಗಿ ಇರತೊಡಗಿದನು. ॥52॥

(ಶ್ಲೋಕ-53)

ಮೂಲಮ್

ಭಗವಾನ್ ಭೀಷ್ಮಕಸುತಾಮೇವಂ ನಿರ್ಜಿತ್ಯ ಭೂಮಿಪಾನ್ ।
ಪುರಮಾನೀಯ ವಿಧಿವದುಪಯೇಮೇ ಕುರೂದ್ವಹ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಎಲ್ಲ ರಾಜರನ್ನು ಗೆದ್ದುಕೊಂಡು ರುಕ್ಮಿಣಿಯನ್ನು ದ್ವಾರಕೆಗೆ ಕರೆತಂದು ಆಕೆಯನ್ನು ವಿಧಿಪೂರ್ವಕವಾಗಿ ವಿವಾಹವಾದನು. ॥53॥

(ಶ್ಲೋಕ-54)

ಮೂಲಮ್

ತದಾ ಮಹೋತ್ಸವೋ ನೃಣಾಂ ಯದುಪುರ್ಯಾಂ ಗೃಹೇ ಗೃಹೇ ।
ಅಭೂದನನ್ಯಭಾವಾನಾಂ ಕೃಷ್ಣೇ ಯದುಪತೌ ನೃಪ ॥

ಅನುವಾದ

ರಾಜೇಂದ್ರನೇ! ಯದುಪತಿಯಾದ ಶ್ರೀಕೃಷ್ಣನಲ್ಲಿ ಅನನ್ಯವಾದ ಪ್ರೇಮವನ್ನು ಇರಿಸಿಕೊಂಡಿದ್ದ ದ್ವಾರಕಾನಗರದ ನಿವಾಸಿಗಳ ಮನೆ-ಮನೆಗಳಲ್ಲಿ ಶ್ರೀಕೃಷ್ಣನ ವಿವಾಹೋತ್ಸವವನ್ನು ಆಚರಿಸಿದರು. ॥54॥

(ಶ್ಲೋಕ-55)

ಮೂಲಮ್

ನರಾ ನಾರ್ಯಶ್ಚ ಮುದಿತಾಃ ಪ್ರಮೃಷ್ಟಮಣಿಕುಂಡಲಾಃ ।
ಪಾರಿಬರ್ಹಮುಪಾಜಹ್ರುರ್ವರಯೋಶ್ಚಿತ್ರವಾಸಸೋಃ ॥

ಅನುವಾದ

ಜಗ ಜಗಿಸುವ ರತ್ನದ ಕುಂಡಲಗಳನ್ನು ಧರಿಸಿದ್ದ ಅಲ್ಲಿಯ ನರ-ನಾರಿಯರು ಶ್ರೀಕೃಷ್ಣ-ರುಕ್ಮಿಣಿಯರ ವಿವಾಹ ಮಹೋತ್ಸವದಿಂದ ಆನಂದ ಭರಿತರಾಗಿ ಚಿತ್ರ-ವಿಚಿತ್ರವಾದ ವಸ್ತ್ರಗಳನ್ನು ಧರಿಸಿದ್ದ ವಧೂ-ವರರಿಗೆ ನಾನಾವಿಧವಾದ ಕಾಣಿಕೆ - ಉಡುಗೊರೆಗಳನ್ನು ತಂದೊಪ್ಪಿಸಿದರು. ॥55॥

(ಶ್ಲೋಕ-56)

ಮೂಲಮ್

ಸಾ ವೃಷ್ಣಿಪುರ್ಯುತ್ತಭಿತೇಂದ್ರಕೇತುಭಿ-
ರ್ವಿಚಿತ್ರಮಾಲ್ಯಾಂಬರರತ್ನತೋರಣೈಃ ।
ಬಭೌ ಪ್ರತಿದ್ವಾರ್ಯುಪಕ್ಲೃಪ್ತಮಂಗಲೈ-
ರಾಪೂರ್ಣಕುಂಭಾಗುರುಧೂಪದೀಪಕೈಃ ॥

ಅನುವಾದ

ಆ ಸಮಯದಲ್ಲಿ ದ್ವಾರಕಾಪಟ್ಟಣವು ಅಪೂರ್ವವಾದ ಶೋಭೆಯಿಂದ ಬೆಳಗುತ್ತಿದ್ದಿತು. ಎತ್ತರವಾದ ಇಂದ್ರಧ್ವಜಗಳು ಎಲ್ಲೆಡೆಯಲ್ಲಿಯೂ ಹಾರಾಡುತ್ತಿದ್ದವು. ಹಲವು ಬಣ್ಣದ ಪುಷ್ಪಹಾರಗಳ, ವಸ್ತ್ರಗಳ ಮತ್ತು ಮಣಿಗಳ ತೋರಣಗಳಿಂದ ಪಟ್ಟಣವು ಸಮಲಂಕೃತವಾಗಿತ್ತು. ಪ್ರತಿ ಮನೆಯ ಬಾಗಿಲುಗಳಲ್ಲಿಯೂ ಅರಳು, ಗರಿಕೆ, ಹೂವು ಮೊದಲಾದ ಮಂಗಳ ದ್ರವ್ಯಗಳನ್ನು ಪೂರ್ಣ ಕುಂಭಗಳನ್ನು ಇರಿಸಿದ್ದರು. ಅಗರು-ಧೂಪಗಳಿಂದಲೂ, ಸಾಲುದೀಪಗಳಿಂದಲೂ ಅಲ್ಲಿಯ ಶೋಭೆಯು ವಿಲಕ್ಷಣವಾಗಿತ್ತು. ॥56॥

(ಶ್ಲೋಕ-57)

ಮೂಲಮ್

ಸಿಕ್ತಮಾರ್ಗಾ ಮದಚ್ಯುದ್ಭಿರಾಹೂತಪ್ರೇಷ್ಠಭೂಭುಜಾಮ್ ।
ಗಜೈರ್ದ್ವಾಸ್ಸು ಪರಾಮೃಷ್ಟರಂಭಾಪೂಗೋಪಶೋಭಿತಾ ॥

ಅನುವಾದ

ವಿವಾಹಕ್ಕೆ ಆಹ್ವಾನಿಸಲ್ಪಟ್ಟ ಮಿತ್ರರಾಜರ ಮತ್ತಗಜಗಳ ಮದೋದಕದಿಂದ ಅಲ್ಲಿಯ ಬೀದಿಗಳು ತೊಯ್ದು ಹೋಗಿದ್ದವು. ಬಾಗಿಲುಗಳು ಸಾರಿಸಲ್ಪಟ್ಟು ಬಾಳೆಯ ಕಂಬಗಳಿಂದಲೂ, ಹೊಂಬಾಳೆಗಳಿಂದಲೂ, ಅಲಂಕರಿಸಲ್ಪಟ್ಟು ಅತ್ಯಂತ ಶೋಭಾಯಮಾನವಾಗಿ ಕಾಣುತ್ತಿದ್ದವು. ॥57॥

(ಶ್ಲೋಕ-58)

ಮೂಲಮ್

ಕುರುಸೃಂಜಯಕೈಕೇಯವಿದರ್ಭಯದುಕುಂತಯಃ ।
ಮಿಥೋ ಮುಮುದಿರೇ ತಸ್ಮಿನ್ಸಂಭ್ರಮಾತ್ ಪರಿಧಾವತಾಮ್ ॥

ಅನುವಾದ

ಆ ವಿವಾಹಮಹೋತ್ಸವ ಸಂದರ್ಭದಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದವರಲ್ಲಿ ಕುರು-ಸೃಂಜಯ-ಕೇಕಯ-ವಿದರ್ಭ-ಯದು ಮತ್ತು ಕುಂತೀದೇಶದ ಅರಸರೂ ಪ್ರಜೆಗಳೂ ಪರಸ್ಪರವಾಗಿ ಮಾತನಾಡಿಕೊಳ್ಳುತ್ತಾ ಆನಂದ ತುಂದಿಲರಾಗಿದ್ದರು. ॥58॥

(ಶ್ಲೋಕ-59)

ಮೂಲಮ್

ರುಕ್ಮಿಣ್ಯಾ ಹರಣಂ ಶ್ರುತ್ವಾ ಗೀಯಮಾನಂ ತತಸ್ತತಃ ।
ರಾಜಾನೋ ರಾಜಕನ್ಯಾಶ್ಚ ಬಭೂವುರ್ಭೃಶವಿಸ್ಮಿತಾಃ ॥

ಅನುವಾದ

ಅಲ್ಲಲ್ಲಿ ಗಾಯಕರು ರುಕ್ಮಿಣೀಹರಣ ಪ್ರಸಂಗವನ್ನು ಮಧುರವಾಗಿ ಗಾಯನ ಮಾಡುತ್ತಿದ್ದರು. ಇದನ್ನು ಕೇಳಿದ ರಾಜರೂ ಮತ್ತು ರಾಜಕನ್ಯೆಯರೂ ಅತ್ಯಂತ ವಿಸ್ಮಿತರಾದರು. ॥59॥

(ಶ್ಲೋಕ-60)

ಮೂಲಮ್

ದ್ವಾರಕಾಯಾಮಭೂದ್ ರಾಜನ್ ಮಹಾಮೋದಃ ಪುರೌಕಸಾಮ್ ।
ರುಕ್ಮಿಣ್ಯಾ ರಮಯೋಪೇತಂ ದೃಷ್ಟ್ವಾ ಕೃಷ್ಣಂ ಶ್ರಿಯಃಪತಿಮ್ ॥

ಅನುವಾದ

ರಾಜೇಂದ್ರನೇ! ಲಕ್ಷ್ಮೀದೇವಿಯು ರುಕ್ಮಿಣೀರೂಪದಲ್ಲಿದ್ದು ಸಾಕ್ಷಾತ್ ಲಕ್ಷ್ಮೀಪತಿಯಾದ ಶ್ರೀಕೃಷ್ಣನೊಡನೆ ಸೇರಿರುವುದನ್ನು ನೋಡಿ ದ್ವಾರಕಾವಾಸಿಗಳಾದ ನರ-ನಾರಿಯರೆಲ್ಲರೂ ಆನಂದ ಸಾಗರದಲ್ಲಿ ಮುಳುಗಿ ಹೋದರು. ॥60॥

ಅನುವಾದ (ಸಮಾಪ್ತಿಃ)

ಐವತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥54॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ರುಕ್ಮಿಣ್ಯುದ್ವಾಹೋತ್ಸವೋ ನಾಮ ಚತುಃಪಂಚಾಶತ್ತಮೋಽಧ್ಯಾಯಃ ॥54॥