[ಮೂವತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣ-ಬಲರಾಮರು ಮಥುರಾಗಮನ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸುಖೋಪವಿಷ್ಟಃ ಪರ್ಯಂಕೇ ರಾಮಕೃಷ್ಣೋರುಮಾನಿತಃ ।
ಲೇಭೇ ಮನೋರಥಾನ್ಸರ್ವಾನ್ ಪಥಿ ಯಾನ್ಸ ಚಕಾರ ಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬಲರಾಮ-ಶ್ರೀಕೃಷ್ಣರಿಂದ ಚೆನ್ನಾಗಿ ಆದರಿಸಲ್ಪಟ್ಟ ಅಕ್ರೂರನು ಮಂಚದ ಮೇಲೆ ಸುಖವಾಗಿ ಕುಳಿತಿದ್ದನು. ಅವನು ಬರುವಾಗ ದಾರಿಯಲ್ಲಿ ಏನೇನನ್ನು ಬಯಸಿದ್ದನೋ ಅದೆಲ್ಲವನ್ನೂ ಪಡೆದುಕೊಂಡನು. ಮನೋರಥಗಳೆಲ್ಲವೂ ಈಡೇರಿದವು. ॥1॥
(ಶ್ಲೋಕ-2)
ಮೂಲಮ್
ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ ।
ತಥಾಪಿ ತತ್ಪರಾ ರಾಜನ್ ನಹಿ ವಾಂಛಂತಿ ಕಿಂಚನ ॥
ಅನುವಾದ
ರಾಜನೇ! ಮಹಾಲಕ್ಷ್ಮಿಗೆ ನಿವಾಸ ಸ್ಥಾನವಾದ ಭಗವಾನ್ ಶ್ರೀಕೃಷ್ಣನೇ ಪ್ರಸನ್ನನಾದನೆಂದರೆ ಲಭಿಸದ ವಸ್ತುವು ಯಾವುದು ತಾನೇ ಇದ್ದೀತು? ಹೀಗಿದ್ದರೂ ಭಗವಂತನಲ್ಲಿಯೇ ಪರಮಭಕ್ತಿಯುಳ್ಳ ಭಕ್ತೋತ್ತಮರು ಯಾವುದೇ ವಸ್ತುವನ್ನು ಬಯಸುವುದಿಲ್ಲ. ॥2॥
(ಶ್ಲೋಕ-3)
ಮೂಲಮ್
ಸಾಯಂತನಾಶನಂ ಕೃತ್ವಾ ಭಗವಾನ್ ದೇವಕೀಸುತಃ ।
ಸುಹೃತ್ಸು ವೃತ್ತಂ ಕಂಸಸ್ಯ ಪಪ್ರಚ್ಛಾನ್ಯಚ್ಚಿಕೀರ್ಷಿತಮ್ ॥
ಅನುವಾದ
ದೇವಕೀ ನಂದನ ಶ್ರೀಕೃಷ್ಣನು ಸಾಯಂಕಾಲದ ಭೋಜನಾನಂತರ ಅಕ್ರೂರನ ಬಳಿಗೆ ಬಂದು - ತನ್ನ ಸ್ವಜನ - ಸಂಬಂಧಿಗಳ ಜೊತೆಗೆ ಕಂಸನು ಹೇಗೆ ವ್ಯವಹರಿಸುವನು ಹಾಗೂ ಮುಂದಿನ ಕಾರ್ಯಕ್ರಮದ ಕುರಿತು ಕೇಳಿದನು. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ತಾತ ಸೌಮ್ಯಾಗತಃ ಕಚ್ಚಿತ್ ಸ್ವಾಗತಂ ಭದ್ರಮಸ್ತು ವಃ ।
ಅಪಿ ಸ್ವಜ್ಞಾತಿಬಂಧೂನಾಮನಮೀವಮನಾಮಯಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಕೇಳಿದನು — ಸೌಮ್ಯನಾದ ಅಕ್ರೂರನೇ! ಪ್ರಯಾಣದಲ್ಲಿ ಯಾವ ತೊಂದರೆಯೂ ಆಗಲಿಲ್ಲವಲ್ಲ? ನಿನಗೆ ಸ್ವಾಗತ ಬಯಸುತ್ತೇನೆ. ನಿನಗೆ ಮಂಗಳವಾಗಲಿ. ಮಥುರೆಯಲ್ಲಿ ನಮ್ಮ ಆತ್ಮೀಯ ಬಂಧುಗಳೂ, ಸುಹೃದರೂ ಹಾಗೂ ಇತರ ಬಾಂಧವರೆಲ್ಲರೂ ಕುಶಲರಾಗಿದ್ದು ಸ್ವಸ್ಥರಾಗಿರುವರೇ? ॥4॥
(ಶ್ಲೋಕ-5)
ಮೂಲಮ್
ಕಿಂ ನು ನಃ ಕುಶಲಂ ಪೃಚ್ಛೇ ಏಧಮಾನೇ ಕುಲಾಮಯೇ ।
ಕಂಸೇ ಮಾತುಲನಾಮ್ನ್ಯಂಗ ಸ್ವಾನಾಂ ನಸ್ತತ್ಪ್ರಜಾಸು ಚ ॥
ಅನುವಾದ
ಹೆಸರಿಗೆ ಮಾತ್ರ ಮಾವನಾದ ಕಂಸನಾದರೋ ನಮ್ಮ ಕುಲಕ್ಕೆ ಒಂದು ಭಯಂಕರ ವ್ಯಾಧಿರೂಪನೇ ಆಗಿರುವನು. ಅವನು ವೃದ್ಧಿ ಹೊಂದುತ್ತಿರುವವರೆಗೆ ನಾವು ನಮ್ಮ ವಂಶಿಯರ, ಸಂತಾನದ ಮತ್ತು ಪ್ರಜೆಗಳ ಕುಶಲವನ್ನು ಕೇಳುವುದೇನಿದೆ? ॥5॥
(ಶ್ಲೋಕ-6)
ಮೂಲಮ್
ಅಹೋ ಅಸ್ಮದಭೂದ್ಭೂರಿ ಪಿತ್ರೋರ್ವೃಜಿನಮಾರ್ಯಯೋಃ ।
ಯದ್ಧೇತೋಃ ಪುತ್ರಮರಣಂ ಯದ್ಧೇತೋರ್ಬಂಧನಂ ತಯೋಃ ॥
ಅನುವಾದ
ಸೌಮ್ಯನೇ! ಇದೊಂದು ನಮಗೆ ಅತ್ಯಂತ ದುಃಖದ ಸಂಗತಿಯಾಗಿದೆ. ನನ್ನ ಸಲುವಾಗಿಯೇ ನಿರಪರಾಧಿಗಳಾದ, ಸದಾಚಾರ ಸಂಪನ್ನರಾದ ನನ್ನ ತಂದೆ-ತಾಯಿಗಳು ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ನನ್ನ ಕಾರಣದಿಂದಲೇ ಅವರ ಕಾಲುಗಳಿಗೆ ಸಂಕೋಲೆಗಳನ್ನು ತೊಡಿಸಿ ಸೆರೆಮನೆಯಲ್ಲಿಡಲಾಗಿದೆ. ನನ್ನ ಕಾರಣದಿಂದಲೇ ಅವರ ಮಕ್ಕಳೂ ಕೊಲ್ಲಲ್ಪಟ್ಟರು. ॥6॥
(ಶ್ಲೋಕ-7)
ಮೂಲಮ್
ದಿಷ್ಟ್ಯಾದ್ಯ ದರ್ಶನಂ ಸ್ವಾನಾಂ ಮಹ್ಯಂ ವಃ ಸೌಮ್ಯ ಕಾಂಕ್ಷಿತಮ್ ।
ಸಂಜಾತಂ ವರ್ಣ್ಯತಾಂ ತಾತ ತವಾಗಮನಕಾರಣಮ್ ॥
ಅನುವಾದ
ನಿಮ್ಮನ್ನೆಲ್ಲ ನೋಡಬೇಕೆಂದು ನಾನು ಬಹಳ ದಿನಗಳಿಂದ ಬಯಸುತ್ತಿದ್ದೆ, ನನ್ನ ಸೌಭಾಗ್ಯದಿಂದ ಆ ಅಭಿಲಾಷೆಯು ಇಂದು ಪೂರ್ಣವಾಯಿತು. ಸೌಮ್ಯಸ್ವಭಾವದ ಚಿಕ್ಕಪ್ಪನವರೇ! ತಮ್ಮ ಶುಭಾಗಮನವು ಯಾವ ನಿಮಿತ್ತದಿಂದ ಆಯಿತು ಎಂಬುದನ್ನು ದಯವಿಟ್ಟು ತಿಳಿಸಿರಿ. ॥7॥
(ಶ್ಲೋಕ-8)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಪೃಷ್ಟೋ ಭಗವತಾ ಸರ್ವಂ ವರ್ಣಯಾಮಾಸ ಮಾಧವಃ ।
ವೈರಾನುಬಂಧಂ ಯದುಷು ವಸುದೇವವಧೋದ್ಯಮಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಪ್ರಶ್ನಿಸಿದಾಗ ಅಕ್ರೂರನು ಹೇಳಿದನು ಕಂಸನಾದರೋ ಯದುವಂಶೀಯರೊಡನೆ ದ್ವೇಷವನ್ನು ಕಟ್ಟಿಕೊಂಡಿರುವನು. ಅವನು ವಸುದೇವನನ್ನು ಕೂಡ ವಧಿಸಲು ಪ್ರಯತ್ನಶೀಲನಾಗಿರುವನು. ॥8॥
(ಶ್ಲೋಕ-9)
ಮೂಲಮ್
ಯತ್ಸಂದೇಶೋ ಯದರ್ಥಂ ವಾ ದೂತಃ ಸಂಪ್ರೇಷಿತಃ ಸ್ವಯಮ್ ।
ಯದುಕ್ತಂ ನಾರದೇನಾಸ್ಯ ಸ್ವಜನ್ಮಾನಕದುಂದುಭೇಃ ॥
ಅನುವಾದ
ಅಕ್ರೂರನು ಕಂಸನ ಸಂದೇಶವನ್ನೂ, ಯಾವ ಉದ್ದೇಶದಿಂದ ತನ್ನನ್ನು ದೂತನಾಗಿ ಕಳಿಸಿರುವನೆಂಬುದನ್ನು ತಿಳಿಸಿದನು. ವಸುದೇವನ ಮನೆಯಲ್ಲಿ ಶ್ರೀಕೃಷ್ಣನು ಹುಟ್ಟಿರುವ ವೃತ್ತಾಂತವನ್ನು ನಾರದರು ಕಂಸನಿಗೆ ತಿಳಿಸಿದುದೆಲ್ಲವನ್ನು ಹೇಳಿದನು. ॥9॥
(ಶ್ಲೋಕ-10)
ಮೂಲಮ್
ಶ್ರುತ್ವಾಕ್ರೂರವಚಃ ಕೃಷ್ಣೋ ಬಲಶ್ಚ ಪರವೀರಹಾ ।
ಪ್ರಹಸ್ಯ ನಂದಂ ಪಿತರಂ ರಾಜ್ಞಾದಿಷ್ಟಂ ವಿಜಜ್ಞತುಃ ॥
ಅನುವಾದ
ಅಕ್ರೂರನು ಹೇಳಿದುದೆಲ್ಲವನ್ನೂ ಕೇಳಿ ಶತ್ರುವಿನಾಶಕರಾದ ಶ್ರೀಕೃಷ್ಣ ಬಲರಾಮರು ನಗತೊಡಗಿದರು ಮತ್ತು ಶ್ರೀಕೃಷ್ಣನು ತಂದೆಯಾದ ನಂದಗೋಪನಿಗೆ ಕಂಸನ ಆದೇಶವನ್ನು ತಿಳಿಸಿದನು. ॥10॥
ಮೂಲಮ್
(ಶ್ಲೋಕ-11)
ಗೋಪಾನ್ ಸಮಾದಿಶತ್ಸೋಪಿ ಗೃಹ್ಯತಾಂ ಸರ್ವಗೋರಸಃ ।
ಉಪಾಯನಾನಿ ಗೃಹ್ಣೀಧ್ವಂ ಯುಜ್ಯಂತಾಂ ಶಕಟಾನಿ ಚ ॥
ಅನುವಾದ
ಕಂಸನ ಆಜ್ಞೆಯನ್ನು ಕೇಳುತ್ತಲೇ ನಂದಗೋಪನು ಗೋಪಾಲರಿಗೆ ಅಪ್ಪಣೆ ಮಾಡಿದನು - ಗೋಪಾಲರೇ! ಹಾಲು-ಮೊಸಲು ಮುಂತಾದ ಗೋರಸವನ್ನು ಸಂಗ್ರಹಿಸಿ ಸಿದ್ಧಪಡಿಸಿರಿ. ರಾಜನಿಗೆ ಕೊಡಬೇಕಾದ ಕಪ್ಪ-ಕಾಣಿಕೆಗಳನ್ನು ಎತ್ತಿಕೊಂಡು ಪ್ರಯಾಣಕ್ಕೆ ಎತ್ತಿನ ಗಾಡಿಗಳು ಸಿದ್ಧವಾಗಲಿ. ॥11॥
(ಶ್ಲೋಕ-12)
ಮೂಲಮ್
ಯಾಸ್ಯಾಮಃ ಶ್ವೋ ಮಧುಪುರೀಂ ದಾಸ್ಯಾಮೋ ನೃಪತೇ ರಸಾನ್ ।
ದ್ರಕ್ಷ್ಯಾಮಃ ಸುಮಹತ್ಪರ್ವ ಯಾಂತಿ ಜಾನಪದಾಃ ಕಿಲ ।
ಏವಮಾಘೋಷಯತ್ ಕ್ಷತಾ ನಂದಗೋಪಃ ಸ್ವಗೋಕುಲೇ ॥
ಅನುವಾದ
ನಾಳೆ ಪ್ರಾತಃ ಕಾಲವೇ ನಾವು ಮಥುರಾಪಟ್ಟಣಕ್ಕೆ ಪ್ರಯಾಣ ಮಾಡಬೇಕಾಗಿದೆ. ಅಲ್ಲಿಗೆ ಹೋಗಿ ಕಂಸರಾಜನಿಗೆ ಗೋರಸವನ್ನು ಕೊಡುವೆವು. ಅಲ್ಲಿ ಒಂದು ಅದ್ಭುತವಾದ ಉತ್ಸವ ನಡೆಯುವುದು. ಅದನ್ನು ನೋಡಲು ದೇಶದ ಎಲ್ಲ ಪ್ರಜೆಗಳು ಆಗಮಿಸುವರು. ನಾವೂ ಅದನ್ನು ನೋಡುವಾ, ಹೀಗೆ ನಂದಗೋಪನು ತಳವಾರನ ಮೂಲಕವಾಗಿ ನಂದಗೋಕುಲದಲ್ಲೆಲ್ಲಾ ಡಂಗುರ ಸಾರಿದನು. ॥12॥
(ಶ್ಲೋಕ-13)
ಮೂಲಮ್
ಗೋಪ್ಯಸ್ತಾಸ್ತದುಪಶ್ರುತ್ಯ ಬಭೂವುರ್ವ್ಯಥಿತಾ ಭೃಶಮ್ ।
ರಾಮಕೃಷ್ಣೌ ಪುರೀಂ ನೇತುಮಕ್ರೂರಂ ವ್ರಜಮಾಗತಮ್ ॥
ಅನುವಾದ
ಪರೀಕ್ಷಿತನೇ! ರಾಮ-ಕೃಷ್ಣರನ್ನು ಮಥುರಾ ಪಟ್ಟಣಕ್ಕೆ ಕರೆದೊಯ್ಯಲು ಅಕ್ರೂರನು ವ್ರಜಕ್ಕೆ ಬಂದಿರುವನೆಂದು ಗೋಪಿಯರು ಕೇಳಿದಾಗ ಅವರು ಬಹಳ ದುಃಖಿತರಾಗಿ ವ್ಯಾಕುಲರಾದರು. ॥13॥
(ಶ್ಲೋಕ-14)
ಮೂಲಮ್
ಕಾಶ್ಚಿತ್ತತ್ಕೃತಹೃತ್ತಾಪಶ್ವಾಸಮ್ಲಾನಮುಖಶ್ರಿಯಃ ।
ಸ್ರಂಸದ್ದುಕೂಲವಲಯಕೇಶಗ್ರಂಥ್ಯಶ್ಚ ಕಾಶ್ಚನ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಮಥುರೆಗೆ ಹೋಗುವನೆಂಬ ಮಾತನ್ನು ಕೇಳುತ್ತಲೇ ಗೋಪಿಯರು ಪರಿತಾಪದಿಂದ ನಿಟ್ಟುಸಿರುಬಿಟ್ಟರು. ಎಲ್ಲ ಗೋಪಿಯರ ಮುಖಕಮಲಗಳು ಬಾಡಿದವು. ಉಟ್ಟಸೀರೆಗಳು ಜಾರಿಹೋಗುತ್ತಿದ್ದರೂ, ಕೈಕಡಗಗಳು ಕಳಚಿ ಬೀಳುತ್ತಿದ್ದರೂ, ತುರುಬುಗಳು ಬಿಚ್ಚಿಹೋಗುತ್ತಿದ್ದರೂ ತಿಳಿಯದಷ್ಟು ಪರವಶರಾದರು. ॥14॥
(ಶ್ಲೋಕ-15)
ಮೂಲಮ್
ಅನ್ಯಾಶ್ಚ ತದನುಧ್ಯಾನನಿವೃತ್ತಾಶೇಷವೃತ್ತಯಃ ।
ನಾಭ್ಯಜಾನನ್ನಿಮಂ ಲೋಕಮಾತ್ಮಲೋಕಂ ಗತಾ ಇವ ॥
ಅನುವಾದ
ಭಗವಂತನಲ್ಲೇ ನೆಟ್ಟ ಮನಸ್ಸುಳ್ಳವರಾಗಿ ಅವನ ಶ್ರೀವಿಗ್ರಹವನ್ನು ಧ್ಯಾನಿಸುತ್ತಾ ಕೆಲವು ಗೋಪಿಯರಿಗೆ ಚಿತ್ತವೃತ್ತಿಯೇ ನಿಂತು ಹೋಗಿ ಸಮಾಧಿಸ್ಥರಾದರು. ಆತ್ಮನಲ್ಲೇ ಸ್ಥಿತರಾದ ಅವರಿಗೆ ತಮ್ಮ ಶರೀರದ ಕುರಿತಾಗಲೀ, ಸಂಸಾರದ ಕುರಿತಾಗಲೀ ಎಚ್ಚರವೇ ಇರಲಿಲ್ಲ. ॥15॥
(ಶ್ಲೋಕ-16)
ಮೂಲಮ್
ಸ್ಮರಂತ್ಯಶ್ಚಾಪರಾಃ ಶೌರೇರನುರಾಗಸ್ಮಿತೇರಿತಾಃ ।
ಹೃದಿಸ್ಪೃಶಶ್ಚಿತ್ರಪದಾ ಗಿರಃ ಸಂಮುಮುಹುಃ ಸಿಯಃ ॥
ಅನುವಾದ
ಮತ್ತೆ ಕೆಲವು ಗೋಪಿಯರು ಶೌರಿಯ ಮಂದಹಾಸದಿಂದ ಕೂಡಿದ ಅನುರಾಗವನ್ನು ಸ್ಮರಿಸಿಕೊಂಡರು. ಕೆಲವರು ವಿಚಿತ್ರ ಪದಸಮೂಹದಿಂದ ಮನಮುಟ್ಟುವ ಶ್ರೀಕೃಷ್ಣನ ಸುಮಧುರವಾದ ಮಾತುಗಳನ್ನು ಸ್ಮರಿಸಿ ವಿಮೋಹಿತರಾದರು. ॥16॥
(ಶ್ಲೋಕ-17)
ಮೂಲಮ್
ಗತಿಂ ಸುಲಲಿತಾಂ ಚೇಷ್ಟಾಂ ಸ್ನಿಗ್ಧಹಾಸಾವಲೋಕನಮ್ ।
ಶೋಕಾಪಹಾನಿ ನರ್ಮಾಣಿ ಪ್ರೋದ್ದಾಮಚರಿತಾನಿ ಚ ॥
(ಶ್ಲೋಕ-18)
ಮೂಲಮ್
ಚಿಂತಯಂತ್ಯೋ ಮುಕುಂದಸ್ಯ ಭೀತಾ ವಿರಹಕಾತರಾಃ ।
ಸಮೇತಾಃ ಸಂಘಶಃ ಪ್ರೋಚುರಶ್ರುಮುಖ್ಯೋಚ್ಯುತಾಶಯಾಃ ॥
ಅನುವಾದ
ಗೋಪಿಯರು ಮನಸ್ಸಿನಲ್ಲೇ ಭಗವಂತನ ಮನಮೋಹಕವಾದ ನಡಿಗೆಯನ್ನು, ಭಾವ-ಭಂಗಿಗಳನ್ನು, ಪ್ರೇಮಪೂರ್ಣವಾದ ಕಿರುನಗೆಯನ್ನು, ಕುಡಿನೋಟವನ್ನು. ಸಕಲ ಶೋಕಗಳನ್ನು ಇಲ್ಲವಾಗಿಸುವ ವಿನೋದ ಮಾತುಗಳನ್ನು, ಲೀಲೆಗಳನ್ನು ಚಿಂತಿಸುತ್ತಾ ವಿರಹದ ಭಯದಿಂದ ಕಾತರರಾದರು. ಅವರ ಹೃದಯ-ಜೀವನ ಎಲ್ಲವೂ ಭಗವಂತನಲ್ಲಿ ಸಮರ್ಪಿತವಾಗಿತ್ತು. ಅವರ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯತೊಡಗಿತು. ಅವರೆಲ್ಲರೂ ಗುಂಪು-ಗುಂಪಾಗಿ ಒಟ್ಟಿಗೆ ಸೇರಿ ಹೀಗೆ ಮಾತನಾಡಿಕೊಂಡರು. ॥17-18॥
(ಶ್ಲೋಕ-19)
ಮೂಲಮ್ (ವಾಚನಮ್)
ಗೋಪ್ಯ ಊಚುಃ
ಮೂಲಮ್
ಅಹೋ ವಿಧಾತಸ್ತವ ನ ಕ್ವಚಿದ್ದಯಾ
ಸಂಯೋಜ್ಯ ಮೈತ್ರ್ಯಾ ಪ್ರಣಯೇನ ದೇಹಿನಃ ।
ತಾಂಶ್ಚಾಕೃತಾರ್ಥಾನ್ ವಿಯುನಂಕ್ಷ್ಯಪಾರ್ಥಕಂ
ವಿಕ್ರೀಡಿತಂ ತೇರ್ಭಕಚೇಷ್ಟಿತಂ ಯಥಾ ॥
ಅನುವಾದ
ಗೋಪಿಯರು ಹೇಳುತ್ತಾರೆ — ಓ ಬ್ರಹ್ಮದೇವನೇ! ನಿನ್ನ ಹೃದಯದಲ್ಲಿ ದಯೆಯೆಂಬುದು ಲೇಶಮಾತ್ರವೂ ಇಲ್ಲವಲ್ಲ! ಮೊದಲು ನೀನು ಸೌಹಾರ್ದದಿಂದಲೂ, ಪ್ರೇಮದಿಂದಲೂ ಪ್ರಪಂಚದಲ್ಲಿರುವ ಪ್ರಾಣಿಗಳನ್ನು ಪರಸ್ಪರವಾಗಿ ಸೇರಿಸುವೆ, ಆದರೆ ಅವರ ಆಶಯವು ಪೂರ್ಣವಾಗುವುದರೊಳಗಾಗಿಯೇ ಅವರು ಪೂರ್ಣತೃಪ್ತಿಯನ್ನು ಹೊಂದುವ ಮೊದಲೇ, ಅವರನ್ನು ಬೇರ್ಪಡಿಸುವೆ. ನಿಶ್ಚಯವಾಗಿಯೂ ಈ ನಿನ್ನ ಕಾರ್ಯವು ಮಕ್ಕಳ ಆಟಿಕೆಯಂತೆ ವ್ಯರ್ಥವಾದುದೇ ಸರಿ. ॥19॥
(ಶ್ಲೋಕ-20)
ಮೂಲಮ್
ಯಸ್ತ್ವಂ ಪ್ರದರ್ಶ್ಯಾಸಿತಕುಂತಲಾವೃತಂ
ಮುಕುಂದವಕಂ ಸುಕಪೋಲಮುನ್ನಸಮ್ ।
ಶೋಕಾಪನೋದಸ್ಮಿತಲೇಶಸುಂದರಂ
ಕರೋಷಿ ಪಾರೋಕ್ಷ್ಯಮಸಾಧು ತೇ ಕೃತಮ್ ॥
ಅನುವಾದ
ಓ ವಿಧಾತನೇ! ಇದೆಂತಹ ದುಃಖದ ವಿಷಯವಾಗಿದೆ ನೋಡು! ಮೊದಲು ನೀನು ಪ್ರೇಮವನ್ನು ಉಮ್ಮಡಿಸುವ ಶ್ಯಾಮಸುಂದರನ ದಿವ್ಯವಾದ ಮುಖ ಕಮಲವನ್ನು ನಮಗೆ ತೋರಿಸಿಕೊಟ್ಟೆ. ಅದೆಷ್ಟು ಚೆಲುವಿನ ಮುಖ ಕಮಲ! ಕಪ್ಪಾದ ಮುಂಗುರುಳಿನಿಂದ ಅಲಂಕೃತವಾಗಿದೆ. ಸುಂದರವಾದ ಕಪೋಲಗಳಿಂದಲೂ, ನೀಳವಾದ ಮೂಗಿನಿಂದಲೂ ಕೂಡಿ ಬೆಳಗುತ್ತಿರುವುದು. ದುಃಖವನ್ನು ಕಳೆದು ಆನಂದವನ್ನುಂಟು ಮಾಡುವ ಚೇತೋಹಾರಿಯಾದ ಕಿರುನಗೆಯಿಂದ ಶೋಭಿಸುತ್ತಿರುವುದು. ಅಂತಹ ಕಡು ಚೆಲುವಿನ ಮುಖಕಮಲವನ್ನು ನಮಗೆ ತೋರಿಸಿ ಈಗ ಅದನ್ನು ನಮ್ಮಿಂದ ಮರೆಮಾಡಲು ಹವಣಿಸುತ್ತಿರುವೆ. ಹೀಗೆ ಮಾಡುವುದು ಖಂಡಿತವಾಗಿಯೂ ನಿನಗೆ ಯೋಗ್ಯವೆನಿಸುವುದಿಲ್ಲ. ॥20॥
(ಶ್ಲೋಕ-21)
ಮೂಲಮ್
ಕ್ರೂರಸ್ತ್ವಮಕ್ರೂರಸಮಾಖ್ಯಯಾ ಸ್ಮ ನ-
ಶ್ಚಕ್ಷುರ್ಹಿ ದತ್ತಂ ಹರಸೇ ಬತಾಜ್ಞವತ್ ।
ಯೇನೈಕದೇಶೇಖಿಲಸರ್ಗಸೌಷ್ಠವಂ
ತ್ವದೀಯಮದ್ರಾಕ್ಷ್ಮ ವಯಂ ಮಧುದ್ವಿಷಃ ॥
ಅನುವಾದ
ವಿಧಾತನೇ! ಅತ್ಯಂತ ಕ್ರೂರಿಯಾದ ನೀನು ‘ಅಕ್ರೂರ’ನೆಂಬ ಹೆಸರಿನಿಂದ ಕರೆಯಲ್ಪಡುತ್ತಾ ನಮ್ಮ ಕಣ್ಮಣಿಯನ್ನು ಮೂಢನಂತೆ ಅಪಹರಿಸುತ್ತಿರುವೆಯಲ್ಲ! ಮಧುಹಂತಕನಾದ ಶ್ರೀಕೃಷ್ಣನ ಒಂದೊಂದು ಅವಯವಗಳಲ್ಲಿಯೂ ನಿನ್ನ ಸೃಷ್ಟಿಯ ಚಾತುರ್ಯವನ್ನು ಯಾವ ಕಣ್ಣುಗಳಿಂದ ಕಂಡು ನಾವು ಬೆರಗಾಗಿ ನಿನ್ನನ್ನು ಕೊಂಡಾಡುತ್ತಿದ್ದೆವೋ ಅಂತಹ ನಮ್ಮ ಕಣ್ಣುಗಳನ್ನೇ ನೀನು ಅಪಹರಿಸುತ್ತಿರುವೆ. ನಮ್ಮ ಕಣ್ಮಣಿಯನ್ನು ಕಾಣದ ನಾವು ಕಣ್ಣಿಲ್ಲದ ಕುರುಡರಂತೆಯೇ ಸರಿ. ॥21॥
(ಶ್ಲೋಕ-22)
ಮೂಲಮ್
ನ ನಂದಸೂನುಃ ಕ್ಷಣಭಂಗಸೌಹೃದಃ
ಸಮೀಕ್ಷತೇ ನಃ ಸ್ವಕೃತಾತುರಾ ಬತ ।
ವಿಹಾಯ ಗೇಹಾನ್ ಸ್ವಜನಾನ್ ಸುತಾನ್ ಪತೀಂ-
ಸ್ತದ್ದಾಸ್ಯಮದ್ಧೋಪಗತಾ ನವಪ್ರಿಯಃ ॥
ಅನುವಾದ
ಅಯ್ಯೋ! ನಂದನಂದನ ಶ್ಯಾಮಸುಂದರನು ಹೊಸ-ಹೊಸ ಜನರಲ್ಲಿ ಸ್ನೇಹ ಮಾಡಲು ಆಶಿಸಿದ್ದಾನೆ. ಇವನ ಸ್ನೇಹವೆಂಬುದು ಕ್ಷಣಭಂಗುರವಾದುದು. ಅವನ ಕಿರುನಗೆ, ಸವಿಮಾತು, ಕುಡಿ ನೋಟ ಇವುಗಳಿಂದ ಆಕರ್ಷಿತರಾದ ನಾವು ಮನೆ-ಮಠಗಳನ್ನು, ಮಾತಾ-ಪಿತೃಗಳನ್ನು, ಪತಿ-ಸುತರನ್ನು, ಅಣ್ಣ-ತಮ್ಮಂದಿರನ್ನು ತೊರೆದು ಇವನಿಗೆ ದಾಸಿಯರಾದೆವು. ಇವನಿಗಾಗಿಯೇ ಇಂದು ನಮ್ಮ ಹೃದಯ ಶೋಕಾತುರವಾಗುತ್ತಿದೆ. ಆದರೆ ಇವನು ನಮ್ಮ ಕಡೆಗೆ ನೋಡುವುದೇ ಇಲ್ಲವಲ್ಲ! ॥22॥
(ಶ್ಲೋಕ-23)
ಮೂಲಮ್
ಸುಖಂ ಪ್ರಭಾತಾ ರಜನೀಯಮಾಶಿಷಃ
ಸತ್ಯಾ ಬಭೂವುಃ ಪುರಯೋಷಿತಾಂ ಧ್ರುವಮ್ ।
ಯಾಃ ಸಂಪ್ರವಿಷ್ಟಸ್ಯ ಮುಖಂ ವ್ರಜಸ್ಪತೇಃ
ಪಾಸ್ಯಂತ್ಯಪಾಂಗೋತ್ಕಲಿತಸ್ಮಿತಾಸವಮ್ ॥
ಅನುವಾದ
ಇಂದಿನ ರಾತ್ರಿಯು ಕಳೆದು ಆಗುವ ಸುಪ್ರಭಾತವು ಮಥುರೆಯ ಸ್ತ್ರೀಯರಿಗೆ ಮಂಗಳ ದಾಯಕವಾಗುತ್ತದೆ. ಅವರ ಅನೇಕ ದಿನಗಳ ಅಭಿಲಾಷೆಯು ನಿಶ್ಚಯವಾಗಿ ಪೂರ್ಣಗೊಳ್ಳುವುದು. ನಮ್ಮ ವ್ರಜರಾಜನಾದ ಶ್ಯಾಮಸುಂದರ ಓರೆನೋಟವನ್ನು ಬೀರುತ್ತಾ, ಮಂದ-ಮಂದವಾದ ಮುಗುಳ್ನಗೆಯಿಂದ ಕೂಡಿದ ಮುಖಾರವಿಂದದ ಮಾದಕತೆಯನ್ನು ಚೆಲ್ಲುತ್ತಾ ಮಥುರೆಯನ್ನು ಪ್ರವೇಶಿಸಿದಾಗ ಅವರು ಅದನ್ನು ಸವಿಯುತ್ತಾ ಧನ್ಯರಾಗಿ ಹೋಗುವರು. ॥23॥
(ಶ್ಲೋಕ-24)
ಮೂಲಮ್
ತಾಸಾಂ ಮುಕುಂದೋ ಮಧುಮಂಜುಭಾಷಿತೈ-
ರ್ಗೃಹೀತಚಿತ್ತಃ ಪರವಾನ್ ಮನಸ್ವ್ಯಪಿ ।
ಕಥಂ ಪುನರ್ನಃ ಪ್ರತಿಯಾಸ್ಯತೇಬಲಾ
ಗ್ರಾಮ್ಯಾಃ ಸಲಜ್ಜಸ್ಮಿತವಿಭ್ರಮೈರ್ಭ್ರಮನ್ ॥
ಅನುವಾದ
ನಮ್ಮ ಶ್ಯಾಮಸುಂದರನು ಧೈರ್ಯಶಾಲಿಯಾಗಿದ್ದರೂ ಜೊತೆಗೆ ನಂದಗೋಪನೇ ಮೊದಲಾದ ಹಿರಿಯರ ಆಜ್ಞಾನುಸಾರವೇ ಇರುತ್ತಾನೆ. ಆದರೂ ಮಥುರೆಯ ಯುವತಿಯರು ತಮ್ಮ ಮಧುವಿನಂತಿರುವ ಮಾತುಗಳಿಂದ ಇವನ ಚಿತ್ತವನ್ನು ತಮ್ಮತ್ತ ಸೆಳೆದುಕೊಳ್ಳುವರು. ಇವನು ಅವರ ನಾಚಿಕೆಯಿಂದ ಕೂಡಿ ಕಿರುನಗೆ ಹಾಗೂ ವಿಲಾಸಪೂರ್ಣವಾದ ಭಾವಭಂಗಿಗೆ ಮನಸೋತು ಅಲ್ಲೇ ಇರುವನು. ಮತ್ತೆ ಹಳ್ಳಿಗಾಡಿನ ಗೊಲ್ಲತಿಯರ ಬಳಿಗೆ ಇವನು ಮರಳಿ ಹೇಗೆ ತಾನೆ ಬರುವನು? ॥24॥
(ಶ್ಲೋಕ-25)
ಮೂಲಮ್
ಅದ್ಯ ಧ್ರುವಂ ತತ್ರ ದೃಶೋ ಭವಿಷ್ಯತೇ
ದಾಶಾರ್ಹಭೋಜಾಂಧಕವೃಷ್ಣಿಸಾತ್ವತಾಮ್ ।
ಮಹೋತ್ಸವಃ ಶ್ರೀರಮಣಂ ಗುಣಾಸ್ಪದಂ
ದ್ರಕ್ಷ್ಯಂತಿ ಯೇ ಚಾಧ್ವನಿ ದೇವಕೀಸುತಮ್ ॥
ಅನುವಾದ
ನಿಶ್ಚಯವಾಗಿಯೂ ಇಂದು ಮಥುರಾಪಟ್ಟಣದಲ್ಲಿ ಶ್ಯಾಮಸುಂದರನನ್ನು ಸಂದರ್ಶಿಸಲಿರುವ ದಾಶಾರ್ಹ, ಭೋಜ, ಅಂಧಕ, ವೃಷ್ಣಿ, ಸಾತ್ವತ ವಂಶೀಯರಿಗೆ ನೇತ್ರಾನಂದೋತ್ಸವವೇ ಆಗುತ್ತದೆ. ಜೊತೆಗೆ ಮಾರ್ಗದಲ್ಲಿ ರಮಾರಮಣನಾದ, ಗುಣಸಾಗರನಾದ, ದೇವಕಿಯ ಮಗನಾದ ನಮ್ಮ ಪ್ರಿಯತಮನನ್ನು ನೋಡುವ ದಾರಿಹೋಕರ ಕಣ್ಣುಗಳಿಗೂ ದೊಡ್ಡ ಹಬ್ಬವೇ ಆಗುತ್ತದೆ. ॥25॥
(ಶ್ಲೋಕ-26)
ಮೂಲಮ್
ಮೈತದ್ವಿಧಸ್ಯಾಕರುಣಸ್ಯ ನಾಮ ಭೂ-
ದಕ್ರೂರ ಇತ್ಯೇತದತೀವ ದಾರುಣಃ ।
ಯೋಸಾವನಾಶ್ವಾಸ್ಯ ಸುದುಃಖಿತಂ ಜನಂ
ಪ್ರಿಯಾತ್ಪ್ರಿಯಂ ನೇಷ್ಯತಿ ಪಾರಮಧ್ವನಃ ॥
ಅನುವಾದ
ನೋಡಿ ಸಖಿಯರೇ! ಈ ಅಕ್ರೂರನಾದರೋ ತನ್ನ ಹೆಸರಿಗೆ ವಿರುದ್ಧವಾಗಿ ಅತಿಕ್ರೂರನಾಗಿದ್ದಾನೆ. ಶ್ರೀಕೃಷ್ಣನ ವಿರಹದಿಂದ ಅತಿಯಾಗಿ ದುಃಖಿಸುತ್ತಿರುವ ನಮ್ಮನ್ನು ಸಿಹಿಮಾತುಗಳಿಂದ ಸಂತೈಸುತ್ತಲೂ ಇಲ್ಲ. ನಮಗೆ ಅತ್ಯಂತ ಪ್ರಿಯವಾದ ಏಕಮಾತ್ರ ಸ್ವಾಮಿಯಾದ ಶ್ರೀಕೃಷ್ಣನನ್ನು ದೂರ ಕರೆದುಕೊಂಡು ಹೋಗುತ್ತಿದ್ದಾನೆ. ಛೀ! ಇಂತಹ ಕ್ರೂರಿಗೆ ಅಕ್ರೂರನೆಂಬ ಹೆಸರು ಖಂಡಿತವಾಗಿಯೂ ಇರಬಾರದು. ॥26॥
(ಶ್ಲೋಕ-27)
ಮೂಲಮ್
ಅನಾರ್ದ್ರಧೀರೇಷ ಸಮಾಸ್ಥಿತೋ ರಥಂ
ತಮನ್ವಮೀ ಚ ತ್ವರಯಂತಿ ದುರ್ಮದಾಃ ।
ಗೋಪಾ ಅನೋಭಿಃ ಸ್ಥವಿರೈರುಪೇಕ್ಷಿತಂ
ದೈವಂ ಚ ನೋದ್ಯ ಪ್ರತಿಕೂಲಮೀಹತೇ ॥
ಅನುವಾದ
ಸಖೀ! ನಮ್ಮ ಈ ಶ್ಯಾಮಸುಂದರನೂ ಕಡಿಮೆ ನಿಷ್ಠುರನಲ್ಲ. ನೋಡು, ನೋಡು! ಅವನು ರಥದಲ್ಲಿ ಕುಳಿತುಕೊಂಡನು. ಉತ್ಸಾಹಿಗಳಾದ ಗೋಪಾಲಕರೂ ಎತ್ತಿನ ಬಂಡಿಗಳಲ್ಲಿ ಅವನೊಂದಿಗೆ ಹೋಗಲು ಎಷ್ಟು ಅವಸರಪಡಿಸುತ್ತಿದ್ದಾರೆ. ನಿಜವಾಗಿ ಇವರು ಮೂರ್ಖರೇ ಆಗಿದ್ದಾರೆ. ಇನ್ನು ನಮ್ಮ ಹಿರಿಯ-ವೃದ್ಧರೂ ಇವರ ಅವಸರವನ್ನು ನೋಡಿ - ‘ಹೋಗಿ ಮನಸ್ಸಿಗೆ ಬಂದ ಹಾಗೆ ಮಾಡಿರಿ’ ಎಂದು ಉಪೇಕ್ಷಿಸಿ ಬಿಟ್ಟಿದ್ದಾರೆ. ಈಗ ನಾವೇನು ಮಾಡಬಹುದು? ಇಂದು ವಿಧಿಯು ಪೂರ್ಣವಾಗಿ ನಮಗೆ ಪ್ರತಿಕೂಲವಾಗಿದೆ. ॥27॥
(ಶ್ಲೋಕ-28)
ಮೂಲಮ್
ನಿವಾರಯಾಮಃ ಸಮುಪೇತ್ಯ ಮಾಧವಂ
ಕಿಂ ನೋಕರಿಷ್ಯನ್ ಕುಲವೃದ್ಧಬಾಂಧವಾಃ ।
ಮುಕುಂದಸಂಗಾನ್ನಿಮಿಷಾರ್ಧದುಸ್ತ್ಯಜಾದ್
ದೈವೇನ ವಿಧ್ವಂಸಿತದೀನಚೇತಸಾಮ್ ॥
ಅನುವಾದ
ಸಖಿಯರೇ! ನಾವೆಲ್ಲರೂ ಮುಂದೆ ಹೋಗಿ ನಮ್ಮ ಪ್ರಾಣಪ್ರಿಯನಾದ ಶ್ಯಾಮಸುಂದರನನ್ನು ತಡೆದುಬಿಡುವಾ. ಕುಲದ ವೃದ್ಧರಾಗಲೀ, ನೆಂಟರಿಷ್ಟರಾಗಲೀ ನಮಗೇನು ಮಾಡಬಲ್ಲರು? ನಮಗಂತೂ ಅರ್ಧ ನಿಮಿಷವಾದರೂ ಮುಕುಂದನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ದೈವವಾದರೋ ನಮ್ಮ ಪ್ರಿಯತಮನೊಡನೆ ವಿರಹವನ್ನು ಕಲ್ಪಿಸಿ ಬಡಪಾಯಿಗಳಾದ ನಮ್ಮ ಬುದ್ಧಿಯನ್ನು ಹಾಳು ಮಾಡಿ ಬಿಟ್ಟಿದೆ. ॥28॥
(ಶ್ಲೋಕ-29)
ಮೂಲಮ್
ಯಸ್ಯಾನುರಾಗಲಲಿತಸ್ಮಿತವಲ್ಗುಮಂತ್ರ-
ಲೀಲಾವಲೋಕಪರಿರಂಭಣರಾಸಗೋಷ್ಠ್ಯಾಮ್ ।
ನೀತಾಃ ಸ್ಮ ನಃ ಕ್ಷಣಮಿವ ಕ್ಷಣದಾ ವಿನಾ ತಂ
ಗೋಪ್ಯಃ ಕಥಂ ನ್ವತಿತರೇಮ ತಮೋ ದುರಂತಮ್ ॥
ಅನುವಾದ
ಗೆಳತಿಯರೇ! ನಾವು ನಮ್ಮ ಪ್ರಾಣಪ್ರಿಯನಾದ ಶ್ರೀಕೃಷ್ಣನ ಪ್ರೇಮಪೂರ್ಣವಾದ ಮತ್ತು ಚೇತೋಹಾರಿಯಾದ ಕಿರುನಗೆ, ರಹಸ್ಯದಲ್ಲಿ ಅವನಾಡುತ್ತಿದ್ದ ಪ್ರೇಮಾಲಾಪಗಳು, ವಿಲಾಸ ಪೂರ್ಣ ಕಡೆಗಣ್ಣು ನೋಟ, ಪ್ರೇಮಾಲಿಂಗನ ಇತ್ಯಾದಿಗಳಿಂದ ರಾಸಕ್ರೀಡೆಯಲ್ಲಿ ಸುದೀರ್ಘವಾದ ರಾತ್ರಿಯನ್ನು ಕ್ಷಣದಂತೆ ಕಳೆಯುತ್ತಿದ್ದೆವು. ಆದರೆ ಈಗ ಅವನಿಲ್ಲದ ದುರಂತರೂಪವಾದ ವಿರಹವೆಂಬ ಅಂಧಕಾರವನ್ನು ಹೇಗೆ ತಾನೇ ದಾಟಿಹೋಗುವುದು? ॥29॥
(ಶ್ಲೋಕ-30)
ಮೂಲಮ್
ಯೋಹ್ನಃ ಕ್ಷಯೇ ವ್ರಜಮನಂತಸಖಃ ಪರೀತೋ
ಗೋಪೈರ್ವಿಶನ್ ಖುರರಜಶ್ಛುರಿತಾಲಕಸ್ರಕ್ ।
ವೇಣುಂ ಕ್ವಣನ್ ಸ್ಮಿತಕಟಾಕ್ಷನಿರೀಕ್ಷಣೇನ
ಚಿತ್ತಂ ಕ್ಷಿಣೋತ್ಯಮುಮೃತೇ ನು ಕಥಂ ಭವೇಮ ॥
ಅನುವಾದ
ನಮ್ಮ ಪ್ರಿಯತಮನು ಅನುದಿನವೂ ಸಾಯಂಕಾಲವಾಗುತ್ತಲೇ ಬಲರಾಮನೊಡನೆ ಗೋಪಾಲಕರಿಂದ ಪರಿವೃತನಾಗಿ ಬರುತ್ತಿರುವಾಗ ಅವನ ಕಪ್ಪಾದ ಗುಂಗುರು ಕೂದಲು, ವನಮಾಲೆಯು ಹಸುಗಳ ಗೊರಸುಗಳಿಂದ ಎದ್ದ ಧೂಳಿನಿಂದ ಮುಚ್ಚಿಹೋಗುತ್ತಿತ್ತು. ಅವನು ಕೊಳಲನ್ನೂದುತ್ತಾ, ಮುಗುಳ್ನಗೆಯಿಂದಲೂ, ಕಡೆಗಣ್ಣ ನೋಟದಿಂದಲೂ ನಮ್ಮ ಮನಸ್ಸನ್ನೂ ಸೂರೆಮಾಡುತ್ತಿದ್ದನು. ಅಂತಹವನನ್ನು ಬಿಟ್ಟು ನಾವು ಬದುಕಿರುವುದಾದರೂ ಹೇಗೆ? ॥30॥
(ಶ್ಲೋಕ-31)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಬ್ರುವಾಣಾ ವಿರಹಾತುರಾ ಭೃಶಂ
ವ್ರಜಸಿಯಃ ಕೃಷ್ಣವಿಷಕ್ತಮಾನಸಾಃ ।
ವಿಸೃಜ್ಯ ಲಜ್ಜಾಂ ರುರುದುಃ ಸ್ಮ ಸುಸ್ವರಂ
ಗೋವಿಂದ ದಾಮೋದರ ಮಾಧವೇತಿ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿರಹಪೀಡಿತರಾಗಿ ಗೋಪಿಕೆಯರು ಬಾಯಿಂದ ಹೀಗೆ ಹೇಳುತ್ತಿದ್ದರೂ ಅವರ ಮನಸ್ಸುಗಳೆಲ್ಲವೂ ಪ್ರಿಯತಮನಾದ ಶ್ರೀಕೃಷ್ಣನ ಅಂಗಸ್ಪರ್ಶ, ಆಲಿಂಗನದಲ್ಲಿಯೇ ಲೀನವಾಗಿ ಬಿಟ್ಟಿತ್ತು. ಅವರೆಲ್ಲರೂ ಲಜ್ಜೆಯನ್ನು ಪರಿತ್ಯಜಿಸಿ ‘ಗೋವಿಂದ! ದಾಮೋದರ! ಮಾಧವ! ನಮ್ಮನ್ನು ಬಿಟ್ಟು ಹೋಗಬೇಡ. ನೀನಿಲ್ಲದೆ ನಾವು ಬದುಕಿರಲಾರೆವು ಎಂದು ಹೇಳುತ್ತಾ ಗಟ್ಟಿಯಾಗಿ ಸುಸ್ವರವಾಗಿ ಅಳತೊಡಗಿದರು. ॥31॥
(ಶ್ಲೋಕ-32)
ಮೂಲಮ್
ಸೀಣಾಮೇವಂ ರುದಂತೀನಾಮುದಿತೇ ಸವಿತರ್ಯಥ ।
ಅಕ್ರೂರಶ್ಚೋದಯಾಮಾಸ ಕೃತಮೈತ್ರಾದಿಕೋ ರಥಮ್ ॥
ಅನುವಾದ
ಗೋಪಿಯರು ಹೀಗೆ ಅಳುತ್ತಾ ಇದ್ದರು. ಅಳುತ್ತಾ-ಅಳುತ್ತಾ ಬೆಳಕು ಹರಿಯಿತು. ಅಕ್ರೂರನು ಸಂಧ್ಯಾವಂದನೆ ಮುಂತಾದ ನಿತ್ಯಕರ್ಮಗಳನ್ನು ಪೂರೈಸಿ ಬಲರಾಮ-ಶ್ರೀಕೃಷ್ಣರೊಂದಿಗೆ ರಥವನ್ನು ಹತ್ತಿದನು ಹಾಗೂ ಅದನ್ನು ಮುನ್ನಡೆಸಿದನು. ॥32॥
(ಶ್ಲೋಕ-33)
ಮೂಲಮ್
ಗೋಪಾಸ್ತಮನ್ವಸಜ್ಜಂತ ನಂದಾದ್ಯಾಃ ಶಕಟೈಸ್ತತಃ ।
ಆದಾಯೋಪಾಯನಂ ಭೂರಿ ಕುಂಭಾನ್ ಗೋರಸಸಂಭೃತಾನ್ ॥
ಅನುವಾದ
ನಂದಗೋಪನೇ ಮೊದಲಾದ ಗೋಪರು ಹಾಲು, ಮೊಸರು, ತುಪ್ಪ, ಬೆಣ್ಣೆ ಮುಂತಾದವುಗಳು ತುಂಬಿದ ಗಡಿಗೆಗಳನ್ನು ಹಾಗೂ ಕಾಣಿಕೆಯಾಗಿ ಕೊಡಲು ಇತರ ವಸ್ತುಗಳನ್ನು ಎತ್ತಿಕೊಂಡು ಎತ್ತಿನ ಗಾಡಿಗಳಲ್ಲಿ ಕುಳಿತುಕೊಂಡು ಅವರ ಹಿಂದೆ-ಹಿಂದೆಯೇ ಹೊರಟರು. ॥33॥
(ಶ್ಲೋಕ-34)
ಮೂಲಮ್
ಗೋಪ್ಯಶ್ಚ ದಯಿತಂ ಕೃಷ್ಣಮನುವ್ರಜ್ಯಾನುರಂಜಿತಾಃ ।
ಪ್ರತ್ಯಾದೇಶಂ ಭಗವತಃ ಕಾಂಕ್ಷಂತ್ಯಶ್ಚಾವತಸ್ಥಿರೇ ॥
ಅನುವಾದ
ಪ್ರಿಯತಮನಾದ ಶ್ರೀಕೃಷ್ಣನ ರಥವನ್ನೇ ಅನುಸರಿಸಿ ಹೋಗುತ್ತಿದ್ದ ಗೋಪಿಯರು ಶ್ರೀಕೃಷ್ಣನ ಮುಗುಳ್ನಗೆ, ಕುಡಿನೋಟ, ಇವುಗಳಿಂದ, ಪ್ರೇಮ ಪೂರ್ಣವಾದ ಭಾವ-ಭಂಗಿಗಳಿಂದ ಸಂತೋಷಗೊಂಡಿದ್ದರೂ ಭಗವಂತನ ಆದೇಶವನ್ನು ಪಡೆಯುವ ಇಚ್ಛೆಯಿಂದ ಅಲ್ಲೆ ನಿಂತು ಬಿಟ್ಟರು. ॥34॥
(ಶ್ಲೋಕ-35)
ಮೂಲಮ್
ತಾಸ್ತಥಾ ತಪ್ಯತೀರ್ವೀಕ್ಷ್ಯ ಸ್ವಪ್ರಸ್ಥಾನೇ ಯದೂತ್ತಮಃ ।
ಸಾಂತ್ವಯಾಮಾಸ ಸಪ್ರೇಮೈರಾಯಾಸ್ಯ ಇತಿ ದೌತ್ಯಕೈಃ ॥
ಅನುವಾದ
ನಾನು ಮಥುರೆಗೆ ಹೋಗುವುದರಿಂದ ಈ ಗೋಪಿಯರ ಹೃದಯದಲ್ಲಿ ವಿರಹವೇದನೆ ಉಂಟಾಗಿದೆ ಎಂದು ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನು ನೋಡಿದನು. ಆಗ ದೂತನ ಮೂಲಕ - ‘ನಾನು ಪುನಃ ಬರುತ್ತೇನೆ. ನಿಮ್ಮನ್ನು ಬಿಟ್ಟುಹೋಗುವುದಿಲ್ಲ’ ಎಂಬ ಪ್ರೇಮಸಂದೇಶವನ್ನು ಕಳಿಸಿ ಧೈರ್ಯತುಂಬಿದನು. ॥35॥
(ಶ್ಲೋಕ-36)
ಮೂಲಮ್
ಯಾವದಾಲಕ್ಷ್ಯತೇ ಕೇತುರ್ಯಾವದ್ರೇಣೂ ರಥಸ್ಯ ಚ ।
ಅನುಪ್ರಸ್ಥಾಪಿತಾತ್ಮಾನೋ ಲೇಖ್ಯಾನೀವೋಪಲಕ್ಷಿತಾಃ ॥
ಅನುವಾದ
ರಥದ ಧ್ವಜ ಮತ್ತು ಗಾಲಿಗಳಿಂದೆದ್ದ ಧೂಳು ಕಾಣಿಸುವವರೆಗೆ ಆ ಗೋಪಿಯರು ಚಿತ್ತಾರದಂತೆ ಸ್ತಬ್ಧರಾಗಿ ನಿಂತಿದ್ದರು. ಆದರೆ ಅವರ ಚಿತ್ತವು ಪ್ರಾಣವಲ್ಲಭನಾದ ಶ್ರೀಕೃಷ್ಣನೊಂದಿಗೇ ಹೊರಟು ಹೋಗಿತ್ತು. ॥36॥
(ಶ್ಲೋಕ-37)
ಮೂಲಮ್
ತಾ ನಿರಾಶಾ ನಿವವೃತುರ್ಗೋವಿಂದವಿನಿವರ್ತನೇ ।
ವಿಶೋಕಾ ಅಹನೀ ನಿನ್ಯುರ್ಗಾಯಂತ್ಯಃ ಪ್ರಿಯಚೇಷ್ಟಿತಮ್ ॥
ಅನುವಾದ
ಬಹುಶಃ ಶ್ರೀಕೃಷ್ಣನು ಸ್ವಲ್ಪದೂರ ಹೋಗಿ ಮರಳಿಬರುವನೆಂಬ ಆಸೆ ಅವರ ಮನಸ್ಸಿನಲ್ಲಿತ್ತು. ಆದರೆ ಅವನು ಹಿಂದಿರುಗಿ ಬಾರದಿದ್ದಾಗ ಅವರು ನಿರಾಶರಾಗಿ ತಮ್ಮ-ತಮ್ಮ ಮನೆಗಳಿಗೆ ಹಿಂದಿರುಗಿದರು. ಪರೀಕ್ಷಿತನೇ! ಗೋಪಿಯರು ಹಗಲು-ರಾತ್ರಿಗಳೆನ್ನದೆ ತಮ್ಮ ಪ್ರಿಯಕರ ಶ್ಯಾಮಸುಂದರನ ಲೀಲೆಗಳನ್ನು ಹಾಡಿಕೊಳ್ಳುತ್ತಾ ತಮ್ಮ ವಿರಹತಾಪವನ್ನು ತಗ್ಗಿಸಿಕೊಳ್ಳುತ್ತಿದ್ದರು. ॥37॥
(ಶ್ಲೋಕ-38)
ಮೂಲಮ್
ಭಗವಾನಪಿ ಸಂಪ್ರಾಪ್ತೋ ರಾಮಾಕ್ರೂರಯುತೋ ನೃಪ ।
ರಥೇನ ವಾಯುವೇಗೇನ ಕಾಲಿಂದೀಮಘನಾಶಿನೀಮ್ ॥
ಅನುವಾದ
ಪರೀಕ್ಷಿತನೇ! ಇತ್ತ ಭಗವಾನ್ ಶ್ರೀಕೃಷ್ಣನು ಬಲರಾಮ ಮತ್ತು ಅಕ್ರೂರನೊಂದಿಗೆ ವಾಯುವೇಗಕ್ಕೆ ಸಮಾನವಾದ ರಥದಲ್ಲಿ ಕುಳಿತು ಪಾಪನಾಶಿನಿಯಾದ ಯಮುನಾನದಿಯ ತೀರವನ್ನು ತಲುಪಿದನು. ॥38॥
(ಶ್ಲೋಕ-39)
ಮೂಲಮ್
ತತ್ರೋಪಸ್ಪೃಶ್ಯ ಪಾನೀಯಂ ಪೀತ್ವಾ ಮೃಷ್ಟಂ ಮಣಿಪ್ರಭಮ್ ।
ವೃಕ್ಷಷಂಡಮುಪವ್ರಜ್ಯ ಸರಾಮೋ ರಥಮಾವಿಶತ್ ॥
ಅನುವಾದ
ಅಲ್ಲಿ ಅವರು ಕೈ-ಕಾಲು-ಮುಖ ತೊಳೆದು ಮರಕತ ಮಣಿಯಂತಿರುವ ಹಾಗೂ ಅಮೃತದಂತೆ ಸಿಹಿಯಾದ ಯಮುನೆಯ ನೀರನ್ನು ಕುಡಿದರು. ಅನಂತರ ಬಲರಾಮನೊಂದಿಗೆ ಶ್ರೀಕೃಷ್ಣನು ವೃಕ್ಷಗಳ ನೆರಳಲ್ಲಿ ನಿಲ್ಲಿಸಿದ್ದ ರಥವನ್ನು ಏರಿದನು. ॥39॥
(ಶ್ಲೋಕ-40)
ಮೂಲಮ್
ಅಕ್ರೂರಸ್ತಾವುಪಾಮಂತ್ರ್ಯ ನಿವೇಶ್ಯ ಚ ರಥೋಪರಿ ।
ಕಾಲಿಂದ್ಯಾ ಹ್ರದಮಾಗತ್ಯ ಸ್ನಾನಂ ವಿಧಿವದಾಚರತ್ ॥
ಅನುವಾದ
ಅಕ್ರೂರನು ಸಹೋದರಿಬ್ಬರನ್ನು ರಥದಲ್ಲಿ ಕುಳ್ಳಿರಿಸಿ, ಅವರಿಂದ ಅಪ್ಪಣೆಯನ್ನು ಪಡೆದು, ಯಮುನೆಯ ಮಡುವಿಗೆ (ಅನಂತತೀರ್ಥ ಅಥವಾ ಬ್ರಹ್ಮಹ್ರದ) ಹೋಗಿ ವಿಧಿವತ್ತಾಗಿ ಸ್ನಾನಮಾಡತೊಡಗಿದನು. ॥40॥
(ಶ್ಲೋಕ-41)
ಮೂಲಮ್
ನಿಮಜ್ಜ್ಯ ತಸ್ಮಿನ್ ಸಲಿಲೇ ಜಪನ್ ಬ್ರಹ್ಮ ಸನಾತನಮ್ ।
ತಾವೇವ ದದೃಶೇಕ್ರೂರೋ ರಾಮಕೃಷ್ಣೌ ಸಮನ್ವಿತೌ ॥
ಅನುವಾದ
ಸನಾತನವಾದ ಬ್ರಹ್ಮಮಂತ್ರ (ಗಾಯತ್ರಿ)ವನ್ನು ಜಪಿಸುತ್ತಾ ಅಕ್ರೂರನು ನೀರಿನಲ್ಲಿ ಮುಳುಗಿದಾಗ ಅಲ್ಲಿಯೇ ಶ್ರೀಕೃಷ್ಣ-ಬಲರಾಮರು ಕುಳಿತಿರುವುದನ್ನು ನೋಡಿದನು. ॥41॥
(ಶ್ಲೋಕ-42)
ಮೂಲಮ್
ತೌ ರಥಸ್ಥೌ ಕಥಮಿಹ ಸುತಾವಾನಕದುಂದುಭೇಃ ।
ತರ್ಹಿ ಸ್ವಿತ್ ಸ್ಯಂದನೇ ನ ಸ್ತ ಇತ್ಯುನ್ಮಜ್ಜ್ಯ ವ್ಯಚಷ್ಟ ಸಃ ॥
ಅನುವಾದ
ವಸುದೇವನ ಪುತ್ರರಿಬ್ಬರನ್ನೂ ನಾನು ರಥದಲ್ಲಿ ಕುಳ್ಳಿರಿಸಿ ಬಂದಿದ್ದೇನೆ. ಈಗ ಅವರು ಇಲ್ಲಿಗೆ ಹೇಗೆ ಬಂದರು? ಎಂಬ ಸಂದೇಹವು ಅಕ್ರೂರನ ಮನಸ್ಸಿಗೆ ಬಂತು. ಹಾಗಾದರೆ ಅವರು ರಥದಲ್ಲಿ ಇರಲಾರರು ಎಂದೆಣಿಸಿ ಅವನು ನೀರಿನಿಂದ ತಲೆಯನ್ನು ಮೇಲೆತ್ತಿ ನೋಡಿದನು. ॥42॥
(ಶ್ಲೋಕ-43)
ಮೂಲಮ್
ತತ್ರಾಪಿ ಚ ಯಥಾಪೂರ್ವಮಾಸೀನೌ ಪುನರೇವ ಸಃ ।
ನ್ಯಮಜ್ಜದ್ದರ್ಶನಂ ಯನ್ಮೇ ಮೃಷಾ ಕಿಂ ಸಲಿಲೇ ತಯೋಃ ॥
ಅನುವಾದ
ಬಲರಾಮ-ಶ್ರೀಕೃಷ್ಣರಿಬ್ಬರೂ ಹಿಂದಿನಂತೆಯೇ ರಥದಲ್ಲಿ ಕುಳಿತಿರುವರು. ಹಾಗಾದರೆ ನಾನು ನೀರಿನಲ್ಲಿ ನೋಡಿದುದು ನನ್ನ ಭ್ರಮೆಯಾಗಿರಬಹುದು ಎಂದು ಯೋಚಿಸಿ ಪುನಃ ನೀರಿನಲ್ಲಿ ಮುಳುಗಿದನು. ॥43॥
(ಶ್ಲೋಕ-44)
ಮೂಲಮ್
ಭೂಯಸ್ತತ್ರಾಪಿ ಸೋದ್ರಾಕ್ಷೀತ್ ಸ್ತೂಯಮಾನಮಹೀಶ್ವರಮ್ ।
ಸಿದ್ಧಚಾರಣಗಂಧರ್ವೈರಸುರೈರ್ನತಕಂಧರೈಃ ॥
ಅನುವಾದ
ಆದರೆ ಪುನಃ ಅಲ್ಲಿ ನೋಡುತ್ತಾನೆ - ಸಾಕ್ಷಾತ್ ಅನಂತನಾದ ಆದಿಶೇಷನು ವಿರಾಜಮಾನನಾಗಿದ್ದಾನೆ. ಸಿದ್ಧರು, ಚಾರಣರು, ಗಂಧರ್ವರು ಮತ್ತು ಅಸುರರು ತಮ್ಮ ತಲೆತಗ್ಗಿಸಿಕೊಂಡು ಅವನನ್ನು ಸ್ತುತಿಸುತ್ತಿದ್ದಾರೆ. ॥44॥
(ಶ್ಲೋಕ-45)
ಮೂಲಮ್
ಸಹಸ್ರಶಿರಸಂ ದೇವಂ ಸಹಸ್ರಣವೌಲಿನಮ್ ।
ನೀಲಾಂಬರಂ ಬಿಸಶ್ವೇತಂ ಶೃಂಗೈಃ ಶ್ವೇತಮಿವ ಸ್ಥಿತಮ್ ॥
ಅನುವಾದ
ಆ ಆದಿಶೇಷನಿಗೆ ಸಾವಿರ ತಲೆ(ಹೆಡೆ)ಗಳಿದ್ದು ಪ್ರತಿಯೊಂದು ಹೆಡೆಯ ಮೇಲೆ ಕಿರೀಟಗಳು ಶೋಭಿಸುತ್ತವೆ. ಕಮಲ ನಾಳದಂತಿರುವ ಉಜ್ವಲವಾದ ಶರೀರದ ಮೇಲೆ ನೀಲಾಂಬರವನ್ನು ಧರಿಸಿರುವನು. ಸಾವಿರ ಶಿಖರಗಳಿಂದ ಕೂಡಿದ ಶ್ವೇತಪರ್ವತದಂತೆ ಶೋಭಾಯ ಮಾನನಾಗಿದ್ದಾನೆ. ॥45॥
ಮೂಲಮ್
(ಶ್ಲೋಕ-46)
ತಸ್ಯೋತ್ಸಂಗೇ ಘನಶ್ಯಾಮಂ ಪೀತಕೌಶೇಯವಾಸಸಮ್ ।
ಪುರುಷಂ ಚತುರ್ಭುಜಂ ಶಾಂತಂ ಪದ್ಮಪತ್ರಾರುಣೇಕ್ಷಣಮ್ ॥
ಅನುವಾದ
ಅಂತಹ ಆದಿಶೇಷನ ಮೇಲೆ ದಟ್ಟವಾದ ಮೇಘದಂತಿರುವ ಶ್ರೀಕೃಷ್ಣನು ವಿರಾಜಮಾನನಾಗಿದ್ದು ಅವನು ರೇಷ್ಮೆಯ ಪೀತಾಂಬರವನ್ನು ಧರಿಸಿದ್ದು, ಚತುರ್ಭುಜನಾಗಿದ್ದು, ಶಾಂತವಾದ ಮುಖಮುದ್ರೆಯನ್ನು ಹೊಂದಿದ್ದು, ಕಮಲದ ಎಸಳಿನಂತೆ ನಸುಗೆಂಪಾದ ಕಣ್ಣುಗಳಿಂದ ಕೂಡಿದ ದಿವ್ಯಮೂರ್ತಿಯನ್ನು ಅಕ್ರೂರನು ನೋಡಿದನು. ॥46॥
(ಶ್ಲೋಕ-47)
ಮೂಲಮ್
ಚಾರುಪ್ರಸನ್ನವದನಂ ಚಾರುಹಾಸನಿರೀಕ್ಷಣಮ್ ।
ಸುಭ್ರೂನ್ನಸಂ ಚಾರುಕರ್ಣಂ ಸುಕಪೋಲಾರುಣಾಧರಮ್ ॥
ಅನುವಾದ
ಅವನ ವದನವು ಅತ್ಯಂತ ಮನೋಹರವಾಗಿದ್ದು ಪ್ರಸನ್ನವಾಗಿತ್ತು. ಅವನ ಮಧುರ ಹಾಸ್ಯ ಮತ್ತು ಕಟಾಕ್ಷವೀಕ್ಷಣವು ಮನಸ್ಸನ್ನು ಸೂರೆಗೊಳ್ಳುತ್ತಿದ್ದವು. ಅಂದವಾದ ಹುಬ್ಬು ನೀಳವಾದ ಮೂಗು, ಸುಂದರವಾದ ಕಿವಿಗಳು, ಹೊಳೆಯುವ ಕಪೋಲಗಳಿಂದ ಕೂಡಿದ್ದು, ತೊಂಡೆ ಹಣ್ಣಿನಂತೆ ತುಟಿಗಳು ಕೆಂಪಾಗಿದ್ದವು. ॥47॥
(ಶ್ಲೋಕ-48)
ಮೂಲಮ್
ಪ್ರಲಂಬಪೀವರಭುಜಂ ತುಂಗಾಂಸೋರಃಸ್ಥಲಶ್ರಿಯಮ್ ।
ಕಂಬುಕಂಠಂ ನಿಮ್ನನಾಭಿಂ ವಲಿಮತ್ಪಲ್ಲವೋದರಮ್ ॥
ಅನುವಾದ
ತೋಳುಗಳು ನೀಳವಾಗಿದ್ದು ದಪ್ಪವಾಗಿದ್ದವು. ಉಬ್ಬಿದ ವಕ್ಷಸ್ಥಳವಿದ್ದು ಅದು ಲಕ್ಷ್ಮೀದೇವಿಗೆ ನಿವಾಸಸ್ಥಾನವಾಗಿತ್ತು. ಕುತ್ತಿಗೆಯು ಸುಳಿಶಂಖದಂತೆ ಕಂಗೊಳಿಸುತ್ತಿತ್ತು. ಆಳವಾದ ನಾಭಿಕಮಲವಿದ್ದು, ತ್ರಿವಳಿಗಳಿಂದ ಕೂಡಿದ ಉದರವು ಅರಳಿಯ ಎಲೆಯಂತೆ ಶೋಭಿಸುತ್ತಿತ್ತು. ॥48॥
(ಶ್ಲೋಕ-49)
ಮೂಲಮ್
ಬೃಹತ್ಕಟಿತಟಶ್ರೋಣಿಕರಭೋರುದ್ವಯಾನ್ವಿತಮ್ ।
ಚಾರುಜಾನುಯುಗಂ ಚಾರುಜಂಘಾಯುಗಲಸಂಯುತಮ್ ॥
(ಶ್ಲೋಕ-50)
ಮೂಲಮ್
ತುಂಗಗುಲ್ಫಾರುಣನಖವ್ರಾತದೀಧಿತಿಭಿರ್ವೃತಮ್ ।
ನವಾಂಗುಲ್ಯಂಗುಷ್ಠದಲೈರ್ವಿಲಸತ್ಪಾದಪಂಕಜಮ್ ॥
ಅನುವಾದ
ತೆಳುವಾದ ಸೊಂಟವಿದ್ದು, ನಿತಂಬಗಳು ಸ್ಥೂಲವಾಗಿದ್ದವು. ಆನೆಯ ಸೊಂಡಿಲಿನಂತಿರುವ ತೊಡೆಗಳು, ಸುಂದರವಾದ ಕಣಕಾಲು-ಮೊಣಕಾಲುಗಳಿದ್ದವು. ಪಾದಗಳ ಹರಡುಗಳು ಎತ್ತರವಾಗಿದ್ದವು. ಕೆಂಪಾದ ಕಾಲುಗುರುಗಳಿಂದ ಜೋತಿರ್ಮಯ ಕಿರಣಗಳು ಚಿಮ್ಮುತ್ತಿದ್ದವು. ಚರಣಕಮಲಗಳ ಹೆಬ್ಬೆರಳು ಮತ್ತು ಬೆರಳುಗಳು ಕಮಲದ ಹೊಚ್ಚ ಹೊಸ ಎಸಳುಗಳಂತೆ ಶೋಭಿತವಾಗಿದ್ದವು. ॥49-50॥
(ಶ್ಲೋಕ-51)
ಮೂಲಮ್
ಸುಮಹಾರ್ಹಮಣಿವ್ರಾತಕಿರೀಟಕಟಕಾಂಗದೈಃ ।
ಕಟಿಸೂತ್ರಬ್ರಹ್ಮಸೂತ್ರಹಾರನೂಪುರಕುಂಡಲೈಃ ॥
(ಶ್ಲೋಕ-52)
ಮೂಲಮ್
ಭ್ರಾಜಮಾನಂ ಪದ್ಮಕರಂ ಶಂಖಚಕ್ರಗದಾಧರಮ್ ।
ಶ್ರೀವತ್ಸವಕ್ಷಸಂ ಭ್ರಾಜತ್ಕೌಸ್ತುಭಂ ವನಮಾಲಿನಮ್ ॥
ಅನುವಾದ
ಬಹುಮೂಲ್ಯವಾದ ರತ್ನಖಚಿತವಾದ ಕಿರೀಟವಿದ್ದಿತು. ಕಡಗ, ಕಂಕಣ, ತೊಳ್ಬಳೆಗಳೂ, ಸುವರ್ಣಮಯವಾದ ಉಡಿದಾರವಿತ್ತು, ಹಾರ, ನೂಪುರ, ಕುಂಡಲ ಹಾಗೂ ಯಜ್ಞೋಪವೀತದಿಂದ ಆ ದಿವ್ಯಮೂರ್ತಿಯು ಅಲಂಕೃತವಾಗಿದೆ. ಒಂದು ಕೈಯಲ್ಲಿ ಪದ್ಮವಿದ್ದು, ಉಳಿದ ಮೂರು ಕೈಗಳಲ್ಲಿ ಶಂಖ, ಚಕ್ರ, ಗದೆ ಶೋಭಿಸುತ್ತಿದ್ದವು. ವಕ್ಷಸ್ಥಳದಲ್ಲಿ ಶ್ರೀವತ್ಸದ ಚಿಹ್ನೆ, ಕೊರಳಲ್ಲಿ ಕೌಸ್ತುಭ ಮಣಿಯೂ, ವನಮಾಲೆಯು ಬೆಳಗುತ್ತಿದ್ದವು. ॥51-52॥
(ಶ್ಲೋಕ-53)
ಮೂಲಮ್
ಸುನಂದನಂದಪ್ರಮುಖೈಃ ಪಾರ್ಷದೈಃ ಸನಕಾದಿಭಿಃ ।
ಸುರೇಶೈರ್ಬ್ರಹ್ಮರುದ್ರಾದ್ಯೈರ್ನವಭಿಶ್ಚ ದ್ವಿಜೋತ್ತಮೈಃ ॥
(ಶ್ಲೋಕ-54)
ಮೂಲಮ್
ಪ್ರಹ್ಲಾದನಾರದವಸುಪ್ರಮುಖೈರ್ಭಾಗವತೋತ್ತಮೈಃ ।
ಸ್ತೂಯಮಾನಂ ಪೃಥಗ್ಭಾವೈರ್ವಚೋಭಿರಮಲಾತ್ಮಭಿಃ ॥
ಅನುವಾದ
ನಂದ-ಸುನಂದರೇ ಮೊದಲಾದ ಪಾರ್ಷದರು ತಮ್ಮ ಒಡೆಯನೆಂದೂ, ಸನಕಾದಿ ಮಹರ್ಷಿಗಳು ಪರಬ್ರಹ್ಮನೆಂದೂ, ಬ್ರಹ್ಮ-ರುದ್ರಾದಿ ದೇವತೆಗಳು ಸರ್ವೇಶ್ವರನೆಂದೂ, ಮರೀಚ್ಯಾದಿ ಒಂಭತ್ತು ಬ್ರಾಹ್ಮಣರು ಪ್ರಜಾಪತಿಯೆಂದೂ, ಪ್ರಹ್ಲಾದ-ನಾರದಾದಿ ಭಗವದ್ಭಕ್ತರು ಹಾಗೂ ಅಷ್ಟ ವಸುಗಳು ಪರಮಪ್ರಿಯತಮ ಭಗವಂತನೆಂದೂ ತಿಳಿದು ಭಿನ್ನ-ಭಿನ್ನ ಭಾವಗಳಿಂದ ನಿರ್ದೋಷವಾದ ವೇದವಾಣಿಗಳಿಂದ ಭಗವಂತನನ್ನು ಸ್ತುತಿಸುತ್ತಿದ್ದಾರೆ. ॥53-54॥
(ಶ್ಲೋಕ-55)
ಮೂಲಮ್
ಶ್ರಿಯಾ ಪುಷ್ಟ್ಯಾ ಗಿರಾ ಕಾಂತ್ಯಾ ಕೀರ್ತ್ಯಾ ತುಷ್ಟ್ಯೇಲಯೋರ್ಜಯಾ ।
ವಿದ್ಯಯಾವಿದ್ಯಯಾ ಶಕ್ತ್ಯಾ ಮಾಯಯಾ ಚ ನಿಷೇವಿತಮ್ ॥
ಅನುವಾದ
ಜೊತೆಗೇ ಲಕ್ಷ್ಮೀ, ಪುಷ್ಟಿ, ಸರಸ್ವತಿ, ಕಾಂತಿ, ಕೀರ್ತಿ, ತುಷ್ಟಿ (ಅರ್ಥಾತ್ - ಐಶ್ವರ್ಯ, ಬಲ, ಜ್ಞಾನ, ಶ್ರೀ, ಯಶ ಮತ್ತು ವೈರಾಗ್ಯ - ಈ ಷಡೈಶ್ವರ್ಯ ಶಕ್ತಿಗಳು), ಇಳಾ, ಊರ್ಜಾ, ವಿದ್ಯಾ-ಅವಿದ್ಯಾ, ಹ್ಲಾದಿನೀ, ಸಂವಿತ್ ಮತ್ತು ಮಾಯೆ ಮೊದಲಾದ ಶಕ್ತಿಗಳು ಮೂರ್ತಿಮತ್ತಾಗಿ ನಿಂತು ಅವನ ಸೇವೆ ಮಾಡುತ್ತಿದ್ದರು. ॥55॥
(ಶ್ಲೋಕ-56)
ಮೂಲಮ್
ವಿಲೋಕ್ಯ ಸುಭೃಶಂ ಪ್ರೀತೋ ಭಕ್ತ್ಯಾ ಪರಮಯಾ ಯುತಃ ।
ಹೃಷ್ಯತ್ತನೂರುಹೋ ಭಾವಪರಿಕ್ಲಿನ್ನಾತ್ಮಲೋಚನಃ ॥
ಅನುವಾದ
ಭಗವಂತನ ದಿವ್ಯವಾದ ಸ್ವರೂಪನ್ನು ನೋಡಿದ ಅಕ್ರೂರನಿಗೆ ಜಂಘಾಬಲವೇ ಉಡುಗಿಹೋಗಿತ್ತು. ಬಾಯಿಂದ ಮಾತೇ ಹೊರಡಲಿಲ್ಲ. ಶರೀರವೆಲ್ಲವೂ ಹರ್ಷಾತಿರೇಕದಿಂದ ಪುಳಕಗೊಂಡಿತು. ಪ್ರೇಮೋದ್ರೇಕದಿಂದ ಅವನ ಕಣ್ಣುಗಳು ಆನಂದ ಬಾಷ್ಪಗಳನ್ನು ಸುರಿಸಿದುವು. ॥56॥
(ಶ್ಲೋಕ-57)
ಮೂಲಮ್
ಗಿರಾ ಗದ್ಗದಯಾಸ್ತೌಷೀತ್ ಸತ್ತ್ವಮಾಲಂಬ್ಯ ಸಾತ್ವತಃ ।
ಪ್ರಣಮ್ಯ ಮೂರ್ಧ್ನಾವಹಿತಃ ಕೃತಾಂಜಲಿಪುಟಃ ಶನೈಃ ॥
ಅನುವಾದ
ಕೆಲವು ಕ್ಷಣಗಳು ಹೀಗೆಯೇ ಇದ್ದು ಮತ್ತೆ ಅವನು ಚೇತರಿಸಿಕೊಂಡು ಭಗವಂತನ ಚರಣಗಳಲ್ಲಿ ಶಿರಸ್ಸನ್ನಿಟ್ಟು ನಮಸ್ಕರಿಸಿದನು. ಅನಂತರ ಕೈಜೋಡಿಸಿಕೊಂಡು ಗದ್ಗದ ಧ್ವನಿಯಿಂದ ನಿಧಾನವಾಗಿ ಭಗವಂತನನ್ನು ಸ್ತುತಿಸತೊಡಗಿದನು. ॥57॥
ಅನುವಾದ (ಸಮಾಪ್ತಿಃ)
ಮೂವತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥39॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇಕ್ರೂರಪ್ರತಿಯಾನೇ ಏಕೋನಚತ್ವಾರಿಂಶೋಽಧ್ಯಾಯಃ ॥39॥