[ಮೂವತ್ತೈದನೆಯ ಅಧ್ಯಾಯ]
ಭಾಗಸೂಚನಾ
ಯುಗಳ ಗೀತೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಗೋಪ್ಯಃ ಕೃಷ್ಣೇ ವನಂ ಯಾತೇ ತಮನುದ್ರುತಚೇತಸಃ ।
ಕೃಷ್ಣಲೀಲಾಃ ಪ್ರಗಾಯಂತ್ಯೋನಿನ್ಯುರ್ದುಃಖೇನ ವಾಸರಾನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಅನುದಿನವೂ ಹಸುಗಳನ್ನು ಮೇಯಿಸಲು ಬೆಳಗಾದೊಡನೆಯೇ ವನಕ್ಕೆ ಹೊರಟು ಹೋಗುತ್ತಿದ್ದನು. ವ್ರಜದಲ್ಲಿದ್ದ ಗೋಪಿಯರ ಮನಸ್ಸೂ ಅವನೊಂದಿಗೇ ಹೊರಟು ಹೋಗುತ್ತಿತ್ತು. ಅವರ ಮನಸ್ಸು ಶ್ರೀಕೃಷ್ಣನನ್ನು ಚಿಂತಿಸುತ್ತಾ, ಅವನ ಲೀಲಾಪ್ರಸಂಗಗಳನ್ನು ಯಾವಾಗಲೂ ಹಾಡುತ್ತಾ ಇದ್ದರು. ಹೀಗೆ ಅವರು ಹಗಲನ್ನು ಬಹಳ ಕಷ್ಟದಿಂದ ಕಳೆಯುತ್ತಿದ್ದರು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಗೋಪ್ಯ ಊಚುಃ
ಮೂಲಮ್
ವಾಮಬಾಹುಕೃತವಾಮಕಪೋಲೋ
ವಲ್ಗಿತಭ್ರುರಧರಾರ್ಪಿತವೇಣುಮ್ ।
ಕೋಮಲಾಂಗುಲಿಭಿರಾಶ್ರಿತಮಾರ್ಗಂ
ಗೋಪ್ಯ ಈರಯತಿ ಯತ್ರ ಮುಕುಂದಃ ॥
(ಶ್ಲೋಕ-3)
ಮೂಲಮ್
ವ್ಯೋಮಯಾನವನಿತಾಃ ಸಹ ಸಿದ್ಧೈ-
ರ್ವಿಸ್ಮಿತಾಸ್ತದುಪಧಾರ್ಯ ಸಲಜ್ಜಾಃ ।
ಕಾಮಮಾರ್ಗಣಸಮರ್ಪಿತಚಿತ್ತಾಃ
ಕಶ್ಮಲಂ ಯಯುರಪಸ್ಮೃತನೀವ್ಯಃ ॥
ಅನುವಾದ
ಗೋಪಿಯರು ಪರಸ್ಪರ ಹೇಳುತ್ತಾರೆ — ಎಲೈ ಸಖಿಯೇ! ನಮ್ಮ ಮುಕುಂದನು ಕೊಳಲನ್ನು ಹಿಡಿದು, ಎಡತೋಳನ್ನು ಎಡಕೆನ್ನೆಗೆ ತಾಗಿಸಿ, ಕೊಳಲನ್ನು ತುಟಿಗೆ ತಗುಲಿಸಿ ಅರೋಹಣ ಅವರೋಹಣ ಮಾರ್ಗವನ್ನು ಅನುಸರಿಸಿ ಹುಬ್ಬನ್ನು ಹಾರಿಸುತ್ತಾ ಮೃದುವಾದ ಬೆರಳುಗಳ ಚಾಲನೆಯಿಂದ ಕೊಳಲನ್ನು ನುಡಿಸುವನು. ವಿಮಾನ ಸಂಚಾರಿಗಳಾದ ಸಿದ್ಧಸ್ತ್ರೀಯರು ತಮ್ಮ ಪತಿಗಳೊಡನೆ ಕರ್ಣಾನಂದಕರವಾದ ಆ ವೇಣುಗಾನವನ್ನು ಕೇಳಿ ಅಚ್ಚರಿಗೊಳ್ಳುವರು. ವೇಣುಗಾನವನ್ನು ಕೇಳಿ ಮನ್ಮಥನ ಬಾಣಗಳ ಲಕ್ಷ್ಯಕ್ಕೆ ಮನಸ್ಸೊಡ್ಡಿದ ಅವರು ಲಜ್ಜೆಗೊಳ್ಳುವರು. ವೇಣುಗಾನ ಶ್ರವಣದಿಂದ ಮೈಮರೆತ ಅವರಿಗೆ ಸೀರೆಯ ಉಡಿಗಂಟು ಬಿಚ್ಚಿ ಹೋಗಿರುವುದೂ ತಿಳಿಯುವುದಿಲ್ಲ. ಹೀಗೆ ನಮ್ಮ ಇನಿಯನ ವೇಣುಗಾನವು ನಮ್ಮನ್ನು ಮಾತ್ರವೇ ಅಲ್ಲದೆ ಆಕಾಶಸಂಚಾರಿಗಳಾದ ದೇವತೆಗಳನ್ನೂ ವಿಮೋಹಗೊಳಿಸುವುದಾಗಿದೆ. ॥2-3॥
(ಶ್ಲೋಕ-4)
ಮೂಲಮ್
ಹಂತ ಚಿತ್ರಮಬಲಾಃ ಶೃಣುತೇದಂ
ಹಾರಹಾಸ ಉರಸಿ ಸ್ಥಿರವಿದ್ಯುತ್ ।
ನಂದಸೂನುರಯಮಾರ್ತಜನಾನಾಂ
ನರ್ಮದೋ ಯರ್ಹಿ ಕೂಜಿತವೇಣುಃ ॥
(ಶ್ಲೋಕ-5)
ಮೂಲಮ್
ವೃಂದಶೋ ವ್ರಜವೃಷಾ ಮೃಗಗಾವೋ
ವೇಣುವಾದ್ಯಹೃತಚೇತಸ ಆರಾತ್ ।
ದಂತದಷ್ಟಕವಲಾ ಧೃತಕರ್ಣಾ
ನಿದ್ರಿತಾ ಲಿಖಿತಚಿತ್ರಮಿವಾಸನ್ ॥
ಅನುವಾದ
ಮತ್ತೊಬ್ಬ ಗೋಪಿಯು ಹೇಳುತ್ತಾಳೆ — ಸಖಿಯರೇ! ನಾನು ಮತ್ತೊಂದು ಆಶ್ಚರ್ಯಕರವಾದ ವಿಚಾರವನ್ನು ಹೇಳುವೆನು, ಕೇಳಿರಿ. ಮುತ್ತಿನಹಾರದಂತೆ ಶುಭ್ರವಾದ ನಗೆಯುಳ್ಳ, ವಕ್ಷಃಸ್ಥಳದಲ್ಲಿ ಮಿಂಚಿನಂತೆ ಹೊಳೆಯುವ ಲಕ್ಷ್ಮೀದೇವಿಯನ್ನು ಹೊಂದಿರುವ, ಆರ್ತರಾದ ಭಕ್ತರಿಗೆ ಸುಖವನ್ನುಂಟುಮಾಡುವ, ನಂದಗೋಪನ ಮಗನಾದ ಶ್ರೀಕೃಷ್ಣನು ಕೊಳಲನ್ನು ನುಡಿಸಲು ಪ್ರಾರಂಭಿಸಿದರೆ, ಗುಂಪು-ಗುಂಪಾಗಿ ಮೇಯುತ್ತಿದ್ದ ವ್ರಜದ ಎತ್ತುಗಳು, ಮೃಗಗಳೂ, ಹಸುಗಳು ಆ ವೇಣುಗಾನದಿಂದ ಮೈಮರೆತು ಮೇಯುವುದನ್ನು ಹಾಗೆಯೇ ನಿಲ್ಲಿಸಿಬಿಡುತ್ತಿದ್ದವು. ಹಲ್ಲುಗಳಲ್ಲಿ ಕಚ್ಚಿಕೊಂಡ ಹುಲ್ಲನ್ನು ಅಗಿಯದೆ, ನುಂಗದೆ ಹಾಗೇ ನಿಂತಿರುತ್ತಿದ್ದವು. ಕಿವಿಗಳನ್ನು ನಿಮಿಸಿಕೊಂಡು ಗಾನಸುಧೆಯನ್ನು ಪಾನಮಾಡುತ್ತಿವೆಯೋ ಎಂಬಂತೆ ಚಿತ್ತಾರದಂತೆ ಸ್ಥಿರವಾಗಿ ನಿಲ್ಲುತ್ತವೆ. ಅವರ ಈ ಸ್ಥಿತಿಯು ಸ್ವಾಭಾವಿಕವೇ ಆಗಿದೆ. ಏಕೆಂದರೆ, ಈ ಮುರಲಿಗಾನವು ಅವರ ಚಿತ್ತವನ್ನು ಅಪಹರಿಸುತ್ತದೆ. ॥4-5॥
(ಶ್ಲೋಕ-6)
ಮೂಲಮ್
ಬರ್ಹಿಣಸ್ತಬಕಧಾತುಪಲಾಶೈ-
ರ್ಬದ್ಧಮಲ್ಲಪರಿಬರ್ಹವಿಡಂಬಃ ।
ಕರ್ಹಿಚಿತ್ ಸಬಲ ಆಲಿ ಸ ಗೋಪೈ-
ರ್ಗಾಃ ಸಮಾಹ್ವಯತಿ ಯತ್ರ ಮುಕುಂದಃ ॥
(ಶ್ಲೋಕ-7)
ಮೂಲಮ್
ತರ್ಹಿ ಭಗ್ನಗತಯಃ ಸರಿತೋ ವೈ
ತತ್ಪದಾಂಬುಜರಜೋನಿಲನೀತಮ್ ।
ಸ್ಪೃಹಯತೀರ್ವಯಮಿವಾಬಹುಪುಣ್ಯಾಃ
ಪ್ರೇಮವೇಪಿತಭುಜಾಃ ಸ್ತಿಮಿತಾಪಃ ॥
ಅನುವಾದ
ಮತ್ತೊಬ್ಬ ಗೋಪಿಯು ಹೇಳುತ್ತಾಳೆ — ಗೆಳತಿಯರೇ! ಕೆಲವೊಮ್ಮೆ ನಮ್ಮ ಮುದ್ದು ಇನಿಯನು ನವಿಲಗರಿಗಳಿಂದಲೂ, ಹೂವಿನ ಗೊಂಚಲುಗಳಿಂದಲೂ, ಹರಿದಳವೇ ಮುಂತಾದ ಬಣ್ಣಗಳಿಂದಲೂ, ಚಿಗುರೆಲೆಗಳಿಂದಲೂ ಶರೀರವನ್ನು ಸಿಂಗರಿಸಿಕೊಂಡು ಜಟ್ಟಿಯಂತೆ ಕಾಣುತ್ತಾ, ಬಲರಾಮನೊಂದಿಗೆ ಕೊಳಲನ್ನೂದುತ್ತಾ ಗೋಪಾಲಕರೊಡನೆ ಆಕಳುಗಳನ್ನು ಅವರ ಹೆಸರೆತ್ತಿ ಕರೆಯುತ್ತಾನೆ. ಆ ಸಮಯದಲ್ಲಿ ವೇಣುಗಾನದ ಮಾಧುರ್ಯವನ್ನು ಕೇಳಿದ ನದಿಗಳು ಸ್ತಬ್ಧರಾಗುತ್ತವೆ. ಮುಂದಕ್ಕೆ ಹರಿಯುವುದೇ ಇಲ್ಲ. ವಾಯುವು ನಮ್ಮ ಇನಿಯನ ಪಾದಧೂಳಿಯನ್ನು ತಂದು ತಮ್ಮ ಮೇಲೆ ಹಾಕುವನೆಂದು ಭಾವಿಸಿ ಸ್ಥಿರವಾಗಿ ನಿಲ್ಲುತ್ತವೆ. ಆದರೆ ಆ ನದಿಗಳು ನಮ್ಮಂತೆಯೇ ಭಾಗ್ಯಹೀನರು. ತೆರೆಗಳೆಂಬ ತೋಳುಗಳನ್ನು ನಾಲ್ಕಾರುಬಾರಿ ಚಾಚಿದರೂ ಅವುಗಳಿಗೆ ಭಗವಂತನ ಪಾದಧೂಳಿಯು ಸಿಗದೆ ಕೊನೆಗೆ ಪ್ರೇಮಾವೇಶದಿಂದ ತಟಸ್ಥರಾಗಿ ನಿಂತು ಬಿಡುತ್ತವೆ. ॥6-7॥
(ಶ್ಲೋಕ-8)
ಮೂಲಮ್
ಅನುಚರೈಃ ಸಮನುವರ್ಣಿತವೀರ್ಯ
ಆದಿಪೂರುಷ ಇವಾಚಲಭೂತಿಃ ।
ವನಚರೋ ಗಿರಿತಟೇಷು ಚರಂತೀ-
ರ್ವೇಣುನಾಹ್ವಯತಿ ಗಾಃ ಸ ಯದಾ ಹಿ ॥
(ಶ್ಲೋಕ-9)
ಮೂಲಮ್
ವನಲತಾಸ್ತರವ ಆತ್ಮನಿ ವಿಷ್ಣುಂ
ವ್ಯಂಜಯಂತ್ಯ ಇವ ಪುಷ್ಪ ಲಾಢ್ಯಾಃ ।
ಪ್ರಣತಭಾರವಿಟಪಾ ಮಧುಧಾರಾಃ
ಪ್ರೇಮಹೃಷ್ಟ ತನವಃ ಸಸೃಜುಃ ಸ್ಮ ॥
ಅನುವಾದ
ಇನ್ನೊಬ್ಬ ಗೋಪಿಯು ಹೇಳುತ್ತಾಳೆ — ಸಖಿಯೇ! ಅನಂತವಾದ ಮತ್ತು ಅಚಿಂತ್ಯವಾದ ಐಶ್ವರ್ಯಕ್ಕೆ ಸ್ವಾಮಿಯಾದ ಶ್ರೀಮನ್ನಾರಾಯಣನ ಅಪಾರಶಕ್ತಿಗಳನ್ನು ದೇವತೆಗಳು ಗಾನ ಮಾಡುತ್ತಾ ಇರುವಂತೆಯೇ ಗೊಲ್ಲಬಾಲಕರು ಕಡುಚೆಲುವನಾದ ಶ್ರೀಕೃಷ್ಣನಲೀಲಾ ಪ್ರಸಂಗಗಳನ್ನು ಗಾನ ಮಾಡುತ್ತಾ ಇರುತ್ತಾರೆ. ಅಂತಹ ಅಚಿಂತ್ಯ ಐಶ್ವರ್ಯ ಸಂಪನ್ನನಾದ ಶ್ರೀಕೃಷ್ಣನು ವೃಂದಾವನದಲ್ಲಿ ವಿಹರಿಸುವಾಗ, ಕೊಳಲನ್ನೂದುತ್ತಾ ಗೋವರ್ಧನದ ತಪ್ಪಲಲ್ಲಿ ಮೇಯುತ್ತಿದ್ದ ಹಸುಗಳ ಹೆಸರಿಡಿದು ಕರೆಯುತ್ತಿರುವನು. ಆ ವನದ ಮರ-ಗಿಡ-ಬಳ್ಳಿಗಳು ಹೂವೂ-ಹಣ್ಣುಗಳಿಂದ ಸಮೃದ್ಧವಾಗಿದ್ದು, ಅವುಗಳ ಕೊಂಬೆಗಳು ಫಲಭಾರದಿಂದ ನೆಲದವರೆಗೂ ಬಗ್ಗಿ ಶ್ರೀಕೃಷ್ಣನಿಗೆ ನಮಸ್ಕರಿಸುವಂತಿದೆ. ಆ ಲತಾ-ವೃಕ್ಷಗಳು ತನ್ನೊಳಗೆ ಭಗವಾನ್ ವಿಷ್ಣುವು ಇರುವೆನೆಂಬುದನ್ನು ಸೂಚಿಸುತ್ತವೋ ಎಂಬಂತೆ ಉಲ್ಲಸಿತವಾಗುತ್ತವೆ. ಆ ವೃಕ್ಷಗಳು ಪ್ರಹೃಷ್ಟವಾದ ಶರೀರವನ್ನು ಹೊಂದಿ ರೋಮಾಂಚನವಾದಂತೆ ಮಕರಂದದ ಧಾರೆಯನ್ನು ಸುರಿಸುತ್ತವೆ. ॥8-9॥
(ಶ್ಲೋಕ-10)
ಮೂಲಮ್
ದರ್ಶನೀಯತಿಲಕೋ ವನಮಾಲಾ-
ದಿವ್ಯಗಂಧತುಲಸೀಮಧುಮತ್ತೈಃ ।
ಅಲಿಕುಲೈರಲಘುಗೀತಮಭೀಷ್ಟ-
ಮಾದ್ರಿಯನ್ ಯರ್ಹಿ ಸಂಧಿತವೇಣುಃ ॥
(ಶ್ಲೋಕ-11)
ಮೂಲಮ್
ಸರಸಿ ಸಾರಸಹಂಸವಿಹಂಗಾ-
ಶ್ಚಾರುಗೀತಹೃತಚೇತಸ ಏತ್ಯ ।
ಹರಿಮುಪಾಸತ ತೇ ಯತಚಿತ್ತಾ
ಹಂತ ಮೀಲಿತದೃಶೋ ಧೃತವೌನಾಃ ॥
ಅನುವಾದ
ಮತ್ತೊಬ್ಬ ಗೋಪಿಯು ಹೇಳುತ್ತಾಳೆ — ಸಖಿಯರೇ! ನಮ್ಮ ಇನಿಯನ ಹಣೆಯಲ್ಲಿ ದರ್ಶನೀಯವಾದ ಕಸ್ತೂರಿ ತಿಲಕವಿದೆ. ಕಂಠದಲ್ಲಿ ತುಲಸೀದಳಗಳಿಂದ ಕೂಡಿದ ವನಮಾಲೆಯಿದೆ. ಇದರ ಸುಗಂಧವನ್ನು ಆಘ್ರಾಣಿಸಿದ ದುಂಬಿಗಳು ಮತ್ತರಾಗಿ ಝೇಂಕರಿಸುತ್ತಿವೆ. ಶ್ರೀಕೃಷ್ಣನು ದುಂಬಿಗಳ ಧ್ವನಿಯನ್ನು ಅನುಸರಿಸಿ ವೇಣುವನ್ನು ನುಡಿಸುತ್ತಾನೆ. ಆ ಮುನಿಜನ ಮೋಹನ ವೇಣುಗಾನವನ್ನು ಕೇಳಿದ ಸರೋವರದಲ್ಲಿದ್ದ ಹಂಸ, ಕಾರಂಡವ ಮೊದಲಾದ ಜಲ ಪಕ್ಷಿಗಳ ಮನಸ್ಸೂ ಕೂಡ ಪರವಶವಾಗುತ್ತದೆ. ಅವುಗಳು ವಿವಶರಾಗಿ ಪ್ರಿಯ ಶ್ಯಾಮಸುಂದರನ ಬಳಿಗೆ ಬಂದು ಮೌನವಾಗಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಂಡು, ಏಕಾಗ್ರಚಿತ್ತದಿಂದ ಅವನನ್ನು ಆರಾಧಿಸುವವೋ ಎಂಬಂತಿರುತ್ತದೆ. ಎಂತಹ ಆಶ್ಚರ್ಯದ ಮಾತಾಗಿದೆ! ॥10-11॥
(ಶ್ಲೋಕ-12)
ಮೂಲಮ್
ಸಹಬಲಃ ಸ್ರಗವತಂಸವಿಲಾಸಃ
ಸಾನುಷು ಕ್ಷಿತಿಭೃತೋ ವ್ರಜದೇವ್ಯಃ ।
ಹರ್ಷಯನ್ ಯರ್ಹಿ ವೇಣುರವೇಣ
ಜಾತಹರ್ಷ ಉಪರಂಭತಿ ವಿಶ್ವಮ್ ॥
(ಶ್ಲೋಕ-13)
ಮೂಲಮ್
ಮಹದತಿಕ್ರಮಣಶಂಕಿತಚೇತಾ
ಮಂದಮಂದಮನುಗರ್ಜತಿ ಮೇಘಃ ।
ಸುಹೃದಮಭ್ಯವರ್ಷತ್ಸುಮನೋಭಿ-
ಶ್ಛಾಯಯಾ ಚ ವಿದಧತ್ ಪ್ರತಪತ್ರಮ್ ॥
ಅನುವಾದ
ಇನ್ನೊಬ್ಬ ಗೋಪಿಯು ಹೇಳಿದಳು — ಗೆಳತಿಯರೇ! ನಮ್ಮ ಶ್ಯಾಮಸುಂದರನು ಹೂಗಳ ಕರ್ಣಕುಂಡಲಗಳಿಂದ ಅಲಂಕರಿಸಿಕೊಂಡು ಬಲರಾಮನೊಂದಿಗೆ ಗೋವರ್ಧನದ ತಪ್ಪಲಿನಲ್ಲಿ ನಿಂತು ಸಮಸ್ತ ಜಗತ್ತನ್ನು ಹರ್ಷಗೊಳಿಸುತ್ತಾ ಕೊಳಲನ್ನು ನುಡಿಸುತ್ತಿರುತ್ತಾನೆ. ಕೇವಲ ನುಡಿಸುವುದು ಮಾತ್ರವಲ್ಲ, ಆನಂದತುಂದಿಲನಾಗಿ ವೇಣುಗಾನದ ಮೂಲಕ ವಿಶ್ವವನ್ನೇ ಆಲಿಂಗಿಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಮೇಘವು ಕೊಳಲಿನ ಧ್ವನಿಯೊಂದಿಗೆ ಮೆಲ್ಲಮೆಲ್ಲನೆ ಗರ್ಜಿಸುತ್ತದೆ. ಶ್ರೀಕೃಷ್ಣನ ವೇಣುನಾದವು ಕೇಳದಂತೆ ನಾವು ಜೋರಾಗಿ ಗುಡುಗಿದರೆ ಶ್ರೀಕೃಷ್ಣನಿಗೆ ಅಪರಾಧವೆಸಗಿದಂತಾದೀತೆಂದು ಶಂಕಿಸಿ ಮೆಲ್ಲನೆ ಗುಡುಗುತ್ತವೆ. ಕೆಲವು ವೇಳೆ ನಮ್ಮ ಪ್ರಿಯಕರನ ಮೇಲೆ ಹೂಮಳೆಗರೆಯುತ್ತವೆ. ಕೆಲವುಸಲ ಬಿಸಿಲಿನಿಂದ ಉಂಟಾದ ಬೇಗೆಯನ್ನು ಹೋಗಲಾಡಿಸಲು ಛತ್ರಿಯಂತೆ ಅವನ ಮೇಲೆ ಆವರಿಸಿ ಬಿಡುತ್ತವೆ. ॥12-13॥
(ಶ್ಲೋಕ-14)
ಮೂಲಮ್
ವಿವಿಧಗೋಪಚರಣೇಷು ವಿದಗ್ಧೋ
ವೇಣುವಾದ್ಯ ಉರುಧಾ ನಿಜಶಿಕ್ಷಾಃ ।
ತವ ಸುತಃ ಸತಿ ಯದಾಧರಬಿಂಬೇ
ದತ್ತವೇಣುರನಯತ್ಸ್ವರಜಾತೀಃ ॥
(ಶ್ಲೋಕ-15)
ಮೂಲಮ್
ಸವನಶಸ್ತದುಪಧಾರ್ಯ ಸುರೇಶಾಃ
ಶಕ್ರಶರ್ವಪರಮೇಷ್ಠಿ ಪುರೋಗಾಃ ।
ಕವಯ ಆನತಕಂಧರಚಿತ್ತಾಃ
ಕಶ್ಮಲಂ ಯಯುರನಿಶ್ಚಿತತತ್ತ್ವಾಃ ॥
ಅನುವಾದ
ಮತ್ತೊಬ್ಬ ಗೋಪಿಯು ಶ್ರೀಕೃಷ್ಣನ ಕೊಳಲಿನ ಮಹಿಮೆಯನ್ನು ಹೇಳುತ್ತಾಳೆ - ಯಶೋದಾಮಾತೆಯೇ! ನಿನ್ನ ಮನಮೋಹಕನಾದ ಮಗನು ಗೋಪಬಾಲಕರೊಂದಿಗೆ ಆಟವಾಡುವುದರಲ್ಲಿ ಬಹಳ ನಿಪುಣನು. ಅವನು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದು, ಅತ್ಯಂತ ಚತುರನೂ ಆಗಿದ್ದಾನೆ. ಅವನು ಕೊಳಲನ್ನು ನುಡಿಸುವುದನ್ನು ಯಾರಿಂದಲೂ ಕಲಿಯಲಿಲ್ಲ. ಅವನು ತೊಂಡೆಹಣ್ಣಿನಂತಿರುವ ಸುಂದರವಾದ ತನ್ನ ತುಟಿಯ ಮೇಲೆ ಕೊಳಲನ್ನು ಇಡುತ್ತಲೇ ಹಲವಾರು ರಾಗ-ರಾಗಿಣಿಯರು ತಾವಾಗಿಯೇ ಪ್ರಕಟಗೊಳ್ಳುವುವು. ಕರ್ಣಾನಂದಕರವಾದ ಆ ವೇಣುಗಾನವನ್ನು ಕೇಳಿದ ಇಂದ್ರ-ರುದ್ರ-ಬ್ರಹ್ಮರೇ ಮೊದಲಾದ ದೇವತೆಗಳ ಮತ್ತು ವಿದ್ವಾಂಸರ ಕತ್ತೂ ಹಾಗೂ ಮನಸ್ಸು ಶ್ರೀಕೃಷ್ಣನ ಕಡೆಗೆ ವಾಲುತ್ತದೆ. ಅವರೆಷ್ಟೇ ಕೇಳಿದರೂ ಆನಂದ ಪಡುವುದು ಬಿಟ್ಟು ಶ್ರೀಕೃಷ್ಣನು ನುಡಿಸುತ್ತಿರುವ ರಾಗವಾಗಲೀ, ರಾಗದ ಭೇದವಾಗಲೀ ಅವರಿಗೆ ತಿಳಿಯುವುದಿಲ್ಲ. ವೇಣುಗಾನದ ರಹಸ್ಯವನ್ನು ತಿಳಿಯಲಾಗದೆ ಅವರು ವಿಮೋಹಿತರಾಗುತ್ತಾರೆ. ॥14-15॥
(ಶ್ಲೋಕ-16)
ಮೂಲಮ್
ನಿಜಪದಾಬ್ಜದಲೈರ್ಧ್ವಜವಜ್ರ-
ನೀರಜಾಂಕುಶವಿಚಿತ್ರಲಲಾಮೈಃ ।
ವ್ರಜಭುವಃ ಶಮಯನ್ಖುರತೋದಂ
ವರ್ಷ್ಮಧುರ್ಯಗತಿರೀಡಿತವೇಣುಃ ॥
(ಶ್ಲೋಕ-17)
ಮೂಲಮ್
ವ್ರಜತಿ ತೇನ ವಯಂ ಸವಿಲಾಸ-
ವೀಕ್ಷಣಾರ್ಪಿತಮನೋಭವವೇಗಾಃ ।
ಕುಜಗತಿಂ ಗಮಿತಾ ನ ವಿದಾಮಃ
ಕಶ್ಮಲೇನ ಕಬರಂ ವಸನಂ ವಾ ॥
ಅನುವಾದ
ಇನ್ನೋರ್ವಳು ಹೇಳುವಳು — ಸಖಿಯೇ! ನಮ್ಮ ಪ್ರಾಣಸಖನಾದ ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ಧ್ವಜ, ವಜ್ರ, ಕಮಲ, ಅಂಕುಶ ಇವೇ ಮೊದಲಾದ ವಿಚಿತ್ರವಾದ, ಸುಂದರವಾದ ಚಿಹ್ನೆಗಳಿವೆ. ವ್ರಜಭೂಮಿಯು ಗೋವುಗಳ ಗೊರಸುಗಳಿಂದ ಪೀಡಿಸಲ್ಪಟ್ಟಾಗ ಶ್ರೀಕೃಷ್ಣನು ಅದರ ನೋವನ್ನು ಹೋಗಲಾಡಿಸಲು ಮದಗಜದಂತೆ ನಿಧಾನವಾಗಿ ನಡೆಯುತ್ತಾ, ಕೊಳಲನ್ನು ನುಡಿಸುತ್ತಾ ಹೋಗುತ್ತಿರುತ್ತಾನೆ. ಅವರ ಚೇತೋಹಾರಿಯಾದ ವೇಣುಗಾನ, ಅವನ ನಡಿಗೆ ಮತ್ತು ಮಂದಹಾಸಗಳು ನಮ್ಮ ಹೃದಯದಲ್ಲಿ ಪ್ರೇಮವನ್ನು ಹಾಗೂ ಅವನನ್ನು ಸೇರಬೇಕೆಂಬ ಆಕಾಂಕ್ಷೆಯನ್ನು ಹೆಚ್ಚಿಸುತ್ತದೆ. ವಿಲಾಸದಿಂದ ಕೂಡಿದ ಅವನ ಕುಡಿ ನೋಟದಿಂದ ಪ್ರೇಮ ವಿಹ್ವಲರಾದ ನಾವು ವೃಕ್ಷಗಳಂತೆ ಜಡರಾಗಿಬಿಡುತ್ತೇವೆ. ಅವನಲ್ಲಿ ವಿಮೋಹಿತರಾದ ನಾವು ತುರುಬು ಬಿಚ್ಚಿಹೋಗುವುದೂ, ಸೀರೆ ಜಾರಿ ಹೋಗುವುದೂ ತಿಳಿಯದಷ್ಟು ತನ್ಮಯರಾಗುತ್ತೇವೆ. ॥16-17॥
(ಶ್ಲೋಕ-18)
ಮೂಲಮ್
ಮಣಿಧರಃ ಕ್ವಚಿದಾಗಣಯನ್ ಗಾ
ಮಾಲಯಾ ದಯಿತಗಂಧತುಲಸ್ಯಾಃ ।
ಪ್ರಣಯಿನೋನುಚರಸ್ಯ ಕದಾಂಸೇ
ಪ್ರಕ್ಷಿಪನ್ಭುಜಮಗಾಯತ ಯತ್ರ ॥
(ಶ್ಲೋಕ-19)
ಮೂಲಮ್
ಕ್ವಣಿತವೇಣುರವವಂಚಿತಚಿತ್ತಾಃ
ಕೃಷ್ಣಮನ್ವಸತ ಕೃಷ್ಣಗೃಹಿಣ್ಯಃ ।
ಗುಣಗಣಾರ್ಣಮನುಗತ್ಯ ಹರಿಣ್ಯೋ
ಗೋಪಿಕಾ ಇವ ವಿಮುಕ್ತಗೃಹಾಶಾಃ ॥
ಅನುವಾದ
ಇನ್ನೊಬ್ಬ ಗೋಪಿಯು ಹೇಳುತ್ತಾಳೆ — ಗೆಳತಿಯರೇ! ಮಣಿಗಳ ಸರವು ನಮ್ಮ ಶ್ಯಾಮಸುಂದರನ ಕೊರಳಿನಲ್ಲಿ ಸದಾ ವಿರಾಜಿಸುತ್ತವೆ. ತುಳಸಿಯ ಪರಿಮಳವು ಅವನಿಗೆ ಅತಿಪ್ರಿಯವಾಗಿದೆ. ಆದುದರಿಂದ ಶ್ರೀಕೃಷ್ಣನು ತುಳಸೀ ಮಾಲೆಯನ್ನು ನಿರಂತರವಾಗಿ ಧರಿಸಿಯೇ ಇರುತ್ತಾನೆ. ಅವನು ಮಣಿಗಳ ಮಾಲೆಯಿಂದ ಹಸುಗಳನ್ನು ಎಣಿಸುತ್ತಾ, ಮತ್ತೊಂದು ತೋಳನ್ನು ತನ್ನ ಪ್ರಿಯಸಖನ ಹೆಗಲ ಮೇಲಿಟ್ಟು ಹಾಡುತ್ತಿರುತ್ತಾನೆ. ಕೆಲವು ವೇಳೆ ಕೊಳಲನ್ನು ನುಡಿಸುತ್ತಿರುತ್ತಾನೆ. ಆ ಕರ್ಣಾನಂದಕರವಾದ ವೇಣುಗಾನದಿಂದ ಆಕರ್ಷಿತರಾದ ಹೆಣ್ಣು ಜಿಂಕೆಗಳು ಗೋಪಿಕೆಯರಾದ ನಾವು ಮನೆ-ಮಠ, ಪತಿ-ಸುತರನ್ನೂ, ಬಂಧು-ಬಾಂಧವರನ್ನು ಪರಿತ್ಯಜಿಸಿ ಶ್ರೀಕೃಷ್ಣನನ್ನು ಹಿಂಬಾಲಿಸಿದಂತೆ - ಸಕಲವನ್ನು ತ್ಯಜಿಸಿ ಮೇಯುವುದನ್ನು ಬಿಟ್ಟು ಗುಣಗಳಿಗೆ ಸಮುದ್ರ ಪ್ರಾಯನಾದ ಶ್ರೀಕೃಷ್ಣನನ್ನು ಹಿಂಬಾಲಿಸಿ ಹೋಗುತ್ತವೆ. ॥18-19॥
(ಶ್ಲೋಕ-20)
ಮೂಲಮ್
ಕುಂದದಾಮಕೃತಕೌತುಕವೇಷೋ
ಗೋಪಗೋಧನವೃತೋ ಯಮುನಾಯಾಮ್ ।
ನಂದಸೂನುರನಘೇ ತವ ವತ್ಸೋ
ನರ್ಮದಃ ಪ್ರಣಯಿನಾಂ ವಿಜಹಾರ ॥
(ಶ್ಲೋಕ-21)
ಮೂಲಮ್
ಮಂದವಾಯುರುಪವಾತ್ಯನುಕೂಲಂ
ಮಾನಯನ್ ಮಲಯಜಸ್ಪರ್ಶೇನ ।
ವಂದಿನಸ್ತಮುಪದೇವಗಣಾ ಯೇ
ವಾದ್ಯಗೀತಬಲಿಭಿಃ ಪರಿವವ್ರಃ ॥
ಅನುವಾದ
ಮತ್ತೊಬ್ಬ ಗೋಪಿಕೆಯು ಹೇಳಿದಳು — ಯಶೋದಾ ರಾಣಿಯೇ! ಅಂತಹ ಜಗದಾನಂದಕಂದನನ್ನು ಮಗನನ್ನಾಗಿ ಪಡೆದಿರುವ ನೀನೇ ಪುಣ್ಯವತಿಯು. ಅವನ ಮನಸ್ಸು ಬಹಳ ಕೋಮಲವಾದುದು. ಅವನು ಬಗೆ-ಬಗೆಯ ಹಾಸ-ಪರಿಹಾಸಗಳ ಮೂಲಕವಾಗಿ ತನ್ನ ಗೆಳೆಯರಿಗೆ ಆನಂದವನ್ನುಂಟುಮಾಡುತ್ತಾ ಇರುತ್ತಾನೆ. ಗೋಪ-ಗೋಪಿಯರಿಗೆ ಕೌತುಕವನ್ನುಂಟುಮಾಡುವ ನಿನ್ನ ಮಗನು ವಿಚಿತ್ರವಾದ ವೇಷಗಳನ್ನು ಧರಿಸಿ, ಮಲ್ಲಿಗೆಯ ಹೂವಿನ ಹಾರವನ್ನು ಹಾಕಿಕೊಂಡು ಗೋ-ಗೋಪಾಲಕರೊಡನೆ ಯಮುನಾ ನದಿಯ ತೀರದಲ್ಲಿ ಆಟವಾಡುವಾಗ ಮಲಯಾಚಲ ಚಂದನದಂತೆ ಸುಗಂಧಿತವಾಯುವು ಮಂದ-ಮಂದವಾಗಿ ಅನುಕೂಲಕರವಾಗಿ ಬೀಸುತ್ತಾ ನಿನ್ನ ಮಗನ ಸೇವೆ ಮಾಡುತ್ತಾ ಇರುತ್ತದೆ. ಗಂಧರ್ವಾದಿ ಉಪದೇವತೆಗಳು ವಂದೀಜನರಂತೆ ಅವನ ಗುಣಗಾನವನ್ನು ಮಾಡುತ್ತಾ ಅವನನ್ನು ಸಂತೋಷಪಡಿಸುತ್ತಾ, ಅನೇಕ ಉಪಹಾರಾದಿಗಳನ್ನು ನೀಡಿಸುತ್ತಲೂ ನಿಂತು ಸೇವೆ ಮಾಡುತ್ತಾ ಇರುತ್ತಾರೆ. ॥20-21॥
(ಶ್ಲೋಕ-22)
ಮೂಲಮ್
ವತ್ಸಲೋ ವ್ರಜಗವಾಂ ಯದಗಧ್ರೋ
ವಂದ್ಯಮಾನಚರಣಃ ಪಥಿ ವೃದ್ಧೈಃ ।
ಕೃತ್ಸ್ನಗೋಧನಮುಪೋಹ್ಯ ದಿನಾಂತೇ
ಗೀತವೇಣುರನುಗೇಡಿತಕೀರ್ತಿಃ ॥
(ಶ್ಲೋಕ-23)
ಮೂಲಮ್
ಉತ್ಸವಂ ಶ್ರಮರುಚಾಪಿ ದೃಶೀನಾ-
ಮುನ್ನಯನ್ ಖರರಜಶ್ಛುರಿತಸ್ರಕ್ ।
ದಿತ್ಸಯೈತಿ ಸುಹೃದಾಶಿಷ ಏಷ
ದೇವಕೀಜಠರಭೂರುಡುರಾಜಃ ॥
ಅನುವಾದ
ಇನ್ನೋರ್ವಳು ಹೇಳುತ್ತಾಳೆ — ಸಖಿಯರೇ! ನಮ್ಮ ಶ್ಯಾಮಸುಂದರನು ಗೋಕುಲದ ಗೋವುಗಳನ್ನು ಬಹಳವಾಗಿ ಪ್ರೀತಿಸುತ್ತಾನೆ. ಹಸುಗಳನ್ನು ರಕ್ಷಿಸುವುಕ್ಕಾಗಿಯೇ ಅವನು ಗೋವರ್ಧನವನ್ನು ಎತ್ತಿದುದು. ಈ ವೇಳೆಗಾಗಲೇ ನಮ್ಮ ಪ್ರೇಮಮೂರ್ತಿಯು ಗೋವುಗಳನ್ನು ಅಟ್ಟಿಕೊಂಡು ಗೋಕುಲದ ಕಡೆಗೆ ಬರುತ್ತಿರಬಹುದು. ಆದರೂ ಏಕಿಷ್ಟು ತಡವಾಗುತ್ತಿದೆ? ವಯೋವೃದ್ಧರೂ, ಜ್ಞಾನವೃದ್ಧರೂ, ತಪೋವೃದ್ಧರೂ ಅವನ ಚರಣಗಳಿಗೆ ವಂದಿಸುತ್ತಿರಬಹುದು. ಈಗ ಅವನು ಕೊಳಲನ್ನೂದುತ್ತಾ ಗೋವುಗಳ ಹಿಂದೆ ಹಿಂದೆಯೇ ಬರುತ್ತಿರಬಹುದು. ಹಸುಗಳ ಗೊರಸುಗಳಿಂದ ಎದ್ದ ಧೂಳಿಯು ಶ್ರೀಕೃಷ್ಣನ ವನಮಾಲೆಯನ್ನು ಮುಚ್ಚಿಕೊಂಡಿದೆ. ಅವನು ದಿನವೆಲ್ಲ ತಿರುಗಿ-ತಿರುಗಿ ಬಹಳವಾಗಿ ದಣಿದಿದ್ದಾನೆ. ಆ ಬಳಲಿಕೆಯಿಂದ ಸೌಂದರ್ಯವೇ ಅಡಗಿದೆ. ಅವನ ಅಲೌಕಿಕವಾದ ಶೋಭೆಯಿಂದಲೇ - ನಮ್ಮ ಕಣ್ಮನಗಳಿಗೆ ಆನಂದವನ್ನುಂಟುಮಾಡುತ್ತಾನೆ. ದೇವಕೀದೇವಿಯ ಗರ್ಭಾಂಬುಧಿಯಲ್ಲಿ ಹುಟ್ಟಿ ಸಮಸ್ತರಿಗೂ ಆಹ್ಲಾದವನ್ನು ಉಂಟು ಮಾಡುವ ಶ್ರೀಕೃಷ್ಣಚಂದ್ರನು ಭಕ್ತಜನರಿಗೆ ಒಳ್ಳೆಯದನ್ನು ಮಾಡಲಿಕ್ಕಾಗಿ, ನಮ್ಮ ಆಸೆ-ಆಕಾಂಕ್ಷೆಗಳನ್ನು ಪೂರ್ಣಗೊಳಿಸಲಿಕ್ಕಾಗಿಯೇ ನಮ್ಮ ಬಳಿಗೆ ಈಗ ಬರುತ್ತಿದ್ದಾನೆ. ॥22-23॥
(ಶ್ಲೋಕ-24)
ಮೂಲಮ್
ಮದವಿಘೂರ್ಣಿತಲೋಚನ ಈಷನ್-
ಮಾನದಃ ಸ್ವಸುಹೃದಾಂ ವನಮಾಲೀ ।
ಬದರಪಾಂಡುವದನೋ ಮೃದುಗಂಡಂ
ಮಂಡಯನ್ ಕನಕಕುಂಡಲಲಕ್ಷ್ಮ್ಯಾ ॥
(ಶ್ಲೋಕ-25)
ಮೂಲಮ್
ಯದುಪತಿರ್ದ್ವಿರದರಾಜವಿಹಾರೋ
ಯಾಮಿನೀಪತಿರಿವೈಷ ದಿನಾಂತೇ ।
ಮುದಿತವಕ ಉಪಯಾತಿ ದುರಂತಂ
ಮೋಚಯನ್ ವ್ರಜಗವಾಂ ದಿನತಾಪಮ್ ॥
ಅನುವಾದ
ಸಖಿಯರೇ! ಇನಿಯನ ಸೌಂದರ್ಯವೆಷ್ಟೆಂಬುದನ್ನು ನೋಡಿ. ಅವನ ಕಣ್ಣುಗಳು ಮದದಿಂದ ಸೊಕ್ಕಿರುವಂತೆ ಕಾಣುತ್ತಿವೆ. ಅವನು ಕೊರಳಲ್ಲಿ ಸುಂದರವಾದ ವನಮಾಲೆಯನ್ನು ಧರಿಸಿದ್ದಾನೆ. ಚಿನ್ನದ ಕರ್ಣಾಭರಣಗಳಿಂದ ಅವನ ಕೆನ್ನೆಗಳು ಅಲಂಕೃತವಾಗಿವೆ. ಸ್ವಲ್ಪ ಪಕ್ವವಾದ ಬೋರೆ ಹಣ್ಣಿನಂತೆ ಕಿರುಹಳದಿಯಾದ ಮುಖಾರವಿಂದದಿಂದ ರಾರಾಜಿಸುತ್ತಿದ್ದಾನೆ. ರೋಮ-ರೋಮಗಳಲ್ಲಿ ವಿಶೇಷವಾಗಿ ಮುಖಕಮಲದಲ್ಲಿ ಪ್ರಸನ್ನತೆಯು ಮೂಡಿದೆ. ಅದೋ ನೋಡು, ನೋಡು! ಈಗ ಅವನು ಸ್ನೇಹಿತರಾದ ಗೊಲ್ಲಬಾಲಕರನ್ನು ಸಂತೈಸಿ ಬೀಳ್ಕೊಳ್ಳುತ್ತಿರುವನು. ವ್ರಜವಿಭೂಷಣ ಶ್ರೀಕೃಷ್ಣನು ಮದಭರಿತ ಗಜರಾಜನ ನಡಿಗೆಯಂತೆ ನಡೆಯುತ್ತಾ ಈ ಸಂಧ್ಯಾಕಾಲದಲ್ಲಿ ನಮ್ಮ ಬಳಿಗೆ ಬರುತ್ತಿರವನು. ವ್ರಜದಲ್ಲಿರುವ ಗೋವುಗಳ ಮತ್ತು ನಮ್ಮಗಳ ಹಗಲಿನ ಅಸಹನೀಯವಾದ ವಿರಹತಾಪನ್ನು ಹೊಗಲಾಡಿಸಲು ಉದಯಿಸುವ ಚಂದ್ರನಂತೆ ಪ್ರಿಯ ಶ್ಯಾಮಸುಂದರನು ನಮ್ಮ ಬಳಿಗೆ ಬರುತ್ತಿದ್ದಾನೆ. ॥24-25॥
(ಶ್ಲೋಕ-26)
ಮೂಲಮ್
ಶ್ರೀಶುಕ ಉವಾಚ
ಏವಂ ವ್ರಜಸಿಯೋ ರಾಜನ್ ಕೃಷ್ಣಲೀಲಾ ನು ಗಾಯತೀಃ ।
ರೇಮಿರೇಹಸ್ಸು ತಚ್ಚಿತ್ತಾಸ್ತನ್ಮನಸ್ಕಾ ಮಹೋದಯಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶ್ರೇಷ್ಠರಾದ ಗೋಪಿಯರ ಮನಸ್ಸು ಶ್ರೀಕೃಷ್ಣನಲ್ಲೇ ಲೀನವಾಗಿ ಹೋಗಿತ್ತು. ಅವರೆಲ್ಲರೂ ಕೃಷ್ಣಮಯರೇ ಆಗಿದ್ದರು. ಭಗವಾನ್ ಶ್ರೀಕೃಷ್ಣನು ಬೆಳಿಗ್ಗೆ ಗೋವುಗಳನ್ನು ಮೇಯಿಸಲು ವೃಂದಾವನಕ್ಕೆ ಹೊರಟು ಹೋದಾಗ, ಸಖಿಯರೆಲ್ಲರೂ ಸೇರಿ ಅವನನ್ನೇ ಚಿಂತಿಸುತ್ತಾ ಅವನ ಲೀಲೆಗಳನ್ನು ಹಾಡುತ್ತಾ ಅದರಲ್ಲೇ ರಮಿಸಿ ಹೋಗುತ್ತಾರೆ. ಹೀಗೆ ತಮ್ಮ ದಿನಗಳನ್ನು ಅವರು ಕಳೆಯುತ್ತಾರೆ. ॥26॥
ಅನುವಾದ (ಸಮಾಪ್ತಿಃ)
ಮೂವತ್ತೈದನೆಯ ಅಧ್ಯಾಯವು ಮುಗಿಯಿತು. ॥35॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ವೃಂದಾವನಕ್ರೀಡಾಯಾಂ ಗೋಪಿಕಾ ಯುಗಳಗೀತಂ ನಾಮ ಪಂಚತ್ರಿಂಶೋಽಧ್ಯಾಯಃ ॥35॥