೩೩

[ಮೂವತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ಮಹಾರಾಸ ಕ್ರೀಡೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಥಂ ಭಗವತೋ ಗೋಪ್ಯಃ ಶ್ರುತ್ವಾ ವಾಚಃ ಸುಪೇಶಲಾಃ ।
ಜಹುರ್ವಿರಹಜಂ ತಾಪಂ ತದಂಗೋಪಚಿತಾಶಿಷಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಗೋಪಿಯರು ಭಗವಂತನ ಪ್ರೇಮಪೂರ್ಣವಾದ, ಸುಮಧುರವಾದ ಈ ಮಾತನ್ನು ಕೇಳಿ ವಿರಹತಾಪದಿಂದ ಮುಕ್ತರಾದರು. ಸೌಂದರ್ಯನಿಧಿಯಾದ, ಪ್ರಾಣಪ್ರಿಯನಾದ ಶ್ರೀಕೃಷ್ಣನ ಅಂಗ ಸಂಗದಿಂದ ಸಫಲ ಮನೋರಥರಾದರು. ॥1॥

(ಶ್ಲೋಕ-2)

ಮೂಲಮ್

ತತ್ರಾರಭತ ಗೋವಿಂದೋ ರಾಸಕ್ರೀಡಾಮನುವ್ರತೈಃ ।
ಸೀರತ್ನೈರನ್ವಿತಃ ಪ್ರೀತೈರನ್ಯೋನ್ಯಾಬದ್ಧಬಾಹುಭಿಃ ॥

ಅನುವಾದ

ಆನಂದ ತುಂದಿಲರಾಗಿ ಪರಸ್ಪರ ತೋಳುಗಳನ್ನು ಹಿಡಿದುಕೊಂಡು ತನ್ನನ್ನು ಅನುಸರಿಸಿ ನಿಂತಿರುವ ಸ್ತ್ರೀರತ್ನಗಳೊಡನೆ ಯಮುನಾ ನದಿಯ ಮರಳುದಿಣ್ಣೆಯಲ್ಲಿ ಭಗವಾನ್ ಶ್ರೀಕೃಷ್ಣನು ರಾಸಕ್ರೀಡೆಯನ್ನು ಆಡಲು ಪ್ರಾರಂಭಿಸಿದನು. ॥2॥

(ಶ್ಲೋಕ-3)

ಮೂಲಮ್

ರಾಸೋತ್ಸವಃ ಸಂಪ್ರವೃತ್ತೋ ಗೋಪೀಮಂಡಲಮಂಡಿತಃ ।
ಯೋಗೇಶ್ವರೇಣ ಕೃಷ್ಣೇನ ತಾಸಾಂ ಮಧ್ಯೇ ದ್ವಯೋರ್ದ್ವಯೋಃ ।
ಪ್ರವಿಷ್ಟೇನ ಗೃಹೀತಾನಾಂ ಕಂಠೇ ಸ್ವನಿಕಟಂ ಸಿಯಃ ॥

ಅನುವಾದ

ಯೋಗೇಶ್ವರನಾದ ಶ್ರೀಕೃಷ್ಣನು ಇಬ್ಬಿಬ್ಬರು ಗೋಪಿಯರ ಮಧ್ಯದಲ್ಲಿ ಒಬ್ಬೊಬ್ಬ ಶ್ರೀಕೃಷ್ಣನಿರುವಂತೆ ಪ್ರಕಟನಾಗಿ ಆ ಇಬ್ಬರೂ ಗೋಪಿಯರ ಹೆಗಲ ಮೇಲೆ ತನ್ನ ತೋಳುಗಳನ್ನು ಹಾಕಿಕೊಂಡಿದ್ದನು. ಇದರಿಂದ ಪ್ರತಿಯೋರ್ವ ಗೋಪಿಯು ಶ್ರೀಕೃಷ್ಣನು ತನ್ನ ಪಕ್ಕದಲ್ಲೇ ಇರುವನೆಂದು ಭಾವಿಸಿಕೊಂಡರು. ॥3॥

(ಶ್ಲೋಕ-4)

ಮೂಲಮ್

ಯಂ ಮನ್ಯೇರನ್ನಭಸ್ತಾವದ್ವಿಮಾನಶತಸಂಕುಲಮ್ ।
ದಿವೌಕಸಾಂ ಸದಾರಾಣಾವೌತ್ಸುಕ್ಯಾಪಹೃತಾತ್ಮನಾಮ್ ॥

ಅನುವಾದ

ಹೀಗೆ ಸಾವಿರ-ಸಾವಿರ ಗೋಪಿಯರಿಂದ ಶೋಭಾಯಮಾನನಾದ ಭಗವಾನ್ ಶ್ರೀಕೃಷ್ಣನ ದಿವ್ಯರಾಸೋತ್ಸವವು ಪ್ರಾರಂಭವಾಯಿತು. ಆ ಸಮಯದಲ್ಲಿ ಆಕಾಶದಲ್ಲಿ ನೂರಾರು ವಿಮಾನಗಳು ನೆರೆದವು. ರಾಸಕ್ರೀಡೆಯನ್ನು ನೋಡಬೇಕೆಂಬ ತವಕದಿಂದ ಸಕಲದೇವತೆಗಳೂ ತಮ್ಮ-ತಮ್ಮ ಪತ್ನಿಯರೊಡನೆ ವಿಮಾನಗಳಲ್ಲಿ ಆಗಮಿಸಿದ್ದರು. ॥4॥

(ಶ್ಲೋಕ-5)

ಮೂಲಮ್

ತತೋ ದುಂದುಭಯೋ ನೇದುರ್ನಿಪೇತುಃ ಪುಷ್ಪವೃಷ್ಟಯಃ ।
ಜಗುರ್ಗಂಧರ್ವಪತಯಃ ಸಸೀಕಾಸ್ತದ್ಯಶೋಮಲಮ್ ॥

ಅನುವಾದ

ಆಗ ದೇವದುಂದುಭಿಗಳು ಮೊಳಗಿದವು. ರಾಸ ಮಂಡಲದ ಮೇಲೆ ಪುಷ್ಪವೃಷ್ಟಿಗಳಾದವು. ಗಂಧರ್ವಶ್ರೇಷ್ಠರು ತಮ್ಮ-ತಮ್ಮ ಪತ್ನಿಯರೊಂದಿಗೆ ಭಗವಂತನ ನಿರ್ಮಲವಾದ ಯಶಸ್ಸನ್ನು ಗಾನ ಮಾಡಿದರು. ॥5॥

(ಶ್ಲೋಕ-6)

ಮೂಲಮ್

ವಲಯಾನಾಂ ನೂಪುರಾಣಾಂ ಕಿಂಕಿಣೀನಾಂ ಚ ಯೋಷಿತಾಮ್ ।
ಸಪ್ರಿಯಾಣಾಮಭೂಚ್ಛಬ್ದಸ್ತುಮುಲೋ ರಾಸಮಂಡಲೇ ॥

ಅನುವಾದ

ರಾಸಮಂಡಲದಲ್ಲಿದ್ದ ಸಮಸ್ತ ಗೋಪಿಯರು ತಮ್ಮ ಪ್ರಿಯತಮ ಶ್ಯಾಮಸುಂದರನೊಂದಿಗೆ ನೃತ್ಯವಾಡತೊಡಗಿದರು. ಅವರ ಕೈಗಡಗಗಳು, ಕಾಲಂದುಗೆಗಳು, ಓಡ್ಯಾಣದ ಕಿರುಗೆಜ್ಜೆಗಳು ಒಟ್ಟಿಗೆ ಉಲಿಯತೊಡಗಿದವು. ಅಸಂಖ್ಯ ಗೋಪಿಯರಿದ್ದ ಕಾರಣ ಆ ಮಧುರ ಧ್ವನಿಯು ಸರ್ವತ್ರ ಕೇಳಿ ಬರುತ್ತಿತ್ತು. ॥6॥

(ಶ್ಲೋಕ-7)

ಮೂಲಮ್

ತತ್ರಾತಿಶುಶುಭೇ ತಾಭಿರ್ಭಗವಾನ್ ದೇವಕೀಸುತಃ ।
ಮಧ್ಯೇ ಮಣೀನಾಂ ಹೈಮಾನಾಂ ಮಹಾಮರಕತೋ ಯಥಾ ॥

ಅನುವಾದ

ಸುವರ್ಣಮಯವಾದ ಮಣಿಗಳ ಮಧ್ಯದಲ್ಲಿ ಜ್ಯೋತಿರ್ಮಯ ಮಹಾಮರಕತಮಣಿಯು ವಿರಾಜಿಸುವಂತೆಯೇ ಕಡುಚೆಲುವೆಯರಾದ ಗೋಪಿಯರ ನಡುವೆ ನೀಲಮೇಘಶ್ಯಾಮನಾದ ದೇವಕೀ ಕಂದನಾದ ಶ್ರೀಕೃಷ್ಣನು ರಾರಾಜಿಸಿದನು. ॥7॥

(ಶ್ಲೋಕ-8)

ಮೂಲಮ್

ಪಾದನ್ಯಾಸೈರ್ಭುಜವಿಧುತಿಭಿಃ ಸಸ್ಮಿತೈರ್ಭ್ರೂವಿಲಾಸೈ-
ರ್ಭಜ್ಯನ್ಮಧ್ಯೈಶ್ಚಲಕುಚಪಟೈಃ ಕುಂಡಲೈರ್ಗಂಡಲೋಲೈಃ ।
ಸ್ವಿದ್ಯನ್ಮುಖ್ಯಃ ಕಬರರಶನಾಗ್ರಂಥಯಃ ಕೃಷ್ಣವಧ್ವೋ
ಗಾಯಂತ್ಯಸ್ತಂ ತಡಿತ ಇವ ತಾ ಮೇಘಚಕ್ರೇ ವಿರೇಜುಃ ॥

ಅನುವಾದ

ರಾಸನೃತ್ಯವನ್ನು ಆಡುವಾಗ ಗೋಪಿಕೆಯರು ತಾಳಕ್ಕೆ ಸರಿಯಾಗಿ ಹೆಜ್ಚೆಗಳನ್ನು ಹಾಕುತ್ತಾ, ಪಾದವಿನ್ಯಾಸಕ್ಕೆ ಅನುಗುಣವಾಗಿ ಕೈಗಳಲ್ಲಿ ಮುದ್ರೆಗಳನ್ನು ತೋರಿಸುತ್ತಾ ಎರಡೂ ಕೈಗಳನ್ನು ಎಡ-ಬಲಕ್ಕೂ ಹಿಂದೆ-ಮುಂದೆಯೂ ಆಡಿಸುತ್ತಿದ್ದರು. ತಾಳಕ್ಕನುಸಾರವಾಗಿ ಕೆಲವು ವೇಳೆ ನಿಧಾನವಾಗಿಯೂ, ಕೆಲವು ವೇಳೆ ವೇಗವಾಗಿಯೂ ಹೆಜ್ಜೆಗಳನ್ನು ಹಾಕುತ್ತಾ ತಲೆಗಳನ್ನು, ಕಣ್ಣುಗಳನ್ನು ಆಡಿಸುವರು. ಕೆಲವು ವೇಳೆ ಭಾವ ಪೂರ್ಣವಾಗಿ ನಗುವರು, ಹುಬ್ಬಹಾರಿಸುವರು. ಕಡೆಗಣ್ಣಿನ ನೋಟದಿಂದ ನೋಡುವರು. ಕೆಲವೊಮ್ಮೆ ಕಿಲಕಿಲನೆ ನಗುವರು. ಸೊಂಟವನ್ನು ಬಳುಕಿಸುವರು. ನರ್ತನವಾಡುತ್ತಾ ಕುಳಿತಾಗ, ಎದ್ದಾಗ, ಬಾಗಿದಾಗ ಅವರ ಸ್ತನಗಳು ಕುಲ ಕಾಡುತ್ತಿದ್ದವು. ಕುಂಡಲಗಳು ಕಪೋಲಗಳಲ್ಲಿ ಕುಣಿದಾಡುತ್ತಿದ್ದವು. ಮುಖವು ಬೆವರಿತ್ತು. ತುರುಬುಗಳು ಬಿಚ್ಚಿಹೋಗಿದ್ದವು. ಓಡ್ಯಾಣಗಳು ಸಡಿಲವಾಗಿದ್ದವು. ಹೀಗೆ ಶ್ರೀಕೃಷ್ಣನ ಪ್ರಿಯೆಯರಾದ ಗೋಪಿಕೆಯರು ಶ್ರೀಕೃಷ್ಣನಿಗೆ ಉಲ್ಲಾಸವಾಗುವಂತೆ ನಾನಾಭಂಗಿಗಳಲ್ಲಿ ನೃತ್ಯವಾಡುತ್ತಾ ಅವನ ಲೀಲಾಪ್ರಸಂಗಗಳನ್ನು ಕರ್ಣಾನಂದಕರವಾಗಿ ಹಾಡುತ್ತಾ ಮೇಘಗಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮಿಂಚುಗಳಂತೆ ಪ್ರಕಾಶಿಸಿದರು. ॥8॥

(ಶ್ಲೋಕ-9)

ಮೂಲಮ್

ಉಚ್ಚೈರ್ಜಗುರ್ನೃತ್ಯಮಾನಾ ರಕ್ತಕಂಠ್ಯೋ ರತಿಪ್ರಿಯಾಃ ।
ಕೃಷ್ಣಾಭಿಮರ್ಷಮುದಿತಾ ಯದ್ಗೀತೇನೇದಮಾವೃತಮ್ ॥

ಅನುವಾದ

ರಾಸಪ್ರಿಯರಾದ ಗೋಪಿಯರು ಶ್ರೀಕೃಷ್ಣನ ಸ್ಪರ್ಶಮಾತ್ರದಿಂದ ಆನಂದ ಸಾಗರದಲ್ಲಿ ಮುಳುಗಿ, ಆತನೊಡನೆ ರಾಸನೃತ್ಯವನ್ನು ಆಡುತ್ತಾ ತಮ್ಮ ಸುಮಧುರ ಕಂಠಮಾಧುರ್ಯದಿಂದ ವಿಶ್ವವನ್ನೇ ವ್ಯಾಪಿಸುವಷ್ಟು ಗಟ್ಟಿಯಾಗಿ ಹಾಡತೊಡಗಿದರು. ಅದು ವಿಶ್ವದಲ್ಲೆಲ್ಲ ಈಗಲೂ ಪ್ರತಿಧ್ವನಿಸುತ್ತಿದೆ. ॥9॥

(ಶ್ಲೋಕ-10)

ಮೂಲಮ್

ಕಾಚಿತ್ಸಮಂ ಮುಕುಂದೇನ ಸ್ವರಜಾತೀರಮಿಶ್ರಿತಾಃ ।
ಉನ್ನಿನ್ಯೇ ಪೂಜಿತಾ ತೇನ ಪ್ರೀಯತಾ ಸಾಧು ಸಾಧ್ವಿತಿ ।
ತದೇವ ಧ್ರುವಮುನ್ನಿನ್ಯೇ ತಸ್ಯೈ ಮಾನಂ ಚ ಬಹ್ವದಾತ್ ॥

ಅನುವಾದ

ಓರ್ವ ಗೋಪಿಯು ಶ್ರೀಕೃಷ್ಣನೊಡನೆ ಧ್ವನಿಗೂಡಿಸಿ ಹಾಡುತ್ತಿದ್ದಳು. ಆಕೆಯ ಧ್ವನಿಯು ಶ್ರೀಕೃಷ್ಣನ ಸ್ವರಕ್ಕಿಂತ ತಾರಕದಲ್ಲಿತ್ತು. ಅದನ್ನೇ ಕೃಷ್ಣನು ಭಲೇ! ಭಲೇ! ಕರ್ಣಾನಂದಕರವಾಗಿದೆ ಎಂದು ಹೇಳುತ್ತಾ ಅವಳ ಹಾಡಿಗೆ ಅನುಗುಣವಾಗಿ ಧ್ರುವವೆಂಬ ತಾಳವನ್ನು ಹಾಕುತ್ತಾ ಆಕೆಯನ್ನು ಪ್ರೋತ್ಸಾಹಿಸಿದನು. ॥10॥

(ಶ್ಲೋಕ-11)

ಮೂಲಮ್

ಕಾಚಿದ್ರಾಸಪರಿಶ್ರಾಂತಾ ಪಾರ್ಶ್ವಸ್ಥಸ್ಯ ಗದಾಭೃತಃ ।
ಜಗ್ರಾಹ ಬಾಹುನಾ ಸ್ಕಂಧಂ ಶ್ಲಥದ್ವಲಯಮಲ್ಲಿಕಾ ॥

ಅನುವಾದ

ಒಬ್ಬ ಗೋಪಿಯು ರಾಸನೃತ್ಯದಿಂದ ಬಹಳವಾಗಿ ಬಳಲಿದಳು. ಮುಂಗೈಗಳಿಗೂ, ತೋಳುಗಳಿಗೂ ಕಟ್ಟಿಕೊಂಡ ಮಲ್ಲಿಗೆಯ ದಂಡೆಗಳು ಕಣಚಿಬೀಳುತ್ತಿದ್ದವು. ತತ್ತರಿಸಿ ಬೀಳುವುದರಲ್ಲಿದ್ದ ಆಕೆಯು ಪಕ್ಕದಲ್ಲಿದ್ದ ಶ್ರೀಕೃಷ್ಣನ ಭುಜವನ್ನು ಹಿಡಿದುಕೊಂಡು ಹಾಗೆಯೇ ನಿಂತುಕೊಂಡಳು. ॥11॥

(ಶ್ಲೋಕ-12)

ಮೂಲಮ್

ತತ್ರೈಕಾಂಸಗತಂ ಬಾಹುಂ ಕೃಷ್ಣಸ್ಯೋತ್ಪಲಸೌರಭಮ್ ।
ಚಂದನಾಲಿಪ್ತಮಾಘ್ರಾಯ ಹೃಷ್ಟರೋಮಾ ಚುಚುಂಬ ಹ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನ ಒಂದು ತೋಳನ್ನು ಒಬ್ಬ ಗೋಪಿಯ ಹೆಗಲಮೇಲಿಟ್ಟಿದ್ದನು. ಸ್ವಾಭಾವಿಕವಾಗಿಯೇ ಶ್ರೀಕೃಷ್ಣನ ತೋಳು ಕಮಲದ ಸುಗಂಧದಿಂದ ಕೂಡಿತ್ತು. ಅದಕ್ಕೆ ಪರಿಮಳದ ಗಂಧವು ಲೇಪಿತವಾಗಿತ್ತು. ಅದನ್ನು ಮೂಸಿ ನೋಡಿದ ಆ ಗೋಪಿಯು ರೋಮಾಂಚಿತಳಾಗಿ ಆ ತೋಳನ್ನು ಮುತ್ತಿಟ್ಟಳು. ॥12॥

(ಶ್ಲೋಕ-13)

ಮೂಲಮ್

ಕಸ್ಯಾಶ್ಚಿನ್ನಾಟ್ಯವಿಕ್ಷಿಪ್ತಕುಂಡಲತ್ವಿಷಮಂಡಿತಮ್ ।
ಗಂಡಂ ಗಂಡೇ ಸಂದಧತ್ಯಾ ಅದಾತ್ತಾಂಬೂಲಚರ್ವಿತಮ್ ॥

ಅನುವಾದ

ಮತ್ತೊಬ್ಬ ಗೋಪಿಯು ನಾಟ್ಯವಾಡುತ್ತಿರುವಾಗ ಕುಂಡಲದಿಂದ ಸಮಲಂಕೃತವಾಗಿದ್ದ ತನ್ನ ಕಪೋಲವನ್ನು ಶ್ರೀಕೃಷ್ಣನ ಕಪೋಲದ ಮೇಲಿಡಲು ಆಕೆಯ ಆಶಯವನ್ನು ತಿಳಿದ ಶ್ರೀಕೃಷ್ಣನು ಆಕೆಗೆ ತಾಂಬೂಲವನ್ನು ನೀಡಿದನು. ॥13॥

(ಶ್ಲೋಕ-14)

ಮೂಲಮ್

ನೃತ್ಯಂತೀ ಗಾಯತೀ ಕಾಚಿತ್ಕೂಜನ್ನೂಪುರಮೇಖಲಾ ।
ಪಾರ್ಶ್ವಸ್ಥಾಚ್ಯುತಹಸ್ತಾಬ್ಜಂ ಶ್ರಾಂತಾಧಾತ್ಸ್ತನಯೋಃ ಶಿವಮ್ ॥

ಅನುವಾದ

ಶ್ರೀಕೃಷ್ಣನ ಪಕ್ಕದಲ್ಲಿದ್ದ ಮತ್ತೊಬ್ಬ ಗೋಪಿಯು ಕಾಲಂದುಗೆ-ಡಾಬುಗಳ ಶಬ್ದದೊಡನೆ ನರ್ತಿಸುತ್ತಾ, ಹಾಡುತ್ತಾ ಬಹಳವಾಗಿ ಬಳಲಿ ಪಕ್ಕದಲ್ಲಿದ್ದ ಶ್ರೀಕೃಷ್ಣನ ಮಂಗಳಕರವಾದ ಕರಕಮಲವನ್ನು ತನ್ನ ವಕ್ಷಸ್ಥಳದ ಮೇಲೆ ಇರಿಸಿಕೊಂಡಳು. ॥14॥

(ಶ್ಲೋಕ-15)

ಮೂಲಮ್

ಗೋಪ್ಯೋ ಲಬ್ಧ್ವಾಚ್ಯುತಂ ಕಾಂತಂ ಶ್ರಿಯ ಏಕಾಂತವಲ್ಲಭಮ್ ।
ಗೃಹೀತಕಂಠ್ಯಸ್ತದ್ದೋರ್ಭ್ಯಾಂ ಗಾಯಂತ್ಯಸ್ತಂ ವಿಜಹ್ರಿರೇ ॥

ಅನುವಾದ

ಪರೀಕ್ಷಿತನೇ! ಗೋಪಿಯರ ಸೌಭಾಗ್ಯವು ಲಕ್ಷ್ಮೀದೇವಿಯ ಸೌಭಾಗ್ಯಕ್ಕಿಂತಲೂ ಮಿಗಿಲಾದುದು. ಲಕ್ಷ್ಮೀದೇವಿಗೆ ಪರಮಪ್ರಿಯನಾದ, ಏಕಾಂತಭಕ್ತರಿಗೆ ಪ್ರಿಯನಾದ ಶ್ರೀಕೃಷ್ಣನನ್ನು ತಮ್ಮ ಪ್ರಿಯತಮನನ್ನಾಗಿಸಿಕೊಂಡು, ಅವನಿಂದ ಆಲಿಂಗಿಸಲ್ಪಟ್ಟವರಾಗಿ, ಅವನ ಲೀಲಾಪ್ರಸಂಗಗಳನ್ನು ಸುಮಧುರವಾಗಿ ಗಾನಮಾಡುತ್ತಾ ಆ ಗೋಪಿಯರು ರಾರಾಜಿಸಿದರು. ॥15॥

(ಶ್ಲೋಕ-16)

ಮೂಲಮ್

ಕರ್ಣೋತ್ಪಲಾಲಕವಿಟಂಕಕಪೋಲಘರ್ಮ-
ವಕಶ್ರಿಯೋ ವಲಯನೂಪುರಘೋಷವಾದ್ಯೈಃ ।
ಗೋಪ್ಯಃ ಸಮಂ ಭಗವತಾ ನನೃತುಃ ಸ್ವಕೇಶ-
ಸ್ರಸ್ತಸ್ರಜೋ ಭ್ರಮರಗಾಯಕರಾಸಗೋಷ್ಠ್ಯಾಮ್ ॥

ಅನುವಾದ

ಅವರ ಕಿವಿಗಳಲ್ಲಿ ಕಮಲದ ಕುಂಡಲಗಳು ಶೋಭಿಸುತ್ತಿದ್ದವು. ಗುಂಗುರು ಕೂದಲುಗಳು ಕೆನ್ನೆಗಳ ಮೇಲೆ ಹಾರಾಡುತ್ತಿದ್ದವು. ಮುತ್ತಿನಂತಹ ಬೆವರಿನ ಹನಿಗಳಿಂದ ಮುಖವು ಅಲಂಕೃತವಾಗಿತ್ತು. ಅವರು ರಾಸಮಂಡಲದಲ್ಲಿ ಶ್ರೀಕೃಷ್ಣನೊಡನೆ ನರ್ತನ ಮಾಡುವಾಗ ಅವರ ಕಡಗ, ಕಂಕಣಗಳು ಧ್ವನಿ ಮಾಡುತ್ತಿದ್ದವು. ಅವರ ಸ್ವರ-ತಾಳಕ್ಕೆ ಸರಿಯಾಗಿ ದುಂಬಿಗಳು ಝೇಂಕರಿಸುತ್ತಿದ್ದವು. ಅವರ ಮುಡಿಗಳಿಂದ ಹೂವುಗಳು ಉದುರುತ್ತಿದ್ದವು. ॥16॥

(ಶ್ಲೋಕ-17)

ಮೂಲಮ್

ಏವಂ ಪರಿಷ್ವಂಗಕರಾಭಿಮರ್ಶ-
ಸ್ನಿಗ್ಧೇಕ್ಷಣೋದ್ದಾಮವಿಲಾಸಹಾಸೈಃ ।
ರೇಮೇ ರಮೇಶೋ ವ್ರಜಸುಂದರೀಭಿ-
ರ್ಯಥಾರ್ಭಕಃ ಸ್ವಪ್ರತಿಬಿಂಬವಿಭ್ರಮಃ ॥

ಅನುವಾದ

ಪರೀಕ್ಷಿತನೇ! ಬಾಲಕನು ಕನ್ನಡಿಯಲ್ಲಿ ಕಾಣುವ ತನ್ನ ಪ್ರತಿಬಿಂಬದೊಡನೆ ನಿರ್ವಿಕಾರ ಭಾವದಿಂದ ಆಡುವಂತೆ ರಮಾರಮಣ ಭಗವಾನ್ ಶ್ರೀಕೃಷ್ಣನು ತನ್ನ ಪ್ರತಿಬಿಂಬರೂಪರಾದ ಗೋಪಿಯರೊಡನೆ ನಿರ್ವಿಕಾರಭಾವದಿಂದ ಆಲಿಂಗನ, ಹಸ್ತಸ್ಪರ್ಶ, ಪ್ರೇಮಾವ ಲೋಕನ, ಕಿರುನಗೆ, ಕುಡಿನೋಟ ಇತ್ಯಾದಿಗಳಿಂದ ಕ್ರೀಡಿಸುತ್ತಿದ್ದನು. ॥17॥

(ಶ್ಲೋಕ-18)

ಮೂಲಮ್

ತದಂಗಸಂಗಪ್ರಮುದಾಕುಲೇಂದ್ರಿಯಾಃ
ಕೇಶಾನ್ದುಕೂಲಂ ಕುಚಪಟ್ಟಿಕಾಂ ವಾ ।
ನಾಂಜಃ ಪ್ರತಿವ್ಯೋಢುಮಲಂ ವ್ರಜಸಿಯೋ
ವಿಸ್ರಸ್ತಮಾಲಾಭರಣಾಃ ಕುರೂದ್ವಹ ॥

ಅನುವಾದ

ಪರೀಕ್ಷಿತ ರಾಜನೇ! ಭಗವಾನ್ ಶ್ರೀಕೃಷ್ಣನ ಅಂಗಸ್ಪರ್ಶವನ್ನು ಪಡೆದ ಗೋಪಿಕೆಯರು ಪ್ರೇಮಾನಂದದಿಂದ ವಿಹ್ವಲರಾಗಿದ್ದರು. ಕೂದಲು ಕೆದರಿದ್ದವು, ಹೂವಿನ ಹಾರಗಳು ಹರಿದಿದ್ದವು. ಒಡವೆಗಳು ಅಸ್ತ-ವ್ಯಸ್ತವಾಗಿದ್ದವು. ಇವುಗಳನ್ನು ಸರಿಪಡಿಸಿಕೊಳ್ಳಲೂ ಕೂಡ ಅವರಿಂದ ಸಾಧ್ಯವಾಗಲಿಲ್ಲ. ॥18॥

(ಶ್ಲೋಕ-19)

ಮೂಲಮ್

ಕೃಷ್ಣವಿಕ್ರೀಡಿತಂ ವೀಕ್ಷ್ಯ ಮುಮುಹುಃ ಖೇಚರಸಿಯಃ ।
ಕಾಮಾರ್ದಿತಾಃ ಶಶಾಂಕಶ್ಚ ಸಗಣೋ ವಿಸ್ಮಿತೋಭವತ್ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಈ ರಾಸಕ್ರೀಡೆಯನ್ನು ನೋಡಿದ ದೇವತಾ ಸ್ತ್ರೀಯರೂ ಈ ಗೋಪಿಯರಂತೆ ಭಗವಂತನಲ್ಲಿ ಸೇರಬೇಕೆಂಬ ಆಕಾಂಕ್ಷೆಯಿಂದ ಮೋಹಿತರಾದರು. ಹಾಗೆಯೇ ಗ್ರಹ-ನಕ್ಷತ್ರ ತಾರೆಗಳಿಂದ ಕೂಡಿದ ಚಂದ್ರನೂ ಅಚ್ಚರಿಗೊಂಡನು. ॥19॥

(ಶ್ಲೋಕ-20)

ಮೂಲಮ್

ಕೃತ್ವಾ ತಾವಂತಮಾತ್ಮಾನಂ ಯಾವತೀರ್ಗೋಪಯೋಷಿತಃ ।
ರೇಮೇ ಸ ಭಗವಾಂಸ್ತಾಭಿರಾತ್ಮಾರಾಮೋಪಿ ಲೀಲಯಾ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಆತ್ಮಾರಾಮನಾಗಿದ್ದರೂ ಅಲ್ಲಿ ಎಷ್ಟು ಮಂದಿಗೋಪಿಯರಿದ್ದರೋ ಅಷ್ಟೆ ಸಂಖ್ಯೆಯಲ್ಲಿ ತನ್ನ ಪ್ರತಿರೂಪಗಳನ್ನು ಸೃಷ್ಟಿಸಿ ಪ್ರತಿಯೊಬ್ಬಳೊಡನೆಯೂ ಲೀಲಾ ವಿನೋದದಿಂದ ವಿಹರಿಸಿದನು. ॥20॥

(ಶ್ಲೋಕ-21)

ಮೂಲಮ್

ತಾಸಾಮತಿವಿಹಾರೇಣ ಶ್ರಾಂತಾನಾಂ ವದನಾನಿ ಸಃ ।
ಪ್ರಾಮೃಜತ್ಕರುಣಃ ಪ್ರೇಮ್ಣಾ ಶಂತಮೇನಾಂಗಪಾಣಿನಾ ॥

ಅನುವಾದ

ಬಹಳ ಹೊತ್ತಿನವರೆಗೆ ನೃತ್ಯ-ಗಾನ-ವಿಹಾರದಿಂದ ಬಳಲಿದ ಗೋಪಿಯರ ಮುಖ ಕಮಲಗಳನ್ನು ಕರುಣಾಮಯನಾದ ಭಗವಾನ್ ಶ್ರೀಕೃಷ್ಣನು ಅತ್ಯಂತ ಪ್ರೀತಿಯಿಂದ ತನ್ನ ಸುಖಕರ ಕರಕಮಲದಿಂದ ನೇವರಿಸಿದನು. ॥21॥

(ಶ್ಲೋಕ-22)

ಮೂಲಮ್

ಗೋಪ್ಯಃ ಸ್ಫುರತ್ಪುರಟಕುಂಡಲಕುಂತಲತ್ವಿಡ್
ಗಂಡಶ್ರಿಯಾ ಸುಧಿತಹಾಸನಿರೀಕ್ಷಣೇನ ।
ಮಾನಂ ದಧತ್ಯ ಋಷಭಸ್ಯ ಜಗುಃ ಕೃತಾನಿ
ಪುಣ್ಯಾನಿ ತತ್ಕರರುಹಸ್ಪರ್ಶಪ್ರಮೋದಾಃ ॥

ಅನುವಾದ

ಪರೀಕ್ಷಿತನೇ! ಭಗವಂತನ ಕರಸ್ಪರ್ಶದಿಂದ ಗೋಪಿಕೆಯರಿಗೆ ಪರಮಾನಂದವಾಯಿತು. ಅವರು ಸ್ವರ್ಣ ಕುಂಡಲಗಳಿಂದಲೂ, ಮುಂಗುರುಳುಗಳಿಂದಲೂ ಕೂಡಿದ ಕಪೋಲಗಳಿಂದಲೂ, ಮುಖಾರವಿಂದದಿಂದಲೂ ಕಡೆಗಣ್ಣ ನೋಟದಿಂದಲೂ, ಅಮೃತಪ್ರಾಯವಾದ ಮಂದಹಾಸದಿಂದಲೂ ಭಗವಾನ್ ಶ್ರೀಕೃಷ್ಣನಿಗೆ ಸೇವೆ ಸಲ್ಲಿಸಿ ಪರಮ ಪವಿತ್ರವಾದ ಅವನ ಲೀಲಾಪ್ರಸಂಗಗಳನ್ನು ಹಾಡತೊಡಗಿದರು. ॥22॥

(ಶ್ಲೋಕ-23)

ಮೂಲಮ್

ತಾಭಿರ್ಯುತಃ ಶ್ರಮಮಪೋಹಿತುಮಂಗಸಂಗ-
ಘೃಷ್ಟಸ್ರಜಃ ಸ ಕುಚಕುಂಕುಮರಂಜಿತಾಯಾಃ ।
ಗಂಧರ್ವಪಾಲಿಭಿರನುದ್ರುತ ಆವಿಶದ್ವಾಃ
ಶ್ರಾಂತೋ ಗಜೀಭಿರಿಭರಾಡಿವ ಭಿನ್ನಸೇತುಃ ॥

ಅನುವಾದ

ಅನಂತರ ಆಯಾಸಗೊಂಡಿರುವ ಸಲಗವು ಹೆಣ್ಣಾನೆಗಳೊಡನೆ ಆಣೆಕಟ್ಟನ್ನು ಭೇದಿಸಿಕೊಂಡು ನೀರಿನೊಳಗೆ ನುಗ್ಗುವಂತೆ ಶ್ರೀಕೃಷ್ಣನು ರಾಸಕ್ರೀಡೆಯ ಆಯಾಸವನ್ನು ಪರಿಹರಿಸಿಕೊಳ್ಳುವ ಸಲುವಾಗಿ ಗೋಪಿಯರೊಡನೆ ಜಲಕ್ರೀಡೆಯಾಡಲು ಯಮುನೆಯ ನೀರನ್ನು ಪ್ರವೇಶಿಸಿದನು. ಆಗ ಶ್ರೀಕೃಷ್ಣನು ಧರಿಸಿದ್ದ ವನಮಾಲೆಯು ಗೋಪಿಯರ ಅಂಗಸಂಗದಿಂದ ಬಾಡಿಹೋಗಿದ್ದರೂ ಅವರ ವಕ್ಷಸ್ಥಳದಲ್ಲಿ ಲೇಪಿತವಾಗಿದ್ದ ಕುಂಕುಮ ಕೇಸರಿಯಿಂದ ರಂಜಿತವಾಗಿತ್ತು. ವನಮಾಲೆಯ ಸುಗಂಧದಿಂದ ಆಕರ್ಷಿತವಾದ ದುಂಬಿಗಳು ಝೇಂಕರಿಸುತ್ತಾ ಶ್ರೀಕೃಷ್ಣನನ್ನು ಅನುಸರಿಸಿ ಹೋಗುವುದನ್ನು ನೋಡಿದರೆ ಗಂಧರ್ವರಾಜನೇನಾದರೂ ಶ್ರೀಕೃಷ್ಣನ ಗುಣಗಾನ ಮಾಡುತ್ತಾ ಅವನ ಹಿಂದೆಯೇ ಹೋಗುತ್ತಿರುವನೋ ಎಂಬಂತೆ ಇತ್ತು. ॥23॥

(ಶ್ಲೋಕ-24)

ಮೂಲಮ್

ಸೋಂಭಸ್ಯಲಂ ಯುವತಿಭಿಃ ಪರಿಷಿಚ್ಯಮಾನಃ
ಪ್ರೇಮ್ಣೇಕ್ಷಿತಃ ಪ್ರಹಸತೀಭಿರಿತಸ್ತತೋಂಗ ।
ವೈಮಾನಿಕೈಃ ಕುಸುಮವರ್ಷಿಭಿರೀಡ್ಯಮಾನೋ
ರೇಮೇ ಸ್ವಯಂ ಸ್ವರತಿರತ್ರ ಗಜೇಂದ್ರಲೀಲಃ ॥

ಅನುವಾದ

ಪರೀಕ್ಷಿತನೇ! ಯಮುನಾನದಿಯ ಶುಭಜಲದಲ್ಲಿ ಜಲಕ್ರೀಡೆಯನ್ನಾಡುವಾಗ ಗೋಪಿಯರು ಪ್ರೇಮಪೂರ್ಣ ನೋಟದಿಂದ ಶ್ರೀಕೃಷ್ಣನನ್ನು ನೋಡುತ್ತಾ, ನಗು-ನಗುತ್ತಾ ಅವನ ಮೇಲೆ ನೀರನ್ನೆರೆಚುತ್ತಿದ್ದರು. ಪ್ರತಿಯಾಗಿ ಅವನೂ ನೀರನ್ನರೆಚುತ್ತಿದ್ದನು. ಹೀಗೆ ಆನಂದಪರವಶರಾಗಿ ಜಲಕ್ರೀಡೆಯಾಡುವುದನ್ನು ನೋಡಿದ ದೇವತೆಗಳು ಅವರ ಮೆಲೆ ಪುಷ್ಪವೃಷ್ಟಿ ಮಾಡುತ್ತಾ ಕೃಷ್ಣನನ್ನು ಪರಿ-ಪರಿಯಾಗಿ ಸ್ತುತಿಸಿದರು. ಹೀಗೆ ಸಾಕ್ಷಾತ್ ಆತ್ಮಾರಾಮನಾದ ಶ್ರೀಕೃಷ್ಣನು ಗಜರಾಜನಂತೆ ಯಮುನೆಯಲ್ಲಿ ನೀರಾಟವನ್ನು ಆಡಿದನು. ॥24॥

(ಶ್ಲೋಕ-25)

ಮೂಲಮ್

ತತಶ್ಚ ಕೃಷ್ಣೋಪವನೇ ಜಲಸ್ಥಲ-
ಪ್ರಸೂನಗಂಧಾನಿಲಜುಷ್ಟದಿಕ್ತಟೇ ।
ಚಚಾರ ಭೃಂಗ ಪ್ರಮದಾಗಣಾವೃತೋ
ಯಥಾ ಮದಚ್ಯುದ್ವರದಃ ಕರೇಣುಭಿಃ ॥

ಅನುವಾದ

ಇದಾದ ಬಳಿಕ ಶ್ರೀಕೃಷ್ಣನು ಗೋಪಿಯರೊಡನೆ ಯಮುನೆಯ ತೀರದ ಉಪವನಕ್ಕೆ ಹೋದನು. ಆ ಉಪವನವು ರಮಣೀಯವಾಗಿದ್ದು, ಎಲ್ಲೆಡೆಗಳಲ್ಲಿಯೂ ನೆಲ ಜಲಗಳಲ್ಲಿ ಅತ್ಯಂತ ಸುಂದರ-ಸುಗಂಧಿತ ಹೂವುಗಳು ಅರಳಿದ್ದವು. ಅದರ ಸುಗಂಧವನ್ನು ಹೊತ್ತುಕೊಂಡು ಮಂದ ಮಾರುತವು ಬೀಸುತ್ತಿತ್ತು. ಮತ್ತ ಗಜವು ಹೆಣ್ಣಾನೆಗಳೊಂದಿಗೆ ವಿಹರಿಸುವಂತೆ ಶ್ರೀಕೃಷ್ಣನು ದುಂಬಿಗಳಿಂದಲೂ ಪ್ರಮದೆಯರಿಂದಲೂ ಸಮಾವೃತನಾಗಿ ಆ ಉದ್ಯಾನದಲ್ಲಿ ವಿಹರಿಸುತ್ತಿದ್ದನು. ॥25॥

(ಶ್ಲೋಕ-26)

ಮೂಲಮ್

ಏವಂ ಶಶಾಂಕಾಂಶುವಿರಾಜಿತಾ ನಿಶಾಃ
ಸ ಸತ್ಯಕಾಮೋನುರತಾ ಬಲಾಗಣಃ ।
ಸಿಷೇವ ಆತ್ಮನ್ಯವರುದ್ಧಸೌರತಃ
ಸರ್ವಾಃ ಶರತ್ಕಾವ್ಯಕಥಾರಸಾಶ್ರಯಾಃ ॥

ಅನುವಾದ

ಪರೀಕ್ಷಿದ್ರಾಜನೇ! ಅನೇಕ ಶರದ್ರಾತ್ರಿಗಳು ಕೂಡಿಕೊಂಡಿವೆಯೋ ಎಂಬಂತೆ ಆ ರಾತ್ರಿಯು ಅತ್ಯಂತ ಶೋಭಾಯಮಾನವಾಗಿತ್ತು. ಎಲ್ಲೆಡೆಗಳಲ್ಲಿಯೂ ಚಂದ್ರನ ಬೆಳದಿಂಗಳು ಹಾಲು ಚೆಲ್ಲಿದಂತೆ ಪ್ರಕಾಶಮಾನವಾಗಿತ್ತು. ಕಾವ್ಯಗಳಲ್ಲಿ ಶರದ್ರುತುವಿನ ಎಷ್ಟು ಬಗೆಯಾದ ವರ್ಣನೆ ಇದೆಯೋ ಆ ಎಲ್ಲ ಲಕ್ಷಣಗಳಿಂದ ಅದು ಕೂಡಿಕೊಂಡಿತ್ತು. ಅಂತಹ ಮಂಗಳಮಯ ರಾತ್ರಿಯಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ಪ್ರೇಯಸಿಯರಾದ ಗೋಪಿಕೆಯರೊಡನೆ ಯಮುನೆಯ ಮಳಲದಿಣ್ಣೆಯಲ್ಲಿ, ಯಮುನೆಯಲ್ಲಿ ಹಾಗೂ ತೀರದ ಉಪವನಗಳಲ್ಲಿಯೂ ಯಥೇಚ್ಛವಾಗಿ ವಿಹರಿಸಿದನು. ಸತ್ಯ ಸಂಕಲ್ಪನಾದ ಭಗವಾನ್ ಶ್ರೀಕೃಷ್ಣನು ತೋರಿದ ಈ ಲೀಲೆಯು ಚಿನ್ಮಯವಾದುದು. ॥26॥

(ಶ್ಲೋಕ-27)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಸಂಸ್ಥಾಪನಾಯ ಧರ್ಮಸ್ಯ ಪ್ರಶಮಾಯೇತರಸ್ಯ ಚ ।
ಅವತೀರ್ಣೋ ಹಿ ಭಗವಾನಂಶೇನ ಜಗದೀಶ್ವರಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ಭಗವಾನ್ ಶ್ರೀಕೃಷ್ಣನು ಸಮಸ್ತ ಜಗತ್ತಿಗೆ ಏಕಮಾತ್ರ ಸ್ವಾಮಿಯು. ಅವನು ತನ್ನ ಅಂಶನಾದ ಬಲರಾಮನೊಂದಿಗೆ ಪೂರ್ಣ ರೂಪದಿಂದ ಅವತರಿಸಿದ್ದನು. ಅವನ ಅವತಾರದ ಉದ್ದೇಶವು ಧರ್ಮದ ಸ್ಥಾಪನೆ ಮತ್ತು ಅಧರ್ಮದನಾಶಕ್ಕಾಗಿಯೇ ಆಗಿತ್ತು. ॥27॥

(ಶ್ಲೋಕ-28)

ಮೂಲಮ್

ಸ ಕಥಂ ಧರ್ಮಸೇತೂನಾಂ ವಕ್ತಾ ಕರ್ತಾಭಿರಕ್ಷಿತಾ ।
ಪ್ರತೀಪಮಾಚರದ್ಬ್ರಹ್ಮನ್ಪರದಾರಾಭಿಮರ್ಶನಮ್ ॥

ಅನುವಾದ

ಬ್ರಾಹ್ಮಣೋತ್ತಮರೇ! ಅವನು ಧರ್ಮದ ಮರ್ಯಾದೆಯನ್ನು ಉಪದೇಶಿಸುವವನೂ, ರಕ್ಷಿಸುವವನೂ, ಪಾಲಿಸುವವನೂ ಆಗಿದ್ದನು. ಹಾಗಿರುವಾಗ ಅವನು ಧರ್ಮಕ್ಕೆ ವಿರೋಧವಾದ ಪರ ಸ್ತ್ರೀಯರನ್ನು ಹೇಗೆ ಸ್ಪರ್ಶಿಸಿದನು? ॥28॥

(ಶ್ಲೋಕ-29)

ಮೂಲಮ್

ಆಪ್ತಕಾಮೋ ಯದುಪತಿಃ ಕೃತವಾನ್ ವೈ ಜುಗುಪ್ಸಿತಮ್ ।
ಕಿಮಭಿಪ್ರಾಯ ಏತಂ ನಃ ಸಂಶಯಂ ಛಿಂದಿ ಸುವ್ರತ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಪೂರ್ಣಕಾಮನಾಗಿದ್ದು ಅವನಿಗೆ ಯಾವುದೇ ವಸ್ತುವಿನ ಕಾಮನೆ ಇರಲಿಲ್ಲವೆಂಬುದು ನಾನು ಬಲ್ಲೆನು. ಹೀಗಿರುವಾಗಲೂ ಅವನು ಯಾವ ಅಭಿಪ್ರಾಯದಿಂದ ಈ ನಿಂದನೀಯವಾದ ಕಾರ್ಯವನ್ನು ಮಾಡಿದನು? ಸುವ್ರತರೇ! ಈ ನನ್ನ ಸಂದೇಹವನ್ನು ದಯಮಾಡಿ ಪರಿಹರಿಸಿರಿ. ॥29॥

(ಶ್ಲೋಕ-30)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಧರ್ಮವ್ಯತಿಕ್ರಮೋ ದೃಷ್ಟ ಈಶ್ವರಾಣಾಂ ಚ ಸಾಹಸಮ್ ।
ತೇಜೀಯಸಾಂ ನ ದೋಷಾಯ ವಹ್ನೇಃ ಸರ್ವಭುಜೋ ಯಥಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಸೂರ್ಯ, ಅಗ್ನಿ, ಮೊದಲಾದ ಮಹಾಪ್ರಭಾವವುಳ್ಳವರು ಕೆಲವೊಮ್ಮೆ ಧರ್ಮದ ಉಲ್ಲಂಘನೆ ಮತ್ತು ಸಾಹಸದ ಕಾರ್ಯವನ್ನು ಮಾಡುವುದನ್ನು ನೋಡುತ್ತೇವೆ. ಆದರೆ ಆ ಕರ್ಮಗಳಿಂದ ಅಂತಹ ತೇಜಸ್ವಿ ಪುರುಷರಿಗೆ ಯಾವುದೇ ದೋಷವೂ ಉಂಟಾಗುವುದಿಲ್ಲ. ಅಗ್ನಿಯು ಸರ್ವಭಕ್ಷಕನಾಗಿದ್ದರೂ ಆ ಪದಾರ್ಥಗಳ ದೋಷಗಳಿಂದ ಲಿಪ್ತನಾಗುವುದಿಲ್ಲ. ॥30॥

(ಶ್ಲೋಕ-31)

ಮೂಲಮ್

ನೈತತ್ಸಮಾಚರೇಜ್ಜಾತು ಮನಸಾಪಿ ಹ್ಯನೀಶ್ವರಃ ।
ವಿನಶ್ಯತ್ಯಾಚರನ್ಮೌಢ್ಯಾದ್ಯಥಾರುದ್ರೋಬ್ಧಿಜಂ ವಿಷಮ್ ॥

ಅನುವಾದ

ಇಂತಹ ಸಾಮರ್ಥ್ಯವಿಲ್ಲದವರು ಅಂತಹ ಧರ್ಮೋಲ್ಲಂಘನೆಯ ಮಾತನ್ನು ಮನಸ್ಸಿನಲ್ಲಿಯೂ ಯೋಚಿಸಬಾರದು; ಶರೀರದಿಂದ ಮಾಡುವುದು ದೂರವುಳಿಯಿತು. ಮೂರ್ಖತೆಯಿಂದ ಹಾಗೇನಾದರೂ ಮಾಡಿಬಿಟ್ಟರೆ ಅವರ ನಾಶವು ನಿಶ್ಚಯವು. ಭಗವಾನ್ ಶಂಕರನು ಹಾಲಾಹಲವನ್ನು ಕುಡಿದಿದ್ದನು. ಎಂದು ಬೇರೆಯಾರಾದರೂ ಕುಡಿದರೆ ಸುಟ್ಟು ಭಸ್ಮರಾಗಿ ಹೋದಾರು. ॥31॥

(ಶ್ಲೋಕ-32)

ಮೂಲಮ್

ಈಶ್ವರಾಣಾಂ ವಚಃ ಸತ್ಯಂ ತಥೈವಾಚರಿತಂ ಕ್ವಚಿತ್ ।
ತೇಷಾಂ ಯತ್ಸ್ವವಚೋಯುಕ್ತಂ ಬುದ್ಧಿಮಾಂಸ್ತತ್ಸಮಾಚರೇತ್ ॥

ಅನುವಾದ

ಅದಕ್ಕಾಗಿ ಶಂಕರರಂತಹ ಜಗದೀಶ್ವರರ ವಚನಗಳನ್ನು ಸತ್ಯವೆಂದು ತಿಳಿದು ಅದಕ್ಕನುಸಾರವಾಗಿ ಆಚರಿಸಬೇಕು. ಅವರ ಆಚರಣೆಗಳ ಅನುಕರಣೆಗಳನ್ನು ಕೆಲವೊಮ್ಮೆ ಮಾತ್ರ ಮಾಡಲಾಗುತ್ತದೆ. ಆದುದರಿಂದ ಬುದ್ಧಿವಂತರಾದವರು ಅವರ ಆಚರಣೆಯು ಅವರ ಉಪದೇಶಕ್ಕನುಕೂಲವಾಗಿದ್ದರೆ ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ॥32॥

(ಶ್ಲೋಕ-33)

ಮೂಲಮ್

ಕುಶಲಾಚರಿತೇನೈಷಾಮಿಹ ಸ್ವಾರ್ಥೋ ನ ವಿದ್ಯತೇ ।
ವಿಪರ್ಯಯೇಣ ವಾನರ್ಥೋ ನಿರಹಂಕಾರಿಣಾಂ ಪ್ರಭೋ ॥

ಅನುವಾದ

ಪರೀಕ್ಷಿತನೇ! ಅಂತಹ ಸರ್ವಸಮರ್ಥ ಪುರುಷರು ಅಹಂಕಾರ ರಹಿತರಾಗಿರುತ್ತಾರೆ. ಶುಭಕರ್ಮಮಾಡುವುದರಲ್ಲಿ ಅವರಿಗೆ ಯಾವುದೇ ಪ್ರಾಪಂಚಿಕ ಸ್ವಾರ್ಥ ಇರುವುದಿಲ್ಲ ಹಾಗೂ ಅಶುಭ ಕರ್ಮಮಾಡುವುದರಲ್ಲಿ ಅನರ್ಥವುಂಟಾಗುವುದಿಲ್ಲ. ಅವರು ಸ್ವಾರ್ಥ ಮತ್ತು ಅನರ್ಥಗಳನ್ನು ಮೀರಿ ಇರುತ್ತಾರೆ. ॥33॥

(ಶ್ಲೋಕ-34)

ಮೂಲಮ್

ಕಿಮುತಾಖಿಲಸತ್ತ್ವಾನಾಂ ತಿರ್ಯಙ್ಮರ್ತ್ಯದಿವೌಕಸಾಮ್ ।
ಈಶಿತುಶ್ಚೇಶಿತವ್ಯಾನಾಂ ಕುಶಲಾಕುಶಲಾನ್ವಯಃ ॥

ಅನುವಾದ

ಇಂತಹವರ ಸಂಬಂಧದಲ್ಲೇ ಹೀಗಿದ್ದರೆ ಪಶು, ಪಕ್ಷಿ, ಮನುಷ್ಯರು, ದೇವತೆಗಳು ಮುಂತಾದ ಸಮಸ್ತ ಚರಾಚರ ಜೀವರ ಏಕಮಾತ್ರ ಸ್ವಾಮಿಯಾದ ಸರ್ವೇಶ್ವರ ಭಗವಂತನ ವಿಷಯದಲ್ಲಿ ಮಾನವೀಯ ಶುಭ-ಅಶುಭಗಳ ಸಂಬಂಧವನ್ನು ಹೇಗೆ ಜೋಡಿಸಲಾಗುತ್ತದೆ? ॥34॥

(ಶ್ಲೋಕ-35)

ಮೂಲಮ್

ಯತ್ಪಾದಪಂಕಜಪರಾಗನಿಷೇವತೃಪ್ತಾ
ಯೋಗಪ್ರಭಾವವಿಧುತಾಖಿಲಕರ್ಮಬಂಧಾಃ ।
ಸ್ವೈರಂ ಚರಂತಿ ಮುನಯೋಪಿ ನ ನಹ್ಯಮಾನಾ-
ಸ್ತಸ್ಯೇಚ್ಛಯಾತ್ತವಪುಷಃ ಕುತ ಏವ ಬಂಧಃ ॥

ಅನುವಾದ

ಭಕ್ತ ಜನರು ಪರಮಾತ್ಮನ ಪಾದ ಪಂಕಜಗಳ ಧೂಳಿನ ಸೇವನೆಯಿಂದ ತೃಪ್ತರಾಗುತ್ತಾರೆ. ಯೋಗಿಗಳು ಅವನನ್ನೇ ಧ್ಯಾನಿಸುತ್ತಾ ಯೋಗದ ಪ್ರಭಾವದಿಂದ ಸಮಸ್ತವಾದ ಕರ್ಮಬಂಧನಗಳಿಂದಲೂ ಮುಕ್ತರಾಗುತ್ತಾರೆ. ಜ್ಞಾನಿಗಳಾದ ಮುನಿಗಳೂ ಕೂಡ ಪರಬ್ರಹ್ಮ ತತ್ತ್ವವನ್ನೇ ವಿಚಾರಮಾಡುತ್ತಾ ತಾದಾತ್ಮ್ಯವನ್ನು ಹೊಂದಿ ಸಮಸ್ತ ಕರ್ಮಬಂಧನಗಳಿಂದಲೂ ಮುಕ್ತರಾಗಿ ಸ್ವೇಚ್ಛೆಯಿಂದ ಸಂಚರಿಸುತ್ತಾರೆ. ಅಂತಹ ಭಗವಂತನೇ ತನ್ನ ಭಕ್ತರ ಇಚ್ಛೆಯಿಂದ ತನ್ನ ಚಿನ್ಮಯ ಶ್ರೀವಿಗ್ರಹವನ್ನು ಪ್ರಕಟಿಸುವನು. ಅಂತಹ ಪರಬ್ರಹ್ಮ ಪರಮಾತ್ಮನಿಗೆ ಕರ್ಮಬಂಧನದ ಕಲ್ಪನೆಯಾದರೂ ಹೇಗಿದ್ದೀತು? ॥35॥

(ಶ್ಲೋಕ-36)

ಮೂಲಮ್

ಗೋಪೀನಾಂ ತತ್ಪತೀನಾಂ ಚ ಸರ್ವೇಷಾಮೇವ ದೇಹಿನಾಮ್ ।
ಯೋಂತಶ್ಚರತಿ ಸೋಧ್ಯಕ್ಷಃ ಕ್ರೀಡನೇನೇಹ ದೇಹಭಾಕ್ ॥

ಅನುವಾದ

ಗೋಪಿಯರ ಗಂಡಂದಿರಲ್ಲಿ ಮತ್ತು ಸಮಸ್ತ ಶರೀರಧಾರಿಗಳಲ್ಲಿಯೂ ಅಂತರ್ಯಾಮಿಯಾಗಿರುವ ಪರಮಾತ್ಮನೇ ಸರ್ವಸಾಕ್ಷಿಯೂ, ಪರಮಪತಿಯೂ ಆಗಿದ್ದಾನೆ. ಅವನೇ ಶ್ರೀಕೃಷ್ಣನ ರೂಪದಲ್ಲಿ ದಿವ್ಯ ಮಂಗಳರೂಪವನ್ನು ಧರಿಸಿ ತನ್ನ ದಿವ್ಯವಾದ ಲೀಲೆಗಳನ್ನು ತೋರಿಸುತ್ತಿದ್ದಾನೆ. ॥36॥

(ಶ್ಲೋಕ-37)

ಮೂಲಮ್

ಅನುಗ್ರಹಾಯ ಭೂತಾನಾಂ ಮಾನುಷಂ ದೇಹಮಾಸ್ಥಿತಃ ।
ಭಜತೇ ತಾದೃಶೀಃ ಕ್ರೀಡಾ ಯಾಃ ಶ್ರುತ್ವಾ ತತ್ಪರೋ ಭವೇತ್ ॥

ಅನುವಾದ

ಭಗವಂತನು ಜೀವರ ಮೇಲೆ ಕೃಪೆದೋರಲೆಂದೇ ತಾನು ಮನುಷ್ಯರೂಪದಿಂದ ಪ್ರಕಟನಾಗಿ ಇಂತಹ ಲೀಲೆಗಳನ್ನು ನಡೆಸುತ್ತಾನೆ. ಇವುಗಳನ್ನು ಶ್ರವಣಿಸಿ ಮನುಷ್ಯನು ಭಗವತ್ಪಾರಾಯಣನಾಗಲೆಂದೇ ಲೀಲೆಗಳನ್ನು ತೋರುವನು. ॥37॥

(ಶ್ಲೋಕ-38)

ಮೂಲಮ್

ನಾಸೂಯನ್ಖಲು ಕೃಷ್ಣಾಯ ಮೋಹಿತಾಸ್ತಸ್ಯ ಮಾಯಯಾ ।
ಮನ್ಯಮಾನಾಃ ಸ್ವಪಾರ್ಶ್ವಸ್ಥಾನ್ ಸ್ವಾನ್ ಸ್ವಾನ್ ದಾರಾನ್ ವ್ರಜೌಕಸಃ ॥

ಅನುವಾದ

ವ್ರಜವಾಸಿಗಳಾದ ಗೋಪರು ಭಗವಾನ್ ಶ್ರೀಕೃಷ್ಣನಲ್ಲಿ ಸ್ವಲ್ಪವೂ ದೋಷಬುದ್ಧಿ ತಳೆದಿರಲಿಲ್ಲ. ಅವರೆಲ್ಲರೂ ಅವನ ಯೋಗ ಮಾಯೆಯಿಂದ ಮೋಹಿತರಾಗಿ ತಮ್ಮ ಪತ್ನಿಯರು ತಮ್ಮ ಬಳಿಯಲ್ಲೇ ಇದ್ದರೆಂದು ಭಾವಿಸಿಕೊಂಡಿದ್ದರು. ॥38॥

(ಶ್ಲೋಕ-39)

ಮೂಲಮ್

ಬ್ರಹ್ಮರಾತ್ರ ಉಪಾವೃತ್ತೇ ವಾಸುದೇವಾನುಮೋದಿತಾಃ ।
ಅನಿಚ್ಛಂತ್ಯೋ ಯಯುರ್ಗೋಪ್ಯಃ ಸ್ವಗೃಹಾನ್ ಭಗವತ್ಪ್ರಿಯಾಃ ॥

ಅನುವಾದ

ಹೀಗೆ ರಾಸಕ್ರೀಡೆ ಜಲಕ್ರೀಡೆಗಳಿಂದ ರಾತ್ರಿಯೆಲ್ಲವೂ ಕಳೆದು ಬ್ರಾಹ್ಮಮುಹೂರ್ತವು ಉದಯಿಸಿತು. ಗೋಪಿಯರಿಗೆ ತಮ್ಮ ಮನೆಗೆ ಮರಳಲು ಇಚ್ಛೆ ಇಲ್ಲದಿದ್ದರೂ ಭಗವಾನ್ ಶ್ರೀಕೃಷ್ಣನ ಆಜ್ಞೆಯಿಂದ ಅವರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಏಕೆಂದರೆ, ತಮ್ಮ ಪ್ರತಿಯೊಂದು ವರ್ತನೆಯಿಂದ ಸಂಕಲ್ಪದಿಂದ ಕೇವಲ ಭಗವಂತನನ್ನು ಸಂತೋಷ ಪಡಿಸುವುದನ್ನೇ ಬಯಸುತ್ತಿದ್ದರು. ॥39॥

(ಶ್ಲೋಕ-40)

ಮೂಲಮ್

ವಿಕ್ರೀಡಿತಂ ವ್ರಜವಧೂಭಿರಿದಂ ಚ ವಿಷ್ಣೋಃ
ಶ್ರದ್ಧಾನ್ವಿತೋನುಶೃಣುಯಾದಥ ವರ್ಣಯೇದ್ಯಃ ।
ಭಕ್ತಿಂ ಪರಾಂ ಭಗವತಿ ಪ್ರತಿಲಭ್ಯ ಕಾಮಂ
ಹೃದ್ರೋಗಮಾಶ್ವಪಹಿನೋತ್ಯಚಿರೇಣ ಧೀರಃ ॥

ಅನುವಾದ

ಪರೀಕ್ಷಿತನೇ! ಯಾವ ಧೀರರು ವ್ರಜಯುವತಿಯರೊಂದಿಗೆ ಭಗವಾನ್ ಶ್ರೀಕೃಷ್ಣನು ನಡೆಸಿದ ಈ ಚಿನ್ಮಯ ರಾಸ-ವಿಲಾಸವನ್ನು ಶ್ರದ್ಧೆಯಿಂದ ಪದೇ-ಪದೇ ಕೇಳುವನೋ, ಕೀರ್ತಿಸುವನೋ ಅವರಿಗೆ ಭಗವಂತನ ಚರಣಗಳಲ್ಲಿ ಪರಾಭಕ್ತಿಯು ಉಂಟಾಗಿ, ಅವರು ಅತ್ಯಂತ ಶೀಘ್ರವಾಗಿ ತಮ್ಮ ಹೃದಯದ ರೋಗದಿಂದ, ಕಾಮವಿಕಾರದಿಂದ ಬಿಡುಗಡೆ ಹೊಂದುವರು. ॥40॥

ಅನುವಾದ (ಸಮಾಪ್ತಿಃ)

ಮೂವತ್ತಮೂರನೆಯ ಅಧ್ಯಾಯವು ಮುಗಿಯಿತು. ॥33॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ರಾಸಕ್ರೀಡಾವರ್ಣನಂ ನಾಮ ತ್ರಯಸಿಂಶೋಽಧ್ಯಾಯಃ ॥33॥