೨೯

[ಇಪ್ಪತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ರಾಸಲೀಲೆಯ ಪ್ರಾರಂಭ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಭಗವಾನಪಿ ತಾ ರಾತ್ರೀಃ ಶರದೋತ್ಫುಲ್ಲಮಲ್ಲಿಕಾಃ ।
ವೀಕ್ಷ್ಯ ರಂತುಂ ಮನಶ್ಚಕ್ರೇ ಯೋಗಮಾಯಾಮುಪಾಶ್ರಿತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಶ್ರೀಕೃಷ್ಣನು ಭಗವಂತನೇ ಆಗಿದ್ದರೂ ಅರಳಿದ ಮಲ್ಲಿಗೆಯ ಹೂವುಗಳಿಂದ ಘಮ-ಘಮಿಸುತ್ತಿದ್ದ ಶರತ್ಕಾಲದ ರಾತ್ರಿಯನ್ನು ಕಂಡು ಯೋಗಮಾಯೆಯನ್ನು ಆಶ್ರಯಿಸಿ ಗೋಪಿಕೆಯರೊಡನೆ ರಸಮಯ ರಾಸಕ್ರೀಡೆಯನ್ನಾಡಲು ಬಯಸಿದನು. ॥1॥

(ಶ್ಲೋಕ-2)

ಮೂಲಮ್

ತದೋಡುರಾಜಃ ಕಕುಭಃ ಕರೈರ್ಮುಖಂ
ಪ್ರಾಚ್ಯಾ ವಿಲಿಂಪನ್ನರುಣೇನ ಶಂತಮೈಃ ।
ಸ ಚರ್ಷಣೀನಾಮುದಗಾಚ್ಛುಚೋ ಮೃಜನ್
ಪ್ರಿಯಃ ಪ್ರಿಯಾಯಾ ಇವ ದೀರ್ಘದರ್ಶನಃ ॥

ಅನುವಾದ

ಬಹುಕಾಲಾನಂತರ ಆಗಮಿಸಿದ ಪತಿಯು ತನ್ನ ಪತ್ನಿಯ ಸುಂದರವಾದ ಮುಖವನ್ನು ಕುಂಕುಮ ಕೇಸರಿಯಿಂದ ಅಲಂಕರಿಸುವಂತೆ - ಶ್ರೀಕೃಷ್ಣನು ರಾಸಕ್ರೀಡೆಯನ್ನು ಆಡಬೇಕೆಂದು ಸಂಕಲ್ಪಿಸಿದೊಡನೆಯೇ, ಚಂದ್ರನು ತನ್ನ ಸುಖಕರವಾದ ಕಿರಣಗಳ ರೂಪವಾದ ಕೈಗಳಿಂದ ಪೂರ್ವದಿಕ್ಕೆಂಬ ಪ್ರೇಯಸಿಯ ಮುಖ ಮಂಡಲವನ್ನು ಕೆಂಪುಬಣ್ಣವೆಂಬ ಕುಂಕುಮಕೇಸರಿಯಿಂದ ಲೇಪಿಸುತ್ತಾ ಹಗಲಿನ ಬಿಸಿಲಿನಿಂದ ಸೊರಗಿಹೋಗಿದ್ದ ಸಮಸ್ತ ಚರಾಚರ ಪ್ರಾಣಿಗಳ ಸಂತಾಪವನ್ನು ದೂರಗೊಳಿಸಿದನು. ॥2॥

(ಶ್ಲೋಕ-3)

ಮೂಲಮ್

ದೃಷ್ಟ್ವಾ ಕುಮುದ್ವಂತಮಖಂಡಮಂಡಲಂ
ರಮಾನನಾಭಂ ನವಕುಂಕುಮಾರುಣಮ್ ।
ವನಂ ಚ ತತ್ಕೋಮಲಗೋಭಿರಂಜಿತಂ
ಜಗೌ ಕಲಂ ವಾಮದೃಶಾಂ ಮನೋಹರಮ್ ॥

ಅನುವಾದ

ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಚಂದ್ರನು ಮೂಡಲ ದಿಕ್ಕಿನಲ್ಲಿ ಮೂಡಿಬಂದ ನಂತರ ಕುಂಕುಮ ಕೇಸರಿಯ ಲೇಪನದಿಂದ ಕೆಂಪಾದ ರಮಾದೇವಿಯ ಮುಖಮಂಡಲದಂತೆ ಎಣ್ಣೆಗೆಂಪಾಗಿದ್ದ ಚಂದ್ರಮಂಡಲವನ್ನೂ, ಆ ಶರಚ್ಚಂದ್ರನ ಕಿರಣಗಳಿಂದ ನಯನಾಭಿರಾಮನಾಗಿ ಬೆಳಗುತ್ತಿದ್ದ ವೃಂದಾವನವನ್ನು, ನೋಡಿದ ಶ್ರೀಕೃಷ್ಣನು ಗೋಪಿಯರ ಮನಸ್ಸನ್ನು ಅಪಹರಿಸುವ ಸುಮಧುರವಾದ ವೇಣುಗಾನವನ್ನು ನುಡಿಸಿದನು. ॥3॥

(ಶ್ಲೋಕ-4)

ಮೂಲಮ್

ನಿಶಮ್ಯ ಗೀತಂ ತದನಂಗವರ್ಧನಂ
ವ್ರಜಸಿಯಃ ಕೃಷ್ಣಗೃಹೀತಮಾನಸಾಃ ।
ಆಜಗ್ಮುರನ್ಯೋನ್ಯಮಲಕ್ಷಿತೋದ್ಯಮಾಃ
ಸ ಯತ್ರ ಕಾಂತೋ ಜವಲೋಲಕುಂಡಲಾಃ ॥

ಅನುವಾದ

ಭಗವಂತನ ಈ ವೇಣುಗಾನವು ಭಗವತ್ ಪ್ರೇಮವನ್ನು, ಅವನನ್ನು ಸೇರುವ ಅಭಿಲಾಷೆಯನ್ನು ಅತ್ಯಂತ ಹೆಚ್ಚಿಸುವುದಾಗಿದೆ. ಶ್ಯಾಮಸುಂದರನು ಮೊದಲಿಂದಲೇ ಗೋಪಿಯರ ಮನಸ್ಸನ್ನು ತನ್ನ ವಶವಾಗಿಸಿಕೊಂಡಿದ್ದನು. ಈಗಲಾದರೋ ಅವರ ಮನಸ್ಸಿನ ಸಮಸ್ತ ವಸ್ತುಗಳನ್ನು - ಭಯ, ಸಂಕೋಚ, ಧೈರ್ಯ, ಮರ್ಯಾದೆ ಮುಂತಾದ ವೃತ್ತಿಗಳನ್ನು ಕಸಿದುಕೊಂಡಿದ್ದನು. ವೇಣುಗಾನವನ್ನು ಕೇಳುತ್ತಲೇ ಅವರ ಸ್ಥಿತಿ ವಿಚಿತ್ರವಾಗಿತ್ತು. ಶ್ರೀಕೃಷ್ಣನನ್ನು ಪತಿರೂಪದಿಂದ ಪಡೆಯಲು ಎಲ್ಲರೂ ಸೇರಿ ಸಾಧನೆ ಮಾಡಿದ್ದ ಗೋಪಿಯರು ಈಗ ಒಬ್ಬಳು ಮತ್ತೊಬ್ಬಳಿಗೆ ತಿಳಿಸದೆಯೇ, ಶ್ರೀಕೃಷ್ಣನ ಬಳಿಗೆ ಧಾವಿಸಿದರು. ಪರೀಕ್ಷಿತನೇ! ಅವರು ಲಗುಬಗೆಯಿಂದ ಹೋಗುವಾಗ ಅವರು ಧರಿಸಿದ್ದ ಕರ್ಣಕುಂಡಲಗಳು ತಕ-ತಕನೆ ಕುಣಿಯುತ್ತಿದ್ದವು. ॥4॥

(ಶ್ಲೋಕ-5)

ಮೂಲಮ್

ದುಹಂತ್ಯೋಭಿಯಯುಃ ಕಾಶ್ಚಿದ್
ದೋಹಂ ಹಿತ್ವಾ ಸಮುತ್ಸುಕಾಃ ।
ಪಯೋಧಿಶ್ರಿತ್ಯ ಸಂಯಾವ-
ಮನುದ್ವಾಸ್ಯಾಪರಾ ಯಯುಃ ॥

ಅನುವಾದ

ಶ್ರೀಕೃಷ್ಣನ ಮನೋಹರವಾದ ವಂಶೀಧ್ವನಿಯನ್ನು ಕೇಳಿದ ಗೋಪಿಯರು ತಮ್ನನ್ನು ತಾವೇ ಮರೆತುಬಿಟ್ಟರು. ಹಾಲು ಕರೆಯುತ್ತಿದ್ದವಳು ಅದನ್ನು ಬಿಟ್ಟು ಉತ್ಸುಕತೆಯಿಂದ ಹೊರಟು ಬಿಟ್ಟಳು. ಒಲೆಯಮೆಲೆ ಹಾಲು ಕಾಯಿಸುತ್ತಿದ್ದವಳು ಹಾಲು ಉಕ್ಕಿ ಬಂದರೂ ಹಾಗೆಯೇ ಬಿಟ್ಟು ಹೊರಟಳು. ಅನ್ನಮಾಡುತ್ತಿದ್ದವಳು ಅದನ್ನು ಒಲೆಯಿಂದ ಇಳಿಸದೆಯೇ ಕೃಷ್ಣನ ಬಳಿಗೆ ಓಡಿದಳು. ॥5॥

(ಶ್ಲೋಕ-6)

ಮೂಲಮ್

ಪರಿವೇಷಯಂತ್ಯಸ್ತದ್ಧಿತ್ವಾ ಪಾಯಯಂತ್ಯಃ ಶಿಶೂನ್ಪಯಃ ।
ಶುಶ್ರೂಷಂತ್ಯಃ ಪತೀನ್ಕಾಶ್ಚಿದಶ್ನಂತ್ಯೋಪಾಸ್ಯ ಭೋಜನಮ್ ॥

ಅನುವಾದ

ಊಟ ಬಡಿಸುತ್ತಿದ್ದವಳು ಅದನ್ನು ಅಲ್ಲೆ ಬಿಟ್ಟು ಹೊರಟಳು. ಮಗುವಿಗೆ ಹಾಲು ಕುಡಿಸುತ್ತಿದ್ದವಳು ಮಗುವನ್ನು ಅಲ್ಲೇ ಬಿಟ್ಟು, ಪತಿ ಸೇವೆಯಲ್ಲಿ ತತ್ಪರಳಾಗಿದ್ದವಳು ಪತಿಯನ್ನು ಬಿಟ್ಟು, ಕೆಲವರು ಊಟಮಾಡುತ್ತಿದ್ದವರು ಊಟವನ್ನು ಬಿಟ್ಟು ಪ್ರಿಯತಮನಾದ ಶ್ರೀಕೃಷ್ಣನ ಬಳಿಗೆ ಧಾವಿಸಿದರು. ॥6॥

(ಶ್ಲೋಕ-7)

ಮೂಲಮ್

ಲಿಂಪಂತ್ಯಃ ಪ್ರಮೃಜಂತ್ಯೋನ್ಯಾ ಅಂಜಂತ್ಯಃ ಕಾಶ್ಚ ಲೋಚನೇ ।
ವ್ಯತ್ಯಸ್ತವಸಾಭರಣಾಃ ಕಾಶ್ಚಿತ್ ಕೃಷ್ಣಾಂತಿಕಂ ಯಯುಃ ॥

ಅನುವಾದ

ಕೆಲವರು ಅಂಗರಾಗವನ್ನು ಶರೀರಕ್ಕೆ ಪೂಸಿಕೊಳ್ಳುತ್ತಿದ್ದರು, ಕೆಲವರು ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುತ್ತಿದ್ದರು. ಕೆಲವರು ಅವಸರದಲ್ಲಿ ಸೀರೆಗಳನ್ನು, ಆಭರಣಗಳನ್ನು ತಲೆಕೆಳಕಾಗಿ ಧರಿಸಿಕೊಂಡು ಹಾಗೆಯೇ ಶ್ರೀಕೃಷ್ಣನ ಬಳಿಗೆ ಓಡಿದರು. ॥7॥

(ಶ್ಲೋಕ-8)

ಮೂಲಮ್

ತಾ ವಾರ್ಯಮಾಣಾಃ ಪತಿಭಿಃ ಪಿತೃಭಿರ್ಭ್ರಾತೃಬಂಧುಭಿಃ ।
ಗೋವಿಂದಾಪಹೃತಾತ್ಮಾನೋ ನ ನ್ಯವರ್ತಂತ ಮೋಹಿತಾಃ ॥

ಅನುವಾದ

ಹೀಗೆ ಮನೆಯಿಂದ ಹೊರಟ ಗೋಪಿಯರನ್ನು ತಂದೆಯಂದಿರು, ಪತಿಗಳು, ಮೈದುನರು, ಬಂಧುಗಳು ತಡೆದೂ ಪ್ರಯೋಜನವಾಗಲಿಲ್ಲ. ಅವರ ಮಂಗಲಮಯ ಪ್ರೇಮಯಾತ್ರೆಯಲ್ಲಿ, ವಿಘ್ನವನ್ನೊಡ್ಡಿದರೂ ಅವರು ಅದನ್ನು ಲೆಕ್ಕಿಸಲೇ ಇಲ್ಲ. ಏಕೆಂದರೆ, ವಿಶ್ವವಿಮೋಹನ ಶ್ರೀಕೃಷ್ಣನು ಅವರ ಮನಸ್ಸು, ಪ್ರಾಣ, ಆತ್ಮ ಎಲ್ಲವನ್ನು ಅಪಹರಿಸಿ ಬಿಟ್ಟಿದ್ದನು. ॥8॥

(ಶ್ಲೋಕ-9)

ಮೂಲಮ್

ಅಂತರ್ಗೃಹಗತಾಃ ಕಾಶ್ಚಿದ್ಗೋಪ್ಯೋಲಬ್ಧವಿನಿರ್ಗಮಾಃ ।
ಕೃಷ್ಣಂ ತದ್ಭಾವನಾಯುಕ್ತಾ ದಧ್ಯುರ್ಮೀಲಿತಲೋಚನಾಃ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಕೆಲವು ಗೋಪಿಯರು ಮನೆಯೊಳಗೆ ಇದ್ದು, ಹೊರಗೆ ಹೋಗಲು ಸಾಧ್ಯವಾಗದವರು ತಮ್ಮ ಕಂಗಳನ್ನು ಮುಚ್ಚಿ, ಅತ್ಯಂತ ತನ್ಮಯತೆಯಿಂದ ಶ್ರೀಕೃಷ್ಣನ ಸೌಂದರ್ಯ, ಮಾಧುರ್ಯ ಹಾಗೂ ಅವನ ಲೀಲೆಗಳನ್ನು ಚಿಂತಿಸುತ್ತಾ ಧ್ಯಾನಮಗ್ನರಾದರು. ॥9॥

(ಶ್ಲೋಕ-10)

ಮೂಲಮ್

ದುಃಸಹಪ್ರೇಷ್ಠವಿರಹತೀವ್ರತಾಪಧುತಾಶುಭಾಃ ।
ಧ್ಯಾನಪ್ರಾಪ್ತಾಚ್ಯುತಾಶ್ಲೇಷನಿರ್ವೃತ್ಯಾ ಕ್ಷೀಣಮಂಗಲಾಃ ॥

ಅನುವಾದ

ದುಃಸಹವಾದ, ತೀವ್ರವಾದ ವಿರಹ ವೇದನೆಯ ಅನುಭವದಿಂದಾಗಿ ಆ ಗೋಪಿಕೆಯರಲ್ಲಿದ್ದ ಪಾಪವು ನಿರಸನವಾಯಿತು. ಅನವರತವಾದ ಧ್ಯಾನದಿಂದಾಗಿ ಹೃತ್ಕಮಲದಲ್ಲಿ ಕಾಣಿಸಿಕೊಂಡ ಮನೋಹರವಾದ ಶ್ರೀಕೃಷ್ಣನ ಗಾಢಾಲಿಂಗನದ ಸುಖದಿಂದಾಗಿ ಅವರಲ್ಲಿದ್ದ ಪುಣ್ಯವೂ ಕೂಡಕ್ಷೀಣಿಸಿತು. ॥10॥

(ಶ್ಲೋಕ-11)

ಮೂಲಮ್

ತಮೇವ ಪರಮಾತ್ಮಾನಂ ಜಾರಬುದ್ಧ್ಯಾಪಿ ಸಂಗತಾಃ ।
ಜಹುರ್ಗುಣಮಯಂ ದೇಹಂ ಸದ್ಯಃ ಪ್ರಕ್ಷೀಣಬಂಧನಾಃ ॥

ಅನುವಾದ

ಪರೀಕ್ಷಿತನೇ! ಆ ಸಮಯದಲ್ಲಿ ಅವರಲ್ಲಿ ಜಾರಭಾವವಿದ್ದರೂ ಅವರು ದೇವ ದೇವನಾದ ನಿರ್ವಿಕಾರನಾದ ಪರಮಾತ್ಮನನ್ನೇ ಆಲಿಂಗಿಸಿಕೊಂಡ ಕಾರಣ, ಪಾಪ-ಪುಣ್ಯಗಳ ಪರಿಣಾಮದಿಂದ ಪ್ರಾಪ್ತವಾದ ಗುಣಮಯ ದೇಹವನ್ನು ತೊರೆದು ಅಪ್ರಾಕೃತವಾದ ಶರೀರಗಳನ್ನು ಪಡೆದುಕೊಂಡರು. ಅಥವಾ ಶ್ರೀಕೃಷ್ಣನಲ್ಲೇ ಸೇರಿ ಹೋದರು. ಭಗವಂತನ ದಿವ್ಯಾಲಿಂಗನವನ್ನು ಪಡೆದುಕೊಂಡೊಡನೇ ಅವರ ಕರ್ಮಬಂಧನಗಳೆಲ್ಲವೂ ಕಳಚಿ ಬಿದ್ದುಹೋಗಿದ್ದುವು. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕೃಷ್ಣಂ ವಿದುಃ ಪರಂ ಕಾಂತಂ ನ ತು ಬ್ರಹ್ಮತಯಾ ಮುನೇ ।
ಗುಣಪ್ರವಾಹೋಪರಮಸ್ತಾಸಾಂ ಗುಣಧಿಯಾಂ ಕಥಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಶುಕಮುನಿಗಳೇ! ಗೋಪಿಕೆಯರಾದರೋ ಭಗವಾನ್ ಶ್ರೀಕೃಷ್ಣನನ್ನು ಕೇವಲ ತಮ್ಮ ಪರಮ ಪ್ರಿಯತಮನೆಂದೇ ಭಾವಿಸಿದ್ದರು. ಅವನಲ್ಲಿ ಅವರಿಗೆ ಬ್ರಹ್ಮಭಾವವೇನೋ ಇರಲಿಲ್ಲ. ಹೀಗೆ ಅವರ ದೃಷ್ಟಿಯು ಪ್ರಾಕೃತ ಗುಣಗಳಲ್ಲಿಯೇ ಆಸಕ್ತವಾದಂತೆ ಕಾಣುತ್ತಿತ್ತು. ಇಂತಹ ಸ್ಥಿತಿಯಲ್ಲಿ ಅವರಿಗೆ ಗುಣ ಪ್ರವಾಹ ರೂಪವಾದ ಈ ಸಂಸಾರದ ನಿವೃತ್ತಿ ಹೇಗೆ ಸಂಭವಿಸಿತು? ॥12॥

(ಶ್ಲೋಕ-13)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಉಕ್ತಂ ಪುರಸ್ತಾದೇತತ್ತೇ ಚೈದ್ಯಃ ಸಿದ್ಧಿಂ ಯಥಾ ಗತಃ ।
ದ್ವಿಷನ್ನಪಿ ಹೃಷೀಕೇಶಂ ಕಿಮುತಾಧೋಕ್ಷಜಪ್ರಿಯಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಚೇದಿರಾಜನಾದ ಶಿಶುಪಾಲನು ಹೃಷಿಕೇಶನನ್ನು ದ್ವೇಷಿಸುತ್ತಿದ್ದರೂ ದ್ವೇಷರೂಪವಾದ ಶ್ರೀಕೃಷ್ಣತಾದಾತ್ಮ್ಯದಿಂದ ಅವನು ಪ್ರಾಕೃತ ಶರೀರವನ್ನು ತೊರೆದು ಅಪ್ರಾಕೃತ ಶರೀರವನ್ನು ಪಡೆದು ಭಗವಂತನ ಪಾರ್ಷದನಾದನೆಂದು ನಾನು ಮೊದಲೇ ನಿನಗೆ ಹೇಳಿಬಿಟ್ಟಿದ್ದೇನೆ. ಹೀಗಿರುವಾಗ ನಿರಂತರವಾಗಿ ಅನಿರ್ದುಷ್ಟವಾದ ಪ್ರೇಮದಿಂದ ಶ್ರೀಕೃಷ್ಣನನ್ನು ಆರಾಧಿಸುತ್ತಿದ್ದ ಗೋಪಿಯರ ಕುರಿತು ಹೇಳುವುದೇನಿದೇ? ॥13॥

(ಶ್ಲೋಕ-14)

ಮೂಲಮ್

ನೃಣಾಂ ನಿಃಶ್ರೇಯಸಾರ್ಥಾಯ ವ್ಯಕ್ತಿರ್ಭಗವತೋ ನೃಪ ।
ಅವ್ಯಯಸ್ಯಾಪ್ರಮೇಯಸ್ಯ ನಿರ್ಗುಣಸ್ಯ ಗುಣಾತ್ಮನಃ ॥

ಅನುವಾದ

ವಾಸ್ತವವಾಗಿ ಭಗವಂತನು ವೃದ್ಧಿ-ವಿನಾಶ, ಪ್ರಮಾಣ-ಪ್ರಮೇಯ, ಗುಣ-ಗುಣಿ ಮುಂತಾದ ಪ್ರಕೃತಿ ಸಂಬಂಧೀ ಭಾವಗಳಿಂದ ರಹಿತನಾಗಿದ್ದಾನೆ. ಅವನು ಅಚಿಂತ್ಯನೂ, ಅನಂತನೂ, ಅಪ್ರಾಕೃತನೂ, ಪರಮಕಲ್ಯಾಣ ಸ್ವರೂಪನೂ, ತ್ರಿಗುಣಾತೀತನೂ ಆಗಿದ್ದು ಕಲ್ಯಾಣಗುಣಗಳಿಗೆ ಏಕಮಾತ್ರ ಆಶ್ರಯನಾಗಿದ್ದಾನೆ. ಭಗವಂತನ ಅವತಾರವೂ ಕೇವಲ ಮನುಷ್ಯರ ಕಲ್ಯಾಣ ಸಾಧನೆಗಾಗಿಯೇ ಆಗಿದೆ. ॥14॥

(ಶ್ಲೋಕ-15)

ಮೂಲಮ್

ಕಾಮಂ ಕ್ರೋಧಂ ಭಯಂ ಸ್ನೇಹಮೈಕ್ಯಂ ಸೌಹೃದಮೇವ ಚ ।
ನಿತ್ಯಂ ಹರೌ ವಿದಧತೋ ಯಾಂತಿ ತನ್ಮಯತಾಂ ಹಿ ತೇ ॥

ಅನುವಾದ

ಅದಕ್ಕಾಗಿ ಭಗವಂತನೊಂದಿಗೆ ಕೇವಲ ಸಂಬಂಧ ಉಂಟಾಗಬೇಕು. ಆ ಸಂಬಂಧವು ಬೇಕಾದರೆ ಕಾಮದಿಂದಾಗಲೀ, ಕ್ರೋಧದಿಂದಾಗಲೀ, ಭಯದಿಂದಾಗಲೀ, ಸ್ನೇಹದಿಂದಾಗಲಿ, ಸೌಹಾರ್ದದ್ದಾಗಲಿ. ಬಯಸಿದ ಯಾವುದೇ ಭಾವದಿಂದ ಭಗವಂತನಲ್ಲಿ ನಿತ್ಯ-ನಿರಂತರ ತಮ್ಮ ವೃತ್ತಿಗಳನ್ನು ನೆಲೆಗೊಳಿಸಿದಾಗ ಅವರು ಭಗವಂತನಲ್ಲಿ ಒಂದಾಗುತ್ತಾರೆ. ಇದರಿಂದ ವೃತ್ತಿಗಳು ಭಗವನ್ಮಯವಾಗಿ ಹೋಗುತ್ತವೆ ಮತ್ತು ಆ ಜೀವನಿಗೆ ಭಗವಂತನು ದೊರೆಯುತ್ತಾನೆ. ॥15॥

(ಶ್ಲೋಕ-16)

ಮೂಲಮ್

ನ ಚೈವಂ ವಿಸ್ಮಯಃ ಕಾರ್ಯೋ ಭವತಾ ಭಗವತ್ಯಜೇ ।
ಯೋಗೇಶ್ವರೇಶ್ವರೇ ಕೃಷ್ಣೇ ಯತ ಏತದ್ವಿಮುಚ್ಯತೇ ॥

ಅನುವಾದ

ಪರೀಕ್ಷಿತನೇ! ಪರಮಭಾಗವತನಾದ, ಭಗವದ್ರಹಸ್ಯವನ್ನು ಸಂಪೂರ್ಣವಾಗಿ ತಿಳಿದಿರುವ ಭಕ್ತಶ್ರೇಷ್ಠನಾದ ನಿನ್ನಂತಹವನು ಶ್ರೀಕೃಷ್ಣನ ಸಂಬಂಧವಾಗಿ ಹೀಗೆ ಸಂದೇಹ ಪಡಬಾರದು. ಯೋಗೇಶ್ವರರಿಗೂ ಈಶ್ವರನಾದ, ಅಜನ್ಮಾ ಭಗವಂತನಿಗೆ ಇದು ಆಶ್ಚರ್ಯದ ಮಾತಾಗಿದೆಯೇ? ಅಯ್ಯಾ! ಅವನ ಸಂಕಲ್ಪಮಾತ್ರದಿಂದ, ಇಡೀ ಜಗತ್ತಿನ ಪರಮಕಲ್ಯಾಣವಾಗಬಲ್ಲದು. ॥16॥

(ಶ್ಲೋಕ-17)

ಮೂಲಮ್

ತಾ ದೃಷ್ಟ್ವಾಂತಿಕಮಾಯಾತಾ ಭಗವಾನ್ ವ್ರಜಯೋಷಿತಃ ।
ಅವದದ್ವದತಾಂ ಶ್ರೇಷ್ಠೋ ವಾಚಃ ಪೇಶೈರ್ವಿಮೋಹಯನ್ ॥

ಅನುವಾದ

ವ್ರಜದ ಅನುಪಮ ವಿಭೂತಿಗಳಾದ ಗೋಪಿಯರು ತನ್ನ ಬಳಿಗೆ ಬಂದಿರುವರೆಂದು ಶ್ರೀಕೃಷ್ಣನು ನೋಡಿದಾಗ, ಅವನು ವಿನೋದದಿಂದ ತುಂಬಿದ ವಾಕ್ಚಾತುರ್ಯದಿಂದ ಅವರನ್ನು ವಿಮೋಹಗೊಳಿಸುತ್ತಾ ಇಂತೆಂದನು. ॥17॥

(ಶ್ಲೋಕ-18)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸ್ವಾಗತಂ ವೋ ಮಹಾಭಾಗಾಃ ಪ್ರಿಯಂ ಕಿಂ ಕರವಾಣಿ ವಃ ।
ವ್ರಜಸ್ಯಾನಾಮಯಂ ಕಚ್ಚಿದ್ ಬ್ರೂತಾಗಮನಕಾರಣಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಮಹಾಭಾಗ್ಯ ಶಾಲಿಯರಾದ ಗೋಪಿಯರೇ! ನಿಮಗೆ ಸ್ವಾಗತ ಬಯಸುತ್ತೇನೆ. ನಿಮಗೆ ಪ್ರಿಯವಾದ ಯಾವ ಕೆಲಸವನ್ನು ಮಾಡಿ ಕೊಡಲಿ? ವ್ರಜದಲ್ಲಿ ಎಲ್ಲರೂ ಕುಶಲಿಗಳಾಗಿದ್ದಾರಲ್ಲ? ನಿಮ್ಮ ಆಗಮನದ ಕಾರಣವೇನು? ಹೇಳಿರಿ. ॥18॥

(ಶ್ಲೋಕ-19)

ಮೂಲಮ್

ರಜನ್ಯೇಷಾ ಘೋರರೂಪಾ ಘೋರಸತ್ತ್ವನಿಷೇವಿತಾ ।
ಪ್ರತಿಯಾತ ವ್ರಜಂ ನೇಹ ಸ್ಥೇಯಂ ಸೀಭಿಃ ಸುಮಧ್ಯಮಾಃ ॥

ಅನುವಾದ

ಸುಂದರಿಯರಾದ ಗೋಪಿಯರೇ! ಇದು ಭಯಾನಕ ರಾತ್ರಿಯಾಗಿದೆ. ಭಯಂಕರವಾದ ಪ್ರಾಣಿಗಳು ಈ ಅರಣ್ಯದಲ್ಲಿ ಸಂಚರಿಸುತ್ತವೆ. ಹೀಗಿರುವಾಗ ಹೆಂಗಸರಾದ ನೀವು ಇಲ್ಲಿರುವುದು ತರವಲ್ಲ. ನೀವೆಲ್ಲರೂ ಈಗಲೇ ವ್ರಜಕ್ಕೆ ಹಿಂದಿರುಗಿರಿ. ॥19॥

(ಶ್ಲೋಕ-20)

ಮೂಲಮ್

ಮಾತರಃ ಪಿತರಃ ಪುತ್ರಾ ಭ್ರಾತರಃ ಪತಯಶ್ಚ ವಃ ।
ವಿಚಿನ್ವಂತಿ ಹ್ಯಪಶ್ಯಂತೋ ಮಾ ಕೃಢ್ವಂ ಬಂಧುಸಾಧ್ವಸಮ್ ॥

ಅನುವಾದ

ನಿಮ್ಮನ್ನು ಕಾಣದೆ ನಿಮ್ಮ ತಂದೆ-ತಾಯಿಯರು, ಸಹೋದರರು, ಪತಿಗಳು, ಪುತ್ರರು ಎಲ್ಲರೂ ನಿಮ್ಮನ್ನು ಹುಡುಕುತ್ತಿರಬಹುದು. ಅವರಿಗೆ ಭಯವುಂಟಾಗುವಂತೆ ವರ್ತಿಸಬೇಡಿ. ॥20॥

(ಶ್ಲೋಕ-21)

ಮೂಲಮ್

ದೃಷ್ಟಂ ವನಂ ಕುಸುಮಿತಂ ರಾಕೇಶಕರರಂಜಿತಮ್ ।
ಯಮುನಾನಿಲಲೀಲೈಜತ್ತರುಪಲ್ಲವಶೋಭಿತಮ್ ॥

ಅನುವಾದ

ನೀವು ಇಲ್ಲಿಗೆ ಬಂದು ಚಂದ್ರನ ಬೆಳದಿಂಗಳಿಂದ ಪ್ರಕಾಶಮಾನವಾಗಿ ಕಾಣುತ್ತಿರುವ ವಿಕಸಿತವಾದ ಘಮ-ಘಮಿಸುವ ಪುಷ್ಪಗಳಿಂದ ಕೂಡಿದ ವೃಂದಾವನನ್ನು ನೋಡಿದಿರಿ. ಯಮುನೆಯ ಮೇಲಿನಿಂದ ಬೀಸಿ ಬರುವ ತಂಗಾಳಿಯಿಂದ ಅಲುಗಾಡುವ ವೃಕ್ಷಗಳ ತಳಿರುಗಳಿಂದ ಈ ವೃಂದಾವನದ ವನಸಿರಿಯನ್ನು ನೋಡಿ ಆನಂದಿಸಿದಿರಿ. ನಿಮ್ಮ ಆಗಮನವೇನೂ ವ್ಯರ್ಥವಾಗಲಿಲ್ಲ. ನೀವಿನ್ನು ಹೋಗಬಹುದು. ॥21॥

(ಶ್ಲೋಕ-22)

ಮೂಲಮ್

ತದ್ಯಾತ ಮಾ ಚಿರಂ ಗೋಷ್ಠಂ ಶುಶ್ರೂಷಧ್ವಂ ಪತೀನ್ಸತೀಃ ।
ಕ್ರಂದಂತಿ ವತ್ಸಾ ಬಾಲಾಶ್ಚ ತಾನ್ಪಾಯಯತ ದುಹ್ಯತ ॥

ಅನುವಾದ

ನೀವಿಗಲೇ ತಡಮಾಡದೆ ವ್ರಜಕ್ಕೆ ಹೊರಡಿರಿ. ಸತೀಧರ್ಮವನ್ನು ಅನುಸರಿಸಿ ನಿಮ್ಮ ಪತಿಗಳ ಸೇವೆ-ಶುಶ್ರೂಷೆ ಮಾಡಿರಿ. ಮನೆಯಲ್ಲಿ ಮಕ್ಕಳು ಹಾಲಿಗಾಗಿ ಅಳುತ್ತಿರುವರು. ಕರುಗಳೂ ಕೂಡ ‘ಹಂಬಾ’ ಎಂದು ಕೂಗಿಕೊಳ್ಳುತ್ತಿವೆ. ಕರುಗಳನ್ನು ಹಾಲುಣಲು ಬಿಟ್ಟು ಹಸುಗಳನ್ನು ಕರೆಯಿರಿ. ನಿಮ್ಮ ಮಕ್ಕಳಿಗೆ ಹಾಲುಣಿಸಿ ಮಲಗಿಸಿರಿ. ॥22॥

(ಶ್ಲೋಕ-23)

ಮೂಲಮ್

ಅಥವಾ ಮದಭಿಸ್ನೇಹಾದ್ಭವತ್ಯೋ ಯಂತ್ರಿತಾಶಯಾಃ ।
ಆಗತಾ ಹ್ಯುಪಪನ್ನಂ ವಃ ಪ್ರೀಯಂತೇ ಮಯಿ ಜಂತವಃ ॥

ಅನುವಾದ

ನನ್ನ ಮೇಲಿನ ಪ್ರೇಮದಿಂದ ಆಕರ್ಷಿಸಲ್ಪಟ್ಟವರಾಗಿ ನೀವೇನಾದರೂ ಇಲ್ಲಿಗೆ ಬಂದಿದ್ದರೆ ಅದೂ ಕೂಡ ಸಮಂಜಸವೇ ಆಗಿದೆ. ಏಕೆಂದರೆ, ಎಲ್ಲರಿಗೆ ಆತ್ಮಸ್ವರೂಪನಾದ ನನ್ನನ್ನು ಎಲ್ಲ ಪ್ರಾಣಿಗಳೂ ಸ್ವಾಭಾವಿಕವಾಗಿಯೇ ಪ್ರೀತಿಸುತ್ತವೆ. ನನ್ನನ್ನು ನೋಡಿ ಪ್ರಸನ್ನರಾಗುತ್ತವೆ. ॥23॥

(ಶ್ಲೋಕ-24)

ಮೂಲಮ್

ಭರ್ತುಃ ಶುಶ್ರೂಷಣಂ ಸೀಣಾಂ ಪರೋ ಧರ್ಮೋ ಹ್ಯಮಾಯಯಾ ।
ತದ್ಬಂಧೂನಾಂ ಚ ಕಲ್ಯಾಣ್ಯಃ ಪ್ರಜಾನಾಂ ಚಾನುಪೋಷಣಮ್ ॥

ಅನುವಾದ

ಮಂಗಳಾಂಗಿಯರೇ! ನಿರ್ವಂಚನೆಯಿಂದ ಪತಿಸೇವೆ ಮಾಡುವುದು, ಬಂಧುಗಳನ್ನು ಸಮಾದರಿಸುವುದು, ಸಂತಾನದ ಪಾಲನೆ-ಪೋಷಣೆ ಮಾಡುವುದು ಸ್ತ್ರೀಯರ ಪರಮ ಧರ್ಮವಾಗಿದೆ. ॥24॥

(ಶ್ಲೋಕ-25)

ಮೂಲಮ್

ದುಃಶೀಲೋ ದುರ್ಭಗೋ ವೃದ್ಧೋ ಜಡೋ ರೋಗ್ಯಧನೋಪಿ ವಾ ।
ಪತಿಃ ಸೀಭಿರ್ನ ಹಾತವ್ಯೋ ಲೋಕೇಪ್ಸುಭಿರಪಾತಕೀ ॥

ಅನುವಾದ

ಉತ್ತಮ ಲೋಕವನ್ನು ಪಡೆಯುವ ಅಭಿಲಾಷೆಯುಳ್ಳ ಸಾಧ್ವಿಯು ಪಾತಕಿಯಾದವನನ್ನು ಬಿಟ್ಟು ಬೇರೆ ಯಾವುದೇ ರೀತಿಯ ಪತಿಯನ್ನು ಪರಿತ್ಯಾಗ ಮಾಡಬಾರದು. ಅವನು ಬೇಕಾದರೆ ಕೆಟ್ಟ ಸ್ವಭಾವದವನಾಗಿರಲೀ, ನಿರ್ಭಾಗ್ಯನಾಗಿರಲಿ, ಮುದುಕನಾಗಿರಲೀ, ಜಡವಾಗಿರಲೀ, ದರಿದ್ರನಾಗಿರಲಿ, ರೋಗಿಯಾಗಿರಲಿ ಅವ ನನ್ನು ತ್ಯಜಿಸಬಾರದು. ॥25॥

(ಶ್ಲೋಕ-26)

ಮೂಲಮ್

ಅಸ್ವರ್ಗ್ಯಮಯಶಸ್ಯಂ ಚ ಲ್ಗು ಕೃಚ್ಛ್ರಂ ಭಯಾವಹಮ್ ।
ಜುಗುಪ್ಸಿತಂ ಚ ಸರ್ವತ್ರ ಔಪಪತ್ಯಂ ಕುಲಸಿಯಾಃ ॥

ಅನುವಾದ

ಕುಲೀನ ಸ್ತ್ರೀಯರಿಗೆ ಜಾರಪುರುಷನ ಸಮಾಗಮವು ಸರ್ವವಿಧದಿಂದಲೂ ನಿಂದನೀಯವಾಗಿದೆ. ಇದರಿಂದ ಅವರ ಪರಲೋಕವು ಕೆಡುವುದು, ಸ್ವರ್ಗವೂ ಸಿಗುವುದಿಲ್ಲ, ಈ ಲೋಕದಲ್ಲಿಯೂ ಅಪಕೀರ್ತಿಯುಂಟಾಗುತ್ತದೆ. ಈ ಕೆಟ್ಟಕೆಲಸವಂತೂ ಅತ್ಯಂತ ತುಚ್ಛವೂ, ನಿಂದನೀಯವೂ ಆಗಿದೆ. ಇದರಿಂದ ವರ್ತಮಾನದಲ್ಲಿ ಕಷ್ಟಗಳೇ ಇದ್ದು, ಎಲ್ಲರಿಗೆ ಭಯಪಡಬೇಕಾಗುತ್ತದೆ. ಕುಲೀನ ಸ್ತ್ರೀಯರಿಗೆ ಇದು ಅತ್ಯಂತ ನೀಚಕಾರ್ಯವಾಗಿದೆ, ನರಕಕ್ಕೆ ಕಾರಣವಾಗಿದೆ. ॥26॥

(ಶ್ಲೋಕ-27)

ಮೂಲಮ್

ಶ್ರವಣಾದ್ದರ್ಶನಾದ್ಧ್ಯಾನಾನ್ಮಯಿ ಭಾವೋನುಕೀರ್ತನಾತ್ ।
ನ ತಥಾ ಸನ್ನಿಕರ್ಷೇಣ ಪ್ರತಿಯಾತ ತತೋ ಗೃಹಾನ್ ॥

ಅನುವಾದ

ಗೋಪಿಯರೇ! ನನ್ನ ಲೀಲಾ-ಗುಣಗಳ ಶ್ರವಣದಿಂದ ಕೀರ್ತನದಿಂದ, ನನ್ನ ದರ್ಶನದಿಂದ ಮತ್ತು ನನ್ನ ಶ್ರೀವಿಗ್ರಹದ ಧ್ಯಾನದಿಂದ ಉಂಟಾಗುವ ಅನನ್ಯ ಪ್ರೇಮವು, ಬಳಿಯಲ್ಲಿ ಇರುವುದರಿಂದ ದೊರೆಯುವುದಿಲ್ಲ. ಅದಕ್ಕಾಗಿ ನೀವೆಲ್ಲರೂ ಶೀಘ್ರವಾಗಿ ನಿಮ್ಮ-ನಿಮ್ಮ ಮನೆಗಳಿಗೆ ಮರಳಿ ಹೋಗಿರಿ. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ವಿಪ್ರಿಯಮಾಕರ್ಣ್ಯ ಗೋಪ್ಯೋ ಗೋವಿಂದಭಾಷಿತಮ್ ।
ವಿಷಣ್ಣಾಭಗ್ನಸಂಕಲ್ಪಾಶ್ಚಿಂತಾಮಾಪುರ್ದುರತ್ಯಯಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಇಂತಹ ಅಪ್ರಿಯವಾದ ಮಾತನ್ನು ಕೇಳಿದ ಗೋಪಿಯರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಅವರ ಆಸೆ-ಆಕಾಂಕ್ಷೆಗಳೆಲ್ಲ ನುಚ್ಚು ನೂರಾದವು. ಕಡು ದುಃಖಿತರಾದರು. ದಾಟಲಶಕ್ಯವಾದ ಚಿಂತಾಸಮುದ್ರದಲ್ಲಿ ಮುಳುಗಿಹೋದರು. ॥28॥

(ಶ್ಲೋಕ-29)

ಮೂಲಮ್

ಕೃತ್ವಾ ಮುಖಾನ್ಯವ ಶುಚಃ ಶ್ವಸನೇನ ಶುಷ್ಯದ್-
ಬಿಂಬಾಧರಾಣಿ ಚರಣೇನ ಭುವಂ ಲಿಖಂತ್ಯಃ ।
ಅಸ್ರೈರುಪಾತ್ತಮಷಿಭಿಃ ಕುಚಕುಂಕುಮಾನಿ
ತಸ್ಥುರ್ಮೃಜಂತ್ಯ ಉರುದುಃಖಭರಾಃ ಸ್ಮ ತೂಷ್ಣೀಮ್ ॥

ಅನುವಾದ

ವಿರಹ ದುಃಖದಿಂದಾಗಿ ಗೋಪಿಯರು ತಲೆತಗ್ಗಿಸಿಕೊಂಡು ನಿಟ್ಟುಸಿರು ಬಿಡುತ್ತಿದ್ದರು. ಆ ನಿಟ್ಟುಸಿರಿನ ಬಿಸಿಯಿಂದಾಗಿ ತೊಂಡೆಯಂತೆ ಇದ್ದ ಅವರ ಕೆಂದುಟಿಗಳು ಒಣಗಿಹೋದುವು. ಮುಂದು ಗಾಣದೆ ಕಾಲುಗುರುಗಳಿಂದ ಭೂಮಿಯನ್ನು ಕೆರೆಯುತ್ತಿದ್ದರು. ಕಂಗಳಿಂದ ದುಃಖಾಶ್ರುಗಳು ಹರಿದು ಕಾಡಿಗೆಯೊಂದಿಗೆ ಕುಚಮಂಡಲದಲ್ಲಿ ಲೇಪಿತವಾಗಿದ್ದ ಕುಂಕುಮ ಕೇಸರಿಯನ್ನು ತೊಳೆದು ಹಾಕಿತು. ದುಃಖ ಆವೇಗದಿಂದ ಗಂಟಲು ಕಟ್ಟಿ ಯಾವ ಮಾತನ್ನು ಆಡಲಾಗದೆ ಮೌನವಾಗಿ ನಿಂತು ಬಿಟ್ಟರು. ॥29॥

(ಶ್ಲೋಕ-30)

ಮೂಲಮ್

ಪ್ರೇಷ್ಠಂ ಪ್ರಿಯೇತರಮಿವ ಪ್ರತಿಭಾಷಮಾಣಂ
ಕೃಷ್ಣಂ ತದರ್ಥವಿನಿವರ್ತಿತಸರ್ವಕಾಮಾಃ ।
ನೇತ್ರೇ ವಿಮೃಜ್ಯ ರುದಿತೋಪಹತೇ ಸ್ಮ ಕಿಂಚಿತ್-
ಸಂರಂಭಗದ್ಗದಗಿರೋಬ್ರುವತಾನುರಕ್ತಾಃ ॥

ಅನುವಾದ

ಗೋಪಿಯರು ತಮ್ಮ ಪ್ರಿಯ ಶ್ಯಾಮ ಸುಂದರನಿಗಾಗಿ ಸಮಸ್ತ ಕಾಮನೆಗಳನ್ನು, ಭೋಗಗಳನ್ನು ಬಿಟ್ಟುಬಿಟ್ಟಿದ್ದರು. ಶ್ರೀಕೃಷ್ಣನಲ್ಲಿ ಅವರಿಗೆ ಅತ್ಯಂತ ಅನುರಾಗ, ಪರಮಪ್ರೇಮವಿತ್ತು. ತಮ್ಮ ಪ್ರಿಯತಮನಾದ ಶ್ರೀಕೃಷ್ಣನ ಇಂತಹ ನಿಷ್ಠುರವಾದ, ಅಪ್ರಿಯದಂತಿರುವ ಮಾತನ್ನು ಕೇಳಿದಾಗ ಅವರಿಗೆ ಅತ್ಯಂತ ದುಃಖವಾಯಿತು. ಅಳುತ್ತಾ-ಅಳುತ್ತಾ ಕಣ್ಣುಗಳು ಕೆಂಪಾದವು ನೀರು ತುಂಬಿ ಮಂಜಾದವು. ಕೊನೆಗೆ ಅವರು ಧೈರ್ಯತಂದುಕೊಂಡು ಕಣ್ಣೀರನ್ನು ಒರೆಸಿಕೊಂಡು, ಪ್ರಣಯಕೋಪದಿಂದ ಗದ್ಗದ ಧ್ವನಿಯಿಂದ ಹೇಳತೊಡಗಿದರು.॥30॥

(ಶ್ಲೋಕ-31)

ಮೂಲಮ್ (ವಾಚನಮ್)

ಗೋಪ್ಯ ಊಚುಃ

ಮೂಲಮ್

ಮೈವಂ ವಿಭೋರ್ಹತಿ ಭವಾನ್ಗದಿತುಂ ನೃಶಂಸಂ
ಸಂತ್ಯಜ್ಯ ಸರ್ವವಿಷಯಾಂಸ್ತವ ಪಾದಮೂಲಮ್ ।
ಭಕ್ತಾ ಭಜಸ್ವ ದುರವಗ್ರಹ ಮಾ ತ್ಯಜಾಸ್ಮಾನ್
ದೇವೋ ಯಥಾದಿಪುರುಷೋ ಭಜತೇ ಮುಮುಕ್ಷೂನ್ ॥

ಅನುವಾದ

ಗೋಪಿಯರು ಹೇಳಿದರು — ಪ್ರಾಣವಲ್ಲಭನೇ! ಇಂತಹ ನಿಷ್ಠುರವಾದ ಮಾತುಗಳನ್ನಾಡುವುದು ನಿನಗೆ ಉಚಿತವಾಗಿ ಕಾಣುವುದಿಲ್ಲ. ನಮ್ಮದೆಂದು ಭಾವಿಸುವ ಸರ್ವಸ್ವವನ್ನು ಪರಿತ್ಯಜಿಸಿ ನಿನ್ನ ಪಾದಮೂಲವನ್ನು ಸೇರಿದ್ದೇವೆ. ಸರ್ವತಂತ್ರ ಸ್ವತಂತ್ರನೇ! ನಮ್ಮನ್ನು ತ್ಯಜಿಸಬೇಡ. ಆದಿ ಪುರುಷನಾದ ನಾರಾಯಣನು ಮೋಕ್ಷಾಪೇಕ್ಷಿಗಳಾದ ಭಕ್ತರನ್ನು ಪರಿಪಾಲಿಸುವಂತೆ ಭಕ್ತರಾದ ನಮ್ಮನ್ನು ಪರಿಗ್ರಹಿಸಿ ಪಾಲಿಸು. ॥31॥

(ಶ್ಲೋಕ-32)

ಮೂಲಮ್

ಯತ್ಪತ್ಯಪತ್ಯಸುಹೃದಾಮನುವೃತ್ತಿರಂಗ
ಸೀಣಾಂ ಸ್ವಧರ್ಮ ಇತಿ ಧರ್ಮವಿದಾ ತ್ವಯೋಕ್ತಮ್ ।
ಅಸ್ತ್ವೇವಮೇತದುಪದೇಶಪದೇ ತ್ವಯೀಶೇ
ಪ್ರೇಷ್ಠೋ ಭವಾಂಸ್ತನುಭೃತಾಂ ಕಿಲ ಬಂಧುರಾತ್ಮಾ ॥

ಅನುವಾದ

ಪ್ರಾಣಪ್ರಿಯನೇ! ನೀನು ಸಮಸ್ತ ಧರ್ಮಗಳ ರಹಸ್ಯವನ್ನು ಬಲ್ಲವನಾಗಿರುವೆ. ‘ತನ್ನ ಪತಿ-ಪುತ್ರ, ಬಂಧು-ಬಾಂಧವರ ಸೇವೆ ಮಾಡುವುದೇ ಸ್ತ್ರೀಯರ ಸ್ವಧರ್ಮವಾಗಿದೆ’ ಎಂದು ನೀನು ಹೇಳಿರುವುದು ಅಕ್ಷರಶಃ ಸರಿಯಾಗಿದೆ. ಆದರೆ ಈ ಉಪದೇಶಕ್ಕೆ ಅನುಸಾರ ನಮಗೆ ನಿನ್ನ ಸೇವೆಮಾಡುವುದೇ ಸೂಕ್ತವಾಗಿದೆ. ಏಕೆಂದರೆ, ನೀನೇ ಎಲ್ಲ ಉಪದೇಶಗಳ ಪರಮ ಲಕ್ಷ್ಯವಾಗಿರುವೆ, ಸಾಕ್ಷಾತ್ ಭಗವಂತನೇ ಆಗಿರುವೆ. ನೀನೇ ಸಮಸ್ತ ಶರೀರಧಾರಿಗಳ ಸುಹೃದನೂ, ಆತ್ಮನೂ ಆಗಿರುವೆ ಮತ್ತು ಪರಮ ಪ್ರಿಯತಮನೂ ಆಗಿರುವೆ. ॥32॥

(ಶ್ಲೋಕ-33)

ಮೂಲಮ್

ಕುರ್ವಂತಿ ಹಿ ತ್ವಯಿ ರತಿಂ ಕುಶಲಾಃ ಸ್ವ ಆತ್ಮನ್
ನಿತ್ಯಪ್ರಿಯೇ ಪತಿಸುತಾದಿಭಿರಾರ್ತಿದೈಃ ಕಿಮ್ ।
ತನ್ನಃ ಪ್ರಸೀದ ಪರಮೇಶ್ವರ ಮಾ ಸ್ಮ ಛಿಂದ್ಯಾ
ಆಶಾಂ ಭೃತಾಂ ತ್ವಯಿ ಚಿರಾದರವಿಂದನೇತ್ರ ॥

ಅನುವಾದ

ಆತ್ಮಜ್ಞಾನದಲ್ಲಿ ನಿಪುಣರಾದ ಮಹಾಪುರುಷರು ನಿನ್ನನ್ನೇ ಪ್ರೇಮಿಸುತ್ತಿರುವರು. ಏಕೆಂದರೆ, ನೀನು ನಿತ್ಯ ಪ್ರಿಯನೂ, ತಮ್ಮ ಆತ್ಮನೇ ಆಗಿರುವೆ. ಅನಿತ್ಯರಾದ, ದುಃಖಕೊಡುವಂತಹ ಪತಿ-ಪುತ್ರರಿಂದ ಏನು ಪ್ರಯೋಜನ? ಪರಮೇಶ್ವರನೇ! ನಮ್ಮ ಮೇಲೆ ಪ್ರಸನ್ನನಾಗು, ಕೃಪೆದೋರು. ಕಮಲನಯನಾ! ಬಹಳ ಕಾಲದಿಂದಲೂ ನಿನ್ನಲ್ಲಿಟ್ಟಿರುವ ಸುಕೋಲವಾದ ಆಶಾಲತೆಯನ್ನು ಕತ್ತರಿಸಿ ಹಾಕಬೇಡ. ॥33॥

(ಶ್ಲೋಕ-34)

ಮೂಲಮ್

ಚಿತ್ತಂ ಸುಖೇನ ಭವತಾಪಹೃತಂ ಗೃಹೇಷು
ಯನ್ನಿರ್ವಿಶತ್ಯುತ ಕರಾವಪಿ ಗೃಹ್ಯಕೃತ್ಯೇ ।
ಪಾದೌ ಪದಂ ನ ಚಲತಸ್ತವ ಪಾದಮೂಲಾದ್
ಯಾಮಃ ಕಥಂ ವ್ರಜಮಥೋ ಕರವಾಮ ಕಿಂ ವಾ ॥

ಅನುವಾದ

ಮನಮೋಹನ! ಇದುವರೆಗೂ ನಮ್ಮ ಚಿತ್ತವು ಗೃಹಕೃತ್ಯದಲ್ಲೇ ತೊಡಗಿತ್ತು. ಅದರಿಂದ ನಮ್ಮ ಕೈಗಳು ಅದರಲ್ಲೇ ತೊಡಗಿತ್ತು. ಆದರೆ ನಾವು ನೋಡು-ನೋಡುತ್ತಾ ನಮ್ಮ ಚಿತ್ತವನ್ನು ಸುಖ ಸ್ವರೂಪನಾದ ನೀನು ಅಪಹರಿಸಿ ಬಿಟ್ಟಿರುವೆ. ಇದರಲ್ಲಿ ನಿನಗೆ ಯಾವುದೇ ಕಷ್ಟವಾಗಲಿಲ್ಲ. ಆದರೆ ಈಗಲಾದರೋ ನಮ್ಮ ಗತಿ-ಮತಿ ಬೇರೆಯೇ ಆಗಿಬಿಟ್ಟಿದೆ. ನಮ್ಮ ಈ ಕಾಲುಗಳು ನಿನ್ನ ಚರಣಕಮಲಗಳನ್ನು ಬಿಟ್ಟು ಒಂದು ಹೆಜ್ಜೆಯೂ ಮುಂದಿಡಲು ಸಿದ್ಧರಿಲ್ಲ. ಹಾಗಿರುವಾಗ ನಾವು ವ್ರಜಕ್ಕೆ ಹೋಗುವುದೆಂತು? ಅಲ್ಲಿಗೆ ಹೋಗಿ ಮಾಡುವುದಾದರೂ ಏನು? ॥34॥

(ಶ್ಲೋಕ-35)

ಮೂಲಮ್

ಸಿಂಚಾಂಗ ನಸ್ತ್ವದಧರಾಮೃತಪೂರಕೇಣ
ಹಾಸಾವಲೋಕಕಲಗೀತಜಹೃಚ್ಛಯಾಗ್ನಿಮ್ ।
ನೋ ಚೇದ್ವಯಂ ವಿರಹಜಾಗ್ನ್ಯುಪಯುಕ್ತದೇಹಾ
ಧ್ಯಾನೇನ ಯಾಮ ಪದಯೋಃ ಪದವೀಂ ಸಖೇ ತೇ ॥

ಅನುವಾದ

ಪ್ರಾಣವಲ್ಲಭ, ಪ್ರಾಣಸಖನೇ! ನಿನ್ನ ಕಿರುನಗೆಯಿಂದಲೂ, ಕುಡಿ ನೋಟದಿಂದಲೂ, ಮನೋಹರವಾದ, ಮಧುರವಾದ ವೇಣುಗಾನದಿಂದಲೂ ನಮ್ಮ ಹೃದಯದಲ್ಲಿ ಉರಿಯುತ್ತಿರುವ ಪ್ರೇಮ ಮತ್ತು ಮಿಲನದ ಅಗ್ನಿಯನ್ನು ನಿನ್ನ ಅಧರಾಮೃತವನ್ನು ಕೆಂದುಟಿಗಳ ಮೂಲಕ ಸುರಿದು ಆರಿಸಿಬಿಡು. ನೀನೇನಾದರೂ ಹಾಗೆ ಮಾಡದಿದ್ದರೆ ವಿರಹಾಗ್ನಿಗೆ ನಮ್ಮ ಶರೀರವನ್ನು ಬಲಿಗೊಟ್ಟು, ಧ್ಯಾನದ ಮೂಲಕ ನಿನ್ನ ಚರಣ ಕಮಲಗಳಲ್ಲಿ ಸೇರಿಬಿಡುವೆವು. ॥35॥

(ಶ್ಲೋಕ-36)

ಮೂಲಮ್

ಯರ್ಹ್ಯಂಬುಜಾಕ್ಷ ತವ ಪಾದತಲಂ ರಮಾಯಾ
ದತ್ತಕ್ಷಣಂ ಕ್ವಚಿದರಣ್ಯಜನಪ್ರಿಯಸ್ಯ ।
ಅಸ್ಪ್ರಾಕ್ಷ್ಮ ತತ್ಪ್ರಭೃತಿ ನಾನ್ಯಸಮಕ್ಷಮಂಗ
ಸ್ಥಾತುಂ ತ್ವಯಾಭಿರಮಿತಾ ಬತ ಪಾರಯಾಮಃ ॥

ಅನುವಾದ

ಕಮಲಾಕ್ಷನೇ! ನೀನು ವನವಾಸಿಗಳನ್ನು ಪ್ರೀತಿಸುವೆ. ವನವಾಸಿಗಳಾದ ನಾವೂ ನಿನ್ನನ್ನು ಬಹಳವಾಗಿ ಪ್ರೀತಿಸುತ್ತೇವೆ. ಆದುದರಿಂದಲೇ ನೀನು ಅವರ ಮಧ್ಯದಲ್ಲಿ ವಾಸಿಸುತ್ತಿರುವೆ. ಯಾರ ಪಾದಸೇವೆಯು ಲಕ್ಷ್ಮೀದೇವಿಗೂ ಯಾವಾಗಲೊಮ್ಮೆ ಪ್ರಾಪ್ತವಾಗುವುದೋ, ಅಂತಹ ಪಾದತಲವನ್ನು ಸ್ಪರ್ಶಿಸುವ ಸೌಭಾಗ್ಯವು ನಮಗೂ ಸಿಕ್ಕಿತು. ಅಂದು ನೀನು ನಮ್ಮನ್ನು ದಾಸಿಯರನ್ನಾಗಿ ಸ್ವೀಕರಿಸಿ ಆನಂದವನ್ನುಂಟು ಮಾಡಿದೆ. ಅಂದಿನಿಂದ ನಾವು ಬೇರೆಯವರ ಮುಂದೆ ಒಂದು ಕ್ಷಣವಾದರೂ ನಿಲ್ಲಲು ಅಸಮರ್ಥರಾಗಿದ್ದೇವೆ. ಹಾಗಿರುವಾಗ ಪತಿ-ಪುತ್ರರ ಸೇವೆಯಾದರೋ ದೂರವೇ ಉಳಿಯಿತು. ॥36॥

(ಶ್ಲೋಕ-37)

ಮೂಲಮ್

ಶ್ರೀರ್ಯತ್ಪದಾಂಬುಜರಜಶ್ಚಕಮೇ ತುಲಸ್ಯಾ
ಲಬ್ಧ್ವಾಪಿ ವಕ್ಷಸಿ ಪದಂ ಕಿಲ ಭೃತ್ಯಜುಷ್ಟಮ್ ।
ಯಸ್ಯಾಃ ಸ್ವವೀಕ್ಷಣಕೃತೇನ್ಯಸುರಪ್ರಯಾಸ-
ಸ್ತದ್ವದ್ವಯಂ ಚ ತವ ಪಾದರಜಃ ಪ್ರಪನ್ನಾಃ ॥

ಅನುವಾದ

ನಮ್ಮ ಸ್ವಾಮಿಯೇ! ಯಾವ ಮಹಾಲಕ್ಷ್ಮಿಯ ಕಡೆಗಣ್ಣ ನೋಟದ ಅನುಗ್ರಹಕ್ಕಾಗಿ ಇತರ ದೇವತೆಗಳು ತಪಸ್ಸಿನ ಮೂಲಕವಾಗಿ ಪ್ರಯಾಸಪಡುವರೋ ಅಂತಹ ಲಕ್ಷ್ಮೀದೇವಿಯೂ ನಿನ್ನ ಹೃತ್ಕಮಲದಲ್ಲಿ ನೆಲೆಸಿದ್ದರೂ ಅಲ್ಲಿರುವುದು ಅವಳಿಗೆ ತೃಪ್ತಿಯನ್ನುಂಟು ಮಾಡಲಿಲ್ಲ. ನಿನ್ನ ಸೇವಕರಿಂದ ಸೇವಿಸಲ್ಪಟ್ಟ ನಿನ್ನ ಪಾದ ಧೂಳಿಯನ್ನು ತನ್ನ ಸವತಿಯಾದ ತುಳಸಿದೇವಿಯೊಂದಿಗೆ ಸೇವಿಸಬೇಕೆಂದು ಆಸೆಪಡುತ್ತಿರುವಳು. ಅವಳಂತೆ ನಾವೂ ಕೂಡ ನಿನ್ನ ಆ ಚರಣರಜಕ್ಕೆ ಶರಣು ಹೊಂದಿದ್ದೇವೆ.॥37॥

(ಶ್ಲೋಕ-38)

ಮೂಲಮ್

ತನ್ನಃ ಪ್ರಸೀದ ವೃಜಿನಾರ್ದನ ತೇಂಘ್ರಿಮೂಲಂ
ಪ್ರಾಪ್ತಾ ವಿಸೃಜ್ಯ ವಸತೀಸ್ತ್ವದುಪಾಸನಾಶಾಃ ।
ತ್ವತ್ಸುಂದರಸ್ಮಿತನಿರೀಕ್ಷಣತೀವ್ರಕಾಮ-
ತಪ್ತಾತ್ಮನಾಂ ಪುರುಷಭೂಷಣ ದೇಹಿ ದಾಸ್ಯಮ್ ॥

ಅನುವಾದ

ಪಾಪಹರನೇ! ಪರಮೇಶ್ವರನೇ! ನಿನ್ನ ಸೇವೆಮಾಡಬೇಕೆಂಬ ಆಸೆಯಿಂದ ನಾವು ಮನೆ-ಮಠಗಳನ್ನು, ಪತಿ-ಸುತರನ್ನು, ಬಂಧುಗಳನ್ನು, ಸಕಲ ಸರ್ವಸ್ವವನ್ನೂ ಪರಿತ್ಯಜಿಸಿ ನಿನ್ನ ದಿವ್ಯಪಾದಗಳ ಮೂಲಕ್ಕೆ ಬಂದು ಸೇರಿ ಕೊಂಡುಬಿಟ್ಟಿದ್ದೇವೆ. ಪುರುಷಭೂಷಣನೇ! ನಿನ್ನ ಅಂದವಾದ ಕಿರುನಗೆಯಿಂದಲೂ, ಚೇತೋಹಾರಿಯಾದ ಕಡೆಗಣ್ಣಿನ ನೋಟದಿಂದಲೂ ನಮ್ಮ ಹೃದಯದಲ್ಲಿ ಕಾಮಾಗ್ನಿಯು ಹೊತ್ತಿಕೊಂಡು ಉರಿಯುತ್ತಿದೆ. ಇದರಿಂದ ದಹಿಸುತ್ತಿರುವ ನಮಗೆ ನಿನ್ನ ದಾಸ್ಯವನ್ನು ಅನುಗ್ರಹಿಸಿ ಕಾಪಾಡು. ॥38॥

(ಶ್ಲೋಕ-39)

ಮೂಲಮ್

ವೀಕ್ಷ್ಯಾಲಕಾವೃತಮುಖಂ ತವ ಕುಂಡಲಶ್ರೀ-
ಗಂಡಸ್ಥಲಾಧರಸುಧಂ ಹಸಿತಾವಲೋಕಮ್ ।
ದತ್ತಾಭಯಂ ಚ ಭುಜದಂಡಯುಗಂ ವಿಲೋಕ್ಯ
ವಕ್ಷಃ ಶ್ರಿಯೈಕರಮಣಂ ಚ ಭವಾಮ ದಾಸ್ಯಃ ॥

ಅನುವಾದ

ಪ್ರಿಯತಮನೇ! ನಿನ್ನ ಗುಂಗುರು ಕೂದಲಗಳಿಂದ ಸಮಲಂಕೃತವಾದ ಮುಖಕಮಲವನ್ನೂ, ಫಳ-ಫಳಿಸುವ ಕುಂಡಲಗಳಿಂದ ಬೆಳಗುತ್ತಿರುವ ಕಪೋಲಗಳನ್ನು, ಅಮೃತಕ್ಕೆ ಸಮಾನವಾದ ಅಧರಾಮೃತವನ್ನು ಸುರಿಸುವ ಕೆಂದುಟಿಯನ್ನು, ನಯನಮನೋಹರವಾದ ಕಡೆಗಣ್ಣನ್ನೂ, ಚಿತ್ತಾಪಹಾರಕವಾದ ಕಿರುನಗೆಯನ್ನು, ಶರಣಾಗತರಿಗೆ ಅಭಯದಾನ ಮಾಡುವ ಎರಡು ದುಂಡಾದ ಭುಜಗಳನ್ನೂ, ಅನುಪಮವಾದ ಸೌಂದರ್ಯದಿಂದ ಬೆಳಗುತ್ತಾ ಲಕ್ಷ್ಮಿಗೆ ನಿರಂತರ ಕ್ರೀಡಾಸ್ಥಳವಾದ ನಿನ್ನ ವಕ್ಷಃಸ್ಥಳವನ್ನೂ ನೋಡಿ ನಾವು ದಾಸಿಯರಾಗಿಬಿಟ್ಟಿದ್ದೇವೆ. ॥39॥

(ಶ್ಲೋಕ-40)

ಮೂಲಮ್

ಕಾ ಸ್ಯಂಗ ತೇ ಕಲಪದಾಯತಮೂರ್ಚ್ಛಿತೇನ
ಸಮ್ಮೋಹಿತಾಏರ್ಯಚರಿತಾನ್ನ ಚಲೇತಿಲೋಕ್ಯಾಮ್ ।
ತ್ರೈಲೋಕ್ಯಸೌಭಗಮಿದಂ ಚ ನಿರೀಕ್ಷ್ಯ ರೂಪಂ
ಯದ್ಗೋದ್ವಿಜದ್ರುಮಮೃಗಾಃ ಪುಲಕಾನ್ಯಬಿಭ್ರನ್ ॥

ಅನುವಾದ

ಪ್ರಿಯ ಶ್ಯಾಮಸುಂದರನೇ! ಮೂರು ಲೋಕಗಳಲ್ಲಿಯೂ - ಮಧುರ ಮಧುರ ಪದ-ಸ್ವರಪ್ರಸ್ತಾರದ ವಿವಿಧ ರೀತಿಯ ಮೂರ್ಛನೆಗಳಿಂದ ಕೂಡಿದ ನಿನ್ನ ವಂಶೀಧ್ವನಿಯನ್ನು ಕೇಳಿ, ನಿನ್ನ ಒಂದು ಬಿಂದುವಿನ ಸೌಂದರ್ಯದಿಂದ ಮೂರು ಲೋಕಗಳಿಗೂ ಸೌಂದರ್ಯವನ್ನು ದಾನಮಾಡುವ ನಿನ್ನ ಮನಮೋಹಕ ಸೌಂದರ್ಯದ ಗಣಿಯಾದ ಮೂರ್ತಿಯನ್ನು ನೋಡಿ ಗೋವು, ಪಕ್ಷಿಗಳು, ವೃಕ್ಷಗಳೂ ಹಾಗೂ ಜಿಂಕೆಗಳೂ ರೋಮಾಂಚಿತವಾಗುತ್ತವೋ, ಅಂತಹ ನಿನ್ನನ್ನು ನೋಡಿ, ಯಾವ ಸ್ತ್ರೀಯು ತಾನೆ ಲೋಕ ಲಜ್ಜೆಯನ್ನು ತ್ಯಜಿಸಿ ನಿನ್ನಲ್ಲಿ ಅನುರಕ್ತಳಾಗದೆ ಇರಬಲ್ಲಳು? ॥40॥

(ಶ್ಲೋಕ-41)

ಮೂಲಮ್

ವ್ಯಕ್ತಂ ಭವಾನ್ ವ್ರಜಭಯಾರ್ತಿಹರೋಭಿಜಾತೋ
ದೇವೋ ಯಥಾದಿಪುರುಷಃ ಸುರಲೋಕಗೋಪ್ತಾ ।
ತನ್ನೋ ನಿಧೇಹಿ ಕರಪಂಕಜಮಾರ್ತಬಂಧೋ
ತಪ್ತಸ್ತನೇಷು ಚ ಶಿರಸ್ಸು ಚ ಕಿಂಕರೀಣಾಮ್ ॥

ಅನುವಾದ

ಭಗವಾನ್ ನಾರಾಯಣನು ದೇವತೆಗಳನ್ನು ರಕ್ಷಿಸುವಂತೆಯೇ ನೀನೇ ವ್ರಜಮಂಡಲದ ಭಯ, ದುಃಖಗಳನ್ನು ಇಲ್ಲವಾಗಿಸಲಿಕ್ಕಾಗಿಯೇ ಪ್ರಕಟನಾಗಿರುವೆ, ಎಂಬ ಮಾತು ನಮ್ಮಿಂದ ಮರೆಯಾಗಿಲ್ಲ. ದೀನ, ದುಃಖಿತರ ಮೇಲೆ ನಿನಗೆ ಬಹಳ ಪ್ರೇಮವಿದೆ, ಕೃಪೆಯಿದೆ ಎಂಬುದು ಸ್ಪಷ್ಟವೇ ಆಗಿದೆ. ಪ್ರಿಯತಮನೇ! ನಾವೂ ಕೂಡ ಬಹಳ ದುಃಖಿತರಾಗಿದ್ದೇವೆ. ನಿನ್ನನ್ನು ಸೇರಬೇಕೆಂಬ ಆಕಾಂಕ್ಷೆಯ ಅಗ್ನಿಯು ನಮ್ಮ ವೃಕ್ಷಃಸ್ಥಳವನ್ನು ಸುಡುತ್ತಿದೆ. ನೀನು ಈ ದಾಸಿಯರ ವಕ್ಷಃಸ್ಥಳ ಮತ್ತು ತಲೆಯ ಮೇಲೆ ನಿನ್ನ ಕೋಮಲವಾದ ಕರಕಮಲವನ್ನಿರಿಸಿ ಆ ಅಗ್ನಿಯನ್ನು ಆರಿಸಿಬಿಡು. ನಮ್ಮನ್ನು ತನ್ನವರಾಗಿಸಿಕೊಂಡು ನಮಗೆ ಜೀವನದಾನವನ್ನು ಕರುಣಿಸು ॥41॥

(ಶ್ಲೋಕ-42)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ವಿಕ್ಲವಿತಂ ತಾಸಾಂ ಶ್ರುತ್ವಾ ಯೋಗೇಶ್ವರೇಶ್ವರಃ ।
ಪ್ರಹಸ್ಯ ಸದಯಂ ಗೋಪೀರಾತ್ಮಾ ರಾಮೋಪ್ಯರೀರಮತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸನಕಾದಿ ಯೋಗಿಗಳಿಗೂ, ಶಿವನೇ ಮೊದಲಾದ ಯೋಗೇಶ್ವರರಿಗೂ ಈಶ್ವರನು. ಗೋಪಿಕಾ ಸ್ತ್ರೀಯರ ದುಃಖದಿಂದ ಕೂಡಿದ ಮಾತುಗಳನ್ನು ಕೇಳುತ್ತಲೇ ಅವನ ಹೃದಯ ದಯಾರಸದಿಂದ ತುಂಬಿಹೋಯಿತು. ಅವನು ಆತ್ಮಾರಾಮನಾಗಿ ಇದ್ದರೂ, ಇತರರ ಅಪೇಕ್ಷೆಯಿಲ್ಲದೆ ಆನಂದಪಡುವವನಾಗಿದ್ದರೂ ನಸುನಗುತ್ತಾ ಗೋಪಿಕೆಯರೊಡನೆ ರಾಸಕ್ರೀಡೆಯಾಡಲು ಪ್ರಾರಂಭಿಸಿದನು. ॥42॥

(ಶ್ಲೋಕ-43)

ಮೂಲಮ್

ತಾಭಿಃ ಸಮೇತಾಭಿರುದಾರಚೇಷ್ಟಿತಃ
ಪ್ರಿಯೇಕ್ಷಣೋತ್ಫುಲ್ಲಮುಖೀಭಿರಚ್ಯುತಃ ।
ಉದಾರಹಾಸದ್ವಿಜಕುಂದದೀಧಿತಿ-
ರ್ವ್ಯರೋಚತೈಣಾಂಕ ಇವೋಡುಭಿರ್ವೃತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ತನ್ನೊಡನಿದ್ದ ಗೋಪಿಯರೊಡನೆ ಉದಾರವಾಗಿ ವರ್ತಿಸಲು ತೊಡಗಿದನು. ಅವನು ಮಂದಹಾಸವನ್ನು ಬೀರಿದಾಗ ಮಲ್ಲಿಗೆಯ ಮೊಗ್ಗಿನಂತಹ ಶುಭ್ರವಾದ ಹಲ್ಲುಗಳು ಕಾಣುತ್ತಿದ್ದವು. ಅವನ ಕಟಾಕ್ಷವೀಕ್ಷಣದಿಂದ ಗೋಪಿಕೆಯರ ಮುಖಗಳು ನಿಕಸಿತವಾಗುತ್ತಿದ್ದವು. ನಕ್ಷತ್ರಗಳಿಂದ ಚಂದ್ರನು ಪರಿವೃತನಾಗಿರುವಂತೆ - ಹಿರಿ ಹಿರಿಹಿಗ್ಗುತ್ತಿದ್ದ ಗೋಪಿಕೆಯರಿಂದ ಪರಿವೃತನಾದ ಶ್ರೀಕೃಷ್ಣನು ವಿರಾಜಿಸುತ್ತಿದ್ದನು. ॥43॥

(ಶ್ಲೋಕ-44)

ಮೂಲಮ್

ಉಪಗೀಯಮಾನ ಉದ್ಗಾಯನ್ವನಿತಾಶತಯೂಥಪಃ ।
ಮಾಲಾಂ ಬಿಭ್ರದ್ವೈಜಯಂತೀಂ ವ್ಯಚರನ್ಮಂಡಯನ್ವನಮ್ ॥

ಅನುವಾದ

ನೂರಾರು ಗೋಪಿಕೆಯರ ಗುಂಪಿಗೆ ಸ್ವಾಮಿಯಾದ ಶ್ರೀಕೃಷ್ಣನು ವೈಜಯಂತೀ ವನಮಾಲೆಯನ್ನು ಧರಿಸಿ ವೃಂದಾವನದ ಶೋಭೆಯನ್ನು ಹೆಚ್ಚಿಸುತ್ತಾ ಅಲ್ಲಿ ಗೋಪಿಯರೊಡನೆ ಸಂಚಿರಿಸುತ್ತಿದ್ದನು. ಕೆಲವುವೇಳೆ ಗೋಪಿಯರು ತಮ್ಮ ಪ್ರಿಯತಮನಾದ ಶ್ರೀಕೃಷ್ಣನ ಲೀಲಾಪ್ರಸಂಗಗಳನ್ನು ಹಾಡುತ್ತಿದ್ದರು. ಕೆಲವುವೇಳೆ ಶ್ರೀಕೃಷ್ಣನು ಗೋಪಿಕೆಯರ ಪ್ರೇಮ-ಸೌಂದರ್ಯ ಗೀತೆಗಳನ್ನು ಹಾಡುತ್ತಿದ್ದನು. ॥44॥

(ಶ್ಲೋಕ-45)

ಮೂಲಮ್

ನದ್ಯಾಃ ಪುಲಿನಮಾವಿಶ್ಯ ಗೋಪೀಭಿರ್ಹಿಮವಾಲುಕಮ್ ।
ರೇಮೇ ತತ್ತರಲಾನಂದ ಕುಮುದಾಮೋದವಾಯುನಾ ॥

ಅನುವಾದ

ಇದಾದ ಬಳಿಕ ಭಗವಾನ್ ಶ್ರೀಕೃಷ್ಣನು ಗೋಪಿಕೆಯರೊಂದಿಗೆ ಸ್ಫಟಿಕದಂತೆ ಹೊಳೆಯುತ್ತಿದ್ದ ಯಮುನೆಯ ಪಾವನ ಮರಳಿನಲ್ಲಿ ಪದಾರ್ಪಣ ಮಾಡಿದನು. ಅದು ಯಮುನೆಯ ತಣ್ಣನೆಯ ತರಂಗಗಳ ಸ್ಪರ್ಶದಿಂದ ಅಲುಗಾಡುತ್ತಿದ್ದ ಕಮಲ-ಕನ್ನೈದಿಲೆಗಳ ಪರಮಳದ ಗಾಳಿಯಿಂದ ಕೂಡಿತ್ತು. ಅಂತಹ ಆನಂದಪ್ರದ ಮರಳಿನಲ್ಲಿ ಭಗವಂತನು ಗೋಪಿಯರೊಡನೆ ರಾಸಲೀಲೆಯನ್ನು ಮಾಡಿದನು. ॥45॥

(ಶ್ಲೋಕ-46)

ಮೂಲಮ್

ಬಾಹುಪ್ರಸಾರಪರಿರಂಭಕರಾಲಕೋರು-
ನೀವೀಸ್ತನಾಲಭನನರ್ಮನಖಾಗ್ರಪಾತೈಃ ।
ಕ್ಷ್ವೇಲ್ಯಾವಲೋಕಹಸಿತೈರ್ವ್ರಜಸುಂದರೀಣಾ
ಮುತ್ತಂಭಯನ್ರತಿಪತಿಂ ರಮಯಾಂಚಕಾರ ॥

ಅನುವಾದ

ತೋಳುಗಳನ್ನು ಅಗಲವಾಗಿ ಚಾಚಿ ಅಪ್ಪಿಕೊಳ್ಳುವುದರಿಂದಲೂ, ಕೈಗಳಿಂದ ಮುಂಗುರುಳನ್ನು ನೇವರಿಸುವುದರಿಂದಲೂ, ಗೋಪಿಕಾಸ್ತ್ರೀಯರ ದಿವ್ಯ ಪ್ರೇಮಭಾವವನ್ನು ಕೆರಳಿಸುತ್ತಾ ಶ್ರೀಕೃಷ್ಣನು ಅವರೊಡನೆ ಕ್ರೀಡೆಯಾಡುತ್ತಿದ್ದನು. ॥46॥

(ಶ್ಲೋಕ-47)

ಮೂಲಮ್

ಏವಂ ಭಗವತಃ ಕೃಷ್ಣಾಲ್ಲಬ್ಧಮಾನಾ ಮಹಾತ್ಮನಃ ।
ಆತ್ಮಾನಂ ಮೇನೀರೇ ಸೀಣಾಂ ಮಾನಿನ್ಯೋಭ್ಯಧಿಕಂ ಭುವಿ ॥

ಅನುವಾದ

ಉದಾರ ಶಿರೋಮಣಿ ಭಗವಾನ್ ಶ್ರೀಕೃಷ್ಣನು ಹೀಗೆ ಗೋಪಿಕೆಯರನ್ನು ಸಮ್ಮಾನಿಸಿದಾಗ ಗೋಪಿಕೆಯರ ಮನಸ್ಸಿನಲ್ಲಿ ಜಗತ್ತಿನ ಸಮಸ್ತ ಸ್ತ್ರೀಯರಲ್ಲಿ ನಾವೇ ಸರ್ವಶ್ರೇಷ್ಠರಾಗಿದ್ದೇವೆ, ನಮ್ಮಂತೆಯೆ ಬೇರೆ ಯಾರೂ ಇಲ್ಲವೆಂಬ ಭಾವ ಉದಿಸಿತು. ॥47॥

(ಶ್ಲೋಕ-48)

ಮೂಲಮ್

ತಾಸಾಂ ತತ್ಸೌಭಗಮದಂ ವೀಕ್ಷ್ಯ ಮಾನಂ ಚ ಕೇಶವಃ ।
ಪ್ರಶಮಾಯ ಪ್ರಸಾದಾಯ ತತ್ರೈವಾಂತರಧೀಯತ ॥

ಅನುವಾದ

ಆಗ ಶ್ರೀಕೃಷ್ಣನು ಗೋಪಿಯರ ಸೌಂದರ್ಯಮದವನ್ನೂ ಮತ್ತು ತಾವೇ ಅಧಿಕರೆಂದು ಭಾವಿಸಿ ಗರ್ವಪಡುತ್ತಿರುವುದನ್ನು ಗಮನಿಸಿ, ಅವರ ಮದವನ್ನೂ, ಗರ್ವವನ್ನೂ, ಹೋಗಲಾಡಿಸಿ ಅವರನ್ನು ಅನುಗ್ರಹಿಸುವುದಕ್ಕಾಗಿ ಒಡನೆಯೇ ಅವರ ನಡುವಿನಿಂದ ಅಂತರ್ಧಾನನಾದನು. ॥48॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥29॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಭಗವತೋ ರಾಸಕ್ರೀಡಾವರ್ಣನಂ ನಾಮೈಕೋನತ್ರಿಂಶೋಽಧ್ಯಾಯಃ ॥29॥