[ಇಪ್ಪತ್ತೆಂಟನೆಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನು ವರುಣಲೋಕದಿಂದ ನಂದಗೋಪನನ್ನು ಬಿಡಿಸಿ ತಂದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏಕಾದಶ್ಯಾಂ ನಿರಾಹಾರಃ ಸಮಭ್ಯರ್ಚ್ಯ ಜನಾರ್ದನಮ್ ।
ಸ್ನಾತುಂ ನಂದಸ್ತು ಕಾಲಿಂದ್ಯಾ ದ್ವಾದಶ್ಯಾಂ ಜಲಮಾವಿಶತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ನಂದಗೋಪನು ಕಾರ್ತೀಕ ಶುಕ್ಲ ಏಕಾದಶಿಯ ದಿನ ಉಪವಾಸ ಮಾಡಿ ಭಗವಂತನಾದ ಜನಾರ್ದನನನ್ನು ಪೂಜಿಸಿ, ರಾತ್ರಿಯಲ್ಲಿ ದ್ವಾದಶಿಯು ಪ್ರಾರಂಭವಾಗುತ್ತಲೇ ಸ್ನಾನ ಮಾಡಲು ಯಮುನಾ ನದಿಯಲ್ಲಿ ಪ್ರವೇಶಿಸಿದನು. ॥1॥
(ಶ್ಲೋಕ-2)
ಮೂಲಮ್
ತಂ ಗೃಹೀತ್ವಾನಯದ್ಭೃತ್ಯೋ ವರುಣಸ್ಯಾಸುರೋಂತಿಕಮ್ ।
ಅವಿಜ್ಞಾಯಾಸುರೀಂ ವೇಲಾಂ ಪ್ರವಿಷ್ಟಮುದಕಂ ನಿಶಿ ॥
ಅನುವಾದ
ಇದು ಅಸುರರ ಕಾಲವೆಂದು ನಂದಗೋಪನಿಗೆ ತಿಳಿದಿರಲಿಲ್ಲ. ಅದಕ್ಕಾಗಿ ಅವನು ರಾತ್ರಿಯೇ ಯಮುನಾನದಿಗೆ ಇಳಿದಿದ್ದನು. ಆಗ ವರುಣನ ಸೇವಕನಾದ ಓರ್ವ ಅಸುರನು ನಂದಗೋಪನನ್ನು ಹಿಡಿದುಕೊಂಡು ತನ್ನ ಒಡೆಯನ ಬಳಿಗೆ ಒಯ್ದನು. ॥2॥
(ಶ್ಲೋಕ-3)
ಮೂಲಮ್
ಚುಕ್ರುಶುಸ್ತಮಪಶ್ಯಂತಃ ಕೃಷ್ಣ ರಾಮೇತಿ ಗೋಪಕಾಃ ।
ಭಗವಾಂಸ್ತದುಪಶ್ರುತ್ಯ ಪಿತರಂ ವರುಣಾಹೃತಮ್ ।
ತದಂತಿಕಮ್ ಗತೋ ರಾಜನ್ ಸ್ವಾನಾಮಭಯದೋ ವಿಭುಃ ॥
ಅನುವಾದ
ನಂದಗೋಪನನ್ನು ಕಾಣದೆ ಗೋಪಾಲರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. ಕೃಷ್ಣ! ಬಲರಾಮ! ನಮ್ಮ ರಾಜನಾದ ನಂದಗೋಪನೇ ಕಾಣೆಯಾಗಿದ್ದಾನೆ. ನೀವೇ ನಮಗೆ ಪರಮಾಶ್ರಯರು. ನಂದಗೋಪನನ್ನು ಬೇಗನೇ ಹುಡುಕಿ ತನ್ನಿರಿ, ಎಂದು ಗೋಳಾಡಿದರು. ಗೋಪಾಲಕರ ಮಾತನ್ನು ಕೇಳಿದ ಭಕ್ತಭಯಾಪಹನಾದ, ಸರ್ವಜ್ಞನಾದ ನಂದಕುಮಾರನು ತನ್ನ ತಂದೆಯನ್ನು ವರುಣನ ಸೇವಕನಾರೋ ಕರೆದೊಯ್ದಿರಬಹುದೆಂದು ತಿಳಿದು ಒಡನೆಯೇ ವರುಣನ ಬಳಿಗೆ ಹೋದನು. ॥3॥
(ಶ್ಲೋಕ-4)
ಮೂಲಮ್
ಪ್ರಾಪ್ತಂ ವೀಕ್ಷ್ಯ ಹೃಷೀಕೇಶಂ ಲೋಕಪಾಲಃ ಸಪರ್ಯಯಾ ।
ಮಹತ್ಯಾ ಪೂಜಯಿತ್ವಾಹ ತದ್ದರ್ಶನಮಹೋತ್ಸವಃ ॥
ಅನುವಾದ
ಅಂತರಿಂದ್ರಿಯ-ಬಹಿರಿಂದ್ರಿಯಗಳ ಪ್ರವರ್ತಕನಾದ ಭಗವಾನ್ ಶ್ರೀಕೃಷ್ಣನೇ ತನ್ನ ಲೋಕಕ್ಕೆ ಬಂದಿರುವನೆಂದು ನೋಡಿ ವರುಣನು ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ಸಲ್ಲಿಸಿದನು. ಭಗವಂತನ ದರ್ಶನದಿಂದ ಆನಂದ ಭರಿತನಾಗಿ ಕೈಗಳನ್ನು ಜೋಡಿಸಿಕೊಂಡು ಭಗವಂತನಲ್ಲಿ ನಿವೇದಿಸಿಕೊಂಡನು. ॥4॥
(ಶ್ಲೋಕ-5)
ಮೂಲಮ್ (ವಾಚನಮ್)
ವರುಣ ಉವಾಚ
ಮೂಲಮ್
ಅದ್ಯ ಮೇ ನಿಭೃತೋ ದೇಹೋದ್ಯೈವಾರ್ಥೋಧಿಗತಃ ಪ್ರಭೋ ।
ತ್ವತ್ಪಾದಭಾಜೋ ಭಗವನ್ನವಾಪುಃ ಪಾರಮಧ್ವನಃ ॥
ಅನುವಾದ
ವರುಣನು ಹೇಳಿದನು — ಪ್ರಭು! ನಿನ್ನ ದಿವ್ಯದರ್ಶನದಿಂದ ನನ್ನ ಜನ್ಮವು ಸಾರ್ಥಕವಾಯಿತು. ಪುರುಷಾರ್ಥವು ಈಡೇರಿತು. ಇಂದು ನನಗೆ ನಿನ್ನ ಚರಣಕಮಲಗಳ ಸೇವೆ ಮಾಡುವ ಶುಭಾವಕಾಶವು ದೊರೆಯಿತು. ನಿನ್ನ ಚರಣ ಕಮಲಗಳನ್ನು ಆಶ್ರಯಿಸಿದವರು ಭವಸಾಗರದಿಂದ ಪಾರಾಗಿ ಹೋಗುತ್ತಾರೆ. ॥5॥
(ಶ್ಲೋಕ-6)
ಮೂಲಮ್
ನಮಸ್ತುಭ್ಯಂ ಭಗವತೇ ಬ್ರಹ್ಮಣೇ ಪರಮಾತ್ಮನೇ ।
ನ ಯತ್ರ ಶ್ರೂಯತೇ ಮಾಯಾ ಲೋಕಸೃಷ್ಟಿವಿಕಲ್ಪನಾ ॥
ಅನುವಾದ
ನೀನು ಭಕ್ತರಿಗೆ ಭಗವಂತನೂ, ವೇದಾಂತಿಗಳ ಬ್ರಹ್ಮನೂ, ಯೋಗಿಗಳ ಪರಮಾತ್ಮನೂ ಆಗಿರುವೆ. ವಿಭಿನ್ನ ಲೋಕಗಳನ್ನು ಸೃಷ್ಟಿಸುವ ಮಾಯೆಯು ನಿನ್ನ ಸ್ವರೂಪದಲ್ಲಿ ಇಲ್ಲವೆಂದು ಶ್ರುತಿಗಳು ಹೇಳುತ್ತವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತಿದ್ದೇನೆ. ॥6॥
(ಶ್ಲೋಕ-7)
ಮೂಲಮ್
ಅಜಾನತಾ ಮಾಮಕೇನ ಮೂಢೇನಾಕಾರ್ಯವೇದಿನಾ ।
ಆನೀತೋಯಂ ತವ ಪಿತಾ ತದ್ಭವಾನ್ ಕ್ಷಂತುಮರ್ಹತಿ ॥
ಅನುವಾದ
ಸ್ವಾಮಿ! ನನ್ನ ಈ ಮೂರ್ಖನಾದ ಸೇವಕನು ತನ್ನ ಕರ್ತವ್ಯವೇನೆಂಬುದನ್ನು ಅರಿಯದೆ ನಿನ್ನ ತಂದೆಯನ್ನು ಇಲ್ಲಿಗೆ ಕರೆತಂದಿರುವನು. ಅವನ ಈ ಅಪರಾಧವನ್ನು ದಯಮಾಡಿ ಕ್ಷಮಿಸಿಬಿಡು. ॥7॥
(ಶ್ಲೋಕ-8)
ಮೂಲಮ್
ಮಮಾಪ್ಯನುಗ್ರಹಂ ಕೃಷ್ಣ ಕರ್ತುಮರ್ಹಸ್ಯಶೇಷದೃಕ್ ।
ಗೋವಿಂದ ನೀಯತಾಮೇಷ ಪಿತಾ ತೇ ಪಿತೃವತ್ಸಲ ॥
ಅನುವಾದ
ಗೋವಿಂದ! ನೀನು ನಿನ್ನ ತಂದೆಯನ್ನು ಬಹಳವಾಗಿ ಪ್ರೀತಿಸುತ್ತಿರುವೆ ಎಂಬುದನ್ನು ನಾನು ಬಲ್ಲೆನು. ಇದೋ ನಿನ್ನ ತಂದೆಯು ಇಲ್ಲಿರುವನು. ಇವನನ್ನು ನೀನು ಕೊಂಡುಹೋಗು. ಭಗವಂತ! ನೀನು ಸರ್ವಾಂತರ್ಯಾಮಿಯೂ, ಸರ್ವಸಾಕ್ಷಿಯೂ ಆಗಿರುವೆ. ವಿಶ್ವಮೋಹನ ಕೃಷ್ಣಾ! ಅದಕ್ಕಾಗಿ ನೀನು ದಾಸನಾದ ನನ್ನ ಮೇಲೆ ಕೃಪೆದೋರು. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಪ್ರಸಾದಿತಃ ಕೃಷ್ಣೋ ಭಗವಾನೀಶ್ವರೇಶ್ವರಃ ।
ಆದಾಯಾಗಾತ್ಸ್ವಪಿತರಂ ಬಂಧೂನಾಂ ಚಾವಹನ್ಮುದಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬ್ರಹ್ಮಾದಿಗಳಿಗೂ ಈಶ್ವರನಾದ ಭಗವಾನ್ ಶ್ರೀಕೃಷ್ಣನನ್ನು ಲೋಕಪಾಲ ವರುಣನು ಹೀಗೆ ಸ್ತುತಿಸಿ ಪ್ರಸನ್ನಗೊಳಿಸಿದನು. ಅನಂತರ ಭಗವಂತನು ತನ್ನ ತಂದೆಯಾದ ನಂದರಾಜನನ್ನು ಕರೆದುಕೊಂಡು ವ್ರಜಕ್ಕೆ ಬಂದು ಬಂಧುಗಳೆಲ್ಲರನ್ನು ಆನಂದಗೊಳಿಸಿದನು. ॥9॥
(ಶ್ಲೋಕ-10)
ಮೂಲಮ್
ನಂದಸ್ತ್ವತೀಂದ್ರಿಯಂ ದೃಷ್ಟ್ವಾ ಲೋಕಪಾಲಮಹೋದಯಮ್ ।
ಕೃಷ್ಣೇ ಚ ಸನ್ನತಿಂ ತೇಷಾಂ ಜ್ಞಾತಿಭ್ಯೋ ವಿಸ್ಮಿತೋಬ್ರವೀತ್ ॥
ಅನುವಾದ
ಲೋಕಪಾಲಕನಾದ ವರುಣನ ಇಂದ್ರಿಯಾತೀತವಾದ ಐಶ್ವರ್ಯವನ್ನೂ, ಸುಖಸಂಪತ್ತುಗಳನ್ನೂ, ತನ್ನ ಮಗನಾದ ಶ್ರೀಕೃಷ್ಣನಿಗೆ ಅಲ್ಲಿಯ ನಿವಾಸಿಗಳು ನಮಸ್ಕರಿಸಿದ್ದನ್ನೂ ಕಂಡ ನಂದಗೋಪನು ಆಶ್ಚರ್ಯಚಕಿತನಾಗಿ, ತನ್ನ ಬಂಧುಗಳಿಗೆ ತಾನು ಕಂಡದ್ದನ್ನು ವಿವರಿಸಿ ಹೇಳಿದನು. ॥10॥
(ಶ್ಲೋಕ-11)
ಮೂಲಮ್
ತೇ ತ್ವೌತ್ಸುಕ್ಯಧಿಯೋ ರಾಜನ್ಮತ್ವಾ ಗೋಪಾಸ್ತಮೀಶ್ವರಮ್ ।
ಅಪಿ ನಃ ಸ್ವಗತಿಂ ಸೂಕ್ಷ್ಮಾಮುಪಾಧಾಸ್ಯದಧೀಶ್ವರಃ ॥
ಅನುವಾದ
ಪರೀಕ್ಷಿತನೇ! ಇದನ್ನು ಕೇಳಿದ ಗೋಪರು ಶ್ರೀಕೃಷ್ಣನನ್ನು ಸರ್ವೇಶ್ವರನೆಂದೇ ನಿಶ್ಚಯಿಸಿದರು. ತಮಗೂ ಕೂಡ ಭಕ್ತಿಪ್ರೇಮಿಯಾದ, ಜಗದೀಶ್ವರನಾದ ಶ್ರೀಕೃಷ್ಣನು ಅವನ ಅನನ್ಯ ಭಕ್ತರಿಗೆ ಮಾತ್ರವೇ ಪ್ರವೇಶಿಸಲು ಸಾಧ್ಯವಾದ ಮಾಯಾತೀತವಾದ ತನ್ನ ಪರಮ ಧಾಮವನ್ನು ತೋರಿಸಿಯಾನೆಂಬ ಉತ್ಸುಕತೆ ಉಂಟಾಯಿತು. ॥11॥
(ಶ್ಲೋಕ-12)
ಮೂಲಮ್
ಇತಿ ಸ್ವಾನಾಂ ಸ ಭಗವಾನ್ವಿಜ್ಞಾಯಾಖಿಲದೃಕ್ ಸ್ವಯಮ್ ।
ಸಂಕಲ್ಪಸಿದ್ಧಯೇ ತೇಷಾಂ ಕೃಪಯೈತದಚಿಂತಯತ್ ॥
ಅನುವಾದ
ಪರೀಕ್ಷಿತನೇ! ಸರ್ವದರ್ಶಿಯಾದ ಭಗವಾನ್ ಶ್ರೀಕೃಷ್ಣನಿಗೆ ಗೋಪಾಲಕರ ಆಶಯವು ತಿಳಿದುಹೋಯಿತು. ದಯಾಮಯನಾದ ಶ್ರೀಕೃಷ್ಣನು ತನ್ನ ಪ್ರಿಯ ಭಕ್ತರ ಸಂಕಲ್ಪವನ್ನು ಹೇಗೆ ಈಡೇರಿಸುವುದೆಂದು ಯೋಚಿಸತೊಡಗಿದನು. ॥12॥
(ಶ್ಲೋಕ-13)
ಮೂಲಮ್
ಜನೋ ವೈ ಲೋಕ ಏತಸ್ಮಿನ್ನವಿದ್ಯಾಕಾಮಕರ್ಮಭಿಃ ।
ಉಚ್ಚಾವಚಾಸು ಗತಿಷು ನ ವೇದ ಸ್ವಾಂ ಗತಿಂ ಭ್ರಮನ್ ॥
ಅನುವಾದ
ಈ ಪ್ರಪಂಚದಲ್ಲಿ ಜೀವರು ಅಜ್ಞಾನವಶದಿಂದ ದೇಹವನ್ನೇ ಆತ್ಮನೆಂದು ಭಾವಿಸಿಕೊಂಡು ಬಗೆ-ಬಗೆಯ ಕಾಮನೆಗಳನ್ನಿಟ್ಟುಕೊಂಡು ಅವುಗಳ ಪ್ರಾಪ್ತಿಗಾಗಿ ನಾನಾ ವಿಧವಾದ ಕರ್ಮಗಳನ್ನು ಮಾಡುತ್ತಾ ಇರುತ್ತಾರೆ. ಆ ಕರ್ಮಗಳ ಫಲರೂಪವಾಗಿ ದೇವ ಮನುಷ್ಯ-ಪಶು-ಪಕ್ಷಿ ಮೊದಲಾದ ಉಚ್ಚ-ನೀಚ ಯೋನಿಗಳಲ್ಲಿ ಅಲೆಯುತ್ತಾ, ತಮ್ಮ ನಿಜನಾದ ಆತ್ಮಸ್ವರೂಪದ ಗತಿಯನ್ನು ತಿಳಿಯುವುದೇ ಇಲ್ಲ. ॥13॥
(ಶ್ಲೋಕ-14)
ಮೂಲಮ್
ಇತಿ ಸಂಚಿಂತ್ಯ ಭಗವಾನ್ಮಹಾಕಾರುಣಿಕೋ ಹರಿಃ ।
ದರ್ಶಯಾಮಾಸ ಲೋಕಂ ಸ್ವಂ ಗೋಪಾನಾಂ ತಮಸಃ ಪರಮ್ ॥
ಅನುವಾದ
ಹೀಗೆ ಯೋಚಿಸಿದ ಪರಮ ಕಾರುಣಿಕನಾದ ಶ್ರೀಹರಿಯು ತನ್ನ ಪ್ರಿಯಭಕ್ತರಾದ ಗೋಪರಿಗೆ ಮಾಯಾಂಧಕಾರದಿಂದ ಅತೀತವಾದ ತನ್ನ ದಿವ್ಯ ಪರಂಧಾಮವನ್ನು ತೋರಿಸಿದನು. ॥14॥
(ಶ್ಲೋಕ-15)
ಮೂಲಮ್
ಸತ್ಯಂ ಜ್ಞಾನಮನಂತಂ ಯದ್ಬ್ರಹ್ಮ ಜ್ಯೋತಿಃ ಸನಾತನಮ್ ।
ಯದ್ಧಿ ಪಶ್ಯಂತಿ ಮುನಯೋ ಗುಣಾಪಾಯೇ ಸಮಾಹಿತಾಃ ॥
ಅನುವಾದ
ಭಗವಂತನು ಮೊಟ್ಟಮೊದಲಿಗೆ ಸಮಾಧಿನಿಷ್ಠರಾದ, ಗುಣಾತೀತರಾದ ಮಹಾಯೋಗಿಗಳು ತಮ್ಮ ಹೃತ್ಕಮಲದಲ್ಲಿ ಸತ್ಯಸ್ವರೂಪನೂ, ಜ್ಞಾನಸ್ವರೂಪನೂ, ಅನಂತನೂ, ಸನಾತನನೂ ಆದ ಪರಂಜ್ಯೋತಿಯನ್ನು ಕಂಡುಕೊಳ್ಳುವರೋ, ಅಂತಹ ದಿವ್ಯಜ್ಯೋತಿಃಸ್ವರೂಪನಾದ ಬ್ರಹ್ಮನ ಸಾಕ್ಷಾತ್ಕಾರವನ್ನು ಗೋಪರಿಗೆ ಮಾಡಿಸಿದನು. ॥15॥
(ಶ್ಲೋಕ-16)
ಮೂಲಮ್
ತೇ ತು ಬ್ರಹ್ಮಹ್ರದಂ ನೀತಾ ಮಗ್ನಾಃ ಕೃಷ್ಣೇನ ಚೋದ್ಧೃತಾಃ ।
ದದೃಶುರ್ಬ್ರಹ್ಮಣೋ ಲೋಕಂ ಯತ್ರಾಕ್ರೂರೋಧ್ಯಗಾತ್ಪುರಾ ॥
ಅನುವಾದ
ತಾನು ಮುಂದೆ ಅಕ್ರೂರನಿಗೆ ತನ್ನ ನಿಜರೂಪವನ್ನು ತೋರಿಸಲಿರುವ ಬ್ರಹ್ಮಹ್ರದವೆಂಬ ದಿವ್ಯ ಜಲಾಶಯಕ್ಕೆ ಶ್ರೀಕೃಷ್ಣನು ಗೋಪರೆಲ್ಲರನ್ನು ಕರೆದೊಯ್ದು ಅವರೆಲ್ಲರನ್ನೂ ಅಲ್ಲಿ ಮುಳುಗಿಸಿ ಅವರೆಲ್ಲರೂ ಬ್ರಹ್ಮಾನಂದದಲ್ಲಿ ಮೈಮರೆತು ಹೋಗಲು, ಅವರನ್ನು ಹೊರಕ್ಕೆ ತಂದು ಎಚ್ಚರಿಸಿ ಭಗವಂತನು ತನ್ನ ಪರಮಧಾಮದ ದರ್ಶನವನ್ನು ಮಾಡಿಸಿದನು. ॥16॥
ಮೂಲಮ್
(ಶ್ಲೋಕ-17)
ನಂದಾದಯಸ್ತು ತಂ ದೃಷ್ಟ್ವಾ ಪರಮಾನಂದನಿರ್ವೃತಾಃ ।
ಕೃಷ್ಣಂ ಚ ತತ್ರಚ್ಛಂದೋಭಿಃ ಸ್ತೂಯಮಾನಂ ಸುವಿಸ್ಮಿತಾಃ ॥
ಅನುವಾದ
ಭಗವತ್ಸ್ವರೂಪ ಆ ದಿವ್ಯಲೋಕವನ್ನು ನೋಡಿ ನಂದಗೋಪನೇ ಮುಂತಾದ ಗೋಪರು ಪರಮಾನಂದ ಭರಿತರಾದರು. ಅಲ್ಲಿ ಸಕಲ ವೇದಗಳು ಮೂರ್ತಿಮಂತರಾಗಿ ಭಗವಾನ್ ಶ್ರೀಕೃಷ್ಣನನ್ನು ಸ್ತುತಿಸುತ್ತಿರುವುದನ್ನು ನೋಡಿ ಅವರೆಲ್ಲರೂ ಪರಮವಿಸ್ಮಿತರಾದರು. ॥17॥
ಅನುವಾದ (ಸಮಾಪ್ತಿಃ)
ಇಪ್ಪತ್ತೆಂಟನೆಯ ಅಧ್ಯಾಯವು ಮುಗಿಯಿತು. ॥28॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಅಷ್ಟಾವಿಂಶೋಽಧ್ಯಾಯಃ ॥28॥