[ಹದಿನೆಂಟನೆಯ ಅಧ್ಯಾಯ]
ಭಾಗಸೂಚನಾ
ಪ್ರಲಂಬಾಸುರ ಉದ್ಧಾರ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥ ಕೃಷ್ಣಃ ಪರಿವೃತೋ ಜ್ಞಾತಿಭಿರ್ಮುದಿತಾತ್ಮಭಿಃ ।
ಅನುಗೀಯಮಾನೋ ನ್ಯವಿಶದ್ವ್ರಜಂ ಗೋಕುಲಮಂಡಿತಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಆನಂದತುಂದಿಲರಾದ ಜ್ಞಾತಿಬಾಂಧವರಿಂದ ಸುತ್ತುವರಿಯಲ್ಪಟ್ಟ ಶ್ರೀಕೃಷ್ಣನು ತನ್ನ ಅನುಯಾಯಿಗಳಿಂದ ಸ್ತುತಿಸಲ್ಪಡುತ್ತಾ ಗೋವುಗಳ ಸಮೂಹದಿಂದ ಸಮಾಲಂಕೃತವಾದ ಗೊಲ್ಲರಹಳ್ಳಿಯನ್ನು ಪ್ರವೇಶಿಸಿದನು. ॥1॥
(ಶ್ಲೋಕ-2)
ಮೂಲಮ್
ವ್ರಜೇ ವಿಕ್ರೀಡತೋರೇವಂ ಗೋಪಾಲಚ್ಛದ್ಮಮಾಯಯಾ ।
ಗ್ರೀಷ್ಮೋ ನಾಮರ್ತುರಭವನ್ನಾತಿಪ್ರೇಯಾನ್ಶರೀರಿಣಾಮ್ ॥
ಅನುವಾದ
ಹೀಗೆ ತನ್ನ ಯೋಗಮಾಯೆಯಿಂದ ಗೋಪಾಲನಂತೆ ವೇಷವನ್ನು ತೊಟ್ಟು ರಾಮ-ಕೃಷ್ಣರು ವ್ರಜದಲ್ಲಿ ಕ್ರೀಡಿಸುತ್ತಿದ್ದರು. ಆಗ ಗ್ರೀಷ್ಮಋತುವು ಬಂದಿತ್ತು. ಇದು ಶರೀರ ಧಾರಿಗಳಗೆ ಅಷ್ಟು ಪ್ರಿಯವಾಗಿರಲಿಲ್ಲ. ॥2॥
(ಶ್ಲೋಕ-3)
ಮೂಲಮ್
ಸ ಚ ವೃಂದಾವನಗುಣೈರ್ವಸಂತ ಇವ ಲಕ್ಷಿತಃ ।
ಯತ್ರಾಸ್ತೇ ಭಗವಾನ್ಸಾಕ್ಷಾದ್ರಾಮೇಣ ಸಹ ಕೇಶವಃ ॥
ಅನುವಾದ
ಆದರೆ ವೃಂದಾವನದ ಸ್ವಾಭಾವಿಕ ಗುಣಗಳಿಂದ ಅಲ್ಲಿ ವಸಂತ ಋತುವಿನದೇ ಲಕ್ಷಣಗಳಿದ್ದವು. ಭಗವಾನ್ ಶ್ಯಾಮಸುಂದರನೂ, ಬಲರಾಮನೂ ಅಲ್ಲಿ ವಾಸಿಸುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ॥3॥
(ಶ್ಲೋಕ-4)
ಮೂಲಮ್
ಯತ್ರ ನಿರ್ಝರನಿರ್ಹ್ರಾದನಿವೃತ್ತಸ್ವನಝಿಲ್ಲಿಕಮ್ ।
ಶಶ್ವತ್ತಚ್ಛೀಕರರ್ಜೀಷದ್ರುಮಮಂಡಲಮಂಡಿತಮ್ ॥
ಅನುವಾದ
ಜೀರುಂಡೆಗಳ ಕರ್ಕಶ ಧ್ವನಿಯು ಅಲ್ಲಿ ಹರಿಯುತ್ತಿದ್ದ ನದಿಯ ಮಂಜುಳ ಧ್ವನಿಯಿಂದ ಅಡಗಿ ಹೋಗಿತ್ತು. ನದಿಗಳ ಪ್ರವಾಹದ ತುಂತುರುಗಳಿಂದ ನೆನೆಸಲ್ಪಟ್ಟು ಹಸಿರಾದ ವೃಕ್ಷಗಳ ಗುಂಪಿನಿಂದ ವೃಂದಾವನವು ಸಮಾಲಂಕೃತವಾಗಿತ್ತು. ॥4॥
(ಶ್ಲೋಕ-5)
ಮೂಲಮ್
ಸರಿತ್ಸರಃ ಪ್ರಸ್ರವಣೋರ್ಮಿವಾಯುನಾ
ಕಲ್ಹಾರಕಂಜೋತ್ಪಲರೇಣುಹಾರಿಣಾ ।
ನ ವಿದ್ಯತೇ ಯತ್ರ ವನೌಕಸಾಂ ದವೋ
ನಿದಾಘಹ್ನ್ಯರ್ಕಭವೋತಿಶಾದ್ವಲೇ ॥
ಅನುವಾದ
ನೋಡಿದಲ್ಲೆಲ್ಲ ಹಚ್ಚ ಹಸಿರಾದ ಹುಲ್ಲಿನಿಂದಾಗಿ ಭೂಪ್ರದೇಶವೆಲ್ಲ ಹಸಿರು ಹಾಸಿಗೆ ಹಾಸಿದಂತಿತ್ತು. ಅಲ್ಲಿನ ತಂಗಾಳಿಯು ನದಿ, ಸರೋವರ, ಗಿರಿ ನದಿಗಳ ಅಲೆಗಳ ಮೂಲಕವಾಗಿ ಬೀಸುತ್ತಾ ಸೌಗಂಧಿಕ, ಕಮಲ, ಕನ್ನೈದಿಲೆಗಳ ಸುಗಂಧಮಯವಾದ ಧೂಳಿಯನ್ನು ಹೊತ್ತುತಂದು ವೃಂದಾವನವನ್ನೇ ಸುಗಂಧಮಯವಾಗಿಯೂ, ಶೀತಲವಾಗಿಯೂ ಮಾಡುತ್ತಿದ್ದಿತು. ಇಲ್ಲಿ ವಾಸಮಾಡುವವರಿಗೆ ಕಾಡ್ಗಿಚ್ಚಿನ ಬೇಗೆಯಾಗಲೀ, ಗ್ರೀಷ್ಮ ಸೂರ್ಯನ ತಾಪವಾಗಲೀ ಇರಲಿಲ್ಲ. ॥5॥
(ಶ್ಲೋಕ-6)
ಮೂಲಮ್
ಅಗಾಧತೋಯಹ್ರದಿನೀತಟೋರ್ಮಿಭಿಃ
ದ್ರವತ್ಪುರೀಷ್ಯಾಃ ಪುಲಿನೈಃ ಸಮಂತತಃ ।
ನ ಯತ್ರ ಚಂಡಾಂಶುಕರಾ ವಿಷೋಲ್ಬಣಾ
ಭುವೋ ರಸಂ ಶಾದ್ವಲಿತಂ ಚ ಗೃಹ್ಣತೇ ॥
ಅನುವಾದ
ನದಿಗಳಲ್ಲಿ ಆಳವಾದ ನೀರು ತುಂಬಿದ್ದು, ಎತ್ತರವಾಗಿ ಎದ್ದು ಬರುತ್ತಿದ್ದ ಅಲೆಗಳು ದಡದಲ್ಲಿದ್ದ ಮರಳು ದಿಣ್ಣೆಗಳಿಗೆ ರಭಸದಿಂದ ಅಪ್ಪಳಿಸುತ್ತಿದ್ದು ಅವನ್ನು ಸ್ವಚ್ಛಗೊಳಿಸುತ್ತಿದ್ದವು. ಅದರಿಂದಾಗಿ ಸುತ್ತಲಿನ ಭೂಮಿಯು ಒದ್ದೆಯಾಗುತ್ತಿತ್ತು. ಸೂರ್ಯನ ಅತ್ಯಂತ ಉಗ್ರಕಿರಣಗಳೂ ಅವನ್ನು ಒಣಗಿಸಲಾಗದೆ ಹಚ್ಚ ಹಸುರಾಗಿಯೇ ಇರುತ್ತಿತ್ತು. ॥6॥
(ಶ್ಲೋಕ-7)
ಮೂಲಮ್
ವನಂ ಕುಸುಮಿತಂ ಶ್ರೀಮನ್ನದಚ್ಚಿತ್ರಮೃಗದ್ವಿಜಮ್ ।
ಗಾಯನ್ಮಯೂರಭ್ರಮರಂ ಕೂಜತ್ಕೋಕಿಲಸಾರಸಮ್ ॥
ಅನುವಾದ
ಆ ವೃಂದಾವನದಲ್ಲಿ ವೃಕ್ಷಗಳ ಸಾಲು-ಸಾಲುಗಳು ಹೂವುಗಳಿಂದ ಸೊಂಪಾಗಿ ಸಂಪತ್ ಭರಿತವಾಗಿತ್ತು. ನೋಡಿದಲ್ಲೆಲ್ಲ ಸೌಂದರ್ಯವೇ ಮೂರ್ತಿಭವಿಸಿದಂತಿತ್ತು. ಕೆಲವೆಡೆ ಬಣ್ಣ-ಬಣ್ಣದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದರೆ, ಕೆಲವೆಡೆ ಜಿಂಕೆಗಳು ನೆಗೆಯುತ್ತಾ ಓಡುತ್ತಿದ್ದವು. ಕೆಲವುಕಡೆ ನವಿಲುಗಳು ಜಾಗರವಾಡುತ್ತಿದ್ದರೆ, ದುಂಬಿಗಳು ಝೇಂಕರಿಸುತ್ತಿದ್ದವು. ಕೆಲವೆಡೆ ಕೋಗಿಲೆ ಸಾರಸಪಕ್ಷಿಗಳು ಸುಮಧುರವಾಗಿ ಕೂಗುತ್ತಿದ್ದವು. ॥7॥
(ಶ್ಲೋಕ-8)
ಮೂಲಮ್
ಕ್ರೀಡಿಷ್ಯಮಾಣಸ್ತತ್ಕೃಷ್ಣೋ ಭಗವಾನ್ಬಲಸಂಯುತಃ ।
ವೇಣುಂ ವಿರಣಯನ್ಗೋಪೈರ್ಗೋಧನೈಃ ಸಂವೃತೋವಿಶತ್ ॥
ಅನುವಾದ
ಅಂತಹ ಸುಂದರ ವನವನ್ನು ನೋಡಿ ಶ್ಯಾಮಸುಂದರ ಶ್ರೀಕೃಷ್ಣನು ಮತ್ತು ಗೌರಸುಂದರ ಬಲರಾಮನು ಆ ವನದಲ್ಲಿ, ವಿಹರಿಸಲು ಮನ ಮಾಡಿದರು. ಮುಂದೆ-ಮುಂದೆ ಹಸುಗಳು ಹೋಗುತ್ತಿದ್ದವು, ಹಿಂದೆ-ಹಿಂದೆ ಗೋಪಬಾಲಕರು ಮತ್ತು ನಡುವೆ ಅಣ್ಣನೊಡನೆ ಮಾರಲಿಯನ್ನು ನುಡಿಸುತ್ತಾ ಶ್ರೀಕೃಷ್ಣನು ಹೋಗುತ್ತಿದ್ದನು. ॥8॥
(ಶ್ಲೋಕ-9)
ಮೂಲಮ್
ಪ್ರವಾಲಬರ್ಹಸ್ತಬಕಸ್ರಗ್ಧಾತುಕೃತಭೂಷಣಾಃ ।
ರಾಮಕೃಷ್ಣಾದಯೋ ಗೋಪಾ ನನೃತುರ್ಯುಯುಧುರ್ಜಗುಃ ॥
ಅನುವಾದ
ರಾಮ-ಶ್ಯಾಮರೂ ಮತ್ತು ಗೋಪಾಲ ಬಾಲಕರು ಹೊಚ್ಚ ಹೊಸದಾದ ಚಿಗುರುಗಳಿಂದಲೂ, ನವಿಲುಗರಿಗಳಿಂದಲೂ, ವಿಕಸಿತ ಸುಗಂಧ ಪುಷ್ಪಗಳಿಂದಲೂ, ಬಣ್ಣ-ಬಣ್ಣದ ಹರಿದಳ, ಮಣಿಶಿಲೆ, ಸಿಂಧೂರವೇ ಮೊದಲಾದ ಗೈರಿಕ ಧಾತುಗಳಿಂದಲೂ ತಮ್ಮ ಶರೀರಗಳನ್ನು ನಾನಾರೀತಿಯಿಂದ ಸಿಂಗರಿಸಿಕೊಂಡರು. ಅವರಲ್ಲಿ ಕೆಲವರು ಆನಂದ ಮಗ್ನರಾಗಿ ನರ್ತಿಸಲು ತೊಡಗಿದರು. ಕೆಲವರು ತೊಡೆಗಳನ್ನು ತಟ್ಟಿಕೊಂಡು ಕುಸ್ತಿಯಾಡತೊಡಗಿದರು. ಕೆಲವರು ಹಾಡಲು ಪ್ರಾರಂಭಿಸಿದರು. ॥9॥
(ಶ್ಲೋಕ-10)
ಮೂಲಮ್
ಕೃಷ್ಣಸ್ಯ ನೃತ್ಯತಃ ಕೇಚಿಜ್ಜಗುಃ ಕೇಚಿದವಾದಯನ್ ।
ವೇಣುಪಾಣಿತಲೈಃ ಶೃಂಗೈಃ ಪ್ರಶಶಂಸುರಥಾಪರೇ ॥
ಅನುವಾದ
ಶ್ರೀಕೃಷ್ಣನು ನರ್ತಿಸುವಾಗ ಕೆಲವು ಗೊಲ್ಲರು ಹಾಡುವರು, ಕೆಲವರು ಕೊಳಲನ್ನು ನುಡಿಸುವರು, ಕೆಲವರು ಕೈಗಳಿಂದ ಚಪ್ಪಾಳೆತಟ್ಟಿ ತಾಳ ಹಾಕುತ್ತಿದ್ದರು. ಕೆಲವರು ಕೊಂಬುಗಳನ್ನೂದುವರು, ಉಳಿದವರು ‘ಭಲೇ ಕೃಷ್ಣ!’ ಎನ್ನುತ್ತಾ ನೃತ್ಯವನ್ನು ಪ್ರೋತ್ಸಾಹಿಸುವರು. ॥10॥
(ಶ್ಲೋಕ-11)
ಮೂಲಮ್
ಗೋಪಜಾತಿಪ್ರತಿಚ್ಛನ್ನೌ ದೇವಾ ಗೋಪಾಲರೂಪಿಣಃ ।
ಈಡಿರೇ ಕೃಷ್ಣರಾವೌ ಚ ನಟಾ ಇವ ನಟಂ ನೃಪ ॥
ಅನುವಾದ
ಪರೀಕ್ಷಿದ್ರಾಜನೇ! ಆ ಸಮಯದಲ್ಲಿ ನಟರು ತಮ್ಮ ನಾಯಕನನ್ನು ಪ್ರಶಂಸೆಮಾಡುವಂತೆ- ಗೋಪಾಲಕರ ವೇಷಗಳನ್ನು ಧರಿಸಿದ್ದ ದೇವತೆಗಳು ಗೊಲ್ಲರ ಜಾತಿಯಲ್ಲಿ ಜನ್ಮತಳೆದು ತಮ್ಮ ನಿಜ ಸ್ವರೂಪವನ್ನು ಮರೆಸಿಕೊಂಡಿದ್ದ ರಾಮ-ಶ್ಯಾಮರನ್ನು ಸ್ತೋತ್ರಮಾಡ ತೊಡಗಿದರು. ॥11॥
(ಶ್ಲೋಕ-12)
ಮೂಲಮ್
ಭ್ರಾಮಣೈರ್ಲಂಘನೈಃ ಕ್ಷೇಪೈರಾಸ್ಫೋಟನವಿಕರ್ಷಣೈಃ ।
ಚಿಕ್ರೀಡತುರ್ನಿಯುದ್ಧೇನ ಕಾಕಪಕ್ಷಧರೌ ಕ್ವಚಿತ್ ॥
ಅನುವಾದ
ಕಾಕಪಕ್ಷಧರರಾದ* ರಾಮಕೃಷ್ಣರು ಒಮ್ಮೆ ಪರಸ್ಪರ ಕೈಗಳನ್ನು ಹಿಡಿದುಕೊಂಡು ಕುಂಬಾರನ ಚಕ್ರದಂತೆ ಗರಗರನೆ ಸುತ್ತುವರು. ಅಪ್ಪಾಲೆ ತಿಪ್ಪಾಲೆ ಆಟವನ್ನು ಆಡುವರು. ಮತ್ತೊಮ್ಮೆ ಎತ್ತರಕ್ಕೂ ಮತ್ತು ದೂರಕ್ಕೂ ನೆಗೆಯುವರು. ಕೆಲವೊಮ್ಮೆ ವೃಕ್ಷಗಳಲ್ಲಿರುತ್ತಿದ್ದ ಹಣ್ಣುಗಳಿಗೆ ಕವಣೆ ಕಲ್ಲಿನಿಂದ ಹೊಡೆಯುವರು. ಪರಸ್ಪರ ಗುದ್ದಾಡುವರು. ಎರಡು ಗುಂಪಿನವರು ಹಗ್ಗವನ್ನು ಎಳೆದಾಡುತ್ತಾ ಹಗ್ಗಜಗ್ಗಾಟ ಆಟವಾಡುವರು. ಹೀಗೆ ಗೋಪಬಾಲಕರಿಂದ ಕೂಡಿದ ರಾಮ-ಶ್ಯಾಮರು ನಾನಾ ವಿಧವಾದ ಆಟಗಳನ್ನಾಡುತ್ತಿದ್ದರು. ॥12॥
ಟಿಪ್ಪನೀ
- ಕಾಕ ಪಕ್ಷ - ಬಾಲಕರ ಕಿವಿಗಳ ಪಕ್ಕದ ಕೆನ್ನೆಗಳ ಮೇಲಿರುವ ಕೂದಲು; ತಲೆಯ ಪಕ್ಕದ ಕೂದಲು, ಕಾಕಪಕ್ಷಧರರೆಂದರೆ ಚಿಕ್ಕ ವಯಸ್ಸಿನವರೂ ಎಂದರ್ಥವಿದೆ.
(ಶ್ಲೋಕ-13)
ಮೂಲಮ್
ಕ್ವಚಿನ್ನೃತ್ಯತ್ಸು ಚಾನ್ಯೇಷು ಗಾಯಕೌ ವಾದಕೌ ಸ್ವಯಮ್ ।
ಶಶಂಸತುರ್ಮಹಾರಾಜ ಸಾಧು ಸಾಧ್ವಿತಿ ವಾದಿನೌ ॥
ಅನುವಾದ
ಕೆಲವು ಸಮಯಗಳಲ್ಲಿ ಗೋಪಬಾಲಕರು ನೃತ್ಯವನ್ನಾಡುವಾಗ ರಾಮ-ಶ್ಯಾಮರು ಹಾಡುವರು, ಕೊಳಲನ್ನೂದುವರು, ಕೊಂಬು ಬಾರಿಸುವರು, ನಡು-ನಡುವೆ ಭಲೇ! ಭಲೇ! ಎಂದು ಪ್ರಶಂಸೆಯನ್ನು ಮಾಡುವರು. ॥13॥
(ಶ್ಲೋಕ-14)
ಮೂಲಮ್
ಕ್ವಚಿದ್ಬಿಲ್ವೈಃ ಕ್ವಚಿತ್ಕುಂಭೈಃ ಕ್ವ ಚಾಮಲಕಮುಷ್ಟಿಭಿಃ ।
ಅಸ್ಪೃಶ್ಯನೇತ್ರಬಂಧಾದ್ಯೈಃ ಕ್ವಚಿನ್ಮೃಗಖಗೇಹಯಾ ॥
ಅನುವಾದ
ಗೋಪಬಾಲಕರಿಂದ ಪರಿವೃತರಾದ ರಾಮ-ಕೃಷ್ಣರು ಕೆಲವು ವೇಳೆ ಬೇಲದಕಾಯಿಗಳಿಂದಲೂ ಬಿಲ್ವದ ಕಾಯಿಗಳಿಂದಲೂ, ನೆಲ್ಲಿಕಾಯಿಗಳಿಂದಲೂ ಚೆಂಡಿನ ಆಡಗಳನ್ನಾಡುವರು. ಕೆಲವೊಮ್ಮೆ ಗೋಪಬಾಲಕರ ಕಣ್ಣುಗಳಿಗೆ ಬಟ್ಟೆಕಟ್ಟಿ ಕಣ್ಣುಮುಚ್ಚಾಲೆ ಆಟವನ್ನು ಆಡುವರು. ಕೆಲವು ವೇಳೆ ಮೃಗಗಳಂತೆಯೂ, ಪಕ್ಷಿಗಳಂತೆಯೂ ಕೂಗುವರು. ॥14॥
(ಶ್ಲೋಕ-15)
ಮೂಲಮ್
ಕ್ವಚಿಚ್ಚ ದರ್ದುರಪ್ಲಾವೈರ್ವಿವಿಧೈರುಪಹಾಸಕೈಃ ।
ಕದಾಚಿತ್ಸ್ಪಂದೋಲಿಕಯಾ ಕರ್ಹಿಚಿನ್ನೃಪಚೇಷ್ಟಯಾ ॥
ಅನುವಾದ
ಕೆಲವು ಸಲ ಕಪ್ಪೆಗಳಂತೆ ಕುಪ್ಪಳಿಸುವರು. ಕೆಲವು ವೇಳೆ ವಿದೂಷಕರಂತೆ ಮುಖಮಾಡಿಕೊಂಡು ನಾನಾ ವಿಧವಾದ ಅಂಗಚೇಷ್ಟೆಗಳಿಂದ ಎಲ್ಲರನ್ನು ನಗಿಸುವರು. ಕೆಲವು ವೇಳೆ ಮರಗಳ ಕೊಂಬೆಗಳಲ್ಲಿ ಜೋಕಾಲಿಕಟ್ಟಿ ಉಯ್ಯಾಲೆಯಾಡುವರು. ಕೆಲವು ವೇಳೆ ಒಬ್ಬರು ಮತ್ತೊಬ್ಬರನ್ನು ಹೆಗಲಮೇಲೆ ಹೊತ್ತುಕೊಂಡು ‘ಕೂಸುಮರಿ’ ಆಟವಾಡುವರು. ಕೆಲವೊಮ್ಮೆ ರಾಜಾ-ಮಂತ್ರಿಗಳ ಆಟವಾಡುವರು. ॥15॥
(ಶ್ಲೋಕ-16)
ಮೂಲಮ್
ಏವಂ ತೌ ಲೋಕಸಿದ್ಧಾಭಿಃ ಕ್ರೀಡಾಭಿಶ್ಚೇರತುರ್ವನೇ ।
ನದ್ಯದ್ರಿದ್ರೋಣಿಕುಂಜೇಷು ಕಾನನೇಷು ಸರಸ್ಸು ಚ ॥
ಅನುವಾದ
ಹೀಗೆ ರಾಮ-ಶ್ಯಾಮರು ನದಿಗಳ ತೀರದಲ್ಲಿಯೂ, ಪರ್ವತ ತಪ್ಪಲುಗಳಲ್ಲೂ, ಪೊದರುಗಳಲ್ಲಿಯೂ, ವನ-ಸರೋವರಗಳಲ್ಲಿಯೂ ಸಾಧಾರಣ ಹುಡುಗರು ಆಟವಾಡುವಂತೆ ಆಟವಾಡುತ್ತಾ ಆನಂದದಿಂದ ಸಂಚರಿಸಿದರು. ॥16॥
(ಶ್ಲೋಕ-17)
ಮೂಲಮ್
ಪಶೂಂಶ್ಚಾರಯತೋರ್ಗೋಪೈಸ್ತದ್ವನೇ ರಾಮಕೃಷ್ಣಯೋಃ ।
ಗೋಪರೂಪೀ ಪ್ರಲಂಬೋಗಾದಸುರಸ್ತಜ್ಜಿಹೀರ್ಷಯಾ ॥
ಅನುವಾದ
ಒಂದುದಿನ ಬಲರಾಮ-ಕೃಷ್ಣರು ಗೋಪಬಾಲಕರೊಂದಿಗೆ ಆ ವನದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಪ್ರಲಂಬನೆಂಬ ರಾಕ್ಷಸನು ಗೊಲ್ಲನ ವೇಷವನ್ನು ಧರಿಸಿ ಅಲ್ಲಿಗೆ ಬಂದನು. ರಾಮ-ಶ್ಯಾಮರನ್ನು ಅಪಹರಿಸಿಕೊಂಡು ಹೋಗುವುದೇ ಅವನ ಉದ್ದೇಶವಾಗಿತ್ತು. ॥17॥
(ಶ್ಲೋಕ-18)
ಮೂಲಮ್
ತಂ ವಿದ್ವಾನಪಿ ದಾಶಾರ್ಹೋ ಭಗವಾನ್ಸರ್ವದರ್ಶನಃ ।
ಅನ್ವಮೋದತ ತತ್ಸಖ್ಯಂ ವಧಂ ತಸ್ಯ ವಿಚಿಂತಯನ್ ॥
ಅನುವಾದ
ಸರ್ವಜ್ಞನಾದ ಭಗವಾನ್ ಶ್ರೀಕೃಷ್ಣನು ಅವನನ್ನು ನೋಡುತ್ತಲೆ ಅವನಾರೆಂದು ತಿಳಿದುಕೊಂಡನು. ಹೀಗಿದ್ದರೂ ಅವನ ಮೈತ್ರಿಯ ಪ್ರಸ್ತಾಪವನ್ನು ಸ್ವೀಕರಿಸಿದರೂ, ಇವನನ್ನು ಯಾವ ಯುಕ್ತಿಯಿಂದ ವಧಿಸುವುದೆಂದು ಮನಸ್ಸಿನಲ್ಲೆ ಯೋಚಿಸುತ್ತಿದ್ದನು. ॥18॥
(ಶ್ಲೋಕ-19)
ಮೂಲಮ್
ತತ್ರೋಪಾಹೂಯ ಗೋಪಾಲಾನ್ಕೃಷ್ಣಃ ಪ್ರಾಹ ವಿಹಾರವಿತ್ ।
ಹೇ ಗೋಪಾ ವಿಹರಿಷ್ಯಾಮೋ ದ್ವಂದ್ವೀಭೂಯ ಯಥಾಯಥಮ್ ॥
ಅನುವಾದ
ಶ್ರೀಕೃಷ್ಣನು ಬಾಲಕರಲ್ಲಿ ಬಹುದೊಡ್ಡ ಆಟಗಾರನೂ, ಆಟಗಳ ಆಚಾರ್ಯನೂ ಆಗಿದ್ದನು. ಅವನು ಎಲ್ಲ ಗೋಪಬಾಲಕರನ್ನು ಕರೆದು - ‘ಮಿತ್ರರೇ! ಇಂದು ನಮ್ಮಲ್ಲಿ ಎರಡು ಗುಂಪುಗಳಾಗಿಸಿಕೊಂಡು ಯಥಾಯೋಗ್ಯವಾಗಿ ಆನಂದದಿಂದ ಆಟವಾಡೋಣ’ ಎಂದು ಹೇಳಿದನು. ॥19॥
(ಶ್ಲೋಕ-20)
ಮೂಲಮ್
ತತ್ರ ಚಕ್ರುಃ ಪರಿವೃಢೌ ಗೋಪಾ ರಾಮಜನಾರ್ದನೌ ।
ಕೃಷ್ಣಸಂಘಟ್ಟಿನಃ ಕೇಚಿದಾಸನ್ರಾಮಸ್ಯ ಚಾಪರೇ ॥
ಅನುವಾದ
ಎಲ್ಲ ಬಾಲಕರು ಇದಕ್ಕೆ ಒಪ್ಪಿ ಒಂದು ಪಂಗಡಕ್ಕೆ ಶ್ರೀಕೃಷ್ಣನನ್ನು, ಇನ್ನೊಂದು ಪಂಗಡಕ್ಕೆ ಬಲರಾಮನನ್ನು ನಾಯಕರನ್ನಾಗಿಸಿಕೊಂಡರು. ಕೆಲವರು ಕೃಷ್ಣನ ಪಂಗಡದಲ್ಲಿದ್ದರೆ ಮತ್ತೆ ಕೆಲವರು ಬಲರಾಮನ ಗುಂಪು ಸೇರಿದರು. ॥20॥
(ಶ್ಲೋಕ-21)
ಮೂಲಮ್
ಆಚೇರುರ್ವಿವಿಧಾಃ ಕ್ರೀಡಾ ವಾಹ್ಯವಾಹಕಲಕ್ಷಣಾಃ ।
ಯತ್ರಾರೋಹಂತಿ ಜೇತಾರೋ ವಹಂತಿ ಚ ಪರಾಜಿತಾಃ ॥
ಅನುವಾದ
ಒಂದು ಗುಂಪಿನವರು ಸೋತರೆ ಗೆದ್ದವರ ಗುಂಪಿನ ಬಾಲಕರನ್ನು ಹೊತ್ತುಕೊಂಡು ನಿರ್ದಿಷ್ಟ ಸ್ಥಾನಕ್ಕೆ ಕೊಂಡು ಹೋಗಬೇಕೆಂಬ ನಿಯಮದಿಂದ ನಾನಾ ವಿಧವಾಗಿ ಆಟವಾಡತೊಡಗಿದರು. ॥21॥
(ಶ್ಲೋಕ-22)
ಮೂಲಮ್
ವಹಂತೋ ವಾಹ್ಯಮಾನಾಶ್ಚ ಚಾರಯಂತಶ್ಚ ಗೋಧನಮ್ ।
ಭಾಂಡೀರಕಂ ನಾಮ ವಟಂ ಜಗ್ಮುಃ ಕೃಷ್ಣಪುರೋಗಮಾಃ ॥
ಅನುವಾದ
ಹೀಗೆ ಒಬ್ಬರು ಮತ್ತೊಬ್ಬರನ್ನು ಹೊತ್ತುಕೊಂಡು ಕೃಷ್ಣನೇ ಮೊದಲಾದ ಗೋಪ ಬಾಲಕರು ಹಸುಗಳನ್ನು ಮೇಯಿಸುತ್ತಾ ಭಾಂಡೀರವೆಂಬ ವಟವೃಕ್ಷದ ಬಳಿಗೆ ತಲುಪಿದರು. ॥22॥
(ಶ್ಲೋಕ-23)
ಮೂಲಮ್
ರಾಮಸಂಘಟ್ಟಿನೋ ಯರ್ಹಿ ಶ್ರೀರಾಮವೃಷಭಾದಯಃ ।
ಕ್ರೀಡಾಯಾಂ ಜಯಿನಸ್ತಾಂಸ್ತಾನೂಹುಃ ಕೃಷ್ಣಾದಯೋ ನೃಪ ॥
ಅನುವಾದ
ಪರೀಕ್ಷಿತನೇ! ಒಮ್ಮೆ ಬಲರಾಮನ ಗುಂಪಿನಲ್ಲಿದ್ದ ಶ್ರೀದಾಮಾ, ವೃಷಭ ಮುಂತಾದ ಗೋಪಬಾಲಕರು ಆಟದಲ್ಲಿ ಗೆದ್ದರು. ಆಗ ಶ್ರೀಕೃಷ್ಣನ ಗುಂಪಿನವರು ಗೆದ್ದವರನ್ನು ತನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಹೋಗುತ್ತಿದ್ದರು. ॥23॥
(ಶ್ಲೋಕ-24)
ಮೂಲಮ್
ಉವಾಹ ಕೃಷ್ಣೋ ಭಗವಾನ್ ಶ್ರೀದಾಮಾನಂ ಪರಾಜಿತಃ ।
ವೃಷಭಂ ಭದ್ರಸೇನಸ್ತು ಪ್ರಲಂಬೋ ರೋಹಿಣೀಸುತಮ್ ॥
ಅನುವಾದ
ಸೋತ ಶ್ರೀಕೃಷ್ಣನು ಶ್ರೀದಾಮನನ್ನು ಹೊತ್ತುಕೊಂಡನು. ಭದ್ರಸೇನನು ವೃಷಭನನ್ನು ಮತ್ತು ಪ್ರಲಂಬನು ಬಲರಾಮನನ್ನು ಹೊತ್ತುಕೊಂಡರು. ॥24॥
(ಶ್ಲೋಕ-25)
ಮೂಲಮ್
ಅವಿಷಹ್ಯಂ ಮನ್ಯಮಾನಃ ಕೃಷ್ಣಂ ದಾನವಪುಂಗವಃ ।
ವಹನ್ ದ್ರುತತರಂ ಪ್ರಾಗಾದವರೋಹಣತಃ ಪರಮ್ ॥
ಅನುವಾದ
ದಾನವ ಪುಂಗವನಾದ ಪ್ರಲಂಬನು ಶ್ರೀಕೃಷ್ಣನಾದರೋ ಮಹಾ ಬಲಿಷ್ಠನಾಗಿ ಇರುವನು, ಅವನನ್ನು ಸೋಲಿಸಲಾರೆ ಎಂದು ತಿಳಿದು ಅವನು ಶ್ರೀಕೃಷ್ಣನ ಪಕ್ಷವನ್ನು ಸೇರಿದನು. ಬಲ ರಾಮನನ್ನು ಹೊತ್ತುಕೊಂಡು ಬಹಳ ವೇಗವಾಗಿ ಓಡುತ್ತಾ ಬೆನ್ನಿಂದ ಇಳಿಸಬೇಕಾದ ಸ್ಥಳವನ್ನು ಬಿಟ್ಟು ಮುಂದಕ್ಕೆ ಓಡಿ ಹೋದನು. ॥25॥
(ಶ್ಲೋಕ-26)
ಮೂಲಮ್
ತಮುದ್ವಹನ್ಧರಣಿಧರೇಂದ್ರಗೌರವಂ
ಮಹಾಸುರೋ ವಿಗತರಯೋ ನಿಜಂ ವಪುಃ ।
ಸ ಆಸ್ಥಿತಃ ಪುರಟಪರಿಚ್ಛದೋ ಬಭೌ
ತಡಿದ್ದ್ಯುಮಾನುಡುಪತಿವಾಡಿವಾಂಬುದಃ ॥
ಅನುವಾದ
ಆದರೆ ಬಲರಾಮನನ್ನು ಎತ್ತಿಕೊಂಡು ಬಹಳ ದೂರ ಹೋಗಲು ರಾಕ್ಷಸನಿಂದ ಸಾಧ್ಯವಾಗಲಿಲ್ಲ. ಬಲರಾಮನು ದೊಡ್ಡ ಪರ್ವತದಷ್ಟು ಭಾರವಾದನು. ಅದರಿಂದ ಮುಂದೆ ಹೋಗಲಾರದೆ ಅಲ್ಲೆ ನಿಂತು ಬಿಟ್ಟನು. ಆಗ ಅವನು ತನ್ನ ಸ್ವಾಭಾವಿಕವಾದ ದೈತ್ಯರೂಪದಿಂದ ಪ್ರಕಟವಾದನು. ಅವನ ಕಪ್ಪಾದ ಶರೀರದಲ್ಲಿ ಸುವರ್ಣಾ ಭರಣಗಳು ಹೊಳೆಯುತ್ತಿದ್ದುವು. ಗೌರಾಂಗನಾದ ಬಲರಾಮನನ್ನು ಹೊತ್ತುಕೊಂಡಿದ್ದ ಅವನು ಮಿಂಚಿನಿಂದ ಕೂಡಿದ ಕಾರ್ಮುಗಿಲು ಚಂದ್ರನನ್ನು ಒಳಗೊಂಡಿರುವಂತೆ ಶೋಭಿಸಿದನು. ॥26॥
(ಶ್ಲೋಕ-27)
ಮೂಲಮ್
ನಿರೀಕ್ಷ್ಯ ತದ್ವಪುರಲಮಂಬರೇ ಚರತ್
ಪ್ರದೀಪ್ತದೃಗ್ಭ್ರುಕುಟಿತಟೋಗ್ರದಂಷ್ಟ್ರಕಮ್ ।
ಜ್ವಲಚ್ಛಿಖಂ ಕಟಕಕಿರೀಟಕುಂಡಲ-
ತ್ವಿಷಾದ್ಭುತಂ ಹಲಧರ ಈಷದತ್ರಸತ್ ॥
ಅನುವಾದ
ಅವನ ಕಣ್ಣುಗಳು ಬೆಂಕಿಯಂತೆ ಉರಿಯುತ್ತಿದ್ದವು. ಕೊರೆದಾಡೆಗಳು ಹುಬ್ಬಿನವರೆಗೆ ಚಾಚಿಕೊಂಡು ಭಯಂಕರವಾಗಿದ್ದವು. ಅವನ ಕೆಂಪಾದ ಕೆದರಿದ ಕೂದಲೂ ಬೆಂಕಿಯ ಜ್ವಾಲೆಯಂತೆ ಹರಡಿಕೊಂಡಿತ್ತು. ಕೈ-ಕಾಲುಗಳಲ್ಲಿ ಕಡಗಗಳೂ, ತಲೆಯಮೇಲೆ ಕಿರೀಟ ವಿದ್ದು, ಕಿವಿಯಲ್ಲಿ ಕರ್ಣಕುಂಡಲಗಳು ಹೊಳೆಯುತ್ತಿದ್ದವು. ಅವುಗಳ ಕಾಂತಿಯಿಂದ ಅವನು ಭಾರೀ ಅದ್ಭುತವಾಗಿ ಕಾಣುತ್ತಿದ್ದನು. ಆ ಭಯಾನಕ ದೈತ್ಯನು ಅತಿವೇಗದಿಂದ ಆಕಾಶದಲ್ಲಿ ಹೋಗುತ್ತಿರುವುದನ್ನು ಕಂಡು ಬಲರಾಮನು ಮೊದಲಿಗೆ ಹೆದರಿದವನಂತಾದನು. ॥27॥
(ಶ್ಲೋಕ-28)
ಮೂಲಮ್
ಅಥಾಗತಸ್ಮೃತಿರಭಯೋ ರಿಪುಂ ಬಲೋ
ವಿಹಾಯಸಾರ್ಥಮಿವ ಹರಂತಮಾತ್ಮನಃ ।
ರುಷಾಹನಚ್ಛಿರಸಿ ದೃಢೇನ ಮುಷ್ಟಿನಾ
ಸುರಾಧಿಪೋ ಗಿರಿಮಿವ ವಜ್ರರಂಹಸಾ ॥
ಅನುವಾದ
ಆದರೆ ಮರುಕ್ಷಣವೇ ತನ್ನ ಸ್ವರೂಪದ ನೆನಪು ಆಗುತ್ತಲೇ ಅವನ ಭಯವು ಹೊರಟುಹೋಯಿತು. ಕಳ್ಳನು ಯಾರದೋ ಧನವನ್ನು ಕದ್ದುಕೊಂಡು ಹೋಗುವಂತೆ ಈ ಶತ್ರುವು ನನ್ನನ್ನು ಕದ್ದುಕೊಂಡು ಹೋಗುತ್ತಿರುವನೆಂದು ತಿಳಿದ ಬಲರಾಮನು, ಆ ಸಮಯದಲ್ಲಿ ಇಂದ್ರನು ಪರ್ವತಗಳನ್ನು ವಜ್ರದಿಂದ ಪ್ರಹರಿಸುವಂತೆ ಅತ್ಯಂತ ಕ್ರೋಧಗೊಂಡು ಅವನ ತಲೆಯ ಮೇಲೆ ಬಲವಾದ ಮುಷ್ಟಿ ಪ್ರಹಾರಮಾಡಿದನು. ॥28॥
(ಶ್ಲೋಕ-29)
ಮೂಲಮ್
ಸ ಆಹತಃ ಸಪದಿ ವಿಶೀರ್ಣಮಸ್ತಕೋ
ಮುಖಾದ್ವಮನ್ರುಧಿರಮಪಸ್ಮೃತೋಸುರಃ ।
ಮಹಾರವಂ ವ್ಯಸುರಪತತ್ಸಮೀರಯನ್
ಗಿರಿರ್ಯಥಾ ಮಘವತ ಆಯುಧಾಹತಃ ॥
ಅನುವಾದ
ಏಟು ಬೀಳುತ್ತಲೇ ಅವನ ತಲೆ ನುಚ್ಚು ನೂರಾಯಿತು. ಬಾಯಿಂದ ರಕ್ತವನ್ನು ಉಗುಳುತ್ತಾ, ಚೈತನ್ಯ ವುಡಿಗಿ ಭಯಂಕರ ಶಬ್ದವನ್ನು ಮಾಡುತ್ತಾ ಇಂದ್ರನ ವಜ್ರದಿಂದ ಪ್ರಹರಿಸಲ್ಪಟ್ಟ ಪರ್ವತದಂತೆ ಆಗಲೇ ಗತಪ್ರಾಣನಾಗಿ ನೆಲಕ್ಕೆ ಉರುಳಿದನು. ॥29॥
(ಶ್ಲೋಕ-30)
ಮೂಲಮ್
ದೃಷ್ಟ್ವಾ ಪ್ರಲಂಬಂ ನಿಹತಂ ಬಲೇನ ಬಲಶಾಲಿನಾ ।
ಗೋಪಾಃ ಸುವಿಸ್ಮಿತಾ ಆಸನ್ಸಾಧು ಸಾಧ್ವಿತಿ ವಾದಿನಃ ॥
ಅನುವಾದ
ಮಹಾಬಲಿಷ್ಠನಾದ ಬಲರಾಮನು ಪ್ರಲಂಬಾಸುರನನ್ನು ಸಂಹರಿಸಿದ್ದನ್ನು ನೋಡಿ ಗೋಪರೆಲ್ಲರಿಗೂ ಪರಮಾಶ್ಚರ್ಯವಾಯಿತು. ಅವರೆಲ್ಲರೂ ಭಲೇ! ಭಲೇ! ಎಂದು ಕೊಂಡಾಡಿದರು. ॥30॥
(ಶ್ಲೋಕ-31)
ಮೂಲಮ್
ಆಶಿಷೋಭಿಗೃಣಂತಸ್ತಂ ಪ್ರಶಶಂಸುಸ್ತದರ್ಹಣಮ್ ।
ಪ್ರೇತ್ಯಾಗತಮಿವಾಲಿಂಗ್ಯ ಪ್ರೇಮವಿಹ್ವಲಚೇತಸಃ ॥
ಅನುವಾದ
ಗೊಲ್ಲಬಾಲಕರ ಚಿತ್ತವು ಪ್ರೇಮದಿಂದ ವಿಹ್ವಲವಾಗಿತ್ತು. ಅವರು ಅವನಿಗೆ ಶುಭವನ್ನು ಕೋರುತ್ತಾ ಸತ್ತು ಬದುಕಿ ಬಂದನೆಂದೇ ಭಾವಿಸಿ ಆನಂದಿತರಾದರು. ಪ್ರಶಂಸೆಗೆ ಅರ್ಹನಾದ ಬಲರಾಮನನ್ನು ಅವರೆಲ್ಲ ಆಲಿಂಗಿಸಿಕೊಂಡು, ಅವನ ಪರಾಕ್ರಮವನ್ನು ಪ್ರಶಂಸೆ ಮಾಡಿದರು. ॥31॥
(ಶ್ಲೋಕ-32)
ಮೂಲಮ್
ಪಾಪೇ ಪ್ರಲಂಬೇ ನಿಹತೇ ದೇವಾಃ ಪರಮನಿರ್ವೃತಾಃ ।
ಅಭ್ಯವರ್ಷನ್ಬಲಂ ಮಾಲ್ಯೈಃ ಶಶಂಸುಃ ಸಾಧು ಸಾಧ್ವಿತಿ ॥
ಅನುವಾದ
ಪಾಪಿಷ್ಠನಾದ ಪ್ರಲಂಬಾಸುರನು ಹತನಾದಾಗ ದೇವತೆಗಳೆಲ್ಲರೂ ಸುಖಿಗಳಾದರು. ಅವರು ಎಲ್ಲರೂ ಬಲ ರಾಮನ ಮೇಲೆ ಹೂಮಳೆಯನ್ನು ಸುರಿಸುತ್ತಾ ಬಲರಾಮ ಸಾಧು! ಎಂದು ಸಾಧುವಾದಗಳನ್ನು ಹೇಳುತ್ತಾ ಬಲ ಭದ್ರನನ್ನು ಬಹಳವಾಗಿ ಪ್ರಶಂಸಿಸಿದರು. ॥32॥
ಅನುವಾದ (ಸಮಾಪ್ತಿಃ)
ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಪ್ರಲಂಬವಧೋ ನಾಮಾಷ್ಟಾದಶೋಧ್ಯಾಯಃ ॥18॥