೧೪

[ಹದಿನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಬ್ರಹ್ಮದೇವರು ಮಾಡಿದ ಭಗವಂತನ ಸ್ತುತಿ

(ಶ್ಲೋಕ-1)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ನೌಮೀಡ್ಯ ತೇಭ್ರವಪುಷೇ ತಡಿದಂಬರಾಯ
ಗುಂಜಾವತಂಸಪರಿಪಿಚ್ಛಲಸನ್ಮುಖಾಯ ।
ವನ್ಯಸ್ರಜೇ ಕವಲವೇತ್ರವಿಷಾಣವೇಣು-
ಲಕ್ಷ್ಮಶ್ರಿಯೇ ಮೃದುಪದೇ ಪಶುಪಾಂಗಜಾಯ ॥

ಅನುವಾದ

ಶ್ರೀಬ್ರಹ್ಮದೇವರು ಸ್ತೋತ್ರಮಾಡುತ್ತಾರೆ — ಸ್ತೋತ್ರಾರ್ಹನಾದ ಭಗವಂತನೇ! ನಾನು ನಿನ್ನ ಚರಣಕಮಲಗಳಲ್ಲಿ ನಮಸ್ಕರಿಸುತ್ತೇನೆ. ನೀಲಮೇಘ ಶ್ಯಾಮನೇ! ಮಿಂಚಿನಂತಹ ಪೀತಾಂಬರವನ್ನು ಧರಿಸಿರುವವನೇ! ಗುಲಗಂಜಿಗಳ ಮಾಲೆಗಳನ್ನು ಧರಿಸಿ, ಮಕರಾಕೃತಿಯ ಕರ್ಣಕುಂಡಲಗಳನ್ನು ಹೊಂದಿರುವವನೇ! ತಲೆಯಲ್ಲಿ ನವಿಲು ಗರಿಯ ಕಿರೀಟವನ್ನು ಧರಿಸಿ ಅದರಿಂದ ಪ್ರಕಾಶಮಾನವಾಗಿ ಕಾಣುವ ಮುಖವುಳ್ಳವನೇ! ವೃಕ್ಷಸ್ಥಳದಲ್ಲಿ ವನಮಾಲೆಯನ್ನು ಧರಿಸಿರುವವನೇ! ಕೈಯಲ್ಲಿ ಮೊಸರನ್ನದ ತುತ್ತನ್ನು ಹಿಡಿದುಕೊಂಡು, ಉಡಿಯಲ್ಲಿ ಕೊಳಲನ್ನು ಸಿಕ್ಕಿಸಿಕೊಂಡು, ಕಂಕುಳಿನಲ್ಲಿ ಕೊಂಬನ್ನು, ಚಾವಟಿಯನ್ನು ಹಿಡಿದುಕೊಂಡು ಅನುಪಮವಾದ ಕಾಂತಿಯಿಂದ ಪ್ರಕಾಶಿಸುತ್ತಿರುವವನೇ! ಮೃದುವಾದ ಪಾದಗಳನ್ನು ಹೊಂದಿರುವವನೇ! ನಂದಗೋಪನ ಸುತನೇ! ನಿನಗೆ ನಮಸ್ಕರಿಸುತ್ತೇನೆ. ॥1॥

(ಶ್ಲೋಕ-2)

ಮೂಲಮ್

ಅಸ್ಯಾಪಿ ದೇವ ವಪುಷೋ ಮದನುಗ್ರಹಸ್ಯ
ಸ್ವೇಚ್ಛಾಮಯಸ್ಯ ನ ತು ಭೂತಮಯಸ್ಯ ಕೋಪಿ ।
ನೇಶೇ ಮಹಿ ತ್ವವಸಿತುಂ ಮನಸಾಂತರೇಣ
ಸಾಕ್ಷಾತ್ತವೈವ ಕಿಮುತಾತ್ಮ ಸುಖಾನುಭೂತೇಃ ॥

ಅನುವಾದ

ದೇವನೇ! ನಿನ್ನ ಶ್ರೀವಿಗ್ರಹವು ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸುವುದಾಗಿದೆ. ನನ್ನನ್ನು ಅನುಗ್ರಹಿಸುವುದಕ್ಕಾಗಿಯೇ ನೀನು ದಿವ್ಯರೂಪವನ್ನು ತಾಳಿರುವೆ. ನಿನ್ನ ಈ ಶ್ರೀವಿಗ್ರಹವನ್ನು ಪಂಚಭೂತಾತ್ಮಕವಾದುದೆಂದು ಯಾರು ತಾನೇ ಹೇಳಬಲ್ಲರು? ಖಂಡಿತವಾಗಿಯೂ ನಿನ್ನದು ಪಂಚಭೂತಾತ್ಮಕ ಶರೀರವಲ್ಲ. ಅಪ್ರಾಕೃತವಾದ ಶುದ್ಧ ಸತ್ತ್ವಮಯ ಶರೀರವಾಗಿದೆ. ನಾನೇ ಆಗಲೀ, ಇತರ ಯೋಗಿಗಳೇ ಆಗಲೀ ಸಮಾಧಿಸ್ಥರಾಗಿ ನಿನ್ನ ಈ ಸಚ್ಚಿದಾನಂದ ವಿಗ್ರಹದ ಸ್ವರೂಪವನ್ನೂ, ಮಹಿಮೆಯನ್ನೂ ತಿಳಿಯಲಾರೆವು. ಆತ್ಮಾನಂದಾನುಭವ ಸ್ವರೂಪನಾದ ನಿನ್ನ ಮಹಿಮೆಯನ್ನು ಏಕಾಗ್ರ ಮನಸ್ಸಿನಿಂದಲಾದರೂ ಯಾರಿಗೆ ತಾನೇ ತಿಳಿಯಲು ಸಾಧ್ಯವಾಗುತ್ತದೆ? ॥2॥

(ಶ್ಲೋಕ-3)

ಮೂಲಮ್

ಜ್ಞಾನೇ ಪ್ರಯಾಸಮುದಪಾಸ್ಯ ನಮಂತ ಏವ
ಜೀವಂತಿ ಸನ್ಮುಖರಿತಾಂ ಭವದೀಯವಾರ್ತಾಮ್ ।
ಸ್ಥಾನೇ ಸ್ಥಿತಾಃ ಶ್ರುತಿಗತಾಂ ತನುವಾಙ್ಮನೋಭಿ-
ರ್ಯೇ ಪ್ರಾಯಶೋಜಿತ ಜಿತೋಪ್ಯಸಿ ತೈಸಿಲೋಕ್ಯಾಮ್ ॥

ಅನುವಾದ

ಪ್ರಭುವೇ! ಯಾರು ಜ್ಞಾನಪ್ರಾಪ್ತಿಗಾಗಿ ಪ್ರಯತ್ನಿಸದೆಯೇ ತಾವಿರುವ ಸ್ಥಳದಲ್ಲೇ ಇದ್ದುಕೊಂಡು ಸತ್ಪುರುಷರ ಸಹವಾಸದಲ್ಲಿರುತ್ತಾ, ನಿನಗೆ ಪ್ರಿಯತಮರಾದ ಸಂತರು ಹೇಳುವ ನಿನ್ನ ಲೀಲಾಪ್ರಸಂಗಗಳನ್ನು ಶರೀರ, ಮಾತು, ಮನಸ್ಸುಗಳೆಂಬ ತ್ರಿಕರಣಗಳಿಂದಲೂ ಶ್ರದ್ಧೆಯಿಟ್ಟು ಕೇಳುತ್ತಾ, ಮತ್ತಾವ ಕಾರ್ಯಗಳನ್ನು ಮಾಡದೆ ಇರುತ್ತಾರೋ, ಅಂತಹವರು ತ್ರಿಲೋಕಗಳಲ್ಲಿಯೂ ಯಾರಿಂದಲೂ ಜಯಿಸಲ್ಪಡದಿರುವ ನಿನ್ನನ್ನು ಜಯಿಸುತ್ತಾರೆ. ಅನನ್ಯಭಕ್ತಿಯ ಮೂಲಕವಾಗಿ ನಿನ್ನನ್ನು ವಶಪಡಿಸಿಕೊಳ್ಳುತ್ತಾರೆ. ॥3॥

(ಶ್ಲೋಕ-4)

ಮೂಲಮ್

ಶ್ರೇಯಃಸ್ತುತಿಂ ಭಕ್ತಿಮುದಸ್ಯ ತೇ ವಿಭೋ
ಕ್ಲಿಶ್ಯಂತಿ ಯೇ ಕೇವಲ ಬೋಧಲಬ್ಧಯೇ ।
ತೇಷಾಮಸೌ ಕ್ಲೇಶಲ ಏವ ಶಿಷ್ಯತೇ
ನಾನ್ಯದ್ಯಥಾ ಸ್ಥೂಲತುಷಾವಘಾತಿನಾಮ್ ॥

ಅನುವಾದ

ಭಗವಂತನೇ! ನಿನ್ನ ಭಕ್ತಿಯು ಎಲ್ಲ ವಿಧದಿಂದ ಶ್ರೇಯಸ್ಸಿನ ಮೂಲಸ್ರೋತವಾಗಿದೆ. ಉದ್ಗಮವಾಗಿದೆ. ಯಾರು ಅದನ್ನು ಬಿಟ್ಟು ಕೇವಲ ಜ್ಞಾನ ಪ್ರಾಪ್ತಿಗಾಗಿ ಶ್ರಮಪಡುವರೋ ಅವರು ದುಃಖವನ್ನೇ ಭೋಗಿಸುವರು. ಅವರಿಗೆ ಕ್ಲೇಶ, ಶ್ರಮವೇ ಉಳಿದುಕೊಳ್ಳುತ್ತದೆ. ಹೊಟ್ಟನ್ನು ಕುಟ್ಟುವವನಿಗೆ ಅಕ್ಕಿಯು ಸಿಗದೆ ಕೇವಲ ಪರಿಶ್ರಮ ಮಾತ್ರ ಕೈಗೂಡುತ್ತದೆ. ಹಾಗೆಯೇ ಕೇವಲ ಜ್ಞಾನಕ್ಕಾಗಿ ಶ್ರಮಿಸುವವರಿಗೆ ಶ್ರಮವು ಮಾತ್ರ ಉಳಿದುಕೊಂಡಿರುತ್ತದೆ. ॥4॥

(ಶ್ಲೋಕ-5)

ಮೂಲಮ್

ಪುರೇಹ ಭೂಮನ್ಬಹವೋಪಿ ಯೋಗಿನ-
ಸ್ತ್ವದರ್ಪಿತೇಹಾ ನಿಜಕರ್ಮಲಬ್ಧಯಾ ।
ವಿಬುಧ್ಯ ಭಕ್ತ್ಯೈವ ಕಥೋಪನೀತಯಾ
ಪ್ರಪೇದಿರೇಂಜೋಚ್ಯುತ ತೇ ಗತಿಂ ಪರಾಮ್ ॥

ಅನುವಾದ

ಓ ಅಚ್ಯುತನೇ! ಓ ಅನಂತನೇ! ಈ ಲೋಕದಲ್ಲಿ ಹಿಂದೆಯೂ ಹಲವಾರು ಯೋಗಿಗಳು ಆಗಿಹೋಗಿದ್ದಾರೆ. ಯೋಗವೇ ಮೊದಲಾದವುಗಳ ಮೂಲಕ ಅವರಿಗೆ ಪರಮಪದದ ಪ್ರಾಪ್ತಿಯಾಗದಿರಲು, ಅವರು ಮಾಡಿದ ತಮ್ಮ ವೈದಿಕ ಮತ್ತು ಲೌಕಿಕಕರ್ಮಗಳೆಲ್ಲವನ್ನು ನಿನಗೆ ಸಮರ್ಪಿಸಿದ್ದರಿಂದಲೂ, ನಿನ್ನ ಲೀಲಾಪ್ರಸಂಗಗಳನ್ನು ಕೇಳುವುದರಿಂದಲೂ ಅವರಿಗೆ ನಿನ್ನಲ್ಲಿ ಅಪಾರವಾದ ಭಕ್ತಿಯುಂಟಾಯಿತು. ಆ ಪರಾಭಕ್ತಿಯಿಂದಲೇ ಅವರು ನಿನ್ನ ಸ್ವರೂಪದ ಜ್ಞಾನವನ್ನು ತಿಳಿದವರಾಗಿ ಬಹಳ ಸುಲಭವಾಗಿ ನಿನ್ನ ಪರಮಪದವನ್ನು ಸೇರಿದರು. ॥5॥

(ಶ್ಲೋಕ-6)

ಮೂಲಮ್

ತಥಾಪಿ ಭೂಮನ್ಮಹಿಮಾಗುಣಸ್ಯ ತೇ
ವಿಬೋದ್ಧುಮರ್ಹತ್ಯಮಲಾಂತರಾತ್ಮಭಿಃ ।
ಅವಿಕ್ರಿಯಾತ್ಸ್ವಾನುಭವಾದರೂಪತೋ
ಹ್ಯನನ್ಯಬೋಧ್ಯಾತ್ಮತಯಾ ನ ಚಾನ್ಯಥಾ ॥

ಅನುವಾದ

ಆದರೂ ಪರಬ್ರಹ್ಮಸ್ವರೂಪನಾದ ಪರಮೇಶ್ವರನೇ! ನಿನ್ನ ನಿರ್ಗುಣ ಸ್ವರೂಪದ ಮಹಿಮೆಯೂ ಪರಿಶುದ್ಧವಾದ ಅಂತಃಕರಣವುಳ್ಳವರಿಗೆ ತಿಳಿಯಲು ಸಾಧ್ಯವಾಗಬಹುದು. ಆಗಲೂ ಅದು ನಿರ್ವಿಕಾರವೂ ನಿರ್ವಿಷಯವೂ ಆದ ಅಂತಃಕರಣಕ್ಕೆ ಸ್ವಯಂಪ್ರಕಾಶವಾಗಿ ಗೋಚರಿಸುತ್ತದೆಯೇ ಹೊರತು ಬೇರೆ ವಿಧದಿಂದ ಗೋಚರಿಸುವುದಿಲ್ಲ. ಯಾವ ವಿಧವಾದ ವಿಕಾರವೂ ಇಲ್ಲದೆ ಅದು ಕಾಣುತ್ತದೆ. ಅದಕ್ಕೆ ನಿರ್ದಿಷ್ಟವಾದ ರೂಪವಿಲ್ಲ. ಅದು ಹೀಗಿರುವುದೆಂದು ಇತರರಿಗೆ ಹೇಳಲು ಸಾಧ್ಯವಾಗುವುದಿಲ್ಲ. ಪ್ರಕಾಶಮಾನವಾದ ಆತ್ಮರೂಪದಲ್ಲಿ ಅದನ್ನು ಕಾಣಬಹುದು. ॥6॥

(ಶ್ಲೋಕ-7)

ಮೂಲಮ್

ಗುಣಾತ್ಮನಸ್ತೇಪಿ ಗುಣಾನ್ವಿಮಾತುಂ
ಹಿತಾವತೀರ್ಣಸ್ಯ ಕ ಈಶಿರೇಸ್ಯ ।
ಕಾಲೇನ ಯೈರ್ವಾ ವಿಮಿತಾಃ ಸುಕಲ್ಪೈ-
ರ್ಭೂಪಾಂಸವಃ ಖೇ ಮಿಹಿಕಾ ದ್ಯುಭಾಸಃ ॥

ಅನುವಾದ

ಭಗವಂತ! ಸಮರ್ಥರಾದ ಪುರುಷರು ಹಲವಾರು ಜನ್ಮಗಳ ಪರಿಶ್ರಮದಿಂದ ಭೂಮಿಯಲ್ಲಿರುವ ಕಣಗಳನ್ನೂ, ಆಕಾಶದಲ್ಲಿರುವ ಹಿಮದ ತುಂತುರುಗಳನ್ನು, ಝಗಝಗಿಸುವ ನಕ್ಷತ್ರ ತಾರೆಗಳನ್ನು ಎಣಿಸಿಯಾರು. ಆದರೆ ನಿನ್ನ ಸಗುಣ ಸ್ವರೂಪದ ಅನಂತಾನಂತ ಗುಣಗಳನ್ನು ಯಾರು ತಾನೇ ಎಣಿಸ ಬಲ್ಲರು? ಮಹಾನುಭಾವನೇ! ನೀನು ಪ್ರಪಂಚಕ್ಕೆ ಕಲ್ಯಾಣ ವನ್ನುಂಟುಮಾಡಲೆಂದೇ ಅವತರಿಸಿರುವೆ. ನಿನ್ನ ಮಹಿಮೆಯನ್ನು ತಿಳಿಯುವುದು ಅತ್ಯಂತ ಕಠಿಣವೇ ಸರಿ. ॥7॥

(ಶ್ಲೋಕ-8)

ಮೂಲಮ್

ತತ್ತೇನುಕಂಪಾಂ ಸುಸಮೀಕ್ಷಮಾಣೋ
ಭುಂಜಾನ ಏವಾತ್ಮಕೃತಂ ವಿಪಾಕಮ್ ।
ಹೃದ್ವಾಗ್ವಪುರ್ಭಿರ್ವಿದಧನ್ನಮಸ್ತೇ
ಜೀವೇತ ಯೋ ಮುಕ್ತಿಪದೇ ಸ ದಾಯಭಾಕ್ ॥

ಅನುವಾದ

ಯಾವ ಪುರುಷನು ಹೆಚ್ಚಿನ ಉತ್ಸಾಹದಿಂದ ನಿನ್ನ ಕೃಪೆಯನ್ನು ಕ್ಷಣ-ಕ್ಷಣಕ್ಕೂ ಪ್ರತೀಕ್ಷಿಸುತ್ತಿರುವನೋ, ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಒದಗಿಬರುವ ಸುಖ-ದುಃಖಗಳನ್ನು ನಿರ್ವಿಕಾರವಾದ ಮನೋಭಾವದಿಂದ ಉಪಭೋಗಿಸುವನೋ, ಪ್ರೇಮಪೂರ್ಣವಾದ ಹೃದಯದಿಂದ, ಗದ್ಗದವಾದ ಧ್ವನಿಯಿಂದ, ಪುಳಕಿತವಾದ ಶರೀರದಿಂದ ತನ್ನನ್ನೇ ತಾನು ನಿನಗೆ ಅರ್ಪಿಸಿಕೊಳ್ಳುವನೋ ಅಂತಹವನು ತಂದೆಯ ಸಂಪತ್ತಿಗೆ ಮಗನು ಸಹಜವಾಗಿಯೇ ಅಧಿಕಾರಿಯಾಗುವಂತೆ ನಿನ್ನ ಪರಮಪದವನ್ನು ಹೊಂದಲು ಅಧಿಕಾರಿಯಾಗುತ್ತಾನೆ. ॥8॥

(ಶ್ಲೋಕ-9)

ಮೂಲಮ್

ಪಶ್ಯೇಶ ಮೇನಾರ್ಯಮನಂತ ಆದ್ಯೇ
ಪರಾತ್ಮನಿ ತ್ವಯ್ಯಪಿ ಮಾಯಿಮಾಯಿನಿ ।
ಮಾಯಾಂ ವಿತತ್ಯೇಕ್ಷಿತುಮಾತ್ಮವೈಭವಂ
ಹ್ಯಹಂ ಕಿಯಾನೈಚ್ಛಮಿವಾರ್ಚಿರಗ್ನೌ ॥

ಅನುವಾದ

ಪ್ರಭುವೇ! ನನ್ನ ಕುಟಿಲತೆಯನ್ನಾದರೂ ನೋಡು. ನೀನು ಅನಂತನೂ, ಆದಿ ಪುರುಷನೂ ಆದ ಪರಮಾತ್ಮನಾಗಿರುವೆ. ನನ್ನಂತಹ ದೊಡ್ಡ-ದೊಡ್ಡ ಮಾಯಾವಿಗಳೂ ಸಹ ನಿನ್ನ ಮಾಯಾಚಕ್ರಕ್ಕೆ ಸಿಲುಕಿರುತ್ತಾರೆ. ಆದರೂ ನನ್ನ ಮಾಯೆಯನ್ನು ನಿನ್ನ ಮೇಲೆ ಚೆಲ್ಲಿ ನಿನ್ನ ಮಹಿಮೆಯನ್ನು ನಾನು ನೋಡಬಯಸಿದೆನು. ಆದರೆ ನಿನ್ನ ಮಾಯಾಚಕ್ರಕ್ಕೆ ಸಿಕ್ಕಿಕೊಂಡ ನಾನು ಬೆಂಕಿಯ ಮುಂದೆ ಕಿಡಿಯಂತೆ ನಿನ್ನ ಮುಂದೆ ನಗಣ್ಯನಾಗಿದ್ದೇನೆ. ॥9॥

(ಶ್ಲೋಕ-10)

ಮೂಲಮ್

ಅತಃ ಕ್ಷಮಸ್ವಾಚ್ಯುತ ಮೇ ರಜೋಭುವೋ
ಹ್ಯಜಾನತಸ್ತ್ವತ್ಪೃಥಗೀಶಮಾನಿನಃ ।
ಅಜಾವಲೇಪಾಂಧತಮೋಂಧಚಕ್ಷುಷ
ಏಷೋನುಕಂಪ್ಯೋ ಮಯಿ ನಾಥವಾನಿತಿ ॥

ಅನುವಾದ

ಓ ಭಗವಂತ! ನಾನು ರಜೋಗುಣದಿಂದ ಉತ್ಪನ್ನನಾದವನು. ನಿನ್ನ ದಿವ್ಯ ಸ್ವರೂಪವನ್ನು, ಮಹಿಮೆಯನ್ನೂ ನಾನು ಚೆನ್ನಾಗಿ ತಿಳಿದವನಾಗಿಲ್ಲ. ಈ ಕಾರಣದಿಂದಲೇ ಈ ಪ್ರಪಂಚಕ್ಕೆ ನಿನ್ನಂತೆಯೇ ನಾನೂ ಒಬ್ಬ ಈಶನೆಂದೇ ಭಾವಿಸಿಕೊಂಡುಬಿಟ್ಟೆನು. ‘ನಾನು ಜನ್ಮ ರಹಿತನೂ, ಜಗತ್ಕರ್ತೃವು ಆಗಿದ್ದೇನೆ’ ಎಂಬ ಮಾಯಾ ಕೃತವಾದ ಮೋಹವೆಂಬ ದಟ್ಟವಾದ ಅಂಧಕಾರದಲ್ಲಿ ಮುಳುಗಿ ಅಂಧನಾಗಿಬಿಟ್ಟಿದ್ದೇನೆ. ಆದುದರಿಂದ ಈ ವಿಷಯವನ್ನು ನೀನು ಮನಗಂಡು ‘ಇವನು ನನ್ನ ಅಧೀನದಲ್ಲೇ ಇದ್ದಾನೆ, ನನ್ನ ಸೇವಕನೇ ಆಗಿದ್ದಾನೆ, ಇವನ ಮೇಲೆ ಕೃಪೆ ತೋರುವುದು ಅಗತ್ಯವಾಗಿದೆ’ ನೀನೇ ನನ್ನ ಸ್ವಾಮಿ ಯಾಗಿದ್ದೀಯೇ ಇಂದು ನಾನು ಸನಾಥನಾದೆ. ಎಂದು ಭಾವಿಸಿ ನನ್ನ ಅಪರಾಧವನ್ನು ಕ್ಷಮಿಸಿಬಿಡು. ॥10॥

(ಶ್ಲೋಕ-11)

ಮೂಲಮ್

ಕ್ವಾಹಂ ತಮೋಮಹದಹಂಖಚರಾಗ್ನಿವಾರ್ಭೂ-
ಸಂವೇಷ್ಟಿತಾಂಡಘಟಸಪ್ತವಿತಸ್ತಿಕಾಯಃ ।
ಕ್ವೇದೃಗ್ವಿಧಾವಿಗಣಿತಾಂಡಪರಾಣುಚರ್ಯಾ-
ವಾತಾಧ್ವರೋಮವಿವರಸ್ಯ ಚ ತೇ ಮಹಿತ್ವಮ್ ॥

ಅನುವಾದ

ಸ್ವಾಮಿಯೇ! ಪ್ರಕೃತಿ, ಮಹತ್ತತ್ತ್ವ, ಅಹಂಕಾರ, ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥಿವಿರೂಪವಾದ ಆವರಣಗಳಿಂದ ಕೂಡಿರುವ ಈ ಬ್ರಹ್ಮಾಂಡವು ನನ್ನ ಶರೀರವಾಗಿರುವುದು. ಆದರೆ ನಿನ್ನ ರೋಮ-ರೋಮಗಳಲ್ಲಿ ಗವಾಕ್ಷಿಯಿಂದ ಬಂದಿರುವ ಸೂರ್ಯಕಿರಣದಲ್ಲಿ ಕಾಣುವ ಪರಮಾಣುಗಳಂತೆ ಅಗಣಿತವಾದ ಇಂತಹ ಬ್ರಹ್ಮಾಂಡಗಳಿವೆ. ಅಂತಹ ನಿನ್ನ ಅನಂತವಾದ ಮಹಿಮೆಯೆಲ್ಲಿ? ಕೇವಲ ಏಳು ಗೇಣುದ್ದದ ಶರೀರವನ್ನು ಧರಿಸಿರುವ ನಾನೆಲ್ಲಿ? ನಮ್ಮಿಬ್ಬರಿಗೂ ಪರ್ವತ ಪರಮಾಣುಗಳ ಅಂತರವೆಂದೇ ಹೇಳಬಹುದು. ॥11॥

(ಶ್ಲೋಕ-12)

ಮೂಲಮ್

ಉತ್ಕ್ಷೇಪಣಂ ಗರ್ಭಗತಸ್ಯ ಪಾದಯೋಃ
ಕಿಂ ಕಲ್ಪತೇ ಮಾತುರಧೋಕ್ಷಜಾಗಸೇ ।
ಕಿಮಸ್ತಿನಾಸ್ತಿವ್ಯಪದೇಶಭೂಷಿತಂ
ತವಾಸ್ತಿ ಕುಕ್ಷೇಃ ಕಿಯದಪ್ಯನಂತಃ ॥

ಅನುವಾದ

ಅಧೋಕ್ಷಜನೇ! ಮಗುವು ತಾಯಿಯ ಹೊಟ್ಟೆಯಲ್ಲಿರುವಾಗ ಕೈ-ಕಾಲುಗಳನ್ನು ಬಡಿಯುತ್ತದೆ. ಇದರಿಂದಾಗಿ ತಾಯಿಗೆ ಅಪರಾಧ ಮಾಡಿದಂತಾಗುತ್ತದೆಯೇ? ತಾಯಿಯು ಇದನ್ನು ಅಪರಾಧವೆಂದು ಭಾವಿಸುವಳೇ? ಅಸ್ತಿ-ನಾಸ್ತಿ ಎಂದು ಹೇಳಲ್ಪಡುವ ಯಾವುದೇ ವಸ್ತುಗಳಾದರೂ ನಿನ್ನ ಹೊಟ್ಟೆಯನ್ನು ಬಿಟ್ಟು ಬೇರೆಡೆಯಲ್ಲಿರುತ್ತವೆಯೇ? ಆದುದರಿಂದ ನಾನು ನಿನ್ನ ಹೊಟ್ಟೆಯಲ್ಲೇ ಇದ್ದೇನೆ. ಅದರಿಂದಾಗಿ ನಾನು ಮಾಡಿದ ಅಪರಾಧವನ್ನು ನೀನು ಕ್ಷಮಿಸಿಬಿಡು. ॥12॥

(ಶ್ಲೋಕ-13)

ಮೂಲಮ್

ಜಗತಯಾಂತೋದಧಿಸಂಪ್ಲವೋದೇ
ನಾರಾಯಣಸ್ಯೋದರನಾಭಿನಾಲಾತ್ ।
ವಿನಿರ್ಗತೋಜಸ್ತ್ವಿತಿ ವಾಙ್ನ ವೈ ಮೃಷಾ
ಕಿಂ ತ್ವೀಶ್ವರ ತ್ವನ್ನ ವಿನಿರ್ಗತೋಸ್ಮಿ ॥

ಅನುವಾದ

ಪ್ರಳಯಕಾಲದಲ್ಲಿ ಮೂರುಲೋಕಗಳೂ ನೀರಿನಲ್ಲಿ ಮುಳುಗಿ ಹೋಗಿದ್ದಾಗ ನಾರಾಯಣನೊಬ್ಬನೇ ಪವಡಿಸಿದ್ದನೆಂದೂ, ಅವನ ನಾಭಿಕಮಲದಿಂದ ಬ್ರಹ್ಮನು ಹುಟ್ಟಿದನೆಂದೂ ಶ್ರುತಿಗಳು ಸಾರುತ್ತವೆ. ಈ ಶ್ರುತಿ ವಾಕ್ಯವು ಖಂಡಿತವಾಗಿ ಸುಳ್ಳಲ್ಲ. ಪ್ರಭೋ! ನೀನೇ ಹೇಳು. ನಿನ್ನ ನಾಭಿಕಮಲದಿಂದ ಹುಟ್ಟಿದ ನಾನು ನಿನ್ನ ಮಗನೇ ಅಲ್ಲವೇ? ॥13॥

(ಶ್ಲೋಕ-14)

ಮೂಲಮ್

ನಾರಾಯಣಸ್ತ್ವಂ ನ ಹಿ ಸರ್ವದೇಹಿನಾ-
ಮಾತ್ಮಾಸ್ಯಧೀಶಾಖಿಲಲೋಕಸಾಕ್ಷೀ ।
ನಾರಾಯಣೋಂಗಂ ನರಭೂಜಲಾಯನಾ-
ತ್ತಚ್ಚಾಪಿ ಸತ್ಯಂ ನ ತವೈವ ಮಾಯಾ ॥

ಅನುವಾದ

ಸ್ವಾಮಿಯೇ! ನಾರಾಯಣನಾಗಿರುವ ನೀನು ಸಮಸ್ತ ಶರೀರಿಗಳಿಗೂ ಆತ್ಮಸ್ವರೂಪನಾಗಿರುವೆಯಲ್ಲವೆ? ಅಧೀಶನೂ ಆಗಿರುವೆಯಲ್ಲವೇ? ಸಮಸ್ತ ಲೋಕಗಳಿಗೂ ಸಾಕ್ಷಿಯಾಗಿರುವೆಯಲ್ಲವೇ? ಸಾಕ್ಷಾತ್ ನಾರಾಯಣನು ನೀನೇ ಆಗಿರುವೆ. ನರನಿಂದ ಉತ್ಪನ್ನವಾದ ಜಲವನ್ನು ನಿನ್ನ ಆಶ್ರಯವೆಂದು ಹೇಳಲಾಗುತ್ತದೆ. ಆದರೆ ಅದೂ ಸತ್ಯವಲ್ಲ. ಇದೆಲ್ಲವೂ ನಿನ್ನ ಮಾಯೆಯೇ ಆಗಿದೆ. ॥14॥

(ಶ್ಲೋಕ-15)

ಮೂಲಮ್

ತಚ್ಚೇಜ್ಜಲಸ್ಥಂ ತವ ಸಜ್ಜಗದ್ವಪುಃ
ಕಿಂ ಮೇ ನ ದೃಷ್ಟಂ ಭಗವಂಸ್ತದೈವ ।
ಕಿಂ ವಾ ಸುದೃಷ್ಟಂ ಹೃದಿ ಮೇ ತದೈವ
ಕಿಂ ನೋ ಸಪದ್ಯೇವ ಪುನರ್ವ್ಯದರ್ಶಿ ॥

ಅನುವಾದ

ಭಗವಂತನೇ! ನಿನ್ನ ವಿರಾಟ್ ಸ್ವರೂಪವು ಆ ಸಮಯದಲ್ಲಿ ಜಲದಲ್ಲೇ ಇದ್ದುದಾದರೆ ನಾನು ಕಮಲನಾಳದ ಮೂಲಕ ನೀರಿನ ಒಳಹೊಕ್ಕು ನೂರು ವರ್ಷಗಳವರೆಗೂ ಹುಡುಕಿದರೂ ಆ ನಿನ್ನ ಸ್ವರೂಪವನ್ನು ಏಕೆ ಕಾಣಲಿಲ್ಲ? ಪುನಃ ನಾನು ತಪಸ್ಸು ಮಾಡಿದಾಗ ನನ್ನ ವಕ್ಷಃಸ್ಥಳದಲ್ಲಿ ಆ ದಿವ್ಯಸ್ವರೂಪವು ಹೇಗೆ ಕಾಣಿಸಿಕೊಂಡಿತು? ಆ ದಿವ್ಯ ಸ್ವರೂಪವು ಹೃದಯ ಗುಹೆಯಲ್ಲಿ ಕ್ಷಣಮಾತ್ರವೇ ಕಂಡು ಪುನಃ ಮರೆಯಾದುದೇಕೆ? ॥15॥

(ಶ್ಲೋಕ-16)

ಮೂಲಮ್

ಅತ್ರೈವ ಮಾಯಾಧಮನಾವತಾರೇ
ಹ್ಯಸ್ಯ ಪ್ರಪಂಚಸ್ಯ ಬಹಿಃ ಸ್ಫುಟಸ್ಯ ।
ಕೃತ್ಸ್ನಸ್ಯ ಚಾಂತರ್ಜಠರೇ ಜನನ್ಯಾ
ಮಾಯಾತ್ವಮೇವ ಪ್ರಕಟೀಕೃತಂ ತೇ ॥

ಅನುವಾದ

ಮಾಯೆಯನ್ನು ಉಪಶಮನ ಗೊಳಿಸುವ ಮಾಯಾಧವನೇ! ಯುಗಾಂತರದಲ್ಲಿ ನಡೆದ ವಿಷಯವು ಹಾಗಿರಲಿ. ಇದೇ ನಿನ್ನ ಈ ಅವತಾರದಲ್ಲಿಯೇ ಹೊರಗೆ ಸ್ಪಷ್ಟವಾಗಿ ಕಾಣುತ್ತಿರುವ ಈ ಜಗತ್ತನ್ನು ನಿನ್ನ ಹೊಟ್ಟೆಯಲ್ಲಿ ತೋರಿಸಿ ತಾಯಿಯಾದ ಯಶೋದೆಯನ್ನು ತಬ್ಬಿಬ್ಬುಗೊಳಿಸಿಬಿಟ್ಟೆ. ಆದುದರಿಂದ ಈ ಸಮಸ್ತ ಜಗತ್ತು ನಿನ್ನ ಮಾಯಾಕಲ್ಪಿತವೆಂದೇ ಸಿದ್ಧಾಂತ ವಾಗುತ್ತದೆ. ॥16॥

(ಶ್ಲೋಕ-17)

ಮೂಲಮ್

ಯಸ್ಯ ಕುಕ್ಷಾವಿದಂ ಸರ್ವಂ ಸಾತ್ಮಂ ಭಾತಿ ಯಥಾ ತಥಾ ।
ತತ್ತ್ವಯ್ಯಪೀಹ ತತ್ಸರ್ವಂ ಕಿಮಿದಂ ಮಾಯಯಾ ವಿನಾ ॥

ಅನುವಾದ

ದಯಾಳುವೆ! ನಿನ್ನಿಂದ ಉಂಟಾದ ಈ ಅಖಂಡವಿಶ್ವವು ಹೊರಗೆ ಕಾಣುತ್ತಿರುವಂತೆಯೇ ನಿನ್ನ ಸಹಿತ ನಿನ್ನ ಉದರದಲ್ಲಿಯೂ ಕಂಡಿತು. ಇದು ನಿನ್ನ ಮಾಯೆಯಲ್ಲದೆ ಮತ್ತೇನು? ಇದು ನಿನ್ನ ಲೀಲಾವಿನೋದವೇ ಆಗಿದೆ. ॥17॥

(ಶ್ಲೋಕ-18)

ಮೂಲಮ್

ಅದ್ಯೈವ ತ್ವದೃತೇಸ್ಯ ಕಿಂ ಮಮ ನ ತೇ
ಮಾಯಾತ್ವಮಾದರ್ಶಿತ-
ಮೇಕೋಸಿ ಪ್ರಥಮಂ ತತೋ ವ್ರಜಸುಹೃದ್
ವತ್ಸಾಃ ಸಮಸ್ತಾ ಅಪಿ ।
ತಾವಂತೋಸಿ ಚತುರ್ಭುಜಾಸ್ತದಖಿಲೈಃ
ಸಾಕಂ ಮಯೋಪಾಸಿತಾಃ
ತಾವಂತ್ಯೇವ ಜಗಂತ್ಯಭೂಸ್ತದಮಿತಂ
ಬ್ರಹ್ಮಾದ್ವಯಂ ಶಿಷ್ಯತೇ ॥

ಅನುವಾದ

ಅಂದು ನಿನ್ನ ತಾಯಿಗೆ ಉದರದಲ್ಲಿ ಬ್ರಹ್ಮಾಂಡವನ್ನು ತೋರಿಸಿದ್ದ ಮಾತಿರಲಿ; ಇಂದು ನೀನು ತೋರಿಸಿದ ವಿಶ್ವರೂಪವಾದರೂ ಸಾಮಾನ್ಯವಾದ ಲೀಲೆಯೆ? ಮೊದಲು ನೀನು ಒಬ್ಬನೇ ಇದ್ದೆ. ಅನಂತರ ಸಮಸ್ತ ಗೋಪಬಾಲಕರೂ, ಕರುಗಳೂ ನೀನೇ ಆಗಿಬಿಟ್ಟೆ. ಕೊಳಲು, ಕೊಂಬು, ಬೆತ್ತಗಳೂ ನಿನ್ನ ರೂಪಗಳೇ ಆದುವು. ಅನಂತರ ಗೋಪಬಾಲಕರಾದಿಯಾಗಿ ಸಮಸ್ತ ವಸ್ತುಗಳೂ ಚತು ರ್ಭುಜರಾಗಿ ಪೀತಾಂಬರಗಳನ್ನು ಧರಿಸಿಕೊಂಡು ಸರ್ವಾಲಂಕಾರ ಭೂಷಿತರಾಗಿ ನನ್ನಿಂದಲೂ, ಇಪ್ಪತ್ತು ನಾಲ್ಕು ತತ್ತ್ವಗಳಿಂದಲೂ ಸೇವಿಸಲ್ಪಡುತ್ತಿರುವಂತೆ ಕಾಣಿಸಿಕೊಂಡೆ. ಅನಂತರ ನೀನೇ ಸಕಲ ಬ್ರಹ್ಮಾಂಡಗಳಾಗಿಯೂ ತೋರಿಕೊಂಡೆ. ಆದರೆ ಈಗ ನೀನೇ ಅಪರಿಚ್ಛಿನ್ನವೂ, ಅದ್ವಿತೀಯವೂ ಆದ ಬ್ರಹ್ಮನಾಗಿ ಉಳಿದಿರುವೆ. ॥18॥

(ಶ್ಲೋಕ-19)

ಮೂಲಮ್

ಅಜಾನತಾಂ ತ್ವತ್ಪದವೀಮನಾತ್ಮ-
ನ್ಯಾತ್ಮಾತ್ಮನಾ ಭಾಸಿ ವಿತತ್ಯ ಮಾಯಾಮ್ ।
ಸೃಷ್ಟಾವಿವಾಹಂ ಜಗತೋ ವಿಧಾನ
ಇವ ತ್ವಮೇಷೋಂತ ಇವ ತ್ರಿನೇತ್ರಃ ॥

ಅನುವಾದ

ಅಜ್ಞಾನವಶರಾದ ಜನರು ನಿನ್ನ ಸ್ವರೂಪವನ್ನು ತಿಳಿಯಲಾರರು. ಅವರಿಗೆ ನೀನು ಪ್ರಕೃತಿಸ್ಥ ಜೀವಿಯ ರೂಪದಲ್ಲಿ ಕಂಡುಬರುವೆ. ಅವರ ಮೇಲೆ ನಿನ್ನ ಮಾಯೆಯ ಜಾಲವನ್ನು ಬೀಸಿ, ಸೃಷ್ಟಿಯ ಸಮಯದಲ್ಲಿ ನನ್ನ (ಬ್ರಹ್ಮ) ರೂಪದಿಂದ, ಪಾಲಿಸುವ ಸಮಯದಲ್ಲಿ ನಿನ್ನ (ವಿಷ್ಣು) ರೂಪದಿಂದ ಮತ್ತು ಸಂಹಾರದ ಸಮಯದಲ್ಲಿ ರುದ್ರರೂಪದಿಂದ ಕಂಡುಬರುವೆ. ॥19॥

(ಶ್ಲೋಕ-20)

ಮೂಲಮ್

ಸುರೇಷ್ವ ಷಿಷ್ವೀಶ ತಥೈವ ನೃಷ್ವಪಿ
ತಿರ್ಯಕ್ಷು ಯಾದಸ್ಸ್ವಪಿ ತೇಜನಸ್ಯ ।
ಜನ್ಮಾಸತಾಂ ದುರ್ಮದನಿಗ್ರಹಾಯ
ಪ್ರಭೋ ವಿಧಾತಃ ಸದನುಗ್ರಹಾಯ ಚ ॥

ಅನುವಾದ

ಪ್ರಭುವೇ! ನೀನು ಸಮಸ್ತ ಪ್ರಪಂಚಕ್ಕೂ ಒಡೆಯನೂ, ನಿಯಾಮಕನೂ ಆಗಿರುವೆ. ನೀನು ಜನ್ಮರಹಿತನೇ ಆದರೂ ದೇವ ಋಷಿ-ಮನುಷ್ಯಾದಿಯೋನಿಗಳಲ್ಲಿಯೂ,ಪಶು-ಪಕ್ಷಿ-ಜಲಚರಾದಿ ಯೋನಿಗಳಲ್ಲಿಯೂ ಅವತರಿಸಿರುವೆ. ಈ ನಿನ್ನ ಅವತಾರಗಳು ದುಷ್ಟರ ನಿಗ್ರಹಕ್ಕಾಗಿ ಮತ್ತು ಸತ್ಪುರುಷರ ಅನುಗ್ರಹಕ್ಕಾಗಿಯೇ ಆಗುವುದು. ॥20॥

(ಶ್ಲೋಕ-21)

ಮೂಲಮ್

ಕೋ ವೇತ್ತಿ ಭೂಮನ್ಭಗವನ್ಪರಾತ್ಮನ್
ಯೋಗೇಶ್ವರೋತೀರ್ಭವತಸೀಲೋಕ್ಯಾಮ್ ।
ಕ್ವ ವಾ ಕಥಂ ವಾ ಕತಿ ವಾ ಕದೇತಿ
ವಿಸ್ತಾರಯನ್ಕ್ರೀಡಸಿ ಯೋಗಮಾಯಾಮ್ ॥

ಅನುವಾದ

ಭಗವಂತನೇ! ನೀನು ಅನಂತನೂ, ಪರಮಾತ್ಮನೂ, ಯೋಗೇಶ್ವರನೂ ಆಗಿರುವೆ. ನೀನು ನಿನ್ನ ಯೋಗಮಾಯೆಯನ್ನು ವಿಸ್ತರಿಸಿಕೊಂಡು ಯಾವಾಗ? ಎಲ್ಲಿ? ಹೇಗೆ? ಎಷ್ಟು ಕಾಲದವರೆಗೆ ಕ್ರೀಡೆಯಾಡುವೆಯೆಂಬ ವಿಷಯವು ಈ ಮೂರು ಲೋಕಗಳಲ್ಲಿ ಯಾರಿಗೆ ತಾನೇ ತಿಳಿದಿರುತ್ತದೆ? ನಿನ್ನ ಯೋಗಮಾಯೆಯು ನಿನ್ನಂತೆಯೇ ಅಚಿಂತ್ಯವೂ, ಅಪ್ರಮೇಯವೂ ಆಗಿದೆ. ॥21॥

(ಶ್ಲೋಕ-22)

ಮೂಲಮ್

ತಸ್ಮಾದಿದಂ ಜಗದಶೇಷಮಸತ್ಸ್ವರೂಪಂ
ಸ್ವಪ್ನಾಭಮಸ್ತಧಿಷಣಂ ಪುರುದುಃಖದುಃಖಮ್ ।
ತ್ವಯ್ಯೇವ ನಿತ್ಯಸುಖಬೋಧತನಾವನಂತೇ
ಮಾಯಾತ ಉದ್ಯದಪಿ ಯತ್ಸದಿವಾವಭಾತಿ ॥

ಅನುವಾದ

ಆದುದರಿಂದ ಈ ಸಮಸ್ತ ಜಗತ್ತು ಅಸತ್ಸ್ವರೂಪವಾದುದು. ಇದು ಸ್ವಪ್ನಸದೃಶವಾಗಿಯೂ, ಚೈತನ್ಯ ರಹಿತವಾಗಿಯೂ, ದುಃಖದ ಮೇಲೆ ದುಃಖ ಒದಗಿಬರುವ ಸ್ಥಾನವು ಆಗಿದೆ. ಆದರೂ ಸಚ್ಚಿದಾನಂದಾತ್ಮಕನಾದ ನಿನ್ನಲ್ಲಿ ಜಗತ್ತು ಎಂಬುದು ಮಾಯೆಯಿಂದ ಜನಿಸಿ ಸಚ್ಚಿದಾನಂದಾತ್ಮಕವಾದ ನಿನ್ನ ಅಧಿಷ್ಠಾನದ ಬಲದಿಂದ ಸತ್ಯವಾಗಿರುವಂತೆಯೂ, ಸುಖಸ್ವರೂಪವಾಗಿರುವಂತೆಯೂ, ಚೇತನ ಸ್ವರೂಪವಾಗಿರುವಂತೆಯೂ ಭಾಸವಾಗುತ್ತದೆ. ॥22॥

(ಶ್ಲೋಕ-23)

ಮೂಲಮ್

ಏಕಸ್ತ್ವಮಾತ್ಮಾ ಪುರುಷಃ ಪುರಾಣಃ
ಸತ್ಯಃ ಸ್ವಯಂಜ್ಯೋತಿರನಂತ ಆದ್ಯಃ ।
ನಿತ್ಯೋಕ್ಷರೋಜಸ್ರಸುಖೋ ನಿರಂಜನಃ
ಪೂರ್ಣೋದ್ವಯೋ ಮುಕ್ತ ಉಪಾಧಿತೋಮೃತಃ ॥

ಅನುವಾದ

ಪ್ರಭುವೇ! ನೀನು ಏಕಮಾತ್ರ ಸತ್ಯನು. ಹೇಗೆಂದರೆ ನೀನು ಸಮಸ್ತರಲ್ಲಿಯೂ ಆತ್ಮಸ್ವರೂಪನಾಗಿರುವೆ. ನೀನು ಪುರಾಣ ಪುರುಷನಾದುದರಿಂದ ಜನ್ಮಾದಿವಿಕಾರಗಳಿಂದ ರಹಿತನಾಗಿರುವೆ. ಸ್ವಯಂಜ್ಯೋತಿಯೂ, ಅನಂತನೂ, ಆದಿಪುರುಷನೂ ನೀನೇ ಆಗಿರುವೆ. ನಿತ್ಯನೂ, ಕ್ಷಯರಹಿತನೂ, ಅಖಂಡಾನಂದ ಸ್ವರೂಪನೂ ನೀನೇ ಆಗಿರುವೆ. ನಿರಂಜನನೂ, ಪೂರ್ಣನೂ, ಅದ್ವಿತೀಯನೂ ನೀನೇ ಆಗಿರುವೆ. ಸಮಸ್ತ ವಾದ ಉಪಾಧಿಗಳಿಂದಲೂ ಮುಕ್ತನಾಗಿರುವುದರಿಂದ ಅಮೃತಸ್ವರೂಪನೂ ನೀನೇ ಆಗಿರುವೆ. ॥23॥

(ಶ್ಲೋಕ-24)

ಮೂಲಮ್

ಏವಂವಿಧಂ ತ್ವಾಂ ಸಕಲಾತ್ಮನಾಮಪಿ
ಸ್ವಾತ್ಮಾನಮಾತ್ಮಾತ್ಮತಯಾ ವಿಚಕ್ಷತೇ ।
ಗುರ್ವರ್ಕಲಬ್ಧೋಪನಿಷತ್ಸುಚಕ್ಷುಷಾ
ಯೇ ತೇ ತರಂತೀವ ಭವಾನೃತಾಂಬುಧಿಮ್ ॥

ಅನುವಾದ

ನೀನು ಎಲ್ಲ ಜೀವಿಗಳಲ್ಲಿಯೂ, ಆತ್ಮಸ್ವರೂಪವಾಗಿ ಬೆಳಗುವೆ. ಗುರುರೂಪನಾದ ಸೂರ್ಯನಿಂದ ತತ್ತ್ವಜ್ಞಾನ ರೂಪವಾದ ದಿವ್ಯದೃಷ್ಟಿಯನ್ನು ಹೊಂದಿ ನಿನ್ನನ್ನು ತನ್ನಲ್ಲಿಯೇ ಸಾಕ್ಷಾತ್ಕರಿಸಿಕೊಂಡವರು ಈ ಮಿಥ್ಯಾಸಂಸಾರ ಸಾಗರವನ್ನು ದಾಟಿಹೋಗುತ್ತಾರೆ. ॥24॥

(ಶ್ಲೋಕ-25)

ಮೂಲಮ್

ಆತ್ಮಾನಮೇವಾತ್ಮತಯಾವಿಜಾನತಾಂ
ತೇನೈವ ಜಾತಂ ನಿಖಿಲಂ ಪ್ರಪಂಚಿತಮ್ ।
ಜ್ಞಾನೇನ ಭೂಯೋಪಿ ಚ ತತ್ಪ್ರಲೀಯತೇ
ರಜ್ಜ್ವಾಮಹೇರ್ಭೋಗಭವಾಭವೌ ಯಥಾ ॥

ಅನುವಾದ

ಪರಮಾತ್ಮನನ್ನು ಆತ್ಮರೂಪವಾಗಿ ತಿಳಿಯದವರಿಗೆ ಆ ಅಜ್ಞಾನದ ಕಾರಣದಿಂದಲೇ ಈ ನಾಮ-ರೂಪಾತ್ಮಕವಾದ ಅಖಿಲ ಜಗತ್ತಿನ ಉತ್ಪತ್ತಿಯ ಭ್ರಮೆ ಉಂಟಾಗುತ್ತದೆ. ಆದರೆ ಹಗ್ಗದಲ್ಲಿ ಉಂಟಾದ ಸರ್ಪದ ಭ್ರಮೆಯು ನಿವೃತ್ತವಾಗುತ್ತಲೇ ಸರ್ಪದ ಭಯ ಹೊರಟು ಹೋಗುವಂತೆ ಜ್ಞಾನ ಉಂಟಾಗುತ್ತಲೇ ಇದರ ಆತ್ಯಂತಿಕ ಪ್ರಳಯವಾಗಿ ಹೋಗುತ್ತದೆ. ॥25॥

(ಶ್ಲೋಕ-26)

ಮೂಲಮ್

ಅಜ್ಞಾನಸಂಜ್ಞೌ ಭವಬಂಧಮೋಕ್ಷೌ
ದ್ವೌ ನಾಮ ನಾನ್ಯೌ ಸ್ತ ಋತಜ್ಞಭಾವಾತ್ ।
ಅಜಸ್ರಚಿತ್ಯಾತ್ಮನಿ ಕೇವಲೇ ಪರೇ
ವಿಚಾರ್ಯಮಾಣೇ ತರಣಾವಿವಾಹನೀ ॥

ಅನುವಾದ

ಸಂಸಾರ ಸಂಬಂಧವಾದ ಬಂಧನ ಮತ್ತು ಅದರಿಂದ ಮೋಕ್ಷ ಇವೆರಡೂ ಅಜ್ಞಾನ ಕಲ್ಪಿತವೇ ಆಗಿವೆ. ವಾಸ್ತವವಾಗಿ ಇವೆರಡೂ ಅಜ್ಞಾನದ್ದೇ ಹೆಸರಾಗಿದೆ. ಇವುಗಳಿಗೆ ಸತ್ಯನೂ, ಜ್ಞಾನಸ್ವರೂಪನೂ ಆದ ಪರಮಾತ್ಮನಿಂದ ಭಿನ್ನವಾದ ಅಸ್ತಿತ್ವವೇ ಇರುವುದಿಲ್ಲ. ಸೂರ್ಯನಲ್ಲಿ ಹಗಲು-ಕತ್ತಲೆ ಎಂಬ ಭೇದವೇ ಇಲ್ಲದಿರುವಂತೇ ವಿಚಾರ ಮಾಡಿದಾಗ ಅಖಂಡ ಚಿತ್ಸ್ವರೂಪ, ಕೇವಲ ಶುದ್ಧ ಆತ್ಮತತ್ತ್ವದಲ್ಲಿ ಬಂಧನವಾಗಲೀ, ಮೋಕ್ಷವಾಗಲೀ ಇಲ್ಲ. ॥26॥

(ಶ್ಲೋಕ-27)

ಮೂಲಮ್

ತ್ವಾಮಾತ್ಮಾನಂ ಪರಂ ಮತ್ವಾ ಪರಮಾತ್ಮಾನಮೇವ ಚ ।
ಆತ್ಮಾ ಪುನರ್ಬಹಿರ್ಮೃಗ್ಯ ಅಹೋಜ್ಞಜನತಾಜ್ಞತಾ ॥

ಅನುವಾದ

ನೀನು ತಮ್ಮ ಆತ್ಮನೇ ಆಗಿದ್ದರೂ ಜನರು ಅದನ್ನು ಬೇರೆಯೆಂದೇ ತಿಳಿಯುತ್ತಾರೆ. ಶರೀರಾದಿಗಳು ಬೇರೆಯಾಗಿದ್ದರೂ ಅವನ್ನು ತನ್ನ ಆತ್ಮನೆಂದೇ ತಿಳಿದಿರುತ್ತಾರೆ. ಮತ್ತೆ ನಿನ್ನನ್ನು ಎಲ್ಲೋ ಹುಡುಕ ತೊಡಗುತ್ತಾರೆ. ಇದೆಂತಹ ಆಶ್ಚರ್ಯದ ಮಾತಾಗಿದೆ? ಅಜ್ಞಾನೀ ಜೀವಿಯ ಇದು ಅಜ್ಞಾನವೇ ಸರಿ. ॥27॥

(ಶ್ಲೋಕ-28)

ಮೂಲಮ್

ಅಂತರ್ಭವೇನಂತ ಭವಂತಮೇವ
ಹ್ಯತತ್ತ್ಯಜಂತೋ ಮೃಗಯಂತಿ ಸಂತಃ ।
ಅಸಂತಮಪ್ಯಂತ್ಯಹಿಮಂತರೇಣ
ಸಂತಂ ಗುಣಂ ತಂ ಕಿಮು ಯಂತಿ ಸಂತಃ ॥

ಅನುವಾದ

ಓ ಅನಂತನೇ! ನೀನಾದರೋ ಎಲ್ಲರ ಅಂತಃಕರಣದಲ್ಲೇ ವಿರಾಜಮಾನನಾಗಿರುವೆ. ಅದಕ್ಕಾಗಿ ಸಂತರಾದ ಸತ್ಪುರುಷರು ನಿನ್ನನಲ್ಲದೆ ಕಂಡುಬರುವುದೆಲ್ಲವನ್ನೂ ಪರಿತ್ಯಾಗಮಾಡಿ, ತಮ್ಮ ಅಂತರಂಗದಲ್ಲೇ ನಿನ್ನನ್ನು ಹುಡುಕುತ್ತಾರೆ. ಏಕೆಂದರೆ, ಹಗ್ಗದಲ್ಲಿ ಸರ್ಪವಿಲ್ಲದಿದ್ದರೂ ಆ ಮಿಥ್ಯೆಯಾಗಿ ಕಂಡು ಬರುವ ಸರ್ಪದ ಭ್ರಮೆಯು ಹೋಗದೆ ಯಾವ ಸತ್ಪುರುಷನು ನಿಜವಾದ ಹಗ್ಗವನ್ನು ತಿಳಿಯಬಲ್ಲನು? ॥28॥

(ಶ್ಲೋಕ-29)

ಮೂಲಮ್

ಅಥಾಪಿ ತೇ ದೇವ ಪದಾಂಬುಜದ್ವಯ-
ಪ್ರಸಾದಲೇಶಾನುಗೃಹೀತ ಏವ ಹಿ ।
ಜಾನಾತಿ ತತ್ತ್ವಂ ಭಗವನ್ಮಹಿಮ್ನೋ
ನ ಚಾನ್ಯ ಏಕೋಪಿ ಚಿರಂ ವಿಚಿನ್ವನ್ ॥

ಅನುವಾದ

ದೇವನೇ! ಯಾವ ಮನುಷ್ಯರು ನಿನ್ನ ಚರಣಕಮಲಗಳ ಅತ್ಯಲ್ಪವಾದ ಅನುಗ್ರಹವನ್ನಾದರೂ ಪಡೆಯುವರೋ ಅವರು ನಿನ್ನ ಸ್ವರೂಪದ ಮಹಿಮೆಯ ತತ್ತ್ವವನ್ನು ಸುಲಭವಾಗಿ ಬಹಳ ಬೇಗನೇ ತಿಳಿದುಕೊಳ್ಳುತ್ತಾರೆ. ಬೇರೆಯವರು ಜ್ಞಾನ-ವೈರಾಗ್ಯಾದಿಗಳನ್ನು ಬಹಳ ಕಾಲದವರೆಗೂ ಅನುಸಂಧಾನ ಮಾಡಿದರೂ ನಿನ್ನ ಮಹಿಮೆಯನ್ನು ಯಥಾವತ್ತಾಗಿ ತಿಳಿಯಲಾರರು. ॥29॥

(ಶ್ಲೋಕ-30)

ಮೂಲಮ್

ತದಸ್ತು ಮೇ ನಾಥ ಸ ಭೂರಿಭಾಗೋ
ಭವೇತ್ರ ವಾನ್ಯತ್ರ ತು ವಾ ತಿರಶ್ಚಾಮ್ ।
ಯೇನಾಹಮೇಕೋಪಿ ಭವಜ್ಜನಾನಾಂ
ಭೂತ್ವಾ ನಿಷೇವೇ ತವ ಪಾದಪಲ್ಲವಮ್ ॥

ಅನುವಾದ

ಆದುದರಿಂದ ಭಗವಂತನೇ! ನನ್ನ ಈ ಜನ್ಮದಲ್ಲಾಗಲೀ, ಬೇರೆ ಜನ್ಮದಲ್ಲಾಗಲೀ, ಪಶು-ಪಕ್ಷಿಗಳ ಜನ್ಮದಲ್ಲೇ ಆಗಲೀ; ನಿನ್ನ ಭಕ್ತ ಸಮೂಹದಲ್ಲಿ ಒಬ್ಬ ಭಕ್ತನಾಗಿದ್ದು, ನಿನ್ನ ಚರಣಕಮಲಗಳ ಸೇವೆ ಮಾಡಲು ಸಾಧ್ಯವಾಗುವಂತಹ ಮಹಾಭಾಗ್ಯವು ಪ್ರಾಪ್ತವಾಗುವಂತೆ ಅನುಗ್ರಹಿಸು. ॥30॥

(ಶ್ಲೋಕ-31)

ಮೂಲಮ್

ಅಹೋತಿಧನ್ಯಾ ವ್ರಜಗೋರಮಣ್ಯಃ
ಸ್ತನ್ಯಾಮೃತಂ ಪೀತಮತೀವ ತೇ ಮುದಾ ।
ಯಾಸಾಂ ವಿಭೋ ವತ್ಸತರಾತ್ಮಜಾತ್ಮನಾ
ಯತ್ತೃಪ್ತಯೇದ್ಯಾಪಿ ನ ಚಾಲಮಧ್ವರಾಃ ॥

ಅನುವಾದ

ಸ್ವಾಮಿಯೇ! ಜಗತ್ತು ಆರಂಭವಾದಾಗಿನಿಂದ ಇದುವರೆಗೂ ನಡೆದ ಹಲವಾರು ಯಜ್ಞಗಳಿಂದ ನಿನ್ನನ್ನು ಪೂರ್ಣವಾಗಿ ತೃಪ್ತಿಪಡಿಸಲಾಗಲಿಲ್ಲ. ಆದರೆ ನೀನು ವ್ರಜದ ಹಸುಗಳ ಮತ್ತು ಗೋಪಿಯರ ಕರುಗಳು ಹಾಗೂ ಗೋಪಬಾಲಕರು ಆಗಿ ಅವರ ಸ್ತನಗಳ ಅಮೃತದಂತಹ ಹಾಲನ್ನು ಪರಮಾನಂದದಿಂದ ಕುಡಿದು ತೃಪ್ತನಾದೆ. ಆದುದರಿಂದ ವ್ರಜದಲ್ಲಿರುವ ಗೋವುಗಳು ಹಾಗೂ ಗೋಪಸ್ತ್ರೀಯರೇ ಅತ್ಯಂತ ಧನ್ಯರು. ॥31॥

(ಶ್ಲೋಕ-32)

ಮೂಲಮ್

ಅಹೋ ಭಾಗ್ಯಮಹೋ ಭಾಗ್ಯಂ ನಂದಗೋಪವ್ರಜೌಕಸಾಮ್ ।
ಯನ್ಮಿತ್ರಂ ಪರಮಾನಂದಂ ಪೂರ್ಣಂ ಬ್ರಹ್ಮ ಸನಾತನಮ್ ॥

ಅನುವಾದ

ಪರಮಾನಂದ ಸ್ವರೂಪನಾದ, ಸನಾತನನಾದ, ಪರಿಪೂರ್ಣನಾದ, ಪರಬ್ರಹ್ಮ ಸ್ವರೂಪನಾದ ನೀನು ಪರಮ ಮಿತ್ರನೂ, ಸುಹೃದನೂ ಆಗಿರುವ ನಂದನೇ ಮೊದಲಾದ ವ್ರಜದ ಗೋಪ ಗೋಪಬಾಲಕರ ಭಾಗ್ಯವೇ ಭಾಗ್ಯವು! ॥32॥

(ಶ್ಲೋಕ-33)

ಮೂಲಮ್

ಏಷಾಂ ತು ಭಾಗ್ಯಮಹಿಮಾಚ್ಯುತ ತಾವದಾಸ್ತಾ-
ಮೇಕಾದಶೈವ ಹಿ ವಯಂ ಬತ ಭೂರಿಭಾಗಾಃ ।
ಏತದ್ಧೃಷೀಕಚಷಕೈರಸಕೃತ್ಪಿಬಾಮಃ
ಶರ್ವಾದಯೋಂಘ್ರ್ಯುದಜಮಧ್ವಮೃತಾಸವಂ ತೇ ॥

ಅನುವಾದ

ಅಚ್ಯುತನೇ! ಈ ವ್ರಜವಾಸಿಗಳ ಸೌಭಾಗ್ಯದ ಮಹಿಮೆಯು ಹಾಗಿರಲಿ. ಮನಸ್ಸೇ ಮೊದಲಾದ ಹನ್ನೊಂದು ಇಂದ್ರಿಯಗಳ ಅಧಿಷ್ಠಾತೃ ದೇವತೆಗಳಾಗಿರುವ ಮಹಾದೇವನೇ ಮೊದಲಾದ ನಾವುಗಳು ಮಹಾ ಭಾಗ್ಯಶಾಲಿಗಳಾಗಿದ್ದೇವೆ. ಏಕೆಂದರೆ, ಈ ವ್ರಜವಾಸಿಗಳ ಮನಸ್ಸೇ ಮೊದಲಾದ ಹನ್ನೊಂದು ಇಂದ್ರಿಯಗಳೆಂಬ ಪಾತ್ರೆಗಳನ್ನಾಗಿಸಿಕೊಂಡು ನಾವು ನಿನ್ನ ಚರಣಕಮಲಗಳ ಅಮೃತಕ್ಕಿಂತಲೂ ಮಧುರವಾದ ಮಕರಂದ ರಸವನ್ನು ಪಾನಮಾಡುತ್ತಾ ಇರುತ್ತೇವೆ. ಅವರ ಒಂದೊಂದು ಇಂದ್ರಿಯದಿಂದ ಪಾನ ಮಾಡಿ ನಾವು ಧನ್ಯರಾಗುತ್ತಿರುವಾಗ ಸಮಸ್ತ ಇಂದ್ರಿಯಗಳಿಂದ ಅದನ್ನು ಸೇವಿಸುತ್ತಿರುವ ವ್ರಜವಾಸಿಗಳ ಸೌಭಾಗ್ಯವು ಎಷ್ಟೆಂಬುದನ್ನು ಹೇಳಬೇಕಾಗಿಯೆ ಇಲ್ಲ. ॥33॥

(ಶ್ಲೋಕ-34)

ಮೂಲಮ್

ತದ್ಭೂರಿಭಾಗ್ಯಮಿಹ ಜನ್ಮ ಕಿಮಪ್ಯಟವ್ಯಾಂ
ಯದ್ಗೋಕುಲೇಪಿ ಕತಮಾಂಘ್ರಿರಜೋಭಿಷೇಕಮ್ ।
ಯಜ್ಜೀವಿತಂ ತು ನಿಖಿಲಂ ಭಗವಾನ್ಮುಕುಂದ-
ಸ್ತ್ವದ್ಯಾಪಿ ಯತ್ಪದರಜಃ ಶ್ರುತಿಮೃಗ್ಯಮೇವ ॥

ಅನುವಾದ

ಪ್ರಭುವೇ! ಈ ವ್ರಜಭೂಮಿಯ ಯಾವುದೇ ವನದಲ್ಲಿ ಮತ್ತು ವಿಶೇಷವಾಗಿ ಗೋಕುಲದಲ್ಲಿ ಯಾವುದೇ ಯೋನಿಯಲ್ಲಿ ಜನ್ಮವೆತ್ತುವುದೇ ನಮ್ಮ ಸೌಭಾಗ್ಯದ ಮಾತಾಗಿದೆ. ಏಕೆಂದರೆ, ಇಲ್ಲಿ ಹುಟ್ಟಿದ ಬಳಿಕ ನಿನ್ನ ಯಾರಾದರೂ ಪ್ರೇಮಿಯ (ಭಕ್ತನ) ಚರಣಧೂಳು ನಮ್ಮ ಮೇಲೆ ಬೀಳಬಹುದಲ್ಲ! ಪ್ರಭುವೇ! ನಿನ್ನ ಪ್ರೇಮಿ ವ್ರಜವಾಸಿಗಳ ಸಂಪೂರ್ಣ ಜೀವನವು ನಿನ್ನದೇ ಜೀವನವಾಗಿದೆ. ನೀನೇ ಅವರ ಜೀವನದ ಏಕಮಾತ್ರ ಸರ್ವಸ್ವನಾಗಿರುವೆ. ಅದಕ್ಕಾಗಿ ಅವರ ಚರಣಗಳ ಧೂಳಿ ಸಿಗುವುದೂ ನಿನ್ನ ಚರಣಧೂಳಿ ಸಿಗುವಂತೆ ಇದೆ. ನಿನ್ನ ಚರಣಧೂಳಿಯನ್ನಾದರೋ ಶ್ರುತಿಗಳೂ ಕೂಡ ಅನಾದಿಕಾಲದಿಂದ ಇಂದಿನವರೆಗೆ ಹುಡುಕುತ್ತಿರುವವು. ॥34॥

(ಶ್ಲೋಕ-35)

ಮೂಲಮ್

ಏಷಾಂ ಘೋಷನಿವಾಸಿನಾಮುತ ಭವಾನ್ಕಿಂ ದೇವರಾತೇತಿ ನ-
ಶ್ಚೇತೋ ವಿಶ್ವಲಾತ್ಫಲಂ ತ್ವದಪರಂ ಕುತ್ರಾಪ್ಯಯನ್ಮುಹ್ಯತಿ ।
ಸದ್ ವೇಷಾದಿವ ಪೂತನಾಪಿ ಸಕುಲಾ ತ್ವಾಮೇವ ದೇವಾಪಿತಾ
ಯದ್ಧಾಮಾರ್ಥಸುಹೃತ್ಪ್ರಿಯಾತ್ಮತನಯಪ್ರಾಣಾಶಯಾಸ್ತ್ವತ್ಕೃತೇ ॥

ಅನುವಾದ

ದೇವತೆಗಳಿಗೂ ಆರಾಧ್ಯನಾದ ಪ್ರಭುವೇ! ಈ ವ್ರಜವಾಸಿಗಳು ಮಾಡುವ ಸೇವೆಯ ಬದಲಿಗೆ ನೀನು ಏನು ಫಲವನ್ನು ಕೊಡುವೆ? ಸಮಸ್ತ ಫಲಗಳ ಫಲಸ್ವರೂಪನೇ! ನಿನ್ನಿಂದ ಮಿಗಿಲಾದ ಬೇರೆ ಯಾವುದೇ ಫಲವು ಇಲ್ಲವೇ ಇಲ್ಲ. ಹೀಗೆಂದು ಯೋಚಿಸುತ್ತಾ ನನ್ನ ಚಿತ್ತವು ಮೋಹಿತಗೊಳ್ಳುತ್ತಿದೆ. ಅವರಿಗೆ ನೀನು ತನ್ನ ಸ್ವರೂಪವನ್ನೇ ಕೊಟ್ಟರೂ ಅವರ ಋಣದಿಂದ ಮುಕ್ತನಾಗಲಾರೆ. ಏಕೆಂದರೆ, ನಿನ್ನ ಸ್ವರೂಪವನ್ನೇನೋ ಆ ಪೂತನೆಯೂ ನಿನ್ನ ಸಂಬಂಧದಿಂದ ಅಘಾಸುರ, ಬಕಾಸುರ ಮುಂತಾದವರೊಡನೆ ಪಡೆದುಕೊಂಡಳು. ಅವಳ ವೇಷ ಕೇವಲ ಸಾಧ್ವಿಯಂತೆ ಇತ್ತು ಆದರೆ ಹೃದಯದಿಂದ ಕ್ರೂರಿಯಾಗಿದ್ದಳು. ಹೀಗಿರುವಾಗ ತನ್ನ ಮನೆ, ಧನ, ಸ್ವಜನರು, ಪ್ರಿಯರು, ಶರೀರ, ಪುತ್ರ, ಪ್ರಾಣ ಮತ್ತು ಮನಸ್ಸು ಹೀಗೆ ಎಲ್ಲವನ್ನು ನಿನ್ನ ಚರಣಗಳಲ್ಲಿ ಅರ್ಪಿಸಿರುವ, ಆ ವ್ರಜವಾಸಿಗಳಿಗೂ ಅದೇ ಫಲವನ್ನು ಕೊಟ್ಟು ನೀನು ಹೇಗೆ ಋಣಮುಕ್ತನಾಗುವೆ? ॥35॥

(ಶ್ಲೋಕ-36)

ಮೂಲಮ್

ತಾವದ್ರಾಗಾದಯಃ ಸ್ತೇನಾಸ್ತಾವತ್ಕಾರಾಗೃಹಂ ಗೃಹಮ್ ।
ತಾವನ್ಮೋಹೋಂಘ್ರಿನಿಗಡೋ ಯಾವತ್ ಕೃಷ್ಣ ನ ತೇ ಜನಾಃ ॥

ಅನುವಾದ

ಶ್ಯಾಮಸುಂದರನೇ! ಜೀವರು ನಿನ್ನವರಾಗುವತನಕ, ಭಕ್ತರಾಗುವತನಕ ರಾಗದ್ವೇಷಾದಿ ದೋಷಗಳು ಕಳ್ಳರಂತೆ ಅವರ ಸರ್ವಸ್ವವನ್ನು ಅಪಹರಿಸಿ ಬಿಡುತ್ತವೆ; ಮನೆಯು ಸೆರೆಮನೆಯಾಗಿರುತ್ತದೆ; ಮೋಹವು ಕಾಲುಗಳಿಗೆ ಸಂಕೋಲೆಯಾಗಿ ಬಂಧನಕ್ಕೆ ಕಾರಣವಾಗುತ್ತದೆ. ॥36॥

(ಶ್ಲೋಕ-37)

ಮೂಲಮ್

ಪ್ರಪಂಚಂ ನಿಷ್ಪ್ರಪಂಚೋಪಿ ವಿಡಂಬಯಸಿ ಭೂತಲೇ ।
ಪ್ರಪನ್ನಜನತಾನಂದಸಂದೋಹಂ ಪ್ರಥಿತುಂ ಪ್ರಭೋ ॥

(ಶ್ಲೋಕ-38)

ಮೂಲಮ್

ಜಾನಂತ ಏವ ಜಾನಂತು ಕಿಂ ಬಹೂಕ್ತ್ಯಾ ನ ಮೇ ಪ್ರಭೋ ।
ಮನಸೋ ವಪುಷೋ ವಾಚೋ ವೈಭವಂ ತವ ಗೋಚರಃ ॥

ಅನುವಾದ

ಹೆಚ್ಚು ಹೇಳುವುದರಿಂದ ಪ್ರಯೋಜನವೇನೂ ಇಲ್ಲ. ಲೋಕದಲ್ಲಿ ನಿನ್ನ ಮಹಿಮೆಯನ್ನು ತಿಳಿದಿರುವವರು ತಿಳಿಯುತ್ತಾ ಇರಲಿ. ನನ್ನ ಮನಸ್ಸು, ಮಾತು, ಶರೀರಗಳಂತೂ ನಿನ್ನ ಮಹಿಮೆಯನ್ನು ತಿಳಿಯಲು ಸರ್ವಥಾ ಅಸಮರ್ಥವಾಗಿದೆ. ॥37-38॥

(ಶ್ಲೋಕ-39)

ಮೂಲಮ್

ಅನುಜಾನೀಹಿ ಮಾಂ ಕೃಷ್ಣ ಸರ್ವಂ ತ್ವಂ ವೇತ್ಸಿ ಸರ್ವದೃಕ್ ।
ತ್ವಮೇವ ಜಗತಾಂ ನಾಥೋ ಜಗದೇತತ್ತವಾರ್ಪಿತಮ್ ॥

ಅನುವಾದ

ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ನೀನು ಸರ್ವಸಾಕ್ಷಿಯಾಗಿ ಎಲ್ಲವನ್ನೂ ತಿಳಿದವನಾಗಿರುವೆ. ಸಕಲ ಜಗತ್ತಿಗೂ ಒಡೆಯನಾಗಿರುವೆ. ಈ ಅಖಂಡ ಭೂಮಂಡಲವೂ ನಿನ್ನಲ್ಲಿಯೇ ನೆಲೆಗೊಂಡಿದೆ. ನಾನು ನಿನ್ನ ವಿಷಯದಲ್ಲಿ ಇನ್ನೇನು ಹೇಳಲಿ? ನನ್ನನ್ನು ಭಕ್ತನನ್ನಾಗಿ ನೀನು ಸ್ವೀಕರಿಸು. ಸ್ವಾಮಿಯೇ! ನಾನು ನನ್ನ ಲೋಕಕ್ಕೆ ಹೋಗಲು ಅನುಮತಿಯನ್ನು ನೀಡು. ॥39॥

(ಶ್ಲೋಕ-40)

ಮೂಲಮ್

ಶ್ರೀಕೃಷ್ಣ ವೃಷ್ಣಿಕುಲಪುಷ್ಕರಜೋಷದಾಯಿನ್
ಕ್ಷ್ಮಾನಿರ್ಜರದ್ವಿಜಪಶೂದಧಿವೃದ್ಧಿಕಾರಿನ್ ।
ಉದ್ಧರ್ಮಶಾರ್ವರಹರ ಕ್ಷಿತಿರಾಕ್ಷಸಧ್ರು-
ಗಾಕಲ್ಪಮಾರ್ಕಮರ್ಹನ್ಭಗವನ್ನಮಸ್ತೇ ॥

ಅನುವಾದ

ಸಮಸ್ತರ ಮನಃಪ್ರಾಣಗಳನ್ನು ರೂಪಮಾಧುರ್ಯಗಳಿಂದ ಆಕರ್ಷಿಸುವ ಶ್ಯಾಮಸುಂದರನೇ! ನೀನು ಯದುವಂಶರೂಪವಾದ ಕಮಲವನ್ನು ವಿಕಸಿತಗೊಳಿಸುವ ಸೂರ್ಯನಾಗಿರುವೆ. ಭೂ-ದೇವತಾ-ಬ್ರಾಹ್ಮಣ ಗೋವು ಮತ್ತು ಸಮುದ್ರವನ್ನು ಅಭಿವೃದ್ಧಿಗೊಳಿಸುವ ಚಂದ್ರನೂ ನೀನೇ ಆಗಿರುವೆ. ಪಾಷಂಡ ಧರ್ಮವೆಂಬ ರಾತ್ರಿಯ ಘೋರ ಅಂಧಕಾರವನ್ನು ನಾಶಗೊಳಿಸುವುದರಲ್ಲಿ ಚಂದ್ರ-ಸೂರ್ಯರಿಗೆ ಸಮಾನನಾಗಿರುವೆ. ಲೋಕದ್ರೋಹಿಗಳಾದ ಕಂಸನೇ ಮೊದಲಾದ ರಾಕ್ಷಸರಿಗೆ ನೀನು ದ್ರೋಹಿಯಾಗಿರುವೆ. ಭಗವಂತ! ನಾನು ಜೀನವವಿಡೀ, ಮಹಾ ಕಲ್ಪಾಂತ್ಯದವರೆಗೂ ನಿನಗೆ ನಮಸ್ಕರಿಸುತ್ತಲೇ ಇರುವೆನು. ॥40॥

(ಶ್ಲೋಕ-41)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯಭಿಷ್ಟೂಯ ಭೂಮಾನಂ ತ್ರಿಃ ಪರಿಕ್ರಮ್ಯ ಪಾದಯೋಃ ।
ನತ್ವಾಭೀಷ್ಟಂ ಜಗದ್ಧಾತಾ ಸ್ವಧಾಮ ಪ್ರತ್ಯಪದ್ಯತ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜ! ಸೃಷ್ಟಿಕರ್ತನಾದ ಬ್ರಹ್ಮನು ಈ ಪ್ರಕಾರವಾಗಿ ಭಗವಾನ್ ಶ್ರೀಕೃಷ್ಣನನ್ನು ಸ್ತುತಿಸಿ, ಅವನಿಗೆ ಮೂರು ಪ್ರದಕ್ಷಿಣೆ ಬಂದು, ಅವನ ಚರಣಗಳಲ್ಲಿ ವಂದಿಸಿಕೊಂಡು ತನ್ನ ಸ್ಥಾನವಾದ ಸತ್ಯಲೋಕಕ್ಕೆ ತೆರಳಿದನು. ॥41॥

(ಶ್ಲೋಕ-42)

ಮೂಲಮ್

ತತೋನುಜ್ಞಾಪ್ಯ ಭಗವಾನ್ಸ್ವಭೂವಂ ಪ್ರಾಗವಸ್ಥಿತಾನ್ ।
ವತ್ಸಾನ್ಪುಲಿನಮಾನಿನ್ಯೇ ಯಥಾಪೂರ್ವಸಖಂ ಸ್ವಕಮ್ ॥

ಅನುವಾದ

ಬ್ರಹ್ಮದೇವನು ಈ ಮೊದಲೇ ಕರುಗಳನ್ನೂ, ಗೋಪ ಬಾಲಕರನ್ನೂ ಅವರು ಹಿಂದಿದ್ದ ಸ್ಥಳಕ್ಕೆ ಕಳುಹಿಸಿಬಿಟ್ಟಿದ್ದನು. ಶ್ರೀಕೃಷ್ಣನು ಬ್ರಹ್ಮದೇವರನ್ನು ಬೀಳ್ಕೊಟ್ಟು, ತನ್ನ ಸ್ನೇಹಿತರಾದ ಗೋಪಬಾಲಕರನ್ನು ಮತ್ತು ಕರುಗಳನ್ನು ಯಮುನಾತೀರಕ್ಕೆ ಹೊಡೆದುಕೊಂಡು ಬಂದನು. ॥42॥

(ಶ್ಲೋಕ-43)

ಮೂಲಮ್

ಏಕಸ್ಮಿನ್ನಪಿ ಯಾತೇಬ್ದೇ ಪ್ರಾಣೇಶಂ ಚಾಂತರಾತ್ಮನಃ ।
ಕೃಷ್ಣಮಾಯಾಹತಾ ರಾಜನ್ ಕ್ಷಣಾರ್ಧಂ ಮೇನಿರೇರ್ಭಕಾಃ ॥

ಅನುವಾದ

ಪರೀಕ್ಷಿತನೇ! ತಮ್ಮ ಜೀವನ ಸರ್ವಸ್ವನಾದ, ಪ್ರಾಣವಲ್ಲಭನಾದ ಶ್ರೀಕೃಷ್ಣನನ್ನು ಅಗಲಿ ಗೋಪಬಾಲಕರಿಗೆ ಒಂದು ವರ್ಷವೇ ಕಳೆದು ಹೋಗಿತ್ತು. ಆದರೂ ಶ್ರೀಕೃಷ್ಣನ ಯೋಗಮಾಯೆಯಿಂದ ಮರುಳಾದ ಗೋಪಬಾಲಕರಿಗೆ ಆ ಸಮಯವು ಕ್ಷಣಾರ್ಧದಂತೆ ಅನಿಸಿತು. ॥43॥

(ಶ್ಲೋಕ-44)

ಮೂಲಮ್

ಕಿಂ ಕಿಂ ನ ವಿಸ್ಮರಂತೀಹ ಮಾಯಾಮೋಹಿತಚೇತಸಃ ।
ಯನ್ಮೋಹಿತಂ ಜಗತ್ಸರ್ವಮಭೀಕ್ಷ್ಣಂ ವಿಸ್ಮೃತಾತ್ಮಕಮ್ ॥

ಅನುವಾದ

ಜಗತ್ತಿನ ಸಮಸ್ತ ಜೀವಿಗಳು ಅದೇ ಮಾಯೆಯಿಂದ ಮೋಹಿತರಾಗಿ ಶಾಸ್ತ್ರ ಮತ್ತು ಆಚಾರ್ಯರು ಪದೇ-ಪದೇ ತಿಳಿಸಿಹೇಳಿದರೂ ತನ್ನ ಆತ್ಮವನ್ನು ನಿರಂತರವಾಗಿ ಮರೆತಿರುತ್ತಾರೆ. ನಿಜವಾಗಿ ಆ ಮಾಯೆಯ ಶಕ್ತಿಯೇ ಇಂತಹುದು. ಅದರಿಂದ ಮೋಹಿತನಾದ ಜೀವನು ಇಲ್ಲಿ ಏನೇನೆಲ್ಲ ಮರೆಯುವುದಿಲ್ಲ? ॥44॥

(ಶ್ಲೋಕ-45)

ಮೂಲಮ್

ಊಚುಶ್ಚ ಸುಹೃದಃ ಕೃಷ್ಣಂ ಸ್ವಾಗತಂ ತೇತಿರಂಹಸಾ ।
ನೈಕೋಪ್ಯಭೋಜಿ ಕವಲ ಏಹೀತಃ ಸಾಧು ಭುಜ್ಯತಾಮ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನನ್ನು ನೋಡುತ್ತಲೇ ಗೋಪಬಾಲಕರೆಲ್ಲರೂ ಅತ್ಯುತ್ಸಾಹದಿಂದ ಅವನಲ್ಲಿ ಹೇಳಿದರು ‘‘ಶ್ರೀಕೃಷ್ಣ! ನೀನು ಬಂದುದು ಒಳ್ಳೆಯದಾಯಿತು. ನಿನಗೆ ಸ್ವಾಗತ ಬಯಸುತ್ತೇವೆ. ನೀನಿಲ್ಲದೆ ನಾವು ಒಂದು ತುತ್ತು ಅನ್ನವನ್ನು ತಿಂದಿರುವುದಿಲ್ಲ. ಇತ್ತ ಬಾ; ಕುಳಿತುಕೋ. ಆನಂದವಾಗಿ ಭೋಜನ ಮಾಡು.’’ ॥45॥

(ಶ್ಲೋಕ-46)

ಮೂಲಮ್

ತತೋ ಹಸನ್ ಹೃಷೀಕೇಶೋಭ್ಯವಹೃತ್ಯ ಸಹಾರ್ಭಕೈಃ ।
ದರ್ಶಯಂಶ್ಚರ್ಮಾಜಗರಂ ನ್ಯವರ್ತತ ವನಾದ್ವ್ರಜಮ್ ॥

ಅನುವಾದ

ಆಗ ಶ್ರೀಕೃಷ್ಣನು ನಸುನಗುತ್ತಾ ಗೋಪಬಾಲಕರೊಂದಿಗೆ ಭೋಜನ ಮಾಡಿದನು. ಬಳಿಕ ಹೆಬ್ಬಾವಿನ ತೊಗಲನ್ನು ಗೋಪ ಬಾಲಕರಿಗೆ ತೋರಿಸುತ್ತಾ ವನದಿಂದ ವ್ರಜಕ್ಕೆ ಮರಳಿದನು. ॥46॥

(ಶ್ಲೋಕ-47)

ಮೂಲಮ್

ಬರ್ಹಪ್ರಸೂನನವಧಾತು ವಿಚಿತ್ರಿತಾಂಗಃ
ಪ್ರೋದ್ದಾಮವೇಣುದಲಶೃಂಗರವೋತ್ಸವಾಢ್ಯಃ ।
ವತ್ಸಾನ್ಗೃಣನ್ನನುಗಗೀತಪವಿತ್ರಕೀರ್ತಿ-
ರ್ಗೋಪೀದೃಗುತ್ಸವದೃಶಿಃ ಪ್ರವಿವೇಶ ಗೋಷ್ಠಮ್ ॥

ಅನುವಾದ

ಶ್ರೀಕೃಷ್ಣನ ತಲೆಯು ನವಿಲುಗರಿಗಳಿಂದಲೂ, ಹೂವಿನ ದಂಡೆಯಿಂದಲೂ ಸಮಲಂಕೃತವಾಗಿತ್ತು. ಹೊಸ-ಹೊಸ ಬಣ್ಣದ ಧಾತುಗಳಿಂದ ಆತನ ಶ್ಯಾಮಲ ಶರೀರವು ಚಿತ್ರಿತವಾಗಿತ್ತು. ಅವನು ವ್ರಜದ ಕಡೆಗೆ ಹೋಗುತ್ತಿದ್ದಾಗ ಕೆಲವು ಬಾಲಕರು ಕೊಳಲನ್ನೂದುತ್ತಿದ್ದರು. ಕೆಲವರು ಕೊಂಬುಗಳನ್ನು ಊದುತ್ತಿದ್ದರೆ, ಕೆಲವರು ಎಲೆಗಳಿಂದ ಪೀಪಿಗಳನ್ನು ಮಾಡಿ ಊದುತ್ತಿದ್ದರು. ಇದೊಂದು ವಾದ್ಯೋತ್ಸವದಂತೆಯೇ ಕಾಣುತ್ತಿತ್ತು. ಹಿಂಭಾಗದಲ್ಲಿ ಕೆಲವು ಗೋಪಬಾಲಕರು ಶ್ರೀಕೃಷ್ಣನ ಲೋಕಪಾವನವಾದ ಕೀರ್ತನೆಗಳನ್ನು ಹಾಡುತ್ತಿದ್ದರು. ಕೆಲವರು ತಮ್ಮ ಕರುಗಳ ಹೆಸರುಗಳನ್ನು ಹಿಡಿದು ಕೂಗೂತ್ತಿದ್ದರು. ಕೆಲವರು ತಮ್ಮ ಕರುಗಳನ್ನು ಮುದ್ದಾಡುತ್ತಾ ಹೋಗುತ್ತಿದ್ದರು. ಎರಡೂ ಕಡೆಗಳಲ್ಲಿ ನಿಂತು ಉತ್ಸಾಹದಿಂದ ನೋಡುತ್ತಿದ್ದ ಗೋಪಿಯರ ಕಣ್ಣುಗಳಿಗೆ ಹಬ್ಬವನ್ನುಂಟುಮಾಡುತ್ತಾ ಶ್ರೀಕೃಷ್ಣನು ವ್ರಜವನ್ನು ಪ್ರವೇಶಿಸಿದನು. ॥47॥

(ಶ್ಲೋಕ-48)

ಮೂಲಮ್

ಅದ್ಯಾನೇನ ಮಹಾವ್ಯಾಲೋ ಯಶೋದಾನಂದಸೂನುನಾ ।
ಹತೋವಿತಾ ವಯಂ ಚಾಸ್ಮಾದಿತಿ ಬಾಲಾ ವ್ರಜೇ ಜಗುಃ ॥

ಅನುವಾದ

ಪರೀಕ್ಷಿತನೇ! ಅದೇ ದಿನ ಬಾಲಕರು ವ್ರಜಕ್ಕೆ ಬಂದು ಹೇಳಿದರು - ‘ಇಂದು ಯಶೋದಾ ಮಾತೆಯ ಮುದ್ದುಕಂದನಾದ ಶ್ರೀಕೃಷ್ಣನು ವೃಂದಾವನದಲ್ಲಿ ಒಂದು ದೊಡ್ಡ ಹೆಬ್ಬಾವನ್ನು ಕೊಂದು ನಮ್ಮೆಲ್ಲರನ್ನು ರಕ್ಷಿಸಿದನು.’ ॥48॥

(ಶ್ಲೋಕ-49)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಬ್ರಹ್ಮನ್ಪರೋದ್ಭವೇ ಕೃಷ್ಣೇ ಇಯಾನ್ಪ್ರೇಮಾ ಕಥಂ ಭವೇತ್ ।
ಯೋಭೂತಪೂರ್ವಸ್ತೋಕೇಷು ಸ್ವೋದ್ಭವೇಷ್ವಪಿ ಕಥ್ಯತಾಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ‘ಬ್ರಾಹ್ಮಣ ಶ್ರೇಷ್ಠರೇ! ವ್ರಜವಾಸಿಗಳಿಗೆ ಶ್ರೀಕೃಷ್ಣನು ತಮ್ಮ ಮಗನಾಗಿರದೆ, ಬೇರೆಯವರ ಮಗನಾಗಿದ್ದನು. ಹೀಗಿದ್ದರೂ ಆತನ ಮೇಲೆ ವ್ರಜವಾಸಿಗಳಿಗೆ ಇಷ್ಟೊಂದು ಪ್ರೇಮ ಹೇಗೆ ಉಂಟಾಯಿತು? ಇಂತಹ ಪ್ರೀತಿಯಾದರೋ ಅವರಿಗೆ ತಮ್ಮ ನಿಜ ಮಕ್ಕಳಲ್ಲಿಯೂ ಇರಲಿಲ್ಲ. ಇದರ ಕಾರಣವನ್ನು ತಾವು ದಯಮಾಡಿ ತಿಳಿಸಿರಿ.’॥49॥

(ಶ್ಲೋಕ-50)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸರ್ವೇಷಾಮಪಿ ಭೂತಾನಾಂ ನೃಪ ಸ್ವಾತ್ಮೈವ ವಲ್ಲಭಃ ।
ಇತರೇಪತ್ಯವಿತ್ತಾದ್ಯಾಸ್ತದ್ವಲ್ಲಭತಯೈವ ಹಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಮಹಾರಾಜ! ಜಗತ್ತಿನ ಸಕಲ ಪ್ರಾಣಿಗಳಿಗೆ ತಮ್ಮ ಆತ್ಮನಲ್ಲಿಯೇ ಹೆಚ್ಚಿನ ಪ್ರೀತಿ ಇರುತ್ತದೆ. ಪುತ್ರ-ಧನ ಮುಂತಾದವುಗಳ ಮೇಲಿನ ಪ್ರೇಮವೂ ಕೂಡ ತಮ್ಮ ಆತ್ಮನ ಮೇಲಿನ ಅಪಾರವಾದ ಪ್ರೇಮದಿಂದಲೇ ಉಂಟಾಗುತ್ತದೆ. ಆತ್ಮಪ್ರೀತಿಗಾಗಿಯೇ ಎಲ್ಲವೂ ಇರುವುದು. ॥50॥

(ಶ್ಲೋಕ-51)

ಮೂಲಮ್

ತದ್ರಾಜೇಂದ್ರಯಥಾ ಸ್ನೇಹಃ ಸ್ವಸ್ವಕಾತ್ಮನಿ ದೇಹಿನಾಮ್ ।
ನ ತಥಾ ಮಮತಾಲಂಬಿಪುತ್ರವಿತ್ತಗೃಹಾದಿಷು ॥

ಅನುವಾದ

ರಾಜೇಂದ್ರ! ಎಲ್ಲ ಪ್ರಾಣಿಗಳಿಗೆ ತಮ್ಮ ಆತ್ಮನ ಕುರಿತು ಪ್ರೇಮವಿರುವಂತೆ, ತನ್ನದೆಂದು ಹೇಳಿಕೊಳ್ಳುವ ಪುತ್ರ-ಧನ-ಮನೆ ಮುಂತಾದವುಗಳಲ್ಲಿ ಪ್ರೇಮವಿರುವುದಿಲ್ಲ. ॥51॥

(ಶ್ಲೋಕ-52)

ಮೂಲಮ್

ದೇಹಾತ್ಮವಾದಿನಾಂ ಪುಂಸಾಮಪಿ ರಾಜನ್ಯಸತ್ತಮ ।
ಯಥಾ ದೇಹಃ ಪ್ರಿಯತಮಸ್ತಥಾ ನ ಹ್ಯನು ಯೇ ಚ ತಮ್ ॥

ಅನುವಾದ

ನೃಪಶ್ರೇಷ್ಠನೇ! ದೇಹವನ್ನೇ ಆತ್ಮನೆಂದು ತಿಳಿದವರೂ ಕೂಡ ತನ್ನ ಶರೀರದಲ್ಲಿ ಪ್ರೀತಿ ಇರುವಂತೆ, ಶರೀರ ಸಂಬಂಧಿ ಪುತ್ರ, ಮಿತ್ರ, ಕಳತ್ರರನ್ನು ಪ್ರೀತಿಸುವುದಿಲ್ಲ.॥52॥

(ಶ್ಲೋಕ-53)

ಮೂಲಮ್

ದೇಹೋಪಿ ಮಮತಾಭಾಕ್ಚೇತ್ತರ್ಹ್ಯಸೌ ನಾತ್ಮವತ್ಪ್ರಿಯಃ ।
ಯಜ್ಜೀರ್ಯತ್ಯಪಿ ದೇಹೇಸ್ಮಿನ್ ಜೀವಿತಾಶಾ ಬಲೀಯಸೀ ॥

ಅನುವಾದ

ವಿಚಾರದ ಮೂಲಕ ‘ಈ ಶರೀರವು ನಾನಲ್ಲ, ಈ ಶರೀರವು ನನ್ನದಾಗಿದೆ’ ಎಂಬುದು ತಿಳಿದಾಗ ಈ ಶರೀರದ ಮೇಲೆಯೂ ಕೂಡ ಆತ್ಮನಂತೆ ಪ್ರೀತಿ ಉಳಿಯುವುದಿಲ್ಲ. ಈ ದೇಹವು ಜೀರ್ಣ ಶೀರ್ಣವಾದರೂ ಕೂಡು ಬದುಕಿರುವ ಆಸೆಯು ಪ್ರಬಲವಾಗಿ ಇರುವುದು ಇದೇ ಕಾರಣವಾಗಿದೆ. ॥53॥

(ಶ್ಲೋಕ-54)

ಮೂಲಮ್

ತಸ್ಮಾತ್ಪ್ರಿಯತಮಃ ಸ್ವಾತ್ಮಾ ಸರ್ವೇಷಾಮಪಿ ದೇಹಿನಾಮ್ ।
ತದರ್ಥಮೇವ ಸಕಲಂ ಜಗದೇತಚ್ಚರಾಚರಮ್ ॥

ಅನುವಾದ

ಎಲ್ಲ ಪ್ರಾಣಿಗಳು ತಮ್ಮ ಆತ್ಮನನ್ನೇ ಎಲ್ಲಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ ಮತ್ತು ಅದಕ್ಕಾಗಿಯೇ ಚರಾಚರ ಜಗತ್ತೆಲ್ಲವನ್ನೂ ಪ್ರೀತಿಸುತ್ತಾರೆ ಎಂಬುದು ಇದರಿಂದ ಸಿದ್ಧವಾಗುತ್ತದೆ. ॥54॥

(ಶ್ಲೋಕ-55)

ಮೂಲಮ್

ಕೃಷ್ಣಮೇನಮವೇಹಿ ತ್ವಮಾತ್ಮಾನಮಖಿಲಾತ್ಮನಾಮ್ ।
ಜಗದ್ಧಿತಾಯ ಸೋಪ್ಯತ್ರ ದೇಹೀವಾಭಾತಿ ಮಾಯಯಾ ॥

ಅನುವಾದ

ಶ್ರೀಕೃಷ್ಣನನ್ನೇ ನೀನು ಎಲ್ಲ ಆತ್ಮರ ಆತ್ಮನಾಗಿದ್ದಾನೆಂದು ತಿಳಿ. ಜಗತ್ತಿನ ಕಲ್ಯಾಣಕ್ಕಾಗಿಯೇ ಯೋಗಮಾಯೆಯನ್ನು ಆಶ್ರಯಿಸಿ ಅವನೇ ಇಲ್ಲಿ ದೇಹಧಾರಿಗಳಂತೆ ಕಂಡು ಬರುತ್ತಿರುವನು. ॥55॥

(ಶ್ಲೋಕ-56)

ಮೂಲಮ್

ವಸ್ತುತೋ ಜಾನತಾಮತ್ರ ಕೃಷ್ಣಂ ಸ್ಥಾಸ್ನು ಚರಿಷ್ಣು ಚ ।
ಭಗವದ್ರೂಪಮಖಿಲಂ ನಾನ್ಯದ್ವಸ್ತ್ವಿಹ ಕಿಂಚನ ॥

ಅನುವಾದ

ಭಗವಾನ್ ಶ್ರೀಕೃಷ್ಣನ ವಾಸ್ತವಿಕ ಸ್ವರೂಪವನ್ನು ತಿಳಿದವರಿಗಾದರೋ ಈ ಜಗತ್ತಿನಲ್ಲಿ ಇರುವ ಚರಾಚರ ಪದಾರ್ಥಗಳು ಅಥವಾ ಅದರಿಂದ ಅತೀತವಾದ ಪರಮಾತ್ಮ, ಬ್ರಹ್ಮ, ನಾರಾಯಣನೇ ಮೊದಲಾದ ಭಗವತ್ಸ್ವರೂಪಗಳೆಲ್ಲವೂ ಶ್ರೀಕೃಷ್ಣಸ್ವರೂಪವೇ ಆಗಿವೆ. ಶ್ರೀಕೃಷ್ಣನಲ್ಲದೆ ಬೇರೆ ಯಾವುದೇ ಪ್ರಾಕೃತ-ಅಪ್ರಾಕೃತ ವಸ್ತುವು ಇಲ್ಲವೇ ಇಲ್ಲ. ॥56॥

(ಶ್ಲೋಕ-57)

ಮೂಲಮ್

ಸರ್ವೇಷಾಮಪಿ ವಸ್ತೂನಾಂ ಭಾವಾರ್ಥೋ ಭವತಿ ಸ್ಥಿತಃ ।
ತಸ್ಯಾಪಿ ಭಗವಾನ್ಕೃಷ್ಣಃ ಕಿಮತದ್ವಸ್ತು ರೂಪ್ಯತಾಮ್ ॥

ಅನುವಾದ

ಎಲ್ಲ ವಸ್ತುಗಳ ಅಂತಿಮ ರೂಪವು ತನ್ನ ಕಾರಣದಲ್ಲೇ ನೆಲೆಸಿರುತ್ತದೆ. ಆ ಕಾರಣಕ್ಕೂ ಪರಮಕಾರಣ ಭಗವಾನ್ ಶ್ರೀಕೃಷ್ಣನಾಗಿದ್ದಾನೆ. ಹಾಗಿರುವಾಗ ಶ್ರೀಕೃಷ್ಣನಿಂದ ಭಿನ್ನವಾದ ವಸ್ತು ಯಾವುದು ತಾನೇ ಇದೆ? ಹೇಳು. ॥57॥

(ಶ್ಲೋಕ-58)

ಮೂಲಮ್

ಸಮಾಶ್ರಿತಾ ಯೇ ಪದಪಲ್ಲವಪ್ಲವಂ
ಮಹತ್ಪದಂ ಪುಣ್ಯಯಶೋಮುರಾರೇಃ ।
ಭವಾಂಬುಧಿರ್ವತ್ಸಪದಂ ಪರಂ ಪದಂ
ಪದಂ ಪದಂ ಯದ್ವಿಪದಾಂ ನ ತೇಷಾಮ್ ॥

ಅನುವಾದ

ಸತ್ಪುರುಷರ ಸರ್ವಸ್ವನಾದ ಪುಣ್ಯಕೀರ್ತಿಯಾದ ಮುಕುಂದ, ಮುರಾರಿಯ ಪದ-ಪಲ್ಲವಗಳ ನೌಕೆಯನ್ನು ಆಶ್ರಯಿಸಿದವರಿಗೆ ಈ ಭವಸಾಗರವು ಕರುವಿನ ಗೊರಸಿನಷ್ಟಾಗಿ ಬಿಡುತ್ತದೆ. ॥58॥

(ಶ್ಲೋಕ-59)

ಮೂಲಮ್

ಏತತ್ತೇ ಸರ್ವಮಾಖ್ಯಾತಂ ಯತ್ಪೃಷ್ಟೋಹಮಿಹ ತ್ವಯಾ ।
ಯತ್ಕೌಮಾರೇ ಹರಿಕೃತಂ ಪೌಗಂಡೇ ಪರಿಕೀರ್ತಿತಮ್ ॥

ಅನುವಾದ

ಪರೀಕ್ಷಿತನೇ! ಭಗವಂತನ ಐದನೇ ವರ್ಷದ ಲೀಲೆಯನ್ನು ಆರನೇ ವರ್ಷದಲ್ಲಿ ಗೋಪಬಾಲಕರು ಈಗ ನಡೆದಂತೆ ಹೇಳಿದರು; ಇದು ಹೇಗೆ ಎಂದು ನೀನು ಕೇಳಿದ್ದೆಯಲ್ಲ. ಅದರ ಎಲ್ಲ ರಹಸ್ಯವನ್ನು ನಾನು ನಿನಗೆ ತಿಳಿಸಿರುವೆನು. ॥59॥

(ಶ್ಲೋಕ-60)

ಮೂಲಮ್

ಏತತ್ಸುಹೃದ್ಭಿಶ್ಚರಿತಂ ಮುರಾರೇ-
ರಘಾರ್ದನಂ ಶಾದ್ವಲಜೇಮನಂ ಚ ।
ವ್ಯಕ್ತೇತರದ್ರೂಪಮಜೋರ್ವಭಿಷ್ಟವಂ
ಶೃಣ್ವನ್ ಗೃಣನ್ನೇತಿ ನರೋಖಿಲಾರ್ಥಾನ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಗೊಲ್ಲಬಾಲಕರೊಂದಿಗೆ ನಡೆಸಿದ ವನಕ್ರೀಡೆ, ಅಘಾಸುರನ ಸಂಹಾರ, ಹಚ್ಚ-ಹಸುರಾದ ಹುಲ್ಲಿನ ಮೇಲೆ ಕುಳಿತು ಭೋಜನ ಮಾಡುವುದು, ಅಪ್ರಾಕೃತರೂಪಧಾರಿ ಕರುಗಳನ್ನು ಮತ್ತು ಗೋಪಬಾಲಕರನ್ನು ಪ್ರಕಟಿಸುವುದು, ಬ್ರಹ್ಮದೇವರು ಮಾಡಿದ ಈ ಶ್ರೇಷ್ಠ ಸ್ತುತಿ ಇವೆಲ್ಲವನ್ನು ಕೇಳುವ-ಹೇಳುವ ಮನುಷ್ಯನಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳ ಪ್ರಾಪ್ತಿಯುಂಟಾಗುವುದು. ॥60॥

(ಶ್ಲೋಕ-61)

ಮೂಲಮ್

ಏವಂ ವಿಹಾರೈಃ ಕೌಮಾರೈಃ ಕೌಮಾರಂ ಜಹತುರ್ವ್ರಜೇ ।
ನಿಲಾಯನೈಃ ಸೇತುಬಂಧೈರ್ಮರ್ಕಟೋತ್ಪ್ಲವನಾದಿಭಿಃ ॥

ಅನುವಾದ

ಪರೀಕ್ಷಿತನೇ! ಹೀಗೆ ಶ್ರೀಕೃಷ್ಣ ಮತ್ತು ಬಲರಾಮರು ಕುಮಾರಾವಸ್ಥೆ ಗನುರೂಪವಾಗಿ ಕಣ್ಣುಮುಚ್ಚಾಲೆ, ಸೇತುಬಂಧ, ಮರಕೋತಿ ಆಟ ಮುಂತಾದ ಅನೇಕ ಲೀಲೆಗಳನ್ನು ಮಾಡುತ್ತಾ ತಮ್ಮ ಕುಮಾರಾವಸ್ಥೆಯನ್ನು ವ್ರಜಭೂಮಿಯಲ್ಲಿ ಕಳೆದರು. ॥61॥

ಅನುವಾದ (ಸಮಾಪ್ತಿಃ)

ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ
ಬ್ರಹ್ಮಸ್ತುತಿರ್ನಾಮ ಚತುರ್ದಶೋಽಧ್ಯಾಯಃ ॥14॥