೧೨

[ಹನ್ನೆರಡನೆಯ ಅಧ್ಯಾಯ]

ಭಾಗಸೂಚನಾ

ಅಘಾಸುರನ ಉದ್ಧಾರ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕ್ವಚಿದ್ವನಾಶಾಯ ಮನೋ ದಧದ್ವ್ರಜಾತ್-
ಪ್ರಾತಃ ಸಮುತ್ಥಾಯ ವಯಸ್ಯವತ್ಸಪಾನ್ ।
ಪ್ರಬೋಧಯನ್ ಶೃಂಗರವೇಣ ಚಾರುಣಾ
ವಿನಿರ್ಗತೋ ವತ್ಸಪುರಃಸರೋ ಹರಿಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಒಂದುದಿನ ಶ್ರೀಹರಿಗೆ ವನಭೋಜನವನ್ನು ಮಾಡಲು ಮನಸ್ಸು ಆಯಿತು. ಅವನು ಬೆಳಗಾದೊಡನೆಯೇ ಎದ್ದು ಸುಮಧುರವಾಗಿ ಕೊಂಬನ್ನು ಊದಿ ಗೋಪಬಾಲಕರನ್ನೂ ಎಚ್ಚರಗೊಳಿಸಿ, ಕರುಗಳನ್ನು ಮುಂದೆ ಮಾಡಿಕೊಂಡು ಬಾಲಗೋಪಾಲನು ಗೊಲ್ಲರ ಹಳ್ಳಿಯಿಂದ ಹೊರಟನು.॥1॥

(ಶ್ಲೋಕ-2)

ಮೂಲಮ್

ತೇನೈವ ಸಾಕಂ ಪೃಥುಕಾಃ ಸಹಸ್ರಶಃ
ಸ್ನಿಗ್ಧಾಃ ಸುಶಿಗ್ವೇತ್ರವಿಷಾಣವೇಣವಃ ।
ಸ್ವಾನ್ಸ್ವಾನ್ಸಹಸ್ರೋಪರಿಸಂಖ್ಯಯಾನ್ವಿತಾ-
ನ್ವತ್ಸಾನ್ಪುರಸ್ಕೃತ್ಯ ವಿನಿರ್ಯಯುರ್ಮುದಾ ॥

ಅನುವಾದ

ಶ್ರೀಕೃಷ್ಣನೊಂದಿಗೆ ಅವನ ಸ್ನೇಹಪರರಾದ ಸಾವಿರಾರು ಗೊಲ್ಲಬಾಲಕರು ಕರುಗಳ ಮಂದೆಯನ್ನು ಮುಂದೆಮಾಡಿಕೊಂಡು ಆನಂದಭರಿತರಾಗಿ ಸುಂದರವಾದ ನೆಲವು, ಕೋಲು, ಕೊಂಬು, ಕೊಳಲು ಇವುಗಳನ್ನು ಎತ್ತಿಕೊಂಡು ತಮ್ಮ-ತಮ್ಮ ಮನೆಗಳಿಂದ ಹೊರಟರು.॥2॥

(ಶ್ಲೋಕ-3)

ಮೂಲಮ್

ಕೃಷ್ಣವತ್ಸೈರಸಂಖ್ಯಾತೈರ್ಯೂಥೀಕೃತ್ಯ ಸ್ವವತ್ಸಕಾನ್ ।
ಚಾರಯಂತೋರ್ಭಲೀಲಾಭಿರ್ವಿಜಹ್ರುಸ್ತತ್ರ ತತ್ರ ಹ ॥

ಅನುವಾದ

ಅವರು ಶ್ರೀಕೃಷ್ಣನ ಅಸಂಖ್ಯ ಕರುಗಳೊಂದಿಗೆ ತಮ್ಮ-ತಮ್ಮ ಕರುಗಳನ್ನು ಒಂದಾಗಿಸಿ ಬಿಟ್ಟರು. ಅಲ್ಲಲ್ಲಿಯೇ ನಿಂತು ಬಾಲ ಯೋಗ್ಯವಾದ ಆಟಗಳನ್ನಾಡುತ್ತಾ ಸಂಚರಿಸತೊಡಗಿದರು. ॥3॥

(ಶ್ಲೋಕ-4)

ಮೂಲಮ್

ಲಪ್ರವಾಲಸ್ತಬಕಸುಮನಃಪಿಚ್ಛಧಾತುಭಿಃ ।
ಕಾಚಗುಂಜಾಮಣಿಸ್ವರ್ಣಭೂಷಿತಾ ಅಪ್ಯಭೂಷಯನ್ ॥

ಅನುವಾದ

ಗೋಪಬಾಲಕರೆಲ್ಲರೂ ಗಾಜಿನ ಮಣಿಗಳಿಂದಲೂ, ಚಿನ್ನದ ವಂಕಿಗಳಿಂದಲೂ, ಗುಲುಗುಂಜಿಯ ಸರಗಳಿಂದಲೂ ಸಿಂಗರಿಸಿಕೊಂಡಿದ್ದರೂ ಅವರು ವೃಂದಾವನದ ಕಾಡಿಗೆ ಬರುತ್ತಲೇ ಕೆಂಪು, ಹಳದಿ, ಹಸಿರು ಹಣ್ಣುಗಳಿಂದಲೂ, ಚಿಗುರುಗಳಿಂದಲೂ, ಹೂವುಗಳಿಂದಲೂ ನವಿಲು ಗರಿಗಳಿಂದಲೂ, ಗೈರಿಕಾದಿ ಧಾತುಗಳಿಂದಲೂ ಇನ್ನೂ ಹೆಚ್ಚಾಗಿ ಸಿಂಗರಿಸಿಕೊಂಡು ಕುಣಿದಾಡಿದರು. ॥4॥

(ಶ್ಲೋಕ-5)

ಮೂಲಮ್

ಮುಷ್ಣಂತೋನ್ಯೋನ್ಯಶಿಕ್ಯಾದೀನ್ ಜ್ಞಾತಾನಾರಾಚ್ಚ ಚಿಕ್ಷಿಪುಃ ।
ತತ್ರತ್ಯಾಶ್ಚ ಪುನರ್ದೂರಾದ್ಧಸಂತಶ್ಚ ಪುನರ್ದದುಃ ॥

ಅನುವಾದ

ಕೆಲವರು ಯಾರದೋ ಬುತ್ತಿಯನ್ನು ಹಾರಿಸಿದರೆ, ಇನ್ನೊಬ್ಬನು ಬೆತ್ತವನ್ನು ಕದಿಯುತ್ತಿದ್ದನು. ಮತ್ತೊಬ್ಬನು ಕೊಳಲನ್ನು. ಕಳಕೊಂಡವನಿಗೆ ಕದ್ದವನು ಯಾರೆಂದು ತಿಳಿದು ಪಡೆಯಲು ಬಂದಾಗ ಇನ್ನೊಬ್ಬನ ಬಳಿಗೆ ಎಸೆದುಬಿಡುತ್ತಿದ್ದರು. ಇನ್ನೊಬ್ಬನು ಮತ್ತೊಬ್ಬನ ಬಳಿಗೆ ಹೀಗೆ ಎಸೆಯುತ್ತಾ ಕೊನೆಗೆ ಅವನಿಗೆ ಮರಳಿಸಿ ಕೇಕೆ ಹಾಕಿ ನಗುತ್ತಿದ್ದರು. ॥5॥

(ಶ್ಲೋಕ-6)

ಮೂಲಮ್

ಯದಿ ದೂರಂ ಗತಃ ಕೃಷ್ಣೋ ವನಶೋಭೇಕ್ಷಣಾಯ ತಮ್ ।
ಅಹಂ ಪೂರ್ವಮಹಂ ಪೂರ್ವಮಿತಿ ಸಂಸ್ಪೃಶ್ಯ ರೇಮಿರೇ ॥

ಅನುವಾದ

ಶ್ಯಾಮಸುಂದರ ಶ್ರೀಕೃಷ್ಣನು ವನದಶೋಭೆಯನ್ನು ನೋಡುತ್ತಾ ದೂರ ಹೋಗಿಬಿಟ್ಟರೆ, ನಾನು ಮೊದಲು ಹೋಗಿ ಮುಟ್ಟುವೆನು, ನಾನು ಮೊದಲು ಎಂಬ ಸ್ಪರ್ಧೆಯಿಂದ ಎಲ್ಲರೂ ಓಡಿಹೋಗಿ ಅವನನ್ನು ಮುಟ್ಟಿ-ಮುಟ್ಟಿ ಸಂತೋಷಪಡುತ್ತಿದ್ದರು. ॥6॥

(ಶ್ಲೋಕ-7)

ಮೂಲಮ್

ಕೇಚಿದ್ವೇಣೂನ್ವಾದಯಂತೋ ಧ್ಮಾಂತಃ ಶೃಂಗಾಣಿ ಕೇಚನ ।
ಕೇಚಿದ್ಭೃಂಗೈಃ ಪ್ರಗಾಯಂತಃ ಕೂಜಂತಃ ಕೋಕಿಲೈಃ ಪರೇ ॥

ಅನುವಾದ

ಕೆಲವರು ಕೊಳಲನ್ನು ಊದುತ್ತಿದ್ದರೆ, ಕೆಲವರು ಕೊಂಬನ್ನು ಊದುತ್ತಿದ್ದರು. ಕೆಲ-ಕೆಲವರು ದುಂಬಿಗಳೊಡನೆ ತಾವೂ ಧ್ವನಿ ಮಾಡುತ್ತಿದ್ದರೆ, ಕೆಲವರು ಕೋಗಿಲೆಯ ಧ್ವನಿಯೊಂದಿಗೆ ತಮ್ಮ ಧ್ವನಿಯನ್ನು ಸೇರಿಸಿ ಅದರಂತೆ ಕೂಗುತ್ತಿದ್ದರು. ॥7॥

(ಶ್ಲೋಕ-8)

ಮೂಲಮ್

ವಿಚ್ಛಾಯಾಭಿಃ ಪ್ರಧಾವಂತೋ ಗಚ್ಛಂತಃ ಸಾಧು ಹಂಸಕೈಃ ।
ಬಕೈರುಪವಿಶಂತಶ್ಚ ನೃತ್ಯಂತಶ್ಚ ಕಲಾಪಿಭಿಃ ॥

ಅನುವಾದ

ಒಂದು ಕಡೆ ಕೆಲವು ಗೊಲ್ಲಬಾಲಕರು ಆಕಾಶದಲ್ಲಿ ಹಾರುತ್ತಿದ್ದ ಪಕ್ಷಿಗಳ ನೆರಳಿನೊಂದಿಗೆ ಓಡತೊಡಗಿದರೆ, ಮತ್ತೊಂದೆಡೆಯಲ್ಲಿ ಕೆಲವರು ಹಂಸದ ನಡೆಯನ್ನು ಅಣಕವಾಡುತ್ತಿದ್ದರು. ಕೆಲವರು ಬಕಪಕ್ಷಿಗಳ ಬಳಿಯಲ್ಲಿ ಕುಳಿತು, ಅವುಗಳಂತೆ ಕಣ್ಣು ಮುಚ್ಚಿಕೊಳ್ಳುತ್ತಿದ್ದರು. ಕೆಲವರು ನವಿಲುಗಳ ಕುಣಿತನ್ನು ನೋಡಿ ತಾವೂ ಅವುಗಳಂತೆ ಕುಣಿಯುತ್ತಿದ್ದರು. ॥8॥

(ಶ್ಲೋಕ-9)

ಮೂಲಮ್

ವಿಕರ್ಷಂತಃ ಕೀಶಬಾಲಾನಾರೋಹಂತಶ್ಚ ತೈರ್ದ್ರುಮಾನ್ ।
ವಿಕುರ್ವಂತಶ್ಚ ತೈಃ ಸಾಕಂ ಪ್ಲವಂತಶ್ಚ ಪಲಾಶಿಷು ॥

ಅನುವಾದ

ಕೆಲವರು ಕೋತಿಗಳ ಬಾಲಗಳನ್ನು ಹಿಡಿದು ಎಳೆಯುತ್ತಿದ್ದರೆ, ಇತರರು ಅವುಗಳೊಂದಿಗೆ ಈ ಮರದಿಂದ ಆ ಮರದ ಮೇಲೆ ಹತ್ತುತ್ತಿದ್ದರು. ಕೆಲವರು ಅವುಗಳ ಜೊತೆ ಯಲ್ಲೇ ಕುಳಿತು ಅವುಗಳಂತೇ ಚೇಷ್ಟೆ ಮಾಡುತ್ತಿದ್ದರೆ, ಕೆಲವರು ಅವುಗಳಂತೆ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ನೆಗೆಯುತ್ತಿದ್ದರು. ॥9॥

(ಶ್ಲೋಕ-10)

ಮೂಲಮ್

ಸಾಕಂ ಭೇಕೈರ್ವಿಲಂಘಂತಃ ಸರಿತ್ಪ್ರಸ್ರವಸಂಪ್ಲುತಾಃ ।
ವಿಹಸಂತಃ ಪ್ರತಿಚ್ಛಾಯಾಃ ಶಪಂತಶ್ಚ ಪ್ರತಿಸ್ವನಾನ್ ॥

ಅನುವಾದ

ಕೆಲವರು ನದಿಯ ನೀರಿನಲ್ಲಿಳಿದು ತೊಳಚಾಡುತ್ತಾ ಆಟವಾಡುತ್ತಿದ್ದರು. ಕೆಲವರು ಕಪ್ಪೆಗಳೊಂದಿಗೆ ತಾವು ವಟಗುಟ್ಟುತ್ತಾ ಕುಪ್ಪಳಿಸುತ್ತಿದ್ದರು. ಕೆಲವರು ನೀರಿನಲ್ಲೇ ತಮ್ಮ ಪ್ರತಿಬಿಂಬವನ್ನು ನೋಡಿ ಹಾಸ್ಯವಾಡುತ್ತಿದ್ದರು. ಬೇರೆ ಕೆಲವರು ತಮ್ಮ ಪ್ರತಿಧ್ವನಿಯನ್ನೇ ಕೇಳಿಸಿಕೊಂಡು ನಾನಾರೀತಿಯಿಂದ ಮಾತನಾಡುತ್ತಾ ಆನಂದಿಸುತ್ತಿದ್ದರು. ॥10॥

(ಶ್ಲೋಕ-11)

ಮೂಲಮ್

ಇತ್ಥಂ ಸತಾಂ ಬ್ರಹ್ಮಸುಖಾನುಭೂತ್ಯಾ
ದಾಸ್ಯಂ ಗತಾನಾಂ ಪರದೈವತೇನ ।
ಮಾಯಾಶ್ರಿತಾನಾಂ ನರದಾರಕೇಣ
ಸಾಕಂ ವಿಜಹ್ರುಃ ಕೃತಪುಣ್ಯಪುಂಜಾಃ ॥

ಅನುವಾದ

ಪರೀಕ್ಷಿತನೇ! ಹೀಗೆ ಸತ್ಪುರುಷರಿಗೆ (ಜ್ಞಾನಿಗಳಿಗೆ) ಬ್ರಹ್ಮ ಆನಂದಾನುಭವರೂಪನಾಗಿದ್ದ, ದಾಸ್ಯಭಾವದಿಂದ ಆರಾಧಿಸುವ ಭಕ್ತರಿಗೆ ಪರದೇವತೆಯಾಗಿದ್ದ, ಮಾಯಾಮೋಹಿತ ವಿಷಯಾಂಧರಿಗೆ ಸಾಧಾರಣ ಮಾನವ ಬಾಲಕನಾಗಿದ್ದ, ಭಗವಾನ್ ಶ್ರೀಕೃಷ್ಣನೊಡನೆ ಅತ್ಯಂತ ಪುಣ್ಯಶಾಲಿಗಳಾದ ಗೊಲ್ಲಬಾಲಕರು ನಾನಾವಿಧವಾದ ಆಟ-ಪಾಟಗಳನ್ನು ಆಡುತ್ತಿದ್ದರು. ॥11॥

(ಶ್ಲೋಕ-12)

ಮೂಲಮ್

ಯತ್ಪಾದಪಾಂಸುರ್ಬಹುಜನ್ಮಕೃಚ್ಛ್ರತೋ
ಧೃತಾತ್ಮಭಿರ್ಯೋಗಿಭಿರಪ್ಯಲಭ್ಯಃ ।
ಸ ಏವ ಯದ್ದೃಗ್ವಿಷಯಃ ಸ್ವಯಂ ಸ್ಥಿತಃ
ಕಿಂ ವರ್ಣ್ಯತೇ ದಿಷ್ಟಮತೋ ವ್ರಜೌಕಸಾಮ್ ॥

ಅನುವಾದ

ಭಗವಂತನಾದ ಶ್ರೀಕೃಷ್ಣನ ಪಾದಧೂಳಿಯು ಸಾಮಾನ್ಯವಾದುದಲ್ಲ. ಹಲವಾರು ಜನ್ಮಗಳು ಬಹಳ ಕಷ್ಟಪಟ್ಟು ತಪಸ್ಸು ಮಾಡಿದ ಜಿತೇಂದ್ರಿಯರಾದ ಮಹಾಯೋಗಿಗಳಿಗೂ ಅದು ಅಲಭ್ಯವಾದುದು. ಹೀಗಿರುವಾಗ ಅಂತಹ ಭಗವಂತನು ವ್ರಜವಾಸಿಗಳಾದ ಗೋಪಾಲಕರ ಸಮಕ್ಷಮದಲ್ಲಿ ಇದ್ದು ಅವರೊಡನೆ ಆಟವಾಡುತ್ತಿದ್ದನೆಂದರೆ ಅವರ ಪರಮ ಸೌಭಾಗ್ಯವನ್ನು ಏನೆಂದು ವರ್ಣಿಸೋಣ! ॥12॥

(ಶ್ಲೋಕ-13)

ಮೂಲಮ್

ಅಥಾಘನಾಮಾಭ್ಯಪತನ್ಮಹಾಸುರ-
ಸ್ತೇಷಾಂ ಸುಖಕ್ರೀಡನವೀಕ್ಷಣಾಕ್ಷಮಃ ।
ನಿತ್ಯಂ ಯದಂತರ್ನಿಜಜೀವಿತೇಪ್ಸುಭಿಃ
ಪೀತಾಮೃತೈರಪ್ಯಮರೈಃ ಪ್ರತೀಕ್ಷ್ಯತೇ ॥

ಅನುವಾದ

ಪರೀಕ್ಷಿತರಾಜನೇ! ಆ ಸಮಯಕ್ಕೆ ಸರಿಯಾಗಿ ಅಘಾಸುರನೆಂಬ ರಾಕ್ಷಸನು ಅಲ್ಲಿಗೆ ಬಂದನು. ಗೋಪಬಾಲಕರು ಶ್ರೀಕೃಷ್ಣನೊಡನೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಅವನಿಂದ ನೋಡಲಾಗಲಿಲ್ಲ. ಅವನು ಮಹಾಕ್ರೂರಿಯಾಗಿದ್ದನು. ಅಮೃತಪಾನ ಮಾಡಿ ಅಮರರಾದ ದೇವತೆಗಳೂ ಕೂಡ ಅವನ ಸಾವನ್ನು ಅನುದಿನವೂ ಪ್ರತೀಕ್ಷಿಸುತ್ತಲೇ ಇದ್ದರು. ॥13॥

(ಶ್ಲೋಕ-14)

ಮೂಲಮ್

ದೃಷ್ಟ್ವಾರ್ಭಕಾನ್ಕೃಷ್ಣಮುಖಾನಘಾಸುರಃ
ಕಂಸಾನುಶಿಷ್ಟಃ ಸ ಬಕೀಬಕಾನುಜಃ ।
ಅಯಂ ತು ಮೇ ಸೋದರನಾಶಕೃತ್ತಯೋ-
ರ್ದ್ವಯೋರ್ಮಮೈನಂ ಸಬಲಂ ಹನಿಷ್ಯೇ ॥

ಅನುವಾದ

ಅಘಾಸುರನು ಪೂತನೆಯ ಮತ್ತು ಬಕಾಸುರನ ತಮ್ಮನಾಗಿದ್ದು, ಕಂಸನಿಂದ ಕಳುಹಲ್ಪಟ್ಟವನಾಗಿದ್ದನು. ಶ್ರೀಕೃಷ್ಣನನ್ನು ಗೋಪಬಾಲಕರ ಸಹಿತವಾಗಿ ಸಂಹರಿಸಿ, ಈ ಮೂಲಕ ಕಂಸರಾಜನ ಆಶಯವನ್ನು ಈಡೇರಿಸಿಕೊಡಲು ನಿಶ್ಚಯಿಸಿದನು. ॥14॥

(ಶ್ಲೋಕ-15)

ಮೂಲಮ್

ಏತೇ ಯದಾ ಮತ್ಸುಹೃದೋಸ್ತಿಲಾಪಃ
ಕೃತಾಸ್ತದಾ ನಷ್ಟಸಮಾ ವ್ರಜೌಕಸಃ ।
ಪ್ರಾಣೇ ಗತೇ ವರ್ಷ್ಮಸು ಕಾ ನು ಚಿಂತಾ
ಪ್ರಜಾಸವಃ ಪ್ರಾಣಭೃತೋ ಹಿ ಯೇ ತೇ ॥

ಅನುವಾದ

ಶ್ರೀಕೃಷ್ಣ ಪ್ರಮುಖರಾದ ಈ ಗೋಪಬಾಲಕರೆಲ್ಲರನ್ನು ಸಂಹರಿಸಿ ನನ್ನ ಅಕ್ಕನಿಗೂ, ಅಣ್ಣನಿಗೂ ಜಲತರ್ಪಣವನ್ನು ಕೊಡುತ್ತೇನೆ. ಕೃಷ್ಣಾದಿಗಳು ಅವಸಾನ ಹೊಂದಿದೊಡನೆ ವ್ರಜವಾಸಿಗಳೆಲ್ಲರೂ ತಮಗೆ ತಾವೇ ಸತ್ತು ಹೋಗುತ್ತಾರೆ. ಅವರನ್ನು ಸಂಹರಿಸುವ ಶ್ರಮವೇನೂ ಆಗಲಾರದು. ಏಕೆಂದರೆ, ಸಂತಾನವೆಂಬುದೇ ಪ್ರಾಣಿಗಳ ಪ್ರಾಣವಾಗಿದೆ. ಪ್ರಾಣಸ್ವರೂಪವಾದ ಸಂತಾನವೇ ವಿನಾಶಹೊಂದಿದ ಬಳಿಕ ಕೇವಲ ದೇಹವು ಹೇಗೆ ತಾನೇ ಉಳಿದೀತು? ಆದುದರಿಂದ ಈ ಮಕ್ಕಳ ವಿನಾಶದಿಂದ ವ್ರಜವಾಸಿಗಳೆಲ್ಲರೂ ತಾನಾಗಿ ಸತ್ತು ಹೋಗುವರು. ॥15॥

(ಶ್ಲೋಕ-16)

ಮೂಲಮ್

ಇತಿ ವ್ಯವಸ್ಯಾಜಗರಂ ಬೃಹದ್ವಪುಃ
ಸ ಯೋಜನಾಯಾಮಮಹಾದ್ರಿಪೀವರಮ್ ।
ಧೃತ್ವಾದ್ಭುತಂ ವ್ಯಾತ್ತಗುಹಾನನಂ ತದಾ
ಪಥಿ ವ್ಯಶೇತ ಗ್ರಸನಾಶಯಾ ಖಲಃ ॥

ಅನುವಾದ

ಹೀಗೆ ನಿಶ್ಚಯಿಸಿ ಆ ದುಷ್ಟ ಅಘಾಸುರನು ಹೆಬ್ಬಾವಿನ ರೂಪವನ್ನು ಧರಿಸಿ ದಾರಿಯಲ್ಲಿ ಮಲಗಿದನು. ಆ ಹೆಬ್ಬಾವಿನ ಶರೀರವು ಒಂದು ಯೋಜನದಷ್ಟು ಉದ್ದವೂ, ಪರ್ವತದಷ್ಟು ಎತ್ತರವಾಗಿಯೂ ಮತ್ತು ದಪ್ಪವಾಗಿಯೂ ಅದ್ಭುತವಾಗಿಯೂ ಇತ್ತು. ಕೃಷ್ಣನ ಸಹಿತ ಗೋಪಬಾಲಕರೆಲ್ಲರನ್ನು ನುಂಗಿಹಾಕುವುದೇ ಅವನ ಆಶಯವಾಗಿತ್ತು. ಆದುದರಿಂದ ಅಘಾಸುರನು ತನ್ನ ಬಾಯನ್ನು ದೊಡ್ಡದಾದ ಗುಹೆಯಂತೆ ತೆರೆದುಕೊಂಡು ಬಿದ್ದಿದ್ದನು. ॥16॥

(ಶ್ಲೋಕ-17)

ಮೂಲಮ್

ಧರಾಧರೋಷ್ಠೋ ಜಲದೋತ್ತರೋಷ್ಠೋ
ದರ್ಯಾನನಾಂತೋ ಗಿರಿಶೃಂಗದಂಷ್ಟ್ರಃ ।
ಧ್ವಾಂತಾಂತರಾಸ್ಯೋ ವಿತತಾಧ್ವಜಿಹ್ವಃ
ಪರುಷಾನಿಲಶ್ವಾಸದವೇಕ್ಷಣೋಷ್ಣಃ ॥

ಅನುವಾದ

ಅವನ ಕೆಳದುಟಿಯು ಭೂಮಿಗೆ ತಾಗಿದ್ದರೆ, ಮೇಲ್ದುಟಿಯು ಆಕಾಶಕ್ಕೆ ಮುಟ್ಟಿತ್ತು. ದವಡೆಗಳು ಗವಿಗಳಂತಿದ್ದು, ಕೊರೆದಾಡೆಗಳು ಪರ್ವತದ ಶಿಖರಗಳಂತಿದ್ದವು. ಬಾಯೊಳಗೆ ಗಾಢಾಂಧ ಕಾರವು ಕವಿದಿತ್ತು. ನೀಳವಾದ ನಾಲಿಗೆಯು ಒಂದು ಅಗಲವಾದ ಕೆಂಪಾದ ರಾಜಬೀದಿಯಂತೆ ಕಂಗೊಳಿಸುತ್ತಿತ್ತು. ಸುಂಟರಗಾಳಿಯಂತೆ ಅದರ ಶ್ವಾಸ-ನಿಃಶ್ವಾಸವಿತ್ತು. ಅದರ ಕಣ್ಣುಗಳು ದಾವಾಗ್ನಿಯಂತೆ ಪ್ರಜ್ವಲಿಸುತ್ತಿತ್ತು. ॥17॥

(ಶ್ಲೋಕ-18)

ಮೂಲಮ್

ದೃಷ್ಟ್ವಾತಂ ತಾದೃಶಂ ಸರ್ವೇ ಮತ್ವಾ ವೃಂದಾವನಶ್ರಿಯಮ್ ।
ವ್ಯಾತ್ತಾಜಗರತುಂಡೇನ ಹ್ಯುತ್ಪ್ರೇಕ್ಷಂತೇ ಸ್ಮ ಲೀಲಯಾ ॥

ಅನುವಾದ

ಅಘಾಸುರನ ಇಂತಹ ಪರಮಾದ್ಭುತವಾದ ರೂಪವನ್ನು ನೋಡಿ ಇದೂ ಒಂದು ವೃಂದಾವನದ ಶೋಭೆಯನ್ನು ಹೆಚ್ಚಿಸುವ ವಸ್ತುವೆಂದು ಬಾಲಕರು ಭಾವಿಸಿದರು. ಅವರು ಅದನ್ನು ಕುತೂಹಲದಿಂದ ಆಟವಾಡುತ್ತಾ ಪರೀಕ್ಷಿಸತೊಡಗಿದರು. ಒಬ್ಬನು ಉತ್ಪ್ರೇಕ್ಷೆಮಾಡುತ್ತಾ ಹೇಳಿದನು - ಅಗಲವಾಗಿ ಬಾಯ್ತೆರೆದುಕೊಂಡಿರುವ ಇದು ಹೆಬ್ಬಾವು ಇರಬಹುದು. ॥18॥

(ಶ್ಲೋಕ-19)

ಮೂಲಮ್

ಅಹೋ ಮಿತ್ರಾಣಿ ಗದತ ಸತ್ತ್ವಕೂಟಂ ಪುರಃಸ್ಥಿತಮ್ ।
ಅಸ್ಮತ್ಸಂಗ್ರಸನವ್ಯಾತ್ತವ್ಯಾಲತುಂಡಾಯತೇ ನ ವಾ ॥

ಅನುವಾದ

ಮತ್ತೊಬ್ಬ ಹೇಳಿದನು - ಮಿತ್ರರೇ! ಇದೊಂದು ಮಹಾಪ್ರಾಣಿಯೇ ಆಗಿರಬಹುದು. ನಮ್ಮನ್ನೆಲ್ಲ ನುಂಗಿಹಾಕಲು ಹೆಬ್ಬಾವಿನಂತೆ ವೇಷಧರಿಸಿ ಬಾಯ್ತೆರೆದುಕೊಂಡು ಮಲಗಿದಂತಿದೆಯಲ್ಲ! ಎಚ್ಚರಿಕೆಯಿಂದ ಇರಿ. ॥19॥

(ಶ್ಲೋಕ-20)

ಮೂಲಮ್

ಸತ್ಯಮರ್ಕಕರಾರಕ್ತಮುತ್ತರಾಹನುವದ್ಘನಮ್ ।
ಅಧರಾಹನುವದ್ರೋಧಸ್ತತ್ಪ್ರತಿಚ್ಛಾಯಯಾರುಣಮ್ ॥

(ಶ್ಲೋಕ-21)

ಮೂಲಮ್

ಪ್ರತಿಸ್ಪರ್ಧೇತೇ ಸೃಕ್ಕಿಭ್ಯಾಂ ಸವ್ಯಾಸವ್ಯೇ ನಗೋದರೇ ।
ತುಂಗಶೃಂಗಾಲಯೋಪ್ಯೇತಾಸ್ತದ್ದಂಷ್ಟ್ರಾಭಿಶ್ಚ ಪಶ್ಯತ ॥

ಅನುವಾದ

ಇನ್ನೊಬ್ಬ ಬಾಲಕನು ಹೇಳುತ್ತಾನೆ - ಮೇಲ್ಭಾಗದಲ್ಲಿ ನೋಡಿರಿ. ಸೂರ್ಯನ ಕಿರಣಗಳು ಬಿದ್ದು ಎಣ್ಣೆಗೆಂಪಾಗಿ ಕಾಣುತ್ತಿರುವ ಮೋಡಗಳೇ - ಹೌದು-ಹೌದು! ನೋಡಿರಲ್ಲ! ಈ ಮಹಾಪ್ರಾಣಿಯು ಮುಖದ ಎರಡು ಭಾಗಗಳೂ ಗವಿಯಂತೆ ಕಾಣುತ್ತಿವೆ. ಈ ಎತ್ತರವಾದ ಪರ್ವತ ಶಿಖರಗಳಾದರೋ ಅದರ ಕೋರೆದಾಡೆಗಳಂತೆ ಕಂಡು ಬರುತ್ತಿವೆಯಲ್ಲ! ॥20-21॥

(ಶ್ಲೋಕ-22)

ಮೂಲಮ್

ಆಸ್ತೃತಾಯಾಮಮಾರ್ಗೋಯಂ ರಸನಾಂ ಪ್ರತಿಗರ್ಜತಿ ।
ಏಷಾಮಂತರ್ಗತಂ ಧ್ವಾಂತಮೇತದಪ್ಯಂತರಾನನಮ್ ॥

ಅನುವಾದ

ಇನ್ನೊಬ್ಬ ಹೇಳಿದ-ಗೆಳೆಯರೇ! ನೋಡಿ-ನೋಡಿ! ನೀಳವಾಗಿಯೂ, ಅಗಲವಾಗಿಯೂ ಇರುವ ಈ ಹೆದ್ದಾರಿಯು ಹೆಬ್ಬಾವಿನ ನಾಲಿಗೆಯಂತೆ ಕಾಣುತ್ತಿದೆಯಲ್ಲ! ಗಿರಿಶೃಂಗಗಳ ನಡುವೆ ಇರುವ ಅಂಧಕಾರವು ಈ ಹೆಬ್ಬಾವಿನ ಬಾಯಲ್ಲಿರುವ ಕತ್ತಲೆಯೊಡನೆ ಸೆಣಸುತ್ತಿದೆ. ॥22॥

(ಶ್ಲೋಕ-23)

ಮೂಲಮ್

ದಾವೋಷ್ಣಖರವಾತೋಯಂ ಶ್ವಾಸವದ್ಭಾತಿ ಪಶ್ಯತ ।
ತದ್ದಗ್ಧಸತ್ತ್ವದುರ್ಗಂಧೋಪ್ಯಂತರಾಮಿಷಗಂಧವತ್ ॥

ಅನುವಾದ

ಯಾರೋ ಇನ್ನೊಬ್ಬ ಗೋಪಬಾಲಕನು ಹೇಳಿದ - ಮಿತ್ರರೇ! ಗಮನಿಸಿರಿ. ಇಲ್ಲೇ ಎಲ್ಲೋ ಕಾಡಿನಲ್ಲಿ ಬೆಂಕಿಬಿದ್ದಿರುವಂತೆ ಕಾಣುತ್ತದೆ. ಅದರಿಂದಲೇ ಈ ಬಿಸಿಯಾದ ಮತ್ತು ತೀಕ್ಷ್ಣವಾದ ಗಾಳಿ ಬರುತ್ತಿದೆ. ಆದರೆ ಹೆಬ್ಬಾವಿನ ನಿಃಶ್ವಾಸದೊಂದಿಗೆ ಇದು ಹೇಗೆ ಹೊಂದಿಕೊಂಡಿತು? ಅದೇ ಬೆಂಕಿಯಲ್ಲಿ ಬೆಂದಿರುವ ಪ್ರಾಣಿಗಳ ದುರ್ಗಂಧದಂತೆ ಅಜಗರದ ಹೊಟ್ಟೆಯಲ್ಲಿ ಸತ್ತಿರುವ ಜೀವಿಗಳ ಮಾಂಸದ ದುರ್ಗಂಧವೇ ಆಗಿರಬೇಕು. ॥23॥

(ಶ್ಲೋಕ-24)

ಮೂಲಮ್

ಅಸ್ಮಾನ್ಕಿಮತ್ರ ಗ್ರಸಿತಾ ನಿವಿಷ್ಟಾ-
ನಯಂ ತಥಾ ಚೇದ್ಬಕವದ್ವಿನಂಕ್ಷ್ಯತಿ ।
ಕ್ಷಣಾದನೇನೇತಿ ಬಕಾರ್ಯುಶನ್ಮುಖಂ
ವೀಕ್ಷ್ಯೋದ್ಧಸಂತಃ ಕರತಾಡನೈರ್ಯಯುಃ ॥

ಅನುವಾದ

ಆಗ ಅವರಲ್ಲಿದ್ದ ಇನ್ನೊಬ್ಬನು ಹೇಳಿದನು — ನಾವುಗಳು ಇದರ ಬಾಯೊಳಗೆ ಪ್ರವೇಶಿಸಿದರೆ ಏನು ನಮ್ನನ್ನು ನುಂಗಿ ಬಿಟ್ಟಿತೇ? ಮತ್ತೊಬ್ಬ ಹೇಳಿದ-ಛೇ! ಛೇ! ಇದೇನು ನಮ್ಮನ್ನು ನುಂಗೀತು? ಹಾಗೇನಾದರೂ ಸಾಹಸ ಮಾಡಿದರೆ ಕ್ಷಣಾರ್ಧದಲ್ಲಿ ಇವನೂ ಬಕಾಸುರನಂತೆ ನಾಶವಾಗಿ ಹೋದಾನು. ನಮ್ಮ ಮುದ್ದುಕೃಷ್ಣನು ನಮ್ಮನ್ನು ನುಂಗಲು ಬಿಡುವನೇ? ಹೀಗೆ ಹೇಳುತ್ತಾ ಆ ಗೊಲ್ಲಬಾಲಕರು ಕೃಷ್ಣನ ನಗುಮುಖವನ್ನು ದಿಟ್ಟಿಸಿ ನೋಡುತ್ತಾ, ಚಪ್ಪಾಳೆಗಳನ್ನು ತಟ್ಟುತ್ತಾ ನಗು-ನಗುತ್ತಾ ಹೆಬ್ಬಾವಿನ ಆ ಮುಖದಲ್ಲಿ ನುಗ್ಗಿದರು. ॥24॥

(ಶ್ಲೋಕ-25)

ಮೂಲಮ್

ಇತ್ಥಂ ಮಿಥೋತಥ್ಯಮತಜ್ಜ್ಞಭಾಷಿತಂ
ಶ್ರುತ್ವಾ ವಿಚಿಂತ್ಯೇತ್ಯಮೃಷಾ ಮೃಷಾಯತೇ ।
ರಕ್ಷೋ ವಿದಿತ್ವಾಖಿಲಭೂತಹೃತ್ಸ್ಥಿತಃ
ಸ್ವಾನಾಂ ನಿರೋದ್ಧುಂ ಭಗವಾನ್ಮನೋ ದಧೇ ॥

ಅನುವಾದ

ಅಜ್ಞರಾದ ಆ ಗೋಪಬಾಲಕರು ಪರಸ್ಪರವಾಗಿ ಮಾತನಾಡಿಕೊಳ್ಳುತ್ತಿದ್ದ ಉತ್ಪ್ರೇಕ್ಷೆಯ ಮಾತುಗಳನ್ನು ಶ್ರೀಕೃಷ್ಣನು ಕೇಳಿಸಿಕೊಂಡು, ಅಯ್ಯೋ! ಇವರಿಗಾದರೋ ನಿಜವಾದ ಸರ್ಪವೂ ಕೂಡ ಸುಳ್ಳೆಂದು ಕಂಡು ಬರುತ್ತಿದೆಯಲ್ಲ! ಎಂದು ಯೋಚಿಸಿದನು. ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಇವನು ರಾಕ್ಷಸನಾಗಿದ್ದಾನೆ ಎಂದು ತಿಳಿದುಕೊಂಡನು. ಅವನಿಂದ ಏನು ತಾನೇ ಅಡಗಿರ ಬಲ್ಲದು? ಅವನು ಎಲ್ಲರ ಹೃದಯದಲ್ಲಿಯೂ ವಾಸವಾಗಿದ್ದಾನೆ ತನ್ನ ಗೆಳೆಯರಾದ ಗೊಲ್ಲಬಾಲಕರನ್ನು ಅವನ ಬಾಯೊಳಗೆ ಹೋಗುವುದನ್ನು ತಡೆಯ ಬೇಕೆಂದು ನಿಶ್ವಯಿಸಿದನು.॥25॥

(ಶ್ಲೋಕ-26)

ಮೂಲಮ್

ತಾವತ್ಪ್ರವಿಷ್ಟಾಸ್ತ್ವಸುರೋದರಾಂತರಂ
ಪರಂ ನ ಗೀರ್ಣಾಃ ಶಿಶವಃ ಸವತ್ಸಾಃ ।
ಪ್ರತೀಕ್ಷಮಾಣೇನ ಬಕಾರಿವೇಶನಂ
ಹತಸ್ವಕಾಂತಸ್ಮರಣೇನ ರಕ್ಷಸಾ ॥

ಅನುವಾದ

ಭಗವಂತನು ಹೀಗೆ ಯೋಚಿಸುವಾಗಲೇ ಎಲ್ಲ ಗೋಪಾಲಬಾಲಕರು ಕರುಗಳೊಂದಿಗೆ ಅಸುರನ ಹೊಟ್ಟೆಯೊಳಗೆ ಪ್ರವೇಶಿಸಿಯೇ ಬಿಟ್ಟರು. ಆದರೆ ಅಘಾಸುರನು ಅವರನ್ನು ಇನ್ನೂ ನುಂಗಿರಲಿಲ್ಲ. ಇದರ ಕಾರಣ - ಅಘಾಸುರನು ತನ್ನ ಅಣ್ಣ ಬಕಾಸುರ ಮತ್ತು ಅಕ್ಕ ಪೂತನೆಯನ್ನು ವಧಿಸಿದುದನ್ನು ನೆನೆದು, ಅವರನ್ನು ವಧಿಸಿದ ಶ್ರೀಕೃಷ್ಣನು ಬಾಯೊಳಗೆ ಬಂದಾಗ ಎಲ್ಲರನ್ನು ಒಂದೇ ಬಾರಿಗೆ ನುಂಗಿ ಬಿಡುವೆನೆಂದು ದಾರಿಕಾಯುತ್ತಿದ್ದನು. ॥26॥

(ಶ್ಲೋಕ-27)

ಮೂಲಮ್

ತಾನ್ವೀಕ್ಷ್ಯ ಕೃಷ್ಣಃ ಸಕಲಾಭಯಪ್ರದೋ
ಹ್ಯನನ್ಯನಾಥಾನ್ಸ್ವಕರಾದವಚ್ಯುತಾನ್ ।
ದೀನಾಂಶ್ಚ ಮೃತ್ಯೋರ್ಜಠರಾಗ್ನಿಘಾಸಾನ್-
ಘೃಣಾರ್ದಿತೋ ದಿಷ್ಟಕೃತೇನ ವಿಸ್ಮಿತಃ ॥

ಅನುವಾದ

ಸಕಲರಿಗೂ ಅಭಯಪ್ರದನಾದ ಶ್ರೀಕೃಷ್ಣನು ಗೊಲ್ಲಬಾಲಕರಿಗೂ ಇವನೇ ಏಕಮಾತ್ರರಕ್ಷಕನಾಗಿದ್ದನು. ಆದರೂ ಅವರು ಇವನ ಕೈತಪ್ಪಿ ಹೋಗಿದ್ದರು. ಹುಲ್ಲು ಕಡ್ಡಿಯು ಕೈತಪ್ಪಿ ಅಗ್ನಿಗೆ ಬಿದ್ದು ಹೋಗುವಂತೇ ಕರುಗಳೂ, ದೀನರಾದ ಗೋಪಾಲಕರೂ ಕೃಷ್ಣನ ಕೈ ತಪ್ಪಿ ಅಘಾಸುರನ ಜಠರಾಗ್ನಿಗೆ ಬಿದ್ದುಹೋಗಿದ್ದರು. ದಯಾರ್ದ್ರ ಹೃದಯನಾದ ಶ್ರೀಕೃಷ್ಣನು ದೈವದ ಈ ವಿಚಿತ್ರವಾದ ಗತಿಯನ್ನು ನೋಡಿ ಅಚ್ಚರಿಗೊಂಡನು. ॥27॥

(ಶ್ಲೋಕ-28)

ಮೂಲಮ್

ಕೃತ್ಯಂ ಕಿಮತ್ರಾಸ್ಯ ಖಲಸ್ಯ ಜೀವನಂ
ನ ವಾ ಅಮೀಷಾಂ ಚ ಸತಾಂ ವಿಹಿಂಸನಮ್ ।
ದ್ವಯಂ ಕಥಂ ಸ್ಯಾದಿತಿ ಸಂವಿಚಿಂತ್ಯ ತ-
ಜ್ಜ್ಞಾತ್ವಾವಿಶತ್ತುಂಡಮಶೇಷದೃಗ್ಘರಿಃ ॥

ಅನುವಾದ

‘ಈಗ ನಾನೇನು ಮಾಡಲಿ?’ ಎಂದು ತಾನು ಮಾಡಬೇಕಾದ ಕರ್ತವ್ಯದ ಕುರಿತಾಗಿ ಯೋಚಿಸಿದನು. ಸಂತಸ್ವಭಾವದ ನನ್ನ ಗೆಳೆಯರಾದ ಗೋಪಾಲರಿಗೂ, ಕರುಗಳಿಗೂ ಯಾವುದೇ ಹಿಂಸೆಯೂ ಆಗಬಾರದು. ಈ ಎರಡನ್ನು ಹೇಗೆ ಸಾಧಿಸಲಿ? ಪರೀಕ್ಷಿತನೇ! ಶ್ರೀಹರಿಯು ಭೂತ ಭವಿಷ್ಯದ್ವರ್ತಮಾನಗಳನ್ನು ತಿಳಿದವನಾಗಿದ್ದನು. ಅವನಿಗೆ ಈ ಉಪಾಯವನ್ನು ತಿಳಿಯುವುದರಲ್ಲಿ ಕಷ್ಟವಾಗಿರಲಿಲ್ಲ. ಅವನು ತನ್ನ ಕರ್ತವ್ಯವನ್ನು ನಿಶ್ವಯಿಸಿಕೊಂಡು ಹೆಬ್ಬಾವಿನ ಮುಖದಲ್ಲಿ ಪ್ರವೇಶಿಸಿ ಬಿಟ್ಟನು. ॥28॥

(ಶ್ಲೋಕ-29)

ಮೂಲಮ್

ತದಾ ಘನಚ್ಛದಾ ದೇವಾ ಭಯಾದ್ದಾಹೇತಿ ಚುಕ್ರುಶುಃ ।
ಜಹೃಷುರ್ಯೇ ಚ ಕಂಸಾದ್ಯಾಃ ಕೌಣಪಾಸ್ತ್ವಘಬಾಂಧವಾಃ ॥

ಅನುವಾದ

ಆ ಸಮಯದಲ್ಲಿ ಮೋಡಗಳಲ್ಲಿ ಅಡಗಿದ್ದ ದೇವತೆಗಳು ಭಯಗೊಂಡು ಅಯ್ಯೋ! ಅಯ್ಯೋ! ಸರ್ವನಾಶವಾಯಿತೆಂದು ಕೂಗಿಕೊಂಡರು. ಆಘಾಸುರನ ಹಿತೈಷಿಗಳಾದ ಕಂಸನೇ ಮೊದಲಾದ ರಾಕ್ಷಸರು ಹಿರಿ-ಹಿರಿ ಹಿಗ್ಗಿದರು. ॥29॥

(ಶ್ಲೋಕ-30)

ಮೂಲಮ್

ತಚ್ಛ್ರುತ್ವಾ ಭಗವಾನ್ ಕೃಷ್ಣಸ್ತ್ವವ್ಯಯಃ ಸಾರ್ಭವತ್ಸಕಮ್ ।
ಚೂರ್ಣೀಚಿಕೀರ್ಷೋರಾತ್ಮಾನಂ ತರಸಾ ವವೃಧೇ ಗಲೇ ॥

ಅನುವಾದ

ಅಘಾಸುರನು ಕರುಗಳನ್ನು ಮತ್ತು ಗೊಲ್ಲಬಾಲಕರನ್ನು ಭಗವಾನ್ ಶ್ರೀಕೃಷ್ಣನೊಂದಿಗೆ ಕೋರೆಹಲ್ಲುಗಳಿಂದ ಜಗಿದು ನುಂಗಿ ಜೀರ್ಣ ಮಾಡಿಕೊಳ್ಳಲು ಹವಣಿಸುತ್ತಿದ್ದನು. ಆದರೆ ಆಗಲೇ ಅವಿನಾಶೀ ಶ್ರೀಕೃಷ್ಣನು ದೇವತೆಗಳ ಕರುಣಾಕ್ರಂದನವನ್ನು ಕೇಳಿ ಅಸುರನ ಗಂಟಲೊಳಗೆ ತನ್ನ ಶರೀರವನ್ನು ವೇಗವಾಗಿ ಹಿಗ್ಗಿಸತೊಡಗಿದನು. ॥30॥

(ಶ್ಲೋಕ-31)

ಮೂಲಮ್

ತತೋತಿಕಾಯಸ್ಯ ನಿರುದ್ಧಮಾರ್ಗಿಣೋ
ಹ್ಯುದ್ಗೀರ್ಣದೃಷ್ಟೇರ್ಭ್ರಮತಸ್ತ್ವಿತಸ್ತತಃ ।
ಪೂರ್ಣೋಂತರಂಗೇ ಪವನೋ ನಿರುದ್ಧೋ
ಮೂರ್ಧನ್ವಿ ನಿಷ್ಪಾಟ್ಯ ವಿನಿರ್ಗತೋ ಬಹಿಃ ॥

ಅನುವಾದ

ಅವನು ಬೆಳೆಯುತ್ತಾ-ಬೆಳೆಯುತ್ತಾ ಅವನ ಗಂಟಲು ತುಂಬಿ ಉಸಿರು ಕಟ್ಟಿಹೋಯಿತು. ಕಣ್ಣುಗಳು ತಿರುಗಿದವು. ಅವನು ವ್ಯಾಕುಲನಾಗಿ ಬಹಳವಾಗಿ ಚಡಪಡಿಸಿದನು. ಶ್ವಾಸೋಶ್ಛಾಸಗಳು ನಿಂತು ಹೋಗಿ ವಾಯುವು ಇಡೀ ಶರೀರದಲ್ಲಿ ತುಂಬಿ ಹೋಯಿತು. ಕೊನೆಗೆ ಪ್ರಾಣವು ಬ್ರಹ್ಮರಂಧ್ರವನ್ನು ಭೇದಿಸಿ ಹೊರಟು ಹೋಯಿತು. ॥31॥

(ಶ್ಲೋಕ-32)

ಮೂಲಮ್

ತೇನೈವ ಸರ್ವೇಷು ಬಹಿರ್ಗತೇಷು
ಪ್ರಾಣೇಷು ವತ್ಸಾನ್ಸುಹೃದಃ ಪರೇತಾನ್ ।
ದೃಷ್ಟ್ಯಾ ಸ್ವಯೋತ್ಥಾಪ್ಯ ತದನ್ವಿತಃ ಪುನ-
ರ್ವಕಾನ್ಮುಕುಂದೋ ಭಗವಾನ್ವಿನಿರ್ಯಯೌ ॥

ಅನುವಾದ

ಅದೇ ಮಾರ್ಗದಿಂದ ಅವನ ಎಲ್ಲ ಇಂದ್ರಿಯಗಳು ಪ್ರಾಣದೊಂದಿಗೆ ಶರೀರದಿಂದ ಹೊರಬಿದ್ದವು. ಆಗಲೇ ಭಗವಾನ್ ಮುಕುಂದನು ತನ್ನ ಅಮೃತಮಯ ದೃಷ್ಟಿಯಿಂದ ಸತ್ತುಹೋದ ಕರುಗಳನ್ನು ಮತ್ತು ಗೋಪಬಾಲಕರನ್ನು ಬದುಕಿಸಿದನು ಹಾಗೂ ಅವರೆಲ್ಲರನ್ನು ಜೊತೆಗೆ ಕರೆದುಕೊಂಡು ಅವನು ಅಘಾಸುರನ ಬಾಯಿಯಿಂದ ಹೊರಗೆ ಬಂದನು. ॥32॥

(ಶ್ಲೋಕ-33)

ಮೂಲಮ್

ಪೀನಾಹಿಭೋಗೋತ್ಥಿತಮದ್ಭುತಂ ಮಹ-
ಜ್ಜ್ಯೋತಿಃ ಸ್ವಧಾಮ್ನಾ ಜ್ವಲಯದ್ದಿಶೋ ದಶ ।
ಪ್ರತೀಕ್ಷ್ಯ ಖೇವಸ್ಥಿತಮೀಶನಿರ್ಗಮಂ
ವಿವೇಶ ತಸ್ಮಿನ್ಮಿಷತಾಂ ದಿವೌಕಸಾಮ್ ॥

ಅನುವಾದ

ಆ ಹೆಬ್ಬಾವಿನ ಸ್ಥೂಲ ಶರೀರದಿಂದ ಅತ್ಯಂತ ಅದ್ಭುತ ಹಾಗೂ ಮಹಾಜ್ಯೋತಿಯೊಂದು ಹೊರಟಿತು. ಆಗ ಆ ಜ್ಯೋತಿಯ ಪ್ರಕಾಶದಿಂದ ಹತ್ತು ದಿಕ್ಕುಗಳೂ ಬೆಳಗಿದವು. ಅದು ಸ್ವಲ್ಪ ಹೊತ್ತು ಆಕಾಶದಲ್ಲಿ ನೆಲೆಸಿ ಭಗವಂತನು ಹೊರಬರುವುದನ್ನು ಪ್ರತೀಕ್ಷೆ ಮಾಡುತ್ತಿತ್ತು. ಅವನು ಹೊರಗೆ ಬರುತ್ತಲೇ ಅದು ಸಕಲ ದೇವತೆಗಳು ನೋಡು-ನೋಡುತ್ತಿರುವಂತೆ ಭಗವಂತನಲ್ಲಿ ಸೇರಿಹೋಯಿತು. ॥33॥

(ಶ್ಲೋಕ-34)

ಮೂಲಮ್

ತತೋತಿಹೃಷ್ಟಾಃ ಸ್ವಕೃತೋಕೃತಾರ್ಹಣಂ
ಪುಷ್ಪೈಃ ಸುರಾ ಅಪ್ಸರಸಶ್ಚ ನರ್ತನೈಃ ।
ಗೀತೈಃ ಸುಗಾ ವಾದ್ಯಧರಾಶ್ಚ ವಾದ್ಯಕೈಃ
ಸ್ತವೈಶ್ಚ ವಿಪ್ರಾ ಜಯನಿಃಸ್ವನೈರ್ಗಣಾಃ ॥

ಅನುವಾದ

ಆ ಸಮಯದಲ್ಲಿ ದೇವತೆಗಳು ಹೂಮಳೆಯನ್ನು ಸುರಿಸಿ, ಅಪ್ಸರೆಯರು ನರ್ತನ ಮಾಡುತ್ತಾ, ಗಂಧರ್ವರು ಹಾಡಿ, ವಿದ್ಯಾಧರರು ವಾದ್ಯಗಳನ್ನು ನುಡಿಸಿ, ಬ್ರಾಹ್ಮಣರು ಸ್ವಸ್ತಿವಾಚನ ಮಾಡುತ್ತಾ, ಪಾರ್ಷದರು ಶ್ರೀಕೃಷ್ಣನಿಗೆ ಜಯವಾಗಲಿ, ಯದುಕುಮಾರನಿಗೆ ಜಯವಾಗಲೀ ಎಂದು ಜಯಘೋಷ ಮಾಡುತ್ತಾ ಆನಂದದಿಂದ ಭಗವಂತನನ್ನು ಅಭಿನಂದಿಸಿದರು. ಏಕೆಂದರೆ, ಭಗವಾನ್ ಶ್ರೀಕೃಷ್ಣನು ಅಘಾಸುರನ್ನು ಕೊಂದು ಅವರೆಲ್ಲರ ದೊಡ್ಡ ಕೆಲಸವನ್ನು ಮಾಡಿದ್ದನು. ॥34॥

(ಶ್ಲೋಕ-35)

ಮೂಲಮ್

ತದದ್ಭುತಸ್ತೋತ್ರಸುವಾದ್ಯಗೀತಿಕಾ-
ಜಯಾದಿನೈಕೋತ್ಸವಮಂಗಲಸ್ವನಾನ್ ।
ಶ್ರುತ್ವಾ ಸ್ವಧಾಮ್ನೋಂತ್ಯಜ ಆಗತೋಚಿರಾದ್
ದೃಷ್ಟ್ವಾ ಮಹೀಶಸ್ಯ ಜಗಾಮ ವಿಸ್ಮಯಮ್ ॥

ಅನುವಾದ

ಆ ಅದ್ಭುತ ಸ್ತುತಿಗಳು, ಮಂಗಳ ವಾದ್ಯ-ಗೀತೆಗಳು, ಜಯಕಾರ ಧ್ವನಿಗಳೂ, ಆನಂದೋತ್ಸವದ ಮಂಗಳಧ್ವನಿಗಳು ಬ್ರಹ್ಮಲೋಕಕ್ಕೆ ಮುಟ್ಟಿದವು. ಬ್ರಹ್ಮದೇವರು ಆ ಧ್ವನಿಯನ್ನು ಕೇಳಿದಾಗ ಅವರು ಶೀಘ್ರವಾಗಿ ತನ್ನ ವಾಹನವನ್ನೇರಿ ಶ್ರೀಕೃಷ್ಣನಿರುವಲ್ಲಿಗೆ ಬಂದು ಅವನ ಮಹಿಮೆಯನ್ನು ನೋಡಿ ಆಶ್ಚರ್ಯಚಕಿತರಾದರು. ॥35॥

(ಶ್ಲೋಕ-36)

ಮೂಲಮ್

ರಾಜನ್ನಾಜಗರಂ ಚರ್ಮ ಶುಷ್ಕಂ ವೃಂದಾವನೇದ್ಭುತಮ್ ।
ವ್ರಜೌಕಸಾಂ ಬಹುತಿಥಂ ಬಭೂವಾಕ್ರೀಡಗಹ್ವರಮ್ ॥

ಅನುವಾದ

ಪರೀಕ್ಷಿತನೇ! ವೃಂದಾವನದಲ್ಲಿ ಆ ಹೆಬ್ಬಾವಿನ ಚರ್ಮವು ಒಣಗಿಹೋದಾಗ ಅದು ವ್ರಜವಾಸಿಗಳಿಗೆ ಅನೇಕ ದಿನಗಳವರೆಗೆ ಆಟವಾಡುವ ಒಂದು ಅದ್ಭುತ ಗುಹೆಯಂತಾಗಿತ್ತು. ॥36॥

(ಶ್ಲೋಕ-37)

ಮೂಲಮ್

ಏತತ್ಕೌಮಾರಜಂ ಕರ್ಮ ಹರೇರಾತ್ಮಾಹಿಮೋಕ್ಷಣಮ್ ।
ಮೃತ್ಯೋಃ ಪೌಗಂಡಕೇ ಬಾಲಾ ದೃಷ್ಟ್ವೋಚುರ್ವಿಸ್ಮಿತಾ ವ್ರಜೇ ॥

ಅನುವಾದ

ಭಗವಂತನು ಗೊಲ್ಲಬಾಲಕರನ್ನು ಮೃತ್ಯುಮುಖದಿಂದ ಬದುಕಿಸಿದ್ದು ಮತ್ತು ಅಘಾಸುರನಿಗೆ ಮೋಕ್ಷವನ್ನು ಕರುಣಿಸಿದ ಆ ಲೀಲೆಯನ್ನು ತನ್ನ ಕೌಮಾರಾವಸ್ಥೆಯಲ್ಲಿ, ಅಂದರೆ ಐದನೇ ವರ್ಷದಲ್ಲಿ ನಡೆಸಿದ್ದನು. ಗೊಲ್ಲಬಾಲಕರು ಅದನ್ನು ಆಗಲೇ ನೋಡಿಯೂ ಇದ್ದರು. ಆದರೆ ಪೌಗಂಡಾವಸ್ಥೆಯಲ್ಲಿ* ಅರ್ಥಾತ್ ಆರನೇ ವರ್ಷದಲ್ಲಿ ಅತ್ಯಂತ ಆಶ್ಚರ್ಯಚಕಿತರಾಗಿ ವ್ರಜದಲ್ಲಿ ಅದನ್ನು ವರ್ಣಿಸಿದರು. ॥37॥

ಟಿಪ್ಪನೀ
  • ಕೌಮಾರಃ - ಪೌಗಂಡ ಃ - ಕೌಮಾರಂ ಪಂಚಮಾಬ್ದಾಂತಂ ಪೌಗಂಡಂ ದಶಮಾವಧಿ ।
    ಕೈಶೋರಮಾಪಂಚಾದಶಾದ್ಯೌವನಂ ಚ ತತಃ ಪರಮ್ ॥

(ಶ್ಲೋಕ-38)

ಮೂಲಮ್

ನೈತದ್ವಿಚಿತ್ರಂ ಮನುಜಾರ್ಭಮಾಯಿನಃ
ಪರಾವರಾಣಾಂ ಪರಮಸ್ಯ ವೇಧಸಃ ।
ಅಘೋಪಿ ಯತ್ಸ್ಪರ್ಶನಧೌತಪಾತಕಃ
ಪ್ರಾಪಾತ್ಮಸಾಮ್ಯಂ ತ್ವಸತಾಂ ಸುದುರ್ಲಭಮ್ ॥

ಅನುವಾದ

ಅಘಾಸುರನು ಮೂರ್ತಿವೆತ್ತ ಅಘ (ಪಾಪ)ವೇ ಆಗಿದ್ದನು. ಭಗವಂತನ ಸ್ಪರ್ಶಮಾತ್ರದಿಂದ ಅವನ ಪಾಪಗಳೆಲ್ಲವೂ ತೊಳೆದು ಹೋದುವು ಮತ್ತು ಪಾಪಿಗಳಿಗೆ ಎಂದೂ ಸಿಗಲಾರದ ಸಾರೂಪ್ಯ ಮುಕ್ತಿಯು ಅವನಿಗೆ ದೊರೆಯಿತು. ಆದರೆ ಇದೇನು ಆಶ್ಚರ್ಯದ ಮಾತಲ್ಲ. ಏಕೆಂದರೆ, ಮನುಷ್ಯಬಾಲಕನಂತೆ ಲೀಲೆಯನ್ನು ಮಾಡುವ ಅವನೇ ಪರಮಪುರುಷ ಪರಮಾತ್ಮನಾಗಿದ್ದಾನೆ. ಅವನು ವ್ಯಕ್ತ-ಅವ್ಯಕ್ತ ಮತ್ತು ಕಾರ್ಯ-ಕಾರಣರೂಪೀ ಸಮಸ್ತ ಜಗತ್ತಿನ ಏಕಮಾತ್ರ ನಿಯಾಮಕನಾಗಿದ್ದಾನೆ. ॥38॥

(ಶ್ಲೋಕ-39)

ಮೂಲಮ್

ಸಕೃದ್ಯದಂಗಪ್ರತಿಮಾಂತರಾಹಿತಾ
ಮನೋಮಯೀ ಭಾಗವತೀಂ ದದೌ ಗತಿಮ್ ।
ಸ ಏವ ನಿತ್ಯಾತ್ಮ ಸುಖಾನುಭೂತ್ಯಭಿ-
ವ್ಯದಸ್ತಮಾಯೋಂತರ್ಗತೋ ಹಿ ಕಿಂ ಪುನಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಯಾವುದೇ ಒಂದು ಅಂಗದ ಭಾವನಿರ್ಮಿತ ಪ್ರತಿಮೆಯನ್ನು ಧ್ಯಾನದ ಮೂಲಕ ಒಮ್ಮೆಯಾದರೂ ಹೃದಯದಲ್ಲಿ ನೆಲೆಸಿಕೊಂಡರೆ, ಅದು ಸಾಲೋಕ್ಯ, ಸಾಮೀಪ್ಯ ಮೊದಲಾದ ಗತಿಯನ್ನು ಕರುಣಿಸುತ್ತದೆ. ಅದು ಭಗವಂತನ ಅಂತರಂಗ ಭಕ್ತರಿಗೆ ಸದಾ ದೊರೆಯುತ್ತದೆ. ಭಗವಂತನು ಆತ್ಮಾನಂದದ ನಿತ್ಯ ಸಾಕ್ಷಾತ್ಕಾರ ಸ್ವರೂಪನಾಗಿದ್ದಾನೆ. ಮಾಯೆಯು ಅವನ ಬಳಿಯಲ್ಲಿ ಸುಳಿಯುವುದಿಲ್ಲ. ಅಂತಹ ಆ ಭಗವಂತನು ಅಘಾಸುರ ಶರೀರದಲ್ಲಿ ಪ್ರವೇಶಿಸಿದನೆಂದರೆ ಅವನಿಗೆ ಸದ್ಗತಿಯಾಗುವುದರಲ್ಲಿ ಸಂದೇಹವಿದೆಯೇ? ॥39॥

(ಶ್ಲೋಕ-40)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಥಂ ದ್ವಿಜಾ ಯಾದವದೇವದತ್ತಃ
ಶ್ರುತ್ವಾ ಸ್ವರಾತುಶ್ಚರಿತಂ ವಿಚಿತ್ರಮ್ ।
ಪಪ್ರಚ್ಛ ಭೂಯೋಪಿ ತದೇವ ಪುಣ್ಯಂ
ವೈಯಾಸಕಿಂ ಯನ್ನಿಗೃಹೀತಚೇತಾಃ ॥

ಅನುವಾದ

ಸೂತ ಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳೇ! ಯದವಂಶ ಶಿರೋಮಣಿಯಾದ ಶ್ರೀಕೃಷ್ಣನೇ ಪರೀಕ್ಷಿದ್ರಾಜನಿಗೆ ಜೀವನದಾನ ಮಾಡಿದ್ದನು. ಪರೀಕ್ಷಿತನು ತನ್ನ ರಕ್ಷಕನೂ, ಜೀವದಾತನೂ ಆದ ಶ್ರೀಕೃಷ್ಣನ ಸುಮನೋಹರವಾದ ಲೀಲಾ ಪ್ರಸಂಗಗಳನ್ನು ಕೇಳಿದಾಗ ಅವನ ಚಿತ್ತವು ಆ ಅಮೃತಮಯ ಲೀಲೆಗಳಿಂದ ಮುಗ್ಧವಾಗಿ ಹೋಗಿತ್ತು. ಇನ್ನೂ ಕೇಳಬೇಕೆಂದು ಅನಿಸಿತು. ಜೀತೇಂದ್ರಿಯನಾದ ಆ ಪರೀಕ್ಷಿತನು ಶ್ರೀಶುಕಮಹಾಮನಿಗಳಲ್ಲಿ ಶ್ರೀಕೃಷ್ಣನ ಪವಿತ್ರ ಲೀಲೆಗಳ ಕುರಿತು ಪುನಃ ಪ್ರಶ್ನಿಸಿದನು. ॥40॥

(ಶ್ಲೋಕ-41)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಬ್ರಹ್ಮನ್ಕಾಲಾಂತರಕೃತಂ ತತ್ಕಾಲೀನಂ ಕಥಂ ಭವೇತ್ ।
ಯತ್ಕೌಮಾರೇ ಹರಿಕೃತಂ ಜಗುಃ ಪೌಗಂಡಕೇರ್ಭಕಾಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಪರಮಪೂಜ್ಯರೇ! ಭಗವಾನ್ ಶ್ರೀಕೃಷ್ಣನು ಐದನೆಯ ವರ್ಷದಲ್ಲಿ ನಡೆಸಿದ ಲೀಲೆಯನ್ನು ಅವನ ಆರನೆಯ ವರ್ಷದಲ್ಲಿ ಗೋಪಾಲಕರು ವ್ರಜದಲ್ಲಿ ಹೋಗಿ ಹೇಳಿದರೆಂದು ತಾವು ಅಪ್ಪಣೆ ಕೊಡಿಸಿದಿರಿ. ಗತಕಾಲದ ಲೀಲೆಯು ವರ್ತಮಾನದಲ್ಲಿ ನಡೆದಂತೆ ಹೇಳಲು ಹೇಗೆ ಸಾಧ್ಯವಾಯಿತು? ॥41॥

(ಶ್ಲೋಕ-42)

ಮೂಲಮ್

ತದ್ಬ್ರೂಹಿ ಮೇ ಮಹಾಯೋಗಿನ್ಪರಂ ಕೌತೂಹಲಂ ಗುರೋ ।
ನೂನಮೇತದ್ಧರೇರೇವ ಮಾಯಾ ಭವತಿ ನಾನ್ಯಥಾ ॥

ಅನುವಾದ

ಮಹಾಯೋಗಿಗಳೇ! ಇದನ್ನು ಕೇಳಲು ನನಗೆ ಹೆಚ್ಚಿನ ಕುತೂಹಲವುಂಟಾಗಿದೆ. ದಯಮಾಡಿ ಹೇಳಿರಿ. ನಿಶ್ಚಯವಾಗಿಯೂ ಇದು ಹರಿಯ ಮಾಯೆಯೇ ಹೊರತು ಬೇರೆ ಯಾವರೀತಿಯಿಂದಲೂ ಹೀಗಾಗಲು ಸಾಧ್ಯವಿಲ್ಲ. ॥42॥

(ಶ್ಲೋಕ-43)

ಮೂಲಮ್

ವಯಂ ಧನ್ಯತಮಾ ಲೋಕೇ ಗುರೋಪಿ ಕ್ಷತ್ರಬಂಧವಃ ।
ಯತ್ಪಿಬಾಮೋ ಮುಹುಸ್ತ್ವತ್ತಃ ಪುಣ್ಯಂ ಕೃಷ್ಣಕಥಾಮೃತಮ್ ॥

ಅನುವಾದ

ಗುರುಗಳೇ! ನಾವು ಕ್ಷತ್ರ ಬಂಧುಗಳಾಗಿದ್ದರೂ (ಕರ್ತವ್ಯವನ್ನು ಪಾಲಿಸದೆ ನಾಮ ಮಾತ್ರಕ್ಕೆ ಕ್ಷತ್ರಿಯರಾಗಿದ್ದರೂ) ಧನ್ಯತಮರಾಗಿ ಇದ್ದೇವೆ. ತಮ್ಮ ಮುಖಾರವಿಂದದಿಂದ ಪುಣ್ಯತಮವಾದ ಶ್ರೀಕೃಷ್ಣ ಕಥಾಮೃತವನ್ನು ಸತತವಾಗಿ ಪಾನಮಾಡುತ್ತಿದ್ದೇವಲ್ಲವೇ? ॥43॥

(ಶ್ಲೋಕ-44)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಥಂ ಸ್ಮ ಪೃಷ್ಟಃ ಸ ತು ಬಾದರಾಯಣಿಃ
ತತ್ಸ್ಮಾರಿತಾನಂತಹೃತಾಖಿಲೇಂದ್ರಿಯಃ ।
ಕೃಚ್ಛ್ರಾತ್ಪುನರ್ಲಬ್ಧ ಬಹಿರ್ದೃಶಿಃ ಶನೈಃ
ಪ್ರತ್ಯಾಹ ತಂ ಭಾಗವತೋತ್ತಮೋತ್ತಮ ॥

ಅನುವಾದ

ಸೂತ ಪುರಾಣಿಕರು ಹೇಳುತ್ತಾರೆ — ಪರಮಾತ್ಮನ ಪರಮ ಭಕ್ತರಲ್ಲಿ ಶ್ರೇಷ್ಠರಾದ ಶೌನಕಮುನಿವರ್ಯರೇ! ಪರೀಕ್ಷಿತನು ಹೀಗೆ ಪ್ರಶ್ನಿಸಿದಾಗ ಶ್ರೀಶುಕದೇವರಿಗೆ ಭಗವಂತನ ಲೀಲಾಪ್ರಸಂಗದ ಸ್ಮರಣೆಯುಂಟಾಗಿ ಇಂದ್ರಿಯಗಳೆಲ್ಲವೂ ಬಹಿರ್ವ್ಯಾಪಾರವನ್ನು ತೊರೆದು ಮನಸ್ಸಿನೊಡನೆ ಹೃತ್ಕಮಲದಲ್ಲಿ ಶ್ರೀಕೃಷ್ಣನ ಲೀಲಾಪ್ರಸಂಗದಲ್ಲಿ ಲೀನವಾಗಿ ಬಿಟ್ಟವು. ಹೀಗೆ ಆತ್ಮಾನಂದವನ್ನು ಅನುಭವಿಸುತ್ತಿದ್ದ ಶುಕಬ್ರಹ್ಮರು ಅತ್ಯಂತ ಕಠಿಣತೆಯಿಂದ ಬಹಿರ್ಮುಖರಾಗಿ ಪುನಃ ಭಗವಂತನ ದಿವ್ಯಲೀಲೆಗಳನ್ನು ವರ್ಣಿಸತೊಡಗಿದರು. ॥44॥

ಅನುವಾದ (ಸಮಾಪ್ತಿಃ)

ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ದ್ವಾದಶೋಽಧ್ಯಾಯಃ ॥12॥