[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಶ್ರೀಕೃಷ್ಣನನ್ನು ಒರಳಿಗೆ ಕಟ್ಟಿಹಾಕಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏಕದಾ ಗೃಹದಾಸೀಷು ಯಶೋದಾ ನಂದಗೇಹಿನೀ ।
ಕರ್ಮಾಂತರನಿಯುಕ್ತಾಸು ನಿರ್ಮಮಂಥ ಸ್ವಯಂ ದಧಿ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಒಮ್ಮೆ ನಂದಪತ್ನಿಯಾದ ಯಶೋದೆಯು ಮನೆಗೆಲಸದ ದಾಸಿಯರನ್ನು ಬೇರೆ ಮನೆಗೆಲಸಕ್ಕೆ ನೇಮಿಸಿ, ಸ್ವತಃ ತನ್ನ ಕಂದಮ್ಮನಿಗೆ ಬೆಣ್ಣೆಯನ್ನು ತಿನ್ನಿಸುವ ಸಲುವಾಗಿ ಮೊಸರು ಕಡೆಯಲು ಪ್ರಾರಂಭಿಸಿದಳು. ॥1॥
(ಶ್ಲೋಕ-2)
ಮೂಲಮ್
ಯಾನಿ ಯಾನೀಹ ಗೀತಾನಿ ತದ್ಬಾಲಚರಿತಾನಿ ಚ ।
ದಧಿನಿರ್ಮಂಥನೇ ಕಾಲೇ ಸ್ಮರಂತೀ ತಾನ್ಯಗಾಯತ ॥
ಅನುವಾದ
ಮಹಾರಾಜಾ! ನಾನು ಇದುವರೆಗೆ ಭಗವಂತನ ಯಾವ ಬಾಲಲೀಲೆಗಳನ್ನು ನಿನಗೆ ವರ್ಣಿಸಿ ಹೇಳಿರುವೆನೋ ಅವೆಲ್ಲವನ್ನೂ ಸ್ಮರಿಸಿಕೊಳ್ಳುತ್ತಾ ಹೃದಯಂಗಮವಾಗಿ ಹಾಡುತ್ತಾ ಯಶೋದೆಯು ಮೊಸರು ಕಡೆಯುತ್ತಿದ್ದಳು. ॥2॥
(ಶ್ಲೋಕ-3)
ಮೂಲಮ್
ಕ್ಷೌಮಂ ವಾಸಃ ಪೃಥುಕಟಿತಟೇ ಬಿಭ್ರತೀ ಸೂತ್ರನದ್ಧಂ
ಪುತ್ರಸ್ನೇಹಸ್ನುತಕುಚಯುಗಂ ಜಾತಕಂಪಂ ಚ ಸುಭ್ರೂಃ ।
ರಜ್ಜ್ವಾಕರ್ಷಶ್ರಮಭುಜಚಲತ್ಕಂಕಣೌ ಕುಂಡಲೇ ಚ
ಸ್ವಿನ್ನಂ ವಕಂ ಕಬರವಿಗಲನ್ಮಾಲತೀ ನಿರ್ಮಮಂಥ ॥
ಅನುವಾದ
ಹೀಗೆ ಮೊಸರು ಕಡೆಯುತ್ತಿರುವಾಗ ಯಶೋದೆಯು ದಿವ್ಯವಾದ ರೇಶ್ಮೆಯ ಸೀರೆಯನ್ನು ಉಟ್ಟಿದ್ದಳು. ಆಕೆಯು ನಡುವಿನಲ್ಲಿ ಕಿರುಗೆಜ್ಜೆಗಳಿಂದ ಕೂಡಿದ ಸ್ವರ್ಣಮಯವಾದ ಸೊಂಟಪಟ್ಟಿಯನ್ನು ಧರಿಸಿದ್ದಳು. ಪುತ್ರಸ್ನೇಹದ ಆಧಿಕ್ಯದಿಂದ ಆಕೆಯ ಸ್ತನಗಳಿಂದ ಹಾಲು ಒಸರುತ್ತಿತ್ತು ಹಾಗೂ ಕಂಪಿಸುತ್ತಿದ್ದವು. ಕಡೆಗೋಲ ಹಗ್ಗವನ್ನು ಎಳೆಯುತ್ತಿರುವಾಗ ಆಕೆಗೆ ಬಳಲಿಕೆ ಉಂಟಾಗಿತ್ತು. ಕೈಗಳಿಂದ ಮೊಸರು ಕಡೆಯುವಾಗ ಕೈಯಲ್ಲಿ ಧರಿಸಿದ ರತ್ನಕಂಕಣಗಳೂ ಝಣ-ಝಣಿಸುತ್ತಿದ್ದವು. ಕರ್ಣಕುಂಡಲಗಳು ಮುಖಮಂಡಲದ ಮೇಲೆ ತಮ್ಮ ಕಾಂತಿಯನ್ನು ಎರಚುತ್ತಾ ಅಲುಗಾಡುತ್ತಿದ್ದವು. ಮುಖವು ಬೆವರಿತ್ತು. ಮುಡಿಯಲ್ಲಿ ಮುಡಿದ ಹೂವುಗಳು ಉದುರುತ್ತಿದ್ದವು. ಸುಂದರವಾದ ಹುಬ್ಬುಗಳಿಂದ ಕಂಗೊಳಿಸುತ್ತಿದ್ದ ಯಶೋದೆಯು ಹೀಗೆ ಮೊಸರು ಕಡೆಯುತ್ತಿದ್ದಳು. ॥3॥
(ಶ್ಲೋಕ-4)
ಮೂಲಮ್
ತಾಂ ಸ್ತನ್ಯಕಾಮ ಆಸಾದ್ಯ ಮಥ್ನಂತೀಂ ಜನನೀಂ ಹರಿಃ ।
ಗೃಹೀತ್ವಾ ದಧಿಮಂಥಾನಂ ನ್ಯಷೇಧತ್ಪ್ರೀತಿಮಾವಹನ್ ॥
ಅನುವಾದ
ಆ ವೇಳೆಗೆ ಮುದ್ದುಕೃಷ್ಣನು ಸ್ತನ್ಯಪಾನ ಮಾಡುವ ಸಲುವಾಗಿ ಮೊಸರು ಕಡೆಯುತ್ತಿದ್ದ ತಾಯಿಯ ಬಳಿಗೆ ಬಂದನು. ಅವನು ತನ್ನ ತಾಯಿಯ ಹೃದಯದಲ್ಲಿ ಪ್ರೇಮವನ್ನು ಮತ್ತು ಆನಂದವನ್ನು ಹೆಚ್ಚಿಸುತ್ತಾ ಕಡೆಗೋಲನ್ನು ತನ್ನ ಪುಟ್ಟಕೈಗಳಿಂದ ಹಿಡಿದುಕೊಂಡು ತಾಯಿಯನ್ನು ಮೊಸರು ಕಡೆಯಲು ತಡೆದನು.॥4॥
(ಶ್ಲೋಕ-5)
ಮೂಲಮ್
ತಮಂಕಮಾರೂಢಮಪಾಯಯತ್ಸ್ತನಂ
ಸ್ನೇಹಸ್ನುತಂ ಸಸ್ಮಿತಮೀಕ್ಷತೀ ಮುಖಮ್ ।
ಅತೃಪ್ತಮುತ್ಸೃಜ್ಯ ಜವೇನ ಸಾ ಯಯಾ-
ವುತ್ಸಿಚ್ಯಮಾನೇ ಪಯಸಿ ತ್ವಧಿಶ್ರಿತೇ ॥
ಅನುವಾದ
ಶ್ರೀಕೃಷ್ಣನು ತಾಯಿಯಾದ ಯಶೋದೆಯ ತೊಡೆಯೇರಿದನು. ವಾತ್ಸಲ್ಯ ಸ್ನೇಹದ ಆಧಿಕ್ಯದಿಂದ ಆಕೆಯ ಸ್ತನಗಳಿಂದ ಹಾಲು ತಾನಾಗಿಯೇ ಸುರಿಯುತ್ತಿತ್ತು. ಅವಳು ಕೃಷ್ಣನಿಗೆ ಹಾಲುಣಿಸತೊಡಗಿದಳು ಹಾಗೂ ಮಂದಮಧುರ ಮುಗುಳ್ನಗುತ್ತಿದ್ದ ಕೃಷ್ಣನ ಮುಖವನ್ನೇ ನೋಡುತ್ತಿದ್ದಳು. ಇಷ್ಟರಲ್ಲಿ ಒಲೆಯ ಮೇಲಿಟ್ಟ ಹಾಲುಕ್ಕಿ ಬಂತು. ಅದನ್ನು ನೋಡಿದ ಯಶೋದೆಯು ಅತೃಪ್ತನಾದ ಅವನನ್ನು ಅಲ್ಲೇ ಬಿಟ್ಟು ಲಗುಬಗೆಯಿಂದ ಹಾಲನ್ನಿಳಿಸಲು ಹೊರಟು ಹೋದಳು. ॥5॥
(ಶ್ಲೋಕ-6)
ಮೂಲಮ್
ಸಂಜಾತಕೋಪಃ ಸ್ಫುರಿತಾರುಣಾಧರಂ
ಸಂದಶ್ಯ ದದ್ಭಿರ್ದಧಿಮಂಥಭಾಜನಮ್ ।
ಭಿತ್ತ್ವಾ ಮೃಷಾಶ್ರುರ್ದೃಷದಶ್ಮನಾ ರಹೋ
ಜಘಾಸ ಹೈಯಂಗವಮಂತರಂ ಗತಃ ॥
ಅನುವಾದ
ಇದರಿಂದ ಶ್ರೀಕೃಷ್ಣನಿಗೆ ಸ್ವಲ್ಪ ಸಿಟ್ಟು ಬಂತು. ಅವನ ಕೆಂದುಟಿಗಳು ಅದುರತೊಡಗಿದವು. ಅವನ್ನು ಹಲ್ಲುಗಳಿಂದ ಕಚ್ಚಿ ಶ್ರೀಕೃಷ್ಣನು ಬಳಿಯಲ್ಲೇ ಇದ್ದ ಗುಂಡುಕಲ್ಲಿನಿಂದ ಮೊಸರಿನ ಮಡಕೆಯನ್ನು ಒಡೆದುಹಾಕಿದನು. ಕಳ್ಳ ಅಳುವಿನಿಂದ ಕಣ್ಣಲ್ಲಿ ನೀರನ್ನು ತುಂಬಿಕೊಂಡು ಮೆಲ್ಲನೆ ಒಳಮನೆಗೆ ಹೋಗಿ ಅಲ್ಲಿಟ್ಟಿದ್ದ ಬೆಣ್ಣೆಯನ್ನು ತಿನ್ನತೊಡಗಿದನು.॥6॥
(ಶ್ಲೋಕ-7)
ಮೂಲಮ್
ಉತ್ತಾರ್ಯ ಗೋಪೀ ಸುಶೃತಂ ಪಯಃ ಪುನಃ
ಪ್ರವಿಶ್ಯ ಸಂದೃಶ್ಯ ಚ ದಧ್ಯಮತ್ರಕಮ್ ।
ಭಗ್ನಂ ವಿಲೋಕ್ಯ ಸ್ವಸುತಸ್ಯ ಕರ್ಮ ತತ್
ಜಹಾಸ ತಂ ಚಾಪಿ ನ ತತ್ರ ಪಶ್ಯತೀ ॥
ಅನುವಾದ
ಯಶೋದೆಯು ಕಾದಿರುವ ಹಾಲನ್ನು ಕೆಳಗಿಳಿಸಿಟ್ಟು ಪುನಃ ಮೊಸರು ಕಡೆವಲ್ಲಿಗೆ ಬಂದಳು. ಅಲ್ಲಿ ಬಂದು ನೋಡಿದಳು ಮೊಸರಿನ ಗಡಿಗೆಯು ಪುಡಿ-ಪುಡಿಯಾಗಿ ಮೊಸರೆಲ್ಲಾ ಚೆಲ್ಲಿ ಹೋಗಿತ್ತು. ಇದು ಶ್ರೀಕೃಷ್ಣನದೇ ಕೆಲಸವೆಂದು ತಿಳಿಯುವಲ್ಲಿ ತಡವಾಗಲಿಲ್ಲ. ಜೊತೆಗೆ ಅವನು ಅಲ್ಲಿ ಇಲ್ಲದಿರುವುದನ್ನು ನೋಡಿ ಯಶೋದೆಯು ನಗತೊಡಗಿದಳು.॥7॥
(ಶ್ಲೋಕ-8)
ಮೂಲಮ್
ಉಲೂಖಲಾಂಘ್ರೇರುಪರಿ ವ್ಯವಸ್ಥಿತಂ
ಮರ್ಕಾಯ ಕಾಮಂ ದದತಂ ಶಿಚಿ ಸ್ಥಿತಮ್ ।
ಹೈಯಂಗವಂ ಚೌರ್ಯವಿಶಂಕಿತೇಕ್ಷಣಂ
ನಿರೀಕ್ಷ್ಯ ಪಶ್ಚಾತ್ಸುತಮಾಗಮಚ್ಛನೈಃ ॥
ಅನುವಾದ
ಅಲ್ಲಿ-ಇಲ್ಲಿ ಹುಡುಕಿದಾಗ ಮತ್ತೊಂದು ಕೊಠಡಿಯಲ್ಲಿ ಶ್ರೀಕೃಷ್ಣನು ಒಂದು ಒರಳಿನ ಮೇಲೆ ನಿಂತು ನೆಲವಿನ ಮೇಲೆ ಇಟ್ಟ ಬೆಣ್ಣೆಯನ್ನು ತೆಗೆ-ತೆಗೆದು ಕೋತಿಗಳಿಗೆ ಮತ್ತು ಸಂಗಾತಿಗಳಿಗೆ ಯಥೇಚ್ಛವಾಗಿ ತಿನ್ನಿಸುತ್ತಿದ್ದನು. ಎಲ್ಲಾದರೂ ತನ್ನ ಕಳ್ಳತನ ಬಯಲಾದೀತು ಎಂಬ ಹೆದರಿಕೆಯಿಂದ ಸುತ್ತಲೂ ನೋಡುತ್ತಾ ಇದ್ದನು. ಇದನ್ನು ನೋಡಿದ ಯಶೋದಾದೇವಿಯು ಹಿಂದಿನಿಂದ ನಿಧಾನವಾಗಿ ಅವನ ಬಳಿಗೆ ಬಂದಳು. ॥8॥
(ಶ್ಲೋಕ-9)
ಮೂಲಮ್
ತಾಮಾತ್ತಯಷ್ಟಿಂ ಪ್ರಸಮೀಕ್ಷ್ಯ ಸತ್ವರಃ
ತತೋವರುಹ್ಯಾಪಸಸಾರ ಭೀತವತ್ ।
ಗೋಪ್ಯನ್ವಧಾವನ್ನ ಯಮಾಪ ಯೋಗಿನಾಂ
ಕ್ಷಮಂ ಪ್ರವೇಷ್ಟುಂ ತಪಸೇರಿತಂ ಮನಃ ॥
ಅನುವಾದ
ತಾಯಿಯು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿದಾಗ ಶ್ರೀಕೃಷ್ಣನು ಒಡನೆಯೇ ಒರಳಿಂದ ಕೆಳಗೆ ಹಾರಿದನು ಮತ್ತು ಹೆದರಿದವನಂತೆ ನಟಿಸುತ್ತಾ ಓಡಿದನು. ಪರೀಕ್ಷಿತನೇ! ಮಹಾಯೋಗಿಗಳು ತಪಸ್ಸಿನಿಂದ ತಮ್ಮ ಮನಸ್ಸನ್ನು ಏಕಾಗ್ರಗೊಳಿಸಿ ಶುದ್ಧವಾಗಿಸಿಕೊಂಡರೂ ಯಾವನಲ್ಲಿ ಮನಸ್ಸಿನಿಂದಲೂ ಪ್ರವೇಶಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಭಗವಂತನನ್ನು ಹಿಡಿಯಲು ಅವನ ಹಿಂದೆ-ಹಿಂದೆ ಯಶೋದೆಯು ಓಡುತ್ತಿರುವಳು. ॥9॥
(ಶ್ಲೋಕ-10)
ಮೂಲಮ್
ಅನ್ವಂಚಮಾನಾ ಜನನೀ ಬೃಹಚ್ಚಲತ್
ಶ್ರೋಣೀಭರಾಕ್ರಾಂತಗತಿಃ ಸುಮಧ್ಯಮಾ ।
ಜವೇನ ವಿಸ್ರಂಸಿತ ಕೇಶಬಂಧನ-
ಚ್ಯುತಪ್ರಸೂನಾನುಗತಿಃ ಪರಾಮೃಶತ್ ॥
ಅನುವಾದ
ಹೀಗೆ ತಾಯಿ ಯಶೋದೆಯು ಶ್ರೀಕೃಷ್ಣನ ಹಿಂದೆ ಓಡತೊಡಗಿದಾಗ ಸ್ಥೂಲವಾದ ನಿತಂಬಗಳ ಭಾರದಿಂದಲೂ ಅವುಗಳ ಕಂಪನದಿಂದಲೂ ಅವಳ ಓಟ ಮಂದವಾಯಿತು. ಆಕೆಯು ಮುಂದ ಮುಂದಕ್ಕೆ ಓಡುತ್ತಿರುವಾಗ ಅವಳ ಹೆರಳು ಬಿಚ್ಚಿಹೋಗಿ ಅದರಲ್ಲಿದ್ದ ಹೂವುಗಳು ದಾರಿಯುದ್ದಕ್ಕೆ ಎರಚಿದಂತೆ ಬೀಳುತ್ತಿದ್ದವು. ಹೀಗೆ ಸುಂದರಿಯಾದ ಯಶೋದೆಯು ಹೇಗಾದರೂ ಅವನನ್ನು ಹಿಡಿದುಬಿಟ್ಟಳು. (ಅಥವಾ ತಾಯಿಯ ಕಷ್ಟವನ್ನು ನೋಡಲಾರದೆ ಕರುಣಾಳು ಕೃಷ್ಣನೇ ತನ್ನ ವೇಗವನ್ನು ಕಡಿಮೆಮಾಡಿ ತಾಯಿಯ ಕೈಗೆ ಸಿಕ್ಕಿಬಿದ್ದನೋ!) ॥10॥
(ಶ್ಲೋಕ-11)
ಮೂಲಮ್
ಕೃತಾಗಸಂ ತಂ ಪ್ರರುದಂತಮಕ್ಷಿಣೀ
ಕಷಂತಮಂಜನ್ಮಷಿಣೀ ಸ್ವಪಾಣಿನಾ ।
ಉದ್ವೀಕ್ಷಮಾಣಂ ಭಯವಿಹ್ವಲೇಕ್ಷಣಂ
ಹಸ್ತೇ ಗೃಹೀತ್ವಾ ಭಿಷಯಂತ್ಯವಾಗುರತ್ ॥
ಅನುವಾದ
ಎಡಗೈಯಿಂದ ಮುದ್ದು ಕೃಷ್ಣನನ್ನು ಹಿಡಿದುಕೊಂಡು, ಬಲಗೈಯಲ್ಲಿದ್ದ ಕೋಲನ್ನು ತೋರಿಸುತ್ತಾ ‘ಪೋರ! ಈಗ ಸಿಕ್ಕಿದೆಯಲ್ಲ! ನಾನೇನು ಮಾಡುವೆನು ಗೊತ್ತೇ?’ ಎಂದು ಗದರಿಸಿದಳು. ಅಪರಾಧಿಯಾದ ಶ್ರೀಕೃಷ್ಣ ಬಿಕ್ಕಿ-ಬಿಕ್ಕಿ ಅಳುತ್ತಿದ್ದನು. ತಾಯಿ ಎಲ್ಲಿ ಹೊಡೆದುಬಿಡುವಳೋ ಎಂಬ ಭಯವನ್ನು ಕಣ್ಣುಗಳಿಂದಲೂ ಮುಖದಿಂದಲೂ ಸೂಚಿಸುತ್ತಿದ್ದನು. ಅಳುತ್ತಾ ಕೈಗಳಿಂದ ಕಣ್ಣುಗಳನ್ನು ಒರೆಸಿಕೊಳ್ಳುವಾಗ ಕಣ್ಣಿಗೆ ಹಚ್ಚಿದ ಕಾಡಿಗೆಯೆಲ್ಲವೂ ಮುಖಕ್ಕೆಲ್ಲ ಹರಡಿಕೊಂಡಿತು.॥11॥
(ಶ್ಲೋಕ-12)
ಮೂಲಮ್
ತ್ಯಕ್ತ್ವಾ ಯಷ್ಟಿಂ ಸುತಂ ಭೀತಂ ವಿಜ್ಞಾಯಾರ್ಭಕವತ್ಸಲಾ ।
ಇಯೇಷ ಕಿಲ ತಂ ಬದ್ಧುಂ ದಾಮ್ನಾತದ್ವೀರ್ಯಕೋವಿದಾ ॥
ಅನುವಾದ
ತನ್ನ ಕೈಯಲ್ಲಿರುವ ಕೋಲನ್ನು ನೋಡಿ ತನ್ನ ಮಗನು ಬಹಳ ಭಯಪಟ್ಟಿರುವನೆಂದು ವಾತ್ಸಲ್ಯಮಯಿಯಾದ ತಾಯಿಯು ಭಾವಿಸಿದಳು. ಕೈಯಲ್ಲಿದ್ದ ಕೋಲನ್ನು ಬಿಸಾಡಿದಳು. ಇವನೆಲ್ಲಾದರೂ ಓಡಿ ಹೋದಾನೆಂದು ಯೋಚಿಸಿ ಇವನನ್ನು ಹಗ್ಗದಿಂದ ಕಟ್ಟಿಹಾಕ ಬೇಕೆಂದು ನಿಶ್ಚಯಿಸಿದಳು. ಪರೀಕ್ಷಿತನೇ! ಪುತ್ರವತ್ಸಲೆಯಾದ ಅವಳಿಗೆ ತನ್ನ ಮಗನ ಐಶ್ವರ್ಯವೆಷ್ಟೆಂಬುದು ತಿಳಿದಿರಲಿಲ್ಲ.॥12॥
(ಶ್ಲೋಕ-13)
ಮೂಲಮ್
ನ ಚಾಂತರ್ನ ಬಹಿರ್ಯಸ್ಯ ನ ಪೂರ್ವಂ ನಾಪಿ ಚಾಪರಮ್ ।
ಪೂರ್ವಾಪರಂ ಬಹಿಶ್ಚಾಂತರ್ಜಗತೋ ಯೋ ಜಗಚ್ಚ ಯಃ ॥
(ಶ್ಲೋಕ-14)
ಮೂಲಮ್
ತಂ ಮತ್ವಾತ್ಮಜಮವ್ಯಕ್ತಂ ಮರ್ತ್ಯಲಿಂಗ ಮಧೋಕ್ಷಜಮ್ ।
ಗೋಪಿಕೋಲೂಖಲೇ ದಾಮ್ನಾ ಬಬಂಧ ಪ್ರಾಕೃತಂ ಯಥಾ ॥
ಅನುವಾದ
ಸರ್ವಾತ್ಮಕನಾದ ಇವನಿಗೆ ಒಳಗೆ-ಹೊರಗೆಂಬುದಿಲ್ಲ. ಆದಿ-ಅಂತ್ಯಗಳಿಲ್ಲ. ಇವನು ಜಗತ್ಸೃಷ್ಟಿಗೆ ಮೊದಲೂ ಇದ್ದನು. ಜಗತ್ಪ್ರಳಯವಾದ ಮೇಲೆಯೂ ಇರುವನು. ಈ ಜಗತ್ತಿನೊಳಗೆ ಇದ್ದೇ ಇದ್ದಾನೆ, ಹೊರಗಿನ ರೂಪಗಳಲ್ಲೂ ಇದ್ದಾನೆ; ಜಗತ್ಸ್ವರೂಪನೂ ಅವನೇ ಇದ್ದಾನೆ. ಇಷ್ಟೇ ಅಲ್ಲ, ಸಮಸ್ತ ಇಂದ್ರಿಯಗಳಿಂದ ಅತೀತನೂ ಅವ್ಯಕ್ತನೂ ಆದ ಭಗವಂತನು ಮನುಷ್ಯರಂತೆ ರೂಪವನ್ನು ಧರಿಸಿರುವುದರಿಂದ ಇವನು ತನ್ನ ಪುತ್ರನೆಂದೇ ತಿಳಿದ ಯಶೋದಾದೇವಿಯು ಯಾರಾದರೂ ಸಾಮಾನ್ಯ ಬಾಲಕನನ್ನು ಕಟ್ಟಿಹಾಕುವಂತೆ ಹಗ್ಗದಿಂದ ಒರಳಿಗೆ ಕಟ್ಟಿ ಹಾಕಿದಳು. ॥13-14॥
(ಶ್ಲೋಕ-15)
ಮೂಲಮ್
ತದ್ದಾಮ ಬಧ್ಯಮಾನಸ್ಯ ಸ್ವಾರ್ಭಕಸ್ಯ ಕೃತಾಗಸಃ ।
ದ್ವ್ಯಂಗುಲೋನಮಭೂತ್ತೇನ ಸಂದಧೇನ್ಯಚ್ಚ ಗೋಪಿಕಾ ॥
ಅನುವಾದ
ತಾಯಿ ಯಶೋದೆಯು ತನ್ನ ತುಂಟನಾದ ಮಗನನ್ನು ಹಗ್ಗದಿಂದ ಕಟ್ಟತೊಡಗಿದಾಗ ಆ ಹಗ್ಗವು ಎರಡು ಅಂಗುಲಗಳಷ್ಟು ಕಡಿಮೆಯಾಯಿತು. ಆಗ ಆಕೆಯು ಇನ್ನೊಂದು ಹಗ್ಗವನ್ನು ತಂದು ಅದಕ್ಕೆ ಜೋಡಿಸಿದಳು. ॥15॥
(ಶ್ಲೋಕ-16)
ಮೂಲಮ್
ಯದಾಸೀತ್ತದಪಿ ನ್ಯೂನಂ ತೇನಾನ್ಯದಪಿ ಸಂದಧೇ ।
ತದಪಿ ದ್ವ್ಯಂಗುಲಂ ನ್ಯೂನಂ ಯದ್ಯದಾದತ್ತ ಬಂಧನಮ್ ॥
ಅನುವಾದ
ಆ ಹಗ್ಗವೂ ಸಾಲದಾದಾಗ ಅದಕ್ಕೆ ಇನ್ನೊಂದನ್ನು ಜೋಡಿಸಿದಳು. ಹೀಗೆ ಎಷ್ಟೆಷ್ಟು ಹಗ್ಗಗಳನ್ನು ಜೊಡಿಸಿದರೂ ಕೊನೆಗೆ ಅದು ಎರಡು ಅಂಗುಲ ಕಡಿಮೆಯಾಗಿ ಕೃಷ್ಣನ ಸೊಂಟಕ್ಕೆ ಸಾಕಾಗಲಿಲ್ಲ.॥16॥
(ಶ್ಲೋಕ-17)
ಮೂಲಮ್
ಏವಂ ಸ್ವಗೇಹದಾಮಾನಿ ಯಶೋದಾ ಸಂದಧತ್ಯಪಿ ।
ಗೋಪೀನಾಂ ಸುಸ್ಮಯಂತೀನಾಂ ಸ್ಮಯಂತೀ ವಿಸ್ಮಿತಾಭವತ್ ॥
ಅನುವಾದ
ಯಶೋದಾದೇವಿಯು ಮನೆಯಲ್ಲಿದ್ದ ಎಲ್ಲ ಹಗ್ಗಗಳನ್ನು ತಂದು ಜೋಡಿಸಿದರೂ ಭಗವಾನ್ ಶ್ರೀಕೃಷ್ಣನನ್ನು ಆಕೆಯಿಂದ ಕಟ್ಟಿ ಹಾಕಲಾಗಲಿಲ್ಲ. ಅವಳ ಅಸಫಲತೆಯನ್ನು ಕಂಡ ಗೋಪಿಯರು ಮುಗುಳ್ನಗತೊಡಗಿದರು. ಯಶೋದೆಯೂ ನಗುತ್ತಾ ಇದೇನು ಎಂದು ಆಶ್ಚರ್ಯ ಚಕಿತಳಾದಳು.॥17॥
(ಶ್ಲೋಕ-18)
ಮೂಲಮ್
ಸ್ವಮಾತುಃ ಸ್ವಿನ್ನಗಾತ್ರಾಯಾ ವಿಸ್ರಸ್ತಕಬರಸ್ರಜಃ ।
ದೃಷ್ಟ್ವಾ ಪರಿಶ್ರಮಂ ಕೃಷ್ಣಃ ಕೃಪಯಾಸೀತ್ಸ್ವಬಂಧನೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ನೋಡುತ್ತಾನೆ ತಾಯಿಯ ಶರೀರವೆಲ್ಲ ಬೆವರಿಹೋಗಿದೆ. ಮುಡಿ ಬಿಚ್ಚಿಹೋಗಿ ಮುಡಿದ ಹೂವುಗಳೆಲ್ಲ ಕೆಳಕ್ಕೆ ಬಿದ್ದಿವೆ. ಬಹಳ ಆಯಾಸಗೊಂಡಿರುವಳು. ಇದನ್ನು ತಿಳಿದ ಕರುಣಾಸಮುದ್ರನಾದ ಭಗವಂತನು ತಾನೇ ತಾಯಿಯ ಬಂಧನಕ್ಕೊಳಗಾದನು.॥18॥
(ಶ್ಲೋಕ-19)
ಮೂಲಮ್
ಏವಂ ಸಂದರ್ಶಿತಾ ಹ್ಯಂಗ ಹರಿಣಾ ಭೃತ್ಯವಶ್ಯತಾ ।
ಸ್ವವಶೇನಾಪಿ ಕೃಷ್ಣೇನ ಯಸ್ಯೇದಂ ಸೇಶ್ವರಂ ವಶೇ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸರ್ವಸ್ವತಂತ್ರನು. ಬ್ರಹ್ಮಾದಿ ಸಮಸ್ತ ದೇವತೆಗಳೊಂದಿಗೆ ಈ ಸಂಪೂರ್ಣ ಜಗತ್ತು ಅವನ ವಶದಲ್ಲಿದೆ. ಹೀಗಿದ್ದರೂ ತಾಯಿಯಿಂದ ಬಂಧಿತನಾಗಿ ತಾನು ತನ್ನ ಪ್ರಿಯಭಕ್ತರ ವಶನಾಗಿರುವೆನೆಂದು ಜಗತ್ತಿಗೆ ತೋರಿಸಿ ಕೊಟ್ಟಿರುವನು. ॥19॥
(ಶ್ಲೋಕ-20)
ಮೂಲಮ್
ನೇಮಂ ವಿರಿಂಚೋ ನ ಭವೋ ನ ಶ್ರೀರಪ್ಯಂಗಸಂಶ್ರಯಾ ।
ಪ್ರಸಾದಂ ಲೇಭಿರೇ ಗೋಪೀ ಯತ್ತತ್ಪ್ರಾಪ ವಿಮುಕ್ತಿದಾತ್ ॥
ಅನುವಾದ
ಗೊಲ್ಲತಿಯಾದ ಯಶೋದಾದೇವಿಯು ಮುಕ್ತಿಪ್ರದನಾದ ಮುಕುಂದನಿಂದ ಪಡೆದುಕೊಂಡ ಅನಿರ್ವಚನೀಯ ಕೃಪಾಪ್ರಸಾದವನ್ನು ಬ್ರಹ್ಮದೇವರಾಗಲೀ, ದೇವದೇವ ಶಂಕರನೇ ಆಗಲೀ, ವಕ್ಷಃಸ್ಥಳದಲ್ಲೇ ವಾಸಿಸುವ ಅರ್ಧಾಂಗಿನಿಯಾದ ಲಕ್ಷ್ಮೀದೇವಿಯೇ ಆಗಲೀ ಪಡೆದುಕೊಳ್ಳಲು ಸಮರ್ಥರಾಗಲಿಲ್ಲ. ॥20॥
(ಶ್ಲೋಕ-21)
ಮೂಲಮ್
ನಾಯಂ ಸುಖಾಪೋ ಭಗವಾನ್ ದೇಹಿನಾಂ ಗೋಪಿಕಾಸುತಃ ।
ಜ್ಞಾನಿನಾಂ ಚಾತ್ಮಭೂತಾನಾಂ ಯಥಾ ಭಕ್ತಿಮತಾಮಿಹ ॥
ಅನುವಾದ
ಈ ಗೋಪಿಕಾನಂದನನಾದ ಭಗವಾನ್ ಶ್ರೀಕೃಷ್ಣನು ಅನನ್ಯ ಪ್ರೇಮಿಗಳಾದ ಭಕ್ತರಿಗೆ ಸುಲಭನಾಗಿರುವಂತೆ, ದೇಹಾಭಿಮಾನಿ ಗಳಾದ ಕರ್ಮಕಾಂಡಿಗಳಿಗಾಗಲೀ, ತಪಸ್ವಿಗಳಿಗಾಗಲೀ, ತನ್ನ ಸ್ವರೂಪಭೂತ ಜ್ಞಾನಿಗಳಿಗಾಗಲೀ ಸುಲಭನಲ್ಲ.॥21॥
(ಶ್ಲೋಕ-22)
ಮೂಲಮ್
ಕೃಷ್ಣಸ್ತು ಗೃಹಕೃತ್ಯೇಷು ವ್ಯಗ್ರಾಯಾಂ ಮಾತರಿ ಪ್ರಭುಃ ।
ಅದ್ರಾಕ್ಷೀದರ್ಜುನೌ ಪೂರ್ವಂ ಗುಹ್ಯಕೌ ಧನದಾತ್ಮಜೌ ॥
ಅನುವಾದ
ಒರಳುಕಲ್ಲಿಗೆ ಕೃಷ್ಣನನ್ನು ಕಟ್ಟಿಹಾಕಿ ನಂದರಾಣೀ ಯಶೋದೆಯು ಗೃಹಕೃತ್ಯದಲ್ಲಿ ನಿರತಳಾದಳು. ಬಂಧಿತನಾದ ಭಗವಾನ್ ಶ್ಯಾಮಸುಂದರನು ತಾಯಿಗೆ ತನ್ನಕಡೆ ಗಮನವಿಲ್ಲವೆಂದರಿತು ಮೊದಲು ಯಕ್ಷರಾಜನಾದ ಕುಬೇರನ ಪುತ್ರರಾಗಿದ್ದು ಶಾಪದಿಂದ ಅರ್ಜುನ ವೃಕ್ಷಗಳಾಗಿದ್ದ ಇಬ್ಬರನ್ನು ಶಾಪವಿಮೋಚನೆ ಮಾಡಬೇಕೆಂದು ಯೋಚಿಸಿದನು. ॥22॥
(ಶ್ಲೋಕ-23)
ಮೂಲಮ್
ಪುರಾ ನಾರದಶಾಪೇನ ವೃಕ್ಷತಾಂ ಪ್ರಾಪಿತೌ ಮದಾತ್ ।
ನಲಕೂಬರಮಣಿಗ್ರೀವಾವಿತಿ ಖ್ಯಾತೌ ಶ್ರಿಯಾನ್ವಿತೌ ॥
ಅನುವಾದ
ನಳಕೂಬರ ಮತ್ತು ಮಣಿಗ್ರೀವರೆಂಬ ಇವರಿಬ್ಬರ ಬಳಿ ಧನ, ಸೌಂದರ್ಯ, ಐಶ್ವರ್ಯಗಳು ಪರಿಪೂರ್ಣವಾಗಿದ್ದವು. ಇದರಿಂದ ಉಂಟಾದ ಅಹಂಕಾರವನ್ನು ಕಂಡು ದೇವಋಷಿ ನಾರದರ ಶಾಪದಿಂದ ಅವರು ವೃಕ್ಷಗಳಾಗಿದ್ದರು. ॥23॥
ಅನುವಾದ (ಸಮಾಪ್ತಿಃ)
ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಗೋಪೀಪ್ರಸಾದೋ ನಾಮ ನವಮೋಽಧ್ಯಾಯಃ ॥9॥