೦೮

[ಎಂಟನೆಯ ಅಧ್ಯಾಯ]

ಭಾಗಸೂಚನಾ

ನಾಮಕರಣ ಸಂಸ್ಕಾರ ಮತ್ತು ಬಾಲಲೀಲೆಗಳು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಗರ್ಗಃ ಪುರೋಹಿತೋ ರಾಜನ್ ಯದೂನಾಂ ಸುಮಹಾತಪಾಃ ।
ವ್ರಜಂ ಜಗಾಮ ನಂದಸ್ಯ ವಸುದೇವಪ್ರಚೋದಿತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಗರ್ಗರೆಂಬುವರು ಯದುವಂಶಕ್ಕೆ ಕುಲಪುರೋಹಿತರಾಗಿದ್ದರು. ಅವರು ಮಹಾತಪಸ್ವಿಗಳು. ವಸುದೇವನ ಪ್ರೇರಣೆಯಿಂದ ಅವರೊಮ್ಮೆ ನಂದಗೋಕುಲಕ್ಕೆ ಆಗಮಿಸಿದರು. ॥1॥

(ಶ್ಲೋಕ-2)

ಮೂಲಮ್

ತಂ ದೃಷ್ಟ್ವಾ ಪರಮಪ್ರೀತಃ ಪ್ರತ್ಯುತ್ಥಾಯ ಕೃತಾಂಜಲಿಃ ।
ಆನರ್ಚಾಧೋಕ್ಷಜಧಿಯಾ ಪ್ರಣಿಪಾತಪುರಃಸರಮ್ ॥

ಅನುವಾದ

ಅವರನ್ನು ನೋಡುತ್ತಲೇ ನಂದಗೋಪನಿಗೆ ಮಹದಾನಂದವಾಯಿತು. ಅವನು ಕೈಜೋಡಿಸಿಕೊಂಡು ಎದ್ದುನಿಂತು ಅವರ ಚರಣಗಳಿಗೆ ನಮಸ್ಕರಿಸಿದನು. ಗರ್ಗರು ಸಾಕ್ಷಾತ್ ಭಗವತ್ಸ್ವರೂಪರೇ ಎಂದು ತಿಳಿದು ಅವರನ್ನು ಅರ್ಘ್ಯ-ಪಾದ್ಯಾದಿಗಳಿಂದ ಪೂಜಿಸಿ ಸತ್ಕರಿಸಿದನು. ॥2॥

(ಶ್ಲೋಕ-3)

ಮೂಲಮ್

ಸೂಪವಿಷ್ಟಂ ಕೃತಾತಿಥ್ಯಂ ಗಿರಾ ಸೂನೃತಯಾ ಮುನಿಮ್ ।
ನಂದಯಿತ್ವಾಬ್ರವೀದ್ಬ್ರಹ್ಮನ್ಪೂರ್ಣಸ್ಯ ಕರವಾಮ ಕಿಮ್ ॥

ಅನುವಾದ

ಸತ್ಕಾರಗಳೆಲ್ಲ ಮುಗಿದನಂತರ ಗರ್ಗರು ಸುಖಾಸೀನರಾದಾಗ ನಂದಗೋಪನು ಕೈಮುಗಿದುಕೊಂಡು ಮಧುರವಾದ ಮಾತುಗಳಿಂದ ಬಿನ್ನವಿಸಿಕೊಂಡನು ಬ್ರಾಹ್ಮಣೋತ್ತಮರೇ! ನೀವು ಪೂರ್ಣಕಾಮರಾಗಿರುವಿರಿ. ಹಾಗಿರುವಾಗ ನಾನೇನು ತಮ್ಮ ಸೇವೆಮಾಡಬಲ್ಲೆನು? ॥3॥

(ಶ್ಲೋಕ-4)

ಮೂಲಮ್

ಮಹದ್ವಿಚಲನಂ ನೃಣಾಂ ಗೃಹಿಣಾಂ ದೀನಚೇತಸಾಮ್ ।
ನಿಃಶ್ರೇಯಸಾಯ ಭಗವನ್ಕಲ್ಪತೇ ನಾನ್ಯಥಾ ಕ್ವಚಿತ್ ॥

ಅನುವಾದ

ತಮ್ಮಂತಹ ಮಹಾತ್ಮರ ಆಗಮನವು ದೀನಮನಸ್ಕರಾದ, ಗೃಹಸ್ಥರಾದ ಮನುಷ್ಯರ ಶ್ರೇಯಸ್ಸಿಗಾಗಿಯೇ ಇರುತ್ತದೆ. ಬೇರೆ ಯಾವ ಕಾರಣದಿಂದಲೂ ಮಹಾತ್ಮರಾದವರು ನಮ್ಮಂತಹವರ ಮನೆಗೆ ಆಗಮಿಸುವುದಿಲ್ಲ. ॥4॥

(ಶ್ಲೋಕ-5)

ಮೂಲಮ್

ಜ್ಯೋತಿಷಾಮಯನಂ ಸಾಕ್ಷಾದ್ಯತ್ತಜ್ಜ್ಞಾನಮತೀಂದ್ರಿಯಮ್ ।
ಪ್ರಣೀತಂ ಭವತಾ ಯೇನ ಪುಮಾನ್ವೇದ ಪರಾವರಮ್ ॥

ಅನುವಾದ

ಸ್ವಾಮಿ! ಯಾವುದು ಇಂದ್ರಿಯಗಳಿಗೆ ಅಗೋಚರವಾದ ವಿಷಯವನ್ನು ತಿಳಿಸುವುದೋ, ಅಥವಾ ಭೂತ ಭವಿಷ್ಯದ ಗರ್ಭದಲ್ಲಿ ಏನಿದೆಯೆಂಬುದನ್ನು ಪ್ರತ್ಯಕ್ಷವಾಗಿ ಯಾವ ಶಾಸ್ತ್ರದಿಂದ ತಿಳಿಯಲಾಗುತ್ತದೋ, ಅಂತಹ ಜ್ಯೋತಿಷ್ಯ ಶಾಸ್ತ್ರವನ್ನು ತಾವು ರಚಿಸಿರುವಿರಿ. ॥5॥

(ಶ್ಲೋಕ-6)

ಮೂಲಮ್

ತ್ವಂ ಹಿ ಬ್ರಹ್ಮವಿದಾಂ ಶ್ರೇಷ್ಠಃ ಸಂಸ್ಕಾರಾನ್ಕರ್ತುಮರ್ಹಸಿ ।
ಬಾಲಯೋರನಯೋರ್ನೃಣಾಂ ಜನ್ಮನಾ ಬ್ರಾಹ್ಮಣೋ ಗುರುಃ ॥

ಅನುವಾದ

ತಾವು ಬ್ರಹ್ಮಜ್ಞರಲ್ಲಿ ಶ್ರೇಷ್ಠರಾಗಿ ಇರುವಿರಿ. ಅದಕ್ಕಾಗಿ ನನ್ನ ಇಬ್ಬರೂ ಬಾಲಕರಿಗೂ ನೀವೇ ನಾಮಕರಣಾದಿ ಸಂಸ್ಕಾರಗಳನ್ನು ಮಾಡಿರಿ. ಏಕೆಂದರೆ, ಬ್ರಾಹ್ಮಣರು ಹುಟ್ಟಿನಿಂದಲೇ ಮನುಷ್ಯ ಮಾತ್ರರಿಗೆ ಗುರುವಾಗಿರುತ್ತಾರೆ. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಗರ್ಗ ಉವಾಚ

ಮೂಲಮ್

ಯದೂನಾಮಹಮಾಚಾರ್ಯಃ ಖ್ಯಾತಶ್ಚ ಭುವಿ ಸರ್ವತಃ ।
ಸುತಂ ಮಯಾ ಸಂಸ್ಕೃತಂ ತೇ ಮನ್ಯತೇ ದೇವಕೀಸುತಮ್ ॥

ಅನುವಾದ

ಗರ್ಗಾಚಾರ್ಯರು ಹೇಳಿದರು — ನಂದಗೋಪನೇ! ಯದುವಂಶೀಯರಿಗೆ ಆಚಾರ್ಯನೆಂದು ನಾನು ಜಗತ್ತಿನಲ್ಲಿ ಪ್ರಸಿದ್ಧನಾಗಿರುವೆನು. ನಾನು ನಿನ್ನ ಪುತ್ರನ ನಾಮಕರಣ ಸಂಸ್ಕಾರ ಮಾಡಿದರೆ ಜನರು ಇವನು ದೇವಕಿಯ ಪುತ್ರನೆಂದೇ ತಿಳಿಯುವರು. ॥7॥

(ಶ್ಲೋಕ-8)

ಮೂಲಮ್

ಕಂಸಃ ಪಾಪಮತಿಃ ಸಖ್ಯಂ ತವ ಚಾನಕದುಂದುಭೇಃ ।
ದೇವಕ್ಯಾ ಅಷ್ಟಮೋ ಗರ್ಭೋ ನ ಸೀ ಭವಿತುಮರ್ಹತಿ ॥

(ಶ್ಲೋಕ-9)

ಮೂಲಮ್

ಇತಿ ಸಂಚಿಂತಯನ್ ಶ್ರುತ್ವಾ ದೇವಕ್ಯಾ ದಾರಿಕಾವಚಃ ।
ಅಪಿ ಹಂತಾಗತಾಶಂಕಸ್ತರ್ಹಿ ತನ್ನೋನಯೋ ಭವೇತ್ ॥

ಅನುವಾದ

ಪಾಪಬುದ್ಧಿಯವನಾದ ಕಂಸನು ನಿನಗೂ ಮತ್ತು ವಸುದೇವನಿಗೂ ಗಾಢವಾದ ಸ್ನೇಹವಿರುವುದನ್ನು ತಿಳಿದಿರುತ್ತಾನೆ. ದೇವಕಿಯ ಮಗಳಿಂದ ‘ನಿನ್ನನ್ನು ಕೊಲ್ಲುವವನು ಬೇರೆಲ್ಲೋ ಬೆಳೆಯುತ್ತಿದ್ದಾನೆ’ ಎಂಬ ಮಾತನ್ನು ಕೇಳಿದಂದಿನಿಂದ ಕಂಸನು ದೇವಕಿಯ ಎಂಟನೆಯ ಗರ್ಭದಲ್ಲಿ ಹೆಣ್ಣುಶಿಶುವು ಹುಟ್ಟಲಾರದೆಂದೇ ತರ್ಕಿಸುತ್ತಿದ್ದಾನೆ. ನಿನ್ನ ಪುತ್ರನಿಗೆ ನಾನು ಸಂಸ್ಕಾರವನ್ನು ಮಾಡಿದರೆ ಅವನು ಈ ಬಾಲಕನು ವಸುದೇವನ ಮಗನೆಂದೇ ಬಗೆದು ಕೊಲ್ಲಲೂಬಹುದು. ಹಾಗಾದರೆ ನಮ್ಮಿಂದ ಭಾರೀ ಅನ್ಯಾಯವೇ ಆದೀತು. ॥8-9॥

(ಶ್ಲೋಕ-10)

ಮೂಲಮ್ (ವಾಚನಮ್)

ನಂದ ಉವಾಚ

ಮೂಲಮ್

ಅಲಕ್ಷಿತೋಸ್ಮಿನ್ ರಹಸಿ ಮಾಮಕೈರಪಿ ಗೋವ್ರಜೇ ।
ಕುರು ದ್ವಿಜಾತಿಸಂಸ್ಕಾರಂ ಸ್ವಸ್ತಿವಾಚನಪೂರ್ವಕಮ್ ॥

ಅನುವಾದ

ನಂದಗೋಪನು ಹೇಳಿದನು — ಆಚಾರ್ಯರೇ! ನೀವು ಏಕಾಂತದಲ್ಲಿ ಗೋಶಾಲೆಯಲ್ಲಿ ಸ್ವಸ್ತಿವಾಚನವನ್ನು ಮಾಡಿ ಈ ಬಾಲಕನಿಗೆ ದ್ವಿಜಾತಿಗೆ ಉಚಿತವಾದ ನಾಮಕರಣಾದಿ ಸಂಸ್ಕಾರಗಳನ್ನು ಮಾಡಿರಿ. ಬೇರೆಯವರಿಗಿರಲಿ, ನನ್ನ ಜ್ಞಾತಿ ಬಂಧುಗಳಿಗೂ ಈ ವಿಷಯ ತಿಳಿಯದಂತಿರಲಿ. ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸಂಪ್ರಾರ್ಥಿತೋ ವಿಪ್ರಃ ಸ್ವಚಿಕೀರ್ಷಿತಮೇವ ತತ್ ।
ಚಕಾರ ನಾಮಕರಣಂ ಗೂಢೋ ರಹಸಿ ಬಾಲಯೋಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಗರ್ಗಾಚಾರ್ಯರಾದರೋ ಸಂಸ್ಕಾರವನ್ನು ಮಾಡಲು ಬಯಸುತ್ತಲೇ ಇದ್ದರು. ನಂದಗೋಪನೂ ಒತ್ತಾಯಿಸಿ ಪ್ರಾರ್ಥಿಸಿದಾಗ ಅವರು ಏಕಾಂತದಲ್ಲಿ ಅಡಗಿಕೊಂಡೇ ಗುಪ್ತವಾಗಿ ಇಬ್ಬರು ಬಾಲಕರಿಗೂ ನಾಮಕರಣ ಸಂಸ್ಕಾರವನ್ನು ಮಾಡಿಬಿಟ್ಟರು. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಗರ್ಗ ಉವಾಚ

ಮೂಲಮ್

ಅಯಂ ಹಿ ರೋಹಿಣೀ ಪುತ್ರೋ ರಮಯನ್ಸುಹೃದೋ ಗುಣೈಃ ।
ಆಖ್ಯಾಸ್ಯತೇ ರಾಮ ಇತಿ ಬಲಾಧಿಕ್ಯಾದ್ಬಲಂ ವಿದುಃ ।
ಯದೂನಾಮಪೃಥಗ್ಭಾವಾತ್ಸಂಕರ್ಷಣಮುಶಂತ್ಯುತ ॥

ಅನುವಾದ

ಗರ್ಗಾಚಾರ್ಯರು ಹೇಳುತ್ತಾರೆ — ನಂದಗೋಪನೇ! ಇವನು ರೋಹಿಣಿಯ ಮಗನು. ಆದುದರಿಂದ ಇವನ ಹೆಸರು ರೌಹಿಣೇಯ. ಇವನು ಬಂಧುಗಳಿಗೂ, ಸುಹೃದರಿಗೂ ತನ್ನ ಒಳ್ಳೆಯ ಗುಣಗಳಿಂದ ಆನಂದವನ್ನುಂಟು ಮಾಡುವನು. ಅದರಿಂದ ಇವನ ಇನ್ನೊಂದು ಹೆಸರು ‘ರಾಮ’ ಎಂದಿರುತ್ತದೆ. ಅಸೀಮ ಬಲನಾಗಿರುವುದರಿಂದ ಇವನಿಗೆ ‘ಬಲಭದ್ರ’ನೆಂದೂ ಒಂದು ಹೆಸರು ಇದೆ. ಯಾದವರಲ್ಲಿ ಮತ್ತು ನಿಮ್ಮಲ್ಲಿ ಜಗಳವುಂಟಾದಾಗ ಇವನು ಒಂದಾಗಿಸುವನು. ಆದ್ದರಿಂದ ‘ಸಂಕರ್ಷಣ’ನೆಂದೂ ಇನ್ನೊಂದು ಹೆಸರಿನಿಂದ ಇವನನ್ನು ಕರೆಯುವರು. ॥12॥

(ಶ್ಲೋಕ-13)

ಮೂಲಮ್

ಆಸನ್ವರ್ಣಾಸಯೋ ಹ್ಯಸ್ಯ ಗೃಹ್ಣತೋನುಯುಗಂ ತನೂಃ ।
ಶುಕ್ಲೋ ರಕ್ತಸ್ತಥಾ ಪೀತ ಇದಾನೀಂ ಕೃಷ್ಣತಾಂ ಗತಃ ॥

ಅನುವಾದ

ಶ್ರೀಕೃಷ್ಣನ ಕಡೆಗೆ ಕೈತೋರಿಸುತ್ತಾ ಶ್ಯಾಮಲವರ್ಣನಾಗಿರುವ ಇವನು ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವರ್ಣದಿಂದ ಶರೀರವನ್ನು ಧರಿಸುವನು. ಕೃತಯುಗದಲ್ಲಿ ಶ್ವೇತ ವರ್ಣದವನಾಗಿಯೂ, ತ್ರೇತಾಯುಗದಲ್ಲಿ ರಕ್ತವರ್ಣದವನಾಗಿಯೂ, ದ್ವಾಪರಯುಗದಲ್ಲಿ ಪೀತವರ್ಣದವನಾಗಿಯೂ ಹುಟ್ಟಿದ್ದಾನೆ. ಈಗ ದ್ವಾಪರದ ಕಡೆಯಲ್ಲಿ ಕೃಷ್ಣವರ್ಣದವನಾಗಿಯೂ ಹುಟ್ಟಿದ್ದಾನೆ. ಆದುದರಿಂದ ಇವನಿಗೆ ಕೃಷ್ಣನೆಂದೇ ಹೆಸರು ಆಗುವುದು. ॥13॥

(ಶ್ಲೋಕ-14)

ಮೂಲಮ್

ಪ್ರಾಗಯಂ ವಸುದೇವಸ್ಯ ಕ್ವಚಿಜ್ಜಾತಸ್ತವಾತ್ಮಜಃ ।
ವಾಸುದೇವ ಇತಿ ಶ್ರೀಮಾನಭಿಜ್ಞಾಃ ಸಂಪ್ರಚಕ್ಷತೇ ॥

ಅನುವಾದ

ನಂದಗೋಪನೇ! ಈ ನಿನ್ನ ಪುತ್ರನು ಹಿಂದೆ ವಸುದೇವನ ಮಗನಾಗಿಯೂ ಹುಟ್ಟಿದ್ದನು. ಆದುದರಿಂದಲೇ ಈ ರಹಸ್ಯವನ್ನು ತಿಳಿದಿರುವ ಜನರು ಇವನನ್ನು ‘ಶ್ರೀಮಾನ್ ವಾಸುದೇವ’ ಎಂದೂ ಕರೆಯುತ್ತಾರೆ. ॥14॥

(ಶ್ಲೋಕ-15)

ಮೂಲಮ್

ಬಹೂನಿ ಸಂತಿ ನಾಮಾನಿ ರೂಪಾಣಿ ಚ ಸುತಸ್ಯ ತೇ ।
ಗುಣಕರ್ಮಾನುರೂಪಾಣಿ ತಾನ್ಯಹಂ ವೇದ ನೋ ಜನಾಃ ॥

ಅನುವಾದ

ನಿನ್ನ ಪುತ್ರನಿಗೆ ಇನ್ನೂ ಹಲವಾರು ನಾಮಧೇಯಗಳೂ ಇವೆ ಹಾಗೂ ರೂಪಗಳೂ ಅನೇಕವಾಗಿವೆ. ಇವನ ಎಲ್ಲ ಗುಣಗಳು ಮತ್ತು ಕರ್ಮಗಳಿಗೆ ಅನುಸಾರ ಬೇರೆ-ಬೇರೆ ನಾಮಧೇಯಗಳಾಗುತ್ತವೆ. ನಾನಾದರೋ ಅವೆಲ್ಲ ನಾಮಗಳನ್ನು ಅರಿತಿರುವೆನು. ಆದರೆ ಜಗತ್ತಿನ ಸಾಧಾರಣ ಜನರು ಅರಿಯಲಾರರು. ॥15॥

(ಶ್ಲೋಕ-16)

ಮೂಲಮ್

ಏಷ ವಃ ಶ್ರೇಯ ಆಧಾಸ್ಯದ್ಗೋಪಗೋಕುಲನಂದನಃ ।
ಅನೇನ ಸರ್ವದುರ್ಗಾಣಿ ಯೂಯಮಂಜಸ್ತರಿಷ್ಯಥ ॥

ಅನುವಾದ

ಇವನು ನಿಮ್ಮಗಳ ಪರಮ ಕಲ್ಯಾಣವನ್ನುಂಟುಮಾಡುವನು. ಸಮಸ್ತ ಗೋಪರಿಗೂ, ಗೋವುಗಳಿಗೂ ಇವನು ಆನಂದ ಗೊಳಿಸುವನು. ಇವನ ಸಹಾಯದಿಂದ ನೀವುಗಳು ಮಹಾವಿಪತ್ತುಗಳಿಂದ ಸುಲಭವಾಗಿ ಪಾರಾಗುವಿರಿ. ॥16॥

(ಶ್ಲೋಕ-17)

ಮೂಲಮ್

ಪುರಾನೇನ ವ್ರಜಪತೇ ಸಾಧವೋ ದಸ್ಯುಪೀಡಿತಾಃ ।
ಅರಾಜಕೇ ರಕ್ಷ್ಯಮಾಣಾ ಜಿಗ್ಯುರ್ದಸ್ಯೂನ್ಸಮೇಧಿತಾಃ ॥

ಅನುವಾದ

ವ್ರಜರಾಜನೇ! ಹಿಂದೊಮ್ಮೆ ಭೂಮಂಡಲವು ಅರಾಜಕವಾಗಿತ್ತು. ದರೋಡೆಕೋರರು ಸತ್ಪುರುಷರನ್ನು ಬಹಳ ಪೀಡಿಸುತ್ತಿದ್ದರು. ಆಗ ನಿನ್ನ ಇದೇ ಪುತ್ರನು ಸಜ್ಜನರನ್ನು ರಕ್ಷಿಸಿದನು. ಇವನಿಂದ ಬಲವನ್ನು ಪಡೆದು ಆ ಜನರು ದರೋಡೆಕೋರರನ್ನು ಜಯಿಸಿದ್ದರು. ॥17॥

(ಶ್ಲೋಕ-18)

ಮೂಲಮ್

ಯ ಏತಸ್ಮಿನ್ಮಹಾಭಾಗಾಃ ಪ್ರೀತಿಂ ಕುರ್ವಂತಿ ಮಾನವಾಃ ।
ನಾರಯೋಭಿಭವಂತ್ಯೇತಾನ್ವಿಷ್ಣುಪಕ್ಷಾನಿವಾಸುರಾಃ ॥

ಅನುವಾದ

ಯಾವ ಮನುಷ್ಯರು ನಿನ್ನ ಈ ಶ್ಯಾಮಲ ಶಿಶುವನ್ನು ಪ್ರೀತಿಸುವರೋ ಅವರು ಮಹಾಭಾಗ್ಯಶಾಲಿಗಳೇ ಸರಿ. ಭಗವಾನ್ ವಿಷ್ಣುವಿನ ಕರಕಮಲಗಳ ಛತ್ರ ಛಾಯೆಯಲ್ಲಿದ್ದ ದೇವತೆಗಳನ್ನು ಅಸುರರು ಜಯಿಸಲಾರರೋ ಹಾಗೆಯೇ ಇವನನ್ನು ಪ್ರೀತಿಸುವವರನ್ನು ಒಳಗಿನ ಅಥವಾ ಹೊರಗಿನ ಯಾವ ಶತ್ರುಗಳು ಜಯಿಸಲಾರರು. ॥18॥

(ಶ್ಲೋಕ-19)

ಮೂಲಮ್

ತಸ್ಮಾನ್ನಂದಾತ್ಮಜೋಯಂ ತೇ ನಾರಾಯಣಸಮೋ ಗುಣೈಃ ।
ಶ್ರಿಯಾ ಕೀರ್ತ್ಯಾನುಭಾವೇನ ಗೋಪಾಯಸ್ವ ಸಮಾಹಿತಃ ॥

ಅನುವಾದ

ನಂದಗೋಪನೇ! ಯಾರ ದೃಷ್ಟಿಯಿಂದ ನೋಡಿದರೂ ಗುಣಗಳಲ್ಲಿ, ಸಂಪತ್ತಿನಲ್ಲಿ, ಸೌಂದರ್ಯದಲ್ಲಿ, ಕೀರ್ತಿಯಲ್ಲಿ, ಮಹಿಮೆಯಲ್ಲಿ ನಿನ್ನ ಈ ಬಾಲಕನು ಸಾಕ್ಷಾತ್ ಭಗವಾನ್ ನಾರಾಯಣನಿಗೆ ಸಮಾನನಾಗಿರುವನು. ನೀನು ಬಹಳ ಎಚ್ಚರಿಕೆಯಿಂದ, ತತ್ಪರತೆಯಿಂದ ಇವನನ್ನು ರಕ್ಷಿಸುತ್ತಿರು.॥19॥

(ಶ್ಲೋಕ-20)

ಮೂಲಮ್

ಇತ್ಯಾತ್ಮಾನಂ ಸಮಾದಿಶ್ಯ ಗರ್ಗೇ ಚ ಸ್ವಗೃಹಂ ಗತೇ ।
ನಂದಃ ಪ್ರಮುದಿತೋ ಮೇನೇ ಆತ್ಮಾನಂ ಪೂರ್ಣಮಾಶಿಷಾಮ್ ॥

ಅನುವಾದ

ಹೀಗೆ ನಂದಗೋಪನಿಗೆ ಗರ್ಗರು ‘ಇವನೇ ಭಗವಂತ’ ಎಂದು ಮಾತ್ರ ಹೇಳದೆ ಉಳಿದೆಲ್ಲ ವಿಷಯವನ್ನು ಹೇಳಿ, ಅವನ ಅನುಮತಿಯನ್ನು ಪಡೆದು ತಮ್ಮ ಆಶ್ರಮಕ್ಕೆ ತೆರಳಿದರು. ಗರ್ಗರ ಮಾತನ್ನು ಕೇಳಿ ನಂದಗೋಪನು ಆನಂದಭರಿತನಾದನು. ತನ್ನ ಆಸೆಗಳೆಲ್ಲವೂ ತೀರಿದುವೆಂದೂ, ಕೃತಕೃತ್ಯನಾದೆನೆಂದೂ ಆತನು ಭಾವಿಸಿಕೊಂಡನು. ॥20॥

(ಶ್ಲೋಕ-21)

ಮೂಲಮ್

ಕಾಲೇನ ವ್ರಜತಾಲ್ಪೇನ ಗೋಕುಲೇ ರಾಮಕೇಶವೌ ।
ಜಾನುಭ್ಯಾಂ ಸಹ ಪಾಣಿಭ್ಯಾಂ ರಿಂಗಮಾಣೌ ವಿಜಹ್ರತುಃ ॥

ಅನುವಾದ

ಪರೀಕ್ಷಿತನೇ! ಕೆಲವು ದಿವಸಗಳಲ್ಲಿಯೇ ರಾಮ ಮತ್ತು ಶ್ಯಾಮರು ಅಂಬೆಗಾಲಿಟ್ಟುಕೊಂಡು ಗೋಕುಲದಲ್ಲೆಲ್ಲ ಆಟವಾಡ ತೊಡಗಿದರು.॥21॥

(ಶ್ಲೋಕ-22)

ಮೂಲಮ್

ತಾವಂಘ್ರಿಯುಗ್ಮಮನುಕೃಷ್ಯ ಸರೀಸೃಪಂತೌ
ಘೋಷಪ್ರಘೋಷರುಚಿರಂ ವ್ರಜಕರ್ದಮೇಷು ।
ತನ್ನಾದಹೃಷ್ಟಮನಸಾವನುಸೃತ್ಯ ಲೋಕಂ
ಮುಗ್ಧಪ್ರಭೀತವದುಪೇಯತುರಂತಿ ಮಾತ್ರೋಃ ॥

ಅನುವಾದ

ಇಬ್ಬರು ಸೋದರರೂ ತಮ್ಮ ಸುಕುಮಾರವಾದ ಕಾಲುಗಳನ್ನೆಳೆಯುತ್ತಾ ಗೋಕುಲದ ಧೂಳಿನಲ್ಲಿ ನಡೆಯುತ್ತಿದ್ದರು. ಆ ಸಮಯದಲ್ಲಿ ಕಾಲುಗಳಲ್ಲಿ ಮತ್ತು ಸೊಂಟದಲ್ಲಿ ಅಲಂಕೃತವಾದ ಗೆಜ್ಜೆಗಳು ಉಲಿಯುತ್ತಿದ್ದವು. ಆ ಮಂಜುಳ ಮಧುರ ಧ್ವನಿಯನ್ನು ಕೇಳಿ ಅವರಿಬ್ಬರೂ ಕಿಲ-ಕಿಲನೆ ನಗುತ್ತಿದ್ದರು. ಕೆಲವೊಮ್ಮೆ ಅವರು ದಾರಿಯಲ್ಲಿ ಯಾರೋ ಅಜ್ಞಾತ ವ್ಯಕ್ತಿಯ ಹಿಂದೆ-ಹಿಂದೆಯೇ ಸ್ವಲ್ಪದೂರ ಹೋಗುತ್ತಿದ್ದರು. ಮತ್ತೆ ಇವನು ಯಾರೋ ಬೇರೆ ಎಂದು ತಿಳಿದಾಗ ಮರುಕ್ಷಣದಲ್ಲೇ ಭಯಗೊಂಡವರಂತೆ ರೋಹಿಣೀ-ಯಶೋದೆಯರ ಬಳಿಗೆ ಬಂದು ಬಿಡುತ್ತಿದ್ದರು.॥22॥

(ಶ್ಲೋಕ-23)

ಮೂಲಮ್

ತನ್ಮಾತರೌ ನಿಜಸುತೌ ಘೃಣಯಾ ಸ್ನುವಂತ್ಯೌ
ಪಂಕಾಂಗರಾಗರುಚಿರಾವುಪಗುಹ್ಯ ದೋರ್ಭ್ಯಾಮ್ ।
ದತ್ತ್ವಾ ಸ್ತನಂ ಪ್ರಪಿಬತೋಃ ಸ್ಮ ಮುಖಂ ನಿರೀಕ್ಷ್ಯ
ಮುಗ್ಧ ಸ್ಮಿತಾಲ್ಪದಶನಂ ಯಯತುಃ ಪ್ರಮೋದಮ್ ॥

ಅನುವಾದ

ತಾಯಂದಿರು ಇದೆಲ್ಲವನ್ನು ನೋಡಿ ಸ್ನೇಹ ಪರವಶರಾಗುತ್ತಿದ್ದರು. ಅವರ ಸ್ತನಗಳಿಂದ ಹಾಲು ತಾನಾಗಿಯೇ ಒಸರುತ್ತಿತ್ತು. ಅವರ ಇಬ್ಬರೂ ಮುದ್ದು ಕಂದಮ್ಮಗಳು ತಮ್ಮ ಶರೀರದಲ್ಲಿ ಧೂಳಿನ ಅಂಗರಾಗವನ್ನು ಹಚ್ಚಿಕೊಂಡು ಮರಳಿದಾಗ ಅವರ ಸೌಂದರ್ಯವು ಇನ್ನೂ ಹೆಚ್ಚುತ್ತಿತ್ತು. ಅವರು ಬರುತ್ತಲೇ ತಾಯಂದಿರು ಎರಡೂ ಕೈಗಳಿಂದ ಬಾಚಿತಬ್ಬಿಕೊಂಡು ತೊಡೆಗಳಲ್ಲಿ ಕುಳ್ಳಿರಿಸಿಕೊಂಡು ಸ್ತನ್ಯ ಪಾನಮಾಡಿಸುತ್ತಿದ್ದರು. ಅವರು ಹಾಲುಕುಡಿಯುತ್ತಿರುವಾಗ ನಡು-ನಡುವೆ ಮುಗುಳ್ನಗುತ್ತಾ ತಮ್ಮ ತಾಯಂದಿರ ಕಡೆಗೆ ನೋಡತೊಡಗಿದಾಗ ಅವರು ಬಾಲಕರ ಮಂದ-ಮಂದ ಮುಗುಳ್ನಗೆಯನ್ನು ಪುಟ್ಟದಾದ ಹಾಲುಹಲ್ಲುಗಳನ್ನೂ, ಮುದ್ದಾದ ಮುಖವನ್ನೂ ನೋಡಿ ಆನಂದ ಸಾಗರದಲ್ಲಿ ಮುಳುಗಿಹೋಗುತ್ತಿದ್ದರು. ॥23॥

(ಶ್ಲೋಕ-24)

ಮೂಲಮ್

ಯರ್ಹ್ಯಂಗನಾದರ್ಶನೀಯಕುಮಾರಲೀಲಾ-
ವಂತರ್ವ್ರಜೇ ತದಬಲಾಃ ಪ್ರಗೃಹೀತಪುಚ್ಛೈಃ ।
ವತ್ಸೈರಿತಸ್ತತ ಉಭಾವನುಕೃಷ್ಯಮಾಣೌ
ಪ್ರೇಕ್ಷಂತ್ಯ ಉಜ್ಝಿತಗೃಹಾ ಜಹೃಷುರ್ಹಸಂತ್ಯಃ ॥

ಅನುವಾದ

ರಾಮ ಮತ್ತು ಶ್ಯಾಮರಿಬ್ಬರೂ ಸ್ವಲ್ಪ ದೊಡ್ಡವರಾದಾಗ ವ್ರಜದ ಮನೆಯ ಹೊರಗೆ ಅವರು ನಡೆಸುತ್ತಿದ್ದ ಲೀಲೆಗಳನ್ನು ಗೋಪಿಯರು ನೋಡುತ್ತಾ ನಿಂತು ಬಿಡುತ್ತಿದ್ದರು. ಅವರು ಯಾವುದೋ ಮಲಗಿದ ಕರುವಿನ ಬಾಲವನ್ನು ಹಿಡಿದುಕೊಂಡಾಗ ಹಾಗೂ ಕರುವು ಹೆದರಿ ಅತ್ತ-ಇತ್ತ ಓಡುವಾಗ ಅವರಿಬ್ಬರೂ ಇನ್ನೂ ಜೋರಾಗಿ ಬಾಲವನ್ನು ಹಿಡಿದು ಕೊಂಡುಬಿಡುತ್ತಿದ್ದರು. ಕರುಗಳು ಅವರನ್ನೂ ಎಳೆದು ಕೊಂಡು ಓಡತೊಡಗುತ್ತಿದ್ದವು. ಗೋಪಿಯರು ತಮ್ಮ ಮನೆಗೆಲಸವನ್ನೆಲ್ಲ ಬಿಟ್ಟು ಇದೆಲ್ಲವನ್ನು ನೋಡುತ್ತಲೇ ಇರುತ್ತಿದ್ದರು ಮತ್ತು ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಪರಮಾನಂದದಲ್ಲಿ ಮಗ್ನರಾಗುತ್ತಿದ್ದರು. ॥24॥

(ಶ್ಲೋಕ-25)

ಮೂಲಮ್

ಶೃಂಗ್ಯಗ್ನಿದಂಷಟ್ಯೆಸಿಜಲದ್ವಿಜಕಂಟಕೇಭ್ಯಃ
ಕ್ರೀಡಾಪರಾವತಿಚಲೌ ಸ್ವಸುತೌ ನಿಷೇದ್ಧುಮ್ ।
ಗೃಹ್ಯಾಮಿ ಕರ್ತುಮಪಿ ಯತ್ರ ನ ತಜ್ಜನನ್ಯೌ
ಶೇಕಾತ ಆಪತುರಲಂ ಮನಸೋನವಸ್ಥಾಮ್ ॥

ಅನುವಾದ

ಕೃಷ್ಣ-ಬಲರಾಮರಿಬ್ಬರೂ ಬಹಳ ಚಂಚಲರೂ, ತುಂಟರೂ ಆಗಿದ್ದರು. ಅವರು ಎಲ್ಲೋ ಜಿಂಕೆ, ಹಸು ಮುಂತಾದ ಕೋಡುಗಳುಳ್ಳ ಪಶುಗಳ ಬಳಿಗೆ ಧಾವಿಸಿದರೆ, ಕೆಲವೊಮ್ಮೆ ಉರಿಯುತ್ತಿರುವ ಬೆಂಕಿಯ ಬಳಿಗೆ ಆಡಲು ಓಡುತ್ತಿದ್ದರು. ಕೆಲವೊಮ್ಮೆ ಹಲ್ಲುಗಳಿಂದ ಕಡಿಯುವಂತಹ ನಾಯಿಗಳ ಬಳಿಗೆ ತಲುಪಿದರೆ, ಕೆಲವೊಮ್ಮೆ ಕಣ್ಣುತಪ್ಪಿಸಿ ಖಡ್ಗವನ್ನೆತ್ತಿಕೊಳ್ಳುತ್ತಿದ್ದರು. ಕೆಲವೊಮ್ಮೆ ಬಾವಿ-ಹಳ್ಳಗಳ ಬಳಿಗೆ ಹೋಗಿ ನೀರಿನಲ್ಲಿ ಬೀಳುವರೋ ಎಂದು ಅನಿಸುತ್ತಿತ್ತು. ಕೆಲವೊಮ್ಮೆ ನವಿಲು ಮುಂತಾದ ಪಕ್ಷಿಗಳ ಹತ್ತಿರ ಹೋದರೆ, ಕೆಲವೊಮ್ಮೆ ಮುಳ್ಳುಗಳಿರುವಲ್ಲಿಗೆ ಮುಂದರಿಯುತ್ತಿದ್ದರು. ತಾಯಂದಿರು ಅವರನ್ನು ಬಹಳವಾಗಿ ನಿವಾರಿಸುತ್ತಿದ್ದರು. ಆದರೆ ಅವರ ಮಾತು ಕೇಳುತ್ತಲೇ ಇರಲಿಲ್ಲ. ಇಂತಹ ಸ್ಥಿತಿಯಲ್ಲಿ ಅವರಿಂದ ಮನೆಯ ಕೆಲಸವನ್ನು ನಿರ್ವಹಿಸಲಾಗುತ್ತಿರಲಿಲ್ಲ. ಅವರ ಚಿತ್ತವು ಮಕ್ಕಳನ್ನು ಭಯದ ವಸ್ತುಗಳಿಂದ ಕಾಪಾಡುವ ಚಿಂತೆಯಲ್ಲೇ ಅತ್ಯಂತ ಚಂಚಲವಾಗಿರುತ್ತಿತ್ತು. ॥25॥

(ಶ್ಲೋಕ-26)

ಮೂಲಮ್

ಕಾಲೇನಾಲ್ಪೇನ ರಾಜರ್ಷೇ ರಾಮಃ ಕೃಷ್ಣಶ್ಚ ಗೋಕುಲೇ ।
ಅಘೃಷ್ಟಜಾನುಭಿಃ ಪದ್ಭಿರ್ವಿಚಕ್ರಮತುರಂಜಸಾ ॥

ಅನುವಾದ

ರಾಜರ್ಷಿಯೇ! ಕೆಲವೇ ದಿನಗಳಲ್ಲಿ ಯಶೋದೆ ಮತ್ತು ರೋಹಿಣಿಯರ ಮುದ್ದಿನ ಮಕ್ಕಳು ಅಂಬೆಗಾಲನ್ನಿಡುವುದನ್ನು ಬಿಟ್ಟು ಗೋಕುಲದಲ್ಲಿ ನಡೆದಾಡಲು ಪ್ರಾರಂಭಿಸಿದರು.॥26॥

(ಶ್ಲೋಕ-27)

ಮೂಲಮ್

ತತಸ್ತು ಭಗವಾನ್ಕೃಷ್ಣೋ ವಯಸ್ಯೈರ್ವ್ರಜಬಾಲಕೈಃ ।
ಸಹರಾಮೋ ವ್ರಜಸೀಣಾಂ ಚಿಕ್ರೀಡೇ ಜನಯನ್ಮುದಮ್ ॥

ಅನುವಾದ

ಕೃಷ್ಣನು ವ್ರಜವಾಸಿಯರಿಗೆ ಪ್ರತ್ಯಕ್ಷ ಭಗವಂತನೇ ಆಗಿದ್ದು, ಪರಮ ಸುಂದರ, ಪರಮಮಧುರವಾಗಿದ್ದಾನೆ. ಈಗ ಅವನು ಮತ್ತು ಬಲರಾಮರಿಬ್ಬರೂ ತಮ್ಮ ವಯಸ್ಸಿನ ಗೊಲ್ಲಬಾಲಕರೊಂದಿಗೆ ಜೊತೆ ಸೇರಿಸಿಕೊಂಡು ಆಟವಾಡಲು ಗೋಕುಲದಲ್ಲೆಲ್ಲ ಓಡಾಡುತ್ತಿದ್ದರು. ವ್ರಜದ ಭಾಗ್ಯವತಿಯರಾದ ಗೋಪಿಯರನ್ನು ಸಂತೋಷ ಪಡಿಸುತ್ತಾ ಅನೇಕ ರೀತಿಯ ಆಟಗಳನ್ನು ಆಡುತ್ತಾರೆ. ॥27॥

(ಶ್ಲೋಕ-28)

ಮೂಲಮ್

ಕೃಷ್ಣಸ್ಯ ಗೋಪ್ಯೋ ರುಚಿರಂ ವೀಕ್ಷ್ಯ ಕೌಮಾರಚಾಪಲಮ್ ।
ಶೃಣ್ವತ್ಯಾಃ ಕಿಲ ತನ್ಮಾತುರಿತಿ ಹೋಚುಃ ಸಮಾಗತಾಃ ॥

ಅನುವಾದ

ಶ್ರೀಕೃಷ್ಣನ ಕೌಮಾರ್ಯದ ಚಂಚಲತೆಯಿಂದ ಕೂಡಿದ ಆಟ ಪಾಟಗಳು ಅತ್ಯಂತ ಮನೋಹರವಾಗಿದ್ದುವು. ಗೋಪಿಯರಿಗಾದರೋ ಅವುಗಳು ಬಹಳ ಸುಂದರವಾಗಿ, ಮಧುರವಾಗಿ ಕಾಣುತ್ತಿದ್ದವು. ಒಂದುದಿನ ಅವರೆಲ್ಲರೂ ಸೇರಿ ನಂದಗೋಪನ ಮನೆಗೆ ಬಂದು ತಾಯಿ ಯಶೋದೆಯನ್ನು ಸಂಬೋಧಿಸುತ್ತಾ ಕೃಷ್ಣನ ತುಂಟತನವನ್ನು ಹೇಳತೊಡಗಿದರು. ॥28॥

(ಶ್ಲೋಕ-29)

ಮೂಲಮ್

ವತ್ಸಾನ್ಮುಂಚನ್ ಕ್ವಚಿದಸಮಯೇ ಕ್ರೋಶಸಂಜಾತಹಾಸಃ
ಸ್ತೇಯಂ ಸ್ವಾದ್ವತ್ತ್ಯಥ ದಧಿ ಪಯಃ ಕಲ್ಪಿತೈಃ ಸ್ತೇಯಯೋಗೈಃ ।
ಮರ್ಕಾನ್ಭೋಕ್ಷ್ಯನ್ವಿಭಜತಿ ಸ ಚೇನ್ನಾತ್ತಿ ಭಾಂಡಂ ಭಿನತ್ತಿ
ದ್ರವ್ಯಾಲಾಭೇ ಸ ಗೃಹಕುಪಿತೋ ಯಾತ್ಯುಪಕ್ರೋಶ್ಯ ತೋಕಾನ್ ॥

ಅನುವಾದ

ಅಮ್ಮಾ! ಯಶೋದೆಯೇ! ನಿನ್ನ ಮಗನು ಕೊಡುವ ಉಪಟಳವನ್ನು ಎಷ್ಟೆಂದು ವರ್ಣಿಸೋಣ! ನಿನ್ನ ಮಗನು ನಿಶ್ಚಯವಾಗಿ ಬಹಳ ತುಂಟನಾಗಿರುವನು. ಹಾಲು ಕರೆಯುವ ಸಮಯವಲ್ಲದಿದ್ದರೂ ಕರುಗಳನ್ನು ಬಿಟ್ಟುಬಿಡುತ್ತಾನೆ. ನಾವು ಗದರಿಸಿದರೆ ಅಣಕಿಸಿನಗುತ್ತಾನೆ. ಇವನು ಉಪಾಯಾಂತರಗಳಿಂದ ನಾವು ಬಟ್ಚಿಟ್ಟಿದ್ದ ರುಚಿಕರವಾದ ಹಾಲು-ಮೊಸರುಗಳನ್ನು ಕದ್ದು ತಿನ್ನುತ್ತಾನೆ. ಕೇವಲ ತಾನೇ ತಿಂದರೆ ತಿನ್ನಲಿ, ಪಾಪ. ಆದರೆ ಹಾಗೆಮಾಡದೆ ಇವನು ಎಲ್ಲ ಹಾಲು-ಮೊಸರುಗಳನ್ನು ಮಂಗಗಳಿಗೆ ಮತ್ತು ಜೊತೆಗಾರ ಬಾಲಕರಿಗೆ ಹಂಚಿಬಿಡುತ್ತಾನೆ. ಅವು ಕೂಡ ಹೊಟ್ಟೆತುಂಬಾ ತಿಂದು ಇನ್ನು ತಿನ್ನಲು ಆಗದಿದ್ದಾಗ ಇವನು ನಮ್ಮ ಹಾಲು-ಮೊಸರಿನ ಗಡಿಗೆಗಳನ್ನು ಒಡೆದು ಹಾಕುತ್ತಾನೆ. ಇವನಿಗೆ ಮನೆಯಲ್ಲಿ ಬೇಕಾದ ವಸ್ತುವು ಸಿಗದಿದ್ದರೆ ಮನೆಯವರ ಮೇಲೆ ರೇಗುತ್ತಾನೆ ಮತ್ತು ನಮ್ಮ ಮಕ್ಕಳನ್ನು ಕೀಟಲೆಮಾಡಿ ಅಳಿಸುತ್ತಾನೆ. ॥29॥

(ಶ್ಲೋಕ-30)

ಮೂಲಮ್

ಹಸ್ತಾಗ್ರಾಹ್ಯೇ ರಚಯತಿ ವಿಧಿಂ ಪೀಠಕೋಲೂಖಲಾದ್ಯೈ-
ಶ್ಛಿದ್ರಂ ಹ್ಯಂತರ್ನಿಹಿತವಯುನಃ ಶಿಕ್ಯಭಾಂಡೇಷು ತದ್ವಿತ್ ।
ಧ್ವಾಂತಾಗಾರೇ ಘೃತಮಣಿಗಣಂ ಸ್ವಾಂಗಮರ್ಥಪ್ರದೀಪಂ
ಕಾಲೇ ಗೋಪ್ಯೋ ಯರ್ಹಿ ಗೃಹಕೃತ್ಯೇಷು ಸುವ್ಯಗ್ರಚಿತ್ತಾಃ ॥

ಅನುವಾದ

ನಾವು ಹಾಲು ಮೊಸರುಗಳನ್ನು ನೆಲವುಗಳಲ್ಲಿ ಇಟ್ಟುಬಿಡುತ್ತೇವೆ. ಇವನ ಪುಟ್ಟ ಕೈ-ಕಾಲುಗಳು ಅಲ್ಲಿಗೆ ಎಟಕದಿದ್ದಾಗ ನಾನಾ ಉಪಾಯಗಳನ್ನು ಮಾಡುತ್ತಾನೆ. ಕೆಲವೊಮ್ಮೆ ನಾಲ್ಕಾರು ಮಣೆಗಳನ್ನು ಒಂದರ ಮೇಲೊಂದು ಇಟ್ಟುಬಿಡುತ್ತಾನೆ. ಕೆಲವೊಮ್ಮೆ ಒರಳಿನಮೇಲೆ ಹತ್ತಿ ಬಿಡುತ್ತಾನೆ. ಕೆಲವೊಮ್ಮೆ ಒರಳಿನ ಮೇಲೆ ಮಣೆಯನ್ನಿಡುತ್ತಾನೆ. ಕೆಲವೊಮ್ಮೆ ತನ್ನ ಜೊತೆಯ ಬಾಲಕನ ಹೆಗಲೇರಿ ಬಿಡುತ್ತಾನೆ. ಇಷ್ಟಾದರೂ ಕಾರ್ಯ ಸಫಲವಾಗದಿದ್ದರೆ ಇವನು ಕೆಳಗಿನಿಂದಲೇ ಕೋಲಿನಿಂದ ಪಾತ್ರೆಗೆ ತೂತು ಮಾಡಿಬಿಡುತ್ತಾನೆ. ಯಾವ-ಯಾವ ನೆಲುವಿನಲ್ಲಿ ಯಾವ ಪಾತ್ರೆಯಲ್ಲಿ ಏನೇನಿದೆ ಎಂಬುದು ಇವನಿಗೆ ಚೆನ್ನಾಗಿ ತಿಳಿದಿರುತ್ತದೆ. ಯಾರಿಗೂ ತಿಳಿಯದಂತೆ ಪಾತ್ರೆಗೆ ಛಿದ್ರ ಕೊರೆಯುವ ಕಲೆ ಇವನಿಗೆ ಚೆನ್ನಾಗಿ ತಿಳಿದಿದೆ. ನಾವು ನಮ್ಮ ವಸ್ತುಗಳನ್ನು ಗಾಢವಾದ ಕತ್ತಲಲ್ಲಿ ಅಡಗಿಸಿಟ್ಟರೂ ನಂದರಾಣಿಯೇ! ನೀನು ಇವನಿಗೆ ತೊಡಿಸಿದ ನವರತ್ನಮಯ ಆಭೂಷಣಗಳ ಪ್ರಭೆಯಿಂದ ಎಲ್ಲವನ್ನೂ ನೋಡಿಕೊಳ್ಳುವನು. ಎಲ್ಲವನ್ನೂ ಕಾಣಿಸುವಂತಹ ಒಂದು ಜ್ಯೋತಿಯೇ ಇವನ ಶರೀರದಲ್ಲಿದೆ. ಯಾವಾಗ ಯಾರು ಎಲ್ಲಿ ಇರುತ್ತಾರೆ ಎಂಬುದು ಇವನಿಗೆ ನಿಶ್ಚಿತವಾಗಿ ತಿಳಿಯುವಷ್ಟು ಇವನು ಜಾಣನಾಗಿದ್ದಾನೆ. ನಾವೆಲ್ಲರೂ ಮನೆಗೆಲಸದಲ್ಲಿ ನಿರತರಾದಾಗ ಇವನು ತನ್ನ ಕಾರ್ಯವನ್ನು ಮಾಡಿಬಿಡುತ್ತಾನೆ. ॥30॥

(ಶ್ಲೋಕ-31)

ಮೂಲಮ್

ಏವಂ ಧಾರ್ಷ್ಟ್ಯಾನ್ಯುಶತಿ ಕುರುತೇ ಮೇಹನಾದೀನಿ ವಾಸ್ತೌ
ಸ್ತೇಯೋಪಾಯೈರ್ವಿರಚಿತಕೃತಿಃ ಸುಪ್ರತೀಕೋ ಯಥಾಸ್ತೇ ।
ಇತ್ಥಂ ಸೀಭಿಃ ಸಭಯನಯನಶ್ರೀಮುಖಾಲೋಕಿನೀಭಿ-
ರ್ವ್ಯಾಖ್ಯಾತಾರ್ಥಾ ಪ್ರಹಸಿತಮುಖೀ ನ ಹ್ಯುಪಾಲಬ್ಧುಮೈಚ್ಛತ್ ॥

ಅನುವಾದ

ಇಷ್ಟು ಮಾಡಿಯೂ ದೊಡ್ಡಸ್ತಿಕೆಯ ಮಾತನಾಡುತ್ತಾ ನಮ್ಮನ್ನು ಕಳ್ಳಿಯರೆಂದು ದಬಾಯಿಸುತ್ತಾನೆ ಮತ್ತು ಮನೆಯ ಯಜಮಾನನಂತೆ ವರ್ತಿಸುತ್ತಾನೆ. ಇಷ್ಟೇ ಅಲ್ಲ, ನಾವು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸಿದ ಮನೆಯನ್ನು ಇವನು ಮೂತ್ರ-ಪುರೀಷೋತ್ಸರ್ಜನಗಳಿಂದ ಕೆಡಿಸಿಬಿಡುತ್ತಾನೆ. ಮನೆ-ಮನೆಯಲ್ಲಿಯೂ ಹೀಗೆ ತುಂಟತನ ಮಾಡುವ ಈ ಪೋರನು ನಿನ್ನ ಬಳಿಯಲ್ಲಿ ಏನೂ ಅರಿಯದವನಂತೆ ಹೆದರಿ ನಿಂತಿದ್ದಾನಲ್ಲ! ಎಂದು ದೂರುತ್ತಿದ್ದ ಗೋಪಿಯರ ಮಾತನ್ನು ಕೇಳಿದ ಯಶೋದೆಯು ಭಯಗೊಂಡವನಂತೆ ನಟಿಸುತ್ತಿದ್ದ ಮುದ್ದುಕೃಷ್ಣನ ಮುದ್ದುಮುಖವನ್ನು ನೋಡಿ ನಕ್ಕು ಬಿಟ್ಟಳು. ಮುದ್ದಿನ ಕಂದಮ್ಮನಾದ ಕೃಷ್ಣನಲ್ಲಿ ವಿಚಾರಿಸಲೂ ಆಗದಿರುವ ಆಕೆಯು ಗದರಿಸಲು ಸಾಧ್ಯವೇ? ॥31॥

ಮೂಲಮ್

(ಶ್ಲೋಕ-32)
ಏಕದಾ ಕ್ರೀಡಮಾನಾಸ್ತೇ ರಾಮಾದ್ಯಾ ಗೋಪದಾರಕಾಃ ।
ಕೃಷ್ಣೋ ಮೃದಂ ಭಕ್ಷಿತವಾನಿತಿ ಮಾತ್ರೇ ನ್ಯವೇದಯನ್ ॥

ಅನುವಾದ

ಒಂದು ದಿನ ಬಲರಾಮನೇ ಮೊದಲಾದ ಗೋಪಬಾಲಕರು ಶ್ರೀಕೃಷ್ಣನೊಡನೆ ಆಟವಾಡುತ್ತಿದ್ದರು. ಆಗ ಒಮ್ಮೆ ಶ್ರೀಕೃಷ್ಣನು ಆಟ ಆಡುತ್ತಿರುವಾಗ ಮಣ್ಣು ತಿಂದನು. ಗೋಪಾಲಕರು ಇದನ್ನು ನೋಡಿ ಬಂದು ಯಶೋದೆಗೆ ದೂರಿತ್ತರು. ॥32॥

(ಶ್ಲೋಕ-33)

ಮೂಲಮ್

ಸಾ ಗೃಹೀತ್ವಾ ಕರೇ ಕೃಷ್ಣಮುಪಾಲಭ್ಯ ಹಿತೈಷಿಣೀ ।
ಯಶೋದಾ ಭಯಸಂಭ್ರಾಂತಪ್ರೇಕ್ಷಣಾಕ್ಷಮಭಾಷತ ॥

ಅನುವಾದ

ಮಗುವಿನ ಹಿತೈಷಿಣಿಯಾದ ಯಶೋದೆಯು ಒಡನೆಯೇ ಶ್ರೀಕೃಷ್ಣನ ಕೈಗಳನ್ನು ಹಿಡಿದುಕೊಂಡಳು. ಆ ಸಮಯದಲ್ಲಿ ಶ್ರೀಕೃಷ್ಣನು ಹೆದರಿದವನಂತೆ ನಟಿಸುತ್ತಿದ್ದ ಅವನ ಕಣ್ಣುಗಳು ಕೆಳಮುಖವಾಗಿತ್ತು. ಯಶೋದೆಯು ಗದರಿಸುತ್ತಾ ಕೇಳಿದಳು ॥33॥

(ಶ್ಲೋಕ-34)

ಮೂಲಮ್

ಕಸ್ಮಾನ್ಮೃದಮದಾಂತಾತ್ಮನ್ ಭವಾನ್ಭಕ್ಷಿತವಾನ್ರಹಃ ।
ವದಂತಿ ತಾವಕಾ ಹ್ಯೇತೇ ಕುಮಾರಾಸ್ತೇಗ್ರಜೋಪ್ಯಯಮ್ ॥

ಅನುವಾದ

ಏನೋ ತುಂಟ! ನೀನು ಬಹಳ ಉದ್ಧಟನಾಗಿರುವೆ. ನೀನು ಅಡಗಿಕೊಂಡು ಮಣ್ಣನ್ನೇಕೆ ತಿಂದೆ? ಹಾಗೆ ತಿಂದೆಯೆಂದು ನಿನ್ನ ಗೆಳೆಯರು ಹೇಳುತ್ತಿದ್ದಾರೆ. ನಿನ್ನಣ್ಣ ಬಲರಾಮನೂ ಹೇಳುತ್ತಿರುವನು. ॥34॥

(ಶ್ಲೋಕ-35)

ಮೂಲಮ್

ಶ್ರೀಕೃಷ್ಣ ಉವಾಚ
ನಾಹಂ ಭಕ್ಷಿತವಾನಂಬ ಸರ್ವೇ ಮಿಥ್ಯಾಭಿಶಂಸಿನಃ ।
ಯದಿ ಸತ್ಯಗಿರಸ್ತರ್ಹಿ ಸಮಕ್ಷಂ ಪಶ್ಯ ಮೇ ಮುಖಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಅಮ್ಮಾ! ನಾನು ಖಂಡಿತವಾಗಿ ಮಣ್ಣು ತಿಂದಿಲ್ಲ. ಇವರೆಲ್ಲರೂ ಸುಳ್ಳನ್ನೇ ಹೇಳುತ್ತಿರುವರು. ನೀನು ಇವರ ಮಾತು ನಿಜವೆಂದು ತಿಳಿಯುವೆಯಾದರೆ ನನ್ನ ಮುಖ ನಿನ್ನ ಇದಿರಿಗೆ ಇದೆಯಲ್ಲ. ನೀನೇ ಪ್ರತ್ಯಕ್ಷವಾಗಿ ಕಣ್ಣಿಂದ ನೋಡು. ಆಗ ನಾನು ಮಣ್ಣುತಿಂದಿರುವೆನೊ, ಇಲ್ಲವೋ ಎಂಬುದು ಗೊತ್ತಾಗುತ್ತಲ್ಲ! ॥35॥

(ಶ್ಲೋಕ-36)

ಮೂಲಮ್

ಯದ್ಯೇವಂ ತರ್ಹಿ ವ್ಯಾದೇಹೀತ್ಯುಕ್ತಃ ಸ ಭಗವಾನ್ಹರಿಃ ।
ವ್ಯಾದತ್ತಾವ್ಯಾಹತೈಶ್ವರ್ಯಃ ಕ್ರೀಡಾಮನುಜಬಾಲಕಃ ॥

ಅನುವಾದ

ಯಶೋದೆಯು ಹೇಳಿದಳು ಸರಿ, ಹಾಗಾದರೆ ಬಾಯ್ತೆರೆ, ನಾನೇ ನೋಡುತ್ತೇನೆ. ತಾಯಿಯು ಹೀಗೆ ಹೇಳಿದಾಗ ಭಗವಾನ್ ಶ್ರೀಕೃಷ್ಣನು ತನ್ನ ಬಾಯನ್ನು ತೆರೆದನು. ಪರೀಕ್ಷಿತನೇ! ಶ್ರೀಕೃಷ್ಣನು ಅನಂತೈಶ್ವರ್ಯನು. ಅವನು ಕೇವಲ ಲೀಲೆಗಾಗಿಯೇ ಮನುಷ್ಯ ಬಾಲಕನಾಗಿದ್ದನು. ॥36॥

(ಶ್ಲೋಕ-37)

ಮೂಲಮ್

ಸಾ ತತ್ರ ದದೃಶೇ ವಿಶ್ವಂ ಜಗತ್ ಸ್ಥಾಸ್ನು ಚ ಖಂ ದಿಶಃ ।
ಸಾದ್ರಿದ್ವೀಪಾಬ್ಧಿಭೂಗೋಲಂ ಸವಾಯ್ವಗ್ನೀಂದು ತಾರಕಮ್ ॥

(ಶ್ಲೋಕ-38)

ಮೂಲಮ್

ಜ್ಯೋತಿಶ್ಚಕ್ರಂ ಜಲಂ ತೇಜೋ ನಭಸ್ವಾನ್ವಿಯದೇವ ಚ ।
ವೈಕಾರಿಕಾಣೀಂದ್ರಿಯಾಣಿ ಮನೋ ಮಾತ್ರಾ ಗುಣಾಸಯಃ ॥

ಅನುವಾದ

ಯಶೋದೆಯು ಬಗ್ಗಿ ನೋಡುತ್ತಾಳೆ ಅವನ ಬಾಯಲ್ಲಿ ಚರಾಚರ ಸಮಸ್ತ ಜಗತ್ತು ಅಡಕವಾಗಿರುವುದನ್ನು ನೋಡಿದಳು. ಆಕಾಶ, ದಿಕ್ಕುಗಳು, ಪರ್ವತಗಳು, ದ್ವೀಪಗಳೂ ಮತ್ತು ಸಮುದ್ರ ಸಹಿತ ಇಡೀ ಭೂಮಂಡಲ, ಬೀಸುವ ಗಾಳಿ, ವಿದ್ಯುತ್, ಅಗ್ನಿ, ಚಂದ್ರ-ತಾರೆಗಳು, ಸಂಪೂರ್ಣವಾದ ಜ್ಯೋತಿರ್ಮಂಡಲ, ಜಲ, ತೇಜಸ್ಸು, ಪವನ, ವಿಯತ್ (ಪ್ರಾಣಿಗಳು ಓಡಾಡುವ ಆಕಾಶ), ರಸಾತಳವೇ ಮುಂತಾದ ಅಧೋಲೋಕಗಳು. ಅಧಿಷ್ಠಾನ ದೇವತೆಗಳಿಂದ ಕೂಡಿದ ಇಂದ್ರಿಯಗಳು, ಮನಸ್ಸು, ಪಂಚತನ್ಮಾತ್ರೆಗಳು ಮತ್ತು ತ್ರಿಗುಣಗಳು ಶ್ರೀಕೃಷ್ಣನ ಬಾಯಲ್ಲಿ ಕಂಡು ಬಂದವು. ॥37-38॥

(ಶ್ಲೋಕ-39)

ಮೂಲಮ್

ಏತದ್ವಿಚಿತ್ರಂ ಸಹ ಜೀವಕಾಲ-
ಸ್ವಭಾವಕರ್ಮಾಶಯಲಿಂಗಭೇದಮ್ ।
ಸೂನೋಸ್ತನೌ ವೀಕ್ಷ್ಯ ವಿದಾರಿತಾಸ್ಯೇ
ವ್ರಜಂ ಸಹಾತ್ಮಾನಮವಾಪ ಶಂಕಾಮ್ ॥

ಅನುವಾದ

ಪರೀಕ್ಷಿತನೇ! ಜೀವಾತ್ಮರು, ಕಾಲ, ಸ್ವಭಾವ, ಕರ್ಮ, ಅವರ ವಾಸನೆಗಳು, ಶರೀರಾದಿಗಳಿಂದ ಭಿನ್ನ-ಭಿನ್ನವಾಗಿ ತೋರುವ ಈ ಇಡೀ ವಿಚಿತ್ರ ಜಗತ್ತು, ಅದರಲ್ಲಿಯೇ ಇರುವ ಗೋಕುಲ ಮತ್ತು ಆ ಗೋಕುಲದಲ್ಲಿ ತಾನಿರುವುದನ್ನು ಯಶೋದೆಯು ಶ್ರಿಕೃಷ್ಣನ ಮುದ್ದಾದ ತೆರೆದ ಬಾಯಿಯಲ್ಲಿ ನೋಡಿ ಅವಳಿಗೆ ಶಂಕೆಯುಂಟಾಯಿತು. ॥39॥

ಮೂಲಮ್

(ಶ್ಲೋಕ-40)
ಕಿಂ ಸ್ವಪ್ನ ಏತದುತ ದೇವಮಾಯಾ
ಕಿಂ ವಾ ಮದೀಯೋ ಬತ ಬುದ್ಧಿಮೋಹಃ ।
ಅಥೋ ಅಮುಷ್ಯೈವ ಮಮಾರ್ಭಕಸ್ಯ
ಯಃ ಕಶ್ಚನೌತ್ಪತ್ತಿಕ ಆತ್ಮಯೋಗಃ ॥

ಅನುವಾದ

ನಾನೀಗ ಎಲ್ಲಿದ್ದೇನೆ? ಏನನ್ನು ನೋಡುತ್ತಿದ್ದೇನೆ? ಇದೇನು ಸ್ವಪ್ನವೇ? ಅಥವಾ ಭಗವಂತನ ಮಾಯೆಯೇ? ನನ್ನ ಬುದ್ಧಿಯಲ್ಲಿ ಏನಾದರೂ ಭ್ರಮೆಯುಂಟಾಗಲಿಲ್ಲವಲ್ಲ! ನನ್ನ ಈ ಬಾಲಕನಲ್ಲೇ ಯಾವುದೋ ಜನ್ಮಜಾತ ಯೋಗಸಿದ್ಧಿಯಿರುವುದೂ ಸಂಭವವಿದೆ. ಅದನ್ನೇ ನನಗೆ ತೋರುತ್ತಿರುವನು. ॥40॥

(ಶ್ಲೋಕ-41)

ಮೂಲಮ್

ಅಥೋ ಯಥಾವನ್ನ ವಿತರ್ಕಗೋಚರಂ
ಚೇತೋಮನಃ ಕರ್ಮವಚೋಭಿರಂಜಸಾ ।
ಯದಾಶ್ರಯಂ ಯೇನ ಯತಃ ಪ್ರತೀಯತೇ
ಸುದುರ್ವಿಭಾವ್ಯಂ ಪ್ರಣತಾಸ್ಮಿ ತತ್ಪದಮ್ ॥

ಅನುವಾದ

ಯಾವುದು ತರ್ಕಕ್ಕೆ ಗೋಚರವಾಗುವುದಿಲ್ಲವೋ, ಯಾವುದು ಬುದ್ಧಿ, ಮನಸ್ಸು, ಕರ್ಮ ಮತ್ತು ವಾಕ್ಕುಗಳಿಗೆ ನಿಲುಕದೋ, ಈ ಇಡೀ ವಿಶ್ವವು ಯಾವುದನ್ನು ಆಶ್ರಯಿಸಿದೆಯೋ, ಯಾವುದರಿಂದ ಈ ಜಗತ್ತು ವ್ಯಾವಹಾರಿಕವಾಗಿ ಇರುವಂತೆ ತೋರುವುದೋ, ಯಾರ ಸ್ವರೂಪವು ಸರ್ವಥಾ ಅಚಿಂತ್ಯವಾಗಿದೆಯೋ ಅಂತಹ ಪ್ರಭುವಿಗೆ ನಾನು ನಮಸ್ಕರಿಸುತ್ತೇನೆ. ॥41॥

(ಶ್ಲೋಕ-42)

ಮೂಲಮ್

ಅಹಂ ಮಮಾಸೌ ಪತಿರೇಷ ಮೇ ಸುತೋ
ವ್ರಜೇಶ್ವರಸ್ಯಾಖಿಲವಿತ್ತಪಾ ಸತೀ ।
ಗೋಪ್ಯಶ್ಚ ಗೋಪಾಃ ಸಹಗೋಧನಾಶ್ಚ ಮೇ
ಯನ್ಮಾಯಯೇತ್ಥಂ ಕುಮತಿಃ ಸ ಮೇ ಗತಿಃ ॥

ಅನುವಾದ

ಪರಮಾತ್ಮನ ಮಾಯೆಯಿಂದ ಬುದ್ಧಿಗೆಟ್ಟವಳಾಗಿ ‘ನಾನು ನನ್ನದು’ ಎಂಬ ಅಹಂಕಾರದಲ್ಲಿ ತುಂಬಿಹೋಗಿದ್ದೇನೆ. ಇವನು ನನ್ನ ಪತಿ, ಇವನು ನನ್ನ ಮಗ, ವ್ರಜೇಶ್ವರನಾದ ನಂದಗೋಪನ ಸಕಲ ಐಶ್ವರ್ಯಕ್ಕೂ ನಾನೇ ಯಜಮಾನಿ, ನಾನು ಮಹಾಪತಿವ್ರತೆ. ಈ ಗೋಪಿಯರು ಗೋಪಾಲಕರೆಲ್ಲರೂ ನನ್ನ ಸೇವಕರು ಮುಂತಾಗಿ ಅಹಂಕಾರಪಡುತ್ತಿದ್ದೇನೆ. ಇದಕ್ಕೆ ಭಗವಂತನ ಮಾಯೇಯೇ ಕಾರಣ. ಹೀಗೆ ಮಾಯಾವರಣವನ್ನು ಹೊದ್ದಿಸಿ ನನ್ನನ್ನು ಕುಮತಿಯನ್ನಾಗಿಸಿದ ಆ ಪರಮಾತ್ಮನಲ್ಲಿ ನಾನು ಶರಣು ಹೊಂದುತ್ತೇನೆ.॥42॥

(ಶ್ಲೋಕ-43)

ಮೂಲಮ್

ಇತ್ಥಂ ವಿದಿತತತ್ತ್ವಾಯಾಂ ಗೋಪಿಕಾಯಾಂ ಸ ಈಶ್ವರಃ ।
ವೈಷ್ಣವೀಂ ವ್ಯತನೋನ್ಮಾಯಾಂ ಪುತ್ರಸ್ನೇಹಮಯೀಂ ವಿಭುಃ ॥

ಅನುವಾದ

ಹೀಗೆ ತಾಯಿ ಯಶೋದೆಯು ಶ್ರೀಕೃಷ್ಣನ ತತ್ತ್ವವನ್ನು ತಿಳಿದುಕೊಂಡಾಗ ಸರ್ವಶಕ್ತನಾದ, ಸರ್ವವ್ಯಾಪಕನಾದ ಪ್ರಭುವು ತನ್ನ ಪುತ್ರಸ್ನೇಹವೆಂಬ ವೈಷ್ಣವೀ ಯೋಗಮಾಯೆಯನ್ನೂ ಅವಳ ಹೃದಯದಲ್ಲಿ ಪ್ರಕಾಶಗೊಳಿಸಿದನು. ॥43॥

(ಶ್ಲೋಕ-44)

ಮೂಲಮ್

ಸದ್ಯೋನಷ್ಟಸ್ಮೃತಿರ್ಗೋಪೀ ಸಾರೋಪ್ಯಾರೋಹಮಾತ್ಮಜಮ್ ।
ಪ್ರವೃದ್ಧಸ್ನೇಹಕಲಿಲಹೃದಯಾಸೀದ್ಯಥಾ ಪುರಾ ॥

ಅನುವಾದ

ಯಶೋದೆಗೆ ಒಡನೆಯೇ ಆ ಘಟನೆ ಮರೆತುಹೋಯಿತು. ಆಕೆಯು ತನ್ನ ಮುದ್ದು ಕೃಷ್ಣನನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡಳು. ಮೊದಲು ಅವಳ ಹೃದಯದಲ್ಲಿ ಪ್ರೇಮಸಮುದ್ರವು ಉಕ್ಕುತ್ತಿರುವಂತೆಯೇ ಪುನಃ ಉಕ್ಕತೊಡಗಿತು. ॥44॥

(ಶ್ಲೋಕ-45)

ಮೂಲಮ್

ತ್ರಯ್ಯಾ ಚೋಪನಿಷದ್ಭಿಶ್ಚ ಸಾಂಖ್ಯಯೋಗೈಶ್ಚ ಸಾತ್ವತೈಃ ।
ಉಪಗೀಯಮಾನಮಾಹಾತ್ಮ್ಯಂ ಹರಿಂ ಸಾಮನ್ಯತಾತ್ಮಜಮ್ ॥

ಅನುವಾದ

ಸಕಲವೇದಗಳೂ ಉಪನಿಷತ್ತುಗಳೂ, ಸಾಂಖ್ಯ-ಯೋಗ ಶಾಸ್ತ್ರಗಳೂ, ಭಕ್ತಜನರೂ ಯಾವ ಪರಮಪುರುಷನ ಮಾಹಾತ್ಮ್ಯೆಯನ್ನು ನಿರಂತರವಾಗಿ ಕೊಂಡಾಡುವರೋ ಅದೇ ಭಗವಂತನನ್ನು ಯಶೋದೆಯು ತನ್ನ ಪುತ್ರನೆಂದೇ ಭಾವಿಸುತ್ತಿದ್ದಳು. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ನಂದಃ ಕಿಮಕರೋದ್ ಬ್ರಹ್ಮನ್ ಶ್ರೇಯ ಏವಂ ಮಹೋದಯಮ್ ।
ಯಶೋದಾ ಚ ಮಹಾಭಾಗಾ ಪಪೌ ಯಸ್ಯಾಃ ಸ್ತನಂ ಹರಿಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಬ್ರಾಹ್ಮಣಶ್ರೇಷ್ಠರೇ! ಭಗವಂತನನ್ನು ಪುತ್ರನನ್ನಾಗಿ ಪಡೆಯಲು ನಂದಗೋಪನು ಎಂತಹ ಅದ್ಭುತವಾದ ಮಂಗಲಮಯವಾದ ಸಾಧನೆಯನ್ನು ಮಾಡಿದ್ದನು? ಭಗವಂತನು ಅಕ್ಕರೆಯಿಂದ ಸ್ತನ್ಯವನ್ನು ಕುಡಿಯುತ್ತಿದ್ದ ಪರಮ ಭಾಗ್ಯವತಿಯಾದ ಯಶೋದಾದೇವಿಯು ಎಂತಹ ಮಹತ್ತಾದ ತಪಸ್ಸನ್ನು ಮಾಡಿದ್ದಳು! ॥46॥

(ಶ್ಲೋಕ-47)

ಮೂಲಮ್

ಪಿತರೌ ನಾನ್ವವಿಂದೇತಾಂ ಕೃಷ್ಣೋದಾರಾರ್ಭಕೇಹಿತಮ್ ।
ಗಾಯಂತ್ಯದ್ಯಾಪಿ ಕವಯೋ ಯಲ್ಲೋಕಶಮಲಾಪಹಮ್ ॥

ಅನುವಾದ

ಸಕಲ ಪಾಪಗಳನ್ನು ಹೋಗಲಾಡಿಸುವ ಭಗವಂತನ ಪರಮಾದ್ಭುತವಾದ ಬಾಲಲೀಲೆಗಳನ್ನು ಈಗಲೂ ಜ್ಞಾನೀ ಪುರುಷರು ವರ್ಣಿಸುತ್ತಿರುತ್ತಾರೆ ಅಂತಹ ಲೀಲೆಗಳನ್ನು ನೋಡಿ ಆನಂದಿಸಲು ಹೆತ್ತ ತಂದೆ-ತಾಯಿಗಳಾದ ವಸುದೇವ-ದೇವಕಿಯರಿಗೂ ಲಭ್ಯವಾಗಲಿಲ್ಲವೋ, ಅವುಗಳನ್ನು ನೋಡಿ ಆನಂದಿಸಲು ನಂದ-ಯಶೋದೆಯರಿಗೆ ಹೇಗೆ ಸಾಧ್ಯವಾಯಿತು? ಇದನ್ನು ದಯಮಾಡಿ ತಿಳಿಸಿರಿ. ॥47॥

(ಶ್ಲೋಕ-48)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ದ್ರೋಣೋ ವಸೂನಾಂ ಪ್ರವರೋ ಧರಯಾ ಸಹ ಭಾರ್ಯಯಾ ।
ಕರಿಷ್ಯಮಾಣ ಆದೇಶಾನ್ಬ್ರಹ್ಮಣಸ್ತಮುವಾಚ ಹ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ನಂದಗೋಪನು ಹಿಂದಿನ ಜನ್ಮದಲ್ಲಿ ಒಬ್ಬ ಶ್ರೇಷ್ಠನಾದ ವಸುವಾಗಿದ್ದನು. ‘ದ್ರೋಣ’ ಎಂದು ಅವನಿಗೆ ಹೆಸರಿತ್ತು. ಅವನ ಪತ್ನಿಯ ಹೆಸರು ‘ಧರಾದೇವಿ’ ಎಂದಿತ್ತು. ಅವರು ಬ್ರಹ್ಮದೇವರ ಆದೇಶವನ್ನು ಪಾಲಿಸುವುದಕ್ಕಾಗಿ ಅವರಲ್ಲಿ ವಿಜ್ಞಾಪಿಸಿಕೊಂಡರು. ॥48॥

(ಶ್ಲೋಕ-49)

ಮೂಲಮ್

ಜಾತಯೋರ್ನೌ ಮಹಾದೇವೇ ಭುವಿ ವಿಶ್ವೇಶ್ವರೇ ಹರೌ ।
ಭಕ್ತಿಃ ಸ್ಯಾತ್ಪರಮಾ ಲೋಕೇ ಯಯಾಂಜೋ ದುರ್ಗತಿಂ ತರೇತ್ ॥

ಅನುವಾದ

ಚತುರ್ಮುಖನೇ! ನಿನ್ನ ಆಜ್ಞೆಯಂತೆ ನಾವು ಭೂಮಿಯಲ್ಲಿ ಹುಟ್ಟಿದಾಗ ಯಾವ ಅನನ್ಯ ಭಕ್ತಿಯ ಮೂಲಕ ಜಗತ್ತಿನ ಜನರು ಅನಾಯಾಸವಾಗಿಯೇ ದುರ್ಗತಿಗಳನ್ನು ದಾಟಿಹೋಗುವರೋ ಅಂತಹ ಅನನ್ಯವಾದ ಪ್ರೇಮಮಯವಾದ ಭಕ್ತಿಯು ಜಗದೀಶ್ವರನಾದ ಭಗವಾನ್ ಶ್ರೀಕೃಷ್ಣನಲ್ಲಿ ಉಂಟಾಗುವಂತೆ ಅನುಗ್ರಹಿಸು. ॥49॥

(ಶ್ಲೋಕ-50)

ಮೂಲಮ್

ಅಸ್ತ್ವಿತ್ಯುಕ್ತಃ ಸ ಭಗವಾನ್ವ್ರಜೇ ದ್ರೋಣೋ ಮಹಾಯಶಾಃ ।
ಜಜ್ಞೇ ನಂದ ಇತಿ ಖ್ಯಾತೋ ಯಶೋದಾ ಸಾ ಧರಾಭವತ್ ॥

ಅನುವಾದ

ಬ್ರಹ್ಮದೇವರು-‘ಹಾಗೆಯೇ ಆಗಲಿ’ ಎಂದು ಅವರನ್ನು ಹರಸಿದರು. ಆ ಪರಮಯಶಸ್ವಿ ಭಗವನ್ಮಯ ದ್ರೋಣನೇ ವ್ರಜದಲ್ಲಿ ಹುಟ್ಟಿ ಅವರ ಹೆಸರು ನಂದಗೋಪನೆಂದಾಯಿತು ಮತ್ತು ಆ ಧರಾದೇವಿಯೇ ಈ ಜನ್ಮದಲ್ಲಿ ಯಶೋದಾ ಎಂಬ ಹೆಸರಿನಿಂದ ಅವನ ಪತ್ನಿಯಾದಳು. ॥50॥

(ಶ್ಲೋಕ-51)

ಮೂಲಮ್

ತತೋ ಭಕ್ತಿರ್ಭಗವತಿ ಪುತ್ರೀಭೂತೇ ಜನಾರ್ದನೇ ।
ದಂಪತ್ಯೋರ್ನಿತರಾಮಾಸೀದ್ಗೋಪಗೋಪೀಷು ಭಾರತ ॥

ಅನುವಾದ

ಪರೀಕ್ಷಿತನೇ! ಈ ಜನ್ಮದಲ್ಲಿ ಜನ್ಮ-ಮೃತ್ಯುರೂಪವಾದ ಚಕ್ರದಿಂದ ಬಿಡುಗಡೆಗೊಳಿಸುವಂತಹ ಭಗವಂತನು ಇವರಿಗೆ ಪುತ್ರನಾದಾಗ ಸಮಸ್ತ ಗೋಪ-ಗೋಪಿಕೆಯರಿಗಿಂತ ಮಿಗಿಲಾಗಿ ಈ ದಂಪತಿಗಳಾದ ನಂದ-ಯಶೋದೆಯರಿಗೆ ಶ್ರೀಕೃಷ್ಣನ ಕುರಿತು ಅತ್ಯಂತ ಪ್ರೇಮಉಂಟಾಯಿತು. ॥51॥

(ಶ್ಲೋಕ-52)

ಮೂಲಮ್

ಕೃಷ್ಣೋ ಬ್ರಹ್ಮಣ ಆದೇಶಂ ಸತ್ಯಂ ಕರ್ತುಂ ವ್ರಜೇ ವಿಭುಃ ।
ಸಹರಾಮೋ ವಸಂಶ್ಚಕ್ರೇ ತೇಷಾಂ ಪ್ರೀತಿಂ ಸ್ವಲೀಲಯಾ ॥

ಅನುವಾದ

ಬ್ರಹ್ಮದೇವರ ಮಾತನ್ನು ಸತ್ಯವಾಗಿಸಲೆಂದೇ ಭಗವಾನ್ ಶ್ರೀಕೃಷ್ಣನು ಬಲರಾಮನೊಂದಿಗೆ ವ್ರಜದಲ್ಲಿದ್ದು ಸಮಸ್ತ ವ್ರಜವಾಸಿಗಳನ್ನೂ ತನ್ನ ಬಾಲಲೀಲೆಗಳಿಂದ ಆನಂದಗೊಳಿಸುತ್ತಿದ್ದನು. ॥52॥

ಅನುವಾದ (ಸಮಾಪ್ತಿಃ)

ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ವಿಶ್ವರೂಪದರ್ಶನೇಷ್ಟಮೋಽಧ್ಯಾಯಃ ॥8॥