[ಐದನೆಯ ಅಧ್ಯಾಯ]
ಭಾಗಸೂಚನಾ
ಗೋಕುಲದಲ್ಲಿ ಭಗವಂತನ ಜನ್ಮೋತ್ಸವ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಂದಸ್ವಾತ್ಮಜ ಉತ್ಪನ್ನೇ ಜಾತಾಹ್ಲಾದೋ ಮಹಾಮನಾಃ ।
ಆಹೂಯ ವಿಪ್ರಾನ್ವೇದಜ್ಞಾನ್ ಸ್ನಾತಃ ಶುಚಿರಲಂಕೃತಃ ॥
(ಶ್ಲೋಕ-2)
ಮೂಲಮ್
ವಾಚಯಿತ್ವಾ ಸ್ವಸ್ತ್ಯಯನಂ ಜಾತಕರ್ಮಾತ್ಮಜಸ್ಯ ವೈ ।
ಕಾರಯಾಮಾಸ ವಿಧಿವತ್ಪಿತೃದೇವಾರ್ಚನಂ ತಥಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಮಹಾನುಭಾವನಾದ ನಂದರಾಜನು ಬಹಳ ಉದಾರನಾಗಿದ್ದನು. ಪುತ್ರನ ಜನ್ಮವಾದಾಗ ಅವನ ಹೃದಯ ವಿಲಕ್ಷಣ ಆನಂದದಿಂದ ತುಂಬಿಹೋಯಿತು. ಅವನು ಸ್ನಾನಮಾಡಿ ಸುಂದರ ವಸ್ತ್ರಾಭೂಷಣಗಳನ್ನು ಧರಿಸಿದನು. ಮತ್ತೆ ವೇದಜ್ಞರಾದ ಬ್ರಾಹ್ಮಣರನ್ನು ಕರೆಸಿ ಸ್ವಸ್ತಿವಾಚನ ಮತ್ತು ಪುತ್ರನ ಜಾತಕರ್ಮ ಸಂಸ್ಕಾರವನ್ನು ನಡೆಸಿದನು. ಜೊತೆಗೆ ದೇವತೆಗಳನ್ನು ಮತ್ತು ಪಿತೃಗಳನ್ನು ವಿಧಿವತ್ತಾಗಿ ಪೂಜಿಸಿದನು. ॥1-2॥
(ಶ್ಲೋಕ-3)
ಮೂಲಮ್
ಧೇನೂನಾಂ ನಿಯುತೇ ಪ್ರಾದಾದ್ವಿಪ್ರೇಭ್ಯಃ ಸಮಲಂಕೃತೇ ।
ತಿಲಾದ್ರೀನ್ಸಪ್ತ ರತ್ನೌಘಶಾತಕೌಂಭಾಂಬರಾವೃತಾನ್ ॥
ಅನುವಾದ
ಅವನು ಬ್ರಾಹ್ಮಣರಿಗೆ ವಸ್ತ್ರಾಭೂಷಣಗಳಿಂದ ಸುಸಜ್ಜಿತವಾದ ಎರಡು ಲಕ್ಷ ಗೋವುಗಳನ್ನು ದಾನಮಾಡಿದನು. ರತ್ನಗಳಿಂದಲೂ, ಸುವರ್ಣನಾಣ್ಯಗಳಿಂದಲೂ, ವಸ್ತ್ರಗಳಿಂದಲೂ ಸಮಲಂಕೃತವಾದ ಏಳು ಎಳ್ಳಿನ ಪರ್ವತಗಳನ್ನು ದಾನಮಾಡಿದನು.॥3॥
(ಶ್ಲೋಕ-4)
ಮೂಲಮ್
ಕಾಲೇನ ಸ್ನಾನಶೌಚಾಭ್ಯಾಂ ಸಂಸ್ಕಾರೈಸ್ತಪಸೇಜ್ಯಯಾ ।
ಶುದ್ಧ್ಯಂತಿ ದಾನೈಃ ಸಂತುಷ್ಟ್ಯಾ ದ್ರವ್ಯಾಣ್ಯಾತ್ಮಾತ್ಮವಿದ್ಯಯಾ ॥
ಅನುವಾದ
ಹೊಸನೀರು, ನೆಲ ಮುಂತಾದ ದ್ರವ್ಯಗಳು ಸಮಯ ಕಳೆದಾಗ ಶುದ್ಧವಾಗುತ್ತವೆ. ಶರೀರಾದಿಗಳು ಸ್ನಾನದಿಂದಲೂ, ವಸ್ತ್ರಾದಿಗಳು ತೊಳೆಯುವಿಕೆಯಿಂದಲೂ, ಸಂಸ್ಕಾರಗಳಿಂದ ಗರ್ಭವೂ, ಇಂದ್ರಿಯಾದಿಗಳು ತಪಸ್ಸಿನಿಂದಲೂ, ಬ್ರಾಹ್ಮಣರು ಯಜ್ಞಾದಿಗಳಿಂದಲೂ, ಧನ ಧಾನ್ಯಗಳು ದಾನದಿಂದಲೂ, ಮನಸ್ಸು ಸಂತೋಷದಿಂದಲೂ ಶುದ್ಧವಾಗುತ್ತವೆ. ಆದರೆ ಆತ್ಮಜ್ಞಾನದಿಂದಲೇ ಆತ್ಮನ ಶುದ್ಧಿಯಾಗುತ್ತದೆ. ॥4॥
(ಶ್ಲೋಕ-5)
ಮೂಲಮ್
ಸೌಮಂಗಲ್ಯಗಿರೋ ವಿಪ್ರಾಃ ಸೂತಮಾಗಧವಂದಿನಃ ।
ಗಾಯಕಾಶ್ಚ ಜಗುರ್ನೇದುರ್ಭೇರ್ಯೋ ದುಂದುಭಯೋ ಮುಹುಃ ॥
ಅನುವಾದ
ಆ ಸಮಯದಲ್ಲಿ ಬ್ರಾಹ್ಮಣರು, ಸೂತರು, ಮಾಗಧರು, ವಂದಿಜನರು ಮಂಗಲಾಶೀರ್ವಾದ ಕೊಡುತ್ತಾ ಸ್ತುತಿಸತೊಡಗಿದರು. ಗಾಯಕರು ಹಾಡ ತೊಡಗಿದರು. ಭೇರಿ, ದುಂದುಭಿಗಳು ಮೊಳಗಿದವು. ॥5॥
(ಶ್ಲೋಕ-6)
ಮೂಲಮ್
ವ್ರಜಃ ಸಮ್ಮೃಷ್ಟಸಂಸಿಕ್ತದ್ವಾರಾಜಿರಗೃಹಾಂತರಃ ।
ಚಿತ್ರಧ್ವಜಪತಾಕಾಸ್ರಕ್ಚೈಲಪಲ್ಲವತೋರಣೈಃ ॥
ಅನುವಾದ
ವ್ರಜಮಂಡಲ ವಾಸಿಗಳೆಲ್ಲರೂ ತಮ್ಮ-ತಮ್ಮ ಮನೆಗಳ ಬಾಗಿಲುಗಳನ್ನೂ, ಅಂಗಳಗಳನ್ನೂ, ಜಗುಲಿಗಳನ್ನೂ ಗುಡಿಸಿ-ಸಾರಿಸಿ ಸುಗಂಧಮಯವಾದ ನೀರನ್ನು ಸಿಂಪಡಿಸಿ, ರಂಗವಲ್ಲಿಯನ್ನಿಟ್ಟು, ಚಿತ್ರ-ವಿಚಿತ್ರವಾದ ಧ್ವಜಪತಾಕೆಗಳಿಂದಲೂ, ಹೂವಿನ ಹಾರಗಳಿಂದಲೂ, ವಸಗಳಿಂದ ಕೂಡಿದ ತೋರಣಗಳಿಂದಲೂ, ತಳಿರುತೋರಣಗಳಿಂದಲೂ, ನಯನಾ ನಂದಕರವಾಗಿ ಸಿಂಗರಿಸಿದರು. ॥6॥
(ಶ್ಲೋಕ-7)
ಮೂಲಮ್
ಗಾವೋ ವೃಷಾ ವತ್ಸತರಾ ಹರಿದ್ರಾತೈಲರೂಷಿತಾಃ ।
ವಿಚಿತ್ರಧಾತುಬರ್ಹಸ್ರಗ್ವಸಕಾಂಚನಮಾಲಿನಃ ॥
ಅನುವಾದ
ತಮ್ಮ ಮನೆಗಳನ್ನು ಸಿಂಗರಿಸಿದಂತೆ ಗೋಪರು ಗೋವುಗಳಿಗೂ, ಎತ್ತುಗಳಿಗೂ, ಕರುಗಳಿಗೂ ಅರಸಿನ ಎಣ್ಣೆಗಳನ್ನು ಮೈಗೆ ಹಚ್ಚಿದರು. ಮಣಿ, ಶಿಲೆ, ಸಿಂಧೂರ, ಬಣ್ಣ-ಬಣ್ಣದ ಧಾತುಗಳಿಂದ, ನವಿಲು ಗರಿಗಳಿಂದ, ಹೂವಿನ ಹಾರಗಳಿಂದ, ನಾನಾರೀತಿಯ ಸುಂದರ ವಸ್ತ್ರಗಳಿಂದ, ಚಿನ್ನದ ಸರಪಳಿಗಳಿಂದ ಅಲಂಕರಿಸಿದರು.॥7॥
(ಶ್ಲೋಕ-8)
ಮೂಲಮ್
ಮಹಾರ್ಹವಸಾಭರಣಕಂಚುಕೋಷ್ಣೀಷಭೂಷಿತಾಃ ।
ಗೋಪಾಃ ಸಮಾಯಯೂ ರಾಜನ್ನಾನೋಪಾಯನಪಾಣಯಃ ॥
ಅನುವಾದ
ಪರೀಕ್ಷಿತನೇ! ಬಳಿಕ ಸಮಸ್ತಗೋಪರು ಬಹುಮೂಲ್ಯ ವಸ್ತ್ರಗಳಿಂದ, ಒಡವೆಗಳಿಂದ, ವಲ್ಲಿಗಳಿಂದ ಸುಸಜ್ಜಿತರಾಗಿ ತಲೆಗೆ ಮುಂಡಾಸನ್ನು ಸುತ್ತಿಕೊಂಡು ನಾನಾವಿಧವಾದ ಪಾರಿತೋಷಕಗಳೊಡನೆ ನಂದಗೋಪನ ಮನೆಗೆ ಬಂದರು. ॥8॥
(ಶ್ಲೋಕ-9)
ಮೂಲಮ್
ಗೋಪ್ಯಶ್ಚಾಕರ್ಣ್ಯ ಮುದಿತಾ ಯಶೋದಾಯಾಃ ಸುತೋದ್ಭವಮ್ ।
ಆತ್ಮಾನಂ ಭೂಷಯಾಂಚಕ್ರುರ್ವಸಾಕಲ್ಪಾಂಜನಾದಿಭಿಃ ॥
ಅನುವಾದ
ಯಶೋದಾದೇವಿಗೆ ಗಂಡುಮಗು ಹುಟ್ಟಿದೆ ಎಂದು ಕೇಳಿದ ಗೋಪಿಯರಿಗೆ ಮಹದಾನಂದವಾಯಿತು. ಅವರೂ ಸುಂದರವಾದ ವಸ್ತ್ರಾಭೂಷಣಗಳಿಂದಲೂ, ಅಂಜನ-ಅಂಗ ರಾಗಗಳಿಂದಲೂ ಶೃಂಗರಿಸಿಕೊಂಡರು. ॥9॥
(ಶ್ಲೋಕ-10)
ಮೂಲಮ್
ನವಕುಂಕುಮಕಿಂಜಲ್ಕಮುಖಪಂಕಜಭೂತಯಃ ।
ಬಲಿಭಿಸ್ತ್ವರಿತಂ ಜಗ್ಮುಃ ಪೃಥುಶ್ರೋಣ್ಯಶ್ಚಲತ್ಕುಚಾಃ ॥
ಅನುವಾದ
ಗೋಪಿಯರ ಮುಖಕಮಲಗಳು ಬಹಳ ಸುಂದರವಾಗಿ ಕಾಣುತ್ತಿದ್ದವು. ಹಣೆಯಲ್ಲಿದ್ದ ಕುಂಕುಮವು ಕಮಲದ ಎಸಳಿನಂತೆ ಕಾಣುತ್ತಿತ್ತು. ಪುಷ್ಟವಾದ ನಿತಂಬಗಳನ್ನು ಹೊಂದಿದ್ದ ಅವರು ಉಪಹಾರ ಸಾಮಗ್ರಿಗಳನ್ನು ಎತ್ತಿಕೊಂಡು ಸಂಭ್ರಮದಿಂದ ಯಶೋದೆಯ ಬಳಿಗೆ ಹೋಗುತ್ತಿದ್ದಾಗ ಅವರ ಕುಚಗಳು ನಲಿದಾಡುತ್ತಿದ್ದವು. ॥10॥
(ಶ್ಲೋಕ-11)
ಮೂಲಮ್
ಗೋಪ್ಯಃ ಸುಮೃಷ್ಟಮಣಿಕುಂಡಲನಿಷ್ಕಕಂಠ್ಯ-
ಶ್ಚಿತ್ರಾಂಬರಾಃ ಪಥಿ ಶಿಖಾಚ್ಯುತಮಾಲ್ಯವರ್ಷಾಃ ।
ನಂದಾಲಯಂ ಸವಲಯಾ ವ್ರಜತೀರ್ವಿರೇಜು-
ರ್ವ್ಯಾಲೋಲಕುಂಡಲಪಯೋಧರಹಾರಶೋಭಾಃ ॥
ಅನುವಾದ
ಗೋಪಿಯರ ಕಿವಿಗಳಲ್ಲಿ ಹೊಳೆಯುತ್ತಿದ್ದ ಮಣಿಕುಂಡಲಗಳಿದ್ದುವು. ಕೊರಳಲ್ಲಿ ಸುವರ್ಣಮಯವಾದ ಸರಗಳನ್ನು ತೊಟ್ಟಿದ್ದರು. ಅವರು ಅತ್ಯಂತ ಸುಂದರವಾದ ಬಣ್ಣ-ಬಣ್ಣದ ಸೀರೆಗಳನ್ನು ಉಟ್ಟಿದ್ದರು. ದಾರಿಯಲ್ಲಿ ಅವರು ಮುಡಿದುಕೊಂಡಿದ್ದ ಹೂವುಗಳು ಉದುರುತ್ತಿದ್ದವು. ಕೈ ಕಡಗಗಳನ್ನು ಧರಿಸಿದ್ದ ಅವರು ನಂದಗೋಪನ ಮನೆಗೆ ಅವಸರ-ಅವಸರವಾಗಿ ಹೋಗುತ್ತಿದ್ದಾಗ ಅವರ ಕಿವಿಯಲ್ಲಿದ್ದ ಕುಂಡಲಗಳೂ, ಪಯೋಧರಗಳೂ, ಹಾರಗಳೂ ಕುಣಿದಾಡುತ್ತಿದ್ದು ಆ ಗೋಪಿಯರು ಬಹಳವಾಗಿ ಪ್ರಕಾಶಿಸಿದರು. ॥11॥
(ಶ್ಲೋಕ-12)
ಮೂಲಮ್
ತಾ ಆಶಿಷಃ ಪ್ರಯುಂಜಾನಾಶ್ಚಿರಂ ಪಾಹೀತಿ ಬಾಲಕೇ ।
ಹರಿದ್ರಾಚೂರ್ಣತೈಲಾದ್ಭಿಃ ಸಿಂಚಂತ್ಯೋಜನಮುಜ್ಜಗುಃ ॥
ಅನುವಾದ
ನಂದರಾಜನ ಮನೆಗೆ ಹೋಗಿ ಅವರು ನವಜಾತ ಶಿಶುವಿಗೆ ‘ಇವನು ಚಿರಂಜೀವಿಯಾಗಲೀ, ಭಗವಂತನು ಇವನನ್ನು ರಕ್ಷಿಸಲಿ’ ಎಂದು ಆಶೀರ್ವಾದಗಳನ್ನು ಕೊಡುತ್ತಿದ್ದರು. ಕುಲಾಚಾರದಂತೆ ಅರಶಿನ-ಎಣ್ಣೆಮಿಶ್ರಿತವಾದ ನೀರನ್ನು (ಓಕುಳಿ) ಜನರಮೇಲೆ ಚಿಮುಕಿಸುತ್ತಾ, ಲಾಲಿ-ಶೋಭಾನೆ ಮುಂತಾದ ಮಂಗಳಗೀತೆಗಳನ್ನು ಗಟ್ಟಿಯಾಗಿ ಹಾಡುತ್ತಿದ್ದರು.॥12॥
(ಶ್ಲೋಕ-13)
ಮೂಲಮ್
ಅವಾದ್ಯಂತ ವಿಚಿತ್ರಾಣಿ ವಾದಿತ್ರಾಣಿ ಮಹೋತ್ಸವೇ ।
ಕೃಷ್ಣೇ ವಿಶ್ವೇಶ್ವರೇನಂತೇ ನಂದಸ್ಯ ವ್ರಜಮಾಗತೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸಮಸ್ತ ಜಗತ್ತಿಗೆ ಏಕಮಾತ್ರ ಸ್ವಾಮಿಯಾಗಿರುವನು. ಅವನ ಐಶ್ವರ್ಯ, ಮಾಧುರ್ಯ, ವಾತ್ಸಲ್ಯ ಎಲ್ಲವೂ ಅನಂತವೇ. ಅವನು ನಂದನ ವ್ರಜದಲ್ಲಿ ಪ್ರಕಟನಾದಾಗ ಅವನ ಜನ್ಮಮಹೋತ್ಸವವನ್ನು ಆಚರಿಸಲಾಯಿತು. ಆಗ ವಿಚಿತ್ರವಾದ ಮಂಗಳವಾದ್ಯಗಳು ಮೊಳಗಿದವು. ॥13॥
ಮೂಲಮ್
(ಶ್ಲೋಕ-14)
ಗೋಪಾಃ ಪರಸ್ಪರಂ ಹೃಷ್ಟಾ ದಧಿಕ್ಷೀರಘೃತಾಂಬುಭಿಃ ।
ಆಸಿಂಚಂತೋ ವಿಲಿಂಪಂತೋ ನವನೀತೈಶ್ಚ ಚಿಕ್ಷಿಪುಃ ॥
ಅನುವಾದ
ಆನಂದಭರಿತರಾದ ಗೋಪಾಲಕರು ಒಬ್ಬರು ಮತ್ತೊಬ್ಬರ ಮೇಲೆ ಹಾಲು, ಮೊಸರು, ತುಪ್ಪ, ನೀರು ಇವುಗಳನ್ನು ಎರಚಾಡಿದರು. ಒಬ್ಬರು ಮತ್ತೊಬ್ಬರ ಮುಖಕ್ಕೆ ಬೆಣ್ಣೆಯನ್ನು ಸವರುತ್ತಾ-ಎಸೆಯುತ್ತಾ ಕುಣಿ-ಕುಣಿದು ಹಾಡುತ್ತಾ ಆನಂದೋತ್ಸವವನ್ನು ಆಚರಿಸಿದರು. ॥14॥
(ಶ್ಲೋಕ-15)
ಮೂಲಮ್
ನಂದೋ ಮಹಾಮನಾಸ್ತೇಭ್ಯೋ ವಾಸೋಲಂಕಾರಗೋಧನಮ್ ।
ಸೂತಮಾಗಧವಂದಿಭ್ಯೋ ಯೇನ್ಯೇ ವಿದ್ಯೋಪಜೀವಿನಃ ॥
(ಶ್ಲೋಕ-16)
ಮೂಲಮ್
ತೈಸ್ತೈಃ ಕಾಮೈರದೀನಾತ್ಮಾ ಯಥೋಚಿತಮಪೂಜಯತ್ ।
ವಿಷ್ಣೋರಾರಾಧನಾರ್ಥಾಯ ಸ್ವಪುತ್ರಸ್ಯೋದಯಾಯ ಚ ॥
ಅನುವಾದ
ಮಹಾನುಭಾವನಾದ ನಂದಗೋಪನು ಪರಮ ಉದಾರಿಯಾಗಿದ್ದನು. ಅವನು ಗೋಪಾಲಕರೆಲ್ಲರಿಗೂ ವಸ್ತ್ರಾಭರಣಗಳನ್ನೂ, ಹಸುಗಳನ್ನೂ, ನೆನಪಿನ ಕಾಣಿಕೆಗಳನ್ನು ಕೊಟ್ಟನು. ಸೂತ, ಮಾಗಧ, ವಂದಿಗಳಿಗೂ,* ನೃತ್ಯ-ವಾದ್ಯ ಮುಂತಾದ ಲಲಿತಕಲೆಗಳಿಂದ ಜೀವನ ನಿರ್ವಹಿಸುವ ಕಲಾವಿದರಿಗೂ, ವಿದ್ವಾಂಸರಿಗೂ ಅವರವರ ಅಪೇಕ್ಷೆಯಂತೆ ಬಹುಮಾನಗಳನ್ನು ಕೊಟ್ಟು ಅವರೆಲ್ಲರನ್ನೂ ಯಥೋಚಿತವಾಗಿ ಸತ್ಕರಿಸಿದನು. ‘ತನ್ನ ಸತ್ಕಾರದಿಂದ ಮಹಾವಿಷ್ಣುವು ಪ್ರಸನ್ನನಾಗಬೇಕು. ನವಜಾತ ಶಿಶುವಿನ ಅಭ್ಯುದಯವಾಗಬೇಕು’ ಎಂಬುದೇ ನಂದಗೋಪನ ಮುಖ್ಯ ಉದ್ದೇಶವಾಗಿತ್ತು. ॥15-16॥
ಟಿಪ್ಪನೀ
- ಸೂತಾಃ ಪೌರಾಣಿಕಾಃ ಪ್ರೋಕ್ತಾ ಮಾಗಧಾ ವಂಶಶಂಸಕಾಃ । ವಂದಿನಸ್ತ್ವಮಲಪ್ರಜ್ಞಾಃ ಪ್ರಸ್ತಾವಸದೃಶೋಕ್ತಯಃ ॥
ಪುರಾಣಗಳನ್ನು ಹೇಳುವವರಿಗೆ ಸೂತರೆಂದೂ, ವಂಶಾವಳಿಗಳನ್ನು ಹೊಗಳುವವರಿಗೆ ಮಾಗಧರೆಂದೂ, ತತ್ಕಾಲೋಚಿತವಾಗಿ ಮಾತಾಡುವವರಿಗೆ ವಂದಿಗಳೆಂದೂ ಹೆಸರು.
(ಶ್ಲೋಕ-17)
ಮೂಲಮ್
ರೋಹಿಣೀ ಚ ಮಹಾಭಾಗಾ ನಂದಗೋಪಾಭಿನಂದಿತಾ ।
ವ್ಯಚರದ್ದಿವ್ಯವಾಸಃಸ್ರಕ್ಕಂಠಾಭರಣಭೂಷಿತಾ ॥
ಅನುವಾದ
ನಂದಗೋಪನಿಂದ ಅಭಿನಂದಿಸಲ್ಪಟ್ಟ ಪರಮ ಸೌಭಾಗ್ಯವತಿಯಾದ ರೋಹಿಣೀದೇವಿಯೂ ದಿವ್ಯವಾದ ವಸ್ತ್ರಗಳಿಂದಲೂ, ಮಾಲೆಗಳಿಂದಲೂ, ಕಂಠಾಭರಣಗಳಿಂದಲೂ ಸಮಲಂಕೃತಳಾಗಿ ಮನೆಯೊಡತಿಯಂತೆ ಬಂದು-ಹೋಗುವ ಗೋಪಿಕಾ ಸ್ತ್ರೀಯರನ್ನು ಆದರದಿಂದ ಸತ್ಕರಿಸುತ್ತಾ ಓಡಾಡುತ್ತಿದ್ದಳು.॥17॥
(ಶ್ಲೋಕ-18)
ಮೂಲಮ್
ತತ ಆರಭ್ಯ ನಂದಸ್ಯ ವ್ರಜಃ ಸರ್ವಸಮೃದ್ಧಿಮಾನ್ ।
ಹರೇರ್ನಿವಾಸಾತ್ಮಗುಣೈ ರಮಾಕ್ರೀಡಮಭೂನ್ನೃಪ ॥
ಅನುವಾದ
ಪರೀಕ್ಷಿತನೇ! ಶ್ರೀಕೃಷ್ಣನ ಜನ್ಮೋತ್ಸವದಿಂದಲೇ ನಂದನ ವ್ರಜಭೂಮಿಯು ಸಮಸ್ತ ಸಂಪತ್ತುಗಳಿಂದ ಸಮೃದ್ಧವಾಯಿತು. ಭಗವಾನ್ ಶ್ರೀಕೃಷ್ಣನ ನಿವಾಸಸ್ಥಾನದಿಂದಲೂ, ತನ್ನ ಸ್ವಾಭಾವಿಕ ಗುಣಗಳ ಕಾರಣದಿಂದ ಅಲ್ಲಿ ಮಹಾಲಕ್ಷ್ಮಿಯು ಆಟವಾಡುತ್ತಿದ್ದಳು.॥18॥
(ಶ್ಲೋಕ-19)
ಮೂಲಮ್
ಗೋಪಾನ್ಗೋಕುಲರಕ್ಷಾಯಾಂ ನಿರೂಪ್ಯ ಮಥುರಾಂ ಗತಃ ।
ನಂದಃ ಕಂಸಸ್ಯ ವಾರ್ಷಿಕ್ಯಂ ಕರಂ ದಾತುಂ ಕುರೂದ್ವಹ ॥
ಅನುವಾದ
ಪರೀಕ್ಷಿತನೇ! ಕೆಲವು ದಿವಸಗಳ ನಂತರ ನಂದಗೋಪನು ಗೋಕುಲದ ರಕ್ಷಣೆಯ ಭಾರವನ್ನು ಇತರ ಗೋಪಾಲಕರಿಗೆ ವಹಿಸಿಕೊಟ್ಟು, ಕಂಸನಿಗೆ ವಾರ್ಷಿಕ ಕಂದಾಯವನ್ನು ಒಪ್ಪಿಸುವ ಸಲುವಾಗಿ ಮಥುರೆಗೆ ಹೊರಟನು.॥19॥
(ಶ್ಲೋಕ-20)
ಮೂಲಮ್
ವಸುದೇವ ಉಪಶ್ರುತ್ಯ ಭ್ರಾತರಂ ನಂದಮಾಗತಮ್ ।
ಜ್ಞಾತ್ವಾ ದತ್ತಕರಂ ರಾಜ್ಞೇ ಯಯೌ ತದವಮೋಚನಮ್ ॥
ಅನುವಾದ
ಮಥುರಾ ಪಟ್ಟಣದಲ್ಲೇ ಇದ್ದ ವಸುದೇವನಿಗೆ ತನ್ನ ಸೋದರನಂತಿದ್ದ ನಂದಗೋಪನು ಕಂಸನಿಗೆ ಕಂದಾಯವನ್ನು ಕೊಡಲು ಮಥುರೆಗೆ ಬಂದಿರುವನೆಂದು ತಿಳಿದು, ಅವನು ನಂದನು ಉಳಿದುಕೊಂಡಿದ್ದ ಬಿಡಾರಕ್ಕೆ ಹೋದನು.॥20॥
(ಶ್ಲೋಕ-21)
ಮೂಲಮ್
ತಂ ದೃಷ್ಟ್ವಾ ಸಹಸೋತ್ಥಾಯ ದೇಹಃ ಪ್ರಾಣಮಿವಾಗತಮ್ ।
ಪ್ರೀತಃ ಪ್ರಿಯತಮಂ ದೋರ್ಭ್ಯಾಂ ಸಸ್ವಜೇ ಪ್ರೇಮವಿಹ್ವಲಃ ॥
ಅನುವಾದ
ವಸುದೇವನನ್ನು ನೋಡುತ್ತಲೇ ನಂದಗೋಪನು ಸತ್ತು ಹೋದವನು ಬದುಕಿ ಮೇಲೆದ್ದು ನಿಲ್ಲುವಂತೆ ಎದ್ದುನಿಂತನು. ಅವನು ಅತ್ಯಂತ ಪ್ರೀತಿಯಿಂದ ವಸುದೇವನನ್ನು ಬಾಚಿ ತಬ್ಬಿಕೊಂಡನು. ಆಗ ನಂದಗೋಪನು ಪ್ರೇಮವಿಹ್ವಲನಾಗಿದ್ದನು. ॥21॥
(ಶ್ಲೋಕ-22)
ಮೂಲಮ್
ಪೂಜಿತಃ ಸುಖಮಾಸೀನಃ ಪೃಷ್ಟ್ವಾನಾಮಯಮಾದೃತಃ ।
ಪ್ರಸಕ್ತಧೀಃ ಸ್ವಾತ್ಮಜಯೋರಿದಮಾಹ ವಿಶಾಂಪತೇ ॥
ಅನುವಾದ
ಪರೀಕ್ಷಿತನೇ! ನಂದಗೋಪನು ವಸುದೇವನನ್ನು ಬಹಳವಾಗಿ ಸ್ವಾಗತ-ಸತ್ಕಾರ ಮಾಡಿದನು. ಅವನು ಸುಖಾಸನದಲ್ಲಿ ಕುಳಿತು ಕುಶಲ ಪ್ರಶ್ನೆಗಳನ್ನು ಕೇಳತೊಡಗಿದನು. ॥22॥
(ಶ್ಲೋಕ-23)
ಮೂಲಮ್
ದಿಷ್ಟ್ಯಾ ಭ್ರಾತಃ ಪ್ರವಯಸ ಇದಾನೀಮಪ್ರಜಸ್ಯ ತೇ ।
ಪ್ರಜಾಶಾಯಾ ನಿವೃತ್ತಸ್ಯ ಪ್ರಜಾ ಯತ್ಸಮಪದ್ಯತ ॥
ಅನುವಾದ
ಆ ಸಮಯದಲ್ಲಿ ವಸುದೇವನ ಮನಸ್ಸು ತನ್ನ ಇಬ್ಬರು ಮಕ್ಕಳ ವಿಷಯದಲ್ಲಿ ಆಸಕ್ತವಾಗಿತ್ತು. ಅಂತೆಯೇ ನಂದ ಗೋಪನಲ್ಲಿ ಹೇಳಿದನು ಸಹೋದರಾ! ನಿನಗೆ ಇದುವರೆಗೆ ಯಾವುದೇ ಸಂತಾನವೂ ಇರಲಿಲ್ಲ. ವೃದ್ಧನಾದ ಕಾರಣ ಅದರ ಆಸೆಯೂ ಇರಲಿಲ್ಲ. ಸೌಭಾಗ್ಯವಶದಿಂದ ಈಗ ನಿನಗೆ ಸಂತಾನವಾಗಿದೆ. ॥23॥
(ಶ್ಲೋಕ-24)
ಮೂಲಮ್
ದಿಷ್ಟ್ಯಾ ಸಂಸಾರಚಕ್ರೇಸ್ಮಿನ್ವರ್ತಮಾನಃ ಪುನರ್ಭವಃ ।
ಉಪಲಬ್ಧೋ ಭವಾನದ್ಯ ದುರ್ಲಭಂ ಪ್ರಿಯದರ್ಶನಮ್ ॥
ಅನುವಾದ
ಇದು ಅತ್ಯಂತ ಆನಂದದ ಮಾತಾಗಿದೆ. ಇಂದು ನಮ್ಮಗಳ ಭೇಟಿಯಾದುದು ಸಂತೋಷವೇ. ಪ್ರಿಯರಾದವರನ್ನು ಸಂದರ್ಶಿಸುವುದೂ ಈಗಿನ ಕಾಲದಲ್ಲಿ ದುರ್ಲಭವೇ ಆಗಿದೆ. ಈ ಸಂಸಾರ ಚಕ್ರವೇ ಹೀಗಿದೆ. ಇಂದು ನಿನ್ನನ್ನು ಸಂದರ್ಶಿಸಿದ್ದು ಪುನರ್ಜನ್ಮವನ್ನು ಪಡೆದಂತೆಯೇ ಆಗಿದೆ. ॥24॥
(ಶ್ಲೋಕ-25)
ಮೂಲಮ್
ನೈಕತ್ರ ಪ್ರಿಯಸಂವಾಸಃ ಸುಹೃದಾಂ ಚಿತ್ರಕರ್ಮಣಾಮ್ ।
ಓಘೇನ ವ್ಯೆಹ್ಯಮಾನಾನಾಂ ಪ್ಲವಾನಾಂ ಸ್ರೋತಸೋ ಯಥಾ ॥
ಅನುವಾದ
ಪ್ರವಾಹಕ್ಕೆ ಸಿಕ್ಕಿದ ತೃಣ-ಕಾಷ್ಠಗಳು ಯಾವಾಗಲೂ ಒಂದೇ ಕಡೆ ಸೇರಿಕೊಂಡಿರುವುದಿಲ್ಲ. ಹಾಗೆಯೇ ನಿಜಬಂಧುಗಳೂ, ಸುಹೃದರೂ ಎಲ್ಲರಿಗೂ, ಪ್ರಿಯರಾಗಿದ್ದರೂ ಒಂದೆಡೆ ಇರುವುದು ಸಂಭವಿಸಲಾರದು. ಏಕೆಂದರೆ, ಎಲ್ಲರ ಪ್ರಾರಬ್ಧ ಕರ್ಮಗಳು ಬೇರೆ-ಬೇರೆಯಾಗಿರುತ್ತವೆ. ॥25॥
(ಶ್ಲೋಕ-26)
ಮೂಲಮ್
ಕಚ್ಚಿತ್ಪಶವ್ಯಂ ನಿರುಜಂ ಭೂರ್ಯಂಬುತೃಣವೀರುಧಮ್ ।
ಬೃಹದ್ವನಂ ತದಧುನಾ ಯತ್ರಾಸ್ಸೇ ತ್ವಂ ಸುಹೃದ್ವ ತಃ ॥
ಅನುವಾದ
ಈಗ ನೀನು ನಿನ್ನ ಬಂಧುಗಳೊಡನೆಯೂ, ಸುಹೃದಯರೊಡನೆಯೂ ವಾಸಿಸುವ ಮಹಾವನದಲ್ಲಿ ಗಿಡ-ಮರ-ಬಳ್ಳಿ ನೀರು-ಹುಲ್ಲು ಇತ್ಯಾದಿಗಳು ಸಮೃದ್ಧವಾಗಿರುವೆಯೇ? ಹಸುಗಳನ್ನು ಸಾಕಲು ಅನುಕೂಲವಾಗಿದೆಯೇ? ಆ ಪ್ರದೇಶವು ರೋಗ-ರುಜಿನಗಳಿಂದ ರಹಿತವಾಗಿರುವುದೇ? ॥26॥
(ಶ್ಲೋಕ-27)
ಮೂಲಮ್
ಭ್ರಾತರ್ಮಮ ಸುತಃ ಕಚ್ಚಿನ್ಮಾತ್ರಾ ಸಹ ಭವದ್ವ್ರಜೇ ।
ತಾತಂ ಭವಂತಂ ಮನ್ವಾನೋ ಭವದ್ಭ್ಯಾಮುಪಲಾಲಿತಃ ॥
ಅನುವಾದ
ತಮ್ಮಾ! ನನ್ನ ಮಗನು ತನ್ನ ತಾಯಿ ರೋಹಿಣಿಯೊಡನೆ ನಿನ್ನ ವ್ರಜದಲ್ಲಿ ಇದ್ದಾನೆ. ಅವನ ಲಾಲನೆ-ಪಾಲನೆಗಳನ್ನು ನೀನು ಮತ್ತು ಯಶೋದೆ ಮಾಡುತ್ತಿರುವಿರಿ. ಅದರಿಂದ ಅವನು ನಿಮ್ಮನ್ನೇ ತಂದೆ-ತಾಯಿಯರೆಂದು ಭಾವಿಸಿಕೊಂಡಿರಬಹುದು? ಅವನು ಕ್ಷೇಮವೇ? ॥27॥
(ಶ್ಲೋಕ-28)
ಮೂಲಮ್
ಪುಂಸಸಿವರ್ಗೋ ವಿಹಿತಃ ಸುಹೃದೋ ಹ್ಯನುಭಾವಿತಃ ।
ನ ತೇಷು ಕ್ಲಿಶ್ಯಮಾನೇಷು ತ್ರಿವರ್ಗೋರ್ಥಾಯ ಕಲ್ಪತೇ ॥
ಅನುವಾದ
ಸ್ವಜನರಿಗೆ ಸುಖಸಿಗುವಂತಹ ಧರ್ಮ, ಅರ್ಥ, ಕಾಮಗಳೇ ಮನುಷ್ಯನಿಗೆ ಶಾಸ್ತ್ರವಿಹಿತವಾಗಿವೆ. ಈ ತ್ರಿವರ್ಗಗಗಳು ತನ್ನ ಸುಖಕ್ಕಾಗಿ ಮಾತ್ರವೇ ಆಗಿದ್ದು ಬಂಧುಗಳಿಗೆ ಕ್ಲೇಶದಾಯಕವಾಗಿದ್ದರೆ ಅವನ್ನು ಶಾಸ್ತ್ರವಿಹಿತವೆಂದು ಹೇಳಲಾಗುವುದಿಲ್ಲ. ॥28॥
(ಶ್ಲೋಕ-29)
ಮೂಲಮ್ (ವಾಚನಮ್)
ನಂದ ಉವಾಚ
ಮೂಲಮ್
ಅಹೋ ತೇ ದೇವಕೀಪುತ್ರಾಃ ಕಂಸೇನ ಬಹವೋ ಹತಾಃ ।
ಏಕಾವಶಿಷ್ಟಾವರಜಾ ಕನ್ಯಾ ಸಾಪಿ ದಿವಂ ಗತಾ ॥
ಅನುವಾದ
ನಂದಗೋಪನು ಹೇಳಿದನು — ಅಣ್ಣ! ವಸುದೇವನೇ! ನಿನ್ನ ಮನಸ್ಸಿನ ಸಂಕಟವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ದೇವಕಿಯ ಗರ್ಭದಲ್ಲಿ ಹುಟ್ಟಿದ ಆರು ಮಕ್ಕಳನ್ನೂ ಕಂಸನು ಕೊಂದುಹಾಕಿದನು. ಏಳನೆಯದಾದ ಕಡೆಯ ಹೆಣ್ಣುಶಿಶುವೂ ಸ್ವರ್ಗಕ್ಕೆ ಹೊರಟು ಹೋಯಿತು. ॥29॥
(ಶ್ಲೋಕ-30)
ಮೂಲಮ್
ನೂನಂ ಹ್ಯದೃಷ್ಟನಿಷ್ಠೋಯಮದೃಷ್ಟ ಪರಮೋ ಜನಃ ।
ಅದೃಷ್ಟಮಾತ್ಮನಸ್ತತ್ತ್ವಂ ಯೋ ವೇದ ನ ಸ ಮುಹ್ಯತಿ ॥
ಅನುವಾದ
ಪ್ರಾಣಿಗಳ ಸುಖ-ದುಃಖಗಳು ಅದೃಷ್ಟವನ್ನೇ ಅವಲಂಬಿಸಿವೆ. ಇದರಲ್ಲಿ ಸಂಶಯವೇ ಇಲ್ಲ. ಜೀವನದಲ್ಲಿನ ಸುಖ-ದುಃಖಗಳ ಕಾರಣವು ಅದೃಷ್ಟವೇ ಆಗಿದೆ ಎಂದು ತಿಳಿಯುವವನು ಅವು ಪ್ರಾಪ್ತವಾದಾಗಲೂ ಮೋಹಿತನಾಗುವುದಿಲ್ಲ. ॥30॥
(ಶ್ಲೋಕ-31)
ಮೂಲಮ್ (ವಾಚನಮ್)
ವಸುದೇವ ಉವಾಚ
ಮೂಲಮ್
ಕರೋ ವೈ ವಾರ್ಷಿಕೋ ದತ್ತೋ ರಾಜ್ಞೇ ದೃಷ್ಟಾ ವಯಂ ಚ ವಃ ।
ನೇಹ ಸ್ಥೇಯಂ ಬಹುತಿಥಂ ಸಂತ್ಯುತ್ಪಾತಾಶ್ಚ ಗೋಕುಲೇ ॥
ಅನುವಾದ
ವಸುದೇವನು ಹೇಳಿದನು — ತಮ್ಮಾ! ಕಂಸನಿಗೆ ಕೊಡ ಬೇಕಾಗಿದ್ದ ವಾರ್ಷಿಕ ಕಂದಾಯವನ್ನು ನೀನು ತೀರಿಸಿಯಾಯಿತು. ನಾವಿಬ್ಬರೂ ಕಲೆತು ಕುಶಲಪ್ರಶ್ನೆಗಳ ವಿನಿಮಯವಾದವು. ಇನ್ನು ನೀನು ಹೆಚ್ಚುದಿನ ಇಲ್ಲಿರುವುದು ಉಚಿತವಾಗಿ ಕಾಣುವುದಿಲ್ಲ. ಏಕೆಂದರೆ, ಗೋಕುಲದಲ್ಲಿ ದೊಡ್ಡ-ದೊಡ್ಡ ಉತ್ಪಾತಗಳು ಕಾಣಿಸಿಕೊಳ್ಳುತ್ತಿವೆ. ॥31॥
(ಶ್ಲೋಕ-32)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ನಂದಾದಯೋ ಗೋಪಾಃ ಪ್ರೋಕ್ತಾಸ್ತೇ ಶೌರಿಣಾ ಯಯುಃ ।
ಅನೋಭಿರನಡುದ್ಯುಕ್ತೈಸ್ತಮನುಜ್ಞಾಪ್ಯ ಗೋಕುಲಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಸುದೇವನು ಹೀಗೆ ಹೇಳಿದಾಗ ನಂದನೇ ಮೊದಲಾದ ಗೋಪರು ವಸುದೇವನ ಅನುಮತಿಯನ್ನು ಪಡೆದು ಎತ್ತುಗಳು ಹೂಡಿದ ಚಕ್ಕಡಿಯಲ್ಲಿ ಕುಳಿತು ಗೋಕುಲದತ್ತ ಪ್ರಯಾಣ ಬೆಳೆಸಿದರು.॥32॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ನಂದವಸುದೇವಸಂಗಮೋ ನಾಮ ಪಂಚಮೋಽಧ್ಯಾಯಃ ॥5॥