[ಎರಡನೆಯ ಅಧ್ಯಾಯ]
ಭಾಗಸೂಚನಾ
ಭಗವಂತನು ದೇವಕಿಯ ಗರ್ಭವನ್ನು ಪ್ರವೇಶಿಸಿದುದು, ದೇವತೆಗಳಿಂದ ಗರ್ಭಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಪ್ರಲಂಬಬಕಚಾಣೂರತೃಣಾವರ್ತಮಹಾಶನೈಃ ।
ಮುಷ್ಟಿಕಾರಿಷ್ಟದ್ವಿವಿದಪೂತನಾಕೇಶಿಧೇನುಕೈಃ ॥
(ಶ್ಲೋಕ-2)
ಮೂಲಮ್
ಅನ್ಯೈಶ್ಚಾಸುರಭೂಪಾಲೈರ್ಬಾಣಭೌಮಾದಿಭಿರ್ಯುತಃ ।
ಯದೂನಾಂ ಕದನಂ ಚಕ್ರೇ ಬಲೀ ಮಾಗಧಸಂಶ್ರಯಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮಗಧಾಧಿಪತಿಯಾದ ಜರಾಸಂಧನ ಆಶ್ರಯವನ್ನು ಪಡೆದುಕೊಂಡಿದ್ದ ಮಹಾಬಲಿಷ್ಠನಾಗಿದ್ದ ಕಂಸನಿಗೆ ಪ್ರಲಂಬಾಸುರ, ಬಕಾಸುರ, ಚಾಣೂರ, ತೃಣಾವರ್ತ, ಅಘಾಸುರ, ಮುಷ್ಟಿಕ, ಅರಿಷ್ಟಾಸುರ, ದ್ವಿವಿದ, ಪೂತನಾ, ಕೇಶೀ ಮತ್ತು ಧೇನುಕ, ಬಾಣಾಸುರ, ಭೌಮಾಸುರ ಮೊದಲಾದ ಮಹಾಸುರರು ಸಹಾಯಕರಾಗಿದ್ದರು. ಇವರನ್ನು ಜೊತೆ ಸೇರಿಸಿಕೊಂಡು ಯದುವಂಶೀಯರನ್ನು ನಾಶಗೊಳಿಸ ತೊಡಗಿದನು. ॥1-2॥
(ಶ್ಲೋಕ-3)
ಮೂಲಮ್
ತೇ ಪೀಡಿತಾ ನಿವಿವಿಶುಃ ಕುರುಪಂಚಾಲಕೇಕಯಾನ್ ।
ಶಾಲ್ವಾನ್ವಿದರ್ಭಾನ್ನಿಷಧಾನ್ವಿದೇಹಾನ್ಕೋಸಲಾನಪಿ ॥
ಅನುವಾದ
ಅವರೆಲ್ಲರೂ ಭಯಗೊಂಡು ಕುರು, ಪಾಂಚಾಲ, ಕೇಕಯ, ಶಾಲ್ವ, ವಿದರ್ಭ, ನಿಷಧ, ವಿದೇಹ, ಕೋಸಲ ಮುಂತಾದ ದೇಶಗಳಿಗೆ ವಲಸೆ ಹೋದರು. ॥3॥
(ಶ್ಲೋಕ-4)
ಮೂಲಮ್
ಏಕೇ ತಮನುರುಂಧಾನಾ ಜ್ಞಾತಯಃ ಪರ್ಯುಪಾಸತೇ ।
ಹತೇಷು ಷಟ್ಸು ಬಾಲೇಷು ದೇವಕ್ಯಾ ಔಗ್ರಸೇನಿನಾ ॥
(ಶ್ಲೋಕ-5)
ಮೂಲಮ್
ಸಪ್ತಮೋ ವೈಷ್ಣವಂ ಧಾಮ ಯಮನಂತಂ ಪ್ರಚಕ್ಷತೇ ।
ಗರ್ಭೋ ಬಭೂವ ದೇವಕ್ಯಾ ಹರ್ಷಶೋಕವಿವರ್ಧನಃ ॥
ಅನುವಾದ
ವಲಸೆ ಹೋಗಲಾಗದ ಕೆಲವರು ಬಹಿರಂಗದಲ್ಲಿ ಕಂಸನಿಗೆ ನಿಷ್ಠರಾಗಿ ಅವನ ಸೇವೆಯಲ್ಲಿ ನಿರತರಾಗಿದ್ದರು. ಕಂಸನು ಒಂದಾದ ಮೇಲೊಂದರಂತೆ ದೇವಕಿಯ ಆರು ಮಂದಿ ಮಕ್ಕಳನ್ನು ಕೊಂದುಹಾಕಿದಾಗ, ದೇವಕಿಯ ಏಳನೆಯ ಗರ್ಭದಲ್ಲಿ ಭಗವಂತನ ಅಂಶರೂಪನಾದ ಅನಂತನೆಂದು ಕರೆಸಿಕೊಳ್ಳುವ ಶ್ರೀಶೇಷದೇವನು* ನೆಲೆಸಿದನು. ಆನಂದಸ್ವರೂಪನಾದ ಮಹಾಶೇಷನು ಗರ್ಭದಲ್ಲಿ ನೆಲೆಸಿದಾಗ ದೇವಕಿಗೆ ಸ್ವಾಭಾವಿಕವಾಗಿಯೇ ಹರ್ಷವುಂಟಾಯಿತು. ಆದರೆ ಕಂಸನು ಇವನನ್ನೂ ಕೊಂದು ಬಿಡಬಹುದೆಂಬ ಭಯದಿಂದ ಶೋಕವು ಹೆಚ್ಚಿತು. ॥4-5॥
ಟಿಪ್ಪನೀ
- ರಾಮಾವತಾರದಲ್ಲಿ ಭಗವಂತನಿಗೆ ನಾನು ತಮ್ಮನಾಗಿದ್ದೆ. ಇದರಿಂದ ಅಣ್ಣನ ಆಜ್ಞೆಯನ್ನು ಪಾಲಿಸಬೇಕಾಯಿತು. ಅವನು ಕಾಡಿಗೆ ಹೋಗುವಾಗ ತಡೆಯಲಾಗಲಿಲ್ಲ. ಈಗ ಕೃಷ್ಣಾವತಾರದಲ್ಲಿ ಅಣ್ಣನಾಗಿ ಭಗವಂತನ ಸೇವೆಯನ್ನು ಚೆನ್ನಾಗಿ ಮಾಡುವೆನು ಎಂದು ವಿಚಾರಮಾಡಿದ ಶೇಷದೇವರು ಶ್ರೀಕೃಷ್ಣನಿಂದ ಮೊದಲೇ ಗರ್ಭವನ್ನು ಪ್ರವೇಶಿಸಿದರು.
(ಶ್ಲೋಕ-6)
ಮೂಲಮ್
ಭಗವಾನಪಿ ವಿಶ್ವಾತ್ಮಾ ವಿದಿತ್ವಾ ಕಂಸಜಂ ಭಯಮ್ ।
ಯದೂನಾಂ ನಿಜನಾಥಾನಾಂ ಯೋಗಮಾಯಾಂ ಸಮಾದಿಶತ್ ॥
ಅನುವಾದ
ತನ್ನನ್ನೇ ನಾಥನನ್ನಾಗಿ ಭಾವಿಸಿರುವ ಯದುವಂಶೀಯರಿಗೆ ಕಂಸನು ಉಪಟಳವನ್ನು ಕೊಡುತ್ತಿರುವನೆಂಬುದನ್ನೂ ತಿಳಿದ ವಿಶ್ವಾತ್ಮನಾದ ಭಗವಂತನು ತನ್ನ ಯೋಗಮಾಯೆಗೆ ಹೀಗೆ ಆದೇಶಿಸಿದನು. ॥6॥
(ಶ್ಲೋಕ-7)
ಮೂಲಮ್
ಗಚ್ಛ ದೇವಿ ವ್ರಜಂ ಭದ್ರೇ ಗೋಪಗೋಭಿರಲಂಕೃತಮ್ ।
ರೋಹಿಣೀ ವಸುದೇವಸ್ಯ ಭಾರ್ಯಾಸ್ತೇ ನಂದಗೋಕುಲೇ ।
ಅನ್ಯಾಶ್ಚ ಕಂಸಸಂವಿಗ್ನಾ ವಿವರೇಷು ವಸಂತಿ ಹಿ ॥
ಅನುವಾದ
ದೇವೀ! ಕಲ್ಯಾಣೀ! ನೀನೀಗಲೇ ವ್ರಜ ಭೂಮಿಗೆ ಹೋಗು. ಅದು ಗೋಪಾಲಕರಿಂದಲೂ, ಗೋವುಗಳಿಂದಲೂ ಸುಶೋಭಿತವಾಗಿದೆ. ನಂದನ ಆ ಗೋಕುಲದಲ್ಲಿ ವಸುದೇವನ ಪತ್ನಿಯಾದ ರೋಹಿಣಿಯು ವಾಸವಾಗಿದ್ದಾಳೆ. ಅವನ ಇತರ ಪತ್ನಿಯರು ಕಂಸನ ಭಯದಿಂದ ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದಾರೆ. ॥7॥
(ಶ್ಲೋಕ-8)
ಮೂಲಮ್
ದೇವಕ್ಯಾ ಜಠರೇ ಗರ್ಭಂ ಶೇಷಾಖ್ಯಂ ಧಾಮ ಮಾಮಕಮ್ ।
ತತ್ಸಂನಿಕೃಷ್ಯ ರೋಹಿಣ್ಯಾ ಉದರೇ ಸಂನಿವೇಶಯ ॥
ಅನುವಾದ
ಈ ಸಮಯದಲ್ಲಿ ನನ್ನ ಅಂಶನಾದ ಮಹಾಶೇಷನು ದೇವಕಿಯ ಗರ್ಭದಲ್ಲಿ ನೆಲೆಸಿರುವನು. ಅವನನ್ನು ಅಲ್ಲಿಂದ ಸೆಳೆದುಕೊಂಡು ನೀನು ರೋಹಿಣಿಯ ಉದರದಲ್ಲಿರಿಸು.॥8॥
(ಶ್ಲೋಕ-9)
ಮೂಲಮ್
ಅಥಾಹಮಂಶಭಾಗೇನ ದೇವಕ್ಯಾಃ ಪುತ್ರತಾಂ ಶುಭೇ ।
ಪ್ರಾಪ್ಸ್ಯಾಮಿ ತ್ವಂ ಯಶೋದಾಯಾಂ ನಂದಪತ್ನ್ಯಾಂ ಭವಿಷ್ಯಸಿ ॥
ಅನುವಾದ
ಕಲ್ಯಾಣಿ! ಈಗ ನಾನು ನನ್ನ ಸಮಸ್ತಜ್ಞಾನ, ಬಲ ಮುಂತಾದ ಅಂಶಗಳೊಂದಿಗೆ ದೇವಕಿಗೆ ಪುತ್ರನಾಗುವೆನು. ನೀನು ನಂದಮಹಾರಾಜನ ಪತ್ನಿಯಾದ ಯಶೋದೆಯ ಗರ್ಭದಲ್ಲಿ ಹುಟ್ಟುವೆ. ॥9॥
(ಶ್ಲೋಕ-10)
ಮೂಲಮ್
ಅರ್ಚಿಷ್ಯಂತಿ ಮನುಷ್ಯಾಸ್ತ್ವಾಂ ಸರ್ವಕಾಮವರೇಶ್ವರೀಮ್ ।
ಧೂಪೋಪಹಾರಬಲಿಭಿಃ ಸರ್ವಕಾಮವರಪ್ರದಾಮ್ ॥
ಅನುವಾದ
ಜನರು ಬೇಡಿದ ವರಗಳನ್ನು ಕೊಡುವುದರಲ್ಲಿ ನೀನು ಸಮರ್ಥಳಾಗುವೆ. ಮನುಷ್ಯರು ತಮ್ಮ ಸಮಸ್ತ ಅಭಿಲಾಷೆಗಳನ್ನು ಪೂರೈಸುವವಳು ಎಂದು ತಿಳಿದು ನಿನ್ನನ್ನು ಧೂಪ-ದೀಪ ನೈವೇದ್ಯಾದಿ ಉಪಚಾರಗಳಿಂದ ಪೂಜಿಸುವರು. ॥10॥
(ಶ್ಲೋಕ-11)
ಮೂಲಮ್
ನಾಮಧೇಯಾನಿ ಕುರ್ವಂತಿ ಸ್ಥಾನಾನಿ ಚ ನರಾ ಭುವಿ ।
ದುರ್ಗೇತಿ ಭದ್ರಕಾಲೀತಿ ವಿಜಯಾ ವೈಷ್ಣವೀತಿ ಚ ॥
(ಶ್ಲೋಕ-12)
ಮೂಲಮ್
ಕುಮುದಾ ಚಂಡಿಕಾ ಕೃಷ್ಣಾ ಮಾಧವೀ ಕನ್ಯಕೇತಿ ಚ ।
ಮಾಯಾ ನಾರಾಯಣೀಶಾನಿ ಶಾರದೇತ್ಯಂಬಿಕೇತಿ ಚ ॥
ಅನುವಾದ
ಭೂಲೋಕದಲ್ಲಿ ನಿನ್ನನ್ನು ದುರ್ಗಾ, ಭದ್ರಕಾಲಿ, ವಿಜಯಾ, ವೈಷ್ಣವೀ, ಕುಮುದಾ, ಚಂಡಿಕಾ, ಕೃಷ್ಣಾ, ಮಾಧವೀ, ಕನ್ಯಕಾ, ಮಹಾಮಾಯಾ, ನಾರಾಯಣೀ, ಈಶಾನೀ, ಶಾರದಾ, ಅಂಬಿಕಾ ಇವೇ ಮುಂತಾದ ಅನೇಕ ನಾಮಗಳಿಂದ ಕೊಂಡಾಡುವರು. ॥11-12॥
(ಶ್ಲೋಕ-13)
ಮೂಲಮ್
ಗರ್ಭಸಂಕರ್ಷಣಾತ್ತಂ ವೈ ಪ್ರಾಹುಃ ಸಂಕರ್ಷಣಂ ಭುವಿ ।
ರಾಮೇತಿ ಲೋಕರಮಣಾದ್ಬಲಂ ಬಲವದುಚ್ಛ್ರಯಾತ್ ॥
ಅನುವಾದ
ದೇವಕಿಯ ಗರ್ಭದಿಂದ ಸಳೆಯಲ್ಪಟ್ಟ ಕಾರಣದಿಂದ ಮಹಾಶೇಷನನ್ನು ಪ್ರಪಂಚದಲ್ಲಿ ಜನರು ‘ಸಂಕರ್ಷಣ’ನೆಂದು ಹೇಳುವರು. ಲೋಕರಂಜಕನಾದ್ದರಿಂದ ‘ರಾಮ’ ಎಂದೂ, ಬಲವಂತರಲ್ಲಿ ಶ್ರೇಷ್ಠನಾದ್ದರಿಂದ ‘ಬಲಭದ್ರ’ ಎಂದೂ ಹೇಳುವರು.॥13॥
(ಶ್ಲೋಕ-14)
ಮೂಲಮ್
ಸಂದಿಷ್ಟೈವಂ ಭಗವತಾ ತಥೇತ್ಯೋಮಿತಿ ತದ್ವಚಃ ।
ಪ್ರತಿಗೃಹ್ಯ ಪರಿಕ್ರಮ್ಯ ಗಾಂ ಗತಾ ತತ್ತಥಾಕರೋತ್ ॥
ಅನುವಾದ
ಭಗವಂತನು ಹೀಗೆ ಆಜ್ಞಾಪಿಸಿದಾಗ ಯೋಗ ಮಾಯೆಯು ‘ಹಾಗೆಯೇ ಆಗಲಿ’ ಎಂದು ಹೇಳಿ ಅವನ ಮಾತನ್ನು ಶಿರಸಾವಹಿಸಿ, ಅವನಿಗೆ ಪ್ರದಕ್ಷಿಣೆ ಮಾಡಿ ಭೂಲೋಕಕ್ಕೆ ಬಂದು ಭಗವಂತನು ಹೇಳಿದಂತೆಯೇ ಮಾಡಿದಳು. ॥14॥
(ಶ್ಲೋಕ-15)
ಮೂಲಮ್
ಗರ್ಭೇ ಪ್ರಣೀತೇ ದೇವಕ್ಯಾ ರೋಹಿಣೀಂ ಯೋಗನಿದ್ರಯಾ ।
ಅಹೋ ವಿಸ್ರಂಸಿತೋ ಗರ್ಭ ಇತಿ ಪೌರಾ ವಿಚುಕ್ರುಶುಃ ॥
ಅನುವಾದ
ಯೋಗಮಾಯೆಯು ದೇವಕಿಯ ಗರ್ಭವನ್ನು ಕೊಂಡುಹೋಗಿ ರೋಹಿಣಿಯ ಉದರದಲ್ಲಿ ಸ್ಥಾಪಿಸಿದಾಗ ಮಥುರಾಪುರವಾಸಿಗಳು ದುಃಖದಿಂದ ಅಯ್ಯೋ! ಬಡಪಾಯಿ ದೇವಕಿಯ ಈ ಗರ್ಭವು ನಾಶವಾಗಿ ಹೋಯಿತಲ್ಲ! ಎಂದು ಪರಸ್ಪರ ಆಡಿಕೊಳ್ಳತೊಡಗಿದರು. ॥15॥
(ಶ್ಲೋಕ-16)
ಮೂಲಮ್
ಭಗವಾನಪಿ ವಿಶ್ವಾತ್ಮಾ ಭಕ್ತಾನಾಮಭಯಂಕರಃ ।
ಆವಿವೇಶಾಂಶಭಾಗೇನ ಮನ ಆನಕದುಂದುಭೇಃ ॥
ಅನುವಾದ
ಭಕ್ತರಿಗೆ ಅಭಯವನ್ನು ಕೊಡುವವನೂ, ಎಲ್ಲೆಡೆಗಳಲ್ಲಿ ಎಲ್ಲ ರೂಪಗಳಿಂದ ಇರುವವನೂ, ಬರುವಿಕೆ-ಹೋಗುವಿಕೆ ಎಂಬುದಿಲ್ಲದವನೂ ಆದ ಭಗವಂತನು ತನ್ನ ಸಮಸ್ತ ಕಲೆಗಳೊಂದಿಗೆ ವಸುದೇವನ ಮನಸ್ಸಿನಲ್ಲಿ ಪ್ರಕಟಗೊಂಡನು. ॥16॥
(ಶ್ಲೋಕ-17)
ಮೂಲಮ್
ಸ ಬಿಭ್ರತ್ಪೌರುಷಂ ಧಾಮ ಭ್ರಾಜಮಾನೋ ಯಥಾ ರವಿಃ ।
ದುರಾಸದೋತಿದುರ್ಧರ್ಷೋ ಭೂತಾನಾಂ ಸಂಬಭೂವ ಹ ॥
ಅನುವಾದ
ಮನಸ್ಸಿನಲ್ಲಿ ಮೊದಲಿನಿಂದಲೂ ಅವ್ಯಕ್ತನಾಗಿದ್ದವನು ವ್ಯಕ್ತನಾದನು. ಭಗವಂತನ ದಿವ್ಯತೇಜಸ್ಸನ್ನು ಧರಿಸಿದ ವಸುದೇವನು ಸೂರ್ಯನಂತೆ ದೇದೀಪ್ಯಮಾನನಾಗಿ ಕಂಗೊಳಿಸಿದನು. ಅವನನ್ನು ನೋಡಿದವರ ಕಣ್ಣುಗಳು ಕುಕ್ಕುತ್ತಿದ್ದವು. ಯಾರೂ ಅವನನ್ನು ಬಲದಿಂದಾಗಲೀ, ವಾಣಿಯಿಂದಾಗಲೀ, ಪ್ರಭಾವದಿಂದಾಗಲೀ ಎದುರಿಸಲಾಗುತ್ತಿರಲಿಲ್ಲ. ॥17॥
(ಶ್ಲೋಕ-18)
ಮೂಲಮ್
ತತೋ ಜಗನ್ಮಂಗಲಮಚ್ಯುತಾಂಶಂ
ಸಮಾಹಿತಂ ಶೂರಸುತೇನ ದೇವೀ ।
ದಧಾರ ಸರ್ವಾತ್ಮಕಮಾತ್ಮಭೂತಂ
ಕಾಷ್ಠಾ ಯಥಾನಂದ ಕರಂ ಮನಸ್ತಃ ॥
ಅನುವಾದ
ಜಗತ್ತಿಗೆ ಪರಮ ಮಂಗಳಕರವಾದ ಭಗವಂತನ ಆ ಜ್ಯೋತಿರ್ಮಯ ಅಂಶವು ವಸುದೇವನ ಮೂಲಕ ಆಧಾನ ಮಾಡಲ್ಪಟ್ಟಾಗ ಪೂರ್ವದಿಕ್ಕು ಚಂದ್ರನನ್ನು ಧರಿಸುವಂತೆಯೇ ಶುದ್ಧ ಸತ್ತ್ವಸಂಪನ್ನಳಾದ ದೇವಕೀದೇವಿಯು ವಿಶುದ್ಧ ಮನಸ್ಸಿನಿಂದ ಸರ್ವಾತ್ಮನೂ, ಆತ್ಮಸ್ವ ರೂಪನೂ ಆದ ಭಗವಂತನನ್ನು ಧರಿಸಿಕೊಂಡಳು. ॥18॥
(ಶ್ಲೋಕ-19)
ಮೂಲಮ್
ಸಾ ದೇವಕೀ ಸರ್ವಜಗನ್ನಿವಾಸ-
ನಿವಾಸಭೂತಾ ನಿತರಾಂ ನ ರೇಜೇ ।
ಭೋಜೇಂದ್ರಗೇಹೇಗ್ನಿಶಿಖೇವ ರುದ್ಧಾ
ಸರಸ್ವತೀ ಜ್ಞಾನಖಲೇ ಯಥಾ ಸತೀ ॥
ಅನುವಾದ
ಭಗವಂತನು ಇಡೀ ಜಗತ್ತಿಗೆ ನಿವಾಸಸ್ಥಾನನಾಗಿದ್ದಾನೆ. ದೇವಕಿಯು ಅವನಿಗೂ ನಿವಾಸಸ್ಥಾನಳಾದಳು. ಗಡಿಗೆಯಲ್ಲಿಟ್ಟ ದೀಪದ ಬೆಳಕು ಹೊರಗೆ ಹರಡದಂತೆ, ಜ್ಞಾನವಂತನ ವಿದ್ಯೆಯು ಪ್ರಕಾಶಕ್ಕೆ ಬರದಂತೆಯೇ ಕಂಸನ ಕಾರಾಗೃಹದಲ್ಲಿ ಬಂದಿಯಾಗಿದ್ದ ದೇವಕಿಯ ಪ್ರಭೆಯು ಪೂರ್ಣವಾಗಿ ಶೋಭಿಸಲಿಲ್ಲ. ॥19॥
(ಶ್ಲೋಕ-20)
ಮೂಲಮ್
ತಾಂ ವೀಕ್ಷ್ಯ ಕಂಸಃ ಪ್ರಭಯಾ ಜಿತಾಂತರಾಂ
ವಿರೋಚಯಂತೀಂ ಭವನಂ ಶುಚಿಸ್ಮಿತಾಮ್ ।
ಆಹೈಷ ಮೇ ಪ್ರಾಣಹರೋ ಹರಿರ್ಗುಹಾಂ
ಧ್ರುವಂ ಶ್ರಿತೋ ಯನ್ನ ಪುರೇಯಮೀದೃಶೀ ॥
ಅನುವಾದ
ಭಗವಂತನು ದೇವಕಿಯ ಗರ್ಭದಲ್ಲಿ ವಿರಾಜಮಾನನಾದಾಗ ಆಕೆಯ ಮುಖದಲ್ಲಿ ಪವಿತ್ರ ಮುಗುಳ್ನಗೆ ಇತ್ತು. ಆಕೆಯ ಶರೀರದ ಕಾಂತಿಯಿಂದ ಕಾರಾಗೃಹವು ಬೆಳಗಿ ಹೋಯಿತು. ಕಂಸನು ಬಂದುನೋಡಿದಾಗ ಅವನು ಮನಸ್ಸಿನಲ್ಲೇ ಈ ಬಾರಿ ನನ್ನ ಪ್ರಾಣಹರನಾದ ವಿಷ್ಣುವೇ ಇವಳ ಗರ್ಭದಲ್ಲಿ ಖಂಡಿತವಾಗಿ ಪ್ರವೇಶಿಸಿರುವನು. ಏಕೆಂದರೆ, ಇದಕ್ಕೆ ಮೊದಲು ದೇವಕಿಯು ಹೀಗೆ ಇರಲಿಲ್ಲವಲ್ಲ! ಎಂದು ತರ್ಕಿಸಿದನು. ॥20॥
(ಶ್ಲೋಕ-21)
ಮೂಲಮ್
ಕಿಮದ್ಯ ತಸ್ಮಿನ್ಕರಣೀಯಮಾಶು ಮೇ
ಯದರ್ಥತಂತ್ರೋ ನ ವಿಹಂತಿ ವಿಕ್ರಮಮ್ ।
ಸಿಯಾಃ ಸ್ವಸುರ್ಗುರುಮತ್ಯಾ ವಧೋಯಂ
ಯಶಃ ಶ್ರಿಯಂ ಹಂತ್ಯನುಕಾಲಮಾಯುಃ ॥
ಅನುವಾದ
ಶತ್ರುವಿನ ನಿರಸನಕ್ಕಾಗಿ ನಾನು ಕೂಡಲೇ ಏನು ಮಾಡಲಿ? ದೇವಕಿಯನ್ನು ಕೊಲ್ಲುವುದೂ ಸರಿಯಾಗಲಾರದು. ಏಕೆಂದರೆ, ವೀರನಾದವನು ಸ್ವಾರ್ಥವಶನಾಗಿ ತನ್ನ ಪರಾಕ್ರಮವನ್ನು ಕಲಂಕಿತವಾಗಿಸುವುದಿಲ್ಲ. ಮೊದಲನೆಯದಾಗಿ ಇವಳು ಸ್ತ್ರೀಯಾಗಿದ್ದಾಳೆ, ಇನ್ನೊಂದು ನನ್ನ ತಂಗಿಯಾಗಿದ್ದಾಳೆ, ಮೂರನೆಯದು ಗರ್ಭಿಣಿ ಬೇರೆ. ಇವಳನ್ನು ಕೊಂದುಬಿಟ್ಟರೆ ತತ್ಕಾಲವೇ ನನ್ನ ಕೀರ್ತಿ, ಲಕ್ಷ್ಮೀ ಮತ್ತು ಆಯುಸ್ಸು ನಾಶವಾಗಿ ಹೋದೀತು. ॥21॥
(ಶ್ಲೋಕ-22)
ಮೂಲಮ್
ಸ ಏಷ ಜೀವನ್ ಖಲು ಸಂಪರೇತೋ
ವರ್ತೇತ ಯೋತ್ಯಂತನೃಶಂಸಿತೇನ ।
ದೇಹೇ ಮೃತೇ ತಂ ಮನುಜಾಃ ಶಪಂತಿ
ಗಂತಾ ತಮೋಂಧಂ ತನುಮಾನಿನೋ ಧ್ರುವಮ್ ॥
ಅನುವಾದ
ಅತ್ಯಂತ ಕ್ರೂರವಾಗಿ ವರ್ತಿಸುವವನು ಜೀವಿತನಾಗಿದ್ದರೂ ಸತ್ತಂತೆಯೇ. ಅವನು ಸತ್ತಮೇಲೆ ಜನರು ಅವನನ್ನು ಬೈಯ್ಯುವರು. ಇಷ್ಟೇ ಅಲ್ಲ, ಅವನು ದೇಹಾಭಿಮಾನಿಗಳಿಗೆ ಯೋಗ್ಯವಾದ ಘೋರ ನರಕಕ್ಕೆ ಅವಶ್ಯವಾಗಿ ಹೋಗುತ್ತಾನೆ. ॥22॥
(ಶ್ಲೋಕ-23)
ಮೂಲಮ್
ಇತಿ ಘೋರತಮಾದ್ಭಾವಾತ್ಸಂನಿವೃತ್ತಃ ಸ್ವಯಂ ಪ್ರಭುಃ ।
ಆಸ್ತೇ ಪ್ರತೀಕ್ಷಂಸ್ತಜ್ಜನ್ಮ ಹರೇರ್ವೈರಾನುಬಂಧಕೃತ್ ॥
ಅನುವಾದ
ಕಂಸನು ದೇವಕಿಯನ್ನು ಕೊಲ್ಲಬಲ್ಲವನಾಗಿದ್ದರೂ ಅವನು ಈ ಅತ್ಯಂತ ಕ್ರೂರವಾದ ವಿಚಾರದಿಂದ ನಿವೃತ್ತನಾದನು.* ಈಗ ಭಗವಂತನ ಕುರಿತು ದೃಢವಾದ ವೈರವನ್ನು ಕಟ್ಟಿಕೊಂಡು ಅವನ ಬರುವಿಕೆಯನ್ನು ಪ್ರತೀಕ್ಷೆ ಮಾಡುತ್ತಿದ್ದನು. ॥23॥
ಟಿಪ್ಪನೀ
- ವಿವಾಹದ ಮಾಂಗಲಿಕ ಚಿಹ್ನೆಗಳನ್ನು ಧರಿಸಿದ್ದ ದೇವಕಿಯನ್ನು ಕೊಲ್ಲಲು ಮುಂದಾದ ಆ ಕಂಸನೇ ಇಂದು ಇಷ್ಟು ಸದಸತ್ವಿಚಾರವಂತನಾದನು. ಇದರ ಕಾರಣವೇನು? ದೇವಕಿಯ ಅಂತರಂಗದಲ್ಲಿ ಗರ್ಭದಲ್ಲಿ ಶ್ರೀಭಗವಂತನಿರುವನು. ಅಂತಹವಳನ್ನು ಇಂದು ಅವನು ನೋಡುತ್ತಿರುವನು. ಯಾರೊಳಗೆ ಭಗವಂತನಿರುವನೋ ಅವನ ದರ್ಶನದಿಂದ ಸದ್ಬುದ್ಧಿಯು ಉದಯಿಸುವುದು ಆಶ್ಚರ್ಯದ ಮಾತಲ್ಲವಲ್ಲ!
(ಶ್ಲೋಕ-24)
ಮೂಲಮ್
ಆಸೀನಃ ಸಂವಿಶಂಸ್ತಿಷ್ಠನ್ಭುಂಜಾನಃ ಪರ್ಯಟನ್ಮಹೀಮ್ ।
ಚಿಂತಯಾನೋ ಹೃಷೀಕೇಶಮಪಶ್ಯತ್ತನ್ಮಯಂ ಜಗತ್ ॥
ಅನುವಾದ
ಈಗ ಅವನು ಕುಳಿತಾಗ-ನಿಂತಾಗ, ಉಂಬಾಗ ತಿಂಬಾಗ, ಮಲಗಿದ್ದಾಗ-ಎದ್ದಾಗ, ನಡೆದಾಡುವಾಗ ಎಲ್ಲ ಹೊತ್ತಿನಲ್ಲೂ ಶ್ರೀಕೃಷ್ಣನ ಚಿಂತನೆಯಲ್ಲೇ ಇರುತ್ತಿದ್ದನು. ಅವನು ಹೋದಲ್ಲಿ, ಎಲ್ಲಾದರೂ ಎಡವಿದಲ್ಲಿ ಅವನಿಗೆ ಶ್ರೀಕೃಷ್ಣನೇ ಕಂಡು ಬರುತ್ತಿದ್ದನು. ಹೀಗೆ ಅವನಿಗೆ ಇಡೀ ಜಗತ್ತೇ ಶ್ರೀಕೃಷ್ಣಮಯವಾಗಿ ಕಾಣತೊಡಗಿತು. ॥24॥
(ಶ್ಲೋಕ-25)
ಮೂಲಮ್
ಬ್ರಹ್ಮಾ ಭವಶ್ಚ ತತ್ರೈತ್ಯ ಮುನಿಭಿರ್ನಾರದಾದಿಭಿಃ ।
ದೇವೈಃ ಸಾನುಚರೈಃ ಸಾಕಂ ಗೀರ್ಭಿರ್ವೃಷಣಮೈಡಯನ್ ॥
ಅನುವಾದ
ಪರೀಕ್ಷಿತನೇ! ಆ ಸಮಯದಲ್ಲಿ ರುದ್ರದೇವರು ಮತ್ತು ಬ್ರಹ್ಮದೇವರು ತಮ್ಮ ಅನುಚರರೊಡನೆಯೂ, ನಾರದರೇ ಮೊದಲಾದ ಋಷಿಗಳೊಡನೆಯೂ ಕಂಸನ ಸೆರೆಮನೆಗೆ ಬಂದು ಸುಮಧುರವಾದ ಮಾತುಗಳಿಂದ ಎಲ್ಲರ ಅಭಿಲಾಷೆಗಳನ್ನು ಪೂರ್ಣಗೊಳಿಸುವಂತಹ ಶ್ರೀಹರಿಯನ್ನು ಹೀಗೆ ಸ್ತುತಿಸಲು ಪ್ರಾರಂಭಿಸಿದರು. ॥25॥
(ಶ್ಲೋಕ-26)
ಮೂಲಮ್
ಸತ್ಯವ್ರತಂ ಸತ್ಯಪರಂ ತ್ರಿಸತ್ಯಂ
ಸತ್ಯಸ್ಯ ಯೋನಿಂ ನಿಹಿತಂ ಚ ಸತ್ಯೇ ।
ಸತ್ಯಸ್ಯ ಸತ್ಯಮೃತಸತ್ಯನೇತ್ರಂ
ಸತ್ಯಾತ್ಮಕಂ ತ್ವಾಂ ಶರಣಂ ಪ್ರಪನ್ನಾಃ ॥
ಅನುವಾದ
ಪ್ರಭುವೇ! ನೀನು ಸತ್ಯಸಂಕಲ್ಪನಾಗಿರುವೆ. ಸತ್ಯವೇ ನಿನ್ನನ್ನು ಪಡೆಯುವ ಶ್ರೇಷ್ಠಸಾಧನವಾಗಿದೆ. ಸೃಷ್ಟಿಯ ಮೊದಲು, ಪ್ರಳಯದ ನಂತರ, ಪ್ರಪಂಚದ ಸ್ಥಿತಿಯ ಸಮಯದಲ್ಲಿ ಈ ಮೂರೂ ಅವಸ್ಥೆಗಳಲ್ಲಿ ಸತ್ಯನಾದ ನೀನೇ ಇರುವವನು. ಪೃಥಿವಿ, ಜಲ, ತೇಜ, ವಾಯು, ಆಕಾಶ ಈ ಐದು ದೃಶ್ಯಮಾನ ಸತ್ಯಗಳ ಕಾರಣನು ನೀನೇ ಆಗಿರುವೆ ಹಾಗೂ ಅವುಗಳ ಅಂತರ್ಯಾಮಿಯಾಗಿ ವಿರಾಜಿಸುತ್ತಿರುವೆ. ನೀನೇ ಕಾಣುತ್ತಿರುವ ಈ ಜಗತ್ತಿಗೆ ಪರಮಾರ್ಥ ಸ್ವರೂಪನಾಗಿರುವೆ. ಸತ್ಯವಚನಕ್ಕೂ, ಸಮ ದೃಷ್ಟಿಗೂ ನೀನೇ ಪ್ರೇರಕನು. ಹೀಗೆ ಸಮಸ್ತ ವಿಷಯಗಳಲ್ಲಿ ಸತ್ಯಸ್ವರೂಪನೇ ಆಗಿರುವ, ಸತ್ಯನೇ ಆದ ನಿನ್ನನ್ನು ಶರಣು ಹೊಂದುತ್ತೇವೆ. ॥26॥
(ಶ್ಲೋಕ-27)
ಮೂಲಮ್
ಏಕಾಯನೋಸೌ ದ್ವಿಲಸಿಮೂಲ-
ಶ್ಚತೂರಸಃ ಪಂಚವಿಧಃ ಷಡಾತ್ಮಾ ।
ಸಪ್ತತ್ವಗಷ್ಟವಿಟಪೋ ನವಾಕ್ಷೋ
ದಶಚ್ಛದೀ ದ್ವಿಖಗೋ ಹ್ಯಾದಿವೃಕ್ಷಃ ॥
ಅನುವಾದ
ಈ ಸಂಸಾರವೆಂಬುದು ಒಂದು ಸನಾತನ ವೃಕ್ಷವಾಗಿದೆ. ಈ ಸನಾತನ ವೃಕ್ಷಕ್ಕೆ ಮೂಲಪ್ರಕೃತಿಯೊಂದೇ ಆಶ್ರಯವು. ಸುಖ-ದುಃಖಗಳೇ ಇದರ ಎರಡು ಫಲಗಳು. ಸತ್ತ್ವ-ರಜ-ತಮಸ್ಸುಗಳೆಂಬುದೇ ಈ ವೃಕ್ಷದ ಬೇರುಗಳು. ಇದಕ್ಕೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ವಿಧವಾದ ರಸಗಳು. ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು ಈ ಐದು ಇವನ್ನು ತಿಳಿಯುವ ಕರಣಗಳು (ಬೀಳಲು). ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಕುಗ್ಗುವುದು, ನಾಶವಾಗುವುದು ಇವು ಆರು ಇದರ ಸ್ವಭಾವಗಳು. ರಸ, ರುಧಿರ, ಮಾಂಸ, ಮೇದಸ್ಸು, ಮೂಳೆ, ಮಜ್ಜೆ, ಶುಕ್ರ ಇವು ಏಳು ಇದರ ತೊಗಟೆಗಳು. ಪಂಚ-ಮಹಾಭೂತಗಳು, ಮನಸ್ಸು, ಬುದ್ಧಿ, ಅಹಂಕಾರ ಈ ಎಂಟು ರೆಂಬೆಗಳು. ನವದ್ವಾರಗಳೇ ಇದರ ಒಂಭತ್ತು ಪೊಟರೆಗಳು. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ ಎಂಬ ಹತ್ತು ಪ್ರಾಣಗಳೇ ಇದರ ಎಲೆಗಳು. ಜೀವೇಶ್ವರರು ಈ ಸಂಸಾರ ವೃಕ್ಷದ ಎರಡು ಹಕ್ಕಿಗಳಂತಿದ್ದಾರೆ. ॥27॥
(ಶ್ಲೋಕ-28)
ಮೂಲಮ್
ತ್ವಮೇಕ ಏವಾಸ್ಯ ಸತಃ ಪ್ರಸೂತಿಃ
ತ್ವಂ ಸಂನಿಧಾನಂ ತ್ವಮನುಗ್ರಹಶ್ಚ ।
ತ್ವನ್ಮಾಯಯಾ ಸಂವೃತಚೇತಸಸ್ತ್ವಾಂ
ಪಶ್ಯಂತಿ ನಾನಾ ನ ವಿಪಶ್ಚಿತೋ ಯೇ ॥
ಅನುವಾದ
ಈ ಸಂಸಾರ ರೂಪೀ ವೃಕ್ಷದ ಉತ್ಪತ್ತಿಯ ಆಧಾರನೂ ಏಕಮಾತ್ರ ನೀನೇ ಆಗಿರುವೆ. ನಿನ್ನಲ್ಲೇ ಇದರ ಪ್ರಳಯವಾಗುತ್ತದೆ. ನಿನ್ನ ಅನುಗ್ರಹದಿಂದಲೇ ಇದರ ರಕ್ಷಣೆಯೂ ಆಗುತ್ತದೆ. ಮಾಯೆಯಿಂದ ಆವೃತವಾದ ಚಿತ್ತವುಳ್ಳವರು ಈ ಸತ್ಯವನ್ನು ಅರಿಯದೆ ಇದರ ಉತ್ಪತ್ತಿ, ಸ್ಥಿತಿ, ಪ್ರಳಯ ಮಾಡುವಂತಹ ಅನೇಕ ಬ್ರಹ್ಮಾದಿ ದೇವತೆಗಳನ್ನು ನೋಡುತ್ತಾರೆ. ತತ್ತ್ವ ಜ್ಞಾನಿಗಳಾದವರು ಎಲ್ಲರ ರೂಪದಲ್ಲಿ ಕೇವಲ ನಿನ್ನನ್ನೇ ದರ್ಶಿಸುತ್ತಾರೆ. ॥28॥
(ಶ್ಲೋಕ-29)
ಮೂಲಮ್
ಬಿಭರ್ಷಿ ರೂಪಾಣ್ಯವಬೋಧ ಆತ್ಮಾ
ಕ್ಷೇಮಾಯ ಲೋಕಸ್ಯ ಚರಾಚರಸ್ಯ ।
ಸತ್ತ್ವೋಪಪನ್ನಾನಿ ಸುಖಾವಹಾನಿ
ಸತಾಮಭದ್ರಾಣಿ ಮುಹುಃ ಖಲಾನಾಮ್ ॥
ಅನುವಾದ
ನೀನು ಜ್ಞಾನಸ್ವರೂಪವಾದ ಆತ್ಮನಾಗಿರುವೆ. ಚರಾಚರ ಜಗತ್ತಿಗೆ ಕಲ್ಯಾಣವನ್ನುಂಟುಮಾಡುವ ಸಲುವಾಗಿ ಅನೇಕ ರೂಪಗಳನ್ನು ಧರಿಸುವೆ. ನಿನ್ನ ಆ ರೂಪಗಳು ಅಪ್ರಾಕೃತವೂ, ಶುದ್ಧ ಸತ್ತ್ವಮಯವೂ ಆಗಿವೆ. ಸತ್ಪುರುಷರಿಗೆ ಸುಖಕರಗಳಾಗಿವೆ. ಜೊತೆಗೆ ದುಷ್ಟರಿಗೆ ದುಷ್ಟತೆಯೇ ಶಿಕ್ಷೆಯನ್ನೂ ಕೊಡುತ್ತವೆ. ಅವರಿಗೆ ಅಮಂಗಳವೂ ಆಗಿರುತ್ತವೆ. ॥29॥
(ಶ್ಲೋಕ-30)
ಮೂಲಮ್
ತ್ವಯ್ಯಂಬುಜಾಕ್ಷಾಖಿಲಸತ್ತ್ವಧಾಮ್ನಿ
ಸಮಾಧಿನಾವೇಶಿತಚೇತಸೈಕೇ ।
ತ್ವತ್ಪಾದಪೋತೇನ ಮಹತ್ಕೃತೇನ
ಕುರ್ವಂತಿ ಗೋವತ್ಸಪದಂ ಭವಾಬ್ಧಿಮ್ ॥
ಅನುವಾದ
ಓ ಕಮಲಾಕ್ಷನೇ! ಪ್ರಭುವೇ! ಕೆಲವೇ ಜನರು ಸಮಸ್ತ ಪದಾರ್ಥಗಳ, ಪ್ರಾಣಿಗಳ ಆಶ್ರಯಸ್ವರೂಪನಾದ ನಿನ್ನ ರೂಪದಲ್ಲಿ ಪೂರ್ಣ ಏಕಾಗ್ರತೆಯಿಂದ ತಮ್ಮ ಚಿತ್ತವನ್ನು ನೆಡಬಲ್ಲರು. ನಿನ್ನ ಚರಣಕಮಲ ರೂಪವಾದ ನೌಕೆಯನ್ನು ಆಶ್ರಯಿಸಿ ಈ ಸಂಸಾರಸಾಗರವನ್ನು ಕರುವಿನ ಗೊರಸಿನಷ್ಟು ಹಳ್ಳವನ್ನು ದಾಟುವಂತೆ ಆಯಾಸವಿಲ್ಲದೆ ದಾಟಿಹೋಗುತ್ತಾರೆ. ಏಕೆಂದರೆ, ಇಂದಿನವರೆಗಿನ ಸಂತರು ಈ ನೌಕೆಯಿಂದಲೇ ಸಂಸಾರ ಸಾಗರವನ್ನು ದಾಟಿಹೋಗಿದ್ದಾರಲ್ಲ! ॥30॥
(ಶ್ಲೋಕ-31)
ಮೂಲಮ್
ಸ್ವಯಂ ಸಮುತ್ತೀರ್ಯ ಸುದುಸ್ತರಂ ದ್ಯುಮ-
ನ್ಭವಾರ್ಣವಂ ಭೀಮಮದಭ್ರಸೌಹೃದಾಃ ।
ಭವತ್ಪದಾಂಭೋರುಹನಾವಮತ್ರ ತೇ
ನಿಧಾಯ ಯಾತಾಃ ಸದನುಗ್ರಹೋ ಭವಾನ್ ॥
ಅನುವಾದ
ಪರಮ ಪ್ರಕಾಶ ಸ್ವರೂಪನಾದ ಪರಮಾತ್ಮನೇ! ನಿನ್ನ ಭಕ್ತಜನರು ಸಮಸ್ತ ಜಗತ್ತಿಗೂ ನಿಷ್ಕಪಟ ಪ್ರೇಮಿಗಳೂ, ಹಿತೈಷಿಗಳೂ ಆಗಿರುತ್ತಾರೆ. ಅವರೇನೋ ಸ್ವತಃ ಈ ದುಷ್ಕರವಾದ ಭಯಂಕರ ಸಂಸಾರಸಾಗರವನ್ನು ದಾಟಿಯೇ ಹೋಗುತ್ತಾರೆ. ಆದರೆ ಬೇರೆಯವರ ಕಲ್ಯಾಣಕ್ಕಾಗಿಯೇ ಅವರು ಇಲ್ಲಿ ನಿನ್ನ ಚರಣ ಕಮಲಗಳ ನೌಕೆಯನ್ನು ಸ್ಥಾಪಿಸಿ ಹೋಗುತ್ತಾರೆ. ನಿಜವಾಗಿ ಸತ್ಪುರುಷರ ಮೇಲೆ ನಿನ್ನ ಮಹತ್ಕೃಪೆ ಇದೆ. ಅವರಿಗಾಗಿ ನೀನು ಅನುಗ್ರಹಸ್ವರೂಪನೇ ಆಗಿರುವೆ. ॥31॥
(ಶ್ಲೋಕ-32)
ಮೂಲಮ್
ಯೇನ್ಯೇರವಿಂದಾಕ್ಷ ವಿಮುಕ್ತಮಾನಿನ-
ಸ್ತ್ವಯ್ಯಸ್ತಭಾವಾದವಿಶುದ್ಧಬುದ್ಧಯಃ ।
ಆರುಹ್ಯ ಕೃಚ್ಛ್ರೇಣ ಪರಂ ಪದಂ ತತಃ
ಪತಂತ್ಯಧೋನಾದೃತಯುಷ್ಮದಂಘ್ರಯಃ ॥
ಅನುವಾದ
ಕಮಲನಯನನೇ! ಜ್ಞಾನಮಾರ್ಗವನ್ನು ಹಿಡಿದಿರುವ ಕೆಲವರು ತಾವು ಮುಕ್ತರೆಂದು ಭಾವಿಸುತ್ತಾರೆ. ಅಂತಹವರಿಗೆ ನಿನ್ನಲ್ಲಿ ಅನನ್ಯ ಭಕ್ತಿಯಿಲ್ಲದ ಕಾರಣ ಅವರ ಬುದ್ಧಿಯು ಶುದ್ಧವಾಗಿ ಇರುವುದಿಲ್ಲ. ಅತಿ ಕಷ್ಟಕರ ಸಾಧನೆಯಿಂದ ಅಂತಹವರು ಪರಮಪದದ ಮಾರ್ಗದಲ್ಲಿ ನಡೆಯುತ್ತಿದ್ದರೂ ನಿನ್ನ ಪಾದಾರವಿಂದಗಳಲ್ಲಿ ಪ್ರೇಮ ಇಲ್ಲದಿರುವುದರಿಂದ ಸ್ವಲ್ಪಕಾಲದಲ್ಲೇ ಸಂಸಾರದಲ್ಲಿ ಬಿದ್ದು ಪತನರಾಗುವರು. ॥32॥
(ಶ್ಲೋಕ-33)
ಮೂಲಮ್
ತಥಾ ನ ತೇ ಮಾಧವ ತಾವಕಾಃ ಕ್ವಚಿದ್
ಭ್ರಶ್ಯಂತಿ ಮಾರ್ಗಾತ್ತ್ವಯಿ ಬದ್ಧಸೌಹೃದಾಃ ।
ತ್ವಯಾಭಿಗುಪ್ತಾ ವಿಚರಂತಿ ನಿರ್ಭಯಾ
ವಿನಾಯಕಾನೀಕಪಮೂರ್ಧಸು ಪ್ರಭೋ ॥
ಅನುವಾದ
ಮಾಧವನೇ! ಪ್ರಭುವೇ! ಆದರೆ ನಿನ್ನ ಚರಣಗಳಲ್ಲಿ ನಿಜವಾದ ಪ್ರೀತಿಯುಳ್ಳ ನಿನ್ನ ನಿಜಭಕ್ತರು ಎಂದಿಗೂ ಈ ಜ್ಞಾನಾಭಿಮಾನಿಗಳಂತೆ ತಮ್ಮ ಸಾಧನೆಯಿಂದ ಭ್ರಷ್ಟರಾಗುವುದಿಲ್ಲ. ನಿನ್ನಿಂದ ರಕ್ಷಿಸಲ್ಪಟ್ಟವರಾಗಿ ನಿನ್ನ ಅನುಗ್ರಹದಿಂದ ವಿಘ್ನದೇವತೆಗಳ ತಲೆಯನ್ನು ಮೆಟ್ಟಿ ನಿರ್ಭಯವಾಗಿ ಸಂಚರಿಸುತ್ತಾರೆ.॥33॥
(ಶ್ಲೋಕ-34)
ಮೂಲಮ್
ಸತ್ತ್ವಂ ವಿಶುದ್ಧಂ ಶ್ರಯತೇ ಭವಾನ್ ಸ್ಥಿತೌ
ಶರೀರಿಣಾಂ ಶ್ರೇಯ ಉಪಾಯನಂ ವಪುಃ ।
ವೇದಕ್ರಿಯಾಯೋಗತಪಃಸಮಾಧಿಭಿಃ
ತವಾರ್ಹಣಂ ಯೇನ ಜನಃ ಸಮೀಹತೇ ॥
ಅನುವಾದ
ನೀನು ಪ್ರಪಂಚದ ಸ್ಥಿತಿಗಾಗಿ ಸಮಸ್ತದೇಹಧಾರಿಗಳಿಗೆ ಪರಮ ಶ್ರೇಯಸ್ಸನ್ನು ಪ್ರದಾನ ಮಾಡುವ ವಿಶುದ್ಧ ಸತ್ತ್ವಮಯ ಸಚ್ಚಿದಾನಂದಮಯ, ಪರಮ ದಿವ್ಯಮಂಗಳ ವಿಗ್ರಹನಾಗಿ ಪ್ರಕಟಗೊಳ್ಳುವೆ. ಆ ರೂಪದಲ್ಲಿ ಪ್ರಕಟವಾಗುವುದರಿಂದಲೇ ನಿನ್ನ ಭಕ್ತರು ವೇದ, ಕರ್ಮಕಾಂಡ, ಅಷ್ಟಾಂಗ ಯೋಗ, ತಪಸ್ಸು, ಸಮಾಧಿ ಇವುಗಳ ಮೂಲಕ ನಿನ್ನನ್ನು ಆರಾಧಿಸುತ್ತಾರೆ. ಯಾವುದೇ ಆಶ್ರಯವಿಲ್ಲದೆ ಯಾರ ಆರಾಧನೆ ಮಾಡಬಲ್ಲರು? ॥34॥
(ಶ್ಲೋಕ-35)
ಮೂಲಮ್
ಸತ್ತ್ವಂ ನ ಚೇದ್ಧಾತರಿದಂ ನಿಜಂ ಭವೇ-
ದ್ವಿಜ್ಞಾನಮಜ್ಞಾನಭಿದಾಪಮಾರ್ಜನಮ್ ।
ಗುಣಪ್ರಕಾಶೈರನುಮೀಯತೇ ಭವಾನ್
ಪ್ರಕಾಶತೇ ಯಸ್ಯ ಚ ಯೇನ ವಾ ಗುಣಃ ॥
ಅನುವಾದ
ಪ್ರಭೋ! ನೀನೇ ಎಲ್ಲರ ನಿಯಾಮಕನಾಗಿರುವೆ. ನಿನ್ನ ಈ ವಿಶುದ್ಧ ಸತ್ತ್ವಮಯ ನಿಜಸ್ವರೂಪವು ಇಲ್ಲದಿದ್ದರೆ ಅಜ್ಞಾನ ಮತ್ತು ಅದರಿಂದುಂಟಾಗುವ ಭೇದಭಾವವನ್ನು ನಾಶಗೊಳಿಸುವಂತಹ ಅಪರೋಕ್ಷಜ್ಞಾನ ಯಾರಿಗೂ ಆಗುತ್ತಿರಲಿಲ್ಲ. ಜಗತ್ತಿನಲ್ಲಿ ಕಂಡುಬರುವ ತ್ರಿಗುಣಗಳು ನಿನ್ನವೇ ಆಗಿವೆ; ನಿನ್ನಿಂದಲೇ ಪ್ರಕಾಶಿತವಾಗುವುದೂ ಸತ್ಯವೇ ಆಗಿದೆ. ಆದರೆ ಈ ಗುಣಗಳ ಪ್ರಕಾಶಕ ವೃತ್ತಿಗಳಿಂದ ನಿನ್ನ ಸ್ವರೂಪದ ಕೇವಲ ಅನುಮಾನವೇ ಆಗುತ್ತದೆ, ವಾಸ್ತವಿಕ ಸ್ವರೂಪದ ಸಾಕ್ಷಾತ್ಕಾರವಾಗುವುದಿಲ್ಲ. (ನಿನ್ನ ಸ್ವರೂಪದ ಸಾಕ್ಷಾತ್ಕಾರವಾದರೋ ನಿನ್ನ ಈ ವಿಶುದ್ಧ ಸತ್ತ್ವಮಯ ಸ್ವರೂಪದ ಸೇವೆ ಮಾಡಿದಾಗಲೇ ನಿನ್ನ ಕೃಪೆಯಿಂದ ಆಗುತ್ತದೆ.) ॥35॥
(ಶ್ಲೋಕ-36)
ಮೂಲಮ್
ನ ನಾಮರೂಪೇ ಗುಣಜನ್ಮಕರ್ಮಭಿ-
ರ್ನಿರೂಪಿತವ್ಯೇ ತವ ತಸ್ಯ ಸಾಕ್ಷಿಣಃ ।
ಮನೋವಚೋಭ್ಯಾಮನುಮೇಯವರ್ತ್ಮನೋ
ದೇವ ಕ್ರಿಯಾಯಾಂ ಪ್ರತಿಯಂತ್ಯಥಾಪಿ ಹಿ ॥
ಅನುವಾದ
ಭಗವಂತನೇ! ಮನಸ್ಸು ಮತ್ತು ವೇದವಾಣಿಯಿಂದ ಕೇವಲ ನಿನ್ನ ಸ್ವರೂಪದ ಅನುಮಾನ ಮಾತ್ರವಾಗುತ್ತದೆ. ಏಕೆಂದರೆ, ನೀನು ಅವುಗಳ ಮೂಲಕ ದೃಶ್ಯನಲ್ಲ; ಅವುಗಳ ಸಾಕ್ಷಿಯಾಗಿರುವೆ. ಅದಕ್ಕಾಗಿ ನಿನ್ನ ಗುಣ, ಜನ್ಮ ಮತ್ತು ಕರ್ಮವೇ ಮೊದಲಾದವುಗಳ ಮೂಲಕ ನಿನ್ನ ನಾಮ-ರೂಪಗಳ ನಿರೂಪಣೆ ಮಾಡಲಾಗುವುದಿಲ್ಲ. ಹೀಗಿದ್ದರೂ ಪ್ರಭುವೇ! ನಿನ್ನ ಭಕ್ತಜನರು ಉಪಾಸನಾದಿ ಕ್ರಿಯಾಯೋಗಗಳ ಮೂಲಕ ನಿನ್ನ ಸಾಕ್ಷಾತ್ಕಾರವನ್ನಾದರೋ ಪಡೆದುಕೊಳ್ಳುವರು. ॥36॥
(ಶ್ಲೋಕ-37)
ಮೂಲಮ್
ಶೃಣ್ವನ್ಗೃಣನ್ಸಂಸ್ಮರಯಂಶ್ಚ ಚಿಂತಯನ್
ನಾಮಾನಿ ರೂಪಾಣಿ ಚ ಮಂಗಲಾನಿ ತೇ ।
ಕ್ರಿಯಾಸು ಯಸ್ತ್ವಚ್ಚರಣಾರವಿಂದಯೋ-
ರಾವಿಷ್ಟಚೇತಾ ನ ಭವಾಯ ಕಲ್ಪತೇ ॥
ಅನುವಾದ
ನಿನ್ನ ಮಂಗಳಮಯ ನಾಮಗಳನ್ನು ಮತ್ತು ರೂಪಗಳನ್ನು ಶ್ರವಣಿಸುತ್ತಾ, ಕೀರ್ತಿಸುತ್ತಾ, ಸ್ಮರಿಸುತ್ತಾ, ಧ್ಯಾನಿಸುತ್ತಾ ನಿನ್ನ ಚರಣ ಕಮಲಗಳ ಸೇವೆಯಲ್ಲೇ ಮನಸ್ಸನ್ನು ತೊಡಗಿಸಿದವನಿಗೆ ಮತ್ತೆ ಜನ್ಮ ಮೃತ್ಯು ರೂಪವಾದ ಸಂಸಾರಚಕ್ರದಲ್ಲಿ ಸಿಕ್ಕಿಕೊಳ್ಳಬೇಕಾಗುವುದಿಲ್ಲ. ॥37॥
(ಶ್ಲೋಕ-38)
ಮೂಲಮ್
ದಿಷ್ಟ್ಯಾ ಹರೇಸ್ಯಾ ಭವತಃ ಪದೋ ಭುವೋ
ಭಾರೋಪನೀತಸ್ತವ ಜನ್ಮನೇಶಿತುಃ ।
ದಿಷ್ಟ್ಯಾಂಕಿತಾಂ ತ್ವತ್ಪದಕೈಃ ಸುಶೋಭನೈ-
ರ್ದ್ರಕ್ಷ್ಯಾಮ ಗಾಂ ದ್ಯಾಂ ಚ ತವಾನುಕಂಪಿತಾಮ್ ॥
ಅನುವಾದ
ಸಮಸ್ತ ದುಃಖಗಳನ್ನು ದೂರಮಾಡುವ ದಯಾಮಯನಾದ ಭಗವಂತನೇ! ನೀನು ಸರ್ವೇಶ್ವರನು. ಈ ಪೃಥಿವಿಯಾದರೋ ನಿನ್ನ ಚರಣಕಮಲವೇ ಆಗಿದೆ. ನಿನ್ನ ಅವತಾರದಿಂದ ಇದರ ಭಾರ ದೂರವಾಗುವುದು. ಪ್ರಭೋ! ನಿನ್ನ ಸುಂದರವಾದ ಚರಣ ಚಿಹ್ನೆಗಳಿರುವ ಚರಣಕಮಲಗಳಿಂದ ಭೂಷಿತವಾದ ಈ ಭೂಮಿಯನ್ನು ನೋಡುವ ನಾವೇ ಭಾಗ್ಯಶಾಲಿಗಳು ಮತ್ತು ಸ್ವರ್ಗಲೋಕವನ್ನೂ ನಿನ್ನ ಕೃಪಾವಿಶೇಷದಿಂದ ಕೃತಾರ್ಥವಾಗಿರುವುದನ್ನು ನೋಡುವೆವು. ॥38॥
(ಶ್ಲೋಕ-39)
ಮೂಲಮ್
ನ ತೇಭವಸ್ಯೇಶ ಭವಸ್ಯ ಕಾರಣಂ
ವಿನಾ ವಿನೋದಂ ಬತ ತರ್ಕಯಾಮಹೇ ।
ಭವೋ ನಿರೋಧಃ ಸ್ಥಿತಿರಪ್ಯವಿದ್ಯಯಾ
ಕೃತಾ ಯತಸ್ತ್ವಯ್ಯಭಯಾಶ್ರಯಾತ್ಮನಿ ॥
ಅನುವಾದ
ಪ್ರಭುವೇ! ನೀನು ಹುಟ್ಟು ಸಾವುಗಳಿಲ್ಲದವನು. ಆದರೆ ಈಗ ಮನುಷ್ಯರೂಪದಿಂದ ಹುಟ್ಟುತ್ತಿರುವೆ. ಇದರ ಕಾರಣವನ್ನು ನಾವು ಊಹಿಸುವುದಾದರೆ ನೀನು ಭೂಮಿಯಲ್ಲಿ ಹುಟ್ಟುವುದು, ಬೆಳೆಯುವುದು ನಿನ್ನ ಲೀಲಾವಿನೋದವೆಂದೇ ಹೇಳಬೇಕಾಗಿದೆ. ಹೀಗೆ ಹೇಳುವ ಕಾರಣವು ನೀನಾದರೋ ದ್ವೈತದ ಲವಲೇಶದಿಂದ ರಹಿತನಾದ, ಸರ್ವಾಧಿಷ್ಠಾನ ಸ್ವರೂಪನಾಗಿರುವೆ. ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯ ಇವುಗಳನ್ನು ನಿನ್ನಲ್ಲಿ ಅಜ್ಞಾನದಿಂದಲೇ ಆರೋಪಿಸಲಾಗುತ್ತದೆ. ॥39॥
(ಶ್ಲೋಕ-40)
ಮೂಲಮ್
ಮತ್ಸ್ಯಾಶ್ವಕಚ್ಛಪನೃಸಿಂಹವರಾಹಹಂಸ-
ರಾಜನ್ಯವಿಪ್ರವಿಬುಧೇಷು ಕೃತಾವತಾರಃ ।
ತ್ವಂ ಪಾಸಿ ನಸಿ ಭುವನಂ ಚ ಯಥಾಧುನೇಶ
ಭಾರಂ ಭುವೋ ಹರ ಯದೂತ್ತಮ ವಂದನಂ ತೇ ॥
ಅನುವಾದ
ಪ್ರಭುವೇ! ನೀನು ಅನೇಕಬಾರಿ ಮತ್ಸ್ಯ, ಹಯಗ್ರೀವ, ಕಚ್ಛಪ, ನರಸಿಂಹ, ವರಾಹ, ಹಂಸ, ರಾಮ, ಪರಶುರಾಮ, ವಾಮನ ಮೊದಲಾದ ಅನೇಕ ಅವತಾರಗಳನ್ನೆತ್ತಿ ನಮ್ಮನ್ನು ಮತ್ತು ಮೂರು ಲೋಕಗಳನ್ನು ರಕ್ಷಿಸಿದಂತೆಯೇ, ನೀನು ಈ ಸಲವೂ ಭೂಭಾರವನ್ನು ಹರಿಸು. ಯದುನಂದನ! ನಾವು ನಿನ್ನ ಚರಣಗಳಲ್ಲಿ ವಂದಿಸುತ್ತೇವೆ. ॥40॥
(ಶ್ಲೋಕ-41)
ಮೂಲಮ್
ದಿಷ್ಟ್ಯಾಂಬ ತೇ ಕುಕ್ಷಿಗತಃ ಪರಃ ಪುಮಾನ್
ಅಂಶೇನ ಸಾಕ್ಷಾದ್ಭಗವಾನ್ಭವಾಯ ನಃ ।
ಮಾ ಭೂದ್ಭಯಂ ಭೋಜಪತೇರ್ಮುಮೂರ್ಷೋ-
ರ್ಗೋಪ್ತಾ ಯದೂನಾಂ ಭವಿತಾ ತವಾತ್ಮಜಃ ॥
ಅನುವಾದ
(ಅನಂತರ ದೇವಕಿಯನ್ನು ಸಂಬೋಧಿಸುತ್ತಾ) ತಾಯೇ! ಸೌಭಾಗ್ಯ ವಶದಿಂದ ನಮ್ಮೆಲ್ಲರಿಗೂ ಕಲ್ಯಾಣವನ್ನುಂಟು ಮಾಡುವುದಕ್ಕಾಗಿ ಭಗವಾನ್ ಪುರುಷೋತ್ತಮನು ತನ್ನ ಜ್ಞಾನ, ಬಲವೇ ಮೊದಲಾದ ಅಂಶಗಳೊಡನೆ (ಪೂರ್ಣ ಸ್ವರೂಪನಾಗಿ) ನಿನ್ನ ಗರ್ಭದಲ್ಲಿದ್ದಾನೆ. ಸಾಯಲು ಸಿದ್ಧನಾಗಿ ನಿಂತಿರುವ ಭೋಜಪತಿಯಾದ ಕಂಸನಿಂದ ಇನ್ನು ನಿನಗೆ ಯಾವ ಭಯವೂ ಬೇಡ. ನಿನ್ನ ಪುತ್ರನು ಯದುವಂಶವನ್ನು ರಕ್ಷಿಸುವನು. ॥41॥
(ಶ್ಲೋಕ-42)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಭಿಷ್ಟೂಯ ಪುರುಷಂ ಯದ್ರೂಪಮನಿದಂ ಯಥಾ ।
ಬ್ರಹ್ಮೇಶಾನೌ ಪುರೋಧಾಯ ದೇವಾಃ ಪ್ರತಿಯಯುರ್ದಿವಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಯಾವನ ರೂಪವನ್ನು ಇಂತಹುದೇ ಎಂದು ನಿಶ್ಚಯ ಮಾಡಲು ಸಾಧ್ಯವಿಲ್ಲವೋ, ಅಂತಹ ಪರಮ ಪುರುಷನನ್ನು ಹೀಗೆ ಸ್ತೋತ್ರ ಮಾಡಿದ ಬಳಿಕ ಬ್ರಹ್ಮ-ರುದ್ರರನ್ನು ಮುಂದೆ ಮಾಡಿಕೊಂಡು ದೇವತೆಗಳು ಸ್ವರ್ಗಕ್ಕೆ ತೆರಳಿದರು. ॥42॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಪೂರ್ವಾರ್ಧೇ ಗರ್ಭಗತವಿಷ್ಣೋರ್ಬ್ರಹ್ಮಾದಿಕೃತಸ್ತುತಿರ್ನಾಮ ದ್ವಿತೀಯೋಽಧ್ಯಾಯಃ ॥2॥