೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ನಾಭಾಗ ಮತ್ತು ಅಂಬರೀಷರ ಕಥೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಾಭಾಗೋ ನಭಗಾಪತ್ಯಂ ಯಂ ತತಂ ಭ್ರಾತರಃ ಕವಿಮ್ ।
ಯವಿಷ್ಠಂ ವ್ಯಭಜನ್ ದಾಯಂ ಬ್ರಹ್ಮಚಾರಿಣಮಾಗತಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಮನುಪುತ್ರನಾದ ನಭಗನಿಗೆ ನಾಭಾಗನೆಂಬ ಕಿರಿಯ ಮಗನಿದ್ದನು. ಅವನು ಬಹಳ ಕಾಲದವರೆಗೆ ಬ್ರಹ್ಮಚರ್ಯ ವ್ರತದಲ್ಲಿದ್ದು ಮಹಾವಿದ್ವಾಂಸನಾಗಿ ಮನೆಗೆ ಮರಳಿದನು. ॥1॥

(ಶ್ಲೋಕ-2)

ಮೂಲಮ್

ಭ್ರಾತರೋಽಭಾಂಕ್ತ ಕಿಂ ಮಹ್ಯಂ ಭಜಾಮ ಪಿತರಂ ತವ ।
ತ್ವಾಂ ಮಮಾರ್ಯಾಸ್ತತಾಭಾಂಕ್ಷುರ್ಮಾ ಪುತ್ರಕ ತದಾದೃಥಾಃ ॥

ಅನುವಾದ

ಆಗ ಅವನು ಕೇಳಿದನು ಸೋದರರೇ! ನೀವು ನನ್ನ ಪಾಲನ್ನು ಏನು ಕೊಟ್ಟಿರುವಿರಿ? ಆಗ ಅವರು ನಿನಗೆ ನಿನ್ನ ಪಾಲಾಗಿ ತಂದೆಯವರನ್ನೇ ಕೊಟ್ಟಿರುವೆವು ಎಂದು ಹೇಳಿದರು. ಅವನು ತಂದೆಯ ಬಳಿಗೆ ಹೋಗಿ ವಿಚಾರಿಸಿದನು ಅಪ್ಪಾ! ನನ್ನ ಅಣ್ಣಂದಿರು ನನ್ನ ಪಾಲಿನಲ್ಲಿ ನಿಮ್ಮನ್ನೇ ಕೊಟ್ಟಿರುವರು. ತಂದೆ ಹೇಳಿದನು ‘ಮಗೂ! ನೀನು ಇವರ ಮಾತನ್ನು ಕೇಳಬೇಡ.॥2॥

(ಶ್ಲೋಕ-3)

ಮೂಲಮ್

ಇಮೇ ಅಂಗಿರಸಃ ಸತ್ರಮಾಸತೇಽದ್ಯ ಸುಮೇಧಸಃ ।
ಷಷ್ಠಂ ಷಷ್ಠಮುಪೇತ್ಯಾಹಃ ಕವೇ ಮುಹ್ಯಂತಿ ಕರ್ಮಣಿ ॥

ಅನುವಾದ

ನಿನ್ನ ಜೀವನೋಪಾಯಕ್ಕೊಂದು ಮಾರ್ಗವನ್ನು ಸೂಚಿಸುವೆನು. ಒಳ್ಳೆಯ ಮೇಧಾವಂತರಾದ ಅಂಗಿರಸರು ಈಗ ಒಂದು ದೊಡ್ಡ ಯಜ್ಞವನ್ನು ಮಾಡುತ್ತಿದ್ದಾರೆ. ಅವರು ಬುದ್ಧಿವಂತರೆಂಬುದೂ ಸತ್ಯ. ಆದರೆ ಅವರು ಆರನೆಯ ದಿನ ತಮ್ಮ ಕರ್ಮಗಳನ್ನು ಮರೆತು ಕಿಂಕರ್ತವ್ಯ ಮೂಢರಾಗುವರು. ॥3॥

(ಶ್ಲೋಕ-4)

ಮೂಲಮ್

ತಾಂಸ್ತ್ವಂ ಶಂಸಯ ಸೂಕ್ತೇ ದ್ವೇ ವೈಶ್ವದೇವೇ ಮಹಾತ್ಮನಃ ।
ತೇ ಸ್ವರ್ಯಂತೋ ಧನಂ ಸತ್ರಪರಿಶೇಷಿತಮಾತ್ಮನಃ ॥

(ಶ್ಲೋಕ-5)

ಮೂಲಮ್

ದಾಸ್ಯಂತಿ ತೇಽಥ ತಾನ್ ಗಚ್ಛ ತಥಾ ಸ ಕೃತವಾನ್ಯಥಾ ।
ತಸ್ಮೈ ದತ್ತ್ವಾ ಯಯುಃ ಸ್ವರ್ಗಂ ತೇ ಸತ್ರಪರಿಶೇಷಿತಮ್ ॥

ಅನುವಾದ

ಮಗೂ! ನೀನು ಆ ಮಹಾತ್ಮರ ಬಳಿಗೆ ಹೋಗಿ ಅವರಿಗೆ ವೈಶ್ವದೇವ ಸಂಬಂಧಿ ಎರಡು ಸೂಕ್ತಗಳನ್ನು ಉಪದೇಶಿಸು. ಅದರಿಂದ ಅವರು ಸ್ವರ್ಗಕ್ಕೆ ಹೋಗುವಾಗ ಯಜ್ಞದಲ್ಲಿ ಉಳಿದಿರುವ ತಮ್ಮ ಸಕಲ ಧನವನ್ನೂ ನಿನಗೆ ಕೊಡುವರು. ಅದಕ್ಕಾಗಿ ನೀನು ಈಗಲೇ ಅವರ ಬಳಿಗೆ ಹೋಗು.’ ತಂದೆಯ ಆದೇಶದಂತೆ ನಾಭಾಗನು ಹಾಗೆ ಮಾಡಿದನು. ಆ ಅಂಗೀರಸರೂ ಕೂಡ ಯಜ್ಞಶಿಷ್ಟ ಭಾಗವನ್ನು ಅವನಿಗೆ ಕೊಟ್ಟು ಸ್ವರ್ಗಕ್ಕೆ ಹೊರಟುಹೋದರು. ॥4-5॥

(ಶ್ಲೋಕ-6)

ಮೂಲಮ್

ತಂ ಕಶ್ಚಿತ್ ಸ್ವೀಕರಿಷ್ಯಂತಂ ಪುರುಷಃ ಕೃಷ್ಣದರ್ಶನಃ ।
ಉವಾಚೋತ್ತರತೋಽಭ್ಯೇತ್ಯ ಮಮೇದಂ ವಾಸ್ತುಕಂ ವಸು ॥

ಅನುವಾದ

ನಾಭಾಗನು ಆ ಧನವನ್ನು ತೆಗೆದುಕೊಳ್ಳ ತೊಡಗಿದಾಗ ಉತ್ತರದ ಕಡೆಯಂದ ಓರ್ವ ಕಪ್ಪಾದ ಪುರುಷನು ಬಂದನು. ಅವನು ಹೇಳಿದನು ‘ಈ ಯಜ್ಞ ಭೂಮಿಯಲ್ಲಿ ಉಳಿದೆಲ್ಲ ಧನಭಾಗವೂ ನನ್ನದಾಗಿದೆ.’ ॥6॥

(ಶ್ಲೋಕ-7)

ಮೂಲಮ್

ಮಮೇದಮೃಷಿಭಿರ್ದತ್ತಮಿತಿ ತರ್ಹಿ ಸ್ಮ ಮಾನವಃ ।
ಸ್ಯಾನ್ನೌ ತೇ ಪಿತರಿ ಪ್ರಶ್ನಃ ಪೃಷ್ಟವಾನ್ ಪಿತರಂ ತಥಾ ॥

ಅನುವಾದ

ನಾಭಾಗನು ಹೇಳಿದನು — ‘ಋಷಿಗಳು ಈ ಧನವನ್ನು ನನಗೆ ಕೊಟ್ಟಿರುವರು, ಅದಕ್ಕಾಗಿ ನನ್ನದಾಗಿದೆ.’ ಆಗ ಆ ಪುರುಷನು ಹೇಳಿದನು ನಮ್ಮ ಈ ವಿವಾದವು ನಿನ್ನ ತಂದೆಯಮುಂದೆ ಇಡಲ್ಪಡಲಿ. ನಾಭಾಗನು ಅದರಂತೆ ತಂದೆಯ ಬಳಿಗೆ ಹೋಗಿ ಕೇಳಿದನು.॥7॥

(ಶ್ಲೋಕ-8)

ಮೂಲಮ್

ಯಜ್ಞವಾಸ್ತುಗತಂ ಸರ್ವಮುಚ್ಛಿಷ್ಟಮೃಷಯಃ ಕ್ವಚಿತ್ ।
ಚಕ್ರುರ್ವಿಭಾಗಂ ರುದ್ರಾಯ ಸ ದೇವಃ ಸರ್ವಮರ್ಹತಿ ॥

ಅನುವಾದ

ತಂದೆಯು ಹೇಳಿದನು ‘ಒಮ್ಮೆ ದಕ್ಷ ಪ್ರಜಾಪತಿಯ ಯಜ್ಞದಲ್ಲಿ ‘ಯಜ್ಞಭೂಮಿಯಲ್ಲಿ ಉಳಿದೆಲ್ಲವೂ ರುದ್ರದೇವರ ಪಾಲು ಆಗಿದೆ’ ಎಂದು ನಿಶ್ಚಯಿಸಿಬಿಟ್ಟಿರುವರು. ಅದಕ್ಕಾಗಿ ಈ ಧನವಾದರೋ ಮಹಾದೇವನಿಗೇ ಸಿಗಬೇಕು.’ ॥8॥

(ಶ್ಲೋಕ-9)

ಮೂಲಮ್

ನಾಭಾಗಸ್ತಂ ಪ್ರಣಮ್ಯಾಹ ತವೇಶ ಕಿಲ ವಾಸ್ತುಕಮ್ ।
ಇತ್ಯಾಹ ಮೇ ಪಿತಾ ಬ್ರಹ್ಮಂಛಿರಸಾ ತ್ವಾಂ ಪ್ರಸಾದಯೇ ॥

ಅನುವಾದ

ನಾಭಾಗನು ಹೋಗಿ ಆ ಕಪ್ಪಾದ ಪುರುಷನಾದ ಭಗವಾನ್ ರುದ್ರದೇವರಿಗೆ ನಮಸ್ಕಾರಮಾಡಿ ಹೇಳಿದನು ಸ್ವಾಮಿ! ಯಜ್ಞ ಭೂಮಿಯ ಎಲ್ಲ ವಸ್ತುಗಳೂ ತಮ್ಮದೇ ಆಗಿವೆ ಎಂದು ನನ್ನ ತಂದೆಯವರು ಹೇಳಿರುವರು. ಭಗವಂತಾ! ನನ್ನಿಂದ ಅಪರಾಧವಾಯಿತು. ನಾನು ತಲೆಬಾಗಿ ತಮ್ಮಲ್ಲಿ ಕ್ಷಮೆಯನ್ನು ಯಾಚಿಸುತ್ತೇನೆ.॥9॥

(ಶ್ಲೋಕ-10)

ಮೂಲಮ್

ಯತ್ತೇ ಪಿತಾವದದ್ಧರ್ಮಂ ತ್ವಂ ಚ ಸತ್ಯಂ ಪ್ರಭಾಷಸೇ ।
ದದಾಮಿ ತೇ ಮಂತ್ರದೃಶೇ ಜ್ಞಾನಂ ಬ್ರಹ್ಮ ಸನಾತನಮ್ ॥

ಅನುವಾದ

ಆಗ ಭಗವಾನ್ ರುದ್ರದೇವರು ಹೇಳಿದರು ‘ನಿನ್ನ ತಂದೆಯು ಧರ್ಮಕ್ಕೆ ಅನುಕೂಲವಾದ ನಿರ್ಣಯವನ್ನೇ ಕೊಟ್ಟಿರುವನು. ನೀನೂ ಕೂಡ ನನ್ನಲ್ಲಿ ಸತ್ಯವನ್ನೇ ನುಡಿದಿರುವೆ. ನೀನು ವೇದಗಳ ಅರ್ಥವನ್ನಾದರೋ ಮೊದಲಿನಿಂದಲೇ ತಿಳಿದಿರುವೆ. ಈಗ ನಾನು ನಿನಗೆ ಸನಾತನ ಬ್ರಹ್ಮತತ್ತ್ವದ ಜ್ಞಾನವನ್ನು ಉಪದೇಶಿಸುವೆನು. ॥10॥

(ಶ್ಲೋಕ-11)

ಮೂಲಮ್

ಗೃಹಾಣ ದ್ರವಿಣಂ ದತ್ತಂ ಮತ್ಸತ್ರೇ ಪರಿಶೇಷಿತಮ್ ।
ಇತ್ಯುಕ್ತ್ವಾಂತರ್ಹಿತೋ ರುದ್ರೋ ಭಗವಾನ್ ಸತ್ಯವತ್ಸಲಃ ॥

ಅನುವಾದ

ಇಲ್ಲಿ ಯಜ್ಞದಲ್ಲಿ ಉಳಿದಿರುವ ನನ್ನ ಅಂಶವಾದ ಈ ಧನವನ್ನೂ ನಿನಗೇ ಕೊಡುತ್ತಿದ್ದೇನೆ. ನೀನು ಇದನ್ನು ಸ್ವೀಕರಿಸು.’ ಇಷ್ಟು ಹೇಳಿ ಸತ್ಯಪ್ರಿಯ ಭಗವಾನ್ ರುದ್ರದೇವನು ಅಂತರ್ಧಾನನಾದನು.॥11॥

(ಶ್ಲೋಕ-12)

ಮೂಲಮ್

ಯ ಏತತ್ಸಂಸ್ಮರೇತ್ ಪ್ರಾತಃ ಸಾಯಂ ಚ ಸುಸಮಾಹಿತಃ ।
ಕವಿರ್ಭವತಿ ಮಂತ್ರಜ್ಞೋ ಗತಿಂ ಚೈವ ತಥಾಽಽತ್ಮನಃ ॥

ಅನುವಾದ

ಪ್ರಾತಃಕಾಲ-ಸಾಯಂಕಾಲಗಳಲ್ಲಿ ಏಕಾಗ್ರ ಚಿತ್ತದಿಂದ ಈ ಆಖ್ಯಾನವನ್ನು ಸ್ಮರಿಸುವ ಮನುಷ್ಯನು ಪ್ರತಿಭಾಶಾಲಿಯಾಗಿ, ವೇದಜ್ಞನಾಗುವನು; ಜೊತೆಗೆ ತನ್ನ ಸ್ವಸ್ವರೂಪವನ್ನೂ ಅರಿತುಕೊಳ್ಳುವನು.॥12॥

(ಶ್ಲೋಕ-13)

ಮೂಲಮ್

ನಾಭಾಗಾದಂಬರೀಷೋಽಭೂನ್ಮಹಾಭಾಗವತಃ ಕೃತೀ ।
ನಾಸ್ಪೃಶದ್ ಬ್ರಹ್ಮಶಾಪೋಽಪಿ ಯಂ ನ ಪ್ರತಿಹತಃ ಕ್ವಚಿತ್ ॥

ಅನುವಾದ

ನಾಭಾಗನಿಗೆ ಅಂಬರೀಷನೆಂಬ ಪುತ್ರನಾದನು. ಅವನು ಭಗವತ್ಪ್ರೇಮಿಯೂ, ಧರ್ಮಾತ್ಮನೂ, ಭಾಗವತೋತ್ತಮನೂ ಆಗಿದ್ದನು. ಎಂದಿಗೂ ತಡೆಯಲು ಅಶಕ್ಯವಾದ ಬ್ರಹ್ಮಶಾಪವೂ ಕೂಡ ಅಂಬರೀಷನನ್ನು ಸ್ಪರ್ಶಿಸಲಾರದೆ ಹೋಯಿತು.॥13॥

(ಶ್ಲೋಕ-14)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಭಗವನ್ ಶ್ರೋತುಮಿಚ್ಛಾಮಿ ರಾಜರ್ಷೇಸ್ತಸ್ಯ ಧೀಮತಃ ।
ನ ಪ್ರಾಭೂದ್ಯತ್ರ ನಿರ್ಮುಕ್ತೋ ಬ್ರಹ್ಮದಂಡೋ ದುರತ್ಯಯಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾಮುನಿಗಳೇ! ಪರಮ ಜ್ಞಾನಿಯಾದ ರಾಜರ್ಷಿ ಅಂಬರೀಷನ ಚರಿತ್ರವನ್ನು ನಾನು ಕೇಳಲು ಬಯಸುತ್ತಿರುವೆನು. ಬ್ರಾಹ್ಮಣನು ಕ್ರೋಧಗೊಂಡು ಯಾವ ರೀತಿಯಿಂದಲೂ ನಿವಾರಿಸಲು ಸಾಧ್ಯವಿಲ್ಲದ ಬ್ರಹ್ಮದಂಡವನ್ನು ವಿಧಿಸಿದರೂ ಅಂಬರೀಷನ ಕೂದಲೂ ಕೊಂಕಿಸಲಾಗಲಿಲ್ಲ. ಇಂತಹವನ ಚರಿತ್ರೆಯನ್ನು ಹೇಳಿರಿ.॥14॥

(ಶ್ಲೋಕ-15)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಂಬರೀಷೋ ಮಹಾಭಾಗಃ ಸಪ್ತದ್ವೀಪವತೀಂ ಮಹೀಮ್ ।
ಅವ್ಯಯಾಂ ಚ ಶ್ರಿಯಂ ಲಬ್ಧ್ವಾ ವಿಭವಂ ಚಾತುಲಂ ಭುವಿ ॥

(ಶ್ಲೋಕ-16)

ಮೂಲಮ್

ಮೇನೇತಿದುರ್ಲಭಂ ಪುಂಸಾಂ ಸರ್ವಂ ತತ್ಸ್ವಪ್ನಸಂಸ್ತುತಮ್ ।
ವಿದ್ವಾನ್ವಿಭವನಿರ್ವಾಣಂ ತಮೋ ವಿಶತಿ ಯತ್ಪುಮಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿದ್ರಾಜನೇ! ಅಂಬರೀಷನು ಮಹಾಭಾಗ್ಯಶಾಲಿಯಾಗಿದ್ದನು. ಸಪ್ತದ್ವೀಪ ಗಳಿಂದೊಡಗೊಂಡ ಅಖಂಡ ಭೂಮಂಡಲಕ್ಕೆ ಒಡೆಯನಾಗಿ ಅಚಲ ಸಂಪತ್ತು ಮತ್ತು ಅತುಲ ಐಶ್ವರ್ಯವು ಅವನಿಗೆ ಪ್ರಾಪ್ತವಾಗಿತ್ತು. ಇವೆಲ್ಲವೂ ಸಾಮಾನ್ಯ ಮನುಷ್ಯರಿಗೆ ಅತ್ಯಂತ ದುರ್ಲಭವಾಗಿದ್ದರೂ ಅವನು ಇವನ್ನು ಸ್ವಪ್ನದಂತೆ ಕ್ಷಣಿಕವೆಂದೇ ತಿಳಿಯುತ್ತಿದ್ದನು. ಏಕೆಂದರೆ, ಯಾವ ವೈಭವ-ಸಂಪತ್ತಿನ ಲೋಭದಿಂದ ಮನುಷ್ಯನು ತಮೋ ಗುಣದಲ್ಲಿ ಮುಳುಗಿ ನರಕಕ್ಕೆ ಹೋಗುತ್ತಾನೋ, ಅಂತಹ ವೈಭವಗಳೆಲ್ಲವೂ ಒಂದುದಿನ ನಾಶವಾಗುವುದೆಂಬುದನ್ನು ಅಂಬರೀಷನು ಅರಿತಿದ್ದನು. ॥15-16॥

(ಶ್ಲೋಕ-17)

ಮೂಲಮ್

ವಾಸುದೇವೇ ಭಗವತಿ ತದ್ಭಕ್ತೇಷು ಚ ಸಾಧುಷು ।
ಪ್ರಾಪ್ತೋ ಭಾವಂ ಪರಂ ವಿಶ್ವಂ ಯೇನೇದಂ ಲೋಷ್ಟವತ್ ಸ್ಮೃತಮ್ ॥

ಅನುವಾದ

ಭಗವಾನ್ ವಾಸುದೇವನಲ್ಲಿ ಹಾಗೂ ಅವನ ಏಕಾಂತ ಭಕ್ತರಲ್ಲಿ ಅಂಬರೀಷನಿಗೆ ಪರಮ ಪ್ರೀತಿ-ಭಕ್ತಿಯಿತ್ತು. ಅಂತಹ ಭಕ್ತಿಯು ಪ್ರಾಪ್ತವಾದ ಮೇಲಂತೂ ಈ ಇಡೀ ವಿಶ್ವ ಮತ್ತು ಸಮಸ್ತ ಸಂಪತ್ತು ಮಣ್ಣಿನಹೆಂಟೆಯಂತೆ ಕಂಡು ಬರುತ್ತಿತ್ತು. ॥17॥

(ಶ್ಲೋಕ-18)

ಮೂಲಮ್

ಸ ವೈ ಮನಃ ಕೃಷ್ಣಪದಾರವಿಂದಯೋ-
ರ್ವಚಾಂಸಿ ವೈಕುಂಠ ಗುಣಾನುವರ್ಣನೇ ।
ಕರೌ ಹರೇರ್ಮಂದಿರಮಾರ್ಜನಾದಿಷು
ಶ್ರುತಿಂ ಚಕಾರಾಚ್ಯುತಸತ್ಕಥೋದಯೇ ॥

ಅನುವಾದ

ಪರಮಭಾಗವತನಾದ ಅಂಬರೀಷನು ಮನಸ್ಸನ್ನು ಭಗವಾನ್ ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಲೀನಗೊಳಿಸಿದ್ದನು. ವಾಣಿಯನ್ನು ಭಗವದ್ಗುಣ ಕೀರ್ತನೆಯಲ್ಲಿ, ಕೈಗಳನ್ನು ಶ್ರೀಹರಿಮಂದಿರವನ್ನು ಗುಡಿಸುವುದು, ಸಾರಿಸುವುದರಲ್ಲಿ, ತನ್ನ ಕಿವಿಗಳನ್ನು ಭಗವಾನ್ ಅಚ್ಯುತನ ಮಂಗಲಮಯ ಕಥಾಶ್ರವಣದಲ್ಲಿ ತೊಡಗಿಸಿದ್ದನು. ॥18॥

(ಶ್ಲೋಕ-19)

ಮೂಲಮ್

ಮುಕುಂದಲಿಂಗಾಲಯದರ್ಶನೇ ದೃಶೌ
ತದ್ಭೃತ್ಯಗಾತ್ರಸ್ಪರ್ಶೇಽಙ್ಗ ಸಂಗಮಮ್ ।
ಘ್ರಾಣಂ ಚ ತತ್ಪಾದಸರೋಜಸೌರಭೇ
ಶ್ರೀಮತ್ತುಲಸ್ಯಾ ರಸನಾಂ ತದರ್ಪಿತೇ ॥

ಅನುವಾದ

ಅವನು ತನ್ನ ಕಣ್ಣುಗಳನ್ನು ಮುಕುಂದನ ಮೂರ್ತಿಯನ್ನೂ, ಮಂದಿರಗಳನ್ನೂ ದರ್ಶಿಸಲು, ಅಂಗ-ಸಂಗವನ್ನು ಭಗವದ್ಭಕ್ತರ ಶರೀರ ಸ್ಪರ್ಶದಲ್ಲಿಯೂ, ಮೂಗನ್ನು ಭಗವಂತನ ಚರಣಕಮಲಗಳಲ್ಲಿ ಅರ್ಪಿಸಿದ ತುಲಸಿಯ ದಿವ್ಯ ಪರಿಮಳವನ್ನು ಆಘ್ರಾಣಿಸಲು, ನಾಲಿಗೆಯನ್ನು ಪರಮಾತ್ಮನಿಗೆ ಅರ್ಪಿಸಿದ ನೈವೇದ್ಯ-ಪ್ರಸಾದ ಸೇವಿಸಲು ಮೀಸಲಾಗಿಟ್ಟಿದ್ದನು. ॥19॥

(ಶ್ಲೋಕ-20)

ಮೂಲಮ್

ಪಾದೌ ಹರೇಃ ಕ್ಷೇತ್ರಪದಾನುಸರ್ಪಣೇ
ಶಿರೋ ಹೃಷಿಕೇಶಪದಾಭಿವಂದನೇ ।
ಕಾಮಂ ಚ ದಾಸ್ಯೇ ನ ತು ಕಾಮಕಾಮ್ಯಯಾ
ಯಥೋತ್ತಮಶ್ಲೋಕಜನಾಶ್ರಯಾ ರತಿಃ ॥

ಅನುವಾದ

ಅಂಬರೀಷನು ತನ್ನ ಕಾಲುಗಳನ್ನು ಭಗವಂತನ ದಿವ್ಯತೀರ್ಥ ಕ್ಷೇತ್ರಯಾತ್ರೆ ಮಾಡುವುದಕ್ಕೂ ತೊಡಗಿಸಿದ್ದನು. ಅವನು ಸದಾಕಾಲ ತಲೆಯಿಂದ ಭಗವಾನ್ ಶ್ರೀಕೃಷ್ಣನ ಚರಣ ಕಮಲಗಳ ವಂದನೆಯನ್ನು ಮಾಡುತ್ತಿದ್ದನು. ಭಗವಂತನ ದಾಸ್ಯ ಮಾಡಬೇಕೆಂಬುದೇ ಅವನ ಮುಖ್ಯ ಕಾಮನೆಯಾಗಿತ್ತು. ಆ ದಾಸ್ಯವೂ ನಿಷ್ಕಾಮದಾಸ್ಯವಾಗಿದ್ದು, ಹರಿಪ್ರೀತ್ಯರ್ಥವಾಗಿಯೇ ಇತ್ತು. ಉತ್ತಮ ಕೀರ್ತಿಯುಳ್ಳ ಭಗವದ್ಭಕ್ತರನ್ನು ಅವನ ಪ್ರೀತಿಯು ಆಶ್ರಯಿಸಿತ್ತು. ಶ್ರೀಕೃಷ್ಣನ ಭಕ್ತರಲ್ಲಿ ಅಂಬರೀಷನಿಗೆ ಅಪಾರ ವಾದ ಭಕ್ತಿಯಿತ್ತು. ॥20॥

(ಶ್ಲೋಕ-21)

ಮೂಲಮ್

ಏವಂ ಸದಾ ಕರ್ಮಕಲಾಪಮಾತ್ಮನಃ
ಪರೇಽಧಿಯಜ್ಞೇ ಭಗವತ್ಯಧೋಕ್ಷಜೇ ।
ಸರ್ವಾತ್ಮಭಾವಂ ವಿದಧನ್ಮಹೀಮಿಮಾಂ
ತನ್ನಿಷ್ಠವಿಪ್ರಾಭಿಹಿತಃ ಶಶಾಸ ಹ ॥

ಅನುವಾದ

ಹೀಗೆ ಅವನು ತನ್ನ ಸಮಸ್ತ ಕರ್ಮಗಳನ್ನು ಯಜ್ಞಪುರುಷ, ಇಂದ್ರಿಯಾತೀತ ಭಗವಂತನನ್ನು ಸರ್ವಾತ್ಮಾ, ಸರ್ವಸ್ವರೂಪನೆಂದು ತಿಳಿದು ಅರ್ಪಿಸಿಬಿಟ್ಟಿದ್ದನು. ಭಗವದ್ಭಕ್ತ ಬ್ರಾಹ್ಮಣರ ಅನುಶಾಸನ ದಂತೆ ಅವನು ರಾಜ್ಯವನ್ನಾಳುತ್ತಿದ್ದನು. ॥21॥

(ಶ್ಲೋಕ-22)

ಮೂಲಮ್

ಈಜೇಽಶ್ವಮೇಧೈರಧಿಯಜ್ಞಮೀಶ್ವರಂ
ಮಹಾವಿಭೂತ್ಯೋಪಚಿತಾಂಗ ದಕ್ಷಿಣೈಃ ।
ತತೈರ್ವಸಿಷ್ಠಾಸಿತಗೌತಮಾದಿಭಿ-
ರ್ಧನ್ವನ್ಯಭಿಸ್ರೋತಮಸೌ ಸರಸ್ವತೀಮ್ ॥

ಅನುವಾದ

ಅವನು ‘ಧನ್ವ’ ಎಂಬ ಮರುಭೂಮಿಯಲ್ಲಿ ಸರಸ್ವತಿಯ ನದಿಯ ಪ್ರವಾಹಕ್ಕೆ ಎದುರಾಗಿ ವಸಿಷ್ಠ, ಅಸಿತ, ಗೌತಮ ಮೊದಲಾದ ಮಹಾ ಆಚಾರ್ಯರ ಮೂಲಕ ಬಹುದಕ್ಷಿಣೆಗಳುಳ್ಳ, ಸರ್ವಾಂಗ ಪರಿಪೂರ್ಣವಾದ ಹಲವಾರು ಅಶ್ವಮೇಧ ಯಜ್ಞಗಳನ್ನು ಮಾಡಿ ಯಜ್ಞಪತಿಯಾದ ಭಗವಂತನನ್ನು ಆರಾಧಿಸಿದ್ದನು. ॥22॥

(ಶ್ಲೋಕ-23)

ಮೂಲಮ್

ಯಸ್ಯ ಕ್ರತುಷು ಗೀರ್ವಾಣೈಃ ಸದಸ್ಯಾ ಋತ್ವಿಜೋ ಜನಾಃ ।
ತುಲ್ಯರೂಪಾಶ್ಚಾನಿಮಿಷಾ ವ್ಯದೃಶ್ಯಂತ ಸುವಾಸಸಃ ॥

ಅನುವಾದ

ಅವನ ಯಜ್ಞದಲ್ಲಿ ದೇವತೆಗಳೊಂದಿಗೆ ಸದಸ್ಯರು ಮತ್ತು ಋತ್ವಿಜರು ಕುಳಿತಿದ್ದಾಗ ಅವನು ತನ್ನ ಸುಂದರ ವಸ್ತ್ರ ಮತ್ತು ದಿವ್ಯರೂಪದಿಂದ ರೆಪ್ಪೆ ಮಿಟುಕಿಸದೆ ದೇವತೆಗಳಂತೆ ಕಾಣುತ್ತಿದ್ದನು. ॥23॥

(ಶ್ಲೋಕ-24)

ಮೂಲಮ್

ಸ್ವರ್ಗೋ ನ ಪ್ರಾರ್ಥಿತೋ ಯಸ್ಯ ಮನುಜೈರಮರಪ್ರಿಯಃ ।
ಶೃಣ್ವದ್ಭಿರುಪಗಾಯದ್ಭಿರುತ್ತಮಶ್ಲೋಕಚೇಷ್ಟಿತಮ್ ॥

ಅನುವಾದ

ಅವನ ಪ್ರಜೆಗಳು ಕೆಲವೊಮ್ಮೆ ಮಹಾತ್ಮರಿಂದ ಹಾಡಲ್ಪಟ್ಟ ಭಗವಂತನ ಉತ್ತಮ ಚರಿತ್ರೆ ಗಳನ್ನು ಭಕ್ತಿಯಿಂದ ಶ್ರವಣಿಸುತ್ತಿದ್ದರೆ, ಕೆಲವೊಮ್ಮೆ ಭಗವದ್ಗುಣಗಳನ್ನು ಕೀರ್ತಿಸುತ್ತಿದ್ದರು. ಈ ವಿಧವಾಗಿ ಅವನ ರಾಜ್ಯದ ಪ್ರಜೆಗಳು ದೇವತೆಗಳ ಅತ್ಯಂತ ಪ್ರಿಯವಾದ ಸ್ವರ್ಗವನ್ನೂ ಕೂಡ ಬಯಸುತ್ತಿರಲಿಲ್ಲ. ॥24॥

(ಶ್ಲೋಕ-25)

ಮೂಲಮ್

ಸಮರ್ದ್ಧಯಂತಿ ತಾನ್ಕಾಮಾಃ ಸ್ವಾರಾಜ್ಯಪರಿಭಾವಿತಾಃ ।
ದುರ್ಲಭಾ ನಾಪಿ ಸಿದ್ಧಾನಾಂ ಮುಕುಂದಂ ಹೃದಿ ಪಶ್ಯತಃ ॥

ಅನುವಾದ

ಅಂಬರೀಷನ ಪ್ರಜೆಗಳು ನಿತ್ಯ-ನಿರಂತರವಾಗಿ ತಮ್ಮ ಹೃದಯಮಂದಿರದಲ್ಲಿ ಶ್ರೀಕೃಷ್ಣನನ್ನು ಕಾಣುತ್ತಿದ್ದರು. ಅದರಿಂದಲೇ ಅವರಿಗೆ ಸಿದ್ಧರಿಗೂ ದುರ್ಲಭವಾದ ಅಣಿಮಾದಿ ಅಷ್ಟೈಶ್ವರ್ಯಗಳೂ ಹರ್ಷವನ್ನುಂಟು ಮಾಡುತ್ತಿರಲಿಲ್ಲ. ಆತ್ಮಾನಂದದ ಮುಂದೆ ಇವೆಲ್ಲ ವಸ್ತುಗಳೂ ಅವರಿಗೆ ತುಚ್ಛವಾಗಿ ಕಾಣುತ್ತಿದ್ದವು, ತಿರಸ್ಕೃತವಾಗಿದ್ದವು. ॥25॥

(ಶ್ಲೋಕ-26)

ಮೂಲಮ್

ಸ ಇತ್ಥಂ ಭಕ್ತಿಯೋಗೇನ ತಪೋಯುಕ್ತೇನ ಪಾರ್ಥಿವಃ ।
ಸ್ವಧರ್ಮೇಣ ಹರಿಂ ಪ್ರೀಣನ್ ಸಂಗಾನ್ ಸರ್ವಾನ್ ಶನೈರ್ಜಹೌ ॥

ಅನುವಾದ

ಹೀಗೆ ಅಂಬರೀಷ ಮಹಾರಾಜನು ತಪಸ್ಸಿನಿಂದ ಕೂಡಿದ ಭಕ್ತಿಯೋಗ ದಿಂದಲೂ, ಪ್ರಜಾಪಾಲನರೂಪವಾದ ಸ್ವಧರ್ಮದ ಮೂಲಕವಾಗಿ ಭಗವಂತನನ್ನು ಪ್ರಸನ್ನಗೊಳಿಸಿ, ನಿಧಾನವಾಗಿ ಅವನು ಎಲ್ಲ ವಿಧದ ಆಸಕ್ತಿಗಳನ್ನು ಪರಿತ್ಯಾಗ ಮಾಡಿದನು.॥26॥

(ಶ್ಲೋಕ-27)

ಮೂಲಮ್

ಗೃಹೇಷು ದಾರೇಷು ಸುತೇಷು ಬಂಧುಷು
ದ್ವಿಪೋತ್ತಮಸ್ಯಂದ ನವಾಜಿಪತ್ತಿಷು ।
ಅಕ್ಷಯ್ಯರತ್ನಾಭರಣಾಯುಧಾದಿ-
ಷ್ವನಂತಕೋಶೇಷ್ವಕರೋದಸನ್ಮತಿಮಮ್ ॥

ಅನುವಾದ

ಅರಮನೆ, ಪತ್ನೀ, ಪುತ್ರರು, ಬಂಧು-ಬಾಂಧವರು, ಶ್ರೇಷ್ಠವಾದ ಆನೆ, ಕುದುರೆ, ರಥ, ಕಾಲಾಳುಗಳೆಂಬ ಚತುರಂಗ ಸೈನ್ಯ, ಅಕ್ಷಯವಾದ ಭಂಡಾರ ಇವೆಲ್ಲವೂ ಅನಿತ್ಯ ವಾದುವುಗಳೆಂದು ಭಾವಿಸಿ ಇವೆಲ್ಲವುಗಳಿಂದ ವಿರಕ್ತನಾದನು. ॥27॥

(ಶ್ಲೋಕ-28)

ಮೂಲಮ್

ತಸ್ಮಾ ಅದಾದ್ಧರಿಶ್ಚಕ್ರಂ ಪ್ರತ್ಯನೀಕಭಯಾವಹಮ್ ।
ಏಕಾಂತಭಕ್ತಿಭಾವೇನ ಪ್ರೀತೋ ಭೃತ್ಯಾಭಿರಕ್ಷಣಮ್ ॥

ಅನುವಾದ

ಅವನ ಅನನ್ಯ ಪ್ರೇಮಮಯವಾದ ಭಕ್ತಿಯಿಂದ ಸುಪ್ರೀತನಾದ ಶ್ರೀಹರಿಯು ಅವನ ರಕ್ಷಣೆಗಾಗಿ ವಿರೋಧಿಗಳಿಗೆ ಭಯವನ್ನುಂಟು ಮಾಡುವ, ಭಗವದ್ಭಕ್ತರಿಗೆ ರಕ್ಷಕವಾಗಿದ್ದ ಸುದರ್ಶನ ಚಕ್ರವನ್ನು ನಿಯಮಿಸಿದ್ದನು. ॥28॥

(ಶ್ಲೋಕ-29)

ಮೂಲಮ್

ಆರಿರಾಧಯಿಷುಃ ಕೃಷ್ಣಂ ಮಹಿಷ್ಯಾ ತುಲ್ಯಶೀಲಯಾ ।
ಯುಕ್ತಃ ಸಾಂವತ್ಸರಂ ವೀರೋ ದಧಾರ ದ್ವಾದಶೀವ್ರತಮ್ ॥

ಅನುವಾದ

ಅಂಬರೀಷರಾಜನ ಪತ್ನಿಯೂ ಅವನಂತೆಯೇ ಧರ್ಮಶೀಲಳೂ, ಸಂಸಾರದಿಂದ ವಿರಕ್ತಳೂ, ಭಕ್ತಿಪರಾಯಣಳೂ ಆಗಿದ್ದಳು. ಒಮ್ಮೆ ಅವನು ಪತ್ನಿಯೊಡನೆ ಭಗವಾನ್ ಶ್ರೀಕೃಷ್ಣನನ್ನು ಆರಾಧಿಸಲಿಕ್ಕಾಗಿ ಒಂದು ವರ್ಷದ ದ್ವಾದಶೀ ಪ್ರಧಾನವಾದ ಏಕಾದಶೀ ವ್ರತವನ್ನು ಕೈಗೊಂಡನು. ॥29॥

(ಶ್ಲೋಕ-30)

ಮೂಲಮ್

ವ್ರತಾಂತೇ ಕಾರ್ತಿಕೇ ಮಾಸಿ ತ್ರಿರಾತ್ರಂ ಸಮುಪೋಷಿತಃ ।
ಸ್ನಾತಃ ಕದಾಚಿತ್ಕಾಲಿಂದ್ಯಾಂ ಹರಿಂ ಮಧುವನೇಽರ್ಚಯತ್ ॥

ಅನುವಾದ

ವ್ರತದ ಸಮಾಪ್ತಿಯಾದಾಗ ಕಾರ್ತೀಕ ಮಾಸದಲ್ಲಿ ರಾಜನು ಮೂರು ರಾತ್ರಿಗಳು ಉಪವಾಸವಿದ್ದು ಯಮುನಾನದಿಯಲ್ಲಿ ಸ್ನಾನಮಾಡಿ ಮಧುವನದಲ್ಲಿ ಭಗವಾನ್ ಶ್ರೀಹರಿಯನ್ನು ಪೂಜಿಸಿದನು. ॥30॥

(ಶ್ಲೋಕ-31)

ಮೂಲಮ್

ಮಹಾಭಿಷೇಕವಿಧಿನಾ ಸರ್ವೋಪಸ್ಕರಸಂಪದಾ ।
ಅಭಿಷಿಚ್ಯಾಂಬರಾಕಲ್ಪೈರ್ಗಂಧಮಾಲ್ಯಾರ್ಹಣಾದಿಭಿಃ ॥

(ಶ್ಲೋಕ-32)

ಮೂಲಮ್

ತದ್ಗತಾಂತರಭಾವೇನ ಪೂಜಯಾಮಾಸ ಕೇಶವಮ್ ।
ಬ್ರಾಹ್ಮಣಾಂಶ್ಚ ಮಹಾಭಾಗಾನ್ ಸಿದ್ಧಾರ್ಥಾನಪಿ ಭಕ್ತಿತಃ ॥

(ಶ್ಲೋಕ-33)

ಮೂಲಮ್

ಗವಾಂ ರುಕ್ಮವಿಷಾಣೀನಾಂ ರೂಪ್ಯಾಂಘ್ರೀಣಾಂ ಸುವಾಸಸಾಮ್ ।
ಪಯಃಶೀಲವಯೋರೂಪವತ್ಸೋಪಸ್ಕರಸಂಪದಾಮ್ ॥

(ಶ್ಲೋಕ-34)

ಮೂಲಮ್

ಪ್ರಾಹಿಣೋತ್ಸಾಧುವಿಪ್ರೇಭ್ಯೋ ಗೃಹೇಷು ನ್ಯರ್ಬುದಾನಿ ಷಟ್ ।
ಭೋಜಯಿತ್ವಾ ದ್ವಿಜಾನಗ್ರೇ ಸ್ವಾದ್ವನ್ನಂ ಗುಣವತ್ತಮಮ್ ॥

ಅನುವಾದ

ರಾಜನು ಮಹಾಭಿಷೇಕ ವಿಧಿಯಿಂದಲೂ ಸಮಸ್ತ ಪರಿಕರಗಳೊಂದಿಗೆ ಹಾಗೂ ಸಂಪತ್ತಿನ ಮೂಲಕ ಭಗವಂತನಿಗೆ ಅಭಿಷೇಕಮಾಡಿ, ತನ್ಮಯವಾದ ಮನಸ್ಸಿನಿಂದ ವಸ್ತ್ರ, ಭೂಷಣ, ಚಂದನ, ಹೂಮಾಲೆಗಳಿಂದಲೂ, ಅರ್ಘ್ಯ-ಪಾದ್ಯಾದಿಗಳಿಂದಲೂ ಹರಿಯನ್ನು ಪೂಜಿಸಿದನು. ಅಂತೆಯೇ ಮಹಾಭಾಗ್ಯಶಾಲಿಗಳಾದ ಸಿದ್ಧಾರ್ಥರಾದ ಬ್ರಾಹ್ಮಣ ಶ್ರೇಷ್ಠರನ್ನೂ ಭಕ್ತಿಪೂರ್ವಕವಾಗಿ ಅರ್ಘ್ಯ-ಪಾದ್ಯಾದಿಗಳಿಂದ ಸತ್ಕರಿಸಿದನು. ಬಳಿಕ ರಾಜನು ಬ್ರಾಹ್ಮಣರಿಗೆ ರುಚಿಕರವಾದ ಮತ್ತು ಗುಣವತ್ತರವಾದ ಭೋಜನವನ್ನು ಮಾಡಿಸಿ, ಸಮಲಂಕೃತವಾದ ಅರವತ್ತು ಕೋಟಿ ಗೋವುಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಆ ಗೋವುಗಳ ಕೊಂಬುಗಳು ಸುವರ್ಣದಿಂದಲೂ, ಕಾಲುಗಳು ಬೆಳ್ಳಿಯಿಂದಲೂ ಅಲಂಕೃತವಾಗಿತ್ತು. ಅವುಗಳಿಗೆ ಸುಂದರವಾದ ವಸ್ತ್ರಗಳನ್ನು ಹೊದಿಸಿದ್ದರು. ಅವೆಲ್ಲವೂ ಹೇರಳವಾಗಿ ಹಾಲುಕೊಡುತ್ತಿದ್ದವು. ಒಳ್ಳೆಯ ಸ್ವಭಾವದವುಗಳಾಗಿದ್ದು, ಪಡ್ಡೆ ಹಸುಗಳಾಗಿದ್ದವು. ನೋಡಲು ಸುಂದರವಾಗಿದ್ದವು. ಕರುಗಳ ಸಮೇತವಾಗಿದ್ದವು. ಜೊತೆಗೆ ಹಾಲು ಕರೆಯುವ ಪಾತ್ರೆಗಳನ್ನೂ ರಾಜನು ಬ್ರಾಹ್ಮಣರಿಗೆ ದಾನವಾಗಿಕೊಟ್ಟನು. ॥31-34॥

(ಶ್ಲೋಕ-35)

ಮೂಲಮ್

ಲಬ್ಧಕಾಮೈರನುಜ್ಞಾತಃ ಪಾರಣಾಯೋಪಚಕ್ರಮೇ ।
ತಸ್ಯ ತರ್ಹ್ಯತಿಥಿಃ ಸಾಕ್ಷಾದ್ದುರ್ವಾಸಾ ಭಗವಾನಭೂತ್ ॥

ಅನುವಾದ

ಗೋವುಗಳನ್ನು ಪಡೆದು ಕಾಮನೆಗಳನ್ನು ಪೂರೈಸಿಕೊಂಡ ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ರಾಜನು ವ್ರತಪಾರಣೆಗಾಗಿ ಸಿದ್ಧನಾಗುತ್ತಿದ್ದನು. ಅದೇ ಸಮಯದಲ್ಲಿ ಶಾಪಾನುಗ್ರಹ ಸಮರ್ಥರಾದ ದುರ್ವಾಸರು ಅವನಲ್ಲಿಗೆ ಅತಿಥಿಗಳಾಗಿ ಆಗಮಿಸಿದರು.॥35॥

(ಶ್ಲೋಕ-36)

ಮೂಲಮ್

ತಮಾನರ್ಚಾತಿಥಿಂ ಭೂಪಃ ಪ್ರತ್ಯುತ್ಥಾನಾಸನಾರ್ಹಣೈಃ ।
ಯಯಾಚೇಽಭ್ಯವಹಾರಾಯ ಪಾದಮೂಲಮುಪಾಗತಃ ॥

ಅನುವಾದ

ಅಂಬರೀಷ ಮಹಾರಾಜನು ಅವರನ್ನೂ ನೋಡುತ್ತಲೇ ಎದ್ದು ನಿಂತು, ಆದರದಿಂದ ಆಸನವನ್ನಿತ್ತು ಕುಳ್ಳಿರಿಸಿ ಅತಿಥಿಯಾಗಿ ಬಂದಿರುವ ದುರ್ವಾಸರನ್ನು ವಿಧ-ವಿಧವಾಗಿ ಪೂಜಿಸಿದನು. ಅವರ ಚರಣಗಳಲ್ಲಿ ನಮಸ್ಕಾರಮಾಡಿ ರಾಜನು ಭೋಜನಕ್ಕಾಗಿ ಪ್ರಾರ್ಥಿಸಿಕೊಂಡನು. ॥36॥

(ಶ್ಲೋಕ-37)

ಮೂಲಮ್

ಪ್ರತಿನಂದ್ಯ ಸ ತದ್ಯಾಞ್ಚಾಂ ಕರ್ತುಮಾವಶ್ಯಕಂ ಗತಃ ।
ನಿಮಮಜ್ಜ ಬೃಹದ್ಧ್ಯಾಯನ್ ಕಾಲಿಂದೀಸಲಿಲೇ ಶುಭೇ ॥

ಅನುವಾದ

ದುರ್ವಾಸರು ಅಂಬರೀಷನ ಪ್ರಾರ್ಥನೆಯನ್ನು ಸ್ವೀಕರಿಸಿ ಆವಶ್ಯಕ ಕರ್ಮಗಳನ್ನು ಪೂರೈಸಲಿಕ್ಕಾಗಿ ನದೀತೀರಕ್ಕೆ ಹೋದರು. ಅವರು ಬ್ರಹ್ಮವಸ್ತುವನ್ನು ಧ್ಯಾನಿಸುತ್ತಾ ಯಮುನೆಯ ಪವಿತ್ರತೀರ್ಥದಲ್ಲಿ ಸ್ನಾನಮಾಡ ತೊಡಗಿದರು. ॥37॥

(ಶ್ಲೋಕ-38)

ಮೂಲಮ್

ಮುಹೂರ್ತಾರ್ಧಾವಶಿಷ್ಟಾಯಾಂ ದ್ವಾದಶ್ಯಾಂ ಪಾರಣಂ ಪ್ರತಿ ।
ಚಿಂತಯಾಮಾಸ ಧರ್ಮಜ್ಞೋ ದ್ವಿಜೈಸ್ತದ್ಧರ್ಮಸಂಕಟೇ ॥

ಅನುವಾದ

ಇತ್ತ ದ್ವಾದಶಿಯು ಕೇವಲ ಒಂದುಗಳಿಗೆ ಮಾತ್ರ ಉಳಿದಿತ್ತು. ಧರ್ಮಜ್ಞನಾದ ಅಂಬರೀಷನು ಧರ್ಮ-ಸಂಕಟಕ್ಕೊಳಗಾಗಿ ಬ್ರಾಹ್ಮಣರೊಂದಿಗೆ ವಿಚಾರ ವಿಮರ್ಶೆ ಮಾಡಿದನು. ॥38॥

(ಶ್ಲೋಕ-39)

ಮೂಲಮ್

ಬ್ರಾಹ್ಮಣಾತಿಕ್ರಮೇ ದೋಷೋ ದ್ವಾದಶ್ಯಾಂ ಯದಪಾರಣೇ ।
ಯತ್ಕೃತ್ವಾ ಸಾಧು ಮೇ ಭೂಯಾದ ಧರ್ಮೋ ವಾ ನ ಮಾಂ ಸ್ಪೃಶೇತ್ ॥

ಅನುವಾದ

ರಾಜನೆಂದನು ಬ್ರಾಹ್ಮಣೋತ್ತಮರೇ! ಅತಿಥಿಯಾದ ಬ್ರಾಹ್ಮಣನಿಗೆ ಭೋಜನಮಾಡಿಸದೆ ಭೋಜನ ಮಾಡುವುದು ಮತ್ತು ದ್ವಾದಶಿ ಕಳೆದಮೇಲೆ ಪಾರಣೆಮಾಡುವುದು ಎರಡೂ ದೋಷವಾಗಿದೆ. ಅದಕ್ಕಾಗಿ ಇಂತಹ ಸಮಯದಲ್ಲಿ ನನಗೆ ಪಾಪವು ತಟ್ಟದೆ ಶ್ರೇಯಸ್ಸಾಗುವಂತಹ ಯಾವ ಕಾರ್ಯ ವನ್ನು ಮಾಡಬೇಕು? ॥39॥

(ಶ್ಲೋಕ-40)

ಮೂಲಮ್

ಅಂಭಸಾ ಕೇವಲೇನಾಥ ಕರಿಷ್ಯೇ ವ್ರತಪಾರಣಮ್ ।
ಪ್ರಾಹುರಬ್ಭಕ್ಷಣಂ ವಿಪ್ರಾ ಹ್ಯಶಿತಂ ನಾಶಿತಂ ಚ ತತ್ ॥

ಅನುವಾದ

ಆಗ ಬ್ರಾಹ್ಮಣರೊಂದಿಗೆ ವಿಚಾರ ವಿಮರ್ಶಿಸಿ ಅವನೆಂದನು ಬ್ರಾಹ್ಮಣಶ್ರೇಷ್ಠರೇ! ಕೇವಲ ನೀರು ಕುಡಿಯುವುದರಿಂದ ಭೋಜನ ಮಾಡಿ ದಂತೆಯೂ, ಮಾಡದಂತೆಯೂ ಇದೆ ಎಂದು ಶ್ರುತಿಗಳಲ್ಲಿ ಹೇಳಿದೆ. ಅದಕ್ಕಾಗಿ ಈ ಸಮಯದಲ್ಲಿ ಕೇವಲ ನೀರು ಕುಡಿದು ಪಾರಣೆ ಮಾಡುತ್ತೇನೆ ಎಂದು ಹೇಳಿಕೊಂಡನು. ॥40॥

(ಶ್ಲೋಕ-41)

ಮೂಲಮ್

ಇತ್ಯಪಃ ಪ್ರಾಶ್ಯ ರಾಜರ್ಷಿಶ್ಚಿಂತಯನ್ಮನಸಾಚ್ಯುತಮ್ ।
ಪ್ರತ್ಯಚಷ್ಟ ಕುರುಶ್ರೇಷ್ಠ ದ್ವಿಜಾಗಮನಮೇವ ಸಃ ॥

ಅನುವಾದ

ಹೀಗೆ ನಿಶ್ಚಯಿಸಿ ಮನಸ್ಸಿನಲ್ಲೇ ಭಗವಂತನನ್ನು ಚಿಂತಿಸುತ್ತಾ ರಾಜರ್ಷಿ ಅಂಬರೀಷನು ಜಲಪ್ರಾಶನ ಮಾಡಿದನು ಹಾಗೂ ಪರೀಕ್ಷಿತನೇ! ದುರ್ವಾಸರ ಆಗಮನ ವನ್ನೇ ಎದುರು ನೋಡುತ್ತಿದ್ದನು. ॥41॥

(ಶ್ಲೋಕ-42)

ಮೂಲಮ್

ದುರ್ವಾಸಾ ಯಮುನಾಕೂಲಾತ್ಕೃತಾವಶ್ಯಕ ಆಗತಃ ।
ರಾಜ್ಞಾಭಿನಂದಿತಸ್ತಸ್ಯ ಬುಬುಧೇ ಚೇಷ್ಟಿತಂ ಧಿಯಾ ॥

ಅನುವಾದ

ದುರ್ವಾಸರು ಆವಶ್ಯಕ ಕರ್ಮಗಳಿಂದ ನಿವೃತ್ತರಾಗಿ ಯಮುನಾ ನದಿ ಯಿಂದ ಮರಳಿದರು. ರಾಜನು ಮುಂದೆ ಹೋಗಿ ಅವರಿಗೆ ಅಭಿನಂದಿಸಿದಾಗ ಅವರು ರಾಜನು ಪಾರಣೆ ಮಾಡಿರುವನೆಂದು ಅನುಮಾನದಿಂದಲೇ ತಿಳಿದುಕೊಂಡರು. ॥42॥

(ಶ್ಲೋಕ-43)

ಮೂಲಮ್

ಮನ್ಯುನಾ ಪ್ರಚಲದ್ಗಾತ್ರೋ ಭ್ರುಕುಟೀಕುಟಿಲಾನನಃ ।
ಬುಭುಕ್ಷಿತಶ್ಚ ಸುತರಾಂ ಕೃತಾಂಜಲಿಮಭಾಷತ ॥

ಅನುವಾದ

ಆ ಸಮಯದಲ್ಲಿ ದುರ್ವಾಸರು ಬಹಳ ಹಸಿದಿದ್ದರು. ಇದರಿಂದ ರಾಜನು ಪಾರಣೆ ಮಾಡಿರುವನೆಂದು ತಿಳಿದು ಅವರ ಶರೀರವೆಲ್ಲವೂ ಕೋಪದಿಂದ ಥರ-ಥರನೆ ನಡುಗುತ್ತಿತ್ತು. ಹುಬ್ಬುಗಂಟಿಕ್ಕಿದ್ದರಿಂದ ಮುಖವು ವಿಕಟವಾಗಿತ್ತು. ಕೈಜೋಡಿಸಿ ನಿಂತುಕೊಂಡಿದ್ದ ಅಂಬರೀಷನನ್ನು ಗದರಿಸುತ್ತಾ ಅವರು ಹೇಳಿದರು.॥43॥

(ಶ್ಲೋಕ-44)

ಮೂಲಮ್

ಅಹೋ ಅಸ್ಯ ನೃಶಂಸಸ್ಯ ಶ್ರೀಯೋನ್ಮತ್ತಸ್ಯ ಪಶ್ಯತ ।
ಧರ್ಮವ್ಯತಿಕ್ರಮಂ ವಿಷ್ಣೋರಭಕ್ತಸ್ಯೇಶಮಾನಿನಃ ॥

ಅನುವಾದ

ಏನನ್ಯಾಯ! ಕ್ರೂರಿಯಾದ, ಸಂಪತ್ತಿನಿಂದ ಮದಿಸಿರುವ, ವಿಷ್ಣುವಿನ ಭಕ್ತನಲ್ಲದ, ತಾನೇ ಸರ್ವೇಶ್ವರನೆಂದು ಭಾವಿಸಿಕೊಂಡಿರುವ ಈ ರಾಜನ ಧರ್ಮೋಲ್ಲಂಘನೆಯನ್ನು ಎಲ್ಲರೂ ನೋಡಿರಿ. ॥44॥

(ಶ್ಲೋಕ-45)

ಮೂಲಮ್

ಯೋ ಮಾಮತಿಥಿಮಾಯಾತಮಾತಿಥ್ಯೇನ ನಿಮಂತ್ರ್ಯ ಚ ।
ಅದತ್ತ್ವಾ ಭುಕ್ತವಾಂಸ್ತಸ್ಯ ಸದ್ಯಸ್ತೇ ದರ್ಶಯೇ ಫಲಮ್ ॥

ಅನುವಾದ

ನಾನು ಅತಿಥಿಯಾಗಿ ಇವನಲ್ಲಿಗೆ ಬಂದಿರುವೆನು. ಅತಿಥಿ ಸತ್ಕಾರ ಮಾಡಲು ರಾಜನು ನನಗೆ ಆಮಂತ್ರಣವನ್ನೂ ಕೊಟ್ಟನು. ಹೀಗಿದ್ದರೂ ನನಗೆ ಊಟಮಾಡಿಸದೆಯೇ ಇವನು ಭೋಜನ ಮಾಡಿರುವನು. ಇಂತಹ ಧರ್ಮವ್ಯತಿಕ್ರಮಕ್ಕೆ ಸಿಗುವ ಫಲವೇನೆಂಬುದನ್ನು ನಾನೀಗಲೇ ತೋರಿಸಿಕೊಡುತ್ತೇನೆ. ॥45॥

(ಶ್ಲೋಕ-46)

ಮೂಲಮ್

ಏವಂ ಬ್ರುವಾಣ ಉತ್ಕೃತ್ಯ ಜಟಾಂ ರೋಷವಿದೀಪಿತಃ ।
ತಯಾ ಸ ನಿರ್ಮಮೇ ತಸ್ಮೈ ಕೃತ್ಯಾಂ ಕಾಲಾನಲೋಪಮಾಮ್ ॥

ಅನುವಾದ

ಹೀಗೆ ಹೇಳುತ್ತಾ-ಹೇಳುತ್ತಾ ಅವರು ಸಿಟ್ಟಿನಿಂದ ಉರಿದೆದ್ದರು. ಅವರು ತಮ್ಮ ಒಂದು ಜಟೆಯನ್ನು ಕಿತ್ತು ಅದರಿಂದ ಅಂಬರೀಷನನ್ನು ಕೊಂದುಬಿಡಲು ಒಂದು ಕೃತ್ಯೆಯನ್ನು ನಿರ್ಮಿಸಿದರು. ಅದು ಪ್ರಳಯಾಗ್ನಿಯಂತೆ ಧಗ-ಧಗಿಸುತ್ತಿತ್ತು.॥46॥

(ಶ್ಲೋಕ-47)

ಮೂಲಮ್

ತಾಮಾಪತಂತೀಂ ಜ್ವಲತೀಮಸಿಹಸ್ತಾಂ ಪದಾ ಭುವಮ್ ।
ವೇಪಯಂತೀಂ ಸಮುದ್ವೀಕ್ಷ್ಯ ನ ಚಚಾಲ ಪದಾನ್ನೃಪಃ ॥

ಅನುವಾದ

ಅದು ಬೆಂಕಿಯಂತೆ ಉರಿಯುತ್ತಾ ಕೈಯಲ್ಲಿ ಖಡ್ಗವನ್ನು ಝಳಪಿಸುತ್ತಾ, ಪಾದ ಘಟ್ಟನೆಯಿಂದ ಭೂಮಿಯನ್ನು ನಡುಗಿಸುತ್ತಾ ಅಂಬರೀಷನ ಮೇಲೆ ಆಕ್ರಮಿಸಿತು. ಆದರೆ ಅಂಬರೀಷ ರಾಜನು ಅದನ್ನು ನೋಡಿನಿಂತ ಜಾಗದಿಂದ ಕದಲದೆ ಹಾಗೆಯೇ ನಿಂತಿದ್ದನು. ॥47॥

(ಶ್ಲೋಕ-48)

ಮೂಲಮ್

ಪ್ರಾಗ್ದಿಷ್ಟಂ ಭೃತ್ಯರಕ್ಷಾಯಾಂ ಪುರುಷೇಣ ಮಹಾತ್ಮನಾ ।
ದದಾಹ ಕೃತ್ಯಾಂ ತಾಂ ಚಕ್ರಂ ಕ್ರುದ್ಧಾಹಿಮಿವ ಪಾವಕಃ ॥

ಅನುವಾದ

ಪರಮ ಪುರುಷ ಪರಮಾತ್ಮನು ತನ್ನ ಸೇವಕನ ರಕ್ಷಣೆಗಾಗಿ ಮೊದಲೇ ಸುದರ್ಶನ ಚಕ್ರವನ್ನು ನಿಯುಕ್ತಗೊಳಿಸಿದ್ದನು. ಕೋಪಗೊಂಡಿರುವ ಘಟಸರ್ಪವನ್ನು ದಾವಾಗ್ನಿಯು ಕ್ಷಣಮಾತ್ರದಲ್ಲಿ ಭಸ್ಮಮಾಡಿ ಬಿಡುವಂತೆ ಸುದರ್ಶನಚಕ್ರವು ದುರ್ವಾಸನ ಕೃತ್ಯೆಯನ್ನು ಸುಟ್ಟು ಬೂದಿ ಮಾಡಿಬಿಟ್ಟಿತು. ॥48॥

(ಶ್ಲೋಕ-49)

ಮೂಲಮ್

ತದಭಿದ್ರವದುದ್ವೀಕ್ಷ್ಯ ಸ್ವಪ್ರಯಾಸಂ ಚ ನಿಷ್ಫಲಮ್ ।
ದುರ್ವಾಸಾ ದುದ್ರುವೇ ಭೀತೋ ದಿಕ್ಷು ಪ್ರಾಣಪರೀಪ್ಸಯಾ ॥

ಅನುವಾದ

ತಾನು ಸೃಷ್ಟಿಸಿದ ಕೃತ್ಯೆಯು ಭಸ್ಮವಾದುದನ್ನು ಮತ್ತು ಚಕ್ರವು ತನ್ನೆಡೆಗೆ ಬರುತ್ತಿರುವುದನ್ನು ಕಂಡು ದುರ್ವಾಸರು ಭಯಗೊಂಡು ತನ್ನ ಪ್ರಾಣಗಳನ್ನು ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದರು.॥49॥

(ಶ್ಲೋಕ-50)

ಮೂಲಮ್

ತಮನ್ವಧಾವದ್ಭಗವದ್ರಥಾಙ್ಗಂ
ದಾವಾಗ್ನಿರುದ್ಧೂತಶಿಖೋ ಯಥಾಹಿಮ್ ।
ತಥಾನುಷಕ್ತಂ ಮುನಿರೀಕ್ಷಮಾಣೋ
ಗುಹಾಂ ವಿವಿಕ್ಷುಃ ಪ್ರಸಸಾರ ಮೇರೋಃ ॥

ಅನುವಾದ

ಎತ್ತರವಾದ ಜ್ವಾಲೆಗಳಿಂದ ಕೂಡಿದ್ದ ಕಾಡ್ಗಿಚ್ಚು ಸರ್ಪವನ್ನು ಹಿಂಬಾಲಿಸಿ ಹೋಗುವಂತೆ ಭಗವಂತನ ಸುದರ್ಶನಚಕ್ರವು ಅವರನ್ನು ಅಟ್ಟಿಸಿಕೊಂಡು ಹೋಯಿತು. ಆಗ ದುರ್ವಾಸರು ಸುಮೇರು ಪರ್ವತದ ಗುಹೆಯನ್ನು ಪ್ರವೇಶಿಸಲು ಅತ್ತಕಡೆಗೆ ಓಡಿದರು. ॥50॥

(ಶ್ಲೋಕ-51)

ಮೂಲಮ್

ದಿಶೋ ನಭಃ ಕ್ಷ್ಮಾಂ ವಿವರಾನ್ ಸಮುದ್ರಾನ್
ಲೋಕಾನ್ಸಪಾಲಾಂಸ್ತ್ರಿದಿವಂ ಗತಃ ಸಃ ।
ಯತೋ ಯತೋ ಧಾವತಿ ತತ್ರ ತತ್ರ
ಸುದರ್ಶನಂ ದುಷ್ಪ್ರಸಹಂ ದದರ್ಶ ॥

ಅನುವಾದ

ದುರ್ವಾಸರು ದಶದಿಕ್ಕುಗಳಲ್ಲಿ, ಆಕಾಶ, ಪೃಥಿವಿ, ಅತಲ-ವಿತಲ ಮುಂತಾದ ಕೆಳಗಿನ ಲೋಕಗಳಲ್ಲಿ, ಸಮುದ್ರ, ಲೋಕಪಾಲರಿಂದ ರಕ್ಷಿತವಾದ ಲೋಕಗಳಲ್ಲಿ, ಸ್ವರ್ಗದಲ್ಲಿ ಹೀಗೆ ಎಲ್ಲೆಡೆಗಳಲ್ಲಿ ಓಡಾಡಿದರು. ಆದರೆ ಅವರು ಹೋದಲ್ಲೆಲ್ಲ ಸಹಿಸಲಸಾಧ್ಯವಾದ ತೇಜಸ್ಸಿನಿಂದ ಕೂಡಿದ ಸುದರ್ಶನವು ತನ್ನನ್ನು ಹಿಂಬಾಲಿಸುವುದನ್ನು ಕಂಡರು. ॥51॥

(ಶ್ಲೋಕ-52)

ಮೂಲಮ್

ಅಲಬ್ಧನಾಥಃ ಸ ಯದಾ ಕುತಶ್ಚಿತ್
ಸಂತ್ರಸ್ತಚಿತ್ತೋಽರಣಮೇಷಮಾಣಃ ।
ದೇವಂ ವಿರಿಂಚಿಂ ಸಮಗಾದ್ವಿಧಾತಃ
ತ್ರಾಹ್ಯಾತ್ಮಯೋನೇಽಜಿತತೇಜಸೋ ಮಾಮ್ ॥

ಅನುವಾದ

ಎಲ್ಲಿಯೂ ಯಾರೂ ರಕ್ಷಕರು ದೊರಯದಿದ್ದಾಗ ಅವರು ಇನ್ನೂ ಭಯಗೊಂಡರು. ತನಗಾಗಿ ಬದುಕುಳಿಯಲು ಸ್ಥಳವನ್ನು ಹುಡುಕುತ್ತಾ ಅವರು ಬ್ರಹ್ಮದೇವರ ಬಳಿಗೆ ಹೋಗಿ ಬೇಡಿಕೊಂಡರು ‘ಓ ವಿರಿಂಚಿಯೇ! ನೀವು ಸ್ವಯಂಭೂ ಆಗಿರುವಿರಿ. ಭಗವಂತನ ಈ ತೇಜೋಮಯ ಚಕ್ರದಿಂದ ನನ್ನನ್ನು ಕಾಪಾಡಿರಿ.’॥52॥

(ಶ್ಲೋಕ-53)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಸ್ಥಾನಂ ಮದೀಯಂ ಸಹವಿಶ್ವಮೇತತ್
ಕ್ರೀಡಾವಸಾನೇ ದ್ವಿಪರಾರ್ಧಸಂಜ್ಞೇ ।
ಭ್ರೂಭಂಗಮಾತ್ರೇಣ ಹಿ ಸಂದಿಧಕ್ಷೋಃ
ಕಾಲಾತ್ಮನೋ ಯಸ್ಯ ತಿರೋಭವಿಷ್ಯತಿ ॥

ಅನುವಾದ

ಬ್ರಹ್ಮದೇವರು ಹೇಳಿದರು — ಮಹರ್ಷಿಯೇ! ನನ್ನ ಎರಡು ಪರಾರ್ಧಗಳ ಆಯುಷ್ಯವು ಮುಗಿದಾಗ ಕಾಲ ಸ್ವರೂಪನಾದ ಭಗವಂತನು ತನ್ನ ಈ ಸೃಷ್ಟಿಲೀಲೆಯನ್ನು ಸಮಾಪ್ತಗೊಳಿಸಲು ಬಯಸಿ ಈ ಜಗತ್ತನ್ನು ಸುಡಲು ಬಯಸಿದಾಗ ಅವನ ಭ್ರೂಭಂಗ ಮಾತ್ರದಿಂದ ಈ ಇಡೀ ಪ್ರಪಂಚ ಮತ್ತು ನನ್ನ ಈ ಲೋಕವೂ ಕೂಡ ಲೀನವಾಗಿ ಹೋದೀತು. ॥53॥

(ಶ್ಲೋಕ-54)

ಮೂಲಮ್

ಅಹಂ ಭವೋದಕ್ಷಭೃಗುಪ್ರಧಾನಾಃ
ಪ್ರಜೇಶಭೂತೇಶಸುರೇಶಮುಖ್ಯಾಃ ।
ಸರ್ವೇ ವಯಂ ಯನ್ನಿಯಮಂ ಪ್ರಪನ್ನಾ
ಮೂಧ್ನ್ಯರ್ಪಿತಂ ಲೋಕಹಿತಂ ವಹಾಮಃ ॥

ಅನುವಾದ

ನಾನು, ಶಂಕರನು, ದಕ್ಷ, ಭೃಗುಮೊದಲಾದ ಪ್ರಜಾಪತಿಗಳು, ಭೂತೇಶರು, ಸುರೇಶಮುಖ್ಯರು, ಇವರೆಲ್ಲರೂ ಯಾರು ನಿರ್ಮಿಸಿದ ನಿಯಮಗಳಲ್ಲಿ ಬಂಧಿತರಾಗಿರುವೆವೋ, ಅವನ ಆಜ್ಞೆಯನ್ನು ಶಿರಸಾವಹಿಸಿ ನಾವೆಲ್ಲರೂ ಪ್ರಪಂಚದ ಹಿತವನ್ನು ಮಾಡುತ್ತೇವೆ. ಅಂತಹ ಮಹಾಮಹಿಮನಾದ ವಿಷ್ಣುವಿನ ಭಕ್ತನಿಗೆ ದ್ರೋಹವೆಸಗಿರುವ ನಿನಗೆ ರಕ್ಷಣೆಯನ್ನೀಯಲು ನಾವು ಸಮರ್ಥರಲ್ಲ. ॥54॥

(ಶ್ಲೋಕ-55)

ಮೂಲಮ್

ಪ್ರತ್ಯಾಖ್ಯಾತೋ ವಿರಿಂಚೇನ ವಿಷ್ಣುಚಕ್ರೋಪತಾಪಿತಃ ।
ದುರ್ವಾಸಾಃ ಶರಣಂ ಯಾತಃ ಶರ್ವಂ ಕೈಲಾಸವಾಸಿನಮ್ ॥

ಅನುವಾದ

ಬ್ರಹ್ಮದೇವರು ಹೀಗೆ ದುರ್ವಾಸರನ್ನು ನಿರಾಶಗೊಳಿಸಿದಾಗ ಭಗವಂತನ ಚಕ್ರದ ಬೇಗೆಯಿಂದ ಬೇಯುತ್ತಿದ್ದ ಅವರು ಕೈಲಾಸವಾಸೀ ಭಗವಾನ್ ಶಂಕರನಲ್ಲಿ ಶರಣುಹೊಕ್ಕರು. ಓ ಪರಮೇಶ್ವರಾ! ನನ್ನನ್ನು ಈ ವಿಷ್ಣು ಚಕ್ರದಿಂದ ಕಾಪಾಡು ಎಂದು ಬೇಡಿದಾಗ ಶಿವನೆಂದನು.॥55॥

(ಶ್ಲೋಕ-56)

ಮೂಲಮ್ (ವಾಚನಮ್)

ಶ್ರೀರುದ್ರ ಉವಾಚ

ಮೂಲಮ್

ವಯಂ ನ ತಾತ ಪ್ರಭವಾಮ ಭೂಮ್ನಿ
ಯಸ್ಮಿನ್ಪರೇಽನ್ಯೇಽಪ್ಯಜಜೀವಕೋಶಾಃ ।
ಭವಂತಿ ಕಾಲೇ ನ ಭವಂತಿ ಹೀದೃಶಾಃ
ಸಹಸ್ರಶೋ ಯತ್ರ ವಯಂ ಭ್ರಮಾಮಃ ॥

ಅನುವಾದ

ಶ್ರೀಮಹಾದೇವನು ಹೇಳಿದನು — ದುರ್ವಾಸನೇ! ಯಾವ ಅಪಾರಮಹಿಮನಾದ ಪರಮಾತ್ಮನಲ್ಲಿ ಕೇವಲ ಈ ಬ್ರಹ್ಮ, ಈ ಜೀವರು ಮಾತ್ರವಲ್ಲದೆ ಅನೇಕ ಬ್ರಹ್ಮರು, ಅನೇಕ ಬ್ರಹ್ಮಾಂಡಗಳು ಹುಟ್ಟುತ್ತಿರುತ್ತವೆಯೋ ಮತ್ತು ಲೀನವಾಗುತ್ತಿರುತ್ತವೆಯೋ ಅಂತಹ ಅನೇಕ ಕೋಟಿ ಬ್ರಹ್ಮಾಂಡಗಳಲ್ಲಿ ನಾವೂ ಕೂಡ ಸಾವಿರಾರು ಬಾರಿ ಹುಟ್ಟಿ ಅವನಲ್ಲೇ ಲೀನವಾಗಿರುತ್ತೇವೆಯೋ ಅಂತಹ ಪ್ರಭುವಿನ ಸಂಬಂಧದಲ್ಲಿ ನಾವು ಏನನ್ನೂ ಮಾಡಲು ಸಮರ್ಥರಲ್ಲ. ॥56॥

(ಶ್ಲೋಕ-57)

ಮೂಲಮ್

ಅಹಂ ಸನತ್ಕುಮಾರಶ್ಚ ನಾರದೋ ಭಗವಾನಜಃ ।
ಕಪಿಲೋಪಾಂತರತಮೋ ದೇವಲೋ ಧರ್ಮ ಆಸುರಿಃ ॥

(ಶ್ಲೋಕ-58)

ಮೂಲಮ್

ಮರೀಚಿಪ್ರಮುಖಾಶ್ಚಾನ್ಯೇ ಸಿದ್ಧೇಶಾಃ ಪಾರದರ್ಶನಾಃ ।
ವಿದಾಮ ನ ವಯಂ ಸರ್ವೇ ಯನ್ಮಾಯಾಂ ಮಾಯಯಾಽಽವೃತಾಃ ॥

ಅನುವಾದ

ನಾನಾಗಲೀ, ಸನತ್ಕುಮಾರ, ನಾರದ, ಬ್ರಹ್ಮದೇವರು, ಕಪಿಲರು, ಅಪಾಂತರತಮ-ದೇವಲರಾಗಲೀ, ಧರ್ಮ-ಆಸುರೀ-ಮರೀಚಿಯೇ ಮೊದಲಾದ ಸರ್ವಜ್ಞರಾದ ಸಿದ್ಧೇಶ್ವರರಾಗಲೀ ಭಗವಂತನ ಮಾಯೆಯನ್ನು ಅರಿಯೆವು. ಏಕೆಂದರೆ, ನಾವೆಲ್ಲರೂ ಅದೇ ಮಾಯೆಯಿಂದಲೇ ಆವೃತರಾಗಿದ್ದೇವೆ. ॥57-58॥

(ಶ್ಲೋಕ-59)

ಮೂಲಮ್

ತಸ್ಯ ವಿಶ್ವೇಶ್ವರಸ್ಯೇದಂ ಶಸಂ ದುರ್ವಿಷಹಂ ಹಿ ನಃ ।
ತಮೇವ ಶರಣಂ ಯಾಹಿ ಹರಿಸ್ತೇ ಶಂ ವಿಧಾಸ್ಯತಿ ॥

ಅನುವಾದ

ಈ ಚಕ್ರವು ಆ ವಿಶ್ವೇಶ್ವರನಾದ ಮಹಾವಿಷ್ಣುವಿನ ಶಸ್ತ್ರವಾಗಿದೆ. ಇದರ ಉಜ್ವಲವಾದ ಪ್ರಭೆಯನ್ನು ನಾವೂ ಸಹಿಸಲಾರೆವು. ನೀನು ಆ ಶ್ರೀಹರಿಗೆ ಶರಣುಹೋಗು. ಅವನೇ ನಿನಗೆ ಮಂಗಳವನ್ನು ಉಂಟುಮಾಡುತ್ತಾನೆ. ॥59॥

(ಶ್ಲೋಕ-60)

ಮೂಲಮ್

ತತೋ ನಿರಾಶೋ ದುರ್ವಾಸಾಃ ಪದಂ ಭಗವತೋ ಯಯೌ ।
ವೈಕುಂಠಾಖ್ಯಂ ಯದಧ್ಯಾಸ್ತೇ ಶ್ರೀನಿವಾಸಃ ಶ್ರಿಯಾ ಸಹ ॥

ಅನುವಾದ

ಅಲ್ಲಿಯೂ ಕೂಡ ನಿರಾಶರಾದ ದುರ್ವಾಸರು ಲಕ್ಷ್ಮೀಪತಿಯಾದ ಭಗವಂತನು ರಮೆಯೊಂದಿಗೆ ವಾಸಿಸುವ ಪರಮಧಾಮವಾದ ವೈಕುಂಠಕ್ಕೆ ಹೋದರು. ॥60॥

(ಶ್ಲೋಕ-61)

ಮೂಲಮ್

ಸಂದಹ್ಯಮಾನೋಽಜಿತಶಸ್ತ್ರವಹ್ನಿನಾ
ತತ್ಪಾದಮೂಲೇ ಪತಿತಃ ಸವೇಪಥುಃ ।
ಆಹಾಚ್ಯುತಾನಂತ ಸದೀಪ್ಸಿತ ಪ್ರಭೋ
ಕೃತಾಗಸಂ ಮಾವ ಹಿ ವಿಶ್ವಭಾವನ ॥

ಅನುವಾದ

ದುರ್ವಾಸರು ಭಗವಂತನ ಸುದರ್ಶನದಿಂದ ಬೇಯುತ್ತಿದ್ದರು. ಅವರು ನಡುಗುತ್ತಾ ಭಗವಂತನ ಚರಣಗಳಲ್ಲಿ ಅಡ್ಡಬಿದ್ದರು. ಓ ಅಚ್ಯುತಾ! ಅನಂತಾ! ಸತ್ಪುರುಷರಿಗೆ ಬೇಕಾದವನೇ! ಪ್ರಭುವೇ! ಲೋಕ ರಕ್ಷಕನೇ! ಅಪರಾಧಿಯಾದ ನನ್ನನ್ನು ರಕ್ಷಿಸು; ಕಾಪಾಡು ಎಂದು ಅಂಗಲಾಚಿದರು.॥61॥

(ಶ್ಲೋಕ-62)

ಮೂಲಮ್

ಅಜಾನತಾ ತೇ ಪರಮಾನುಭಾವಂ
ಕೃತಂ ಮಯಾಘಂ ಭವತಃ ಪ್ರಿಯಾಣಾಮ್ ।
ವಿಧೇಹಿ ತಸ್ಯಾಪಚಿತಿಂ ವಿಧಾತ-
ರ್ಮುಚ್ಯೇತ ಯನ್ನಾಮ್ನ್ಯುದಿತೇ ನಾರಕೋಽಪಿ ॥

ಅನುವಾದ

ನಿನ್ನ ಪರಮಾದ್ಭುತ ವಾದ ಪ್ರಭಾವವನ್ನು ಅರಿಯದೆ ನಾನು ನಿನ್ನ ಪ್ರಿಯಭಕ್ತನಿಗೆ ಅಪರಾಧ ಮಾಡಿಬಿಟ್ಟೆ. ಪ್ರಭುವೇ! ನನ್ನನ್ನು ಈ ಸುದರ್ಶನದಿಂದ ಪಾರುಮಾಡು. ನಿನ್ನ ನಾಮೋಚ್ಚಾರಣ ಮಾತ್ರದಿಂದಲೇ ನರಕದಲ್ಲಿರುವ ಜೀವರು ಮುಕ್ತರಾಗಿ ಹೋಗುತ್ತಾರೆ. ॥62॥

(ಶ್ಲೋಕ-63)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಹಂ ಭಕ್ತಪರಾಧೀನೋ ಹ್ಯಸ್ವತಂತ್ರ ಇವ ದ್ವಿಜ ।
ಸಾಧುಭಿರ್ಗ್ರಸ್ತಹೃದಯೋ ಭಕ್ತೈರ್ಭಕ್ತಜನಪ್ರಿಯಃ ॥

ಅನುವಾದ

ಶ್ರೀಭಗವಂತನು ಹೇಳಿದನು — ದುರ್ವಾಸರೇ! ನಾನು ಸರ್ವಥಾ ಭಕ್ತರಿಗೆ ಅಧೀನನಾಗಿ ಬಿಟ್ಟಿರುವೆನು. ನಾನು ಅಸ್ವತಂತ್ರನು, ನನಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಸಾಧುಗಳಾದ ನನ್ನ ಭಕ್ತರು ನನ್ನ ಹೃದಯವನ್ನು ಕೈವಶ ಮಾಡಿಕೊಂಡಿದ್ದಾರೆ. ಭಕ್ತರು ನನ್ನನ್ನು ಪ್ರೀತಿಸುವಂತೆ ನಾನೂ ಅವರನ್ನು ಪ್ರೀತಿಸುತ್ತೇನೆ. ॥63॥

(ಶ್ಲೋಕ-64)

ಮೂಲಮ್

ನಾಹಮಾತ್ಮಾನಮಾಶಾಸೇ ಮದ್ಭಕ್ತೈಃ ಸಾಧುಭಿರ್ವಿನಾ ।
ಶ್ರಿಯಂ ಚಾತ್ಯಂತಿಕೀಂ ಬ್ರಹ್ಮನ್ ಯೇಷಾಂ ಗತಿರಹಂ ಪರಾ ॥

ಅನುವಾದ

ಬ್ರಾಹ್ಮಣೋತ್ತಮನೇ! ನನ್ನ ಭಕ್ತರ ಏಕಮಾತ್ರ ಆಶ್ರಯ ನಾನೇ ಆಗಿರುವೆನು. ಅದರಿಂದ ಸಾಧುಸ್ವಭಾವವುಳ್ಳ ನನ್ನ ಭಕ್ತರನ್ನು ಬಿಟ್ಟು ನಾನು ಸ್ವತಃ ನನ್ನನ್ನಾಗಲೀ, ವಿನಾಶರಹಿತಳಾದ ನನ್ನ ಅರ್ಧಾಂಗಿನಿಯಾದ ಲಕ್ಷ್ಮಿಯನ್ನೂ ಬಯಸುವುದಿಲ್ಲ. ॥64॥

(ಶ್ಲೋಕ-65)

ಮೂಲಮ್

ಯೇ ದಾರಾಗಾರಪುತ್ರಾಪ್ತಾನ್ ಪ್ರಾಣಾನ್ವಿತ್ತಮಿಮಂ ಪರಮ್ ।
ಹಿತ್ವಾ ಮಾಂ ಶರಣಂ ಯಾತಾಃ ಕಥಂ ತಾಂಸ್ತ್ಯಕ್ತುಮುತ್ಸಹೇ ॥

ಅನುವಾದ

ಯಾವ ಭಕ್ತನು ಪತ್ನೀ, ಪುತ್ರ, ಗೃಹ, ಗುರುಜನರು, ಪ್ರಾಣ, ಧನ, ಇಹಲೋಕ, ಪರಲೋಕ ಎಲ್ಲವನ್ನೂ ಬಿಟ್ಟು ಕೇವಲ ನನಗೇ ಶರಣುಬಂದಿರುವನೋ, ಅಂತಹವನನ್ನು ನಾನು ಹೇಗೆ ತಾನೇ ತ್ಯಜಿಸಬಲ್ಲೆನು? ॥65॥

(ಶ್ಲೋಕ-66)

ಮೂಲಮ್

ಮಯಿ ನಿರ್ಬದ್ಧಹೃದಯಾಃ ಸಾಧವಃ ಸಮದರ್ಶನಾಃ ।
ವಶೀಕುರ್ವಂತಿ ಮಾಂ ಭಕ್ತ್ಯಾಸತ್ ಸ್ತ್ರಿಯಃ ಸತ್ಪತಿಂ ಯಥಾ ॥

ಅನುವಾದ

ಸಾಧ್ವಿಯಾದ ಸ್ತ್ರೀಯು ತನ್ನ ಪಾತಿವ್ರತ್ಯದಿಂದ ಸದಾಚಾರಿಯಾದ ಪತಿಯನ್ನು ವಶಪಡಿಸಿಕೊಳ್ಳುವಂತೆಯೇ ನನ್ನೊಂದಿಗೆ ತಮ್ಮ ಹೃದಯವನ್ನು ಪ್ರೇಮಬಂಧನದಿಂದ ಬಂಧಿಸಿರುವ ಸಮದರ್ಶಿಗಳಾದ ಸಾಧುಗಳು ಭಕ್ತಿಯ ಮೂಲಕ ನನ್ನನ್ನು ವಶಪಡಿಸಿಕೊಂಡು ಬಿಡುತ್ತಾರೆ. ॥66॥

(ಶ್ಲೋಕ-67)

ಮೂಲಮ್

ಮತ್ಸೇವಯಾ ಪ್ರತೀತಂ ಚ ಸಾಲೋಕ್ಯಾದಿಚತುಷ್ಟಯಮ್ ।
ನೇಚ್ಛಂತಿ ಸೇವಯಾ ಪೂರ್ಣಾಃ ಕುತೋಽನ್ಯತ್ಕಾಲವಿದ್ರುತಮ್ ॥

ಅನುವಾದ

ನನ್ನ ಅನನ್ಯಪ್ರೇಮಿ ಭಕ್ತರು ನನ್ನ ಸೇವೆಯಿಂದಲೇ ತಮ್ಮನ್ನು ಪರಿಪೂರ್ಣ-ಕೃತಕೃತ್ಯರೆಂದು ತಿಳಿಯುತ್ತಾರೆ. ನನ್ನ ಸೇವೆಯ ಫಲಸ್ವರೂಪವಾಗಿ ಅವರಿಗೆ ಸಾಲೋಕ್ಯ-ಸಾರೂಪ್ಯಾದಿ ಮುಕ್ತಿಗಳು ದೊರಕಿದರೂ ಅವರು ಅದನ್ನೂ ಸ್ವೀಕರಿಸಲು ಬಯಸುವುದಿಲ್ಲ. ಮತ್ತೆ ಕಾಲವಶವಾದ ವಸ್ತುಗಳ ಬಗೆಗೆ ಹೇಳುವುದೇನಿದೆ? ॥67॥

(ಶ್ಲೋಕ-68)

ಮೂಲಮ್

ಸಾಧವೋ ಹೃದಯಂ ಮಹ್ಯಂ ಸಾಧೂನಾಂ ಹೃದಯಂ ತ್ವಹಮ್ ।
ಮದನ್ಯತ್ತೇ ನ ಜಾನಂತಿ ನಾಹಂ ತೇಭ್ಯೋ ಮನಾಗಪಿ ॥

ಅನುವಾದ

ದುರ್ವಾಸರೇ! ಹೆಚ್ಚೇನು ಹೇಳಲಿ? ಸಾಧುಗಳೇ ನನ್ನ ಹೃದಯಸ್ವರೂಪರಾಗಿದ್ದಾರೆ. ಸಾಧುಗಳಿಗೆ ನಾನು ಹೃದಯ ಸ್ವರೂಪನಾಗಿರುವೆನು. ಅವರು ನನ್ನನ್ನು ಬಿಟ್ಟು ಬೇರೆ ಏನನ್ನೂ ತಿಳಿಯರು ಹಾಗೂ ನಾನು ಅವರಲ್ಲದೆ ಬೇರೆ ಯಾರನ್ನೂ ಅರಿಯೆ. ॥68॥

(ಶ್ಲೋಕ-69)

ಮೂಲಮ್

ಉಪಾಯಂ ಕಥಯಿಷ್ಯಾಮಿ ತವ ವಿಪ್ರ ಶೃಣುಷ್ವ ತತ್ ।
ಅಯಂ ಹ್ಯಾತ್ಮಾಭಿಚಾರಸ್ತೇ ಯತಸ್ತಂ ಯಾತು ವೈ ಭವಾನ್ ।
ಸಾಧುಷು ಪ್ರಹಿತಂ ತೇಜಃ ಪ್ರಹರ್ತುಃ ಕುರುತೇಽಶಿವಮ್ ॥

ಅನುವಾದ

ವಿಪ್ರರೇ! ನಾನೊಂದು ಉಪಾಯವನ್ನು ಹೇಳುತ್ತೇನೆ; ಕೇಳಿರಿ. ಯಾರ ಅನಿಷ್ಟ ಮಾಡಿರುವುದರಿಂದ ನಿಮಗೆ ಈ ವಿಪತ್ತು ಸಂಭವಿಸಿತೋ, ನೀವು ಅವರ ಬಳಿಯೇ ಹೋಗಿರಿ. ನಿರಪರಾಧಿಗಳಾದ ಸಾಧುಗಳಿಗೆ ಮಾಡಿದ ಅನಿಷ್ಟದಿಂದಾಗಿ ಮಾಡಿದವರಿಗೇ ಅಮಂಗಳ ಉಂಟಾಗುತ್ತದೆ. ॥69॥

(ಶ್ಲೋಕ-70)

ಮೂಲಮ್

ತಪೋ ವಿದ್ಯಾ ಚ ವಿಪ್ರಾಣಾಂ ನಿಃಶ್ರೇಯಸಕರೇ ಉಭೇ ।
ತೇ ಏವ ದುರ್ವಿನೀತಸ್ಯ ಕಲ್ಪೇತೇ ಕರ್ತುರನ್ಯಥಾ ॥

ಅನುವಾದ

ಬ್ರಾಹ್ಮಣರಿಗೆ ತಪಸ್ಸು ಮತ್ತು ವಿದ್ಯೆಯೇ ಪರಮ ಶ್ರೇಯಸ್ಕರ ಸಾಧನೆಯಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಬ್ರಾಹ್ಮಣನು ಉದ್ಧತನಾಗಿ, ಅನ್ಯಾಯಿಯಾದರೆ ಅವೆರಡೂ ವಿಪರೀತ ಫಲವನ್ನು ಕೊಡುತ್ತವೆ. ॥70॥

(ಶ್ಲೋಕ-71)

ಮೂಲಮ್

ಬ್ರಹ್ಮಂಸ್ತದ್ಗಚ್ಛ ಭದ್ರಂ ತೇ ನಾಭಾಗತನಯಂ ನೃಪಮ್ ।
ಕ್ಷಮಾಪಯ ಮಹಾಭಾಗಂ ತತಃ ಶಾಂತಿರ್ಭವಿಷ್ಯತಿ ॥

ಅನುವಾದ

ದುರ್ವಾಸರೇ! ನಿಮಗೆ ಮಂಗಳವಾಗಲಿ. ನೀವು ನಾಭಾಗನಂದನ ಪರಮ ಭಾಗ್ಯಶಾಲಿ ಅಂಬರೀಷರಾಜನ ಬಳಿಗೆ ಹೋಗಿರಿ. ಅವನಲ್ಲಿ ಕ್ಷಮೆ ಯಾಚಿಸಿರಿ. ಆಗ ನಿಮಗೆ ಶಾಂತಿಯು ಲಭಿಸುವುದು. ॥71॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ನವಮಸ್ಕಂಧೇ ಅಂಬರೀಷಚರಿತೇ ಚತುರ್ಥೋಽಧ್ಯಾಯಃ ॥4॥