[ಎಂಟನೆಯ ಅಧ್ಯಾಯ]
ಭಾಗಸೂಚನಾ
ವಿಶ್ವರೂಪನು ಇಂದ್ರನಿಗೆ ನಾರಾಯಣ ಕವಚವನ್ನು ಉಪದೇಶಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಯಯಾ ಗುಪ್ತಃ ಸಹಸ್ರಾಕ್ಷಃ ಸವಾಹಾನ್ ರಿಪುಸೈನಿಕಾನ್ ।
ಕ್ರೀಡನ್ನಿವ ವಿನಿರ್ಜಿತ್ಯ ತ್ರಿಲೋಕ್ಯಾ ಬುಭುಜೇ ಶ್ರೀಯಮ್ ॥
(ಶ್ಲೋಕ-2)
ಮೂಲಮ್
ಭಗವಂಸ್ತನ್ಮಮಾಖ್ಯಾಹಿ ವರ್ಮ ನಾರಾಯಣಾತ್ಮಕಮ್ ।
ಯಥಾತತಾಯಿನಃ ಶತ್ರೂನ್ಯೇನ ಗುಪ್ತೋಜಯನ್ಮೃಧೇ ॥
ಅನುವಾದ
ಪರೀಕ್ಷಿತರಾಜನು ಕೇಳಿದನು — ಮಹಾತ್ಮರೇ! ದೇವೇಂದ್ರನು ಯಾವ ವಿದ್ಯೆಯಿಂದ ಸಂರಕ್ಷಿತನಾಗಿ ಶತ್ರುಗಳ ಚತುರಂಗ ಸೈನ್ಯವನ್ನು ಆಟಗಾರಿಕೆಯೋ ಎಂಬಂತೆ ಅನಾಯಾಸವಾಗಿ ಸೋಲಿಸಿ ಮೂರುಲೋಕಗಳ ಐಶ್ವರ್ಯವನ್ನು ಅನುಭವಿಸಿದನೋ, ಆ ನಾರಾಯಣಕವಚವೆಂಬ ಮಹಾಮಂತ್ರವನ್ನು ನನಗೆ ತಿಳಿಸಿರಿ. ಅದರಿಂದ ಸುರಕ್ಷಿತನಾಗಿ ಅವನು ರಣಭೂಮಿಯಲ್ಲಿ ಆಕ್ರಮಣಕಾರಿಗಳಾದ ಶತ್ರುಗಳನ್ನು ಸೋಲಿಸಿ ವಿಜಯ ವನ್ನು ಹೇಗೆ ಪಡೆದನು? ಎಂಬುದನ್ನೂ ನಿರೂಪಿಸಿರಿ. ॥1-2॥
(ಶ್ಲೋಕ-3)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ವೃತಃ ಪುರೋಹಿತಸ್ತ್ವಾಷ್ಟ್ರೋ ಮಹೇಂದ್ರಾಯಾನುಪೃಚ್ಛತೇ ।
ನಾರಾಯಣಾಖ್ಯಂ ವರ್ಮಾಹ ತದಿಹೈಕಮನಾಃ ಶೃಣು ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವತೆಗಳು ವಿಶ್ವರೂಪನನ್ನು ಪುರೋಹಿತನನ್ನಾಗಿ ಮಾಡಿಕೊಂಡಾಗ ದೇವೇಂದ್ರನು ಪ್ರಶ್ನಿಸಿದಾಗ ವಿಶ್ವರೂಪನು ಅವನಿಗೆ ನಾರಾಯಣ ಕವಚವನ್ನು ಉಪದೇಶಿಸಿದನು. ಅದನ್ನು ನಾನು ನಿನಗೆ ಹೇಳುವೆನು. ನೀನೂ ಏಕಾಗ್ರತೆಯಿಂದ ಶ್ರವಣಿಸು. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ವಿಶ್ವರೂಪ ಉವಾಚ
ಮೂಲಮ್
ಧೌತಾಂಘ್ರಿಪಾಣಿರಾಚಮ್ಯ ಸಪವಿತ್ರ ಉದಙ್ಮುಖಃ ।
ಕೃತಸ್ವಾಙ್ಗಕರನ್ಯಾಸೋ ಮಂತ್ರಾಭ್ಯಾಂ ವಾಗ್ಯತಃ ಶುಚಿಃ ॥
(ಶ್ಲೋಕ-5)
ಮೂಲಮ್
ನಾರಾಯಣಮಯಂ ವರ್ಮ ಸನ್ನಹ್ಯೇದ್ ಭಯ ಆಗತೇ ।
ಪಾದಯೋರ್ಜಾನುನೋರೂರ್ವೋರುದರೇ ಹೃದ್ಯಥೋರಸಿ ॥
(ಶ್ಲೋಕ-6)
ಮೂಲಮ್
ಮುಖೇ ಶಿರಸ್ಯಾನುಪೂರ್ವ್ಯಾದೋಂಕಾರಾದೀನಿ ವಿನ್ಯಸೇತ್ ।
ಓಂ ನಮೋ ನಾರಾಯಣಾಯೇತಿ ವಿಪರ್ಯಯಮಥಾಪಿ ವಾ ॥
ಅನುವಾದ
ವಿಶ್ವರೂಪನು ಹೇಳಿದನು — ದೇವರಾಜ ಇಂದ್ರನೇ! ಭಯವು ಏನಾದರೂ ಒದಗಿದರೆ ನಾರಾಯಣಕವಚವನ್ನು ಧರಿಸಿಕೊಂಡು ತನ್ನ ಶರೀರವನ್ನು ರಕ್ಷಿಸಿಕೊಳ್ಳಬೇಕು. ಅದರ ವಿಧಾನ ಇಂತಿದೆಮೊದಲು ಕೈ-ಕಾಲುಗಳನ್ನು ತೊಳೆದು ಕೊಂಡು ಆಚಮನ ಮಾಡಬೇಕು. ದರ್ಭೆಯ ಪವಿತ್ರಕವನ್ನು ಧರಿಸಿಕೊಂಡು ಉತ್ತರಾಭಿಮುಖವಾಗಿ ಕುಳಿತುಕೊಳ್ಳಬೇಕು. ಅನಂತರ ಮಂತ್ರಾನುಷ್ಠಾನವು ಮುಗಿಯುವವರೆಗೆ ಮೌನ ವಾಗಿರಲು ನಿಶ್ಚಯಿಸಿ, ಶುಚಿಯಾಗಿ ‘ಓಂ ನಮೋ ನಾರಾಯಣಾಯ’ ಮತ್ತು ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಹಾಮಂತ್ರಗಳಿಂದ ಹೃದಯಾದಿ ಅಂಗನ್ಯಾಸವನ್ನು ಅಂಗುಷ್ಠಾದಿ ಕರನ್ಯಾಸವನ್ನು ಮಾಡಬೇಕು. ಮೊದಲು ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರ ಮಂತ್ರದ ಓಂ ಇತ್ಯಾದಿ ಎಂಟು ಅಕ್ಷರಗಳನ್ನು ಕ್ರಮವಾಗಿ ಪಾದಗಳು, ಮೊಣಕಾಲುಗಳು, ತೊಡೆಗಳು, ಹೊಟ್ಟೆ, ಹೃದಯ, ವಕ್ಷಃಸ್ಥಳ, ಮುಖ ಮತ್ತು ತಲೆಯಲ್ಲಿ ನ್ಯಾಸಮಾಡಬೇಕು (ಅರ್ಥಾತ್ ಇರಿಸುವುದು) ಅಥವಾ ಇದಕ್ಕೆ ತಲೆಕೆಳಗಾಗಿ ಆ ಮಂತ್ರದ ಯಕಾರದಿಂದ ಪ್ರಾರಂಭಿಸಿ ಓಂಕಾರದವರೆಗಿನ ಎಂಟು ಅಕ್ಷರಗಳನ್ನು ತಲೆಯಿಂದ ಪ್ರಾರಂಭಿಸಿ ಪಾದಗಳವರೆಗಿನ ಎಂಟು ಅಂಗಗಳಲ್ಲಿ ನ್ಯಾಸಮಾಡಬೇಕು. ॥4-6॥
(ಶ್ಲೋಕ-7)
ಮೂಲಮ್
ಕರನ್ಯಾಸಂ ತತಃ ಕುರ್ಯಾದ್ದ್ವಾದಶಾಕ್ಷರವಿದ್ಯಯಾ ।
ಪ್ರಣವಾದಿಯಕಾರಾಂತಮಂಗುಲ್ಯಂಗುಷ್ಠಪರ್ವಸು ॥
ಅನುವಾದ
ಅನಂತರ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರ ಮಂತ್ರದ ಓಂಕಾರದಿಂದ ಆರಂಭಿಸಿ ಪ್ರತಿಯೊಂದು ಅಕ್ಷರವನ್ನು ಬಲಗಡೆಯ ತರ್ಜನಿಯಿಂದ ಎಡಗಡೆಯ ತರ್ಜನಿಯವರೆಗೆ ಎರಡೂ ಕೈಗಳ ಬೆರಳುಗಳಲ್ಲಿಯೂ ಮತ್ತು ಎರಡು ಅಂಗುಷ್ಠಗಳ ಎರಡೆರಡು ಗಂಟುಗಳಲ್ಲಿ ನ್ಯಾಸ ಮಾಡಬೇಕು.॥7॥
(ಶ್ಲೋಕ-8)
ಮೂಲಮ್
ನ್ಯಸೇದ್ಧೃದಯ ಓಂಕಾರಂ ವಿಕಾರಮನು ಮೂರ್ಧನಿ ।
ಷಕಾರಂ ತು ಭ್ರುವೋರ್ಮಧ್ಯೇ ಣಕಾರಂ ಶಿಖಯಾ ದಿಶೇತ್ ॥
(ಶ್ಲೋಕ-9)
ಮೂಲಮ್
ವೇಕಾರಂ ನೇತ್ರಯೋರ್ಯುಂಜ್ಯಾನ್ನಕಾರಂ ಸರ್ವಸಂಧಿಷು ।
ಮಕಾರಮಸಮುದ್ದಿಶ್ಯ ಮಂತ್ರ ಮೂರ್ತಿರ್ಭವೇದ್ಬುಧಃ ॥
(ಶ್ಲೋಕ-10)
ಮೂಲಮ್
ಸವಿಸರ್ಗಂ ಡಂತಂ ತತ್ ಸರ್ವದಿಕ್ಷು ವಿನಿರ್ದಿಶೇತ್ ।
ಓಂ ವಿಷ್ಣವೇ ನಮ ಇತಿ ॥
ಅನುವಾದ
ಬಳಿಕ ‘ಓಂ ವಿಷ್ಣವೇ ನಮಃ’ ಎಂಬ ಮಂತ್ರದ ಮೊದಲನೆಯ ಅಕ್ಷರವಾದ ‘ಓಂ’ಕಾ ವನ್ನು ಹೃದಯದಲ್ಲಿಯೂ, ‘ವಿ’ಯನ್ನು ಬ್ರಹ್ಮರಂಧ್ರದಲ್ಲಿಯೂ, ‘ಷ’ ಕಾರವನ್ನು ಹುಬ್ಬುಗಳ ಮಧ್ಯದಲ್ಲೂ, ‘ಣ’ ಕಾರವನ್ನು ಶಿಖೆಯಲ್ಲಿಯೂ, ‘ವೇ’ ಕಾರವನ್ನು ಎರಡೂ ಕಣ್ಣು ಗಳಲ್ಲಿಯೂ ಮತ್ತು ‘ನ’ ಕಾರವನ್ನು ಶರೀರದ ಎಲ್ಲ ಗಂಟುಗಳಲ್ಲಿಯೂ ನ್ಯಾಸಮಾಡಬೇಕು. ಇದಾದ ನಂತರ ‘ಓಂ ಮಃ ಅಸ್ತ್ರಾಯ ಫಟ್’ ಎಂದು ಹೇಳಿ ದಿಗ್ಬಂಧನವನ್ನು ಮಾಡಬೇಕು. ಈ ಪ್ರಕಾರ ನ್ಯಾಸ ಮಾಡುವುದರಿಂದ ಈ ವಿಧಿಯನ್ನು ತಿಳಿದ ಮನುಷ್ಯನು ಮಂತ್ರಸ್ವರೂಪನೇ ಆಗುತ್ತಾನೆ. ॥8-10॥
(ಶ್ಲೋಕ-11)
ಮೂಲಮ್
ಆತ್ಮಾನಂ ಪರಮಂ ಧ್ಯಾಯೇದ್ಧ್ಯೇಯಂ ಷಟ್ಶಕ್ತಿಭಿರ್ಯುತಮ್ ।
ವಿದ್ಯಾತೇಜಸ್ತಪೋಮೂರ್ತಿಮಿಮಂ ಮಂತ್ರಮುದಾಹರೇತ್ ॥
ಅನುವಾದ
ಅನಂತರ ಸಮಗ್ರ ಐಶ್ವರ್ಯ, ಧರ್ಮ, ಯಶ, ಲಕ್ಷ್ಮೀ, ಜ್ಞಾನ ಮತ್ತು ವೈರಾಗ್ಯದಿಂದ ಪರಿಪೂರ್ಣನಾದ ಇಷ್ಟದೇವನಾದ ಭಗವಂತನನ್ನು ಧ್ಯಾನಿಸ ಬೇಕು ಮತ್ತು ತನ್ನನ್ನೂ ತದ್ರೂಪನಾಗಿಯೇ ಚಿಂತಿಸಬೇಕು. ಬಳಿಕ ವಿದ್ಯೆ, ತೇಜಸ್ಸು ಮತ್ತು ತಪಸ್ಸುರೂಪವಾದ ಈ ಕವಚವನ್ನು ಪಾರಾಯಣ ಮಾಡಬೇಕು. ॥11॥
(ಶ್ಲೋಕ-12)
ಮೂಲಮ್
ಓಂ ಹರಿರ್ವಿದಧ್ಯಾನ್ಮಮ ಸರ್ವರಕ್ಷಾಂ
ನ್ಯಸ್ತಾಂಘ್ರಿಪದ್ಮಃ ಪತಗೇಂದ್ರಪೃಷ್ಠೇ ।
ದರಾರಿಚರ್ಮಾಸಿಗದೇಷುಚಾಪ-
ಪಾಶಾಂದಧಾನೋಷ್ಟಗುಣೋಷ್ಟಬಾಹುಃ॥
ಅನುವಾದ
‘‘ಭಗವಾನ್ ಶ್ರೀಹರಿಯು ಗರುಡನ ಹೆಗಲಮೇಲೆ ತನ್ನ ಚರಣಕಮಲಗಳನ್ನು ಇರಿಸಿಕೊಂಡಿರುವನು. ಅಣಿಮಾದಿ ಎಂಟೂ ಸಿದ್ಧಿಗಳು ಅವನ ಸೇವೆ ಮಾಡುತ್ತಿದ್ದಾರೆ. ಅವನು ತನ್ನ ಎಂಟು ಕೈಗಳಲ್ಲಿ ಶಂಖ, ಚಕ್ರ, ಗುರಾಣಿ, ಖಡ್ಗ, ಗದೆ, ಬಾಣ, ಧನುಸ್ಸು ಮತ್ತು ಪಾಶಗಳೆಂಬ ದಿವ್ಯ ಆಯುಧಗಳನ್ನು ಧರಿಸಿರುವನು. ಆ ಓಂಕಾರಸ್ವರೂಪನಾದ ಸ್ವಾಮಿಯು ಎಲ್ಲ ರೀತಿಯಿಂದ ಎಲ್ಲ ಕಡೆಗಳಿಂದಲೂ ನನ್ನನ್ನು ರಕ್ಷಿಸಲಿ. ॥12॥
(ಶ್ಲೋಕ-13)
ಮೂಲಮ್
ಜಲೇಷು ಮಾಂ ರಕ್ಷತು ಮತ್ಸ್ಯಮೂರ್ತಿ-
ರ್ಯಾದೋಗಣೇಭ್ಯೋ ವರುಣಸ್ಯ ಪಾಶಾತ್ ।
ಸ್ಥಲೇಷು ಮಾಯಾವಟುವಾಮನೋವ್ಯಾತ್-
ತ್ರಿವಿಕ್ರಮಃ ಖೇವತು ವಿಶ್ವರೂಪಃ ॥
ಅನುವಾದ
ಮತ್ಸ್ಯರೂಪನಾದ ಭಗವಂತನು ಜಲದಲ್ಲಿ ಜಲ ಜಂತುಗಳಿಂದಲೂ ಹಾಗೂ ವರುಣಪಾಶದಿಂದಲೂ ನನ್ನನ್ನು ರಕ್ಷಿಸಲಿ. ಮಾಯೆಯಿಂದ ಬ್ರಹ್ಮಚಾರಿಯ ರೂಪವನ್ನು ಧರಿಸಿದ ಭಗವಾನ್ ವಾಮನನು ನೆಲದ ಮೇಲೂ, ವಿಶ್ವ ರೂಪಿಯಾದ ಭಗವಾನ್ ತ್ರಿವಿಕ್ರಮನು ಆಕಾಶದಲ್ಲಿಯೂ ನನ್ನನ್ನು ರಕ್ಷಿಸಲಿ. ॥13॥
(ಶ್ಲೋಕ-14)
ಮೂಲಮ್
ದುರ್ಗೇಷ್ವಟವ್ಯಾಜಿಮುಖಾದಿಷು ಪ್ರಭುಃ
ಪಾಯಾನ್ನೃಸಿಂಹೋಸುರಯೂಥಪಾರಿಃ ।
ವಿಮುಂಚತೋ ಯಸ್ಯ ಮಹಾಟ್ಟಹಾಸಂ
ದಿಶೋ ವಿನೇದುರ್ನ್ಯಪತಂಶ್ಚ ಗರ್ಭಾಃ ॥
ಅನುವಾದ
ಯಾವನು ಘೋರವಾಗಿ ಅಟ್ಟ ಹಾಸವನ್ನು ಮಾಡಿದಾಗ ದಿಗ್ ದಿಗಂತಗಳೆಲ್ಲ ಪ್ರತಿ ಧ್ವನಿಸಿ ದೈತ್ಯಸೀಯರಿಗೆ ಗರ್ಭಪಾತ ಉಂಟಾಯಿತೋ, ಅಂತಹ ದೈತ್ಯರ ಹಿಂಡಿಗೆ ಶತ್ರುವಾದ ಶ್ರೀಭಗವಂತನಾದ ನರಸಿಂಹನು ಕೋಟೆ, ಅರಣ್ಯ, ರಣಭೂಮಿ ಮುಂತಾದ ವಿಕಟವಾದ ಸ್ಥಾನಗಳಲ್ಲಿ ನನ್ನನ್ನು ಕಾಪಾಡಲಿ. ॥14॥
(ಶ್ಲೋಕ-15)
ಮೂಲಮ್
ರಕ್ಷತ್ವಸೌ ಮಾಧ್ವನಿ ಯಜ್ಞಕಲ್ಪಃ
ಸ್ವದಂಷ್ಟ್ರಯೋನ್ನೀತಧರೋ ವರಾಹಃ ।
ರಾಮೋದ್ರಿಕೂಟೇಷ್ವಥ ವಿಪ್ರವಾಸೇ
ಸಲಕ್ಷ್ಮಣೋವ್ಯಾದ್ಭರತಾಗ್ರಜೋಸ್ಮಾನ್ ॥
ಅನುವಾದ
ತನ್ನ ಕೋರೆದಾಡೆಗಳ ಮೇಲೆ ಭೂದೇವಿಯನ್ನು ಧರಿಸಿಕೊಂಡು ಯಜ್ಞಮೂರ್ತಿಯಾದ ಭಗವಾನ್ ವರಾಹನು ಮಾರ್ಗದಲ್ಲಿಯೂ, ಪರಶುರಾಮದೇವರು ಪರ್ವತಗಳ ಶಿಖರ ಗಳಲ್ಲಿಯೂ ಮತ್ತು ಲಕ್ಷ್ಮಣನಸಹಿತ ಭರತಾಗ್ರಜನಾದ ಭಗವಾನ್ ಶ್ರೀರಾಮಚಂದ್ರನು ಪ್ರವಾಸದಲ್ಲಿಯೂ ನನ್ನನ್ನು ರಕ್ಷಿಸಲಿ. ॥15॥
(ಶ್ಲೋಕ-16)
ಮೂಲಮ್
ಮಾಮುಗ್ರಧರ್ಮಾದಖಿಲಾತ್ಪ್ರಮಾದಾ-
ನ್ನಾರಾಯಣಃ ಪಾತು ನರಶ್ಚ ಹಾಸಾತ್ ।
ದತ್ತಸ್ತ್ವಯೋಗಾದಥ ಯೋಗನಾಥಃ
ಪಾಯಾದ್ಗುಣೇಶಃ ಕಪಿಲಃ ಕರ್ಮಬಂಧಾತ್ ॥
ಅನುವಾದ
ಭಗವಾನ್ ನಾರಾಯಣನು ಮಾರಣ-ಮೋಹನ ಮುಂತಾದ ಭಯಂಕರ ಅಭಿಚಾರಗಳಿಂದಲೂ ಮತ್ತು ಎಲ್ಲ ಪ್ರಕಾರದ ಪ್ರಮಾದಗಳಿಂದಲೂ ನನ್ನನ್ನು ರಕ್ಷಿಸಲಿ. ಋಷಿಶ್ರೇಷ್ಠನಾದ ನರನು ಗರ್ವದಿಂದಲೂ, ಯೋಗೇಶ್ವರ ಭಗವಾನ್ ದತ್ತಾತ್ರೇಯನು ಯೋಗದ ವಿಘ್ನಗಳಿಂದಲೂ ಹಾಗೂ ತ್ರಿಗುಣಾಧಿಪತಿಯಾದ ಕಪಿಲ ಭಗವಂತನು ಕರ್ಮ ಬಂಧನಗಳಿಂದಲೂ ನನ್ನನ್ನು ಕಾಪಾಡಲಿ.॥16॥
(ಶ್ಲೋಕ-17)
ಮೂಲಮ್
ಸನತ್ಕುಮಾರೋವತು ಕಾಮದೇವಾ -
ದ್ಧಯಶೀರ್ಷಾ ಮಾಂ ಪಥಿ ದೇವಹೇಲನಾತ್ ।
ದೇವರ್ಷಿವರ್ಯಃ ಪುರುಷಾರ್ಚನಾಂತರಾತ್
ಕೂರ್ಮೋ ಹರಿರ್ಮಾಂ ನಿರಯಾದಶೇಷಾತ್ ॥
ಅನುವಾದ
ಪರಮ ಋಷಿ ಸನತ್ಕುಮಾರನು ಕಾಮದೇವನಿಂದಲೂ, ಭಗವಾನ್ ಹಯಗ್ರೀವನು ಮಾರ್ಗದಲ್ಲಿ ನಡೆಯುವಾಗ ದೇವತಾ ಮೂರ್ತಿಗಳಿಗೆ ನಮಸ್ಕಾರಮಾಡದ ಅಪರಾಧದಿಂದಲೂ, ದೇವಋಷಿ ನಾರದರು ಸೇವಾಪರಾಧಗಳಿಂದಲೂ* ಮತ್ತು ಕೂರ್ಮಾವತಾರೀ ಶ್ರೀಹರಿಯು ಎಲ್ಲ ಪ್ರಕಾರದ ನರಕಗಳಿಂದಲೂ ನನ್ನನ್ನು ರಕ್ಷಿಸಲಿ. ॥17॥
ಟಿಪ್ಪನೀ
- ಶ್ರೀಭಗವಂತನ ಸೇವೆಯಲ್ಲಿ ಒದಗಬಹುದಾದ 32 ಅಪಚಾರಗಳನ್ನು ಹೀಗೆ ಪರಿಗಣಿಸಲಾಗಿದೆ 1) ವಾಹನಾರೂಢನಾಗಿ ಅಥವಾ ಪಾದರಕ್ಷೆಗಳನ್ನು ಹಾಕಿಕೊಂಡು ಭಗವಂತನ ಮಂದಿರಕ್ಕೆ ಹೋಗುವುದು. 2) ರಥೋತ್ಸವ ಮತ್ತು ಜನ್ಮಾಷ್ಟಮಿ ಮುಂತಾದ ಉತ್ಸವಗಳನ್ನು ಆಚರಿಸದೇ ಇರುವುದು ಅಥವಾ ಅವುಗಳನ್ನು ದರ್ಶಿಸದೇ ಇರುವುದು. 3) ಶ್ರೀಭಗವನ್ಮೂರ್ತಿಗಳನ್ನು ದರ್ಶನಮಾಡಿ ನಮಸ್ಕರಿಸದಿರುವುದು. 4) ಅಶುಚಿಯಾಗಿ ದೇವರ ದರ್ಶನ ಮಾಡುವುದು. 5) ಒಂದೇ ಕೈಯಿಂದ ನಮಸ್ಕರಿಸುವುದು. 6) ಪ್ರದಕ್ಷಿಣೆ ಮಾಡುವಾಗ ಭಗವಂತನ ಮುಂದೆ ಬಂದಾಗ ಸ್ವಲ್ಪ ನಿಲ್ಲದೆ ಮತ್ತೆ ಪ್ರದಕ್ಷಿಣೆ ಮಾಡುವುದು ಅಥವಾ ಕೇವಲ ಮುಂದುಗಡೆಯೇ ಪ್ರದಕ್ಷಿಣೆ ಮಾಡುವುದು. 7) ಭಗವಂತನ ವಿಗ್ರಹದ ಮುಂದೆ ಕಾಲುಚಾಚಿ ಕುಳಿತುಕೊಳ್ಳುವುದು. 8) ಭಗವಂತನ ಶ್ರೀವಿಗ್ರಹದ ಮುಂದೆ ಎರಡೂ ಮಂಡಿಗಳನ್ನು ಮೇಲಕ್ಕೆತ್ತಿ ಅವುಗಳನ್ನು ಕೈಗಳಿಂದ ಬಳಸಿಕೊಂಡು ಕುಳಿತುಕೊಳ್ಳುವುದು. 9) ಭಗವಂತನ ಶ್ರೀವಿಗ್ರಹದ ಮುಂದೆ ಮಲಗುವುದು. 10) ಭಗವಂತನ ಶ್ರೀಮೂರ್ತಿಯ ಮುಂದೆ ಊಟಮಾಡುವುದು. 11) ಭಗವಂತನ ಶ್ರೀಮೂರ್ತಿಯ ಮುಂದೆ ಸುಳ್ಳು ಹೇಳುವುದು. 12) ಭಗವಂತನ ಶ್ರೀವಿಗ್ರಹದ ಮುಂದೆ ಗಟ್ಟಿಯಾಗಿ ಮಾತಾಡುವುದು. 13) ಶ್ರೀಭಗವದ್ವಿಗ್ರಹದ ಮುಂದೆ ಪರಸ್ಪರ ಮಾತಾಡಿಕೊಳ್ಳುವುದು. 15) ಭಗವಂತನ ಶ್ರೀವಿಗ್ರಹದ ಮುಂದೆ ಬೊಬ್ಬೆಹಾಕುವುದು. 15) ಭಗವಂತನ ಶ್ರೀಮೂರ್ತಿಯ ಮುಂದೆ ಜಗಳಾಡುವುದು. 16) ಭಗವಂತನ ಶ್ರೀಮೂರ್ತಿಯ ಮುಂದೆ ಯಾರಿಗಾದರೂ ಪೀಡಿಸುವುದು. 17) ಭಗವಂತನ ಶ್ರೀವಿಗ್ರಹದ ಮುಂದೆ ಯಾರಿಗಾದರೂ ಅನುಗ್ರಹಮಾಡುವುದು. 18) ಭಗವಂತನ ಶ್ರೀವಿಗ್ರಹದ ಮುಂದೆ ಯಾರನ್ನಾದರೂ ಕುರಿತು ನಿಷ್ಠುರವಾದ ಮಾತುಗಳನ್ನಾಡುವುದು. 19) ಭಗವಂತನ ಶ್ರೀವಿಗ್ರಹದ ಮುಂದೆ ಕಂಬಳಿಯಿಂದ ಇಡೀ ದೇಹವನ್ನು ಮುಚ್ಚಿಕೊಳ್ಳುವುದು. 20) ಭಗವಂತನ ಶ್ರೀವಿಗ್ರಹದ ಮುಂದೆ ಇತರರನ್ನು ನಿಂದಿಸುವುದು. 21) ಭಗವಂತನ ಶ್ರೀವಿಗ್ರಹದ ಮುಂದೆ ಬೇರೆಯವರನ್ನು ಸ್ತುತಿಸುವುದು. 22) ಭಗವಂತನ ಶ್ರೀವಿಗ್ರಹದ ಮುಂದೆ ಅಶ್ಲೀಲವಾಗಿ ಮಾತಾಡುವುದು. 23) ಭಗವಂತನ ಶ್ರೀಮೂರ್ತಿಯ ಮುಂದೆ ಅಧೋವಾಯುವನ್ನು ಬಿಡುವುದು. 24) ಮುಖ್ಯವಾದ ಉಪಚಾರಗಳನ್ನು ಮಾಡುವ ಶಕ್ತಿಯಿದ್ದರೂ ಗೌಣವಾದ ಉಪಚಾರಗಳಿಂದ ಭಗವಂತನ ಸೇವೆ-ಪೂಜೆ ಮಾಡುವುದು. 25) ಶ್ರೀಭಗವಂತನಿಗೆ ನಿವೇದನೆ ಮಾಡದೆ ಇರುವ ಯಾವುದೇ ವಸ್ತುವನ್ನು ತಿನ್ನುವುದು-ಕುಡಿಯುವುದು. 26) ಯಾವುದೇ ಋತುವಿನಲ್ಲಿ ಯಾವ ಹಣ್ಣು ಬಿಡುವುದೋ ಅದನ್ನು ಮೊಟ್ಟಮೊದಲಿಗೆ ಭಗವಂತನಿಗೆ ಅರ್ಪಿಸದಿರುವುದು. 27) ಯಾವುದಾದರೂ ಕಾಯಿಪಲ್ಲೆ ಅಥವಾ ಹಣ್ಣು ಮುಂತಾದವುಗಳ ಮುಂಭಾಗವನ್ನು ಮುರಿದು ದೇವರ ವ್ಯಂಜನಾದಿಗಳಿಗಾಗಿ ಸಮರ್ಪಿಸುವುದು. 28) ಭಗವಂತನ ಶ್ರೀವಿಗ್ರಹಕ್ಕೆ ಬೆನ್ನುಹಾಕಿ ಕುಳಿತುಕೊಳ್ಳುವುದು. 29) ಭಗವಂತನ ಶ್ರೀವಿಗ್ರಹದ ಮುಂದೆ ಬೇರೆ ಯಾರನ್ನಾದರೂ ನಮಸ್ಕರಿಸುವುದು. 30) ಶ್ರೀಗುರುದೇವರ ಪ್ರಾರ್ಥನೆ, ಕುಶಲಪ್ರಶ್ನೆ, ಸ್ತೋತ್ರ ಮುಂತಾದವುಗಳನ್ನು ಮಾಡದೇ ಇರುವುದು. 31) ದೇವರ ಮುಂದೆ ತನ್ನನ್ನು ಪ್ರಶಂಸಿಸಿಕೊಳ್ಳುವುದು. 32) ಯಾವುದೇ ದೇವತೆಯನ್ನು ನಿಂದಿಸುವುದು.
(ಶ್ಲೋಕ-18)
ಮೂಲಮ್
ಧನ್ವಂತರಿರ್ಭಗವಾನ್ಪಾತ್ವಪಥ್ಯಾದ್
ದ್ವಂದ್ವಾದ್ ಭಯಾದೃಷಭೋ ನಿರ್ಜಿತಾತ್ಮಾ ।
ಯಜ್ಞಶ್ಚ ಲೋಕಾದವತಾಜ್ಜನಾಂತಾದ್
ಬಲೋ ಗಣಾತ್ಕ್ರೋಧವಶಾದಹೀಂದ್ರಃ ॥
ಅನುವಾದ
ಭಗವಂತನಾದ ಧನ್ವಂತರಿಯು ಕುಪಥ್ಯದಿಂದ, ಜಿತೇಂದ್ರಿಯ ಭಗವಾನ್ ಋಷದೇವನು ಸುಖ-ದುಃಖಾದಿ ಭಯದಾಯಕ ದ್ವಂದ್ವಗಳಿಂದ, ಯಜ್ಞಭಗವಂತನು ಲೋಕಾಪವಾದದಿಂದ, ಬಲರಾಮ ದೇವರು ಜನರು ಕೊಡುವ ಕಷ್ಟದಿಂದ ಮತ್ತು ಶ್ರೀಆದಿಶೇಷನು ಕ್ರೋಧವಶವೆಂಬ ಗಣಕ್ಕೆ ಸೇರಿದ ಸರ್ಪಗಳಿಂದಲೂ ನನ್ನನ್ನು ರಕ್ಷಿಸಲಿ. ॥18॥
(ಶ್ಲೋಕ-19)
ಮೂಲಮ್
ದ್ವೈಪಾಯನೋ ಭಗವಾನಪ್ರಬೋಧಾದ್
ಬುದ್ಧಸ್ತು ಪಾಖಂಡಗಣಾತ್ಪ್ರಮಾದಾತ್ ।
ಕಲ್ಕಿಃ ಕಲೇಃ ಕಾಲಮಲಾತ್ಪ್ರಪಾತು
ಧರ್ಮಾವನಾಯೋರುಕೃತಾವತಾರಃ ॥
ಅನುವಾದ
ಭಗವಾನ್ ಶ್ರೀಕೃಷ್ಣ ದ್ವೈಪಾಯನ ವ್ಯಾಸರು ಅಜ್ಞಾನದಿಂದ ಮತ್ತು ಬುದ್ಧದೇವನು ಪಾಷಂಡಿಗಳಿಂದ ಹಾಗೂ ಪ್ರಮಾದದಿಂದ ನನ್ನನ್ನು ಕಾಪಾಡಲಿ. ಧರ್ಮರಕ್ಷಣೆಗಾಗಿ ಅವತರಿಸುವ ಭಗವಾನ್ ಕಲ್ಕಿಯು ಪಾಪಬಾಹುಳ್ಯವುಳ್ಳ ಕಲಿಕಾಲದ ದೋಷಗಳಿಂದ ನನ್ನನ್ನು ರಕ್ಷಿಸಲಿ. ॥19॥
(ಶ್ಲೋಕ-20)
ಮೂಲಮ್
ಮಾಂ ಕೇಶವೋ ಗದಯಾ ಪ್ರಾತರವ್ಯಾದ್
ಗೋವಿಂದ ಆಸಂಗವಮಾತ್ತವೇಣುಃ ।
ನಾರಾಯಣಃ ಪ್ರಾಹ್ಣ ಉದಾತ್ತಶಕ್ತಿ-
ರ್ಮಧ್ಯಂದಿನೇ ವಿಷ್ಣುರರೀಂದ್ರಪಾಣಿಃ ॥
ಅನುವಾದ
ಪ್ರಾತಃಕಾಲದಲ್ಲಿ ಭಗವಾನ್ ಶ್ರೀಕೇಶವನು ಗದಾಹಸ್ತನಾಗಿಯೂ, ಹಗಲು ಸ್ವಲ್ಪ ಏರಿದಾಗ ಭಗವಾನ್ ಶ್ರೀಗೋವಿಂದನು ತನ್ನ ಕೊಳಲನ್ನು ಹಿಡಿದುಕೊಂಡು, ಮಧ್ಯಾಹ್ನದ ಮೊದಲು ಭಗವಾನ್ ಶ್ರೀನಾರಾಯಣನು ತನ್ನ ತೀಕ್ಷ್ಣವಾದ ಶಕ್ತ್ಯಾಯುಧಧಾರಿಯಾಗಿ, ಮಧ್ಯಾಹ್ನದಲ್ಲಿ ಭಗವಾನ್ ಶ್ರೀವಿಷ್ಣುವು ಚಕ್ರರಾಜ ಸುದರ್ಶನವನ್ನು ಹಿಡಿದು ನನ್ನನ್ನು ಕಾಪಾಡಲಿ. ॥20॥
(ಶ್ಲೋಕ-21)
ಮೂಲಮ್
ದೇವೋಪರಾಹ್ಣೇ ಮಧುಹೋಗ್ರಧನ್ವಾ ।
ಸಾಯಂ ತ್ರಿಧಾಮಾವತು ಮಾಧವೋ ಮಾಮ್
ದೋಷೇ ಹೃಷೀಕೇಶ ಉತಾರ್ಧರಾತ್ರೇ
ನಿಶೀಥ ಏಕೋವತು ಪದ್ಮನಾಭಃ ॥
ಅನುವಾದ
ಅಪರಾಹ್ನಕಾಲದಲ್ಲಿ ಭಗವಾನ್ ಮಧುಸೂದನನು ತನ್ನ ಪ್ರಚಂಡವಾದ ಧನುಸ್ಸನ್ನು ಹಿಡಿದುಕೊಂಡು ನನ್ನನ್ನು. ರಕ್ಷಿಸಲಿ. ಸಾಯಂಕಾಲದಲ್ಲಿ ತ್ರಿಮೂರ್ತಿಸ್ವರೂಪನಾದ ಮಾಧವನೂ, ಪ್ರದೋಷದಲ್ಲಿ ಹೃಷೀಕೇಶನೂ, ಅರ್ಧರಾತ್ರಿಯ ಮೊದಲು ಹಾಗೂ ಅರ್ಧರಾತ್ರಿಯಲ್ಲಿ ಭಗವಾನ್ ಪದ್ಮನಾಭನೊಬ್ಬನೇ ನನ್ನನ್ನು ಸಲಹಲಿ. ॥21॥
(ಶ್ಲೋಕ-22)
ಮೂಲಮ್
ಶ್ರೀವತ್ಸಧಾಮಾಪರರಾತ್ರ ಈಶಃ
ಪ್ರತ್ಯೂಷ ಈಶೋಸಿಧರೋ ಜನಾರ್ದನಃ ।
ದಾಮೋದರೋವ್ಯಾದನುಸಂಧ್ಯಂ ಪ್ರಭಾತೇ
ವಿಶ್ವೇಶ್ವರೋ ಭಗವಾನ್ ಕಾಲಮೂರ್ತಿಃ ॥
ಅನುವಾದ
ಶ್ರೀವತ್ಸಲಾಂಛನವನ್ನು ಧರಿಸಿದ ಶ್ರೀಹರಿಯು ಅಪರರಾತ್ರಿಯಲ್ಲೂ, ಖಡ್ಗಹಸ್ತನಾದ ಭಗವಾನ್ ಜನಾರ್ದನನು ಉಷಃಕಾಲದಲ್ಲಿಯೂ, ಶ್ರೀದಾಮೋದರ ಸ್ವಾಮಿಯು ಸೂರ್ಯೋದಯಕ್ಕೆ ಮೊದಲೂ ಮತ್ತು ಎಲ್ಲ ಸಂಧ್ಯೆಗಳಲ್ಲಿ ಕಾಲಮೂರ್ತಿ ಭಗವಾನ್ ವಿಶ್ವೇಶ್ವರನು ನನ್ನನ್ನು ರಕ್ಷಿಸಲಿ.॥22॥
(ಶ್ಲೋಕ-23)
ಮೂಲಮ್
ಚಕ್ರಂ ಯುಗಾಂತಾನಲತಿಗ್ಮನೇಮಿ
ಭ್ರಮತ್ಸಮಂತಾದ್ಭಗವತ್ಪ್ರಯುಕ್ತಮ್ ।
ದಂದಗ್ಧಿ ದಂದಗ್ಧ್ಯರಿಸೈನ್ಯಮಾಶು
ಕಕ್ಷಂ ಯಥಾ ವಾತಸಖೋ ಹುತಾಶಃ ॥
ಅನುವಾದ
ಪ್ರಳಯಕಾಲದ ಅಗ್ನಿಯಂತೆ ತೀಕ್ಷ್ಣವಾದ ಅಲಗುಗಳಿಂದ ಕೂಡಿ, ಶ್ರೀಭಗವಂತನ ಪ್ರೇರಣೆಯಂತೆ ಸದಾಕಾಲ ಸುತ್ತುತ್ತಿರುವ ಚಕ್ರರಾಜನಾದ ಸುದರ್ಶನವೇ! ಗಾಳಿಯಿಂದೊಡಗೂಡಿದ ಬೆಂಕಿಯು ಹುಲ್ಲಿನಮೆದೆಯನ್ನು ಸುಟ್ಟುರುಹುವಂತೆ ನಮ್ಮ ಶತ್ರುಸೈನ್ಯವನ್ನು ಶೀಘ್ರಾತಿ ಶೀಘ್ರವಾಗಿ ಸುಟ್ಟುಹಾಕು, ಸುಟ್ಟುಹಾಕು. ॥23॥
(ಶ್ಲೋಕ-24)
ಮೂಲಮ್
ಗದೇಶನಿಸ್ಪರ್ಶನವಿಸ್ಫುಲಿಂಗೇ
ನಿಷ್ಪಿಂಢಿ ನಿಷ್ಪಿಂಢ್ಯಜಿತಪ್ರಿಯಾಸಿ ।
ಕೂಷ್ಮಾಂಡವೈನಾಯಕಯಕ್ಷರಕ್ಷೋ-
ಭೂತಗ್ರಹಾಂಶ್ಚೂರ್ಣಯಚೂರ್ಣಯಾರೀನ್ ॥
ಅನುವಾದ
ಎಲೈ ಕೌಮೋದಕೀ ಗದೆಯೇ! ನೀನು ವಜ್ರಾಯುಧಕ್ಕೆ ಎಣೆ ಯಾಗಿ ಮುಟ್ಟಲು ಅಸಾಧ್ಯವಾದ ಕಿಡಿಗಳನ್ನು ಉದುರಿಸುತ್ತಿ ರುವೆ. ನೀನು ಭಗವಾನ್ ಅಜಿತನಿಗೆ ಪ್ರಿಯವಾಗಿರುವೆ ಹಾಗೂ ನಾನು ಅವನ ಸೇವಕನಾಗಿರುವೆನು. ಅದಕ್ಕಾಗಿ ನೀನು ಕುಷ್ಮಾಂಡ, ವಿನಾಯಕ, ಯಕ್ಷ, ರಾಕ್ಷಸ, ಭೂತ-ಪ್ರೇತಾದಿ ಗ್ರಹರನ್ನು ಈಗಲೇ ಹೊಸಕಿಹಾಕಿಬಿಡು ಹಾಗೂ ನನ್ನ ಶತ್ರುಗಳನ್ನು ನುಚ್ಚುನೂರಾಗಿಸಿಬಿಡು.॥24॥
(ಶ್ಲೋಕ-25)
ಮೂಲಮ್
ತ್ವಂ ಯಾತುಧಾನಪ್ರಮಥಪ್ರೇತಮಾತೃ-
ಪಿಶಾಚವಿಪ್ರಗ್ರಹಘೋರದೃಷ್ಟೀನ್ ।
ದರೇಂದ್ರ ವಿದ್ರಾವಯ ಕೃಷ್ಣಪೂರಿತೋ
ಭೀಮಸ್ವ ನೋರೇರ್ಹೃದಯಾನಿ ಕಂಪಯನ್ ॥
ಅನುವಾದ
ಎಲೈ ಶಂಖಶ್ರೇಷ್ಠನಾದ ಪಾಂಚಜನ್ಯನೇ! ನಿನ್ನನ್ನು ಭಗವಾನ್ ಶ್ರೀಕೃಷ್ಣನು ಊದಿದಾಗ ಭಯಂಕರವಾದ ಶಬ್ದವನ್ನು ಮಾಡಿ ನನ್ನ ಶತ್ರುಗಳ ಹೃದಯಗಳನ್ನು ನಡುಗಿಸಿಬಿಡು ಹಾಗೂ ಯಾತುಧಾನ, ಪ್ರಮಥ, ಪ್ರೇತ, ಮಾತೃಕಾ, ಪಿಶಾಚ, ಬ್ರಹ್ಮರಾಕ್ಷಸಾದಿ ಭಯಂಕರರಾದ ಪ್ರಾಣಿಗಳನ್ನು ಇಲ್ಲಿಂದ ಒಡನೆಯೇ ಓಡಿಸಿಬಿಡು. ॥25॥
(ಶ್ಲೋಕ-26)
ಮೂಲಮ್
ತ್ವಂ ತಿಗ್ಮಧಾರಾಸಿವರಾರಿಸೈನ್ಯ-
ಮೀಶಪ್ರಯುಕ್ತೋ ಮಮ ಛಿಂದಿ ಛಿಂಧಿ ।
ಚಕ್ಷೂಂಷಿ ಚರ್ಮಂಛತಚಂದ್ರಛಾದಯ
ದ್ವಿಷಾಮಘೋನಾಂ ಹರ ಪಾಪಚಕ್ಷುಷಾಮ್ ॥
ಅನುವಾದ
ಭಗವಂತ ನಿಗೆ ಪ್ರಿಯವಾದ ಎಲೈ ಖಡ್ಗವೇ! ನಿನ್ನ ಅಲಗು ತುಂಬಾ ತೀಕ್ಷ್ಣವಾಗಿದೆ. ನೀನು ಭಗವಂತನ ಪ್ರೇರಣೆಯಿಂದ ನನ್ನ ಶತ್ರುಗಳನ್ನು ಛಿನ್ನ-ಭಿನ್ನವಾಗಿಸು. ಹಾಗೆಯೇ ನೂರಾರು ಚಂದ್ರಮಂಡಲಗಳ ಆಕಾರದಿಂದ ಬೆಳಗುತ್ತಿರುವ ಭಗವಂತ ನಿಗೆ ಪ್ರಿಯವಾದ ಗುರಾಣಿಯೇ! ನೀನು ಪಾಪದೃಷ್ಟಿಯುಳ್ಳ ಪಾಪಾತ್ಮಾ ಶತ್ರುಗಳ ಪಾಪೀಕಣ್ಣುಗಳನ್ನು ಮುಚ್ಚಿಸಿಬಿಡು. ॥26॥
(ಶ್ಲೋಕ-27)
ಮೂಲಮ್
ಯನ್ನೋ ಭಯಂ ಗ್ರಹೇಭ್ಯೋ-
ಭೂತ್ ಕೇತುಭ್ಯೋ ನೃಭ್ಯ ಏವ ಚ ।
ಸರೀಸೃಪೇಭ್ಯೋ ದಂಷ್ಟ್ರಿಭ್ಯೋ
ಭೂತೇಭ್ಯೋಂಹೋಭ್ಯ ಏವ ವಾ ॥
(ಶ್ಲೋಕ-28)
ಮೂಲಮ್
ಸರ್ವಾಣ್ಯೇತಾನಿ ಭಗವನ್ನಾಮರೂಪಾಸ ಕೀರ್ತನಾತ್ ।
ಪ್ರಯಾಂತು ಸಂಕ್ಷಯಂ ಸದ್ಯೋ ಯೇ ನಃ ಶ್ರೇಯಃಪ್ರತೀಪಕಾಃ ॥
ಅನುವಾದ
ಸೂರ್ಯಾದಿ ಗ್ರಹಗಳ ವಿರೋಧಿ ಧೂಮಕೇತು, ದುಷ್ಟ ಮನುಷ್ಯರು, ಸರ್ಪವೇ ಮುಂತಾದ ಹರಿದಾಡುವ ಪ್ರಾಣಿಗಳು, ಕೋರೆದಾಡೆಗಳುಳ್ಳ ಹಿಂಸ್ರಕ ಪಶುಗಳು, ಭೂತ-ಪ್ರೇತಗಳು ಮತ್ತು ಪಾಪಿಗಳಾದ ಪ್ರಾಣಿಗಳು ಇವುಗಳಿಂದ ನಮಗೆ ಉಂಟಾದ ಹಾಗೂ ಉಂಟಾಗುವ ಭಯಗಳೂ, ನಮ್ಮ ಶ್ರೇಯಸ್ಸಿಗೆ ಉಂಟಾದ ವಿರೋಧಗಳೆಲ್ಲವೂ ಭಗವಂತನ ನಾಮ, ರೂಪ, ಆಯುಧಗಳ ಕೀರ್ತನೆ ಮಾಡು ವುದರಿಂದ ಒಡನೆಯೇ ನಾಶವಾಗಲೀ. ॥27-28॥
(ಶ್ಲೋಕ-29)
ಮೂಲಮ್
ಗರುಡೋ ಭಗವಾನ್ಸ್ತೋತ್ರಸ್ತೋಭಶ್ಛಂದೋಮಯಃ ಪ್ರಭುಃ ।
ರಕ್ಷತ್ವಶೇಷಕೃಚ್ಛ್ರೇಭ್ಯೋ ವಿಷ್ವಕ್ಸೇನಃ ಸ್ವನಾಮಭಿಃ ॥
ಅನುವಾದ
ಬೃಹದ್ ರಥಂತರವೇ ಮೊದಲಾದ ಸಾಮವೇದದ ಸ್ತೋತ್ರಗಳಿಂದ ಸ್ತುತಿಸಲ್ಪಡುವ ವೇದಮೂರ್ತಿಯಾದ ಭಗವಾನ್ ಗರುಡ ದೇವರೂ ಮತ್ತು (ಭಗವಂತನ ಪಾರ್ಷದರಿಗೆ ಗಣ ನಾಯಕರಾದ) ವಿಶ್ವಕ್ಸೇನದೇವರೂ ತಮ್ಮ ನಾಮೋಚ್ಚಾರಣೆಯ ಪ್ರಭಾವದಿಂದ ನಮ್ಮನ್ನು ಎಲ್ಲ ವಿಧದ ವಿಪತ್ತುಗಳಿಂದ ಕಾಪಾಡಲಿ. ॥29॥
(ಶ್ಲೋಕ-30)
ಮೂಲಮ್
ಸರ್ವಾಪದ್ಭ್ಯೋಹರೇರ್ನಾಮರೂಪಯಾನಾಯುಧಾನಿ ನಃ ।
ಬುದ್ಧೀಂದ್ರಿಯಮನಃಪ್ರಾಣಾನ್ ಪಾಂತು ಪಾರ್ಷದಭೂಷಣಾಃ ॥
ಅನುವಾದ
ಶ್ರೀಹರಿಯ ನಾಮ, ರೂಪ, ವಾಹನ, ಆಯುಧಗಳು ಮತ್ತು ಶ್ರೇಷ್ಠ ಪಾರ್ಷದರು ನಮ್ಮ ಬುದ್ಧಿ, ಇಂದ್ರಿಯಗಳು, ಮನಸ್ಸು ಹಾಗೂ ಪ್ರಾಣಗಳನ್ನು ಎಲ್ಲ ಬಗೆಯ ಆಪತ್ತುಗಳಿಂದ ಕಾಪಾಡಲಿ. ॥30॥
(ಶ್ಲೋಕ-31)
ಮೂಲಮ್
ಯಥಾ ಹಿ ಭಗವಾನೇವ ವಸ್ತುತಃ ಸದಸಚ್ಚ ಯತ್ ।
ಸತ್ಯೇನಾನೇನ ನಃ ಸರ್ವೇ ಯಾಂತು ನಾಶಮುಪದ್ರವಾಃ ॥
ಅನುವಾದ
ಕಾರ್ಯ-ಕಾರಣರೂಪವಾದ ಈ ಜಗತ್ತೆಲ್ಲವೂ ವಾಸ್ತವವಾಗಿ ಭಗವಂತನೇ ಆಗಿರುವನು. ಭಗವಂತನಿಗೆ ಅಧೀನವಾಗಿದೆ ಎಂಬ ಸತ್ಯದಿಂದ ನಮ್ಮ ಎಲ್ಲ ಉಪದ್ರವಗಳು ನಾಶ ಹೊಂದಲಿ. ॥31॥
(ಶ್ಲೋಕ-32)
ಮೂಲಮ್
ಯಥೈಕಾತ್ಮ್ಯಾನುಭಾವಾನಾಂ ವಿಕಲ್ಪರಹಿತಃ ಸ್ವಯಮ್ ।
ಭೂಷಣಾಯುಧಲಿಂಗಾಖ್ಯಾ ಧತ್ತೇ ಶಕ್ತೀಃ ಸ್ವಮಾಯಯಾ ॥
(ಶ್ಲೋಕ-33)
ಮೂಲಮ್
ತೇನೈವ ಸತ್ಯಮಾನೇನ ಸರ್ವಜ್ಞೋ ಭಗವಾನ್ ಹರಿಃ ।
ಪಾತು ಸರ್ವೈಃ ಸ್ವರೂಪೈರ್ನಃ ಸದಾ ಸರ್ವತ್ರ ಸರ್ವಗಃ ॥
ಅನುವಾದ
ಬ್ರಹ್ಮ ಮತ್ತು ಆತ್ಮನ ಏಕತೆಯನ್ನು ಅನುಭವಿಸಿರುವ ಜನರ ದೃಷ್ಟಿಯಲ್ಲಿ ಭಗವಂತನ ಸ್ವರೂಪವು ಸಮಸ್ತ ವಿಕಲ್ಪ-ಭೇದಗಳಿಂದ ರಹಿತವಾಗಿದೆ. ಹೀಗಿದ್ದರೂ ಅವನು ತನ್ನ ಮಾಯಾಶಕ್ತಿಯ ಮೂಲಕ ಭೂಷಣ, ಆಯುಧ ಮತ್ತು ರೂಪ ನಾಮವೆಂಬ ಶಕ್ತಿಗಳನ್ನು ಧರಿಸುತ್ತಾನೆ. ಇದು ನಿಶ್ಚಿತವಾಗಿ ಸತ್ಯವಾಗಿದೆ. ಇದರಿಂದ ಸರ್ವಜ್ಞನೂ, ಸರ್ವವ್ಯಾಪಕನೂ ಆದ ಭಗವಾನ್ ಶ್ರೀಹರಿಯು ಸದಾಕಾಲ, ಎಲ್ಲೆಡೆ, ಎಲ್ಲ ಸ್ವರೂಪಗಳಿಂದ ನಮ್ಮನ್ನು ರಕ್ಷಿಸಲಿ. ॥32-33॥
(ಶ್ಲೋಕ-34)
ಮೂಲಮ್
ವಿದಿಕ್ಷು ದಿಕ್ಷೂರ್ಧ್ವಮಧಃ ಸಮಂತಾ-
ದಂತರ್ಬಹಿರ್ಭಗವಾನ್ ನಾರಸಿಂಹಃ ।
ಪ್ರಹಾಪಯಲ್ಲೋಕಭಯಂ ಸ್ವನೇನ
ಸ್ವತೇಜಸಾ ಗ್ರಸ್ತಸಮಸ್ತತೇಜಾಃ ॥
ಅನುವಾದ
ಯಾರು ತನ್ನ ಭಯಂಕರ ಅಟ್ಟಹಾಸದಿಂದಲೇ ಎಲ್ಲ ಜನರ ಭಯವನ್ನು ಓಡಿಸಿ ಬಿಡುವನೋ ಮತ್ತು ತನ್ನ ತೇಜದಿಂದ ಎಲ್ಲರ ತೇಜವನ್ನು ನುಂಗಿ ಬಿಡುವನೋ ಅಂತಹ ಭಗವಾನ್ ನರಸಿಂಹದೇವರು ದಿಕ್ಕುಗಳಲ್ಲಿಯೂ ವಿದಿಕ್ಕುಗಳಲ್ಲಿಯೂ, ಮೇಲೂ, ಕೆಳಗೂ, ಒಳಗೂ, ಹೊರಗೂ ಎಲ್ಲ ಕಡೆಗಳಿಂದ ನಮ್ಮನ್ನು ರಕ್ಷಿಸಲಿ. ॥34॥
(ಶ್ಲೋಕ-35)
ಮೂಲಮ್
ಮಘವನ್ನಿದಮಾಖ್ಯಾತಂ ವರ್ಮ ನಾರಾಯಣಾತ್ಮಕಮ್ ।
ವಿಜೇಷ್ಯಸ್ಯಂಜಸಾ ಯೇನ ದಂಶಿತೋಸುರಯೂಥಪಾನ್ ॥
ಅನುವಾದ
ಎಲೈ ದೇವೆಂದ್ರನೇ! ನಾನು ನಿನಗೆ ಈ ನಾರಾಯಣ ಕವಚವನ್ನು ಉಪದೇಶಿಸಿರುವೆನು. ಈ ಕವಚದಿಂದ ನೀನು ನಿನ್ನನ್ನು ಸುರಕ್ಷಿತನನ್ನಾಗಿಸಿಕೋ. ಸರಿ, ಮತ್ತೆ ನೀನು ಅನಾಯಾಸವಾಗಿಯೇ ಎಲ್ಲ ದೈತ್ಯರ ಗುಂಪನ್ನು ಗೆಲ್ಲಬಲ್ಲೆ. ॥35॥
(ಶ್ಲೋಕ-36)
ಮೂಲಮ್
ಏತದ್ಧಾರಯಮಾಣಸ್ತು ಯಂ ಯಂ ಪಶ್ಯತಿ ಚಕ್ಷುಷಾ ।
ಪದಾ ವಾ ಸಂಸ್ಪೃಶೇತ್ಸದ್ಯಃ ಸಾಧ್ವಸಾತ್ಸ ವಿಮುಚ್ಯತೇ ॥
ಅನುವಾದ
ಈ ನಾರಾಯಣ ಕವಚವನ್ನು ಧರಿಸಿರುವ ಮನುಷ್ಯನು ಯಾರನ್ನಾದರೂ ತನ್ನ ಕಣ್ಣುಗಳಿಂದ ನೋಡಿದರೆ ಅಥವಾ ಕಾಲು ಮುಟ್ಟಿಸಿಕೊಂಡರೆ ಅವನು ಒಡನೆಯೇ ಸಮಸ್ತ ಭಯಗಳಿಂದಲೂ ಬಿಡುಗಡೆ ಹೊಂದುವನು. ॥36॥
(ಶ್ಲೋಕ-37)
ಮೂಲಮ್
ನ ಕುತಶ್ಚಿದ್ಭಯಂ ತಸ್ಯ ವಿದ್ಯಾಂ ಧಾರಯತೋ ಭವೇತ್ ।
ರಾಜದಸ್ಯುಗ್ರಹಾದಿಭ್ಯೋ ವ್ಯಾಘ್ರಾದಿಭ್ಯಶ್ಚ ಕರ್ಹಿಚಿತ್ ॥
ಅನುವಾದ
ಈ ವೈಷ್ಣವೀ ವಿದ್ಯೆಯನ್ನು ಧರಿಸಿಕೊಂಡಿರು ವವನಿಗೆ ರಾಜನಿಂದ, ಕಳ್ಳರಿಂದ, ಭೂತ-ಪ್ರೇತಾದಿಗಳಿಂದ, ಹುಲಿಯೇ ಮುಂತಾದ ಹಿಂಸಕ ಪ್ರಾಣಿಗಳಿಂದ ಎಂದಿಗೂ ಯಾವುದೇ ವಿಧದ ಭಯವು ಉಂಟಾಗಲಾರದು.॥37॥
(ಶ್ಲೋಕ-38)
ಮೂಲಮ್
ಇಮಾಂ ವಿದ್ಯಾಂ ಪುರಾ ಕಶ್ಚಿತ್ಕೌಶಿಕೋ ಧಾರಯನ್ದ್ವಿಜಃ ।
ಯೋಗಧಾರಣಯಾ ಸ್ವಾಂಗಂ ಜಹೌ ಸ ಮರುಧನ್ವನಿ ॥
ಅನುವಾದ
ದೇವರಾಜನೇ! ಹಿಂದೆ ಕೌಶಿಕಗೋತ್ರದ ಬ್ರಾಹ್ಮಣನೊಬ್ಬನು ಈ ವಿದ್ಯೆಯನ್ನು ಧರಿಸಿಕೊಂಡು ಯೋಗಧಾರಣೆಯಿಂದ ತನ್ನ ಶರೀರವನ್ನು ಮರಳು ಗಾಡಿನಲ್ಲಿ ತ್ಯಜಿಸಿದನು. ॥38॥
(ಶ್ಲೋಕ-39)
ಮೂಲಮ್
ತಸ್ಯೋಪರಿ ವಿಮಾನೇನ ಗಂಧರ್ವಪತಿರೇಕದಾ ।
ಯಯೌ ಚಿತ್ರರಥಃ ಸೀಭಿರ್ವೃತೋ ಯತ್ರ ದ್ವಿಜಕ್ಷಯಃ ॥
ಅನುವಾದ
ಆ ಬ್ರಾಹ್ಮಣನ ಶರೀರವು ಬಿದ್ದ ಜಾಗದ ಮೇಲಿನಿಂದ ಒಂದುದಿನ ಗಂಧರ್ವರಾಜನಾದ ಚಿತ್ರರಥನು ತನ್ನ ಪತ್ನಿಯರೊಂದಿಗೆ ವಿಮಾನದಲ್ಲಿ ಕುಳಿತು ಹೋಗುತ್ತಿದ್ದನು. ॥39॥
(ಶ್ಲೋಕ-40)
ಮೂಲಮ್
ಗಗನಾನ್ನ್ಯಪತತ್ಸದ್ಯಃ ಸವಿಮಾನೋ ಹ್ಯವಾಕ್ಶಿರಾಃ ।
ಸ ವಾಲಖಿಲ್ಯವಚನಾದಸ್ಥೀನ್ಯಾದಾಯ ವಿಸ್ಮಿತಃ ।
ಪ್ರಾಸ್ಯ ಪ್ರಾಚೀಸರಸ್ವತ್ಯಾಂ ಸ್ನಾತ್ವಾ ಧಾಮ ಸ್ವಮನ್ವಗಾತ್ ॥
ಅನುವಾದ
ಅಲ್ಲಿಗೆ ಬರುತ್ತಲೇ ತಲೆಕೆಳಗಾಗಿ ವಿಮಾನಸಹಿತ ಅವನು ಆಕಾಶದಿಂದ ಭೂಮಿಗೆ ಬಿದ್ದುಬಿಟ್ಟನು. ಈ ಘಟನೆಯಿಂದ ಅವನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ವಾಲಖಿಲ್ಯ ಮುನಿಗಳು ಅವನಿಗೆ ಇದು ನಾರಾಯಣಕವಚ ಧರಿಸಿದ ಪ್ರಭಾವವೆಂದು ತಿಳಿಸಿದಾಗ, ಅವನು ಆ ಭೂಸುರನ ಮೂಳೆಗಳನ್ನು ತೆಗೆಸಿ ಪೂರ್ವವಾಹಿನಿಯಾದ ಸರಸ್ವತೀನದಿಯಲ್ಲಿ ವಿಸರ್ಜನೆಮಾಡಿ, ಸ್ನಾನಮಾಡಿ ತನ್ನ ಲೋಕಕ್ಕೆ ಹೊರಟು ಹೋದನು.॥40॥
(ಶ್ಲೋಕ-41)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯ ಇದಂ ಶೃಣುಯಾತ್ಕಾಲೇ ಯೋ ಧಾರಯತಿ ಚಾದೃತಃ ।
ತಂ ನಮಸ್ಯಂತಿ ಭೂತಾನಿ ಮುಚ್ಯತೇ ಸರ್ವತೋ ಭಯಾತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಈ ನಾರಾಯಣಕವಚವನ್ನು ಸಕಾಲದಲ್ಲಿ ಕೇಳುವವನು, ಆದರದಿಂದ ಧರಿಸುವವನು, ಅವನ ಮುಂದೆ ಎಲ್ಲ ಪ್ರಾಣಿಗಳು ಆದರದಿಂದ ತಲೆತಗ್ಗಿಸುವರು ಹಾಗೂ ಎಲ್ಲ ರೀತಿಯ ಭಯದಿಂದ ಬಿಡುಗಡೆ ಹೊಂದುವನು. ॥41॥
(ಶ್ಲೋಕ-42)
ಮೂಲಮ್
ಏತಾಂ ವಿದ್ಯಾಮಧಿಗತೋ ವಿಶ್ವರೂಪಾಚ್ಛತಕ್ರತುಃ ।
ತ್ರೈಲೋಕ್ಯಲಕ್ಷ್ಮೀಂ ಬುಭುಜೇ ವಿನಿರ್ಜಿತ್ಯ ಮೃಧೇಸುರಾನ್ ॥
ಅನುವಾದ
ಮಹಾರಾಜಾ! ಇಂದ್ರನು ಆಚಾರ್ಯ ವಿಶ್ವರೂಪನಿಂದ ಈ ವೈಷ್ಣವೀ ವಿದ್ಯೆಯನ್ನು ಪಡೆದುಕೊಂಡು ರಣರಂಗದಲ್ಲಿ ಅಸುರರನ್ನು ಗೆದ್ದುಕೊಂಡು, ಮೂರು ಲೋಕಗಳ ಸಾಮ್ರಾಜ್ಯಲಕ್ಷ್ಮಿಯನ್ನು ಅನುಭವಿಸ ತೊಡಗಿದನು. ॥42॥
ಅನುವಾದ (ಸಮಾಪ್ತಿಃ)
ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ನಾರಾಯಣವರ್ಮ ಕಥನಂನಾಮಾಷ್ಟಮೋಽಧ್ಯಾಯಃ ॥8॥