೦೯

[ಒಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಬ್ರಾಹ್ಮಣಕುಲದಲ್ಲಿ ಭರತನ ಜನ್ಮ - ಜಡನಂತೆ ಆಚರಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ಕಸ್ಯಚಿದ್ ದ್ವಿಜವರಸ್ಯಾಂಗಿರಃಪ್ರವರಸ್ಯ ಶಮದಮತಪಃಸ್ವಾಧ್ಯಾಯಾಧ್ಯಯನತ್ಯಾಗಸಂತೋಷ ತಿತಿಕ್ಷಾ ಪ್ರಶ್ರಯವಿದ್ಯಾನಸೂಯಾತ್ಮಜ್ಞಾನಾನಂದಯುಕ್ತಸ್ಯಾತ್ಮ ಸದೃಶಶ್ರುತಶೀಲಾಚಾರರೂಪೌದಾರ್ಯಗುಣಾ ನವ ಸೋದರ್ಯಾ ಅಂಗಜಾ ಬಭೂವುರ್ಮಿಥುನಂ ಚ ಯವೀಯಸ್ಯಾಂ ಭಾರ್ಯಾಯಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಆಂಗಿರಸ ಗೋತ್ರದಲ್ಲಿ ಶಮ, ದಮ, ತಪಸ್ಸು, ಅಧ್ಯಯನ, ತ್ಯಾಗ, ಸಂತೋಷ, ಸಹನೆ, ವಿನಯ, ಕರ್ಮವಿದ್ಯೆ, ಅಸೂಯೆ ಇಲ್ಲದಿರುವಿಕೆ, ಆತ್ಮಜ್ಞಾನ ಮತ್ತು ಆನಂದ ಗಳೆಂಬ ಎಲ್ಲ ಸದ್ಗುಣಗಳಿಂದಲೂ ಸಂಪನ್ನನಾಗಿದ್ದ ಒಬ್ಬ ಬ್ರಾಹ್ಮಣ ಶ್ರೇಷ್ಠನಿದ್ದನು. ಅವನು ಹಿರಿಯ ಹೆಂಡತಿಯಲ್ಲಿ ವಿದ್ಯೆ, ಶೀಲ, ಆಚಾರ, ರೂಪ, ಔದಾರ್ಯ ಮುಂತಾದ ಗುಣಗಳುಳ್ಳ ತನಗೆ ಸಮಾನರಾದ ಒಂಭತ್ತು ಪುತ್ರರನ್ನು ಪಡೆದನು. ಕಿರಿಯ ಮಡದಿಯಲ್ಲಿ ಒಬ್ಬ ಪುತ್ರನೂ, ಒಬ್ಬಳು ಕನ್ಯೆಯೂ ಜನಿಸಿದರು. ॥1॥

(ಶ್ಲೋಕ - 2)

ಮೂಲಮ್

ಯಸ್ತು ತತ್ರ ಪುಮಾಂ ಸ್ತಂ ಪರಮಭಾಗವತಂ ರಾಜರ್ಷಿಪ್ರವರಂ ಭರತಮುತ್ಸೃಷ್ಟಮೃಗಶರೀರಂ ಚರಮಶರೀರೇಣ ವಿಪ್ರತ್ವಂ ಗತಮಾಹುಃ ॥

ಅನುವಾದ

ಆ ಇಬ್ಬರು ಮಕ್ಕಳಲ್ಲಿ ಪುತ್ರನಾಗಿದ್ದವನೇ ಪರಮಭಾಗವತ ಶಿರೋಮಣಿಯೂ, ರಾಜರ್ಷಿಯೂ ಆಗಿದ್ದ ಭರತನಾಗಿದ್ದನು. ‘ಅವನು ಮೃಗಶರೀರವನ್ನು ತೊರೆದು ಕೊನೆಯ ಜನ್ಮದಲ್ಲಿ ಬ್ರಾಹ್ಮಣ ನಾಗಿದ್ದನು’ ಎಂದು ಮಹಾಪುರುಷರು ಹೇಳುತ್ತಾರೆ. ॥2॥

(ಶ್ಲೋಕ - 3)

ಮೂಲಮ್

ತತ್ರಾಪಿ ಸ್ವಜನಸಂಗಾಚ್ಚ ಭೃಶಮುದ್ವಿಜಮಾನೋ ಭಗವತಃ ಕರ್ಮಬಂಧವಿಧ್ವಂಸನಶ್ರವಣಸ್ಮರಣ ಗುಣವಿವರಣ ಚರಣಾರವಿಂದಯುಗಲಂ ಮನಸಾ ವಿದಧದಾತ್ಮನಃ ಪ್ರತಿಘಾತಮಾಶಂಕಮಾನೋ ಭಗವದನುಗ್ರಹೇಣಾನುಸ್ಮೃತಸ್ವಪೂರ್ವಜನ್ಮಾವಲಿರಾತ್ಮಾನಮುನ್ಮತ್ತ ಜಡಾಂಧಬಧಿರಸ್ವರೂಪೇಣ ದರ್ಶಯಾಮಾಸ ಲೋಕಸ್ಯ ॥

ಅನುವಾದ

ಈ ಜನ್ಮದಲ್ಲಿಯೂ ಭಗವಂತನ ಕೃಪೆಯಿಂದ ತನ್ನ ಹಿಂದಿನ ಜನ್ಮಪರಂಪರೆಯ ನೆನಪು ಇದ್ದುದರಿಂದ ಅವನು ‘ತನ್ನ ಯೋಗದಲ್ಲಿ ಪುನಃ ವಿಘ್ನವು ಒದಗದಿರಲಿ’ ಎಂಬ ಆಶಂಕೆಯಿಂದಲೇ ತಮ್ಮ ಬಂಧುಗಳ ಸಹವಾಸದಿಂದಲೂ ಹೆದರುತ್ತಿದ್ದನು. ಯಾರ ಸ್ಮರಣೆ ಮತ್ತು ಗುಣಕೀರ್ತನೆಗಳನ್ನು ಸದಾಮಾಡುತ್ತಿರುವುದರಿಂದ ಸಕಲ ಕರ್ಮಬಂಧನಗಳು ಕತ್ತರಿಸಿಹೋಗುವವೋ, ಆ ಭಗವಂತನ ಅಡಿದಾವರೆಗಳನ್ನೇ ತನ್ನ ಹೃದಯದಲ್ಲಿ ಧರಿಸಿಕೊಂಡಿದ್ದು, ಬೇರೆಯವರ ದೃಷ್ಟಿಗೆ ತಾನು ಹುಚ್ಚನಂತೆಯೂ, ಮೂರ್ಖನಂತೆಯೂ, ಕುರುಡನಂತೆಯೂ, ಕಿವುಡನಂತೆಯೂ ತೋರ್ಪಡಿಸಿಕೊಳ್ಳುತ್ತಿದ್ದನು. ॥3॥

(ಶ್ಲೋಕ - 4)

ಮೂಲಮ್

ತಸ್ಯಾಪಿ ಹ ವಾ ಆತ್ಮಜಸ್ಯ ವಿಪ್ರಃ ಪುತ್ರಸ್ನೇಹಾನುಬದ್ಧಮನಾ ಆಸಮಾವರ್ತನಾತ್ಸಂಸ್ಕಾರಾನ್ಯಥೋಪದೇಶಂ ವಿದಧಾನ ಉಪನೀತಸ್ಯ ಚ ಪುನಃ ಶೌಚಾಚಮನಾದೀನ್ಕರ್ಮನಿಯಮಾನನಭಿಪ್ರೇತಾನಪಿ ಸಮಶಿಕ್ಷಯದನುಶಿಷ್ಟೇನ ಹಿ ಭಾವ್ಯಂ ಪಿತುಃ ಪುತ್ರೇಣೇತಿ ॥

ಅನುವಾದ

ತಂದೆಗಾದರೋ ಇತರ ಮಕ್ಕಳಲ್ಲಿರುವಷ್ಟೇ ಪ್ರೇಮ ಇವನಲ್ಲಿಯೂ ಇತ್ತು. ಆ ವಿಪ್ರವರ್ಯನು ಹುಚ್ಚನಂತೆ ಕಾಣುತ್ತಿದ್ದ ತನ್ನ ಈ ಮಗನಿಗೂ ಶಾಸ್ತ್ರಾನುಸಾರವಾಗಿ ಸಮಾವರ್ತನದವರೆಗಿನ ವಿವಾಹ ಪೂರ್ವಭಾವಿಯಾದ ಸಂಸ್ಕಾರಗಳೆಲ್ಲವನ್ನು ಮಾಡಬೇಕೆಂಬ ಮನಸ್ಸಿನಿಂದ ಅವನಿಗೆ ಉಪನಯನಸಂಸ್ಕಾರ ಮಾಡಿದನು. ಹುಡುಗನಿಗೆ ಇಷ್ಟವಿಲ್ಲದಿದ್ದರೂ ತಂದೆಯು ಶಾಸ್ತ್ರವಿಧಿಗನುಸಾರವಾಗಿ ಶೌಚ-ಆಚಮನವೇ ಮುಂತಾದ ಎಲ್ಲ ಆವಶ್ಯಕ ಕರ್ಮಗಳನ್ನು ತನ್ನ ಕರ್ತವ್ಯವೆಂಬ ಭಾವನೆಯಿಂದ ಅವನಿಗೆ ಕಲಿಸಿದನು.॥4॥

(ಶ್ಲೋಕ - 5)

ಮೂಲಮ್

ಸ ಚಾಪಿ ತದು ಹ ಪಿತೃ ಸಂನಿಧಾವೇವಾಸಧ್ರೀಚೀನಮಿವ ಸ್ಮ ಕರೋತಿ ಛಂದಾಂಸ್ಯ ಧ್ಯಾಪಯಿಷ್ಯನ್ ಸಹ ವ್ಯಾಹೃತಿಭಿಃ ಸಪ್ರಣವಶಿರಸಿಪದೀಂ ಸಾವಿತ್ರೀಂ ಗ್ರೈಷ್ಮವಾಸಂತಿಕಾನ್ಮಾಸಾನಧೀಯಾನಮಪ್ಯ ಸಮವೇತರೂಪಂ ಗ್ರಾಹಯಾಮಾಸ ॥

ಅನುವಾದ

ಆದರೆ ಭರತನಾದರೋ ತನ್ನ ತಂದೆಯ ಎದುರಿನಲ್ಲಿಯೇ ಅವನ ಉಪದೇಶಕ್ಕೆ ವಿರುದ್ಧವಾಗಿಯೇ ಆಚರಿಸುತ್ತಿದ್ದನು. ವರ್ಷಾಕಾಲದಲ್ಲಿ ಅವನಿಗೆ ವೇದಾಧ್ಯಯನವನ್ನು ಪ್ರಾರಂಭಿಸ ಬೇಕೆಂದು ತಂದೆಯು ಬಯಸುತ್ತಿದ್ದನು. ಆದರೆ ವಸಂತ ಮತ್ತು ಗ್ರೀಷ್ಮಋತುಗಳ ನಾಲ್ಕು ತಿಂಗಳು ಹೇಳಿ ಕೊಟ್ಟರೂ ಭರತನಿಗೆ ವ್ಯಾಹೃತಿ ಮತ್ತು ಗಾಯತ್ರಿಶಿರಸ್ಸಿನಿಂದ ಕೂಡಿದ ತ್ರಿಪದಾ ಗಾಯತ್ರಿ ಮಂತ್ರವನ್ನೂ ಕೂಡ ಚೆನ್ನಾಗಿಕಲಿಸಲಾಗಲಿಲ್ಲ. ॥5॥

(ಶ್ಲೋಕ - 6)

ಮೂಲಮ್

ಏವಂ ಸ್ವತನುಜ ಆತ್ಮನ್ಯನುರಾಗಾವೇಶಿತಚಿತ್ತಃ ಶೌಚಾಧ್ಯಯನವ್ರತನಿಯಮಗುರ್ವನಲ ಶುಶ್ರೂಷಣಾದ್ಯೌಪಕುರ್ವಾಣಕಕರ್ಮಾಣ್ಯನಭಿಯುಕ್ತಾನ್ಯಪಿ ಸಮನುಶಿಷ್ಟೇನ ಭಾವ್ಯಮಿತ್ಯಸದಾಗ್ರಹಃ ಪುತ್ರಮನುಶಾಸ್ಯ ಸ್ವಯಂ ತಾವದನಧಿಗತಮನೋರಥಃ ಕಾಲೇನಾಪ್ರಮತ್ತೇನ ಸ್ವಯಂ ಗೃಹ ಏವ ಪ್ರಮತ್ತ ಉಪಸಂಹೃತಃ ॥

ಅನುವಾದ

ಹೀಗಿದ್ದರೂ ತಂದೆಗೆ ಆ ಬಾಲಕನ ಮೇಲೆ ತನ್ನ ಆತ್ಮದಲ್ಲಿರುವಷ್ಟೇ ಪ್ರೇಮವು ತುಂಬಿತ್ತು. ಅದಕ್ಕಾಗಿ ಆತನಿಗೆ ಕಲಿಯುವ ಪ್ರವೃತ್ತಿಯೇ ಇಲ್ಲದಿದ್ದರೂ ‘ಪುತ್ರನಿಗೆ ಒಳ್ಳೆಯ ಶಿಕ್ಷಣವನ್ನು ನೀಡಬೇಕು’ ಎಂಬ ಆಗ್ರಹದಿಂದ ಅವನಿಗೆ ಶೌಚ, ವೇದಾಧ್ಯಯನ, ವ್ರತ,ನಿಯಮ, ಗುರುವಿನ ಮತ್ತು ಅಗ್ನಿಯ ಸೇವೆ ಇವೇ ಮುಂತಾದ ಬ್ರಹ್ಮಚರ್ಯಾಶ್ರಮದ ಆವಶ್ಯಕವಾದ ನಿಯಮಗಳನ್ನು ಕಲಿಸುತ್ತಲೇ ಇದ್ದನು. ಆದರೆ ಪುತ್ರನನ್ನು ಶಿಕ್ಷಿತನನ್ನಾಗಿ ನೋಡುವ ಅವನ ಮನೋರಥ ಪೂರ್ಣವಾಗಲೇ ಇಲ್ಲ. ಸ್ವತಃ ತಾನೂ ಕೂಡ ಭಗವದ್ಭಜನರೂಪವಾದ ಮುಖ್ಯ ಕರ್ತವ್ಯವನ್ನು ಮರೆತು ಕೇವಲ ಮನೆವಾರ್ತೆಯಲ್ಲೇ ತೊಡಗಿರುತ್ತಾ ಎಚ್ಚರಿಕೆ ಇಲ್ಲದಿರುವಾಗಲೇ ಕಾಲವಶನಾದನು. ॥6॥

(ಶ್ಲೋಕ - 7)

ಮೂಲಮ್

ಅಥ ಯವೀಯಸೀ ದ್ವಿಜಸತೀ ಸ್ವಗರ್ಭಜಾತಂ ಮಿಥುನಂ ಸಪತ್ನ್ಯಾ ಉಪನ್ಯಸ್ಯ ಸ್ವಯಮನುಸಂಸ್ಥಯಾ ಪತಿಲೋಕಮಗಾತ್ ॥

ಅನುವಾದ

ಆಗ ಅವನ ಕಿರಿಯ ಹೆಂಡತಿಯು ತನ್ನಲ್ಲಿ ಹುಟ್ಟಿದ ಇಬ್ಬರು ಬಾಲಕರನ್ನು ತನ್ನ ಸವತಿಗೆ ಒಪ್ಪಿಸಿ ತಾನು ಸಹಗಮನಮಾಡಿ ಪತಿಲೋಕವನ್ನು ಸೇರಿದಳು. ॥7॥

(ಶ್ಲೋಕ - 8)

ಮೂಲಮ್

ಪಿತರ್ಯುಪರತೇ ಭ್ರಾತರ ಏನಮತತ್ಪ್ರಭಾವವಿದ- ಸಯ್ಯಾಂ ವಿದ್ಯಾಯಾಮೇವ ಪರ್ಯವಸಿತಮತಯೋ ನ ಪರವಿದ್ಯಾಯಾಂ ಜಡಮತಿರಿತಿ ಭ್ರಾತುರನುಶಾಸನ ನಿರ್ಬಂಧಾನ್ನ್ಯವೃತ್ಸಂತ ॥

ಅನುವಾದ

ಭರತನ ಒಡಹುಟ್ಟಿದವರೆಲ್ಲರೂ ಕರ್ಮಕಾಂಡವನ್ನೇ ಸರ್ವ ಶ್ರೇಷ್ಠವೆಂದು ತಿಳಿಯುತ್ತಿದ್ದರು. ಬ್ರಹ್ಮಜ್ಞಾನರೂಪ ವಾದ ಪರಾವಿದ್ಯೆಯ ಪರಿಚಯವೇ ಇಲ್ಲದವರೂ, ಭರತನ ಪ್ರಭಾವವನ್ನು ಅರಿಯದವರೂ ಆಗಿದ್ದು, ಅವನನ್ನು ಶುದ್ಧ ಮೂರ್ಖನೆಂದೇ ತಿಳಿಯುತ್ತಿದ್ದರು. ಆದ್ದರಿಂದ ತಂದೆಯು ಸರ್ಗಸ್ಥನಾದ ಬಳಿಕ ಅವರು ಅವನನ್ನು ಓದು-ಬರಹವನ್ನು ಕಲಿಸುವ ಆಗ್ರಹವನ್ನು ಬಿಟ್ಟುಬಿಟ್ಟರು. ॥8॥

(ಶ್ಲೋಕ - 9)

ಮೂಲಮ್

ಸ ಚ ಪ್ರಾಕೃತೈರ್ದ್ವಿಪದಪಶುಭಿರುನ್ಮತ್ತಜಡಬಧಿರೇತ್ಯಭಿಭಾಷ್ಯಮಾಣೋ ಯದಾ ತದನುರೂಪಾಣಿ ಪ್ರಭಾಷತೇ ಕರ್ಮಾಣಿ ಚ ಸ ಕಾರ್ಯಮಾಣಃ ಪರೇಚ್ಛಯಾ ಕರೋತಿ ವಿಷ್ಟಿತೋ ವೇತನತೋ ವಾ ಯಾಂಚಯಾ ಯದೃಚ್ಛಯಾ ವೋಪಸಾದಿತಮಲ್ಪಂ ಬಹು ಮೃಷ್ಟಂ ಕದನ್ನಂ ವಾಭ್ಯವಹರತಿ ಪರಂ ನೇಂದ್ರಿಯ ಪ್ರೀತಿನಿಮಿತ್ತಮ್ ನಿತ್ಯನಿವೃತ್ತನಿಮಿತ್ತಸ್ವಸಿದ್ಧವಿಶುದ್ಧಾನುಭವಾನಂದಸ್ವಾತ್ಮಲಾಭಾಧಿಗಮಃ ಸುಖದುಃಖಯೋ- ರ್ಧ್ವಂದ್ವನಿಮಿತ್ತಯೋರಸಂಭಾವಿತದೇಹಾಭಿಮಾನಃ ॥

ಅನುವಾದ

ಭರತನಿಗೆ ಮಾನಾಪಮಾನದ ಭಾವನೆಯೇ ಇರಲಿಲ್ಲ. ಅದರಿಂದ ಸಾಧಾರಣ ನರಪಶುಗಳು ಅವನನ್ನು ಹುಚ್ಚ, ಮೂರ್ಖ ಅಥವಾ ಕಿವುಡ ಎಂದು ಹೇಳಿ ಕರೆದಾಗಲೂ ಅವನು ಅದಕ್ಕೆ ಅನುರೂಪವಾಗಿಯೇ ಮಾತಾಡುತ್ತಿದ್ದನು. ಯಾರಾದರೂ ತನ್ನಿಂದ ಏನೇ ಕೆಲಸವನ್ನು ಮಾಡಿಸಿಕೊಳ್ಳಲು ಬಯಸಿದರೆ ಅವರ ಇಚ್ಛೆಗನುಗುಣವಾಗಿ ಆ ಕೆಲಸವನ್ನು ಮಾಡಿಕೊಡು ತ್ತಿದ್ದನು. ಕೂಲಿ ಇಲ್ಲದ ಬಿಟ್ಟಿಯ ಕೆಲಸವನ್ನಾಗಲೀ, ಕೂಲಿಯ ಕೆಲಸವನ್ನಾಗಲೀ, ಯಾರಾದರೂ ಮಾಡಲು ಬೇಡಿದರೆ ಅವರನ್ನು ಏನೂ ಕೇಳದೆ ಅವರು ಸ್ವಲ್ಪವೋ ಹೆಚ್ಚಾಗಿಯೋ ಎಷ್ಟು ಕೊಟ್ಟರೆ ಅಷ್ಟನ್ನು, ಒಳ್ಳೆಯ ಅನ್ನವೋ, ಕೆಟ್ಟ ಅನ್ನವೋ ಏನೂ ಕೊಟ್ಟರೂ ನಾಲಿಗೆಯ ರುಚಿ ನೋಡದೆಯೇ ತಿಂದುಬಿಡುತ್ತಿದ್ದನು. ಸ್ವತಃ ಸಿದ್ಧವಾದ ಕೇವಲ ಜ್ಞಾನಾನಂದ ಸ್ವರೂಪವಾದ ಆತ್ಮಜ್ಞಾನವು ಆತನಿಗೆ ಉಂಟಾಗಿದ್ದರಿಂದ ಶೀತ-ಉಷ್ಣ, ಮಾನ-ಅಪಮಾನ ಮುಂತಾದ ದ್ವಂದ್ವ ಗಳಿಂದುಂಟಾಗುವ ಸುಖ-ದುಃಖಾದಿಗಳಲ್ಲಿ ದೇಹಾಭಿ ಮಾನದ ಸ್ಫೂರ್ತಿಯೇ ಆತನಿಗೆ ಉಂಟಾಗುತ್ತಿರಲಿಲ್ಲ. ॥9॥

(ಶ್ಲೋಕ - 10)

ಮೂಲಮ್

ಶೀತೋಷ್ಣವಾತವರ್ಷೇಷು ವೃಷ ಇವಾನಾವೃತಾಂಗಃ ಪೀನಃ ಸಂಹನನಾಂಗಃಸ್ಥಂಡಿಲಸಂವೇಶನಾನುನ್ಮರ್ದನಾ ಮಜ್ಜನರಜಸಾ ಮಹಾಮಣಿ ರಿವಾನಭಿವ್ಯಕ್ತಬ್ರಹ್ಮವರ್ಚಸಃ ಕುಪಟಾವೃತ ಕಟಿರುಪವೀತೇನೋರುಮಷಿಣಾದ್ವಿಜಾತಿರಿತಿ ಬ್ರಹ್ಮಬಂಧುರಿತಿ ಸಂಜ್ಞಯಾತಜ್ಜ್ಞಜನಾವಮತೋ ವಿಚಚಾರ ॥

ಅನುವಾದ

ಚಳಿ, ಸೆಕೆ, ಮಳೆ, ಬಿರುಗಾಳಿ ಇವಾವುದನ್ನೂ ಲೆಕ್ಕಿಸದೆ ಬರಿಮೈಯಲ್ಲಿ ಎಲ್ಲೆಂದರಲ್ಲಿ ಬಿದ್ದು ಕೊಂಡಿರುತ್ತಿದ್ದನು. ಆದರೆ ಅವನ ಅಂಗಾಂಗಗಳೆಲ್ಲವೂ ದಷ್ಟಪುಷ್ಟವಾಗಿ ದೃಢವಾಗಿದ್ದವು. ಅವನು ಬರೀ ನೆಲದಲ್ಲೇ ಬಿದ್ದುಕೊಂಡಿರುತ್ತಿದ್ದನು. ಎಂದೂ ಎಣ್ಣೆ ಹಚ್ಚಿಕೊಳ್ಳುತ್ತಿರಲಿಲ್ಲ. ಸ್ನಾನವನ್ನೂ ಮಾಡುತ್ತಿರಲಿಲ್ಲ. ಇದರಿಂದ ದೇಹಕ್ಕೆ ಕೊಳೆಯು ಸದಾಮೆತ್ತಿಕೊಂಡಿರುತ್ತಿತ್ತು. ಅವನ ಬ್ರಹ್ಮ ತೇಜಸ್ಸು ಧೂಳಿನಿಂದ ಮುಚ್ಚಿಕೊಂಡಿರುವ ಅಮೂಲ್ಯವಾದ ಮಣಿ-ಮಾಣಿಕ್ಯದಂತೆ ಅಡಗಿಕೊಂಡಿತ್ತು. ನಡುವಿಗೆ ಒಂದು ಕೊಳೆಯಾದ ಬಟ್ಟೆಯನ್ನು ಸುತ್ತಿಕೊಂಡಿರುತ್ತಿದ್ದನು. ಅವನ ಜನಿವಾರವೂ ತುಂಬಾ ಕೊಳಕಾಗಿತ್ತು. ಆದ್ದರಿಂದ ಅಜ್ಞಾನಿಗಳು ‘ಈತನು ಯಾವನೋ ಒಬ್ಬ ಬ್ರಾಹ್ಮಣನು, ಆದರೆ ಅಧಮ ಬ್ರಾಹ್ಮಣನು’ ಎಂದು ಹೇಳಿ ಅವನನ್ನು ತಿರಸ್ಕರಿಸುತ್ತಿದ್ದರು. ಆದರೆ ಭರತನು ಅದಾವುದನ್ನೂ ವಿಚಾರ ಮಾಡದೆ ಸ್ವಚ್ಛಂದವಾಗಿ ಓಡಾಡುತ್ತಿದ್ದನು. ॥10॥

(ಶ್ಲೋಕ - 11)

ಮೂಲಮ್

ಯದಾ ತು ಪರತ ಆಹಾರಂ ಕರ್ಮವೇತನತ ಈಹಮಾನಃ ಸ್ವಭ್ರಾತೃಭಿರಪಿ ಕೇದಾರಕರ್ಮಣಿ ನಿರೂಪಿತಸ್ತದಪಿ ಕರೋತಿ ಕಿಂತು ನ ಸಮಂ ವಿಷಮಂ ನ್ಯೂನಮಧಿಕಮಿತಿ ವೇದ ಕಣಪಿಣ್ಯಾ ಕಲೀಕರಣಕುಲ್ಮಾಷಸ್ಥಾಲೀ ಪುರೀಷಾದೀನ್ಯಪ್ಯಮೃತವದ ಭ್ಯವಹರತಿ ॥

ಅನುವಾದ

ಇತರರ ಮನೆಗಳಲ್ಲಿ ಕೆಲಸವನ್ನು ಮಾಡಿ ಹೊಟ್ಟೆಹೊರೆಯುವುದನ್ನು ಕಂಡು ಭರತನ ಸೋದರರು ಆತನನ್ನು ಕೆಸರುಗದ್ದೆಯ ಕೆಲಸಕ್ಕೆ ನೇಮಿಸಿದರು. ಆ ಮಹಾತ್ಮನು ಅದನ್ನೂ ಮಾಡ ತೊಡಗಿದನು. ಆದರೆ ಆತನಿಗೆ ಗದ್ದೆಯ ಭೂಮಿಯು ಸಮತಲವಾಗಿದೆಯೇ, ಎತ್ತರ-ತಗ್ಗಾಗಿದೆಯೇ, ಚಿಕ್ಕದಾಗಿದೆಯೇ, ದೊಡ್ಡದಾಗಿದೆಯೇ ಎಂಬುದರ ಕಡೆಗೆ ಸ್ವಲ್ಪವೂ ಗಮನವಿರಲಿಲ್ಲ. ಸಹೋದರರು ಆತನಿಗೆ ನುಚ್ಚನ್ನೋ, ಹಿಂಡಿ ಯನ್ನೋ, ತೌಡನ್ನೋ ಹಳಸಿಹೋದ ಉದ್ದನ್ನೋ, ಪಾತ್ರೆ ಯಲ್ಲಿ ಅಂಟಿಕೊಂಡಿದ್ದ ಸೀದುಹೋದ ಅನ್ನವನ್ನೋ ತಿನ್ನಲು ಕೊಡುತ್ತಿದ್ದರು. ಅದನ್ನು ಅವನು ಅಮೃತತುಲ್ಯವೆಂದು ಭಾವಿಸಿ ತಿಂದುಬಿಡುತ್ತಿದ್ದನು. ॥11॥

(ಶ್ಲೋಕ - 12)

ಮೂಲಮ್

ಅಥ ಕದಾಚಿತ್ಕಶ್ಚಿದ್ ವೃಷಲಪತಿರ್ಭದ್ರಕಾಲ್ಯೈ ಪುರುಷ ಪಶುಮಾಲಭತಾಪತ್ಯಕಾಮಃ ॥

ಅನುವಾದ

ಹೀಗಿರುವಾಗ ಒಮ್ಮೆ ಅಧರ್ಮಿಷ್ಠನಾದ ಕಳ್ಳರತಂಡದ ನಾಯಕನು ಪುತ್ರಕಾಮನೆಗಾಗಿ ಭದ್ರಕಾಲಿಗೆ ನರಬಲಿ ಯನ್ನು ಕೊಡುವ ಸಂಕಲ್ಪ ಮಾಡಿದನು. ॥12॥

(ಶ್ಲೋಕ - 13)

ಮೂಲಮ್

ತಸ್ಯ ಹ ದೈವಮುಕ್ತಸ್ಯ ಪಶೋಃ ಪದವೀಂ ತದನುಚರಾಃ ಪರಿಧಾವಂತೋ ನಿಶಿ ನಿಶೀಥಸಮಯೇ ತಮಸಾವೃತಾಯಾಮನಧಿಗತ ಪಶವ ಆಕಸ್ಮಿಕೇನ ವಿಧಿನಾ ಕೇದಾರಾನ್ ವೀರಾಸನೇನ ಮೃಗವರಾಹಾದಿಭ್ಯಃ ಸಂರಕ್ಷಮಾಣಮಂಗಿರಃಪ್ರವರ ಸುತಮ ಪಶ್ಯನ್ ॥

ಅನುವಾದ

ಅವನು ಬಲಿಕೊಡುವುದಕ್ಕಾಗಿ ಹಿಡಿದುಹಾಕಿದ್ದ ಮನುಷ್ಯರೂಪದ ಪಶುವು ದೈವವಶದಿಂದ ಸೆರೆಯಿಂದ ತಪ್ಪಿಸಿಕೊಂಡು ಓಡಿ ಹೋಯಿತು. ಅವನನ್ನು ಹುಡುಕುವುದಕ್ಕಾಗಿ ನಾಯಕನ ಸೇವಕರು ನಾಲ್ಕೂ ಕಡೆಗಳಲ್ಲಿ ಓಡಿದರು. ಆದರೆ ಕಗ್ಗತ್ತಲೆ ಕವಿದಿದ್ದ ಅರ್ಧರಾತ್ರಿಯಲ್ಲಿ ಅವನು ಎಲ್ಲಿಯೂ ಸಿಗಲಿಲ್ಲ. ಅದೇ ಸಮಯದಲ್ಲಿ ದೈವಯೋಗದಿಂದ ಅವರ ದೃಷ್ಟಿಯು ಅಕಸ್ಮಾತ್ತಾಗಿ ಜಿಂಕೆ-ಹಂದಿ ಮುಂತಾದ ಪ್ರಾಣಿಗಳಿಂದ ಹೊಲವನ್ನು ಕಾಯುವುದಕ್ಕಾಗಿ ವೀರಾಸನದಲ್ಲಿ ಕುಳಿತಿದ್ದ ಆಂಗೀರಸ ಗೋತ್ರದ ಬ್ರಾಹ್ಮಣಕುಮಾರ ಭರತನ ಮೇಲೆ ಬಿತ್ತು. ॥13॥

(ಶ್ಲೋಕ - 14)

ಮೂಲಮ್

ಅಥ ತ ಏನಮನವದ್ಯಲಕ್ಷಣಮವಮೃಶ್ಯ ಭರ್ತೃ ಕರ್ಮನಿಷ್ಪತ್ತಿಂ ಮನ್ಯಮಾನಾ ಬದ್ಧ್ವಾ ರಶನಯಾ ಚಂಡಿಕಾಗೃಹಮುಪನಿನ್ಯುರ್ಮುದಾ ವಿಕಸಿತವದನಾಃ ॥

ಅನುವಾದ

‘ಇದು ತುಂಬಾ ಒಳ್ಳೆಯ ಲಕ್ಷಣಗಳಿಂದ ಕೂಡಿದ ನರಪಶುವಾಗಿದೆ. ಇದರಿಂದ ನಮ್ಮ ಒಡೆಯನ ಕಾರ್ಯವು ಖಂಡಿತವಾಗಿ ಸಿದ್ಧಿಸುವುದು’ ಎಂಬ ಭಾವನೆಯಿಂದ ಅವರ ಮುಖಗಳು ಆನಂದದಿಂದ ಅರಳಿದವು. ಒಡನೆಯೇ ಆತನನ್ನು ಹಗ್ಗಗಳಿಂದ ಕಟ್ಟಿ ಚಂಡಿಕಾದೇವಿಯ ದೇವಾಲಯಕ್ಕೆ ತಂದರು. ॥14॥

(ಶ್ಲೋಕ - 15)

ಮೂಲಮ್

ಅಥ ಪಣಯಸ್ತಂ ಸ್ವವಿಧಿನಾಭಿಷಿಚ್ಯಾಹತೇನ ವಾಸಸಾಚ್ಛಾದ್ಯ ಭೂಷಣಾಲೇಪಸ್ರಕ್ತಿಲಕಾದಿಭಿರು ಪಸ್ಕೃತಂ ಭುಕ್ತವಂತಂ ಧೂಪದೀಪಮಾಲ್ಯಲಾಜಕಿಸಲ ಯಾಂಕುರ ಲೋಪಹಾರೋಪೇತಯಾ ವೈಶಸ ಸಂಸ್ಥಯಾ ಮಹತಾ ಗೀತಸ್ತುತಿಮೃದಂಗಪಣವಘೋ- ಷೇಣ ಚ ಪುರುಷಪಶುಂ ಭದ್ರಕಾಲ್ಯಾಃ ಪುರತ ಉಪವೇಶಯಾಮಾಸುಃ ॥

ಅನುವಾದ

ಅನಂತರ ಆ ಕಳ್ಳರು ತಮ್ಮ ಪದ್ಧತಿಯಂತೆ ಆತನಿಗೆ ವಿಧಿಪೂರ್ವಕವಾಗಿ ಸ್ನಾನಮಾಡಿಸಿ, ಹೊಸ ಬಟ್ಟೆಗಳನ್ನು ಉಡಿಸಿ, ಬಗೆ-ಬಗೆಯ ಒಡವೆಗಳಿಂದಲೂ, ಗಂಧ, ಮಾಲೆ, ತಿಲಕ ಮುಂತಾದವುಗಳಿಂದ ಚೆನ್ನಾಗಿ ಅಲಂಕರಿಸಿ, ಊಟ ಮಾಡಿಸಿದರು. ಮತ್ತೆ ಧೂಪ, ದೀಪ, ಮಾಲೆ, ಅರಳು, ಎಲೆ, ಧಾನ್ಯದ ಮೊಳಕೆ, ಫಲಗಳು ಮುಂತಾದ ಪೂಜಾಸಾಮಗ್ರಿಗಳೊಡನೆ ಬಲಿದಾನದ ವಿಧಿಯಂತೆ ಹಾಡುಗಳನ್ನು ಹಾಡುತ್ತಾ, ಸ್ತುತಿಸುತ್ತಾ, ಮೃದಂಗ, ಡೋಲು ಮುಂತಾದ ವಾದ್ಯಗಳನ್ನು ನುಡಿಸುತ್ತಾ ಆ ನರಪಶುವನ್ನು ಭದ್ರಕಾಳಿಯ ಮುಂದೆ ತಲೆಬಾಗಿಸಿ ಕುಳ್ಳಿರಿಸಿದರು. ॥15॥

(ಶ್ಲೋಕ - 16)

ಮೂಲಮ್

ಅಥ ವೃಷಲರಾಜಪಣಿಃ ಪುರುಷ ಪಶೋರಸೃಗಾಸವೇನ ದೇವೀಂ ಭದ್ರಕಾಲೀಂ ಯಕ್ಷ್ಯಮಾಣ ಸ್ತದಭಿಮಂತ್ರಿತಮಸಿಮತಿಕರಾಲನಿಶಿತಮುಪಾದದೇ ॥

ಅನುವಾದ

ಅನಂತರ ಕಳ್ಳರ ಪುರೋಹಿತನಾದ ದರೋಡೆಕೋರನು ಆ ನರ ಪಶುವಿನ ರಕ್ತದಿಂದ ದೇವಿಯನ್ನು ತೃಪ್ತಿಪಡಿಸಲಿಕ್ಕಾಗಿ ದೇವೀಮಂತ್ರಗಳಿಂದ ಅಭಿಮಂತ್ರಿಸಿದ ಒಂದು ಹರಿತವಾದ ಖಡ್ಗವನ್ನು ಎತ್ತಿಕೊಂಡನು. ॥16॥

(ಶ್ಲೋಕ - 17)

ಮೂಲಮ್

ಇತಿ ತೇಷಾಂ ವೃಷಲಾನಾಂ ರಜಸ್ತಮಃಪ್ರಕೃತೀನಾಂ ಧನಮದರಜಉತ್ಸಿಕ್ತಮನಸಾಂ ಭಗವತ್ಕಲಾ ವೀರಕುಲಂ ಕದರ್ಥೀಕೃತ್ಯೋತ್ಪಥೇನ ಸ್ವೈರಂ ವಿಹರತಾಂ ಹಿಂಸಾವಿಹಾರಾಣಾಂ ಕರ್ಮಾತಿದಾರುಣಂ ಯದ್ಬ್ರಹ್ಮಭೂತಸ್ಯ ಸಾಕ್ಷಾದ್ಬ್ರಹ್ಮರ್ಷಿಸುತಸ್ಯ ನಿರ್ವೈರಸ್ಯ ಸರ್ವಭೂತಸುಹೃದಃ ಸೂನಾಯಾಮಪ್ಯನನುಮತಮಾಲಂಭನಂ ತದುಪಲಭ್ಯ ಬ್ರಹ್ಮತೇಜಸಾತಿದುರ್ವಿಷಹೇಣ ದಂದಹ್ಯಮಾನೇನವಪುಷಾ ಸಹಸೋಚ್ಚಚಾಟ ಸೈವ ದೇವೀ ಭದ್ರಕಾಲೀ ॥

ಅನುವಾದ

ಆ ದರೋಡೆಕೋರರಾದರೋ ಸ್ವಾಭಾವಿಕವಾಗಿಯೇ ರಜೋಗುಣೀ-ತಮೋಗುಣಿಗಳಾಗಿದ್ದರು. ಅಲ್ಲದೆ ಧನ ಮದದಿಂದ ಅವರ ಚಿತ್ತವು ಮತ್ತೇರಿತ್ತು. ಹಿಂಸೆಯಲ್ಲೇ ಅವರಿಗೆ ಅಭಿರುಚಿಯಿತ್ತು. ಆ ಸಮಯದಲ್ಲಿ ಅವರು ಶ್ರೀಭಗವಂತನ ಅಂಶಸ್ವರೂಪನಾದ ಬ್ರಾಹ್ಮಣಕುಲವನ್ನು ತಿರಸ್ಕರಿಸಿ ಸ್ವಚ್ಛಂದವಾಗಿ ದುರ್ಮಾರ್ಗದ ಕಡೆಗೆ ಮುನ್ನುಗ್ಗಿ ದ್ದರು. ಆಪತ್ಕಾಲದಲ್ಲಿ ಯಾವ ಹಿಂಸೆಯನ್ನು ಅನುಮೋದಿಸ ಲಾಗಿದೆಯೋ ಅದರಲ್ಲಿಯೂ ಬ್ರಾಹ್ಮಣನ ವಧೆಯನ್ನು ಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ. ಅದರಲ್ಲಿಯೂ ಇವನು ಸಾಕ್ಷಾತ್ ಬ್ರಹ್ಮಭಾವವನ್ನು ಹೊಂದಿದ, ವೈರಭಾವಹೀನ ಹಾಗೂ ಸಮಸ್ತ ಪ್ರಾಣಿಗಳಲ್ಲಿಯೂ ಸೌಹಾರ್ದವನ್ನೂ ಹೊಂದಿದ್ದ ಬ್ರಹ್ಮರ್ಷಿಕುಮಾರನನ್ನು ಬಲಿಕೊಡಲು ಬಯಸುತ್ತಿದ್ದರು. ಇಂತಹ ಭಯಂಕರವಾದ ಕುಕರ್ಮವನ್ನು ಕಂಡು ಭದ್ರ ಕಾಳಿಯ ಶರೀರದಲ್ಲಿ ತಡೆಯಲಸಾಧ್ಯವಾದ ಭರತನ ಬ್ರಹ್ಮ ತೇಜಸ್ಸಿನ ತಾಪವು ತುಂಬಿ ಆಕೆಯು ಇದ್ದಕ್ಕಿದ್ದಂತೆ ಮೂರ್ತಿಯನ್ನು ಒಡೆದುಕೊಂಡು ಅಲ್ಲಿ ಪ್ರಕಟಳಾದಳು. ॥17॥

(ಗದ್ಯ - 18)

ಮೂಲಮ್

ಭೃಶಮಮರ್ಷರೋಷಾವೇಶರಭಸವಿಲಸಿತಭ್ರುಕುಟಿವಿಟ-ಪಕುಟಿಲದಂಷ್ಟ್ರಾರುಣೇಕ್ಷಣಾಟೋಪಾತಿಭಯಾನಕವದನಾ ಹಂತುಕಾಮೇವೇದಂ ಮಹಾಟ್ಟಹಾಸಮತಿಸಂರಂಭೇಣ ವಿಮುಂಚಂತೀ ತತ ಉತ್ಪತ್ಯ ಪಾಪೀಯಸಾಂ ದುಷ್ಟಾನಾಂ ತೇನೈವಾಸಿನಾ ವಿವೃಕ್ಣಶೀರ್ಷ್ಣಾಂ ಗಲಾತ್ಸ್ರವಂತಮಸೃಗಾಸ- ವಮತ್ಯುಷ್ಣಂ ಸಹ ಗಣೇನ ನಿಪೀಯಾತಿಪಾನಮದವಿಹ್ವ- ಲೋಚ್ಚೈಸ್ತರಾಂ ಸ್ವಪಾರ್ಷದೈಃ ಸಹ ಜಗೌ ನನರ್ತ ಚ ವಿಜಹಾರ ಚ ಶಿರಃಕಂದುಕಲೀಲಯಾ ॥

ಅನುವಾದ

ಕಡುರೋಷದಿಂದಲೂ, ಅಸಹನೆಯಿಂದಲೂ ಆಕೆಯ ಹುಬ್ಬುಗಳು ಮೇಲೆದ್ದು ಗಂಟುಹಾಕಿಕೊಂಡಿದ್ದವು. ಕರಾಳವಾದ ಕೋರೆದಾಡೆಗಳು ಹೊರಗೆ ಚಾಚಿಕೊಂಡಿದ್ದವು. ಕಣ್ಣುಗಳು ಕೆಂಪಾಗಿ ಆಕೆಯ ಮುಖವು ಅತ್ಯಂತ ಭೀಕರವಾಗಿತ್ತು. ಆಕೆಯ ಆ ಕರಾಳವಾದ ರೂಪವನ್ನು ನೋಡಿದಾಗ ಆಕೆಯು ಈ ಜಗತ್ತನ್ನೇ ಸಂಹರಿಸಿ ಬಿಡುವಳೋ ಎಂಬಂತೆ ತೋರುತ್ತಿತ್ತು. ದೇವಿಯು ರೋಷಾವೇಶದಿಂದ ಗಟ್ಟಿಯಾಗಿ ಅಟ್ಟಹಾಸ ಮಾಡಿ ಪುರೋಹಿತನ ಕೈಯಿಂದ ಅಭಿಮಂತ್ರಿತವಾದ ಆ ಖಡ್ಗವನ್ನು ಕಿತ್ತುಕೊಂಡು ಅದರಿಂದಲೇ ಆ ಎಲ್ಲ ಪಾಪಿಗಳ ತಲೆಗಳನ್ನೂ ಕಡಿದು ಹಾರಿಸಿದಳು ಮತ್ತು ತನ್ನ ಗಣಗಳೊಡನೆ ಆ ದುಷ್ಟರ ಕುತ್ತಿಗೆಗಳಿಂದ ಹರಿಯುತ್ತಿದ್ದ ಬಿಸಿರಕ್ತ ರೂಪದ ಮದ್ಯವನ್ನು ಕುಡಿದು ಹುಚ್ಚೇರಿ ಗಟ್ಟಿಯಾಗಿ ಹಾಡುತ್ತಾ ಕುಣಿದು ಕುಪ್ಪಳಿಸುತ್ತಾ ಅವರ ತಲೆಬುರುಡೆಗಳನ್ನು ಚೆಂಡಾಡಿದಳು. ॥18॥

(ಗದ್ಯ - 19)

ಮೂಲಮ್

ಏವ- ಮೇವ ಖಲು ಮಹದಭಿಚಾರಾತಿಕ್ರಮಃ ಕಾರ್ತ್ಸ್ನ್ಯೇನಾತ್ಮನೇ ಲತಿ ॥

ಅನುವಾದ

ಮಹಾಪುರುಷರಿಗೆ ಅತ್ಯಾಚಾರದ ಅಪಚಾರವನ್ನೆಸಗಿದರೆ ಅದು ಹೀಗೆಯೇ ಅದನ್ನು ಮಾಡಿದವನ ಮೇಲೆ ಬಂದು ಎರಗುವುದು. ಇದು ಸತ್ಯ. ॥19॥

(ಗದ್ಯ - 20)

ಮೂಲಮ್

ನ ವಾ ಏತದ್ವಿಷ್ಣುದತ್ತ ಮಹದದ್ಭುತಂ ಯದಸಂಭ್ರಮಃ ಸ್ವಶಿರಶ್ಛೇದನ ಆಪತಿತೇಪಿ ವಿಮುಕ್ತ- ದೇಹಾದ್ಯಾತ್ಮಭಾವಸುದೃಢಹೃದಯಗ್ರಂಥೀನಾಂ ಸರ್ವ- ಸತ್ತ್ವ ಸುಹೃದಾತ್ಮನಾಂ ನಿರ್ವೈರಾಣಾಂ ಸಾಕ್ಷಾದ್ಭಗವತಾ- ನಿಮಿಷಾರಿವರಾಯುಧೇನಾಪ್ರಮತ್ತೇನ ತೈಸ್ತೈರ್ಭಾವೈಃ ಪರಿರಕ್ಷ್ಯಮಾಣಾನಾಂ ತತ್ಪಾದಮೂಲಮಕುತಶ್ಚಿದ್ಭಯ- ಮುಪಸೃತಾನಾಂ ಭಾಗವತಪರಮಹಂಸಾನಾಮ್ ॥20॥

ಅನುವಾದ

ವಿಷ್ಣುದತ್ತ ಮಹಾರಾಜನೇ! ಯಾರ ದೇಹಾಭಿ ಮಾನರೂಪವಾದ ದೃಢವಾದ ಹೃದಯ ಗ್ರಂಥಿಯು ಬಿಚ್ಚಿ ಹೋಗಿದೆಯೋ, ಯಾರು ಸಮಸ್ತ ಪ್ರಾಣಿಗಳ ಆತ್ಮ ಸ್ವರೂಪನೂ, ಸುಹೃದನೂ, ವೈರಹೀನನಾಗಿರುವನೋ, ಸಾಕ್ಷಾತ್ ಭಗವಂತನೇ ಭದ್ರಕಾಲಿ ಮುಂತಾದ ಬೇರೆ-ಬೇರೆ ರೂಪಗಳನ್ನು ಧರಿಸಿ ಎಂದಿಗೂ ಗುರಿತಪ್ಪದಿರುವ ಕಾಲಚಕ್ರವೆಂಬ ಶ್ರೇಷ್ಠವಾದ ಶಸ್ತ್ರದಿಂದ ರಕ್ಷಿಸುತ್ತಾನೋ, ಯಾರು ಭಗವಂತನ ನಿರ್ಭಯ ಚರಣಕಮಲಗಳನ್ನು ಆಶ್ರಯಿಸಿರುವನೋ, ಅಂತಹ ಭಗವದ್ಭಕ್ತ ಪರಮಹಂಸರಿಗೆ ತಮ್ಮ ತಲೆಯು ಕತ್ತರಿಸಿ ಹೋಗುವ ಕಾಲವು ಬಂದರೂ ಯಾವರೀತಿಯ ಕಳವಳವೂ ಉಂಟಾಗುವುದಿಲ್ಲ ಎಂಬುದರಲ್ಲಿ ಅದ್ಭುತವೇನೂ ಇಲ್ಲ.॥20॥

ಅನುವಾದ (ಸಮಾಪ್ತಿಃ)

ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಜಡಭರತಚರಿತೇ ನವಮೋಽಧ್ಯಾಯಃ ॥9॥