[ಎಂಟನೆಯ ಅಧ್ಯಾಯ]
ಭಾಗಸೂಚನಾ
ಭರತನು ಜಿಂಕೆಯ ಮೋಹದಲ್ಲಿ ಸಿಲುಕಿ ಜಿಂಕೆಯ ಯೋನಿಯಲ್ಲಿ ಜನ್ಮತಾಳುವುದು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏಕದಾ ತು ಮಹಾನದ್ಯಾಂ ಕೃತಾಭಿಷೇಕನೈಯಮಿಕಾವಶ್ಯಕೋ ಬ್ರಹ್ಮಾಕ್ಷರಮಭಿಗೃಣಾನೋ ಮುಹೂರ್ತತ್ರಯಮುದಕಾಂತ ಉಪವಿವೇಶ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಒಂದು ದಿನ ಆ ಮಹಾತ್ಮನಾದ ಭರತನು ಗಂಡಕೀನದಿಯಲ್ಲಿ ಸ್ನಾನಮಾಡಿ ನಿತ್ಯ-ನೈಮಿತ್ತಿಕಾದಿ ಆಹ್ನಿಕಗಳನ್ನು ಮುಗಿಸಿಕೊಂಡು ಪ್ರಣವವನ್ನು ಜಪಿಸುತ್ತಾ ಮೂರು ಮುಹೂರ್ತಗಳ ಕಾಲದವರೆಗೆ ನದಿಯ ಧಾರೆಯ ಬಳಿಯೇ ಕುಳಿತಿದ್ದನು.॥1॥
(ಶ್ಲೋಕ - 2)
ಮೂಲಮ್
ತತ್ರ ತದಾ ರಾಜನ್ ಹರಿಣೀ ಪಿಪಾಸಯಾ ಜಲಾಶಯಾಭ್ಯಾಶಮೇಕೈವೋಪಜಗಾಮ ॥
ಅನುವಾದ
ಅದೇ ಸಮಯಕ್ಕೆ ಒಂದು ಹೆಣ್ಣು ಜಿಂಕೆಯು ಬಾಯಾರಿಕೆಯಿಂದ ಪೀಡಿತವಾಗಿ ನೀರು ಕುಡಿಯಲಿಕ್ಕಾಗಿ ಒಂಟಿಯಾಗಿಯೇ ನದಿತೀರಕ್ಕೆ ಬಂತು. ॥2॥
(ಶ್ಲೋಕ - 3)
ಮೂಲಮ್
ತಯಾ ಪೇಪೀಯಮಾನ ಉದಕೇ ತಾವದೇವಾವಿದೂರೇಣ ನದತೋ ಮೃಗಪತೇರುನ್ನಾದೋ ಲೋಕಭಯಂಕರ ಉದಪತತ್ ॥
ಅನುವಾದ
ಅದು ಇನ್ನೇನು ನೀರು ಕುಡಿಯಬೇಕೆಂದಾಗ ಇದ್ದಕಿದ್ದಂತೆ ಲೋಕಭಯಂಕರವಾದ ಒಂದು ಸಿಂಹಗರ್ಜನೆ ಕೇಳಿಬಂತು. ॥3॥
(ಶ್ಲೋಕ - 4)
ಮೂಲಮ್
ತಮುಪಶ್ರುತ್ಯ ಸಾ ಮೃಗವಧೂಃ ಪ್ರಕೃತಿವಿಕ್ಲವಾ ಚಕಿತನಿರೀಕ್ಷಣಾ ಸುತರಾಮಪಿ ಹರಿಭಯಾಭಿ ನಿವೇಶವ್ಯಗ್ರಹೃದಯಾ ಪಾರಿಪ್ಲವದೃಷ್ಟಿರಗ-ತತೃಷಾ ಭಯಾತ್ಸಹಸೈವೋಚ್ಚಕ್ರಾಮ ॥
ಅನುವಾದ
ಜಿಂಕೆಯ ಸ್ವಭಾವವೇ ಅಂಜು ಬುರುಕುತನವಿರುತ್ತದೆ. ಆದುದರಿಂದ ಅದು ಮೊದಲೇ ಚಕಿತದೃಷ್ಟಿಯಿಂದ ಅತ್ತ-ಇತ್ತ ನೋಡುತ್ತಿತ್ತು. ಆ ಭೀಕರವಾದ ಶಬ್ದವು ಕಿವಿಗೆ ಬೀಳುತ್ತಲೆ ಸಿಂಹದ ಭಯದಿಂದ ಎದೆಯು ಡವಗುಟ್ಟುತ್ತಿರಲು, ಬಾಯಾರಿಕೆಯು ತಣಿಯುವುದಕ್ಕೆ ಮೊದಲೇ ಪ್ರಾಣಭಯದಿಂದ ನದಿಯನ್ನು ದಾಟಲೆಂದು ಛಂಗನೆ ಮೇಲೆ ನೆಗೆಯಿತು. ॥4॥
(ಶ್ಲೋಕ - 5)
ಮೂಲಮ್
ತಸ್ಯಾ ಉತ್ಪತಂತ್ಯಾ ಅಂತರ್ವತ್ನ್ಯಾ ಉರುಭಯಾವ- ಗಲಿತೋ ಯೋನಿನಿರ್ಗತೋ ಗರ್ಭಃ ಸ್ರೋತಸಿ ನಿಪಪಾತ ॥
ಅನುವಾದ
ಅದು ಗರ್ಭಧರಿಸಿದ್ದ ಜಿಂಕೆಯಾದ್ದರಿಂದ ಮೇಲೆ ಹಾರಿದಾಗ ಭಯದಿಂದ ಅದರ ಗರ್ಭವು ತನ್ನ ಜಾಗದಿಂದ ಜಾರಿ ಯೋನಿದ್ವಾರದಿಂದ ಹೊರಬಂದು ನದಿಯ ಪ್ರವಾಹದಲ್ಲಿ ಬಿದ್ದು ಬಿಟ್ಟಿತು. ॥5॥
(ಶ್ಲೋಕ - 6)
ಮೂಲಮ್
ತತ್ಪ್ರಸವೊತ್ಸರ್ಪಣಭಯಖೇದಾತುರಾ ಸ್ವಗಣೇನ ವಿಯುಜ್ಯಮಾನಾ ಕಸ್ಯಾಂಚಿದ್ದರ್ಯಾಂ ಕೃಷ್ಣಸಾರಸತೀ ನಿಪಪಾತಾಥ ಚ ಮಮಾರ ॥
ಅನುವಾದ
ಹಾಗೆ ಗರ್ಭಭಾರವು ಬಿದ್ದು ಹೋದ ಆಯಾಸದಿಂದಲೂ, ಸಿಂಹದ ಭಯದಿಂದಲೂ ಅತಿಪೀಡಿತವಾದ ಆ ಜಿಂಕೆಯು ತನ್ನ ಹಿಂಡನ್ನು ಅಗಲಿ ಓಡುತ್ತಾ ಒಂದು ಗುಹೆಯಲ್ಲಿ ಬಿದ್ದು ಸತ್ತು ಹೋಯಿತು. ॥6॥
(ಶ್ಲೋಕ - 7)
ಮೂಲಮ್
ತಂ ತ್ವೇಣಕುಣಕಂ ಕೃಪಣಂ ಸ್ರೋತಸಾನೂಹ್ಯಮಾನ- ಮಭಿವೀಕ್ಷ್ಯಾಪವಿದ್ಧಂ ಬಂಧುರಿವಾನುಕಂಪಯಾ ರಾಜರ್ಷಿರ್ಭರತ ಆದಾಯ ಮೃತಮಾತರಮಿತ್ಯಾಶ್ರಮಪದ ಮನಯತ್ ॥
ಅನುವಾದ
ಆಗ ಆ ಬಡಪಾಯಿಯಾದ ಜಿಂಕೆಯ ಮರಿಯು ತನ್ನ ಬಂಧುಗಳನ್ನಗಲಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ರಾಜರ್ಷಿಯಾದ ಭರತನಿಗೆ ಕರುಣೆಯುಂಟಾಗಿ ಆತನು ತಬ್ಬಲಿಯಾದ ಆ ಮರಿಯನ್ನು ಆತ್ಮೀಯತೆಯಿಂದ ಎತ್ತಿಕೊಂಡು ತನ್ನ ಆಶ್ರಮಕ್ಕೆ ಬಂದನು.॥7॥
(ಶ್ಲೋಕ - 8)
ಮೂಲಮ್
ತಸ್ಯ ಹ ವಾ ಏಣಕುಣಕ ಉಚ್ಚೈ- ರೇತಸ್ಮಿನ್ ಕೃತನಿಜಾಭಿಮಾನಸ್ಯಾಹರಸ್ತತ್ಪೋಷಣಪಾಲನ ಲಾಲನ ಪ್ರೀಣನಾನುಧ್ಯಾನೇನಾತ್ಮನಿಯಮಾಃ ಸಹಯಮಾಃ ಪುರುಷಪರಿಚರ್ಯಾದಯ ಏಕೈಕಶಃ ಕತಿಪಯೇನಾಹರ್ಗಣೇನ ವಿಯುಜ್ಯಮಾನಾಃ ಕಿಲ ಸರ್ವ ಏವೋದವಸನ್ ॥
ಅನುವಾದ
ಆ ಜಿಂಕೆಯ ಮರಿಯಮೇಲೆ ದಿನ-ದಿನಕ್ಕೆ ಭರತನ ಮಮತೆಯು ಹೆಚ್ಚತೊಡಗಿತು. ಆತನು ಪ್ರತಿದಿನವೂ ಅದಕ್ಕೆ ಆಹಾರ-ಪಾನೀಯಗಳನ್ನು ಒದಗಿಸುವುದು, ಅದನ್ನು ಹುಲಿ ಮುಂತಾದವುಗಳಿಂದ ರಕ್ಷಿಸುವುದು, ಮೈದಡವಿ ಮುದ್ದಿಸುವುದು ಮುಂತಾದ ಚಿಂತೆಗಳಲ್ಲೇ ಮುಳುಗ ತೊಡಗಿದನು. ಕೆಲವೇ ದಿನಗಳಲ್ಲಿ ಅವನ ಯಮ, ನಿಯಮ, ಭಗವತ್ಪೂಜೆ ಮುಂತಾದ ಆವಶ್ಯಕವಾದ ವಿಧಿಗಳು ಒಂದೊಂದಾಗಿ ಬಿಟ್ಟು ಹೋಗುತ್ತಾ, ಕೊನೆಗೆ ಎಲ್ಲವೂ ಬಿಟ್ಟು ಹೋಯಿತು.॥8॥
(ಶ್ಲೋಕ - 9)
ಮೂಲಮ್
ಅಹೋ ಬತಾಯಂ ಹರಿಣಕುಣಕಃ ಕೃಪಣ ಈಶ್ವರರಥಚರಣಪರಿಭ್ರಮಣರಯೇಣ ಸ್ವಗಣಸುಹೃದ್ಬಂ ಧುಭ್ಯಃ ಪರಿವರ್ಜಿತಃ ಶರಣಂ ಚ ಮೋಪಸಾದಿತೋ ಮಾ- ಮೇವ ಮಾತಾಪಿತರೌ ಭ್ರಾತೃಜ್ಞಾತೀನ್ ಯೌಥಿಕಾಂಶ್ಚೈ ವೋಪೇಯಾಯ ನಾನ್ಯಂ ಕಂಚನ ವೇದ ಮಯ್ಯತಿವಿ ಸ್ರಬ್ಧಶ್ಚಾತ ಏವ ಮಯಾ ಮತ್ಪರಾಯಣಸ್ಯ ಪೋಷಣ ಪಾಲನಪ್ರೀಣನಲಾಲನಮನಸೂಯುನಾನುಷ್ಠೇಯಂಶರಣ್ಯೋಪೇಕ್ಷಾದೋಷವಿದುಷಾ ॥
ಅನುವಾದ
ಆತನು ಹೀಗೆ ವಿಚಾರ ಮಾಡತೊಡಗಿದನು ‘‘ಆಹಾ! ಈ ಬಡಪಾಯಿಯಾದ ಜಿಂಕೆಯ ಮರಿಯು ಭಗವಂತನ ಕಾಲಚಕ್ರದ ವೇಗದಿಂದ ತನ್ನ ಹಿಂಡನ್ನೂ, ಗೆಳೆಯರನ್ನೂ, ನೆಂಟರಿಷ್ಟರನ್ನೂ ಅಗಲಿ ಕೊನೆಗೆ ನನ್ನ ಆಸರೆಗೆ ಬಂದು ಸೇರಿತಲ್ಲ! ಈಗ ಇದು ನನ್ನನ್ನೇ ತನ್ನ ತಾಯಿಯೆಂದೂ, ತಂದೆಯೆಂದೂ, ಬಂಧು ಬಳಗವೆಂದೂ, ಹಿಂಡಿನ ಗೆಳೆಯನೆಂದೂ ತಿಳಿದುಕೊಂಡಿದೆ. ನನ್ನನ್ನು ಬಿಟ್ಟು ಇದಕ್ಕೆ ಬೇರೆ ಯಾರ ಪರಿಚಯವೂ ಇಲ್ಲ. ನನ್ನಲ್ಲಿ ಪೂರ್ಣವಾದ ನಂಬಿಕೆಯೂ ಇದಕ್ಕೆ ಉಂಟಾಗಿದೆ. ಶರಣು ಬಂದವರನ್ನು ಕೈಬಿಡುವುದು ಮಹಾದೋಷವೆಂದು ನನಗೆ ತಿಳಿದಿದೆ. ಆದುದರಿಂದ ನನ್ನಲ್ಲಿ ಶರಣಾದ ಈ ಪ್ರಾಣಿಯನ್ನು ನಾನು ಎಲ್ಲ ದೋಷಬುದ್ಧಿಯನ್ನು ಬಿಟ್ಟು ಸಾಕಿ-ಸಲಹಿ ಮುದ್ದಿಸುತ್ತಾ ಬೆಳೆಸಬೇಕು. ॥9॥
(ಶ್ಲೋಕ - 10)
ಮೂಲಮ್
ನೂನಂ ಹ್ಯಾರ್ಯಾಃ ಸಾಧವ ಉಪಶಮಶೀಲಾಃ ಕೃಪಣಸುಹೃದ್ ಏವಂವಿಧಾ ರ್ಥೇ ಸ್ವಾರ್ಥಾನಪಿ ಗುರುತರಾನುಪೇಕ್ಷಂತೇ ॥
ಅನುವಾದ
ನಿಶ್ಚಯ ವಾಗಿಯೂ ಶಾಂತ ಸ್ವಭಾವದವರೂ, ದೀನರಕ್ಷಕರೂ ಆದ ಪರೋಪಕಾರಿಗಳಾದ ಸಜ್ಜನರು ಇಂತಹ ಶರಣಾಗತರನ್ನು ರಕ್ಷಿಸುವುದಕ್ಕಾಗಿ ದೊಡ್ಡ-ದೊಡ್ಡ ಸ್ವಾರ್ಥಗಳನ್ನು ಕಡೆಗಣಿಸಿ ಬಿಡುತ್ತಾರೆ. ॥10॥
(ಶ್ಲೋಕ - 11)
ಮೂಲಮ್
ಇತಿ ಕೃತಾನುಷಂಗ ಆಸನಶಯನಾಟನಸ್ಥಾನಾಶನಾದಿಷು ಸಹ ಮೃಗಜಹುನಾ ಸ್ನೇಹಾನುಬದ್ಧಹೃದಯ ಆಸೀತ್ ॥
ಅನುವಾದ
ಹೀಗೆ ಆ ಹುಲ್ಲೆಮರಿಯಲ್ಲಿ ವ್ಯಾಮೋಹವು ಹೆಚ್ಚಿದ್ದರಿಂದ ಆತನ ಮನಸ್ಸು ಕುಳಿತಿರುವಾಗಲೂ, ಮಲಗುವಾಗಲೂ, ನಿಲ್ಲುವಾಗಲೂ, ಆಹಾರವನ್ನು ಸೇವಿಸುವಾಗಲೂ ಸದಾ ಅದನ್ನೇ ಯೋಚಿಸುತ್ತಾ ಸ್ನೇಹಪಾಶಕ್ಕೆ ಕಟ್ಟುಬಿದ್ದಿತು. ॥11॥
(ಶ್ಲೋಕ - 12)
ಮೂಲಮ್
ಕುಶಕುಸುಮಸಮಿತ್ಪಲಾಶಲಮೂಲೋದಕಾ- ನ್ಯಾಹರಿಷ್ಯಮಾಣೋ ವೃಕಸಾಲಾವೃಕಾದಿಭ್ಯೊಭಯ- ಮಾಶಂಸಮಾನೋ ಯದಾ ಸಹ ಹರಿಣಕುಣಕೇನ ವನಂ ಸಮಾವಿಶತಿ ॥
ಅನುವಾದ
ದರ್ಭೆ, ಸಮಿತ್ತು, ಪತ್ರ, ಪುಷ್ಪ, ಗೆಡ್ಡೆ, ಗೆಣಸುಗಳನ್ನು ತರುವುದಕ್ಕೆ ಹೋದಾಗಲೂ ಆತನು ತೋಳ, ನಾಯಿಗಳು ಮುತ್ತಬಹುದೆಂಬ ಭಯದಿಂದ ಅದನ್ನು ಜೊತೆಯಲ್ಲೇ ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದನು. ॥12॥
(ಶ್ಲೋಕ - 13)
ಮೂಲಮ್
ಪಥಿಷು ಚ ಮುಗ್ಧಭಾವೇನ ತತ್ರ ತತ್ರ ವಿಷಕ್ತಮತಿಪ್ರಣಯ ಭರಹೃದಯಃ ಕಾರ್ಪಣ್ಯಾತ್ಸ್ಕಂಧೇ- ನೋದ್ವಹತಿ ಏವಮುತ್ಸಂಗ ಉರಸಿ ಚಾಧಾಯೋಪಲಾಲಯನ್ಮುದಂ ಪರಮಾಮವಾಪ॥
ಅನುವಾದ
ದಾರಿಯಲ್ಲಿ ಅಲ್ಲಲ್ಲಿ ಆ ಹುಲ್ಲೆಯ ಮರಿಯು ಮೃದುವಾದ ಹುಲ್ಲನ್ನು ಕಂಡು ಮುಗ್ಧ ಭಾವದಿಂದ ಆಸಕ್ತವಾಗಿ ಮೊಂಡುಬಿದ್ದಾಗ, ಭರತನು ಅತ್ಯಂತ ಪ್ರೇಮಪೂರ್ಣವಾದ ಹೃದಯದಿಂದ ಅದನ್ನು ತನ್ನ ಹೆಗಲಮೇಲೆ ಏರಿಸಿಕೊಳ್ಳುತ್ತಿದ್ದನು. ಹೀಗೆಯೇ ಅದನ್ನು ತೊಡೆಯ ಮೇಲೆ ಮಲಗಿಸಿ ಕೊಳ್ಳುವುದು, ಎದೆಗಪ್ಪಿಕೊಂಡು ಮುದ್ದಾಡುವುದು ಇವುಗಳಿಂದ ಅವನಿಗೆ ತುಂಬಾ ಸಂತೋಷವುಂಟಾಗುತ್ತಿತ್ತು. ॥13॥
(ಶ್ಲೋಕ - 14)
ಮೂಲಮ್
ಕ್ರಿಯಾಯಾಂ ನಿರ್ವರ್ತ್ಯಮಾನಾಯಾಮಂತರಾಲೇಪ್ಯುತ್ಥಾಯೋತ್ಥಾಯ ಯದೈನಮಭಿಚಕ್ಷೀತ ತರ್ಹಿ ವಾವ ಸ ವರ್ಷಪತಿಃ ಪ್ರಕೃತಿಸ್ಥೇನ ಮನಸಾ ತಸ್ಮಾ ಆಶಿಷ ಆಶಾಸ್ತೇ ಸ್ವಸ್ತಿ ಸ್ತಾದ್ವತ್ಸ ತೇ ಸರ್ವತ ಇತಿ ॥
ಅನುವಾದ
ನಿತ್ಯ-ನೈಮಿತ್ತಿಕ ಕರ್ಮಗಳನ್ನು ಮಾಡುವಾಗಲೂ ಭರತಚಕ್ರವರ್ತಿಯು ನಡು-ನಡುವೆ ಎದ್ದು ಆ ಮರಿಯನ್ನು ನೋಡಲು ಹೋಗುತ್ತಿದ್ದನು. ಆಗ ಅದನ್ನು ಕಣ್ಣಿಂದ ಕಂಡಾಗಲೇ ಆತನ ಮನಸ್ಸಿಗೆ ನೆಮ್ಮದಿಯುಂಟಾಗುತ್ತಿತ್ತು. ಆಗ ಆತನು ‘ಮಗೂ! ನಿನಗೆ ಎಲ್ಲೆಲ್ಲಿಯೂ ಮಂಗಳವುಂಟಾಗಲಿ’ ಎಂದು ಶುಭ ಹಾರೈಸುತ್ತಿದ್ದನು. ॥14॥
ಮೂಲಮ್
(ಶ್ಲೋಕ - 15)
ಅನ್ಯದಾ ಭೃಶಮುದ್ವಿಗ್ನಮನಾ ನಷ್ಟದ್ರವಿಣ ಇವ ಕೃಪಣಃ ಸಕರುಣಮತಿತರ್ಷೇಣ ಹರಿಣಕುಣಕವಿರಹವಿಹ್ವಲ ಹೃದಯಸಂತಾಪಸ್ತಮೇವಾನುಶೋಚನ್ಕಿಲ ಕಶ್ಮಲಂ ಮಹದಭಿ- ರಂಭಿತ ಇತಿ ಹೋವಾಚ ॥
ಅನುವಾದ
ಕೆಲವೊಮ್ಮೆ ಅದು ಏನಾದರೂ ಕಣ್ಣಿಗೆ ಕಾಣದೇ ಹೋದರೆ ಹಣವನ್ನು ಕಳೆದುಕೊಂಡ ಕೃಪಣನಂತೆ ಮನಸ್ಸಿನಲ್ಲಿ ತುಂಬಾ ಕಳವಳಗೊಂಡು ಅದರ ಅಗಲಿಕೆಯಿಂದ ಕಡುನೊಂದವನಾಗಿ ಮೋಹಾವೇಶಗೊಂಡು ದುಃಖದಲ್ಲಿ ಮುಳುಗಿ ಹೀಗೆ ಉದ್ಗರಿಸುತ್ತಿದ್ದನು. ॥15॥
(ಶ್ಲೋಕ - 16)
ಮೂಲಮ್
ಅಪಿ ಬತ ಸ ವೈ ಕೃಪಣ ಏಣಬಾಲಕೋ ಮೃತಹರಿಣೀ ಸುತೋಹೋ ಮಮಾ- ನಾರ್ಯಸ್ಯ ಶಠಕಿರಾತಮತೇರಕೃತಸುಕೃತಸ್ಯ ಕೃತವಿಸ್ರಂಭ ಆತ್ಮಪ್ರತ್ಯಯೇನ ತದವಿಗಣಯನ್ಸುಜನ ಇವಾಗಮಿಷ್ಯತಿ ॥
ಅನುವಾದ
ಅಯ್ಯೋ! ತಾಯಿಯಿಲ್ಲದ ಆ ದೀನವಾದ ಹುಲ್ಲೆಮರಿಯು ದುಷ್ಟಕಿರಾತನಂತೆ ಬುದ್ಧಿಯುಳ್ಳ, ಪುಣ್ಯಹೀನ, ಅನಾರ್ಯನಾದ ನನ್ನಲ್ಲಿ ನಂಬಿಕೆಯನ್ನಿಟ್ಟು ನನ್ನನ್ನು ತನ್ನವನೆಂದು ಭಾವಿಸಿ ಸತ್ಪುರುಷರಂತೆ ನಾನು ಮಾಡಿದ ಅಪರಾಧಗಳನ್ನು ಮರೆತು ಹಿಂದಿರುಗಿ ಬರುವುದು ತಾನೇ! ॥16॥
(ಶ್ಲೋಕ - 17)
ಮೂಲಮ್
ಅಪಿ ಕ್ಷೇಮೇಣಾಸ್ಮಿನ್ನಾಶ್ರಮೋಪವನೇ ಶಷ್ಪಾಣಿ ಚರಂತಂ ದೇವಗುಪ್ತಂ ದ್ರಕ್ಷ್ಯಾಮಿ ॥
ಅನುವಾದ
ಅದು ಈ ಆಶ್ರಮದ ಉಪವನಕ್ಕೆ ಹಿಂದಿರುಗಿ ಶ್ರೀಭಗವಂತನ ಕೃಪೆಯಿಂದ ಸುರಕ್ಷಿತವಾಗಿ ನಿರ್ವಿಘ್ನವಾಗಿ ಹಸಿರುಹುಲ್ಲನ್ನು ಮೇಯುತ್ತಿರುವುದನ್ನು ನಾನು ಕಾಣುವೆನು ತಾನೇ! ॥17॥
(ಶ್ಲೋಕ - 18)
ಮೂಲಮ್
ಅಪಿ ಚ ನ ವೃಕಃ ಸಾಲಾವೃಕೋನ್ಯತಮೋ ವಾ ನೈಕಚರ ಏಕಚರೋ ವಾ ಭಕ್ಷಯತಿ ॥
ಅನುವಾದ
ಯಾವುದಾದರೂ ತೋಳವೋ, ನಾಯಿಯೋ, ಹಿಂಡುಕಟ್ಟಿಕೊಂಡು ಓಡಾಡುವ ಹಂದಿಯೇ ಮುಂತಾದ ಪ್ರಾಣಿಗಳೋ ಒಂಟಿಯಾಗಿ ಸಂಚರಿಸುವ ಹುಲಿಯೇ ಅದನ್ನು ತಿಂದುಹಾಕಿಲ್ಲ ತಾನೇ! ಆದರೆ ಹೀಗಾಗದಿರಲಿ. ॥18॥
(ಶ್ಲೋಕ - 19)
ಮೂಲಮ್
ನಿಮ್ಲೋಚತಿ ಹ ಭಗವಾನ್ಸಕಲಜಗತ್ ಕ್ಷೇಮೋದಯ ಸಯ್ಯಾತ್ಮಾದ್ಯಾಪಿ ಮಮ ನ ಮೃಗವಧೂನ್ಯಾಸ ಆಗಚ್ಛತಿ ॥
ಅನುವಾದ
ಅಯ್ಯೋ! ಇದೇನಿದು! ಇಡೀ ಜಗತ್ತಿನ ಕ್ಷೇಮಕ್ಕಾಗಿ ಪ್ರಕಟಗೊಳ್ಳುವ ವೇದತ್ರಯ ಸ್ವರೂಪನಾದ ಭಗವಾನ್ ಸೂರ್ಯನು ಮುಳುಗಲು ಬಯಸುತ್ತಿದ್ದಾನೆ. ಆದರೂ ಆ ತಾಯಿ ಜಿಂಕೆಯು ನನ್ನಲ್ಲಿ ನ್ಯಾಸವಾಗಿ ಇಟ್ಟು ಹೋಗಿರುವ ನಿಧಿಯು ಇನ್ನೂ ಹಿಂದಿರುಗಿ ಬಂದಿಲ್ಲವಲ್ಲ! ॥19॥
(ಶ್ಲೋಕ - 20)
ಮೂಲಮ್
ಅಪಿಸ್ವಿದಕೃತಸುಕೃತಮಾಗತ್ಯ ಮಾಂ ಸುಖಯಿ ಷ್ಯತಿ ಹರಿಣ ರಾಜಕುಮಾರೋ ವಿವಿಧರುಚಿರದರ್ಶನೀಯ ನಿಜಮೃಗದಾರಕವಿನೋದೈರಸಂತೋಷಂ ಸ್ವಾನಾಮಪನುದನ್ ॥
ಅನುವಾದ
ಆ ಹರಿಣ ರಾಜಕುಮಾರನು ಪುಣ್ಯಹೀನನಾದ ನನ್ನ ಬಳಿಗೆ ಬಂದು, ತನ್ನ ವಯಸ್ಸಿಗೂ, ಜಾತಿಗೂ ಉಚಿತವಾದ ಬಗೆ-ಬಗೆಯ ಮನೋಹರವಾದ ಆಟ-ಪಾಟಗಳಿಂದ ಸ್ವಜನರ ಶೋಕವನ್ನು ದೂರಮಾಡುತ್ತಾ ನನ್ನನ್ನು ಆನಂದಗೊಳಿಸಿತೇ? ॥20॥
(ಶ್ಲೋಕ - 21)
ಮೂಲಮ್
ಕ್ಷ್ವೇಲಿಕಾಯಾಂ ಮಾಂ ಮೃಷಾ ಸಮಾಧಿನಾಮೀಲಿತದೃಶಂ ಪ್ರೇಮಸಂರಂಭೇಣ ಚಕಿತಚಕಿತ ಆಗತ್ಯ ಪೃಷದಪರುಷವಿಷಾಣಾಗ್ರೇಣ ಲುಠತಿ ॥
ಅನುವಾದ
ಆಹಾ! ನಾನೇನಾದರೂ ಪ್ರೀತಿಯ ಕೋಪದಿಂದ ಆಟಕ್ಕಾಗಿ ಸುಳ್ಳು-ಸುಳ್ಳೇ ಸಮಾಧಿಯಲ್ಲಿರುವ ನೆಪದಿಂದ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಂಡರೆ, ಅದು ಚಕಿತವಾದ ಚಿತ್ತದಿಂದ ನನ್ನ ಬಳಿಗೆ ಬಂದು ನೀರಿನ ಹನಿಯಂತೆ ಮೃದುವಾದ ತನ್ನ ಎಳೆಯ ಕೊಂಬಿನ ತುದಿಯಿಂದ ಹೇಗೆ ನನ್ನ ಅಂಗಾಂಗಗಳನ್ನು ತುರಿಸುತ್ತಿತ್ತು. ॥21॥
(ಶ್ಲೋಕ - 22)
ಮೂಲಮ್
ಆಸಾದಿತಹವಿಷಿ ಬರ್ಹಿಷಿ ದೂಷಿತೇ ಮಯೋ ಪಾಲಬ್ಧೋ ಭೀತಭೀತಃ ಸಪದ್ಯುಪರತರಾಸ
ಋಷಿಕುಮಾರವದವಹಿತಕರಣಕಲಾಪ ಆಸ್ತೇ ॥
ಅನುವಾದ
ನಾನು ಎಂದಾದರೂ ದರ್ಭೆಗಳ ಮೇಲೆ ಹವನ ಸಾಮಗ್ರಿಯನ್ನು ಇಟ್ಟಿರುವಾಗ ಅದು ಅವುಗಳನ್ನು ಹಲ್ಲಿನಿಂದ ಎಳೆದು ಅಪವಿತ್ರಗೊಳಿಸಿದಾಗ ನಾನು ಅದನ್ನು ಗದರಿಸುತ್ತಿದ್ದೆ. ಆಗ ಅದು ತುಂಬಾ ಭಯ-ಭೀತವಾಗಿ ಒಡನೆಯೇ ತನ್ನ ಜಿಗಿತ-ಕುಣಿತವನ್ನು ಬಿಟ್ಟು ಋಷಿಕುಮಾರನಂತೆ ಎಲ್ಲ ಇಂದ್ರಿಯಗಳನ್ನು ತಡೆದು ಸುಮ್ಮನೆ ಕುಳಿತಿರುತ್ತಿತ್ತು. ॥22॥
(ಶ್ಲೋಕ - 23)
ಮೂಲಮ್
ಕಿಂ ವಾ ಅರೇ ಆಚರಿತಂ ತಪಸ್ತಪಸ್ವಿನ್ಯಾನಯಾ ಯದಿಯಮವನಿಃ ಸವಿನಯಕೃಷ್ಣಸಾರತನಯ ತನುತರ- ಸುಭಗಶಿವತಮಾಖರಖುರಪದಪಂಕ್ತಿಭಿರ್ದ್ರವಿಣವಿಧುರಾ ತುರಸ್ಯ ಕೃಪಣಸ್ಯ ಮಮ ದ್ರವಿಣಪದವೀಂ ಸೂಚಯಂತ್ಯಾತ್ಮಾನಂ ಚ ಸರ್ವತಃ ಕೃತಕೌತುಕಂ ದ್ವಿಜಾನಾಂ ಸ್ವರ್ಗಾಪವರ್ಗಕಾಮಾನಾಂ ದೇವಯಜನಂ ಕರೋತಿ ॥
ಅನುವಾದ
ಭೂಮಿಯ ಮೇಲೆ ಆ ಜಿಂಕೆಯ ಮರಿಯ ಹೆಜ್ಜೆಗಳ ಗುರುತುಗಳು ಕಾಣಿಸಿದರೆ ಅದನ್ನು ನೋಡಿ ಭರತನು ಹೀಗೆ ಉದ್ಗರಿಸುತ್ತಿದ್ದನು ಓಹೋ! ಈ ಭೂದೇವಿಯು ಎಂತಹ ತಪಸ್ಸು ಮಾಡಿರುವಳೋ! ಅದಕ್ಕೆ ಈಕೆಯು ಜಿಂಕೆಯ ಮರಿಯೆಂಬ ಮಹಾಧನವನ್ನು ಕಳೆದುಕೊಂಡು ಕಳವಳಗೊಂಡು ದೀನನಾಗಿರುವ ನನಗೆ ಅದರ ಸುಂದರವೂ, ಸುಖಕರವೂ ಆದ ಗೊರಸುಗಳುಳ್ಳ ಪುಟ್ಟ ಪದಚಿಹ್ನೆಗಳಿಂದ ಆ ದ್ರವ್ಯವು ದೊರಕುವ ಮಾರ್ಗವನ್ನು ತೋರಿಸುತ್ತಿದ್ದಾಳೆ ಮತ್ತು ತಾನೂ ಸ್ವರ್ಗ-ಮೋಕ್ಷಗಳನ್ನು ಬಯಸುವ ದ್ವಿಜರಿಗೆ ಯಜ್ಞಾನುಷ್ಠಾನದ ಸ್ಥಳವನ್ನು* ಸೂಚಿಸುವ ಆ ಪವಿತ್ರ ವಾದ ಪಾದಚಿಹ್ನೆಗಳಿಂದ ಅಲಂಕೃತವಾಗಿದ್ದಾಳೆ. ॥23॥
ಟಿಪ್ಪನೀ
- ಕೃಷ್ಣಮೃಗವು ಎಲ್ಲಿ ಧಾರಾಳವಾಗಿ ಸಂಚರಿಸುವುದೋ, ಅದು ಯಜ್ಞಾನುಷ್ಠಾನಕ್ಕೆ ಮತ್ತು ಧರ್ಮಶ್ರವಣಕ್ಕೆ ಯೋಗ್ಯವಾದ ಸ್ಥಳ ಎಂದು ಶಾಸ್ತ್ರಗಳು ಹೇಳುತ್ತವೆ.
‘ಮಿಥಿಲಾಸ್ಥಃ ಸ ಯೋಗೀಂದ್ರಃ ಕ್ಷಣಂ ಧ್ಯಾತ್ವಾ ಬ್ರವೀನ್ಮುನೀನ್ । ಯಸ್ಮಿನ್ ದೇಶೇ ಮೃಗಃ ಕೃಷ್ಣಃ ತಸ್ಮಿನ್ ಧರ್ಮಾನ್ನಿಬೋಧತ ॥’
(ಯಾಜ್ಞವಲ್ಕ್ಯ ಸ್ಮೃತಿ)
(ಶ್ಲೋಕ - 24)
ಮೂಲಮ್
ಅಪಿಸ್ವಿದಸೌ ಭಗವಾನುಡುಪತಿರೇನಂ ಮೃಗಪತಿಭಯಾನ್ಮೃತಮಾತರಂ ಮೃಗಬಾಲಕಂ ಸ್ವಾಶ್ರಮ ಪರಿಭ್ರಷ್ಟಮನುಕಂಪಯಾ ಕೃಪಣಜನವತ್ಸಲಃ ಪರಿಪಾತಿ ॥
ಅನುವಾದ
(ಚಂದ್ರನಲ್ಲಿ ಜಿಂಕೆಯಂತೆ ಕಪ್ಪಾಗಿರುವ ಗುರುತನ್ನು ಕಂಡು ಅದನ್ನೇ ತನ್ನ ಪ್ರೀತಿಯ ಜಿಂಕೆಮರಿಯೆಂದು ಭಾವಿಸಿ) ‘ಅಯ್ಯೋ! ಸಿಂಹದ ಭಯದಿಂದ ಪ್ರಾಣಕಳೆದುಕೊಂಡ ಜಿಂಕೆಯ ಮರಿಯು ಈಗ ನನ್ನ ಆಶ್ರಮವನ್ನು ಅಗಲಿ ಹೋಗಿದೆ. ಆದ್ದರಿಂದ ಅದನ್ನು ಅನಾಥವೆಂದು ತಿಳಿದು ಈ ದೀನವತ್ಸಲನಾದ ಭಗವಾನ್ ಚಂದ್ರನು ದಯೆಯಿಂದ ರಕ್ಷಿಸುತ್ತಿದ್ದಾನಲ್ಲ!’ ॥24॥
(ಶ್ಲೋಕ - 25)
ಮೂಲಮ್
ಕಿಂ ವಾತ್ಮಜವಿಶ್ಲೇಷಜ್ವರದ ವದಹನಶಿಖಾಭಿರುಪತಪ್ಯಮಾನಹೃದಯಸ್ಥಲನಲಿನೀಕಂ ಮಾಮುಪಸೃತ ಮೃಗೀತನಯಂ ಶಿಶಿರಶಾಂತಾನುರಾಗಗುಣಿತನಿಜವದ- ನಸಲಿಲಾಮೃತಮಯಗಭಸ್ತಿಭಿಃ ಸ್ವಧಯತೀತಿ ಚ ॥
ಅನುವಾದ
(ಮತ್ತೆ ಚಂದ್ರನ ತಂಪಾದ ಕಿರಣಗಳಿಂದ ಆಹ್ಲಾದಿತ ನಾಗಿ) ‘ಅಥವಾ ಪುತ್ರರ ಅಗಲಿಕೆಯೆಂಬ ಕಾಡ್ಗಿಚ್ಚಿನ ವಿಷಮವಾದ ಜ್ವಾಲೆಯಿಂದ ಹೃದಯಕಮಲವು ಸುಟ್ಟು ಹೋಗುತ್ತಿದ್ದುದರಿಂದ ನಾನು ಒಂದು ಜಿಂಕೆಯ ಮರಿಯ ಆಸರೆಯನ್ನು ಪಡೆದಿದ್ದೆ. ಈಗ ಅದು ಹೊರಟು ಹೋಗಿರುವುದರಿಂದ ನನ್ನ ಹೃದಯವು ಮತ್ತೆ ಸುಡಲು ಆರಂಭ ವಾಗಿದೆ. ಆದುದರಿಂದ ಈ ಚಂದ್ರನು ತನ್ನ ಶೀತಲವೂ, ಶಾಂತವೂ, ಸ್ನೇಹಪೂರ್ಣವೂ ಆದ ಮುಖಾರವಿಂದ ರಸ ರೂಪವಾದ ಅಮೃತಕಿರಣಗಳಿಂದ ನನ್ನನ್ನು ಶಾಂತಗೊಳಿಸುತ್ತಿದ್ದಾನೆ.’ ॥25॥
(ಶ್ಲೋಕ - 26)
ಮೂಲಮ್
ಏವಮಘಟಮಾನಮನೋರಥಾಕುಲಹೃದಯೋ ಮೃಗದಾರಕಾಭಾಸೇನ ಸ್ವಾರಬ್ಧಕರ್ಮಣಾಯೋಗಾರಂಭಣತೋ ವಿಭ್ರಂಶಿತಃ ಸ ಯೋಗತಾಪಸೋ ಭಗವದಾರಾಧನಲಕ್ಷಣಾಚ್ಚ ಕಥಮಿತರಥಾ ಜಾತ್ಯಂತರ ಏಣ ಕುಣಕ ಆಸಂಗಃ ಸಾಕ್ಷಾನ್ನಿಃಶ್ರೇಯಸಪ್ರತಿಪಕ್ಷತಯಾ ಪ್ರಾಕ್ಪರಿ ತ್ಯಕ್ತದುಸ್ತ್ಯಜಹೃದಯಾಭಿಜಾತಸ್ಯ ತಸ್ಯೈವಮಂತರಾಯ ವಿಹತಯೋಗಾರಂಭಣಸ್ಯರಾಜರ್ಷೇರ್ಭರತಸ್ಯ ತಾವನ್ಮೃಗಾರ್ಭಕಪೋಷಣಪಾಲನಪ್ರೀಣನ ಲಾಲನಾನುಷಂಗೇಣಾವಿಗಣಯತ ಆತ್ಮಾನಮಹಿರಿವಾಖುಬಿಲಂ ದುರತಿಕ್ರಮಃ ಕಾಲಃ ಕರಾಲರಭಸ ಆಪದ್ಯತ ॥
ಅನುವಾದ
ರಾಜೇಂದ್ರಾ! ಹೀಗೆ ಈಡೇರಿಸಲು ಅಸಂಭವವಾದ ವಿವಿಧ ಮನೋರಥಗಳಿಂದ ಭರತನ ಚಿತ್ತವು ಕಳವಳದಿಂದ ತುಂಬಿ ಹೋಯಿತು. ತಪಸ್ವೀ ಭರತನು ಜಿಂಕೆಯ ಮರಿಯ ರೂಪದಲ್ಲಿ ಕಾಣಿಸಿಕೊಂಡ ಪ್ರಾರಬ್ಧಕರ್ಮದಿಂದ ಶ್ರೀಭಗವಂತನ ಆರಾಧನೆಯ ರೂಪವಾದ ಕರ್ಮಗಳಿಂದಲೂ, ಯೋಗಾನುಷ್ಠಾನದಿಂದಲೂ ಜಾರಿಬಿಟ್ಟನು. ಮೋಕ್ಷಮಾರ್ಗಕ್ಕೆ ಸಾಕ್ಷಾತ್ತಾಗಿ ವಿಘ್ನರೂಪವೆಂದು ಭಾವಿಸಿ ಬಿಡುವುದಕ್ಕೆ ಅತಿಕಷ್ಟವಾಗಿದ್ದ ತನ್ನ ಪುತ್ರಾದಿಗಳನ್ನೂ ಕೂಡ ತ್ಯಜಿಸಿದ್ದನು. ಅಂತಹವನಿಗೆ ಬೇರೆ ಜಾತಿಯ ಪ್ರಾಣಿಯಾದ ಜಿಂಕೆಯ ಮರಿಯಲ್ಲಿ ಇಂತಹ ಆಸಕ್ತಿ ಉಂಟಾದುದಕ್ಕೆ ಪ್ರಾರಬ್ಧಕರ್ಮವಲ್ಲದೆ ಮತ್ತಾವ ಕಾರಣವಿದ್ದೀತು? ಹೀಗೆ ರಾಜರ್ಷಿ ಭರತನು ವಿಘ್ನಗಳಿಗೆ ವಶನಾಗಿ ಯೋಗಸಾಧನೆಯಿಂದ ಭ್ರಷ್ಟನಾಗಿ ಆ ಜಿಂಕೆಯ ಮರಿಯ ಪಾಲನೆ- ಪೋಷಣೆ ಮತ್ತು ಮುದ್ದಿಸುವುದರಲ್ಲೇ ತೊಡಗಿರುವುದರಿಂದ ಆತ್ಮಸ್ವರೂಪವನ್ನು ಮರೆತುಬಿಟ್ಟನು. ಆಗಲೇ ಯಾರಿಂದಲೂ ತಪ್ಪಿಸಿಕೊಳ್ಳುವುದು ಅಸಾಧ್ಯವಾದ ಬಲಶಾಲಿಯೂ, ವೇಗಶಾಲಿಯೂ ಆದ ಕರಾಳ-ಕಾಲವು ಇಲಿಯ ಬಿಲಕ್ಕೆ ಹಾವು ನುಗ್ಗುವಂತೆ ಆ ರಾಜರ್ಷಿಯನ್ನು ಆಕ್ರಮಿಸಿತು. ॥26॥
(ಶ್ಲೋಕ - 27)
ಮೂಲಮ್
ತದಾನೀಮಪಿ ಪಾರ್ಶ್ವವರ್ತಿನಮಾತ್ಮಜಮಿವಾನು ಶೋಚಂತಮಭಿವೀಕ್ಷಮಾಣೋ ಮೃಗ ಏವಾಭಿ ನಿವೇಶಿತಮನಾ ವಿಸೃಜ್ಯ ಲೋಕಮಿಮಂ ಸಹ ಮೃಗೇಣ ಕಲೇವರಂ ಮೃತಮನು ನ ಮೃತಜನ್ಮಾನುಸ್ಮೃತಿರಿತರವನ್ಮೃಗಶರೀರಮವಾಪ ॥
ಅನುವಾದ
ಆಗಲೂ ತನ್ನ ಬಳಿಯಲ್ಲಿ ಪುತ್ರನಂತೆ ಶೋಕಾತುರವಾಗಿ ಕುಳಿತಿದ್ದ ಆ ಜಿಂಕೆಯ ಮರಿಯನ್ನೇ ನೋಡುತ್ತಾ ಅದರಲ್ಲೇ ಅವನ ಚಿತ್ತವು ತೊಡಗಿತ್ತು. ಇಂತಹ ಆಸಕ್ತಿಯಲ್ಲೇ ಮೃಗದೊಂದಿಗೆ ಅವನ ಶರೀರವು ಬಿಟ್ಟು ಹೋಯಿತು. ಅನಂತರ ಅವನಿಗೆ ಅಂತ್ಯಕಾಲದ ಭಾವನೆಗನುಸಾರವಾಗಿ ಬೇರೆ ಸಾಧಾರಣ ಮನುಷ್ಯರಂತೆ ಮೃಗಶರೀರವೇ ದೊರೆಯಿತು. ಆದರೆ ಅವನ ಸಾಧನೆ ಪೂರ್ಣವಾಗಿತ್ತು, ಅದರಿಂದಾಗಿ ಅವನಿಗೆ ಹಿಂದಿನ ಜನ್ಮದ ಸ್ಮೃತಿಯು ನಾಶವಾಗಲಿಲ್ಲ. ॥27॥
(ಶ್ಲೋಕ - 28)
ಮೂಲಮ್
ತತ್ರಾಪಿ ಹ ವಾ ಆತ್ಮನೋ ಮೃಗತ್ವ ಕಾರಣಂ ಭಗವದಾರಾಧನಸಮೀಹಾನುಭಾವೇನಾನು ಸ್ಮೃತ್ಯ ಭೃಶಮನುತಪ್ಯಮಾನ ಆಹ ॥
ಅನುವಾದ
ಆ ಜಿಂಕೆಯ ಯೋನಿಯಲ್ಲಿಯೂ ಹಿಂದಿನ ಜನ್ಮದ ಭಗವದಾರಾಧನೆಯ ಪ್ರಭಾವದಿಂದ ತಾನು ಮೃಗರೂಪನಾದ ಕಾರಣವನ್ನು ಅರಿತುಕೊಂಡು ಅವನು ಅತ್ಯಂತ ಪಶ್ಚಾತ್ತಾಪ ಪಡುತ್ತಾ ಹೀಗೆ ಹೇಳ ತೊಡಗಿದನು. ॥28॥
(ಶ್ಲೋಕ - 29)
ಮೂಲಮ್
ಅಹೋ ಕಷ್ಟಂ ಭ್ರಷ್ಟೋಹಮಾತ್ಮವತಾಮನುಪಥಾದ್ಯ ದ್ವಿಮುಕ್ತ ಸಮಸ್ತಸಂಗಸ್ಯ ವಿವಿಕ್ತಪುಣ್ಯಾರಣ್ಯ ಶರಣ್ಯಸ್ಯಾತ್ಮವತ ಆತ್ಮನಿ ಸರ್ವೇಷಾಮಾತ್ಮನಾಂ ಭಗವತಿ ವಾಸುದೇವೇ ತದನುಶ್ರವಣಮನನ ಸಂಕೀರ್ತನಾರಾಧನಾನುಸ್ಮರಣಾಭಿಯೋಗೇನಾಶೂನ್ಯಸಕಲಯಾಮೇನ ಕಾಲೇನ ಸಮಾವೇಶಿತಂ ಸಮಾಹಿತಂ ಕಾರ್ತ್ಸ್ನ್ಯೇನ ಮನಸ್ತತ್ತು ಪುನರ್ಮಮಾಬುಧಸ್ಯಾರಾನ್ಮೃಗಸುತಮನುಪರಿಸುಸ್ರಾವ ॥
ಅನುವಾದ
ಅಯ್ಯೋ! ಕಷ್ಟವೇ! ನಾನು ಸಂಯಮಶೀಲ ಮಹಾನುಭಾವರ ಮಾರ್ಗದಿಂದ ಪತಿತನಾದೆನು. ನಾನಾದರೋ ಧೈರ್ಯದಿಂದ ಎಲ್ಲ ರೀತಿಯ ಆಸಕ್ತಿಯನ್ನು ಬಿಟ್ಟು ಏಕಾಂತವೂ, ಪವಿತ್ರವೂ ಆದವನವನ್ನು ಆಶ್ರಯಿಸಿದ್ದೆ. ಅಲ್ಲಿದ್ದುಕೊಂಡು ನನ್ನ ಚಿತ್ತವನ್ನು ಸರ್ವಭೂತಾತ್ಮಾ ಶ್ರೀವಾಸುದೇವನಲ್ಲಿ, ನಿರಂತರ ಅವನ ಗುಣಗಳನ್ನು ಶ್ರವಣಿಸುತ್ತಾ, ಮನನಮಾಡುತ್ತಾ, ಸಂಕೀರ್ತನೆಮಾಡುತ್ತಾ ಹಾಗೂ ಪ್ರತಿಯೊಂದು ಕ್ಷಣವನ್ನು ಅವನ ಆರಾಧನೆ ಮತ್ತು ಸ್ಮರಣಾದಿಗಳಿಂದ ಸಫಲಗೊಳಿಸಿಕೊಂಡು ಸ್ಥಿರಭಾವದಿಂದ ಪೂರ್ಣವಾಗಿ ತೊಡಗಿಸಿಬಿಟ್ಟಿದ್ದೆ. ಅಜ್ಞಾನಿಯಾದ ನನ್ನನ್ನು ಅದೇ ಮನಸ್ಸು ಅಕಸ್ಮಾತ್ತಾಗಿ ಒಂದು ಎಳೆಯ ಜಿಂಕೆಯಮರಿಯ ಹಿಂದೆಬಿದ್ದು ನನ್ನ ಲಕ್ಷ್ಯದಿಂದ ಜಾರಿಬಿಟ್ಟೆನಲ್ಲ! ॥29॥
(ಶ್ಲೋಕ - 30)
ಮೂಲಮ್
ಇತ್ಯೇವಂ ನಿಗೂಢನಿರ್ವೇದೋ ವಿಸೃಜ್ಯ ಮೃಗೀಂ ಮಾತರಂ ಪುನರ್ಭಗವತ್ಕ್ಷೇತ್ರಮುಪಶಮಶೀಲಮುನಿಗಣದಯಿತಂ ಶಾಲಗ್ರಾಮಂ ಪುಲಸ್ತ್ಯಪುಲಹಾಶ್ರಮಂ ಕಾಲಂಜರಾತ್ಪ್ರತ್ಯಾಜಗಾಮ ॥
ಅನುವಾದ
ಮೃಗರೂಪನಾಗಿದ್ದ ರಾಜರ್ಷಿ ಭರತನು ಹೀಗೆ ತನ್ನ ಮನಸ್ಸಿನಲ್ಲಿ ಎಚ್ಚರಗೊಂಡಿದ್ದ ವೈರಾಗ್ಯಭಾವವನ್ನು ಅಡಗಿಸಿಟ್ಟುಕೊಂಡು, ತನ್ನ ತಾಯಿಯಾದ ಜಿಂಕೆಯನ್ನು ತೊರೆದು, ತಾನು ಹುಟ್ಟಿದ್ದ ಕಾಲಂಜರ ಪರ್ವತದಿಂದ ಮತ್ತೆ ಶಾಂತ ಸ್ವಭಾವರಾದ ಮುನಿಗಳಿಗೆ ಪ್ರಿಯವಾದ ಅದೇ ಭಗವತ್ ಕ್ಷೇತ್ರವಾದ ಶಾಲಗ್ರಾಮ ತೀರ್ಥದಲ್ಲಿದ್ದ ಪುಲಸ್ತ್ಯ ಮತ್ತು ಪುಲಹ ಋಷಿಗಳ ಆಶ್ರಮಕ್ಕೆ ಬಂದು ಸೇರಿದನು. ॥30॥
(ಶ್ಲೋಕ - 31)
ಮೂಲಮ್
ತಸ್ಮಿನ್ನಪಿ ಕಾಲಂ ಪ್ರತೀಕ್ಷಮಾಣಃ ಸಂಗಾಚ್ಚ ಭೃಶಮುದ್ವಿಗ್ನ ಆತ್ಮಸಹಚರಃ ಶುಷ್ಕಪರ್ಣತೃಣವೀರುಧಾ ವರ್ತಮಾನೋ ಮೃಗತ್ವನಿ ಮಿತ್ತಾವಸಾನಮೇವ ಗಣಯನ್ಮೃಗಶರೀರಂ ತೀರ್ಥೋದಕ ಕ್ಲಿನ್ನಮುತ್ಸಸರ್ಜ ॥
ಅನುವಾದ
ಅಲ್ಲಿ ವಾಸವಿದ್ದಾಗಲೂ ಅವನು ಕಾಲವನ್ನೇ ಇದಿರು ನೋಡುತ್ತಿದ್ದನು. ‘ಆಸಕ್ತಿ’ ಎಂದರೆ ಅವನಿಗೆ ಭಯವಾಗುತ್ತಿತ್ತು. ಅಲ್ಲಿ ಆತನು ಒಣ ಎಲೆ, ಹುಲ್ಲು, ಪೊದೆ ಮುಂತಾದವುಗಳಿಂದ ಜೀವನವನ್ನು ನಿರ್ವಹಿಸುತ್ತಾ, ತನಗೆ ಮೃಗ ಯೋನಿಯನ್ನುಂಟುಮಾಡಲು ಕಾರಣವಾಗಿದ್ದ ಪ್ರಾರಬ್ಧದ ಕ್ಷಯದ ದಾರಿಯನ್ನೇ ನೋಡುತ್ತಿದ್ದನು. ಕೊನೆಗೆ ಅವನು ತನ್ನ ಶರೀರದ ಅರ್ಧಭಾಗವನ್ನು ಗಂಡಕೀ ನದಿಯಲ್ಲಿ ಮುಳುಗಿಸಿಕೊಂಡು ಆ ಮೃಗಶರೀರವನ್ನು ತ್ಯಜಿಸಿಬಿಟ್ಟನು. ॥31॥
ಅನುವಾದ (ಸಮಾಪ್ತಿಃ)
ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭರತಚರಿತೇಷ್ಟಮೋಽಧ್ಯಾಯಃ ॥8॥