ಅನುವಾದ
ಶ್ರೀಮದ್ಭಾಗವತದ ಮಹಿಮೆಯನ್ನು ನಾನೇನು ಬರೆಯಲಿ? ಅದರ ಮೊದಲಿನ ಮೂರು ಶ್ಲೋಕಗಳಲ್ಲಿ ಹೇಳಲ್ಪಟ್ಟ ಮಹಿಮೆಗೆ ಸರಿಗಟ್ಟುವಂತೆ ಯಾರು ಹೇಳಬಲ್ಲರು? ಆ ಮೂರು ಶ್ಲೋಕಗಳನ್ನು ಎಷ್ಟೋ ಬಾರಿ ಓದಿದರೂ, ಅದರ ಸ್ಮರಣೆಯಾದಾಗ ಮನಸ್ಸಿನಲ್ಲಿ ಅದ್ಭುತ ಭಾವವು ಉದಯವಾಗುತ್ತದೆ. ಯಾವುದೇ ಅನುವಾದವು ಆ ಶ್ಲೋಕಗಳ ಗಂಭೀರತೆಯನ್ನು ಮತ್ತು ಮಾಧುರ್ಯವನ್ನು ಪಡೆಯಲಾರದು. ಆ ಮೂರು ಶ್ಲೋಗಳಿಂದ ಮನಸ್ಸನ್ನು ನಿರ್ಮಲಗೊಳಿಸಿ ಮತ್ತೆ ಭಗವಂತನನ್ನು ಈ ಪ್ರಕಾರ ಧ್ಯಾನಿಸಬೇಕು.
ಮೂಲಮ್
ಧ್ಯಾಯತಶ್ಚರಣಾಂಭೋಜಂ ಭಾವನಿರ್ಜಿತಚೇತಸಾ ।
ಔತ್ಕಂಠ್ಯಾಶ್ರುಕಲಾಕ್ಷಸ್ಯ ಹೃದ್ಯಾಸೀನ್ಮೇ ಶನೈರ್ಹರಿಃ ॥
ಪ್ರೇಮಾತಿಭರನಿರ್ಭಿನ್ನಪುಲಕಾಂಗೋಽತಿನಿರ್ವೃತಃ ।
ಆನಂದಸಂಪ್ಲವೇ ಲೀನೋ ನಾಪಶ್ಯಮುಭಯಂ ಮುನೇ ॥
ರೂಪಂ ಭಗವತೋ ಯತ್ತನ್ಮನಃ ಕಾಂತಂ ಶುಚಾಪಹಮ್ ।
ಅಪಶ್ಯನ್ ಸಹಸೋತ್ತಸ್ಥೇ ವೈಕ್ಲವ್ಯಾದ್ ದುರ್ಮನಾ ಇವ॥
ಅನುವಾದ
ನನಗೆ ಶ್ರೀಮದ್ಭಾಗವತದಲ್ಲಿ ಅತ್ಯಂತ ಪ್ರೇಮವಿದೆ. ಇದನ್ನು ಓದುವುದರಿಂದ, ಕೇಳುವುದರಿಂದ ಮನುಷ್ಯನಿಗೆ ಈಶ್ವರನ ನಿಜವಾದ ಜ್ಞಾನ ಪ್ರಾಪ್ತವಾಗುತ್ತದೆ. ಮತ್ತು ಅವನ ಚರಣಕಮಲಗಳಲ್ಲಿ ಅಚಲಭಕ್ತಿಯು ಉಂಟಾಗುತ್ತದೆ ಎಂಬ ವಿಶ್ವಾಸ ನನಗಿದೆ. ಹಾಗೂ ನನ್ನ ಅನುಭವವೂ ಆಗಿದೆ. ಇದನ್ನು ಓದುವುದರಿಂದ ಮನುಷ್ಯನಿಗೆ ಈ ಪ್ರಪಂಚವನ್ನು ರಚಿಸಿ, ಪಾಲಿಸುವ ಒಂದು ಸರ್ವವ್ಯಾಪಕ ಶಕ್ತಿ ಇದೆ ಎಂಬ ದೃಢ ನಿಶ್ಚಯ ಉಂಟಾಗುತ್ತದೆ.
ಮೂಲಮ್
ಏಕ ಅನಂತ ತ್ರಿಕಾಲ ಸಚ, ಚೇತನ ಶಕ್ತಿ ದಿಖಾತ ।
ನಿರಜತ, ಪಾಲಕ, ಹರತ, ಜಗ, ಮಹಿಮಾ ಬರನಿ ನ ಜಾತ ॥
ಅನುವಾದ
ಈ ಒಂದೇ ಶಕ್ತಿಯನ್ನು ಜನರು, ಈಶ್ವರ, ಬ್ರಹ್ಮ, ಪರಮಾತ್ಮಾ ಮುಂತಾದ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಭಾಗವತದ ಮೊದಲಿನ ಶ್ಲೋಕದಲ್ಲೇ ವೇದವ್ಯಾಸರು ಈಶ್ವರನ ಸ್ವರೂಪವನ್ನು ಇಂತು ವರ್ಣಿಸಿರುವರು - ಆ ಈಶ್ವರನಿಂದ ಈ ಪ್ರಪಂಚದ ಸೃಷ್ಟಿ, ಪಾಲನೆ ಮತ್ತು ಸಂಹಾರವಾಗುತ್ತದೆ. ಅವನು ತ್ರಿಕಾಲಗಳಲ್ಲಿಯೂ ಸತ್ಯನಾಗಿದ್ದಾನೆ. ಅರ್ಥಾತ್ ಅವನು ಸದಾ ಇದ್ದಾನೆ ಮತ್ತು ಇರುವನು. ಅವನು ತನ್ನ ಪ್ರಕಾಶದಿಂದ ಅಂಧಕಾರವನ್ನು ದೂರಗೊಳಿಸಿರುವನು. ಅಂತಹ ಪರಮ ಸತ್ಯಸ್ವರೂಪವನ್ನು ನಾವು ಧ್ಯಾನಿಸುತ್ತೇವೆ. ಅಲ್ಲೇ ಶ್ರೀಮದ್ಭಾಗವತದ ಸ್ವರೂಪವನ್ನು ಸಂಕ್ಷೇಪವಾಗಿ ಹೀಗೆ ವರ್ಣಿತವಾಗಿದೆ - ಈ ಭಾಗವತದಲ್ಲಿ ಇತರರ ಉನ್ನತಿಯನ್ನು ನೋಡಿ ಮತ್ಸರಿಸದೆ ಇರುವ ಸಾಧು ಜನರ ಎಲ್ಲ ಪ್ರಕಾರದಿಂದ ಸ್ವಾರ್ಥರಹಿತ ಪರಮಧರ್ಮ ಮತ್ತು ಅವರು ತಿಳಿಯಲು ಯೋಗ್ಯವಾದ ಜ್ಞಾನವು ವರ್ಣಿತವಾಗಿದೆ. ಅದು ವಾಸ್ತವವಾಗಿ ಎಲ್ಲ ಶ್ರೇಯಸ್ಸನ್ನು ಕೊಡುವುದು ಹಾಗೂ ಆಧಿಭೌತಿಕ, ಆದಿ ದೈವಿಕ ಮತ್ತು ಆಧ್ಯಾತ್ಮಿಕ ಈ ಮೂರು ರೀತಿಯ ತಾಪಗಳನ್ನು ಇಲ್ಲವಾಗಿಸುವುದಾಗಿದೆ. ಯಾವ ಸುಕೃತಿಗಳು ಪೂಣ್ಯಕರ್ಮಗಳನ್ನು ಆಚರಿಸಿರುವರೋ, ಯಾರು ಶ್ರದ್ಧೆಯಿಂದ ಭಾಗವತವನ್ನು ಓದುವರೋ, ಕೇಳುವರೋ, ಅವರು ಇದನ್ನು ಸೇವಿಸಿದಂದಿನಿಂದ ತಮ್ಮ ಭಕ್ತಿಯಿಂದ ಈಶ್ವರನ ಜ್ಞಾನ ಮತ್ತು ಅವನಲ್ಲಿ ಭಕ್ತಿಯ ಪರಮ ಸಾಧನೆ - ಇವೆರಡು ಪದಾರ್ಥಗಳು ಯಾವುದಾದರೂ ಪ್ರಾಣಿಗೆ ಪ್ರಾಪ್ತವಾದರೆ ಮನುಷ್ಯನು ಬಯಸುವ ಯಾವ ಪದಾರ್ಥ ಉಳಿದಿದೆ? ಇವೆರಡೂ ಪದಾರ್ಥಗಳು ಶ್ರೀಮದ್ಭಾಗವತದಿಂದ ಪೂರ್ಣವಾಗಿ ಪ್ರಾಪ್ತವಾಗುತ್ತವೆ. ಅದಕ್ಕಾಗಿ ಆ ಪವಿತ್ರ ಗ್ರಂಥವು ಮನುಷ್ಯ ಮಾತ್ರರ ಉಪಕಾರಿಯಾಗಿದೆ. ಎಲ್ಲಿಯವರೆಗೆ ಮನುಷ್ಯನು ಭಾಗವತವನ್ನು ಓದುವುದಿಲ್ಲವೋ, ಅವನಿಗೆ ಇದರಲ್ಲಿ ಶ್ರದ್ಧೆ ಉಂಟಾಗುವುದಿಲ್ಲವೋ, ಅಲ್ಲಿಯವರೆಗೆ ಜ್ಞಾನ, ಭಕ್ತಿ, ವೈರಾಗ್ಯಗಳ ಸಮುದ್ರ ಎಷ್ಟು ವಿಶಾಲವಾಗಿದೆ ಎಂದು ತಿಳಿಯಲಾರದು. ಭಾಗವತವನ್ನು ಓದುವುದರಿಂದ ಅವನಿಗೆ - ಒಂದೇ ಪರಮಾತ್ಮನು ಪ್ರತಿಯೊಂದು ಪ್ರಾಣಿಯಲ್ಲಿಯೂ ನೆಲೆಸಿರುವನು ಎಂಬ ವಿಮಲಜ್ಞಾನ ಉಂಟಾಗುತ್ತದೆ. ಅವನಿಗೆ ಈ ಜ್ಞಾನವು ಉಂಟಾದಾಗ ಅವನು ಅಧರ್ಮಕ್ಕೆ ಮನಗೊಡುವುದಿಲ್ಲ. ಏಕೆಂದರೆ, ಇತರರಿಗೆ ಬಯಸಿದ ಕೇಡು ತನಗೇ ಬಯಸಿದಂತೆ ಇದೆ. ಇದರ ಅರಿವು ಮೂಡಿದಾಗ ಮನುಷ್ಯನು ಸತ್ಯ, ಧರ್ಮದಲ್ಲಿ ಸ್ಥಿರನಾಗುತ್ತಾನೆ. ಸ್ವಾಭಾವಿಕವಾಗಿ ದಯೆ-ಧರ್ಮಗಳನ್ನು ಪಾಲಿಸ ತೊಡಗುವವನು ಹಾಗೂ ಯಾವುದೇ ಅಹಿಂಸಕ ಪ್ರಾಣಿಯ ಮೇಲೆ ಕೈ ಎತ್ತಲು ಇಚ್ಛಿಸುವುದಿಲ್ಲ. ಮನುಷ್ಯರಲ್ಲಿ ಪರಸ್ಪರ ಪ್ರೇಮ ಮತ್ತು ಪ್ರಾಣಿಮಾತ್ರರ ಕುರಿತು ದಯಾಭಾವವನ್ನು ಸ್ಥಾಪಿಸಲಿಕ್ಕಾಗಿ ಇದಕ್ಕಿಂತ ಮಿಗಿಲಾದ ಸಾಧನ ಮತ್ತೊಂದಿಲ್ಲ. ವರ್ತಮಾನ ಕಾಲದಲ್ಲಿ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಭಯಂಕರ ಯುದ್ಧಗಳು ಹತ್ತಿಕೊಂಡಿವೆ. ಮನುಷ್ಯ ಮಾತ್ರರಿಗೆ ಈ ಪವಿತ್ರ ಧರ್ಮದ ಉಪದೇಶ ಅತ್ಯಂತ ಶ್ರೇಯಸ್ಕರವಾದೀತು. ಭಗವದ್ಬಕ್ತನಾದವನಿಗೆ ಹಾಗೂ ಶ್ರೀಮದ್ಭಾಗವತದ ಮಹತ್ವವನ್ನು ತಿಳಿದವನಿಗೆ ಇಹಲೋಕ ಮತ್ತು ಪರಲೋಕ ಎರಡನ್ನೂ ಸುಧಾರಿಸುವ ಈ ಪವಿತ್ರ ಗ್ರಂಥವನ್ನು ಎಲ್ಲ ಪ್ರಾಂತೀಯ ಭಾಷೆಗಳಲ್ಲಿ ಅನುವಾದ ಮಾಡಿ ಪ್ರಚಾರ ಮಾಡಬೇಕಾದುದು ಪರಮ ಕರ್ತವ್ಯವಾಗಿದೆ.
- ಮದನ ಮೋಹನ ಮಾಲವೀಯ