+೦೧ ನಮ್ರ ನಿವೇದನೆ

ಅನುವಾದ

ಶ್ರೀಮದ್ಭಾಗವತವು ಸಾಕ್ಷಾತ್ ಭಗವಂತನ ಸ್ವರೂಪವಾಗಿದೆ. ಭಕ್ತ - ಭಾಗವತರು ಭಗವದ್ಭಾವನೆಯಿಂದ ಇದರ ಪೂಜೆ-ಆರಾಧನೆ ಅನುಸಂಧಾನ ಮಾಡುತ್ತಾರೆ. ಭಾರತೀಯ ಸಾಹಿತ್ಯದಲ್ಲಿ ಶ್ರೀಮದ್ಭಾಗವತದ ಸ್ಥಾನವು ಅನುಪಮವಾದುದು. ಅದು ಭಕ್ತಿಶಾಸ್ತ್ರದ ಸಾರಸರ್ವಸ್ವವಾಗಿ ಸಂಸ್ಕೃತ ಸಾಹಿತ್ಯದ ಅನರ್ಘ್ಯ ರತ್ನವೂ ಆಗಿದೆ. ಮಹರ್ಷಿಗಳು ಗ್ರಂಥಾರಂಭದಲ್ಲಿ ಸಾರಿರುವಂತೆ ಅದು ನಿಗಮ ಕಲ್ಪತರುವಿನಿಂದ ಭೂಮಿಗೆ ಜಾರಿ ಬಂದಿರುವ ಅಮೃತಮಯವಾದ ಫಲ. ವೇದವು ಸರ್ವ ಪುರುಷಾರ್ಥಗಳಿಗೂ ಉಪಾಯವಾದ ಕಲ್ಪತರುವೇನೋ ಹೌದು. ಆದರೆ ಸ್ವರ್ಗ-ವೈಕುಂಠಧಾಮಗಳಿಗೆ ಹತ್ತಿ ಅದರಿಂದ ಫಲಗಳನ್ನು ದೊರಕಿಸಿಕೊಳ್ಳುವ ಶಕ್ತಿ ನಮಗಿಲ್ಲ. ಅದಕ್ಕಾಗಿ ದೇವರ್ಷಿ ನಾರದರು ಅದನ್ನು ತಂದು ವೇದವ್ಯಾಸರ ಕೈಗೆ ಕೊಟ್ಟರು. ವ್ಯಾಸರು ಅದನ್ನು ತಮ್ಮ ಜ್ಞಾನಪುತ್ರನೂ, ಔರಸ ಪುತ್ರನೂ ಆದ ಅಮರಜೀವಿ ಶುಕುಮುನಿಯೆಂಬ ಅರಗಿಳಿಯ ಬಾಯಲ್ಲಿಟ್ಟರು. ಆ ದಿವ್ಯ ಶುಕವು ಅದನ್ನು ಆಸ್ವಾದಿಸಿ, ಭೂಮಿಗೆ ಬೀಳಿಸಿತು. ಆ ಗಿಳಿಯು ಕಚ್ಚಿದ ರಸ ಫಲವು ಭೂಮಿಗೆ ಜಾರಿದರೂ ಒಡೆಯದೆ ರಸಪೂರ್ಣವಾಗಿಯೇ ಧರೆಗೆ ಇಳಿದಿದೆ. ಸಿಪ್ಪೆ, ನಾರು, ಚಿಪ್ಪುಗಳಿಲ್ಲದೆ ಕೇವಲ ರಸರೂಪದಲ್ಲೇ ಇರುವ ಹಣ್ಣು ಅದು. ರಸರೂಪವಾಗಿದ್ದರೂ ಘನಫಲ ರೂಪವಾಗಿದೆ. ಹಾಗೆಯೇ ಘನವಾಗಿದ್ದರೂ ರಸರೂಪವಾಗಿದೆ. ಸೋರಿಹೋಗದಿರಲೆಂದು ಘನಾಕೃತಿ, ಆಸ್ವಾದನೀಯವೇ ಆಗಿರಲೆಂದು ರಸಾಕೃತಿ. ಹೀಗೆ ರಸ-ಘನಗಳೆರಡೂ ಸೇರಿರುವ ಅದ್ಭುತವಾದ ಅಮೃತಫಲವೇ ಶ್ರೀಮದ್ಭಾಗವತ ಗ್ರಂಥವು.

ಶ್ರುತಿ, ಸ್ಮೃತಿ, ಇತಿಹಾಸ - ಪುರಾಣಗಳಾಗಿದ್ದು, ಪುರಾಣವು ಮೂರನೆಯದಾಗಿದ್ದರೂ ಶ್ರೀಮದ್ಭಾಗವತ ಮಹಾ ಪುರಾಣವು ಅನ್ಯಾದೃಶ ಮಹಿಮೆಯಿಂದ ಉಪನಿಷತ್ತು, ಗೀತೆ, ಬ್ರಹ್ಮಸೂತ್ರಗಳಂತೆ ಪ್ರಥಮ ಸ್ಥಾನದಲ್ಲೇ ಇರುವ ಅಗ್ಗಳಿಕೆಯ ಶಾಸ್ತ್ರವೆಂದು ದಾರ್ಶನಿಕರು ಸಾರಿರುತ್ತಾರೆ. ಅಷ್ಟೇ ಅಲ್ಲ ಅದು ವೇದವ್ಯಾಸರ ಸಮಾಧಿಭಾಷೆ ಎಂದು ಶ್ರೀ ವಲ್ಲಭಾಚಾರ್ಯರು ಘೋಷಿಸಿದ್ದಾರೆ. ಇದರ ಆಧಾರದ ಮೇಲೆಯೇ ತಮ್ಮ ಆಧ್ಯಾತ್ಮಿಕ ಸಿದ್ಧಾಂತವನ್ನು ಶ್ರೀ ವಲ್ಲಭಾಚಾರ್ಯರು, ಶ್ರೀ ಚೈತನ್ಯ ಮಹಾಪ್ರಭುಗಳು, ಮೊದಲಾದ ಮಹಾತ್ಮರು ಸಾರಿರುತ್ತಾರೆ. ಇಷ್ಟು ಅಧಿಕ ಸಂಖ್ಯೆಯ ವ್ಯಾಖ್ಯಾನ - ಟೀಕೆಗಳಿಂದ ಸಂಭಾವಿತವಾಗಿರುವ ಹಿರಿಮೆ ಬೇರಾವ ಪುರಾಣಕ್ಕೂ ಇಲ್ಲ. ಅತ್ಯಧಿಕ ಸಂಖ್ಯೆಯ ವ್ಯಾಖ್ಯಾನಗಳಿಂದ ಭೂಷಿತವಾಗಿರುವ ಗ್ರಂಥಗಳಲ್ಲಿ ಶ್ರೀಮದ್ಭಗವದ್ಗೀತೆಗೆ ಎರಡನೆಯದು ಶ್ರೀಮದ್ಭಾಗತವೊಂದೇ. ವಿಶುದ್ಧಾದ್ವೈತ, ವಿಶಿಷ್ಟಾದ್ವೈತ, ಶುದ್ಧಾದ್ವೈತ, ದ್ವೈತ, ದ್ವೈತಾದ್ವೈತ ಮುಂತಾದ ನಾನಾ ವೇದಾಂತ ಶಾಖೆಗಳ ಆಚಾರ್ಯರಿಂದ ವ್ಯಾಖ್ಯಾನಗೊಂಡಿರುವ ಶಾಸ್ತ್ರ ಸಾರ್ವಭೌಮ ಈ ಶ್ರೀಮದ್ಭಾಗವತ. ಅದ್ವೈತಾಚಾರ್ಯರೂ, ಭಕ್ತಸತ್ತಮರೂ ಆದ ಶ್ರೀಧರ ಸ್ವಾಮಿಗಳ ‘‘ಭಾಗವತಾರ್ಥ ದೀಪಿಕಾ’’, ವಿಶಿಷ್ಟಾದ್ವೈತದ ಸಂಪ್ರದಾಯದ ಸುದರ್ಶನ ಸೂರಿಗಳ ‘‘ಶುಕಪಕ್ಷೀಯ’’, ವೀರರಾಘವಾಚಾರ್ಯರ ‘‘ಭಾಗವತ ಚಂದ್ರ ಚಂದ್ರಿಕಾ’’ ವೆಂಕಟಕೃಷ್ಣಮಾಚಾರ್ಯರ ‘‘ಭಾಗವತ ಚಂದ್ರಿಕಾ’’ ದ್ವೈತಮತ ಸ್ಥಾಪಕರಾದ ಶ್ರೀಮದಾನಂದತೀರ್ಥ ಭಗವತ್ಪಾದರ ‘‘ಭಾಗವತ ತಾತ್ಪರ್ಯ ನಿರ್ಣಯ’’, ಶ್ರೀ ವಿಜಯಧ್ವಜರ ‘‘ಪದರತ್ನಾವಳಿ’’, ನಿಂಬಾರ್ಕಮತದ ಶ್ರೀ ಶುಕದೇವಾ ಚಾರ್ಯರ, ‘‘ಸಿದ್ಧಾಂತ ಪ್ರದೀಪ’’, ಶುದ್ಧಾದ್ವೈತ ಸಂಪ್ರದಾಯದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ವಲ್ಲಭಾಚಾರ್ಯರ ‘‘ಸುಬೋಧಿನೀ’’, ಶ್ರೀಗಿರಿಧರಾಚಾರ್ಯರ ‘‘ಆಧ್ಯಾತ್ಮಿಕ ವ್ಯಾಖ್ಯಾನ’’, ಶ್ರೀ ಚೈತನ್ಯ ಮತೀಯರಾದ ಜೀವಗೋಸ್ವಾಮಿಗಳ ‘‘ಸಂದರ್ಭ’’, ಶ್ರೀ ವಿಶ್ವನಾಥ ಚಕ್ರವರ್ತಿಗಳ ‘‘ಸಾರಾರ್ಥ ದರ್ಶಿನೀ’’ ಮತ್ತು ಶ್ರೀಹರಿಯ ‘‘ಹರಿಭಕ್ತಿ ರಸಾಯನ’’ ಇವುಗಳಲ್ಲದೆ ಇನ್ನೂ ಅನೇಕ ಮಹಾಮಹಿಮರ ವ್ಯಾಖ್ಯಾನಗಳು ಪ್ರಸಿದ್ಧವಾಗಿದೆ.

ಇದು ಪುರಾಣವಾದರೂ ಸಾಹಿತ್ಯದ ಪರಮಾವಧಿ ಗ್ರಂಥವಾಗಿ ‘‘ವಿದ್ಯಾ ಭಗವತಾವಧಿಃ’’ ಎಂಬ ಪ್ರಸಿದ್ಧಿಗೆ ಕಾರಣವಾಗಿದೆ. ವಿದ್ಯಾವಂತರನ್ನು ಪರೀಕ್ಷೆ ಮಾಡಬೇಕಾದರೆ ಶ್ರೀಮದ್ಭಾಗವತವೇ ಓರೆಗಲ್ಲು. ‘‘ವಿದ್ಯಾವತಾಂ ಭಾಗವತೇ ಪರೀಕ್ಷಾ’’ ಎಂಬ ಮಾತು ವಿಶ್ರುತವಾಗಿದೆ. ಭಗವದ್ರಸದಿಂದ ಪರಿಪೂರ್ಣವಾಗಿ ‘‘ಸ್ವಾದು ಸ್ವಾದು ಪದೇ ಪದೇ’’ ಎಂಬ ಅನುಭವವಾಣಿಗೆ ಆಶ್ರಯವಾಗಿರುವ ಅಸದೃಶ ಗ್ರಂಥವೂ ಆಗಿದೆ.

ಇದರ ಅನುಸಂಧಾನದಿಂದ ಪಾರಮಾರ್ಥಿಕ ಲಾಭವಾದರೋ ಇದ್ದೇ ಇದೆ. ಜೊತೆಗೆ ಲೌಕಿಕವಾದ ಅನೇಕ ಲಾಭಗಳು ದೊರೆಯುವವು ಎಂದು ಸಾರುವ ಫಲಶ್ರುತಿಗಳು ಇವೆ. ಉದಾಹರಣೆಗಾಗಿ - ಇದರಲ್ಲಿ ಬರುವ ನಾರಾಯಣ ಕವಚದ ಅನುಸಂಧಾನದಿಂದ ವಿಘ್ನಗಳ ನಾಶ, ವಿಜಯ - ಆರೋಗ್ಯ - ಐಶ್ವರ್ಯಗಳ ಪ್ರಾಪ್ತಿ; ಗೋಪಿಕಾ ಕನ್ಯೆಯರೂ, ಶ್ರೀ ರುಕ್ಮಿಣೀ ದೇವಿಯೂ, ಕಾತ್ಯಾಯಿನಿ ದೇವಿಯಲ್ಲಿ ಮಾಡುವ ಪ್ರಾರ್ಥನೆ ಮತ್ತು ಶ್ರೀ ರುಕ್ಮಿಣೀ ದೇವಿಯು ಶ್ರೀಕೃಷ್ಣನಿಗೆ ಕಳುಹಿಸುವ ಸಂದೇಶ - ಇವುಗಳನ್ನ್ನು ಅನುಸಂಧಾನ ಮಾಡುವುದರಿಂದ ಕನ್ಯೆಯರಿಗೆ ಶೀಘ್ರವಾಗಿ ವಿವಾಹಪ್ರಾಪ್ತಿ; ಪುಂಸವನ ವ್ರತದಿಂದ ಉತ್ತಮ ಸಂತಾನ ಪ್ರಾಪ್ತಿ ಮತ್ತು ಸಮಸ್ತ ಕಾಮನೆಗಳ ಪೂರ್ತಿ ; ‘‘ಗಜೇಂದ್ರ ಸ್ತವನ’’ದಿಂದ ಋಣಮುಕ್ತಿ, ಶತ್ರು ಮುಕ್ತಿ ಮತ್ತು ದೌರ್ಭಾಗ್ಯ ಪರಿಹಾರ; ‘‘ಪಯೋವ್ರತ’’ದಿಂದ ಇಷ್ಟವಾದ ಸಂತಾನ ಪ್ರಾಪ್ತಿ ಮತ್ತು ‘‘ಭಾಗವತ ಸಪ್ತಾಹ ಶ್ರವಣ - ಪಾರಾಯಣ’’ಗಳ ಫಲವಾಗಿ ಪ್ರೇತಯೋನಿಯಿಂದ ಬಿಡುಗಡೆ - ಇತ್ಯಾದಿ ಫಲಗಳನ್ನು ಶ್ರೀಮದ್ಭಾಗವತ ಶಾಸ್ತ್ರವು ಘೋಷಣೆ ಮಾಡುತ್ತದೆ. ಇದು ಅನೇಕರ ಪ್ರಯೋಗಗಳಿಂದಲೂ ಜೀವನದಲ್ಲಿ ಸಿದ್ಧವಾಗಿರುವ ಸತ್ಯ. ಇಷ್ಟೆಲ್ಲ ಇದ್ದರೂ ಶ್ರೀಮದ್ಭಾಗವತದ ಶ್ರವಣ, ಪಾರಾಯಣ ಮತ್ತು ಪೂಜೆಗಳ ಮುಖ್ಯಫಲ ಭಕ್ತಿ - ಜ್ಞಾನ - ವೈರಾಗ್ಯಗಳು. ಮುಕ್ತಿಯು ಭಕ್ತಿಯ ದಾಸಿಯಾಗಿ ತಾನಾಗಿಯೇ ಬರುವಳೆಂದು ಇದು ಸಾರುತ್ತದೆ. ‘‘ಮುಕ್ತಿಂ ದಾಸೀಂ ದದೌ ತುಭ್ಯಂ’’ ಸಾಧನಭಕ್ತಿ ಮತ್ತು ಸಾಧ್ಯಭಕ್ತಿ ಇವೆರಡನ್ನು ಕರುಣಿಸುವ ಕಾಮಧೇನು ಇದು. ಅಷ್ಟೇಕೆ, ಭಗವಾನ್ ಶ್ರೀಕೃಷ್ಣನ ವಾಙ್ಮಯ ಮೂರ್ತಿಯೇ ಶ್ರೀಮದ್ಭಾಗವತ. ಭಗವಾನ್ ಶ್ರೀಕೃಷ್ಣನು ಪರಂಧಾಮವನ್ನು ಸೇರಿಕೊಳ್ಳುವಾಗ ತನ್ನ ಪ್ರತಿನಿಧಿಯನ್ನಾಗಿ ಭಕ್ತೋತ್ತಮ ಉದ್ಧವನಿಗೆ ಅನುಗ್ರಹಿಸಿದ ಅಪೂರ್ವ ಪ್ರಸಾದವೂ ಇದಾಗಿದೆ.

ಮೂಲಮ್

ಸ್ವಕೀಯಂ ಯದ್ಭವೇತ್ತೇಜಃ ತಚ್ಚ ಭಾಗವತೇಽದಧಾತ್ ।
ತಿರೋಧಾಯ ಪ್ರವಿಷ್ಟೋಽಯಂ ಶ್ರೀಮದ್ಭಾಗವತಾರ್ಣವಮ್ ॥
ತೇನೇಯಂ ವಾಙ್ಮಯೀ ಮೂರ್ತಿಃ ಪ್ರತ್ಯಕ್ಷಾ ವರ್ತತೇ ಹರೇಃ ।
ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮ ಸಮ್ಮಿತಮ್ ॥

ಅನುವಾದ

ಇದರ ಅಪಾರ ಮಹಿಮೆಯನ್ನು ಪದ್ಮ ಪುರಾಣ, ಮತ್ಸ್ಯ ಪುರಾಣ ಮುಂತಾದ ಮಹಾಪುರಾಣಗಳು ಘೋಷಿಸುತ್ತವೆ. ಕೆಲವು ಧರ್ಮ ಗ್ರಂಥಗಳು ಸಾರ್ವಭೌಮನ ಆಜ್ಞೆಯಂತೆ ನಮಗೆ ಧರ್ಮವನ್ನು ಬೋಧಿಸುತ್ತವೆ. ಉದಾಹರಣೆಗೆ - ಶ್ರುತಿ, ಕಾವ್ಯಗಳು. ಕೆಲವು ಗ್ರಂಥಗಳು ಸ್ನೇಹಿತನಂತೆ ನಮಗೆ ಧರ್ಮಜಾಗೃತಿಯನ್ನು ಉಂಟು ಮಾಡುತ್ತವೆ. ಉದಾಹರಣೆಗೆ - ಪುರಾಣಗಳು, ಕಾವ್ಯಗಳು ಪ್ರಿಯತಮೆಯಂತೆ ಮಧುರವಾದ ಮಾರ್ಗದಿಂದ ಅರಿವು ಮೂಡಿಸುತ್ತವೆ. ಇವುಗಳನ್ನು ಕ್ರಮವಾಗಿ ಪ್ರಭಸಮ್ಮಿತ, ಮಿತ್ರ ಸಮ್ಮಿತ ಮತ್ತು ಕಾಂತಾ ಸಮ್ಮಿತ ಎಂದು ಕರೆಯುತ್ತಾರೆ. ಈ ಮೂರು ರೀತಿಯಿಂದಲೂ ನಮಗೆ ಉಪದೇಶ ನೀಡಿ, ನಮ್ಮನ್ನು ಉದ್ಧರಿಸುವ ಅನುಪಮ ಗ್ರಂಥ ಶ್ರೀಮದ್ಭಾಗವತ. ಶ್ರೀಮದ್ಭಾಗವತವನ್ನು ಪುರಾಣ ರತ್ನವೆಂದೂ, ಆಧ್ಯಾತ್ಮಿಕ ಕಾವ್ಯಗಳ ಶಿರೋಮಣಿಯೆಂದೂ, ಪರಮಶ್ರೇಷ್ಠ ಪರಮಹಂಸ ಸಂಹಿತೆಯೆಂದೂ ಮನೀಷಿಗಳು ಮಾನ್ಯ ಮಾಡಿರುತ್ತಾರೆ.
ಭಕ್ತಿ ಶಾಸ್ತ್ರವಾದ ಶ್ರೀಮದ್ಭಾಗವತದ ಪ್ರಧಾನ ಪ್ರತಿಪಾದಿತ ವಸ್ತು ಭಗವಲ್ಲೀಲೆ, ಭಗವಂತನ ಅವತಾರಗಳ ವರ್ಣನೆ ಮತ್ತು ಭಾಗವತೋತ್ತಮರ ಚರಿತ್ರೆಗಳು. ಅದರಲ್ಲಿಯೂ ನಿತ್ಯ, ಶುದ್ಧ, ನಿರಂಜನ, ವಿಶ್ವರೂಪೀ, ಪರಮಾತ್ಮನಾದ ಭಗವಾನ್ ಶ್ರೀಕೃಷ್ಣನ ದಿವ್ಯ ಚರಿತ್ರೆ. ಅದರಲ್ಲಿ ಬರುವ ಭಗವಂತನ ಬಾಲಲೀಲೆ, ನವನೀತಲೀಲೆ, ಗೋಚಾರಣ, ಮುರಳೀಗಾನ, ಬ್ರಹ್ಮ ಗರ್ವಭಂಗ, ಕಾಳೀಯದಮನ, ದಾವಾಗ್ನಿ ಪಾನ, ಗೋಪಿಕಾ ವಸ್ತ್ರಾಪಹಾರ, ರಾಸಲೀಲೆ ಮುಂತಾದವುಗಳು ಅವನ ಮಾಹಾತ್ಮ್ಯಲೀಲೆಗಳು. ಪೂತನಾ, ತೃಣಾವರ್ತ, ಶಕಟ, ಪ್ರಲಂಬ, ಧೇನುಕ, ಬಕ, ವತ್ಸಾಸುರ, ಕಂಸನೇ ಮೊದಲಾದ ದಾನವರ ಉದ್ಧಾರ. ಇನ್ನೂ ಅನೇಕ ಅಧರ್ಮಿಗಳ ಸಂಹಾರ ಮಾಡಿ, ಧರ್ಮಸ್ಥಾಪನೆ ಮಾಡಿದ ಧರ್ಮಮೂರ್ತಿಯ ಚರಿತ್ರೆ ಇದರಲ್ಲಿ ವರ್ಣಿತವಾಗಿದೆ. ಗೋಪಿಕಾಗೀತೆ, ಯುಗ್ಮಗೀತೆ, ಶ್ರುತಿಗೀತೆ, ಭ್ರಮರ ಗೀತೆ, ವೇಣುಗೀತೆ ಹೀಗೆ ಆಧ್ಯಾತ್ಮ ತತ್ತ್ವಗಳನ್ನೊಳಗೊಂಡ ಅನೇಕ ಪ್ರಕರಣಗಳಿವೆ. ಶ್ರೀಮದ್ಭಾಗವತದಲ್ಲಿ ಬರುವ ಭಗವತ್ ಸ್ತುತಿಗಳಂತೂ ವೇದಾಂತ ತತ್ತ್ವಗಳ ಸಾರಸರ್ವಸ್ವವೇ ಆಗಿವೆ. ಇನ್ನು ಭಾಗವತೋತ್ತಮರ ಕಥೆಗಳಿಂದ ತುಂಬಿ ತುಳುಕುತ್ತದೆ. ಪಾಪಿಷ್ಠತಮನಾಗಿದ್ದರೂ ಭಗವನ್ನಾಮದ ಬಲದಿಂದ ಭವವನ್ನು ದಾಟಿದ ಅಜಾಮಿಳನ ಕಥೆ, ಬಾಲಕ ಭಕ್ತವರೇಣ್ಯರಾದ ಧ್ರುವ-ಪ್ರಹ್ಲಾದರ ಕಥೆ, ಅಸುರರಾಗಿದ್ದರೂ ಅಸುರತ್ವವನ್ನು ಗೆದ್ದು ದೇವತೆಗಳನ್ನು ನಾಚಿಸಿದ ಬಲಿ-ವೃತ್ರರ ಕಥೆ, ದರಿದ್ರತಮನಾಗಿದ್ದರೂ ಲಕ್ಷ್ಮೀಪತಿಯಿಂದ ತನ್ನ ಮಿತ್ರನೆಂದು ಸಂಭಾವಿಸಲ್ಪಟ್ಟ ಸುದಾಮನ ಕಥೆ, ತಾನು ಹಸಿದಿದ್ದರೂ ದುಃಖ ಸಂತಪ್ತರಾದ ಎಲ್ಲ ಜೀವಿಗಳ ಶೋಕನಾಶವೇ ತಾನು ಬೇಡುವ ಏಕಮಾತ್ರ ವರ ಎಂದು ಪ್ರಾರ್ಥನೆ ಮಾಡಿದ ರಂತಿದೇವನ ಕಥೆ - ಇವುಗಳನ್ನು ಮರೆಯಲಾಗುವುದಿಲ್ಲ. ಪುರಂಜನೋಪಾಖ್ಯಾನದಂತಹ ರೂಪಕ ಕಥೆಯು ವಿಶ್ವಸಾಹಿತ್ಯದಲ್ಲೇ ಅತಿ ದುರ್ಲಭ.
ಶ್ರೀಮದ್ಭಾಗವತವು ಪಾರಮಹಂಸ ಸಂಹಿತೆಯಾಗಿದ್ದರೂ ಧರ್ಮ-ಅರ್ಥ-ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಹೇಳುತ್ತದೆ. ಧರ್ಮಾರ್ಥ-ಕಾಮ ಪ್ರಧಾನವಾದ ಗೃಹಸ್ಥಾಶ್ರಮದ ಮಹಿಮೆಯನ್ನು ಅನೇಕ ಕಡೆ ನಿರೂಪಿಸುತ್ತದೆ. ಗೃಹಸ್ಥಾಶ್ರಮದಲ್ಲಿದ್ದು ಕೊಂಡೇ ಭಗವದ್ಭಕ್ತಿ-ಜ್ಞಾನಗಳ ಬಲದಿಂದ ಮುಕ್ತಿಯನ್ನು ಪಡೆದ ಮಹಾತ್ಮರನೇಕರ ಕಥೆಗಳನ್ನು ಹೇಳುತ್ತದೆ. ಕಥಾನಾಯಕನಾದ ಲೀಲಾ ವಿನೋದಿ ಶ್ರೀಕೃಷ್ಣಪರಮಾತ್ಮನೇ ಅವ್ಯಾಕೃತ ಗೃಹಸ್ಥನು. ಅವನ ಗ್ರಹಸ್ಥಾಶ್ರಮದ ಅನಂತ ಲೀಲೆಯನ್ನು ನಾರದರು ದರ್ಶಿಸಿದ್ದನ್ನು ದಶಮ ಸ್ಕಂಧದಲ್ಲಿ ವರ್ಣಿತವಾಗಿದೆ. ಆತನ ಭಕ್ತಶ್ರೇಷ್ಠರಾದ ಅಂಬರೀಷ - ಉದ್ಧವಾದಿಗಳು ಗೃಹಸ್ಥೋತ್ತಮರೇ. ಮಿತ್ರಮಣಿಯಾದ ಆ ಭಗವಂತನಿಂದ ಅದ್ಭುತವಾದ ಐಶ್ವರ್ಯವನ್ನು ಪಡೆದ ಕುಚೇಲನೂ ತನ್ನ ಧರ್ಮಪತ್ನಿಯೊಡನೆ ಅನಾಸಕ್ತನಾಗಿ ಸುಖವನ್ನು ಅನುಭವಿಸುವ ಸದ್ಗೃಹಸ್ಥನೇ ಆಗಿದ್ದನು. ‘‘ವಿಷಯಾನ್ ಜಾಯಯಾತ್ಯಕ್ಷ್ಯನ್ ಬುಭುಜೇ ನಾತಿಲಂಪಟಃ’’ (10/81/38). ಏಕಾಂತ ಭಕ್ತನು ಗೃಹಸ್ಥನಾಗಿದ್ದರೂ ಶ್ರೇಷ್ಠನೆ. ಆದರೂ ಶ್ರೀಮದ್ಭಾಗವತಕ್ಕೆ ಪ್ರಿಯವಾದುದು ಸರ್ವಸಂಗ ಪರಿತ್ಯಾಗ ಮತ್ತು ಪರಮ ವೈರಾಗ್ಯಗಳಿಂದ ಕೂಡಿದ ಏಕಾಂತಿಕ ಧರ್ಮವೇ. ಶ್ರೀಕೃಷ್ಣ ಪರಮಾತ್ಮನು ‘ಅಕಿಂಚನ ವಿತ್ತ’. ಋಷಭದೇವರು, ಜಡಭರತ, ನಾರದರು, ದತ್ತಾತ್ರೇಯರು - ಎಲ್ಲರೂ ಪರಮಹಂಸ ಧರ್ಮವನ್ನೇ ಎತ್ತಿ ಹೇಳುತ್ತಾರೆ. ‘‘ಧರ್ಮಸ್ಯ ಹ್ಯಾಪವರ್ಗ್ಯಸ್ಯ’’ ಎಂಬಂತೆ ಧರ್ಮದ ಫಲವು ಮೋಕ್ಷವೇ. ‘‘ಜನಯತ್ಯಾಶು ವೈರಾಗ್ಯಂ ಜ್ಞಾನಂ ಚ ಯದಹೈತುಕಮ್’’ ಎಂಬಂತೆ ಭಕ್ತಿಯ ಫಲವೂ ವೈರಾಗ್ಯವೂ ಮತ್ತು ಜ್ಞಾನಗಳೇ.
ಶ್ರೀಮದ್ಭಾಗವತವು ವೇದ, ಉಪನಿಷತ್ತು, ಭಗವದ್ಗೀತೆಗಳ ಕಥಾರೂಪವಾದ ಭಾಷ್ಯವೆಂದೂ ಹೇಳಬಹುದು. ಕೆಲವು ಕಡೆಗಳಲ್ಲಿ
ಆ ಮಂತ್ರಗಳ ಸಾಕ್ಷಾದ್ಭಾಷ್ಯಗಳನ್ನು ಇಲ್ಲಿ ನೋಡುತ್ತೇವೆ. ಎರಡನೇ ಸ್ಕಂಧವನ್ನು ಅಲಂಕರಿಸಿರುವ ‘ಚತುಃಶ್ಲೋಕೀ ಭಾಗವತ’ವು ವೈದಿಕ ನಾಸದೀಯ ಸೂಕ್ತ ಮತ್ತು ತೈತರೀಯ ಶ್ರುತಿಗಳ ಸಾರವೇ ಆಗಿದೆ. ವಿರಾಟ್ ಸ್ವರೂಪದ ವರ್ಣನೆಯಲ್ಲಿ ಬೆಳಗುತ್ತಿರುವ ಪುರುಷಸೂಕ್ತ ಭಾಷ್ಯವು ಸ್ಪಷ್ಟವೇ ಆಗಿದೆ. ಶ್ರೀಕೃಷ್ಣನು ಉದ್ಧವನಿಗೆ ಮಾಡಿದ ಭಾಗವತ ಧರ್ಮದ ಉಪದೇಶವು ಇನ್ನೊಂದು ಭಗವದ್ಗೀತೆಯಂತೆಯೇ ಇದೆ. ಕುರುಕ್ಷೇತ್ರದಲ್ಲಿ ಶೋಕ-ಮೋಹಗಳ ಮಹೋದಧಿಯಲ್ಲಿ ಮುಳುಗಿದ್ದ ಅರ್ಜುನನಿಗೆ ತಾನು ಉಪದೇಶ ಮಾಡಿದುದು ಭಾಗವತ ಧರ್ಮವನ್ನೇ ಎಂದು ಭಗವಂತನೇ ಪ್ರತಿಜ್ಞೆ ಮಾಡುತ್ತಾನೆ.

ಮೂಲಮ್

ಸ ತದಾ ಪುರುಷವ್ಯಾಘ್ರೋಯುಕ್ತ್ಯಾ ಮೇ ಪ್ರತಿಬೋಧಿತಃ ।
ಅಭ್ಯಭಾಷತ ಮಾಮೇವಂ ಯಥಾ ತ್ವಂ ರಣಮೂರ್ಧನಿ ॥

ಅನುವಾದ

(11/16/8)
ಭಗವದ್ಗೀತೆಯಲ್ಲಿ ಹೇಳುವಂತೆಯೇ ಇಲ್ಲಿಯೂ ಮೋಕ್ಷವನ್ನು ಹೊಂದುವುದಕ್ಕೂ ಪ್ರಧಾನವಾಗಿ ಜ್ಞಾನಯೋಗ-ಕರ್ಮಯೋಗ ಭಕ್ತಿಯೋಗಗಳೆಂಬ ಮೂರು ಉಪಾಯಗಳನ್ನು ಭಗವಂತನು ಉಪದೇಶ ಮಾಡಿದ್ದಾನೆ. ‘‘ಜ್ಞಾನಂ ಕರ್ಮ ಚ ಭಕ್ತಿಶ್ಚ ನೋಪಾಯೋಽನ್ಯೋಽಸ್ತಿ ಕುತ್ರಚಿತ್’’ (11/20/6) ಹೀಗೆ ಉಪನಿಷತ್ತು-ಗೀತೆಗಳ ಪರಮಾರ್ಥವನ್ನು ತಿಳಿಯ ಬಯಸುವವರು ಶ್ರೀಮದ್ಭಾಗವತವನ್ನು ಅನುಸಂಧಾನ ಮಾಡುವುದರಿಂದ ಬಹುಮಟ್ಟಿಗೆ ಕೃತಕೃತ್ಯರಾಗುತ್ತಾರೆ.