ಗೀತಾರ್ಥ ಸಂಗ್ರಹ
ಶ್ರೀ ಯಾಮುನ ಮುನಿಗಳು
(ಆಳವಂದಾರ್)
ಕನ್ನಡ ಅನುವಾದ
ರಾಧಾಕೃಷ್ಣನ್ ಗರಣಿ
कायेन वाचा मनसेन्द्रियैर्वा ।,
बुद्ध्यात्मना वा प्रकृतिस्वभावात् ।
करोमि यद्यत्सकलं परस्मै ।
नारायणयेति समर्पयामि ॥
ಗೀತಾರ್ಥ ಸಂಗ್ರಹದ ಮೂಲ ಲೇಖಕರಾದ ಯಾಮುನ ಮುನಿಗಳು, ಸುಮಾರು ಕ್ರೈಸ್ತ ಶಕ 918 ರಲ್ಲಿ ಇದ್ದ ಬಹಳ ದೊಡ್ಡ ವಿದ್ವಾಂಸರು ಮತ್ತು ತತ್ವಜ್ಞಾನಿ. ಆದಿಶಂಕರನಂತರ ಮತ್ತು ರಾಮಾನುಜರಗಿಂತ ಮೊದಲೇ ಇದ್ದ ಮಹಾಪುರುಷ. ನಾಥಮುನಿಗಳ ಮೊಮ್ಮಗ ನಾಗಿ,ಈಶ್ವರ ಭಟ್ಟರ ಮಗನಾಗಿ, ಇದ್ದ, ಇವರು ಒಬ್ಬ ಪ್ರಮುಖ ಆಚಾರ್ಯರೆಂದು ಗುರುತಿಸಲ್ಪಟ್ಟು, ರಾಮಾನುಜರಿಗಿಂತ ಮೊದಲೇ ಶ್ರೀ ವೈಷ್ಣವ ಸಂಪ್ರದಾಯದಲ್ಲಿ ನೆಲೆ ನಿಂತಿದ್ದರು. ಯೋಗಶಾಸ್ತ್ರ ರಚನಕಾರರಾದ ನಾಥಮುನಿಗಳು, ಸುಮಾರು 90 ವರ್ಷ ಜೀವಿಸಿದ್ದರು. ಇವರು ನಾಲ್ಕು ನ್ಯಾಯ ಮತ್ತು ವೇದಾಂತದ ರಚನಕಾರರೂ ಹೌದು. ಅವರಿಗೆ 11 ಜನ ಶಿಷ್ಯರಿದ್ದರು. ಅವರಲ್ಲಿ ರಾಮ ಮಿಶ್ರರ ಶಿಷ್ಯರಾದ ಪುಂಡರೀಕಾಕ್ಷ( ಉಯ್ಯಕೊಂಡರ್) ಎಂಬವರು ಒಬ್ಬರು. ರಾಮಮಿಶ್ರದಲ್ಲಿ ವೇದಗಳನ್ನು ಕಲಿತವರು ಯಾಮುನರು. ರಾಮಮಿಶ್ರರ ಸಲಹೆಯಂತೆ, ಯಾಮುನರು, ಕರುಕಾನಾಥರಲ್ಲಿ ಯೋಗವನ್ನು ಕಲಿತರು. ರಾಮಮಿಶ್ರರಿಂದ ಯಾಮುನರು, ಆಲ್ವಾರುಗಳ ತಮಿಳು ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಬಹಳಷ್ಟು ಶಿಷ್ಯರುಗಳು ಇದ್ದ ಯಾಮುನರಲ್ಲಿ, ಕೆಲವು ಮುಖ್ಯವಾದವರು, ಮಹಾ ಪೂರ್ಣ (ಪೇರಿಯನಂಬಿ) ಶ್ರೀಶೈಲ ಪೂರ್ಣ (ತಾತಾಚಾರ್ಯ) ಗೋಷ್ಠಿ ಪೂರ್ಣ,ಕಾನೆಹಿ ಪೂರ್ಣ (ಪೂನಮಾಮಲ್ಲೆ, ಸೇರಿದ ಶೂದ್ರ ಸಂಪ್ರದಾಯದ ಗುರು. ಇವರು, ನಂತರ ರಾಮಾನುಜರ ಗುರುಆಗಿದ್ದರು)ಮತ್ತು ಮಾರನೆರ ನಂಬಿ.
ಆಳವಂದಾರ್ ಎಂಬ ನಾಮಾಂಕಿತರಾದ ಯಾಮುನಾಚಾರ್ಯರು, ಮಣಕ್ಕಾಲ್ನಂಬಿಯ ನಂತರ ಬಂದ, ಗುರುಪರಂಪರೆಯಲ್ಲಿ, ಮುಖ್ಯಸ್ಥರಾಗಿದ್ದರು. ಮಣಕ್ಕಾಲ್ನಂಬಿ ಅವರು, ಉಯ್ಯಕೊಂಡರ್ ಅಥವಾ, ಪುಂಡರೀಕಾಕ್ಷರ ನಂತರ ಬಂದವರು. ಪುಂಡರೀಕಾಕ್ಷರು, ನಾಥಮುನಿಗಳ ನಂತರ ಬಂದವರು. ಪೆರಿಯ ನಂಬಿಯ ನಂತರ ಬಂದ, ಮಹಾಪೂರ್ಣರು, ರಾಮಾನುಜರ ಗುರುಗಳಾಗಿದ್ದವರು.
ಯಾಮುನರು, ಆರು ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ..ಸ್ತೋತ್ರ ರತ್ನ,ಚತುಶ್ಲೋಕಿ, ಆಗಮ ಪ್ರಾಮಾಣ್ಯ ಸಿದ್ದಿತ್ರಯ, ಮಹಾಪುರುಷ ನಿರ್ಣಯ ಮತ್ತು ಗೀತಾರ್ಥ ಸಂಗ್ರಹ.
ಬಹಳ ಚಿಕ್ಕ ಮತ್ತು ಚೊಕ್ಕದಾದ,ಮೂವತ್ತೆರಡು ಶ್ಲೋಕಗಳನ್ನು ಒಳಗೊಂಡ ಗೀತಾರ್ತಸಾರ ಸಂಗ್ರಹವು, ಭಗವದ್ಗೀತೆಯ ಏಳುನೂರು ಶ್ಲೋಕಗಳ ಮತ್ತು ಹದಿನೆಂಟು ಅಧ್ಯಾಯಗಳ ಸಾರವೇ ಆಗಿದೆ. ವೇದಾಂತ ದೇಶಿಕರು, ಇದರ ಮೇಲೆ, ಅರ್ಥಸಾರಸಂಗ್ರಹರಕ್ಷಾ ಎಂಬ ಭಾಷ್ಯವನ್ನು ಬರೆದಿರುವುದು ಗಮನಾರ್ಹವಾಗಿ ಇದೆ.
ಮೊದಲ ಇಪ್ಪತ್ತೆರಡು ಶ್ಲೋಕಗಳಲ್ಲಿ, ಹದಿನೆಂಟು ಅಧ್ಯಾಯಗಳ ಸಾರಾಂಶವನ್ನು ಇಡಲಾಗಿದೆ. ಮುಂದಿನ ಶ್ಲೋಕಗಳಲ್ಲಿ ಗೀತೆಯ ವಿವರಣೆ ಇದೆ. ಮೂವತ್ತೆರಡನೆಯ ಶ್ಲೋಕದಲ್ಲಿ ಸಂಪೂರ್ಣ ಅವಲೋಕವನ್ನು ಮಾಡಿದೆ.
ಗೀತೆಯನ್ನು ಶಾಸ್ತ್ರ ಎಂದು ಕರೆದಿದ್ದಾರೆ. ಅಂದರೆ, ಇದರಲ್ಲಿ, ಉಪದೇಶ, ಆದರ್ಶಗಳು ದೈವಾಜ್ಞೆ, ವಿಜ್ಞಾನ ಮತ್ತು ಶಿಸ್ತು ಅಥವಾ ಶಿಷ್ಯತ್ವವನ್ನು ಒಳಗೊಂಡಿದೆ. ಶ್ರುತಿ ಎಂದರೆ, ಸಿದ್ಧಾಂತಗಳ ಮಂಡನೆಗಳನ್ನು ಒಳಗೊಂಡ ಗ್ರಂಥ. ಶಾಸ್ತ್ರಗಳಾದರೋ,ಸಾಧಕನಾದವನಿಗೆ ಪ್ರಾಯೋಗಿಕ ಬೋಧನೆಗಳನ್ನು ಒಳಗೊಂಡ ಗ್ರಂಥ. ಮನುಕುಲಕ್ಕೆ ಯಾವ ರೀತಿ ಅದರ ಅಂಶಗಳು ಉಪಕಾರಿ ಆಗುತ್ತದೆಯೋ, ಅದನ್ನು ತಿಳಿಸುವಂತಹ ಗ್ರಂಥಗಳು. ಪುರುಷಾರ್ಥಗಳ ಬಗ್ಗೆ ತಿಳುವಳಿಕೆ ನೀಡುವಂತಹ ವಿಚಾರಗಳು ಅಡಗಿರುವ ಗ್ರಂಥಗಳು.
ಗ್ರಂಥದ ಉದ್ದೇಶ
स्वधर्मज्ञानवैराग्यसाध्यभक्त्येकगोचरः ।
नारायणः परं ब्रह्म गीताशास्त्रे समीरितः ॥ १॥
ಎಲ್ಲ ಜೀವಿಗಳ ಹೃದಯದಲ್ಲಿರುವ ನಾರಾಯಣನೇ ಪರಬ್ರಹ್ಮ ಎಂದು ವೇದಗಳಲ್ಲಿ,ಕರೆಯಲ್ಪಟ್ಟ, ಸರ್ವೋಚ್ಚ ಸತ್ಯ ಎಂದು ಭಗವದ್ಗೀತೆಯು ಸಾರುತ್ತದೆ. ಇದು, ಭಗವದ್ಗೀತೆಯಿಂದ ಪಡೆಯಬಹುದಾದ ಒಂದೇ ಮಾರ್ಗ ಎಂದು ವಿವರಣೆಯನ್ನು ಕೊಡುತ್ತದೆ. ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಸ್ವಧರ್ಮಗಳನ್ನು ಆಚರಿಸುತ್ತಾ, ಅಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆದು, ಜ್ಞಾನ ಸಂಪಾದಿಸಿಕೊಂಡು, ಸಾಂಸಾರಿಕ ಜೀವನದಿಂದ ಬೇರ್ಪಡಿಸಿಕೊಂಡು, ವೈರಾಗ್ಯವನ್ನು ಗಳಿಸಿ ಕೊಳ್ಳುವುದು,ಮುಖ್ಯವಾದ ಗುರಿ.
ಮೊದಲನೆಯ ಷಟ್ಕ
ज्ञानकर्मात्मिके निष्ठे योगलक्ष्ये सुसंस्कृते ।
आत्मानुभूतिसिद्ध्यर्थेपूर्वषट्केनचोदिते ॥ २॥
ಸರ್ವೋಚ್ಚವಾದ ಸತ್ಯವನ್ನು ಕಂಡುಕೊಳ್ಳಲು, ಎರಡು ಮಾರ್ಗಗಳಿವೆ ಮೊದಲನೆಯದು, ಕರ್ಮಮಾರ್ಗ…ಅಂದರೆ, ನಿಯೋಜಿಸಲ್ಪಟ್ಟ ಶಾಸ್ತ್ರಸಮ್ಮತವಾದ ಕಾರ್ಯಗಳನ್ನು(ಅನಾಸಕ್ತಿ ಮತ್ತು ಫಲ ಅನುಸಂಧಾನ ರಾಹಿತ್ಯದಿಂದ ಕೂಡಿದ ಕರ್ಮಗಳು)ಆಚರಿಸುವುದು. ಎರಡನೆಯ ಮಾರ್ಗ ಜ್ಞಾನಮಾರ್ಗ.. ವಿಚಾರ ವಿಮರ್ಶೆಯಿಂದ ತಿಳಿಯುವಂತಹ ಸತ್ಯ. ನಿಷ್ಠೆಯು ಬಳವತ್ತರ ಗೊಳ್ಳುವವರೆಗೆ, ಎರಡು ಮಾರ್ಗಗಳನ್ನೂ ಅನುಸರಿಸಬೇಕು. ದೈವತ್ವದ ನಂಬಿಕೆಯಲ್ಲಿ, ಮತ್ತು ಅದರ ಧೀರ್ಘ ಚಿಂತನೆಯಲ್ಲಿ ತೊಡಗಿಸಿ ಕೊಂಡು, ಇರಬೇಕಾದುದು ಮೂಲ ಮುಖ್ಯ ಗುರಿ ಯಾಗಬೇಕು. ಈ ಆಚರಣೆಯಿಂದ, ಬರತಕ್ಕ ಸಾಧನೆಯಿಂದ, ಆತ್ಮಾನುಭವಕ್ಕೆ ದಾರಿದೀಪವಾಗಿ, ಮೊದಲ ಆರು ಷಟ್ಕಗಳು ಉಪಕಾರಿ ಯಾಗಬಲ್ಲದು. ಇದನ್ನು ಮೊದಲ ಆರು ಷಟ್ಕದಲ್ಲಿ ತಿಳಿಸಿದೆ.
ಎರಡನೆಯ ಷಟ್ಕ.
मध्यमे भगवत्तत्त्वयाथात्म्यावाप्तिसिद्धये ।
ज्ञानकर्माभिनिर्वर्त्योभक्तियोगःप्रकीर्तितः॥३॥
ಮಧ್ಯಮ ಷಟ್ಕದ ಆರು ಅಧ್ಯಾಯ ಗಳಲ್ಲಿ,ಭಕ್ತಿಯೋಗದ ಕ್ರಮಗಳನ್ನು (path of devotion) ಹೇಳಲಾಗಿದೆ. ಈ ಕ್ರಮಗಳಿಗೆ ಸೂಚಕವಾಗಿ, ಬೇಕಾಗುವಂತಹ ಉಪಾಯಗಳನ್ನು ತಿಳಿಸಲಾಗಿದೆ. ವೇದಾಂತಗಳ ನಿಟ್ಟುಗಳನ್ನು, ತಿಳಿದುಕೊಂಡು, ಅದನ್ನು ಅನುಷ್ಠಾನ ಮಾಡಿ, ಅವರವರ ರುಚಿಗೆ ತಕ್ಕಂತೆ, ಬಳಸಿಕೊಂಡು ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿಯನ್ನು ತೋರಿಸಬೇಕು. ಈ ರೀತಿಯಾದ ಧೃಡವಾದ ಭಕ್ತಿಗೆ,,ಭಗವಂತನು ಯಾವ ರೀತಿಯಲ್ಲಿ ತೋರಿಸಿಕೊಳ್ಳಬಲ್ಲ ಎಂಬುದನ್ನು ತಿಳಿಸಲಾಗಿದೆ.
ಮೂರನೆಯ ಷಟ್ಕ
प्रधानपुरुषव्यक्तसर्वेश्वरविवेचनम् ।
कर्मधीर्भक्तिरित्यादिःपूर्वशेषोऽन्तिमोदितः ॥४॥
ಮೂರನೆಯ ಮತ್ತು ಕೊನೆಯ ಷಟ್ಕದಲ್ಲಿ ಹದಿಮೂರರನೇ ಅಧ್ಯಾಯದಿಂದ, ಹದಿನೆಂಟರ ರವರೆಗೆ ಸೂಚಿಸಿರುವ ವಿಷಯಗಳಲ್ಲಿ ಪ್ರಧಾನ (ಅವ್ಯಕ್ತವಾದ ವಸ್ತು) ಮತ್ತು ಪುರುಷರ (ವ್ಯಕ್ತವಾದ, ವಿಕಸನಗೊಂಡ ವಸ್ತು) ಬಗ್ಗೆ ವ್ಯತ್ಯಾಸವನ್ನು ತಿಳಿಸಲಾಗಿದೆ. ಕಾರ್ಯಕಾರಣ ಸಂಬಂಧಗಳನ್ನು ತಿಳಿಸಲಾಗಿದೆ. ವ್ಯಕ್ತ ಪ್ರಪಂಚದ ಮತ್ತು ಆಳುವ ಈಶ್ವರ ತತ್ವಗಳು ವಿಸ್ತಾರವಾಗಿ ಪ್ರತಿಪಾದಿತವಾಗಿದೆ. ಹಿಂದಿನ ಷಟ್ಕದಲ್ಲಿ ತಿಳಿಸಲು ಆಗದ ವಿಚಾರವನ್ನು,(,ಕರ್ಮ, ಭಕ್ತಿ ಮುಂತಾದುವುಗಳಲ್ಲಿ ಬಿಟ್ಟಿರು ವುದನ್ನು) ಈ ಷಟ್ಕದಲ್ಲಿ ವಿವರಿಸಿದೆ.
ಮೊದಲನೆಯ ಅಧ್ಯಾಯ
अस्थानस्नेहकारुण्यधर्माधर्मधियाकुलम् ।
पार्थं प्रपन्नमुद्दिश्य शास्त्रावतरणं कृतम् ॥ ५॥
ಸ್ವಜನರ ಬಗ್ಗೆ ಅತೀವ ಪ್ರೀತಿ ಮತ್ತು ಕರುಣೆ ಅರ್ಜುನನನ್ನು ಆವರಿಸಿಕೊಂಡಿದ್ದರಿಂದ, ಅವನಿಗೆ ಉದ್ವಿಗ್ನತೆಯಿಂದ ಕೂಡಿದ ಮನಸ್ಸು ಇದ್ದಿದ್ದರಿಂದ ಯಾವ ಕಾರ್ಯದಲ್ಲಿ ನಿರತನಾಗಬೇಕೋ, ಬೇಡವೋ ಎಂಬ ಸಂದೇಹವೂ ಇದ್ದುದರಿಂದ, ಭಗವದ್ಗೀತೆ ಅವನಿಗಾಗಿ ಹೇಳಲ್ಪಟ್ಟಿತು.
ಎರಡನೆಯ ಅಧ್ಯಾಯ.
नित्यात्मासङ्गकर्मेहागोचरा साङ्खययोगधीः
द्वितीये स्थितधीलक्षाप्रोक्तातन्मोहशान्तये॥६॥
ಸಾಂಖ್ಯ ಯೋಗದ ಪ್ರಕಾರ, ಜೀವಾತ್ಮನು, ಅಮರನೂ ನಿರ್ವಿಕಾರನೂ,ಆದ್ದರಿಂದ ಎಲ್ಲ ರೀತಿಯ ಯೋಗಾಭ್ಯಾಸವು ಎಲ್ಲ ಕಾರ್ಯಗಳಲ್ಲಿ, ಅನಾಸಕ್ತಿಯಿಂದ,ಮಾಡತಕ್ಕದ್ದು. ಅದರಿಂದ, ಮನಸ್ಸು ದೃಢವಾಗಿ, ಸ್ಪಷ್ಟವಾಗಿ ನೆಲೆಯಲ್ಲಿ, ನಿಂತು ಬೇರ್ಪಡುವುದು. ಈ ಉಪಾಯವನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು, ಎಂಬುದನ್ನು ಎರಡನೆಯ ಅಧ್ಯಾಯದಲ್ಲಿ ವಿವರಿಸಿದೆ. ಇದರಿಂದ ಅಜ್ಞಾನದಿಂದ ತೊಳಲುತ್ತಿರುವ ಮನಸ್ಸನ್ನು ಸ್ಥಿರ ಪಡಿಸಿಕೊಳ್ಳಬಹುದು.
ಮೂರನೆಯ ಅಧ್ಯಾಯ.
असक्त्या लोकरक्षायै गुणेष्वारोप्य कर्तृताम् ।
सर्वेश्वरेवान्यस्योक्ता तृतीये कर्मकार्यता ॥ ७॥
ಮೂರನೆಯ ಅಧ್ಯಾಯದಲ್ಲಿ, ದೇವ ಹಿತಕ್ಕಾಗಿಯೇ ಯಾವ ಕರ್ಮಗಳನ್ನು ಮಾಡಿದರೂ, ಅದರಲ್ಲಿ ಅನಾಸಕ್ತಿಭಾವ ಮತ್ತು ಫಲ ಅನುಸಂಧಾನ ರಾಹಿತ್ಯದಿಂದ ಕೂಡಿದ್ದರೆ, ಲೋಕಸಂಗ್ರಹ ಕ್ಕಾಗಿಯೇ, ಅಹಂಕಾರದಿಂದ ಕೂಡಿರದೆ ಇರುವಂತಹ ಮನಸ್ಸು ಇರಬೇಕು. ಎಲ್ಲ ಕಾರ್ಯಗಳು ಸತ್ವ ರಜಸ್ ತಮೋ ಗುಣಗಳಿಂದ ಕೂಡಿ ಇರುವುದರಿಂದ, ಎಲ್ಲವೂ ಭಗವಂತನ ಇಚ್ಛೆಯಿಂದ ನಡೆಯುತ್ತದೆ, ಎಂಬ ಭಾವನೆಯನ್ನು ಬಲವತ್ತರ ಗೊಳಿಸಬೇಕು
ನಾಲ್ಕನೆಯ ಅಧ್ಯಾಯ
प्रसङ्गात्स्वस्वभावोक्तिः कर्मणोऽकर्मतास्य च
भेदा ज्ञानस्य माहात्म्यंचतुर्थाध्याय उच्यते ॥ ८॥
ನಾಲ್ಕನೆಯ ಅಧ್ಯಾಯದಲ್ಲಿ, ಭಗವಂತನ, ತನ್ನದೇ ಆದ (ಸ್ವವಿಷಯ) ನೈಜ ಸ್ಥಿತಿಯ ವರ್ಣನೆಯಿಂದ ಹಿಡಿದು, ಕರ್ಮಯೋಗದ ಬಗ್ಗೆ ವಿವರಣೆ ಇದೆ. ಕರ್ಮದ ಅಂಶವೇ ಬೇರೆ ಮತ್ತು ಮನಸ್ಸಿನ ಆಲೋಚನೆಗಳೇ ಬೇರೆ,( ಸಂಕಲ್ಪದಿಂದ ಮಾಡುವ ಕಾರ್ಯ,ಮನೋವೃತ್ತಿಗಳು,,ಆದುದರಿಂದ,ಆತ್ಮಶುದ್ದಿಗೆ ಯಾವಕರ್ಮದಲ್ಲಿ ತೊಡಗಬೇಕು),ಮತ್ತು ಆತ್ಮ ದರ್ಶನಕ್ಕೆ ಜ್ಞಾನ ಸಂಪಾದನೆಯ ಮಹತ್ವ, ಏನು ಎಂಬ ವಿಷಯಗಳು ಇವೆ. ಜ್ಞಾನದ ಪಾತ್ರವನ್ನು ಒತ್ತಿ ಹೇಳಲಾಗಿದೆ.
ಐದನೆಯ ಅಧ್ಯಾಯ.
कर्मयोगस्य सौकर्यं शैघ्रयं काश्चन तद्विधाः ।
ब्रह्मज्ञानप्रकारश्च पञ्चमाध्याय उच्यते ॥ ९॥
ಐದನೆಯ ಅಧ್ಯಾಯದಲ್ಲಿ ಸುಲಭಸಾಧ್ಯ ಮತ್ತು ಫಲದಾಯಕವಾದ ಕರ್ಮಯೋಗದ ಬಗ್ಗೆ ಮತ್ತು ಬ್ರಹ್ಮನನ್ನು ಪಡೆಯಬೇಕಾದ ಗುರುತುಗಳನ್ನು, ತಿಳಿಸಲಾಗಿದೆ.
ಆರನೆಯ ಅದ್ಯಾಯು.
योगाभ्यासविधिर्योगी चतुर्धा योगसाधनम् ।
योगसिद्धिस्स्वयोगस्य पारम्यंषष्ठउच्यते॥ १०॥
ಆರನೆಯ ಅಧ್ಯಾಯದಲ್ಲಿ, ಧ್ಯಾನ ಮತ್ತು ಏಕಾಗ್ರತೆಯ ಬಗ್ಗೆ ವಿವರಣೆಯನ್ನು ನೀಡುತ್ತಾ, ನಾಲ್ಕು ವಿಧವಾದ ಆಚರಣೆಗಳಲ್ಲಿ, ಜಯಗಳಿಸಿದ ಯೋಗಿಗಳ ಬಗ್ಗೆ ತಿಳಿಸಿ, ಯೋಗ ಸಾಧನೆಗೆ ಮಾರ್ಗಗಳು, ಯೋಗದ ಹೆಚ್ಚುಗಾರಿಕೆ ಮತ್ತು ಶ್ರೇಷ್ಠತೆಯ ಬಗ್ಗೆ ವಿವರಿಸಲಾಗಿದೆ.
ಏಳನೆಯ ಅಧ್ಯಾಯ.
स्वयाथात्म्यं प्रकृत्यास्य तिरोधिश्शरणागतिः ।
भक्तभेदः प्रबुद्धस्य श्रैष्ठ्यं सप्तम उच्यते ॥ ११॥
ಏಳನೆಯ ಅಧ್ಯಾಯದಲ್ಲಿ ಸ್ವವಿಷಯ ಅಂದರೆ ತನ್ನ ಸ್ವಂತ ಇರುವಿಕೆಯು ಯಾವರೀತಿಯಲ್ಲಿ ಮಾಯೆಯಿಂದ ಮುಚ್ಚಲ್ಪಟ್ಟಿದೆ ಮತ್ತು ಇದನ್ನು ಯಾವ ರೀತಿ ದಾಟುವುದು, ಭಕ್ತರ ವಿವಿಧ ರೂಪಗಳು, ಶರಣಾಗತಿಯ ಮಹತ್ವದ ಬಗ್ಗೆಯೂ ಮತ್ತು ಆತ್ಮನಲ್ಲಿಯೇ ಪ್ರೇಮದಿಂದ ಇರುವಂತಹವನು, ಯಾವ ರೀತಿಯಲ್ಲಿ ಎಲ್ಲರಿಗಿಂತ ಉತ್ತಮನೆಂದು, ತಿಳಿಸಲಾಗಿದೆ
ಎಂಟನೆಯ ಅಧ್ಯಾಯ.
ऐश्वर्याक्षरयाथात्म्यभगवच्चरणार्थिनाम् ।
वेद्योपादेयभावानामष्टमे भेद उच्यते ॥ १२॥
ಧನ-ಕನಕಗಳ ಸಂಪಾದನೆ ಮತ್ತು ಪ್ರಾಪಂಚಿಕ ಸುಖಗಳನ್ನು ಕೋರುವ ಭಕ್ತರು, ಆತ್ಮಸಾಕ್ಷಾತ್ಕಾರಕ್ಕಾಗಿ ಶರಣು ಹೋಗುವ ಭಕ್ತರು, ಮತ್ತು ದೈವದಲ್ಲಿಯೇ ಅನನ್ಯ ಭಕ್ತಿ ಮತ್ತು ನಿಷ್ಠೆ ಇರುವಂತಹ ಭಕ್ತರ ಬಗ್ಗೆ ತಿಳಿಸುತ್ತಾ, ಯಾರು ಯಾರು, ಯಾವ ರೀತಿಯಲ್ಲಿ ತನ್ನನ್ನು ಹೊಂದಬಹುದು ಎಂಬುವುದನ್ನು ವಿವರಿಸಿ, ಈ ಮೂರ್ವರಲ್ಲಿನ ವ್ಯತ್ಯಾಸವನ್ನು ಎಂಟನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
ಒಂಬತ್ತನೆಯ ಅಧ್ಯಾಯ
स्वमाहात्म्यं मनुष्यत्वे परत्वं च महात्मनाम् ।
विशेषो नवमेयोगो भक्तिरूपःप्रकीर्तितः ॥ १३॥
ತಾನು ಅವತಾರವೆತ್ತಿ, ಭೂಮಂಡಲದಲ್ಲಿ ಇಳಿದಾಗ, ತನ್ನ ಅತೀಂದ್ರಿಯ ಶಕ್ತಿಗಳನ್ನು ಯಾವ ರೀತಿಯಲ್ಲಿ, ತನ್ನಲ್ಲಿ ನಿಲ್ಲಿಸಿಕೊಳ್ಳಬಲ್ಲ ಎಂಬುದನ್ನು ತಿಳಿಸಿದೆ. ಅತ್ಯಂತ ಉನ್ನತ ಸ್ಥಿತಿಯಲ್ಲಿ ಇರುವ ಜೀವಿಗಳ ಹೆಚ್ಚುಗಾರಿಕೆಯನ್ನು ಮತ್ತು ಅವರ ಸಾಕ್ಷಾತ್ಕಾರದ ಬಗ್ಗೆಯೂ ತಿಳಿಸಿ, ಅನನ್ಯ ಭಕ್ತಿಯಿಂದ ಯಾವ ರೀತಿಯಲ್ಲಿ ಸಾಕ್ಷಾತ್ಕಾರವನ್ನು ಪಡೆಯಬಹುದು, ಎಂದು ಈ ಅಧ್ಯಾಯದಲ್ಲಿ ವಿವರಿಸಿದೆ.
ಹತ್ತನೆಯ ಅಧ್ಯಾಯ.
स्वकल्याणगुणानन्त्यकृत्स्नस्वाधीनतामतिः ।
भक्त्युत्पत्तिविवृध्द्यर्था विस्तीर्णादशमोदिता. ॥१४॥
ವೈವಿಧ್ಯಮಯ, ಮಂಗಳಕರ, ದೈವತ್ವದ ಗುಣಗಳನ್ನು, ಈ ಭೂಮಂಡಲದ ಒಳಿತಿಗಾಗಿಯೇ, ತನ್ನಲ್ಲಿಯೇ ಸ್ವಾಧೀನದಲ್ಲಿ ಇರಿಸಿಕೊಂಡು, ಭಕ್ತರುಗಳು ಯಾವರೀತಿಯಲ್ಲಿ ಅನನ್ಯ ಭಕ್ತಿಯಲ್ಲಿ ನಿರತರಾಗಬೇಕು ಎಂಬ ಸೂಚನೆಗಳನ್ನು ನೀಡುಬಲ್ಲ ವಿವರಣೆ ಈ ಅಧ್ಯಾಯದಲ್ಲಿ ವಿಷದವಾಗಿ ಇದೆ.
ಹನ್ನೊಂದನೆಯ ಅಧ್ಯಾಯ.
एकादशे स्वयाथात्म्यसाक्षात्कारावलोकनम् ।
दत्तमुक्तं विदिप्राप्त्योर्भक्त्येकोपायतातथा ॥१५॥
ಭಗವಂತನು, ಅರ್ಜುನನಿಗೆ ಅತೀಂದ್ರಿಯ ದೃಷ್ಟಿಯನ್ನು ದಯಪಾಲಿಸಿ, ತನ್ನ ವಿಶ್ವರೂಪ ದರ್ಶನವನ್ನು ತೋರಿಸುತ್ತಾ, ತನ್ನಲ್ಲಿಯೇ ಭಕ್ತಿಯನ್ನು ಅನನ್ಯವಾಗಿ ಇಡುತ್ತಾ, ಇದೊಂದನ್ನೇ ಗುರಿಯಾಗಿ ಇಟ್ಟುಕೊಂಡು, ಕರ್ತವ್ಯದಲ್ಲಿ ತೊಡಗಬೇಕು, ಎಂಬುದನ್ನು ಸ್ಪಷ್ಟವಾಗಿ ಹನ್ನೊಂದನೆಯ ಅಧ್ಯಾಯದಲ್ಲಿ ತಿಳಿಸಿದ್ದಾನೆ.
ಹನ್ನೆರಡನೆಯ ಅಧ್ಯಾಯ
भक्तेश्श्रैष्ठयमुपायोक्तिरशक्तस्यात्मनिष्ठता ।
तत्प्रकारास्त्वतिप्रीतिर्भक्तेद्वादशउच्यते ॥ १६॥
ಆತ್ಮಚಿಂತನಕ್ಕಿಂತ ಉತ್ತಮ ವಾದ, ಪ್ರೀತಿ ಪೂರ್ವಕವಾದ ಭಕ್ತಿಗೆ,ಅನುಕೂಲವಾಗುವಂತಹ ಸಲಹೆಗಳ ಬಗ್ಗೆ ಹನ್ನೆರಡನೆಯ ಅಧ್ಯಾಯದಲ್ಲಿ ವಿವರಣೆ,ಇದೆ. ಭಕ್ತಿಯಿಂದ, ಶರಣಾಗತಿಯನ್ನು ಮಾಡಲಾರದವರಿಗೆ, ಆತ್ಮ ಚಿಂತನದ ಧ್ಯಾನ ಮಾರ್ಗವನ್ನು ಸೂಚಿಸಿದೆ. ಭಕ್ತಿಗೆ ಸಹಕಾರಿಯಾಗಬಲ್ಲ ಗುಣಗಳನ್ನು, ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿ, ಇದರಿಂದ ಅಂತರಂಗ ಭಕ್ತಿಯು ಬೆಳಗುವುದನ್ನೂ, ಹೊಗಳಿದೆ.
ಹದಿಮೂರನೆಯ ಅಧ್ಯಾಯ
देहस्वरूपमात्माप्तिहेतुरात्मविशोधनम् ।
बन्धहेतुर्वि वेकश्च त्रयोदश उदीर्यते ॥ १७॥
ಹದಿಮೂರನೆಯ ಅಧ್ಯಾಯದಲ್ಲಿ, ದೇಹದ ಪ್ರಕೃತಿ ಮತ್ತು ಆತ್ಮಸಾಕ್ಷಾತ್ಕಾರದ ಬಗ್ಗೆ ತಿಳುವಳಿಕೆ ಇದೆ. ದೇಹದಿಂದ ಆತ್ಮನನ್ನು ಬೇರ್ಪಡಿಸಿ ತಿಳಿದುಕೊಳ್ಳುವ ಬಗೆ, ಬಂಧನಗಳಿಗೆ ಕಾರಣವಾಗುವ ಅವಕಾಶ ಮತ್ತು ಸ್ಥಿತಿಗಳು, ಅದರಿಂದ ಮುಕ್ತನಾಗುವ ಬಗ್ಗೆ ಚಿಂತನೆ ನಡೆದಿದೆ.
ಹದಿನಾಲ್ಕನೆಯ ಅಧ್ಯಾಯ
गुणबन्धविधा तेषां कर्तृत्वं तन्निवर्तनम् ।
गतित्रयस्वमूलत्वं चतुर्दश उदीर्यते ॥ १८॥
ಯಾವ ರೀತಿಯಲ್ಲಿ ಸತ್ವ ರಜಸ್ ತಮಸ್ ಎಂಬ ತ್ರಿಗುಣಗಳು ಆತ್ಮನನ್ನು ಬಂಧನಕ್ಕೆ ಹೇಗೆ ಒಳಪಡಿಸಬಲ್ಲದು ಮತ್ತು ಎಲ್ಲಾ ಕರ್ಮಗಳಲ್ಲಿ ಅವುಗಳ ಸಕ್ರಿಯರೂಪಗಳ ಬಗ್ಗೆ ವಿವರಣೆ,ಹದಿನಾಲ್ಕನೆಯ ಅಧ್ಯಾಯದಲ್ಲಿ ನಿರೂಪಿಸಲಾಗಿದೆ. ಇವುಗಳಿಂದ ಯಾವ ರೀತಿಯಲ್ಲಿ ಬಿಡಿಸಿ ಕೊಳ್ಳಬಹುದಾದ ಉಪಾಯಗಳು, ಅದರಿಂದ ಉಂಟಾಗುವ ಆತ್ಮಸಾಕ್ಷಾತ್ಕಾರದ ಮೂರು ಉಗಮ ಸ್ಥಾನದ ಕವಲುಗಳ ವಿವರಣೆ( ಧನ ಧಾನ್ಯ ಪ್ರಾಪ್ತಿ, ಆತ್ಮಾವಲೋಕನದ ಆತುರತೆ, ಮತ್ತು ದೈವೀ ಗುಣಗಳನ್ನು ಹೊಂದುವ ಬಗೆ) ಮತ್ತು ಸೂಚನೆಗಳು ಇವೆ.
ಹದಿನೈದನೆಯ ಅಧ್ಯಾಯ
अचिन्मिश्राद्विशुद्धाच्च चेतनात्पुरुषोत्तमः ।
व्यापनाद्भरणात्स्वाम्यदन्यःपञ्चदशोदितः॥१९॥
ಸಾಧಾರಣ ಮನುಷ್ಯರಲ್ಲಿ ಮತ್ತು ವಸ್ತುಗಳಲ್ಲಿ ಬೆರೆತು ಹೋದ ಆತ್ಮನು, ಜೀವನಿಗಿಂತ ಯಾವ ರೀತಿಯಲ್ಲಿ ಭೇದವನ್ನು ಹೊಂದಿರುವನು ಮತ್ತು ಜೀವನಿಂದ ಬಿಡುಗಡೆ ಹೊಂದಿದ ಆತ್ಮನು ಯಾವ ರೀತಿ ಎಲ್ಲ ಕಡೆಯಲ್ಲಿಯೂ ಹಂಚಿಹೋಗಿರುವ ಇರುವಿಕೆಯಂತೆ, ಎಲ್ಲರನ್ನೂ, ತನ್ನ ಭಾಗಿತ್ವದಿಂದ ಎಲ್ಲರಿಗೂ ಆಸರೆಯಾಗಿ ಇರುವನೆಂದು ಈ ಅಧ್ಯಾಯದಲ್ಲಿ ತೋರಿಸಿಕೊಟ್ಟಿದೆ.
ಹದಿನಾರನೆಯ ಅಧ್ಯಾಯ
देवासुरविभगोक्तिपूर्विका शास्त्रवश्यता ।
तत्त्वानुष्ठानविज्ञानस्थेम्ने षोडश उच्यते ॥ २०॥
ಹಿಂದಿನ ಅಧ್ಯಾಯಗಳಲ್ಲಿ ತಿಳಿಸಿದ ದೈವೀ ಗುಣಗಳು ಮತ್ತು ಆಸುರೀ ಗುಣಗಳ ಬಗ್ಗೆ, ದೀರ್ಘ ಚಿಂತನೆ ನಡೆಸಿ, ಯಾವ ರೀತಿಯಲ್ಲಿ ಇವುಗಳ ಮಹತ್ವವನ್ನು ಶಾಸ್ತ್ರಸಮ್ಮತವಾದ ವಿಧಿಗಳಿಂದ ತಿಳಿದು, ಆತ್ಮನಲ್ಲಿ ನಿರಂತರವಾಗಿ ನಿಲ್ಲಲು, ಬೇಕಾದ ಸೂಚನೆಗಳಿಂದ ತನ್ನ ಉದ್ಧಾರಕ್ಕಾಗಿ ಶ್ರಮ ಪಡಬೇಕು. ಮತ್ತು ಇದಕ್ಕೆ ಮುನ್ನುಡಿಯಾಗಿ ದೈವೀ ತತ್ವ ಮತ್ತು ಆಸುರೀತತ್ವಗಳ ಬಗ್ಗೆ ವ್ಯತ್ಯಾಸ ಮತ್ತು ತಿಳುವಳಿಕೆಯನ್ನು ಹೊಂದಬೇಕು ಎಂಬುವುದನ್ನು ಈ ಅಧ್ಯಾಯದಲ್ಲಿ ನಿರೂಪಿಸಲಾಗಿದೆ.
ಹದಿನೇಳನೆಯ ಅಧ್ಯಾಯ
अशास्त्रमासुरं कृत्स्नं शास्त्रीयं गुणतः पृथक् ।
लक्षणं शास्त्रसिद्धस्य त्रिधा सप्तदशोदितम् ॥२१॥
ಹದಿನೆಂಟನೆಯ ಅಧ್ಯಾಯ
ईश्वरे कर्तृताबुद्धिस्सत्त्वोपादेयतान्तिमे ।
स्वकर्मपरिणामश्च शास्त्रसारार्थ उच्यते ॥ २२॥
ಕಡೆಯ ಅಧ್ಯಾಯದಲ್ಲಿ, ಭಗವದ್ಗೀತೆಯ ಸಮಗ್ರ ಸಾರಾಂಶವನ್ನು ಬೋಧನೆಯಾಗಿ ರೂಪಿಸಿದೆ. ಎಲ್ಲ ಕಾರ್ಯಗಳು ದೈವ ಕೃಪೆಯಿಂದಲೇ ನಡೆಯುತ್ತದೆ ಎಂಬ ಭಾವನೆ ಯಿಂದ, ಸತ್ವಗುಣವನ್ನು ಹೆಚ್ಚು-ಹೆಚ್ಚು ವೃದ್ಧಿಸಿಕೊಳ್ಳಬೇಕು. ಭಗವದ್ಗೀತೆಯ ಮೂಲ ಸೂಚನೆ, ಏನೆಂದರೆ, ಎಲ್ಲ ಕಾರ್ಯಗಳನ್ನೂ ದೈವನಲ್ಲಿ ಅರ್ಪಿಸಿ, ತನ್ನ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ನೀಗಿಸಬಲ್ಲ ಶಕ್ತಿ ಅದೇ, ಎಂಬ ವಿಶ್ವಾಸ ಇಟ್ಟು ಶುದ್ಧತೆ, ವೈರಾಗ್ಯ ಮತ್ತು ಅನನ್ಯ ಭಕ್ತಿಯಿಂದ ಎಲ್ಲ ಕರ್ಮಗಳಲ್ಲಿ ತೊಡಗಿಸಿಕೊಂಡಾಗ, ಅದು ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗಬಲ್ಲದು.
ಶ್ಲೋಕ ಇಪ್ಪತ್ಮೂರರಿಂದ ಮೂವತ್ತೊಂದರವರೆಗೆ ಶ್ರೀಯಾಮುನಾಚಾರ್ಯರು, ಭಗವದ್ಗೀತೆಯ ತಿರುಳನ್ನು ಹೊರತಂದಿದ್ದಾರೆ. ಇದನ್ನು, ಸಮಗ್ರವಾಗಿ ನೋಡೋಣ.
कर्मयोगस्तपस्तीर्थदानयज्ञादिसेवनम्ज्ञानयोगो जितस्वान्तैः परिशुद्धात्मनि स्थितिः ॥ २३॥
ಮಾಡಿಕೊಳ್ಳುವುದು.
भक्तियोगः परैकान्तप्रीत्याध्यानादिषु स्थितिः ।
त्रयाणामपियोगानांत्रिभिरन्योन्यसङ्गमः॥२४॥
ನಿರಂತರವಾಗಿ ಭಗವಂತನಲ್ಲಿ ಧ್ಯಾನಾಸಕ್ತರಾಗಿ ಇರುವುದು ಭಕ್ತಿಯೋಗ. ಈ ಮೂರು ಯೋಗಗಳು ಒಂದಕ್ಕೊಂದು ಪೂರಕವಾದವುಗಳು.
नित्यनैमित्तिकानां च पराराधनरूपिणाम् ।
आत्मदृष्टेस्त्रयोऽप्येतेयोगद्वारेणसाधकाः॥ २५॥
ಈ ಮೂರು ಯೋಗ ಗಳಲ್ಲಿಯೂ ನಿತ್ಯಕರ್ಮ (ನಿಯಮಗಳಿಗೆ ಬದ್ಧನಾಗಿರುವುದು) ಮತ್ತು ನೈಮಿತ್ತಿಕಕರ್ಮ (ಭಗವಂತನ ಕಾರ್ಯದಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವುದು) ಮುಖ್ಯವಾದ ವಿಷಯ. ಈ ಯೋಗಗಳು ಆತ್ಮಸಾಕ್ಷಾತ್ಕಾರಕ್ಕೆ ಸಾಧನೆಗಳಾಗಿವೆ.
निरस्तनिखिलाज्ञानो दृष्ट्वात्मानं परानुगम् ।
प्रतिलभ्यपरांभक्तिंतयैवाप्नोतितत्पदम् ॥ २६॥
ಅಜ್ಞಾನವನ್ನು,ಪರಿಪೂರ್ಣವಾಗಿ ತೊಲಗಿಸಿಕೊಂಡ ನಂತರ, ಆತ್ಮನ ನಿಸ್ಸಂಗತ್ವವು ಬಹಳ ಸ್ಪಷ್ಟವಾಗಿ ಗೋಚರಿಸಿ, ಪರಿಶುದ್ಧವಾದ ಪರಾ ಭಕ್ತಿಯಲ್ಲಿ ಕೊನೆಗೊಂಡು, ಅವನ ಪಾದಗಳಲ್ಲಿ ಶರಣಾಗತಿಯನ್ನು ಹೊಂದಲು, ಅವಕಾಶ ವಾಗುತ್ತದೆ.
भक्तियोगस्तदर्थी चेत्समग्रैश्वर्यसाधकः ।
आत्मार्थी चेत्त्रयोऽप्येतेतत्कैवल्यस्य साधकाः॥ २६॥
ಅವರವರ ಇಚ್ಛೆಗೆ ಅನುಗುಣವಾಗಿ, ಭಕ್ತಿ ಯೋಗವು, ಪರಿಪೂರ್ಣ ಸಾರ್ವಭೌಮತೆಯನ್ನು ಹೊಂದಲು ಎಡೆ ಮಾಡಿಕೊಡುತ್ತದೆ. ಅಥವಾ ಆತ್ಮಾರಾಮನಾಗಲು ಉತ್ಸುಕತೆ ಇದ್ದಲ್ಲಿ, ಈ ಮೂರು ಯೋಗಗಳು, ಏಕಾಂತದಲ್ಲಿ ಆತ್ಮನಲ್ಲಿ ನೆಲೆ ನಿಲ್ಲುವಂತಹ ಸ್ಥಿತಿಯನ್ನು ಉಂಟು ಮಾಡುತ್ತವೆ.
ऐकान्त्यं भगवत्येषां समानमधिकारिणाम् ।
यावत्प्राप्ति परार्थी चेत्तदेवात्यन्तमश्नुते ॥ २८॥
ಎಲ್ಲ ಮುಮುಕ್ಷುಗಳಲ್ಲಿಯೂ ಆತನೊಬ್ಬನೇ ತನ್ನ ಮೋಕ್ಷಕ್ಕಾಗಿ, ಮುಕ್ತಿಗಾಗಿ, ಅಣಿವಾಗಬಲ್ಲ, ಎಂಬ ನಂಬಿಕೆ ಬಲವತ್ತರವಾಗಿ ಬೆಳೆದು, ಆನಂದದ ಸ್ಥಿತಿಯನ್ನು ಇಲ್ಲಿಯೇ, ಇಂದೇ, ಹೊಂದ ಬಲ್ಲವನಾಗುತ್ತಾನೆ. ಸಮಾಧಿ ಸ್ಥಿತಿಯಲ್ಲಿ ಇಲ್ಲದಿದ್ದರೂ, ಅಪರಿಮಿತ ಆನಂದದಲ್ಲಿ ಮುಳುಗಿ, ಪರಿಪೂರ್ಣತೆಯನ್ನು ಪಡೆದು, ದೇಹಪಾತ ಆಗುವವರೆಗೆ ರಮಿಸತ್ತಾ ಇರುತ್ತಾನೆ.
ज्ञानी तु परमैकान्ती तदायत्तात्मजीवनः ।
तत्संश्लेषवियोगैकसुखदुःखस्तदेकधीः ॥ २९॥
ಜ್ಞಾನಿಯಾದವನು,ಎಲ್ಲರಿಗಿಂತಲೂ ಅಧಿಕ ರೀತಿಯಲ್ಲಿ ಆತ್ಮನಿಗಾಗಿ, ಆತ್ಮಾರಾಮನಾಗಿ ಇರುತ್ತಾನೆ. ಅವನ ಜೀವನವೇ ಆತ್ಮನಿಗೆ ಮುಡುಪಾಗಿ ಬಿಟ್ಟಿರುತ್ತದೆ. ಆತ್ಮನ ಸೇರುವಿಕೆ ಮತ್ತು ಬಿಡಿಸುವಿಕೆ ಯಲ್ಲೇ, ಅವನ ಎಲ್ಲ ಸುಖ-ದುಃಖಗಳು ಸೀಮಿತವಾಗಿರುತ್ತದೆ. ಮನಸ್ಸು ಸಂಪೂರ್ಣವಾಗಿ, ಆ, ಅರಿವಿನ, ಇರುವಿಕೆ ಯಲ್ಲಿಯೇ, ನಿಂತಿರುತ್ತದೆ.
भगवद्ध्यानयोगोक्तिवन्दनस्तुतिकीर्तनैः ।
लब्धात्मा तद्गतप्राणमनोबुद्धीन्द्रियक्रियः ॥३०॥
ಆತ್ಮದ ಬಗ್ಗೆ ನಿರಂತರ ಧ್ಯಾನದಲ್ಲಿ ಇರುವ ಜ್ಞಾನಿಯು, ಆತ್ಮನ ಬಗ್ಗೆ ಸ್ವಾಧ್ಯಾಯ ಮತ್ತು ಪ್ರವಚನದಲ್ಲಿ,,ಸಂಪೂರ್ಣವಾಗಿ ಇದ್ದುಕೊಂಡು ನಾಮಸಂಕೀರ್ತನೆಯಲ್ಲಿ ತನ್ನ ಕಾಲವನ್ನು ಕಳೆಯುತ್ತಾ ಇರ ಬಲ್ಲವನಾಗಿರುತ್ತಾನೆ. ಈ ನೆಲೆಯಲ್ಲಿಯೇ ನಿಲ್ಲುವುದಕ್ಕೆ,ತನ್ನ ಎಲ್ಲಾ ಇಂದ್ರಿಯಗಳು, ಸಂಕಲ್ಪಗಳು, ಜ್ಞಾನ, ಮತ್ತು ಚೇತನ ಶಕ್ತಿಗಳನ್ನು,ಬಳಸುತ್ತಾನೆ.
निजकर्मादि भक्त्यन्तं कुर्यात्प्रीत्यैव कारितः ।
उपायतां परित्यज्य न्यस्येद्देवेतु तामभीः ॥ ३१॥
ಆದ್ದರಿಂದ ಅತ್ಯಂತ ಪ್ರೇಮಪೂರ್ವಕವಾಗಿಯೇ ಎಲ್ಲ ಕಾರ್ಯಗಳಲ್ಲಿ ತೊಡಗುತ್ತಾ, ಅವೆಲ್ಲವೂ ಕಡೆಯಲ್ಲಿ, ಆತ್ಮನನ್ನು ಸೇರುವ ಉಪಾಯಗಳೇ ಎಂದು ನಂಬಿ, ಲೋಕ ಸಂಗ್ರಹಕ್ಕಾಗಿ, ಯಾವ ಬಂಧನದ ಭೀತಿ ಒಳಗಾಗದೆ ಎಲ್ಲರ ಮಧ್ಯದಲ್ಲಿ ಸಾಮಾನ್ಯರಂತೆ ಇದ್ದ ಬಿಡಬೇಕು.
एकान्तात्यन्तदास्यैकरतिस्तत्पदमाप्नुयात् ।
तत्प्रधानमिदं शास्त्रमिति गीतार्थसङ्ग्रहः ॥ ३२॥
ಯಾವಾಗಲೂ ಆತ್ಮನ ನೆಲೆಯಲ್ಲಿಯೇ ತೃಪ್ತನಾಗಿ ಇರುವನೋ, ಅಂತಹವನು, ವಿಷ್ಣುವಿನ ಪರಮ ಪದವನ್ನು ಸೇರುವುದರಲ್ಲಿ ಸಂಶಯವೇ ಇಲ್ಲ. ಇದೇ ಭಗವದ್ಗೀತೆಯಲ್ಲಿ, ಇರತಕ್ಕ, ಗೀತಾರ್ಥ ಸಂಗ್ರಹ