Misc Detail
ಮೊದಲ ಪುಟ
॥ ಶ್ರೀ ಹರಿಃ ॥
ಶ್ರೀ ವಿಷ್ಣುಸಹಸ್ರನಾಮಸ್ತೋತ್ರಮ್
ಕನ್ನಡ ಅನುವಾದ ಸಹಿತ
श्रीविष्णुसहस्रनामस्तोत्रम् सटीक - कन्नड़
ಸೂಚನಾ
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ ॥
Misc Detail
ಗೀತಾ ಸೇವಾ ಟ್ರಸ್ಟ್
ಅಥ ಶ್ರೀವಿಷ್ಣುಸಹಸ್ರನಾಮ ಸ್ತೋತ್ರಮ್
ಸೂಚನಾ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ ।
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ॥
ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ ।
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ॥
ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ ।
ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ॥
ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ ।
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ॥
ಓಂ ನಮೋ ವಿಷ್ಣವೇ ಪ್ರಭವಿಷ್ಣವೇ ॥
ಅನುವಾದ
ಯಾರ ಸ್ಮರಣೆ ಮಾತ್ರದಿಂದಲೇ ಮನುಷ್ಯನು ಜನನ-ಮರಣ ರೂಪೀ ಸಂಸಾರಬಂಧನದಿಂದ ಮುಕ್ತನಾಗಿ ಹೋಗುತ್ತಾನೆಯೋ, ಎಲ್ಲರ ಉತ್ಪತ್ತಿಗೆ ಕಾರಣಭೂತನಾದ ಆ ಪರಮಾತ್ಮ ಶ್ರೀವಿಷ್ಣುವಿಗೆ ನಮಸ್ಕಾರಗಳು.
ಸೂಚನಾ
ನಮಃ ಸಮಸ್ತಭೂತಾನಾಮಾದಿಭೂತಾಯ ಭೂಭೃತೇ ।
ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣುವೇ ॥
ಅನುವಾದ
ಸಮಸ್ತ ಪ್ರಾಣಿಗಳಿಗೆ ಆದಿಭೂತನೂ, ಪೃಥ್ವಿಯನ್ನು ಧರಿಸಿರುವವನೂ, ಅನೇಕ ರೂಪಧಾರಿಯೂ ಮತ್ತು ಸರ್ವಸಮರ್ಥನಾದ ಭಗವಾನ್ ಶ್ರೀವಿಷ್ಣುವಿಗೆ ಪ್ರಣಾಮಗಳು.
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀವೈಶಂಪಾಯನ ಉವಾಚ
ಮೂಲಮ್
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ ।
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭಾಷತ ॥
ಅನುವಾದ
ವೈಶಂಪಾಯನರು ಹೇಳುತ್ತಾರೆ - ಮಹಾರಾಜನೇ! ಧರ್ಮಪುತ್ರನಾದ ರಾಜಾ ಯುಧಿಷ್ಠಿರನು ಸಂಪೂರ್ಣ ವಿಧಿರೂಪೀ ಧರ್ಮ ಹಾಗೂ ಪಾಪಗಳನ್ನು ನಾಶ ಮಾಡುವ ಧರ್ಮರಹಸ್ಯಗಳನ್ನು ಎಲ್ಲಾ ಪ್ರಕಾರದಿಂದಲೂ ಕೇಳಿ ಶಂತನು ಪುತ್ರ ಭೀಷ್ಮರನ್ನು ಪುನಃ ಕೇಳಿದನು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಮ್ ।
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃಶುಭಮ್ ॥
ಅನುವಾದ
ಯುಧಿಷ್ಠಿರ ಹೇಳಿದನು - ಇಡೀ ಜಗತ್ತಿನಲ್ಲಿ ಒಬ್ಬನೇ ಆದ ದೇವರು ಯಾರು? ಹಾಗೂ ಈ ಲೋಕದಲ್ಲಿ ಒಂದೇ ಪರಮ ಆಶ್ರಯಸ್ಥಾನ ಯಾವುದು? ಯಾರ ಸಾಕ್ಷಾತ್ಕಾರ ಮಾಡಿಕೊಂಡ ನಂತರ ಜೀವನದ ಅವಿದ್ಯಾರೂಪೀ ಹೃದಯ - ಗ್ರಂಥಿಗಳು ಬಿಚ್ಚಲ್ಪಡುತ್ತವೋ, ಎಲ್ಲಾ ಸಂಶಯಗಳೂ ದೂರವಾಗಿ ಹೋಗುತ್ತವೋ ಹಾಗೂ ಸಂಪೂರ್ಣವಾಗಿ ಕರ್ಮಗಳೆಲ್ಲಾ ಕ್ಷೀಣವಾಗಿ ಹೋಗುತ್ತವೋ, ಯಾವ ದೇವನ ಸ್ತುತಿ-ಗುಣ ಕೀರ್ತನೆ ಮಾಡುವುದರಿಂದ ಹಾಗೂ ಯಾವ ದೇವನನ್ನು ನಾನಾ ಪ್ರಕಾರದಿಂದ ಬಾಹ್ಯ ಮತ್ತು ಆಂತರಿಕವಾಗಿ ಪೂಜಿಸುವುದರಿಂದ ಮನುಷ್ಯರು ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆಯೋ ॥2॥
(ಶ್ಲೋಕ-3)
ಮೂಲಮ್
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ ।
ಕಿಂ ಜಪನ್ ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ ॥
ಅನುವಾದ
ಸಮಸ್ತ ಧರ್ಮಗಳಲ್ಲಿ ಪೂರ್ವೋಕ್ತ ಲಕ್ಷಣಗಳಿಂದ ಕೂಡಿದ ಯಾವ ಧರ್ಮವನ್ನು ನೀವು ಪರಮ ಶ್ರೇಷ್ಠವೆಂದು ಭಾವಿಸುವಿರೋ? ಹಾಗೂ ಯಾರನ್ನು ಜಪಿಸುವುದರಿಂದ ಜನನ ಧರ್ಮವುಳ್ಳ ಜೀವನು ಜನನ-ಮರಣರೂಪೀ ಸಂಸಾರಬಂಧನದಿಂದ ಮುಕ್ತನಾಗಿ ಹೋಗುತ್ತಾನೆ? ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಶ್ರೀಭೀಷ್ಮ ಉವಾಚ
ಮೂಲಮ್
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ ।
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ ॥
ಅನುವಾದ
ಶ್ರೀ ಭೀಷ್ಮರು ಹೇಳಿದರು - ಸ್ಥಾವರ-ಜಂಗಮರೂಪೀ ಜಗತ್ತಿನ ಸ್ವಾಮಿಯೂ, ಬ್ರಹ್ಮಾದಿ ದೇವತೆಗಳ ದೇವನೂ, ಅನಂತನಾದವನೂ ಅರ್ಥಾತ್ ದೇಶ, ಕಾಲ ಮತ್ತು ವಸ್ತುಗಳಲ್ಲಿಯೂ ಸೀಮಿತವಾಗಿಲ್ಲದವನೂ, ಕ್ಷರ-ಅಕ್ಷರಕ್ಕಿಂತ ಶ್ರೇಷ್ಠನಾದ ಪುರುಷೋತ್ತಮನ ಸಹಸ್ರನಾಮಗಳ ಮೂಲಕ ನಿರಂತರ ತತ್ಪರನಾಗಿದ್ದು ಗುಣ-ಸಂಕೀರ್ತನೆ ಮಾಡುವುದರಿಂದ ಪುರುಷನು ಎಲ್ಲಾ ದುಃಖಗಳಿಂದ ಪಾರಾಗಿ ಹೋಗುತ್ತಾನೆ. ॥4॥
(ಶ್ಲೋಕ-5)
ಮೂಲಮ್
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ ।
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ ॥
ಅನುವಾದ
ಹಾಗೂ ಅದೇ ವಿನಾಶರಹಿತ ಪುರುಷನನ್ನು ಎಲ್ಲಾ ಸಮಯದಲ್ಲಿಯೂ ಭಕ್ತಿಯಿಂದ ಪೂಜಿಸುವುದರಿಂದಲೂ, ಆತನ ಧ್ಯಾನ ಮಾಡುವುದರಿಂದಲೂ ಹಾಗೂ ಹಿಂದೆ ಹೇಳಿದ ಪ್ರಕಾರ ಸಹಸ್ರನಾಮಗಳ ಮೂಲಕ ಸ್ತೋತ್ರ ಮತ್ತು ನಮಸ್ಕಾರ ಮಾಡುವುದರಿಂದಲೂ, ಪೂಜೆ ಮಾಡುವವನು ಎಲ್ಲಾ ದುಃಖಗಳಿಂದ ಬಿಡುಗಡೆಹೊಂದುತ್ತಾನೆ. ॥5॥
(ಶ್ಲೋಕ-6)
ಮೂಲಮ್
ಅನಾದಿನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ ।
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ ॥
ಅನುವಾದ
ಆ ಜನನ-ಮರಣಾದಿ ಆರು ಭಾವವಿಕಾರಗಳಿಂದ ಹೊರತಾದವನೂ, ಸರ್ವವ್ಯಾಪಕನೂ, ಸಮಸ್ತ ಲೋಕಗಳ ಮಹೇಶ್ವರನೂ, ಲೋಕಾಧ್ಯಕ್ಷನೂ ಆದ ದೇವನನ್ನು ನಿರಂತರ ಸ್ತುತಿಸುವುದರಿಂದ ಮನುಷ್ಯನು ಎಲ್ಲಾ ದುಃಖಗಳಿಂದ ಪಾರಾಗಿ ಹೋಗುತ್ತಾನೆ. ॥6॥
(ಶ್ಲೋಕ-7)
ಮೂಲಮ್
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ ।
ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಮ್ ॥
ಅನುವಾದ
ಜಗತ್ತಿನ ರಚನೆ ಮಾಡುವ ಬ್ರಹ್ಮನ ಹಾಗೂ ಬ್ರಾಹ್ಮಣರ, ತಪಸ್ಸು ಮತ್ತು ಶ್ರುತಿಗಳ ಹಿತಕಾರಿಯೂ, ಎಲ್ಲಾ ಧರ್ಮಗಳನ್ನು ತಿಳಿದವನೂ, ಪ್ರಾಣಿಗಳ ಕೀರ್ತಿಯನ್ನು (ಅವುಗಳಲ್ಲಿ ತನ್ನ ಶಕ್ತಿಯಿಂದ ಪ್ರವೇಶಿಸಿ) ವೃದ್ಧಿಪಡಿಸುವವನೂ, ಸಮಸ್ತ ಲೋಕಗಳ ಸ್ವಾಮಿಯೂ, ಸಮಸ್ತ ಜೀವಿಗಳ ಉತ್ಪತ್ತಿ ಸ್ಥಾನ ಹಾಗೂ ಜಗತ್ತಿನ ಕಾರಣ ರೂಪೀಯಾದ ಪರಮಾತ್ಮನ ಸ್ತೋತ್ರ ಮಾಡುವುದರಿಂದ ಮನುಷ್ಯನು ಎಲ್ಲಾ ದುಃಖಗಳಿಂದ ಬಿಡುಗಡೆಯಾಗುತ್ತಾನೆ. ॥7॥
(ಶ್ಲೋಕ-8)
ಮೂಲಮ್
ಏಷ ಮೇ ಸರ್ವಧರ್ಮಾಣಾಂ ಧರ್ಮೋಽಧಿಕತಮೋ ಮತಃ ।
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ ॥
ಅನುವಾದ
ಯಾವ ಭಕ್ತನು ತನ್ನ ಹೃದಯ ಕಮಲದಲ್ಲಿ ವಿರಾಜಮಾನನಾಗಿರುವ ಕಮಲ-ನಯನ ಭಗವಾನ್ ಶ್ರೀವಾಸುದೇವನನ್ನು ಭಕ್ತಿ ಪೂರ್ವಕವಾಗಿ ತತ್ಪರತೆಯಿಂದ ಗುಣ ಸಂಕೀರ್ತನರೂಪೀ ಸ್ತುತಿಗಳಿಂದ ಯಾವಾಗಲೂ ಅರ್ಚನೆ ಮಾಡುತ್ತಾನೋ ಆ ವಿಧಿರೂಪೀ ಸಂಪೂರ್ಣ ಧರ್ಮಗಳಲ್ಲಿ ನಾನು ಇದೇ ಧರ್ಮವನ್ನು ಎಲ್ಲಕ್ಕಿಂತ ದೊಡ್ಡದೆಂದು ಭಾವಿಸುತ್ತೇನೆ. ॥8॥
(ಶ್ಲೋಕ-9)
ಮೂಲಮ್
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ ।
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ॥
ಅನುವಾದ
ಯಾವ ದೇವನು ಪರಮ ತೇಜನೋ, ಪರಮ ತಪವೋ, ಪರಮ ಬ್ರಹ್ಮ ಮತ್ತು ಪರಮ ಪರಾಯಣನೋ, ಅವನೇ ಸಮಸ್ತ ಪ್ರಾಣಿಗಳಿಗೆ ಪರಮ ಗತಿಯಾಗಿದ್ದಾನೆ. ॥9॥
(ಶ್ಲೋಕ-10)
ಮೂಲಮ್
ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಳಮ್ ।
ದೈವತಂ ದೇವತಾನಾಂ ಚ ಭೂತಾನಾಂ ಯೋಽವ್ಯಯಃ ಪಿತಾ ॥
(ಶ್ಲೋಕ-11)
ಮೂಲಮ್
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ ।
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ ॥
(ಶ್ಲೋಕ-12)
ಮೂಲಮ್
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ ।
ವಿಷ್ಣೋರ್ನಾಮಸಹಸ್ರಂ ಮೇ ಶೃಣು ಪಾಪಭಯಾಪಹಮ್ ॥
ಅನುವಾದ
ಓ ಪೃಥ್ವೀಪತಿಯೇ! ಯಾರು ಪವಿತ್ರಗೊಳಿಸುವ ತೀರ್ಥಾದಿಗಳಲ್ಲಿ ಪರಮ ಪವಿತ್ರನಾಗಿದ್ದಾನೋ, ಮಂಗಳಗಳಿಗೆ ಮಂಗಳಪ್ರದನೋ, ದೇವತೆಗಳಿಗೆ ದೇವನೋ, ಯಾರು ಭೂತಪ್ರಾಣಿಗಳಿಗೆ ಅವಿನಾಶಿಯಾದ ತಂದೆಯೋ, ಕಲ್ಪದ ಆದಿಯಲ್ಲಿ ಯಾರಿಂದ ಸಂಪೂರ್ಣ ಭೂತಗಳು ಉತ್ಪತ್ತಿಯಾಗುತ್ತವೆಯೋ ಮತ್ತು ಪುನಃ ಯುಗದ ನಾಶವಾದಾಗ ಮಹಾಪ್ರಳಯದಲ್ಲಿ ಯಾರಲ್ಲಿ ಅವು ವಿಲೀನವಾಗಿ ಹೋಗುತ್ತವೆಯೋ, ಆ ಲೋಕ ಪ್ರಧಾನ, ಜಗದೊಡೆಯ ಭಗವಾನ್ ಶ್ರೀವಿಷ್ಣುವಿನ ಪಾಪ ಮತ್ತು ಸಂಸಾರಭಯವನ್ನು ಹೋಗಲಾಡಿಸುವಂತಹ ಸಾವಿರ ನಾಮಗಳನ್ನು ಹೇಳುತ್ತೇನೆ ಕೇಳು. ॥10-12॥
(ಶ್ಲೋಕ-13)
ಮೂಲಮ್
ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ ।
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ ॥
ಅನುವಾದ
ಯಾವ ನಾಮಗಳು ಗುಣಗಳು ಕಾರಣ ಪ್ರವೃತ್ತವಾಗಿವೆಯೋ, ಅವುಗಳಲ್ಲಿ ಯಾವ-ಯಾವುವು ಪ್ರಸಿದ್ಧವಾಗಿವೆಯೋ ಮತ್ತು ಮಂತ್ರದ್ರಷ್ಟರಾದ ಮುನಿಗಳ ಮೂಲಕ ಯಾವುವು ಎಲ್ಲೆಲ್ಲಿಯೂ ಭಗವತ್ಕಥೆಗಳಲ್ಲಿ ಹಾಡಲ್ಪಡುತ್ತವೆಯೋ, ಆ ಅಚಿಂತ್ಯ-ಪ್ರಭಾವಶಾಲೀ ಮಹಾತ್ಮನ ಆ ಸಮಸ್ತ ನಾಮಗಳನ್ನು ಪುರುಷಾರ್ಥ-ಸಿದ್ಧಿಗೋಸ್ಕರವಾಗಿ ವರ್ಣನೆ ಮಾಡುತ್ತೇನೆ ॥13॥
ಮೂಲಮ್
ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ ।
ಛಂದೋಽನುಷ್ಟುಪ್ತಥಾ ದೇವೋ ಭಗವಾನ್ ದೇವಕೀಸುತಃ ॥
ಅಮೃತಾಂಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನಃ ।
ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ ॥
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ ।
ಅನೇಕರೂಪದೈತ್ಯಾಂತಂ ನಮಾಮಿ ಪುರುಷೋತ್ತಮಮ್ ॥
ಅನುವಾದ
ಅಸ್ಯ ಶ್ರೀ ವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಮಹಾಮಂತ್ರಸ್ಯ । ಶ್ರೀವೇದವ್ಯಾಸೋ ಭಗವಾನ್ ಋಷಿಃ । ಅನುಷ್ಟುಪ್ ಛಂದಃ । ಶ್ರೀ ಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ । ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ । ದೇವಕೀನಂದನಃ ಸ್ರಷ್ಟೇತಿ ಶಕ್ತಿಃ । ಉದ್ಭವಃ ಕ್ಷೋಭಣೋ ದೇವ ಇತಿ ಪರಮೋ ಮಂತ್ರಃ । ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ । ಶಾರ್ಙ್ಗಧನ್ವಾ ಗದಾಧರ ಇತ್ಯಸ್ತ್ರಮ್ । ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಮ್ । ತ್ರಿಸಾಮಾ ಸಾಮಗಃ ಸಾಮೇತಿ ಕವಚಮ್ । ಆನಂದಂ ಪರಬ್ರಹ್ಮೇತಿ ಯೋನಿಃ । ಋತುಸ್ಸುದರ್ಶನಃ ಕಾಲ ಇತಿ ದಿಗ್ಬಂಧಃ । ಶ್ರೀವಿಶ್ವರೂಪ ಇತಿ ಧ್ಯಾನಮ್ । ಶ್ರೀಮಹಾವಿಷ್ಣುಪ್ರೀತ್ಯರ್ಥೇ ಸಹಸ್ರನಾಮ ಜಪೇ ವಿನಿಯೋಗಃ ॥
ಮೂಲಮ್ (ವಾಚನಮ್)
ಅಥ ಧ್ಯಾನಮ್
ಮೂಲಮ್
ಕ್ಷೀರೋದನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇ ಮೌಕ್ತಿಕಾನಾಂ ।
ಮಾಲಾಕ್ಲೃಪ್ತಾಸನಸ್ಥ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ ।
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷ ವರ್ಷೈಃ ।
ಆನಂದೀ ನಃ ಪುನೀಯಾದರಿ ನಳಿನ ಗದಾ ಶಂಖಪಾಣಿರ್ಮುಕುಂದಃ ॥
ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರಸೂರ್ಯೌ ಚ ನೇತ್ರೇ ।
ಕರ್ಣಾವಾಶಾಶ್ಶಿರೋದ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ
ಅಂತಃಸ್ಥಂ ಯಸ್ಯ ವಿಶ್ವಂ ಸುರನರಖಗಗೋಭೋಗಿಗಂಧರ್ವದೈತ್ಯೈಃ ।
ಚಿತ್ರಂ ರಂರಮ್ಯತೇ ತಂ ತ್ರಿಭುವನವಪುಷಂ ವಿಷ್ಣುಮೀಶಂ ನಮಾಮಿ ॥
ಸೂಚನಾ
॥ ಓಂ ನಮೋ ಭಗವತೇ ವಾಸುದೇವಾಯ ॥
ಮೂಲಮ್
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ ।
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ॥
ಮೇಘಶ್ಯಾಮಂ ಪೀತಕೌಶೇಯವಾಸಂ ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಮ್ ।
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ ವಿಷ್ಣುಂ ವಂದೇ ಸರ್ವಲೋಕೈಕನಾಥಮ್ ॥
ನಮಃ ಸಮಸ್ತಭೂತಾನಾಮಾದಿಭೂತಾಯ ಭೂಭೃತೇ ।
ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣವೇ ॥
ಸಶಂಖಚಕ್ರಂ ಸಕಿರೀಟಕುಂಡಲಂ ಸಪೀತವಸಂ ಸರಸೀರುಹೇಕ್ಷಣಮ್ ।
ಸಹಾರವಕ್ಷಸ್ಸ್ಥಲ ಕೌಸ್ತುಭಶ್ರಿಯಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ ॥
ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ ।
ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ ॥
ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತವಕ್ಷಸಮ್ ।
ರುಕ್ಮಿಣೀಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ ॥
(ಶ್ಲೋಕ-14)
ಮೂಲಮ್
ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ ।
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ॥
ಅನುವಾದ
ಓಂ ಸಚ್ಚಿದಾನಂದ ಸ್ವರೂಪೀ, 1 ವಿಶ್ವಮ್-ಸಮಸ್ತ ಜಗತ್ತಿನ ಕಾರಣ ರೂಪೀ, 2 ವಿಷ್ಣುಃ-ಸರ್ವವ್ಯಾಪೀ, 3 ವಷಟ್ಕಾರಃ- ಯಾರ ಉದ್ದೇಶದಿಂದ ಯಜ್ಞದಲ್ಲಿ ವಷಟ್ಕ್ರಿಯೆ ನಡೆಯುವುದೋ, ಅಂತಹ ಯಜ್ಞಸ್ವರೂಪೀ, 4 ಭೂತಭವ್ಯಭವತ್ಪ್ರಭುಃ- ಭೂತ, ಭವಿಷ್ಯತ್ ಮತ್ತು ವರ್ತಮಾನಗಳ ಸ್ವಾಮಿಯು, 5 ಭೂತಕೃತ್-ರಜೋಗುಣವನ್ನು ಆಶ್ರಯಿಸಿ ಬ್ರಹ್ಮನ ರೂಪದಿಂದ ಸಂಪೂರ್ಣ ಭೂತಗಳ ರಚನೆ ಮಾಡುವವನು, 6 ಭೂತಭೃತ್-ಸತ್ತ್ವಗುಣದ ಆಶ್ರಯ ಪಡೆದು ಇಡೀ ಜೀವರಾಶಿಗಳ ಪಾಲನೆ - ಪೋಷಣೆ ಮಾಡುವವನು, 7 ಭಾವಃ-ನಿತ್ಯಸ್ವರೂಪನಾಗಿದ್ದರೂ ಸಹ ಸ್ವತಃ ಉಂಟಾಗುವವನು, 8 ಭೂತಾತ್ಮಾ-ಸಂಪೂರ್ಣ ಜೀವಿಗಳ ಆತ್ಮ ಅರ್ಥಾತ್ ಅಂತರ್ಯಾಮಿಯು, 9 ಭೂತಭಾವನಃ-ಜೀವಿಗಳನ್ನು ಉತ್ಪತ್ತಿ ಮತ್ತು ವೃದ್ಧಿಮಾಡುವವನು, ॥14॥
(ಶ್ಲೋಕ-15)
ಮೂಲಮ್
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ ।
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ ॥
ಅನುವಾದ
10 ಪೂತಾತ್ಮಾ-ಪವಿತ್ರಾತ್ಮನೂ, 11 ಪರಮಾತ್ಮಾ-ಪರಮಶ್ರೇಷ್ಠ ನಿತ್ಯಶುದ್ಧ-ಬುದ್ಧ ಮುಕ್ತ ಸ್ವಭಾವದವನು, 12 ಮುಕ್ತಾನಾಂ ಪರಮಾಗತಿಃ-ಮುಕ್ತ ಪುರುಷರ ಸರ್ವಶ್ರೇಷ್ಠ ಗತಿಸ್ವರೂಪೀ, 13 ಅವ್ಯಯಃ-ಎಂದಿಗೂ ವಿನಾಶವಾಗದೇ ಇರುವವನು, 14 ಪುರುಷಃ-ಪುರ ಅರ್ಥಾತ್ ಶರೀರದಲ್ಲಿ ವಾಸಿಸುವವನು, 15 ಸಾಕ್ಷೀ-ಯಾವ ಆತಂಕವೂ ಇಲ್ಲದೆ ಎಲ್ಲವನ್ನೂ ನೋಡುವವನು, 16 ಕ್ಷೇತ್ರಜ್ಞಃ-ಕ್ಷೇತ್ರ ಅರ್ಥಾತ್ ಸಮಸ್ತ ಪ್ರಕೃತಿ ರೂಪೀ ಶರೀರವನ್ನು ಪೂರ್ಣವಾಗಿ ತಿಳಿದವನು, 17 ಅಕ್ಷರಃ-ಎಂದಿಗೂ ಕ್ಷೀಣವಾಗದಿರುವವನು, ॥15॥
(ಶ್ಲೋಕ-16)
ಮೂಲಮ್
ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ ।
ನಾರಸಿಂಹವಪುಃ ಶ್ರೀಮಾನ್ಕೇಶವಃ ಪುರುಷೋತ್ತಮಃ ॥
ಅನುವಾದ
18 ಯೋಗಃ-ಮನಸ್ಸಹಿತ ಸಂಪೂರ್ಣ ಜ್ಞಾನೇಂದ್ರಿಯಗಳ ನಿರೋಧ ರೂಪೀ ಯೋಗದಿಂದ ಪ್ರಾಪ್ತಿಯಾಗುವವನು, 19 ಯೋಗವಿದಾಂ ನೇತಾ- ಯೋಗವನ್ನು ತಿಳಿದ ಭಕ್ತರ ಯೋಗಕ್ಷೇಮಾದಿಗಳನ್ನು ನಿರ್ವಹಿಸುವುದರಲ್ಲಿ ಮುಂದಾಗಿರುವವನು, 20 ಪ್ರಧಾನಪುರುಷೇಶ್ವರಃ- ಪ್ರಕೃತಿ ಮತ್ತು ಪುರುಷರ ಒಡೆಯನು, 21 ನಾರಸಿಂಹವಪುಃ- ನರಸಿಂಹ ರೂಪಧಾರಿ, 22 ಶ್ರೀಮಾನ್- ವಕ್ಷಸ್ಥಳದಲ್ಲಿ ಸದಾ ಶ್ರೀಯನ್ನು ಧರಿಸಿರುವವನು, 23 ಕೇಶವಃ- (ಕ) ಬ್ರಹ್ಮನ, (ಅ) ವಿಷ್ಣು ಮತ್ತು (ಈಶ) ಮಹಾದೇವ-ಈ ಪ್ರಕಾರ ತ್ರಿಮೂರ್ತಿಸ್ವರೂಪೀ, 24 ಪುರುಷೋತ್ತಮಃ-ಕ್ಷರ ಮತ್ತು ಅಕ್ಷರ ಇವೆರಡಕ್ಕಿಂತಲೂ ಸರ್ವೋತ್ತಮನು, ॥16॥
(ಶ್ಲೋಕ-17)
ಮೂಲಮ್
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ ।
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ ॥
ಅನುವಾದ
- ಸರ್ವಃ - ಅಸತ್ ಮತ್ತು ಸತ್-ಎಲ್ಲದರ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯದ ಸ್ಥಾನವಾಗಿರುವ, 26 ಶರ್ವಃ-ಪ್ರಳಯಕಾಲದಲ್ಲಿ ಸಮಸ್ತ ಪ್ರಜೆಗಳನ್ನು ಸಂಹಾರಮಾಡುವವನು, 27 ಶಿವಃ-ಮೂರು ಗುಣಗಳಿಂದಲೂ ಶ್ರೇಷ್ಠನಾದ ಕಲ್ಯಾಣ ಸ್ವರೂಪೀ, 28 ಸ್ಥಾಣುಃ-ಸ್ಥಿರನು, 29 ಭೂತಾದಿಃ- ಭೂತಗಳಿಗೆ ಆದಿಕಾರಣನು, 30 ನಿಧಿರವ್ಯಯಃ-ಪ್ರಳಯಕಾಲದಲ್ಲಿ ಎಲ್ಲಾ ಪ್ರಾಣಿಗಳೂ ಲೀನವಾಗುವ ಅವಿನಾಶೀ ಸ್ಥಾನರೂಪೀ, 31 ಸಂಭವಃ-ತನ್ನ ಇಚ್ಛೆಯಿಂದ ಪ್ರಕಟವಾಗುವವನು, 32 ಭಾವನಃ-ಸಮಸ್ತ ಭೋಕ್ತರ ಫಲಗಳನ್ನುಂಟು ಮಾಡುವವನು, 33 ಭರ್ತಾ-ಎಲ್ಲರ ಪಾಲನೆ-ಪೋಷಣೆ ಮಾಡುವವನು, 34 ಪ್ರಭವಃ-ಸರ್ವೋತ್ಕೃಷ್ಣ (ದಿವ್ಯ) ಜನ್ಮವುಳ್ಳವನು, 35 ಪ್ರಭುಃ-ಎಲ್ಲರ ಒಡೆಯನು, 36 ಈಶ್ವರಃ-ಐಶ್ವರ್ಯವುಳ್ಳವನು, ॥17॥
(ಶ್ಲೋಕ-18)
ಮೂಲಮ್
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ ।
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ ॥
ಅನುವಾದ
37 ಸ್ವಯಂಭೂಃ-ಸ್ವತಃ ಉತ್ಪತ್ತಿಯಾಗುವವನು, 38 ಶಂಭುಃ-ಭಕ್ತರಿಗಾಗಿ ಸುಖವನ್ನು ಉಂಟುಮಾಡುವವನು, 39 ಆದಿತ್ಯಃ-ದ್ವಾದಶಾದಿತ್ಯರಲ್ಲಿ ವಿಷ್ಣು ಎಂಬ ಆದಿತ್ಯನು, 40 ಪುಷ್ಕರಾಕ್ಷಃ-ಕಮಲಗಳಂತೆ ಕಣ್ಣುಗಳುಳ್ಳವನು, 41 ಮಹಾಸ್ವನಃ- ವೇದರೂಪೀ ಅತ್ಯಂತ ಮಹಾನ್ ಘೋಷವುಳ್ಳವನು, 42 ಅನಾದಿ ನಿಧನಃ- ಜನನ-ಮರಣ ರಹಿತನು, 43 ಧಾತಾ-ವಿಶ್ವವನ್ನು ಧರಿಸಿಕೊಂಡಿರುವವನು, 44 ವಿಧಾತಾ-ಕರ್ಮ ಮತ್ತು ಅವುಗಳ ಫಲಗಳನ್ನು ರಚಿಸುವವನು, 45 ಧಾತುರುತ್ತಮಃ- ಕಾರ್ಯಕಾರಣ ರೂಪೀ ಸಂಪೂರ್ಣ ಜಗತ್ತನ್ನು ಧರಿಸಿರುವ ಹಾಗೂ ಸರ್ವಶ್ರೇಷ್ಠನು, ॥18॥
(ಶ್ಲೋಕ-19)
ಮೂಲಮ್
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಽಮರಪ್ರಭುಃ ।
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ ॥
ಅನುವಾದ
46 ಅಪ್ರಮೇಯಃ- ಪ್ರಮಾಣಾದಿಗಳಿಂದ ಅರಿಯಲು ಸಾಧ್ಯವಿಲ್ಲದವನು, 47 ಹೃಷಿಕೇಶಃ- ಇಂದ್ರಿಯಗಳ ಒಡೆಯನು, 48 ಪದ್ಮನಾಭಃ- ಜಗತ್ತಿನ ಕಾರಣರೂಪೀ ಕಮಲಕ್ಕೆ ತನ್ನ ನಾಭಿಯಲ್ಲಿ ಸ್ಥಳವಿತ್ತಿರುವವನು, 49 ಅಮರಪ್ರಭುಃ- ದೇವತೆಗಳಿಗೆ ಒಡೆಯನು, 50 ವಿಶ್ವಕರ್ಮಾ- ಇಡೀ ಜಗತ್ತಿನ ರಚನೆಮಾಡುವವನು, 51 ಮನುಃ- ಪ್ರಜಾಪತಿ ಮನುರೂಪೀ, 52 ತ್ವಷ್ಟಾ- ಸಂಹಾರ ಕಾಲದಲ್ಲಿ ಎಲ್ಲ ಪ್ರಾಣಿಗಳನ್ನು ಕ್ಷೀಣಗೊಳಿಸುವವನು, 53 ಸ್ಥವಿಷ್ಠಃ- ಅತ್ಯಂತ ಸ್ಥೂಲನು, 54 ಸ್ಥವಿರೋ ಧ್ರುವಃ- ಅತಿ ಪ್ರಾಚೀನ ಮತ್ತು ಅತ್ಯಂತ ಸ್ಥಿರನಾದವನು, ॥19॥
(ಶ್ಲೋಕ-20)
ಮೂಲಮ್
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ ।
ಪ್ರಭೂತಸಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ ॥
ಅನುವಾದ
55 ಅಗ್ರಾಹ್ಯಃ-ಮನಸ್ಸಿನಿಂದ ಗ್ರಹಿಸಲು ಸಾಧ್ಯವಿಲ್ಲದವನು, 56 ಶಾಶ್ವತಃ-ಎಲ್ಲಾ ಕಾಲದಲ್ಲಿಯೂ ಸ್ಥಿತನಾಗಿರುವವನು, 57 ಕೃಷ್ಣಃ-ಎಲ್ಲರ ಮನಸ್ಸನ್ನೂ ತನ್ನ ಕಡೆಗೆ ಬಲವಂತವಾಗಿ ಆಕರ್ಷಿಸಿಕೊಳ್ಳುವ ಪರಮಾನಂದ ಸ್ವರೂಪೀ, 58 ಲೋಹಿತಾಕ್ಷಃ- ಕೆಂಪಾದ ಕಣ್ಣುಗಳುಳ್ಳವನು, 59 ಪ್ರತರ್ದನಃ- ಪ್ರಳಯ ಕಾಲದಲ್ಲಿ ಜೀವಿಗಳನ್ನು ಸಂಹಾರ ಮಾಡುವವನು, 60 ಪ್ರಭೂತಃ- ಜ್ಞಾನ, ಐಶ್ವರ್ಯ ಮುಂತಾದ ಗುಣಗಳಿಂದ ಸಂಪನ್ನನಾದವನು. 61 ತ್ರಿಕಕುಬ್ಧಾಮ- ಮೇಲೆ-ಕೆಳಗೆ ಮತ್ತು ಮಧ್ಯ ಭೇದಗಳುಳ್ಳ ಮೂರು ದಿಕ್ಕೂಗಳ ಆಶ್ರಯರೂಪೀ, 62 ಪವಿತ್ರಮ್- ಎಲ್ಲವನ್ನೂ ಪವಿತ್ರ ಮಾಡುವವನು, 63 ಮಂಗಲಂ ಪರಮ್- ಪರಮ ಮಂಗಳ ಸ್ವರೂಪನು, ॥20॥
(ಶ್ಲೋಕ-21)
ಮೂಲಮ್
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ ।
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ ॥
ಅನುವಾದ
64 ಈಶಾನಃ-ಸರ್ವಭೂತಗಳ ನಿಯಂತ್ರಕನು, 65 ಪ್ರಾಣದಃ-ಎಲ್ಲರ ಪ್ರಾಣ ಸಂಶೋಧನೆ ಮಾಡುವವನು, 66 ಪ್ರಾಣಃ- ಎಲ್ಲರನ್ನೂ ಜೀವಂತವಾಗಿಡುವ ಪ್ರಾಣಸ್ವರೂಪೀ, 67 ಜ್ಯೇಷ್ಠಃ-ಎಲ್ಲಕ್ಕೂ ಕಾರಣನಾದ್ದರಿಂದ ಎಲ್ಲರಿಗಿಂತ ಹಿರಿಯ, 68 ಶ್ರೇಷ್ಠಃ- ಎಲ್ಲದರಲ್ಲಿಯೂ ಉತ್ಕೃಷ್ಟನಾದ್ದರಿಂದ ಪರಮಶ್ರೇಷ್ಠನು, 69 ಪ್ರಜಾಪತಿಃ- ಈಶ್ವರ ರೂಪದಿಂದ ಇಡೀ ಪ್ರಜಾಕೋಟಿಗಳ ಯಜಮಾನನು, 70 ಹಿರಣ್ಯಗರ್ಭಃ-ಬ್ರಹ್ಮಾಂಡ ರೂಪೀ ಹಿರಣ್ಮಯ ಅಂಡದೊಳಗೆ ಬ್ರಹ್ಮರೂಪದಿಂದ ವ್ಯಾಪಿಸಿಕೊಂಡಿರುವವನು, 71 ಭೂಗರ್ಭಃ-ಪೃಥ್ವಿಯ ಗರ್ಭದಲ್ಲಿರುವವನು, 72 ಮಾಧವಃ-ಲಕ್ಷ್ಮೀಪತಿಯು, 73 ಮಧುಸೂದನಃ-ಮಧು ಎಂಬ ದೈತ್ಯನನ್ನು ಕೊಂದವನು, ॥21॥
(ಶ್ಲೋಕ-22)
ಮೂಲಮ್
ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ ।
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ ॥
ಅನುವಾದ
74 ಈಶ್ವರಃ-ಸರ್ವಶಕ್ತಿವಂತನಾದವನು, 75 ವಿಕ್ರಮೀ-ಶೌರ್ಯ ವೀರಸಂಪನ್ನನು, 76 ಧನ್ವೀ-ಶಾರ್ಙ್ಗಧನುಸ್ಸನ್ನು ಧರಿಸಿಕೊಂಡಿರುವವನು, 77 ಮೇಧಾವೀ- ಅತಿಶಯವಾದ ಬುದ್ಧಿವಂತನು, 78 ವಿಕ್ರಮಃ- ಗರುಡಪಕ್ಷಿದ್ವಾರಾ ಹೋಗುವವನು, 79 ಕ್ರಮಃ-ಕ್ರಮ ವಿಸ್ತಾರಕ್ಕೆ ಕಾರಣನು, 80 ಅನುತ್ತಮಃ-ಸರ್ವೋತ್ಕೃಷ್ಟನು, 81 ದುರಾಧರ್ಷಃ-ಯಾರಿಂದಲೂ ಸಹ ತಿರಸ್ಕೃತನಾಗಲಾರದವನು, 82 ಕೃತಜ್ಞಃ-ತನ್ನ ನಿಮಿತ್ತವಾಗಿ ಕಿಂಚಿತ್ ತ್ಯಾಗಮಾಡಿದರೂ ಸಹ ಅದನ್ನು ಬಹಳವೆಂದು ಭಾವಿಸುವವ ಅಂದರೆ ಪತ್ರ-ಪುಷ್ಪಾದಿ ಅಲ್ಪ-ಸ್ವಲ್ಪ ವಸ್ತುವನ್ನು ಸಮರ್ಪಿಸುವವನಿಗೂ ಸಹ ಮೋಕ್ಷ ಕೊಡುವವನು, 83 ಕೃತಿಃ-ಪುರುಷ ಪ್ರಯತ್ನದ ಆಧಾರ ರೂಪನು, 84 ಆತ್ಮವಾನ್-ತನ್ನದೇ ಆದ ಮಹಿಮೆಯಲ್ಲಿ ಸ್ಥಿರವಾಗಿರುವವನು, ॥22॥
(ಶ್ಲೋಕ-23)
ಮೂಲಮ್
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ ।
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಃ ಸರ್ವದರ್ಶನಃ ॥
ಅನುವಾದ
85 ಸುರೇಶಃ- ದೇವತೆಗಳ ಒಡೆಯನು, 86 ಶರಣಮ್- ದೀನ-ದುಃಖಿಗಳಿಗೆ ಪರಮಾಶ್ರಯನು, 87 ಶರ್ಮ- ಪರಮಾನಂದ ಸ್ವರೂಪನು, 88 ವಿಶ್ವರೇತಾಃ- ವಿಶ್ವಕ್ಕೆ ಕಾರಣನು, 89 ಪ್ರಜಾಭವಃ- ಸಕಲ ಪ್ರಜೆಗಳನ್ನು ಉತ್ಪತ್ತಿಮಾಡುವವನು, 90 ಅಹಃ- ಪ್ರಕಾಶರೂಪನು, 91 ಸಂವತ್ಸರಃ- ಕಾಲ ರೂಪದಿಂದ ಇರುವವನು, 92 ವ್ಯಾಲಃ- ಸರ್ಪದಂತೆ ಗ್ರಹಿಸಲು ಆಗದಿರುವವನು, 93 ಪ್ರತ್ಯಯಃ- ಉತ್ತಮ ಬುದ್ಧಿಯಿಂದ ತಿಳಿದುಕೊಳ್ಳಲು ಆಗುವಂತಹವನು, 94 ಸರ್ವದರ್ಶನಃ- ಎಲ್ಲವನ್ನೂ ನೋಡುವವನು, ॥23॥
(ಶ್ಲೋಕ-24)
ಮೂಲಮ್
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ ।
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಃಸೃತಃ ॥
ಅನುವಾದ
95 ಅಜಃ-ಜನ್ಮರಹಿತನು, 96 ಸರ್ವೇಶ್ವರಃ-ಸಮಸ್ತ ಈಶ್ವರರಿಗೂ ಈಶ್ವರನು, 97 ಸಿದ್ಧಃ-ನಿತ್ಯಸಿದ್ಧನು, 98 ಸಿದ್ಧಿಃ-ಎಲ್ಲಕ್ಕೂ ಫಲರೂಪನು, 99 ಸರ್ವಾದಿಃ-ಸಕಲ ಜೀವಿಗಳಿಗೂ ಆದಿ ಕಾರಣನು, 100 ಅಚ್ಯುತಃ-ತನ್ನ ಸ್ವರೂಪಸ್ಥಿತಿಯಿಂದ ಎಂದಿಗೂ ತ್ರಿಕಾಲಗಳಲ್ಲಿಯೂ ಸಹ ಚ್ಯುತನಾಗದವನು, 101 ವೃಷಾಕಪಿಃ-ಧರ್ಮ ಮತ್ತು ವರಾಹರೂಪನು, 102 ಅಮೇಯಾತ್ಮಾ- ಅಪ್ರಮೇಯ ಸ್ವರೂಪನು 103 ಸರ್ವಯೋಗವಿನಿಃಸೃತಃ- ನಾನಾ ಪ್ರಕಾರಗಳ ಶಾಸ್ತ್ರೋಕ್ತ ಸಾಧನೆಗಳಿಂದ ತಿಳಿದುಕೊಳ್ಳಲು ಯೋಗ್ಯನು, ॥24॥
(ಶ್ಲೋಕ-25)
ಮೂಲಮ್
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಮ್ಮಿತಃ ಸಮಃ ।
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ ॥
ಅನುವಾದ
104 ವಸುಃ- ಎಲ್ಲಾ ಜೀವಿಗಳ ವಾಸಸ್ಥಾನನು, 105 ವಸುಮನಾಃ- ಉದಾರ ಮನಸ್ಸುಳ್ಳವನು, 106 ಸತ್ಯಃ- ಸತ್ಯರೂಪನು, 107 ಸಮಾತ್ಮಾ- ಎಲ್ಲಾ ಪ್ರಾಣಿಗಳಲ್ಲಿಯೂ ಒಂದೇ ಆತ್ಮರೂಪದಿಂದ ವಿರಾಜಿಸುತ್ತಿರುವವನು, 108 ಸಮ್ಮಿತಃ- ಸಮಸ್ತ ಪದಾರ್ಥಗಳಿಂದ ಅಳತೆಗೆ ಒಳಪಡದವನು, 109 ಸಮಃ- ಎಲ್ಲಾ ಸಮಯದಲ್ಲಿಯೂ ಸಕಲ ವಿಕಾರಗಳಿಂದ ರಹಿತನಾದವನು, 110 ಅಮೋಘಃ- ಭಕ್ತರು ಪೂಜೆ, ಸ್ತೋತ್ರ ಅಥವಾ ಸ್ಮರಣೆ ಮಾಡಿದರೆ ಅವುಗಳನ್ನು ವ್ಯರ್ಥಮಾಡದೆ ಪೂರ್ಣರೂಪದಿಂದ ಅವುಗಳ ಫಲವನ್ನು ಕೊಡುವವನು, 111 ಪುಂಡರೀಕಾಕ್ಷಃ - ಕಮಲದಂತೆ ಕಣ್ಣುಗಳುಳ್ಳವನು, 112 ವೃಷಕರ್ಮಾ- ಧರ್ಮಮಯವಾದ ಕರ್ಮಗಳನ್ನು ಮಾಡುವವನು, 113 ವೃಷಾಕೃತಿಃ- ಧರ್ಮ ಸ್ಥಾಪನೆ ಮಾಡುವುದಕ್ಕಾಗಿ ವಿಗ್ರಹವನ್ನು ಧರಿಸುವವನು, ॥25॥
(ಶ್ಲೋಕ-26)
ಮೂಲಮ್
ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ ।
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ ॥
ಅನುವಾದ
114 ರುದ್ರಃ- ದುಃಖ ಅಥವಾ ದುಃಖದ ಕಾರಣಗಳನ್ನು ದೂರ ಓಡಿಸುವವನು, 115 ಬಹುಶಿರಾಃ- ಅನೇಕ ತಲೆಗಳುಳ್ಳವನು, 116 ಬಭ್ರುಃ- ಲೋಕಗಳನ್ನು ಪಾಲಿಸುವವನು, 117 ವಿಶ್ವಯೋನಿಃ- ವಿಶ್ವವನ್ನು ಉತ್ಪತ್ತಿಮಾಡುವವನು, 118 ಶುಚಿಶ್ರವಾಃ- ಪವಿತ್ರವಾದ ಕೀರ್ತಿಯುಳ್ಳವನು, 119 ಅಮೃತಃ- ಎಂದಿಗೂ ಸಾಯದ ಅಮರನು, 120 ಶಾಶ್ವತ ಸ್ಥಾಣುಃ- ನಿತ್ಯ ಸದಾ ಏಕ ರಸದಿಂದ ಇರುವವನು ಹಾಗೂ ಸ್ಥಿರವುಳ್ಳವನು, 121 ವರಾರೋಹಃ- ಆರೂಢನಾಗಲು ಪರಮೋತ್ತಮವಾದ ಅಪುನರಾವೃತ್ತಿ ಸ್ಥಾನರೂಪನು, 122 ಮಹಾತಪಾಃ- ಪ್ರತಾಪ (ಐಶ್ವರ್ಯ) ರೂಪೀ ಮಹಾನ್ ತಪಸ್ವಿಯಾದವನು, ॥26॥
(ಶ್ಲೋಕ-27)
ಮೂಲಮ್
ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ ।
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ ॥
ಅನುವಾದ
123 ಸರ್ವಗಃ- ಕಾರಣ ರೂಪದಿಂದ ಎಲ್ಲೆಲ್ಲಿಯೂ ವ್ಯಾಪ್ತನಾಗಿರುವವನು 124 ಸರ್ವವಿದ್ಭಾನುಃ- ಎಲ್ಲವನ್ನೂ ಬಲ್ಲವನು ಹಾಗೂ ಪ್ರಕಾಶ ರೂಪನು, 125 ವಿಷ್ವಕ್ಸೇನಃ- ಯುದ್ಧಕ್ಕಾಗಿ ಮಾಡಲ್ಪಟ್ಟ ಸಿದ್ಧತೆಯ ಮಾತ್ರದಿಂದಲೇ ದೈತ್ಯರ ಸೇನೆಯನ್ನು ಚಲ್ಲಾ-ಪಿಲ್ಲಿ ಮಾಡಿಬಿಡುವವನು. 126 ಜನಾರ್ದನಃ- ಭಕ್ತರ ಮೂಲಕ ಅಭ್ಯುದಯ ನಿಃಶ್ರೇಯಸಸ್ವರೂಪೀ ಪರಮ ಪುರುಷಾರ್ಥಕ್ಕಾಗಿ ಪ್ರಾರ್ಥಿಸಲ್ಪಡುವವನು, 127 ವೇದಃ- ವೇದರೂಪನು, 128 ವೇದವಿತ್- ವೇದ ಹಾಗೂ ವೇದದ ಅರ್ಥವನ್ನು ಯಥಾವತ್ ತಿಳಿದವನು, 129 ಅವ್ಯಂಗಃ- ಜ್ಞಾನಾದಿಗಳಿಂದ ಪರಿಪೂರ್ಣ ಅರ್ಥಾತ್ ಯಾವುದೇ ಪ್ರಕಾರದಿಂದಲೂ ಅಪೂರ್ಣನಾಗಿರದೇ, ಸರ್ವಾಂಗಪೂರ್ಣನು, 130 ವೇದಾಂಗಃ- ವೇದರೂಪೀ ಅಂಗಗಳುಳ್ಳವನು, 131 ವೇದವಿತ್- ವೇದಗಳನ್ನು ಬಲ್ಲವನು, 132 ಕವಿಃ- ಸರ್ವಜ್ಞನು, ॥27॥
(ಶ್ಲೋಕ-28)
ಮೂಲಮ್
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ ।
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಪ್ರಶ್ಚತುರ್ಭುಜಃ ॥
ಅನುವಾದ
133 ಲೋಕಾಧ್ಯಕ್ಷಃ-ಸಮಸ್ತ ಲೋಕಗಳ ಅಧಿಪತಿಯು, 134 ಸುರಾಧ್ಯಕ್ಷಃ- ದೇವತೆಗಳ ಅಧ್ಯಕ್ಷನು, 135 ಧರ್ಮಾಧ್ಯಕ್ಷಃ - ಅನುರೂಪವಾದ ಫಲ ಕೊಡುವುದಕ್ಕಾಗಿ ಧರ್ಮ ಮತ್ತು ಅಧರ್ಮಗಳ ನಿರ್ಣಯ ಮಾಡುವವನು, 136 ಕೃತಾಕೃತಃ- ಕೃತ ಅರ್ಥಾತ್ ಕಾರ್ಯರೂಪೀ, ಅಕೃತ ಅರ್ಥಾತ್ ಕಾರಣರೂಪೀ ಎರಡೂ ರೂಪದಿಂದ ಇರುವವನು, 137 ಚತುರಾತ್ಮಾ- ಸೃಷ್ಟಿಯ ಉತ್ಪತ್ತಿ ಇತ್ಯಾದಿಗಾಗಿ ನಾಲ್ಕು ಬೇರೆ ಮೂರ್ತಿಗಳುಳ್ಳವನು, 138 ಚತುರ್ವ್ಯೂಹಃ- ಉತ್ಪತ್ತಿ, ಸ್ಥಿತಿ, ನಾಶ ಮತ್ತು ರಕ್ಷಾರೂಪೀ ನಾಲ್ಕು ವ್ಯೂಹಗಳುಳ್ಳವನು, 139 ಚತುರ್ದಂಷ್ಟ್ರಃ- ನಾಲ್ಕು ದಾಡೆಗಳುಳ್ಳ ನರಸಿಂಹರೂಪನು, 140 ಚತುರ್ಭುಜಃ- ನಾಲ್ಕು ಭುಜಗಳುಳ್ಳ ವೈಕುಂಠವಾಸೀ ಮಹಾವಿಷ್ಣುವು, ॥28॥
(ಶ್ಲೋಕ-29)
ಮೂಲಮ್
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ ।
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ ॥
ಅನುವಾದ
141 ಭ್ರಾಜಿಷ್ಣುಃ- ಏಕರಸ ಪ್ರಕಾಶರೂಪನು, 142 ಭೋಜನಮ್- ಜ್ಞಾನಿಗಳು ಅನುಭವಿಸಲು ಯೋಗ್ಯವಾದ ಅಮೃತಸ್ವರೂಪನು, 143 ಭೋಕ್ತಾ- ಪುರುಷರೂಪದಿಂದ ಭೋಕ್ತನು, 144 ಸಹಿಷ್ಣುಃ- ಸಹಸಶೀಲನು, 145 ಜಗದಾದಿಜಃ- ಜಗತ್ತಿನ ಆದಿಯಲ್ಲಿ ಹಿರಣ್ಯ ಗರ್ಭರೂಪದಿಂದ ಸ್ವತಃ ಉತ್ಪತ್ತಿಯಾಗುವವನು, 146 ಅನಘಃ- ಪಾಪ ರಹಿತನು, 147 ವಿಜಯಃ- ಜ್ಞಾನ ವೈರಾಗ್ಯ ಮತ್ತು ಐಶ್ವರ್ಯ ಮೊದಲಾದ ಗುಣಗಳಲ್ಲಿ ಎಲ್ಲರಿಂದ ಶ್ರೇಷ್ಠನಾದವನು, 148 ಜೇತಾ- ಸ್ವಭಾವದಿಂದ ಸಮಸ್ತ ಜೀವಿಗಳನ್ನು ಗೆಲ್ಲುವವನು, 149 ವಿಶ್ವಯೋನಿಃ-ಪ್ರಕೃತಿ ಸ್ವರೂಪನು, 150 ಪುನರ್ವಸುಃ- ಪುನಃ ಪುನಃ ಶರೀರಗಳಲ್ಲಿ ಆತ್ಮರೂಪದಿಂದ ವಾಸಿಸುವವನು, ॥29॥
(ಶ್ಲೋಕ-30)
ಮೂಲಮ್
ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ ।
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ ॥
ಅನುವಾದ
151 ಉಪೇಂದ್ರಃ - ಇಂದ್ರನಿಗೆ ತಮ್ಮನಾಗಿ ಇರುವವನು, 152 ವಾಮನಃ- ವಾಮನ ರೂಪದಿಂದ ಅವತರಿಸುವವನು, 153 ಪ್ರಾಂಶುಃ- ಮೂರು ಲೋಕಗಳನ್ನೂ ಮೀರಿ ತ್ರಿವಿಕ್ರಮರೂಪದಿಂದ ಬೆಳೆದವನು, 154 ಅಮೋಘಃ- ಸಫಲ ಚೇಷ್ಟೆಯುಳ್ಳವನು, 155 ಶುಚಿಃ- ಸ್ಮರಣೆ, ಸ್ತುತಿ ಮತ್ತು ಪೂಜೆ ಮಾಡುವವರನ್ನು ಪವಿತ್ರ ಮಾಡುವವನು, 156 ಊರ್ಜಿತಃ- ಅತ್ಯಂತ ಬಲಶಾಲಿಯು, 157 ಅತೀಂದ್ರಃ- ಸ್ವಯಂಸಿದ್ಧ ಜ್ಞಾನ-ಐಶ್ವರ್ಯಾದಿಗಳ ಕಾರಣ ಇಂದ್ರನಿಗಿಂತಲೂ ಸಹ ಅತಿ ದೊಡ್ಡವನು, 158 ಸಂಗ್ರಹಃ- ಪ್ರಳಯದ ಸಮಯದಲ್ಲಿ ಎಲ್ಲವನ್ನೂ ತನ್ನಲ್ಲಿ ಅಡಗಿಸಿಕೊಳ್ಳುವವನು, 159 ಸರ್ಗಃ- ಸೃಷ್ಟಿಯ ಕಾರಣ ರೂಪನು, 160 ಧೃತಾತ್ಮಾ- ಜನ್ಮಾದಿಗಳಿಂದ ರಹಿತನಾಗಿ ಸ್ವೇಚ್ಛೆಯಿಂದ ಸ್ವರೂಪವನ್ನು ಧರಿಸುವವನು, 161 ನಿಯಮಃ- ಪ್ರಜೆಗಳನ್ನು ತಮ್ಮ-ತಮ್ಮ ಅಧಿಕಾರಗಳಲ್ಲಿ ನಿಯಮಿಸುವವನು, 162 ಯಮಃ- ಅಂತಃಕರಣದಲ್ಲಿದ್ದುಕೊಂಡು ನಿಯಂತ್ರಿಸುವವನು, ॥30॥
(ಶ್ಲೋಕ-31)
ಮೂಲಮ್
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ ।
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ॥
ಅನುವಾದ
163 ವೇದ್ಯಃ- ಮೋಕ್ಷಾಕಾಂಕ್ಷಿಗಳ ಮೂಲಕ ತಿಳಿಯಲು ಯೋಗ್ಯನು, 164 ವೈದ್ಯಃ- ಸಮಸ್ತ ವಿದ್ಯೆಗಳನ್ನೂ ಅರಿತವನು, 165 ಸದಾಯೋಗೀ- ಯಾವಾಗಲೂ ಯೋಗದಲ್ಲಿ ಸ್ಥಿತನಾಗಿರುವವನು, 166 ವೀರಹಾ- ಧರ್ಮದ ರಕ್ಷಣೆಗಾಗಿ ಅಸುರ ಯೋಧರನ್ನು ಸಂಹಾರ ಮಾಡುವವನು, 167 ಮಾಧವಃ- ವಿದ್ಯೆಯ ಒಡೆಯನು, 168 ಮಧುಃ- ಅಮೃತದಂತೆ ಎಲ್ಲರನ್ನೂ ಪ್ರಸನ್ನಗೊಳಿಸುವವನು, 169 ಅತೀಂದ್ರಿಯಃ- ಇಂದ್ರಿಯಗಳಿಂದ ಸರ್ವಥಾ ಅತೀತನು, 170 ಮಹಾಮಾಯಃ- ಮಾಯಾವಿಗಳ ಮೇಲೆಯೂ ಸಹ ಮಾಯೆಯನ್ನು ಬೀಸುವ ಮಹಾನ್ ಮಾಯಾವಿಯು, 171 ಮಹೋತ್ಸಾಹಃ- ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯಕ್ಕಾಗಿ ತತ್ಪರನಾಗಿರುವ ಪರಮ ಉತ್ಸಾಹಿಯು, 172 ಮಹಾಬಲಃ- ಮಹಾ ಬಲಶಾಲೀ, ॥31॥
(ಶ್ಲೋಕ-32)
ಮೂಲಮ್
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ ।
ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ ॥
ಅನುವಾದ
173 ಮಹಾಬುದ್ಧಿಃ- ಮಹಾನ್ ಬುದ್ಧಿವಂತನು, 174 ಮಹಾವೀರ್ಯಃ- ಮಹಾನ್ ಪರಾಕ್ರಮೀ, 175 ಮಹಾಶಕ್ತಿಃ- ಮಹಾನ್ ಸಾಮರ್ಥ್ಯವುಳ್ಳವನು, 176 ಮಹಾದ್ಯುತಿಃ- ಮಹಾನ್ ಕಾಂತಿಯುಳ್ಳವನು, 177 ಅನಿರ್ದೇಶ್ಯವಪುಃ- ಅನಿರ್ದೇಶ್ಯ ವಿಗ್ರಹವುಳ್ಳವನು, 178 ಶ್ರೀಮಾನ್- ಐಶ್ವರ್ಯವುಳ್ಳವನು, 179 ಅಮೇಯಾತ್ಮಾ- ಊಹೆಗೆ ನಿಲುಕದಂತಹ ಆತ್ಮರೂಪಿಯು, 180 ಮಹಾದ್ರಿಧೃಕ್- ಅಮೃತ ಮಂಥನ ಮತ್ತು ಗೋರಕ್ಷಣದ ಸಮಯದಲ್ಲಿ ಮಂದರಾಚಲ ಹಾಗೂ ಗೋವರ್ಧನ ಮಹಾನ್ ಪರ್ವತಗಳನ್ನು ಧರಿಸಿದವನು, ॥32॥
(ಶ್ಲೋಕ-33)
ಮೂಲಮ್
ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ ।
ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ ॥
ಅನುವಾದ
181 ಮಹೇಷ್ವಾಸಃ- ಮಹಾನ್ ಧನುಸ್ಸುಳ್ಳವನು, 182 ಮಹೀಭರ್ತಾ- ಪೃಥ್ವಿಯನ್ನು ಧರಿಸಿರುವವನು, 183 ಶ್ರೀನಿವಾಸಃ- ತನ್ನ ವಕ್ಷಸ್ಥಳದಲ್ಲಿ ಶ್ರೀಲಕ್ಷ್ಮೀಗೆ ಆಶ್ರಯಕೊಟ್ಟಿರುವವನು, 184 ಸತಾಂಗತಿಃ- ಸತ್ಪುರುಷರಿಗೆ ಪರಮಾಶ್ರಯನು, 185 ಅನಿರುದ್ಧಃ- ನಿಜವಾದ ಭಕ್ತಿಯಿಲ್ಲದ ಹೊರತು ಯಾರಿಂದಲೂ ತಡೆಯಲ್ಪಡದವನು, 186 ಸುರಾನಂದಃ- ದೇವತೆಗಳಿಗೆ ಆನಂದವನ್ನುಂಟು ಮಾಡುವವನು, 187 ಗೋವಿಂದಃ- ವೇದವಾಣಿಗಳ ಮೂಲಕ ಪ್ರಾಪ್ತಿಯಾಗುವವನು, 188 ಗೋವಿದಾಂಪತಿಃ- ವೇದವಾಣಿಯನ್ನು ಬಲ್ಲವರಿಗೆ ಒಡೆಯನು, ॥33॥
(ಶ್ಲೋಕ-34)
ಮೂಲಮ್
ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ ।
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ ॥
ಅನುವಾದ
189 ಮರೀಚಿಃ- ತೇಜಸ್ವಿಗಳಿಗೂ ಸಹ ಪರಮ ತೇಜರೂಪನು, 190 ದಮನಃ- ಅಪರಾಧ ಮಾಡುವ ಪ್ರಜೆಗಳನ್ನು ಯಮನೇ ಆದಿರೂಪದಿಂದ ದಮನ ಮಾಡುವವನು, 191 ಹಂಸಃ- ಪಿತಾಮಹ ಬ್ರಹ್ಮನಿಗೆ ವೇದದ ಜ್ಞಾನವನ್ನು ಉಂಟು ಮಾಡಿಸುವುದಕ್ಕಾಗಿ ಹಂಸ ರೂಪವನ್ನು ಧರಿಸಿದವನು, 192 ಸುಪರ್ಣಃ- ಸುಂದರವಾದ ರೆಕ್ಕೆಗಳುಳ್ಳ ಗರುಡ ಸ್ವರೂಪನು, 193 ಭುಜಗೋತ್ತಮಃ- ಸರ್ಪಗಳಲ್ಲಿ ಶ್ರೇಷ್ಠ ಶೇಷನಾಗರೂಪನು, 194 ಹಿರಣ್ಯನಾಭಃ- ಹಿತಕಾರೀ ಮತ್ತು ರಮಣೀಯ ನಾಭಿಯುಳ್ಳವನು, 195 ಸುತಪಾಃ- ಬದರಿಕಾಶ್ರಮದಲ್ಲಿ ನರ-ನಾರಾಯಣ ರೂಪದಿಂದ ಸುಂದರ ತಪಸ್ಸು ಮಾಡುವವನು, 196 ಪದ್ಮನಾಭಃ- ಕಮಲದಂತೆ ಸುಂದರವಾದ ನಾಭಿಯುಳ್ಳವನು, 197 ಪ್ರಜಾಪತಿಃ- ಪ್ರಜೆಗಳೆಲ್ಲರನ್ನು ಪಾಲಿಸುವವನು ॥34॥
(ಶ್ಲೋಕ-35)
ಮೂಲಮ್
ಅಮೃತ್ಯುಃ ಸರ್ವದೃಕ್ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ ।
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ ॥
ಅನುವಾದ
198 ಅಮೃತ್ಯುಃ- ಮರಣ ರಹಿತನಾದವನು, 199 ಸರ್ವದೃಕ್- ಸಮಸ್ತವನ್ನೂ ನೋಡುವವನು, 200 ಸಿಂಹಃ- ದುಷ್ಟರನ್ನು ನಾಶಮಾಡುವವನು, 201 ಸಂಧಾತಾ- ಪುರುಷರನ್ನು ಅವರವರ ಕರ್ಮಗಳ ಫಲಗಳೊಡನೆ ಸಂಯುಕ್ತಗೊಳಿಸುವವನು, 202 ಸಂಧಿಯಾನ್- ಎಲ್ಲ ಯಜ್ಞ ಮತ್ತು ತಪಸ್ಸುಗಳ ಫಲಗಳನ್ನು ಭೋಗಿಸುವವನು, 203 ಸ್ಥಿರಃ- ಯಾವಾಗಲೂ ಒಂದೇ ರೀತಿಯಲ್ಲಿರುವವನು, 204 ಅಜಃ- ಭಕ್ತರ ಹೃದಯವನ್ನು ಪ್ರವೇಶಿಸುವವನು ಹಾಗೂ ದುರ್ಗುಣಗಳನ್ನು ಹೋಗಲಾಡಿಸುವವನು, 205 ದುರ್ಮರ್ಷಣಃ- ಯಾರಿಂದಲೂ ಕೂಡ ಸಹಿಸಲಾಗದವನು, 206 ಶಾಸ್ತಾ- ಎಲ್ಲರ ಮೇಲೆಯೂ ಶಾಸನ ಮಾಡುವವನು, 207 ವಿಶ್ರುತಾತ್ಮಾ- ವೇದಶಾಸ್ತ್ರಗಳಲ್ಲಿ ವಿಶೇಷ ರೂಪದಿಂದ ಪ್ರಸಿದ್ಧ ಸ್ವರೂಪವುಳ್ಳವನು, 208 ಸುರಾರಿಹಾ- ದೇವತೆಗಳ ಶತ್ರುಗಳನ್ನು ಸಂಹಾರ ಮಾಡುವವನು, ॥35॥
(ಶ್ಲೋಕ-36)
ಮೂಲಮ್
ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ ।
ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ ॥
ಅನುವಾದ
209 ಗುರುಃ- ಎಲ್ಲಾ ವಿದ್ಯೆಗಳನ್ನು ಉಪದೇಶಮಾಡುವವನು, 210 ಗುರುತಮಃ- ಬ್ರಹ್ಮಾದಿಗಳಿಗೂ ಸಹ ಬ್ರಹ್ಮವಿದ್ಯೆ-ಕರುಣಿಸುವವನು, 211 ಧಾಮ- ಸಂಪೂರ್ಣ ಪ್ರಾಣಿಗಳ ಕಾಮನೆಗಳ ಆಶ್ರಯನು, 212 ಸತ್ಯಃ- ಸತ್ಯ ಸ್ವರೂಪನು, 213 ಸತ್ಯಪರಾಕ್ರಮಃ- ಅಮೋಘ ಪರಾಕ್ರಮಶಾಲಿಯು, 214 ನಿಮಿಷಃ- ಯೋಗ ನಿದ್ರೆಯಿಂದ ಮುಚ್ಚಿದ ಕಣ್ಣುಗಳುಳ್ಳವನು, 215 ಅನಿಮಿಷಃ- ಮತ್ಸ್ಯರೂಪದಿಂದ ಅವತಾರ ತಾಳುವವನು, 216 ಸ್ರಗ್ವೀ- ವೈಜಯಂತೀ ಮಾಲೆಯನ್ನು ಧರಿಸಿರುವವನು, 217 ವಾಚಸ್ಪತಿರುದಾರಧೀಃ- ಸಕಲ ಪದಾರ್ಥಗಳನ್ನೂ ಪ್ರತ್ಯಕ್ಷಗೊಳಿಸುವ ಬುದ್ಧಿಯಿಂದ ಕೂಡಿದ ಸಮಸ್ತ ವಿದ್ಯೆಗಳ ಅಧಿಪತಿಯು, ॥36॥
(ಶ್ಲೋಕ-37)
ಮೂಲಮ್
ಅಗ್ರಣೀರ್ಗ್ರಾಮಣೀಃ ಶ್ರೀಮಾನ್ನ್ಯಾಯೋ ನೇತಾ ಸಮೀರಣಃ ।
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ ॥
ಅನುವಾದ
218 ಅಗ್ರಣೀಃ- ಮುಮುಕ್ಷುಗಳನ್ನು ಉತ್ತಮ ಪದಕ್ಕೆ ಕರೆದೊಯ್ಯುವವನು, 219 ಗ್ರಾಮಣೀಃ- ಜೀವ ಸಮುದಾಯಗಳ ಮುಖಂಡನು, 220 ಶ್ರೀಮಾನ್-ಎಲ್ಲಕ್ಕಿಂತಲೂ ಅತ್ಯಧಿಕ ಕಾಂತಿಯುಳ್ಳವನು, 221 ನ್ಯಾಯಃ- ಪ್ರಮಾಣಗಳಿಗೆ ಆಶ್ರಯಭೂತವಾದ ತರ್ಕದ ಮೂರ್ತಿಯು, 222 ನೇತಾ- ಜಗತ್ ರೂಪೀ ಯಂತ್ರವನ್ನು ನಡೆಸುವವನು, 223 ಸಮೀರಣಃ- ಶ್ವಾಸ ರೂಪದಿಂದ ಪ್ರಾಣಿಗಳಿಂದ ಚೇಷ್ಟೆ ಮಾಡಿಸುವವನು, 224 ಸಹಸ್ರಮೂರ್ಧಾ- ಸಾವಿರಾರು ಶಿರಸ್ಸುಳ್ಳವನು, 225 ವಿಶ್ವಾತ್ಮಾ- ವಿಶ್ವದ ಆತ್ಮನು, 226 ಸಹಸ್ರಾಕ್ಷಃ- ಸಾವಿರಾರು ಕಣ್ಣುಗಳುಳ್ಳವನು, 227 ಸಹಸ್ರಪಾತ್- ಸಾವಿರಾರು ಕಾಲುಗಳುಳ್ಳವನು, ॥37॥
(ಶ್ಲೋಕ-38)
ಮೂಲಮ್
ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ ।
ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ ॥
ಅನುವಾದ
228 ಆವರ್ತನಃ- ಜಗತ್ಚಕ್ರವನ್ನು ನಡೆಸುವ ಸ್ವಭಾವದವನು, 229 ನಿವೃತ್ತಾತ್ಮಾ- ಸಂಸಾರಬಂಧನದಿಂದ ಮುಕ್ತನಾದ ಆತ್ಮಸ್ವರೂಪನು, 230 ಸಂವೃತಃ- ತನ್ನ ಯೋಗಮಾಯೆಯಿಂದ ಮುಚ್ಚಲ್ಪಟ್ಟಿರುವವನು, 231 ಸಂಪ್ರಮರ್ದನಃ- ರುದ್ರನೇ ಆದಿ ಸ್ವರೂಪದಿಂದ ಎಲ್ಲರನ್ನೂ ಸಂಹಾರ ಮಾಡುವವನು, 232 ಅಹಃಸಂವರ್ತಕಃ- ಸೂರ್ಯರೂಪದಿಂದ ದಿನದ ಸಮ್ಯಕ್ ಪ್ರವರ್ತಕನು, 233 ವಹ್ನಿಃ- ಹವಿಸ್ಸನ್ನು ತೆಗೆದುಕೊಂಡು ಹೋಗುವ ಅಗ್ನಿದೇವನು, 234 ಅನಿಲಃ- ಪ್ರಾಣರೂಪದಿಂದ ವಾಯು ಸ್ವರೂಪನಾಗಿರುವವನು, 235 ಧರಣೀಧರಃ- ವರಾಹ ಮತ್ತು ಶೇಷ ರೂಪದಿಂದ ಪೃಥ್ವಿಯನ್ನು ಧರಿಸಿದವನು, ॥38॥
(ಶ್ಲೋಕ-39)
ಮೂಲಮ್
ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ ।
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ ॥
ಅನುವಾದ
236 ಸುಪ್ರಸಾದಃ- ಶಿಶುಪಾಲಾದಿ ಅಪರಾಧಿಗಳ ಮೇಲೆಯೂ ಸಹ ಕೃಪಾ ಪ್ರಸಾದ ಮಾಡುವವನು, 237 ಪ್ರಸನ್ನಾತ್ಮಾ- ಪ್ರಸನ್ನ ಸ್ವಭಾವವುಳ್ಳವನು ಅರ್ಥಾತ್ ಕರುಣೆಯುಳ್ಳವನು, 238 ವಿಶ್ವಧೃಕ್-ವಿಶ್ವವನ್ನು ಧರಿಸಿರುವವನು, 239 ವಿಶ್ವಭುಕ್- ವಿಶ್ವವನ್ನು ಭೋಗಿಸುವವನು ಅರ್ಥಾತ್ ವಿಶ್ವದ ಪಾಲನೆ ಮಾಡುವವನು, 240 ವಿಭುಃ- ವಿವಿಧ ಪ್ರಕಾರಗಳಿಂದ ಪ್ರಕಟನಾಗುವವನು, 241 ಸತ್ಕರ್ತಾ-ಭಕ್ತರನ್ನು ಸತ್ಕರಿಸುವವನು, 242 ಸತ್ಕೃತಃ- ಪೂಜ್ಯರಿಂದಲೂ ಸಹ ಪೂಜಿಸಲ್ಪಡುವವನು, 243 ಸಾಧುಃ- ಭಕ್ತರ ಕಾರ್ಯಗಳನ್ನು ಸಾಧಿಸುವವನು, 244 ಜಹ್ನುಃ- ಸಂಹಾರದ ಸಮಯದಲ್ಲಿ ಜೀವಿಗಳನ್ನು ಲಯ ಮಾಡುವವನು, 245 ನಾರಾಯಣಃ-ಜಲದಲ್ಲಿ ಮಲಗುವವನು, 246 ನರಃ- ಭಕ್ತರನ್ನು ಪರಮಧಾಮಕ್ಕೆ ಕರೆದೊಯ್ಯುವನು, ॥39॥
(ಶ್ಲೋಕ-40)
ಮೂಲಮ್
ಅಸಂಖ್ಯೇಯೋಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ ।
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ ॥
ಅನುವಾದ
247 ಅಸಂಖ್ಯೇಯಃ- ನಾಮ ಮತ್ತು ಗುಣಗಳಲ್ಲಿ ಅಸಂಖ್ಯಾತನು, 248 ಅಪ್ರಮೇಯಾತ್ಮಾ- ಯಾವುದರಿಂದಲೂ ಅಳೆಯಲಾಗದವನು, 249 ವಿಶಿಷ್ಟಃ- ಎಲ್ಲರಿಗಿಂತಲೂ ಉತ್ಕೃಷ್ಟನಾದವನು, 250 ಶಿಷ್ಟಕೃತ್- ಶಾಸನ ಮಾಡುವವನು, 251 ಶುಚಿಃ- ಪರಮ ಶುದ್ಧನು, 252 ಸಿದ್ಧಾರ್ಥಃ- ನಿತ್ಯತೃಪ್ತನು, 253 ಸಿದ್ಧಸಂಕಲ್ಪಃ- ಸತ್ಯ ಸಂಕಲ್ಪವುಳ್ಳವನು, 254 ಸಿದ್ಧಿದಃ- ಕರ್ಮ ಮಾಡುವವರಿಗೆ ಅವರ ಅಧಿಕಾರಕ್ಕನುಸಾರವಾಗಿ ಫಲ ಕೊಡುವವನು, 255 ಸಿದ್ಧಿಸಾಧನಃ- ಸಿದ್ಧಿರೂಪೀ ಕ್ರಿಯೆಯ ಸಾಧಕನು, ॥40॥
(ಶ್ಲೋಕ-41)
ಮೂಲಮ್
ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ ।
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ ॥
ಅನುವಾದ
256 ವೃಷಾಹೀ- ದ್ವಾದಶಾಹಾದಿ ಯಜ್ಞಗಳನ್ನು ತನ್ನಲ್ಲಿ ಸ್ಥಿತವಾಗಿಸಿಕೊಂಡಿರುವವನು, 257 ವೃಷಭಃ- ಭಕ್ತಿರಿಗಾಗಿ ಇಚ್ಛಿತ ವಸ್ತುಗಳ ಮಳೆಗರೆವವನು, 258 ವಿಷ್ಣುಃ- ಶುದ್ಧ ಸತ್ತ್ವಮೂರ್ತಿಯು, 259 ವೃಷಪರ್ವಾ- ಪರಮ-ಧಾಮಕ್ಕೆ ಹೋಗಲು ಇಚ್ಛಿಸುವವರಿಗೆ ಧರ್ಮರೂಪೀ ಮೆಟ್ಟಿಲುಗಳಂತಿರುವವನು, 260 ವೃಷೋದರಃ- ತನ್ನ ಉದರದಲ್ಲಿ ಧರ್ಮವನ್ನು ಧರಿಸಿಕೊಂಡಿರುವವನು, 261 ವರ್ಧನಃ- ಭಕ್ತರನ್ನು ವೃದ್ಧಿಗೊಳಿಸುವವನು, 262 ವರ್ಧಮಾನಃ- ಪ್ರಪಂಚ ರೂಪದಿಂದ ಬೆಳೆಯುವವನು, 263 ವಿವಿಕ್ತಃ- ಪ್ರಪಂಚದಿಂದ ಬೇರೆಯಾಗಿ ಇರುವವನು, 264 ಶ್ರುತಿಸಾಗರಃ-ವೇದರೂಪೀ ಜಲಭರಿತ ಸಮುದ್ರನು, ॥41॥
(ಶ್ಲೋಕ-42)
ಮೂಲಮ್
ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ ।
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ ॥
ಅನುವಾದ
265 ಸುಭುಜಃ- ಜಗತ್ತನ್ನು ರಕ್ಷಿಸುವ ಅತ್ಯಂತ ಸುಂದರ ಭುಜಗಳುಳ್ಳವನು, 266 ದುರ್ಧರಃ- ಬೇರೆಯವರಿಂದ ಧರಿಸಲು ಸಾಧ್ಯವಾಗದೇ ಇರುವವನು, ಪೃಥಿವ್ಯಾದಿ ಲೋಕಧಾರಕ ಪದಾರ್ಥಗಳನ್ನೂ ಸಹ ಧರಿಸಿರುವವನು ಮತ್ತು ಸ್ವಯಂ ಯಾರಿಂದಲೂ ಧರಿಸಲಸಾಧ್ಯನಾದವನು, 267 ವಾಗ್ಮೀ- ವೇದಮಯೀ ವಾಣಿಯನ್ನು ಉತ್ಪನ್ನ ಮಾಡುವವನು, 268 ಮಹೇಂದ್ರಃ- ಈಶ್ವರರಿಗೆಲ್ಲಾ ಈಶ್ವರನು, 269 ವಸುದಃ- ಧನವನ್ನು ಕೊಡುವವನು, 270 ವಸುಃ- ಶ್ರೇಷ್ಠಧನರೂಪನು, 271 ನೈಕರೂಪಃ- ಅನೇಕ ರೂಪಧಾರಿಯು, 272 ಬೃಹದ್ರೂಪಃ- ವಿಶ್ವರೂಪಧಾರಿಯು, 273 ಶಿಪಿವಿಷ್ಟಃ- ಸೂರ್ಯಕಿರಣಗಳಿಂದ ಸ್ಥಿರವಾಗಿರುವವನು, 274 ಪ್ರಕಾಶನಃ-ಎಲ್ಲವನ್ನೂ ಪ್ರಕಾಶಗೊಳಿಸುವವನು, ॥42॥
(ಶ್ಲೋಕ-43)
ಮೂಲಮ್
ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ ।
ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ ॥
ಅನುವಾದ
275 ಓಜಸ್ತೇಜೋದ್ಯುತಿಧರಃ- ಪ್ರಾಣ, ಬಲ, ಶೌರ್ಯಾದಿ ಗುಣ ಹಾಗೂ ಜ್ಞಾನದ ಪ್ರಕಾಶವನ್ನು ಧರಿಸುವವನು, 276 ಪ್ರಕಾಶಾತ್ಮಾ- ಪ್ರಕಾಶರೂಪೀ ವಿಗ್ರಹನು, 277 ಪ್ರತಾಪನಃ- ಸೂರ್ಯನೇ ಮೊದಲಾದ ತನ್ನ ವಿಭೂತಿಗಳಿಂದ ಜಗತ್ತಿಗೆ ಉಷ್ಣತೆಯನ್ನು ಕೊಡುವವನು, 278 ಋದ್ಧಃ- ಧರ್ಮ, ಜ್ಞಾನ ಮತ್ತು ವೈರಾಗ್ಯಾದಿಗಳಿಂದ ಸಂಪನ್ನನಾದವನು, 279 ಸ್ಷಷ್ಟಾಕ್ಷರಃ- ಓಂಕಾರ ರೂಪೀ ಸ್ವಷ್ಟವಾದ ಉದಾತ್ತ ಅಕ್ಷರನು, 280 ಮಂತ್ರಃ- ಋಕ್, ಸಾಮ, ಯಜುರ್ವೇದ ರೂಪೀ, ಮಂತ್ರಗಳಿಂದ ತಿಳಿದುಕೊಳ್ಳಲು ಯೋಗ್ಯನಾದವನು, 281 ಚಂದ್ರಾಂಶುಃ- ಸಾಂಸಾರಿಕ ತಾಪದಿಂದ ಸಂತಪ್ತ ಚಿತ್ತರಾದ ಪುರುಷರಿಗೆ ಚಂದ್ರನ ಕಿರಣಗಳಂತೆ ಆಹ್ಲಾದವನ್ನುಂಟು ಮಾಡುವವನು, 282 ಭಾಸ್ಕರದ್ಯುತಿಃ- ಸೂರ್ಯನಂತೆ ಪ್ರಕಾಶಸ್ವರೂಪೀ, ॥43॥
(ಶ್ಲೋಕ-44)
ಮೂಲಮ್
ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ ।
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ ॥
ಅನುವಾದ
283 ಅಮೃತಾಂಶೂದ್ಭವಃ- ಸಮುದ್ರಮಂಥನ ಸಮಯದಲ್ಲಿ ಚಂದ್ರನನ್ನು ಉತ್ಪನ್ನ ಮಾಡುವ ಸಮುದ್ರರೂಪನು, 284 ಭಾನುಃ- ಭಾಸವಾಗುವವನು, 285 ಶಶಬಿಂದುಃ- ಮೊಲದ ಚಿಹ್ನೆಯುಳ್ಳ ಚಂದ್ರನಂತೆ ಸಂಪೂರ್ಣ ಪ್ರಜೆಗಳನ್ನು ಪೋಷಿಸುವವನು. 286 ಸುರೇಶ್ವರಃ- ದೇವಾದಿ ದೇವತೆಗಳೊಡೆಯನು, 287 ಔಷಧಮ್- ಸಂಸಾರರೂಪೀ ರೋಗವನ್ನು ನಾಶ ಮಾಡುವ ಔಷಧ ರೂಪನು, 288 ಜಗತಃ ಸೇತುಃ- ಸಂಸಾರ ಸಾಗರವನ್ನು ದಾಟಿಸುವುದಕ್ಕೆ ಸೇತುವೆಯಂತಿರುವವನು, 289 ಸತ್ಯಧರ್ಮ ಪರಾಕ್ರಮಃ-ಸತ್ಯರೂಪೀ ಧರ್ಮ ಮತ್ತು ಪರಾಕ್ರಮಶಾಲಿಯು, ॥44॥
(ಶ್ಲೋಕ-45)
ಮೂಲಮ್
ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ ।
ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ ॥
ಅನುವಾದ
290 ಭೂತಭವ್ಯಭವನ್ನಾಥಃ- ಭೂತ, ಭವಿಷ್ಯ ಮತ್ತು ವರ್ತಮಾನ ಎಲ್ಲ ವಿಷಯಗಳ ಒಡೆಯನು, 291 ಪವನಃ- ವಾಯು ರೂಪಿಯು, 292 ಪಾವನಃ- ದೃಷ್ಟಿ ಮಾತ್ರದಿಂದಲೇ ಜಗತ್ತನ್ನು ಪವಿತ್ರಗೊಳಿಸುವವನು, 293 ಅನಲಃ- ಅಗ್ನಿಸ್ವರೂಪಿಯು, 294 ಕಾಮಹಾ- ತನ್ನ ಭಕ್ತರ ಸಕಾಮಭಾವವನ್ನು ನಾಶ ಮಾಡುವವನು, 295 ಕಾಮಕೃತ್ - ಭಕ್ತರ ಕಾಮನೆಗಳನ್ನು ಪೂರ್ಣ ಗೊಳಿಸುವವನು, 296 ಕಾಂತಃ- ಅತ್ಯಂತ ಸುಂದರನು, 297 ಕಾಮಃ-‘ಕ’ ಎಂದರೆ ಬ್ರಹ್ಮ ‘ಅ’ ಎಂದರೆ ವಿಷ್ಣು ‘ಮ’ ಎಂದರೆ ಮಹಾದೇವ-ಈ ಪ್ರಕಾರ ತ್ರಿಮೂರ್ತಿ ಸ್ವರೂಪನು, 298 ಕಾಮಪ್ರದಃ- ಭಕ್ತರ ಇಷ್ಟಾರ್ಥವನ್ನು ಈಡೇರಿಸುವವನು, 299 ಪ್ರಭುಃ- ಸರ್ವೋತ್ಕೃಷ್ಣ ಸರ್ವಸಾಮರ್ಥ್ಯವುಳ್ಳ ಒಡೆಯನು, ॥45॥
(ಶ್ಲೋಕ-46)
ಮೂಲಮ್
ಯುಗಾದಿಕೃದ್ಯುಗಾವರ್ತೋ ನೌಕಮಾಯೋ ಮಹಾಶನಃ ।
ಅದೃಶ್ಯೋಽವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ ॥
ಅನುವಾದ
300 ಯುಗಾದಿಕೃತ್- ಯುಗಾದಿಯ ಆರಂಭ ಮಾಡುವವನು, 301 ಯುಗಾವರ್ತಃ- ನಾಲ್ಕು ಯುಗಗಳನ್ನೂ ಚಕ್ರದಂತೆ ತಿರುಗಿಸುವವನು, 302 ನೈಕಮಾಯಃ- ಅನೇಕ ಮಾಯೆಗಳನ್ನು ಧರಿಸಿರುವವನು, 303 ಮಹಾಶನಃ- ಕಲ್ಪದ ಅಂತ್ಯದಲ್ಲಿ ಎಲ್ಲವನ್ನೂ ನುಂಗುವವನು, 304 ಅದೃಶ್ಯಃ- ಸಮಸ್ತ ಜ್ಞಾನೇಂದ್ರಿಯಗಳ ವಿಷಯವಲ್ಲದವನು, 305 ಅವ್ಯಕ್ತರೂಪಃ- ನಿರಾಕಾರ ಸ್ವರೂಪವುಳ್ಳವನು, 306 ಸಹಸ್ರಜಿತ್- ಯುದ್ಧದಲ್ಲಿ ಸಾವಿರಾರು ದೇವತೆಗಳ ಶತ್ರುಗಳನ್ನು ಜಯಿಸುವವನು, 307 ಅನಂತಜಿತ್- ಯುದ್ಧ ಮತ್ತು ಕ್ರೀಡಾದಿಗಳಲ್ಲಿ ಸರ್ವತ್ರ ಸಮಸ್ತ ಜೀವಿಗಳನ್ನೂ ಜಯಿಸುವವನು, ॥46॥
(ಶ್ಲೋಕ-47)
ಮೂಲಮ್
ಇಷ್ಟೋಽವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ ।
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ ॥
ಅನುವಾದ
308 ಇಷ್ಟಃ- ಪರಮಾನಂದ ರೂಪಿಯಾದುದರಿಂದ ಸರ್ವಪ್ರಿಯನು, 309 ಅವಿಶಿಷ್ಟಃ- ಸಂಪೂರ್ಣ ವಿಶೇಷಣಗಳಿಂದ ರಹಿತನಾದ ಸರ್ವಶ್ರೇಷ್ಠನು, 310 ಶಿಶ್ಟೇಷ್ಟಃ- ಶಿಷ್ಟ ಪುರುಷರ ಇಷ್ಟ ದೇವನು, 311 ಶಿಖಂಡೀ- ನವಿಲುಗರಿಯನ್ನು ತನ್ನ ಕಿರೀಟದಲ್ಲಿ ಧರಿಸಿಕೊಂಡಿರುವವನು, 312 ನಹುಷಃ- ಜೀವಿಗಳನ್ನೂ ತನ್ನ ಮಾಯೆಯಿಂದ ಬಂಧಿಸುವವನು, 313 ವೃಷಃ- ಕಾಮನೆಗಳನ್ನು ಪೂರ್ಣ ಮಾಡುವವನು, 314 ಕ್ರೋಧಹಾ- ಕ್ರೋಧವನ್ನು ನಾಶ ಮಾಡುವವನು, 315 ಕ್ರೋಧಕೃತ್ಕರ್ತಾ- ದುಷ್ಟರ ಮೇಲೆ ಕ್ರೋಧ ಮಾಡುವವನು, ಮತ್ತು ಜಗತ್ತನ್ನು ಅದರ ಕರ್ಮಾನುಸಾರ ರಚಿಸುವವನು, 316 ವಿಶ್ವಬಾಹುಃ- ಎಲ್ಲೆಲ್ಲಿಯೂ ಬಾಹುಗಳುಳ್ಳವನು, 317 ಮಹೀಧರಃ- ಪೃಥ್ವಿಯನ್ನು ಧರಿಸುವವನು, ॥47॥
(ಶ್ಲೋಕ-48)
ಮೂಲಮ್
ಅಚ್ಯುತಃ ಪ್ರಥಿತಃ ಪ್ರಾಣ ಪ್ರಾಣದೋ ವಾಸವಾನುಜಃ ।
ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ ॥
ಅನುವಾದ
318 ಅಚ್ಯುತಃ- ಆರು ಭಾವವಿಕಾರಗಳಿಂದ ರಹಿತನಾದವನು, 319 ಪ್ರಥಿತಃ-ಜಗತ್ತಿನ ಸೃಷ್ಟ್ಯಾದಿ ಕರ್ಮಗಳಿಗೆ ಕಾರಣನು, 320 ಪ್ರಾಣಃ- ಹಿರಣ್ಯಗರ್ಭರೂಪದಿಂದ ಪ್ರಜೆಗಳನ್ನು ಜೀವಂತವಾಗಿಡುವವನು, 321 ಪ್ರಾಣದಃ- ಎಲ್ಲರನ್ನೂ ಪಾಲನೆ-ಪೋಷಣೆ ಮಾಡುವವನು, 322 ವಾಸವಾನುಜಃ- ವಾಮನಾವತಾರದಲ್ಲಿ ಕಶ್ಯಪರಿಂದ ಅದಿತಿಯಲ್ಲಿ ಇಂದ್ರನ ತಮ್ಮನ ರೂಪದಲ್ಲಿ ಪ್ರಕಟನಾದವನು, 323 ಅಪಾಂ ನಿಧಿಃ- ನೀರನ್ನು ಒಂದೆಡೆ ಸೇರಿಸಿಡುವ ಸಮುದ್ರರೂಪನು, 324 ಅಧಿಷ್ಠಾನಮ್- ಉಪಾದಾನ ಕಾರಣ ರೂಪದಿಂದ ಎಲ್ಲಾ ಜೀವರುಗಳಿಗೂ ಆಶ್ರಯನು, 325 ಅಪ್ರಮತ್ತಃ- ಅಧಿಕಾರಿಗಳಿಗೆ ಕರ್ಮಗಳಿಗೆ ತಕ್ಕಂತೆ ಫಲ ಕೊಡುವುದರಲ್ಲಿ ಎಂದಿಗೂ ತಪ್ಪು ಮಾಡದಿರುವವನು, 326 ಪ್ರತಿಷ್ಠಿತಃ- ತನ್ನ ಮಹಿಮೆಯಲ್ಲಿಯೇ ಸ್ಥಿತನಾಗಿರುವವನು, ॥48॥
(ಶ್ಲೋಕ-49)
ಮೂಲಮ್
ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ ।
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ ॥
ಅನುವಾದ
327 ಸ್ಕಂದಃ- ಸ್ವಾಮಿಕಾರ್ತಿಕೇಯ ರೂಪನು, 328 ಸ್ಕಂದಧರಃ- ಧರ್ಮ ಪಥವನ್ನು ಧರಿಸಿರುವವನು, 329 ಧುರ್ಯಃ- ಸಮಸ್ತ ಭೂತಗಳ ಜನ್ಮಾದಿರೂಪೀ ಹೊರೆಯನ್ನು ಹೊರುವವನು, 330 ವರದಃ- ಇಚ್ಛಿಸಿದ ವರವನ್ನು ಕೊಡುವವನು, 331 ವಾಯುವಾಹನಃ- ಎಲ್ಲಾ ವಾಯುಭೇದಗಳನ್ನು ನಡೆಸುವವನು, 332 ವಾಸುದೇವಃ- ಸಮಸ್ತ ಪ್ರಾಣಿಗಳನ್ನು ತನ್ನಲ್ಲಿ ಇಟ್ಟುಕೊಂಡಿರುವವನು ಹಾಗೂ ಅವುಗಳಲ್ಲಿ ಸರ್ವಾತ್ಮರೂಪದಿಂದ ವಾಸ ಮಾಡುವ ದಿವ್ಯ ಸ್ವರೂಪನು, 333 ಬೃಹದ್ಭಾನುಃ- ಮಹಾನ್ ಕಿರಣಗಳಿಂದ ಕೂಡಿದನು ಮತ್ತು ಇಡೀ ಜಗತ್ತನ್ನು ಪ್ರಕಾಶಗೊಳಿಸುವವನು, 334 ಆದಿದೇವಃ- ಎಲ್ಲಕ್ಕೂ ಆದಿ ಕಾರಣ ದೇವನು, 335 ಪುರಂದರಃ- ಅಸುರರ ನಗರಗಳನ್ನು ಧ್ವಂಸ ಮಾಡುವವನು, ॥49॥
(ಶ್ಲೋಕ-50)
ಮೂಲಮ್
ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ ।
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ ॥
ಅನುವಾದ
336 ಅಶೋಕಃ- ಎಲ್ಲಾ ಪ್ರಕಾರಗಳ ಶೋಕದಿಂದ ರಹಿತನಾದವನು 337 ತಾರಣಃ- ಸಂಸಾರ ಸಾಗರದಿಂದ ಪಾರು ಮಾಡುವವನು, 338 ತಾರಃ- ಹುಟ್ಟು-ಮುಪ್ಪು-ಸಾವು ಈ ಭಯದಿಂದ ದಾಟಿಸುವವನು, 339 ಶೂರಃ- ಪರಾಕ್ರಮಶಾಲಿ, 340 ಶೌರಿಃ- ಶೂರ ವೀರ ವಸುದೇವನಂದನ ಶ್ರೀಕೃಷ್ಣನು, 241 ಜನೇಶ್ವರಃ- ಸಮಸ್ತ ಜೀವಿಗಳೊಡೆಯನು, 342 ಅನುಕೂಲಃ- ಎಲ್ಲರಲ್ಲಿಯೂ ಆತ್ಮರೂಪದಿಂದ ಇರುವ ಕಾರಣ ಸರ್ವರಿಗೂ ಅನುಕೂಲನಾಗಿರುವವನು, 343 ಶತಾವರ್ತಃ- ಧರ್ಮದ ರಕ್ಷಣೆಗಾಗಿ ನೂರಾರು ಅವತಾರ ಎತ್ತುವವನು, 344 ಪದ್ಮೀ- ತನ್ನ ಕೈಯ್ಯಲ್ಲಿ ಕಮಲವನ್ನು ಹಿಡಿದಿರುವವನು, 345 ಪದ್ಮನಿಭೇಕ್ಷಣಃ- ಕಮಲದಂತೆ ಕೋಮಲ ಹಾಗೂ ನಿರ್ಮಲ ದೃಷ್ಟಿಯುಳ್ಳವನು ॥50॥
(ಶ್ಲೋಕ-51)
ಮೂಲಮ್
ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ ।
ಮಹರ್ದ್ಧ್ಧಿಋದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ ॥
ಅನುವಾದ
346 ಪದ್ಮನಾಭಃ- ಹೃದಯ-ಕಮಲದ ಮಧ್ಯದಲ್ಲಿ ವಾಸಿಸುವವನು 347 ಅರವಿಂದಾಕ್ಷಃ- ಕಮಲದಂತಹ ಕಣ್ಣುಗಳುಳ್ಳವನು, 348 ಪದ್ಮಗರ್ಭಃ- ಹೃದಯ-ಕಮಲದಲ್ಲಿ ಧ್ಯಾನಮಾಡಲು ಯೋಗ್ಯನಾದವನು, 349 ಶರೀರಭೃತ್- ಅನ್ನರೂಪದಿಂದ ಎಲ್ಲರ ಶರೀರಗಳ ಪೋಷಣೆ ಮಾಡುವವನು, 350 ಮಹರ್ದ್ಧಿಃ- ಮಹಾನ್ ವಿಭೂತಿಗಳುಳ್ಳವನು, 351 ಋದ್ಧಃ- ಎಲ್ಲದರಲ್ಲಿಯೂ ಉತ್ಕೃಷ್ಟನಾದವನು, 352 ವೃದ್ಧಾತ್ಮಾ- ಪುರಾತನ ಆತ್ಮಸ್ವರೂಪಿಯು, 353 ಮಹಾಕ್ಷಃ- ವಿಶಾಲವಾದ ನೇತ್ರಗಳುಳ್ಳವನು, 354 ಗರುಡಧ್ವಜಃ- ಗರುಡನ ಚಿಹ್ನೆಯಿಂದ ಕೂಡಿದ ಧ್ವಜವುಳ್ಳವನು, ॥51॥
(ಶ್ಲೋಕ-52)
ಮೂಲಮ್
ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ ।
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ ॥
ಅನುವಾದ
355 ಅತುಲಃ- ಹೋಲಿಕೆಗೆ ಒಳಪಡದವನು, 356 ಶರಭಃ- ಶರೀರಗಳನ್ನು ಪ್ರತ್ಯಗಾತ್ಮ ರೂಪದಿಂದ ಪ್ರಕಾಶಿತಗೊಳಿಸುವವನು, 357 ಭೀಮಃ- ದುರ್ಜನರಾದ ಪಾಪಿಗಳಿಗೆ ಭಯಂಕರನು, 358 ಸಮಯಜ್ಞಃ- ಸಮಭಾವರೂಪೀ ಯಜ್ಞದಿಂದ ಪ್ರಾಪ್ತನಾಗುವವನು, 259 ಹವಿರ್ಹರಿಃ- ಯಜ್ಞಗಳಲ್ಲಿ ಹವಿಸ್ಸನ್ನು ಸ್ವೀಕರಿಸುವವನು ಮತ್ತು ತನ್ನನ್ನು ಸ್ಮರಿಸುವವರ ಪಾಪಗಳನ್ನು ಹರಣಮಾಡುವವನು, 360 ಸರ್ವಲಕ್ಷಣಲಕ್ಷಣ್ಯಃ- ಸಮಸ್ತ ಲಕ್ಷಣ ಪ್ರಮಾಣಗಳಿಂದಲೂ ಪ್ರತಿಪಾದಿತನಾಗಿರುವವನು, 361 ಲಕ್ಷ್ಮೀವಾನ್- ತನ್ನ ವಕ್ಷಸ್ಥಳದಲ್ಲಿ ಲಕ್ಷ್ಮಿಯನ್ನು ಶಾಶ್ವತವಾಗಿ ಇಟ್ಟುಕೊಂಡಿರುವವನು, 362 ಸಮಿತಿಂಜಯಃ- ಸಂಗ್ರಾಮ ವಿಜಯೀ, ॥52॥
(ಶ್ಲೋಕ-53)
ಮೂಲಮ್
ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ ।
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ ॥
ಅನುವಾದ
363 ವಿಕ್ಷರಃ- ನಾಶರಹಿತನು, 364 ರೋಹಿತಃ- ಮತ್ಸ್ಯ ವಿಶೇಷದ ಸ್ವರೂಪನ್ನು ಧರಿಸಿ ಅವತಾರವೆತ್ತಿದವನು, 365 ಮಾರ್ಗಃ- ಪರಮಾನಂದ ಪ್ರಾಪ್ತಿಯ ಸಾಧನ ಸ್ವರೂಪನು, 366 ಹೇತುಃ- ಪ್ರಪಂಚದ ನಿಮಿತ್ತನೂ ಮತ್ತು ಉಪಾದಾನ ಕಾರಣನು, 367 ದಾಮೋದರಃ- ಯಶೋದೆಯ ಮೂಲಕ ಹಗ್ಗದಿಂದ ಬಂಧಿಸಲ್ಪಟ್ಟ ಉದರವುಳ್ಳವನು, 368 ಸಹಃ- ಭಕ್ತರ ಅಪರಾಧಗಳನ್ನು ಸಹಿಸಿಕೊಳ್ಳುವವನು, 369 ಮಹೀಧರಃ- ಪರ್ವತಗಳ ರೂಪದಿಂದ ಭೂಮಿಯನ್ನು ಧರಿಸುವವನು, 370 ಮಹಾಭಾಗಃ- ಮಹಾನ್ ಭಾಗ್ಯಶಾಲಿ, 371 ವೇಗವಾನ್-ಶೀಘ್ರಗತಿಯುಳ್ಳವನು, 372 ಅಮಿತಾಶನಃ- ಇಡೀ ವಿಶ್ವವನ್ನೇ ಭಕ್ಷಿಸುವವನು, ॥53॥
(ಶ್ಲೋಕ-54)
ಮೂಲಮ್
ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ ।
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ ॥
ಅನುವಾದ
373 ಉದ್ಭವಃ- ಜಗತ್ತಿನ ಉತ್ಪತ್ತಿಗೆ ಉಪಾದಾನ ಕಾರಣನು, 374 ಕ್ಷೋಭಣಃ- ಜಗತ್ತಿನ ಸೃಷ್ಟಿ ಸಮಯದಲ್ಲಿ ಪ್ರಕೃತಿ ಮತ್ತು ಪುರುಷರ ಒಳಹೊಕ್ಕು ಅವರನ್ನು ಕ್ಷುಬ್ಧಗೊಳಿಸುವವನು, 375 ದೇವಃ- ಪ್ರಕಾಶಸ್ವರೂಪನು, 376 ಶ್ರೀಗರ್ಭಃ- ಸಮಸ್ತ ಐಶ್ವರ್ಯವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವವನು, 377 ಪರಮೇಶ್ವರಃ- ಸರ್ವಶ್ರೇಷ್ಠ ಶಾಸನ ಮಾಡುವವನು, 378 ಕರಣಮ್- ಜಗತ್ತಿನ ಉತ್ಪತ್ತಿಗೆ ಎಲ್ಲಕ್ಕಿಂತ ದೊಡ್ಡ ಸಾಧನವಾಗಿರುವವನು, 379 ಕಾರಣಮ್- ಜಗತ್ತಿನ ಉಪಾದಾನ ಮತ್ತು ನಿಮಿತ್ತ ಕಾರಣನು, 380 ಕರ್ತಾ- ಎಲ್ಲಾ ಪ್ರಕಾರದಿಂದಲೂ ಸರ್ವ ಸ್ವತಂತ್ರನು, 381 ವಿಕರ್ತಾ- ವಿಚಿತ್ರ ಭುವನಗಳನ್ನು ರಚಿಸುವವನು, 382 ಗಹನಃ- ತನ್ನ ವಿಲಕ್ಷಣ ಸ್ವರೂಪ, ಸಾಮರ್ಥ್ಯ ಮತ್ತು ಲೀಲಾದಿಗಳ ಕಾರಣದಿಂದ ತಿಳಿಯಲಾಗದವನು, 383 ಗುಹಃ- ಮಾಯೆಯಿಂದ ತನ್ನ ಸ್ವರೂಪವನ್ನು ಮುಚ್ಚಿಕೊಂಡಿರುವವನು, ॥54॥
(ಶ್ಲೋಕ-55)
ಮೂಲಮ್
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ ।
ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ ॥
ಅನುವಾದ
384 ವ್ಯವಸಾಯಃ- ಜ್ಞಾನಮಾತ್ರ ಸ್ವರೂಪನು, 385 ವ್ಯವಸ್ಥಾನಃ- ಲೋಕಪಾಲಕಾದಿಗಳನ್ನೂ, ಸಮಸ್ತ ಜೀವರುಗಳನ್ನೂ, ನಾಲ್ಕು ವರ್ಣಾಶ್ರಮಗಳನ್ನೂ ಮತ್ತು ಅವುಗಳ ಧರ್ಮಗಳನ್ನೂ ವ್ಯವಸ್ಥಿತವಾಗಿ ರಚಿಸುವವನು, 386 ಸಂಸ್ಥಾನಃ- ಪ್ರಳಯದ ಸಮ್ಯಕ್ ಸ್ಥಾನವಾಗಿರುವವನು, 387 ಸ್ಥಾನದಃ- ಧ್ರುವಾದಿಭಕ್ತರಿಗೆ ಸ್ಥಾನವನ್ನು ಕೊಡುವವನು, 388 ಧ್ರುವಃ- ಅವಿನಾಶೀ ಸ್ವರೂಪನು, 289 ಪರರ್ದ್ಧಿಃ- ಶ್ರೇಷ್ಠವಾದ ವಿಭೂತಿಗಳುಳ್ಳವನು, 390 ಪರಮಸ್ಪಷ್ಟಃ- ಜ್ಞಾನ ಸ್ವರೂಪಿಯಾದುದರಿಂದ ಪರಮ ಸ್ಪಷ್ಟ ರೂಪದಿಂದ ಅವತಾರ ವಿಗ್ರಹಗಳಲ್ಲಿ ಎಲ್ಲರ ಎದುರಿಗೆ ಪ್ರತ್ಯಕ್ಷವಾಗಿ ಪ್ರಕಟಗೊಳ್ಳುವವನು, 391 ತುಷ್ಟಃ- ಏಕಮಾತ್ರ ಪರಮಾನಂದ ಸ್ವರೂಪನು, 392 ಪುಷ್ಟಃ- ಸರ್ವತ್ರ ಪರಿಪೂರ್ಣನಾಗಿರುವವನು, 393 ಶುಭೇಕ್ಷಣಃ- ದರ್ಶನ ಮಾತ್ರದಿಂದಲೇ ಶ್ರೇಯಸ್ಸನ್ನುಂಟು ಮಾಡುವವನು, ॥55॥
(ಶ್ಲೋಕ-56)
ಮೂಲಮ್
ರಾಮೋ ವಿರಾಮೊ ವಿರಜೋ ಮಾರ್ಗೋ ನೇಯೋ ನಯೋಽನಯಃ ।
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ ॥
ಅನುವಾದ
394 ರಾಮಃ- ಯೋಗಿಜನರು ಸ್ಮರಣೆ ಮಾಡುವುದಕ್ಕಾಗಿ ನಿತ್ಯಾನಂದ ಸ್ವರೂಪನು, 395 ವಿರಾಮಃ- ಪ್ರಳಯಕಾಲದಲ್ಲಿ ಪ್ರಾಣಿಗಳಿಗೆ ತನ್ನಲ್ಲಿ ವಿಶ್ರಾಂತಿ ಕೊಡುವವನು, 396 ವಿರಜಃ- ರಜೋಗುಣ ಹಾಗೂ ತಮೋಗುಣದಿಂದ ಸರ್ವಥಾ ಶೂನ್ಯನಾದವನು, 397 ಮಾರ್ಗಃ- ಮೋಕ್ಷಾಪೇಕ್ಷಿಗಳಾದ ಭಕ್ತರು ಅಮರರಾಗಲು ಸಾಧನ ಸ್ವರೂಪನು, 398 ನೇಯಃ- ಉತ್ತಮ ಜ್ಞಾನದಿಂದ ಗ್ರಹಿಸಲು ಯೋಗ್ಯನಾದವನು, 399 ನಯಃ- ಎಲ್ಲರನ್ನೂ ನಿಯಮದಲ್ಲಿ ಇಟ್ಟುಕೊಳ್ಳುವವನು, 400 ಅನಯಃ - ಸರ್ವ ಸ್ವತಂತ್ರನು, 401 ವೀರಃ- ಮಹಾಪರಾಕ್ರಮಶಾಲಿಯು, 402 ಶಕ್ತಿಮತಾಂ ಶ್ರೇಷ್ಠಃ- ಶಕ್ತಿಶಾಲಿಗಳಲ್ಲಿಯೂ ಸಹ ಅತಿಶಯವಾದ ಶಕ್ತಿವಂತನು, 403 ಧರ್ಮಃ- ಶ್ರುತಿ ಸ್ಮೃತಿರೂಪೀ ಧರ್ಮನು, 404 ಧರ್ಮವಿದುದತ್ತಮಃ- ಸಮಸ್ತ ಧರ್ಮವೇತ್ತರುಗಳಲ್ಲೆಲ್ಲಾ ಉತ್ತಮನು, ॥56॥
(ಶ್ಲೋಕ-57)
ಮೂಲಮ್
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ ।
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ ॥
ಅನುವಾದ
405 ವೈಕುಂಠಃ- ಪರಮಧಾಮಸ್ವರೂಪನು, 406 ಪುರುಷಃ- ವಿಶ್ವರೂಪೀ ಶರೀರದಲ್ಲಿ ಮಲಗುವವನು, 407 ಪ್ರಾಣಃ- ಪ್ರಾಣ ವಾಯುರೂಪದಿಂದ ಚೇಷ್ಟೆ ಮಾಡುವವನು, 408 ಪ್ರಾಣದಃ- ಸರ್ಗ (ಸೃಷ್ಟಿ)ಯ ಆದಿಯಲ್ಲಿ ಪ್ರಾಣವನ್ನು ಕೊಡುವವನು, 409 ಪ್ರಣವಃ- ‘ಓಂ’ ಎಂಬುದಾಗಿ ಕರೆಯಲ್ಪಡುವವನು ಮತ್ತು ವೇದಗಳಿಂದ ವಂದಿತನಾದವನು, 410 ಪೃಥುಃ- ವಿರಾಟ್ ರೂಪದಿಂದ ವಿಸ್ತಾರವಾಗುವವನು 411 ಹಿರಣ್ಯಗರ್ಭಃ- ಬ್ರಹ್ಮರೂಪದಿಂದ ಪ್ರಕಟಗೊಳ್ಳುವವನು, 412 ಶತ್ರುಘ್ನಃ- ಶತ್ರುಗಳನ್ನು ಸಂಹಾರ ಮಾಡುವವನು, 413 ವ್ಯಾಪ್ತಃ- ಕಾರಣರೂಪದಿಂದ ಎಲ್ಲಾ ಕಾರ್ಯಗಳಲ್ಲಿಯೂ ವ್ಯಾಪಿಸಿರುವವನು, 414 ವಾಯುಃ- ವಾಯು ರೂಪನು, 415 ಅಧೋಕ್ಷಜಃ- ತನ್ನ ಸ್ವರೂಪದಿಂದ ಕ್ಷೀಣನಾಗದವನು, ॥57॥
(ಶ್ಲೋಕ-58)
ಮೂಲಮ್
ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ ।
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ ॥
ಅನುವಾದ
416 ಋತುಃ- ವಸಂತಾದಿ ಋತು ಕಾಲರೂಪದಿಂದ ತಿಳಿಯಲ್ಪಡುವವನು, 417 ಸುದರ್ಶನಃ- ಭಕ್ತರಿಗೆ ಸುಲಭವಾಗಿಯೇ ದರ್ಶನ ಕೊಡುವವನು. 418 ಕಾಲಃ- ಕಾಲರೂಪದಿಂದ ಎಲ್ಲರ ಎಣಿಕೆ ಮಾಡುವವನು, 419 ಪರಮೇಷ್ಠೀ- ತನ್ನ ಉತ್ಕೃಷ್ಟವಾದ ಮಹಿಮೆಯಲ್ಲಿ ಸ್ಥಿತನಾಗಿರುವ ಸ್ವಭಾವವುಳ್ಳವನು, 420 ಪರಿಗ್ರಹಃ- ಶರಣಾರ್ಥಿಗಳ ಮೂಲಕ ಅರ್ಪಿಸಿದುದನ್ನು ಎಲ್ಲ ಕಡೆಗಳಿಂದಲೂ ಸ್ವೀಕರಿಸುವವನು, 421 ಉಗ್ರಃ- ಸೂರ್ಯಾದಿಗಳಿಗೂ ಭಯಕ್ಕೆ ಕಾರಣನು, 422 ಸಂವತ್ಸರಃ- ಸಮಸ್ತ ಜೀವಿಗಳ ಆವಾಸಸ್ಥಾನನು, 423 ದಕ್ಷಃ- ಸಕಲ ಕಾರ್ಯಗಳನ್ನೂ ಬಹು ಕುಶಲತೆಯಿಂದ ಮಾಡುವವನು, 424 ವಿಶ್ರಾಮಃ- ವಿಶ್ರಾಂತಿಯನ್ನು ಬಯಸುವ ಮುಮುಕ್ಷುಗಳಿಗೆ ಮೋಕ್ಷವನ್ನು ದಯಪಾಲಿಸುವವನು, 425 ವಿಶ್ವದಕ್ಷಿಣಃ- ಬಲಿಯ ಯಜ್ಞದಲ್ಲಿ ಸಮಸ್ತ ವಿಶ್ವವನ್ನು ದಕ್ಷಿಣೆಯ ರೂಪದಲ್ಲಿ ಪಡೆದುಕೊಂಡಿರುವವನು, ॥58॥
(ಶ್ಲೋಕ-59)
ಮೂಲಮ್
ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ ।
ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ ॥
ಅನುವಾದ
426 ವಿಸ್ತಾರಃ- ಸಮಸ್ತ ಲೋಕಗಳ ವಿಸ್ತಾರಕ್ಕೆ ಕಾರಣನು, 427 ಸ್ಥಾವರಸ್ಥಾಣು- ಸ್ವಯಂ ಸ್ಥಿತಿಶೀಲನಾಗಿದ್ದು ಪೃಥಿವ್ಯಾದಿ ಸ್ಥಿತಿಶೀಲ ಪದಾರ್ಥಗಳನ್ನು ತನ್ನಲ್ಲಿ ಸ್ಥಿತವಾಗಿಟ್ಟುಕೊಳ್ಳುವವನು, 428 ಪ್ರಮಾಣಮ್- ಜ್ಞಾನ ಸ್ವರೂಪಿಯಾದ ಕಾರಣ ಸ್ವಯಂ ಪ್ರಮಾಣ ರೂಪನು, 429 ಬೀಜಮವ್ಯಯಮ್- ಜಗತ್ತಿನ ಅವಿನಾಶೀ ಕಾರಣನು, 430 ಅರ್ಥಃ- ಸುಖಸ್ವರೂಪಿಯಾಗಿರುವ ಕಾರಣ ಎಲ್ಲರಿಂದಲೂ ಪ್ರಾರ್ಥನೀಯನು, 431 ಅನರ್ಥಃ- ಪೂರ್ಣಕಾಮನಾದುದರಿಂದ ಪ್ರಯೋಜನ ರಹಿತನು, 432 ಮಹಾಕೋಶಃ- ದೊಡ್ಡ ಭಂಡಾರ ಉಳ್ಳವನು, 433 ಮಹಾಭೋಗಃ- ಸುಖಸ್ವರೂಪೀ ಮಹಾನ್ ಭೋಗಗಳುಳ್ಳವನು, 434 ಮಹಾಧನಃ- ಯಥಾರ್ಥ ಮತ್ತು ಅತಿಶಯ ಧನಸ್ವರೂಪನು, ॥59॥
(ಶ್ಲೋಕ-60)
ಮೂಲಮ್
ಅನಿರ್ವಿಣ್ಣಃ ಸ್ಥವಿಷ್ಠೋಽಭೂರ್ಧರ್ಮಯೂಪೋ ಮಹಾಮಖಃ ।
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ ॥
ಅನುವಾದ
435 ಅನಿರ್ವಿಣ್ಣಃ- ಬೇಸರವೇ ಮುಂತಾದ ವಿಕಾರರಹಿತನಾದವನು, 436 ಸ್ಥವಿಷ್ಠಃ- ವಿರಾಟ್ ರೂಪದಿಂದ ಸ್ಥಿತನಾದವನು, 437 ಅಭೂಃ- ಜನ್ಮ ರಹಿತನು, 438 ಧರ್ಮಯೂಪಃ- ಧರ್ಮಗಳಿಗೆಲ್ಲಾ ಆಧಾರಸ್ತಂಭರೂಪನು, 439 ಮಹಾಮಖಃ- ಅರ್ಪಿಸಲ್ಪಟ್ಟ ಯಜ್ಞಗಳನ್ನು ನಿರ್ವಾಣರೂಪೀ ಮಹಾನ್ ಫಲದಾಯಕವನ್ನಾಗಿ ಮಾಡುವವನು, 440 ನಕ್ಷತ್ರನೇಮಿಃ- ಸಮಸ್ತ ನಕ್ಷತ್ರಗಳ ಕೇಂದ್ರ ಸ್ವರೂಪನು, 441 ನಕ್ಷತ್ರೀ- ಚಂದ್ರರೂಪನು, 442 ಕ್ಷಮಃ- ಸಮಸ್ತ ಕಾರ್ಯಗಳಲ್ಲಿಯೂ ಸಮರ್ಥನು, 443 ಕ್ಷಾಮಃ- ಸಮಸ್ತ ವಿಕಾರಗಳು ನಾಶವಾಗಿ ಹೋದ ಮೇಲೆ ಪರಮಾತ್ಮ ಭಾವದಿಂದ ಸ್ಥಿತನಾದವನು, 444 ಸಮೀಹನಃ- ಸೃಷ್ಟ್ಯಾದಿಗಳಿಗಾಗಿ ಚೇಷ್ಟೆ ಮಾಡುವವನು, ॥60॥
(ಶ್ಲೋಕ-61)
ಮೂಲಮ್
ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ ।
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ ॥
ಅನುವಾದ
445 ಯಜ್ಞಃ-ಭಗವಾನ್ ವಿಷ್ಣುವು, 446 ಇಜ್ಯಃ-ಪೂಜನೀಯನು, 447 ಮಹೇಜ್ಯಃ-ಎಲ್ಲರಿಗಿಂತಲೂ ಅಧಿಕವಾಗಿ ಪೂಜಿಸಲ್ಪಡುವವನು, 448 ಕ್ರತುಃ-ಯೂಪ (ಯಜ್ಞಸ್ತಂಭ) ಸಹಿತ ಯಜ್ಞಸ್ವರೂಪನು, 449 ಸತಮ್-ಸತ್ಪುರುಷರನ್ನು ರಕ್ಷಿಸುವವನು, 450 ಸತಾಂಗತಿಃ-ಸತ್ಪುರುಷರ ಪರಮ ಗತಿಯ ಸ್ಥಾನನು, 451 ಸರ್ವದರ್ಶೀ-ಸಮಸ್ತ ಜೀವಿಗಳನ್ನೂ ಮತ್ತು ಅವುಗಳ ಕಾರ್ಯಗಳನ್ನು ನೋಡುವವನು, 452 ವಿಮುಕ್ತಾತ್ಮಾ-ಸಾಂಸಾರಿಕ ಬಂಧನದಿಂದ ರಹಿತನಾದ ಆತ್ಮಸ್ವರೂಪನು, 453 ಸರ್ವಜ್ಞಃ- ಎಲ್ಲವನ್ನೂ ತಿಳಿದಿರುವವನು, 454 ಜ್ಞಾನಮುತ್ತಮಮ್-ಸರ್ವೋತ್ಕೃಷ್ಟ ಜ್ಞಾನಸ್ವರೂಪನು, ॥61॥
(ಶ್ಲೋಕ-62)
ಮೂಲಮ್
ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ ।
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ ॥
ಅನುವಾದ
455 ಸುವ್ರತಃ- ಭಕ್ತಪಾಲನಾದಿ ಶ್ರೇಷ್ಠ ವ್ರತಗಳುಳ್ಳವನು, 456 ಸುಮುಖಃ- ಸುಂದರ ಮತ್ತು ಪ್ರಸನ್ನ ಮುಖವುಳ್ಳವನು, 457 ಸೂಕ್ಷ್ಮಃ- ಅಣುವಿಗಿಂತಲೂ ಅಣುವಾಗಿರುವವನು, 458 ಸುಘೋಷಃ- ಸುಂದರ ಮತ್ತು ಗಂಭೀರ ವಾಣಿಯಿಂದ ಮಾತನಾಡುವವನು, 459 ಸುಖದಃ- ತನ್ನ ಭಕ್ತರಿಗೆ ಎಲ್ಲಾ ಪ್ರಕಾರದಿಂದಲೂ ಸುಖವನ್ನುಂಟುಮಾಡುವವನು, 460 ಸುಹೃತ್- ಪ್ರಾಣಿಮಾತ್ರರ ಮೇಲೆ ಅಹೈತುಕ ದಯೆಗೈಯ್ಯುವ ಪರಮ ಮಿತ್ರನು, 461 ಮನೋಹರಃ- ತನ್ನ ರೂಪ-ಲಾವಣ್ಯಗಳಿಂದ ಮತ್ತು ಮಧುರ ಮಾತಿನಿಂದ ಎಲ್ಲರ ಮನಸ್ಸನ್ನು ಅಪಹರಿಸುವವನು 462 ಜಿತಕ್ರೋಧಃ- ಕ್ರೋಧದ ಮೇಲೆ ವಿಜಯಪಡೆದವನು ಅರ್ಥಾತ್ ತನ್ನ ಜೊತೆ ಅತ್ಯಂತ ಅನುಚಿತವಾಗಿ ನಡೆದುಕೊಂಡವರ ಮೇಲೆಯೂ ಕೂಡ ಕೋಪಿಸಿಕೊಳ್ಳದಿರುವವನು, 463 ವೀರಬಾಹುಃ- ಅತ್ಯಂತ ಪರಾಕ್ರಮಶಾಲಿಗಳಾದ ಭುಜಗಳಿಂದ ಕೂಡಿರುವವನು, 464 ವಿದಾರಣಃ- ಅಧರ್ಮಿಗಳನ್ನು ನಷ್ಟ ಮಾಡುವವನು, ॥62॥
(ಶ್ಲೋಕ-63)
ಮೂಲಮ್
ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ ।
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ ॥
ಅನುವಾದ
465 ಸ್ವಾಪನಃ- ಪ್ರಳಯ ಕಾಲದಲ್ಲಿ ಸಮಸ್ತ ಜೀವಿಗಳನ್ನೂ ಅಜ್ಞಾನ ನಿದ್ರೆಯಲ್ಲಿ ಮಲಗಿಸುವವನು, 466 ಸ್ವವಶಃ- ಸ್ವತಂತ್ರನು, 467 ವ್ಯಾಪೀ- ಆಕಾಶದಂತೆ ಸರ್ವವ್ಯಾಪಿಯು, 468 ನೈಕಾತ್ಮಾ- ಪ್ರತಿಯುಗದಲ್ಲೂ ಲೋಕೋದ್ಧಾರಕ್ಕಾಗಿ ಅನೇಕ ರೂಪಗಳನ್ನು ಧರಿಸುವವನು, 469 ನೈಕಕರ್ಮಕೃತ್- ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯ ರೂಪಿ ಹಾಗೂ ಭಿನ್ನ-ಭಿನ್ನ ಅವತಾರಗಳಲ್ಲಿ ಮನೋಹರ ಲೀಲಾ ರೂಪೀ ಅನೇಕ ಕರ್ಮ ಮಾಡುವವನು, 470 ವತ್ಸರಃ- ಎಲ್ಲರ ನಿವಾಸಸ್ಥಾನನು, 471 ವತ್ಸಲಃ- ಭಕ್ತ ವತ್ಸಲನು, 472 ವತ್ಸೀ- ವೃಂದಾವನದಲ್ಲಿ ಕರುಗಳನ್ನು ಪಾಲನೆ ಮಾಡುವವನು, 473 ರತ್ನಗರ್ಭಃ- ರತ್ನಗಳನ್ನು ತನ್ನ ಗರ್ಭದಲ್ಲಿ ಧರಿಸಿಕೊಂಡಿರುವ ಸಮುದ್ರ ರೂಪನು, 474 ಧನೇಶ್ವರಃ- ಎಲ್ಲಾ ಪ್ರಕಾರದ ಧನ ಸಂಪತ್ತಿನ ಒಡೆಯನು, ॥63॥
(ಶ್ಲೋಕ-64)
ಮೂಲಮ್
ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್ ।
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ ॥
ಅನುವಾದ
475 ಧರ್ಮಗುಪ್- ಧರ್ಮದ ರಕ್ಷಣೆ ಮಾಡುವವನು, 476 ಧರ್ಮಕೃತ್- ಧರ್ಮ ಸ್ಥಾಪನೆಗಾಗಿ ಸ್ವತಃ ಧರ್ಮದ ಆಚರಣೆ ಮಾಡುವವನು, 477 ಧರ್ಮೀ- ಸಂಪೂರ್ಣ ಧರ್ಮಗಳಿಗೂ ಆಧಾರನೂ, 478 ಸತ್- ಸತ್ಯರೂಪನು, 479 ಅಸತ್- ಸ್ಥೂಲ ಜಗತ್ಸ್ವರೂಪನು, 480 ಕ್ಷರಮ್- ಸರ್ವಭೂತಮಯನು, 481 ಅಕ್ಷರಮ್ - ಅವಿನಾಶಿಯು, 482 ಅವಿಜ್ಞಾತಾ- ಕ್ಷೇತ್ರಜ್ಞ ಜೀವಾತ್ಮನನ್ನು ವಿಜ್ಞಾತಾ ಎಂದು ಹೇಳುತ್ತಾರೆ, ಅವನಿಗಿಂತ ವಿಲಕ್ಷಣನಾದ ಭಗವಾನ್ ವಿಷ್ಣವು, 483 ಸಹಸ್ರಾಂಶುಃ- ಸಾವಿರಾರು ಕಿರಣಗಳುಳ್ಳ ಸೂರ್ಯಸ್ವರೂಪನು, 484 ವಿಧಾತಾ- ಎಲ್ಲರನ್ನೂ ಉತ್ತಮ ರೀತಿಯಲ್ಲಿ ಧರಿಸುವವನು, 485 ಕೃತಲಕ್ಷಣಃ- ಶ್ರೀವತ್ಸಾದಿ ಚಿಹ್ನೆಗಳನ್ನು ಧರಿಸಿರುವವನು, ॥64॥
(ಶ್ಲೋಕ-65)
ಮೂಲಮ್
ಗಭಸ್ತಿನೇಮಿಃ ಸತ್ತ್ವತಃ ಸಿಂಹೋ ಭೂತಮಹೇಶ್ವರಃ ।
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ ॥
ಅನುವಾದ
486 ಗಭಸ್ತಿನೇಮಿಃ- ಕಿರಣಗಳ ಮಧ್ಯದಲ್ಲಿ ಸೂರ್ಯರೂಪದಿಂದ ಸ್ಥಿತನಾಗಿರುವವನು, 487 ಸತ್ತ್ವಸ್ಥಃ- ಅಂತರ್ಯಾಮಿ ರೂಪದಿಂದ ಸಮಸ್ತ ಪ್ರಾಣಿಗಳ ಅಂತಃಕರಣದಲ್ಲಿ ಸ್ಥಿತನಾಗಿರುವವನು, 488 ಸಿಂಹಃ- ಭಕ್ತ ಪ್ರಹ್ಲಾದನಿಗಾಗಿ ನೃಸಿಂಹರೂಪವನ್ನು ಧರಿಸಿದವನು, 489 ಭೂತ ಮಹೇಶ್ವರಃ- ಸಂಪೂರ್ಣ ಪ್ರಾಣಿಗಳಿಗೂ ಮಹಾನ್ ಈಶ್ವರನು, 490 ಆದಿದೇವಃ- ಎಲ್ಲರ ಆದಿ ಕಾರಣನು ಮತ್ತು ದಿವ್ಯ ಸ್ವರೂಪನು, 491 ಮಹಾದೇವಃ- ಜ್ಞಾನಯೋಗ ಮತ್ತು ಐಶ್ವರ್ಯಾದಿ ಮಹಿಮೆಗಳಿಂದ ಕೂಡಿದವನು, 492 ದೇವೇಶಃ- ಸಮಸ್ತ ದೇವತೆಗಳ ಸ್ವಾಮಿಯು, 493 ದೇವಭೃದ್ಗುರುಃ- ದೇವತೆಗಳನ್ನು ವಿಶೇಷ ರೂಪದಿಂದ ಪಾಲನೆ-ಪೋಷಣೆ ಮಾಡುವವನು, ಅವರ ಪರಮ ಗುರು, ॥65॥
(ಶ್ಲೋಕ-66)
ಮೂಲಮ್
ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ ।
ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ ॥
ಅನುವಾದ
494 ಉತ್ತರಃ- ಸಂಸಾರ-ಸಾಗರದಿಂದ ಉದ್ಧಾರ ಮಾಡುವವನು ಮತ್ತು ಸರ್ವಶ್ರೇಷ್ಠನು, 495 ಗೋಪತಿಃ- ಗೋಪಾಲ ರೂಪದಿಂದ ಗೋವುಗಳನ್ನು ರಕ್ಷಿಸುವವನು, 496 ಗೋಪ್ತಾ- ಸಮಸ್ತ ಪ್ರಾಣಿಗಳನ್ನೂ ಪಾಲನೆ ಮತ್ತು ರಕ್ಷಣೆ ಮಾಡುವವನು, 497 ಜ್ಞಾನಗಮ್ಯಃ- ಜ್ಞಾನದ ಮೂಲಕ ತಿಳಿಯಲ್ಪಡುವವನು, 498 ಪುರಾತನಃ- ಸದಾ ಏಕರಸವಾಗಿ ಇರುವವನು, ಎಲ್ಲರ ಆದಿ ಪುರುಷನು, 499 ಶರೀರಭೂತಭೃತ್- ಶರೀರದ ಉತ್ಪಾದಕ ಪಂಚಭೂತಗಳನ್ನು ಪ್ರಾಣರೂಪದಿಂದ ಪಾಲಿಸುವವನು 500 ಭೋಕ್ತಾ- ನಿರತಿಶಯ ಪರಮಾನಂದವನ್ನು ಭೋಗಿಸುವವನು 501 ಕಪೀಂದ್ರಃ- ಕಪಿಗಳಿಗೆ ಒಡೆಯನಾದ ಶ್ರೀರಾಮನು, 502 ಭೂರಿದಕ್ಷಿಣಃ- ಶ್ರೀರಾಮಾದಿ ಅವತಾರಗಳಲ್ಲಿ ಯಜ್ಞ ಮಾಡುವಾಗ ಬಹಳಷ್ಟು ದಕ್ಷಿಣೆಯನ್ನು ಕೊಡುವವನು, ॥66॥
(ಶ್ಲೋಕ-67)
ಮೂಲಮ್
ಸೋಮಪೋಽಮೃತಪಃ ಸೋಮಃ ಪುರುಜಿತ್ಪುರುಸತ್ತಮಃ ।
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ವತಾಂಪತಿಃ ॥
ಅನುವಾದ
503 ಸೋಮಪಃ- ಯಜ್ಞಗಳಲ್ಲಿ ದೇವರೂಪದಿಂದ ಮತ್ತು ಯಜಮಾನರೂಪದಿಂದ ಸೋಮರಸವನ್ನು ಪಾನ ಮಾಡುವವನು, 504 ಅಮೃತಪಃ- ಸಮುದ್ರ-ಮಥನದಿಂದ ಅಮೃತವನ್ನು ದೇವತೆಗಳಿಗೆ ಕುಡಿಸಿ ತಾನೂ ಕುಡಿಯುವವನು, 505 ಸೋಮಃ- ವನಸ್ಪತಿಯಾದಿ ಔಷಧಿಗಳ ಪೋಷಣೆ ಮಾಡುವ ಚಂದ್ರರೂಪಿಯು, 506 ಪುರುಜಿತ್- ಅನೇಕರ ಮೇಲೆ ವಿಜಯವನ್ನು ಗಳಿಸಿದವನು, 507 ಪುರುಸತ್ತಮಃ- ವಿಶ್ವರೂಪಿಯು ಮತ್ತು ಅತ್ಯಂತ ಶ್ರೇಷ್ಠನು, 508 ವಿನಯಃ- ದುಷ್ಟರನ್ನು ದಂಡಿಸುವವನು, 509 ಜಯಃ- ಎಲ್ಲರ ಮೇಲೆ ವಿಜಯವನ್ನು ಪಡೆಯುವವನು, 510 ಸತ್ಯಸಂಧಃ- ಸತ್ಯಸಂಕಲ್ಪವುಳ್ಳವನು, 511 ದಾಶಾರ್ಹಃ- ದಾಶಾರ್ಹ ಕುಲದಲ್ಲಿ ಪ್ರಕಟನಾಗುವವನು, 512 ಸಾತ್ವತಾಂ ಪತಿಃ- ಯಾದವ ಮತ್ತು ತನ್ನ ಭಕ್ತರ ಒಡೆಯನು ಅಂದರೆ ಅವರ ಯೋಗಕ್ಷೇಮವನ್ನು ನಡೆಸುವವನು, ॥67॥
(ಶ್ಲೋಕ-68)
ಮೂಲಮ್
ಜೀವೋ ವಿನಯಿತಾ ಸಾಕ್ಷೀ ಮುಕುಂದೋಽಮಿತವಿಕ್ರಮಃ ।
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಽಂತಕಃ ॥
ಅನುವಾದ
513 ಜೀವಃ- ಕ್ಷೇತ್ರಜ್ಞರೂಪದಿಂದ ಪ್ರಾಣಗಳನ್ನು ಧರಿಸುವವನು, 514 ವಿನಯಿತಾಸಾಕ್ಷೀ- ತನಗೆ ಶರಣಾಗತರಾದ ಭಕ್ತರ ವಿನಯಭಾವವನ್ನು ತತ್ಕಾಲದಲ್ಲಿಯೇ ಪ್ರತ್ಯಕ್ಷ ಅನುಭವ ಮಾಡಿಕೊಳ್ಳುವವನು, 515 ಮುಕುಂದಃ- ಮುಕ್ತಿಯನ್ನು ಕೊಡುವವನು, 516 ಅಮಿತ ವಿಕ್ರಮಃ- ವಾಮನಾವತಾರದಲ್ಲಿ ಪೃಥ್ವಿಯನ್ನು ಅಳೆಯುವ ಸಂದರ್ಭದಲ್ಲಿ ಅತ್ಯಂತ ವಿಶಾಲವಾದ ಹೆಜ್ಜೆಯಿಟ್ಟವನು, 517 ಅಂಭೋನಿಧಿಃ- ನೀರಿನ ನೆಲೆಯಾದ ಸಮುದ್ರ ಸ್ವರೂಪನು, 518 ಅನಂತಾತ್ಮಾ- ಅನಂತಮೂರ್ತಿಯು, 519 ಮಹೋದಧಿಶಯಃ- ಪ್ರಳಯ ಕಾಲದ ಮಹಾನ್ ಸಮುದ್ರದಲ್ಲಿ ಮಲಗಿಕೊಳ್ಳುವವನು, 520 ಅಂತಕಃ- ಪ್ರಾಣಿಗಳ ಸಂಹಾರ ಮಾಡುವ ಮೃತ್ಯು ಸ್ವರೂಪನು ॥68॥
(ಶ್ಲೋಕ-69)
ಮೂಲಮ್
ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ ।
ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ ॥
ಅನುವಾದ
521 ಅಜಃ- ಅ ಕಾರವು ಭಗವಾನ್ ವಿಷ್ಮುವಿನ ವಾಚಕವಾಗಿದೆ. ಅದರಿಂದ ಉತ್ಪತ್ತಿಯಾಗುವ ಬ್ರಹ್ಮದೇವರು, 522 ಮಹಾರ್ಹಃ- ಪೂಜನೀಯನು, 523 ಸ್ವಾಭಾವ್ಯಃ- ನಿತ್ಯ ಸಿದ್ಧನಾದ ಕಾರಣ ಸ್ವಾಭಾವಿಕ ಹುಟ್ಟದೇ ಇರುವ, 524 ಜಿತಾಮಿತ್ರಃ- ರಾವಣ, ಶಿಶುಪಾಲಾದಿ ವೈರಿಗಳನ್ನೂ ಜಯಿಸುವವನು, 525 ಪ್ರಮೋದನಃ- ಸ್ಮರಣ ಮಾತ್ರದಿಂದಲೇ ನಿತ್ಯ ಆನಂದಪಡಿಸುವವನು, 526 ಆನಂದಃ- ಆನಂದ ಸ್ವರೂಪನು, 527 ನಂದನಃ- ಎಲ್ಲರನ್ನು ಪ್ರಸನ್ನಗೊಳಿಸುವವನು, 528 ನಂದಃ- ಸಕಲೈಶ್ವರ್ಯ ಸಂಪನ್ನನು, 529 ಸತ್ಯಧರ್ಮಾ- ಧರ್ಮಜ್ಞಾನಾದಿ ಸಕಲ ಗುಣಗಳಿಂದ ಕೂಡಿದವನು, 530 ತ್ರಿವಿಕ್ರಮಃ- ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನೂ ಅಳೆದವನು, ॥69॥
(ಶ್ಲೋಕ-70)
ಮೂಲಮ್
ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ ।
ತ್ರಿಪದಸಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ ॥
ಅನುವಾದ
531 ಮಹರ್ಷಿಃ ಕಪಿಲಾಚಾರ್ಯಃ- ಸಾಂಖ್ಯ ಶಾಸ್ತ್ರದ ಪ್ರಣೇತಾ ಭಗವಾನ್ ಕಪಿಲಾಚಾರ್ಯನು, 532 ಕೃತಜ್ಞಃ - ಮಾಡಲ್ಪಟ್ಟದ್ದನ್ನು ಸ್ಮರಿಸಿಕೊಳ್ಳುವನು ಅಂದರೆ ತನ್ನ ಭಕ್ತರ ಸೇವೆಯನ್ನು ಬಹಳವಾಗಿ ಮೆಚ್ಚಿಕೊಂಡು ತನ್ನನ್ನು ಅವರಿಗೆ ಋಣಿಯೆಂದು ತಿಳಿದುಕೊಳ್ಳುವವನು, 533 ಮೇದಿನೀಪತಿಃ- ಪೃಥ್ವಿಯ ಒಡೆಯನು, 534 ತ್ರಿಪದಃ- ತ್ರಿಲೋಕರೂಪೀ ಮೂರು ಕಾಲುಗಳುಳ್ಳ ವಿಶ್ವರೂಪನು, 535 ತ್ರಿದಶಾಧ್ಯಕ್ಷಃ- ದೇವತೆಗಳ ಒಡೆಯನು, 536 ಮಹಾಶೃಂಗಃ- ಮತ್ಸ್ಯಾವತಾರದಲ್ಲಿ ಮಹಾನ್ ಶೃಂಗವನ್ನು ಧರಿಸಿರುವವನು, 537 ಕೃತಾಂತಕೃತ್- ಸ್ಮರಣೆ ಮಾಡುವವರ ಸಮಸ್ತ ಕರ್ಮಗಳನ್ನೂ ಅಂತ್ಯಗೊಳಿಸುವವನು, ॥70॥
(ಶ್ಲೋಕ-71)
ಮೂಲಮ್
ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ ।
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ ॥
ಅನುವಾದ
538 ಮಹಾವರಾಹಃ- ಹಿರಣ್ಯಾಕ್ಷನ ಸಂಹಾರಕ್ಕಾಗಿ ಮಹಾವರಾಹ ರೂಪವನ್ನು ಧರಿಸಿದವನು, 539 ಗೋವಿಂದಃ- ನಾಶವಾದ ಪೃಥ್ವಿಯನ್ನು ಪುನಃ ಪಡೆದುಕೊಳ್ಳುವವನು, 540 ಸುಷೇಣಃ- ಪಾರ್ಷದರ ಸಮುದಾಯ ರೂಪೀ ಸುಂದರ ಸೈನ್ಯದಿಂದ ಸುಸಜ್ಜಿತನಾದವನು, 541 ಕನಕಾಂಗದೀ- ಬಂಗಾರದ ತೋಳಬಂದಿ ಧರಿಸಿರುವವನು, 542 ಗುಹ್ಯಃ- ಹೃದಯಾಕಾಶದಲ್ಲಿ ಅಡಗಿರುವವನು, 543 ಗಂಭೀರಃ- ಅತಿಶಯ ಗಂಭೀರ ಸ್ವಭಾವದವನು, 544 ಗಹನಃ- ಅವನ ಸ್ವರೂಪದಲ್ಲಿ ಪ್ರವೇಶಿಸಲು ಅತ್ಯಂತ ಕಠಿಣವಾಗಿರುವಂತಹವನು, 545 ಗುಪ್ತಃ- ವಾಣಿ ಮತ್ತು ಮನಸ್ಸುಗಳಿಂದ ತಿಳಿಯಲು ಸಾಧ್ಯನಾಗದಿರುವವನು, 546 ಚಕ್ರಗದಾಧರಃ- ಭಕ್ತರ ರಕ್ಷಣೆಗಾಗಿ ಚಕ್ರ ಮತ್ತು ಗದೆ ಇತ್ಯಾದಿ ದಿವ್ಯ ಆಯುಧಗಳನ್ನು ಧರಿಸಿರುವವನು, ॥71॥
(ಶ್ಲೋಕ-72)
ಮೂಲಮ್
ವೇಧಾಃ ಸ್ವಾಂಗೋಽಜಿತಃ ಕೃಷ್ಣೋ ದೃಢಃ ಸಂಕರ್ಷಣೋಚ್ಯುತಃ ।
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ ॥
ಅನುವಾದ
547 ವೇಧಾಃ- ಸಮಸ್ತವಿಧಾನವನ್ನೂ ರಚನೆ ಮಾಡುವವನು, 548 ಸ್ವಾಂಗಃ- ಕಾರ್ಯ ಮಾಡುವುದರಲ್ಲಿ ಸ್ವತಃ ಸಹಕಾರಿಯಾದವನು, 549 ಅಜಿತಃ- ಯಾರಿಂದಲೂ ಜಯಿಸಲ್ಪಡದವನು. 550 ಕೃಷ್ಣಃ- ಶ್ಯಾಮಸುಂದರ ಶ್ರೀಕೃಷ್ಣನು, 551 ದೃಢಃ- ತನ್ನ ಸ್ವರೂಪ, ಸಾಮರ್ಥ್ಯಗಳಿಂದ ಎಂದೆಂದಿಗೂ ಸಹ ಚ್ಯುತನಾಗದವನು, 552 ಸಂಕರ್ಷಣೋಚ್ಯುತಃ- ಪ್ರಳಯ ಕಾಲದಲ್ಲಿ ಒಮ್ಮೆಗೆ ಎಲ್ಲವನ್ನೂ ಸಂಹಾರ ಮಾಡುವವನು, ಮತ್ತು ಯಾವ ಕಾರಣದಿಂದ ಎಂದಿಗೂ ಪತನನಾಗದಿರುವ ಅವಿನಾಶಿಯು, 553 ವರುಣಃ- ಜಲದ ಸ್ವಾಮಿ ವರುಣದೇವನು, 554 ವಾರುಣಃ- ವರುಣನ ಮಗ ವಸಿಷ್ಠ ಸ್ವರೂಪನು, 555 ವೃಕ್ಷಃ- ಅಶ್ವತ್ಥವೃಕ್ಷ ರೂಪನು, 556 ಪುಷ್ಕರಾಕ್ಷಃ- ಚಿಂತನೆ ಮಾಡುವುದರಿಂದ ಹೃದಯ ಕಮಲದಲ್ಲಿ ಪ್ರತ್ಯಕ್ಷನಾಗುವವನು, 557 ಮಹಾಮನಾಃ- ಸಂಕಲ್ಪ ಮಾತ್ರದಿಂದಲೇ ಉತ್ಪತ್ತಿ ಸ್ಥಿತಿ ಮತ್ತು ಸಂಹಾರಾದಿ ಸಮಸ್ತ ಲೀಲೆ ಮಾಡುವ ಶಕ್ತಿಯುಳ್ಳವನು, ॥72॥
(ಶ್ಲೋಕ-73)
ಮೂಲಮ್
ಭಗವಾನ್ ಭಗಹಾಽನಂದೀ ವನಮಾಲೀ ಹಲಾಯುಧಃ ।
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ ॥
ಅನುವಾದ
558 ಭಗವಾನ್-ಉತ್ಪತ್ತಿ ಮತ್ತು ಪ್ರಳಯ, ಪ್ರಾಣಿಗಳ ಆಗಮನ ಮತ್ತು ನಿರ್ಗಮನ, ಹಾಗೂ ವಿದ್ಯೆ ಮತ್ತು ಅವಿದ್ಯೆಗಳನ್ನು ತಿಳಿದವನು ಜೊತೆಗೆ ಸರ್ವೈಶ್ವರ್ಯಾದಿ ಆರು ಭಗಗಳಿಂದ ಕೂಡಿದವನು, 559 ಭಗಹಾ-ತನ್ನ ಭಕ್ತರ ಪ್ರೇಮವನ್ನು ಹೆಚ್ಚಿಸುವುದಕ್ಕಾಗಿ ಅವರ ಐಶ್ವರ್ಯವನ್ನು ಹರಣ ಮಾಡುವವನು ಮತ್ತು ಪ್ರಳಯ ಕಾಲದಲ್ಲಿ ಎಲ್ಲರ ಐಶ್ವರ್ಯವನ್ನೂ ನಾಶಮಾಡುವವನು, 560 ಆನಂದೀ-ಪರಮ ಸುಖ ಸ್ವರೂಪನು, 561 ವನಮಾಲೀ-‘ವೈಜಯಂತಿ’ ಎಂಬ ವನಮಾಲೆಯನ್ನು ಧರಿಸಿದವನು, 562 ಹಲಾಯುಧಃ-ನೇಗಿಲರೂಪೀ ಆಯುಧವನ್ನು ಧರಿಸಿದವನು, ಬಲಭದ್ರ ಸ್ವರೂಪನು, 563 ಆದಿತ್ಯಃ- ಅದಿತಿಯ ಪುತ್ರ ಭಗವಾನ್ ವಾಮನನು, 564 ಜ್ಯೋತಿರಾದಿತ್ಯಃ-ಸೂರ್ಯಮಂಡಲದಲ್ಲಿ ವಿರಾಜಿಸುವ ಜ್ಯೋತಿಃ ಸ್ವರೂಪನು, 565 ಸಹಿಷ್ಣುಃ-ಸಮಸ್ತ ದ್ವಂದ್ವಗಳನ್ನೂ ಸಹಿಸಿಕೊಳ್ಳುವುದರಲ್ಲಿ ಸಮರ್ಥನು, 566 ಗತಿಸತ್ತಮಃ-ಸತ್ಪುರುಷರ ಪರಮ ಗತಿಯೂ, ಸರ್ವಶ್ರೇಷ್ಠನು, ॥73॥
(ಶ್ಲೋಕ-74)
ಮೂಲಮ್
ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ ।
ದಿವಃ ಸ್ಪೃಕ್ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ ॥
ಅನುವಾದ
567 ಸುಧನ್ವಾ-ಅತಿಶಯ ಸುಂದರ ಶಾರ್ಙ್ಗವೆಂಬ ಧನುಸ್ಸನ್ನು ಧರಿಸಿದವನು, 568 ಖಂಡಪರಶುಃ-ಶತ್ರುಗಳನ್ನು ಸಂಹರಿಸುವ ಕೊಡಲಿಯನ್ನು ಧರಿಸಿರುವ ಪರುಶರಾಮ ಸ್ವರೂಪನು, 569 ದಾರುಣಃ-ಸನ್ಮಾರ್ಗವಿರೋಧಿಗಳಿಗೆ ಮಹಾಭಯಂಕರನು, 570 ದ್ರವಿಣಪ್ರದಃ-ಅರ್ಥಾರ್ಥಿ ಭಕ್ತರಿಗೆ ಧನ-ಸಂಪತ್ತನ್ನು ಕೊಡುವವನು, 571 ದಿವಃಸ್ಪೃಕ್- ಸ್ವರ್ಗ ಲೋಕದವರೆಗೂ ವ್ಯಾಪ್ತನಾದವನು, 572 ಸರ್ವದೃಗ್ ವ್ಯಾಸಃ- ಸಮಸ್ತವನ್ನೂ ನೋಡುವವನು ಮತ್ತು ವೇದಗಳನ್ನು ವಿಭಾಗಿಸಿದ ಶ್ರೀಕೃಷ್ಣದ್ವೈಪಾಯನ ವ್ಯಾಸರೂಪನು, 573 ವಾಚಸ್ವತಿರಯೋನಿಜಃ- ವಿದ್ಯೆಗೆ ಒಡೆಯನೂ ಹಾಗೂ ಅಯೋನಿಜನಾಗಿ ಸ್ವಯಂ ಪ್ರಕಟನಾಗುವವನು, ॥74॥
(ಶ್ಲೋಕ-75)
ಮೂಲಮ್
ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ ।
ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್ ॥
ಅನುವಾದ
574 ತ್ರಿಸಾಮಾ- ದೇವವ್ರತಾದಿ ಮೂರು ಸಾಮಶ್ರುತಿಗಳ ಮೂಲಕ ಸ್ತುತಿಸಲ್ಪಡುವಂತಹ ಪರಮೇಶ್ವರನು, 575 ಸಾಮಗಃ- ಸಾಮವೇದದ ಗಾನ ಮಾಡುವವನು, 576 ಸಾಮ- ಸಾಮವೇದ ಸ್ವರೂಪನು, 577 ನಿರ್ವಾಣಮ್- ಪರಮಶಾಂತಿಯ ಆಗರವಾದ ಪರಮಾನಂದ ಸ್ವರೂಪನು, 578 ಭೇಷಜಮ್- ಭವರೋಗಕ್ಕೆ ಔಷಧಿಯಂತಿರುವವನು, 579 ಭಿಷಕ್- ಸಂಸಾರ ರೋಗದ ನಾಶ ಮಾಡುವುದಕ್ಕಾಗಿ ಗೀತಾರೂಪ ಉಪದೇಶಾಮೃತವನ್ನು ಪಾನ ಮಾಡಿಸುವಂತಹ ಪರಮ ವೈದ್ಯನು, 580 ಸಂನ್ಯಾಸಕೃತ್- ಮೋಕ್ಷಕ್ಕಾಗಿ ಸಂನ್ಯಾಸಾಶ್ರಮ ಮತ್ತು ಸಂನ್ಯಾಸ ಯೋಗವನ್ನು ರಚಿಸಿದವನು, 581 ಶಮಃ- ಶಮ (ಬಾಹ್ಯ ಇಂದ್ರಿಯ ನಿಗ್ರಹ)ದ ಉಪದೇಶ ಮಾಡುವವನು, 582 ಶಾಂತಃ- ಪರಮಶಾಂತ ಸ್ವರೂಪನು, 583 ನಿಷ್ಠಾ- ಎಲ್ಲರ ಸ್ಥಿತಿಗೆ ಆಧಾರನಾದ ಅಧಿಷ್ಠಾನ ಸ್ವರೂಪನು, 584 ಶಾಂತಿಃ- ಪರಮ ಶಾಂತಿ ಸ್ವರೂಪನು, 585 ಪರಾಯಣಮ್- ಮುಮುಕ್ಷು ಪುರುಷರಿಗೆ ಪರಮೋತ್ಕೃಷ್ಠವಾದ ಪ್ರಾಪ್ಯಸ್ಥಾನನು, ॥75॥
(ಶ್ಲೋಕ-76)
ಮೂಲಮ್
ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ ।
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ ॥
ಅನುವಾದ
586 ಶುಭಾಙ್ಗಃ- ಅತ್ಯಂತ ಮನೋಹರವಾದ ಪರಮ ಸುಂದರ ಅಂಗಾಂಗಗಳುಳ್ಳವನು, 587 ಶಾಂತಿದಃ- ಪರಮ ಶಾಂತಿ ಕೊಡುವವನು, 588 ಸ್ರಷ್ಟಾ-ಸೃಷ್ಟಿಯ ಆದಿಯಲ್ಲಿ ಎಲ್ಲವನ್ನೂ ಸೃಷ್ಟಿಸುವನು, 589 ಕುಮುದಃ- ಭೂಮಿಯ ಮೇಲೆ ಪ್ರಸನ್ನತೆಯಿಂದ ಲೀಲೆ ಮಾಡುವವನು, 590 ಕುವಲೇಶಯಃ- ಕ್ಷೀರಸಾಗರದಲ್ಲಿ ಶೇಷಶಾಯಿಯಾಗಿರುವವನು, 591 ಗೋಹಿತಃ- ಗೋಪಾಲಕನಾಗಿ ಗೋವುಗಳನ್ನು ಕಾಪಾಡಿದವನು ಮತ್ತು ಅವತಾರ ಧರಿಸಿ ಭೂಮಿಯ ಭಾರವನ್ನು ಇಳಿಸಿ ಹಿತವನ್ನು ಮಾಡುವವನು, 592 ಗೋಪತಿಃ- ಪೃಥ್ವೀ ಹಾಗೂ ಗೋವುಗಳಿಗೆ ಒಡೆಯನು, 593 ಗೋಪ್ತಾ- ಅವತಾರ ಧರಿಸಿ ಎಲ್ಲರ ಸಮ್ಮುಖದಲ್ಲಿ ಪ್ರಕಟನಾಗುವ ಸಮಯದಲ್ಲಿ ತನ್ನ ಮಾಯೆಯಿಂದ ತನ್ನ ಸ್ವರೂಪವನ್ನು ಮರೆಮಾಡಿಕೊಳ್ಳುವವನು, 594 ವೃಷಭಾಕ್ಷಃ- ಸಕಲ ಇಷ್ಟಾರ್ಥಗಳನ್ನು ವರ್ಷಿಸುವ ಕೃಪಾದೃಷ್ಟಿಯಿಂದ ಕೂಡಿದವನು, 595 ವೃಷಪ್ರಿಯಃ- ಧರ್ಮವನ್ನು ಪ್ರೀತಿಸುವವನು, ॥76॥
(ಶ್ಲೋಕ-77)
ಮೂಲಮ್
ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ ।
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ ॥
ಅನುವಾದ
596 ಅನಿವರ್ತೀ- ರಣಭೂಮಿಯಲ್ಲಿ ಮತ್ತು ಧರ್ಮಪಾಲನೆಯಲ್ಲಿ ಹಿಮ್ಮೆಟ್ಟದಿರುವವನು, 597 ನಿವೃತ್ತಾತ್ಮಾ- ಸ್ವಭಾವದಿಂದಲೇ ವಿಷಯ ವಾಸನಾರಹಿತ-ನಿತ್ಯಶುದ್ಧ ಮನಸ್ಸುಳ್ಳವನು, 598 ಸಂಕ್ಷೇಪ್ತಾ- ವಿಸ್ತೃತವಾದ ವಿಶ್ವವನ್ನು ಪ್ರಳಯಕಾಲದಲ್ಲಿ ಕ್ಷಣ ಮಾತ್ರದಲ್ಲಿ ಸಂಕ್ಷಿಪ್ತಗೊಳಿಸುವವನು, 599 ಕ್ಷೇಮಕೃತ್- ಶರಣಾಗತರನ್ನು ರಕ್ಷಿಸುವವನು, 600 ಶಿವಃ- ಸ್ಮರಣ ಮಾತ್ರದಿಂದಲೇ ಎಲ್ಲರನ್ನೂ ಪವಿತ್ರಗೊಳಿಸುವ ಶ್ರೇಯಃ ಸ್ವರೂಪನು, 601 ಶ್ರೀವತ್ಸವಕ್ಷಾಃ- ಶ್ರೀವತ್ಸ ಹೆಸರಿನ ಚಿಹ್ನೆಯನ್ನು ಎದೆಯಲ್ಲಿ ಧರಿಸಿರುವವನು, 602 ಶ್ರೀವಾಸಃ- ಶ್ರೀಲಕ್ಷ್ಮಿಯ ನಿವಾಸ ಸ್ಥಾನನು, 603 ಶ್ರೀಪತಿಃ- ಪರಮ ಶಕ್ತಿರೂಪೀ ಲಕ್ಷ್ಮಿಯ ಸ್ವಾಮಿಯು, 604 ಶ್ರೀಮತಾಂ ವರಃ- ಎಲ್ಲಾ ಪ್ರಕಾರದ ಸಂಪತ್ತು ಮತ್ತು ಐಶ್ವರ್ಯಗಳಿಂದ ಕೂಡಿದ ಬ್ರಹ್ಮಾದಿ ಸಮಸ್ತ ಲೋಕಪಾಲಕರುಗಳಿಗಿಂತ ಶ್ರೇಷ್ಠನು, ॥77॥
(ಶ್ಲೋಕ-78)
ಮೂಲಮ್
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ ।
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ ॥
ಅನುವಾದ
605 ಶ್ರೀದಃ - ಭಕ್ತರಿಗೆ ಶ್ರೀಯನ್ನು ಕೊಡುವವನು, 606 ಶ್ರೀಶಃ- ಲಕ್ಷ್ಮೀಕಾಂತನು, 607 ಶ್ರೀನಿವಾಸಃ- ಶ್ರೀಲಕ್ಷ್ಮಿಯ ಅಂತಃಕರಣದಲ್ಲಿ ಸದಾ ನಿವಾಸಮಾಡುವವನು, 608 ಶ್ರೀನಿಧಿಃ- ಸಕಲ ಸಂಪತ್ತುಗಳಿಗೂ ಆಧಾರನು, 609 ಶ್ರೀವಿಭಾವನಃ- ಎಲ್ಲರಿಗೂ ಅವರವರ ಕರ್ಮಾನು ಸಾರವಾಗಿ ನಾನಾ ಪ್ರಕಾರದ ಐಶ್ವರ್ಯವನ್ನು ಕೊಡುವವನು, 610 ಶ್ರೀಧರಃ- ಜಗಜ್ಜನನೀ ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿರುವವನು, 611 ಶ್ರೀಕರಃ- ಸ್ಮರಣೆ, ಸ್ತವನ, ಮತ್ತು ಅರ್ಚನೆ ಇತ್ಯಾದಿ ಮಾಡುವ ಭಕ್ತರ ಸಂಪತ್ತನ್ನು ವೃದ್ಧಿಪಡಿಸುವವನು, 612 ಶ್ರೇಯಃ- ಶ್ರೇಯಃಸ್ವರೂಪನು, 613 ಶ್ರೀಮಾನ್- ಎಲ್ಲಾ ಪ್ರಕಾರಗಳ ಸಂಪತ್ತುಗಳಿಂದ ಸಮೃದ್ಧಿಯುಳ್ಳವನು, 614 ಲೋಕತ್ರಯಾಶ್ರಯಃ- ಮೂರು ಲೋಕಗಳಿಗೂ ಆಧಾರನು, ॥78॥
(ಶ್ಲೋಕ-79)
ಮೂಲಮ್
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ ।
ವಿಜಿತಾತ್ಮಾಽವಿಧೇಯಾತ್ಮಾ ಸತ್ಕೀರ್ತಿಶ್ಫಿನ್ನಸಂಶಯಃ ॥
ಅನುವಾದ
615 ಸ್ವಕ್ಷಃ-ಮನೋಹರವಾದ ಕೃಪಾಕಟಾಕ್ಷದಿಂದ ಕೂಡಿದ ಪರಮ ಸುಂದರ ಕಣ್ಣುಗಳುಳ್ಳವನು, 616 ಸ್ವಙ್ಗಃ-ಅತಿಶಯ ಕೋಮಲ ಪರಮ ಸುಂದರ ಮನೋಹರವಾದ ಅಂಗಾಂಗಗಳುಳ್ಳವನು, 617 ಶತಾನಂದಃ-ಲೀಲಾಭೇದದಿಂದ ನೂರಾರು ವಿಭಾಗಗಳಲ್ಲಿ ವಿಭಕ್ತ ಆನಂದ ಸ್ವರೂಪನು, 618 ನಂದಿಃ-ಪರಮಾನಂದ ಸ್ವರೂಪನು, 619 ಜ್ಯೋತಿರ್ಗಣೇಶ್ವರಃ-ಜ್ಯೋತಿರ್ಮಯ ನಕ್ಷತ್ರ ಸಮುದಾಯಗಳ ಒಡೆಯನು, 620 ವಿಜಿತಾತ್ಮಾ-ಜಯಿಸಲ್ಪಟ್ಟ ಮನಸ್ಸುಳ್ಳವನು, 621 ಅವಿಧೇಯಾತ್ಮಾ-ಯಾರ ನಿಜ ಸ್ವರೂಪವನ್ನು ಯಾವ ಪ್ರಕಾರದಿಂದಲೂ ಕೂಡ ವರ್ಣಿಸಲಾಗದಂತಹ ಅನಿರ್ವಚನೀಯ ಸ್ವರೂಪನು, 622 ಸತ್ಕೀರ್ತಿಃ- ಸತ್ಯವಾದ ಕೀರ್ತಿಯುಳ್ಳವನು, 623 ಛಿನ್ನಸಂಶಯಃ-ಅಂಗೈಯಲ್ಲಿಟ್ಟ ನೆಲ್ಲಿಕಾಯಿಯಂತೆ ಸಂಪೂರ್ಣ ವಿಶ್ವವನ್ನು ಪ್ರತ್ಯಕ್ಷವಾಗಿ ನೋಡುವವನಾದುದರಿಂದ ಎಲ್ಲಾ ರೀತಿಯ ಸಂಶಯಗಳಿಂದ ರಹಿತನು, ॥79॥
(ಶ್ಲೋಕ-80)
ಮೂಲಮ್
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ ।
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ ॥
ಅನುವಾದ
624 ಉದೀರ್ಣಃ-ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನು, 625 ಸರ್ವತಶ್ಚಕ್ಷುಃ-ಸಮಸ್ತ ವಸ್ತುಗಳನ್ನು ಎಲ್ಲಾ ದಿಕ್ಕುಗಳಲ್ಲಿಯೂ ಸರ್ವದಾ ನೋಡುವ ಶಕ್ತಿವುಳ್ಳವನು, 626 ಅನೀಶಃ-ತನಗೆ ಬೇರೆ ಯಾರೂ ಶಾಸಕರಿಲ್ಲದ ಸ್ವತಂತ್ರನು, 627 ಶಾಶ್ವತ ಸ್ಥಿರಃ- ಯಾವಾಗಲೂ ಏಕರಸನಾಗಿ ಸ್ಥಿರನಾಗಿರುವ ನಿರ್ವಿಕಾರನು, 628 ಭೂಶಯಃ-ಲಂಕೆಗೆ ಹೋಗುವುದಕ್ಕಾಗಿ ಮಾರ್ಗವನ್ನು ಕೇಳುವ ಸಂದರ್ಭದಲ್ಲಿ ಸಮುದ್ರ ತೀರದ ಭೂಮಿಯ ಮೇಲೆ ಮಲಗಿಕೊಂಡಿದ್ದವನು, 629 ಭೂಷಣಃ-ಸ್ವೇಚ್ಛೆಯಿಂದ ನಾನಾ ಅವತಾರವೆತ್ತಿ ತನ್ನ ಚರಣ ಚಿಹ್ನೆಗಳಿಂದ ಭೂಮಿಯ ಶೋಭೆಯನ್ನು ಹೆಚ್ಚಿಸುವವನು, 630 ಭೂತಿಃ-ಸತ್ತಾಸ್ವರೂಪೀ ಮತ್ತು ಸಮಸ್ತ ವಿಭೂತಿಗಳ ಆಧಾರ ಸ್ವರೂಪನು, 631 ವಿಶೋಕಃ-ಎಲ್ಲಾ ಪ್ರಕಾರದಿಂದಲೂ ಶೋಕರಹಿತನಾದವನು, 632 ಶೋಕನಾಶನಃ-ಸ್ಮರಣೆ ಮಾತ್ರದಿಂದಲೇ ಭಕ್ತರ ಶೋಕ-ಸಮೂಹವನ್ನು ನಾಶ ಮಾಡುವವನು, ॥80॥
(ಶ್ಲೋಕ-81)
ಮೂಲಮ್
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ ।
ಅನಿರುದ್ಧೋಽಪ್ರತಿರಥಃ ಪ್ರದ್ಯುಮ್ನೋಽಮಿತವಿಕ್ರಮಃ ॥
ಅನುವಾದ
633 ಅರ್ಚಿಷ್ಮಾನ್- ಚಂದ್ರ-ಸೂರ್ಯ ಮುಂತಾದ ಸಮಸ್ತ ಜ್ಯೋತಿಗಳನ್ನು ದೇದೀಪ್ಯಮಾನಗೊಳಿಸುವ ಅತಿಶಯ ಪ್ರಕಾಶಮಯ ಅನಂತ ಕಿರಣಗಳಿಂದ ಕೂಡಿದವನು, 634 ಅರ್ಚಿತಃ- ಸಮಸ್ತ ಲೋಕಗಳಿಗೂ ಪೂಜ್ಯರಾದ ಬ್ರಹ್ಮಾದಿಗಳಿಂದಲೂ ಸಹ ಪೂಜಿಸಲ್ಪಡುವವನು, 635 ಕುಂಭಃ- ಕೊಡದಂತೆ ಎಲ್ಲರಿಗೂ ಆಶ್ರಯಸ್ಥಾನವಾಗಿರುವವನು, 636 ವಿಶುದ್ಧಾತ್ಮಾ- ಪರಮಶುದ್ಧ ನಿರ್ಮಲ ಆತ್ಮಸ್ವರೂಪನು, 637 ವಿಶೋಧನಃ- ಸ್ಮರಣ ಮಾತ್ರದಿಂದಲೇ ಸಮಸ್ತ ಪಾಪಗಳನ್ನು ನಾಶ ಮಾಡಿ ಭಕ್ತರ ಅಂತಃಕರಣವನ್ನು ಪರಮಶುದ್ಧಿಗೊಳಿಸಿಬಿಡುವವನು, 638 ಅನಿರುದ್ಧಃ- ಯಾರಿಂದಲೂ ಬಂಧಿಸಿಟ್ಟುಕೊಳ್ಳಲಾಗದಂತಹ ಚತುರ್ವ್ಯೂಹಗಳಲ್ಲಿ ಅನಿರುದ್ಧ ಸ್ವರೂಪನು, 639 ಅಪ್ರತಿರಥಃ- ಪ್ರತಿಪಕ್ಷವಿಲ್ಲದವನು, 640 ಪ್ರದ್ಯುಮ್ನಃ- ಪರಮಶ್ರೇಷ್ಠವಾದ ಅಪಾರ ಧನದಿಂದ ಕೂಡಿದ ಚತುರ್ವ್ಯೂಹದಲ್ಲಿ ಪ್ರದ್ಯುಮ್ನ ಸ್ವರೂಪನು, 641 ಅಮಿತವಿಕ್ರಮಃ- ಅಪಾರ ಪರಾಕ್ರಮಶಾಲಿಯು, ॥81॥
(ಶ್ಲೋಕ-82)
ಮೂಲಮ್
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ ।
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ ॥
ಅನುವಾದ
642 ಕಾಲನೇಮಿನಿಹಾ- ಕಾಲನೇಮಿಯೆಂಬ ಅಸುರನನ್ನು ಕೊಂದವನು, 643 ವೀರಃ- ಪರಮ ಶೌರ್ಯಶಾಲಿಯಾದವನು, 644 ಶೌರಿಃ- ಶೂರಕುಲದಲ್ಲಿ ಹುಟ್ಟಿದ ಶ್ರೀಕೃಷ್ಣಸ್ವರೂಪನು, 645 ಶೂರಜನೇಶ್ವರಃ- ಅತಿಶಯವಾದ ಶೌರ್ಯದ ಕಾರಣ ಇಂದ್ರಾದಿ ಶೂರ ವೀರರಿಗೂ ಸಹ ಇಷ್ಟನಾದವನು, 646 ತ್ರಿಲೋಕಾತ್ಮಾ- ಅಂತರ್ಯಾಮೀ ರೂಪದಿಂದ ಮೂರು ಲೋಕಗಳ ಆತ್ಮನಾಗಿರುವವನು, 647 ತ್ರಿಲೋಕೇಶಃ- ಮೂರು ಲೋಕಗಳ ಒಡೆಯನು, 648 ಕೇಶವಃ- ಸೂರ್ಯನ ಕಿರಣರೂಪಿ ಕೇಶಗಳುಳ್ಳವನು, 649 ಕೇಶಿಹಾ- ಕೇಶೀ ಎಂಬ ಅಸುರನನ್ನು ಕೊಂದವನು, 650 ಹರಿಃ- ಸ್ಮರಣ ಮಾತ್ರದಿಂದಲೇ ಸಮಸ್ತ ಪಾಪಗಳನ್ನು ಮತ್ತು ಸಂಸಾರವನ್ನು ಸಮೂಲವಾಗಿ ಹರಣ ಮಾಡುವವನು, ॥82॥
(ಶ್ಲೋಕ-83)
ಮೂಲಮ್
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ ।
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ ॥
ಅನುವಾದ
651 ಕಾಮದೇವಃ- ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಬಯಸುವ ಮನುಷ್ಯರಿಂದ ಇಚ್ಛಿಸಲ್ಪಟ್ಟ ಸಮಸ್ತ ಕಾಮನೆಗಳ ಆಧಾರ ಪರಮ ದೇವನು, 652 ಕಾಮಪಾಲಃ- ಸಕಾಮೀ ಭಕ್ತರ ಕಾಮನೆಗಳನ್ನು ಪೂರ್ತಿಗೊಳಿಸುವವನು, 653 ಕಾಮೀ- ಸ್ವಭಾವದಿಂದಲೇ ಪೂರ್ಣಕಾಮನು, ಮತ್ತು ತನ್ನ ಪ್ರೀತಿ ಪಾತ್ರರನ್ನು ಬಯಸುವವನು, 654 ಕಾಂತಃ- ಪರಮ ಮನೋಹರ ಶ್ಯಾಮಸುಂದರ ದೇಹ ಧರಿಸಿರುವ ಗೋಪೀಜನವಲ್ಲಭನು, 655 ಕೃತಾಗಮಃ- ಸಮಸ್ತ ವೇದ ಮತ್ತು ಶಾಸ್ತ್ರಗಳನ್ನು ರಚಿಸಿದವನು, 656 ಅನಿರ್ದೇಶ್ಯವಪುಃ- ಆತನ ದಿವ್ಯ ಸ್ವರೂಪವನ್ನು ಯಾವ ರೀತಿಯಿಂದಲೂ ಸಹ ವರ್ಣಿಸಲಾಗದಂತಹ ಅನಿರ್ವಚನೀಯ ಶರೀರವುಳ್ಳವನು, 657 ವಿಷ್ಣುಃ- ಶೇಷಶಾಯೀ ಭಗವಾನ್ ವಿಷ್ಣುವು, 658 ವೀರಃ- ಕಾಲಿಲ್ಲದೆ ಗಮನ ಮಾಡುವುದೇ ಆದಿ ದಿವ್ಯ ಶಕ್ತಿಗಳಿಂದ ಕೂಡಿರುವವನು, 659 ಅನಂತಃ- ಆತನ ಸ್ವರೂಪ, ಶಕ್ತಿ, ಐಶ್ವರ್ಯ, ಸಾಮರ್ಥ್ಯ ಮತ್ತು ಗುಣಗಳನ್ನು ಯಾರೂ ಸಹ ಇಷ್ಟೇ ಎಂದು ಕಂಡುಕೊಳ್ಳಲಾಗದಂತಹ ಅವಿನಾಶೀ ಗುಣ, ಪ್ರಭಾವ ಮತ್ತು ಶಕ್ತಿಗಳಿಂದ ಕೂಡಿದವನು, 660 ಧನಂಜಯಃ- ಅರ್ಜುನ ರೂಪದಿಂದ ದಿಗ್ವಿಜಯದ ಸಮಯದಲ್ಲಿ ಬಹಳಷ್ಟು ಧನವನ್ನು ಜಯಿಸಿ ತಂದವನು, ॥83॥
(ಶ್ಲೋಕ-84)
ಮೂಲಮ್
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ ।
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ ॥
ಅನುವಾದ
661 ಬ್ರಹ್ಮಣ್ಯಃ- ತಪಸ್ಸು, ವೇದ, ಬ್ರಾಹ್ಮಣ, ಮತ್ತು ಜ್ಞಾನವನ್ನು ರಕ್ಷಿಸುವವನು, 662 ಬ್ರಹ್ಮಕೃತ್- ಹಿಂದೆ ಹೇಳಿದ ತಪಸ್ಸು ಮುಂತಾದವುಗಳನ್ನು ರಚಿಸಿದವನು, 663 ಬ್ರಹ್ಮಾ- ಚತುರ್ಮುಖ ಬ್ರಹ್ಮನರೂಪದಿಂದ ಜಗತ್ತನ್ನು ಉತ್ಪತ್ತಿ ಮಾಡಿದವನು, 664 ಬ್ರಹ್ಮ- ಸಚ್ಚಿದಾನಂದ ಸ್ವರೂಪನು, 665 ಬ್ರಹ್ಮವಿವರ್ಧನಃ- ಮೊದಲು ಹೇಳಿದ ಬ್ರಹ್ಮ ಶಬ್ದವಾಚೀ ತಪಸ್ಸು ಮುಂತಾದವುಗಳನ್ನು ವೃದ್ಧಿಪಡಿಸುವವನು, 666 ಬ್ರಹ್ಮವಿತ್- ವೇದ ಮತ್ತು ವೇದಾರ್ಥವನ್ನು ಪೂರ್ಣವಾಗಿ ಬಲ್ಲವನು, 667 ಬ್ರಾಹ್ಮಣಃ- ಸಮಸ್ತ ವಸ್ತುಗಳನ್ನೂ ಬ್ರಹ್ಮರೂಪದಿಂದ ನೋಡುವವನು, 668 ಬ್ರಹ್ಮೀ- ಬ್ರಹ್ಮಶಬ್ದವಾಚೀ ತಪಸ್ಯಾದಿ ಸಮಸ್ತ ಪದಾರ್ಥಗಳಿಗೂ ಆಧಾರನಾಗಿರುವವನು, 669 ಬ್ರಹ್ಮಜ್ಞಃ- ತನ್ನ ಆತ್ಮಸ್ವರೂಪೀ ಬ್ರಹ್ಮಶಬ್ದವಾಚೀ ವೇದವನ್ನು ಪೂರ್ಣವಾಗಿ ಮತ್ತು ಯಥಾರ್ಥವಾಗಿ ಅರಿತುಕೊಂಡಿರುವವನು, 670 ಬ್ರಾಹ್ಮಣಪ್ರಿಯಃ- ಬ್ರಾಹ್ಮಣರಿಗೆ ಪರಮಪ್ರಿಯನು ಮತ್ತು ಬ್ರಾಹ್ಮಣರನ್ನು ಅತಿಶಯ ಪ್ರಿಯರೆಂದು ಭಾವಿಸುವವನು, ॥84॥
(ಶ್ಲೋಕ-85)
ಮೂಲಮ್
ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ ।
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ ॥
ಅನುವಾದ
671 ಮಹಾಕ್ರಮಃ-ಬಹು ವೇಗದಿಂದ ಚಲಿಸುವವನು, 672 ಮಹಾಕರ್ಮಾ- ಭಿನ್ನ-ಭಿನ್ನ ಅವತಾರಗಳಲ್ಲಿ ನಾನಾ ಪ್ರಕಾರದ ಮಹಾನ್ ಕರ್ಮ ಮಾಡುವವನು, 673 ಮಹಾತೇಜಾಃ-ಯಾರ ತೇಜಸ್ಸಿನಿಂದ ಸಮಸ್ತ ತೇಜಸ್ವಿಗಳೂ ದೇದಿಪ್ಯಮಾನರಾಗುವರೋ ಅಂತಹ ಮಹಾನ್ ತೇಜಸ್ವಿಯಾಗಿರುವವನು, 674 ಮಹೋರಗಃ- ಬಹು ದೊಡ್ಡ ಸರ್ಪ ಅಂದರೆ ವಾಸುಕಿ ಸ್ವರೂಪನು, 675 ಮಹಾಕ್ರತುಃ- ಮಹಾನ್ ಯಜ್ಞ ಸ್ವರೂಪನು, 676 ಮಹಾಯಜ್ವಾ- ದೊಡ್ಡ ಯಜಮಾನನು, ಅಂದರೆ ಲೋಕಸಂಗ್ರಹಕ್ಕಾಗಿ ದೊಡ್ಡ - ದೊಡ್ಡ ಯಜ್ಞಗಳನ್ನು ಅನುಷ್ಠಾನ ಮಾಡುವವನು, 677 ಮಹಾಯಜ್ಞಃ- ಜಪಯಜ್ಞವೇ ಮುಂತಾದ ಭಗವತ್ಪ್ರಾಪ್ತಿಗೆ ಸಾಧನರೂಪೀ ಸಮಸ್ತ ಯಜ್ಞಗಳು ಯಾರ ವಿಭೂತಿಯಾಗಿವೆಯೋ ಅಂತಹ ಮಹಾನ್ ಯಜ್ಞಸ್ವರೂಪನು, 678 ಮಹಾಹವಿಃ- ಬ್ರಹ್ಮಸ್ವರೂಪೀ ಅಗ್ನಿಯಲ್ಲಿ ಹವನ ಮಾಡಲು ಯೋಗ್ಯವಾದ ಪ್ರಪಂಚರೂಪೀ ಹವಿಸ್ಸು ಯಾರ ಸ್ವರೂಪವಾಗಿದೆಯೋ, ಅಂತಹ ಮಹಾನ್ ಹವಿಃಸ್ವರೂಪನು, ॥85॥
(ಶ್ಲೋಕ-86)
ಮೂಲಮ್
ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ ।
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ ॥
ಅನುವಾದ
679 ಸ್ತವ್ಯಃ-ಎಲ್ಲರಿಂದಲೂ ಸ್ತುತಿಸಲ್ಪಡಲು ಯೋಗ್ಯನಾದವನು, 680 ಸ್ತವಪ್ರಿಯಃ-ಸ್ತುತಿಯಿಂದ ಪ್ರಸನ್ನನಾಗುವವನು, 681 ಸ್ತೋತ್ತಮ್-ಭಗವಂತನ ಗುಣ ಪ್ರಭಾವಗಳ ಕೀರ್ತನೆ ಮಾಡಲ್ಪಡುವ ಸ್ತೋತ್ರರೂಪನು, 682 ಸ್ತುತಿಃ-ಸ್ತವನ ಕ್ರಿಯಾ ಸ್ವರೂಪನು, 683 ಸ್ತೋತಾ-ಸ್ತುತಿಸುವವನು, 684 ರಣಪ್ರಿಯಃ-ಯುದ್ಧವನ್ನು ಪ್ರೀತಿಸುವವನು, 685 ಪೂರ್ಣಃ-ಸಮಸ್ತ ಜ್ಞಾನ, ಶಕ್ತಿ, ಐಶ್ವರ್ಯ ಮತ್ತು ಗುಣಗಳಿಂದ ಪರಿಪೂರ್ಣನಾಗಿರುವವನು, 686 ಪೂರಯಿತಾ-ತನ್ನ ಭಕ್ತರನ್ನೂ ಎಲ್ಲಾ ಪ್ರಕಾರಗಳಿಂದಲೂ ಪರಿಪೂರ್ಣಗೊಳಿಸುವವನು, 687 ಪುಣ್ಯಃ-ಸ್ಮರಣೆ ಮಾತ್ರದಿಂದ ಪಾಪಗಳನ್ನು ನಾಶ ಮಾಡುವ ಪುಣ್ಯ ಸ್ವರೂಪನು, 688 ಪುಣ್ಯಕೀರ್ತಿಃ-ಪರಮ ಪಾವನ ಕೀರ್ತಿಯುಳ್ಳವನು, 689 ಅನಾಮಯಃ-ಆಂತರಿಕ ಮತ್ತು ಬಾಹ್ಯ ಎಲ್ಲಾ ಪ್ರಕಾರಗಳ ವ್ಯಾಧಿಗಳಿಂದ ರಹಿತನಾದವನು, ॥86॥
(ಶ್ಲೋಕ-87)
ಮೂಲಮ್
ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ ।
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ ॥
ಅನುವಾದ
690 ಮನೋಜವಃ-ಮನೋವೇಗವುಳ್ಳವನು, 691 ತೀರ್ಥಕರಃ-ಸಮಸ್ತ ವಿದ್ಯೆಗಳ ರಚಯಿತನು ಮತ್ತು ಉಪದೇಶ ಮಾಡುವವನು 692 ವಸುರೇತಾಃ-ಹಿರಣ್ಮಯ ಪುರುಷ (ಪ್ರಥಮ ಪುರುಷ-ಸೃಷ್ಟಿಯ ಬೀಜ)ನ ಸುವರ್ಣದಂತಹ ವೀರ್ಯ ಉಳ್ಳವನು, 693 ವಸುಪ್ರದಃ-ಧನವನ್ನು ಹೇರಳವಾಗಿ ಪ್ರದಾನ ಮಾಡುವವನು, 694 ವಸುಪ್ರದಃ-ತನ್ನ ಭಕ್ತರಿಗೆ ಮೋಕ್ಷರೂಪೀ ಮಹಾನ್ ಧನವನ್ನು ಕೊಡುವವನು, 695 ವಾಸುದೇವಃ-ವಸುದೇವನ ಪುತ್ರ ಶ್ರೀಕೃಷ್ಣನು, 696 ವಸುಃ-ಎಲ್ಲರ ಅಂತಃಕರಣದಲ್ಲಿ ವಾಸ ಮಾಡುವವನು, 697 ವಸುಮನಾಃ-ಸಮಾನಭಾವದಿಂದ ಎಲ್ಲದರಲ್ಲಿ ನಿವಾಸ ಮಾಡುವ ಶಕ್ತಿಯುಳ್ಳ ಮನಸ್ಸಿನವನು, 698 ಹವಿಃ-ಯಜ್ಞದಲ್ಲಿ ಹವನ ಮಾಡಲ್ಪಡಲು ಯೋಗ್ಯ ಹವಿಃಸ್ವರೂಪನು, ॥87॥
(ಶ್ಲೋಕ-88)
ಮೂಲಮ್
ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ ।
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ ॥
ಅನುವಾದ
699 ಸದ್ಗತಿಃ-ಸತ್ಪುರುಷರ ಮೂಲಕ ಯೋಗ್ಯವಾದ ಗತಿ ಸ್ವರೂಪನು, 700 ಸತ್ಕೃತಿಃ-ಜಗತ್ತಿನ ರಕ್ಷಣೆ ಮುಂತಾದ ಸತ್ಕಾರ್ಯ ಮಾಡುವವನು, 701 ಸತ್ತಾ-ಸದಾ ಸರ್ವದಾ ಸುಸ್ಥಿರವಾಗಿರುವ ಸತ್ ಸ್ವರೂಪನು, 702 ಸದ್ಭೂತಿಃ-ಬಹಳ ಪ್ರಕಾರದಿಂದ ಬಹಳ ರೂಪಗಳಲ್ಲಿ ಪ್ರಕಾಶಿಸುವವನು, 703 ಸತ್ಪರಾಯಣಃ-ಸತ್ಪುರುಷರ ಪರಮ ಪ್ರಾಪ್ಯಸ್ಥಾನನು, 704 ಶೂರಸೇನಃ-ಹನುಮಂತನೇ ಆದಿ ಶ್ರೇಷ್ಠ ಶೂರವೀರ ಯೋಧರಿಂದ ಕೂಡಿದ ಸೇನೆಯುಳ್ಳವನು, 705 ಯದುಶ್ರೇಷ್ಠಃ- ಯದುವಂಶದವರಲ್ಲಿ ಸರ್ವ ಶ್ರೇಷ್ಠನು, 706 ಸನ್ನಿವಾಸಃ-ಸತ್ಪುರುಷರ ಆಶ್ರಯದಾತನು, 707 ಸುಯಾಮುನಃ-ಯಮುನಾ ನದಿ-ತಟ ನಿವಾಸಿಗಳಾದ ಗೋಪಾಲರು ಗೋಪಿಕೆಯರಿಂದೊಡಗೂಡಿದ ಅತ್ಯಂತ ಸುಂದರ ಪರಿಕರವುಳ್ಳಂತಹ ಶ್ರೀಕೃಷ್ಣನು, ॥88॥
(ಶ್ಲೋಕ-89)
ಮೂಲಮ್
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋಽನಲಃ ।
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಽಥಾಪರಾಜಿತಃ ॥
ಅನುವಾದ
708 ಭೂತಾವಾಸಃ-ಸಮಸ್ತ ಪ್ರಾಣಿಗಳ ಮುಖ್ಯ ನಿವಾಸ ಸ್ಥಾನನು, 709 ವಾಸುದೇವಃ-ತನ್ನ ಮಾಯೆಯಿಂದ ಜಗತ್ತನ್ನು ಆವರಿಸಿಕೊಂಡಿರುವ ಪರಮ ದೇವನು, 710 ಸರ್ವಾಸುನಿಲಯಃ-ಸಮಸ್ತ ಪ್ರಾಣಿಗಳಿಗೂ ಆಧಾರನು, 711 ಅನಲಃ-ಅಪಾರಶಕ್ತಿ ಮತ್ತು ಸಂಪತ್ತುಗಳಿಂದ ಕೂಡಿದವನು, 712 ದರ್ಪಹಾ-ಧರ್ಮದವಿರುದ್ಧವಾದ ಮಾರ್ಗದಲ್ಲಿ ನಡೆಯುವವರ ದರ್ಪವನ್ನು ನಾಶ ಮಾಡುವವನು, 713 ದರ್ಪದಃ-ತನ್ನ ಭಕ್ತರಿಗೆ ವಿಶುದ್ಧವಾದ ಗೌರವ ಕೊಡುವವನು, 714 ದೃಪ್ತಃ-ನಿತ್ಯಾನಂದದಲ್ಲಿ ಮಗ್ನನಾಗಿರುವವನು, 715 ದುರ್ಧರಃ-ಬಹಳ ಕಷ್ಟದಿಂದ ಹೃದಯದಲ್ಲಿ ನೆಲೆಸಲ್ಪಡುವವನು, 716 ಅಪರಾಜಿತಃ-ಇತರರಿಂದ ಜಯಿಸಲ್ಪಡದವನು ಅರ್ಥಾತ್ ಭಕ್ತ-ಪರಾಧೀನನು, ॥89॥
(ಶ್ಲೋಕ-90)
ಮೂಲಮ್
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ ।
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ ॥
ಅನುವಾದ
717 ವಿಶ್ವಮೂರ್ತಿಃ- ಇಡೀ ವಿಶ್ವವೇ ಆತನ ಮೂರ್ತಿಯಾಗಿರುವಂತಹ ವಿರಾಟ್ ಸ್ವರೂಪನು, 718 ಮಹಾಮೂರ್ತಿಃ- ಮಹತ್ತಾದ ರೂಪುಳ್ಳವನು, 719 ದೀಪ್ತಮೂರ್ತಿಃ- ಸ್ವೇಚ್ಛೆಯಿಂದ ಧರಿಸಲ್ಪಟ್ಟ ದೇದೀಪ್ಯಮಾನವಾದ ಸ್ವರೂಪದಿಂದ ಕೂಡಿದವನು, 720 ಅಮೂರ್ತಿಮಾನ್- ಯಾವ ಮೂರ್ತಿಯೂ ಇಲ್ಲದಂತಹ ನಿರಾಕಾರನು, 721 ಅನೇಕ ಮೂರ್ತಿಃ- ನಾನಾ ಅವತಾರಗಳಲ್ಲಿ ಸ್ವೇಚ್ಛೆಯಿಂದ ಜನಗಳ ಉಪಕಾರಾರ್ಥವಾಗಿ ಅನೇಕ ರೂಪಗಳನ್ನು ಧರಿಸಿದವನು, 722 ಅವ್ಯಕ್ತಃ - ಅನೇಕ ರೂಪಗಳುಳ್ಳವನಾದರೂ ಸಹ ಯಾವುದೇ ಪ್ರಕಾರದಿಂದಲೂ ಆತನ ಸ್ವರೂಪವನ್ನು ವ್ಯಕ್ತ ಮಾಡಲಾಗದಂತಹ ಅಪ್ರಕಟ ಸ್ವರೂಪನು, 723 ಶತಮೂರ್ತಿಃ- ನೂರಾರು ರೂಪಗಳುಳ್ಳವನು, 724 ಶತಾನನಃ- ನೂರಾರು ಮುಖಗಳುಳ್ಳವನು, ॥90॥
(ಶ್ಲೋಕ-91)
ಮೂಲಮ್
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ ।
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ ॥
ಅನುವಾದ
725 ಏಕಃ-ಎಲ್ಲ ರೀತಿಯ ಭೇದ-ಭಾವಗಳಿಂದ ರಹಿತನಾದ ಅದ್ವಿತೀಯನು, 726 ನೈಕಃ-ಉಪಾಧಿಭೇದದಿಂದ ಅನೇಕನು, 727 ಸವಃ-ಸೋಮ ಔಷಧಿಯ ರಸವನ್ನು ಹಿಂಡಲ್ಪಡುವಂತಹ ಯಜ್ಞಸ್ವರೂಪನು, 728 ಕಃ-ಸುಖಸ್ವರೂಪನು, 729 ಕಿಮ್- ವಿಚಾರಣೀಯನಾದ ಬ್ರಹ್ಮಸ್ವರೂಪನು, 730 ಯತ್-ಸ್ವತಃಸಿದ್ಧನು, 731 ತತ್-ವಿಸ್ತಾರವಾಗಿಸುವವನು, 732 ಪದಮನುತ್ತಮಮ್- ಮುಮುಕ್ಷುಗಳಾದ ಪುರುಷರು ಪಡೆಯಬಹುದಾದ ಸರ್ವೋತ್ಕೃಷ್ಟ ಪರಮಪದನು, 733 ಲೋಕಬಂಧುಃ-ಸಮಸ್ತ ಪ್ರಾಣಿಗಳಿಗೂ ಹಿತವನ್ನು ಬಯಸುವ ಪರಮ ಮಿತ್ರನು, 734 ಲೋಕನಾಥಃ-ಎಲ್ಲರಿಂದ ಯಾಚಿಸಲ್ಪಡಲು ಯೋಗ್ಯನಾದ ಲೋಕದೊಡೆಯನು, 735 ಮಾಧವಃ-ಮಧು ಕುಲದಲ್ಲಿ ಹುಟ್ಟಿದವನು, 736 ಭಕ್ತವತ್ಸಲಃ-ಭಕ್ತರಲ್ಲಿ ಪ್ರೀತಿ ವಾತ್ಸಲ್ಯಗಳುಳ್ಳವನು, ॥91॥
(ಶ್ಲೋಕ-92)
ಮೂಲಮ್
ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ ।
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ ॥
ಅನುವಾದ
737 ಸುವರ್ಣವರ್ಣಃ-ಬಂಗಾರದಂತಹ ವರ್ಣವುಳ್ಳವನು, 738 ಹೇಮಾಂಗಃ-ಚಿನ್ನದಂತೆ ಪುಷ್ಪವಾದ ಹೊಳೆಯುವ ಅಂಗಾಂಗಗಳುಳ್ಳವನು, 739 ವರಾಂಗಃ-ಪರಮ ಶ್ರೇಷ್ಠವಾದ ಅಂಗ-ಪ್ರತ್ಯಂಗಗಳುಳ್ಳವನು, 740 ಚಂದನಾಂಗದೀ-ಚಂದನ ಲೇಪಿತ ಮತ್ತು ತೋಳಬಂದಿ ಮುಂತಾದ ಆಭರಣಗಳಿಂದ ಶೋಭಿತನು, 741 ವೀರಹಾ-ರಾಗ ದ್ವೇಷಾದಿ ಪ್ರಬಲ ಶತ್ರುಗಳಿಗೆ ಹೆದರಿ ಶರಣಾಗತರಾದವರ ಅಂತಃಕರಣದಲ್ಲಿ ಅವುಗಳಿಲ್ಲದಂತೆ ನಾಶ ಮಾಡುವವನು, 742 ವಿಷಮಃ-ಆತನಿಗೆ ಸರಿ-ಸಮಾನರಾದವನು ಬೇರೆ ಯಾರು ಇಲ್ಲದಂತಹ ಅನುಪಮನಾದವನು, 743 ಶೂನ್ಯಃ-ಸಮಸ್ತ ವಿಶೇಷಣಗಳಿಂದ ರಹಿತನು, 744 ಘೃತಾಶೀಃ-ತನ್ನ ಆಶ್ರಿತರಾದ ಜನರಿಗಾಗಿ ಕೃಪಾಪೂರ್ಣವಾದ ಸ್ನೇಹಮಯ ಸಂಕಲ್ಪ ಮಾಡುವವನು, 745 ಅಚಲಃ- ಯಾವ ಪ್ರಕಾರದಿಂದಲೂ ವಿಚಲಿತನಾಗದಿರುವ ಅವಿಚಲನು, 746 ಚಲಃ-ವಾಯು ರೂಪದಿಂದ ಸರ್ವತ್ರ ಚಲಿಸುವವನು, ॥92॥
(ಶ್ಲೋಕ-93)
ಮೂಲಮ್
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ ।
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ ॥
ಅನುವಾದ
747 ಅಮಾನೀ-ಸ್ವತಃ ಮಾನ-ಪ್ರತಿಷ್ಠೆಗಳನ್ನು ಬಯಸದೇ ಇರುವ ಅಭಿಮಾನರಹಿತನು, 748 ಮಾನದಃ-ಬೇರೆಯವರಿಗೆ ಗೌರವ ಕೊಡುವವನು, 749 ಮಾನ್ಯಃ-ಎಲ್ಲರೂ ಪೂಜಿಸಲು ಯೋಗ್ಯನಾದ ಮಾನನೀಯನು, 750 ಲೋಕಸ್ವಾಮೀ-ಹದಿನಾಲ್ಕು ಲೋಕಗಳಿಗೂ ಒಡೆಯನು, 751 ತ್ರಿಲೋಕಧೃಕ್-ಮೂರು ಲೋಕಗಳನ್ನೂ ಧರಿಸಿರುವವನು, 752 ಸುಮೇಧಾಃ-ಉಜ್ಜ್ವಲವಾದ ಅತ್ಯುತ್ತಮ ಬುದ್ಧಿಯುಳ್ಳವನು, 753 ಮೇಧಜಃ-ಯಜ್ಞದಲ್ಲಿ ಪ್ರಕಟವಾಗುವವನು, 754 ಧನ್ಯಃ-ನಿತ್ಯ ಕೃತಕತ್ಯನಾದ ಕಾರಣ ಸರ್ವಥಾ ಧನ್ಯವಾದಕ್ಕೆ ಪಾತ್ರನು, 755 ಸತ್ಯಮೇಧಾಃ-ಸತ್ಯವಾದ ಮತ್ತು ಶ್ರೇಷ್ಠವಾದ ಬುದ್ಧಿಯುಳ್ಳವನು, 756 ಧರಾಧರಃ- ಅನಂತನ ರೂಪದಿಂದ (ಆದಿಶೇಷ) ಪೃಥ್ವಿಯನ್ನು ಧರಿಸಿರುವವನು, ॥93॥
(ಶ್ಲೋಕ-94)
ಮೂಲಮ್
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ ।
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ ॥
ಅನುವಾದ
757 ತೇಜೋವೃಷಃ-ಆದಿತ್ಯ ರೂಪದಿಂದ ತೇಜಸ್ಸಿನ ಮಳೆಗರೆವವನು ಮತ್ತು ಭಕ್ತರ ಮೇಲೆ ತನ್ನ ಅಮೃತಮಯ ತೇಜಸ್ಸನ್ನೂ ಸುರಿಸುವವನು, 758 ದ್ಯುತಿಧರಃ-ಪರಮಕಾಂತಿಯನ್ನು ಧರಿಸಿರುವವನು, 759 ಸರ್ವಶಸ್ತ್ರಭೃತಾಂ ವರಃ- ಸಮಸ್ತ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಶ್ರೀರಾಮನು, 760 ಪ್ರಗ್ರಹಃ-ಭಕ್ತರಿಂದ ಅರ್ಪಿಸಲ್ಪಟ್ಟ ಪತ್ರ-ಪುಷ್ಪಾದಿಗಳನ್ನು ಸ್ವೀಕರಿಸುವವನು, 761 ನಿಗ್ರಹಃ-ಎಲ್ಲರನ್ನೂ ನಿಗ್ರಹಿಸುವವನು, 762 ವ್ಯಗ್ರಃ-ತನ್ನ ಭಕ್ತರಿಗೆ ಅಭೀಷ್ಟ ಫಲಗಳನ್ನು ಕೊಡುವುದರಲ್ಲಿ ತೊಡಗಿರುವವನು 763 ನೈಕಶೃಂಗಃ-ನಾಮ, ಆಖ್ಯಾತ, ಉಪಸರ್ಗ ಮತ್ತು ನಿಪಾತ ಎಂಬ ನಾಲ್ಕು ಕೊಂಬುಗಳನ್ನು ಧರಿಸಿರುವ ಶಬ್ದಬ್ರಹ್ಮ ಸ್ವರೂಪನು, 764 ಗದಾಗ್ರಜಃ- (ಶ್ರೀಕೃಷ್ಣನ ತಮ್ಮ ಗದ ಎಂಬುವನು) ಗದನಿಗಿಂತ ಮೊದಲು ಹುಟ್ಟಿದವನು, ॥94॥
(ಶ್ಲೋಕ-95)
ಮೂಲಮ್
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ ।
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ ॥
ಅನುವಾದ
765 ಚತುರ್ಮೂರ್ತಿಃ- ರಾಮ, ಲಕ್ಷ್ಮಣ, ಭರತ, ಶತ್ರುಘ್ನರೂಪೀ ನಾಲ್ಕು ಮೂರ್ತಿಗಳುಳ್ಳವನು, (ವಿರಾಟ್, ಸೂತ್ರಾತ್ಮಾ, ಅವ್ಯಾಕೃತ, ತುರೀಯ ಎಂಬ ನಾಲ್ಕು ಮೂರ್ತಿಗಳುಳ್ಳವನು) 766 ಚತುರ್ಬಾಹುಃ- ನಾಲ್ಕು ಬಾಹುಗಳುಳ್ಳವನು, 767 ಚತುರ್ವೂಹಃ- ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಈ ನಾಲ್ಕು ವ್ಯೂಹಗಳಿಂದ ಕೂಡಿರುವವನು, 768 ಚತುರ್ಗತಿಃ- ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ರೂಪೀ, ನಾಲ್ಕೂ ಪರಮ ಗತಿ ಸ್ವರೂಪನು, 769 ಚತುರಾತ್ಮಾ- ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತರೂಪೀ ನಾಲ್ಕು ಅಂತಃಕರಣಗಳುಳ್ಳವನು, 770 ಚತುರ್ಭಾವಃ- ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕೂ ಪುರುಷಾರ್ಥಗಳ ಉತ್ಪತ್ತಿ ಸ್ಥಾನನು, 771 ಚತುರ್ವೇದವಿತ್- ನಾಲ್ಕೂ ವೇದಗಳ ಅರ್ಥವನ್ನು ಚೆನ್ನಾಗಿ ಬಲ್ಲವನು, 772 ಏಕಪಾತ್- ಒಂದೇ ಪಾದವುಳ್ಳವನು ಅಂದರೆ ಒಂದು ಪಾದ (ಅಂಶ)ದಿಂದ ಸಮಸ್ತ ವಿಶ್ವವನ್ನೂ ವ್ಯಾಪಿಸಿಕೊಂಡಿರುವವನು, ॥95॥
(ಶ್ಲೋಕ-96)
ಮೂಲಮ್
ಸಮಾವರ್ತೋಽನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ ।
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ ॥
ಅನುವಾದ
773 ಸಮಾವರ್ತಃ-ಸಂಸಾರ ಚಕ್ರವನ್ನು ಚೆನ್ನಾಗಿ ತಿರುಗಿಸುವವನು, 774 ಅನಿವೃತ್ತಾತ್ಮಾ-ಎಲ್ಲೆಲ್ಲಿಯೂ ಇರುವವನಾದ ಕಾರಣ ಅವನ ಆತ್ಮವು ಎಲ್ಲಿಂದಲೂ ಸಹ ನಿವೃತ್ತಿಯಾಗದಿರುವಂತವನು, 775 ದುರ್ಜಯಃ-ಯಾರಿಂದಲೂ ಸಹ ಜಯಿಸಲು ಸಾಧ್ಯವಿಲ್ಲದವನು, 776 ದುರತಿಕ್ರಮಃ-ಈತನ ಆಜ್ಞೆಯನ್ನು ಯಾರೂ ಉಲ್ಲಂಘಿಸಲು ಆಗದಂತಹವನು, 777 ದುರ್ಲಭಃ- ನಿಜವಾದ ಭಕ್ತಿಯ ಹೊರತು ಪ್ರಾಪ್ತನಾಗದಿರುವವನು, 778 ದುರ್ಗಮಃ-ಬಹಳ ಕಷ್ಟದಿಂದ ತಿಳಿಯಲಾಗುವವನು, 779 ದುರ್ಗಃ-ಬಹು ಕಠಿಣತೆಯಿಂದ ದೊರೆಯುವವನು, 780 ದುರಾವಾಸಃ-ಬಹು ಶ್ರಮಪಡುವ ಯೋಗಿಗಳ ಮೂಲಕ ಹೃದಯದಲ್ಲಿ ನೆಲೆಸಲ್ಪಡುವವನು, 781 ದುರಾರಿಹಾ-ದುಷ್ಟಮಾರ್ಗದಲ್ಲಿ ನಡೆಯುವ ದೈತ್ಯರನ್ನು ವಧಿಸುವವನು, ॥96॥
(ಶ್ಲೋಕ-97)
ಮೂಲಮ್
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ ।
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ ॥
ಅನುವಾದ
782 ಶುಭಾಂಗಃ-ಮಂಗಳದಾಯಕ ನಾಮಗಳಿಂದ ಸಂಬೋಧಿಸಲ್ಪಡುವವನು, 783 ಲೋಕಸಾರಂಗಃ-ಲೋಕಗಳ ಸಾರವನ್ನು ಗ್ರಹಿಸುವವನು, 784 ಸುತಂತುಃ-ಸುಂದರ ವಿಸ್ತೃತ ಜಗತ್ರೂಪೀ ತಂತು ರೂಪನು, 785 ತಂತುವರ್ಧನಃ-ಮೇಲೆ ತಿಳಿಸಿದ ಜಗತ್-ತಂತುವನ್ನು ವೃದ್ಧಿಪಡಿಸುವವನು, 786 ಇಂದ್ರಕರ್ಮಾ-ಇಂದ್ರನಿಗೆ ಸಮಾನವಾದ ಕರ್ಮವುಳ್ಳವನು, 787 ಮಹಾಕರ್ಮಾ-ದೊಡ್ಡ ದೊಡ್ಡ ಕರ್ಮಗಳನ್ನು ಮಾಡುವವನು, 788 ಕೃತಕರ್ಮಾ-ಸಮಸ್ತ ಕರ್ತವ್ಯ ಕರ್ಮಗಳನ್ನು ಮಾಡಿಬಿಟ್ಟಿರುವವನು, ಅವನಿಗೆ ಯಾವ ಕರ್ತವ್ಯವೂ ಉಳಿದುಕೊಂಡಿರದಂತಹ ಕೃತಾರ್ಥನು, 789 ಕೃತಾಗಮಃ-ಸ್ಪೋಚಿತ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿ ಅವತಾರವೆತ್ತಿ ಬರುವವನು, ॥97॥
(ಶ್ಲೋಕ-98)
ಮೂಲಮ್
ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ ।
ಅರ್ಕೋ ವಾಜಸನಃ ಶೃಂಗೀ ಜಯಂತಃಸರ್ವವಿಜ್ಜಯೀ ॥
ಅನುವಾದ
790 ಉದ್ಭವಃ-ತನ್ನಿಚ್ಛೆಯಿಂದ ಶ್ರೇಷ್ಠವಾದ ಜನ್ಮವನ್ನು ಧರಿಸುವವನು 791 ಸುಂದರಃ-ಅತ್ಯಧಿಕ ಭಾಗ್ಯಶಾಲಿಯಾದ ಕಾರಣ ಪರಮಸುಂದರನು, 792 ಸುಂದಃ-ಪರಮ ಕರುಣಾಶೀಲನು, 793 ರತ್ನನಾಭಃ-ರತ್ನದಂತಹ ಸುಂದರವಾದ ನಾಭಿಯುಳ್ಳವನು, 794 ಸುಲೋಚನಃ-ಸುಂದರವಾದ ಕಣ್ಣುಗಳುಳ್ಳವನು, 795 ಅರ್ಕಃ-ಬ್ರಹ್ಮಾದಿ ಪೂಜ್ಯ ಪುರುಷರಿಗೂ ಪೂಜ್ಯನು, 796 ವಾಜಸನಃ-ಯಾಚಿಸುವವರಿಗೆ ಅನ್ನವನ್ನು ಕೊಡುವವನು, 797 ಶೃಂಗೀ-ಪ್ರಳಯ ಕಾಲದಲ್ಲಿ ಕೋಡುಗಳುಳ್ಳ ಮತ್ಸ್ಯ ವಿಶೇಷ ರೂಪವನ್ನು ಧರಿಸುವವನು, 798 ಜಯಂತಃ-ಶತ್ರುಗಳನ್ನು ಪೂರ್ಣವಾಗಿ ಜಯಿಸುವವನು, 799 ಸರ್ವವಿಜ್ಜಯೀ-ಸರ್ವಜ್ಞ ಅಂದರೆ ಎಲ್ಲವನ್ನು ಬಲ್ಲವನು ಮತ್ತು ಎಲ್ಲರನ್ನು ಜಯಿಸುವವನು, ॥98॥
(ಶ್ಲೋಕ-99)
ಮೂಲಮ್
ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ ।
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ ॥
ಅನುವಾದ
800 ಸುವರ್ಣಬಿಂದುಃ-ಸುಂದರ ಅಕ್ಷರ ಮತ್ತು ಬಿಂದುವಿನಿಂದೊಡಗೂಡಿದ ಓಂಕಾರ ಸ್ವರೂಪೀ ನಾಮ ಬ್ರಹ್ಮನು, 801 ಅಕ್ಷೋಭ್ಯಃ-ಯಾರಿಂದಲೂ ಸಹ ಕ್ಷೋಭೆಗೆ ಒಳಗಾಗದವನು, 802 ಸರ್ವವಾಗೀಶ್ವರೇಶ್ವರಃ-ಸಮಸ್ತ ವಾಣೀಪತಿಗಳಿಗೆ ಅಂದರೆ ಬ್ರಹ್ಮಾದಿಗಳಿಗೂ ಸಹ ಒಡೆಯನು, 803 ಮಹಾಹ್ರದಃ-ಧ್ಯಾನ ಮಾಡುವವರು, ಆನಂದ ಮಗ್ನರಾಗಿ ತೇಲಿ-ಮುಳುಗೇಳುವಂತಹ ಪರಮಾನಂದದ ಮಹಾನ್ ಸರೋವರ ಅರ್ಥಾತ್ ಆನಂದ ಸಾಗರನು, 804 ಮಹಾಗರ್ತಃ-ಮಾಯಾರೂಪಿ ಮಹಾನ್ ಕಂದಕ ಸ್ವರೂಪನು, 805 ಮಹಾಭೂತಃ-ತ್ರಿಕಾಲಗಳಲ್ಲಿ ಎಂದಿಗೂ ನಾಶವಾಗದಿರುವಂತಹ ಮಹಾಭೂತ ಸ್ವರೂಪನು, 806 ಮಹಾನಿಧಿಃ-ಎಲ್ಲಕ್ಕೂ ಮಹಾನ್ ನಿವಾಸ-ಸ್ಥಾನನು, ॥99॥
(ಶ್ಲೋಕ-100)
ಮೂಲಮ್
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋಽನಿಲಃ ।
ಅಮೃತಾಶೋಽಮೃತವಪುಃ ಸರ್ವಜ್ಞಃ ಸರ್ವತೋಮುಖಃ ॥
ಅನುವಾದ
807 ಕುಮುದಃ-ಕು ಎಂದರೆ ಭೂಮಿ, ಅದರ ಭಾರವನ್ನು ಇಳಿಸಿ ಪ್ರಸನ್ನಗೊಳಿಸುವನು, 808 ಕುಂದರಃ-ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಉದ್ಧರಿಸಿದವನು, 809 ಕುಂದಃ-ಕಶ್ಯಪರಿಗೆ ಭೂಮಿಯನ್ನು ದಾನವಾಗಿ ಕೊಟ್ಟವನು, 810 ಪರ್ಜನ್ಯಃ- ಮೋಡಗಳಂತೆ ಇಷ್ಟಾರ್ಥಗಳನ್ನು ವರ್ಷಿಸುವವನು, 811 ಪಾವನಃ-ಸ್ಮರಣ ಮಾತ್ರದಿಂದ ಪವಿತ್ರ ಗೊಳಿಸುವವನು, 812 ಅನಿಲಃ-ಸದಾ ಪ್ರಬುದ್ಧನಾಗಿರುವವನು, 813 ಅಮೃತಾಶಃ-ಆತನ ಆಶೆಗಳು ಎಂದಿಗೂ ವಿಫಲವಾಗದಿರುವಂತಹ ಅಮೋಘ ಸಂಕಲ್ಪನು, 814 ಅಮೃತವಪುಃ-ಎಂದೆಂದಿಗೂ ನಾಶವಾಗದಿರುವಂತಹ ಶಾಶ್ವತ ಶರೀರವುಳ್ಳವನು, 815 ಸರ್ವಜ್ಞಃ- ಯಾವಾಗಲೂ ಎಲ್ಲವನ್ನು ಬಲ್ಲವನು, 816 ಸರ್ವತೋಮುಖಃ-ಎಲ್ಲಾ ಕಡೆಗಳಲ್ಲಿಯೂ ಮುಖಗಳುಳ್ಳವನು ಅಂದರೆ ಎಲ್ಲೆಲ್ಲಿಯೂ ಸಹ ಆತನ ಭಕ್ತರು ಭಕ್ತಿಪೂರ್ವಕವಾಗಿ ಪತ್ರ-ಪುಷ್ಪಾದಿ ಏನೆಲ್ಲವನ್ನು ಅರ್ಪಿಸುವರೋ ಅದನ್ನು ಸ್ವೀಕರಿಸುವವನು, ॥100॥
(ಶ್ಲೋಕ-101)
ಮೂಲಮ್
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ ।
ನ್ಯಗ್ರೋಧೋದುಂಬರೋಽಶ್ವತ್ಥಃ ಚಾಣೂರಾಂಧ್ರನಿಷೂದನಃ ॥
ಅನುವಾದ
817 ಸುಲಭಃ-ನಿತ್ಯ, ನಿರಂತರವಾಗಿ ಚಿಂತಿಸುವವರಿಗೆ ಮತ್ತು ಏಕನಿಷ್ಠ ಶ್ರದ್ಧಾವಂತ ಭಕ್ತರಿಗೆ ಪರಿಶ್ರಮವಿಲ್ಲದೆ ಸುಗಮವಾಗಿ ದೊರೆಯುವವನು, 818 ಸುವ್ರತಃ-ಸುಂದರ ಭೋಜನ ಮಾಡುವವನು ಅಂದರೆ ತನ್ನ ಭಕ್ತರ ಮೂಲಕ ಪ್ರೇಮಪೂರ್ವಕ ಅರ್ಪಿಸಲ್ಪಟ್ಟ ಪತ್ರ ಪುಷ್ಪಾದಿ ಸಾಮಾನ್ಯ ಭೋಜನವನ್ನೂ ಸಹ ಪರಮ ಶ್ರೇಷ್ಠವೆಂದು ತಿಳಿದುಕೊಂಡು ಸೇವಿಸುವವನು, 819 ಸಿದ್ಧಃ-ಸ್ವಭಾವದಿಂದಲೇ ಸಮಸ್ತ ಸಿದ್ಧಿಗಳಿಂದ ಕೂಡಿರುವವನು, 820 ಶತ್ರುಜಿತ್-ದೇವತೆಗಳ ಮತ್ತು ಸತ್ಪುರುಷರ ಶತ್ರುಗಳನ್ನು ತನ್ನ ಶತ್ರುಗಳೆಂದು ಭಾವಿಸಿಕೊಂಡು ಅವರನ್ನು ಜಯಿಸುವವನು, 821 ಶತ್ರುತಾಪನಃ-ಶತ್ರುಗಳಿಗೆ ತಾಪವನ್ನುಂಟು ಮಾಡುವವನು, 822 ನ್ಯಗ್ರೋಧಃ- ವಟವೃಕ್ಷರೂಪನು, 823 ಉದುಂಬರಃ-ಕಾರಣ ರೂಪದಿಂದ ಆಕಾಶಕ್ಕಿಂತಲೂ ಸಹ ಮೇಲಿರುವವನು, 824 ಅಶ್ವತ್ಥಃ-ಅರಳೀ ಮರದ ಸ್ವರೂಪನು, 825 ಚಾಣೂರಾಂಧ್ರನಿಷೂದನಃ- ಚಾಣೂರನೆಂಬ ಆಂಧ್ರ ಜಾತಿಯ ವೀರ ಮಲ್ಲನನ್ನು ಕೊಂದವನು, ॥101॥
(ಶ್ಲೋಕ-102)
ಮೂಲಮ್
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ ।
ಅಮೂರ್ತಿರನಘೋಽಚಿಂತ್ಯೋ ಭಯಕೃದ್ಭಯನಾಶನಃ ॥
ಅನುವಾದ
826 ಸಹಸ್ರಾರ್ಚಿಃ-ಅನಂತ ಕಿರಣಗಳುಳ್ಳವನು, 827 ಸಪ್ತಜಿಹ್ವಃ-ಕಾಲೀ, ಕರಾಲೀ, ಮನೋಜವಾ, ಸುಲೋಹಿತಾ, ಧೂಮ್ರವರ್ಣಾ, ಸ್ಫುಲಿಂಗಿನೀ ಮತ್ತು ವಿಶ್ವರುಚಿ ಎಂಬ ಈ ಏಳು ನಾಲಿಗೆಗಳುಳ್ಳ ಅಗ್ನಿಸ್ವರೂಪನು, 828 ಸಪ್ತೈಧಾಃ-ಏಳು ಜ್ವಾಲೆಗಳುಳ್ಳ ಅಗ್ನಿ ಸ್ವರೂಪನು, 829 ಸಪ್ತವಾಹನಃ-ಏಳು ಕುದುರೆಗಳುಳ್ಳ ಸೂರ್ಯರೂಪನು, 830 ಅಮೂರ್ತಿಃ-ಮೂರ್ತಿರಹಿತ ನಿರಾಕಾರನು, 831 ಅನಘಃ-ಎಲ್ಲಾ ರೀತಿಯ ಪಾಪಗಳಿಲ್ಲದವನು, 832 ಅಚಿಂತ್ಯಃ-ಯಾವುದೇ ಪ್ರಕಾರದ ಚಿಂತನೆಗೂ ಬಾರದಿರುವವನು, 833 ಭಯಕೃತ್-ದುಷ್ಟರಿಗೆ ಭಯಭೀತಿಯನ್ನುಂಟುಮಾಡುವವರು, 834 ಭಯನಾಶನಃ-ಸ್ಮರಣೆಮಾಡುವರ ಮತ್ತು ಸತ್ಪುರುಷರ ಭಯವನ್ನು ನಾಶ ಮಾಡುವವನು, ॥102॥
(ಶ್ಲೋಕ-103)
ಮೂಲಮ್
ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ ।
ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ ॥
ಅನುವಾದ
835 ಅಣುಃ-ಅತ್ಯಂತ ಸೂಕ್ಷ್ಮನಾಗಿರುವವನು, 836 ಬೃಹತ್-ಅತ್ಯಂತ ಬೃಹತ್ ಸ್ವರೂಪನು, 837 ಕೃಶಃ-ಅತ್ಯಂತ ಕೃಶನಾದವನು, ಲಘುವಾಗಿರುವವನು, 838 ಸ್ಥೂಲಃ-ಅತಿ ದಪ್ಪ ಹಾಗೂ ಭಾರಿ ಸ್ವರೂಪವುಳ್ಳವನು, 839 ಗುಣಭೃತ್- ಸಕಲ ಗುಣಗಳನ್ನು ಧರಿಸಿಕೊಂಡಿರುವವನು, 840 ನಿರ್ಗುಣಃ-ಸತ್ತ್ವ, ರಜ ಮತ್ತು ತಮ - ಈ ಮೂರು ಗುಣಗಳಿಂದ ರಹಿತನಾದವನು, 841 ಮಹಾನ್-ಗುಣ, ಪ್ರಭಾವ, ಐಶ್ವರ್ಯ ಮತ್ತು ಜ್ಞಾನ ಇತ್ಯಾದಿಗಳ ಅತಿಶಯತ್ವದ ಕಾರಣದಿಂದ ಪರಮ ಮಹತ್ತ್ವವುಳ್ಳವನು, 842 ಅಧೃತಃ-ಆತನನ್ನು ಯಾರೂ ಸಹ ಧರಿಸಿಕೊಳ್ಳಲಾಗದಂತಹ ನಿರಾಧಾರನು, 843 ಸ್ವಧೃತಃ-ತನ್ನಿಂದ ತಾನೇ ಧರಿಸಿಕೊಂಡಿರುವನು ಅಂದರೆ ತನ್ನ ಮಹಿಮೆಯಲ್ಲಿಯೇ ಸ್ಥಿರವಾಗಿರುವವನು, 844 ಸ್ವಾಸ್ಯಃ- ಸುಂದರ ಮುಖವುಳ್ಳವನು, 845 ಪ್ರಾಗ್ವಂಶಃ-ಯಾರಿಂದ ಸಮಸ್ತ ವಂಶಪರಂಪರೆಯೂ ಪ್ರಾರಂಭವಾಗಿದೆಯೋ ಅಂತಹ ಸಮಸ್ತ ಪೂರ್ವಜರಿಗೂ ಸಹ ಪೂರ್ವಜ, ಆದಿ ಪುರುಷನು, 846 ವಂಶವರ್ಧನಃ-ಪ್ರಪಂಚರೂಪೀ ವಂಶವನ್ನು ಮತ್ತು ಯಾದವ ವಂಶವನ್ನು ವೃದ್ಧಿಗೊಳಿಸುವವನು, ॥103॥
(ಶ್ಲೋಕ-104)
ಮೂಲಮ್
ಭಾರಭೃತ್ ಕಥಿತೋ ಯೋಗೀ ಯೋಗೀಶಃಸರ್ವಕಾಮದಃ ।
ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ ॥
ಅನುವಾದ
847 ಭಾರಭೃತ್-ಅದಿಶೇಷಾದಿಗಳ ರೂಪದಲ್ಲಿ ಪೃಥ್ವಿಯ ಭಾರವನ್ನು ಹೊತ್ತಿರುವವನು ಮತ್ತು ತನ್ನ ಭಕ್ತರ ಯೋಗಕ್ಷೇಮದ ಭಾರವನ್ನು ಹೊತ್ತುಕೊಂಡಿರುವವನು, 848 ಕಥಿತಃ-ವೇದ-ಶಾಸ್ತ್ರ ಮತ್ತು ಮಹಾಪುರುಷರಿಂದ ಯಾರ ಗುಣ ಪ್ರಭಾವ ಐಶ್ವರ್ಯ ಮತ್ತು ಸ್ವರೂಪಗಳು ಪದೇಪದೇ ಕಥನ ಮಾಡಲ್ಪಟ್ಟಿವೆಯೋ ಅಂತಹ ಎಲ್ಲರಿಂದಲೂ ವರ್ಣಿಸಲ್ಪಡುವವನು, 849 ಯೋಗೀ-ನಿತ್ಯ ಸಮಾಧಿ ಸ್ಥಿತಿಯಲ್ಲಿರುವವನು, 850 ಯೋಗೀಶಃ-ಸಮಸ್ತ ಯೋಗಿಗಳ ಸ್ವಾಮಿಯು, 851 ಸರ್ವಕಾಮದಃ-ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವವನು, 852 ಆಶ್ರಮಃ-ಎಲ್ಲರಿಗೂ ವಿಶ್ರಾಂತಿ ಕೊಡುವವನು, 853 ಶ್ರಮಣಃ-ದುಷ್ಟರನ್ನು ಶಿಕ್ಷಿಸುವವನು, 854 ಕ್ಷಾಮಃ-ಪ್ರಳಯ ಕಾಲದಲ್ಲಿ ಎಲ್ಲ ಪ್ರಜೆಯ ನಾಶ ಮಾಡುವವನು 855 ಸುಪರ್ಣಃ-ವೇದರೂಪೀ ಸುಂದರವಾದ ಎಲೆಗಳುಳ್ಳವನು, ಸಂಸಾರ ವೃಕ್ಷಸ್ವರೂಪೀ, 856 ವಾಯುವಾಹನಃ-ವಾಯುವಿಗೆ ಗಮನ ಮಾಡುವ ಶಕ್ತಿಯನ್ನು ಕೊಡುವವನು, ॥104॥
(ಶ್ಲೋಕ-105)
ಮೂಲಮ್
ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ ।
ಅಪರಾಜಿತಃಸರ್ವಸಹೋ ನಿಯಂತಾನಿಯಮೋಽಯಮಃ ॥
ಅನುವಾದ
857 ಧನುರ್ಧರಃ-ಧನುರ್ಧಾರೀ ಶ್ರೀರಾಮನು, 858 ಧನುರ್ವೇದಃ-ಧನುರ್ವಿದ್ಯೆಯನ್ನು ಬಲ್ಲ ಶ್ರೀರಾಮನು, 859 ದಂಡಃ- ದಮನ ಮಾಡುವವರ ದಮನ ಶಕ್ತಿಯು, 860 ದಮಯಿತಾ-ಯಮ ಮತ್ತು ರಾಜರರೂಪಗಳಿಂದ ದಮನ ಮಾಡುವವನು, 861 ದಮಃ- ದಂಡಿಸುವ ಕಾರ್ಯ ಅಂದರೆ ದಂಡಿಸಲ್ಪಡುವವರನ್ನು ಸುಧಾರಿಸುವವನು, 862 ಅಪರಾಜಿತಃ-ಶತ್ರುಗಳಿಂದ ಪರಾಜಿತನಾಗದವನು, 863 ಸರ್ವಸಹಃ-ಎಲ್ಲವನ್ನೂ ಸಹಿಸಿಕೊಳ್ಳುವವನು ಅತಿಶಯವಾದ ಸಹನಶೀಲನು, 864 ನಿಯಂತಾ- ಎಲ್ಲರನ್ನೂ ಅವರವರ ಕರ್ತವ್ಯಗಳಲ್ಲಿ ನಿಯುಕ್ತಿಗೊಳಿಸುವವನು, 865 ಅನಿಯಮಃ-ನಿಯಮಗಳಿಂದ ಬಂಧಿಸಲ್ಪಡದಿರುವವನು ಅವನಿಗೆ ಯಾರೂ ಸಹ ನಿಯಂತ್ರಿಸುವವರು ಇಲ್ಲದಿರುವಂತಹ ಪರಮ ಸ್ವತಂತ್ರನು, 866 ಅಯಮಃ-ಅವನಿಗೆ ಯಾರೂ ಶಾಸಕರಿಲ್ಲ ಅಥವಾ ಮೃತ್ಯು ರಹಿತನು, ॥105॥
(ಶ್ಲೋಕ-106)
ಮೂಲಮ್
ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ ।
ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ ॥
ಅನುವಾದ
867 ಸತ್ತ್ವವಾನ್-ಬಲ, ವೀರ್ಯ, ಸಾಮರ್ಥ್ಯ ಮುಂತಾದ ಸಮಸ್ತ ಸತ್ತ್ವಗಳಿಂದ ಸಂಪನ್ನನಾದವನು, 868 ಸಾತ್ತ್ವಿಕಃ- ಸತ್ತ್ವಗುಣ ಪ್ರಧಾನ ಮೂರ್ತಿಯು, 869 ಸತ್ಯಃ-ಸತ್ಯ-ಭಾಷಣ ಸ್ವರೂಪನು, 870 ಸತ್ಯಧರ್ಮಪರಾಯಣಃ-ಯಥಾರ್ಥವಾದಿಯೂ ಮತ್ತು ಧರ್ಮದ ಪರಮಾಧಾರನು, 871 ಅಭಿಪ್ರಾಯಃ-ಪ್ರೇಮೀ ಭಕ್ತರು ಬಯಸುವಂತಹ ಪರಮ ಇಷ್ಟನಾದವನು, 872 ಪ್ರಿಯಾರ್ಹಃ-ಅತ್ಯಂತ ಪ್ರಿಯವಸ್ತುಗಳನ್ನು ಸಮರ್ಪಿಸಲು ಯೋಗ್ಯಪಾತ್ರನಾದವನು, 873 ಅರ್ಹಃ-ಎಲ್ಲರಿಗೂ ಪರಮ ಪೂಜ್ಯನಾದವನು, 874 ಪ್ರಿಯಕೃತ್-ಭಜಿಸುವವರಿಗೆ ಪ್ರಿಯವನ್ನುಂಟು ಮಾಡುವವನು, 875 ಪ್ರೀತಿವರ್ಧನಃ-ತನ್ನ ಪ್ರೇಮಿಗಳ ಪ್ರೇಮವನ್ನು ವೃದ್ಧಿಪಡಿಸುವವನು, ॥106॥
(ಶ್ಲೋಕ-107)
ಮೂಲಮ್
ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ ।
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ ॥
ಅನುವಾದ
876 ವಿಹಾಯಸಗತಿಃ-ಆಕಾಶಗಾಮಿಯಾಗಿರುವವನು, 877 ಜ್ಯೋತಿಃ-ಸ್ವಯಂಪ್ರಕಾಶಸ್ವರೂಪನು, 878 ಸುರುಚಿಃ-ಸುಂದರರುಚಿ ಮತ್ತು ಮನೋಹರ ಕಾಂತಿಯುಳ್ಳವನು, 879 ಹುತಭುಕ್-ಯಜ್ಞದಲ್ಲಿ ಹವನ ಮಾಡಲ್ಪಟ್ಟ ಸಮಸ್ತ ಅಗ್ನಿರೂಪದಿಂದ ಸೇವಿಸುವವನು, 880 ವಿಭುಃ-ಸರ್ವವ್ಯಾಪಿಯಾಗಿರುವವನು, 881 ರವಿಃ-ಸಮಸ್ತ ರಸಗಳನ್ನು ಶೋಷಣೆ ಮಾಡುವ ಸೂರ್ಯನು, 882 ವಿರೋಚನಃ-ವಿವಿಧ ಪ್ರಕಾರಗಳಿಂದ ಪ್ರಕಾಶವನ್ನು ಹರಡಿಸುವವನು, 883 ಸೂರ್ಯಃ-ಕಾಂತಿಯನ್ನು ಪ್ರಕಟಪಡಿಸುವವನು, 884 ಸವಿತಾ-ಸಮಸ್ತ ಜಗತ್ತನ್ನೂ ಉತ್ಪತ್ತಿ ಮಾಡುವವನು, 885 ರವಿಲೋಚನಃ-ಸೂರ್ಯರೂಪೀ ಕಣ್ಣುಗಳುಳ್ಳವನು, ॥107॥
(ಶ್ಲೋಕ-108)
ಮೂಲಮ್
ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಽಗ್ರಜಃ ।
ಅನಿರ್ವಿಣ್ಣಃಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ ॥
ಅನುವಾದ
886 ಅನಂತಃ-ಎಲ್ಲಾ ಪ್ರಕಾರಗಳಿಂದಲೂ ಅಂತ್ಯವಿಲ್ಲದವನು, 887 ಹುತಭುಕ್-ಯಜ್ಞದಲ್ಲಿ ಹವನ ಮಾಡಲ್ಪಟ್ಟ ಸಾಮಗ್ರಿಗಳನ್ನು ಆಯಾಯ ದೇವತೆಗಳ ರೂಪದಲ್ಲಿ ಸ್ವೀಕರಿಸುವವನು, 888 ಭೋಕ್ತಾ-ಪ್ರಕೃತಿಯನ್ನು ಭೋಗಿಸುವವನು, 889 ಸುಖದಃ- ಭಕ್ತರಿಗೆ ದರ್ಶನ ರೂಪೀ ಪರಮ ಸುಖವನ್ನು ಕೊಡುವವನು, 890 ನೈಕಜಃ-ಧರ್ಮ ರಕ್ಷಣೆ, ಸಾಧು-ಸತ್ಪುರುಷರ ರಕ್ಷಣೆ ಇತ್ಯಾದಿ ಪರಮ ವಿಶುದ್ಧ ಕಾರಣಗಳಿಗಾಗಿ ಸ್ವೇಚ್ಛಾಪೂರ್ವಕ ಅನೇಕಾನೇಕ ಅವತಾರವೆತ್ತುವವನು, 891 ಅಗ್ರಜಃ-ಎಲ್ಲರಿಗೆ ಅಗ್ರಜನಾದ ಆದಿಪುರುಷನು, 892 ಅನಿರ್ವಿಣ್ಣಃ-ಪೂರ್ಣಕಾಮನಾದುದರಿಂದ ಯಾವ ಚಿಂತೆಯೂ ಇಲ್ಲದವನು, 893 ಸದಾಮರ್ಷೀ-ಸತ್ಪುರುಷರನ್ನು ಕ್ಷಮಿಸುವನು, 894 ಲೋಕಾಧಿಷ್ಠಾನಮ್-ಸಮಸ್ತ ಲೋಕಗಳ ಆಧಾರನು, 895 ಅದ್ಭುತಃ- ಅತ್ಯಂತ ಆಶ್ಚರ್ಯಮಯನು, ॥108॥
(ಶ್ಲೋಕ-109)
ಮೂಲಮ್
ಸನಾತ್ಸನಾತನತಮಃ ಕಪಿಲಃ ಕಪಿರಪ್ಯಯಃ ।
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ ॥
ಅನುವಾದ
896 ಸನಾತ್-ಅನಂತಕಾಲ ಸ್ವರೂಪನು, 897 ಸನಾತನತಮಃ-ಎಲ್ಲಕ್ಕೂ ಕಾರಣ ಸ್ವರೂಪಿಯಾದುದರಿಂದ ಬ್ರಹ್ಮಾದಿ ಪುರುಷರುಗಳಿಗಿಂತಲೂ ಸಹ ಪರಮ ಪುರಾಣಪುರುಷನು, 898 ಕಪಿಲಃ-ಮಹರ್ಷಿ ಕಪಿಲರು, 899 ಕಪಿಃ-ಸೂರ್ಯದೇವನು, 900 ಅಪ್ಯಯಃ-ಇಡೀ ಜಗತ್ತಿನ ಲಯಸ್ಥಾನನಾಗಿರುವವನು, 901 ಸ್ವಸ್ತಿದಃ-ಪರಮಾನಂದ ರೂಪೀ ಮಂಗಳ ಪ್ರದಾಯಕನು, 902 ಸ್ವಸ್ತಿಕೃತ್-ಆಶ್ರಿತರಾದವರಿಗೆ ಶ್ರೇಯಸ್ಸನ್ನುಂಟು ಮಾಡುವವನು, 903 ಸ್ವಸ್ತಿ-ಕಲ್ಯಾಣ ಸ್ವರೂಪನು, 904 ಸ್ವಸ್ತಿಭುಕ್- ಭಕ್ತರ ಪರಮ ಶ್ರೇಯಸ್ಸನ್ನು ರಕ್ಷಿಸುವವನು, 905 ಸ್ವಸ್ತಿದಕ್ಷಿಣಃ-ಶ್ರೇಯಸ್ಸನ್ನುಂಟುಮಾಡಲು ಸಮರ್ಥನಾದವನು ಮತ್ತು ಬೇಗನೇ ಮಂಗಳವನ್ನುಂಟು ಮಾಡುವವನು, ॥109॥
(ಶ್ಲೋಕ-110)
ಮೂಲಮ್
ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ ।
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ ॥
ಅನುವಾದ
906 ಅರೌದ್ರಃ-ಎಲ್ಲಾ ರೀತಿಯ ರೌದ್ರ ಭಾವಗಳಿಂದ ರಹಿತವಾದ ಶಾಂತಮೂರ್ತಿಯು, 907 ಕುಂಡಲೀ-ಸೂರ್ಯನಂತೆ ಪ್ರಕಾಶಮಾನ ಮಕರಾಕೃತಿಯ ಕುಂಡಲಗಳನ್ನು ಧರಿಸಿರುವವನು, 908 ಚಕ್ರೀ-ಸುದರ್ಶನ ಚಕ್ರವನ್ನು ಧರಿಸಿರುವವನು, 909 ವಿಕ್ರಮೀ-ಎಲ್ಲರಿಗಿಂತಲೂ ವಿಲಕ್ಷಣ ಪರಾಕ್ರಮಶಾಲಿಯು, 910 ಊರ್ಜಿತಶಾಸನಃ-ಆತನ ಶ್ರುತಿ-ಸ್ಮೃತಿರೂಪೀ ಶಾಸನಗಳು ಅತ್ಯಂತ ಶ್ರೇಷ್ಠವಾಗಿರುವಂತಹ ಅತಿಶ್ರೇಷ್ಠವಾದ ಶಾಸನ ಮಾಡುವವನು, 911 ಶಬ್ದಾತಿಗಃ-ವರ್ಣನಾತೀತನಾದವನು, 912 ಶಬ್ದಸಹಃ-ಸಕಲವೇದ ಶಾಸ್ತ್ರಗಳೂ ಯಾರ ಮಹಿಮೆಯನ್ನು ವರ್ಣಿಸುವವೋ ಅಂತಹವನು, 913 ಶಿಶಿರಃ-ಅಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎಂಬ ಮೂರು ಬಗೆಯ ತಾಪದಿಂದ ಪೀಡಿತರಾದವರಿಗೆ ಶಾಂತಿಪ್ರದನಾದ ಶೀತಲ ಸ್ವರೂಪನು, 914 ಶರ್ವರೀಕರಃ-ಸಂಸಾರಿಗಳಿಗೆ ಆತ್ಮನು ರಾತ್ರಿಯಂತಿದ್ದಾನೆ, ಜ್ಞಾನಿಗಳಿಗೆ ಸಂಸಾರವು ರಾತ್ರಿಯಂತಿದೆ. ಈ ಜ್ಞಾನಿ-ಅಜ್ಞಾನಿಗಳ ಎರಡೂ ರಾತ್ರಿಗಳನ್ನು ಉಂಟುಮಾಡುವವನು, ॥110॥
(ಶ್ಲೋಕ-111)
ಮೂಲಮ್
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂ ವರಃ ।
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ ॥
ಅನುವಾದ
915 ಅಕ್ರೂರಃ-ಎಲ್ಲಾ ರೀತಿಯ ಕ್ರೂರ ಭಾವಗಳಿಂದಲೂ ರಹಿತನಾದವನು, 916 ಪೇಶಲಃ-ಮಾತು,ಮನಸ್ಸು ಮತ್ತು ಕರ್ಮ ಇತ್ಯಾದಿ ಎಲ್ಲಾ ದೃಷ್ಟಿಗಳಿಂದಲೂ ಸುಂದರವಾಗಿರುವುದರಿಂದ ಪರಮ ಸುಂದರನು, 917 ದಕ್ಷಃ-ಎಲ್ಲಾ ಪ್ರಕಾರದಿಂದಲೂ ಸಮೃದ್ಧ, ಪರಮಭಕ್ತಿಶಾಲೀ ಮತ್ತು ಕ್ಷಣ ಮಾತ್ರದಲ್ಲಿ ಅತ್ಯಂತ ಭಾರಿ ಕಾರ್ಯವನ್ನು ಮಾಡಿಬಿಡುವ ಮಹಾನ್ ಕಾರ್ಯಕುಶಲನು, 918 ದಕ್ಷಿಣಃ-ಸಂಹಾರಕಾರೀ ಶಕ್ತಿಯುಳ್ಳವನು, 919 ಕ್ಷಮಿಣಾಂವರಃ-ಕ್ಷಮಿಸುವರಲ್ಲಿ ಸರ್ವಶ್ರೇಷ್ಠನು, 620 ವಿದ್ವತ್ತಮಃ- ವಿದ್ವಾಂಸರಲ್ಲಿ ಸರ್ವಶ್ರೇಷ್ಠ ಪರಮ ವಿದ್ವಾಂಸನು, 621 ವೀತಭಯಃ-ಎಲ್ಲಾ ಪ್ರಕಾರದ ಭಯಗಳಿಂದ ರಹಿತನಾದವನು, 922 ಪುಣ್ಯಶ್ರವಣಕೀರ್ತನಃ-ಯಾರ ನಾಮ, ಗುಣ, ಮಹಿಮೆ ಮತ್ತು ಸ್ವರೂಪದ ಶ್ರವಣ ಮತ್ತು ಕೀರ್ತನೆಗಳು ಪರಮ ಪುಣ್ಯತಮ ಅಂದರೆ ಪರಮ ಪಾವನವಾಗಿರುವಂತಹವನು ॥111॥
(ಶ್ಲೋಕ-112)
ಮೂಲಮ್
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ ।
ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ ॥
ಅನುವಾದ
923 ಉತ್ತಾರಣಃ-ಸಂಸಾರ ಸಾಗರದಿಂದ ಪಾರು ಮಾಡುವವನು, 924 ದುಷ್ಕೃತಿಹಾ-ಪಾಪಗಳನ್ನು ಮತ್ತು ಪಾಪಿಗಳನ್ನು ನಾಶ ಮಾಡುವವನು, 925 ಪುಣ್ಯಃ-ಸ್ಮರಣಾದಿಗಳನ್ನು ಮಾಡುವ ಸಮಸ್ತ ಪುರುಷರನ್ನು ಪವಿತ್ರಗೊಳಿಸುವವನು, 926 ದುಃಸ್ವಪ್ನನಾಶನಃ-ಧ್ಯಾನ, ಸ್ಮರಣೆ, ಕೀರ್ತನೆ ಮತ್ತು ಪೂಜೆ ಮಾಡುವುದರಿಂದ ಕೆಟ್ಟ ಸ್ವಪ್ನಗಳನ್ನು ಮತ್ತು ಸಂಸಾರ ರೂಪೀ ದುಃಸ್ವಪ್ನವನ್ನು ನಾಶ ಮಾಡುವವನು, 927 ವೀರಹಾ-ಶರಣಾಗತರ ವಿವಿಧ ಗತಿಗಳನ್ನು ಅಂದರೆ ಸಂಸಾರ ಚಕ್ರವನ್ನು ನಾಶ ಮಾಡುವವನು, 928 ರಕ್ಷಣಃ-ಎಲ್ಲಾ ಪ್ರಕಾರದಿಂದಲೂ ರಕ್ಷಣೆ ಮಾಡುವವನು, 929 ಸಂತಃ-ವಿದ್ಯೆ ಮತ್ತು ವಿನಯಗಳ ಪ್ರಚಾರ ಮಾಡುವುದಕ್ಕಾಗಿ ಸಂತರ ರೂಪದಲ್ಲಿ ಪ್ರಕಟನಾಗುವವನು, 930 ಜೀವನಃ-ಸಕಲ ಪ್ರಜೆಗಳನ್ನೂ ಪ್ರಾಣ ರೂಪದಲ್ಲಿ ಜೀವಿತವಾಗಿಡುವವನು 931 ಪರ್ಯವಸ್ಥಿತಃ-ಸಮಸ್ತ ವಿಶ್ವವನ್ನು ವ್ಯಾಪಿಸಿಕೊಂಡು ಸ್ಥಿತನಾಗಿರುವವನು, ॥112॥
(ಶ್ಲೋಕ-113)
ಮೂಲಮ್
ಅನಂತರೂಪೋಽನಂತಶ್ರೀರ್ಜಿತಮನ್ಯುರ್ಭಯಾಪಹಃ ।
ಚತುರಸ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ ॥
ಅನುವಾದ
932 ಅನಂತರೂಪಃ-ಅನಂತ-ಅಮಿತ ರೂಪಗಳುಳ್ಳವನು, 933 ಅನಂತಶ್ರೀಃ-ಅನಂತಶ್ರೀ ಅಂದರೆ ಅಪರಿಮಿತ ಪರಾಶಕ್ತಿಗಳಿಂದ ಕೂಡಿದವನು, 934 ಜಿತಮನ್ಯುಃ-ಎಲ್ಲಾ ಪ್ರಕಾರದಿಂದ ಕ್ರೋಧವನ್ನು ಜಯಿಸಿಕೊಳ್ಳುವವನು, 935 ಭಯಾಪಹಃ-ಭಕ್ತರ ಭಯವನ್ನು ಹೋಗಲಾಡಿಸುವವನು, 936 ಚತುರಸ್ರಃ-ನಾಲ್ಕು ವೇದರೂಪೀ ಕೋನಗಳುಳ್ಳ ಮಂಗಳ ಮೂರ್ತಿ ಮತ್ತು ನ್ಯಾಯಶೀಲನಾದವನು, 937 ಗಭೀರಾತ್ಮಾ-ಗಂಭೀರವಾದ ಮನಸ್ಸುಳ್ಳವನು, 938 ವಿದಿಶಃ-ಅಧಿಕಾರಿಗಳಿಗೆ ಅವರ ಕರ್ಮಾನುಸಾರ ವಿಭಾಗ ಪೂರ್ವಕ ನಾನಾ ಪ್ರಕಾರಗಳ ಫಲವನ್ನು ಕೊಡುವವನು, 939 ವ್ಯಾದಿಶಃ-ಎಲ್ಲರಿಗೂ ಯಥಾಯೋಗ್ಯ ವಿವಿಧ ಆಜ್ಞೆಗಳನ್ನು ಕೊಡುವವನು, 940 ದಿಶಃ-ವೇದಗಳ ರೂಪದಿಂದ ಸಕಲ ಕರ್ಮಗಳ ಫಲವನ್ನು ತಿಳಿಸುವವನು, ॥113॥
(ಶ್ಲೋಕ-114)
ಮೂಲಮ್
ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ ।
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ ॥
ಅನುವಾದ
941 ಅನಾದಿಃ-ಯಾವ ಆದಿಯೂ ಇಲ್ಲದಂತಹ ಎಲ್ಲರ ಕಾರಣ ಸ್ವರೂಪನು, 942 ಭೂರ್ಭುವಃ-ಪೃಥ್ವಿಗೂ ಸಹ ಆಧಾರನು 943 ಲಕ್ಷ್ಮೀಃ-ಶೋಭಾಯಮಾನವಾಗಿರುವ ಸಮಸ್ತ ವಸ್ತುಗಳ ಶೋಭೆಯಾಗಿರುವವನು, 944 ಸುವೀರಃ-ಆಶ್ರಿತರಾದವರ ಅಂತಃಕರಣದ ಸುಂದರ ಕಲ್ಯಾಣಮಯ ವಿವಿಧ ಸ್ಫೂರ್ತಿಯನ್ನುಂಟು ಮಾಡುವವನು, 945 ರುಚಿರಾಂಗದಃ-ಪರಮ ಸುಂದರ ಕಲ್ಯಾಣಮಯ ಭುಜಕೀರ್ತಿಗಳನ್ನು ಧರಿಸಿರುವವನು, 946 ಜನನಃ-ಸಮಸ್ತ ಜೀವಿಗಳನ್ನು ಉತ್ಪತ್ತಿ ಮಾಡುವವನು, 947 ಜನಜನ್ಮಾದಿಃ-ಜನ್ಮತಾಳುವವರ ಜನ್ಮಕ್ಕೆ ಮೂಲ ಕಾರಣನು, 948 ಭೀಮಃ-ಎಲ್ಲರಿಗೂ ಭಯವನ್ನುಂಟುಮಾಡುವವನು, 949 ಭೀಮ ಪರಾಕ್ರಮಃ-ಅತಿಶಯ ಭಯವನ್ನುಂಟುಮಾಡುವ ಪರಾಕ್ರಮಶಾಲಿ, ॥114॥
(ಶ್ಲೋಕ-115)
ಮೂಲಮ್
ಆಧಾರನಿಲಯೋಽಧಾತಾ ಪುಷ್ಪಹಾಸಃ ಪ್ರಜಾಗರಃ ।
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ ॥
ಅನುವಾದ
950 ಆಧಾರನಿಲಯಃ-ಆಧಾರ ಸ್ವರೂಪೀ ಪೃಥ್ವೀ ಆದಿ ಸಕಲ ಭೂತಗಳ ಸ್ಥಾನನು, 951 ಅಧಾತಾ-ಆತನನ್ನು ರಚಿಸಲು ಯಾರು ಸಹ ಇಲ್ಲದಿರುವಂತಹ ಸ್ವಯಂ ಸ್ಥಿತನು, 952 ಪುಷ್ಪಹಾಸಃ-ಹೂವಿನಂತೆ ವಿಕಸಿತ ನಗೆಯುಳ್ಳವನು, 953 ಪ್ರಜಾಗರಃ-ಸರಿಯಾದ ರೀತಿಯಲ್ಲಿ ಸದಾ ಜಾಗ್ರತನಾಗಿರುವ ನಿತ್ಯ ಪ್ರಬುದ್ಧನು, 954 ಊರ್ದ್ವಗಃ-ಎಲ್ಲರಿಗಿಂತಲೂ ಎತ್ತರದಲ್ಲಿರುವವನು, 955 ಸತ್ಪಥಾಚಾರಃ-ಸತ್ಪುರುಷರ ಮಾರ್ಗದ ಆಚರಣೆ ಮಾಡುವ ಮರ್ಯಾದಾ ಪುರುಷೋತ್ತಮನು, 956 ಪ್ರಾಣದಃ-ಪರೀಕ್ಷಿತನೇ ಮುಂತಾದ ಮೃತರಿಗೂ ಸಹ ಜೀವನ ಕೊಡುವವನು, 957 ಪ್ರಣವಃ-ಓಂಕಾರ ಸ್ವರೂಪನು, 958 ಪಣಃ-ಯಥಾ ಯೋಗ್ಯ ವ್ಯವಹಾರ ಮಾಡುವವನು, ॥115॥
(ಶ್ಲೋಕ-116)
ಮೂಲಮ್
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ ।
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ ॥
ಅನುವಾದ
959 ಪ್ರಮಾಣಮ್-ಸ್ವತಃ ಸಿದ್ಧನಾದುದರಿಂದ ಸ್ವಯಂ ಪ್ರಮಾಣ ಸ್ವರೂಪನು, 960 ಪ್ರಾಣನಿಲಯಃ-ಪ್ರಾಣಗಳಿಗೆ ಆಧಾರಭೂತನು, 961 ಪ್ರಾಣಭೃತ್-ಸಮಸ್ತ ಪ್ರಾಣಗಳನ್ನು ಪೋಷಿಸುವವನು, 962 ಪ್ರಾಣ ಜೀವನಃ-ಪ್ರಾಣವಾಯುವಿನ ಸಂಚಾರದಿಂದ ಪ್ರಾಣಿಗಳನ್ನು ಜೀವಂತವಾಗಿರಿಸುವವನು, 963 ತತ್ತ್ವಮ್-ಯಥಾರ್ಥವಾದ ತತ್ತ್ವರೂಪನು, 964 ತತ್ತ್ವವಿತ್-ಯಥಾರ್ಥವಾದ ತತ್ತ್ವವನ್ನು ಸಂಪೂರ್ಣವಾಗಿ ತಿಳಿದಿರುವವನು, 965 ಏಕಾತ್ಮಾ-ಅದ್ವಿತೀಯ ಸ್ವರೂಪನು, 966 ಜನ್ಮಮೃತ್ಯುಜರಾತಿಗಃ-ಜನನ, ಮರಣ ಮತ್ತು ಮುಪ್ಪು ಇತ್ಯಾದಿ ಶರೀರ ಧರ್ಮಗಳಿಂದ ಸರ್ವಥಾ ಅತೀತನು, ॥116॥
(ಶ್ಲೋಕ-117)
ಮೂಲಮ್
ಭೂರ್ಭುವಃ ಸ್ವಸ್ತರುಸ್ತಾರಃ ಸವಿತಾ ಪ್ರತಿತಾಮಹಃ ।
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ ॥
ಅನುವಾದ
967 ಭೂರ್ಭುವಃಸ್ವಸ್ತರುಃ-ಭೂಃ, ಭುವಃ, ಸ್ವಃ ಎಂಬ ಈ ಮೂರು ಲೋಕಗಳನ್ನೂ ವ್ಯಾಪಿಸಿಕೊಂಡಿರುವವನು ಮತ್ತು ಸಂಸಾರ ವೃಕ್ಷ ಸ್ವರೂಪನು, 968 ತಾರಃ-ಸಂಸಾರ ಸಾಗರವನ್ನು ದಾಟಿಸುವವನು, 969 ಸವಿತಾ-ಎಲ್ಲರನ್ನು ಉತ್ಪತ್ತಿ ಮಾಡುವ ಪಿತಾಮಹನು, 970 ಪ್ರಪಿತಾಮಹಃ-ಪಿತಾಮಹ ಬ್ರಹ್ಮನಿಗೂ ಸಹ ತಂದೆಯಾಗಿರುವವನು, 971 ಯಜ್ಞಃ-ಯಜ್ಞಸ್ವರೂಪನು, 972 ಯಜ್ಞಪತಿಃ-ಸಮಸ್ತ ಯಜ್ಞಗಳ ಅಧಿಷ್ಠಾತನು, 973 ಯಜ್ವಾ-ಯಜಮಾನ ರೂಪದಿಂದ ಯಜ್ಞ ಮಾಡುವವನು, 974 ಯಜ್ಞಾಂಗಃ- ಸಕಲ ಯಜ್ಞರೂಪೀ ಅಂಗಗಳುಳ್ಳವನು, 975 ಯಜ್ಞವಾಹನಃ-ಯಜ್ಞಗಳನ್ನು ನಡೆಸುವವನು, ॥117॥
(ಶ್ಲೋಕ-118)
ಮೂಲಮ್
ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ ।
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ ॥
ಅನುವಾದ
976 ಯಜ್ಞಭೃತ್-ಯಜ್ಞಗಳನ್ನು ಧರಿಸಿ ಪೋಷಿಸುವವನು, 977 ಯಜ್ಞಕೃತ್-ಯಜ್ಞಗಳ ರಚಯಿತನು, 978 ಯಜ್ಞೀ-ಸಮಸ್ತ ಯಜ್ಞಗಳೂ ಯಾರಲ್ಲಿ ಸಮಾಪ್ತಿಯಾಗುವವೋ ಅಂತಹ ಯಜ್ಞಶೇಷಿಯು, 979 ಯಜ್ಞಭುಕ್-ಸಮಸ್ತ ಯಜ್ಞಗಳ ಭೋಕ್ತಾರನು, 980 ಯಜ್ಞಸಾಧನಃ-ಬ್ರಹ್ಮಯಜ್ಞ, ಜಪಯಜ್ಞ ಮುಂತಾದ ಅನೇಕ ಯಜ್ಞಗಳು ಯಾರ ಪ್ರಾಪ್ತಿಗೆ ಸಾಧನವಾಗಿರುವವೋ ಅಂತಹವನು, 981 ಯಜ್ಞಾಂತಕೃತ್-ಯಜ್ಞಗಳನ್ನು ಸಮಾಪ್ತಿಗೊಳಿಸುವವನು ಅಂದರೆ ಅವುಗಳ ಫಲವನ್ನು ಕೊಡುವವನು, 982 ಯಜ್ಞಗುಹ್ಯಮ್-ಯಜ್ಞಗಳಲ್ಲಿ ಗುಪ್ತ ಜ್ಞಾನ ಸ್ವರೂಪಿ ಮತ್ತು ನಿಷ್ಕಾಮ ಯಜ್ಞಸ್ವರೂಪನು 983 ಅನ್ನಮ್-ಸಮಸ್ತ ಪ್ರಾಣಿಗಳ ಅನ್ನ ಅಂದರೆ ಅನ್ನದಂತೆ ಅವುಗಳನ್ನು ಎಲ್ಲಾ ರೀತಿಯಿಂದ ತುಷ್ಟಿ-ಪುಷ್ಟಿಗೊಳಿಸುವವನು, 984 ಅನ್ನಾದಃ-ಸಕಲ ಅನ್ನಗಳನ್ನು ಭುಂಜಿಸುವವನು, ॥118॥
(ಶ್ಲೋಕ-119)
ಮೂಲಮ್
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ ।
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ ॥
ಅನುವಾದ
985 ಆತ್ಮಯೋನಿಃ-ಬೇರೆ ಕಾರಣ ಇಲ್ಲದಂತಹ ಸ್ವಯಂ ಯೋನಿ ಸ್ವರೂಪನು, 986 ಸ್ವಯಂಜಾತಃ-ಸ್ವಯಂ ತನ್ನಿಂದ ತಾನೇ ಸ್ವೇಚ್ಛಾಪೂರ್ವಕ ಪ್ರಕಟಗೊಳ್ಳುವವನು, 987 ವೈಖಾನಃ-ಪಾತಾಳವಾಸಿ ಹಿರಣ್ಯಾಕ್ಷನ ಸಂಹಾರಕ್ಕಾಗಿ ಭೂಮಿಯನ್ನು ಅಗೆದವನು, 988 ಸಾಮಗಾಯನಃ-ಸಾಮವೇದವನ್ನು ಹಾಡುವವನು, 989 ದೇವಕೀನಂದನಃ-ದೇವಕಿಯ ಮಗನು, 990 ಸ್ರಷ್ಟಾ-ಸಮಸ್ತ ಲೋಕಗಳನ್ನು ರಚಿಸುವವನು, 991 ಕ್ಷಿತೀಶಃ-ಪೃಥ್ವೀಪತಿಯು, 992 ಪಾಪನಾಶನಃ-ಸ್ಮರಣೆ, ಕೀರ್ತನೆ, ಆರಾಧನೆ ಮತ್ತು ಧ್ಯಾನ ಇತ್ಯಾದಿಗಳನ್ನು ಮಾಡುವುದರಿಂದ ಸಕಲ ಪಾಪ-ಸಮೂಹವನ್ನು ನಾಶ ಮಾಡುವವನು, ॥119॥
(ಶ್ಲೋಕ-120)
ಮೂಲಮ್
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ ।
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ ॥
ಅನುವಾದ
993 ಶಂಖಭೃತ್-ಪಾಂಚಜನ್ಯವೆಂಬ ಶಂಖವನ್ನು ಧರಿಸಿರುವವನು, 994 ನಂದಕೀ-ನಂದಕವೆಂಬ ಖಡ್ಗವನ್ನು ಧರಿಸಿರುವವನು, 995 ಚಕ್ರೀ- ಸಂಸಾರ ಚಕ್ರವನ್ನು ನಡೆಸುವವನು ಹಾಗೂ ಸುದರ್ಶನವೆಂಬ ಚಕ್ರವನ್ನು ಧರಿಸಿರುವವನು, 996 ಶಾಙರ್ಗ್ಧನ್ವಾ- ಶಾರ್ಙ್ಗವೆಂಬ ಧನುಸ್ಸನ್ನು ಧರಿಸಿರುವವನು, 997 ಗದಾಧರಃ-ಕೌಮೋದಕೀ ಎಂಬ ಗದೆಯನ್ನು ಧರಿಸಿರುವವನು, 998 ರಥಾಂಗ ಪಾಣಿಃ-ಭೀಷ್ಮರ ಪ್ರತಿಜ್ಞೆಯನ್ನು ನಡೆಸಲು ಸುದರ್ಶನಚಕ್ರವನ್ನು ಕೈಗೆತ್ತಿಕೊಂಡವನು, 999 ಅಕ್ಷೋಭ್ಯಃ-ಯಾವ ರೀತಿಯಿಂದಲೂ ಸಹ ವಿಚಲಿತಗೊಳಿಸಲು ಆಗದಂತಹ ಶಾಂತಮೂರ್ತಿಯು, 1000 ಸರ್ವಪ್ರಹಾರಣಾಯುಧಃ-ಜ್ಞಾತ ಮತ್ತು ಅಜ್ಞಾತವಾದ ಎಷ್ಟು ಯುದ್ಧ ಭೂಮಿಯಲ್ಲಿ ಪ್ರಹಾರ ಮಾಡಲು ಯೋಗ್ಯವಾದ ಆಯುಧಗಳಿವೆಯೋ ಅವೆಲ್ಲವನ್ನೂ ಧರಿಸಿರುವವನು, ॥120॥
ಮೂಲಮ್
॥ ಸರ್ವಪ್ರಹರಣಾಯುಧ ಓಂ ನಮ ಇತಿ ॥
ಅನುವಾದ
ಇಲ್ಲಿ ಒಂದು ಸಾವಿರ ನಾಮಗಳ ಸಮಾಪ್ತಿಯನ್ನು ಸೂಚಿಸುವ ಸಲುವಾಗಿ ಅಂತ್ಯದ ನಾಮವನ್ನು ಎರಡು ಬಾರಿ ಬರೆಯಲಾಗಿದೆ. ಮಂಗಳ ವಾಚನವಾದುದರಿಂದ ‘ಓಂ’ ಕಾರವನ್ನು ಸ್ಮರಿಸಲಾಗಿದೆ. ಅಂತ್ಯದಲ್ಲಿ ನಮಸ್ಕಾರ ಮಾಡಿ ಭಗವಂತನನ್ನು ಪೂಜಿಸಲಾಗಿದೆ.
ಮೂಲಮ್
ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ ।
ಶ್ರೀಮಾನ್ ನಾರಾಯಣೋ ವಿಷ್ಣುರ್ವಾಸುದೇವೋಽಭಿರಕ್ಷತು ॥
(ಶ್ಲೋಕ-121)
ಮೂಲಮ್
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ ।
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ ॥
ಅನುವಾದ
ಈ ಪ್ರಕಾರ ಕೀರ್ತನೆ ಮಾಡಲು ಯೋಗ್ಯವಾದ ಮಹಾತ್ಮಾ ಕೇಶವನ ಒಂದು ಸಾವಿರ ಈ ದಿವ್ಯ ನಾಮಗಳನ್ನು ಪೂರ್ಣವಾಗಿ ವರ್ಣನೆ ಮಾಡಲಾಯಿತು, ॥121॥
(ಶ್ಲೋಕ-122)
ಮೂಲಮ್
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ ।
ನಾಶುಭಂ ಪ್ರಾಪ್ನುಯಾತ್ಕಿಂಚಿತ್ಸೋಮುತ್ರೇಹ ಚ ಮಾನವಃ ॥
ಅನುವಾದ
ಯಾವ ಮನುಷ್ಯನು ಈ ವಿಷ್ಣು ಸಹಸ್ರನಾಮಗಳನ್ನು ಸದಾ ಶ್ರವಣ ಮಾಡುವನೋ ಮತ್ತು ಪ್ರತಿದಿನವೂ ಇದನ್ನು ಕೀರ್ತನೆ ಮಾಡುವನೋ ಅಥವಾ ಪಠಿಸುವನೋ ಅವನಿಗೆ ಈ ಲೋಕದಲ್ಲಿ ಹಾಗೂ ಪರಲೋಕದಲ್ಲಿ ಎಲ್ಲಿಯೂ ಸಹ ಕಿಂಚಿತ್ತೂ ಅಶುಭವುಂಟಾಗುವುದಿಲ್ಲ, ॥122॥
(ಶ್ಲೋಕ-123)
ಮೂಲಮ್
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ ।
ವೈಶ್ಯೋ ಧನಸಮೃದ್ಧಃ ಸ್ಯಾಚ್ಛೂದ್ರಃ ಸುಖಮವಾಪ್ನುಯಾತ್ ॥
ಅನುವಾದ
ಈ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುವುದರಿಂದ ಅಥವಾ ಕೀರ್ತನೆ ಮಾಡುವುದರಿಂದ ಬ್ರಾಹ್ಮಣನು ವೇದಾಂತವನ್ನು ಬಲ್ಲವನಾಗುತ್ತಾನೆ ಅಂದರೆ ಉಪನಿಷತ್ತುಗಳ ಅರ್ಥರೂಪೀ ಪರಬ್ರಹ್ಮವನ್ನು ಪಡೆದುಕೊಳ್ಳುತ್ತಾನೆ. ಕ್ಷತ್ರಿಯನು ಯುದ್ಧದಲ್ಲಿ ವಿಜಯಿಯಾಗುತ್ತಾನೆ. ವೈಶ್ಯನು ವ್ಯಾಪಾರದಲ್ಲಿ ಹಣವನ್ನು ಪಡೆಯುತ್ತಾನೆ ಮತ್ತು ಶೂದ್ರನು ಸುಖವನ್ನು ಪಡೆಯುತ್ತಾನೆ, ॥123॥
(ಶ್ಲೋಕ-124)
ಮೂಲಮ್
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ ।
ಕಾಮಾನವಾಪ್ನುಯಾತ್ಕಾಮೀ ಪ್ರಜಾರ್ಥೀ ಚಾಪ್ನುಯಾತ್ಪ್ರಜಾಮ್ ॥
ಅನುವಾದ
ಧರ್ಮದ ಇಚ್ಛೆಯುಳ್ಳವರಿಗೆ ಧರ್ಮವೂ, ಐಶ್ವರ್ಯದ ಇಚ್ಛೆಯುಳ್ಳವರಿಗೆ ಐಶ್ವರ್ಯವೂ, ಸುಖ-ಭೋಗಗಳನ್ನು ಬಯಸುವವರಿಗೆ ಸುಖ-ಭೋಗವೂ ಮತ್ತು ಪ್ರಜೆಯನ್ನು ಬಯಸುವವರಿಗೆ ಸಂತಾನವೂ ಪ್ರಾಪ್ತಿಯಾಗುತ್ತದೆ, ॥124॥
(ಶ್ಲೋಕ-125)
ಮೂಲಮ್
ಭಕ್ತಿಮಾನ್ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ ।
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ಪ್ರಕೀರ್ತಯೇತ್ ॥
(ಶ್ಲೋಕ-126)
ಮೂಲಮ್
ಯಶಃ ಪ್ರಾಪ್ನೋತಿ ವಿಪುಲಂ ಜ್ಞಾತಿಪ್ರಾಧಾನ್ಯಮೇವ ಚ ।
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ ॥
(ಶ್ಲೋಕ-127)
ಮೂಲಮ್
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ ।
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ ॥
ಅನುವಾದ
ಯಾವ ಭಕ್ತಿಯುಕ್ತನಾದ ಪುರುಷನು ದಿನವೂ ಪ್ರಾತಃಕಾಲದಲ್ಲಿ ಸ್ನಾನಮಾಡಿ ಪವಿತ್ರನಾಗಿ ಮನದಲ್ಲಿ ವಿಷ್ಣುವಿನ ಧ್ಯಾನ ಮಾಡುತ್ತಾ ಈ ವಾಸುದೇವನ-ಸಹಸ್ರನಾಮವನ್ನು ಉತ್ತಮ ರೀತಿಯಲ್ಲಿ ಪಠಿಸುವನೋ ಅವನು ಅತ್ಯಧಿಕ ಯಶಸ್ಸನ್ನು ಪಡೆಯುತ್ತಾನೆ. ಬಂಧು-ಬಾಂಧವರಲ್ಲಿ ಮಾನ್ಯತೆಯನ್ನು ಪಡೆಯುತ್ತಾನೆ ಹಾಗೂ ಆತನಿಗೆ ಎಂದಿಗೂ ಭಯವುಂಟಾಗುವುದಿಲ್ಲ. ಅವನು ವೀರ್ಯ ಮತ್ತು ತೇಜಸ್ಸನ್ನು ಪಡೆಯುತ್ತಾನೆ ಹಾಗೂ ಆರೋಗ್ಯವಂತನೂ, ಕಾಂತಿಯುಳ್ಳವನೂ, ಬಲಶಾಲಿಯೂ, ರೂಪವಂತನೂ ಮತ್ತು ಸರ್ವಗುಣ ಸಂಪನ್ನನೂ ಆಗುತ್ತಾನೆ. ॥125-127॥
(ಶ್ಲೋಕ-128)
ಮೂಲಮ್
ರೋಗಾರ್ತೋಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ ।
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ ॥
ಅನುವಾದ
ರೋಗಪೀಡಿತನಾದವನು ರೋಗದಿಂದ ಬಿಡುಗಡೆಯಾಗುತ್ತಾನೆ, ಬಂಧನಕ್ಕೊಳಗಾಗಿರುವವನು ಬಂಧನದಿಂದ ಮುಕ್ತನಾಗುತ್ತಾನೆ, ಭಯಭೀತನು ಭಯಮುಕ್ತನಾಗುತ್ತಾನೆ ಮತ್ತು ಆಪತ್ತಿಗೆ ಸಿಕ್ಕಿರುವವನು ಆಪತ್ತಿನಿಂದ ಬಿಡುಗಡೆಯಾಗುತ್ತಾನೆ, ॥128॥
(ಶ್ಲೋಕ-129)
ಮೂಲಮ್
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ ।
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ ॥
ಅನುವಾದ
ಯಾವ ಪುರುಷನು ಭಕ್ತಿ ಸಂಪನ್ನನಾಗಿ ಈ ವಿಷ್ಣುಸಹಸ್ರನಾಮಗಳಿಂದ ಭಗವಾನ್ ಪುರುಷೋತ್ತಮನನ್ನು ಪ್ರತಿದಿವಸವೂ ಸ್ತುತಿಸುವನೋ ಅವನು ಶೀಘ್ರವಾಗಿಯೇ ಸಕಲ ಸಂಕಟಗಳಿಂದ ಪಾರಾಗಿ ಹೋಗುತ್ತಾನೆ, ॥129॥
(ಶ್ಲೋಕ-130)
ಮೂಲಮ್
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ ।
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ ॥
ಅನುವಾದ
ಯಾವ ಮನುಷ್ಯನು ವಾಸುದೇವನಿಗೆ ಆಶ್ರಿತನಾಗಿ ಮತ್ತು ಆತನ ಪರಾಯಣನಾಗುವನೋ ಅವನು ಸಮಸ್ತ ಪಾಪಗಳಿಂದ ಬಿಡುಗಡೆಯಾಗಿ ವಿಶುದ್ಧ ಅಂತಃಕರಣವುಳ್ಳವನಾಗಿ ಸನಾತನ ಪರಬ್ರಹ್ಮವನ್ನು ಪಡೆಯುತ್ತಾನೆ, ॥130॥
(ಶ್ಲೋಕ-131)
ಮೂಲಮ್
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ ।
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ ॥
ಅನುವಾದ
ವಾಸುದೇವನ ಭಕ್ತರಿಗೆ ಎಲ್ಲಿಯೂ ಅಶುಭವುಂಟಾಗುವುದಿಲ್ಲ ಹಾಗೂ ಅವರಿಗೆ ಜನನ, ಮರಣ, ಮುಪ್ಪು ಮತ್ತು ವ್ಯಾಧಿಯ ಭಯವು ಇರುವುದಿಲ್ಲ, ॥131॥
(ಶ್ಲೋಕ-132)
ಮೂಲಮ್
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ ।
ಯುಜ್ಯೇತಾತ್ಮಸುಖಕ್ಷಾಂತಿ ಶ್ರೀಧೃತಿಸ್ಮೃತಿಕೀರ್ತಿಭಿಃ ॥
ಅನುವಾದ
ಶ್ರದ್ಧಾ ಪೂರ್ವಕವಾಗಿ ಭಕ್ತಿಭಾವದಿಂದ ಈ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುವ ಪುರುಷನು ಆತ್ಮಸುಖ, ಕ್ಷಮೆ, ಲಕ್ಷ್ಮೀ, ಧೈರ್ಯ, ಸ್ಮೃತಿ ಮತ್ತು ಕೀರ್ತಿಯನ್ನು ಪಡೆಯುತ್ತಾನೆ, ॥132॥
(ಶ್ಲೋಕ-133)
ಮೂಲಮ್
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ ।
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ ॥
ಅನುವಾದ
ಪುರುಷೋತ್ತಮನ ಪುಣ್ಯವಂತರಾದ ಭಕ್ತರಿಗೆ ಯಾವ ದಿನವೂ ಕೋಪ ಬರುವುದಿಲ್ಲ, ಅಸೂಯೆಯುಂಟಾಗುವುದಿಲ್ಲ. ಲೋಭವಿರುವುದಿಲ್ಲ ಮತ್ತು ಅವರ ಬುದ್ಧಿ ಎಂದಿಗೂ ಅಶುದ್ಧವಾಗುವುದಿಲ್ಲ, ॥133॥
(ಶ್ಲೋಕ-134)
ಮೂಲಮ್
ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ ।
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ ॥
ಅನುವಾದ
ಸ್ವರ್ಗ, ಸೂರ್ಯ, ಚಂದ್ರ ಹಾಗೂ ನಕ್ಷತ್ರಸಹಿತ ಆಕಾಶ, ಹತ್ತು ದಿಕ್ಕುಗಳು, ಪೃಥ್ವೀ ಮತ್ತು ಮಹಾಸಾಗರ - ಇವೆಲ್ಲವೂ ಮಹಾತ್ಮಾ ವಾಸುದೇವನ ವೀರ್ಯದಿಂದ ಧಾರಣ ಮಾಡಲ್ಪಟ್ಟಿವೆ. ॥134॥
(ಶ್ಲೋಕ-135)
ಮೂಲಮ್
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ ।
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ ॥
ಅನುವಾದ
ದೇವತೆಗಳು, ದೈತ್ಯರು, ಗಂಧರ್ವರು, ಯಕ್ಷರು, ಸರ್ಪಗಳು ಮತ್ತು ರಾಕ್ಷಸರ ಸಹಿತವಾದ ಈ ಸ್ಥಾವರ-ಜಂಗಮರೂಪೀ ಸಂಪೂರ್ಣ ಜಗತ್ತೆಲ್ಲಾ ಶ್ರೀಕೃಷ್ಣನ ಅಧೀನದಲ್ಲಿದ್ದುಕೊಂಡು ಯಥಾ ಯೋಗ್ಯವಾಗಿ ವರ್ತಿಸುತ್ತದೆ, ॥135॥
(ಶ್ಲೋಕ-136)
ಮೂಲಮ್
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ ।
ವಾಸುದೇವಾತ್ಮಕಾನ್ಯಾಹುಃ ಕ್ಷೇತ್ರಂ ಕ್ಷೇತ್ರಜ್ಞ ಏವ ಚ ॥
ಅನುವಾದ
ಇಂದ್ರಿಯಗಳು, ಮನಸ್ಸು, ಬುದ್ಧಿ, ಸತ್ತ್ವ, ತೇಜಸ್ಸು, ಬಲ, ಧೈರ್ಯ, ಕ್ಷೇತ್ರ (ಶರೀರ) ಮತ್ತು ಕ್ಷೇತ್ರಜ್ಞ (ಆತ್ಮಾ) - ಇವುಗಳೆಲ್ಲವೂ ಶ್ರೀವಾಸುದೇವನ ರೂಪವಾಗಿವೆ - ಎಂದು ವೇದಗಳು ಹೇಳುತ್ತವೆ ॥136॥
(ಶ್ಲೋಕ-137)
ಮೂಲಮ್
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪತೇ ।
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ ॥
ಅನುವಾದ
ಆಚಾರವನ್ನು ಎಲ್ಲಕ್ಕಿಂತ ಶ್ರೇಷ್ಠವೆಂದು ಎಲ್ಲಾ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆಚಾರದಿಂದಲೇ ಧರ್ಮದ ಉತ್ಪತ್ತಿಯಾಗುತ್ತದೆ ಮತ್ತು ಭಗವಾನ್ ಅಚ್ಯುತನೇ ಧರ್ಮದ ಒಡೆಯನಾಗಿದ್ದಾನೆ, ॥137॥
(ಶ್ಲೋಕ-138)
ಮೂಲಮ್
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ ।
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ ॥
ಅನುವಾದ
ಋಷಿಗಳು, ಪ್ರಿತೃಗಳೂ, ದೇವತೆಗಳೂ, ಪಂಚ-ಮಹಾಭೂತಗಳೂ, ಧಾತುಗಳೂ ಮತ್ತು ಸ್ಥಾವರ ಜಂಗಮಾತ್ಮಕ ಸಂಪೂರ್ಣ ಜಗತ್ತೆಲ್ಲವೂ ನಾರಾಯಣನಿಂದಲೇ ಉತ್ಪನ್ನವಾಗಿದೆ, ॥138॥
(ಶ್ಲೋಕ-139)
ಮೂಲಮ್
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿ ಕರ್ಮ ಚ ।
ವೇದಾಃ ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ ॥
ಅನುವಾದ
ಋಷಿಗಳು, ಜ್ಞಾನ, ಸಾಂಖ್ಯ, ವಿದ್ಯೆಗಳು, ಶಿಲ್ಪ ಮುಂತಾದ ಕರ್ಮಗಳು, ವೇದ, ಶಾಸ್ತ್ರ ಮತ್ತು ವಿಜ್ಞಾನ-ಇವುಗಳೆಲ್ಲಾ ವಿಷ್ಣುವಿನಿಂದ ಉತ್ಪತ್ತಿಯಾಗಿವೆ. ॥139॥
(ಶ್ಲೋಕ-140)
ಮೂಲಮ್
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ ।
ತ್ರೀನ್ ಲೋಕಾನ್ ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ ॥
ಅನುವಾದ
ಅವನು ಸಮಸ್ತ ವಿಶ್ವದ ಭೋಕ್ತಾ ಮತ್ತು ಅವಿನಾಶಿಯಾದ ಆ ವಿಷ್ಣು ಪರಮಾತ್ಮನೊಬ್ಬನೇ ಅನೇಕ ರೂಪಗಳಲ್ಲಿ ವಿಭಕ್ತನಾಗಿ ಭಿನ್ನ-ಭಿನ್ನ ಭೂತ ವಿಶೇಷಗಳ ಅನೇಕ ರೂಪಗಳನ್ನು ಧರಿಸಿರುವನು ಹಾಗೂ ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿ ಎಲ್ಲವನ್ನೂ ಭೋಗಿಸುತ್ತಿದ್ದಾನೆ. ॥140॥
(ಶ್ಲೋಕ-141)
ಮೂಲಮ್
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ ।
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ನುಂ ಸುಖಾನಿ ಚ ॥
ಅನುವಾದ
ಯಾವ ಪುರುಷನು ಪರಮ ಶ್ರೇಯಸ್ಸನ್ನು ಮತ್ತು ಸುಖವನ್ನು ಪಡೆಯಲಿಚ್ಛಿಸುವನೋ ಅವನು ಭಗವಾನ್ ವ್ಯಾಸರು ಹೇಳಿರುವ ಈ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಿಸಬೇಕು. ॥141॥
(ಶ್ಲೋಕ-142)
ಮೂಲಮ್
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ ।
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ ॥
ಅನುವಾದ
ಯಾರು ವಿಶ್ವದ ಈಶ್ವರ, ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ವಿನಾಶ ಮಾಡುವ ಜನ್ಮರಹಿತ ಕಮಲಲೋಚನ ಭಗವಾನ್ ವಿಷ್ಣುವನ್ನು ಭಜಿಸುವರೋ ಅವರು ಎಂದಿಗೂ ಪರಾಭವವನ್ನು ಹೊಂದುವುದಿಲ್ಲ. ॥142॥
ಮೂಲಮ್ (ಸಮಾಪ್ತಿಃ)
ಓಂ ತತ್ಸದಿತಿ ಶ್ರೀಮಹಾಭಾರತೇ ಶತಸಾಹಸ್ರ್ಯಾಂ ಸಂಹಿತಾಯಾಂ
ವೈಯ್ಯಾಸಿಕ್ಯಾಮಾನುಶಾಸನಿಕೇ ಪರ್ವಣಿ ಭೀಷ್ಮಯುಧಿಷ್ಠಿರ ಸಂವಾದೇ
ಶ್ರೀವಿಷ್ಣೋರ್ದಿವ್ಯಸಹಸ್ರನಾಮ ಸ್ತೋತ್ರಮ್ ॥
Misc Detail
ಅನುವಾದ
ವಿ.ಸೂ- ಈ ವಿಷ್ಣು ಸಹಸ್ರನಾಮವು ಶ್ರೀಮನ್ಮಹಾಭಾರತದ ಅಂತರ್ಗತವಾಗಿದೆ. ಅದರಲ್ಲಿರುವ ಶ್ಲೋಕಗಳ ಅನುವಾದವನ್ನು ಕೊಡಲಾಗಿದೆ. ದಾಕ್ಷಿಣಾತ್ಯ ಪಾಠವನ್ನು ಗಮನದಲ್ಲಿಟ್ಟುಕೊಂಡು ಕೆಲವು ಶ್ಲೋಕಗಳನ್ನು ಹೆಚ್ಚಿಗೆ ಕೊಡಲಾಗಿದೆ. ಓದುಗರು ಇದರ ಲಾಭವನ್ನು ಪಡೆಯಬೇಕಾಗಿ ಅಪೇಕ್ಷಿಸುತ್ತೇವೆ.
Misc Detail
ಕೊನೆಯ ಪುಟ