ಚತುರ್ದಶಾಶ್ವಾಸಂ
೧. ಹರಿಗಂ–ಅರ್ಜುನನು, ಶ್ರೀ ರಾಮಾಲಿಂಗಿತ ವಿಪುಲೋರಸ್ಕಂ–ಲಕ್ಷ್ಮಿ ಎಂಬ ವನಿತೆ ಯಿಂದ ತಬ್ಬಲ್ಪಟ್ಟ ವಿಶಾಲವಾದ ಎದೆಯುಳ್ಳವನು, ಭಾಸ್ಕರ ಪ್ರತಾಪಂ–ಸೂರ್ಯನ ಪ್ರತಾಪ ವುಳ್ಳವನು, ನಿಜದೋರ್ಮೇರು ಮಥಿತಾರಿಕೂಪಾರಂ–ತನ್ನ ಬಾಹುಗಳೆಂಬ ಮೇರು ಪರ್ವತ ದಿಂದ ಕಡೆಯಲ್ಪಟ್ಟ ಶತ್ರುಸಾಗರವುಳ್ಳವನು, ಸಂಹಾರಿತಾರಿಶೌರ್ಯಂ–ಧ್ವಂಸಮಾಡಿದ ಶತ್ರು ಪರಾಕ್ರಮವುಳ್ಳವನು.
೨. ತನ್ನಿಱಿದು–ತಾನು ಯುದ್ಧ ಮಾಡಿ, ಗೆಲ್ದ–ಗೆದ್ದ, ಕೊಳುಗುಳಮಂ–ಯುದ್ಧರಂಗ ವನ್ನು, ನೋಡಲ್–ನೋಡುವುದಕ್ಕಾಗಿ, ಚಕ್ರಪಾಣಿಯುಂ–ಕೃಷ್ಣನೂ, ತನ್ನ ಸಹೋತ್ಪನ್ನರುಂ– ತನ್ನ ಸಹೋದರರೂ, ಒಡವರೆ–ಸೇರಿ ಬರಲು, ಬಂದು, ವಿಪನ್ನೋಗ್ರಾರಾತಿ ವರ್ಗಂ–ಸತ್ತ ಭೀಕರ ಶತ್ರುಸಮೂಹಗಳನ್ನುಳ್ಳವನು, ಆಹವ ಧರೆಯಂ–ಯುದ್ಧಭೂಮಿಯನ್ನು.
ವಚನ : ಎಯ್ದಿ–ಮುಟ್ಟಿ, ತಲುಪಿ; ಅಂತಕ ಆನನಮಂ–ಯಮನ ಬಾಯನ್ನು; ಸಂಹತಿ ಯುಮಂ–ಸಮೂಹವನ್ನೂ; ಎಣಿಕೆಗೞಿದ–ಲೆಕ್ಕಕ್ಕೆ ಮೀರಿದ, ಅಸಂಖ್ಯಾತವಾದ; ಅಧೋ ಕ್ಷಜಂ–ಶ್ರೀಕೃಷ್ಣನು, ಅಜಾತ ಶತ್ರುವಂ–ಧರ್ಮರಾಜನನ್ನು;
೩. ಶಾತ–ಹರಿತವಾದ, ಶರಾಗ್ನಿ–ಬಾಣಗಳ ಉರಿಯಿಂದ, ಭಗ್ನ–ಹಾಳಾದ, ಭಟ ಕೋಟಿ–ಕೋಟ್ಯಂತರ ಯೋಧರಿಂದ, ವಿಭೀಷಣಂ–ಭಯಂಕರವಾದದ್ದು; ಉಗ್ರ…. ಬುಕಂ: ಉಗ್ರ–ಭಯಂಕರವಾದ, ವೈರಿ–ಶತ್ರುಗಳ, ಸಂಘಾತ–ಸಮೂಹಗಳ, ಕರೀಂದ್ರ–ಆನೆಗಳ, ರುಂದ್ರ–ವಿಸ್ತಾರವಾದ, ಕಟಕೂಟ–ಕಪೋಲದ ತುದಿಯಿಂದ, ಪರಿಚ್ಯುತ–ಸೋರುತ್ತಿರುವ, ಭೃಂಗಮಾಳಿಕಾ ಪೀತಂ–ದುಂಬಿಗಳ ಮಾಲೆಯಿಂದ ಕುಡಿಯಲ್ಪಟ್ಟ, ಮದಾಂಬುಕಂ–ಮದೋ ದಕವನ್ನುಳ್ಳದ್ದು; ಪ್ರಕೃತಿ–ಸಹಜವಾದ, ರಕ್ತಜಲಾಸವ–ರಕ್ತ ಜಲವೆಂಬ ಮದ್ಯದಿಂದ, ಮತ್ತ– ಸೊಕ್ಕಿದ, ಯೋಗಿನೀವ್ರಾತ–ಜೋಗಿಣಿಗಳ ಗುಂಪುಗಳಿಂದ, ಪರೀತ–ಬಳಸಲ್ಪಟ್ಟ, ಭೂತ– ಪಿಶಾಚಿಗಳ, ಸದನಂ–ಮನೆಯಾದದ್ದು; ಕದನ ತ್ರಿಣೇತ್ರನಾ–ಅರ್ಜುನನ, ಕದನಂ–ಯುದ್ಧವು, ಇಲ್ಲಿ ಪ್ರಕೃತಿ ಎಂಬುದಕ್ಕೆ ಪ್ರಸೃತಿ ಎಂದು ಪಾಠವಿದ್ದಿರಬಹುದು.
೪. ಸ್ಫುರಿತ ವರೂಥ ಚಕ್ರಹತಿಯಿಂ–ಪ್ರಕಾಶಮಾನವಾದ ರಥಗಳ ಗಾಲಿಗಳ ಹೊಡೆತ ದಿಂದ, ಧರಣೀತಳಂ–ಭೂ ಪ್ರದೇಶವು, ಅತ್ತಂ ಇತ್ತಂ–ಅಲ್ಲೂ ಇಲ್ಲೂ, ಅ [ೞ್ದ] ರಿಯೆ– ಮುಳುಗಿ ಎಂದರೆ ತಗ್ಗಾಗಿ ಭಿನ್ನವಾಗಲು (?); ಬಗೆದು ನೋೞ್ಪೊಡೆ–ಭಾವಿಸಿ ನೋಡಿದರೆ, ವಿಯತ್ತಳಂ–ಆಕಾಶ ಪ್ರದೇಶವು, ನಾಡೆ–ವಿಶೇಷವಾಗಿ, ಪತತ್ಪತತ್ರಿ–ಬೀಳುವ ಬಾಣಗಳ, ಜರ್ಜರಿತಮೆ–ಚೂರುಗಳಿಂದ ಕೂಡಿದ್ದೆ; ದಿಕ್ತಟಂ–ದಿಕ್ಪ್ರದೇಶಗಳು, ರಿಪುನರಾಧಿಪರಕ್ತಧುನೀ ಪ್ರವಾಹ–ಶತ್ರು ರಾಜರ ರಕ್ತದ ನದಿಯ ಪ್ರವಾಹದಿಂದ, ಪಿಂಜರಿತಮೆ–ಕೆಂಪು ಹಳದಿ ಮಿಶ್ರ ಬಣ್ಣವುಳ್ಳದ್ದೇ, ಕದನ ತ್ರಿಣೇತ್ರನಾ–ಅರ್ಜುನನ, ಬೀರಮಂ–ಪ್ರತಾಪವನ್ನು, ಪೊಗೞ್ವಂ– ಹೊಗಳುವವನು, ಏವೊಗೞ್ವಂ–ಏನು ಹೊಗಳುವನು?
ವಚನ : ಬಾಯೞಿದು ಪಳಯಿಸುತ್ತುಂ–ಬಾಯಿ ಬಳಲುವಂತೆ ಪ್ರಲಾಪ ಮಾಡುತ್ತ; ಯೂಧಪತಿ–ಹಿಂಡಿನ ಒಡೆಯ ಸಲಗ; ಕರೇಣುಗಳುಮಂ–ಹೆಣ್ಣಾನೆಯ ಮರಿಗಳನ್ನು; ಅಡರ್ಪ್ಪಿಲ್ಲದೆ–ಆಶ್ರಯವಿಲ್ಲದೆ, ಅವಲಂಬವಿಲ್ಲದೆ; ಬಂಬಲ ಬಾಡಿದ–ಅಧಿಕವಾಗಿ ಬಾಡಿದ (?)
೫. ಇಱಿವ–ಸಡಿಲವಾಗುತ್ತಿರುವ (?), ಪಿಣಿಲ್–ಜಡೆ; ತೆರಳ್ದು–ಒಟ್ಟಾಗಿ, ಒಱೆವ– ಸುರಿಯುವ, ಕಣ್ಬನಿ–ಕಣ್ಣೀರು; ಮಾಣದೆ–ಬಿಡದೆ, ಮೋದೆ–ಹೊಡೆದುಕೊಳ್ಳಲು, ಶೋಕದ–ದುಃಖದ, ಅಚ್ಚಿಱಿದವೊಲ್–ಅಚ್ಚಿಟ್ಟ ಹಾಗೆ, ಇರ್ದ–ಇದ್ದ, ಬಾಸುೞಿ ನೊಳ್– ಬಾಸುಂಡೆಗಳಲ್ಲಿ, ಅೞ್ದು–ತಗ್ಗಾಗಿ, ಕನಲ್ದು–ಕೆರಳಿ, ಬೞಲ್ದು–ಆಯಾಸಗೊಂಡು, ಜೋಲ್ದ– ಜೋಲಿದ, ಮೆಯ್–ಮೈಗಳು; ಮಱುಗುವ–ವ್ಯಥೆಪಡುವ, ಬೇಗದೊಳ್–ಹೊತ್ತಿನಲ್ಲಿ, ಅಣಂ–ಸ್ವಲ್ಪವೂ, ದೆಸೆಗಾಣದ–ದಿಕ್ಕನ್ನು ಕಾಣದ ಎಂದರೆ ಕಣ್ಣಲ್ಲಿ ನೀರು ತುಂಬಿ ಕಾಣಲು ಕಷ್ಟವಾದ, ನೋಟಂ–ನೋಟವು, ಆರುಮಂ–ಯಾರನ್ನೂ, ಮಱುಗಿಸೆ–ದುಃಖಿಸುವಂತೆ ಮಾಡಲು, ವೈರಿನೃಪಾಂಗನಾಜನಂ–ಶತ್ರುರಾಜರ ಸ್ತ್ರೀ ಜನರು, ಕರುಣಂಬರೆ–ಕರುಣೆಯೇ ಬಂದಂತೆ, ಅಂದು–ಆಗ, ಬಂದುದು–ಬಂತು.
೬. ಏಗೆಯ್ದುಂ–ಏನು ಮಾಡಿಯೂ, ಎನ್ನಧರೆಯ–ನನ್ನ ರಾಜ್ಯದ, ಒರ್ವಾಗಮುಮಂ– ಒಂದು ಭಾಗವನ್ನೂ, ನೀಮೆ–ನೀವೆ, ಬೆಸೆಸೆಯುಂ–ಹೇಳಿದರೂ, ಕುಡದೆ–ಕೊಡದೆ, ಇನಿತಂ–ಇಷ್ಟನ್ನು, ಮೇಗಿಲ್ಲದೆ–ಲೇಸಿಲ್ಲದೆ (?), ನಾಗಧ್ವಜಂ–ದುರ್ಯೋಧನನು, ನೆಗೞ್ದು– ಮಾಡಿ, ಅೞಿದಂ–ಸತ್ತನು; ಅಯ್ಯ–ತಂದೆಯೇ, ನೀಂ–ನೀವು, ಅದರ್ಕೆ–ಅದಕ್ಕಾಗಿ, ಅೞಲದಿರಂ–ವ್ಯಥೆಪಡದಿರಿ.
೭. ಪಗೆ–ದ್ವೇಷವು, ಆತನ–ಅವನ, ಒಡವೋಯ್ತು–ಜೊತೆಯಲ್ಲಿ ಹೋಯಿತು; ಆಂ– ನಾನು, ಆತನಿಂ–ಅವನಿಗಿಂತ, ಅಗ್ಗಳದ–ಶ್ರೇಷ್ಠನಾದ, ಮಗನೆನ್–ಮಗನಾಗಿದ್ದೇನೆ; ನಖಮಾಂಸ ಪ್ರೀತಿಯೊಳೆ–ಉಗುರು ಮಾಂಸದ ಎಂದರೆ ಅತಿ ಅನ್ಯೋನ್ಯವಾದ ಪ್ರೀತಿ ಯಲ್ಲೇ, ನೆಗೞ್ವೆಂ–ನಡೆದುಕೊಳ್ಳುವೆನು; ಪಡೆಮಾತೇಂ–ಬೇರೆ ಮಾತೇನು? ಪಂಬಲಿಸದೆ–ಹಂಬಲಿ ಸದೆ, ಎನ್ನ–ನಾನು, ಪೇೞ್ದುದು ಗೆಯ್ಯಿಂ–ಹೇಳಿದುದನ್ನು ಮಾಡಿರಿ.
೮. ಎನಗೆ–ನನಗೆ, ತನಯಶತಮಾದುದಲ್ತು–ನೂರು ಮಕ್ಕಳಾದುದಲ್ಲ, ಅನಿವಾರಿತ– ತಡೆಯಲಾಗದ, ದುಃಖಶತಮೆ–ನೂರು ದುಃಖಗಳೆ, ತಾಂ–ತಾನು, ಆದುದು–ಆಯಿತು, ಅವಂ–ಅವುಗಳನ್ನು, ನೆನೆಯೆಂ–ನೆನೆದುಕೊಳ್ಳೆನು, ಈ ವನಿತೆಯರ್ಗೆ–ಈ ಸ್ತ್ರೀಯರಿಗೆ, ಅವರ ವರ ಪುರುಷರಂ–ಅವರವರ ಗಂಡರನ್ನು, ಸಂಸ್ಕಾರಿಸಲ್–ಶವಸಂಸ್ಕಾರ ಮಾಡಲು, ಕುಡವೇ ೞ್ಕುಂ–ಕೊಡಬೇಕು. “ಹಾ, ವೀರಶತಪ್ರಸವಿನೀ ಹತಗಾಂಧಾರೀ ದುಃಖಶತಂ ಪ್ರಸೂತಾಸಿ, ನ ಪುನಃ ಸುತಶ್ಶತಮ್” (ವೇಣೀಸಂಹಾರ, v– ೭ ಗ); (ಗದಾಯುದ್ಧ ೪–೫)–ಇವೆರಡ ರೊಡನೆ ಹೋಲಿಸಿ.
ವಚನ : ಅದಾವುದು ದೋಷಂ–ಅದೇನು ತಪ್ಪು? ಕಳೇವರಮಂ–ದೇಹವನ್ನು; ತೞ್ಕೈಸಿ ಕೊಂಡು–ಅಪ್ಪಿಕೊಂಡು;
೯. ಕರ್ಣಂ–ಕರ್ಣನು, ನಿಮ್ಮಣ್ಣಂ–ನಿಮ್ಮ ಅಣ್ಣನು, ಎನ್ನ ಪಿರಿಯಮಗಂ–ನನ್ನ ಹಿರಿಯಮಗ, ಮಾತೇಂ–ಮಾತೇನು, ಆಂ ಮಹಾಪಾತಕಿಯೆಂ–ನಾನು ಮಹಾ ಪಾಪಿಯಾಗಿ ದ್ದೇನೆ; ನಿಮ್ಮಯ ಮೋಹದಿಂ–ನಿಮ್ಮ ಮೇಲಣ ಪ್ರೇಮದಿಂದ, ಈತಂಗೆ–ಇವನಿಗೆ, ಇನಿತಂ– ಇಷ್ಟನ್ನು, ಆಂ–ನಾನು, ಮಾಡಿದೆಂ–ಮಾಡಿದೆನು, ಎಂದು, ಶೋಕಂಗೆಯ್ದಳ್–ದುಃಖಿ ಸಿದಳು.
೧೦. ಅಂಗವಲ್ಲಭಾ–ಅಂಗರಾಜನಾದ ಕರ್ಣನೇ, ನೀಂ–ನೀನು, ಎಮಗೆ–ನಮಗೆ, ಅಣ್ಣನಯ್–ಅಣ್ಣನಾಗಿರುವೆ, ಎಂದು–ಎಂಬುದಾಗಿ, ಎಮಗೆ–ನಮಗೆ, ಅಱಿಪಿದರ್– ತಿಳಿಸಿದವರು, ಆರುಂ ಇಲ್ಲ–ಯಾರೂ ಇಲ್ಲ; ಆಂ–ನಾವು, ಮುನ್ನಂ–ಮೊದಲು, ಅಱಿ ದೊಡೆ–ತಿಳಿದಿದ್ದರೆ, ಪಟ್ಟಮಂ–ರಾಜಪಟ್ಟವನ್ನೂ, ನೆಲನುಮಂ–ರಾಜ್ಯವನ್ನೂ, ನಿನಗಿತ್ತು– ನಿನಗೆ ಒಪ್ಪಿಸಿ, ಕುರುಪ್ರಧಾನನೊಳ್–ಕೌರವ ಮುಖ್ಯನಲ್ಲಿ ಎಂದರೆ ದುರ್ಯೋಧನನಲ್ಲಿ, ಕಱುಪನೆ–ಕೋಪವನ್ನೇ, ನಿಚ್ಚಟಂ–ಸ್ಥಿರವಾಗಿ, ಶಾಶ್ವತವಾಗಿ, ಬಿಸುಟ–ತೊರೆದು, ನಿನ್ನಯ ಪೇೞ್ದುದು ಗೆಯ್ದು–ನೀನು ಹೇಳಿದ್ದನ್ನು ಮಾಡಿ, ಬಾಯತಂಬುಲದೊಳಂ–ಬಾಯಿನ ತಂಬುಲದಲ್ಲಿಯೂ, ಮಡಗೂೞೊಳಂ– ಎಂಜಲನ್ನದಲ್ಲೂ, ಪಾೞಿಯಂ–ಧರ್ಮವನ್ನು, [ನೆಱಪೆವೆ]–ಪೂರ್ಣಗೊಳಿಸೆವೆ? ಅಗ್ರಜನಿಗೆ ಸೇವೆ ಮಾಡಿ ನಮ್ಮ ಧರ್ಮವನ್ನು ನಾವು ಪರಿಪೂರ್ಣಗೊಳಿಸುತ್ತಿದ್ದೆವು ಎಂದು ಭಾವ. “ಮಡಗೂೞ್ ಬೀೞುಡೆ ಬಾಯ ತಂಬುಲಮಿವ ಸ್ಪೃಶ್ಯಂಗಳೇನಲ್ಲವೇ” ಎಂದು ನಾಗಚಂದ್ರ ಹೇಳುತ್ತಾನೆ (ಪಂಪ.ರಾ. ೧೯–೮೧) ಅಸ್ಪೃಶ್ಯ ಗಳಾದ ಬಾಯತಂಬುಲ ಮಡಗೂಳುಗಳನ್ನು ಭ್ರಾತೃಭಕ್ತಿಯಿಂದ ನಾವು ಸ್ವೀಕರಿಸಿ ನಿನಗೆ ಸೇವೆ ಸಲ್ಲಿಸಿ ಧರ್ಮವನ್ನು ಪಾಲಿಸಲಾರೆವಾಗಿದ್ದೆವೆ? ಕರ್ಣನು ತನಗೆ ಅಣ್ಣನೆಂದು ತಿಳಿದ ಧರ್ಮರಾಜನು ವ್ಯಾಸಭಾರತದಲ್ಲಿ ಕೆಳಗೆ ಕಾಣಿಸುವಂತೆ, ಕುಂತಿಗೆ ಹೇಳುತ್ತಾನೆ :
ಕಥಂ ಪುತ್ರೋ ಭವತ್ಯಾಃ ಸ ದೇವಗರ್ಭೇ ಪುರಾಭವತ್
ಯಸ್ಯಬಾಹು ಪ್ರತಾಪೇನ ತಾಪಿತಾಃ ಸರ್ವತೋ ವಯಂ ॥ ಸ್ತ್ರೀಪರ್ವ ೨೭–೧೭
ತಮಗ್ನಿಮಿವ ವಸ್ತ್ರೇಣ ಕಥಂ ಛಾದಿವತ್ಯಸಿ ।
ಯಸ್ಯ ಬಾಹುಬಲಂ ನಿತ್ಯಂ ಧಾರ್ತರಾಷ್ಟ್ರೈರುಪಾಸಿತಂ ೧೮
ಅಸೂತ ತ್ವಂ ಭವತ್ಯಗ್ರೇ ಕಥಮದ್ಭುತ ವಿಕ್ರಮಮ್
ಅಹೋ ಭವತ್ಯಾ ಮನ್ತ್ರಸ್ಯ ಗೂಹನೇನ ವಯಂ ಹತಾಃ ॥ ೨೧
ನಿಧನೇನ ಹಿ ಕರ್ಣಸ್ಯ ಪೀಡಿತಾಸ್ತು ಸಬಾಂಧವಾಃ
ಅಭಿಮನ್ಯೋರ್ವಿನಾಶೇನ ದ್ರೌಪದೇಯ ವದೇನ ಚ ೨೨
ಪಂಚಾಲಾನಾಂ ವಿನಾಶೇನ ಕುರೂಣಾಂ ಪತನೇನ ಚ ।
ತತಃ ಶತಗುಣಂ ದುಃಖಮಿದಂ ಮಾಮಸ್ಪೃದ್ಭೃಶಂ ॥ ೨೩
ವಚನ : ಕೊಂದರ್ ಕೊಲೆಸಾವರ್–ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ; ಸಮಾಹಿತಚಿತ್ತರಾಗಿ–ಸಮಾಧಾನಗೊಂಡ ಮನಸ್ಸುಳ್ಳವರಾಗಿ; ಕೊಳುಗುಳನಂ–ಯುದ್ಧ ಭೂಮಿಯನ್ನು; ಬೆಟ್ಟಾಗೊಟ್ಟಿ–ಬೆಟ್ಟದಂತೆ ರಾಶಿಹಾಕಿ; ಜಳದಾನಾದಿ ಕ್ರಿಯೆಗಳಂ–ಎಳ್ಳು ನೀರು ಬಿಡುವುದೇ ಮುಂತಾದ ಕರ್ಮಗಳನ್ನು; ನಿರ್ವರ್ತಿಸೆ–ಮಾಡಿ ಮುಗಿಸಲು;
೧೧. ಇನಿತೊಂದುಗ್ರ ರಣ ಪ್ರಘಟ್ಟಕದೊಳ್–ಇಷ್ಟು ಭಯಂಕರವಾದ ಯುದ್ಧದ ಸಮಾರಂಭದಲ್ಲಿ, ಈಯಿರ್ವರಿಂ–ಈ ಇಬ್ಬರಿಂದ ಎಂದರೆ ಭೀಮಾರ್ಜುನರಿಂದ, ಈ ಭಾರಾ ವತಾರಂ–ಈ ಭಾರದ ಇಳಿತ, ಧರಾಂಗನೆಗೆ–ಭೂದೇವಿಗೆ, ಆದುದು–ಆಯಿತು; ಎನಗೆ–ನನಗೆ, ನಿರ್ದಾಯಾದ್ಯಂ–ದಾಯಾದಿಗಳಿಲ್ಲದಿರುವುದು, ಆಯ್ತು–ಆಯಿತು; ಈ ಪೆಂಪೆ– ಈ ಹಿರಿಮೆಯೇ, ಸಾಲ್ಗೆ–ಸಾಕಾಗಲಿ; ಎನಗೆ–ನನಗೆ, ಇಂ–ಇನ್ನು, ರಾಜ್ಯಮೇ–ರಾಜ್ಯವೇ, ಬಾೞ್ತೆಯಲ್ತು– ಪ್ರಯೋಜನವಿಲ್ಲ; ಹರಿಗಂಗೆ–ಅರ್ಜುನನಿಗೆ, ಉತ್ಸಾಹದಿಂ–ಒಸಗೆ ಯಿಂದ, ಪಟ್ಟಬಂಧನಮಂ–ಪಟ್ಟಕಟ್ಟುವುದನ್ನು, ಮಾಡುವಂ–ಮಾಡೋಣ, ಇಂದೇ–ಈ ದಿನವೇ, ಹಸ್ತಿನಪುರ ಪ್ರಸ್ಥಾನಮಂ–ಹಸ್ತಿನ ನಗರಿಗೆ ಪ್ರಯಾಣವನ್ನು, ಮಾಡುವಂ–ಮಾಡೋಣ.
ವಚನ : ಪೆಱಂಗೆ ತಾಳ್ದಲರಿದು–ಬೇರೆಯವನಿಗೆ ತಾಳಲು ಅಸಾಧ್ಯ, ಕಷ್ಟ; ಮುಕುಂದ ಬೃಂದಂಗಳ್–ಮುಕುಂದವೆಂಬ ಹರೆಯ ಸಮೂಹಗಳು;
೧೨. ಮೃದುಮಧುರ ಸ್ವನಂ ನೆಗೞೆ–ಮೃದು ಮಧುರವಾದ ನಾದವುಂಟಾಗಲು, ಬಂದ– ಚಿಗುರಿದ, (ಹೂಬಿಟ್ಟ, ಫಲಿತವಾದ), ಎಳಮಾವಿನೊಳ್–ಎಳೆಯ ಮಾವಿನ ಮರದಲ್ಲಿ, ಇರ್ದು–ಇದ್ದು, ಕೂಡೆ–ಕೂಡಲೇ, ಮದಾಳಿಮಾಲೆ–ಸೊಕ್ಕಿದ ದುಂಬಿಗಳ ಸಾಲು, ಪಾಡಿ ದುದು–ಹಾಡಿತು; ತಳಿರ್ತ–ಚಿಗುರಿದ, ಅಸುಗೆಯೊಳ್–ಅಶೋಕದ ಮರದಲ್ಲಿ, ನೆಲಸಿರ್ದ ಪಿಕಾಳಿ–ನೆಲಸಿದ್ದ ಕೋಗಿಲೆಗಳ ಸಮೂಹ, ಪುಗಲ್ ಎನ್ನದೆ–ಪ್ರವೇಶ ಮಾಡಬೇಡಿ ಎಂದು ಹೇಳದೆ, ಪುಗಿಂ ಎಂದು–ಪ್ರವೇಶಿಸಿರಿ ಎಂದು, ಮೆಲ್ಪಗುಂದದ–ನಯವು ಕಡಮೆಯಾಗದ, ದನಿಯಿಂ–ಧ್ವನಿಯಿಂದ, ಮೆಲ್ಲನೆ–ಮೃದುವಾಗಿ, ಊಳ್ದುದು–ಕೂಗಿದವು; ತೆಂಕಣ– ದಕ್ಷಿಣದ, ತೆಂಬೆಲರ್–ತಂಗಾಳಿ (?) ಅಪ್ಪಿಕೊಳ್ವವೋಲ್–ತಬ್ಬಿಕೊಳ್ಳುವಂತೆ; ಮನಮಾಱೆ– ಮನಸ್ಸಿಗೆ ಸಮಾಧಾನವಾಗುವಂತೆ, ತೀಡಿದುದು–ಬೀಸಿತು.
೧೩. ಪಸರಿಸಿ–ಹಬ್ಬಿ, ಬಂದ–ಹೂವಾದ, ಮಾಮರನೆ–ಮಾವಿನ ಮರಗಳೇ, ಬೆಳ್ಗೊಡೆ– ಶ್ವೇತ ಛತ್ರಿ; ರಾಗದ–ಕೆಂಬಣ್ಣದ, ಪುಂಜದನ್ನವಪ್ಪ–ಒಟ್ಟಿಲಾದ, ಅಸುಗೆಯ–ಅಶೋಕದ, ನೀಳ್ದ–ಉದ್ದವಾದ, ಕೆಂದಳಿರೇ–ಕೆಂಪಾದ ಚಿಗುರೇ, ಪಾಳಿ ಮಹಾಧ್ವಜಂ–ಪಾಳಿಕೇತನಗಳು; ಇಂಪನಾಳ್ದು–ಇಂಪನ್ನು ಹೊಂದಿ, ಎಸೆವ–ಶಬ್ದ ಮಾಡುವ, ಅಳಿಗೀತಿ–ದುಂಬಿಗಳ ಹಾಡು, ತಾನೆ–ತಾನೇ, ಜಯಗೀತಿಗಳಾಗಿರೆ–ವಿಜಯದ ಸಂಗೀತಗಳಾಗಿರಲು, ಬಸಂತ ರಾಜನಾ– ವಸಂತ ಕಾಲವೆಂಬ ರಾಜನ, ಬನಂ–ಉದ್ಯಾನವನ, ವಿಕ್ರಮಾರ್ಜುನಂಗೆ–ಅರ್ಜುನನಿಗೆ, ಒಸೆದು–ಪ್ರೀತಿಸಿ, ಇದಿರ್ವರ್ಪವೋಲ್–ಎದುರುಗೊಳ್ಳುವಂತೆ, ಒಪ್ಪಿದುದು–ಸೊಗಸಾ ಯಿತು, “ಬಂದ ಮಾವೆಂದು ಫಲಿತರಸಾಲಂ.”
ವಚನ : ನಿಜಾನ್ವಯ ರಾಜದ್ರಾಜಧಾನಿಯಂ–ತಮ್ಮ ಕುಲಕ್ರಮಾಗತವಾದ ಪ್ರಕಾಶ ಮಾನವಾದ ರಾಜಧಾನಿಯನ್ನು ಎಂದರೆ ಹಸ್ತಿನಾಪುರವನ್ನು.
೧೪. ನವಕಾಳಾಗರು ಧೂಪಧೂಮತತಿ–ಹೊಸದಾದ ಕರಿ ಅಗರುವಿನ ಧೂಪದ್ರವ್ಯದ ಹೊಗೆಗಳ ಸಮೂಹ, ಸೌಗಂಧಂಗಳಿಂ–ಪರಿಮಳಗಳಿಂದ, ವಿಯಚ್ಚಕ್ರದೊಳ್–ಆಕಾಶ ಮಂಡಲದಲ್ಲಿ, ಸಯ್ತು–ನೇರಾಗಿ, ನೀಳ್ದು–ಉದ್ದವಾಗಿ, ವ್ಯಾಪಿಸಿ, ಮಂದಮರುತ ವ್ಯಾಘಾತ ದಿಂದೆ–ಮಂದಾನಿಲನ ಹೊಡೆತದಿಂದ, ಎಯ್ದೆ–ಚೆನ್ನಾಗಿ, ತೋರ್ಪವೊಲ್–ತೋರುವಂತೆ, ಆಗಿರ್ದುದು–ಆಗಿತ್ತು; ಪುರಸ್ತ್ರೀ–ನಗರವೆಂಬ ನಾರಿ, ಪಾಂಡುಪುತ್ರಂಗಂ–ಪಾಂಡು ಕುಮಾರ ನಾದ ಅರ್ಜುನನಿಗಾಗಿ, ಮುನ್ನರಿದಿರ್ದ–ಮೊದಲು ಕತ್ತರಿಸಿದ್ದ, ತನ್ನ ಪಿಣಿಲಂ–ತನ್ನ ಜಡೆಯನ್ನು, ಕೂರ್ತು–ಪ್ರೀತಿಸಿ, ಅಂದು–ಆ ದಿನ, ಉತ್ಸವದಿಂ–ಸಂತೋಷದಿಂದ, ಬಿಟ್ಟಂತೆ ವೊಲ್–ಇಳಿಯ ಬಿಟ್ಟ ಹಾಗೆ, ಕಣ್ಗೆವಂದುದು–ಕಣ್ಣುಗಳಿಗೆ ಸೊಗಸಾಯಿತು. “ಮುನ್ನರಿ ದಿರ್ದ” ಎಂಬೆಡೆ ಏನೋ ಪಾಠ ಕ್ಲೇಶವಿದೆ; ಪುರಸ್ತ್ರೀ ಮೊದಲು ಏಕೆ ತನ್ನ ಜಡೆಯನ್ನು ಕತ್ತರಿಸಿ ಕೊಂಡಳು?
೧೫. ಹಾರದ–ಹಾರಗಳ, ಪಚ್ಚೆಸಾರದ–ಸಾರವಾದ ಪಚ್ಚೆಗಳಿಂದ ಮಾಡಿದ, ಮಾಲೆ– ಸಾಲುಗಳೇ, ಓಳಿದೋರಣಮಾಯ್ತು–ಸಾಲುಸಾಲಾದ ತೋರಣಗಳಾದುವು; ಚೀನದ– ರೇಷ್ಮೆಯ, [ಸೂಯಿಯಾಣದ]–ಕಸೂತಿ ಕೆಲಸ ಮಾಡಿದ, ಪಟ್ಟೆ–ವಸ್ತ್ರದ ಪಟ್ಟಿಗಳು, ಸೌಧಾಳಿಯ–ಉಪ್ಪರಿಗೆಯ ಸಾಲುಗಳ, ಒಳ್ಗುಡಿಯಾಯ್ತು–ಒಳ್ಳೆಯ ಬಾವುಟಗಳಾದವು; ಹರ್ಮ್ಯಾಳಿದಪ್ಪದೆ–ಯಾವ ಅರಮನೆಯೂ ತಪ್ಪದೆ, ಎಂದರೆ ಎಲ್ಲ ಸೌಧಗಳಲ್ಲೂ, ಎಸೆವ– ಶೋಭಿಸುವ, ಆಟ ಪಾಟದ–ನೃತ್ಯಸಂಗೀತಗಳ, ಗೀತಿ–ಹಾಡುಗಳು, ರಯ್ಯಮಾಯ್ತು–ರಮ್ಯ ವಾಯಿತು; ತತ್ಪುರ ಮಧ್ಯದೊಳ್–ಆ ನಗರದ ನಡುವೆ, ಅದೊಂದು ಚೆಲ್ವು–ಅದೊಂದು ಸೊಗಸು, ಕಣ್ಗೋಳಿವಟ್ಟದು–ಕಣ್ಣುಗಳಿಗೆ ಸಾಲಾಗಿ ಕಂಡದ್ದು, ಆಯ್ತುದಲ್–ಆಯಿ ತಲ್ಲವೆ? ಸೂಚೀಯಾನ ಸೂಯಿಯಾಣ; ವಾತ್ಸ್ಯಾಯನನ “ಕಾಮಸೂತ್ರ” ದಲ್ಲಿ ಚತುಃ ಷಷ್ಠಿ ಕಲೆಗಳನ್ನು ಹೆಸರಿಸುವಾಗ (ಅಧಿಕರಣ ೧, ಅಧ್ಯಾಯ ೩, ಸೂ. ೧೬) ೨೫ನೆಯದಾಗಿ “ಸೂಚೀವಾನ ಕರ್ಮಾಣಿ” ಎಂದು ಹೇಳಿದೆ; ಇದಕ್ಕೆ ವ್ಯಾಖ್ಯಾನ: “ಸೂಚೀವಾನ ಕರ್ಮಾಣೀತಿ, ಸೂಚ್ಯಾಯತ್ಸಂಧಾನ ಕರಣಂ ತತ್ಸೂಚಿವಾನಂ; ತ್ರಿವಿಧಂ – ಸೀವನಮ್, ಊತಾಮ್, ವಿರಚನಮ್:” ತತ್ರಾದ್ಯಂ ಕಂಚುಕಾದೀನಾಮ್, ದ್ವಿತೀಯಂ ತ್ರುಟಿತ ವಸ್ತ್ರಾಣಾಮ್ ತೃತೀಯಂ ಕುಥಾಸ್ತರಣಾದೀನಾಮ್, ಇಯಂ ಪ್ರತೀತಾರ್ಥೈವ” ಎಂದಿದೆ. ಇದರಂತೆ “ಸೂಚಿವಾನ” ಎಂಬುದು ಶಬ್ದವಾಗುತ್ತದೆ, “ಸಾಹಿಯಾಣ” ಎಂದು “ಆದಿ ಪುರಾಣ” ದ ಮುದ್ರಿತ ಪ್ರತಿಗಳಲ್ಲಿ ಇದೆ (೪–೩೪ಗ), ಇದೇ ರೂಪ “ಸುಕುಮಾರ ಚರಿತ” ದಲ್ಲೂ ಉಂಟು (೧೦–೯೧ ಗ); “ಆದಿಪುರಾಣ” ದ ಒಂದು ಹಸ್ತಪ್ರತಿಯಲ್ಲಿ “ಸುಯಿ ಯಾಣ” ಎಂಬ ಪಾಠಾಂತರವಿದೆ. ಸೂಚೀಯಾನದ ತದ್ಭವ ಸೂಯಾಣಂ ಎಂದು ಕೇಶಿರಾಜ (ಸೂ.೩೦೯); ಭಟ್ಟಕಳಂಕನು ಕೀಲಾರಾದ ಆಕೃತಿಗಣದಲ್ಲಿ (ಸೂ.೩೭೮) ಸೂಯಾಣ ಶಬ್ದವನ್ನು ಕಾಣಿಸಿ, ವ್ಯಾಖ್ಯಾನದಲ್ಲಿ “ಸೂಯಾಣಂ ಸೂಪಸ್ಥಾಪನಂ, ಮಹಾನಸಮಿತಿ ಯಾವತ್” ಎಂದು ಬರೆದಿದ್ದಾನೆ; ಇದರಂತೆ ಸೂಯಾಣವೆಂದರೆ ಅಡಿಗೆ ಮಾಡುವ ಎಡೆ, ಪಾಕಶಾಲೆ, ಬಾಣಸಿನಮನೆ ಎಂದರ್ಥವಾಗುತ್ತದೆ. ಆದರೆ ಸೂಪಸ್ಥಾನ ಶಬ್ದವು ‘ಸೂಯಟ್ಠಾಣ, ಸೂಯಠಾಣ ಎಂಬ ರೂಪಗಳನ್ನು ಪ್ರಾಕೃತದಲ್ಲಿ ಪಡೆಯಬಹುದೇ ಹೊರತು, ಸೂಯಾಣ ಎಂದು ಪ್ರಾಕೃತದಲ್ಲಾಗಲಿ ಕನ್ನಡದಲ್ಲಾಗಲಿ ಆಗದು, ಕೇಶಿರಾಜನು ಸೂಚೀಯಾನದ ತದ್ಭವ ಸೂಯಾಣ ಎಂದು ಹೇಳಿದ್ದರೂ ಭಟ್ಟಾಕಳಂಕನು ಹೀಗೆ ಹೇಳಿರುವುದು ಸೋಜಿಗ ವಾಗಿದೆ. ಅವನ ಸೂಪಸ್ಥಾನ ಸೂಯಾಣ ಎಂಬ ಅಭಿಪ್ರಾಯವನ್ನು ಬಿಡಬಹುದು. ಸುಯಿಯಾಣ, ಸೂಯಿಯಾಣ, ಸುಯ್ಯಾಣ, ಸೂಯಾಣ ಎಂಬೀ ರೂಪಗಳು ಸಾಧುವೆಂದು ಪರಿಗ್ರಹಿಸಬಹುದು; ಇವುಗಳಿಗೆ ಸಂಸ್ಕೃತದ ಮೂಲ ಸೂಚೀಯಾನವೆಂಬುದು ಸ್ಪಷ್ಟ ವಾಗಿದೆ. ವಾತ್ಸ್ಯಾಯನನು ಕೊಟ್ಟಿರುವ ಸೂಚೀವಾನವೆಂಬುದು ಇನ್ನೊಂದು ರೂಪವಿರ ಬೇಕು; ಇದಕ್ಕೆ ಹರಿದ ವಸ್ತ್ರಗಳನ್ನು ಸೇರಿಸಿ ಹೊಲಿಯುವುದು, ಹಾಗೆ ಹೊಲಿದ ಬಟ್ಟೆ ಎಂಬರ್ಥವಿದೆ. ಇಲ್ಲಿ ಕಸೂತಿ ಕೆಲಸ ಎಂದು ಆಧುನಿಕ ದೃಷ್ಟಿಯಿಂದ ಹೇಳಿದೆ. ಪಚ್ಚೆಸಾರ ಎಂಬುದರ ಅರ್ಥವೂ ಚಿಂತನೀಯ. “ಪೊಸ ಮಾವಿನ ಮಿಡಿಯೊಳ್ ಪಚ್ಚೆಸಾರಮಂ ಮಾಡುವೞ್ತಿಯಿಂ” ಎಂದು ಆದಿಪುರಾಣದ ಪ್ರಯೋಗವಿದೆ (೧೦–೧೦೧); ಇದಕ್ಕೆ ಪದ್ಯಸಾರ II ರಲ್ಲಿ “ಪಚ್ಚೆಯ ಸರ” ಎಂದು ಅರ್ಥ ಹೇಳಿದೆ; ಇದನ್ನು ಒಂದು ಆಭರಣ ವಿಶೇಷವೆಂದು ಭಾವಿಸಬಹುದು; ಪ್ರಕೃತ ಪದ್ಯದಲ್ಲಿ ಈ ಅರ್ಥ ಎಷ್ಟರ ಮಟ್ಟಿಗೆ ಸಾಧು?
೧೬. ಪ್ರವರತರ ಪುರಂಧ್ರಿನೂಪುರಾರಾವಂ–ಅತಿ ಶ್ರೇಷ್ಠರಾದ (ಅಂತಃಪುರ) ಸ್ತ್ರೀಯರ ಕಾಲಂದಿಗೆಗಳ ಧ್ವನಿಯು, ಎತ್ತಂ–ಎಲ್ಲೆಲ್ಲೂ, ಕಿವಿಗೆ ವರೆ–ಕಿವಿಗೆ ಬರಲು ಎಂದರೆ ಕೇಳಿಸು ತ್ತಿರಲು, ಕಣ್ಗೆ–ಕಣ್ಣುಗಳಿಗೆ, ವಿಳಾಸಂ–ಸೊಗಸು, [ವರೆ–ಬರಲು], ಶೇಷಾಕ್ಷತೌ ಘದ್ರವಮೆ–ಆಶೀರ್ವಾದದ ಅಕ್ಷತೆಗಳ ಸಮೂಹದ ಒದ್ದೆಯೆ, ತಮಗಂ–ತಮಗೂ, ಇಂಬಂ–ಸಂತೋಷವನ್ನು, ಇತ್ತತ್ತು–ಕೊಟ್ಟಿತು, ಎಂಬನ್ನೆಗಂ–ಎನ್ನುತ್ತಿರಲು, ಪೊೞಲ್ಗೆ– ನಗರಕ್ಕೆ, ಪಾಂಡವರೆ–ಪಾಂಡವರೇ, ಪುಗೆ–ಪ್ರವೇಶಿಸಲು, ಅಂದು–ಆಗ, ರಾಗಂ–ಸಂತೋಷವು, ಒಟ್ಟಿ–ರಾಶಿಯಾಗಿ, ಬೆಟ್ಟಾಯ್ತು–ಬೆಟ್ಟವಾಯಿತು ಎಂದರೆ ಸಂತೋಷದ ಅತ್ಯತಿಶಯ ವಾಯಿತು.
ವಚನ : ಆನುತ್ತಂ–ತಾಳುತ್ತ, ಧರಿಸಿಕೊಳ್ಳುತ್ತ; ಸಮಕೊಳಿಸಿ–ಏರ್ಪಡಿಸಿ;
೧೭. ಪ್ರಾಯದ ಪೆಂಪೆ ಪೆಂಪು–ತಾರುಣ್ಯದ ಹಿರಿಮೆಯೇ ಹಿರಿಮೆ; ಎಮಗೆ–ನಮಗೆ, ಮೀಱಿದರಂ–ಅತಿಕ್ರಮಿಸಿದವರನ್ನು, ತವೆ–ನಾಶವಾಗುವಂತೆ, ಕೊಂದ, ಪೆಂಪು–ಹಿರಿಮೆ, ಕಟ್ಟಾಯದ ಪೆಂಪು–ತೀವ್ರವಾದ ಪರಾಕ್ರಮದ ಹಿರಿಮೆ; ಶಕ್ರನೊಡನೆ–ಇಂದ್ರನೊಡನೆ, ಏಱಿದ–ಅರ್ಧಾಸನವನ್ನು ಹತ್ತಿದ, ಪೆಂಪು–ಹಿರಿಮೆ, ಇವು–ಇವುಗಳು, ಪೆಂಪುವೆತ್ತು– ಅತಿಶಯತೆಯನ್ನು ಹೊಂದಿ, ನಿಟ್ಟಾಯುಗಳಾಗಿ–ದೀರ್ಘಾಯಸ್ಸುಳ್ಳುವಾಗಿ, ನಿನ್ನೊಳ್– ನಿನ್ನಲ್ಲಿ, ಅಮರ್ದು–ಸೇರಿ, ಇರ್ದುವು–ಇದ್ದುವು; ನೀಂ–ನೀನು, ತಲೆವೀಸದೆ–ತಲೆಯನ್ನು ಬೀಸದೆ ಎಂದರೆ ಬೇಡವೆಂದು ಹೇಳದೆ, ಇದು ಆಗದು ಎನ್ನದೆ–ಇದು ಆಗುವುದಿಲ್ಲವೆಂದು ಹೇಳದೆ, ಗುಣಾರ್ಣವಾ–ಅರ್ಜುನನೇ, ಪರಮೋತ್ಸವದಿಂ–ಅತ್ಯಂತ ವೈಭವದಿಂದ, ಉರ್ವ ರಾಶ್ರೀಯಂ–ಭೂಮಿಯೆಂಬ ಲಕ್ಷ್ಮಿಯನ್ನು, ಒಳಕೊಳ್–ಹೊಂದಿರುವವನಾಗು ಎಂದರೆ ರಾಜನಾಗು ಎಂದು ಭಾವ.
ವಚನ : ಕೋಡ ಮಣ್ಣುಮಂ–ಕೊಂಬುಗಳ ಮಣ್ಣನ್ನು; ಇಕ್ಷು–ಕಬ್ಬಿನ (ರಸ); ದಧಿ– ಮೊಸರು; ಸ್ವಾದೂದಕ–ರುಚಿಯಾದ ನೀರು, ಸಿಹಿನೀರು, ಈಂಟುನೀರು; ಕಳಧೌತ–ಚಿನ್ನ, ಬೆಳ್ಳಿ; ತೆಕ್ಕನೆ ತೀವಿ–ಭರ್ತಿಯಾಗಿ ತುಂಬಿ; ಉಡಲಿಕ್ಕಿ–ಉಡುಗೊರೆಯನ್ನು ಕೊಟ್ಟು; ಪಟ್ಟ ವರ್ಧನ–ಪೂಜಾಗಜ ಎಂದರೆ ಪಟ್ಟದಾನೆ; ಅಧಿವಾಸಿಸಿ–ಪ್ರತಿಷ್ಠೆ ಮಾಡಿ, ಕೌಶೇಯ ಪರಿಧಾನನುಮಾಗಿರ್ದ–ರೇಷ್ಮೆವಸ್ತ್ರದ ಹೊದಿಕೆಯುಳ್ಳವನಾಗಿದ್ದ; ಕಳಕಳಾವರ್ತಮಾಗೆ– ಕಲಕಲ ಶಬ್ದದ ಸುಳಿದಾಟವಾಗಲು, ಜಾಗರಮಿರ್ದು–ಜಾಗರಣೆಯಲ್ಲಿದ್ದು; ಅಷ್ಟೋತ್ತರ ಶತ–ನೂರೆಂಟು; ಮೀಯಿಸಿ–ಜಳಕಮಾಡಿಸಿ, ಅಭಿಷೇಕ ಮಾಡಿ.
೧೮. ವನಧಿ ಪ್ರಧ್ವಾನದಿಂ–ಸಮುದ್ರಘೋಷಕ್ಕಿಂತಲೂ, ಮಂಗಳಪಟಹರವಂ– ಮಂಗಳ ಸೂಚಕವಾದ ತಮಟೆಗಳ ಸದ್ದು, ಪೆರ್ಚೆ–ಹೆಚ್ಚಾಗಲು; ಮಾಂಗಲ್ಯ ಗೇಯಧ್ವನಿ ಯಿಂದೆ–ಮಂಗಳ ಗೀತೆಗಳ ನಾದದಿಂದ, ಆಶಾಂತರಂ–ದಿಕ್ಪ್ರದೇಶಗಳು, ಘೂರ್ಣಿಸೆ– ಶಬ್ದಮಾಡುತ್ತಿರಲು, ಸೊಗಯಿಸೆ–ಸೊಗಸಾಗುವಂತೆ, ಕೆಯ್ಗೆಯ್ದು–ಸಿಂಗರಿಸಿಕೊಂಡು, ಸಾಮಂತ ಸೀಮನ್ತಿನಿಯರ್–ಸಾಮಂತ ರಾಜರ ಸ್ತ್ರೀಯರು, ಮುಂದೆ ಆಡೆ–ಎದುರಿಗೆ ನರ್ತಿಸುತ್ತಿರಲು; ಜಯ ಜಯ ಧ್ವಾನಂ–ಜಯಜಯವೆಂಬ ಉಲಿ, ಭೋರೆಂದೆಸೆಯೆ–ಭೋರೆಂದು ಶಬ್ದವಾಗಲು; ವಾರಾಂಗನೆಯರ್–ವಾರಸ್ತ್ರೀಯರು, ಓರಂತೆ–ಕ್ರಮವಾಗಿ, ವಂದು ಆಡೆ– ಬಂದು ನಾಟ್ಯವಾಡಲು; ಸಂದ–ಉಂಟಾದ, ಈ ವಿಭವದೊಳ್–ಈ ವೈಭವದಲ್ಲಿ, ಅರಿಗಂಗೆ– ಅರ್ಜುನನಿಗೆ, ರಾಜ್ಯಾಭಿಷೇಕಂ ಆಯ್ತು–ಪಟ್ಟಾಭಿಷೇಕವಾಯಿತು.
ವಚನ : ಕೇಸರಿ ವಿಷ್ಟರದೊಳ್–ಸಿಂಹಾಸನದಲ್ಲಿ; ಪಂಚರತ್ನಶಿಖಾವಿರಾಜ ಮಾನಮಪ್ಪ– ಐದು ರತ್ನಗಳಿಂದ ಖಚಿತವಾದ ಶಿರಪೇಷಿನಿಂದ ಪ್ರಕಾಶಮಾನವಾದ; ಪಟ್ಟಮಂ–ಪಟ್ಟವಸ್ತ್ರ ವನ್ನು;
೧೯. ದೇವದುಂದುಭಿ ರವಂ–ದೇವತೆಗಳ ಭೇರಿಗಳ ಶಬ್ದ, ನೆಗೞ್ದುದು–ಉಂಟಾಯಿತು. ಪೊದಳ್ದ–ವ್ಯಾಪಿಸಿದ, ಬಲ್ಮುಗುಳ್ಗಳ–ದೊಡ್ಡ ಮೊಗ್ಗುಗಳ, ತಂದಲ್–ಮಳೆಯು, ಅಂದು– ಆ ದಿನ, ಸುರನಂದನದಿಂ–ದೇವತೆಗಳ ಉದ್ಯಾನವನದಿಂದ, ಕವಿತಂದುದು–ಮುಚ್ಚುವ ಹಾಗೆ ಸುರಿಯಿತು, ಅದಂ–ಆ ಪುಷ್ಪವೃಷ್ಟಿಯನ್ನು, ತನಿಸೋಂಕು ಸೋಂಕಿ–ಹೊಸದಾಗಿ ಸ್ಪರ್ಶವನ್ನು ಸ್ಪರ್ಶಿಸಿ ಎಂದರೆ ಹೊಸ ಹೊಸದಾಗಿ, ಮುಟ್ಟಿ; ಮೆಲ್ಲಗೆ–ಮೃದುವಾಗಿ, ಮಲಯಾ ನಿಳಂ–ಮಲಯ ಮಾರುತವು, ಸುೞಿದೊಡೆ–ಸುಳಿದಾಡಿದರೆ, ಜಗಂ–ಲೋಕವು, ಪೊಸತಾ ದುದು–ಹೊಸದಾಯಿತು, ಎಂದೊಡೆ–ಎಂದು ಹೇಳಿದರೆ, ಜಗದೇಕಮಲ್ಲನಾ–ಅರ್ಜುನನ, ಪಟ್ಟಬಂಧನ ಮಹೋತ್ಸವಮಂ–ಪಟ್ಟ ಕಟ್ಟುವ ಮಹಾ ಸಮಾರಂಭವನ್ನು, ಏ ವೊಗೞ್ವುದೊ– ಏನೆಂದು ಹೊಗಳುವುದೋ!
೨೦. ಮುತ್ತಿನ–ಮುತ್ತುಗಳ, ಪಚ್ಚೆ–ಪಚ್ಚೆಗಳ, ಮಾಣಿಕದ–ರತ್ನಗಳ, ವಜ್ರದ–ವಜ್ರಗಳ, ಕೇೞಿಯೊಳ್–ಸಾಲುಗಳಲ್ಲಿ, ಒಂದಿ–ಸೇರಿ; ಸಾಂದಿನೊಳ್–ಸಾದಿನಲ್ಲಿ (ಗಂಧದಲ್ಲಿ); ಕತ್ತುರಿಯ–ಕಸ್ತೂರಿಯ, ಒಂದು; ಕೊೞ್ಗೆಸಱೊಳ್–ಗಟ್ಟಿ ಕೆಸರಿನಲ್ಲಿ, ಓಕುಳಿ–ಓಕುಳಿ ಯಾಡುವ, ಚಂದನ ಗಂಧವಾರಿಯೊಳ್–ಶ್ರೀಗಂಧದ ಪರಿಮಳವನ್ನುಳ್ಳ ನೀರಿನಲ್ಲಿ; ಸುತ್ತ ಲುಂ–ಸುತ್ತಲೂ, ಅೞ್ಕಱಂ ಪಡೆವ–ಪ್ರೀತಿಯನ್ನುಂಟುಮಾಡುವ, ಗೇಯದ–ಸಂಗೀತದ, ಪೆಂಪಿಂ–ಆಧಿಕ್ಯದಿಂದ, ಪಡೆಮೆಚ್ಚೆ ಗಂಡನಾ–ಅರ್ಜುನನ, ಪಟ್ಟಬಂಧನ ಮಹೋತ್ಸವಂ– ಪಟ್ಟಾಭಿಷೇಕ ಮಹೋತ್ಸವವು, ಆರ್ಗಂ–ಯಾರಿಗೂ, ಆರ್ತು–ಸಮರ್ಥವಾಗಿ, ಅಲಂಪಂ– ಸಂತೋಷವನ್ನು, ಇತ್ತುದು–ಇತ್ತಿತು, ಕೊಟ್ಟಿತು.
ವಚನ : ಐರಾವಣಾನ್ವಯಂ–ಐರಾವತವೆಂಬ ಆನೆಯ ವಂಶಕ್ಕೆ ಸೇರಿದವನೂ; ಸುರಭಿ ನಿಶ್ವಾಸನುಂ–ಸುಗಂಧಯುಕ್ತವಾದ ಉಸಿರನ್ನುಳ್ಳವನೂ; ಸೂಕ್ಷ್ಮಬಿಂದು ರುಚಿರನುಂ–ಸೂಕ್ಷ್ಮ ವಾದ ಸಣ್ಣ ಸಣ್ಣ ಬಿಳಿ ಮಚ್ಚೆಗಳಿಂದ ರಮ್ಯವಾದವನೂ; ಕಾಳಿಂಗವನ ಸಂಭೂತನುಂ– ಕಳಿಂಗ ದೇಶದ ಅರಣ್ಯಗಳಲ್ಲಿ ಹುಟ್ಟಿದವನೂ; ತ್ರಿಭುವನಾಭರಣಮೆಂಬ–ತ್ರಿಭುವನಾ ಭರಣ ಎಂಬ ಹೆಸರಿನ ಅರಿಕೇಸರಿಯ ಪಟ್ಟದಾನೆ; ತ್ರಿಭುವನ ತಿಲಕವೆಂಬ–ಅರಿಕೇಸರಿಯ ಪಟ್ಟದ ಕುದುರೆ; ತುಳಾ ಪುರುಷಮನಿರ್ದು–ತುಳಾಪುರುಷವೆಂಬ ದಾನವನ್ನು ಮಾಡಿ; ತನ್ನ ತೂಕದಷ್ಟು ಚಿನ್ನವನ್ನು ದಾನಮಾಡುವುದು; ಬಿಯಮಂ–ವ್ಯಯವನ್ನು ಎಂದರೆ ವೆಚ್ಚವನ್ನು;
೨೧. ಕಾಮಧೇನು–ಕಾಮಧೇನು ಎಂಬ ದೇವಲೋಕದ ಹಸು, ತೊರೆದುದು–ಹಾಲನ್ನು ಸುರಿಸಿತು; ಕಲ್ಪವೃಕ್ಷಂ–ಸ್ವರ್ಗದ ಕಲ್ಪವೃಕ್ಷವು, ತುಱುಗಲ್ ಗೊನೆವಣ್ತುದು–ಕಿಕ್ಕಿರಿದ ಗೊನೆ ಯಿಂದ ಫಲಿತವಾಯಿತು; ಈಶ್ವರನ–ಶಿವನ, ವರಪ್ರಸಾದಂ–ವರದ ಕರುಣೆಯು, ಇದಿರ್ಗೊಂಡುದು–ಎದುರುಗೊಂಡಿತು; ಸುತ್ತಿಱಿದ–ಬಳಸಿದ, ಅದೊಂದು, ಮುತ್ತಿ ನಾಗರಮೆ– ಮುತ್ತಿನ ಮನೆಯೇ, ತೆರಳ್ದುದು–ಚಲಿಸಿತು; ಎಯ್ದೆ–ಚೆನ್ನಾಗಿ, ರಸಸಿದ್ಧಿಯುಂ–ಸಿದ್ಧಿರಸದ ಪ್ರಾಪ್ತಿಯೂ, ಆಯ್ತು–ಆಯಿತು, ಎನೆ–ಎನ್ನಲು, ತನ್ನಂ–ತನ್ನನ್ನು, ಆಸೆವಟ್ಟು–ಆಸೆಯನ್ನು ಹೊಂದಿ, ಎರೆದವರ್ಗೆ–ಬೇಡಿದವರಿಗೆ, ಇತ್ತು–ದಾನಮಾಡಿ, ಗುಣಾರ್ಣವಂ–ಅರ್ಜುನನು, ಈ ನೆಲನಂ–ಈ ಭೂಮಿಯನ್ನು, ಪೊಮ್ಮಯದೆ–ಚಿನ್ನದ ಮಯವಾಗಿಯೇ, ಮಾಡಿದಂ– ಮಾಡಿದನು, ಕಾಮಧೇನು ಕಲ್ಪವೃಕ್ಷಾದಿಗಳನ್ನು ಅರಿಕೇಸರಿ ಕೀಳ್ಮಾಡಿದನು, ಬೇಡಿದವರಿಗೆ ಬೇಡಿದ್ದನ್ನೆಲ್ಲ ಕೊಟ್ಟು ಎಂದು ಭಾವ.
ವಚನ : ಚಾಗಂ ಗೆಯ್ದು–ದಾನ ಮಾಡಿ; ಸಂಭಾದಿತನುಂ–ಮುಸುಕಲ್ಪಟ್ಟವನೂ; ಒಡ್ಡೋಲಗಂಗೊಟ್ಟಿರೆ–ಆಸ್ಥಾನದ ರಾಜಸಭೆಯಲ್ಲಿರಲು; ಒಡ್ಡೋಲಗ ಎಂಬ ಪದ ಸ್ವಾರಸ್ಯಕರವಾದುದು; ತಮಿಳಿನಲ್ಲಿ ಒಟ್ಟೋಲಕ್ಕಂ=ಪೆರುಂಕೊಟ್ಟಂ–ದೊಡ್ಡ ಸಭೆ ಎಂದರ್ಥ; ತೆಲುಗಿನಲ್ಲಿ ಒಡ್ಡೋಲಗಮು ಎಂದರೆ, ಸಂಸ್ಕೃತದ ವೃಧ್ ಧಾತುವಿನಿಂದ ಜನ್ಯವಾದ ವೃದ್ಧ, ವರ್ಧನ ಮುಂತಾದ ಶಬ್ದಗಳು ಪ್ರಾಕೃತವಾದಾಗ ವಡ್ಢ, ವುಡ್ಢ ಇತ್ಯಾದಿ ರೂಪಗಳನ್ನು ಧರಿಸುತ್ತವೆ, ವಡ್ಡ ಎಂಬುದಕ್ಕೆ ಪ್ರಾಕೃತದಲ್ಲಿ ಮಹಾನ್–ದೊಡ್ಡ ಎಂಬರ್ಥವಿದೆ, ಇದರ ಇನ್ನೊಂದು ರೂಪ ವೃದ್ಧ; ಇದು ಕನ್ನಡದಲ್ಲಿ ವೊಡ್ಡ ಒಡ್ಡ ಆಗಿರಬಹುದು; ಓಲಗ (ಸಂ) ಅವಲೋಕನ–ದರ್ಶನ, ನೋಡುವುದು, ಒಡ್ಡೋಗಲ ಎಂದರೆ ದೊಡ್ಡ ದರ್ಶನ, ರಾಜನು ತನ್ನ ಪ್ರಜೆಗಳಿಗೆ ದರ್ಶನ ಕೊಡುವುದು, ಹಾಗೆ ಕೊಡುವ ಸ್ಥಳ ಎಂಬರ್ಥವಿರಬಹುದು ಮೂಲತಃ. ಇದು ದರ್ಬಾರ್, ರಾಜಸಭೆ ಎಂಬರ್ಥಗಳನ್ನು ಅನಂತರ ತಾಳಿರಬಹುದು. ಸೇವೆ, ಚಾಕರಿ ಎಂಬರ್ಥವುಳ್ಳ ಇನ್ನೊಂದು ಪ್ರಾಕೃತ ಶಬ್ದ ಓಲಗ್ಗಾ ಎಂದು; ಇದನ್ನು ಓಲಗಿಸು, ಓಲೈಸು ಎಂದು ಕನ್ನಡದಲ್ಲಿ ಕಾಣಬಹುದು; ಓಲಗಿಸಿ ಬಾೞ್ವುದೆ ಕಷ್ಟಮಿಳಾಧಿನಾಥರಂ ಎಂಬ ಪ್ರಯೋಗವನ್ನು ನೋಡಬಹುದು.
೨೩. ಈ ಪದ್ಯದ ಪಾಠ ತುಂಬ ಕೆಟ್ಟುಹೋಗಿದೆ; ಸರಿಪಡಿಸುವುದಕ್ಕೆ ಸಾಧ್ಯವಿಲ್ಲ; ಪೊಳೆವ ಕಣ್ಗಳ್–ಹೊಳೆಯುವ ಕಣ್ಣುಗಳು, ಓಳಿಕೊಳೆ–ಸಾಲಾಗಲು; ನೀಳಿಮವನ ಜಂಗಳ್– ಕನ್ನೈದಿಲೆಗಳು, ಓಳಿಕೊಳ್ಳದುವುಂ–ಸಾಲಾಗಿ ಇಲ್ಲದಿರುವುವೂ, ತಾಂ–ತಾವು, ಓಳಿಕೊಳಲ್– ಸಾಲಾಗಿ ಇರಲು, ಗಣಿಕೆಯರ–ಸೂಳೆಯರ, ಓಳಿ–ಪಂಕ್ತಿಯು, ಓಳಿಯೊಳೆ–ಸಾಲಿನಲ್ಲಿಯೇ, ಮಡಲ್ತ–ಹಬ್ಬಿದ, ಲತೆಗಳಿರ್ಪಂತೆ–ಬಳ್ಳಿಗಳು ಇರುವ ಹಾಗೆ, ಇರ್ದರ್–ಇದ್ದರು (?)
೨೪. ಸಾರ್ಚಿದ–ಹತ್ತಿರ ಇಟ್ಟ, ಲೋಹಾಸನದೊಳ್–ಲೋಹಾಸನವೆಂಬ ಪೀಠಗಳಲ್ಲಿ, ಅಮರ್ಚಿದ–ಸೇರಿಸಿದ, ಹಾಕಿದ, ಬೊಂದರಿಗೆ–ಮೆತ್ತೆಗಳು, ಪೞಿಯ–ವಸ್ತ್ರದ, ಬಿತ್ತರಿಗೆ– ಸಣ್ಣ ಪೀಠಗಳು, ಬಹುಶಃ ಪಾದ ಪೀಠಗಳು, ಕರಂ–ವಿಶೇಷವಾಗಿ, ಪೆರ್ಚುವ–ಹೆಚ್ಚುವ, ಮಹಿಮೆಯಂ–ಪೆಂಪನ್ನು, ಎಯ್ದೆ–ಚೆನ್ನಾಗಿ, ನಿಮಿರ್ಚೆ–ಪಸರಿಸಲು, ಮಹಾಮಕುಟ ಬದ್ಧರ್–ಮಹಾರಾಜರುಗಳು, ಓಳಿಯೊಳ್–ಪಂಕ್ತಿಯಲ್ಲಿ, ಸಾಲಾಗಿ, ಇರ್ದರ್–ಇದ್ದರು. ಲೋಹಾಸನ (೯–೨೮ ವ) ನೋಡಿ.
೨೫. ಮಗಮಗಮಗಿಸುವ–ಗಮಗಮಾಯಿಸುತ್ತಿರುವ, ಮೃಗಮದದ–ಕಸ್ತೂರಿಯ, ಅಗರುವ–ಅಗರುವಿನ, ಕಪ್ಪುರದ–ಕರ್ಪೂರದ, ಕಂಪುಮಂ–ಸುಗಂಧವನ್ನೂ, ಸೂಡಿದ– ಮುಡಿದುಕೊಂಡ, ಬಾಸಿಗದ–ಹೂವಿನ ಹಾರದ, ಪೊಸಗಂಪುಮಂ–ಹೊಸದಾದ ಕಂಪನ್ನೂ, ಚಮರರುಹ ಗಂಧವಹಂ–ಚಾಮರದ ಬೀಸುವಿಕೆಯಿಂದ ಬಂದ ಗಾಳಿಯು, ಒಗೆದಿರೆ–ಎಬ್ಬಿಸು ತ್ತಿರಲು, ಇಂಬಾಗಿ–ಸಂತೋಷದಾಯಕವಾಗಿ, ಮಾಡಿದುದು–ಮಾಡಿತು. ಈ ಪದ್ಯ ಆದಿ ಪುರಾಣದ ಪದ್ಯಕ್ಕೆ (೯–೪) ಸಮಾನವಾಗಿದೆ, ಸ್ವಲ್ಪ ಪಾಠಭೇದಗಳೊಡನೆ.
೨೬. ಪಸರಿಸಿದ–ವ್ಯಾಪಿಸಿದ, ತಾರಹಾರದ–ಮುತ್ತಿನಹಾರಗಳ, ಪೊಸವೆಳ್ದಿಂಗಳುಮಂ– ಹೊಸದಾದ ಬೆಳ್ದಿಂಗಳನ್ನೂ, ಅಮರ್ದ–ಸೇರಿಕೊಂಡ, ಧರಿಸಿದ, ಪೆರ್ದುಡುಗೆಗಳೊಳ್– ದೊಡ್ಡ ಎಂದರೆ ಬೆಲೆಯುಳ್ಳ ಆಭರಣಗಳಲ್ಲಿ, ಮಿಸುಗುವ–ಪ್ರಕಾಶಿಸುವ, ಪೊಸ ಮಾಣಿಕದ– ಹೊಸದಾದ ರತ್ನಗಳ, ಎಳವಿಸಿಲುಮಂ–ಎಳೆಯ ಬಿಸಿಲನ್ನೂ, ಅರಿಗನ ಸಭೆಯೊಳ್–ಅರಿ ಕೇಸರಿಯ ಆಸ್ಥಾನದಲ್ಲಿ, ಒಡಗಾಣಲ್–ಜೊತೆ ಜೊತೆಯಾಗಿಯೇ ನೋಡಲು, ಆದುದು– ಆಯಿತು, ಎಂದರೆ ಬೆಳುದಿಂಗಳೂ ಕೆಂಬಿಸಿಲೂ ಒಟ್ಟಿಗೆ ಇದ್ದಂತೆ ತೋರುತ್ತಿತ್ತು.
ವಚನ : ಸಂಸಾರ ಸಾರೋದಯನ ಎಂದರೆ ಆ ಬಿರುದುಳ್ಳ ಅರಿಕೇಸರಿಯ ಅಥವಾ ಅರ್ಜುನನ; ವೈತಾಳಿಕ–ವಿವಿಧ ತಾಳಗಳನ್ನು ಉಪಯೋಗಿಸಿ ಹಾಡುವ ಗಾಯಕ.
೨೭. ರಾಮ….ಖಂಡಾತ್ : ರಾಮಚಾಪ–ಶ್ರೀರಾಮನ ಬಿಲ್ಲಿನ, ಅಟನಿ–ಕೊಪ್ಪುಗಳ, ತುದಿಗಳ, ತಟಯುಗ–ಎರಡು ಕಡೆಗಳೆಂಬ, ಟಂಕ–ಉಳಿಗಳಿಂದ, ಅಂಕಿತ–ಗುರುತು ಮಾಡಲ್ಪಟ್ಟ, ಅಖಂಡ–ಸಮಗ್ರವಾದ, ಖಂಡಾತ್–ಭರತಖಂಡದಿಂದ, ಆಸೇತೋ–ರಾಮ ಸೇತುವೆಯ ಪರ್ಯಂತ; ಆಪೀಯೂಷಾಬ್ಧಿ–ಹಾಲ್ಗಡಲಿನಿಂದ, ಕ್ಷೀರಸಾಗರದಿಂದ, ದುಗ್ಧಪ್ಲವಧವಳ–ಹಾಲಿನ ಪ್ರವಾಹದಂತೆ ಬೆಳ್ಳಗೆ, ಕನತ್–ಪ್ರಕಾಶಿಸುತ್ತಿರುವ; ಮಂದರಾದ್ರೇಃ –ಮಂದರ ಪರ್ವತದ, ಕಂದರಾತ್–ಕಣಿವೆಗಳವರೆಗೆ; ಸ್ವೋದಯಸ್ಯ–ತನ್ನ ಉಛ್ರಾಯಕ್ಕೆ, ಏಕಹೇತೋಃ–ಒಂದೇ ಕಾರಣವಾಗಿರುವ, ಆ ಚಂದ್ರಾರ್ಕ ಪ್ರತೀತ–ಚಂದ್ರಸೂರ್ಯರವರೆಗೆ ಪ್ರಸಿದ್ಧವಾದ, ಉಭಯಗಿರಿ ಶಿಖರಾತ್–ಪೂರ್ವ ಪಶ್ಚಿಮ ಪರ್ವತಗಳ ಶಿಖರಗಳವರೆಗೆ, ಶೈಲೇಳಾಕಲ್ಪಕಾಳಂ–ಪರ್ವತ ಭೂಮಿಗಳು ಇರುವಷ್ಟು ವರ್ಷಗಳವರೆಗೂ, ವಿಕ್ರಾಂತ ತುಂಗಃ –ಅರ್ಜುನನು, ಕ್ಷಿತಿವಲಯಮಿದಂ–ಈ ಭೂಮಂಡಲವನ್ನು, ಪಾತು–ರಕ್ಷಿಸಲಿ, ಈ ಪದ್ಯದ ಪಾಠದ ವಿಷಯದಲ್ಲಿ ಸಂದೇಹವಿದೆ.
೨೮. ಯಸ್ಯಗುಣಾರ್ಣವಕ್ಷಿತಿಪತೇಃ–ಯಾವ ಅರಿಕೇಸರಿ ರಾಜನ (ಅರ್ಜುನನ), ಶೌರ್ಯಂ–ಪ್ರತಾಪವು, ಸವ್ಯಾಪಸವ್ಯಕ್ರಮಾತ್–ಬಲ ಎಡಗೈಗಳಿಂದ ಬಾಣಪ್ರಯೋಗ ಮಾಡುವ ಕ್ರಮದಿಂದ, ಗರ್ವಾಕೃಷ್ಟ–ಗರ್ವದಿಂದ ಕಿವಿವರೆಗೂ ಸೆಳೆದಿರುವ, ವಿಕರ್ಣ–ಬಾಣ ಗಳೆಂಬ, ಟಂಕನಿಕರ–ಉಳಿಗಳ ಸಮೂಹದಿಂದ, ಉತ್ಕೀರ್ಣ–ಕೊರೆಯಲ್ಪಟ್ಟ, ಪ್ರಭಾವ– ಶಕ್ತಿದ್ಯೋತಕವಾದ ಅಕ್ಷರೈಃ–ಅಕ್ಷರಗಳಿಂದ, ಮತ್ತಾರಿ….ಪಟ್ಟಂ: ಮತ್ತ–ಸೊಕ್ಕಿದ, ಅರಿದ್ವಿಪ–ಶತ್ರುಜನರ ಆನೆಗಳ, ಮಸ್ತಕ ಸ್ಥಿತ–ತಲೆಯಲ್ಲಿ ನೆಲಸಿರುವ, ಶಿಲಾಪಟ್ಟಂ– ಶಾಸನದ ಕಲ್ಲು, ಹಲಗೆಯು, ಸದಾ–ಯಾವಾಗಲೂ, ಆಖ್ಯಾಯತೇ–ಹೇಳುತ್ತದೆಯೋ, ತಸ್ಯ–ಅವನ, ಆ ಅರಿಕೇಸರಿಯ, ಅಯಂ–ಈ, ಸಮರ ಶ್ಲಾಘ್ಯ ಪ್ರಶಸ್ತಿ ಕ್ರಮಃ–ಯುದ್ಧ ವನ್ನು ಹೊಗಳುವ ಈ ಪ್ರಶಸ್ತಿಯ ವಿಧಾನ, ಪುನರುಕ್ತ ಏವ–ಪುನಃ ಹೇಳಿದಂತೆಯೇ, ಪುನರುಕ್ತ ವಾದದ್ದೇ.
೨೯. ಈ ಪದ್ಯದ ಪಾಠ ಹಲವೆಡೆ ಕೆಟ್ಟಿರುವುದರಿಂದ ಪೂರ್ಣವಾಗಿ ಅರ್ಥೈಸಲು ಆಗುವು ದಿಲ್ಲ:
೩೦. ಪರಸ್ಪರ ವಿರುದ್ಧಯೋಃ–ಪರಸ್ಪರ ವಿರೋಧಿಗಳಾಗಿರುವ, ವಿನಯ ಯೌವನಾ ರಂಭಯೋಃ–ವಿನಯ ಮತ್ತು ಪ್ರಾಯದಾರಂಭಗಳು; ಪ್ರಭೂತ ಸಹ ಜೇರ್ಷ್ಯಯೋಃ ಅಪಿ– ಉತ್ಪನ್ನವಾದ ಸಹಜವಾದ ಅಸೂಯೆಯನ್ನುಳ್ಳವರಾಗಿದ್ದರೂ, ಸರಸ್ವತೀ ಶ್ರೀಸ್ತ್ರಿಯೋಃ –ಸರಸ್ವತಿ ಮತ್ತು ಲಕ್ಷ್ಮಿ ಎಂಬ ಸ್ತ್ರೀಯರ; ತಥಾಚ–ಹಾಗೆಯೇ, ಮತ್ತು; ಪರಿಹಾರಿಣೋಪಿ– ಪರಸ್ಪರ ಪರಿಹಾರವನ್ನುಳ್ಳವಾದರೂ, ಮಹಾಕ್ಷಮಾಶೌರ್ಯಯೋಃ–ಮಹಾಕ್ಷಮಾಗುಣದ ಮತ್ತು ಪ್ರತಾಪದ; ಪ್ರಥಮ ಸಂಗಮಃ–ಮೊದಲ ಸಮಾಗಮವು, ಚಿ [ರಾತ್]–ಬಹಳ ಕಾಲದ ಅನಂತರ, ಹರಿಗಭೂಪತೌ–ಅರಿಕೇಸರಿ ರಾಜನಲ್ಲಿ, ದೃಶ್ಯತೇ–ಕಾಣಲ್ಪಡುತ್ತದೆ, ಕಾಣು ತ್ತದೆ, ಎಂದರೆ ಅರಿಕೇಸರಿಯಲ್ಲಿ, ವಿನಯ ಯೌವನಗಳೂ, ಸರಸ್ವತಿಲಕ್ಷ್ಮಿಯರೂ ಕ್ಷಮಾ ಶೌರ್ಯಗಳೂ–ಇವು ಪರಸ್ಪರ ವಿರುದ್ಧವಾದ ಗುಣಗಳು ಮೊದಲ ಬಾರಿಗೆ, ಬಹುಕಾಲದ ಅನಂತರ, ಒಟ್ಟಿಗೆ ಸೇರಿದ್ದವು. ಬಾಣಭಟ್ಟನು ತನ್ನ ಹರ್ಷ ಚರಿತ್ರೆಯಲ್ಲಿ ಮಾಧವಗುಪ್ತ ನನ್ನು ವರ್ಣಿಸುವಾಗ (ಚತುರ್ಥಕಃ ಉಚ್ಛ್ವಾಸಃ) “ಯಶಸಾ ಪರಸ್ಪರ ವಿರುದ್ಧಯೋಃ ವಿನಯ ಯೌವನಯೋಃ ಚಿರಾತ್ ಪ್ರಥಮ ಸಂಗಮ ಚಿಹ್ನಮಿವ ಭ್ರೂಸಂಗತಕೇನ ಕಥಯಂತಮ್” ಎಂದು ಹೇಳಿರುವುದನ್ನು ಇದರೊಡನೆ ಹೋಲಿಸಿ.
ವಚನ : ಪೊಗೞ್ದು–ಹೊಗಳಿ; ಮಾಣ್ದ–ನಿಲ್ಲಿಸಿದ; ಪಲ್ಲಟಿಸದೆಯುಂ–ವ್ಯತ್ಯಾಸ ಮಾಡದೆಯೂ; ಪರಿಚೆ, । ದಂಗಳನಱಿದು–ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುವುದನ್ನು ತಿಳಿದುಕೊಂಡು (ಈ ಶಬ್ದ ಸಂಗೀತದ ಪರಿಭಾಷೆ ಇರಬಹುದು); ಒಟ್ಟಜೆಯ ರಾಜಿಯಂ– [?]; ಕಣ್ಗಳಿಂಚರದೊಳಂ–ಕಣ್ಣುಗಳು ಇನಿದಾದ ಸ್ವರದಲ್ಲಿಯೂ [?], ಪೊಂಪುೞಿವೋಗೆ– ಅತಿಶಯವಾಗಲು;
೩೧. ರಂಗ….ಜಳಂ; ರಂಗತ್–ನರ್ತಿಸುತ್ತಿರುವ, ತುಂಗ–ಎತ್ತರವಾದ, ತರಂಗ– ಅಲೆಗಳ, ಭಂಗುರ–ಒಡೆತದಿಂದ, ಲಸತ್–ಪ್ರಕಾಶಮಾನವಾದ, ಗಂಗಾಜಳಂ–ಗಂಗಾ ನದಿಯ ನೀರು; ನರ್ಮದಾಸಂಗಸ್ವಚ, ವನಂ–ನರ್ಮದಾ ನದಿಯ ಕೂಡಲಿನ ಶುಭ್ರವಾದ ನೀರು; ಪ್ರಸಿದ್ಧವರದಾ ಪುಣ್ಯಾಂಬು–ಪ್ರಸಿದ್ಧವಾದ ವರದಾನದಿಯ ಪವಿತ್ರವಾದ ನೀರು; ಗೋದಾವರೀ ಸಂಗತ್ಯೂರ್ಜಿತವಾರಿ–ಗೋದಾವರೀ ನದಿಯಲ್ಲಿ ಸೇರಿರುವ ವರ್ಧಿಸುತ್ತಿರುವ ನೀರು; ಸಾರಯಮುನಾ ನೀಳೋರ್ಮಿ ನೀರಂ–ಸಾರವತ್ತಾದ ಯಮುನಾ ನದಿಯ ನೀಲಿ ಬಣ್ಣದ ಅಲೆಗಳನ್ನುಳ್ಳ ನೀರು; ಇವೆಲ್ಲ, ಭುಜೋತ್ತುಂಗಂಗೆ–ಎತ್ತರವಾದ ಭುಜಗಳುಳ್ಳ, ಅರಿಗಂಗೆ–ಅರಿಕೇಸರಿಗೆ, ಮಂಗಳ ಮಹಾಶ್ರೀಯಂ–ಮಂಗಳವೆಂಬ ಮಹಾ ಸಂಪತ್ತನ್ನೂ, ಜಯಶ್ರೀಯುಮಂ–ಜಯಲಕ್ಷ್ಮಿಯನ್ನೂ, ಈಗೆ–ಕೊಡಲಿ, ಇಲ್ಲಿ ಪಂಪ ಬನವಾಸಿಯ ಸಮೀಪದಲ್ಲಿ ಹರಿಯುವ ವರದಾ ನದಿಯನ್ನು ಹೇಳಿರುವುದು ಗಮನಾರ್ಹವಾಗಿದೆ.
೩೨. ಶೃತದೇವೀವಚನಾಮೃತಂ–ಸರಸ್ವತಿಯ ವಚನವೆಂಬ ಅಮೃತವು, ಶ್ರುತಕಥಾಳಾ ಪಂ–ಕೇಳಿದ, ಪ್ರಸಿದ್ಧವಾದ ಕಥಾಲಾಪಗಳು; ಶ್ರುತಸ್ಕಂದ ಸಂತತಿ–ನಾಲ್ಕು ಅನುಯೋಗ ಗಳನ್ನು ಒಳಕೊಂಡ ಜಾನಾಗಮಗಳ ಸಮೂಹ; ಶಶ್ವಚ್ಛ್ರುತಪಾರಗ ಶ್ರುತಿ–ಶಾಶ್ವತವಾದ ವೇದಗಳಲ್ಲಿ ಪಾರಂಗತರಾದವರ ಜ್ಞಾನ, ಮಹೋ….ಗೀತಿ; ಮಹಾ–ದೊಡ್ಡದಾದ, ಊರ್ಮಿ– ಅಲೆಗಳಿಂದ, ಉಲ್ಲಾಸಿ–ಉಲ್ಲಾಸವನ್ನುಳ್ಳ, ವಾರಾಶಿ–ಸಮುದ್ರದಿಂದ, ವಾರಿತ–ತಡೆಯ ಲ್ಪಟ್ಟ, ಧಾತ್ರೀತಳ–ಭೂತಳದ, ಗೀತಿ–ಸ್ತೋತ್ರಗಳು; ಇವೆಲ್ಲ; ನಿರ್ಮಳ ಯಶಂಗೆ–ನಿರ್ಮಲ ವಾದ ಕೀರ್ತಿಯುಳ್ಳ, ಆರೂಢ ಸರ್ವಜ್ಞ ಭೂಪತಿಗೆ–ಆರೂಢ ಸರ್ವಜ್ಞ ಎಂಬ ಬಿರುದುಳ್ಳ ರಾಜನಾದ ಅರಿಕೇಸರಿಗೆ, ಒಲ್ದು–ಪ್ರೀತಿ, ಮಂಗಳ ಮಹಾಶ್ರೀಯಂ ಜಯಶ್ರೀಯುಮಂ, ಆಗಳುಂ–ಯಾವಾಗಲೂ, ಈಗೆ–ಕೊಡಲಿ.
೩೩. ಕೈಲಾಸಂ–ಕೈಲಾಸವೆಂಬ ಪರ್ವತ; ನಿಷಧಾಧಿಪಾಂಗ ನಿಕಟಕ್ಷೋಣೀಧರಂ–ನಿಷಧ ಪರ್ವತ ಮತ್ತು ಅಂಗ ದೇಶಕ್ಕೆ ಸಮೀಪವಾದ ಪರ್ವತ; ನೀಳಕುತ್ಕೀಲಂ–ನೀಲಾಚಲವೆಂಬ ಬೆಟ್ಟ; ಕಂದಮಹೀಧರಂ–ಕಂದವೆಂಬ ಪರ್ವತ, ಶಿಖರನಾಮಂ–ಶಿಖರ ಎಂಬ ಹೆಸರುಳ್ಳ, ಉದ್ಯನ್ನಗಂ–ಎತ್ತರವಾದ ಪರ್ವತ; ಪ್ರಸ್ಫುರತ್–ಅತಿ ಪ್ರಕಾಶಮಾನವಾಗಿರುವ, ಪ್ರಾಳೇಯಾ ಚಲಂ–ಹಿಮವತ್ಪರ್ವತ, ಇವೆಲ್ಲ, ಈತಂ–ಈ ಅರಿಕೇಸರಿ, ಎಮ್ಮವೊಲ್–ನಮ್ಮಂತೆ, ಇಳಾ ಭೃನ್ನಾಥಂ–ಪರ್ವತಗಳಿಗೆ ರಾಜ, ಅಥವಾ ರಾಜರಿಗೆ ರಾಜ ಎಂದು, ಇಂತು–ಹೀಗೆ, ಇಳಾ ಪಾಳಂಗೆ–ಭೂಪಾಲನಾದ, ಅರಿಗಂಗೆ–ಅರಿಕೇಸರಿಗೆ, ಮಂಗಳ ಮಹಾಶ್ರೀಯಂ ಜಯಶ್ರೀ ಯುಮಂ, ಈಗೆ.
೩೪. ಜಳಧಿ ದ್ವೀಪ ರಸಾತಳಾಂಬರ ಕುಲಾದ್ರೀಂದ್ರಂಗಳ್–ಸಮುದ್ರದ್ವೀಪ ಪಾತಾಳ ಆಕಾಶ ಕುಲಪರ್ವತಗಳು, ಓರಂತೆ–ಕ್ರಮವಾಗಿ, ತನ್ನೊಳಂ–ತನ್ನಲ್ಲಿಯೂ (ಇರುವ), ಉದ್ಯತ್ಕಟಕಂಗಳ್–ಅತಿಶಯವಾದ ಸೈನ್ಯಗಳೂ, ಆಹವ ಮಹಾದ್ರವ್ಯಂಗಳ್–ಯುದ್ಧದ ಮಹಾವಸ್ತುಗಳೂ, ಓರಂತೆ–ಕ್ರಮವಾಗಿ, ಮಂಗಳ ಕಾರ್ಯಂಗಳನಿತ್ತು–ಮಂಗಳಕರವಾದ ಕಾರ್ಯಗಳನ್ನು ಕೊಟ್ಟು, ಮತ್ತೆ–ಪುನಃ ಮಣಿಭೂಷಾ ತುಂಗ ರತ್ನಾಂಶು ಪಾಟಳಿತಂಗೆ– ರತ್ನಖಚಿತವಾದ ಆಭರಣಗಳ ಅತಿಶಯವಾದ ಕಿರಣಗಳಿಂದ ಕೆಂಪೇರಿದವನಾದ, ಅರಿಗಂಗೆ– ಅರಿಕೇಸರಿಗೆ, ಮಂಗಳ ಮಹಾಶ್ರೀಯಂ ಜಯಶ್ರೀಯುಮಂ ಈಗೆ.
೩೫. ನಯನಾನಂದ ಮೃಗಾಂಕ ಬಿಂಬಂ–ಕಣ್ಣುಗಳಿಗೆ ಆನಂದಕರವಾದ ಚಂದ್ರ ಮಂಡಲ; ಉದಯಂಗೆಯ್ವ–ಮೂಡುತ್ತಿರುವ, ಅರ್ಕಬಿಂಬಂ–ಸೂರ್ಯಮಂಡಲ; ಮನಃ ಪ್ರಿಯ ಲಕ್ಷ್ಮೀವದನೇಂದು ಬಿಂಬಂ–ಮನಸ್ಸಿಗೆ ಪ್ರಿಯಳಾದ ಲಕ್ಷ್ಮಿಯ ಮುಖಚಂದ್ರವೆಂಬ ಬಿಂಬವು; ಅಖಿಳ–ಸಮಸ್ತವಾದ, ಕ್ಷ್ಮಾ–ಭೂಮಿಗೆ, ದ್ವೀಪ–ದ್ವೀಪಗಳಿಗೆ, ವಾರ್ಧಿ–ಸಮುದ್ರ ಗಳಿಗೆ, ಪ್ರಮೋದ–ಸಂತೋಷದ (ಸಂತೋಷವನ್ನು ಕೊಡುವ), ಯಶೋಬಿಂಬಂ–ಕೀರ್ತಿಯ ಮಂಡಲವು, ಉದ….ಹುಗೆ; ಉದಗ್ರ–ಉನ್ನತವಾದ, ದಿಕ್ಕರಿ–ದಿಕ್ಕಿನಾನೆಗಳ, ಕರ–ಸೊಂಡ ಲಿನ, ಆಕಾರ–ಆಕಾರವನ್ನುಳ್ಳ, ಲಸತ್–ಪ್ರಕಾಶಮಾನವಾದ, ಬಾಹುಗೆ–ಬಾಹುಗಳನ್ನುಳ್ಳ, ಪ್ರಿಯಗಳ್ಳಂಗೆ–ಪ್ರಿಯಗಳ್ಳನೆಂಬ ಬಿರುದಿದ್ದ, ಅರಿಕೇಸರಿಗೆ, ಒಸೆದು–ಸಂತೋಷಿಸಿ, ಮಂಗಳ ಮಹಾಶ್ರೀಯಂ ಜಯಶ್ರೀಯುಮಂ, ಈಗೆ.
ವಚನ : ಪೊಗೞ್ದು ಮಾಣ್ದನಂತರದೊಳ್–ಹೊಗಳಿ ನಿಲ್ಲಿಸಿದ ತರುವಾಯ; ಧವಳಾಕ್ಷ ತಂಗಳಂ ತಳಿದು–ಬಿಳಿ ಅಕ್ಷತೆಗಳನ್ನು ಚಿಮುಕಿಸಿ (ಹಾಕಿ).
೩೬. ಹರಿಗ–ಅರ್ಜುನನೇ, ಅರಿಭೂಪಾಲದವಾನಳಂ–ಶತ್ರುರಾಜರೆಂಬ ಕಾಳ್ಗಿಚ್ಚು, ನಿನ್ನ–ನಿನ್ನ, ಉಗ್ರಾಸಿಧಾರಾ–ಭಯಂಕರವಾದ ಕತ್ತಿಯ ಅಲಗೆಂಬ, ಅಂಬುಶೀಕರದಿಂ–ನೀರಿನ ಹನಿಗಳಿಂದ, ಮೞ್ಗುಗೆ–ನಾಶವಾಗಲಿ, ನಂದಲಿ; ಅರ್ಥಿ ಸಸ್ಯಕ್ಕೆ–ಯಾಚಕರೆಂಬ ಸಸಿಗಳಿಗೆ, ದಾನವರ್ಷಸಲಿಲಂ–ದಾನವೆಂಬ ಮಳೆಯ ನೀರು, ಕೊಳ್ಗೆ–ಸುರಿಯಲಿ; ನಿನ್ನ, ಅದೊಂದು, ಪಲವುಂ–ಹಲವೂ, ಬಣ್ಣಂಗಳಂ–ವರ್ಣಗಳನ್ನು ಎಂದರೆ ಹಾಡುಗಳನ್ನು, ಕಿನ್ನರಿಯರ್–ಕಿನ್ನರ ಸ್ತ್ರೀಯರು, ಮೇರು, ಮಂದರ, ಕೈಳಾಸ, ಮಹೇಂದ್ರ, ನೀಳ, ನಿಷಧ–ಎಂಬ, ಅದ್ರೀಂದ್ರ– ಶ್ರೇಷ್ಠ ಪರ್ವತಗಳ, ಉಪಕಂಠಂಗಳೊಳ್–ಸಮೀಪ ಪ್ರದೇಶಗಳಲ್ಲಿ, ಪಾಡುಗೆ–ಹಾಡಲಿ;
ವಚನ : ಮುಮುಕ್ಷು ವೃತ್ತಿಯೊಳ್–ಮೋಕ್ಷಾಪೇಕ್ಷಿಯ ನಡವಳಿಕೆಯಲ್ಲಿ; ಬಾೞ್ತೆಯಲ್ಲಂ– ಪ್ರಯೋಜನವಲ್ಲ;
೩೭. ನಿನ್ನ ದಯೆಯಿಂದಂ–ನಿನ್ನ ಕರುಣೆಯಿಂದ, ಅರಿನೃಪರಂ–ಶತ್ರುರಾಜರನ್ನು, ನೆಱೆ– ಪೂರ್ಣವಾಗಿ, ಕೊಂದ, ಎಮಗೆ–ನಮಗೆ, ಸಕಳ ರಾಜ್ಯಶ್ರೀಯುಂ–ಸಮಸ್ತ ರಾಜ್ಯಸಂಪತ್ತೂ, ನಿನ್ನ ಬಲದಿಂದೆ–ನಿನ್ನ ಶಕ್ತಿಯಿಂದ, ಸಾರ್ದುದು–ಸೇರಿತು, ನಿನ್ನುಪಕಾರಮಂ–ನಿನ್ನ ಸಹಾಯ ವನ್ನು, ಅದೇತಱೊಳ್–ಅದು ಯಾವುದರಲ್ಲಿ, ನೀಗುವೆನೋ–ತೀರಿಸುವೆನೋ!
ವಚನ : ಅನುನಯವಚನ-ಪ್ರೀತಿಯ, ಸ್ನೇಹದ ಮಾತುದ್ ಅವಯವದಿಂ-ಸುಲಭವಾಗಿ, ಶ್ರಮವಿಲ್ಲದೆದ್ ಮಸುಳೆವಂದ-ಮಾಸಿಸಿದದ್ ನೆಗೞ್ತೆಯೊಳ್-ಕಾರ್ಯದಲ್ಲಿ; ಅಸುಂಗೊಳಿಸಿದ-ಆಶ್ಚರ್ಯಪಡಿಸಿದ, ಬೆರಗಾಗಿಸಿದ; ಏಳಿಸಿದ-ಕೀಳ್ಮಾಡಿದದ್ ಮಾರ್ಮ ಲೆವರಿಲ್ಲ-ಪ್ರತಿಭಟಿಸುವವರು ಇಲ್ಲ; ಬಾಳ ಬಾಯೊಳ್-ಕತ್ತಿಯ ಬಾಯಲ್ಲಿ, ಧಾರೆಯಲ್ಲಿ; ಅೞ್ಕಾಡಿದುದಱಿಂ-ನಾಶಮಾಡಿದ್ದರಿಂದ; ಅಮಂದಧ್ವನಿಗೆ-ಉಚ್ಚವಾದ ಕೂಗಿಗೆ, ಗರ್ಜನೆಗೆ; ಒಡ್ಡೊಡೆದು-ಸೈನ್ಯವ್ಯೂಹ ಭಿನ್ನವಾಗಿ; ವಿದ್ವಿಷ್ಟಬಲಂ-ಶತ್ರು ಸೈನ್ಯ; ಅಳುರ್ದು ಕೊಳ್ವುದಱಿಂದೆ-ವ್ಯಾಪಿಸಿ ಸುಡುವುದರಿಂದ; ಕುರಂಗಂಗಳನ್-ಜಿಂಕೆಗಳನ್ನು; ಪಿರಿಯನಪ್ಪುದ ಱಿಂ-ದೊಡ್ಡವನಾಗಿರುವುದರಿಂದ; ವಿಕ್ರಮಕ್ರಮಂ-ಪರಾಕ್ರಮವೇ ಕ್ರಮವು; ಗೊಜ್ಜಿಗನೆಂಬ ಸಕಳ ಚಕ್ರವರ್ತಿ-ರಾಷ್ಟ್ರಕೂಟ ನಾಲ್ಕನೆಯ ಗೋವಿಂದನೆಂಬ ಚಕ್ರವರ್ತಿ; ಎನಿತಾನುಂ ಗಜಗಮನಂಗಳಂ ತಾನೆಸಮೆದನಪ್ಪುದಱಿಂ-ಎಷ್ಟೋ ಗಜಾಗಮಗಳನ್ನು, ಗಜಶಾಸ್ತ್ರಗಳನ್ನು ತಾನೇ ರಚಿಸಿದವನಾದ್ದರಿಂದ; ಗಜಗಮನ ರಾಜಪುತ್ರನಂ-ಗಜಾಗಮನವನ್ನು ರಚಿಸಿದ ರಾಜಪುತ್ರನ (೨.೩೪, ವ. ನೋಡಿ); ಗರ್ವವ್ಯಾಳಿಯುಮಂ-ಮದದಿಂದ ಕೂಡಿದ ತೊಂಡಾನೆಗಳನ್ನು ಅತಿವರ್ತಿಗಳುಮಂ-ವಶಕ್ಕೆ ಬರದೆ, ಅಧೀನವಾಗದೆ ಇರುವ ಆನೆಗಳನ್ನೂ; ಕೆಯ್ಗೆಯ್ಯದೆ-ಸಿಂಗರಿಸಿಕೊಳ್ಳದೆದ್ ಬರ್ದೆಯರುಮಂ.ಪ್ರೌಢಸ್ತ್ರೀಯರನ್ನೂ; ತಕ್ಕಿನೊಳ್-ಯೋಗ್ಯತೆಯಲ್ಲಿ; ಕೂರ್ಪ ಕೂರದರ-ಪ್ರೀತಿಸುವ ಮತ್ತು ಪ್ರೀತಿಸದವರ; ಅರಿಕೇಸರಿ-ಶತ್ರುಗಳಿಗೆ ಸಿಂಹವಾಗಿರುವವನು;
೩೮. ಆವಋತುವಿಂಗೆ–ಯಾವ ಋತುವಿಗೆ, ಆವ ಪಸದನಂ–ಯಾವ ಉಡಿಗೆ ತೊಡಿಗೆ ಗಳು, ಅಮರ್ದುಹೊಂದಿಕೊಂಡು, ಒಪ್ಪುಗುಂ–ಒಪ್ಪುತ್ತವೆಯೋ; ವಿನಯಂ–ವಿನಯವು, ನಮ್ರತೆಯು, ಆವ ಪೊೞ್ತು–ಯಾವ ಹೊತ್ತು, ಅದು ಆವ ಎಸಕದೊಳ್–ಅದು ಯಾವ ಕಾರ್ಯದಲ್ಲಿ, ಒಪ್ಪುಗುಂ–ಹೊಂದುತ್ತದೆಯೋ; ಆವೆಡೆಗೆ–ಯಾವ ಸಮಯಕ್ಕೆ, ಆವುದು– ಯಾವುದು, ಚೆಲ್ವುವೆತ್ತು–ಸೊಗಸನ್ನು ಹೊಂದಿ, ರಂಜಿಸುಗುಂ–ಸಂತೋಷಪಡಿಸುತ್ತದೋ, ಅದರ್ಕೆ–ಅದಕ್ಕೆ, ಅದಂ–ಅದನ್ನು, ಸಮಱಿ–ಸುಂದರವಾಗಿ ಸೇರಿಸಿ, ನಿಚ್ಚಲುಂ–ಪ್ರತಿ ದಿನವೂ, ಆ ಬಿಯಂ–ಆ ವೆಚ್ಚ, ಆ ವಿನೋದಂ–ಆ ಸಂತೋಷ, ಆ ಪಸದನಂ–ಆ ಅಲಂಕಾರ, ಆ ವಿಲಾಸದೊಳ್–ಆ ಲೀಲೆಯಲ್ಲಿ, ಒಡಂಬಡೆ–ಸೇರಿ ಒಪ್ಪಲು, ಗುಣಾರ್ಣವಂ–ಅರಿಕೇಸರಿ, ಭೋಗಿಸಿದಂ–ಸುಖಪಟ್ಟನು, ರಾಜನು ಆಯಾ ಋತುವಿನಲ್ಲಿ ಧರಿಸಬೇಕಾದ ವಸ್ತ್ರಗಳನ್ನು ಕೆಳಗೆ ಕೊಟ್ಟಿದೆ :
(1) ವಸಂತಕಾಲ : ವಸಂತೇ ಬಿಭೃಯೇದ್ರಾಜಾ ಕೌಮಕಾರ್ಪಾಸಿಕಾನಿ ಚ
ಸುಶ್ಲ ಕ್ಷಾಣಿ ಮನೋಜ್ಞಾನಿ ಸೂಕ್ಷ್ಮಾಣಿ ವಿರಲಾನಿ ಚ ॥
(2) ನಿದಾಘ (ಬೇಸಿಗೆ) : ನಿದಾಘೇ ಧಾರಯೇತ್ ರಾಜಾ ಸಿತಾನಿ ವಿವಿಧಾನಿ ಚ ।
ರೋಮಜಾನಿ ಸುಸೂಕ್ಷ್ಮಾನಿ ಶ್ಲಕ್ಣಾನಿ ವಿವಿಧಾನಿ ಚ ॥
(3) ವರ್ಷಋತು : ಮಾಂಜಿಷ್ಠಾನಿಚ ರಕ್ತಾನಿ ಪ್ರಾವೃಟ್ಕಾಲೇ ವಿಧಾರಯೇತ್ ।
ಪಾಟಲಾನ್ಯಭಿರಾಮಾಣಿ ಧೂಮ್ರಾಣಿ ಮಧುರಾಣಿ ಚ ॥
(4) ಶರತ್ಕಾಲ : ಶರತ್ಕಾಲೇಽತಿಸೂಕ್ಷ್ಮಾಣಿ ವಸನಾನಿ ವಿಧಾರಯೇತ್ ।
ಕೌಸುಂಭಾನಿ ಸುಭವ್ಯಾನಿ ಲಾಕ್ಷಿಕಾನಿ ಘನಾನಿಚ ॥
(5) ಶೀತಕಾಲ : ಆಂಕಿಕಾಶ್ಚ ಪಟೀಜಾತಾಃ ಶೀತ ಕಾಲೇ ಭಜೇನ್ನೃಪಃ ।
ಋತೂನಾಮನುಸಾರೇಣ ಶೃಂಗಾರಸ್ಯಾನು ಸಾರತಃ ॥
ಯಾವ ಸಂದರ್ಭದಲ್ಲಿ ಯಾವ ವಸ್ತ್ರಧಾರಣೆ ಇರಬೇಕೆಂಬುದನ್ನು
ಶೀತವಾತೇ ಪ್ರಯಾಣೇ ಚ ಪಾರರ್ಧೌ ವಾರಿಖೇಲನೇ ।
ಸೂಕ್ಷ್ಮಾಣಿ ಬಹುಮೂಲ್ಯಾನಿ ವರ್ಣಾಢ್ಯಾನಿ ವರಾಣಿ ಚ ॥
ನಾನಾ ದ್ವೀಪಸಮುತ್ಥಾನಿ ಶೃಂಗಾರೇ ಧಾರಯೇನ್ನೃಪಃ ॥
ಮಾಗಿಯ ಕಾಲದಲ್ಲಿ ಜನ ಹೇಗೆ ಬದುಕುತ್ತಿದ್ದರೆಂಬುದನ್ನು ದೇವಕವಿ ಹೀಗೆ ಹೇಳಿ ದ್ದಾನೆ :
ನಸುಬಿಸಿಯಪ್ಪ ನಲ್ಲುಣಿಸಿನಿಂ ಘುಸೃಣಾರ್ದ್ರ ವಿಲೇಪದಿಂ ವಿರಾ
ಜಿಸುವ ಕದಂಬದಂಬುಲದಿನಂಚಿತಕಾಂಚನ ಭೂಷಣಂಗಳಿಂ ।
ದೆಸಕದ ಶೋಣವರ್ಣವಸನಾವೃತದಿಂ ಜನಮಾಗಳಿಂತು ಜೀ
ವಿಸಿತನಿತಲ್ಲದಂದುೞಿವುದೇ ಹಿಮದಾಗರಮಾದ ಮಾಗೆಯೊಳ್ ॥
ಮೇಲಿನ ಪಂಪನ ಪದ್ಯ ಅವನ ಭೋಗಕಾಂಕ್ಷೆಯನ್ನೂ ದೃಷ್ಟಿಯನ್ನೂ, ತೋರಿಸುತ್ತಿರು ವುದಲ್ಲದೆ ಅವನು ಸಂಸಾರದಲ್ಲಿ ಪಟ್ಟ ಸುಖವನ್ನೂ ಪ್ರತಿಬಿಂಬಿಸುತ್ತದೆ. ಧರ್ಮಮೂಲ ವಾದ ಅರ್ಥಕಾಮಗಳು ಗ್ರಾಹ್ಯವೆಂಬಂಶ ಅವನ ‘ಆದಿಪುರಾಣ’ ದಲ್ಲಿ ಸ್ಪಷ್ಟವಾಗಿದೆ; ಮಾವು, ಮಲ್ಲಿಗೆ–ಇವೆರಡಿದ್ದರೆ ಸಾಕು; “ಇಂಪೆಱತಾವುದು ಸಂಸಾರ ಸಾರ ಸರ್ವಸ್ವ ಫಲಂ.”
೩೯. ಪಸರಿಸಿ–ಹರಡಿ, ನೀಳ್ದ–ದೀರ್ಘವಾದ, ತನ್ನ, ಜಸದೊಳ್–ಕೀರ್ತಿಯಲ್ಲಿ, ಪೆಱನೊರ್ವನ–ಇನ್ನೊಬ್ಬನ, ಕೀರ್ತಿ–ಕೀರ್ತಿಯು, ತಳ್ತು–ಸೇರಿ, ರಂಜಿಸೆ–ಶೋಭಿಸಲು, ನೆಗೞ್ದಾತಂ–ಪ್ರಸಿದ್ಧನಾದವನು, ಏಂ ನೆಗೞ್ದಂ–ಏನು ಪ್ರಸಿದ್ಧನಾದನು? ಎಂದರೆ ತನ್ನ ಕೀರ್ತಿ ಯೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿದ್ದರೆ ತಾನು ಏನು ಪ್ರಸಿದ್ಧಿ ಪಡೆದಂತಾಯಿತು? ತನಗೆ ಸಮಾನನು ಇನ್ನೊಬ್ಬನಿಲ್ಲವೆಂದಾಗ ತಾನೆ ತನ್ನ ಕೀರ್ತಿ ಬೆಳಗುವುದು, ಎಂಬ– ಎನ್ನುವ, ಚಲಂ–ಛಲವು, ಮಿಗೆ–ಹೆಚ್ಚಾಗಲು, ತನ್ನ ಪೆಂ [ಪೆ]–ತನ್ನ ಹಿರಿಮೆಯೇ, ತನ್ನೆಸಕಮೆ– ತನ್ನ ಕಾರ್ಯವೇ, ತನ್ನ ವಿಕ್ರಮಮೆ–ತನ್ನ ಶೌರ್ಯವೇ, ತನ್ನ ನೆಗೞ್ತೆಯೆ–ತನ್ನ ಖ್ಯಾತಿಯೇ, ತನ್ನ ಮಾತೆ–ತನ್ನ ಸುದ್ದಿಯೇ, ಎಸೆವ–ಶೋಭಿಸುವ, ಜಗತ್ರಯಕ್ಕೆ–ಮೂರು ಲೋಕಕ್ಕೆ, ತಾನೆನಿಸಿ–ತಾನೇ ಎನ್ನಿಸಿ, ನೆಲನಂ–ರಾಜ್ಯವನ್ನು, ಗುಣಾರ್ಣವಂ–ಅರಿಕೇಸರಿ, ಪಾಲಿಸಿದಂ– ಪಾಲನೆ ಮಾಡಿದನು.
೪೦. ಆ ಮಳಯಾಚಳ ಹಿಮಗಿರಿ ಸೀಮಾವನಿತಳಕೆ–ಮಲಯ ಪರ್ವತದಿಂದ ಹಿಡಿದು ಹಿಮವತ್ಪರ್ವತವನ್ನು ಮೇರೆಯಾಗುಳ್ಳ ಭೂಭಾಗಕ್ಕೆ, ವೆಂಗಿಮಂಡಳಮೆ–ವೆಂಗಿ ದೇಶವೇ, ಚೆಲ್ವು–ಸೊಗಸು; ಆವಗಮೆ–ಪೂರ್ಣವಾಗಿ, ತನಗೆ–ತನಗೆಯೇ, ಎಂದು–ಎಂಬುದಾಗಿ, ಒಂದೂರ್–ಒಂದು ಊರು, ನಾಮದೊಳಂ–ಹೆಸರಿನಲ್ಲಿ, ವೆಂಗಿಪೞು–ವೆಂಗಿಪಳು ಎಂಬುದು, ಕರಂ–ವಿಶೇಷವಾಗಿ, ಸೊಗಯಿಪುದು–ಶೋಭಿಸುತ್ತದೆ.
೪೧. ಅದುವೇ–ಅದೇ ಎಂದರೆ ವೆಂಗಿಪಳುವೇ, ವಸಂತಂ, ಕೊಟ್ಟೂರ್–ಕೊಟ್ಟೂರು, ಒದವಿದ–ಉಂಟಾದ, ನಿಡುಗುಂದಿ, ಮಿಕ್ಕ–ಅತಿಶಯವಾದ, ವಿಕ್ಕಮಪುರಂ–ವಿಕ್ರಮಪುರವು, ಎಂಬುದುಂ–ಎನ್ನಿಸಿಕೊಳ್ಳುವುದೂ, ಅಗ್ರಹಾರ–ಅಗ್ರಹಾರಗಳ, ಸಂಪತ್ಪದವಿಗಳೊಳ್– ಐಶ್ವರ್ಯದ ಪದವಿಗಳಲ್ಲೂ, ಅಗ್ರಗಣ್ಯಂ–ಶ್ರೇಷ್ಠನಾದ, ಊರ್ಜಿತ ಪುಣ್ಯಂ–ವರ್ಧಿಸು ತ್ತಿರುವ ಪುಣ್ಯವುಳ್ಳ.
೪೨. ನಯಶಾಲಿ–ನಯವುಳ್ಳ, ವತ್ಸಗೋತ್ರಶ್ರಯಣೀಯಂ–ಆ ವತ್ಸಗೋತ್ರವನ್ನು ಅವಲಂಬನವಾಗುಳ್ಳ, ಸಕಳಶಾಸ್ತ್ರಾರ್ಥ ವಿನಿಶ್ಚಯಮತಿಕೃತಿ–ಎಲ್ಲಾ ಶಾಸ್ತ್ರಗಳ ಅರ್ಥ ನಿರ್ಣಯದಲ್ಲಿ ಬುದ್ಧಿ ವ್ಯಾಪಾರವುಳ್ಳ, ಮಾಧವ ಸೋಮಯಾಜಿ–ಮಾಧವ ಸೋಮಯಾಜಿ ಯೆಂಬುವನು, ಆ ಸಮುದ್ರಂ ಬರೆಗಂ–ಆ ಕಡಲ ಕಡೆವರೆಗೂ, ಸಲೆ–ಚೆನ್ನಾಗಿ, ನೆಗೞ್ದಂ– ಪ್ರಸಿದ್ಧನಾದನು.
೪೩. ಶಕ್ರಶಶಾಂಕ ಸೂರ್ಯ ಪವಮಾನರುಂ–ಇಂದ್ರ ಚಂದ್ರ ಸೂರ್ಯ ವಾಯುಗಳೂ, ಆತನ, ಹೋಮ ಮಂತ್ರ ಚಕ್ರ ಕ್ರಮಕ್ಕೆ–ಹೋಮದ ಮಂತ್ರವೆಂಬ ಚಕ್ರದ ಸಂಚಾರಕ್ಕೆ, ಅಣಂ–ಸ್ವಲ್ಪವೂ, ಮಿಡುಕಲ್–(ಅಡ್ಡಿಮಾಡಿ) ಬಲವನ್ನು ತೋರಿಸಲು, ಆಗಡೆ–ಆಗಲೇ, ಶಾಪಮಂ ಈಗುಂ–ಶಾಪವನ್ನು ಕೊಡುತ್ತಾನೆ, ಎಂದೆ–ಎಂಬುದಾಗಿಯೇ, ದಿಕ್ಚಕ್ರಮುಂ– ದಿಗ್ವಲಯಗಳೂ, ಅಂಜಿ–ಹೆದರಿ, ಬೆರ್ಚಿ–ಬೆದರಿ, ಬೆಸಕೆಯ್ವುವು–ಸೇವೆ ಮಾಡುತ್ತವೆ; ಅದಲ್ಲದೆ–ಅದೂ ಅಲ್ಲದೆ, ಸರ್ವಕ್ರತು ಯಾಜಿಯಾದಂ–ಸರ್ವ ಕ್ರತುವೆಂಬ ಯಜ್ಞವನ್ನು ಮಾಡಿದವನಾದನು; ಮಾಧವ ಸೋಮಯಾಜಿಯ, ಅಳವು–ಶಕ್ತಿ, ಪ್ರಭಾವ, ಇಂತುಟು– ಹೀಗೆ!
೪೪. ವರದಿಗ್ವನಿತೆಗೆ–ಶ್ರೇಷ್ಠಳಾದ ದಿಕ್ಕೆಂಬ ಸ್ತ್ರೀಗೆ, ಮಾಟದ–ಕೃತಕವಾದ, ಕುರುಳ್– ಕೇಶಗಳು; ಆ ತ್ರೈಭುವನ ಕಾಂತೆಗಂ–ಆ ಮೂರು ಲೋಕಗಳೆಂಬ ಸ್ತ್ರೀಗೂ, ಕಂಠಾಭರಣಂ– ಕೊರಳಿನ ತೊಡವು; ಎನೆ–ಎನ್ನಲು, ಪರೆದ–ವ್ಯಾಪಿಸಿದ, ತನ್ನಧ್ವರ ಧೂಮದೆ–ತನ್ನ ಯಾಗದ ಹೊಗೆಯಿಂದ, ನಿಜಯಶಮಂ–ತನ್ನ ಕೀರ್ತಿಯನ್ನು, ಕರಿದು ಮಾಡಿದಂ–ಕರಿದಾಗಿ ಮಾಡಿ ದನು.
ಪಂಪನು (೪೧–೪೩)ನೆಯ ಪದ್ಯಗಳಲ್ಲಿ ಮಾಧವ ಸೋಮಯಾಜಿಯನ್ನು ಬಹುವಾಗಿ ಹೊಗಳಿ ಮೆಚ್ಚಿ ಈ ಪದ್ಯದಲ್ಲಿ ಅವನನ್ನು “ನಿಜಯಶಮಂ ಕರಿದು ಮಾಡಿದಂ” ಎಂದು ಹೇಳುವುದರಲ್ಲಿ ಔಚಿತ್ಯವೇನಿದೆ? ದಿಗಂತ ವ್ಯಾಪಿಯೂ ಮೂರು ಲೋಕಗಳಲ್ಲಿ ಪ್ರಸಾರ ವುಳ್ಳದ್ದೂ ಆಗಿದ್ದ ಅವನ ಕೀರ್ತಿ–ಇಂದು ಬೆಳ್ಳಗೆ ಇರುವುದೆಂದು ಕವಿಸಮಯ–ಅವನು ಮಾಡಿದ ಯಾಗಗಳ ಧೂಮದಿಂದ ಕರಿದಾಯಿತು ಎಂದರೆ ಪ್ರಶಸ್ತಿಯ ಮಾತಲ್ಲ. ಈ ಪದ್ಯ ದಲ್ಲಿ ಏನೋ ಪಾಠದೋಷವಿರಬೇಕೆಂದು ತೋರುತ್ತದೆ. ಈ ಪದ್ಯವನ್ನು ಬರೆಯುವಾಗ ಪಂಪ ಬಾಣಭಟ್ಟನ ಈ ಕೆಳಗಿನ ಪದ್ಯವನ್ನು ಸ್ಮರಣೆಗೆ ತಂದುಕೊಂಡಿರುವನೆಂದು ತೋರು ತ್ತದೆ :
ದಿಶಾಮಲೀಕಾಲಕ ಭಂಗತಾಂ ಗತಃ
ತ್ರಯೀವಧೂ ಕರ್ಣತಮಾಲ ಪಲ್ಲವಃ ।
ಚಕಾರ ಯಸ್ಯಾಧ್ವರ ಧೂಮಸಂಚಯೋ ಮಲೀಮಸಃ
ಶುಕ್ಲತರಂ ನಿಜಂ ಯಶಃ ॥
ಇದು ಬಾಣನ ‘ಕಾದಂಬರಿಯ’ ಪ್ರಾಸ್ತಾವಿಕ ಶ್ಲೋಕಗಳಲ್ಲಿ ೧೮ನೆಯದು. ಇದರಲ್ಲಿ ಬಾಣ ತನ್ನ ತಂದೆಯಾದ ಚಿತ್ರಭಾನುವಿನ ಪ್ರಶಂಸೆಯನ್ನು ಮಾಡಿದ್ದಾನೆ. ಯಾರ ಯಾಗ ಧೂಮ ಸಮೂಹ ದಿಗ್ವನಿತೆಗಳ ಲಲಾಟದಲ್ಲಿ ಕುರುಳುಗಳಾದುವೋ, ವೇದತ್ರಯಗಳೆಂಬ ಕಾಂತೆಯ ಕಿವಿಯಲ್ಲಿರುವ ತಮಾಲಪಲ್ಲವಗಳಾದುವೋ ಆ ಧೂಮವು ಮಲೀಮಸ ವಾಗಿದ್ದರೂ ಅವನ ಕೀರ್ತಿಯನ್ನು ಶುಕ್ಲತರವಾಗಿ ಮಾಡಿದವು–ಇದು ಪದ್ಯದ ಅಭಿಪ್ರಾಯ. ಅವನ ಕೀರ್ತಿ ಮೊದಲೇ ಬೆಳ್ಳಗೆ ಇತ್ತು; ಅದನ್ನು ಯಾಗಧೂಮದ ಹೊಗೆ ತಾನೇ ಕರಿದಾಗಿದ್ದರೂ ಹೆಚ್ಚು ಬೆಳ್ಳಗಾಗಿಸಿತು. ಎಂದರೆ ಅವನ ಕೀರ್ತಿ ದಿಗಂತದವರೆಗೂ ವ್ಯಾಪಿಸಿತು; ಮೂರು ವೇದಗಳಿಗೆ ಕರ್ಣಾಭರಣವಾಯಿತು; ಅತಿಶಯವಾಯಿತು ಎಂದು ಭಾವ. ಈ ಪದ್ಯದಲ್ಲಿರುವ ಅಲೀಕ ಶಬ್ದಕ್ಕೆ ಕೃತಕ, ಲಲಾಟ ಎಂಬೆರಡರ್ಥಗಳಿವೆ. ಪ್ರಕೃತ ಪಂಪನು ‘ಅಲೀಕ’ ವನ್ನು ಕೃತಕಾರ್ಥದಲ್ಲಿ ಸ್ವೀಕರಿಸಿ ‘ಮಾಟದ’ ಎಂದು ಭಾಷಾಂತರಿಸಿದ್ದಾನೆ; ‘ತ್ರಯೀ ವಧೂ’ ವನ್ನು ‘ತ್ರೈಭುವನ ಕಾಂತೆ’ ಯನ್ನಾಗಿ ಮಾಡಿದ್ದಾನೆ; ‘ಕರ್ಣತಮಾಲ ಪಲ್ಲವ’ ವನ್ನು ‘ಕಂಠಾಭರಣ’ ವಾಗಿಸಿದ್ದಾನೆ; “ಮಾಟದ ಕುರುಳ್” ಚೆನ್ನಾಗಿದೆ; “ತ್ರೈಭುವನಕಾಂತೆ” ಆದುದಕ್ಕೆ ಕಾರಣ? ಪಂಪನಿಗೆ ಶ್ರುತಸ್ಕಂಧದಲ್ಲಿ ಇದ್ದಷ್ಟು ನಂಬಿಕೆ ವೇದತ್ರಯದಲ್ಲಿ ಬಹುಶಃ ಇದ್ದಿರಲಾರದೇನೊ? ಆದ್ದರಿಂದ ಅವನು ಬಾಣನ ರೂಪಕವನ್ನು ಮಾರ್ಪಡಿಸಿರ ಬಹುದು. ಕಾಂ [ತೆಗಂ] ದಲ್ ಎಂಬುದಕ್ಕೆ, ಕಂಠಮಾಲಾ, ಕಂಠಮಾ, ಕತಮಾ, ಕಾಂತ ಮಾದಲ್–ಎಂಬ ಪಾಠಾಂತರಗಳಿವೆ; ಇವನ್ನು ನೋಡಿದ ಈ ಎಡೆಯಲ್ಲಿ ಪಂಪನ ಪದ್ಯ ಕೆಟ್ಟಿದೆ ಯೆಂದು ತೋರಿಬರುತ್ತದೆ. “ಶುಕ್ಲತರಂ ಚಕಾರ” ಎಂಬ ಬಾಣನ ಮಾತುಗಳಿಗೆ ಪ್ರತಿ ಯಾಗಿ “ಕರಿದು ಮಾಡಿದಂ” ಎಂದು ಏಕೆ ಬರೆದ ಪಂಪ? ಇದು ಬಹುಶಃ ‘ಕರಮೆ ಮಾಡಿದಂ’ ಎಂದಿರಬಹುದೇನೋ? ಎಂದರೆ ಅತಿಶಯವಾಗುವಂತೆಯೇ ಮಾಡಿದನು ಎಂಬರ್ಥ ಬರುತ್ತದೆ. ಅಂತು ಈ ಪದ್ಯ ಒಂದು ಸಮಸ್ಯೆಯಾಗಿದೆ.
೪೫. ತತ್ತನಯಂ–ಅವನ ಮಗನು, ಅತಿ ಪುರುಷೋತ್ತಮಂ–ಪುರುಷರಲ್ಲಿ ಶ್ರೇಷ್ಠ ನಾದ, ಪೆಸರಿಂ–ಹೆಸರಿನಿಂದ, ಅಭಿಮಾನ ಚಂದ್ರಂ ಎನಿಪಂ–ಅಭಿಮಾನ ಚಂದ್ರ ಎನ್ನು ವವನು, ಎರೆದರ್ಗೆ–ಬೇಡಿದವರಿಗೆ, ಅಖಿಳ–ಎಲ್ಲ, ಕರಿತುರಗೋತ್ತಮ ಮಣಿಕನಕ ಸಾರ ವಸ್ತುವಂ–ಆನೆ ಕುದುರೆ ಶ್ರೇಷ್ಠಗಳು ಹೊನ್ನು ಮುಂತಾದ ಬೆಲೆ ಬಾಳುವ ವಸ್ತುಗಳನ್ನು, ಇತ್ತು–ದಾನ ಮಾಡಿ, ಸಲೆ–ಚೆನ್ನಾಗಿ, ನೆಗೞ್ದಂ–ಪ್ರಸಿದ್ಧನಾದನು.
೪೬. ಭುವನ ಭವನ ಖ್ಯಾತಂಗೆ–ಭೂಲೋಕದಲ್ಲಿ ಪ್ರಸಿದ್ಧನಾದ, ಆತಂಗೆ–ಅವನಿಗೆ, ಸಮಸ್ತ ವೇದವೇದಾಂಗ ಸಮುದ್ಯೋತಿತಮತಿಯುತಂ–ಸಕಲ ವೇದಗಳಿಂದಲೂ, ವೇದಾಂಗ ಗಳಿಂದಲೂ ಬೆಳಗಲ್ಪಟ್ಟ ಬುದ್ಧಿಯವನಾದ, ಉಚಿತ ಪುರಾತನ ಚರಿತಂ–ಉಚಿತವಾದ ಹಳಬರ ನಡವಳಿಕೆಯುಳ್ಳ, ತನೂಭವಂ–ಮಗನು, ಕೊಮರಯ್ಯಂ–ಕುಮಾರಯ್ಯನೆಂಬು ವನು.
೪೭. ಈ ಕೊಮರಯ್ಯಂಗೆ–ಈ ಕೊಮರಯ್ಯನಿಗೆ, ಅವನಿತಳಾಕಾಶ ವ್ಯಾಪ್ತ ಕೀರ್ತಿ– ಭೂತಳದಲ್ಲೂ ಆಕಾಶದಲ್ಲೂ ವ್ಯಾಪಿಸಿದ ಕೀರ್ತಿಯುಳ್ಳ; ನಿಜಗುಣಮಣಿ ರತ್ನಾಕರಂ– ತನ್ನ ಗುಣಗಳೆಂಬ ಮಣಿಗೆ ಸಮುದ್ರವಾಗಿರುವ, ಅಜ್ಞಾನ ತಮೋನಿಕರಂ–ಅಜ್ಞಾನವೆಂಬ ಕತ್ತಲನ್ನು ತೊಲಗಿಸುವ, ಅಭಿರಾಮದೇವರಾಯಂ–ಅಭಿರಾಮದೇವರಾಯನು, ತನಯಂ– ಮಗನು, ಈ ಪದ್ಯದ ಕೊನೆಯ ಪಂಕ್ತಿಯಲ್ಲಿ ‘ನಿಕರಂ ಭೀಮನಾಮದೆಯಂ. ನೀಕಪರಂ ಭೀಮ ನಾಮದೆಯಂ’ ಎಂದು ಎರಡು ಪಾಠಾಂತರಗಳಿವೆ. ಇವು ಪರಿಗ್ರಾಹ್ಯವೇ ಎಂಬುದನ್ನು ನೋಡ ಬೇಕು. ಈಗ ಹೊಸದಾಗಿ ಸಿಕ್ಕಿರುವ ಗಂಗಾಧರದ ಜಿನವಲ್ಲಭನ ಶಾಸನ ಪಾಠ ನಿರ್ಣಯಕ್ಕೆ ಸಹಾಯಕವಾಗಿದೆ. ಜಿನವಲ್ಲಭನು ಪಂಪನ ತಮ್ಮ; ಇವನು ತ್ರಿಭುವನತಿಲಕವೆಂಬ ಬಸದಿ ಯನ್ನೂ ಕವಿತಾಗುಣಾರ್ಣವವೆಂಬ ಕೆರೆಯನ್ನೂ ಮದನವಿಳಾಸವೆಂಬ ಉದ್ಯಾನವನವನ್ನೂ ನಿರ್ಮಾಪಿಸಿದನೆಂದು ಶಾಸನ ಹೇಳುತ್ತದೆ. ಇದರ ಮೊದಲಿನ ಎರಡು ಸಾಲುಗಳಲ್ಲಿ ಜಿನವಲ್ಲಭ ತನ್ನ ವಂಶ ವೃತ್ತಾಂತವನ್ನು ತಿಳಿಸುತ್ತಾನೆ. ಇವನು ನಿಡುಂಗೊಂಡೆಯ ಅಭಿಮಾನ ಚಂದ್ರನ ಮೊಮ್ಮಗನಾದ ಭೀಮಪ್ಪಯ್ಯನ, ಬೆಳ್ವೊಲದ ಅಣ್ಣಿಗೆಱೆಯ ಜೋಯಿಸ ಸಿಂಘನ ಮಮ್ಮಳ್ (ಮೊಮ್ಮಗಳು) ಅಬ್ಬಣಬ್ಬೆಯ, ಮಗನೆಂದು, ತಿಳಿದುಬರುತ್ತದೆ. ಎಂದರೆ ಇವನ ತಂದೆ ಭೀಮಪ್ಪಯ್ಯ ತಾಯಿ ಅಬ್ಬಣಬ್ಬೆ. ಮಾತೃ ಪಿತಾಮಹ ಜೋಯಿಸ ಸಿಂಘ.
ಅಬ್ಬಣಬ್ಬೆಯ ತಾತ ಅಣ್ಣಿಗೆಱೆಯ ಜೋಯಿಸ ಸಿಂಘ, ಅವನ ಮೊಮ್ಮಗಳ ಮಗ ಜಿನವಲ್ಲಭ, ಪಂಪ ಇವನ ಅಣ್ಣಾದುದರಿಂದ ಪಂಪನ ತಾಯಿ ಅಬ್ಬಣಬ್ಬೆಯೇ ಆಗಿರ ಬಹುದು, ಇವರು ಏಕೋದರರಾಗಿದ್ದ ಪಕ್ಷದಲ್ಲಿ. ಈ ಶಾಸನದಿಂದ ಪಂಪನ ತಂದೆಯ ಹೆಸರು ಭೀಮಪ್ಪಯ್ಯನೆಂದು ಖಚಿತವಾಗಿ ತಿಳಿಯುತ್ತದೆ1
ಮೇಲಿರುವ ಎರಡು ಪಾಠಾಂತರಗಳಲ್ಲೂ “ಭೀಮನಾಮದೇಯುಂ” ಎಂದಿದೆ; ಇದು ಭೀಮನಾಮಧೇಯಂ ಎಂದಿರಬೇಕು. ‘ನಿಕರಂ ಭೀಮ ನಾಮಧೇಯಂ’ –ಎಂಬುದು ಛಂದಸ್ಸಿನ ದೃಷ್ಟಿಯಿಂದ ಸರಿಯಾಗಿಲ್ಲ. ‘ನೀಕಪರಂ ಭೀಮ ನಾಮಧೇಯಂ’ ಎಂಬುದೂ ಹಾಗೆಯೆ, ಆದ್ದರಿಂದ ಈಗ ಇರುವಂತೆ ಈ ಪಾಠಾಂತರಗಳು ಗ್ರಾಹ್ಯವಾಗಿಲ್ಲ. ಇದನ್ನು ತಿದ್ದಿ “ತಮೋ ನೀ [ಕಾ] ರಂ ಭೀಮನಾಮಧೇಯಂ ತನಯಂ” ಎಂದು ಸರಿಯಾದ ಪಾಠವನ್ನು ರಚಿಸ ಬಹುದು. ಆಗ ‘ಅಜ್ಞಾನ ತಮೋ ನೀ [ಕಾ] ರಂ’ ಎಂಬುದಕ್ಕೆ ಅಜ್ಞಾನವೆಂಬ ಕತ್ತಲೆಯನ್ನು ಧಿಕ್ಕರಿಸುವವನು ಎಂದರ್ಥವಾಗುತ್ತದೆ.
೪೮. ಜಾತಿಯೊಳೆಲ್ಲಂ–ಎಲ್ಲ ಜಾತಿಗಳಲ್ಲೂ, ಉತ್ತಮದ–ಶ್ರೇಷ್ಠವಾದ, ಜಾತಿಯ, ವಿಪ್ರಕುಲಂಗೆ–ಬ್ರಾಹ್ಮಣ ಕುಲದವನಿಗೆ, ನಂಬಲ್ ಏ ಮಾತೋ–ನಂಬುವುದಕ್ಕೆ ಯಾವ ಮಾತೋ ! ಜಿನೇಂದ್ರ ಧರ್ಮಮೆ–ಜೈನಧರ್ಮವೆ, ವಲಂ–ಅಲ್ಲವೆ, ಧರ್ಮದೊಳ್–ಧರ್ಮ ಗಳಲ್ಲಿ, ದೊರೆ–ಅರ್ಹತೆಯನ್ನುಳ್ಳದ್ದು, ಎಂದು, ನಂಬಿ, ತಜ್ಜಾತಿಯಂ–ಆ ಜೈನಧರ್ಮ ವನ್ನು, ಉತ್ತರೋತ್ತರಮೆ ಮಾಡಿ–ಅತಿಶಯವಾದುದಾಗಿ ಮಾಡಿ, ಆತ್ಮವಿಖ್ಯಾತಿಯಂ–ತನ್ನ ಕೀರ್ತಿಯನ್ನು, ಇಂತಿರೆ–ಹೀಗಿರಲು, ಆತಂ–ಆತನು, ನೆಗೞ್ಚಿದಂ–ಉಂಟುಮಾಡಿದನು; ಆತನ ಮಗಂ–ಅವನ ಮಗನು, ಕವಿತಾಗುಣಾರ್ಣವನೆಂಬ ಬಿರುದಿದ್ದ ಪಂಪನು, ನೆಗೞ್ದಂ– ಪ್ರಸಿದ್ಧವಾದನು.
೪೯. ಪಂಪಂ–ಪಂಪನು, ಧಾತ್ರೀವಳಯನಿಳಂಪಂ–ಭೂಮಂಡಲದ ದೇವತೆ; ಚತು ರಂಗಬಲ ಭಯಂಕರಣಂ–ಚತುರಂಗ ಸೈನ್ಯಗಳಿಗೆ ಭಯೋತ್ಪಾದಕನು; ನಿಷ್ಕಂಪಂ–ನಡುಗ ದವನು, ಧೈರ್ಯಶಾಲಿ, ಲಲಿತಾಲಂಕರಣಂ–ಸುಂದರವಾದ ಅಲಂಕಾರಗಳುಳ್ಳವನು; ಪಂಚ ಶರೈಕರೂಪಂ–ಮನ್ಮಥನಂತೆಯೇ ರೂಪವುಳ್ಳವನು, ಅಪಗತ ಪಾಪಂ–ಪಾಪ ತೊಲಗಿದವನು, ಪುಣ್ಯಶಾಲಿ.
೫೦. ಕವಿತೆ–ಕಾವ್ಯವು, ನೆಗೞ್ತೆಯುಂ–ಖ್ಯಾತಿಯನ್ನು, ನಿಱಿಸೆ–ಸ್ಥಾಪಿಸಲು, ಜೋಳದ ಪಾೞಿ–ಅನ್ನದ ಧರ್ಮ ಎಂದರೆ ಅನ್ನದಾತನಾದ ಸ್ವಾಮಿಗೆ ಕೃತಜ್ಞನಾಗಿರುವುದು; ನಿಜಾಧಿ ನಾಥನ–ತನ್ನ ರಾಜನ, ಆಹವದೊಳ್–ಯುದ್ಧಗಳಲ್ಲಿ, ಅರಾತಿನಾಯಕರ–ಶತ್ರು ಸೇನಾನಿ ಗಳ, ಪಟ್ಟನೆ–ವೀರಪಟ್ಟಗಳನ್ನು, ಪಾಱಿಸೆ–ಹಾರಿಸಲು; ಸಂದ–ಉಂಟಾದ, ಪೆಂಪು–ಹಿರಿಮೆ, ಭೂಭುವನದೊಳ್–ಭೂಲೋಕದಲ್ಲಿ ಆವಗಂ–ಯಾವಾಗಲೂ, ಬೆಳಗೆ–ಪ್ರಕಾಶಿಸಲು; ಮಿಕ್ಕ–ಉಳಿದ, ಅಭಿಮಾನದ ಮಾತುಗಳು, ಕೀರ್ತಿಯಂ–ತನ್ನ ಯಶಸ್ಸನ್ನು, ವಿವರಿಸೆ– ವಿಸ್ತರಿಸಲು, ಕವಿತಾಗುಣಾರ್ಣವಂ–ಪಂಪನು, ಸಂದಂ–ಪ್ರಸಿದ್ಧನಾದನು; ಏಂ ಕಲಿಯೋ ಸತ್ಕವಿಯೋ–ಏನು ಶೂರನೋ ಏನು ಉತ್ತಮ ಕವಿಯೋ! ಪಟ್ಟನೆ ಪಾಱಿಸು– ಪಟ್ಟಂಬಾಱಿಸು; “ಮೀಱಿದ ಪಗೆವರ ಪಟ್ಟಂ ಬಾಱಿಸುವೆನೋ? (ಗದಾ. ೯–೧೭) ಎಂಬ ರನ್ನನ ಪ್ರಯೋಗವನ್ನು ನೋಡಿ! ಪಟ್ಟಮನೆ ಎಂದಿರಬೇಕು; ಆದರೆ ಪಂಪ ಅಕಾರಾಂತ ಪಟ್ಟ ಶಬ್ದವನ್ನು ಉಕಾರಾಂತವಾಗಿ ಮಾಡಿದ್ದಾನೆ.
೫೧. ಆತಂಗೆ–ಆತನಿಗೆ (ಪಂಪನಿಗೆ), ಅರಿಕೇಸರಿ–ಅರಿಕೇಸರಿ ರಾಜ, ಸಂಪ್ರೀತಿಯೆ– ಕಟ್ಟೊಲವಿನಿಂದ, ಬೞಿಯಟ್ಟಿ–ದೂತನೊಡನೆ ಹೇಳಿ ಕಳುಹಿಸಿ, ಪಿರಿದನಿತ್ತು–ತುಂಬ ಧನಕನಕಾದಿಗಳನ್ನು ಕೊಟ್ಟು, ನಿಜಾಭಿಖ್ಯಾತಿಯಂ–ತನ್ನ ಕೀರ್ತಿಯನ್ನು, ಇಳೆಯೊಳ್–ಭೂಮಿ ಯಲ್ಲಿ, ನಿಱಿಸಲ್ಕೆ–ಸ್ಥಾಪಿಸುವುದಕ್ಕಾಗಿ, ಈ ತೆಱದ–ಈ ರೀತಿಯಾದ, ಇತಿಹಾಸ ಕಥೆಯಂ– ಭಾರತದ ಕಥೆಯನ್ನು (ಇತಿಹಾಸದ ಕಥೆಯನ್ನು), ಒಪ್ಪಿಸೆ–(ರಚಿಸಿ) ಒಪ್ಪಿಸುವಂತೆ, ಕುಱಿತಂ– ನಿಶ್ಚಯಿಸಿದನು.
೫೨. ಶ್ರೌತಮಿದು–ಕೇಳಲ್ಪಡತಕ್ಕ ಎಂದರೆ ಶ್ರವ್ಯವಾದ, ಕಾವ್ಯವಿದು, ತನಗೆ, ಗಂಗಾ ಸ್ರೋತದವೊಲ್–ಗಂಗಾ ಪ್ರವಾಹದಂತೆ, ಅಳುಂಬಮಾಗೆ–ಅತಿಶಯತೆಯುಳ್ಳದಾಗಲು, ಗೆಡೆಗೊಳ್ಳದೆ–ಜೊತೆಯನ್ನಪೇಕ್ಷಿಸದೆ ಎಂದರೆ ಅಸಹಾಯನಾಗಿ, ತಾನೊಬ್ಬನೇ, ವಿಖ್ಯಾತ ಕವಿ ವೃಷಭವಂಶೋದ್ಭೂತ ಮೆನಲ್–ಪ್ರಸಿದ್ಧರಾದ ಕವಿಪುಂಗವರ ಪರಂಪರೆಯಲ್ಲಿ ಹುಟ್ಟಿದ್ದು ಎನ್ನುವಂತೆ, ಬರಿಸದೊಳಗೆ–ಒಂದು ವರ್ಷದೊಳಗೆ, ಇದಂ–ಈ ಕಾವ್ಯವನ್ನು, ಸಮೆವಿ ನೆಗಂ–ಮಾಡುವಲ್ಲಿ.
ವಚನ : ಪಾರಾಶರ ವೀಕ್ಷಣಂ–ವೇದವ್ಯಾಸನ ದರ್ಶನ; ವೇಣೀಸಂಹನನಂ–ವೇಣೀ ಸಂಹಾರ ಎಂದರೆ ಮುಡಿಯನ್ನು ಕಟ್ಟುವುದು;
ಈ ವಚನ ಹಲವು ದೃಷ್ಟಿಗಳಿಂದ ಗಮನಾರ್ಹವಾಗಿದೆ. ವಿಸ್ತಾರವಾದ ವ್ಯಾಸಭಾರತವನ್ನು ಸಂಕ್ಷೇಪಗೊಳಿಸಿ ಹೇಳುವಾಗ, ಯಾವುದನ್ನು ವಿಸ್ತರಿಸದೇ ಹೇಳಬೇಕು. ಯಾವುದನ್ನು ಸವಿ ಸ್ತಾರವಾಗಿ ಪ್ರತಿಪಾದಿಸಬೇಕು ಎಂದು ಪಂಪನು ತನ್ನಲ್ಲಿಯೇ ಯೋಚನೆ ಮಾಡಿರುವುದನ್ನು ಇದು ತೋರಿಸುತ್ತದೆ. ಕತೆಯ ಮೇಹ್ಗಿಡಲೀಯದೆ ಸಮಸ್ತ ಭಾರತವನ್ನು ಹೇಳಬೇಕೆಂಬ ಅವನ ಸಂಕಲ್ಪದ ಫಲ ಈ ವಚನ. ಮಹಾಭಾರತದ ಮುಖ್ಯ ಕಥೆಯ ದೃಷ್ಟಿಯಿಂದ ಆದರೆ ವಿನ್ಯಾಸವು ಕೆಡದಂತೆ ಆರಿಸಿಕೊಳ್ಳಬೇಕಾದ ಕಥಾಂಶಗಳನ್ನು ಇಲ್ಲಿ ಹೇಳಿದೆ. ಪ್ರಸಿದ್ಧ ಪಾತ್ರಗಳ ಗುಣಸ್ವಭಾವ ನಿರೂಪಣೆಗೆ ಅವಕಾಶವಿರಬೇಕೆಂಬುದನ್ನು ಅವನು ಮರೆತಿಲ್ಲ. ಕಥೆಯಲ್ಲಿ ರಸಸ್ಥಾನಗಳಾವುವೆಂಬುದನ್ನು ಅವನು ಬಲ್ಲವನಾಗಿದ್ದಾನೆ. “ಪೆಱವುಂ ಉಪಾ ಖ್ಯಾನ ಕಥೆಗಳೊಳೊಂದುಮಂ ಕುಂದಲೀಯದೆ ಪೇೞ್ದೆಂಪ್ಪ್ ಎಂಬ ಅವನ ಮಾತಿನ ಸತ್ಯತೆಯನ್ನು ಈ ಗದ್ಯದಿಂದ ತಿಳಿಯಬಹುದು. ಈ ಸಮಗ್ರ ಕಥಾಂಶಗಳನ್ನು ಕಥಾನಾಯಕನಾದ ಅರ್ಜುನನ ಸುತ್ತ ಅವನ ಪರಿವೇಷದಂತೆ ರಚಿಸಿದ್ದಾನೆ. ಅವನ ಕೌಶಲ್ಯ, ವಿಮರ್ಶ ಶಕ್ತಿ, ರಸಿಕತೆಗಳು ಇಲ್ಲಿ ಗೋಚರವಾಗುತ್ತವೆ.
೫೩. ಆವ ನರೇಂದ್ರರುಂ–ಯಾವ ರಾಜರೂ, ಆರ್ತು–ಸಮರ್ಥರಾಗಿ, ಕೂರ್ತು– ಪ್ರೀತಿಸಿ, ಒಲಿದು, ಎಸೆವ–ಪ್ರಕಾಶಿಸುವ, ಸಮಸ್ತ ಭಾರತಮಂ–ಸಮಗ್ರವಾದ ಭಾರತವನ್ನು, ಪೇೞಿಸರೆ–ಹೇಳಿಸರೆ; ಕವೀಂದ್ರರುಂ–ಕವಿಶ್ರೇಷ್ಠರೂ, ನೆಱೆಯೆ–ಪೂರ್ಣವಾಗಿ, ಪೇೞರೆ– ಹೇಳರೆ; ಪೇೞಿಪೊಡೆ–ಹೇಳಿಸುವ ಪಕ್ಷದಲ್ಲಿ; ನೀನೆ–ನೀನೇ, ಎಯ್ದೆ–ಚೆನ್ನಾಗಿ, ಪೇೞಿಸುವೆ– ಹೇಳಿಸುತ್ತೀಯೆ, ಉದಾತ್ತಕೀರ್ತಿ–ಉನ್ನತವಾದ ಕೀರ್ತಿಯು; ನಿಲೆ–ನಿಲ್ಲುವಂತೆ, ಪೇೞ್ವೊಡೆ– ಹೇಳುವ ಪಕ್ಷದಲ್ಲಿ, ಪಂಪನೆ–ಪಂಪನೇ, ಪೇೞ್ಗುಂ–ಹೇಳುತ್ತಾನೆ, ಇಂತು ಪೇೞಿಸಿದ–ಹೀಗೆ ಕಾವ್ಯವನ್ನು ಹೇಳಿಸಿದ, ನರೇಂದ್ರರುಂ–ರಾಜರೂ, ನೆಱೆಯೆ–ಪೂರ್ಣವಾಗಿ, ಪೇೞ್ದ–ಹೇಳಿದ, ಕವೀಂದ್ರರುಂ–ಕವಿ ಶ್ರೇಷ್ಠರೂ, ಧರಿತ್ರಿಯೊಳ್–ಲೋಕದಲ್ಲಿ, ಆರ್–ಯಾರು?
೫೪. ಸಕಳಾವನೀತಳ ಜನಂ ಎನೆ–ಎಂದು ಸಕಲ ಭೂಮಂಡಲದ ಜನ ಹೇಳಲು; ಗುಣಾರ್ಣವಂ–ಅರಿಕೇಸರಿಯು, ಪಿರಿದುಂದಯೆಗೆಯ್ದು–ಹಿರಿದಾದ ದಯೆಯನ್ನು ತೋರಿಸಿ, ಪಿರಿದಪ್ಪ–ದೊಡ್ಡವಾದ, ಗೌರವದ, ಮೈಮೆಯ–ಮಹಿಮೆಯೆ, ಮನ್ನಣೆಯ–ಸತ್ಕಾರದ, ಓಳಿಗಳ್–ಪರಂಪರೆಗಳನ್ನು, ಮೆಲ್ಲನೆ–ಸದ್ದಿಲ್ಲದೆ, ಮೃದುವಾಗಿ, ಸಾರ್ಚಿ–ಸೇರಿಸಿ ಎಂದರೆ ಕೊಟ್ಟು, ಕರಂ–ವಿಶೇಷವಾಗಿ, ಮನಮಂ–ಮನಸ್ಸನ್ನು, ಅಲರ್ಚೆ–ಅರಳಿಸಲು, ಕೀರ್ತಿ– ಯಶಸ್ಸು, ಜಗದೊಳ್–ಲೋಕದಲ್ಲಿ, ನಿಲೆ–ನಿಲ್ಲುವಂತೆ, ಜಗಕ್ಕೆ–ಲೋಕಕ್ಕಾಗಿ, ನಚ್ಚಿನ– ವಿಶ್ವಾಸದ, ಕವಿತಾಗುಣಾರ್ಣವನಿಂ–ಪಂಪನಿಂದ, ಈ ಕೃತಿಬಂಧನಮಂ–ಈ ಕಾವ್ಯ ಪ್ರಬಂಧ ವನ್ನು, ಪೇೞಿಸಿದಂ–ಹೇಳಿಸಿದನು, ಇಲ್ಲಿ ಓಳಿಗಳ್ ಎಂಬುದು ಪ್ರಥಮಾಂತ; ಅದು ದ್ವಿತೀಯಾರ್ಥದಲ್ಲಿ ಪ್ರಯುಕ್ತವಾಗಿದೆ.
೫೫. ನಿಚ್ಚಲುಂ–ಪ್ರತಿ ದಿನವೂ, ತುಡುಗೆ–ಆಭರಣಗಳೂ, ಪಂಚರತ್ನಂಗಳುಂ–ಐದು ಬಗೆಯಾದ ರತ್ನಗಳೂ, ಪೊಱಮಡೆ–ಹೊರಕ್ಕೆ ಹೋಗಲು, ತನ್ನುಡುವ–ತಾನು ಉಟ್ಟು ಕೊಳ್ಳುವ, ಉಪ್ಪಟಂಗಳ್–ಶ್ರೇಷ್ಠವಾದ ವಸ್ತ್ರಗಳೂ, ಮಡಿಯೊಳಾಗೆಯುಂ–ಮಡಿ ಮಾಡುವುದರಲ್ಲಾಗಲು, ಕಂಡಾಗಳ್–ನೋಡಿದಾಗ, ದರ್ಶನ ಮಾಡಿದಾಗ, ಅೞ್ಕೞಿಂ– ಪ್ರೀತಿಯಿಂದ, ಪಿರಿಯ ಬಿತ್ತರಿಗೆಯಂ–ಶ್ರೇಷ್ಠವಾದ ಪೀಠವನ್ನು, ಕೆಲದೊಳಿಕ್ಕಿ–ಮಗ್ಗುಲಲ್ಲಿ ಹಾಕಿ, ಕೊಡುವ–ಬಹುಮಾನವಾಗಿ ಕೊಡುವ, ಬಾಡಕ್ಕಂ–ಗ್ರಾಮಗಳಿಗೂ, ಜೀವಧನಂಗಳ್ಗಂ–ಹಸುವೇ ಮುಂತಾದ ಪ್ರಾಣಿಗಳಿಗೂ, ಬಿಡುವೆಣ್ಗಂ–ದಾಸಿಯರಿಗೂ, ಲೆಕ್ಕಮಿಲ್ಲೆನಿಸಿ– ಲೆಕ್ಕವಿಲ್ಲವೆನ್ನಿಸಿ, ರಾಗಂಗಿಡದೆ–ಪ್ರೀತಿಯು ಕುಗ್ಗದೆ, ಗುಣಾರ್ಣವಂ–ಅರಿಕೇಸರಿಯು ಕವಿತಾಗುಣಾರ್ಣವನಂ–ಪಂಪನನ್ನು, ಬಲ್ಲಹನಱಿಯೆ–ರಾಷ್ಟ್ರಕೂಟ ಚಕ್ರವರ್ತಿಯಾದ ವಲ್ಲಭರಾಜನು, ಮೂರನೆಯ ಕೃಷ್ಣನು (೯೩೯–೯೬೮) ತಿಳಿಯುವಂತೆ, ಕೊಂಡಾಡಿದಂ– ಸತ್ಕರಿಸಿದನು, (ಸಂ) ವಿಷ್ಟರಿಕಾ ಬಿತ್ತರಿಗೆ; ಪಂಪನ ಸನ್ಮಾನ ಸಮಾರಂಭಕ್ಕೆ ಅರಿಕೇಸರಿ ತನ್ನ ಚಕ್ರವರ್ತಿಯಾಗಿದ್ದ ಮೂರನೆಯ ಕೃಷ್ಣನಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದಂತೆ ತೋರುತ್ತದೆ.
೫೬. ಬೀರದ–ಶೌರ್ಯದ, ಅಳವಿಯ–ಶಕ್ತಿಯ, ನನ್ನಿಯ–ಸತ್ಯದ, ಚಾಗದ–ದಾನದ, ಶಾಸನಂ–ಶಾಸನವು, ಆಚಂದ್ರಾರ್ಕತಾರಂಬರಂ–ಚಂದ್ರಸೂರ್ಯ ನಕ್ಷತ್ರಗಳಿರುವವರೆಗೆ, ಮೇರು ನಿಲ್ವಿನಂ–ಮೇರು ಪರ್ವತ ನಿಲ್ಲುವಂತೆ, ಕಾವ್ಯಕ್ಕೆ–ಕಾವ್ಯಕ್ಕೆ ಪಾರಿತೋಷಿಕವಾಗಿ, ತಾನಿತ್ತ–ತಾನು ಕೊಟ್ಟ, ಶಾಸನದಗ್ರಹಾರಂ–ಶಾಸನಪೂರ್ವಕವಾದ ಅಗ್ರಹಾರವು, ನಿಲವೇೞ್ಕುಂ–ನಿಲ್ಲಬೇಕು, ಶಾಶ್ವತವಾಗಿರಬೇಕು; ಸಾರಮೆಂಬಿನಂ–ಸಾರವತ್ತಾದುದು ಎನ್ನುತ್ತಿರಲು, ಪೆಸರಿಟ್ಟು–ಹೆಸರು ಹೇಳಿ, ತಾನೀಯೆ–ತಾನು ಕೊಡಲು, ಆ ಬಚ್ಚೆಸಾಸಿರ ದೊಳಂ–ಆ ಬಚ್ಚೆ ಸಾವಿರ ಎಂಬ ನಾಡಿನಲ್ಲಿಯೂ, ಬಿಟ್ಟ–ದಾನವಾಗಿ ಕೊಟ್ಟ, ಆ ಧರ್ಮ ಪುರಂ–ಆ ಧರ್ಮಪುರವು, ಹರಿಗನ–ಅರಿಕೇಸರಿಯ, ಧರ್ಮಭಂಡಾರದಂತೆ–ಧರ್ಮದ ಖಜಾನೆಯಂತೆ, ಸಾರಮಾದುದು–ಸಾರವುಳ್ಳದ್ದಾಯಿತು. ಬಚ್ಚೆ ಸಾಸಿರ: ಇದೊಂದು ನಾಡ ಹೆಸರು. ಜಿನವಲ್ಲಭನ ಗಂಗಾಧರದ ಶಾಸನದಲ್ಲಿ “ಸಬ್ಬಿನಾಡ ನಟ್ಟನಡುವಣ ಧರ್ಮಪುರ ದುತ್ತರ ದಿಗ್ಭಾಗದ ವೃಷಭಗಿರಿ” ಎಂಬಲ್ಲಿ ನಾಡಿನ ಹೆಸರು ಸಬ್ಬಿ ಎಂದು ಕಾಣುತ್ತದೆ; ಇದು ಸಬ್ಬಿಸಹಸ್ರ ನಾಡಾಗಿರಬೇಕು. ಬಚ್ಚೆಸಾಸಿರ ಸರಿಯಾದ ಹೆಸರಲ್ಲವೆಂದೂ “ಸಬ್ಬಿ ಸಾಸಿರ” ಎಂಬುದು ಸರಿಯಾದುದೆಂದೂ ಹೇಳಬಹುದಾಗಿದೆ.
೫೭. ದೆಸೆ–ದಿಕ್ಕುಗಳು, ಮಖಧೂಮದಿಂ–ಯಾಗದ ಹೊಗೆಗಳಿಂದಲೂ, ದ್ವಿಜರ ಹೋಮದಿಂ–ಬ್ರಾಹ್ಮಣರ ಹೋಮಗಳಿಂದಲೂ, ಒಳ್ಗೆಱೆ–ಒಳ್ಳೆಯ ಕೆರೆಯು, ಹಂಸಕೋಕ ಸಾರಸಕಳನಾದದಿಂದೆ–ಹಂಸ ಚಕ್ರವಾಕ ಸಾರಸ ಪಕ್ಷಿಗಳ ಮಧುರವಾದ ಧ್ವನಿಗಳಿಂದ, ಒಳಗೆ– ಒಳಗಡೆ (ಊರಿನೊಳಗೆ), ವೇದನಿನಾದದಿಂ–ವೇದಘೋಷದಿಂದ, ಎತ್ತಂ–ಎಲ್ಲೆಲ್ಲೂ, ಎಯ್ದೆ–ಚೆನ್ನಾಗಿ; ಶೋಭಿಸೆ–ಸುಂದರವಾಗಿರಲು, ಸುರಮಥ್ಯ ಮಾನ ವನಧಿಕ್ಷುಭಿತಾರ್ಣದ– ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಕದಡಲ್ಪಟ್ಟ ನೀರಿನ, ಘೋಷದಂತೆ–ಅಬ್ಬರದ ಹಾಗೆ, ಗುಣಾರ್ಣವನ–ಈ ಅರಿಕೇಸರಿಯ, ಧರ್ಮದ–ಧರ್ಮವಾಗಿ ಕೊಟ್ಟ, ಮನೋಹರಂ– ರಮಣೀಯವಾದ, ಧರ್ಮಪುರಂ–ಧರ್ಮಪುರವು, ಘೂರ್ಣಿಸುತಿರಲಿ–ಶಬ್ದಾಯಮಾನ ವಾಗಿರಲಿ, ಘೋಷಿಸುತ್ತಿರಲಿ.
೫೮. ರಾಜದ್ರಾಜಕ ಮೆನಿಸಿದ : ರಾಜತ್–ಪ್ರಕಾಶಮಾನವಾದ, ರಾಜಕಂ–ರಾಜನುಳ್ಳದ್ದು ಎಂದೆನಿಸಿದ, ಪುಲಿಗೆಱೆಯ–ಪುಲಿಗೆರೆಯ, ಸಾಜದ–ಸಹಜವಾದ, ತಿರುಳ ಕನ್ನಡದೊಳ್– ತಿರುಳಾದ ಕನ್ನಡದಲ್ಲಿ, ನಿರ್ವ್ಯಾಜದ–ವ್ಯಾಜವಿಲ್ಲದ ಎಂದರೆ ಪ್ರಾಮಾಣಿಕತೆಯಿಂದ ಕೂಡಿದ, ಸಾಚಾ ಆದ, ಎಸಕದೊಳೆ–(ಕಾವ್ಯ) ಕರ್ಮದಲ್ಲೇ, ಪುದಿದ–ಸೇರಿದ, ಒಂದು, ಓಜೆಯ– ಕ್ರಮದ, ಬಲದ–ಶಕ್ತಿಯನ್ನುಳ್ಳ, ಕವಿತೆ–ಕವಿತೆಯು, ಪಂಪನ ಕವಿತೇ–ಪಂಪನ ಕಾವ್ಯವಾಗಿದೆ.
೫೯. ಈ ಪದ್ಯದ ಪೂರ್ವಾರ್ಧದ ಅರ್ಥವಿಶದವಾಗಿಲ್ಲ; ಪುದಿದ ಜಸಂ–ಸೇರಿಕೊಂಡು ಇರುವ ಕೀರ್ತಿ, ಪೊದಳ್ದ–ವ್ಯಾಪಿಸಿರುವ, ಚಳಂ–ಕಾಂತಿಯು (?); ಒಂದಿದ ಕೂಡಿದ, ಅಳಂಕೃತಿ–ಅಲಂಕಾರಗಳು, ಕೈತ=ಕೆಯ್ತ–ಮಾಟ, ರಚನೆ, ದೇಸಿ–ದೇಸಿಶೈಲಿ, ಚೆಲ್ವು; ಎಂಬುದನ್–ಎಂಬುದನ್ನು, ಎನೆ–ಹೇಳಲು, ವಸ್ತುವಿದ್ಯೆಯೆನೆ–ಶಿಲ್ಪವಿದ್ಯೆಯೆನಲು(?), ಕಬ್ಬಮೆ–ಕಾವ್ಯವೇ; ಮುನ್ನಂ–ಮೊದಲು, ಹಿಂದೆ; ಅವು ಅಂತು ಇವು ಅಲ್ಲದ–ಎಂದರೆ ಆ ಕಾವ್ಯ ಈ ಕಾವ್ಯ ಎಂದಲ್ಲದೆ, ಕಬ್ಬಂ–ಕಾವ್ಯಗಳು, ಅಲ್ಲದೆ, ಪೆಱವಿಲ್ಲ–ಬೇರೆ ಇಲ್ಲ. ಇತರ ಕಾವ್ಯಗಳಲ್ಲಿ; ಎನೆ–ಎನ್ನಲು, ಸಮಸ್ತ ಭಾರತಮುಂ–ಸಮಗ್ರ ಭಾರತವೂ, ಆದಿಪುರಾಣ ಮಹಾಪ್ರಬಂಧಮುಂ–ಆದಿಪುರಾಣವೆಂಬ ಮಹಾಕಾವ್ಯವೂ! ಮುನ್ನಿನ ಕಬ್ಬಮನೆಲ್ಲಂ– ಪೂರ್ವಕಾವ್ಯಗಳನ್ನೆಲ್ಲಾ, ಇಕ್ಕಿ ಮೆಟ್ಟಿದುವು–ಬೀಳಿಸಿ ತುಳಿದವು. ಈ ಪದ್ಯಕ್ಕೆ ಮುಳಿಯ ತಿಮ್ಮಪ್ಪಯ್ಯನವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ (ನಾಡೋಜ ಪಂಪ: ೧೪೮– ೧೫೧).
೬೦. ಇಲ್ಲಿ–ಈ ಕಾವ್ಯದಲ್ಲಿ (ವಿಕ್ರಮಾರ್ಜುನ ವಿಜಯದಲ್ಲಿ), ಲೌಕಿಕಮಂ–ಲೋಕ ವ್ಯವಹಾರವನ್ನು, ಸಮಸ್ತ ಭೂತಳಂ–ಸಕಲ ಲೋಕಕ್ಕೆ, ಬೆಳಗುವೆಂ–ಪ್ರಕಾಶಪಡಿಸುತ್ತೇನೆ; ಅಲ್ಲಿ–ಆ ಕಾವ್ಯದಲ್ಲಿ (ಆದಿಪುರಾಣದಲ್ಲಿ), ಜಿನಾಗಮಮಂ–ಜೈನಶಾಸ್ತ್ರಗಳನ್ನು, ಬೆಳಗು ವೆಂ; ಸಮಸ್ತ ಭಾರತಮುಂ, ಆದಿಪುರಾಣಮುಮೆಂದು–ಸಮಸ್ತ ಭಾರತವೂ ಆದಿ ಪುರಾಣವೂ ಎಂಬುದಾಗಿ, ಮೆಯ್–ದೇಹವು, ಅಥವಾ ಕಥಾವಸ್ತುಗಳು, ಅಸುಂಗೊಳು ತಿರೆ–ಸಚೇತನವಾಗುತ್ತಿರಲು, ಪೂಣ್ದು–ಪ್ರತಿಜ್ಞೆ ಮಾಡಿ, ಪೂಣ್ದತೆಱದೆ–ಪ್ರತಿಜ್ಞೆ ಮಾಡಿದ ರೀತಿಯಿಂದ, ಒಂದು ಕಾವ್ಯ, ಅಱುದಿಂಗಳೊಳ್–ಆರು ತಿಂಗಳುಗಳಲ್ಲಿಯೂ, ಒಂದು– ಒಂದು ಕಾವ್ಯ, ಮೂಱು ತಿಂಗಳೊಳೆ–ಮೂರು ತಿಂಗಳುಗಳಲ್ಲಿಯೇ, ಸಮಾಪ್ತಿಯಾದುದು– ಮುಕ್ತಾಯವಾಯಿತು, ಎನೆ–ಎನ್ನಲು, ಕವಿತಾಗುಣಾರ್ಣವಂ–ಪಂಪನು, ಬಣ್ಣಿಸಿದಂ– ವರ್ಣಿಸಿದನು. ಈ ಪದ್ಯವನ್ನು ಯಥಾಕ್ರಮದ ದೃಷ್ಟಿಯಿಂದ ನೋಡಿದರೆ ಸಮಸ್ತ ಭಾರತ ವನ್ನು ಆರು ತಿಂಗಳುಗಳಲ್ಲೂ, ಆದಿಪುರಾಣವನ್ನು ಮೂರು ತಿಂಗಳಲ್ಲೂ ಪಂಪನು ರಚಿಸಿ ಮುಗಿಸಿರಬೇಕೆಂದು ತೋರುತ್ತದೆ.
೬೧. ಕ್ಷಿತಿಗೆ–ಲೋಕಕ್ಕೆ, ಸಮಸ್ತ ಭಾರತಮುಂ–ಸಮಗ್ರ ಭಾರತವೂ, ಆದಿಪುರಾಣ ಮುಂ–ಆದಿಪುರಾಣವೂ, ಈಗಳ್–ಈಗ, ಒಂದು ಅಳಂಕೃತಿಯವೊಲ್–ಒಂದು ಅಲಂಕಾರ ದಂತೆ, ಇರ್ದುವು–ಇವೆ; ಏಕೆ–ಏಕೆಂದು, ಅಱಿಯ–ತಿಳಿದುಕೋ, ಕವಿತಾಗುಣಕ್ಕೆ–ಕಾವ್ಯದ ಗುಣಕ್ಕೆ, ಮೇಲ್ಮೆಗೆ, ಪೋದವರೊಳ್ ಆದವರೊಳ್–ಹಿಂದೆ ಹುಟ್ಟಿದವರಲ್ಲಿ ಇಂದು ಆಗಿರುವ ಕವಿಗಳಲ್ಲಿ, ಸರಸ್ವತೀಮತಿ–ಸರಸ್ವತಿಯ ಮತಿಯುಳ್ಳವನು, ಬುದ್ಧಿಯುಳ್ಳವನು, ಪಂಪನು; ಸರಸ್ವತಿಗೆ–ಸರಸ್ವತಿಗೂ, ಪೊಸತು–ಹೊಸದಾದ, ವಾಗ್ವಿಳಾಸಮಂ–ವಾಕ್ಕಿನ ಸೌಂದರ್ಯವನ್ನು, ಮಾಡುವ–ಉಂಟುಮಾಡುವ, ಪಂಪನ ವಾಗ್ವಿಳಾಸಮಂ–ಪಂಪನ ಮಾತಿನ ಚೆಲುವನ್ನು, ಎಯ್ದೆವರಲ್ಕೆ–ಮುಟ್ಟುವಂತೆ ಬರುವುದಕ್ಕೆ, ಸಮೀಪಿಸುವುದಕ್ಕೆ, ಕವೀಂದ್ರರ್ ಆರ್–ಕವಿಶ್ರೇಷ್ಠರು ಯಾರಿದ್ದಾರೆ? ಅರ್ಥ ಅಸ್ಪಷ್ಟ.
೬೨. ವ್ಯಾಸಮುನಿ ಪ್ರಣೂತಕೃತಿಯಂ–ವ್ಯಾಸಮುನಿಗಳ ಪ್ರಸಿದ್ಧವಾದ (ಹೊಗಳಲ್ಪಟ್ಟ) ಕಾವ್ಯವನ್ನು (ಮಹಾಭಾರತವನ್ನು), ಸಲೆ–ಚೆನ್ನಾಗಿ, ಪೇೞ್ದು–ಹೇಳಿ, ಪೊದಳ್ದ–ವ್ಯಾಪಿಸಿದ, ಸತ್ಕವಿ–ಸತ್ಕವಿಗಳ, ವ್ಯಾಸ–ವಿವರಣೆಯಿಂದಲೂ, ಸಮಾಗಮ–ಸಹವಾಸದಿಂದಲೂ, ಅನ್ವಿತಮಂ–ಕೂಡಿದ, ಆದಿಪುರಾಣಮಂ–ಆದಿಪುರಾಣವನ್ನು, ಎಯ್ದೆ–ಚೆನ್ನಾಗಿ, ಪೇೞ್ದು– ಹೇಳಿ, ವಾಕ್ಶ್ರೀಸುಭಗಂ–ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ, ಪುರಾಣ ಕವಿಯುಂ– ಪುರಾಣವನ್ನು ಹೇಳಿದ ಕವಿಯೂ, ಧರೆಗೆ–ಲೋಕಕ್ಕೆ, ಉಣ್ಮಿ–ತಲೆದೋರಿ, ಪೊಣ್ಮುವ– ಹೊಮ್ಮುವ, ಈ ದೇಸಿಗಳ್–ಈ ಚೆಲ್ವುಗಳು, ಆಗಿರೆ–ಉಂಟಾಗಿರಲು, ಕವಿತಾಗುಣಾರ್ಣ ವಂ–ಪಂಪನು, ಉಂತೆ–ಸುಮ್ಮನೇ, ನಾಡೊವಜಂ–ನಾಡಿನ ಉಪಾಧ್ಯಾಯನು, ಆದನೆ– ಆದನೇ? ಇಲ್ಲಿ ‘ಧರೆಗಾಗಿರೆ’ ಎಂಬುದಕ್ಕೆ ಬದಲಾಗಿ ‘ತನಗಾಗಿರೆ’ ಎಂದು ಮುಳಿಯ ತಿಮ್ಮಪ್ಪ ಯ್ಯನವರು ಪಾಠವನ್ನಿಟ್ಟುಕೊಂಡಿದ್ದಾರೆ (ನಾ. ಪಂ. ೧೪೪); ಇದಕ್ಕೆ ಆಧಾರ?
೬೩. ಎಲ್ಲಂ ಓದಿದರ್ಗೆ–ಕಾವ್ಯವನ್ನೆಲ್ಲ ಓದಿದವರಿಗೆ, ರಾಗಂ–ಸಂತೋಷವು, ಪುದಿದಿರೆ– ತುಂಬಿರಲು, ಇದಱ–ಈ ಕಾವ್ಯದ, ಅನುಯಾಯಿಗಳ್ಗೆ ಅನುಸರಿಸುವವರಿಗೆ, ಎಂದರೆ ಈ ಕಾವ್ಯದಲ್ಲಿ ಹೇಳಿರುವುದನ್ನು ಅನುಷ್ಠಾನ ಮಾಡುವವರಿಗೆ, ಪೊಸವೇಟದ–ಹೊಸ ಪ್ರಣಯದ, ಅಲಂಪುಗಳ್–ಸಂತೋಷಗಳು, ಉರ್ಕೆ–ಉಕ್ಕಲು, ಔದಾರ್ಯವು, ಸಕಳಾವನೀಶ್ವರರ್ಗೆ– ಎಲ್ಲಾ ರಾಜರಿಗೂ, ಎಸೆವ–ಪ್ರಕಾಶಿಸುವ, ಉದಾರಗುಣಂ, ಭೃತ್ಯನಿವಹಕ್ಕೆ–ಸೇವಕರ ಗುಂಪಿಗೆ; ಅದಟಿನ–ಪ್ರತಾಪದ, ಅಳುರ್ಕೆ–ಆಧಿಕ್ಯವು; ಗಣಿಕಾಜನಕ್ಕೆ–ವೇಶ್ಯೆಯರಿಗೆ, ಚದುರ್– ಕೌಶಲವು, ಮದೀಯ ಕೃತಿ ಪ್ರಬಂಧದಿಂ–ನನ್ನ ಕಾವ್ಯ ರಚನೆಯಿಂದ, ಮಹೀತಳಕ್ಕೆ–ಲೋಕ ದಲ್ಲಿ, ಕುಂದದೆ–ಕಡಿಮೆಯಾಗದೆ, ನೆಲಸಿರ್ಕೆ–ಶಾಶ್ವತವಾಗಿ ಇರಲಿ.
೬೪. ಚಲದೊಳ್–ಹಠದಲ್ಲಿ, ದುರ್ಯೋಧನಂ–ದುರ್ಯೋಧನನು; ನನ್ನಿಯೊಳ್– ಸತ್ಯದಲ್ಲಿ, ಇನತನಯಂ–ಕರ್ಣನು; ಗಂಡಿನೊಳ್–ಪೌರುಷದಲ್ಲಿ, ಭೀಮಸೇನಂ–ಭೀಮನು, ಬಲದೊಳ್–ಶಕ್ತಿಯಲ್ಲಿ, ಮದ್ರೇಶಂ–ಶಲ್ಯರಾಜನು; ಅತ್ಯುನ್ನತಿಯೊಳ್–ಅತ್ಯುನ್ನತ ತನದಲ್ಲಿ, ಸಿಂಧೂದ್ಭವಂ–ಭೀಷ್ಮನು, ಚಾಪವಿದ್ಯಾಬಲದೊಳ್–ಧನುರ್ವಿದ್ಯೆಯ ಶಕ್ತಿಯಲ್ಲಿ, ಕುಂಭೋದ್ಭವಂ–ದ್ರೋಣನು; ಸಾಹಸದ ಮಹಿಮೆಯೊಳ್–ಪರಾಕ್ರಮದ ಹಿರಿಮೆಯಲ್ಲಿ, ಫಲ್ಗುಣಂ–ಅರ್ಜುನನು; ಧರ್ಮದೊಳ್–ಧರ್ಮದಲ್ಲಿ, ನಿರ್ಮಳಚಿತ್ತಂ–ಶುಭ್ರಮನಸ್ಕ ನಾದ, ಧರ್ಮಪುತ್ರಂ–ಧರ್ಮರಾಜನು, ಮಿಗಿಲ್–ಅಧಿಕರಾದವರು; ಇವರ್ಗಳಿಂ–ಇವರು ಗಳಿಂದ, ಈ ಭಾರತಂ–ಈ ಮಹಾಭಾರತವು, ಲೋಕಪೂಜ್ಯಂ–ಲೋಕದಿಂದ ಪೂಜ್ಯವಾ ದುದು.
೬೫. ಸಮಸ್ತ ಭಾರತ ಕಥಾಸಂಬಂಧಮಂ–ಸಮಗ್ರ ಭಾರತದ ಕಥಾ ಪ್ರಬಂಧವನ್ನು, ಕರಂ–ವಿಶೇಷವಾಗಿ, ಅೞ್ಕರ್ತು–ಪ್ರೀತಿಸಿ, ಬಾಜಿಸಲ್–ವಾಚಿಸುವುದಕ್ಕೆ ಎಂದರೆ ಪಠಿಸು ವುದಕ್ಕೆ, ಬರೆಯಲ್–ಬರೆಯುವುದಕ್ಕೆ, ಕೇಳಲ್–ಕೇಳುವುದಕ್ಕೆ, ಒಡರ್ಚುವಂಗೆ– ತೊಡಗಿದವನಿಗೆ, ತನ್ನಿಷ್ಟಂ–ತನ್ನ ಇಷ್ಟಾರ್ಥವು, ಅಪ್ಪನ್ನಂ–ಆಗುತ್ತಿರಲು, ಧೃತಿ–ಧೈರ್ಯವು, ತುಷ್ಟಿ–ತೃಪ್ತಿ, ಪುಷ್ಟಿ–ಬಲ, ವಿಭವಂ–ವೈಭವ, ಸೌಭಾಗ್ಯಂ–ಐಶ್ವರ್ಯ, ಇಷ್ಟಾಂಗನಾಸು ರತಂ–ಮೆಚ್ಚಿಗೆಯ ಸ್ತ್ರೀಯ ಸಂಭೋಗ, ಶಾಂತಿ–ಶಾಂತಿಯು, ಅಗುಂತಿ–ಏಳಿಗೆ, ವೃದ್ಧಿ, ವಿಭವಂ–ವಿಭುತ್ವ, ಭದ್ರಂ, ಶುಭಂ–ಶುಭವು, ಮಂಗಳಂ, ಉತ್ತರಂ–ಅತಿಶಯವಾಗಿ, ಅಕ್ಕುಂ ಆಗುತ್ತವೆ.
ಚತುರ್ದಶಾಶ್ವಾಸಂ ಸಂಪೂರ್ಣಂ
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ
ಪ್ರಸನ್ನ ಗಂಭೀರ ವಚನರಚನ ಚತುರ ಕವಿತಾ ಗುಣಾರ್ಣವ
ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಚತುರ್ದಶಾಶ್ವಾಸಂ
ಶ್ರೀಮತ್ಕರಿಗಿರಿವಾಸ ಪ್ರಹ್ಲಾದ ಪರಿಪಾಲಕ
ಶ್ರೀಲಕ್ಷ್ಮೀನೃಸಿಂಹ ಸ್ವಾಮಿಚರಣದಾಸನಪ್ಪ
ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯನಿಂ ರಚಿತವಾದ
ಪಂಪಭಾರತ ದೀಪಿಕೆಯೆಂಬ ಟೀಕೆಯೊಳ್
ಚತುರ್ದಶಾಶ್ವಾಸಂ ಸಂಪೂರ್ಣಂ
ಶಾಲಿವಾಹನಶಕ ೧೮೯೧ನೆಯ ಕೀಲಕ ಸಂವತ್ಸರ ಆಷಾಢಕೃಷ್ಣ ಭಾನುವಾರದಂದು (೧೪–೭–೧೯೬೮) ಆರಂಭವಾಗಿ ಅದೇ ಸಂವತ್ಸರದ ಮಾಘಶುಕ್ಲ ಶುಕ್ರವಾರದಂದು (೩೧–೧–೧೯೬೯) ಈ ವ್ಯಾಖ್ಯಾನಂ ಸಂಪೂರ್ಣಮಾಯ್ತು.
Footnotes
ಈ ಶಾಸನದ ಪಾಠದ ವಿಷಯದಲ್ಲಿ ಸ್ವಲ್ಪ ಚರ್ಚೆ ನಡೆದಿದೆ. ಜೋಯಿಸಸಿಂಘನ ‘ಮರ್ಮ್ಮಂ’ ಜಿನವಲ್ಲಭನೆಂದು ಒಂದು ಅಭಿಪ್ರಾಯ. ಜೋಯಿಸಸಿಂಘನ ‘ಮರ್ಮ್ಮಳ್’ ಅಬ್ಬಣಬ್ಬೆಯೆಂದೂ ಅವಳ ಮಗ ಜಿನವಲ್ಲಭನೆಂದೂ ಇನ್ನೊಂದು ಅಭಿಪ್ರಾಯ. ಇಲ್ಲಿ ‘ಮರ್ಮ್ಮಳ್’ ಎಂಬ ಪಾಠವೇ ಸರಿಯೆಂದು ಡಾ ॥ ಗೋವಿಂದರಾವ್ ಗಾಯಿ ಅವರು ಸ್ಥಾಪಿಸಿದ್ದಾರೆ. ‘ಮರ್ಮ್ಮಳ್’ ಶಬ್ದಕ್ಕೆ ಎರಡು ಪ್ರಯೋಗಗಳಿವೆ: (1) ಶಕ ೯೩೩ರ ವಿಕ್ರಮಾದಿತ್ಯನ VI ಆಲೂರು ಶಾಸನ, ಪಂಕ್ತಿ ೧ (Epigraphia Indica XVI), (2) ಸಿಂಗವೆಗ್ಗಡೆಯ ಮಂಮಳ್ನಾಗವೆ ನಾಯ್ಕಿತಿಯ ಮಗ ಕಲಿಯಮ್ಮ (Epigraphia Carnatica VIII, ಸಾಗರ, ೮೩; ೧೧೬೩ AD).