ತ್ರಯೋದಶಾಶ್ವಾಸಂ
೧. ಶ್ರೀದಯಿತನ–ಶ್ರೀಗೆ ವಲ್ಲಭನಾದ, ಹರಿಗನ–ಅರ್ಜುನನ, ಸಂಪಾದಿತ ಭುಜವೀರ್ ಯಂ–ಗಳಿಸಿದ ಭುಜಪರಾಕ್ರಮ, ತನಗೆ, ಎರ್ದೆಯೊಳ್–ಎದೆಯಲ್ಲಿ, ಅೞ್ಕಱಂ ಚೋದಿಸೆ– ಪ್ರೀತಿಯನ್ನುಂಟುಮಾಡಲು, ಅಂತಕ ತನಯಂ–ಧರ್ಮಪುತ್ರನು, ಆಗಳ್–ಆಗ, ಆಶೀರ್ವಾದ ಪರಂಪರೆಯಿಂ–ಹರಕೆಗಳ ಸಾಲುಗಳಿಂದ, ಪರಸಿದಂ–ಆಶೀರ್ವಾದ ಮಾಡಿದನು.
೨. ಪರಸಿ–ಹರಸಿ, ಹರಿಗನಿಂದ–ಅರ್ಜುನನಿಂದ, ಇನಸುತಂ–ಕರ್ಣ, ಅೞಿಯೆ– ಸಾಯಲು, ಸಕಳಾವನೀತಳಭರಂ–ಸಮಸ್ತ ಭೂಮಂಡಲದ ಭಾರ, ಎನಗೆ–ನನಗೆ, ಈಗಳ್– ಈಗ, ದೊರೆಕೊಂಡುದು–ಉಂಟಾಯಿತು, ಎಂದೊಡೆ–ಎಂದರೆ, ರಿಪುಕುರಂಗ ಕಂಠೀರ ವನಂ–ಅರ್ಜುನನನ್ನು, ಏಂ ಬಿತ್ತರಿಸಿದನೋ–ಏನು ವಿಸ್ತರಿಸಿದನೋ, ಎಂದರೆ ದೊಡ್ಡದು ಮಾಡಿದನೋ, ಹೊಗಳಿದನೋ.
ವಚನ : ಅತಿ ಸಂಭ್ರಮಾಕುಳಿತ–ಅತ್ಯಂತ ಸಡಗರದಿಂದ ವ್ಯಾಕುಲಿತರಾದ; ಪರೀತ– ಬಳಸಿದ; ಉಪನೀತ–ತರಲ್ಪಟ್ಟ; ಪರಿಷೇಕದಿಂದೆ–ತಳಿಯುವುದರಿಂದ; ಕರೆಗಣ್ಮೆ–ಉಕ್ಕಲು;
೩. ದುರ್ಯೋಧನನ ವಿಲಾಪ: ನೀನುಂ–ನೀನು ಕೂಡ, ಅಗಲ್ದೆ–ಅಗಲಿ ಹೋದೆ; ಇಂ– ಇನ್ನು, ಎನಗೆ–ನನಗೆ, ಪೇೞ್–ಹೇಳು; ಪೆಱರ್ ಆರ್ ಎನಗೆ ಆಸೆ–ಬೇರೆ ಯಾರು ನನಗೆ ಆಸೆಯಾಗಿರುವವರು? ನಿನ್ನಂ–ನಿನ್ನನ್ನು, ಇಂ–ಇನ್ನು, ಆನುಂ–ನಾನು ಕೂಡ, ಅಗಲ್ವೆನೇ– ಅಗಲಿರುವೆನೇ, ಕೆಳೆಯ–ಸ್ನೇಹಿತನೇ? ಆಂತರಂ–ಎದುರಿಸಿದವರನ್ನು, ಯಮಸ್ಥಾನ ಮನೆಯ್ದಿಸುತ್ತೆ–ಯಮನ ಎಡೆಗೆ ಸೇರಿಸುತ್ತ, ಬೆನ್ನನೆ–ಹಿಂಡುಗಡೆಯೇ, ಬಂದಪೆನ್–ಬರುತ್ತೇನೆ; ಇದುವೆ–ಇದೇ, ದಂದುಗಂ–ದುಃಖ, ಇಂತು–ಹೀಗೆ, ಎರ್ದೆಮುಟ್ಟಿ–ಎದೆಸೋಕಿ, ಕೂರ್ತು– ಪ್ರೀತಿಸಿ, ಅಂಗವಿಷಯಾಧಿಪ–ಕರ್ಣನೇ, ನೀಂ–ನೀನು, ಪೊಱಗಾಗೆ–ಹೊರಗಾಗಲು ಎಂದರೆ ನನ್ನಿಂದ ಅಗಲಿ ಹೋಗಲು, ಮಾನಸವಾೞಂ–ಮನುಷ್ಯನ ಬದುಕನ್ನು, ಬಾೞ್ವೆನೇ–ಬಾಳು ತ್ತೇನೆಯೇ, ಪೇೞ್–ಹೇಳು.
೪. ಇವಗೆ–ಈ ಕರ್ಣ ದುರ್ಯೋಧನರಿಗೆ, ಒಡಲ್ ಎರಡು–ದೇಹಗಳು ಎರಡು, ಒಂದೇ ಜೀವಂ–ಒಂದೇ ಪ್ರಾಣ, ಎಂಬುದಂ–ಎಂಬುದನ್ನು, ಲೋಕಂ–ಜನ, ಎಂಬುದು– ಹೇಳುತ್ತದೆ; ಈಗಳ್–ಈಗ, ಆ ನುಡಿ–ಆ ಮಾತು, ಪುಸಿಯಾಯ್ತು–ಸುಳ್ಳಾಯಿತು; ನಿನ್ನಸು– ನಿನ್ನ ಪ್ರಾಣ, ಕಿರೀಟಿಯ–ಅರ್ಜುನನ, ಶಾತಶರಂಗಳಿಂದೆ–ಹರಿತವಾದ ಬಾಣಗಳಿಂದ, ಪೋಪೊಡಂ–ಹೋದರೂ, ಈ ನಾಣಿಲಿ ಜೀವಂ–ಈ ನನ್ನ ಲಜ್ಜೆಗೆಟ್ಟ ಜೀವವು, ಇನ್ನುಂ– ಇನ್ನು ಕೂಡ, ಈ ಒಡಲೊಳ್–ಈ ಮೈಯಲ್ಲಿ, ಇರ್ದುದು–ಇದೆ, ಎಂದೊಡೆ–ಎಂದರೆ, ಅಂಗವಲ್ಲಭಾ–ಕರ್ಣನೇ, ನಿನ್ನೊಳ್–ನಿನ್ನಲ್ಲಿ, ಎನ್ನ–ನನ್ನ, ಕಡುಗೂರ್ಮೆಯುಂ– ಅತಿಶಯವಾದ ಪ್ರೀತಿಯೂ, ಅೞ್ಕಱುಂ–ಸ್ನೇಹವೂ, ಆವೆಡೆಯೊಳೆ–ಯಾವ ಎಡೆಯಲ್ಲಿಯೋ, ಎಲ್ಲಿಯೋ?
೫. ಧರ್ಮತನಯಂ–ಧರ್ಮಪುತ್ರನು, ಸೋದರನೆಂದು–(ನೀನು) ಸಹೋದರನೆಂದು, ಅಱಿಯಂ–ತಿಳಿಯನು; ನಿರ್ವ್ಯಾಜದಿಂ–ಯಾವ ನೆಪವೂ ಇಲ್ಲದೆ ಎಂದರೆ ತಾನಾಗಿಯೇ, ನಿನ್ನಂ–ನಿನ್ನನ್ನು, ಆಂ–ನಾನು, ಅಱಿವೆಂ–ತಿಳಿದಿದ್ದೇನೆ, ಎಂದರೆ ನೀನು ಯಾರೆಂಬುದನ್ನು ನಾನು ಬಲ್ಲೆ; ಮುನ್ನಱಿದಿರ್ದುಂ–ಮೊದಲೇ ತಿಳಿದಿದ್ದೂ, ಎನ್ನ–ನನ್ನ, ಅರಸಂ–ಪ್ರಭುತ್ವ ವನ್ನು (ರಾಜತ್ವವನ್ನು), ಅನೇಕೆ ಇತ್ತೆನಿಲ್ಲ–ನಾನು ಏಕೆ ಕೊಟ್ಟವನಾಗಲಿಲ್ಲ? ಪೇೞ್– ಹೇಳು, ಅಱಿಪಲ್ಕೆ–(ನಿನಗೆ) ತಿಳಿಸುವುದಕ್ಕೂ, ಒಲ್ದೆನುಮಿಲ್ಲ–ಇಷ್ಟಪಡಲೂ ಇಲ್ಲ? ಕಾರ್ಯವಶದಿಂ–ಸ್ವಕಾರ್ಯ ಸಾಧನೆಗೆ ವಶವಾಗಿ, ಕೂರ್ಪಂತೆವೋಲ್–ಪ್ರೀತಿಸುವಂತೆ, ಅಂಗನೃಪತೀ–ಕರ್ಣನೇ, ಮುಳಿಸಿಂದಂ–ಕೋಪದಿಂದ (ಪಾಂಡವರ ಮೇಲಿದ್ದ), ನಿನ್ನಂ– ನಿನ್ನನ್ನು, ಆಂ–ನಾನು, ನೆಱೆಕೊಂದೆಂ–ಪೂರ್ಣವಾಗಿ ಕೊಂದೆನು, ಕೌಂತೇಯರ್–ಪಾಂಡವರು, ಏಂ ಕೊಂದರೇ–ಏನು ಕೊಂದರೇ?
೬. ಉದಧಿತರಂಗತಾಟಿತ ಧರಾತಳಮಂ–ಕಡಲ ಅಲೆಗಳ ಹೊಡೆತವುಳ್ಳ ಭೂಪ್ರದೇಶ ವನ್ನು, ನಿನಗೆ ಇತ್ತು–ನಿನಗೆ ಒಪ್ಪಿಸಿ, ನಿನ್ನ ಕೊಟ್ಟುದನೆ–ನೀನು ಕೊಟ್ಟಿದ್ದನ್ನೇ, ಪಸಾದಂ– ಪ್ರಸಾದ, ಎಂದು, ಪೊಡೆವಟ್ಟು–ನಮಸ್ಕರಿಸಿ, ಮನೋಮುದದಿಂದೆ–ಮನದ ಸಂತೋಷ ದಿಂದ, ಕೊಂಡು–ಸ್ವೀಕರಿಸಿ, ಬಾೞ್ವ–ಬದುಕುವ, ಬಯಕೆ–ಆಸೆಯು, ಇದುವೆ–ಇದೇ, ಮುಂ–ಮೊದಲು; ನಿನಗೆ, ಅದಂ ಕಿಡಿಪಂದು–ಅದನ್ನು ಇಲ್ಲವಾಗಿಸುವಾಗ, ಕೆಡಿಸುವಾಗ, ಎಲೆ ಕರ್ಣ–ಎಲೆ ಕರ್ಣನೆ, ಆ ವೃಕೋದರನ–ಆ ಭೀಮಸೇನನ, ಕಾಯ್ಪನೆ–ಕೋಪವನ್ನೇ, ಪೊತ್ತಿಸಿದ– ಉರಿಯುವಂತೆ ಮಾಡಿದ, ಎನ್ನ ಕಾಳೆಗಂ–ನಾನು ಹೂಡಿದ ಯುದ್ಧ, ನಿನಗೆ, ಕೇತು ವಾದುದು–ಕೇತುಗ್ರಹವಾಯಿತು, ಅಥವಾ ಧೂಮಕೇತುವಾಯಿತು, ಎಂದರೆ ವಿನಾಶಕಾರಿಯಾ ಯಿತು.
ವಚನ : ಶೋಕಾನಲನೊಳ್–ದುಃಖಾಗ್ನಿಯಲ್ಲಿ; ಬಾಯೞಿದು–ಅತ್ತು ಆಯಾಸ ಪಟ್ಟು; ಮೆಯ್ಮಱೆದು–ಮೂರ್ಛೆ ಹೋಗಿ; ಪಳಯಿಸುವ–ಪ್ರಲಾಪ ಮಾಡುವ; ಬರವಂ– ಬರುವಿಕೆಯನ್ನು; ಗೆಂಟಱೊಳ್–ದೂರದಲ್ಲಿ;
೭. ಆನುಂ ದುಶ್ಶಾಸನನುಂ ಕಾನೀನನುಂ–ನಾನೂ ದುಶ್ಶಾಸನನೂ ಕರ್ಣನೂ, ಒಡನೆ ಪೋಗಿ–ಜೊತೆಗೂಡಿ ಹೋಗಿ, ಬೀೞ್ಕೊಂಡು–ಹೋಗಿಬರುತ್ತೇವೆ ಎಂದು ಹೇಳಿ ಅಪ್ಪಣೆ ಪಡೆದುಕೊಂಡು, ರಣಸ್ಥಾನಕ್ಕೆ–ಕದನದೆಡೆಗೆ, ಪೋದೆವು–ಹೋದೆವು; ಇಂ–ಇನ್ನು, ಮಗುೞ್ದು–ಹಿಂದಕ್ಕೆ ಬಂದು, ಇವರ ಮೊಗಮಂ–ಈ ತಂದೆ ತಾಯಿಗಳ ಮುಖವನ್ನು, ನಾಣ್ಚದೆ–ನಾಚದೆ, ಸಂಕೋಚವಿಲ್ಲದೆ, ಏನೆಂದು–ಏನೆಂಬುದಾಗಿ, ಆಂ–ನಾನು, ನೋೞ್ಪೆಂ– ನೋಡುತ್ತೇನೆ. ಕದನಕ್ಕೆ ಹೋದವರಲ್ಲಿ ನಾನೊಬ್ಬನೇ ಮರಳಿಬಂದು ಇವರ ಮುಖವನ್ನು ಹೇಗೆ ನೋಡಲಿ ಎಂದು ಭಾವ.
೮. ಪವನಜಂ–ಭೀಮನು, ಅಂತು–ಹಾಗೆ, ಪೂಣ್ದು–ಪ್ರತಿಜ್ಞೆ ಮಾಡಿ, ಯುವರಾಜನ– ದುಶ್ಶಾಸನನ, ನೆತ್ತರಂ–ರಕ್ತವನ್ನು, ಆರ್ದು–ಸಿಂಹನಾದ ಮಾಡುತ್ತಾ, ಪೀರ್ದಂ–ಹೀರಿದನು; ಇಂತು–ಹೀಗೆ, ಅವಗಡದಿಂ–ಮೋಸದಿಂದ, ದಿನೇಶಜನಂ–ಕರ್ಣನನ್ನು, ಅಂಕದ– ಪ್ರಸಿದ್ಧನಾದ, ಗಾಂಡೀವಿ–ಅರ್ಜುನನು, ಕೊಂದಂ–ಕೊಂದನು; ಎಂತು–ಹೇಗೆ, ಪಾಂಡವರಂ– ಪಾಂಡವರನ್ನು, ಇದಿರ್ಚಿ–ಎದುರಿಸಿ, ಸಾಧಿಸುವೆ–ಗೆಲ್ಲುವೆ? ಈಗಳ್–ಈಗ, ಸಂಧಿಯಂ– ಸಂಧಿಯನ್ನು, ಒಲ್ವುದೆ–ಅಪೇಕ್ಷಿಸುವುದೇ, ಕಜ್ಜಂ–ಕಾರ್ಯಂ, ಎಂಬವರ್ಗಳ–ಎಂದು ಹೇಳುವವರ, ಮಾತುಗೇಳ್ವನಿತಂ–ಮಾತನ್ನು ಕೇಳುವಷ್ಟನ್ನು, ಇಂ ಎನಗಂ–ಇನ್ನು ನನಗೂ, ಬಿದಿ–ದೈವ, ಮಾಡಿತಾಗದೇ–ಮಾಡಿದುದು ಆಗಲಿಲ್ಲವೆ? ಇಲ್ಲಿ ಅವಗಡದ ಅರ್ಥ ಚಿಂತನೀಯ; ಅವಗಡ–ಸಾಹಸ (ಪಂಭಾ.ಕೋ.); (ತ) ವಂಚನೆ ಮೋಸ, “ಕೞುತ್ತಿಲೇ ತಾವಡಂ, ಮನತ್ತಿಲೆ ಅವಗಡಂ” ; (ತೆ) ಚೇಷ್ಟೆ. ಕೆಟ್ಟ ಕೆಲಸ; (ಮರಾ) ಅವಘಡ–ಅಸಾಧ್ಯ ವಾದ, ಕಷ್ಟಕರವಾದ; ಅಂಥ ಕೆಲಸ; ಕಿಟ್ಟಲ್ ಅವರು ಅಡ್ಡಿ, ದುರ್ಗಮ, ಭಯಂಕರತೆ, ಅಸಾಧ್ಯ ಎಂಬ ಅರ್ಥಗಳನ್ನು ಹೇಳಿದ್ದಾರೆ; ಬಹುಶಃ ಇಲ್ಲಿ ರಭಸದಿಂದ, ಕ್ರೂರವಾಗಿ ಎಂಬ ಭಾವ ಬರಬಹುದು.
ವಚನ : ಎಯ್ದೆವಂದ–ಹತ್ತಿರಕ್ಕೆ ಬಂದ; ತಡವರಿಸಿಯುಂ–(ಮೈಯನ್ನು) ಮುಟ್ಟಿ ಮುಟ್ಟಿ ನೋಡಿಯೂ; ತೆಬ್ಬರಿಸಿಯುಂ–ಧೈರ್ಯ ಹೇಳಿಯೂ (ಸಮಾಧಾನಪಡಿಸಿಯೂ)?, ಅೞ್ಕಱೊಳ್–ಪ್ರೀತಿಯಲ್ಲಿ; ಅಮೃತ ವರ್ಷಿಕರ ಪರಿಷೇಕದಿಂದೆ–ಅಮೃತವನ್ನು ಸುರಿಸುವ ಕೈಯ ಸುತ್ತುವಿಕೆಗಿಂತಲೂ; ಆಪ್ಯಾಯನ ಕೋಟಿಯಾಗೆ–ಸಂತೋಷದ ತುತ್ತ ತುದಿಯಾಗಲು; ಪರಿಕಲಿತ–ಕೂಡಿದ; ಕಾರ್ಯವ್ಯಗ್ರ ಪಾಪಿ ಪಾಶಾಶ್ರಿತರೆಲ್ಲರುಂ–ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ, ತೆಬ್ಬರಿಸು ಎಂಬುದರ ಅರ್ಥ ಅನಿಶ್ಚಿತ; ಇದೇ ಸಂದರ್ಭದಲ್ಲಿರನ್ನನೂ ಇವೇ ಮಾತುಗಳನ್ನು ಬಳಸಿದ್ದಾನೆ; “ತಡವರಿಸಿಯುಂ ತೆಬ್ಬರಿಸಿಯುಂ ತೆಗೆದಪ್ಪಿಯುಂ” (ಗದಾ. ೩–೮ ೪ ಗ), ತಮಿಳಿನಲ್ಲಿ ತೆಮ್ಪು, ತೆನ್ಪು–ಧೈರ್ಯ ಎಂದೂ ತೆಲುಗಿನಲ್ಲಿ ತೆಮ್ಪು, ತೆಮ್ಪಿ, ತೆಮ್ಮರಿ–ಧೈರ್ಯ ಎಂದೂ ಶಬ್ದಗಳಿವೆ, ಇವುಗಳಿಗೆ ತೆಬ್ಬರು+ಇಸು ಎಂಬ ಶಬ್ದ ಸಂಬಂಧಪಟ್ಟಿರಬಹುದು. (ಪಂಭಾ. ಕೋ.) ದಲ್ಲಿ ಇದಕ್ಕೆ “ಮೇಲಕ್ಕೆತ್ತು” ಎಂದು ಅರ್ಥ ಕೊಟ್ಟಿದೆ. ದುರ್ಯೋಧನನನ್ನು ಪಾಪಿ ಎಂದು ಅವನ ತಂದೆ ತಾಯಿಗಳೇ ಇಲ್ಲಿ ಹೇಳಿರುವಂತಿದೆ; ಇಲ್ಲೇನಾದರೂ ಪಾಠದೋಷ ವಿದೆಯೇ?
೯. ಎನಗಂ ಪಾಂಡುಗಂ–ನನಗೂ ಪಾಂಡು ರಾಜನಿಗೂ, ಭೇದಂ–ವ್ಯತ್ಯಾಸವು, ಇಲ್ಲ; ಎಳೆಯಂ–ಭೂಮಿಯನ್ನು, ರಾಜ್ಯವನ್ನು, ಪಚ್ಚಿ–ವಿಭಾಗ ಮಾಡಿ, ಆಳ್ವಂ–ಆಳೋಣ; ಆ ಪಾಂಡುನಂದನರುಂ–ಆ ಪಾಂಡುವಿನ ಮಕ್ಕಳೂ, ನಿನ್ನೊಳೆ–ನಿನ್ನಲ್ಲಿ, ಸೈದರೆ–ನೇರಾಗಿ ಇರುವವರೆ ಎಂದರೆ ಸರಿಯಾಗಿ ನಡೆದುಕೊಳ್ಳುವವರೇ; ಈ ಕಲಹಮುಂ–ಈ ಯುದ್ಧವೂ, ನಿನ್ನಿಂದಂ–ನಿನ್ನಿಂದ, ಆಯ್ತು–ಆಯಿತು, ಎಂದೊಡೆ–ಎಂದು ಹೇಳಿದರೆ, ಇಂ–ಇನ್ನು, ಮುನಿವಯ್–ಕೋಪಗೊಳ್ಳುತ್ತೀಯೆ; ಗಂಗೆಯ ಪೆರ್ಮಗಂಗೆ–ಭೀಷ್ಮನಿಗೆ, ಘಟಸಂ ಭೂತಂಗೆ–ದ್ರೋಣನಿಗೆ, ಕರ್ಣಂಗೆ–ಕರ್ಣನಿಗೆ, ಅಸಾಧ್ಯನೊಳ್–ಅಸಾಧ್ಯನಾದ, ಆ ಗಾಂಡಿವಿಯೊಳ್–ಆ ಅರ್ಜುನನಲ್ಲಿ, ಕಱುತ್ತು–ಕೋಪಿಸಿ, ಇಱಿವರ್–ಯುದ್ಧ ಮಾಡುವ ವರು, ಆರ್–ಯಾರು? ಇಂ–ಇನ್ನು, ಸಂಧಿಯಂ–ಸಂಧಿಯನ್ನು, ಮಾಡುವಂ–ಮಾಡೋಣ.
೧೦. ಪಗೆಗೆ–ದ್ವೇಷಕ್ಕೆ, ಕಣಿಯೊಂದು–ಒಂದು ಗಣಿ, ಉಂಟೇ–ಇದೆಯೇ? ನಣ್ಪಿಂಗಂ– ನಂಟತನಕ್ಕೂ, ಆಗರಂ–ಆಕರವು, ಉಂಟೆ–ಇದೆಯೇ? ನೀಂ–ನೀನು, ಬಗೆಯ–ಆಲೋಚನೆ ಮಾಡು; ಎಂದರೆ ದ್ವೇಷಕ್ಕೆಲ್ಲ ಒಂದು ಸ್ಥಳ, ಬಾಂಧವ್ಯಕ್ಕೆಲ್ಲಾ ಎಂದರೆ ಪ್ರೀತಿಗೆಲ್ಲಾ ಒಂದು ಸ್ಥಳ ಎಂದು ಇದೆಯೇ? ವಿಚಾರಿಸಿ ನೋಡು ಎಂದು ಅಭಿಪ್ರಾಯ. ಪಗೆಯುಂ ನಣ್ಪುಂ–ದ್ವೇಷವೂ, ಬಾಂಧವ್ಯವೂ, ಕೆಯ್ಕೊಂಡ–ಸ್ವೀಕರಿಸಿದ ಎಂದರೆ ಮಾಡಿದ, ಕಜ್ಜದಿಂ–ಕಾರ್ಯ ದಿಂದ, ಅರಸುಗಳ್ಗೆ–ರಾಜರಿಗೆ, ಪುಟ್ಟುಗುಂ–ಹುಟ್ಟುತ್ತವೆ. ಅಲ್ತೆ–ಅಲ್ಲವೆ? ಎಂದರೆ ಮಾಡುವ ಕೆಲಸದಿಂದ ಹಗೆತನ ಪ್ರೀತಿಗಳು ಉಂಟಾಗುತ್ತವೆ. ಎಂದ–ಎಂದು ಹೇಳಿದ, ಸಂದ–ಪ್ರಸಿದ್ಧವಾದ, ಈ ಅರ್ಥಶಾಸ್ತ್ರದೊಳ್–ಈ ದಂಡ ನೀತಿಶಾಸ್ತ್ರದಲ್ಲಿ, ಏಕೆ–ಏತಕ್ಕೆ, ಪೇೞ್–ಹೇಳು; ಮಗನೆ–ಮಗನೇ, ಕಾರ್ಯಂ ಮಿತ್ರಾ [ರಿ] ಕಾರಕಂ–ಕಾರ್ಯವು ಮಿತ್ರರನ್ನೂ ಶತ್ರುವನ್ನೂ ಉಂಟುಮಾಡತಕ್ಕದ್ದು, ಎಂದುದಂ–ಎಂಬುದನ್ನು, ಏಕೆ ನೆಗೞ್ವಯ್–ಏಕೆ ಮಾಡುತ್ತೀಯೆ? ಈ ಪದ್ಯದ ಕೊನೆಯ ಪಾದದಲ್ಲಿ ಏನೋ ತಪ್ಪಿರಬಹುದು; ಅದನ್ನು ತಿದ್ದಿ ಅರ್ಥ ಹೇಳಿದೆ. ಆದರೂ ಅಭಿಪ್ರಾಯ ವೈಶದ್ಯವಿಲ್ಲ.
೧೧. ಎಮಗೆ–ನಮಗೆ, ನೀನುಳ್ಳೊಡೆ–ನೀನು ಇದ್ದ ಪಕ್ಷದಲ್ಲಿ, ಎಲ್ಲರ್–ಎಲ್ಲರೂ, ಒಳರ್–ಇದ್ದಾರೆ; ಮನದೊಳ್–ನಮ್ಮ ಮನಸ್ಸಿನಲ್ಲಿ, ಅೞಲ್–ದುಃಖವು, ಏನುಂ– ಏನೂ, ಇಲ್ಲ; ಮಗನೇ, ಅದೆಂತೆನೆ–ಅದು ಹೇಗೆಂದರೆ, ಭಾನುವೆ–ಸೂರ್ಯನೇ, ಸಾಲದೆ– ಸಾಕಾಗದೆ; ಪಗಲ್–ಹಗಲಿನಲ್ಲಿ, ಎನಿತಾನುಂ ದೀವಿಗೆಗಳ್–ಎಷ್ಟು ದೀಪಗಳು ತಾನೆ, ಉರಿ ದೊಡೇಂ–ಉರಿದರೇನು, ನಂದಿದೊಡೇಂ–ಆರಿ ಹೋದರೇನು
ವಚನ : ಬೆಸಕೆಯ್ಯದುದನೆ–ಮಾಡದುದನ್ನೆ; ಎಂದುದನೆನಿಸುವೆಂ–ಹೇಳಿದ್ದನ್ನು ಹೇಳಿಸುತ್ತೇನೆ; ಮಾರ್ಕೊಳ್ಳದೆ–ಪ್ರತಿಭಟಿಸದೆ; ಅನುಬಲವಾಗಿ–ಬೆಂಬಲವಾಗಿ.
೧೨. ಕುರುಕುಳನಂದನಂ–ಕೌರವ ವಂಶವೆಂಬ ತೋಟವು, ಪವನನಂದನನೆಂಬ–ಭೀಮ ನೆಂಬ, ಮದಾಂಧಗಂಧ ಸಿಂಧುರಮೆ–ಮದದಿಂದ ಸೊಕ್ಕೇರಿದ ಆನೆಯೇ, ಕಱುತ್ತು– ಕೋಪಿಸಿ, ಪಾಯೆ–ಹಾಯಲು, ನುಗ್ಗಲು, ಪಡಲಿಟ್ಟವೊಲ್–ಧ್ವಂಸವಾದಂತೆ, ಆದುದು– ಆಯಿತು; ಪುಣ್ಯದೆ–ನಮ್ಮ ಪುಣ್ಯದಿಂದ, ಒಂದು, ಪೆರ್ಮರಂ–ದೊಡ್ಡ ಮರವು, ಉೞಿವಂತೆ– ಉಳಿಯುವ ಹಾಗೆ, ನೀಂ–ನೀನು, ಉೞಿದೆ–ಬದುಕಿಕೊಂಡಿರುವೆ; ಇಂ–ಇನ್ನು, ಇಱಿವನ್ನರುಂ–ಯುದ್ಧ ಮಾಡುವಂಥವರೂ, ಇಲ್ಲ; ಮಗನೇ, ಮುತ್ತರುಂ–ಮುದುಕರೂ, ಕುರುಡರುಂ–ಕುರುಡರೂ, ಎನ್ನದೆ–ಎಂದು ಹೇಳದೆ, ಎಮ್ಮನುಡಿಗೇಳ್–ನಮ್ಮ ಮಾತನ್ನು ಕೇಳು; ಬಗೆ–ಆಲೋಚಿಸು, ತಂದೆಗೆ–ತಂದೆಯ ಮಾತಿಗೆ, ಇಂಬುಕೆಯ್–ಅವಕಾಶವನ್ನು ಕೊಡು ಎಂದರೆ ತಂದೆಯ ಮಾತನ್ನು ನಡೆಸು, ಒಪ್ಪು.
೧೩. ಈ ಕಲಹಂ–ಈ ಯುದ್ಧ, ಇನಿತಱೊಳ್–ಇಷ್ಟರಲ್ಲಿ, ಅಸವಸದಿಂ–ಕ್ಷಿಪ್ರವಾಗಿ, ಪೋಕೆ–ಹೋಗಲಿ, ಎಂದರೆ ಈ ಯುದ್ಧ ಇಷ್ಟಕ್ಕೇ ಬೇಗನೆ ನಿಲ್ಲಲಿ, ಇನ್ನು ವಿನಾಶವಾಗು ವುದು ಬೇಡ; ಧರ್ಮಸುತನಂ–ಧರ್ಮಪುತ್ರನನ್ನು, ಆಂ–ನಾನು, ನಿರಾಪೇಕಂ–ಆಕ್ಷೇಪಣೆ ಯಿಲ್ಲದೆ ಎಂದರೆ ಪ್ರತಿಭಟನೆಯಿಲ್ಲದೆ, ಒಡಂಬಡಿಸುವೆಂ–ಒಪ್ಪಿಸುತ್ತೇನೆ; ಎನಗೆ–ನನಗೆ, ಕೂರ್ಪೊಡೆ–ಪ್ರೀತಿಸುವ ಪಕ್ಷದಲ್ಲಿ, ಇಂತು–ಹೀಗೆ, ಮಗನೇ, ಈ ಕಜ್ಜಂ–ಈ ಕಾರ್ಯವನ್ನು, ಕೈಕೊಳ್–ಸ್ವೀಕರಿಸು, ನಿರಾಕ್ಷೇಪ ನಿರಾಪೇಕ; ಇಲ್ಲಿ ವರ್ಣವಿಪರ್ಯಯವಾಗಿದೆ (Metathesis); ಕಜ್ಜಂ–ದ್ವಿತೀಯಾರ್ಥದಲ್ಲಿ ಪ್ರಥಮೆ.
ವಚನ : ಅನುಬಂಧಿಸಿದ–ಕಟ್ಟಿದ; ಅಭಿಮಾನಧನಂ–ಆತ್ಮಗೌರವವನ್ನೇ ಧನವಾಗಿ ಉಳ್ಳವನು.
೧೪. ನಿಮ್ಮ ಪೇೞ್ದುದು–ನೀವು ಹೇಳಿದ್ದು, ದೋಷಮೆ–ತಪ್ಪೆ? ಅಲ್ಲ; ಎಂತುಂ–ಹೇಗೂ, ಒಡಂಬಡಲ್–ಒಪ್ಪಲು, ಅಪ್ಪುದು–ಆಗುತ್ತದೆ, ಒಂದೆ–ಒಂದೇ ಒಂದು ಅಂಶವಿದೆ; ದುಶ್ಶಾಸನ ರಕ್ತಪಾನದೊಳೆ–ದುಶ್ಶಾಸನನ ರಕ್ತದ ಕುಡಿತದಲ್ಲಿ, ಸೊರ್ಕಿದ– ಮದವೇರಿದ, ಪಾತಕನಂ–ಪಾಪಿಯಾದ ಭೀಮನನ್ನು, ಪೊರಳ್ಚಿ–ನೆಲದ ಮೇಲೆ ಹೊರಳಿಸಿ, ಕೊಂದು, ಈ ಸಮರಾವನೀ ತಲದೊಳ್–ಈ ಯುದ್ಧ ಭೂಮಿಯಲ್ಲಿ, ಬಲಿಗೆಯ್ವಿನಂ– ಬಲಿಮಾಡುವವರೆಗೆ, ಒಲ್ಲೆನಲ್ತೆ–ಒಪ್ಪೆನಲ್ಲವೆ? ನಿರ್ದೋಷಿಗಳೊಳ್ ಪೃಥಾಸುತರೊಳ್– ದೋಷರಹಿತರಾದ ಪೃಥೆಯ ಮಕ್ಕಳಲ್ಲಿ ಎಂದರೆ ಪಾಂಡವರಲ್ಲಿ, ಇಂ ಮಗುೞ್ದುಂ–ಇನ್ನು ಮರಳಿಯೂ, ಪುದುವಾೞೆನ್–ಕೂಡಿ ಬದುಕೆನು, ಎಂಬೆನೇ–ಎಂದು ಹೇಳುವೆನೇ?
ವಚನ : ಅಂಧಮಹೀಪತಿ–ಧೃತರಾಷ್ಟ್ರ; ಇದಾವುದು ಮಾತಾಗಿ ನುಡಿವೈ–ಇದು ಯಾವ ಮಾತೆಂದು ಹೇಳುವೆ?
೧೫. ಧರ್ಮನಂದನಂ–ಧರ್ಮಪುತ್ರನು, ಅನುಜರ್ ನಾಲ್ವರುಮಂ–ನಾಲ್ವರು ತಮ್ಮಂದಿ ರನ್ನೂ, ವೇಳೆಗೊಂಡು–ಸಮಯ ಪ್ರತಿಜ್ಞೆಯನ್ನು ಮಾಡಿ, ಎಂದರೆ ಅವರಲ್ಲಿ ಒಬ್ಬನು ಸತ್ತರೂ ತಾನು ಕೂಡ ಸಾಯುವೆನೆಂದು; ಪೊಣರ್ದ–ಸೇರಿದ, ಒದಗಿದ, ಆವ ಅನುವರದೊಳಂ– ಯಾವ ಯುದ್ಧದಲ್ಲೂ, ಕಾವಂ–ರಕ್ಷಿಸುವನು; ಎನೆ–ಎನ್ನಲು, ಪೇೞ್–ಹೇಳು, ಪವನನಂದ ನಂಗೆ–ಭೀಮನಿಗೆ, ಅೞಿವು ಪೂಣರೆ–ಸಾವು ಸೇರಲು ಎಂದರೆ ಉಂಟಾಗಲು, ತಾಂ–ತಾನು, ಬೞ್ದಪನೇ–ಬದುಕುತ್ತಾನೆಯೇ?
೧೬. ಎನೆ–ಎನ್ನಲು, ನೃಪಂ–ದುರ್ಯೋಧನನು, ಎಂದಂ–ಎಂದನು; ಅನುಜರ್ಕಳೊಳ್– ತಮ್ಮಂದಿರಲ್ಲಿ, ಓರ್ವನ್–ಒಬ್ಬನು, ಅೞಿದೊಡೆ–ಸತ್ತರೆ, ಧರ್ಮಜಂ–ಧರ್ಮತನಯನು, ಒಡನೆ–ಕೂಡಲೇ, ಅೞಿವ–ಸಾಯುವನು; ಅಲ್ಲಿ–ಯುದ್ಧದಲ್ಲಿ, ನೂರ್ವರುಂ ತನ್ನ ಅನುಜರ್ಕಳ್– ತನ್ನ ನೂರು ಜನ ತಮ್ಮಂದಿರು, ಸಾಯೆ–ಸಾಯಲು, ಸುಯೋಧನನ– ದುರ್ಯೋಧನನು, ಬಾೞ್ವುದಂ–ಬದುಕುವುದನ್ನು, ನಂಬಿದಿರೇ–ನಂಬಿಕೊಂಡಿರಾ? ಇಲ್ಲಿ ಅೞಿವ ಎಂಬುದು ಅೞಿವಂ ಎಂದಿರಬೇಕು, ಅಂತ್ಯ ಬಿಂದು ಲೋಪವೆಂದು ಭಾವಿಸಬೇಕು.
೧೭. ವೈರಿ–ಶತ್ರುವು, ತಲೆದೋಱಲ್ಕೆ–ತಲೆ ತೋರಿಸುವುದಕ್ಕೆ ಎಂದರೆ ಸಮ್ಮುಖವಾಗಿ ನಿಲ್ಲುವುದಕ್ಕೆ, ಅಣಂ ಅಳ್ಕಿ–ವಿಶೇಷವಾಗಿ ಹೆದರಿ, ಪೋ–ಹೋಗು, ನೆಲನಂ–ನೆಲವನ್ನು, ಪೊಕ್ಕಂ–ಹೊಕ್ಕನು, ಎಂಬನ್ನೆಗಂ–ಎನ್ನುತ್ತಿರಲು, ಚಲದಿಂದೆ–ಒಂದೇ ಸಮನಾಗಿ (ಬಿಡದೆ ಹಠದಿಂದ), ಎಯ್ದುವ–ಓಡಿಬರುತ್ತಿರುವ, ಕರ್ಣನ, ಉಗ್ರರಥಮಂ–ಭಯಂಕರ ರಥವನ್ನು, ಮುಂ–ಮೊದಲು, ನುಂಗಿದ–ಕಬಳಿಸಿದ, ಈ ದ್ರೋಹಿಯೊಳ್–ಈ ದ್ರೋಹಿಯಾದ, ನೆಲದೊಳ್–ನೆಲದಲ್ಲಿ, ಪಂಬಲೆ–ಹಂಬಲೇ ಎಂದರೆ ಆಸೆಯೆ? ಮತ್ತಂ–ಮತ್ತು, ಎನ್ನ ಮುಳಿಸಿಂಗೆ–ನನ್ನ ಕೋಪಕ್ಕಾಗಿ, ಆಂ–ನಾನು, ಕಾದುವೆಂ–ಯುದ್ಧ ಮಾಡುವೆನು; ನೆಲೆಗಂಡು– ಸ್ಥಿರತೆಯನ್ನು ತಿಳಿದು, ನೆಲಕ್ಕೆ–ಈ ರಾಜ್ಯಕ್ಕೆ (ಭೂಮಿಗೆ), ಅಂತೆ–ಹಾಗೆ, ಪೇಸಿದೆಂ–ಹೇಸಿ ದೆನು, ಎಂದರೆ ಶಾಶ್ವತವಾದುದಾವುದು ಎಂಬುದನ್ನು ತಿಳಿದು ಅಶಾಶ್ವತವಾದ ಭೂಮಿಗೆ ಹೇಸಿದೆನು; ಗೆಲ್ದೊಡಂ–ಗೆದ್ದರೂ, ಅದಂ–ಆ ನೆಲವನ್ನು, ಮತ್ತಂ–ಪುನಃ, ಆಂ–ನಾನು, ಆಳ್ವೆನೇ–ಆಳುತ್ತೇನೆಯೇ ?
೧೮. ನೀಮುಂ ಆ ನೆಗೞ್ದ ಪಾಂಡುವುಂ–ನೀವೂ ಆ ಪ್ರಸಿದ್ಧನಾದ ಪಾಂಡುರಾಜನೂ, ತೊಡರದೆ–ಒಬ್ಬರಲ್ಲಿ ಒಬ್ಬರು ತೊಡರಿಕೊಳ್ಳದೆ ಎಂದರೆ ಜಗಳವಾಡದೆ, ಒಂದಿಯೆ–ಸೇರಿ ಕೊಂಡೇ, ಹೊಂದಿಕೊಂಡೇ, ಬೞ್ದಿರ್–ಬಾಳಿದಿರಿ; ಒಂ [ದೆ] ಡಂಬಡು–ಒಂದು ಅಸಮಾಧಾನವೂ, ನಿಮಗಿಲ್ಲ–ನಿಮಗೆ ಇಲ್ಲ; ಜೂದೆ–ಜೂಜೆ, ನೆವಮಾಗಿರೆ–ನೆವವಾಗಿರಲು, ಪೂಣ್ದ–ಮೇಲೆಳೆದುಕೊಂಡ, ಧರಿಸಿದ, ಇಡುವಗೆಗೆ–ಇಡುವ ದ್ವೇಷಕ್ಕೆ ಎಂದರೆ ಬದ್ಧವೈರಕ್ಕೆ, ಆನೆ–ನಾನೆ, ಮೂಲಿಗನಾದೆನ್–ಮೊದಲಿಗನಾದೆನು, ಮೂಲಕಾರಣನಾದೆನು; ಎನ್ನೊಳಾದ–ನನ್ನಿಂದ ಉಂಟಾದ, ಕಿಸುರ್–ಕಲಹವು, ಎನ್ನೊಡವೋಪುದು–ನನ್ನ ಸಂಗಡವೇ ಹೋಗುತ್ತದೆ; ಇದು ಒಳ್ಳಿತು–ಇದು ಒಳ್ಳೆಯದು, ಎನ್ನ ಪಿಂಬಡಿನೊಳೆ–ನನ್ನ ತರುವಾಯ ದಲ್ಲಿಯೇ, ನಣ್ಪಿನಯ್ಯ–ಪ್ರೀತಿಯ ತಂದೆಯೇ, ಧರ್ಮನಂದನಂ–ಧರ್ಮಪುತ್ರನು, ನಿಮಗಂ–ನಿಮಗೂ, ಮಗನಲ್ಲನೆ–ಮಗನಲ್ಲವೇ? ಎಂದರೆ ಅವನೊಡನೆ ಸುಖವಾಗಿ ಬಾಳ ಬಹುದು, ನಾನು ಇಲ್ಲವಾದರೂ; ಇಡುವುದು+ಪಗೆ=ಇಡುವಗೆ;
೧೯. ಕರ್ಣನಿಂ ಬೞಿಕೆ–ಕರ್ಣನ ಅನಂತರ ಎಂದರೆ ಕರ್ಣನು ಸತ್ತ ಮೇಲೆ, ಎನಗೆ– ನನಗೆ, ಸಂಧಿಯ ಮಾತು–ಸಂಧಿ ಮಾಡುವ ಮಾತು, ತಪ್ಪು, ಅದು; ಆತನಿಲ್ಲದೆ– ಅವನಿಲ್ಲದೆ, ರಾಜ್ಯಂ–ರಾಜ್ಯವು, ಎಂತಪ್ಪುದೋ–ಹೇಗೆ ಆಗುತ್ತದೊ. ಎಂದರೆ ಕರ್ಣ ನಿಲ್ಲದೆ ನನ್ನ ದೊರೆತನ ದೊರೆತನವಲ್ಲ; ಈ ಗದೆಯುಂ–ಈ ಗದೆಯೂ, ಈ ಭುಜದಂಡ ಮುಂ–ಈ ಬಾಹುದಂಡಗಳೂ, ಉಳ್ಳಿನಂ–ಇರುತ್ತಿರಲು, ಎನ್ನ ಪಗೆ–ನನ್ನ ಶತ್ರು, ಕೊನರ್ ತಪ್ಪುದೆ–ಚಿಗುರಿಕೊಳ್ಳುತ್ತದೆಯೆ? ಎಂದರೆ ಚಿಗುರಿಕೊಳ್ಳುತ್ತಾನೆಯೇ? ಪೇೞಿಂ–ಹೇಳಿರಿ; ನೋವಱಿದು–ದುಃಖವನ್ನು ತಿಳಿದು ಎಂದರೆ ಯುದ್ಧವನ್ನು ಮುಂದುವರಿಸದೆ ನಿಂತರೆ, ಅಯ್ಯ–ತಂದೆಯೇ, ಪೇೞಿಂ–ಹೇಳಿರಿ, ನೊಸಲೊಳ್–ಹಣೆಯಲ್ಲಿ, ವಿಧಾತ್ರನಾ–ವಿಧಿಯು, ಬರೆದ, ಅಕ್ಕರಂ–ಅಕ್ಷರಗಳು, ಎಂದರೆ ಬ್ರಹ್ಮನು ಹಣೆಯಲ್ಲಿ ಬರೆದ ಬರಹ, ಏಂ ತಪ್ಪುದೋ–ಏನು ನಾಶವಾಗುತ್ತದೋ?
೨೦. ಕರ್ಣನಂ–ಕರ್ಣನನ್ನು, ಅೞಿದುದುಱಿಂ–ಸಾಯಿಸಿದ್ದರಿಂದ, ನರನಂ–ಅರ್ಜುನ ನನ್ನು, ಮುಂ–ಮೊದಲು, ಆಂ–ನಾನು, ಕೊಲ್ವೆಂ–ಕೊಲ್ಲುತ್ತೇನೆ; ಸಂಗರದೊಳ್–ಯುದ್ಧದಲ್ಲಿ, ಸೀಳ್ದೊಟ್ಟಿ–ಸೀಳಿ ಹಾಕಿ, ದುಶ್ಶಾಸನನ–ದುಶ್ಶಾಸನನ ಸಾವಿನ, ಅೞಲನದಂ–ಆ ದುಃಖವನ್ನು, ನೀಗುವೆಂ–ಕಳೆಯುತ್ತೇನೆ; ಅಂತಿರ್ವರುವಂ–ಹಾಗೆ ಇಬ್ಬರನ್ನೂ, ಕೊಂದಂದು–ಕೊಂದಾಗ, ಮೇಣ್–ಅಥವಾ, ಅವರ ಇದಿರಿದಿರೊಳ್–ಎದುರೆದುರಿನಲ್ಲಿ ಎಂದರೆ ಸಮ್ಮುಖದಲ್ಲಿ, ಕಾದಿ–ಯುದ್ಧ ಮಾಡಿ, ಸತ್ತಂದು ಮೇಣ್–ಸತ್ತಾಗ, ವಿಸ್ಫುರಿತಂ– ದಳ್ಳಿಸುತ್ತಿರುವ, ಮತ್ಕೋಪಮುಂ–ನನ್ನ ಕೋಪವೂ, ಪೋಕುಂ–ಹೋಗುತ್ತದೆ; ನಿಮ್ಮಡಿಯು ಮಂ–ನಿಮ್ಮ ಪಾದಗಳನ್ನು, ಬೀೞ್ಕೊಂಡೆಂ–ಬೀಳುಕೊಂಡೆನು, ಹೋಗಿಬರಲು ಅಪ್ಪಣೆ ಪಡೆದನು; ಇಂ–ಇನ್ನು, ಪೋಗಿ–ಹೋಗಿರಿ, ಏೞಿಂ–ಏಳಿರಿ. ಬಿಡು ಬೀಡು+ಕೊಳ್– ಬೀೞ್ಕೊಳ್.
ವಚನ : ಸಂಸಾರಾಸಾರತೆಯನಱಿದನುಂ–ಸಂಸಾರದ ನಿಸ್ಸಾರತೆಯನ್ನು ತಿಳಿದವನೂ (ಜೈನ ವೈರಾಗ್ಯದ ಛಾಯೆ ಇದೆ ಇಲ್ಲಿ), ಮಹಾಸತ್ವನುಂ–ಮಹಾಶಕ್ತಿಯುಳ್ಳವನೂ, ಅನುಲೇಪನ–ಗಂಧ; ಮಹಾಹವ ಖೇದಮುಮಂ–ಮಹಾಯುದ್ಧದ ದುಃಖವನ್ನು ಎಂದರೆ ಆಯಾಸವನ್ನು; ಅಂತಸ್ಥಿತ–ಒಳಗಿರುವ, ಕನಕವಿಷ್ಟರ–ಚಿನ್ನದ ಪೀಠ; ಎಮ್ಮಗೆಯ್ವ–ನಾವು ಮಾಡುವ; ನಿಯೋಗಮೇನ್–ಉದ್ಯೋಗವೇನು, ಕಾರ್ಯವೇನು?
೨೧. ಸಂಗತ ನೀತಿಶಾಸ್ತ್ರವಿದರಪ್ಪರ್–ಚೆನ್ನಾಗಿ ನೀತಿಶಾಸ್ತ್ರವನ್ನು ಬಲ್ಲವರು, ಅವಂದಿರ– ಅವರ, ತಮ್ಮ ತಮ್ಮ–ತಂತಮ್ಮ, ಕಜ್ಜಂಗಳ–ಕಾರ್ಯಗಳ, ಮೆಯ್ಗಳೊಳ್–ಮೈಗಳಲ್ಲಿ ಎಂದರೆ ವಿಷಯದಲ್ಲಿ, ಪುಸಿದು–ಸುಳ್ಳಾಡಿ, ಅದಂ–ಆ ಸುಳ್ಳನ್ನೇ, ಕಡುನನ್ನಿಯೆ ಮಾಡಿ– ಅತ್ಯಂತ ಸತ್ಯವನ್ನಾಗಿ ಮಾಡಿ, ತೋರ್ಪರ್–ತೋರಿಸುತ್ತಾರೆ; ಹೇಗೆಂದರೆ; ಚಿತ್ರಕಂ–ಚಿತ್ರ ಲೇಖಕನು, ಉತ್ತುಂಗ ಸುಸೂಕ್ಷ್ಮ ಪಾರ್ಶ್ವಕೃಶಕೋಮಲ ನಿಮ್ನ ಘನೋನ್ನತ ಪ್ರದೇಶಂಗಳಂ– ಎತ್ತರವಾದ, ಅತಿ ನವುರಾದ, ಮಗ್ಗುಲ ನಿಲವನ್ನುಳ್ಳ, ತೆಳ್ಳಗಿರುವ, ಲಲಿತವಾದ, ತಗ್ಗಾದ, ದಪ್ಪನಾದ, ನಿಡಿದಾದ ಪ್ರದೇಶಗಳನ್ನು, ಆ ಸಮಾನ ತಳದಲ್ಲಿಯೆ–ಪಟದ ಸಮಪ್ರದೇಶ ದಲ್ಲಿಯೇ, ತೋರ್ಪವೋಲ್–ತೋರಿಸುವಂತೆ; ಪಂಪನು ಕೊಟ್ಟಿರುವ ಈ ಹೋಲಿಕೆ ಅವ ನಿಗಿದ್ದ ಚಿತ್ರ ಕಲಾಭಿರುಚಿಯನ್ನು ತೋರಿಸುವುದೇ ಅಲ್ಲದೆ ಅವನ ಚಿತ್ರ ಶಾಸ್ತ್ರ ಪ್ರೌಢಿಮೆ ಯನ್ನು ಪ್ರತಿಬಿಂಬಿಸುವುದಾಗಿದ್ದು ಜೀವನದ ಪ್ರತಿಯೊಂದು ಕ್ಷೇತ್ರದಿಂದ ಕವಿ ಪ್ರತಿಮೆ ಗಳನ್ನು ಆರಿಸಿಕೊಳ್ಳಬಹುದೆಂಬುದನ್ನೂ ದ್ಯೋತಿಸುವ ಹಾಗಿದೆ. ತನ್ನ ಕಾಲದ ಶಾಸ್ತ್ರಗಳಿಂದ ಕಾವ್ಯಕ್ಕೆ ಈ ರೀತಿಯ ನೆರವನ್ನು ಅವನು ಪಡೆದಿದ್ದಾನೆ.
ವಚನ : ಬುದ್ಧಿಯೊಡೆಯರ ಪೇೞ್ವ–ಬುದ್ಧಿಯುಳ್ಳವರು ಹೇಳುವ; ಸಾಮಾನ್ಯ ಮಪ್ಪುಪಾಯಂಗಳುಂ–ಸಾಧಾರಣವಾದ ಸಾಮ ದಾನ ಭೇದ ದಂಡ ಎಂಬ ಚತುರೋಪಾಯ ಗಳೂ; ಅಪಾಯಬಹುಳಮಾಗಿ–ಅಪಾಯಮಯವಾಗಿ; ಆಱುಂಗುಣಂಗಳನೆ–ಷಾಡ್ಗುಣ್ಯ ಗಳನ್ನೇ ಅಂದರೆ, ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೈಧೀಭಾವ ಎಂಬ ಆರು ಗುಣಗಳನ್ನೇ; ಇವು ಅರ್ಥಶಾಸ್ತ್ರದ ಪರಿಭಾಷೆಗಳು; ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕ ತಂತ್ರಂಗಳ್; ಇವಕ್ಕೆ ಷಡ್ವಿಧಂ ಬಲಂ ಎಂದರೆ ಆರು ಬಗೆಯಾದ ಸೈನ್ಯಗಳು ಎಂದು ಹೆಸರು; ಮೌಲ–ಪರಂಪರೆಯಿಂದ ಬಂದಿರುವ ರಾಜಸೇವಕರು; ಭೃತ್ಯ–ಸಂಬಳ ತೆಗೆದು ಕೊಳ್ಳುವ ಸೇವಕರು; ಸುಹೃತ್–ಸ್ನೇಹಿತರಾದ, ಅಥವಾ ಸ್ವಪಕ್ಷವರ್ತಿಗಳಾದ ರಾಜರು; ಶ್ರೇಣಿ–ಯುದ್ಧದ ಸಮಯದಲ್ಲಿ ಬಂದು ಸೇರುವ ಹಂಗಾಮಿ ಸೈನಿಕರು, ದ್ವಿಷದ್– ಶತ್ರುವಿಗೆ ವಿರೋಧವಾಗಿರುವವರು, ಆಟವಿಕ–ಕಾಡುಜನರ ಸೈನ್ಯ; “ಮೌಲಂಭೃತ್ಯಃ ಸುಹೃ ಚ್ಛ್ರೇಣೀ ದ್ವಿಷದಾಟವಿಕಂ ಬಲಂ” ಎಂದು ಕೋಶ; “ಹಸ್ತ್ಯಶ್ವರಥಪದಾತಿ ಸೇನಾಕರ್ಮ ಕರಾತ್ಮಕಂ ಷಡ್ವಿಧಂ ಬಲಂ” ಎಂದು ಕುಲ್ಲೂಕನ ಅಭಿಪ್ರಾಯವೂ ಉಂಟು. ಇಲ್ಲಿರುವ “ಶ್ರೇಣಿ ಮಿತ್ರಾಟವಿಕಬಲಂ” ಎಂಬ ಪಾಠಕ್ಕೆ ಪ್ರತಿಯಾಗಿ “ಶ್ರೇಣ್ಯಮಿತ್ರಾಟವಿಕಬಲಂ” ಎಂಬ ಪಾಠವಿರಬೇಕು. ಪಣ್ಣಿದ ಜಂತ್ರಗಳಂತೆ–ಮಾಡಿದ ಯಂತ್ರಗಳಂತೆ, ಎಂದರೆ ಕೃತಕ ವಾದ ಯಂತ್ರಗಳ ಹಾಗೆ; ಕೞಕೞಮಾದುವು–ಚೆಲ್ಲಾಪಿಲ್ಲಿಯಾದುವು; ಅಯೋನಿ ಸಂಭವರೆ–ದ್ರೋಣಾಚಾರ್ಯರೇ; ಹೇಳಾಸಾಧ್ಯರಾದರ್–ಆಟದಲ್ಲಿ ಗೆಲ್ಲುವಂತೆ ಗೆಲ್ಲಲ್ಪಟ್ಟವ ರಾದರು.
೨೨. ಅಧಿಕರ್–ಅತಿಶಯರಾದ ಎಂದರೆ ಅಸಾಧ್ಯರಾದ, ಭೀಷ್ಮದ್ರೋಣಾಂಗ ನಾಯಕರ್–ಭೀಷ್ಮ ದ್ರೋಣ ಕರ್ಣರೆಂಬ ಸೇನಾಪತಿಗಳು, ಅೞಿದರ್–ಸತ್ತು ಹೋದರು; ಈಗಳ್–ಈಗ, ಇನ್ನುೞಿದರ್–ಇನ್ನು ಉಳಿದವರು, ಮಹಾರಥರ್–ಮಹಾರಥಿಕರು, ಅವರಿಂ–ಅವರಿಗಿಂತ, ಮೇಲೆಂಬನ್ನರ್ ಅಲ್ತೆ–ಉತ್ತಮರಾದಂಥವರನಲ್ಲವೆ? ಮುಂ– ಮೊದಲು, ಕೞಿದುದಱೊಳ್–ಅತೀತವಾಗಿರುವುದರಲ್ಲಿ, ಏಂ–ಏನು ಪ್ರಯೋಜನ? ನಷ್ಟಂನಷ್ಟಂ–ನಾಶವಾದದ್ದು ನಾಶವಾದದ್ದೇ, ಮೃತಂ ಮೃತಂ–ಸತ್ತದ್ದು ಸತ್ತದ್ದೇ; ಎಂಬುದು– ಎಂದು ಹೇಳುವುದು; ಇನ್ನೞಲದಿರ್–ಇನ್ನು ದುಃಖಿಸಬೇಡ; ಇಲ್ಲಿಂ–ಇಲ್ಲಿಂದ, ಮೇಲ ಪ್ಪುದಂ–ಮುಂದಾಗುವುದನ್ನು, ಭೂಪತಿ–ರಾಜನೆ, ಬಗೆ–ಆಲೋಚಿಸು, ಎಂದರೆ ಮುಂದೇ ನಾಗಬೇಕೆಂಬುದನ್ನು ಆಲೋಚಿಸು.
೨೩. ಇಱಿವೊಡೆ–ಯುದ್ಧ ಮಾಡುವ ಪಕ್ಷದಲ್ಲಿ, ಇನಿಬರುಂ–ನಾವಿಷ್ಟು ಜನರೂ, ನೆರಂ ಒಳೆಮ್–ಸಹಾಯಕ್ಕಿದ್ದೇವೆ. ಇಱಿ–ಯುದ್ಧಮಾಡು; ಕಲಹಂ–ಯುದ್ಧವು, ಅಪಾಯ ಬಹುಳಂ–ಅನೇಕ ಅಪಾಯಗಳನ್ನುಳ್ಳದ್ದು; ಇನ್ನುಂ–ಇನ್ನು ಕೂಡ, ನಯದತ್ತ–ನೀತಿಯತ್ತ, ಎಱಗುವೊಡೆ–ಒಲಿವ ಪಕ್ಷದಲ್ಲಿ, ಸಂಧಿ–ರಾಜಿಯು, ಹರಿಗನೊಳ್–ಅರ್ಜುನನಲ್ಲಿ, ಉಱುಗುಂ–ಇರುತ್ತದೆ ಎಂದರೆ ಸಂಧಿ ಮಾಡುವ ಪಕ್ಷದಲ್ಲಿ ಅರ್ಜುನನು ಸಮ್ಮತಿಸುವನು; ನೃಪತೀ–ರಾಜನೇ, ನಿನಗೆ, ಇವು–ಇವುಗಳು, ಎರಡೇ ಕಜ್ಜಂ–ಎರಡೇ ಕಾರ್ಯಗಳು.
ವಚನ : ಬೞಿಕ್ಕಿನ ನುಡಿಗೆ–ತರುವಾಯದ, ಆ ಮೇಲೆ ಹೇಳಿದ ಮಾತಿಗೆ; ಫಣಿ ಕೇತನಂ–ದುರ್ಯೋಧನ.
೨೪. ಪೞವಾಡಯ್ದನೆ–ಐದು ಹಳೆಯ ಗ್ರಾಮಗಳನ್ನೇ, ಬೇಡೆಯುಂ–ಬೇಡಿದರೂ, ಕುಡದ ನಾನ್–ಕೊಡದ ನಾನು, ಏನೆಂದು–ಏನೆಂಬುದಾಗಿ, ಸಂಧಾನಮಂ–ಸಂಧಿಯನ್ನು, ಗೞಿಯಿ ಪ್ಪೆಂ–ಘಟಿಸುವೆನು, ಉಂಟು ಮಾಡುವೆನು? ಅಂಗನೃಪನಂ–ಕರ್ಣನನ್ನು, ನೀಂ–ನೀನು, ಎತ್ತಿತಂದು–ಎತ್ತಿಕೊಂಡು ಬಂದು, ಎನ್ನ ಮುಂದೆ–ನನ್ನ ಎದುರಿಗೆ, ಇೞಿಪಲ್ಕೆ– ಇಳಿಸುವುದಕ್ಕೆ, ಆರ್ಪೊಡಂ–ಸಮರ್ಥನಾಗುವ ಪಕ್ಷದಲ್ಲಿ, ಗೞಿಯಿಪ್ಪೆಂ–ಉಂಟಾಗುವ ಹಾಗೆ ಮಾಡುತ್ತೇನೆ; ಕೃಪ–ಕೃಪನೇ, ನೀಂ–ನೀನು, ಆವುದಾಗಿ–ಏನೆಂಬುದಾಗಿ, ಯಾವು ದೆಂಬುದಾಗಿ, ಈ ಮಾತಂ–ಈ ಮಾತುಗಳನ್ನು, ಪೇೞ್ದಪ್ಪೆ–ಹೇಳುತ್ತೀಯೆ? ಇಂ ಉೞಿ– ಇನ್ನು ಬಿಡು; ಕಳದೊಳಂ–ಯುದ್ಧರಂಗದಲ್ಲಿಯೂ, ಕೌಂತೇಯರಂ–ಪಾಂಡವರನ್ನು, ಕಾಣ್ಬಂತು–ನೋಡುವ ಹಾಗೆ, ಎದುರಿಸುವ ಹಾಗೆ, ದುರ್ಯೋಧನನ್–ದುರ್ಯೋಧನ ಎಂಬ ಸಾರ್ಥಕವಾದ ಹೆಸರಿನವನು, ಅಲ್ಲನೇ–ನಾನಲ್ಲವೆ?
ವಚನ : ಜಳಧರ ಧ್ವನಿಯಂ–ಮೋಡದ ಶಬ್ದದಿಂದ ಎಂದರೆ ಗುಡುಗಿನ ಧ್ವನಿಯಿಂದ.
೨೫. ಕುಳಬಳ ಶೌರ್ಯಧೈರ್ಯಯುತರೆಲ್ಲರುಮಂ–ಕುಲ ಬಲ ಪರಾಕ್ರಮ ಧೈರ್ಯ ಗಳಿಂದ ಕೂಡಿದವರನ್ನೆಲ್ಲ, ಪೆಱಗಿಕ್ಕಿ–ಹಿಂದಕ್ಕಿಟ್ಟು ಎಂದರೆ ಉಪೇಕ್ಷೆ ಮಾಡಿ, ಕರ್ಣನಂ– ಕರ್ಣನನ್ನು ಕುರಿತು, ಪಳಯಿಸುತಿರ್ಪೆಯೇನೊ ಗಳ–ಪ್ರಲಾಪ ಮಾಡುತ್ತಿರುವೆಯೇನೋ, ದಿಟವಾಗಿಯೂ? ನಿನ್ನಯ ತಮ್ಮನ ನೆತ್ತರಂ–ನಿನ್ನ ತಮ್ಮನ ರಕ್ತವನ್ನು, ಭಯಂಗೊಳೆ–ಭಯ ವುಂಟಾಗುತ್ತಿರಲು, ಪವಮಾನಸೂನು–ಭೀಮಸೇನನು, ತವೆ–ನಾಶವಾಗುವಂತೆ, ಪೀರ್ದೆಡೆ ಯೊಳ್–ಹೀರಿದ ಸಮಯದಲ್ಲಿ, ಕಲಿಕರ್ಣಂ–ಶೂರನಾದ ಕರ್ಣ, ಅವನ–ಭೀಮನ, ಉರ್ಕಂ–ಗರ್ವವನ್ನು, ಏಕೆ ಮಿಳಮಿಳ ನೋಡುತಿರ್ದಂ–ಏಕೆ ಮಿಟಿಮಿಟಿ ನೋಡುತ್ತಿದ್ದನು? ಪೇೞ್–ಹೇಳು; ನಿನ್ನವೊಲ್–ನಿನ್ನ ಹಾಗೆ, ಇಳಾಧಿಪರುಂಟೆ–ರಾಜರು ಇರುವರೆ?
೨೬. ಅಂಬಿಗನೊಳ್–ದೋಣಿ ಹಾಯಿಸುವವನಲ್ಲಿ ಎಂದರೆ ಬೆಸ್ತನಲ್ಲಿ, ಇದು ಋಣ ಸಂಬಂಧಂ–ಈ ಕರ್ಮಾಧೀನ ಬಾಂಧವ್ಯ, ನಿನಗೆ, ಅಮೋಘಂ–ವ್ಯರ್ಥವಲ್ಲದೆ, ಆದುದು– ಆಯಿತು; ಇದಂ–ಈ ಸಂಬಂಧವನ್ನು, ಉೞಿದವರಾರ್ಗಂ–ಮಿಕ್ಕವರಿಗೆ ಯಾರಿಗೂ ಎಂದರೆ ಬೇರಾರಿಗೂ, [ಬಿಡಿಸಲ್ಕೇಂ]–ಬಿಡಿಸುವುದಕ್ಕೇನು, ಬರ್ಕುಮೆ–ಬರುತ್ತದೆಯೆ? ನೀಂ–ನೀನು, ಎನ್ನಂ–ನನ್ನನ್ನು, ಬೆಸಸುವುದು–ಅಪ್ಪಣೆಮಾಡುವುದು, ಆಂತರಂ–ಎದುರಾದ ವರನ್ನು, ತವೆ–ನಾಶವಾಗುವಂತೆ, ಕೊಲ್ವೆಂ–ಸಂಹಾರ ಮಾಡುತ್ತೇನೆ.
ವಚನ : ಪೞಿದು ನುಡಿದೊಡೆ–ನಿಂದಿಸಿ ಬಯ್ದರೆ; ಕೊಲ್ವನಿತುವರಂ–ಕೊಲ್ಲುವಷ್ಟರ ಮಟ್ಟಿಗೆ; ಬಗೆದು–ಭಾವಿಸಿ.
೨೭. ನಿನ್ನಿಂದಂ–ನಿನ್ನಿಂದ, ತ್ರಿಭುವನ ರಾಜ್ಯೋನ್ನತಿ–ಮೂರು ಲೋಕದ ಆಧಿಪತ್ಯದ ಆಧಿಕ್ಯವು, ಬಂದು, ಎನಗೆ–ನನಗೆ, ಸಾರ್ಗುಮಪ್ಪೊಡಂ–ಸೇರುವುದಾದ ಪಕ್ಷದಲ್ಲೂ, ಒಲ್ಲೆಂ–ನಾನು ಒಲ್ಲೆನು, ನನಗೆ ಬೇಡ; ನೀಂ–ನೀನು, ನುಡಿದು–ಬಯ್ದು, ಬರ್ದುಕಿದೈ– ಜೀವಿಸಿರುತ್ತೀಯೆ, ಪೆಱರ್–ಇತರರು, ಕರ್ಣನಂ–ಕರ್ಣನನ್ನು, ನುಡಿದು–ಬಯ್ದು, ಎನ್ನಿದಿ ರೊಳ್–ನನ್ನೆದುರು, ಬರ್ದುಕುವರೇ–ಜೀವದಿಂದಿರುತ್ತಾರೆಯೇ?
೨೮. ನಿನಗಂ ದಿನೇಶತನಯಂಗಂ–ನಿನಗೂ ಕರ್ಣನಿಗೂ, ನುಡಿ–ಮಾತು, ಎನ್ನಯ ಪಕ್ಕದೆ–ನನ್ನ ಪಕ್ಕದಲ್ಲಿ ಎಂದರೆ ನನ್ನೆದುರಿಗೆ, ಆದೊಡಂ–ಆದರೂ, ಮಿಡುಕದೆ–ಅಲು ಗಾಡದೆ ಎಂದರೆ ಸಮಾಧಾನ ಚಿತ್ತನಾಗಿ, ಕೇಳ್ವೆಂ–ಕೇಳುತ್ತೇನೆ; ಅಲ್ಲಿ ಇರ್ವರುಂ ಸಮಂ– ಆ ಸಂದರ್ಭದಲ್ಲಿ ಇಬ್ಬರೂ ಸಮಾನರು; ಆತಂ–ಆ ಕರ್ಣ, ಅತೀತನಾದ–ಸತ್ತ, ಪಿಂಬಡಿ ನೊಳ್–ತರುವಾಯದಲ್ಲಿ, ಅನಂತರದಲ್ಲಿ, ಅದೆಂತು–ಅದು ಹೇಗೆ, ಪೞಿಯೆ–ನೀನು ನಿಂದಿಸಲು, ಕೇಳ್ವೆನೋ–ಕೇಳುತ್ತೇನೆಯೋ? ಪೇೞ್–ಹೇಳು; ಕೇಳ್ದೊಡೆ–ಹಾಗೆ ಕೇಳಿದರೆ, ಚಿಃ–ಛೀ, ಪೆಱಂಪೆಱಂ–ಬೇರೆ ಇತರರು, ನುಡಿದೊಡೆ–ಬಯ್ದರೆ, ಕೇಳ್ದಂ–ಕೇಳಿದನು, ಎಂದು, ಎನಗೆ–ನನಗೆ, ನನ್ನ ವಿಷಯದಲ್ಲಿ, ಸಗ್ಗದೊಳಿರ್ದ–ಸ್ವರ್ಗದಲ್ಲಿರುವ, ಇನಾತ್ಮಜಂ– ಕರ್ಣ, ನೋಯನೆ–ನೊಂದುಕೊಳ್ಳುವುದಿಲ್ಲವೆ?
ವಚನ : ಕೂರ್ಮೆಗಂ–ಸ್ನೇಹಕ್ಕೂ, ಪ್ರೀತಿಗೂ, ತಕ್ಕೂರ್ಮೆಗಂ–ಯೋಗ್ಯತಾತಿಶಯಕ್ಕೂ; ದೊರೆಯಪ್ಪುದು–ಸಮಾನವಾಗುತ್ತದೆ; ಅರಾತಿ ಸೈನ್ಯಮಂ–ಶತ್ರುಸೈನ್ಯವನ್ನು;
೨೯. ಇನತನಯಂಗೆ–ಕರ್ಣನಿಗೆ, ಸಾವುಂ–ಮರಣವೂ, ಎನಗೆ–ನನಗೆ, ಇನಿತೊಂದು– ಇಷ್ಟೊಂದು, ಅೞಲು–ವ್ಯಥೆಯೂ, ದಿನೇಶಪುತ್ರನೆ–ಕರ್ಣನೆ, ನಿಮಗೆ, ಇಂಬುಕೆಯ್ಯದು ದಱಿಂ–ಹೇಳಿದ್ದನ್ನು ಮಾಡದೆ ಇದ್ದುದರಿಂದ, ದೊರೆಕೊಂಡುದು–ಉಂಟಾಯಿತು; ನಿಮ್ಮನು ಬಲರಿಂದಮಲ್ಲದೆ–ನಿಮ್ಮ ಬೆಂಬಲದಿಂದಲ್ಲದೆ, ವೀರಲಕ್ಷ್ಮಿ–ಜಯಲಕ್ಷ್ಮಿಯು, ಎನಗೆ– ನನಗೆ, ಆಗದುದಲ್–ಆಗುವುದಿಲ್ಲವಲ್ಲ; ಎನಗೆಯೆ–ನನಗೆ, ಎಂದರೆ ನಾನೇಯೇ, ಸಲೆ– ಸಲ್ಲುವಂತೆ, ಪಟ್ಟಮಂ–ಸೇನಾಪತಿಯ ಪಟ್ಟವನ್ನು, ಸಮಂತು–ಚೆನ್ನಾಗಿ, ಮಾೞ್ಪೊಡೆ– ಮಾಡುವ ಪಕ್ಷದಲ್ಲಿ, ಏ ತೊದಳೋ–ಏನು ಮಾತೋ, ನೀಮೆ–ನೀವೆ, ದಲ್–ದಿಟ ವಾಗಿಯೂ, ವೀರಪಟ್ಟಮಂ–ಸೇನಾಪತಿ ಪಟ್ಟವನ್ನು, ಆಂಪುದು–ಧರಿಸುವುದು, ತಾಳುವುದು.
ವಚನ : ಇಂತಿರ್ದ–ಹೀಗಿದ್ದ, ಇನಿಬರೊಳ್–ಇಷ್ಟು ವೀರರಲ್ಲಿ, ಆನ್ ಆವಾಳ ದೊರೆಯೆಂ–ನಾನು ಯಾವ ಶೂರನಿಗೆ ಸಮಾನ; ಬೆಸನಂ–ಕಾರ್ಯವನ್ನು; ಸೈಪುಂ–ಪುಣ್ಯವೂ;
೩೦. ಮುಟ್ಟುಗಿಡೆ–ಉಪಕರಣ ಅಥವಾ ಆಯುಧಗಳು ನಾಶವಾಗಲು, ತಾನೆ–ತಾನೇ, ತನ್ನಂ–ತನ್ನನ್ನು, ಕಟ್ಟಿಸಿಕೊಳ್ವಂತೆ–ಕಟ್ಟಿಸಿಕೊಳ್ಳುವ ಹಾಗೆ ಎಂದರೆ ಬಂಧನಕ್ಕೆ ಒಳಪಡುವಂತೆ, ಶಲ್ಯಂ–ಶಲ್ಯನು, ಬೀರವಟ್ಟಮಂ–ವೀರಪಟ್ಟವನ್ನು, ಆಗಳ್–ಆಗ, ಕಟ್ಟಿಸಿ ಕೊಂಡಂ– ಕಟ್ಟಿಸಿಕೊಂಡನು; ಕಟ್ಟಿದುದಂ–ವಿಧಿ ಮೊದಲೇ ಕಟ್ಟಿರುವುದನ್ನು, ಕಳೆಯಲ್–ಬಿಡಿಸಲು, ಆಗಂ–ಯಾರಿಗೂ, ಏಂ ತೀರ್ದಪುದೇ–ಏನು ಸಾಧ್ಯವಾಗುತ್ತದೆಯೇ? “ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್” ಎಂಬ ಉಕ್ತಿಯನ್ನು ಹೋಲಿಸಿ.
ವಚನ : ಸಂಚಳಿತ ಚಾರಚಕ್ಷುಗಳಿಂದಂ–ಸಂಚರಿಸುವ ಗೂಢಚಾರರ ಮೂಲಕ; ನರಕಾಂತಕಂಗೆ–ಕೃಷ್ಣನಿಗೆ, ಬೞಿಯನಟ್ಟಿ–ದೂತನನ್ನು ಕಳುಹಿಸಿ; ನಿಶಾಟರಾಜ ಕಿರೀಟ ಕೋಟಿ ತಾಟಿತಭುಜಂ–ರಾಕ್ಷಸ ರಾಜರ ಕಿರೀಟಾಗ್ರದಿಂದ ಹೊಡೆಯಲ್ಪಟ್ಟ ಬಾಹುಗಳುಳ್ಳ; ಚತುರ್ಭುಜಂ–ಕೃಷ್ಣನು.
೩೧. ಅದಟುಂ–ಪರಾಕ್ರಮವೂ, ಕಾರ್ಮುಕ ವಿದ್ಯೆಯುಂ–ಬಿಲ್ವಿದ್ಯೆಯೂ; ಭುಜಬಳಾ ವಷ್ಟಂಭಮುಂ–ಬಾಹುಬಲದ ಗರ್ವವೂ, ಶಲ್ಯಂಗೆ–ಶಲ್ಯನಿಗೆ, ಸಂದು–ಸೇರಿ, ನಿಂದುದು– ನಿಂತಿತು, ಎಂದರೆ ಸ್ಥಿರವಾಯಿತು; ನಮಗಂ–ನಮಗೂ, ಅವನೊರ್ವಂ–ಅವನೊಬ್ಬನು, ಹೃಚ, ಲ್ಯನಲ್ತೆ–ಹೃದಯಕ್ಕೆ ನಾಟುವ ಕಠಾರಿಯಲ್ಲವೆ? ಆತಂಗೆ–ಅವನಿಗೆ, ಕಟ್ಟಿದಿರೊಳ್– ಎದುರಿನಲ್ಲಿ, ನಿಲ್ವೊಡೆ–ನಿಲ್ಲುವ ಪಕ್ಷದಲ್ಲಿ, ನೀನೆ–ನೀನೇ, ನಿಲ್ವೆ–ನಿಲ್ಲುವೆ; ಅದಱಿಂ– ಆದ್ದರಿಂದ (ಅದರಿಂದ), ನಿಶ್ಶಲ್ಯಮಪ್ಪಂತು–ಶಲ್ಯರಹಿತವಾಗುವ ಹಾಗೆ, ಅಗಾಧ ಸಾಗರ ಪರೀತಾಶೇಷ ಭೂಭಾಗಮಂ–ಅತಿ ಆಳವಾದ ಕಡಲು ಬಳಸಿರುವ ಈ ಭೂಭಾಗವನ್ನು, ನಿನ್ನೊದವಿಂ–ನಿನ್ನ ಸಿದ್ಧತೆಯಿಂದ, ಮಾೞ್ಪುದು–ಮಾಡುವುದು.
ವಚನ : ಸಿದ್ಧಿತ್ರಯಂಗಳ್–ಮೂರು ಸಿದ್ಧಿಗಳು, ಎಂದರೆ ರಾಜನಿಗಿರುವ ಪ್ರಭುಶಕ್ತಿ, ಮಂತ್ರಶಕ್ತಿ, ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳಿಂದ ಸಾಧ್ಯವಾಗುವ ಪುರುಷಾರ್ಥಗಳನ್ನುಳ್ಳ ಪ್ರಭುಸಿದ್ಧಿ, ಮಂತ್ರಸಿದ್ಧಿ, ಉತ್ಸಾಹಸಿದ್ಧಿ ಎಂಬ ಮೂರು ಸಿದ್ಧಿಗಳು; (ಮಾಘ ಕವಿಯ ಶಿಶುಪಾಲವಧಂ ೨–೨೬ನೆಯ ಪದ್ಯವನ್ನು ನೋಡಿ), ಆಯತ್ತ–ವಶವಾದ, ಅಧೀನವಾದ;
೩೨. ಆಂ–ನಾನು, ದಿಟಮಾಗಿ–ಸತ್ಯವಾಗಿ, ಶಲ್ಯನ, ಅಳವಂ–ಶೌರ್ಯವನ್ನು; ಮುನ್ನೆ– ಮೊದಲು, ನೆಱೆ–ಪೂರ್ಣವಾಗಿ, ಅಱಿದಿರ್ದುಂ–ತಿಳಿದಿದ್ದೂ, ಎನ್ನ ತಮ್ಮಂದಿರಂ–ನನ್ನ ತಮ್ಮಂದಿರನ್ನು, ಏಕೆ ಕಾದಿಸುವೆನ್–ಏಕೆ ಯುದ್ಧ ಮಾಡಿಸುವೆನು? ಆನೆ–ನಾನೆ, ಮಹಾಜಿ ಯೊಳ್–ಮಹಾಯುದ್ಧದಲ್ಲಿ, ಆಂಪೆಂ–ಎದುರಿಸುತ್ತೇನೆ, ಮುಕುಂದ–ಕೃಷ್ಣನೇ, ಅಂತೆಗೆಯ್–ಹಾಗೆಯೇ ಮಾಡು; ಎನಗೆ ಪಟ್ಟಮಂ ಕಟ್ಟು–ನನಗೆ ಪಟ್ಟವನ್ನು ಕಟ್ಟು, ಎಂದು–ಎಂದು ಹೇಳಿ, ಮುಕುಂದವೃಂದಂ–ಮುಕುಂದವೆಂಬ ಒಂದು ಬಗೆಯ ಭೇರಿಯ ಸಮೂಹವು, ಒಂದೊಂದಱೊಳೊಂದಿ–ಒಂದೊಂದರಲ್ಲಿ ಸೇರಿ, ಮಿಕ್ಕು–ಮೀರಿ, ಎಸೆಯೆ– ಶಬ್ದ ಮಾಡಲು, ಆ ವಿಭು–ಆ ರಾಜ ಧರ್ಮಪುತ್ರ, ಬೀರಪಟ್ಟಮಂ–ವೀರಪಟ್ಟವನ್ನು, ತಾಳ್ದಿದಂ–ತಾಳಿದನು.
ವಚನ : ನಿಷ್ಠಿತಾಹವವ್ಯಾಪಾರನಾಗಿ–ನಿಶ್ಚಿತವಾದ ಯುದ್ಧೋದ್ಯೋಗವುಳ್ಳವನಾಗಿ; ದರ್ಭಶಯನದೊಳ್–ದರ್ಭೆಯೆಂಬ ಹುಲ್ಲಿನ ಹಾಸಿಗೆಯಲ್ಲಿ; ಒಱಗಿ–ಮಲಗಿ; ಜಾವ ದೊಳ್–ಯಾಮದಲ್ಲಿ, ಹೊತ್ತಿನಲ್ಲಿ;
೩೩. ಕಡಲುರಿಯಂತೆ–ನೀರ್ಗಿಚ್ಚಿನಂತೆ ಎಂದರೆ ಬಡಬಾಗ್ನಿಯಂತೆ, ಅಕಾಲ ಘನ ಗರ್ಜನೆಯಂತೆ–ಕಾಲವಲ್ಲದ ಕಾಲದ ಗುಡುಗಿನಂತೆ, ಸಮಸ್ತ ದಿಕ್ತಟಂ–ಎಲ್ಲ ದಿಕ್ಪ್ರದೇಶಗಳೂ, ಪಿಡುಗುವಿನಂ–ಸಿಡಿಲಿನಂತೆ ಸಿಡಿಯುತ್ತಿರಲು, ರಣಾನಕರವಂಗಳ್–ರಣಭೇರಿಗಳ ಸದ್ದುಗಳು, ಅಸುಂಗೊಳೆ–ತೀವ್ರವಾಗಿ, ಬೇಗದಿಂ–ಬೇಗನೆ, ಪರ್ವಿ–ವ್ಯಾಪಿಸಿ, ಸಡಗರದೇೞ್ಗೆ ಯುಂ–ಸಂಭ್ರಮಾತಿಶಯವೂ, ಕಳಕಳ ಧ್ವನಿಯುಂ–ಗದ್ದಲವೂ, ಬೆರಸು–ಕೂಡಿಕೊಂಡು, ಆಡುವಂತೆ–ಸಂಚರಿಸುವ ಹಾಗೆ, ಎರೞ್ಪಡೆಯೊಳಂ–ಉಭಯ ಸೈನ್ಯಗಳಲ್ಲೂ, ಒರ್ಮೊದಲೆ– ಒಟ್ಟಿಗೇ, ಅಲ್ಲಕಲ್ಲೊಳಂ–ಅಲ್ಲ ಕಲ್ಲೋಲವು, ಪಲ್ಲಣಮಿಕ್ಕಿಪುದು–ಜೀನನ್ನು ಕುದುರೆ ಗಳಿಗೆ ಹಾಕಿಸುತ್ತಿದೆ.
ವಚನ : ಉಪಾರೂಢ ವಿಶೇಷಕರುಂ–ಜೊತೆಯಲ್ಲಿ ಹತ್ತಿ ಕುಳಿತ ಇತರ ಮುಖ್ಯಸ್ಥರೂ; ಅವತರಿಸೆ–ಇಳಿಯಲು; ಮಾರ್ವಲಕ್ಕೆ–ಪ್ರತಿಯಾದ ಸೈನ್ಯಕ್ಕೆ, ಶತ್ರುಸೈನ್ಯಕ್ಕೆ;
೩೪. ಮೆಯ್ ಮೆಯ್–ದೇಹ ದೇಹಗಳು, ಚಯ್ ಚಯ್ ಎಂಬಾಗಳ್–ಚಯ್ ಚಯ್ ಎಂದು ಘರ್ಷಣೆ ಮಾಡುತ್ತಿರುವಾಗ, ಚಲದಿಂ–ಮಾತ್ಸರ್ಯದಿಂದ, ಮುಟ್ಟಿ–ಸೋಕಿ, ಪೊಣರ್ದು–ಜೋಡಿಗಳಾಗಿ ಸೇರಿ, ತಳ್ತು–ಎದುರಿಸಿ, ಇಱಿವ–ಹೊಯ್ದಾಡುವ, ಉರ್ಕಿಂ– ಕೊಬ್ಬಿನಿಂದ, ಕೆಯ್ ಚಚ್ಚರಿಕೆಯ–ಕೈಗಳ ಚಟುವಟಿಕೆಯ, ತೀವ್ರತ್ವದ, ಚಲದಿಂ–ರಭಸ ದಿಂದ, ಕೆಯ್–ಕೈಗಳು, ಚಳಿವಿನಂ–ಸುಸ್ತಾಗುತ್ತಿರಲು, ಎರಡುಂ ಬಲದೊಳ್–ಎರಡು ಸೈನ್ಯ ಗಳಲ್ಲೂ, ಅದಟರ್–ಶೂರರು, ಇಱಿದರ್–ಕಾಳಗ ಮಾಡಿದರು.
೩೫. ಕರಿ–ನೀರಾನೆಗಳು, ಮಕರಾಹತ ಹತಿಯಿಂ–ಮೊಸಳೆಗಳ ಅಥವಾ ತಿಮಿಂಗಿಲಗಳ ಏಟಿನಿಂದ, ಬಿರಿದು–ಸೀಳಿ, ಅ [ಲ] ಱುವ–ನಾಶವಾಗುವ, ಭೈತ್ರದಂತೆ–ದೋಣಿಯಂತೆ, ವಿವಿಧಾಯುಧದಂತುರಿತಂಗಳ್–ಬಗೆಬಗೆಯಾದ ಆಯುಧಗಳು, ವ್ಯಾಪಿಸಿ ನಾಟಿರುವ, ವರೂಥಕರಿ ನಿಕರಂಗಳ್–ರಥಗಳ ಆನೆಗಳ ಸಮೂಹಗಳು, ಸಂಗರಜಳನಿಧಿಯೊಳ್–ಯುದ್ಧ ವೆಂಬ ಸಮುದ್ರದಲ್ಲಿ, ಅೞಿದುವು–ನಾಶವಾದುವು.
೩೬. ಎರಡುಂ ದೆಸೆಯೊಳಂ–ಎರಡು ಕಡೆಗಳಲ್ಲೂ ಎಂದರೆ ಉಭಯ ಪಕ್ಷಗಳಲ್ಲೂ, ಒಂದಕ್ಷೋಹಿಣಿ ಬಲಂ–ಒಂದಕ್ಷೋಹಿಣಿ ಸೈನ್ಯವು; ಉೞಿದುವು–ಉಳಿದುಕೊಂಡವು; ಭಾರತಂ–ಭಾರತ ಯುದ್ಧವು, ಅನಿತೆ–ಅಷ್ಟೇ; ಎಮಗೆ–ನಮಗೆ, ಇಂ–ಇನ್ನು, ಇಂದು– ಈ ದಿನ, ಉಜ್ಜವಣೆ ದಲ್–ಉದ್ಯಾಪನೆಯಲ್ಲವೆ ಎಂದರೆ ಮುಕ್ತಾಯವಲ್ಲವೆ, ಎಂದು– ಎಂದು ಹೇಳುತ್ತ, ಅದಟು–ಪರಾಕ್ರಮವು, ಒಂದುತ್ತರಮಾಗೆ–ಒಂದು ಹೆಚ್ಚಳವಾಗುತ್ತಿ ರಲು, ಕಟ್ಟಾಳ್ಗಳ್–ಶೂರರು, ಕಾದಿದರ್–ಯುದ್ಧ ಮಾಡಿದರು.
೩೭. ಸ್ಫುರಿತ ಶರನಿಕರ ಪಾತಿತ–ಹೊಳೆಯುವ ಬಾಣ ಸಮೂಹಗಳಿಂದ ಬೀಳಿಸಲ್ಪಟ್ಟ, ನರೋತ್ತಮಾಂಗಂ–ಮನುಷ್ಯರ ತಲೆಗಳನ್ನುಳ್ಳ, ಕಬಂಧ ನಾಟಕರಂಗಂ–ಮುಂಡಗಳು ಕುಣಿ ದಾಡುವ ರಂಗಸ್ಥಳವಾಗಿರುವ, ಸ್ಫುರಿತನವರುಧಿರ ರಂಗತ್ತರಂಗಂ–ಹೊಳೆಯುವ ಹೊಸ ರಕ್ತದ ಚಂಚಲವಾದ ಅಲೆಗಳನ್ನುಳ್ಳ, ವೀರಭಟ ರಣರಂಗಂ–ವೀರ ಯೋಧರ ಯುದ್ಧರಂಗವು, ಒಪ್ಪಿದುದು–ಸೊಗಸಾಯಿತು. ಕಬಂಧ ನಾಟಕ=ಕಬಂಧ ನೃತ್ಯ; ಯುದ್ಧದಲ್ಲಿ ಒಂದು ಸಾವಿರ ಶೂರರು ಸತ್ತಾಗ ಅಥವಾ ಒಬ್ಬನು ಸಾವಿರ ಶೂರರನ್ನು ಕೊಂದಾಗ, ಆಡುವ ಪೈಶಾಚ ನೃತ್ಯ ಎಂದು ‘ಶಿಲಪ್ಪದಿಕಾರ’ ದಲ್ಲಿ ಹೇಳಿದೆಯಂತೆ (Introduction 21) ; ಯುದ್ಧದಲ್ಲಿ ಸಾವಿರ ಭಟರು ಸತ್ತಾಗ ಅವುಗಳಲ್ಲಿ ಒಂದು ಮುಂಡ ಮೇಲಕ್ಕೆ ಹಾರುತ್ತದಂತೆ: “ಮನುಷ್ಯಾ ಣಾಂ ಸಹಸ್ರೇಷು ಹತೇಷು ಹತಮೂರ್ಧಸು । " ತದಾವೇಶಾತ್ಕಬಂಧಃ ಸ್ಯಾದೇಕೋ ಮೂರ್ಧಾ ಕ್ರಿಯಾನ್ವಿತಃ ॥
ವಚನ : ಮುಂಬಗಲ್ವರಂ–ಹಗಲಿನ ಮುಂಭಾಗದವರೆಗೂ; ತುಮುೞೆ ಕಾದುವ– ತುಮುಲ ಯುದ್ಧವನ್ನು ಮಾಡು (?), ಸಮರಭರಂ–ಯುದ್ಧದ ವೇಗವು; ಮುಮ್ಮೞಿಸಿ– ಮುಂದೆ ನುಗ್ಗಿ (?); ಕಲಿಕೆಯ–ವಿದ್ಯೆಯನ್ನುಳ್ಳ ಎಂದರೆ ಪ್ರವೀಣರಾದ;
೩೮. ಕಡುಕೆಯ್ದು–ತೀವ್ರತೆಯನ್ನು ತೋರಿಸಿ, ಒಂದೊರ್ವರೊಳ್–ಒಬ್ಬರೊಬ್ಬರಲ್ಲಿ, ತಳ್ತಿಱಿವ–ಸಂಘಟ್ಟಿಸಿ ಯುದ್ಧ ಮಾಡುವ, ಬಯಕೆಯಿಂ–ಅಪೇಕ್ಷೆಯಿಂದ, ದಿವ್ಯಬಾಣಾದಿ ಗಳ್ಗಂ–ಶ್ರೇಷ್ಠವಾದ, ಬಾಣವೇ ಮುಂತಾದುವುಗಳಿಗೂ ಪೊಡೆವಟ್ಟುಂ–ನಮಸ್ಕರಿಸಿಯೂ, ಸೂತರಂ–ಸಾರಥಿಗಳನ್ನು, ಚೋದಿಸಿಂ–ರಥವನ್ನು ಮುಂದಕ್ಕೆ ಹಾಯಿಸಿರಿ, ಎನುತುಂ–ಎಂದು ಹೇಳುತ್ತ, ಅಗುರ್ವುರ್ವೆ–ಭಯವು ಅಧಿಕವಾಗಲು ಕೆಯ್ಮಿಕ್ಕು–ಕೈಮೀರಿ, ಶಕ್ತಿಮೀರಿ, ಕಾದಲ್–ಯುದ್ಧಮಾಡುವುದಕ್ಕೆ, ನಡೆತರ್ಪ–ಬರುವ, ಆ ವೇಗದೊಳ್–ಆ ಬಿರುಸಿನಲ್ಲಿ, ಮುಮ್ಮೞಿಸಿದ–ಮುಂದಕ್ಕೆ ಚಾಚಿ (?), ಪಲವುಂ ರಾಜಚಿಹ್ನಂಗಳಂ–ಹಲವು ರಾಜ ಲಾಂಛನ ಗಳನ್ನು, ಬೆಳ್ಗೊಡೆಗಳ್–ಶ್ವೇತಚ, ತ್ರಿಗಳು, ತಳ್ಪೊಯ್ದು–ತಾಗಿ, ಚಳತ್ ಚಂದ್ರಕ–ಅಲುಗಾಡು ತ್ತಿರುವ ನವಿಲು ಗರಿಗಳನ್ನುಳ್ಳ, ಛತ್ರಪಿಂಡಂ–ಛತ್ರಿಗಳ ಸಮೂಹ, ಏಂ ಕಣ್ಗೊಳಿಸಿದುದೋ– ಏನು ಆಕರ್ಷಕವಾಯಿತೋ!
ವಚನ : ಪೞವಿಗೆಯ–ಧ್ವಜದ; ಕುಱುಪುಗಳಿಂ–ಕುರುಹುಗಳಿಂದ; ಮಂಡಲ, ಭ್ರಾಂತ, ಉದ್ಭ್ರಾಂತ, ಸ್ಥಿತಚಕ್ರ –ಈ ನಾಲ್ಕು ರಥವನ್ನು ನಡೆಸುವ ರೀತಿಗಳು, ಇವು ರಥಶಾಸ್ತ್ರದ ಪರಿಭಾಷೆ ಇರಬಹುದು; ಆಲೀಢ–ಬಿಲ್ಗಾರನು ಕುಳಿತುಕೊಳ್ಳುವ ಒಂದು ಭಂಗಿ; ಪೂರ್ವಮಾ ಕುಂಚಿತಂ ಪಾದಂ ಚಾಪಸ್ಥಾನಾಂಗ ಯೋಜಿತಂ । ತಿರ್ಯಕ್ಪಸಾರಿತಂ ಕೃತ್ವಾ ಪೃಷ್ಠೇ ಪಾದಂ ತಥಾಪರಂ ॥ ಅಂಗುಷ್ಠಃ ಪೂರ್ವಪಾದಸ್ಯ ಪಶ್ಚಾತ್ ಪಾದ ಕನಿಷ್ಠಿಕಾ, ವಿತಸ್ತಿಪಂಚಕಂ ಮಧ್ಯಂ ತಯೋರಾಲೀಢಕಂ ಭವೇತ್–ಇತಿ ಸೋಮ ಭೂಭುಜಃ. ಬಲಗಾಲನ್ನು, ಮುಂದಕ್ಕೆ ಮಡಿಸಿಕೊಂಡು ಎಡಗಾಲನ್ನು ಹಿಂದಕ್ಕೆ ಮಡಿಸಿ ಕುಳಿತುಕೊಳ್ಳುವುದು; ಪ್ರತ್ಯಾಲೀಢವು ಆಲೀಢಕ್ಕೆ ವ್ಯತ್ಯಾಸವಾದ ಆಸನ ಎಂದರೆ ಬಲಗಾಲನ್ನು ಹಿಂದಕ್ಕೆ ಮಡಿಸಿ ಎಡಗಾಲನ್ನು ಮುಂದಕ್ಕೆ ಮಡಿಸಿ ಕುಳ್ಳಿರುವುದು; ಸಮಪಾದ–ವಿತಸ್ತ್ಯಂತರ ಮಾತ್ರಾತು ಸಮೌಪಾದೌ ಪ್ರಯೋಜಯೇತ್–ಸಮಾನಾಂತರದಲ್ಲಿ (೨೪ ಅಂಗುಲ) ಪಾದಗಳನ್ನಿಟ್ಟು ನಿಲ್ಲುವುದು. ಪಂಪನು ಈ ಮೂರು ಆಸನಗಳನ್ನು ಮಾತ್ರ ಹೇಳಿದ್ದಾನೆ; ಇವುಗಳ ಜೊತೆಗೆ ವೈಶಾಖ, ಮಣ್ಡಲ, ಎಂಬೆರಡೂ ಸೇರಿ ಒಟ್ಟು ಐದಾಗುತ್ತವೆ; ರನ್ನನು ವೈಶಾಖಕದೆಡೆಯಲ್ಲಿ ವೈಷ್ಣವ ಎಂದು ಹೇಳಿದ್ದಾನೆ (ಗದಾ. ೮–೧ ಗ).
೩೯. ಈ ಅಕ್ಕರದಲ್ಲಿ ಬಗೆಬಗೆಯ ಬಾಣಗಳನ್ನು ಹೇಳುವ ಶಬ್ದಗಳಿವೆ; ಅವುಗಳ ಅರ್ಥ, ಕೆಲವೆಡೆ ಅವುಗಳ ರೂಪ–ಇವೆರಡರಲ್ಲೂ ಅನಿರ್ದಿಷ್ಟತೆಯಿದೆ ಎಂದರೆ ಸರಿಯಾಗಿ ಗೊತ್ತಾಗು ವುದಿಲ್ಲ. ನೆಱೆದು–ಸಮರ್ಥರಾಗಿ, ನಿರ್ವಾಯಂ–ಬಾಯಿಲ್ಲದಿರುವ ಬಾಣ ಎಂದರೆ ಅಲಗಿಲ್ಲದ ಬಾಣ?, ನರುವಾಯಂ?, ಮುಂಮೊನೆ–ಮುಂದುಗಡೆ ಮೊನಚಾಗಿರುವ ಬಾಣ?; ನೆರಕೆ=ನೇರಿಕೆ–ಕತ್ತರಿಸುವ ಬಾಣ? ನಾರಾಚಂ–ತಕ್ಕಡಿಯ ಮುಳ್ಳಿನಂತಿರುವ ಬಾಣ?, ತಗರ್ತಲೆಯಂ–ಒಂದು ಬಾಣ? ನೆಱನನಱಪ ಕಣೆ–ಮರ್ಮಸ್ಥಾನ ಹುಡುಕುವ ಬಾಣ ಎಂದರೆ ಮರ್ಮಭೇದಿ ಬಾಣ? ಗೆಲೆಯಂಬು–?, ಕಕ್ಕಂಬು–?, ಕೆಲ್ಲಂಬು–?, ಮೊನೆಯಂಬು–ಮೊನಚಾದ ಬಾಣ?; ತಿರೆಕಾಣ್ಬಂ–ನೆಲವನ್ನು ಭೇದಿಸಿಕೊಂಡು ಹೋಗುವ ಬಾಣ?, ಪೆಱೆಯಮುಱಿಗಂ–ಅರ್ಧಚಂದ್ರನ ಚೂರಿನಂತಿರುವ ಬಾಣ? ಕಣಕೆನೆ ವೋಪಂಬು–ಕಣಕ್ ಎಂದು ಹೋಗುವ ಬಾ (?), ಕವಲಂಬು–ಕವಲಾಗಿರುವ ಬಾಣ, ಎಂಬ–ಎನ್ನುವ, ಅಂಕದಂಬು–ಹೆಸರುವಾಸಿಯಾದ ಬಾಣಗಳು, ಎತ್ತಲುಂ–ಎಲ್ಲೆಲ್ಲೂ, ತುಱುಗಿ–ಗುಂಪಾಗಿ, ನಡುವಿನಂ–ನಾಟುತ್ತಿರಲು, ಸಾರ್ದುಸಾರ್ದು–ಹತ್ತಿರ ಹತ್ತಿರ ಬಂದು, ಅಥವಾ ಪಾರ್ದು ಪಾರ್ದು–ನೋಡಿ ನೋಡಿ, ಗುರಿಯಿಟ್ಟು, ಎಚ್ಚೆಚ್ಚು–ಪ್ರಯೋಗ ಮಾಡಿ ಮಾಡಿ, ಅತಿರಥರ್–ಅತಿರಥರೆಂಬ ವೀರರು, ಒಂದು ಜಾವಂ–ಒಂದು ಜಾವದ ಹೊತ್ತು, ಕಾದಿದರ್–ಹೋರಾಡಿದರು.
ವಚನ : ಏವದೊಳ್–ಮುಳಿಸಿನಲ್ಲಿ; ಮಾರ್ಕೊಂಡು–ಪ್ರತಿಭಟಿಸಿ.
೪೦. ತನ್ನದೊಣೆಯಂಬುಗಳ್–ತನ್ನ ಬತ್ತಳಿಕೆಯ ಬಾಣಗಳು, ತವುವನ್ನೆಗಂ–ಮುಗಿದು ಹೋಗುವವರೆಗೂ, ಎಚ್ಚು–ಬಾಣಗಳನ್ನು ಪ್ರಯೋಗಿಸಿ, ಅಂಬು–ಬಾಣಗಳು, ತಪ್ಪೊಡೆ– ನಾಶವಾದರೆ, ತೀರಿಹೋದರೆ, ಇಂ–ಇನ್ನು, ಎನಗೆ–ನನಗೆ, ಅಭಿವಾದಯೆನಲ್ಕೆ–ನಮಸ್ಕಾರ ಎಂದು ಹೇಳಲು, ಇದು ಪದಂ–ಇದು ಸಮಯ, ಎಂದು–ಎಂದು ಹೇಳಿ, ಆಗಳ್–ಆಗ, ಕರಂ ಸುರರ್ ನಗೆ–ದೇವತೆಗಳು ವಿಶೇಷವಾಗಿ ನಗುತ್ತಿರಲು, ಅರಿಗನ–ಅರ್ಜುನನ, ಇದಿರ್ಗೆ– ಎದುರಿನಿಂದ, ತೊಲಗಿದಂ–ಹೊರಟು ಹೋದನು.
೪೧. ದಾವಶಿಖಿಶಿಖೆಯಂ–ದಾವಾಗ್ನಿಯ ಜ್ವಾಲೆಯನ್ನು, ಇಳಿಪುದು–ಕೀಳ್ಮಾಡುತ್ತಿರು ವುದು, ಇದು, ಆವಸರಲ್–ಯಾವ ಬಾಣ, ಪೇೞಿಂ–ಹೇಳಿರಿ, ಎನಿಪ–ಎನ್ನಿಸುವ, ಸರಲಿಂ– ಬಾಣದಿಂದ, ಸಹದೇವಂ–ಸಹದೇವನು, ಮನದ ಏವದಿಂ–ಮನಸ್ಸಿನ ಕೋಪದಿಂದ, ದೇವರ ಪಡೆರಾಗಿಸೆ–ದೇವತೆಗಳ ಗುಂಪು ಸಂತೋಷಿಸುತ್ತಿರಲು, ಶಕುನಿಯಂ–ಶಕುನಿಯನ್ನು, ಅವಯ ವದಿಂ–ಶ್ರಮವಿಲ್ಲದೆ, ತಱಿದಂ–ಕತ್ತರಿಸಿದನು, ಕೊಂದನು.
ವಚನ : ಅತಿರ ಭುಕ್ತಿ–ಒಂದು ದೇಶ; ಬಿಂದಂಗಳಂತೆ–ರಾಶಿಯಂತೆ, ಬಿಂ (ಸಂ) ವೃಂದ; ಅಥವಾ ಬಿಂದುಗಳಂತೆ–(ಹುಲ್ಲಿನ ಮೇಲೆ) ಹನಿಗಳಂತೆ; ನೆಲಕ್ಕೆ–ಭೂಮಿಗೆ, ಸೋವತಂ ಮಾಡಿದಂ–ಆಹಾರವನ್ನಾಗಿ ಮಾಡಿದನು, ಬಲಿ ಕೊಟ್ಟನು; ಅಂತಕಾನನಮಂ– ಯಮನ ಮುಖವನ್ನು; ಎಯ್ದಿಸಿದಂ–ಸೇರಿಸಿದನು; ಪುಲ್ಲಸೂಡಂ–ಹುಲ್ಲಿನ ಕಟ್ಟನ್ನು; ಪೊಣರ್ದು–ಹೋರಾಡಿ; ಸೋವತ–ಜವನ ಬಾರಿಗೆ ಸೋವತಮಾಗಿರಮಾೞ್ಪೆಂ(ಪಂಪ.ರಾ. ೯–೧೩೩); ಅಂತಕನ ಬಾರಿಗೆ ಸೋವತಮಾದೆ ದೇವ (ಪಂಪ.ರಾ. ೧೪–೨೦೧); ಪ್ರಾ. ಸೋವತ್ಥಂ–ಉಪಭೋಗ್ಯವಸ್ತು ಎಂಬ ಶಬ್ದಕ್ಕೆ ಸಂಬಂಧಿಸಿರಬಹುದು.
೪೨. ಮಹಾರಥರಿರ್–ಮಹಾರಥಿಕರೇ, ನಿಜಕುಲೋಚಿತ ವೃತ್ತಿಯಂ–ನಿಮ್ಮ ಕುಲಕ್ಕೆ ತಕ್ಕುದಾದ ವರ್ತನೆಯನ್ನು, ಬಗೆಯಿಂ–ಭಾವಿಸಿರಿ; ಮಹೀಭುಜರ–ರಾಜರ, ಕ್ಷತ್ರಿಯರ, ಮಕ್ಕಳಿರ್–ಮಕ್ಕಳಾಗಿದ್ದೀರಿ, ಎಂದು, ನಂಬಿದೆಂ–ನಂಬಿದೆನು; ಇಂತು–ಹೀಗೆ, ನಣ್ಪನೆ– ಬಾಂಧವ್ಯವನ್ನೇ, ವೈರಿಭೂಭುಜರೊಳ್–ಶತ್ರುರಾಜರಲ್ಲಿ, ಉಂಟೊಡೆತಾಗಿ–ಇದೆಯಾಗಿ, ಉಳ್ಳುದಾಗಿ, ಮಾೞ್ಪುದಂ–ಮಾಡುವುದನ್ನು, ಈಗಳ್–ಈಗ, ಆನಱಿದೆಂ–ನಾನು ತಿಳಿದೆನು; ಇಂ–ಇನ್ನು, ನಿಮ್ಮಂ–ನಿಮ್ಮನ್ನು, ಈ ರಣರಂಗದೊಳ್–ಈ ಯುದ್ಧ ಭೂಮಿಯಲ್ಲಿ, ಎನಗೆ ಎಂದೊಡೆ–ನನಗೆ ಸಂಬಂಧಿಸಿದವರು ಎಂದು ಹೇಳಿದರೆ, ಫಣಿಧ್ವಜನೆಂ ಅಪ್ಪೆನೆ–ನಾನು ಸರ್ಪಧ್ವಜನಾಗುತ್ತೇನೆಯೆ ಎಂದರೆ ನಾನು ದುರ್ಯೋಧನನೆ? ಇಲ್ಲಿ ಮಹಾರಥರಿರ್ ಎಂಬುದು ಸಂಬೋಧನಾರ್ಥದಲ್ಲಿ ಇರಬಹುದು. ಜಲಧಿ ದ್ವೀಪಾಂತರಾಳಂಗಳನಿರದೆಪುಗಿಂ ಪೋಗಿಮುಗ್ರಾರಿಗಳ್ ಎಂಬಲ್ಲಿರುವಂತೆ; ಇಲ್ಲದಿದ್ದರೆ ಮಹಾರಥರಿರ್–ಮಹಾರಥಿಕರಾಗಿ ದ್ದೀರಿ ಎಂದು ಅನ್ವಯಿಸಿಕೊಳ್ಳಬಹುದು; ಆಗ ನಿಜಕುಲೋಚಿತ ವೃತ್ತಿಯಂ ಬಗೆಯಿಂ ಎಂದಷ್ಟಕ್ಕೇ ಒಂದು ವಾಕ್ಯವಾಗುತ್ತದೆ.
೪೩. ಇದು–ಹೀಗೆ ಯುದ್ಧ ಮಾಡುವುದು, ಕಾದುವ ಮಾೞ್ಕೆಯಲ್ಲಂ–ಯುದ್ಧ ಮಾಡುವ ರೀತಿಯಲ್ಲ; ಕೆಮ್ಮನೆ–ಸುಮ್ಮನೆ, ನಣ್ಪಿನ–ಬಾಂಧವ್ಯದ ಅಥವಾ ಸ್ನೇಹದ, ಮೇಳಗಾಳೆಗಂ–ಕ್ರೀಡಾಯುದ್ಧವನ್ನು, ಕಾದುವ–ಹೋರುವ, ಮಾೞ್ಕೆ–ರೀತಿ; ಸಿಂಧುಘಟ ಸೂತ ಸುತರ್ಕಳಿಂ–ಭೀಷ್ಮ ದ್ರೋಣ ಕರ್ಣರಿಂದ, ಆಗದ–ಆಗದಿರುವ, ರಾಜ್ಯೋದಯಂ– ರಾಜ್ಯ ಶ್ರೀ ಅಥವಾ ರಾಜ್ಯಲಾಭವು, ಅಮ್ಮ–ಅಪ್ಪಗಳಿರಾ, ನಿಮ್ಮ ಬಲದಿಂದೆ–ನಿಮ್ಮ ಸಾಮರ್ಥ್ಯದಿಂದ, ಎನಗೆ–ನನಗೆ, ಅಪ್ಪುದೆ–ಆಗುತ್ತದೆಯೆ? ಮದ್ವಿರೋಧಿಯಂ–ನನ್ನ ಶತ್ರುವನ್ನು, ಛೇದಿಸಲ್–ಕತ್ತರಿಸಲು, ಕೊಲ್ಲಲು, ಆನೆ–ನಾನೇ, ಸಾಲ್ವೆಂ–ಸಾಕಾಗುತ್ತೇನೆ, ಸಮರ್ಥನಾಗಿರುವೆನು, ಅನ್ನೆಗಂ–ಅಲ್ಲಿಯ ತನಕ, ರಣರಂಗಭೂಮಿಯೊಳ್–ಯುದ್ಧಭೂಮಿ ಯಲ್ಲಿ ಇರಿಂ–ಇರಿರಿ, ಇರಿ.
ವಚನ : ವರೂಥದಿಂ–ರಥಾರೂಢನಾಗಿ; ಏವಯಿಸಿ–ದುಃಖಕೋಪಗಳನ್ನು ಹೊಂದಿ.
೪೪. ಇನಿತುವರಂ–ಇಷ್ಟರವರೆಗೆ, ಇಳೇಶನಿಂ–ರಾಜ ದುರ್ಯೋಧನನಿಂದ, ಪರಾಭವಂ– ಅವಮಾನವು, ಇಂ–ಇನ್ನು, ಎನಗೆ–ನನಗೆ, ಆದುದು–ಆಯಿತು; ಇಂ–ಇನ್ನು, ಸಿಡಿಲ್ವೆನೆ– ಸಿಡಿಯುತ್ತೇನೆಯೆ ಎಂದರೆ ಬಿಟ್ಟು ಹೋಗುತ್ತೇನೆಯೆ? ರಿಪುಸೇನೆಯಂ–ಶತ್ರುಸೈನ್ಯವನ್ನು, ತೊೞ್ತುೞಿಮಾೞ್ಪೆಂ–ತುಳಿದು ಸೊಪ್ಪಾಗಿ ಮಾಡುತ್ತೇನೆ, ಎಂದು–ಎಂಬುದಾಗಿ, ಅಗುರ್ವಿನ– ಭಯದ, ಉರ್ವಿನ–ಅತಿಶಯತೆಯನ್ನುಳ್ಳ, ಶರಸಂಕುಲಂಗಳೊಳೆ–ಬಾಣಗಳ ಸಮೂಹ ಗಳಲ್ಲಿಯೆ, ಪೂೞ್ದೊಡೆ–ಹೂಳಿದರೆ, ಪಾಂಡವ ಸೈನ್ಯಂ–ಪಾಂಡವರ ಪಡೆ, ಆತನಂಬಿನ ಮೊನೆ ಯೊಳ್–ಅವನ ಬಾಣಗಳ ಬಾಯಲ್ಲಿ, ಸುರುಳ್ದು–ಸುರುಟಿ, ಉರುಳಿಗೊಂಡುದು– ರಾಶಿಯಾಗಿ ಬಿತ್ತು; ಶಲ್ಯಂ–ಶಲ್ಯರಾಜನು, ಇದೇಂ ಪ್ರತಾಪಿಯೋ–ಇದೇನು ಪ್ರತಾಪವನ್ನುಳ್ಳ ವನೋ!
ವಚನ : ಮಕುಟಬದ್ಧರಂ–ರಾಜರನ್ನು; ಆಂಪರ್–ಎದುರಾಗುವವರು; ಮೇಗಿಲ್ಲದೆ– ತನಗಿಂತ ಮೇಲಾದವರು, ಉತ್ತಮರಾದವರು ಇಲ್ಲದೆ; ಆಕಂಪಂಗೊಳೆ–ಪೂರ್ಣವಾಗಿ ನಡುಗಲು, ಹೆದರಲು; ಮುರಜಕೇತನ-ಮದ್ದಲೆಯ ಗುರುತುಳ್ಳ ಬಾವುಟ.
೪೫. ಇರ್ವರುಂ–ನಾವಿಬ್ಬರೂ, ಬೀರವಟ್ಟಮನಾಂತ–ಸೇನಾಪತಿಪಟ್ಟವನ್ನು ಧರಿಸಿದ, ಬೀರ [ರೆಂ]–ಶೂರರಾಗಿದ್ದೇವೆ; ಸುರರಾಜಿ–ದೇವತೆಗಳ ಸಮೂಹ, ಕೈವಾರದಿಂ–ಹೊಗಳಿಕೆ ಯಿಂದ, ಬೞಿವಿಟ್ಟು–ದಾರಿಯನ್ನು ಬಿಟ್ಟು, ಎಡೆಮಾಡಿಕೊಟ್ಟು, ನಮ್ಮನೆ–ನಮ್ಮನ್ನೇ, ನೋಡ–ನೋಡು, ನೋಡುವರ್–ನೋಡುತ್ತಾರೆ; ಈಗಳ್–ಈಗ, ಈ ಭಾರತಂ–ಈ ಭಾರತ ಯುದ್ಧವು; ಸಮೆದಪ್ಪುದು–ಮುಕ್ತಾಯವಾಗುತ್ತದೆ; ಅಳ್ಕದೆ–ಹೆದರದೆ, ನಿಂದು–ನಿಂತು, ಕಾದು–ಯುದ್ಧಮಾಡು, ಎನುತುಂ–ಎಂದು ಹೇಳುತ್ತ, ಅಂತಕಾತ್ಮಜಂ–ಯಮನ ಪುತ್ರ ಧರ್ಮರಾಜನು, ಶರಾಸಾರಮಂ–ಬಾಣ ವರ್ಷವನ್ನು, ಸುರಿದು, ಅಂತು–ಹಾಗೆ, ಅಸುಂ ಗೊಳೆ–ಪ್ರಾಣಾಪಹರಣ ಮಾಡಲು, ಕಾದಿದಂ–ಯುದ್ಧ ಮಾಡಿದನು.
೪೬. ಕಾದೆ–ಯುದ್ಧ ಮಾಡಲು, ರಥ ತುರಗಕೇತನ ಕೋದಂಡುಗಳುಮಂ–ರಥ ಕುದುರೆ ಧ್ವಜ ಬಿಲ್ಲುಗಳನ್ನು, ಉಱದೆ–ಇರದೆ, ಖಂಡಿಸಿ–ಕತ್ತರಿಸಿ, ವಿಳಯಾಂಭೋದನಿನಾದದೆ– ಪ್ರಳಯ ಕಾಲದ ಮೋಡದ ಶಬ್ದದಿಂದ ಎಂದರೆ ಗುಡುಗಿನಿಂದ, ತೊಟ್ಟನೆ–ಬೇಗನೆ, ಮದ್ರ ಮಹೀದಯಿತಂ–ಮದ್ರರಾಜನು, ಶಲ್ಯನು, ಆರ್ವುದುಂ–ಗರ್ಜಿಸುತ್ತಲು, ಧರ್ಮಸುತಂ– ಧರ್ಮರಾಜನು.
೪೭. ಮುಳಿದು–ಕೆರಳಿ, ತಳಮಳಿಸಿ–ಬೆರಗಾಗಿ ಅಥವಾ ವ್ಯಾಕುಲಿತನಾಗಿ, ತಳರದೆ– ಚಲಿಸದೆ, ಹೋಗದೆ, ತೊಳಗುವ–ಹೊಳೆಯುವ, ಕರವಾಳಂ–ಕತ್ತಿಯನ್ನು, ಉರ್ಚಿ– ಸೆಳೆದು, ಮೈಯ್ವೆರ್ಚಿ–ಮೈಯುಬ್ಬಿ, ಪೊದಳ್ದ–ವ್ಯಾಪಿಸಿದ, (ತನ್ನೊಳಗೆ) ಅಳವು–ಶಕ್ತಿಯು, ಅಮರೆ–ಕೂಡಲು, ಪಿಡಿದು–ಹಿಡಿದುಕೊಂಡು, ರಥದಿಂದೆ–ರಥದಿಂದ, ಇಳೆಗೆ–ನೆಲಕ್ಕೆ, ಇೞಿದು–ಇಳಿದು, ಅವಂ–ಅವನು, (ಧರ್ಮರಾಜನು) ಅವನಿಪತಿಯಂ–ರಾಜ ಶಲ್ಯನನ್ನು, ಅಣುಗಿಱಿವೊಯ್ದಂ–ಸಮೀಪಿಸಿ ಹೊಡೆದನು, ಅಣುಗಿಱಿವೊಯ್ ಅಣುಗಿಱಿ+ಪೊಯ್; ಅಣುಗಿಱಿ ಅಣುಗು+ಇಱಿ, ಸಮೀಪಿಸು, ಹತ್ತಿರಬರು.
ವಚನ : ಪೆರ್ಮರದಂತೆ–ದೊಡ್ಡ ಮರದಂತೆ; ಕೆಡೆದ–ಬಿದ್ದ; ತನ್ನಳಿಯನಂ–ತನ್ನ ಸೋದರಳಿಯನನ್ನು; ಈ ವಚನವನ್ನು ನೋಡಿದರೆ ಹೊಡೆದವನು ಶಲ್ಯನೆಂದೂ, ಬಿದ್ದವನು ಧರ್ಮರಾಜನೆಂದೂ ಸ್ಪಷ್ಟವಾಗುತ್ತದೆ; ಆದರೆ ೪೭ನೆಯ ಪದ್ಯದ ಕೊನೆಯ ಭಾಗದಿಂದ ಹೊಡೆದವನು ಧರ್ಮರಾಜನೆಂದು ಅರ್ಥವಾಗುತ್ತದೆ. ಇಲ್ಲಿ ಏನೋ ಪಾಠಕ್ಲೇಶವಿರಬಹುದು; ಕೊನೆಯ ಸಾಲನ್ನು “ದಿಳೆಗಿೞಿದನನವನಿಪತಿಯ ನಣುಗಿಱಿವೊಯ್ದಂ” ಎಂದು ತಿದ್ದಿ ಕೊಂಡರೆ ಸರಿಯಾಗುತ್ತದೆ.
೪೮. ಮುಳಿಯಿಸದನ್ನಂ–(ಇವನಿಗೆ) ಕೋಪವನ್ನುಂಟುಮಾಡದವರೆಗೂ, ಈ ನೃಪನಿಂ– ಈ ಧರ್ಮರಾಜನಿಂದ, ಸಾವು–ಮರಣವು, ಎನಗೆ–ನನಗೆ, ಆಗದು–ಆಗುವುದಿಲ್ಲ; ಎಂತುಂ– ಹೇಗೂ, ಈತನಂ–ಇವನನ್ನು, ಮುಳಿಯಿಪೆಂ–ಕೆರಳಿಸುತ್ತೇನೆ, ಎಂದು, ಉರಃಸ್ಥಳಮಂ– ಎದೆಯ ಪ್ರದೇಶವನ್ನು, ಅಂತು–ಹಾಗೆ, ಒದೆದಾಗಡೆ–ಕಾಲಿನಿಂದ ಒದೆದಾಗಲೆ, ನೃಪಂ– ಧರ್ಮರಾಜನು, ಕಂತುಗೆ–ಮನ್ಮಥನಿಗೆ, ಈಶ್ವರಂ–ಶಿವನು, ಮುಳಿದವೊಲ್–ಕೋಪಿಸಿ ಕೊಂಡಂತೆ, ಮುಳಿದು–ಕೆರಳಿ, ನೋಡೆ–ನೋಡಲು, ವಿಳೋಚನ ಪಾವಕಂ–ನೇತ್ರಾಗ್ನಿಯು, ತಗುಳ್ದು–ಬೆನ್ನಟ್ಟಿ, ಅಳುರ್ದೊಡೆ–ವ್ಯಾಪಿಸಿದರೆ, ಸುಟ್ಟರೆ; ಮದ್ರಮಹೀಶನಾ–ಶಲ್ಯನ, ಒಡಲ್–ದೇಹವು, ಆಗಳೆ–ಆಗಲೇ, ಬೂದಿಯಾದುದು–ಭಸ್ಮವಾಯಿತು.
ವಚನ : ನೇತ್ರೋದ್ಭೂತಾನಳಂ–ಕಣ್ಣಿನಲ್ಲಿ ಹುಟ್ಟಿದ ಕಿಚ್ಚು; ತ್ರಿಣೇತ್ರ ಲಲಾಟಾನಳ ನಂತೆ–ಶಿವನ ಹಣೆಗಣ್ಣ ಅಗ್ನಿಯಂತೆ; ಅಳವಲ್ಲದೆ–ವಶವಲ್ಲದೆ, ಮೀರಿ, ಅಳುರೆ–ಸುಡಲು;
ವ್ಯಾಸಭಾರತದಲ್ಲಿ ಶಲ್ಯನ ವಧೆ ಬೇರೆ ರೀತಿಯಲ್ಲಿ ವರ್ಣಿತವಾಗಿದೆ. ಧರ್ಮರಾಜನು ಶಕ್ತ್ಯಾಯುಧವನ್ನು ಪ್ರಯೋಗಿಸಿ ಶಲ್ಯನ ಎದೆಯನ್ನು ಸೀಳಿದಂತೆ ಹೇಳಿದೆ; ಅದರಿಂದ ಶಲ್ಯನು ಸತ್ತನು.
ತಾಂ ಸರ್ವಶಕ್ತ್ಯಾಂ ಪ್ರಹಿತಾಂ ಸುಶಕ್ತೀಂ
ಯುಧಿಷ್ಠಿರೇಣ ಪ್ರತಿವಾರ್ಯ ವೀರ್ಯಾಂ
ಪ್ರತಿಗ್ರಹಾಯಾಭಿ ನನರ್ದ ಶಲ್ಯಃ
ಸಮಗ್ಘುತಾಮಗ್ನಿ ಮಿವಾಜ್ಯಧಾರಾಂ ॥
ಸಾ ತಸ್ಯಮರ್ಮಾಣಿ ವಿದಾರ್ಯ ಶುಭ್ರ
ಮುರೋ ವಿಶಾಲಂಚ ತಥೈವ ಭಿತ್ವಾ
ವಿವೇಶ ಗಾಂ ತೋಯಮಿವಾ ಪ್ರಸಕ್ತಾ
ಯಶೋ ವಿಶಾಲಂ ನೃಪತೇರ್ದಹಂತೀ ॥
ನಾ ಸಾಕ್ಷಿ ಕರ್ಣಾಸ್ಯ ವಿನಿಃಸೃತೇನ
ಪ್ರಸ್ಯಂದತಾವ್ರಣ ಸಂಭವೇ ನ
ಸಂಸಿಕ್ತಗಾತ್ರೋ ರುಧಿರೇಣ ಸೋಭೂತ್
ಕ್ರೌಂಚೋ ಯಥಾ ಸ್ಕಂದಹತೋ ಮಹಾದ್ರಿಃ ॥
ಮೇಲೆ ಹೇಳಿರುವಂತೆ ಪಂಪನು ವರ್ಣಿಸಿಲ್ಲ. ಇಲ್ಲಿ ಕುಮಾರವ್ಯಾಸನು ವ್ಯಾಸರನ್ನೇ ಅನು ಸರಿಸುತ್ತಾನೆ. ಪಂಪನು ಹೀಗೆ ವ್ಯತ್ಯಾಸ ಮಾಡುವುದಕ್ಕೆ ಕಾರಣವೇನು? ಆತನಿಗೆ ವ್ಯಾಸ ಭಾರತದಲ್ಲೇ ಒಂದು ಸೂಚನೆ ಸಿಕ್ಕಿರುವಂತಿದೆ :
ಸಧರ್ಮರಾಜೋ ಮಿ ಹೇಮದಂಡಾಂ
ಜಗ್ರಾಹಶಕ್ತಿಂ ಕನಕ ಪ್ರಕಾಶಾಮ್
ನೇತ್ರೇ ಚ ದೀಪ್ತೇ ಸಹಸಾ ವಿವೃತ್ಯ
ಮದ್ರಾಧಿಪಂ ಕ್ರದ್ಧಮನಾ ನಿರೈಷೇತ್ ॥
ನಿರೀಕ್ಷಿತೋಽಸೌ ನರದೇವ ರಾಜ್ಞಾ
ಪೂತಾತ್ಮನಾ ನಿರ್ಹೃತಕಲ್ಮಷೇಣ ।
ಆಸೀನ್ನಯದ್ ಭಸ್ಮ ಸಾದ್ಮದ್ರರಾಜ
ಸ್ತದದ್ಭುತಂ ಮೇ ಪ್ರತಿಭಾತಿ ರಾಜನ್ ॥
ಪೂತಾತ್ಮನೂ ಕಲ್ಮಷರಹಿತನೂ ಆಗಿದ್ದ ಧರ್ಮರಾಜನ ದೃಷ್ಟಿಪಾತದಿಂದ ಮದ್ರರಾಜನು ಏಕೆ ಭಸ್ಮವಾಗಲಿಲ್ಲ ಎಂಬುದೇ ನನಗೆ ಅದ್ಭುತವಾಗಿ ತೋರುತ್ತದೆ ಎಂದು ಸಂಜಯನ ಮಾತು. ಪಂಪನು ಈ ಸೂಚನೆಯನ್ನು ಪರಿಭಾವಿಸಿ ಹೀಗೆಯೇ ಏಕಾಗಬಾರದು ಎಂದು ಧರ್ಮರಾಜನಿಗೆ ಮತ್ತಷ್ಟು ಕೋಪವುಂಟಾಗುವಂತೆ ಶಲ್ಯನು ಅವನನ್ನು ಒದೆಯುವಂತೆ ಮಾಡಿದ್ದಾನೆ. ಪರಿಣಾಮ ಧರ್ಮರಾಜನ ಕಣ್ಣುಗಳಿಂದ ಕಿಚ್ಚು ಹೊಮ್ಮಿ ಶಲ್ಯ ಬೂದಿ ಯಾದದ್ದು.
೪೯. ಆ ದೊರೆಯರ್–ಅಂಥ ಯೋಗ್ಯತೆಯುಳ್ಳ, ನದೀಜಘಟಸಂಭವ ಸೂರ್ಯ ತನೂಜ ಮದ್ರರಾಜಾದಿ ಮಹೀಭುಜರ್–ಭೀಷ್ಮ ದ್ರೋಣ ಕರ್ಣ ಶಲ್ಯ ಮುಂತಾದ ರಾಜರು, ಎನ್ನಯ ದೂಸಱಿಂ–ನನ್ನ ಕಾರಣದಿಂದ, ಧುರದೊಳ್–ಯುದ್ಧದಲ್ಲಿ, [ಅೞ್ಕಿಮೆೞ್ಕಿ] ದಂತಾದರ್–ನಾಶವಾಗಿ ಸಾರಿಸಿದಂತಾದರು, ಎಂದರೆ ನಿರ್ನಾಮರಾದರು; ಇದೊಂದೆ–ಇದು ಒಂದೇ, ಮೆಯ್–ದೇಹ, ಉೞಿದುದು–ಉಳಿಯಿತು; ಇಂ–ಇನ್ನು, ಎನಗೆ–ನನಗೆ, ಮಾೞ್ಪೊಡೆ–ಮಾಡುವ ಪಕ್ಷದಲ್ಲಿ, ಆವುದೊ–ಯಾವುದೋ, ಏನೊ? ಎಯ್ದೆ–ಚೆನ್ನಾಗಿ, ಮುಂದಾದ–ಎದುರಿಸಿದ, ವಿರೋಧಿಸಾಧನಮಂ–ಶತ್ರು ಸೈನ್ಯವನ್ನು, ಎನ್ನಗದಾಶನಿಯಿಂದೆ– ನನ್ನ ಗದೆಯೆಂಬ ಸಿಡಿಲಿನಿಂದ, ಉರುಳ್ಚುವೆಂ–ಉರುಳಿಸುತ್ತೇನೆ.
ವಚನ : ದಕ್ಷಿಣಕರಾಗ್ರಮಂ–ಬಲಗೈಯ ತುದಿಯನ್ನು;
೫೦. ಕೃಪಾಶ್ವತ್ಥಾಮರುಳ್ಳಂತೆ–ಕೃಪ ಅಶ್ವತ್ಥಾಮರಿರುತ್ತಿರಲು, ಬೆವಸಾಯಂಗೆಯಲ್– ಕಾರ್ಯವನ್ನು ಮಾಡಲು, ಇನ್ನುಂ–ಇನ್ನೂ, ಎಡೆ–ಅವಕಾಶವು, ಉಂಟು–ಇದೆ; ಪಾಂಡವರಂ ಗೆಲ್ವುದು–ಪಾಂಡವರನ್ನು ಗೆಲ್ಲುವುದು, ಅಸಾಧ್ಯಮಾಯ್ತೆ–ಅಸಾಧ್ಯವಾಯಿತೆ? ನಿಜದೋರ್ದಂಡಂಬರಂ–ನಿನ್ನ ಬಾಹುದಂಡಗಳವರೆಗೆ, ಗಂಡರ್–ಶೂರರು, ಆಹವರಂಗಕ್ಕೆ–ಯುದ್ಧ ರಂಗಕ್ಕೆ, ಒಳರೇ–ಇರುವರೇ? ಸಮಂತು–ಚೆನ್ನಾಗಿ, ಪಗೆಯಂ–ಶತ್ರುವನ್ನು, ಕೊಲ್ವಂತು ಗೆಲ್ವಂತು–ಕೊಲ್ಲುವ ಹಾಗೆ ಗೆಲ್ಲುವ ಹಾಗೆ, ಕಾದುವುದು–ಯುದ್ಧ ಮಾಡುವುದು; ದೇವ– ರಾಜನೇ, ಏಕಾಕಿಯೆ ಆಗಿ–ಒಂಟಿಗನೇ ಆಗಿ, ರಿಪುಭೂಪಾಳರ್ಕಳೊಳ್–ಶತ್ರುರಾಜರಲ್ಲಿ, ಕಾದುವಯ್–ಯುದ್ಧ ಮಾಡುವೆಯಾ?
ವಚನ : ಎನ್ನುಮಂ–ನನ್ನನ್ನೂ; ಏಕಾಕಿಯೆಂದು–ಒಂಟಿಗನೆಂದು; ಏಳಿಸಿ–ತಿರಸ್ಕರಿಸಿ;
೫೧. ವನಕರಿ….ನನನೆನೆ: ವನಕರಿ–ಕಾಡಾನೆಗಳ, ಕುಂಭ–ಕುಂಭ ಸ್ಥಳವನ್ನು, ಪಾಟನ– ಸೀಳುವುದರಲ್ಲಿ, ಪಟಿಷ್ಠ–ಸಮರ್ಥವಾದ, ಕಠೋರ–ಕಠಿನವಾದ, ನಖ–ಉಗುರುಗಳ, ಪ್ರಹಾರ–ಏಟಿನಿಂದಾದ, ಭೇದನ–ಬಿರಿಯುವಿಕೆಯಿಂದ, ಗಳಿತ–ಸೋರಿದ, ಅಸ್ತ್ರ–ರಕ್ತದಿಂದ, ರಕ್ತ–ಕೆಂಪಾದ, ನವ–ಹೊಸದಾದ, ಮೌಕ್ತಿಕ–ಮುತ್ತುಗಳ, ಪಂಕ್ತಿ–ಸಾಲುಗಳ, ವಿಳಾಸ– ಶೋಭೆಯಿಂದ, ಭಾಸುರ–ಪ್ರಕಾಶಮಾನವಾದ, ಆನನಂ–ಮುಖವುಳ್ಳದ್ದು, ಎನೆ–ಎನ್ನಲು, ಸಂದ–ಪ್ರಸಿದ್ಧವಾದ, ಉದಗ್ರ–ಶ್ರೇಷ್ಠವಾದ, ಮೃಗರಾಜನುಮಂ–ಸಿಂಹವನ್ನೂ, ಮದವದ್ವಿ ರೋಧಿಭೇದನ ಕರನಪ್ಪ–ಮದಿಸಿದ ಶತ್ರುವನ್ನು ಸೀಳುವವನಾದ, ಶೌರ್ಯ ಮದದ– ಪ್ರತಾಪದ ಸೊಕ್ಕಿನಿಂದ ಕೂಡಿದ, ಎನ್ನುಮಂ–ನನ್ನನ್ನೂ, ಸಂಜಯಾ–ಸಂಜಯನೇ, ಒಂದೊಡಲ್–ಒಂದೇ ದೇಹ ಎಂದರೆ ಏಕಾಕಿಯೆಂದು, ಎಂಬೆ–ಹೇಳುವೆಯಾ?
ವಚನ : ಆಪತ್ಪ್ರತೀಕಾರಮುಮಂ–ಆಪತ್ತಿಗೆ ಪ್ರತಿಕ್ರಿಯೆಯನ್ನೂ; ನೆಗೞಲಾಗದು– ಮಾಡಲಾಗದು; ಮುಳಿಸಾಱಿ–ಕೋಪಶಮನವಾಗಲು; ನೃಪಶಿರಃ ಕಪಾಲ ಜರ್ಜರಿತ ಮುಂ–ರಾಜರ ತಲೆಯೋಡುಗಳಿಂದ ಕಿಕ್ಕಿರಿದದ್ದೂ; ಸಮುತ್ಸಾರಿತಮುಂ–ಹೊರ ಡಿಸಲ್ಪಟ್ಟದ್ದೂ; ಮೌಳಿಮಾಳಾ–ತಲೆಗಳ ಸಾಲುಗಳಿಂದ; ವಿಗಳಿತ–ಜಾರಿದ; ಕೋಟಿ– ತುದಿಗಳ; ಉಚ್ಚಳಿತ–ಮೇಲೆದ್ದ; ಮಣಿಶಲಾಕಾ ಸಂಕುಳಮುಂ–ರತ್ನಗಳ ಸಲಾಕಿಗಳ ಸಮೂಹ ವನ್ನುಳ್ಳ; ನಿಸ್ಸಹ–ಸಹಿಸಲು ಸಾಮರ್ಥ್ಯವಿಲ್ಲದ; ಖರ್ವಿತ–ತೋಡಿದ; ಉರ್ವೀತಳಮುಂ– ಭೂಪ್ರದೇಶವುಳ್ಳ; ತೀವ್ರಜ್ವಳನ–ತೀವ್ರಾಗ್ನಿಯಂತೆ; ಆಸ್ಫಾರ–ಹೊಳೆಯುವ, ಕರಾಳ– ಭಯಂಕರವಾದ, ಕರವಾಳ–ಕತ್ತಿಗಳ, ಭಾಮಂಡಲ–ಕಾಂತಿಯ ಬಳಸಿನಿಂದ ಎಂದರೆ ಪರಿವೇಷದಿಂದ; ಪರೀತ–ಸುತ್ತುವರಿಯಲ್ಪಟ್ಟ; ಉದ್ಯತ–ಎತ್ತರವಾದ, ಖರ–ಹೇಸರಗತ್ತೆ ಗಳ, ಖುರ–ಗೊರಸುಗಳ; ಟಂಕ–ಲಾಳಗಳ, ಪರಿಸ್ಖಲನ–ಜಾರಿ ಬೀಳುವಿಕೆಯಿಂದ, ಕಳಿತ– ಕೂಡಿದ; ನಿಸ್ವನಮುಂ–ಶಬ್ದವುಳ್ಳ; ಶಲ್ಯ–ಶಲ್ಯವೆಂಬ ಆಯುಧ, ಕಠಾರಿ; ಕಳಕಳ–ಸದ್ದು ಗಳಿಂದ, ಆಕಳಿತಮುಂ–ತುಂಬಿದ; ಸೂತ–ಸಾರಥಿಗಳ, ಹೂಂಕಾರ–ಗರ್ಜನೆಗಳಿಂದ; ಕಾತರಿತ–ಸಂಭ್ರಮಗೊಂಡ; ತರಳತರ–ಅತಿ ಚಂಚಲವಾದ; ದ್ರುತವೇಗ–ಓಟದ ವೇಗ ದಿಂದ; ನೇಮಿಧಾರಾ–ಗಾಲಿಯ ಸುತ್ತಲಿರುವ ಕಬ್ಬಿಣದ ಪಟ್ಟೆಗಳ; ಪರಿವೃತ–ಹೊರಳಿದ, ಸಂಘಟ್ಟನ–ಹೊಡೆತದಿಂದ; ಸಮುಚ್ಚಳಿತ–ಮೇಲೆದ್ದ; ಪಾಂಸುಪಟಳ–ಧೂಳುಗಳ ಪದರಗಳ; ದುರ್ಲಕ್ಷ–ನೋಡಲಾಗದ; ನಿಹಿತ–ಹೊಡೆಯಲ್ಪಟ್ಟ; ನಿಕುರುಂಬ–ಸಮೂಹ; ಕೀಲಾಲ–ರಕ್ತದ; ಕಲ್ಲೋಲ–ಅಲೆಗಳ, ಪ್ರವರ್ತನ–ಹೊರಳುವಿಕೆಯನ್ನುಳ್ಳ; ದುಸ್ತರ– ದಾಟಲಸಾಧ್ಯವಾದ, ಅವತರಣ ಮಾರ್ಗಮುಂ–ದಾಟುವ ದಾರಿಯನ್ನುಳ್ಳ; ಅಸಿಪತ್ರ–ಕತ್ತಿಗಳ; ಚಟಾಚಾ, ಟನ–ಜುಟ್ಟುಗಳ ಮಿಡಿತದಿಂದ; ದುರ್ನಿರೀಕ್ಷ್ಯ–ನೋಡಲಾಗದ; ಬಂಧುರಮಪ್ಪ– ಸೊಗಸಾದ, ವಿಷಮ ಪ್ರದೇಶಂಗಳೊಳ್–ಸಮವಲ್ಲದ ಎಂದರೆ ಹಳ್ಳತಿಟ್ಟಾದ ಎಡೆಗಳಲ್ಲಿ;
೫೨. ಎಱಗುವ–ನಮಸ್ಕರಿಸುವ, ಅನೇಕವಂಶ–ಅನೇಕ ಮನೆತನಗಳ, ನರಪಾಲಕರ– ರಾಜರ, ಕಿರೀಟ ಕೋಟಿಯೊಳ್–ಕಿರೀಟಗಳ ತುದಿಯಲ್ಲಿ, ಮಿಱುಗುವ–ಪ್ರಕಾಶಿಸುವ, ಪದ್ಮ ರಾಗದ–ರತ್ನಗಳ, ಬಿಸಿಲ್ಗೆ–ಪ್ರಕಾಶಕ್ಕೆ, ಅಗಿವ–ಅಂಜುವ, ಈ ನಿಜ ಪಾದಪದ್ಮಂ–ಈ ನಿನ್ನ ಪಾದಕಮಲಗಳು, ಈ ಯಿಱಿದು–ಇಗೋ ಹೊಡೆದು, ಸಿಡಿಲ್ದ–ಸಿಡಿದಿರುವ, ಬಾಳ– ಕತ್ತಿಗಳ, ಮೊನೆಯಂಬಿನ–ಮೊನಚಾದ ಬಾಣಗಳ, ತಿಂತಿಣಿಯೊಳ್–ರಾಶಿಯಲ್ಲಿ, ತಗುಳ್ದು– ಸೇರಿ, ಕಿಕ್ಕಿಱಿಗಿಱಿದಿರ್ದ–ಒತ್ತಾಗಿ ತುಂಬಿರುವ, ಕೊಳ್ಗುಳದೊಳಂ–ಯುದ್ಧಭೂಮಿ ಯಲ್ಲಿ, ನಡೆವ–ನಡೆಯುವ, ಈ ನಡೆಗೆ–ಈ ನಡೆಯುವಿಕೆಗೆ, ಎಂತು ನೋಂತೆಯೋ–ಹೇಗೆ ವ್ರತ ಮಾಡಿದೆಯೋ?
೫೩. ಇವು–ಇವುಗಳು, ಪವನಾತ್ಮಜಂ–ಭೀಮನು, ಗದೆಯಿನ್–ಗದೆಯಿಂದ, ಎಲ್ವಡ ಗಾಗಿರೆ–ಮೂಳೆ ಮಾಂಸಗಳಾಗಿರಲು, ಮೋದೆ–ಹೊಡೆಯಲು, ಮೊೞ್ಗಿ–ಬಗ್ಗಿ, ಬಿೞ್ದುವು– ಬಿದ್ದಂಥ, ಮದವಾರಣಂಗಳ್–ಸೊಕ್ಕಿದಾನೆಗಳು; ಇವು–ಇವುಗಳು, ನೋಡ–ನೋಡು, ಗುಣಾರ್ಣವನ–ಅರ್ಜುನನ, ಅಂಬಿನಿಂದೆ–ಬಾಣಗಳಿಂದ, ಉರುಳ್ದುವು–ಉರುಳಿದಂಥ, ಮನುಜೇಂದ್ರ ರುಂದ್ರಮಕುಟಾಳಿಗಳ್–ರಾಜರ ವಿಶಾಲವಾದ ಕಿರೀಟಗಳ ಸಮೂಹಗಳ, ಓಳಿಗಳ್–ಸಾಲುಗಳು; ಇವಲ್ತೆ–ಇವುಗಳಲ್ಲವೆ; ಗಾಂಡಿವಿಯ–ಅರ್ಜುನನ, ವರೂಥಘಾತ ದೊಳೆ–ರಥದ ಹೊಡೆತದಲ್ಲೇ, ನುರ್ಗಿದ–ಜಜ್ಜಿಹೋದ, ತುಂಗ ತುರಂಗ ಕೋಟಿಗಳ್– ಎತ್ತರವಾದ ಕೋಟ್ಯಂತರ ಕುದುರೆಗಳು!
ವಚನ : ಬಂಚಿಸಿಯುಂ–ವಂಚಿಸಿಯುಂ ಎಂದರೆ ತಪ್ಪಿಸಿಯೂ; ಅಡಗಿನ–ಮಾಂಸದ, ಇಡುವುಗಳಂ–ರಾಶಿಗಳನ್ನು (?); ತಿಂತಿಣಿಯಂ–ಸಮೂಹಗಳನ್ನು; ಘಟ್ಟಣೆಗಳಂ–(ರಥದ ಗಾಲಿಗಳ ಹೊಡೆತದಿಂದ) ತಗ್ಗುತಿಟ್ಟಾದ ಪ್ರದೇಶಗಳನ್ನು; ತೇರ ಪಲಗೆಯಂ–ರಥದ ಹಲಗೆಗಳನ್ನು; ಇಲ್ಲಿ ಇಡುವು ಎಂಬ ಶಬ್ದಕ್ಕೆ ಅರ್ಥ ನಿರ್ದಿಷ್ಟತೆ ಇಲ್ಲ; ಇಡುವು ಎಂದರೆ ಅನೇಕ ವಸ್ತುಗಳ ನಡುನಡುವೆ ಇರುವ ಇಕ್ಕಟ್ಟಾದ ಸ್ಥಳಗಳು ಎಂದಿರುವಂತೆ ತೋರುತ್ತದೆ; ನರವಿನಡಗಿನಿಡುವಿನೆಡೆಯ (ಪಂಪ.ಭಾ. ೧೨–೧೫೮ ಗ); ಇಡಿದಿರೆ ಪೂತಮರದ್ರುಮ ದಿಡುವುಗಳೊಳ್….ಕುಸುಮರಜಂ (ಆದಿಪು. ೭–೭೨); ಅರೆದುಱುಗಿರ್ದ ಬಯಲ್ದಾವರೆ ಯೆಲೆಗೊಡೆಯಿಡುವಿನಲ್ಲಿ (ಕಾದಂ ೨೮೨) ಎಂಬ ಪ್ರಯೋಗಗಳನ್ನು ನೋಡಿ;
೫೪. ಬೇಡ ವಿರೋಧಂ–ಹಗೆತನ ಬೇಡ; ಎಂತುಂ–ಹೇಗೂ, ಅರಿಕೇಸರಿಯೊಳ್– ಅರ್ಜುನನಲ್ಲಿ, ಸಮಸಂದು–ಸಮನಾಗಿ ಸೇರಿ, ಸಂಧಿಯಂ–ಸಂಧಿಯನ್ನು, ಮಾಡು, ಎನೆ– ಎನ್ನಲು, ಮಾಡಲೊಲ್ಲದೆ–ಮಾಡಲು ಒಪ್ಪದೆ, ಸುಹೃದ್ಬಲಮೆಲ್ಲಮಂ–ಮಿತ್ರಸೈನ್ಯವನ್ನೆಲ್ಲ, ಇಕ್ಕಿ–ಒಡ್ಡಿ, ಯುದ್ಧಮಂ ಮಾಡಿದ–ಯುದ್ಧವನ್ನು ಮಾಡಿದ, ಜಾತಿಬೆಳ್–ಜಾತಿದಡ್ಡನಾದ ಎಂದರೆ ಅಪ್ಪಟ ದಡ್ಡನಾದ, ನಿನಗೆ, ಈ ಎಡಱು–ಈ ಸಂಕಷ್ಟ, ಅದೇವಿರಿದು–ಅದೇನು ಹಿರಿದು? ಎಂದು, ಮುಂದೆ ಬಂದು–ಎದುರಿಗೆ ಬಂದು, ಏಡಿಸುವಂತಿರೆ–ಹೀಯಾಳಿಸುವಂತೆ, ಫಣಿರಾಜ ಕೇತುವಂ–ದುರ್ಯೋಧನನನ್ನು, ಒಂದು ಮರುಳ್–ಒಂದು ಪಿಶಾಚಿ, ಆಡಿದುದು– ನುಡಿಯಿತು.
೫೫. ಮರುಳೆನೆ–ಪಿಶಾಚಿಯೆಂದು, ಲೋಕದೊಳ್ ನೆಗೞ್ದು–ಲೋಕದಲ್ಲಿ ಪ್ರಸಿದ್ಧ ವಾಗಿ, ಕೊಳ್ಗುಳದೊಳ್–ಯುದ್ಧರಂಗದಲ್ಲಿ, ಮರುಳಾಟಮಾಡುವ–ಪಿಶಾಚಿಗಳ ಆಟವನ್ನು ಆಡುವ, ಆಂ ಮರುಳನೋ–ನಾನು ಬುದ್ಧಿಯಿಲ್ಲದವನೋ, ವಿಕ್ರಮಾರ್ಜುನನೊಳ್– ಅರ್ಜುನನಲ್ಲಿ, ಸಂಧಿಯಂ–ಸಂಧಿಯನ್ನು, ಒಲ್ಲದೆ–ಒಪ್ಪದೆ, ಉರ್ಕಿ–ಗರ್ವಿಸಿ, ಕೆಟ್ಟ– ಹಾಳಾದ, ನೀಂ–ನೀನು, ಮರುಳೆಯೋ–ದಡ್ಡನಾಗಿದ್ದೀಯೋ, ಪೇೞ–ಹೇಳು, ಪೇೞದೊಡೆ– ಹೇಳದಿದ್ದರೆ, ಪೋಗದಿರ್–ಹೋಗಬೇಡ, ಈಶ್ವರನಾಣೆ–ಶಿವನಾಣೆ, ಎಂದು, ಪುಲ್ಮರುಳ್– ಒಂದು ಸಣ್ಣ ಪಿಶಾಚಿ, ಇನಿಸಾನುಮಂ [ತ] ಗೆದು–ಒಂದು ಸ್ವಲ್ಪ ಅಡ್ಡಗಟ್ಟಿ ನಿಲ್ಲಿಸಿ, ಅಲ್ಲಿ, ಫಣೀಂದ್ರಕೇತುವಂ–ದುರ್ಯೋಧನನನ್ನು, ಕಾಡಿದುದು–ಕಾಡಿತು, “ತಗೆ–ಸ್ತಂಭನೇ”.
ವಚನ : ಕೆಯ್ತಕ್ಕೆ–ಮಾಡಿದುದಕ್ಕೆ, ಮಾಟಕ್ಕೆ, ವಿಧಾತ್ರಂ–ಬ್ರಹ್ಮನು; ಮರುಳ್ಮಾಡಿದ– ಭ್ರಾಂತನನ್ನಾಗಿ ಮಾಡಿದ, ಮೋಸಗೊಳಿಸಿದ; ತಳರ್ದು–ನಡೆದು; ಕಳೇವರ ಸಂಕೀರ್ಣಂ– ದೇಹಗಳಿಂದ ತುಂಬಿದ್ದು; ಮೇಚಕಿತಮುಂ–ಕರ್ನೀಲಿಯ ಬಣ್ಣವುಳ್ಳದ್ದೂ; ಕಚಗ್ರಹ– ಜುಟ್ಟನ್ನು ಹಿಡಿಯುವುದರಿಂದ, ವಿಲುಳಿತ–ತಿರುಗಿದ; ಕೌಕ್ಷೇಯಕ–ಕತ್ತಿ; ವಿದಾರಿತ–ಸೀಳಿದ, ಶರಾಚಾರ್ಯರಂ–ದ್ರೋಣರನ್ನು;
೫೬. ಬಿಲ್ಲ ಬಿನ್ನಣಂ–ಧನುರ್ವಿದ್ಯಾ ಪರಿಣತಿಯು, ಇಳಾವಳಯಕ್ಕೆ–ಭೂಮಂಡಲಕ್ಕೆ, ನೆಗೞ್ದುದು–ಪ್ರಸಿದ್ಧವಾಯಿತು; ನಿಮ್ಮದೊಂದೆ ಪೆಸರ್ಗೇಳ್ದೊಡೆ–ನಿಮ್ಮ ಒಂದು ಹೆಸರನ್ನು ಕೇಳಿದರೆ ಸಾಕು, ಸಮಸ್ತಧಾತ್ರಿ–ಸಮಸ್ತ ಲೋಕವು, ಕೆಯ್ಮುಗಿವುದು–ಕೈಗಳನ್ನು ಜೋಡಿಸಿ ನಮಸ್ಕರಿಸುತ್ತದೆ; ನಿಮ್ಮ ಸರಲ್ಗೆ–ನಿಮ್ಮ ಬಾಣಗಳಿಗೆ, ದೇವರುಂ–ದೇವತೆಗಳೂ, ಸುಗಿವರ್– ಹೆದರುವರು; ಅಯೋನಿ ಸಂಭವರಿರ್–ನೀವು ಯೋನಿಯಲ್ಲಿ ಜನಿಸಿದವರಲ್ಲ; ಎನ್ನಯ ದೂಸಱಿಂ–ನನ್ನ ಕಾರಣದಿಂದ, ಎನ್ನ ಕರ್ಮದಿಂ–ನನ್ನ ಪಾಪಕರ್ಮದಿಂದ, ಅಕ್ಕಟಾ– ಅಯ್ಯೋ, ಪಗೆವರಿಂ–ಹಗೆಗಳಿಂದ, ನಿಮಗಂ–ನಿಮಗೂ ಎಂದರೆ ನಿಮ್ಮಂಥವರಿಗೂ, ಕುಂಭ ಸಂಭವಾ–ದ್ರೋಣನೇ, ಈ ಇರವಾದುದೆ–ಈ ಸ್ಥಿತಿಯುಂಟಾಯಿತೇ?
ವಚನ : ಸುತ್ತಿಱಿದ–ಬಳಸಿದ; ಮುದುವರ್ದುಗಳುಮಂ–ಮುದಿ ರಣಹದ್ದುಗಳನ್ನೂ; ಅಗಲೆಮೆಟ್ಟಿ–ದೂರ ಹೋಗುವಂತೆ ಕಾಲ್ತುಳಿತದ ಶಬ್ದವನ್ನು ಮಾಡಿ; ಪೋೞ್ದು–ಸೀಳಿ; ಊಳ್ವ–ಕೂಗುವ; ಬಳ್ಳುಗಳುಮಂ–ಗುಳ್ಳೆನರಿಗಳನ್ನೂ; ನರವುಮಂ–ನರಗಳನ್ನೂ, ಬರಿಯು ಮಂ–ಪಕ್ಕೆಗಳನ್ನೂ; ತೆಗೆದು–ಎಳೆದು, ಪೆಡಸಾರ್ವ–ಹಿಂದಕ್ಕೆ ಹೋಗುವ; ಸೋದು–ಹೆದರಿಸಿ ಓಡಿಸಿ;
೫೭. ನಿನ್ನಂ ಕೊಂದನ–ನಿನ್ನನ್ನು ಕೊಂದ ಭೀಮನ, ಬಸಿಱಿಂ–ಹೊಟ್ಟೆಯಿಂದ, ನಿನ್ನಂ ತೆಗೆಯದೆಯುಂ–ನಿನ್ನನ್ನು ಹೊರಕ್ಕೆ ತೆಗೆಯದೆಯೂ, ಅವನ ಕರುಳಂ–ಅವನ ಕರುಳುಗಳನ್ನು; ಮುಂ–ಮೊದಲು, ಪರ್ದಿಂ–ಹದ್ದುಗಳಿಂದ, ನುಂಗಿಸಿ–ನುಂಗುವಂತೆ ಮಾಡಿ, ನೋಡದೆ ಯುಂ–ಕಣ್ಣಾರ ನೋಡದೆಯೂ, ಮುನ್ನಮೆ–ಮುಂಚಿತವಾಗಿಯೇ, ಯುವರಾಜ–ಯುವರಾಜ ನಾದ ದುಶ್ಯಾಸನನೇ, ನಿನ್ನಂ–ನಿನ್ನನ್ನು, ಆಂ–ನಾನು, ನೋಡಿದೆನೇ–ನೋಡಿದೆನೇ?
ವಚನ : ವಿಪ್ರಳಾಪಂಗಳ್–ಅಳುಗಳು, ರೋದನಗಳು; ಎೞ್ತರ್ಪುದು–ಬರುವುದು; ಕರಪರಿಚ್ಯುತವಿಕರ್ಣ–ಕೈಗಳಿಂದ ಬಿಡಲ್ಪಟ್ಟ ಬಾಣಗಳು; ವಿಶೀರ್ಣನಾಗಿರ್ದ–ಜರ್ಜರಿತ ನಾಗಿದ್ದ; ಎರ್ದೆದೆಱೆದು–ಎದೆ ಬಿರಿದು; ನಿಮ್ಮ ಅಮ್ಮಂ–ನಿಮ್ಮ ಅಪ್ಪ; ತೆಕ್ಕನೆ ತೀವಿದ– ನಾಲಗೆಯಲ್ಲಿ ನೆಕ್ಕಿಕೊಳ್ಳುವಂತೆ ಎಂದರೆ ಪೂರ್ಣವಾಗಿ ತುಂಬಿದ; ತೆಕ್ಕನೆ ತೆಕ್ಕು– ಲೇಹನೇ+ಅನೆ.
೫೮. ನರಶರಘಾತದಿಂ–ಅರ್ಜುನನ ಬಾಣಗಳ ಏಟಿನಿಂದ, ಪಱಿದು [ಪಚ್ಚಿ] ಸಿದಂತೆ ವೊಲ್–ಹರಿ ಹಂಚಾದಂತೆ, ಇರ್ದ–ಇದ್ದ, ಮೆಯ್–ದೇಹ, ಭಯಂಕರ ತರಮಾಗೆ–ಅತಿ ಭೀಕರವಾಗಿರಲು, ಮುಯ್ವುವರೆಗಂ–ಹೆಗಲ ತುದಿಯವರೆಗೂ, ತೆಗೆದ–ಸೆಳೆದ, ಅಂಬಿನ ಮುಷ್ಟಿ–ಬಾಣವನ್ನು ಹಿಡಿದ ಕೈಹಿಡಿ, ಬಿನ್ನಣಂ ಬೆರಸಿರೆ–ಪ್ರೌಢಿಮೆಯಿಂದ ಕೂಡಿರಲು; ಪೋದ ಪಂದಲೆಯೊಳ್–ಕಡಿದುಹೋದ ಹಸಿ ತಲೆಯಲ್ಲಿ, ಆದ–ಉಂಟಾಗಿದ್ದ, ಮುಗುಳ್ನಗೆ– ಮಂದಹಾಸವು; ಭೀತರಾದರೆಲ್ಲರುಮಂ–ಭಯಪಟ್ಟವರನ್ನೆಲ್ಲ, ಅಳುರ್ಕೆಯಿಂ–ತನ್ನ ಪರಾ ಕ್ರಮದಿಂದ ಅಥವಾ ಅತಿಶಯತೆಯಿಂದ, ನಗುವವೊಲ್–ಪರಿಹಾಸ ಮಾಡುವಂತೆ, ರವಿನಂದನಂ–ಕರ್ಣನು, ಇತ್ತಲ್–ಇತ್ತಕಡೆ, ಇರ್ದಪಂ–ಇರುತ್ತಾನೆ.
ವಚನ : ತೆಪ್ಪತ್ತುಂ–ಚೇತರಿಸಿಕೊಂಡೂ; ತೞ್ಕೈಸಿಕೊಂಡಾಗಳ್–ಆಲಿಂಗಿಸಿಕೊಂಡಾಗ; ಕೂರ್ಮೆ–ಸ್ನೇಹವು;
೫೯. ಬೆಸನೆಡೆಗಳ್ಗೆ–ಕಾರ್ಯದ ಸಮಯದಲ್ಲಿ, ತೊೞ್ತು–ಸೇವಕ, ಬೆಸನಂಗಳ್–ಸಪ್ತ ವ್ಯಸನಗಳು, ಅವುಂಕಿದೊಡೆ–ಒತ್ತರಿಸಿಕೊಂಡು ಬಂದರೆ, ಆಗದು–ಆಗುವುದಿಲ್ಲ, ಬೇಡ, ಎಂದು, ಬಗ್ಗಿಸುವೆಡೆಗೆ–ಗದರಿಸಿಕೊಳ್ಳುವ ಸಮಯದಲ್ಲಿ, ಆಳ್ದಂ–ಸ್ವಾಮಿ; ಇಂತು–ಹೀಗೆ, ನೆಗೞ್–ಮಾಡು, ಎಂಬೆಡೆಯೊಳ್–ಎನ್ನುವ ಸಮಯದಲ್ಲಿ, ಗುರು–ಗುರುವಾದವನು; ಪೆರ್ಚಿದ–ಅಧಿಕವಾದ, ಒಂದು, ಬೇವಸದ–ವ್ಯಥೆಯ, ಎಡೆಗೆ–ಸಮಯಕ್ಕೆ, ಆಶ್ರಯಂ– ಅವಲಂಬನವಾದವನು; ಮನಮಂ–ಮನವನ್ನು, ಒಪ್ಪಿಸುವ–ಒಪ್ಪುವಂತೆ ಮಾಡುವ, ಈ ಎಡೆಯೊಳ್–ಈ ಸಮಯದಲ್ಲಿ, ಮನಂ–ಮನವಾಗಿರುವವನು; ವಿಚಾರಿಸುವೊಡೆ–ವಿಚಾರ ಮಾಡಿದರೆ, ಎನಗೆ–ನನಗೆ, ಕರ್ಣನಲ್ಲದೆ–ಕರ್ಣನು, ಅಲ್ಲದೆ, ಪೆಱನೊರ್ವಂ–ಬೇರೊಬ್ಬನು, ಆವನೋ–ಯಾವನೋ, ಯಾರೋ!
೬೦. ಇನಾತ್ಮಜಾತಂ–ಸೂರ್ಯಸುತನಾದ ಕರ್ಣನು, ಎನಗೆ–ನನಗೆ, ನೆಲನಂ–ರಾಜ್ಯ ವನ್ನು, ಕೊಟ್ಟಂ–ಕೊಟ್ಟನು; ಎಂದರೆ ಕರ್ಣನು ಅನೇಕ ದೇಶಗಳನ್ನು ಜಯಿಸಿ ದುರ್ಯೋಧನನ ವಶಕ್ಕೆ ತಂದನೆಂಬ ಅರ್ಥಮಾತ್ರವಲ್ಲ, ದುರ್ಯೋಧನನಿಗೆ ತಿಳಿದಿದೆ, ಕರ್ಣನು ತನ್ನ ಕುಲಕ್ಕೆ ಜೇಷ್ಠನೆಂದು, ನ್ಯಾಯವಾಗಿ ತನಗೆ ಸಲ್ಲಬೇಕಾಗಿದ್ದ ರಾಜ್ಯವನ್ನು ದುರ್ಯೋಧನನಿಗೆ ಅವನು ಕೊಟ್ಟನು ಎಂದು ಅರ್ಥವಾಗಬಹುದು; ಆಂ–ನಾನು, ತಕ್ಕೂರ್ಮೆಯಿಂದಂ–ಯೋಗ್ಯತಾತಿಶಯದಿಂದ, ಜಳಾಂಜಳಿಯಂ–ತರ್ಪಣವನ್ನು, ಕೊಟ್ಟೆನುಮಿಲ್ಲಂ–ಕೊಟ್ಟವನು ಆಗಲಿಲ್ಲ; ಸೂರ್ಯತನಯಂ–ಕರ್ಣನು, ತೇಜೋಗ್ನಿ ಯಿಂದಂ–ತನ್ನ ತೇಜಸ್ಸೆಂಬ ಅಗ್ನಿಯಿಂದ, ದ್ವಿಷದ್ಬಲಮಂ–ವೈರಿ ಸೇನೆಯನ್ನು, ಸುಟ್ಟಂ– ಸುಟ್ಟನು; ಉದಾತ್ತಪುಣ್ಯಂ–ಅತ್ಯತಿಶಯ ಪುಣ್ಯವನ್ನುಳ್ಳ, ಅವನಂ–ಅವನನ್ನು, ಚೈತಾಗ್ನಿ ಯಿಂ–ಚಿತೆಯ ಉರಿಯಲ್ಲಿ, ಸುಟ್ಟೆನಿಲ್ಲ–ನಾನು ಸುಡಲಿಲ್ಲ; ಒಲವಿಂದೆ–ಪ್ರೀತಿಯಿಂದ, ಇಂತು–ಹೀಗೆ, ಎರ್ದೆಮುಟ್ಟಿ–ಎದೆಸೋಂಕಿ, ಕರ್ಣಂಗೆ–ಕರ್ಣನಿಗೆ, ಕೂರ್ತಂ–ಸ್ನೇಹವನ್ನುಳ್ಳ, ದುರ್ಯೋಧನಂ–ದುರ್ಯೋಧನನು, ಒಳನೇ–(ಇನ್ನೂ) ಇರುವನೇ!
೬೧. ಉದಗ್ರಶೋಕಶಿಖಿಯಿಂ–ಶ್ರೇಷ್ಠ ದುಃಖಾಗ್ನಿಯಿಂದ, ಕಿರ್ಚಂ–ಕಿಚ್ಚನ್ನು ಎಂದರೆ ಚಿತೆಗೆ ಉರಿಯನ್ನು. ಕೊಟ್ಟೈ–ಕೊಟ್ಟಿರುವೆ; ಕಣ್ಣೀರ್ಗಳಿಂದೆ–ಕಣ್ಣ ನೀರಿನಿಂದ, ಎಯ್ದೆ– ಚೆನ್ನಾಗಿ, ಸೂರ್ಯಸುತಂಗೆ–ಕರ್ಣನಿಗೆ, ನೀಗೊಟ್ಟೈ–ತರ್ಪಣವನ್ನು ಕೊಟ್ಟಿರುವೆ; ಲೌಕಿ ಕಮಂ–ಲೋಕ ವ್ಯವಹಾರವನ್ನು, ಇಂ–ಇನ್ನು, ಏಂ ದಾಂಟಿದಯ್–ಏನನ್ನು ಉಲ್ಲಂಘಿ ಸಿರುವೆ? ವೈರಿಯಂ–ಹಗೆಗಳನ್ನು, ಇಂ–ಇನ್ನು, ಪೋೞ್ದು–ಹೋಳುಮಾಡಿ, ಸೀಳ್ದು–ಸೀಳಿ, ಒಡ್ಡಿ–ಚಾಚಿ, ಮುಂದಿಟ್ಟು, ತತ್ಪಿಶಿತದಿಂದೆ–ಅವರ ಮಾಂಸದಿಂದ, ನೀಂ–ನೀನು, ಆತಂಗೆ– ಆ ಕರ್ಣನಿಗೆ, ಕೂರ್ಪೊಡೆ–ಪ್ರೀತಿಸುವ ಪಕ್ಷದಲ್ಲಿ, ಭೂಪತೀ–ದುರ್ಯೋಧನನೇ, ತದ್ದ್ವಿಜ ಗಣಕ್ಕೆ–ಆ ಪಕ್ಷಿಗಳ ಸಮೂಹಕ್ಕೆ, ಆಹಾರಮಂ–ಆಹಾರವನ್ನಾಗಿ, ಮಾಡು; ಏಗೆಟ್ಟತ್ತು– ಏನು ನಷ್ಟವಾಯಿತು, ಇಂ–ಇನ್ನು, ನಡೆ–ಹೆಜ್ಜೆಯಿಡು ಮುಂದಕ್ಕೆ.
ವಚನ : ಶರಶಯನತಳ–ಬಾಣಗಳ ಹಾಸಿಗೆಯ ಮೇಲೆ; ಅಲ್ಲಿವರಂ–ಅಲ್ಲಿಯ ತನಕ;
೬೨. ರೋಮಕೂಪದೊಳಗೆ–ಮೈಯ ಕೂದಲುಗಳ ಕುಳಿಗಳಲ್ಲಿ, ಉರ್ಚಿದ–ನಾಟಿದ, ಸಾಲಸರಲ್ಗಳುಂ–ಸಾಲ ವೃಕ್ಷದ ಮರದಿಂದ ಮಾಡಿದ ಬಾಣಗಳು, ಇಡಿದಿರೆ–ಒತ್ತಾಗಿ ತುಂಬಿರಲು, ತೆಱಂ ಬಿಡಿದಿರೆ–ನಾನಾ ತೆರನಾಗಿ, ಬೆಟ್ಟು–ಬೆಟ್ಟವು, ಒರ್ಗುಡಿಸಿದಂತೆ–ಕುಪ್ಪೆ ಹಾಕಿದ ಹಾಗೆ, ನೆಱಲ್ದಿರೆ–ನಿಶ್ಚೇಷ್ಟನಾಗಿರಲು, ಸುಯ್ವಪುಣ್ಗಳಿಂ–ದುಡಿಯುತ್ತಿರುವ ಹುಣ್ಣು ಗಳಿಂದ, ಶರಾಳಿಭಯದಿಂ–ಬಾಣಗಳ ಭಯದಿಂದ, ಬಡನಡುವಂ–ಕೃಶವಾದ ಸೊಂಟ ವನ್ನು, ನಡುಪಂತಿರೆ–ನಡುಗಿಸುವ ಹಾಗಿರಲು, ಚಿತ್ತದೊಳ್–ಮನಸ್ಸಿನಲ್ಲಿ, ಮೃಡಂ– ಶಿವನು, ತೊಡರ್ದಿರೆ–ಸೇರಿರಲು, ಅಂದು–ಆ ದಿನ, ಸಿಂಧುಜಂ–ಭೀಷ್ಮನು, ಶರಶಯ್ಯೆ ಯೊಳ್–ಬಾಣಗಳ ಹಾಸಿಗೆಯಲ್ಲಿ, ಬಿೞ್ದು–ಬಿದ್ದು, ಅದೇನೆಸೆದನೋ–ಅದೇನು ಶೋಭಿಸಿ ದನೋ?
೬೩. ಹರನೊಳೆ–ಶಿವನಲ್ಲಿಯೇ, ಪತ್ತಿ–ಸೇರಿ, ತೆತ್ತಿಸಿದ–ಅಂಟಿಸಿದ, ಚಿತ್ತಮಂ– ಮನಸ್ಸನ್ನು, ಇರ್ಬಗೆಯಾಗೆ–ಎರಡು ಭಾಗವಾಗಲು, ಮೋಹಂ–ಮಮತೆಯು, ಒತ್ತರಿಸೆ– ಬೇರ್ಪಡಿಸಲು, ಸುಯೋಧನಂಗೆ–ದುರ್ಯೋಧನನಿಗೆ, ರಣಭೂಮಿಯೊಳ್–ಯುದ್ಧ ರಂಗದಲ್ಲಿ, ಎಂತುಟು ಅವಸ್ಥೆಯೋ–ಯಾವ ರೀತಿಯ ಪರಿಸ್ಥಿತಿಯೋ, ಎನ್ನ–ನನ್ನ, ಮೆಯ್– ಮೈ, ಕನಲ್ದು–ಕೆಂಡದಂತೆ ಹೊಳೆದು, ಉರಿದಪುದು–ಉರಿಯುತ್ತಿದೆ; ಎನುತುಂ–ಎಂದು ಹೇಳುತ್ತ, ಅತ್ತಣ–ಅತ್ತಕಡೆಯ, ಪಂಬಲ–ಕಳವಳದ, ಬಂಬಲೊಳ್–ಪರಂಪರೆಯಲ್ಲಿ, ಚಿತ್ತಂ–ಮನಸ್ಸು, ತೆಱಂದಿರಿದುದು–ನಾನಾ ವಿಧವಾಗಿ ಅಲೆದಾಡಿತು; ಆ ದೊರೆಯ–ಅಂಥ ಯೋಗ್ಯತೆಯನ್ನುಳ್ಳ, ಯೋಗಿಗಂ–ಯೋಗಶಕ್ತಿಯುಳ್ಳವನಿಗೂ, ಇಂತುಟೆ–ಹೀಗೆಯೇ, ಮೋಹಂ–ಮಮತೆಯು, ಆಗದೇ–ಉಂಟಾಗದೇ?
ವಚನ : ಸೊಪ್ಪುಳಂ–ಸದ್ದನ್ನು ಆಲಿಸಿ–ಕೇಳಿ; ವ್ರಣವೇದನಾ–ಗಾಯಗಳ ನೋವಿನಿಂದ; ಕರ್ಣೋಪಾಂತಮಂ–ಕಿವಿಯ ಸಮೀಪವನ್ನು; ಮೃಗಧರಂ–ಚಂದ್ರನು; ಅರೆಮುಗುಳ್ದ– ಅರ್ಧ ಮುಚ್ಚಿದ; ರಕ್ತಾಂಭೋಜ–ಕೆಂದಾವರೆಯ; ಉಪಹಾಸಿಗಳಪ್ಪ–ನಗುವಂತಿರುವ; ಒತ್ತಂಬದಿಂ–ಬಲಾತ್ಕಾರದಿಂದ;
೬೪. ಎಱಗಿದ ಕೌರವೇಶ್ವರನೊಳ್–ನಮಸ್ಕರಿಸಿದ ದುರ್ಯೋಧನನಲ್ಲಿ, ಆದಂ– ವಿಶೇಷವಾಗಿ, ಇದಿರ್ಚಿದ–ಎದುರಿನಲ್ಲಿ ಕಂಡ, ಅಲಂಪು–ಸಂತೋಷವು, ಎಲರ್ಚಿದ– ಸಚೇತನವಾದ, ಅೞ್ಕಱಂ–ಪ್ರೀತಿಯನ್ನು, ಒಳಕೊಳ್ವಿನಂ–ಒಳಗೊಳ್ಳುತ್ತಿರಲು, ಪರಸಿ– ಆಶೀರ್ವಾದ ಮಾಡಿ, ಮೆಯ್ಯೊಳೆ ಬಂದ ತೆಱಕ್ಕೆ–ಏಕಾಂಗಿಯಾಗಿ ಬಂದ ರೀತಿಗೆ, ಮೆಯ್– ನನ್ನ ಮೈ, ಕರಂ–ವಿಶೇಷವಾಗಿ, ಇಂತು–ಹೀಗೆ, ಮಱು [ಗುವು] ದು–ದುಃಖಪಡುತ್ತಿದೆ; ಮಗನೆ– ಕಂದಾ, ಬೆಳ್ಗೊಡೆ–ಶ್ವೇತಚ, ತ್ರಿ, ಎಲ್ಲಿದುದು–ಎಲ್ಲಿತ್ತು? ಸುತ್ತಿಱಿದ–ಬಳಸಿಕೊಂಡಿದ್ದ, ಚತುರ್ಬಲಂ–ಚತುರಂಗ ಸೈನ್ಯ, ಎತ್ತಪೋಯ್ತು–ಎಲ್ಲಿ ಹೋಯಿತು, ಪೇೞ್–ಹೇಳು; ವೈರಿ ಭೂಪರಿಂ–ಶತ್ರುರಾಜರಿಂದ, ನಿನಗಂ–ನಿನಗೂ, ಈ ಇರವಾದುದೆ–ಈ ಸ್ಥಿತಿ ಉಂಟಾ ಯಿತೆ?
ವಚನ : ಕಣ್ಣನೀರಂ ನೆಗಪಿ–ಕಣ್ಣೀರನ್ನು ಉಕ್ಕಿಸಿ ಹರಿಯಿಸಿ; ನಿನ್ನಗೆಯ್ವ–ನೀನು ಮಾಡುವ; ನಿಯೋಗಂ–ಕಾರ್ಯವು; ಬಗೆದಪೆ–ಆಲೋಚಿಸುತ್ತೀಯ;
೬೫. ಎಂತುಂ–ಹೇಗೂ, ವೈರಿನೃಪರಂ–ಶತ್ರುರಾಜರನ್ನು, ತಱಿದೊಟ್ಟುವುದಲ್ಲದೆ– ಕತ್ತರಿಸಿ ಹಾಕುವುದಲ್ಲದೆ, ಬಗೆ ಪೆಱತುಂಟೆ–ಆಲೋಚನೆ ಬೇರೆ ಇದೆಯೆ? ಭವತ್ಪದ ಸರೋಜಮನ್–ತಮ್ಮ ಪಾದಕಮಲಗಳನ್ನು, ಬಲಗೊಂಡು–ಪ್ರದಕ್ಷಿಣೆ ಮಾಡಿ, ಮತ್ತಂ– ಪುನಃ, ಆಜಿಗೆ–ಯುದ್ಧಕ್ಕೆ, ನಡೆಯಲ್ಕೆ–ಹೋಗುವುದಕ್ಕೆ, ಆಂ–ನಾನು, ಇಲ್ಲಿಗೆ, ಬರವಂ ಬಂದೆನ್–ಬರವನ್ನು ಬಂದಿದ್ದೇನೆ ಎಂದರೆ ಆಗಮಿಸಿದ್ದೇನೆ, ಎನೆ–ಎನ್ನಲು, ದೇವನ ದೀಸುತಂ–ಭೀಷ್ಮನು, ರಾಜರಾಜನಾ–ದುರ್ಯೋಧನನ, ಶೌರ್ಯಗುಣೋನ್ನತಿ–ಶೌರ್ಯ ಗುಣದ ಅತಿಶಯವು, ಇದೇನ್ ಅಖಂಡಿತಮೋ–ಇದೇನು ಅಖಂಡವಾದುದೋ! ಎಂದು, ಚಿತ್ತದೊಳ್–ಮನಸ್ಸಿನಲ್ಲಿ, ಬಗೆದಂ ಭಾವಿಸಿದನು.
ವಚನ : ಅವಸಾನದೊಳ್–ಕೊನೆಯಲ್ಲಿ; ಎೞಲದ–ಜೋತುಬೀಳದ ಎಂದರೆ ಸಡಿಲ ವಾಗದ, ಕುಗ್ಗದ; ಮನಂಗೊಂಡು–ಮನದಲ್ಲಿ ಮೆಚ್ಚಿ; ಕೂರ್ಪು–ಹರಿತವಾಗಿರುವುದು, ಮೊನೆ; ಅನಿವಾರಿತಂ–ನಿವಾರಿಸಲಾಗದ್ದು; ಬೞಿಯಂ–ಅನಂತರ.
೬೬. ಒಂದಱಿಂದೆ–ಒಂದರಿಂದ ಎಂದರೆ ಬುದ್ಧಿಯಿಂದ, ಎರಡಂ–ಎರಡನ್ನು ಎಂದರೆ ಕಾರ್ಯಾಕಾರ್ಯಗಳನ್ನು ಅಥವಾ ಪುಣ್ಯಪಾಪಗಳನ್ನು, ಪರಿಕಿಪುದು–ಪರೀಕ್ಷಿಸುವುದು; ಮೂಱಱಿಂದೆ–ಶತ್ರು ಮಿತ್ರ ಬಾಂಧವ ಎಂಬ ಮೂರರಿಂದ, ಓತು–ಪ್ರೀತಿಸಿ, ಒಳ ಕೊಳ್ವುದು–ಒಳಪಡಿಸಿಕೊಳ್ಳುವುದು; ನಾಲ್ಕು–ಸಾಮ ದಾನ ಭೇದ ದಂಡ ಎಂಬ ಉಪಾಯ ಗಳು, ಅರಿದು–ಕಷ್ಟವಾದುವು; ಅವುಗಳನ್ನು, ಅಱಿದು–ತಿಳಿದುಕೊಂಡು, ಅಯ್ದಱಿಂದೆ– ಐದು ಜ್ಞಾನೇಂದ್ರಿಯಗಳಿಂದ, ನೆಱೆ–ಪೂರ್ಣವಾಗಿ, ಕಲ್ವುದು–ಕಲಿಯುವುದು; ನಿರ್ಣಯ ಮಾಗಿರೆ–ನಿಶ್ಚಯವಾಗಿರಲು, ಆಱಱೊಳ್–ಆರರಲ್ಲಿ ಎಂದರೆ ಸಂಧಿ ವಿಗ್ರಹ ಯಾನ ಆಸನ ಸಂಶ್ರಯ ದ್ವೈಧೀಭಾವ ಎಂಬ ಷಾಡ್ಗುಣ್ಯಗಳಲ್ಲಿ, ಪರಿಣತನಪ್ಪುದು–ಚೆನ್ನಾಗಿ ತಿಳಿದವನಾಗು ವುದು; ಏೞರೊಳಂ–ಏಳರಲ್ಲಿ ಎಂದರೆ ಸಪ್ತ ವ್ಯಸನಗಳಲ್ಲಿ, ಒಂದದೆ–ಸೇರದೆ, ನಿಲ್ವುದು– ನಿಲ್ಲುವುದು; ದುರ್ವಿಮಂತ್ರಮಂ–ದುಷ್ಟಮಂತ್ರಾಲೋಚನೆಯನ್ನು, ಪರೆಪ–ವಿಸ್ತರಿಸುವ, ಟಮಾಳಮಂ–ವಂಚನೆಯ ಮಾತುಗಳನ್ನು, ಪಿರಿದನೋದಿದೊಡೆ–ಹಿರಿದಾಗಿ ಹೇಳಿದರೆ, ಅಪ್ಪ–ಆಗುವ, ಪದಾರ್ಥಮಾವುದೋ– ಲಾಭವೇನೋ, ಪ್ರಯೋಜನವೇನೋ!
ಈ ಪದ್ಯಕ್ಕೆ ಮೂಲವಾದದ್ದು ವ್ಯಾಸಭಾರತದ ಉದ್ಯೋಗಪರ್ವದ, ೩೩ನೆಯ ಅಧ್ಯಾಯದ ೪೮ನೆಯದಾದ ಕೆಳಗಿನ ಶ್ಲೋಕ :–
ಏಕಯಾ ದ್ವೇವಿನಿಶ್ಚಿತ್ಯ ತ್ರೀಂಶ್ಚತುರ್ಭಿರ್ವಶೇ ಕುರು
ಪಂಚ ಜಿತ್ವಾ ವಿದಿತ್ವಾಷಟ್ ಸಪ್ತಹಿತ್ವಾಸುಖೀಭವ ॥
ಇದಕ್ಕೆ ವ್ಯಾಖ್ಯಾನ: “ಏಕಯಾ–ಬುದ್ಧ್ಯಾ, ದ್ವೇ–ಪುಣ್ಯಪಾಪೇ, ತ್ರೀನ್–ಶತ್ರು ಮಿತ್ರ ಬಾಂಧವಾನ್; ಚತುರ್ಭಿಃ–ಸಾಮಾದ್ಯುಪಾಯೈಃ; ಪಂಚ–ಜ್ಞಾನೇಂದ್ರಿಯಾಣಿ; ಷಟ್– ಸಂಧ್ಯಾದಿಗುಣಾನ್; ಸಪ್ತ–ದ್ಯೂತ ಸ್ತ್ರೀಪಾನಾದೀನಿ ಸಪ್ತವ್ಯಸನಾನಿ”
ಒಂದಱಿಂದೆರಡಹುದನಱಿ ಮೂ
ಱಂದವನು ತಿಳಿ ನಾಲ್ಕಱೊಳು ಮನ
ಗುಂದದಿರೈದಱೊಳು ವರ್ತಿಪುದಾಱನೇಳಱೊಳು ।
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿಯೊಂಬತ್ತಱೊಳು ನೆಱೆ
ಸಂದಿಸದರೀರೈದಱೊಳು ಭೂಪಾಲ ಕೇಳೆಂದ ॥ (೫-೩-೩)
ಇದೇ ಶ್ಲೋಕದ ಅಭಿಪ್ರಾಯವನ್ನು ಕುಮಾರವ್ಯಾಸ ಹೇಳುತ್ತಾ ಇನ್ನೂ ಮೂರನ್ನು ಸೇರಿಸಿ ಹತ್ತನ್ನು ಹೇಳಿದ್ದಾನೆ;
೬೭. ಭರತಕುಲಂ–ಭರತನ ವಂಶ, ಪೆರ್ಚುಗೆ–ಹೆಚ್ಚಲಿ, ವರ್ಧಿಸಲಿ; ನಿಮ್ಮೆರಡು ತಂಡಂ–ನಿಮ್ಮ ಉಭಯ ಪಕ್ಷಗಳು, ನೆಲೆವೆರ್ಚುಗೆ–ಇರುವ ಸ್ಥಿತಿಗಿಂತ ಉತ್ಕೃಷ್ಟವಾಗಲಿ; ಒದವಿದ–ಉಂಟಾದ, ನಣ್ಪಿಂ–ಬಾಂಧವ್ಯದಿಂದ, ಕಲುಷಂ–ದ್ವೇಷವು, ಕರ್ಚುಗೆ–ತೊಳೆದು ಹೋಗಲಿ; ಕುರುಕುಳತಿಳಕಾ–ದುರ್ಯೋಧನನೇ, ಎನ್ನೆಂದ ನುಡಿಗೆ–ನಾನು ಹೇಳಿದ ಮಾತು ಗಳಿಗೆ, ನೀಂ–ನೀನು, ತಲೆಯುರ್ಚದಿರ್–ತಲೆಯನ್ನು ಎಳೆದುಕೊಳ್ಳಬೇಡ ಎಂದರೆ ವಿಮುಖ ನಾಗಬೇಡ.
೬೮. ದೋಷಮುಂ–ಅಪರಾಧವೂ, ಏವಮುಂ–ಕೋಪವೂ, ಶಕುನಿಯಿಂ–ಶಕುನಿ ಯಿಂದ, ಯುವರಾಜನಿಂ–ದುಶ್ಶಾಸನನಿಂದ, ಆಯ್ತು ಪೋಯ್ತು–ಆಯಿತು ಹೋಯಿತು; ಎಂದರೆ ಇನ್ನು ಅದರ ವಿಚಾರವೇಕೆ? ನಿರ್ದೋಷಿಗಳಪ್ಪ–ದೋಷವಿಲ್ಲದಿರುವ, ತಪ್ಪಿಲ್ಲ ದಿರುವ, ನಿಮ್ಮೆರಡು ತಂಡಮುಂ–ನಿಮ್ಮ ಎರಡು ಪಂಗಡಗಳೂ, ಇಂ–ಇನ್ನು, ಪುದು ವಾೞ್ವುದು–ಹೊಂದಿಕೊಂಡು ಬದುಕುವುದು; ಅಂತು–ಹಾಗೆ, ಅದು ಏಂ ದೋಷಮೋ– ಏನು ತಪ್ಪೋ, ಮೇಣ್–ಅಥವಾ, ವೃಕೋದರನಿಂ–ಭೀಮಸೇನನಿಂದ, ಆ ರಣರಂಗದೊಳ್– ಆ ಯುದ್ಧ ಭೂಮಿಯಲ್ಲಿ, ಆದ–ಉಂಟಾದ, ದುಷ್ಟ ದುಶ್ಶಾಸನ ರಕ್ತಮೋಕ್ಷದೊಳೆ– ದುರುಳ ದುಶ್ಶಾಸನನ ರಕ್ತದ ಬಿಡುತೆಯಲ್ಲೇ, ದೋಷವಿಮೋಕ್ಷಂ–ದೋಷದ ಬಿಡುಗಡೆ, ವಿಮೋಚನೆ; ಅದೇಕೆ–ಅದೇತಕ್ಕೆ, ಕೊಂಡಪೈ–ಬಲವಾಗಿ ಹಿಡಿದುಕೊಳ್ಳುವೆ?
೬೯. ನೀಂ–ನೀವು, ಇಂತು–ಹೀಗೆ, ಶರಶಯ್ಯಾಗ್ರದೊಳ್–ಬಾಣಗಳ ಹಾಸಿಗೆಯ ಮೇಲೆ, ಇರೆ–ಇರಲು; ಘಟಪ್ರೋದ್ಭೂತಂ–ದ್ರೋಣನು, ಅಂತಾಗೆ–ಹಾಗಾಗಲು, ವಾಸರ ನಾಥಾತ್ಮಜಂ–ಕರ್ಣನು, ರಣದೊಳ್–ಯುದ್ಧದಲ್ಲಿ, ಅಂತು–ಹಾಗೆ, ಸಾಯೆ–ಸಾಯಲು, ತದ್ವೃಕೋದರನಿಂ–ಆ ಭೀಮನಿಂದ, ದುಶ್ಶಾಸನಂ–ದುಶ್ಶಾಸನನು, ಇಂತು–ಹೀಗೆ, ಅೞಿದು– ಸತ್ತು, ಅೞ್ಗೆ–ನಾಶವಾಗಲು, ಸೈರಿಸಿಯುಂ–ಸಹಿಸಿಯೂ, ಆಂ–ನಾನು, ವೈರಿಭೂಪರೊಳ್– ಶತ್ರುರಾಜರಲ್ಲಿ ಸಂಧಾನಮಂ–ಸಂಧಿಯನ್ನು, ಇಂ–ಇನ್ನು, ಸಂಧಿಸಿ–ಉಂಟುಮಾಡಿ, ಸಂಪತ್ತುಮಂ ಶ್ರೀಯುಮಂ–ಐಶ್ವರ್ಯವನ್ನೂ, ತೆಜಸ್ಸನ್ನೂ, ಆರ್ಗೆ–ಯಾರಿಗೆ, ಮೆಱೆವೆಂ– ಪ್ರದರ್ಶಿಸುವೆನು? ಪೇೞಿಂ–ಹೇಳಿರಿ.
೭೦. ಬಿಡಿಂ ಎನ್ನ ನುಡಿಗೆ–ನನ್ನ ಮಾತಿಗೆ ನನ್ನನ್ನು ಬಿಡಿರಿ, ಎಂದರೆ ನನ್ನ ಮಾತು ನನಗೆ, ನಿಮ್ಮ ಮಾತು ನಿಮಗೆ; ಅಜ್ಜ–ತಾತನೇ, ಬೀೞ್ಕೊಳೆ–ಬೀಳ್ಕೊಳಲು, ಪೆಱತಂ–ಬೇರೆ ಮಾತನ್ನು, ನುಡಿಯದಿರಿಂ–ಹೇಳಬೇಡಿರಿ, ಮುಂ ನುಡಿದು–ಮೊದಲು ಒಂದು ಹೇಳಿ, ಎರಡಂ ನುಡಿವೆನೆ–ಎರಡನೆಯ ಮಾತನ್ನು ಹೇಳುತ್ತೇನೆಯೆ? ಚಲಮಂ–ಹಿಡಿದ ಪಟ್ಟನ್ನೇ ಹಿಡಿಯುವ ಹಠವನ್ನು, ಬಲ್ವಿಡಿವಿಡಿದೆಂ–ಬಲವಾದ ಮುಷ್ಟಿಯಿಂದ ಹಿಡಿದಿದ್ದೇನೆ; ಸಂಗರಧರೆ ಯೊಳ್–ಯುದ್ಧಭೂಮಿಯಲ್ಲಿ, ತನ್ನಪ್ಪುದು ಅಕ್ಕೆ–ತಾನಾಗುವುದಾಗಲಿ.
ವಚನ : ನಿನ್ನವಸರಕ್ಕೆ–ನಿನ್ನ ಸಮಯಕ್ಕೆ; ಪಗೆವರಂ–ಶತ್ರುಗಳನ್ನು; ಪರ್ಚಿಪೇೞ್ದು– ಪಿಸುಮಾತಾಡಿ ಹೇಳಿ; ಸಂಧಾನವಾರ್ತೆಯಂ–ಸಂಧಿಯ ಸುದ್ದಿಯನ್ನು; ಸಮಕೊಳಿಸುವಂತೆ– ಏರ್ಪಡಿಸುವಂತೆ; ಅನಾಗತ ಬಾಧಾ ಪ್ರತಿಷೇಧಂ–ಮುಂದಾಗಲಿರುವ ಹಾನಿಗೆ ಪ್ರತೀಕಾರ ವನ್ನು; ಬಟ್ಟೆಯಂ–ಮಾರ್ಗವನ್ನು;
೭೧. ಕ್ರಂದತ್….ಸ್ರಂಗಳ್ : ಕ್ರಂದತ್–ಶಬ್ದ ಮಾಡುತ್ತಿರುವ, ಸ್ಯಂದನ–ರಥಗಳಿಂದ, ಜಾತ–ಹುಟ್ಟಿದ, ನಿರ್ಗತ–ಹೊರ ಹೊರಟ, ಶಿಖಿಜ್ವಾಲಾ ಸಹಸ್ರಂಗಳ್–ಸಾವಿರಾರು ಉರಿ ಗಳು, ಆಟಂದು–ಮೇಲೆ ಹಾಯ್ದು, ಎತ್ತಂ ಕವಿದು–ಎಲ್ಲೆಲ್ಲಿಯೂ ಆವರಿಸಿಕೊಂಡು, ಅೞ್ವೆ– ಸುಡಲು, ಎತ್ತಂ–ಎಲ್ಲೆಲ್ಲೂ, ಬೇವ–ಬೇಯುತ್ತಿರುವ, ಶವ ಸಂಘಾತಂಗಳಂ–ಹೆಣದ ರಾಶಿ ಗಳನ್ನು, ಚಕ್ಕು ಮೊಕ್ಕೆಂದು–ಚಕ್ ಮೊಕ್ ಎಂದು, ಆಗಳ್–ಆಗ, ಕಡಿದು–ಕತ್ತರಿಸಿ, ಉಗ್ರ ಭೂತನಿಕರಂ–ಭಯಂಕರ ಪಿಶಾಚಿ ಸಮೂಹ, ಕೆಯ್ ಬೇಯೆ–ಕೈ ಸುಡುತ್ತಿರಲು, ಬಾಯ್ ಬೇಯೆ–ಬಾಯಿ ಸುಡುತ್ತಿರಲು, ತಿಂಬ ಅಂದಂ–ತಿನ್ನುವ ರೀತಿಯು, ತನ್ನ ಮನಕ್ಕೆ–ತನ್ನ ಮನಸ್ಸಿಗೆ, ಅಗುರ್ವಿಸುವಿನಂ–ಬೆದರಿಕೆಯನ್ನುಂಟುಮಾಡುತ್ತಿರಲು, ದುರ್ಯೋಧನಂ– ದುರ್ಯೋಧನನು, ನೋಡಿದಂ–ನೋಡಿದನು.
ವಚನ : ಕನಲ್ವ–ನಿಗಿನಿಗಿ ಎಂದು ಹೊಳೆಯುವ; ಪೞೆಯ–ಹಳೆಯದಾದ; ಬಳ್ಳುವಿನ– ಗುಳ್ಳೆನರಿಯ; ಅಳುರ್ವ–ಸುಡುವ; ಕಂಪುನಾಱುವುದರ್ಕೆ–ದುರ್ನಾತದ ಹೊಡೆತಕ್ಕೆ; ಕೋಳ್ದಾಂಟಿನೊಳ್–ವ್ಯಾಪಿಸುವಷ್ಟು ದೂರದಲ್ಲಿ; ಎಂದರೆ ನಾತ ಎಲ್ಲಿಯವರೆಗೆ ವ್ಯಾಪಿಸ ಬಲ್ಲುದೋ ಅಲ್ಲಿಂದ ಆಚೆಗೆ; ಕೊಳುಗುಳಮಂ–ಯುದ್ಧಭೂಮಿಯನ್ನು; ಕೞೆದು–ದೂರ ತೊಲಗಿ; ವಿಳಯ….ತಳವೆ: ವಿಳಯಕಾಲ–ಪ್ರಳಯಕಾಲದಿಂದ, ವಿಘಟ್ಟಿತ–ಅಪ್ಪಳಿಸಲ್ಪಟ್ಟ, ಅಷ್ಟದಿಗ್ಭಾಗ–ಎಂಟು ದಿಕ್ಪ್ರದೇಶಗಳ, ಸಂಧಿ ಬಂಧನ–ಕೀಲುಗಳ ಕಟ್ಟುಳ್ಳ, ಗಗನತಳಮೆ– ಆಕಾಶ ಪ್ರದೇಶವೇ, ಪಱಿದು ಬಿೞ್ದಂತೆ–ಹರಿದು ಬಿದ್ದ ಹಾಗೆ;
೭೨. ಇದು ಪಾತಾಳ ಬಿಲಕ್ಕೆ ಬಾಗಿಲ್–ಇದು ಪಾತಾಳವೆಂಬ ಬಿಲದ ಬಾಗಿಲು; ದಲ್– ನಿಜವಾಗಿಯೂ, ಘೋರಾಂಧಕಾರಕ್ಕೆ–ಭಯಂಕರ ಕತ್ತಲೆಗೆ, ಮಾಡಿದ, ಕೂಪಂ–ಬಾವಿ; ಇದು ಪೆಱತಲ್ತು–ಇದು ಬೇರೆ ಏನೂ ಅಲ್ಲ; ಉಗ್ರ ಕಾಳಾಂಭೋಧರಚಾ, ಯೆ–ಭೀಕರ ಪ್ರಳಯ ಕಾಲದ ಮೋಡಗಳ ನೆರಳು, ತಾನೆ ದಲ್–ತಾನೇ ನಿಜವಾಗಿಯೂ, ಎಂಬಂತಿರೆ– ಎನ್ನುವ ಹಾಗಿರಲು, ಕಾಚ ಮೇಚಕಚಯಚಾ, ಯಾಂಬುವಿಂ–ಕಾಚದಂತೆ ಕಪ್ಪುನೀಲಿ ಮಿಶ್ರಿತವಾದ ಬಣ್ಣವನ್ನಳ್ಳ ನೀರಿನಿಂದ, ಗುಣ್ಪಿನಿಂ–ಆಳದಿಂದ, ಪುದಿದು–ತುಂಬಿ, ಬಕಬಳಾಕಾ ನೀಕ ರಾವಾಕುಳಂ–ಬಕ ಬಲಾಕಪಕ್ಷಿಗಳ ಸಮೂಹದ ಶಬ್ದದಿಂದ ಮೊರೆಯುತ್ತಿರುವ, ಸರೋವರಂ–ವೈಶಂಪಾಯನ ಸರೋವರ, ಇರ್ದತ್ತು–ಇತ್ತು. ಈ ವರ್ಣನೆಯಲ್ಲಿ ಭವ್ಯತೆಯ (Sublimity) ಸಂಸ್ಪರ್ಶವಿದೆ.
೭೩. ಅದಟಿನ–ಪರಾಕ್ರಮದ, ವಿಕ್ರಮಾರ್ಜುನನ–ಅರ್ಜುನನ, ಸಾಹಸಭೀಮನ–ಸಾಹಸಿ ಯಾದ ಭೀಮಸೇನನ, ಕೋಪ ಪಾವಕಂ–ಕೋಪವೆಂಬ ಅಗ್ನಿಯು, ಪುದಿದು–ತುಂಬಿ, ಅಳುರ್ದು–ವ್ಯಾಪಿಸಿ, ಇಲ್ಲಿಯುಂ–ಇಲ್ಲಿ ಕೂಡ, ಎಮ್ಮಂ–ನಮ್ಮನ್ನು, ಅೞ್ವುಕೊಳ್ಳದೆ– ಸುಡದೆ, ಇರದು–ಇರುವುದಿಲ್ಲ; ಇಲ್ಲಿ–ಇಲ್ಲಿ, ಬಾೞ್ವರಂ–ಬಾಳುವವರನ್ನು, ಕದಡದಿರ್– ಕಲಕದೆ ಇರು; ಇತ್ತಬಾರದಿರು–ಇತ್ತಕಡೆ ಬರಬೇಡ, ಸಾರದಿರ್–ಹತ್ತಿರ ಬರಬೇಡ; ರುಂದ್ರ ಫಣೀಂದ್ರಕೇತುವಂ–ವಿಸ್ತಾರವಾದ ಹಾವಿನ ಹಳವಿಗೆಯ ದುರ್ಯೋಧನನನ್ನು, ಎಂಬ ವೊಲ್–ಎನ್ನುವ ಹಾಗೆ, ಉನ್ಮದಕಳಹಂಸ ಕೋಕನಿಕರಧ್ವನಿ–ಮದಿಸಿದ ಹಂಸ ಚಕ್ರವಾಕ ಪಕ್ಷಿಗಳ ಸಮೂಹದ ನಾದವು, ಎತ್ತಂ–ಎಲ್ಲೆಲ್ಲೂ, ಆದುದು–ಉಂಟಾಯಿತು.
ವಚನ : ಪುಂಡರೀಕ ಷಂಡ–ಸರೋವರದ; ಉಪಾಂತಮಂ–ಸಾಮೀಪ್ಯವನ್ನು; ಕರ್ಚಿ– ತೊಳೆದು;
೭೪. ನಿಜತೇಜದಿಂ–ತನ್ನ ತೇಜಸ್ಸಿನಿಂದ, ಸಮಸ್ತ ಭೂವಳಯಮಂ–ಸಕಲ ಭೂಮಂಡಲವನ್ನು, ಬೆಳಗಿ–ಪ್ರಕಾಶ ಮಾಡಿ, ಆಂತ–ಎದುರಿಸಿದ, ದೈತ್ಯರಂ–ರಾಕ್ಷಸರನ್ನು, ತಳವೆಳಗಾಗೆ–ತಬ್ಬಿಬ್ಬಾಗುವಂತೆ, ಕಾದಿ–ಯುದ್ಧಮಾಡಿ, ಚಳಿತು–ವಿಗತ ಪ್ರಭಾವನಾಗಿ, ಎಯ್ದೆ–ಚೆನ್ನಾಗಿ, ಬೞಲ್ದು–ಆಯಾಸ ಹೊಂದಿ, ಅಪರಾಂಬುರಾಶಿಯೊಳ್–ಪಶ್ಚಿಮ ಸಮುದ್ರದಲ್ಲಿ, ಮುೞುಗುವ–ಮುಳುಗುವ, ತೀವ್ರದೀಧಿತಿವೊಲ್–ಸೂರ್ಯನಂತೆ, ಫಣಿರಾಜಕೇತನಂ–ದುರ್ಯೋಧನನು, ಆ ಕೊಳದೊಳ್–ಆ ಸರೋವರದಲ್ಲಿ, ಮುೞುಗಿ ದಂ–ಮುಳುಗಿದನು; ಬಿದಿಯ ಕಟ್ಟಿದುದಂ–ವಿಧಿಯು ಹಣೆಗೆ ಕಟ್ಟಿರುವುದನ್ನು, ಕಳೆಯಲ್ಕೆ– ನೀಗುವುದಕ್ಕೆ, ಆರ್ಗಂ–ಯಾರಿಗೂ, ಏಂ ತೀರ್ಗುಮೇ–ಏನು ಸಾಧ್ಯವಾಗುವುದೇ? ಪದ್ಯದ ಭವ್ಯತೆ ಭಾವಗಮ್ಯ. ಇಲ್ಲಿ ಳಕಾರ ೞಕಾರಗಳ ಮಿಶ್ರಪ್ರಾಸವನ್ನು ನೋಡಬಹುದು.
ವಚನ : ವಜ್ರಿಯ–ಇಂದ್ರನ, ವಜ್ರಹತಿಗೆ–ವಜ್ರಾಯುಧದ ಏಟಿಗೆ, ಅಳ್ಕಿ–ಹೆದರಿ; ಕೊಳಗುಳದೊಳ್–ಯುದ್ಧ ಭೂಮಿಯಲ್ಲಿ; ಮಧುವನಿತಾವದನಕಮಳ ಹಿಮಕರಂ– ಮಧುಸೂದನನು, ಕೃಷ್ಣನು.
೭೫. ಇಂದಿನ ನೇಸಱಿಂದೊಳಗೆ–ಇವತ್ತಿನ ಸೂರ್ಯ ಮುಳುಗುವುದರೊಳಗಾಗಿ, ಅರಾತಿಯಂ–ಶತ್ರುವನ್ನು; ಇಕ್ಕದೆ–ಕೊಲ್ಲದೆ, ಮಾಣ್ದೆಮಪ್ಪೊಡೆ–ಬಿಟ್ಟೆವಾದ ಪಕ್ಷದಲ್ಲಿ, ಇನ್ನೆಂದುಂ–ಇನ್ನು ಯಾವತ್ತೂ, ಅಸಾಧ್ಯ–ಗೆಲ್ಲಲಾಗದವನು; ಇಂದೇ–ಈ ದಿನವೇ, ಹಳಿಯುಂ–ಬಲರಾಮನೂ, ಆತನಂ–ಅವನನ್ನು, ದುರ್ಯೋಧನನನ್ನು, ಕೂಡುವಂ ಗಡ– ಸೇರುತ್ತಾನಲ್ಲವೇ? ಬೞಿಕ್ಕೆ–ಅನಂತರ, ಗೆಲಲ್–ಗೆಲ್ಲಲು, ಬಂದಪುದೇ–ಆಗುವುದೇ? ಅದುವೆ ಕಾರಣಮಾಗಿ–ಅದೇ ಕಾರಣವಾಗಿ, ಅಂಧರಾಣ್ನಂದನಂ–ಧೃತರಾಷ್ಟ್ರನ ಮಗ, ದುರ್ಯೋಧನ, ಉಳಿದಿರ್ದಂ–ಅಡಗಿಕೊಂಡಿದ್ದಾನೆ; ಅಲ್ಲದೆ–ಹೀಗಲ್ಲದೆ, ಉಂತೆ– ಸುಮ್ಮನೆ, ರಣರಂಗ ಭೂಮಿಯೊಳ್–ಯುದ್ಧಭೂಮಿಯಲ್ಲಿ, ತಲೆಯುರ್ಚುಗುಮೇತಲೆ ಯನ್ನು ಎಳೆದುಕೊಳ್ಳುತ್ತಾನೆಯೇ ಎಂದರೆ ತಲೆ ತಪ್ಪಿಸಿಕೊಳ್ಳುತ್ತಾನೆಯೆ, ಮರೆಯಾಗಿ ರುತ್ತಾನೆಯೇ?
ವಚನ : ಜಳಧರ ಸಮಯ–ವರ್ಷ ಕಾಲದ, ನಿಶಾ–ರಾತ್ರಿಯಲ್ಲಿ, ಸಂಚಲಿತ– ಕಂಪಿಸುತ್ತಿರುವ, ವಿದ್ಯುತ್–ಮಿಂಚಿನಂತೆ, ಪಿಂಗಳ–ಹೊಂಬಣ್ಣದ, ಅಕ್ಷ–ಕಣ್ಣುಗಳನ್ನುಳ್ಳ; ಪಾತಂಗಳಿಂ–ನೋಟಗಳಿಂದ; ಜರಾಸಂಧ ಸಂಧಿ ಬಂಧನ ವಿಘಟನಂ–ಜರಾಸಂಧನ ಕೀಲ್ಕಟ್ಟು ಗಳನ್ನು ಸೀಳಿದವನಾದ ಭೀಮಸೇನನು.
೭೬. ಕಡಲಂಪೊಕ್ಕೊಡೆ–ಸಮುದ್ರವನ್ನು ಹೊಕ್ಕರೆ, ಕಡಲಂ–ಸಾಗರವನ್ನು, ಪೀರ್ದಪೆಂ– ಹೀರುತ್ತೇನೆ; ಪಾತಾಳಮಂ ಪೊಕ್ಕನಪ್ಪೊಡೆ–ಪಾತಾಳವನ್ನು ಹೊಕ್ಕವನಾದರೆ, ಶೇಷಾಹಿಯ– ಆದಿಶೇಷನ, ಪಲ್ಗಳಂ–ಹಲ್ಲುಗಳನ್ನು, ಮುಱಿದಪೆಂ–ಮುರಿಯುತ್ತೇನೆ; ಬ್ರಹ್ಮಾಂಡಮಂ ಪೊಕ್ಕನಪ್ಪೊಡಂ–ಬ್ರಹ್ಮಾಂಡವನ್ನು ಹೊಕ್ಕವನಾದರೂ, ಆ ಬ್ರಹ್ಮನ, ಗಂಟಲಂ– ಕೊರಳನ್ನು, ಮುಱಿದಪೆಂ–ಮುರಿಯುತ್ತೇನೆ; ದುರ್ಯೋಧನಂಗೆ–ದುರ್ಯೋಧನನಿಗೆ, ಇಂ–ಇನ್ನು, ಪುಗಲ್ಕೆ–ಪ್ರವೇಶಿಸುವುದಕ್ಕೆ, ತ್ರೈಭೂಭುವನಂಗಳಿಂ–ಮೂರು ಲೋಕಗಳಿಂದ, ಪೊಱಗೆ–ಹೊರಗೆ, ಆಚೆ, ಎಡೆ–ಸ್ಥಳವು, ಬಾಣಾಂತಕಾ–ಶ್ರೀಕೃಷ್ಣನೇ, ಮತ್ತೆ–ಬೇರೆ, ಎಲ್ಲಿತ್ತೋ–ಎಲ್ಲಿದೆಯೋ?
ವಚನ : ಕಿರಾತಂ–ಬೇಡನು; ಹಳಕುಳಿಶ ಶಂಕಚಕ್ರ ಲಾಂಛಿತಮಪ್ಪಡಿ ವಜ್ಜೆಯಂ– ನೇಗಿಲು, ವಜ್ರ, ಶಂಖ, ಚಕ್ರ ಇವುಗಳ ಗುರುತನ್ನುಳ್ಳ ಪಾದಗಳ ಹೆಜ್ಜೆಯನ್ನು; ಮುಟ್ಟೆ ವಂದು–ಸಮೀಪಿಸಿ; ಕಳಕಳ ನಿನಾದಂಗಳಿಂದೆ–ಕೋಲಾಹಲದ ಶಬ್ದಗಳಿಂದ, ಆರ್ದು– ಗರ್ಜಿಸಿ; ತಾಡಿಸಿಯುಂ–ಹೊಡೆಯಿಸಿಯೂ; ಸರಂಗೇಳ್ದಲ್ಲದೆ–ಧ್ವನಿಯನ್ನು ಕೇಳಿದಲ್ಲದೆ; ಈ ಬೂತು–ಈ ದೆವ್ವ, ಪ್ರಾಣಿ; ಪೌವನೆ ಪಾಱುವನ್ನೆಗಂ–ಹವ್ವನೆ ಹಾರುವವರೆಗೂ.
೭೭. ಕಿಱಿಯಂದಿಂದಿತ್ತ–ಚಿಕ್ಕಂದಿನಿಂದೀಚೆಗೆ, ದುರ್ಯೋಧನಂ–ಯುದ್ಧಕ್ಕೆ ಅಸಾಧ್ಯನು, ಅಜೇಯನು, ಎನಿಸಿದ–ಎನ್ನಿಸಿಕೊಂಡ, ವಿಕ್ರಾಂತಂ–ಪರಾಕ್ರಮವು, ಏನಾದುದು–ಏನಾಯಿತು? ಎೞ್ತಂದು–ದಂಡೆತ್ತಿ ಬಂದು, ಇಱಿವ–ಯುದ್ಧ ಮಾಡುವ, ಉರ್ಕು–ಕೊಬ್ಬು, ಗರ್ವ, ಎಲ್ಲಿತ್ತೊ–ಎಲ್ಲಿ ಇದ್ದಿತೊ? ಪಾಂಚಾಳಿಯಂ–ದ್ರೌಪದಿಯನ್ನು, ಎೞೆವ–ಎಳೆಯುವ, ಅದಟು–ಪ್ರತಾಪ, ಏನಾದುದೋ–ಏನಾಯಿತೋ? ಗಂಡ–ಶೂರನೇ, ಪೇೞ್–ಹೇಳು; ಪೊಚ್ಚಱಿನ–ಪ್ರತಾಪದ, ಅಂತಾಮಾತುಂ–ಹಾಗಿರುವ ಮಾತೂ, ಇಂತೂ–ಹೀಗೆ, ಈ ಇರವು–ಈ ಪರಿಸ್ಥಿತಿಯು, ಎನೆ–ಎನ್ನಲು, ನಗೆಯಂ–ಪರಿಹಾಸವನ್ನು, ಮಾಡಿದಯ್– ಉಂಟು ಮಾಡಿದೆ; ಬಂದನೀತಂ–ಬಂದವನಿವನು, ಪೆಱನಲ್ಲಂ–ಬೇರೆ ಯಾರೂ ಅಲ್ಲ, ಕೌರವಕುಳನಳಿನೀಕುಂಜರಂ–ಕೌರವ ವಂಶವೆಂಬ ತಾವರೆಗೆ ಆನೆಯಾಗಿರುವ, ಭೀಮಸೇನಂ– ಭೀಮಸೇನನು. “ಕ್ರುದ್ಧೇ ಯುಷ್ಮತ್ಕುಲಕಮಲಿನೀಕುಂಜರೇ ಭೀಮಸೇನೇ” (ವೇಣೀ. ೫– ೩೩)
೭೮. ದುಶ್ಶಾಸನೋರಸ್ಥಳ ವಿಗಳದಸೃಗ್ವಾರಿಯಂ–ದುಶ್ಶಾಸನ ಎದೆಯ ಪ್ರದೇಶದಿಂದ ಸುರಿಯುವ ರಕ್ತವೆಂಬ ನೀರನ್ನು, ಕುಡಿದೆಂ–ಕುಡಿದೆನು; ಅದಂ ಕಂಡು–ಅದನ್ನು ನೋಡಿ, ಮುಂ–ಮೊದಲು, ನಡೆ ನೋಡುತ್ತ–ನಾಟುವಂತೆ ನೋಡುತ್ತ, ಅಳ್ಕಿ–ಹೆದರಿ, ಮಾಣ್ದಯ್– ನಿಂತೆ ಎಂದರೆ ಏನೂ ಪ್ರತಿಕ್ರಿಯೆಯನ್ನು ಮಾಡಲಿಲ್ಲ; ಇಂದು–ಈ ದಿನ, ಇಱಿವದಟಂ– ಯುದ್ಧ ಮಾಡುವ ಶಕ್ತಿಯನ್ನು, ಆರ್ಕೊಟ್ಟರ್–ಯಾರು ಕೊಟ್ಟರು? ಮಾಣಲ್ಕೆ–ತಡೆಯು ವುದಕ್ಕೆ, ಎಡೆಯುಂಟೇ–ಅವಕಾಶವಿದೆಯೆ? ಸಿಲ್ಕಿದೈ–ಸಿಕ್ಕಿಬಿದ್ದೆ; ಪೋ–ಹೋಗು, ಕೊಳದಿಂ–ಸರೋವರದಿಂದ, ಪೊಱಮಡು–ಹೊರಕ್ಕೆ ಬಾ; ನೀಂ–ನೀನು, ಸತ್ತೊಡಂ– ಸತ್ತರೂ, ಪುಟ್ಟ–ಹುಟ್ಟೆಯಾ? ಈಗಡೆ ದಲ್–ಈಗಲೇ ದಿಟ, ಕೊಂದಪ್ಪೆಂ–ಕೊಲ್ಲುತ್ತೇನೆ; ದ್ರೋಹ–ದ್ರೋಹ ಮಾಡಿದವನೇ, ಎನ್ನಂ–ನನ್ನನ್ನು, ಮುಳಿಯಿಸಿ–ಕೆರಳಿಸಿ, ನಿನಗೆ, ಇಂ– ಇನ್ನು, ಬಾೞ್ವಾಸೆ–ಬದುಕುವ ಆಸೆಯು, ಉಂಟೇ–ಇದೆಯೇ? “ಮಾಣ್–ನಿವಾರಣೇ” ಎಂದಿದ್ದರೂ ಆ ಧಾತುಗೆ ಛಾಯಾರ್ಥಗಳು ಅನೇಕವಿವೆ. ಪೊಱಗೆ+ಮಡು=ಸೇರು ಪೊಱ ಮಡು. ಪುಟ್ಟ ಎಂಬುದು ಪ್ರಶ್ನಾರ್ಥಕ, ಅದೇಕೆನ್ನ (ಪಂ.ಭಾ.–೧೦–೧೨೦), ಕಟಕೋಪಾ ಧ್ಯಾಯನಾರೆಂಬ (ಅನಂ.ಪು.)–ನೋಡಿ.
೭೯. ಮಾನಸಿಕೆಯೆ–ಮನುಷ್ಯತ್ವವೆ, ದೊರೆಗಿಡೆ–ಯೋಗ್ಯತೆಯನ್ನು ಕಳೆದುಕೊಳ್ಳಲು, ನೀರ್ಮಾನಸನೆನೆ–ನೀರಿನಲ್ಲಿರುವ ಮನುಷ್ಯ ಎನ್ನಲು (ಒಂದು ಜಲಚರ ಪ್ರಾಣಿ), ನೀನುಂ– ನೀನೂ, ಎಲವೋ–ಎಲೋ, ನೀರೊಳ್–ನೀರಿನಲ್ಲಿ, ಮೀನೆಂಬೀ ನೆವದೆ–ಮೀನು ಎಂಬ ಈ ನೆಪದಿಂದ, ಇರ್ದೆ–ಇದ್ದೆ; ಅಭಿಮಾನದ–ಆತ್ಮಗೌರವದ, ಕಲಿತನದ–ಶೌರ್ಯದ, ಪರಮಪದಂ–ಉತ್ಕೃಷ್ಟ ಸ್ಥಿತಿಯನ್ನು, ಇದೇಂ–ಇದೇನು, ಎಯ್ದಿದೆಯೋ–ಸೇರಿದೆಯೋ?
೮೦. ಅದಟಿನ–ಶೌರ್ಯದ, ಅಳುರ್ಕೆಯಂ–ಅತಿಶಯತೆಯನ್ನು, ನಿಱಿಸಿ–ಸ್ಥಾಪಿಸಿ, ನಿನ್ನ ನಿಸೇಕದ ಪೊೞ್ತು–ನಿನಗೆ ಶಾಸ್ತಿ ಆಗುವ ಹೊತ್ತು, ತಪ್ಪಲೀಯದೆ–ತಪ್ಪಿಹೋಗುವುದಕ್ಕೆ ಬಿಡದೆ, ತಡೆಯದೆ–ತಡಮಾಡದೆ, ಈಗಳೆ–ಈಗಲೇ, ಪೊಱಮಟ್ಟು ಬಾ–ಹೊರಕ್ಕೆ ಹೊರಟು ಬಾ; ನೀಂ–ನೀನು, ಇನಿಸು–ಸ್ವಲ್ಪ ಕಾಲ, ಇರ್ದೆಯಪ್ಪೊಡೆ–ಇದ್ದೆಯಾದರೆ, ಏತೊದಳೋ– ಏನು ಸುಳ್ಳೋ, ಸರೋವರಾಂಬುವನಿತಂ–ಸರೋವರದ ನೀರಷ್ಟನ್ನು, ತವೆ–ನಾಶವಾಗು ವಂತೆ, ತುಳ್ಕಿ–ತುಳುಕಿ, ರಸಾತಳಂಬರಂ–ಪಾತಾಳದವರೆಗೂ, ಬೆದಕಿಯುಂ–ಹುಡುಕಿಯೂ, ಎಂತುಂ–ಹೇಗೂ, ಅಪ್ಪಳಿಸಿ–ಗುದ್ದಿ, ಕೊಂದಪೆಂ–ಕೊಲ್ಲುತ್ತೇನೆ; ಸುಯೋಧನನೇ, ಏೞ್ವುದು–ಕೊಳದಿಂದ ಮೇಲಕ್ಕೆ ಏಳು; ಇದೇಂ–ಇದೇನು?
ವಚನ : ಜಟಾಸುರಾರಾತಿಯ–ಭೀಮಸೇನನ; ಚಿತ್ತಸ್ಖಲನೆಯಾಗೆ–ಮನಸ್ಸು ಸ್ಥಿರತೆ ಯನ್ನು ನೀಗಿಕೊಳ್ಳಲು, ಸಡಿಲವಾಗಲು;
೮೧. ಪಗೆವಂ ಬಂದು–ಶತ್ರುವು ಬಂದು, ಉಱದೆ–ಇರದೆ, ಇಂತು–ಹೀಗೆ, ಮೂದಲಿಸೆ ಯುಂ–ಹೀಯಾಳಿಸಿಯೂ, ಮಾತಂ–ಅವನ ಮಾತುಗಳನ್ನು, ಕಿವುೞ್ಗೇಳ್ದು–ಕಿವುಡನಂತೆ ಕೇಳಿ ಎಂದರೆ ಕಿವಿಗೆ ಹಾಕಿಕೊಳ್ಳದೆ, ಕೆಮ್ಮಗೆ–ಸುಮ್ಮನೆ, ನೀರೊಳ್–ನೀರಿನಲ್ಲಿ, ಮುೞುಗಿರ್ ದೊಡೆ–ಮುಳುಗಿದ್ದರೆ, ಮಚೌರ್, ಯಂ–ನನ್ನ ಪ್ರತಾಪವು, ಅೞ್ದು–ಮುಳುಗಿ, ಕಿಡುಗುಂ– ಹಾಳಾಗುತ್ತದೆ, ಎಂದು, ಉದ್ಧತಂ–ಗರ್ವಿಷ್ಠನಾದ ದುರ್ಯೋಧನ, ನೆಗೆದಾಗಳ್–ನೀರಿನ ಮೇಲಕ್ಕೆ ನೆಗೆದಾಗ, ವಿಳಸತ್ಕಿರೀಟರತ್ನಾಂಶು ಪ್ರಭಾರಾಜಿ–ಪ್ರಕಾಶಮಾನವಾದ ಕಿರೀಟ ರತ್ನಗಳ ರಶ್ಮಿಗಳ ಕಾಂತಿ ಸಮೂಹ, ತೊಟ್ಟನೆ–ಬೇಗನೆ, ಕೆಯ್ಗಣ್ಮೆ–ಅಧಿಕವಾಗಲು, ಆಪೂ ಗೊಳಂ– ಆ ಸರೋವರ, ಸುರೇಂದ್ರ ಚಾಪರುಚಿಯಂ–ಇಂದ್ರಚಾಪದ ಎಂದರೆ ಮಳೆಬಿಲ್ಲಿನ ಕಾಂತಿಯನ್ನು, ಕೆಯ್ಕೊಂಡುದು–ಸ್ವೀಕರಿಸಿತು.
೮೨. ಪೊದಳ್ದ–ವ್ಯಾಪಿಸಿದ, ಬೊಬ್ಬುಳಿಕೆಗಳ್–ನೀರ್ಗುಳ್ಳೆಗಳು, ನೆಗೆಯೆ–ಮೇಲಕ್ಕೆ ಬರಲು, ನೆಗೆದಂತೆ–ಅವು ಬಂದ ಹಾಗೆ, ಎರಡುಂ ಕೆಲಕ್ಕೆ–ಎರಡು ಪಕ್ಕಗಳಿಗೂ, ನೀರ್– ನೀರು, ಉಗಿಯೆ–ವಿಭಾಗವಾಗಲು, ಗದಾಭಿಘಾತ ಪರಿಪೂರಿತ ತೋಯಜಷಂಡಂ–ಗದೆಯ ಹೊಡೆತದಿಂದ ತುಳುಕಿದ ಸರೋವರ, ಅಲ್ಲಿಗಲ್ಲಿಗೆ–ಅಲ್ಲಿಲ್ಲಿ, ಕದಡೇಳೆ–ಬಗ್ಗಡವಾಗಲು, ಭೀಮಭುಜ ಮಂದರ ಘಟ್ಟನೆಯಿಂದಂ–ಭೀಮನ ಮಂದರ ಪರ್ವತದಂತಿರುವ ಬಾಹುಗಳ ಹೊಡೆತದಿಂದ, ತೊಟ್ಟಗೆ ಕೊಳೆ–ಬೇಗನೆ ಆಕ್ರಮಿಸಲು, ಕಾಳಕೂಟಮೊಗೆವಂತೆ–ಕಾಲಕೂಟ ವಿಷವು ಉತ್ಪನ್ನವಾಗುವಂತೆ, ಫಣಿರಾಜಕೇತನಂ–ದುರ್ಯೋಧನನು, ಒಗೆದಂ–ಹುಟ್ಟಿ ದನು, ಆವಿರ್ಭವಿಸಿದನು. ನೀರಿನಲ್ಲಿ ಮುಳುಗಿದವನು ಮೇಲೇಳುವ ಇಲ್ಲಿನ ವಾಸ್ತವಿಕ ದೃಶ್ಯ ಮನೋಜ್ಞವಾಗಿದೆ; ಪದ್ಯದ ಕೊನೆಯಲ್ಲಿ ಕಾಣುವ ಕಾಲಕೂಟದ ಉಪಮಾನ, ಸರ್ಪಧ್ವಜನಿಗೆ ಅನುಗುಣವಾಗಿದೆ, ಭಾವಿಸಿದಂತೆ ಮನದಲ್ಲಿ ಮಡಲಿರಿದು ಬೆಳೆಯುತ್ತದೆ. ಈ ಪದ್ಯದ ವೈಭವ. ಈ ಸಂದರ್ಭದಲ್ಲಿ ವೇಣೀಸಂಹಾರ ನಾಟಕದ ಪದ್ಯದ (VI –೯) ಉತ್ತರಾರ್ಧವನ್ನು ಹೋಲಿಸಿ ನೋಡಬಹುದು; “ಆಯಸ್ತ ಭೀಮ ಭುಜಮಂದರ ವೇಲ್ಲ ನಾಭಿಃ ಕ್ಷೀರೋದಧೇಃ ಸುಮಥನಾದಿವ ಕಾಲ ಕೂಟಃ.”
ವಚನ : ದಿಕ್ಕರಿಕರಾನುಕಾರಿ–ದಿಕ್ಕಾನೆಯ ಸೊಂಡಿಲನ್ನು ಹೋಲುವ; ಕರಪರಿ ಘೋತ್ತಂಸಿತ–ಪರಿಘದಂತಿರುವ ಕೈಗಳಿಗೆ ಆಭರಣಪ್ರಾಯವಾಗಿ; ತೋರಣೀಕೃತ– ತೋರಣವಾಗಿ ಮಾಡಲ್ಪಟ್ಟ; ಸೆರಗಿಲ್ಲದೆ–ಭಯವಿಲ್ಲದೆ; “ಉತ್ಥಾಯ ಚ ತಸ್ಮಾತ್ಸಲಿಲಾಶ ಯಾತ್ಕರಯುಗಲೋತ್ತಂಭಿತ ತೋರಣೀಕೃತ ಭೀಮಗದಃ” ಎಂಬ ವೇಣೀಸಂಹಾರದ ಗದ್ಯಭಾಗವನ್ನೇ ಹೋಲಿಸಿ (VI –೯ರ ಅನಂತರ).
೮೩. ನಡಪಿದ–ಸಾಕಿಸಲಹಿದ, ನಂಟರ್–ಬಂಧುಗಳೂ, ಎಯ್ದೆ–ಚೆನ್ನಾಗಿ, ಪೊರೆದ– ಕಾಪಾಡಿದ, ಆಳ್–ಶೂರರು, ಉಳ್ಳರೆಲ್ಲರುಂ–ನಿನಗೆ ಇರುವವರೆಲ್ಲರೂ, ರಣರಂಗದೊಳ್– ಯುದ್ಧರಂಗದಲ್ಲಿ, ಮಡಿದೊಡಂ–ಸತ್ತು ಹೋದರೂ, ಉರ್ಕುಗುಂದದೆ–ಗರ್ವ ಕುಗ್ಗದೆ, ಉಗುರಂತೆ–ಉಗುರಿನ ಹಾಗೆ, ಎರಡುಂ ಕಡೆ–ಎರಡು ಪಕ್ಕಗಳಲ್ಲೂ, ತಪ್ಪ–ನಾಶಮಾಡುವ, ಕೂರ್ಪಂ–ತೀಕ್ಷ್ಣತೆಯನ್ನು, ಓಗಡಿಸದೆ–ಅಸಹ್ಯಪಡದೆ (?), ಮೆಯ್ಯೊಳೆ–ಮೈಯಲ್ಲೇ, ತಾಳ್ದಿ–ಧರಿಸಿ, ವೃಕೋದರನ–ಭೀಮನ, ಒಂದೆಸರಕ್ಕೆ–ಒಂದೇ ಗರ್ಜನೆಗೆ, ಕಾಯ್ಪೊಡಂಬಡೆ– ಕೋಪವೊಪ್ಪಲು, ಸಿಡಿಲೇೞ್ಗೆಯಿಂ–ಸಿಡಿಲೇಳುವಂತೆ, ಮಸಗಿ–ಉಕ್ಕಿ, ಬಂದಂ–ಬಂದನು; ಏಂ ಕಲಿಯೋ ಸುಯೋಧನಂ–ಏನು ಶೂರನೋ ದುರ್ಯೋಧನನು!
೮೪. ಮುಂ–ಪೂರ್ವಕಾಲದಲ್ಲಿ, ಎಳೆ–ಭೂಮಿಯು, ದೈತ್ಯನ–ರಾಕ್ಷಸನಾದ ಹಿರಣ್ಯಾಕ್ಷನ, ಕೆಯ್ಗೆಪೋಗೆ–ಕೈಗೆ ಹೋಗಲು, ವಶವಾಗಲು, ತರಲ್ ಎಂದು–ಮರಳಿ ತರಬೇಕೆಂದು, ಈ ಚಕ್ರಿ–ಈ ಕೃಷ್ಣ, ವಿಷ್ಣು, ಮುನ್ನಂ–ಮೊದಲು, ರಸಾತಳಮಂ–ಪಾತಾಳವನ್ನು, ಪೊಕ್ಕುದುಂ– ಹೊಕ್ಕುದ್ದೂ, ಈ ಮಹೋಗ್ರರಣದೊಳ್–ಈ ಮಹಾ ಭೀಕರ ಯುದ್ಧದಲ್ಲಿ, ನಿಮ್ಮೊಂದು ಕೆಯ್ವೞ್ದ–ನಿಮ್ಮ ಕೈಗೆ ಬಿದ್ದ, ವಶವಾದ, ಭೂತಳಮಂ–ಭೂಮಿಯನ್ನು, ಮತ್ತೆ ತರಲ್– ತಿರುಗಿ ತರುವುದಕ್ಕಾಗಿ, ಆನುಂ–ನಾನೂ, ವಿಶುದ್ಧನಿಯಮ ಪ್ರಾರಂಭದಿಂ–ಪರಿಶುದ್ಧವಾದ ವ್ರತಾಚರಣೆಯಿಂದ, ಈ ಕೊಳನಂ–ಈ ಸರೋವರವನ್ನು, ಪೊಕ್ಕುದುಂ–ಪ್ರವೇಶ ಮಾಡಿದ್ದೂ, ಆವ ದೋಷಂ–ಏನು ತಪ್ಪು? ಇಂ–ಇನ್ನು, ಎನಗೆ, ಮಾಱಾಂಪರಾರ್–ಎದು ರಾಗುವವರು ಯಾರು? ತೋಱಿರೇ–ತೋರಿಸಿರೇ!
೮೫. ಇನ್ನಪ್ಪೊಡಂ–ಇನ್ನಾದರೂ, ಏವಮಂ–ಕ್ರೋಧವನ್ನು, ಬಿಸುಡು–ಬಿಟ್ಟುಬಿಡು, ಧರಣಿಯಂ–ನೆಲವನ್ನು, ಪಚ್ಚಿ–ವಿಭಾಗಿಸಿಕೊಂಡು, ಆಳ್ವಂ–ಆಳೋಣ; ಈ ಕಿಸುರೊಳ್– ಈ ಕಲಹದಲ್ಲಿ, ಏನಪ್ಪುದು–ಏನಾಗುತ್ತದೆ, ಏನು ಪ್ರಯೋಜನ? ಕೆಮ್ಮನೆ–ಸುಮ್ಮನೆ, ಪಾಪಕರ್ಮ–ಪಾಪಕರ್ಮವು; ಚಲಮಂ ಕೊಂಡಾಡದೆ–ಹಗೆತನವನ್ನು ಹಿಡಿದು ನಡೆಯದೆ, ಎಮ್ಮಯ್ವರುಂ–ನಾವು ಐದು ಜನರೂ, ಬೆಸಕೆಯ್ಯುತ್ತಿರೆ–ಸೇವೆ ಮಾಡುತ್ತಿರಲು, ನೀನೆ– ನೀನೇ, ಮೇಣ್–ಅಥವಾ, ಅರಸುಗೆಯ್–ದೊರೆತನವನ್ನು ಮಾಡು; ಸೌದರ್ಯದಿಂದೆ– ಸಹೋದರತ್ವಕ್ಕಿಂತ, ವಸುಧಾಮಂಡಳಂ–ಈ ಭೂಮಂಡಲ, ಒಳ್ಳಿತೇ–ಒಳ್ಳೆಯದೇ? ಇದಂ–ಈ ಮಾತನ್ನು, ಇಂಬುಕೆಯ್ವುದು–ಅಂಗೀಕರಿಸುವುದು; ಆಂ–ನಾನು, ಕೆಯ್ಯೊಡ್ಡಿದೆಂ– ಕೈ ಚಾಚಿದ್ದೇನೆ, ಬೇಡಿದೆಂ–ಬೇಡಿದ್ದೇನೆ, ಪಾಪಕರ್ಮ ಎಂಬುದು ಪ್ರಕೃತಿ ಪ್ರಯೋಗ; ಅದು ಪಾಪ ಕರ್ಮಂ ಎಂದು ಪ್ರಥಮಾಂತವಾಗಿರಬೇಕು. ಸೋದರ್ಯ ಎಂಬುದಕ್ಕೆ ಎಲ್ಲ ಪ್ರತಿ ಗಳಲ್ಲೂ ಸೌಂದರ್ಯ ಎಂದು ಪಾಠವಿದೆ; ಆದಿಪುರಾಣದಲ್ಲೂ (೧೪–೮೫) ಹೀಗೆಯೇ ಉಂಟು, ಇಲ್ಲಿ ಸೌಂದರ್ಯ ಎಂಬ ಸರಿಯಾದ ರೂಪವನ್ನು ಅಂಗೀಕರಿಸಿದೆ.
೮೬. ಅಯ್ದೞಿವಾಡದೊಳ್–ಐದು ಕುಗ್ರಾಮಗಳಲ್ಲಿ, ಅಯ್ವರುಮಂ–ಪಾಂಡವರೈವ ರನ್ನೂ, ನೀಂ–ನೀನು, ಕೂರ್ತು–ಒಲಿದು, ಇರಿಸು–ಇಡು, ಎಂದೊಡಂ–ಎಂದು ಹೇಳಿದರೂ, ಎಂತುಂ–ಹೇಗೂ, ಏಗೆಯ್ದುಂ–ಏನು ಮಾಡಿಯೂ, ಅದು, ಒಲ್ಲದ–ಒಪ್ಪದ, ಕಾರಣ ದಿಂದಂ–ಕಾರಣದಿಂದ, ನೋಡ–ನೋಡು, ಇನಿತಾದುದು–ಇಷ್ಟಾಯಿತು? ನಿನ್ನೊಳ್– ನಿನ್ನಲ್ಲಿ, ಧರ್ಮತನೂಜಂ–ಧರ್ಮಪುತ್ರನು, ಏಂ ಸಯ್ದವನಲ್ಲನೆ–ಏನು ನೇರಾಗಿ ನಡೆಯುವ ವನಲ್ಲವೆ? ಪೇೞ್ದುದಂ–ಹೇಳಿದ್ದನ್ನು, ಎಮಗೆ–ನಮಗೆ, ಇಂಬುಕೆಯ್–ಅಂಗೀಕರಿಸು; ಸಯ್ದನೆ ಆಗು–ನೇರಾದವನೇ, ಋಜುವಾದವನೇ, ಆಗು; ಉೞಿದಾರೊಳಂ–ಬೇರೆ ಯಾರಲ್ಲಿಯೂ, ಫಣಿಕೇತನಾ–ದುರ್ಯೋಧನನೇ, ಇನ್ನು, ಏವಂಗೊಳ್ಳದಿರ್–ಕೋಪ ಮಾಡ ಬೇಡ, ಮಾಡದಿರು.
ವಚನ : ಕೆೞಗಿವಿಗೆಯ್ದು–ಕಿವಿಯ ಕೆಳಕ್ಕೆ ಹಾಕಿಕೊಂಡು ಎಂದರೆ ಕಿವಿಯಿಂದ ಕೇಳದೆ; ಅಳವಡಿಸಿ–ಸೇರಿಸಿ.
೮೭. ಮುಂ–ಮೊದಲು, ನಿಮ್ಮ–ನೀವು, ಪೇೞ್ದು–ಹೇಳಿ, ಗೆಯ್ಯದಂ–ಹೇಳಿದ್ದನ್ನು ಮಾಡ ದವನು, ಇಂ–ಇನ್ನು, ಈ ಪದದಲ್ಲಿ–ಈ ಸಂದರ್ಭದಲ್ಲಿ, ಪೇೞ್ದು ಗೆಯ್ವಂತೆ–ಹೇಳಿದ್ದನ್ನು ಮಾಡುವಂತೆ, ಉಂತೆ–ಸುಮ್ಮನೆ, ಪನ್ನಗಪತಾಕನಲ್ಲನೆ–ನಾನು ಸರ್ಪಧ್ವಜನಲ್ಲವೆ? ಬಿನ್ನಣ ವಡೆಮಾತಂ–ಬಿನ್ನಾಣದ ಸಾಧಾರಣವಾದ ಮಾತನ್ನು, ಎನ್ನೊಳ್–ನನ್ನಲ್ಲಿ, ಇಂ–ಇನ್ನು, ನುಡಿಯದಿರಿಂ–ಹೇಳದೆ ಇರಿ, ಪೇೞ್ದುದಂಗೆಯ್ ಪೇೞ್ದುಗೆಯ್; ಎಂಬುಕೆಯ್=ಎಂಬುದಂ+ಕೆಯ್–ಹಾಗೆ.
೮೮. ರಣದೊಳ್–ಯುದ್ಧದಲ್ಲಿ, ಆ ದುಶ್ಶಾಸನನಂ–ಆ ದುಶ್ಶಾಸನನನ್ನು, ಪೊರಳ್ಚಿ– ಹೊರಳಿಸಿ, ಕೊಂದ, ಈ ಮರುತ್ಪುತ್ರಂ–ಈ ಭೀಮನು, ಇಂತು–ಹೀಗೆ, ಆದಂ–ವಿಶೇಷವಾಗಿ, ದಳ್ಳಿಸೆ–ಜ್ವಲಿಸುತ್ತಿರುವ, ನೋಡಿ ನೋಡಿ–ಅದನ್ನು ನೋಡಿ ನೋಡಿ, ಪುದುವಾೞ್– ಹುದುವಾದ ಬದುಕು, ಎಂತಕ್ಕುಂ–ಹೇಗೆ ಆಗುತ್ತದೆ; ಇಂತು–ಹೀಗೆ, ಈಗಳ್–ಈಗ, ಆನಾದೆಂ–ನಾನಾದೆನು, ಮೇಣ್–ಅಥವಾ, ಇವನಾದಂ–ಇವನಾದನು, ಎಂದರೆ ನಾನಿರಬೇಕು ಇಲ್ಲ ಇವನಿರಬೇಕು; ಏಕೆ ತಡೆವಿರ್–ಏತಕ್ಕೆ ತಡೆ ಮಾಡುತ್ತಿದ್ದೀರಿ; ಕೆಯ್ವೊ ಯ್ದೆವು–ಕೈಗಳನ್ನು ತಟ್ಟಿದೆವು (ಯುದ್ಧಾರಂಭ ಸೂಚನೆ); ಇಂ–ಇನ್ನು, ನೀಂ–ನೀವು, ಸೌದರ್ಯಕ್ಕೆ–ಸಹೋದರಿಕೆಗೆ, ಕನಲ್ವೊಡೆ–ಕೆರಳುವುದಾದರೆ, ಇಂತು, ಇನಿಬರುಂ–ಹೀಗೆ ನೀವಿಷ್ಟು ಜನರೂ, ಕಾದಿಂ–ಯುದ್ಧಮಾಡಿರಿ, ಭರಂಗೆಯ್ದಪೆಂ–ನಿರ್ವಹಿಸುತ್ತೇನೆ. ೮೫ನೆಯ ಪದ್ಯದಲ್ಲಿ ಸೌಂದರ್ಯ ಎಂದು ಇರುವ ಪ್ರತಿಗಳ ಪಾಠ ಇಲ್ಲಿ ಹೊಂದುವುದಿಲ್ಲ. ಪ್ರಾಸಾಕ್ಷರ ‘ದ’ ಇರುವುದರಿಂದ; ಆದ್ದರಿಂದ ಸೌದರ್ಯ ಸರಿಯಾದ ಪಾಠ ಎಲ್ಲೆಡೆಯೂ, ಕುಸ್ತಿ ಕಾಳಗವಾಡುವವರು ತೋಳ್ತಟ್ಟುವುದು ವಾಡಿಕೆ; ಕೆಯ್ವೊಯ್ ಎಂಬುದಕ್ಕೆ ಅದೇ ಅರ್ಥ, ಕುಸ್ತಿಗೆ ಅದು ನಾಂದಿ.
ವಚನ : ತೊಡರ್ದು–ಸಿಕ್ಕಿ, ತಡೆದ–ತಡಮಾಡಿದ, ಮನ್ಯುಗದ್ಗದ ಕಂಠನಾಗಿ– ದುಃಖದಿಂದ ಮಾತು ಹೊರಡದವನಾಗಿ, ಗದಗದಿಕೆಯನ್ನು ಹೊಂದಿ; ಇದೇನಂ ಮಾಡಿದಿರ್ –ಇದೇನು ಮಾಡಿದಿರಿ, ಏನು ಅನಾಹುತವನ್ನು ಮಾಡಿದಿರಿ ಎಂಬ ಕೋಪದ ನುಡಿ.
೮೯. ಮುಳಿವೊಡಂ–ಕೋಪಿಸುವುದಾದರೂ, ಎಯ್ದೆ–ಚೆನ್ನಾಗಿ, ಕೇಳ್ದು–ಕೇಳಿ, ಮುಳಿ– ಕೋಪಿಸಿಕೊಳ್ಳು; ಪಾಂಡತನೂಜರ–ಪಾಂಡವರು, ಮುನ್ನಿನ–ಮೊದಲಿನ, ಆಳ್ದ–ಆಳಿದ, ಭೂತಳಮಂ–ರಾಜ್ಯವನ್ನು, ಎಂತುಂ–ಹೇಗೂ, ಈಯದೆ–ಕೊಡದೆ, ಸುಯೋಧನಂ– ದುರ್ಯೋಧನನು, ಉದ್ಧತವೃತ್ತಿಯಿಂ–ಗರ್ವದಿಂದ, ಸುಹೃದ್ಬಳಂ–ಮಿತ್ರ ಸೈನ್ಯಗಳು, ಅೞಿದು–ಸತ್ತು, ಅೞ್ಗೆ–ನಾಶವಾಗಲು, ಕಾದಿ–ಯುದ್ಧ ಮಾಡಿ, ಪುದುವಾೞ್ಕೆಗೆ–ಕೂಡಿ ಬದುಕು ವುದಕ್ಕೆ, ಒಲ್ಲದೆ–ಒಪ್ಪದೆ, ಇನ್ನುಂ–ಇನ್ನೂ ಕೂಡ, ಅವ್ವಳಿಸುವಂ–ಮೇಲೆ ಹಾಯುವನು; ಈಗಳ್–ಈಗ, ಆತನನೆ–ಅವನನ್ನೇ, ಬೆಸಗೊಳ್–ಕೇಳು; ಸುಯೋಧನಂ–ದುರ್ಯೋಧ ನನು, ಪುಸಿಯಂ–ಸುಳ್ಳಾಡನು. ಅಪ್ಪೊಡಂ ಆದೊಡಂ ಎಂಬೆಡೆಗಳಲ್ಲಿ ಅಂತ್ಯದ ಅಂ ಸಮುಚ್ಚಯದಂತೆ ಮುಳಿವೊಡಂ ಎಂಬಲ್ಲಿಯೂ ಅಂ ಸಮುಚ್ಚಯವುಂಟು; “ಮಾಡಿದು ದುಣ್ಯಾತನಾತ್ಮನಘಜಲಧಿಯೋಳೋಲಾಡುವೊಡಂ ಗುಣಗಣದೊಳ್ ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ” ಇತ್ಯಾದಿ ಪ್ರಯೋಗಗಳಿವೆ (ಯಶೋಚ. ೪–೨೮).
ವಚನ : ಮರುಳ್ತನಮಂ–ದಡ್ಡತನವನ್ನು, ತಿಳಿಗೇಡಿತನವನ್ನು;
೯೦. ಹರಿ ಎಂದ ಅಂದಂ–ಕೃಷ್ಣನು ಹೇಳಿದ ರೀತಿ, ಅದು ಹಾಗೆಯೇ–ಅದು ಅಂತೆ ಎಂದರೆ ಕೃಷ್ಣನು ಹೇಳಿದ ಹಾಗೆಯೆ ಇದೆ; ಪಾಂಡುತನಯರ್–ಪಾಂಡವರು, ನಿರ್ದೋಷಿ ಗಳ್–ದೋಷವಿಲ್ಲದವರು, ತಪ್ಪಿಲ್ಲದವರು; ತಥ್ಯಂ–ನಿಜ; ಇಂತು–ಹೀಗೆ, ರಣಸ್ಥಾನ ದೊಳ್–ಯುದ್ಧರಂಗದಲ್ಲಿ, ಎರೞ್ನುಡಿವೆನೇ–ಸುಳ್ಳಾಡುತ್ತೇನೆಯೆ? ಮದ್ಬಂಧು ಶೋಕಾಗ್ನಿ ಯಿಂ–ನನ್ನ ಬಾಂಧವರ ಮರಣದ ದುಃಖಾಗ್ನಿಯಿಂದ, ಉರಿದಪ್ಪೆಂ–ಉರಿಯುತ್ತಿದ್ದೇನೆ; ತೊಡರ್ದ–ಸಿಕ್ಕಿಕೊಂಡ, ಎನ್ನಂ–ನನ್ನನ್ನು, ಇಂ–ಇನ್ನು, ಬಿಡು–ಯುದ್ಧಕ್ಕೆ ಬಿಡು; ವಿರೋಧಿ ಕ್ಷ್ಮಾಪರ್–ಶತ್ರು ರಾಜರು, ಎನ್ನ–ನನ್ನ, ಈ ಗದಾಪರಿಘಾತದಿಂ–ಈ ಪರಿಘದಂತಿರುವ ಗದೆಯ ಏಟಿನಿಂದ, ಅೞ್ಗಿ–ನಾಶವಾಗಿ, ತೞ್ಗಿ–ತಗ್ಗಿ, ಮಡಿದು–ಸತ್ತು, ಇಂ–ಇನ್ನು, ಅೞ್ಕಾಡದೆ–ನಿರವಶೇಷವಾಗದೆ, ಏಂ ಪೋಪರೇ–ಏನು ಹೋಗುತ್ತಾರೆಯೇ?
ವಚನ : ಸಂಕರ್ಷಣಂ–ಬಲರಾಮನು; ಉತ್ಕರ್ಷತೆಯಂ–ಶ್ರೇಷ್ಠತೆಯನ್ನು; ಪೆಱತಂ– ಬೇರೆ ಮಾತನ್ನು, ಎಡೆಯಿಲ್ಲ–ಅವಕಾಶವಿಲ್ಲ;
೯೧. ಸುಯೋಧನನಂ ಎನ್ನುಮಂ–ದುರ್ಯೋಧನನನ್ನೂ ನನ್ನನ್ನೂ, ತೊಡರ್ದು– ತೊಡರಿಸಿ, ಬಿಡಿಂ–ಬಿಡಿರಿ ಎಂದರೆ ಇಬ್ಬರೂ ಕೈ ಮೈ ಕಲೆತು ಯುದ್ಧ ಮಾಡುವಂತೆ ಬಿಡಿರಿ; ಕೌರವಾಧಿಪಂಗೆ–ದುರ್ಯೋಧನನಿಗೆ, ಇಡುವಗೆ–ಬದ್ಧ ದ್ವೇಷಿಯಾದ, ಆನಿರೆ–ನಾನಿರಲು, ಇಂ ಪೆಱರೊಳಂ–ಇನ್ನು ಇತರರಲ್ಲಿ, ಮುಳಿಸುಂಟೆ–ಕ್ರೋಧವಿದೆಯೆ, ಪೇೞಿ–ಹೇಳಿರಿ; ಮಹಾ ಪ್ರತಿಜ್ಞೆಯೊಳ್–ಮಹತ್ತರವಾದ ಪ್ರತಿಜ್ಞೆಯಲ್ಲಿ, ತೊಡರ್ದನುಂ–ಸಿಲುಕಿದವನೂ, ಆನೆ–ನಾನೆ; ಭೂತಳಮದಿರ್ಕೆ–ಭೂಮಿ, ರಾಜ್ಯ ಅದು ಹಾಗಿರಲಿ; ಎಡೆಗೆಯ್–ಸ್ಥಳವನ್ನು ಸಿದ್ಧಪಡಿಸು, ಮಲ್ಲಯುದ್ಧಕ್ಕೆ ಅಖಾಡವನ್ನು ಅಣಿಗೊಳಿಸು; ಗೆಲಲಾರ್ತರ್–ಗೆಲ್ಲಲು ಸಮರ್ಥರಾದವರು, ಆರ್ಗೆ–ಯಾರು? ಅಥವಾ ಯಾರಿಗೆ ಸಂಬಂಧಿಸಿದವರು? ಎರೞ್ನುಡಿ ಯದಿರ್–ಎರಡು ಮಾತಾಡಬೇಡ, ಸುಳ್ಳಾಡಬೇಡ; ಎಂದು, ವೃಕೋದರಂ–ಭೀಮನು, ಹಳಿಯಂ–ಬಲರಾಮನನ್ನು, ನಯದಿಂ–ನಯವಾಗಿ, ಒಡಂಬಡಿಸಿದಂ–ಒಪ್ಪಿಸಿದನು.
ವಚನ : ಸಂಗ್ರಾಮರಂಗಕ್ಕೆ–ಯುದ್ಧರಂಗಕ್ಕೆ, ಅನಿಬರುಮಂ–ಅಷ್ಟು ಜನರನ್ನೂ.
೯೨. ಕರಿ ತುರಗ ನರಕಳೇವರ ಪರಿಚಿತಂ–ಆನೆ ಕುದುರೆ ಮನುಷ್ಯರ ಹೆಣಗಳಿಂದ ಕಿಕ್ಕಿರಿದ, ರಣಂ–ಯುದ್ಧಭೂಮಿ, ಅಲ್ಲಿ ಮಹಿತಳಂ–ಅಲ್ಲಿ ನೆಲವು, ಕಾದಲ್ಕೆ–ಯುದ್ಧ ಮಾಡುವುದಕ್ಕೆ, ಅರಿದಪ್ಪುದು–ಕಷ್ಟವಾಗುತ್ತದೆ, ಎಂದೆಂದು–ಎಂದೆನುತ್ತ, ಅಣಂ–ಸ್ವಲ್ಪವೂ, ಇರದೆ, ಮರು ತ್ಸೂನು–ಭೀಮಸೇನನು, ಕೊಳುಗುಳಮಂ–ಯುದ್ಧಭೂಮಿಯನ್ನು, ಸಮಱಿದಂ–ಹಸನಾಗಿ ಮಾಡಿದನು. ಇದು ಭೀಮನ ಉತ್ಸಾಹವನ್ನು ತೋರಿಸುತ್ತಿದೆ.
ವಚನ : ವಿಕ್ಷೇಪ–ಅತ್ತ ಇತ್ತ ತೂಗುತ್ತಿರುವುದರಿಂದ, ಹರ್ಷಿತ–ಹರ್ಷಗೊಳಿಸಲ್ಪಟ್ಟ; ಪ್ರಹಸ್ತ–ದೊಡ್ಡ ಕೈಗಳಿಂದ; ಪ್ರಸಾಧಿತ–ವಿಶೇಷವಾಗಿ ಸಾಧಿಸಲ್ಪಟ್ಟ; ಭಾಸುರ–ಪ್ರಕಾಶಮಾನ ವಾದ; ಸವ್ಯ–ಬಲದಿಂದ ಎಡಕ್ಕೆ, ಅಪಸವ್ಯ–ಎಡದಿಂದ ಬಲಕ್ಕೆ ತಿರುಗಿಸುವುದು; ಭ್ರಾಂತ– ಭ್ರಮಣಮಾಡುವುದು; ಉದ್ಭ್ರಾಂತ–ಮೇಲೆತ್ತಿ ತಿರುಗಿಸುವುದು; ಕರ್ಷಣ–ಎಳೆಯುವುದು; ಮಂಡಳಾವರ್ತನ–ಗುಂಡಾಗಿ ಚಕ್ರದಂತೆ ತಿರುಗುವುದು; ಇವೆಲ್ಲ ಗದೆಯನ್ನು ತಿರುಗಿಸುವ ವಿಧಾನಗಳು; ಇವು ಮೂವತ್ತೆರಡು ತೆರನಾಗಿ ಇರುವುವು; ಈ ವಚನದ ಪಾಠ ಕೆಲವೆಡೆ ಸಂದೇಹಾ ಸ್ಪದವಾಗಿರಬಹುದು; “ಪರಸ್ಪರ ಕ್ರೋಧಾಧಿಕ್ಷೇಪ ಪರುಷ ವಾಕ್ಕಲಹ ಪ್ರಸ್ತಾವಿತ ಘೋರ ಸಂಗ್ರಾಮೌ ವಿಚಿತ್ರ ವಿಭ್ರಮಭ್ರಮಿತ ಗದಾ ಪರಿಭಾಸುರ ಭುಜದಂಡೌ” ಎಂದಿರುವ ‘ವೇಣೀಸಂಹಾರ’ ದ ಪಂಕ್ತಿಗಳನ್ನು ಹೋಲಿಸಿ (VI –೧೧ವ).
೯೩. ಕುಲಾಚಲಪ್ರತತಿಗಳ್–ಕುಲಪರ್ವತಗಳ ಗುಂಪುಗಳು, ಮೊದಲಿಂ ಕಿೞ್ತು– ಬುಡಸಹಿತ ಕಿತ್ತು, ಪ್ರೋದ್ಯತ್–ಮೇಲೆತ್ತಿದ, ಗದಾಘಾತವಾತದಿಂ–ಗದೆಯ ಬೀಸಿನಿಂದ ಉಂಟಾದ ಗಾಳಿಯಿಂದ, ಆಕಾಶಮಂ–ಆಕಾಶವನ್ನು, ಎಯ್ದೆ–ಚೆನ್ನಾಗಿ, ತೂಳ್ದಿ–ತಳ್ಳಿ, ಕವಿತಂದು–ಮುಚ್ಚುವಂತೆ ಬಂದು, ಅಂಭೋಧಿಯೊಳ್–ಸಮುದ್ರದಲ್ಲಿ, ಸೂೞ್ಸೂೞಿಂದೆ– ಕ್ರಮಕ್ರಮವಾಗಿ, ಬಾರಿಬಾರಿಗೆ, ಬೀೞ್ತಂದುವು–ಬೀಳಲು ಆರಂಭಿಸಿದುವು, ಆ ವಾರಾಶಿ ಗಳ್–ಆ ಕಡಲುಗಳು, ಬತ್ತಲ್–ಇಂಗಿಹೋಗಲು, ಆಟಿಸಿದುವು–ಬಯಸಿದುವು; ಸುರ್ಕಿ–ಸಂಕೋಚವಾಗಿ, ಬಿಕ್ಕಿದ–ಗೊಳೋ ಎಂದು ಅತ್ತ, ಬಾಯಂತೆ–ಬಾಯಿಯ ಹಾಗೆ, ಅಂಬರಂ– ಆಕಾಶವು, ಸುರುಳ್ದುದು–ಸುರುಳಿಯಾಯಿತು; ಗದಾಯುದ್ಧದ, ಪೆಂಪು–ಮಹಿಮೆ, ಇದೇಂ– ಇದೇನು! ಇಲ್ಲಿ ‘ಬಿಕ್ಕಿದ ಬಾಯಂತೆ’ ಎಂಬ ಶಬ್ದಗಳ ಅರ್ಥ ಸಂದೇಹಾಸ್ಪದ; “ಬಿಕ್ಕು– ಉಚ್ಛ್ವಾಸೆ, ಮಾಂಸ ಭೇದೇಚ” ಎಂದು ಕೇಶಿರಾಜ; ಬಿಕ್ಕಿದ ಎಂದು ಪಾಠಾಂತರ ಬೇರೆ ಇದೆ. ಇದಕ್ಕೇನರ್ಥ? (ಸಂ) ವಿಕ್ಕ ಬಿಕ್ಕ ಎಂದರೆ ಆನೆಯಮರಿ; ಆನೆಯ ಮರಿಯ ಬಾಯಿ ಸುರುಟಿ ಕೊಂಡಿರುವುದೆ? ಬಾಯಂತೆ ಎಂಬುದು ಬಾಡಂತೆ ಎಂದಿರಬಹುದೆ? ಇಲ್ಲಿ ಏನೋ ಕ್ಲೇಶ ವಿದೆ.
೯೪. ಗದೆಯೊಳ್–ಗದೆಗಳಲ್ಲಿ, ಘಟ್ಟಿಸೆ–ತಾಡಿಸಲು, ಪುಟ್ಟಿದ–ಹುಟ್ಟಿದ, ಉಲ್ಕತತಿ– ಉಲ್ಕೆಗಳ ಸಮೂಹ, ನೀಳ್ದು–ವಿಸ್ತರಿಸಿ, ಆಕಾಶಮಂ–ಆಕಾಶವನ್ನು, ತಾಪಿನಂ–ತಾಗು ತ್ತಿರಲು, ಆ ದೇವರ ಕಣ್ಣೊಳ್–ಆ ದೇವತೆಗಳ ಕಣ್ಣುಗಳಲ್ಲಿ, ಪುದಿದು–ತುಂಬಿ, ಉಳ್ಕೆ– ತೊಳಗಲು, ವಿಳಯೋಳ್ಕಾಶಂಕೆಯಂ ಮಾಡೆ–ಪ್ರಳಯ ಕಾಲದ ಉಲ್ಕಪಾತಗಳೋ ಎಂಬ ಸಂದೇಹವನ್ನುಂಟುಮಾಡಲು, ಮೆಟ್ಟಿದ–ತುಳಿದ, ಸೂೞ್ಮೆಟ್ಟುಗಳಿಂದ–ಒಬ್ಬರದಾಗುತ್ತಲು ಇನ್ನೊಬ್ಬರ ತುಳಿತಗಳಿಂದ, ಬೆಟ್ಟು–ಬೆಟ್ಟಗಳು, ಕೞಲಲ್–ಕಳಚಲು, ಭೂಭಾಗಂ– ಭೂತಳವು, ಅಳ್ಳಾಡೆ–ಅಲುಗಾಡಲು, ದುರ್ಯೋಧನ ಭೀಮಸೇನರ ಗದಾಯುದ್ಧಂ– ದುರ್ಯೋಧನ ಭೀಮರ ಗದಾಯುದ್ಧವು, ಮಹಾಭೈರವ–ಮಹಾ ಭಯಂಕರವು, ಆದುದು– ಆಯಿತು.
ವಚನ : ವಿದ್ಯಾಧರ ರಣದೊಳ್–ವಿದ್ಯಾಧರರೆಂಬ ದೇವತೆಗಳ ಯುದ್ಧದಲ್ಲಿ; ಇಲ್ಲಿ ಬಹುಶಃ ‘ವಿದ್ಯಾಧರಕರಣದೊಳ್’ ಎಂದು ಪಾಠವಿರಬೇಕು; “ಕುರುರಾಜಂ ವಿದ್ಯಾಧರ ಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂ ತಿರಿಪೆ” (ಗದಾ ೮–೨೫) ಎಂಬುದನ್ನು ನೋಡಿ; ‘ವಿದ್ಯಾಧರಕರಣ’ ವು ಮೇಲಕ್ಕೆ ನೆಗೆಯುವುದರಲ್ಲಿ ಒಂದು ವರಸೆ ಇರಬೇಕು.
೯೫. ಭೋರೆಂದು–ಭೋರ್ ಎಂದು, ಸಿಡಿಲೆಱಗುವಂತೆ–ಸಿಡಿಲು ಮೇಲೆ ಬೀಳುವಂತೆ, ಒಡನೆ–ಕೂಡಲೆ, ಎಱಗಿ–ಮೇಲ್ಬಿದ್ದು; ಆರ್ದು–ಗರ್ಜಿಸಿ, ಮಹೋಗ್ರಘನಗದಾಪರಿಘ ದಿಂ–ಮಹಾ ಭಯಂಕರವಾದ, ದೊಡ್ಡದಾದ ಪರಿಘದಂತಿರುವ ಗದೆಯಿಂದ, ಎಡೆಗಿಡೆ– ಇದ್ದ ಸ್ಥಳದಿಂದ ಕದಲುವಂತೆ, ಪೊಯ್ದೊಡೆ–ಹೊಡೆದರೆ, ಭೀಮಂ–ಭೀಮನು, ಧರೆ ನಡುಗೆ–ಭೂಮಿ ನಡುಗುವಂತೆ, ನೀಳಕುತ್ಕೀಳಂಬೊಲ್–ನೀಲಗಿರಿಯಂತೆ, ಕೆಡೆದಂ– ಬಿದ್ದನು.
ವಚನ : ಪ್ರಹರಣದಿಂದೆ–ಹೊಡೆತದಿಂದ; ಅಚೇತನವಾಗಿ–ಶಕ್ತಿಯಿಲ್ಲದವನಾಗಿ; ಪವಮಾನ ಮಾರ್ಗದೊಳ್–ಆಕಾಶದಲ್ಲಿ; ಬಿಚ್ಚಳಿಸುವ–ವಿಸ್ತರಿಸುವ ಎಂದರೆ ಹೊಗಳುವ; ಎಮ್ಮಮ್ಮಂಗೆ–ನಮ್ಮ ಅಪ್ಪನಿಗೆ; ನೆಱನ್–ಮರ್ಮಸ್ಥಾನ.
೯೬. ಈತಂಗೆ–ಇವನಿಗೆ, ಊರುಯುಗ್ಮಂ–ಎರಡು ತೊಡೆಗಳು, ನೆಱನ್–ಮರ್ಮ ಸ್ಥಾನವು; ನೆಱನಂ–ಅಱಿಯದೆ–ಈ ಮರ್ಮಸ್ಥಾನವನ್ನು ತಿಳಿಯದೆ, ಆನ್–ನಾನು, ಇನ್ನೆಗಂ– ಇದುವರೆಗೆ, ಮಾಣ್ದೆಂ–ತಪ್ಪಿದೆನು; ಇಂ–ಇನ್ನು, ಪೋ–ಹೋಗು, ತೆಱಪಂ–ಅವಕಾಶವನ್ನು, ಪಾರ್ದಿರ್ಪೆಂ–ನಿರೀಕ್ಷಿಸುತ್ತಾ ಇರುತ್ತೇನೆ, ಎಂದು ಒಯ್ಯನೆ–ಮೆಲ್ಲಗೆ, ಗದೆಯಂ–ಗದೆ ಯನ್ನು, ಅಣಂ–ವಿಶೇಷವಾಗಿ, ಪಾಡುಗೆಯ್ದಿರ್ದು–ಒಳ್ಳೆಯ ಸ್ಥಿತಿಯಲ್ಲಿಟ್ಟುಕೊಂಡು ಎಂದರೆ ಗುರಿಯಿಟ್ಟು, ಭೋರೆಂದು–ಭೋರ್ ಎಂದು ಶಬ್ದ ಮಾಡುತ್ತ, ಎಱಪ– ಮೇಲ್ಬೀಳುವ, ಉಗ್ರಾರಾತಿಯ–ಭಯಂಕರನಾದ ಶತ್ರುವಿನ, ಊರುದ್ವಯಮನಿಡೆ–ಎರಡು ತೊಡೆಗಳನ್ನು ಅಪ್ಪಳಿಸಲು, ಗದಾಘಾತದಿಂದೆ–ಗದೆಯ ಹೊಡೆತದಿಂದ, ಊರುಯುಗ್ಮಂ– ಎರಡು ತೊಡೆಗಳು, ಮುಱಿದು–ಭಗ್ನವಾಗಿ, ನುಚ್ಚುನೂಱಾಗಿರೆ–ಚೂರುಚೂರಾಗಿರಲು, ಇಳಾಭಾಗದೊಳ್–ನೆಲದ ಮೇಲೆ, ಧಾರ್ತರಾಷ್ಟ್ರಂ–ದುರ್ಯೋಧನನು, ಕೆಡೆದಂ–ಬಿದ್ದನು.
೯೭. ದುರ್ಯೋಧನನಿಗೆ ಚರಮ ಶ್ಲೋಕ: ನುಡಿದುದಂ–ಹೇಳಿದ್ದನ್ನು, ಎಯ್ದೆ– ಚೆನ್ನಾಗಿ, ತುತ್ತತುದಿಯೆಯ್ದುವಿನಂ–ತುತ್ತತುದಿಯನ್ನು ಮುಟ್ಟುವವರೆಗೂ, ನುಡಿದಂ– ಹೇಳಿದನು; ವಲಂ–ಅಲ್ಲವೆ? ಚಲಂ ಬಿಡಿ [ದ] ದನ್–ಹಠ ಹಿಡಿದ ಅದನ್ನು, ಎಯ್ದೆ–ಪೂರ್ಣ ವಾಗುವಂತೆ, ಮುಂ ಪಿಡಿದುದಂ–ಮೊದಲು ಪಟ್ಟುಹಿಡಿದದ್ದನ್ನು, ಪಿಡಿದಂ–ಹಿಡಿದನು; ಪೂಣ್ದ ಪೂಣ್ಕೆ–ಪ್ರತಿಜ್ಞೆ ಮಾಡಿದ ಪ್ರತಿಜ್ಞೆ, ಸಲೆ–ಚೆನ್ನಾಗಿ, ನೇರ್ಪಡೆ–ನೇರವಾಗುವಂತೆ, ನಡೆ ವನ್ನೆಗಂ–ನಡೆಯುವವರೆಗೂ, ನಡೆದಂ–ನಡೆದನು; ಅಳ್ಕದೆ ಬಳ್ಕದೆ–ಹೆದರದೆ ಬಾಗದೆ, ತನ್ನೊಡಲ್–ತನ್ನ ದೇಹ, ಪಡಲ್ವಡುವಿನಂ–ಧ್ವಂಸವಾಗುತ್ತಿರಲು, ಅಣ್ಮುಗುಂದನೆ ದಲ್– ಪೌರುಷವು ಕುಗ್ಗದವನಲ್ಲವೆ! ಸುಯೋಧನಂ–ದುರ್ಯೋಧನನು, ಏನಭಿಮಾನಧನಂ–ಏನು ಆತ್ಮಗೌರವದ ಸಂಪತ್ತುಳ್ಳವನೋ!
ವಚನ : ಪತ್ತುವಿಡೆಂ–ಅಂಟಿಕೊಂಡಿರುವುದನ್ನು ಬಿಡೆನು, ಸೇರುವೆ ತಪ್ಪುವಂತೆ ಬಿಡೆನು; ಎಂದರೆ ಸಂಬಂಧವನ್ನು ಬಿಡೆನು; ನೆಲನಂ ಪತ್ತಿ–ನೆಲವನ್ನು ಅಂಟಿಕೊಂಡು; ಕಿಮ್ಮೀರವೈರಿ– ಭೀಮನು; ಮುಟ್ಟೆವಂದಾಗಳ್–ಸಮೀಪಿಸಿದಾಗ; ಪರಾಭವಂ ಬಡಿಸದಿರ್–ಅವಮಾನ ಮಾಡ ಬೇಡ; ಬಾರಿಸೆವಾರಿಸಿ–ಬೇಡವೆಂದು ನಿವಾರಿಸುತ್ತಿರಲು.
೯೮. ಇದಱೊಳ್–ಈ ಕಿರೀಟದಲ್ಲಿ, ಮೂರ್ಧಾಭಿಷೇಕಂ–ತಲೆಯ ಮೇಲೆ ನೀರು ಹನಿಸು ವುದು ಎಂದರೆ ಪಟ್ಟಾಭಿಷೇಕವು, ತನಗೆ–ತನಗೆ, ಸಮಂತು–ಚೆನ್ನಾಗಿ, ಆಯ್ತುಗಡ–ಆಯಿ ತಲ್ಲವೆ? ಪಿಂಛಾತ ಪತ್ರಂ–ನವಿಲುಗರಿಗಳಿಂದ ಮಾಡಿದ ಕೊಡೆ, ಎತ್ತಂ ಪುದಿದು–ಎಲ್ಲ ಕಡೆಯೂ ವ್ಯಾಪಿಸಿ, ತಣ್ಣೆೞಲ್ ಮಾಡುವುದು ಗಡಂ–ತಂಪಾದ ನೆರಳನ್ನು ಉಂಟುಮಾಡುವು ದಲ್ಲವೆ? ಇದು–ಈ ಕಿರೀಟ, ಎಂತುಂ–ಹೇಗೂ, ಎಂದುಂ–ಯಾವತ್ತೂ, ಆರ್ಗಪ್ಪೊಡಂ– ಯಾರಿಗಾದರೂ, ಪರ್ವಿದ–ಹಬ್ಬಿದ, ಗರ್ವೋದ್ರೇಕದಿಂ–ಅಹಂಕಾರಾತಿಶಯದಿಂದ, ಬಾಗದು ಗಡಂ–ತಗ್ಗುವುದಿಲ್ಲವಲ್ಲವೆ? ಎನುತುಂ–ಎಂದು ಹೇಳುತ್ತ, ಸಾರ್ತಂದು–ಹತ್ತಿರ ಬಂದು, ಮಾಣಿಕಂ ಸೂಸೆ–ರತ್ನಗಳು ಚೆಲ್ಲಾಡುತ್ತಿರಲು, ದುರ್ಯೋಧನನ ಮಕುಟಮಂ– ದುರ್ಯೋಧನನ ಕಿರೀಟವನ್ನು, ಭೀಮಸೇನಂ–ಭೀಮನು, ಕೋಪದಿಂ–ಕೋಪದಿಂದ, ಬಲ್ಪಿಂದೆ–ರಭಸದಿಂದ, ಒದೆದಂ–ಒದೆದನು (ಕಾಲಿನಿಂದ), ಪಿಂಛಾತ ಪತ್ರ; “ಸಸೌವರ್ಣ ಕಲಾಪಸ್ಥ ಚಂದ್ರಕೈಃ ಪರಿಕಲ್ಪಿತಂ, ಸುವರ್ಣದಂತಿದಂಡೇನ ರತ್ನೇನ ಪರಿಮಂಡಿತಮ್, ಕಲಶೇನ ತದುತ್ಥೇನ ಶುಭ್ರೇಣ ಪರಿಶೋಭಿತಂ । ಪಿಂಚ, ಚ, ತ್ರಮಿದಂ ಪ್ರಾಹುಃ ಸೀಗುರೀತಿ ವಿಚಕ್ಷಣಾಃ ॥”
ವಚನ : ನೆರಪಿದ–ಪೂರೈಸಿದ; ಅನಾಗದ ಬಾಧಾವಿಘಾತಮಂ–ಮುಂದೆ ಬರಲಿರುವ ವಿಪತ್ತಿಗೆ ಪರಿಹಾರವನ್ನು;
೯೯. ಪಿಡಿದ–ಹಿಡಿದುಕೊಂಡ, ಎಡಗೆಯ್ಯ–ಎಡಗೈಯಿನ, ಚಾಮರದ–ಚಾಮರವನ್ನುಳ್ಳ, ದಕ್ಷಿಣಹಸ್ತದ–ಬಲಗೈಯಿನ, ಪದ್ಮದ–ಕಮಲವನ್ನುಳ್ಳ, ಒಳ್ಪು–ಸೊಗಸು, ಒಡಂಬಡೆ– ಒಪ್ಪಲು, ನಸುಮಾಸಿ–ಸ್ವಲ್ಪ ಮಾಸಿ, ಪಾಡೞಿದ–ಸ್ಥಿತಿಕೆಟ್ಟ, ರೂಪಿನೊಳ್–ಆಕಾರದಲ್ಲಿ, ಉಣ್ಮುವ–ಹೊಮ್ಮುವ, ಗಾಡಿ–ಸೌಂದರ್ಯವು, ನಾಡೆ–ನೋಡಲು, ಕಣ್ಗೆಡಱೆ–ಕಣ್ಣಿಗೆ ಸಿಲು ಕಲು; ತೊಡಂಕಿ–ಸಿಕ್ಕು ಸಿಕ್ಕಾಗಿ, ಪೀಱಿದ–ಕೆದರಿದ, ಕುರುಳ್ಗಳೆ–ತಲೆಕೂದಲುಗಳೆ, ಚಿತ್ತ ದೊಳಾದ–ಮನಸ್ಸಿನಲ್ಲುಂಟಾದ, ಬೇಸಱಂ–ಆಲಸ್ಯವನ್ನು, ನುಡಿವವೊಲಾಗೆ–ಹೇಳುವಂತಾ ಗಿರಲು, ಬರ್ಪ–ಬರುವ, ಕಮಳಾಯತ ನೇತ್ರೆಯಂ–ತಾವರೆಯಂತೆ ಅಗಲವಾದ ಕಣ್ಣುಗಳುಳ್ಳ, ಇಂದುವಕ್ತ್ರೆಯಂ–ಚಂದ್ರಮುಖಿಯನ್ನು; “ಪೀಱು–ವಿಕೀರ್ಣೇ.”
ವಚನ : ಕಂಡು–ನೋಡಿ; ನೀನಾರ್ಗೆ–ನೀನು ಯಾರು, ಯಾರಿಗೆ ಸಂಬಂಧಿಸಿದವಳು; ಏನೆಂಬೆ–ಏನೆಂದು ಕರೆದುಕೊಳ್ಳುವೆ ಎಂದರೆ ಹೆಸರೇನು?
೧೦೦. ಪೆಸರೊಳ್–ಹೆಸರಿನಲ್ಲಿ, ಲಕ್ಷ್ಮಿಯೆಂ–ಲಕ್ಷ್ಮಿಯಾಗಿದ್ದೇನೆ, ದ್ರೋಣನದೀಜ ಕರ್ಣಭುಜವೀರ್ಯಾವೇಷ್ಟಿತಂ–ದ್ರೋಣ ಭೀಷ್ಮ ಕರ್ಣರ ಬಾಹುಬಲದಿಂದ ರಕ್ಷಿತವಾದ, ದುರ್ಯೋಧನೋರಸ್ಥಳಾವಸಥಂ ಮಾಡೆ–ದುರ್ಯೋಧನನ ಎದೆಯ ಪ್ರದೇಶವನ್ನು ಮನೆ ಯನ್ನಾಗಿ ಮಾಡಲು, ತಾಂ–ತಾನು, ಇನ್ನೆಗಂ–ಇದುವರೆಗೆ, ನೆಲಸಿ, ಸಂತಸದೆ–ಸಂತೋಷ ದಿಂದ, ಇರ್ದೆಂ–ಇದ್ದೆನು; ನಾರಾಯಣಾದೇಶಂ–ಆ ವಿಷ್ಣುವಿನ ಅಪ್ಪಣೆಯು, ಒಡ್ಡಿಸೆ– ಒದಗಲು, ಆ ಧರಾಧಿಪತಿಯಿಂ–ಆ ರಾಜನಾದ ದುರ್ಯೋಧನನನ್ನು, ಬಿಸುಟು–ಬಿಟ್ಟು, ತೊರೆದು, ಪಾಂಡು ಪ್ರಿಯಪುತ್ರರೊಳ್–ಪಾಂಡವರಲ್ಲಿ, ನೆರೆಯಲೆಂದು–ಸೇರಬೇಕೆಂದು, ಈಗಳ್–ಈಗ, ಆಂ–ನಾನು, ಪೋದಪೆಂ–ಹೋಗುತ್ತಿದ್ದೇನೆ.
೧೦೧. ಪೊಸತಲರ್ದ–ಹೊಸದಾಗಿ ಅರಳಿದ, ಅಂಬುಜಂಗಳ–ತಾವರೆಗಳ, ಎಸೞೊಳ್– ಎಸಳುಗಳಲ್ಲಿ, ನಡೆಪಾಡುವಳೇಂ– ಓಡಾಡುವವಳೇನು? ಪಯೋಧಿಯಂ–ಸಮುದ್ರವನ್ನು, ಪೊಸೆದೊಡೆ–ಕಡೆದರೆ, ಪುಟ್ಟಿದಯ್–ಹುಟ್ಟಿದೆಯಾ? ಮುರವಿರೋಧಿಯ–ಮುರಾರಿಯ ಎಂದರೆ ವಿಷ್ಣುವಿನ (ಕೃಷ್ಣನ), ಪತ್ನಿಯೆ–ಹೆಂಡತಿಯೆ? ಮಿಂಚುತಿರ್ಪ ಕೂರಸಿಗಳ ಮೇಲೆ– ಮಿಂಚುತ್ತಿರುವ ಹರಿತವಾದ ಕತ್ತಿಗಳ ಮೇಲೆ, ಸಂಚರಿಪೆ–ಓಡಾಡುತ್ತೀಯೆ; ವೈರಿ ನರಾಧಿಪ ಸೈನ್ಯವಾರ್ಧಿಯಂ–ಶತ್ರುರಾಜರ ಸೈನ್ಯ ಸಾಗರವನ್ನು, ಪೊಸೆದೊಡೆ–ಕಡೆದರೆ, ಪುಟ್ಟಿದೀ ನಿನಗೆ–ಹುಟ್ಟಿದ ಈ ನಿನಗೆ, ಎನ್ನಂ–ನನ್ನನ್ನು, ವಕ್ರಿಸಲ್–ಪ್ರತಿಭಟಿಸಲು, ತೀರ್ಗುಮೇ–ಸಾಧ್ಯ ವಾಗುತ್ತದೆಯೆ?
೧೦೨. ಕುರುವಂಶಾಂಬರ ಭಾನುವಂ–ಕುರುಕುಲಾಕಾಶಕ್ಕೆ ಸೂರ್ಯನಾದ ದುರ್ಯೋಧ ನನನ್ನು, ಆನುಳ್ಳಿನಂ–ನಾನು ಇರುತ್ತಿರಲು, ಬಿಸುಡಿಸಲ್ಕೆ–ಬಿಡುವಂತೆ ಮಾಡುವುದಕ್ಕೆ, ತೀರದು– ಸಾಧ್ಯವಾಗದು; ಆನಿರೆ–ನಾನು ಇರಲು, ನಾರಾಯಣನೆಂಬನುಂ–ನಾರಾಯಣ ನೆನ್ನುವವನೂ, ಪ್ರಭುವೆ–ಸ್ವಾಮಿಯೆ? ಅಂಬುರುಹಾಕ್ಷೀ–ತಾವರೆಗಣ್ಣ ಲಕ್ಷ್ಮಿಯೇ, ನೀನ್–ನೀನು, ಈ ಮರುಳ್ಮಾತುಂ–ಈ ಹುಚ್ಚು ನುಡಿಯನ್ನು, ಬಿಸುಡು–ಬಿಸಾಡು, ತೊರೆ; ಅಂಜದಿರ್–ಹೆದರದಿರು, ಕುರುಕ್ಷ್ಮಾಪಾಳನಿರ್ದಲ್ಲಿಗೆ–ದುರ್ಯೋಧನನು ಇದ್ದ ಸ್ಥಳಕ್ಕೆ, ನಡೆ–ಹೊರಡು ಎಂದು, ಅರವಿಂದಾಲಯೆಯಂ–ಲಕ್ಷ್ಮಿಯನ್ನು, ಮಗುೞ್ಚಿದಂ–ಹಿಂದಿರುಗು ವಂತೆ ಮಾಡಿದನು; ಆ ದ್ರೌಣಿ–ಆ ಅಶ್ವತ್ಥಾಮ, ಅದೇನ್ ಶೌರ್ಯಾರ್ಥಿಯೋ–ಅದೇನು ಪ್ರತಾಪಾಭಿಲಾಷಿಯೋ?
ವಚನ : ಘಟಚೇಟಿಕೆಯಂ–ಮಡಕೆ ಹೊರುವ ತೊತ್ತನ್ನು, ಕುಂಭದಾಸಿಯನ್ನು; ಶೋಣಿತ–ರಕ್ತದಿಂದ, ಆರ್ದ್ರ–ತೊಯ್ದ; ಕೋಟಲೆಗೊಳ್ವ–ವ್ಯಥೆಪಡುವ; ಮಂಡಲಾಗ್ರ ನುಂ–ಕತ್ತಿಯನ್ನುಳ್ಳವನು;
೧೦೩. ನೆಗೞ್ದ ನೆಗೞ್ತೆಗೆ–ಮಾಡಿದ ಕಾರ್ಯಕ್ಕೆ, ಪ್ರಸಿದ್ಧವಾದ ಕೀರ್ತಿಗೆ, ಆವೆಡೆಯೊಳಂ– ಯಾವ ಸ್ಥಳದಲ್ಲೂ, ಪೞಿಯಿಲ್ಲದೆ–ನಿಂದೆಯಿಲ್ಲದೆ, ಪೂಣ್ದು–ನಿರ್ವಹಿಸಿ, ಸಂದವೈರಿ ಗಳನೆ–ಪ್ರಸಿದ್ಧರಾದ ಶತ್ರುಗಳನ್ನೇ ಕೊಂದು, ವಾರಿಧಿಪರೀತ ಮಹೀತಲಮಂ–ಕಡಲು ಬಳಸಿರುವ ಭೂಪ್ರದೇಶವನ್ನು, ನಿಮಿರ್ಚಿ–ವಿಸ್ತರಿಸಿ; ಜಟ್ಟಿಗರಂ–ಶೂರರನ್ನು, ಅಯೋನಿ ಸಂಭವರಂ–ದ್ರೋಣನನ್ನು, ಆಳ್ದು–ಆಳಿ ಎಂದರೆ ಅವರಿಗೆ ಸ್ವಾಮಿಯಾಗಿ, ಅರಿವರ್ಗದೊಳ್ –ಶತ್ರುಗಳ ಸಮೂಹದಲ್ಲಿ, ಆಂತು–ಎದುರಿಸಿ, ಕಾದೆಯುಂ–ಯುದ್ಧ ಮಾಡಿಯೂ, ಬಗೆ– ಮನೋರಥವು, ದೊರೆಕೊಂಡುದಿಲ್ಲ–ಲಭಿಸಲಿಲ್ಲ; ಇದು, ವಿಧಾತ್ರನ–ವಿಧಿಯ, ದೋಷಮೊ–ತಪ್ಪೋ, ನಿನ್ನ ದೋಷಮೋ–ನಿನ್ನ ತಪ್ಪೊ?
೧೦೪. ಆದೊಡಂ–ಆದರೂ, ಎನ್ನಂ–ನನ್ನನ್ನು, ಬಂಚಿಸಿ–ಮೋಸ ಮಾಡಿ, ಎಂದರೆ ನನಗೆ ತಿಳಿಯದಂತೆ, ಪೋದುದಱೊಳ್–ಹೋದದ್ದರಿಂದ, ನಿನಗೆ, ಪಗೆವರಿಂ–ಹಗೆಗಳಿಂದ, ಇನಿತು–ಇಷ್ಟು, ಎಡಱಾಯ್ತು–ಕೇಡಾಯಿತು; ಆದಿತ್ಯತೇಜ–ಸೂರ್ಯತೇಜವನ್ನುಳ್ಳವನೇ, ದುರ್ಯೋಧನನೇ, ಬೆಸಸು–ಅಪ್ಪಣೆ ಮಾಡು, ಇದಿರಾದ–ಪ್ರತಿಭಟಿಸಿದ, ಪೃಥಾಸುತರಂ– ಪಾಂಡವರನ್ನು, ಉೞಿಯಲೀಯದೆ–ನಿಶ್ಶೇಷವಾಗಿ, ಕೊಲ್ವೆಂ–ಕೊಲ್ಲುತ್ತೇನೆ.
ವಚನ : ಒತ್ತಂಬದಿಂ–ಬಲಾತ್ಕಾರದಿಂದ;
೧೦೫. ಎನಗೆ–ನನಗೆ, ಇನಿತೊಂದು–ಇಷ್ಟೊಂದು, ಅವಸ್ಥೆ–ಕಷ್ಟಸ್ಥಿತಿ, ವಿಧಿಯೋಗ ದಿಂ–ದೈವಯೋಗದಿಂದ, ಆದುದು–ಆಯಿತು; ಇದಕೆ–ಇದಕ್ಕೆ, ನೀಂ–ನೀನು, ಅೞಲ್ದು– ದುಃಖಿಸಿ, ಇನಿತು–ಹೀಗೆ, ಮನಃಕ್ಷತಂಬಡದಿರು–ಮನಸ್ಸಿನಲ್ಲಿ ನೋಯಬೇಡ; ಪುರಾತನ ಪುರುಷಂ ಮುರಾರಿ–ಆದಿ ಪುರುಷನಾದ ಶ್ರೀಕೃಷ್ಣ, ಕೆಲದೊಳ್ ನಿಲೆ–ಮಗ್ಗುಲಲ್ಲಿ ನಿಲ್ಲಲು ಎಂದರೆ ಸಹಾಯವಾಗಿರಲು, ಪಾಂಡವರಂ–ಪಾಂಡವರನ್ನು, ಗೆಲಲ್–ಗೆಲ್ಲಲು, ಆಗದು; ನೀಂ–ನೀನು, ಕೊಲಲಾರ್ಪೊಡೆ–ಕೊಲ್ಲಲು ಸಮರ್ಥನಾಗಿದ್ದರೆ, ಆಗದು–ಆಗುವುದಿಲ್ಲ, ಬೇಡ, ಎಂಬೆನೆ–ಎಂದು ಹೇಳುವೆನೆ? ವೈರಿಗಳಂ–ಶತ್ರುಗಳನ್ನು, ತಱಿದೊಟ್ಟಿ–ಕತ್ತರಿಸಿ ಹಾಕಿ, ಎನ್ನಸುವುಳ್ಳಿನಂ–ನನ್ನ ಪ್ರಾಣವಿರುತ್ತಿರಲು, ಎಯ್ದೆವಾ–ಹತ್ತಿರಕ್ಕೆ ಬಾ, ಗಡಾ– ಅಲ್ಲವೇ?
ವಚನ : ಇಕ್ಕಿದ–ಕೊಂದ; ಒಸಗೆವಾತಂ–ಸಂತೋಷದ ಮಾತನ್ನು;
೧೦೬. ಮಗನೞಲೊಳ್–ಮಗನ ದುಃಖದಲ್ಲಿ, ಎಂದರೆ ನನ್ನ ಮಗ ಕರ್ಣನ ಸಾವಿನಲ್ಲಿ, ಕರಂ–ವಿಶೇಷವಾಗಿ, ಮರುಗುತಿರ್ಪಿನಂ–ಕುದಿಯುತ್ತಿರಲು, ಎನ್ನ ತನೂಜನ–ನನ್ನ ಮಗನ, ಆಳ್ವಸಾಮಿಗಂ–ಆಳುವ ಪ್ರಭುವಿಗೂ, ಅೞಿವಾಗೆ–ಸಾವಾಗಲು, ಶೋಕರಸಂ–ದುಃಖದ ಭಾವವು, ಇರ್ಮಡಿಸಿತ್ತು–ಎರಡರಷ್ಟಾಯಿತು; ಇಲ್ಲಿಗೆ–ಈ ಸಮಯಕ್ಕೆ, ಜಳಪ್ರವೇಶಂ– ನೀರಿನಲ್ಲಿ ಹೋಗುವುದು, ಪದಂ–ಹದನು; ಎಂದು, ವಾರಿಜನಾಥಂ–ಸೂರ್ಯನು, ನಿಶ್ಚಯಿಸಿ–ನಿರ್ಣಯಮಾಡಿಕೊಂಡು, ಅನಾಥನಾಗಿ–ದಿಕ್ಕಿಲ್ಲದವನಾಗಿ, ತೊಟ್ಟಗೆ–ಬೇಗನೆ, ಮುೞುಪಂತೆ ವೊಲ್–ಮುಳುಗುವ ಹಾಗೆ, ಅಪರಾಂಬುರಾಶಿಯೊಳ್–ಪಶ್ಚಿಮ ಸಮುದ್ರದಲ್ಲಿ, ಕಡುಕೆಯ್ದು–ಶೀಘ್ರವಾಗಿ, ಮುೞುಗಿದಂ–ಮುಳುಗಿದನು.
ವಚನ : ಆ ಪ್ರಸ್ತಾವದೊಳ್–ಆ ಸಮಯದಲ್ಲಿ; ಇರ್ದರೆಗೆತ್ತು–ಇದ್ದರೆಂದೇ ಭಾವಿಸಿ; ನಿಟ್ಟಾಲಿಯಾಗಿ–ಚಾಚಿದ ಕಣ್ಣುಳ್ಳವನಾಗಿ ಎಂದರೆ ಎಡೆಬಿಡದೆ ನೋಡುತ್ತ; ದಾೞಿಯನಿಟ್ಟು –ಮುತ್ತಿಗೆ ಹಾಕಿ; ಬಾಯ್ಮಾಡಿ–ಕೂಗಿ, ಗದರಿ, ಬೆದರಿಸಿ; ಪಾಂಡವರೆ ಗೆತ್ತು–ಪಾಂಡವ್ ಅರೆಂದೇ ಭ್ರಮಿಸಿ; ಉತ್ತಮಾಂಗಂಗಳಂ–ತಲೆಗಳನ್ನು; ಕೊಳ್–ತೆಗೆದುಕೋ! ಇಲ್ಲಿ ‘ನಿಟ್ಟಾಲಿ’ ಎಂಬುದರ ಪಾಠದಲ್ಲಿ ಸಂದೇಹಕ್ಕೆ, ಎಡೆ ಇದೆ; ನಿಟ್ಟುರಿ ಎಂದು ಪಾಠಾಂತರವಿದೆ; ಬೀಡಿಂಗೆ ನಿಟ್ಟುರಿಗೊಂಡು ಎಂಬ ಪ್ರಯೋಗವಿದೆ (ಗದಾ. ೯–೨೮ ಗ);
೧೦೭. ಬಾಲಕಮಳಂಗಳಂ–ಎಳೆಯ ಕಮಲಗಳನ್ನು, ಕಮಳಾಲಯದಿಂ–ಸರೋವರ ದಿಂದ, ತಿಱಿದು–ಬಿಡಿಸಿ, ತರ್ಪವೊಲ್–ತರುವಂತೆ, ನೀಂ–ನೀನು, ತಂದಯ್–ತಂದಿದ್ದೀಯೆ; ಬಾಲಕರ–ಪಾಂಡುಕುಮಾರರ, ತಲೆಗಳ್–ತಲೆಗಳು! ಅಕ್ಕಟ–ಅಯ್ಯೋ, ಬಾಲಕ ವಧ ದೋಷಂ– ಬಾಲಕರನ್ನು ಕೊಂದ ಪಾಪ! ಎಂತು–ಹೇಗೆ, ನೀಂ–ನೀನು, ನೀಗಿದಪಯ್– ಕಳೆದುಕೊಳ್ಳುತ್ತೀಯ?
ವಚನ : ಅಂತೆಂಬುದೇನ್–ಹಾಗೆನ್ನುವುದು ಏನು? ಸೂನುಗಳಪ್ಪ–ಮಕ್ಕಳಾದ; ಸಿಗ್ಗಾಗಿ– ಅವಮಾನಹೊಂದಿ, ನಾಚಿ;
೧೦೮. ಬಿಳಿಯ ತಾವರೆಯೆಸೞೊಳ್–ಬಿಳಿದಾದ ತಾವರೆಯ ರೇಕಿನಲ್ಲಿ, ಮಾಡಿದ, ಬೆಳ್ಗೊಡೆ–ಬಿಳಿಕೊಡೆ, ರಯ್ಯಮಾಗೆ–ರಮ್ಯವಾಗಲು; ಎಡದ ಕೆಯ್ಯೊಳ್–ಎಡಗೈಯಲ್ಲಿ, ಪಿಡಿದ–ಹಿಡಿದ, ಚೆಂಬೊನ್ನ–ಕೆಂಪು ಚಿನ್ನದ, ಕಾವಿನ–ಹಿಡಿಯನ್ನುಳ್ಳ, ಚಾಮರಂ–ಚಾಮರವು, ಅಮರ್ದಿರೆ–ಸೇರಿರಲು, ಭೇರಿ ಸಿಂಹಾಸನಮುಂ–ಭೇರಿಗಳೂ ಸಿಂಹಾಸನವೂ, [ಅಮರ್ದಿರೆ– ಕೂಡಿರಲು], ಬೞಿಯೊಳ್–ಸಮೀಪದಲ್ಲಿ, ಜವಂಮಿಳಿರೆ–ವೇಗದಿಂದ ಅಲುಗಾಡಲು, ರಾಜ್ಯ ಚಿಹ್ನಂಗಳ್ವೆರಸು–ರಾಜ್ಯ ಲಾಂಛನಗಳ ಸಹಿತವಾಗಿ, ಇಂತು–ಹೀಗೆ, ನಡೆತಂದು– ಬಂದು, ರಾಜ್ಯಲಕ್ಷ್ಮಿ–ರಾಜ್ಯವೆಂಬ ಲಕ್ಷ್ಮಿಯು, ಬಳೆದ–ಬೆಳೆದ, ಸಂತೋಷದ, ಅಂತಮಂ– ಪಾರವನ್ನು, ಎಯ್ದೆ–ಮುಟ್ಟಲು, ಸಹಜ ಮನೋಜನಂ–ಸಹಜ ಮನೋಜನಾದ ಅರಿಕೇಸರಿ ಯನ್ನು, ಅರ್ಜುನನನ್ನು, ನಾಡೋಜನಂ–ನಾಡಿನ ಗುರುವನ್ನು ಎಂದರೆ ಇಲ್ಲಿ ಅರ್ಜುನನನ್ನು, ಪತ್ತಿದಳ್–ಸೇರಿಕೊಂಡಳು, ಈ ಪದ್ಯದಲ್ಲಿ ಹಲವು ಕ್ಲೇಶಗಳಿವೆ (೧) ಭೇರಿ ಸಿಂಹಾಸನ [ಮುಂ] ಎಂಬುದಕ್ಕೆ ಒಂದು ನ್ಯೂನ ಕ್ರಿಯಾಪದವಿಲ್ಲ, (೨) ಬೞಿಯೊಳ್ ಎಂಬಲ್ಲಿನ ೞಿ, ಳಕಾರ ಪ್ರಾಸಕ್ಕೆ ಹೊಂದುವುದಿಲ್ಲ, ಳೞಗಳ ಮಿಶ್ರ ಪ್ರಾಸವೆಂದು ಇದನ್ನು ಭಾವಿಸಿದರೆ ಪಂಪನು ಕ್ವಚಿತ್ತಾಗಿ ಹೀಗೆ ಮಿಶ್ರಣ ಮಾಡುವನೆಂಬುದಕ್ಕೆ ಉದಾಹರಣೆಗಳಿವೆ; ಈ ಕ್ಲೇಶ ತಪ್ಪುತ್ತದೆ.
ತ್ರಯೋದಶಾಶ್ವಾಸಂ ಸಂಪೂರ್ಣಂ