ದ್ವಾದಶಾಶ್ವಾಸಂ
೧. ಶ್ರೀಕಾಂತಾಕಾಂತಂ–ಜಯಲಕ್ಷ್ಮಿಯೆಂಬ ಸ್ತ್ರೀಗೆ ಒಡೆಯನಾದ, ಇಳಾ ಲೋಕೈಕಲ ಲಾಮಂ–ಭೂಲೋಕಕ್ಕೆ ಒಬ್ಬನೇ ಶ್ರೇಷ್ಠನಾದ, ಅರಿಗಂ–ಅರ್ಜುನನು, ಅನೇಕಮಂ–ಅನೇಕ ವಾದ, ಮಹೋಗ್ರಾರಿನೃಪಾನೀಕಮಂ–ಅತಿ ಭಯಂಕರರಾದ ಶತ್ರುರಾಜರ ಸೈನ್ಯವನ್ನು, ಗೆಲ್ದು–ಗೆದ್ದು, ಉಱದೆ–ಇರದೆ, ಆ ಕಲಹದೊಳ್–ಆ ಯುದ್ಧದಲ್ಲಿ, ನಿಲ್ವುದುಂ–ನಿಂತು ಕೊಳ್ಳುತ್ತಲು, ಆಗಳ್–ಆಗ.
೨. ನೃಪಂ–ದುರ್ಯೋಧನನು, ನಂಬಿ–ನನ್ನನ್ನು ನಚ್ಚಿ, ಬಂದು, ಸೈಂಧವನಂ–ಜಯ ದ್ರಥನನ್ನು, ಎನಗೆ–ನನಗೆ, ಅಪ್ಪೈಸೆ–ಒಪ್ಪಿಸಲು (ರಕ್ಷಿಸಬೇಕೆಂದು), ಆದುದನಾಗಲ್ಕೆ– ಜಯದ್ರಥನಾದುದನ್ನು ನಾನು ಆಗುವುದಕ್ಕೆ, ಪೂಣ್ದೆಂ–ಪ್ರತಿಜ್ಞೆ ಮಾಡಿದೆನು; ಇಂಬೞಿದು– ಹದತಪ್ಪಿ, ಆಶ್ರಯ ನಷ್ಟವಾಗಿ, ಅವಂ–ಅವನು, ಅನುವರದೊಳ್–ಯುದ್ಧದಲ್ಲಿ, ಮುಂಬ ಯಣಂಬೋದಂ–ಮುಂಚಿತವಾಗಿ ಪ್ರಯಾಣ ಹೋದನು, ಎನಗೆ–ನನಗೆ, ಮಾಣ್ಬುದು– (ಇನ್ನು) ತಡೆದಿರುವುದು; ದೊರೆಯೇ–ಯೋಗ್ಯವೇ, ಉಚಿತವೇ?
೩. ಬವರದೊಳ್–ಯುದ್ಧದಲ್ಲಿ, ಏಂಬಲ್ಲಂ–ಏನು ತಿಳಿದಿದ್ದಾನೆ, ಎಂದರೆ ಏನೂ ಇಲ್ಲ ವೆಂದರ್ಥ; ಪೆಱರ್ಗೆ–ಇತರರಿಗೆ, ಒವಜುಗೆಯಲ್–ಉಪಾಧ್ಯಾಯ ವೃತ್ತಿಯನ್ನು ಮಾಡಲು, ಎಂದರೆ ಬೋಧಿಸಲು, ಕಂಡು–ನೋಡಿ, ತನಗೆ–ತನ್ನ ವಿಷಯಕ್ಕೆ, ಅಱಿಯಂ–ತಿಳಿಯನು; ಎಂದರೆ ಇತರರಿಗೆ ಉಪದೇಶ ಮಾಡಬಹುದು; ಆದರೆ ಅದರಂತೆ ನಡೆಯಲು ಮಾತ್ರ ವ್ಯಕ್ತಿಗೆ ಆಗದಿರಬಹುದು; ಹಾಗೆ, ಹೀಗೆ, ಯುದ್ಧ ಮಾಡಬೇಕು ಎಂದು ಬಾಯಲ್ಲಿ ಹೇಳಬಹುದು, ಆದರೆ ಯುದ್ಧ ಬಂದಾಗ ಏನೂ ಮಾಡದಿರಬಹುದು; ಎಂತುವೊ ನುಡಿ–ಮಾತು ಎಂಥಾದ್ದೋ; ತ [ಪ್ಪು] ದು–ನಷ್ಟವಾಗುತ್ತದೆ; ಬಿಲ್ಲೊವಜಂ–ಬಿಲ್ಲಿನ ಆಚಾರ್ಯ (ದ್ರೋಣನು), ಕಮ್ಮ [ರಿ] ಯೊವಜಂ–ನುಡಿದಂತೆ ನಡೆಯದವನು, ಎಂಬುದಂ–ಎನ್ನುವು ದನ್ನು, ಮಾಡುವೆನೇ–ಮಾಡುತ್ತೇನೆಯೇ, ಇಲ್ಲ. ಈ ಪದ್ಯದಲ್ಲಿ ಕೆಲವು ಪಾಠ ಕ್ಲೇಶಗಳಿವೆ; ಆದರೆ ಅರ್ಥವೇನೋ ಚಿಂತಿಸಿದರೆ ವಿಶದವಾಗುತ್ತದೆ. ದ್ರೋಣನು ತನಗೆ ತಾನೇ ಹೇಳಿಕೊಳ್ಳು ತ್ತಾನೆ; ಜನ ಏನು ಹೇಳುತ್ತಾರೆ, ದ್ರೋಣನು ಇತರರಿಗೆ ಹೇಳುವವನೇ ಹೊರತು ಯುದ್ಧದಲ್ಲಿ ತಾನು ಹೇಳಿದಂತೆ ಮಾಡಲು ತಿಳಿಯನು; ಮಾತೊಂದು ಕಾರ್ಯವಿನ್ನೊಂದು, ಎಂಥ ಮಾತುಗಳಿವು, ನಾಶವಾಗುವಂಥವು, ತಾನು ನುಡಿದಂತೆ ನಡೆಯದ ಆಚಾರ್ಯನಲ್ಲವೇ, ಎಂದು. ತಪ್ಪದು–ಅದು ತಪ್ಪು, ಸುಳ್ಳು ಎಂದೂ ಆಗಬಹುದು, ಇಲ್ಲಿ ತ [ಪ್ಪು] ದು ಎಂದು ತಿದ್ದಿದೆ; ಕಮ್ಮಱ ಎಂಬುದನ್ನು ಕಮ್ಮ [ರಿ] ಎಂದು ತಿದ್ದಿದೆ. ಕಮ್ಮಱಿ ಎಂದರೆ ಕಮ್ಮಾರ ನನ್ನುಳ್ಳದು ಅಥವಾ ಕಮ್ಮಾರತನವನ್ನುಳ್ಳವನು; ಕೆಲಸ ಕೆಲಸಿ ಇದ್ದ ಹಾಗೆ, ಎಂದರೆ ಅರ್ಥ ವಾಗುವುದಿಲ್ಲ. ಈ ಶಬ್ದದ ಪ್ರಯೋಗವು ಹಲವೆಡೆ ಬರುತ್ತದೆ, ಪದುಳಂ ಕುಳ್ಳಿರ್ದೆ ಮಗಾಯದ ಮಾತಂ ತಗುಳೆ ಗೞಪಿ ಪೋದಂ ಸಂದಿ । ರ್ದದಟರೊಳಿಱಿದಱಿಯಂ ತ । ಪ್ಪದೆ ಕಮ್ಮಱಿ ಯೋಜನೆನಿಸಿದಂ ಬಿಲ್ಲೋಜಂ ॥ (ಗದಾ. ೨–೧೩); ಇನ್ನಂತುಟು ಪೇೞ್ದು ಕೆಮ್ಮಗಿರೆ ಗಮ್ಮನೆ ಕಮ್ಮರಿ ಯೋಜನಾಗೆನೇ (ಆದಿಪು. ೨–೬೧); ಒಡಲಧ್ರುವಮಶುಚಿಯಿದಂ ಬಿಡು ವುದು ಧರ್ಮಮನೆ ಪಿಡಿವುದೆಂದಾತೆಱದಿಂ । ನಡೆಯದೆ ಮಱೆದಾನಿಂತಿರ್ದೊಡೆ ಕಮ್ಮರಿ ಯೋಜನೆಂಬ ನುಡಿಗೆಡೆಯಪ್ಪೆಂ (ಚಂದ್ರಪು. ೧೦–೧೨೪); ಈ ಮೂರು ಪ್ರಯೋಗಗಳಲ್ಲೂ ನುಡಿದಂತೆ ನಡೆಯದವನು ಎಂಬ ಅರ್ಥ ಸ್ಪಷ್ಟವಾಗಿದೆ; ಕಮ್ಮರಿಯೋಜ ಎಂಬುದೇ ಸರಿಯಾದ ರೂಪವೆಂಬುದೂ ಖಚಿತವಾಗುತ್ತದೆ; ಗದಾ. ಪ್ರಯೋಗದಲ್ಲಿರುವ ‘ಱಿ’ ತಪ್ಪು; ಕಮ್ಮರಿ(ಸಂ) ಕರ್ಮಾರಿ–ಕರ್ಮಕ್ಕೆ ಶತ್ರುವಾದವನು, ಕೆಲಸ ಮಾಡದವನು.
೪. ಒಪ್ಪೆ–ಸೊಗಸಾಗಲು, ಎಲ್ಲರಿಗೂ ಸಮ್ಮತವಾಗಿರಲು, ಜಯದ್ರಥಂ–ಜಯದ್ರಥನು, ಆದುದಂ–ಆದುದನ್ನು, ಅಪ್ಪೆಂ–ನಾನು ಆಗುತ್ತೇನೆ, ಪೋಗು–ಹೋಗು, ಎಂದು, ಮುನ್ನೆ ನುಡಿದುದಂ–ಮೊದಲು ಭಾಷೆ ಮಾಡಿದ್ದನ್ನು, ಈಗಳ್–ಈಗ, ತಪ್ಪುವೆನೆ–ಸುಳ್ಳಾಗಿಸು ತ್ತೇನೆಯೆ?ಧರೆಯೊಳ್–ಲೋಕದಲ್ಲಿ, ಎನ್ನ ನುಡಿಯುಂ–ನನ್ನ ಮಾತೂ, ಎನ್ನ ಎಚ್ಚ ಅಂಬುಂ–ನಾನು ಪ್ರಯೋಗಿಸಿದ ಬಾಣವೂ, ತಪ್ಪದು ವಲಂ–ತಪ್ಪುವುದಿಲ್ಲ, ಅಲ್ಲವೆ?
ವಚನ : ಕುಂಭಸಂಭವಂ–ದ್ರೋಣ; ಕುಂಭಸಂಭವನಂತೆ–ಅಗಸ್ತ್ಯನಂತೆ, ಅಳುರಲ್ ಬಗೆದು–ವ್ಯಾಪಿಸಲು ಯೋಚಿಸಿ, ನೇಸಱ್ ಪಟ್ಟೊಡಂ–ಸೂರ್ಯ ಮುಳುಗಿದರೂ, ಅನುವರ ದೊಳ್–ಯುದ್ಧದಲ್ಲಿ; ಅಳ್ಳೆವಿಳ್ಳೆಯಾದ–ಆಯಾಸ ಹೊಂದಿದ (?); ಅಳ್ಳೆ ವಿಳ್ಳೆ–ಈ ಶಬ್ದದ ಅರ್ಥ ನಿಷ್ಪತ್ತಿಗಳು ಚಿಂತನೀಯ; ಕೆಲವು ಪ್ರಯೋಗಗಳಿವೆ: ಪಯಣದೊಳಳ್ಳೆ ವಿಳ್ಳೆ ಯಾಗಿ ಬಂಬಲ ಬಾಡಿದ ತನುಲತೆಗಳುಂ (ಆದಿಪು. ೧೧–೭೦ ಗ); ಅಟ್ಟುಪೆತ್ತ ಪೊಲೆವುಲ್ಲೆ ಯಳ್ಳೆವಿಳ್ಳೆಯಾದ ಮಾತಂ….ಕೆಳೆಯಂಗಿಂತೆಂದಂ (ಅದೇ ೧೨–೨೯ಗ); ಅಳ್ಳೆವಿಳ್ಳೆಯಾಗಿ ಪೋಗಲೀಯದೆ ತಳ್ತು ಪರಭಾಗಂ ಒಡೆದ ವಿದ್ರುಮಲತೆಗಳುಮಂ (ಅದೇ ೧೧–೭೯ ಗ); (ಶತ್ರು ಸೈನ್ಯದ) ಸಂಘಟ್ಟನದಿಂದಳ್ಳೆವಿಳ್ಳೆಯಾದ ಯಾದವ ದೇಶದ ಜನ ಕ್ಲೇಶಮಂ (ಜಗವಿ. ೮–೩ ಗ).
೫. ಇಲ್ಲಿಂದ ಮುಂದಕ್ಕೆ ರಾತ್ರಿ ಕಾಳಗ; ತಕ್ಕಿನ–ಪರಾಕ್ರಮವುಳ್ಳ, ವಿಕ್ರಮಾರ್ಜುನನ– ಅರಿಕೇಸರಿಯ, ಅರ್ಜುನನ, ಕೋಪದ ದಳ್ಳುರಿಗಳ್–ಕೋಪವೆಂಬ ಜ್ವಲಿಸುವ ಉರಿಗಳು, ವಿರೋಧಿಯಂ–ಶತ್ರುವನ್ನು, ಮುಕ್ಕಲೆ–ಕಬಳಿಸುವುದಕ್ಕೇ, ಮುತ್ತಿದಂತೆ–ಮುತ್ತಿಕೊಂಡ ಹಾಗೆ, ಕರಿಗೆ–ಆನೆಗೆ, ಎಂಟು; ರಥಕ್ಕೆ–ರಥಗಳಿಗೆ, ಅನುವಾಗೆ–ಅನುಕೂಲವಾಗಲು, ನಾಲ್ಕು; ವಾಹಕ್ಕೆ–ಕುದುರೆಗೆ, ಎರಡು, ಪಾದಚರರ್ಗೆ–ಪದಾತಿಗಳಿಗೆ ಒಂದು, ಎನೆ–ಎನ್ನಲು, ದೀವಿಗೆಗಳ್–ದೀಪಗಳು ಎರೞ್ದೆಸೆಯ–ಎರಡು ಪಕ್ಷಗಳ, ಒಡ್ಡಣಂಗಳೊಳ್–ಸೈನ್ಯಗಳಲ್ಲಿ, ಜಲಕ್ಕನೆ–ವಿಶದವಾಗಿ, ಇಟ್ಟಳಂ–ರಮಣೀಯವಾಗಿ, ಎಕ್ಕೆಕ್ಕೆಯಿಂ–ಗುಂಪು ಗುಂಪಾಗಿ, ಬೆಳಗುತಿರ್ದುವು–ಹೊಳೆಯುತ್ತಿದ್ದವು.
ವಚನ : ಏರ್ವೆಸನಂ–ಯುದ್ಧೋದ್ಯೋಗವನ್ನು, ಯುದ್ಧಕಾರ್ಯವನ್ನು; ವೈಮಾನಿಕ ದೇವರ್–ವಿಮಾನಸ್ಥಿತರಾದ ದೇವತೆಗಳು; ಕಿರ್ಚೆೞ್ದಲಂಕೆಯಂ–ಉರಿಯುತ್ತಿರುವ ಲಂಕಾ ನಗರವನ್ನು; ಧರ್ಮಪುತ್ರಂ, ಅಧೋಕ್ಷಜನಂ–ಶ್ರೀಕೃಷ್ಣನನ್ನು.
೬. ಇರುಳೊಳಂ–ರಾತ್ರಿಯಲ್ಲಿ ಕೂಡ, ವೋಗದೆ–ಹೋಗದೆ, ಇಂತು–ಹೀಗೆ, ಇಱಿ ಯಲ್–ಯುದ್ಧ ಮಾಡಲು, ಘಟಸಂಭವಂ–ದ್ರೋಣನು, ಇರ್ದಂ–ಇರುತ್ತಾನೆ, ಎಂತು–ಹೇಗೆ, ಈ ಮಹಾಹವಮಂ–ಈ ಮಹಾಯುದ್ಧವನ್ನು, ನಿತ್ತರಿಸುವಂ–ದಾಟೋಣ, ಪಾರಾಗೋಣ, ಎಂಬುದು–ಎನ್ನುತ್ತಲು, ಇಂ ಇರುಳೊಳ್–ಇನ್ನು ರಾತ್ರಿಯಲ್ಲಿ, ಬಲಂ–ಶಕ್ತಿ, ನಿಶಾಚರ ಬಲಕುಂಟು–ರಾಕ್ಷಸರ ಸೈನ್ಯಕ್ಕೆ ಉಂಟು, ಮಾಣದೆ–ಬಿಡದೆ, ತಡಮಾಡದೆ, ಘಟೋತ್ಕ ಚನಂ–ಘಟೋತ್ಕಚನನ್ನು, ಬೆಸಸವೇೞ್ವುದು–ಯುದ್ಧ ಕಾರ್ಯಕ್ಕೆ ನಿಯಮಿಸುವುದು, ಎಂದೊಡೆ–ಎಂದು ಶ್ರೀಕೃಷ್ಣನು ಹೇಳಿದರೆ, ಆದರದೊಳೆ–ಪ್ರೀತಿಯಿಂದಲೇ, ಯಮರಾಜ ನಂದನಂ–ಧರ್ಮಪುತ್ರನು, ಆ ಪದದೊಳ್–ಆ ಸಮಯದಲ್ಲಿ, ಭೀಮನಂದನನಂ–ಭೀಮನ ಮಗ ಘಟೋತ್ಕಚನನ್ನು.
ವಚನ : ಕರೆದು–ಕೂಗಿ; ಅರಿದುಂ ಪಿರಿದುಂ ಆಗಿ–ಅಸಾಧ್ಯ ಮತ್ತು ಮಹಾಘನವೆಂದು; ಎನ್ನ ತೊೞ್ತುವೆಸನಂ–ನನ್ನ ಸೇವಾ ಕಾರ್ಯವನ್ನು; ಈ ವಿಶಸನರಂಗದೊಳ್–ಈ ಯುದ್ಧ ರಂಗದಲ್ಲಿ;
೭. ಪರೆದ–ಕೆದರಿದ, ಉರಿಗೇಸಂ–ಉರಿಯುತ್ತಿರುವ ಕೂದಲುಳ್ಳವನು; ಅವ್ವಳಿಪ– ಮುಂದಕ್ಕೆ ನುಗ್ಗುವ, ಚಾಚುವ, ನಾಲಗೆ–ನಾಲಿಗೆ, ಮಿಂಚುವ–ಹೊಳೆಯುವ, ದಾಡೆ–ಕೋರೆ ಹಲ್ಲು, ಬಿಟ್ಟ ಕಣ್–ತೆರೆದ ಕಣ್ಣುಗಳು, ತಿರಿಪಿದ–ಹೊಸೆದಿರುವ, ಮೀಸೆ–ಮೀಸೆಗಳು, ಕೊಂಕಿದ–ವಕ್ರವಾದ, ಸಟಂ–ಕೇಸರಗಳು, ಕರಿದಪ್ಪ ಕದಂಪು–ಕಪ್ಪಗಿರುವ ಕೆನ್ನೆಗಳು, ನೀಳ್ದ– ಉದ್ದವಾದ, ತಾೞ್ಮರದವೊಲ್–ತಾಳೆಯ ಮರದಂತೆ, ಅಪ್ಪ–ಆಗಿರುವ, ಒಡಲ್–ದೇಹ, ಕಹಕಹ ಧ್ವನಿ–ಕಹಕಹ ಎಂಬ ಶಬ್ದ, ಕೌಳಿಕನಾದಂ–ಸಾಮೂಹಿಕ ಶಬ್ದ, ಇವೆಲ್ಲ, ಆಸುರತರ ಮಾಗೆ–ತುಂಬ ಭಯಂಕರವಾಗಲು, ಘಟೋತ್ಕಚ ರೌದ್ರ ಸಾಧನಂ–ಘಟೋತ್ಕಚನ ಭಯಂಕರ ಸೈನ್ಯವು, ಬಂದು, ಕವಿದತ್ತು–ಮುತ್ತಿಕೊಂಡಿತು; ಇಲ್ಲಿ ಕ [ಡು] ನೆಕ್ಕಕದಂಪು. ಪೊದಳ್ದು–ಎಂಬ ಪಾಠಾಂತರಗಳು ಪರಿಗ್ರಾಹ್ಯ.
ವಚನ: ನಿಶಾಚರಬಲಂ–ರಾಕ್ಷಸ ಸೈನ್ಯ, ಅಱವಱಗಾದ–ಒಣಗಿಬತ್ತಿ ಹೋದ; ಅಳುರ್ವ– ಸುಡುವ; ದಳ್ಳಿಸಿ–ಪ್ರಜ್ವಲಿಸಿ; ಪುದಿದ–ಹೊಂದಿಸಿದ, ಕರ್ಬೊನ್ನ–ಕಬ್ಬಿಣದ; ಗೊಂಕುಱು ಗೞ್ತೆಯುಂ–ಒಂದು ಜಾತಿಯ ಹೇಸರಕತ್ತೆಯೂ; ಗೃಧ್ರ ಧ್ವಜಮುಂ–ಹದ್ದಿನ ಬಾವುಟವೂ; ಅಂಜನಪುಂಜ–ಕಾಡಿಗೆಯ ರಾಶಿ, ವಿಕಟಾಂಗಮುಂ–ವಿಕಾರವಾದ ದೇಹವೂ, ಎಳವೆಱೆ ಯಂ–ಬಾಲ ಚಂದ್ರನನ್ನು; ಅಡಸಿದಂತಪ್ಪ–ತುರುಕಿದಂತಿರುವ, ಜೋಡಿಸಿರುವ ಹಾಗೆ ಇರುವ; ಅಗುರ್ವಾಗೆ–ಭಯವಾಗಲು.
೮. ಕುದುರೆಯ–ಕುದುರೆಗಳ, ಬಿಲ್ಲ–ಬಿಲ್ಗಾರರ, ಬಲ್ಲಣಿಯ–ಬಲವಾದ ಪದಾತಿಯ, ಕೇಣಿಯಂ–ಸಾಲುಗಳನ್ನು, ಅಲ್ಲಿ, ಕೆಲರ್–ಕೆಲವರು, ನಿಶಾಟರ್–ರಾಕ್ಷಸರು, ಉಣ್ಮಿದ– ಚಿಮ್ಮಿದ, ಬಿಸುನೆತ್ತರೊಳ್–ಬಿಸಿ ರಕ್ತದಲ್ಲಿ, ಮಿದಿದು–ಕುಟ್ಟಿ, ನುಣ್ಣನೆ ನುಂಗಿದರ್–ನಯ ವಾಗಿ ನುಂಗಿದರು; ಕೆಲರ್–ಕೆಲವರು, ಕುದುಗುಳಿ–ಕುದಿಯುವ ಸ್ವಭಾವವುಳ್ಳ, ರಕ್ಕಸರ್– ರಾಕ್ಷಸರು, ಬಿಸುಗೆಗಳ್ವೆರಸು–ಅಂಬಾರಿಗಳ ಸಮೇತವಾಗಿ, ಉಗ್ರಮಹಾಗಜಂಗಳಂ–ಭಯಂಕರ ವಾದ ಹೇರಾನೆಗಳನ್ನು, ಚದುರ್ಗಿಡೆ–ಚತುರತೆ ಕೆಡುತ್ತಿರಲು, ನುಂಗಿ, ಬಿಸುನೆತ್ತರ–ಬಿಸಿ ರಕ್ತದ, ಕಾೞ್ಪುರಂಗಳಂ–ಕಾಡಿನ ಪ್ರವಾಹಗಳನ್ನು, ಬಿಕ್ಕಿ–ಉಸಿರೆಳೆದುಕೊಂಡು, ಕುಡಿದರ್– ಕುಡಿದರು. ಕೇಣಿ ಕೇೞಿ–ಪಂಕ್ತಿ; “ಮಿದಿ ಮುಸಲಕ್ರಿಯಾಯಾಂ”, ಕುದುಗುಳಿ ಕುದಿ+ ಕುಳಿ; “ಬಿಕ್ಕು–ಉಚ್ಛ್ವಾಸೇ”
ವಚನ : ತೆರಳ್ವಿ–ತೆರಳೆಮಾಡಿ, ಉಂಡೆಮಾಡಿ; ತೇರಯಿಸಿ–ತವಕಿಸಿ (?), ಬೆಱಗಾದ– ಅಚ್ಚರಿಪಟ್ಟ; ನೆಱಪಲೆಂದು–ತೀರಿಸಬೇಕೆಂದು, ಪೂರ್ಣಮಾಡಬೇಕೆಂದು; ಬೆಸನಂ ಬೇಡಿ ದಾಗಳ್–ಈ ಕೆಲಸವನ್ನು ನಮಗೆ ಒಪ್ಪಿಸಿ ಎಂದು ಬಯಸಿದಾಗ.
೯. ಅಗ್ನಿಗೆ–ಉರಿಗೆ, ಅಗ್ನಿ–ಉರಿಯು, ಪ್ರತಿವಿಷಂ–ಪ್ರತಿಯಾದ ವಿಷ, ಎಂದರೆ ಉರಿ ಉರಿಯನ್ನು ಆರಿಸುತ್ತದೆ; ವಿಷಕಂ–ವಿಷಕ್ಕೂ, ವಿಷಂ–ವಿಷವು, ಪ್ರತಿವಿಷಂ–ಪ್ರತಿಯಾದ ವಿಷ, ಎಂದರೆ ವಿಷ ವಿಷವನ್ನು ಹೊಡೆಯುತ್ತದೆ; ಎಂಬವೋಲ್–ಎನ್ನುವ ಹಾಗೆ, ಆ ನಿಶಾ ಚರಂಗೆ–ಆ ರಾಕ್ಷಸ ಘಟೋತ್ಕಚನಿಗೆ; ಈ ನಿಶಾಟರ್–ಈ ರಾಕ್ಷಸರಾದ ಜಟಾಸುರನ ಮಕ್ಕಳು, ಅತಿಬಲರ್–ಅತಿ ಬಲವುಳ್ಳವರು; ಇವರ್–ಇವರು, ಅಕ್ಕೆ–ಆಗಲಿ, ಎಂದರೆ ಪ್ರತಿಭಟ ರಾಗಲಿ, ಎನುತಂ–ಎನ್ನುತ್ತ, ಬೆಸವೇೞೆ–ಅಪ್ಪಣೆ ಮಾಡಲು, ಕಾರ್ಯಕ್ಕೆ ನಿಯಮಿಸಲು, ತಾಗಿದಾದಿತಿಸುತರಂ–ಎದುರಿಸಿದ ಆ ರಾಕ್ಷಸರನ್ನು, ಘಟೋತ್ಕಚಂ–ಘಟೋತ್ಕಚನು, ಅಸುಂಗೊಳೆ–ಪ್ರಾಣವನ್ನು ತೆಗೆಯುವಂತೆ, ಕಾದಿ–ಯುದ್ಧ ಮಾಡಿ, ನಿಶಾಟ ಕೋಟಿ ಸಂತತಿಗಳಂ-ಕೋಟ್ಯಂತರ ರಾಕ್ಷಸ ಸಮೂಹಗಳನ್ನು, ಇಕ್ಕಿ-ಸಾಯಿಸಿ, ಪಾಂಡವ ಬಲಕ್ಕೆ -ಪಾಂಡವರ ಸೈನ್ಯಕ್ಕೆ, ಅನುರಾಗಮಂ-ಸಂತೋಷವನ್ನು, ಉಂಟುಮಾಡಿದಂ-ಉಂಟಾಗಿಸಿದನು.
ವಚನ : ಜೀರಿಗೆಯೊಕ್ಕಲ್ ಮಾಡಿ–ಜೀರಿಗೆ ಧಾನ್ಯವನ್ನು ಒಕ್ಕಣೆ ಮಾಡುವಂತೆ ಮಾಡಿ; ಅಂಗರಾಜಂ–ಕರ್ಣ.
೧೦. ಸಮದೇಭೇಂದ್ರ ಸಮೂಹದಿಂದಂ–ಮದಿಸಿದ ಆನೆಗಳ ಸಮೂಹದಿಂದ, (ಆನೆಯ ಸಮೂಹಗಳನ್ನು), ಇಡುತುಂ–ಹೊಡೆಯುತ್ತ, ಕಂಠೀರವ ಧ್ವಾನದಿಂದೆ–ಸಿಂಹನಾದದಿಂದ, ಅಗುರ್ವಪ್ಪಿನಂ–ಭಯವಾಗುತ್ತಿರಲು, ಆರುತುಂ–ಗರ್ಜಿಸುತ್ತ, ಪೆಣಗಳಂ–ಹೆಣಗಳನ್ನು, ನುಂಗುತುಂ–ನುಂಗುತ್ತ, ಆಕಾಶದ ಅಂತಮಂ–ಆಕಾಶದ ಅಂತ್ಯವನ್ನು, ಎಯ್ದುತ್ತುಂ– ಸೇರುತ್ತ, ಇದಿರ್ಚಿ–ಎದುರಿಸಿ, ಕಾದುವೆಡೆಯೊಳ್–ಯುದ್ಧ ಮಾಡುವ ಸಮಯದಲ್ಲಿ, ದೇವರ್ಕಳ್–ದೇವತೆಗಳು, ಕಾಣುತ್ತೆ–ನೋಡುತ್ತ, ಇನ್ನುಂ–ಇನ್ನು ಕೂಡ, ರಾವಣಂ– ರಾವಣಾಸುರನು, ಒಳಂ–ಇರುತ್ತಾನೆ, ಎಂಬಿನಂ–ಎನ್ನುತ್ತಿರಲು, ಹೈಡಿಂಬನ–ಘಟೋತ್ಕಚನ, ಆಡಂಬರಂ–ಆಟೋಪವು, ನೆಗೞ್ದುದು–ಉಂಟಾಯಿತು.
೧೧. ಸರಿದಧಿಪತಿ–ನದಿಗಳಿಗೆ ರಾಜ ಎಂದರೆ ಸಮುದ್ರವು, ಮೊೞಕಾಲ್ವರಂ–ಮೊಣ ಕಾಲಿನವರೆಗೆ; ಮೇರು–ಮೇರುಪರ್ವತ, ಉರಂಬರಂ–ಎದೆಯವರೆಗೆ; ಅಜಾಂಡಂ– ಬ್ರಹ್ಮಾಂಡವು, ಮುಯ್ವುವರೆಗಂ–ಹೆಗಲಿನವರೆಗೆ, ಬರೆ–ಬರಲು, ತಲೆಯ ನೆಲೆಗೆ–ತಲೆಯ ಎಡೆಗೆ, ಲೋಕಾಂತರಂ–ಅನ್ಯಲೋಕವು, ಎಡೆಯಿಲ್ಲ–ಜಾಗವಿಲ್ಲ, ಎನಿಸೆ–ಎನಿಸಲು, ದನುತನಯಂ–ರಾಕ್ಷಸ ಪುತ್ರನು, ಘಟೋತ್ಕಚನು, ಪೆರ್ಚಿದಂ–ಬೆಳೆದನು; ಘಟೋತ್ಕಚನ ತಲೆಗೆ ಸ್ಥಳವೇ ಇಲ್ಲವೆಂಬಂತೆ ಅವನ ಬೃಹದಾಕಾರ ಬೆಳೆಯಿತು.
೧೨. ಬೆಳ್ಳಾಳ್ಗೆ–ಅಂಜುವ ಯೋಧನಿಗೆ, ಪೊಳೆಪುದೋಱುವುದು–ಹೊಳಪನ್ನು ತೋರಿಸು ವುದು ಎಂದರೆ ಬರಿಹೊಳಪನ್ನು (ಆಯುಧಗಳ) ತೋರಿಸಿದರೆ ಸಾಕು ಹೇಡಿ ಅಂಜಿ ಓಡುವನು; ಒಳ್ಳಾಳ್ಗೆ–ಸುಭಟನಿಗೆ, ಪೊಡರ್ಪುದೋರ್ಪುದು–ಪರಾಕ್ರಮವನ್ನು ತೋರಿಸುವುದು, ಅಣ್ಮು ಅಣ್ಮು–ಪೌರುಷವನ್ನು ತೋರಿಸು ತೋರಿಸು ಎಂದು, ಒಳ್ಳಲಗಿನ–ಒಳ್ಳೆಯ ಅಲಗನ್ನುಳ್ಳ, ಶರತತಿಯಿಂ-ಬಾಣಗಳ ಸಮೂಹದಿಂದ, ಕೊಳ್ಳ ಕೊಳ-ಕೋ ಕೋ ಎಂದು, ಅಂಗರಾಜಂ-ಕರ್ಣ, ಅಸುರನಂ-ರಾಕ್ಷಸನನ್ನು, ಎಚ್ಚಂ-ಪ್ರಯೋಗಿಸಿದನು, ಬಾಣದಿಂದ ಹೊಡೆದನು.
೧೩. ಎಚ್ಚೊಡೆ–ಬಾಣಗಳಿಂದ ಹೊಡೆದರೆ, ಅಸುರಂ–ರಾಕ್ಷಸನು, ಇಟ್ಟ–ಮೇಲೆಸೆದ, ಬೆಟ್ಟಂ–ಬೆಟ್ಟವನ್ನು, ಒಂದು ವಜ್ರಶರದಿಂ–ಒಂದು ವಜ್ರಬಾಣದಿಂದ, ಆರ್ದು–ಗರ್ಜಿಸಿ, ಎಚ್ಚು–ಹೊಡೆದು; ದಿತಿಜನೆಚ್ಚ–ರಾಕ್ಷಸನು ಪ್ರಯೋಗಿಸಿದ, ಸಿಡಿಲಶರಮಂ–ಸಿಡಿಲ ಬಾಣ ವನ್ನು, ಉದಕ ಬಾಣದಿಂದೆ–ನೀರ್ಬಾಣದಿಂದ, ಎಚ್ಚು–ಹೊಡೆದು; ದನುತನೂನೆಚ್ಚ– ರಾಕ್ಷಸಕುಮಾರನು ಪ್ರಯೋಗಿಸಿದ, ವಾರ್ಧಿಗೆ–ಸಮುದ್ರಾಸ್ತ್ರಕ್ಕೆ, ಅನಲಬಾಣದಿಂದೆ– ಆಗ್ನೇಯಾಸ್ತ್ರದಿಂದ, ಎಚ್ಚು–ಹೊಡೆದು, ನಚ್ಚುಗಿಡಿಸೆ–(ಅವನ ಸ್ವಶಕ್ತಿಯ) ನಂಬಿಕೆಯನ್ನು ಹಾಳುಮಾಡಲು, ಘಟೋತ್ಕಚಂ–ಘಟೋತ್ಕಚನು, ಶೂಲಮಂ–ಶೂಲಾಯುಧವನ್ನು, ಕೊಂಡು–ತೆಗೆದುಕೊಂಡು; ಇದು ಮಾತ್ರಾವೃತ್ತ; ಪ್ರತಿ ಪಾದದಲ್ಲೂ ಮೂರು ಮಾತ್ರೆಯ ಗಣಗಳು ಏಳು ಮತ್ತು ಒಂದು ಗುರುವೂ ಬರುತ್ತವೆ; ಇದು ಅಂಶಗಣಘಟಿತ ವೃತ್ತವೂ ಆಗಬಹುದು; ಆಗ -,ಎಂಬ ಚತುರ್ಮಾತ್ರಾಗಣಗಳು ಬರುವುದಿಲ್ಲ.
೧೪. ನೆಲಂ ಅದಿರ್ವಿನಂ–ನೆಲವು ಅದುರುತ್ತಿರಲು, ಇದಿರಂಬರೆ–ಎದುರಿಗೆ ಬರಲು, ಕುಲಿಶಾಯುಧಂ–ಇಂದ್ರನು, ಇತ್ತ–ಕೊಟ್ಟ, ಶಕ್ತಿಯಿಂದೆ–ಶಕ್ತಿಯೆಂಬ ಆಯುಧದಿಂದ, ಆತನ–ಘಟೋತ್ಕಚನ, ಉರಃಸ್ಥಲಮಂ–ಎದೆಯ ಪ್ರದೇಶವನ್ನು, ಇಡೆ–(ಕರ್ಣನು) ಹೊಡೆಯಲು, ವಜ್ರಹತಿಯಿಂ–ವಜ್ರಾಯುಧದ ಏಟಿನಿಂದ, ಕುಲಗಿರಿ–ಕುಲಪರ್ವತವು, ಕೆಡೆವಂತೆ–ಬೀಳುವ ಹಾಗೆ, ಆ ದನುತನಯಂ–ಆ ಘಟೋತ್ಕಚನು, ಕೆಡೆದಂ–ಬಿದ್ದನು.
೧೫. ಇವನ–ಘಟೋತ್ಕಚನ, ಕಬಂಧ ಘಾತದಿಂ–ಮುಂಡದ ಪೆಟ್ಟಿನಿಂದ, ಒಂದ ಕ್ಷೋಹಿಣಿ–ಒಂದು ಅಕ್ಷೋಹಿಣಿ ಸೈನ್ಯವು, ಇಂದು, ನುರ್ಗಿದುದು–ನುಚ್ಚು ನುರಿಯಾಯಿತು; ಸತ್ತು–ತಾನು ಸತ್ತು, ಇನಿತಂ–ಇಷ್ಟನ್ನು, ಕೊಂದಂ–ಕೊಂದನು; ಇವನಂ–ಇವನನ್ನು ಎಂದರೆ ಇಂಥವನನ್ನು, ಅಳ್ಕುಱೆ–ಭಯವುಂಟಾಗುವ ಹಾಗೆ, ಕೊಂದ, ಅಳವು–ಪರಾಕ್ರಮವು, ಇನತನಯನಲ್ಲದಂಗೆ–ಕರ್ಣನಲ್ಲದವನಿಗೆ, ಒಪ್ಪುಗುಮೇ–ಒಪ್ಪುತ್ತದೆಯೇ? ಇಲ್ಲ.
ವಚನ : ಎರಡುಂ ಪಡೆಗಳುಂ–ಎರಡು ಸೈನ್ಯಗಳೂ; ದೇವರ ಪಡೆಗಳುಂ–ದೇವತೆಗಳ ಸಮೂಹಗಳೂ; ಅಯ್ಗಾವುದು ನೆಲಂ–ಐದು ಗಾವುದದ ನೆಲವು; ಒಡಲ ಅಳವಿಯಾಗೆ– ದೇಹದ ಪ್ರಮಾಣವಾಗಲು (ಅಳತೆಯಾಗಲು);
೧೬. ಘಟೋತ್ಕಚನ ವಧೆಯಲ್ಲಿ ರಾತ್ರಿ ಯುದ್ಧ ಮುಗಿಯುತ್ತದೆ: ದಿವಿಜಾಧೀಶನ– ಇಂದ್ರನು, ಕೊಟ್ಟ, ಶಕತಿಯನದಂ–ಆ ಶಕ್ತ್ಯಾಯುಧವನ್ನು, ಕರ್ಣಂ–ಕರ್ಣನು, ನರಂಗೆಂದು– ಅರ್ಜುನನಿಗೆ ಎಂದು, ಬಯ್ತು–ಮುಚ್ಚಿಟ್ಟು, [ಅ] ವನಿಂದೆ–ಆ ಕರ್ಣನಿಂದ, ಇಂದು–ಈ ದಿನ, ಅೞಿವೆಯ್ದೆವಂದೊಡೆ–ಸಾವು ಸಮೀಪಿಸಿದ್ದರಿಂದ, ಅದಱಿಂದೆ–ಆ ಶಕ್ತ್ಯಾಯುಧ ದಿಂದ, ಆತನಂ–ಘಟೋತ್ಕಚನನ್ನು, ಕೊಂದಂ–ಕೊಂದನು; ಇಂ ಇವನಂ–ಇನ್ನು ಈ ಕರ್ಣನನ್ನು, ಕೊಲ್ವದು–ಕೊಲ್ಲುವುದು, ಮೊಗ್ಗು–ಸಾಧ್ಯ; ಅದರ್ಕೆ–ಅದಕ್ಕಾಗಿ, ಅೞಲವೇಡ– ದುಃಖ ಪಡಬೇಡ, ಎಂಬನ್ನಂ–ಎನ್ನುತ್ತಿರಲು, ಅತ್ತ–ಅತ್ತ ಕಡೆ, ರವಿ–ಸೂರ್ಯನು, ನಿಜಾತ್ಮ ಜನ ಗೆಲ್ದ–ತನ್ನ ಮಗನಾದ ಕರ್ಣನು ಗೆದ್ದ, ಉಗ್ರಾಜಿಯಂ–ಭಯಂಕರ ಯುದ್ಧವನ್ನು, ನೋೞ್ಪವೋಲ್–ನೋಡುವ ಹಾಗೆ, ಪೂರ್ವಾಚಲಮಂ–ಮೂಡಣ ಪರ್ವತವನ್ನು, ಏಱಿದಂ–ಹತ್ತಿದನು; ಎಂದರೆ ಸೂರ್ಯೋದಯವಾಯಿತು.
ವಚನ : ಶೋಣಾಶ್ವಂಗಳೊಳ್–ಕೆಂಪಾದ ಕುದುರೆಗಳಲ್ಲಿ; ಕಳೇಬರ–ದೇಹ, ಹೆಣ; ಗಿರಿದುರ್ಗಮಲ್ಲದ–ಬೆಟ್ಟದ ದುರ್ಗವಲ್ಲದ; ಶೃಂಗಾಟಕವ್ಯೂಹಮಂ–ನಾಲ್ಕು ದಾರಿ ಕೂಡುವ ಸ್ಥಳದಂತಿರುವ ಸೇನಾರಚನೆಯನ್ನು; ಪತಾಕಿನಿಯುಮಂ–ಸೈನ್ಯವನ್ನೂ; ಕೆಯ್ವೀಸಿದಾಗಳ್– ಕೈ ಬೀಸಿದಾಗ.
೧೭. ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲ್–ಭೂಮಿಯೂ ಬ್ರಹ್ಮಾಂಡವೂ ಸಂಘಟ್ಟಿಸುವ ಹಾಗೆ, ಉಭಯ ಸೈನ್ಯಾಬ್ಧಿಗಳ್–ಎರಡು ಸೈನ್ಯ ಸಾಗರಗಳೂ, ಬಿಲ್ ಬಿಲ್ಲೊಳ್–ಬಿಲ್ಗಾರರು ಬಿಲ್ಗಾರರಲ್ಲಿ; ಉದಗ್ರಾಶ್ವಂಗಳ್–ಶ್ರೇಷ್ಠರಾದ ಅಶ್ವಾರೋಹಕರು, ಅಶ್ವಂಗಳೊಳ್–ಕುದುರೆ ಸವಾರಿಯಲ್ಲಿ; ಅಣಿ–ಪದಾತಿ, ಅಣಿಯೊಳ್–ಪದಾತಿಗಳಲ್ಲಿ, ಸ್ಯಂದನಂ–ರಥಿಕರು; ಸ್ಯಂದನೌಘಂಗಳೊಳ್–ರಥಿಕರ ಸಮೂಹಗಳಲ್ಲಿ, ಉಗ್ರೇಭಂ– ಭಯಂಕರವಾದ ಗಜಾರೋಹಕರು, ಮದೇಭಂಗಳೊಳ್–ಸೊಕ್ಕಾನೆಯ ಭಟರಲ್ಲಿ, ಇಱಿಯೆ–ಯುದ್ಧ ಮಾಡಲು, ತೆರಳ್ತರ್ಪ–ಹರಿದು ಬರುವ, ಕೆನ್ನೆತ್ತರಿಂದೆ–ಕೆಂಪಾದ ರಕ್ತ ದಿಂದ, ಖಂಡಂಗಳ–ಮಾಂಸಖಂಡಗಳ, ಒಂದಿಂಡೆಯೊಳೆ–ಒಂದು ರಾಶಿಯಲ್ಲೇ, ಜವಂ– ಯಮನು, ಅಡುರ್ತು–ಮೇಲೆ ಎರಗಿ, ಓಕುಳಿಯಂ–ಓಕುಳಿ ಎರಚುವುದನ್ನು, ಆಗಳ್– ಆಗ, ಆಡಿದಂತೆ–ಆಡಿದ ಹಾಗೆ, ಆದುದು–ಆಯ್ತು, ಇಲ್ಲಿ ಬಿಲ್, ಅಶ್ವ, ಅಣಿ ಮುಂತಾದು ವುಗಳ ವಾಚ್ಯಾರ್ಥಕ್ಕಿಂತ ಲಕ್ಷ್ಯಾರ್ಥಗಳು ಪರಿಗ್ರಾಹ್ಯ; ಈ ಅಲಂಕಾರವನ್ನು Synecdoce ಎಂದು ಕರೆಯುತ್ತಾರೆ.
ವಚನ : ಬೆಳ್ಳಂಗೆಡೆದು–ಪ್ರವಾಹವಾಗಿ; ಬಸವೞಿದು–ಆಯಾಸಪಟ್ಟು; ಮಾನಸಿಕೆ ಯಂ–ಮನುಷ್ಯತ್ವವನ್ನು; ತುಱುವಂ ಮಗುೞ್ಚಿದುದುಮಂ–ದನಗಳನ್ನು ಹಿಂದಿರುಗಿಸಿ ದುದನ್ನೂ.
೧೮. ಮಗಳಂ–ಮಗಳಾದ ಉತ್ತರೆಯನ್ನು, ಪಾರ್ಥಾತ್ಮಜಂಗಂ–ಅಭಿಮನ್ಯುವಿಗೂ, ತಲೆ–ತನ್ನ ತಲೆಯೇ, ಬೞಿವೞಿಯೆಂದು–ಬಳುವಳಿಯೆಂಬುದಾಗಿ, ಇತ್ತುದಂ– ಕೊಟ್ಟು ದನ್ನು, ತನ್ನ ಮಕ್ಕಳ್–ಉತ್ತರ, ಶ್ವೇತ ಮುಂತಾದವರು, ನೆಗೞ್ದ–ಉಂಟಾದ, ಆ ಸಂಗ್ರಾಮ ದೊಳ್–ಆ ಯುದ್ಧದಲ್ಲಿ, ಸತ್ತುದುಮನೆ–ಸತ್ತುದನ್ನೇ, ಮನದೊಳ್–ಮನಸ್ಸಿನಲ್ಲಿ, ತಾಳ್ದಿ– ಧರಿಸಿ, ತಾಪಾಗಳ್–ಎದುರಾಗಿ ತಾಗುವಾಗ, ಆ ಜೆಟ್ಟಿಗನಂ–ಆ ಶೂರನನ್ನು, ಕುಂಭೋದ್ಭವಂ–ದ್ರೋಣನು, ಬಂದು, ಅದಿರದೆ–ಹೆದರದೆ, ಇದಿರಂ–ಎದುರನ್ನು, ಆಂತು– ಪ್ರತಿಭಟಿಸಿ, ಒಂದೆ ಕೆಲ್ಲಂಬಿನಿಂ–ಒಂದೇ ಒಂದು ಕೆಲ್ಲಂಬಿನಿಂದ (?), ಮೆಲ್ಲಗೆ–ಸದ್ದಿಲ್ಲದೆ, ಪಾರ್ದು–ನೋಡಿ, ಆರ್ದು–ಗರ್ಜಿಸಿ, ಏಸಿಂ–ಹೊಡೆತದಿಂದ, ತಲೆಪಱಿದು–ತಲೆ ಕತ್ತರಿಸಿ, ಬೀೞ್ವನ್ನಂ–ಬೀಳುತ್ತಿರಲು, ಆಗಳ್–ಆಗ, ಎಚ್ಚಂ–ಬಾಣ ಪ್ರಯೋಗ ಮಾಡಿದನು.
ವಚನ : ಬೆಳ್ಳಂಗೆಡೆದು–ಪ್ರವಾಹವಾಗಿ; ಬಸವೞಿದು–ಆಯಾಸಪಟ್ಟು; ಮಾನಸಿಕೆ ಯಂ–ಮನುಷ್ಯತ್ವವನ್ನು;
೧೯. ಎನಗಂ–ನನಗೂ (ದ್ರುಪದನಿಗೂ), ಭಾರದ್ವಾಜಂಗಂ–ದ್ರೋಣನಿಗೂ, ವಿದ್ಯೆ ಯೊಳ್–ವಿದ್ಯೆ ಕಲಿಸುವಲ್ಲಿ, ಗುರುಗಳ್–ಗುರುವು (ಗಳು), ಒರ್ವರೆ–ಒಬ್ಬರೇ; ಎನ್ನಂ– ನನ್ನನ್ನು, ಬಿಲ್ಬಲ್ಮೆಯೊಳ್–ಬಿಲ್ಲಿನ ಜ್ಞಾನದಲ್ಲಿ ಎಂದರೆ ಧನುರ್ವಿದ್ಯೆಯಲ್ಲಿ, ಮಿಗಲ್–ಮೀರಿಸಲು, ಪಿರಿದು–ಹಿರಿದಾದ, ಪುರುಡು–ಸ್ಪರ್ಧೆಯು, ಉಂಟು–ಇದೆ; ಎಯ್ದೆ–ಚೆನ್ನಾಗಿ, ಬೇರ್ವರಿದ–ಬೇರುಬಿಟ್ಟ, ಪಗೆಯುಂ–ದ್ವೇಷವೂ, ಬನ್ನಂಬಟ್ಟ–ಸೋಲನ್ನು ಹೊಂದಿದ, ತಿರಸ್ಕಾರಕ್ಕೆ ಗುರಿಯಾದ, ಮುನ್ನಿನ–ಮೊದಲಿನ, ಎನ್ನ–ನನ್ನ, ಬನ್ನಮುಂ–ಸೋಲೂ, ಪಿರಿದು– ದೊಡ್ಡದು; ಅದೆ ನೆವಂಗೊಂಡು–ಅದೇ ನೆಪವನ್ನಾಗಿಟ್ಟುಕೊಂಡು, ಆಂ–ನಾನು, ಇಂದು– ಈಗ, ಇಲ್ಲಿ–ಈ ರಣರಂಗದಲ್ಲಿ, ನೀಗದೆ–ತೀರಿಸದೆ, ಕಳೆದುಕೊಳ್ಳದೆ, ಮಾಣ್ಬೆನೇ–ತಡೆಯು ತ್ತೇನೆಯೇ?
ವಚನ : ಆಕಾಶದ ಕವಿಯುಂ–ಆಕಾಶದ ಮುಚ್ಚಳವೂ; ನೆಲದ ಕಲ್ಲೆಯುಂ–ನೆಲದ ಬೇಲಿಯೂ ಎಂದರೆ ಸಮುದ್ರವೂ; ಮುನ್ನಮೆ–ಮೊದಲೇ, ಮೇರೆದಪ್ಪುವುದುಮಂ–ಮೇರೆ ಯನ್ನು ಮೀರುವುದನ್ನೂ; ತನ್ನೊಳ್ ಅಳವಡಿಸಿಕೊಂಡು–ತನ್ನಲ್ಲಿ ಹೊಂದಿಸಿಕೊಂಡು; ಕವಿ– ಮುಚ್ಚಳ; ಕವಿ ಪೊಱಗಿರೆ ಕೀೞೊಳಗಿರೆ ಅವಿರಳಮಾ ತುರಗಮುಖಮೋ ನೃಪಮಂದಿರಮೋ (ಶಮದ. ೧೨೯–೮), ಕಲ್ಲೆ = (ತೆ) ಕಲ್ಲ–ಬೇಲಿ, ಎಲ್ಲೆ.
೨೦. ದೆಸೆಯೆಲ್ಲಂ–ಎಲ್ಲ ದಿಕ್ಕುಗಳೂ, ತೀವ್ರ ಬಾಣಾಳಿಯೊಳೆ–ತೀಕ್ಷ್ಣವಾದ ಬಾಣಗಳ ಸಾಲುಗಳಲ್ಲಿಯೇ, ಮೆಡಱಿದಂತೆ–ಹೆಣದ ಹಾಗೆ, ಅಂಬರಂ–ಆಕಾಶ, ಬಾಣದಿಂದಂ– ಬಾಣಗಳಿಂದ, ಮುಸುಕಿಟ್ಟಂತೆ–ಮುಸುಕು ಹಾಕಿದಂತೆ, ಆಗೆ–ಆಗಲು, ಬೇಗಂ–ವೇಗವಾಗಿ, ತುಡುವ–ಹೂಡುವ, ಬಿಡುವ–ಎಸೆಯುವ, ಸೂೞ್ಗೆಯ್ಯ–ಸರದಿಯ ಕೈಗಳ, ಬೇಗಂಗಳಂ– ವೇಗಗಳನ್ನು, ನಿಟ್ಟಿಸಲ್–ನೋಡಲು, ಆರ್ಗಂ–ಯಾರಿಗೂ, ಬಾರದಂತಾಗೆ–ಬರದೆ ಇರದಂತಾಗಲು, ತದ್ರಾಜಚಕ್ರಂ–ಆ ರಾಜರ ಸಮೂಹ, ಅಸದಳಂ–ಅಧಿಕವಾಗಿ, ಇಸೆ–ಬಾಣ ಪ್ರಯೋಗ ಮಾಡಲು, ಉದ್ದಾಮ….ಕಾರಂ: ಉದ್ದಾಮ–ಅತಿಶಯವಾದ, ಮೌರ್ವೀರವ– ಬಿಲ್ಲಹೆದೆಯ ಟಂಕಾರದಿಂದ, ಮುಖರ–ಶಬ್ದಾಯಮಾನವಾಗಿರುವ, ಮಹಾ ಚಾಪ–ಮಹಾ ಧನಸ್ಸುಗಳ, ಚಕ್ರ–ಸಮೂಹಗಳ, ಅಂಧಕಾರಂ–ಕತ್ತಲೆಯು, ಪೊದಳ್ದು–ವ್ಯಾಪಿಸಿ, ಅರ್ಬಿಸಿದತ್ತು–ಹೆದರಿಸಿತು.
ವಚನ : ಅನ್ನೆಗಂ–ಅಷ್ಟರಲ್ಲಿ; ಕಪ್ಪಂಗವಿಯಾಗಿ–ಆನೆಯನ್ನು ಹಿಡಿಯುವ ಗುಣಿಯ ಮುಚ್ಚಳದಂತಾಗಿ, ಕವಿವ–ಮುತ್ತಿಕೊಳ್ಳುವ; ಜಳಧರ ವರ್ಷಂಗಳಿಂ–ಮೇಘಗಳ ಮಳೆ ಯಿಂದ; ನಂದಿಸೆಯುಂ–ಆರಿಸುತ್ತಲು; ಮುಟ್ಟೆವರೆ–ಮುಟ್ಟುವಂತೆ ಹತ್ತಿರ ಬರಲು; ನಿಱಿಸಿ– ಸ್ಥಾಪಿಸಿ; ಪೇೞ್ದು–ನಿಯಮಿಸಿ; ಕಪ್ಪಂಗವಿ ಕಪ್ಪು=ಕಪ್ಪು+ಕವಿ; ಕಪ್ಪು ಎಂದರೆ ಗುಣಿ; ನಡುವೆ ಬಿಂದುವಿನ ಆಗಮ, ಕಳ್ಳಂಗಡಲೆ ಎಂಬಲ್ಲಿರುವಂತೆ.
೨೧. ಉಪಚಯಮಪ್ಪ–ವೃದ್ಧಿ ಹೊಂದುತ್ತಿರುವ, ಬಿಲ್ಲೊವಜನ–ದ್ರೋಣನ, ಅಂಬಿನ– ಬಾಣಗಳ, ಬೆಳ್ಸರಿ–ಬಿಳಿ ಸೋನೆ ಮಳೆ; ದ್ರುಪದಬಲಾಂಬು ರಾಶಿಯಂ–ದ್ರುಪದ ಸೈನ್ಯ ಸಾಗರ ವನ್ನು, ಅಗುರ್ವಿಪ–ಹೆದರಿಸುವ, ಪರ್ವಿಪ–ಚೆದುರಿಸುವ, ಬಾಡಬಾಗ್ನಿಯಾಯ್ತು–ಬಾಡಬಾಗ್ನಿ ಯಾಯಿತು, ಆದಂ–ವಿಶೇಷವಾಗಿ, ರಥಿದ್ವಿಪಘಟೆ–ರಥಗಳೂ, ಆನೆಗಳ ಸಮೂಹವೂ, ಎಂಬಿವು–ಎಂಬ ಇವು, ಅಂಬಿನೊಳೆ–ಬಾಣಗಳಲ್ಲಿಯೇ, ಪೂೞ್ದು–ಹೂತು ಹೋಗಿ, ಪಡಲ್ವಡೆ– ಚಲ್ಲಾಪಿಲ್ಲಿಯಾಗುತ್ತಿರಲು, ಕುಂಭಸಂಭವಂ–ದ್ರೋಣನು, ಆ ತ್ರಿಪುರಮಂ– ಆ ಮೂರು ಪುರಗಳನ್ನು, ಎಚ್ಚ–ಬಾಣದಿಂದ ಹೊಡೆದ, ರುದ್ರನ–ಈಶ್ವರನ, ನೆಗೞ್ತೆಯು ಮಂ–ಕಾರ್ಯವನ್ನೂ, ಗೆಲೆ–ಗೆಲ್ಲಲು, ತಿಣ್ಣಂ–ಬಲವಾಗಿ, ಎಚ್ಚಂ–ಹೊಡೆದನು.
ವಚನ : ಜವನಂತೆ–ಯಮನ ಹಾಗೆ, ಒಕ್ಕಲಿಕ್ಕಿ–ಒಕ್ಕಣೆ ಮಾಡಿ; ಏನುಂ ಮಾಣದೆ–ಏನೂ ತಡಮಾಡದೆ; ಬಟ್ಟಿನಂಬಿನ–ದುಂಡಾದ ಅಲಗುಳ್ಳ ಬಾಣಗಳ, ಬೆಳ್ಸರಿಯುಮಂ–ಸೋನೆ ಮಳೆಯನ್ನೂ; ಕೆಲ್ಲಂಬಿನ–ಕೆಲ್ಲಂಬುಗಳೆಂಬ ಬಾಣಗಳ, ತಂದಲುಮಂ–ತುಂತುರು ಮಳೆಯನ್ನೂ, ಪಾರೆಯಂಬಿನ–ಹಾರೆಯಾಕಾರದ ಬಾಣಗಳ, ಸೋನೆಯಮಂ–ಎಡೆಬಿಡದೆ ಸುರಿಯುವ ಮಳೆಯನ್ನೂ; ಕಳಶಯೋನಿ–ದ್ರೋಣನು.
೨೨. ಪದಿನೆಂಟಂಬಿನೊಳ್ ಎಚ್ಚೊಡೆ–ಹದಿನೆಂಟು ಬಾಣಗಳಿಂದ ಹೊಡೆದರೆ, ಪದಿನೆಂಟಸ್ತ್ರಂಗಳಿಂ–ಹದಿನೆಂಟು ಬಾಣಗಳಿಂದ, ಎಚ್ಚು–ಹೊಡೆದು, ಸೀಳ್ದು–ಸೀಳಿ, ಕೋಪ ದಿಂ–ಕೋಪದಿಂದ, ಎಂಬತ್ತುಸರಂಗಳಿಂ–ಎಂಬತ್ತು ಬಾಣಗಳಿಂದ, ಗುರು–ದ್ರೋಮ, ಭರಂಗೆಯ್ದು–ವೇಗವನ್ನು ತೋರಿಸಿ, ಎಚ್ಚೊಡೆ–ಪ್ರಯೋಗಿಸಿದರೆ, ಎಂಬತ್ತು ಬಾಣದಿಂ– ಎಂಬತ್ತು ಬಾಣಗಳಿಂದ, ಕಡಿದು–ಕತ್ತರಿಸಿ, ಉಗ್ರ….ತಂಗಳಂ; ಉಗ್ರ–ಭಯಂಕರವಾದ, ಸೂತ–ಸಾರಥಿಗಳ, ಹಯ–ಕುದುರೆಗಳ, ಸಂಘಾತಂಗಳಂ–ಸಮೂಹಗಳನ್ನು, ತಿಣ್ಣಂ–ತೀವ್ರ ವಾಗಿ, ಎಚ್ಚು–ಹೊಡೆದು, ಇದಿರೊಳ್–ಎದುರಿನಲ್ಲಿ, ನಿಲ್ಲದಿರ್–ನಿಲ್ಲಬೇಡ, ಸತ್ತೆ– ನೀನು ಸತ್ತು ಹೋದೆ, ಎನುತುಂ–ಎಂದು ಹೇಳುತ್ತ, ಪಾಂಚಾಳರಾಜಾಧಿಪಂ–ದ್ರುಪದನು,
ವಚನ : ಮೆಯ್ವೆರ್ಚಿ–ಉಕ್ಕಿ, ಕೊಬ್ಬಿ; ಪೆರ್ಚಿದ–ಅಧಿಕವಾದ, ಉಮ್ಮಚ್ಚದೊಳ್– ಕೋಪದಲ್ಲಿ; ಪೂಣ್ಗೂರ್ತು–?
ಪೂಣ್ಗೂರ್ತು–ಇದರ ರೂಪವೂ ಅರ್ಥವೂ ಅನಿರ್ದಿಷ್ಟ, ಪುಣ್ಗೂರ್ತು ಎಂದು ರೂಪವುಂಟು (ಪಂಪಭಾ. ೧೨–೭೨ವ); ಬಹುಶಃ ಪುಣ್=ಹುಣ್ಣು, ಎಂಬ ಶಬ್ದ ಇರ ಬಹುದು, ಪುಣ್ಣಂ+ಕೂರ್ತು ಕೂರ್–ತೀಕ್ಷ್ಣವಾಗು?
೨೩. ಮುನ್ನೆ–ಮೊದಲೇ, ಎನ್ನೊಳೆ–ನನ್ನಲ್ಲಿಯೇ, ಮಚ್ಚರಿಪನೆ–ಮಾತ್ಸರ್ಯ ಪಡುವ ವನೇ; ಒಡನೇ ಓದಿದೆನೆಂಬ ಮೇಳದಿಂ–ಒಡನೆ ವಿದ್ಯಾಭ್ಯಾಸ ಮಾಡಿದೆನು ಎಂಬ ಸಲುಗೆ ಯಿಂದ, ಎನ್ನನೆ–ನನ್ನನ್ನೇ, ಮೆಚ್ಚಂ–ಮೆಚ್ಚನು; ಎನ್ನೊಳ್–ನನ್ನಲ್ಲಿ, ಇವಂ–ಇವನು, ಸಮನೆ– ಸಮಾನನಾಗಿಯೆ, ಎಚ್ಚಪನಕ್ಕುಂ–ಬಾಣಪ್ರಯೋಗ ಮಾಡುವವನಾಗುತ್ತಾನೆ; ಆದೊಡೇಂ– ಆದರೇನು? ಇಂ–ಇನ್ನು, ಇವನಂ–ಇವನನ್ನು, ಪಡಲ್ವಡಿಪೆಂ–ಕೆದರಿ ಬೀಳಿಸುತ್ತೇನೆ, ಎಂದು, ಇರದೆ, ಆಗಳೆ–ಆಗಲೇ, ಭಾರ್ಗವಾಸ್ತ್ರದಿಂದಂ–ಭಾರ್ಗವವೆಂಬ ಬಾಣದಿಂದ, ಆ ದ್ರುಪದರಾಜ ಶಿರೋಂಬುಜಮಂ–ಆ ದ್ರುಪದರಾಜನ ಕಮಳದಂತಿರುವ ತಲೆಯನ್ನು, ಘಟೋದ್ಭವಂ– ದ್ರೋಣನು, ನೆಱೆದು–ಸಮರ್ಥನಾಗಿ, ಎಚ್ಚಂ–(ಬಾಣದಿಂದ) ಕತ್ತರಿಸಿದನು, ಭಾರ್ಗವಾಸ್ತ್ರ ಎಂದರೆ, ಪರಶುರಾಮನು ಕೊಟ್ಟ ಬಾಣವಿರಬಹುದು; ಶಿವನು ಕೊಟ್ಟ ಬಾಣವಿರಬಹುದು; ಭಾರ್ಗವ ಎಂದರೆ ವಜ್ರ ಎಂದೂ ಅರ್ಥವಾಗುತ್ತದೆ. ಭಾರ್ಗವಾಸ್ತ್ರ ಎಂದರೆ ವಜ್ರಾಸ್ತ್ರವಿರ ಬಹುದು.
ವಚನ : ಅೞಿವಂ ಕಂಡು–ಸಾವನ್ನು ನೋಡಿ; ಪನ್ನೊರ್ವರುಂ–ಹನ್ನೊಂದು ಜನರೂ.
೨೪. ಶಕಟಂಗಳ್–ಬಂಡಿಗಳು, ಪದಿನೆಂಟು ಕೋಟಿವರೆಗಂ–ಹದಿನೆಂಟು ಕೋಟಿಯ ವರೆಗೂ, ತೀವಿರ್ದ–ತುಂಬಿದ್ದ, ಅನೇಕ–ಲೆಕ್ಕವಿಲ್ಲದ, ಉಗ್ರಸಾಯಕದಿಂದಂ–ಭೀಕರ ಬಾಣ ಗಳಿಂದ, ಚತುರಂಗ ಸಾಧನದ–ಚತುರಂಗ ಸೈನ್ಯದ, ಮೆಯ್ಮೆಯ್ಯೊಳ್–ಮೈಮೈಯಲ್ಲಿ, ಜಿಗಿಲ್ತು–ಅಂಟಿಸಿ, ಆಂತ–ಎದುರಾದ, ನಾಯಕರಂ–ಸೇನಾಪತಿಗಳನ್ನು, ಸುಂಟಗೆಯಾಱಿ ದಂತೆ–ಸುಟ್ಟ ಮಾಂಸವನ್ನು ಆರಲು ಇಕ್ಕಿದ ಹಾಗೆ, ಜೋಲ್ವನ್ನೆಗಂ–ಜೋತು ಬೀಳುತ್ತಿರಲು, ರಥದೊಳ್–ರಥಗಳಲ್ಲಿ, ಕೋದು–ಪೋಣಿಸಿ, ಕುಂಭೋದ್ಭವಂ–ದ್ರೋಣನು, ಮೆಯ್ವೆರ್ಚಿ– ಮೈಯುಬ್ಬಿ, ಚಾಪಕಳಾಕೌಶಳಮಂ–ಬಿಲ್ವಿದ್ಯೆಯ ನೈಪುಣ್ಯವನ್ನು, ಜಗಕ್ಕೆ–ಲೋಕಕ್ಕೆ, ಮೆಱೆದಂ– ಪ್ರಕಟಿಸಿದನು.
ವಚನ : ಪೇೞೆಪೆಸರಿಲ್ಲದಂತೆ–ಹೇಳಲು ಹೆಸರಿಲ್ಲದೆ, ನಿರ್ನಾಮವಾಗಿ; ಆಂಪರ್– ಎದುರಿಸುವವರು; ಇಕ್ಕಿ–ಹೊಡೆದು, ಗೆಲ್ದಮಲ್ಲನಿರ್ದಂತೆ–ಗೆದ್ದ ಜೆಟ್ಟಿ ಇದ್ದ ಹಾಗೆ.
೨೫. ಸಕಲಾರಾತಿ ನರೇಂದ್ರ ಮೌಳಿಗಳ್–ಎಲ್ಲಾ ಶತ್ರು ರಾಜರ ಕಿರೀಟಗಳು, ಉರುಳ್ದು– ನೆಲಕ್ಕೆ, ಆದೀಪ್ತ ರತ್ನಾಂಶುಮಾಳಿಕೆಯಿಂದೆ–ಪ್ರಕಾಶಮಾನವಾದ ರತ್ನಗಳ ಕಿರಣಗಳ ಮಾಲೆ ಯಿಂದ, ಆ ರಣರಂಗಮಂ–ಆ ಕದನ ಭೂಮಿಯನ್ನು, ಬೆಳಗೆ–ಬೆಳಗುವಂತೆ ಮಾಡಲು, ಕಾೞ್ಕಿರ್ಚು ಎಂದು–ಇದು ಕಾಡುಗಿಚ್ಚು ಎಂದು, ಭೂತಾಂಗನಾನಿಕರಂ–ಪಿಶಾಚಸ್ತ್ರೀಯರ ಸಮೂಹವು, ಶೋಣಿತವಾರಿಯಂ–ರಕ್ತವೆಂಬ ನೀರನ್ನು, ಕುಡಿದು, ಅಗುರ್ವಪ್ಪನ್ನೆಗಂ–ಭಯ ವುಂಟಾಗುತ್ತಿರಲು, ಸೂಸೆ–ಚೆಲ್ಲಲು, ನೋಡ–ನೋಡು, ಆ ದ್ರೋಣನಿಂ–ಆ ದ್ರೋಣ ನಿಂದ, ಕೊಳ್ಗುಳಂ–ಯುದ್ಧರಂಗವು, ಕೂಡೆ–ಕೂಡಲೇ, ಸಂಜೆಗವಿದಂತೆ–ಸಂಧ್ಯಾಕಾಲವು ಮುಚ್ಚಿಕೊಂಡಂತೆ, ಕವಿಲ್ತು–ಕಪ್ಪು ಕೆಂಪು ಮಿಶ್ರವಾದ ಕಪಿಲ ವರ್ಣವಾಗಿ, ಇರ್ದುದು– ಇತ್ತು.
ವಚನ : ದ್ರೋಣನಂ ಕೆಯ್ಗೆಮಾಡಲೆಂದು–ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು;
೨೬. ನಿಶಿತ ವಿಶಿಖಂಗಳ್–ಹರಿತವಾದ ಬಾಣಗಳು, ಒಂದೊಂದು–ಒಂದೊಂದೂ, ಅಶನಿಯೆ–ಸಿಡಿಲೇ; (ಅವು) ಗಿರಿಕುಳಮಂ–ಬೆಟ್ಟಗಳ ಸಮೂಹವನ್ನು, ಅ [ಲ] ಱುವಂತೆ– ನಾಶ ಮಾಡುವ ಹಾಗೆ, ಮದೇಭಪ್ರಸರಸಹಸ್ರಂ–ಸಾವಿರ ಸೊಕ್ಕಾನೆಗಳ ಗುಂಪುಗಳು, ಕೆಡೆ ದುವು–ಬಿದ್ದುವು; ದ್ರೋಣನಿದಿರ್ಗೆ–ದ್ರೋಣನ ಎದುರಿಗೆ, ವಿಸಸನದೊಳ್–ಯುದ್ಧದಲ್ಲಿ, ಮಾರ್ವಲಂ–ಪ್ರತಿಭಟಿಸುವ ಸೈನ್ಯ, ಒಳವೇ–ಇವೆಯೇ? ಇಲ್ಲ.
ವಚನ : ಮಾಱಾಂತ–ಪ್ರತಿಭಟಿಸಿ ಎದುರಿಸಿದ; ಸಿಂಧುರಾತಿಯೆ–ಸಿಂಹವೇ;
೨೭. ನಾಮದಿಂ–ಹೆಸರಿನಿಂದ, ಅಶ್ವತ್ಥಾಮಂ–ಅಶ್ವತ್ಥಾಮ ಎನ್ನುವ, ಒಂದು ಸಾಮಜಂ– ಒಂದು ಆನೆಯು, ಅಲ್ಲಿ–ಯುದ್ಧರಂಗದಲ್ಲಿ, ಅೞಿದೊಡೆ–ಸತ್ತರೆ, ನೃಪಂ–ಧರ್ಮ ರಾಜನು, ಕಂಡು–ನೋಡಿ, ಹತೋಶ್ವತ್ಥಾಮಾ ಎನೆ–ಅಶ್ವತ್ಥಾಮನು ಹತನಾದನು ಎನ್ನಲು, ಒವಜಂ–ಗುರುವಾದ ದ್ರೋಣನು, ಒರ್ವೆಸರ ಇಭಮಂ–ಒಂದು ಹೆಸರಿನ ಆನೆಯನ್ನು, ಅಶ್ವತ್ಥಾಮನೆಗೆತ್ತು–ತನ್ನ ಮಗನಾದ ಅಶ್ವತ್ಥಾಮನೆಂದೇ ಭಾವಿಸಿ, ಒಣರ್ದಂ–ಚಿಂತಿಸಿದನು.
೨೮. ಒಗೆದ–ಉತ್ಪನ್ನವಾದ, ಸುತಶೋಕದಿಂದೆ–ಪುತ್ರಶೋಕದಿಂದ, ಆವಗೆಯಂತೆ– ಮಡಕೆಯನ್ನು ಸುಡುವ ಒಲೆಯಂತೆ, ಒಳಗು–ಮನಸ್ಸು, ಉರಿಯೆ–ಉರಿಯಲು, ಭೋಂಕನೆ–ಬೇಗನೆ, ಇದ್ದಕ್ಕಿದ್ದಂತೆ, ಎರ್ದೆ–ಎದೆಯು, ತೆಱೆಯಲ್–ಬಿರಿಯಲು, ಹಾ ಮಗನೆ–ಅಯ್ಯೋ ಮಗನೇ, ಎಂದು, ಅಶ್ರು ಜಲಾರ್ದ್ರಗಂಡಂ–ಕಣ್ಣೀರಿನಿಂದ ತೋಯ್ದ ಕೆನ್ನೆಯುಳ್ಳವನು, (ದ್ರೋಣ), ಆ ಗಂಡಿನೊಡನೆ–ಆ ತನ್ನ ಪೌರುಷದೊಡನೆ, ಬಿಲ್ಲಂ– ಬಿಲ್ಲನ್ನು, ಬಿಸುಟಂ–ಬಿಸಾಡಿದನು, ಎಸೆದನು.
ವಚನ : ವಿಚಿ, ನ್ನ ವೀರರಸನುಂ–ಕತ್ತರಿಸಿ ಎಂದರೆ ನಿಂತು ಹೋದ ವೀರರಸವುಳ್ಳವನೂ; ಮಗನ ಮಾತಂ–ಮಗನ ಸುದ್ದಿಯನ್ನು.
೨೯. ಬೆಸಗೊಳೆ–ಕೇಳಲು, ಕುಂಜರಂ–ಆನೆಯು, ಮಡಿದುದು–ಸತ್ತಿತು, ಎಂದು, ಮಹೀಭುಜಂ–ಧರ್ಮರಾಜನು, ಉಳ್ಳಮಾೞ್ಕೆಯಿಂ–ಇರುವ ರೀತಿಯಿಂದ ಎಂದರೆ ನಿಜ ವಾಗಿ, ಪುಸಿಯದೆ–ಸುಳ್ಳು ಹೇಳದೆ, ಪೇೞ್ದೊಡಂ–ಹೇಳಿದರೂ, ಕಿಱಿದು ನಂಬದೆಯುಂ– ಸ್ವಲ್ಪವೂ ನಂಬದೆ, ರಣದಲ್ಲಿ–ಯುದ್ಧದಲ್ಲಿ, ಮುನ್ನೆ–ಮೊದಲೇ, ಬಿಲ್ವಿಸುಟೆಂ–ಬಿಲ್ಲನ್ನು ಬಿಸಾಡಿದನು; ಇಂ ಇದಂ–ಇನ್ನು ಇದನ್ನು ಎಂದರೆ ಈ ಬಿಲ್ಲನ್ನು, ಇದೆಂತು ಪಿಡಿವೆಂ–ಇದು ಹೇಗೆ ಹಿಡಿಯುವೆನು, ಪೇೞ್–ಹೇಳು, ಎಂದು, ಇರದೆ, ಆತ್ಮಯೋಗಿ–ಆತ್ಮಯೋಗ ವನ್ನುಳ್ಳ, ಬಿಲ್ಲೊವಜಂ–ದ್ರೋಣನು, ರಣಾಗ್ರದೊಳ್–ಯುದ್ಧದ ಮುಂದುಗಡೆ, ಉದಾತ್ತ ಯೋಗದೊಳೆ–ಉತ್ಕೃಷ್ಟವಾದ ಯೋಗ ಸಮಾಧಿಯಲ್ಲೆ, ತನ್ನಸುವಂ–ತನ್ನ ಪ್ರಾಣವನ್ನು, ಕಳೆದಂ–ನೀಗಿದನು.
ವಚನ : ಭಾವಿತಾತ್ಮಂ–ಧ್ಯಾನಿಸಲ್ಪಟ್ಟ ಆತ್ಮವುಳ್ಳವನು; ಪೆಣನನಿಱಿದು ಪಗೆಗೊಂಡರ್– ಹೆಣವನ್ನು ಹೊಡೆದು ಹಗೆ ತೀರಿಸಿಕೊಂಡರು; ಬಾರಿಸೆವಾರಿಸೆ–ಬೇಡ ಬೇಡವೆಂದು ತಡೆಯುತ್ತಿರಲು;
೩೦. ಕರವಾಳಂ–ಕತ್ತಿಯನ್ನು, ಘರವಟ್ಟಿಸಿ–ಬೀಸಿ, ಝಳಪಿಸಿ, ಶಿರೋಜಮಂ– ಕೂದಲನ್ನು, ಪಿಡಿದು–ಹಿಡಿದು, ತೆಗೆದು–ಎಳೆದು, ಗುರುವಂ–ದ್ರೋಣನನ್ನು, ಪಚ್ಚಂತಿರೆ– ಎರಡು ಭಾಗ ಮಾಡಿದ ಹಾಗೆ, ಪಿರಿದು–ಹಿರಿದಾಗಿ, ಪೊಯ್ದಂ–ಹೊಡೆದನು; ಎಂತಪ್ಪ ರೊಳಂ–ಎಂಥವರಲ್ಲಿಯೂ, ಮುಳಿಸು–ಕೋಪವು, ಅೞಿವಂ–ವಿವೇಕವನ್ನು, ಆಗಲ್– ಉಂಟಾಗಲು, ಇತ್ತಪುದೇ ಏಂ–ಅವಕಾಶವನ್ನು ಕೊಡುತ್ತದೆಯೇ ಏನು? ಅರ್ಥಂತರನ್ಯಾ ಸಾಲಂಕಾರ.
ವಚನ : ಎೞೆಗೋಣ ಸಾವಂ–(ಬಲಿಯಾಗಿ) ಎಳೆದು ತಂದ ಕೋಣನ ಸಾವನ್ನು; ಪತಾಕಿನಿಯುಮಂ–ಸೈನ್ಯವನ್ನು; ಒಂದು ತಲೆಯಾಗೋಡುವ–ಒಂದೇ ದಿಕ್ಕಿಗೆ ತಲೆ ತಿರುಗಿಸಿ ಕೊಂಡು ಓಡುತ್ತಿರುವ; ಧ್ವಜಿನಿಯುಮಂ–ಸೇನೆಯನ್ನೂ, ಮೊನೆಯೊಳ್–ಯುದ್ಧದಲ್ಲಿ; ಮುಟ್ಟೆವರ್ಪನ್ನೆಗಂ–ಹತ್ತಿರಕ್ಕೆ ಬರುತ್ತಿರಲು, ಶೋಣಾಶ್ವೋಪಲಕ್ಷಿತ–ಕೆಂಪು ಕುದುರೆಗಳ ಗುರುತನ್ನುಳ್ಳ; ಸೂತ–ಸಾರಥಿ; ಕೇತನ–ಬಾವುಟ; ಉಪಲಕ್ಷಿಸಿ–ನೋಡಿ, ಚೆನ್ನಾಗಿ ದೃಷ್ಟಿಸಿ ನೋಡಿ; ಅತೀತನಾದುದಂ–ಸತ್ತುದನ್ನು
೩೧. ಅಶ್ವತ್ಥಾಮನ ದುಃಖ ಕೋಪಗಳು; ಒಱೆತು–ಸೋರಿ, ಉಗುತರ್ಪ–ಸುರಿಯು ತ್ತಿರುವ, ಕಣ್ಬನಿಗಳಂ–ಕಣ್ಣೀರ ಹನಿಗಳನ್ನು, ಬರಲ್ ಈಯದೆ–ಬರುವುದಕ್ಕೆ ಬಿಡದೆ ಎಂದರೆ ತಡೆದುಕೊಂಡು, ಕೋಪಪಾವಕಂ–ಕೋಪಾಗ್ನಿಯು, ನಿಱಿಸೆ–ಸ್ಥಿರವಾಗಿಸಲು, ಕನಲ್ದು–ಕೆರಳಿ, ರೋಷದಿಂ–ಸಿಟ್ಟಿನಿಂದ (ಅಥವಾ ಬಾಣಗಳಿಂದ). ಅಪಾಂಡವಮಾಗಿರೆ–ಪಾಂಡವರು ಇಲ್ಲ ದಂತಾಗಿ, ಮಾಡದಂದು–ಮಾಡದಿರುವಾಗ, ಬಿಲ್ಲೆಱೆಯನ–ಧನುರ್ವಿದ್ಯೆಗೆ ಒಡೆಯನಾದ ದ್ರೋಣನ, ಪುತ್ರನಲ್ಲೆನ್–ಮಗನಲ್ಲ (ನಾನು), ಎನುತಂ–ಎನ್ನುತ್ತ, ಗುರುಪುತ್ರಂ–ಗುರು ಸುತನಾದ ಅಶ್ವತ್ಥಾಮನು, ಇದಿರ್ಚೆ–ಎದುರಿಸಲು, ಪಾಂಡವ ಸೈನ್ಯ ಸಾಗರಂ–ಪಾಂಡವರ ಪಡೆಯ ಕಡಲು, ಭೀತಿಯಿಂ–ಭಯದಿಂದ, ಮಱುಗಿ–ಕುದಿದು, ತೆರಳ್ದು–ಚಲಿಸಿ, ತೂಳ್ದಿ– ತಳ್ಳಲ್ಪಟ್ಟು, ಸುೞಿಗೊಂಡುದು– ಸುಳಿಸುಳಿಯಾಗಿ ತಿರುಗಿತು.
ವಚನ : ಉರಿಯ ಉರಳಿಯಂತಪ್ಪ–ಉರಿಯ ಉಂಡೆಯಂತಿರುವ; ತೊಟ್ಟು–ಹೂಡಿ.
೩೨. ದೆಸೆಮಸುಳ್ದತ್ತು–ದಿಕ್ಕುಗಳು ಮಾಸಿದವು; ವಾರ್ಧಿ ತಳರ್ದತ್ತು–ಕಡಲುಗಳು ನೆಲೆ ಯಿಂದ ಚಲಿಸಿದುವು; ನೆಲಂ ಪಿಡುಗಿತ್ತು–ಭೂಮಿಯು ಸಿಡಿಲಂತೆ ಸಿಡಿಯಿತು; ತೊಟ್ಟನೆ– ಬೇಗನೆ (ಅನಿರೀಕ್ಷಿತವಾಗಿ), ಆಗಸಂ–ಆಕಾಶವು, ಒಡೆದತ್ತು–ಒಡೆಯಿತು, ಅಜಾಂಡಂ ಅಳಱಿತ್ತು–ಬ್ರಹ್ಮಾಂಡವು ಬೆದರಿತ್ತು ಅಥವಾ, (ಅಲಱಿತ್ತು) ನಾಶವಾಯಿತು; ಎನುತಿರ್ದ ಎಡೆಯಲ್ಲಿ–ಎನ್ನುತ್ತಿದ್ದ ಸಮಯದಲ್ಲಿ, ಲೋಕಮಂ–ಜಗತ್ತನ್ನು, ಬಸಿಱೊಳಗಿಟ್ಟು–ಗರ್ಭ ದಲ್ಲಿಟ್ಟು ಕೊಂಡು, ಆರ ಅಳವು ಒಡ್ಡಿಸೆ–ಯಾರ ಶಕ್ತಿಯೂ ಪ್ರತಿಭಟಿಸಲು, ಕಾದಳವಂ– ರಕ್ಷಿಸಿದ ಶಕ್ತಿಯುಳ್ಳ, ಮುರಾಂತಕಂ–ಶ್ರೀಕೃಷ್ಣನು, ಅರ್ವಿಸೆ ತೆಗೆದೆಚ್ಚ–ಭಯಪಡಿಸುವಂತೆ ಸೆಳೆದು ಪ್ರಯೋಗಿಸಿದ, ವೈಷ್ಣವಮಂ–ನಾರಾಯಣಾಸ್ತ್ರವನ್ನು, ವೈಷ್ಣವದಿಂ–ವೈಷ್ಣವಾಸ್ತ್ರ ದಿಂದ, ಒಡ್ಡಿಸಿ–ಎದುರಿಸಿ, ಆಗಳ್–ಆಗ, ಕಾದಂ–ಕಾಪಾಡಿದನು.
ವಚನ : ಉಪಾಯದೊಳೆ ಗೆಲ್ದಂ–ಉಪಾಯದಲ್ಲಿಯೇ ಎಂದರೆ ಸುಲಭವಾಗಿಯೇ ಗೆದ್ದನು.
೩೩. ಸೂರ್ಯನು ಅಸ್ತಮಿಸುತ್ತಾನೆ: ಎರಡುಂ ಪತಾಕಿನಿಗಳ್–ಉಭಯ ಸೈನ್ಯಗಳೂ, ಕವಿದು–ಮುತ್ತಿಕೊಂಡು, ಆಗಡುಂ–ಯಾವಾಗಲೂ, ಎನ್ನನೆ–ನನ್ನನ್ನೇ, ಸಕ್ಕಿಮಾಡಿ–ಸಾಕ್ಷಿ ಯಾಗಿ ಮಾಡಿ, ಕಾದುವುದಱಿಂ–ಯುದ್ಧಮಾಡುವುದರಿಂದ, ಅಲ್ಲಿ ಸತ್ತರಸುಮಕ್ಕಳ– ಅಲ್ಲಿ ಸತ್ತ ರಾಜಕುಮಾರರ, ಪಾಪಂ–ಪಾಪವು, ಇದೆಲ್ಲಂ–ಇದೆಲ್ಲವೂ, ಎನ್ನಂ–ನನ್ನನ್ನು, ಎಯ್ದುವುದು–ಮುಟ್ಟುತ್ತದೆ, ಅದಂ–ಅದನ್ನು (ಆ ಪಾಪವನ್ನು), ಉಪವಾಸದಿಂ ಜಪದಿಂ– ಉಪವಾಸದಿಂದ, ಜಪದಿಂದ, ಓಡಿಸಿ–ತೊಲಗಿಸಿ, ಶುದ್ಧನಪ್ಪೆಂ–ನಿರ್ಮಲನಾಗುತ್ತೇನೆ, ಎಂಬವೊಲ್–ಎನ್ನುವಂತೆ, ನಳಿನೀವ ಜೀವಿತೇಶ್ವರಂ–ತಾವರೆಗಳ ಶ್ರೇಷ್ಠ ಪ್ರಾಣವಲ್ಲಭ ನಾದ ಸೂರ್ಯನು, ಅಪರಾಂಬುರಾಶಿಗೆ–ಪಶ್ಚಿಮ ಸಮುದ್ರಕ್ಕೆ, ಇೞಿದಂ–ಇಳಿದನು.
ವಚನ : ಒಂದಿರುಳುಮೆರಡುಂ ಪಗಲುಂ–ಒಂದು ರಾತ್ರಿಯೂ ಎರಡು ಹಗಲುಗಳೂ; ಓರಂತೆ–ಒಂದೇ ಸಮನಾಗಿ (ಕ್ರಮವಾಗಿ); ಚಳಿತು–ಶಕ್ತಿಗುಂದಿ; ಬೀಡುಗಳ್ಗೆ–ಶಿಬಿರಗಳಿಗೆ; “ಚಳಿ–ವಿಗತ ಪ್ರಭಾವೇ.”
೩೪. ಗುರುವಿನ–ತಂದೆಯ, ಶೋಕದಿಂದೆ–ದುಃಖದಿಂದ ಎಂದರೆ ತಂದೆಯ ಮರಣ ದಿಂದಾದ ದುಃಖದಿಂದ, ರಥಮಧ್ಯದೊಳ್–ರಥದ ನಡುವೆ, ಒಯ್ಯನೆ–ಮೆಲ್ಲನೆ, ಜೋಲ್ದು– ಜೋತು, ಬಿೞ್ದನಂ–ಬಿದ್ದ ಅಶ್ವತ್ಥಾಮನನ್ನು, ಗುರುಸುತನಂ–ಗುರುವಿನ ಮಗನನ್ನು, ಕೃಪಂ– ಕೃಪಾಚಾರ್ಯನು, ಕೃಪೆಯಿಂ–ಕರುಣೆಯಿಂದ, ಆತ್ಮ ವಿಳಾಸದೊಳ್–ಆತ್ಮ ಪ್ರಕಾಶನ ದಲ್ಲಿ, ಆಱಿಸುತ್ತುಂ–ಸಮಾಧಾನಪಡಿಸುತ್ತ, ಅಂತಿರೆ–ಹಾಗಿರಲು, ಗುರುಶೋಕಂ–ಪಿತೃ ಶೋಕವು, ಅಗ್ಗಳಿಸೆ–ಅಧಿಕವಾಗಲು, ತಾಪವಿಯೋಗಮುಮಕ್ಕುಂ–ತಾಪವೂ ವಿಯೋಗವೂ ಆಗುತ್ತವೆ; ಆಗಡುಂ–ಯಾವಾಗಲೂ, ಗುರುವೆನೆ–ಅಧಿಕವೆನ್ನಲು, ಪೇೞಿಂ–ಹೇಳಿರಿ, ಆ ಗುರುವಿಯೋಗಭರಂ–ಆ ತಂದೆಯ ಅಗಲಿಕೆಯ ತೀವ್ರತೆ, ಗುರುವಾಗದಿರ್ಕುಮೇ–ಭಾರ ವಾಗದೆ ಇರುತ್ತದೆಯೇ? ಎಂದರೆ ಅತಿಶಯವಾಗುತ್ತದೆ.
ವಚನ : ಪನ್ನಗಕೇತನಂ–ಸರ್ಪಧ್ವಜನಾದ ದುರ್ಯೋಧನ.
೩೫. ಪುದಿದ–ವ್ಯಾಪಿಸಿದ, ಔರ್ವಾನಳಂ–ಬಾಡಬಾಗ್ನಿಯು, ಅಬ್ಧಿಯಂ–ಕಡಲನ್ನು, ಸುಡುವವೊಲ್–ಸುಡುವಂತೆ, ಶಸ್ತ್ರಾಗ್ನಿಯಿಂ–ಬಾಣಗಳ ಉರಿಯಿಂದ, ತೀವ್ರಕೋಪದಿಂ– ತೀಕ್ಷ್ಣವಾದ ಕೋಪದಿಂದ, ಉದ್ವೃತ್ತ–ಗರ್ವಿಷ್ಠವಾದ, ಬಲಾಬ್ಧಿಯಂ–ಸೈನ್ಯಸಾಗರವನ್ನು, ಸುಡೆ–ಸುಡಲು, ಕರಂ–ವಿಶೇಷವಾಗಿ, ಬೆಂಬಿೞ್ದು–ಬೆನ್ನಿನಲ್ಲಿ ಬಿದ್ದು ಎಂದರೆ ಅನುಸರಿಸಿ ಉಪ ಸರ್ಪಣೆ ಮಾಡಿ, ದುರ್ಯುಕ್ತಿಯಿಂದೆ–ಹೀನೋಪಾಯದಿಂದ, ಅದಯಂ–ದಯೆಯಿಲ್ಲದ, ಧರ್ಮಜಂ–ಧರ್ಮರಾಜನು, ಗುರುವಂ–ಗುರುವಾದ ದ್ರೋಣನನ್ನು, ಇಕ್ಕಿದಂ–ಕೊಂದನು. ಇಂ–ಇನ್ನು, ನೀಂ–ನೀನು, ಆತನಂ–ಅವನನ್ನು, ಬೇಗಂ–ಬೇಗನೆ, ಇಕ್ಕಲೆ–ಕೊಲ್ಲದೆ, ಕಣ್ಣೀರ್ಗಳಂ ಇಕ್ಕೆ–ಕಣ್ಣೀರನ್ನು ಸುರಿಸಲು, ಚಂದ್ರಧವಳಂ–ಚಂದ್ರನಂತೆ ಬೆಳ್ಳಗಿರುವ, ನಿನ್ನ ಅನ್ವಯಂ–ನಿನ್ನ ವಂಶವು, ಮಾಸದೇ–ಮಲಿನವಾಗದೇ?
೩೬. ಎನಗೆ–ನನಗೆ, ಕೂರ್ಪುದನ್–ಪ್ರೀತಿಸುವುದನ್ನು, ಆ ಘಟಸಂಭವಂ–ಆ ದ್ರೋಣನು, ನಿನಗೆ ಕೂರಂ–ನಿನಗೆ ಪ್ರೀತಿಸನು ಎಂದರೆ ದ್ರೋಣ ನನ್ನನ್ನು ಎಷ್ಟು ಪ್ರೀತಿಸು ತ್ತಾನೋ ಅಷ್ಟು ನಿನ್ನನ್ನು ಪ್ರೀತಿಸುವುದಿಲ್ಲ; ಅೞಲ್–ದುಃಖವು, ನಿನತು–ನಿನ್ನದು, ಅಲ್ತು–ಅಲ್ಲ, ಕೇಳ್–ಕೇಳು, ಎನತುಂ–ನನ್ನದೂ ಕೂಡ; ಆಱದ ಶೋಕಮಂ–ಶಮನವಾಗದ ದುಃಖವನ್ನು, ಇರ್ವೆಮುಂ–ನಾವಿಬ್ಬರೂ, ಮುನಿವರಂ–ಕೋಪಿಸುವವರನ್ನು ಎಂದರೆ ಹಗೆ ಗಳನ್ನು, ತವೆ–ನಾಶವಾಗುವಂತೆ, ಕೊಂದು, ಒಡನೀಗುವಂ–ಜೊತೆಯಲ್ಲೇ ಕಳೆಯೋಣ. “ದ್ರುತವಿಲಂಬಿತಮೊಪ್ಪೆ ನಭಂಭರಂ.”
೩೭. ಗುರು–ತಂದೆಯಾದ ದ್ರೋಣ, ಮದೀಯ ವಿಮೋಹದಿಂ–ನನ್ನ ಮೇಲಣ ಪ್ರೀತಿ ಯಿಂದ, ಜವಂ–ಯಮನು, ಕೃಪೆಯಿಂ–ಕರುಣೆಯನ್ನು, ಬಿಸುಟಂತೆ–ಬಿಸಾಡಿದ ಹಾಗೆ, ಕೊಕ್ಕರಿಸಿ–ಹೇಸಿ, ಬಿಲ್ವಿಸುಟಿರ್ದೊಡೆ–ಬಿಲ್ಲನ್ನು ಎಸೆದರೆ, ಆ ಪದದೊಳ್–ಆ ಸಮಯ ದಲ್ಲಿ, ದ್ರುಪದಾತ್ಮಜಂ–ದ್ರುಪದನ ಮಗ, ದೃಷ್ಟದ್ಯುಮ್ನ, ಗುರುವ–ತಂದೆಯ, ಕೇಶಕಲಾ ಪಮಂ–ಕೂದಲಿನ ಸಮೂಹವನ್ನು, ಎಂದರೆ ಜುಟ್ಟನ್ನು, ತೆಗೆದಂಗಡಂ–ಎಳೆದನಲ್ಲವೆ? ತೆ–ತೆಗೆ, ಛೀ, ಗಂಡನುಮಾದಂ–ಶೂರನೂ ಆದನು, ಈ ಪರಾಭವಕ್ಕೆ–ಈ ಅವಮಾನಕ್ಕೆ, ಅನುರೂಪಂ–ಸದೃಶವಾದದ್ದು, ಅಹಿಕೇತನಾ–ದುರ್ಯೋಧನನೇ, ಪೆಱತೊಂದುಂ– ಬೇರೊಂದೂ, ಇಲ್ಲ. “ತರಳವೃತ್ತಮೆನಿಪ್ಪುದೊಪ್ಪಿರೆ ನಂಭರಂ ಸಹಜಂಗಮಂ.”
೩೮. ಭಾರ್ಗವ–ಪರಶುರಾಮನ, ತಂದೆಯ ಅೞಿವಿಂಗೆ–ತನ್ನ ತಂದೆಯ ಕೊಲೆಗಾಗಿ (ಸಾವಿಗಾಗಿ), ರಾಯೆಂಬೀ ಪೆಸರಿಲ್ಲದಂತು–ರಾಜ ಎಂಬ ಈ ಹೆಸರು ಇಲ್ಲದಿರುವ ಹಾಗೆ, ಮುಯ್ಯೇೞುಸೂೞ್–ಇಪ್ಪತ್ತೊಂದು ಸಲ, ಕಟ್ಟಾಯಂ–ತೀವ್ರವಾದ ಪರಾಕ್ರಮವು, ಪೊಂಪುೞಿವೋಗೆ–ಅಧಿಕವಾಗಲು, ಎಂತು–ಹೇಗೆ, ಕೊಂದನ್–ಕೊಂದನು, ಅಂತು–ಹಾಗೆ, ಈ ಎಮ್ಮಯ್ಯನಿಂ–ಈ ನಮ್ಮ ತಂದೆ ಕಾರಣವಾಗಿ, ಆದುದು ಒಂದು–ಆದ ಒಂದು, ಪಗೆ ಯಿಂ–ದ್ವೇಷದಿಂದ, ಉಗ್ರಪಾಂಚಾಳ ರಾಜಾಯುಃ ಪಾರಮಂ–ಭಯಂಕರರಾದ ಪಾಂಚಾಲ ದೇಶದರಸುಗಳ ಆಯುಸ್ಸಿನ ಅಂತ್ಯವನ್ನು, ಸೀಳ್ದು–ಸೀಳಿ, ಅನ್ಯಭೂಪಬಲಮಂ–ಶತ್ರುರಾಜರ ಸೈನ್ಯವನ್ನು, ಪರ್ದಿಂಗೆ–ಹದ್ದುಗಳಿಗೆ, ಬಿರ್ದಿಕ್ಕುವೆಂ–ಔತಣ ಮಾಡುತ್ತೇನೆ.
೩೯. ಪಗೆಯಂದಮುಂ–ಶತ್ರುವಿನ ರೀತಿಯು ಕೂಡ, ಆ ರಾಮರ–ಆ ಪರಶುರಾಮನ, ಪಗೆಯೊಳ್ಸಮಂ–ಶತ್ರುಗಳಿಗೆ ಸಮಾನ (ಕ್ಷತ್ರಿಯರು); ಅವರ ಪಿಡಿವ ಬಿಲ್–ಅವರು ಹಿಡಿಯುವ ಬಿಲ್ಲು, ಬಿಲ್–ನನ್ನ ಬಿಲ್ಲು; ಎಮ್ಮಂಬುಗಳುಂ–ನಮ್ಮ ಬಾಣಗಳು ಕೂಡ, ಅವರಿತ್ತ–ಅವರು ಕೊಟ್ಟ, ನಲ್ಲಂಬುಗಳ್–ಒಳ್ಳೆಯ ಬಾಣಗಳು, ಎನೆ–ಎನ್ನಲು, ಬೞಿ ಗಾಯದಂತು: ಬೞಿಯಂ ಕಾಯದಂತು–ಕ್ಷತ್ರಿಯ ವಂಶವನ್ನು ರಕ್ಷಿಸದೆ, ಹಾಗೆ, ಚಲಮನೆ– ನನ್ನ ಛಲವನ್ನೇ, ಕಾವೆಂ–ರಕ್ಷಿಸುತ್ತೇನೆ, ಎಂದರೆ ಕ್ಷತ್ರಿಯ ಕುಲವನ್ನು ನಿರ್ಮೂಲಿಸಿ ನನ್ನ ಹಠವನ್ನು ನೀಗುತ್ತೇನೆ.
ವಚನ : ವೀರವಟ್ಟಮಂ–ವೀರಪಟ್ಟವನ್ನು;
೪೦. ಅಶ್ವತ್ಥಾಮ–ಕರ್ಣ ಕಲಹ: ಭೂಪರೆಂಬರ್–ರಾಜರೆನ್ನುವರು, ನಿಜದೊಳೆ– ಸಹಜವಾಗಿಯೇ, ಅವಿವೇಕಿಗಳ್ ಅಪ್ಪರ್–ಬುದ್ಧಿಯಿಲ್ಲದವರಾಗುತ್ತಾರೆ; ಅದು, ಅಕ್ಕೆ– ಆಗಲಿ; ಫಣಿಧ್ವಜ–ದುರ್ಯೋಧನನೇ, ನೀಂ–ನೀನು, ಕಡುಕೆಯ್ದು–ತೀವ್ರವಾಗಿ ಎಂದರೆ ಬಲವಾಗಿ, ಕರ್ಣನನೆ–ಕರ್ಣನನ್ನೇ, ನಚ್ಚುವೆಯಪ್ಪೊಡೆ–ನಂಬುವೆಯಾದರೆ, ಯುದ್ಧ ದೊಳ್–ಕಾಳಗದಲ್ಲಿ, ವೃಷಧ್ವಜನುಮಂ–ಶಿವನನ್ನೂ, ಇಕ್ಕೆಗೆಲ್ದ–ಹೊಡೆದು ಗೆದ್ದ, ಅರಿಗ ನೊಳ್–ಅರ್ಜುನನಲ್ಲಿ, ತಲೆಮಟ್ಟು–ತಲೆಯನ್ನು ಸೇರಿಸಿ ಎಂದರೆ ಅಭಿಮುಖನಾಗಿ, ನಿಂದು– ನಿಂತು, ಸೂತಜಂ–ಕರ್ಣನು, ಇಱಿವಂ ಗಡಂ–ಯುದ್ಧ ಮಾಡುವನಲ್ಲವೆ? ಪಟ್ಟಮೇ– ಕಟ್ಟಿದ ವೀರಪಟ್ಟವೇ, ಪಾಱಿ–ಹಾರಿ, ಮೇಲೆಬಿದ್ದು, ಪಗೆಯಂ–ವೈರಿಯನ್ನು, ತಿಂಬುದೇ– ತಿನ್ನುವುದೇ, ಏಂಗಳ–ಏನು ದಿಟವಾಗಿಯೂ? “ತಲೆಮಡು–ಶಿರಸ್ಸಂಧಾನೇ.”
ವಚನ : ಅಂಗರಾಜಂ–ಕರ್ಣನು, ಗುರುತನೂಜನಂ–ಅಶ್ವತ್ಥಾಮನನ್ನು, ಇಂತೆಂದಂ– ಹೀಗೆಂದನು.
೪೧. ಎನಿತು–ಎಷ್ಟು, ಅಳವು ಉಳ್ಳೊಡಂ–ಪ್ರತಾಪವಿದ್ದರೂ, ದ್ವಿಜನ–ಹಾರುವನ, ಗಂಡಗುಣಕ್ಕೆ–ಪೌರುಷ ಗುಣಕ್ಕೆ, ಅಗಿವನ್ನರ್–ಹೆದರುವಂಥವರು, ಆರೋ–ಯಾರೋ? ವಿಷಂ–ವಿಷವು, ಒಳ್ಳೆಗೆ–ಕೇರೆ ಹಾವಿಗೆ, ಉಳ್ಳೊಡೆ–ಇದ್ದರೆ, ಅದು, ನೆಟ್ಟನೆ–ನೇರಾಗಿ, ಒಳ್ಳೆಯೆ–ನೀರಹಾವೇ, ಕಾಳಿಯನಾಗಂ ಆಗದು–ಕಾಳಿಂಗ ಸರ್ಪವಾಗುವುದಿಲ್ಲ; ಅಣ್ಮಿನ– ಪೌರುಷದ, ಪಡೆಮಾತು–ಸುದ್ದಿ, ಅದೊಂದೆ–ಅದು ಒಂದೇ ನೆವಮಾಗಿರೆ–ನೆಪವಾಗಿರಲು, ಕೆಯ್ದುವನಿಕ್ಕಿ–ಆಯುಧವನ್ನು ಬೀಸಾಡಿ, ಸತ್ತ–ಮಡಿದ, ಸಾವಿನ–ಮರಣದ, ಪಡಿಚಂದ ಮಾಗಿಯುಂ–ಪ್ರತಿಕೃತಿಯಾಗಿದ್ದರೂ, ಗಂಡವಾತುಗಳ್–ಪೌರುಷದ ಮಾತುಗಳು, ಇದೇಂ–ಇದೇನು, ನಿಮಗೆ, ಅೞ್ತಿಯೋ–ಪ್ರೀತಿಯೋ, ಇಷ್ಟವೊ? ಪಡಿಚಂದ ಪ್ರಾ. ಪಡಿಚ್ಚಂದ ಸಂ. ಪ್ರತಿಚ್ಛಂದ–ಮೂರ್ತಿ, ಪ್ರತಿಬಿಂಬ.
ವಚನ : ಗಂಡವಾತಂ–ಪೌರುಷದ ಮಾತನ್ನು, ಈ ಮೀಂಗುಲಿಗಂ–ಈ ಮೀನನ್ನು ಕೊಲ್ಲುವವನು ಎಂದರೆ ಬೆಸ್ತರವನು; ಬಾಳಂಕಿೞ್ತು–ಕತ್ತಿಯನ್ನು ಒರೆಯಿಂದ ಎಳೆದು; ಎಡೆವೊಕ್ಕು– ನಡುವೆ ಪ್ರವೇಶಿಸಿ; ಬಾರಿಸಿ–ತಡೆದು;
೪೨. ಈ ನಮ್ಮ ಸೈನ್ಯಂ–ಈ ನಮ್ಮ ಸೇನೆಗಳು, ಅಸದಳಮಾಗಿಯುಂ–ಅಸದೃಶ ವಾಗಿದ್ದರೂ, ಅತಿಶಯವಾಗಿದ್ದರೂ; ಇಂತು–ಹೀಗೆ, ಒರ್ವರೊರ್ವರೊಳ್–ಒಬ್ಬೊಬ್ಬರಲ್ಲಿ, ಸೆಣಸಿ–ಜಗಳವಾಡಿ, ಮತ್ಸರಿಸಿ; ಬಳವ್ಯಸನದೊಳೆ–ಸೈನ್ಯದಲ್ಲಿರುವ ಒಳ ಜಗಳಗಳಿಂದಲೇ, ಕೆಟ್ಟುದು–ಹಾಳಾಯಿತು; ಅಲ್ಲದೊಡೆ–ಅಲ್ಲದಿದ್ದರೆ, ಸುಯೋಧನ–ದುರ್ಯೋಧನನೇ, ನಿನಗೆ, ಮಲೆವ–ಔದ್ಧತ್ಯವನ್ನು ತೋರಿಸುವ, ಮಾರ್ವಲಂ–ಎದುರು ಸೈನ್ಯ, ಶತ್ರು ಸೈನ್ಯ, ಒಳವೇ–ಉಂಟೇ? ಬಲವ್ಯಸನಗಳಲ್ಲಿ ಅಂತಶ್ಶಲ್ಯಂ ಎಂಬುದೊಂದು, ಅಂತರ್ದ್ವೇಷ ಯುಕ್ತಂ ಎಂದು ಅರ್ಥ; ಇದು ಅರ್ಥಶಾಸ್ತ್ರದ ಪರಿಭಾಷೆ. ‘ಖಳವ್ಯಯಸನ’ ಎಂಬ ಪಾಠ ತಪ್ಪು.
ವಚನ : ಮುಳಿಸಂ–ಕೋಪವನ್ನು; ಅವಧಾರಿಸಲಾಱದೆ–ತಾಳಲಾರದೆ, ಸೈರಿಸಲಾರದೆ;
೪೩. ಆಂ ಇರೆ–ನಾನು ಇರುವಾಗ, ನೀಂ–ನೀನು, ಈ ಸೂತಸುತಂಗೆ–ಈ ಸೂತಪುತ್ರ ನಾದ ಕರ್ಣನಿಗೆ, ಎಡೆಗೊಂಡು–ನಡುವೆ ಹೊಗಿಸಿ ಎಂದರೆ ಅನಿರೀಕ್ಷಿತವಾಗಿ ಇಬ್ಬರ ನಡುವೆ ತಂದು, ಕೈವಾರದಿಂದೆ–ಹೊಗಳಿಕೆಯಿಂದ, ಬೀರವಟ್ಟಮಂ–ವೀರ ಪಟ್ಟವನ್ನು, ಒಸೆದು– ಪ್ರೀತಿಸಿ, ಇತ್ತೊಡಂ–ಕೊಟ್ಟರೂ, ಏನಾಯ್ತು–ಏನು ಆಯಿತು? ಈ ಖಳಂ–ಈ ದುಷ್ಟನಾದ ಕರ್ಣನು, ಧನಂಜಯ ಕ್ರೂರ ಬಾಣ ಗಣಾವಳಿಯಿಂದೆ–ಅರ್ಜುನನ ಕ್ರೂರವಾದ ಬಾಣಗಳ ಸಮೂಹಗಳಿಂದ, ಅೞ್ಕಾಡಿದೊಡಲ್ಲದೆ–ನಾಶವಾದರಲ್ಲದೆ, ಆಂ–ನಾನು, ವೈರಿಸಂಹಾರಕಾರಣ ಚಾಪಮಂ–ಶತ್ರು ಸಂಹಾರಕ್ಕೆ ಕಾರಣವಾದ ಈ ನನ್ನ ಬಿಲ್ಲನ್ನು, ಪಿಡಿಯೆಂ–ಹಿಡಿಯೆನು, ಗಡಾ–ಅಲ್ಲವೇ? “ಒಪ್ಪಿರಲ್ ರಸಸಂತಜಜಂಗಂ ಪುಟ್ಟುವುದಾ ಖಚರಪ್ಲುತಂ.”
೪೪. ಭುವನಂಗಳ್ ಪದಿನಾಲ್ಕುಮಂ–ಹದಿನಾಲ್ಕು ಲೋಕಗಳನ್ನೂ, ನಡುಗಿಸಲ್– ಹೆದರಿಸಲು, ಸಾಮರ್ಥ್ಯಮುಳ್ಳ–ಶಕ್ತಿಯನ್ನುಳ್ಳ, ಎನ್ನ ಕೆಯ್ದುವಿನೊಳ್–ನನ್ನ ಆಯುಧ ಗಳಲ್ಲಿ, ತೀರದುದು–ತೀರದಿರುವುದು ಎಂದರೆ ಸಾಧ್ಯವಾಗದೆ ಇರುವುದು, ಆವ ಕೆಯ್ದುವಿ ನೊಳಂ–ಯಾವ ಆಯುಧಗಳಲ್ಲಿಯೂ, ತೀರ್ದಪುದೇ–ತೀರುತ್ತದೆಯೇ? ಇಲ್ಲ; ನಿನ್ನ ಕೆಯ್ದುವಂ–ನಿನ್ನ ಆಯುಧವನ್ನು, ಎಂತುಂ–ಹೇಗೂ, ಬಿಸುಟಿರ್ದ ಲೆಕ್ಕಮೆ ವಲಂ– ಬಿಸಾಡಿರುವ ಹಾಗೆಯೇ ಗಣಿಸಬೇಕಲ್ಲವೆ? ಎಂದರೆ ಆಯುಧವಿದ್ದರೂ ಇಲ್ಲದಿದ್ದರೂ ನೀನು ಮಾಡುವುದು ಒಂದೇ ಎಂಬ ಭಾವ. ಏನೂ ಮಾಡಲಾರೆ; ನಿಷ್ಕಾರಣಂ–ಕಾರಣ ವಿಲ್ಲದೆ, ಕೆಯ್ದುವಿಕ್ಕುವ–ಆಯುಧವನ್ನು ತೊರೆಯುವ, ಕಣ್ಣೀರ್ಗಳಂ–ಇಕ್ಕುವ–ಕಣ್ಣೀರನ್ನು ಸುರಿಸುವ, ಈ ಎರಡುಮಂ–ಈ ಎರಡನ್ನೂ, ನಿಮ್ಮಯ್ಯನೊಳ್–ನಿಮ್ಮ ತಂದೆಯಾದ ದ್ರೋಣನಲ್ಲಿ, ಕಲ್ತಿರೇ–ಕಲಿತುಕೊಂಡಿರೇ?
ವಚನ : ನುಡಿದೆ–ಮೂದಲಿಕೆಯ ಮಾತಿಗೆ; ಸಿಗ್ಗಾಗಿ–ನಾಚಿ;
೪೫. ಮುನಿಸಂ ಮುಂದಿಟ್ಟು–ಕೋಪವನ್ನು ಮುಂದು ಮಾಡಿ, ಬಿಲ್ಲಂ–ಬಿಲ್ಲನ್ನು, ಬಿಸುಡಲೆ–ಬಿಸಾಡುವುದಕ್ಕೇ, ಮುನ್ನಂ–ಮೊದಲು, ಬಗೆದೆಂ–ಎಣಿಸಿದೆನು, ಆಲೋಚಿಸಿ ದೆನು; ಇಂ–ಇನ್ನು, ನಿನ್ನನೆ–ನಿನ್ನನ್ನೇ, ಪೀನಂ–ವಿಶೇಷವಾಗಿ, ನಚ್ಚಿ–ನಂಬಿ, ನಿನ್ನಾಳ್ದನ– ನಿನ್ನ ಸ್ವಾಮಿಯಾದ ದುರ್ಯೋಧನನು, ನುಡಿಯಿಸೆ–ಮಾತಾಡಿಸಲು, ಉರ್ಕಿನಿಂ–ಗರ್ವದಿಂದ, ನೀಂ–ನೀನು, ಆಡಿದೈ–ಮಾತನಾಡಿದೆ; ಎನಗೆ–ನನಗೆ, ಮಾತನಾಡಲ್ಕೆ–ಮಾತನಾಡುವುದಕ್ಕೆ, ಈ ಸೂೞ್ ಅಲ್ತು–ಈ ಸರದಿಯಲ್ಲ ಎಂದರೆ ಇದು ಸಮಯವಲ್ಲ; ಇಂ–ಇನ್ನು, ಸೇನಾಧಿಪ ಪದವಿಯೊಳ್–ಸೈನ್ಯಾಧಿಪತಿಯ ಅಧಿಕಾರದಲ್ಲಿ, ನೀನೆ–ನೀನೇ, ನಿಲ್–ನಿಲ್ಲು; ನೀನುಂ ಆನುಂ–ನೀನೂ ನಾನೂ, ದುರ್ಯೋಧನನಂ–ದುರ್ಯೋಧನನನ್ನು, ಸಕ್ಕಿಟ್ಟು–ಸಾಕ್ಷಿ ಯಾಗಿಟ್ಟು, ಮಾಱಾಂತ–ಎದುರಾದ, ಅದಟರೊಳ್–ಶೂರರಲ್ಲಿ, ಅಳವಂ–(ನನ್ನ ನಿನ್ನ) ಶಕ್ತಿಯನ್ನು, ನಾಳೆ–ನಾಳೆಯ ದಿನ, ತೋಱುವಂ–ತೋರಿಸೋಣ, ಪೀನ ಎಂಬುದು ಸಂಸ್ಕೃತದಲ್ಲಿ ಗುಣವಾಚಕ. ಇದನ್ನೇ ಪೀನಂ ಎಂದು ಕನ್ನಡದಲ್ಲಿ ಅವ್ಯಯವಾಗಿ ಬಳಸುವ ರೂಢಿ ಇದೆ; ಅಱಿದು ಪೀನಂ ಮಾರ್ಗಗತಿಯಂ (ಕವಿರಾ. ೧–೪೬): ದಾನಾಂಬು ಚುಂಬಿತ ಕಪೋಲತಂ ಮದೇಭಂ । ತಾನೊಪ್ಪುವಂತೆ ಸೊಗಯಿಪ್ಪುದು ನೋಡೆ ಪೀನಂ (ಕಾವ್ಯಾಲೋ. ೬೮೩); “ಪೀನಂ ಪ್ರಥಮೆಗೆ ನೀನಾತಾನೆಂದಱಿ” (ಶಮದ. ೧೫೨).
೪೬. ನಿನ್ನ ಶರಾಸಾರಂಗಳ್–ನಿನ್ನ ಬಾಣಗಳ ಮಳೆ, ಸಾರಂಗಳ್–ಶಕ್ತಿಯುತವಾದವು; ಉೞಿದ–ಮಿಕ್ಕ ಎಂದರೆ ನಿನ್ನದಲ್ಲದ, ಇತರರ, ಕೆಯ್ದುಗಳ್–ಆಯುಧಗಳು, ಎಂತುಂ– ಹೇಗೂ, ಅಸಾರಂ–ಸಾರವಿಲ್ಲದುವು, ಶಕ್ತಿಯಿಲ್ಲದುವು; ಇದಿರ್ಚಿದ–ಎದುರಾದ, ಅರಿ ನೃಪಧ್ವಜಿನಿಗಳೊಳ್–ಶತ್ರುರಾಜರ ಸೈನ್ಯದಲ್ಲಿ, ನಾಂ–ನಾವಿಬ್ಬರೂ, ಸಾರಾಸಾರತೆಯಂ–ಸಾರತೆ ನಿಸ್ಸಾರತೆಗಳನ್ನು, ಆರಯ್ವಂ–ಹುಡುಕೋಣ, ವಿಚಾರ ಮಾಡೋಣ, “ಆರಯ್– ಅನ್ವೇಷಣೇ.”
ವಚನ : ಪುರುಷಕಾರಮನೆ–ಪೌರುಷ ಪ್ರಯತ್ನವನ್ನೆ; ನೆಗೞ್ವುದು–ಮಾಡುವುದು; ಪ್ರತಿಪತ್ತಿಗಳಿಂ–ಸತ್ಕಾರಗಳಿಂದ, ಇಲ್ಲಿಗೆ ಕರ್ಣಾಶ್ವತ್ಥಾಮರ ವಿವಾದವು ಮುಗಿಯುತ್ತದೆ. ಪಂಪನು ಈ ದೃಶ್ಯವನ್ನು ರಚಿಸುವಾಗ ವೇಣೀ ಸಂಹಾರದ ನಾಟಕದ ಮೂರನೆಯ ಅಂಕದಲ್ಲಿ ಬರುವ ಸದೃಶ ದೃಶ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದನು. ಎರಡಕ್ಕೂ ಸಮಾನವಾದ ಅಂಶಗಳು ಕೆಲವಿವೆ. ಕತ್ತಿ ಹಿರಿದು ಅಶ್ವತ್ಥಾಮ ಕರ್ಣರು ಒಬ್ಬರ ಮೇಲೊಬ್ಬರು ನುಗ್ಗಿದಾಗ ಕರ್ಣ ಅಶ್ವತ್ಥಾಮನನ್ನು ಕೊಲ್ಲುವುದಕ್ಕೆ ಹಿಂಜರಿಯುತ್ತಾನೆ; ಕಾರಣ ಅವನು ಬ್ರಾಹ್ಮಣನೆಂದು. ಇದನ್ನು ಕೇಳಿ ಅಶ್ವತ್ಥಾಮ ತಾನು ಬ್ರಾಹ್ಮಣನಲ್ಲವೆಂದು ಹೇಳುತ್ತ ತನ್ನ ಜನಿವಾರವನ್ನು ಕಿತ್ತೆಸೆಯುತ್ತಾನೆ. ಈ ಅಂಶವನ್ನು ಪಂಪನು ಬಿಟ್ಟಿದ್ದಾನೆ; ಉಳಿದೆಡೆಗಳಲ್ಲಿ ಸಾದೃಶ್ಯ ಗಳಿವೆ.
೪೭. ಅಂತರ್ಭೇದದೊಳ್–ರಹಸ್ಯವಾದ ಭೇದೋಪಾಯದಲ್ಲಿ, ಆ ಗಾಂಗೇಯರಂ– ಆ ಭೀಷ್ಮರನ್ನು, ಅಂತು–ಹಾಗೆ, ಛಿದ್ರಿಸಿದರ್–ಒಡೆದರು, ನಾಶಮಾಡಿದರು; ಈಗಳ್– ಈಗ, ಇಂತು–ಹೀಗೆ, ಪುಸಿದು–ಸುಳ್ಳು ಹೇಳಿ, ಈ ಘಟೋದ್ಭವನಂ–ಈ ದ್ರೋಣನನ್ನು, ಕೊಂದರ್–ಕೊಂದರು; ಆ ಕೌಂತೇಯರ–ಆ ಪಾಂಡವರ, ಆಯಕ್ಕೆ–(ವಿಜಯದ) ಲಾಭಕ್ಕೆ, ಗೆಂಟು–ದೂರವು, ಎಂತೆಂತಕ್ಕುಂ–ಹೇಗೆ ಹೇಗೆ ಆಗುವುದೊ, ಅದಂ–ಅದನ್ನು, ಮದುದ್ಯ ಮಮೆ–ನನ್ನ ಕಾರ್ಯವೇ, ಪ್ರಯತ್ನವೇ, ಪೇೞ್ಗೆ–ಹೇಳಲಿ, ಆ ವೈರಿಗಳ್ಗೆ–ಆ ಹಗೆಗಳಿಗೆ, ಆಂ– ನಾನು, ಎಂತು–ಹೇಗೆ, ಒಲ್ವೆಂ–ಒಲಿಯುತ್ತೇನೆ, ಒಳ್ಪಂ–ಒಳ್ಳೆಯತನವನ್ನು, ತಳೆವಂತು– (ಪಾಂಡವರ ವಿಷಯದಲ್ಲಿ) ಹೊಂದುವ ಹಾಗೆ, ತೇಜಂ–ತೇಜಸ್ಸು, ಎನಗೆ–ನನಗೆ, ಇಂ– ಇನ್ನು, ಎಂತಕ್ಕು–ಹೇಗೆ ಆಗುವುದು? ಇಂ ಪೇೞಿರೇ–ಇನ್ನು ನೀವು ಹೇಳಿರಿ.
೪೮. ಚಲಮನೆ–ಹಿಡಿದ ಪಟ್ಟನ್ನೇ ಹಿಡಿಯುವ ಎಂದರೆ ಹಟವನ್ನೇ, ಪೇೞ್ವೊಡೆ– ಹೇಳುವ ಪಕ್ಷದಲ್ಲಿ, ಅಯ್ವರುಮಂ–ಐದು ಜನ ಪಾಂಡವರನ್ನೂ, ಅಯ್ದು–ಐದು, ಅೞಿಯೂರೊಳೆ–ಕುಗ್ರಾಮಗಳಲ್ಲಿಯೇ, ಬಾೞಿಸು ಎಂದು–ಜೀವಿಸುವ ಹಾಗೆ ಮಾಡು ಎಂದು, ಮುಂ–ಮೊದಲು, ಬಲಿ ಬಲಸೂದನಂ–ಬಲಿ ಚಕ್ರವರ್ತಿಯ ಶಕ್ತಿಯನ್ನು ಧ್ವಂಸ ಮಾಡಿದ ಶ್ರೀಕೃಷ್ಣನು, ನುಡಿಯೆಯುಂ–ಹೇಳಿದರೂ, ಕುಡದೆ ಇರ್ದುದೆ–ಕೊಡದೆ ಇದ್ದುದೇ, ಪೇೞ್ಗುಂ–ಹೇಳುತ್ತದೆ; ಮೆಯ್ಗಲಿತನಮಂ–ಶೌರ್ಯವನ್ನು, ಸರಿತ್ಸುತ ಘಟೋದ್ಭವರಂ–ಭೀಷ್ಮ ದ್ರೋಣರನ್ನು, ಪೊಣರ್ದಿಕ್ಕಿ–ಯುದ್ಧ ಮಾಡಿ ಸಂಹರಿಸಿ, ಗೆಲ್ದರೊಳ್–ಗೆದ್ದ ಪಾಂಡವರಲ್ಲಿ, ಕಲಹಮೆ–ಯುದ್ಧವೇ, ಎಯ್ದೆ–ಚೆನ್ನಾಗಿ, ಹೇಳುತ್ತದೆ; ಕೌರವೇಶ್ವರಾ–ದುರ್ಯೋಧನನೇ, ಪೆಱತು ಪೇೞ್ವೆಡೆ ಆವುದೋ–ಬೇರೆ ಹೇಳುವ ಅವಕಾಶ ಯಾವುದೋ? ಯಾವುದೂ ಇಲ್ಲ.
ವಚನ : ಪೆಱತು ಮಂತಣಕ್ಕೆ–ಬೇರೆ ಆಲೋಚನೆಗೆ; ಒಲ್ಲಣಿಗೆ [ಯಂ]–ಒದ್ದೆ ಬಟ್ಟೆ ಯನ್ನು; ಪಿೞಿವಂತೆ–ಹಿಂಡುವಂತೆ; ತಳಂ–ಅಂಗೈ; ಸುರುಳ್ವಿನಂ–ಸುರುಟಿಕೊಳ್ಳುತ್ತಿರಲು; ಮುಯ್ಯೇೞ್ಸೂೞ್–ಇಪ್ಪತ್ತೊಂದು ಸಲ, ಪಿೞಿದ–ಹಿಂಡಿದ; ತಿದಿಯುಗಿದು–ಚರ್ಮವನ್ನು ಸುಲಿದು; ಮಿಡಿದನಿತು ಬೇಗದಿಂ–ಚಿಟಿಕೆ ಹಾಕುವಷ್ಟು ಹೊತ್ತಿನಲ್ಲಿ; ಪುಡಿಯೊಳ್– ಧೂಳಿನಲ್ಲಿ; ತೊತ್ತೞದುೞಿದು–ಸೊಪ್ಪುಸೊಪ್ಪಾಗಿ ತುಳಿದು; ರೂಕ್ಷರಾಕ್ಷಸನಂ–ಕ್ರೂರ ನಾದ ರಾಕ್ಷಸನನ್ನು; ಆಲೋಕಾಂತರಂ–ಲೋಕದ ಒಳಗೂ ಹೊರಗೂ; ನೆಗೞೆ–ಪ್ರಸಿದ್ಧವಾಗಲು; ಒಲ್ಲಣಿಗೆ ಉದ್ರಪಟ್ಟಿಕಾ (ಸಂ), ‘ಶಬ್ದವಿಹಾರ’ ವನ್ನು ನೋಡಿ.
೪೯. ನೆಗೞ್ದ–ಪ್ರಸಿದ್ಧವಾದ, ಕಲಿತನದ–ಶೌರ್ಯದ, ಚಾಗದ–ದಾನದ, ಬಗೆ–ರೀತಿ, ತನ್ನೊಳ್–ತನ್ನಲ್ಲಿ, ನೆಗೞ್ತೆವೆತ್ತು–ಪ್ರಸಿದ್ಧಿಯನ್ನು ಪಡೆದು, ನೆಗೞ್ದಿರೆ–ಉಂಟಾಗಿರಲು, ಸಂದಂಗೆ–ಸಂದವನಿಗೆ ಎಂದರೆ ಹೆಸರುವಾಸಿಯಾದವನಿಗೆ, ಅಗಣಿತಗುಣಂಗೆ–ಅಸಂಖ್ಯಗುಣ ಗಳುಳ್ಳವನಿಗೆ, ಕರ್ಣಂಗೆ–ಕರ್ಣನಿಗೆ, ಒಗಸುಗಮೇ–ಅತಿಶಯವೇ? ಅಲ್ಲ; ಅರಸಾ– ರಾಜನೇ, ಬೀರವಟ್ಟಮಂ–ವೀರಪಟ್ಟವನ್ನು ಕಟ್ಟು, ಎಂದರೆ ಕಲಿತನದಲ್ಲೂ, ದಾನದಲ್ಲೂ, ಗುಣದಲ್ಲೂ, ನಡತೆಯಲ್ಲೂ, ಸುಪ್ರಸಿದ್ಧನಾದ ಕರ್ಣನಿಗೆ ವೀರಪಟ್ಟವನ್ನು ಕಟ್ಟುವುದು ಏನೂ ಹೆಚ್ಚಲ್ಲ; ಆದ್ದರಿಂದ ದುರ್ಯೋಧನನೇ, ಕರ್ಣನಿಗೆ ಸೇನಾಪತಿಯ ಪದವಿಯನ್ನು ಕೊಡು.
೫೦. ರಥಯಾನಪಾತ್ರದಿಂ–ರಥವೆಂಬ ನಾವೆಯಿಂದ, ಪರರಥಿನೀ ಜಳ ನಿಧಿಯ– ಶತ್ರುಸೈನ್ಯ ಸಾಗರದ, ಪಾರಮಂ–ಆಚೆಯ ತೀರವನ್ನು, ಸಲ್ವ–ಸೇರುವ, ಜಗತ್ಪ್ರಥಿತಭುಜ ದರ್ಪದಿಂದೆ–ಲೋಕಪ್ರಸಿದ್ಧವಾದ ಬಾಹು ಬಲಗರ್ವದಿಂದ, ಅತಿರಥಮಥನಂ–ಅತಿರಥ ರನ್ನು ಧ್ವಂಸಮಾಡುವವನಾದ, ಕರ್ಣಂ–ಕರ್ಣಂ, ಕರ್ಣಧಾರಂ ಅಲ್ಲವೆ–ಹಡಗನ್ನು, ನಾವೆ ಯನ್ನು ನಡೆಯಿಸುವವನಲ್ಲವೆ? ಹೌದು.
ವಚನ : ಮನದೆಗೊಂಡು–ಮನಸ್ಸಿನಲ್ಲಿ ಸ್ವೀಕರಿಸಿ ಎಂದರೆ ಒಪ್ಪಿ;
೫೧. ಅಂಗಮಹೀತಳಾಧಿಪಾ–ಕರ್ಣನೇ, ನಿನಗೆ, ಪಾಂಡವಬಲಂ–ಪಾಂಡವರ ಸೈನ್ಯ, ಉಂತೆ–ಸುಮ್ಮನೆ, ನಡುಗುವುದು–ಹೆದರುತ್ತದೆ, ಅರ್ಜುನಂ ಎಂಬಂ–ಅರ್ಜುನನೆನ್ನುವ ವನು, ಉರ್ಕುಡುಗಿ–ಗರ್ವ ಕುಗ್ಗಿ, ಸುರುಳ್ವನ್–ಸಂಕೋಚಗೊಳ್ಳುತ್ತಾನೆ ಎಂದರೆ ಮುದುರಿ ಕೊಂಡು ಬಿಡುತ್ತಾನೆ; ಈ ಎಡೆಗೆ–ಈ ಸಮಯಕ್ಕೆ, ಪೆಱರ್ ಆರ್ ದೊರೆ–ಬೇರೆ ಯಾರು ಅರ್ಹರು? ಪೇೞ್–ಹೇಳು, ವೀರಪಟ್ಟಮಂ–ವೀರಪಟ್ಟವನ್ನು, ತಡೆಯದೆ–ತಡಮಾಡದೆ, ಕಟ್ಟಿ–ಕಟ್ಟಿಕೊಂಡು, ವೈರಿಗಳ–ಹಗೆಗಳನ್ನು, ಪಟ್ಟನೆ–ಪಟ್ಟೆಂದು, ಪಾಱಿಸಿ–ಹಾರಿ ಹೋಗು ವಂತೆ ಮಾಡಿ, ಎನ್ನ ಬೆಳ್ಗೊಡೆಯುಮಂ–ನನ್ನ ರಾಜ್ಯ ಚಿಹ್ನವಾದ ಬಿಳಿ ಕೊಡೆಯನ್ನೂ, ಎನ್ನಪಟ್ಟಮುಮಂ–ನನ್ನ ರಾಜ ಪಟ್ಟವನ್ನೂ, ಎನ್ನುಮಂ–ನನ್ನನ್ನೂ, ಕಾವುದು–ಕಾಪಾಡು ವುದು. ವೈರಿಗಳ ಎಂಬಲ್ಲಿರುವ ಷಷ್ಠೀವಿಭಕ್ತಿ ದ್ವಿತೀಯಾ ವಿಭಕ್ತಿಯ ಅರ್ಥವನ್ನುಳ್ಳದ್ದು, “ತೆಂಕನಾಡ ಮಱೆಯಲ್ಕಿನ್ನುಂ ಮನಂಬರ್ಕುಮೇ” ಎಂಬಲ್ಲಿ ಇರುವ ಹಾಗೆ.
ವಚನ : ನಿನ್ನಾಳ್ಗಳೊಳ್–ನಿನ್ನ ಸೇವಕರಲ್ಲಿ; ಆನಾರದೊರೆಯಂ–ನಾನು ಯಾರಿಗೆ ಸಮಾನ? ಎಣ್ಬೆರಲಪಟ್ಟಂ–ಎಂಟು ಬೆರಳಷ್ಟು ಅಗಲವಾಗಿರುವ ಹಣೆಗೆ ಕಟ್ಟುವ ಪಟ್ಟಿ, ಬದ್ದವಣಂ (ಸಂ) ವರ್ಧಮಾನ–ಮಂಗಳ ವಾದ್ಯಗಳು; ಕನಕಪೀಠದೊಳ್–ಸುವರ್ಣದ ಪೀಠದಲ್ಲಿ.
೫೨. ಪಱೆಗಳ್–ಭೇರಿಗಳು, ಭೋರೆಂದು–ಭೋರೆಂಬುದಾಗಿ, ಓರಂತೆ–ಕ್ರಮವಾಗಿ, ಮೊರೆಯೆ–ಶಬ್ದ ಮಾಡಲು, ಮಂಗಳಗೀತಿಗಳ್–ಶುಭ ಸಂಗೀತಗಳು, ನೆರೆಯೆ–ಸೇರಲು, ಗಣಿಕಾನೀಕಂ–ವೇಶ್ಯಾ ಸಮೂಹವು, ಬಂದು, ಆಡೆ–ಕುಣಿಯಲು; ಕುರುಪರಿವೃಢಂ–ಕುರು ರಾಜ ದುರ್ಯೋಧನನು, ಪುಣ್ಯಜಲಂಗಳಂ–ಪುಣ್ಯ ತೀರ್ಥಗಳ ನೀರುಗಳನ್ನು, ತರಿಸಿ, ಮಿಸಿಸುತ್ತೆ–ಸ್ನಾನ ಮಾಡಿಸುತ್ತ ಎಂದರೆ ಅಭಿಷೇಕ ಮಾಡುತ್ತ, ಕರ್ಣಂಗೆ–ಕರ್ಣನಿಗೆ, ಆ ವೀರ ಪಟ್ಟದ–ಆ ವೀರಪದವಿಯ, ಪಟ್ಟಮಂ–ವಸ್ತ್ರವನ್ನು, ತಾಂ–ತಾನು, ತನ್ನ ಕೈಯೊಳೆ–ತನ್ನ ಕೈಗಳಿಂದಲೇ, ಕಟ್ಟಿದಂ–ಹಣೆಗೆ ಕಟ್ಟಿದನು, “ಹರಿಣಿಯೆನಿಪಾ ವೃತ್ತಂ ತೋಱಲ್ ನಸಂಮರ ಸಲಗಂ.”
ವಚನ : ನೊಸಲೊಳ್–ಹಣೆಯಲ್ಲಿ; ಅಸದಳಂ–ಅತಿಶಯವಾಗಿ, ಅಸಮಾನವಾಗಿ; ಉಪಾಶ್ರಯಂ ಬಡೆಯೆ–ಆಶ್ರಯವನ್ನು ಹೊಂದಲು; ಸೇಸೆಯನಿಕ್ಕಿ–ಮಂತ್ರಾಕ್ಷತೆಯನ್ನು ಹಾಕಿ; ತುಡುಗೆಗಳೆಲ್ಲಮಂ–ಎಲ್ಲ ಒಡವೆಗಳನ್ನು; ನೆಱೆಯೆ–ಪೂರ್ಣವಾಗಿ; ದೇವ ಸಬಳದ– ದೇವ ಮಾನದ?; ಮಂಡನಾಯೋಗದೊಳ್–ಅಲಂಕಾರಗಳಲ್ಲಿ; ಪಣ್ಣಿದ–ಸಿದ್ಧಪಡಿಸಿದ, ಸಿಂಗರಿಸಿದ; ತಡವಿಕ್ಕಿದಂತೆ–ಹಿರಿದು ಮಾಡಿದ ಹಾಗೆ, ತಡಂ–ದೊಡ್ಡದು, ಹಿರಿದು; ಬೂತು ಗಳ್ಗೆಲ್ಲಂ–ಪ್ರಾಣಿಗಳಿಗೆಲ್ಲ; ನಿಯೋಗಿಗಳ್–ಕಾರ್ಯಕರ್ತರು; ಪುಂಜಿಸಿದ–ರಾಶಿ ಹಾಕಿದ; ಅರ್ಥಿಜನಕ್ಕೆ–ಬೇಡುವವರಿಗೆ, ಗೋಸನೆಯಿಟ್ಟು–ಸಾರಿಸಿ, ಕೂಗಿ ಕರೆಸಿ; ದರ್ಭಾಸ್ತರಣ ದೊಳ್–ದರ್ಭೆ ಹುಲ್ಲಿನ ಚಾಪೆಯ ಮೇಲೆ.
೫೩. ಉದಯಗಿರಿತಟದೊಳ್–ಉದಯ ಪರ್ವತ ಪ್ರದೇಶದಲ್ಲಿ ಎಂದರೆ ಪೂರ್ವ ದಿಕ್ಪ್ರದೇಶದಲ್ಲಿ, ಉದಯಿಸುವ–ಹುಟ್ಟುವ, ಅದಿತಿಪ್ರಿಯ ಪುತ್ತ್ರಂ–ಸೂರ್ಯನು, ಅಲ್ಲದೆ, ಮತ್ತೊರ್ವಂ–ಮತ್ತೊಬ್ಬನು, ಭಾನು–ಸೂರ್ಯ, ದಲ್–ದಿಟವಾಗಿಯೂ, ಒಗೆದಂ–ಹುಟ್ಟಿ ದನು, ಎನಿಪ–ಎನ್ನಿಸಿಕೊಳ್ಳುವ, ತೇಜಸ್ಸಿನ, ಪೊದಳ್ಕೆಯಿಂ–ವ್ಯಾಪ್ತಿಯಿಂದ, ಕರ್ಣ–ಕರ್ಣನು, ಜನದ ಮನಮಂ–ಲೋಕದ ಮನಸ್ಸನ್ನು, ಅಲೆದಂ–ಆವರಿಸಿದನು.
ವಚನ : ಪಾರಗರಪ್ಪ–ಪರಿಣತರಾದ; ಧರಾಮರರ್ಗೆ–ಬ್ರಾಹ್ಮಣರಿಗೆ; ವಾರುವದ ಬೋರಗುದುರೆಗಳೊಳ್–ಒಂದು ಜಾತಿಯ ಕುದುರೆಗಳಲ್ಲಿ; ಪಸುರ್ವೊನ್ನ–ಹಸುರು ಲೋಹದ ಅಥವಾ ಹಸುರು ಚಿನ್ನದ (?); ಶರಶಯನದೊಳ್–ಬಾಣದ ಹಾಸಿಗೆಯಲ್ಲಿ; ಗಾಂಗೇಯನಲ್ಲಿಗೆ–ಭೀಷ್ಮನ ಬಳಿಗೆ, ಬಲವಂದು–ಪ್ರದಕ್ಷಿಣೆ ಮಾಡಿ; ತದೀಯ– ಅವನ;
೫೪. ಕರ್ಣನು ಭೀಷ್ಮರಿಂದ ಕ್ಷಮೆಯನ್ನು ಯಾಚಿಸುವುದು: ಆಂ–ನಾನು, ಮಾತಱಿ ಯದೆ–ಏನು ಹೇಳಬೇಕೆಂಬುದನ್ನು ತಿಳಿಯದೆ, ನಿಮ್ಮಡಿಯಂ–ನಿಮ್ಮ ಪಾದಗಳನ್ನು, ನಿಮ್ಮನ್ನು, ನೋಯೆ–ನೊಂದುಕೊಳ್ಳುವಂತೆ, ನುಡಿದೆಂ–ಮಾತಾಡಿದೆನು; ಉಱದೆ–ಇರದೆ, ಏಳಿಸಲ್–ತಿರಸ್ಕಾರ ಮಾಡಲು, ಎಮ್ಮಳವೆ, ಏನ್–ನಮಗೆ ಸಾಧ್ಯವೇನು? ಅಜ್ಜ–ತಾತನೆ, ಆ ಮನದ ಉಮ್ಮಚ್ಚಮಂ–ಮನದ ಆ ಕೋಪವನ್ನು, ಮಱೆವುದು–ಮರೆತು ಬಿಡುವುದು; ನಿಮ್ಮಂ–ನಿಮ್ಮನ್ನು, ಎರೆಯಲೆ–ಬೇಡುವುದಕ್ಕಾಗಿಯೇ, ಬಂದೆಂ–ಬಂದೆನು, “ಉಮ್ಮಚ್ಚಂ–ಅಸಂಬದ್ಧಂ ಭಂಗೀಭಣಿತಂ ಕ್ರೋಧಃ” ಎಂದು ಹೇಮಚಂದ್ರಾಚಾರ್ಯ (ದೇಶೀನಾಮ ಮಾಲಾ).
೫೫. ಆ ಪಾಂಡುಸುತರಂ–ಆ ಪಾಂಡವರನ್ನು, ನಿಮ್ಮಡಿಯಂ–(ಪೂಜ್ಯರಾದ) ನೀವು ಕೂಡ, ಧುರದೊಳ್–ಯುದ್ಧದಲ್ಲಿ, ಗೆಲಲ್–ಗೆಲ್ಲಲು, ಅರಿಯರುಂ–ಅಸಾಧ್ಯರಾದವರು, ಎಮ್ಮಂದಿಗರ್–ನಮ್ಮಂಥವರು; ಗೆಲ್ವರೆಂಬುದು–ಗೆಲ್ಲುತ್ತಾರೆ ಎನ್ನುವುದು, ಅಚ್ಚರಿಯಲ್ತೆ– ಆಶ್ಚರ್ಯವಲ್ಲವೆ? ಎಂತುಂ–ಹೇಗೂ, ಹರಿಗನೊಳ್–ಅರ್ಜುನನಲ್ಲಿ, ಇಱಿದು–ಹೋರಾಡಿ, ಎನ್ನ ಚಲಮನೆ–ನನ್ನ ಛಲವನ್ನೇ, ಮೆಱೆವೆಂ–ಪ್ರದರ್ಶಿಸುತ್ತೇನೆ; ಇಲ್ಲಿ “ಗೆಲಲರಿಯ [ರನಾ] ಪಾಂಡುಸುತರಂ” ಎಂದು ಪಾಠವಿರಬೇಕು.
ವಚನ : ಅಹರ್ಪತಿ ಸುತನಂ–ಸೂರ್ಯನ ಮಗ ಕರ್ಣನನ್ನು.
೫೬. ನುಡಿವುದಂ–ಹೇಳುವುದನ್ನು, ನೀಂ–ನೀನು, ಪತಿಭಕ್ತಿಯ–ಸ್ವಾಮಿಭಕ್ತಿಯ, ಪೆಂಪಿಂ–ಹಿರಿಮೆಯಿಂದ, ನುಡಿದಯ್–ಹೇಳಿದೆ; ಪೆಱತಂದದಿಂ–ಬೇರೆ ರೀತಿಯಿಂದ, ನುಡಿದೆಯಲ್ತೆ–ಮಾತಾಡಲಿಲ್ಲವಲ್ಲವೆ? ಇಲ್ಲಿ ನುಡಿ [ಯೆ] ಯಲ್ತೆ ಎಂದು ಪಾಠವಿರ ಬೇಕೇನೊ? ಮದಾಯಂ–ನನ್ನ ಸಾಮರ್ಥ್ಯವು, ಅಮೋಘಂ–ವ್ಯರ್ಥವಲ್ಲದ್ದು (ಹೀಗೆಂದು ಭೀಷ್ಮ ತನ್ನನ್ನು ತಾನೇ ಹೊಗಳಿಕೊಳ್ಳುವನೆ? ಆದ್ದರಿಂದ ನನ್ನ ಲಾಭವು, ನನ್ನ ದರ್ಶನ ಲಾಭವು ವ್ಯರ್ಥವಲ್ಲದ್ದು ಎಂದಾಗಬಹುದು; ಆಯಶಬ್ದಕ್ಕೆ ಸಾಮರ್ಥ್ಯ ಎಂಬ ಅರ್ಥ ಕಾಣುವು ದಿಲ್ಲ); ಸೂೞ್–ಸರದಿಯನ್ನು, ಪಡೆಯಲ್ಕೆ–ಪಡೆಯುವುದಕ್ಕೆ, ಎನಗೆ–ನನಗೆ, ಅಕ್ಕುಂ– ಆಗುತ್ತದೆ; ಇಂ–ಇನ್ನು, ಎಡೆಯೊಳ್–ನಡುವೆ, ಎಂದೆಂ–ಎಂದು ಹೇಳಿದೆನು; ಅದೆಂದುದು– ಹೇಳಿದ ಆ ಮಾತು, ಅದೇಂ–ಅದೇನು, ತಪ್ಪಾದುದೆ–ತಪ್ಪಾಯಿತೆ? ನಮ್ಮೊವಜರ್– ನಮ್ಮಿಬ್ಬರ ಗುರುಗಳು, ಜಸಂಬಡೆದ–ಕೀರ್ತಿವಂತರಾದ, ಭಾರ್ಗವರ್–ಪರಶುರಾಮರು, ಅಪ್ಪುದಱಿಂದಂ–ಆಗಿರುವುದರಿಂದ, ಅಂಗಮಹೀಪತೀ–ಕರ್ಣನೇ, ನಂಟ [ರೆಂ]–ನಾವು ನಂಟರಾಗಿದ್ದೇವೆ.
ವಚನ : ಮಕ್ಕಳ ಲೆಕ್ಕದ–ಮಕ್ಕಳ ಲೆಕ್ಕದಲ್ಲಿ, ಎಂದರೆ ಕುಂತಿಯ ಗಾಂಧಾರಿಯ ಮಕ್ಕಳು ಹೇಗೋ ಹಾಗೆ; ಮೊಮ್ಮಗನಾಗಿರುವೆ.
೫೭. ಕುರುಮಹೀಪತಿ–ದುರ್ಯೋಧನನು, ನಿನ್ನನೆ–ನಿನ್ನನ್ನೇ, ನಚ್ಚಿದಂ–ನಂಬಿದನು; ನಿನ್ನ, ಶರಾಳಿಗಳ್ಗೆ–ಬಾಣಗಳ ಸಮೂಹಕ್ಕೆ, ಅರಿಸಾಧನಸಂಪದಂ–ಶತ್ರು ಸೈನ್ಯದಸಂಪತ್ತೆಲ್ಲಾ, ಮುನ್ನಂ–ಮೊದಲು, ನಡುಗುತ್ತುಮಿರ್ಪುದು–ಹೆದರುತ್ತಿದೆ; ಅಂತೆ–ಹಾಗೆಯೇ, ಶಸ್ತ್ರ ಸಂಪನ್ನನೆ ಆಗಿ–ಆಯುಧಗಳ ಸಂಪತ್ತುಳ್ಳವನಾಗಿ, ಶಲ್ಯನನೆ–ಶಲ್ಯರಾಜನನ್ನೇ, ಸಾರಥಿ ಯಾಗಿರೆ ಮಾಡಿ–ಸಾರಥಿಯಾಗಿರುವಂತೆ ಮಾಡಿಕೊಂಡು, ನೀಂ–ನೀನು, ನಿನ್ನಯ ಬಲ್ಲಮಾೞ್ಕೆ ಯೊಳ್–ನೀನು ಬಲ್ಲ ರೀತಿಯಲ್ಲಿ, ಕಾದು–ಯುದ್ಧ ಮಾಡು; ಅಂಗವಲ್ಲಭಾ–ಕರ್ಣನೇ, ನಿನಗೆ, ಇದಂ–ಈ ಮಾತನ್ನು, ನುಡಿದೆಂ–ಹೇಳಿದೆನು.
೫೮. ಎನೆ–ಎನ್ನಲು, ಕುಲದ ಚಲದ ಒಳ್ಪಿನ–ಒಳ್ಳೆಯ ಕುಲವನ್ನುಳ್ಳ ಚಲವನ್ನುಳ್ಳ, ಭೂಪನಂ–ರಾಜನಾದ ಶಲ್ಯನನ್ನು, ಎನಗೆ–ನನಗೆ, ತೇರಂ–ರಥವನ್ನು, ಎಸಗು–ನಡೆಯಿಸು, ಎಂದೊಡೆ–ಎಂದು ಕೇಳಿದರೆ, ಸದ್ವಿನಯಮುೞಿದು–ಒಳ್ಳೆಯ ವಿನಯವನ್ನು ಬಿಟ್ಟು, ಉರ್ಕಿ–ಗರ್ವಿಸಿ, ಕುಲಹೀನನೆಂಬ ಪರಿವಾದಂ–ಹೀನಕುಲದವನೆಂಬ ಅಪವಾದವು, ಈಗಳ್–ಈಗ, ಎನಗೆ ಆಗಿರದೇ–ನನಗೆ ಆಗಿರುವುದಲ್ಲವೇ ಏನು?
೫೯. ಆಯದ–ಸ್ಥಿರತೆಯನ್ನುಳ್ಳ, ಕಟ್ಟಾಳ್–ಶೂರರು, ನೀಂ–ನೀವು, ಈ ಯುಗ ದೊಳ್–ಈ ಯುಗದಲ್ಲಿ, ಮೊದಲ್–ಮೊದಲಿಗರಾಗಿರುವರು; ಪೆಱರುಂ ಒಳರೆ–ಇತರರೂ ಇದ್ದಾರೆಯೆ? ಧಾತ್ರನಿಂ–ವಿಧಿಯಿಂದ, ಸಾವಕ್ಕೆ–ಮರಣವಾಗಲಿ, ಜಯಶ್ರೀಯಕ್ಕೆ–ಗೆಲು ವಿನ ಸಂಪದವುಂಟಾಗಲಿ, ಕಟ್ಟಾಯದ–ಶೌರ್ಯದ, ಬೞಿ ಸಂದು–ಮಾರ್ಗವಾಗಿ ಹೋಗಿ, ಆಂ–ನಾನು, ನಿಮ್ಮಂ–ನಿಮ್ಮನ್ನು; ಮೆಚ್ಚಿಸುವೆಂ–ಮೆಚ್ಚಿಸುತ್ತೇನೆ.
ವಚನ : ಪಾೞಿಯ–ಕ್ರಮದ, ಧರ್ಮದ; ಪಸುಗೆಯ–ವಿವೇಕದ; ಮನದೆಗೊಂಡು– ಮನಸ್ಸಿನಲ್ಲಿ ಒಪ್ಪಿ, ಮೆಚ್ಚಿ, ಉಭಯ ಕುಲಶುದ್ಧಂ–ತಂದೆ ತಾಯಿಗಳಿಬ್ಬರ ಕುಲಗಳಿಂದಲೂ ನಿರ್ಮಲನಾದವನು; [ಎಂ] ಬು ಕೆಯ್ವೊಡಂ–ಹೇಳಿದ್ದನ್ನು ಮಾಡುವ ಪಕ್ಷದಲ್ಲೂ ಮಕರ ವ್ಯೂಹ–ಮೊಸಳೆಯಾಕಾರದ ಸೇನಾರಚನೆ ಪರಸೈನ್ಯ ಭೈರವಂ–ಶತ್ರುಸೈನ್ಯಗಳಿಗೆ ಭಯ ಪ್ರದನಾದವನು, ಅರ್ಜುನ.
೬೦. ಸಂಸಪ್ತಕರ್ಕಳ್–ಸಂಸಪ್ತಕರು, ಪಿರಿದುಂ–ಹಿರಿದಾದ, ಕಾಯ್ಪಿಂದಂ–ಕೋಪ ದಿಂದ, ಎನ್ನೊಳ್ ನೆರೆದು–ನನ್ನಲ್ಲಿ ಸೇರಿ, ಎದುರಿಸಿ, ಇಱಿಯಲ್–ಯುದ್ಧ ಮಾಡಲು, ಪೂಣ್ದು–ಪ್ರತಿಜ್ಞೆ ಮಾಡಿ, ಅತ್ತ–ಅತ್ತ ಕಡೆಗೆ, ಕರೆವರ್–ಕರೆಯುತ್ತಿದ್ದಾರೆ; ಮತ್ತೆ–ಪುನಃ, ಇತ್ತ–ಇತ್ತಕಡೆ, ಕರ್ಣಂ–ಕರ್ಣನು, ಚಲ ಚಲದೆ–ಅತಿಶಯವಾದ ಛಲದಿಂದ, ಇಱಿಯಲ್– ಯುದ್ಧ ಮಾಡಲು, ನಿಂದಂ–ನಿಂತನು; ಏಗೆಯ್ವುದು–ಈಗ ಏನು ಮಾಡುವುದು, ಎಂ [ದ]– ಎಂದು ಹೇಳಿದ, ಆ ನರನಂ–ಆ ಅರ್ಜುನನನ್ನು, ಮುನ್ನಂ–ಮೊದಲು, ತ್ರಿಗರ್ತಾಧಿಪ ಬಲಮಂ–ತ್ರಿಗರ್ತ ದೇಶದ ರಾಜನ ಸೈನ್ಯವನ್ನು, ಅದಂ–ಅದನ್ನು, ನೀಂ–ನೀನು, ನುರ್ಗು– ಧ್ವಂಸ ಮಾಡು, ಎಂದು–ಎಂದು ಹೇಳಿ, ತೇರಂ–ರಥವನ್ನು, ಹರಿ–ಕೃಷ್ಣನು, ಕೊಂಡು–ಓಡಿಸಿ ಕೊಂಡು, ಅತ್ತ–ಆ ಕಡೆಗೆ, ಉಯ್ದಂ–ತೆಗೆದುಕೊಂಡು ಹೋದನು; ಇತ್ತ–ಇತ್ತ ಕಡೆ, ಒರ್ಮೊದಲ್–ಕೂಡಲೇ, ಉಭಯಬಲಂ–ಎರಡು ಸೈನ್ಯಗಳೂ, ತಾಗಿ–ಸಂಘಟಿಸಿ, ಬೇಗಂ– ವೇಗವಾಗಿ, ಕಾದಿತ್ತು–ಯುದ್ಧ ಮಾಡಿತು.
ವಚನ : ಚತುರ್ವಲಂಗಳ್–ಚತುರಂಗ ಸೈನ್ಯಗಳು; ನಟ್ಟಸರಲ್ವಿಡಿದು–ನಾಟಿದ ಬಾಣ ವನ್ನು ಅನುಸರಿಸಿ, ಕರಗದ ಧಾರೆಯಂತೆ–ಕಳಶದಿಂದ ಸುರಿಯುವ ಧಾರೆಯಂತೆ; ಅಂಬಿರಿ ವಿಡುವಿನಂ–ಪ್ರವಾಹವಾಗಿ ಹರಿಯುತ್ತಿರಲು; ಉರ್ಚಿವೋಪ–ಭೇದಿಸಿಕೊಂಡು ಹೋಗುವ, ಕಿತ್ತಂಬುಗಳಿಂ–ಸಣ್ಣ ಬಾಣಗಳಿಂದ; ಧನುರ್ಧರರ್–ಬಿಲ್ಗಾರರು, ಶರನಿಕರಂಗಳಿಂ–ಬಾಣಗಳ ಸಮೂಹದಿಂದ, [ಎ] ಯ್–ಮುಳ್ಳುಹಂದಿಯು, ಪೇಱುವಂತೆ–ಹೊರುವ ಹಾಗೆ, ಅಂಬನೆ– ಬಾಣಗಳನ್ನೇ, ಪೇಱಿ–ಹೊತ್ತು; ಪೆಱಗೆಡೆದ–ಹಿಂದೆ ಬಿದ್ದ, ತುರುಷ್ಕ ತುರಂಗಂಗಳುಮಂ– ತುರ್ಕಿ ದೇಶದ ಕುದುರೆಗಳನ್ನು; ತೊತ್ತೞದುೞಿವ–ಚೆನ್ನಾಗಿ ತುಳಿಯುವ, ಸೊಪ್ಪಾಗುವಂತೆ ತುಳಿಯುವ; ಬಿಟ್ಟಿಕ್ಕುವ–ತೋರಿ ಬಿಡುವ, ಛೂ ಬಿಡುವ; ನಿಷಾದಿಗಳ್–ಮಾವಟಿಗರು; ಪೊರಜೆವಿಡಿದು–ಹಗ್ಗವನ್ನು (ಆನೆಗೆ ಕಟ್ಟಿರುವ) ಹಿಡಿದು; ಕೊರಲ ಬಳೆಗಳೊಳೆ–ಕೊರಳ ಬಳೆಗಳಲ್ಲಿಯೇ, ಕಾಲ್ಗೋದು–ಕಾಲನ್ನು ತೂರಿಸಿ; ಪರಿಯಿಸುವ–ಓಡಿಸುವ, ರಸತ್ತಾರು ಗರುಮಂ–ಆನೆಯ ಮೇಲೆ ಕುಳಿತು ಯುದ್ಧ ಮಾಡುವವರನ್ನು (?), ಇಡುವಿಟ್ಟಿಯ–ಇಡುವ ಈಟಿಯ; ಪಿಡಿಕುತ್ತಿನ–ಹಿಡಿಯನುಳ್ಳ ಚುಚ್ಚುವ ಆಯುಧದ; ಕಕ್ಕಡೆಯ–ಕಕ್ಕಡೆಯೆಂಬ ಆಯುಧದ; ಕೋಳ್ಗೆ–ಹೊಡೆತಕ್ಕೆ; ಮರಪಟಲಂ ಪಾಯ್ದು–ದೊಡ್ಡ ಪೆಟಲಿನಿಂದ ಚಿಮ್ಮುವ ಕಾಯಂತೆ ಹಾರಿ(?); ಕೆಡೆದು–ಕೆಳಗೆ ಬಿದ್ದು, ಅನಾರೂಢಂ–ವಾಹಕರಿಲ್ಲದೆ (?), ಪೇಸೇೞೆ– ಹೇಸಿಗೆ ಅತಿಶಯವಾಗಲು, ತುೞಿದುಕೊಲ್ವ ಕರಿಗಳ–ತುಳಿದು ಕೊಲ್ಲುವ ಆನೆಗಳ; ಕರ– ಸೊಂಡಿಲು, ರದನ–ದಂತ; ಲಾಂಗೂಲ–ಬಾಲ; ಘಾತದಿಂದಂ–ಏಟಿನಿಂದ; ಇಟ್ಟೆಡೆಯೊಳ್– ಇಕ್ಕಟ್ಟುಗಳಲ್ಲಿ; ಕಿಂಕೊೞೆಯಾಗಿ–(?); ಪೆತ್ತ–ಗಟ್ಟಿಯಾದ, ಹೆತ್ತುಕೊಂಡ; ಕೆನ್ನೆತ್ತರೊಳ್– ಕೆಂಪು ರಕ್ತದಲ್ಲಿ; ರೂಪಱಿಯಲಾಗದಂತಿರ್ದ–ಆಕಾರವನ್ನು ತಿಳಿಯಲು ಆಗದಂತಿದ್ದ; ಅಗುರ್ವಂ–ಭಯವನ್ನು; ವಿಕರ್ಣ ಕೋಟಿಗಳಿಂ–ಅಸಂಖ್ಯಾತ ಬಾಣಗಳಿಂದ; ಅಸುಂಗೊಳೆ– ಪ್ರಾಣಾಪಹರಣ ಮಾಡುವಂತೆ; ಅಱಿಕೆಯ ನಾಯಕಂ–ಪ್ರಸಿದ್ಧ ನಾಯಕನಾದ; ಅಗುರ್ವಾಗೆ– ಭಯವುಂಟಾಗುವ ಹಾಗೆ; ಈ ಗದ್ಯದಲ್ಲಿ ಕೆಲವು ವಿಶೇಷಗಳಿವೆ; ಬಾಣಗಳು ನಾಟಿಕೊಂಡು ಕೆಳಗೆ ಬಿದ್ದ ಕುದುರೆಗಳು ಮುಳ್ಳುಗಳನ್ನು ಕೆದರಿಕೊಂಡಿರುವ ಮುಳ್ಳುಹಂದಿಗಳಂತೆ ಕಾಣು ತ್ತಿದ್ದವು. ಕುಲಮುದ್ದನೆಂಬ ವೀರ ಕಾಳಗದಲ್ಲಿ ಹಲವರನ್ನು ಕೊಂದು “ತಾನುಂ ಪಲವುಂ ಏಸುವೆತ್ತು ಎಯ್ವೊದೆದಪ್ಪಿದಪ್ಪೊಲ್ ಕಣೆ ಪಂಜರದೊಳೊಱಗಿ ಭೀಷ್ಮನ್ ವಿೞ್ದಂತೆ ನೆಲಮುಟ್ಟದೆ ವಿೞ್ದೊನ್” ಎಂಬ ಶಾಸನ ವಾಕ್ಯವನ್ನು ಇಲ್ಲಿರುವ ಉಪಮೆಯೊಡನೆ ಹೋಲಿಸ ಬಹುದು [ಸೊರಬ ೧೦, ಕಾಲ 800 ಕ್ರಿ.ಶ.]; ಆನೆಯ ಹೊರಜಿಗಳು; ಬಲವೊರಜೆ ಎಡವೊರಜೆ ಬೆನ್ನಿನ ಮಿಳಿಯ ಜಾಳಿಗೆ ವೊರಜೆ (ಕುವ್ಯಾದ್ರೋ. ೩–೨); ರಸತ್ತಾರುಗ ಶಬ್ದದ ಅರ್ಥ ಅನಿರ್ದಿಷ್ಟ; ‘ಮರಪಟಲಂ’ ಎಂಬುದು ‘ಮರಪೆಟಲಂ’ ಎಂದಿರಬಹುದು; ಮರ–ದೊಡ್ಡದಾದ, ಪೆಟಲಂ–ಪೆಟಲನ್ನು; ಕಿಂಕೊೞೆ, ಬಹುಶಃ ಇದು ಕೀೞ್+=ಕೀೞ್ಕೊೞೆ ಆಗಿರಬಹುದು, ಕೀಳಾದ ಕೊಳೆ ಎಂದರೆ ಜೀರ್ಣವಾದ ವಸ್ತು ಎಂಬರ್ಥವಾಗಬಹುದು.
೬೧. ಎಱಪ ಪತತ್ರಿಗಳಂ–ಮೇಲೆ ಬೀಳುವ ಬಾಣಗಳನ್ನು, ಚಿತ್ರಪತತ್ರಿಯೊಳ್– ವಿಚಿತ್ರವಾದ ಎಂದರೆ ನಾನಾ ಆಕಾರದ ಬಾಣಗಳಿಂದ, ಕಡಿದು–ಕತ್ತರಿಸಿ, ಆಗಳ್–ಆಗ, ಚಿತ್ರ ಸೇನನಂ–ಚಿತ್ರಸೇನನನ್ನು, ಚಿತ್ರ ವಿಧಮಾಗಿ–ನಾನಾ ರೀತಿಯಾಗಿ, ಕೊಂದೊಡೆ–ಕೊಂದರೆ, ಅವನಾ–ಅವನ (ಕೃತವರ್ಮನ) ಭಜುಬಲಂ–ಬಾಹು ಬಲವು, ಧಾತ್ರಿಗೆ–ಲೋಕಕ್ಕೆ, ತಾಂ– ತಾನು, ಚಿತ್ರಮಾಯ್ತು–ಆಶ್ಚರ್ಯಕರವಾಯಿತು.
ವಚನ : ಅತೀತನಾದುದರ್ಕೆ–ಸತ್ತುದಕ್ಕೆ; ಏವೈಸಿ–ದುಃಖಪಟ್ಟು ಮತ್ತು ಕೆರಳಿ.
೬೨. ಚಿತ್ರನ–ಚಿತ್ರನೆಂಬವನ, ವಿಶ್ರುತಶೌರ್ಯಂ–ಪ್ರಸಿದ್ಧವಾದ, ಪರಾಕ್ರಮ, ಅತಿಚಿತ್ರಂ– ಅತಿ ಆಶ್ಚರ್ಯಕರ, ಇದು ಎನಿಸಿ–ಇದು ಎನ್ನಿಸಿ, ತಾಪ–ಎದುರಾಗುವ, ಚಿತ್ರನಂ–ಚಿತ್ರ ನೆಂಬವನನ್ನು, ಅಂತು–ಹಾಗೆ, ಆ ಪ್ರತಿವಿಂಧ್ಯಂ–ಆ ಪ್ರತಿವಿಂಧ್ಯನೆಂಬವನು, ವಿಂಧ್ಯಾಚಲ ಪತಿಯವೊಲ್–ಶ್ರೇಷ್ಠವಾದ ವಿಂಧ್ಯಪರ್ವತದಂತೆ, ಅವಿಚಳಿತಂ–ಸ್ಥಿರನಾಗಿರುವವನು, ಆತನಂ–ಆ ಚಿತ್ರನನ್ನು, ಬಂದಾಂತಂ–ಬಂದು ಎದುರಿಸಿದನು.
೬೩. ಆಂತು–ಎದುರಿಸಿ, ಅವನ ಮೇಗೆ–ಆ ಪ್ರತಿವಿಂಧ್ಯನ ಮೇಲೆ, ಶಿತಶರ ಸಂತತಿಯಂ– ಹರಿತವಾದ ಬಾಣಗಳ ಸಮೂಹವನ್ನು, ಸುರಿಯೆ–ಕರೆಯಲು, ನೋಡಿ, ತಾಂ–ತಾನು, ಶರಪರಿಣತಿಯಂ–ಬಿಲ್ವಿದ್ಯೆಯ ನೈಪುಣ್ಯವನ್ನು, ಎನಗೆ–ನನಗೆ, ತೋರ್ಪಂ–ತೋರಿಸು ತ್ತಾನೆ, ಎನುತ್ತೆ–ಎನ್ನುತ್ತ, ಇರದೆ, ಅಂತು–ಹಾಗೆ, ಅನಿತುಮಂ–ಅಷ್ಟು ಬಾಣಗಳನ್ನು, ಒಡನೆ– ಕೂಡಲೆ, ಎಡೆಯೊಳೆ–ನಡುವೆಯೇ, ಚಿತ್ರಂ–ಚಿತ್ರನು, ಒರ್ಮೆಯೆ–ಒಂದೇ ಸಲಕ್ಕೆ, ಕಡಿದಂ–ಕತ್ತರಿಸಿದನು.
೬೪. ಕಡಿದೊಡೆ–ಕತ್ತರಿಸಿದರೆ, ಕಡುಪಿಂದಂ–ತೀವ್ರತೆಯಿಂದ, ಪ್ರತಿವಿಂಧ್ಯಂ–ಪ್ರತಿ ವಿಂಧ್ಯನು, ಕಿಡಿಕಿಡಿಯಾಗಿ–ಕೋಪಿಸಿ, ಶಿತಾಸ್ತ್ರನಿಕರಮಂ–ಹರಿತವಾದ ಬಾಣಜಾಲವನ್ನು, ಕಡಿದು–ಕತ್ತರಿಸಿ, ಅವನ ರಥಮಂ–ಅವನ ರಥವನ್ನು, ತಲೆಯುಮಂ–ತಲೆಯನ್ನೂ, ಅದೊಂದು ದಾರಣ ಶರದಿಂ–ಅದೊಂದು ಕ್ರೂರವಾದ ಬಾಣದಿಂದ, ಕಡಿದಂ–ಕತ್ತರಿಸಿ ದನು.
ವಚನ : ಅವಂಧ್ಯ–ಬಂಜೆಯಾಗದ ಎಂದರೆ ವ್ಯರ್ಥವಾಗದ; ಆಸ್ಫೋಟಿಸಿ–ಸಿಡಿಯಿಸಿ ಅಥವಾ ಸಿಡಿದು.
೬೫. ಕುರುಸೈನ್ಯಾಂಭೋದಿ–ಕೌರವ ಸೈನ್ಯಸಾಗರವು, ತೂಳ್ದು–ತಳ್ಳಲ್ಪಟ್ಟು, ಎಯ್ದೆ– ಚೆನ್ನಾಗಿ, ಉಗಿದಪುದು–ಆಕರ್ಷಿತವಾಗುತ್ತದೆ; ಇಲ್ಲಿ–ಈ ಯುದ್ಧದಲ್ಲಿ, ಇದಂ–ಈ ಸೈನ್ಯವನ್ನು, ಕೆಯ್ಕೊಳ್ವರ್–ಸಹಾಯವಾಗಿ ಬಂದು ರಕ್ಷಿಸುವವರು, ಆರ್–ಯಾರು? ಈ ಸಂಗರದೊಳ್–ಈ ಕಾಳಗದಲ್ಲಿ, ನಿಲ್ವನ್ನರ್–ಸ್ಥಿರವಾಗಿ ನಿಲ್ಲುವವರು, ಆರ್–ಯಾರು? ಎಂಬೆಡೆಯೊಳ್–ಎನ್ನುವ ಸಮಯಕ್ಕೆ, ಆಚಾರ್ಯ ಪುತ್ರಂ–ದ್ರೋಣನ ಮಗ ಅಶ್ವತ್ಥಾಮನು, ಇದಿರೊಳ್–ಎದುರಿಗೆ, ಆನಲ್ತೆ–ನಾನಲ್ಲವೆ? ಬಂದಿರ್ದೆಂ–ಬಂದಿದ್ದೇನೆ, ಎಂದು, ಎಲ್ಲರು ಮಂ–ಎಲ್ಲರನ್ನೂ, ಸಂತೈಸಿ–ಸಮಾಧಾನಪಡಿಸಿ, ಕಣ್–ಮೂರು ಕಣ್ಣುಗಳು, ನೊಸಲೊಳ್– ಹಣೆಯಲ್ಲಿ; ಬಿಲ್–ಬಿಲ್ಲು, ಚಂಡದೋರ್ದಂಡದೊಳ್–ಉಗ್ರವಾದ ಬಾಹುದಂಡಗಳಲ್ಲಿ; ಕಱೆ–ಕಪ್ಪು ಮಚ್ಚೆ, (ವಿಷದ ಮಚ್ಚೆ), ಕಂಧರದೊಳ್–ಕೊರಳಿನಲ್ಲಿ, ಪೆಱೆ–ಅರ್ಧ ಚಂದ್ರ, ತನ್ನುತ್ತಮಾಂಗಾಂತರದೊಳ್–ತನ್ನ ತಲೆಯ ನಡುವೆ, ಎಸೆಯೆ–ಪ್ರಕಾಶಿಸಲು, ನಿಂದು– ನಿಂತು, ಆಂತುತಂ–ಎದುರಿಸಿದನು.
ವಚನ : ಎಡಗಲಿಸಿದ–ದಾಟಿದ (?); ತಡೆಯದೆ–ತಡಮಾಡದೆ, ಎಡಗಲಿಸಿ–ದಾಟಿ ಎಂದರೆ ಪ್ರತಿವಿಂಧ್ಯನ ಮೇಲೆ ಹಾರಿ ಅವನಿಗೂ ಅಶ್ವತ್ಥಾಮನಿಗೂ ನಡುವೆ ಭೀಮಸೇನನು ಬಂದು ನಿಂತನೆಂದು ಅಭಿಪ್ರಾಯ; ಅದಿರದೆ–ಹೆದರದೆ;
೬೬. ಏನುಮಲ್ಲದ–ಏನೂ ಅಲ್ಲದ ಎಂದರೆ ನಿಷ್ಪ್ರಯೋಜಕವಾದ, ಅೞಿ ಗಂಡರ್– ಅಲ್ಪಶೂರರು, ಉಱದೆ–ಇರದೆ, ನಿನಗೆ, ಇದಿರ್ಚುವರಲ್ಲರ್– ಎದುರಿಸುವವರಲ್ಲ; ಎನ್ನಂ–ನನ್ನನ್ನು, ಆಂಪನಿತು–ಎದುರಿಸುವಷ್ಟು, ಅಳವು–ಶಕ್ತಿಯು, ಉಳ್ಳೊಡೆ–ಇರುವ ಪಕ್ಷದಲ್ಲಿ, ಇತ್ತಮಗುೞ್–ಇತ್ತ ಕಡೆ ತಿರುಗು, ಎಂದು–ಹೇಳಿ, ಶರಾವಳಿಯಿಂದೆ–ಬಾಣನಿಕರ ಗಳಿಂದ, ಪೂೞ್ದೊಡೆ–ಹೂಳಿದರೆ, ಅಂಬಿನ ಸರಿ ಸೋನ ತಂದಲ್–ಬಾಣಗಳ ಮಳೆ ಜಡಿಮಳೆ ತುಂತುರು ಮಳೆಗಳು, ದಲ್–ದಿಟವಾಗಿಯೂ, ಕಂಡರೆಲ್ಲಂ–ನೋಡಿದವರೆಲ್ಲ, ಪೊಸ ತಾಯ್ತು–ಹೊಸದಾಯಿತು, ಎನೆ–ಎನ್ನಲು, ಕುರುಭೂಮಿಗೆ–ಕುರುಕ್ಷೇತ್ರಕ್ಕೆ, ಅಂಬಿನ– ಬಾಣಗಳ, ಮೞೆಗಾಲವಾಯ್ತ, ಮಳೆಯ ಕಾಲವಾಯಿತು; ಭೀಮ–ಭೀಮನು, ಅದೇಂ ಪ್ರತಾಪಿಯೋ–ಅದೇನು ಪ್ರತಾಪಶಾಲಿಯೋ!
೬೭. ಪವನನಂದನಂ–ಭೀಮಸೇನನು, ಗದೆಯೊಳೆ–ಗದಾಯುಧದಲ್ಲಿಯೇ, ಜೆಟ್ಟಿಗಂ– ಶೂರನು, ಎಂಬರ ಎನ್ನುವವರ ಮಾತ್ರ ಮಾತು, ಮಾತದಲ್ಲದು–ಮಾತು ಅಲ್ಲ; ಸುರರ್…. ಕಳ್: ಸುರಸಿಂಧುಪುತ್ರ–ಭೀಷ್ಮ, ಗುರು–ದ್ರೋಣ, ಕೃಪ, ಕರ್ಣ ಎಂಬ ಪ್ರಮುಖರು, ಶರಾಸ ನಾಗಮದೊಳ್–ಧನುರ್ವಿದ್ಯೆಯಲ್ಲಿ, ಇಂತು–ಹೀಗೆ, ನೇರಿದರೆ–ಕಲಿತವರೆ, ಪರಿಣತರಾ ದವರೆ? ಸುರರ್ಕಳ್–ದೇವತೆಗಳು, ಅಂಬರದೊಳ್–ಆಕಾಶದಲ್ಲಿ, ಎಂಬಿನಂ–ಎನ್ನು ತ್ತಿರಲು, ಮರುತ್ಸುತಂ–ಭೀಮಸೇನನು, ಗುರುಪ್ರಿಯನಂದನನಂ–ಅಶ್ವತ್ಥಾಮನನ್ನು, ಬಾಣ ಜಾಲದೆ–ಬಾಣಗಳ ಸಮೂಹಗಳಿಂದ, ಏಂ ಪುದಿದನೋ–ಏನು ಮುಚ್ಚಿದನೋ! ನೇರಿದರ್ ನೇರಿದು+ಅರ್; ನೇರ್=(ತೆ) ನೇರ್ಚು–ಕಲಿ, ಅಭ್ಯಾಸ ಮಾಡು; ಅಥವಾ ನೇರಿದು–ನೇರಾದ, ಸಯ್ತಾದ; ನೇರಿದರ್–ನೆಟ್ಟಗೆ ಇರುವವರು, ವಕ್ರವಿಲ್ಲದವರು.
ವಚನ : ಭೀಮೋದ್ದಾಮ….ಳಿಯ; ಭೀಮ–ಭೀಮನೆಂಬ, ಉದ್ದಾಮ–ವಿಶಾಲವಾದ, ಶಾಮಜಳಧರ–ನೀಲ ಮೇಘದಿಂದ, ವಿಮುಕ್ತ–ಬಿಡಲ್ಪಟ್ಟ, ಶರಾವಳಿಯ–ಬಾಣದ ಸಮೂಹದ, ಬಳಸಂ–ಆವರಿಸುವಿಕೆಯನ್ನು, ಬಳಸಿದಪ್ಪಂ–ಸುತ್ತಲೂ ಮುಚ್ಚುತ್ತಾನೆ.
೬೮. ಅನಳಶಿಖಾಕಳಾಪವನೆ–ಅಗ್ನಿಜ್ವಾಲೆಗಳ ಸಮೂಹವನ್ನೇ, ಭೋರ್ಗರೆದು– ಭೋರೆಂದು ಶಬ್ದಮಾಡಿ, ಉಗುೞ್ವನ್ನಮಪ್ಪ–ಉಗುಳುವಂಥವುವಾದ, ಅಗುರ್ವಿನ–ಭಯಂಕರ ವಾದ, ಶರಸಂಕುಳಂಗಳೊಳೆ–ಬಾಣಗಳ ಗುಂಪುಗಳಲ್ಲಿಯೇ, ಭೋರ್ಗರೆದು–ಭೋರೆಂದು, ಆರ್ದು–ಗರ್ಜಿಸಿ, ಇಸೆ–ಪ್ರಯೋಗಿಸಲು, ಭೀಮನೆಚ್ಚ–ಭೀಮನು ಪ್ರಯೋಗಿಸಿದ, ನಚ್ಚಿನ– ನಂಬಿಕೆಗರ್ಹವಾದ, ಘನಬಾಣ ಜಾಳಮದು–ಆ ಹಿರಿದಾದ ಬಾಣಗಳ ಸಮೂಹ, ನೋಡು ವೊಡೆ–ನೋಡುವುದಾದರೆ, ಆಳಜಾಳವಾಯ್ತು–ಸುಳ್ಳಾದ ಬಲೆಯಾಯಿತು; ಎನೆ–ಎನ್ನಲು, ಗುರುಪುತ್ರನಂಬುಗಳ್–ಅಶ್ವತ್ಥಾಮನ ಬಾಣಗಳು, ಪತತ್ರಿಗಳಂ–(ಭೀಮನ) ಬಾಣಗಳನ್ನು, ಕಡಿದು–ಕತ್ತರಿಸಿ, ಒಟ್ಟಿ–ರಾಶಿಮಾಡಿ, ಸುಟ್ಟುವು–ಉರಿಸಿದುವು, ಆಲಜಾ (ಸಂ) ಆಳ ಜಾಳ; ಆಲ ಎಂದರೆ ಸುಳ್ಳು, ಮಿಥ್ಯೆ; ಜಾಲವೆಂಬುದನ್ನು ಇಲ್ಲಿ ಹಂದರ ಎಂಬರ್ಥದಲ್ಲಿ ಗ್ರಹಿಸ ಬೇಕು. ಸಮೂಹಾರ್ಥದಲ್ಲಿ ಮಿಥ್ಯೆಯ ಗುಂಪು ಎಂದಾಗುತ್ತದೆ; ಬಾಣನ ಕಾದಂಬರಿಯಲ್ಲಿ “ಅನ್ಯಾನಿಚಾಲಜಾಲಾನಿ ದುರ್ಜೀವಿತ ಗೃಹೀತಾ ಚಿಂತಯನ್ತೀ” ಎಂಬ ಪ್ರಯೋಗವಿದೆ; “ಆಲಜಾಲಾನಿ ನಿಸ್ಸಾರಾಣಿ” ಎಂದು ಒಬ್ಬ ವ್ಯಾಖ್ಯಾಕಾರ (ಮಯೂರೇಶ್ವರ) ಹೇಳುತ್ತಾನೆ; “ಪಲವುಮಾಲ ಜಾಲಂಗಳಂ ದುರ್ಜೀವಿಕಾಗೃಹೀತೆಯೆನೆನ್ನೊಳ್ ಚಿಂತಿಸುತ್ತಾಮಿರ್ಪ ನ್ನೆಗಂ” ಎಂದು ಕನ್ನಡ ಕಾದಂಬರಿಯಲ್ಲಿ ಬರುತ್ತದೆ; ಇಲ್ಲಿ ಪಲವುಮಾಲಜಾಲಂಗಳಂ ಎಂಬುದನ್ನು ಅನೇಕ ಮಿಥ್ಯಾಭಿಲಾಷೆಗಳನ್ನು ಎಂದು ಅರ್ಥೈಸಿದ್ದಾರೆ (ಬಿ. ಮಲ್ಲಪ್ಪನವರು, ಕರ್ಣಾಟಕ ಕಾದಂಬರಿ ಉತ್ತರಭಾಗ, ೫೬೭); ೞಕಾರಕ್ಕೆ ಸಂದೇಹ ಇರುವ ಶಬ್ದಗಳಲ್ಲಿ “ಆಳ ಮಾಳ ಮೆಂದು ಠಮಾಳಂ” ಎಂದು ಕೇಶಿರಾಜ ಹೇಳುತ್ತಾನೆ; ಇಲ್ಲಿ ಆಳಂ ಎಂದರೆ ಠಮಾಳಂ– ಮೋಸ, ಸುಳ್ಳು, ಮಿಥ್ಯೆ; ಆದ್ದರಿಂದ ಆಳಜಾಳ ಎಂದರೆ ನಿಸ್ಸಾರ ಅಥವಾ ಮಿಥ್ಯಾಜಾಲ, ಸುಳ್ಳಿನ ಪಂಜರ ಎಂದರ್ಥವಾಗುತ್ತದೆ. ಛಿನ್ನಾಭಿನ್ (?) ಎಂದು ಪಂಪಭಾರತ ಕೋಶದಲ್ಲಿ ಕಾಣಿಸಿರುವ ಅರ್ಥ ಊಹೆಯದು.
ವಚನ : ನಿಶಾತವಿಶಿಖ ಪಂಜರಮಂ–ಹರಿತವಾದ ಬಾಣಗಳ ಹಂದರವನ್ನು; ಕೞಕುೞಂ ಮಾಡಿಯುಂ–ತಾರುಮಾರಾಗಿಸಿಯೂ;
೬೯. ತೇರಂ–ರಥವನ್ನು, ಕುದುರೆಯಂ–ಕುದುರೆಗಳನ್ನು, ಎಸಗುವ–ಚೋದಿಸುವ, ಸಾರಥಿಯಂ–ಸಾರಥಿಯನ್ನು, ಪೊಡರ್ಪ–ಶಕ್ತಿಯನ್ನು, ಅಯ್ದು ಬಾಣದೊಳ್–ಐದು ಬಾಣ ಗಳಲ್ಲಿ, ಉಪಸಂಹಾರಿಸಿ–ನಾಶ ಮಾಡಿ, ತೞತೞ ತೊಳಗುವ–ಥಳಥಳ ಹೊಳೆಯುವ,
ನಾರಾಚದಿಂ–ಬಾಣದಿಂದ, ಭೀಮನ ನೊಸಲಂ–ಭೀಮನ ಹಣೆಯನ್ನು, ಊಱಿ ಎಚ್ಚಂ–ನಾಟಿಸಿ ಪ್ರಯೋಗ ಮಾಡಿದನು;
೭೦. ಮಿಸಗುವ ನೊಸಲಂ–ಹೊಳೆಯುವ ಹಣೆಯನ್ನು, ನಟ್ಟು–ನಾಟಿ, ಅರ್ವಿಸುವಿನೆಗಂ– ವ್ಯಾಪಿಸುತ್ತಿರಲು, ತೂಗಿ–ತೂಗಾಡಿ, ತೊನೆವ–ಅತ್ತಿತ್ತ ಚಲಿಸುವ, ನಾರಾಚಂ–ಬಾಣವು, ಅದು, ತದ್ವದನಾಂಭೋಜ ಸೌರಭಾಕೃಷ್ಟಮಧುಪಮಾಲಾ ಕೃತಿಯಿಂ–ಅವನ ಮುಖ ಕಮಲದ ಸುಗಂಧದಿಂದ ಆಕರ್ಷಿತವಾದ ದುಂಬಿಗಳ ಮಾಲೆಯ ಆಕಾರದಿಂದ, ಏನ್ ಎಸೆದುದೋ–ಏನು ಸೊಗಸಾಯಿತೋ?
೭೧. ನಡೆ–ನಾಟಲು, ನಾರಾಚದ–ಬಾಣದ, ನೋವಿನ–ಯಾತನೆಯ, ನಡುಕಂ–ದುಡಿ ತವು, ಪಿರಿದಾಯ್ತು–ಹೆಚ್ಚಾಯಿತು, ಸರ್ಪರೋಗಿಯ–ವಿಸರ್ಪಿಯೆಂಬ ರೋಗವನ್ನುಳ್ಳವನ, ಸೆರೆಯಂ–ರಕ್ತನಾಳವನ್ನು, ಬಿಡಿಸಿದವೊಲ್–ಕತ್ತರಿಸಿದಂತೆ, ಕದುಷ್ಣ ಕೃಷ್ಣರುಧಿರ ಜಲೌಘಂ– ಉಗುರು ಬೆಚ್ಚಗಿರುವ ಕರಿದಾದ ನೆತ್ತರ ನೀರ ಸಮೂಹವು, ಒಡನೆ–ಕೂಡಲೆ, ಎಚ್ಚು– ಸೂಸಿ, ಪಾಯ್ದತ್ತು–ಹರಿಯಿತು, ಇಲ್ಲಿನ ಉಪಮೆ ಪಂಪನಿಗಿದ್ದ ವೈದ್ಯಶಾಸ್ತ್ರದ ಪರಿಚಯ ವನ್ನು ತೋರಿಸುತ್ತದೆ.
೭೨. ಆ ಮಾರ್ಗಣದಿಂ–ಆ ಬಾಣದಿಂದ, ಎರ್ದೆ–ಎದೆಯು, ನಡುಗಲ್ಕೆ–ನಡುಗುವುದಕ್ಕೆ, ತನು–ಮೈ, ಬೆಮರಲ್–ಬೆವರುವುದಕ್ಕೆ, ನಾಲಗೆ–ನಾಲಗೆಯು, ತೊಡರಲ್–ತೊಡರಿ ಕೊಳ್ಳುವುದಕ್ಕೆ, ತಗುಳ್ದುದು–ಮೊದಲಿಟ್ಟಿತು; ಗುರುತನಯಂ–ಅಶ್ವತ್ಥಾಮನು, ಎಚ್ಚ– ಹೊಡೆದ, ಶಿತನಾರಾಚಂ–ಹರಿತವಾದ ಬಾಣ, ಮತ್ತೆ, ಉೞೆದರಂ–ಉಳಿದವರನ್ನು, ಇತರ ರನ್ನು, ಎಂತುಂ ಮಡಿಪದೆ ಗಡ–ಹೇಗೂ ಕೊಲ್ಲದಿರುತ್ತದೆಯೆ?
ವಚನ : ನಾರಾಚ ಘಾತದಿಂ–ಬಾಣದ ಏಟಿನಿಂದ; ಪುಣ್ಗೂರ್ತು–ಗಾಯವನ್ನು ಹೊಂದಿ(?); ಬಿಲ್ಲಕೊಪ್ಪಂ–ಬಿಲ್ಲಿನ ಅಗ್ರಭಾಗವನ್ನು; ಕಿಱಿದಾನುಂ ಬೇಗಂ–ಸ್ವಲ್ಪ ವಾದರೂ ಹೊತ್ತು; ಎಂತಾನುಂ–ಹೇಗಾದರೂ;
೭೩. ಖರಕರಬಿಂಬದಿಂ–ಸೂರ್ಯ ಮಂಡಲದಿಂದ, ಕಿರಣ ಸಂತತಿಗಳ್–ಕಿರಣಗಳ ಸಮೂಹಗಳು, ಪೊಱಪೊಣ್ಮಿದಪ್ಪುವು–ಹೊರಕ್ಕೆ ಹೊರಟು ಬರುತ್ತವೆ, ಎಂಬರ– ಎನ್ನುವವರ, ನುಡಿ–ಮಾತು, ಪೋಲ್ವೆವೆತ್ತುದು–ಸಾಟಿಯಾಯಿತು, ಎನೆ–ಎನ್ನಲು, ಬಾಣಧಿ ಯಿಂದೆ–ಬತ್ತಳಿಕೆಯಿಂದ, ಇರದೆ–ಬಿಡದೆ, ವಿಸ್ಫುರಿತಶರಂಗಳೆಂಟರ–ಎಂಟು ತೊಳಗುವ ಬಾಣ ಗಳನ್ನು, ಉರ್ಚಿಕೊಂಡು–ಸೆಳೆದುಕೊಂಡು, ಅವಱೊಳ್–ಆ ಬಾಣಗಳಲ್ಲಿ, ಪೊಳೆವ– ಹೊಳೆಯುವ, ಅಯ್ದು ಶರಂಗಳಿಂ–ಐದು ಬಾಣಗಳಿಂದ, ಆ ದ್ವಿಜನ–ಆ ಅಶ್ವತ್ಥಾಮನ, ಸೂತವರೂಥತುರಂಗಮಂಗಳಂ–ಸಾರಥಿ ರಥ ಕುದುರೆಗಳನ್ನು, ಸುರುಳ್ದು–ಸುತ್ತಿ, ಉರುಳ್ವಿನಂ– ಬೀಳುತ್ತಿರಲು, ಎಚ್ಚಂ–ಪ್ರಯೋಗಿಸಿದನು.
೭೪. ಉೞಿದ–ಮಿಕ್ಕ, ಪೆಱವು–ಬೇರೆಯಾದ, ಮೂಱು–ಮೂರು, ಮಿಱು ಮಿಱುಮಿ ಱುಪ–ಹೊಳೆಹೊಳೆಯುತ್ತಿರುವ, ಶಿತಾಸ್ತ್ರಂಗಳಿಂ–ಕೂರ್ಗಣೆಗಳಿಂದ, ದ್ವಿಜನ್ಮನನೊಸಲಂ– ಹಾರುವ ಅಶ್ವತ್ಥಾಮನ ಹಣೆಯನ್ನು, ನೆಱಗೊಳ್ವಿನಂ–ಮರ್ಮವನ್ನು ಭೇದಿಸುವಂತೆ, ಎಚ್ಚೊಡೆ–ಪ್ರಯೋಗಿಸಿದರೆ, ಆ ಮಾರುತಿಯಾ–ಆ ಭೀಮಸೇನನ, ಅದಟುಂ ಅಳವುಂ–ಪರಾ ಕ್ರಮವೂ ಶಕ್ತಿಯೂ, ಕಣ್ದೆಱೆದವೊಲಾಯ್ತು–ಕಣ್ಣುಬಿಟ್ಟ ಹಾಗಾಯಿತು, ಎಂದರೆ ಚೈತನ್ಯ ಮಯವಾಯಿತು.
ವಚನ : ಹೇಮಪುಂಖಾಂಕಿತಂ–ಚಿನ್ನದಗರಿಗಳಿಂದ ಕೂಡಿದ ಬಾಣದ ಹಿಂಭಾಗ; ನಿರ್ಘಾತ ದಿಂದೆ–ಪೆಟ್ಟಿನಿಂದ; ಅೞಿಯೆನೊಂದು–ಸಾಯುವಂತೆ ನೊಂದು; ಸೀಂಟಿ ಕಳೆದು–ಒರಸಿ ನೀಗಿ; ನಡುಕೋಲ್ವರಂ–ಬಾಣದ ಮಧ್ಯದವರೆಗೆ; ಕೂರ್ಗಣೆಗಳಂ–ಹರಿತವಾದ ಬಾಣಗಳನ್ನು; ಗಱಿವೆರಸು–ಗರಿ ಸಮೇತವಾಗಿ; ಕೊಱೆದು–ಕತ್ತರಿಸಿ, ಕಳೆದು–ತೆಗೆದು ಹಾಕಿ;
೭೫. ಅಳವೆನಿತು–ಶಕ್ತಿಯೆಷ್ಟು, ಚಾಪವಿದ್ಯಾಬಳಮೆನಿತು–ಬಿಲ್ವಿದ್ಯೆಯ ಬಲ್ಮೆಯೆಷ್ಟು, ಉಂಟು–ಇದೆಯೋ, ಅನಿತುಂ–ಅಷ್ಟೂ, ಎಯ್ದೆವಂದು–ಕೂಡಿಬಂದು, ಇಲ್ಲಿ–ಈ ಅಶ್ವತ್ಥಾ ಮನಲ್ಲಿ, ಪುದುಂಗೊಳಿಸಿದುದು–ಹುದುವಾಗಿ ಸೇರಿಕೊಂಡಿತು, ಎನೆ–ಎನ್ನಲು, ಅಶ್ವತ್ಥಾಮಂ– ಅಶ್ವತ್ಥಾಮನು, ಕಲ್ಪಾನಲವಿಳಯಾಂತಕ ರೂಪನಾದಂ–ಪ್ರಳಯಾಗ್ನಿಯ ಮತ್ತು ಪ್ರಳಯ ಕಾಲದ ಯಮನ ರೂಪವುಳ್ಳವನಾದನು.
ವಚನ : ಸವ್ಯ–ಎಡದಿಂದ ಬಲಕ್ಕೆ ಸುತ್ತುವ; ಅಪಸವ್ಯ–ಬಲದಿಂದ ಎಡಕ್ಕೆ ಸುತ್ತುವ; ಭ್ರಾಂತ–ತಿರುಗುವ; ಉದ್ಭ್ರಾಂತ–ಮೇಲೆ ಗಿರ್ರೆಂದು ತಿರುಗುವ; ರಥಕಲ್ಪ ವಿಶೇಷ ವಿನ್ಯಾಸಂ ಗಳಂ–ರಥವಿದ್ಯೆಯ ನಾನಾ ರಚನೆಗಳನ್ನು, ರೀತಿಗಳನ್ನು, ಸುಟ್ಟುರೆಯೊಳಗಣ–ಸುಂಟರಗಾಳಿ ಯಲ್ಲಿನ;
೭೬. ಮುಳಿಸಳುರ್ದು–ಕೋಪವು ವ್ಯಾಪಿಸಿ, ಎಯ್ದೆ–ಚೆನ್ನಾಗಿ, ಕಣ್ಗಳೊಳೆ–ಕಣ್ಣು ಗಳಲ್ಲಿಯೇ, ಪೀರ್ವವೋಲ್–ಹೀರುವಂತೆ, ಕುಡಿಯುವಂತೆ; ಉಗ್ರ ಶರಾನಲಾರ್ಚಿ ಯಿಂದೆ–ಭಯಂಕರ ಬಾಣಾಗ್ನಿ ಜ್ವಾಲೆಯಿಂದ, ಅಳುರ್ವವೊಲ್–ಸುಡುವಂತೆ, ವರೂಥಮಂ– ರಥಗಳನ್ನು, ಎಯ್ದೆ ಚೋದಿಸಿ–ಹತ್ತಿರ ಹರಿಯಿಸಿ, ಇಂ–ಇನ್ನು, ಬರ್ದುಕಾಡೆ–ತಪ್ಪಿಸಿ ಕೊಂಡು ಹೋಗೆ, ಎಂದು, ಅಸುಂಗೊಳೆ–ಪ್ರಾಣವನ್ನು ತೆಗೆಯುವಂತೆ, ಮೊನೆಯಂಬು ಗಳ್–ಮೊನಚಾದ ಬಾಣಗಳು, ತನುವಂ–ಮೈಗಳನ್ನು, ಅೞ್ದು–ನಾಟಿ (ಮುಳುಗಿ), ಅೞಿವೋಪಿನಂ–ನಾಶವಾಗುತ್ತಿರಲು (ಕಾಣಲಾಗದಂತಾಗಲು), ಎಚ್ಚು–ಬಾಣಪ್ರಯೋಗ ಮಾಡಿ, ನೆತ್ತರ್–ರಕ್ತ, ಉಚ್ಚಳಿಸಿ–ಚಿಮ್ಮಿ, ರಥದೊಳ್–ರಥಗಳಲ್ಲಿ, ಕೊಳಗೊಳುತ್ತಿರೆ– ಕೊಳವಾಗುತ್ತಿರಲು, ಒರ್ವರೊರ್ವರೊಳ್–ಒಬ್ಬರೊಬ್ಬರಲ್ಲಿ, ಕಾದಿದರ್–ಯುದ್ಧ ಮಾಡಿ ದರು.
ವಚನ : ಮುಳಿಸಿನ–ಕೋಪದ; ಮೋಪಿನ–(ಹೋರಾಡಬೇಕೆಂಬ) ಆಸಕ್ತಿಯುಳ್ಳ (?), ಗಂಡಮಚ್ಚರದ–ಪೌರುಷದ ಮಾತ್ಸರ್ಯವುಳ್ಳ; ಮೆಚ್ಚುವಣಿಗೆಯ–(ಪರಸ್ಪರ) ಮೆಚ್ಚುಗೆ ಯನ್ನುಳ್ಳ (?); ಅಂಕಕಾಱರ್–ಅಂಕವೆಂಬ ದ್ವಂದ್ವ ಯುದ್ಧವನ್ನು ಎಂದರೆ ಮಲ್ಲಗಾಳಗ ವನ್ನು, ಮಾಡುವವರು; ಎಕ್ಕತುಳಕ್ಕೆ–ಕುಸ್ತಿಯುದ್ಧಕ್ಕೆ; ಎಕ್ಕೆಕ್ಕೆಯಿಂ–ಮೇಲಿಂದ ಮೇಲೆ; ಸೂೞೇಱಿಱಿವಂತೆ–ಸರದಿಪ್ರಕಾರ ಹೊಯ್ದಾಟದಲ್ಲಿ ಹೊಡೆಯುವಂತೆ; ಇಲ್ಲಿ ಹಲವು ಶಬ್ದಗಳ ಅರ್ಥ ಅನಿರ್ದಿಷ್ಟ; ಮೋಪ್ಪು(ತ)–ಅಸೆ; ಅಂಕ:–ಕೆ (ಯೇ)ನ ವಾ ಯುಧ್ಯಮೇತೇ ಸಾರ್ಥಕಃ ಖಲಕಧಾಮನಿ ಸಮೇನಾಸ್ತ್ರೇಣ ಯಸ್ತಜ್ಞೈರಂಕಃ ಸಪರಿಕೀರ್ತೀತಃ ॥ ಅಖಾಡದಲ್ಲಿ ಒಬ್ಬನು ಸಮಾನವಾದ ಆಯುಧವುಳ್ಳ ಇನ್ನೊಬ್ಬರೊಡನೆ ಯುದ್ಧ ಮಾಡುವುದು; ಇಂಥವರಿಗೆ ಅಂಕ ಎಂದು ಹೆಸರು; ಪರಿಭೂತಾಂಕ, ಮತ್ಸರಾಂಕ, ಭೂಮ್ಯಂಕ–ಎಂದು ಮೂರು ವಿಧ; ಇವಲ್ಲದೆ ವಿರುದ್ಧಾಂಕ, ವಿಧ್ಯಾಂಕ, ವೈರಾಂಕ, ದ್ರೋಹಾಂಕ, ಪ್ರಾಯಶ್ಚಿತ್ತಾಂಕ–ಎಂಬವೂ ಸೇರಿ ಎಂಟು ವಿಧ.
೭೭. ಸೂತರುರುಳ್ವಿನಂ–ಸಾರಥಿಗಳು ಉರುಳುತ್ತಿರಲು; ರಥತುರಂಗಮ ರಾಜಿ–ರಥಗಳ ಕುದುರೆಗಳ ಸಮೂಹ, ಸುರುಳ್ವಿನಂ–ಸುರುಟಿಕೊಳ್ಳುತ್ತಿರಲು; ಚಳತ್ಕೇತುಗಳ್– ಅಲುಗಾಡು ತ್ತಿರುವ ಧ್ವಜಗಳು, ಎತ್ತಂ–ಎಲ್ಲೆಲ್ಲೂ, ಅವ್ವಳಿಸಿ–ಮುಂದೆ ಹಾರಿ, ಬೀೞ್ವಿನಂ–ಬೀಳು ತ್ತಿರಲು; ಅಳ್ಕುಱೆ–ಭಯವಾಗುವಂತೆ, ಕಾದಿ–ಹೋರಾಡಿ, ಬಾಣ ಸಂಘಾತದ ಕೋಳೊಳ್– ಬಾಣಗಳ ಸಮೂಹದ ತಿವಿತದಲ್ಲಿ, ಉಚ್ಚಳಿಪ–ಚಿಮ್ಮುವ, ನೆತ್ತರೊಳ್–ರಕ್ತದಲ್ಲಿ, ಇಚ್ಚೆಯೆ–ಇಚಾ, ಶಕ್ತಿಗಳೇ, ಕೆಟ್ಟೊಡೆ–ನಷ್ಟವಾದರೆ, ಆತಂ–ಆ ಭೀಮನು, ಅತ್ತ–ಅತ್ತ ಕಡೆ, ಈತನುಂ–ಈ ಅಶ್ವತ್ಥಾಮನು, ಇತ್ತ–ಇತ್ತ ಕಡೆ, ಜೋಲ್ದರಣಮಂ–ಸೊರಗಿ ಬಿದ್ದ ಯುದ್ಧ ವನ್ನು, ದೇವಕೋಟಿಗಳ್–ದೇವತೆಗಳ ಸಮೂಹವು, ಪೊಗೞುತ್ತಿರೆ–ಹೊಗಳುತ್ತಿರಲು,
ವಚನ : ಒಂದೊರ್ವರಂ–ಒಬ್ಬೊಬ್ಬರನ್ನು; ಕೆಯ್ಕೊಂಡು–ರಕ್ಷಣೆಗಾಗಿ ಸ್ವೀಕರಿಸಿ; ಅಳುರ್ದು–ಸುಟ್ಟು; ಪೆಣೆದ–ಹೆಣೆದು ಯುದ್ಧಮಾಡಿದ; ಉಪೇತ–ಕೂಡಿದ;
೭೮. ಬಡಿಗೊಂಡು–ಪೆಟ್ಟನ್ನು ತಿಂದು, ಮಸಗಿ–ಕೆರಳಿ, ಭೈತ್ರಮಂ–ನಾವೆಯನ್ನು, ಒಡೆವ– ಮುರಿಯುವ, ಮಹಾಮಕರದಂತೆ–ಮಹಾ ತಿಮಿಂಗಿಲದಂತೆ, ಪವನ ಸುತಂ–ಭೀಮ ಸೇನನು, ಕರಿಘಟೆಗಳಂ–ಆನೆಗಳ ಸೈನ್ಯವನ್ನು, ಆರ್ದು–ಗರ್ಜಿಸಿ, ಉಡಿಯೆ ಬಡಿದು–ನಾಶ ವಾಗುವಂತೆ ಹೊಡೆದು, ಕ್ಷೇಮಧೂರ್ತಿಯಂ–ಕ್ಷೇಮಧೂರ್ತಿಯೆಂಬವನನ್ನು, ಆಗಡೆ– ಆಗಲೇ, ಆನೆವೆರಸು–ಆನೆ ಸಹಿತವಾಗಿ, ಕೊಂದಂ–ಕೊಂದನು.
ವಚನ : ಅೞಸುತ್ತುಂಬರ್ಪ–ಹುಡುಕುತ್ತ ಬರುವ; ಎಡೆಗೊಂಡು–ನಡುವೆ ಕೈಕೊಂಡು; ಮಾರ್ಕೊಂಡು–ಪ್ರತಿಭಟಿಸಿ.
೭೯. ನೀನಲ್ಲದೆ–ನೀನು ಅಲ್ಲದೆ, ಎನ್ನ ಶರಸಂಧಾನಮಂ–ನನ್ನ ಬಾಣದ ಸಂಧಾನ ವನ್ನು, ಆನಲ್ಕೆ–ತಾಳುವುದಕ್ಕೆ, ಈ ಪಡೆಯೊಳ್–ಈ ಸೈನ್ಯದಲ್ಲಿ, ನೆಱೆವರ್–ಸಮರ್ಥರಾ ದವರು, ಇಲ್ಲ; ನೀಂ–ನೀನು, ಇನಿಸಂ–ಒಂದಿಷ್ಟನ್ನು, ಆಂಪುದು–ತಾಳುವುದು, ಎಂಬುದುಂ– ಎನ್ನುತ್ತಲೂ, ಆನಲ್ಲದೆ–ನಾನಲ್ಲದೆ, ನಿನ್ನಂ–ನಿನ್ನನ್ನು, ಆಂಪ–ಎದುರಿಸುವ, ಗಂಡರುಂ– ಶೂರರೂ, ಒಳರೇ–ಇರುವರೇ?
೮೦. ಎನೆ–ಎನ್ನಲು, ಬೆಳ್ಮಸೆಯಂಬಿನ–ಬೆಳ್ಳಗೆ ಮಸೆದಿರುವ ಬಾಣಗಳ, ಸರಿ–ಮಳೆ, ಮೊನೆಯಂಬಿನ ಸೋನೆ–ಮೊನಚಾದ ಬಾಣಗಳ ಜಡಿಮಳೆ, ಪಾರೆಯಂಬಿನ ತಂದಲ್– ಹಾರೆಯಾಕಾರದ ಬಾಣಗಳ ತುಂತುರು ಮಳೆ; ಘನಮಾದುದು–ಅತಿಶಯವಾಯಿತು; ಪಾಂಡ್ಯಂ–ಪಾಂಡ್ಯನು, ಕಿತ್ತಂಬಿನ–ಕಿರಿಯ ಬಾಣಗಳ, ಬಡಪಮಿದು ಎನಿಸಿ–ನಿರಂತರವಾದ ಮಳೆ, ಇದು, ಎನ್ನಿಸಿ, ಅಂಬಂ–ಬಾಣಗಳನ್ನು, ಕಱೆದಂ–ಸುರಿದನು. ಬಡಪ ಪ್ರಾ. ವಡಪ್ಪಂ– ಝೂಢಝೂಢೀವಡಪ್ಪಂ . ವಡಪ್ಪಂ ಲತಾಗಹನಂ ನಿರಂತರಂ ವೃಷ್ಟಿಶ್ಚ ಎಂದು ಹೇಮ ಚಂದ್ರ; ಕಿತ್ತಂಬು ಕಿಱಿದು+ಅಂಬು.
೮೧. ಕಱೆದೊಡೆ–ಸುರಿಸಿದರೆ, ಅವುಅನಿತುಮಂ–ಅವುಗಳಷ್ಟನ್ನು, ಅಂತಂತೆ–ಹಾಗೆ ಹಾಗೆಯೇ, ಉಱದೆ–ಇರದೆ, ಎಚ್ಚು–ಹೊಡೆದು, ಕಡಂಗಿ–ಉತ್ಸಾಹಿಸಿ, ತಱಿದು–ಕತ್ತರಿಸಿ, ಶರವರ್ಷದಿಂ–ಬಾಣದ ಮಳೆಯಿಂದ, ಅಂದು, ಅಱಿಯೆ–ತಿಳಿಯುವಂತೆ, ಕಡಿಕೆಯ್ದು– ತುಂಡು ತುಂಡುಮಾಡಿ, ಬಿಡದೆ–ನಿಲ್ಲದೆ, ಗುರುತನೂಜನ ಕಣೆಗಳ್–ಅಶ್ವತ್ಥಾಮನ ಬಾಣ ಗಳು, ಎಡೆವಱನಂ–ನಡುವೆ ಬರಿದಾಗುವುದನ್ನು ಎಂದರೆ ಬರವನ್ನು, ಬರಗಾಲವನ್ನು, ಮಾಡಿದವು–ಉಂಟು ಮಾಡಿದವು. ಎಂದರೆ ಪಾಂಡ್ಯನು ಸೃಷ್ಟಿಸಿದ ಬಾಣಗಳ ಮಳೆಗಾಲ ವನ್ನು ಅಶ್ವತ್ಥಾಮನ ಬಾಣಗಳು ನಡುವೆಯೆ ನಾಶ ಮಾಡಿ ಬರಗಾಲವಾಗಿಸಿದುವು ಎಂದು ಅಭಿಪ್ರಾಯ.
೮೨. ಎಡೆವಱದೊಳ್–(ಹೀಗೆ ಉಂಟಾದ) ನಡುವಣ ಬರದಲ್ಲಿ, ಬಱಸಿಡಿಲ್– ಮಳೆಯಿಲ್ಲದೆ ಬೀಳುವ ಸಿಡಿಲು, ಇಡುಮುಡುಕನೆ–ಛಿಳಿಛಿಟೀರೆನ್ನಲು, ವೊಡೆದುದೆನಿಸಿ–ಹೊಡೆಯಿತು ಎನ್ನಿಸಿ, ಪಾಂಡ್ಯನ, ರಥದ, ಅಚ್ಚು–ಅಚ್ಚುಮರ, ಉಡಿದು–ಮುರಿದು, ಅೞ್ಗಿ– ನಾಶವಾಗಿ, ತೞ್ಗೆ–ತಗ್ಗಲು, ಕುಗ್ಗಲು, ಗುರುತನೂಜನ–ಅಶ್ವತ್ಥಾಮನ, ಕಡುಗೂರಿದುವು– ಅತ್ಯಂತ ಹರಿತವಾದುವು, ಎನಿಪ–ಎನ್ನಿಸಿಕೊಳ್ಳುವ, ಕಣೆಗಳ್–ಬಾಣಗಳು, ಕೊಂಡವು–ಹೊಡೆ ದುವು. ‘ಎಡೆವಱ’ ಎಂದು ಎರಡು ಸಲ (೮೧, ೮೨) ಪ್ರಯೋಗವಾಗಿದೆ; ಎಡೆ+ಬಱ– ನಡುವಣ ಬರ, ಬಱ=(ತ)ವಱಂ–ನೀರಿಲ್ಲದಿರುವುದು, ಒಣಗಲು, ಎಡೆವಱೆ ಎಂದು ಇದರ ಕ್ರಿಯಾರೂಪ; ನಡುವೆ ಬತ್ತು ಎಂದರ್ಥ, ಇಡೈವಱು ಎಂಬುದು ಸಮಾನ ತಮಿಳು ಶಬ್ದ; ಭಾರತ ವಿನುತ ಕುಲಜಲರಾಶಿಯೆಡೆವಱತುದು ವಿಚಿತ್ರದಲಿ ಎಂದು ಕುಮಾರವ್ಯಾಸನ ಪ್ರಯೋಗ (ಆ. ೩–೪); ಇಲ್ಲಿರುವ ಎಡೆವರಿತುದು, ಎಡೆವರೈತುದು, ಎಂಬ ಪಾಠಭೇದ ಗಳು, ಗಮನಾರ್ಹವಲ್ಲ. ಇಡುಮುಡುಕನೆ=ಇಡುಮುಡುಕು+ಅನೆ; ಇಡುಮುಡುಕು (ತ) ಇಡಿಮುೞಕ್ಕಂ–ಇಡಿಯೊಲಿ=ಸಿಡಿಲಿನಬ್ಬರ; ಇಡಿ=ಸಿಡಿಲು, ಮುೞಕ್ಕಂ=ಮೊಳಗು, ದೊಡ್ಡ ಶಬ್ದ, ಪೇರುಲಿ.
೮೩. ವಿರಥಂ–ರಥವಿಲ್ಲದ, ಕೋಪಸ್ಫುರಿತಾಧರಂ–ಕೋಪದಿಂದ ನಡುಗುವ ತುಟಿಯುಳ್ಳ, ಪಾಂಡ್ಯಂ–ಪಾಂಡ್ಯನು, ಕೆಡೆಯೆ–ಬೀಳಲು, ಪೞಯಿಗೆಯುಂ–ಬಾವುಟವೂ, ಬಿಬ್ಬರ ಬಿರಿಯೆ– ಬಿರಿದು ಬಿರಿದು ಮುರಿಯಲು, ಗುರುತನೂಜನ–ಅಶ್ವತ್ಥಾಮನ, ಉರಮಂ–ಎದೆಯನ್ನು, ಬಿರಿಯೆಚ್ಚು–ಬಿರಿಯುವಂತೆ ಬಾಣ ಪ್ರಯೋಗಮಾಡಿ, ಗಜದಾ–ಆನೆಯ, ಬೆಂಗೆವಂದಂ– ಬೆನ್ನಿಗೆ ಬಂದನು ಎಂದರೆ ಆನೆಯ ಮೇಲೆ ಹತ್ತಿದನು.
ವಚನ : ತನ್ನ ನಚ್ಚುವ–ತಾನು ನಂಬುವ, ಕೆಯ್ದುಗಳನಿ [ತುಂ]–ಅಷ್ಟು ಆಯುಧಗಳೂ; ಪೊಳೆಯೆ ಮಸೆದು–ಹೊಳೆಯುವಂತೆ; ಮತ್ತ ಹಸ್ತಿಯಂ–ಮದ್ದಾನೆಯನ್ನು; ಅಣೆದು– (ಅಂಕುಶದಿಂದ) ಮುಟ್ಟಿ, ತಿವಿದು; ತೋಱಿಕೊಟ್ಟಾಗಳ್–ಛೂ ಬಿಟ್ಟಾಗ;
೮೪. ಈ ಮದದಂತಿಯ–ಈ ಸೊಕ್ಕಾನೆಯ, ಎೞ್ತರವುಂ–ಬರುವಿಕೆಯೂ, ಈತನ–ಇವನ (ಪಾಂಡ್ಯನ), ಶೌರ್ಯಮುಂ–ಪ್ರತಾಪವೂ, ಈ ಮಹೋಗ್ರ ಸಂಗ್ರಾಮದೊಳ್–ಈ ಮಹಾ ಭಯಂಕರ ಯುದ್ಧದಲ್ಲಿ, ಎನ್ನುಮಂ–ನನ್ನನ್ನೂ, ಚಳಿಯಿಸಲ್–ಶಕ್ತಿಹೀನನನ್ನಾಗಿ ಮಾಡಲು, ಬಗೆದಪ್ಪುದು–ಬಗೆಯುತ್ತಿದೆ; ಇಂ–ಇನ್ನು, ಪಾಂಡ್ಯನನ್ನಂ–ಪಾಂಡ್ಯನಂಥವನು, ಈ ಮಹಿ ಯೊಳ್–ಈ ಭೂಮಿಯಲ್ಲಿ, ಪೆಱಂ–ಇತರನು, ಕಲಿಯೆ–ಶೂರನೇ? ನೆಟ್ಟನೆ–ನೇರಾಗಿ, ಇದಿರ್ಚುವ–ಎದುರಿಸುವ, ನಿಚ್ಚಟಿಕ್ಕೆಯೊಳ್–ನಿಶ್ಚಲತ್ವದಲ್ಲಿ ಎಂದರೆ ಸ್ಥಿರತೆಯಲ್ಲಿ, ಭೀಮನುಂ–ಭೀಮನು ಕೂಡ, ಇನ್ನಂ–ಇಂಥವನು, ಅಲ್ಲನ್–ಅಲ್ಲನು; ಎನೆ–ಎನ್ನಲು, ಪೋಲ್ವೆಗೆ–ಹೋಲಿಕೆಗೆ, ಗಂಡರ್ ಎಂಬರ್–ಶೂರರೆನ್ನುವವರು, ಆರ್–ಯಾರು?
ವಚನ : ಮುಟ್ಟೆವಂದು–ಸಮೀಪಿಸಿ, ಹತ್ತಿರ ಬಂದು,
೮೫. ವಿಳಯಾನಳ ವಿಳಸನ ವಿಸ್ಫುಲಿಂಗ ಸಂಘಾತದಿಂ–ಪ್ರಳಯಾಗ್ನಿಯ ಪ್ರಕಾಶವುಳ್ಳ ಕಿಡಿಗಳ ಸಮೂಹದಿಂದ, ತಗುಳ್ದು–ಹಿಂಬಾಲಿಸಲ್ಪಟ್ಟು, ಅಡರ್ವ–ಮೇಲೇರುವ, ಅನಿ ತೊಂದು–ಅಷ್ಟೊಂದು, ಅಳವಿಯ–ಶಕ್ತಿಯುಳ್ಳ, ತೋಮರದಿಂದೆ–ತೋಮರವೆಂಬ ಆಯುಧ ದಿಂದ, ಇಡೆ–ಬೀಸಿ ಹೊಡೆಯಲು, ಗುರುತನೂಜಂ–ಅಶ್ವತ್ಥಾಮನು, ಎಡೆಯೊಳೆ– ನಡುವೆಯೇ, ಪೊಳೆವ ಅಸ್ತ್ರದೆ–ಹೊಳೆಯುವ ಬಾಣಗಳಿಂದ, ಕಡಿದಂ–ಕತ್ತರಿಸಿದನು.
ವಚನ : ಕೂರಿದುವುಂ–ಹರಿತವೂ, ನೇರಿದುವುಂ–ನೇರವಾಗಿರುವುವೂ, ಅಪ್ಪ–ಆದ; ಬಾಣಧಿಯಿಂದೆ–ಬತ್ತಳಿಕೆಯಿಂದ; ಉರ್ಚಿಕೊಂಡು–ಸೆಳೆದು, ಸಮಕಟ್ಟಿಕೊಂಡು–ವಿಧಾನ ವನ್ನು ತಿಳಿದು.
೮೬. ಕರಿಕರಮುಂ–ಆನೆಯ ಸೊಂಡಿಲೂ, ಮಾವಂತನ–ಮಾವಟಿಗನ, ಕರಮುಂ– ಕೈಯೂ, ತತ್ಪಾಂಡ್ಯಶಿರಮುಂ–ಆ ಪಾಂಡ್ಯರಾಜನ ತಲೆಯೂ, ಒಡನೆ ಉರುಳೆ–ಜೊತೆ ಯಾಗಿಯೇ ಉರುಳಲು, ಭಯಂಕರಮುಮಂ–ಭಯಂಕರತೆಯನ್ನು, ಉರ್ವಿಗೆ–ಲೋಕಕ್ಕೆ, ಅಗುರ್ವುಮಂ–ಅದ್ಭುತವನ್ನೂ, ಗುರುತನಯಂ–ಅಶ್ವತ್ಥಾಮನು, ಪಡೆಗಳ್ಗೆ–ಸೈನ್ಯಗಳಿಗೆ, ತೋಱಿದಂ–ತೋರಿಸಿದನು.
ವಚನ : ಅನ್ನೆಗಂ–ಅಷ್ಟರಲ್ಲಿ; ಸಂಸಪ್ತಕ ನಿಕಾಯಮಂ–ಸಂಸಪ್ತಕರ ಸಮೂಹವನ್ನು; ಸಾಯಕ–ಬಾಣ; ಕಳವಳಮಂ–ಅಬ್ಬರವನ್ನು; ಗಂಡಗುಣಕ್ಕೆ–ಪೌರುಷಕ್ಕೆ; ಪ್ರಚಂಡವೇತಂಡ ಮಂ–ಅತಿ ತೀಕ್ಷ್ಣವಾದ ಆನೆಯನ್ನು; ಅಣೆದು–ತಿವಿದು, ಬಿಟ್ಟಿಕ್ಕಿದಾಗಳ್–ತೋರಿಕೊಟ್ಟಾಗ;
೮೭. ಕಾದಲ್–ಯುದ್ಧ ಮಾಡುವುದಕ್ಕೆ, ಇದಿರ್ಚಿ–ಎದುರಾಗಿ, ಬಂದ ಪಗೆ–ಬಂದ ಶತ್ರು, ಸಂಪಗೆಯಂತೆ–ಸಂಪಗೆಯ ಹೂವಿನಂತೆ, ಶಿಳೀಮುಖಕ್ಕೆ–ದುಂಬಿಗೆ, ಬಾಣಗಳಿಗೆ, ಗೆಂಟಾದುದು–ದೂರವಾಯಿತು; ಇದೊಂದೆ–ಇದು ಒಂದೇ, ಸಿಂಧುರದೊಳ್–ಆನೆಯಲ್ಲಿ, ಇಂತು–ಹೀಗೆ, ಇವನೊರ್ವನೆ–ಇವನೊಬ್ಬನೇ, ತಳ್ತನಾದೊಡೆ–ಎದುರಿಸಿದವನಾದರೆ, ಏನಾ ದುದೋ–ಏನಾಯಿತೋ, ಬಲ್ಲೆನೆಂದು–ಬಲ್ಲೆನು ಎಂದು, ಮುಳಿದು–ಕೆರಳಿ, ಎಚ್ಚೊಡೆ– ಬಾಣ ಪ್ರಯೋಗ ಮಾಡಿದರೆ, ದಂಡಧಾರ ಗಜಂ–ದಂಡಧಾರನೆಂಬಾತನ ಆನೆಯು, ಆತನ ಒಡಲ್ವೆರಸು–ಅವನ ದೇಹ ಸಮೇತವಾಗಿ, ಅಂದು, ಸೌಳನೆ ಸೀಳ್ದು–ಸೌಳೆಂದು ಸೀಳಿ, ಪಚ್ಚವೋಲ್–ವಿಭಾಗಿಸಿದಂತೆ, ಪಾರ್ಥನಿಂ–ಅರ್ಜುನನಿಂದ, ಆದುದು–ಆಯಿತು.
ವಚನ : ಕೃತಾಂತನಿವಾಸಮಂ–ಯಮನ ಮನೆಯನ್ನು, ಎಯ್ದುವುದುಂ–ಸೇರುತ್ತಲು, ಎಂದರೆ ಸಾಯಲು.
೮೮. ಇನ್ನಿನಿಸನಿರ್ದೊಡೆ–ಇನ್ನು ಸ್ವಲ್ಪ ಕಾಲವಿದ್ದರೆ, ಆಜಿಯೊಳ್–ಯುದ್ಧದಲ್ಲಿ, ಎನ್ನ ತನೂಜನುಮಂ–ನನ್ನ ಮಗನಾದ ಕರ್ಣನನ್ನೂ, ನರಂ–ಅರ್ಜುನನು, ಅೞ್ಗಿಪಂ–ನಾಶ ಮಾಡುತ್ತಾನೆ, ಅದಂ ಇಂ ಆಂ ನೋಡಲಾಱೆಂ–ಅದನ್ನು ಇನ್ನು ನಾನು ನೋಡಲಾರೆನು, ಎಂಬ ವೊಲ್–ಎನ್ನುವಂತೆ, ದಿನಪಂ–ಸೂರ್ಯ, ಅನ್ನೆಗಂ–ಅಷ್ಟರಲ್ಲಿ, ಅಸ್ತಾಚಳಸ್ಥನಾದಂ–ಮುಳು ಗುವ ಬೆಟ್ಟದ ಮೇಲೆ ನಿಂತವನಾದನು, ಎಂದರೆ ಮುಳುಗಲು ಸಿದ್ಧನಾದನು.
೮೯. ಶಲ್ಯನನ್ನು ಸಾರಥಿಯಾಗಿ ಮಾಡುವ ಸಂದರ್ಭ: ಅಂತೆ–ಹಾಗೆಯೇ, ಕುಳ್ಳಿರಿ ರಪ್ಪೊಡೆ–ಕುಳಿತುಕೊಳ್ಳದೆ ಇರುವಿರಾದರೆ, ಇಂ–ಇನ್ನು, ನಿಮಗೆ, ಆಣೆ–ನನ್ನಾಣೆ, ಎಂದು ಹೇಳಿ, ಇರವೇೞ್ದು–ಕುಳ್ಳಿರುವಂತೆ ಹೇಳಿ, ಇಳಾಕಾಂತನುಂ–ರಾಜ ದುರ್ಯೋಧನನೂ, ತೊಡೆಸೋಂಕಿ–ತೊಡೆಮುಟ್ಟಿ ಎಂದರೆ ಅಷ್ಟು ಸಮೀಪವಾಗಿ, ಕುಳ್ಳಿರೆ–ಕುಳ್ಳಿರಲು, ಬಾೞ್ತೆಯು ಳ್ಳೊಡೆ–ಕಾರ್ಯವಿದ್ದರೆ, ನೀನೆ–ನೀನೇ, ಬರ್ಪಂತುಟು–ಬರುವ ಹಾಗೆ, ಆದುದೆ–ಆಯಿತೇ, ಪೇೞ–ಹೇಳು; ನೀಂ–ನೀನು, ಕೆಮ್ಮನೆ–ಸುಮ್ಮನೆ, ಬೞಿಯಟ್ಟಲಾಗದೆ–ದೂತನನ್ನು ಕಳುಹಿಸ ಬಾರದಾಗಿತ್ತೆ? ಇಂ–ಇನ್ನು, ಎಂದರೆ ನೀನೇ ಬಂದ ಮೇಲೆ, ಎಂತುಂ–ಹೇಗೂ; ಏಂ–ಏನು? ಇಳಾಧಿಪಾ–ರಾಜನೇ, ಏಂ–ಮನೆವಾೞ್ತೆಯಂ–ಏನು ಮನೆವಾರ್ತೆಯನ್ನು, ಏನು ಮನೆ ಕಾರ್ಯವನ್ನು, ಬೆಸಸಲ್ಕೆ–ಹೇಳುವುದಕ್ಕೆ, ಬಂದೆ–ಬಂದಿರುವೆ?
೯೦. ಬೆಸಸು–ಹೇಳು, ಎನೆಯುಂ–ಎಂದರೂ, ಆಂ–ನಾನು, ನುಡಿಯಲ್–ಹೇಳಲು, ಶಂಕಿಸಿದಪೆಂ–ಹೆದರುತ್ತಿರುವೆನು, ಎಂದೊಡೆ–ಎಂದರೆ, ಏಕೆ ಶಂಕಿಸುವಯ್–ಏಕೆ ಹೆದರುತ್ತೀಯ? ನೀಂ–ನೀನು, ಬೆಸವೇೞ್–ಕಾರ್ಯವನ್ನು ತಿಳಿಸು, ಎನೆ–ಎನ್ನಲು, ಮಾವ– ಮಾವನೇ, ನಿಮ್ಮ ದಯೆಯಿಂದಂ–ಕರುಣೆಯಿಂದ, ಜಯವಧು–ಜಯಸ್ತ್ರೀ, ಎಮ್ಮಂ– ನಮ್ಮನ್ನು, ಕೂರ್ತು–ಪ್ರೀತಿಸಿ, ಒಸೆದುಂ–ರಾಗಿಸಿ, ಇರ್ಕ್ಕುಂ–ಇರುವಳು.
೯೧. ರಥಮಂ–(ಅರ್ಜುನನ) ರಥವನ್ನು, ಹರಿ–ಕೃಷ್ಣ, ಪುಸಿಯೆನೆ–ಸುಳ್ಳು ಎನ್ನಲು, ಚೋದಿಸುವಂತೆವೊಲ್–ನಡೆಸುವವನಂತೆ, ಇರ್ದು–ಇದ್ದು, ಅದೆಂತು–ಅದು ಹೇಗೆ, ನರನಂ–ಅರ್ಜುನನನ್ನು, ಗೆಲಿಪಂ–ಗೆಲ್ಲುವಂತೆ ಮಾಡುವನೋ, ಅಂತೆ–ಹಾಗೆ, ವಿಸಸನ ದೊಳ್–ಯುದ್ಧರಂಗದಲ್ಲಿ, ನೀಮುಂ–ನೀವು ಕೂಡ, ಕರ್ಣಂಗೆ–ಕರ್ಣನಿಗೆ, ಪೆಸರಂ ಮಾಡಿ– ಹೆಸರನ್ನು ಎಂದರೆ ಕೀರ್ತಿಯನ್ನು ಉಂಟುಮಾಡಿ, ಗೆಲ್ಲಂಗೊಳ್ಳಿ–ವಿಜಯವನ್ನು ಸಂಪಾದಿ ಸಿರಿ.
ವಚನ : ಉಮ್ಮಚ್ಚದೊಳ್–ಕೋಪದಲ್ಲಿ; ಉಮ್ಮನೆ–ಬಿಸಿಬಿಸಿಯಾಗಿ; ಬೆಮರ್ತು– ಬೆವರಿ; ಕಿನಿಸಿ–ಕೆರಳಿ, ಕಿಂಕಿರಿವೋಗಿ–ಕಿರಿಕಿರಿಯಾಗಿ ಎಂದರೆ ವ್ಯಾಕುಲಿತನಾಗಿ; (ಸಂ) ಊಷ್ಮೆ ಉಮ್ಮೆ; ಅನೆ ಸೇರಿ ಉಮ್ಮನೆ, ಅವ್ಯಯ.
೯೨. ಕಲಿಯನೆ ಪಂದೆಮಾೞ್ಪ–ಶೂರನನ್ನು ಹೇಡಿಯಾಗಿ ಮಾಡುವ; ಕಡುವಂದೆ ಯನೊಳ್ಗಲಿಮಾೞ್ಪ–ಅತಿ ಹೇಡಿಯನ್ನು ಒಳ್ಳೆಯ ಶೂರನನ್ನಾಗಿ ಮಾಡುವ; ತಕ್ಕನಂ ಪೊಲೆಯನೆ ಮಾೞ್ಪ–ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ; ಮುಂ ಪೊಲೆಯನಂ ನೆಱೆ ತಕ್ಕನೆ ಮಾೞ್ಪ–ಮೊದಲು ಹೊಲೆಯನಾದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮೊಳ್–ತಮ್ಮಲ್ಲಿ, ಅಗ್ಗಳಿಸಿ–ಅಧಿಕವಾಗಿ, ಪೊದಳ್ದು–ವ್ಯಾಪಿಸಿ, ಪರ್ವಿದ– ಹಬ್ಬಿದ, ಅವಿವೇಕತೆಯಿಂ–ಅವಿವೇಕದಿಂದ, ನೃಪಚಿತ್ತವೃತ್ತಿ–ರಾಜರ ಮನೋವ್ಯಾಪಾರ ಗಳು, ಸಂಚಲಂ–ಅಸ್ಥಿರವಾದುದು; ಅದಱಿಂದೆ–ಆದ್ದರಿಂದ, ಇಳಾದಿನಾಥರಂ–ರಾಜರನ್ನು, ಓಲಗಿಸಿ–ಸೇವೆ ಮಾಡಿ, ಬಾೞ್ವುದೆ–ಬದುಕುವುದೇ, ಕಷ್ಟಂ–ಕಷ್ಟ.
೯೩. ಅನುಪಮ ವಿಕ್ರಮಕ್ರಮಂ–ಅಸದೃಶವಾದ ಪರಾಕ್ರಮದ ರೀತಿ, ಉದಾರ ಗುಣಂ– ವಿಶಾಲವಾದ ತ್ಯಾಗದ ಗುಣ, ಋತವಾಕ್ಯಂ–ನೇರಾದ ಭಾಷೆ ಎಂದರೆ ಸತ್ಯ, ಎಂಬ ಪೆಂಪು–ಎನ್ನುವ ಹಿರಿಮೆ, ಮೂಱೆನಾಲ್ಕೆಗುಣಂ–ಇವೇ ಮೂರು ಅಥವಾ ನಾಲ್ಕು ಗುಣಗಳು; ಅತ್ತ– ಇನ್ನೊಂದು ಕಡೆ, ರಾಜಬೀಜ ಸಂಜನಿತಗುಣಂ–ಅರಸುಕುಲದಲ್ಲಿ ಹುಟ್ಟಿದ್ದರ ಗುಣವು, ಮದಂ–ಮದವು, ಗರ್ವವು; ಮದಮನಾಳ್ದ–ಮದವನ್ನು ಹೊಂದಿರುವ, ಅವಿವೇಕತೆ ಯಿಂದಂ–ವಿವೇಕ ಶೂನ್ಯತೆಯಿಂದ, ತೊೞ್ತಿನ–ತೊತ್ತಿನ, ಮೊಲೆವಾಲನುಂಡ–ಮೊಲೆ ಹಾಲನ್ನು ಕುಡಿದ, ಗುಣಂ ಅಲ್ತೆ–ಗುಣವಲ್ಲವೇ? ಇವನ್–ಇವುಗಳನ್ನು, ನರೇಂದ್ರರೊಳ್– ರಾಜರಲ್ಲಿ, ಆರ್ಕಿಡಿಪರ್–ಯಾರು ಹೋಗಲಾಡಿಸುವವರು.
೯೪. ಪಿಂದೆ–ಹಿಂದುಗಡೆ, ಕಡಂಗಿ–ಉತ್ಸಾಹಿಸಿ, ತೇರಂ ಎಸಗು–ರಥವನ್ನು ಹಾಯಿಸು, ಎಂಬವಂ–ಎನ್ನುವವನು, ಅಂಬಿಗಂ–ದೋಣಿ ನಡೆಸುವವನು, ಬೆಸ್ತರವನು; ಆಜಿರಂಗ ದೊಳ್–ಯುದ್ಧರಂಗದಲ್ಲಿ, ಮುಂದೆ–ಸಮ್ಮುಖದಲ್ಲಿ, ಸಮಾನನಾಗಿ–ಸಮಾನನಾಗಿ ಎಂದರೆ ನನ್ನಂತೆ ಸಾರಥಿಯಾಗಿ, ಬೆಸದೆ–ಕೆಲಸದಲ್ಲಿ (ಸಾರಥಿಯ ಕೆಲಸದಲ್ಲಿ) ಇರ್ಪವನುಂ–ಇರುವ ವನೂ, ತುಱುಕಾಱನಾಗೆ–ದನಗಾಹಿಯಾಗಲು ಎಂದರೆ ಗೋಪಾಲ ಕೃಷ್ಣನಾಗಿರಲು, ಮತ್ಸ್ಯಂದನ ಚೋದನ ಕ್ರಮಂ–ರಥವನ್ನು ಹಾಯಿಸುವ ನನ್ನ ರೀತಿ, ಅದುಂ–ಅದೂ, ಪೊಲೆಯಂಗೆ–ಹೊಲೆಯನಿಗೆ, ಅಮರ್ದು–ಸೇರಿ, ಒಪ್ಪಿ, ಇರ್ಕುಂ–ಇರುತ್ತದೆ; ಅಂತುಟಂ– ಅಷ್ಟನ್ನು, ನೀಂ–ನೀನು, ದಯೆಗೆಯ್ದು ಪೇೞ್ದೆ–ದಯೆ ತೋರಿಸಿ ಹೇಳಿದೆ; ಫಣಿರಾಜಕೇತನಾ– ದುರ್ಯೋಧನನೇ, ಇದಂ–ಇಂಥದನ್ನು ಎಂದರೆ ಇಂತಹ ಸೌಭಾಗ್ಯವನ್ನು, ಆರ್ಪಡೆವರ್– ಯಾರು ಪಡೆಯುತ್ತಾರೆ?
೯೫. ಎನಿತು–ಎಷ್ಟು, ಒಲ್ಲದಿರ್ದೊಡಂ–ಒಪ್ಪದಿದ್ದರೂ, ಸಜ್ಜನರುಂ–ಸತ್ಪುರುಷರೂ, ಪತಿಹಿತರುಂ–ಸ್ವಾಮಿಗೆ ಹಿತವರಾದವರೂ, ಅಱಿಯವೇೞ್ಕುಂ–ತಿಳಿಯಬೇಕು; ನೀಂ– ನೀನು, ಇಂ–ಇನ್ನು, ಎನಿತುಂ–ಎಷ್ಟೂ, ಕೂರದೊಡಂ–ಪ್ರೀತಿಸದಿದ್ದರೂ, ನಿನ್ನ ನುಡಿಯಂ– ನಿನ್ನ ಮಾತನ್ನು, ಆಂ–ನಾನು, ಆಜಿರಂಗದೊಳ್–ಯುದ್ಧರಂಗದಲ್ಲಿ, ಮೀಱುವೆನೇ–ಮೀರು ತ್ತೇನೆಯೆ?
೯೬. ಮಾಮ–ಮಾವನೇ, ನೀಂ–ನೀವು, ಇನಿತಂ–ಇಷ್ಟನ್ನು, ಕೆಮ್ಮನೆ–ಸುಮ್ಮನೆ, ಎನಗೆ–ನನಗೆ, ಮನಂನೊಂದು–ಮನಸ್ಸು ನೊಂದು, ಬೆಸಸಿದಿರ್–ಹೇಳಿದಿರಿ; ಬಿನ್ನಪವಂ– (ನನ್ನ) ಬಿನ್ನಹವನ್ನು, ನೀಂ–ನೀವು, ಅವಧಾರಿಸಿಂ–ಕೇಳಿರಿ; ಎಂತೆನೆ–ಹೇಗೆನ್ನಲು, ಅಂಗಮ ಹೀಶಂ–ಅಂಗರಾಜ ಕರ್ಣನು, ಸಾಮಾನ್ಯದ ಮನುಜನಲ್ಲಂ–ಸಾಧಾರಣ ಮನುಷ್ಯನಲ್ಲ.
೯೭. ಕುಲಹೀನನೆ–ಹೀನಕುಲದವನೇ, ಅಪ್ಪೊಡೆ–ಆಗಿದ್ದರೆ, ಕೇವಲ ಬೋಧಂ–ಕೇವಲ ಜ್ಞಾನವುಳ್ಳ, ಎಂದರೆ ಸರ್ವಜ್ಞನಾದ, ಪರಶುರಾಮಂ–ಪರಶುರಾಮನು, ನಿರ್ಮಲಿನ ಕುಲಂಗಲ್ಲದೆ–ಪರಿಶುದ್ಧವಾದ ಕುಲದವನಿಗಲ್ಲದೆ, ಪಿಡಿಯಲ್–ಹಿಡಿಯಲು; ಅಲ್ಲದಂತಪ್ಪ– ಅಲ್ಲದಂತಾಗಿರುವ, ದಿವ್ಯಬಾಣಾವಳಿಯಂ–ದಿವ್ಯವಾದ ಬಾಣಗಳ ಸಮೂಹವನ್ನು, ಏನ್ ಈಗುಮೇ–ಏನು ಕೊಡುವನೆ?
೯೮. ಮಣಿಕುಂಡಲಮುಂ–ರತ್ನಕುಂಡಲವೂ, ಕವಚಂ–ಕವಚವೂ, ಮಣಿಯದ ಚಾರಿತ್ರಂ–ಬಾಗದ ಎಂದರೆ ಕುಗ್ಗದ ನಡತೆಯೂ, ಉಗ್ರತೇಜಮುಂ–ಭಯಂಕರ ತೇಜಸ್ಸೂ, ಈ ಒಳ್ಗುಣಮುಂ–ಈ ಒಳ್ಳೆಯ ಗುಣವೂ, ಕಲಿತನಮುಂ–ಶೌರ್ಯವೂ, ಪ್ರಣತಾರೀ– ವಿಧೇಯರಾದ ಶತ್ರುಗಳನ್ನುಳ್ಳ ಶಲ್ಯನೇ, ಸೂತಸುತನೊಳ್–ಸೂತಪುತ್ರ ಕರ್ಣನಲ್ಲಿ, ಇವು–ಈ ಗುಣಗಳೆಲ್ಲ, ಏಂ ಒಡವುಟ್ಟುಗುಮೇ–ಜೊತೆಯಲ್ಲಿಯೇ ಹುಟ್ಟುವುವೇ ಏನು?
೯೯. ಕಲಿತನದ–ಪರಾಕ್ರಮದ, ನೆಗೞ್ದ–ಪ್ರಸಿದ್ಧವಾದ, ಕಸವರಗಲಿತನದ–ದಾನ ಶೂರ ತೆಯ, ಪೊದಳ್ದ–ವ್ಯಾಪಿಸಿದ, ಪರಮಕೋಟಿಗೆ–ಪರಾಕಾಷ್ಠತೆಗೆ, ಸಲೆ–ಸಲ್ಲಲು, ಕರ್ಣನಲ್ಲದೆ, ಪೆಱರ್–ಇತರರು, ಆರ್–ಯಾರು? ಎನಿಸುವ–ಎನ್ನಿಸುವ, ಕಲಿತನಮಂ–ಶೌರ್ಯವನ್ನು, ಹರಿಗೆ–ಇಂದ್ರನಿಗೆ, ಕವಚಮಿತ್ತುದೆ–ಕವಚವನ್ನು ಕೊಟ್ಟದ್ದೇ, ಪೇೞ್ಗುಂ–ಹೇಳುತ್ತದೆ. ಕಸವ (ಸಂ)ಕಾರ್ತಸ್ವರ=ಚಿನ್ನ; ಅದರಲ್ಲಿ ಕಲಿತನ ಕಸವರಗಲಿತನ.
ವಚನ : ಹೃಚ, ಲ್ಯಮೆಲ್ಲಮುಂ–ಹೃದಯಕ್ಕೆ ನಾಟುವ ಮುಳ್ಳುಗಳೆಲ್ಲ ಎಂದರೆ ಹೃದಯದ ನೋವನ್ನೆಲ್ಲ; ಕೞಲೆ–ಸಡಿಲವಾಗುವಂತೆ, ನುಡಿದೊಡೆ–ಹೇಳಿದರೆ.
೧೦೦. ನೃಪ–ರಾಜನೇ, ನೀಂ–ನೀನು, ಅಱಿಯದೆಯುಂ–ತಿಳಿಯದೆಯೂ, ವಿಚಾರಿಸದೆ ಯುಂ–ವಿಚಾರ ಮಾಡದೆಯೂ, ನೆಗೞ್ವನ್ನಂ–ಕಾರ್ಯ ಮಾಡುವಂಥವನು, ಅಲ್ಲೆ, (ಅಲ್ಲಯ್)–ಅಲ್ಲ; ಆನಱಿವೆಂ–ನಾನು ತಿಳಿಯುವೆನು, ಅದಂತೆ–ಅದು ಹಾಗೆಯೇ ಎಂದರೆ ಕರ್ಣನ ವಿಷಯವಾಗಿ ನೀನು ಹೇಳಿದ್ದೆಲ್ಲ ವಾಸ್ತವವೇ; ಕರ್ಣನ, ಎಣೆಗಂತೊಣೆಗಂ– ಸರಿಸಮಾನಕ್ಕೆ, ನೃಪರ್–ರಾಜರು, ಆರುಂ–ಯಾರೂ ಇಲ್ಲ; ತೇರಂ–ರಥವನ್ನು; ಒಸೆದು– ರಾಗಿಸಿ, ಆಂ–ನಾನು, ಎಸಗುತ್ತಿರೆ–ಚೋದಿಸುತ್ತಿರಲು, ರಿಪುಸೇನೆ–ಶತ್ರುಸೈನ್ಯ, ಬೆಳ್ಕುಱೆ– ಭಯವನ್ನು ಹೊಂದಲು, ನಾಳೆ–ನಾಳೆಯ ದಿನ, ಕರ್ಣನಂ–ಕರ್ಣನನ್ನು, ಗೆಲಲ್–ಗೆಲ್ಲಲು, ರಣರಂಗ ಭೂಮಿಯೊಳ್–ಯುದ್ಧರಂಗದ ಕ್ಷೇತ್ರದಲ್ಲಿ ಫಲ್ಗುಣನಮಚ್ಯುತನುಂ– ಅರ್ಜುನನೂ, ಕೃಷ್ಣನೂ, ನೆಱೆವರೆ–ಸಮರ್ಥರಾಗುವರೆ ಇಲ್ಲ.
೧೦೧. ಒಂದೇ ಗಡ–ಒಂದೇ ಅಲ್ಲವೆ, ಎಂದರೆ ಒಂದೇ ಒಂದು ವಿಷಯವಿದೆ, ನರಂ– ಅರ್ಜುನ, ಹರಿಯ ಪೇೞ್ದ–ಕೃಷ್ಣನು ಹೇಳಿದ, ಒಂದಂದವೆ–ಒಂದು ರೀತಿಯಿಂದ, ಎಸಗು ವಂತೆ–ಮಾಡುವ ಹಾಗೆ, ಕರ್ಣನುಂ–ಕರ್ಣನು ಕೂಡ, ಎನ್ನೆಂದ–ನಾನು ಹೇಳಿದ, ಒಂದು ಓಜೆಯೊಳ್–ಒಂದು ಕ್ರಮದಲ್ಲಿ, ಎಸಗದೊಡೆ–ಮಾಡದಿದ್ದರೆ, ಸ್ಯಂದನದಿಂದೆ–ರಥದಿಂದ, ಇೞಿದುಪೋಪೆಂ–ಇಳಿದು ಹೋಗುತ್ತೇನೆ. ತೇರಂ–ರಥವನ್ನು, ಎಸಗೆಂ–ಹಾಯಿಸೆನು, ನಡೆಯಿಸೆನು.
೧೦೨. ಎಂಬುದುಂ–(ಎಂದು ಶಲ್ಯನು) ಹೇಳುತ್ತಲೂ, ಭೂಭುಜಂ–ರಾಜ ದುರ್ಯೋ ಧನ, ಅಂಗಮಹೀಪತಿಯಂ–ಅಂಗರಾಜ ಕರ್ಣನನ್ನು, ಬರಿಸಿ–ಬರಮಾಡಿ, ಮಹಾಜಿಯಲ್ಲಿ– ಮಹಾಯುದ್ಧದಲ್ಲಿ, ಮಾವಂ–ಮಾವನಾದ ಶಲ್ಯ, ತಾನೇನೆಂಬಂ–ತಾನು ಏನು ಹೇಳುವನೊ, ಅದಂ–ಅದನ್ನು, ಅಂತೆ–ಹಾಗೆಯೇ, ಮೀಱದೆ–ದಾಟದೆ, ಉಲ್ಲಂಘಿಸದೆ, ನೀನ್–ನೀನು, ಒಡಂಬಡು–ಒಪ್ಪು, ಎಂದು–ಎಂಬುದಾಗಿ, ಪ್ರಾರ್ಥಿಸಿದಂ–ಬೇಡಿದನು.
ಕರ್ಣನಿಗೆ ಸಾರಥಿಯಾಗುವಂತೆ ಶಲ್ಯನನ್ನು ದುರ್ಯೋಧನ ಒಡಂಬಡಿಸಿದ ಈ ಸನ್ನಿವೇಶ ನಾಟಕದ ದೃಶ್ಯವೊಂದೆಂಬಂತೆ ರಮಣೀಯವಾಗಿದೆ. ಶಲ್ಯನೊಡನೆ ಮಾತಾಡು ವಾಗ ದುರ್ಯೋಧನ ತೋರಿಸುವ ನಯವಿನಯಗಳೂ, ಹೊಗಳಿಕೆಯಿಂದ ಕಾರ್ಯಸಾಧನೆ ಯಾಗುವುದೆಂಬ ಅವನ ಲೋಕಜ್ಞಾನವೂ ಇಲ್ಲಿ ರೂಪುಗೊಂಡಿವೆ. ಶಲ್ಯನ ಮಾತಿನಲ್ಲಿ ಅಸಹನೆಯೂ, ಕೋಪವೂ, ವಿಡಂಬನೆಯೂ, ತಿರಸ್ಕಾರವೂ ತನ್ನ ಕುಲ ಐಶ್ವರ್ಯ ಜ್ಞಾನ ಗಳಲ್ಲಿ ಅಭಿಮಾನ ಗರ್ವಗಳೂ ಅಭಿವ್ಯಕ್ತವಾಗಿವೆ. ದುರ್ಯೋಧನನಿಗೆ ಕರ್ಣನಲ್ಲಿದ್ದ ಪ್ರೀತಿ ಗೌರವ ಆದರ ಸ್ನೇಹ ಭಾವಗಳು, ‘ಸಾಮಾನ್ಯದ ಮನುಜನಲ್ಲಂಗಮಹೀಶಂ’ ಎಂದು ಮುಂತಾಗಿ ಶಲ್ಯನೊಡನೆ ಹೇಳುವಾಗ ಹೊರಸೂಸಿವೆ. ತನಗಿಷ್ಟವಿಲ್ಲದಿದ್ದರೂ ಶಲ್ಯನು ಸಾರಥಿತನಕ್ಕೆ ಒಪ್ಪಿಕೊಂಡದ್ದು ದುರ್ಯೋಧನನ ಮಾತನ್ನು ಮೀರಬಾರದೆಂಬ ದೃಷ್ಟಿ ಯಿಂದ. ದುರ್ಯೋಧನ ಅದನ್ನು ನಿಜವೆಂದು ಭಾವಿಸುತ್ತಾನೆ. ವ್ಯಾಸಭಾರತದಲ್ಲಿ ದುರ್ಯೋಧನ ಶಲ್ಯನನ್ನು ಒಪ್ಪಿಸುವ ಸಲುವಾಗಿ ತ್ರಿಪುರೋತ್ಪತ್ತಿಯ ಕಥೆಯನ್ನು, ದೇವತೆ ಗಳು ಶಿವನಿಗೆ ಮೊರೆಯಿಡುವುದನ್ನು, ತ್ರಿಪುರ ಸಂಹಾರವನ್ನು, ಇನ್ನು ಅನೇಕ ಕಥೆಗಳನ್ನು ಹೇಳುತ್ತಾನೆ. ಇವೆಲ್ಲ ಪಂಪನಿಂದ ಸ್ವೀಕೃತವಾಗಿಲ್ಲ. ಅವು ಭಾರತದ ಮುಖ್ಯ ಕಥೆಗೆ ಹೊರಗಾದುವು, ಅವನ್ನು ಅವನು ಬಿಟ್ಟಿರುವುದು ಉಚಿತವಾಗಿಯೇ ಇದೆ. ದುರ್ಯೋಧನ ಶಲ್ಯರ ವ್ಯಕ್ತಿ ಚಿತ್ರಗಳು ಇಲ್ಲಿ ಪರಿಸ್ಫುಟವಾಗಿವೆ. ಸಂಭಾಷಣೆಯು ಎಷ್ಟು ಬೇಕೊ ಅಷ್ಟೆ ಇದ್ದು ಪರಿಣಾಮಕಾರಿಯಾಗಿದೆ. ಶಲ್ಯನ ಬಾಯಲ್ಲಿ ಬರುವ ರಾಜಗುಣಾವಗಳ ನಿರೂಪಣೆ ಪಂಪ ನಿಂದ ನಿಯೋಜಿತವಾದುದು. ಈ ಪದ್ಯಗಳನ್ನು ಅವನು ಅರಿಕೇಸರಿಯ ಮುಂದೆ ಓದುವಾಗ ಆ ರಾಜ ನಿಜವಾಗಿಯೂ ಚಕಿತನಾಗಿರಬೇಕು.
ವಚನ : ನಿವಾಸಂಗಳ್ಗೆ–ಮನೆಗಳಿಗೆ, ಪಡೆಮಾತಂ–ಸುದ್ದಿಯನ್ನು; ಬೞಿಯನಟ್ಟಿ– ದೂತನನ್ನು ಕಳುಹಿಸಿ.
೧೦೩. ರಣರಂಗದೊಳ್–ಯುದ್ಧಭೂಮಿಯಲ್ಲಿ, ಸೂತಸುತನಂ–ಕರ್ಣನನ್ನು, ಉಂತೆ– ಸುಮ್ಮನೆ ಎಂದರೆ ಸುಲಭವಾಗಿ, ಗೆಲಲ್–ಗೆಲ್ಲಲು, ಅರಿದು–ಅಸಾಧ್ಯ; ಎಂಬುದು–ಎನ್ನುವು ದನ್ನು, ಒಂದು ಪಂಬಲೆ–ಒಂದು ಹಂಬಲವೇ, ಪಿರಿದು–ಹಿರಿದಾಗಿದೆ; ಆತಂಗೆ–ಅವನಿಗೆ, ನಾಳೆ–ನಾಳೆಯ ದಿನ, ಶಲ್ಯಂ–ಶಲ್ಯನು, ಒಸೆದು–ಸಂತೋಷಿಸಿ, ತೇರೆಸಪಂಗಡಂ–ತೇರನ್ನು ನಡೆಸುತ್ತಾನೆ ಅಲ್ಲವೆ? ಈ ಕಲಹಂ–ಈ ಯುದ್ಧ, ಇದೆಂತು ದಲ್–ಇದು ಹೇಗೋ ದಿಟ ವಾಗಿಯೂ, ಬಿದಿರ ಗಂಟುಗಳಂ–ಬಿದಿರಿನ ಗೆಣ್ಣುಗಳನ್ನು, ಕಳೆದಂತೆ–ತೆಗೆದು ಹಾಕುವ ಹಾಗೆ, ಮನ್ಮನಃಸ್ಖಲನೆಯಂ–ನನ್ನ ಮನಸ್ಸು ಸಡಿಲವಾಗುವುದನ್ನು, ಉಂಟುಮಾಡಿದಪುದು– ಉಂಟುಮಾಡುತ್ತಿದೆ; ಅಚ್ಯುತಾ–ಕೃಷ್ಣನೇ, ಇಲ್ಲಿಗೆ–ಈ ಸಮಯಕ್ಕೆ, ಕಜ್ಜಂ–ಮಾಡಬೇಕಾದ ಕಾರ್ಯ; ಆವುದು–ಯಾವುದು?
ವಚನ : ರಥಕಲ್ಪಮೆಂಬುದು–ರಥವಿದ್ಯೆಯೆಂಬುದು, ಒಡವುಟ್ಟಿದುದು–ಒಡನೆ ಹುಟ್ಟಿದ್ದು; ಮೂಗುದುಱಿಸಲಾಗದ–ಮೂಗನ್ನು ಕೆರೆಯಲಾಗದ; ಕಡ್ಡಂ–ದ್ವೇಷ, ಮಾತ್ಸರ್ಯ (?); ಒಡಂಬಡು–ಸಮ್ಮತವು, ಒಪ್ಪಿಗೆಯು;
೧೦೪. ಗಂಡರ್–ಶೂರರು, ಕರ್ಣಂಗಂಡು–ಕರ್ಣನನ್ನು ನೋಡಿ, ನುಡಿವ–ಮಾತಾ ಡುವ, ಪಸುಗೆಯಂ–ವಿವೇಕವನ್ನು, ಕಲ್ತರ್ಅಲ್ತೆ–ಕಲಿತರಲ್ಲವೆ? ಆ ಗಂಡವಾತುಂ–ಆ ಪೌರುಷದ ಮಾತೂ, ಮುಂ–ಮೊದಲು, ಕರ್ಣಂ–ಕರ್ಣನು, ಪುಟ್ಟೆ–ಹುಟ್ಟಲು, ಪುಟ್ಟಿತ್ತು– ಹುಟ್ಟಿತು; ಅಳವು ಅಮರ್ದು–ಪ್ರತಾಪಸಹಿತವಾಗಿ, ಪೂಣ್ದೀವ–ಪ್ರತಿಜ್ಞೆ ಮಾಡಿ ಕೊಡುವ, ಚಾಗಂ–ದಾನವು, ಒಡವುಟ್ಟಿತ್ತು–ಜೊತೆಯಲ್ಲಿ ಹುಟ್ಟಿತು, ಭಾರತಂ–ಮಹಾಭಾರತವು, ಕರ್ಣಂಗೆ–ಕರ್ಣನಿಗಾಗಿ, ಒಡ್ಡಿತ್ತು ದಲ್–ಚಾಚಿತ್ತಲ್ಲವೆ, ಏರ್ಪಟ್ಟಿತ್ತಲ್ಲವೆ? ಎನೆ–ಎನ್ನಲು, ಜಗದೊಳ್–ಲೋಕದಲ್ಲಿ, ಸಂದಂ–ಸಂದನು, ಪ್ರಸಿದ್ಧನಾದನು, ಸಂದೊಡೆ–ಪ್ರಸಿದ್ಧನಾದರೆ, ಏಂ–ಏನು? ನಾಳೆ–ನಾಳೆಯ ದಿನ, ಹರಿಗಂ–ಅರ್ಜುನ, ಆಂತು–ಎದುರಿಸಿ, ಕರ್ಣಾಂತಾಕೃಷ್ಣ ಬಾಣಾವಳಿಯೊಳೆ–ಕಿವಿವರೆಗೂ ಸೆಳೆದು ಬಿಡುವ ಬಾಣದ ಸಾಲುಗಳಿಂದಲೇ, ಕರ್ಣನಂ– ಕರ್ಣನನ್ನು, ಕೊಲ್ಗುಂ–ಕೊಲ್ಲುತ್ತಾನೆ.
೧೦೫. ಎಂಬಿನೆಗಂ–ಎನ್ನುತ್ತಿರಲು, ಆಗಳ್–ಆಗ, ಪ್ರಭಾತಸಮೀರಂ–ಪ್ರಾತಃಕಾಲದ ಗಾಳಿ, ವಿಕಚಾಂಬುಜ ಸೌರಭಮಂ–ಅರಳಿದ ತಾವರೆಗಳ ಸುಗಂಧವನ್ನು, ಒಸೆದು– ಸಂತೋಷಿಸಿ, ಸೇವಿಸುವ–ಮೂಸಿ ನೋಡುವ, ಆ ಪೆಣ್ದುಂಬಿಗಳ–ಆ ಹೆಣ್ಣು ದುಂಬಿಗಳ, ಸರ ಮಂ–ನಾದವನ್ನು, ಎತ್ತಿ–ಎಬ್ಬಿಸಿ, ತಱುಂಬುತ್ತು–ಅಟ್ಟುತ್ತ, ಬಂದುದು–ಬಂತು, ಬೀಸಿತು. ‘ತಱುಂಬು–ಗತಿಸ್ತಂಭೇ’ ಎಂದಿದ್ದರೂ ತೆಲುಗಿನ ತಱುಮು ಎಂಬುದಕ್ಕೆ ಅಟ್ಟು, ಹಿಂದೆ ಓಡು ಎಂಬರ್ಥವಿರುವುದರಿಂದ ಅದೇ ಅರ್ಥವನ್ನು ಇಲ್ಲಿ ಸ್ವೀಕರಿಸಿದೆ.
೧೦೬. ಸೂತ, ನಟ, ವಂದಿ, ಮಾಗಧ, ವೈತಾಳಿಕ, ಕಥಕ, ಪುಣ್ಯಪಾಠಕ ವಿಪ್ರೋದ್ಬೂತರವಂ–ಗಾಯಕರು, ನಟುವರು, ಹೊಗಳುಭಟ್ಟರು, ಸ್ತೋತ್ರ ಮಾಡುವವರು, ಹಾಡುವವರು, ಕಥೆ ಹೇಳುವವರು, ಸ್ವಸ್ತಿವಾಚನವನ್ನು ಮಾಡುವವರು, ಬ್ರಾಹ್ಮಣರು–ಇವರಿಂದ ಉತ್ಪನ್ನ ವಾದ ಶಬ್ದವು, ಜಯಜಯಗೀತಿಗಳ್–ಜಯವನ್ನು ಹೇಳುವ ಸಂಗೀತಗಳು, ಎರಡುಂ ಪಡೆಯೊಳ್–ಉಭಯ ಸೈನ್ಯಗಳಲ್ಲೂ, ತಡೆಯದೆ–ತಡಮಾಡದೆ, ಒರ್ಮೊದಲೆ–ಒಟ್ಟಿಗೆ, ಏಕಕಾಲದಲ್ಲೇ, ಎಸೆಯೆ–ಶಬ್ದ ಮಾಡುತ್ತಿರಲು,
೧೦೭. ಈ ಪದ್ಯದ ಪಾಠ ತುಂಬ ಕೆಟ್ಟಿದೆ; ಅರ್ಥವಾಗುವುದೇ ಕಷ್ಟ; ಕೌರವ ಸೈನ್ಯದ ಆನೆಗಳೂ ಕುದುರೆಗಳೂ ಅಪಶಕುನ ಸೂಚನೆಯನ್ನು ಮಾಡಿದಂತೆ ತೋರುತ್ತದೆ. ಎರಡುಂ ಪಕ್ಕಮನೆಱಗಿದ–ಎರಡು ಪಾರ್ಶ್ವಗಳಲ್ಲೂ ಬಾಗಿದ; ಕರಿಗಳ್–ಆನೆಗಳು, ಪಾರ್ದು– ನಿರೀಕ್ಷಿಸಿ, ಎಯ್ದೆವೇೞ್ದ–ಐದುವಂತೆ ಹೇಳಿದ, ಕೊರಲ ಸರಂಬೆತ್ತಿರೆ–ಕೊರಳಿನ ಧ್ವನಿಯನ್ನು ಹೊಂದಿರಲು, ಮು [ಱು] ವಿಟ್ಟು–ಆಹಾರವನ್ನು ಬಿಟ್ಟು, ನೃಪತುರಗಂಗಳ್–ದುರ್ಯೋಧ ನನ ಕಡೆಯ ಕುದುರೆಗಳು, ಅಲ್ಲಿ ಹೇಷಾಸ್ವರಮಂ ತೋಱಿದಪುವು–ಅಲ್ಲಿ ಕೆನೆಯುವ ಶಬ್ದವನ್ನು ತೋರಿಸುತ್ತಿವೆ. ಕರ್ಣನು ಯುದ್ಧರಂಗಕ್ಕೆ ಹೊರಡುವಾಗ ಅನೇಕ ಅಪಶಕು ನಗಳಾದುವು; ಅವುಗಳಲ್ಲಿ “ಪ್ರಸ್ಥಿತಸ್ತಸ್ಯಕರ್ಣಸ್ಯ ನಿಪೇತುಸ್ತುರಗಾ ಭುವಿ, ಅಶ್ರೂಣಿ ಚ ವಿಮುಂಚಂತ ವಾಹನಾನಿ ವಿಶಾಂಪತೇ” ಎಂಬಿವು ಎರಡು (ವ್ಯಾಸಭಾರತ). ಬಗೆಬಗೆ ಯಾದ ಸೊಪ್ಪುಗಳನ್ನು ಬೇಯಿಸಿ ಮುದ್ದೆ ಮಾಡಿ ದನಗಳಿಗೆ ಆಹಾರವಾಗಿ ಕೊಡುತ್ತಾರೆ; ಇದಕ್ಕೆ ಮುಱು ಎಂದು ಹೆಸರು; ‘ಎಳಗಱುವಂ ಬಿಡು ಮುಱವಂತಳಿದು’ ಎಂದು ಸುರಂಗನ ಪ್ರಯೋಗವಿದೆ (ತ್ರಿಪುವಿ ೧೬–೧೩); ‘ತಡೆಯದೆ ಮುಱುವಂ ಸುರಿಯೆಂಬ ಸರಮೆ ತುಱುಗಾರ್ತಿಯರೊಳ್’ ಎಂದು ನೇಮಿಚಂದ್ರನ ಪ್ರಯೋಗ (ಲೀಲಾವತಿ ೨–).
೧೦೮. ಇಂದು–ಈ ದಿನ, ಎನ್ನ ಮಗನಂ–ನನ್ನ ಮಗನಾದ ಕರ್ಣನನ್ನು, ಅರ್ಜುನಂ– ಅರ್ಜುನನು, ಒಂದುಂ–ಒಂದೂ, ತಳ್ವಿಲ್ಲದೆ–ತಡಮಾಡದೆ, ಅೞಿವಂ–ಕೊಲ್ಲುತ್ತಾನೆ, ಅವನಂ–ಅವನನ್ನು, ನೀಂ–ನೀನು, ಕಾಯೆಂದು–ರಕ್ಷಿಸು ಎಂಬುದಾಗಿ, ಪಸರಿಪ–ಹರಡು ತ್ತಿರುವ, ಇನಕಿರಣಂಗಳ್–ಸೂರ್ಯನ ಕಿರಣಗಳು, ಸುರಪತಿಯ–ಇಂದ್ರನ, ಕಾಲ್ವಿಡಿವ ಅಂದಮಂ–ಕಾಲು ಹಿಡಿಯುವ ರೀತಿಯನ್ನು, ಇಳಿಸಿದುವು–ಕೀಳ್ಮಾಡಿದುವು.
ವಚನ : ಪರಿಚೆ, । ದಿಸಿ–ನಿಶ್ಚಯಿಸಿ; ಆಜ್ಯಾವೇಕ್ಷಣಂಗೆಯ್ದು–ತುಪ್ಪದಲ್ಲಿ ಮುಖವನ್ನು ನೋಡಿಕೊಂಡು; ಸವತ್ಸಸುರಭಿಯಂ–ಕರುಸಮೇತವಾದ ಗೋವನ್ನು; ಪಸುರ್ಮಣಿ ಯನಪ್ಪೊಡಂ–ಹಸುರುಮಣಿಯಾದರೂ ಪೞಯಿಗೆಯನೆತ್ತಿಸಿ–ಬಾವುಟವನ್ನೇರಿಸಿ; ದುಕೂಲಾಬಂರಮಂ–ರೇಷ್ಮೆವಸ್ತ್ರವನ್ನು; ಪೊಸವಾವುಗೆಯಂ–ಹೊಸದಾದ ಪಾದುಕೆಯನ್ನು; ಕನಕಸಂವ್ಯಾನ ಸೂತ್ರಂ–ಚಿನ್ನದ ಉತ್ತರೀಯವನ್ನೂ ಜನ್ನಿವಾರವನ್ನೂ ಉಳ್ಳವನು; ಆಚಮಿಸಿ– ಆಚಮನಮಾಡಿ; ಚಲ್ಲಣಮನುಟ್ಟು–ಚಡ್ಡಿಯನ್ನು ಧರಿಸಿ; ಪುಡಿಗತ್ತುರಿಯಂ– ಕಸ್ತೂರಿಯ ಪುಡಿಯನ್ನು; ಪಸಿಯ ನೇತ್ರದ–ಹಸಿರು ಬಣ್ಣದ ವಸ್ತ್ರದ, ಅಸಿಯ ಪಾಳೆಯೊಳ್– ನವುರಾದ ಪಟ್ಟಿಯಲ್ಲಿ (ಹಾಳೆಯಲ್ಲಿ), ನವಿರಂ–ಕೂದಲನ್ನು, ಪಚ್ಚುಗಂಟಿಕ್ಕಿ–ಎರಡು ಭಾಗಮಾಡಿ ಗಂಟುಹಾಕಿ; ಮಕುಟಮಂ ಕವಿದು–ಕಿರೀಟವನ್ನು ಧರಿಸಿ; ಕಾಯಿಂ–ಕಾಯಿಗಿಂತ; ಎೞಲಿಕ್ಕಿ–ಜೋಲುವಂತೆ ಹಾಕಿ; ಪಸದನಂ–ಅಲಂಕಾರ; ನೆಱೆಯೆ–ಪೂರ್ಣವಾಗಿ, ಕೆಯ್ಗೆಯ್ದು–ಸಿಂಗರಿಸಿಕೊಂಡು; ಸನ್ನಣಂಗಳೆಲ್ಲಮಂ–ಕವಚಗಳನ್ನೆಲ್ಲ;
೧೦೯. ಮುನ್ನ–ಮೊದಲು, ಅಮರಪತಿಗೆ–ಇಂದ್ರನಿಗೆ, ಒಡವುಟ್ಟಿದಕವಚಮಂ–ಸಹಜ ಕವಚವನ್ನು; ತಿದಿಯುಗಿದು–ಚರ್ಮ ಸುಲಿಯುವಂತೆ ಸುಲಿದು, ಕೊಟ್ಟೆಂ–ದಾನವಾಗಿ ಕೊಟ್ಟೆನು; ಎನಗೆ–ನನಗೆ, ಇಂ–ಇನ್ನು, ಮಱೆಯಂ–ಮೈಗೆ ಮರೆಯಾದ ಕವಚಾದಿಗಳನ್ನು, ಆಸೆವಡಲ್–ಬಯಸಲು, ಒಪ್ಪದು–ಒಪ್ಪುವುದಿಲ್ಲ, ಎಂದು, ಅದಟಂ–ಶೂರನಾದ, ರಾಧೇಯಂ–ಕರ್ಣನು, ಕವಚಮಂ–ಕವಚವನ್ನು, ಅಣಂ–ಸ್ವಲ್ಪವಾಗಿಯೂ, ತುಡನೆ– ಧರಿಸನೇ!
ವಚನ : ಕಕ್ಷ–ಪಾರ್ಶ್ವದ; ಸಗ್ಗಮನೇಱುವುದಂ–ಸ್ವರ್ಗಾರೋಹಣ ಮಾಡುವುದನ್ನು; ನೆಲನ್–ನೆಲವು; ಅಂಬರದೆಡೆಗೆ–ಆಕಾಶ ಪ್ರದೇಶಕ್ಕೆ, ಬರ್ಪಂತೆ–ಬರುವ ಹಾಗೆ, ಧ್ವಜಿನಿ ಯಂ–ಸೈನ್ಯವನ್ನು;
೧೧೦. ಪರಿವಿಧ್ವಂಸಿತ ರಿಪುನೃಪಸಮೂಹಂ–ಧ್ವಂಸಮಾಡಲ್ಪಟ್ಟ ಶತ್ರುರಾಜರ ಸಮೂಹ ವುಳ್ಳವನು ಆದ, ಉತ್ತುಂಗಾಂಸಂ–ಎತ್ತರವಾದ ಹೆಗಲುಳ್ಳ, ವಿಬುಧವನಜವನ ಕಳಹಂಸಂ– ಪಂಡಿತರೆಂಬ ತಾವರೆಯ ತೋಟದಲ್ಲಿ ಕಲಹಂಸನಾದ, ಕಂಸಾರಿ ಸಖಂ–ಶ್ರೀ ಕೃಷ್ಣನ ಸ್ನೇಹಿತ ನಾದ ಅರ್ಜುನನು, ಆಗಳ್–ಆಗ, ಹಂಸವ್ಯೂಹಮಂ–ಹಂಸಾಕಾರದ ಸೇನಾ ರಚನೆಯನ್ನು, ಒಡ್ಡಿದಂ–ಮುಂದೆ ಚಾಚಿದನು.
ವಚನ : ಬೀಸುವಂತೆ–ಗಾಳಿಯನ್ನು ಊದಿ ಉರಿಯನ್ನು ದಳ್ಳಿಸುವಂತೆ; ಕೆಯ್ವೀಸಿ ದಾಗಳ್–ಯುದ್ಧಾರಂಭವಾಗಲಿ ಎಂದು ಕೈಬೀಸಿ ಸೂಚಿಸಿದಾಗ;
೧೧೧. ಕರದಸಿಗಳ್–ಕೈಗತ್ತಿಗಳು, ಪಳಂಚೆ–ತಾಗಲು, ಕಿಡಿವಿಟ್ಟು–ಕಿಡಿಗಳನ್ನು ಚಿಮ್ಮಿ, ಒಗೆದ–ಹುಟ್ಟಿದ, ಒಳ್ಗಿಡಿ–ಒಳ್ಳೆಯ ಕಿಡಿಗಳು, ತಾರಕಾಳಿಯಂತಿರೆ–ನಕ್ಷತ್ರಗಳ ಸಮೂಹ ದಂತಿರಲು, ಬಾಳುಡಿ–ಕತ್ತಿಗಳ ಚೂರುಗಳು, ಪಾಱುವ–ಹಾರಾಡುವ, ಉಳ್ಕದಂತಿರೆ– ಬೀಳುವ ನಕ್ಷತ್ರದಂತಿರಲು, ಅಂಬರದೊಳ್–ಆಕಾಶದಲ್ಲಿ, ಅಂಬರಂ–ಆಕಾಶವು, ತಡಮಾ ದುದು–ಸಮಾನವಾಯಿತು, ಎಂಬಿನೆಗಂ–ಎನ್ನುತ್ತಿರಲು, ಜಗತ್ರಯಂಬರಂ–ಮೂರು ಲೋಕಗಳವರೆಗೂ, ಎಸೆವಂತು–ಸೊಗಸಾಗುವ ಹಾಗೆ, ಎರಡುಂ ಬಲಂ–ಎರಡು ಸೈನ್ಯಗಳೂ, ಉಗ್ರಕೋಪದಿಂ–ಭಯಂಕರ ಕೋಪದಿಂದ, ಅಂದು–ಆ ದಿನ, ತಳ್ತು–ತಾಗಿ, ಇಱಿದವು– ಹೋರಾಡಿದುವು.
ವಚನ : ಅತಿರಥಮಥನನ–ಅರ್ಜುನನ; ತಮ್ಮತ್ತ–ತಮ್ಮ ಕಡೆಗೆ; ತೆಗೆಯಲೊಡಂ–ತೆಗೆದುಕೊಂಡು ಹೋದ ಕೂಡಲೇ; ಅಮ್ಮನಗಂಧವಾರಣಂ–ತಂದೆಯ ಮದ್ದಾನೆಯಾದ ಅರ್ಜುನ (ಇದು ಅರಿಕೇಸರಿಯ ಒಂದು ಬಿರುದು).
೧೧೨. ಇವಂದಿರ ಕಾರಣದಿಂದ–ಇವರ ಎಂದರೆ ಸಂಸಪ್ತಕರ ಕಾರಣದಿಂದ, ಭಾರತಂ– ಭಾರತ ಯುದ್ಧವು, ಪಱಿಪಡದೆ ಆಯ್ತು–ಖಂಡಿತವಾಗದಾಯಿತು ಎಂದರೆ ನಿರ್ಣಾಯಕವಾಗ ದಂತೆ ಆಯಿತು; ಇವಂದಿರಂ–ಇವರನ್ನು ಎಂದರೆ ಸಂಸಪ್ತಕರನ್ನು, ಪಱಿಪಡೆ–ಕತ್ತರಿಸಿ ಬೀಳುವಂತೆ, ಕೊಂದು, ಅಮೋಘಂ–ವ್ಯರ್ಥವಿಲ್ಲದೆ, ಕರ್ಣನೊಳೆ–ಕರ್ಣನಲ್ಲಿಯೇ, ಕಾದಲೆವೇೞ್ಕುಂ–ಯುದ್ಧಮಾಡಲೇಬೇಕು, ಎಂದು–ಎಂದು ಹೇಳುತ್ತ, ಕೆಂಗಱಿಗಳ– ಕೆಂಪಾದಗಱಿಗಳನ್ನುಳ್ಳ, ಪಾರೆಯಂಬುಗಳೊಳ್–ಹಾರೆಯಾಕಾರದ ಬಾಣಗಳಲ್ಲಿ, ಊಱಿ– ಅದುಮಿ, ಕಱುತ್ತು–ಕೆರಳಿ, ಇಸೆ–ಪ್ರಯೋಗಿಸಲು, ಪರ್ದೆಱಗೆ–ಹದ್ದು ಮೇಲೆ ಬೀಳಲು, ಸುರುಳ್ತು–ಸುರುಟಿ, ಬೀೞ್ವ–ಬೀಳುವ, ಕಿಱುವಕ್ಕಿವೊಲ್–ಸಣ್ಣ ಹಕ್ಕಿಗಳಂತೆ, ಉಗ್ರವಿರೋಧಿ ನಾಯಕರ್–ಭಯಂಕರವಾದ ಶತ್ರು ಸೇನಾನಾಯಕರು, ಎಯ್ದೆ–ಚೆನ್ನಾಗಿ, ಬಿೞ್ದರ್–ಕೆಳಗೆ ಬಿದ್ದರು.
೧೧೩. ಕೞಕುೞಮಾದ ರಥಂಗಳಿಂ–ಸ್ಥಾನ ತಪ್ಪಿದ, ತಾರುಮಾರಾದ, ರಥಗಳಿಂದಲೂ, ಅೞಿದ–ಸತ್ತ, ಅರಿಭಟರಿಂ–ಶತ್ರುಸೈನಿಕರಿಂದಲೂ, ಸುರುಳ್ದ–ಸುಕ್ಕಿಬಿದ್ದ, ಮದಗಜ ಘಟೆಯಿಂ–ಸೊಕ್ಕಾನೆಗಳ ಹಿಂಡಿನಿಂದಲೂ, ರುಧಿರಜಳಂ–ರಕ್ತದ ನೀರು, ಕಲ್ವಱಿಯೊಳ್– ಕಲ್ಲುಗಳ ದಾರಿಯಲ್ಲಿ ಎಂದರೆ ಶಿಲಾಮಯವಾದ ಪಾತ್ರದಲ್ಲಿ, ಭೋರ್ಗರೆವ–ಭೋರೆಂದು ಶಬ್ದಮಾಡುವ, ತೊಱೆಯವೊಲ್–ನದಿಯಂತೆ, ಸುೞಿಸುೞಿದು–ಸುತ್ತಿ ಸುತ್ತಿ, ಒಡವರಿ ದುದು–ಕೂಡ ಹರಿಯಿತು.
೧೧೪. ಪಿರಿದು–ಹಿರಿದಾಗಿ, ಪೊಗೞಿಸಿದ–ಹೊಗಳಿಸಿಕೊಂಡ, ಪಾಡಿಸಿದ–ಹಾಡಿಸಿ ಕೊಂಡ, ಅರಿಯರಂ–ಅಸಾಧ್ಯರಾದವರನ್ನು, ಆನಲ್ಕೆ–ಎದುರಿಸಲು, ಪಿರಿಯರಂ–ದೊಡ್ಡವ ರಾದವರನ್ನು, ಪೂಣಿಗರಂ–ಶೂರರನ್ನು, ಬಿರುದರಂ–ಬಿರುದುಳ್ಳವರನ್ನು, ಅದಟಿನೊಳ್– ಶೌರ್ಯದಲ್ಲಿ, ಉಬ್ಬರಮುರಿವರಂ–ಅಧಿಕವಾಗಿ ಉರಿಯುವವರನ್ನು, ಅರಿಗನ ಕಣೆಗಳ್– ಅರ್ಜುನನ ಬಾಣಗಳು, ಆಯ್ದು–ಆರಿಸಿಕೊಂಡು, ಅಱಸಿ–ಹುಡುಕಿಕೊಂಡು ಬಂದು, ಕೊಂಡುವು–ನಾಟಿದುವು.
೧೧೫. ಕಣೆಕೊಳೆ–ಬಾಣಗಳು ಹೊಡೆದಾಗ, ಪಱಿದ–ಕತ್ತರಿಸಿದ, ಅರಿನರಪರ– ಶತ್ರುರಾಜರ, ಕಣೆಗಾಲ್ಗಳ–ಕಾಲುಗಳ ಕೆಳಭಾಗದ, ಬೆರಲ ರತ್ನ ಮುದ್ರಿಕೆಗಳ–ಬೆರಳುಗಳಿಗೆ ಹಾಕಿರುವ ರತ್ನದುಂಗುರಗಳ, ಸಂದಣಿಯ–ಗುಂಪಿನ, ಬೆಳಗುಗಳಿಂ–ಕಾಂತಿಗಳಿಂದ, ರಣ ರಂಗದೊಳ್–ಯುದ್ಧರಂಗದಲ್ಲಿ, ಅಯ್ದುಪೆಡೆಯ–ಅಯ್ದು ಹೆಡೆಗಳನ್ನುಳ್ಳ, ನಾಗಂಗಳ ವೋಲ್– ಸರ್ಪಗಳಂತೆ, ಎಸೆದುವು–ಪ್ರಕಾಶಿಸಿದುವು.
೧೧೬. ಆಗಳ್–ಆಗ, ವಿಜಯನ ವೀರಶ್ರೀಗೆ–ಅರ್ಜುನನ ಪರಾಕ್ರಮದ ಸಂಪತ್ತಿಗೆ, ಕರಂ ಕಿನಿಸಿ–ವಿಶೇಷವಾಗಿ ಕೆರಳಿ, ಕಲಿ ಸುಶರ್ಮಂ–ಶೂರನಾದ ಸುಶರ್ಮನು, ಮೆಯ್ಯೊಳ್ ತಾಗೆ–ಮೈಯಲ್ಲಿ ಎದುರಿಸಲು, ಪಗೆ–ದ್ವೇಷವು, ನೀಗೆ–ತೀರುವಂತೆ, ಅದೊಂದು–ಅದು ಒಂದು, ಪರಶು ದಾರುಣ ಶರದಿಂ–ಕೊಡಲಿಯಾಕಾರದ ಕ್ರೂರವಾದ ಬಾಣದಿಂದ, ತಲೆಯಂ– ತಲೆಯನ್ನು, ಪೋಗೆಚ್ಚಂ–ಕತ್ತರಿಸಿ ಹೋಗುವಂತೆ ಹೊಡೆದನು.
ವಚನ : ಆಳ್ದನಾಗಿರ್ದ–ಸ್ವಾಮಿಯಾಗಿದ್ದ; ಉದೀರ್ಣ–ಅಧಿಕವಾಗುತ್ತಿರುವ; ಸುರಿಗೆ ಗಾಳೆಗಮಂ–ಕತ್ತಿಯ ದ್ವಂದ್ವ ಯುದ್ಧವನ್ನು; ಮಿೞ್ತು ಬರ್ಪಂತೆ–ಮೃತ್ಯು ಬರುವ ಹಾಗೆ; ಪೆಸರ–ಹೆಸರುಳ್ಳ; ಅಱಿಕೆಯ ನಾಯಕರಂ–ಪ್ರಸಿದ್ಧರಾದ ಸೇನಾನಾಯಕರನ್ನು; ನಿಟ್ಟಾಲಿ ಗೊಂಡು–ಉದ್ದಕ್ಕೂ ನೋಡಿ; ಮುಟ್ಟೆ ವಂದಾಗಳ್–ಮುಟ್ಟುವಂತೆ ಬಂದಾಗ ಎಂದರೆ ಹತ್ತಿರ ಬಂದಾಗ;
೧೧೭. ಯಮಸುತಂ–ಧರ್ಮರಾಜನು, ಅಣ್ಮಿ–ಪೌರುಷವನ್ನು ತೋರಿ, ಸತ್ತೆಯೆನು ತುಂ–(ನೀನು, ಕರ್ಣನು) ಸತ್ತೆ ಎನ್ನುತ್ತ, ನಿಶಿತಾಸ್ತ್ರಮಂ–ಹರಿತವಾದ ಬಾಣವನ್ನು, ಉರ್ಚಿ ಕೊಂಡು–ಸೆಳೆದುಕೊಂಡು, ವಕ್ಷಮಂ–ಎದೆಯನ್ನು, ಇರದೆ–ಬಿಡದೆ, ಎಚ್ಚೊಡೆ– ಹೊಡೆದರೆ, ಶರಮಂ–ಬಾಣವನ್ನು, ಕಲಿ–ಶೂರನಾದ, (ಕರ್ಣ), ಚಕ್ಕನೆ–ಚಕ್ಕೆಂದು, ಕಿೞ್ತು– ಕಿತ್ತು, ಉರಃ ಪ್ರದೇಶಮನಿಸೆ–(ಧರ್ಮಜನ) ಎದೆಯ ಪ್ರದೇಶವನ್ನು ಹೊಡೆಯಲು, ನೆತ್ತರೊಕ್ಕು–ರಕ್ತವು ಸುರಿದು, ಪತಿ–ಧರ್ಮಜನು, ಮುಚ್ಚೆಯೊಳ್–ಮೂರ್ಛೆಯಲ್ಲಿ, ಇಚ್ಚೆಯೆಗೆಟ್ಟು–ಇಚಾ, ಶಕ್ತಿ ಉಡುಗಿ ಹೋಗಿ, ಜೋಲ್ದೊಡೆ–ಸೋತು ಬಿದ್ದರೆ, ದಿನೇಶಜಂ–ಕರ್ಣ, ನಸುನೊಂದು–ಸ್ವಲ್ಪ ವ್ಯಥೆಪಟ್ಟು, ನಂದಿಸದೆ–ಆರಿಸದೆ, ಎಂದರೆ ಪ್ರಾಣ ವನ್ನು ತೆಗೆಯದೆ, ತನ್ನನೆ–ತನ್ನನ್ನೇ, ಆದಮೆ–ವಿಶೇಷವಾಗಿಯೇ, ನಿಂದಿಸಿದಂ–ಹಳಿದು ಕೊಂಡನು.
ವಚನ : ನನ್ನಿಗೆ–ಸತ್ಯಕ್ಕೆ; ಬನ್ನಂ ಬಂದಪುದು–ಭಂಗವುಂಟಾಗುತ್ತದೆ; ಪೆಱಗಿಕ್ಕಿ– ಹಿಂದಿಟ್ಟು, ಸಾವಿಂಗಾಱದೆ–ಸಾವಿಗೆ ಸೈರಿಸಲಾರದೆ.
೧೧೮. ಎರೆದನ–ಬೇಡಿದವನ, ಪೆಂಪು–ಹಿರಿಮೆಯೂ, ಆಂತ–ಎದುರಿಸಿದ, ಅಧಿಕ ನಪ್ಪನ–ಮೇಲಾದವನ, ಪೆಂಪು–ಹಿರಿಮೆಯೂ, ಈವ–ದಾನ ಕೊಡುವ, ಕಾವ–ರಕ್ಷಿಸುವ, ನಿನ್ನ, ಎರಡು ಗುಣಂಗಳುಂ–ಎರಡು ಗುಣಗಳೂ, ಬಯಸುತಿರ್ಪುವು–ಬಯಸುತ್ತಿವೆ; ನಿನ್ನೊಳ್– ನಿನ್ನಲ್ಲಿ, ಇವಂದಿರ್–ಇವರು (ನಕುಲ ಸಹದೇವರು), ಏತಱೊಳ್–ಯಾವುದರಲ್ಲಿ, ದೊರೆ– ಸಮಾನ; ದೊರೆವತ್ತ–ಸಮಾನತೆಯನ್ನು ಪಡೆದ; ನಿನ್ನೊಳಂ–ನಿನ್ನಲ್ಲಿಯೂ, ನರನೊಳಂ– ಅರ್ಜುನನಲ್ಲೂ, ಗೆಲ್ಲದ–ಗೆಲುವಿನ, ಸೋಲದ–ಸೋಲಿನ, ಮಾತು, ಇರ್ದುದು–ಇದೆ; ಸಿಸುಗಳ್–ಮಕ್ಕಳು (ನಕುಲಸಹದೇವರು), ಬೞಲ್ದ ಭೂಪನಂ–ಆಯಾಸಗೊಂಡಿರುವ, ರಾಜ ಧರ್ಮಜನನ್ನು, ಸಿಬಿರಕ್ಕೆ–ಪಾಳಯಕ್ಕೆ, ಉಯ್ಗೆ–ಒಯ್ಯಲಿ.
ವಚನ : ಅನುವರಂ–ಯುದ್ಧವು, ಪೊಣರ್ದು–ಕೂಡಿ; ಕೆಯ್ಕೊಳ್ವಂ–ರಕ್ಷಿಸೋಣ, ಸಹಾಯಕ್ಕೆ ಹೋಗೋಣ; ಉತ್ತಾಯಕರಾಗಿ–ಪ್ರತಿಭಟಿಸಿದವರಾಗಿ; ಕಾಲಾಗ್ನಿಯಂ [ಕೀ] ಡಿ ಸುತ್ತುವಂತೆ–ಪ್ರಳಯ ಕಾಲದ ಅಗ್ನಿಯನ್ನು ಕೀಟವು ಮುತ್ತಿಕೊಳ್ಳುವ ಹಾಗೆ; ಇಟ್ಟುಂ– ಹೊಡೆದೂ; ಎಚ್ಚುಂ–ಪ್ರಯೋಗ ಮಾಡಿಯೂ; ಇಱಿದುಂ–ತಿವಿದೂ; ಅಗುರ್ವುಂ– ಭಯವೂ,
೧೧೯. ಎನಗಂ–ನನಗೂ, ಅರಾತಿ ಸಾಧನಂ–ಶತ್ರುಸೈನ್ಯವು, ಇದಿರ್ಚುಗುಂ–ಎದುರಿಸು ತ್ತದೆ; ಅಳ್ಕದೆ–ಹೆದರದೆ, ಇದಿರ್ಚಿ–ಎದುರಿಸಿ, ಬಾೞ್ಗುಂ–ಬದುಕುತ್ತದೆ, ಇನ್ನೆನೆ–ಇನ್ನು ಎಂದು ಹೇಳಲು, ದೋಷಂ–ಕಳಂಕವು, ಪೆಱತು ಉಂಟೆ–ಬೇರೆ ಇದೆಯೆ? ಎನಗೆ ಅಂತು ಅದೆ ದೋಷಂ–ನನಗೆ ಹಾಗೆ ಅದೇ ಕಳಂಕವು; ಅದು ಆಗಲ್ ಆಗದು–ಅದು ಉಂಟಾಗ ಬಾರದು; ಎಂದು, ಇನತನಯಂ–ಕರ್ಣನು, ತಗುಳ್ದು–ಅಟ್ಟಿ, ಇಸೆ–ಬಾಣಗಳನ್ನು ಪ್ರಯೋಗಿಸಲು, ನಿಶಾತಶರಾಳಿಗಳ್–ಕ್ರೂರವಾದ ಬಾಣಗಳ ಸಮೂಹ, ಎಯ್ದೆ–ಚೆನ್ನಾಗಿ, ಚಕ್ಕು ಚಕ್ಕನೆ–ಚಕ್ ಚಕ್ ಎಂದು, ಕೊಳೆ–ಕತ್ತರಿಸಲು, ವೈರಿ ಭೂಪರಾ–ಶತ್ರು ರಾಜರ, ಶಿರಂಗಳ್–ತಲೆಗಳು, ಮೊಕ್ಕು ಮೊಕ್ಕನೆ–ಮೊಕ್ ಮೊಕ್ ಎಂದು, ಉರುಳ್ದುವು–ಉರುಳಿದುವು.
ವಚನ : ಆ ಪ್ರಸ್ತಾವದೊಳ್–ಆ ಸಮಯದಲ್ಲಿ,
೧೨೦. ಮಂತ್ರ….ಮಂತ್ರಂ: ಮಂತ್ರಪದ–ಮಂತ್ರದ ಪದಗಳಲ್ಲಿ; ಪ್ರವೀಣ–ಚತುರ ರಾದ, ಬಹುಸಾಧನ–ಅನೇಕ ಸೈನಿಕರ, ಹೂಂಕರಣಾದಿ–ಹುಂಕಾರವೇ ಮುಂತಾದ, ಮಂತ್ರಂ– ಮಂತ್ರವನ್ನುಳ್ಳ; ಆಮಂ….ಷಣಂ; ಆ ಮಂತ್ರಿತ–ಆಹ್ವಾನಿಸಲ್ಪಟ್ಟ, ಡಾಕಿನೀ–ಪಿಶಾಚಿಗಳ, ದಶನ–ಹಲ್ಲುಗಳ, ಘಟ್ಟನ–ಘರ್ಷಣದಿಂದ, ಜಾತ–ಹುಟ್ಟಿದ, ವಿಭೀಷಣ–ಭಯಂಕರ ವಾದ, ಮದೇಭಾಂ….ತಂತ್ರ; ಮದೇಭ–ಸೊಕ್ಕಾನೆಗಳ, ಅಂತ್ರ–ಕರುಳುಗಳಿಂದ, ನಿಯಂತ್ರಿತ– ಕಟ್ಟಲ್ಪಟ್ಟ, ಅಶ್ವ–ಕುದುರೆಗಳ, ಶವ–ಹೆಣಗಳ, ಮಾಂಸರಸ–ಸಾರವುಳ್ಳ ಮಾಂಸದಿಂದ; ಮತ್ತ– ಸೊಕ್ಕಿದ, ಯೋಗಿನೀ–ಜೋಗಿಣಿ ಎಂಬ ಮರುಳುಗಳ, ತಂತ್ರಂ–ಸಮೂಹವನ್ನುಳ್ಳ; ಕರ್ಣನು ಗೆಲ್ದ–ಕರ್ಣನು ಗೆದ್ದ; ಕೊಳ್ಗುಳಂ–ಯುದ್ಧ ಭೂಮಿಯು, ಏಂ, ಅಗುರ್ವಂ ಒಳ ಕೊಂಡುದೊ–ಏನು ಭಯವನ್ನು ಒಳಕೊಂಡಿತೋ!
ವಚನ : ನಿಕುರುಂಬದೊಳಗೆ–ಸಮೂಹದಲ್ಲಿ; ಕಿಱುವೀೞಲೀಯದೆ–ಸ್ವಲ್ಪವೂ ಬೀಳದಂತೆ ಎಂದರೆ ತಪ್ಪಿಸಿಕೊಳ್ಳದಂತೆ; ರಸಮಂ–ಪಾದರಸವನ್ನು, ಕೊಲ್ವಂತೆ–ಮರ್ದಿಸುವ ಹಾಗೆ; ಎಂತಾನು–ಹೇಗಾದರೂ; ಪೊಣರಲ್–ಹೋರಾಡಲು; ಬಳ್ವಳ ಬಳೆದು–ಅತಿಶಯ ವಾಗಿ ಬೆಳೆದು, ಒಗೆದ–ನೆಗೆದ, ಕೇಸುರಿಯಂತೆ–ಕೆಂಪಾದ ಉರಿಯ ಹಾಗೆ; ಮಿಳಿರ್ವ– ಅಲುಗಾಡುವ; ಕೇಸರಿಕೇತನ–ಸಿಂಹದ ಬಾವುಟ; ಮುಟ್ಟೆವರ್ಪನ್ನೆಗಂ–ಹತ್ತಿರ ಬರುತ್ತಿರಲು; ಅರವಿಂದ ಬಾಂಧವ ತನೂಜನ–ಸೂರ್ಯಪುತ್ರ ಕರ್ಣನ; ಮಹಾ ಪ್ರಹರಣ–ಬಲವಾದ ಏಟಿನ;
೧೨೧. ಪವನಸುತಂಗೆ–ಭೀಮನಿಗೆ, ಪಾಸಟಿಗಳ್–ಸಮಾನರು, ಒರ್ವರುಮಿಲ್ಲ– ಒಬ್ಬರೂ ಇಲ್ಲ; ಅದಱಿಂದಂ–ಆದ್ದರಿಂದ, ಆಂತ ಕೌರವ ಬಲದ–ಎದುರಿಸಿದ ಕೌರವ ಸೈನ್ಯದ, ಉರ್ಕುಂ–ಗರ್ವವನ್ನು, ಒಂದಿನಿಸು–ಒಂದಿಷ್ಟು, ಮಾಣಿಸಿ–ನಿಲ್ಲಿಸಿ, ಇಳೇಶ್ವರ ನಲ್ಲಿಗೆ–ರಾಜ ಧರ್ಮಪುತ್ರನ ಬಳಿಗೆ, ಪೋಪಂ–ಹೋಗೋಣ, ಎಂದು, ಅವನತ ವೈರಿ– ಬಗ್ಗಿಸಲ್ಪಟ್ಟ ಶತ್ರುಗಳನ್ನುಳ್ಳವನು, ಅರ್ಜುನ, ವೈರಿಬಲ ವಾರಿಧಿಯಂ–ಶತ್ರು ಸೈನ್ಯ ಸಾಗರ ವನ್ನು, ವಿಶಿಖೌರ್ವವಹ್ನಿಯಿಂ–ಬಾಣಗಳ ಬಡಬಾನಲದಿಂದ, ತವಿಸಿ–ನಾಶಮಾಡಿ, ಅಲ್ಲಿಗೆ–ಆ ಯುದ್ಧಕ್ಕೆ, ಮರುತ್ತನೂಭವನಂ–ಭೀಮನನ್ನು, ಪೇೞ್ದು–ನಿಯಮಿಸಿ, ಭೂಪನಂ– ಧರ್ಮರಾಜನನ್ನು, ಇರದೆ, ಎಯ್ದಿ–ಸಮೀಪಿಸಿ.
೧೨೨. ತಾನುಂ ಹರಿಯುಂ–ತಾನೂ ಶ್ರೀಕೃಷ್ಣನೂ, ಭೂಪತಿಗೆ–ಧರ್ಮರಾಜನಿಗೆ, ಆನತರಾಗಲೊಡಂ–ನಮಸ್ಕರಿಸಿದವರಾದ ಕೂಡಲೆ, ಪತಿ–ಪ್ರಭುವು, ಒಸೆದು–ಸಂತೋಷಿಸಿ, ಪರಸಿ–ಆಶೀರ್ವದಿಸಿ, ಕಾನೀನನ ದೊರೆಯ–ಕರ್ಣನಂಥ ಯೋಗ್ಯತೆಯುಳ್ಳ, ಕಲಿಯಂ– ಶೂರನನ್ನು, ಉಗ್ರಾಹವದೊಳ್–ಭಯಂಕರ ಯುದ್ಧದಲ್ಲಿ, ಯಮಸ್ಥಾನಮಂ– ಯಮನೆಡೆಯನ್ನು ಎಂದರೆ ಯಮಲೋಕವನ್ನು, ಎಂತು–ಹೇಗೆ, ಎಯ್ದಿಸಿದಿರೊ–ಸೇರಿಸಿದಿರೋ!
೧೨೩. ನರನಾರಾಯಣರೆಂಬಿರ್ವರು–ನರ, ನಾರಾಯಣ ಎಂಬ ನೀವಿಬ್ಬರೂ, ಒಡಗೂಡಿ ದೊಡೆ–ಜೊತೆಯಾಗಿ ಸೇರಿದರೆ, ಉರ್ವರೆಯೊಳ್–ಲೋಕದಲ್ಲಿ, ನಿರುತಂ–ನಿಶ್ಚಯ ವಾಗಿಯೂ, ಗೆಲ್ವರ್–ಗೆಲ್ಲುವವರು, ಆರ್ ಎನೆ–ಯಾರು ಎನ್ನಲು, ನೆಗೞ್ದ–ಪ್ರಸಿದ್ಧರಾದ, ನಿಮ್ಮಿರ್ವರದೊರೆಗಂ–ನಿಮ್ಮಿಬ್ಬರ ಸಾಟಿಗೂ, ಬಗೆವೊಡೆ–ಭಾವಿಸಿದರೆ, ಅಗ್ಗಳಂ–ಮಿಗಿ ಲಾದ, ನರರ್–ಮನುಷ್ಯರು, ಒಳರೇ–ಇರುವರೇ?
೧೨೪. ಎಂತೆನೆ–ಹೇಗೆನ್ನಲು, ಮುಯ್ಯೇೞ್ಸೂೞ್–ಇಪ್ಪತ್ತೊಂದು ಸಲ, ಎಳೆಯಂ– ಭೂಮಿಯನ್ನು, ತಳದೊಳೆ–ಅಂಗೈಯಲ್ಲಿಯೇ, ಆತಂ–ಅವನು (ಕರ್ಣನು), ಪಿೞಿದಂ– ಹಿಡಿದನು, ಎಂಬುದಂ–ಎಂಬುದನ್ನು, ಆಂ–ನಾನು, ಮುನ್ನ–ಮೊದಲು, ಎಂತುಂ–ಹೇಗೂ, ನಂಬೆನೆ–ನಂಬಲಿಲ್ಲ; ಇಂದಿನ–ಇವತ್ತಿನ, ಗಂಡವಾತಿನೊಳ್–ಪೌರುಷದ ಸುದ್ದಿಯಲ್ಲಿ, ಸೂತಜನಂ–ಕರ್ಣನನ್ನು, ನಂಬಿದೆಂ–ನಂಬಿದೆನು, ಎಂದರೆ ಇಂದಿನ ಯುದ್ಧದಲ್ಲಿ ಕರ್ಣನ ಪರಾಕ್ರಮವನ್ನು ಕಂಡು ಅವನು ಮಹಾಶೂರನೆಂಬ ನಂಬಿಕೆ ನನ್ನಲ್ಲಿ ಉಂಟಾಯಿತು; ಅಂಥ ನಂಬಿಕೆ ನನಗೆ ಮೊದಲು ಇರಲಿಲ್ಲ.
೧೨೫. ಮಕ್ಕಳ್ವೆತ್ತರೊಳ್–ಮಕ್ಕಳನ್ನು ಹೆತ್ತವರಲ್ಲಿ, ಕುಂತಿಯೆ–ಕುಂತಿಯೇ, ಪೆತ್ತಳ್– ಹೆತ್ತವಳು; ಎಂಬವರೆ–ಎಂದು ಹೇಳುವವರೆ, ಕರ್ಣಂಬೆತ್ತ–ಕರ್ಣನನ್ನು ಹೆತ್ತ, ಅಕ್ಕನೆ–ಅಕ್ಕನೆ, ಕೊಂತಿಮಾದೇವಿಗಂ–ಕುಂತಿ ಮಹಾದೇವಿಗೂ ಒಂದು, ಉತ್ತರಮಾದಳ್–ಅತಿಶಯವಾ ದಳು, ಎಂದು, ಎರಡುಂ ಪಡೆಗಳ್–ಎರಡು ಸೈನ್ಯಗಳೂ, ಪೊಗೞ್ದುವು–ಹೊಗಳಿದವು, ಮಕ್ಕಳನ್ನು ಹಡೆದವರಲ್ಲಿ ನಿಜವಾಗಿಯೂ ಕುಂತಿಯೇ ಹಡೆದವಳು, ಪಾಂಡವರಂಥ ಮಕ್ಕಳನ್ನು ಯಾರು ತಾನೆ ಹಡೆದಿದ್ದಾರೆ ಎಂಬುದರಿಂದ; ಇಂಥ ವೀರಮಾತೆ ಕುಂತಿಗಿಂತಲೂ ಕರ್ಣನನ್ನು ಹೆತ್ತ ತಾಯಿಯೇ ಶ್ರೇಷ್ಠಳು–ಏಕೆಂದರೆ ಕರ್ಣನು ಪಾಂಡವರಿಗಿಂತ ಅಧಿಕ ಶೂರ ಎಂದು ತಾತ್ಪರ್ಯ.
೧೨೬. ಇನ್ನುಂ–ಇನ್ನೂ, ಕರ್ಣನ ರೂಪೆ–ಕರ್ಣನ ಆಕಾರವೇ, ದಲ್–ದಿಟವಾಗಿಯೂ, ಎನ್ನೆರ್ದೆಯೊಳಂ–ನನ್ನ ಎದೆಯಲ್ಲೂ, ಕಣ್ಣೊಳಂ–ಕಣ್ಣುಗಳಲ್ಲೂ, ಸುೞಿದಪುದು–ಸುಳಿ ದಾಡುತ್ತಿದೆ; ಆಂತು–ಎದುರಿಸಿ, ಎನ್ನೆಚ್ಚ–ನಾನು ಪ್ರಯೋಗಿಸಿದ, ಶರಮುಮಂ–ಬಾಣ ವನ್ನು, ಗೆಲ್ದು–ಗೆದ್ದು, ಎನ್ನುಮಂ–ನನ್ನನ್ನು, ಅಂಜಿಸಿದನೆಂದೊಡೆ–ಹೆದರಿಸಿದನೆಂದು ಹೇಳಿದರೆ, ಇನ್ನೇನೆಂಬೆಂ–ಇನ್ನೇನನ್ನು ಹೇಳುವೆನು?
೧೨೭. ಅಂತಪ್ಪ ಅದಟನಂ–ಅಂಥ ಶೂರನನ್ನು, ಆಜಿಯೊಳ್–ಯುದ್ಧದಲ್ಲಿ, ಎಂತೆಂತು– ಹೇಗೆ ಹೇಗೆ, ಇದಿರಾಂತು–ಇದಿರಿಗೆ ನಿಂತು, ಗೆಲ್ದಿರ್–ಗೆದ್ದಿರಿ, ಎನೆ–ಎನ್ನಲು, ಕಂಸಾಂತಕಂ– ಕೃಷ್ಣನು, ನೃಪನಂ–ರಾಜನನ್ನು (ಕುರಿತು), ಎಂದಂ–ಹೇಳಿದನು, ಕರ್ಣನುಂ–ಕರ್ಣನೂ, ಆಂತಿರೆ–(ನಿಮ್ಮನ್ನು) ಎದುರಿಸಲು, ಇಂದು–ಈ ದಿನ, ನೀಂ–ನೀವು, ನೊಂದುದಂ–ನೋವು ಪಟ್ಟದ್ದನ್ನು, ಕೇಳ್ದು–ಕೇಳಿ, ಈಗಳ್–ಈಗ.
೧೨೮. ಆರಯ್ಯಲೆಂದು ಬಂದೆವು–ವಿಚಾರಿಸಬೇಕೆಂದು ಬಂದೆವು; ಅಪಾರ ಗುಣಾ– ಅಪಾರ ಗುಣವುಳ್ಳವನೇ, ಕೊಂದೆವಿಲ್ಲವಿನ್ನುಂ–ಇನ್ನೂ (ಕರ್ಣನನ್ನು) ಕೊಂದೆವಿಲ್ಲ; ಬಳವತ್–ಶಕ್ತಿಯುತನಾದ, ಕ್ರೂರಾರಾತಿಯಂ–ನಿಷ್ಠುರನಾದ ಶತ್ರುವನ್ನು, ಉಪಸಂಹಾರಿ ಪೆವು–ಉಡುಗಿಸುತ್ತೇವೆ, ಎಂದರೆ ಕೊಲ್ಲುತ್ತೇವೆ, ಏಂ ಪಿರಿಯನಾದನ್–ಅವನೇನು ದೊಡ್ಡ ವನು? ಮಹಾ? ಎಂಬುದಂ–ಎನ್ನುತ್ತಲೂ, ಆಗಳ್–ಆಗ.
೧೨೯. ನರಕಾಂತಕನಂ–ಶ್ರೀಕೃಷ್ಣನನ್ನು (ಕುರಿತು), ನರೇಂದ್ರಂ–ಧರ್ಮರಾಜನು, ನುಡಿದಂ–ಹೇಳಿದನು; ಆಂ–ನಾನು, ಅರಸುಗೆಯ್ವ–ದೊರೆತನವನ್ನು ಮಾಡುವ, ಪೞುವಗೆ ಯನದಂ–ಆ ಕಾಡೆಣಿಕೆಯನ್ನು, ಪರಿಹರಿಸಿದೆಂ–ಬಿಟ್ಟೆನು; ಆತನಂ–ಅವನನ್ನು, ಈ ಕಿರೀಟಿ– ಈ ಅರ್ಜುನ, ಗೆಲ್ದು–ಗೆದ್ದು, ಎನಗೆ–ನನಗೆ, ಪಟ್ಟವಂ–ಪಟ್ಟಾಭಿಷೇಕವಂ, ಮಾಡುವನೇ– ಮಾಡುತ್ತಾನೆಯೇ?
೧೩೦. ಏಂ ಮೊಗ್ಗೆ–ಏನು ಸಾಧ್ಯನೆ? ಕರ್ಣಂ–ಕರ್ಣ, ಇಂತು–ಹೀಗೆ, ನಿಮ್ಮಂದಿಗರ್– ನಿಮ್ಮ ತೆರನಾದವರು, ಎಂದರೆ ನಿಮ್ಮಂಥವರು, ಇಱಿಯೆ–ಯುದ್ಧ ಮಾಡಲು, ಸಾವನೇ– ಸಾಯುತ್ತಾನೆಯೆ? ಇಂ–ಇನ್ನು, ಅಮ್ಮ–ಅಪ್ಪಗಳಿರಾ, ಸುಯೋಧನನೊಳ್–ದುರ್ಯೋಧ ನನಲ್ಲಿ (ಸೇರಿ), ಸುಖಮಿರಿ–ಸುಖವಾಗಿ ಇರಿ; ಆನುಂ–ನಾನು ಕೂಡ, ಪಗೆಯಂ–ದ್ವೇಷವನ್ನು, ಮಱೆದು–ಮರೆತು, ತಪೋನಿಯೋಗದೊಳ್–ತಪಸ್ಸಿನ ಉದ್ಯೋಗದಲ್ಲಿ, ಇರ್ಪೆಂ–ಇರು ತ್ತೇನೆ.
ವಚನ : ನಿಜಾಗ್ರಜನ–ತನ್ನ ಅಣ್ಣನ; ಮನದೊಳ್ ಏವೈಸಿ–ಮನಸ್ಸಿನಲ್ಲಿ ಕೋಪಿಸಿ; ಏವೈಸದೆ–ಕೋಪವನ್ನು ತೋರಿಸದೆ, ವಿನಯವನೆ–ವಿನೀತಭಾವವನ್ನೇ, ಮುಂದಿಟ್ಟು– ಮುಂದು ಮಾಡಿ, ವಿನಯ ವಿಭೂಷಣಂ–ಅರ್ಜುನನು, ಏವಂ ಎಂದರೆ ದ್ವೇಷ, ಜುಗುಪ್ಸೆ, ಮನೋವಿಕಾರ ಎಂಬರ್ಥಗಳಿವೆ; ತೆಲುಗಿನಲ್ಲೂ ಈ ಅರ್ಥಗಳುಂಟು; ಏವೈಸು=(ತೆ) ಏವ ಗಿಂಚು.
೧೩೧. ಮುಳಿದು–ಕೋಪಗೊಂಡು, ಇಂತು–ಹೀಗೆ, ಬೆಸಸೆ–(ನೀವು) ಹೇಳಲು, ನಿಮ್ಮಡಿ ಯೊಳೆ–ನಿಮ್ಮ ಪಾದಗಳಲ್ಲಿಯೇ, ಮಾರ್ಕೊಂಡು–ಎದುರಾಗಿ, ಪ್ರತಿಭಟಿಸಿ, ಎಂತು–ಹೇಗೆ, ನುಡಿವೆಂ–ಮಾತಾಡುವೆನು; ಉಸಿರೆಂ–ಉಸಿರೆನು, ಹೇಳೆನು; ನಿಮ್ಮಂ–ನಿಮ್ಮನ್ನು, ಮುಳಿ ಯಿಸಿದ–ಕೆರಳಿಸಿದ, ಸುರಾಸುರರುಮಂ–ದೇವದಾನವರನ್ನು, ಒಳರ್–ಜೀವಿಸುವವರು, ಎನಿಸೆಂ–(ನಾನು) ಎನ್ನಿಸೆನು; ಕರ್ಣನೆಂಬಂ–ಕರ್ಣನೆಂಬವನು, ಎನಗೆ–ನನಗೆ, ಏವಿರಿಯಂ– ಏನು ದೊಡ್ಡವನು! ಅವನನ್ನು ಕೊಲ್ಲುವುದೇನು ನನಗೆ ಗಹನವೇ ಎಂದು ಭಾವ.
೧೩೨. ನರಸಿಂಗಂಗಂ–ನರಸಿಂಹನಿಗೂ, ಜಾಕಬ್ಬರಸಿಗಂ–ಜಾಕಬ್ಬೆಯೆಂಬ ರಾಣಿಗೂ, ಅಳವು–ಪರಾಕ್ರಮವು, ಒದವೆ–ಉಂಟಾಗಲು, ಪುಟ್ಟಿ–ಹುಟ್ಟಿ, ಪುಟ್ಟಿಯುಂ–ಹುಟ್ಟಿಯು ಕೂಡ, ಅರಿಕೇಸರಿಯೆನೆ–ಅರಿಕೇಸರಿಯೆಂದು, ನೆಗೞ್ದುಂ–ಪ್ರಸಿದ್ಧನಾಗಿಯೂ, ಅರಾತಿಯ– ಶತ್ರುವಿನ, ಸರಿದೊರೆಗಂ–ಸರಿಸಮಾನಕ್ಕೂ, ಬಂದೆನಪ್ಪೊಡೆ–ಬಂದೆನಾದರೆ, ಆಗಳ್–ಆಗ, ನಗಿರಿ, ಪರಿಹಾಸ ಮಾಡಿರಿ; (ತಿರಸ್ಕಾರದಿಂದ).
೧೩೩. ಪುಟ್ಟೆ–ಹುಟ್ಟಲು, ಮುಳಿಸು ಒಸಗೆಗಳ–ಕೋಪ ಪ್ರಸಾದಗಳೆ, ಕಡುಗಟ್ಟಂ– ಅತಿಶಯವಾದ ಕಷ್ಟಗಳು; ಮುಳಿಸೆ–ಕೋಪವೆ, ಒಸಗೆ–ಪ್ರಸಾದ ಅಥವಾ ಸಂತೋಷ, ಎಂಬ–ಎನ್ನುವ, ನೃಪತನಯನವಂ–ಆ ರಾಜಕುಮಾರನು, ಮುಟ್ಟುಗಿಡೆ–ಮುಟ್ಟಾಗುವುದು ಕೆಡಲು, ನಿಸ್ಸಹಾಯಕನಾಗಲು(?), ಪಾರದರದೊಳ್–ಹಾದರದಲ್ಲಿ, ಪುಟ್ಟಿದಂ–ಪುಟ್ಟಿ ದವನು; ಅರಸಂಗಂ–ರಾಜನಿಗೂ, ಅರಸಿಂಗಂ–ರಾಣಿಗೂ, ಪುಟ್ಟಿದನೇ–ಹುಟ್ಟಿದನೇ?
ಪಂಪ ಅರ್ಜುನನಿಂದ ಹೇಳಿಸಿರುವ ಮೇಲಿನ ಎರಡು ಪದ್ಯಗಳು ಉಚಿತವಾಗಿರುವಂತೆ ತೋರುವುದಿಲ್ಲ. ಅರ್ಜುನನ ತಂದೆ ತಾಯಿಗಳು ನರಸಿಂಹ ಜಾಕಬ್ಬೆಯರೆಂದು ಹೇಗೆ ತಾನೆ ನಂಬಿಕೆ ಉಂಟಾದೀತು; ಅರಿಕೇಸರಿಗೇನೋ ಆ ತಂದೆ ತಾಯಿಗಳು ಇರಬಹುದು. ಅರಿಕೇಸರಿ– ಅರ್ಜುನರ ಸಮೀಕರಣವನ್ನು ಇದುವರೆಗೆ ಹೇಗೋ ಪಾಲಿಸಿಕೊಂಡು ಬಂದ ಕವಿ ಇಲ್ಲಿ ಅದನ್ನು ಪಾಲಿಸಲಾಗದೆ ಅತಿಗೆ ಹೋಗಿರುವಂತೆ ಕಾಣುತ್ತದೆ. “ಮುಟ್ಟುಗಿಡೆ ಪಾರದರ ದೊಳ್ ಪುಟ್ಟಿದಂ” ಎಂಬ ಮಾತುಗಳು ಧರ್ಮರಾಜನ ಭಯ ದುಃಖ ಗಾಬರಿಗಳನ್ನು ಸಮಾಧಾನಪಡಿಸುವ ಈ ಸಂದರ್ಭದಲ್ಲಿ, ಅರ್ಜುನನ ಬಾಯಿಂದ ಬರುವುದು ಅವನಿಗೆ ಅಸಭ್ಯತನವನ್ನು ಆರೋಪಿಸಿದಂತಾಗುತ್ತದೆ. ಇವನ್ನು ಓದಿ ‘ನಗಿರೇ’ ಎಂದು ಹೇಳಬಹುದು.
೧೩೪. ಎಂದು–ಎಂದು ಹೇಳಿ, ಅರಸ–ರಾಜಧರ್ಮಪುತ್ರನೇ, ನೇಸಱಿಂದೊಳಗೆ– ಎಂದರೆ ಸೂರ್ಯನು ಮುಳುಗುವಷ್ಟರಲ್ಲಿ, ಆಂ–ನಾನು, ದಿನಕರ ಸುತನಂ–ಕರ್ಣನನ್ನು, ಇಕ್ಕಿಬಂದಲ್ಲದೆ–ಕೊಂದು ಬಂದಲ್ಲದೆ, ಭವತ್ಪದಾಬ್ಜಮಂ–ನಿನ್ನ ಪಾದಕಮಲಗಳನ್ನು, ಕಾಣೆಂ–ನೋಡೆನು, ದಲ್–ದಿಟವಾಗಿಯೂ; ಎಂದು, ಉದಶ್ರು ಜಳಲವಾರ್ದ್ರಕಪೋಳಂ– ಚಿಮ್ಮುವ ಕಣ್ಣೀರ ಹನಿಗಳಿಂದ ಒದ್ದೆಯಾದ ಕೆನ್ನೆಯುಳ್ಳ ಅರ್ಜುನನು, ಎಱ್ದು–ಎದ್ದು ನಿಂತನು.
ವಚನ : ಕಿಡೆನುಡಿದು–ತಿರಸ್ಕರಿಸಿ ಮಾತಾಡಿ; ನಿಂದಿರ್ದನಂ–ನಿಂತ ಧರ್ಮರಾಜನನ್ನು; ಪೊಡೆವಟ್ಟು–ನಮಸ್ಕರಿಸಿ; ಸಮಾವಸ್ಥೆಯಂ–ಸಮಸ್ಥಿತಿಯನ್ನು; ಅನುವರಮೆಲ್ಲಮಂ– ಯುದ್ಧವನ್ನೆಲ್ಲ; ನಿಮ್ಮೊರ್ವರ ಮೇಲಿಕ್ಕಿ–ನಿಮ್ಮೊಬ್ಬರ ಮೇಲೆ ಹಾಕಿ; ಪಿರಿದುಂ ಪೊೞ್ತು– ಬಲು ಹೊತ್ತು, ತಡೆದಿರ್ಪೆವು–ತಡಮಾಡುತ್ತೇವೆ, ಹಿಡಿಂಬಾಂತಕಂ–ಭೀಮಸೇನನು.
೧೩೫. ನರಮಾತಂಗ ತುರಂಗ ಸೈನ್ಯಂ–ಪದಾತಿಗಳ ಆನೆಗಳ ಕುದುರೆಗಳ ಸೈನ್ಯಗಳು, ಇದಿರಾಂತು–ಎದುರಿಸಿ, ಈರೆಂಟು ಲಕ್ಕಂಬರಂ–ಹದಿನಾರು ಲಕ್ಷದವರೆಗೆ, ಎನ್ನ–ನನ್ನ, ನಿಶಾತಹೇತಿಹತಿಯಿಂ–ಹರಿತವಾದ ಆಯುಧಗಳ ಹೊಡೆತದಿಂದ, ಕರಗಿತ್ತು–ಕರಗಿತು; ಮತ್ತೆ, ಅಂತುಂ–ಹಾಗೆ, ಈ ತೋಳ್ ತೀನ್–ಈ ಬಾಹುಗಳ ತೀಟೆ, ಕರಗಲ್ಕೆ–ಕರಗುವುದಕ್ಕೆ, ಆರ್ತಪುದು ಇಲ್ಲ–ಸಮರ್ಥವಾದುದಾಗಲಿಲ್ಲ; ಅರಿಗ–ಅರ್ಜುನನೇ, ಅದಕ್ಕೆ–ಆ ಸೈನ್ಯಕ್ಕೆ, ನೀಂ–ನೀನು, ವೇೞ್ಪುದೇ–ಬೇಕೇ? ಎಂದರೆ ಆ ಸೈನ್ಯವನ್ನು ನಾಶಮಾಡುವುದಕ್ಕೆ ನಾನೊಬ್ಬನೇ ಸಾಕು, ನೀನು ಬರುವ ಅವಶ್ಯಕತೆಯಿಲ್ಲ, ಎಂದು ಭಾವ; ಸಂಗರಾಜಿರದೊಳ್–ಯುದ್ಧಾಂ ಗಣದಲ್ಲಿ, ಕೌರವರೆಂಬ ಕಾಕಕುಳಕೆ–ಕೌರವರೆಂಬ ಕಾಗೆಗಳ ಗುಂಪಿಗೆ, ಎನ್ನ–ನನ್ನ, ಈ ಒಂದೆ ಬಿಲ್–ಈ ಒಂದೇ ಬಿಲ್ಲು, ಸಾಲದೇ–ಸಾಕಾಗದೇ?
ವಚನ : ಅಕಲಂಕರಾಮಂ–ಅರಿಕೇಸರಿಯ ಒಂದು ಬಿರುದು, ಇಲ್ಲಿ ಅರ್ಜುನ; ಅದೇ ವಿರಿದು–ಅದೇನು ದೊಡ್ಡದು, ತೊಡೆಯಂ ಪೊಯ್ದು–ತೊಡೆಗಳನ್ನು ತಟ್ಟಿಕೊಂಡು; ಆರ್ದು– ಕೂಗಿ; ಪವನಜವದಿಂ–ವಾಯುವೇಗದಿಂದ; ಒಲ್ಲನೆ–ಸದ್ದಿಲ್ಲದೆ; ವೈಕರ್ತನನ–ಕರ್ಣನ; ಮದೀಯ–ನನ್ನ; ಎರಡು ಮುಯ್ವುಮಂ–ಎರಡು ಹೆಗಲುಗಳನ್ನು; ಸಮರಾನಂದಂ ಬೆರಸು– ಯುದ್ಧದ ಆನಂದದಿಂದ ಕೂಡಿ; ದೊಣೆಗಳಂ–ಬತ್ತಳಿಕೆಗಳನ್ನು; ತಾಳವಟ್ಟದ ಬಿಲ್ಲಂ– ತಾಳವಟ್ಟವೆಂಬ ಬಿಲ್ಲನ್ನು; ಕೆಂದಳದೊಳ್–ಕೆಂಪಾದ ಅಂಗೈಯಲ್ಲಿ; ಜೇವೊಡೆದಾಗಳ್– ಬಿಲ್ಲಿನ ಹೆದೆಯನ್ನು ಮೀಟಿದಾಗ; ಕರ್ಣನ ಬಿಲ್ಲಿನ ಹೆಸರು ತಾಳವಟ್ಟವೆಂದು ಇಲ್ಲಿದೆ; ಹೀಗೆಯೇ ಗದಾಯುದ್ಧದಲ್ಲೂ ಹೇಳಿದೆ (೨–೧೦; ಗದ್ಯ); ‘ವೇಣೀಸಂಹಾರ’ ದ ೪ನೆಯ ಅಂಕದಲ್ಲಿ, ‘ಸ್ವಾಮಿನಾಪಿ ಸಜ್ಜೀಕೃತಂ ಕಾಲಪೃಷ್ಠಂ’ ಎಂದಿದೆ.
೧೩೬. ಮಹಾ ಪ್ರಳಯ ಭೈರವಕ್ಷುಭಿತ ಪುಷ್ಕಲಾವರ್ತಂ–ಮಹಾ ಪ್ರಳಯವೆಂಬ ಭೈರವ ನಿಂದ ರೇಗಿಸಲ್ಪಟ್ಟ ಪುಷ್ಕಲಾವರ್ತ ಮೇಘವನ್ನುಳ್ಳ, ಆ ಮಹೋಗ್ರ….ಡಂಬರಂ; ಆ, ಮಹೋಗ್ರ–ಭಯಂಕರವಾದ, ರಿಪುಭೂಭುಜ–ಶತ್ರುರಾಜರ, ಶ್ರವಣ–ಕಿವಿಗಳಿಗೆ, ಭೈರವ– ಭಯಂಕರವಾದ, ಆಡಂಬರಂ–ಆಟೋಪವನ್ನುಳ್ಳ, ಗುಹಾಗಹನ ಗಹ್ವರೋದರ ವಿಶೀರ್ಣಂ– ಗುಹೆಗಳ ಆಳವಾದ ಕಣಿವೆಗಳ ಒಳಗನ್ನು ಭೇದಿಸುತ್ತಿರುವ, ರವಿತನೂಭವಜ್ಯಾರವಂ–ಕರ್ಣನ ಬಿಲ್ಲ ಹೆದೆಯ ಟಂಕಾರವು, ಆದಂ–ವಿಶೇಷವಾಗಿ, ಅಂದು–ಆ ದಿನ, ಏಂಮುಹುಃ ಪ್ರಕಟ ಮಾದುದು–ಏನು ಪುನಃ ಪುನಃ ಮೆರೆಯುವುದಾಯಿತು.
ವಚನ : ಯುಗಾಂತವಾತಾಹತ–ಪ್ರಳಯಕಾಲದ ಗಾಳಿಯಿಂದ ಅಪ್ಪಳಿಸಲ್ಪಟ್ಟ; ನೆಲ್ಯಿಂ ತಳರ್ವಂತೆ–ಸ್ಥಳದಿಂದ ಚಲಿಸುವ ಹಾಗೆ; ಧ್ವಾಂಕ್ಷಧ್ವಜಂ–ಕಾಗೆಯ ಬಾವುಟ; ಮಿಳಿರೆ–ಅಲ್ಲಾಡಲು; ಆಸನ್ನಮಾಗೆ–ಸಮೀಪವಾಗುವಂತೆ;
೧೩೭. ಆ ಬ್ರಹ್ಮಾಂಡದಿಂದೆ–ಆ ಬ್ರಹ್ಮಾಂಡದಿಂದ, ಇತ್ತ–ಇತ್ತ ಕಡೆಗೆ, ಉದಧಿ ಕುಲನಗ ದ್ವೀಪ ಸಂಘಾತಂ–ಸಮುದ್ರಗಳು, ಕುಲಪರ್ವತಗಳು, ದ್ವೀಪ ಸಮೂಹಗಳು, ಎನಿತು–ಎಷ್ಟು, ಅಂತು ಅನಿತು–ಹಾಗೆ ಅಷ್ಟೂ, ಬತ್ತಿತ್ತು–ಇಂಗಿ ಹೋಯಿತು, ತೂಳ್ದತ್ತು– ತಳ್ಳಲ್ಪಟ್ಟಿತು, ಉಡುಗಿದುದು–ಸುಕ್ಕಿ ಹೋದುವು, ಎಂದು, ದಿಕ್ಪಾಲರ್–ದಿಗ್ದೇವತೆಗಳು, ಎನೆ–ಎನ್ನಲು, ದೇವದತ್ತಧ್ವನಿ ಸಂಮಿಶ್ರಂ–ದೇವದತ್ತವೆಂಬ ಶಂಖದ ಧ್ವನಿ ಬೆರೆತಿರುವ, ಅಕಾಂಡ ಪ್ರಳಯ ಘನಾಘಟಾಟೋಪ ಗಂಭೀರನಾದಂ–ಅಕಾಲದಲ್ಲುಂಟಾದ ಪ್ರಳಯ ಮೇಘ ಸಮೂಹಗಳ ಆಡಂಬರವನ್ನುಳ್ಳ, ಗಂಭೀರವಾದ ಶಬ್ದವನ್ನುಳ್ಳ, ಸಮುದ್ಯ…. ನಿನದಂ: ಸಮುದ್ಯತ್–ಅತಿ ಎತ್ತರವಾದ, ರಜತಗಿರಿ–ಕೈಲಾಸ ಪರ್ವತದ, ತಟ–ಪ್ರದೇಶ ದಲ್ಲಿ, ಸ್ಪಷ್ಟ–ಪ್ರಕಟಿತವಾದ, ಸಂಶ್ಲಿಷ್ಟ–ಚೆನ್ನಾಗಿ ಸೇರಿಸಿದ, ಮೌರ್ವೀ–ಬಿಲ್ಲಿನ ಹೆದೆಯ, ನಿನದಂ–ಟಂಕಾರವು, ಪರ್ವಿತ್ತು–ಹಬ್ಬಿತ್ತು.
ಕರ್ಣಾರ್ಜುನರ ಬಿಲ್ಟಂಕಾರಗಳಲ್ಲಿ ಯಾವುದು ಅತಿ ಭಯಂಕರ? ಕರ್ಣನ ಧನುಷ್ಟಂ ಕಾರವನ್ನು ವರ್ಣಿಸುವಾಗ ಪಂಪ ವೇಣೀಸಂಹಾರದ ಪದ್ಯವನ್ನು [೩–೪] ಅನುಕರಿಸಿದ್ದರೆ, ಅರ್ಜುನನ ಧನುಷ್ಟಂಕಾರದ ವರ್ಣನೆಗೆ ಸ್ವತಂತ್ರವಾದ ಪದ್ಯವನ್ನು ಬರೆದಿರುವನು; ಇಷ್ಟೇ ಸಾಕು ಅರ್ಜುನನ ಗಾಂಡೀವದ ಟಂಕಾರ ಕರ್ಣನ ಧನುಷ್ಟಂಕಾರಕ್ಕಿಂತ ಭಯಂಕರವೆಂದು ತಿಳಿಸುವುದಕ್ಕೆ.
ವಚನ : ಮಿಟ್ಟೆಂದು ಮಿಡುಕಲಪ್ಪೊಡಂ–ಮಿಟ್ಟು ಎಂದು ಎಂದರೆ ಅಲುಗಾಡುವುದಕ್ಕೂ, ದೇವರಿಲ್ಲದಂತು–ದೇವತೆಗಳಿಲ್ಲದಿರುವ ಹಾಗೆ; ದೇವನಿಕಾಯಂ ಬೆರಸು–ದೇವತೆಗಳ ಸಮೂಹದೊಡನೆ;
ಕರ್ಣಾರ್ಜುನರ ಕಾಳಗವನ್ನು ನೋಡುವುದಕ್ಕೆ ದೇವತೆಗಳೂ, ಬ್ರಹ್ಮರುದ್ರರೂ, ನಾರ ದರೂ, ಪಾತಾಳದ ವಾಸುಕಿಯೂ ಮುಂತಾದವರು ನೆರೆದರು. ಈ ಪ್ರೇಕ್ಷಕವೃಂದ ಒದಗಿದ್ದು ಭೀಮಸೇನನಿಗೆ ಒಳ್ಳೆಯ ಸಮಯವಾಯಿತು. ದುಶ್ಶಾಸನನನ್ನು ಕೊಂದು ತನ್ನ ಪ್ರತಿಜ್ಞೆಗಳಲ್ಲಿ ಒಂದನ್ನು ತೀರಿಸುವುದಕ್ಕೆ ಈ ಹಿನ್ನಲೆಯ ಪರಿಕಲ್ಪನೆ ಬಹುರಮ್ಯವಾಗಿ ನಡೆದಿದೆ ಪಂಪನಿಂದ.
೧೩೮. ದೇವ ಬ್ರಹ್ಮಮುನೀಂದ್ರಾಸೇವಿತಂ–ದೇವತೆಗಳು, ಬ್ರಹ್ಮ, ಋಷಿ ಶ್ರೇಷ್ಠರು ಗಳಿಂದ ಸೇವಿಸಲ್ಪಟ್ಟವನು, ಉತ್ತಪ್ತಕನಕವರ್ಣಂ–ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳ ವನು, ಹಂಸಗ್ರೀವನಿಹಿತ ಏಕಪಾದಂ–ಹಂಸ ಪಕ್ಷಿಯ ಕೊರಳಲ್ಲಿ ಇಟ್ಟ ಒಂದು ಪಾದವುಳ್ಳ ವನು, ಇಳಾವಂದ್ಯಂ–ಲೋಕದಿಂದ ನಮಸ್ಕರಿಸಲ್ಪಟ್ಟವನು ಆದ, ಅಬ್ಜಗರ್ಭಂ–ತಾವರೆಯಲ್ಲಿ ಹುಟ್ಟಿದ ಬ್ರಹ್ಮನು, ಬಂದಂ–ಬಂದನು. ಬ್ರಹ್ಮನು ತನ್ನ ವಾಹನವಾದ ಹಂಸಪಕ್ಷಿಯ ಕೊರಳ ಮೇಲೆ ಒಂದು ಕಾಲನ್ನು ಇಟ್ಟುಕೊಂಡು ಇನ್ನೊಂದನ್ನು ಇಳಿಯಬಿಟ್ಟು ಕುಳಿತಿರುವ ದೃಶ್ಯ ಚೆನ್ನಾಗಿದೆ.
೧೩೯. ಭೂತನಾಥಂ–ಶಿವನು, ನಂದಿಯಂ–ತನ್ನ ವಾಹನವಾದ ನಂದಿಯನ್ನು, ಏಱಿಯೆ– ಹತ್ತಿಕೊಂಡೇ, ಪೆಱಗೇಱಿದ–ಹಿಂದೆ ಹತ್ತಿ ಕುಳಿತ, ಗಿರಿಸುತೆಯ–ಪಾರ್ವತಿಯ, ಮೊಲೆಗಳ್– ಮೊಲೆಗಳು, ಅಳ್ಳೇಱಿಂ–ನಯವಾದ ತಿವಿತದಿಂದ, ನೀರೇಱಿಸುತಿರೆ–ರಸವನ್ನು ಉಕ್ಕಿಸು ತ್ತಿರಲು, ಕರ್ಣಾರ್ಜುನರ–ಕರ್ಣನ ಮತ್ತು ಅರ್ಜುನನ, ಏಱಂ–ಯುದ್ಧವನ್ನು, ನೋಡಲ್ಕೆ– ನೋಡುವುದಕ್ಕೆ, ಬಂದಂ–ಬಂದನು.
೧೪೦. ಆರ ಅನುವರದೊಳಂ–ಯಾರ ಯುದ್ಧದಲ್ಲೂ, ಎನಗೆ–ನನಗೆ, ಆರದ–ತುಂಬದ, ಕಣ್ಮಲರ್ಗಳ್–ಹೂವಿನಂತಿರುವ ಕಣ್ಣುಗಳು, ಅರಿಗನಿಂ–ಅರ್ಜುನನಿಂದ, ಆರ್ಗುಂ–ತುಂಬು ತ್ತದೆ, ಎನುತುಂ–ಎಂದು ಹೇಳುತ್ತ, ನೀರದ ಪಥದೊಳ್–ಮೇಘ ಮಾರ್ಗದಲ್ಲಿ ಎಂದರೆ ಆಕಾಶದಲ್ಲಿ, ಮುತ್ತಿನ ಹಾರದ, ಬೆಳಗು–ಪ್ರಕಾಶವು, ಎಸೆಯೆ–ಸೊಗಸಾಗಲು, ನಾರದಂ– ನಾರದನು, ಬಂದು, ಇರ್ದಂ–ಇದ್ದನು.
೧೪೧. ರಸೆಯಿಂದಂ–ಪಾತಾಳಲೋಕದಿಂದ, ಒಗೆದು–ಮೂಡಿ, ಪೆಡೆಗ [ಳ್]–ಹೆಡೆಗಳು, ಪೊಸಮಾಣಿಕದ–ಹೊಸ ರತ್ನಗಳ, ಎಳವಿಸಿಲ್ಗಳೊಳ್–ಎಳೆಯ (ಕೆಂಪಾದ) ಬಿಸಿಲುಗಳಲ್ಲಿ, ಪೊಸದಳಿರೊಳ್–ಹೊಸ ಚಿಗುರುಗಳಲ್ಲಿ, ಮುಸುಕಿದ ತೆಱದಿಂದೆ–ಮುಚ್ಚಿದ ರೀತಿಯಿಂದ, ಎಸೆದಿರೆ–ಸೊಗಸುತ್ತಿರಲು, ಪೊಸತೆನೆ–ಹೊಸತು ಎನ್ನಲು, ನಡೆನೋಡಲ್–ಚೆನ್ನಾಗಿ ನೋಡು ವುದಕ್ಕೆ, ಉರಗರಾಜಂ–ಸರ್ಪರಾಜನಾದ ವಾಸುಕಿ, ಬಂದಂ–ಬಂದನು.
೧೪೨. ದಿನಕರನುಂ–ಸೂರ್ಯನೂ, ಇಂದ್ರನುಂ–ಇಂದ್ರನೂ, ನಿಜತನಯರ–ತಂತಮ್ಮ ಮಕ್ಕಳ, ದೆಸೆಗೆ–ಕಡೆಗೆ, ಎಱಗಿದ–ಬಾಗಿದ, ಎಱಕದಿಂ–ಪ್ರೀತಿಯಿಂದ, ಗೆಲವಿನ–ಜಯದ, ಮಾತನೆ–ಮಾತನ್ನೇ, ನುಡಿಯುತ್ತಿರೆ–ಹೇಳುತ್ತಿರಲು, ನುಡಿದ–ಹೇಳಿದ, ಜಗಳಮದು– ಆ ಜಗಳವು, ತ್ರಿಪುರಹರನ–ಶಿವನ, ಕಿವಿಗೆ–ಕಿವಿಗಳಿಗೆ, ಎಯ್ದುವುದುಂ–ಮುಟ್ಟುತ್ತಲೂ; ಸೂರ್ಯ ತನ್ನ ಮಗ ಕರ್ಣ ಗೆಲ್ಲುತ್ತಾನೆ ಎಂದೂ ಇಂದ್ರ ತನ್ನ ಮಗ ಅರ್ಜುನ ಗೆಲ್ಲುತ್ತಾನೆ ಎಂದೂ ಆರಂಭಿಸಿದ ಮಾತಿನ ಜಗಳ ಶಿವನ ಕಿವಿಗೆ ಬೀಳುತ್ತದೆ.
ವಚನ : ದೇವೇಂದ್ರಂಗಂ–ಇಂದ್ರನಿಗೂ, ದಿವಸೇಂದ್ರಗಂ–ಸೂರ್ಯನಿಗೂ, ಬೞಿಯ ನಟ್ಟಿ–ದೂತನನ್ನು ಕಳುಹಿಸಿ, ಬರಿಸಿ–ಬರಮಾಡಿಕೊಂಡು; ಈ ಜಗಳದ ವಿಷಯ ವ್ಯಾಸ ಭಾರತದಲ್ಲಿ ಇದೆ; ಹತ್ವಾರ್ಜುನಂ ಮಮ ಸುತಃ ಕರ್ಣೋ ಜಯತು ಸಂಯುಗೇ । ಹತ್ವಾ ಕರ್ಣಂ ಜಯತ್ಯದ್ಯ ಮಮ ಪುತ್ರೋ ಧನಂಜಯಃ ॥ ಇತಿ ಸೂರ್ಯಸ್ಯ ಚೈವಾಸೀತ್ ವಿವಾದೋ ವಾಸವಸ್ಯ ಚ ॥ (ಕರ್ಣ ಪರ್ವ ೮೭–೯, ೬೦).
೧೪೩. ದಿನಕರ–ಸೂರ್ಯನೇ, ಇದೇಂ ಜಗಳಂ–ಇದೇನು ಜಗಳ, ನಿಜತನೂಭವಂ– ನಿನ್ನ ಮಗ ಕರ್ಣ, ಹರಿಗನೊಳ್–ಅರ್ಜುನನಲ್ಲಿ, ಪೊಣರ್ದು–ಯುದ್ಧ ಮಾಡಿ, ಗೆಲ್ವನೇ– ಗೆಲ್ಲುತ್ತಾನೆಯೆ? ಏಂ ಬಗೆಗೆಟ್ಟೆಯೋ–ಏನು ಬುದ್ಧಿಹೀನನಾದೆಯೋ! ಅವಂ–ಅರ್ಜುನ, ಧುರದೊಳ್–ಯುದ್ಧದಲ್ಲಿ, ಎನಗೆ–ನನಗೆ, ಮಿಗಿಲ್–ಮೀರಿದವನು, ಎನೆ–ಎನ್ನಲು, ನಿನಗೆ, ಪಗಲೊಳ್–ಹಗಲಿನಲ್ಲಿ, ಏಂ ಕೞ್ತಲೆಯೆ–ಕತ್ತಲೆಯೇನು!
ವಚನ : ಪತ್ತುವಿಡೆ ನುಡಿದು–ಕಲಹವು ಹೋಗುವಂತೆ ಮಾತಾಡಿ; ನಿಲ್ಲುವಂತೆ ಹೇಳಿ. “ಪತ್ತು–ಸಂಶ್ಲೇಷೇ ಕಲಹ ಸಂಖ್ಯಯೋಃ” ; ಜಗಳ ಪ್ರಾ. ದೇ. ಝಗಡ; (ತೆ) ಜಗಡಮು, (ಮರಾ) ಝಗಡ–ಕಲಹ.
೧೪೪. ಅಳವಿನೊಳ್–ಶಕ್ತಿಯಲ್ಲಿ, ಎನ್ನುಮಂ–ನನ್ನನ್ನೂ, ಇನಿಸು–ಸ್ವಲ್ಪ, ಅಗ್ಗಳಿಸಿದ– ಮೀರಿದ, ಅಧಿಕನಾದ, ಹರಿಗನೊಳ್–ಅರ್ಜುನನಲ್ಲಿ, ಇದಿರ್ಚಿ–ಎದುರಿಸಿ, ಕರ್ಣಂ– ಕರ್ಣನು, ಗೆಲಲ್–ಗೆಲ್ಲಲು, ಉಮ್ಮಳಿಪಂ ಗಡಂ–ಚಿಂತಿಸುತ್ತಿರುವನಲ್ಲವೆ, ಎಂದು, ಈಶ್ವರಂ– ಶಿವನು, ಓಪಳ–ತನ್ನ ಪ್ರಿಯಳಾದ ಪಾರ್ವತಿಯ, ಕರತಳಮಂ–ಅಂಗೈಯನ್ನು, ಪೊಯ್ದು–ತಟ್ಟಿ, ಮುಗುಳ್ನಗೆ ನಕ್ಕಂ–ಮುಗುಳುನಗೆಯನ್ನು ನಕ್ಕನು.
ವಚನ : ಮುಗಿಲೂಱಿದ–ಮೇಘಗಳನ್ನು ಆಶ್ರಯಿಸಿದ ಎಂದರೆ ಆಕಾಶದಲ್ಲಿ ನೆರೆದ; ನೆರವಿವಡೆದು–ಪ್ರೇಕ್ಷಕರ ಸಮೂಹವನ್ನು ಪಡೆದು; ನೆಱಪಲ್–ಮುಗಿಸಲು, ಪೂರ್ಣ ಮಾಡಲು; ಅವಸರಂಬಡೆದೆಂ–ಅವಕಾಶವನ್ನು ಪಡೆದೆನು; ಕೌರವ….ನಪ್ಪ; ಕೌರವಕುಲ– ಕುರುವಂಶವೆಂಬ, ಹಿಮಕರ–ಚಂದ್ರನ, ಆವಿಲ ಪ್ರಚಯ–ಕಶ್ಮಲದ ಸಮೂಹಕ್ಕೆ, ವರ್ಷವಾರಿ ದನಪ್ಪ–ಮಳೆಗಾಲದ ಮೋಡವಾಗಿರುವ, ಪವನತನಯಂ–ಭೀಮಸೇನನು; ಬದ್ಧವಪುವಾಗಿ– ಸ್ಥಿರಶರೀರದವನಾಗಿ; ಪೆಸರ್ವೆಸರೊಳೆ–ಹೆಸರು ಹೆಸರಿನಲ್ಲಿಯೇ ಎಂದರೆ ಹೆಸರು ಹಿಡಿದು, ಮೂದಲಿಸಿದೊಡೆ–ಹೀಯಾಳಿಸಿದರೆ; ತಾಗಿದಾಗಳ್–ಸಂಘಟ್ಟಿಸಿದಾಗ.
೧೪೫. ಮಸಕಂಗುಂದದೆ–ರಭಸವು ಕಡಮೆಯಾಗದೆ, ಪಾಯ್ವ–ನುಗ್ಗಿ ಬರುವ, ಅರಾತಿ ಶರಸಂಘಾತಂಗಳಂ–ಶತ್ರುಗಳ ಬಾಣ ಜಾಲವನ್ನು, ಕೂಡೆ–ಕೂಡಲೆ, ಖಂಡಿಸಿ–ಕತ್ತರಿಸಿ, ಬಿಲ್ಲಂ–ಬಿಲ್ಲನ್ನು, ಮುಱಿಯೆಚ್ಚೊಡೆ–ಮುರಿಯುವಂತೆ ಹೊಡೆದರೆ, ಅಂತು–ಹಾಗೆ, ಅನಿಬರುಂ–ಅಷ್ಟು ಜನ ದುರ್ಯೋಧನನ ತಮ್ಮಂದಿರೂ, ಬಾಳ್ಗಿೞ್ತು–ಕತ್ತಿಯನ್ನು ಸೆಳೆದು, ಮೇಲ್ವಾಯ್ದೊಡೆ–ಮೇಲೆ ನುಗ್ಗಿದರೆ, ಅರ್ಬಿಸೆ–ಅತಿಕ್ರಮಿಸಲು, ತಿಣ್ಣಂ–ತೀವ್ರವಾಗಿ, ತೆಗೆದು– ಬತ್ತಳಿಕೆಯಿಂದ ತೆಗೆದುಕೊಂಡು, ಅರ್ಧಚಂದ್ರಶರದಿಂ–ಅರ್ಧಚಂದ್ರಾಕಾರದ ಬಾಣದಿಂದ, ಸೂೞ್ ಸೂೞೊಳ್–ಬಾರಿ ಬಾರಿಗೆ, ಎಚ್ಚಾಗಳ್–ಪ್ರಯೋಗಿಸಿದಾಗ, ಉರುಳ್ದ–ಉರುಳಿದ, ಕೌರವಶಿರಃ ಪದ್ಮಂಗಳಿಂ–ಕೌರವರ ತಲೆಗಳೆಂಬ ತಾವರೆಗಳಿಂದ, ಕೊಳ್ಗುಳಂ–ಕದನ ಭೂಮಿ, ಅರ್ಚಿಸಿದಂತೆ ಪೂಜಿಸಲ್ಪಟ್ಟಂತೆ, ಇರ್ದುದು–ಇತ್ತು.
ವಚನ : ಜೀರಗೆಯೊಕ್ಕಲ್ ಮಾಡಿ–ಜೀರಿಗೆಯನ್ನು ಒಕ್ಕುವಂತೆ ಒಕ್ಕಿ, ಕೆಡೆದ–ಬಿದ್ದ, ಎಡಗಲಿಸಿ–ದಾಟಿ (?)
೧೪೬. ಇಲ್ಲಿಂದ ದುಶ್ಯಾಸನನ ವಧೆಯ ಪ್ರಸಂಗ: ಚಲದಿಂ–ಮಾತ್ಸರ್ಯದಿಂದ, ಕೃಷ್ಣೆಯ–ದ್ರೌಪದಿಯ, ಕೇಶಮಂ–ಕುರುಳುಗಳನ್ನು, ಪಿಡಿದ–ಹಿಡಿದೆಳೆದ, ನಿನ್ನಿಂದೆ–ನಿನ್ನಿಂದ, ಆದ, ಅೞಲ್–ದುಃಖವು, ನಿನ್ನುರಃಸ್ಥಲಮಂ–ನಿನ್ನ ಎದೆಯ ಪ್ರದೇಶವನ್ನು, ಪೋೞದೆ– ಹೋಳು ಮಾಡದೆ, ಪೋಪುದಲ್ತು–ಹೋಗುವಂಥದಲ್ಲ; ಎನಗೆ–ನನಗೆ, ಅಳ್ಕಿ–ಹೆದರಿ, ಅದೇಕೆ–ಅದೇತಕ್ಕೆ, ಇರ್ದಪಯ್–ಇರುವೆ?, ನಿನ್ನನುಜರಂ–ನಿನ್ನ ತಮ್ಮಂದಿರನ್ನು (ಅವರಿ ಗಾದ ಅವಸ್ಥೆಯನ್ನು), ಕಂಡು–ನೋಡಿ, ಬಾೞ್ವ ಪಂಬಲ್–ಬಾಳುವ ಹಂಬಲ, ನಿನಗೆ, ಅದೇಂ ಇಂ ಉಂಟೆ–ಅದೇನು ಇನ್ನೂ ಇದೆಯೆ? ಎಂತುಂ ಏನ್–ಹೇಗೂ ಏನು? ಎನ್ನತೋಳ್ವಲೆ ಯೊಳ್–ನನ್ನ ಬಾಹುಗಳ ಬಲೆಯಲ್ಲಿ, ಸಿಲ್ಕಿದೆ–ಸಿಕ್ಕಿಕೊಂಡೆ, ಎಂದು, ಮೂದಲಿಪುದುಂ– ತೆಗಳಲು (ಸವಾಲು ಮಾಡಲು), ದುಶ್ಶಾಸನಂ–ದುಶ್ಯಾಸನನು, ತಾಗಿದಂ–ಸಂಘಟ್ಟಿಸಿದನು, “ಯೇ ರಾಜಸೂಯಾವಭೃಥೇ ಪವಿತ್ರಾ । ಜಾತಾಃ ಕಚಾ ಯಾಜ್ಞಸೇನ್ಯಾ ದುರಾತ್ಮನ್ ॥ ತೇ ಪಾಣಿನಾ ಕತರೇಣಾವಕೃಷ್ವ್ಯಾ । ಸ್ವಾದ್ ಬ್ರೂಹಿ ತ್ವಾಂ ಪೃಚ, ತಿ ಭೀಮಸೇನಃ” । । ಎಂದು ವ್ಯಾಸ ಭಾರತದಲ್ಲಿದೆ.
೧೪೭. ಕಱುಪಿ–ಕೆರಳಿ, ಎೞ್ದ–ಎದ್ದ, ಎಂದರೆ ವೃದ್ಧಿಯಾದ, ಪಗೆಯ–ಹಗೆತನದ; ಬೇರ್ವರಿದ–ಬೇರುಬಿಟ್ಟ, ಉಱುಮಿಕೆಯ–ಗರ್ಜನೆಯ?; ಪೊದಳ್ದ–ವ್ಯಾಪಿಸಿದ, ಗಂಡಮ ಚ್ಚರದ–ಪೌರುಷ ವಿದ್ವೇಷದ, ಒದವಿಂ–ಉಂಟಾಗುವಿಕೆಯಿಂದ, ನೆಱನನೆ–ಮರ್ಮವನ್ನೇ, ಮೂದಲಿಸುತ್ತುಂ–ಅವಹೇಳನ ಮಾಡುತ್ತ, ನೆಱನನೆ–ಮರ್ಮಸ್ಥಾನವನ್ನೇ, ಆಗಳ್–ಆಗ, ಒರ್ವರೊರ್ವರಂ–ಒಬ್ಬರೊಬ್ಬರನ್ನು, ತೆಗೆದು–ಹೆದೆಯನ್ನು ಸೆಳೆದು, ಎಚ್ಚರ್–ಬಾಣ ಪ್ರಯೋಗ ಮಾಡಿದರು. ಇಲ್ಲಿ ಉಱುಮಿಕೆ ಶಬ್ದದ ಅರ್ಥ ಚಿಂತನೀಯ; ಉಱುಮು+ಇಕೆ; ಉಱುಮುದಲ್ (ತ)–(೧) ಗರ್ಜನೆ (೨) ಕೋಪದಿಂದ ಗೊಣಗುಟ್ಟುವುದು; (ತೆ) ಉಱುಮು–ಗರ್ಜಿಸು, ಮೊಳಗು; (ಮ) ಉಱುಂಪಲ್–ಹುಲಿಯ ಗರ್ಜನೆ; (ಪಂಭಾ.ಕೋ.) ದಲ್ಲಿ ಆಧಿಕ್ಯ ಎಂದು ಅರ್ಥ ಹೇಳಿದೆ.
೧೪೮. ಸುರಿಗಿಱಿವ ತೆಱದಿಂ–ಕತ್ತಿಯಿಂದ ಹೊಯ್ದಾಡುವಂತೆ, ಓರೊರ್ವರಂ–ಒಬ್ಬ ರೊಬ್ಬರನ್ನು, ಇಸೆ–ಬಾಣಗಳಿಂದ ಹೊಡೆಯಲು, ನಡೆ–ನಾಟಿಸಲು, ನಟ್ಟಕೋಲ–ನಾಟಿದ ಬಾಣಗಳ, ಬೞಿವಿಡಿದು–ದಾರಿಯನ್ನು ಹಿಡಿದು, ಎಂದರೆ ಅನುಸರಿಸಿ, ಎತ್ತಂ–ಎಲ್ಲೆಲ್ಲೂ, ಅವಂದಿರ–ಅವರ, ನವರುಧಿರಂಗಳ್–ಹೊಸ ರಕ್ತಗಳು, ಮುಳಿಸಿನ–ಕೋಪದ, ತೆರಳ್ದ– ಉಂಡೆಯಾದ, ದಳ್ಳುರಿಗಳಂ–ಜ್ವಲಿಸುವ ಉರಿಗಳನ್ನು, ಇಳಿಸಿ–ಕೀಳ್ಮಾಡಿ, ಸುರಿದವು– ಸೋರಿದುವು, ಸೂಸಿದುವು.
ವಚನ : ನಿಶಿತಮಾರ್ಗಣಂಗಳಿಂದ–ಹರಿತವಾದ ಬಾಣಗಳಿಂದ; ಅಂಬುತಪ್ಪೆ–ಬಾಣ ಗಳು ಮುಗಿದು ಹೋಗಲು, ಜಟ್ಟಿಗ ಬಿಲ್ಲಾಳಂತೆ–ಶೂರನಾದ ಬಿಲ್ಗಾರನ ಹಾಗೆ, ಎಚ್ಚು– ಪ್ರಯೋಗ ಮಾಡಿ, ಪಾಯ್ವ–ಮುನ್ನುಗ್ಗುವ, ಅರಾತಿಯ–ಹಗೆಯಾದ ದುಶ್ಯಾಸನನ; ನೆತ್ತರಂ– ರಕ್ತವನ್ನು; ಸೂೞೇಸಿನೊಳ್–ಬಾರಿಬಾರಿಯ ಬಾಣ ಪ್ರಹಾರದಲ್ಲಿ; ಒಕ್ಕೊಡಂ–ಸುರಿದರೂ; ಬಸಿಱಾರೆ–ಹೊಟ್ಟೆ ತುಂಬಲು; ತೊಯ್ದು–ಒದ್ದೆ ಮಾಡಿ; ಮುಡಿಯಲುಂ–ಕಟ್ಟುವುದಕ್ಕೂ, ನೆಱಯದು–ಸಾಲದು, ತಪ್ಪು ತವು+ದ+ಉ; ತವು ಇತ್ಯಸ್ಯ ಧಾತೋಃ ದೋಃ ಪಕಾರದೇ ಶೋಭವತಿ ದಕಾರಾದಿ ಪ್ರತ್ಯಯೇ ಪರೇ (ಶಬ್ದಾನು. ಸೂ. ೪೮೦).
೧೪೯. ಅವನಂ–ದುಶ್ಯಾಸನನನ್ನು, ಬಂಚಿಸಿ–ವಂಚಿಸಿ, ಗದೆಗೊಂಡು–ಗದೆಯನ್ನೆತ್ತಿ ಕೊಂಡು, ಅವನ–ದುಶ್ಯಾಸನನ, ವರೂಥಮನೆ–ರಥವನ್ನೇ, ತಿಣ್ಣಂ–ತೀಕ್ಷ್ಣವಾಗಿ, ಇಟ್ಟೊಡೆ– ಹೊಡೆದರೆ, ಅವಂ–ದುಶ್ಯಾಸನ, ಗದೆಗೊಂಡು–ಗದೆಯನ್ನು ಹಿಡಿದು, ಎಯ್ತರೆ–ಹತ್ತಿರ ಬರಲು, ಪವನಸುತಂ–ಭೀಮನು, ರಥದಿಂದೆ–ತೇರಿನಿಂದ, ಇೞಿದು–ಕೆಳಗಿಳಿದು, ಅವನಿ ಯೊಳ್–ನೆಲದ ಮೇಲೆ, ಅವನುಮಂ–ಅವನನ್ನೂ, ಉರುಳ್ಚಿದಂ–ಹೊರಳಿಸಿದನು.
೧೫೦. ಬಳೆ–(ಗಂಟಲ) ಬಳೆಗಳು, ನುರ್ಗುತ್ತಿರೆ–ಜಜ್ಜಿಹೋಗುತ್ತಿರಲು, ಗಂಟಲಂ– ಗಂಟಲನ್ನು, ಮೆಟ್ಟಿ–ತುಳಿದು, ಇವಂ ದುಶ್ಶಾಸನಂ–ಇವನು ದುಶ್ಯಾಸನ, ಭೀಮನಿಂ– ಭೀಮನಿಗಿಂತ, ಬಳಸಂಪನ್ನಂ–ಶಕ್ತಿಸಂಪನ್ನನಾದವನು, ಅವುಂಕಿ–ಅಮುಕಿ, ಮರ್ದನ ಮಾಡಿ, ಕೊಂದ [ಪೆ] ನ್–ಕೊಲ್ಲುತ್ತೇನೆ, ಇದಂ–ಇದನ್ನು, ಮಾರ್ಕೊಳ್ವ–ಪ್ರತಿಭಟಿಸುವ, ಬಲ್ಲಾಳ್ಗೆ–ಶೂರನಿಗೆ, ಅಸುಂಗೊಳೆ–ಪ್ರಾಣವನ್ನು ತೆಗೆಯಲು, ಬಾಳೆತ್ತಿದೆಂ–ಕತ್ತಿಯನ್ನು ಎತ್ತಿದ್ದೇನೆ; ಪಿಂಗಾಕ್ಷ–ದುರ್ಯೋಧನನೇ, ಏಕೆ ಕಣ್ಣ ಮಿಡುಕಯ್–ಏಕೆ ಕಣ್ಣನ್ನು ಮಿಟುಕಿ ಸುವುದಿಲ್ಲ? ನೀಂ–ನೀನು, ಏಕೆ–ಏತಕ್ಕೆ, ಮಿಳ್ಮಿಳ ನೋಡುತ್ತು–ಮಿಳಮಿಳ ನೋಡುತ್ತ, ಉಳನೆ–(ಸೈನ್ಯದ) ಒಳಗಡೆಯೆ, ಇರ್ದೆ–ಇದ್ದೀಯಾ? (ಹೊರಕ್ಕೆ ಬಾ, ಸೇನೆಯ ನಡುವೆ ಅಡಗಿರಬೇಡ), ಎಂದು, ಅದಟರಂ–ಶೂರರನ್ನು, ಭೀಮಂ–ಭೀಮನು, ಪಳಂಚಿ–ಪ್ರತಿ ಭಟಿಸಿ, ಅಲ್ವಿದಂ–ಗರ್ಜಿಸಿದನು; ಇಲ್ಲಿ ಉಳನೆ ಎಂಬುದು ಉಳ್–ಒಳಗಡೆ ಎಂಬುದ ರಿಂದ ಬಂದಿರಬಹುದು; ಅಲ್ವಿದಂ: ಪಾಠಾಂತರಗಳು, ಆರ್ವ್ವಿನಂ, ಅಲ್ವಿನಂ; ಆರ್ವ್ವಿನಂ– ಎಂದರೆ ಗರ್ಜಿಸುತ್ತಿರಲು, ಇದು ಆಲ್ವಿನಂ ಎಂದಾಗಬಹುದು; ಆದರೆ ಕ್ರಿಯಾಪದವಾದರೆ ಆರ್ದಂ, ಆಲ್ದಂ ಎಂದಿರಬೇಕು; ಇಲ್ಲಿ ಬಹುಶಃ ಆರಿದಂ, ಆಲಿದಂ ಎಂಬ ನಡುಗನ್ನಡದ ರೂಪ, ಜನರ ಮಾತನಲ್ಲಿ ಇದ್ದಿರಬಹುದಾದದ್ದು, ಬಂದಿರಬಹುದು; ಛಂದಸ್ಸಿಗಾಗಿ. ಅಂತು ‘ಅಲ್ವಿನಂ’ ಪ್ರಯೋಗ ಸಂದೇಹಗ್ರಸ್ತ.
ವಚನ : ಆಟೋಪಮಂ–ಆಡಂಬರವನ್ನು; ಮಿಟ್ಟೆಂದು ಮಿಡುಕಲಣ್ಮದಿರೆ–ಮಿಟ್ಟೆಂದು ಅಲುಗಾಡಲು ಕೂಡ ಪೌರುಷವಿಲ್ಲದೆ ಇರಲು;
೧೫೧. ಉಸಿರೊತ್ತಿಂ–ಉಸಿರಿನ ಒತ್ತಡದಿಂದ, ತಿದಿಯಂತಿರೆ–ತಿದಿಯ ಹಾಗೆ, ಒತ್ತಿದ– ಅಮುಕಿದ, ಬಸಿಱ್–ಹೊಟ್ಟೆ, ಪೋತಂದ–ಹೊರಕ್ಕೆ ಹೊರಟಿರುವ, ಕಣ್ಣು–ಕಣ್ಣುಗಳು; ಬಿಟ್ಟಬಾಯ್–ತೆರೆದ ಬಾಯಿ; ಮಸಕಂಗುಂದಿದ–ಶಕ್ತಿಗುಂದಿದ, ಮೆಯ್–ದೇಹ; ವಲಂ– ಚೆನ್ನಾಗಿ, ಬಡಿವ–ಬಡಿಯುತ್ತಿರುವ, ಕಾಲ್–ಕಾಲುಗಳು; ಭೂಭಾಗದೊಳ್–ನೆಲದ ಮೇಲೆ, ತಂದು–ಹಾಕಿ, ತಾಟಿಸುತುಂ–ಹೊಡೆಯಲ್ಪಡುತ್ತ, ಕೋಟಲೆಗೊಳ್ವ–ಹಿಂಸೆಗೆ ಒಳಗಾಗಿ ರುವ, ರತ್ನಮಕುಟದ್ಯೋತೋತ್ತಮಾಂಗಂ–ರತ್ನಖಚಿತ ಕಿರೀಟದಿಂದ ಪ್ರಕಾಶಿತವಾದ ತಲೆ, ಇವೆಲ್ಲ, ವಿರಾಜಿಸುವನ್ನಂ–ಶೋಭಿಸುತ್ತಿರಲು, ಪುಡಿಯೊಳ್–ದೂಳಿನಲ್ಲಿ, ಪೊರಳ್ವ– ಹೊರಳುವ, ಪಗೆಯಂ–ಹಗೆಯನ್ನು, ಕಣ್ಣಾರ್ವಿನಂ–ಕಣ್ಣು ತುಂಬುತ್ತಿರಲು, ಕಣ್ಣುಗಳಿಗೆ ತೃಪ್ತಿ ಯಾಗುತ್ತಿರಲು, ನೋಡಿದಳ್–(ದ್ರೌಪದಿಯು) ನೋಡಿದಳು.
೧೫೨. ಆಸತ್ತು–ಆಯಾಸಗೊಂಡು, ತಿರಿದ–ಅಲೆದಾಡಿದ, ಅರಣ್ಯಾವಾಸದ–ಕಾಡಿನಲ್ಲಿ ವಾಸಮಾಡುವುದರ, ಪರಿಭವದ–ಅವಮಾನದ, ಕುದಿಪಮಂ–ಸಂಕಟವನ್ನು, ನೀಗಿ–ಕಳೆದು, ದುಶ್ಶಾಸನನ ಇರ್ದ–ದುಶ್ಯಾಸನನು ಇದ್ದ, ಇರವುಂ–ಅವಸ್ಥೆಯೂ, ಆ ದ್ರೌಪದಿಯಾ– ಆ ದ್ರೌಪದಿಯ, ಮನದೊಳ್–ಮನಸ್ಸಿನಲ್ಲಿ, ಸುಖಾವಾಸಮಂ–ಸುಖದ ನೆಲೆಯನ್ನು, ಎಯ್ದಿಸಿದುದು–ಮುಟ್ಟಿಸಿತು, ಸೇರಿಸಿತು. ಈ ಪದ್ಯದ ದೀರ್ಘಾಕ್ಷರಗಳ ವಿಳಂಬ ಗತಿ ದ್ರೌಪದಿಯು ಪಟ್ಟ ಕಷ್ಟಗಳ ಪ್ರಮಾಣವನ್ನೂ ದೀರ್ಘಕಾಲಿಕೆಯನ್ನೂ ಅನುಭವಕ್ಕೆ ತಂದು ಕೊಡುತ್ತಿರುವುದೇ ಅಲ್ಲದೆ, ಅವಳಿಗುಂಟಾದ ಕಿಂಚಿತ್ಸುಖಕ್ಕೆ ಅವರ ಅರ್ಹತೆಯನ್ನೂ ಧ್ವನಿ ಸುತ್ತಿದೆ.
ವಚನ : ನೆಱಪುವಂ–ಪೂರ್ತಿ ಮಾಡೋಣ; ದೃಢಕಠಿನ ಹೃದಯನಪ್ಪ–ದೃಢವೂ ಕಠಿಣವೂ ಆದ ಎದೆಯುಳ್ಳ; ಪೋೞ್ವ–ಸೀಳುವ.
೧೫೩. ಸುರಿಗೆಯೊಳ್–ಕತ್ತಿಯಲ್ಲಿ, ಉರಮಂ–ಎದೆಯನ್ನು, ಡೊಕ್ಕನೆ–ಡೊಕ್ಕೆಂದು, ಬಿಕ್ಕನೆಬಿರಿಯಿಱಿದು–ಬಿರುಬಿರನೆ ಬಿರಿಯುವಂತೆ ತಿವಿದು, ಬರಿಯಂ–ಪಕ್ಕೆಗಳನ್ನು, ಅಗ ಲೊತ್ತಿ–ಅಗಲವಾಗಿ ತಳ್ಳಿ, ಮನಂ–ಮನಸ್ಸು, ಕೊಕ್ಕರಿಸದೆ–ಹೇಸದೆ, ಬಗಸೆರೆಯಿಂ–ಬೊಗಸೆ ಯಿಂದ, ಪವನಸುತಂ–ಭೀಮನು, ನೆತ್ತರಂ–ರಕ್ತವನ್ನು, ಅಳುರ್ಕೆಯೆ–ಆಧಿಕ್ಯದಿಂದ, ಮೊಗೆ ಮೊಗೆದು–ತುಂಬಿ ತುಂಬಿ.
೧೫೪. ನೆತ್ತಿಯೊಳ್–(ದ್ರೌಪದಿಯ) ತಲೆಯ ಮೇಲೆ, ಎಱೆದೆಱೆದು–ಹೊಯ್ದು ಹೊಯ್ದು, ಇನಿಸು–ಸ್ವಲ್ಪ, ಅಱೆಯೊತ್ತಿ–ತಟ್ಟಿ ಒಳಕ್ಕಿಳಿಯುವಂತೆ ಮಾಡಿ, ಬೞಿಕ್ಕೆ– ಆಮೇಲೆ, ಇೞಿಯೆ–ಕೆಳಕ್ಕೆ ಸೇರಲು, ಪೊಸೆದು–ಹೆಣೆದುಕೊಂಡು, ಜಡೆಗೊಂಡಿರ್ದ–ಸಿಕ್ಕಾ ಗಿದ್ದ, ಉದ್ವೃತ್ತಕುಚಯುಗೆಯ–ಗರ್ವಿತ ಸ್ತನಗಳುಳ್ಳ ದ್ರೌಪದಿಯ, ಕೇಶಮಂ–ಕುರು ಳೋಳಿಗಳನ್ನು, ಎಯ್ದೆ–ಚೆನ್ನಾಗಿ, ಪಸರಿಸಿದ–ವ್ಯಾಪಿಸಿದ, ಅದಟಿಂ–ಪರಾಕ್ರಮದಿಂದ, ಎತ್ತಂ–ಎಲ್ಲ ಕಡೆಯೂ, ಪಸರಿಸಿದಂ–ಬಿಡಿಸಿದನು, ಹರವಿದನು.
೧೫೫. ಪಸರಿಸಿ–ಸಿಕ್ಕನ್ನು ಬಿಡಿಸಿ, ಪಂದಲೆಯಂ (ದುಶ್ಯಾಸನನ) ಹಸಿತಲೆಯನ್ನು, ಮೆಟ್ಟಿಸಿ–(ದ್ರೌಪದಿಯಿಂದ) ತುಳಿಯಿಸಿ, ವೈರಿಯ–ಶತ್ರುವಿನ, ಪಲ್ಲಪಣಿಗೆಯಿಂ–ಹಲ್ಲು ಗಳೆಂಬ ಬಾಚಣಿಗೆಯಿಂದ, ಬಾರ್ಚಿ–ತಲೆಯನ್ನು ಬಾಚಿ, ಪೊದಳ್ದ–ವ್ಯಾಪಿಸಿದ, ಒಸಗೆಯಿಂ– ಸಂತೋಷದಿಂದ, ಅವನ ಕರುಳ್ಗಳೆ–ಆ ದುಶ್ಶಾಸನನ ಕರುಳುಗಳೆ, ಪೊಸವಾಸಿಗಮಾಗೆ–ಹೊಸ ಹೂವಿನ ದಂಡೆಯಾಗಲು, ಕೃಷ್ಣೆಯಂ–ದ್ರೌಪದಿಯನ್ನು, ಮುಡಿಯಿಸಿದಂ–ತಾನೇ ಮುಡಿ ಯಿಸಿದನು. ದ್ರೌಪದಿಯ ತುಳಿತದಿಂದ ದುಶ್ಶಾಸನನ ಹಲ್ಲುಗಳ ಸಾಲುಗಳು ಕಳಚಿ ಬಿದ್ದವು; ಅದೇ ಬಾಚಣಿಗೆಯಾಯಿತು ಎಂದು ಭಾವ. ಬಾಸಿಗ=(ತ) ವಾಶಿಕೈ–ಹೂವಿನ ಸರ, ದಂಡೆ.
ದುಶ್ಯಾಸನನ ರಕ್ತಪಾನವನ್ನು ಭೀಮನು ಮಾಡಿದ ಪ್ರಸಂಗ ಭಾರತದಲ್ಲಿದೆ; ಆದರೆ ಆ ರಕ್ತವನ್ನು ಹೊಯ್ದು ದ್ರೌಪದಿಯ ತಲೆಯನ್ನು ಬಾಚಿದ್ದೂ ಅವನ ಕರುಳುಗಳನ್ನು ಅವಳ ತಲೆಗೆ ಮುಡಿಸಿದ್ದೂ ಅಲ್ಲಿ ಕಂಡುಬರುವುದಿಲ್ಲ.
ವಚನ : ಪಗೆಯುಂ ಬಗೆಯುಂ–ವೈರಿಯೂ ಮನೋರಥವೂ; ಒಡನೊಡನೆ ಮುಡಿಯೆ–ಜೊತೆಯಾಗಿಯೇ, ತೀರಲು; ತದೀಯಾಂತ್ರ–ಆತನ ಕರಳುಗಳ;
೧೫೬. ಇದಱೊಳ್–ಈ ಮುಡಿಯಲ್ಲಿ, ಶ್ವೇತಾತಪತ್ರಸ್ಥಗಿತದಶದಿಶಾಮಂಡಲಂ– ಬೆಳ್ಗೊಡೆಗಳು ತೆತ್ತಿಸಿದ ಹತ್ತು ದಿಕ್ಕುಗಳನ್ನುಳ್ಳ, ರಾಜಚಕ್ರ–ರಾಜರ ಸಮೂಹ, ಪುದಿದು– ಸೇರಿ, ಅೞ್ಕಾಡಿತ್ತು–ನಾಶವಾಯಿತು; ಇದಱೊಳೆ–ಇದರಲ್ಲಿಯೇ, ಕುರುರಾಜಾನ್ವಯಂ– ಕೌರವ ರಾಜಕುಲವು, ಅಡಂಗಿತು–ಮರೆಯಾಯಿತು; ಇದಱಿಂದಂ–ಇದರಿಂದ, ಮತ್ಪ್ರ ತಾಪಕ್ಕೆ–ನನ್ನ ಶೌರ್ಯಕ್ಕೆ, ಅಗುರ್ವು–ಅತಿಶಯವು, ಅಥವಾ ಭಯವು, ಉರ್ವಿದುದು–ವೆಗ್ಗಳ ವಾಯಿತು; ಅಬ್ಜದಳಾಕ್ಷೀ–ಕಮಲನೇತ್ರೆ ದ್ರೌಪದಿಯೇ, ನೋಡ–ನೋಡು, ಇದುವೆ–ಇದೇ, ಮಹಾಭಾರತಕ್ಕೆ–ಮಹಾಭಾರತದ ಯುದ್ಧಕ್ಕೆ, ಆದಿಯಾಯ್ತು–ಮೊದಲು ಆಯಿತು, ಎಂದರೆ ಬೀಜವಾಯಿತು; ಭವತ್ಕೇಶಪಾಶಪ್ರಪಂಚಂ–ನಿನ್ನ ಕುರುಳೋಳಿಯ ವಿಸ್ತಾರವು, ಬಗೆಯೆ– ಭಾವಿಸಿದರೆ, ಸಾಮಾನ್ಯಮೆ–ಸಾಧಾರಣವಾದದ್ದೇ, ಪೇೞ್–ಹೇಳು.
ವಚನ : ನೆಱಪಿದೆ–ಪೂರೈಸಿದೆ, ಪಿಡಿಯನೇಱಿಸಿ–ಹೆಣ್ಣಾನೆಯ ಮೇಲೆ ಹತ್ತಿಸಿ;
೧೫೭. ಒಸರ್ವ ಬಿಸುನೆತ್ತರಂ–ಸುರಿಯುವ ಬಿಸಿರಕ್ತವನ್ನು; ರಕ್ಕಸನಂದದೆ–ರಾಕ್ಷಸ ನಂತೆ, ಕುಡಿದು–ಕುಡಿದು, ಕಂಡಂಗಳಂ–ಮಾಂಸಖಂಡಗಳನ್ನು, ಅರ್ವಿಸೆ–ಮಿತಿಮೀರಿ, ಮೆಲ್ದು ಮೆಲ್ದು–ಅಗಿದು ಅಗಿದು, ಕರ್ಬಿನ ರಸಕ್ಕಂ–ಕಬ್ಬಿನ ರಸಕ್ಕೂ, ಇನಿಸು–ಇಷ್ಟು, ಇಂಪು ಗಾಣೆಂ– ರುಚಿಯನ್ನು ನೋಡೆನು, ಎಂದು ಅನಿಲಸುತಂ–ಭೀಮನು,
೧೫೮. ಸವಿಸವಿದು–ರುಚಿ ನೋಡಿ ರುಚಿನೋಡಿ, ಬಿಕ್ಕ ಬಿಕ್ಕನೆ–ಎದೆಯ ಮುಂತಾದ ಬಗೆ ಬಗೆಯ ಮಾಂಸಗಳನ್ನು, ಸವಿನೋಡು–ರುಚಿನೋಡು, ಎನ್ನಾಣೆ–ನನ್ನಾಣೆ, ಎಂದು–ಎಂದು ಹೇಳಿ, ರಕ್ಕಸಿಗಂ–ರಾಕ್ಷಸಿ ಹಿಡಿಂಬೆಗೂ, ಅದಂ–ಅದನ್ನು, ಸವಿದೋಱಿ–ರುಚಿ ತೋರಿಸಿ, ನೆತ್ತರೆಲ್ಲಂ ತವೆ–ರಕ್ತವೆಲ್ಲಾ ಮುಗಿಯಲು, ಕರುಳ–ಕರುಳುಗಳ, ಪಿಣಿಲಂ–ಗೋಜುಗಳನ್ನು, ನೊಣೆದಂ–ನುಂಗಿದನು.
ವಚನ : ರುಧಿರಾಸವದೊಳ್–ರಕ್ತವೆಂಬ ಮದ್ಯದಲ್ಲಿ; ಅಳವಿಗೞಿಯೆ–ಮಿತಿಮೀರಿ, ಅಳತೆ ಮೀರಿ; ಸೊರ್ಕಿ–ಉನ್ಮತ್ತನಾಗಿ; ಬರಿಯ–ಪಕ್ಕೆಗಳ, ನರವಿನ–ನರಗಳ, ಅಡಗಿನ– ಮಾಂಸಗಳ, ಇಡುವಿನ ಎಡೆಯ–ಸಂದಿಗಳಲ್ಲಿರುವ, ಕೆನ್ನೆತ್ತರೊಳ್–ಕೆಂಪು ರಕ್ತದಲ್ಲಿ; ತಳ್ಕಿಱಿದುಂ–ಮೈಗೆ ಬಳಿದೂ, ಲೇಪಿಸಿಯೂ; ಬೊಬ್ಬಿಱಿದುಂ–ಗಟ್ಟಿಯಾಗಿ ಅರಚಿಯೂ, ತ್ರಿಪುಂಡ್ರಮಿಟ್ಟುಂ–ಹಣೆಯಲ್ಲಿ ಮೂರು ಗೆರೆಗಳನ್ನು ಎಳೆದೂ; ಕೂಕಿಱಿದುಂ–ಆರ್ಭಟಿ ಸಿಯೂ(?), ತೇಗಿಯುಂ–ತೇಗನ್ನು ಬಿಟ್ಟೂ; ಸಸಿನೆವರಿದುಂ–ನೇರವಾಗಿ ಓಡಿಯೂ, ಬವಳಿ ವರಿದುಂ–ಸುತ್ತ ತಿರುಗಿಯೂ, ಬಾನಂಗುಳಿಗೆ ವರಿದುಂ–ನಕ್ಷತ್ರ ಮಂಡಲಕ್ಕೆ ನೆಗೆದೂ, ಸೂೞ್ವರಿದುಂ–ಒಬ್ಬರಾದ ನಂತರ ಇನ್ನೊಬ್ಬರು ಓಡಿಯೂ, ಬೆಕ್ಕಸಂಬಟ್ಟು–ಆಶ್ಚರ್ಯ ವನ್ನು ಹೊಂದಿ.
ಭೀಮಸೇನನು ಯುದ್ಧಭೂಮಿಗೆ ಹಿಡಿಂಬೆಯನ್ನು ಬರಿಸಿ ಅವಳೊಡನೆ ಸೇರಿ ರಾಕ್ಷಸಕ್ರೀಡೆಯಾಡಿ ನೆತ್ತರು ಮಾಂಸಗಳನ್ನು ಕುಡಿದು ಮೆದ್ದ ಸಂದರ್ಭ ವ್ಯಾಸಭಾರತ ದಲ್ಲಿಲ್ಲ. ಆ ರಕ್ತದ ರುಚಿ ಭೀಮಸೇನನಿಗೆ ಹೇಗಿತ್ತೆಂಬುದನ್ನು ಅಲ್ಲಿ ವರ್ಣಿಸಿದೆ; ಆದರೆ ಅಲ್ಲಿ ಕಬ್ಬಿನ ರಸವನ್ನು ಹೇಳಿಲ್ಲ; ಸ್ತನ್ಯಸ್ಯ ಮಾತುರ್ಮಧುಸರ್ಪಿಷೋರ್ವಾ, ಮಾಧ್ವೀಕ ಪಾನಸ್ಯ ಚ ಸತ್ಕೃತಸ್ಯ । ದಿವ್ಯಸ್ಯ ವಾ ತೋಯ ರಸಸ್ಯ ಚ ಯಾನಿ ಲೋಕೇ ಸುಧಾಮೃತಾ ಸ್ವಾದುರಸಾನಿ ತೇಭ್ಯಃ । ಸರ್ವೇಭ್ಯ ಏವಾಭ್ಯಧಿಕೋ ರಸೋಯಂ, ಮಮಾದ್ಯ ಚಾಸ್ಯಾಹಿತ ಲೋಹಿತಸ್ಯ ॥
ಮೇಲಿನ ಗದ್ಯದಲ್ಲಿ ಕೆಲವು ಕ್ಲಿಷ್ಟ ಶಬ್ದಗಳಿವೆ; ಅವುಗಳ ಅರ್ಥಗಳು ಅವ್ಯಕ್ತವಾಗಿವೆ; (೧) ತಳ್ಕಿಱಿ=ತಳ್ಕು+ಇಱಿ; ತಳ್ಕು ಎಂದರೆ ಲೇಪನ; “ಚಂದನದ ತಳ್ಕಬಲಾ ನಿಕರಕ್ಕದೀ ಗಳೀಗಳೆ ನೆಗೞ್ದತ್ತಲೇ ಪುಗಿಲದಾಗಲೆ ವೇಡ ವಸಂತರಾಜನಾ” ಎಂದು ಆದಿಪುರಾಣದ ಪ್ರಯೋಗವಿದೆ; ತಳ್ಕಿಱಿ–ಲೇಪಿಸು ಎಂದಷ್ಟೇ ಅರ್ಥ (೨) ಕೂಕಿಱಿ=ಕೂಕು+ಇಱಿ; ಕೂಕು=ಕೂಗು; ಆದ್ದರಿಂದ ಶಬ್ದ ಮಾಡು ಆರ್ಭಟಿಸು ಎಂದು ಅರ್ಥೈಸಿದೆ. (ಪಂಭಾ.ಕೋ.)ದಲ್ಲಿ; ಆದರೆ ಕೊಂಕು ಶಬ್ದವೊಂದಿದೆ, “ನಕ್ತಂಚರೀ ಮುಖದೊಳ್ ಕೊಂಕುವುದಾಂತರಂ ರಣ ಮುಖೋತ್ಖಾತಾಸಿಧಾರಾಮುಖಂ” (ಪಂಪ.ರಾ. ೧೦–೨೨೩) ಇಲ್ಲಿ ಕೂಗು ಎಂಬರ್ಥ ಹೊಂದುವುದಿಲ್ಲ; ಗಿಡಿ, ತುರುಕು ಎಂದಾಗಬಹುದು. (೩) ಬಾನಂಗುೞಿಗೆ–ಒಂದು ಬಗೆ ಯಾದ ನಡಿಗೆ ಎಂದು ಹೇಳಿದೆ (ಪಂಭಾ.ಕೋ.), ಶಬ್ದರೂಪ ಬಾನಂಗುಳಿಗೆ ಎಂದಿರಬೇಕು; (ಶಮ.ದ. ೧೮೩ ಸೂ); ಅರ್ಥದ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. (೧) ನಕ್ಷತ್ರ ಎಂಬ ಒಂದು ಟಿಪ್ಪಣಿ ಇದೆ (ಶಮ.ದ. ೧೮೩); (೨) ಸಗಣಿಯ ಉಂಡೆ ಅಥವಾ ಬೆರಣಿ; ಸಗಣಿಯ ಗುಳಿಗೆ ಘಟಿಕಾ ಎಂದು ಕಿಟ್ಟಲ್ ಅವರು ಅರ್ಥ ಹೇಳಿದ್ದಾರೆ. ಈ ಶಬ್ದವಲ್ಲದೆ ಬಾನಂಗುೞಿ ಎಂಬ ಒಂದು ಶಬ್ದವೂ ಇರುವಂತೆ ಕಾಣುತ್ತದೆ; ಬಾನಂಗುೞಿ, ಬಾಂಗುೞಿ ಎಂದು ಭಟ್ಟಾ ಕಳಂಕ ಪ್ರಯೋಗವನ್ನು ಕಾಣಿಸಿ (ಸೂ. ೩೪೬) ವ್ಯಾಖ್ಯಾನದಲ್ಲಿ “ಬಾನಂಗುೞಿ ಅತ್ತ ಗುೞಿರಿತಿ ನ ಪ್ರತ್ಯಯಃ, ಕಿಂತು ಗರ್ತವಾ ಚೀ ಕುೞಿ ಶಬ್ದಃ, ಕತಪಃ ಇತ್ಯಾದಿನಾ ಕಸ್ಯ ಗಾದೇಶಃ ಗಗನಗರ್ತ ಇತ್ಯರ್ಥಃ” ಎಂದು ಹೇಳಿದ್ದಾನೆ, ಹೀಗೆ ಭಾವಿಸುವುದಾದರೆ ಆಕಾಶದ (ದಲ್ಲಿರುವ) ಗುಣಿ ಎಂದರ್ಥವಾಗುತ್ತದೆ. ಆಕಾಶದಲ್ಲಿ ಗುಣಿ ಎಂದರೇನು? ನೇಮಿಚಂದ್ರನ ಅರ್ಧನೇಮಿಯ ಈ ಕೆಳಗಣ ಪ್ರಯೋಗವನ್ನು ನೋಡಬಹುದು:
ಬರಿಯೆಲ್ ಬೇಱೆರ್ದ ಕಂಕಾಳಿಕೆ ಪೆಡತಲೆಯೊಳ್ ಪೊಕ್ಕ ಕಣ್ ತೋರ್ಪ ಕೈಕಾಲ್
ಸೆರೆ ಪಾತಾಳಕ್ಕೆ ಪೊಕ್ಕಿರ್ದೊಣವಸಿಱುಡುಗಿರ್ದೊಂದುರಂ ಪೂೞ್ದಬಾಯ್ ಬೇ
ಕರಿಯೋದಂತಿರ್ದ ಬಾನಂಗುಳಿ ಗಿಟಿ ಗಿಟಿ ಜಂತ್ರಂಬೊಲಾಗಿರ್ದಮೆಯ್ಮೈ
ಸಿರಿ ಚಿದ್ರೂಪಕೆ ಪಕ್ಕಾಗಿರೆ ಚರಿಗೆಗುಣಲ್ಬಂದನೊರ್ವಂ ಮುನೀಂದ್ರಂ ॥
ಈ ಪದ್ಯದಲ್ಲಿ ಉಪವಾಸದಿಂದ ಒಣಗಿದ ದೇಹವುಳ್ಳ ಒಬ್ಬ ಜೈನಯತಿಯ ವರ್ಣನೆ ಇದೆ; ಇಲ್ಲಿ ಬರುವ ಬಾನಂಗುಳಿ ಎಂಬುದು ಮೈಯ ಒಂದು ಭಾಗವಿರುವಂತೆ ತೋರುತ್ತದೆ.
೧೫೯. ಆದ ಮುಳಿಸಿಂದಂ–ಉಂಟಾದ–ಅಥವಾ ವರ್ಧಿಸಿದ ಕೋಪದಿಂದ, ಎಲ್ವಂ– ಮೂಳೆಯನ್ನು, ತೇದುಂ–ತೆಯ್ದೂ, ಕುಡಿಯಲ್ಕೆ–ಕುಡಿಯುವುದಕ್ಕೆ, ತಕ್ಕ–ತಕ್ಕವನಾದ, ಪಗೆವನ–ಶತ್ರುವಿನ, ರುಧಿರಾಚೊ, । ದಮನೆ–ರಕ್ತವೆಂಬ ನಿರ್ಮಲವಾದ ನೀರನ್ನೇ, ಕುಡಿದು, ಮಾಣ್ದ–ಬಿಟ್ಟ, ನಿಂತ, ವೃಕೋದರಂ–ಭೀಮನು, ಆವತೆಱದೊಳಂ–ಯಾವ ರೀತಿಯಲ್ಲೂ, ಏಂ ದೋಷಿಗನೆ–ಏನು ದೋಷವುಳ್ಳವನೇ ? ಅಲ್ಲ ಎಂದು ಭಾವ. ದುಶ್ಯಾಸನನ ಮೂಳೆ ಗಳನ್ನು ಅರೆದು ಕುಡಿದಿದ್ದರೂ ಭೀಮನಿಗೆ ಏನು ಅಪವಾದ ಬರುತ್ತಿರಲಿಲ್ಲ; ಅಂಥ ಶತ್ರು ದುಶ್ಶಾಸನ.
೧೬೦. ಮುಳಿಸಂ ಮಾಡಿದ–ಕೋಪವನ್ನುಂಟುಮಾಡಿದ, ಅರಾತಿನಾಥರ–ಶತ್ರುರಾಜರ, ಅಡಗಂ–ಮಾಂಸವನ್ನು, ಸುಪ್ಪಲ್ಗೆ–ಉಪ್ಪು ಹಾಕಿದ, ಖಾದ್ಯಕ್ಕೆ, ಚಾಕಣಕ್ಕೆ; ಕೆನ್ನೆತ್ತರಂ– ಕೆಂಪು ರಕ್ತವನ್ನು, ಕೆನೆಗೊಂಡು–ಕೆನೆಗಟ್ಟಿ, ಆಱಿದ–ತಣ್ಣಗಾದ, ಪಾಲ್ಗೆ–ಹಾಲಿಗೆ; ದೊಂಡೆ ಗರುಳಂ–ಶ್ಲೇಷ್ಮದಿಂದ ಕೂಡಿರುವ ಕರುಳನ್ನು, ಕರ್ಬಿಂಗೆ–ಕಬ್ಬಿಗೆ; ಲೆಕ್ಕಕ್ಕೆ ತಂದು–ಗಣನೆಗೆ ತಂದು, ಇನಿಸುಂ–ಸ್ವಲ್ಪವೂ, ಮಾಣದೆ–ನಿಲ್ಲದೆ, ಪೀರ್ದು ಪೀರ್ದು–ಹೀರಿ ಹೀರಿ, ನೊಣೆದು– ನುಂಗಿ, ಅಂತೆ–ಹಾಗೆ, ಈ ಮಾಳ್ಕೆಯಿಂ–ಈ ರೀತಿಯಿಂದ, ಭೀಮಸೇನನವೋಲ್–ಭೀಮ ಸೇನನಂತೆ, ಪೂಣ್ದುದಂ–ಪ್ರತಿಜ್ಞೆ ಮಾಡಿದ್ದನ್ನು, ಎಯ್ದೆ–ಚೆನ್ನಾಗಿ, ಪೂಣ್ದ–ಮಾಡಿಮುಗಿಸಿದ, ನೆರವೇರಿಸಿದ, ಪಗೆಯಂ–ಹಗೆತನವನ್ನು, ಕೊಂಡಾಡದಂ–ಹೊಗಳದವನು, ಗಂಡನೇ– ಶೂರನೇ, ಗಂಡುಸೇ? ಸುಪ್ಪಲ್ ಎಂಬುದು ಒಂದು ಅಪೂರ್ವ ಶಬ್ದ; ಉಪ್ಪು ಎಂಬ ತಮಿಳು ತೆಲುಗು ಕನ್ನಡ ಮಲೆಯಾಳ ತುಳು ಶಬ್ದಕ್ಕೆ ಉತ್ತರ ದ್ರಾವಿಡ ಭಾಷೆಗಳಲ್ಲಿ ಸುಪ್ಪು ಎಂದಿದೆ; ಉತ್ತರ ದ್ರಾವಿಡದ ಆದಿ ಸಕಾರ ದಕ್ಷಿಣ ದ್ರಾವಿಡದಲ್ಲಿ ಲೋಪವಾಗುವುದೆಂಬ ನಿಯಮದಂತೆ ಸುಪ್ಪು ಉಪ್ಪು ಆಗುತ್ತದೆ; ಈ ಸುಪ್ಪು+ಅಲ್ ಎನ್ನುವುದು ಕನ್ನಡದಲ್ಲಿ ಇದೊಂದೆಡೆ ಉಳಿದುಕೊಂಡಿದೆ; ಇದು ಬಹುಶಃ ಪ್ರಾಚೀನ ದ್ರಾವಿಡದ ಅವಶೇಷ. ದೊಂಡೆ=ತೊಂಡೆ, ಶ್ಲೇಷ್ಮ; ಪೂಣ್–ತೊಡು, ಮೊಗಕ್ಕೆ ಸಿಕ್ಕು, ಬಳಸು, ಮೇಲ್ಕೊಳ್ಳುದಲ್ ಕೆಲಸಕ್ಕೆ ಮುಂತಾ ದುದನ್ನು ತನ್ನ ಮೇಲೆ ಎಳೆದುಕೊಳ್ಳುವುದು, ಉಳ್ಳುದಾಗು, ಸಿಕ್ಕಿಕೊಳ್ಳು, ಒಂದಾಗಿ ಸೇರು ಎಂಬ ಅರ್ಥಗಳು ತಮಿಳಿನಲ್ಲಿವೆ; ಇವುಗಳಲ್ಲಿ ತೊಡು, ಧರಿಸು ಎಂಬುದರಿಂದ ಪ್ರತಿಜ್ಞೆ ಮಾಡು, ಮೇಲ್ಕೊಳ್ಳು ಎಂಬುದರಿಂದ ಜವಾಬುದಾರಿಯನ್ನು ಹೊತ್ತುಕೊ, ನಿರ್ವಹಿಸು, ನೆರ ವೇರಿಸು ಎಂಬರ್ಥಗಳು ಬೆಳೆದು ಬರಲು ಸಾಧ್ಯ.
ವಚನ : ಜರಾಸಂಧಾರಿಯ–ಭೀಮಸೇನನ; ಗಂಡವಾತಂ–ಪೌರುಷದ ಮಾತನ್ನು, ಸುದ್ದಿ ಯನ್ನು.
೧೬೧. ಪೊಲ್ಲದು ಪೂಣ್ದು ಕೆಟ್ಟದ್ದನ್ನು ಪ್ರತಿಜ್ಞೆ ಮಾಡಿ ಎಂದರೆ ದುಷ್ಟ ಪ್ರತಿಜ್ಞೆಯನ್ನು ಮಾಡಿ, ಪುಚ್ಚೞಿಯದೆ–ಕೇಡು ಉಂಟಾಗದೆ, ಉರ್ಕಿದ–ಗರ್ವಿತರಾದ, ಕೌರವರಂ– ಕೌರವರನ್ನು, ಪೊರಳ್ಚಿ–ನೆಲದ ಮೇಲೆ ಹೊರಳಿಸಿ, ಕೊಂದು–ಸಾಯಿಸಿ, ಇಲ್ಲಿಯೆ–ಇಲ್ಲಿಯೇ, ವೈರಿಶೋಣಿತಮಂ–ಹಗೆಯ ರಕ್ತವನ್ನು, ಈಂಟಿ–ಕುಡಿದು, ತದಂತ್ರದೆ–ಅವನ ಕರುಳುಗಳಿಂದ, ಕೃಷ್ಣೆಗೆ–ದ್ರೌಪದಿಗೆ, ಧಮ್ಮಿಲ್ಲಮಂ–ತುರುಬನ್ನು, ಇಂಬಿನಿಂ–ಸೊಗಸಿನಿಂದ, ಮುಡಿಸಿ– ಸೂಡಿ, ಕೌರವ ನಾಯಕನ–ದುರ್ಯೋಧನನ, ಊರುಭಂಗಂ–ತೊಡೆಯನ್ನು ಮುರಿಯು ವುದು, ಒಂದಲ್ಲದುದು–ಒಂದಲ್ಲದ್ದನ್ನು ಎಂದರೆ ಒಂದನ್ನು ಬಿಟ್ಟು, ಎಲ್ಲಮಂ–ಪ್ರತಿಜ್ಞೆ ಗಳನ್ನೆಲ್ಲ, ಓಳಿಯೆ–ಕ್ರಮವಾಗಿ, ನೆಱಪಿದೆಂ ಗಡ–ಪೂರೈಸಿದೆನಲ್ಲವೆ? ಎಲ್ಲರುಂ ಕೇಳಿ– ಎಲ್ಲರೂ ಕೇಳಿರಿ. “ಮುಕುಟ ತಾಡಿತಕ” ಎಂಬೊಂದು ನಷ್ಟ ನಾಟಕದಲ್ಲಿ ಇರುವುದೆಂದು ಹೇಳಲಾಗಿರುವ ಈ ಕೆಳಗಿನ ಪದ್ಯದೊಡನೆ ಇದನ್ನು ಹೋಲಿಸಬಹುದು:
ಧ್ವಸ್ತಾಃ ಕ್ಷುದ್ರಾಃ ಧಾರ್ತರಾಷ್ಟ್ರಾಃ ಸಮಸ್ತಾಃ
ಪೀತಂ ರಕ್ತಂ ಸಾಧು ದುಶ್ಶಾಸನಸ್ಯ ।
ಪೂರ್ಣಾ ಕೃಷ್ಣಾ ಕೇಶಬಂಧ ಪ್ರತಿಜ್ಞಾ
ತಿಷ್ಠತ್ಯೇಕಂ ಕೌರವಸ್ಯೂರುಭಂಗಃ ॥
ವಚನ : ಕಾಲದಂಡಮಂ–ಯಮನ ದಂಡವನ್ನು.
೧೬೨. ಕರ್ಣನ ಮಗ ವೃಷಸೇನನ ಮರಣ: ದಡಿಗನ–ದಾಂಡಿಗನಾದ ಭೀಮನ, ಮಿೞ್ತುವಂ–ಮೃತ್ಯುವನ್ನು, ಮಿದಿದೊಡಲ್ಲದೆ–ಕುಟ್ಟಿಯಲ್ಲದೆ, ಮಾಣೆಂ–ಬಿಡೆನು, ಎಂದು, ಕೂರ್ಪು–ತೀಕ್ಷ್ಣತೆಯು, ಉಡುಗದೆ–ಕಡಿಮೆಯಾಗದೆ, ಬಂದು, ತಾಗೆ–(ವೃಷಸೇನನು) ಎದುರಿ ಸಲು, ಯಮಳರ್–ನಕುಲ ಸಹದೇವರು, ತಡೆಗೊಂಡೊಡೆ–ಅಡ್ಡಗಟ್ಟಿದರೆ, ತಾವುಂ–ತಾವು ಕೂಡ, ಎಮ್ಮೊಳಂ–ನಮ್ಮಲ್ಲಿಯೂ, ತೊಡರ್ದಪರ್–ಹೆಣಗುತ್ತಾರೆ, ಎಂದು, ಅವಂದಿರ– ಅವರ, ರಥಂಗಳಂ–ರಥಗಳನ್ನು, ಅಚ್ಚುಡಿಯೆಚ್ಚು–ಅಚ್ಚು ಮುರಿಯುವ ಹಾಗೆ ಹೊಡೆದು, ಭೀಮನಂ–ಭೀಮಸೇನನನ್ನು, ತಡೆಯದೆ–ತಡಮಾಡದೆ, ಮುಟ್ಟಿ–ಸಮೀಪಿಸಿ, ಪೆರ್ಚೆ– ಹೆಚ್ಚಳವನ್ನು, ತೋರಲು, ಮುರಾಂತಕಂ–ಕೃಷ್ಣ, ಕಪಿಕೇತನನಂ–ಅರ್ಜುನನನ್ನು ಕುರಿತು, ನುಡಿದಂ–ಹೇಳಿದನು.
೧೬೩. ಇವನ–ವೃಷಸೇನನ, ಶರಕಲ್ಪಂ–ಬಾಣವಿದ್ಯೆ, ಇವನ ಅದಟು–ಇವನ ಪರಾ ಕ್ರಮ, ಇವನಳವು–ಇವನ ಶಕ್ತಿ, ಇವನಣ್ಮು–ಇವನ ಪೌರುಷ, ನಿನಗಂ–ನಿನಗಿಂತಲೂ, ಅಗ್ಗಳಂ–ಅಧಿಕವಾದದ್ದು; ಇವನಂ–ಇವನನ್ನು, ಪವನಸುತಂ–ಭೀಮಸೇನನು, ಗೆಲ್ಲಂ– ಗೆಲ್ಲನು ಎಂದರೆ ಗೆಲ್ಲಲಾರನು; ನೀಂ–ನೀನು, ಇವನೊಳ್–ಇವನಲ್ಲಿ, ಪೊಣರ್–ಯುದ್ಧ ಮಾಡು, ಎಂದೊಡೆ–ಎಂದು ಹೇಳಿದರೆ, ಅವನೊಳ್–ವೃಷಸೇನನಲ್ಲಿ, ಅರಿಗಂ–ಅರ್ಜುನನು, ಪೊಣರ್ದಂ–ಕಾದಿದನು.
೧೬೪. ಪೊಣರ್ದೊಡಂ–ಕಾದಿದರೂ, ಅನುವರಂ–ಯುದ್ಧವು, ಇವನೊಳ್–ಇವನಲ್ಲಿ (ಎಂದರೆ ಅರ್ಜುನನಲ್ಲಿ), ಎನಗೆ–ನನಗೆ, ನರನೊಳ್–ಅರ್ಜುನನಲ್ಲಿ, ತೊಣೆವೆತ್ತ ಪ್ಪುದು–ಸಮಾನತೆಯನ್ನು ಪಡೆಯುತ್ತದೆ, ಎಂದು–ಎಂದು ಹೇಳಿ, ಅಱಿಕೆಯ–ಪ್ರಸಿದ್ಧವಾದ, ಕೂರ್ಗಣೆಗಳೊಳೆ–ಹರಿತವಾದ ಬಾಣಗಳಲ್ಲಿಯೇ, ಪೂೞ್ದು–ಹೂಳಿ, ತನ್ನಳವು–ತನ್ನ ಶಕ್ತಿಯು, ಅಣಿಯರಂ–ಅತಿಶಯ, ಎನೆ–ಎನ್ನಲು, ನಾಲ್ಕು ಶರದೆ–ನಾಲ್ಕು ಬಾಣಗಳಿಂದ, ಪಾರ್ಥನಂ–ಅರ್ಜುನನನ್ನು, ಎಚ್ಚಂ–ಹೊಡೆದನು.
೧೬೫. ಇಸೆ–ಪ್ರಯೋಗಿಸಲು, ನರರಥತುರಂಗಮಂಗಳಂ–ಅರ್ಜುನನ ರಥದ ಕುದುರೆ ಗಳನ್ನು, ಮುತ್ತಿಮುಸಱಿ–ಸುತ್ತಲೂ ದಟ್ಟವಾಗಿ ಆವರಿಸಿಕೊಂಡು, ಪರಿಬಂಧಿಸಿದುವು–ಕಟ್ಟಿ ಬಿಟ್ಟವು ಎಂದರೆ ಗತಿಸ್ತಂಭನ ಮಾಡಿದುವು; ಅಂತು–ಹಾಗೆ, ಆರ್ದು–ಗರ್ಜಿಸಿ, ಎಸಗಲ್– ರಥವನ್ನು ನಡೆಸುವುದಕ್ಕೆ, ಪೊಣರಲ್–ಹೋರಾಡುವುದಕ್ಕೆ, ಮಿಡುಕಲ್–ಅಲುಗಾಡುವುದಕ್ಕೆ, ಮಿಸುಕಲ್–ಚಲಿಸುವುದಕ್ಕೆ, ಅವನ ಸರಲ್ಗಳ್–ವೃಷಸೇನನ ಬಾಣಗಳು, ಅಣಂ–ಸ್ವಲ್ಪವೂ, ಈಯದೆ ಆದುವು–ಅವಕಾಶವನ್ನು ಕೊಡದಾದವು.
೧೬೬. ಸ್ಯಂದನಬಂಧನಮೆಂಬುದಂ–ರಥದ ಗತಿ ಸ್ತಂಭನವೆಂಬುದನ್ನು, ಇಂದು–ಈ ದಿನ, ಈ ವೃಷಸೇನನಿಂದಂ–ಈ ವೃಷಸೇನನಿಂದ, ಅಱಿದೆಂ–ತಿಳಿದೆನು; ಇದಂ–ಇದನ್ನು, ಮುನ್ನೆ– ಮೊದಲು, ಎಂದುಂ–ಯಾವಾಗಲೂ, ಕಂಡಱಿಯೆಂ–ನೋಡಿ ತಿಳಿಯೆನು; ಇದರ್ಕೆ–ಇದಕ್ಕೆ, ಆಂ–ನಾನು, ಬೆಱಗಾದೆಂದಲ್–ಅಚ್ಚರಿಪಟ್ಟೆನು, ದಿಟವಾಗಿಯೂ; ಮುಕುಂದಾ–ಶ್ರೀಕೃಷ್ಣನೇ, ಎನಗೆ–ನನಗೆ, ಬೆಸಸು–ಮುಂದೇನು ಮಾಡಬೇಕೆಂಬುದನ್ನು ಹೇಳು.
೧೬೭. ಎನೆ–ಎನ್ನಲು, ಪರಶುರಾಮನಿಂ–ಪರಶುರಾಮನಿಂದ, ಕರ್ಣನೆ–ಕರ್ಣನೇ, ಚಾಪ ವಿದ್ಯೆಯಂ–ಬಿಲ್ವಿದ್ಯೆಯನ್ನು, ಬಲ್ಲಂ–ತಿಳಿದವನು, ಕರ್ಣನಿಂ–ಕರ್ಣನಿಂದ, ಈತನೆ–ಇವನೇ, ಬಲ್ಲಂ–ತಿಳಿದವನು; ಇವನ ಸರಲ್ ಎನಿತು–ಇವನ ಬಾಣಗಳು ಎಷ್ಟೋ, ಅನಿತುಮಂ– ಅಷ್ಟನ್ನು, ಎಡೆವಿಡದೆ–ನಿರಂತರವಾಗಿ, ತಱಿದು–ಕತ್ತರಿಸಿ, ತಲೆಯಂ–ತಲೆಯನ್ನು, ತಱಿಯಾ–ಕತ್ತರಿಸು.
ವಚನ : ಅಳವಿಗೞಿಯೆ–ಅಳತೆ ಮೀರಿ, ವಿಶೇಷವಾಗಿ; ಪುದುಂಗೊಳಿಸಿದ–ಒತ್ತಾಗಿ ದಟ್ಟ ವಾಗಿ ಬೆಳೆದ, ಬಿದಿರ ಸಿಡುಂಬಂ–ಬಿದಿರ ಮೆಳೆಯನ್ನು, ಪೋಡುಂಗಾಱನಂತೆ–ಕಾಡನ್ನು ಕತ್ತರಿಸುವವನಂತೆ; ಪರಶು–ಕೊಡಲಿ; ಅಸಿಧೇನು–ಕತ್ತಿ; ತೋಡುಂಬೀಡಿಂಗಂ–ಬಾಣ ಸಂಧಾನಕ್ಕೂ ಮೋಚನಕ್ಕೂ; ರಥಮನೆಸಗುವ–ರಥವನ್ನು ನಡೆಸುವ, ಕೆಯ್ಗಂ–ಕೈಗಳಿಗೂ ಎಂದರೆ ಕೈಗಳನ್ನಾಡಿಸುವುದಕ್ಕೂ, ಎಡೆಮಾಡಿ–ಅವಕಾಶವನ್ನು ಉಂಟು ಮಾಡಿ;
೧೬೮. ವಿನಾಯಕಂ–ಗಣೇಶನು, ತನಗೆ, ದಯೆಯಿಂ–ಕರುಣೆಯಿಂದ, ಇತ್ತ–ಕೊಟ್ಟ, ಜಯಾಸ್ತ್ರಮಂ–ಜಯವೆಂಬ ಬಾಣವನ್ನು, ಭೋಂಕನೆ–ಬೇಗನೆ, ದೊಣೆಯಿಂ–ಬತ್ತಳಿಕೆ ಯಿಂದ, ಉರ್ಚಿಕೊಂಡು–ಸೆಳೆದುಕೊಂಡು, ಶರಾಸನದೊಳ್–ಬಿಲ್ಲಿನಲ್ಲಿ, ಅಂತು–ಹಾಗೆ, ಅದಂ–ಅದನ್ನು, ಆಗಡೆ–ಆಗಲೇ, ಪೂಡಿ–ಸಂಧಾನಮಾಡಿ, ಧಾತ್ರಿ–ಭೂಮಿಯು, ತಿಱ್ರನೆ– ಗಿರ್ರೆಂದು, ತಿರಿವನ್ನೆಗಂ–ಸುತ್ತುತ್ತಿರಲು, ತೆಗೆದು–ಬಿಲ್ಲಿನ ಹೆದೆಯನ್ನು ಎಳೆದು, ಕಂಧರ ಸಂಧಿಯಂ–ಕೊರಳ ಕೀಲನ್ನು, ಎಯ್ದೆ ನೋಡಿ–ಚೆನ್ನಾಗಿ ನೋಡಿ, ಗುರಿಯಿಟ್ಟು, ತೊಟ್ಟನೆ– ಬೇಗನೆ, ನರಂ–ಅರ್ಜುನ, ಎಚ್ಚೊಡೆ–ಹೊಡೆದರೆ, ವೈರಿಶಿರಸ್ಸರೋರುಹಂ–ಹಗೆಯ ತಲೆ ಯೆಂಬ ಕಮಲವು, ಉಚ್ಚಳಿಸಿ–ಮೇಲಕ್ಕೆ ಹಾರಿ, ಬಿೞ್ದುದು–ಬಿತ್ತು.
೧೬೯. ಅಂತೆ–ಹಾಗೆ, ಅತ್ತ–ಅತ್ತಕಡೆಗೆ, ಪರಿದ–ಓಡಿದ, ತಲೆಯನದಂ–ಆ ತಲೆಯನ್ನು, ಸುರಗಣಿಕೆಯರ್–ದೇವಸ್ತ್ರೀಯರು, ತಂದು–ತೆಗೆದುಕೊಂಡು ಬಂದು, ಅಟ್ಟೆಯೊಳ್–ಮುಂಡ ದಲ್ಲಿ, ಅಮರ್ಚಿ–ಸೇರಿಸಿ, ಅಭ್ರಾಂತದೊಳೆ–ಮೋಡಗಳ ನಡುವೆಯೇ, ತಮ್ಮ ವಿಮಾನಾಂತರ ದೊಳಗಿಟ್ಟು–ತಮ್ಮ ವಿಮಾನದೊಳಗೆ ಇಟ್ಟು, ಕರ್ಣತನಯನಂ–ಕರ್ಣನ ಮಗ ವೃಷಸೇನ ನನ್ನು, ಉಯ್ದರ್–ಒಯ್ದರು.
ವ್ಯಾಸಭಾರತದಲ್ಲಿ ವೃಷಸೇನನ ವಧೆಯ ಪ್ರಸಂಗ ಬೇರೆ ರೀತಿಯಲ್ಲಿದೆ. ವೃಷಸೇನನ ರಥಕಲ್ಪದ ಮಹಿಮೆಯಾಗಲಿ, ಅದರಿಂದ ಅವನು ರಥಸ್ತಂಭನವನ್ನು ಮಾಡಿದ್ದಾಗಲಿ, ಅರ್ಜುನ ಅಚ್ಚರಿಪಟ್ಟುದಾಗಲಿ, ಮುಕುಂದನ ಸಲಹೆಯನ್ನು ಕೇಳಿ ಪಡೆದದ್ದಾಗಲಿ, ವಿನಾಯ ಕಾಸ್ತ್ರದಿಂದ ಅವನ ತಲೆಯನ್ನು ಕತ್ತರಿಸಿದ್ದಾಗಲಿ, ಅವನನ್ನು ಸುರಸ್ತ್ರೀಯರು ಸ್ವರ್ಗಕ್ಕೆ ಒಯ್ದ ದ್ದಾಗಲಿ–ಯಾವುದೂ ಅಲ್ಲಿಲ್ಲ. ಆರಕ್ತನೇತ್ರನಾದ ಅರ್ಜುನ ಕರ್ಣ ದುರ್ಯೋಧನ ಅಶ್ವತ್ಥಾಮಾದಿಗಳನ್ನು ಕೂಗಿ ಕರೆಯುತ್ತ ನಿಮ್ಮೆದುರಿಗೇ ವೃಷಸೇನನ್ನು ಕೊಲ್ಲುತ್ತೇನೆ ಎಂದು ಹೇಳುತ್ತ “ಸಸರ್ಜ ಬಾಣಾನ್ ವಿಶಿಖಾನ್ ಮಹಾತ್ಮಾ, ವಧಾಯ ರಾಜನ್ ಕರ್ಣಸುತಸ್ಯ ಸಂಖ್ಯೇ । ವಿವ್ಯಾಧ ಚೈನಂ ದಶಭಿಃ ಪೃಷತ್ಕೈಃ ಮರ್ಮಸ್ವಶಂಕಂ ಪ್ರಹಸನ್ ಕಿರೀಟೀ ॥ ಚಿಚೆ, । ದ ಚಾಸ್ಯೇಷ್ವಸನಂ ಭುಜೌ ಚ, ಕ್ಷುರೈಶ್ಚತುರ್ಭಿರ್ನಿಸಿತೈಃ ಶರೈಶ್ಚ । ಸ ಪಾರ್ಥ ಬಾಣಾಭಿ ಹತಃ ಪಪಾತ, ರಯಾದ್ ವಿಬಾಹುಃ ವಿಶಿರಾ ಧರಾಯಾಂ ॥” ಇಷ್ಟೇ ಅಲ್ಲಿರುವುದು.
ವಚನ : ಅಂತಕನ–ಯಮನ, ಅಣಲೊಳ್–ಗಂಟಲಿನಲ್ಲಿ, ಅಡಸಿ–ತುರುಕಿ.
೧೭೦. ಮಗನ ಅೞಲ್ ಒಂದು–ಮಗನು ಸತ್ತ ದುಃಖವೊಂದು; ಭೂಪತಿಯ ತಮ್ಮ ನೊಳ್–ದುಶ್ಶಾಸನನಲ್ಲಿ (ಅವನ ಸಾವಿನಲ್ಲಿ), ಆದ–ಉಂಟಾದ, ಅೞಲೊಂದು–ದುಃಖ ವೊಂದು, ನೊಂದು ಬಿನ್ನಗೆ ಮೊಗದಿಂದೆ ಕುಂದಿ–ವ್ಯಥೆಪಟ್ಟು ಮೌನದಿಂದಿರುವ ಮುಖ ದಲ್ಲಿ ಕಳೆಗುಂದಿ, ಫಣಿಕೇತನಂ–ದುರ್ಯೋಧನ, ಇರ್ದ–ಇದ್ದ, ಅೞಲೊಂದು–ದುಃಖ ವೊಂದು, ಈ ಮೂರು, ತನ್ನಂ–ತನ್ನನ್ನು, ಆವಗೆಯ–ಮಡಕೆ ಸುಡುವ ಒಲೆಯ, ಉರಿ– ಬೇಗೆ, ಅೞ್ವವೋಲ್–ಸುಡುವ ಹಾಗೆ, ಅಳುರೆ–ವ್ಯಾಪಿಸಲು, ತನ್ನ, ನೆಗೞ್ತೆಗೆ–ಕೀರ್ತಿಗೆ, ಮುಯ್ವನಾಂತು–ಹೆಗಲನ್ನು ಹೊತ್ತು (ಎಂದರೆ ಹೆಗಲನ್ನು ನೋಡಿಕೊಂಡು); ಮುಂ– ಹಿಂದಿನ ಕಾಲದಲ್ಲಿ, ಪೊಗೞಿಸಿ–ಹೊಗಳಿಸಿಕೊಂಡು, ಬೞ್ದುದಂ–ಬಾಳಿದ್ದನ್ನು, ನೆನೆದು– ಜ್ಞಪ್ತಿಗೆ ತಂದುಕೊಂಡು, ಕರ್ಣಂ–ಕರ್ಣನು, ಅಸುಂಗೊಳೆ–ಅರ್ಜುನನ ಪ್ರಾಣಾಪಹಾರ ಮಾಡಲು, ಬಂದು–ಎದುರಾಗಿ ಬಂದು, ತಾಗಿದಂ–ಸಂಘಟ್ಟಿಸಿದನು.
೧೭೧. ಬಧಿರಿತ ಸಮಸ್ತ ದಿಕ್ತಟಂ–ಕಿವುಡು ಮಾಡಲ್ಪಟ್ಟ ಎಲ್ಲಾ ದಿಕ್ಪ್ರದೇಶಗಳುಳ್ಳ, ಅಧರಿತ ಸರ್ವೇಭ್ಯಗರ್ಜಿತಂ–ಕೀಳ್ಮಾಡಲ್ಪಟ್ಟ ಎಲ್ಲಾ ಆನೆಗಳ ಘೀಂಕಾರವನ್ನುಳ್ಳ, ಕ್ಷುಭಿತಾಂ ಭೋನಿಧಿ ಸಲಿಲಂ–ಕದಡಲ್ಪಟ್ಟ ಸಮುದ್ರದ ನೀರುಗಳನ್ನುಳ್ಳ, ಧುರ ವಿಧಾನ ಪಟುಪಟಹ ಕಹಳ ಭೇರೀರಭಸಂ–ಯುದ್ಧಕ್ರಮದಲ್ಲಿ ಸಮರ್ಥವಾದ ತಮ್ಮಟೆ ಕಹಳೆ ಭೇರಿವಾದ್ಯಗಳ ರಭಸವು, ಪರೆದುದು–ವ್ಯಾಪಿಸಿತು. ಈ ಪದ್ಯದಲ್ಲಿ ಬರುವ ಪವರ್ಗಾಕ್ಷರಗಳ ಮತ್ತು ಮಹಾ ಪ್ರಾಣಗಳ ವಿನ್ಯಾಸ ವಾದ್ಯಗಳ ಗಡಾವಣೆಯನ್ನು ಓದಿದ ಮಾತ್ರದಿಂದಲೇ ಅನುಭವಕ್ಕೆ ಗೋಚರ ವಾಗಿಸುತ್ತಿದೆ.
೧೭೨. ಧುರದೊಳ್–ಯುದ್ಧದಲ್ಲಿ, ಹರಿಯುಂ ಶಲ್ಯನುಂ–ಕೃಷ್ಣನೂ, ಶಲ್ಯನೂ, ನರನ ದಿನಪತನಯನ–ಅರ್ಜುನನ ಮತ್ತು ಕರ್ಣನ, ರಥಮಂ–ರಥಗಳನ್ನು, ಆದರದಿಂ–ಆಸಕ್ತಿ ಯಿಂದ, ಚೋದಿಸೆ–ಹಾಯಿಸಲು, ಆದಿತ್ಯನ ಸಾರಥಿ–ಸೂರ್ಯನ ಸಾರಥಿ, ಅರುಣ, ಬೆಱಗಾದಂ–ಅಚ್ಚರಿಪಟ್ಟನು; ಮಾತಾಳಿ–ಮಾತಿನಮಲ್ಲನು ಎಂದರೆ ಇಂದ್ರನ ಸಾರಥಿ ಮಾತಲಿ, ಮಾತುಗೆಟ್ಟಂ–ಮೂಕನಾದನು; ಇಲ್ಲಿ ಮಾತಲಿಗೆ ಮಾತಾಳಿಯೆಂದು ಮಾಡಿರುವ ಪ್ರಯೋಗ ರಮ್ಯವಾಗಿದೆ.
ವಚನ : ಒರ್ವರೊರ್ವರಂ–ಒಬ್ಬರೊಬ್ಬರನ್ನು; ಮುಟ್ಟೆವಂದಲ್ಲಿ–ಸಮೀಪಿಸಿದಾಗ.
೧೭೩. ಇಲ್ಲಿಂದ ಕರ್ಣಾರ್ಜುನರ ಕಾಳಗ; ಕರ್ಣನ ಸೂರ್ಯಲೋಕ ಪ್ರಾಪ್ತಿ; ನಿನ್ನಂ– ನಿನ್ನನ್ನು, ದುರ್ಯೋಧನ–ದುರ್ಯೋಧನನು, ಪಿರಿದು ಪೊರೆದಂ–ಹಿರಿದಾಗಿ ಸಲಹಿದನು; ನಿನಗೆ, ಎನ್ನೊಳಂ–ನನ್ನಲ್ಲಿಯೂ, ಕಲುಷಂ–ದ್ವೇಷವು, ಪಿರಿದು–ಹಿರಿದು; ಕರ್ಣಂಗೆ–ಕರ್ಣನಿ ಗಾಗಿ, ಭಾರತಂ–ಭಾರತ ಯುದ್ಧವು, ಒಡ್ಡಿತ್ತು–ಚಾಚಿತು, ಏರ್ಪಟ್ಟಿತು; ನಿನಗಂ–ನಿನಗೂ, ಏಂ ಬೆಸಂ ಪಿರಿದು–ಯುದ್ಧ ಕಾರ್ಯವೇನು ಹಿರಿದು? ರಾಗಂ ಮಿಕ್ಕಿರ್ದ–ಪ್ರೀತಿ ಅತಿಶಯ ವಾಗಿದ್ದ, ಅಗುರ್ವಿನಸೂನು–ಪ್ರಚಂಡನಾದ ಮಗ, ನಿರ್ನೆರಂ–ನಿಷ್ಕಾರಣವಾಗಿ, ಅೞಿಯೆ ಯುಂ–ಸತ್ತರೂ, ನೋಡುತ್ತೆ–ನೋಡುತ್ತ, ಇಂತು–ಹೀಗೆ, ಇರ್ದೆ–ಇದ್ದೆ; ಇರ್ಪುದು–ಹಾಗೆ ಇರುವುದು, ಪಾೞಿಯೇ–ಧರ್ಮವೇ?
೧೭೪. ಎನ್ನ ಪೆಸರ್ಗೇಳ್ದು–ನನ್ನ ಹೆಸರನ್ನು ಹೇಳಿ, ಸೈರಿಸದಂ–ಸಹಿಸದವನು, ನಯದೆ– ನಯದಿಂದ ಎಂದರೆ ನಯಭಾವದಿಂದ, ಈಗಳ್–ಈಗ, ಎನ್ನರೂಪಂ ಕಂಡುಂ–ನನ್ನ ಮೂರ್ತಿ ಯನ್ನು ನೋಡಿಯೂ, ನಿನ್ನರಸನ–ನಿನ್ನ ದೊರೆ ದುರ್ಯೋಧನನ, ಅಣುಗದಮ್ಮನ–ಪ್ರೀತಿ ಪಾತ್ರನಾದ ದುಶ್ಶಾಸನನ, ನಿನ್ನತನೂಭವನ–ನಿನ್ನ ಮಗನ, ಸಾವುಗಂಡುಂ–ಸಾವನ್ನು ನೋಡಿಯೂ, ಎಂತು ಮಾಣ್ಬಾ–ಹೇಗೆ ತಡಮಾಡುವೆ?
೧೭೫. ಭಯಮೇಕಕ್ಕು–ಭಯವು ಏಕಾಗುತ್ತದೆ? ಅದೆಂತುಟು–ಅದು ಹೇಗಿದೆ? ಎಂದು– ಎಂಬುದಾಗಿ, ಅದಟುಮಂ–ಪರಾಕ್ರಮವನ್ನು, ಪೆರ್ಮಾತುಮಂ–ದೊಡ್ಡ ಮಾತುಗಳನ್ನು, ಈ ಭೂತದಾತ್ರಿಯೊಳ್–ಈ ಸಚರಾಚರ ಭೂಮಿಯಲ್ಲಿ, ಮುನ್ನೆ–ಮೊದಲು, ಓರಂತೆ–ಕ್ರಮ ವಾಗಿ, ನೆಗೞ್ಚಿ–ಮಾಡಿಯಾಡಿ, ಬೞಿಯಂ–ಅನಂತರ, ಕಾನೀನ–ಕರ್ಣನೇ, ನೀಂ–ನೀನು, ಈ ಮಹಾಜಿಯೊಳ್–ಈ ಮಹಾ ಯುದ್ಧದಲ್ಲಿ, ಎನಗಂಜಿ–ನನಗೆ ಹೆದರಿ, ಇಂತೇಂ ಮಾಣ್ದೆ– ಹೀಗೆ ಏನು ತಡಮಾಡಿದೆ? ಪೆಱತೇಂ–ಬೇರೇನು? ಪೋ–ಹೋಗು! ಅಣ್ಣ–ಅಣ್ಣನೇ, ಮಾತು ಲೇಸು–ಮಾತು ಚೆನ್ನಾಗಿದೆ, ಸೆಟ್ಟಿಯ ಬಳ್ಳಂ ಕಿಱಿದು–ಸೆಟ್ಟಿಯ ಅಳತೆಯ ಬಳ್ಳ ಚಿಕ್ಕದು; ಎಂಬುದೊಂದು–ಎಂಬ ಒಂದು, ನುಡಿಯಂ–ಗಾದೆಯನ್ನು, ನೀಂ–ನೀನು, ನಿಕ್ಕುವಂ–ನಿಜವ ನ್ನಾಗಿ, ಮಾಡಿದಯ್–ಮಾಡಿದೆ.
೧೭೬. ಪೆಸರೆಸೆಯೆ–ಹೆಸರು ಪ್ರಕಾಶವಾಗಲು, ಬೀರಮಂ–ಶೌರ್ಯವನ್ನು, ಪಾಡಿಸಿಯುಂ–ಹಾಡಿಸಿಯೂ, ಪೊಗೞಿಸಿಯುಂ–ಹೊಗಳುಭಟ್ಟರಿಂದ ಹೇಳಿಸಿಯೂ, ಉರ್ಕಿ ಬಿೞ್ದು–ಔದ್ಧತ್ಯದಿಂದ ಹೊರಳಾಡಿ, ಆಹವದೊಳ್–ಯುದ್ಧದಲ್ಲಿ, ಕುಸಿದು–ಕುಗ್ಗಿ, ಪೆಱಪಿಂಗೆ–ಹಿಂಜರಿಯಲು, ಪೇೞ್–ಹೇಳು, ಮಾನಸರ್–ಮನುಷ್ಯರು, ಇನ್ನೂಱು ವರ್ಷಮಂ– ಇನ್ನೂರು ವರ್ಷಗಳನ್ನು, ಏಂ ಬೞ್ದಪರೇ–ಏನು ಬದುಕುತ್ತಾರೆಯೇ?
ವಚನ : ನೃಪ ಪರಮಾತ್ಮನ–ಅರ್ಜುನನ; ಪಾೞಿಯ–ಧರ್ಮದ; ಪಸುಗೆಯ–ವಿವೇಕದ; ಪರಮಾರ್ತನಾಗಿ–ಅತ್ಯಂತ ವ್ಯಾಕುಲಿತನಾಗಿ; ಉದ್ಘಾಟಿಸಿ ನುಡಿದೊಡೆ–ತೆರೆದು ಎಂದರೆ ಪ್ರಕಟ ವಾಗಿ ಮಾತಾಡಿದರೆ; ಉಮ್ಮಚ್ಚದೊಳ್–ಕೋಪದಲ್ಲಿ; ಮೆಚ್ಚದೆ–ಮೆಚ್ಚಿ ಕೊಳ್ಳದೆ; ದರ ಹಸಿತ–ಅರೆ ನಗುವಿನಿಂದ ಕೂಡಿದ; ದಶಶತಕರತನೂಜಂ–ಸೂರ್ಯನ ಮಗ ಕರ್ಣ.
೧೭೭. ಎಳೆಯಂ–ನೆಲವನ್ನು, ರಾಜ್ಯವನ್ನು, ಮುಂ–ಮೊದಲು, ಕೋಳ್ಪಟ್ಟುಂ–ಇತರರ ಹಿಡಿತಕ್ಕೆ ಒಳಪಡಿಸಿಯೂ; ಬಳೆದೊಟ್ಟುಂ–ಬಳೆಯನ್ನು ತೊಟ್ಟೂ, ಮುಟ್ಟುಗೆಟ್ಟುಂ–ನಿರಾ ಯುಧರಾಗಿಯೂ, ಇರ್ದು–ಇದ್ದು, ಈಗಳ್–ಈಗ ಬಳ್ಳಳನೆ ನುಡಿದಪುದೆ–ಅತಿಯಾಗಿ ಮಾತಾಡುವುದೆ? ನುಡಿವಂತೆ–ಮಾತಾಡುವಂತೆ, ಅಳವುಂ–ಶಕ್ತಿಯೂ, ಪೆರ್ಮಾತುಂ–ದೊಡ್ಡ ಮಾತುಗಳೂ, ಆಯಮುಂ–ಹೆಚ್ಚಳವೂ, ನಿನಗಾಯ್ತೇ–ನಿನಗೆ ಆಯಿತೇ? ಕೋಳ್ಪಡು– ಇತರರ ಆಕ್ರಮಣಕ್ಕೆ ಸಿಕ್ಕು; ಕೊಳ್ ಕೋಳ್+ಪಡು; “ಮಹಾರಾಜಾ, ಆಂ ಬತ್ತಲೆ ಸವಣರಿಂ ದಂ ಕೋಳ್ಪಟ್ಟೆಂ, ಎನ್ನ ಮಗಳ್ ನಾಗಶ್ರೀಯಂ ತನ್ನ ಮಗಳೆಂದು ಕೈಕೊಂಡಿರ್ದರ್” ಎಂದು ಪ್ರಯೋಗ (ವಡ್ಡಾ.೨೩).
೧೭೮. ಮದೀಯನಾಥಂ–ನನ್ನ ರಾಜ ದುರ್ಯೋಧನ, ನಿಮ್ಮಂ–ನಿಮ್ಮನ್ನು, ಏೞ್ಕಟ್ಟಿಂ– ವರ್ಷಗಳ ಅವಧಿಯ ಕಟ್ಟುಪಾಡಿನಿಂದ, ಎೞೆದು–ಸೆಳೆದು, ನಾೞ್ಕಡಿ ಗೞಿದೊಡೆ–ನಾಡಗಡಿ ಯಿಂದದೂರ ಹೋಗಿಸಿದರೆ, ಬೇರಂ ಬಿೞ್ಕೆಯನೆ–ಬೇರನ್ನೂ ಬಿಕ್ಕೆ ಕಾಯನ್ನೂ, ತಿಂದದೆವಸ ದೊಳ್–ತಿಂದ ದಿನಗಳಲ್ಲಿ, ಅೞ್ಕಾಡಿದ–ನಾಶವಾದ, ಬೀರಂ–ಶೌರ್ಯ, ಈಗಳ್–ಈಗ, ಏಂ ಪೊಸತಾಯ್ತೇ–ಏನು ಹೊಸದಾಗಿ ಆಯಿತೇ? ಏೞ್ಕಟ್ಟು ಏಡು+ಕಟ್ಟು; ಏಡು=(ತ) ಯಾಣ್ಡು, ಆಣ್ಡು=(ತೆ) ಏಡು=(ಕೊಡ) ಆಣ್ಡಿ–ವರ್ಷ. ಈ ಅರ್ಥದಲ್ಲಿ ಯಾಂಡು ಎಂಬ ಶಬ್ದ ಕೆಲವು ಶಾಸನಗಳಲ್ಲಿ ದೊರೆಯುತ್ತದೆ (ನಂಜನಗೂಡು ೧೬೪, ಶಕ ೯೫೩); ಮೊನೆ ಯೇಡು ಎಂಬ ಶಬ್ದ (ಶಮದ. ೩೩೭) ಕಾಲವಾಚಿಯಾದದ್ದು; ಅಲ್ಲಿರುವ ಎರಡನೆಯ ಶಬ್ದ ಏಡು ಎಂಬುದು ವರ್ಷವಾಚಿ ಎಂದು ತೋರುತ್ತದೆ. ಈ ಪದ್ಯವನ್ನು (ಗದಾ. ೭–೩೮) ರೊಡನೆ ಹೋಲಿಸಬಹುದು.
೧೭೯. ಮತ್ತನಯನ–ನನ್ನ ಮಗನ, ಅರಸನನುಜನ–ನನ್ನ ರಾಜನ ತಮ್ಮ ದುಶ್ಶಾಸನನ, ಸತ್ತ–ಮರಣವನ್ನು ಹೊಂದಿದ, ಅೞಲಂ–ದುಃಖವನ್ನು, ನಿನ್ನೊಳ್–ನಿನ್ನಲ್ಲಿ, ಅಱಸಲೆಂದು– ಹುಡುಕಬೇಕೆಂದು, ಇರ್ದೆಂ–ಇದ್ದೆನು; ಬೆಳ್ಕುತ್ತು–ಹೆದರಿ, ಇರ್ದೆನಪ್ಪೊಡೆ–ಇದ್ದೆನಾದರೆ, ಏ ತೊದಳ್–ಏನು ಸುಳ್ಳು, ಇತ್ತಣ–ಇತ್ತ ಕಡೆಯ, ದಿನನಾಥಂ–ಸೂರ್ಯ, ಇತ್ತ–ಇತ್ತಕಡೆ, ಮೂಡುಗುಮಲ್ತೇ–ಹುಟ್ಟುತ್ತಾನೆಯಲ್ಲವೇ?
೧೮೦. ಕಸವರದ–ಚಿನ್ನದ, ಸವಿಯುಮಂ–ರುಚಿಯನ್ನೂ, ಭಯರಸಕದ ಸವಿಯು ಮಂ–ಭೀತಿಭಾವದ ರುಚಿಯನ್ನೂ, ಅದೆಂತು–ಅದು ಹೇಗೂ, ಆನಱಿಯದುದಂ–ನಾನು ತಿಳಿಯದುದನ್ನು, ವಸುಮತಿ–ಭೂಮಿಯು, ಲೋಕವು, ಅಱಿವುದು–ತಿಳಿಯುತ್ತದೆ; ನೀಂ– ನೀನು, ಪುರುಡಿಸಿ–ಮತ್ಸರಿಸಿ, ನುಡಿದೊಡೆ–ಆಡಿದರೆ, ನಿನ್ನ ನುಡಿದ ಮಾತು–ನೀನು ಹೇಳಿದ ಮಾತು, ಏಱುಗುಮೇ–ಏರುತ್ತದೆಯೇ? ಎಂದರೆ ವೃದ್ಧಿಯಾಗುತ್ತದೆಯೇ; ಕರ್ಣ ದಾನಶೂರ ನಾಗಿದ್ದುದರಿಂದ ತನ್ನ ಐಶ್ವರ್ಯದ ಸವಿಯನ್ನು ತಾನು ಅನುಭವಿಸಲಿಲ್ಲ. ಇತರರಿಗೆ ಕೊಡು ವುದರಲ್ಲಿಯೇ ಅವನಿಗೆ ಸಂತೋಷ; ಸ್ವಾರ್ಥಕ್ಕಾಗಿ ಅದನ್ನು ಬಳಸಲಿಲ್ಲ; ಹೀಗೆಯೇ ಅವನ ಶೂರತನಕ್ಕೆ ಭಯವು ಅಪರಿಚಿತವಾಗಿತ್ತು ಎಂದು ಪದ್ಯದ ತಾತ್ಪರ್ಯ. ಲೋಕಕ್ಕೆ ತಿಳಿದಿರುವ ಈ ವಿಷಯವನ್ನು ಅರ್ಜುನ ಕಡೆಗಣಿಸಿ ಮಾತನಾಡಿದರೆ ಅವನ ಮಾತಿಗೆ ಬೆಲೆ ಬರು ತ್ತದೆಯೆ?
೧೮೧. ಒಡಲುಂ ಪ್ರಾಣಮುಂ–ದೇಹವೂ ಪ್ರಾಣವೂ, ಎಂಬ ಇವು, ಕಿಡಲ್ ಆದುವು– ನಾಶವಾಗುವುದಕ್ಕೆ ಹುಟ್ಟಿದವು; ಜಸಂ–ಕೀರ್ತಿ, ಅದೊಂದೆ–ಅದೊಂದೇ, ಕಿಡದು– ಹಾಳಾಗದು; ಅದಂ–ಅದನ್ನು, ಆಂ–ನಾನು, ಬಲ್ವಿಡಿವಿಡಿದು–ಬಲವಾದ ಮುಷ್ಟಿಯಿಂದ ಹಿಡಿದುಕೊಂಡು, ನೆಗೞ್ದೆಂ–ನಡೆದೆನು; ಉೞಿದ–ಮಿಕ್ಕ, ಅೞಿವಡೆಮಾತಂ–ಹೀನವಾದ ಸುದ್ದಿಯನ್ನು, ಮಾಡಿ–ಹುಟ್ಟಿಸಿ, ನೀನೆ–ನೀನೇ, ಕೆಮ್ಮನೆ–ಸುಮ್ಮನೆ, ನುಡಿವಯ್–ಮಾತಾಡು ತ್ತೀಯೆ?
೧೮೨. ಪುಟ್ಟುವುದು–ಹುಟ್ಟುವುದು, ಬಿದಿವಸದಿಂದೆ–ದೈವವಶದಿಂದ; ಬಿದಿ–ವಿಧಿಯು; ಪುಟ್ಟಿಸುವಂ–ಹುಟ್ಟಿಸುತ್ತಾನೆ; ಪುಟ್ಟಿದಂದು–ಹುಟ್ಟಿದಾಗ, ಇವಂಗೆ–ಇವನಿಗೆ, ಬಿಯಂ– ವೆಚ್ಚ (ಐಶ್ವರ್ಯ), ಇದು; ಇವಂಗೆ–ಇವನಿಗೆ, ಒಳ್ಪು–ಮಂಗಳವು, ಇದು; ಇವಂಗೆ– ಇವನಿಗೆ, ವಿನೋದಂ–ಸಂತೋಷವು, ಇದು; ಇವಂಗೆ–ಇವನಿಗೆ, ಸಾವ ಪಾಂಗು–ಸಾಯುವ ರೀತಿ, ಇದು; ಇವಂಗೆ–ಇವನಿಗೆ, ಪಡೆಮಾತು–ಜನಜನಿತವಾದ ಮಾತು ಎಂದರೆ ಕೀರ್ತಿ ಇದು; ಪರಾಕ್ರಮಂ–ಪ್ರತಾಪವು, ಇದು; ಎಂಬುದಂ–ಎಂದು ಹೇಳುವುದನ್ನು, ಎಲ್ಲ ಮಾೞ್ಕೆಯಿಂ– ಎಲ್ಲ ರೀತಿಗಳಿಂದಲೂ, ಬಿದಿ–ದೈವ, ಸಮಕಟ್ಟಿ–ಏರ್ಪಡಿಸಿ, ಕೊಟ್ಟೊಡೆ–ಕೊಟ್ಟರೆ, ಎಡೆ ಯೊಳ್–ನಡುವೆ, ಕಿಡಿಸಲ್–ಕೆಡಿಸುವುದಕ್ಕಾಗಲಿ, ಕುಡಿಸಲ್–ಕೊಡಿಸುವುದಕ್ಕಾಗಲಿ, ಆರ್ ಸಮರ್ಥರ್–ಯಾರು ಶಕ್ತರು? ಈ ಪದ್ಯದಲ್ಲಿ ಕರ್ಣನ ಜೀವನ ಸಿದ್ಧಾಂತವನ್ನು ಪಂಪ ಮನೋಜ್ಞವಾಗಿ ನಿರೂಪಿಸಿದ್ದಾನೆ; ಮನುಷ್ಯನ ಆಗುಹೋಗುಗಳೆಲ್ಲ ದೈವಾಯತ್ತ; ಅವನು ಹುಟ್ಟುವಾಗಲೇ ಅವನ ಇತಿಮಿತಿಗಳನ್ನು ದೈವ ನಿರ್ಧರಿಸುತ್ತದೆ; ಅವನ್ನು ಕೆಡಿಸುವುದಕ್ಕಾ ಗಲಿ, ಇನ್ನೊಬ್ಬರಿಂದ ಪಡೆಯುವುದಾಗಲಿ ಸಾಧ್ಯವಿಲ್ಲ. ಇದು ದೈವವಾದ. ಕರ್ಣನ ಜೀವನಕ್ಕೆ ಈ ದೈವವಾದವನ್ನು ಅನ್ವಯಗೊಳಿಸಿ ಭಾವಿಸಿದರೆ ಅವನ ಬಾಳು ದಾರುಣವಾದ ಕರುಣ ಕಥೆಯೆಂಬುದು ವೇದ್ಯವಾಗುತ್ತದೆ. ಅದರಲ್ಲಿ ನಮ್ಮ ಅನುಕಂಪೆ ತುಂಬಿ ಹರಿಯುತ್ತದೆ.
೧೮೩. ಎಂದು–ಎಂದು ಹೇಳಿ, ಅಮ್ಮ–ಅಪ್ಪನೇ, ಈ ಬಾಯ್ವಾತಿನೊಳ್–ಈ ಬಾಯ್ಮಾತುಗಳಲ್ಲಿ, ಏವಂದಪುದು–ಏನು ಬರುತ್ತದೆ ಎಂದರೆ ಏನು ಪ್ರಯೋಜನ? ಅಣ್ಮಿ– ಪೌರುಷವನ್ನು ತೋರಿಸಿ, ಕಾದುಕೊಳ್–(ನಿನ್ನನ್ನು ನೀನು) ರಕ್ಷಿಸಿಕೋ; ಎನುತಂ–ಎನ್ನುತ್ತ, ಭೋರೆಂದು–ಭೋರೆಂದು ಶಬ್ದ ಮಾಡುತ್ತ, ಇಸೆ–ಬಾಣ ಪ್ರಯೋಗ ಮಾಡಲು, ಪೊಸಮಸೆ ಯಂಬಿನ–ಹೊಸದಾದ ಮಸೆತವನ್ನುಳ್ಳ ಬಾಣಗಳ, ತಂದಲ–ಧಾರೆಗಳ, ಬೆಳ್ಸರಿಗಳ್–ಬಿಳಿಯ ಮಳೆಗಳು, ನರನಂ–ಅರ್ಜುನನನ್ನು, ಕವಿದುವು–ಮುಚ್ಚಿದುವು.
೧೮೪. ದೊಣೆಗಳಿಂ–ಬತ್ತಳಿಕೆಗಳಿಂದ, ಉರ್ಚುವ–ಬಾಣಗಳನ್ನು ಸೆಳೆದುಕೊಳ್ಳುವ, ತಿರು ವಾಯ್ವೊಣರ್ಚಿ–ಬಿಲ್ಲಿನ ಹೆದೆಯ ಬಾಯಿಗೆ ಸೇರಿಸಿ, ತೆಗೆನೆಱೆವ–ಕಿವಿವರೆಗೂ ಎಳೆಯುವ, ಬೇಗಮಂ–ವೇಗವನ್ನು, ಕಾಣದೆ–ನೋಡದೆ, ದೇವಗಣಂ–ದೇವತೆಗಳ ಸಮೂಹ, ಇನಸು ತನಾ–ಕರ್ಣನ, ಕೂರ್ಗಣೆಗಳ–ಹರಿತವಾದ ಬಾಣಗಳ, ಪಂದರನೆ–ಹಂದರವನ್ನೇ, ನಭೋಂ ಗಣದೊಳ್–ಆಕಾಶ ಪ್ರದೇಶದಲ್ಲಿ, ಕಂಡತ್ತು–ನೋಡಿತು.
೧೮೫. ಪಾತಂ–ಬೀಳುವುದು, ಲಕ್ಷ್ಯಂ–ಗುರಿತಾಕುವುದು, ಶೀಘ್ರಂ–ವೇಗತ್ವ, ಘಾತಂ– ಸಂಘಟನೆ, ಬಹುವೇಗಂ–ಅತಿಶಯವೇಗ, ಎಂಬ, ಇವು, ಅಯ್ದು–ಐದು, ಏಸಿನೊಳಂ–ಬಾಣ ಪ್ರಯೋಗಗಳಲ್ಲಿಯೂ, ಅಂತು–ಹಾಗೆ, ಈತನ ದೊರೆಯಿಲ್ಲ–ಈತನ ಸಮಾನವಿಲ್ಲ, ಎಂದೂ, ಆತನ–ಕರ್ಣನ, ಬಿಲ್ಬಲ್ಮೆ–ಬಿಲ್ವಿದ್ಯೆಯ ಕೌಶಲ, ಅಂಬರತಲದೊಳ್–ಆಕಾಶ ದಲ್ಲಿ, ಸುರರಿಂ–ದೇವತೆಗಳಿಂದ, ಎನಿಸಿದುದು–ಎನ್ನಿಸಿತು, ಹೇಳಿಸಿತು. ಈ ಪದ್ಯದಲ್ಲಿರುವ ಪಾತಂ ಮುಂತಾದ ಐದು ಶಬ್ದಗಳು ಧನುರ್ವೇದದ ಪರಿಭಾಷೆಯಂತಿವೆ; ಅವುಗಳ ಅರ್ಥವನ್ನು ಆ ಶಾಸ್ತ್ರವನ್ನು ನೋಡಿ ಹೇಳಬೇಕು; ಇಲ್ಲಿರುವುದು ಸಾಮಾನ್ಯಾರ್ಥಗಳು.
೧೮೬. ಶರಸಂಧಾನಾಕರ್ಷಣ ಹರಣಾದಿ–ಬಾಣಗಳನ್ನು ಹೂಡುವುದು ಎಳೆಯುವುದು, ಹರಣವೇ ಮೊದಲಾದ, ವಿಶೇ….ತಿಯಂ–ವಿಶೇಷ ವಿವಿಧ ಸಂಕಲ್ಪಗಳ ಕಲಾಪ್ರೌಢಿಮೆ ಯನ್ನು, ಅರಿಗಂ–ಅರ್ಜುನ, ತರತರದೊಳೆ–ಸಾಲುಸಾಲಾಗಿಯೆ, ಮುಳಿದು–ಕೆರಳಿ, ಇಸುವ– ಪ್ರಯೋಗಿಸುವ, ಶರನಿಕರಂಗಳ್–ಬಾಣಗಳ ಸಮೂಹಗಳು, ಮೆಱೆದುದು–ಪ್ರಕಟಿಸಿದುವು.
೧೮೭. ಮುನಿದು–ಕೋಪಿಸಿ, ಇಸುವ–ಪ್ರಯೋಗಿಸುವ, ಇನಜನ–ಕರ್ಣನ, ಸರಲಂ– ಬಾಣಗಳನ್ನು, ಮೊನೆಯಿಂ ಗಱಿವರೆಗಂ–ತುದಿಯಿಂದ ಹಿಡಿದು ಗರಿಗಳವರೆಗೆ, ಎಯ್ದೆ ಸೀಳ್ದುವು–ಚೆನ್ನಾಗಿ ಸೀಳಿದುವು, ಕಣೆಗಳ್–ಬಾಣಗಳು, ಘನಪಥಮಂ–ಆಕಾಶವನ್ನು, ಅಳುರ್ದು–ವ್ಯಾಪಿಸಿ, ಸುಟ್ಟಪುವು–ಸುಡುತ್ತವೆ, ಎನೆ–ಎನ್ನಲು, ಕೋಲಪೊಗೆಯುಂ–ಬಾಣಗಳ ಹೊಗೆಯೂ, ಅಂಬಿನ–ಬಾಣಗಳ, ಕಿಡಿಯುಂ–ಕಿಡಿಗಳೂ, ನೆಗೆದುವು–ಮೇಲಕ್ಕೆದ್ದವು.
೧೮೮. ಕೂಡೆ–ಕೂಡಲೇ, ಕಡಿವ–ಕತ್ತರಿಸುವ, ಅಂಬಂ–ಬಾಣಗಳನ್ನು, ಅಂಬು– ಬಾಣಗಳು, ಎಡೆಮಾಡದೆ–ಅವಕಾಶವನ್ನು ಕೊಡದೆ, ಬಿಡದೆ–ತಪ್ಪದೆ, ಒರಸೆ–ಉಜ್ಜಲು, ಪುಟ್ಟಿದ–ಹುಟ್ಟಿದ, ಉರಿಗಳ್–ಜ್ವಾಲೆಗಳು, ಅಗುರ್ವಂ ಮಾಡೆ–ಭಯವನ್ನುಂಟು ಮಾಡಲು, ಕವಿದು–ಆವರಿಸಿ, ಅಳುರ್ವ–ಸುಡುವ, ಬೆಂಕಿಯೊಳ್–ಉರಿಯಲ್ಲಿ, ಅಮರ ಸುಂದರಿಯರ್ಕಳ್–ದೇವ ಸುಂದರಿಯರು, ಮೊಗಮಂ–ತಮ್ಮ ಮುಖಗಳನ್ನು, ಆಡಿಸಿದರ್– ಅತ್ತ ಇತ್ತ ಅಲುಗಾಡಿಸಿದರು.
೧೮೯. ಮೊನೆಯಂಬಿನ–ಮೊನಚಾದ ಬಾಣಗಳ, ತಂದಲೊಳ್–ಮಳೆಯಲ್ಲಿ, ಅರ್ಜುನನಂ ಕರ್ಣನುಮಂ–ಅರ್ಜುನನನ್ನೂ ಕರ್ಣನನ್ನೂ, ಇನಿಸುಕಾಣದೆ–ಸ್ವಲ್ಪವೂ ನೋಡದೆ, ಅಣಂ–ಸ್ವಲ್ಪವೂ, ಮೆಲ್ಲನೆ–ಸದ್ದಿಲ್ಲದೆ, ಬಗಿದುನೋಡಿ–ತೋಡಿ ನೋಡಿ, ಕುಡು ಮಿಂಚಿನಂತೆ–ವಕ್ರವಾದ ಮಿಂಚಿನಂತೆ, ಮೇಗೊಗೆದು–ಮೇಲಕ್ಕೆ ನೆಗೆದು, ನಾರದಂ– ನಾರದನು, ನರ್ತಿಸಿದಂ–ಕುಣಿದನು.
೧೯೦. ಕವಿವ ಶರಾಳಿಯಂ–ಮುಸುರುವ ಬಾಣಗಳ ಸಮೂಹವನ್ನು (ಕರ್ಣನ), ನಿಜಶರಾಳಿಗಳ್–ತನ್ನ ಬಾಣಾವಳಿಗಳು, ಅೞ್ವಿ–ಆಕ್ರಮಿಸಿ, ತೆರಳ್ದಿ–ಓಡಿಸಿ, ತೂಳ್ದಿ–ತಳ್ಳಿ, ಮಾರ್ಕವಿದು–ಪ್ರತಿಯಾಗಿ ಮುಚ್ಚಿ, ಪಳಂಚಿ–ತಗುಲಿ, ಹಾಯ್ದು–ನುಗ್ಗಿ, ಒರಸೆ–ಉಜ್ಜಲು, ಪುಟ್ಟಿದ ಕಿರ್ಚು–ಹುಟ್ಟಿದ ಉರಿ, ಅಳರ್ದು–ವ್ಯಾಪಿಸಿ, ಎೞ್ದು–ಮೇಲಕ್ಕೆ ನೆಗೆದು, ಅಜಾಂಡದ–ಬ್ರಹ್ಮಾಂಡದ, ಅಂತುವರಂ–ಕೊನೆಯವರೆಗೂ, ಅಗುರ್ವು–ಭಯವು, ಪರ್ವಿ–ಹಬ್ಬುತ್ತಿರಲು, ದಳ್ಳುರಿ–ಜ್ವಾಲೆ, ಪೆರ್ಚಿ–ಅಧಿಕವಾಗಿ, ಕರ–ವಿಶೇಷವಾಗಿ, ಅರ್ವಿಸೆ– ಸುಡಲು, ಕಂಡು–ನೋಡಿ, ಗುಣಾರ್ಣವನ–ಅರ್ಜುನನ, ಅಸ್ತ್ರಕೌಶಲಂ–ಬಾಣಪಾಂಡಿತ್ಯ, ಖಾಂಡವವನದಾಹಮಂ–ಖಾಂಡವ ವನದ ದಹನವನ್ನು, ನೆನೆಯಿಸಿತ್ತು–ನೆನೆಯಿಸಿತು, ನೆನಪಿಗೆ ತಂದುಕೊಟ್ಟಿತು.
ವಚನ : ಈ ಅಂಬುಗಳೊಳೇಂ–ಈ ಬಾಣಗಳಲ್ಲೇನು? ತೀರ್ದುಪುದು–ಮುಗಿಯು ತ್ತದೆ; ನುಡಿವಳಿಯಂ–ಭಾಷೆಯನ್ನು; ಪುರಿಗಣೆಯ–ದಿವ್ಯಾಸ್ತ್ರದ (?), ದೊಣೆಗೆ–ಬತ್ತಳಿಕೆಗೆ;
೧೯೧. ಮುಳಿಸಂ ನೆಱಪಲ್ಕೆ–ಕೋಪವನ್ನು ತೀರಿಸಿಕೊಳ್ಳುವುದಕ್ಕೆ, ವಿಸ್ಫುಲಿಂಗ ಪಿಂಗಲಿತ ಭುವನ ಭವನಾ ಭೋಗಂ: ವಿಸ್ಫುಲಿಂಗ–ಕಿಡಿಗಳಿಂದ, ಪಿಂಗಲಿತ–ಕೆಂಪು ಕಪ್ಪು ಮಿಶ್ರವಾದ ಕಾಂತಿಯನ್ನುಳ್ಳ, ಭವನ–ಪ್ರಪಂಚವೆಂಬ ಮನೆಯ, ಆಭೋಗಂ–ವಿಸ್ತಾರ ವನ್ನುಳ್ಳ, ಅರ್ಧಾವಲೀಕ ಶರರೂಪದಿಂದೆ–ಅರ್ಧಾವಲೀಕವೆಂಬ ಬಾಣದ ಆಕಾರದಿಂದ, ದೊಣೆಯಿಂದ–ಬತ್ತಳಿಕೆಯಿಂದ, ತಾಂ–ತಾನು, ಪೊಳೆದು–ಹೊಳೆದು, ಅಥವಾ ಹೊರಳಿ, ಅಸುಂಗೊಳೆ–ಪ್ರಾಣಾಪಹಾರ ಮಾಡಲು, ಕೆಯ್ಗೆಬರೆ–ಕೈಗೆ ಬರಲು.
೧೯೨. ಅದಂ–ಅದನ್ನು, ತಿರಿಪಿದೊಡೆ–ತಿರುಗಿಸಿದರೆ, ಇಳೆ–ಭೂಮಿ, ತಿಱ್ರನೆ– ಗಿರ್ರೆಂದು, ತಿರಿದುದು–ತಿರುಗಿತು; ತಿರುವಾಯೊಳಿಡೆ–ಅದನ್ನು ಬಿಲ್ಲಿನ ಹೆದೆಗೆ ಸೇರಿಸಲು, ಸುರರ್–ದೇವತೆಗಳು; ಮೊಱೆಯಿಟ್ಟರ್–ಗಟ್ಟಿಯಾಗಿ ಕೂಗಿಕೊಂಡರು; ಭರದೆ–ವೇಗ ದಿಂದ, ತೆಗೆನೆಱೆಯೆ–ಬಿಲ್ಲ ಹಗ್ಗವನ್ನು ಕಿವಿವರೆಗೆ ಸೆಳೆಯಲು, ಮೆಯ್ದೆಗೆದ–ಮೈಯಿಳಿದ ಎಂದರೆ ಗರ್ಭಸ್ರಾವವಾದ, ಅರವಿಂದೋದ್ಭವನಿಂ–ಬ್ರಹ್ಮನಿಂದ, ಆ ಬ್ರಹ್ಮಾಂಡಂ–ಆ ಬ್ರಹ್ಮಾಂಡವು, ಒಗೆದುದು–ಹುಟ್ಟಿತು.
೧೯೩. ಅದಂ–ಆ ರೌದ್ರಶರವನ್ನು, ಕರ್ಣಂ–ಕರ್ಣನು, ತುಡೆ–ಹೂಡಲು, ಸುಯೋಧನನ ಸಕಲ ರಾಜ್ಯಶ್ರೀಯುಂ–ದುರ್ಯೋಧನನ ಸಮಸ್ತ ರಾಜ್ಯಲಕ್ಷ್ಮಿಯೂ, ನಡನಡನಡುಗಿ– ನಡುಗಿ ನಡುಗಿ ಎಂದರೆ ವಿಶೇಷವಾಗಿ ಹೆದರಿ, ಸಡಿಲಿಸಿದ–ಸಡಿಲವಾದ, ತೋಳಂ–ತೋಳನ್ನು, ಸಡಿಲಿಸಲ್–ಪೂರ್ತಿ ಸಡಿಲಿಸಲು, ಆಗಳ್–ಆಗ, ಅಣ್ಮಳೆ–ಪ್ರಯತ್ನ ಪಡಳೆ! ದಲ್–ದಿಟ ವಾಗಿಯೂ, ಅದಱ–ಆ ಬಾಣದ, ಅಗುರ್ವು–ಭೀಕರತೆಯು, ಏಂ ಪಿರಿದೋ–ಹಿರಿದೋ!
೧೯೪. ಆ ಕರ್ಣಂ–ಆ ಕರ್ಣನು, ಆಕರ್ಣಾಂತಂ ತೆಗೆ ನೆಱೆದು–ಕಿವಿವರೆಗೆ ಬಾಣವನ್ನು ಸೆಳೆದು, ಇಸಲ್ಕೆ–ಪ್ರಯೋಗಿಸಲು, ಬಗೆದೊಡೆ–ಯೋಚಿಸದರೆ, ಉಡುಗು ಉಡುಗು– ಸಂಕೋಚ ಮಾಡು ಸಂಕೋಚ ಮಾಡು ಎಂದರೆ ಹಿಂದಕ್ಕೆ ತೆಗೆದುಕೋ, ಇಸಲ್–ಪ್ರಯೋಗಿಸ ಬೇಡ; ಈ ಭೀಕರ ಬಾಣಮಂ–ಈ ಭಯಂಕರವಾದ ಬಾಣವನ್ನು, ಆದ ವಿವೇಕದೆ– ಉಂಟಾದ ವಿವೇಕದಿಂದ, ಉರದೆಡೆಗೆ ತುಡದೆ–ಎದೆಯ ಪ್ರದೇಶಕ್ಕೆ ಗುರಿಯಿಟ್ಟು ಹೂಡದೆ, ತಲೆಗೆಯೆ–ತಲೆಗೇ, ತುಡುವಾ–ತೊಡುತ್ತೀಯಾ, ಹೂಡುತ್ತೀಯಾ?
೧೯೫. ಉರದೆಡೆಗೆ ತುಡೆ–ಎದೆಗೆ ಸಂಧಾನ ಮಾಡಲು, ಜಯಶ್ರೀಗೆ–ಜಯಲಕ್ಷ್ಮಿಗೆ, ಇರಲ್–ಇರಲು, ಎಡೆ–ಸ್ಥಳವು, ನಿನಗಪ್ಪುದು–ನಿನಗಾಗುತ್ತದೆ; ಆ ಸುಯೋಧನನೊಳ್– ಆ ದುರ್ಯೋಧನನಲ್ಲಿ, ಶ್ರೀಗೆ–ರಾಜ್ಯಲಕ್ಷ್ಮಿಗೆ, ಇರಲು, ಎಡೆಯಪ್ಪುದು–ಅವಕಾಶವಾಗು ತ್ತದೆ; ಮೇಣ್–ಅಥವಾ, ದಿನಕರಸುತ–ಕರ್ಣನೇ, ತೊದಳುಂಟೆ–ಸುಳ್ಳಾಗುವುದೇ, ಬಗೆಯ ಸಂದೆಯಮುಂಟೇ–ಮನದ ಸಂಶಯವಿದೆಯೇ?
೧೯೬. ಎನಿತುಂ–ಎಷ್ಟೂ, ಶಲ್ಯನ ಪೇೞ್ದಪಾಂಗೆ–ಶಲ್ಯನು ಹೇಳಿದ ರೀತಿಯೇ ಎಂದರೆ ಎಲ್ಲವೂ ಶಲ್ಯನು ಹೇಳಿದ ಹಾಗೆಯೇ, ಸರಿ; ತೊದಳಿಲ್ಲ–ಸುಳ್ಳಿಲ್ಲ; ಅಂತಾದೊಡೆ–ಹಾಗಾ ದರೆ ಎಂದರೆ ಶಲ್ಯನು ಹೇಳಿದಂತೆ ಮಾಡಿದರೆ, ಆ ಶಕ್ರಪುತ್ರನಂ–ಆ ಇಂದ್ರಸೂನು ಅರ್ಜುನನನ್ನು, ಆಂ–ನಾನು, ಕೊಂದೊಡೆ–ಕೊಂದರೆ, ಧರ್ಮಪುತ್ರನೞಿಗುಂ–ಧರ್ಮರಾಜನು ಸಾಯುವನು; ತಾಯೆಂದೆ–ತಾಯಿ ಎಂದೇ ಹೇಳಿಕೊಂಡು, ಮುಂ–ಮೊದಲು, ಕೊಂತಿ– ಕುಂತಿದೇವಿಯು, ಬಂದು, ಎನ್ನಂ–ನನ್ನನ್ನು, ಇನಿಸಂ–ಇಷ್ಟನ್ನು, ಪ್ರಾರ್ಥಿಸಿ–ಬೇಡಿ, ಪೋದಳ್–ಹೋದಳು; ಅದಂ–ಅದನ್ನು ಎಂದರೆ ಶಲ್ಯನ ಮಾತನ್ನು, ಆಂ–ನಾನು, ಮಾಣ್ದಿರ್ದೆಂ–ಬಿಟ್ಟಿದ್ದೇನೆ; ಇರ್ದಾಗಳ್–ಇದ್ದಾಗ, ಒಳ್ಪಿನ–ಒಳ್ಳೆಯತನದ, ಪೆರ್ಮಾತಿನ– ಹೆಮ್ಮಾತಿನ, ದೊಡ್ಡ ಮಾತಿನ, ನನ್ನಿ–ಸತ್ಯವು, ಬನ್ನದೊಳ್–ನಾಶದಲ್ಲಿ, ಒಡಂಬಟ್ಟು– ಒಡಗೂಡಿ, ಒಂದಾಗಿ ಸೇರಿ, ಇರ್ಪುದಂ–ಇರುವುದನ್ನು, ಮಾೞ್ಪೆನೇ–ಮಾಡುತ್ತೇನೆಯೇ? ಇಲ್ಲ. ನನ್ನ ಸತ್ಯವಾಕ್ಯಕ್ಕೆ ಭಂಗವುಂಟಾಗುವಂತೆ ನಾನು ಮಾಡಲಾರೆನು ಎಂಬ ಭಾವ.
೧೯೭. ತನಗೆ, ಉಱುವಂತುಟಾಗೆ–ಇರುವಷ್ಟಾಗಲು, ಕಡುನನ್ನಿಯ–ತೀವ್ರ ಸತ್ಯದ, ಪೆಂಪುಮಂ–ಆಧಿಕ್ಯವನ್ನು, ಆಂತು–ಹೊಂದಿ, ಎಂದರೆ ತನಗೆ ಎಷ್ಟು ಸಾಧ್ಯವೋ ಅಷ್ಟು ಸತ್ಯದ ಹಿರಿಮೆಯನ್ನು ಹೊಂದಿ, ಭೂಭುಜರ್–ರಾಜರು, ತನಗೆ, ಇನಿತು–ಒಂದಿಷ್ಟು, ಊನಮಾಗೆ– ಕಡಿಮೆಯಾಗಲು, ಎಂದರೆ ಅವಜ್ಞೆಗೆ ಈಡಾಗಲು, ಮೆಱೆದ–ಪ್ರದರ್ಶಿಸಿದ, ಆ ಭುಜವೀರ್ಯ ಮಂ–ಆ ತೋಳ ಬಲವನ್ನು, ಆಂತು–ಹೊಂದಿ, ಮಾಣ್ಬುದೇಂ–ತಡಮಾಡುವುದೇನು? ತನಗುಱುವ–ತನಗೆ ಸೇರಿರುವ, ಒಂದು, ನನ್ನಿಯನೆ–ಸತ್ಯವನ್ನೆ, ಪೂಣ್ದು–ಮೇಲೆ ಹೊತ್ತುಕೊಂಡು ಎಂದರೆ ವಹಿಸಿಕೊಂಡು, ಪಿರಿದುಂ ಬಲಸ್ಥನಪ್ಪನನೆ–ಹಿರಿದು ಸೈನ್ಯದಿಂದ ಕೂಡಿದವನನ್ನೇ ಅಥವಾ ಅಧಿಕ ಬಲಶಾಲಿಯಾದವನನ್ನೇ, ಕಱುತ್ತು–ಕೋಪಿಸಿ, ಕಾದಿ– ಯುದ್ಧಮಾಡಿ, ನೆಗೞ್ದಾತನೆ–ಮಾಡಿದವನೆ ಎಂದರೆ ಮಾಡಿ ತೋರಿಸಿದವನೇ, ನನ್ನಿಯ– ಸತ್ಯದ, ಬೀರದ–ಶೌರ್ಯದ, ಆಗರಂ–ಮನೆ, ವಾಸಸ್ಥಾನ.
೧೯೮. ಪಾಂಡವರ್–ಪಾಂಡವರು, ಎನ್ನಂ–ನನ್ನನ್ನು, ಇನ್ನು–ಇನ್ನೂ, ಅಱಿಯರ್– ತಿಳಿಯರು, ನೀಂ–ನೀವು, ಅಱಿಪಲ್–ತಿಳಿಸಬೇಡಿರಿ, ಎಂದು, ಚಕ್ರಿಗೆ–ಶ್ರೀಕೃಷ್ಣನಿಗೆ, ಆಂ– ನಾನು, ಅಱಿಪಿರ್ದೆಂ–ತಿಳಿಸಿದ್ದೆನು; ಪೃಥೆಯುಂ–ಕುಂತಿಯೂ, ಮದೀಯ ಸುತರೊಳ್– ನನ್ನ ಮಕ್ಕಳಲ್ಲಿ, ವೈಕರ್ತನಂ–ಸೂರ್ಯನ ಮಗ ಕರ್ಣ, ನನ್ನಿಯಂ–ಸತ್ಯವನ್ನು, ನಿಱಿಸಲ್ಕೆ– ಸ್ಥಾಪಿಸುವುದಕ್ಕೆ, ಅಮೋಘಂ–ವ್ಯರ್ಥವಲ್ಲದೆ, ಆರ್ಕುಂ–ಸಮರ್ಥನಾಗುತ್ತಾನೆ, ಎಂದು, ಮನ ದೊಳ್–ಮನಸ್ಸಿನಲ್ಲಿ, ನಂಬಿರ್ದಳ್–ನಂಬಿದ್ದಾಳೆ; ಇಂ–ಇನ್ನು, ಪೆಂಪು–ಹಿರಿಮೆಯು, ಎಱಕಂಬೆತ್ತಿರೆ–ಎರಕ ಹೊಯ್ದಿರಲು ಅಥವಾ ಪ್ರೀತಿಯುಕ್ತವಾಗಿರಲು, ಎನ್ನ ನುಡಿಯಂ– ನನ್ನ ಭಾಷೆಯನ್ನು, ಕೆಯ್ಕೊಂಡ–ವಹಿಸಿಕೊಂಡ, ಕಟ್ಟಾಯಮಂ–ತೀವ್ರ ಸಾಮರ್ಥ್ಯವನ್ನೂ, ಕಾವೆಂ–ರಕ್ಷಿಸುತ್ತೇನೆ, ಕಾಪಾಡುತ್ತೇನೆ.
೧೯೯. ಎಂಬುದನೆ–ಎನ್ನುವುದನ್ನೇ, ಬಗೆದು–ಆಲೋಚಿಸಿ, ಪೆಱತಂ–ಬೇರೆ ಯಾವುದನ್ನೂ, ಅಣಂ–ಸ್ವಲ್ಪವೂ, ಬಗೆಯದೆ–ಭಾವಿಸದೆ, ಮದ್ರಪತಿಯಂ–ಶಲ್ಯ ರಾಜನನ್ನು, ಎಂದಂ–ಕುರಿತು ಹೇಳಿದನು; ಕರ್ಣಂ–ಕರ್ಣನು, ಮುಂತೊಟ್ಟ–ಮೊದಲು ಗುರಿಯಿಟ್ಟು ಹೂಡಿದ, ಅಂಬಂ–ಬಾಣವನ್ನು, ಅದಂ–ಅದನ್ನು, ಉಗಿದು–ಕಿತ್ತು, ಭಯದಿಂ–ಹೆದರಿಕೆ ಯಿಂದ, ಕುಂದಿಸಿದಂ–ಕುಗ್ಗಿಸಿದನು, ಎಂದು ಲೋಕಂ–ಜನವು, ನಗದೇ–ನಗುವುದಿಲ್ಲವೆ?
೨೦೦. ಉಡುಗುಡುಗುಡುಗೆಂದಿಸೆ–ಕುಗ್ಗಿಸು ಕುಗ್ಗಿಸು ಕುಗ್ಗಿಸು ಎಂದು ಪ್ರಯೋಗಿ ಸಲು, ಬಱಸಿಡಿಲ್–ಬರಸಿಡಿಲು, ಎಱಪಂತೆ–ಎರಗುವ ಹಾಗೆ ಎಂದರೆ ಅಪ್ಪಳಿಸುವಂತೆ, ಎಱಪ–ಹೊಡೆಯುವ, ಸರಲಬರವಂ–ಬಾಣವು ಬರುವುದನ್ನು, ಕಂಡು–ನೋಡಿ, ಆಗಡೆ– ಆಗಲೇ, ಚಕ್ರಿ–ಕೃಷ್ಣನು, ನರರಥಮಂ–ಅರ್ಜುನನ ರಥವನ್ನು, ನೆಲನೊಳ್–ನೆಲದಲ್ಲಿ, ಎಣ್ಬೆರಲ್ ಅಡಂಗೆ–ಎಂಟು ಬೆರಳಷ್ಟು ಕುಸಿಯುವ ಹಾಗೆ, ನಿಪುಣತೆಯಿಂ–ಚಮತ್ಕಾರ ದಿಂದ, ಒತ್ತಿದಂ–ಅಮುಕಿದನು.
೨೦೧. ಒತ್ತುವುದಂ–ಅಮುಕುತ್ತಲು, ಶರ–ಬಾಣ, ಇರದೆ–ನಿಲ್ಲದೆ, ಎಯ್ದುತ್ತೆ–ಹತ್ತಿರಕ್ಕೆ ಬರುತ್ತಾ, ಕಿರೀಟಿಯ–ಅರ್ಜುನನ, ಕಿರೀಟಮಂ–ಕಿರೀಟವನ್ನು, ಕೊಱೆದೊಡೆ–ಕತ್ತರಿಸಿದರೆ, ಭಯಂ–ಭೀತಿಯು, ಇಂದ್ರನಂ–ಇಂದ್ರನನ್ನು, ಪರ್ವಿತ್ತು–ವ್ಯಾಪಿಸಿತು; ಆಗಳ್–ಆಗ, ಆ ಸಂಕಟದೊಳ್–ಆ ಸಂಕಷ್ಟದಲ್ಲಿ, ಅೞಲ್–ದುಃಖ, ಈಶ್ವರನಂ–ಶಿವನನ್ನು, ಮುತ್ತಿತ್ತು– ಆವರಿಸಿಕೊಂಡಿತು.
೨೦೨. ಒಳಗಱಿಯದೆ–ಒಳಗನ್ನು ತಿಳಿಯದೆ, ಎಂದರೆ ರಹಸ್ಯವು ತಿಳಿಯದೆ, ಕೌರವ ಬಳಜಳನಿಧಿ–ಕೌರವ ಸೇನಾ ಸಮುದ್ರವು, ಬೊಬ್ಬಿಱಿದು–ಬೊಬ್ಬೆಯಿಟ್ಟು ಕೂಗಿ ಕೊಳ್ಳುತ್ತಾ, ಮೇಲುದಂ–ಉತ್ತರೀಯಗಳನ್ನು, ಬೀಸಿದೊಡೆ–ಬೀಸಿದರೆ, ಉಚ್ಚಳಿಸಿದ–ಮೇಲಕ್ಕೆ ನೆಗೆದ, ಮಕುಟದ–ಕಿರೀಟದ, ಮಣಿಗಳ–ರತ್ನಗಳ, ಪೊಳೆಪುಗಳಿಂದೆ–ಪ್ರಕಾಶದಿಂದ, ಎಂಟುಂ ದೆಸೆಯೊಳ್–ಎಂಟು ದಿಕ್ಕುಗಳಲ್ಲೂ, ಉಳ್ಕಂ ಎೞ್ದುವು–ಉಲ್ಕಾಪಾತಗಳು ಆವಿರ್ಭವಿಸಿ ದುವು.
ವಚನ : ರುಂದ್ರ–ವಿಸ್ತಾರವಾದ; ರತ್ನಕೂಟಾಗ್ರ–ರತ್ನಮಯವಾದ ಶಿಖರದ ತುದಿ; ಅರಾತಿ ಶಾತ ಶರದಿಂ–ಶತ್ರುವಿನ ಹರಿತವಾದ ಬಾಣಗಳಿಂದ; ಅಳಿ ನೀಲೋಜ್ವಳ–ದುಂಬಿ ಗಳ ಕಪ್ಪು ಬಣ್ಣದಂತೆ ಪ್ರಕಾಶಮಾನವಾದ; ಕುಂತಳಂಗಳ್–ಕೂದಲುಗಳು; ಪರಕಲಿಸಿ– ಕೆದರಿ, ಚೆದರಿ; ಪೊಱಮುಯ್ವನ್–ಹೆಗಲ ಹೊರ ಭಾಗವನ್ನು, ಅಳ್ಳಿಱಿಯೆ–ಚಲಿಸುತ್ತಾ ಸ್ಪರ್ಶಿಸಲು, ಪಚ್ಚು ಗಂಟಿಕ್ಕಿ–ಎರಡು ವಿಭಾಗದ ಗಂಟನ್ನು ಹಾಕಿ; ಗಾಂಡೀವಧನ್ವಂ– ಅರ್ಜುನ.
೨೦೩. ಪುರಿಗಣೆಯಪ್ಪ–ದಿವ್ಯಾಸ್ತ್ರವಾಗಿರು (?); ಕಾರಣದಿಂ–ಕಾರಣದಿಂದ, ಅಂತು– ಹಾಗೆ, ಅದು–ಆ ರೌದ್ರಶರವು, ತಪ್ಪಿದೆಂ–ತಪ್ಪು ಮಾಡಿದೆನು, ಎಂದು, ನೊಂದು–ವ್ಯಥೆ ಪಟ್ಟು, ಪಲ್ಮೊರೆದು–ಹಲ್ಲನ್ನು ಉಜ್ಜಿ ಶಬ್ದ ಮಾಡುತ್ತಾ, ಅಹಿರೂಪದಿಂ–ಸರ್ಪಾಕಾರ ದಿಂದ, ಮಗುೞ್ದು–ಹಿಂತಿರುಗಿ, ಇನನಂದನನಲ್ಲಿಗೆ–ಕರ್ಣನ ಬಳಿಗೆ, ಬಂದು, ಎನ್ನ–ನನ್ನನ್ನು, ಅಂತರಿಸದೆ–ನಡುವೆ ಇಡದೆ, ಎಡೆಮಡಗದೆ, ತೊಟ್ಟು–ಬಿಲ್ಲಿನಲ್ಲಿ ಹೂಡಿ, ಬೇಗಂ– ಬೇಗನೆ, ಇಸು–ಪ್ರಯೋಗಿಸು; ರಸಾಂಬರಧರಣೀ ವಿಭಾಗದೊಳಗೆ–ಪಾತಾಳ ಆಕಾಶ ಭೂಮಿ ಗಳ ಭಾಗಗಳಲ್ಲಿ, ಆವೆಡೆವೊಕ್ಕೊಡಂ–ಯಾವ ಸ್ಥಳದಲ್ಲಿ ಹೊಕ್ಕಿದ್ದರೂ, ಅಂಗನಾಯಕಾ–ಕರ್ಣನೆ, ವೈರಿಯಂ–ಹಗೆಯನ್ನು, ಈಗಳೆ–ಈಗಲೇ, ಕೊಂದಪೆಂ–ಕೊಲ್ಲುವೆನು.
ವಚನ : ನಿನಾರ್ಗೆ–ನೀನು ಯಾರು ಎಂದರೆ ಯಾರಿಗೆ ಸಂಬಂಧಪಟ್ಟವನು? ಏನೆಂಬೆ– ಹೆಸರೇನು; ಎನ್ನದೊಣೆಯಂ–ನನ್ನ ಬತ್ತಳಿಕೆಯನ್ನು;
೨೦೪. ಶರರೂಪದೊಳಿರೆ–ಬಾಣದ ಆಕಾರದಲ್ಲಿರಲು, ನಿನ್ನಂ–ನಿನ್ನನ್ನು, ಆಂ–ನಾನು, ಶರಮೆಂದು–ಬಾಣವೆಂದು, ತೊಟ್ಟೆಂ–ಹೂಡಿದೆನು; ಅಱಿದು–ತಿಳಿದು, ನಿನ್ನಂ–ನಿನ್ನನ್ನು, ತುಡುವೆನೆ–ಹೂಡುತ್ತೇನೆಯೆ? ನೆರದೊಳ್–ಸಹಾಯದಲ್ಲಿ, ಕೊಲ್ವಂತೆ–ಕೊಲ್ಲುವಷ್ಟು, ನನಗೆ, ಗಾಂಡೀವಧನ್ವಂ–ಅರ್ಜುನನು, ಏನರಿಯನೆ–ಏನು ಅಸಾಧ್ಯನೇ? ಎಂಬುದುಂ– ಎನ್ನುತ್ತಲು, ಆಗಳ್–ಆಗ.
೨೦೫. ನೀಂ–ನೀನು, ನಿನ್ನ, ಪಗೆಯಂ–ದ್ವೇಷವನ್ನು, ಆರ್ಪೊಡೆ–ಸಮರ್ಥನಾದರೆ, ಅದಂ–ಅದನ್ನು, ನೆಱಪು–ಪೂರ್ಣಮಾಡು, ತೀರಿಸು, ಎನೆ–ಎನ್ನಲು, ನೆಗೆದು ಬರ್ಪ–ಹಾರಿ ಬರುವ, ವಿಷಪನ್ನಗನಂ–ವಿಷಸರ್ಪವನ್ನು, ಪನ್ನತಂ–ಶೂರನಾದ, ಅರಿಗಂ–ಅರ್ಜುನ, ಎಡೆಯೊಳ್–ನಡುವೆ, ತನ್ನಯ–ತನ್ನ, ಗರುಡಾಸ್ತ್ರದಿಂದೆ–ಗರುಡ ಬಾಣದಿಂದ, ಕುಱಿದಱಿದಱಿದಂ–ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು.
ವಚನ : ಕಿನಿಸಿ–ಕೋಪಿಸಿ; ಏಕಗ್ರಾಹಿಗಂ–ಹಿಡಿದ ಪಟ್ಟನ್ನೇ ಹಿಡಿಯುವ ಹಠಮಾರಿಗೂ; ಒರಂಟಂಗಂ–ಒರಟನಿಗೂ, ಎಸಗೆನೆಂದುಂ–ನಡೆಯಿಸುವುದಿಲ್ಲವೆಂದು, ವರೂಥದಿಂದೆ– ರಥದಿಂದ.
೨೦೬. ಅರಿಗನ–ಅರ್ಜುನನ, ಬಟ್ಟಿನಂಬುಗಳ–ದುಂಡಾದ ಮೊನೆಯುಳ್ಳ ಬಾಣಗಳ, ಬಲ್ಸರಿ–ದೊಡ್ಡ ಮಳೆಯು, ಸೋಂಕುಗುಂ–ತಟ್ಟುತ್ತದೆ, ಏೞಿಂ–ಏಳಿರಿ, ಎನ್ನ–ನನ್ನ, ತೋಳ್–ಬಾಹುಗಳು, ನೆರಮೆನೆಗೆ–ನನಗೆ ಸಹಾಯ; ಎನ್ನ ಬಿಲ್ಲೆನೆರಂ–ನನ್ನ ಬಿಲ್ಲೇ ಸಹಾಯ, ಎಂದು, ವರೂಥತುರಂಗಮಂಗಳಂ–ರಥದ ಕುದುರೆಗಳನ್ನು, ತುರಿಪದೆ–ವೇಗ ವಾಗಿ, ತಾನೆ–ತಾನೇ, ಚೋದಿಸುತಂ–ಮುಂದಕ್ಕೆ ನಡಿಯಿಸುತ್ತ, ಆರ್ದು–ಗರ್ಜಿಸಿ, ಇಸುತುಂ–ಬಾಣಪ್ರಯೋಗ ಮಾಡುತ್ತ, ಕಡುಕೆಯ್ದು–ತೀವ್ರತೆಯಿಂದ, ಕಾದೆ–ಯುದ್ಧ ಮಾಡಲು, ಭೀಕರ ರಥಚಕ್ರಮಂ–ಭಯಂಕರವಾದ ರಥದ ಗಾಲಿಯನ್ನು, ಧಾತ್ರಿ–ನೆಲವು, ಭೂಮಿಯು, ಕೋಪದಿಂ–ಸಿಟ್ಟಿನಿಂದ, ಪಿಡಿದು–ಹಿಡಿದುಕೊಂಡು, ನುಂಗಿದಳ್–ನುಂಗಿ ದಳು, ಎಂದರೆ ಕರ್ಣನ ತೇರಿನ ಗಾಲಿಗಳು ನೆಲದಲ್ಲಿ ಹೂತುಕೊಂಡುವು ಎಂದು ಅಭಿಪ್ರಾಯ.
ವಚನ : ಮುಯ್ಯೇೞ್ಸೂೞ್ವರಂ–ಇಪ್ಪತ್ತೊಂದು ಸಲದವರೆಗೆ; ಒಲ್ಲಣಿಗೆಯಂ ಪಿೞಿವಂತೆ–ಒದ್ದೆ ಬಟ್ಟೆಯನ್ನು ಹಿಂಡುವಂತೆ; ಪಿೞಿದ ಪಗೆಗೆ–ಹಿಂಡಿದ ದ್ವೇಷಕ್ಕೆ; ಕಡಿ ದೊಟ್ಟಿದಾಗಳ್–ಕಡಿದು ರಾಶಿ ಮಾಡಿದಾಗ; ಕೊಕ್ಕರಿಸಿ–ಅಸಹ್ಯಪಟ್ಟು.
೨೦೭. ಬಱುವಂ–ಬರಿದಾದವನು, ನಿಸ್ಸಹಾಯಕನಾದವನು, ಸಾರಥಿಯಿಲ್ಲ– ಸಾರಥಿಯು ಇಲ್ಲ; ಮೆಯ್ಗೆ–ಮೈಗೆ, ಮಱೆಯುಂ–ಮರೆಯಾದ ಕವಚವೂ, ತಾನಿಲ್ಲ–ತಾನು ಇಲ್ಲ; ಎಂತು ಈಗಳ್ ಆಂ ಇಸುವೆಂ–ಹೇಗೆ ಈಗ ನಾನು ಹೊಡೆಯುವೆನು? ನೋಡಿರೆ– ನೋಡಿರಿ, ಮತ್ತಂ–ಮತ್ತೂ, ಒಂದನಿಸಲುಂ–ಒಂದು ಬಾಣವನ್ನು ಹೂಡುವುದಕ್ಕೂ, ಕೈಯೇೞದು–ಕೈ ಏಳುವುದಿಲ್ಲ; ಏಕೆ ಎಂದುಂ ಆಂ ಅಱಿಯೆಂ–ಏಕೆ ಎಂದು ನಾನು ತಿಳಿಯೆನು; ಕೂರ್ಮೆಯೆ–ಪ್ರೀತಿಯೆ, ಮಿಕ್ಕು–ಮೀರಿ, ಬಂದಪುದು–ಬರುತ್ತಿದೆ, ಇದರ್ಕೆ ಏಗೆಯ್ವೆನ್–ಇದಕ್ಕೆ ಏನು ಮಾಡುವೆನು, ಏನೆಂಬೆಂ–ಏನೆಂದು ಹೇಳುವೆ? ಆಂ–ನಾನು, ಮುನ್ನಿನ ವೈರಮಂ–ಹಿಂದಿನ ದ್ವೇಷವನ್ನು, ಮಱೆದೆಂ–ಮರೆತೆನು; ಇದಿಂತು–ಇದು ಹೀಗೆ; ಭೂಧರಾ–ಗೋವಿಂದನೇ, ಏ ಕಾರಣಂ–ಏನು ಕಾರಣ? ಈ ಪದ್ಯದಲ್ಲಿ ಸುಮಾರು ಹದಿ ಮೂರು ವಾಕ್ಯಗಳಿವೆ. ಪಾರ್ಥನ ಮನಸ್ಸಿನಲ್ಲಿ ಎದ್ದ ಭಾವಗಳ ಪರಂಪರೆಯ ವೇಗವನ್ನು ಇವು ತೋರಿಸುತ್ತವೆ; ತನಗೂ ಕರ್ಣನಿಗೂ ಏನೋ ಒಂದು ಅಜ್ಞಾತ ಮೈತ್ರಿ ಇದೆಯೆಂದು ಅವನಿಗೆ ತೋರಿ ಕರ್ಣನ ವಧೆಗೆ ಅವನು ಹಿಂತೆಗೆಯುತ್ತಾನೆ, ಇಂಥ ಸಂದರ್ಭ ವ್ಯಾಸಭಾರತ ದಲ್ಲಿ ಕಾಣುವುದಿಲ್ಲ. ರಥದ ಗಾಲಿಯನ್ನು ನೆಲದಿಂದ ಕೀಳುವವರೆಗೆ ಸ್ವಲ್ಪ ತಾಳಬೇಕೆಂದು ಕರ್ಣ ಅರ್ಜುನನನ್ನು ಕೇಳುತ್ತಾನೆ, ಹಾಗೆ ಮಾಡುವುದು ಧರ್ಮವೆಂದೂ ಹೇಳುತ್ತಾನೆ; ಆಗ ಕೃಷ್ಣ ಕರ್ಣನು ದುರ್ಯೋಧನನನ್ನು ಸೇರಿ ಮಾಡಿದ ಅನ್ಯಾಯಗಳನ್ನು ಹೇಳುತ್ತ ಆಗ ನಿನ್ನ ಧರ್ಮ ಎಲ್ಲಿ ಹೋಯಿತು (ಕ್ವತೇ ಧರ್ಮ ಸ್ತದಾಗತಃ) ಎಂದು ಮೂದಲಿಸುತ್ತಾನೆ; ಅದಕ್ಕೆ ಕರ್ಣ ಏನು ಉತ್ತರವನ್ನು ಹೇಳದೆ, (ಲಜ್ಜಾವನತೋ ನೋತ್ತರಂ ಕಿಂಚಿದುಕ್ತವಾನ್) ಕ್ರೋಧದಿಂದ ತುಟಿ ಕಚ್ಚಿ ಧನಸ್ಸನ್ನು, ಎತ್ತಿಕೊಂಡು ಯುದ್ಧ ಮಾಡುವನು, ಆಗ ಕೃಷ್ಣ ದಿವ್ಯಾಸ್ತ್ರ ದಿಂದ ಇವನನ್ನು ಸೀಳಿಬಿಸುಡು (ದಿವ್ಯಾಸ್ತ್ರೇಣ ನಿರ್ಭಿದ್ಯ ಪಾತಯಸ್ವ ಮಹಾಬಲ) ಎಂದೆನ್ನುವನು. ಅನೇಕ ಅಸ್ತ್ರ ಪ್ರತ್ಯಸ್ತ್ರಗಳ ಪ್ರಯೋಗವಾಗುತ್ತದೆ, ಕೊನೆಗೆ ಅರ್ಜುನ ಅಂಜಲಿಕಾಸ್ತ್ರವನ್ನು ಸೆಳೆದುಕೊಂಡು ಕರ್ಣನ ಶಿರವನ್ನು ಕತ್ತರಿಸುತ್ತಾನೆ. ಪಂಪನ ಪದ್ಯದಲ್ಲಿ ಕಾಣುವ ಅರ್ಜುನನ ಅನಿರೀಕ್ಷಿತ ಕರ್ಣಮೈತ್ರಿಯೂ ಅದರಿಂದ ಅವನಲ್ಲಿ ಉಂಟಾದ ಅನು ಕಂಪೆಯೂ ಆ ಕವಿಯ ಪ್ರತಿಭಾ ಜ್ಯೋತಿಯೆಂದು ಕಾಣುತ್ತದೆ, ಇದು ಕುಮಾರ ವ್ಯಾಸನ ಪ್ರತಿಭೆಯಲ್ಲಿ ಮತ್ತಷ್ಟು ಹದಗೊಂಡು ಅರ್ಜುನನ ಕರ್ಣಸ್ನೇಹದ ಭಾವಗೀತೆಯಾಗಿ ಪರಿಣಮಿಸಿರುವಂತೆ ಮನಸ್ಸಿಗೆ ಅನುಭವವಾಗುತ್ತದೆ.
ವಚನ : ಸೋದರಿಕೆಯೆ–ಭ್ರಾತೃಭಾವವೇ; ಮಿಕ್ಕುಬರ್ಕುಮಾಗದೆ–ಮೀರಿ ಬರುತ್ತ ದಲ್ಲವೆ? ಅಂತರ್ಗತದೊಳ್–ಮನಸ್ಸಿನಲ್ಲಿ;
೨೦೮. ನೆಗೞ್ದಭಿಮನ್ಯುವಂ–ಪ್ರಸಿದ್ಧನಾದ ಅಭಿಮನ್ಯುವನ್ನು, ಚಲದಿಂ–ಮಾತ್ಸರ್ಯ ದಿಂದ, ಅಂದು–ಆ ದಿನ, ಇಱಿದು–ಕೊಂದು, ನಿಜಾಗ್ರಜಾತನಂ–ನಿನ್ನ ಅಣ್ಣ ಧರ್ಮರಾಜ ನನ್ನು, ಸುಗಿವಿನಂ–ಹೆದರುವಂತೆ, ಎಚ್ಚು–ಬಾಣ ಪ್ರಹಾರ ಮಾಡಿ, ಬೀರದೊಳೆ– ಶೌರ್ಯ ದಲ್ಲಿಯೇ, ಬೀಗುವ–ಗರ್ವಿಸುವ, ಸೂತಸುತಂಗೆ–ರಥಕಾರನ ಮಗನಿಗೆ, ನೀನುಂ–ನೀನು ಕೂಡ, ಆಜಿಗೆ–ಯುದ್ಧಕ್ಕೆ, ಸೆಡೆದಿರ್ದೆಯಪ್ಪೊಡೆ–ಭಯಪಡುತ್ತಿರುವೆಯಾದರೆ, ಇರು– ಹಾಗೆಯೆ ಇರು; ಚಕ್ರನಿಘಾತದಿಂ–ಚಕ್ರಾಯುಧದ ಏಟಿನಿಂದ, ಇಕ್ಕಿ–ಹೊಡೆದು, ಬೀರಂ– ಶೌರ್ಯವು, ಉರ್ವಿಗೆ–ಲೋಕಕ್ಕೆ, ಪಡಿಚಂದಮಾಗೆ–ಪ್ರತಿಮೆಯಾಗಲು, ಮಾದರಿ ಯಾಗಲು, ತಱಿದೊಟ್ಟಿ–ಕತ್ತರಿಸಿ ಹಾಕಿ, ಜಯಾಂಗನೆಗೆ–ಜಯ ವನಿತೆಗೆ, ಆಣ್ಮನಾದಪೆಂ– ಸ್ವಾಮಿಯಾಗುತ್ತೇನೆ.
ವಚನ : ಎಂಬನ್ನೆಗಂ–ಎನ್ನುವಷ್ಟರಲ್ಲಿ; ಧರಾತಳಂ–ಭೂಮಿಯು; ಅಳಱೆ–ಕಂಪಿಸಲು; ನಿಟ್ಟಾಲಿಯಾಗಿ–ದೀರ್ಘದೃಷ್ಟಿಯುಳ್ಳವನಾಗಿ; ಮುಟ್ಟೆವಂದು–ಹತ್ತಿರ ಬಂದು; ಮರ್ಮೋದ್ಘಾಟನಂಗೆಯ್ದು–ಮರ್ಮಭೇದಕವಾದ ಮಾತುಗಳನ್ನು ಆಡಿ; ವನದಂತಿಯಂತೆ– ಕಾಡಾನೆಯಂತೆ; ಧ್ವಾಂಕ್ಷಧ್ವಜಮಂ–ಕಾಕಧ್ವಜವನ್ನು (ಕಾಗೆಯನ್ನುಳ್ಳ ಧ್ವಜ); ಉಡಿದು–ಮುರಿದು; ಕೆಡೆವಿನಂ–ಬೀಳುವಂತೆ.
೨೦೯. ಪೞಯಿಗೆ–ಬಾವುಟವು, ಬಿೞ್ದೊಡೆ–ಬಿದ್ದರೆ, ಬೀರದ–ಪ್ರತಾಪದ, ಪೞವಿಗೆ ಯಂ–ಧ್ವಜವನ್ನು, ನಿಱಿಸಲೆಂದೆ–ಸ್ಥಾಪಿಸಬೇಕೆಂದೇ, ಹರಿವಕ್ಷಮಂ–ಕೃಷ್ಣನ ಎದೆಯನ್ನು, ಅ [ೞ್ದು]–ಮುಳುಗಿ, ನಾಟಿ; ಅೞಿವೋಗೆ–ಹೊರಕ್ಕೆ ಸೂಸುವಂತೆ, ಎಚ್ಚು–ಪ್ರಯೋಗ ಮಾಡಿ, ಮುಳಿಸು–ಕೋಪವು, ಅವಗೞಿಯಿಸುತಿರೆ–ಅಧಿಕವಾಗುತ್ತಿರಲು, ನರನ ಬಿಲ್ಲ– ಅರ್ಜುನನ ಬಿಲ್ಲಿನ, ಗೊಣೆಯುಮಂ–ಹೆದೆಯನ್ನೂ, ಎಚ್ಚಂ–ಪ್ರಹಾರ ಮಾಡಿದನು ಎಂದರೆ ಕತ್ತರಿಸಿದನು.
೨೧೦. ಬೆಳಗುವ–ಉರಿಯುವ, ಸೊಡರ್ಗಳ–ದೀಪಗಳ, ಬೆಳಗು–ಪ್ರಕಾಶವು, ಪೋಪ ಪೊೞ್ತಱೊಳ್–ಆರಿಹೋಗುವ ಹೊತ್ತಿನಲ್ಲಿ, ಅಗ್ಗಳಿಸುವವೊಲ್–ಹೆಚ್ಚಾಗುವ ಹಾಗೆ, ದಿನಪಸುತಂ–ಸೂರ್ಯನ ಮಗ ಕರ್ಣನು, ಅಸ್ತಮಯ ಸಮಯದೊಳ್–ಮುಳುಗುವ ಸಮಯದಲ್ಲಿ ಎಂದರೆ ಸಾಯುವ ಹೊತ್ತಿನಲ್ಲಿ, ತೇಜಂ–ತೇಜಸ್ಸು, ಪಜ್ಜಳಿಸೆ–ಪ್ರಕಾಶಿ ಸಲು, ತೞತೞಿಸಿ–ಥಳಥಳ ಎಂದು, ತೊಳ ತೊಳ ತೊಳಗಿದಂ–ಮಿಗಿಲಾಗಿ ಪ್ರಕಾಶಿಸಿದನು.
ವಚನ : ನಿಶಿತವಿಕರ್ಣ ಹತಿಯಿಂದೆ–ಹರಿತವಾದ ಬಾಣದ ಘಾತದಿಂದ; ಕೞಿಯೆ ನೊಂದು–ಸಾಯುವಂತೆ ನೋವನ್ನು ಹೊಂದಿ.
೨೧೧. ಕಸೆಯಂ–ಚಾವಟಿಯನ್ನು, ಬಿಟ್ಟು–ಕೆಳಗಿಟ್ಟು, ಅಭಿಮಂತ್ರಿಸಿ–ಮಂತ್ರಹಾಕಿ, ಚಕ್ರಮಂ–ಚಕ್ರಾಯುಧವನ್ನು, ಅಸುರವೈರಿ–ಕೃಷ್ಣನು, ಇಡುವಾಗಳ್–ಎಸೆಯುವಾಗ, ಬಾರಿಸಿ–(ಅರ್ಜುನನು) ತಡೆದು, ಪೆಱತು–ಬೇರೆ, ಗೊಣೆಯದಿಂದೆ–ಬಿಲ್ಲಿನ ಹೆದೆಯಿಂದ, ಬಿಲ್ಲಂ–ಬಿಲ್ಲನ್ನು, ಏಱಿಸಿ–ಕಟ್ಟಿ, ತ್ರಿಭುವನಂಗಳ್–ಮೂರು ಲೋಕಗಳು, ಅಳ್ಳಾಡುವಿನಂ– ಕಂಪಿಸುತ್ತಿರಲು.
ವಚನ : ಪಶುಪತಿಯಂ–ಶಿವನನ್ನು, ಆರಾಧಿಸಿ–ಪೂಜಿಸಿ, ಮೆಚ್ಚಿಸಿ, ತೆಲ್ಲಟಿಯೆಂದು– ಬಳುವಳಿಯೆಂದು.
೨೧೨. ಗಿರಿಜೆಯ–ಪಾರ್ವತಿಯು, ಮೆಚ್ಚಿ ಕೊಟ್ಟ, ನಿಶಿತಾಸ್ತ್ರಮಂ–ಕ್ರೂರವಾದ ಬಾಣ ವನ್ನು, ಅಂಜಲಿಕಾಸ್ತ್ರಮಂ–ಅಂಜಲಿಕಾ ಎಂಬ ಹೆಸರುಳ್ಳ ಬಾಣವನ್ನು, ಭಯಂಕರತರ ಮಾಗೆ–ಅತಿ ಭೀಕರವಾಗಲು, ಕೊಂಡು–ಸೆಳೆದುಕೊಂಡು, ವಿಧಿಯಿಂದೆ–ಬ್ರಹ್ಮಮಂತ್ರ ದಿಂದ, ಅಭಿಮಂತ್ರಿಸಿ–ಮಂತ್ರದಿಂದ ಆಹ್ವಾನ ಮಾಡಿ, ಬಿಲ್ಲೊಳ್–ಬಿಲ್ಲಿನಲ್ಲಿ, ಪೂಡೆ– ಹೂಡಲು, ಉರ್ವರೆ–ಭೂಮಿ, ನಡುಗಿತ್ತು–ನಡುಗಿತು; ಅಜಾಂಡಂ–ಬ್ರಹ್ಮಾಂಡವು, ಒಡೆದತ್ತು– ಒಡೆಯಿತು; ನೆಲಂ–ನೆಲವು, ಪಿಡುಗಿತ್ತು–ಸಿಡಿಲಿನಂತೆ ಸಿಡಿಯಿತು, ಸಪ್ತಸಾಗರಂ– ಏಳು ಸಮುದ್ರಗಳು, ಉಡುಗಿತ್ತು–ಸಂಕೋಚವಾದುವು; ಕದನತ್ರಿಣೇತ್ರನಾ–ಅರ್ಜುನನ, ಸಾಹಸಂ–ಪರಾಕ್ರಮ, ಅದೇಂ ಪಿರಿದೋ–ಅದೇನು ಹಿರಿದಾದುದೋ!
ವಚನ : ಆಕರ್ಣಾಂತಂಬರಂ–ಕಿವಿಯ ಮೂಲದವರೆಗೆ; ತೆಗೆದು–ಎಳೆದು; ಆ ಕರ್ಣಾಂತಂ ಮಾಡಲ್–ಆ ಕರ್ಣನನ್ನು ಕೊಲ್ಲಲು, ಕಂಧರಸಂಧಿಯಂ–ಕೊರಳಿನ ಸಂಧಿಯನ್ನು.
೨೧೩. ಮುಳಿದು–ಕೋಪಿಸಿ, ಎಚ್ಚಾಗಳ್–ಪ್ರಯೋಗಿಸಿದಾಗ, ಮಹೋಗ್ರ ಪ್ರಳಯ ಶಿಖಿ ಶಿಖಾನೀಕಮಂ–ಮಹಾ ಭಯಂಕರವಾದ ಪ್ರಳಯ ಕಾಲದ ಅಗ್ನಿಯ ಜ್ವಾಲಾಮಾಲೆಗಳನ್ನು, ವಿಸ್ಫುಲಿಂಗಂಗಳುಮಂ–ಕಿಡಿಗಳನ್ನು, ಬೀಱುತ್ತುಂ–ಎರಚುತ್ತ, ಔರ್ವಜ್ವಳನ ರುಚಿಯುಮಂ–ಬಾಡಬಾಗ್ನಿಯ ಪ್ರಕಾಶವನ್ನೂ, ತಾನೆ–ತಾನೇ, ತೋಱುತ್ತುಂ–ತೋರಿಸುತ್ತ, ಆಟಂದು–ಮೇಲೆ ಹಾಯ್ದು, ಅಳುರುತ್ತಂ–ವ್ಯಾಪಿಸುತ್ತ, ಬಂದು, ಕೊಂಡಾಗಳೆ–ತಾಗಿದ ಕೂಡಲೇ, ತಾಗಿದಾಗ, ಪಾಯ್ದ–ಹರಿದ, ಕೆನ್ನೆತ್ತರಿಂದೆ–ಕೆಂಪು ರಕ್ತದಿಂದ, ಗಗನತಳಂ– ಆಕಾಶ ಪ್ರದೇಶವು, ಉಚ್ಚಳಿಸುತ್ತಿರ್ಪನ್ನೆಗಂ–ಮೇಲು ಮೇಲಕ್ಕೆ ಹೋಗುತ್ತಿರಲು, ಕರ್ಣೋತ್ತ ಮಾಂಗಂ–ಕರ್ಣನ ತಲೆ, ಅತ್ತ–ಅತ್ತಕಡೆಗೆ, ಸಿಡಿಲ್ದು–ಸಿಡಿದು ಹಾರಿ, ಭರದೆ–ವೇಗವಾಗಿ, ಬಿೞ್ದುದು–ಬಿದ್ದಿತು. ವ್ಯಾಸ ಭಾರತದಲ್ಲಿ ಕರ್ಣನ ಶಿರಸ್ಸು ಉರುಳಿದ್ದು ಹೀಗಿದೆ;
ಮಹಾನಿಲೇನಾದ್ರಿಮಿವಾಪವಿದ್ಧಂ
ಯಜ್ಞಾವಸಾನೇಽಗ್ನಿಮಿಸುವ ಪ್ರಶಾಂತಂ ।
ರರಾಜ ಕರ್ಣಸ್ಯಶಿರೋ ನಿಕೃತ್ತಂ
ಅಸ್ತಂಗತಂ ಭಾಸ್ಕರಸ್ಯೇವ ಬಿಂಬಂ ॥
ಸಹಸ್ರ ನೇತ್ರ ಪ್ರತಿಮಾನ ಕರ್ಮಣಃ
ಸಹಸ್ರ ನೇತ್ರ ಪ್ರತಿಮಾನನಂ ಶುಭಂ ।
ಸಹಸ್ರ ರಶ್ಮಿರ್ದಿನ ಸಂಚಯೇ ಯಥಾ
ತತೋಪತತ್ ಕರ್ಣಶಿರೋ ವಸುಂಧರಾಮ್ ॥
ವಚನ : ಅಗುಂದಲೆಯಾದ–ಅತಿಶಯವಾದ; ತೊಲಗದ ನನ್ನಿಯಂ–ಸ್ಥಿರವಾದ ಸತ್ಯವನ್ನು; ಅಟ್ಟೆಯುಂ–ಮುಂಡವೂ; ಒಳ್ಪಿನ–ಒಳ್ಳೆಯತನದ;
೨೧೪. ಚಾಗದ–ತ್ಯಾಗದ, ನನ್ನಿಯ–ಸತ್ಯದ, ಕಲಿತನದ–ಶೌರ್ಯದ, ಆಗರಂ–ನಿವಾಸ ಸ್ಥಾನ, ಎನೆ–ಎನ್ನಲು, ನೆಗೞ್ದ–ಪ್ರಸಿದ್ಧನಾದ, ಕರ್ಣನ ಒಡಲಿಂದೆ–ಕರ್ಣನ ದೇಹದಿಂದ, ಎಂತುಂ–ಹೇಗೂ, ಪೋಗಲ್ಕಱಿಯದೆ–ಹೋಗಲು ತಿಳಿಯದೆ, ಸಿರಿ–ಲಕ್ಷ್ಮಿ, ಆಗಳ್–ಆಗ, ಕರಿಕರ್ಣತಾಳ ಸಂಚಳೆಯಾದಳ್–ಆನೆಯ ಅಲುಗಾಡುವ ಕಿವಿಗಳಂತೆ ಸಂಚಲಳಾದಳು.
೨೧೫. ಕುಡುಮಿಂಚಿನ–ವಕ್ರವಾದ ಮಿಂಚನ್ನುಳ್ಳ, ಸಿಡಿಲುರುಳಿಯೊಳ್–ಸಿಡಿಲ ಉಂಡೆ ಯಲ್ಲಿ, ತೇಜೋರೂಪಂ–ತೇಜಸ್ಸಿನ ರೂಪವುಳ್ಳ, ಒಂದು ಮೂರ್ತಿ–ಒಂದು ಬಿಂಬವು, ಒಡಂಬಡಂ ಪಡೆಯೆ–ಒಪ್ಪುವುದಾಗಲು, ಹೊಂದಿಕೊಳ್ಳಲು, ಕರ್ಣನ, ಒಡಲಿಂದೆ–ದೇಹ ದಿಂದ, ಆಗಳ್–ಆಗ, ನಡೆ ನೋಡೆ ನೋಡೆ–ಚೆನ್ನಾಗಿ ನೋಡ ನೋಡಲು, ದಿನಪನೊಳ್– ಸೂರ್ಯನಲ್ಲಿ, ಒಡಗೂಡಿದುದು–ಐಕ್ಯವಾಯಿತು.
೨೧೬. ಪುರಿಗಣೆಯಂ–ದಿವ್ಯಾಸ್ತ್ರವನ್ನು(?), ಪಿಡಿದನೆ–ಹಿಡಿದನೆ? ಎರೞ್ನುಡಿದನೆ– ಎರಡು ಮಾತು ಎಂದರೆ ಸುಳ್ಳನ್ನು ಹೇಳಿದನೆ? ಬಳ್ಕಿದನೆ–ಬಾಗಿದನೆ? ಚಲಮಂ ಪಿಡಿದು– ಹಿಡಿದ ಪಟ್ಟನ್ನೇ ಹಿಡಿದು, ತಾನೆ–ತಾನೇ, ತನ್ನನ್ನೆ–ತನ್ನನ್ನೇ, ಅೞಿದಂ–ನಾಶಮಾಡಿಕೊಂಡನು, ಎಂದು, ದೇವರ ಪಡೆ–ದೇವತೆಗಳ ಗುಂಪು, ಇನತನೂಜನ–ಕರ್ಣನ, ಗಂಡಂ–ಪೌರುಷವನ್ನು, ಗಡಣದೆ–ಗುಂಪಾಗಿ, ಪೊಗೞ್ದುದು–ಹೊಗಳಿತು.
೨೧೭. ಅಣ್ಣ–ಅಣ್ಣನೇ, ಭಾರತದೊಳ್–ಮಹಾಭಾರತದಲ್ಲಿ, ಇಂಪೆಱರಾರುಮಂ– ಇನ್ನು ಬೇರೆ ಯಾರನ್ನೂ, ನೆನೆಯದಿರ್– ನೆನಪಿಗೆ ತಂದುಕೊಳ್ಳದೆ ಇರು; ಒಂದೆ ಚಿತ್ತದಿಂ– ಒಂದೇ ಮನಸ್ಸಿನಿಂದ, ನೆನೆವೊಡೆ–ನೆನೆಯುವ ಪಕ್ಷದಲ್ಲಿ, ಕರ್ಣನಂ–ಕರ್ಣನನ್ನು, ನೆನೆಯ –ಸ್ಮರಿಸು; ಕರ್ಣನೊಳ್–ಕರ್ಣನಲ್ಲಿ, ಆರ್ದೊರೆ–ಯಾರು ಸಮಾನ; ಕರ್ಣನ ಏಱು– ಕರ್ಣನ ಕಾಳಗವು, ಕರ್ಣನ ಕಡು ನನ್ನಿ–ಕರ್ಣನ ತೀವ್ರ ಸತ್ಯ, ಕರ್ಣನಳವು–ಕರ್ಣನ ಶಕ್ತಿ, ಅಂಕದ–ಹೆಸರುವಾಸಿಯಾದ, ಕರ್ಣನ ಚಾಗಂ–ಕರ್ಣನ ದಾನ, ಎಂದು–ಎಂಬುದಾಗಿ, ಕರ್ಣನ ಪಡೆಮಾತಿನೊಳ್–ಕರ್ಣನ ವೃತ್ತಾಂತ ದಲ್ಲಿ, ಪುದಿದು–ತುಂಬಿ, ಭಾರತಂ–ಮಹಾಭಾರತವು, ಕರ್ಣ ರಸಾಯನಮಲ್ತೆ–ಕಿವಿಗಳಿಗೆ ರಸಾಯನವಲ್ಲವೆ? ಇಲ್ಲಿ ಅರ್ಜು (ಅರಿಕೇಸರಿ)ನನ್ನು ಕೂಡ ಮರೆತಿದ್ದಾನೆ ಪಂಪ; ಆತನಿಗೆ ಕರ್ಣನಲ್ಲಿ ಅಷ್ಟು ಅನುಕಂಪೆ.
ವಚನ : ರಿಪುಕುರಂಗ ಕಂಠೀರವನ–ಶತ್ರುಗಳೆಂಬ ಹುಲ್ಲೆಗಳಿಗೆ ಸಿಂಹನಾಗಿರುವವನು, ಅರ್ಜುನನ; ವೈಕರ್ತನಂ–ಕರ್ಣನು; ಮೇಲುದಂ ಬೀಸಿ–ಉತ್ತರೀಯವನ್ನು ಅತ್ತ ಇತ್ತ ಆಡಿಸಿ, ಆರ್ವ–ಗರ್ಜಿಸುವ, ಪತಾಕಿನಿಯೊಳ್–ಸೈನ್ಯದಲ್ಲಿ.
೨೧೮. ಬದ್ದವಣದ–ಮಂಗಳಸೂಚಕವಾದ, ಪಱೆಗಳ್–ಹರೆಗಳು, ಭೇರಿಗಳು, ಕಿವಿ ಸದ್ದಂಗಿಡೆ–ಕಿವಿ ಶಬ್ದವನ್ನು ಕಳೆದುಕೊಳ್ಳಲು ಎಂದರೆ ಕಿವುಡಾಗುವಂತೆ, ಮೊೞಗೆ–ಸದ್ದು ಮಾಡಲು, ದುಂದುಭಿ–ಭೇರಿಗಳ (ದೇವತೆಗಳ), ರವದ–ಶಬ್ದದ, ಒಂದು ಉದ್ದಾನಿ– ಒಂದು ಅತಿಶಯವು, ನೆಗೞೆ–ಉಂಟಾಗಲು, ಮುಗುಳ–ಮೊಗ್ಗುಗಳ, ಅಲರೊದ್ದೆ–ಹೂಗಳ ರಾಶಿಗಳು, ಅಂಬರತಲದೊಳ್–ಆಕಾಶದಲ್ಲಿ, ಕರಂ–ವಿಶೇಷವಾಗಿ, ಸಿದ್ಧಮಾದುದು–ಅಣಿ ಯಾಯಿತು.
೨೧೯. ಒದವಿದ–ಸಮೃದ್ಧಿಯಾದ, ಅಲಂಪು–ಸಂತೋಷವು, ಕಣ್ಣೆವೆ–ಕಣ್ಣಿನ ರೆಪ್ಪೆ, ಕರುಳ್–ಕರುಳು, ತನಗೆ–ತನಗೇ, ಎಂಬುದಂ–ಎಂದು ಹೇಳುವುದನ್ನು (ಎಂದರೆ ಕಣ್ಣುಗಳು ಮತ್ತು ಕರುಳು (ಅಂತಃಕರಣದ ಪ್ರೀತಿ) ತನಗೆ ಮಾತ್ರ, ಬೇರೆ ಯಾರಿಗೂ ಇಲ್ಲ), ಉಂಟು ಮಾಡೆ–ನೆಗಳಲು, ನೋಡಿದುದಱೆ–ನೋಡಿದ್ದರಲ್ಲಿಯೇ, ಕಣ್ಗಳ್–ಕಣ್ಣುಗಳು, ಅೞ್ಕಮೆ ವಡುತ್ತಿರೆ–ಅಜೀರ್ಣವನ್ನು ಹೊಂದಿರಲು, ಪೋ–ಹೋಗು, ಪಸವು–ಬರ, ಓಡಿತು–ತೊಲ ಗಿತು, ಎಂದು, ನೀರದ ಪಥದೊಳ್–ಆಕಾಶದಲ್ಲಿ, ನಾರದಂ–ನಾರದನು, ದಂಡಕಾಷ್ಠದ– ದಂಡಗೋಲಿನ; ತುದಿಯೊಳ್–ತುದಿಯಲ್ಲಿ, ಪಳಂಚಿ–ತಾಗಿ, ಅಲೆಯೆ–ಅಲುಗಾಡುವಂತೆ, ಕೋವಣಮಂ–ಕೌಪೀನವನ್ನು, ಗುಡಿಗಟ್ಟಿ–ಧ್ವಜವಾಗಿ ಕಟ್ಟಿ, ಅರಿಗನಂ–ಅರ್ಜುನನನ್ನು, ತಗುಳ್ದು–ಅನುಸರಿಸಿ, ಅಂದು–ಆ ದಿವಸ, ಪೊಗೞ್ದು–ಹೊಗಳಿ, ಆಡಿದಂ–ಕುಣಿದನು, ಕರ್ಣಾರ್ಜುನರ ಯುದ್ಧವನ್ನು ನೋಡಲು ನಾರದನು ಬಂದುದಕ್ಕೆ ಕಾರಣ ಯಾವ ಯುದ್ಧ ವನ್ನು ನೋಡಿಯೂ ಅವನ ಕಣ್ಣುಗಳಿಗೆ ತೃಪ್ತಿಯಾಗದೆ ಇದ್ದುದ್ದು; ಇಂದು ಆ ಕಣ್ಣುಗಳಿಗೆ ತೃಪ್ತಿಯುಂಟಾಗಿ ಕಣ್ಣು ಪಡೆದವನೆಂದರೆ ಅವನೇ ಎಂಬಂತಾಯಿತು; ಆ ತೃಪ್ತಿಯನ್ನು ಒದಗಿಸಿದ ಅರ್ಜುನನಲ್ಲಿ ಆದರ ಮಿಗಿಲಾಯಿತು. ಅವನ ಕಣ್ಣು ಸಾರ್ಥಕವಾಯಿತು, ಎಂದು ತಾತ್ಪರ್ಯ, ತನ್ನ ದಂಡಕೋಲಿಗೆ ಕೌಪೀನವನ್ನು ಬಾವುಟವಾಗಿ ಕಟ್ಟಿ ನಾರದ ನರ್ತನ ಮಾಡಿದ್ದು ಆನಂದ ನೃತ್ಯ. ಆದರೆ ಅದನ್ನು ನೋಡುವವರಿಗೆ ನಗುವೂ ಬರಬಹುದು.
೨೨೦. ಪೞಯಿಗೆಯಂ–ಧ್ವಜವನ್ನು, ಉಡುಗಿ–ಕುಗ್ಗಿಸಿಕೊಂಡು, ಪೆೞವನಂ–ಹೆಳವನಾದ ಅರುಣನನ್ನು, ರಥಮಂ–ರಥವನ್ನು, ಎಸಗಲ್ಕೆ–ನಡೆಸುವುದಕ್ಕೆ, ಪೇೞ್ದು–ಹೇಳಿ; ಸುತ ಶೋಕದ–ಪುತ್ರಶೋಕದ, ಪೊಂಪುೞಿಯೊಳ್–ಆಧಿಕ್ಯದಲ್ಲಿ, ಮೆಯ್ಯೞಿಯದೆ–ಮೈಯನ್ನು ತಿಳಿಯದೆ ಎಂದರೆ ಪ್ರಜ್ಞೆಯಿಲ್ಲದೆ, ದಿನಪಂ–ಸೂರ್ಯನು, ನೀರಿೞಿವಂತೆವೊಲ್–(ಸತ್ತವರಿ ಗಾಗಿ ನೀರಲ್ಲಿಳಿದು ಸ್ನಾನ ಮಾಡುವಂತೆ), ಅಪರಜಳನಿಧಿಗೆ–ಪಶ್ಚಿಮ ಸಮುದ್ರಕ್ಕೆ, ಇೞಿದಂ– ಇಳಿದನು.
ವಚನ : ಬೞಿವೞಿಯನೆ–ದಾರಿಯಲ್ಲೇ, ಹಿಂದು–ಹಿಂದೆಯೇ; ತನ್ನ ಪೋಪುದಂ– ತಾನು ಹೋಗುವುದನ್ನು; ನಾಡಾಡಿಯಲ್ಲದೆ–ಸಾಧಾರಣವಾಗಿ ಅಲ್ಲದೆ; ನಿಜನಿವಾಸಕ್ಕೆ–ತನ್ನ ಮನೆಗೆ.
೨೨೧. ಅಜರ–ದೇವತೆಗಳು, ಸುರಿವ–ಸುರಿಯುವ, ಪ್ರಸೂನ–ಹೂವುಗಳ, ರಜದಿಂ– ಪರಾಗದಿಂದ, ಕವಿಲಾದ–ಕಪಿಲವರ್ಣವಾದ, ಶಿರೋರುಹಂ–ಕೇಶಗಳು; ರಜಂಬೊರೆದ– ಪರಾಗದಿಂದ ವ್ಯಾಪ್ತವಾದ, ಅಳಿಮಾಲೆ–ದುಂಬಿಗಳ ಸಮೂಹ, ಮಾಲೆಯನೆ–ಹೂವಿನ ಹಾರವನ್ನೇ, ಪೋಲೆ–ಹೋಲಲು; ಪಯೋಜಜ ಪಾರ್ವತೀ ಶರ–ಬ್ರಹ್ಮನ ಮತ್ತು ಶಿವನ, ಒಳ್ವರಕೆಯನಾಂತು–ಒಳ್ಳೆಯ ಆಶೀರ್ವಾದಗಳನ್ನು ಧರಿಸಿ, ಅಮ್ಮನ ಗಂಧವಾರಣಂ– ಅರ್ಜುನ, ಕರ್ಣಹತಿಯೊಳ್–ಕರ್ಣನ ವಧೆಯಲ್ಲಿ, ತನಗೆ, (ಧರ್ಮರಾಜನಿಗೆ) ಅೞ್ಕಱ ನೀಯೆ–ಪ್ರೀತಿಯನ್ನು ಕೊಡಲು, ಅಚ್ಯುತಂ ಬೆರಸು–ಶ್ರೀಕೃಷ್ಣ ಸಹಿತನಾಗಿ, ಅರಮನೆಗೆ, ಅಳುರ್ಕೆಯಿಂ–ಅತಿಶಯತೆಯಿಂದ, ಬಂದಂ–ಬಂದನು.
ದ್ವಾದಶಾಶ್ವಾಸಂ ಸಂಪೂರ್ಣಂ