ಏಕಾದಶಾಶ್ವಾಸಂ
೧. ಶ್ರೀಯುವತಿಯಂ–ಲಕ್ಷ್ಮಿಯೆಂಬ ವನಿತೆಗೆ, ಆ ವೀರಶ್ರೀ ಯುವತಿಯಂ–ಆ ವೀರ ಲಕ್ಷ್ಮಿಯೆಂಬ ಸ್ತ್ರೀಯನ್ನು, ಸವತಿ ಮಾೞ್ಪೆಂ–ಸವತಿಯಾಗಿ ಮಾಡುತ್ತೇನೆ, ಎಂದು–ಎಂಬು ದಾಗಿ, ಅರಿನೃಪರ–ಶತ್ರುರಾಜರ, ಉಳ್ಳಾಯಂ ಬೆರಸು–ಇರುವ ಸಾಮರ್ಥ್ಯ ಸಮೇತರಾಗಿ, ಎೞೆದುಕೊಂಡು–ಸೆಳೆದುಕೊಂಡು, ಧರಾಯುವತಿಗೆ–ಭೂಮಿಯೆಂಬ ಸ್ತ್ರೀಗೆ, ನೆಗೞ್ದ-ಪ್ರಸಿದ್ಧ ನಾದ, ಹರಿಗನೊರ್ವನೆ–ಅರ್ಜುನನೊಬ್ಬನೇ, ಗಂಡಂ–ಪತಿ,
೨. ಎಂಬ-ಎನ್ನುವ, ನಿಜ ಚರಿತಮಂ.ತನ್ನ ಚರಿತ್ರೆಯನ್ನು, ಪಲರುಂ-ಹಲವರೂ, ಬಣ್ಣಿಸೆ-ವರ್ಣಿಸಲು, ಕಿವಿಯನಾಂತು-ಕಿವಿಗೊಟ್ಟು ಕೇಳುತ್ತ, ಬೀರಂ-ಶೌರ್ಯವು ಅಳುಂಬಂ ಎನಿಸಿ–ಅತಿಶಯವೆನಿಸಿ, ತನಗಿದಿರಂ ಬಂದು–ತನಗೆ ಎದುರು ಬಂದು, ಕಡಂಗಿ–ಉತ್ಸಾಹಿಸಿ ಎಂದರೆ ಯುದ್ಧ ಮಾಡಲು ಪ್ರಯತ್ನಿಸಿ, ಸತ್ತರಂ–ಸತ್ತವರನ್ನು, ಪೊಗೞುತ್ತುಂ–ಹೊಗಳುತ್ತ,
ವಚನ : ಯುದ್ಧವಾದ ದಿನ ರಾತ್ರಿಯಲ್ಲಿ ಸೈನ್ಯದ ಶಿಬಿರಗಳಲ್ಲಿ ಆಗುವ ನಡವಳಿಕೆಯ ಚಿತ್ರ ಇಲ್ಲಿದೆ : ಅೞಿಯೆ ನೊಂದ–ಸಾಯುವಂತೆ ನೋವುಪಟ್ಟ, ತಮ್ಮಣುಗಾಳ್ಗಳ–ತಮ್ಮ ಪ್ರೀತಿಯ ಬಂಟರ, ಕೊಂಡಾಟದಾನೆಗಳ–ಹೊಗಳಲ್ಪಟ್ಟ ಆನೆಗಳ; ಪುಣ್ಗಳಂ–ಗಾಯಗಳನ್ನು, ಉಡಿಯಲುಂ–ಅಳಿಸುವುದಕ್ಕೆ ಎಂದರೆ ಹೋಗಲಾಡಿಸುವುದಕ್ಕೂ, ಓವಲುಂ–ಕಾಪಾಡುವುದಕ್ಕೂ, ಮರ್ದುಬೆಜ್ಜರುಮಂ–ಮದ್ದನ್ನೂ, ವೈದ್ಯರನ್ನೂ, ಅಟ್ಟುತ್ತುಂ–ಕಳುಹಿಸಿ ಕೊಡುತ್ತ; ಇಕ್ಕಿದ–ಧರಿಸಿದ; ಸನ್ನಣಂಗಳಂ–ಯುದ್ಧ ಕವಚಗಳನ್ನು; ಗೆಲ್ದು–ಗೆದ್ದು ಎಂದರೆ ಭೇದಿಸಿ, ಕಣಕೆನೆ–ಕಣಕ್ ಎನ್ನುವಂತೆ, ಪೋಗುರ್ಚಿ–ಸೀಳಿ ಹೊಕ್ಕು; ಉಡಿದಂಬುಗಳು ಮಂ–ಮುರಿದ ಬಾಣಗಳನ್ನು; ಎಲ್ವಂನಟ್ಟು–ಎಲುಬುಗಳನ್ನು ನಾಟಿ, ಉಡಿದ–ಮುರಿದ, ಬಾಳ ಕಕ್ಕಡೆಯ–ಕತ್ತಿಗಳ ಮತ್ತು ಕಕ್ಕಡೆಗಳ, ಉಡಿಗಳುಮಂ–ಚೂರುಗಳನ್ನೂ; ಅಯ ಸ್ಕಾಂತಮಂ ತೋಱಿ–ಸೂಜಿಕಲ್ಲನ್ನು ತೋರಿಸಿ; ವಜ್ರಮುಷ್ಟಿಯ–ವಜ್ರಮುಷ್ಟಿ ಎಂಬ ಕೈಯಾಯುಧದ, ಪೊಯ್ಲೊಳಂ–ಏಟಿನಲ್ಲಿಯೂ, ಬಾಳ–ಕತ್ತಿಯ, ಕೋಳೊಳಂ–ತಿವಿತ ದಲ್ಲೂ, ಉಚ್ಚಳಿಸಿದ–ಸಿಡಿದು ಹೋದ, ಕಪಾಲದ ಓಡುಗಳಂ–ತಲೆಯ ಚಿಪ್ಪುಗಳನ್ನು, ಗಂಗೆಗಟ್ಟುತ್ತಂ–ಗಂಗಾ ನದಿಗೆ ಕಳುಹಿಸಿಕೊಡುತ್ತ.
೩. ಉನ್ನತ ಮಸ್ತಕ ಸ್ಥಳದೊಳ್–ಎತ್ತರವಾದ ತಲೆಯ ಪ್ರದೇಶದಲ್ಲಿ, ಅಂಬುಗಳ್ ಅೞ್ದು–ಬಾಣಗಳು ಮುಳುಗಿ ಎಂದರೆ ನಾಟಿ, ಉಡಿದಿರ್ದೊಡೆ–ಮುರಿದಿದ್ದರೆ, ಅತ್ತಮಿತ್ತಂ– ಅತ್ತಕಡೆ ಇತ್ತಕಡೆ, ನೆ [ರೆ] ತಂದು–ಗುಂಪಾಗಿ ಬಂದು, ಬಲ್ದಡಿಗರ್–ಬಲು ದಾಂಡಿಗರು, ಇೞ್ಕುಳಿನೊಳ್–ಇಕ್ಕುಳಗಳಲ್ಲಿ, ಕಿೞೆ–ಕೀಳಲು, ನೊಂದೆನೆನ್ನದೆ–ನೊಂದೆನು ಎಂದು ಹೇಳದೆ, ಅಃ ಎನ್ನದೆ–ಅಃ ಎಂದು ಹೇಳದೆ, ಅಣಂ–ಸ್ವಲ್ಪವೂ, ಮೊಗಂ ಮುರಿಯದೆ–ಮುಖವನ್ನು ತಿರುಗಿಸಿಕೊಳ್ಳದೆ, ಅಳ್ಕದೆ–ಸುಸ್ತಾಗದೆ, ಬೇನೆಗಳೊಳ್–ನೋವುಗಳಲ್ಲಿ, ಮೊಗಂಗಳಂ–ಮುಖ ಗಳನ್ನು, ಬಿನ್ನಗೆಮಾಡದೆ–ವ್ಯಾಕುಲಿತವನ್ನಾಗಿ ಮಾಡದೆ, ಅಳವು–ಸಾಮರ್ಥ್ಯ, ಅಚ್ಚರಿಯಾಗೆ– ಆಶ್ಚರ್ಯಕರವಾಗಿರಲು, ಕೆಲರ್–ಕೆಲವರು, ಮಹಾರಥರ್–ಮಹಾರಥಿಕರು, ಇರ್ದರ್– ಇದ್ದರು.
೪. ರಸಮೊಸರ್ವನ್ನೆಗಂ–ರಸವು ಸೂಸುತ್ತಿರಲು, ತಗುಳೆಪಾಡುವ–ಬಿಡದೆ ಅನುಸರಿಸಿ ಹಾಡುವ, ಗಾಣರ–ಸಂಗೀತಗಾರರ, ಗೇಯಂ–ಸಂಗೀತ, ಅೞ್ಕಱಂ–ಪ್ರೀತಿಯನ್ನು, ಪೊಸಯಿಸೆ– ಹೊಸದಾಗಿ ಉಂಟುಮಾಡುತ್ತಿರಲು, ಸೋಂಕುವ–ಮುಟ್ಟುವ, ಒಲ್ದು ಒಲಿಸುವ–ಪ್ರೀತಿಸಿ, ಪ್ರೀತಿಸುವಂತೆ ಮಾಡುವ, ಓಪಳ–ಪ್ರಿಯಳ, ಸೋಂಕು–ಸ್ಪರ್ಶವು, ಪೊದಳ್ದ–ವ್ಯಾಪಿಸಿದ, ಬಿರಿದ–ಅರಳಿದ, ಜಾದಿಯೊಳ್–ಜಾಜಿಯ ಹೂವಿನಲ್ಲಿ, ಮಸಗಿದ–ವಿಜೃಂಭಿಸಿದ, ಕಂಪು– ಸುಗಂಧವು, ಕಂಪಂ ಒಳಕೊಂಡು–ಸುಗಂಧವನ್ನು ಬೆರಸಿಕೊಂಡು, ಅಲೆವ–ಬೀಸುವ, ಒಂದು ಎಲರ್–ಒಂದು ಗಾಳಿಯು, ಎಂಬ ಇವು–ಎನ್ನುವ ಇವುಗಳು, ಉಗ್ರ–ಭಯಂಕರವಾದ, ವೀರಭಟ–ವೀರಯೋಧರ, ಆಹವ ಕೇಳಿ–ಯುದ್ಧಕ್ರೀಡೆಯ, ಪರಿಶ್ರಮಂಗಳಂ–ಆಯಾಸ ಗಳನ್ನು, ಅಂದು–ಆಗ, ಪಾಱಿಸುವುವು–ಹಾರಿ ಹೋಗುವಂತೆ ಮಾಡುತ್ತವೆ ಎಂದರೆ ಕಳೆಯು ತ್ತವೆ, ಹೋಗಲಾಡಿಸುತ್ತವೆ.
ವಚನ : ಉತ್ತಾಯಕನಾಗಿ–(ಪ್ರತಾಪವನ್ನು) ಮೆರೆದವನಾಗಿ; ಕಟ್ಟುವಂ–ಕಟ್ಟೋಣ.
೫. ಬೇಳ್ವೆಯ–ಯಜ್ಞದ, ಕೊಂಡದೊಳ್–ಕುಂಡದಲ್ಲಿ, ಉರ್ಚಿದ ಬಾಳ್ವೆರಸು–ಹಿರಿದ ಕತ್ತಿಯೊಡನೆ, ಅರಿಬಲಮಂ–ಶತ್ರುಸೈನ್ಯವನ್ನು, ಅರಿಯಲೆಂದು–ಕತ್ತರಿಸಬೇಕೆಂದು, ಅಂಕದ ಕಟ್ಟಾಳ್–ಯುದ್ಧದ ಬಲ್ಲಾಳು, ವೀರಂ–ಶೂರನು, ಅತಿಬಲಂ–ಅತಿಶಕ್ತಿಯನ್ನುಳ್ಳವನು, ದೃಷ್ಟ ದ್ಯುಮ್ನಂ–ದೃಷ್ಟದ್ಯುಮ್ನನೆಂಬುವನು, ನಿನಗೆ ಆಳ್ವೆಸಕೆ–ಸೇವಾವೃತ್ತಿಗೆ, ಎಂದು, ಇರ್ದನಲ್ತೆ– ಇದ್ದಾನಲ್ಲವೇ?
ವಚನ : ಈ ಕಜ್ಜಂ–ಈ ಕೆಲಸ ಬೞಿಯನಟ್ಟಿ–ದೂತನನ್ನು ಕಳುಹಿಸಿ.
೬. ಆ ಸಮರ ಮುಖದೊಳ್–ಆ ಯುದ್ಧಾರಂಭದಲ್ಲಿ, ಎಸೆವ–ಪ್ರಕಾಶಿಸುವ, ಅರಿ ಕೇಸರಿಯ–ಅರ್ಜುನನ, ವಿರೋಧಿ ರುಧಿರ ಜಲನಿಧಿವೊಲ್–ಶತ್ರುಗಳ ರಕ್ತದ ಕಡಲಂತೆ, ಸಂಧ್ಯಾಸಮಯಮೆಸೆಯೆ–ಮುಂಜಾನೆಯ ಸಂಧಿಕಾಲವು ಸೊಗಸಾಗಲು, ತೞತೞ–ಥಳಥಳ ಎಂದು, ನೇಸರ್ಮ್ಮೂಡುವುದುಂ–ಸೂರ್ಯ ಹುಟ್ಟುತ್ತಲು, ಒಡ್ಡಣಕ್ಕೆ–ಯುದ್ಧರಂಗಕ್ಕೆ, ಎೞ್ತಂದರ್–ಬಂದರು.
ವಚನ : ಒಡ್ಡಿ–ಸೈನ್ಯವನ್ನು ಮುಂದಿಟ್ಟು, ಚಾಚಿ; ವಿಳಯಕಾಳಾನಿಳನೆ–ಪ್ರಳಯದ ಗಾಳಿಯೆ; ಕೆಯ್ವೀಸಿದಾಗಳ್–ಕೈಯನ್ನು ಬೀಸಿದಾಗ.
೭. ಚತುರಂಗಂ ಚತುರಂಗ ಸೈನ್ಯದೊಳ್–ಚತುರಂಗ ಸೈನ್ಯವು ಚತುರಂಗ ಸೈನ್ಯದಲ್ಲಿ, ಅಡುರ್ತುಂ–ಸಮೀಪಿಸಿ, ತಿಱ್ಱನೆ ಎಯ್ತಂದು–ತಿರ್ರೆಂದು ತಿರುಗುತ್ತ ಬಂದು, ತಾಗಿ–ಸಂಘಟ್ಟಿಸಿ, ತಡಂಮೆಟ್ಟದೆ–ನಿಧಾನವಾಗಿ ಹೆಜ್ಜೆ ಇಡದೆ, ಕಾದೆ–ಯುದ್ಧ ಮಾಡಲು, ಬಾಳ್ಗಳ–ಕತ್ತಿಗಳ, ಉಡಿಗಳ್–ಮುರುಕುಗಳು, ಜೀಱೆೞ್ದು–ಜೀರೆಂದು ಶಬ್ದ ಮಾಡಿ ಚಿಮ್ಮಿ, ಮಾರ್ತಾಗಿ– ಒಂದೊಂದಕ್ಕೆ ತಗುಲಿ, ಅಥವಾ ಪಾಱೇೞೆ–ಹಾರಿ ಏಳಲು, ಶೋಣಿತಧಾರೆಗಳ್–ರಕ್ತದ ಧಾರೆಗಳು, ಉರ್ಚಿ–ಸೂಸಿ, ಪೆರ್ಚಿ–ಹೆಚ್ಚಾಗಿ, ಸಿಡಿಯಲ್–ಸಿಡಿಯಲು, ವಿಮಾನಂಗಳು–(ದೇವತೆಗಳ) ವಿಮಾನಗಳು, ತೇಂಕಲ್–ತೇಲಾಡಲು, ಅಳ್ಕಿ–ಬೆದರಿ, ತಗುಳ್ದು–(ಒಬ್ಬರ ಹಿಂದೆ ಒಬ್ಬರು) ಓಡಿ, ದೇವರ್–ದೇವತೆಗಳು, ನಭೋಭಾಗದೊಳ್–ಆಕಾಶದ ಭಾಗದಲ್ಲಿ, ಮತ್ತಂ–ಪುನಃ, ಅತ್ತ–ಅತ್ತಕಡೆಗೆ, ಆಗಳೆ–ಆಗಲೇ, ತಳರ್ದರ್–ಚಲಿಸಿದರು, ಹೊರಟರು. ಅಡುರ್ತು ಅಡುಱು+ದು, ಅಡ್+ಉಱು–ಹತ್ತಿರ ಇರು, ಸಮೀಪಿಸು, ಲಕ್ಷ್ಮಣನಡುರ್ತು ಕಾಡುತ್ತಿರ್ದಂ, ಓವದೆ ಬಿಲ್ಲ ಬಿತ್ತೆಗಡುರ್ತಿಸೆ (ಅದೇ. ೧೩–೪೮), ತಪೋಭರಮನಡುರ್ತು ತಾಳ್ದಲ್ (ಚಂದ್ರಪು. ೨–೫೨) ಎಂದು ಕೆಲವು ಪ್ರಯೋಗಗಳಿವೆ.
ವಚನ : ಒಂದೊರ್ವರೊಳ್–ಒಬ್ಬೊಬ್ಬರಲ್ಲಿ; ಇದು ಓರೊರ್ವರೊಳ್ ಎಂದಿರ ಬೇಕು; ಪಾರೆಯಂಬಿನೊಳ್–ಹಾರೆಯಾಕಾರದ ಬಾಣದಲ್ಲಿ, ನೆಪ್ಪಿಂಗೆ–ಕತ್ತರಿಸುವಿಕೆಗೆ, ಕೊಲೆಗೆ, ನೆಪ್ಪುಗೊಳ್ಳದೆ–ಕತ್ತರಿಸುವಿಕೆಯನ್ನು ಕೊಳ್ಳದೆ ಎಂದರೆ ಕೊಲೆಗೆ ಕೊಲೆಯನ್ನು ಮಾಡದೆ, ನೇರ್+ಪು=ನೇರ್ಪು, ನೇರ್–ಕೃಂತನೇ; ಅಂತಕಲೋಕಮಂ–ಯಮಲೋಕ ವನ್ನು; ಎಯ್ದಿಸುವುದುಂ–ಸೇರಿಸುತ್ತಲೂ; ಎೞ್ಬಟ್ಟು–ಎಬ್ಬಿಸಿ ಓಡಿಸು;
೮. ಉತ್ಕೋಪಾದಹನದೊಡದೆ–ಅತಿಶಯವಾದ ಕೋಪಾಗ್ನಿಯೊಡನೆ, ಪೃಷತ್ಕಂಗಳ್– ಬಾಣಗಳು, ಕೋಟಿಗಣಿತದಿಂದೆ–ಕೋಟಿ ಲೆಕ್ಕದಿಂದ, ಉಱುವಿನಂ–ಇರುತ್ತಿರಲು, ಆರ್ದು– ಗರ್ಜಿಸಿ, ಉತ್ಕಚದಿತಿಜನಂ–ಕೆದರು ಕೂದಲುಳ್ಳ ರಾಕ್ಷಸನಾದ, ಘಟೋತ್ಕಚನಂ–ಘಟೋತ್ಕಚ ನನ್ನು, ಬಿೞ್ದು–ಬಿದ್ದು, ಮೂರ್ಛೆವೋಪಿನಂ–ಮೂರ್ಛೆಹೋಗುವಂತೆ, ಉಱದೆ–ಬಿಡದೆ, ಎಚ್ಚಂ–ಬಾಣಗಳಿಂದ ಹೊಡೆದನು.
ವಚನ : ತೆರಳ್ಚಿ–ಒಂದು ಮಾಡಿ, ಉಂಡೆಮಾಡಿ; ತೇರೈಸಿ–ಚಪ್ಪರಿಸಿ (?) (೨–೫೮) ಪದ್ಯವನ್ನು ನೋಡಿ; ಮಸಕದಿಂ–ಕೋಪದಿಂದ;
೯. ಇಸುವುದುಂ–ಬಾಣಪ್ರಯೋಗ ಮಾಡುತ್ತಲು, ಎಚ್ಚ ಶಾತಶರಸಂತತಿಯಂ–ಬಿಟ್ಟ ಹರಿತವಾದ ಬಾಣಗಳ ಸಮೂಹವನ್ನು, ಭಗದತ್ತಂ–ಭಗದತ್ತನು, ಎಯ್ದೆ–ಚೆನ್ನಾಗಿ, ಖಂಡಿಸಿ– ಕತ್ತರಿಸಿ, ರಥಮಂ–ರಥವನ್ನು, ಪಡಲ್ವಡಿಸಿ–ಧ್ವಂಸಮಾಡಿ ಬೀಳಿಸಿ, ಮಚ್ಚರದಿಂ–ಕತ್ತರಿಸಿ, ಗಜೆಗೊಂಡು–ಗದೆಯನ್ನು ಹಿಡಿದುಕೊಂಡು, ತಾಗೆ–(ಭಗದತ್ತನನ್ನು) ತಾಗಲು, ಮಾಣಿಸಲ್–(ಅವನನ್ನು) ನಿಲ್ಲಿಸಲು, ಅಮರಾಪಗಾಸುತಂ–ಭೀಷ್ಮನು, ಇದಿರ್ಚುವುದಂ– ಎದುರಿಸುತ್ತಲೂ, ಪವನಾತ್ಮಜಂ–ಭೀಮನು, ರಥಮೞ್ಗೆ–ರಥವು ನಾಶವಾಗುವಂತೆ, ಪೊಯ್ದು–ಹೊಡೆದು, ಶಂಕಿಸದೆ–ಹೆದರದೆ, ಇದಿರಾಂತ–ಎದುರು ನಿಂತ, ಸೈಂಧವನುಮಂ– ಜಯದ್ರಥನನ್ನೂ, ಓಡೆ–ಪಲಾಯನ ಮಾಡುವಂತೆ, ಕಾದಿದಂ–ಸೆಣಸಿದನು.
ವಚನ : ತಾಗಿದ ಬೇಗದಿಂ–ಸಂಘಟ್ಟಿಸಿದ ಶೀಘ್ರತೆಯಿಂದ, ಬಿರ್ದನಿಕ್ಕುವಂತಿಕ್ಕಿ– ಔತಣವಿಕ್ಕುವಂತೆ ಇಕ್ಕಿ: ಮತ್ತಿನ–ಬೇರೆಯ; ಬೞಿಸಂದಾಗಳ್–ಹಿಂದೆ ಅಟ್ಟಿಸಿಕೊಂಡು ಬಂದಾಗ; ಬಿರ್ದು=(ತ) ವಿರುಂದು=(ತೆ) ವಿಂದು–ಉತ್ಸವದ ಊಟ ಇತ್ಯಾದಿ.
೧೦. ಕೌರವರಂ–ಕೌರವರನ್ನು, ಕೊಲಲೆಂದು–ಕೊಲ್ಲಬೇಕೆಂದು, ಮೊದಲಿಟ್ಟಂ– (ಭೀಮನು) ಆರಂಭಿಸಿದನು; ಆರ್ದು–ಗರ್ಜಿಸಿ, ಉರ್ಚಿ–ಭೇದಿಸಿ, ಮುಕ್ಕದೆ–ತಿನ್ನದೆ, ಇನ್ನೇಕಿರ್ ಪಂ–ಇನ್ನೇಕೆ ಇರುವನು; ಇವಂಗೆ–ಈ ಭೀಮನಿಗೆ, ಆಂ–ನಾನು, ಕರಂ–ವಿಶೇಷವಾಗಿ, ಕೂರ್ಪೆಂ–ಪ್ರೀತಿಸುತ್ತೇನೆ; ಇವರುಂ–ಈ ಕೌರವರೂ, ಸತ್ತಪ್ಪರ್–ಸಾಯುತ್ತಾರೆ; ಇಂದಿಂಗೆ– ಇವತ್ತಿಗೆ, ಕಾವುದಂ–ರಕ್ಷಿಸುವುದನ್ನು, ಆಂ–ನಾನು, ಕಾವೆಂ–ರಕ್ಷಿಸುತ್ತೇನೆ; ಎನ್ನುತ್ತೆ–ಎನ್ನುತ್ತ, ಬೇಱೆ ರಥಮಂ–ಬೇರೆ ರಥವನ್ನು, ಬಂದೇಱಿ–ಬಂದು ಹತ್ತಿ, ಪೋ ಪೋಗಲ್–ಹೋಗ ಬೇಡ, ಹೋಗಬೇಡ, ಎಂದೊದಱುತ್ತುಂ–ಎಂದು ಕೂಗಿಕೊಳ್ಳುತ್ತ, ಪರಿತಂದು–ದೌಡಾಯಿಸಿ ಬಂದು, ಗಂಗಾಸುತಂ–ಭೀಷ್ಮನು, ಭೀಮನಂ–ಭೀಮನನ್ನು, ತಾಗಿ–ಎದುರಿಸಿ, ತಗರ್ದಂ– ಅಡ್ಡಗಟ್ಟಿದನು “ತಗರ್–ಗತಿಬಂಧನೇ”
ವಚನ : ಅಳಱೆ ಪೆಳಱೆ–ಹೆದರಲು ಬೆದರಲು; ಕಿವುೞೆದುೞಿದು ಕೊಲ್ವಲ್ಲಿ–ಅಮುಕಿ ಹಿಂಡುವಂತೆ ಕೊಲ್ಲುವಾಗ, “ಕಿಮುೞ್ಚಿ ಹಸ್ತಮರ್ದನೇ” ; (ಕಿಮುೞ್=ಕಿವುೞ್)+ಚು; ಕಿವುೞ್–ಹಿಂಡು ಎಂದಾಗಬಹುದು.
೧೧. ಪ್ರಳಯ ಪಯೋಧಿ ನಾದಮನೆ–ಪ್ರಳಯ ಕಾಲದ ಸಮುದ್ರದ ಘೋಷವನ್ನೇ, ಪೋಲ್ತು–ಹೋಲಿ, ರಣಾನಕರಾವಂ–ಯುದ್ಧದ ಭೇರೀ ಶಬ್ದಗಳು, ಈಗಳ್–ಈಗ, ಅಗ್ಗಳಂ– ವಿಶೇಷವಾಗಿ, ಎಸೆದಪ್ಪುದು–ಕೇಳಿ ಬರುತ್ತಿದೆ, ಅತ್ತ–ಅತ್ತ ಕಡೆ, ಕಱೆವ ಅಂಬಿನ ಬಲ್ಸರಿ ಯಿಂದಂ–ಸುರಿಯುವ ಬಾಣಗಳ ಬಲುಮಳೆಯಿಂದ, ಆ ದಿಶಾವಳಿ–ಆ ದಿಕ್ಕುಗಳ ಸಾಲು, ಮಸುಳ್ದು–ಕಾಂತಿಹೀನವಾಗಿ, ಇಂತು–ಹೀಗೆ, ನೀಳ್ದಪುದು–ಉದ್ದವಾಗಿದೆ, ಎಂದರೆ ಚಾಚಿ ಕೊಂಡಿದೆ; ಪೋಗದೆ ಕಾದುವ ಗಂಡರಿಲ್ಲ–ಹಿಮ್ಮೆಟ್ಟದೆ ಕಾದಾಡುವ ಶೂರರಿಲ್ಲ; ನಿನ್ನಳಿ ಯನುಂ–ನಿನ್ನ ಸೋದರಳಿಯನಾದ ಅಭಿಮನ್ಯುವೂ, ಆ ವೃಕೋದರನುಂ–ಆ ಭೀಮಸೇನನೂ, ಅಲ್ಲದೆ–ಅಲ್ಲದವರು, ಪೆಱರ್–ಇತರರು, ಮುರಾಂತಕ–ಕೃಷ್ಣನೇ, ಇಲ್ಲ.
೧೨. ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರ್–ದ್ರೋಣ ಅಶ್ವತ್ಥಾಮ ಶಲ್ಯ ಭಗದತ್ತ ಭೀಷ್ಮರು, ಎಂಬ–ಎನ್ನುವ, ಸಂದ ಬೀರರೆ–ಪ್ರಸಿದ್ಧರಾದ ವೀರರೆ, ಮಱುವಕ್ಕಂ– ಎದುರುಪಕ್ಷ, ಶತ್ರುಪಕ್ಷ; ಅಣ್ಣನೊಡನೆ–ಅಣ್ಣನಾದ ಭೀಮನೊಡನೆ, ಇರ್ವರೆ–ಇಬ್ಬರೆ, ಕೂಸುಗಳ್–ಮಕ್ಕಳು (ಎಂದರೆ ಅಭಿಮನ್ಯು ಘಟೋತ್ಕಚರು) ಎಂಬ ಶಂಕೆಯುಂ–ಎಂಬ ಭಯವೂ, ಎನಗೆ–ನನಗೆ, ಈಗಳ್–ಈಗ, ಪಿರಿದು ಆದಪುದು–ಹಿರಿದಾಗಿ ಆಗುತ್ತಿದೆ; ಮಾಣದೆ–ಬಿಡದೆ, ಅತ್ತಲತ್ತ–ಅತ್ತಕಡೆಗೆ, ರಥಮಂ–ರಥವನ್ನು, ಚೋದಿಸು–ಪ್ರೇರಿಸಿ ಬಿಡು, ಎಂದು–ಎಂದು ಹೇಳುತ್ತ, ಭೋರ್ಗರೆಯೆ–ಭೋರೆಂದು ಶಬ್ದ ಮಾಡಲು, ಅರಾತಿಗೆ– ಹಗೆಗೆ, ಮಿೞ್ತುಬರ್ಪವೋಲ್–ಸಾವು ಬರುವಂತೆ, ಬಂದಂ–ಬಂದನು. “ಮತ್ತಲತ್ತ ರಥಮನೆಂದು” ಎಂಬುದಕ್ಕೆ ಪ್ರತಿಯಾಗಿ “ಮತ್ತಲತ್ತರ [ದ] ಮನೆಂದು” ಎಂಬ ಪಾಠವಿದ್ದರೆ ಪದ್ಯದ ಓಟ ಚೆಲುವಾಗುತ್ತದೆ; ರಾಜ ಎಂಬುದು ಅರಸ ಆದಂತೆ ರಥ ಎಂಬುದು ಅರದವಾಗು ತ್ತದೆ; ಸಂಸ್ಕೃತದ ರಕಾರ ಲಕಾರಾದಿ ಶಬ್ದಗಳಿಗೆ ತಮಿಳಿನಲ್ಲಿ ಆದಿಯಲ್ಲಿ ಅಕಾರ, ಉಕಾರ, ಇಕಾರಗಳು ಸೇರಿ ತದ್ಭವಗಳಾಗುತ್ತವೆ; ಲೋಕ ಉಲಗಂ, ಲಕ್ಷ್ಮಣ ಇಲಕ್ಕಣಂ; ರೂಪಂ ಉರುವಂ ಇತ್ಯಾದಿ; ಇದರಂತೆ ರಥ ತಮಿಳಿನಲ್ಲಿ ಅರದವಾಗುತ್ತದೆ; ಅದು ಕನ್ನಡಕ್ಕೆ ಬಂದಿದೆ, ತಮಿಳಿನ ಮೂಲಕ; ಪೊನ್ನ ಕರ್ಣಪಾರ್ಯರು ಈ ಶಬ್ದವನ್ನು ಪ್ರಯೋಗಿಸಿದ್ದಾರೆ.
ವಚನ : ನೆಲನದಿರೆ–ನೆಲ ನಡುಗಲು; ಬರವಿಂಗೆ–ಬರುವಿಕೆಗೆ, ಆಗಮನಕ್ಕೆ; ಮೆಲ್ಲನೆ ಉಲಿದು–ಮೆಲ್ಲಗೆ ಸದ್ದು ಮಾಡಿ;
೧೩. ಎಡೆಗೊಂಡ–(=ಗೋದ)–ನಡುವೆ ಬಂದ, ಅಂಕದ–ಪ್ರಸಿದ್ಧರಾದ, ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ–ಶಲ್ಯ ಜಯದ್ರಥ ಕೃಪ ದ್ರೋಣರು ಕೂಡ, ಸಾಯಕಂಗಿಡೆ–ಬಾಣ ಗಳನ್ನು ವ್ಯರ್ಥವಾಗಿ ಬಿಡಲು, ತನ್ನೆಚ್ಚ–ತಾನು (ಅರ್ಜುನನು) ಪ್ರಯೋಗಿಸಿದ, ಶರಾಳಿಗಳ್–ಬಾಣಗಳ ಸಾಲು, ವಿಲಯ ಕಾಲೋಲ್ಕಂಗಳ್–ಪ್ರಳಯ ಕಾಲದ ಉಲ್ಕಾಪಾತಗಳು, ಆ ತಾಗಿ ದಾಗಡೆ–ಅಗೋ ತಗುಲಿದ ಕೂಡಲೇ, ತತ್ಸೂತ ರಥಾಶ್ವಕೇತನ ಶರವ್ರಾತಂಗಳುಂ–ಆ ಸಾರಥಿ ರಥ ಕುದುರೆ ಬಾವುಟ ಬಾಣಗಳ ಸಮೂಹಗಳೂ, ನುರ್ಗೆ–ನುರಿಯಾಗಲು, ನಮ್ಮ ಹರಿಗಂ– ನಮ್ಮ ಅರಿಕೇಸರಿ, ಅರ್ಜುನ, ಕಣ್ಗಿಡೆ–ಶತ್ರುಗಳು ಕಂಗೆಡಲು, ಅಂತು–ಹಾಗೆ, ಬೆನ್ನಟ್ಟಿದನ್– ಅಟ್ಟಿಸಿಕೊಂಡು ಹೋದನು; ಹರಿಗಂ–ಅರ್ಜುನ, ಗಂಡಂ–ಶೂರನು, ಪೆಱರ್–ಇತರರು, ಗಂಡರೇ–ಶೂರರೇ?
ವಚನ : ಕುಳುಂಪೆಯಂ–ಹೊಂಡದ, ಕುಂಟೆಯ; ಕೆದಱುವನ್ನಂ–ಸಿಡಿಯುತ್ತಿರಲು; ಅಳುಂಬಮಾದ–ಅತಿಶಯವಾದ; ಕನಕ ತಾಳಧ್ವಜಂಗೆ–ಹೊಂದಾಳೆಯ ಚಿಹ್ನವನ್ನು ಧ್ವಜದಲ್ಲುಳ್ಳವನಿಗೆ ಎಂದರೆ ಭೀಷ್ಮನಿಗೆ,
೧೪. ಅಜ್ಜ–ತಾತನಾದ ಭೀಷ್ಮನೇ, ಮುಳಿ [ಯಲ್]–ಕೋಪ ಮಾಡಬೇಡ, ಬಿನ್ನಪಂ– ಬಿನ್ನಹ, ದಾಯಿಗರೊಳ್–ದಾಯಾದಿಗಳಲ್ಲಿ, ವಿರೋಧಮಂ–ಹಗೆತನವನ್ನು, ಇಂತು– ಹೀಗೆ, ಬಳ್ವಳನೆ–ಅತಿಶಯವಾಗಿ, ಮಾೞ್ಪುದಂ–ಮಾಡುವುದನ್ನು, ನಿಮ್ಮನೆ–ನಿಮ್ಮನ್ನೇ, ನಂಬಿ–ನಚ್ಚಿ, ಮಾಡಿದೆಂ–ಮಾಡಿದೆನು; ಇಂತು–ಹೀಗೆ, ಗೋವಳಿಗನಂ ಗೆಡೆಗೊಂಡು– ಗೋಪಾಲನಾದ ಕೃಷ್ಣನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು, ಮುಂ–ಮುಂಚೆ, ಬಳೆದೊಟ್ಟ– ಬಳೆಯನ್ನು ಧರಿಸಿದ, ಪೇಡಿಯೆ–ಹೇಡಿಯಾದ ಅರ್ಜುನನೇ, ನಿಮ್ಮಂ–ನಿಮ್ಮನ್ನು, ಇಂತು– ಹೀಗೆ, ಇಳಿಸಿ–ಕಡೆಗಣಿಸಿ, ಮದ್ಬಲಮೆಲ್ಲಮಂ–ನನ್ನ ಸೈನ್ಯವನ್ನೆಲ್ಲ, ಕೊಲೆ–ಕೊಲ್ಲಲು. ನೋಡುತಿರ್ಪುದು–ನೋಡುತ್ತ ಇರುವುದು, ಪಾೞಿಯೇ–ಧರ್ಮವೇ? ಅಲ್ಲ ಎಂದು ದುರ್ಯೋಧನನ ಅಭಿಪ್ರಾಯ.
೧೫. ಮೇಳದೊಳ್–ಸ್ನೇಹದಲ್ಲಿ, ಎಂತುಂ–ಹೇಗೂ, ಪೆಱರ ಆಳಂ–ಇತರರ ಶೂರರನ್ನು, ಎಂದರೆ ಶತ್ರುಪಕ್ಷದ ಶೂರರನ್ನು, ಛಿದ್ರಿಸುವೆವು–ಭೇದಿಸುತ್ತೇವೆ, ಪೋ–ಹೋಗು, ಎಂಬ– ಎನ್ನುವ, ಪಾಂಡವರೊಳ್–ಪಾಂಡವರಲ್ಲಿ, ಮೇಳಿಸಿ–ಸೇರಿಕೊಂಡು, ನಣ್ಪನೆ–ನಂಟತನವನ್ನೇ, ಬಾಂಧವ್ಯವನ್ನೇ, ಬಗೆದಿರ್–ಬಗೆದಿರಿ, ಜೋಳದ ಪಾೞಿಯುಮಂ–ಅನ್ನವಿಟ್ಟ ಧರ್ಮವನ್ನೂ ಎಂದರೆ ಅನ್ನದ ಋಣವನ್ನೂ, ಇನಿಸು–ಸ್ವಲ್ಪ, ನಿಮ್ಮೊಳ್–ನಿಮ್ಮಲ್ಲಿ, ಬಗೆಯಿಂ–ಭಾವಿಸಿರಿ.
೧೬. ಒರ್ವಂ–ಒಬ್ಬನು (ಶ್ರೀಕೃಷ್ಣನು), ಕೇಳ್–ಕೇಳು, ತ್ರಿಜಗಕ್ಕಂ–ಮೂರು ಲೋಕಕ್ಕೂ, ಗುರು; ದೇವಂ–ದೇವನು; ಆದಿಪುರುಷಂ–ಪ್ರಥಮ ಪುರುಷನಾದವನು; ಒರ್ವಂ–ಒಬ್ಬನು (ಅರ್ಜುನನು), ರಿಪುಧ್ವಜಿನೀ ಧ್ವಂಸಕನಾಗಿ–ಶತ್ರು ಸೈನ್ಯಗಳನ್ನು ನಾಶಮಾಡುವವನಾಗಿ, ಸಂದ ಕಲಿಯುಂ ಬಿಲ್ಲಾಳುಂ–ಪ್ರಸಿದ್ಧನಾದ ಶೂರನೂ, ಬಿಲ್ಗಾರನೂ; ಇನ್ನೆಂದೊಡೆ–ಇನ್ನು ಎಂದರೆ, ಜಗತ್ಖ್ಯಾತರಂ–ಲೋಕವಿಖ್ಯಾತರಾದ ಕೃಷ್ಣಾರ್ಜುನರನ್ನು, ಎಂತು–ಹೇಗೆ, ಏಳಿಪಯ್–ತಿರಸ್ಕರಿಸುತ್ತೀಯ? ಮುಂ ಪೂಣ್ದುದಂ–ಮೊದಲು ಪ್ರತಿಜ್ಞೆ ಮಾಡಿದುದನ್ನು, ಮಱೆವೆನೇ–ಮರೆಯುತ್ತೇನೆಯೇ? ರಥಂ ಧ್ವಜಂ ಅಂಬು ಎಂಬಿವಂ–ರಥ ಧ್ವಜ ಬಾಣ ಎಂಬಿವುಗಳನ್ನು, ಎಯ್ದೆ–ಚೆನ್ನಾಗಿ, ಸಂಧಿಸು–ಕೂಡಿಸು, ನೆರಹು; ಜಸಂ–ಕೀರ್ತಿಯು, ನಿಲ್ವನ್ನೆಗಂ–ಶಾಶ್ವತವಾಗಿ ನೆಲಸುತ್ತಿರಲು, ಕಾದುವೆಂ–ಯುದ್ಧ ಮಾಡುವೆನು.
ವಚನ : ಪೆಱಗೆ–ಹಿಂದೆ; ಒರ್ವರೊರ್ವರಂ ಗಱಿಸನ್ನೆಗೈದು–ಒಬ್ಬರೊಬ್ಬರಿಗೆ ಬಾಣದ ಗರಿಯಿಂದ ಸಂಜ್ಞೆ ಮಾಡಿ; ಚೌಪಳಿಗೆಗಳೊಳ್–ಚೌಕಾಕಾರದ ಮುಖ ಮಂಟಪಗಳಲ್ಲಿ; ಕಲಂಕೆ–ಕಲಕಲು;
೧೭. ಉಪಮಾತೀತದ–ಹೋಲಿಕೆಗೆ ಮೀರಿದ, ಬಿಲ್ಲಬಲ್ಮೆ–ಬಿಲ್ವಿದ್ದೆಯ ನೈಪುಣ್ಯ, ಸಮ ಸಂದು–ಸಮಾನವಾಗಿ ಸೇರಿ, ಒಂದೊರ್ವರೊಳ್–ಒಬ್ಬೊಬ್ಬರಲ್ಲಿ, ಪರ್ಬೆ–ಹಬ್ಬಲು; ಪರವ್ಯೂಹ ಭಯಂಕರಂ–ಶತ್ರುಸೈನ್ಯ ಭೀಕರನಾದ ಅರ್ಜುನ, ಪರ್ವಿ–ವ್ಯಾಪಿಸಿ, ನೆಗೆದು– ಹಾರಿ, ಪಾರ್ದು–ನೋಡಿ, ಆರ್ದು–ಗರ್ಜಿಸಿ, ಎಚ್ಚೊಡೆ–ಬಾಣಪ್ರಯೋಗ ಮಾಡಿದರೆ, ಅಂಬು ಅಂಬಂ ಅಟ್ಟಿ–ಬಾಣಗಳು ಬಾಣಗಳನ್ನು ಅನುಸರಿಸಿ, ಪಳಂಚುತ್ತೆ–ಸಂಘಟಿಸುತ್ತ, ಸಿಡಿಲ್ದ– ಸಿಡಿದ, ತೋರಗಿಡಿಯಿಂ–ದಪ್ಪನಾದ ಕಿಡಿಗಳಿಂದ, ಒಂದೊಂದಱೊಳ್–ಒಂದು ಬಾಣ ಇನ್ನೊಂದರಲ್ಲಿ, ಬೇವುತಂ–ಸುಡುತ್ತ, ತ್ರಿಪುರಂ ಬೊತ್ತಿಸಿದಂತೆ–ತ್ರಿಪುರಗಳನ್ನು ಉರಿ ಮುಟ್ಟಿಸುವ ಹಾಗೆ, ವಿಯನ್ಮಂಡಳಂ–ಆಕಾಶ ಮಂಡಲವು, ಪೊತ್ತಿ–ಹೊತ್ತಿಕೊಂಡು, ಎತ್ತಂ–ಎಲ್ಲೆಲ್ಲೂ, ಪೊಗೆದತ್ತು–ಹೊಗೆಯಾಡಿತು. ತೋರ (ಪ್ರಾ) ಥೋರ (ಸಂ) ಸ್ಥೂಲ.
ವಚನ : ಬ್ರಹ್ಮಾಂಡಮುರಿಯೆ–ಬ್ರಹ್ಮನ ಮೊಟ್ಟೆ ಎಂದರೆ ಸಮಸ್ತ ಸೃಷ್ಟಿ ಉರಿಯಲು.
೧೮. ನಡಪಿದಂ–ಸಾಕಿಸಲಹಿದವನು, ಅಜ್ಜಂ–ತಾತನಾದ ಭೀಷ್ಮ, ಎಂದು, ವಿಜಯಂ– ಅರ್ಜುನ, ಕಡುಕೆಯ್ದು–ತೀವ್ರತೆಯನ್ನು ತೋರಿಸಿ, ಇಸಂ–ಬಾಣ ಪ್ರಯೋಗ ಮಾಡನು; ಎನ್ನ–ನನ್ನ, ಮಮ್ಮಂ–ಮೊಮ್ಮಗ, ಆಂ–ನಾನು, ನಡಪಿದೆಂ–ಸಾಕಿದೆನು, ಎಂದು, ಸಿಂಧು ತನಯಂ–ಭೀಷ್ಮನು, ಕಡುಕೆಯ್ದು–ತೀವ್ರತೆಯನ್ನು ಪ್ರದರ್ಶಿಸಿ, ಇಸಂ–ಬಾಣಬಿಡನು; ಇಂತು–ಹೀಗೆ, ಪಾಡುಗಾದು–ಸ್ಥಿತಿಯನ್ನು ಕಾಪಾಡಿ, ಒಡನೊಡನೆ–ಕೂಡಲೇ, ಇರ್ವರುಂ– ಇಬ್ಬರೂ, ಶರಾಸನ ವಿದ್ಯೆ [ಯಂ]–ಬಿಲ್ವಿದ್ಯೆಯನ್ನು, ಮೆಱೆಯಲೆಂದೆ–ತೋರಿಸಬೇಕೆಂದೇ, ಎತ್ತಂ–ಎಲ್ಲೂ, ಇತ್ತಂ–ಇಲ್ಲೂ, ಇದಿರೊಳ್–ಎದುರಿನಲ್ಲಿ, ಮಲೆದು–ಪ್ರತಿಭಟಿಸಿ, ಒಡ್ಡಿದ–ಚಾಚಿದ, ಚಾತುರಂಗಮಂ–ಚತುರಂಗ ಸೈನ್ಯವನ್ನು, ಪಡಲ್ವಡಿಸಿದರ್–ಚೆಲ್ಲಾಪಿಲ್ಲಿ ಯಾಗಿ ಕೆಡವಿದರು.
ವಚನ : ಕಿಱಿದು ಪೊೞ್ತು–ಸ್ವಲ್ಪ ಹೊತ್ತು; ಕೆಯ್ಗಾದು–ಕೈಯನ್ನು ರಕ್ಷಿಸಿ, ಎಂದರೆ ಧಾರಾಳವಾಗಿ ಬಾಣಪ್ರಯೋಗ ಮಾಡದೆ, ಸರಿತ್ಸುತನ–ಭೀಷ್ಮನ; ಏವಮಂ ಮಾಡೆ–ಕೋಪ ವನ್ನುಂಟುಮಾಡಲು,
೧೯. ಮುನಿದು–ಕೆರಳಿ, ಎರಡಂಬಿನೊಳ್–ಎರಡು ಬಾಣಗಳಲ್ಲಿ, ರಥಮುಮಂ– ರಥವನ್ನೂ, ಪದವಿಲ್ಲುಮಂ–ಹದವಾದ ಬಿಲ್ಲನ್ನೂ, ಎಯ್ದೆ ಪಾರ್ದು–ಚೆನ್ನಾಗಿ ನೋಡಿ, ನೆಕ್ಕನೆ–ನೆಕ್ಕೆಂದು, ಕಡಿದು–ಕತ್ತರಿಸಿ, ಇಂದ್ರಸೂನು–ಅರ್ಜುನ, ಅಳುರ್ಕೆಯಿಂ–ಆಧಿಕ್ಯ ದಿಂದ, ಆರ್ದೊಡೆ–ಗರ್ಜಿಸಿದರೆ, ದಿವ್ಯಸಿಂಧುನಂದನಂ–ದೇವನದಿಯ ಮಗ ಭೀಷ್ಮ, ಬೇಱೆ ರಥಮಂ–ಇನ್ನೊಂದು ರಥವನ್ನು, ಇರದೆ ಏಱಿ–ಇರದೆ ಹತ್ತಿ, ಪೆಱತೊಂದು–ಬೇರೊಂದು, ಶರಾಸನಕ್ಕೆ–ಬಿಲ್ಲಿಗೆ, ಮೆಲ್ಲನೆ–ಮೆಲ್ಲಗೆ, ನಿಡುದೋಳನುಯ್ದು–ಉದ್ದವಾದ ತೋಳುಗಳನ್ನು ಚಾಚಿ–ಕರಂ ಅಚ್ಚರಿಯಾಗೆ–ವಿಶೇಷವಾಗಿ ಆಶ್ಚರ್ಯವುಂಟಾಗಲು, ಕಡಂಗಿ–ಉತ್ಸಾಹಿಸಿ, ಕಾದಿದಂ–ಯುದ್ಧ ಮಾಡಿದನು.
ವಚನ : ತೋಡುಂ ಬೀಡುಂ–ಬಾಣವನ್ನು ಹೂಡುವುದೂ ಬಿಡುವುದೂ; ಎರ್ದೆ ಗಾಯಲ್–ಮನವನ್ನು ವಶದಲ್ಲಿಟ್ಟುಕೊಳ್ಳಬೇಕೆಂದು; ಎಕ್ಕೆಯಿಂ–ಒಂದೇ ಸಲ, ತಂಡ ತಂಡದೆ–ರಾಶಿರಾಶಿಯಾಗಿ, ತೀವಿದ–ತುಂಬಿದ, ಅಕಾಂಡ ಪ್ರಳಯಾನಿಲ ವಿಸ್ಫುಲಿಂಗೋಪ ಮಾನಂಗಳಪ್ಪ–ಅಕಾಲದ ಪ್ರಲಯಾಗ್ನಿಯ ಕಿಡಿಗಳಿಗೆ ಸಮಾನಗಳಾದ; ನಿಶಿತಕಾಂಡಂ ಗಳಿಂದೆ–ಹರಿತವಾದ ಬಾಣಗಳಿಂದ, ಪಯಿಂಛಾಸಿರ್ವರ್–ಹತ್ತು ಸಾವಿರ; ಮಕುಟಬದ್ಧ ರುಮಂ–ರಾಜರನ್ನೂ, ತುರುಷ್ಕ–ಟರ್ಕಿ ದೇಶದ, ಪೇಸೇೞೆ–ಜುಗುಪ್ಸೆಯೇಳುವಂತೆ; ಸೂೞೊಳೆ–ಸರದಿಯಲ್ಲೇ; ತೊಡು ತೋಡು, ಬಿಡು ಬೀಡು; ಎರಡೂ ಭಾವನಾಮಗಳು.
೨೦. ನುಡಿವಳಿಗೆ–ಮಾತುಗಾರಿಕೆಗಾಗಿ, ಎಂದರೆ ಪ್ರತಿಜ್ಞೆಗಾಗಿ, ನರನ ರಥಮಂ–ಅರ್ಜುನನ ರಥವನ್ನು, ಪಡುವು–ಪಶ್ಚಿಮಕ್ಕೆ, ಎಣ್ಗಾವುದುವರಂ–ಎಂಟು ಗಾವುದದವರೆಗೆ, ಸಿಡಿಲ್ವಿನಂ– ಸಿಡಿದು ಹೋಗುವಂತೆ, ಎಚ್ಚು–ಹೊಡೆದು, ಅಚ್ಚುಡಿಯೆ–ರಥದ ಅಚ್ಚನ್ನು ಮುರಿಯಲು, ಭುಜ ಬಲದೆ–ಬಾಹುಬಲದಿಂದ, ಹರಿಯ–ಕೃಷ್ಣನ, ಉರದೆಡೆಯಂ–ಎದೆಯ ಪ್ರದೇಶವನ್ನು, ಬಿರಿಯೆಚ್ಚು–ಬಿರಿಯುವಂತೆ ಹೊಡೆದು, ಭೀಷ್ಮಂ–ಭೀಷ್ಮನು, ಅಳವಂ–ಶಕ್ತಿಯನ್ನು, ಮೆಱೆದಂ–ಪ್ರಕಟಿಸಿದನು.
೨೧. ದೇವಾಸುರದೊಳಂ–ದೇವದಾನವರ ಯುದ್ಧದಲ್ಲೂ, ಇಂದಿನ–ಇವತ್ತಿನ, ನೋವಂ–ಯಾತನೆಯನ್ನು, ನೊಂದು–ನೋವನ್ನು ಹೊಂದಿ, ಅಱಿಯೆಂ–ತಿಳಿಯೆನು; ಉೞಿದ ಕೆಯ್ದುವಿನೊಳಂ–ಮಿಕ್ಕ ಆಯುಧಗಳಲ್ಲೂ, ಇವಂ–ಈ ಭೀಷ್ಮನು, ಸಾವನೆ– ಸಾಯುತ್ತಾನೆಯೆ? ಸೆರಗಂ ಬಗೆದೊಡೆ–ಸಹಾಯವನ್ನು ಅಪೇಕ್ಷಿಸಿದರೆ, ಸಾವಾದಪುದು– ಮರಣವಾಗುತ್ತದೆ, ಎಂದು, ಚಕ್ರಿ–ಕೃಷ್ಣನು, ಚಕ್ರದೊಳ್–ಚಕ್ರಾಯುಧದಲ್ಲಿ, ಇಟ್ಟಂ– ಹೊಡೆದನು. ಸೆರಗಂ ಎಂಬುದಕ್ಕೆ ಅರ್ಥ ಅನಿರ್ದಿಷ್ಟ; ಕೇಡು, ಅಪಾಯ, ಭಯ ಎಂದು ಕೆಲವು ವೇಳೆ ಅರ್ಥವಾದರೆ ಇತರ ಸಂದರ್ಭಗಳಲ್ಲಿ ಸಹಾಯ ಎಂಬರ್ಥ ಹೊಂದಿಕೆಯಾಗು ತ್ತದೆ; ಸೆರಗಂ ಪಾರ್ದಪನೆಂಗುಮೀಧರೆ ಗದಾದಂಡಂ ಭುಜಾದಂಡಂ ಸಂಜಯ ಮಜ್ಜಯಕ್ಕೆ ನೆರವು, ಮತ್ತಾರ್ ನೆರಂ ಬಾರ್ವೆನೇ (ಗದಾ. ೩–೪೭); ಸೆರಗಂ ಪಾರದುದಾತ್ತ ರಾಘವನ ಮಾತಂ ಕೇಳ್ದು ಜಾಂಬೂನದಂ (ಪಂಪರಾ. ೧೧–೭) ಎಂಬ ಪ್ರಯೋಗಗಳನ್ನು ನೋಡ ಬಹುದು; ಕೆಲವು ವೇಳೆ ಎರಡು ಅರ್ಥಗಳೂ ಹೊಂದುತ್ತವೆ; ಖರದೂಷಣರಂ ಕೊಂದರ್ ವಿರಾಧಿತಂಗವನ ಪೂರ್ವವೃತ್ತಿಯನಿತ್ತರ್ ಸೆರಗಿಲ್ಲದವರ್ ಕಾರಣಪುರುಷರ್ (ಪಂಪರಾ. ೧–೧೯೯); ‘ಸೆರಗಂ ಬೆರಗಂ ಬಗೆಯದೆ’ ಎಂಬ ನುಡಿಗಟ್ಟಿನಲ್ಲಿ ಇದು ಸಾಧಾರಣವಾಗಿ ಬರುತ್ತದೆ.
೨೨. ಇಟ್ಟೊಡೆ–ಹೊಡೆದರೆ, ತನಗೆ, ಅಸುರಾರಿಯ–ವಿಷ್ಣುವು, ಕೊಟ್ಟ, ಮಹಾ ವೈಷ್ಣ ವಾಸ್ತ್ರಮಂ–ಮಹಾ ವೈಷ್ಣವಾಸ್ತ್ರವನ್ನು, ಗಾಂಗೇಯಂ–ಭೀಷ್ಮನು, ತೊಟ್ಟು–ಹೂಡಿ, ಇಸುವುದುಂ–ಪ್ರಯೋಗಿಸುತ್ತಲು, ಎರಡುಂ–ಎರಡು ಅಸ್ತ್ರಗಳೂ, ಕಿಡಿಗುಟ್ಟಿ–ಕಿಡಿಗಳನ್ನು ಕಾರಿ, ಸಿಡಿಲ್ ಸಿಡಿಯೆ–ಸಿಡಿಲು ಸಿಡಿಯಲು, ಅಂಬರ ತಲದೊಳ್–ಆಕಾಶ ಪ್ರದೇಶದಲ್ಲಿ, ಪೋರ್ದುವು–ಹೋರಾಡಿದುವು.
೨೩. ಪೋರ್ವುದುಂ–ಹೋರಾಡುತ್ತಲು, ಇಂ–ಇನ್ನು, ಪೆಱತಂಬಿಂ–ಬೇರೆಯ ಬಾಣ ದಿಂದ, ಪಗೆ–ಶತ್ರುತ್ವವು, ತೀರ್ವುದೆ–ಮುಗಿಯತ್ತದೆಯೆ, ಎಂದು, ಪಾಶುಪತಮಂ–ಪಾಶು ಪತಾಸ್ತ್ರವನ್ನು, ಪಿಡಿಯಲ್–ಹಿಡಿಯಲು, ಅರ್ಜುನಂ–ಅರ್ಜುನನು, ಪಾರ್ವುದುಂ–ನೋಡು ತ್ತಿರಲು, ಆಗಳ್–ಆಗ, ಬೇರ್ವೆರಸು–ಬೇರು ಸಮೇತವಾಗಿ, ಕಿೞಲ್ಕೆ–ಕೀಳುವುದಕ್ಕೆ, ಬಗೆಯೆ– ಯೋಚಿಸಲು, ಸುರರ್–ದೇವತೆಗಳು, ಎಡೆವೊಕ್ಕರ್–ನಡುವೆ ಹೊಕ್ಕರು (ಅರ್ಜುನ ಪಾಶು ಪತವನ್ನು ಹೂಡಬಾರದೆಂಬುದನ್ನು ಸೂಚಿಸುವುದಕ್ಕಾಗಿ).
೨೪. ಸೂರ್ಯ ಮುಳುಗಿ ದಿನದ ಯುದ್ಧ ಮುಗಿದದ್ದು: ಅಸುರಾರಿಯ–ಕೃಷ್ಣನು, ಪಿಡಿವ– ಹಿಡಿಯುವ, ಉನ್ನತ ಕರಚಕ್ರಮೆಂದು–ಶ್ರೇಷ್ಠವಾದ ಕೈಯ ಚಕ್ರವೆಂದು, ಎನ್ನುಮಂ ನನ್ನನ್ನೂ, ಭೀಷ್ಮಂ–ಭೀಷ್ಮನು, ತಱಿಗುಂ–ಕತ್ತರಿಸುವನು, ಮುನ್ನಂ–ಮೊದಲು, ಅಡಂಗುವೆನೆಂಬ ವೋಲ್–ಮರೆಯಾಗುತ್ತೇನೆ ಎನ್ನುವಂತೆ, ದಿನಪಂ–ಸೂರ್ಯನು, ಅಸ್ತಾಚಲಸ್ಥನಾದಂ– ಪಶ್ಚಿಮದ ಬೆಟ್ಟದಲ್ಲಿ ನಿಂತವನಾದನು.
ವಚನ : ಅಪಹಾರತೂರ್ಯಂಗಳಂ–ಯುದ್ಧ ನಿಂತಿತೆಂದು ಸೂಚಿಸುವ ವಾದ್ಯಗಳನ್ನು; ಮುನ್ನೊತ್ತಿದ ವೇಳೆಗಳ್–ಮೊದಲು ಒತ್ತರಿಸಿಕೊಂಡ ಕಡಲ ಮೇರೆಗಳು, ಬೀಡುಗಳಂ–ಶಿಬಿರ ಗಳನ್ನು.
೨೫. ಅರಸಂ–ಧರ್ಮರಾಜನು, ಅಸುರ ವೈರಿಯಂ–ಕೃಷ್ಣನನ್ನು, ಮನೆಗೆ ಬರಿಸಿ–ತನ್ನ ಮನೆಗೆ ಬರಮಾಡಿಕೊಂಡು, ಚಕ್ರಂ–ಚಕ್ರಾಯುಧವು, ಭೀಷ್ಮಂಗೆ–ಭೀಷ್ಮನಿಗೆ, ಇಂತು– ಹೀಗೆ, ಏಕೆ–ಏತಕ್ಕೆ, ಮೊಗಂದಿರಿದುದೋ–ಮುಖವನ್ನು ತಿರುಗಿಸಿತೊ, ವಿಮುಖ ವಾಯಿತೊ? ಅಸುರಾರೀ–ಕೃಷ್ಣನೇ, ನಿಮ್ಮಂ ಪಿಡಿದ–ನಿಮ್ಮನ್ನು ಹಿಡಿದುಕೊಂಡಿರುವ ಎಂದರೆ ಆಶ್ರಯಿಸಿರುವ, ಎನಗೆ–ನನಗೆ, ಧುರದೊಳ್–ಯುದ್ಧದಲ್ಲಿ, ಅರಿದೆನಲ್–ಅಸಾಧ್ಯವೆನ್ನಲು, ಅರಿದು–ಅಶಕ್ಯವಾದುದು, ಉಂಟೇ–ಇದೆಯೇ?
೨೬. ಬೆಸಸೆನೆ–ಹೇಳು ಎನ್ನಲು, ನುಡಿದಂ–(ಕೃಷ್ಣನು) ಹೇಳಿದನು; ಭೀಷ್ಮಂ–ಭೀಷ್ಮನು, ಮುರನೆಂಬಸುರನಂ–ಮುರನೆಂಬ ರಾಕ್ಷಸನನ್ನು, ಎನಗಾಗಿ–ನನಗಾಗಿ, ಕಾದಿ–ಯುದ್ಧಮಾಡಿ, ಪಿಡಿದು–ಹಿಡಿದು, ಒಪ್ಪಿಸಿದೊಡೆ–ಒಪ್ಪಿಸಿದರೆ, ವೈಷ್ಣವ ಬಾಣಮಂ–ವೈಷ್ಣವಾಸ್ತ್ರವನ್ನು, ಒಸೆದು–ಸಂತೋಷಿಸಿ, ಇತ್ತೆಂ–ಕೊಟ್ಟೆನು; ಅದಂ ಗೆಲಲ್ಕೆ–ಅದನ್ನು ಗೆಲ್ಲುವುದಕ್ಕೆ, ಕೆಯ್ದು ಗಳೊಳ್–ಆಯುಧಗಳು, ಒಳವೇ–ಇವೆಯೇ? ಇಲ್ಲ.
೨೭. ಭೇದದೊಳಲ್ಲದೆ–ಭೇದೋಪಾಯದಲ್ಲಿ ಅಲ್ಲದೆ, ಗೆಲಲ್–ಗೆಲ್ಲಲು, ಅರಿದಾದಂ– ಅಸಾಧ್ಯನಾದವನು; ಸುರಸಿಂಧು ಸುತನಂ–ಭೀಷ್ಮನನ್ನು, ಇಂದು ಇರುಳೊಳ್–ಇಂದು ರಾತ್ರಿ ಯಲ್ಲಿ, ನೀಂ–ನೀನು, ಭೇದಿಸು–ಛಿದ್ರಿಸು, ಎನೆ–ಎನ್ನಲು, ನೃಪತಿಯೋರ್ವನೆ–ರಾಜನಾದ ಧರ್ಮಪುತ್ರನೊಬ್ಬನೇ, ಆದರದಿಂ ಬಂದು–ಪ್ರೀತಿಯಿಂದ ಬಂದು, ಸಿಂಧುಸುತನಂ–ಭೀಷ್ಮ ನನ್ನು, ಕಂಡಂ–ನೋಡಿದನು.
೨೮. ಕಂಡು–ನೋಡಿ, ಪೊಡೆವಟ್ಟು–ನಮಸ್ಕರಿಸಿ, ನಯಂ–ನಮ್ರತೆಯು, ಎರ್ದೆ ಗೊಂಡಿರೆ–ಮನವನ್ನು ತುಂಬಿರಲು, ಪತಿ ನುಡಿದಂ–ಧರ್ಮರಾಜನು ಹೇಳಿದನು; ದೇವರ್– ಸ್ವಾಮಿಗಳು, ಕಲುಷಂಗೊಂಡಾಗಳ್–ಕೋಪಗೊಂಡಾಗ, ಕಾವರೆ ಕಣೆಗೊಂಡವೊಲ್– ಕಾಪಾಡುವವರೆ ಬಾಣವನ್ನು ಹೂಡಿದ ಹಾಗೆ, ಎಂದೆಂಬ ಮಾತಿನಂತೆ–ಎಂದು ಹೇಳುವ ಗಾದೆಯ ಮಾತಿನಂತೆ, ಆಗಿರದೇ–ಆಗಿರುವುದಿಲ್ಲವೆ? “ಕಾವರೆ ಕಣೆಗೊಳ್ವೊಡಬ್ಬೆ ಬಾರಿ ಪರೊಳರೇ” ಎಂದು ಜನ್ನನ ಪ್ರಯೋಗವಿದೆ (ಯಶೋಚ); “ಕಾವರೆಕಣೆಗೊಂಡರೆಂಬ ನುಡಿಗೆಡೆಯಕ್ಕುಂ” ಎಂದು ನಾಗಚಂದ್ರನ ಪ್ರಯೋಗ (ಪಂಪರಾ. ೯–೯೧).
೨೯. ತೊಂಬಯ್ ಸಾಸಿರ್ವರ್–ತೊಂಬತ್ತು ಸಾವಿರ, ಮಕುಟಬದ್ಧರ್–ರಾಜರು, ನಿಮ್ಮಂಬಿನ–ನಿಮ್ಮ ಬಾಣಗಳ, ಬಂಬಲೊಳೆ–ಸಮೂಹದಲ್ಲಿಯೇ, ಮಡಿದರ್–ಸತ್ತರು, ನಂಬಿಂ–ನಂಬಿರಿ, ನಂಬಲಿಂ–ನಂಬದಿರಿ, ಇಂದಿಂಗೆ–ಇವತ್ತಿಗೆ, ಒಂಬತ್ತು ದಿನಂ ದಲ್– ಒಂಬತ್ತು ದಿವಸಗಳು, ದಿಟವಾಗಿಯೂ, ಎಮ್ಮ–ನಮ್ಮ, ಬೆನ್ನಲೆನಿಂದಿರ್–ಬೆನ್ನ ಪೀಡೆಯಾಗಿ ನಿಂತಿರಿ, ಎಂದರೆ ನಮ್ಮನ್ನು ನೋಯಿಸುವವರಾದಿರಿ.
೩೦. ಚಕ್ರಿಯ ಚಕ್ರದೊಳಂ–ಶ್ರೀಕೃಷ್ಣನ ಚಕ್ರಾಯುಧದಲ್ಲಿಯೂ, ಎಚ್ಚ–(ನೀವು) ಹೂಡಿದ, ನಿಜಪತತ್ರಿ–ನಿಮ್ಮ ಬಾಣ, ತೊಡರ್ದು–ಅಡ್ಡಗಟ್ಟಿ, ಆಕ್ರಮಿಸಿದುದು–ಬಳಸಿ ಕೊಂಡಿತು, ದಲ್–ದಿಟ, ಎನೆ–ಎನ್ನಲು, ನಿಮ್ಮೀ–ನಿಮ್ಮ ಈ, ಕ್ರಮಕಮಲಕ್ಕೆ–ಪಾದ ಕಮಲಕ್ಕೆ, ಎಱಗದೆ–ಬಾಗದೆ, ವಕ್ರಿಸಿ–ವಕ್ರವಾಗಿ, ಬಾೞ್ವರುಂ–ಬಾಳುವವರೂ, ಭೂಚಕ್ರ ದೊಳಗೆ–ಭೂಮಂಡಲದೊಳಗೆ, ಒಳರೇ–ಇದ್ದಾರೆಯೇ? ಇಲ್ಲ.
೩೧. ಸಾವೆ ನಿಮತಿಚೆ, ಯೆನೆ–ಮರಣವೇ ನಿಮ್ಮ ಇಚೆ, ಯೆನಲು, ಆವಂ–ಯಾರು, ತಳ್ತಿಱಿದು–ಎದುರಾಗಿ ನಿಂತು, ಪೊಣರ್ದು–ಹೋರಾಡಿ, ಗೆಲ್ವಂ–ಗೆಲ್ಲುತ್ತಾನೆ? ಅದಱಿಂದಂ– ಆದ್ದರಿಂದ, ಎಮಗೆ–ನಮಗೆ, ಸಾವು–ಮರಣವು, ದಿಟಂ–ನಿಶ್ಚಯ; ನಿಮ್ಮಡಿ–ನಿಮ್ಮ ಪಾದ ಗಳು, ಕೊಲೆ–ಕೊಲ್ಲಲು, ಸಾವುದು–ಸಾಯುವುದು, ಲೇಸಲ್ತೆ–ಒಳ್ಳೆಯದಲ್ಲವೆ? ಸುಗತಿವಡೆಯಲ್ಕಕ್ಕುಂ–ಸದ್ಗತಿಯನ್ನು ಪಡೆಯುವುದಾಗುತ್ತದೆ.
ವಚನ : ಮಮ್ಮನ–ಮೊಮ್ಮಗನ; ಕೂರ್ಮೆಯಿಂ–ಪ್ರೀತಿಯಿಂದ; ಕಣ್ಣ ನೀರಂ ನೆಗಪಿ– ಕಣ್ಣೀರನ್ನು ತುಂಬಿಕೊಂಡು.
೩೨. ಜಗದೊಳ್–ಲೋಕದಲ್ಲಿ, ಅವಧ್ಯನಂ–ಕೊಲ್ಲಲಾಗದವನನ್ನು, ಗೆಲಲೆ ಬಾರದು– ಗೆಲ್ಲಲು ಬರುವುದಿಲ್ಲ, ಅದು ಆದೊಡಮೇಂ–ಅದು ಆದರೆ ತಾನೆ ಏನು? ಶಿಖಂಡಿ– ಶಿಖಂಡಿಯು, ತೊಟ್ಟಗೆ ಕೊಳೆ–ಬೇಗನೆ ಎದುರಿಸಿ, ಮುಂದೆ ನಿಲೆ–ಮುಂದುಗಡೆ ನಿಲ್ಲಲು, ನಾಳಿನೊಂದು ಕಾಳೆಗದೊಳ್–ನಾಳೆಯ ದಿವಸದ ಒಂದು ಯುದ್ಧದಲ್ಲಿ, ಸಾವು–ಮರಣವು, ಎನಗೆ–ನನಗೆ, ಅಪ್ಪುದು–ಆಗುತ್ತದೆ; ಇದಂ–ಈ ವಿಷಯವನ್ನು, ನರಂಗೆ–ಅರ್ಜುನನಿಗೆ, ಅಱಿಪದೆ–ತಿಳಿಸದೆ, ಈ ತೆಱದಿಂ–ಈ ರೀತಿಯಿಂದ, ನೆಗೞ್ದು–ಮಾಡಿ, ಎಯ್ದೆ–ಚೆನ್ನಾಗಿ, ವೀರಲಕ್ಷ್ಮಿಗೆ–ಜಯಲಕ್ಷ್ಮಿಗೆ, ನೆಲೆಯಾಗು–ಆಶ್ರಯವಾಗು, ಪೋಗು–ಹೋಗು, ಎನೆ– ಎನ್ನಲು, ನೃಪಂ–ರಾಜ ಧರ್ಮರಾಜನು, ಪೊಡೆವಟ್ಟು–ನಮಸ್ಕರಿಸಿ, ಮನೋನುರಾಗದಿಂ– ಮನದ ಸಂತೋಷದಿಂದ.
ವಚನ : ಮಂದರಧರಂಗೆ–ಶ್ರೀಕೃಷ್ಣನಿಗೆ, ಪವಡಿಸಿದಾಗಳ್–ಮಲಗಿಕೊಂಡಾಗ.
೩೩. ಚಲಚಲದೆ–ಅಧಿಕವಾದ ಛಲದಿಂದ, ಆಂತು–ಎದುರಿಸಿ, ಕಾದುವ–ಯುದ್ಧ ಮಾಡುವ, ಸುಯೋಧನ ಸಾಧನದ–ದುರ್ಯೋಧನನ ಸೈನ್ಯದ, ಒಡ್ಡುಗಳ್–ಗುಂಪುಗಳು, ಕೞಲ್ದು–ಕೃಶವಾಗಿ, ಅಲಱಿ–ಬಿರಿದು ಎಂದರೆ ಚೆದರಿ, ತೆರಳ್ದು–ಚಲಿಸಿ, ತೂಳ್ದು–ಒತ್ತರಿ ಸಲ್ಪಟ್ಟು, ಬಿಱುತು–ಬೆದರಿ, ಓಡೆ–ಓಡಲು, ಗುಣಾರ್ಣವನಿಂದಂ–ಅರ್ಜುನನಿಂದ, ಆಜಿಯೊಳ್–ಯುದ್ಧದಲ್ಲಿ, ಕೊಲಿಸಿ–ಕೊಲ್ಲಿಸಿ, ಸಮಸ್ತ ಧಾತ್ರಿಯುಮಂ–ಸಮಸ್ತ ಭೂಮಂಡಲವನ್ನೂ, ಆಳಿಪೆವು–ಆಳುವ ಹಾಗೆ ಮಾಡುತ್ತೇವೆ, ಎಂದು, ಉಲಿವಂತೆ–ಕೂಗುವ ಹಾಗೆ, ಪಕ್ಕಿಗಳ್–ಪಕ್ಷಿಗಳು, ಚಿಲಿಮಿಲಿಯೆಂಬ ಪೊೞ್ತಱೊಳೆ–ಚಿಲಿಮಿಲಿ ಎಂದು ಸದ್ದು ಮಾಡುವ ಹೊತ್ತಿನಲ್ಲಿಯೇ ಎಂದರೆ ಮುಂಜಾನೆಯಲ್ಲಿಯೇ, ಅಂತಕಾತ್ಮಜಂ–ಧರ್ಮ ಪುತ್ರನು, ಬಂದು, ಉಱದೆ–ಇರದೆ, ಒಡ್ಡಿದಂ–ಸೈನ್ಯವನ್ನು ಚಾಚಿದನು. ಅಲಱು=(ತ) ಅಲಱು–ಬಿರಿ, ಒಡೆ, ನಾಶಮಾಡು; ಮನದಿಂ ನುಡಿಯಿಂ ತನುವಿಂ । ದೆನಸುಂ ಮುನ್ನೆಱಪಿದ ಘಮನಲಱಿಪೆನೆಂಬೀ ॥ ಮನದಿಂದಮೊಸೆದು ಗೊಮ್ಮಟ ಜಿನನಂ ಸ್ತುತಿಯಿಸಿದನಿಂತು ಸುಜನೋತ್ತಂಸಂ ॥ ಎಂಬಲ್ಲಿ ಪ್ರಯೋಗವಿದೆ.
ವಚನ : ಕುರುಧ್ವಜಿನಿಯುಂ–ಕೌರವ ಸೇನೆಯೂ; ಪಣವ–ಒಂದು ವಾದ್ಯ; ಝಲ್ಲರೀ– ಒಂದು ಬಗೆಯಾದ ತಮಟೆ; ವಿಕಟಾಟ್ಟಹಾಸಂಗಳೆಂಬಂತೆ–ವಿಕಾರವಾದ ನಗುವೆಂಬಂತೆ; ಮೊೞಗೆ–ಶಬ್ದ ಮಾಡಲು;
೩೪. ಉಭಯಬಲದ–ಎರಡೂ ಸೈನ್ಯಗಳ, ಅರಸುಗಳ್–ರಾಜರು, ರಣ ರಭಸಂಗಳ್ವೆರಸು– ಯುದ್ಧ ತೀವ್ರತೆಯಿಂದ ಕಾದಿ, ಮುಳಿದು–ಕೋಪಿಸಿ, ಕೆೞ್ವೂಸೆ–ಕೈ ಬೀಸಲು, ಒಗೆದು– ಹುಟ್ಟಿ, ನೆಗೆದ–ಚಿಮ್ಮಿದ, ಸಮರಾರಾವಂ–ಯುದ್ಧದ ಘೋಷವು, ಲಯಕ್ಷುಭಿತ ಜಲನಿಧಿ ನಿನಾದಮಂ–ಪ್ರಳಯಕಾಲದ ಕದಡಿದ ಕಡಲ ಅಬ್ಬರವನ್ನು, ಅಭಿನಯಿಸಿದುದು–ಅನು ಕರಣೆ ಮಾಡಿತು.
೩೫. ಇಸುವ–ಬಾಣ ಪ್ರಯೋಗ ಮಾಡುವ, ಧನುರ್ಧರರಿಂ–ಬಿಲ್ಗಾರರಿಂದಲೂ, ಪಾಯಿ ಸುವ–ಹಾಯಿಸುವ, ನುಗ್ಗಿಸುವ, ದೞಂಗಳಿಂ–ಸೈನ್ಯಗಳಿಂದಲೂ, ಅಗುರ್ವು–ಭೀಕರತೆಯು, ಪರ್ವುವಿನಂ–ಹಬ್ಬುತ್ತಿರಲು, ಚೋದಿಸುವ–ಹರಿಯಿಸುತ್ತಿರುವ, ರಥಂಗಳಿಂ–ರಥ ಗಳಿಂದಲೂ, ಎಂಟುಂದೆಸೆ–ಎಂಟು ದಿಕ್ಕುಗಳೂ, ಮಸುಳ್ವಿನಂ–ಮಾಸುತ್ತಿರಲು, ಆಗಳ್–ಆಗ, ಉಭಯ ಬಲಂಗಳ್–ಎರಡು ಸೈನ್ಯಗಳೂ, ಇಱಿದುವು–ಯುದ್ಧ ಮಾಡಿದುವು.
೩೬. ಅೞಿದು–ಸತ್ತು, ಅೞ್ಗಿದ–ನಾಶವಾದ, ಕರಿಘಟೆಗಳ ಬಳಗದಿಂ–ಆನೆಗಳ ಸಮೂಹಗಳಿಂದ, ಉಚ್ಚಳಿಸಿ–ಮೇಲಕ್ಕೆ ಚಿಮ್ಮಿ, ಮೊರೆವ–ಶಬ್ದ ಮಾಡುತ್ತಿರುವ, ನೆತ್ತರ– ರಕ್ತದ, ತೆರೆಗಳ್–ಅಲೆಗಳು, ಸುೞಿಸುೞಿದು–ಸುಳಿಸುಳಿಯಾಗಿ ಸುತ್ತಿ, ಕಲ್ವೞಿಯೊಳ್– ಕಲ್ಲು ದಾರಿಯಲ್ಲಿ ಎಂದರೆ ಪಾತ್ರದಲ್ಲಿ, ಭೋರ್ಗರೆದು–ಭೋರೆಂದು ಶಬ್ದ ಮಾಡಿ, ಪರಿವ– ಹರಿಯುವ, ತೊಱೆಗಳ–ನದಿಗಳ, ತೆಱದಿಂ–ರೀತಿಯಿಂದ, ಒಡವರಿದುವು–ಕೂಡ ಹರಿದುವು. ಇಲ್ಲಿ ೞಳಗಳ ಮಿಶ್ರಪ್ರಾಸವಿದೆ.
ವಚನ : ಚಾತುರ್ದಂತಂ–ಚತುರಂಗ ಸೈನ್ಯ; ಓರಂತೆ–ಕ್ರಮವಾಗಿ; ನಡುವಗಲ್ವರಂ– ನಡುಹಗಲವರೆಗೊ; ಸಮಕಟ್ಟಂ–ಏರ್ಪಾಡನ್ನು, ವ್ಯವಸ್ಥೆಯನ್ನು.
೩೭. ಕುರುಬಲವೆಂಬುದು–ಕೌರವಸೈನ್ಯವೆಂಬುದು, ಈ ಸುರನದೀಜನ–ಈ ಭೀಷ್ಮನ, ತೋಳ್ವಲಮೆಂಬ–ಬಾಹುಬಲವೆಂಬ, ವಜ್ರಪಂಜರದೊಳಗೆ–ವಜ್ರದ ಪಂಜರದಲ್ಲಿ, ಇರ್ದು–ಇದ್ದು, ಬೞ್ದಪುದು–ಬಾಳುತ್ತಿದೆ; ಪಾಂಡವ ಸೈನ್ಯಮುಂ–ಪಾಂಡವರ ಸೈನ್ಯವು ಕೂಡ, ಇಂದು, ಭೀಷ್ಮರೊರ್ವರೊಳ್–ಭೀಷ್ಮರೊಬ್ಬರಲ್ಲಿ, ಇರದೆ–ಬಿಡದೆ, ಆಂತು–ಎದುರಿಸಿ, ಕಾದಲ್–ಯುದ್ಧಮಾಡಲು, ಅವರಂ–ಆ ಭೀಷ್ಮರನ್ನು, ಪೆಱಗಿಕ್ಕಿ–ಹಿಂದಿಕ್ಕಿ (ರಕ್ಷಿಸಿ), ಕಡಂಗಿ–ಉತ್ಸಾಹಿಸಿ, ಕಾದಿ–ಹೋರಾಡಿ, ನಿತ್ತರಿಸುವೆಂ–ನಿಭಾಯಿಸುತ್ತೇನೆ (ಅಥವಾ ಪಾರಾಗು ತ್ತೇನೆ) ಎಂದು ತಱಿಸಂದು–ನಿಶ್ಚಯಿಸಿ, ಪಾಂಡವ ಬಲಕ್ಕೆ–ಪಾಂಡವರ ಸೈನ್ಯಕ್ಕೆ, ಇದಿರಂ– ಎದುರಾಗಿ, ತಾಗಿದಂ–ಸಂಘಟ್ಟಿಸಿದನು.
ವಚನ : ಅತಿರಥಮಥನಂ–ಅರ್ಜುನನು; ಆಂತಾಗಳ್–ಪ್ರತಿಭಟಿಸಿದಾಗ.
೩೮. ನಡುವ–ನಾಟುವ, ಇಡುವ–ಬೀಸಿ ಹೊಡೆಯುವ, ಆರ್ದು–ಗರ್ಜಿಸಿ, ಅರಿವ–ಕತ್ತರಿಸುವ, ನೇರ್ವ–ತುಂಡು ಮಾಡುವ, ಪಳಂಚುವ–ತಾಗುವ, ಪೋರ್ವ–ಹೋರಾಡುವ, ಬಾಣದಿಂದೆ–ಬಾಣಗಳಿಂದ, ಉಡಿದು–ಮುರಿದು, ಸಿಡಿಲ್ದು–ಸಿಡಿದು, ಸೂಸಿಯೆ– ಚೆಲ್ಲಾಡಿಯೆ, ಕೞಲ್ದು–ಸಡಿಲವಾಗಿ, ಬೞಲ್ದು–ಬಾಗಿ, ಸಡಿಲ್ದು–ಬಿಗಿತಪ್ಪಿ, ಜೋಲ್ದು– ಜೋತುಬಿದ್ದು, ನೇಲ್ದು–ನೇತಾಡಿ, ಉಡಿದನೊಗಂ–ಮುರಿದ ನೊಗವು, ಧ್ವಜಂ– ಬಾವುಟವು, ಪಲಗೆ–ಹಲಗೆಯು, ಕೀಲ್–ಕೀಲು, ಕವರ್–ಕವಲುಮರ, ಕವೆ, ಅಚ್ಚು– ರಥದ ಅಚ್ಚು, ತುರಂಗಮಂ–ಕುದುರೆಗಳು, ರಥಂ–ರಥಗಳು, ಕಿಡೆ–ನಾಶವಾಗಲು, ಕವರಿಂದೆ–ಕೊಳ್ಳೆಯಿಂದೆ, ಅಗುರ್ವಂ–ಭಯವನ್ನೂ, ಒಳಕೊಂಡಿರೆ–ಹೊಂದಿರಲು, ಮಹಾರಥರ್–ಮಹಾರಥಿಕರು, ತಳ್ತಿಱಿದರ್–ಸೇರಿ ಹೋರಾಡಿದರು. ಕವರ್=(ತ) ಕವರ್, ಕವಲ್;
ವಚನ : ಮಾರ್ಮಲೆಯಲಾಱದೆ–ಪ್ರತಿಭಟಿಸಲಸಮರ್ಥರಾಗಿ; ಒಲ್ಲ ನುಲಿದು– ಮೆಲ್ಲನೆ ಕೂಗಿಕೊಂಡು.
೩೯. ಧವಳಹಯಂ–ಬಿಳಿ ಕುದುರೆಗಳು, ಧವಳರಥಂ–ಬಿಳಿಯ ರಥ, ಧವಳೋಷ್ಣೀಷಂ– ಬಿಳಿಯ ತಲೆಪಾಗು, ಶಶಾಂಕ ಸಂಕಾಶ ಯಶೋಧವಳಿತ ಭುವನಂ–ಚಂದ್ರನಿಗೆ ಸದೃಶವಾದ ಕೀರ್ತಿಯಿಂದ ಬೆಳ್ಳಗಾಗಿರುವ ಲೋಕವುಳ್ಳವನು (ಭೀಷ್ಮ), ಅವಯವದಿಂ–ಶ್ರಮವಿಲ್ಲದೆ, ಬಂದು, ಧರ್ಮತನಯನ–ಧರ್ಮಪುತ್ರನ, ಬಲದೊಳ್–ಸೈನ್ಯದೊಡನೆ, ತಾಗಿದಂ–ಹಳಚಿ ದನು.
ವಚನ : ಕಳಾಪಂಗಳೊಳ್–ಸಮೂಹಗಳಲ್ಲಿ; ಪುಡಪುಡನೆ [ಪು] ೞ್ಗಿ–ಬಿಸಿಬಿಸಿಯಾಗಿ ಬೆಂದು, ಪಾಯ್ವ–ಹಾಯುವ; ಪತಂಗಗಳಂತೆ–ಚಿಟ್ಟೆಗಳಂತೆ; ಭರಂಗೆಯ್ದು–ಜೋರು ಮಾಡಿ.
೪೦. ಶರಸಂಧಾನದ–ಬಾಣಗಳನ್ನು ಬಿಲ್ಲಿಗೆ ತೊಡಿಸುವ, ಬೇಗಂ–ವೇಗವು, ಅಂಬು ಗಳಂ–ಬಾಣಗಳನ್ನು, ಈಂಬಂತೆ–ಈನುವ ಹಾಗೆ ಎಂದರೆ ಹೆರುವ ಹಾಗೆ, ಮೇಣ್–ಅಥವಾ, ಅಂಬಿನ ಆಗರಂ–ಬಾಣಗಳ ಮನೆ, ಅಂಬು ಅಂತೆನೆ–ಬಾಣಗಳಂತೆ ಎನ್ನಲು, ಪಾಯ್ವ– ನುಗ್ಗಿಬರುವ, ಅರಾತಿ ಶರಸಂಘಾತಂಗಳಂ–ವೈರಿಯ ಬಾಣ ಸಮೂಹಗಳನ್ನು, ನುರ್ಗಿ–ಪುಡಿ ಮಾಡಿ, ನೇರ್ದು–ಕತ್ತರಿಸಿ, ಅರಿದು–ತುಂಡುಮಾಡಿ, ಅಟ್ಟುಂಬರಿಗೊಂಡು–ಬೆನ್ನಟ್ಟಿ ಓಡಿಸಿ, ಕೂಡೆ–ಕೂಡಲೇ, ಕಡಿದಂತೆ–ಕಡಿದ ಹಾಗೆ, ಗಾಂಗೇಯನ–ಭೀಷ್ಮನ, ಅಸ್ತ್ರಾಳಿಗಳ್–ಬಾಣಗಳ ಸಾಲುಗಳು, ಆ ಸೈನ್ಯಮಂ–ಆ ಸೇನೆಯನ್ನು, ಪರ್ವಿ–ವ್ಯಾಪಿಸಿ, ಗೋಳ್ಮುರಿಗೊಂಡು– ಕೊರಳನ್ನು ತಿರಿಚಿಕೊಂಡು, ಆ ರಸಾತಳಮುಮಂ–ಆ ಪಾತಾಳಲೋಕವನ್ನೂ, ಉರ್ವಿದುವು– ಉಬ್ಬಿದವು, ತುಂಬಿದುವು.
ವಚನ : ಗ್ರೀಷ್ಮಕಾಲದ ಆದಿತ್ಯನಂತೆ–ಬೇಸಗೆ ಕಾಲದ ಸೂರ್ಯನಂತೆ; ಕಾಯ್ದು– ಸುಟ್ಟು; ಕೆಳರ್ದು–ಕೆರಳಿ; ಪಯಿಂಛಾಸಿರ್ವರ್–ಹತ್ತುಸಾವಿರ ಜನ.
೪೧. ಮಣಿಮಕುಟಾಳಿಗಳ್ವೆರಸು–ರತ್ನಮಯ ಕಿರೀಟಗಳ ಸಮೂಹದೊಡನೆ ಕೂಡಿ, ಉರುಳ್ದ–ಉರುಳಿದ, ನರೇಂದ್ರ–ರಾಜರ, ಶಿರಂಗಳೊಳ್–ತಲೆಗಳಲ್ಲಿ, ಫಣಾಮಣಿಗಳ–ಹೆಡೆ ಗಳಲ್ಲಿರುವ ರತ್ನಗಳ, ದೀಪ್ತಿಗಳ್–ಕಾಂತಿಗಳು, ಬೆಳಗೆ–ಪ್ರಕಾಶಿಸಲು, ಧಾತ್ರಿಯಂ– ನೆಲವನ್ನು, ಒಯ್ಯನೆ–ಮೆಲ್ಲಗೆ, ಕಂಡಿಮಾಡಿ–ರಂಧ್ರಮಾಡಿ, ಕಣ್ತಣಿವಿನಂ–ಕಣ್ಣುತೃಪ್ತಿ ಪಡು ತ್ತಿರಲು, ಅಂದು, ನಿಂದು–ನಿಂತು, ಇಱಿದ–ಹೋರಾಡಿದ, ಕೊಳ್ಗುಳಮಂ–(ಭೀಷ್ಮನ) ಯುದ್ಧರಂಗವನ್ನು, ನಡೆನೋೞ್ಪ–ಚೆನ್ನಾಗಿ ನೋಡುವ, ಅಹೀಂದ್ರರೊಳ್–ಸರ್ಪರಾಜರಲ್ಲಿ, ಸೆಣಸಿದುದು–ಸ್ಪರ್ಧಿಸಿತು, ಎಂದೊಡೆ–ಎಂದು ಹೇಳಿದರೆ, ಸುರಸಿಂಧು ಪುತ್ರನಾ–ಭೀಷ್ಮನ, ಏರ್ವೆಸನಂ–ಯುದ್ಧ ಕಾರ್ಯವನ್ನು, ಏವೊಗೞ್ವುದು–ಏನೆಂದು ಹೊಗಳುವುದು? ಎಂದರೆ ಭೀಷ್ಮನ ಯುದ್ಧ ಹೊಗಳಿಕೆಗೆ ಮೀರಿದ್ದಾಗಿತ್ತು.
ವಚನ : ಪೇೞೆ ಪೆಸರಿಲ್ಲದಂತೆ–ಹೇಳಲು ಹೆಸರು ಕೂಡ ಇಲ್ಲದಂತೆ, ಮಲ್ಲನಂತೆ– ಜಟ್ಟಿಯಂತೆ; ಪೆಂಕುಳಿಗೊಂಡ ಸಿಂಹಮಂ–ಹುಚ್ಚೇರಿದ ಸಿಂಹವನ್ನು.
೪೨. ಅಂಬರಮೆಲ್ಲಂ–ಆಕಾಶವೆಲ್ಲ, ಅಂಬಿನೊಳೆ–ಬಾಣಗಳಲ್ಲಿಯೆ, ಪೂೞೆ–ಹೂತು ಹೋಗಲು; ಮಹೀಭುಜರ್–ರಾಜರು, ಎತ್ತಂ ಎಚ್ಚ–ಎಲ್ಲೆಲ್ಲಿಯೂ ಪ್ರಯೋಗಿಸಿದ, ಕಿತ್ತಂಬುಗಳ್–ಸಣ್ಣ ಬಾಣಗಳು, ಎತ್ತ–ಎಲ್ಲೆಲ್ಲೂ, ಅವ್ವಳಿಸೆ–ಮೇಲೆ ನುಗ್ಗಲು, ಮಾಣದೆ– ನಿಲ್ಲದೆ, ಅವಂ–ಅವುಗಳನ್ನು, ಕಡಿದಿಕ್ಕಿ–ಕತ್ತರಿಸಿ ಹಾಕಿ, ತನ್ನ, ನಲ್ಲಂಬುಗಳಿಂದ–ಒಳ್ಳೆಯ ಬಾಣಗಳಿಂದ, ಆರ್ದು–ಗರ್ಜಿಸಿ, ಇರದೆ, ಅಡುರ್ತು–ಸಮೀಪಿಸಿ, ಇಸೆ–ಪ್ರಯೋಗಿಸಲು, ಭೂಭುಜರೆಲ್ಲಂ–ಎಲ್ಲಾ ರಾಜರೂ; ಬಿಲ್ಲು ಬೆಱಗಾಗೆ–(ಭಯ ಆಶ್ಚರ್ಯಗಳಿಂದ) ಸಂಭ್ರಾಂತ ರಾಗಲು, ವಿಕ್ರಮಾರ್ಜುನಂ–ಅರ್ಜುನನು, ಸೆರಗಿಲ್ಲದೆ–ಭಯವಿಲ್ಲದೆ ಅಥವಾ ಸಹಾಯ ವಿಲ್ಲದೆ, ಬಂದು, ಪೊಣರ್ದಂ–ಹೋರಾಡಿದನು, ಕಿತ್ತಂಬು ಕಿಱಿದು+ಅಂಬು;
ವಚನ : ಪೊಣರ್ದಾಗಳ್–ಹೋರಾಡಿದಾಗ; ಅನುವರಂ–ಯುದ್ಧ; ದೊರೆಯಾಯ್ತು– ಸಮಾನವಾಯಿತು, ಸೂೞೊಳೆ–ಬಾರಿಯಲ್ಲೆ.
೪೩. ಜ್ವಳನ ಪತತ್ರಿಯಂ–ಆಗ್ನೇಯಾಸ್ತ್ರವನ್ನು, ವಾರುಣಪತ್ರಿಯಿಂ–ವರುಣಾಸ್ತ್ರದಿಂದ, ಕಡಿದು–ಕತ್ತರಿಸಿ, ಐಂದ್ರಬಾಣಮಂ–ಇಂದ್ರಾಸ್ತ್ರವನ್ನು, ಸಮೀರಣಾಸ್ತ್ರದಿಂ–ವಾಯ್ವಸ್ತ್ರ ದಿಂದ, ಕಳೆದು–ಹೋಗಲಾಡಿಸಿ, ಇದಿರ್ಚಿದ–ಎದುರಾದ, ಭೂಭುಜರೆಲ್ಲರಂ–ರಾಜರನ್ನೆಲ್ಲಾ, ಭಯಂಗೊಳಿಸಿ–ದಿಗಿಲುಪಡಿಸಿ, ನಿಶಾತವಜ್ರಿಶರದಿಂ–ಹರಿತವಾದ ಇಂದ್ರಬಾಣದಿಂದ, ಸುರರ್–ದೇವತೆಗಳು, ಅಂಬರದೊಳ್–ಆಕಾಶದಲ್ಲಿ, ತಗುಳ್ದು–ಅನುಸರಿಸಿ, ಬಿಚ್ಚಳಿಸೆ– ವಿಸ್ತರಿಸಲು ಎಂದರೆ ಚೆನ್ನಾಗಿ ಹೊಗಳಲು, ನದೀಜಂ–ಭೀಷ್ಮನು, ಉಚ್ಚಳಿಸೆ–ಮೇಲಕ್ಕೆ ಹಾರುತ್ತಿರಲು, ಗುಣಾರ್ಣವಂ–ಅರ್ಜುನ, ಕಾದಿದಂ–ಯುದ್ಧ ಮಾಡಿದನು; ಏಂ ಕಲಿಯೋ– ಏನು ಶೂರನೋ!
ವಚನ : ತನ್ನ ನುಡಿದ ನುಡಿವಳಿಯಂ–ತಾನು ಹೇಳಿದ ಮಾತುಗಳನ್ನು ಎಂದರೆ ಪ್ರತಿಜ್ಞೆ ಯನ್ನು; ನೆನೆದು–ಸ್ಮರಿಸಿ, ಅಲ್ಲಳಿಗಾಳೆಗಂ–ಮೇಳಗಾಳಗ, ವಿನೋದದ ಕಾಳಗ; “ಅಲ್ಲಣಿಗೆ ಯೆಂದು ಮೇಳಂ,”
೪೪. ಇಲ್ಲಿಂದ ಮುಂದಕ್ಕೆ ಭೀಷ್ಮನ ಶರಶಯನ : ಉದಗ್ರ ನಾಯಕರ–ಶ್ರೇಷ್ಠರಾದ ಸೇನಾ ನಾಯಕರ, ಸಾಯಕಮೆಲ್ಲಮಂ–ಬಾಣಗಳನ್ನೆಲ್ಲ, ಕಡಿದಂ–(ಭೀಷ್ಮನು) ಕತ್ತರಿಸಿದನು; ಆ ಶಿಖಂಡಿ–ಆ ಶಿಖಂಡಿಯು, ಪೊಕ್ಕು–ಪ್ರವೇಶಿಸಿ, ಅಡಿಗಿಡೆ–ಹೆಜ್ಜೆ ಕೆಡಲು, ಬಂದು ಮುಂದೆ ನಿಲೆಯುಂ–ಬಂದು ಮುಂದೆ ನಿಲ್ಲುತ್ತಲೂ, ಮೊಗಮಂ ನಡೆ ನೋಡಿ–ಮುಖವನ್ನು ದೃಷ್ಟಿಸಿ ನೋಡಿ, ಆತಂ–ಶಿಖಂಡಿ, ಆರ್ದು–ಗರ್ಜಿಸಿ, ಒಡನೊಡನೆ–ಮೇಲಿಂದ ಮೇಲೆ, ಎಚ್ಚೊಡೆ–ಬಾಣ ಪ್ರಯೋಗ ಮಾಡಿದರೆ, ಎಚ್ಚಮೊನೆಯಂಬುಗಳ್–ಹೊಡೆದ ಹರಿತವಾದ ಬಾಣಗಳು, ಅ [ೞ್ದಿ]–ಮೈಯಲ್ಲಿ ನಾಟಿ ಮುಳುಗಿ, ಇಡಿವೋಗೆಯುಂ–ಕಿಕ್ಕಿರಿದರೂ, ಸುರಸಿಂಧು ನಂದನಂ–ಭೀಷ್ಮನು, ಮನಂಗಿಡಂ–ಮನಸ್ಸಿನ ಸ್ಥಿರತೆಯನ್ನು ಕಳೆದುಕೊಳ್ಳನು; ಅವಂ–ಅವುಗಳನ್ನು, ಆಂಕೆಗೊಳ್ಳನ್–ಎದುರಿಸನು; ಅಗಿಯಂ–ಹೆದರನು, ಸುಗಿಯಂ–ಬೆದರನು.
೪೫. ಇದು ರಣಂ–ಇದು ಯುದ್ಧ; ಎನ್ನೊಳಾಂತಿಱಿವ–ನನ್ನಲ್ಲಿ ಎದುರಿಸಿ ಯುದ್ಧ ಮಾಡುವ, ಮೆಯ್ಗಲಿಯುಂ–ಶೂರನಾದವನೂ, ಸಮರೈಕಮೇರು–ಯುದ್ಧದಲ್ಲಿ ಮೇರು ಪರ್ವತದಂತೆ ಸ್ಥಿರನಾದವನು ಒಬ್ಬನೇ; ಇದು ಬಿರುದು, ಅರ್ಜುನ; ಎನ್ನದಟುಂ–ನನ್ನ ಪೌರುಷವೂ, ಅಳುರ್ಕೆಯುಂ–ವ್ಯಾಪ್ತಿಯೂ, ಪಿರಿದು–ಹಿರಿದಾದದ್ದು; ಪೇಡಿಗೆ–ಹೇಡಿಯಾದ ಶಿಖಂಡಿಗೆ, ಅದೆಂತು–ಅದು ಹೇಗೆ, ಇದಿರಾಂಪೆಂ–ಎದುರಾಗುವೆನು, ಎಂದು, ಅಣಂ– ಕೊಂಚವೂ, ಬೆದಱದೆ–ಭಯಪಡದೆ, ನಟ್ಟ ಕೂರ್ಗಣೆಯ–ನಾಟಿದ ಹರಿತವಾದ ಬಾಣಗಳ, ಬಿಣ್ಪೊಱೆಯಿಂದೆ–ಭಾರವಾದ ಹೊರೆಯಿಂದ, ಪೆರ್ವಿದಿರ–ದೊಡ್ಡ ಬಿದಿರಿನ, ಸಿಡುಂಬಿ ನೊಳ್–ಮೆಳೆಗಳಲ್ಲಿ, ಉರ್ವಿ–ಉಬ್ಬಿ, ಪುದಿದ–ಸೇರಿದ, ತುಂಬಿದ, ಒಂದು ಕುಳಾಚಳ ದಂತೆ–ಒಂದು ಕುಲಪರ್ವತದಂತೆ, ಸಿಂಧುಜಂ–ಭೀಷ್ಮನು, ಬೞಲ್ದಂ– ಜೋತುಬಿದ್ದನು (ಆಯಾಸದಿಂದ).
೪೬. ತಿಂತಿಣಿಯಾಗಿ–ಗುಂಪುಗುಂಪಾಗಿ, ನಟ್ಟ ಕಣೆಯೊಳ್–ನಾಟಿದ ಬಾಣಗಳಲ್ಲಿ, ನೆಲಮುಟ್ಟದೆ–ನೆಲವನ್ನು ಸೋಕದೆ, ಮೈಯ್ಯೊಳ್–ಮೈಯಲ್ಲಿ, ಅತ್ತಮಿತ್ತಂ–ಅಲ್ಲಿ ಇಲ್ಲಿ, ತೆಱೆದಿರ್ದ–ಬಾಯಿ ಬಿಟ್ಟುಕೊಂಡಿರ್ದ, ಪುಣ್ಗಳ್–ಹುಣ್ಣುಗಳು, ಎಸೆವಕ್ಕರದಂತಿರೆ–ಹೊಳೆ ಯುವ ಅಕ್ಷರಗಳಂತಿರಲು, ನೋಡಿ, ಕಲ್ಲಿಂ–ಕಲಿಯಿರಿ, ಎಂಬಂತೆವೊಲ್–ಎನ್ನುವ ಹಾಗೆ, ಅಟ್ಟವಣೆಕೋಲ್ಗಳ ಮೇಲೆ–ಪುಸ್ತಕವನ್ನಿಡುವ ಪೀಠದ ಮೇಲೆ, ಎಸೆದಿರ್ದ–ಸೊಗಸಾಗಿ ಇದ್ದ, ವೀರ ಸಿದ್ಧಾಂತದ ಶಾಸನಂ ಬರೆದ–ಪ್ರತಾಪದ ತತ್ವಗಳನ್ನು ಶಾಸನವಾಗಿ ಬರೆದಿರುವ, ಪೊತ್ತಗೆ ಯಂತೆ–ಪುಸ್ತಕದಂತೆ, ಅಮರಾಪಗಾತ್ಮಜಂ–ಭೀಷ್ಮನು, ಇರ್ದಂ–ಇದ್ದನು. “ತಿಣಿ– ಸಂಛನ್ನೇ” ; ತಿಣಿ+ತಿಣಿ=ತಿಂತಿಣಿ–ಸಮೂಹ; ಧಾತು ಪುನರುಕ್ತವಾಗಿ ಭಾವನಾಮವಾಗಿದೆ; ಅಟ್ಟವಣೆ (ಸಂ) ಆಸ್ಥಾಪನಾ (ಶಬ್ದವಿಹಾರ–೪೬ನೆಯ ಪುಟ ನೋಡಿ) : ಠವಣೆ ಕೋಲು ಎಂದರೂ ಇದೇ ಅರ್ಥ; ಪೊತ್ತಗೆ (ಸಂ) ಪುಸ್ತಕ (ಪಾರಶಿ) ಪೊಸ್ತ್–ಬರೆವಣಿಗೆಗಾಗಿ ಉಪ ಯೋಗಿಸುವ ಚರ್ಮದ ಪಟ್ಟಿ.
೪೭. ಬಾಳಕಾಲದೊಳೆ–ಬಾಲನಾಗಿದ್ದ ಕಾಲದಿಂದಲೇ, ತೊಟ್ಟು–ಆರಂಭವಾಗಿ, ಅಂಕದ– ಪ್ರಸಿದ್ಧವಾದ, ಶೌಚಂ–ಶೌಚಗುಣವು ಎಂದರೆ ಬ್ರಹ್ಮಚರ್ಯೆಯು, ನಡೆದುದು–ನಡೆ ಯಿತು; ಈಗಳ್–ಈಗ, ನಾಂ–ನಾನು, ನೆಲನಂ ಮುಟ್ಟಿ–ನೆಲವನ್ನು ಸೋಕಿ, ಓಗಡಿಪುದೆ– (ಶೌಚವನ್ನು) ಹೋಗಲಾಡಿಸುವುದೆ? ಕೆಡಿಸುವುದೆ?; ಏಕೆ ಅದು–ನೆಲವು ಏಕೆ, ಪೆಣ್ ಗಡಿಂ– ಸ್ತ್ರೀ ಅಲ್ಲವೆ? ಎಂದು–ಎಂಬುದಾಗಿ, ಮೈಯೊಳ್–ಮೈಯಲ್ಲಿ, ಅೞ್ದಿಡಿದ–ನಾಟಿ ಮುಳುಗಿ ತುಂಬಿದ, ವಿಕರ್ಣ ಕೋಟಿಯೊಳ್–ಅಸಂಖ್ಯಾತ ಬಾಣಗಳಲ್ಲಿ, ಅಣಂ–ಸ್ವಲ್ಪವೂ, –ಭೀಷ್ಮನು, ಶೌಚಗುಣದುನ್ನತಿಯಂ–ಬ್ರಹ್ಮಚರ್ಯಗುಣದ ಆಧಿಕ್ಯವನ್ನು, ಒಡಂಬಡಿಸಿ ದಂ–ಅಂಗೀಕರಿಸಿದನು. ಓಗಡಿಸು–ಜುಗುಪ್ಸೆಪಡು, ಓಕರಿಸು ಎಂಬಿವು ಸಾಧಾರಣವಾದ ಅರ್ಥಗಳು; ಆದರೆ ಇಲ್ಲಿ ಸ್ವಲ್ಪ ಬೇರೆಯಾಗಿದೆ. ಈ ಪದ್ಯ ಭೀಷ್ಮನನ್ನು ಕುರಿತ ಚರಮ ಶ್ಲೋಕ; ಆತನ ಬಾಳಿನ ಘನತೆಯನ್ನು ತೆರೆದು ತೋರಿಸುತ್ತದೆ.
ವಚನ : ಪತ್ತುವಿಟ್ಟು-ಸಂಬಂಧವನ್ನು ಬಿಟ್ಟು; ತೊಲಗಿ; ಸ್ವಚ್ಛಂದ ಮಿೞ್ತು-ಸ್ವೇಚಾ, ಮರಣಿ
೪೮. ತರುವಲಿಗಳಂ ನಮ್ಮಂ–ಹುಡುಗರಾದ ಅಥವಾ ಅನಾಥರಾದ ನಮ್ಮನ್ನು, ತಾಯ್ವೋಲ್–ತಾಯ ಹಾಗೆ, ಕರುಣದಿಂ–ದಯೆಯಿಂದ, ನಡಪಿದ–ಸಾಕಿದ, ಅಜ್ಜರ್– ತಾತಂದಿರಾದ, ನೀಂ–ನೀವು, ಇಂತಿರೆಯುಂ–ಹೀಗೆ ಇರಲೂ ಎಂದರೆ ಈ ಸ್ಥಿತಿಗೆ ಬಂದಿರುವಿಕೆ ಯನ್ನೂ, ನೋಡಿದೆವು–ಕಂಡೆವು; ಏನ್ ಎಮಗೆ ಅರಸಿಕೆಯೋ–ನಮಗೆ ಏನು ರಾಜತನವೊ, ಪೇೞಿಂ–ಹೇಳಿರಿ, ಎಂದು, ಶೋಕಂ ಗೆಯ್ದರ್–ದುಃಖಪಟ್ಟರು.
ವಚನ : ಅೞಲ್ವೇಡ–ದುಃಖಬೇಡ ಅಥವಾ ದುಃಖಪಡಬೇಡ; ಪೊಡೆವಟ್ಟು– ನಮಸ್ಕರಿಸಿ.
೪೯. ಆಂತ ಮಾರ್ವಲಮಂ–ಎದುರಿಸಿದ ಶತ್ರುಸೈನ್ಯವನ್ನು, ಇಱಿವುದಂ–ಘಾತಿಸು ವುದನ್ನು, ಇನ್ನೆಗಂ–ಇದುವರೆಗೆ, ಅಚ್ಚರಿಯಾಗೆ–ಆಶ್ಚರ್ಯವಾಗಲು, ತಾಗಿ–ತಗುಲಿ, ತಳ್ತು– ಸೇರಿ, ಇಱಿದಿರ್–ಯುದ್ಧ ಮಾಡಿದಿರಿ; ಇದೊಂದವಸ್ಥೆ–ಈ ಒಂದು ಅವಸ್ಥೆ (ಶರಶಯನದ), ನಿಮಗೆ, ಎನ್ನಯ–ನನ್ನ, ಕರ್ಮದಿಂ–ಹಿಂದೆ ಮಾಡಿದ ಕರ್ಮದಿಂದ, ಆದುದು–ಆಯಿತು; ಎಂದೊಡೆ–ಎಂದು (ದುರ್ಯೋಧನ ಹೇಳಿದರೆ), ಕಂದ–ಮಗುವೇ, ಪಾಂಡವರ ವೈರಮಂ– ಪಾಂಡವರಲ್ಲಿ ದ್ವೇಷವನ್ನು, ಇಂ–ಇನ್ನು, ಮಱೆವುದು–ಮರೆಯುವುದು; ಕೋಪಮುಂ– ಕೋಪವೂ, ಕಱುಪುಂ–ಅಸಂತೋಷವೂ, ಎನ್ನೊಡವೋಕೆ–ನನ್ನ ಜೊತೆಯಲ್ಲಿ ಹೋಗಲಿ; [ಎ] ಡಂಬಡುಂ–ಅಸಮಾಧಾನವು, ಏವುದು–ಯಾವುದು? ಅದಂ–ಸಂಧಿಯನ್ನು, ಇನ್ನುಂ– ಇನ್ನೂ, ಒಡಂಬಡು–ಒಪ್ಪು, ಸಂಧಿ ಮಾಡುವೆಂ–ಸಂಧಿಯನ್ನು ಮಾಡುತ್ತೇನೆ.
೫೦. ಅದಟಿನಳುರ್ಕೆಯಂ–ಶೌರ್ಯದ ಆಧಿಕ್ಯವನ್ನು, ಬಲದ–ಸೈನ್ಯದ, ಅಳುರ್ಕೆ ಯುಮಂ–ಆಧಿಕ್ಯವನ್ನು, ಗೆಡೆಗೊಂಡು–ಜೊತೆಯಾಗಿ ಹೊಂದಿ, ನೀಂ–ನೀವು, ಇದಾವುದು –ಇದು ಯಾವ, ಪಡೆಮಾತಂ–ಸುದ್ದಿಯನ್ನು ಎಂದರೆ ವಿಷಯವನ್ನು, ಇಂತು–ಹೀಗೆ, ನುಡಿದಿರ್–ಹೇಳಿದಿರಿ? ಪುದುವಾೞ್ಕೆಯೊಳ್–ಜೊತೆಗೂಡಿ ಬದುಕುವುದರಲ್ಲಿ, ಎನ್ನ– ನನ್ನ, ಬಳ್ಕಿದ ಅಳ್ಕಿದ–ಬಳುಕಿದ ಬೆದರಿದ, ಬಗೆಗಂಡಿರೇ–ಮನವನ್ನು ನೋಡಿದಿರೆ! ಮಗನೆ– ಮಗನೇ, ನೀಂ–ನೀನು, ಪಗೆಯಂ–ಹಗೆಯನ್ನು, ನೆಟ್ಟನೆ–ನೇರಾಗಿ, ತಱಿದೊಟ್ಟು–ಕತ್ತರಿಸಿ ಹಾಕು, ಎನ್ನದೆ–ಎಂದು ಹೇಳದೆ, ಬಗೆಗೆಟ್ಟು–ಬುದ್ಧಿಹೀನರಾಗಿ, ದಾಯಿಗರೊಳ್–ದಾಯಾದಿ ಗಳಲ್ಲಿ, ಇಂ–ಇನ್ನು, ಮಗುೞ್ದುಂ–ಮತ್ತೆಯೂ, ಪುದುವಾೞ್ವುದು–ಹುದುವಾಗಿ ಬದುಕು ವುದು, ಎಂಬಿರೇ–ಎಂದು ಹೇಳುತ್ತೀರೇ?
ವಚನ : ಇಲ್ಲಿಂದಂ ಮೇಲಾದ ಕಜ್ಜಮಂ–ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು;
೫೧. ಸೂರ್ಯನು ಮುಳುಗುತ್ತಾನೆ; ನೆರೆದ ವಿರೋಧಿ ನಾಯಕರಂ–ಕಾಳಗಕ್ಕಾಗಿ ಸೇರಿದ ಶತ್ರುರಾಜರನ್ನು, ಆಹವದೊಳ್–ಯುದ್ಧದಲ್ಲಿ, ತಱಿದು–ಕತ್ತರಿಸಿ, ಒಟ್ಟಲ್– ರಾಶಿಮಾಡಲು, ಒಂದಿದ–ಸೇರಿದ, ಒಡ್ಡು–ಸೈನ್ಯ, ಉರುಳ್ವಿನಂ–ಉರುಳುತ್ತಿರಲು, ಗುಣಾರ್ಣ ವಂ–ಅರ್ಜುನ, ಅಡರ್ತು–ಸಮೀಪಿಸಿ, ಇಱಿದಲ್ಲಿ–ಘಾತಿಸುವಾಗ, ಸಿಡಿಲ್ದ ನೆತ್ತರೊಳ್– ಸಿಡಿದ ರಕ್ತದಲ್ಲಿ, ಪೊರೆದು–ವ್ಯಾಪಿಸಿ, ನಿರಂತರಂ–ಯಾವಾಗಲೂ, ಪೊಲಸುನಾಱುವ– ದುರ್ನಾತ ಹೊಡೆಯುವ, ಮೆಯ್ಯನೆ–ದೇಹವನ್ನೇ, ಕರ್ಚಲೆಂದು–ತೊಳೆಯಬೇಕೆಂದು, ಕಮಳೈಕಬಾಂಧವಂ–ಸೂರ್ಯನು, ಅಪರಾಂಬುರಾಶಿಗೆ–ಪಶ್ಚಿಮದ ಕಡಲಿಗೆ, ಇೞಿವಂತೆ–ಇಳಿಯುವ ಹಾಗೆ, ಚೆಚ್ಚರಂ–ಬೇಗನೆ, ಇೞಿದಂ–ಇಳಿದನು.
ವಚನ : ಬಿದಿರ ಸಿಡಿಂಬಿನ–ಬಿದಿರ ಮೆಳೆಯ; ಒಱಗಿದಂ–ಮಲಗಿದನು; ಬೞಿಯ ನಟ್ಟಿ–ದೂತನನ್ನು ಕಳಿಸಿ;
೫೨. ಪಾಂಡುಸುತರಂ–ಪಾಂಡವರನ್ನು, ಸಾಧಿಸಿಕೊಂಡು–ಗೆದ್ದುದು, ಆಯ್ತೇ–ಆಯಿತೇ! ನಣ್ಪಿಂಗೆ–ಬಾಂಧವ್ಯಕ್ಕೆ, ಬೆನ್ನಿತ್ತು–ಬೆನ್ನನ್ನು ಕೊಟ್ಟು ಎಂದರೆ ಆಶ್ರಯವಾಗಿ, ಅಜ್ಜನ ಮಾತು– ತಾತನ ಮಾತು, ಭೀಷ್ಮನ ಮಾತು, ಸೈತಾಯ್ತು–ನೇರವಾಯ್ತು; ದಲ್–ದಿಟವಾಗಿಯೂ, ನಮ್ಮ ಪಡೆಯಂ–ನಮ್ಮ ಸೈನ್ಯವನ್ನು, ಕಾವನ್ನರ್–ರಕ್ಷಿಸುವಂಥವರು, ಇನ್ನಾರೋ–ಇನ್ನು ಯಾರೋ? ಕಾವೊಡೆ–ರಕ್ಷಿಸುವ ಪಕ್ಷದಲ್ಲಿ, ಈತಂ ಕರ್ಣಂ ಸುಷ್ಠು ಅಕ್ಕುಂ–ಈ ಕರ್ಣನು ಸಮರ್ಥನಾಗುತ್ತಾನೆ; ಅದಱಿಂ–ಆದ್ದರಿಂದ, ಆತಂಗೆ–ಆತನಿಗೆ, ನಾಮೆಲ್ಲಂ–ನಾವೆಲ್ಲರೂ, ನಿರ್ದ್ವೈತಂ–ಎರಡಿಲ್ಲದೆ ಎಂದರೆ ಭಿನ್ನಾಭಿಪ್ರಾಯವಿಲ್ಲದೆ, ಬೀರದ–ವೀರದ, ಬೀರವಟ್ಟ ಮಂ–ವೀರಪಟ್ಟವನ್ನು, ಇದಂ–ಇದನ್ನು, ನಿರ್ವ್ಯಾಜದಿಂ–ಯಾವ ನೆಪವೂ ಇಲ್ಲದೆ, ಕಟ್ಟು ವಂ–ಕಟ್ಟೋಣ.
೫೩. ಸುರಸಿಂಧೂದ್ಭವನಿಂಬೞಿಕ್ಕೆ–ಭೀಷ್ಮನ ಅನಂತರ, ಸೇನಾಧಿಪತ್ಯಕ್ಕೆ–ಸೈನ್ಯಾಧಿ ಭೂಪತಿಯ ಪದವಿಗೆ, ತಕ್ಕರೆ–ಯೋಗ್ಯರಾದವರೇ; ಪೆಱರಾರ್–ಬೇರೆ ಯಾರು? ಲೋಕೈಕ ಧನುರ್ ಧರಂ–ಲೋಕಕ್ಕೆಲ್ಲ ಒಬ್ಬನೆ ಬಿಲ್ಗಾರನಾದ, ಕಳಶಜಂ–ದ್ರೋಣನು, ತಕ್ಕ–ಯೋಗ್ಯನು; ನದೀ ನಂದನಂಗೆ–ಭೀಷ್ಮನಿಗೆ, ಆಂ–ನಾನು, ನೆರವಾದೆನಪ್ಪೊಡೆ–ಸಹಾಯವಾಗಿದ್ದ ಪಕ್ಷದಲ್ಲಿ, ಇನಿತು–ಇಷ್ಟು, ಏಕಾದಪ್ಪುದು–ಏಕಾಗುತ್ತದೆ; ಈ ಪೊೞ್ತೆಪೊೞ್ತು–ಈ ಹೊತ್ತೇ ಹೊತ್ತು; ಇರಬೇಡ–ಸುಮ್ಮನಿರಬೇಡ; ಭೂಪತೀ–ರಾಜನೇ, ನೀಂ–ನೀನು, ವೀರಪಟ್ಟಮನದಂ–ಆ ವೀರ ಪಟ್ಟವನ್ನು, ದ್ರೋಣಂಗೆ–ದ್ರೋಣನಿಗೆ, ಈವುದು–ಕೊಡುವುದು.
೫೪. ವಿಸಸನ ರಂಗಕ್ಕೆ–ಯುದ್ಧರಂಗಕ್ಕೆ, ಆನ್ಇರೆ–ನಾನು ಇರಲು, ಪೆಱರಂ–ಇತರರನ್ನು, ಬೆಸಗೊಳ್ವುದೆ–ಕೇಳುವುದೆ? ಎಂದು–ಎಂದು ಹೇಳುತ್ತ, ಜಯ ಪಟಹಂಗಳ್–ವಿಜಯ ಭೇರಿಗಳು, ದೆಸೆದೆಸೆಗೆ–ದಿಕ್ಕುದಿಕ್ಕಿಗೆ, ಎಸೆವಿನೆಗಂ–ಶಬ್ದ ಮಾಡುತ್ತಿರಲು, ಕಳಶಭವಂ– ದ್ರೋಣನು, ಬೀರವಟ್ಟಮಂ–ವೀರಪಟ್ಟವನ್ನು, ಕಟ್ಟಿಸಿಕೊಂಡಂ–ಕಟ್ಟಿಸಿಕೊಂಡನು.
ವಚನ : ಶಾತಕುಂಭಕುಂಭಸಂಭೃತ–ಚಿನ್ನದ ಕಲಶಗಳಲ್ಲಿ ತುಂಬಲ್ಪಟ್ಟ; ಸಮಕಟ್ಟು ತಿರ್ಪನ್ನೆಗಂ–ಏರ್ಪಾಡು ಮಾಡುತ್ತಿರಲು.
೫೫. ಅದಟಂ ಸಿಂಧುತನೂಭವಂ–ಶೂರನಾದ ಭೀಷ್ಮನು, ವಿಜಯನೊಳ್ ಮಾರ್ಕೊಂಡು– ಅರ್ಜುನನಲ್ಲಿ ಪ್ರತಿಭಟಿಸಿ, ಅಣಂ–ವಿಶೇಷವಾಗಿ, ಕಾದಲಾಱದೆ–ಯುದ್ಧ ಮಾಡಲ ಸಮರ್ಥನಾಗಿ, ಬೆಂಬಿೞ್ದೊಡೆ–ಬೆನ್ನ ಮೇಲೆ ಬಿದ್ದರೆ ಎಂದರೆ ಶರಶಯನದ ಮೇಲೆ ಬೆನ್ನಿಟ್ಟು ಮಲಗಿದರೆ, ದ್ರೋಣಂ–ದ್ರೋಣನು, ಕಾದಲೆಂದು–ಯುದ್ಧ ಮಾಡಬೇಕೆಂದು, ಬೆಸನಂ– ಕಾರ್ಯವನ್ನು, ಪೂಣ್ದಂ–ವಹಿಸಿಕೊಂಡನು, ಅಂತು–ಹಾಗೆ, ಅದುವಂ–ಅದನ್ನೂ, ನೋಡುವೆಂ–ನೋಡುತ್ತೇನೆ, ಎಂದು, ಕಣ್ ತಣಿವಿನಂ–ಕಣ್ಣು ತೃಪ್ತಿಪಡುತ್ತಿರಲು, ನೋಡಲ್ಕೆ ಬರ್ಪಂತೆ–ನೋಡುವುದಕ್ಕೆ ಬರುವ ಹಾಗೆ ಬಂದು, ಭಾನು–ಸೂರ್ಯ, ಉದಯಾದ್ರೀಂದ್ರ ಮನೇಱಿ–ಉದಯ ಪರ್ವತವನ್ನು ಹತ್ತಲು, ಅನೀಕಾರ್ಣವಂ–ಸೇನಾಸಮುದ್ರವು, ಪೊಱಮಟ್ಟು–ಹೊರಕ್ಕೆ ಬಂದು, ಒಡ್ಡಿತ್ತು–ಚಾಚಿತ್ತು, ಯುದ್ಧಕ್ಕೆ ಸಿದ್ಧವಾಗಿತ್ತು.
ವಚನ : ತದ್ವ್ಯೂಹದ ಆ ರಚನೆಯ; ಮೊನೆಗೆ–ಮುಂಭಾಗಕ್ಕೆ, ಅಗ್ರಕ್ಕೆ.
೫೬. ಶೋಣಾಶ್ವಂಗಳ್–ಕೆಂಪು ಕುದುರೆಗಳು, ರಜತ ರಥಮಂ–ಬೆಳ್ಳಿಯ ರಥವನ್ನು, ಪೂಡೆ–ಹೂಡಲು; ಕುಂಭಧ್ವಜಂ–ಕಲಶದ ಬಾವುಟ, ಗೀರ್ವಾಣಾ ವಾಸಂಬರ–ಸ್ವರ್ಗದ ವರೆಗೂ, ಅಡರೆ–ಏರಲು; ಮಾಱೊಡ್ಡು–ಎದುರು ಸೈನ್ಯ, ಎನ್ನೀ ಬಾಣಾವಾಸಕ್ಕೆ–ನನ್ನ ಈ ಬತ್ತಳಿಕೆಗೆ, ಸಾಲದು ದಲ್–ಸಾಕಾಗುವುದಿಲ್ಲ, ದಲ್–ದಿಟ, ಎನುತುಂ–ಎಂದು ಹೇಳುತ್ತ, ಅಳವಂ–ಪ್ರತಾಪವನ್ನು, ಬೀಱುತುಂ–ಬೀರುತ್ತ, ಪ್ರಕಟಿಸುತ್ತ; ಬಿಲ್ಗೆ ಜಾಣಂ–ಬಿಲ್ವಿದ್ಯೆ ಯಲ್ಲಿ ಜಾಣನಾದ ದ್ರೋಣನು, ಮಸಗಿ–ಕೆರಳಿ, ಒಂದು ಕೂರಂಬನಾಗಳ್–ಒಂದು ಹರಿತ ವಾದ ಬಾಣವನ್ನು ಆಗ, ತಿರುಪುತ್ತೆ–ತಿರುಗಿಸುತ್ತ, ನಿಂದಂ–ನಿಂತನು.
೫೭. ಆ ಸಕಳಧರಾಧೀಶರ–ಆ ಎಲ್ಲಾ ರಾಜರ, ಬೀಸುವ ಕುಂಚಮನೆ–ಬೀಸುವ ಚವರಿ ಗಳನ್ನೇ, ಪಾರ್ದು–ನೋಡಿ, ಬೀಸಲೊಡಂ–ಬೀಸಿದ ಕೂಡಲೇ, ಕೆಯ್ವೀಸಲೊಡಂ–ತೋಳು ಗಳನ್ನು ಬೀಸಿದ ಕೂಡಲೇ, ಉಭಯ ಬಲಂಗಳ್–ಎರಡು ಸೈನ್ಯಗಳೂ, ಅಱಿದು–ತಿಳಿದು, ತಡೆಯದೆ–ತಡಮಾಡದೆ, ಆಸುಕರಂ ಬೆರಸು–ತೀವ್ರತೆಯಿಂದ ಕೂಡಿ, ತಾಗಿದುವು–ಸಂಘಟ್ಟಿಸಿ ದುವು; ಆಸುಕರಂ (ಸಂ) ಆಶುಕರ.
ವಚನ : ತಲೆಗಳ್ ಪಱಿಯೆ–ತಲೆಗಳು ಕತ್ತರಿಸಲು; ಬರಿಗಳ್–ಪಕ್ಕೆಗಳು; ಸುಲಿಯೆ– ಬಿಚ್ಚಲು, ತೆರೆಯಲು;
೫೮. ಒಡನೆ–ಕೂಡಲೇ, ನಭಂಬರಂ–ಆಕಾಶದವರೆಗೆ, ಸಿಡಿಲ್ವ–ಸಿಡಿಯುವ, ಪಂದಲೆ– ಹಸಿತಲೆ; ಸೂಸುವ–ಚೆಲ್ಲುವ, ಕಂಡದ ಇಂಡೆಗಳ್–ಮಾಂಸಖಂಡಗಳ ಮುದ್ದೆಗಳು, ತೊಡರೆ– ಸಿಕ್ಕಿಕೊಳ್ಳಲು, ತೆರಳ್ದ–ಒಟ್ಟಾದ, ನೆತ್ತರ ಕಡಲ್–ರಕ್ತದ ಸಮುದ್ರ; ನೇಣದ–ಕೊಬ್ಬಿನ, ಒಳ್ಗೆಸಱೊಳ್–ಒಳ್ಳೆಯ ಕೆಸರಿನಲ್ಲಿ, ಜಿಗಿಲ್ತು–ಅಂಟಿಕೊಂಡು, ಅಗುರ್ವು–ಭಯ, ಅಡರೆ– ಏರಲು; ನಿರಂತರಂ–ಎಡೆಬಿಡದೆ, ಪೊಳೆವ–ಹೊಳೆಯುವ, ಬಾಳುಡಿ–ಕತ್ತಿಯ ಮುರುಕು ಗಳು, ಸುಯ್ವ–ದುಡಿಯುತ್ತಿರುವ, ನವವ್ರಣಂಗಳೊಳ್–ಹೊಸ ಗಾಯಗಳಲ್ಲಿ, ಪೊಡರೆ– ಸ್ಫುರಿಸುತ್ತಿರಲು, ಆಹವರಂಗ ಭೂಮಿಯೊಳ್–ಯುದ್ಧಭೂಮಿಯಲ್ಲಿ, ಅದ್ಭುತ ಭಯಾನ ಕಂ–ಆಶ್ಚರ್ಯ ಭಯಂಕರತೆಗಳು, ಪೊದಳ್ದುವು–ವ್ಯಾಪಿಸಿದವು.
ವಚನ : ಧರ್ಮಪುತ್ರನ ಮೊನೆಯೊಳ್–ಧರ್ಮರಾಜನ ಸೈನ್ಯದ ಅಗ್ರಭಾಗದಲ್ಲಿ, ಭರಂಗೆಯ್ದು–ಜೋರುಮಾಡಿ.
೫೯. ಧ್ವಜಮಂ–ಬಾವುಟವನ್ನು, ಖಂಡಿಸಿ–ಕತ್ತರಿಸಿ; ದೃಷ್ಟದ್ಯುಮ್ನನಂ–ದೃಷ್ಟದ್ಯುಮ್ನ ನನ್ನು, ಬಾಣದೊಳೆ–ಬಾಣಗಳಲ್ಲಿಯೆ, ಪೂೞ್ದು–ಹೂತು; ನೆಟ್ಟನೆ–ನೇರಾಗಿ, ಒಟ್ಟಜೆಯಿಂ– ಆಧಿಕ್ಯದಿಂದ (ಬಲವಾಗಿ), ಶಿಖಂಡಿಯಂ–ಶಿಖಂಡಿಯನ್ನು, ತೂಳ್ದಿ–ತಳ್ಳಿ; ಕಾಯ್ಪಿಂದಂ– ಕೋಪದಿಂದ, ದ್ರುಪದನಂ–ದ್ರುಪದನನ್ನು, ಏಸಾಡಿ–ಬಾಣಪ್ರಯೋಗ ಮಾಡಿ, ಮಿಕ್ಕು– ಮೀಱಿ, ಜವಂ–ಯಮನು, ಕೊಲ್ವವೊಲ್–ಕೊಲ್ಲುವಂತೆ, ಆತನಿಂಕಿಱಿಯರಂ–ಆ ದ್ರುಪ ದನಿಗಿಂತ ಕಿರಿಯರಾದವರನ್ನು ಎಂದರೆ ಅವನ ತಮ್ಮಂದಿರನ್ನು, ಪನ್ನೊರ್ವರಂ–ಹನ್ನೊಂದು ಜನರನ್ನು, ಕೊಂದು, ಮಾಣದೆ–ಬಿಡದೆ, ಮತ್ಸ್ಯಜನಂ–ವಿರಾಟನ ಮಗನಾದ, ನಿಶ್ಶಂಕನಂ– ಹೆದರಿಕೆಯಿಲ್ಲದ, ಶಂಕನಂ–ಶಂಕನನ್ನು, ಒಂದೇ ಶರದಿಂ–ಒಂದೇ ಬಾಣದಿಂದ, ಕೊಂದಂ– ಕೊಂದನು.
ವಚನ : ಮೇಘ ಘಟೆಗಳ್–ಮೋಡಗಳ ಸಮೂಹಗಳು; ಅನೇಕಪಘಟೆಗಳ್ವೆರಸು– ಆನೆಗಳ ಗುಂಪುಗಳೊಡನೆ ಕೂಡಿ; ಪೆಱಗಿಕ್ಕಿ–ಹಿಂದಕ್ಕಿ (ರಕ್ಷಿಸಿ).
೬೦. ಓರೊಂದೆ ಪಾರೆಯಂಬಿನೊಳ್–ಒಂದೊಂದೇ ಹಾರೆಯಾಕಾರದ ಬಾಣದಲ್ಲಿ, ಓರೊಂದೆ–ಒಂದೊಂದೇ, ಗಜೇಂದ್ರಮುರುಳೆ–ಆನೆ ಉರುಳಲು; ತೆಗೆನೆಱೆದು–ಕಿವಿವರೆಗೆ ಹೆದೆಯನ್ನು ಸೆಳೆದು, ಎಚ್ಚೆಚ್ಚು–ಹೊಡೆದು ಹೊಡೆದು, ಓರಣದೊಳ್–ಕ್ರಮವಾಗಿ, ಸಾಲಾಗಿ, ಆರುಂ ಅಗುರ್ವಿಸೆ–ಯಾರಾದರೂ ಸರಿಯೆ ಭಯಪಡುತ್ತಿರಲು, ಚೇಕಿತ್ಸನಂ–ಚೇಕಿತ್ಸನನ್ನು, ಘಟೋದ್ಭವಂ–ದ್ರೋಣನು, ತಱಿದು–ಕತ್ತರಿಸಿ, ಆರ್ದಂ–ಗರ್ಜಿಸಿದನು.
ವಚನ : ಅಲ್ಲಕಲ್ಲೋಲಂ ಮಾಡಿ–ಚೆಲ್ಲಾಪಿಲ್ಲಿಯಾಗಿ ಚೆದರಿಸಿ; ಕಳಶಕೇತನಂ– ದ್ರೋಣ;
೬೧. ಸಂಸಪ್ತಕರ್ಕಳ್–ಸಂಸಪ್ತಕರು, ಕಾದಲ್–ಯುದ್ಧ ಮಾಡಲು, ಕರೆದೊಡೆ–ಕರೆದರೆ, ಬೆನ್ನಂ ತಗಳ್ದು–ಅವರ ಬೆನ್ನಟ್ಟಿ, ಆದಕಾಯ್ಪಿಂ–ಉಂಟಾದ ಕೋಪದಿಂದ, ಕಾದುತ್ತಿರ್ ಪಾತಂ–ಹೋರಾಡುತ್ತಿರುವ, ಅರಿಗಂ–ಅರ್ಜುನನು, ಅಂತಾ ಕಳಕಳಮಂ ಅದಂ ಕೇಳ್ದು– ಹಾಗೆ ಆ ಕೋಲಾಹಲವನ್ನು ಕೇಳಿ, ಭೋರೆಂದು ಬಂದು–ಬಿರುಸಾಗಿ ಬಂದು, ಎಚ್ಚೆಚ್ಚ– ಹೊಡೆದ ಹೊಡೆದ, ಆ ದಿವ್ಯಾಸ್ತ್ರಂಗಳಿಂ–ಆ ಶ್ರೇಷ್ಠವಾದ ಬಾಣಗಳಿಂದ, ತಮ್ಮೊವಜರ್– ತಮ್ಮ ಗುರುಗಳಾದ ದ್ರೋಣರು, ಉಗಿಯೆ–ಆಕರ್ಷಿತರಾಗಲು, ತಮ್ಮಣ್ಣನಂ–ತಮ್ಮ ಅಣ್ಣ ಧರ್ಮರಾಜನನ್ನು, ಶೌರ್ಯದಿಂದಂ–ಪ್ರತಾಪದಿಂದ, ಕಾದಂ–ರಕ್ಷಿಸಿದನು; ಮುಂ–ಹಿಂದಿನ ಕಾಲದಲ್ಲಿ, ಬಿಜ್ಜನಂ–ವಿಜಯಾದಿತ್ಯನೆಂಬ ರಾಜನನ್ನು, ಕಾದ–ರಕ್ಷಿಸಿದ, ಅರಿಗಂ–ಅರಿಕೇಸರಿ (ಪಾರ್ಥ), ಉೞಿದರಂ–ಮಿಕ್ಕವರನ್ನು, ಕಾವುದು–ರಕ್ಷಿಸುವುದು, ಏಂ ಚೋದ್ಯಮಾಯ್ತೇ– ಏನು ಆಶ್ಚರ್ಯವಾಯಿತೇ? ಅರಿಕೇಸರಿ ವಿಜಯಾದಿತ್ಯನನ್ನು ರಕ್ಷಿಸಿದ ವಿಷಯ ಹಿಂದೆಯೇ ಬಂದಿದೆ.
ವಚನ : ಮಾರ್ತಾಂಡಂ–ಸೂರ್ಯ; ಶರನಿಕರಸ್ಫುರಿತಕಿರಣಂಗಳ್–ಬಾಣಗಳ ಸಮೂಹದ ಪ್ರಕಾಶಮಾನವಾದ ರಶ್ಮಿಗಳು; ಮಸುಳ್ದು–ಕಾಂತಿಹೀನವಾಗಿ, ಕಂದಿ; ಅಪರಜಳನಿಧಿಗೆ–ಪಶ್ಚಿಮ ಸಾಗರಕ್ಕೆ; ಅಪಹಾರತೂರ್ಯಂಗಳಂ–ಯುದ್ಧದ ನಿಲುಗಡೆಯನ್ನು ಸೂಚಿಸುವ ವಾದ್ಯಗಳನ್ನು.
೬೨. ಪಡೆಗಳೆರಡುಂ–ಎರಡು ಸೈನ್ಯಗಳೂ, ಬೀಡಿಂಗೆ–ಪಾಳಯಕ್ಕೆ, ಎತ್ತಂ–ಎಲ್ಲೆಲ್ಲೂ, ತೆರಳ್ದು–ಹೋಗಿ, ನೆಗೞ್ತೆಯಂ–ಕೀರ್ತಿಯನ್ನು, ಪಡೆದು–ಹೊಂದಿ, ಸಂಪಾದಿಸಿ; ಅೞಿದರಂ– ಸತ್ತವರನ್ನು, ಮೆಚ್ಚುತ್ತೆ–ಮೆಚ್ಚಿಕೊಳ್ಳುತ್ತ, ಉತ್ಸಾಹದಿಂ–ಮೇಲಿಂದ ಮೇಲೆ, ಪೊಗೞು ತ್ತುಂ–ಹೊಗಳುತ್ತ, ಒಳ್ಪಡರೆ–ಒಳ್ಳೆಯತನವು ಅಧಿಕವಾಗುತ್ತಿರಲು, ನುಡಿಯುತ್ತುಂ– ಮಾತಾಡುತ್ತ, ಅಂತು ಇರ್ದು–ಹಾಗೆ ಇದ್ದು, ಆದಿತ್ಯಂ–ಸೂರ್ಯನು, ಅಂದು–ಆ ದಿನ, ಅತ್ತ– ಅತ್ತ ಕಡೆ, ಉದಯಾದ್ರಿಯಂ ಅಡರೆ–ಉದಯಗಿರಿಯನ್ನೇರಲು, ಪೊಱಮಟ್ಟು– ಶಿಬಿರಗಳಿಂದ ಹೊರಕ್ಕೆ ಬಂದು, ಕೋಪದಿಂ–ಕೋಪದಿಂದ, ಒಡ್ಡಿ ನಿಂದುವು–ಎದುರಿಸಿ ನಿಂತುವು.
೬೩. ಅಂತು–ಹಾಗೆ, ಒಡ್ಡಿನಿಂದ–ಎದುರಿಸಿ ನಿಂತ, ಚಾತುರ್ದಂತಂ–ಚತುರಂಗ ಸೈನ್ಯ ಗಳು, ಕೆಯ್ವೀಸುವನ್ನೆಗಂ–ಕೈಬೀಸುತ್ತಿರಲು, ಸೈರಿಸದೆ–ತಾಳ್ಮೆಯಿಂದಿರದೆ; ಓರಂತೆ–ಕ್ರಮ ವಾಗಿ, ಪೆಣೆದು–ಹೆಣೆದುಕೊಂಡು, ಅಂತೆ–ಹಾಗೆ, ನೆತ್ತರ ತೊಱೆಗಳ್–ರಕ್ತದ ನದಿಗಳು, ದಿಗಂತಾಂತಮಂ–ದಿಕ್ಕುಗಳ ಕೊನೆಯನ್ನು, ಎಯ್ದಿ–ಮುಟ್ಟಿ, ಪರಿಯೆ–ಹರಿಯಲು, ಇಱಿದುವು–ಯುದ್ಧಮಾಡಿದುವು.
೬೪. ಅೞ್ಗಿದ–ನಾಶವಾದ, ಬಿಲ್ವಡೆ–ಬಿಲ್ಗಾರರ ಸೈನ್ಯ, ಮಾಣದೆ–ಇರದೆ, ತೞ್ಗಿದ– ತಗ್ಗಿದ, ಕ್ಷಯಿಸಿದ, ರಥಂ–ರಥಂಗಳು, ಎಯ್ದೆ–ಚೆನ್ನಾಗಿ, ಬಗಿದ–ತೋಡಿದ, ಪುಣ್ಗಳ ಪೊಱೆ ಯಿಂ–ಹುಣ್ಣುಗಳ ಭಾರದಿಂದ ಎಂದರೆ ಆಧಿಕ್ಯದಿಂದ, ಮೊೞ್ಗಿದ–ಬಾಗಿದ, ಕರಿಘಟೆ–ಆನೆಗಳ ಸೈನ್ಯಗಳು, ಇವುಗಳಿಂದ, ವೀರಭಟ ರಣರಂಗಂ–ಶೂರ ಯೋಧರಿಂದ ಕೂಡಿದ ರಣಭೂಮಿ, ಜವಂ–ಯಮನು, ಅಡುವ–ಬೇಯಿಸುವ, ಅೞ್ಗೆಯಂ–ಅಡುಗೆಯನ್ನು, ಅನುಕರಿಸೆ– ಹೋಲಲು; “ಮೊೞ್ಗು–ನಮನೇ” ; ಅೞ್ಗೆ ಅಡುಗೆ; ಅಲುಗು ಅಲ್ಗು ಆದ ಹಾಗೆ; ಹೀಗೆಯೇ ಬಿರುದು ಬಿರ್ದು, ಬಿರ್ದುಗೊಂಡಾಡುವ ಮದನಮದೋನ್ಮತ್ತೆಯರ್ ನಲ್ಲ ರಾದರ್ (ಶೂದ್ರಕ, ಕಾವ್ಯಸಾ. ೨೧೫).
ವಚನ : ಪೆಣೆದು ಕಾದೆ–ಹೆಣೆದುಕೊಂಡು ಯುದ್ಧಮಾಡಲು.
೬೫. ಪೊಸಮಸೆಯ–ಹೊಸದಾಗಿ ಸಾಣೆಯಿಕ್ಕಿದ, ಅಂಬುಗಳ್–ಬಾಣಗಳು, ದೆಸೆಗಳಂ– ದಿಕ್ಕುಗಳನ್ನು, ಮಸುಳ್ವನ್ನೆಗಂ–ಮಾಸಿಸುತ್ತಿರಲು, ಎಯ್ದೆಪಾಯೆ–ಚೆನ್ನಾಗಿ ನುಗ್ಗಲು; ಪಾಯಿ ಸುವ ರಥಂಗಳ್–ಚೋದಿಸುವ ರಥಗಳು, ಆ ರಥದ–ಆ ರಥಗಳ, ಕೀಲ್ಮುಱಿದಾಗಳೆ–ಕೀಲು ಗಳು ಮುರಿದಾಗಲೇ, ಕೆಯ್ಯಂ–ಕೈಗಳನ್ನು, ಅಲ್ಲಿ–ಕೀಲುಗಳೆಡೆಯಲ್ಲಿ, ಕೋದು–ಪೋಣಿಸಿ, ಸೇರಿಸಿ, ಎಸಗುವ–ರಥಗಳನ್ನು ಓಡಿಸುವ, ಸೂತರ್–ಸಾರಥಿಗಳು; ಅಂಬುಕೊಳೆ–ಬಾಣಗಳು ನಾಟಲು, ಸೂತರ್–ಸಾರಥಿಗಳು, ಉರುಳ್ದುಂ–ಕೆಳಕ್ಕೆ ಉರುಳಿಯೂ, ಇಳಾತಳಕ್ಕೆ ಪಾಯ್ದು– ನೆಲದ ಮೇಲಕ್ಕೆ ನೆಗೆದು, ಅಸಿಯೊಳೆ–ಕತ್ತಿಗಳಲ್ಲೆ, ತಾಗಿ–ಸಂಘಟ್ಟಿಸಿ, ತಳ್ತಿಱಿವ–ಎದುರಿಸಿ ಹೋರಾಡುವ, ನಿಚ್ಚಟರ್–ಸ್ಥಿರರಾದ ಶೂರರು, ಆಜಿರಂಗದೊಳ್–ಯುದ್ಧರಂಗದಲ್ಲಿ, ಒಪ್ಪಿದರ್–ಶೋಭಿಸಿದರು.
ವಚನ : ವಿಳಯಕಾಲ ಜಳಧರಂಗಳ್–ಪ್ರಳಯ ಕಾಲದ ಮೇಘಗಳು;
೬೬. ರಥದಿಂ ಧಾತ್ರಿಗೆ ಪಾಯ್ದು–ರಥದಿಂದ ನೆಲಕ್ಕೆ ದುಮುಕಿ, ಕೊಂಡು ಗದೆಯಂ– ಗದೆಯನ್ನು ತೆಗೆದುಕೊಂಡು, ಇಂದು–ಈ ದಿವಸ, ಅಸ್ಮನ್ಮನೋರಥಂ–ನನ್ನ ಅಭಿಲಾಷೆಯು, ಕೆಯ್ಸಾರ್ದುದು–ಕೈಗೆ ಬಂತು, ಎಂದು, ಕಡಂಗಿ–ಉತ್ಸಾಹಿಸಿ, ಮಾಣದೆ–ನಿಲ್ಲದೆ, ಸಿಡಿಲ್ ಪೊಯ್ದಂತೆವೊಲ್–ಸಿಡಿಲು ಹೊಡೆಯುವಂತೆ, ಪೊಯ್ದುದುಂ–ಹೊಡೆಯುತ್ತಲು, ರಥಯೂಥಧ್ವಜಶಸ್ತ್ರ ಸಂಘಟನದೊಳ್–ರಥಗಳ ಸಮೂಹ ಬಾವುಟಗಳು ಆಯುಧಗಳು– ಇವುಗಳ ತಾಕಲಾಟದಲ್ಲಿ, ಘಂಟಾ ಸಮೇತಂ–ಕೊರಳಿನ ಗಂಟೆಗಳು ಸಹಿತವಾಗಿ, ಕರಿಗಳ್– ಆನೆಗಳು, ಉಗ್ರಾಜಿಯೊಳ್–ಭಯಂಕರ ಯುದ್ಧದಲ್ಲಿ, ಮಹಾರಥನಿಂದಂ–ಮಹಾರಥಿಕ ನಾದ ಭೀಮಸೇನನಿಂದ, ಕುಳಶೈಳದಂತೆ–ಕುಲಗಿರಿಗಳ ಹಾಗೆ, ಬೀೞ್ತಂದುವು–ಕೆಳಕ್ಕೆ ಬಿದ್ದುವು. ಇಲ್ಲಿ ‘ಸಂಘಟನ’ ಎಂಬುದಕ್ಕೆ ಇತರ ಪಾಠಗಳಿವೆ; ಅವುಗಳಿಗೆ ಅರ್ಥೈಸುವುದು ಕಷ್ಟ.
೬೭. ಮದವದ್ದಂತಿಗಳಂ–ಸೊಕ್ಕೇರಿದಾನೆಗಳನ್ನು, ಕಱುತ್ತು–ಕೋಪಿಸಿ, ಅಸಗವೊ ಯ್ಲ್ಪೊಯ್ದು–ಅಗಸನೇಟಿನಿಂದ ಹೊಡೆದು, ಆಜಿಯೊಳ್–ಯುದ್ಧದಲ್ಲಿ, ಭೀಮಂ–ಭೀಮ ಸೇನನು, ಆರ್ದು–ಗರ್ಜಿಸಿ, ಒದೆದು–ಕಾಲಿನಿಂದ ಒದ್ದು, ಈಡಾಡಿದೊಡೆ–ಎಸೆದರೆ, ಅತ್ತ– ಅತ್ತಕಡೆ, ಅಜಾಂಡ ತಟಮಂ–ಬ್ರಹ್ಮಾಂಡದ ಮೇರೆಯನ್ನು, ತಾಪನ್ನೆಗಂ–ತಗುಲುವ ಹಾಗೆ, ಪಾಱಿ–ಹಾರಿ, ತಾಱಿದ–ಒಣಗಿಹೋದ, ಪೇರಾನೆಯ–ದೊಡ್ಡ ಆನೆಗಳ, ಒಡಲ್ಗಳ್– ದೇಹಗಳು, ಅಭ್ರತಳದೊಳ್–ಮೋಡಗಳ ಪ್ರದೇಶದಲ್ಲಿ, ಸಿಲ್ಕಿರ್ದುಂ–ಸಿಕ್ಕಿಕೊಂಡಿದ್ದೂ, ಓರೊಂದು–ಒಂದೊಂದು, ಮಾಣದೆ–ನಿಲ್ಲದೆ, ಬೆಟ್ಟುಬೀೞ್ವತೆಱದಿಂದೆ–ಬೆಟ್ಟ ಬೀಳುವ ಹಾಗೆ, ಕುರು ಕ್ಷೇತ್ರದೊಳ್–ಕುರುಭೂಮಿಯಲ್ಲಿ, ಇನ್ನುಂ–ಇನ್ನೂ ಕೂಡ, ಬೀೞ್ತರ್ಪುವು– ಬೀಳುತ್ತಿವೆ. ಭೀಮನು ಎಂದೋ ಎಸೆದ ಆನೆಗಳ ಹೆಣಗಳು ಮೋಡದ ಪದರಗಳಲ್ಲಿ ಸಿಕ್ಕಿ ಕೊಂಡಿದ್ದು ಇನ್ನೂ ಕೂಡ ಒಂದೊಂದು ಕುರುಕ್ಷೇತ್ರದಲ್ಲಿ ಬೀಳುತ್ತಿದೆ ಎಂಬ ಉತ್ಪ್ರೇಕ್ಷೆ ಅದರ ನವೀನತೆಯಿಂದ ಆಶ್ಚರ್ಯಕರವಾಗಿ ಮನೋಜ್ಞವಾಗಿದೆ. ಪಂಪ ಭಾರತವಿರುವವರೆಗೂ ಅವು ಬೀಳುತ್ತಲೇ ಇರುತ್ತವೆ.
೬೮. ತಡಂಗಾಲ್–(ಭೀಮನ) ದೊಡ್ಡ ಕಾಲುಗಳು, ತೊಡರಿ–ಸಿಕ್ಕಿಕೊಂಡು, ಪೊಯ್ದೊಡೆ– ಒದೆದರೆ, ಕೆಡೆದುಂ–ಕೆಳಕ್ಕೆ ಬಿದ್ದೂ, ತಿವಿದೊಡೆ–ತಿವಿದರೆ, ಸುರುಳ್ದುಂ–ಸುರುಟಿಕೊಂಡೂ, ಮೋದಿದೊಡೆ–ಅಪ್ಪಳಿಸಿದರೆ, ಇರದೆ–ಬಿಡದೆ, ಎಲ್ವಡಗಾಗಿ–ಎಲುಬು ಮಾಂಸಗಳಾಗಿ, ಮಡಿದುಂ–ಸತ್ತೂ, ಕರಿಘಟೆಗಳ್–ಆನೆಗಳು, ಗಡಣದೆ–ಗುಂಪುಗುಂಪಾಗಿ, ಬಿೞ್ದುವು– ಬಿದ್ದುವು; ಏಂ ಬಲಸ್ಥನೊ ಭೀಮಂ–ಭೀಮನು ಏನು ಶಕ್ತಿಸಂಪನ್ನನೋ!
ವಚನ : ಒಲ್ಲನೆ–ಒಯ್ಯನೆ, ಮೆಲ್ಲನೆ; ಉಲಿದು–ಕೂಗಿ.
೬೯. ಇಲ್ಲಿಂದ ಮುಂದಕ್ಕೆ ೮೨ನೆಯ ಪದ್ಯಪೂರ್ತ ಸುಪ್ರತೀಕ ಗಜದ ವಧೆ ಭಗದತ್ತನ ಮರಣ: ನೆಗೞ್ದೆಂ–ಪ್ರಸಿದ್ಧನಾದೆನು; ಎನ್ನೇಣಿದೀಯಾನೆಯುಂ–ನಾನು ಹತ್ತಿಕೊಂಡಿರುವ ಈ ಆನೆ ಕೂಡ, ದೇವೇಂದ್ರನ–ಇಂದ್ರನ, ಐರಾವತದ–ಐರಾವತವೆಂಬ ಆನೆಯ, ಕೆಳೆಯಂ– ಸ್ನೇಹಿತ, ದಲ್–ದಿಟವಾಗಿಯೂ, ದಿಗಿಭಂ–ದಿಗ್ದಂತಿ; ದುರ್ಯೋಧನಂ–ಕೌರವನು, ಎನಗೆ– ನನಗೆ, ನಚ್ಚಿದಂ–ನಂಬಿಕೆಯುಳ್ಳವನು; ಭೀಮಂ–ಭೀಮನು, ಇದಿರಂ–ಸಮ್ಮುಖಕ್ಕೆ, ಎೞ್ತಂದಂ–ಬಂದನು, ಈಗಳ್–ಈಗ, ಸಂದ ಎನ್ನ ಅಳವುಂ ಅದಟುಂ–ಪ್ರಸಿದ್ಧವಾದ ನನ್ನ ಶಕ್ತಿಯೂ ಶೌರ್ಯವೂ, ಮುಗಿಲಂ ಮುಟ್ಟಿತ್ತು–ಮೋಡಗಳನ್ನು ಸ್ಪರ್ಶಮಾಡಿತು, ಎಂದರೆ ಅತ್ಯತಿಶಯವಾಯಿತು; ಎಂದು ಆರ್ದು–ಎಂದು ಗರ್ಜಿಸಿ, ದೋರ್ದರ್ಪಯುಕ್ತಂ–ಬಾಹು ಬಲದ ಗರ್ವದಿಂದ ಕೂಡಿದ, ಭಗದತ್ತಂ–ಭಗದತ್ತನು, ಸುಪ್ರತೀಕದ್ವಿಪಮಂ–ಸುಪ್ರತೀಕ ವೆಂದು ಹೆಸರುಳ್ಳ ಆನೆಯನ್ನು, ಉಪಚಿತ ಉತ್ಸಾಹದಿಂ–ವೃದ್ಧಿಗೊಳ್ಳುತ್ತಿರುವ ಹುಮ್ಮಸ್ಸಿ ನಿಂದ, ತೋಱಿಕೊಟ್ಟಂ–ತೋರಿಸಿಬಿಟ್ಟನು, ಛೂಬಿಟ್ಟನು.
೭೦. ಮದಕರಿಯ ಪರಿವ ಭರದಿಂ–ಮದಿಸಿದ ಆನೆಯು ಓಡುವ ವೇಗದಿಂದ, ನೆಲಂ– ಭೂಮಿಯು, ಅದಿರ್ದೊಡೆ–ಅಲುಗಾಡಿದರೆ, ಒಡ್ಡಿನಿಂದ–ಚಾಚಿನಿಂತ, ಚತುರಂಗಮುಂ– ಚತುರಂಗ ಸೈನ್ಯವೂ, ಕೂಡಿದ–ಕಾಯಿಗಳಿಂದ ಕೂಡಿದ, ಹೂಡಿದ; ಚದುರಂಗದ ಮಣೆಯಂ– ಚದುರಂಗದ ಮಣೆಯನ್ನು, ಅಲ್ಗಿದಂತಪ್ಪಿನೆಗಂ–ಅಳ್ಳಾಡಿಸಿದಂತಾಗುತ್ತಿರಲು, ಒರ್ಮೊದಲೆ– ಒಂದೇ ಸಲ, ನಡುಗಿದುದು–ಕಂಪಿಸಿತು.
ವಚನ : ಅಸುರನುಯ್ದ–ರಾಕ್ಷಸನು ಎತ್ತಿಕೊಂಡು ಹೋದ; ಆದಿವರಾಹಂ–ಆದಿಯ ಹಂದಿ, ಎಂದರೆ ವರಾಹಾವತಾರದ ವಿಷ್ಣು; ಅಱಸಲೆಂದು–ಹುಡುಕಬೇಕೆಂದು; ಸಕಳ ಜಳಚರ ಕಳಿತ ಜಳನಿಧಿಗಳಂ–ಸಮಸ್ತ ನೀರ್ಜಂತುಗಳಿಂದ ಕೂಡಿದ ಕಡಲುಗಳನ್ನು; ಕಲಂಕುವಂತೆ– ಕಲಕುವ ಹಾಗೆ ಬಳಜಳನಿಧಿಯಂ–ಸೈನ್ಯ ಸಾಗರವನ್ನು, ಅಳಿ….ತಟಂ; ಅಳಿಕುಳ–ದುಂಬಿಗಳ ಸಮೂಹದ, ಝೇಂಕಾರದಿಂದ, ಮುಖರಿತ–ಶಬ್ದ ಮಾಡುತ್ತಿರುವ, ವಿಶಾಲ–ವಿಸ್ತಾರವಾದ, ಕರಟತಟಂ–ಕಪೋಲ ಪ್ರದೇಶವುಳ್ಳ; ಆ ದಿಶಾಗಜೇಂದ್ರಂ–ಆ ದಿಗ್ದಂತಿ;
೭೧. ಕರ್ಣತಾಳ–ಕಿವಿಗಳನ್ನು ಬೀಸುವುದರಿಂದಾದ, ಪವನಾಹತಿಯಿಂ–ಗಾಳಿಯ ಹೊಡೆತ ದಿಂದ, ಜಳರಾಶಿ–ಸಮುದ್ರವು, ತಳರ್ದುದು–ಚಲಿಸಿತು; ಕೆಯ್ಯ–ಸೊಂಡಿಲಿನ, ಬಳ್ವಳಿಕೆಗೆ– ಅತಿಶಯವಾದ ಬೀಸಾಟಕ್ಕೆ, ದಿಗ್ಗಜಂ–ದಿಗ್ದಂತಿಗಳು, ದೆಸೆಯಿನ್–ದಿಕ್ಕುಗಳಿಂದ, ಅತ್ತ– ಅತ್ತಕಡೆಗೆ, ತೆರಳ್ದುವು–ಹೋದುವು; ಕಾಯ್ಪಿನಿಂ–ಕೋಪದಿಂದ, ದಿಶಾವಳಿವೆರಸು–ದಿಕ್ಕುಗಳ ಸಮೂಹ ಸಹಿತವಾಗಿ, ಅಂಬರಂ–ಆಕಾಶ, ಪೊಗೆದು–ಹೊಗೆಯಾಡಿ, ಪೊತ್ತಿದುದು–ಉರಿ ಯಿತು; ಆದಮದಾಂಬುವಿಂ–ಸುರಿದ ಮದದ ನೀರಿನಿಂದ, ಜಗಂ–ಜಗತ್ತು, ಜಳಧಿವೊ ಲಾಯ್ತು–ಸಮುದ್ರದಂತಾಯಿತು; ಸುಪ್ರತೀಕಮಂ–ಆ ಸುಪ್ರತೀಕ ಗಜವನ್ನು, ನೆಱೆಯೆ– ಪೂರ್ಣವಾಗಿ, ಬಣ್ಣಿಪರಾರ್ ಗಳ–ವರ್ಣಿಸುವವರು ಯಾರು, ದಿಟವಾಗಿಯೂ! ಬಳ್ವಳಿಕೆ ಬಳ್ವಳ–ಅತಿಶಯ+ಇಕೆ.
೭೨. ಕರನಖದಂತಘಾತದಿಂ–ಸೊಂಡಿಲು, ಉಗುರು–ದಂತಗಳ, ಹೊಡೆತಗಳಿಂದ, ಉರುಳ್ವ–ಬೀಳುವ, ಚತುರ್ಬಲದಿಂ–ಚತುರಂಗ ಸೈನ್ಯದಿಂದ, ತೆರಳ್ವ–ಹೊರಡುವ, ನೆತ್ತರ ಕಡಲ್–ರಕ್ತದ ಕಡಲು, ಆ ಕಡಲ್ವರೆಗಂ–ಆ ಸಮುದ್ರದವರೆಗೂ, ಎಯ್ದೆ–ಹೋಗಲು; ಮಹಾಮಕರಂ–ಮಹಾ ಮೊಸಳೆಯು, ಸಮುದ್ರದೊಳ್–ಸಾಗರದಲ್ಲಿ, ಪರಿವವೊಲ್– ಓಡುವಂತೆ, ಇಂತು–ಹೀಗೆ, ಅಗುರ್ವುವೆರಸು–ಭೀಕರತೆಯಿಂದ ಕೂಡಿ, ಆ ಭಗದತ್ತನ ಕಾಲೊಳ್–ಆ ಭಗದತ್ತನ ಕಾಲುಗಳ ತಿವಿತದಲ್ಲಿ, ಸುಪ್ರತೀಕ ಗಜಂ–ಸುಪ್ರತೀಕವೆಂಬ ಆನೆ, ಆಜಿರಂಗದೊಳ್–ರಣಾಂಗಣದಲ್ಲಿ, ಅಚ್ಚರಿಯಪ್ಪಿನಂ–ಆಶ್ಚರ್ಯವುಂಟಾಗುತ್ತಿರಲು, ಏಂ ಪರಿದುದೊ–ಏನು ಓಡಿತೋ!
ವಚನ : ಪರಿದ ಬೀದಿಗಳೊಳೆಲ್ಲಂ–ಓಡಿದ ದಾರಿಗಳಲ್ಲೆಲ್ಲ; ಕೆಯ್ಯ ಕಾಲ ಕೋಡ ಏಱಿನೊಳ್–ಸೊಂಡಲಿನ, ಕಾಲುಗಳ, ಕೊಂಬುಗಳ ಹೊಡೆತದಲ್ಲಿ; ಜವನೆ–ಯಮನೇ; ಜಿವುಳಿದುೞಿವಂತೆ–ಚಿಗುಳಿಯನ್ನು ತುಳಿದ ಹಾಗೆ; ತೊೞ್ತುೞಿದುೞಿದು–ತುಳಿದು ತುಳಿದು ತುಳಿದು, ಚೆನ್ನಾಗಿ ತುಳಿದು, ಸೊಪ್ಪಾಗುವಂತೆ ತುಳಿದು; ಅರೆದು ಸಣ್ಣಿಸಿದಂತೆ–ತೇದು ಸಣ್ಣ ಗಾಗಿಸಿದಂತೆ, ಗಜಾಸುರನೊಳ್–ಗಜನೆಂಬ ರಾಕ್ಷಸನಲ್ಲಿ; ಆಸುರಂ ಬೆರಸು–ರಭಸದೊಡನೆ ಕೂಡಿ; ಅಂಧಕಾರಾತಿಯಂತೆ–ಈಶ್ವರನ ಹಾಗೆ; ಪೊಣರೆ–ಹೋರಾಡಲು;
೭೩. ತೊಲಗು–ನಡೆ, ಆಚೆಗೆ; ಇದು ಸುಪ್ರತೀಕ ಗಜಂ–(ಅಂಥ ಇಂಥ ಆನೆಯಲ್ಲ) ಸುಪ್ರತೀಕವೆಂಬ ಆನೆ ಇದು; ಆಂ–ನಾನು, ಭಗದತ್ತನೆಂ–(ಸಾಮಾನ್ಯನಲ್ಲ), ಭಗದತ್ತನಾಗಿ ದ್ದೇನೆ; ಇಲ್ಲಿ, ನಿನ್ನ, ತೋಳ್ವಲದ–ಬಾಹುಬಲದ, ಪೊಡರ್ಪು–ಚೈತನ್ಯ, ಸಲ್ಲದು–ಸಲ್ಲುವು ದಿಲ್ಲ; ಎಲೆ–ಲೋ, ಸಾಯದೆ, ಪೋಗು–ಹೋಗು; ಎನೆ–ಎನ್ನಲು, ಭೀಮಂ–ಭೀಮನು, ಕೇಳ್ದು–ಕೇಳಿ, ಆಂತು–ಎದುರಿಸಿ, ಒಲೆಯದಿರ್–ತೂಗಾಡಬೇಡ, ಉರ್ಕಿನೊಳ್–ಉಬ್ಬಾಟ ದಲ್ಲಿ, ನುಡಿವೆ–ಮಾತಾಡುತ್ತೀಯೆ; ಈ ಕರಿ–ಈ ಆನೆ, ಸೂಕರಿಯಲ್ತೆ–ಹೆಣ್ಣು ಹಂದಿ ಯಲ್ಲವೆ? ಪತ್ತಿ–ಏರಿ, ಗಂಟಲಂ–ಇದರ ಗಂಟಲನ್ನು, ಒಡೆಯೊತ್ತಿ–ಒಡೆಯುವಂತೆ ಅಮುಕಿ, ಕೊಂದಪೆಂ–ಕೊಲ್ಲುತ್ತೇನೆ; ಇದಲ್ತು–ಇದಲ್ಲ, ಇದಱಮ್ಮನುಂ–ಇದರ ಅಪ್ಪನು ಕೂಡ, ಎನ್ನಂ–ನನ್ನನ್ನು, ಆಂಪುದೇ–ಎದುರಿಸುತ್ತದೆಯೆ? ಈ ಪದ್ಯದ ತುಂಬ ಇರುವ ಸಣ್ಣ ಸಣ್ಣ ವಾಕ್ಯಗಳು ಸಂಭಾಷಣೆಯ ಶೈಲಿಗೆ ಅಳವಟ್ಟು ಶಕ್ತಿಸಂಪನ್ನವಾಗಿವೆ.
ವಚನ : ನಾರಾಚಂಗಳಿಂ–ಬಾಣಗಳಿಂದ; ತೋಡುಂ ಬೀಡುಂ–ತೊಡು ಬಿಡುವುದೂ; ಸರಲ ಸರಿಯಂ–ಬಾಣದ ಮಳೆಯನ್ನು.
೭೪. ದಿಕ್ಕರಿ–ದಿಗ್ದಂತಿ ಸುಪ್ರತೀಕ, ಸಿಡಿಲೆಱಪಂದದಿಂದೆ–ಸಿಡಿಲು ಬೀಳುವ ಹಾಗೆ, ಎಱಗಿ– ಹೊಡೆದು, ವರೂಥಮಂ–ರಥವನ್ನು, ಪಡಲ್ವಡಿಸೆ–ಚೂರು ಚೂರಾಗಿ ಬೀಳಿಸಲು, ಮರು ತ್ಸುತಂ–ಭೀಮನು, ಮುಳಿದು–ಕೆರಳಿ, ಮಚ್ಚರದಿಂ–ಮಾತ್ಸರ್ಯದಿಂದ, ಗಜೆಗೊಂಡು– ಗದೆಯನ್ನು ಹಿಡಿದು, ಸುತ್ತುಗೊಂಡು–ಬಳಸಿ, ಅಡಿಗಿಡೆ–ಹೆಜ್ಜೆ ಹಾಳಾಗುವಂತೆ, ನುರ್ಗಿ– ನುಗ್ಗಿ, ಪೊಯ್ದು–ಹೊಡೆದು, ಪೆಱಪಿಂಗುವುದು–ಹಿಂದಕ್ಕೆ ಹೋಗುತ್ತಲು, ಕರಿ–ಆನೆಯು, ನೊಂದು–ಯಾತನೆಪಟ್ಟು, ಭೀಮನಂ–ಭೀಮನನ್ನು, ಅಗುರ್ವಿಸಿ–ಹೆದರಿಸಿ, ಪಾಂಡವ ಸೈನ್ಯಂ–ಪಾಂಡವರ ಸೈನ್ಯವು, ಅಳ್ಕುಱಲ್–ಭಯವನ್ನು ಹೊಂದುತ್ತಿರಲು, ಕೋಪದಿಂ–ಕೋಪ ದಿಂದ, ಪಿಡಿದು–ಹಿಡಿದು, ಎಱಗಿತ್ತು–ಮೇಲೆ ಬಿತ್ತು.
ವಚನ : ಕೋಡ–ಕೊಂಬುಗಳ, ಕೆಯ್ಯ–ಸೊಂಡಲಿನ, ಕಾಲ–ಕಾಲುಗಳ, ಎಡೆ ಗಳೊಳ್–ನಡುವಣ ಪ್ರದೇಶಗಳಲ್ಲಿ; ಬಿಣ್ಪುಮಂ–ಭಾರವನ್ನು, ಪೊಳೆವಂದದಿಂ–ಹೊರಳಿ ಸುವ ರೀತಿಯಿಂದ; ಏರ್ದು–ಹತ್ತಿ, ಡೊಕ್ಕರಂಗೊಂಡು–ಡೊಕ್ಕರವೆಂಬ ಒಂದು ಪಟ್ಟನ್ನು ಹಾಕಿ; ಯೋಜನಂಬರಂ–ಯೋಜನಗಳವರೆಗೆ; ಒತ್ತುವುದುಂ–ತಳ್ಳುತ್ತಲು, ಕೊರಳ ಹಿಂಭಾಗ ವನ್ನು ಒಂದು ಭುಜದ ಕಂಕುಳಲ್ಲಿ ಇರಿಕಿಸಿಕೊಂಡು, ಗಲ್ಲವನ್ನು ಅಂಗೈಯಲ್ಲಿ ಪೀಡಿಸುತ್ತ ಇನ್ನೊಂದು ಕೈಯಿಂದ ಕೀಲುಗಳನ್ನು ಹಿಡಿದುಕೊಂಡು, ಎರಡು ತೊಡೆಗಳಿಂದ ಹೊಟ್ಟೆಯನ್ನು ಬಲವಾಗಿ ಪೀಡಿಸುತ್ತ ಇರುವುದಕ್ಕೆ ಡೊಕ್ಕರವೆಂದು ಹೆಸರು (“ಮನ್ಯಾಂ ಕಕ್ಷೇ ವಿನಿಕ್ಷಿಪ್ಯ ಭುಜೇನೈಕೇನ ಸಂಯುತಾಮ್ ॥ ಗಲಂ ಪ್ರಕೋಷ್ಠೇನಾಪೀಡ್ಯ ತತ್ಕರೇಣ ಕಾರಾಂತರಮ್, ಸಂಧೌ ಪ್ರಗೃಹ್ಯ ಜಠರಂ ಸಕ್ಥಿಭ್ಯಾಂಪರಿಪೀಡಯೇತ್ ॥ ತತಸ್ತದ್ ಡೊಕ್ಕರಂ ನಾಮ ವಿಜ್ಞಾನಂ ಜೀವಘಾತನಂ ॥”); ಮಲ್ಲಯುದ್ಧದಲ್ಲಿ ಇದು ಒಂದು ಬಿನ್ನಣ.
೭೫. ಕರಿಯುಂ–ಆನೆಯೂ, ಪವನಜನಂ–ಭೀಮನನ್ನು, ಕುರುಭೂಮಿಯ ನಡುವರೆಗಂ– ಕುರುಕ್ಷೇತ್ರದ ಮಧ್ಯದವರೆಗೂ, ಒತ್ತೆ–ತಳ್ಳಲು, ತದ್ದಿಕ್ಕರಿಗಂ–ಆ ದಿಗ್ದಂತಿಗೂ, ಭೀಮಂಗಂ– ಭೀಮನಿಗೂ, ಉಗ್ರಸಂಗರಧರೆಯೋಳ್–ಭಯಂಕರವಾದ ಯುದ್ಧ ಭೂಮಿಯಲ್ಲಿ, ಆಗಳ್– ಆಗ, ತೋಳ್ವಲಂ–ಭುಜಬಲವು, ಸರಸರಿಯಾದುದು– ಸರಿಸಮಾನವಾಯಿತು.
ವಚನ : ಅಳಱೆ ಪೆಳಱೆ–ಹೆದರಲು ಬೆದರಲು; ಕಿವುೞೆದುೞಿದು–ಅಜಿಗುಜಿಯಾಗು ವಂತೆ ತುಳಿದು, ವಿಕ್ರಾಂತತುಂಗಂ–ಅರ್ಜುನ, ಈ ವಚನ ಇದೇ ಆಶ್ವಾಸದ ೧೦ರ ನಂತರ ಬರುವ ವಚನಕ್ಕೆ ಸಮಾನವಾಗಿದೆ, ಬಲುಮಟ್ಟಿಗೆ.
೭೬. ಪರಿದುದು–ಓಡಿದುದು, ಸುಪ್ರತೀಕ ಗಜಂ–ಸುಪ್ರತೀಕವೆಂಬ ಆನೆ; ಏಱಿದವಂ– ಆನೆಯನ್ನು ಆರೋಹಿಸಿರುವವನು, ಭಗದತ್ತಂ–ಭಗದತ್ತನು; ಆ ಮದದ್ವಿರದಮಂ–ಆ ಸೊಕ್ಕಾನೆಯನ್ನು, ಆಂಕೆಗೊಂಡು–ಎದುರಿಸಿ, ಪೆಣೆವಂ–ಹೆಣೆದುಕೊಂಡು ಹೋರಾಡು ವವನು, ಪವನಾತ್ಮಜಂ–ಭೀಮಸೇನನು; ಈಗಳ್–ಈಗ, ಆಹವಂ–ಯುದ್ಧ, ಪಿರಿದುದಲ್– ಹಿರಿದಾಗಿದೆ ಅಲ್ಲವೆ? ಅತ್ತ ಪೋಪಂ ಎನೆ–ಅತ್ತ ಕಡೆ ಹೋಗೋಣ ಎನ್ನಲು, ಹರಿ–ಕೃಷ್ಣನು, ತದ್ರಥಮಂ–ಆ ರಥವನ್ನು, ವಾಯುವೇಗದಿಂ ಪರಿಯಿಸೆ–ವಾಯುವೇಗದಿಂದ ಓಡಿಸಲು, ಅಂಕದ–ಯುದ್ಧದ, ಪೊಂಕದ–ಆಧಿಕ್ಯವನ್ನುಳ್ಳ, ಸುಪ್ರತೀಕಮಂ–ಸುಪ್ರತೀಕ ಗಜವನ್ನು, ಹರಿಗಂ–ಅರ್ಜುನ, ತಾಗಿದಂ–ಹಳಚಿದನು. “ಪೊಂಗು–ಸ್ಫುಟನೇ” ; ಇದರ ಭಾವನಾಮ ಪೊಂಕ; (ತ) ಪೊಂಗು–ಮಿಗುದಲ್. ಇದಕ್ಕೆ ಕಾದು, ಉಕ್ಕು, ಬಿರಿ, ಒಡೆ ಮುಂತಾದ ಹಲವರ್ಥಗಳಿವೆ.
ವಚನ : ಮೃಗರಾಜ ನಖರ ಮಾರ್ಗಣಂಗಳೊಳಂ–ಸಿಂಹದ ಉಗುರಿನಂತಿರುವ ಬಾಣ ಗಳಲ್ಲಿ; ಕೂರ್ಮನಖಾಸ್ತ್ರಂಗಳೊಳಂ–ಆಮೆಯ ಉಗುರಿನಂತಿರುವ ಅಂಬುಗಳಲ್ಲಿ; ಪೊೞ್ದೊಡೆ–ಹೂತರೆ; ಭೂದತ್ತಮಪ್ಪ–ಭೂಮಿದೇವಿಯಿಂದ ಕೊಡಲ್ಪಟ್ಟ.
೭೭. ಇಡುವುದುಂ–(ದಿವ್ಯಾಂಕುಶವನ್ನು) ಬೀಸಿ ಎಸೆಯಲು; ಅದು, ವಿಲಯಾಗ್ನಿಯ– ಪ್ರಳಯಾಗ್ನಿಯ, ಕಿಡಿಗಳಂ–ಕಿಡಿಗಳನ್ನು, ಉಗುೞುತುಂ–ಕಾರುತ್ತ, ಎಯ್ದೆವರ್ಪುದುಂ– ಹತ್ತಿರಕ್ಕೆ ಬರಲು, ಇದಿರಂ ನಡೆದು–ಎದುರಾಗಿ ಹೋಗಿ, ಅಜರಂ–ಶ್ರೀಕೃಷ್ಣನು, ಉರದಿಂ– ಎದೆಯಿಂದ, ಆಂತೊಡೆ–ಎದುರಿಸಿದರೆ, ಕಂಧರದೊಳ್–ಕೊರಳಿನಲ್ಲಿ, ಅಂಕುಶಂ–ಅಂಕು ಶವು, ತುಡುಗೆವೊಲ್–ಆಭರಣದಂತೆ, ಎಸೆದಿರ್ದುದು–ಪ್ರಕಾಶಿಸಿತು.
ವಚನ : ಚೋದ್ಯಂಬಟ್ಟು–ಆಶ್ಚರ್ಯವನ್ನು ಹೊಂದಿ.
೭೮. ಇದು–ಈ ಅಂಕುಶ, ಪೆಱತಲ್ತು–ಬೇರೆ ಅಲ್ಲ ಎಂದರೆ ಬೇರೇನೂ ಅಲ್ಲ; ಭೂತಲಮಂ–ಭೂಮಂಡಲವನ್ನು, ಆಂ–ನಾನು, ತರಲ್–ತರುವುದಕ್ಕಾಗಿ, ಆದಿ ವರಾಹ ನಾದೆಂ–ವರಾಹಾವತಾರವನ್ನು ಮಾಡಿದೆನು; ಅಂದು–ಆಗ, ಅದಱ–ಆ ವರಾಹದ, ವಿಷಾಣ ಮಂ–ಕೋರೆಹಲ್ಲನ್ನು, ಬೞಿಯಂ–ಅನಂತರ, ಆ ವಸುಧಾಂಗನೆಗೆ–ಆ ಭೂಮಿದೇವಿಗೆ, ಇತ್ತೆಂ–ಕೊಟ್ಟೆನು; ಈತಂ–ಈ ಭಗದತ್ತನು, ಆ ಸುದತಿಯ–ಆ ಭೂದೇವಿಯ, ಪೌತ್ರಂ– ಮೊಮ್ಮಗ; ಆಕೆ–ಅವಳು, ಕುಡೆ–ಕೊಡಲು, ಇವಂಗೆ–ಇವನಿಗೆ, ಬಂದುದು–ಬಂತು; ಎನ ಗಲ್ಲದೆ–ನನಗಲ್ಲದೆ, ಆನಲಾಗದುದಱಿಂ–ತಾಳಿಕೊಳ್ಳಲಾಗದ್ದರಿಂದ, ಆಂತೆಂ–ತಾಳಿ ಕೊಂಡೆನು, ಧರಿಸಿದೆನು; ಗುಣಾರ್ಣವ–ಅರ್ಜುನನೇ, ಇಂ–ಇನ್ನು, ಈ ಕರಿಕಂಧರಮಂ– ಈ ಆನೆಯ ಕೊರಳನ್ನು, ತಱಿವುದು–ಕತ್ತರಿಸುವುದು.
೭೯. ಎಂಬುದುಂ–ಎನ್ನುತ್ತಲೂ, ಒಂದೆ ದಿವ್ಯಶರದಿಂ–ಒಂದೇ ಶ್ರೇಷ್ಠವಾದ ಬಾಣದಿಂದ, ಶಿರಮಂ–(ಆನೆಯ) ತಲೆಯನ್ನು, ಪಱಿಯೆಚ್ಚೊಡೆ–ಕತ್ತರಿಸಿ ಹೋಗುವಂತೆ ಹೊಡೆದರೆ, ಆತಂ–ಆ ಭಗದತ್ತನು, ಒತ್ತಂಬದಿಂ–ಬಲಾತ್ಕಾರದಿಂದ, ಆಂತೊಡೆ–ಎದುರಾದರೆ, ಆಂ– ನಾನು, ಬಱಿದೆ–ವ್ಯರ್ಥವಾಗಿ, ತಪ್ಪಿದೆನೆಂದು–ತಪ್ಪುಮಾಡಿದೆನೆಂದು, ಎಂದರೆ ಆನೆಯ ತಲೆಯನ್ನೂ ಭಗದತ್ತನ ಶಿರವನ್ನೂ ಒಟ್ಟಿಗೇ ಕತ್ತರಿಸಬೇಕಾಗಿತ್ತು, ಹಾಗೆ ಮಾಡಲಿಲ್ಲ, ತಪ್ಪಾ ಯಿತು ಎಂದು; ಕಿರೀಟಿ–ಅರ್ಜುನ, ತನ್ನ, ಬಿಲ್ಲಂ–ಬಿಲ್ಲನ್ನು, ಬಿಸುಟಿರ್ದೊಡೆ–ಬಿಸಾಡಿ ದ್ದರೆ, ಅಚ್ಯುತಂ–ಶ್ರೀಕೃಷ್ಣನು, ಇದೇತಱಿಂ–ಇದು ಏತಕ್ಕೆ, ಆಕುಲಮಿರ್ದೆ–ವ್ಯಥಿತನಾಗಿ ದ್ದೀಯ, ನೋಡು, ಇದು ಎಂತು ಎಂಬುದುಂ–ಇದು ಹೇಗೆ ಎನ್ನುತ್ತಲು, ಮುಳಿಸಿಂ–ಕೋಪ ದಿಂದ, ಗುಣಾರ್ಣವಂ–ಅರ್ಜುನ, ಎರಡು ಕೈಗಳುಮಂ–ಭಗದತ್ತನ ಎರಡು ಕೈಗಳನ್ನೂ, ಎಚ್ಚಂ–ಬಾಣದಿಂದ ಹೊಡೆದನು. ವ್ಯಾಸಭಾರತದ ಕಥೆಗೂ ಇಲ್ಲಿನ ಕಥೆಗೂ ತುಂಬ ವ್ಯತ್ಯಾಸ ವಿದೆ.
೮೦. ಎಚ್ಚು–ಕೈಗಳನ್ನು ಕತ್ತರಿಸಿ, ಅವನ ತಲೆಯುಮಂ–ಭಗದತ್ತನ ತಲೆಯನ್ನೂ, ಪಱಿಯೆಚ್ಚೊಡೆ–ಕತ್ತರಿಸುವಂತೆ ಹೊಡೆದರೆ, ದಿಕ್ಕರಿಯ ತಲೆಯುಂ–ದಿಗ್ದಂತಿಯ ತಲೆಯೂ, ಆತನ ತಲೆಯುಂ–ಅವನ ತಲೆಯೂ, ಪಚ್ಚಿಕ್ಕಿದಂತೆ–ವಿಭಾಗ ಮಾಡಿದಂತೆ, ಕೆಯ್ಗಳುಂ– ಕೈಗಳೂ, ಧರೆಯೊಳ್–ನೆಲದಲ್ಲಿ, ಅಚ್ಚರಿಯಪ್ಪಿನೆಗಂ–ಆಶ್ಚರ್ಯವುಂಟಾಗುತ್ತಿರಲು, ಒಡನೆ– ಜೊತೆಯಾಗಿಯೇ, ಉರುಳ್ದುವು–ಉರುಳಿದುವು.
೮೧. ಇತ್ತ–ಇತ್ತಕಡೆ, ಅರಿಗಂಗೆ–ಅರ್ಜುನನಿಗೆ, ಅಮಿತ್ರಜಯಮಪ್ಪುದುಂ– ಶತ್ರು ವಿಜಯವಾಗುತ್ತಲು, ಅತ್ತ–ಅತ್ತಕಡೆ, ಅಮರರ್ಕಳ್–ದೇವತೆಗಳು, ಆರ್ದು–ಗರ್ಜಿಸಿ, ಪುಷ್ಪವೃಷ್ಟಿಗಳಂ–ಹೂವಿನ ಮಳೆಗಳನ್ನು, ಸೂಸುತ್ತಿರೆ–ಚೆಲ್ಲುತ್ತಿರಲು, ಓಗರವೂಗಳ ಬಂಡಂ– ಬೆರಕೆ ಹೂಗಳ ಮಕರಂದವನ್ನು, ಎಯ್ದೆ ಪೀರುತ್ತೆ–ಚೆನ್ನಾಗಿ ಹೀರುತ್ತ, ಇಂದ್ರವನದಿಂ– ಇಂದ್ರನ ತೋಟದಿಂದ, ಮಱಿದುಂಬಿಗಳ್–ದುಂಬಿಯ ಮರಿಗಳು, ಇಂದ್ರನೀಲಮಂ– ಇಂದ್ರನೀಲವೆಂಬ ರತ್ನಗಳನ್ನೂ, ಮುತ್ತುಮಂ–ಮುತ್ತುಗಳನ್ನೂ, ಓಳಿಯೊಳೆ–ಸಾಲಾಗಿ, ಕೋದು–ಪೋಣಿಸಿ, ಎೞಲಿಕ್ಕಿದ–ನೇತುಬಿಟ್ಟ, ಮಾಲೆಯಂತೆವೋಲ್–ಹಾರದಂತೆ, ಒಡವಂದುವು–ಜೊತೆಯಲ್ಲೇ ಬಂದುವು. ಓಗರವೂಗಳ್ ಎಂದರೆ ಬಗೆ ಬಗೆಯ ಹೂಗಳ ಮಿಶ್ರಣ; ಹಿಂದೆ ಬಂದಿರುವ ಓಗರಗಂಪು–ಎಂಬುದನ್ನು ನೋಡಬಹುದು; ಅಗ್ಗಳನ ಕೆಳಗಿನ ಪದ್ಯ ಈ ಸಂದರ್ಭದಲ್ಲಿ ಗಮನಾರ್ಹ; ಕುಸುಮಿತಾನೇಕ ಕುಸುಮವಲ್ಲೀ ಪ್ರಸರ ವಿಸರ ದೊಳ್.
ತಾನುಗುೞುತ್ತುಮಿರ್ಪ ಪೊಸಗಂಪುಮನಿತ್ತೆ ತೆಮಳ್ದಿಕೊಂಡು ಮಂ
ದಾನಿಳನುಯ್ಯುತಿರ್ಪ ತನಿಗಂಪುಮನಿತ್ತೆ ಮರುಳ್ದು ಭೃಂಗಸಂ
ತಾನಮುಣುತ್ತುಮಿರ್ಪ ನಱುಗಂಪುಮನಿತ್ತೆ ಗಡಂ ಪ್ರಫುಲ್ಲಮ
ಲ್ಲೀ ನವಪುಷ್ಪ ಮೋಗರದ ಕಂಪುಗಳಾಗರಮಾಯ್ತು ಸುಗ್ಗಿಯೊಳ್ ॥ ೪–೯೯.
೮೨. ನರಶರಂಗಳಿಂ–ಅರ್ಜುನನ ಬಾಣಗಳಿಂದ, ಧರಣೀಸುತನೞಿದಂ–ಭಗದತ್ತನು ಸತ್ತನು; ದಿಕ್ಕರಿ ಕೆಡೆದುದು–ದಿಗ್ದಂತಿ ಸುಪ್ರತೀಕ ಬಿತ್ತು ನೆಲಕ್ಕೆ; ಭುವನಮುಂ–ಲೋಕವು ಕೂಡ, ಇನ್ ಉರಿಯದೆ ಇರದು–ಇನ್ನು ಉರಿಯದೆ ಇರುವುದಿಲ್ಲ, ಆಂ–ನಾನು, ಇರದೆ, ಅಡಗುವೆಂ–ಅಡಗಿಕೊಳ್ಳುತ್ತೇನೆ, ಎಂಬವೊಲ್–ಎನ್ನುವಂತೆ, ಅರ್ಕಂ–ಸೂರ್ಯನು, ಅಪರಜಳನಿಧಿಗೆ–ಪಶ್ಚಿಮ ಸಮುದ್ರಕ್ಕೆ, ಇೞಿದಂ–ಇಳಿದನು. ಸೂರ್ಯ ಮುಳುಗಿದನೆಂದು ಭಾವ.
ವಚನ : ಅೞಲ್ದು–ದುಃಖಿಸಿ; ತೊಟ್ಟ ಸನ್ನಣಮನಪ್ಪೊಡಂ–ತೊಟ್ಟ ಯುದ್ಧಕವಚ ವನ್ನಾದರೂ, ಕಳೆಯದೆಯುಂ–ತೆಗೆದುಹಾಕದೆಯೂ;
೮೩. ಮಸಕಂಗುಂದದ–ಆಟೋಪವು ಕಡಮೆಯಾಗದ, ಸುಪ್ರತೀಕಗಜಮಂ– ಸುಪ್ರತೀಕವೆಂಬ ಆನೆಯನ್ನು, ಧಾತ್ರೀಸುತಂ–ಭಗದತ್ತನು, ಕೀಱಿ–ಭಯಧ್ವನಿಯನ್ನು ಮಾಡುತ್ತ, ಚೋದಿಸಿ–ಪ್ರೇರಿಸಿ, ಮುಂದಕ್ಕೆ ನುಗ್ಗಿಸಿ, ಭೀಮಂಗೆಲೆ–ಭೀಮನನ್ನು ಗೆಲ್ಲಲು, ಹರಿಯುಂ ತಾನುಂ–ಕೃಷ್ಣನೂ ತಾನೂ (ಅರ್ಜುನನೂ), ಮುಟ್ಟೆವಂದು–ಹತ್ತಿರಕ್ಕೆ ಬಂದು, ಭರಂಗೆಯ್ದು–ತೀವ್ರತೆಯನ್ನು, ತೋರಿಸಿ, ತನ್ನೆಸಕಂಗಾಯದೆ–ತನ್ನ ಕರ್ತವ್ಯವನ್ನು ಪಾಲಿಸದೆ ಅಧರ್ಮ ಯುದ್ಧದೆ–ಅನ್ಯಾಯವಾದ ಯುದ್ಧದಲ್ಲಿ, ನರಂ–ಅರ್ಜುನನು, ಕೊಲ್ವಲ್ಲಿ–ಕೊಲ್ಲುವಾಗ, ಕಂಡು–ನೋಡಿ, ಇಂತು–ಹೀಗೆ, ಉಪೇಕ್ಷಿಸಿ–ಉದಾಸೀನ ಮಾಡಿ, ನೀಮುಂ– ನೀವು ಕೂಡ, ನಡೆ–ನಾಟುವಂತೆ ಎಂದರೆ ಸ್ಥಿರವಾಗಿ, ನೋಡುತಿರ್ದಿರ್–ನೋಡುತ್ತ ಇದ್ದಿರಿ, ಎನೆ–ಎನ್ನಲು, ಮತ್ತಿನ್ನಾರಂ–ಮತ್ತೆ ಇನ್ನು ಯಾರನ್ನು, ಆಂ–ನಾನು, ನಂಬುವೆಂ–ನಂಬುತ್ತೇನೆ.
ವಚನ : ಪನ್ನಗ ಧ್ವಜನ–ದುರ್ಯೋಧನನ; ಕಾರ್ಮುಕಾಚಾರ್ಯ–ಬಿಲ್ಲೋಜ, ದ್ರೋಣ.
೮೪. ಎನಗಲ್ತು–ನನಗೆ (ಮಾತ್ರ) ಅಲ್ಲ, ಆರ್ಗಂ–ಯಾರಿಗೂ, ವಿಜಯಂ–ಪಾರ್ಥನು; ಅಸಾಧ್ಯನಲ್ತೆ–ಗೆಲ್ಲಲರಿದಾದವನಲ್ಲವೆ? ನೀಂ–ನೀನು, ಆತನಂ ಗೆಲ್ವ–ಅವನನ್ನು ಗೆಲ್ಲುವ, ಮಾತಂ–ಮಾತನ್ನು, ಅಮೋಘಂ–ವ್ಯರ್ಥವಲ್ಲದೆ, ಇಂದೆ–ಈ ದಿನವೇ, ಬಿಸುಡು–ಬಿಟ್ಟು ಬಿಡು; ನಾಳೆ–ನಾಳೆಯ ದಿನ, ವಿಜಯಂ–ಅರ್ಜುನ, ಮಾರ್ಕೊಳ್ಳದಂದು–ಪ್ರತಿಭಟಿಸ ದಿರುವಾಗ, ಉರ್ಕಿ–ಉಕ್ಕಿ, ಪೊಕ್ಕನಂ–ಹೊಕ್ಕವನನ್ನು, ಒರ್ವನಂ–ಒಬ್ಬನನ್ನು, ಆಂತು– ಎದುರಿಸಿ, ಕದನದೊಳ್–ಯುದ್ಧದಲ್ಲಿ ಇಕ್ಕುವೆಂ–ಕೊಲ್ಲುತ್ತೇನೆ, ಮೇಣ್–ಅಥವಾ, ಧರ್ಮನಂ–ಧರ್ಮಪುತ್ರನನ್ನು, ಕಟ್ಟುವೆಂ–ಕಟ್ಟುತ್ತೇನೆ, ಸೆರೆಹಿಡಿಯುತ್ತೇನೆ, ಭೂಪತಿ– ದುರ್ಯೋಧನನೇ, ನೀಂ–ನೀನು, ಇಂತು–ಹೀಗೆ, ನಂಬು; ಅನ್ನನಂ–ಅಂಥವನನ್ನು, ಬಗೆಯಲ್ವೇಡ–ಗಣಿಸಬೇಡ.
ವಚನ : ಇನಿತಂ–ಇಷ್ಟನ್ನು; ಪೂಣಿಸಲೆ–ಪ್ರತಿಜ್ಞೆ ಮಾಡಿಸಲೆಂದೇ; ಬೞಿಯನಟ್ಟಿ– ದೂತನನ್ನು ಕಳಿಸಿ,
೮೫. ಆಹವಾಜಿರದೊಳ್–ಯುದ್ಧರಂಗದಲ್ಲಿ, ಅರಿಗನಂ–ಅರ್ಜುನನನ್ನು, ಆಂಪ– ಎದುರಿಸುವ, ಗಂಡುಂ ಅದಟುಂ–ಪೌರುಷವೂ ಶೌರ್ಯವೂ, ನಿಮಗೆ, ಆವಗಂ–ಪೂರ್ತಿ ಯಾಗಿ (ಯಾವಾಗಲೂ), ಆದುದು–ಉಂಟಾಗಿದೆ; ಅದರ್ಕೆ–ಅದಕ್ಕೆ (ಆದ್ದರಿಂದ), ನಾಳೆ– ನಾಳೆಯ ದಿನ, ನರನಂ–ಅರ್ಜುನನನ್ನು, ತೆಗೆದು–ಆಕರ್ಷಿಸಿ, ಉಯ್ವುದು–ಕರೆದುಕೊಂಡು ಹೋಗುವುದು; ಧರ್ಮಪುತ್ರನಂ–ಧರ್ಮರಾಜನನ್ನು, ಗುರು–ದ್ರೋಣನು, ಪಿಡಿದಪ್ಪಂ– ಸೆರೆಹಿಡಿಯುತ್ತಾನೆ, ಎಂದು, ಅವರಂ–ಆ ಸಂಸಪ್ತಕರನ್ನು, ಆಗಲೆ–ಆಗಲೇ, ಪೂಣಿಸಿ– ಪ್ರತಿಜ್ಞೆ ಮಾಡಿಸಿ, ಪೋಗವೇೞ್ದು–ಹೋಗುವಂತೆ ಹೇಳಿ, ಮಚ್ಚರದೊಳೆ–ದ್ವೇಷದಲ್ಲಿಯೆ, ಮಾಣದೆ–ನಿಲ್ಲದೆ, ಅಸುಂಗೊಳೆ–ಪ್ರಾಣಾಪಹಾರವನ್ನು ಮಾಡಲು; ಕಕ್ಕರಸು–ಕಕ್ಕನೆಂಬ ರಾಜ (?), ಅಂಜೆ–ಹೆದರಲು, ಸಂಜೆಯೊಳ್–ಬೆಳಗಿನ ಸಂಧ್ಯಾಕಾಲದಲ್ಲಿ, ಒಡ್ಡಿದಂ–ಸೇನೆ ಯನ್ನು ಸ್ಥಾಪಿಸಿದನು, ಚಾಚಿದನು. ಇಲ್ಲಿ ‘ಕಕ್ಕರ ಸಂಜೆ’ ಎಂಬುದಕ್ಕೆ ಸರಿಯಾಗಿ ಅರ್ಥವಾಗು ವುದಿಲ್ಲ; ಈ ವಿಷಯವಾಗಿ, ದಿ ॥ ಮುಳಿಯ ತಿಮ್ಮಪ್ಪಯ್ಯನವರು “ಕಕ್ಕ–ಅರಸು–ಅಂಜೆ– ಸಂಜೆಯೊಳ್ ಎಂದು ವಿಂಗಡಿಸಿ ಅನ್ವಯಗೊಳಿಸಬೇಕು. ಕಕ್ಕ–ಕಕ್ಕಲ ಮೊದಲಾದವುಗಳು ಒಂದೇ ಹೆಸರಿನ ರೂಪಾಂತರಗಳೆಂಬುದು ಇತರ ರಾಜವಂಶಾವಳಿಯಿಂದ ಗೊತ್ತಾಗಿದೆ. ಸಂಸಪ್ತಕರನ್ನು ಹಾಗೆ ಕಳುಹಿಸಿದ ಕಕ್ಕರಸ (ಸುಯೋಧನ)ನು ವೈರಿಗಳಂಜುವಂತೆ ಸಂಜೆಯ ಸಮಯದಲ್ಲಿ ಯುದ್ಧಕ್ಕಣಿಯಾದನು ಎಂದೂ, ಅದರೊಡನೆ ಕಕ್ಕರ (ಮಾಸಲು ಬಣ್ಣವು) ಸಂಧಿ(ಸಂಜೆ)ಗೊಂಡ ಸಂಜೆಯಲ್ಲಿ ಎಂದೂ ಪ್ರಕೃತಾಪ್ರಕೃತಾರ್ಥಗಳು ಅಲ್ಲಿ ಸಂಧಿಸಿರಬೇಕೆಂದು ನಮಗೆ ತೋರುತ್ತಿದೆ” ಎಂದು ಬರೆದಿದ್ದಾರೆ (ನಾಡೋಜ ಪಂಪ, ಪು. ೧೭೯); ‘ಕಕ್ಕರಸಂಜೆ’ ಎಂಬ ಪಾಠಕ್ಕೆ ಪ್ರತಿಯಾಗಿ ‘ಕಕ್ಕಸರಂಜೆ’ ಎಂದಾಗಲಿ ‘ಕಕ್ಕರರಂಜೆ’ ಎಂದಾಗಲಿ ಇದ್ದಿರ ಬಹುದು, ಕಕ್ಕಸ (ಸಂ)ಕರ್ಕಶ=ಕರ್ಕರ ಕರ್ಕರ–ಕಠೋರ. ಕಠಿನ; ಎಂದರೆ ಕದನದಲ್ಲಿ ಕರ್ಕಶ ರಾದವರು, ಕದನಕರ್ಕಶರು ಎಂದು ಅರ್ಥವಾಗಬಹುದು; ಅವರು ಅಂಜೆ–ಹೆದರಲು.
ವಚನ : ಪತಾಕಿನಿಯುಂ–ಸೈನ್ಯವೂ; ಮಿೞ್ತುಗರೆವಂತೆ–ಮೃತ್ಯುವನ್ನು ಕರೆದ ಹಾಗೆ;
೮೬. ಗುರು ಭಾರ್ಗವಂ–ಗುರುವಾದ ಪರಶುರಾಮ, ಇಂತು–ಹೀಗೆ, ಈ ಒಡ್ಡಂ–ಈ ವ್ಯೂಹ ರಚನೆಯನ್ನು, ಎಂದರೆ ಚಕ್ರವ್ಯೂಹ ರಚನೆಯನ್ನು, ಅಱಿಪಿದಂ–ತಿಳಿಸಿಕೊಟ್ಟನು; ಇದಂ–ಇದನ್ನು, ಗೆಲಲ್–ಗೆಲ್ಲಲು, ಆವನುಂ–ಯಾವನೂ, ನೆಱೆಯಂ–ಸಮರ್ಥನಾಗನು; ಒರ್ವಂ–ಒಬ್ಬನು, ಉರ್ಕಿನ–ಉದ್ಧಟತನದ, ಅಳುರ್ಕೆಯಿಂ–ಆಧಿಕ್ಯದಿಂದ, ಪೊಕ್ಕೊಡೆ– ಹೊಕ್ಕರೆ, ಪೊಕ್ಕನೆ–ಹೊಕ್ಕವನೇ, ಮತ್ತೆ–ತಿರುಗಿ, ಅಣಂ–ಸ್ವಲ್ಪವೂ, ಪೊಱಮಡಂ–ಹೊರಕ್ಕೆ ಬಾರನು, ಅಂತು–ಹಾಗೆ, ಆ ಪಾಂಡವ ಸೈನ್ಯಮಂ–ಆ ಪಾಂಡವರ ಸೈನ್ಯವನ್ನು, ತಱಿದು– ಕತ್ತರಿಸಿ, ಒಟ್ಟುವೆಂ–ರಾಶಿ ಹಾಕುತ್ತೇನೆ ಎಂದು, ಬಿಲ್ಲೆಱೆಯಂ–ಧನುರ್ವಿದ್ಯೆಗೆ ಒಡೆಯನಾದ ದ್ರೋಣನು, ಆಹವರಂಗದೊಳ್–ರಣರಂಗದಲ್ಲಿ, ಅಂಕದ–ಪ್ರಸಿದ್ಧವಾದ, ಚಕ್ರವ್ಯೂಹ ಮಂ–ಚಕ್ರವ್ಯೂಹವೆಂಬ ರಚನೆಯನ್ನು, ಒಡ್ಡಿದಂ–ಚಾಚಿದನು, ಮುಂದಿಟ್ಟನು. “ನಭಭಮಂಸ ಸಲಂಗ ಮುಮೊಪ್ಪಲ್ ಪೇೞ್ದಪರಾ ಅನವದ್ಯಮಂ.”
ವಚನ : ಎಡೆಯಱಿದು–ಅವಕಾಶವನ್ನು ತಿಳಿದು, ಸ್ಥಾನವನ್ನು ತಿಳಿದು; ಅವರ ಬಳಸಿ ಯುಂ–ಅವರನ್ನು ಸುತ್ತುವರಿದೂ; ಇವರ್ಗಿವರ್ ಪಾಸಟಿ–ಇವರಿಗೆ ಇವರು ಸಮಾನ, ನೆಲೆಯೊಳ್–ಸ್ಥಳದಲ್ಲಿ; ತಳರದೆ–ಚಲಿಸದೆ; ನೆಱೆದು–ಪೂರ್ಣನಾಗಿ, ಸಮರ್ಥನಾಗಿ;
೮೭. ಇಲ್ಲಿಂದ ಮುಂದಕ್ಕೆ ೧೦೬ರ ವರೆಗೆ ಅಭಿಮನ್ಯುವಿನ ಸಂಹಾರ; ಇದು ಚಕ್ರವ್ಯೂಹಂ– ಇದು (ಸಾಮಾನ್ಯ ವ್ಯೂಹವಲ್ಲ, ಪ್ರಸಿದ್ಧವಾದ, ಅಭೇದ್ಯವಾದ) ಚಕ್ರವ್ಯೂಹ; ಈ ವ್ಯೂಹ ಮನೊಡೆವದಟಂ–ಈ ವ್ಯೂಹವನ್ನು ಭೇದಿಸುವ ಶೂರ, ಪಾರ್ಥಂ–ಅರ್ಜುನ; ಅಂತು–ಹಾಗೆ, ಆತನುಂ–ಅವನೂ, ಗೆಂಟಿದಂ–ದೂರದಲ್ಲಿರುವವನು; ಎಮ್ಮೀ–ನಮ್ಮ ಈ, ನಾಲ್ವರುಂ– ನಾಲ್ಕು ಜನವೂ, ಇದಂ–ಇದನ್ನು, ಭೇದಿಸಲ್–ಮುರಿಯಲು, ಅಱಿಯೆವು–ತಿಳಿಯೆವು; ಕಂದ–ಮಗುವೇ, ನೀಂ–ನೀನು, ಬಲ್ಲ–ಬಲ್ಲೆಯೋ? ಪೇೞ್–ಹೇಳು, ಎಂಬುದುಂ– ಎನ್ನುತ್ತಲೂ, ಆಂ–ನಾನು, ಎಮ್ಮಯ್ಯನಲ್–ನನ್ನ ತಂದೆಯಲ್ಲಿ, ಕೇಳ್ದು–ಕೇಳಿ, ಇದಂ– ಇದನ್ನು, ಅಱವೆಂ–ತಿಳಿದಿರುತ್ತೇನೆ; ಇದೇನ್ ಅಯ್ಯ ಚಿಂತಾಂತರಂ–ಇದೇನು ಅಪ್ಪ ವಿಶೇಷ ಚಿಂತೆ? ಇದಂ–ಇದನ್ನು, ಈಗಳ್–ಈಗ, ವನ್ಯಗಂಧದ್ವಿರದಮೆ–ಕಾಡಿನ ಸೊಕ್ಕಾನೆಯೆ, ಕೊಳನಂ ಪೊಕ್ಕವೊಲ್–ಕೊಳವನ್ನು ಹೊಕ್ಕ ಹಾಗೆ, ಪೊಕ್ಕು–ಪ್ರವೇಶಿಸಿ, ಕಾದಿ–ಯುದ್ಧ ಮಾಡಿ, ತೋರ್ಪೆಂ–ತೋರಿಸುತ್ತೇನೆ.
೮೮. ಅನಲನ–ಅಗ್ನಿಯು, ಕೊಟ್ಟ, ಗಾಂಡಿವದ–ಗಾಂಡೀವವೆಂಬ ಬಿಲ್ಲಿನ, ತೇರ–ರಥದ ಸಾರಥಿಯಾದ, ಮುರಾರಿಯ–ಶ್ರೀಕೃಷ್ಣನ, ಮೆಚ್ಚ–ಮೆಚ್ಚಿಕೆಯ, ದೇವದೇವನ–ಶಿವನು, ದಯೆಗೆಯ್ದ– ಕರುಣಿಸಿದ, ಸಾಯಕದ–ಪಾಶುಪತಾಸ್ತ್ರದ, ಬೆಂಬಲದೊಳ್–ಸಹಾಯ ದಲ್ಲಿ, ಕಲಿಯೆಂದು–ಶೂರನೆಂದು, ಕೆಮ್ಮನೆ–ಸುಮ್ಮನೆ, ಅಮ್ಮನಂ–ಅಪ್ಪನಾದ ಅರ್ಜುನ ನನ್ನು, ಅದ [ಟು] ೞ್ಗುತಿರ್ಪ–ಶೌರ್ಯವನ್ನು ಒಲಿದು ಮೆಚ್ಚುತ್ತಿರುವ, ಇರವಿದೇಂ–ಸ್ಥಿತಿ ಯೇನು? ಪಗೆಯ–ಹಗೆಯ, ಒಡ್ಡು–ಸೈನ್ಯ, ಗೆಲಲ್ಕೆ–ಗೆಲ್ಲುವುದಕ್ಕೆ, ಅಳುಂಬಂ–ಅಸಾಧ್ಯ, ಅತಿಶಯ, ಎಂಬನಿತುವರಂ–ಎಂಬಷ್ಟರವರೆಗೆ, ನಿಮಗೆ, ಅತ್ತಳಗಂ ಬರೆ–ವ್ಯಥೆ ಯುಂಟಾಗಲು, ಮತ್ತೆ–ತಿರುಗಿ, ಮಾಣ್ಬೆನೇ–ನಿಲ್ಲುವೆನೇ? ಇಲ್ಲ, ಯುದ್ಧಕ್ಕೆ ಹೊರಡುತ್ತೇನೆ. ‘ಉೞ್ಗು–ಸ್ನೇಹೇ, ಉೞುಗಿದನೆಂದು ಬಲ್ದಂ, ಉೞುಗೆಂದು ಬೇಂಟ’ ; ಅತ್ತಳಗಂ, ಅತ್ತಲಗ್ಗಂ ಎಂಬುದಕ್ಕೆ ಸಾಧಾರಣಾರ್ಥ ಅತಿಶಯ, ಅಸಾಧ್ಯ, ಕ್ವಚಿತ್ತಾಗಿ ವ್ಯಾಕುಲ ಎಂದಾಗುತ್ತದೆ; ತೋಳೊಳೆ ಜೀವವಿಯೋಗಮಪ್ಪುದೆರ್ದೆಗಪ್ಪುದತ್ತಳಗಂ (ಪಂಪಭಾ. ೪–೧೦೦) ಎಂಬುದನ್ನು ನೋಡ ಬಹುದು.
೮೯. ನೆಱೆದು–ಸಮರ್ಥರಾಗಿ, ಚತುರ್ವಲಂ ಬೆರಸು ಬಂದು–ಚತುರ್ಬಲಸಮೇತವಾಗಿ ಬಂದು, ಉಱದೆ–ಇರದೆ, ಒಡ್ಡಿದ–ಎದುರಿಸಿದ, ಗಂಡರ್–ಶೂರರು, ಆರುಂ–ಯಾರೂ, ಎನ್ನಱಿಯದ–ನಾನು ತಿಳಿಯದ, ಗಂಡರೇ–ಶೂರರೇ? ನೆಗೆದ ನೆತ್ತರ–ಚಿಮ್ಮಿದ ರಕ್ತದ, ಸುಟ್ಟುರೆ–ಪ್ರವಾಹವು (?), ಕಂಡದ ಇಂಡೆಗಳ್–ಮಾಂಸ ಖಂಡದ ರಾಶಿಗಳು, ಪಱಿದು– ಕತ್ತರಿಸಿ, ನಭಂಬರಂ–ಆಕಾಶದವರೆಗೆ, ಪರೆದು–ವ್ಯಾಪಿಸಿ, ಪರ್ವಿ–ಹಬ್ಬಿ, ಲಯಾಗ್ನಿ ಶಿಖಾಕಳಾ ಪಮಂ–ಪ್ರಳಯಾಗ್ನಿ ಜ್ವಾಲೆಗಳ ಸಮೂಹವನ್ನು, ಮಱೆಯಿಸೆ–ಮರೆಮಾಡುತ್ತಿರಲು, ತಾಗಿ– ಎದುರಿಸಿ, ತಳ್ತು–ಸೇರಿ, ಇಱಿಯದನ್ನೆಗಂ–ಯುದ್ಧ ಮಾಡದಿರಲು, ಎಂತು–ಹೇಗೆ, ನರಂಗೆ– ಅರ್ಜುನನಿಗೆ, ಪುಟ್ಟಿದೆಂ–ಹುಟ್ಟಿದೆನು.
ವಚನ : ಯಮನಂದನನಿಂತೆಂದಂ–ಧರ್ಮರಾಜನು ಹೀಗೆ ಹೇಳಿದನು.
೯೦. ಅನುವರದಲ್ಲಿ–ಕಾಳಗದಲ್ಲಿ, ತಳ್ತು–ಸೇರಿ, ಪಗೆಯಂ–ವೈರಿಯನ್ನು, ತವೆ–ನಾಶ ವಾಗಲು, ಕೊಂದೊಡಂ–ಕೊಂದರೂ; ಆಂತ–ಎದುರಿಸಿದ, ಅರಾತಿಸಾಧನದೊಳಗೆ–ಶತ್ರು ಸೈನ್ಯದಲ್ಲಿ, ಅೞ್ಗಿತೞ್ಗಿದೊಡಂ–ನಾಶವಾಗಿ ಕ್ಷೀಣಿಸಿದರೂ, ಎನ್ನಯ ಸಂತತಿಗೆ–ನನ್ನ ಸಂತಾನಕ್ಕೆ, ಆಗಿಸಿರ್ದ–ಉಂಟುಮಾಡಿದ, ನಿನ್ನನೆ–ನಿನ್ನನ್ನೇ, ಮದದಂತಿದಂತ ಮುಸಲಾ ಹತಿಗಂ–ಸೊಕ್ಕಾನೆಯ ದಂತವೆಂಬ ಒನಕೆಯ ಏಟಿಗೂ, ಕರವಾಳ ಬಾಯ್ಗಂ–ಕತ್ತಿಯ ಬಾಯಿಗೂ, ಅಂಬಿನಮೊನೆಗಂ–ಬಾಣದ ಅಲಗಿಗೂ, ಮಹಾರಥರ–ಮಹಾರಥಿಕರ, ತಿಂತಿಣಿ ಗಂ–ಸಮೂಹಕ್ಕೂ, ಪಿಡಿದು–ನಿನ್ನನ್ನು ಹಿಡಿದು, ಎಂತು ನೂಂಕುವೆಂ–ಹೇಗೆ ತಳ್ಳುವೆನು, ಒಡ್ಡುವೆನು.
೯೧. ಮಗನೆ–ಮಗನೇ, ಪದಿನಾಲ್ಕು ವರುಷದ–ಹದಿನಾಲ್ಕು ವರ್ಷಗಳ, ಮಗನಯ್– ಮಗನಾಗಿರುವೆ; ನಿನ್ನನ್ನನೊರ್ವನಂ–ನಿನ್ನಂಥ ಒಬ್ಬನನ್ನು, ಪಗೆವಡೆಯ–ಶತ್ರುಸೈನ್ಯದ, ಒಡ್ಡುಗಳಂ–ಸಮೂಹಗಳನ್ನು, ಒಡೆಯಲ್ಕೆವೇೞ್ದು–ಒಡೆಯುವುದಕ್ಕೆ ಹೇಳಿ, ನಿಯಮಿಸಿ, ಎರ್ದೆ–ಎದೆಯು, ಧಗಮೆನೆ–ಧಗ್ಗೆಂದು ಉರಿಯಲು, ಕಱುವೇ–ವತ್ಸನೇ, ಸೈರಿಸುವ–ತಾಳಿ ಕೊಳ್ಳುವ, ಉಪಾಯಮಾವುದು–ಉಪಾಯ ಯಾವುದು?
ವಚನ : ಆ ಮಾತಂ ಮಾರ್ಕೊಂಡು–ಆ ಮಾತನ್ನು ಪ್ರತಿಭಟಿಸಿ,
೯೨. ರಣದೊಳ್–ಯುದ್ಧದಲ್ಲಿ, ಕ್ರಮಮಂ–ಕ್ರಮವನ್ನು ಎಂದರೆ ಹಿರಿಯನಾದ ಮೇಲೆ ಅವನಿಗಿಂತ ಕಿರಿಯ ಎಂಬ ಕ್ರಮವನ್ನು, ಕೆಯ್ಕೊಳಲೆಂದು–ಸ್ವೀಕರಿಸಲೆಂದು, ಪುಟ್ಟಿ–ಹುಟ್ಟಿ, ಸಾವನ್ನೆಗಂ–ಸಾಯುವವರೆಗೂ, ? ಮಾಣ್ದೊಡೆ–ನಿಂತರೆ, ತಡೆದರೆ, ಅಕ್ರಮಮಕ್ಕುಂ– ಕ್ರಮವಲ್ಲದಾಗುತ್ತದೆ; ಕ್ರಮಮಕ್ಕುಮೇ–ಕ್ರಮವಾಗುತ್ತದೆಯೇ? ಕ್ರಮಮಂ–ಕ್ರಮವನ್ನು, ಆಂ–ನಾನು, ಏಗೆಯ್ದಪೆಂ–ಏಕೆ ಮಾಡುತ್ತೇನೆ? ವಿಕ್ರಮಂ–ಪರಾಕ್ರಮವು, ಕ್ರಮಂ–ಕ್ರಮವು; ಆಂ ವಿಕ್ರಮದಾತನೆಂ–ನಾನು ಪರಾಕ್ರಮದವನಾಗಿದ್ದೇನೆ, ಕ್ರಮದಮಾತಂತಿರ್ಕೆ–ನಿಮ್ಮ ಪಾದಗಳ ಮಾತು ಹಾಗಿರಲಿ; ಮಾಣ್ದಿರ್ದೊಡೆ–(ಯುದ್ಧಕ್ಕೆ ಹೋಗದೆ) ನಿಂತಿದ್ದರೆ, ಆಂ– ನಾನು, ಕ್ರಮಕೆಂದು–ನಿಮ್ಮ ಪಾದಗಳಿಗೆ ಎಂದು, ಎಂದರೆ ಸೇವೆಗಾಗಿ ಎಂದು, ಇರ್ದೆನೆ– ಇದ್ದೇನೆಯಲ್ಲ; ಬಿಟ್ಟೊಡಂ ಬಿಡದೊಡಂ–(ನೀವು ನನ್ನನ್ನು) ಯುದ್ಧಮಾಡುವುದಕ್ಕೆ ಬಿಟ್ಟರೂ ಬಿಡದಿದ್ದರೂ, ಬೀೞ್ಕೊಂಡೆಂ–ಹೋಗುವುದಕ್ಕೆ ಅಪ್ಪಣೆಯನ್ನು ಪಡೆದೆ, ಇಂ– ಇನ್ನು, ಮಾಣ್ಬೆನೇ–ನಿಲ್ಲುತ್ತೇನೆಯೇ?
ವಚನ : ಕನಕರಥಮಂ–ಚಿನ್ನದ ರಥವನ್ನು; ತನ್ನ ಮನದನ್ನನಪ್ಪ–ತನ್ನ ಮನಸ್ಸಿ ನಂಥವನೇ ಆದ; ಚೋದಿಸೆಂದಾಗಳ್–ಮುಂದಕ್ಕೆ ಹರಿಯಿಸು ಎಂದಾಗ.
೯೩. ಎಱಗುವ–ಬೀಳುವ, ಬಟ್ಟಿನಂಬುಗಳ–ದುಂಡಾದ ಬಾಣಗಳ, ಬಲ್ಸರಿ–ಬಲವಾದ ಮಳೆ, ಕುಂಭಜನಂ–ದ್ರೋಣನನ್ನು, ಮರಳ್ಚೆ–ಹಿಂದಿರುಗಿಸಲು, ಪಾಯ್ದ–ಹಾದ, ಅಱಿಕೆಯ– ಪ್ರಸಿದ್ಧರಾದ, ಪಾರೆಯಂಬುಗಳ–ಹಾರೆಯಾಕಾರದ ಬಾಣಗಳ, ತಂದಲ್–ಸೋನೆ, ಸಿಂಧುರಾಜನಂ–ಸೈಂಧವನನ್ನು, ಅಗುರ್ವಿಸಿ–ಹೆದರಿಸಿ, ಮಱುಗಿಸೆ–ವ್ಯಥೆಪಡಿಸಲು, ಬಾಗಿಲೊಳ್–ಚಕ್ರವ್ಯೂಹದ ಬಾಗಿಲಲ್ಲಿ, ಮುಸುಱಿ–ಮುತ್ತಿ, ನಿಂದ–ನಿಂತ, ಘಟಾವಳಿ ಯಂ–ಆನೆಗಳ ಸಾಲನ್ನು, ತೆರಳ್ಚಿ–ಓಡಿಸಿ, ತತ್ತಱದಱಿದು–ತುಂಡು ತುಂಡಾಗಿ ಕತ್ತರಿಸಿ, ಒತ್ತಿ–ತಳ್ಳಿ, ಅಭಿಮನ್ಯು–ಅಭಿಮನ್ಯುವು, ವಿರೋಧಿಬಳಾಂಬು ರಾಶಿಯಂ–ಶತ್ರುಸೇನಾ ಸಾಗರ ವನ್ನು, ಪೊಕ್ಕಂ–ಪ್ರವೇಶಿಸಿದನು.
ವಚನ : ಪೆಣಮಯಂಮಾಡಿ–ಹೆಣಗಳಿಂದ ಕಿಕ್ಕಿರಿಯುವಂತೆ ಮಾಡಿ; ಇಲ್ಲಿ ಸಂಸ್ಕೃತದ ಮಯಟ್ ಪ್ರತ್ಯಯ ಪೆಣ ಎಂಬ ಕನ್ನಡ ಶಬ್ದಕ್ಕೆ ಸೇರಿದೆ; ತೂಱಿಕೊಂಡ–ಗಾಳಿಯಲ್ಲಿ ತೂರಿದ, ಜೋಳದಂತೆ–ಜೋಳದ ಕಾಳಿನ ಹಾಗೆ, ಪಡಲ್ವಡಿಸಿದಾಗಳ್–ಚೆಲ್ಲಾಪಿಲ್ಲಿಯಾಗಿ ಬೀಳಿಸಿದಾಗ.
೯೪. ಒಣಗಿದುದು–ಒಣಕಲಾದ, ಪೆರ್ವಿದಿರ–ಹೆಬ್ಬಿದಿರಿನ, ಒಂದು ಪೆರ್ವೊದಱಿಂ– ಒಂದು ದೊಡ್ಡ ಮೆಳೆಯಿಂದ, ಮೊರೆದು–ಶಬ್ದ ಮಾಡಿ, ಉರ್ವುವ–ಉಬ್ಬುವ, ಆಶುಶುಕ್ಷಣಿ ಯವೊಲ್–ಅಗ್ನಿಯಂತೆ, ಆಂತ–ಎದುರಿಸಿದ, ಖೞ್ಗನಿವಹಕ್ಕೆ–ಕತ್ತಿಗಳ ಸಮೂಹಕ್ಕೆ ಎಂದರೆ ಕತ್ತಿಹಿಡಿದವರ ಗುಂಪಿಗೆ, ರಥಕ್ಕೆ–ರಥಗಳಿಗೆ, ಮತ್ತು ವಾರಣ ನಿವಹಕ್ಕೆ–ಮದ್ದಾನೆಗಳ ಸಮೂಹಕ್ಕೆ, ತಕ್ಕಿನ–ಯೋಗ್ಯತೆಯನ್ನುಳ್ಳ, ಅಭಿಮನ್ಯುವ–ಅಭಿಮನ್ಯುವಿನ, ಕೂರ್ಗಣೆ– ಹರಿತವಾದ ಬಾಣಗಳು, ಪಾಯ್ದು–ನುಗ್ಗಿ, ನುಂಗಲುಂ–ನುಂಗುವುದಕ್ಕೂ, ನೊಣೆಯ ಲುಂ– ಕಬಳಿಸುವುದಕ್ಕೂ, ಉರ್ಚಿ–ಭೇದಿಸಿ, ಮುಕ್ಕಲುಂ–ತಿನ್ನುವುದಕ್ಕೂ, ಯುದ್ಧರಂಗದೊಳ್– ರಣರಂಗದಲ್ಲಿ, ಇದೇಂ–ಇದೇನು, ನೆಱೆ–ಚೆನ್ನಾಗಿ, ಕಲ್ತುವೊ–ಕಲಿತುವೊ! ಇಲ್ಲಿ ನೊಣೆ ಎಂಬುದಕ್ಕೆ ಟೊಣೆ ಎಂಬ ಪಾಠವಿದೆ: ‘ಟೊಣೆ–ಶಠಾರ್ಥೇ(ಮೋಸಗೊಳಿಸು)’ ಎಂಬ ಅರ್ಥ ಹೊಂದುವುದಿಲ್ಲ; ಅಲ್ಲದೆ ನುಂಗಿನೊಣೆ, ನೊಣೆದು ನುಂಗು ಎಂದು ಒಟ್ಟಿಗೆ ಬರುವುದು ಒಂದು ನುಡಿಗಟ್ಟು.
ವಚನ : ಮಾರ್ಪಡೆಯೆಲ್ಲಮಂ–ಪ್ರತಿ ಸೈನ್ಯವನ್ನೆಲ್ಲ; ಜವನ ಪಡೆಗೆ–ಯಮನ ಸೈನ್ಯಕ್ಕೆ; ಪಡಿಗಚ್ಚಿಕ್ಕಿದಂತೆ–(?); ಇಲ್ಲಿ ಬಹುಶಃ ‘ಪಡಿಗಂಚಿಕ್ಕವಂತೆ’ ಎಂಬ ಪಾಠ ಇದ್ದಿರಬಹುದು; ಪಡಿ–ಎಂದರೆ ನಿತ್ಯಗಟ್ಟಳೆಯ ಆಹಾರ; ಕಂಚು–ತಟ್ಟೆ; ಎಂದರೆ ಪಡಿಯನ್ನು ಬಡಿಸುವ ತಟ್ಟೆ ಎಂದರ್ಥವಾಗುತ್ತವೆ; ನರನಂದನನಂ–ಅಭಿಮನ್ಯುವನ್ನು; ವಿಕ್ರಮಕ್ಕಂ ಕ್ರಮಕ್ಕಂ–ಶೌರ್ಯಕ್ಕೂ ಕ್ರಮಕ್ಕೂ, ಪುರುಡಿಸುವ–ಸ್ಪರ್ಧಿಸುವ;
೯೫. ಸೂೞೈಸಿ–ಕ್ರಮಕ್ರಮವಾಗಿ, ಎಚ್ಚೆಚ್ಚು–ಬಾಣ ಪ್ರಯೋಗ ಮಾಡಿ, ಬಿಲ್ಲಂ– ಬಿಲ್ಲನ್ನು, ರಥದ ಕುದುರೆಯಂ–ರಥಗಳ ಕುದುರೆಗಳನ್ನು, ಸೂತನಂ–ಸಾರಥಿಗಳನ್ನು, ಖಂಡಿ ಸುತ್ತೆ–ಕತ್ತರಿಸುತ್ತ, ಆಱೇೞೆಂಟೊಂಬತ್ತುಪತ್ತು–ಆರೇಳು ಎಂಟು ಒಂಬತ್ತು ಹತ್ತು, ಎಂಬ– ಎನ್ನುವ, ಅಱಿಕೆಯ ಸರಲಿಂದೆ–ಹೆಸರಾಂತ ಬಾಣಗಳಿಂದ, ಊಱಿಕೊಂಡು–ನಾಟಿ ಕೀಲಿಸಿ, ಆವಮೆಯ್ಯುಂ–ಯಾವ ದೇಹವೂ, ಪಾೞ್–ಹಾಳು, ಎಂಬಂತಾಗೆ–ಎಂಬ ಹಾಗಾಗಲು, ಪಾರ್ದಾರ್ದು–ನೋಡಿ ಗರ್ಜಿಸಿ, ಉಱದೆ–ಇರದೆ, ಮುಳಿಸಿಂ–ಕೋಪದಿಂದ, ಇಸೆ–ಪ್ರಯೋಗಿ ಸಲು, ನೂರ್ವರುಂ–ನೂರು ಜನರೂ, ಮಕುಟಮಣಿಗಣ ದ್ಯೋತಿಸಾರರ್–ಕಿರೀಟಗಳ ರತ್ನಸಮೂಹಗಳ ಕಾಂತಿಯ ಸಾರವನ್ನುಳ್ಳ, ಕುಮಾರರ್–ದುರ್ಯೋಧನನ ಮಕ್ಕಳು, ಪೊನ್ನತಾೞ್ಗಳ್–ಹೊಂದಾಳೆಯ ಮರಗಳು, ಬೀೞ್ವಂತೆ–ಬೀಳುವ ಹಾಗೆ, ಬಿೞ್ದರ್–ಬಿದ್ದರು.
ವಚನ : ಮೊಗಮಂ ಆವಮೊಗದೊಳೆ ನೋೞ್ಪೆಂ–ಮುಖವನ್ನು ಯಾವ ಮುಖದಲ್ಲಿ ನೋಡುವೆನು ಎಂದರೆ ಯಾವ ಮುಖದಿಂದ ಅವನನ್ನು ನೋಡಲಿ.
೯೬. ಒಂದೆ ಸರಲಿಂದಂ–ಒಂದೇ ಬಾಣದಿಂದ, ಅವನ–ದುಶ್ಶಾಸನನ, ಎದೆಯಂ– ಎದೆಯನ್ನು, ದೊಕ್ಕನೆ–ದೊಕ್ಕೆಂದು, ತಿಣ್ಣಂ ಎಚ್ಚು–ತೀಕ್ಷ್ಣವಾಗಿ ಘಾತಿಸಿ, ಸಂಕ್ರಂದ ನನಂದನತನಯಂ–ಅಭಿಮನ್ಯುವು, ತಂದೆಯ–ಭೀಮಸೇನನ, ಪೂಣ್ಕೆಯನೆ–ಪ್ರತಿಜ್ಞೆಯನ್ನೇ, ನೆನೆದು–ನೆನೆದುಕೊಂಡು, ದುಶ್ಶಾಸನನಂ–ದುಶ್ಶಾಸನನನ್ನು, ಕೊಲಲ್–ಕೊಲ್ಲಲು, ಒಲ್ಲನೆ– ಒಪ್ಪನೆ, ಇಷ್ಟಪಡನೆ.
ವಚನ : ಕಾನೀನ ಸೂನು–ಕರ್ಣನ ಮಗ; ಏನುಂ ಮಾಣದೆ–ಏನೂ, ಸ್ವಲ್ಪವೂ ಬಿಡದೆ; ಬೞಿವೞಿಯಂ ತಗುಳ್ದು–ಹಿಂದೆ ಹಿಂದೆಯೇ ಅನುಸರಿಸಿ; ಗೞಿವೞಿಯ ಪಾವಿನಂತೆ– ಬಿದಿರಗಣೆಯ ಮೇಲೆ ಬರುವ ಹಾವಿನಂತೆ, ಗೞೆ ಗಣೆ+ಬೞಿ–ದಾರಿ; ಮಲ್ಲಾಮಲ್ಲಿ ಯಾಗೆ–ದ್ವಂದ್ವ ಯುದ್ಧವಾಗಿ; ತೂಳ್ದು–ತಳ್ಳಲ್ಪಟ್ಟು; ತೆರಳ್ದು–ಚಲಿಸಿ; ಅತಿಭರಂ–ಅತಿ ಜೋರಾದುದು; ಏಗೆಯ್ವಂ ಎನೆ–ಏನು ಮಾಡೋಣವೆನ್ನಲು; ಇಂದಿನ ಅನುವರಕೆ–ಈ ದಿನದ ಯುದ್ಧಕ್ಕೆ; ಎಡೆಯೊಳ್–ಈ ಸಮಯದಲ್ಲಿ, ಆನೆ–ನಾನೆ, ಸಾಲ್ವೆಂ–ಸಾಕಾಗುತ್ತೇನೆ, ಸಮರ್ಥನಾಗುತ್ತೇನೆ.
೯೭. ಉಱದೆ–ಇರದೆ, ಇದಿರಾಂತು–ಎದುರಿಗೆ ಪ್ರತಿಭಟಿಸಿ, ನಿಂದ–ನಿಂತ, ರಿಪುಸೈನ್ಯ ಮಂ–ಶತ್ರು ಸೈನ್ಯವನ್ನು, ತತ್ತಱದಱಿದಿಕ್ಕಲ್–ಚೂರು ಚೂರಾಗಿ ಕತ್ತರಿಸಿ ಹಾಕಲು, ಆಂ– ನಾನು, ನೆಱೆವೆಂ–ಸಮರ್ಥನಾಗಿದ್ದೇನೆ, ಇನ್ ಇರಬೇಡ–ಇನ್ನು ಇಲ್ಲಿ ಇರಬೇಡ, ನಿನ್ನಱಿ ಕೆಯ–ನಿನ್ನ ಪ್ರಸಿದ್ಧನಾದ, ಕುಂಭಸಂಭವನಂ–ದ್ರೋಣನನ್ನು, ಒಡಗೊಂಡು ಪೋಗು ಒಡ ಗೂಡಿ ಹೋಗು, ಎಂದೊಡೆ–ಎಂದು ಹೇಳಿದರೆ, ಜಯದ್ರಥಾ–ಜಯದ್ರಥನೇ, ಪಾಂಡವ ಸೈನ್ಯಮಂ–ಪಾಂಡವರ ಸೇನೆಯನ್ನು, ಕಱುತ್ತು–ಕೆರಳಿ, ಇಱಿವ–ಘಾತಿಸುವ, ಇನಿತೊಂದು– ಇಷ್ಟೊಂದು, ಅಳುರ್ಕೆ–ಸಾಮರ್ಥ್ಯ, ನಿನಗೆ, ಏತಱೊಳ್–ಯಾವುದರಲ್ಲಿ, ಆದುದೊ, ಉಂಟಾ ಯಿತೋ? ಪೇೞ್–ಹೇಳು.
೯೮. ನರನೊಳ್–ಅರ್ಜುನನಲ್ಲಿ, ಮುಂ–ಹಿಂದಿನ ಕಾಲದಲ್ಲಿ, ಅಗಪಟ್ಟ–ಒಳಗೆ ಸಿಕ್ಕ,
ಸೆರೆಯಾದ, ಒಂದೞಲೊಳ್–ಒಂದು ವ್ಯಥೆಯಿಂದ, ಆಂ–ನಾನು, ಕೈಳಾಸ ಶೈಳೇಶನಂ–ಈಶ್ವರ ನನ್ನು, ಪಿರಿದುಂ ಭಕ್ತಿಯೊಳ್–ಹಿರಿದಾದ ಭಕ್ತಿಯಲ್ಲಿ, ಅರ್ಚಿಸುತ್ತಮಿರೆ–ಪೂಜಿಸುತ್ತಿರಲು, ತದ್ದೇವಾಧಿಪಂ–ಆ ದೇವತೆಗಳೊಡೆಯ, ಶಿವ, ಮೆಚ್ಚಿದೆಂ–ಮೆಚ್ಚಿದೆನು, ನರನೊರ್ವಂ– ಅರ್ಜುನನೊಬ್ಬ, ಪೊಱಗಾಗಲ್–ಹೊರಗಾಗಿರಲು, ಒಂದು ದಿವಸಂ–ಒಂದು ದಿನ, ನಿರುತಂ– ನಿಶ್ಚಯವಾಗಿಯೂ, ಕೌಂತೇಯರಂ–ಪಾಂಡವರನ್ನು, ನೀಂ–ನೀನು, ಕಾದಿ–ಯುದ್ಧಮಾಡಿ, ಗೆಲ್–ಗೆಲ್ಲು, ಎನೆ–ಎನ್ನಲು, ಆಂ–ನಾನು, ಅದ್ರೀಂದ್ರಾತ್ಮಜಾಧೀಶನೊಳ್–ಶಿವನಲ್ಲಿ, ಬರಮಂ–ವರವನ್ನು, ಪೆತ್ತೆಂ–ಪಡೆದೆನು. ಇಲ್ಲಿ ಅಗಪಡು ಎಂಬುದು ಗಮನಾರ್ಹ; ಅಗಂ– ಒಳಗೆ+ಪಡು–ಬೀಳು, ಒಳಗೆ ಬೀಳು, ಸೆರೆಯಾಗಿ ಸಿಕ್ಕು ಎಂದು ಅಭಿಪ್ರಾಯ, (ತ) ಅಗಂ– ಉಳ್ಳಿಡಂ–ಒಳಗು; ಇದನ್ನು ಕೆಲವರು ಕವಿಗಳು ಅಘವಡು ಎಂದರೆ ಅಘಮಂ+ಪಡು–ಪಾಪ ವನ್ನು ಹೊಂದು ಎಂದು ಭಾವಿಸಿದ್ದಾರೆ; ಮುನಿ ನೇತ್ರೇಂದ್ರಿಯ ಲೋಭದಿಂದ ಮಂದ ಘವಟ್ಟಂ (ಪಂಪರಾ. ೪–೮೫), ಅವರಘವಟ್ಟಿರವಂ ತಿಳಿದು ವಿಭೀಷಣಂ (ಪಂಪರಾ.–೧೩– ೧೪೮); ಕಿಟ್ಟೆಲ್ಲರೂ ಇದನ್ನು ಅಘವಡು ಎಂಬುದಾಗಿ ಉಲ್ಲೇಖಿಸಿ ‘to suffer pain’ ಎಂದು ಅರ್ಥ ಹೇಳಿದ್ದಾರೆ; ಪಂಪಭಾ. ಕೋಶದಲ್ಲಿ ಸರಿಯಾದ ಅರ್ಥವಿದೆ.
ವಚನ : ರಾಜಾಧಿರಾಜಂ–ದುರ್ಯೋಧನನು; ಎರಡು ಮುಯ್ವುಮಂ–ಎರಡು ಹೆಗಲು ಗಳನ್ನೂ,
೯೯. ನಿನ್ನನೆ ನಚ್ಚಿ–ನಿನ್ನನ್ನೇ ನಂಬಿ, ಪಾಂಡವರೊಳ್–ಪಾಂಡವರಲ್ಲಿ, ಆಂತು–ಎದುರಿಸಿ, ಇಱಿಯಲ್–ಯುದ್ಧ ಮಾಡಲು, ತಱಿಸಂದು–ನಿಶ್ಚಯಿಸಿ, ಆಂ–ನಾನು, ಪೂಣ್ದೆಂ–ಪ್ರತಿಜ್ಞೆ ಮಾಡಿದೆನು; ನಿನ್ನ ಶರಾಳಿಗಳ್ಗೆ–ನಿನ್ನ ಬಾಣ ಸಂಘಾತಕ್ಕೆ, ಪಾಂಡವಸೈನ್ಯಂ–ಪಾಂಡವರ ಸೈನ್ಯಗಳು, ಅಗಿದು–ಹೆದರಿ, ನಿಂದುವು–ನಿಂತುವು; ಎಂದೊಡೆ–ಎಂದು ಹೇಳಿದರೆ, ಇಂ–ಇನ್ನು, ನಿನ್ನ, ಭುಜಪ್ರತಾಪದ–ಬಾಹುವಿಕ್ರಮದ, ಅಳವು–ಪ್ರಮಾಣ, ಆರ್ಗಂ–ಯಾರಿಗೂ, ಅಸಾಧ್ಯ ಮಾಯ್ತು–ಗೆಲ್ಲಲಾಗದ್ದಾಯಿತು; ಅದೇಂ–ಅದೇನು, ನಿನ್ನ ಅಳವಿಂದ–ನಿನ್ನ ಶೌರ್ಯ ದಿಂದ, ಜಯದ್ರಥಾ–ಜಯದ್ರಥನೇ, ಅರಾತಿಜಯಂ–ಶತ್ರುಗಳನ್ನು ಗೆಲ್ಲುವುದು, ಎನಗೆ– ನನಗೆ, ಸಾರ್ದುದು–ಸೇರಿತು;
ವಚನ : ಪೊಗೞ್ದು–ಹೊಗಳಿ; ಇರವೇೞ್ದು–ಇರಲು ಹೇಳಿ.
೧೦೦. ಉಡಿದ ರಥಂಗಳ–ಮುರಿದ ರಥಗಳ, ಇಟ್ಟೆಡೆಗಳೊಳ್–ಇಕ್ಕಟ್ಟುಗಳಲ್ಲಿ, ಮಕುಟ ಗಳ–ಕಿರೀಟಗಳ, ರತ್ನದೀಪ್ತಿಗಳ್–ರತ್ನದ ಕಾಂತಿಗಳು, ಪೊಡರ್ವಿನಂ–ಸ್ಫುರಿಸುತ್ತಿರಲು, ಅೞ್ಗಿತೞ್ಗಿದ–ಪೂರ್ತಿ ನಾಶರಾದ, ನಿಜಾತ್ಮಜರಂ–ತನ್ನ ಮಕ್ಕಳನ್ನು, ನಡೆನೋಡಿ–ದೃಷ್ಟಿಸಿ ನೋಡಿ, ಕಣ್ಣನೀರ್–ಕಣ್ಣೀರು, ಒಡನೊಡನೆ–ಕೂಡಲೇ, ಉರ್ಚಿಪಾಯೆ–ಚಿಮ್ಮಿ ಹರಿ ಯಲು, ಮುಳಿಸಿಂದೆ–ಕೋಪದಿಂದ, ಅದಂ–ಅದನ್ನು, ಒಯ್ಯನೆ–ಮೆಲ್ಲಗೆ, ತಾಳ್ದಿ–ಸೈರಿಸಿ, ಕಾಯ್ಪಿನೊಳ್–ಕೋಪದಲ್ಲಿ, ಕಡಂಗಿ–ಉತ್ಸಾಹಿಸಿ, ಜಗಂಗಳಂ–ಲೋಕಗಳನ್ನು, ನೊಣೆದು ನುಂಗಲುಂ–ಕಬಳಿಸಿ ನುಂಗಲು, ಸುಯೋಧನಂ–ದುರ್ಯೋಧನನು, ಆಟಿಸಿದಂ–ಬಯಸಿದನು.
ವಚನ : ಆಳ್ದನ–ಸ್ವಾಮಿಯಾದ ದುರ್ಯೋಧನನ; ಮುಳಿದ ಮೊಗಮಂ–ಕೆರಳಿದ ಮುಖವನ್ನು;
೧೦೧. ತೇರಂ–ರಥವನ್ನು, ಕುದುರೆಯಂ–ಕುದುರೆಗಳನ್ನು, ಎಸಗುವ–(ರಥವನ್ನು) ಹರಿಸುವ; ಸಾರಥಿಯಂ–ಸಾರಥಿಯನ್ನು, ಬಿಲ್ಲಂ–ಬಿಲ್ಲನ್ನು, ಅದಱ–ಬಿಲ್ಲಿನ, ಗೊಣೆಯು ಮಂ–ಹೆದೆಯನ್ನೂ, ಉಱದೆ–ಇರದೆ, ಓರೊರ್ವರ್–ಒಬ್ಬರೊಬ್ಬರು, ಓರೊಂದಂ– ಒಂದೊಂದನ್ನು, ಎಚ್ಚೊಡೆ–ಹೊಡೆದರೆ, ಬೀರಂ–ವೀರನಾದ ಅಭಿಮನ್ಯು, ಗದೆಗೊಂಡು– ಗದೆಯನ್ನು ಹಿಡಿದು, ಬೀರರಂ–(ಶತ್ರು) ಶೂರರನ್ನು, ಬೆಂಕೊಂಡಂ–ಬೆನ್ನಟ್ಟಿದನು. ಇಲ್ಲಿರುವ ಉಂ ಎಂಬ ಸಮುಚ್ಚಯವನ್ನು ತೇರಂ–ಮುಂತಾದ ಶಬ್ದಗಳಿಗೆ ಅನ್ವಯಿಸುವಾಗ ಸೇರಿಸಿಕೊಳ್ಳ ಬೇಕು.
೧೦೨. ಬೆಂಕೊಳೆ–ಬೆನ್ನಟ್ಟಲು, ಕಳಿಂಗ ರಾಜನ–ಕಳಿಂಗ ದೇಶದ ರಾಜನು, ನೂಂಕಿದ– ಮುಂದಕ್ಕೆ ತಳ್ಳಿದ, ಕರಿಘಟೆಯಂ–ಆನೆಗಳ ಹಿಂಡನ್ನು, ಬಡಿ ಬಡಿದು–ಹೊಡೆದು ಹೊಡೆದು, ಎತ್ತಂ–ಎಲ್ಲೆಲ್ಲೂ, ಕಿಂಕೊೞೆ ಮಾೞ್ಪುದುಂ–ಕಿಂಕೊಳೆ ಮಾಡುತ್ತಲು, ಉಱದೆ–ಇರದೆ, ಕರ್ಣನು, ನಿಶಿತವಿಶಿಖದಿಂದೆ–ಹರಿತವಾದ ಬಾಣದಿಂದ, ಎರಡುಂ ಕರಮಂ–ಎರಡೂ ಕೈಗಳನ್ನು, ಎಚ್ಚಂ– ಹೊಡೆದನು, ಕತ್ತರಿಸಿದನು. ಇಲ್ಲಿ ‘ಕಿಂಕೊೞೆ’ ಎಂಬುದಕ್ಕೆ ೧–೩೨ರ ಟಿಪ್ಪಣಿಯನ್ನು ನೋಡಿ.
೧೦೩. ಕರಮೆರಡುಂ ಪಱಿವುದುಂ–ಎರಡು ಕೈಗಳೂ ಕತ್ತರಿಸಿ ಹೋಗುತ್ತಲು, ಆತುರ ದಿಂದಂ–ನೋವಿನಿಂದ, ತನ್ನ, ಕುನ್ನಗೆಯ್ಯೊಳೆ–ಮುರಿದ ಕೈಗಳಿಂದಲೇ, ಉದ್ಧುರ–ಕಳಚಿ ಹೋದ, ರಥಚಕ್ರದಿಂ–ರಥದ ಗಾಲಿಯಿಂದ, ನರಪ್ರಿಯತನೂಜಂ–ಅಭಿಮನ್ಯುವು, ಅಕ್ಷೋಹಿಣಿ ಯಂ–ಅಕ್ಷೋಹಿಣಿ ಸೈನ್ಯವನ್ನು, ತಿರಿಪಿ–ತಿರುಗಿಸಿ, ಇಟ್ಟಂ–ಹೊಡೆದನು. ಕುನ್ನ (ಸಂ) ಕ್ಷುಣ್ಣ– ಮುರಿದ, ಜಜ್ಜಿದ.
ವಚನ : ಅೞಿಯೆ ನೊಂದ–ಸಾಯುವಂತೆ ಯಾತನೆ ಪಟ್ಟ; ಬೆರಗಱಿಯದ–ಉಪಾಯ ವನ್ನು ತಿಳಿಯದ ಅಥವಾ ವಿವೇಕವಿಲ್ಲದ; ಬೆಳ್ಳಾಳ್–ಅಂಜುಪುರುಕ ಅಥವಾ ದಡ್ಡನು; ಪಾಯ್ವಂತೆ–ನುಗ್ಗುವಂತೆ; ಕಿೞ್ತ ಬಾಳ್ವೆರಸು–ಹಿರಿದ ಕತ್ತಿಯೊಡನೆ, ಬೆರಗು=(ತ) ವಿರಗು– ಉಪಾಯಂ, ವಿವೇಕಂ.
೧೦೪. ಸ್ಫುರಿತ ಕೃಪಾಣ ಪಾಣಿಗೆ–ಹೊಳೆಯುವ ಕತ್ತಿಯನ್ನು ಕೈಯಲ್ಲುಳ್ಳವನಿಗೆ ಎಂದರೆ ಖಡ್ಗಪಾಣಿಯಾದ ಗದಾಯುಧನೆಂಬ ದುಶ್ಶಾಸನನ ಮಗನಿಗೆ, ಇದಿರಂ ನಡೆದು–ಎದುರಾಗಿ (ಅಭಿಮನ್ಯುವು) ನಡೆದು, ಅಳ್ಕುಱೆ–ಭಯವಾಗುತ್ತಿರಲು, ತೊಟ್ಟುವಾಯ್ದು–ಮುಟ್ಟು ವಂತೆ ಮೇಲೆ ಬಿದ್ದು, ಡೊಕ್ಕರದೊಳ್–ಡೊಕ್ಕರವೆಂಬ ಒಂದು ಬಿನ್ನಣದಲ್ಲಿ, ಪಟ್ಟಿನಲ್ಲಿ, ಮಿಕ್ಕ–ಮೀರಿದ, ದಿಕ್ಕರಿಯನಿಕ್ಕುವವೊಲ್–ದಿಗ್ಗಂತಿಯನ್ನು ಕೊಲ್ಲುವ ಹಾಗೆ, ನೆಲಕಿಕ್ಕಿ– ನೆಲಕ್ಕೆ ಬೀಳಿಸಿ, ಪತ್ತಿ–ಮೇಲೆ ಏರಿ, ಕತ್ತರಿಗೊಳೆ–ಕತ್ತರಿಯಂತೆ ಹಿಡಿಯಲು, ಕಾಯ್ದು– ಕೋಪಿಸಿ, ಕಣ್ತುಮುೞ್ದು–ಕಮ್ಣು ಹೊರಕ್ಕೆ ಹೊರಟುಕೊಂಡು, ಉಸಿರ್ ಕುಸಿದು–ಉಸಿರು ಕುಗ್ಗಿ, ಅಂತಕಂ–ಕೊಲ್ಲುವವನು (ಗದಾಯುಧನು), ಅಂತಮೆಯ್ದೆ–ಸಾಯಲು, ಅಭಿಮನ್ಯು, ಭಯಂಕರ ರಂಗಭೂಮಿಯೊಳ್–ಭಯಂಕರವಾದ ರಣರಂಗದಲ್ಲಿ, ಮೆಯ್–ಮೈ, ಪರವಶ ವಾಗೆ–ಮೂರ್ಛೆಯನ್ನು ಹೊಂದಲು, ಜೋಲ್ದಂ–ಜೋತು ಬಿದ್ದನು, ಸೊರಗಿ ಬಿದ್ದನು. ಡೊಕ್ಕರ–೧೧–೭೪. ಟಿಪ್ಪಣಿಯನ್ನು ನೋಡಿ; ಕತ್ತರಿ=ಕತ್ತರಂ, ಆಂ ಪಿಡಿದುದೆಕತ್ತರಂ (ಅನಂಪು. ೨–೨೭), ಖಮ್ಮರಿ ಕತ್ತರಿ (ಚಂದ್ರ ಪು. ೫–೭೮).
೧೦೫. ಅನಿತು–ಅಷ್ಟು, ಅಣ್ಮಿ–ಪೌರುಷ ಪ್ರದರ್ಶನ ಮಾಡಿ, ಸತ್ತ, ನರನಂದನಂಗೆ–ಅಭಿಮನ್ಯುವಿಗೆ, ಕಣ್ಸೋಲ್ತು–ಚಕ್ಷು ಪ್ರೀತಿಯುಂಟಾಗಿ, ಅಮರೇಂದ್ರನಂ–ಇಂದ್ರನನ್ನು, ಬಗೆಯದೆ–ಲಕ್ಷ್ಯ ಮಾಡದೆ, ಇಂ–ಇನ್ನು, ಎನಗೆ ತನಗೆ ಎಂಬ–ಅಬಿಮನ್ಯುವು ನನಗೆ ಬೇಕು ತನಗೆ ಬೇಕು ಎಂದು ಹೇಳುವ, ದೇವಾಂಗನೆಯರ–ದೇವಸ್ತ್ರೀಯರ, ಕಳಕಳಮೆ–ಗದ್ದಲವೇ, ಅಂಬರದೊಳ್–ಆಕಾಶದಲ್ಲಿ, ಪಿರಿದುಂ–ಹಿರಿದಾಗಿಯೂ, ಆಯ್ತು–ಆಯಿತು.
೧೦೬. ಅಭಿಮನ್ಯು ಮರಣವಾರ್ತಾ ಪ್ರಭೂತಶೋಕಾಗ್ನಿ–ಅಭಿಮನ್ಯುವಿನ ಸಾವಿನ ಸುದ್ದಿ ಯಿಂದ ಉಂಟಾದ ದುಃಖವೆಂಬ ಅಗ್ನಿ, ಧರ್ಮತನಯನಂ–ಧರ್ಮಪುತ್ರನನ್ನು, ಇರದೆ– ಬಿಡದೆ, ಅಂದು–ಆಗ, ಅಭಿಭವಿಸಿ–ಆಕ್ರಮಿಸಿ, ತನ್ನನ್–ತನ್ನನ್ನು, ಅಳುರ್ದಂತೆ–ವ್ಯಾಪಿಸಿದ ಹಾಗೆ (ಸುಟ್ಟ ಹಾಗೆ), ಭಾಸ್ಕರಂ–ಸೂರ್ಯನು, ಅಸ್ತಾಚಲದೊಳ್–ಅಸ್ತಗಿರಿಯಲ್ಲಿ, ಕೆಂಕ ಮಾದಂ–ಕೆಂಪಾದನು. ದೀರ್ಘಾಕ್ಷರ ಪ್ರಾಚುರ್ಯವುಳ್ಳ ಈ ಪದ್ಯದ ಬಂಧ ಶೋಕಭಾವ ವನ್ನು ಪ್ರತಿಬಿಂಬಿಸುತ್ತದೆ.
ವಚನ : ಅಶನಿಘಾತ–ವಜ್ರದ ಏಟು; ಅಪಹತ ಕದನರ್–ಯುದ್ಧದಿಂದ ಹಿಂದಿರುಗಿ ದವರು;
೧೦೭. ಇದಿರಾಂತ–ಎದುರಿಗೊಡ್ಡಿದ, ಅರಾತಿ ಬಲಂ–ಶತ್ರು ಸೈನ್ಯ, ಎನಿತು–ಎಷ್ಟು, ಅಂತು–ಹಾಗೆ, ಅನಿತಂ–ಅಷ್ಟನ್ನು, ತವೆಕೊಂದು–ನಾಶವಾಗುವಂತೆ ಕೊಂದು, ತತ್ಸುಯೋಧನ ಸುತರ್–ಆ ದುರ್ಯೋಧನನ ನೂರು ಮಕ್ಕಳು, ಎನ್ನ–ನನ್ನ, ಬಾಣಗಣದಿಂ–ಬಾಣಗಳ ಸಮೂಹದಿಂದ, ತವದೆ–ನಾಶವಾಗದೆ, ಇರ್ದರೋ–ಇದ್ದಾರೆಯೋ? ಯುದ್ಧದಾಳ್ಗೆ–ಕಾಳಗದ ಶೂರನಾದ, ಎನಗೆ–ನನಗಾಗಿ, ರೋದನಂ–ಅಳುವುದು, ಆವುದು–ಯಾವುದು? ಎನಗೆ– ನನಗಾಗಿ, ಏಕೆಯೋ–ಏಕೊ, ಶೋಕಿಪಂ–ದುಃಖಿಸುತ್ತಾನೆ? ಎಂದು–ಎಂಬುದಾಗಿ, ಧರ್ಮ ನಂದನ–ಧರ್ಮಸುತನೇ, ನರನಂದನಂ ಅಭಿಮನ್ಯು–ಅರ್ಜುನನ ಮಗನಾದ ಅಭಿಮನ್ಯುವು, ನಿನಗೆ–ನಿನಗಾಗಿ, ಸಗ್ಗದೊಳ್–ಸ್ವರ್ಗದಲ್ಲಿ, ಏನ್ನೋಯನೇ–ಏನು ವ್ಯಥೆಪಡುವು ದಿಲ್ಲವೇ?
೧೦೮. ಜ್ಞಾನಮಯನಾಗಿ–ಜ್ಞಾನದಿಂದ ತುಂಬಿದವನಾಗಿ, ಸಂಸಾರ ನಿತ್ಯತೆಯಂ–ಹುಟ್ಟು ಸಾವುಗಳ ಅಶಾಶ್ವತತೆಯನ್ನು, ಜಲಕ್ಕನಾಗಿ–ವಿಶದವಾಗಿ, ಅಱಿದು–ತಿಳಿದು, ಇರ್ದು– ಇದ್ದು, ಅಜ್ಞಾನಿಯವೋಲ್–ಅವಿವೇಕಿಯಂತೆ, ನೀನುಂ–ನೀನು ಕೂಡ, ಶೋಕಾನಲ ಸಂತಪ್ತ ಚಿತ್ತನಪ್ಪುದು–ಶೋಕದುರಿಯಿಂದ ಬೆಂದಮನದವನಾಗುವುದು, ದೊರೆಯೇ–ತಕ್ಕುದೇ, ಉಚಿತವೇ?
ವಚನ : ಷೋಡಶರಾಜೋಪಾಖ್ಯಾನಮಂ–ಹದಿನಾರು ರಾಜರ ಕಥೆಗಳನ್ನು, ಆಱೆನುಡಿದು–ಶಮನವಾಗುವಂತೆ ಮಾತಾಡಿ.
೧೦೯. ಇತ್ತ–ಇತ್ತಕಡೆ, ಆಜಿಯೊಳ್–ಯುದ್ಧದಲ್ಲಿ, ಮತ್ತನೂಜಶತಂ–ನನ್ನ ಮಗದಿರು ನೂರು, ಅೞಿದುದು–ಸತ್ತುಹೋಯಿತು; ಅತ್ತ–ಅತ್ತಕಡೆ, ಅಭಿಮನ್ಯುವೊರ್ವನ್– ಅಭಿಮನ್ಯುವೊಬ್ಬ, ಅೞಿದಂ–ಸತ್ತನು; ಇದಾವ ಗೆಲ್ಲಂ–ಇದು ಯಾವ ಜಯ? ಎನಗಂ– ನನಗೆ ಕೂಡ ಎಂದರೆ ನನಗಿಂತಲೂ, ಕಲಿಯಾದನೊ–ಶೂರನಾದನೋ; ಪೂಣ್ದ–ಪ್ರತಿಜ್ಞೆ ಮಾಡಿದ, ಗಂಡವಾತೞಿಯದೆ–ಪೌರುಷದ ಭಾಷೆಯನ್ನು ಕೆಡಿಸದೆ, ಗಂಡಂ–ಪೌರುಷ ವನ್ನು (ಅಥವಾ ಶೂರನು), ಇಂತು–ಹೀಗೆ, ಅೞಿವುದು–ಕೆಡಿಸಬೇಕು, ಅಥವಾ ಸಾಯಬೇಕು; ಈ ಅೞಿವು–ಅವಸಾನವು, ಸಾವು, ಎನಗೆ–ನನಗೆ, ಆಜಿರಂಗದೊಳ್–ರಣರಂಗದಲ್ಲಿ, ಗೞಿಯಿಸುಗೆ–ಘಟಿಸಲಿ, ಉಂಟಾಗಲಿ; ಎಂಬಿದಂ–ಎಂಬ ಈ ಮಾತುಗಳನ್ನು, ಘಟಸಂಭವ ನೊಳ್–ದ್ರೋಣನಲ್ಲಿ, ನುಡಿಯುತುಂ–ಮಾತಾಡುತ್ತ, ಸುಯೋಧನಂ–ದುರ್ಯೋಧನನು (ಬೀಡಿಂಗೆ ಪೋದಂ), ತನ್ನ ನೂರು ಮಕ್ಕಳನ್ನು ಕೊಂದವನೂ ಹಗೆಯ ಮಗನೂ ಆಗಿದ್ದ ಅಭಿಮನ್ಯುವಿನ ವಿಷಯವಾಗಿ ಇಂಥ ಪ್ರಶಂಸೆಯನ್ನು ಮಾಡುವುದು ದುರ್ಯೋಧನನ ಗುಣೋನ್ನತಿಯನ್ನು ಸಾರುತ್ತದೆ. ರನ್ನನ ಪದ್ಯಗಳನ್ನು (ಗದಾ. ೪–೫೪, ೫೫, ೫೬) ಇದ ರೊಡನೆ ಹೋಲಿಸಬಹುದು.
ವಚನ : ಬಡಬಾನಳನಳರ್ವಂತಳುರ್ದು–ಬಡಬಾಗ್ನಿಯು ವ್ಯಾಪಿಸುವ ಹಾಗೆ ವ್ಯಾಪಿಸಿ ಸುಟ್ಟು; ಕಟಕಕ್ಕೆ–ಶಿಬಿರಕ್ಕೆ; ವಿಜಯಂ–ಅರ್ಜುನ, ಬರೆವರೆ–ಬರುತ್ತಿರಲು,
೧೧೦. ಹರಿ–ಶ್ರೀಕೃಷ್ಣನು, ನಿಜಯೋಗದಿಂ–ತನ್ನ ಯೋಗಶಕ್ತಿಯಿಂದ, ತನ್ನಳಿಯಂ– ತನ್ನ ಸೋದರಳಿಯ ಅಭಿಮನ್ಯು, ಲಯಮಾದುದಂ–ಸತ್ತುದನ್ನು, ಅಱಿದು–ತಿಳಿದು, ಭಯಂಕರ ಕಪಿಕೇತನಂಗೆ–ಭಯಂಕರನಾದ ಅರ್ಜುನನಿಗೆ, ಅಱಿಪಲ್–ತಿಳಿಸಲು, ಒಲ್ಲದೆ–ಒಪ್ಪದೆ, ಶಮಂತ ಪಂಚಕಂಬರಂ–ಶಮಂತಪಂಚಕವೆಂಬ ಕೊಳದವರೆಗೆ, ಬಂದು ಇೞಿದು–ರಥದಿಂದ ಇಳಿದು, ಸಂಗರಪರಿಶ್ರಮಮಂ–ಯುದ್ಧದ ಆಯಾಸವನ್ನು, ಕಳೆ ಯೆಂದು–ನೀಗು ಎಂದು, ಮಯ್ದುನಂ ಬೆರಸು–ಮೈದುನನೊಡನೆ, ಜಳಾವಗಾಹದೊಳ್– ಮುಳುಗಿ ಸ್ನಾನಮಾಡುವುದರಲ್ಲಿ, ಇರುತ್ತೆ–ಇರುತ್ತ, ಮಹಾಕಪಟ ಪ್ರಪಂಚದಿ–ಮಹಾ ಮೋಸದ ಆಧಿಕ್ಯದಿಂದ.
೧೧೧. ಜಳಮಂತ್ರಮಂತ್ರಿತಾಶಯ ಜಳದೊಳ್–ಜಲಸ್ತಂಭನ ಮಂತ್ರದಿಂದ ಮಂತ್ರಿ ಸಲ್ಪಟ್ಟ ಜಲಾಶಯದಲ್ಲಿ, ನರಂ–ಅರ್ಜುನ, ಇನಿಸು ಮುಳುಗೆ–ಸ್ವಲ್ಪ ಹೊತ್ತು ಮುಳುಗಲು, ನಿಜಸುತಂ–ನಿನ್ನ ಮಗ, ಅಸುಹೃದ್ಬಳಜಳನಿಧಿಯೊಳ್–ಶತ್ರು ಸೈನ್ಯ ಸಾಗರದಲ್ಲಿ, ಫಲ್ಗುಣ– ಅರ್ಜುನನೇ, ಮುೞುಗಿದಂ–ಮುೞುಗಿ ಹೋದನು, ಎಂಬುದನೆ–ಎಂಬ ಈ ಮಾತನ್ನೇ, ನುಡಿದು, ಹರಿ–ಕೃಷ್ಣ, ಮುಳುಗುವುದುಂ–ಮುಳುಗುತ್ತಲು.
೧೧೨. ಭೋಂಕನೆ–ಬೇಗನೆ ಎಂದರೆ ಇದ್ದಕ್ಕಿದ್ದಂತೆ, ಅನಿರೀಕ್ಷಿತವಾಗಿ, ಕೇಳ್ದು–ಆ ಮಾತನ್ನು ಕೇಳಿ, ಎರ್ದೆಕದಡಿ–ಹೃದಯ ಕಲಕಿ, ಕಲಂಕಿದ–ಕದಡಿದ, ಬಗೆವೆರಸು–ಚಿಂತೆ ಯಿಂದ ಕೂಡಿ, ನೆಗೆದು–ನೀರ ಮೇಲಕ್ಕೆ ಎದ್ದು, ನಾಲ್ಕುಂ ದೆಸೆಯಂ–ನಾಲ್ಕು ದಿಕ್ಕುಗಳನ್ನು, ಶಂಕಾಕುಳಿತಂ–ಭಯದಿಂದ ಪೀಡಿತನಾದವನು, ನೋಡಿ, ಮನಂ–ಮನಸ್ಸು, ಕೊಳುಕೆನೆ– ಕಳಕ್ಕೆನ್ನಲು, ಮುೞುಗಿ ನೆಗೆದ ಹರಿಯಂ–ಮುಳುಗಿ ಮೇಲೆದ್ದ ಕೃಷ್ಣನನ್ನು, ನುಡಿದಂ–ಕುರಿತು ಹೇಳಿದನು.
೧೧೩. ಇದು–ಈ ಮಾತು, ಆಕಾಶವಚನಂ–ಆಕಾಶದ ಮಾತು, ಎಂದರೆ ಅಶರೀರ ವಾಣಿ; ಸುತಶೋಕಮಂ–ಪುತ್ರಶೋಕವನ್ನು, ಎನಗೆ–ನನಗೆ, ಅಱಿಪಿದಪ್ಪುದು–ತಿಳಿಸುತ್ತದೆ; ಅಸ್ಮತ್ತನಯಂಗೆ–ನನ್ನ ಮಗನಿಗೆ, ಮರಣಂ–ಸಾವು, ಆ ಕುರುಪತಿಯಿಂದಂ–ಆ ದುರ್ಯೋಧನ ನಿಂದ, ಆದುದು–ಆದದ್ದು, ಆಗಲೆ ವೇೞ್ಕುಂ–ಆಗಿಯೇ ಇರಬೇಕು; ಏಕೆ, ಎಂದು, ಅಱಿಯೆಂ– ತಿಳಿಯೆನು.
೧೧೪. ಇಂದಿನ–ಇವತ್ತಿನ, ಚಕ್ರವ್ಯೂಹಮಂ–ಚಕ್ರವ್ಯೂಹ ರಚನೆಯನ್ನು, ಆಂ–ನಾನು, ದಲ್–ನಿಜವಾಗಿಯೂ, ಅಣಂ–ಸ್ವಲ್ಪವೂ, ಮೆಚ್ಚಲಾಱೆಂ–ಮೆಚ್ಚಲಸಮರ್ಥನಾಗಿದ್ದೇನೆ, ಎನುತಂ–ಎಂದು ಹೇಳುತ್ತ, ರಥಮಂ–ರಥವನ್ನು, ಬಂದು–ಕೊಳದಿಂದ ಬಂದು, ಏಱಿ– ಹತ್ತಿ, ಮಗನ–ಮಗನಿಗೆ ಸಂಬಂಧಿಸಿದ, ಮನಕತಂ–ಮನದ ನೋವು, ವ್ಯಥೆ, ಎರ್ದೆಯಂ– ಎದೆಯನ್ನು, ಒಂದುತ್ತರಂ–ಒಂದಿಷ್ಟು ಅತಿಶಯವಾಗಿ, ಅಲೆಯೆ–ಪೀಡಿಸಲು, ನರಂ– ಅರ್ಜುನ, ಇಂತೆಂದಂ–ಹೀಗೆಂದನು.
೧೧೫. ಕದನದಿಂ–ಯುದ್ಧದಿಂದ, ಆಂ–ನಾನು, ಬರೆ–ಬರಲು, ನಿಚ್ಚಲುಂ–ಪ್ರತಿ ದಿನವೂ, ಇದಿರ್ವಂದು–ಎದುರಿಗೆ ಬಂದು, ಕೊರಲ್ಗೆ–ಕೊರಳಿಗೆ, ಪಾಯ್ದು–ಹಾರಿ, ಅಪ್ಪಿ, ಬಾಯ್ವಾ ಯೊಳ್–ನನ್ನ ಬಾಯಿಂದ ತನ್ನ ಬಾಯಲ್ಲಿ, ಅಲಂಪು–ಸಂತೋಷವು, ಇದಿರ್ಗೊಳೆ–ಎದುರಿಗೆ ತೋರುತ್ತಿರಲು, ತಂಬುಲಮಂ–ಅಗಿದ ಎಲೆಯಡಿಕೆಯನ್ನು, ಕೊಳ್ಳದೆ–ಸ್ವೀಕರಿಸದೆ, ಮಾಣ್ದ– ಬಿಟ್ಟ, ಮಗನ ತಡವು–ಮಗನು ತಡಮಾಡಿದ್ದು, ಅಸುರಾರೀ–ಶ್ರೀಕೃಷ್ಣನೇ, ಇದೇನ್– ಇದೇನು?
ಈ ಪದ್ಯಗಳಲ್ಲಿ (೧೧೦–೧೧೫) ವಾಕ್ಯಗಳು ಪದ್ಯದಿಂದ ಪದ್ಯಕ್ಕೆ ಹರಿದು ಕಥೆಯ ವೇಗವನ್ನು ಪ್ರತಿಬಿಂಬಿಸುತ್ತ ಅರ್ಜುನನ ಆತಂಕವನ್ನು ವೆಗ್ಗಳಿಸುತ್ತ ಶೈಲಿ ದಾರುಣ ರಮ್ಯ ವಾಗಿ ಭವ್ಯತೆಯ ನೆಲೆಯನ್ನು ಮುಟ್ಟುವಂತಿದೆ.
ವಚನ : ಎಯ್ದೆವಂದು–ಹತ್ತಿರ ಬಂದು, ಪರಿಜನಮುಂ–ಸೇವಕರನ್ನೂ; ಇದೇನ್– ಇದೇನು ವಿಷಯ, ಎಂದು ಬೆಸಗೊಳೆ–ಎಂದು ಕೇಳಲು; ಇದೇನ್ ಎಂಬ ಪ್ರಶ್ನೆಯಲ್ಲಿ ಎಂಥ ಶೋಕಸಾಗರವಡಗಿದೆಯೊ!
೧೧೬. ಧರ್ಮರಾಜನ ಮಾತು: ಗುರು ಚಕ್ರವ್ಯೂಹಮಂ ಪಣ್ಣಿದೊಡೆ–ದ್ರೋಣನು ಚಕ್ರವ್ಯೂಹವನ್ನು ರಚನೆ ಮಾಡಿದರೆ, ಇದಂ–ಇದನ್ನು, ಪುಗಲ್–ಹೋಗಲು, ಬಲ್ಲರ್– ತಿಳಿದವರು, ಆರ್–ಯಾರು, ಎಂದೊಡೆ–ಎಂದು ಹೇಳಿದರೆ, ನಾನಿರೆ–ನಾನಿರಲು, ಇಂ– ಇನ್ನು, ಮತ್ತೆ ಆರ್ ಬಲ್ಲರ್–ಬೇರೆ ಯಾರು ತಿಳಿದವರು? ಎಂದು–ಎಂದು ಹೇಳಿ, ಒರ್ವನೆ– ಒಬ್ಬನೆ, ರಿಪುಬಳ ವಾರಾಸಿಯಂ–ಶತ್ರುಸೈನ್ಯ ಸಾಗರವನ್ನು, ಪೊಕ್ಕು–ಪ್ರವೇಶಿಸಿ, ಮಿಕ್ಕು– ಮೀರಿ, ಆಂತರಂ–ಎದುರಾದವರನ್ನು, ಆಟಂದು–ಮೇಲೆ ಬಿದ್ದು, ಇಕ್ಕಿ–ಕೊಂದು, ದುರ್ಯೋ ಧನನ–ಕೌರವನ, ನೂರ್ವರುಂತನಯರಂ–ನೂರು ಮಂದಿ ಮಕ್ಕಳನ್ನು ಕೊಂದು, ತತ್ಸಂಗರ ದೊಳ್–ಆ ಯುದ್ಧದಲ್ಲಿ, ಎಮ್ಮಂ–ನಮ್ಮನ್ನು, ಕಾದು–ರಕ್ಷಿಸಿ, ಇಂತು–ಹೀಗೆ, ಆಂತು– ಎದುರಿಸಿ, ಇಱಿದು–ಯುದ್ಧಮಾಡಿ, ನಿಜಸುತಂ–ನಿನ್ನ ಮಗ ಅಭಿಮನ್ಯು, ದೇವಲೋಕಕ್ಕೆ– ಸ್ವರ್ಗಕ್ಕೆ, ಸಂದಂ–ಸೇರಿದನು. ‘ಸಂದಾನ್’ ಎಂದು ಪೂರ್ವದ ಹಳಗನ್ನಡದ ಪ್ರಯೋಗವಿದ್ದಿ ದ್ದರೆ, ಪದ್ಯದ ರಮಣೀಯತೆ ಹೆಚ್ಚುತ್ತಿತ್ತು.
೧೧೭. ಸಿಂಧು ವಿಷಯಾಧೀಶಂ–ಸಿಂಧು ದೇಶದ ರಾಜ ಸೈಂಧವನು, ಬಾಳ ಶಶಾಂಕ ಮೌಳಿ–ಶಿವನು, ಬರಮಂ–ವರವನ್ನು, ಕುಡೆ–ಕೊಡಲು, ಪೆತ್ತ–ಪಡೆದ, ಒಂದು ಉರ್ಕಿನಿಂ– ಒಂದು ಕೊಬ್ಬಿನಿಂದ, ರಣೋತ್ಸಾಹದಿಂ–ಯುದ್ಧದ ಹುಮ್ಮಸ್ಸಿನಿಂದ, ನಿಂದು–ನಿಂತು ಕೊಂಡು, ಓವದೆ–ಕಾಪಾಡದೆ (ನಿರ್ದಾಕ್ಷಿಣ್ಯವಾಗಿ), ಒರ್ವನೆ–ಒಬ್ಬನೇ, ಎಮ್ಮನ್– ನಮ್ಮನ್ನು, ಆಂತು–ಎದುರಿಸಿ, ಭರಂಗೆಯ್ದು–ತೀವ್ರತೆಯನ್ನು ತೋರಿಸಿ, ಅತ್ತ–ಅತ್ತಕಡೆಗೆ, ದುರ್ಯೋಧನಂ ಬೆರಸು–ದುರ್ಯೋಧನ ಸಹಿತವಾಗಿ, ಆ ದ್ರೋಣನಂ–ಆ ದ್ರೋಣನನ್ನು, ಅಟ್ಟಿ–ಕಳುಹಿಸಿ, ಪೊದಳ್ದ ಒಂದು ಮಚ್ಚರದಿಂ–ವ್ಯಾಪಿಸಿದ ಒಂದು ದ್ವೇಷದಿಂದ, ನಿನ್ನ, ತನೂಜನಂ–ಮಗನನ್ನು, ಕೊಲಿಸಿದಂ–ಕೊಲ್ಲಿಸಿದನು, ಮತ್ತೆ–ಬೇರೆ, ಅವರ್–ಆ ಕೌರವರು, ಆಂತು–ಎದುರಿಸಿ, ಕೊಲ್ವರೇ–ಕೊಲ್ಲುವವರೇ? ಅಭಿಮನ್ಯುವಿನ ಕೊಲೆಗೆ ದುಶ್ಶಾಸನನ ಮಗ ಗದಾಯುಧನು ನೇರವಾಗಿ ಕಾರಣನಾಗಿದ್ದರೂ ಆ ಅಪವಾದ ಸೈಂಧವನಿಗೆ ಅಂಟಿಕೊಂಡಿತು. ಕೊಂದವನು ಕೊಲ್ಲಿಸಿಕೊಂಡವನ ಸಂಗಡಲೇ ಸತ್ತದ್ದರಿಂದ ಅರ್ಜುನ ಸೇಡನ್ನು ಯಾರ ಮೇಲೆ ತೀರಿಸಿಕೊಳ್ಳಬೇಕು? ಚಕ್ರವ್ಯೂಹದೊಳಗೆ ಕರ್ಣಾದಿಗಳು ಅಭಿಮನ್ಯುವಿಗೆ ಏನು ಮಾಡಿದರೆಂಬ ವಿಷಯ ಪಾಂಡವರಿಗೆ ತಿಳಿಯಲಾಗಲಿಲ್ಲ; ಏಕೆಂದರೆ ಅವರಿಗೆ ಅದರೊಳಕ್ಕೆ ಪ್ರವೇಶವೇ ದೊರೆಯಲಿಲ್ಲ; ಇದಕ್ಕೆ ಕಾರಣ ಸೈಂಧವ; ಅವನು ಅವರನ್ನು ಚಕ್ರವ್ಯೂಹದ ಬಾಗಿಲಲ್ಲೆ ಅಡ್ಡಗಟ್ಟಿ ನಿಂತನು. ಆದ್ದರಿಂದ ಅವನ ಮೇಲೆಯೇ ಅಪವಾದವು ಏರಿಕೊಂಡಿತು.
ವಚನ : ಪ್ರಚಂಡ….ರಸನುಂ; ಪ್ರಚಂಡ–ಅತಿ ತೀಕ್ಷ್ಣವಾದ, ಕೋಪ ಪಾವಕ–ಕೋಪಾಗ್ನಿ ಯಿಂದ, ಪ್ರಶಮಿತ–ಶಮನ ಮಾಡಲ್ಪಟ್ಟ, ಶೋಕರಸನುಂ–ದುಃಖ ಭಾವವುಳ್ಳವನು; ಉನ್ನತ…. ಭ್ರುಕುಟಿಯುಂ: ಉನ್ನತ–ಎತ್ತರವಾದ, ಲಲಾಟತಟ–ಹಣೆಯ ಪ್ರದೇಶದಲ್ಲಿ, ಘಟಿತ–ಸೇರಿಸಿದ, ಭೀಷಣ–ಭಯಂಕರವಾದ, ಭ್ರುಕುಟಿಯುಂ–ಹುಬ್ಬುಗಂಟುಳ್ಳವನೂ, ಕಲ್ಪಾಂತದಿನಕರ ದುರ್ನಿರೀಕ್ಷನುಂ–ಕಲ್ಪದ ಕಡೆಯ ಸೂರ್ಯನಂತೆ ನೋಡಲಶಕ್ಯನಾದ ವನೂ; ಉತ್ಪಾತ ಮಾರುತನಂತೆ–ವಿಪತ್ಕಾಲದ ಗಾಳಿಯಂತೆ, ಸಕಲ ಭೂ ಭೃತ್ಕಂಪಕಾರಿಯುಂ– ಎಲ್ಲ ಬೆಟ್ಟಗಳನ್ನು ನಡುಗಿಸುವವನೂ; ವರ್ಧಮಾನ ಉತ್ಸೇಧನುಂ–ಬೆಳೆಯುತ್ತಿರುವ ಎತ್ತರವುಳ್ಳವನೂ; ಅಂಧಕಾರಾತಿಯಂತೆ–ರುದ್ರನಂತೆ, ಭೈರವಾಕಾರನುಂ ಆಗಿ–ಭೀಕರಾಕಾರನೂ ಆಗಿ.
೧೧೮. ಅರ್ಜುನನ ಮಹಾಪ್ರತಿಜ್ಞೆ; ರಸೆಯಿಂ–ಪಾತಾಳದಿಂದ, ಭೂತಳದಿಂ–ಭೂಮಂಡಲ ದಿಂದ, ಕುಳಾದ್ರಿಕುಳದಿಂ–ಕುಲಪರ್ವತಗಳ ಸಮೂಹದಿಂದ, ದಿಗ್ದಂತಿಯಿಂ–ದಿಕ್ಕಿನ ಆನೆಗಳಿಂದ, ವಾರ್ಧಿಯಿಂ–ಸಮುದ್ರಗಳಿಂದ, ದೆಸೆಯಿಂದೆ–ದಿಕ್ಕುಗಳಿಂದ, ಅಜಾಂಡತಟ ದಿಂದೆ–ಬ್ರಹ್ಮಾಂಡದ ಮೇರೆಯಿಂದ, ಅತ್ತ–ಆಚೆಗೆ, ಎಲ್ಲಿ ಪೊಕ್ಕಿರ್ದುಂ–ಎಲ್ಲಿ ಹೊಕ್ಕಿದ್ದೂ, ಇಂ–ಇನ್ನು, ವೈರಿಗೆ–ಹಗೆಗೆ, ಮಿಸುಕಲ್–ಅಲ್ಲಾಡಲು, ತೀರ್ಗುಮೆ–ತೀರುತ್ತದೆಯೆ? ಎನ್ನ ಸುತನಂ ಕೊಂದಿರ್ದುದಂ ಕೇಳ್ದು–ನನ್ನ ಮಗನನ್ನು ಕೊಂದಿದ್ದನ್ನು ಕೇಳಿ, ಇನ್ನುಂ–ಇನ್ನೂ ಕೂಡ, ಸೈರಿಸಿ ಮಾಣ್ದೆಂ–ಸಹಿಸಿಕೊಂಡು ನಿಂತೆನು, ಎಂದೊಡೆ–ಎಂದರೆ, ಇದಂ–ಈ ಕೊಲೆಯನ್ನು, ಪೇೞ್–ಹೇಳು, ಆಂ–ನಾನು, ಏತಱೊಳ್–ಯಾವುದರಲ್ಲಿ, ನೀಗುವೆಂ– ಕಳೆಯುತ್ತೇನೆ, ಏನು ಪ್ರತೀಕಾರ ಮಾಡುತ್ತೇನೆ ಎಂದು ತಾತ್ಪರ್ಯ.
೧೧೯. ಬಳೆದ ಸುತಶೋಕದಿಂದೆ–ವೃದ್ಧಿಗೊಂಡ ಪುತ್ರಶೋಕದಿಂದ, ಎನ್ನ ನಯನ ಜಲಂಗಳ್–ನನ್ನ ಕಣ್ಣೀರುಗಳು, ಈಗಳೆ ಸುರಿಗುಮೆ–ಈಗಲೆ ಸುರಿಯುತ್ತದೆಯೆ? ಸುರಿ ಯದು–ಸುರಿಯುವುದಿಲ್ಲ; ಜಯದ್ರಥನ–ಸೈಂಧವನ, ಚಿತಾನಳನಿಂದಂ–ಚಟ್ಟದ ಉರಿ ಯಿಂದ, ಒಗೆದ–ಹುಟ್ಟಿದ, ಪೊಗೆಗಳ್–ಹೊಗೆಗಳು, ಕೊಳೆ–ಮುತ್ತಿಕೊಳ್ಳಲು, ಸುರಿವೊಡೆ– ಸುರಿಯುವ ಪಕ್ಷದಲ್ಲಿ, ಸುರಿವುವು–ಸುರಿಯುತ್ತವೆ.
೧೨೦. ಬಿಸಜಭವನಕ್ಕೆ–ಬ್ರಹ್ಮನಾಗಲಿ, ಮೃಡನಕ್ಕೆ–ಶಿವನಾಗಲಿ, ಅಸುರಾಂತಕನಕ್ಕೆ–ವಿಷ್ಣು ವಾಗಲಿ, ಕಾವೊಡಂ–ರಕ್ಷಿಸಿದರೂ, ನಾಳಿನೊಳ್–ನಾಳೆ, ಅರ್ವಿಸೆ–ಹೆದರಲು, ಕೊಂದು, ಸಿಂಧುರಾಜನ ಬಸಿಱಂ–ಸೈಂಧವನ ಬಸಿರನ್ನು, ಪೋೞ್ದು–ಸೀಳಿ, ಎನ್ನಮಗನಂ–ನನ್ನ ಮಗ ನನ್ನು, ಆಂ–ನಾನು, ತೆಗೆಯದೆ–ಹೊರಕ್ಕೆ ತೆಗೆಯದೆ, ಇರೆಂ–ಇರೆನು.
೧೨೧. ಎನ್ನ–ನನ್ನ, ಮಗನಂ–ಮಗನನ್ನು, ಕೊಂದು, ಇಂ–ಇನ್ನು, ಭಯದಿಂದಂ–ಭಯ ದಿಂದ, ಅಜನ–ಬ್ರಹ್ಮನ, ಗುಂಡಿಗೆವೊಕ್ಕು–ಕಮಂಡಲುವನ್ನು ಪ್ರವೇಶಿಸಿಯೂ, ಮೇಣ್– ಅಥವಾ, ಮಂದರಧರನ–ವಿಷ್ಣುವಿನ, ಪೊರ್ಕುೞ–ಹೊಕ್ಕುಳಿನ, ಪೊಂದಾವರೆ ವೊಕ್ಕುಂ– ಹೊಂದಾವರೆಯನ್ನು ಪ್ರವೇಶಿಸಿಯೂ, ಅವಂ–ಆ ಜಯದ್ರಥನು, ಬರ್ದುಕುವನೇ–ತಪ್ಪಿಸಿ ಕೊಳ್ಳುತ್ತಾನೆಯೆ?
೧೨೨. ಪಡೆ–ಸೈನ್ಯವು, ಪಡೆಮೆಚ್ಚೆಗಂಡನೆನೆ–ಪಡೆಮೆಚ್ಚೆಗಂಡ ಎಂಬ ಬಿರುದನ್ನು ಹೇಳಲು, ಸಂದ–ಪ್ರಸಿದ್ಧವಾದ, ಅರಿಕೇಸರಿ–ವೈರಿಸಿಂಹ, ಎಂಬ, ಅಗುರ್ವು–ಭೀತಿಯು, ನೇರ್ಪಡೆ–ನೇರಾಗಿ ಉಂಟಾಗಲು, ನೆಗೞ್ದ–ಪ್ರಸಿದ್ಧನಾದ, ಆಂ–ನಾನು, ಅಣಂ–ಸ್ವಲ್ಪವೂ, ಸೆಡೆದು–ಭಯದಿಂದ ಕುಗ್ಗಿ, ಮಾಣ್ಬೆನೆ–ಬಿಡುತ್ತೇನೆಯೆ? ನಾಳೆ–ನಾಳೆಯ ದಿನ, ದಿನೇಶಂ– ಸೂರ್ಯನು, ಅಸ್ತದತ್ತ–ಮುಳುಗು ಬೆಟ್ಟದ ಆಚೆ, ಉಡುಗದ ಮುನ್ನ–ಕುಗ್ಗಿ ಹೋಗುವುದಕ್ಕೆ ಮುಂಚೆಯೇ ಎಂದರೆ ಸೂರ್ಯನು ಮುಳುಗುವುದಕ್ಕೆ ಮುಂಚಿತವಾಗಿಯೆ, ಸೈಂಧವನ್– ಜಯದ್ರಥನು, ಅಗುರ್ವಿಸೆ–ಹೆದರಲು, ಕೊಲ್ಲದೊಡೆ–ಕೊಲ್ಲದಿದ್ದರೆ, ಏನೋ–ಏನೋ, ಗಾಂಡಿವಂ ಪಿಡಿದೆನೆ–ಗಾಂಡೀವವನ್ನು ಹಿಡಿದೆನೆ? ಚಿಃ–ಚೀ, ಯುದ್ಧರಂಗದೊಳ್–ರಣ ರಂಗದಲ್ಲಿ, ವೈರಿಗೆ–ಶತ್ರುವಿಗೆ, ತೊವಲ್ವಿಡಿದೆಂ–ಚಿಗುರನ್ನು ಹಿಡಿದೆನು, ಅಲ್ಲೆನೆ–ಅಲ್ಲವೆ? ಚಿಗುರನ್ನು ಹಗೆಯ ಎದುರಿಗೆ ಹಿಡಿದುಕೊಂಡಿರುವುದು ಹೇಡಿತನದ ಸೂಚಕ.
ವಚನ : ಸೈಂಧವನ ಸಜ್ಜನಂ–ಸೈಂಧವನ ಕುಲಸ್ತ್ರೀ, ಧರ್ಮಪತ್ನಿ; ದುಜ್ಜೋದನನ– ದುರ್ಯೋಧನನ; ತಂಗೆ–ತಂಗಿ; ಮಲಮಲಮಱುಗಿ–ಮಲ ಮಲ ಎಂದು ವ್ಯಥೆಪಟ್ಟು, ಕವಿದು ಪಟ್ಟು–ಮುಚ್ಚಿ ಮಲಗಿ.
೧೨೩. ತನ್ನ ಸುತನೞಿಯಲ್–ತನ್ನ ಮಗನು ಸಾಯಲು, ನಿನ್ನಯ–ನಿನ್ನ, ಮಯ್ದುನನಂ– ಮೈದುನನಾದ ಜಯದ್ರಥನನ್ನು, ಅೞಿಯಲ್–ಕೊಲ್ಲಲು, ಅರ್ಜುನನು, ಪೂಣ್ದಂ–ಪ್ರತಿಜ್ಞೆ ಮಾಡಿದನು; ಅದಕ್ಕೆ–ಆದ್ದರಿಂದ, ಆಂ–ನಾನು, ನಡುಗಿ–ಹೆದರಿ, ಬಂದೆಂ–ಬಂದೆನು; ಇಂ– ಇನ್ನು, ನೀಂ–ನೀನು, ಎನ್ನ–ನನ್ನ, ಓಲೆಯ–ಕಿವಿಯೋಲೆಯ, ಕಡಗದ–ಬಳೆಗಳ, ಅೞಿವಂ– ನಾಶವನ್ನು, ಏಂ ನೋಡಿದಪಾ–ನೋಡುವೆಯ, ಏನು? ನಾನು ವಿಧವೆಯಾಗುವುದನ್ನು ನೋಡು ವೆಯೋ ಏನು? ಎಂದು ತಾತ್ಪರ್ಯ.
ವಚನ : ಸುಯೋಧನಂ ಮುಗುಳ್ನಗೆ ನಕ್ಕು–ಈ ನಗೆಯ ಅರ್ಥವೇನು? ಅರ್ಜುನನ ಪ್ರತಿಜ್ಞೆ ಬರಿ ಬಾಯಿಮಾತು; ಅದೆಲ್ಲಿ ನಡೆಯುತ್ತದೆ? ಅದಕ್ಕೇಕೆ ಗಾಬರಿಪಡುವುದು? ಇಂಥ ಪ್ರತಿಜ್ಞೆ ಗಳು ಎಷ್ಟೋ! ಎಂಬ ಅವಜ್ಞೆ, ಧಿಕ್ಕಾರ, ಅಪಹಾಸ್ಯದ ಭಾವಗಳು ವ್ಯಕ್ತವಾಗಿವೆ.
೧೨೪. ಮರುಳಕ್ಕ–ಅಯ್ಯೋ, ಹುಚ್ಚಿತಂಗಿ, ಮಗನ ಶೋಕದಿಂ–ಪುತ್ರ ಶೋಕದಿಂದ, ಉರುಳ್ದುಂ– ಉರುಳಾಡಿಯೂ, ಪೂಣ್ದವನ–ಪ್ರತಿಜ್ಞೆ ಮಾಡಿದವನ, ಪೂಣ್ಕೆ–ಪ್ರತಿಜ್ಞೆಯು, ದುಶ್ಶಾಸನನೊಳ್– ದುಶ್ಯಾಸನನಲ್ಲಿಯೂ, ಎನ್ನೊಳಂ–ನನ್ನಲ್ಲಿಯೂ, ಕರತನದಿಂ–ತೀಕ್ಷ್ಣತೆ ಯಿಂದ, ಮರುತ್ಸುತಂ–ಭೀಮನು, ಪೂಣ್ದ–ಪ್ರತಿಜ್ಞೆ ಮಾಡಿದ, ಪೂಣ್ಕೆವೊಲ್–ಪ್ರತಿಜ್ಞೆ ಯಂತೆ, ಅಕ್ಕು–ಆಗುತ್ತದೆ. ಕರತನ=ಕರ (ಸಂ) ಖರ+ತನ.
೧೨೫. ಕೃತವಿವಿಧಾಸ್ತ್ರಶಸ್ತ್ರ ಯಮಪುತ್ರ ಮರುತ್ಸುತಯಜ್ಞಸೇನರ್–ವಿವಿಧ ಶಾಸ್ತ್ರಗಳಲ್ಲಿ ಪರಿಣತರಾದ ಧರ್ಮರಾಜ ಭೀಮ ದೃಷ್ಟದ್ಯುಮ್ನರು, ಉದ್ಧತಬಳರ್–ಅತಿಶಯಶಕ್ತಿ ಯುಳ್ಳವರು, ಎತ್ತಿ–ದಂಡೆತ್ತಿ, ಕಾದಿ–ಹೋರಾಡಿ, ಸುಗಿದು–ಹೆದರಿ, ಓಡಿದರ್, ಅಲ್ಲರೆ– ಅಲ್ಲವೆ? ಜಯದ್ರಥನೊಡನೆ ಯುದ್ಧದಲ್ಲಿ ಹೆದರಿ ಪಲಾಯನ ಮಾಡಿದರು; ವಿವಿಂಶತಿ…. ಪುತ್ರರ್; ವಿವಿಂಶತಿ, ಕೃಪ, ಕರ್ಣ, ಶಲ್ಯ, ಕಳಶೋದ್ಭವ–ದ್ರೋಣ, ತತ್ಪ್ರಿಯಪುತ್ರರ್– ಅವನ ಮಗ ಅಶ್ವತ್ಥಾಮ, ಇವರೆಲ್ಲ, ಕಾವರ್–ರಕ್ಷಿಸುವವರು, ಎಂದೊಡೆ–ಎಂದು ಹೇಳಿದರೆ, ಅಪ್ರತಿರಥನಂ–ಸಾಟಿಯಿಲ್ಲದ ರಥಿಕನಾದ, ಜಯದ್ರಥನಂ–ಜಯದ್ರಥನನ್ನು, ಆಜಿಯೊಳ್– ಯುದ್ಧದಲ್ಲಿ, ಎಯ್ತರೆ ವರ್ಪ–ಸಮೀಪವಾಗಿ ಬರುವ, ಗಂಡರಾರ್–ಶೂರರಾರು?
ವಚನ : ದುಶ್ಯಳೆಯಂ–ಸೈಂಧವನ ಹೆಂಡತಿ, ದುರ್ಯೋಧನನ ತಂಗಿ ದುಶ್ಶಲೆ, ಒಡ ಗೊಂಡು–ಜೊತೆಯಲ್ಲಿ ಕರೆದುಕೊಂಡು; ಕುಂಭಸಂಭವನಲ್ಲಿಗೆ–ದ್ರೋಣನಲ್ಲಿಗೆ.
೧೨೬. ಸುತಶೋಕೋದ್ರೇಕದಿಂ–ಪುತ್ರಶೋಕದ ಕದಡಿನಿಂದ, ಅರ್ಜುನಂ–ಅರ್ಜುನನು, ಸೈಂಧವನಂ–ಜಯದ್ರಥನನ್ನು, ಅೞಿವೆಂ–ನಾಶಮಾಡುವೆನು, ಎಂದು, ಪೂಣ್ದಂ–ಪ್ರತಿಜ್ಞೆ ಮಾಡಿದನು; ಇಂತು–ಹೀಗೆ, ಈ ಸತಿ–ಈ ಹೆಂಗಸು ದುಶ್ಶಳೆಯು, ಬಂದಳ್–ನಿಮ್ಮಲ್ಲಿಗೆ ಬಂದಳು; ಆತ್ಮಾನುಜೆಯ–ನನ್ನ ತಂಗಿಯ, ಕಡಗಮಂ–ಬಳೆಗಳನ್ನು ಎಂದರೆ ಸೌಮಂಗಲ್ಯ ವನ್ನು, ಕಾವುದು–ರಕ್ಷಿಸುವುದು; ನೀವೆ–ನೀವೇ, ಮಾರ್ಕೊಳ್ವೊಡೆ–ಶತ್ರುಗಳನ್ನು ಪ್ರತಿಭಟಿಸಿದ ಪಕ್ಷದಲ್ಲಿ, ಇತರರ್ ತಾಂ ಆರ್–ಇತರರು ತಾವು ಯಾರು, ಕದನದೊಳ್–ಯುದ್ಧದಲ್ಲಿ, ಮುಟ್ಟಲ್–ಸೈಂಧವನನ್ನು ಸೋಕಲು, ಸಮರ್ಥರ್–ಶಕ್ತಿವಂತರು? ಎನೆ–ಎಂದು ಹೇಳಲು, ರಣದೊಳ್–ಯುದ್ಧದಲ್ಲಿ, ಗೆಲ್ವಾಸೆಯಂತಿರ್ಕೆ–ಗೆಲ್ಲುವ ಆಸೆ ಹಾಗಿರಲಿ, ಸಿಂಧು ಕ್ಷಿತಿಪಂ– ಸಿಂಧುರಾಜನು, ಸೈಂಧವನು, ತಾಂ ಏನನಾದಂ ತಾನು ಏನಾದನೋ, ಅದನೆ–ಅದನ್ನೇ, ಆನುಂ–ನಾನೂ, ಅಪ್ಪೆಂ–ಆಗುತ್ತೇನೆ; ಪೋಗು–ಹೋಗಯ್ಯ ಅಥವಾ, ನರೇಂದ್ರ– ದುರ್ಯೋಧನನೇ, ಪೋಗು–ಹೋಗು, ಎಂದರೆ ಸೈಂಧವನಿಗೆ ಯುದ್ಧದಲ್ಲಿ ಯಾವ ಗತಿ ಬರುತ್ತದೋ ಅದೇ ಗತಿಗೆ ನಾನು ಹೋಗುತ್ತೇನೆ ಎಂದು ಭಾವ.
೧೨೭. ಬಿಜಯಂಗೆಯ್–ನೀನು ಹೋಗುವುದು, ಎನೆ–ಎನ್ನಲು, ನೃಪಂ–ದುರ್ಯೋಧ ನನು, ಪೋಪುದುಂ–ಹೋಗುತ್ತಲು, ಅದಂ–ಆ ವಿಷಯವನ್ನು, ಧರ್ಮಾತ್ಮಜಂ–ಧರ್ಮ ಪುತ್ರನು, ಕೇಳ್ದು–ಕೇಳಿ, ಅಜಿತಂಗೆ–ಶ್ರೀಕೃಷ್ಣನಿಗೆ, ಪೇೞ್ದು–ಹೇಳಿ, ಆ ಹರಿ ಪೇೞ್ದುದು ಒಂದು ನಯದಿಂದೆ–ಆ ಕೃಷ್ಣನು ಹೇಳಿದ ಒಂದು ನೀತಿಯಿಂದ, ಆ ರಾತ್ರಿಯೊಳ್–ಆ ಇರುಳಿನಲ್ಲಿ, ಪೋಗಿ–ಹೋಗಿ, ಕುಂಭಜನಂ–ದ್ರೋಣನನ್ನು, ಕಂಡು–ನೋಡಿ, ವಿನಮ್ರನಾಗಿ–ಬಾಗಿದವ ನಾಗಿ, ನಮಸ್ಕರಿಸಿದವನಾಗಿ, ನುಡಿದಂ–ಹೇಳಿದನು, ಜಗತ್ಪೂಜಿತ–ಲೋಕಪೂಜ್ಯನಾದ ದ್ರೋಣನೇ, ನೀಂ–ನೀವು, ಇಂತು–ಹೀಗೆ, ಕೆಯ್ಕೊಂಡು ಕಾದೆ–ದುರ್ಯೋಧನನ ಪಕ್ಷವನ್ನು ವಹಿಸಿ ಯುದ್ಧ ಮಾಡಲು, ಬೆಟ್ಟನಾದೊಡೆ–ರಭಸವುಳ್ಳವನಾದರೆ, ಎಮಗೆ–ನಮಗೆ, ಇಂ– ಇನ್ನು, ಬಾೞ್ವಾಸೆ–ಬದುಕುವ ಆಸೆ, ಆವಾಸೆಯೋ–ಯಾವ ಆಸೆಯೋ?
೧೨೮. ನಿಮ್ಮಳವಂ–ನಿಮ್ಮ ಪ್ರತಾಪವನ್ನು, ಅಱಿದು–ತಿಳಿದು, ಮುನ್ನಂ–ಮೊದಲು, ನಿಮ್ಮಂ–ನಿಮ್ಮನ್ನು, ಪ್ರಾರ್ಥಿಸಿದೆಂ–ಬೇಡಿಕೊಂಡೆವು; ಈಗಳ್–ಈಗ, ಅದುವಂ–ಅದನ್ನೂ, ಮಱೆದಿರ್–ಮರೆತಿರಿ; ನಿಮ್ಮಯ–ನಿಮ್ಮ, ಧರ್ಮದ–ಕರುಣೆಯ, ದಯೆಯ, ಮಕ್ಕಳೆವು–ಕಂದರಾಗಿದ್ದೇವೆ, ಎಮ್ಮಂ–ನಮ್ಮನ್ನು, ಕಡೆಗಣಿಸಿ–ಉಪೇಕ್ಷಿಸಿ, ನಿಮಗೆ–ನಿಮಗೆ, ನೆಗೞ್ವುದು–ಮಾಡುವುದು, ದೊರೆಯೇ–ಯೋಗ್ಯವೆ.
೧೨೯. ಎನೆ–ಎನ್ನಲು, ಗುರು–ದ್ರೋಣ, ಕರುಣಾರಸಮದು–ಆ ದಯೆಯ ಭಾವ, ಮನದಿಂ–ಮನಸ್ಸಿನಿಂದ, ಪೊಱಪೊಣ್ಮೆ–ಹೊರಕ್ಕೆ ಚಿಮ್ಮಲು, ನಿನಗೆ, ಜಯಮಕ್ಕುಂ– ಗೆಲವಾಗುತ್ತದೆ, ಅನಂತನ–ಶ್ರೀಕೃಷ್ಣನು, ಪೇೞ್ದ ತೆಱದೆ–ಹೇಳಿದ ರೀತಿಯಿಂದ, ನೆಗೞ್– ಮಾಡು, ಎನೆ–ಎನ್ನಲು, ನೃಪತಿ–ಧರ್ಮರಾಜ, ವಿನಯದೆ–ನಮ್ರತೆಯಿಂದ, ಬೀೞ್ಕೊಂಡು– ಅಪ್ಪಣೆಯನ್ನು ಪಡೆದು, ಬೀಡಂ–ಪಾಳೆಯವನ್ನು, ಪೊಕ್ಕಂ–ಪ್ರವೇಶಿಸಿದನು. ಬೀೞ್ಕೊಳ್ ಬಿಡು ಬೀಡು ಎಂದರೆ ಬಿಡುವಿಕೆ, ಅಗಲುವುದು+ಕೊಳ್.
ವಚನ : ತರಂಗೋಪಮಾನ–ಅಲೆಗಳಿಗೆ ಸಾಟಿಯಾದ, ದುಕೂಲಾಂಬರ ಪರಿಧಾನನುಂ– ರೇಷ್ಮೆಯ ವಸ್ತ್ರದ ಹೊದಿಕೆಯುಳ್ಳವನೂ; ಮಱೆದೊಱಗಿದ [ನಂ]–ಮರೆತು ಮಲಗಿದವನನ್ನು, ಅಮೋಘಾಸ್ತ್ರ ಧನಂಜಯನಂ–ಅರ್ಜುನನನ್ನು, ಪುಂಡರೀಕಾಕ್ಷಂ–ಶ್ರೀಕೃಷ್ಣನು, ಈ ವಚನದ ಕೊನೆಯ ಪಂಕ್ತಿಯಲ್ಲಿ ಸ್ವಲ್ಪ ಪಾಠಕ್ಲೇಶವಿದೆ. “ಮಱೆದೊಱಗಿದಮೋಘಾಸ್ತ್ರ ಧನಂಜ ಯನಂ” ಎಂಬ ಸರ್ವ ಪ್ರತಿಗಳ ಪಾಠ; ಇದನ್ನು ಹೀಗೆಯೇ ಇಟ್ಟುಕೊಂಡರೆ ಈ ವಾಕ್ಯಕ್ಕೆ ಕರ್ತೃಪದವಾದ ಆರೂಢ ಸರ್ವಜ್ಞಂ ಎಂಬುದಕ್ಕೆ ಕ್ರಿಯಾಪದವಿಲ್ಲವಾಗುತ್ತದೆ; ಆದ್ದರಿಂದ ಪಾಠವನ್ನು ಮಱೆದೊಱಗಿದ [ನ] ಮೋಘಾಸ್ತ್ರ ಎಂದು ತಿದ್ದಿದೆ; ಇದರಲ್ಲೂ ಕೊಂಚ ಕ್ಲೇಶವಿದೆ; ಮಱೆದೊಱಗಿದನ್+ಅಮೋಘಾಸ್ತ್ರ ಎಂದು ಬಿಡಿಸುವುದು ಉಚಿತವೆಂದು ಕಾಣುವುದಿಲ್ಲ; ಆದ್ದರಿಂದ ಇದನ್ನು ಮಱೆದೊಱಗಿದನನ್+ಅಮೋಘಾಸ್ತ್ರ = “ ಮಱೆದೊಱಗಿದ [ನನ] ಮೋಘಾಸ್ತರ” ಎಂದು ತಿದ್ದಿದೆ, ಆಗ ಆರೂಢ ಸರ್ವಜ್ಞಂ, ಎಂಬುದಕ್ಕೆ ಆರೂಢ ಸರ್ವಜ್ಞನಂ ಎಂದು ಇಟ್ಟುಕೊಳ್ಳಬೇಕು, ಅನ್ವಯಿಸುವಾಗ.
೧೩೦. ಸೈಂಧವನಂ–ಜಯದ್ರಥನನ್ನು, ಆಜಿಯೊಳ್–ಯುದ್ಧದಲ್ಲಿ, ಕೊಲಲ್ಕೆ– ಕೊಲ್ಲಲು, ಅರಿದು–ಅಸಾಧ್ಯ, ಈತನ–ಅರ್ಜುನನು, ಪೂಣ್ದ–ಪ್ರತಿಜ್ಞೆ ಮಾಡಿದ, ಪೂಣ್ಕೆ ಯುಂ–ಪ್ರತಿಜ್ಞೆಯೂ, ಪಿರಿದು–ದೊಡ್ಡದು; ಅವನ್–ಅವನು, ಉಗ್ರಪಾಶುಪತಬಾಣ ದಿನಲ್ಲದೆ–ಭಯಂಕರವಾದ ಪಾಶುಪತಾಸ್ತ್ರದಿಂದಲ್ಲದೆ, ಸಾಯಂ–ಸಾಯನು; ಅಂತು– ಹಾಗೆ, ಹರಂ–ಶಿವನು, ಅದಂ–ಅದನ್ನು, ಒಸೆದು–ಮೆಚ್ಚಿ, ಇತ್ತುಂ–ಕೊಟ್ಟು, ಅದಱಮುಷ್ಟಿ ಯಂ–ಅದರ ಮಂತ್ರವನ್ನೂ (?), ಈಯನೆ ಏನ್–ಏನು ಕೊಡೆನೆ? ಅದಂ–ಅದನ್ನು, ಆದರದೆ–ಭಕ್ತಿಯಿಂದ, ಬೇಡವೇೞ್ಪುದು–ಬೇಡಬೇಕಾಗಿದೆ ಎಂದು, ಚಕ್ರಿ–ಕೃಷ್ಣನು, ಕಿರೀಟಿಯಂ–ಅರ್ಜುನನನ್ನು, ಶಿವನಲ್ಲಿಗೆ–ಶಿವನ ಬಳಿಗೆ, ಕೊಂಡೊಗೆದಂ–ಕರೆದುಕೊಂಡು ಹಾರಿದನು.
ವಚನ : ಮನಃ ಪವನವೇಗದಿಂ–ಮನಸ್ಸಿನ ಗಾಳಿಯ ವೇಗದಿಂದ, ತ್ರಿಣೇತ್ರನ–ಶಿವನ; ಅಭವಂ–ಶಿವನು, ಅತಿರಥನುಮಂ ಮಧುಮಥನನುಮಂ–ಅರ್ಜುನನನ್ನೂ ಕೃಷ್ಣನನ್ನೂ; ಅಮೃತದೃಷ್ಟಿಯಿಂ–ಅಮೃತದಂತಿರುವ ನೋಟದಿಂದ;
೧೩೧. ಅಪಗತ ಕಪಟದೆ–ಹೊರಟು ಹೋದ ಕಪಟದಿಂದ ಎಂದರೆ ನಿಷ್ಕಪಟದಿಂದ, ನಟಂ– ನಟರಾಜನಾದ ಶಿವನು, ಅದಂ–ಅದನ್ನು, ಆ ಮುಷ್ಟಿಯನ್ನು–ಮಂತ್ರವನ್ನು; ಉಪ ದೇಶಂಗೆಯ್ದು–ಉಪದೇಶ ಮಾಡಿ, ಪರಸಿ–ಹರಸಿ, ಪೋಗು–ಹೋಗು, ಎನೆ–ಎನ್ನಲು, ಪೊಡೆಮಟ್ಟು–ನಮಸ್ಕರಿಸಿ, ಪ್ರಸಾದಂ ಎಂದ–ಪ್ರಸಾದ, ಅನುಗ್ರಹ ಎಂದು ಹೇಳಿದ, ಹರಿಗನಂ– ಅರ್ಜುನನನ್ನು, ಉಪೇಂದ್ರಂ–ಕೃಷ್ಣನು, ಆ ದರ್ಭಶಯನತಳಕೆ–ಆ ದರ್ಭೆಯ ಹಾಸಿಗೆಯ ಮೇಲಕ್ಕೆ, ಇೞಿಪುವುದುಂ–ಇಳಿಸುತ್ತಲು.
ವಚನ : ನನಸಾಗೆಯುಂ–ಪ್ರತ್ಯಕ್ಷವಾಗಿ ಕಂಡಂತೆ ಆಗಿಯೂ; ಕನಸಿನಂದರಮಾಗಿ–ಕನಸಿನ ರೀತಿಯಾಗಿ; ಮಂಗಳ ಪಾಠಕರ ರವಂಗಳೊಳ್–ವಂದಿಮಾಗಧ ಮಂಗಳ ಗೀತೆಗಳ ಶಬ್ದಗಳಲ್ಲಿ, ಭೋಂಕನೆ–ಬೇಗನೆ, ಅನ್ನೆಗಂ–ಅಷ್ಟರಲ್ಲಿ.
೧೩೨. ತನ್ನ ಸುತನೞಲೊಳ್–ತನ್ನ ಪುತ್ರಶೋಕದಲ್ಲಿ, ಅರ್ಜುನಂ–ಅರ್ಜುನನು, ಎನ್ನ–ನನ್ನ, ಉದಯಮಂ–ಮೂಡುವುದನ್ನು, ಎಯ್ದೆ–ಚೆನ್ನಾಗಿ, ಪಾರ್ದು–ನಿರೀಕ್ಷಿಸಿ, ಪಗೆವರ–ಹಗೆಗಳ, ಬೇರೊಳ್–ಬೇರಿನಲ್ಲಿ, ಬೆನ್ನೀರಂ–ಬಿಸಿ ನೀರನ್ನು, ಎಱೆಯದಿರಂ–ಹೊಯ್ಯ ದಿರನು, ಅದಂ–ಅದನ್ನು, ಆಂ–ನಾನು, ನೋಡುವೆಂ–ನೋಡುತ್ತೇನೆ, ಎಂಬ ತೆಱದಿಂ– ಎಂಬ ರೀತಿಯಿಂದ, ಇನಂ–ಸೂರ್ಯ, ಉದಯಿಸಿದಂ–ಹುಟ್ಟಿದನು.
ವಚನ : ನೆಲೆಯಿಂ ತಳರ್ವಂತೆ–ಇರುವ ಸ್ಥಳದಿಂದ ಚಲಿಸುವಂತೆ; ಅನುವರ ದೊಳ್– ಯುದ್ಧದಲ್ಲಿ; ಪರಿಚೆ, । ದಿಸಿ–ನಿಶ್ಚಯಿಸಿ; ಕನಕ ಕಳಶ ಸಂಭೃತ–ಚಿನ್ನದ ಕೊಡಗಳಲ್ಲಿ ತುಂಬಿದ; ನಿರ್ವರ್ತಿತ–ಮುಗಿಸಲ್ಪಟ್ಟ, ಸಂಧ್ಯೋಪಾಸನನುಂ–ಸಂಧ್ಯಾವಂದನೆಯನ್ನುಳ್ಳವನೂ, ಅರ್ಚಿತ ಶಿತಿಕಂಠನುಂ–ಪೂಜಿಸಲ್ಪಟ್ಟ ಶಿವನನ್ನುಳ್ಳವನೂ, ನೀರಾಜಿತ–ಆರತಿ ಮಾಡಿದ; ಇನಿಸು– ಸ್ವಲ್ಪ, ಮಾರ್ಕೊಂಡು–ಎದುರಿಸಿ, ಸಾಮಂತ ಚಕ್ರಮಂ–ಸಾಮಂತರ ಸಮೂಹವನ್ನು; ಇರಲ್ವೇೞ್ದು–ಇರುವಂತೆ ನಿಯಮಿಸಿ, ಶಕಟವ್ಯೂಹ–ಗಾಡಿಯಾಕಾರದ ಸೈನ್ಯ ರಚನೆ; ಶರಾಸನಾಚಾರ್ಯಂ–ಬಿಲ್ಲೋಜ, ದ್ರೋಣ; ರಥಾಂಗಧರನಂ–ಶ್ರೀಕೃಷ್ಣನನ್ನು; ಮೂಱು ಸೂೞ್–ಮೂರು ಸಲ; ಬಲವಂದು–ಪ್ರದಕ್ಷಿಣೆ ಮಾಡಿ; ತವದೊಣೆಗಳಂ– ಅಕ್ಷಯವಾದ ಬತ್ತಳಿಕೆಗಳನ್ನು; ಅಮರೆ–ಸೇರಿಕೊಳ್ಳುವಂತೆ; ಜೇವೊಡೆದಾಗಳ್–ಬಿಲ್ಲಿನ ಹೆದೆಯನ್ನು ಎಳೆದು ಟಂಕಾರ ಮಾಡಿದಾಗ;
೧೩೩. ಭವಂ–ಶಿವನು, ಭವನಗೋತ್ರದಿಂ–ಶಿವನ ಬೆಟ್ಟದಿಂದ ಎಂದರೆ ಕೈಲಾಸದಿಂದ, ಅಜಂ–ಬ್ರಹ್ಮನು, ಅಜಾಂಡದಿಂ–ಬ್ರಹ್ಮಾಂಡದಿಂದ, ಭಾನು–ಸೂರ್ಯನು, ಭಾನುವೀಧಿ ಯಿಂ–ಸೂರ್ಯನ ಮಾರ್ಗದಿಂದ ಎಂದರೆ ಆಕಾಶದಿಂದ, ಇಳಾತಳಂ–ಭೂಮಿ, ತಳದಿಂ– ಬುಡದಿಂದ, ಎಯ್ದೆ–ಚೆನ್ನಾಗಿ, ಕಿೞ್ತು–ಕಿತ್ತು, ಎೞ್ದು ಬರ್ಪಂತೆ–ಎದ್ದು ಬರುವ ಹಾಗೆ, ತೂಳ್ವ–ತಳ್ಳುವ, ಅವಾರ್ಯ ಭುಜವೀರ್ಯಮಂ–ತಡೆಯಲಶಕ್ಯವಾದ ಬಾಹುಬಲವನ್ನು, ನೆಱೆಯೆ–ಪೂರ್ಣವಾಗಿ, ತೋರ್ಪಿನಂ–(ಅರ್ಜುನ) ತೋರಿಸುತ್ತಿರಲು, ಕುಂಭಸಂಭವಂ– ದ್ರೋಣನು, ಮರಲೆ=ಮಲರೆ–ಸಂತೋಷದಿಂದ ಮನಸ್ಸು ಅರಳಲು, ಎಂದರೆ ಸಂತೋಷ ಪಡಲು, ರಿಪುಕುರಂಗ ಕಂಠೀರವಂ–ಶತ್ರುಗಳೆಂಬ ಹುಲ್ಲೆಗೆ ಹುಲಿಯಾದ ಅರ್ಜುನನು, ತಾಗಿದಂ–ಸಂಘಟ್ಟಿಸಿದನು, ತಾಕಿದನು. (ತ) ಮಲರ್ತ್ತಲ್–ಮನಮಗಿೞ್ದಲ್=ಮನದಲ್ಲಿ ಸಂತೋಷಪಡು; “ಜಸಂ ಜಸಯಲಂಗಮೊಂದಿದೊಡೆ ಪೃಥ್ವಿಯೆಂಬರ್ ಬುಧರ್”
ವಚನ : ಪುಗಲೀಯದೆ–ಪ್ರವೇಶಿಸಲು ಬಿಡದೆ; ಉಱೆ ಸೆಱೆಗೆಯ್ಯದೆ–ಚೆನ್ನಾಗಿ ಸೆರೆ ಹಿಡಿಯದೆ; ವಿನಯಾಸ್ತ್ರ–ವಿನಯವನ್ನು ತೋರುವ ಬಾಣ;
೧೩೪. ಕಮನೀಯಂ–ಸೊಗಸಾಗಿ, ಸೌಮ್ಯವಾಗಿ, ಬಲವಂದು–ಪ್ರದಕ್ಷಿಣೆ ಮಾಡಿ,
ಪೋಪನಂ–ಹೋಗುವವನನ್ನು, ಎಲೆ–ಲೋ, ಪೋ ಪೋಗದಿರ್ ಪೋಗದಿರ್–ಹೋಗ ಬೇಡ, ಹೋಗಬೇಡ, ಎನ್ನೊಡನೆ–ನನ್ನೊಡನೆ, ಸಮರಕ್ಕೆ–ಯುದ್ಧಕ್ಕೆ, ಅಂಜಿ–ಹೆದರಿ, ಪೋದೆ–ಹೋದೆ, ಎನಲ್–ಎನ್ನಲು, ನರಂ–ಅರ್ಜುನ, ದ್ರೋಣರಂ–ದ್ರೋಣಾಚಾರ್ ಯರನ್ನು ಕುರಿತು, ಎಂದಂ–ಹೇಳಿದನು, ನಿಮಗಾಂ–ನಿಮಗೆ ನಾನು, ಅಂಜುವುದು–ಹೆದರು ವುದು, ಎನ್ನ–ನನ್ನ, ಬಾಲತನದಿಂದೆ–ಬಾಲ್ಯದಿಂದ, ಅಂದು–ಆಗ, ಆದುದು–ಆಯಿತು, ಇಂದು–ಈಗ, ಆದುದೇ–ಆಯಿತೇ! ನಿಮಗೆ, ಆಂ–ನಾನು, ಅಂಜದೊಡೆ–ಹೆದರದಿದ್ದರೆ, ಯುದ್ಧದೊಳ್–ರಣದಲ್ಲಿ, ತ್ರೈಲೋಕ್ಯಮಂ–ಮೂರು ಲೋಕಗಳನ್ನು, ಅಂಜಿಸಲ್– ಹೆದರಿಸಲು, ನೆಱೆವೆನೇ–ಸಮರ್ಥನಾಗುವೆನೆ?
ವಚನ : ಪದುಮನಾಭನ ಚೋದಿಸುವ–ಶ್ರೀಕೃಷ್ಣನು ಮುಂದೆ ಹಾಯಿಸುವ; ಸಾಧನ ದೊಳ್–ಸೈನ್ಯದಲ್ಲಿ;
೧೩೫. ಪೊಸಮಸೆಯಂಬು–ಹೊಸದಾಗಿ ಮಸೆದ ಬಾಣಗಳು, ಕಾರಮೞೆವೋಲ್– ಮಳೆಗಾಲದ ಮಳೆಯಂತೆ, ಕಱೆಯುತ್ತಿರೆ–ಸುರಿಯುತ್ತಿರಲು, ಅನಿತುಮಂ–ಅಷ್ಟನ್ನೂ, ನಿಜ ಮಾರ್ಗಣಕೋಟಿಯಿಂ–ತನ್ನ ಬಾಣಗಳ ತುದಿಗಳಿಂದ, ನೇರ್ದು–ಕತ್ತರಿಸಿ, ಸೀಳ್ದು–ಸೀಳಿ, ಖಂಡಿಸಿ–ಮುರಿದು, ಕಡಿದೊಟ್ಟಿ–ತುಂಡು ಮಾಡಿ ರಾಶಿ ಹಾಕಿ, ಸುಟ್ಟು–ಉರಿಸಿ, ತನ್ನ ಮೊನೆಯಂಬುಗಳಿಂ–ತನ್ನ ಮೊನಚಾದ ಬಾಣಗಳಿಂದ, ಚತುರಂಗಂ–ಚತುರಂಗ ಸೈನ್ಯವು, ಅಗುರ್ವಿಸೆ–ಹೆದರಲು, ತೆಗೆದೆಚ್ಚು–ಕಿವಿವರೆಗೆ ಸೆಳೆದು ಬಾಣಪ್ರಯೋಗ ಮಾಡಿ, ಎಯ್ದೆ– ಚೆನ್ನಾಗಿ, ಕೀಲಿಸೆ–ಬಾಣಗಳನ್ನು ನಾಟಿಸಲು, ಅಕಳಂಕರಾಮನಿಂ–ಅರಿಕೇಸರಿಯಿಂದ ಎಂದರೆ ಅರ್ಜುನನಿಂದ, ಪಡೆ–ಸೈನ್ಯ, ಚಿತ್ರದ–ಚಿತ್ತಾರದ, ಪಡೆಯಂತೆವೋಲ್–ಸೈನ್ಯದಂತೆ, ಆಯ್ತು– ಆಯಿತು.
೧೩೬. ಅಡಿ–ಪಾದಗಳು, ತೊಡೆ, ಪೊರ್ಕುೞುಂ–ಹೊಕ್ಕುಳೂ, ತೆಗಲೆ–ಹೆಗ್ಗತ್ತು, ಕೈ ಕಣಕಾಲ್–ಕಾಲಿನ ಕೆಳಭಾಗ, ಕೊರಲ್–ಕೊರಳು, ಎಂಬಿವುಂ–ಎಂಬ ಇವುಗಳೂ, ಬೆರಲ್– ಬೆರಳು, ನಡು–ನಡುವು, ಉರ–ಎದೆ, ಬೆನ್–ಬೆನ್ನು, ಬಸಿಱ್–ಹೊಟ್ಟೆ, ತೊಳಕು–(?), ಕರ್ಚರೆ–(?), ಮುಯ್ವು–ಹೆಗಲು, ಮುಸುಂಬು–ಮೂತಿ, ಮೂಗು, ಪೆರ್ದೊಡೆ–ಹೆದ್ದೊಡೆ, ಕಟಿ–ಸೊಂಟ, ಮುಮ್ಮಡಂ–ಕಾಲ ಹರಡಿನ ಮುಂಭಾಗ, ಪರಡು–ಕಾಲಿನ ಹರಡು, ಸಂದಿ– ಕೀಲು, ನೊಸಲ್–ಹಣೆಯ ಭಾಗ, ಪಣೆ–ಹಣೆ, ಕಣ್–ಕಣ್ಣುಗಳು, ಕದಂಪು–ಕೆನ್ನೆ, ಇವು ಎಂಬ–ಇವುಗಳು ಎನ್ನುವ, ಎಡೆಯನೆ–ಸ್ಥಳಗಳನ್ನೆ, ಪಾರ್ಥನಂಬುಗಳ್–ಅರ್ಜುನನ ಬಾಣ ಗಳು, ನಟ್ಟುವು–ನಾಟಿದುವು, ಉರ್ಚಿದುವು–ಸೀಳಿದುವು, ನೇರ್ದುವು–ಕತ್ತರಿಸಿದುವು, ಸೀಳ್ದುವು–ಹೋಳು ಮಾಡಿದುವು.
ವಚನ : ಮಾಱಾಂತ–ಎದುರಿಸಿದ, ಮಾರ್ಪಡೆಯೆಲ್ಲಮಂ–ಎದುರು ಸೈನ್ಯವನ್ನೆಲ್ಲ; ಜವನ–ಯಮನ, ಒಕ್ಕಲಿಕ್ಕಿ–ಒಕ್ಕಲಾಗಿ ಮಾಡಿ; ಪೆಣೆದ–ಹೆಣೆದುಕೊಂಡ, ತೊಡರಿಕೊಂಡ; ಆನೆ ಮೆಟ್ಟಿದ ಕುಳುಂಪೆಯ ನೀರಂತೆ–ಆನೆ ತುಳಿದಾಡಿದ ಹೊಂಡದ ನೀರಿನಂತೆ; ಎೞ್ಬಟ್ಟೆ– ಎಬ್ಬಿಸಿ ಓಡಿಸಲು; ಮಕುಟವರ್ಧನರಂ–ರಾಜರನ್ನು; ನಡುವಗಲಿೞಿವಿನಂ–ಮಧ್ಯಾಹ್ನ ಇಳಿ ಯುತ್ತಿರಲು; ನೀರೊಳಿಕ್ಕಲೆಂದು–ಸ್ನಾನ ಮಾಡಿಸಬೇಕೆಂದು;
೧೩೭. ಚಾತುರಂಗಬಳಂ–ಚತುರಂಗ ಸೈನ್ಯವೂ, ಅಳ್ಕುಱದೆ–ಭಯಪಡದೆ, ಆಂತ–ಎದುರಿಸಿದ, ಮಹಾರಥರ್ಕಳುಂ–ಮಹಾರಥಿಕರೂ, ಅೞಿದುದು–ನಾಶವಾಯಿತು; ಒಡ್ಡಣಂ– ಸೈನ್ಯವು, ಕೞಕುೞಮಾದುದು–ಚೆಲ್ಲಾಪಿಲ್ಲಿಯಾಯಿತು, ತಲೆದೋಱಲೆ–ತಲೆಯನ್ನು ತೋರಿಸುವುದಕ್ಕೇ ಎಂದರೆ ಸಮ್ಮುಖವಾಗಿ ನಿಲ್ಲುವುದಕ್ಕೇ, ಗಂಡರಿಲ್ಲ–ಶೂರರು ಇಲ್ಲ; ಇನ್ನಿನಿಸು–ಇನ್ನು ಸ್ವಲ್ಪ, ಬೇಗದೆ–ಹೊತ್ತಿನಲ್ಲಿ, ಸೈಂಧವನಂ–ಜಯದ್ರಥನನ್ನು, ತೊತ್ತುೞ ದುೞಿದಪ್ಪಂ–ಚೆನ್ನಾಗಿ ತುಳಿದುಬಿಡುತ್ತಾನೆ; ನೆಗೞ್ತೆಯಂ–ಕೀರ್ತಿಯನ್ನು, ಗೞಿಯಿಸಿ ಕೊಳ್ವೊಡೆ–ಸೇರಿಸಿಕೊಳ್ಳಬೇಕಾದರೆ, ಪಡೆಯಬೇಕಾದರೆ, ಇನ್ನಿನಿಸು–ಇನ್ನೂ ಸ್ವಲ್ಪ, ತಱಿಸಂದು–ನಿಶ್ಚಯಿಸಿ, ನಿಂದು–ನಿಂತುಕೊಂಡು, ಪಾರ್ಥನೊಳ್–ಅರ್ಜುನನಲ್ಲಿ, ಇಱಿಯಿಂ–ಯುದ್ಧ ಮಾಡಿರಿ.
ವಚನ : ದ್ರೋಣಾಚಾರ್ಯಂ ಮುಗುಳ್ನಗೆ ನಕ್ಕು–ಈ ನಗೆಯ ಇಂಗಿತ? ದುರ್ಯೋಧ ನನ ಮಾತುಗಳನ್ನು ಹಗುರವಾಗಿ ಪರಿಗಣಿಸುವುದು; ಅರ್ಜುನನ ಪರಾಕ್ರಮ ಈಗಲಾದರೂ ತಿಳಿಯಿತಲ್ಲ ಎಂಬ ಸಂತೋಷ; ಇಳಿಸಿ ನುಡಿವ–ತಿರಸ್ಕರಿಸಿ ಮಾತಾಡುವ; ಎಣಗೋಣಂ ಗಳುಂ–ಗರ್ವವಕ್ರತೆಗಳೂ, ಎಕ್ಕಸಕ್ಕತನಂಗಳುಂ–ನಿಂದೆ ಪರಿಹಾಸಗಳೂ, ಎತ್ತವೋದುವು– ಎಲ್ಲಿ ಹೋದುವು, ಎಣಗೋಣ: ಇದಕ್ಕೆ ಏಣಗೋಣ ಎಂಬ ರೂಪವೂ ಉಂಟು: ಬ್ರಹ್ಮಶಿವನ ಕೆಳಗಿನ ಪ್ರಯೋಗಗಳನ್ನು ನೋಡಿ; ಅತಿಮಾರ್ಗನೆಕ್ಕಸಕ್ಕಂ । ಸಿತಗಂ ಚಳಬಳಿಗನೇಣಗೋಣಂ ಮೂರ್ಖಂ ॥ ಮತಿಹೀನನದಱಿನೀ ಜಿನ । ಮತಮಂ ಕೇಳ್ದಾಗಮ ಸುಮನನಕ್ಕುಮವಶ್ಯಂ ॥ ೩–೫೫; ನೆೞಲಂ ನೋಡಿ ತುಱುಂಬನೋಸರಿಸುತುಂ ತುಂತೆನ್ನನುಂ ಪಾಡುತುಂ । ಪೞಿವುತ್ತುಂ ಸುಚರಿತ್ರದೊಂದೆಸಕಮಂ ಪಣ್ಯಾಂಗನಾನೀಕದೊಳಂ ॥ ಕೆಳೆಗೊಂಡಾಡುತುಮೇಣ ಗೋಣ ತನದಿಂ ಮಾತಾಡುತುಂ ರಾಗದಿಂ । ಸುೞಿವುತ್ತಿರ್ದವರಾಂತಿರಾರ್ಹತರದೇನೆ ಗೆಯ್ದೊಡಂ ಬಲ್ಲರೇ ॥ ೬–೩೯, (ತ) ಏಣ್ ಕೋಣ್–ವಕ್ರವಾದ ಮಾತು; ಏಣ್ ಗೋಣಾನ ಪೇಚ್ಚು; ಗರ್ವದ ಮಾತು, ಗರ್ವಪ್ಪೇಚ್ಚು; ಎಕ್ಕಸಕ್ಕ=(ತ) ಎಕ್ಕಚ್ಚಕ್ಕಂ–ತಾರುಮಾರು, ಅಂಕು ಡೊಂಕು=(ತೆ) ಎಕ್ಕಸಕ್ಕಮು–ಅಪಹಾಸ್ಯ, ಗೇಲಿ, ನಿಂದೆ.
೧೩೮. ನಿನಗರಸಾಳ್ತನಂ ನುಡಿವ: ನಿನಗೆ, ಅರಸ–ರಾಜನೇ, ಆಳ್ತನಂ ನುಡಿವ–ಪರಾ ಕ್ರಮದ ಮಾತುಗಳನ್ನು ಹೇಳುವ ಅಥವಾ ನಿನಗೆ, ಅರಸಾಳ್ತನಂ–ರಾಜಭಟತನವನ್ನು ಎಂದರೆ ರಾಜನ ಇಂಗಿತಕ್ಕೆ ಅನುಸಾರವಾಗಿ ನುಡಿಯುವ ಅರಸಾಳಿನತನವನ್ನು, ನುಡಿವ–ಹೇಳುವ, ಬೀರರ–ವೀರರ, ಬೀರದ–ಶೌರ್ಯದ, ಅಳುರ್ಕೆ–ವ್ಯಾಪ್ತಿ, ಆಧಿಕ್ಯ, ವಿಕ್ರಮಾರ್ಜುನ ನೊಳ್–ಅರ್ಜುನನಲ್ಲಿ, ಏಕೆ ಸಲ್ಲದು–ಏಕೆ ಸಲ್ಲುವುದಿಲ್ಲ? ಎನಗೆ–ನನಗೆ, ಆತಂ–ಅವನು, ಆ ಅರ್ಜುನ, ಅಸಾಧ್ಯಂ–ಗೆಲ್ಲಲಾಗದವನು, ಅವಧ್ಯಂ–ಕೊಲ್ಲಲಾಗದವನು, ಆನುಂ–ನಾನೂ, ಈ ಮೊನೆಯೊಳೆ–ಈ ಯುದ್ಧಮುಖದಲ್ಲಿಯೇ, ನಿಂದು–ನಿಂತು, ಕಾದಿದಪೆಂ–ಹೋರಾಡು ತ್ತೇನೆ; ಅನ್ನೆಗಂ–ಅಲ್ಲಿಯವರೆಗೆ, ನೀಂ–ನೀನು, ಎನ್ನವರೂಥಸೂತ ಕೇತನ ಕವಚಂಗಳಿಂ– ನನ್ನ ರಥಸಾರಥಿ ಧ್ವಜ ಕವಚಗಳಿಂದ, ನೆಱೆದು–ಸಮರ್ಥನಾಗಿ, ಜಗದೇಕಮಲ್ಲನೊಳ್– ಅರ್ಜುನನಲ್ಲಿ, ತಳ್ತು–ಎದುರಿಸಿ, ಇಱಿ–ಯುದ್ಧಮಾಡು.
ವಚನ : ಅಭೇದ್ಯಕವಚಮಂ–ಭೇದಿಸಲಾಗದ ಕವಚವನ್ನು; ಶರಾಸನ–ಬಿಲ್ಲು; ಕಳಸಕೇತನವರೂಥನಾಗಿ–ಕಲಶಧ್ವಜದಿಂದ ಕೂಡಿದ ರಥವುಳ್ಳವನಾಗಿ, ಎಂದರೆ ದ್ರೋಣನ ರಥವನ್ನುಳ್ಳವನಾಗಿ.
೧೩೯. ತಡೆಯದೆ–ತಡಮಾಡದೆ, ರಾಜರಾಜಂ–ದುರ್ಯೋಧನನು, ಇದಿರಂ ಬರೆ– ಎದುರು ಬರಲು, ಭೋರ್ಗರೆದು–ಭೋರೆಂದು ಶಬ್ದಮಾಡಿ, ಎಚ್ಚೊಡೆ–ಬಾಣ ಪ್ರಹಾರ ಮಾಡಿದರೆ, ಅಂಬುಗಳ್–ಬಾಣಗಳು, ನಡದೆ–ನಾಟಿಕೊಳ್ಳದೆ, ಸಿಡಿಲ್ವುದುಂ–ಸಿಡಿಯು ತ್ತಲೂ, ಕರತಳದ್ವಯಮಂ–ಎರಡು ಅಂಗೈಗಳನ್ನು, ಬಿರಿಯೆಚ್ಚು–ಬಿರಿಯುವಂತೆ ಹೊಡೆದು, ಕೆಯ್ದುವಂ–ಆಯುಧವನ್ನು, ಪಿಡಿವ–ಹಿಡಿಯುವ, ಅದಟೆಲ್ಲಮಂ–ಶಕ್ತಿಯನ್ನೆಲ್ಲ, ಕಿಡಿಸಿ– ಕೆಡಿಸಿ, ಅಮರೇಂದ್ರನಂದನಂ–ಅರ್ಜುನ, ಭೀಮಂ–ಭೀಮಸೇನನು, ಆತನಂ–ಆ ದುರ್ಯೋಧ ನನನ್ನು, ಮಡಿಪುವೆಂ–ಸಾಯಿಸುತ್ತೇನೆ, ಎಂದ ಪೂಣ್ಕೆ–ಎಂಬ ಪ್ರತಿಜ್ಞೆ, ಪುಸಿಯಾದಪುದು– ಸುಳ್ಳಾಗುವುದು, ಎಂದು, ತಾಂ–ತಾನು, ಕೊಲಲ್–ಕೊಲ್ಲಲು, ಒಲ್ಲನೆ–ಇಷ್ಟಪಡನೆ!
ವಚನ : ಕೆಯ್ಕೊಳಲ್–ಸ್ವೀಕರಿಸಲು ಎಂದರೆ ಬೆಂಬಲವಾಗಿ ರಕ್ಷಿಸಲು; ಎಡೆಗೊಂಡು– ನಡುವೆ ಆಕ್ರಮಿಸಿ, ಅಡ್ಡಗಟ್ಟಿ.
೧೪೦. ಪೋಗದಿರ್–ಹೋಗಬೇಡ, ಎಂದು ಮೂದಲಿಸೆ–(ಭೂರಿಶ್ರವನು) ಅವಹೇಳನ ಮಾಡಲು, ಸಾತ್ಯಕಿ–ಸಾತ್ಯಕಿಯು, ತೀವ್ರ ಶರಾಳಿಯಿಂದೆ–ತೀಕ್ಷ್ಣವಾದ ಬಾಣ ಸಮೂಹ ಗಳಿಂದ, ಅಗುರ್ವಾಗೆ–ಭಯವುಂಟಾಗಲು, ವರೂಥಮಂ–ರಥವನ್ನು, ಕಡಿದೊಡೆ–ಕತ್ತರಿಸಿ ದರೆ, ಆತಂ–ಅವನು, ಉರ್ಚಿದ–ಕಿತ್ತ, ಬಾಳ್ವೆರಸು–ಕತ್ತಿಯೊಡನೆ, ಎಯ್ದೆವಂದು–ಹತ್ತಿರ ಬಂದು, ಆಗಳ್–ಆಗ, ಇದಿರ್ಚೆ–ಎದುರಿಸಲು, ತಾನುಂ–ತಾನು ಕೂಡ, ಅಸಿಯಂ– ಕತ್ತಿಯನ್ನು, ಸೆರಗಿಲ್ಲದೆ ಕಿೞ್ತು–ಭಯವಿಲ್ಲದೆ ಕಿತ್ತು, ಪಾಯ್ದು–ನುಗ್ಗಿ; ಭೂಭಾಗ ನಭೋವಿ ಭಾಗವರಂ–ಭೂಮಿ ಆಕಾಶ ಪ್ರದೇಶಗಳವರೆಗೆ, ಅಳ್ಕುಱೆ–ಭಯವುಂಟಾಗಲು, ವಿರೋಧಿ ಗಳ್–ವೈರಿಗಳು, ತಳ್ತಿಱಿದರ್–ಎದುರಿಸಿ ಯುದ್ಧ ಮಾಡಿದರು.
ವಚನ : ಬಿಂಕಮುಮಂ–ಗರ್ವವನ್ನೂ; ದಾಸವಣ–ದಾಸಿವಾಳದ ಹೂ; ದಂಡೆಯಂ– ಹಾರವನ್ನು; ತೋರದ–ದೊಡ್ಡದಾದ, ಇಂಡೆಯಾಡಿದಂತೆ–ರಾಶಿ ಹಾಕಿದಂತೆ; ಇಂಡೆಗಳುಂ– ರಾಶಿಗಳೂ; ನಾರಂಗ ಸಕಳವಟ್ಟೆಯ ಪೞಯಿಗೆಗಳಂತೆ–ಕಿತ್ತಳೆಯ ಮತ್ತು ಬಣ್ಣಬಣ್ಣದ ಬಟ್ಟೆಗಳ ಬಾವುಟಗಳಂತೆ; ಮಿಳಿರ್ದು ಮಿಳ್ಳಿಸಿ–ಅತ್ತ ಇತ್ತ ಹೊರಳಾಡಿ ಚಲಿಸಲು, “ಮಿಳಿರ್ ಲುಠನೇ” ; ಮಿಳ್ಳಿಸು– “ಸರಿಸುರಿಯೆ ಮಿಂಚು ಮಿಳ್ಳಿಸೆ” (ಪಂಪರಾ. ೧–೮೧), “ಮಿಳಿರ್ದು ಮಿಳ್ಳಿಸೆ ವಾನರ ಕೇತನಂ” (ಪಂಪರಾ. ೧೩–೧೧೯); ಪಾಱುವ ನೆತ್ತರ ಸುಟ್ಟುರೆ ಗಳುಂ–ಮೇಲಕ್ಕೆ ಹಾರುವ ರಕ್ತದ ಸುಂಟರುಗಾಳಿಗಳೂ (?);
೧೪೧. ನರನೆಚ್ಚೊಡೆ–ಅರ್ಜುನನು ಬಾಣ ಪ್ರಯೋಗ ಮಾಡಿದರೆ, ಕರ–ಕೈ, ಪಱಿದು– ಕತ್ತರಿಸಿ, ಕರವಾಳ್–ಕತ್ತಿ, ಒಡನೆ–ಕೂಡಲೆ, ಕಾಸಿ ಬೆಚ್ಚಂತೆ–ಕಾಸಿ ಬೆಸುಗೆ ಹಾಕಿದಂತೆ, ಅಮರೆ–ಸೇರಿಕೊಂಡಿರಲು, ವಸುಂಧರೆಯೊಳ್–ನೆಲದಲ್ಲಿ, ಬಿೞ್ದು–ಬಿದ್ದು, ಇರ್ದುದು– ಇತ್ತು; ಭೂರಿಶ್ರವನಾ–ಭೂರಿಶ್ರವನ, ಪೂಣಿಸಿದ–ಪ್ರತಿಜ್ಞೆ ಮಾಡಿ ಹಿಡಿದ, ಮುಷ್ಟಿ, ಏಂ ತಿರವೋ–ಏನು ಸ್ಥಿರವಾದದ್ದೋ?
ವಚನ : ತನ್ನೇಱಿಂಗೆ–ತನ್ನ ಯುದ್ಧಕ್ಕೆ, ತಾನೇ ಸಿಗ್ಗಾಗಿ–ತಾನೇ ನಾಚಿ; ಸೊರ್ಕುತ್ತಂ– ಕೊಬ್ಬುತ್ತ;
೧೪೨. ನಿಡುವಗೆ–ದೀರ್ಘಕಾಲದ ಶತ್ರು, ಸೈಪಿನಿಂದೆ–ಪುಣ್ಯವಶದಿಂದೆ, ದೊರೆ ಕೊಂಡುದು–ದೊರೆಯಿತು; ಗದೆಗೊಂಡೆನಪ್ಪೊಡೆ–ಗದೆಯನ್ನು ತೆಗೆದುಕೊಂಡವನಾದರೆ, ಇವರ್– ದುಶ್ಯಾಸನಾದಿಗಳು, ಈಗಡೆ–ಈಗಲೇ, ಪರೆದಪರ್–ಚೆದರಿ ಬಿಡುತ್ತಾರೆ; ಇವಂದಿರಂ–ಇವರನ್ನು, ಎಚ್ಚು–ಬಾಣಪ್ರಹಾರ ಮಾಡಿ, ತವೆ–ನಾಶವಾಗುವಂತೆ, ಕೊಲ್ವೆಂ– ಕೊಲ್ಲುತ್ತೇನೆ; ಎಂದು–ಎಂಬುದಾಗಿ, ನಚ್ಚಿನ–ನಂಬಿಕೆಯ ಎಂದರೆ ಆತ್ಮವಿಶ್ವಾಸದ, ಅಚ್ಚು–ಮುದ್ರೆ; ಉಡಿವಿನಂ–ಮುರಿಯುತ್ತಿರಲು, ಎಚ್ಚೊಡೆ–ಬಾಣಘಾತ ಮಾಡಲು, ಎಚ್ಚೆಡೆಯಿಂ–ಹೊಡೆದ ಸ್ಥಳದಿಂದ ಎಂದರೆ ಗಾಯಗಳಿಂದ, ಅರುಣಾಂಬು–ರಕ್ತ, ಕಲಂಕಿ– ಕದಡಿ, ಪಾಯೆ–ಹರಿಯಲು, ಅಂಧನೃಪಾಲನಂದನರ್–ಧೃತರಾಷ್ಟ್ರನ ಮಕ್ಕಳು, ಮರುತ್ತನೂಜನಾ–ಭೀಮಸೇನನ, ಮುನ್ನಡಿಯೊಳ್–ಅಡಿಯ ಮುಂಭಾಗದಲ್ಲಿ, ಉರುಳ್ದರ್–ಉರುಳಿದರು.
ವಚನ : ನಿಶಿತ ವಿಶಿಖಹತಿಯಿಂ–ಹರಿತವಾದ ಬಾಣಗಳ ಏಟಿನಿಂದ, ಮುಟ್ಟೆ ವರ್ಪಾಗಳ್–ಸಮೀಪಕ್ಕೆ ಬರುವಾಗ, ಆಳ್ದನ–ಸ್ವಾಮಿಯಾದ ದುರ್ಯೋಧನನ; ಸಾವಂ– ಸಾವನ್ನು ಎಂದರೆ ಸಾವಿಗೆ ಸಮಾನವಾದ ಮೂರ್ಛೆಯನ್ನು.
೧೪೩. ಎಡೆಗೋದು–ದುರ್ಯೋಧನನ ಭೀಮನ ನಡುವೆ ಪೋಣಿಸಿಕೊಂಡು, ಅಂಕದ ಕರ್ಣಂ–ಹೆಸರುವಾಸಿಯಾದ ಕರ್ಣನು, ಎಯ್ದೆವರೆ–ಹತ್ತಿರಕ್ಕೆ ಬರಲು, ದಿವ್ಯಾಸ್ತ್ರಗಳಿಂದಂ– ಶ್ರೇಷ್ಠವಾದ ಬಾಣಗಳಿಂದ, ಸಿಡಿಲ್ ಪೊಡೆವಂತಪ್ಪಿನಂ–ಸಿಡಿಲು ಹೊಡೆಯುವ ಹಾಗೆ ಆಗುತ್ತಿರಲು, ಉದಗ್ರರಥಮಂ–ಶ್ರೇಷ್ಠವಾದ ರಥವನ್ನು, ಎಚ್ಚು–ಹೊಡೆದು, ಮುಯ್ಯೇೞುಸೂೞ್–ಇಪ್ಪತ್ತೊಂದು ಸಲ, ಕಡಿಯಲ್–ಕತ್ತರಿಸಲು, ಸಾರ್ದೊಡೆ– ಬಂದರೆ, ಸೂತಸುತಂ–ಕರ್ಣನು, ಅೞಲ್ದು–ವ್ಯಥೆಗೊಂಡು, ಒಂದು ಉಗ್ರೇಷುವಿಂ–ಒಂದು ಭಯಂಕರ ಬಾಣದಿಂದ, ತಿಣ್ಣಂ ಎಚ್ಚು–ತೀವ್ರವಾಗಿ ಪ್ರಯೋಗಿಸಿ, ಭೀಮಂ–ಭೀಮನು, ನಸುಮುಚ್ಚೆವೋಗಿ–ಸ್ವಲ್ಪ ಮೂರ್ಛೆಗೊಂಡು, ರಥದೊಳ್–ರಥದಲ್ಲಿ, ನರಲ್ವನ್ನೆಗಂ– ನರಳುತ್ತಿರಲು, ಆರ್ದಂ–ಗರ್ಜಿಸಿದನು.
ವಚನ : ಬಿಲ್ಲಂಕೋದು–ಬಿಲ್ಲನ್ನು ಎಂದರೆ ಬಿಲ್ಲಿನ ಹಗ್ಗವನ್ನು, ಕೋದು–ಭೀಮನ ಕೊರಳಿಗೆ ಸುತ್ತಿ; ಮೇಗಿಲ್ಲದೆ–ಮೇಲಿಲ್ಲದೆ ಎಂದರೆ ಅಸಮಾನವಾಗಿ, ತೆಗೆದು–ಎಳೆದು,
೧೪೪. ತಾಂ ಗಡಂ–ತಾನಲ್ಲವೆ, ಎನ್ನಾಳ್ದನ–ನನ್ನ ಸ್ವಾಮಿ ದುರ್ಯೋಧನನ, ತೊಡೆಯಂ–ತೊಡೆಗಳನ್ನು, ಇಂ ಉಡಿವನ್–ಇನ್ನು ಮುರಿಯುತ್ತಾನೆ! ಇವನ್–ಇವನು, ಎನ್ನೊಳಂ–ನನ್ನಲ್ಲಿಯೂ, ಕಾದುವಂ–ಯುದ್ಧ ಮಾಡುತ್ತಾನೆ! ಎಂದು ಅಂಗಪತಿ ನುಡಿದು– ಎಂದು ಕರ್ಣ ಹೇಳಿ, ಅಂಬಿಕೆಗೆ–ತಾಯಿ ಕುಂತಿಗೆ, ನುಡಿದ ನುಡಿ–ಹೇಳಿದ ಮಾತು, ಭಾಷೆ, ಮನದೊಳ್–ಮನದಲ್ಲಿ, ನಿಲೆ–ನಿಲ್ಲಲು, ಕೊಲ್ಲದೆ, ತಾಂಗಿದಂ–ತಡೆದನು, ಎಂದರೆ ಕೊಲ್ಲದೆ ಬಿಟ್ಟನು. ತಾಂಗು–ತಡೆ, ತಡಮಾಡು, “ನಿಲಲ್ವೇೞ್ಕುಮೆಂದು ಪೋಗಲೀಯದೆ, ಕಾಲಂ ಪಿಡಿದು, ತಾಂಗುತ್ತಿರ್ಪನ್ನೆಗಂ” (ವಡ್ಡಾ. ೧೧೭), (ತ) ತಾಂಗು–ತಡುತ್ತಲ್.
ವಚನ : ಚಾಣೂರಾರಿ–ಕೃಷ್ಣ; ಜರಾಸಂಧಾರಿಯ–ಭೀಮನ; ಮುನ್ನೆಗೆದ–ಮೊದಲು ಚಿಮ್ಮಿದ, ತಲೆದೋರಿದ; ಮನಃಕ್ಷತಂಬಟ್ಟು–ಮನದಲ್ಲಿ ನೊಂದು; ಆರಯಲ್– ವಿಚಾರಿಸಲು; ಸೈಂಧವನ ಮೊನೆಯೊಳ್–ಸೈಂಧವನ ಯುದ್ಧದಲ್ಲಿ; ಪೆಱಗಿಕ್ಕಿ–ಹಿಂದಿಕ್ಕಿ, ಮುಂದೆ ಬಂದು;
೧೪೫. ದಿನಕರಂ–ಸೂರ್ಯನು, ಅಸ್ತಮಸ್ತಕಮಂ–ಅಸ್ತಗಿರಿಯ ನೆತ್ತಿಯನ್ನು, ಆಸೆವಡಲ್–ಬಯಸಲು, ಬಗೆದಪ್ಪಂ–ಎಣಿಸುತ್ತಿದ್ದಾನೆ ಎಂದರೆ ಸೂರ್ಯ ಮುಳುಗಲು ಬಯಸುತ್ತಿದ್ದಾನೆ; ಏಕೆ–ಯಾತಕ್ಕೆ, ಕೆಮ್ಮನೆ–ಸುಮ್ಮನೆ, ತಡೆವೈ–ತಡಮಾಡುತ್ತೀಯೆ? ಜಯದ್ರಥನಂ ಇಕ್ಕು–ಜಯದ್ರಥನನ್ನು ಹೊಡೆ, ಕೊಲ್ಲು; ಆರೊಳಂ–ಯಾರಲ್ಲಿಯೂ, ತೊಡಂಕವೇಡ–ತೊಡಕಿಕೊಳ್ಳಬೇಡ; ಎಂದು ಎನುತಂ–ಎಂದು ಹೇಳುತ್ತ, ಅಜಂ– ಶ್ರೀಕೃಷ್ಣನು, ಮರುಜ್ಜವದೆ–ವಾಯುವೇಗದಿಂದ, ಚೋದಿಸೆ–ರಥವನ್ನು ಹಾಯಿಸಲು, ಪಾರ್ಥನ–ಅರ್ಜುನನ, ದೇವದತ್ತನಿಸ್ವನದೊಳೆ–ದೇವದತ್ತವೆಂಬ ಶಂಖದ ನಾದದೊಡನೆ, ತೀವಿ–ತುಂಬಿ, ಅಜಾಂಡಮಂಡಳಂ–ಬ್ರಹ್ಮಾಂಡ ಮಂಡಲವು, ಪೊಟ್ಟನೆ–ಫಟ್ಟನೆ, ಒಡೆವಂತೆವೊಲ್–ಒಡೆಯುವ ಹಾಗೆ, ಆದುದು–ಆಯಿತು.
೧೪೬. ರಣರಂಗದಲ್ಲಿ ಅರ್ಜುನನ ರಥ ಓಡಿದ್ದು : ಚಟುಳಿತ….ತಳಂ: ಚಟುಳಿತ– ವೇಗವಾಗಿ ಚಲಿಸುತ್ತಿರುವ, ಚಕ್ರನೇಮಿ–ಗಾಡಿಯ ಬಳೆಯ, ಪರಿವರ್ತನ–ಹೊರಳುವಿಕೆಯ, ಘಟ್ಟನ–ಹೊಡೆತದ, ಘಾತ–ಏಟಿನಿಂದ, ನಿರ್ಭರ–ಭರಿಸಲಸಾಧ್ಯವಾಗಿ, ಸ್ಫುಟಿತ–ಸೀಳಿದ, ಧರಾತಳಂ–ಭೂಮಿಯ ಪ್ರದೇಶವನ್ನುಳ್ಳ; ವಿಜಯನುಗ್ರರಥಂ–ಅರ್ಜುನನ ಭಯಂಕರ ರಥವು, ಘಟಾಘಟಿತ–ಆನೆಗಳ ಗುಂಪಿನಿಂದ ಕೂಡಿದ, ಹಟದ್ವಿರೋಧಿರುಧಿರಪ್ಲವ–ಶತ್ರುಗಳ ಹೊಳೆಯುತ್ತಿರುವ ರಕ್ತ ಪ್ರವಾಹದ, ಲಂಪಟ–ಆಸಕ್ತಿಯುಳ್ಳ, ಸಂಕಟಂ–ಸಮ್ಮರ್ದದ, ಉತ್ಕಟಂ–ಅತಿಶಯತೆಯನ್ನುಳ್ಳುದು, ಕಟಕಟಘಾತ ನಾಕತಟ ಸಂಕಟಂ–ಕಟಕಟವೆಂಬ ಹೊಡೆತದಿಂದ ಸ್ವರ್ಗಕ್ಕೆ ಸಂಕಟವನ್ನುಂಟುಮಾಡುವುದು, ಸಂಗರ ರಂಗಭೂಮಿಯೊಳ್– ಯುದ್ಧಾಂಗಣದಲ್ಲಿ, ಪರಿದತ್ತುದಲ್–ದೌಡಾಯಿಸಿತು. ಅಲ್ಲವೆ? ಈ ಪದ್ಯದಲ್ಲಿ ಟಕಾರದ ಅನುಪ್ರಾಸ ಕರ್ಕಶತೆಯನ್ನು ಬಿಂಬಿಸುತ್ತ ರಥ ಓಡಿದ್ದನ್ನು ಶಬ್ದಮೂಲಕವಾಗಿಯೇ ಚಿತ್ರಿಸು ತ್ತಿದೆ; ನಾಕತಟ ಸಂಕಟ–ಪ್ರಕೃತಿ ಪ್ರಯೋಗ, ನಾಕತಟಸಂಕಟಂ–ಎಂದು ಪ್ರಥಮಾಂತವಾಗಿರ ಬೇಕು.
ವಚನ : ಭಯಜ್ವರಮುಂ–ಭಯವೆಂಬ ಜ್ವರವೂ; ಮಹೇಶ್ವರ ಜ್ವರಮುಂ–ಶಿವನ ಹಣೆಗಣ್ಣಿನಿಂದ ಉತ್ಪನ್ನವಾದ ಜ್ವರವೂ; ಒಂದೆ ವಿಂದೆಯಲ್ಲದೆ–ಒಂದೇ ಗುಂಪಾಗಿ ಯಲ್ಲದೆ, ಎಂದರೆ ಪೃಥಕ್ಕಾಗಿ, ಬೇರೆ ಬೇರೆಯಾಗಿ, ವಿಂದೆ (ಸಂ) ವೃಂದ; ಒಂದೊರ್ವರೊಳ್– ಒಬ್ಬರೊಬ್ಬರಲ್ಲಿ; ಸಂದಿಸಿ–ಎದುರಾಗಿ, ಗೊಂದಣಿಸಿ–ಗುಂಪಾಗಿ (ತಮ್ಮ ಸೈನ್ಯ ಸಮೇತವಾಗಿ).
೧೪೭. ಈ ಎಱಗುವಂಬಿನ ಬಲ್ಸರಿ–ಈ ಬೀಳುವ ಬಾಣಗಳ ದೊಡ್ಡ ಮಳೆಯು, ಶರದೊಳಗೆ–ಬಾಣಗಳ ನಡುವೆ, ಉರ್ಚಿಪೋಪ–ಭೇದಿಸಿಕೊಂಡು ಹೋಗುವ, ಪೊಳ ಪಿಂಗೆ–ಹೊಳಹಿಗೆ, ಒಳಗಾಗಿ–ವಶವಾಗಿ, ತಗುಳ್ದುದು–ಅಟ್ಟಲ್ಪಟ್ಟ, ಒಂದು, ಬೆಳ್ಸರಿಗೆ– ಬಿಳಿ ಬಣ್ಣದ ಮಳೆಗೆ, ಎಣೆಯಾದುದು–ಸಮಾನವಾಯಿತು, ನಿರಂತರವಾಗಿ ಬೀಳುವ ಬಾಣಗಳ ನಡುವೆ ನಡುವೆ ಸೂರ್ಯಕಾಂತಿ ನುಸುಳಿಕೊಂಡು ಬಂದು ಪ್ರಕಾಶಿತವಾಗಿ ಅದು ಬಾಣದ ಮಳೆಯಲ್ಲಿ ಸುರಿಯುವ ಬಿಳಿ ಕಿರಣಗಳ ಮಳೆ ಎಂಬಂತಾಯಿತು, ಎಂಬಿನಂ–ಎನ್ನುತ್ತಿರಲು, ನಿರಂತರದೊಳೆ–ಎಡೆಬಿಡದೆ, ಪಾಯ್ದ–ಹಾದ, ನುಗ್ಗಿದ, ಕೂರ್ಗಣೆಯಿಂ–ಮಸೆದ ಬಾಣ ಗಳಿಂದ, ಗುಣಾರ್ಣವಂ–ಅರ್ಜುನನು, ಚತುರ್ಬಲಂ–ಚತುರಂಗ ಸೈನ್ಯವನ್ನು, ತಱಿದೊಟ್ಟಿ– ಕತ್ತರಿಸಿ ರಾಶಿ ಹಾಕಿ, ತೆರಳ್ಚಿ–ಓಡಿಸಿ, ತೂಳ್ದಿಕೊಂಡು–ತಳ್ಳಿಕೊಂಡು, ಅರೆದು–ತೇದು, ಮಗುೞ್ಚಿ–ಹಿಂದಿರುಗಿಸಿ, ಸಣ್ಣಿಸಿದಂ–ನಯಗೊಳಿಸಿದನು; ಎಂದರೆ ಸೈನ್ಯವನ್ನೆಲ್ಲ ಧ್ವಂಸ ಮಾಡಿದನು ಎಂದು ಭಾವ.
೧೪೮. ಕಲಿಗಂ ಬಲ್ಲಾಳ್ಗಂ–ಕಲಿಗಳಿಗೂ ಬಲ್ಲಾಳುಗಳಿಗೂ, ಅಂಬೆತ್ತಿದೆಂ–ಬಾಣವನ್ನು ಎತ್ತಿದ್ದೇನೆ, ಎಂದರೆ ಅವರನ್ನು ಸವಾಲು ಮಾಡಿ ಯುದ್ಧಕ್ಕೆ ಕರೆಯುತ್ತಿದ್ದೇನೆ. ಸಿಂಧು ರಾಜಂ–ಸೈಂಧವನು, ಮಾರ್ಕೊಳಲ್–ಎದುರಿಸಲು, ಇದುವೆ–ಇದೇ, ಪದಂ–ಸಮಯ, ಗೆಲಲೆಂದು–ಗೆಲ್ಲಬೇಕೆಂದು, ಆಂ–ನಾನು, ಬಂದೆಂ–ಬಂದೆನು, ಇಂ ಕೊಂದಪೆನೆ–ಇನ್ನು ಕೊಲ್ಲುತ್ತೇನೆಯೆ? ಎಂದರೆ ನಾನು ಗೆಲ್ಲುವುದಕ್ಕೆ ಬಂದೆನೇ ಹೊರತು ಕೊಲ್ಲುವುದಕ್ಕೆ ಬರಲಿಲ್ಲ; ನೆರೆದು–ಒಟ್ಟಾಗಿ ಸೇರಿ, ನಿಂದು–ನಿಂತು, ಆನಿಂ–ಎದುರಿಸಿರಿ; ಎಂದು ಆಂತರಂ– ಎಂದು ಎದುರಾದವರನ್ನು, ಮೂದಲಿಸುತ್ತೆ ಹೀಯಾಳಿಸುತ್ತ, ಪ್ರಚಂಡ ಪ್ರಳಯ ಘನಘಟಾ ರಾವದಿಂದೆ–ಪ್ರಚಂಡವಾದ ಪ್ರಳಯಕಾಲದ ಮೋಡಗಳ ಸಮೂಹದ ಮೊಳಗಿನಿಂದ, ಆರ್ದು–ಗರ್ಜಿಸಿ, ಎಚ್ಚಂ–ಹೊಡೆದನು (ಬಾಣಗಳಿಂದ), ರೋದೋವಿವರಮಂ–ಆಕಾಶದ ಬಿಲವನ್ನು ಅಥವಾ ವಿಸ್ತಾರವನ್ನು, ಬಾಣಾವಲಿಯಿಂದಂ–ಬಾಣ ಸಮೂಹಗಳಿಂದ, ಪೂೞೆ– ಹೂಳಲು, ಒಂದು, ಘೋರಾಂಧಕಾರಂ–ಒಂದು ಭಯಂಕರವಾದ ಕತ್ತಲೆ, ಒದವಿತ್ತು–ಉಂಟಾ ಯಿತು.
ವಚನ : ಶರಸಂಘಾತದಿಂ–ಬಾಣಗಳ ಸಮೂಹದಿಂದ; ಒಗೆದ–ಹುಟ್ಟಿದ, ರಣ ಗೞ್ತಲೆಯೆ–ಯುದ್ಧದ ಕತ್ತಲೆಯ, ಮೊಲಗೞ್ತೆಲೆಯಂ–ಮೊಲದ ಕತ್ತಲೆಯನ್ನು, ಎಂದರೆ ಚಂದ್ರನಲ್ಲಿರುವ ಮೊಲದ ಮಚ್ಚೆಯಿಂದ ಉಂಟಾಗುವ ಕತ್ತಲೆಯನ್ನು; ನೇಸಱ್ಪಟ್ಟತ್ತು– ಸೂರ್ಯ ಮುಳುಗಿದನು. ಮೊಲಗೞ್ತಲೆ– “ನಿನ್ನ ಮೊಲಗೞ್ತಲೆಗಾಂ ಬೆಱಗಾದೆನೆಂದು” (ಆದಿಪು. ೩–೬೩)
೧೪೯. ಜ್ವಳತ್–ಪ್ರಕಾಶಿಸುತ್ತಿರುವ, ಅನಳಾಸ್ತ್ರದಿಂದ–ಆಗ್ನೇಯಾಸ್ತ್ರದಿಂದ, ಇಸೆ– ಪ್ರಯೋಗಿಸಲು, ಕೞ್ತಲೆ–ಕತ್ತಲೆಯು, ತೆರಳ್ದು–ಚಲಿಸಿ, ತೂಳ್ದುದು–ತಳ್ಳಲ್ಪಟ್ಟಿತು; ಆಗಳ್– ಆಗ, ಮಹಾರಥರ್–ಮಹಾರಥಿಕರು, ಉಮ್ಮಳಿಸಿ–ವ್ಯಾಕುಲಗೊಂಡು, ಪೆಳಱೆ–ಹೆದರಲು, ಸೈಂಧವಂ–ಜಯದ್ರಥನು, ಎನ್ನ ಅಳವಿಂಗಂ–ನನ್ನ ಶಕ್ತಿಗೂ, ದೋರ್ಬಲದ–ಬಾಹುಬಲದ, ಅಳವಿಂಗಂ–ಅಳತೆಗೂ, ಇಂ–ಇನ್ನು, ಎನಗೆ–ನನಗೆ, ಸೆಡೆದಿರಲ್–ಸೆಡೆದುಕೊಂಡು ಇರಲು ಎಂದರೆ ಭಯದಿಂದ ಕುಗ್ಗಿರಲು, ದೊರೆಯಲ್ತು–ಯೋಗ್ಯವಲ್ಲ, ಎಂದು–ಎಂಬುದಾಗಿ, ಬಂದು–ಯುದ್ಧಕ್ಕೆ ಬಂದು, ಅಸುಂಗೊಳೆ–ಪ್ರಾಣಾಪಹಾರವನ್ನು ಮಾಡಲು, ಜಗದೇಕಮಲ್ಲ ನೊಳ್–ಅರ್ಜುನನಲ್ಲಿ, ಸುರರ್–ದೇವತೆಗಳು, ತನ್ನ, ಅಳವಂ–ಪರಾಕ್ರಮವನ್ನು, ಪೊಗೞೆ– ಕೊಂಡಾಡಲು, ಪೊಣರ್ದಂ–ಹೋರಾಡಿದನು.
೧೫೦. ನಿನ್ನೆ–ನಿನ್ನೆ ದಿನ, ನಿನ್ನ ಮಗನಂ–ನಿನ್ನ ಮಗನಾದ ಅಭಿಮನ್ಯುವನ್ನು, ಸೆರಗಿಲ್ಲದೆ– ಭಯವಿಲ್ಲದೆ, ಪೊರಳ್ಚಿ–ಹೊರಳಿಸಿ, ಕೊಂದೆಂ–ಕೊಂದೆನು, ಇಂದುಂ–ಈ ದಿನವೂ, ಇಂತು– ಹೀಗೆ, ಇನ್ನೆಗಂ–ಇದುವರೆಗೂ, ಇರ್ಪುದಂ–ಇರುವುದನ್ನು, ಭಯದಿಂ–ಭಯದಿಂದ, ಇರ್ದೆನೆ–ಇದ್ದೇನೆ? ಎಂದರೆ ಈ ದಿವಸ ಇದುವರೆಗೂ ನಾನು ನಿನಗೆ ಎದುರಾಗದೆ ಇದ್ದುದು ಭಯದಿಂದಲ್ಲವಲ್ಲ; ನಿನ್ನನೆ–ನಿನ್ನನ್ನೇ, ಪಾರುತಿರ್ದೆಂ–ನಿರೀಕ್ಷಿಸುತ್ತ ಇದ್ದೆನು; ಎಂದು– ಎಂದು ಹೇಳಿ, ಉನ್ನತ ಶೌರ್ಯದಿಂದೆ–ಅತಿಶಯವಾದ ಪರಾಕ್ರಮದಿಂದ, ಅಜಿತನಂ–ಕೃಷ್ಣನನ್ನೂ, ನರನಂ–ಅರ್ಜುನನನ್ನು, ಏೞುಮೆಂಟುಂ ನಿಶಿತಾಸ್ತ್ರದಿಂ–ಏಳು ಎಂಟು ಹರಿತವಾದ ಬಾಣಗಳಿಂದ, ಮುನಿದು–ಕೆರಳಿ, ಎಚ್ಚಂ–ಪ್ರಯೋಗಿಸಿದನು; ಸಿಂಧುರಾಜನಾ–ಸೈಂಧವನ, ಅದಟು–ಪರಾಕ್ರಮ, ಏಂ ದೊರೆವೆತ್ತದೊ–ಏನು ಯೋಗ್ಯತೆಯನ್ನು ಪಡೆಯಿತೋ! ಎಂದರೆ ಅಸಮಾನವಾಯಿತು ಎಂದು ಭಾವ.
ವಚನ : ಪೆರ್ಚಿದ–ಹೆಚ್ಚಿದ, ಉಮ್ಮಚ್ಚದಿಂದೆ–ಕೋಪದಿಂದ;
೧೫೧. ಎಂತು–ಹೇಗೆ, ಅಸ್ಮತ್ಪುತ್ರನಂ–ನನ್ನ ಮಗನನ್ನು, ಸಂಗರದೊಳ್–ಯುದ್ಧದಲ್ಲಿ, ಅೞಿದೆ–ಕೊಂದೆ, ಇನ್ನಂತೆ–ಇನ್ನು ಹಾಗೆಯೇ, ನಿಲ್–ನಿಲ್ಲು, ಶಕ್ತಿ ಚಾತುರ್ದಂತಂಗಳ್– ಪರಾಕ್ರಮವೂ ಚತುರಂಗ ಸೈನ್ಯಗಳೂ, ನಿನ್ನಂ–ನಿನ್ನನ್ನು, ಆಂ–ನಾನು, ಕೊಲ್ವೆಡೆಯೊಳ್– ಕೊಲ್ಲುವ ಸಮಯದಲ್ಲಿ, ಕಾವುವೇ–ರಕ್ಷಿಸುತ್ತವೆಯೇ, ಪೇೞ್–ಹೇಳು; ಕಾಯವು–ರಕ್ಷಿಸವು; ಅಣ್ಮು–ಪೌರುಷವನ್ನು ತೋರಿಸು, ಎಂದು, ಆಂತಾಂತು–ಎದುರಿಸಿ, ಎದುರಿಸಿ, ಎಚ್ಚೆಚ್ಚು– ಬಾಣಪ್ರಯೋಗ ಮಾಡಿ ಮಾಡಿ, ಸೂತ ಧ್ವಜಹಯ ರಥ ಸಂಘಾತಮಂ–ಸಾರಥಿ ಬಾವುಟ ಕುದುರೆ ರಥಗಳ ಸಮೂಹವನ್ನು, ನುರ್ಗೆ–ನುಚ್ಚು ಮಾಡಲು, ಲೋಕಕ್ಕೆ–ಪ್ರಪಂಚಕ್ಕೆ, ಅಂತಂ ಮಾೞ್ಪ–ಕೊನೆಯನ್ನು ಮಾಡುವ ಎಂದರೆ ನಾಶ ಮಾಡುವ, ಅಂತಕಂಬೊಲ್–ಯಮನಂತೆ, ಗದೆವಿಡಿದು–ಗದೆಯನ್ನು ಹಿಡಿದು, ಉಱದೆ–ಇರದೆ, ಎಯ್ತರ್ಪನಂ–ಬರುವವನನ್ನು, ಅನಂತಂ–ಕೃಷ್ಣ, ಕಂಡು–ನೋಡಿ,
೧೫೨. ಪಾಶುಪತಮಂ–ಪಾಶುಪತಾಸ್ತ್ರವನ್ನು, ತುಡು–ಹೂಡು, ಎನೆ–ಎನ್ನಲು, ನರಂ– ಅರ್ಜುನನು, ಎಡೆಮಡಗದೆ–ಅವಕಾಶವನ್ನು ಕೊಡದೆ ಎಂದರೆ ತ್ವರೆಯಾಗಿ, ತುಡೆ–ಹೂಡಲು, ದಿಶಾಳಿ–ದಿಕ್ಕುಗಳ ಸಾಲು, ನಡುಗಿದುದು–ಕಂಪಿಸಿತು; ವಿಯತ್ತಳಂ–ಆಕಾಶ, ಸುರುಳ್ದು– ಸುರುಳಿಯಾಗಿ, ಉಡುಗಿದುದು–ಸುಕ್ಕಿತು, ಎಳೆ–ಭೂಮಿ, ಪಿಡುಗಿದುದು–ಒಡೆಯಿತು; ಶಿವನ, ಮನಂ–ಮನಸ್ಸು, ಕಲಂಕಿ ಕದಡಿದುದು–ಕ್ಷೋಭೆಗೊಂಡಿತು.
೧೫೩. ಬೆಟ್ಟು–ಬೆಟ್ಟವು, ಎಂದರೆ ಕಡಲಲ್ಲಿರುವ ಪರ್ವತಗಳು, ಸುೞಿಯೊಳಗಿರ್ದು– ಸುಳಿಯಲ್ಲಿದ್ದು, ಪೊಱಪೊಣ್ಮುವಿನಂ–ಹೊರಕ್ಕೆ ಹೊರಡುತ್ತಿರಲು, ಲವಣಾಂಬುರಾಶಿ– ಉಪ್ಪು ನೀರಿನ ಸಮುದ್ರ, ಕುಕ್ಕುೞಗುದಿವಲ್ಲಿ–ಅನ್ನ ಕುದಿಯುವಂತೆ ಕುದಿಯುವಾಗ, ಕೂೞ್ಗು ದಿಯೆ–ಅನ್ನ ಕುದಿಯುತ್ತಿರಲು, ಮೇಗೆ ಸಿಡಿಲ್ದಗುೞಂತೆ–ಮೇಲಕ್ಕೆ ಸಿಡಿದ ಅಗುಳಿನ ಹಾಗೆ, ಕೂಡೆ–ಕೂಡಲೆ, ತತ್ತೞಗುದಿಯುತ್ತುಮಿರ್ಪ–ತಳತಳಯೆಂದು ಕುದಿಯುತ್ತಿರುವ, ಕುದಿ ಯೊಳ್–ಕುದಿತದಲ್ಲಿ, ಅಲ್ಲಿಯ–ಸಮುದ್ರದ, ಮುತ್ತುಗಳ್–ಮುತ್ತುಗಳು, ಸಿಡಿದು, ರುದ್ರ ಸುರೇಂದ್ರವಿಮಾನಪಂಕ್ತಿಯಂ–ಶಿವನ ದೇವೇಂದ್ರನ ವಿಮಾನಗಳ ಸಾಲುಗಳನ್ನು, ಒರ್ಮೊದಲೆ–ಒಂದೇ ಸಲಕ್ಕೆ, ಛೞಿಲ್ ಛೞಿಲೆನೆ–ಚಳೀರೆನ್ನಲು, ಕೊಂಡವು–ಆಕ್ರಮಿಸಿ ದುವು, ತಾಗಿದುವು.
ವಚನ : ಕ್ಷೋಭಮುಂ–ಕದಡುವುದೂ; ತ್ರೈಲೋಕ್ಯಕ್ಷೋಭಮುಂ–ಮೂರು ಲೋಕಗಳ ಭಯ ಕಂಪನಗಳೂ.
೧೫೪. ತೆಗೆನೆಱೆದು–ಕಿವಿವರೆಗೆ ಬಾಣವನ್ನು ಸೆಳೆದು, ಊಱಿಕೊಂಡು–ಬಲವಾಗಿ ಅಮುಕಿ, ಇಸೆ–ಪ್ರಯೋಗಿಸಲು, ಶಿರಂ ಪಱಿದು–ತಲೆ ಕತ್ತರಿಸಿ, ವಿಯತ್ತಳಂಬರಂ–ಆಕಾಶ ದವರೆಗೆ, ನೆಗೆದೊಡೆ–ಹಾರಿದರೆ, ರಾಹು–ರಾಹುಗ್ರಹ, ಬಾಯ್ದೆಱೆದು–ಬಾಯನ್ನು ತೆರೆದು ಕೊಂಡು, ನುಂಗಲೆ ಬಂದಪುದು–ನುಂಗುವುದಕ್ಕೇ ಬರುತ್ತಿದೆ, ಎಂಬ–ಎನ್ನುವ, ಶಂಕೆಯಿಂದ– ಭಯದಿಂದ, ದಿನೇಶಂ–ಸೂರ್ಯನು, ಅಗಿದು–ಹೆದರಿ, ಅಸ್ತಗಿರಿಯಂ–ಅಸ್ತಾಚಲವನ್ನು, ಮಱೆಗೊಂಡಂ–ಮರೆಯಾಗಿಸಿಕೊಂಡನು, ಎಂದರೆ ಸೂರ್ಯನು ಮುಳುಗಿದನು; ಪರಸೈನ್ಯ ಭೈರವಂ–ಅರ್ಜುನನು, ಅಮೋಘಂ–ಅಮೋಘವಾದದ್ದು, ಎಂಬ ಮಾತುಗಳ, ನೆಗೞ್ತೆಯಂ– ಕೀರ್ತಿಯನ್ನು, ಆಹವದೊಳ್–ಯುದ್ಧದಲ್ಲಿ, ಪಡೆದಂ–ಪಡೆದನು.
೧೫೫. ಬಿರಿದ–ಅರಳಿದ, ಅಲರೋಳಿ–ಹೂಗಳ ಸಾಲು, ಸಗ್ಗದ–ಸ್ವರ್ಗದ, ಮದಾಳಿ ಗಳಂ–ಸೊಕ್ಕಿದ ದುಂಬಿಗಳನ್ನು, ಗೆಡೆಗೊಂಡು–ಜೊತೆಗೂಡಿ, ದೇವಸುಂದರಿಯರ–ದೇವಸ್ತ್ರೀ ಯರ, ಕೆಯ್ಗಳಿಂದಂ–ಕೈಗಳಿಂದ, ಉಗೆ–ಸೂಸಲು, ತುಂಬುರು ನಾರದರ–ತುಂಬುರನ ನಾರದನ, ಒಂದುಗೇಯದ–ಒಂದು ಸಂಗೀತದ; ಇಂಚರಂ–ಇನಿಯ ಸದ್ದು, ಎರ್ದೆಯಂ– ಹೃದಯವನ್ನು, ಪಳಂಚಿ–ತಾಗಿ, ಅಲೆಯೆ–ಪೀಡಿಸಲು, ವೀರಲತಾಂಗಿಯ ಸೋಂಕು–ವೀರ ವನಿತೆಯ, ವಿಜಯಲಕ್ಷ್ಮಿಯ ಸ್ಪರ್ಶ, ಮೆಯ್ಯೊಳ್–ಮೈಯಲ್ಲಿ, ಅಂಕುರಿಸೆ–ಮೊಳೆಯಲು, ರೋಮಾಂಚಗೊಳ್ಳಲು, ಗುಣಾರ್ಣವಂ–ಅರ್ಜುನ, ಆಜಿಪರಿಶ್ರಮಮಂ–ಯುದ್ಧದ ಆಯಾಸವನ್ನು, ನಿರಾಕುಳಂ–ತೊಂದರೆ ಇಲ್ಲದೆ, ಕಳೆದಂ–ನೀಗಿದನು.
ಏಕಾದಶಾಶ್ವಾಸಂ ಸಂಪೂರ್ಣಂ