೦೯

ನವಮಾಶ್ವಾಸಂ

೧. ಶ್ರೀಗೆ–ಐಶ್ವರ್ಯಕ್ಕೆ, ನೆಗೞ್ತೆಗೆ–ಕೀರ್ತಿಗೆ, ವೀರಶ್ರೀಗೆ–ಜಯಲಕ್ಷ್ಮಿಗೆ, ಆಗರ ಮಪ್ಪೆ ನೆಂಬ–ಮನೆಯಾಗುತ್ತೇನೆಂಬ, ಆಶ್ರಯವಾಗುತ್ತೇನೆಂಬ, ಕಳಕಳ ವಿಜಯೋದ್ಯೋಗದೊಳೆ– ಸಡಗರ ಸಹಿತವಾದ ಗೆಲ್ಲುವ ಕಾರ್ಯದಲ್ಲೇ, ನೆಗೞ್ವೆನೆಂಬ–ಆಚರಿಸುತ್ತೇನೆನ್ನುವ, ಉದ್ಯೋ ಗಿಗೆ–ಕಾರ್ಯಶೀಲನಾದವನಿಗೆ, ಮಲೆವ–ಔದ್ಧತ್ಯದಿಂದ ನಡೆಯುವ, ಅನ್ಯನೃಪತಿ ಮಂಡ ಳಂ–ಶತ್ರುರಾಜರ ಪ್ರದೇಶವು, ಒಳವೇ–ಉಂಟೇ? ಇಲ್ಲವೆಂದು ತಾತ್ಪರ್ಯ. ಕಳಕಳ, ಕಲಕಲ– ಗದ್ದಲ, ಅಬ್ಬರ, ಹಕ್ಕಿಗಳ ಚಿಲಿಪಿಲಿ ಎಂಬುದು ವಾಚ್ಯಾರ್ಥ. ನೆಗೞ್–ಉದ್ಯೋಗೇ ಖ್ಯಾತೌ ನಕ್ರೇಚ.

೨. ಎಂದು–ಎಂಬುದಾಗಿ, ಜಗಜ್ಜನಂ–ಲೋಕದ ಜನ, ಅಳವಂ–ಪ್ರತಾಪವನ್ನು, ಅಗುಂದಲೆಯಾಗಿ–ಅತಿಶಯವಾಗಿ, ಅಡರೆ–ಏರುತ್ತಿರಲು, ಬಿಡದೆ, ಪೊಗೞುತ್ತಿರೆ–ಹೊಗಳು ತ್ತಿರಲು, ಕುಂದೇಂದುಯಶಂ–ಕುಂದಪುಷ್ಪದಂತೆ, ಚಂದ್ರನಂತೆ ಬೆಳ್ಳಗಿರುವ ಕೀರ್ತಿಯನ್ನುಳ್ಳ ಅರ್ಜುನನು, ರಥದಿಂದಿೞಿತಂದು–ರಥದಿಂದ ಇಳಿದು ಬಂದು, ಅಗ್ರಜನ್ಮ ಪದ ಸರಸಿಜ ದೊಳ್–ಅಣ್ಣನ ಪಾದಕಮಲದಲ್ಲಿ, ಎಱಗಿದಂ–ನಮಸ್ಕರಿಸಿದನು. ಅಗುಂದಲೆಯೆಂದು ಪಿರಿದು;< ಆಗು+ದಲೆ–ಆಗುವಿಕೆ, ಏಳ್ಗೆಯಾಗುವಿಕೆ, ವೃದ್ಧಿ, ಅತಿಶಯ.

೩. ಅಱಮಗನ–ಧರ್ಮಪುತ್ರನ, ಪವನತನಯನ–ಭೀಮನ, ನೆಱೆದ–ತುಂಬಿದ, ಆಶೀರ್ವಚನಶತಮನಾಂತು–ನೂರು ಆಶೀರ್ವಾದಗಳನ್ನು ಪಡೆದು, ಅನುನಯದಿಂದೆ– ಪ್ರೀತಿಯಿಂದ, ಎಱಗಿದ–ನಮಸ್ಕರಿಸಿದ, ಅಮಳರುಮಂ–ನಕುಲಸಹದೇವರನ್ನೂ (ಅವಳಿ ಗಳನ್ನೂ), ಅೞ್ಕಱಿಂ–ಪ್ರೀತಿಯಿಂದ, ಒಱಲ್ದು–ಒಲಿದು, ತೆಗೆದಪ್ಪಿ–ಬರಸೆಳೆದು ಅಪ್ಪಿ ಕೊಂಡು, ನಲ್ವರಕೆಗಳಿಂ–ಒಳ್ಳೆಯ ಹರಕೆಗಳಿಂದ, ಪರಸೆ–ಹರಸಲು.

೪. ಚಲಚಲದಿಂ–ಸ್ಥಿರವಾದ ಉದ್ದೇಶದಿಂದ, ಉಱದೆ–ಇರದೆ, ಬಿಡದೆ, ಪಗೆವರ ತಲೆ ಗಳಂ–ಹಗೆಗಳ ತಲೆಗಳನ್ನು, ಅರಿದರಿದು ಬಂದು–ಕತ್ತರಿಸಿ ಕತ್ತರಿಸಿ ಬಂದು, ಪಾಂಡು ತನೂಜರ್–ಪಾಂಡುಕುಮಾರರು, ತಲೆದೋಱಿರೆ–ಕಾಣಿಸಿಕೊಂಡಿರಲು, ಮತ್ಸ್ಯಂಗೆ–ವಿರಾಟನಿಗೆ, ರಾಗಂ–ಸಂತೋಷವು, ಆಗಳ್–ಆಗ, ಅಗುಂದಲೆಯುಂ–ಹಿರಿದೂ, ಪೊಂಪುೞಿಯುಂ– ಅತಿಶಯವೂ, ಆಯ್ತು–ಆಯಿತು. ಪೊಂಪುೞಿಯೆಂದು ಪೆರ್ಚುಗೆ; ಈಚಿನ ಕನ್ನಡದಲ್ಲಿ ಇದಕ್ಕೆ ರೋಮಾಂಚ ಎಂಬರ್ಥವಾಗಿದೆ, “ಪುಳಕಕ್ಕೊಪ್ಪಿರೆ ಪೊಂಪುಳಿಯೆನಿಪ್ಪ ಪೆಸರಕ್ಕು” (ಕಬ್ಬಿಕೈ. ೩೦); ಪೊಂಪುೞಿ ಹೊಂಪುಳಿ ಎಂಬ ರೂಪವೂ ಉಂಟು; ಒಗುಮಿಗೆಯ ಹರುಷದಲಿ ಹೊಂಪುಳಿ ಯೋದನಾ ಭೀಷ್ಮ (ಕುವ್ಯಾ.ಭಾ. ೬–೮–೧೭).

೫. ಗುಡಿಯಂ ಕಟ್ಟಿಸಿ-ಬಾವುಟಗಳನ್ನು ಬಿಗಿಯಿಸಿ, ಬದ್ದವಣಮಂ-ಮಂಗಳ ವಾದ್ಯವನ್ನು, ಪೊಯ್ಸಿ-ಹೊಡೆಯಿಸಿ, ಪ್ರಾಣಕ್ಕಂ-ಜೀವಕ್ಕೂ, ಅರ್ಥಕ್ಕಂ-ಐಶ್ವರ್ಯಕ್ಕೂ, ಇಂ-ಇನ್ನು, ಎಡ, ಱೇನ್–ವಕ್ರತೆಯೇನು, ಏತಱೊಳ್–ಯಾವುದರಲ್ಲಿ, ಅಪ್ಪುದು–ಆಗುತ್ತದೆ, ಎಂದು–ಎಂದು ಹೇಳಿ, ಕುರುಡಂ–ಕುರುಡನು, ಕಣ್ಬೆತ್ತವೋಲ್–ಕಣ್ಣನ್ನು ಪಡೆದ ಹಾಗೆ, ರಾಗದಿಂದೆ–ಸಂತೋಷ ದಿಂದ, ಒಡೆಯಂ ತಾಂ–ರಾಜನಾದ ತಾನು, ಬಗೆದು–ಯೋಚಿಸಿ, ಉಳ್ಳಸಾರಧನಮಂ–ಇರುವ ಉತ್ಕೃಷ್ಟವಾದ ದ್ರವ್ಯವನ್ನು, ಮುಂದಿಟ್ಟು–ಮುಂದೆ ಇರಿಸಿ, ಮತ್ಸ್ಯಮಹೇಶಂ–ವಿರಾಟ ರಾಜನು, ತತ್ಪಾಂಡು ಪುತ್ರರ್ಕಳಾ–ಆ ಪಾಂಡುಕುಮಾರರ, ಮನದೊಳ್–ಮನಸ್ಸಿನಲ್ಲಿ, ಅಂದು–ಆ ದಿನ, ಅತಿ ಪ್ರೀತಿಯಂ–ಹೆಚ್ಚು ಪ್ರೀತಿಯನ್ನು, ಪಡೆದಂ–ಉಂಟು ಮಾಡಿದನು.

೬. ಕೇಳಿರೆ–ಕೇಳಿರೇ, ಕಂಕಭಟ್ಟನೆ, ಯುಧಿಷ್ಠಿರಂ–ಧರ್ಮರಾಜನು; ಆ ವಲಲಂ–ಆ ಬಾಣಸಿಗ, ವೃಕೋದರಂ–ಭೀಮನು; ಆ ಬಾಳೆಯರಂದಲಾಡಿಪ ಬೃಹಂದಳೆ–ಆ ಬಾಲೆ ಯರನ್ನು ಚೆನ್ನಾಗಿ ಕುಣಿಸುವ ಬೃಹಂದಳೆಯು, ಫಲ್ಗುಣಂ–ಅರ್ಜುನ, ಅಂಕದ–ಹೆಸರುವಾಸಿ ಯಾದ, ಅಶ್ವಗೋಪಾಲಕರೆಂಬರ್–ಕುದುರೆ ಮತ್ತು ಗೋವುಗಳ ರಕ್ಷಕರೆಂಬವರು, ಆ ನಕುಲನುಂ ಸಹದೇವನುಂ ಆದರ್–ಆ ನಕುಲನೂ ಸಹದೇವನೂ ಆದರು; ಮಹೀಪಾಲ ರೊಳ್–ರಾಜರಲ್ಲಿ, ಆದ–ಉಂಟಾದ, ಕಾರ್ಯಗತಿಗಳ್–ಕಾರ್ಯಗಳ ಪರಿಣಾಮ, ಬಗೆ ಯಲ್ಕೆ–ಯೋಚನೆ ಮಾಡಲು, ಏಂ ಬಹು ಪ್ರಕಾರಮೋ–ಏನು ಬಹುರೀತಿಗಳನ್ನುಳ್ಳದ್ದೋ?

ವಚನ : ಪುರಜನಾಳಾಪಂಗಳ್–ಪಟ್ಟಣಿಗರ ಮಾತುಗಳು; ನೆಗೞೆ–ಉಂಟಾಗಲು; ಕೃಷ್ಣೆಗೆ–ದ್ರೌಪದಿಗೆ; ಎಱಗಿ–ಬಾಗಿ; ಪೊಡೆವಡೆ–ನಮಸ್ಕರಿಸಲು; ಅವನತ ಮಣಿಮಕುಟಂ– ಬಾಗಿದ ರತ್ನಖಚಿತವಾದ ಕಿರೀಟವುಳ್ಳವನು, ಬಿನ್ನಪಂಗೆಯ್ದಂ–ಬಿನ್ನಹ ಮಾಡಿದನು :

೭. ನೃಪ ನೀಂ–ರಾಜನೇ, ನೀನು, ಉೞಿದಾವ ಮಂಡಲದೊಳಂ–ಬೇರೆ ಯಾವ ದೇಶ ದಲ್ಲಿಯೂ, ಇರದೆ, ಇಲ್ಲಿ–ಈ ದೇಶದಲ್ಲಿ, ದಯೆಯಿಂದಂ–ಕರುಣೆಯಿಂದ, ಬಂದಿರೆ– ಬಂದು ಇರಲು, ಎನ್ನ ಮೆಱೆವ–ನಾನು ತೋರಿಸುವ, ಆಳ್ವೆಸನ್–ಸೇವಾಕಾರ್ಯ, ದೊರೆ ವೆತ್ತುದು–ಸಮಾನತೆ ಪಡೆಯಿತು, ತಕ್ಕುದಾಯಿತು; ಎನ್ನತನೂಜೆಗೆ ಅಂಕದುತ್ತರೆಗೆ–ನನ್ನ ಮಗಳಾದ ಪ್ರಸಿದ್ಧಳಾದ ಉತ್ತರೆಗೆ, ಅಭಿಮನ್ಯುಗೆ–ಅಭಿಮನ್ಯುವಿಗೆ, ಇನ್–ಇನ್ನು, ವಿವಾಹ ಮಂಗಳಮಂ–ಮದುವೆಯ ಮಂಗಳಕಾರ್ಯವನ್ನು, ಮಾೞ್ಪುದು–ಮಾಡುವುದು; ಉತ್ತರೋ ತ್ತರಮೆನೆ–ಶ್ರೇಯಸ್ಸು ಎನ್ನಲು, ಮಾಡು; ಯಮರಾಜ ನಂದನಾ–ಧರ್ಮಪುತ್ರನೇ, ನಿನ್ನ ದಯೆಯಿಂ–ನಿನ್ನ ಪ್ರಸಾದದಿಂದ, ಮೆಱೆವೆಂ–ಮೆರೆಯುತ್ತೇನೆ.

ವಚನ : ಅಂತೆಗೆಯ್ವೆಂ–ಹಾಗೆಯೇ ಮಾಡುತ್ತೇನೆ, ನಣ್ಪುಗಳ್–ನಂಟತನಗಳು ಬಾಂಧವ್ಯ ಗಳು; ತಗುಳ್ದು–ಅನುಸರಿಸಿ; ಅವ್ಯವಚಿ, ನ್ನವಾಗಿ–ನಡುವೆ ಬಿಟ್ಟುಹೋಗದೆ, ಎಡೆಬಿಡದೆ; ದೊರೆಯ–ಸಮಾನತೆಯ; ಚಾಣೂರಾರಿಯಂ–ಶ್ರೀಕೃಷ್ಣನನ್ನು, ಬೞಿಯನಟ್ಟಿ–ದೂತನನ್ನು ಕಳುಹಿಸಿ; ಬರವಱಿದು–ಬರವನ್ನು, ಆಗಮನವನ್ನು, ತಿಳಿದು; ಇದಿರ್ವೋಗಿ–ಎದುರಿಗೆ ಹೋಗಿ, ಎದುರುಗೊಂಡು.

೮. ಮುರರಿಪು–ಕೃಷ್ಣನು, ಧರ್ಮನಂದನ–ಧರ್ಮರಾಜನ, ಪದಾಬ್ಜಯುಗಕ್ಕೆ–ಎರಡು ಪಾದಕಮಲಗಳಿಗೆ, ಮರುತ್ಸುದಾದಿಗಳ್–ಭೀಮನೇ ಮುಂತಾದವರು, ಹರಿಚರಣಾಂ ಬುಜಕ್ಕೆ–ಕೃಷ್ಣನ ಪಾದಕಮಲಗಳಿಗೆ, ಎಱಗೆ–ನಮಸ್ಕರಿಸಲು, ಉತ್ಸವದಿಂದೆ–ಒಸಗೆಯಿಂದ, ಅಭಿಮನ್ಯು–ಅಭಿಮನ್ಯುವು, ತಮ್ಮುತೈವರ–ತಮ್ಮ ಐವರ, ಲಲಿತಾಂಘ್ರಿ ಪದ್ಮ ನಿವಹಕ್ಕೆ– ಕೋಮಲವಾದ ಪಾದಪದ್ಮಗಳ ಸಮೂಹಕ್ಕೆ, ಎಱಗುತ್ತಿರೆ–ನಮಸ್ಕರಿಸುತ್ತಿರಲು, ತನ್ಮು ಖಾಬ್ಜದೊಳ್–ಅವರ ಮುಖಕಮಲಗಳಲ್ಲಿ, ಪರಕೆಗಳ್–ಆಶೀರ್ವಾದಗಳು, ಪಂಕಜದಿಂ– ತಾವರೆಯಿಂದ, ಮಕರಂದದಂತೆವೋಲ್–ಹೂವಿನ ರಸದ ಹಾಗೆ, ಉಣ್ಮಿ–ಚಿಮ್ಮಿ, ಪೊಣ್ಮಿ ದುವು–ಹೊಮ್ಮಿದುವು.

ವಚನ : ಮಂದರಧರನುಂ–ಶ್ರೀಕೃಷ್ಣನೂ; ಒಂದೊರ್ವರಂ–ಒಬ್ಬೊಬ್ಬರನ್ನು; ಇದು ಓರೊರ್ವರಂ ಎಂದಿರಬೇಕು. ಆದರೆ ಪಂಪನು ಹೀಗೆ ಪ್ರಯೋಗ ಮಾಡುವುದುಂಟು; ಒಂದೊಂದಱಲ್, ನೋಡಿ (ಪಂಪಭಾ. ೮–೧೦೩); ಅಗಲ್ದಿಂಬೞಿಯಂ–ಅಗಲಿದ ಅನಂತರ; ಅನ್ಯೋನ್ಯ ನಿವೇದನಂ ಗೆಯ್ದು–ಪರಸ್ಪರ ತಿಳಿಯಪಡಿಸಿ, ಅಪಗತ–ಹೊರಟುಹೋದ;

೯. ವಾರಿಧಿ ಘೋಷದಂತೆ–ಕಡಲಿನ ಅಬ್ಬರದಂತೆ, ಎಸೆವ–ಶಬ್ದ ಮಾಡುವ, ತೂರ್ಯರವಂಗಳಿಂ–ವಾದ್ಯಧ್ವನಿಗಳಿಂದ, ಬಿಯಂ–ಖರ್ಚುವೆಚ್ಚಕ್ಕೆ, ಮೇರುವ ಪೊನ್– ಮೇರು ಪರ್ವತದ ಚಿನ್ನ, ಅಣಂ–ಸ್ವಲ್ಪವೂ, ನೆಱೆಯದು–ಸಾಕಾಗದು, ಎಂಬಿನಂ– ಎನ್ನುತ್ತಿರಲು, ಇಟ್ಟಳಮಾಗೆ–ಅತಿಶಯವಾಗಲು, ವಾರನಾರೀರಮಣೀಯನೃತ್ತಂ–ವೇಶ್ಯೆ ಯರ ಸುಂದರವಾದ ನಾಟ್ಯವು, ಅಮರುತ್ತಿರೆ–ಕೂಡಿರಲು, ಸಂದವಿರಾಟಂ–ಪ್ರಸಿದ್ಧನಾದ ವಿರಾಟರಾಜನು, ಕೆಯ್ನೀರೆಱೆದು–ದಾನೋದಕವನ್ನು ಹೊಯ್ದು, ಈಯೆ–ದಾನವಾಗಿ ಕೊಡಲು, ಅಭಿಮನ್ಯುಗಂ–ಅಭಿಮನ್ಯುವಿಗೂ, ಉತ್ತರೆಗಂ–ಉತ್ತರೆಗೂ ವಿವಾಹಮಂ– ಮದುವೆಯನ್ನು, ಗೆಯ್ದರ್–ಮಾಡಿದರು. ಇಲ್ಲಿ ಬಿಯಂ ಎಂಬೆಡೆ ಇರುವ ಪ್ರಥಮೆಗೆ ಚತುರ್ಥಿಯ ಅರ್ಥವಿರುವಂತೆ ತೋರುತ್ತದೆ; ‘ಇಟ್ಟಳಂ’ ಗೆ ನೈಘಂಟುಕಾರ್ಥ ಸಮೂಹ ಎಂದು, ತಮಿಳಿನಲ್ಲಿಯೂ ಇದೇ ಅರ್ಥವಿದೆ; ಇಲ್ಲಿ ಅಧಿಕ, ಅತಿಶಯ ಎಂಬ ಲಕ್ಷಣಾರ್ಥ ವನ್ನು ಸ್ವೀಕರಿಸಿದೆ.

ವಚನ : ನೆರಪುವಂತೆ–ಸೇರಿಸುವ ಹಾಗೆ, ನೆರಪಿ–ಸೇರಿಸಿ.

೧೦. ಮಲೆಪರ್–ಪರ್ವತಗಳ ರಾಜರು, ಮಂಡಳಿಕರ್–ಸಾಮಂತರು, ಕಱುಂಬರ್– ಅಸೂಯಾಪರರು, ಅದಟರ್–ಶೂರರು, ವೀರರ್ಕಳುಂ–ಪ್ರತಾಪಿಗಳೂ, ತಮ್ಮ, ಬಾೞ್ದಲೆ ಯಂ–ಬದುಕಿದ ತಲೆಯನ್ನು ಎಂದರೆ ಸೆರೆಯನ್ನು, ಬೇಡಿದ–ಬಯಸಿದ, ವಸ್ತುವಾಹನ ಮುಮಂ–ವಸ್ತುವನ್ನೂ, ವಾಹನಗಳನ್ನೂ, ಮುಂದಿಟ್ಟು–ಎದುರಿನಲ್ಲಿಟ್ಟು, ಮೂವಿಟ್ಟಿಯ– ಮೂರು ಬಗೆಯಾದ ವಿಷ್ಟಿಕರ್ಮದ, ಒಕ್ಕಲವೊಲ್–ಸೇವಕರಂತೆ, ಇಂ ಬೆಸಕೆಯ್ಯೆ–ಇನ್ನು ಸೇವೆ ಮಾಡಲು, ಕುಂತೀಸುತರ್–ಪಾಂಡವರು, ಸಂತಮಿರುತಂ–ಕ್ಷೇಮವಾಗಿ ಇರುತ್ತ, ದಾಯಿಗರ್–ದಾಯಾದಿಗಳು, ಧರೆಯನಾಳ್ದು–ರಾಜ್ಯವನ್ನು ಪಡೆದು, ಅಂದು–ಆಗ, ಅೞ್ದರ್–ತಮ್ಮನ್ನು ಮುಳುಗಿಸಿದರು, ಎಂಬ–ಎನ್ನುವ, ಏವದಿಂ–ಕೋಪದಿಂದ, ತಮ್ಮ, ತೋಳ್ವಲಮಂ–ತೋಳಿನ ಶಕ್ತಿಯನ್ನು, ನಚ್ಚರೆ–ನಂಬರೇ; ಪಾಂಡವರು ತಮ್ಮ ಬಾಹುಬಲ ವನ್ನು ನಂಬದಾದರು.

ಇಲ್ಲಿ ‘ಮಲೆಪರ್ ಮಂಡಳಿಕರ್ ಕಱುಂಬರದಟರ್ ವೀರರ್ಕಳುಂ’ –ಎಂಬಲ್ಲಿ ಕೊನೆಯ ಸಮುಚ್ಚಯ ಉಂ ಅನ್ನು ಅನ್ವಯಿಸುವಾಗ ಮಲೆಪರ್ ಮುಂತಾದ ಪ್ರಥಮಾಂತ ಗಳಿಗೆಲ್ಲ ಸೇರಿಸಬೇಕು, ಒಂದಕ್ಕೆ ಮಾತ್ರ ಉಂ ಅನ್ನು ಸೇರಿಸಿ ಉಳಿದುವಕ್ಕೆ ಸೇರಿಸದಿರುವುದು ದೋಷವೆನ್ನುತ್ತಾನೆ ಕವಿರಾಜಮಾರ್ಗಕಾರ, (೧–೧೩೦, ೧೩೧); ಕಱುಂಬರ್ ಎಂಬ ಶಬ್ದ ಕುಱುಂಬರ್ (–ಸಣ್ಣಪುಟ್ಟ ರಾಜರು, ಕೋಟೆ ರಕ್ಷಕರು) ಎಂದಿರಬಹುದೇನೊ?

ವಚನ : ಪೂಣ್ದ–ಪ್ರತಿಜ್ಞೆ ಮಾಡಿದ; ಉಮ್ಮಳಿಸಿ–ವ್ಯಥೆಪಟ್ಟು; ಕೆಮ್ಮಗೆ–ಸುಮ್ಮನೆ; ಶ್ವೇತಕೃಷ್ಣಕಾರಕಂ–ಬಿಳಿದನ್ನು ಕರಿದಾಗಿ ಮಾಡುವವನು; ಎಂದರೆ ಮೋಸಗಾರ, ಪನ್ನಗ ಶಯನನಂ–ಕೃಷ್ಣನನ್ನು; ಮನಃಪವನ ವೇಗದಿಂ–ಮನಸ್ಸಿನ ಗಾಳಿಯ ವೇಗದಿಂದ; ದುಗ್ಧಾಬ್ಧಿ– ಹಾಲ್ಗಡಲಿನ; ಧವಳ–ಬೆಳ್ಳಗಿರುವ; ಮಧುಮಥನನಂ–ಮಧುಸೂದನನನ್ನು, ಕೃಷ್ಣನನ್ನು, ಎತ್ತಲಣ್ಮದೆ–ಎಬ್ಬಿಸಲು ಪ್ರಯತ್ನಿಸದೆ, ಉಸಿರದೆ–ಮಾತಾಡದೆ, ಬಲಿಬಂಧನನ–ಶ್ರೀಕೃಷ್ಣನ.

೧೧. ಪವಡಿಸಿದ –ಮಲಗಿದ್ದ, ಅನಂತನ್–ಶ್ರೀಕೃಷ್ಣನು, ಒಸೆದು–ಸಂತೋಷಿಸಿ, ಉಪ್ಪವಡಿಸಿ–ಮೇಲಕ್ಕೆದ್ದು, ತನ್ನೆರಡುಮಡಿಯಂ–ತನ್ನ ಎರಡು ಪಾದಗಳನ್ನು, ಒತ್ತುತ್ತಿರ್ದ– ಅಮುಕುತ್ತಿದ್ದ, ಆಹವವಿಜಯಿಯಪ್ಪ–ಯುದ್ಧದಲ್ಲಿ ಗೆದ್ದವನಾದ, ವಿಜಯನನೆ– ಅರ್ಜುನನನ್ನೇ, ಮುಂ ಕಂಡು–ಮೊದಲು ನೋಡಿ, ಬೞಿಕೆ–ಆಮೇಲೆ, ನೃಪನಂ ಕಂಡಂ– ದುರ್ಯೋಧನನನ್ನು ನೋಡಿದನು.

ವಚನ : ಬಂದಂದಮುಮಂ–ಬಂದ ರೀತಿಯನ್ನೂ, ಮನೆವಾೞ್ತೆಯಂ–ಗೃಹಕೃತ್ಯವನ್ನು; ಕೆಯ್ಕೊಂಡು–ಸ್ವೀಕರಿಸಿ;

೧೨. ಇರ್ವರುಂ–ನೀವಿಬ್ಬರೂ, ಎನಗೆ–ನನಗೆ, ಮನ್ನಣೆಗೆ–ಮರ್ಯಾದೆಗೆ, ಓರನ್ನರೆ– ಸಮಾನರಾದಂಥವರೇ; ವಿಜಯನನೆ ಮುನ್ನೆ ಕಂಡುದಱಿಂದೆ–ಅರ್ಜುನನನ್ನೇ ಮೊದಲು ನೋಡಿದ್ದರಿಂದ, ಆಂ–ನಾನು, ಎನ್ನಂ–ನನ್ನನ್ನು, ಕೊಟ್ಟೆಂ–ಕೊಟ್ಟೆನು; ಪನ್ನಗಕೇತನ– ದುರ್ಯೋಧನನೇ, ನಿನಗಂ–ನಿನಗೂ, ಚತುರ್ವಲಂಗಳನಿತ್ತೆಂ–ನನ್ನ ನಾಲ್ಕು ತೆರನಾದ ಸೈನ್ಯ ಗಳನ್ನು ಕೊಟ್ಟೆನು.

ವಚನ : ಮಜ್ಜನ ಭೋಜನಾದಿಗಳೊಳ್–ಸ್ನಾನ ಊಟ ಮುಂತಾದವುಗಳಲ್ಲಿ; ಮಱು ದೆವಸಂ–ಮಾರನೆಯ ದಿನ; ಮಂತ್ರಶಾಲೆಯಂ–ಆಲೋಚನಾಮಂದಿರವನ್ನು.

೧೩. ಇಂದ್ರಿಯಂಗಳ್–ಕಣ್ಣು ಕಿವಿ ಮುಂತಾದ ಪಂಚೇಂದ್ರಿಯಗಳು, ಪ್ರಿಯವಿಷಯ ಕಾಂಕ್ಷೆಯಿಂದೆ–ತಮಗೆ ಪ್ರಿಯವಾದ ವಸ್ತುಗಳ ಅಪೇಕ್ಷೆಯಿಂದ, ಮನಮಂ–ಮನಸ್ಸನ್ನು, ಎಯ್ದೆ–ಚೆನ್ನಾಗಿ, ಎಂತು–ಹೀಗೆ, ಆಶ್ರಯಿಸುಗುಂ–ಅವಲಂಬಿಸುತ್ತವೊ, ಅಂತು–ಹಾಗೆ, ಅಯನಯಪರರ್ ಅಯ್ವರುಂ–ಶುಭಕರವಾದ ವಿಧಿಗಳಲ್ಲೂ ನೀತಿಯಲ್ಲೂ ಆಸಕ್ತರಾದ ಆ ಐವರೂ, ವಿಷಯಕಾಂಕ್ಷೆಯಿಂ–ರಾಜ್ಯಾಭಿಲಾಷೆಯಿಂದ, ಮುರರಿಪುವಂ–ಶ್ರೀಕೃಷ್ಣನನ್ನು, ಆಶ್ರಯಿಸಿರ್ದರ್–ಅವಲಂಬಿಸಿದ್ದರು.

೧೪. ಧರ್ಮತನಯಂ–ಧರ್ಮಪುತ್ರನು, ಲೋಕಕ್ಕೆ–ಲೋಕದ ಜನರಿಗೆ, ಅರ್ಥಶಾಸ್ತ್ರದ ಟೀಕು–ಅರ್ಥಶಾಸ್ತ್ರದ, ರಾಜನೀತಿಶಾಸ್ತ್ರದ ವ್ಯಾಖ್ಯಾನ, ಎನಿಸಿದ–ಎನ್ನಿಸಿಕೊಂಡ, ತನ್ನ ನುಡಿ–ತನ್ನ ಮಾತು, ಮನಂಗೊಳಿಸೆ–ಮನವನ್ನು ಅಪಹರಿಸಲು ಎಂದರೆ ರಮಣೀಯ ವಾಗಲು, ದಳತ್ಕೋಕನದ ಜಠರನಂ–ಬಿರಿದ ತಾವರೆಯನ್ನು ಹೊಕ್ಕುಳಲ್ಲಿ ಉಳ್ಳ ಶ್ರೀ ಕೃಷ್ಣನನ್ನು, ನಿರ್ವ್ಯಾಕುಳಂ–ಏನೂ ಕ್ಲೇಶವಿಲ್ಲದೆ, ಇಂತೆಂದು–ಹೀಗೆಂದು, ನುಡಿದಂ– ಹೇಳಿದನು.

೧೫. ರಸೆಯೊಳೞ್ದುದಂ–ಪಾತಾಳದಲ್ಲಿ ಮುಳುಗಿದ್ದುದನ್ನು, ಎಳೆ(ಯಂ)–ಭೂಮಿ ಯನ್ನು, ಭುಜಬಳದಿಂ–ತೋಳ್ಬಲದಿಂದ, ಮುನ್ನೆ–ಹಿಂದಿನ ಕಾಲದಲ್ಲಿ, ಎತ್ತಿದಂತೆ–ಉದ್ಧರಿ ಸಿದ ಹಾಗೆ, ವಿಷಯಾಂಬುಧಿಯೊಳ್–ಇಂದ್ರಿಯ ಭೋಗವೆಂಬ ಸಮುದ್ರದಲ್ಲಿ ಅಥವಾ ರಾಜ್ಯವೆಂಬ ಕಡಲಿನಲ್ಲಿ, ಮುೞುಗಿರ್ದ–ಮುಳುಗಿ ಇದ್ದ, ಎಮ್ಮಯ್ವರುಮಂ–ನಮ್ಮ ಐದು ಜನರನ್ನೂ, ಬಲಿಹರ–ಬಲಿಧ್ವಂಸಿಯಾದ ಕೃಷ್ಣನೇ, ಪಿಡಿದು ಎತ್ತಲೆಂದು–ಹಿಡಿದು ಎತ್ತಬೇಕೆಂದು, ಬರವಂ–ಬರುವಿಕೆಯನ್ನು, ಬಂದೈ–ಬಂದಿರುವೆ.

೧೬. ಜಗತೀತ್ರಯಮುಮಂ–ಮೂರು ಲೋಕಗಳನ್ನೂ, ಬಸಿಱೊಳ್–ಹೊಟ್ಟೆಯಲ್ಲಿ, ಒಸೆದು–ಪ್ರೀತಿಸಿ, ಇಟ್ಟು, ಓರಂತೆ–ಕ್ರಮವಾಗಿ, ಕಾದ–ರಕ್ಷಿಸಿದ, ಪೆಂಪಿನ–ಹಿರಿಮೆಯುಳ್ಳ, ನಿಮ್ಮ, ಈ ಬಸಿಱಂ–ಈ ಒಳಗನ್ನು, ಅಂತರಂಗವನ್ನು, ಪೊಕ್ಕ–ಹೊಕ್ಕ, ಎಮ್ಮಯ್ವರಂ– ನಮ್ಮ ಐಯ್ವರನ್ನೂ, ಅಸುರಕುಳಾಂತಕ–ಕೃಷ್ಣನೇ, ಕಡಂಗಿ–ಉತ್ಸಾಹಿಸಿ, ಕಾವುದು–ರಕ್ಷಿಸು ವುದು, ಪಿರಿದೇ–ದೊಡ್ಡದೇ? ಅಲ್ಲವೆಂದು ಭಾವ.

೧೭. ಎನ್ನ ನನ್ನಿಯ ಪೆಂಪು–ನನ್ನ ಸತ್ಯದ ಹಿರಿಮೆ, ನಿನ್ನ ಮಹತ್ವದಿಂದಮೆ–ನಿನ್ನ ಮಹಿಮೆ ಯಿಂದಲೇ, ಸಂದುದು–ಪ್ರಸಿದ್ಧವಾಯಿತು; ಅದು ಎಂತು ಎನ್ನ–ಅದು ಹೇಗೆ ಎಂದು ಕೇಳುವೆಯೊ?; ಪನ್ನಗಕೇತನಂಗೆ–ದುರ್ಯೋಧನನಿಗೆ, ಧರಾವಿಭಾಗಮನಿತ್ತು–ಭೂಭಾಗ ವನ್ನು ಒಪ್ಪಿಸಿ, ಸಂಪನ್ನಯೋಗನಿಯೋಗದಿಂದಂ–ಸುಪುಷ್ಟವಾದ ಯೋಗಾಭ್ಯಾಸದಿಂದ, ಅರಣ್ಯದೊಳ್–ಕಾಡಿನಲ್ಲಿ, ನೆಲಸಿರ್ದು–ವಾಸಿಸಿದ್ದು, ಉಣಲ್–ಉಣ್ಣುವುದಕ್ಕೆ, ಬನ್ನ ಮಿಲ್ಲದೆ–ಕೊರತೆಯಿಲ್ಲದೆ, ಬಾೞ್ವುದು–ಬದುಕುವುದು, ಪುೞುವಾನಸಂಗೆ–ಹುಳುವಿ ನಂಥವನಾದ ನನಗೆ, ಮನುಷ್ಯ ಕೀಟಕ್ಕೆ, ಅಕ್ಕುಮೇ–ಆಗುತ್ತದೆಯೇ, ಏನ್–ಏನು?

ವಚನ : ಈ ಸೂೞು–ಈ ಸಲ, ಈ ಬಾರಿ; ಒಂದು [ಎ] ಡಂಬಡಿಲ್ಲದೆ–ಒಂದೂ ಎಡವಟ್ಟಿಲ್ಲದೆ, ಅಸಮಾಧಾನಕರವಾದ ಒಂದು ಕಾರ್ಯವೂ ಇಲ್ಲದೆ, ನಿಷ್ಕಾರಣವಾಗಿ; ನೆವಂಮಾಡಿ–ನೆಪವಾಗಿ ಮಾಡಿಕೊಂಡು, ಪಾಪಕರ್ಮನ–ಪಾಪಕರ್ಮನು; ಅನುವರಂ– ಯುದ್ಧ, ಅನುಬಲದೊಳಂ–ಸಹಾಯದಲ್ಲೂ; ಇಂಬುವಂದುದು–ಅನುಕೂಲವಾಯಿತು; ಎಡಂಬಡು; ನಡೆಯಿಲ್ಲದ ಕೞ್ತೆಮನಕ್ಕೆಡಂಬಡಂ ಮಾಡುಗುಮೞ್ತಿಯಂ ಮಾಡುಗುಮೇ– ಎಂದು ರನ್ನನ ಪ್ರಯೋಗ (ಅಜಿತ.)

೧೮. ಕಾದದೆ–ಯುದ್ಧ ಮಾಡದೆ, ಪನ್ನಗಧ್ವಜಂ–ದುರ್ಯೋಧನ, ಇಳಾತಳಮಂ– ಭೂಪ್ರದೇಶವನ್ನು, ರಾಜ್ಯವನ್ನು, ಕುಡಂ–ಕೊಡನು, ಆನುಂ–ನಾನು ಕೂಡ, ಇರ್ಪುದುಂ– (ಸುಮ್ಮನೆ) ಇರುವುದೂ, ಸೋದರರ್–ಸಹೋದರರು, ಎಂದು–ಎಂಬುದಾಗಿ, ನಾಣ್ಚಿ– ಸಂಕೋಚ ಪಟ್ಟುಕೊಂಡು, ಸೆಡೆದು–ಸೆಡೆತುಕೊಂಡು, ಇರ್ದಪೆನ್–ಇದ್ದೇನೆ; ಇರ್ದೊಡೆ– ಹಾಗೆ ಇದ್ದರೆ, ಅವಸ್ತು ಭೂತನೆಂದು–ಏನೂ ಆಸ್ತಿ ಇಲ್ಲದವನೆಂದು, ಅಲ್ಪನೆಂದು, ಆದಮೆ– ವಿಶೇಷವಾಗಿಯೆ, ಭೂತಳಂ–ಲೋಕವು, ಪೞಿಯೆ–ನಿಂದಿಸಲು, ತೇಜಮೆ–ತೇಜಸ್ಸೇ, ಕೆಟ್ಟಪುದು–ಕೆಡುತ್ತದೆ; ಪದ್ಮೋದರ–ಕೃಷ್ಣನೇ, ಇಂತು ಇದರ್ಕ್ಕೆ–ಹೀಗೆ ಇದಕ್ಕೆ, ಕಜ್ಜಮಂ– ಕಾರ್ಯವನ್ನು, ದಿವ್ಯಚಿತ್ತದಿಂ–ದಿವ್ಯವಾದ ನಿನ್ನ ಮನಸ್ಸಿನಲ್ಲಿ, ಬಗೆದು–ಆಲೋಚಿಸಿ, ನೀನೆ ಪೇೞ್–ನೀನೇ ಹೇಳು.

ವಚನ : ಅಂಬುಜೋದರಂ–ಕೃಷ್ಣ; ನೀರಡಕಲುಂ–ನೀರನ್ನು ತುಂಬಲೂ; ಸೊಡರಿ ಡಲುಂ–ದೀಪವನ್ನು ಇಡಲೂ; ಕಜ್ಜಂ ಬೇೞ್ವುದು=ಕಜ್ಜಮಂ+ಪೇೞ್ವುದು–ಕಾರ್ಯವನ್ನು ಹೇಳುವುದು.

೧೯. ಬೆಸಂ–ಕೆಲಸವು, ಆರ್–ಯಾರು, ಕೊಂಡವೊಲ್–ಯಾವ ಉದ್ದೇಶದಿಂದ ಮಾಡಲು ಎತ್ತಿಕೊಂಡರೋ ಆ ಉದ್ದೇಶ ನೆರವೇರುವಂತೆ, ಅಕ್ಕುಂ–ಆಗುತ್ತದೆ? ಒಂದೆ ನಯಮಂ ಕೇಳ್–ಒಂದೇ ನೀತಿಯನ್ನು ಕೇಳು; ನಿನ್ನ ಮುಂದೀಗಳಾನುಸಿರ್ದಪ್ಪೆಂ–ನಿನ್ನ ಎದುರಿಗೆ ಈಗ ನಾನು ಹೇಳುತ್ತೇನೆ; ಸಲೆ ಮೆಲ್ಪು ಬಲ್ಪನೞಿಗುಂ–ಮೃದು ಸ್ವಭಾವ ಗಡುಸಿನ ಸ್ವಭಾವವನ್ನು ಕೆಡಿಸುತ್ತದೆ (Non–violence kills violence) ; ಕೈವಾರಮುಂ ಕೂಡೆ ಕೂರಿಸುಗುಂ–ಹೊಗಳಿಕೆಯೂ ಕೂಡಲೇ ಒಲಿಸುತ್ತದೆ, ನಿಕ್ಕುವಮಪ್ಪ–ನಿಜವಾಗಿರುವ, ಕಾರಣದಿಂ–ಕಾರಣದಿಂದ, ಇಂತು–ಹೀಗೆ, ಈ ಸಾಮಮಂ–ಈ ಸಾಮೋಪಾಯವನ್ನು, ಮುಂ–ಮೊದಲು, ಪ್ರಯೋಗಿಸದೆ–ಆಚರಿಸದೆ, ಏಕೆಟ್ಟಪುದು–ಏನು ನಷ್ಟವಾಗುತ್ತದೆ, ಎಂದು–ಎಂಬುದಾಗಿ, ದಂಡಮನೆ–ದಂಡೋಪಾಯವನ್ನೇ, ಮುಂ–ಮೊದಲು, ಮುಂತಿ ಕ್ಕುವಂ–ಎದುರಿಗೆ ಒಡ್ಡುವವನು, ಮಂತ್ರಿಯೇ–ಮಂತ್ರಿಯೇನು? ಅಲ್ಲ.

೨೦. ಮುಂ–ಪೂರ್ವ ಕಾಲದಲ್ಲಿ, ವಾಮನರೂಪದಿಂದಮೆ–ವಾಮನನ ಆಕಾರ ದಿಂದಲೇ, ಬಲಿಯಂ–ಬಲಿಚಕ್ರವರ್ತಿಯನ್ನು, ಭೂರಿಭೂತಲಮಂ–ವಿಶಾಲವಾದ ಭೂಮಂಡ ಲವನ್ನು, ಬೇಡಿದೆಂ–ಯಾಚಿಸಿದೆನು, ವಲಂ–ಅಲ್ಲವೆ? ಎನಗೆ–ನನಗೆ, ಕುಂದು–ಕೊರತೆಯು, ಆಯ್ತೆ–ಆಯಿತೇ? ಇಳೆಯಂ–ಭೂಮಿಯನ್ನು, ಕೊಂಡೆಂ–ತೆಗೆದುಕೊಂಡೆನು; ದೈತ್ಯನಂ– ರಾಕ್ಷಸನನ್ನು, ಇನ್ನುಂ–ಇನ್ನೂ, ರಸಾತಲದೊಳ್–ಪಾತಾಳದಲ್ಲಿ, ಕಟ್ಟಿಟ್ಟೆಂ–ಕಟ್ಟಿ ಹಾಕಿ ದ್ದೇನೆ; ಅಂತೆ–ಹಾಗೆಯೇ, ನೀನುಂ–ನೀನು ಕೂಡ, ಇಳೆಯಂ–ಭೂಮಿಯನ್ನು, ಮುಂ– ಮೊದಲು, ಬೇಡಿ–ಬಯಸಿ, ಅಟ್ಟಟ್ಟೆ–ದೂತನನ್ನು ಕಳುಹಿಸಲು, ಆತಂ–ಅವನು; ದುರ್ಯೋಧನ, ಮಾರ್ಮಲೆದು–ಪ್ರತಿಯಾಗಿ ಉದ್ಧತನಾಗಿ, ಕುಡದಿರ್ದೊಡೆ–ಕೊಡದೆ ಇದ್ದರೆ, ಅಂದು–ಆಗ, ಲೋಕಂ–ಲೋಕದ ಜನ, ಗುಣಂಗೊಳ್ವಿನಂ–ಗುಣ ಗ್ರಹಣವನ್ನು ಮಾಡುತ್ತಿರಲು, ನೀಂ–ನೀನು, ಇಱಿಯ–ಯುದ್ಧಮಾಡು.

ವಚನ : ಮಂದರಧರನ–ಕೃಷ್ಣನ; ಕಿನಿಸಿ–ಕೆರಳಿ; ಕಿಂಕಿರಿವೋಗಿ–ಅಸಹನೆಯನ್ನು ಹೊಂದಿ, ದ್ವೇಷದಿಂದ ಕೂಡಿ; (ತೆಲುಗು) ಕಿಂಕಿರಿ, ಕಿಂಕಿರಿಪಡು, ಕಿಂಕಿರಿಪಾಟು–ಕೋಪ, ಅಸಹನೆ, ದ್ವೇಷ.

೨೧. ಅಜಾತ–ಹುಟ್ಟಿಲ್ಲದವನೇ, ಕೃಷ್ಣನೇ, ನಿಜಮತಮಂ–ನಿನ್ನ ಅಭಿಪ್ರಾಯವನ್ನು, ಮೀಱಲ್ಕೆ–ಮೀರುವುದಕ್ಕೆ, ಎನಗೆ–ನನಗೆ, ದೊರೆಯಲ್ಲಂ–ಸರಿಯಲ್ಲ; ಅಲ್ಲದಿರ್ದೊಡಂ– ಸರಿಯಲ್ಲದಿದ್ದರೂ, ಅಹಿಧ್ವಜಂ–ಸರ್ಪಧ್ವಜನಾದ ದುರ್ಯೋಧನನು, ಓವದೆ– ಕಾಪಾಡದೆ, ಮುನ್ನೆ–ಮೊದಲು, ನೆಗೞ್ದ–ಮಾಡಿದ, ದುಶ್ಚರಿತಂಗಳ್–ಕೆಟ್ಟ ಕೆಲಸಗಳು, ಎನ್ನಿಂದೆ– ನನ್ನಿಂದ, ಅಜನಿಸಿ–ತಿರಸ್ಕರಿಸುವಂತೆ, ನುಡಿಯಿಸಿದುವು–ಮಾತಾಡಿಸಿದುವು. ಇಲ್ಲಿ ಅಜನಿಸು ಶಬ್ದಕ್ಕೆ ಅರ್ಥ ಸ್ವಲ್ಪ ಅನಿರ್ದಿಷ್ಟ. ರೂಪಂ ಸ್ಮರಾಕಾರಮನಜನಿಸೆ, ಸಮುದ್ರ ಘೋಷ ಮನಜನಿಸುವ–ಎಂಬ ಬೇರೆ ಪ್ರಯೋಗಗಳಲ್ಲಿ ಕೀಳ್ಮಾಡು, ಕಡೆಗಣಿಸು, ತಿರಸ್ಕರಿಸು ಎಂಬರ್ಥ ಗಳೆಂದು ಊಹಿಸಬಹುದು.

೨೨. ಆ ಲಾಕ್ಷಾಗೃಹದಾಹಮೊಂದೆ–ಆ ಅರಗಿನ ಮನೆಯಲ್ಲಿ ಸುಡುವುದು ಒಂದೆಯೇ, ವಿಷಸಂಯುಕ್ತಾನ್ನಮಂತೊಂದೆ–ವಿಷದಿಂದ ಕೂಡಿದ ಆಹಾರವನ್ನು ಊಡುವುದು ಒಂದೆಯೇ; ಪಾಂಚಾಳೀನಿಗ್ರಹಮೊಂದೆ–ದ್ರೌಪದಿಯನ್ನು ಅವಮಾನ ಮಾಡಿದ್ದು ಒಂದೆಯೇ; ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ–ಮೋಸದ ವಿಧಾನದಿಂದ ಗೆದ್ದಿರುವ ಆ ಜೂಜು ಒಂದೆಯೇ; ಶಾರ್ದೂಲಾಭೀಲ ವನಂಗಳೊಳ್–ಹುಲಿಗಳಿಂದ ಭಯಂಕರವಾದ ಕಾಡುಗಳಲ್ಲಿ, ತಿರಿಸಿದ–ಅಲೆದಾಡಿಸಿದ, ಈ ಯುರ್ಕು ಒಂದೆ–ಈ ಕೊಬ್ಬು, ಅಹಂಕಾರ ಒಂದೆಯೋ? ಲೆಕ್ಕಂಗೊಳಲ್–ಒಂದೇ ಎರಡೇ ಎಂದು ಲೆಕ್ಕ ಮಾಡಲು, ಕಾಲಂ ಸಾಲದೆ–ಕಾಲವು ಸಾಕಾಗುವುದಿಲ್ಲವಲ್ಲ; ಕಂಡುಂ–ನೋಡಿಯೂ, ಉಂಡುಂ–ಅನುಭವಿಸಿಯೂ, ಎಮಗೆ– ನಮಗೆ, ಇನ್–ಇನ್ನು, ಆತಂಗಳೊಳ್–ಆ ಕೌರವರಲ್ಲಿ, ಪಾೞಿಯೇ–ಧರ್ಮವೇ, ಕ್ರಮವೇ?

೨೩. ಜಟಮಟಿಸಿಕೊಂಡು–ಸಡಗರದಿಂದ ಕೂಡಿ, ನಿಮ್ಮ–ನೀವು, ಕೌರವರ್ಕಳೊಳ್– ಕೌರವರಲ್ಲಿ, ಈ ಘಟಿಯಿಸುವ–ಇಗೋ ಉಂಟುಮಾಡಲಿರುವ, ಈ ಸಂಧಿ–ಈ ಸಂಧಿ ಕಾರ್ಯವು, ಘಟಿತ….ಸಿಂಧಿವೊಲ್; ಘಟಿತ–ಸೇರಿರುವ, ಜರಾಸಂಧ–ಜರಾಸಂಧನ, ಉರಸ್ತಟ–ಎದೆಯ ಪ್ರದೇಶದ, ಸಂಧಿವೋಲ್–ಜೋಡಣೆಯ ಹಾಗೆ, ಒಂದೆಪೊೞ್ತ ಱೊಳ್– ಒಂದೇ ಹಗಲಲ್ಲಿ, ಎನ್ನಿಂ–ನನ್ನಿಂದ, ವಿಘಟಿಸದೇ–ಭಿನ್ನವಾಗುವುದಿಲ್ಲವೆ, ಮುರಿದು ಹೋಗದೆ;

ಇಲ್ಲಿ ಜಟಮಟಿಸಿಕೊಳ್ ಎಂಬುದರ ಅರ್ಥ ವಿಚಾರಣೀಯ; ಜಟಮಟ ಶಬ್ದದಿಂದ ಬಂದಿರುವ ಜಟಮಟಿಕರ್ ಎಂಬುದಕ್ಕೆ, “ಪಟವಿದೆ ಸಾಲ್ಗುಮನ್ಯಭವವಲ್ಲಭನಂ ಪಟವಿದ್ಯೆ ಯೆತ್ತಲುಂ ಜಟಮಟಿಕರ್ಕಳಂ ತೊಡರೆ ಸುತ್ತಲುಂ” ಎಂದು ಪ್ರಯೋಗವಿದೆ. (ಆದಿಪು. ೩–೪೫); ಈ ಪದ್ಯಕ್ಕೆ ಸಂವಾದಿಯಾದ ಪದ್ಯ ಜಿನಸೇನರ ಪೂರ್ವಪುರಾಣದಲ್ಲಿ “ಕ್ವಚಿತ್ಕಿಂಚಿನ್ನಿಗೂಢಾಂತಃ ಪ್ರಕೃತಂ ಚಿತ್ತರಂಜನಂ ತದ್ವ್ರಜಾದಾಯ ಧೂರ್ತಾನಾಂ ಮನಸ್ಸಂಮೋಹಕಾರಣಂ” (೬–೧೭೧); ಇಲ್ಲಿರುವ ಧೂರ್ತಾನಾಂ ಎಂಬುದು ಜಟ ಮಟಿಕರ್ ಎಂಬುದಕ್ಕೆ ಸಮಾನಾರ್ಥಕವಾಗಿರಬಹುದು, ಮೋಸಗಾರ, ವಂಚಕ, ನಟನೆ ಮಾಡು ವವನು ಎಂಬರ್ಥ ಜಟಮಟಿಕ ಶಬ್ದಕ್ಕಿರಬಹುದು. ಪ್ರಕೃತ ಪದ್ಯಕ್ಕೆ ಈ ಅರ್ಥ ಹೊಂದ ಲಾರದೇನೋ? ಜಟಮಟಿಸು ಜಟಮಟ+ಇಸು; ಜಟಮಟಕ ಜಟಮಟ+ಇಕ.

೨೪. ಒರ್ವನ–ಒಬ್ಬನ, (ದುಶ್ಶಾಸನನ) [ಉ] ಳ್ಗರುಳಂ–ಒಳಕರುಳನ್ನು, ಉರ್ವಿಗೆ– ನೆಲಕ್ಕೆ (ಬೀಳುವಂತೆ), ತೋಡುವೆಂ–ಬಗಿಯುತ್ತೇನೆ; ನೆತ್ತರಂ–ರಕ್ತವನ್ನು, ಎಯ್ದೆ ಪೀರ್ದು– ಚೆನ್ನಾಗಿ ಹೀರಿ, ವಿರ್ದಾಡುವೆಂ–ಔತಣ ಮಾಡುತ್ತೇನೆ; ಒರ್ವನ–ಒಬ್ಬನ (ದುರ್ಯೋಧನನ), ಊರುಗಳಂ–ತೊಡೆಗಳನ್ನು, ಎನ್ನ–ನನ್ನ, ಗದಾಶನಿಘಾತದಿಂದೆ–ಗದೆಯೆಂಬ ಸಿಡಿಲಿನ ಹೊಡೆತ ದಿಂದ, ನುರ್ಗಾಡುವೆಂ–ನುಗ್ಗಿಬಿಡುತ್ತೇನೆ. ಚೂರಾಗಿಸುತ್ತೇನೆ; ಎಂದು–ಎಂಬುದಾಗಿ, ಲೋಕಮಱಿಯುತ್ತಿರೆ–ಲೋಕವೆಲ್ಲ ತಿಳಿಯುತ್ತಿರಲು, ಪೂಣ್ದ–ಪ್ರತಿಜ್ಞೆ ಮಾಡಿದ, ಎನಗೆ– ನನಗೆ, ಅಂತೆ–ಹಾಗೆ, ಸಂತಸಂ ಮಾಡದೆ–ಸಂತೋಷವನ್ನು ಮಾಡದೆ, ಸಂಧಿಮಾಡಿ– ರಾಜಿಮಾಡಿಕೊಂಡು, ಕುರುಪುತ್ರರೊಳ್–ಕೌರವರಲ್ಲಿ, ಎನ್ನನ್ನೆ–ನನ್ನನ್ನೇ, ಜೋಡು ಮಾೞ್ಪಿರೇ–ಜೋಡಿಯಾಗಿಸುತ್ತೀರಾ?

ವಚನ : ಮಸಗಿದ–ವಿಜೃಂಭಿಸಿದ; ಮದಾಂಧಗಂಧ ಸಿಂಧುರದಂತೆ–ಮದದಿಂದ ಕಣ್ಗಾಣದ ಸೊಕ್ಕಾನೆಯಂತೆ,

೨೫. ಬಕರ್….ಕಳಂ: ಬಕ, ಕಿಮ್ಮೀರ, ಜಟಾಸುರ, ಉದ್ಧತ–ಗರ್ವಿಷ್ಠರಾದ, ಜರಾಸಂಧರ್ಕಳಂ–ಜರಾಸಂಧರನ್ನೂ, ಸಂದ–ಪ್ರಸಿದ್ಧರಾದ, ನೂರ್ವರುಮಂ ಕೀಚಕರಂ– ನೂರು ಜನ ಕೀಚಕರನ್ನೂ, ಪಡಲ್ವಡಿಸಿದ–ಬೀಳುವಂತೆ ಮಾಡಿದ, ಕೊಂದ; ತ್ವಚ್ಚಂಡ ದೋರ್ದಂಡಂ–ನಿನ್ನ ತೀಕ್ಷ್ಣವಾದ ಬಾಹುದಂಡಗಳು, ಉಗ್ರ….ಕರಮಂ: ಉಗ್ರ– ಭಯಂಕರರಾದ, ಕುರುಕ್ಷ್ಮಾಪ–ಕುರುರಾಜರೆಂಬ, ಮಹೀರುಹ–ಮರಗಳ, ಪರರಮಂ– ಸಮೂಹವನ್ನು, ಮತ್ತೇಭವಿಕ್ರೀಡಿತಕ್ಕೆ–ಸೊಕ್ಕಾನೆಯ ಕೇಳಿಗೆ, ಕರಂ–ವಿಶೇಷವಾಗಿ, ಪೋಲ್ವೆಗೆವಂದು–ಹೋಲಿಕೆಗೆ ಬಂದು, ಭೀಮ–ಭೀಮಸೇನನೇ, ರಣದೊಳ್–ಯುದ್ಧದಲ್ಲಿ ನುರ್ಗಾಡದೆ–ನುಗ್ಗು ನುರಿ ಮಾಡದೆ, ಪೋಕುಮೇ– ಹೋಗುತ್ತದೆಯೇ, ಏಂ–ಏನು?

ಇಲ್ಲಿ ವೃತ್ತದ ಹೆಸರು ‘ಮತ್ತೇಭವಿಕ್ರೀಡಿತ’ ಎಂಬುದನ್ನು ಪದ್ಯದಲ್ಲೇ ಹೇಳಿರುವುದ ರಿಂದ ಇದು ಮುದ್ರಾಲಂಕಾರ.

ವಚನ : ಆಱೆ ನುಡಿದು–ಸಮಾಧಾನವಾಗುವಂತೆ ಮಾತಾಡಿ, ನಿಷ್ಠಿತ ಕಾರ್ಯಮಂ– ನಿಶ್ಚಯಿಸಲ್ಪಟ್ಟ ಕಾರ್ಯವನ್ನು; ಅನುಷ್ಠಿಸಲೆಂದು–ಮಾಡಬೇಕೆಂದು.

೨೬. ಅವನೀನಾಥನ–ರಾಜನಾದ ದುರ್ಯೋಧನನು, ಗೆಯ್ದ–ಮಾಡಿದ, ಪೊಲ್ಲ ಮೆಗಂ–ಕೇಡಿಗೂ, ಎನ್ನ–ನನ್ನ, ಒಳ್ಪಿಂಗಂ–ಒಳ್ಳೆಯತನಕ್ಕೂ, ನೀಂ–ನೀನು; ಸಕ್ಕಿಯಾಗಿ– ಸಾಕ್ಷಿಯಾಗಿ, ಅವನ್–ಅವನು, ಈವಂತುಟಂ–ಕೊಡುವಷ್ಟನ್ನು, ಈಯದಂತುಟಂ–ಕೊಡ ದಿರುವಷ್ಟನ್ನು, ಅದಂ–ಅದನ್ನು, ನೀಂ–ನೀನು, ಬಲ್ಲಂತೆ–ತಿಳಿದ ಹಾಗೆ, ಕಾಲ್ಗುತ್ತಿ–ಕಾಲಿನಿಂದ ಕುಕ್ಕಿ ಎಂದರೆ ಬೆದಕಿ, ಪರೀಕ್ಷಿಸಿ; ನೋಡು; ಅವನೀ ಭಾಗದೊಳ್–ಭೂಭಾಗದಲ್ಲಿ, ಎನ್ನಭಾಗಮಂ–ನನ್ನ ಪಾಲನ್ನು, ಅದಂ–ಅದನ್ನು, ತಾನ್–ಅವನು, ಈಯದಿರ್ದಾಗಳ್– ಕೊಡದೆ ಇದ್ದಾಗ, ಎನ್ನ–ನನ್ನ, ಅವನೀರಕ್ಷಣದಕ್ಷ ದಕ್ಷಿಣ ಭುಜಸ್ತಂಭಂ–ಭೂಮಿಯನ್ನು ರಕ್ಷಿಸುವುದರಲ್ಲಿ ಸಮರ್ಥವಾದ ಕಂಬದಂತಿರುವ ಬಲಭುಜವು, ಕೊಲಲ್–ಕೊಲ್ಲಲು, ಸಾಲದೇ–ಸಾಕಾಗದೇ? ಸಾಕು ಎಂಬ ಭಾವ.

ವಚನ : ರಾಜರಾಜನಲ್ಲಿಗೆ–ದುರ್ಯೋಧನನಲ್ಲಿಗೆ; ನಿರ್ವ್ಯಾಜದಿಂ–ನಿಷ್ಕಪಟತೆಯಿಂದ; ಅಜಿತನನೆ–ಕೃಷ್ಣನನ್ನೇ: ಅಸುರ ವಿಜಯಿಯುಂ–ರಾಕ್ಷಸರನ್ನು ಗೆದ್ದವ, ಕೃಷ್ಣನು ಕೂಡ; ಕತಿಪಯ–ಕೆಲವು; ಮದಗಜೇಂದ್ರಪುರಮಂ–ಹಸ್ತಿನಾವತೀ ನಗರವನ್ನು.

೨೭. ತುರಂಗಮ ಹೇಷಿತ ಘೋಷದೊಳ್–ಕುದುರೆಗಳ ಹೇಷಾರವದಲ್ಲಿ, ಪೊದಳ್ದು– ಬೆರಸಿ, ವ್ಯಾಪಿಸಿ, ಮದಗಜಬೃಂಹಿತ ಧ್ವನಿ–ಸೊಕ್ಕಾನೆಗಳ ಘೀಂಕಾರ ಶಬ್ದ, ಒದವೆ–ಉಂಟಾ ಗಲು; ಗಭೀರಧೀರ ಮುರಜಧ್ವನಿ–ಮದ್ದಲೆಗಳ ಗಾಢವೂ ಸ್ಥಿರವೂ ಆದ ನಾದವು, ಯೌವನ ಮತ್ತ ಕಾಮಿನೀ ಮೃದುಪದನೂಪುರ ಕ್ವಣಿತದೊಳ್–ಪ್ರಾಯದಿಂದ ಮದಿಸಿದ ಸ್ತ್ರೀಯರ ಮೃದುವಾದ ಪಾದಗಳ ಅಂದಿಗೆಯ ಶಬ್ದದಲ್ಲಿ, ಪೆಣೆದು–ಹೆಣೆದುಕೊಂಡು, ಒಂದಿರೆ– ಬೆರಸಿರಲು, ಪೊೞಲ್–ಪಟ್ಟಣವು, ಸುರಾದ್ರಿ–ಮಂದರ ಪರ್ವತದಿಂದ, ಮಥಿತ–ಕಡೆ ಯಲ್ಪಟ್ಟ, ಅಂಬುಧಿ–ಸಮುದ್ರದಲ್ಲಿ, ಜಾತ–ಹುಟ್ಟಿದ, ನಿನಾದ–ಶಬ್ದದ, ಶಂಕೆಯಂ–ಸಂದೇಹ ವನ್ನು, ಚಕ್ರಿಗೆ–ಶ್ರೀಕೃಷ್ಣನಿಗೆ, ಉಂಟು ಮಾಡಿದುದು–ಉಂಟುಮಾಡಿತು.

ವಚನ : ನಾಗಪುರಮಂ–ಆದಿಶೇಷನ ನಗರವಾದ ಭೋಗಾವತಿಯನ್ನು; ಇಳಿಸುವ– ಕಡೆಗಣಿಸುವ; ನಾಗಪುರಮಂ–ಹಸ್ತಿನಾವತಿಯನ್ನು; ನಾಗಶಯನಂ–ಶ್ರೀ ಕೃಷ್ಣನು; ವರೆ– ಬರಲು; ಕುಶಲವಾರ್ತೆಯಂ–ಕ್ಷೇಮಸಮಾಚಾರವನ್ನು; ಅಜನಂ–ಕೃಷ್ಣನನ್ನು.

೨೮. ತೀವಿದ ಮಜ್ಜನದಿಂ–ತುಂಬಿದ ಸ್ನಾನದಿಂದ, ಎಂದರೆ ಪುಷ್ಕಲವಾದ ಸ್ನಾನದಿಂದ; ಸದ್ಭಾವದಿಂ–ಒಳ್ಳೆಯ ಮನಸ್ಸಿನಿಂದ, ಒಸೆದು–ಪ್ರೀತಿಸಿ, ಎತ್ತಿದ–ಬಡಿಸಿದ, ಒಂದು ಬೋನ ದೊಳಂ–ಒಂದು ಭೋಜನದಲ್ಲಿಯೂ, ನಾನಾ ವಿಧದ–ನಾನಾ ಬಗೆಯಾದ, ಪದೆಪಿನೊಳ್– ಇಷ್ಟಾರ್ಥಗಳಲ್ಲಿ, ಹರಿಗೆ–ಕೃಷ್ಣನಿಗೆ, ಪಥಪರಿಶ್ರಮಮೆಲ್ಲಂ–ಮಾರ್ಗಾಯಾಸವೆಲ್ಲ, ಆವಗಂ–ಪೂರ್ತಿಯಾಗಿ, ಆಱಿದುದು–ಶಮನವಾಯಿತು.

ವಚನ : ಉಚಿತ ಪ್ರತಿಪತ್ತಿಗಳಿಂ–ಯೋಗ್ಯ ಮರ್ಯಾದೆಗಳಿಂದ; ಉಱದೆ–ಇರದೆ; ಮಣಿ….ಸೀನನುಂ: ಮಣಿಮಯೂಖ–ರತ್ನಗಳ ಕಿರಣಗಳಿಂದ, ವಿಜೃಂಭಮಾಣ–ಮೆರೆಯು ತ್ತಿರುವ, ಆಖಂಡಳ–ಇಂದ್ರನ, ವಿಳಂಬಿತ–ಉದ್ದವಾದ, ಆಭೀಳ–ಭಯಂಕರವಾದ, ಕೋದಂಡ– ಬಿಲ್ಲಿನ, ವಿಳಾಸವಿಭ್ರಮ–ಸೊಗಸಿನ ಆಧಿಕ್ಯದಿಂದ ಕೂಡಿದ, ಸಿಂಹಾಸನಾ–ಸಿಂಹಾಸನದಲ್ಲಿ, ಆಸೀನನುಂ–ಕುಳಿತಿರುವವನೂ; ಪ್ರಮದಾ–ಸ್ತ್ರೀಯರ, ಹಸ್ತ–ಕೈಗಳಲ್ಲಿ, ವಿನ್ಯಸ್ತ–ಇಡಲ್ಪಟ್ಟ, ವಾಮಕ್ರಮ ಕಮಳನುಂ–ಎಡಪಾದದ ಕಮಲವುಳ್ಳವನೂ; ಅನ….ಸ್ಥಳನುಂ; ಅನವರತ ಸ್ಫುರಿತ–ಯಾವಾಗಲೂ ಹೊಳೆಯುತ್ತಿರುವ, ತಾರಕಾಕಾರ–ನಕ್ಷತ್ರದ ಆಕಾರವನ್ನುಳ್ಳ, ಮುಕ್ತಾ ಭರಣ–ಮುತ್ತಿನ ತೊಡಿಗೆಗಳ, ಕಿರಣ–ಕಿರಣಗಳ, ನಿಕರ–ಸಮೂಹದಿಂದ, ವಿಳಸಿತ–ಪ್ರಕಾಶ ಮಾನವಾದ, ಉರಸ್ಥಳನುಂ–ಎದೆಯ ಪ್ರದೇಶವುಳ್ಳವನೂ; ಮಂಜರೀಜಾಳಪಲ್ಲವಿತ– ಗೊಂಚಲಿನ ಸಮೂಹದಿಂದ ಚಿಗುರಿದ; ಎಡೆವಱೆಯದೆ–ನಡುವೆ ವಿಚ್ಚೇದವಾಗದೆ; ಪ್ರತಿಪತ್ತಿಗಂ–ಗೌರವ ಮರ್ಯಾದೆಗಳನ್ನು; ಇಕ್ಕಿದ–ಹಾಕಿದ, ಲೋಹಾಸನಂಗಳೊಳಂ– ಲೋಹಾಸನಗಳಲ್ಲಿಯೂ; ಲೋಹಾಸನ–ಒಂದು ಬಗೆಯಾದ ಪೀಠ; ಪಂಚಭಿಃ ಸಪ್ತ ಭಿರ್ವಾಪಿ ನವಭಿರ್ಲೋಹಜೈಃಪದೈಃ, ಲೋಹಪಟ್ಟಕೃತಾಧಾರೈರ್ ಲೋಹಜಾಲಕ ಮೂರ್ಧನಿ ॥ ಛದಿಕಾ ಪಟ್ಟಗರ್ಭಸ್ಥಂ ಕಾರ್ಪಾಸೇನ ವಿಮಿಶ್ರಿತಂ, ಲೋಹಾಸನಮಿದಂ ಪ್ರೋಕ್ತಂ” ಎಂದು ಇದರ ವರ್ಣನೆ; ಐದು, ಏಳು ಅಥವಾ ಒಂಬತ್ತು ಕಾಲುಗಳುಳ್ಳ, ಲೋಹದ ಹಲಗೆಯ ಆಸನವನ್ನುಳ್ಳ, ಮೇಲುಗಡೆ ಲೋಹದ ಜಾಲರಿಯನ್ನುಳ್ಳ, ಹತ್ತಿ ಮತ್ತು ರೇಷ್ಮೆಯಿಂದ ತುಂಬಿದ ಮೆತ್ತೆಯನ್ನುಳ್ಳ, ಒಳ್ಳೆ ಹೊದಿಕೆಯನ್ನುಳ್ಳ ಆಸನ; “ಆತನುಂ ಪಿರಿಯ ಲೋಹಾಸನ ಮೇಱಿ” (ವಡ್ಡಾ. ೭–೧೩); ಪುಳಿನದ ಲೋಹಾಸನಂಗಳೊಳ್ ನೆರ್ಮಿದುಂ (ಆದಿಪು. ೧೧– ೩೬); ನಿಜಸಭಾಭ್ಯಂತ ಲೋಹಾಸನಾರೂಢಂ (ಸುಕುಮಾ. ೪–೨೩ಗ)–ಎಂಬಿವು ಇತರ ಪ್ರಯೋಗಗಳು; ಬೊಂದರಿಗೆಯೊಳಂ–ಮತ್ತೆ, ತಿವಾಸಿ (ಪಂಪಭಾ. ಕೋಶ) ಎಂದು ಅರ್ಥ ಹೇಳಿದೆ; ಪಂಪಭಾ. ೪–೪೩ರರಲ್ಲೂ ಚಿನ್ನದ ಬೊಂದರಿಗೆ ಎಂದಿದೆ; ಇದು ಬಹುಶಃ ಚೀನದ ರೇಷ್ಮೆಯ ಎಂಬುವುದಕ್ಕೆ ಅಪಪಾಠವಿರಬೇಕು; ಪಂಪಭಾ. ೧೪–೨೪ರಲ್ಲಿ ‘ಸಾರ್ಚಿದ ಲೋಹಾ ಸನದೊಳಮರ್ಚಿದ ಬೊಂದರಿಗೆ’ ಎಂದಿರುವುದರಿಂದ ಲೋಹಾಸನಕ್ಕೆ ಹಾಕಿದ ಬೊಂದರಿಗೆ ಎಂದರೆ, ಮೆತ್ತೆ, ತಿವಾಸಿ ಎಂಬರ್ಥ ತಕ್ಕುದಾಗಿದೆ; ಆದಿಪು. ೧೧–೭೮ರಲ್ಲಿ “ಮಲಂಗಿದರ್ ಪೊಳೆವ ತಳಿರ ಬೊಂದರಿಗೆಗಳೊಳ್” ಎಂಬಲ್ಲಿ ಚಿಗುರಿನಿಂದ ಮಾಡಿದ ಮೆತ್ತೆ ಎಂದರ್ಥ ವಾಗುತ್ತದೆ; ಎಡೆಯಱಿದು–ಅವರವರಿಗೆ ತಕ್ಕ ಸ್ಥಾನವನ್ನು ತಿಳಿದು; ಅಣುಗಾಳ್–ಪ್ರೀತಿಗೆ ಆಸ್ಪದನಾದ ಮನುಷ್ಯ, ಆಪ್ತ;

೨೯. ನನೆಯಂಬಂ–ಮನ್ಮಥನು, ಮಸೆದನ್ನರಪ್ಪ–ಸಾಣೆ ಹಿಡಿದಂಥವರಾದ, ಪಲರೊ ಳ್ವೆಂಡಿರ್–ಹಲವರು ಉತ್ತಮ ಸ್ತ್ರೀಯರು, ಮನಂಗೊಂಡು–ಮನಸ್ಸನ್ನು ಅಪಹರಿಸಿ, ಒಱಲ್ವಿನಂ–ಸ್ನೇಹಭಾವವನ್ನು ತೋರಿಸುತ್ತಿರಲು, ಪಾಡೆ–ಹಾಡಲು, ಜೇನಮೞೆ ಕೊಂಡಂತಪ್ಪ– ಜೇನಿನ ಮಳೆ ಸುರಿದ ಹಾಗಿರುವ, ಗೇಯಂ–ಸಂಗೀತವು; ಎತ್ತಂ ಕೊಳೆ–ಎಲ್ಲೆಲ್ಲಿಯೂ ವ್ಯಾಪಿಸಲು, ಮನಕ್ಕೆ–ಮನಸ್ಸಿಗೆ, ನೆಲಕ್ಕೆ–ಆಸ್ಥಾನ ಭೂಮಿಗೆ, ಇಟ್ಟಳಮಾಗೆ–ರಮಣೀಯ ವಾಗಲು, ಸಂದ ರಥಿಕರ್–ಪ್ರಸಿದ್ಧರಾದ ರಥಾರೋಹಕರು, ಕಣ್ಗೊಳ್ವಿನಂ–ಕಣ್ಣನ್ನು ಸೆಳೆಯು ತ್ತಿರಲು, ತತ್ಸುಯೋಧನನ–ಆ ದುರ್ಯೋಧನನ, ಒಡ್ಡೋಲಗಂ–ಆಸ್ಥಾನ ಸಭೆಯು, ಇಂದ್ರನ, ಓಲಗಮುಮಂ–ಆಸ್ಥಾನವನ್ನೂ, ಕೀೞ್ಮೂಡಿ –ಕಡೆಗಣಿಸಿ, ಕಣ್ಗೊಪ್ಪುಗುಂ–ಕಣ್ಣಿಗೆ ಶೋಭಾಕರವಾಗಿದೆ.

ವಚನ : ಮುನ್ನಮೆ–ಮೊದಲೇ; ಪಡಿಯಱಂ–ದ್ವಾರಪಾಲಕನು.

೩೦. ಲೋಕಗುರು–ಲೋಕಕ್ಕೆ ಗುರುವಾದ, ಶಂಕಚಕ್ರಗದಾಕರಂ–ಶಂಖಚಕ್ರ ಗದೆ ಗಳನ್ನು ಕೈಯಲ್ಲಿ ಉಳ್ಳ, ಅತಿಶಯ ಚತುರ್ಭುಜಂ–ಅತಿಶಯವಾದ ನಾಲ್ಕು ತೋಳುಗಳನ್ನುಳ್ಳ ಶ್ರೀಕೃಷ್ಣನು, ಜನಜನಿತ ವ್ಯಾಕುಳದೆ–ಎಲ್ಲರಿಗೂ ತಿಳಿದ, ಪ್ರಸಿದ್ಧವಾದ ಹಂಬಲದಿಂದ, ಬಂದನೆಂದೊಡೆ–ಬಂದನೆಂದರೆ, ಇನ್–ಇನ್ನು, ಲೋಕದೊಳ್–ಲೋಕದಲ್ಲಿ, ಎನ್ನ–ನನ್ನ, ದೊರೆಗೆ–ಸಾಟಿಗೆ, ಪಿರಿಯರುಂ–ದೊಡ್ಡವರಾದವರೂ, ಒಳರೇ–ಇದ್ದಾರೆಯೇ?

ವಚನ : ತನ್ನಬೆಸನನೆ ಪಾರ್ದು–ತನ್ನ ಅಪ್ಪಣೆಯನ್ನೇ ಎದುರು ನೋಡುತ್ತ, ಮಹಾ ಪ್ರತೀಹಾರನ–ಮಹಾದ್ವಾರಪಾಲಕನ;

೩೧. ಬರವೇೞ್ ಎಂಬುದುಂ–ಬರಲು ಹೇಳು ಎನ್ನುತ್ತಲೂ, ಅಂಜನಾ ಚಲದವೊಲ್– ಅಂಜನದ ಪರ್ವತದ ಹಾಗೆ, ಕಣ್ಗೊಪ್ಪಿ ಬರ್ಪ–ಕಣ್ಣಿಗೆ ಸೊಗಸಾಗುವಂತೆ ಬರುವ, ಅಂಬು ಜೋದರನಂ–ಶ್ರೀಕೃಷ್ಣನನ್ನು, ಮೆಲ್ಲನೆ ನೋಡಿ–ಮೆಲ್ಲನೆ ನೋಡಿ, ಮೈಯಲಸಿದಂತೆ–ದೇಹಾ ಯಾಸವಾದ ಹಾಗೆ, ಕೇಸರಿಪೀಠಾಗ್ರದಿಂ–ಸಿಂಹಾಸನದ ಮೇಲಿಂದ, ಎಂತಾನುಂ–ಹೇಗಾದರೂ, ಎೞ್ದು–ಎದ್ದು ನಿಂತು, ಅಪ್ಪಿಕೊಂಡು–ಆಲಿಂಗಿಸಿ, ಪೊಡೆವಟ್ಟು–ನಮಸ್ಕರಿಸಿ, ಉಚ್ಚಾಸೀನ ನಾಗಿ–ಎತ್ತರವಾದ, ಪೀಠದ ಮೇಲೆ, ಕುಳಿತವನಾಗಿ, ಇರವೇೞ್ದು–ಇರುವಂತೆ ಹೇಳಿ, ಅರ್ಘ್ಯ ಮನಿತ್ತು–ಪೂಜೆಯನ್ನು ಮಾಡಿ, ದುರ್ಯೋಧನಂ–ದುರ್ಯೋಧನನು, ಅನಂತರಮೆ– ಆಮೇಲೆಯೇ, ಆ ಬಳಿಕವೇ, ತಾಂ–ತಾನು, ಕುಳ್ಳಿರ್ದು–ಕುಳಿತುಕೊಂಡು ಇದ್ದು.

ವಚನ : ಮಧುಕೈಟಭಾರಾತಿಯ–ಮಧುಕೈಟಭರೆಂಬ ರಾಕ್ಷಸರ ವೈರಿಯಾದ ಶ್ರೀಕೃಷ್ಣನ;

೩೨. ಕಂಸಾರಿ–ಶ್ರೀಕೃಷ್ಣನೇ, ನೀಂಬರೆ–ನೀನು ಬರಲು, ಸಂಸಾರ ದೊಳ್–ಲೋಕ ಜೀವನ ದಲ್ಲಿ ಅಥವಾ ಪ್ರಪಂಚದಲ್ಲಿ, ಇನ್–ಇನ್ನು, ಎನ್ನವೊಲ್–ನನ್ನ ಹಾಗೆ, ಸೈಪಂ–ಪುಣ್ಯವನ್ನು, ಪಡೆದರ್–ಪಡೆದವರು, ಒಳರೇ–ಇದ್ದಾರೆಯೇ? ಪೆಱತೇಂ–ಬೇರೇನು? ಆಂ–ನಾನು, ಯುಷ್ಮತ್ಪದ ಪಾಂಸುಗಳಿಂದೆ–ನಿನ್ನ ಪಾದಗಳ ದೂಳಿನಿಂದ, ಪವಿತ್ರಗಾತ್ರನೆನ್ ಆದೆಂ–ಪವಿತ್ರ ವಾದ ದೇಹವುಳ್ಳವನಾದೆನು.

೩೩. ಬಂದ ಬರವು–ನೀವು ಇಲ್ಲಿಗೆ ಬಂದಿರುವುದು, ನಿಮ್ಮ ಆಗಮನ, ಆವುದು– ಯಾವುದು ಎಂದರೆ ನೀವು ಇಲ್ಲಿಗೆ ಏತಕ್ಕಾಗಿ ಬಂದಿದ್ದೀರಿ; ಇದು–ನಿಮ್ಮ ಬರವು, ಬಿಸವಂದಂ– ಆಶ್ಚರ್ಯ; ಬೆಸನಾವುದು–ಏನು ಕಾರ್ಯ?; ಆವ ಬೆಸನಂ ಬೆಸಸಲ್ ಬಂದಿರ್–ಯಾವಕಾರ್ಯ ವನ್ನು ಅಪ್ಪಣೆ ಮಾಡಲು ಬಂದಿದ್ದೀರಿ; ಈಗಳ್–ಈಗ, ಎನಗಂ–ನನಗೆ ಕೂಡ, ಬರವಿನೊಳ್– ಆಗಮನದಲ್ಲಿ, ಅಗುಂದಲೆಯಾಯ್ತು– ಹೆಚ್ಚಳವುಂಟಾಯಿತು, ಎಂಬುದು–ಎನ್ನುತ್ತಲೂ.

೩೪. ಆ ಸಭೆಯೊಳ್–ಆ ಆಸ್ಥಾನದಲ್ಲಿ, ಹರಿ–ಶ್ರೀಕೃಷ್ಣನು, ಕರವಿನ್ಯಾಸಂಗಳ್–ಕೈಯ ಅಭಿನಯಗಳು, ನುಡಿಯಂ–ಮಾತನ್ನು, ಅಡಕುವಂತಿರೆ–ಅಡಕವಾಗಿಡುವಂತೆ ಇರಲು, ದಂತ ಪ್ರಭೆಗಳ್–ಹಲ್ಲುಗಳ ಕಾಂತಿ, ಪಾಸುಂಪೊಕ್ಕುಂ ಪರೆದು–ಹಾಸುಹೊಕ್ಕಾಗಿ ಹರಡಿ, ಸಭಾಸದನಂ– ಸಭಾಮಂದಿರ, ತೊಳಗಿಬೆಳಗೆ–ಪ್ರಕಾಶಮಾನವಾಗಲು, ನುಡಿದಂ–ಮಾತಾಡಿದನು.

೩೫. ಅಯ ನಯ ಪರಾಕ್ರಮೋಪಾಶ್ರಯಂಗಳಂ: ಅಯ–ಶುಭಕರವಾದ ವಿಧಿಗೂ, ನಯ–ನೀತಿಗೂ, ಪರಾಕ್ರಮ–ಪ್ರತಾಪಕ್ಕೂ, ಉಪಾಶ್ರಯಂಗಳಂ– ಅವಲಂಬನವಾಗಿರು ವುವುಗಳನ್ನು, ಶ್ರೀಗೆ–ರಾಜ್ಯಲಕ್ಷ್ಮಿಗೆ, ಅಡರ್ಪುಮಾಡಿದ–ಆಶ್ರಯವಾಗಿ ಮಾಡಿದ, ನಿನ್ನ, ಇಂದ್ರಿಯ ಜಯಮೆ–ಇಂದ್ರಿಯಗಳನ್ನು ಗೆದ್ದಿರುವುದೇ, ಲೋಕತ್ರಯದಿಂ–ಮೂರು ಲೋಕ ಗಳಿಂದ, ಕೂಡೆ–ಕೂಡಲೇ, ಇಂತು–ಹೀಗೆ, ಪೊಗೞಿಸಿದುದು–ಹೊಗಳುವ ಹಾಗೆ ಮಾಡಿತು; ಇಂತು–ಹೀಗೆ, ಪಿರಿಯರುಂ–ಹಿರಿಯರಾದವರೂ, ಒಳರೇ–ಇರುವರೆ?

೩೬. ಉನ್ನತನೆ ಆಗಿಯುಂ–ಉದಾತ್ತನೇ ಆಗಿದ್ದರೂ, ನುಡಿ–ಮಾತು, ನನ್ನಿಯಂ– ಸತ್ಯವನ್ನು, ಅಳವು–ಶಕ್ತಿ, ಅಣ್ಮಂ–ಪೌರುಷವನ್ನು, ಅಱವು–ಜ್ಞಾನವು, ವಿನಯಮಂ– ನಮ್ರತೆಯನ್ನು, ಆದಂ–ವಿಶೇಷವಾಗಿ, ಮನ್ನಣೆ–ಮರ್ಯಾದೆಯು, ಗುರುಜನಮಂ– ಹಿರಿಯರನ್ನೂ ಗುರುಗಳನ್ನು, ನೆಱೆ–ಪೂರ್ಣವಾಗಿ, ಮನ್ನಿಸಿದುದು–ಗೌರವಿಸಿತು; ಪಿರಿಯ ಸಿರಿಯೊಳ್–ಹಿರಿದಾದ ಐಶ್ವರ್ಯದಲ್ಲಿ, ಏಂ ಸುಜನತೆಯೋ–ಏನು ಸೌಜನ್ಯವೋ?

೩೭. ಕುವಳಯ ಬಾಂಧವಂ–ಚಂದ್ರನು, ಕುವಳಯಮಂ–ಭೂಮಿಯನ್ನು, ಬೆಳಗಿ– ಪ್ರಕಾಶಿಸುವಂತೆ ಮಾಡಿ, ಕುವಳಯಂ–ನೆಯ್ದಿಲೆ ಹೂವುಗಳು; ಪೊಱಗು ಎನೆ–ಹೊರಗು ಎನ್ನಲು ಎಂದರೆ ಚಂದ್ರನಕಾಂತಿ ಭೂಮಿಯಲ್ಲೆಲ್ಲ ವ್ಯಾಪಿಸಿ ನೆಯ್ದಿಲೆಯನ್ನು ಮಾತ್ರ ಸೋಕು ವುದಿಲ್ಲ ಎನ್ನಲು, ನೃಪತೀ–ದುರ್ಯೋಧನನೇ, ಪಾಂಡವರೆ–ಪಾಂಡವರೇ; ಪೊಱಗಾಗೆ– ಹೊರಗಾಗಲು, ನಿನಗೆ, ಈ ಕುವಳಯಪತಿ–ಈ ಭೂಮಿಗೆ ರಾಜ, ಎಂಬ, ಪೆಂಪು–ಹಿರಿಮೆ; ಒಡಂಬಡೆ–ಒಪ್ಪಿತವೆ? ಎಂದರೆ ಒಪ್ಪಾಗಲಾರದು.

೩೮. ಮನಕತದಿಂದೆ–ಮನಃಕ್ಷತದಿಂದ, ಮನದ ನೋವಿನಿಂದ, ಒಂದೊರ್ವರಂ– ಒಬ್ಬೊಬ್ಬರನ್ನು, ಇನಿಸಂ–ಒಂದಿಷ್ಟನ್ನು, ಅಗಲ್ದಿರ್ದಿರ್–ಅಗಲಿದ್ದೀರಿ; ಇನಿಸೆ–ಇಷ್ಟೇ; ನಿಮಗಂ ತಮಗಂ–ನಿಮಗೂ ಅವರಿಗೂ, ಮುನಿಸುಂಟೆ–ಕೋಪವಿದೆಯೇ, ? ಇಲ್ಲ; ಕುರು ರಾಜಾ–ದುರ್ಯೋಧನನೇ, ಕಾಯ್ದ ಬೆನ್ನೀರ್–ಕುದಿದ ಬಿಸಿನೀರು, ಮನೆ ಸುಡದು–ಮನೆ ಯನ್ನು ಸುಡುವುದಿಲ್ಲ; ಎಂಬೊಂದು ನುಡಿಯವೋಲ್–ಎಂಬ ಒಂದು ನಾಣ್ಣುಡಿಯಂತೆ, ಅಲ್ಲವೇ?

೩೯. ಈ ಪದ್ಯದಲ್ಲಿ ಸ್ವಲ್ಪ ಪಾಠಕ್ಲೇಶವಿದೆ. ಡಂಗಂ(ಗಳ್) ಎಂದು ತಿದ್ದಿಕೊಳ್ಳಬೇಕು; ಕುರುಕುಳಾಂಬರ ಭಾನೂ–ಕೌರವ ವಂಶವೆಂಬ ಆಕಾಶಕ್ಕೆ ಸೂರ್ಯನಾದ ದುರ್ಯೋಧನನೇ, ಪಾಂಡವರಂ–ಪಾಂಡವರನ್ನು, ಗೆಡೆಗೊಳೆ–ಸ್ನೇಹಿತರನ್ನಾಗಿ ಸ್ವೀಕರಿಸಲು, ನಿನಗೆ, ಪೊಂಗುವ– ಉಕ್ಕುವ, ಉಬ್ಬುವ, ಕುದಿಯುವ : ಮಲೆಪರ–ಪರ್ವತ ರಾಜರ, ಮಲೆಗಳ–ಬೆಟ್ಟ ಗಳಲ್ಲಿರುವ, ಡಂಗಂ(ಗಳ್)–ಸುಂಕದ ಕಟ್ಟೆಗಳು, ಕಾವಲು ಕಟ್ಟೆಗಳು; ಮಲೆವ–ಔದ್ಧತ್ಯ ದಿಂದ ವರ್ತಿಸುವ, ಮಂಡಲಂಗಳ್–ದೇಶಗಳು, ಪ್ರತ್ಯಂತಂಗಳ್–ಗಡಿಯಲ್ಲಿರುವ ಪ್ರದೇಶ ಗಳು, ಎನಲ್–ಎನ್ನಲು, ಒಳವೇ–ಇರುವುದೇ? ಡಂಗ <(ಸಂ) ದ್ರಂಗ; (ಶಬ್ದವಿಹಾರ : ಡಂಗ ಹಾಕು–ಎಂದರೇನು, ಎಂಬ ಲೇಖನವನ್ನು ನೋಡಿ)

೪೦. ಪಟ್ಟದ–ರಾಜ್ಯಪಟ್ಟಕ್ಕೆ, ಮೊದಲಿಗರ್–ಮೊದಲು ಅರ್ಹರಾದವರು; ಆಜಿಗೆ–ಯುದ್ಧಕ್ಕೆ, ಜೆಟ್ಟಿಗರ್–ಶೂರರು; ಅವರ್–ಅವರು, ಎಂದುಂ–ಯಾವಾಗಲೂ, ಆಳ್ವ– ಪಾಲಿಸುವ, ಮುನ್ನಿನ ನೆಲನಂ–ಮುಂಚಿನ ರಾಜ್ಯವನ್ನು ಕೊಟ್ಟು, ಬೞಿಯಟ್ಟು–ದೂತರನ್ನು ಕಳುಹಿಸು, ನಿನಗೆ ಒಡವುಟ್ಟಿದರ್–ನಿನ್ನ ಸಹೋದರರು, ಆ ದೊರೆಯರಾಗೆ–ಅಂಥವ ರಾಗಲು ಎಂದರೆ ಅಂಥ ಯೋಗ್ಯತೆಯುಳ್ಳವರಾಗಲು, ತೀರದುದು–ಅಸಾಧ್ಯವಾದದ್ದು, ಉಂಟೇ–ಇದೆಯೇ?

೪೧. ಎಮಗೆ–ನಮಗೆ, ಮುನ್ನಿನ ನೆಲನಂ–ಮೊದಲಿದ್ದ ರಾಜ್ಯವನ್ನು, ಕುಡುಗೆ–ಕೊಡಲಿ, ಎಂದು, ಎನ್ನರ್–ಹೇಳರು; ದಾಯಿಗರೆಂ–ದಾಯಾದಿಗಳಾಗಿದ್ದೇವೆ, ಎನ್ನರ್–ಎಂದು ಹೇಳರು; ಅಂತಲ್ತು ಇಂತಲ್ತು–ಹಾಗಲ್ಲ, ಹೀಗಲ್ಲ, ಎನ್ನರ್–ಎಂದು ಹೇಳರು; ಕರುಣಿಸಿ– ಕೃಪೆಯಿಟ್ಟು, ದಯೆಯಿಂದೆ–ದಯೆಯಿಂದ, ಇನ್–ಇನ್ನು, ಇತ್ತುದೆ–ಕೊಟ್ಟದ್ದೇ, ಸಾಲ್ಗುಂ– ಸಾಕು, ಎಂಬರ್–ಎಂದು ಹೇಳುತ್ತಾರೆ; ಎಂಬುದನೆಂಬರ್–ನೀನು ಹೇಳಿದ್ದನ್ನು ಹೇಳುತ್ತಾರೆ.

೪೨. ಕರಿ….ಟವಿಯೊಳ್: ಕರಿಕಳಭ–ಆನೆಗಳ, ಪ್ರಚಂಡ–ತೀಕ್ಷ್ಣಣವಾದ, ಮೃಗರಾಜ ಕಿಶೋರ–ಸಿಂಹದ ಮರಿಗಳ, ಕಠೋರ–ಕರ್ಕಶವಾದ, ಘೋರ–ಭಯಂಕರವಾದ, ಹೂಂಕರಣ–ಹೂಂ ಎಂಬ ಅಬ್ಬರದಿಂದ, ಭಯಂಕರ–ಭಯವನ್ನುಂಟುಮಾಡುವ, ಅಟವಿ ಯೊಳ್–ಕಾಡುಗಳಲ್ಲಿ, ಇನ್ನೆವರಂ–ಇದುವರೆಗೂ, ನೆಲಸಿರ್ದ–ವಾಸಿಸುತ್ತಿದ್ದ, ಸೇದೆ– ಆಯಾಸವು, ನೀಂ–ನೀನು, ಕರುಣಿಸಿದಾಗಳಲ್ಲದೆ–ದಯೆಯನ್ನು ತೋರಿಸಿದಾಗಲ್ಲದೆ, ಅವರ್ಗೆ–ಆ ಪಾಂಡವರಿಗೆ, ಆಱದು–ಶಮನವಾಗುವುದಿಲ್ಲ; ಕೆಮ್ಮಗೆ–ಸುಮ್ಮನೆ, ನಾಡ– ಸುಳ್ಳುಗಾರರಾದ, ಚಲ್ಲವತ್ತರ–ನಂಬಿಸಿ ಹೊಟ್ಟೆಹೊರೆಯುವವರ, ನುಡಿಗೊಳ್ಳದಿರ್– ಮಾತುಗಳನ್ನು ಕೇಳಬೇಡ; ನಿನಗೆ, ಪಾಂಡವರಪ್ಪುದಂ–ಪಾಂಡವರು ಆಗುವುದನ್ನು, ಆರುಂ– ಯಾರೂ, ಅಪ್ಪರೇ–ಆಗುವರೇ, ಎಂದರೆ ನಿನ್ನ ಕಷ್ಟ ಸುಖಕ್ಕೆ ಪಾಂಡವರು ಪಾಲುಗಾರರಾಗು ವಂತೆ ಬೇರೆ ಯಾರಾದರೂ ಆಗುತ್ತಾರೆಯೇ; ಇಲ್ಲ, ಇಲ್ಲಿ ‘ನಾಡ’ ಎಂಬುದರ ಅರ್ಥ ಚಿಂತನೀಯ. “ನಾೞನುಡಿ ತುಂಬು ಕಳ್ಳನೊಳುಂಟು” ಎಂಬ ವಾಕ್ಯದಂತೆ ನಾೞ ಎಂದರೆ ವಂಚಕ, ಕಪಟಿ; ನಾಡ ನಾೞ; ‘ಇದಾ ನಾಡ ಜೂದಿಂಗೆ’ ಎಂಬ ರನ್ನನ ಪ್ರಯೋಗವನ್ನು ನೋಡ ಬಹುದು: ನಾಡಜೂದು–ಕಪಟದ್ಯೂತ; ಚಲ್ಲವತ್ತನೆಂದು ನಂಬಿಸಿ ತಿಂಬವಂ.

೪೩. ಅವರ್ಗೆ–ಪಾಂಡವರಿಗೆ, ಒಂದುಂ–ಒಂದೂ, ಒಡಂಬಡುಂ–ಒಪ್ಪಿಗೆಯೂ ಅಥವಾ ಸಮಾಧಾನವೂ, ಪೊರೆಯುಂ–ರಕ್ಷಣೆಯೂ, ಇಲ್ಲ, ಎಂಬುದಂ–ಎನ್ನುವುದನ್ನು, ಎಯ್ದೆ– ಚೆನ್ನಾಗಿ, ನಂಬಿ, ಪೆಱತೇ ಪಡೆಮಾತೊ–ಬೇರೇನು ಮಾತೋ, ನಾಡಂ ದಯೆಗೆಯ್ದು ನೀಂ ಕುಡುವಿನಂ–ರಾಜ್ಯವನ್ನು ದಯಮಾಡಿ ನೀನು ಕೊಡುತ್ತಿರಲು, ಒಳ್ಪುನಿಲೆ–ನಿನ್ನ ಒಳ್ಳೆಯ ತನ ಶಾಶ್ವತವಾಗಿರಲು, ಕಂಚಿ–ಕಂಚಿಯೆಂಬ, ನೆಗೞ್ತೆಯ ವಾರಣಾಸಿ–ಪ್ರಸಿದ್ಧವಾದ ವಾರಣಾಸಿ ಯೆಂಬ, ಕಾಕಂದಿ–ಕಾಕಂದಿಯೆಂಬ, ಕುರುಸ್ಥಳಂ–ಕುರುಸ್ಥಳವೆಂಬ, ವರವೃಕಸ್ಥಳಂ–ಶ್ರೇಷ್ಠವಾದ ವೃಕಸ್ಥಳವೆಂಬ, ಅಯ್ದುಬಾಡಮಂ–ಐದು ಗ್ರಾಮಗಳನ್ನು, ಇವಂ–ಇವನ್ನು, ಅವರ್ಗೆ– ಆ ಪಾಂಡವರಿಗೆ, ಪಳ್ಳಿರಲ್ಕೆ ಎಂದು–ಹಾಸಿಗೆಯಲ್ಲಿರುವುದಕ್ಕೆ ಎಂದು, ಮಲಗಿರುವುದಕ್ಕೆ ಎಂದು, ಈವುದು–ಕೊಡುವುದು ಪಳ್ಳಿ–(ತ) ಪಳ್ಳಿ–ಹಾಸಿಗೆ, ಶಯನ, ನಿದ್ದೆ, ಪ್ರಾಣಿಗಳು ನಿದ್ರಿಸುವ ಎಡೆ.

ವಚನ : ಕ್ರೋಧಾನಲೋದ್ದೀಪಿತ–ಕೋಪವೆಂಬ ಅಗ್ನಿಯಿಂದ ಉರಿಯುತ್ತಿರುವ; ಶೌರ್ಯಮದಾಡಂಬರದೊಳ್–ಪ್ರತಾಪದ ಸೊಕ್ಕಿನ ಉಬ್ಬರದಲ್ಲಿ; ಅಂಬರಂಬರಂ–ಆಕಾಶ ದವರೆಗೆ.

೪೪. ದುರ್ಯೋಧನನ ಮಾತು: ಗೋವುಗಾದ–ದನವನ್ನು ಕಾಯುವ, ಕಿಱಿಯಂದಿನ– ನಿನ್ನ ಬಾಲ್ಯದ, ಗೋವಿಕೆ–ದನಗಾಹಿತನ, ತೊಲಗದೆ–ಹೋಗದೆ; ನಿನ್ನ ಚಿತ್ತದೊಳ್–ನಿನ್ನ ಮನಸ್ಸಿನಲ್ಲಿ, ನೆಲಸಿದುದಕ್ಕಂ–ಶಾಶ್ವತವಾಗಿ ಇರುವಂಥದ್ದಾಗಿದೆ, ಅಗ್ಗಳದ–ಅಧಿಕವಾದ, ವೈಷ್ಣವ ಮೋಹಮೆ–ವಿಷ್ಣುಭಕ್ತರ ಎಂದರೆ ಪಾಂಡವರ ಮೇಲಿನ ಮಮಕಾರವೇ; ನಿನ್ನ ಮೆಯ್ಯೊಳ್–ನಿನ್ನ ದೇಹದಲ್ಲಿ, ಜಡಧಿ ಸಂಗತಿಯಿಂ–ಸಮುದ್ರದ ಸಹವಾಸದಿಂದ ಅಥವಾ ಜಡಬುದ್ಧಿಯುಳ್ಳವರ ಸಾಹಚರ್ಯದಿಂದ, ಜಡಬುದ್ಧಿ–ಜಡಬುದ್ಧಿಯು, ಅಗ್ಗಲಿಸಿ ದುದಕ್ಕುಂ–ಅತಿಶಯವಾದದ್ದಾಗಿದೆ, ಬುದ್ಧಿಯಂ–ಬುದ್ಧಿಯನ್ನು, ತೊಲಗಿಸಿತಕ್ಕುಂ– ಹೋಗಾಡಿಸಿದ್ದಾಗಿದೆ; ಅಲ್ಲದೊಡೆ–ಅಲ್ಲದಿದ್ದರೆ, ನೀಂ–ನೀನು, ಇನಿತಂ–ಇಷ್ಟು, ಪಳಾಳ ಮಂ–ಜಳ್ಳು ಮಾತುಗಳನ್ನು, ನುಡಿವಯ್–ಹೇಳುತ್ತೀಯ?

೪೫. ಪಱಿಪಟ್ಟ–ಕತ್ತರಿಸಿ ಹೋದ ಎಂದರೆ ಸಂಬಂಧ ಕಡಿದುಹೋದ, ಪಗೆವರಂ–ಹಗೆ ಗಳನ್ನು, ನೆಱೆ–ಪೂರ್ಣವಾಗಿ, ಪಱಿ ಪಡಲ್–ಕತ್ತರಿಸಿ ಬೀಳುವುದಕ್ಕೆ ಎಂದರೆ ನಾಶವಾಗು ವುದಕ್ಕೆ, ಅಣಂ–ಸ್ವಲ್ಪವೂ, ಈಯದೆ–ಅವಕಾಶವನ್ನು ಕೊಡದೆ, ಅವರಂ–ಪಾಂಡವರನ್ನು, ಅವರ್ಗಳ–ಅವರ, ಬಾೞೊಳ್–ಸಂಪತ್ತಿನಲ್ಲಿ, ಏಳ್ಗೆಯ ಸ್ಥಿತಿಯಲ್ಲಿ, ನಿಱಿಸಲ್–ಸ್ಥಾಪಿಸಲು, ಬಗೆದಯ್–ಮನಸ್ಸು ಮಾಡಿದೆ; ನಿನ್ನ ಪೇೞ್ದ ಧರ್ಮಶ್ರವಣಂ–ನೀನು ಹೇಳಿದ ಧರ್ಮದ ಕೇಳಿಕೆ, ಆಲಾಪ, ಕರಂ–ವಿಶೇಷವಾಗಿ, ಎನಗೆ–ನನಗೆ, ಉಱದೆ–ಹೊಂದದೆ, ಇರ್ಕುಮೆ–ಇರು ವುದೆ? ಇಲ್ಲ. ಬಾೞ್–ಜೀವಿಕೆಯ ಸಾಧನ, ಸಂಪತ್ತು, ಉಛ್ರಾಯಸ್ಥಿತಿ ಎಂಬರ್ಥಗಳಿವೆ, ವಾೞ್(ತ); ಅವರ ದಾಯಿಗಂ ಶಾಸ್ತ್ರಂಗಳಂ ಬಲ್ಲೊಂಗಂ ಮಂತ್ರಿಪದವಿಯಂ ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ (ವಡ್ಡಾ, ೨–೨೫), ನಿಮ್ಮ ತಂದೆಯ ಮಂತ್ರಿಪದಮಂ ಬಾೞುಮಂ ಕೈಕೊಳ್ಳಿಮೆಂದು (ಅದೇ. ೪–೨೪), ಎಂಬುವು ಇತರ ಪ್ರಯೋಗಗಳು; ವೃತ್ತಿ ಎಂದೂ ಅರ್ಥವಾಗಬಹುದು.

೪೬. ಭಾಗಮಂ–ರಾಜ್ಯದ ಭಾಗವನ್ನು, ಆಸೆಪಟ್ಟು–ಆಸೆಯನ್ನು ಹೊಂದಿ, ಅಳಿಪಿ– ಬಯಸಿ, ಬೇೞ್ದುದು–ಬೇಡುವುದು, ನಿನ್ನಯ–ನಿನ್ನ, ಕಲ್ತ–ಕಲಿತ, ವಿದ್ಯೆ; ಅಣ್ಣ–ಅಣ್ಣನೇ, ನೀನ್–ನೀನು, ಆಗಳುಂ–ಯಾವಾಗಲೂ, ಬೇಡಿದಪೆ–ಬೇಡುತ್ತೀಯೆ, ಎನಗೆ–ನನಗೆ, ಈಗಳ್–ಈಗ, ಇಳಾ ಲತಾಂಗಿ–ಭೂಮಿಯೆಂಬ ಸ್ತ್ರೀ, ಸಜ್ಜನದಂತೆ–ಕುಲವಧುವಿನ ಹಾಗೆ, ಎಕ್ಕಬಾಗೆ–ಒಂದೇ ಭಾಗವುಳ್ಳವಳು ಎಂದರೆ ಏಕಭೋಗ್ಯಳಾದವಳು, ನೋಡ–ನೋಡು; ಪುದುವಲ್ಲಳ್–ಇನ್ನೊಬ್ಬನ ಜೊತೆಗೂಡಿ ಇರುವವಳಲ್ಲ, ಅದೆಂತೆನೆ–ಅದು ಹೇಗೆಂದರೆ, ಮುನ್ನ–ಮೊದಲು, ನೂಲ ತೋಡಾಗದೆ–ಹರಿದ ನೂಲಿನಂತೆ ತಿರುಗಿ ಸೇರದೆ, ಕೆಟ್ಟು ವೋದವರಂ–ಹಾಳಾದವರನ್ನು, ಇನ್–ಇನ್ನು ಮೇಲೆ, ಮಗುೞ್ದುಂ–ಮತ್ತೆಯೂ, ತಿರುಗಿಯೂ, ನಿಱಿಪಂತು–ಸ್ಥಾಪಿಸುವ ಹಾಗೆ, ಬೆಳ್ಳನೇ–ದಡ್ಡನೇ? ಅಲ್ಲ. ಅಳಿಪು– ಲೋಲತ್ವೇ (ಆಶಿಸು, ಬಯಸು);

೪೭. ಗೋವುಗಳಿಗನಪ್ಪಂ–ಗೋವುಗಳಲ್ಲಿಯೇ ಜೀವಿಸುವವನು, ಎಂದರೆ ದನಗಾಹಿ ಯಾದವನು (ನೀನು), ವಿಜಿಗೀಷುತ್ವದೊಳ್–ಜಯಿಸಬೇಕೆಂಬ ಅಪೇಕ್ಷೆಯುಳ್ಳವನ ತನದಲ್ಲಿ, ಜಯಶಾಲಿಯಾಗಿರುವುದರಲ್ಲಿ, ಒಂದಿ–ಸೇರಿ, ಮತ್ಸ್ಯನಾಳಾಗಿ–ವಿರಾಟನ ಸೇವಕ ನಾಗಿ, ವಾರಿಜನಾಭಂ–ಕಮಲನಾಭನು, ಹರಿ–ವಿಷ್ಣು, ಎಂಬ–ಎನ್ನುವ, ದೊಡ್ಡಿವೆಸರಂ– ದೊಡ್ಡ ಹೆಸರನ್ನು, ಪೊತ್ತಿರ್ದ–ಹೊತ್ತುಕೊಂಡಿರುವ, ನೀಂ–ನೀನು, ಮಂತ್ರಿಯಾಗೆ– ಮಂತ್ರಿಯಾಗಲು, ಆ ಗಂಡರ್–ಆ ಶೂರರಾದ ಪಾಂಡವರು, ಜಯೋದ್ಯೋಗ ಮನೆತ್ತಿಕೊಂಡು–ಯುದ್ಧದಲ್ಲಿ ಗೆಲ್ಲುವ ಕಾರ್ಯವನ್ನು ಕೈಕೊಂಡು, ಈ ಗಂಡರಂ–ಈ ಶೂರ ರಾದ ಕೌರವರನ್ನು, ಒಟ್ಟಜೆಯಿಂದೆ–ಪರಾಕ್ರಮದಿಂದ, ಅಂಜಿಸಿ–ಹೆದರಿಸಿ, ರಣದೊಳ್– ಯುದ್ಧದಲ್ಲಿ, ನೆಟ್ಟನೆ–ನೇರಾಗಿ, ಭೂಭಾಗಮಂ–ಭೂಮಿಯ ಭಾಗವನ್ನು, ಸಮಂತು– ಚೆನ್ನಾಗಿ, ಕೊಳ್ಳದೆ–ತೆಗೆದುಕೊಳ್ಳದೆ, ಇರ್ಪಿರೇ–ಇರುತ್ತೀರಾ? ದುರ್ಯೋಧನನ ಮಾತು ಗಳಲ್ಲಿ ವ್ಯಂಗ್ಯ, ಕಟಕಿ, ತಿರಸ್ಕಾರ, ಗರ್ವ, ಮಾತ್ಸರ್ಯ, ಪರಿಹಾಸ–ಇವೇ ಮುಂತಾದ ಭಾವ ಗಳು ತುಂಬಿವೆ. ಗೋವುಳಿಗ ಗೋವು+ಉಳಿಗ; ದೊಡ್ಡಿವೆಸರ್ ದೊಡ್ಡಿತು+ಪೆಸರ್, ‘ಮತ್ಸ್ಯನಾಳಾಗಿ’ ಎಂಬುದಕ್ಕೆ ‘ಮರ್ತ್ಯನಾಳಾಗಿ’ ಎಂದು ಸೂಚಿತವಾಗಿರುವ ಪಾಠ (ಪ) ಗಮನಾರ್ಹ, ಹಾಗೆಯೇ ‘ಇರ್ಪರೆ’ ಎಂಬುದೂ.

೪೮. ಪುಸಿಯೆನೆ–ಸುಳ್ಳು ಎನ್ನಲು, ಸಾಮಮಂ–ಸಾಮೋಪಾಯವನ್ನು, ನುಡಿದು– ಹೇಳಿ, ಭೇದಮಂ–ಭೇದೋಪಾಯವನ್ನು, ಉಂಟೊಡೆತಾಗಿ ಮಾಡಿ–ಉಂಟು, ಇದೆ ಎಂಬಂತೆ ಪ್ರಯೋಗಿಸಿ, ಛಿದ್ರಿಸಲ್–ಭೇದಿಸಲು, ಒಳಪೊಕ್ಕು, ಒಳಕ್ಕೆ ಹೊಕ್ಕು, ಮಿಕ್ಕು–ಮಿತಿಮೀರಿ, ನೆಗೞ್ದ–ಕಾರ್ಯ ಮಾಡಿದ, ಉಗ್ರವಿರೋಧಿಗಳ್–ಭಯಂಕರ ವೈರಿಗಳಾದ, ತಾವು–ಅವರು, ಆ ಪಾಂಡವರು, ಎತ್ತಂ–ಎಲ್ಲೆಲ್ಲೂ, ಎಯ್ದೆ–ಚೆನ್ನಾಗಿ, ಬಂಚಿಸಿ–ವಂಚನೆ ಮಾಡಿ, ಪೊಱಗಣ್ಗೆ– ಹೊರಗಡೆಗೆ, ಹೊರನೋಟಕ್ಕೆ, ಸಯ್ದರೆನೆ–ಋಜುವಾದವರು, ಸತ್ಯವಂತರು ಎನ್ನಲು, ತವೆ– ನಾಶವಾಗುವಂತೆ, ಒಳಗಂ ತೋಡಿ–ಒಳಭಾಗವನ್ನು ಅಗೆದು, ತಿಂದು–ಕಬಳಿಸಿ, ರಕ್ಕಸಿಯರ– ರಾಕ್ಷಸಿಯರು, ಕಂಡ–ನೋಡಿದ, ಕುಂಬಳದ ಕುಂಬಳಕಾಯಿಯ, ಮಾೞ್ಕೆವೊಲ್–ಮಾಟ ದಂತೆ, ಆಗಿರೆ–ಆಗಿರಲು, ಮಾಡದಿರ್ಪಿರೇ, ಮಾಡದೆ ಇರುತ್ತೀರಾ? ಒಡೆತು ಒಡೆಯದು– ಉಳ್ಳುದು; ಕುಂಬಳದ ಹಣ್ಣು ಹೊರನೋಟಕ್ಕೆ ಚೆನ್ನಾಗಿದ್ದರೂ ಒಳಗೆಲ್ಲಾ ಕೊಳೆತಿರುವು ದುಂಟು, ಇದಕ್ಕೆ ಕಾರಣ ರಾಕ್ಷಸಿಯ ದೃಷ್ಟಿ ತಾಕಿದೆಯೆಂಬುದು, ಇದು ಒಂದು ನಂಬಿಕೆ ಆ ಕಾಲದ್ದು. ಹೀಗೆಯೇ ಪಾಂಡವರು (ಕೃಷ್ಣನ ಸಮೇತವಾಗಿ) ಹೊರಗೆ ನೇರಾದವರು ಎಂದು ಕಂಡು ಬಂದರೂ ಒಳಗೊಳಗೇ ವಿನಾಶಕಾರಿಗಳು ಎಂದು ಭಾವ.

ವಚನ : ಒಂದೆ ಗರುಡಿಯೊಳ್–ಒಂದೇ ವ್ಯಾಯಾಮ ಶಾಲೆಯಲ್ಲಿ, ಓದಿದ–ಕಲಿತ, ಮಾನಸರೆವು–ಮನುಷ್ಯರಾಗಿದ್ದೇವೆ, ನಿಮ್ಮಡಿ–ನಿಮ್ಮ ಪಾದಗಳು ಎಂದರೆ, ನಿಮ್ಮಂಥ ಮಹಿ ಮರು; ಕೆಮ್ಮನೆ–ಸುಮ್ಮನೆ, ಬೞಲಿಸಲ್ವೇಡ–ಆಯಾಸಪಡಿಸಬೇಡಿರಿ; ಬಟ್ಟೆಯಿನೆ–ದಾರಿ ಯಿಂದಲೇ, ಬಿಜಯಂಗೆಯ್ಯಿಂ–ಬಿಜಯಮಾಡಿರಿ, ತೊಲಗಿ ಹೋಗಿರಿ; ಅಂತಕನಂತೆ–ಯಮನ ಹಾಗೆ, ಮಾಮಸಕಂ ಮಸಗಿ–ಮಹಾಕೋಪದಿಂದ ಕೆರಳಿ; ಮಸಗು–ವಿಜೃಂಭಣೇ; ಇದರ ಭಾವನಾಮ ಮಸಕ.

೪೯. ಶ್ರೀಕೃಷ್ಣನ ಮಾತು: ಸೀತೆಯ–ಸೀತಾದೇವಿಯ, ದೂಸಱಿಂದೆ–ಕಾರಣದಿಂದ, ಅೞಿದ–ನಾಶವಾದ, ರಾವಣನಂತಿರೆ–ರಾವಣನ ಹಾಗೆ, ನೀನುಂ–ನೀನು ಕೂಡ, ಈಗಳ್–ಈಗ, ಸೀತೆಯ–ಉತ್ತ ನೆಲದ ಎಂದರೆ ನಾಡಿನ, ದೂಸಱಿಂದೆ–ಕಾರಣದಿಂದ, ಅೞಿಯಲ್– ನಾಶವಾಗಲು, ಆಟಿಸಿದೈ–ಬಯಸಿದೆ, ನಿನಗೆ, ಅಂತು–ಹಾಗೆ, ಸೀತೆ–ನಾಡು, ನೆಲವು, ಭೂಮಿದೇವಿಯು, ಸೀತೆಯೇ–ತಂಪಾದವಳೇ? ಅಥವಾ ಸೀತೆ–ಭೂಮಿಯು, ಸೀತೆಯೇ– ಸೀತಾದೇವಿಯೇ ಆಗಿದ್ದಾಳೆ; ಕಡಂಗಿ–ಉತ್ಸಾಹಿಸಿ, ಕಾಯ್ದು–ಕೋಪಿಸಿ, ಕಡೆಗಣ್ಚಿದಳ್ ಅಪ್ಪೊಡೆ–(ಭೂಮಿದೇವಿ ನಿನ್ನನ್ನು) ತಿರಸ್ಕರಿಸಿದವಳಾದರೆ, ಧಾತ್ರನಿಂ–ವಿಧಿಯಿಂದ, ಪಾಂಡವ ರಕೆಯ್ಯೊಳೆ–ಪಾಂಡವರ ಕೈಯಿಂದಲೇ, ನಿನ್ನ, ನಿಸೇಕಂ–ಮದುವೆ, ಪ್ರಸ್ತ, ಶಾಸ್ತಿ, ಆಗದೇ– ಆಗುವುದಿಲ್ಲವೆ? ತೊದಳ್ವಾತಿನೋಳೇನೊ–ಅಸ್ಪಷ್ಟವಾದ ಮಾತುಗಳಿಂದ ಏನು ಪ್ರಯೋ ಜನ? ದುರ್ಯೋಧನ, ನಿನಗೆ ತಕ್ಕ ಶಾಸ್ತಿ ಆಗದೇ ಇರುವುದೇ, ಪಾಂಡವರಿಂದ ಎಂದು ಭಾವ.

೫೦. ಪಾಂಡವರೊಳ್–ಪಾಂಡವರಲ್ಲಿ, ಕಡುಕೆಯ್ದು–ತೀವ್ರತೆಯನ್ನು ತೋರಿಸಿ, ಆಂತು–ಎದುರಿಸಿ, ಇಱಿಯಲ್–ಯುದ್ಧ ಮಾಡಲು, ನೆ [ಱೆ] ವನ್ನರ್–ಸಮರ್ಥರಾದಂಥ ವರು, ಆರ್–ಯಾರು? ಇಂತಿದೇತರ್ಕೆ–ಹೀಗೆ ಇದು ಏತಕ್ಕೆ, ಬಿಗುರ್ತುಪೈ–ಹೆದರಿಸು ತ್ತೀಯ? ನೆಲನಂ–ಭೂಮಿಯನ್ನು, ಒಪ್ಪಿಸಿ–ಅರ್ಪಿಸಿ, ತಪ್ಪದೆ–ತಪ್ಪುಮಾಡದೆ, ಬಾೞ್ವೆಂ– ಬದುಕುತ್ತೇನೆ, ಎನ್ನದೆ–ಎಂದು ಹೇಳದೆ, ಈ ಯುರ್ಕಿನೊಳ್–ಈ ಉದ್ಧತತನದಲ್ಲಿ, ನಿಂದು– ಎದುರಾಗಿ ನಿಂತು, ಸೆಣಸಲ್–ಮಾತ್ಸರ್ಯದಿಂದ ಹೋರಾಡಲು, ಎಂತು ಹೇಗೆ, ಬಗೆ ಬಂದುದು–ಮನಸ್ಸು ಬಂತು? ನಿನ್ನ ಮೆಯ್ಯನೆತ್ತರ್–ನಿನ್ನ ಮೈಯಿನ ರಕ್ತ, ಕುದಿದುರ್ಕಿ– ಕುದಿದು ಉಕ್ಕಿ, ಸಾವ ಬಗೆಯಿಂ–ಸಾಯುವ ಇಚೆ, ಯಿಂದ, ಸೆಣಸಲ್–ಯುದ್ಧಮಾಡಲು, ಬಗೆ–ಮನಸ್ಸು, ಬಂದುದು ಆಗದೇ ಬಂದದ್ದಾಗಲಿಲ್ಲವೇ, ಬಂತಲ್ಲವೇ? ಬಿಗುರ್ತು ಎಂಬಲ್ಲಿನ ಬಿಗುರ್ ಧಾತುವನ್ನು ಪ್ರೇರಣಾರ್ಥದಲ್ಲಿ ಬಳಸಿದೆ, ‘ಎಂತು ಬಿಗುರ್ತು ಬೀರರನೆ ಕೊಂದಪಿರ್’ –ಎಂದು ಪ್ರಯೋಗ ಹಿಂದೆಯೇ ಬಂದಿದೆ.

೫೧. ಯುಧಿಷ್ಠಿರನಂ–ಧರ್ಮರಾಜನನ್ನು, ಮುಳಿಯಿಸಿ–ಕೆರಳಿಸಿ, ಬರ್ದುಂ ಕಲಾದನುಂ– ಜೀವಿಸಲು ಸಮರ್ಥನಾದವನೂ, ಒಳನೆ–ಇರುವನೆ? ಅಮಳರ–ಅವಳಿಗಳಾದ ನಕುಲ ಸಹದೇವರ, ಅಳವು–ಪ್ರತಾಪ, ಎಂಬುದು, ಭೂ ಭುವನ ಪ್ರಸಿದ್ಧಂ–ಭೂಲೋಕದಲ್ಲಿ ಪ್ರಸಿದ್ಧ ವಾದದ್ದು; ಅವರಿಱಿಯೆ–ಅವರು ಯುದ್ಧ ಮಾಡಲು, ಪೆಳಱೆವು–ಹೆದರೆವು, ಎಂಬ– ಎನ್ನುವ, ಅರಿನೃಪ ಬಲಂಗಳ್–ಶತ್ರು ಸೈನ್ಯಗಳು, ಒಳರೇ–ಉಂಟೇ? ಇಲ್ಲ.

೫೨. ಭೀಮಸೇನಂ–ಭೀಮಸೇನನು, ಗಜೆಗೊಳೆ–ಗದಾಯುಧವನ್ನು ಹಿಡಿಯಲು, ಇದಿರಾಂತು–ಎದುರಿಸಿ ನಿಂತು, ಬರ್ದುಂಕುವ– ಜೀವಿಸುವ ಅಥವಾ ತಪ್ಪಿಸಿಕೊಳ್ಳುವ, ವೈರಿಭೂಭುಜ ಧ್ವಜಿನಿಗಳ್–ಶತ್ರುರಾಜರ ಸೇನೆಗಳು, ಇಲ್ಲದು–ಇಲ್ಲ; ಅಲ್ಲದೆಯುಂ– ಅಲ್ಲದೆ ಮತ್ತೆ, ಈ ಯುವರಾಜನ–ಈ ದುಶ್ಶಾಸನನ, ನೆತ್ತರಂ–ರಕ್ತವನ್ನು, ಕುರು ಧ್ವಜಿನಿಯೆ– ಕೌರವನ ಸೈನ್ಯವೇ, ನೋಡೆ–ನೋಡಲು, ಪೀರ್ದು–ಹೀರಿ, ಭವದೂರು ಯುಗಂಗಳಂ– ನಿನ್ನ ಎರಡು ತೊಡೆಗಳನ್ನು, ಆಜಿರಂಗದೊಳ್–ಯುದ್ಧರಂಗದಲ್ಲಿ, ಗಿಜಿಗಿಜಿ ಮಾಡ ಲೆಂದು–ಅಜಿಗುಜಿ ಮಾಡಬೇಕೆಂದು, ಅವನ ಪೂಣ್ದುದು–ಅವನು ಪ್ರತಿಜ್ಞೆ ಮಾಡಿದುದು, ನಿಕ್ಕುವಂ ಆಗದೆ–ನಿಜವಾಗದೆ, ಇರ್ಕುಮೇ–ಇರುತ್ತದೆಯೇ?

ವಚನ : ರಾಜಸೂಯ ವ್ಯತಿಕರದೊಳ್–ರಾಜಸೂಯ ಯಾಗದ ಸಂದರ್ಭದಲ್ಲಿ; ಕಪ್ಪಂ ಗೊಂಡ–ಕಪ್ಪವನ್ನು ತೆಗೆದುಕೊಂಡ; ವಿಕ್ರಮಮುಮಂ–ಶೌರ್ಯವನ್ನೂ; ಕಾಪಿನ ದೇವರ್– ಕಾಪಿನ ಎಂದರೆ ರಕ್ಷಣೆಯ ದೇವತೆಗಳು; ಒಂದು ಪೊೞ್ತುಂ ಅಗಲದ–ಒಂದು ಹೊತ್ತೂ ಬಿಡದ; ಅಳವಿಯ–ಪ್ರಮಾಣದ; ಅನಲಂಗೆ–ಅಗ್ನಿಗೆ; ಊಡಿ–ತಿನ್ನಿಸಿ; ಅಳವುಮಂ– ಪರಾಕ್ರಮವನ್ನೂ; ಅವಯವದೊಳ್–ಶ್ರಮವಿಲ್ಲದೆ, ಸುಲಭವಾಗಿ; ಪಾರ್ವರ ಪಿಳ್ಳೆಯ– ಬ್ರಾಹ್ಮಣ ಹುಡುಗನ; ಅಳ್ಕದ–ಹೆದರದ; ಸೂಕರನಂ–ಹಂದಿಯನ್ನು; ಒಂದೆ ಸೂೞ್–ಒಂದೇ ಬಾರಿಗೆ, ಅಂಬಿನೊಳೆಚ್ಚು–ಬಾಣದಿಂದ ಹೊಡೆದು, ಗಂಡ ಗರ್ವಮುಮಂ–ಪೌರುಷದ ಹೆಮ್ಮೆ ಯನ್ನು, ಪಗೆವರಪ್ಪ–ಹಗೆಗಳಾದ, ಪಡಲ್ವಡಿಸಿದ–ಚೆಲ್ಲಾಪಿಲ್ಲಿಯಾಗಿ ಕೆದರಿ ಬೀಳಿಸಿದ; ತಳರದೆ–ಚಲಿಸದೆ, ಪೆಱಗಿಕ್ಕಿ–ಹಿಂದಿಟ್ಟುಕೊಂಡು, ಕಾದ–ರಕ್ಷಿಸಿದ, ಗೊಜ್ಜಿಗನೆಂಬ ಸಕಳ ಚಕ್ರವರ್ತಿ–ಗೋವಿಂದನೆಂಬ ಚಕ್ರವರ್ತಿ, ಮರಲಿಱಿದು–ಹಿಮ್ಮೆಟ್ಟುವಂತೆ ಹೊಡೆದು, ಅತಿವರ್ತಿಯಾಗಿ–ಹದ್ದು ಮೀರಿದವನಾಗಿ; ಮಾರ್ಮಲೆವ–ಪ್ರತಿಭಟಿಸುವ; ನಿಱಿಸಿದ– ಸ್ಥಾಪಿಸಿದ; ಓರಂತು–ಕ್ರಮವಾಗಿ; ತೋಳ್ವಲಮುಮಂ–ಬಾಹುಬಲವನ್ನೂ, ಅದಿರೆವಂದು– ನಡುಗುವಂತೆ ಬಂದು; ಅಂಕಕಾಱನಂ–ಮಲ್ಲಯುದ್ಧಮಾಡುವ ಜಟ್ಟಿಯನ್ನು; ವೈರಿಗಜ ಘಟಾವಿಘಟನನ–ಶತ್ರುಗಳ ಆನೆ ಸೈನ್ಯವನ್ನು ಮರ್ದಿಸುವವನ; ಅದಟುಮಂ–ಶೌರ್ಯವನ್ನೂ, ಮೇಗಿಲ್ಲದ–ಉತ್ತಮವಾದುದಿಲ್ಲದ, ಬಲ್ಲಾಳ್ತನಮುಮಂ–ಅತಿಶಯವಾದ ಪೌರುಷ ವನ್ನು, ಸೆಣಸಲ್–ಮತ್ಸರಿಸಿ ಹೋರಾಡಲು, ಇಲ್ಲಿರುವ ಪೂರ್ವ ವೃತ್ತಾಂತಗಳು.

(1) ಜವನನವಯವದೊಳ್ ಗೆಲ್ದು ಪಾರ್ವರ ಪಿಳ್ಳೆಯ ಪೋದಜೀವಮಂ ಅರ್ಜುನ ತಂದದ್ದು: ಈ ಕಥೆ ೬–೨ ರಲ್ಲಿಯೂ ಬಂದಿದೆ; ಇದು ಯಾವ ಕಥೆಯೆಂಬುದು ಸ್ಪಷ್ಟ ವಾಗಿಲ್ಲ. ಶ್ರೀಕೃಷ್ಣ ಬಲರಾಮರು ತಮ್ಮ ಗುರುವಾದ ಸಾಂದೀಪಿನಿಯ ಸತ್ತ ಮಗನನ್ನು ಯಮ ಲೋಕದಿಂದ ತಂದು ಗುರುದಕ್ಷಿಣೆಯಾಗಿ ಒಪ್ಪಿಸಿದ ಕಥೆ (ಭಾಗವತ ೧೦–೪೫) ಹೇಳಿದೆ; ಕನ್ನಡ ಭಾಗವತದಲ್ಲೂ ಈ ಕಥೆ ಬರುತ್ತದೆ (೧೦–೪೧) ಆದರೆ ಇಲ್ಲಿ ಅರ್ಜುನನ ಪ್ರಸ್ತಾಪ ವಿಲ್ಲ. ಇನ್ನೊಂದು ಕಥೆ ಸಂಸ್ಕೃತ ಭಾಗವತದಲ್ಲೂ (೧೦–೮೯), ಕನ್ನಡ ಭಾಗವತದಲ್ಲೂ (೧೦–೯೯) ಇದೆ. ಕೃಷ್ಣನು ಒಂದು ಸಲ ಅಶ್ವಮೇಧಯಾಗವನ್ನು ಮಾಡುತ್ತಾನೆ; ಇತರ ರಾಜರು ಬಂದಂತೆಯೇ ಪಾಂಡವರು ಕೂಡ ಅಲ್ಲಿಗೆ ಬಂದಿರುತ್ತಾರೆ. ಯಾಗ ಮುಗಿದ ಮೇಲೆ ಶ್ರೀಕೃಷ್ಣನು ಆಸ್ಥಾನದಲ್ಲಿರುವಾಗ ಒಬ್ಬ ಬ್ರಾಹ್ಮಣ ಕೈಯಲ್ಲಿ ಹುಲ್ಲನ್ನು ಹಿಡಿದುಕೊಂಡು ರಾಜದ್ವಾರದ ಮುಂದೆ ಬಿದ್ದು ಗೋಳಾಡುತ್ತಾ ನೃಪಕುಲದ ದೋಷದಿಂದ ನನ್ನ ಪುತ್ರರು ಸತ್ತರು ಎಂದು ಮೊರೆಯಿಟ್ಟನು. ಕೃಷ್ಣನ ಅಪ್ಪಣೆಯಂತೆ ಅರ್ಜುನ ಹೊರಕ್ಕೆ ಬಂದು ಬ್ರಾಹ್ಮಣನನ್ನು ಕಂಡನು. ವಿಚಾರವೇನೆಂದು ಅರ್ಜುನ ಕೇಳಿದಾಗ ಬ್ರಾಹ್ಮಣ ‘ನನ್ನ ಹೆಂಡತಿ ಸೂತಿಕಾ ಗೃಹದಲ್ಲಿ ಮಕ್ಕಳನ್ನು ಹೆರುತ್ತಾಳೆ, ಆದರೆ ಏನಾಗುತ್ತದೋ ತಿಳಿಯೆ, ಮಕ್ಕಳ ಮುಖವನ್ನು ನೋಡುವ ಭಾಗ್ಯ ನನಗಿಲ್ಲ’ ಎಂದು ಹೇಳಿದನು. ಆಗ ಅರ್ಜುನ ‘ನೀನು ಹೆದರಬೇಡ, ನಾನು ನಿನ್ನ ಮಕ್ಕಳನ್ನು ಬದುಕಿಸುತ್ತೇನೆ, ನಡೆ ನಿನ್ನ ಮನೆಗೆ ಹೋಗೋಣ,’ ಎಂದು ಹೇಳಿ ಕೃಷ್ಣನಿಗೆ ಈ ವಿಷಯವನ್ನು ತಿಳಿಸಿದಾಗ ಅವನು ಮಕ್ಕಳನ್ನು ಬದುಕಿಸುವುದು ನಿನ್ನ ಕೈಯಲ್ಲಿ ಅಸಾಧ್ಯ ಎಂದು ಬಿಟ್ಟನು. ಅರ್ಜುನ ‘ಮಾತು ಕೊಟ್ಟಿದ್ದೇನೆ, ನಡೆಸಲೇಬೇಕು’ ಎಂದು ಹೊರಡಲನು ವಾದನು. ರಥಾರೂಢನಾಗಿ ಅವನು ಬ್ರಾಹ್ಮಣನ ಮನೆಗೆ ಬಂದನು. ಬ್ರಾಹ್ಮಣನ ಹೆಂಡತಿಗೆ ಪ್ರಸವ ಕಾಲವಾಗಿತ್ತು. ಆಗ ಅರ್ಜುನ ಆ ಮನೆಯ ಸುತ್ತಲೂ ಬಾಣದ ಪಂಜರವನ್ನು ಬಿಗಿದು ದಿಗ್ಬಂಧನ ಮಾಡಿದ. ಹುಟ್ಟಿದ ಮಗು ಹೇಗೋ ಮಾಯವಾಯಿತು, ಪಂಜರ ಇದ್ದ ಹಾಗೆಯೇ ಇತ್ತು, ಅರ್ಜುನನಿಗೆ ಆಶ್ಚರ್ಯವಾಯಿತು. ಬ್ರಾಹ್ಮಣ ನಿನ್ನ ಕೈಲಿ ಏನಾಗುತ್ತದೆ ಎಂದು ಅರ್ಜುನನನ್ನು ಮೂದಲಿಸಿದನು. ಆಗ ಅರ್ಜುನ ನನ್ನ ಸಾಹಸವನ್ನು ನೋಡು ಎಂದು ಹೇಳುತ್ತ ಹೊರಟು ಸ್ವರ್ಗ ಮರ್ತ್ಯ ಪಾತಾಳ ಲೋಕಗಳನ್ನೆಲ್ಲ ಹುಡುಕಾಡಿದನು. ಎಲ್ಲಿಯೂ ಆ ಮಗು ಕಾಣಲಿಲ್ಲ. ಅಗ್ನಿ ಪ್ರವೇಶ ಮಾಡುತ್ತೇನೆ ಎಂದು ಅರ್ಜುನ ಸಿದ್ಧನಾದಾಗ ಶ್ರೀಕೃಷ್ಣ ‘ಬೇಡ ಬೇಡ, ಬಾಲಕನನ್ನು ನಿನಗೆ ತೋರಿಸಿಕೊಡುತ್ತೇನೆ’ ಎಂದು ಸಮಾಧಾನಪಡಿಸಿ, ಅರ್ಜುನ ನೊಡನೆ ರಥವನ್ನೇರಿ ಪಡುವ ದಿಕ್ಕಿಗೆ ಪ್ರಯಾಣ ಮಾಡಿದನು. ಭಯಂಕರ ಕತ್ತಲೆ ಮುಂದಾ ಯಿತು. ಸುದರ್ಶನ ಚಕ್ರದಿಂದ ಕತ್ತಲೆಯನ್ನು ತೊಲಗಿಸಿ ಕೃಷ್ಣ ವಿಷ್ಣುಲೋಕಕ್ಕೆ ಬಂದನು. ಅಲ್ಲಿನ ತೇಜಸ್ಸು ಕಣ್ಣು ಕೋರೈಸಿತು. ಅರ್ಜುನನಿಗೆ ಕೃಷ್ಣ ದಿವ್ಯದೃಷ್ಟಿಯನ್ನು ಕೊಟ್ಟನು. ಅವನಿಗೆ ವಿಷ್ಣುಪದ ಗೋಚರವಾಯಿತು. ಅಲ್ಲಿ ಆ ಬ್ರಾಹ್ಮಣ ಬಾಲಕರೆಲ್ಲರೂ ಇದ್ದರು. ಪುಣ್ಯಮೂರ್ತಿಗಳಾದ ನಿಮ್ಮನ್ನು ನೋಡಬೇಕೆಂದು ನಾನು ದ್ವಿಜ ಬಾಲಕರನ್ನು ಇಲ್ಲಿಗೆ ತಂದೆ ಎಂದು ಪರಮಾತ್ಮನು ಹೇಳಿ ಆ ಬಾಲಕರನ್ನು ಕೃಷ್ಣಾರ್ಜುನರೊಡನೆ ಕಳಿಸಿಕೊಟ್ಟನು. ಅವರನ್ನು ಅರ್ಜುನ ಬ್ರಾಹ್ಮಣನಿಗೆ ಕೊಟ್ಟು ಸಂತಸವುಂಟುಮಾಡಿದನು. ಈ ಕಥೆಯಲ್ಲಿ ಅರ್ಜುನ ಯಮನನ್ನು ಗೆದ್ದ ವಿಷಯವಿಲ್ಲ. ಪುತ್ರರನ್ನು ಎಂದು ಇಲ್ಲಿದ್ದರೆ ಪಂಪನು ‘ಪಾರ್ವರ ಪಿಳ್ಳೆ’ ಎಂದು ಒಬ್ಬ ಮಗನನ್ನು ಹೇಳಿದ್ದಾನೆ. ಮೊದಲನೆಯ ಕಥೆಯಲ್ಲಿ ಕಾಣುವ ಯಮ ಪರಾಭವವನ್ನೂ ಏಕಪುತ್ರತೆಯನ್ನೂ ಎರಡನೆಯ ಕಥೆಯಲ್ಲಿ ಪಂಪನು ಸೇರಿಸಿರುವ ನೆಂದು ತೋರುತ್ತದೆ.

(2) ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ: ವಿಜಯಾದಿತ್ಯನು ಚಾಲುಕ್ಯ ವಂಶದ ರಾಜ. ಇವನಿಗೆ ಬಿಜ್ಜ ಎಂಬ ಹೆಸರೂ ಉಂಟು. ಗೋವಿಂದರಾಜನು ರಾಷ್ಟ್ರಕೂಟ ಚಕ್ರವರ್ತಿ, ನಾಲ್ವಡಿ ಗೋವಿಂದ; ಈ ಚಕ್ರವರ್ತಿಗೆ ವಿಜಯಾದಿತ್ಯನ ಮೇಲೆ ಕೋಪವುಂಟಾ ಯಿತು; ಕಾರಣ ಬಿಜ್ಜನು ಪದ್ಮ್ಯಾರ್ಯನೆಂಬವನನ್ನು ಕೊಂದು ಅನೇಕ ಸಾಮಂತರನ್ನೂ ದಂಡನಾಯಕರನ್ನೂ, ಅಶ್ವಗಜ ಘಟೆಗಳನ್ನೂ ನಾಶ ಮಾಡಿದ್ದು. ಬಿಜ್ಜನು II ನೆಯ ಅರಿ ಕೇಸರಿಯ ರಕ್ಷಣೆಯನ್ನು ಬೇಡಿ ಅವನಿಗೆ ಶರಣಾದನು. ಅರಿಕೇಸರಿ ಅವನನ್ನು ರಕ್ಷಿಸಿದನು. ನಾಲ್ವಡಿ ಗೋವಿಂದರಾಜನ ಆಳ್ವಿಕೆಯ ಕೊನೆಯ ವರ್ಷ ಕ್ರಿ.ಶ. ೯೩೪. ಈ ಘಟನೆ ಸುಮಾರು ಅದೇ ವರ್ಷದಲ್ಲಿ ನಡೆದಿರಬಹುದು. ಈ ವಿಷಯವಾಗಿ ವೇಮುಲವಾಡ ಶಾಸನದಲ್ಲಿ “ಸಾಮನ್ತಾನ್ ದಂಡಮುಖ್ಯಾನ್ ನಿಜಭುಜ ಪರಿಘಾನ್ ಪ್ರಸ್ಫುರದ್ದಂಡಧಾರಾ । ನ್ನೀರಾಂ ಭೋರಾಶಿಮಗ್ನಾಂ ಸ್ತುರಗಕರಿ ಘಟಾಪತ್ತಿ ಸಂಪತ್ತಿಯುಕ್ತಾನ್ ॥ ಕೃತ್ವಾಪದ್ಮ್ಯಾರ್ಯ ಮಾರ್ಯ್ಯಂ ಸ್ವಜನ ಪರಿಜನೈಸ್ಸನ್ನಿಹತ್ಯಾಜಿರಂಗೇ । ಕ್ರುದ್ಧೇ ಗೋವಿಂದ ರಾಜೇ ಶರಣ ಮುಪಗತೋ ರಕ್ಷಿತೋ ಯೇನ ಬಿಜ್ಜಃ ॥ ಎಂಬ ಪದ್ಯವಿದೆ. ಚಳುಕ್ಯ ಬಿಜ್ಜನು ಒಬ್ಬ ಸಾಮಂತ ರಾಜನಿದ್ದಿರಬಹುದು. ಪದ್ಮಾರ್ಯನು ಯಾರೋ ಚರಿತ್ರೆಗೆ ತಿಳಿಯದು. ಅರಿಕೇಸರಿ ಬಿಜ್ಜನನ್ನು ರಕ್ಷಿಸುವ ಕಾರ್ಯದಲ್ಲಿ ಅವನ ಮೇಲೆ ದಂಡನ್ನು ಕಳಿಸಿದನು. ಗೊಜ್ಜಿಗ (=ಗೋವಿಂದ) ಎಂಬ ಚಕ್ರವರ್ತಿ, ಈ ಸೈನ್ಯವನ್ನು ಅರಿಕೇಸರಿ ಸೋಲಿಸಿದನು.

(3) ಬದ್ದೆಗ ದೇವಂಗೆ ಸಕಳಸಾಮ್ರಾಜ್ಯಮನೋರಂತು ಮಾಡಿ : ನಾಲ್ವಡಿ ಗೋವಿಂದ ನೆಂಬ ರಾಷ್ಟ್ರಕೂಟ ಚಕ್ರವರ್ತಿ (೯೧೯–೯೩೪) ಸ್ತ್ರೀಲೋಲನಾಗಿದ್ದು ಅಸಮರ್ಥನಾದ ಆಡಳಿತ ಗಾರನಾಗಿದ್ದನು. ಇವನ ಚಿಕ್ಕಪ್ಪ ಬದ್ದೆಗ ದೇವ ಅಥವಾ ಮೂರನೆಯ ಅಮೋಘವರ್ಷ. ಅರಿಕೇಸರಿ ಚಕ್ರವರ್ತಿಯಾದ ಗೋವಿಂದರಾಜನನ್ನು ಸಿಂಹಾಸನದಿಂದ ತಳ್ಳಿ ಅವನ ಚಿಕ್ಕಪ್ಪ ನಾಗಿದ್ದ ಬದ್ದೆಗ ದೇವನನ್ನು ರಾಜನನ್ನಾಗಿ ಸ್ಥಾಪಿಸಿದನು. ಇವನು ೯೩೫–೯೩೯ರ ವರೆಗೆ ಆಳಿದನು. ಅರಿಕೇಸರಿ ಸಾಮಂತರಾಜನಾಗಿದ್ದರೂ ಚಕ್ರವರ್ತಿಯ ಮೇಲೆ ಕೈಮಾಡಿ ಅವನನ್ನು ಪದಚ್ಯುತನನ್ನಾಗಿ ಮಾಡಿ ತನ್ನನ್ನು ನಂಬಿದ ಬದ್ದೆಗ ದೇವನನ್ನು ಚಕ್ರವರ್ತಿ ಪದವಿಯಲ್ಲಿ ಸ್ಥಾಪಿಸಿದ್ದು ಅವನ ಶಕ್ತಿ ಪ್ರಭಾವಗಳನ್ನು ತೋರಿಸುತ್ತದೆ.

(4) ಕಕ್ಕಲನ ತಮ್ಮನಪ್ಪ ಬಪ್ಪುವ: ಈ ಕಕ್ಕಲನೂ ಅವನ ತಮ್ಮನಾದ ಬಪ್ಪುವನೂ ಯಾರೋ ತಿಳಿಯದು. ಅಪ್ರಕಟಿತವಾಗಿರುವ ಒಂದು ಶಿಲಾಹಾರರ ಶಾಸನದಲ್ಲಿ ಒಬ್ಬ ಕರ್ಕರನನ್ನು ಮೂರನೆಯ ಅಮೋಘವರ್ಷನು ಸೋಲಿಸಿದನೆಂದು ಕೆ. ಎ. ನೀಲಕಂಠಶಾಸ್ತ್ರೀ ಅವರು ಹೇಳುತ್ತಾರೆ (Journal of the Madras University XV, No. 2, p–124) ; ಈ ಕರ್ಕನೇ ಕಕ್ಕಲನಿರಬೇಕೆಂದು ಅವರ ಅಭಿಪ್ರಾಯ.

೫೩. ದಶಕಂಧರಂ–ರಾವಣನು, ಆಡಿಪಾಡಿ–ಕುಣಿದು ಹಾಡಿ, ನೆಟ್ಟನೆ–ನೇರಾಗಿ, ಬೂತು– ಬಡಪ್ರಾಣಿ, ಕೊಳ್ವತೆಱದಿಂ–ತೆಗೆದುಕೊಂಡ ರೀತಿಯಿಂದ, ಬರಂಗಳಂ–ವರಗಳನ್ನು, ಈಶ್ವರ ನಲ್ಲಿ–ಶಿವನಿಂದ, ನಾಣ್ಗೆಟ್ಟಿರೆ–ನಾಚಿಕೆ ಕೇಡಾಗಲು, ಕೊಂಡನಲ್ಲದೆ–ತೆಗೆದುಕೊಂಡನಲ್ಲದೆ, ಒಟ್ಟಜೆಯಿಂದ–ಪರಾಕ್ರಮದಿಂದ, ಕೊಂಡನೆ–ತೆಗೆದುಕೊಂಡನೆ? ಪೇೞಿಂ–ಹೇಳಿರಿ; ಎನುತುಂ–ಎಂದು ಹೇಳುತ್ತಾ, ವಿಜಯಂ–ಅರ್ಜುನ, ನೆಲಕಿಕ್ಕಿ–ಶಿವನನ್ನು ನೆಲಕ್ಕೆ ಬೀಳಿಸಿ, ಗಂಟಲಂಮೆಟ್ಟದೆ–ಗಂಟಲನ್ನು ತುಳಿಯದೆ, ಇಂದ್ರಕೀಲದೊಳ್– ಇಂದ್ರಕೀಲ ಪರ್ವತ ದಲ್ಲಿ, ಹರನ ಪಾಶುಪತಾಸ್ತ್ರಮಂ–ಶಿವನ ಪಾಶುಪತವೆಂಬ ಬಾಣವನ್ನು, ಕೊಂಡನೆ– ತೆಗೆದುಕೊಂಡನೆ? ಎಂದರೆ ಶಿವನ ಗಂಟಲನ್ನು ಮೆಟ್ಟಿ ಅರ್ಜುನ ಪಾಶುಪತವನ್ನು ಪಡೆದನು; ರಾವಣನಾದರೆ ಆಡಿಹಾಡಿ ಶಿವನಿಂದ ವರಗಳನ್ನು ಪಡೆದನು. ಆದ್ದರಿಂದ ಅರ್ಜುನ ರಾವಣನಿ ಗಿಂತ ಪರಾಕ್ರಮಿ.

೫೪. ಪೊಂಗಿ–ಉಕ್ಕಿ, ಕಡಂಗಿ–ಉತ್ಸಾಹಿಸಿ ಬೀರದೊಳೆ ಬೀಗುವ–ಶೌರ್ಯದಲ್ಲೆ ಗರ್ವಪಡುವ, ನಿನ್ನಣುಗಾಳ್–ನಿನ್ನ ಪ್ರೀತಿಗೆ ಆಸ್ಪದರಾದವರೇ, ನೋಡೆ–ನೋಡುತ್ತಿರಲು; ನಿನ್ನಂಗನೆಯರ್–ನಿನ್ನ ಸ್ತ್ರೀಯರು, ತೊವಲ್ಗೊಳೆ–ಕೈಯಲ್ಲಿ ಚಿಗುರನ್ನು, ಹಿಡಿದಿರಲು (ಅಪಾಯದಲ್ಲಿ ರಕ್ಷಣೆ ಬೇಡ ಬಂದವರು ಕೈಯಲ್ಲಿ ಚಿಗುರನ್ನು ಹಿಡಿಯುವುದು ಪದ್ಧತಿ), ಭಯಂಗೊಳೆ–ಹೆದರಿರಲು, ಚಿತ್ರಾಂಗದಂ–ಚಿತ್ರಾಂಗದನೆಂಬ ಗಂಧರ್ವ, ಕೋಡಗಗಟ್ಟು ಕಟ್ಟಿ–ಕಪಿಯನ್ನು ಕಟ್ಟುವ ಹಾಗೆ ಕಟ್ಟಿ, ನಿನ್ನಂ–ನಿನ್ನನ್ನು, ಉಯ್ಯೆ–ತೆಗೆದುಕೊಂಡು ಹೋಗಲು, ಎಡೆಮಾಡದೆ–ತಡಮಾಡದೆ, ಅಸುಂಗೊಳೆ–ಪ್ರಾಣವನ್ನು ಸೆಳೆಯುವಂತೆ, ಕಾದಿ ತಂದ ವೀರಂಗೆ–ಯುದ್ಧ ಮಾಡಿ ತೆಗೆದುಕೊಂಡು ಬಂದ ವೀರನಾದ, ಅರಿಗಂಗೆ–ಅರ್ಜುನನಿಗೆ, ಸುಯೋಧನಾ–ದುರ್ಯೋಧನನೇ, ನೀಂ–ನೀನು, ಮಲೆದು–ಗರ್ವಿಸಿ, ನಿಲ್ವುದು–ಎದುರಿಗೆ ನಿಲ್ಲುವುದು, ಪಾೞಿವಲಂ–ಕ್ರಮವಲ್ಲವೆ, ಧರ್ಮವಲ್ಲವೆ? ಅಲ್ಲ, “ಬೀಗು–ಹರ್ಷ ಭಾವೇ, ಸ್ಥೌಲ್ಯೇಚ” ; ಅಣುಗಾಳ್: ಅಣುಗಾಳ್ ಕಾರ್ಯದ ಶೌರ್ಯದೊಳ್ ವಿಜಯದಾಳ್ ಎಂದು ಪ್ರಯೋಗಾಂತರ; ತೊವಲ್–ಎಳದಳಿರು [ತ. ಶುಪ್ಪಲ್, (ಮ), ತೋಲ್], ಸೋಮ ಶರ್ಮಭಟ್ಟಂ ಪಿರಿದೊಂದು ತೊವಲಂ ಪಿಡಿದು ಬ್ರಹ್ಮಣ್ಯಂ ಭೋ ಎಂದೞುತ್ತುಂ (ವಡ್ಡಾ ೩೩–೨); ನೀನವಧಾರಿಸೆಂದು ತೊವಲಂ ಮುಂದಿಕ್ಕಿದಂ ಭೂಪನಾ (ಸುಕುಮಾ. ೨–೪೨).

೫೫. ನಿನ್ನಂ–ನಿನ್ನನ್ನು, ಕುರುರಾಜ–ದುರ್ಯೋಧನನೇ, ಗಂಧರ್ವರುಯ್ವಂದು–ಗಂಧರ್ವ ಸೆರೆ ಹಿಡಿದು ತೆಗೆದುಕೊಂಡು ಹೋಗುವಾಗ, ಗುರುವಿಲ್ಲಾ–ಗುರುವಾದ ದ್ರೋಣನು ಇಲ್ಲ, ಕರ್ಣನಿಲ್ಲಾ–ಕರ್ಣನು ಇಲ್ಲ; ಗುರುವಿನ ಮಗನಿಲ್ಲಾ–ಗುರುಪುತ್ರನಾದ ಅಶ್ವತ್ಥಾಮನು ಇಲ್ಲ; ಕೃಪಾಚಾರ್ಯನಿಲ್ಲಾ–ಕೃಪಾಚಾರ್ಯನು ಇಲ್ಲ; ನಿನ್ನ ಇನಿಬರೊಳ್ ತಮ್ಮಂದಿ ರೊಳ್–ನಿನ್ನ ಇಷ್ಟು ಜನ ತಮ್ಮಂದಿರಲ್ಲಿ, ಆರ್ಇಲ್ಲ–ಯಾರೂ ಇಲ್ಲ; ಗಾಂಗೇಯನಿಲ್ಲಾ– ಭೀಷ್ಮನು ಇಲ್ಲ; ಮರುಳೇ–ತಿಳಿಗೇಡಿಯೇ, ಗಾಂಡೀವಿ–ಅರ್ಜುನನು, ಆರ್–ಯಾವನು, ಎಂದು, ಇಳಿಸಿ ನುಡಿವೆ–ಕಡೆಗಣಿಸಿ ಮಾತಾಡುವೆ; ನೆರೆದ ಕುರುಬಲಂ–ಸೇರಿದ ಕುರುಸೈನ್ಯ, ಕುರುವಿಟ್ಟಂತೆ–ಎರಕ ಹೊಯ್ದಂತೆ; ಇರ್ದುದಲ್ಲಾ–ಇದ್ದಿತಲ್ಲವೆ; ತಂದವಂ–ನಿನ್ನನ್ನು ಬಿಡಿಸಿ ತಂದವನು, ಪಾರ್ಥನಲ್ಲಾ–ಅರ್ಜುನನಲ್ಲವೆ? “ಕರುವಿಡು–ಲೇಪ್ಯಕರಣೇ” ಇಲ್ಲಾ=ಇಲ್ಲಂಗಡ.

೫೬. ಅಮೋಘಂ–ವ್ಯರ್ಥವಿಲ್ಲದೆ, ಬವರಂಗೆಯ್ವಂ–ಯುದ್ಧಮಾಡೋಣ, ಎಂಬ ಬಗೆಯಿಂ–ಎಂಬ ಮನಸ್ಸಿನಿಂದ, ನೀಮೆಲ್ಲಂ–ನೀವೆಲ್ಲರೂ, ಆದಂ ರಣೋತ್ಸವದಿಂ–ಅತಿಶಯ ವಾದ ಯುದ್ಧಾಸಕ್ತಿಯಿಂದ, ನಿನ್ನೆಯೆ–ನಿನ್ನೆಯ ದಿವಸವೇ, ಪೋದ–ನಡೆದ, ಕಳೆದ, ಗೋಗ್ರಹಣದಂದು–ತುರುಗಳನ್ನು ಸೆರೆಹಿಡಿಯುವಾಗ, ಏನಾದಿರ್–ಏನಾದಿರಿ? ಅಂತು– ಹಾಗೆ, ಆ, ಪರಾಭವಮಂ–ಸೋಲನ್ನು, ಚೀ–ಛೀ, ಮಱೆದಿರ್ದಿರ್ ಅಪ್ಪೊಡೆ–ನೀವು ಮರೆತು ಇದ್ದ ಪಕ್ಷದಲ್ಲಿ, ಅದೇನ್–ಅದೇನು, ಏವೋದುದು–ಏನು ಹೋಯಿತು, ಇನ್ನುಂ– ಮತ್ತೆಯೂ, ಗುಣಾರ್ಣವನಿಂ–ಅರ್ಜುನನಿಂದ, ಮಹಾಗಾಂಡೀವ ನಿರ್ಘೋಷಮಂ–ಗಾಂಡೀ ವದ ಮಹಾಟಂಕಾರನಾದವನ್ನು, ನಾಳೆಯೆ–ನಾಳೆಯ ದಿನವೇ, ಕೇಳದೆ–ಕಿವಿಯಾರ ಕೇಳದೆ, ಇರ್ಪಿರೆ–ಇರುತ್ತೀರಾ?

೫೭. ಈ ಪದ್ಯದಲ್ಲಿ ಶ್ರೀಕೃಷ್ಣ ಬರಲಿರುವ ಯುದ್ಧದ ಭೀಕರ ಚಿತ್ರವನ್ನು ಕೊಡುತ್ತಾನೆ: ಸುರಿವ–ಸುರಿಯುವ, ಸರಲ್–ಬಾಣಗಳು; ನರಲ್ವ ಭಟರ್–ನರಳುವ ಯೋಧರು; ಎತ್ತ ಮುರುಳ್ವದೞಂ–ಎಲ್ಲೆಲ್ಲೂ ಉರುಳಿ ಬೀಳುವ ಸೈನ್ಯ; ಪೊರಳ್ವ ಸಿಂಧುರ ಘಟೆ–ಹೊರಳಾ ಡುವ ಆನೆಗಳ ಸಮೂಹ; ಬರ್ಪನೆತ್ತರ ಕಡಲ್–ಹರಿದು ಬರುವ ರಕ್ತದ ಸಮುದ್ರ; ಕುಣಿವಟ್ಟೆ ಗಳ್–ಕುಣಿದಾಡುವ ಮುಂಡಗಳು, ಆಜಿಯೊಳ್–ಯುದ್ಧದಲ್ಲಿ, ಭಯಂಕರತರ ಮಪ್ಪಿನಂ–ಅತಿ ಭಯಂಕರವಾಗುತ್ತಿರಲು, ಪಗೆವರ–ಹಗೆಗಳ, ಒಕ್ಕಲೊಳ್–ಮನೆಗಳಲ್ಲಿ, ಓವೆನಲ್–ಓ ಎಂದು ಕೂಗಲು, ಒರ್ವರ್ ಇಲ್ಲದಂತಿರೆ–ಒಬ್ಬರೂ ಇಲ್ಲದಿರುವ ಹಾಗೆ, ತವೆ–ನಾಶವಾಗುವ ಹಾಗೆ, ಕೊಲ್ಗುಂ–ಕೊಲ್ಲುತ್ತಾನೆ. ಅಂತುಂ–ಹಾಗೆಯೂ, ಅರಿಕೇಸರಿಗೆ– ಅರ್ಜುನನಿಗೆ, ಆಂತು–ಎದುರಾಗಿ, ಬರ್ದುಂಕಲಕ್ಕುಮೇ–ಬದುಕಲಾಗುತ್ತದೆಯೇ, ತಪ್ಪಿಸಿ ಕೊಳ್ಳಲಾಗುತ್ತದೆಯೇ?

ವಚನ : ಕಾಳನೀಳ ಮೇಘದಂತು–ಪ್ರಳಯ ಕಾಲದ ಕರಿಮೋಡಗಳ ಹಾಗೆ, ಮಸಗಿ– ವಿಜೃಂಭಿಸಿ; ಅಸುರಕುಳವಿಳಯಕೇತುಗೆ–ಶ್ರೀಕೃಷ್ಣನಿಗೆ, ಫಣಿಕೇತು–ದುರ್ಯೋಧನ; ತಳ ಮಳಿಸಿ–ತಳಮಳವೆಂದು ಕೋಪದಿಂದ ಕುದಿದು; ಕಣ್ಗಾಣದೆ–ಕಣ್ಣು ಕಾಣದೆ, ವಿವೇಕ ಶೂನ್ಯ ನಾಗಿ.

೫೮. ಎೞ್ಪೋಗು–ಏಳು, ತೊಲಗಿ ಹೋಗು; ದೂತನಪ್ಪನ–ದೂತನಾಗಿರುವವನ, ಬೆೞ್ಪನ–ಬೇಡುವವನ, ನುಡಿಗೇಳ್ದು–ಮಾತನ್ನು ಕೇಳಿ, ಮುಳಿಯಲಾಗದು–ಕೋಪ ಮಾಡಿಕೊಳ್ಳಲಾಗುವುದಿಲ್ಲ; ನೀನುಂ–ನೀನು ಕೂಡ, ಮೆೞ್ಪಟ್ಟು–ಮೋಸಹೋಗಿ, ವಿದುರ ನೆಂಬ–ವಿದುರನೆನ್ನುವ, ಈ ತೊೞ್ಪುಟ್ಟಿಯ–ಈ ತೊತ್ತಿಗೆ ಹುಟ್ಟಿದವನ, ಮನೆಯ ಕೂೞೆ– ಮನೆಯ ಅನ್ನವೇ, ನುಡಿಯಿಸೆ–ಮಾತಾಡಿಸಲು, ನುಡಿದಯ್–ಮಾತಾಡಿದೆ, ಇಲ್ಲಿ ಏೞ್ಪೋಗು, ಬೇೞ್ಪನ–ಎಂದು ಪಾಠಗಳಿರಬಹುದು.

ವಚನ : ಅತಿಕುಪಿತ–ಅತಿಯಾಗಿ ಕೆರಳಿದ.

೫೯. ಭೀಮಸೇನಂ–ಭೀಮನು, ಕಡುಮುಳಿದು–ತೀವ್ರವಾಗಿ ಕೆರಳಿ, ನಿನ್ನ ತೊಡೆಗಳ ನುಡಿ ವೆಡೆಯೊಳ್–ನಿನ್ನ ತೊಡೆಗಳನ್ನು ಮುರಿಯುವ ಸಮಯದಲ್ಲಿ, ಆ ಪದದೊಳ್–ಆ ಹೊತ್ತಿ ನಲ್ಲಿ, ಅಥವಾ ಆಪತ್ತಿನಲ್ಲಿ, ಆಂ–ನಾನು, ಇದಂ–ಇದನ್ನು, ಈ ಬಿಲ್ಲನ್ನು, ಪಿಡಿಯಲ್ಕೆಂದು– ಹಿಡಿಯಬೇಕೆಂದು, ಇರ್ದೆಂ–ಇದ್ದೆನು; ಪಿಡಿಯೆಂ–ಹಿಡಿಯೆನು, ಪೋಗು–ಹೋಗು, ಎಂದು, ಸಭೆಯೊಳ್–ಸಭೆಯಲ್ಲಿ, ಬಿಲ್ಲಂ–ಬಿಲ್ಲನ್ನು, ಉಡಿದಂ–ಮುರಿದನು, ವಿದುರ ತನ್ನ ಬಿಲ್ಲನ್ನು ಮುರಿದ ದೃಶ್ಯ ವ್ಯಾಸಭಾರತದಲ್ಲಿಲ್ಲ; ಕುಮಾರವ್ಯಾಸನ ಭಾರತದಲ್ಲಿದೆ (೫–೮–೬೭), ಪಂಪನ ಮಾತುಗಳನ್ನೇ ಇಲ್ಲಿ ಕಾಣಬಹುದು.

ವಚನ : ವಿಚಿ, ದುರ–ಒಡೆದು ಹೋದ, ಮುರಿದ; ಬಾಳಂಕಿೞ್ತು–ಕತ್ತಿಯನ್ನು ಒರೆ ಯಿಂದ ಸೆಳೆದು; ಏವದಿಂ–ಕೋಪದಿಂದ; ನೊಳವಿನಂತೆ–ನೊಣದ ಹಾಗೆ; ಉರುಳ್ತರೆ–ಉರುಳಿ ಬರಲು; ಪಾಯ್ದು–ನುಗ್ಗಿ.

೬೦. ಮುರಾಂತಕಂ–ಶ್ರೀಕೃಷ್ಣನು, ವೈಷ್ಣವದಿಂ–ತನ್ನ ವಿಷ್ಣುಮಾಯೆಯಿಂದ, ಇರ್ದರಂ– ಸಭೆಯಲ್ಲಿದ್ದವರನ್ನು, ನೆಱೆಯೆ–ಪೂರ್ಣವಾಗಿ, ಮೋಹಿಸಿ–ಮೂರ್ಛೆಗೊಳಿಸಿ, ನೆಲನೆಲ್ಲ ಮಂ–ಭೂಮಿಯನ್ನೆಲ್ಲ, ಮೂಱಡಿಮಾಡಿದಂದು–ಮೂರು ಹೆಜ್ಜೆಗಳಲ್ಲಿ ಅಳೆದಾಗ, ಆ ಬಲಿಗೆ–ಆ ಬಲಿಚಕ್ರವರ್ತಿಗೆ, ಆದ–ಉಂಟಾದ, ರೂಪಮಂ–ಬೃಹದ್ರೂಪವನ್ನು, ತೋಱಿ ದಂ–ತೋರಿಸಿದನು; ಈ ಜಗತ್ರಯಮಂ–ಈ ಮೂರು ಲೋಕಗಳನ್ನು, ಒರ್ಮೆಯೆ–ಒಂದೇ ಬಾರಿಗೆ, ನುಂಗುವ, ಕಾಲರೂಪಮಂ–ಪ್ರಳಯದ ಆಕಾರವನ್ನು, ಯಮನ ರೂಪವನ್ನು, ಒರ್ಮೆಯೆ–ಒಂದೇ ಸಲಕ್ಕೆ, ವಿಶ್ವರೂಪಮಂ–ಅನಂತಾದ್ಭುತವನ್ನು, ತೋಱಿದಂ–ತೋರಿಸಿ ದನು.

ವಚನ : ವರದನಾಗಿ–ವರವನ್ನು ಕೊಟ್ಟವನಾಗಿ; ತನಗೆ ಮಾಡಿ–ತನ್ನ ಪಕ್ಷವನ್ನಾಗಿ ಮಾಡಿ ಕೊಂಡು;

೬೧. ಗುರುಕೃಪಶಲ್ಯ ಸಿಂಧುಸುತರಪ್ಪೊಡೆ–ದ್ರೋಣಕೃಪಶಲ್ಯಭೀಷ್ಮರಾದರೆ, ನಮ್ಮಯ– ನಮ್ಮ, ಪಕ್ಷಂ–ಕಡೆಯವರು ಎಂದರೆ ನಮಗೆ ಸೇರಿದವರು; ಗುರುಸುತಂ–ಅಶ್ವತ್ಥಾಮನು, ಈಗಳ್–ಈಗ, ಎಮ್ಮೊಳ್–ನಮ್ಮಲ್ಲಿ, ಒಂದಿದಂ–ಸೇರಿದನು; ಅಖಿಳಾಸ್ತ್ರವಿಶಾರದನಪ್ಪ ನುಂ–ಎಲ್ಲಾ ಬಗೆಯಾದ ಆಯುಧಗಳಲ್ಲೂ ನಿಪುಣನಾದವನೂ, ಗೆಲಲ್ಕೆ ಅರಿಯನುಂ–ಜಯಿ ಸಲ ಸಾಧ್ಯನೂ, ಒಂದಿಬಾರದನುಂ–ನಮ್ಮೊಡನೆ ಕೂಡಿ ಬರದವನೂ, ಅಂಕದ–ಪ್ರಸಿದ್ಧನಾದ, ಕರ್ಣನೆ–ಕರ್ಣನೇ; ಸಮಸ್ತ ಧಾತ್ರಿಯೊಳ್–ಈ ಸಮಸ್ತ ಭೂಮಿಯಲ್ಲಿ, ಆತನಿಂ–ಅವನಿಂದ, ಬೀರಂ–ಪ್ರತಾಪವು, ಉರಿವರಿದತ್ತು–ಉರಿಯಂತೆ ಉಲ್ಬಣವಾಯಿತು; ಅವನಿಂದೆ–ಆತ ನಿಂದ, ಚಾಗಂ–ದಾನವು, ಎಸೆದತ್ತು–ಪ್ರಕಾಶಿಸಿತು.

೬೨. ಎಂತೆನೆ–ಹೇಗೆಂದರೆ, ವಜ್ರಿ–ಇಂದ್ರನು, ವಜ್ರಕವಚಕ್ಕೆ–ತನ್ನ ಸಹಜವಾದ ವಜ್ರಾಂಗಿಗೆ, ನಿಜೋಜ್ವಲ ಕುಂಡಲಕ್ಕೆ–ತನ್ನ ಪ್ರಕಾಶಮಾನವಾದ ಕರ್ಣಕುಂಡಲಗಳಿಗೆ, ಕೈಯಾಂತೊಡೆ–ಕೊಡು ಎಂದು ಕೈಯನ್ನು ಚಾಚಿದರೆ, ಪಾಂಡುಪುತ್ರರನೆ–ಪಾಂಡವರನ್ನೇ, ಕಾದು–ರಕ್ಷಿಸಿ, ಎರೆವಂದು–ಬೇಡಲು ಬಂದು, ಉಗಿವಂದಲ್–ಭೇದಿಸುತ್ತಾನೆ ನಿಜ ವಾಗಿಯೂ, ಎಂದು–ಎಂಬುದಾಗಿ, ಮಂತಣದಿಂದೆ–ವಿವೇಕದ ಮಾತುಗಳಿಂದ, ಇನಂ– ಸೂರ್ಯನು, ಬಾರಿಸೆಯುಂ–ತಡೆದರು ಕೂಡ, ಎಂದುದನೆನ್ನದೆ–ಹೇಳಿದ್ದನ್ನು ಹೇಳದೆ ಎಂದರೆ ಒಪ್ಪದೆ, ಮೀಱಿ–ಉಲ್ಲಂಘಿಸಿ, ಒಡಲೊಳ್ ತೊಡರ್ದಾ ತನುತ್ರಮಂ–ಮೈಗೆ ಅಂಟಿ ಕೊಂಡಿದ್ದ ಆ ವಜ್ರಕವಚವನ್ನು, ಬಿಡೆ ನೇರ್ದು–ಸುಲಿದು ಬರುವ ಹಾಗೆ ಕತ್ತರಿಸಿ, ಜಸಕ್ಕೆ ನೋಂತು–ಕೀರ್ತಿಗೆ ವ್ರತ ಹಿಡಿದು, ಎಂದರೆ ಕೀರ್ತಿಗಾಗಿ ಸಂಕಲ್ಪಿಸಿ, ಓರಂತು–ಕ್ರಮವಾಗಿ, ಕೊಟ್ಟಂ– ದಾನಮಾಡಿದನು, ಎಂದರೆ ಮೊದಲು ಕವಚವನ್ನೂ, ಅನಂತರ ಕುಂಡಲಗಳನ್ನೂ ದಾನವಾಗಿ ಕೊಟ್ಟನು ಎಂದು ತಾತ್ಪರ್ಯ; ಎರೆವಂದು ಎರೆಯಲ್+ ಬಂದು;

೬೩. ಬೇಡಿದರ್ಗೆ–ಯಾಚಕರಿಗೆ, ಬರವಂ–ವರವನ್ನು, ಈವ–ಕೊಡುವ, ದೇವನೆ–ದೇವತೆ ಯಾದ ಇಂದ್ರನೇ, ವಲಂ–ದಿಟವಾಗಿಯೂ, ನಾಣ್ಗೆಟ್ಟು ಬಂದು–ನಾಚಿಕೆಯನ್ನು ಕಳೆದು ಕೊಂಡು ಬಂದು, ಎನ್ನಂ–ನನ್ನನ್ನು, ಇಂತು–ಹೀಗೆ, ಎರೆದಂ–ಬೇಡಿದನು; ಬರ್ದರೊಳ್– ಬಾಳಿದವರಲ್ಲಿ, ಆನೆ–ನಾನೇ, ಬರ್ದನ್–ಬಾಳಿದವನು, ಎನುತುಂ–ಎಂದು ಹೇಳುತ್ತ, ನೇರ್ವಲ್ಲಿ–ಕತ್ತರಿಸುವಾಗ, ಕನ್ನೆತ್ತರುಂ–ಕೆಂಪುರಕ್ತವೂ; ಬಿರಿಕಂಡಂಗಳೆ–ಸೀಳಿದ ಮಾಂಸ ಖಂಡಗಳೇ, ಬೀೞಲುಣ್ಮೆ–ಧಾರೆಯಾಗಿ ಸುರಿಯುತ್ತಿರಲು, ಮನದ–ಮನಸ್ಸಿನ, ಒಂದು ಅಣ್ಮು–ಒಂದು ಶಕ್ತಿ, ಇಟ್ಟಳಂ–ಅತಿಶಯವಾಗಿ, ಪೊಣ್ಮೆ–ತಲೆದೋರಲು, ಆ ಕರ್ಣನಾ ಕವಚಂಗೊಂಡಂದಂ–ಆ ಕರ್ಣನ ಕವಚವನ್ನು ತೆಗೆದುಕೊಂಡ ರೀತಿ, ನೋಡೆ–ನೋಡಲು, ವೀರರಸಕ್ಕೆ–ಶೌರ್ಯರಸಕ್ಕೆ, ಆಗರಮಾಯ್ತು–ಮನೆಯಾಯಿತು, ಬೀೞ್ ಬೀೞಲ್; ಬೀಳು ವಿಕೆ ಎಂಬರ್ಥದ ಭಾವನಾಮ; “ನೇರ್–ಕೃಂತನೇ”

ವಚನ : ನೆತ್ತರ್ ಪನಪನ ಪನಿಯೆ–ರಕ್ತ ಪನಪನ ಎಂದು ತೊಟ್ಟಿಡಲು; ತಿದಿಯುಗಿ ವಂತೆ–ಚರ್ಮವನ್ನು ಸುಲಿಯುವ ಹಾಗೆ; ಉಗಿದು–ಸೀಳಿ; ಭೇದಿಸಿದಪ್ಪೆಂ–ಭೇದೋಪಾಯ ದಿಂದ ಛಿದ್ರಿಸುತ್ತೇನೆ: ಚೊಚ್ಚಿಲ ಮಗನಪ್ಪ–ಮೊದಲ ಮಗನಾದ; ಸೂರ್ಯಸೂನುವಂ– ಕರ್ಣನನ್ನು; ರಥಾಂಗಧರಂ–ಚಕ್ರಪಾಣಿ, ಕೃಷ್ಣ; ಕಿಱಿದಂತರಂ–ಸ್ವಲ್ಪ ದೂರ; ಕಳಿಪಿ–ಕಳಿಸಿ ಕೊಟ್ಟು, ಮಗುೞ್ವೆ–ಹಿಂದಿರುಗುವೆ; ಪೋಪಂ–ಹೋಗೋಣ;

೬೪. ಕೃಷ್ಣನು ಕರ್ಣನನ್ನು ಭೇದಿಸಿ ಅಧೀರನನ್ನಾಗಿ ಮಾಡಿದ್ದು; ಕರ್ಣ–ಕರ್ಣನೇ, ಭೇದಿಸ ಲೆಂದೆ–ಮನಸ್ಸನ್ನು ಒಡೆಯಬೇಕೆಂದೇ, ನುಡಿದರ್–ಮಾತಾಡಿದರು, ಎನ್ನದಿರ್–ಎಂದು ಹೇಳದೆ ಇರು; ಒಯ್ಯನೆ–ಮೆಲ್ಲಗೆ, ಸಮಾಧಾನದಿಂದ, ಕೇಳ–ಕೇಳು; ನಿನ್ನಾದಿಯೊಳ್–ನಿನ್ನ ಮೊದಲಲ್ಲಿ, ಹುಟ್ಟಿನಲ್ಲಿ, ಅಬ್ಬೆ–ತಾಯಿ, ಕೊಂತಿ–ಕುಂತಿ; ನಿನಗೆ ಅಮ್ಮಂ–ನಿನಗೆ ತಂದೆ, ಅಹರ್ಪತಿ–ಸೂರ್ಯನು; ಪಾಂಡುನಂದನರ್–ಪಾಂಡವರು, ಸೋದರರ್–ಒಡಹುಟ್ಟಿ ದವರು; ಆಂ–ನಾನು, ಎಯ್ದೆ–ಚೆನ್ನಾಗಿ, ಮಯ್ದುನನೆಂ–ಮೈದುನನಾಗಿದ್ದೇನೆ; ಪೆಱತೇಂ ಪಡೆ ಮಾತೋ–ಬೇರೇನು ವಿಚಾರವೋ, ಸುದ್ದಿಯೋ, ನಿನ್ನದೀಮೇದಿನಿ–ಈ ಭೂಮಿ ನಿನ್ನದು, ಪಟ್ಟಮುಂ ನಿನತೆ–ರಾಜ್ಯ ಪಟ್ಟವು ಕೂಡ ನಿನ್ನದೇ, ನೀನಿರೆ–ನೀನು ಇರುವಾಗ, ಮತ್ತೆ ಪೆಱರ್– ಮತ್ತೆ ಇತರರು, ನರೇಂದ್ರರೇ–ರಾಜರೇ? ಅಲ್ಲ. ಈ ಪದ್ಯದಲ್ಲಿ ಹತ್ತು ಸಣ್ಣ ಸಣ್ಣ ವಾಕ್ಯಗಳಿವೆ. ಇವು ಒಂದಾದಮೇಲೊಂದು ಉಸಿರುಬಿಡುವುದಕ್ಕೆ ಕೂಡ ಅವಕಾಶವಿಲ್ಲದಂತೆ ಬಂದು, ಕರ್ಣನ ಆಶ್ಚರ್ಯ ಹರ್ಷವಿಷಾದಗಳನ್ನು ಕಲಕಿ ವೆಗ್ಗಳಿಸುತ್ತ ಬೀಸುತ್ತವೆ, ಅನಿರೀಕ್ಷಿತವಾಗಿ ಕರ್ಣನ ಮನವನ್ನು ಅಪ್ಪಳಿಸುತ್ತವೆ.

೬೫. ಉತ್ತುಂಗಸ್ತನಿ–ಎತ್ತರವಾದ ಮೊಲೆಯುಳ್ಳವಳು, ಎಂದರೆ ಹೊಸಪ್ರಾಯ ದಲ್ಲಿರುವ ಕುಂತಿ, ಕೆಯ್ಯೆಡೆಯೆಂದು–ನ್ಯಾಸವೆಂದು, ರಕ್ಷಣೆಯ ವಸ್ತುವೆಂದು, ಗಂಗೆಗೆ–ಗಂಗಾ ದೇವಿಗೆ, ಕೊಟ್ಟು ಪೋಗೆ–ಕೊಟ್ಟು ಹೋಗಲು, ಸೂತಂ–ಬೆಸ್ತರ ಕುಲದವನಾದ ಸೂತನೆಂಬ ವನು, ಕಂಡು–ನೋಡಿ, ಆತ್ಮಾಂಗನೆಗೆ–ತನ್ನ ಹೆಂಡತಿಯಾದ, ರಾಧೆಗೆ–ರಾಧೆಯೆಂಬುವಳಿಗೆ, ಇತ್ತು–ಕೊಟ್ಟು, ಮನಂಗೊಳೆ–ಮನಸ್ಸನ್ನು ಮೆಚ್ಚಿಸಲು, ರಾಧೇಯನೆನಿಸಿ–ರಾಧೇಯ ಎನ್ನಿಸಿ ಕೊಂಡು, ಸೂತಜನಾದಯ್–ಸೂತ ಪುತ್ರನಾದೆ.

೬೬. ನಿನ್ನುತ್ಪತ್ತಿಯಂ–ನಿನ್ನ ಜನ್ಮವನ್ನು, ಇಂತೆಂದು–ಹೀಗೆ ಎಂದು, ಎನ್ನರುಂ–ಎಂಥ ವರೂ, ಅಣಂ–ಸ್ವಲ್ಪವೂ, ಅಱಿಯರ್–ತಿಳಿಯರು; ಆಂ ಅಱಿವೆಂ–ನಾನು ತಿಳಿದಿದ್ದೇನೆ; ಸಹದೇವಂ–ಸಹದೇವನು, ಪನ್ನಗಕೇತು–ದುರ್ಯೋಧನನು, ದಿನೇಶಂ–ಸೂರ್ಯನು, ನಿನ್ನಂಬಿಕೆ ಕುಂತಿ–ನಿನ್ನ ತಾಯಿಯಾದ ಕುಂತಿ, ಇಂತಿವರ್–ಹೀಗೆ ಇವರು, ನೆಱೆ–ಚೆನ್ನಾಗಿ, ಬಲ್ಲರ್–ತಿಳಿದಿದ್ದಾರೆ.

ವಚನ : ಏತಱೊಳ್–ಯಾವುದರಲ್ಲಿ; ಪೊಡೆವಟ್ಟು–ನಮಸ್ಕರಿಸಿ; ಮುನ್ನಂ–ಮೊದಲು; ಏಱಲ್ ತರಿಸಿದೊಡೆ–ಹತ್ತುವುದಕ್ಕೆ ಪೀಠವನ್ನು ತರಿಸಿದರೆ; ಏವಯಿಸಿ–ಅಸಮಾಧಾನ ಹೊಂದಿ, ಕುಪಿತನಾಗಿ; ಪೋಗಲ್ವೇೞ್ದು–ಹೋಗುವಂತೆ ಹೇಳಿ.

೬೭. ಆನಿರೆ–ನಾನು ಇರಲು, ಇರುವಾಗ, ನೀಂ–ನೀವು, ಮೀಂಗುಲಿಗಂಗೆ–ಬೆಸ್ತರವನಾದ ಕರ್ಣನಿಗೆ, ಇದೇಕೆ–ಇದೇತಕ್ಕೆ, ದಯೆಗೆಯ್ದಿರೋ–(ಕುಳ್ಳಿರಲು ಮೊದಲು ಪೀಠವನ್ನು ಕೊಟ್ಟು) ದಯೆ ತೋರಿಸಿರಿದಿರೋ! ಪೇೞಿಂ–ಹೇಳಿರಿ, ಎಂದ ಆ ನರನಾಥನಂ–ಎಂದ ಆ ದುರ್ಯೋಧನನನ್ನು, ತನ್ಮುನಿ–ಆ ಸತ್ಯಂತಪನೆಂಬ ಋಷಿ, ತಿಳಿಪೆ–ತಿಳಿಯ ಹೇಳಲು, ಭೂಭುಜಂ–ದುರ್ಯೋಧನ, ಎಯ್ದೆ–ಚೆನ್ನಾಗಿ, ನಂಬಿ–ನಂಬಿಕೊಂಡು, ಕಾನೀನ–ಕರ್ಣನೇ, ಒಯ್ಯನೆ–ಮೆಲ್ಲಗೆ, ಮುಳ್ಳೊಳೆ–ಮುಳ್ಳಿನಿಂದಲೇ, ಮುಳ್ಳಂ–ಮುಳ್ಳನ್ನು, ಸಮಂತು– ಚೆನ್ನಾಗಿ, ಪಾಟಿಸುವೆಂ–ಕೀಳುತ್ತೇನೆ, ಎಂದು–ಎಂಬುದಾಗಿ, ತಾಂ–ತಾನು, ಈ ನಯದಿಂದೆ– ಈ ನೀತಿಯಿಂದ, ಪೆರ್ಚಿ–ಉಬ್ಬಿ, ಪೊರೆದು–ನಿನ್ನನ್ನು ಕಾಪಾಡಿ, ಅಂದು–ಆ ದಿನ, ಅೞ್ಕ ಱೊಳ್–ಪ್ರೀತಿಯಲ್ಲಿ, ಒಡನುಂಡನಲ್ಲನೇ–ಜೊತೆಗೂಡಿ ಊಟ ಮಾಡಿದನಲ್ಲವೇ? ಕರ್ಣನಿಗೆ ಲಭಿಸಿದ ದುರ್ಯೋಧನನ ಮೈತ್ರಿಗೆ ಕಾರಣ ದುರ್ಯೋಧನನ ಸ್ವಾರ್ಥ ಚಿಂತನೆ ಯೆಂಬಂಶವನ್ನು ಇಲ್ಲಿ ಕವಿ ಬಹು ನಯವಾಗಿ ನಿರೂಪಿಸಿದ್ದಾನೆ.

೬೮. ಕೃಷ್ಣನ ಮಾತಿನಿಂದ ಕರ್ಣನ ಮೇಲೆ ಆದ ಪರಿಣಾಮ; ಎನೆ ಎನೆ–ಎನ್ನಲೆನ್ನಲು, ಬಾಷ್ಪವಾರಿ–ಕಣ್ಣೀರು, ಪುಳಕಂಬೆರಸು–ರೋಮಾಂಚದೊಡನೆ, ಒರ್ಮೆಯೆ–ಒಂದೇ ಬಾರಿ, ಪೊಣ್ಮೆ–ಹೊಮ್ಮಲು, ನೆಗೞ್ತೆ ಪೊಗೞ್ತೆಯನಾಂಪಿನಂ–ನನ್ನ ಕಾರ್ಯ ಹೊಗಳಿಕೆಯನ್ನು ಪಡೆಯುತ್ತಿರಲು, ಮುನ್ನೆ ನೀವಿದನೆನಗೇಕೆ ಪೇೞ್ದಿರೋ–ಮೊದಲೇ ನೀವು ಇದನ್ನು ನನಗೆ ಏಕೆ ಹೇಳಿದಿರೋ: ಸುಯೋಧನಂ–ದುರ್ಯೋಧನ, ಎನಗೆ ಒಳ್ಳಿಕೆಯ್ದ–ನನಗೆ ಒಳ್ಳೆಯದನ್ನು ಮಾಡಿದ. ಕೃತಮಂ–ಉಪಕಾರವನ್ನು, ಪೆಱಗಿಕ್ಕಿ–ಹಿಂದಿರಿಸಿ ಎಂದರೆ ಅವಜ್ಞೆ ಮಾಡಿ, ನೆಗೞ್ತೆ ಮಾಸೆ–ನನ್ನ ಕೀರ್ತಿ ಮಾಸುತ್ತಿರಲು, ನಣ್ಪಿನ ನೆವದಿಂದೆ–ನಂಟತನದ ನೆಪದಿಂದ, ಆನ್– ನಾನು, ಪಾಂಡವರಂ–ಪಾಂಡವರನ್ನು, ಒಳವೊಕ್ಕೊಡೆ–ಒಳಗೆ ಸೇರಿದರೆ ಎಂದರೆ ಅವರೊಡನೆ ಒಂದಾದರೆ, ನೀಮೆ–ನೀವೇ, ಪೇಸಿರೇ–ಅಸಹ್ಯಪಟ್ಟುಕೊಳ್ಳುವುದಿಲ್ಲವೇ? ದುರ್ಯೋಧನನಿಗೆ ಕೃತಘ್ನನಾಗಿ ಪಾಂಡವರೊಡನೆ ನಾನು ಸೇರಿಕೊಂಡರೆ ನೀವು ಕೂಡ ನನ್ನ ವಿಷಯದಲ್ಲಿ ಹೇಸು ವಂತಾಗುತ್ತದೆ. ‘ನೀಮೆ’ ಎಂಬ ಮಾತು ಧ್ವನಿಮಯವಾಗಿದೆ.

೬೯. ಕರ್ಣನ ಸ್ನೇಹದ, ಸ್ವಾಮಿಭಕ್ತಿಯ ಪರಾಕಾಷ್ಠತೆಯ ಚಿತ್ರ ಈ ಪದ್ಯದಲ್ಲಿದೆ. ಇದರಿಂದ ಸಹೃದಯ ಪ್ರತಿಭೆಗೆ ಒಂದು ಇಡೀ ದೃಶ್ಯವೇ ಕಾಣಿಸುತ್ತದೆ. ದುರ್ಯೋಧನನ ಅಂತಃ ಪುರದಲ್ಲಿ ಅವನ ರಾಣಿ ಭಾನುಮತಿ ಕರ್ಣನೊಡನೆ ಪಗಡೆಯಾಡುತ್ತಿದ್ದಾಳೆ; ದುರ್ಯೋಧನ ಅವರಿಬ್ಬರ ಆಟವನ್ನು ನೋಡುತ್ತಿದ್ದಾನೆ. ಭಾನುಮತಿ ತನ್ನ ಮುತ್ತಿನ ಹಾರವನ್ನು ಆಟಕ್ಕೆ ಪಣವಾಗಿ ಒಡ್ಡಿರುತ್ತಾಳೆ. ಅವಳು ಸೋತಳು ಆಟದಲ್ಲಿ, ಪಣವನ್ನು ಕೊಡದೆ ಅವಳು ಎದ್ದು ಹೋಗುವುದರಲ್ಲಿದ್ದಾಗ ಕರ್ಣ ಅವಳ ಮುತ್ತಿನ ಹಾರಕ್ಕೆ ಕೈ ಚಾಚಿದ. ಅದು ಹರಿದು ಹೋಗಿ ಬಿಡಿಮುತ್ತುಗಳು ಸುರಿದು ದಿಕ್ಕಾಪಾಲಾಗಿ ಚೆದರಿಹೋದುವು. ಆಗ ಕರ್ಣನಿಗೆ ತಾನೇನು ಮಾಡಿದೆನೆಂಬ ಅರಿವುಂಟಾಗಿ ಹೆದರಿಕೆಯಿಂದ ನಡುಗುತ್ತಿರುವಲ್ಲಿ ಹತ್ತಿರಿದ್ದ ದುರ್ಯೋಧನ ಸ್ವಲ್ಪವೂ ಕೋಪಿಸಿಕೊಳ್ಳದೆ ‘ಕರ್ಣ, ಮುತ್ತುಗಳನ್ನು ಆರಿಸಿಕೊಡಲೆ’ ಎಂದು ಹೇಳುವನು. ಇಂಥ ಸ್ವಾಮಿಯನ್ನು ನಾನು ಬಿಟ್ಟುಬಂದರೆ, ನಾನು ಯಾರಿಗೂ ಬೇಡವಾದವ ನಾಗುತ್ತೇನೆ ಎಂದು ಕೃಷ್ಣನಿಗೆ ಕರ್ಣ ಹೇಳುವನು.

ಭಾನುಮತಿ–ದುರ್ಯೋಧನನ ರಾಣಿ ಭಾನುಮತಿಯು, ನೆತ್ತಮನಾಡಿ–ಕರ್ಣನೊಡನೆ ಪಗಡೆಯನ್ನಾಡಿ, ಸೋಲ್ತೊಡೆ–ಸೋತರೆ, ಸೋಲಮಂ–ಸೋತುದನ್ನು ಎಂದರೆ ಪಣವನ್ನು, ಈವುದು–ಕೊಡುವುದು, ಎಂದು–ಎಂಬುದಾಗಿ, ಕಾಡುತ್ತಿರೆ–ಕಾಡುತ್ತ ಇರಲು, ಲಂಬಣಂ ಪಱಿಯೆ–ಹಾರ ಹರಿದು ಹೋಗಲು, ಮುತ್ತಿನ ಕೇಡನೆ–ಮುತ್ತುಗಳ ಹಾನಿಯನ್ನೇ; ನೋಡಿ ನೋಡಿ–ನೋಡುತ್ತ, ನೋಡುತ್ತ, ಬಳ್ಕುತ್ತಿರೆ–ಕರ್ಣ ನಡುಗುತ್ತಿರಲು, ಏವಮಿಲ್ಲದೆ– ಅಸಮಾಧಾನವಿಲ್ಲದೆ ಎಂದರೆ ಪ್ರಸನ್ನಚಿತ್ತನಾಗಿ, ಇವಂ–ಈ ಮುತ್ತುಗಳನ್ನು, ಆಯ್ವುದೋ– ಆರಿಸಿಕೊಡುವುದೋ, ತಪ್ಪದೆ–ತಪ್ಪಿಲ್ಲದೆ, ಪೇೞಿಂ–ಹೇಳಿರಿ, ಎಂದು–ಎಂದು ಹೇಳುವ, ಭೂಪೋತ್ತಮನಂ–ರಾಜಶ್ರೇಷ್ಠನಾದ ದುರ್ಯೋಧನನನ್ನು, ಬಿಸುಟ್ಟು–ತೊರೆದು, ನಿಮ್ಮೊಳೆ ಪೊಕ್ಕೊಡೆ–ನಿಮ್ಮಲ್ಲಿಯೇ ನಾನು ಹೊಕ್ಕರೆ, ಎಂದರೆ ಸೇರಿಕೊಂಡರೆ, ಬೇಡನಲ್ಲೆನೇ– ಯಾರಿಗೂ ಬೇಡವಾದವನಲ್ಲವೇ; ಅಥವಾ ಕಿರಾತನಾಗುತ್ತೇನಲ್ಲವೇ?

ಕರ್ಣನ ಸ್ನೇಹದ ಭವ್ಯತೆಯನ್ನು ಇದಕ್ಕಿಂತ ಮಿಗಿಲಾಗಿ ವರ್ಣಿಸುವುದು ಕಷ್ಟ, ಪಂಪನಿಗೆ ತನ್ನ ಪೋಷಕ ಅರಿಕೇಸರಿ ರಾಜನಲ್ಲಿದ್ದ ಆತ್ಮೀಯ ಸ್ನೇಹದ ಸ್ವಾನುಭವ ಇಲ್ಲಿ ಆದರ್ಶೀಕೃತ ವಾಗಿರುವಂತೆ ತೋರುತ್ತದೆ. ಇದು ಅಪೂರ್ವವೂ ಅದ್ಭುತ ರಮಣೀಯವೂ ಆಗಿರುವ ಪ್ರತಿಭಾ ವ್ಯಾಪಾರ. ಚಿಂತಿಸಿದಷ್ಟು ಬೆಳೆಯುತ್ತ ಹೋಗುತ್ತದೆ ಈ ಪದ್ಯದ ಭಾವವಲ್ಲರಿ. ಇದರ ವಿಚಾರವಾಗಿ ವಿದ್ವಾಂಸರಲ್ಲಿ ಕೊಂಚ ಚರ್ಚೆ ನಡೆದಿದೆ. ಪಂಪನ ಅನಂತರ ಬಂದ ತಮಿಳು ಕವಿ ವಿಲ್ಲಪುತ್ತೂರನ ಭಾರತದಲ್ಲಿ (ಕಾಲ ಸು. ೧೩೨೫) ಈ ಪದ್ಯವನ್ನು ಹೋಲುವ ಪದ್ಯವೊಂದಿದ್ ಯೆಂದು ಬಲ್ಲವರು ಹೇಳುತ್ತಾರೆ.

ವಚನ : ಒಡಂಬಡದುದಂ–ಒಪ್ಪದೆ ಇರುವುದನ್ನು; ಮಗುೞಲ್ವೇೞ್ದು–ಹಿಂದಿರುಗಲು ಹೇಳಿ! ಆತ್ಮಾಲಯಕ್ಕೆ–ತನ್ನ ಮನೆಗೆ.

೭೦. ಕರ್ಣನ ಧರ್ಮಸಂಕಟ: ಕುರುಪತಿಗೆ–ದುರ್ಯೋಧನನಿಗೆ, ದೈವಬಲಂ–ವಿಧಿಯ ಬಲ ಇಲ್ಲ. ಗುರು ಗುರುಪುತ್ರ ಸಿಂಧುಸುತರು–ದ್ರೋಣಾಶ್ವತ್ಥಾಮ ಭೀಷ್ಮರು, ಆಗಳುಂ– ಯಾವಾಗಲೂ, ಆಜಿಗೆ–ಯುದ್ಧಕ್ಕೆ, ಮೇಲ್ಮಲೆಗೆಯ್ವರ್–ಮೇಲುಮೇಲೆ ಹುರುಡನ್ನು ಮಾಡುತ್ತಾರೆ, ಎಂದರೆ ಮನಸ್ಸಿಟ್ಟು ಹೋರಾಡುವುದಿಲ್ಲ; ಆಳ್ದನುಂ–ಸ್ವಾಮಿಯಾದ ದುರ್ಯೋಧನನೂ, ಎನ್ನನೆ ನಚ್ಚಿ–ನನ್ನನ್ನೇ ನಂಬಿ, ಪೆರ್ಚಿ–ಉಬ್ಬಿ, ಮುಂ–ಮೊದಲು, ಪೊರೆದಂ–ಕಾಪಾಡಿದನು; ಇದಿರ್ಚಿ ಕಾದುವರುಂ–ಎದುರಿಸಿ ಯುದ್ಧ ಮಾಡುವವರೂ, ಎನ್ನಯ ಸೋದರರ್–ನನ್ನ ಒಡಹುಟ್ಟಿದವರು; ನೋಡಿ, ಎಂತು–ಹೇಗೆ, ಕೊಕ್ಕರಿಸದೆ– ಹೇಸದೆ, ಕೊಲ್ವೆಂ–ಕೊಲ್ಲುತ್ತೇನೆ; ರಣರಂಗಭೂಮಿಯೊಳ್–ಯುದ್ಧ ಭೂಮಿಯಲ್ಲಿ, ಆಂ– ನಾನು, ಎನ್ನೊಡಲಂ–ನನ್ನ ದೇಹವನ್ನು, ತವಿಪೆಂ–ನಾಶಮಾಡುತ್ತೇನೆ.

೭೧. ಪಾಂಡವರಂ–ಪಾಂಡವರನ್ನು, ಸೋದರರೆಂದು–ಸಹೋದರರೆಂದು, ಅಱಿದೆಂ– ತಿಳಿದೆನು; ಎಂತು–ಹೇಗೆ, ಎನ್ನರಂ–ನನ್ನವರನ್ನು, ಕೊಲ್ವೆಂ–ಕೊಲ್ಲುವೆನು; ? ಅೞ್ಕಱೊಳ್– ಪ್ರೀತಿಯಲ್ಲಿ, ಎನ್ನಂ–ನನ್ನನ್ನು, ಪೊರೆದು–ಕಾಪಾಡಿ, ಎಯ್ದೆ–ಚೆನ್ನಾಗಿ, ನಂಬಿದ–ನೆಚ್ಚಿದ. ನೃಪಂಗೆ–ದೊರೆಗೆ, ಸುಯೋಧನನಿಗೆ, ಆಜಿಯೊಳ್–ಯುದ್ಧದಲ್ಲಿ, ಎಂತು–ಹೇಗೆ, ತಪ್ಪುವೆಂ–ತಪ್ಪುತ್ತೇನೆ; ? ತಱಿಸಂದು–ನಿಶ್ಚಯ ಮಾಡಿ, ಉದ್ಧತವೈರಿ ಭೂಪಬಲದ–ಗರ್ವಿಷ್ಠ ರಾದ ಶತ್ರುರಾಜರ ಸೈನ್ಯದ, ಒಡ್ಡು–ಸಮೂಹ, ಅೞ್ಕೂಕ– ನಾಶವಾಗಲು, ಲೆಕ್ಕಕ್ಕೆ–ಗಣನೆಗೆ, ತಳ್ತಿಱಿದು–ಸಂಧಿಸಿ ಹೋರಾಡಿ, ಎನ್ನಾಳ್ದನಿಂ–ನನ್ನ ಸ್ವಾಮಿಗಿಂತ, ಮುಂಚೆ–ಮುಂಚಿತವಾಗಿ, ಕಟ್ಟಾಯಮಂ–ತೀವ್ರತರ ಸಾಮರ್ಥ್ಯವನ್ನು, ಕೈಕೊಂಡು–ಸ್ವೀಕರಿಸಿ, ನಿಱಿಪೆಂ–ಸ್ಥಾಪಿಸು ತ್ತೇನೆ.

ವಚನ : ಮುಂತಪ್ಪ ಕಜ್ಜಮಂ–ಮುಂದಾಗುವ ಕಾರ್ಯವನ್ನು; ಬಗೆದು–ಆಲೋಚಿಸಿ; ಅವಾರ್ಯವೀರ್ಯಂ–ತಡೆಯಲಾಗದ ಪರಾಕ್ರಮವುಳ್ಳವನು; ಸೂರ್ಯದಿನದಂದು– ಭಾನುವಾರದಲ್ಲಿ; ಮಂದಾಕಿನಿಯಂ ಮೀಯಲೆಂದು–ಗಂಗೆಯಲ್ಲಿ, ಸ್ನಾನ ಮಾಡಲೆಂದು: ದೇವಸವಳದ–ದೇವಮಾನದ?; ಒಟ್ಟಿ–ರಾಶಿ ಮಾಡಿ, ಬೆಟ್ಟಾಗೆ–ಬೆಟ್ಟದಂತಾಗಲು, ಪೂಜಿಸಿ– ಸೇರಿಸಿ, ರಾಶಿಮಾಡಿ.

೭೨. ಸೋರ್ವ–ಸುರಿಯುತ್ತಿರುವ, ವಸುಧಾರೆಯಂ–ಚಿನ್ನದ ಮಳೆಯನ್ನೂ; ಕೆಯ್ಸಾರ್ವ– ಕೈಗೆ ಬರುವ, ನಿಧಾನಮುಮಂ–ನಿಧಿಯನ್ನೂ, ತನ್ನೀವಳವಿಂ–ತಾನು ದಾನ ಮಾಡುವ ಅಳತೆ ಯಿಂದ, ಇಳಿಸಿ–ಕಡೆಗಣಿಸಿ, ಪಾರ್ವಂಗಂ–ನಿರೀಕ್ಷಿಸುತ್ತಿರುವವನಿಗೂ, ಅಳಿಪಿ–ಆಸೆಪಟ್ಟು, ಬೇಡಿದ–ಯಾಚಿಸಿದ, ಪಾರ್ವಂಗಂ–ಬ್ರಾಹ್ಮಣನಿಗೂ, ಅಂಗ ಮಹೀಶಂ–ಕರ್ಣನು, ಪಿರಿದಂ– ಹಿರಿದಾದ ಐಶ್ವರ್ಯವನ್ನು, ಇತ್ತಂ–ದಾನವಾಗಿ ಕೊಟ್ಟನು.

ವಚನ : ಚಾಗಂಗೆಯ್ದು–ದಾನ ಮಾಡಿ; ಅಘಮರ್ಷಣಪೂರ್ವಕಂ–ಪಾಪ ನಿವಾರಕ ಮಂತ್ರೋಚ್ಚಾರಣೆಯಿಂದ, ಕನಕಪಾತ್ರದೊಳ್–ಚಿನ್ನದ ಪಾತ್ರೆಯಲ್ಲಿ; ತೆಕ್ಕನೆ ತೀವಿದ–ಪೂರ್ತಿ ತುಂಬಿದ; ಕನಕ ಕಮಳಂಗಳಿಂ–ಹೊಂದಾವರೆಗಳಿಂದ; ನೀರಂ ಸೂಸಿ–ಅರ್ಘ್ಯವನ್ನು ಬಿಟ್ಟು, ಚೆಲ್ಲಿ; ತ್ರಿಃ ಪ್ರದಕ್ಷಿಣಂ–ಮೂರು ಬಾರಿ ಪ್ರದಕ್ಷಿಣೆ;

೭೩. ಸಂಗತ ತರಂಗಯುತೆಯಂ–ಕೂಡಿರುವ ಅಲೆಗಳನ್ನುಳ್ಳ, ಮಂಗಳ, ಲಕ್ಷಣೆಯಂ– ಮಂಗಳಕರವಾದ ಲಕ್ಷಣಗಳನ್ನುಳ್ಳ, ಗಂಗಾಂಗನೆಯಂ–ಗಂಗಾದೇವಿಯನ್ನು, ಮುಂದೆ ನಿಂದ ಕುಂತಿಯಂ–ಎದುರಿಗೆ ನಿಂತ ಕುಂತಿದೇವಿಯನ್ನು, ಆಗಳ್–ಆಗ, ಕಾಣ್ಬವೊಲ್–ನೋಡುವ ಹಾಗೆ; ಅಂಗನೃಪಂ–ಕರ್ಣ, ಅಂದು–ಆ ದಿನ, ಭೋಂಕನೆ–ಅನಿರೀಕ್ಷಿತವಾಗಿ, ಕಂಡಂ–ನೋಡಿ ದನು.

ವಚನ : ಎಱಕದಿಂ–ಪ್ರೀತಿಯಿಂದ; ಎಱಗಿ–ಬಾಗಿ; ಪೊಡೆವಟ್ಟ–ನಮಸ್ಕರಿಸಿದ, ಅೞ್ಕಱಿಂದೆ– ಪ್ರೀತಿಯಿಂದ, ಪರಸಿ–ಹರಸಿ.

೭೪. ತೊರೆದ–ಸೊರೆಬಿಟ್ಟ, ಸುರಿಯುತ್ತಿರುವ, ಕುಚಯುಗಳಂ–ಎರಡು ಮೊಲೆಗಳು, ಅಂದು–ಆಗ, ಮೊಲೆವಾಲಂ–ಮೊಲೆ ಹಾಲನ್ನು, ಅಂಬಿರಿವಿಡೆ–ಧಾರಾಕಾರವಾಗಿ ಸುರಿಸು ತ್ತಿರಲು, ಅೞ್ಕಱಿಂದಂ–ಪ್ರೇಮದಿಂದ, ಮೆಯ್ಯಂಕುರಿಸೆ–ಮೈ ರೋಮಾಂಚ ಹೊಂದಲು, ಸುರಿವಶ್ರುಜಲಂ–ಸುರಿಯುತ್ತಿರುವ ಕಣ್ಣೀರು, ಉಬ್ಬರಿಸಿ–ವೆಗ್ಗಳವಾಗಿ, ಪೊನಲ್–ಕಣ್ಣೀರ ಪ್ರವಾಹ; ಪೊನಲಂ–ಗಂಗೆಯ ಪ್ರವಾಹವನ್ನು, ಅಟ್ಟೆ–ಅಟ್ಟಿಸಿಕೊಂಡು ಹೋಗಲು, ಆಗಳ್– ಆಗ, ಜನನುತೆಗೆ–ಜನರಿಂದ ಹೊಗಳಲ್ಪಟ್ಟ ಗಂಗಾದೇವಿಗೆ.

೭೫. ಆಗಳೆ ಮಗನಂ ಪೆತ್ತವೊಲಾಗಿ–ಆಗಲೇ ಮಗನನ್ನು ಹೆತ್ತವಳಂತಾಗಿ, ಲತಾಲಲಿತೆ– ಗಂಗಾದೇವಿ, ನೊಸಲ ಕಣ್ಬೆತ್ತವೊಲ್–ಹಣೆಯಲ್ಲಿ ಕಣ್ಣನ್ನು ಪಡೆದಂತೆ, ಅಂತು ಆಗಡೆ– ಹಾಗೆ ಆಗಲೆ, ರಾಗಕ್ಕಾಗರಮಾಗೆ–ಸಂತೋಷಕ್ಕೆ ಮನೆಯಾಗಲು, ದಿನಾಧಿಪತನೂಜಂ– ಸೂರ್ಯನಮಗ ಕರ್ಣ, ಒಸೆದಿರ್ಪಿನೆಗಂ–ಸಂತೋಷಿಸುತ್ತಿರಲು.

ವಚನ : ದಿವ್ಯಮೂರ್ತಿಯಂ–ದಿವ್ಯವಾದ ಆಕಾರವನ್ನು, ಕೈಕೊಂಡು–ಭಾಳಿ, ಧರಿಸಿ.

೭೬. ಕೆಯ್ಯೆಡೆಯೆಂದು–ನ್ಯಾಸವೆಂದು, ಅಪ್ಪೈಸಿದ–ನನಗೆ ಒಪ್ಪಿಸಿದ, ನಿನ್ನ ಮಗನಂ– ನಿನ್ನ ಮಗನನ್ನು, ಈಗಳೆ–ಈಗಲೇ, ನಿನಗೆ, ಒಪ್ಪಿಸಿದೆಂ–ಒಪ್ಪಿಸಿಕೊಟ್ಟೆನು, ಎಂದು, ಅಪ್ಪೈಸಿ– ಅರ್ಪಿಸಿ, ಗಂಗೆ ಪೋಪುದುಂ–ಗಂಗಾದೇವಿ ಹೋಗುತ್ತಲು, ದಿನಪಂ–ಸೂರ್ಯನು, ಒಪ್ಪುವ– ಶೋಭಿಸುವ, ನಿಜಬಿಂಬದೊಳಗಣಿಂದಂ–ತನ್ನ ಮಂಡಲದ ಒಳಗಡೆಯಿಂದ.

೭೭. ಪೊಱಮಟ್ಟು ಬರಲು–ಹೊರಕ್ಕೆ ಹೊರಟು ಬರಲು, ತನ್ನಡಿಗೆಱಗಿದ–ತನ್ನ ಪಾದಕ್ಕೆ ನಮಸ್ಕರಿಸಿದ, ನಿಜಸುತನಂ–ತನ್ನ ಮಗನನ್ನು, ಅೞ್ಕಱಿಂ–ಪ್ರೀತಿಯಿಂದ, ಪರಸಿ– ಎನ್ನಮನುಱದೆ–ನನ್ನನ್ನೂ ಲಕ್ಷಿಸದೆ, ಮರುಳ್ಮಗನೇ–ತಿಳಿಗೇಡಿಯಾದ ಮಗನೇ, ಹರಿಗೆ– ಇಂದ್ರನಿಗೆ, ಕವಚಮಂ–ವಜ್ರ ಕವಚವನ್ನು, ಇತ್ತೈ–ಕೊಟ್ಟೆ.

೭೮. ಅದಂ–ಅದನ್ನು, ನುಡಿಯೆಂ–ಹೇಳೆನು (ಈಗ), ಪಡೆಮಾತೇಂ–ಬೇರೇನು ಮಾತು; ಹರಿಯ ಮತದಿಂ–ಕೃಷ್ಣನ ಆಶಯದಿಂದ, ನಿನ್ನಂಬಿಕೆ–ನಿನ್ನ ತಾಯಾದ, ಕೊಂತಿ–ಕುಂತಿಯು, ಸುತರಂ–ತನ್ನ ಮಕ್ಕಳನ್ನು, ಕಾಯಲ್ಕೆ–ರಕ್ಷಿಸುವುದಕ್ಕಾಗಿ, ಒಡರಿಸಿ–ತೊಡಗಿ, ಬಂದಳ್– ಬಂದಳು; ಎನಿತು ಲಲ್ಲೈಸಿದೊಡಂ–ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ, ಪುರಿಗಣೆಯಂ–ನಿನ್ನಲ್ಲಿರುವ ದಿವ್ಯಾಸ್ತ್ರವನ್ನು, ಕುಡದಿರ್–ಕೊಡದೆ ಇರು, ಪುರಿಗಣೆ ಹುರಿಗಣೆ (ಗದಾ. ೫–೨೩), ಇದರ ಸರಿಯಾದ ಅರ್ಥವೇನೆಂಬುದು ಚಿಂತನೀಯ; ಪುರಿ–ಎಂದರೇನು?

೭೯. ಎಂದು ಹೇಳಿ, ಅರವಿಂದ ಪ್ರಿಯಸಖಂ–ಸೂರ್ಯನು, ಅಂಬರ ತಳಮನಡರ್ವು ದುಂ–ಆಕಾಶಕ್ಕೆ ಏರುತ್ತಲು, ಕೈಮುಗಿದು–ಕರ್ಣನು ನಮಸ್ಕರಿಸಿ, ಕುಂತಿಯಂ–ಕುಂತಿ ಯನ್ನು, ಇಂತೆಂದಂ–ಹೀಗೆಂದನು, ಅಬ್ಬೆ–ತಾಯೇ, ಎನಗೆ ಸಯ್ಪು ಬರ್ಪಂತೆ–ನನಗೆ ಪುಣ್ಯ ಬರುವ ಹಾಗೆ, ಅದು ಏವಂದಿರ್ಪುದು–ಅದು ಏನು ನೀವು ಬಂದಿರುವುದು;

೮೦. ನಿಮ್ಮ ಕರುಣಾಬಲದಿಂ–ನಿಮ್ಮ ದಯಾಶಕ್ತಿಯಿಂದ, ನೀವೆನ್ನಂ–ನೀವು ನನ್ನನ್ನು, ಇಂದು–ಈ ದಿನ, ಮಗನ್–ಮಗನು, ಎಂದುದಱಿಂ–ಎಂದು ಹೇಳಿದ್ದರಿಂದ, ಚಲಮುಂ– ಛಲವೂ, ಚಾಗಮುಂ–ತ್ಯಾಗವೂ, ಅಳವುಂ–ಪ್ರಮಾಣವೂ ಎಂದರೆ ಯೋಗ್ಯತೆಯೂ, ಕಲಿ ತನಮುಂ–ಶೌರ್ಯವೂ, ಕುಲಮುಂ–ಸತ್ಕುಲವೂ, ಎನ್ನಯ–ನನ್ನ, ಮೆಯ್ಯೊಳ್–ದೇಹ ದಲ್ಲಿ, ಈಗಳ್–ಈಗ, ನೆಲಸಿದುವು–ಸೇರಿನಿಂತುವು.

೮೧. ಒಡಲಂ–ದೇಹವನ್ನೂ, ಪ್ರಾಣಮುಮಂ–ಪ್ರಾಣವನ್ನೂ, ತಾಯುಂ ತಂದೆಯುಂ– ತಾಯಿತಂದೆಗಳು, ಪಡೆದರ್–ಹಡೆದವರು; ಅವು–ಅವುಗಳು, ಅವರವು–ಅವರಿಗೆ ಸೇರಿದ್ದು: ಕೆಯ್ಯೆಡೆಯಂ–ನ್ಯಾಸವನ್ನು, ಕುಡುವುದು–ಕೊಡುವುದು, ಅರಿದಾಯ್ತೆ–ಅಸಾಧ್ಯವಾಯಿತೆ? ಇಲ್ಲ; ಎಂದರೆ ತಮಗೆ ಸೇರಿರುವ ಪದಾರ್ಥವನ್ನು ಇನ್ನೊಬ್ಬರಿಗೆ ನ್ಯಾಸವಾಗಿ ಕೊಡು ವುದೇನೂ ಅಪೂರ್ವವಲ್ಲ; ನೀಂ–ನೀವು, ಎಡೆ ಮಡಗದೆ–ನಡುವೆ ಇಟ್ಟುಕೊಳ್ಳದೆ ಎಂದರೆ ಮುಚ್ಚಿಡದೆ, ವ್ಯಕ್ತವಾಗಿ, ಬೆಸೆಪ–ಹೇಳುವ, ತೊೞ್ತುವೆಸನಂ–ಸೇವೆ ಕೆಲಸವನ್ನು ಎನಗೆ–ನನಗೆ ಬೆಸಸಿಂ–ಅಪ್ಪಣೆ ಮಾಡಿರಿ.

೮೨. ಎಂಬುದುಂ–ಎಂದು ಹೇಳುತ್ತಲೂ, ಅಂಬಿಕೆ–ತಾಯಿಯಾದ ಕುಂತಿ, ಮನಂ ಬೆಳಱದೆ–ಮನಸ್ಸಿನಲ್ಲಿ ಹೆದರದೆ, ನೀನುಂ–ನೀನೂ, ಇತ್ತೆ–ಕೊಟ್ಟೆ, ಆನುಂ–ನಾನೂ, ಪೆತ್ತೆಂ– ಪಡೆದನು; ನಂಬಿದ, ನಿನ್ನನುಜರ್–ನಿನ್ನನ್ನೇ, ನಂಬಿರುವ ನಿನ್ನ ತಮ್ಮಂದಿರು, ನಿನ್ನಂ ಬೆಸಕೆಯೆ– ನಿನ್ನನ್ನು ಸೇವಿಸುತ್ತಿರಲು, ಕಂದಾ–ಮಗುವೇ, ನೀನೇ, ನೆಲನನ್–ರಾಜ್ಯವನ್ನು, ಆಳ್ವುದು– ಆಳುವುದು, ಮನಂ ಬೆಳಱು ಮನ+ಪೆಳಱು– “ಭಯೇ.”

೮೩. ನಿನ್ನನುಜರ್–ನಿನ್ನ ತಮ್ಮಂದಿರು, ದುರ್ಯೋಧನನ ಒಲವಂ–ದುರ್ಯೋಧನನ ಪ್ರೀತಿಯನ್ನು, ಮುಂದುಗೆಯ್ದು–ಮುಂದಿಟ್ಟುಕೊಂಡು, ನಿನಗಪ್ಪರಸಂ–ನಿನಗೆ ಆಗಲಿರುವ ರಾಜತನಕ್ಕೆ, ಬೆಸಕೆಯ್ವರೆ–ಸೇವೆ ಮಾಡುವವರೇ ಆಗಿದ್ದಾರೆ; ಎರೞ್ದೆಸೆಗಂ–ಉಭಯ ಪಕ್ಷಗಳಿಗೂ, ಕಿಸುರ್–ಅಸಹ್ಯಭಾವವು ಎಂದರೆ ಮಾತ್ಸರ್ಯವು, ಇನಿಸಾಗದು–ಸ್ವಲ್ಪವೂ ಆಗುವುದಿಲ್ಲ, ಮಗನೆ–ಮಗನೇ, ನೀಂ–ನೀನು, ಒಡಂಬಡವೇೞ್ಕುಂ–ಒಪ್ಪಿಕೊಳ್ಳಬೇಕು. ಇಲ್ಲಿ ಅರಸಂ ಎಂಬುದು ದ್ವಿತೀಯಾಂತವಾಗಿದ್ದರೂ (ಅರಸು+ಅಂ) ಚತುರ್ಥ್ಯರ್ಥಯುಕ್ತವಾಗಿದೆ, “ಸಾರಥಿಮಾಡು ಮತ್ಸ್ಯಸುತನುತ್ತರನಂ” ಎಂಬಲ್ಲಿರುವಂತೆ; ಅರಸ ಎಂಬುದರ ಭಾವನಾಮ ಅರಸು.

ವಚನ : ಮುಗುಳ್ನಗೆ ನಕ್ಕು–ಮಂದಸ್ಮಿತದಿಂದ ನಕ್ಕು; ಈ ನಗುವಿನ ಅರ್ಥವೇನಿರ ಬಹುದು? ಊಹಿಸಿದಷ್ಟೂ ಅದರ ಅರ್ಥ ಊರುತ್ತದೆ.

೮೪. ಭಯಮುಂ ಲೋಭಮುಮೆಂಬ–ಭಯವೂ ಅತ್ಯಾಸೆಯೂ ಎಂಬ, ತಮ್ಮುತೆ ರಡುಂ–ತಾವೆರಡೂ, ಪಾಪಕ್ಕೆ ಪಕ್ಕಾಗೆ–ಪಾಪಕ್ಕೆ ಗುರಿಯಾಗಿರಲು, ಪಾೞಿಯ ನೊಕ್ಕು– ಧರ್ಮ ಅಥವಾ ಕ್ರಮವನ್ನು ಬಿಟ್ಟು, ಆಳ್ದನ ಗೆಯ್ದ–ಸ್ವಾಮಿಯು ಮಾಡಿರುವ, ಸತ್ಕೃತಮು ಮಂ–ಒಳ್ಳೆಯ ಉಪಕಾರವನ್ನೂ, ಪಿಂತಿಕ್ಕೆ–ಕಡೆಗಣಿಸಿ, ಜೋಳಕ್ಕೆ–ಅನ್ನಕ್ಕೆ ಎಂದರೆ ಅನ್ನದ ಋಣಕ್ಕೆ, ತಪ್ಪಿಯುಂ–ತಪ್ಪು ಮಾಡಿಯೂ, ಇಂ–ಇನ್ನು, ಬಾೞ್ವುದೆ–ಜೀವಿಸುವುದೆ? ಅಬ್ಬೆ–ತಾಯಿಯೇ, ಈಯೊಡಲ್–ಈ ದೇಹ, ನಿಲ್ಲದಿಕೆ [ಯಂ] ಪೂಣ್ದು– ಅಶಾಶ್ವತೆಯನ್ನು ಹೊತ್ತುಕೊಂಡು, ವಿಖ್ಯಾತ ಕೀರ್ತಿಯವೋಲ್–ಪ್ರಸಿದ್ಧವಾದ ಯಶಸ್ಸಿನ ಹಾಗೆ, ಬಾೞ್ವಂತು–(ಶಾಶ್ವತವಾಗಿ) ಬಾಳುವ ಹಾಗೆ, ಎನಗೆ–ನನಗೆ, ಕಲ್ಪಾಂತರಸ್ಥಾಯಿಯೇ– ಕಲ್ಪಾಂತರಗಳವರೆಗೆ ನೆಲಸಿರುವಂಥದೇ, ಪೇೞಿಂ–ಹೇಳಿರಿ ಎಂದರೆ ಕೀರ್ತಿ ಶಾಶ್ವತವಾಗಿ ನೆಲಸಿರುವಂತೆ ಈ ದೇಹ ಶಾಶ್ವತವಾಗಿದೆಯೇ, ನೀವೇ ಹೇಳಿರಿ ಎಂದು ತಾತ್ಪರ್ಯ. ಇಲ್ಲಿ ನಿಲ್ಲದಿಕೆಯೆಂಬುದು ಪ್ರತಿಷೇಧಾರ್ಥಕ ಭಾವನಾಮ; ನಿಲ್ಲದು+ಇಕೆ.

೮೫. ಮೀಂಗುಲಿಗನೆನ್, ನಾನು ಬೆಸ್ತರವನಾಗಿದ್ದೇನೆ, ಆಗಿಯುಂ–ಆಗಿದ್ದರೂ, ಆಂ– ನಾನು, ಅಣಂ–ಸ್ವಲ್ಪವೂ, ಗುಣಮನೆ–ಗುಣವನ್ನೆ, ಬಿಸುಟೆನಿಲ್ಲ–ತೊರೆದವನಾಗಲಿಲ್ಲ; ನಿಮಗಂ–ನಿಮಗೂ, ಮಗನಾದಂಗೆ–ಮಗನಾದವನಿಗೆ, ಎನಗೆ–ನನಗೆ, ಬಿಸುಡಲಕ್ಕುಮೆ– ಬಿಡಲಾಗುತ್ತದೆಯೇ? ಇಲ್ಲ; ನೀಂ–ನೀವು, ಇನ್–ಇನ್ನು ಮೇಲೆ, ಎನ್ನೆಡೆಯೊಳ್–ನನ್ನ ಎಡೆಯಲ್ಲಿ ಎಂದರೆ ನನ್ನ ವಿಷಯದಲ್ಲಿ, ಪಂಬಲನೆ–ಹಂಬಲವನ್ನೆ, ಬಿಸುಡಿಂಗಳ– ತೊರೆಯಿರಿ, ದಿಟವಾಗಿಯೂ, ನಾನು ಹೀನಕುಲದ ಬೆಸ್ತರವನೆಂದು ತಿಳಿದಿರುವಾಗಲೇ ನನ್ನ ಒಳ್ಳೆಯ ಗುಣಗಳನ್ನು ಬಿಡಲಿಲ್ಲ; ನಿಮಗೆ ಮಗನಾಗಿ ಸತ್ಕುಲಜನೆಂದು ನಾನು ತಿಳಿದ ಮೇಲೆ ಇನ್ನು ಸದ್ಗುಣಗಳನ್ನು ಬಿಡುವುದಾಗುತ್ತದೆಯೇ? ಇಲ್ಲ ಎಂದು ತಾತ್ಪರ್ಯ.

ವಚನ : ಭೋಂಕನೆ–ಅನಿರೀಕ್ಷಿತವಾಗಿ, ಬೇಗನೆ; ಎರ್ದೆದೆಱೆದು–ಎದೆಬಿರಿದು,

೮೬. ಅೞಿದೆಂ–ಹಾಳಾದೆನು, ಅಯ್ಯೋ! ನೆಟ್ಟನೆ ಬೆಟ್ಟ ನಿಂತು ನುಡಿವಯ್–ನೇರಾಗಿ, ಬಿರುಸಾಗಿ ಹೀಗೆ ಮಾತಾಡುವೆ; ಕಂದ, ನೀಂ–ನೀನು, ಪೋಗು–ಹೋಗು; ಸೋಮವಂಶ– ಚಂದ್ರವಂಶವು, ಕೆಟ್ಟು, ಅೞಿದತ್ತಾಗದೆ–ನಾಶವಾದುದಾಗಲಿಲ್ಲವೇ? ಎನಗಿಂ–ನನಗೆ ಇನ್ನು, ಬಾೞ್ವಾಸೆ–ಬದುಕುವ ಆಸೆ, ಎಲ್ಲಿತ್ತೊ–ಎಲ್ಲಿದೆಯೋ, ಮತ್ತನ–ಉಳಿದ, ಮಕ್ಕಳಾಸೆಯುಮಂ–ಮಕ್ಕಳ ಆಸೆಯನ್ನೂ, ಬಿಟ್ಟುೞಿದೆಂ–ಬಿಟ್ಟು ಬಿಟ್ಟಿ ದ್ದೇನೆ; ಎಂದಳ್ಗೆ– ಎಂದು ಹೇಳಿದವಳಿಗೆ, ಕುಂತಿಗೆ, ಕರ್ಣಂ–ಕರ್ಣನು, ಶೋಕಾಗ್ನಿ–ದುಃಖಾಗ್ನಿ, ಪೊಂಪುೞಿವೋಗುತ್ತಿರೆ–ಅಧಿಕವಾಗುತ್ತಿರಲು, ಅಬ್ಬೆ–ತಾಯಿಯೇ, ಇನಿತು–ಇಷ್ಟು, ಚಿಂತಾಂತರಂ–ಬೇರೆ ಚಿಂತೆ, ಏಂ–ಏನು, ಪೇೞ್–ಹೇಳು, ಎಂದಂ–ಎಂದನು.

೮೭. ನರಂ–ಅರ್ಜುನನು, ಎಡೆ [ಗೋ] ದೊಡಂ–ನಡುವೆ ಪೋಣಿಸಿಕೊಂಡು ಬಂದರೂ, ಎಂದರೆ ಯುದ್ಧದಲ್ಲಿ ಇದಿರಾದರೂ, ಪುರಿಗಣೆಯಂ–ದಿವ್ಯಾಸ್ತ್ರವನ್ನು, ಪಿಡಿಯೆಂ– ಹಿಡಿಯೆನು, ಇನ್–ಇನ್ನು, ಏರ್ದೊಡಂ–ಯುದ್ಧ ಮಾಡಿದರೂ, ಉಳಿದ ನಿನ್ನ ಮಕ್ಕಳಂ– ಉಳಿದ ನಿನ್ನ ಮಕ್ಕಳನ್ನು, ಅೞಿಯೆಂ–ನಾಶಮಾಡೆನು; ಪೆರ್ಜಸಮನೆ ಪಿಡಿದು–ಹಿರಿದಾದ ಕೀರ್ತಿಯನ್ನೇ ಹಿಡಿದುಕೊಂಡು, ಎನ್ನನೆ–ನನ್ನನ್ನೇ, ರಣದೊಳ್–ಯುದ್ಧದಲ್ಲಿ, ಅೞಿವೆಂ– ನಾಶಮಾಡುತ್ತೇನೆ; ಇರದೆ–(ಚಿಂತೆಯಿಂದ) ಇರದೆ, ಅಡಿಯೆತ್ತಿಂ–ಹೆಜ್ಜೆ ಎತ್ತಿರಿ, ಹೊರಡಿರಿ, ಎಡೆಗೋದು ಎಡೆ+ಕೋ– “ಸೂತ್ರ ಪ್ರವೇಶೇ”, “ಎಡೆಗೋದಿರದಿರಿಮುದ್ದಂ ನುಡಿಯ ದಿರಿಂ” ಎಂದು ಪಂಪನ ಆದಿಪುರಾಣ ಪ್ರಯೋಗ; ನಡುವೆ ಹೋಗು, ಪ್ರವೇಶಿಸು ಎಂದರ್ಥ.

ವಚನ : ವಿಸರ್ಜಿಸಿ–ಬಿಟ್ಟು ಕಳೆದು; ನನ್ನಿಯಂ–ಸತ್ಯವನ್ನು, ಆವರ್ಜಿಸಿ– ಎಳೆದು ಕೊಂಡು; ರಾಧೇಯಂ–ಕರ್ಣನು; ಆಧೇಯಮಾಗಿ–ಆಶ್ರಯವಾಗಿ; ಕತಿಪಯ–ಕೆಲವು; ನಿಕಟವರ್ತಿಯಪ್ಪ–ಹತ್ತಿರ ಇರುವ; ದಿವಿಜಾಪಗಾ–ದೇವನದಿ, ಗಂಗೆ; ನೆಲಂ ಮೂರಿ ವಿಟ್ಟಂತೆ–ನೆಲದ ಜನರೆಲ್ಲ ಗುಂಪಾದಂತೆ, “ಮಾರಿಯ ಮೂರಿ ರಕ್ಕಸರ ಜಂಗುಳಿ” ಎಂದು ಪ್ರಯೋಗಾಂತರವುಂಟು; ಬಿಟ್ಟಿರ್ದ–ಬೀಡುಬಿಟ್ಟಿದ್ದ, ಅಜಾತಶತ್ರುವಂ–ಧರ್ಮರಾಜನನ್ನು, ಅವನತೋತ್ತಮಾಂಗನಾಗಿ–ಬಾಗಿದ ತಲೆಯುಳ್ಳವನಾಗಿ ನಮಸ್ಕರಿಸಿದವನಾಗಿ.

೮೮. ಹಿಮಕೃದ್ವಂಶಜರಪ್ಪ–ಚಂದ್ರವಂಶದಲ್ಲಿ ಹುಟ್ಟಿದವರಾದ, ಪಾಂಡುಸುತರಂ– ಪಾಂಡವರನ್ನು, ಕೈಕೊಂಡು–ಸ್ವೀಕರಿಸಿ, ನಿನ್ನ, ಅಯ್ದು ಬಾಡಮನಿತ್ತುಂ–ಐದು ಗ್ರಾಮ ಗಳನ್ನು ಕೊಟ್ಟು, ನಡಪು–ಸಲಹು, ಎಂದು, ಎಂಬುದಾಗಿ, ಸಾಮಮನೆ–ಸಾಮೋಪಾಯವನ್ನೇ, ಮುಂ–ಮೊದಲು, ಮುಂತಿಟ್ಟೊಡೆ–ಎದುರಿಗಿಟ್ಟರೆ, ಆತಂ–ಆ ದುರ್ಯೋಧನ, ಪರಾಕ್ರಮ ಮಂ ತೋಱಿ–ಶೌರ್ಯವನ್ನು ಪ್ರದರ್ಶಿಸಿ, ಸಿಡಿಲ್ದು–ಸಿಡಿದು, ಪಾಯ್ದು–ಮುನ್ನುಗ್ಗಿ, ಅಸುಂಗೊಳ್ವನ್ನೆಗಂ–ಪ್ರಾಣಾಪಹರಣ ಮಾಡುವಷ್ಟರಲ್ಲಿ, ಆಂ–ನಾನು, ವಿಶ್ವರೂಪಮಂ– ನನ್ನ ಬೃಹದ್ರೂಪವನ್ನು, ತೋಱಿದೆಂ–ತೋರಿಸಿದೆನು; ಇಂ–ಇನ್ನು ಮೇಲೆ, ಕಡಂಗಿ–ಉತ್ಸಾಹಿಸಿ, ರಣದೊಳ್–ಯುದ್ಧದಲ್ಲಿ, ನಿನ್ನಾರ್ಪುಮಂ–ನಿನ್ನ ಸಾಮರ್ಥ್ಯವನ್ನೂ, ನೀಂ–ನೀನು, ತೋಱು– ತೋರಿಸು.

ವಚನ : ಎಂಬನ್ನೆಗಂ–ಎನ್ನುವಷ್ಟರಲ್ಲಿ; ಮರೀಚಿಮಸೃಣಿತ–ಕಿರಣಗಳಿಂದ ನುಣ್ಪೇರಿದ;

೮೯. ಅಟ್ಟಿದ–ಕಳಿಸಿದ, ನಿಮ್ಮ ಪೆರ್ಗಡೆ–ನಿಮ್ಮ ಹೆಗ್ಗಡೆ, ರಾಯಭಾರಿ, ಬರ್ದುಂಕಿದ ನೆಂಬುದಂ–ಪ್ರಾಣಸಹಿತವಾಗಿ ಬಂದನೆಂಬುದನ್ನು, ಇಂದ್ರಜಾಲಮಂ– ಮಾಯಾವಿದ್ಯೆ ಯನ್ನು, ತೊಟ್ಟನೆ–ಕೂಡಲೇ, ಬೇಗನೇ, ತೋಱಿ ಬಂದು–ತೋರಿಸಿ ಬಂದು, ಬರ್ದುಕಾಡಿದಂ– ತಪ್ಪಿಸಿಕೊಂಡನು; ಇಂ–ಇನ್ನು, ಅಳಿಪಿಂದಂ–ರಾಜ್ಯದಾಸೆಯಿಂದ, ಅಟ್ಟುವ–ಕಳುಹಿಸುವ, ಅಟ್ಟಟ್ಟಿಗಳಂ–ದೂತರನ್ನು, ಬಿಸುೞ್ಪುದು–ಬಿಡುವುದು, ಎಮಗಂತಮಗಂ–ನಮಗೂ ಅವರಿಗೂ, ಮುಳಿಸಿಂದಂ–ಕೋಪದಿಂದ, ಈಗಳ್–ಈಗ, ಅಟ್ಟಟ್ಟಿಗಳ್–ದೂತಸಂದೇಶ ಗಳು, ಅಪ್ಪುವು–ಆಗುತ್ತವೆ; ಎಂದು–ಎಂಬುದಾಗಿ, ಇದನೆ–ಇದನ್ನೇ, ದಲ್–ದಿಟವಾಗಿಯೂ, ಎಮ್ಮ ಭೂಭುಜಂ–ನಮ್ಮ ದೊರೆ ದುರ್ಯೋಧನ, ನುಡಿದಟ್ಟಿದಂ–ಹೇಳಿ ಕಳುಹಿಸಿದನು. ಬರ್ದುಕಾಡು–ತಪ್ಪಿಸಿಕೋ, ಎಂಬರ್ಥದಲ್ಲಿ, ‘ಪಗೆಕೆಯ್ಗೆವಂದು ಬರ್ದುಕಾಡಿದ ಬಲ್ಮುಳಿಸಿಂ ವೃಕೋದರಂ’, (ಪಂಪಭಾ. ೧೦–೧೦೧) ಎಂಬ ಪ್ರಯೋಗವಿದೆ; ಅಟ್ಟಟ್ಟಿ ಪ್ರಾ. ಅಟ್ಟಟ್ಟ– ಯಾತಃ ಗತಃ ಹೋದವನು ಎಂದರೆ ಪ್ರೇಷಿತನಾದವನು.

೯೦. ಬಳಸಂಪನ್ನರಂ–ಸೈನ್ಯಸಂಪತ್ತಿಯುಳ್ಳವರನ್ನು, ಆಸೆಗೆಯ್ಗೆ–ಅಪೇಕ್ಷಿಸಲಿ; ಚತುರಂಗಾ ನೀಕಮಂ–ಚತುರಂಗ ಸೈನ್ಯವನ್ನು, ಕೂಡಿ–ಸೇರಿ, ಕೊಳ್ಗುಳಮಂ–ಯುದ್ಧರಂಗವನ್ನೂ, ಗಂಡುಮಂ–ಪೌರುಷವನ್ನೂ, ಅಪ್ಪುಕೆಯ್ಗೆ–ಅಂಗೀಕರಿಸಲಿ, ಮನಮಂ–ಮನಸ್ಸನ್ನು, ಬಲ್ಲಿತ್ತು ಮಾೞ್ಕೆ–ಗಟ್ಟಿ ಮಾಡಲಿ; ಎಂದು–ಎಂದೂ, ಆಂ–ನಾನು, ಎಳೆಯಂ–ಭೂಮಿಯನ್ನು, ಕಾದಿ ದೊಡಲ್ಲದೆ–ಯುದ್ಧ ಮಾಡಿದಲ್ಲದೆ, ಈಯೆಂ–ಕೊಡೆನು; ಅಱಿದಿರ್ಕೆ–(ಇದನ್ನು) ತಿಳಿದಿ ರಲಿ; ಎಂದು–ಎಂಬುದಾಗಿ, ಆಕುರುಕ್ಷೇತ್ರಮಂ–ಆಕುರುಕ್ಷೇತ್ರವನ್ನು, ಕಳವೇೞ್ದಿ– ಯುದ್ಧರಂಗವನ್ನಾಗಿ ಗೊತ್ತುಮಾಡಿ ಅಟ್ಟಿದಂ–ಸುದ್ದಿಯನ್ನು ಕಳುಹಿದ್ದಾನೆ ದುರ್ಯೋಧನ; ಅಣ್ಮಿಸಾಯಿಂ–ಹೋರಾಡಿ ಸಾಯಿರಿ; ನಿಮ್ಮ, ಒಂದು ಬಾೞ್ವಾಸೆಯಂ–ಒಂದು ಬದುಕುವ ಆಸೆಯನ್ನು, ಉೞಿಯಿಂ–ಬಿಡಿರಿ, ಕಳವೇೞ್ ಕಳನಂ+ಪೇೞ್.

ವಚನ : ವೃಕೋದರಂ–ಭೀಮನು; ಮುಳಿದು–ಕೆರಳಿ, ಆಸ್ಫೋಟಿಸಿ–ಸಿಡಿದು,

೯೧. ಎನಗಂ ತನಗಂ–ನನಗೂ ಅವನಿಗೂ (ದುರ್ಯೋಧನನಿಗೂ), ವಿಸಸನರಂಗಂ–ಯುದ್ಧ ರಂಗವು, ದೊರೆಯಪ್ಪುದು–ಸಾಟಿಯಾಗುತ್ತದೆ, ತಕ್ಕುದಾಗುತ್ತದೆ, ತನ್ನೊಳಂ ಎನ್ನೊಳಂ– ಅವನಲ್ಲಿಯೂ ನನ್ನಲ್ಲಿಯೂ, ಕಾಯ್ಪುಂ–ಕೋಪವೂ, ಏವಮುಂ–ಮಾತ್ಸರ್ಯವೂ, ಪಸರಿಸಿ ಪರ್ವಿ–ವ್ಯಾಪಿಸಿ ಹಬ್ಬಿ, ಅದಿರ್ದುದು–ಅದು ಇದೆ; ಭೀಮನೆಂದೊಡೆ–ಭೀಮನು ಎಂದರೆ, ಆ ಪೆಸರನೆ ಕೇಳ್ದು–ಆ ಹೆಸರನ್ನೇ ಕೇಳಿ, ಸೈರಿಸದ–ಸಹಿಸಿಕೊಳ್ಳದ, ನಿನ್ನರಸಂ– ನಿನ್ನ ರಾಜ ದುರ್ಯೋಧನ, ಕಲಿಯಾಗಿ–ಶೂರನಾಗಿ, ನಾಳೆ–ನಾಳಿನ ದಿನ, ವೈರಿ…. ಘಾತಮಂ: ವೈರಿಭೂಪ–ಶತ್ರುರಾಜರ, ರುಧಿರ–ರಕ್ತದಿಂದ, ಆರ್ದ–ಒದ್ದೆಯಾದ, ಮದೀಯ–ನನ್ನ, ಗದಾಭಿಘಾತಮಂ–ಗದೆಯ ಹೊಡೆತವನ್ನು, ಸೈರಿಸುಗುಮೆ–ತಾಳಿಕೊಳ್ಳುತ್ತಾನೆಯೆ? ಇಲ್ಲ.

ವಚನ : ಪರಾಕ್ರಮಧವಳಂ–ಅರ್ಜುನನು.

೯೨. ಕಱುಪುಂ–ಕೋಪವನ್ನೂ, ಕಾಯ್ಪುಮಂ–ತಾಪವನ್ನೂ, ಉಂಟುಮಾಡಿ–ಇರುವಂತೆ ಮಾಡಿ, ದುರ್ಯೋಧನಂ–ದುರ್ಯೋಧನನು, ತಾಗಿ–ಸಂಘಟ್ಟಿಸಿ, ತಳ್ತಿಱಿದಂದಲ್ಲದೆ–ಸೇರಿ ಯುದ್ಧಮಾಡಿದಾಗಲ್ಲದೆ, ನೆಲನಂ–ರಾಜ್ಯವನ್ನು, ಕೂಡಂ–ನಮ್ಮೊಡನೆ ಸೇರಿಸನು ಎಂದರೆ ಕೊಡನು; ಆಜಿಭರಮುಂ–ಯುದ್ಧದ ಹೊರೆಯೂ, ಸಾರ್ಚಿತ್ತು–ಸಮೀಪಿಸಿದೆ; ಮುನ್ನಱು ದಿಂಗಳ್–ಆಱು ತಿಂಗಳು ಮುಂಚಿತವಾಗಿಯೇ, ಅದೇನೆಂದು–ಅದು ಏನೆಂಬುದಾಗಿ, ಜಱುಚುತ್ತುಂ–ಅತ್ಯಾಲಾಪ ಮಾಡುತ್ತ, ಇರ್ಪುದೆ–ಇರುವುದೆ? ರಣಕ್ಕೆ–ಯುದ್ಧಕ್ಕೆ, ಆರ್– ಯಾರು, ಎನ್ನರ್–ಎಂಥವರು; ಈಗಳ್–ಈಗ, ಎಂ(ದ)ಱಿಯಲ್–ಎಂದು ತಿಳಿಯಲು, ಬರ್ಕುಮೆ–ಬರುತ್ತದೆಯೆ? ಕುರುಕ್ಷೇತ್ರದೊಳ್–ಕುರುಕ್ಷೇತ್ರದಲ್ಲಿ, ಬರ್ಕೆ–(ಕದನಕ್ಕೆ) ಬರಲಿ, ಬಂದೊಡೆ–ಬಂದರೆ, ಅಱಿಯಲಕ್ಕುಂ–ತಿಳಿವುದಾಗುತ್ತದೆ. ಕಱುಪ್ಪು–(ತ) ಕಱುಪು– ಕೋಪ? “ಜಱುಚು–ಬಹುಭಾಷಣೇ.”

೯೩. ದುರ್ಯೋಧನಂ–ದುರ್ಯೋಧನನು, ತಳ್ತಿಱಿಯದೆ–ಎದುರಿಸಿ ಯುದ್ಧ ಮಾಡದೆ, ಎಳೆಯಂ–ಭೂಮಿಯನ್ನು, ಕುಡೆಂ–ಕೊಡೆನು, ಎಂದಟ್ಟೆ–ಎಂದು ದೂತನನ್ನು ಕಳುಹಿಸಿ, ಕಾದಲ್ಕಂ–ಯುದ್ಧ ಮಾಡುವುದಕ್ಕೂ, ಈಗಳ್–ಈಗ, ಕುರುಕ್ಷೇತ್ರಮಂ–ಕುರುಕ್ಷೇತ್ರ ವನ್ನು, ಕಳನಂ ಪೇೞ್ದಂ–ಯುದ್ಧರಂಗವನ್ನಾಗಿ ಗೊತ್ತು ಮಾಡಿದನು; ಎನೆ–ಎನ್ನಲು, ತಡ ವಿನ್ನಾವುದು–ತಡವಿನ್ನೇನು, ಉಗ್ರಾಜಿಯೊಳ್–ಭಯಂಕರ ಯುದ್ಧದಲ್ಲಿ, ದೋರ್ವಳ ದಿಂದಂ–ಭುಜಬಲದಿಂದ, ತನ್ನ–ಅವನ, ಮಚ್ಚಂ–ಅಪೇಕ್ಷೆಯನ್ನು, ಸಲಿಸಿಯೆ–ಸಲ್ಲಿಸಿಯೇ, ನೆಲನಂ–ರಾಜ್ಯವನ್ನು, ಕೊಳ್ವೆನ್–ಕಸಿದುಕೊಳ್ಳುತ್ತೇನೆ, ಇಂ ತಳ್ವೆನ್–ಇನ್ನು ತಡಮಾಡೆನು; ಎಮ್ಮೊಳ್–ನಮ್ಮಲ್ಲಿ, ಕಳನಂಬೇಡಿ–ಯುದ್ಧರಂಗವನ್ನು ಬಯಸಿ, ಎಯ್ದೆ–ಚೆನ್ನಾಗಿ, ಕೇ [ಳ್ದಂ]–ಕೇಳಿದನು; ಬಗೆಯನಱಿಯಲಾಯ್ತು–ಅವನ ಇಚೆ, ಯನ್ನು ತಿಳಿಯಲಾಯಿತು; ಎೞಿಂ–ಏಳಿರಿ, ಅಂತೆಂದೆ–ಹಾಗೆಂದೇ, ಪೇೞಿಂ–ಹೇಳಿರಿ; ಕಳ [ನಂ] ಬೇಡೆಯ್ದೆ–ಎಂಬಲ್ಲಿ ಏನೋ ಪಾಠಕ್ಲೇಶವಿದೆ.

೯೪. ಧರ್ಮರಾಜನು ದಂಡೆತ್ತಿ ನಡೆಯುವುದು: ದೆಸೆಯಂ ಪೊತ್ತ–ದಿಕ್ಕುಗಳನ್ನು ಹೊತ್ತಿರುವ, ಮದೇಭರಾಜಿ–ಸೊಕ್ಕಾನೆಗಳ ಸಾಲು ಎಂದರೆ ದಿಗ್ದಂತಿಗಳು, ದೆಸೆಗೆಟ್ಟೋಡಲ್–ದಿಕ್ಕುಗೆಟ್ಟು ಓಡಲು (ಸೇನಾಭಾರ ಕಾರಣವಾಗಿ), ತಗುಳ್ದತ್ತು–ತೊಡಗಿದುವು; ಸಪ್ತ ಸಮುದ್ರಂ–ಏಳು ಸಾಗರಗಳು, ಕರೆಗಣ್ಮಿ–ಮೇರೆಯನ್ನು ಮೀರಿ, ತನ್ನವಧಿಯಂ–ತನ್ನ ಎಲ್ಲೆ ಯನ್ನು, ದಾಂಟಿತ್ತು–ದಾಟಿತ್ತು; ಅಜಾಂಡಂ–ಬ್ರಹ್ಮಾಂಡವು, ಸಿಡಿಲ್ದು–ಸಿಡಿದು, ಸಿಡಿಲ್ಪೊ ಯ್ದೊಡೆದ–ಸಿಡಿಲು ಹೊಡೆದು ಚೂರಾದ, ಒಂದು ತತ್ತಿಯವೊಲ್–ಒಂದು ಮೊಟ್ಟೆಯಂತೆ, ಆಯ್ತು–ಆಯಿತು, ಎಂಬ, ಒಂದು, ಪೊಸತಂ–ಹೊಸದಾದ, ಸಂದೇಹಮಂ–ಶಂಕೆಯನ್ನು, ತತ್ಸನ್ನಾಹ ಭೇರೀರವಂ–ಆ ಸೈನ್ಯಸಿದ್ಧತೆಯ ಭೇರೀನಾದ, ಭೂಭುವನಕ್ಕೆ–ಭೂಲೋಕಕ್ಕೆ, ಮಾಡಿದುದು–ಉಂಟುಮಾಡಿತು.

೯೫. ಭೃಂಗಕುಳಾಕುಳೀಕೃತ ಕಟೋಪೇತಂಗಳ್–ದುಂಬಿಗಳ ಸಮೂಹದಿಂದ ಪೀಡಿಸಲ್ಪಟ್ಟ ಕಪೋಲಗಳನ್ನುಳ್ಳ, ಕರಿಗಳ್–ಆನೆಗಳು, ಒಂಬತ್ತು ಸಾಸಿರಂ–ಒಂಬತ್ತು ಸಾವಿರ, ಅಂತು– ಹಾಗೆ, ಒಂದು ಗಜಕ್ಕೆ–ಒಂದಾನೆಗೆ, ನೂಱು ರಥಂ–ನೂರು ರಥಗಳು, ಅಂತಾಸ್ಯಂದನಕ್ಕೆ– ಹಾಗೆ ಆ ರಥಗಳಿಗೆ, ಒಂದಱೊಳ್–ಒಂದರಲ್ಲಿ, ನೂಱು–ನೂರು, ತುರಗಂ–ಕುದುರೆಗಳು; ಅನಿತುಂ–ಅಷ್ಟೂ, ತುರಂಗದೞಂ–ಕುದುರೆಯ ಸೈನ್ಯದ, ಒಂದೊಂದಕ್ಕೆ–ಒಂದೊಂದು ಕುದುರೆಗೆ, ನೂಱಾಳ್–ನೂರು ಪದಾತಿಗಳು, ತಗುಳ್ದಿರೆ–ಸೇರಿಕೊಂಡಿರಲು, ಬಲ್ಲರ್– ತಿಳಿದವರು, ನಡೆನೋಡಿ–ನಾಟುವಂತೆ ನೋಡಿ ಎಂದರೆ ವಿಚಾರಿಸಿ, ಕೂಡೆ–ಕೊಡಲು, ಅಕ್ಷೋಹಿಣೀ ಸಂಖ್ಯೆಯಂ–ಅಕ್ಷೋಹಿಣಿ ಸೈನ್ಯದ ಲೆಕ್ಕವನ್ನು, ಪಡೆದತ್ತು–ಪಡೆಯಿತು. ಆನೆ ೯೦೦೦; ರಥ ೯೦೦೦ × ೧೦೦; ಕುದುರೆ ೯೦೦೦ × ೧೦೦ × ೧೦೦; ಪದಾತಿ ೯೦೦೦ × ೧೦೦ × ೧೦೦ × ೧೦೦; ಇವೆಲ್ಲಕ್ಕೂ ಸಂಖ್ಯೆ ಹಿಣಿ ಎಂದು ಹೆಸರು; ಇದು ಪಂಪನು ಕೊಟ್ಟಿರುವ ಲೆಕ್ಕ; ಬೇರೆಯವರು ಇತರ ಅಕ್ಷೋಗಳನ್ನು ಹೇಳುತ್ತಾರೆ (ಕಿಟಲ್, ಆಪ್ಟೆ ಇವರ ನಿಘಂಟುಗಳನ್ನು ನೋಡಿ.)

ವಚನ : ಪರಿಸಂಖ್ಯೆಯೊಳ್–ಲೆಕ್ಕದಲ್ಲಿ, ತಲೆಬೞಿವೞಿಯೆಂದು–ತಲೆಯೇ ಬಳುವಳಿ ಯೆಂಬುದಾಗಿ, ಕೂಸಂ ಕೊಟ್ಟ–ಮಗಳನ್ನು ಕೊಟ್ಟ, ಜಟ್ಟಿಗಂ–ಶೂರನು; ಮುಂಗೋಳೊಳ್– ಸೇನಾ ಮುಂಭಾಗದಲ್ಲಿ, ನಣ್ಪುಮಂ–ನಂಟತನವನ್ನೂ, ಪರಿಭವಮಂ–ಅವಮಾನವನ್ನು, ನೆಲಂ ಮೂರಿವಿಟ್ಟಂತೆ–ನೆಲ ಬಾಯಿ ತೆರದ ಹಾಗೆ, ಅಥವಾ ಲೋಕದ ಜನವೆಲ್ಲ ಗುಂಪು ಸೇರಿದ ಹಾಗೆ, ಬಲವಕ್ಕದೊಳ್–ಬಲ ಪಾರ್ಶ್ವದಲ್ಲಿ; ಎಡವಕ್ಕದೊಳ್–ಎಡದ ಪಕ್ಕದಲ್ಲಿ, ಉರುಳಿ ಮಾಡಿದಂತು–ಉಂಡೆ ಮಾಡಿದ ಹಾಗೆ, ಪಿಂಗೋಳೊಳ್–ಹಿಂದುಗಡೆಯ ಭಾಗ ದಲ್ಲಿ, ಕಿೞ್ತೆೞ್ದು ಬರ್ಪಂತೆ–ಕಿತ್ತೆದ್ದು ಬರುವ ಹಾಗೆ, ಅಂಕದ–ಹೆಸರುವಾಸಿಯಾದ, ಪಗೆಗಂ–ಹಗೆತನಕ್ಕೆ, ಪಾೞಿಗಂ–ಧರ್ಮಕ್ಕೂ, ಪರಿಭವಕ್ಕಂ–ತಿರಸ್ಕಾರಕ್ಕೂ, ಪೞವೆಗಂ– ಹಳೆಯತನಕ್ಕೂ, ಎಂದರೆ ಬಹುಕಾಲದ ಸಂಬಂಧಕ್ಕೂ, ಪಾಗುಡಕ್ಕಂ–ಕಪ್ಪಕಾಣಿಕೆಗೂ, ಪಳಬದ್ದಕ್ಕಂ–ಲಾಭ ಅಥವಾ ಪ್ರಯೋಜನ ಪಡೆದುದಕ್ಕೂ, ಅಟ್ಟಟ್ಟಿಗಂ–ದೌತ್ಯಕ್ಕೂ, ಮಂಗಳ ವಸದನಂಗೊಂಡು–ಮಂಗಳಾಲಂಕಾರವನ್ನು ಮಾಡಿಕೊಂಡು, ವಿದ್ಯೋತಮಾಗಿ–ಪ್ರಕಾಶಿಸು ವುದಾಗಿ, ದಕ್ಷಿಣಾವರ್ತಮಪ್ಪ–ಬಲಗಡೆಯ ಸುಳಿಯನ್ನುಳ್ಳ, ಕೋಡು–ಆನೆಯ ಕೊಂಬು, ಪೇಱಿ–ಹೇರಿ, ಮುಖವಿಕ್ಷೇಪಣಂಗೆಯ್ದು–ಮುಖವನ್ನು ಅತ್ತ ಇತ್ತ ಕೊಡವಿ, ಘನಾಘನ ನಿನಾದ–ಮೋಡದ ಶಬ್ದ, ಗುಡುಗು; ಬೃಂಹಿತಂಗೆಯ್ವ–ಘೀಂಕಾರ ಮಾಡುವ ಅಗುೞ್ದು– ಅಗೆದು ತೋಡಿ, ಪರಡಿ–ಕೆದರಿ, ಹೇಷಿತಂಗೆಯ್ವ–ಕೆನೆಯುವ; ಗಿಳಿಯ ಬಣ್ಣದ ಕುದುರೆಗಳನ್ನು ಈ ಗದ್ಯದಲ್ಲೂ ಹೇಳಿದೆ; ಪಾಗುಡ< (ಸಂ) ಪ್ರಾಭೃತ;

೯೬. ಅಂದು–ಆಗ, ಅನುಕೂಲ ಮಂದಪವನಂ–ಅನುಕೂಲವಾಗಿ ಮೆಲ್ಲಗೆ ಬೀಸುವ ಗಾಳಿ, ಎಸಗಿತ್ತು–ಚಲಿಸಿತ್ತು; ಇಂದ್ರವನದಿಂ–ಇಂದ್ರನ ಉದ್ಯಾನದಿಂದ, ಪೂದಂದಲ್– ಹೂವಿನ ತುಂತುರು ಮಳೆ, ಪೆಣ್ದುಂಬಿಗಳ್–ಹೆಣ್ಣು ದುಂಬಿಗಳು, ಮುತ್ತುತುಂ–ಮುತ್ತಿ ಕೊಳ್ಳುತ್ತ, ಮುಸುಱುತ್ತಂ–ಕವಿದುಕೊಳ್ಳುತ್ತ, ಬರೆ–ಬರಲು, ಬಂದುದು–ಬಂದಿತು; ದೇವ ದುಂದುಭಿ–ದೇವತೆಗಳ ಭೇರೀ (ನಾದ), ಅಂಭೋಧಿ–ಸಮುದ್ರವು; ಗರ್ಜಿಸುವಂತಾದುದು– ಗರ್ಜನೆ ಮಾಡುವಂತಾಯಿತು; ದಿಗಂತಂಗಳೊಳ್–ದಿಕ್ಕಿನ ಅಂಚುಗಳಲ್ಲಿ, ಜಯಜಯ ಧ್ವಾನಂ–ಜಯ ಜಯ ಎಂಬ ಧ್ವನಿ, ಅಚ್ಚರಿಯಪ್ಪಿಂ–ಆಶ್ಚರ್ಯವುಂಟಾಗುತ್ತಿರಲು, ಜಯ ಪ್ರಾರಂಭಮಂ ಸಾಱುವಂತೆ–ಜಯೋದ್ಯೋಗವನ್ನು ಘೋಷಿಸುವಂತೆ, ಎಸೆದತ್ತು–ಶೋಭಿ ಸಿತು.

ವಚನ : ಆ ಪ್ರಸ್ತಾವದೊಳ್–ಆ ಸಮಯದಲ್ಲಿ.

೯೭. ವಾತ್ಯಾ–ಕಡುಗಾಳಿಯಿಂದ, ದುರ್ಧರ–ಧರಿಸಲಸಾಧ್ಯವಾದ, ಗಂಧ ಸಿಂಧುರ– ಮದಿಸಿದ ಆನೆಗಳ, ಕಟಿ–ಕಪೋಲ ಪ್ರದೇಶದ, ಸ್ರೋತಃ–ಮದಧಾರೆಯನ್ನುಳ್ಳ, ಸಮುದ್ಯತ್ –ಚಿಮ್ಮುತ್ತಿರುವ, ಮದವ್ರಾತ–ಮದೋದಕ ಸಮೂಹದ, ಇಂದಿಂದಿರ–ದುಂಬಿಗಳ, ಚಂಡ ತಾಂಡವ–ವೇಗವಾದ ಕುಣಿತದ, ಕಲ–ರಮಣೀಯ ನಾದದಿಂದ, ಸ್ವಾಭಾವಿಕ–ಸಹಜವಾದ, ಶ್ರೇಯಸಃ–ಶುಭವನ್ನುಳ್ಳ, ಕಿಂಚ–ಮತ್ತು, ಆಕಸ್ಮಿಕಪಾಂಸು–ಅಕಸ್ಮಾತ್ತಾಗಿ ಎದ್ದ ದೂಳನ್ನುಳ್ಳ, ಪಲ್ಲವ–ಆನೆಯ ಸೊಂಡಿಲಿನ ತುದಿಯ, ಜಲಸ್ಯಂದೀ–ನೀರ ಸುರಿತದಿಂದ, ಸದಾ ಸಿಂಧು– ಯಾವಾಗಲೂ ಹರಿಯುತ್ತಿರುವ ನದಿಯನ್ನುಳ್ಳ, ಪ್ರಿಯಗಳ್ಳ ಭೂಪತಿ–ಪ್ರಿಯಗಳ್ಳನೆಂಬ ಬಿರು ದಿದ್ದ ಅರಿಕೇಸರಿ ರಾಜ, ಅಪ್ರಾಗೇಯಂ?, ಚಮೂಪ್ರಸ್ಥಾನಂ–ಸೇನಾ ಪ್ರಯಾಣವನ್ನು, ಆಚಕ್ಷತೇ–ನೋಡುತ್ತಾನೆ.

೯೮. ಅಂಬರಂ–ಆಕಾಶ, ಧ್ವಜಮಯಂ–ಬಾವುಟಗಳಿಂದ ತುಂಬಿದೆ; ಭುವನಂ–ಲೋಕ, ಗಜಮಯಂ–ಆನೆಗಳಿಂದ ತುಂಬಿದೆ; ಅಷ್ಟ ದಿಗ್ವಳಯಂ–ಎಂಟು ದಿಙ್ಮಂಡಲಗಳು, ಪ್ರಲಯ ಪ್ರಚಂಡ–ಪ್ರಳಯದಂತೆ ತೀಕ್ಷ್ಣರಾದ, ಭೂಭುಜಮಯಂ–ರಾಜರಿಂದ ತುಂಬಿದೆ; ಜಗತೀತಳಂ–ಭೂಪ್ರದೇಶವು, ಅಶ್ವಮಯಂ–ಕುದುರೆಗಳಿಂದ ತುಂಬಿದೆ; ಕಾಡು ಕೋಡುಂ– ಕಾಡೂ ಬೆಟ್ಟದ ಶಿಖರಗಳೂ, ರಥವ್ರಜಮಯಂ–ರಥಸಮೂಹದಿಂದ ತುಂಬಿದ್ದೂ, ಪದಾತಿ ಮಯಮುಂ–ಕಾಲಾಳುಗಳಿಂದ ತುಂಬಿದ್ದೂ, ನೆಱೆ–ಪೂರ್ಣವಾಗಿ, ಆದುದು–ಆಯಿತು; ಇಂ–ಇನ್ನು, ಜಗದೊಳ್–ಮೂರು ಲೋಕಗಳಲ್ಲಿ, ಈ ಬಲಮಂ–ಸೈನ್ಯವನ್ನು, ಆಂಪರ್– ಎದುರಿಸುವವರು, ಆರ್–ಯಾರು, ಎಂದು ಚತುರ್ಬಲಾರ್ಣವ–ಚತುರಂಗ ಸೈನ್ಯ ಸಮುದ್ರ, ಎನಿಸಿತ್ತು–ಎನ್ನಿಸಿತು.

೯೯. ಎಣಿಕೆಗೆ–ಲೆಕ್ಕ ಮಾಡುವುದಕ್ಕೆ, ಅಳುಂಬಮುಂ ಪಿರಿದುಮಾದ–ಅಧಿಕವೂ ಹಿರಿದೂ ಆದ, ಪದಾತಿ ವರೂಥ ವಾಜಿ ವಾರಣ ಬಲದಿಂದಂ–ಕಾಲಾಳು ರಥ ಕುದುರೆ ಆನೆಗಳ ಸೈನ್ಯ ದಿಂದ, ಧಾತ್ರಿಯ–ಭೂಮಿಯ, ಬಿಣ್ಪು–ಭಾರ, ಇರ್ಮಡಿಸೆ–ಎರಡು ಮಡಿಯಾಗಲು, ಎನಗೆ– ನನಗೆ, ಎಂದಿನವಲ್ತು–ಯಾವತ್ತಿನ ರೀತಿಯದಲ್ಲ, ಇದು ಅಣಕಂ–ಈ ಪೀಡೆ, ಹಿಂಸೆ; ಎಂದು–ಎಂದು ಹೇಳುತ್ತಾ, ಕಣ್ತುಮುೞೆ–ಕಣ್ಣು ಹೊರಕ್ಕೆ ಬರಲು, ಪೆರ್ಬೆಡೆಯಿಂ–ದೊಡ್ಡ ಹೆಡೆಯಿಂದ, ಮಣಿ–ರತ್ನಗಳು, ಸೂಸೆ–ಚೆಲ್ಲಲು, ಬೇಸಱಿಂ–ಬೇಸರದಿಂದ, ಶೇಷಂ– ಆದಿಶೇಷನು, ಅಶೇಷಮಹೀ ವಿಭಾಗಮಂ–ಸಮಸ್ತ ಭೂಮಿ ಭಾಗವನ್ನು, ಆನಲ್–ಧರಿಸಲು, ಉಮ್ಮಳಿಸಿ–ವ್ಯಥೆಪಟ್ಟು, ತಿಣುಕಿದಂ–ಮುಲುಗಿದನು, ಹೂಸಿದನು; ಇಲ್ಲಿ ಬರುವ ತುಮುೞ್ ಎಂಬ ಧಾತುವಿನ ಅರ್ಥ ವಿಚಾರಣೀಯ; ಕಣ್ತುಮುೞ್ದುಸಿರ್ ಕುಸಿದಂತಕನಂತ ಮೆಯ್ದೆ ಮೆಯ್ ಪರವಶಮಾಗೆ ಜೋಲ್ದನಭಿಮನ್ಯು (ಪಂಪಭಾ. ೧೧–೧೦೪); ಮೊಳೆವುಲ್ಲಂ ಮೇದೆರೞ್ಕಣ್ ತುಮುೞೆ ಚಂದ್ರಪ (೪–೪೮); ಕೂರ್ಮಶಿರಂ ಪೊಱಪಾಯ್ದು ಕಣ್ತು ಮುೞ್ದೊಡವನಿತಾಗೆ ತನ್ನ ಭರದಿಂ ತಳರ್ದತ್ತು ನರೇಂದ್ರ ಸೈನಿಕಂ (ಮಲ್ಲಿಪು. ೮–೧೪೦); ಕಿರ್ಬ್ಬಸಿರ್ತ್ತಿದಿಯವೊಲಾಗೆ ಕಣ್ತುಮುೞೆಬಿರ್ದು ಮುಸುಂಬಿ (ಮಲ್ಲಿಪು. ೧೦–೭೩) ಎಂದು ಮುಂತಾಗಿ ಕೆಲವು ಪ್ರಯೋಗಗಳಿವೆ.

೧೦೦. ಏಱಿದ–ಹತ್ತಿಕೊಂಡ, ಪೊನ್ನ–ಚಿನ್ನದ, ಪಣ್ಣುಗೆಯ–ಮಾಟದ, ಅಲಂಕಾರ ವನ್ನುಳ್ಳ, ಪೆರ್ವಿಡಿ–ದೊಡ್ಡ ಹೆಣ್ಣಾನೆ, ಕಟ್ಟಿದಿರಾಗೆ–ಅತಿ ಎದುರಾಗಿ ಬರಲು, ಮುಂದೆ ಬಂದು– ಎದುರಿಗೆ ಬಂದು, ಏಱಿದ–ಹತ್ತಿದ, ಚೆನ್ನಗನ್ನಡಿಯ–ಚೆಲುವಾದ ಕನ್ನಡಿಯನ್ನುಳ್ಳ, ಚೇಟಿಕೆ– ದಾಸಿಯು, ಬೀಸುವ ಕುಂಚಂ–ಬೀಸುವ ನವಿಲುಗರಿಯ, ದೊಂದೆಯು, ಎಯ್ದೆ–ಚೆನ್ನಾಗಿ, ಮೆಯ್ದೋಱುವ–ಪ್ರಕಟಪಡಿಸುವ, ಗಾಡಿ–ಸೊಗಸು, ಕಾಂಚನದ ದಂಡದ–ಚಿನ್ನದ ಹಿಡಿಯ ನ್ನುಳ್ಳ, ಸೀಗುರಿ–ಒಂದು ಬಗೆಯಾದ ಕೊಡೆಯು, ನೋೞ್ಪೊಡೆ–ನೋಡುವರೆ, ಆರುಮಂ– ಯಾರನ್ನಾದರೂ, ಮಾಱೆ–ವಿಕ್ರಯಿಸಲು, ನಡೆತಂದ–ಬಂದ, ನರೇಂದ್ರಕಾಂತೆಯರ್– ರಾಜಸ್ತ್ರೀಯರು, ಮನೋಜನ–ಮನ್ಮಥನ, ಒಡ್ಡು–ಸೈನ್ಯವು, ಎನಿಸಿದರ್–ಎನಿಸಿಕೊಂಡರು.

೧೦೧. ಅಂತು–ಹಾಗೆ, ತಿರುವಿಂ–ಬಿಲ್ಲಿನ ಹಗ್ಗದಿಂದ, ಬರ್ದುಂಕಿದ–ತಪ್ಪಿಸಿಕೊಂಡು ಬಂದ, ಕಂತುವ–ಕಾಮನ, ನನೆಗಣೆಗಳಂತೆವೊಲ್–ಹೂವಿನ ಬಾಣಗಳ ಹಾಗೆ, ಅರೆಬರ್– ಕೆಲವರು, ಭೋಗಿಯರ್–ವಿಲಾಸಿನಿಯರು, ಪೊನ್ನಕಳಸದ–ಚಿನ್ನದ ಕಲಶವನ್ನುಳ್ಳ, ದಂತದ ಸಿವಿಗೆಗಳಂ–ದಂತದಿಂದ ಮಾಡಿದ ಪಲ್ಲಕ್ಕಿಗಳನ್ನು, ಏಱಿ–ಹತ್ತಿ, ಸಂತಸದೆ–ಸಂತೋಷದಿಂದ, ನಡೆತಂದರ್–ಬಂದರು.

೧೦೨. ತುರಗಂ–ಕುದುರೆಗಳು, ಪೊನ್ನಾಯೋಗಂಗಳಿಂ–ಚಿನ್ನದ ಅಲಂಕಾರಗಳಿಂದ, ಅಮರ್ದು–ಸೇರಿ, ಕೂಡಿ, ಅೞ್ತಿಯಿಂ–ನಡೆಯೆ–ಪ್ರೀತಿಯಿಂದ ನಡೆಯಲು, ಚಂಚತ್– ಚಲಿಸುತ್ತಿರುವ, ಪಿಂಛಾತ ಪತ್ರಮೆ–ನವಿಲು ಗರಿಯ ಕೊಡೆಯೇ, ನೆೞಲಂ–ನೆರಳನ್ನು, ಪಡೆಯೆ–ಉಂಟುಮಾಡಲು, ಕೂಡೆ–ಕೂಡಲೇ, ತಮ್ಮೊಡನೆ ಬರೆ–ತಮ್ಮ ಜೊತೆಯಲ್ಲಿ ಬರಲು, ಬಂದು, ಎತ್ತಂ–ಎಲ್ಲೆಲ್ಲೂ, ಪತ್ತೆಂಟು–ಹತ್ತೆಂಟು, ದೇಸೆ–ಚೆಲ್ವುಗಳು, ವಿಳಾಸ ದೊಳ್–ಸಿಂಗಾರದಲ್ಲಿ, ತೊಡರೆ–ಸೇರಲು, ವರ ಭೋಗಿಯರ್–ಶ್ರೇಷ್ಠರಾದ ಭೋಗ ವನಿತೆಯರು, ಕಣ್ಗೊಪ್ಪಿರಲ್–ಕಂಗೆಸೆದಿರಲು, ಚರಿತದಿಂ–ಬೇಗನೆ, ಬಂದರ್–ಬಂದರು. “ಹರಿಣಿಯೆನಿಪಾವೃತ್ತಂ ತೋಱಲ್ ನಸಂಮರಸಂಲಗಂ” ಹರಿಣೀಪ್ಲುತ ಎಂದು ಹೆಸರು.

೧೦೩. ಸಡಹುಡನಪ್ಪ–ಚಡಪಡಿಸುತ್ತಿರುವ (?), ಕೞ್ತೆ–ಹೇಸರಗತ್ತೆ, ಕೊಡೆ–ಛತ್ರಿ, ಸಂತಸದಿಂ ಪೆಱಗೇಱಿಬರ್ಪ–ಸಂತೋಷದಿಂದ ಹಿಂದೆ ಕುಳಿತು ಬರುವ, ಕನ್ನಡಿವಿಡಿದಾಕೆ– ಕನ್ನಡಿಯನ್ನು ಹಿಡಿದಿರುವವಳು, ಚಿನ್ನದ ಸವಗಂ–ಚಿನ್ನದಿಂದ ಮಾಡಿದ ಕವಚವು, ಅಪೂರ್ವದ–ಅಪರೂಪವಾದ; ಮೊಚ್ಚೆಯಂ–ಪಾದರಕ್ಷೆಯು, ಪವಣ್ಬಡೆದ–ಅಳವಟ್ಟ, ಸುವರ್ಣ–ಹೊಂಬಣ್ಣದ, ಪಾರಿವದ–ಪಾರಿವಾಳದ ಬಣ್ಣದ, ಕುಪ್ಪಸಮೊಪ್ಪೆ–ರವಿಕೆಗಳು ಸೊಗಸಾಗಿರಲು, ಬೆಡಂಗನಾಳ್ದು–ಬೆಡಗನ್ನು ಹೊಂದಿ, ಕಣ್ಗೆಡಱದೆ–ನೋಟಕ್ಕೆ ದಾರಿದ್ರ್ಯ ವನ್ನುಂಟುಮಾಡದೆ, ಪೆಂಡವಾಸದ–ಅಂತಃಪುರದ, ವಿಳಾಸದ–ಸೊಗಸನ್ನುಳ್ಳ, ಸೂಳೆಯರ್– ದಾಸಿಯರು, ಒಪ್ಪಿ–ಸೊಗಸಾಗಿ, ತೋಱಿದರ್–ಕಾಣಿಸಿಕೊಂಡರು. ಇಲ್ಲಿ ‘ಸಡಹುಡನಪ್ಪ’ ಎಂಬುದರ ಅರ್ಥ ಖಚಿತವಿಲ್ಲ; ಚಿನ್ನದ ಎಂಬುದಕ್ಕೆ ಬದಲಾಗಿ ಚೀನದ (=ರೇಷ್ಮೆಯ) ಎಂಬ ಪಾಠವಿದ್ದಿರಬಹುದು; ಸವಗ, ಸವಂಗ (ಸಂ) ಕವಚ;

೧೦೪. ನಡೆಯಲ್ ಬಂದು–ದಂಡೆತ್ತಿ ನಡೆಯಲು ಬಂದು, ಇಱಿಯಲ್ಕೆ–ಯುದ್ಧ ಮಾಡುವುದಕ್ಕೆ, ತಕ್ಕ–ಯೋಗ್ಯವಾದ, ತುರಗಂ–ಕುದುರೆ, ಭೋರೆಂದು–ಭೋರ್ ಎನ್ನುತ್ತ, ಬರ್ಪ–ಬರುವ, ಒಂದು, ಒಡಂಬಡು–ಒಪ್ಪಂದ, ಸೊಗಸು, ಬಂದೆತ್ತಿಸಿದುದೊಂದು ಸತ್ತಿಗೆ– ಬಂದು ಎತ್ತಿ ಹಿಡಿಯಿಸಿದ ಒಂದು ಛತ್ರಿಯು, ಕರಂ–ವಿಶೇಷವಾಗಿ, ಮೆಯ್ವೆತ್ತು–ಸಾಕಾರ ವಾಗಿರುವ, ಮುಯ್ವಾಗಂ–ಹೆಗಲಿನ ಭಾಗವು, ಆಗಡುಂ–ಯಾವಾಗಲೂ, ಆರ್ಗಂ– ಯಾರಿಗೂ, ಕುಡುತಿರ್ಪ–ಕೊಡುತ್ತಿರುವ, ಕಪ್ಪುರದ–ಪಚ್ಚಕರ್ಪೂರ ಮಿಶ್ರವಾದ, ಬಂಬಲ್ದಂಬುಲಂ–ಕಟ್ಟು ವೀಳೆಯವು, ಪಡೆಗೆಲ್ಲಂ–ಸೈನ್ಯಕ್ಕೆಲ್ಲ, ರಾಗಮಂ–ಸಂತೋಷವನ್ನು, ಪಡೆವನ್ನೆಗಂ–ಪಡೆಯುತ್ತಿರಲು, ಕೆಲರ್ ನಾಯಕರ್–ಕೆಲವರು ಸೇನಾನಾಯಕರು, ಅಂದು, ಎತ್ತಂ–ಎಲ್ಲೆಲ್ಲೂ, ನಡೆದರ್–ಹೊರಟರು. ಈ ಪದ್ಯದ ಅರ್ಥ ತಾತ್ಪರ್ಯಗಳು ವಿಶದ ವಾಗಿ ತಿಳಿಯುವಂತಿಲ್ಲ; ಪಾಠದೋಷವೊ?

ವಚನ : ಪದಿರ ಪಱೆಗಳಿಂದಂ–ಸಂಕೇತ ಸೂಚಕ ವಾದ್ಯ ಧ್ವನಿಗಳಿಂದ, ಅಗುರ್ವಾಗೆ– ಭಯಂಕರವಾಗಲು; ಒಲೆಗಲ್ಗಳ್ಗೆ–ಒಲೆಯ ಕಲ್ಲುಗಳಿಗೆ; ಗುಡಿಯ ಗೂಂಟಕ್ಕೆ–ಗೂಡಾರವನ್ನು ಹಾಕಲು ಬೇಕಾದ ಗೂಟಗಳಿಗೆ; ದಂಡಿಗೆಗೆ–ಪಲ್ಲಕ್ಕಿಗೆ; ವೇಣುವನಂಗಳುಂ–ಬಿದಿರ ಕಾಡು ಗಳೂ; ಆನೆಕಂಬಕ್ಕೆ–ಆನೆಯನ್ನು ಕಟ್ಟುವ ಕಂಬಗಳಿಗೆ; ನೆಱೆಯವು–ಸಾಕಾಗವು; ಕಡಿತಮಿಕ್ಕಿ ದಂತಿರ್ದ–ಕಡಿತದಲ್ಲಿ ಬರೆದಂತಿದ್ದ, ಸಮಚತುರಶ್ರಂ–ಸಮಚೌಕವಾಗಿರುವ; ಪರಿಪ್ರಮಾ ಣಂ–ಸುತ್ತಳತೆಯನ್ನುಳ್ಳ; ಸೂೞ್ವರಂ–ಬಾರಿವರೆಗೂ; ನೀರಿೞಿಪಲುಂ–ಸ್ನಾನ ಮಾಡಿಸಲೂ; ನೀರ್ಗುಡಲುಂ–ತರ್ಪಣ ಕೊಡಲೂ; ಪೆರ್ಮಡುಗಳ–ದೊಡ್ಡ ಸರೋವರಗಳ; ಎಡೆಯ ಱಿದು–ಯೋಗ್ಯವಾದ ಸ್ಥಳವನ್ನು ತಿಳಿದು; ಬೀಡಂ ಬಿಡಿಸಿ–ಪಾಳೆಯವನ್ನು ಬಿಡಿಸಿ;

೧೦೫. ಅಂಕದ ಕುರುಕ್ಷೇತ್ರಂ–ಪ್ರಸಿದ್ಧವಾದ ಕುರುಕ್ಷೇತ್ರವು, ಅದು, ಉರ್ವಿಗೆ– ಭೂಮಿಗೆ, ವೀರಕ್ಷೇತ್ರಂ–ವೀರರು ಹೋರಾಡುವ ಕ್ಷೇತ್ರ; ಮಹಾಕ್ರೂರಾರಾತಿಗಳ್– ಮಹಾಕ್ರೂರರಾದ ಶತ್ರುಗಳು, ಬಲಸ್ಥರ್–ಶಕ್ತಿವಂತರು; ಎನ್ನ–ನನ್ನ, ದೋರ್ಬಲದ– ಭುಜಬಲದ, ಅಗುರ್ವಿಂದಂ–ಭೀಕರತೆಯಿಂದಲೂ, ತ್ರಿಲೋಕಕ್ಕೆ ಸಂಹಾರಂ ಮಾಡಿದ– ಮೂರು ಲೋಕಗಳಿಗೆ ಲಯವುಂಟುಮಾಡಿದ, ಭೈರವ ಪ್ರಭುವಿನ– ಭೈರವಸ್ವಾಮಿಯಾದ ರುದ್ರನ, ಒಂದಾಕಾರದಿಂ–ಒಂದು ರೂಪಿನಿಂದಲೂ, ವೈರಿ ಸಂಹಾರಂ–ವೈರಿಗಳ ಕೊಲೆ ಯನ್ನು, ಮಾಡದೆ ಮಾಣೆಂ–ಮಾಡದೆ ಬಿಡೆನು, ಎಂದು, ಹರಿಗಂ–ಅರ್ಜುನ, ಉತ್ಸಾಹ ಮಂ–ಆವೇಶವನ್ನು, ಕೈಕೊಂಡಂ–ಸ್ವೀಕರಿಸಿದನು.

ನವಮಾಶ್ವಾಸಂ ಸಂಪೂರ್ಣಂ