ಅಷ್ಟಮಾಶ್ವಾಸಂ
೧. ಶ್ರೀಯಂ–ರಾಜ್ಯಲಕ್ಷ್ಮಿಯನ್ನು, ಭುಜಬಳದಿಂ–ಬಾಹುಬಲದಿಂದ, ನಿರ್ದಾಯಾ ದ್ಯಂ–ದಾಯಾದಿಗಳಿಲ್ಲದಂತೆ, ಮಾೞ್ಪಬಗೆಯಿಂ–ಮಾಡುವ ಮನಸ್ಸಿನಿಂದ, ಅವಿಕಳ– ಕುಂದಿಲ್ಲದ, ನಿಯಮಶ್ರೀಯಂ–ಯತಿಧರ್ಮದ ನಿಯಮ ಲಕ್ಷ್ಮಿಯನ್ನು, ಅಳವಡಿಸಿ–ಸರಿ ಯಾಗಿ ಸೇರಿಸಿ, ನಿಂದ–ತಪಸ್ಸಿನಲ್ಲಿ ನಿಂತುಕೊಂಡಿರುವ, ಧರಾಯುವತೀಶನಂ–ಭೂಮಿ ಯೆಂಬ ಯುವತಿಗೆ ಒಡೆಯನಾದ, ಉದಾತ್ತನಾರಾಯಣನಂ–ಅರ್ಜುನನನ್ನು.
೨. ಕಂಡು–ನೋಡಿ, ನಿಜತನಯನ–ತನ್ನ ಮಗನ, ಅಳವು–ಪರಾಕ್ರಮ, ಎರ್ದೆ ಗೊಂಡಿರೆ–ಹೃದ್ಯವಾಗಿರಲು, ಮುದು ಪಾರ್ವನಾಗಿ–ಮುದುಕ ಬ್ರಾಹ್ಮಣನಾಗಿ, ಮೆಲ್ಲನೆ ಸಾರ್ವ– ಮೆಲ್ಲಗೆ ಹತ್ತಿರಕ್ಕೆ ಬರುವ, ಆಖಂಡಳನಂ–ಇಂದ್ರನನ್ನು, ಕಾಣಲೊಡಂ–ಕಂಡ ಕೂಡಲೇ, ಗಾಂಡಿವಿಗೆ–ಅರ್ಜುನನಿಗೆ, ಅಶ್ರುಜಲಂಗಳ್–ಕಣ್ಣೀರುಗಳು, ಇರದೆ–ಬಿಡದೆ, ಉರ್ಚಿ– ಚಿಮ್ಮಿ, ಪಾಯ್ದುವು–ಹರಿದುವು.
ವಚನ : ಪೊಱಪೊಣ್ಮುವ–ಹೊರಕ್ಕೆ ಚಿಮ್ಮುವ; ವಲ್ಕಲ–ನಾರುಬಟ್ಟೆ;
೩. ನೀನಾರ್ಗೆ–ನೀನು ಯಾರು ಅಥವಾ ಯಾರಿಗೆ ಸಂಬಂಧಪಟ್ಟವನು, ನಿನ್ನ ಪೆಸರೇನ್– ನಿನ್ನ ಹೆಸರೇನು? ಈ ನಿಯಮಕ್ಕೆ–ಈ ತಪೋನಿಯಮಕ್ಕೆ, ಮೆಯ್ಯಂ–ಶರೀರವನ್ನು, ಎಂತು ಒಡ್ಡಿದೆ–ಹೇಗೆ ಸೇರಿಸಿದೆ?; ಇದು ದಲ್ ತಾನಾಶ್ಚರ್ಯಂ–ಇದು ನಿಶ್ಚಯವಾಗಿಯೂ ಆಶ್ಚರ್ಯ; ಇದೇನು ಅಜ್ಞಾನಿಯವೊಲ್–ಅಜ್ಞಾನಿಯ ಹಾಗೆ, ಇದೇನು?ತಪಕ್ಕೆ–ತಪಸ್ಸಿಗೆ, ಬಿಲ್ಲುಂ ಅಂಬುಂ ದೊರೆಯೇ–ಬಿಲ್ಲುಬಾಣಗಳು ಸಮಾನವೇ, ತಕ್ಕವೇ?
೪. ನಿನ್ನೆಂದಂತುಟೆ–ನೀನು ಹೇಳಿದ ಹಾಗೆಯೇ; ಎನ್ನಿರವು–ನನ್ನ ಸ್ಥಿತಿ, ಮೋಕ್ಷಕ್ಕೆ– ಮುಕ್ತಿ ಸಾಧನೆಗೆ, ಅಘಟಮಾನಂ–ಹೊಂದಿಕೊಳ್ಳತಕ್ಕುದಲ್ಲ; ಐಹಿಕದ ತೊಡರ್ಪು– ಇಹಲೋಕದ ಬಂಧನ, ಎನ್ನಿರವಿನೊಳುಂಟು–ನನ್ನ ಸ್ಥಿತಿಯಲ್ಲಿ ಇದೆ; ಅಱಿಪದೆ–ತಿಳಿಸದೆ, ಏನು ಯೋಗ್ಯವೇ? ಅಲ್ಲ ಎಂದು ಭಾವ.
೫. ನಿನಗಂ ಪೇೞ್ವೊಡೆ–ನಿನಗೂ ಹೇಳುವುದಾದರೆ, ಪಾಂಡುರಾಜ ತನಯಂ– ಪಾಂಡುರಾಜನ ಮಗ; ಗಾಂಡೀವಿಯೆಂ–ನಾನು ಗಾಂಡೀವಿಯಾಗಿದ್ದೇನೆ. (ಅರ್ಜುನ); ನೆಲಂ–ರಾಜ್ಯವು, ಜೂದಿನೊಳ್–ಜೂಜಿನಲ್ಲಿ, ದಾಯಿಗಂಗೆ–ದಾಯಾದಿ ದುರ್ಯೋಧನ ನಿಗೆ, ಒತ್ತೆವೋಗೆ–ಒತ್ತೆಯಾಗಿ ಹೋಗಲು, ಬನಮಂ ಪೊಕ್ಕ–ಕಾಡನ್ನು ಹೊಕ್ಕ, ಅಣ್ಣ ನೆಂದ–ಅಣ್ಣನು ಹೇಳಿದ, ಒಂದು ಮಾತಂ–ಒಂದು ಮಾತನ್ನು, ಅಣಂ ಮೀಱದೆ–ಕೊಂಚವೂ ಉಲ್ಲಂಘಿಸದೆ, ನಿಂದು–ನಿಂತು, ಶಂಕರನಂ–ಶಿವನನ್ನು, ನೀಂ ಆರಾಧಿಸು–ನೀನು ಸಾಧಿಸು. ಎಂದಿಂತಿದಂ–ಎಂದು ಹೀಗೆ ಇದನ್ನು, ಮುನಿ ಪಾರಾಶರಂ–ಋಷಿ ವೇದವ್ಯಾಸನು, ಒಲ್ದು ಪೇೞೆ–ಪ್ರೀತಿಸಿ ಅನುಜ್ಞೆ ಮಾಡಲು, ಹರಬರ್ಪನ್ನಂ–ಶಿವನು ಬರುವವರೆಗೆ, ತಪಂಗೆಯ್ದಪೆಂ– ತಪಸ್ಸನ್ನು ಮಾಡುತ್ತೇನೆ.
‘ಹರಂಬರ್ಪನ್ನಂ’ ಎನ್ನುವುದಕ್ಕೆ ಪ್ರತಿಯಾಗಿ ‘ಹರಬರ್ಪನ್ನಂ’ ಎಂದು ಪ್ರಕೃತಿ ಪ್ರಯೋಗ ವಿದೆ.
೬. ಸ್ಫುರಿತ ತಪೋಮಯಾನಳನಿಂ–ಪ್ರಕಾಶಮಾನವಾದ ತಪಸ್ಸೆಂಬ ಅಗ್ನಿಯಿಂದ, ನೆಗೞ್ದೀ ಗಿರೀಂದ್ರ ಕಂದರದೊಳಗೆ–ಪ್ರಸಿದ್ಧವಾದ ಈ ಪರ್ವತದ ಕಣಿವೆಯಲ್ಲಿ, ಈಯೊಡಲಂ– ಈ ದೇಹವನ್ನು, ಇಂತೆ–ಹೀಗೆಯೇ, ದಲ್–ದಿಟವಾಗಿಯೂ, ಕರಗಿಪೆಂ–ಕರಗಿಸುತ್ತೇನೆ, ಪೆಱತೇಂ–ಬೇರೇನು, ಪಡೆಮಾತೊ–ಸುದ್ದಿಯೋ, ಮೇಣ್–ಅಥವಾ ಪುರಂದರಂ–ಶಿವನು, ಒಸೆದಿತ್ತದೊಂದು ಬರದಿಂದೆ–ಪ್ರೀತಿಸಿ ಕೊಟ್ಟ ಒಂದು ವರದಿಂದ, ಉಱದೆ–ಬಿಡದೆ, ಎನ್ನ– ನನ್ನ, ವಿರೋಧಿ ವರ್ಗಮಂ–ಶತ್ರು ಸಮೂಹವನ್ನು, ಕರಗಿಪೆಂ–ಕರಗಿಸುತ್ತೇನೆ, ಅಲ್ಲದೆ ಇಲ್ಲಿ–ಅಲ್ಲದೆ ಈ ಸಮಯದಲ್ಲಿ, ದ್ವಿಜೋತ್ತಮಾ–ಬ್ರಾಹ್ಮಣ ಶ್ರೇಷ್ಠನೇ, ಸೆರಗಂ ಬೆರಗಂ ಬಗೆಯೆಂ–ಅಪಾಯವನ್ನಾಗಲಿ ಉಪಾಯವನ್ನಾಗಲಿ ಎಣಿಸೆನು. ಪುರಂದರ–ಇಂದ್ರ, ಶಿವ ಎರಡೂ ಅರ್ಥಗಳುಂಟು; ಸೆರಗು=(ತೆ)ಸೆರಗು–ಅಪಾಯ, ಕೇಡು; ಬೆರಗು=(ತ) ವೆರವು– ಉಪಾಯ.
೭. ಎನೆಯೆನೆ–ಎನ್ನಲೆನ್ನಲು, ರತ್ನರಶ್ಮಿಜಟಿಳಂ–ರತ್ನಗಳ ಕಿರಣಗಳಿಂದ ಹೆಣೆದುಕೊಂಡಿ ರುವ, ಮಕುಟಂ–ಕಿರೀಟ, ಮಣಿಕುಂಡಳಂ–ರತ್ನಕುಂಡಲ, ಕನತ್ಕನಕ ಪಿಶಂಗ ದೇಹರುಚಿ– ಹೊಳೆಯುವ ಚಿನ್ನದಂತೆ ಕೆಂಪುಹೊಂಬಣ್ಣ ಮಿಶ್ರವಾದ ಮೈಕಾಂತಿ, ನೀಳ ಸರೋಜ ವನಂಗಳ್–ಕನ್ನೈದಿಲೆಯ ವನಗಳು, ಉಳ್ಳನಿತುಂ–ಇರುವಷ್ಟೂ, ಅಲರ್ವವೊಲ್– ಅರಳುವ ಹಾಗೆ, ಪೊಳೆವ ಕಣ್ಗಳುಂ–ಹೊಳೆಯುವ ಸಹಸ್ರ ನೇತ್ರಗಳು–ಇವೆಲ್ಲ, ವಿಕ್ರ ಮಾರ್ಜುನನ ಮನಕ್ಕೆ–ಅರ್ಜುನನ ಮನಸ್ಸಿಗೆ, ಅೞ್ಕಱನೀಯೆ–ಪ್ರೀತಿಯನ್ನುಂಟು ಮಾಡಲು, ಇಳಾಮರಂ–ಬ್ರಾಹ್ಮಣನು, ಅಂದು–ಆಗ, ಅಮರೇಂದ್ರ ರೂಪಮಂ–ಇಂದ್ರನ ಆಕಾರ ವನ್ನು, ತೋಱಿದಂ–ತೋಱಿಸಿದನು.
ವಚನ : ಮನದೞ್ಕಱಂ ತೋಱಲೆಂದು–ಮನಸ್ಸಿನ ಪ್ರೀತಿಯನ್ನು ತೋರಬೇಕೆಂದು;
೮. ಅರಿನೃಪರಂ–ವೈರಿ ರಾಜರನ್ನು, ಸಾಧಿಸುವೊಡಂ–ಗೆಲ್ಲುವ ಪಕ್ಷದಲ್ಲಿ, ಅಸ್ತ್ರಚಯ ಮಂ–ಬಾಣಗಳ ಸಮೂಹವನ್ನು, ಸಾಧಿಸುವೊಡಂ–ಪಡೆಯುವ ಪಕ್ಷದಲ್ಲಿ, ಇನ್ನುಂ–ಇನ್ನು ಕೂಡ, ತಪೋಗ್ನಿಯಿಂದೆ–ತಪಸ್ಸೆಂಬ ಅಗ್ನಿಯಿಂದ, ತನುವಂ–ದೇಹವನ್ನು, ಬಾಧಿಸು– ಹಿಂಸಿಸು, ದಂಡಿಸು; ಮಗನೆ–ಮಗನೇ, ನೀಂ–ನೀನು, ದುರಿತಹರನಂ ಹರನಂ–ಪಾಪವನ್ನು ಹೋಗಲಾಡಿಸುವ ಶಿವನನ್ನು, ಆರಾಧಿಸು–ಸೇವಿಸು.
೯. ಎಂದು–ಎಂದು ಹೇಳಿ, ತಿರೋಹಿತನಾಗಿ–ಅದೃಶ್ಯನಾಗಿ, ಪುರಂದರನುಂ–ಇಂದ್ರನೂ, ಪೋದಂ–ಹೋದನು; ಇತ್ತ–ಇತ್ತ ಕಡೆ, ತಪದೊಳ್–ತಪಸ್ಸಿನಲ್ಲಿ, ನರಂ–ಅರ್ಜುನ, ಇಂತೊಂದಿ ನಿಲೆ–ಹೀಗೆ ಸೇರಿ ನಿಲ್ಲಲು, ತಪದ ಬಿಸುಪಿಂ–ತಪಸ್ಸಿನ ಬೇಗೆಯಿಂದ, ವನದೊಳುಳ್ಳ–ವನದಲ್ಲಿರುವ, ತಪಸಿಯರ–ತಪಸ್ವಿಗಳ; ತಪಂ–ತಪಸ್ಸು, ಬೆಂದು–ಸೀದು, ಅೞಿದುದು–ನಾಶವಾಯಿತು.
೧೦. ನರೇಂದ್ರ ತಾಪಸನ–ಅರ್ಜುನನ, ತಪೋಮಯೂಖಾವಳಿಗಳ್–ತಪಸ್ಸಿನ ಕಿರಣ ಗಳ ಶ್ರೇಣಿ, ಪಗಲ್–ಹಗಲು, ಖರಕರಕಿರಣಾವಳಿಯಂ–ಸೂರ್ಯಕಿರಣಗಳ ಸಮೂಹವನ್ನು, ಪರಿದು–ಓಡಿ, ಎೞ್ಬಟ್ಟಿದುವು–ಎಬ್ಬಿಸಿ ಓಡಿಸಿದುವು; ಇರುಳ್–ರಾತ್ರಿ, ಶಶಿರುಚಿಯಂ– ಚಂದ್ರನ ಕಾಂತಿಯನ್ನು, ಪರಿಭವಿಸಿ–ತಿರಸ್ಕರಿಸಿ, ನಭಮಂ–ಆಕಾಶವನ್ನು, ಅಡರ್ದುವು– ಹತ್ತಿದುವು.
ವಚನ : ತಪಸ್ತಪನ–ತಪಸ್ಸೆಂಬ ಸೂರ್ಯನ; ವಿಪುಳ ಮರೀಚಿಗಳ್–ಅನೇಕ ರಶ್ಮಿಗಳು, ತಪೋವಿಘಾತಮಂ–ತಪಸ್ಸಿಗೆ ಹಾನಿಯನ್ನು; ತಳ್ತಿರ್ದ–ಸೇರಿ ಇದ್ದ; ಬಾಳೇಂದು ಚೂಡಾ ಮಣಿಗೆ–ಶಿವನಿಗೆ;
೧೧. ಆವನೆಂದಱಿಯಲ್ಕೆಬಾರದು–ಯಾರು ಎಂದು ತಿಳಿಯುವುದಾಗುವುದಿಲ್ಲ; ಅಪೂರ್ವಂ–ಅಪರೂಪನಾದ, ಒರ್ವಂ–ಒಬ್ಬನು, ಅರಾತಿ ವಿದ್ರಾವಣಂ–ಶತ್ರುಗಳನ್ನು ಓಡಿಸು ವವನು, ತಪಕೆಂದು–ತಪಸ್ಸಿಗೆ ಎಂದು, ನಿಂದೊಡೆ–ನಿಂತುಕೊಂಡರೆ, ತತ್ತಪೋಮಯ ಪಾವಕಂ–ಆ ತಪಸ್ಸಿನಿಂದ ತುಂಬಿದ ಅಗ್ನಿ, ದಾವ ಪಾವಕನಂತೆವೋಲ್–ಕಾಳ್ಕಿಚ್ಚಿನ ಹಾಗೆ, ಸುಡೆ–ಸುಡಲು, ಎಮ್ಮ–ನಮ್ಮ, ತಪಂಗಳ್–ತಪಸ್ಸುಗಳು, ಬೆಂದುವು–ಸುಟ್ಟುಹೋದುವು; ಇನ್ನಾವ–ಇನ್ನು ಯಾವ, ಶೈಲದೊಳ್–ಬೆಟ್ಟದಲ್ಲಿ; ಇರ್ಪೆವು–ಇರುವೆವು, ಇರೋಣ, ತ್ರಿಪುರಾಂತಕಾ–ಶಿವನೇ, ನೀಂ–ನೀನು, ಇರ್ಪ–ನಾವು ಇರಬೇಕಾದ, ಎಡೆವೇೞ–ಪ್ರದೇಶವನ್ನು ಸೂಚಿಸು. “ಮಲ್ಲಿಕಾಯುತಮಾಲೆಯಪ್ಪುದು ರಂಸಜಂಜಭರಂ ಬರಲ್.”
೧೨. ಆರೋಪಿತ ಚಾಪಂ–ಹೆದೆಯೇರಿಸಿದ ಬಿಲ್ಲುಳ್ಳ, ಸಂಧಾರಿತ ಕವಚಂ–ಧರಿಸಿದ ಕವಚವುಳ್ಳ, ಧೃತೋಗ್ರಶರಧಿ ಯುಗಂ–ಬೆನ್ನಿನಲ್ಲಿ ಹೊತ್ತಿರುವ ಎರಡು ಭಯಂಕರ ಬತ್ತಳಿಕೆ ಗಳನ್ನುಳ್ಳ, ಅವಂ–ಆ ಅರ್ಜುನನು, ಅವನು, ತಾಂ–ತಾನು, ಆರಂದಮಲ್ಲ–ಯಾರ ರೀತಿ ಯವನೂ ಅಲ್ಲ; ತ್ರಿಪುರಾರೀ–ಶಿವನೇ, ಕೇಳ್–ಕೇಳು, ತ್ರಿಪುರಮಿಸುವ–ತ್ರಿಪುರಕ್ಕೆ ಬಾಣ ಸಂಧಾನ ಮಾಡುವ, ನಿನ್ನನ್ನೇ–ನಿನ್ನನ್ನೇ, ಪೋಲ್ವಂ–ಹೋಲುತ್ತಾನೆ.
ವಚನ : ಅಱಿಯಲೆಂದು–ತಿಳಿಯುವುದಕ್ಕಾಗಿ.
೧೩. ಅಭವಂ–ಶಿವನು, ಧ್ಯಾನದೊಳ್–ಧ್ಯಾನದಲ್ಲಿ, ನೆಱೆದು–ಪೂರ್ಣವಾಗಿ, ಇನಿ ಸಾನುಮಂ–ಒಂದು ಸ್ವಲ್ಪ, ಕಣ್ಗಳಂ–ಕಣ್ಣುಗಳನ್ನು, ಅರೆಮುಚ್ಚಿ–ಅರ್ಧಮುಚ್ಚಿ, ನಿಶ್ಚಳಿತಂ– ಸ್ತಿಮಿತನಾಗಿ, ತಾನಿರ್ದು–ತಾನು ಇದ್ದು, ಮಱೆದು ಕೆಂದಿದ–ಮೈಮರೆತು ಮಲಗಿದ, ಮೀನಂ– ಮೀನನ್ನು, ತಳ್ತು–ಹೊಂದಿ, ಆಡದಿರ್ದ–ಅಲುಗಾಡದೆ ಇದ್ದ, ಮಡುವಂ ಪೋಲ್ತ–ಮಡು ವನ್ನು ಹೋಲಿದನು. “ಸುಪ್ತಮೀನಮಿವಹ್ರದಃ” ಎಂಬ ಕಾಳಿದಾಸನ ಉಪಮೆಯನ್ನು ನೆನೆಯಬಹುದು.
ವಚನ –ಬೆರಲಂ ಮಿಡಿದು–ಬೆರಳನ್ನು ಚಿಟುಕಿಸಿ; ಪುಯ್ಯಲಂ–ಹೋರಾಟವನ್ನು; ಏನಾನು [ಮೆ] ಡಂಬಡಂಮಾಡಿ–ಏನಾದರೂ ಕೀಟಲೆಯನ್ನು ಮಾಡಿ; ಇಲ್ಲಿ ‘ಎಡಂಬಡಂ’ ಎಂದು ಪಾಠವಿರಬೇಕು.
೧೪. ಶಂಭು–ಶಿವನು, ವನಚರನಾಗಿ–ಬೇಡರವನಾಗಿ, ಗಿರಿಜಾತೆಯಂ–ಪಾರ್ವತಿಯನ್ನು, ಓತು–ಪ್ರೀತಿಸಿ, ಪುಳಿಂದಿಮಾಡಿ–ಬೇಡಿತಿಯನ್ನಾಗಿ ಮಾಡಿ, ನಚ್ಚಿನ ಗುಹನಂ–ನಂಬಿಕೆಯ ಷಣ್ಮುಖನನ್ನು, ಕಿರಾತ ಬಲನಾಯಕನಾಗಿರೆ ಮಾಡಿ–ಬೇಡರ ಸೈನ್ಯದ ನಾಯಕನನ್ನಾಗಿ ಮಾಡಿ, ಭೂತಮುಳ್ಳನಿತುಮಂ–ಇರುವಷ್ಟು ಮರುಳುಗಳನ್ನೂ, ಬೇಡವಡೆಮಾಡಿ–ಬೇಡರ ಪಡೆಯನ್ನಾಗಿ ಮಾಡಿ, ಯುಗಾಂತ ಪಯೋಧರಾಳಿ–ಪ್ರಳಯ ಕಾಲದ ಮೇಘ ಸಮೂಹ, ಭೋಂಕನೆ–ಬೇಗನೆ, ಕವಿವಂದದಿಂ–ಮುಚ್ಚಿಕೊಳ್ಳುವ ಹಾಗೆ, ಮೃಗಯಾ ನಿಧಾನಮಂ– ಬೇಟೆಗೆ ಆಕರವಾದ, ಆ ಬನಮಂ–ಆ ಕಾಡನ್ನು, ಕವಿದಂ–ಮುಚ್ಚಿದನು, ಮುತ್ತಿದನು.
ವಚನ : ಆ ಕಳಕಳಕ್ಕೆ–ಆ ಕೋಲಾಹಲಕ್ಕೆ; ಏವಯಿಸಿ–ಅಸಮಾಧಾನಪಟ್ಟು, ಕೋಪಿಸಿ; ವರಾಹರೂಪದ–ಹಂದಿಯಾಕಾರದ.
೧೫. ಪೊರಳೆ–ಹೊರಳಲು, ವಾರಿಧಿಗಳ್–ಸಮುದ್ರಗಳು, ಕಲಂಕಿದುವು–ಕದಡಿದುವು; ಮೆಯ್ಯಂ–ಮೈಯನ್ನು, ಉರ್ದೆ–ಉಜ್ಜಲು, ಉದಗ್ರ–ಅತಿ ಎತ್ತರವಾದ, ಮಂದರಂ–ಮಂದರ ಪರ್ವತ, ಅದು, ಅಂದು ಅಲುಗಿತ್ತು–ಅಳ್ಳಾಡಿತು; ಬಾಯ್ಗೆಯೆ–ಡುರುಕೆಂದು ಕೂಗಿದರೆ, ದಿಗ್ಗಜಂ–ದಿಕ್ಕಿನಾನೆಗಳು, ಪೆಱಗಿಟ್ಟುವು–ಹಿಂದಕ್ಕೆ ಸರಿದುವು; ಆಂತರದೆ–ನಡುವೆ, ತೊಟ್ಟನೆ– ಬೇಗನೆ, ದಾಡೆಗುಟ್ಟೆ–ಕೋರೆಹಲ್ಲುಗಳನ್ನು ಕಡಿಯಲು, ತಾರಗೆಗಳ್–ನಕ್ಷತ್ರಗಳು, ಕೞಲ್ದು– ಸಡಿಲವಾಗಿ, ನಭಂಬೆರಸು–ಆಕಾಶ ಸಮೇತವಾಗಿ, ಬಿೞ್ದುವು–ಕೆಳಕ್ಕೆ ಬಿದ್ದುವು; ದೈತ್ಯವರಾ ಹನಾ–ರಾಕ್ಷಸ ಹಂದಿಯ, ಪೆಂಪಿದೇಂ–ಹಿರಿಮೆ ಏನು, ಪಿರಿದಾಯ್ತೊ–ಅತಿಶಯವಾಯಿತೋ!
ವಚನ : ಮುರಾಂತಕನುಮಂ–ವಿಷ್ಣುವನ್ನೂ, ಇ [ಳಿ] ಸಿ–ತಿರಸ್ಕರಿಸಿ; ಕಪ್ಪಂ ಗವಿಯು ಮಾಗೆ–ಮುಚ್ಚುವ ಮುಚ್ಚಳವಾಗಲು; ಕೃತಕ ಕಿರಾತಂ–ಮಾಟದ ಬೇಡ; ತನ್ನತ್ತ ಮೊಗದೆ– ತನ್ನ ಕಡೆಗಭಿಮುಖವಾಗಿ; ಅಕ್ಷೂಣ ಬಾಣಧಿ–ಕೊರತೆಯಿಲ್ಲದೆ ಎಂದರೆ ಅಕ್ಷಯವಾದ ಬತ್ತಳಿಕೆಯಿಂದ; ಕಪ್ಪಂಗವಿ ಕಪ್ಪುವ–ಆವರಿಸುವ, ಮುತ್ತಿಕೊಳ್ಳುವ, ಮುಚ್ಚುವ+ಕವಿ– ಮುಚ್ಚಳ; (ತ, ತೆ, ಮ) ಕಪ್ಪು–ಮೂಡಿಕ್ಕೊಳ್ಳುದಲ್; ಕವಿ–ಮುಚ್ಚಳ; “ಕವಿ ಪೊಱಗಿರೆ ಕೀೞೊಳಗಿರಲವಿರಳಮಾ ತುರಗ ಬಳಮೊ ನೃಪಮಂದರಮೊ;” (ಪಂಪಭಾ) ೧೨–೨೦ ಗ ನೋಡಿ.
೧೬. ತೆಗೆದೆಚ್ಚ–ಹೆದೆಯನ್ನು ಎಳೆದು ಪ್ರಯೋಗ ಮಾಡಿದ, ಅರ್ಜುನನ, ಅಂಬು– ಬಾಣ, ತುದಿಯಿಂ–ತುದಿಯಿಂದ, ಬಾಲಂಬರಂ–ಬಾಲದವರೆಗೆ, ತೀವೆ–ವ್ಯಾಪಿಸಲು, ಸೌಳಗೆ–ಸೌಳೆಂದು (ಸೀಳುವ ಧ್ವನಿ), ಪೋಪಂತಿರೆ–ಹೋಗುವ ಹಾಗೆ, ಎಂದರೆ ಸೀಳಿ ಹೋಗು ವಂತೆ, ಪಂದಿ–ಹಂದಿ, ನೋಡ–ನೋಡು, ಸಂಬಳಿಗೆವೋಯ್ತು–ಸಂಪುಟವಾಗಿ ಹೋಯಿತು ಎಂದರೆ ಮೈಯಲ್ಲೇ ಅಡಗಿತು, ಎಂಬನ್ನೆಗಂ–ಎನ್ನುತ್ತಿರಲು, ಕೊಂಡುದು–ನಾಟಿತು; ಒಯ್ಯಗೆ–ಮೆಲ್ಲಗೆ, ಪಾರ್ದು–ನೋಡಿ, ಎಚ್ಚ–ಪ್ರಯೋಗಿಸಿದ, ವೃಷಾಂಕನ–ಶಿವನ, ಅಂಬು– ಬಾಣ, ತನುವಂ–ಮೈಯನ್ನು, ಪಚ್ಚಂತೆ–ವಿಭಾಗಿಸಿದ ಹಾಗೆ, ತೊಟ್ಟಗೆ–ಬೇಗನೆ, ವೈಮಾನಿಕ ಕೋಟಿಗೆ–ವಿಮಾನಸ್ಥರಾಗಿ ನೋಡುತ್ತಿದ್ದ ದೇವತೆಗಳ ನೆರವಿಗೆ, ಅಂದು, ಪಿರಿದೊಂದು ತ್ಸಾಹಂ–ಹಿರಿದಾದ ಉತ್ಸಾಹವೊಂದು, ಅಪ್ಪನ್ನೆಗಂ–ಆಗುತ್ತಿರಲು, ಕೊಂಡತ್ತು–ಕತ್ತರಿಸಿತು, ಸಂಬಳಿಗೆ ಸಂ. ಸಂಪುಟಿಕಾ.
ವಚನ : ವರಾಹಾರುಣಜಲಧಾರಾರುಣಮಾಗಿರ್ದ–ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ; ಆತ್ಮೀಯ ಬಾಣಮಂ–ತನ್ನ ಬಾಣವನ್ನು; ಬಾಣಧಿಯೊಳ್–ಬತ್ತಳಿಕೆಯಲ್ಲಿ; ಪ್ರಕ್ಷಾಳನಂಗೆಯ್ದು–ತೊಳೆದುಕೊಂಡು; ಮಗುೞ್ದು–ಪುನಃ; ಏಕಪಾದತಪದೊಳ್–ಒಂದೇ ಪಾದದ ಮೇಲೆ ನಿಂತು ಮಾಡುವ ತಪಸ್ಸಿನಲ್ಲಿ; ಗೀರ್ವಾಣನಾಥಾತ್ಮಜನಲ್ಲಿಗೆ–ಇಂದ್ರನ ಮಗನಾದ ಅರ್ಜುನನಲ್ಲಿಗೆ; ಅಹಿಭೂಷಣಂ–ಶಿವನು.
೧೭. ಗೊರವರೆ–ತಪಸ್ವಿಗಳೇ, ತಪಕ್ಕೆ–ತಪಸ್ಸಿಗೆ, ಬೂದಿಯುಂ ಜೆಡೆಯುಂ–ಬೂದಿಯೂ ಜಟೆಯೂ, ಅಕ್ಕೆ–ಆಗಲಿ; ತನುತ್ರಂ–ಕವಚ, ಈ ಭಯಂಕರ ಧನು–ಈ ಭಯಪ್ರದವಾದ ಬಿಲ್ಲು, ಖೞ್ಗಂ–ಕತ್ತಿ, ಅತ್ತಪರಂ–ಗುರಾಣಿ, ಇಂತೆರಡುಂ ದೊಣೆ–ಹೀಗೆ ಎರಡೂ ಬತ್ತಳಿಕೆ ಗಳು, ತೀವಿದಂಬು–ತುಂಬಿದ ಬಾಣಗಳೂ, ಇವುಗಳ ಒಂದಿರವು–ಒಂದು ಸ್ಥಿತಿ, ತಪಕ್ಕಿ ದೆಂತುಟೋ–ತಪಸ್ಸಿಗೆ ಇವು ಹೇಗೋ? ತಪಂಗಳುಮಿಲ್ಲ–ತಪಸ್ಸುಗಳು ಕೂಡ ಇಲ್ಲ; ಅವು ಉಳ್ಳೊಡೆ–ಅವು ಇರುವ ಪಕ್ಷದಲ್ಲಿ, ಈಗಳ್–ಈಗ, ಎಮ್ಮರಸರ–ನಮ್ಮ ಪ್ರಭುವಿನ, ನಚ್ಚಿನ–ನಂಬಿಕೆಯ, ಎಚ್ಚಶರಮಂ–ಬಿಟ್ಟ ಬಾಣವನ್ನು, ಸೆರಗಿಲ್ಲದೆ–ಭಯವಿಲ್ಲದೆ, ಕೊಂಡು ಬರ್ಪಿರೇ–ತೆಗೆದುಕೊಂಡು ಬರುತ್ತೀರೋ?
೧೮. ಅಱಿಯದೆ–ತಿಳಿಯದೆ, ತಂದೊಡಮೇನ್–ತಂದರೆ ಏನು; ಎಮ್ಮೆಱೆಯಂಗೆ– ನಮ್ಮ ಅರಸನಿಗೆ, ಅದಂ–ಅದನ್ನು, ಎಮ್ಮಕೆಯ್ಯೊಳ್–ನಮ್ಮ ಕೈಯಲ್ಲಿ, ಅಟ್ಟಿಂ–ಕಳಿಸಿ ಕೊಡಿರಿ; ನೀಂ–ನೀವು, ಇಂತು–ಹೀಗೆ, ಅಱಿಯುತ್ತಂ–ತಿಳಿಯುತ್ತ ಎಂದರೆ ತಿಳಿದವರಾಗಿದ್ದು, ಪೆಱರ–ಇತರರ, ಒಡಮೆಯಂ–ಸ್ವತ್ತನ್ನು, ಉಱೆ–ಹೊಂದಿ, ಸೆಱೆವಿಡಿದಿರ್ಪಿರ್–ಸೆರೆಹಿಡಿ ದಿದ್ದೀರಿ. ಇನ್ನರ್–ಇಂಥವರು, ಉರ್ವಿಯೊಳ್–ಭೂಮಿಯಲ್ಲಿ, ಒಳರೇ–ಉಂಟೇ?
ವಚನ : ಕಿರಾತದೂತಂ–ಬೇಡನ ದೂತ; ಅತಿಕ್ರಮಿಸಿ–ಮೀರಿ;
೧೯. ಬೇಡಂಗೆ–ಬೇಡರವನಿಗೆ, ಮೃಗಮಂ–ಪ್ರಾಣಿಯನ್ನು, ಇಸಲ್ಕೆ–ಪ್ರಯೋಗಿಸಲು, ದಸಿಕು ಒಂದು–ಒಂದು ಮೊಳೆ, ದೊರೆಯಕ್ಕುಂ–ಸಾಟಿಯಾಗುತ್ತದೆ; ಈ ಜಗಂಗಳಂ–ಈ ಲೋಕಗಳನ್ನು, ಅಳ್ಳಾಡಿಸುವ–ಅಲ್ಲಾಡುವಂತೆ ಮಾಡುವ, ಮದೀಯ–ನನ್ನ, ಉಗ್ರಾಸ್ತ್ರಂ– ಭಯಂಕರವಾದ ಬಾಣ, ಪೆಸರ್ಗೊಳಲ್–ಹೆಸರು ಹೇಳುವುದಕ್ಕೆ ಕೂಡ, ತನಗೆ, ದೊರೆಯೇ ಏಂ–ಸಮಾನವೇ ಏನು? ಖಳಂ–ದುಷ್ಟನು, ಅಳವಱಿಯಂ–ತನ್ನ ಅಳತೆಯನ್ನು, ಯೋಗ್ಯತೆ ಯನ್ನು, ತಿಳಿಯಂ–ತಿಳಿಯನು.
೨೦. ಏಱನೆ–ಕಲಹವನ್ನೇ, ಸೂಱೆಗೊಂಡು–ಹಿಡಿದುಕೊಂಡು, ನುಡಿವೀನುಡಿಯಲ್ಲದೆ– ನುಡಿಯುವ ಈ ಮಾತು ಅಲ್ಲದೆ; ಮತ್ತಂ–ತಿರುಗಿಯೂ, ಆಸನಂದೋಱುವ–ಉಪೇಕ್ಷೆ ಯನ್ನು ತೋರಿಸುವ, ಬಲ್ಪುದೋಱುವ–ಶಕ್ತಿಪ್ರದರ್ಶನ ಮಾಡುವ, ಎರ್ದೆದೋಱುವ– ಧೈರ್ಯವನ್ನು ತೋರಿಸುವ, ಕಯ್ಪೆಸರಂಗಳ್–ಕಹಿಯಾದ ಮಾತುಗಳು, ಎಮ್ಮಂ–ನಮ್ಮನ್ನು, ಉಂತೆ–ಸುಮ್ಮನೆ, ಏಱವು–ಅಡರವು, ಹತ್ತಲಾರವು; ಬೇಡ–ಬೇಡವೋ! ಬೇಡ–ಬೇಡನೇ, ಬೇಡದಿರು–ಬಾಣವನ್ನು ಕೇಳಬೇಡ; ಚಲಂ ಬೆರಸು–ಛಲದೊಡನೆ ಕೂಡಿ, ಅಂಬನಂಬನ್– ಬಾಣ ಬಾಣವನ್ನು, ಇನ್ಕಾಱುತೆ–ಇನ್ನು ಕಕ್ಕುತ್ತ, ಮೋದಲಾಟಿಪೊಡೆ–ಹೊಡೆಯಲು ಬಯಸುವುದಾದರೆ, ಎಂದರೆ ಯುದ್ಧ ಮಾಡಲು ಮನಸ್ಸಿದ್ದರೆ, ನಿನ್ನನಾಳ್ದನಂ–ನಿನಗೆ ಪ್ರಭುವಾ ದವನನ್ನು, ನೀಂ–ನೀನು, ಬರವೇೞ್ದುದು–ಬರುವಂತೆ ಹೇಳುವುದು. ಆಸನಂ–ಷಾಡ್ಗುಣ್ಯ ಗಳಲ್ಲಿ ಒಂದು; ‘ಉಪೇಕ್ಷಣಮಾಸನಂ’ ಎಂದು ಕೌಟಿಲ್ಯ; ಕಯ್ಪೆ=(ತ) ಕಶಪ್ಪು;
ವಚನ : ಬಗ್ಗಿಸಿದೊಡೆ–ಗದರಿಸಿದರೆ, ಬೈದರೆ; ಆ ಮಾೞ್ಕೆಯೊಳೆ–ಆ ರೀತಿಯಲ್ಲೇ; ಪೊಣರ್ಚಲ್ ಬಗೆದು–ಗಂಟಿಕ್ಕಲು, ಸೇರಿಸಲು, ಆಲೋಚಿಸಿ; ಒಡ್ಡಿದಾಗಳ್–ಚಾಚಿದಾಗ; ಸೆರಗಿಲ್ಲದೆ–ಅಂಜಿಕೆಯಿಲ್ಲದೆ;
೨೧. ಚತುರ್ಬಲಂ–ಚತುರಂಗ ಸೈನ್ಯ, ಕೆದಱೆ–ಚೆದರಲು, ತಳ್ತದೞಂ–ಸೇರಿದ ಸೈನ್ಯ, ಬೆದಱೆ–ಬೆದರಲು, ಘಟಾಳಿ–ಆನೆಗಳ ಗುಂಪು, ಕೆಡೆದು–ಬಿದ್ದು, ಅೞ್ಗಿತೞ್ಗು–ನಾಶವಾಗಿ ಕುಗ್ಗಿ, ಮಾಣದೆ–ನಿಲ್ಲದೆ, ಪೆಱಗಿಟ್ಟು–ಹಿಂಜರಿದು, ಬಾಯ್ವಿಡೆ–ಕೂಗಿಕೊಳ್ಳಲು; ಗುಣಾರ್ಣವ ನಂಬು–ಅರ್ಜುನನ ಬಾಣ, ಲಕ್ಕಲೆಕ್ಕದೆ–ಲಕ್ಷ, ಸಂಖ್ಯೆಯಿಂದ, ಕೊಳೆ– ನಾಟಲು, ಚಾತುರಂಗ ಬಲಂ–ನಾಲ್ಕು ಬಗೆ ಸೈನ್ಯಗಳು, ಅಂತು–ಹಾಗೆ, ಅೞಿದು–ನಾಶ ವಾಗಿ, ಅೞ್ಗೆ–ಕುಸಿಯಲು, ಹರ–ಶಿವನು, ಕನಲ್ದೊನಲ್ದು–ಅತಿಯಾಗಿ ಕೆರಳಿ, ಮಾಣದೆ–ಬಿಡದೆ, ಪಾರ್ಥನೊಳ್–ಅರ್ಜುನನೊಡನೆ, ದಿಗಿಭಂ–ದಿಗ್ದಂತಿ, ದಿಗಿಭದೊಳ್–ದಿಗ್ದಂತಿ ಯೊಡನೆ, ಪೆಣೆವಂತೆ–ಹೆಣೆದುಕೊಳ್ಳುವ ಹಾಗೆ, ಪೆಣೆದಂ–ಹೆಣೆದುಕೊಂಡನು, ಹೋರಾಡಿ ದನು.
ವಚನ : ಶೂನ್ಯಹಸ್ತದೊಳ್–ಬರಿಗೈಯಲ್ಲಿ, ನಿರಾಯುಧರಾಗಿ; ಪಲವುಂ ಗಾಯ ದೊಳಂ–ಹಲವು ಪಟ್ಟುಗಳಲ್ಲಿ; ಆಯಂದಪ್ಪದೆ–ಸಾಮರ್ಥ್ಯ ತಪ್ಪಿ ಹೋಗದೆ; ಸಂತರ್ಪಿನಂ=ಸಲ್ತರ್ಪಿನಂ–ಸಲ್ಲುತ್ತಿರಲು, ಕಳೆದುಹೋಗುತ್ತಿರಲು; ಪೋರೆ–ಹೋರಾಡಲು; ಇಲ್ಲಿಂದ ಮುಂದಕ್ಕೆ ‘ತಮ್ಮಂನೋೞ್ಪಂತೆ’ ಎಂದು ಪಾಠವಿದೆ; (ಗ)ದಲ್ಲಿ ಪಾಠಾಂತರ ‘ಕಮಂ’ ಎಂದಿದೆ. ‘ಅಂಬರತಳದೊಳಿ [ರ್ದಂಕಮಂ] ನೋೞ್ಪಂತೆ’ ಎಂದು ಕವಿಪಾಠವಿದ್ದಿರಬಹುದು. ದೇವತೆ ಗಳೆಲ್ಲ ಆಕಾಶದಲ್ಲಿದ್ದು, ಅಂಕಮಂ–ದ್ವಂದ್ವ ಯುದ್ಧವನ್ನು, ನೋೞ್ಪಂತೆ–ನೋಡುವಂತೆ ಎಂದರ್ಥವಾಗುತ್ತದೆ.
೨೨. ಅಭವಂ–ಶಿವನು, ಪಾರ್ಥನಂ–ಅರ್ಜುನನನ್ನು, ಇಕ್ಕಿದಂ–ಬೀಳಿಸಿದನು; ಅರ್ಜುನಂ–ಅರ್ಜುನನು, ಆ ತ್ರಿಪುರಹರನಂ–ಆ ಶಿವನನ್ನು, ಇಕ್ಕಿದಂ–ಬೀಳಿಸಿದನು, ಎನೆ– ಎನ್ನಲು, ಗೆಲ್ಲಕ್ಕೆ–ವಿಜಯಕ್ಕೆ, ಮುಡಿಗಿಕ್ಕುವಂತೆವೊಲ್–ಮುಡಿಗೆ ಹಾಕುವ ಹಾಗೆ ಎಂದರೆ ಸವಾಲು ಮಾಡುವ ಹಾಗೆ, ಹರಿಗಂ–ಅರ್ಜುನ, ಹರನಂ–ಶಿವನನ್ನು, ನೆಲದೊಳ್– ನೆಲದಲ್ಲಿ, ಅವಯವದೆ–ಶ್ರಮವಿಲ್ಲದೆ, ಇಕ್ಕಿದಂ–ಕೆಡವಿದನು.
ವಚನ : ನೆಲಕ್ಕಿಕ್ಕಿ–ನೆಲದ ಮೇಲೆ ಬೀಳಿಸಿ.
೨೩. ಪೊಱಕಣ್ಗಂ–ಹೊರಕ್ಕೆ ಕಾಣುವ ಕಣ್ಣುಗಳಿಗಿಂತ, ಮುನ್ನಂ–ಮುಂಚೆಯೇ, ತಾಂ– ತಾನು, ಮಱಸಿದ–ಮರೆಮಾಡಿದ್ದ, ನೊಸಲ ಒಂದು ಕಣ್ಣುಂ–ಹಣೆಯ ಕಣ್ಣೊಂದು, ನೊಸಲಿಂ–ಹಣೆಯಿಂದ, ಪೊಱಮಟ್ಟಂತಿರೆ–ಹೊರಗೆ ಬಂದ ಹಾಗಾಗಿರಲು, ರುದ್ರಂ– ಶಿವನು, ಹರಿಗಂಗೆ–ಅರ್ಜುನನಿಗೆ, ಅಗ್ಗಳಗಣ್ಣಂ–ಶ್ರೇಷ್ಠವಾದ ಕಣ್ಣನ್ನು, ಎಱಕದೆ–ಪ್ರೀತಿ ಯಿಂದ, ತೋಱಿದಂ–ತೋರಿಸಿದನು.
೨೪. ಉರದೊಳ್–ಎದೆಯಲ್ಲಿ, ಫಣಿ–ಸರ್ಪ; ಕರದೊಳ್–ಕೈಯಲ್ಲಿ, ಬಿಲ್–ಬಿಲ್ಲು; ಶಿರದೊಳ್–ತಲೆಯಲ್ಲಿ, ತೊಱೆ–ಗಂಗಾನದಿ; ತೊಱೆಯ ಕೆಲದೊಳ್–ನದಿಯ ಪಕ್ಕದಲ್ಲಿ, ಪೆಱೆ–ಅರ್ಧಚಂದ್ರ; ಎಸೆದಿರೆ–ಶೋಭಿಸಿರಲು, ಮುಂಗೊರಲೊಳ್–ಕೊರಳ ಮುಂಭಾಗ ದಲ್ಲಿ, ಕಱೆ–ಕಪ್ಪು, ಮಱೆಯಿಲ್ಲದೆ–ಪ್ರಕಟವಾಗಿ, ದೊರೆಕೊಳೆ–ಉಂಟಾಗಲು, ಮೃಡನಡಿಗೆ– ಶಿವನ ಪಾದಕ್ಕೆ, ಹರಿಗಂ–ಅರ್ಜುನ, ಆಗಳ್–ಆಗ, ಎಱಗಿದಂ–ಬಾಗಿದನು, ನಮಸ್ಕರಿ ಸಿದನು.
೨೫. ನೀನಪ್ಪುದಂ–ನೀನು ಶಿವನಾಗಿರುವುದನ್ನು, ಅಣಂ–ಸ್ವಲ್ಪವೂ, ಅಱಿಯದೆ– ತಿಳಿಯದೆ; ದಾನವ….ಪದಂಗೆ; ದಾನವ–ರಾಕ್ಷಸರು, ಮಾನವ–ಮನುಷ್ಯರು, ಸುರೇಂದ್ರ– ಇಂದ್ರನು, ಇವರ, ಮಣಿಮಕುಟತಟ–ರತ್ನಖಚಿತವಾದ ಕಿರೀಟ ಪ್ರದೇಶಗಳಿಂದ, ವ್ಯಾನ– ಆವರಿಸಲ್ಪಟ್ಟ, ಪದಂಗೆ–ಪಾದಗಳುಳ್ಳ ಶಿವನಿಗೆ, ಆ ನೆಗೞ್ದುದಂ–ಅಗೋ ಮಾಡಿದ್ದನ್ನು, ಆನ್–ನಾನು, ಏತಱೊಳ್–ಯಾವುದರಲ್ಲಿ, ಎಂತು ನೀಗುವೆಂ–ಹೇಗೆ ಕಳೆಯುವೆನು, ನೀಂ– ನೀನು, ಬೆಸಸಾ–ಅಪ್ಪಣೆ ಮಾಡು; ಶಿವನೆಂದು ತಿಳಿಯದೆ ಅವನಿಗೆ ಮಾಡಿದ ಅಪಚಾರವನ್ನು ಹೇಗೆ ನೀಗುವುದು ಎಂಬುದನ್ನು ತಿಳಿಸು ಎಂದು ತಾತ್ಪರ್ಯ.
ವಚನ : ವಿನಮಿತೋತ್ತಮಾಂಗನಾಗಿ–ಬಾಗಿದ ಶಿರವುಳ್ಳವನಾಗಿ; ನಿಮ್ಮಡಿ–ನಿಮ್ಮ ಪಾದ;
೨೬. ಕ್ಲೇಶದ ಫಳಂ–ಕ್ಲೇಶದಿಂದ, ಕಷ್ಟದಿಂದ ಬರುವ ಲಾಭ, ಎರ್ದೆಗೊಳ್ಳದೆ–ಹೃದ್ಯ ವಾಗದೆ ಇರುತ್ತದೆಯೆ? ಈಶಂ–ಶಿವನು, ಮನಮೊಸೆದು–ಮನದಲ್ಲಿ ಪ್ರೀತಿಸಿ, ನೆಗೞ್ದ– ಪ್ರಸಿದ್ಧವಾದ, ದಿವ್ಯಾಸ್ತ್ರಮಂ–ದಿವ್ಯಾಸ್ತ್ರವಾದ, ಆ ಪಾಶುಪತಾಸ್ತ್ರಮಂ–ಆ ಪಾಶುಪತಾಸ್ತ್ರ ವನ್ನು, ಇತ್ತು–ಕೊಟ್ಟು, ಹರಿಗಂ–ಅರ್ಜುನ, ವಿನಾಶಿತರಿಪುವಕ್ಕೆ–ನಾಶಮಾಡಲ್ಪಟ್ಟ ಹಗೆಗಳ ನ್ನುಳ್ಳವನಾಗಲಿ, ದಯೆಯಿಂ–ಕರುಣೆಯಿಂದ, ಎಂದಂ–ಹೇಳಿದನು, ಆಶೀರ್ವದಿಸಿದನು.
ವಚನ : ತೆಲ್ಲಂಟಿಯೆಂದು–ಬಳುವಳಿಯೆಂದು; ಏಗೆಯ್ವತೆಱನುಮನಱಿಯದೆ–ಏನು ಮಾಡಬೇಕೆಂಬ ರೀತಿಯನ್ನು ತಿಳಿಯದೆ; ಪರಿಶ್ರಮಂ–ಆಯಾಸ; ಅಷ್ಟ ಶೋಭೆಯಂ ಮಾಡಿಸಿ–ತಳಿರು ತೋರಣಾದಿಗಳನ್ನು ಕಟ್ಟಿಸಿ.
೨೭. ಅಂದು–ಆ ದಿನ, ಅಮರಾವತೀಪುರದ ವಾರಸ್ತ್ರೀಯರ್–ಅಮರಾವತೀ ನಗರದ ದೇವ ವೇಶ್ಯೆಯರು, ಪರಿತಂದು–ಓಡಿಬಂದು, ಈತನೇ ನರಂ–ಇವನೇ ಅರ್ಜುನ, ಆ ಖಾಂಡವ ಮೆಲ್ಲಮಂ–ಆ ಖಾಂಡವ ವನವನ್ನೆಲ್ಲ, ಶಿಖಿಗೆ–ಅಗ್ನಿಗೆ, ಉಣಲ್–ಉಣ್ಣಲು, ಕೊಟ್ಟಾತಂ– ಕೊಟ್ಟವನು! ಈಗಳ್–ಈಗ, ಮಹೇಶ್ವರನಂ–ಶಿವನನ್ನು, ಮೆಚ್ಚಿಸಿ–ಮೆಚ್ಚುವಂತೆ ಮಾಡಿ, ಮಿಕ್ಕ–ಅತಿಶಯವಾದ, ಪಾಶುಪತಮಂ–ಪಾಶುಪತಾಸ್ತ್ರವನ್ನು, ಪೆತ್ತಾತನೇ–ಪಡೆದವನೇ! ಸಾಹಸಂ–ಸಾಹಸವುಳ್ಳವನು, ಪಿರಿದುಂ ಚೆಲ್ವನುಮಪ್ಪಂ–ಹೆಚ್ಚು ಸುಂದರನಾಗಿಯೂ ಇರು ವವನು! ಎಂದು ಮನದೊಳ್–ಮನಸ್ಸಿನಲ್ಲಿ, ಸೋಲ್ತು–ಸೋತು, ಮೋಹಿಸಿ, ಅೞ್ಕಱಿಂ– ಪ್ರೇಮದಿಂದ, ನೋಡಿದರ್–ನೋಡಿದರು.
ವಚನ : ಚೆಲ್ಲಂಬೆರಸು–ಚಲ್ಲಾಟದೊಡನೆ; ಸೂಸುವ–ಎರಚುವ; ವಾಸವ ಸ್ತ್ರೀಯರ– ಇಂದ್ರನ ವನಿತೆಯರ, ಮುಖಾಬ್ಜಾಸವ ಸಂಬಂಧಿಗಳಪ್ಪ–ಮುಖ ಕಮಲದ ಮಧುವಿನ ಸಂಪರ್ಕವನ್ನುಳ್ಳ; ಸೇಸೆಗೊಳ್ವಂತೆ–ಮಂತ್ರಾಕ್ಷತೆಯನ್ನು ಸ್ವೀಕರಿಸುವಂತೆ; ಅವಧ್ಯರುಂ– ಕೊಲ್ಲಲಸಾಧ್ಯರಾದವರೂ; ವಿವಿಧಾಸ್ತ್ರಗರ್ಭಮಪ್ಪ–ನಾನಾ ತೆರನಾದ ಬಾಣಗಳಿಂದ ತುಂಬಿದ.
೨೮. ದನುಜಾನೀಕದನಿಂದ–ರಾಕ್ಷಸರ ಸೈನ್ಯವು ನಿಂತುಕೊಂಡಿರುವ, ಒಂದು ನೆಲೆಯಂ– ಒಂದು ಶಿಬಿರವನ್ನು, ಮುಟ್ಟುತ್ತೆ–ಸಮೀಪಿಸಿ, ಮಾದೇವನಿತ್ತ–ಶಿವನು ಕೊಟ್ಟ, ನಿಜೋ ಗ್ರಾಸ್ತ್ರದೆ–ತನ್ನ ಭಯಂಕರ ಬಾಣದಿಂದ, ದೈತ್ಯರೆಂಬ–ರಾಕ್ಷಸರೆಂಬ, ಪೆಸರಿಲ್ಲ–ಹೆಸರು ಇಲ್ಲ. ಎಂಬಂತುಟಂ–ಎಂಬ ಅಷ್ಟನ್ನು ಮಾಡಿ, ಬಂದು, ಎನಿತಾನುಂ–ಎಷ್ಟೋ, ಮಹಿಮಾ ಗುಣಕ್ಕೆ–ಮಹಾತ್ಮ್ಯೆಗೆ–ಕಣಿಯಾಗಿರ್ದ–ಆಕರವಾಗಿದ್ದ, ಒಂದು ಪೆಂಪಿಂದಂ–ಒಂದು ಹಿರಿಮೆ ಯಿಂದ, ಇಂದ್ರನೊಳ್–ಇಂದ್ರನಲ್ಲಿ, ಅರ್ಧಾಸನಮೇಱಿದ–ಸಿಂಹಾಸನಾರ್ಧವನ್ನು ಹತ್ತಿದ, ಒಳ್ಪು–ಸೌಭಾಗ್ಯವು, ಹರಿಗಂಗೆ–ಅರ್ಜುನನಿಗೆ, ಅಕ್ಕುಂ–ಆಗುತ್ತದೆ; ಪೆಱಂಗೆ–ಬೇರೆಯ ವನಿಗೆ, ಅಕ್ಕುಮೇ–ಆಗುತ್ತದೆಯೇ?
ವಚನ : ಗಂಡ ಗಾಡಿಗಂ–ಪುರುಷ ಸೌಂದರ್ಯಕ್ಕೂ; ಏಕಾಂತದೊಳ್–ರಹಸ್ಯದಲ್ಲಿ, ಮೇಲೆ ಬಿೞ್ದೊಡೆ–ಮೇಲೆ ಬಿದ್ದರೆ.
೨೯. ಎಂದು ಪುರಂದರನರಸಿಯಯ್–ಎಂದು ನೀನು ಇಂದ್ರನ ರಾಣಿಯಾಗಿರು ವೆಯೋ, ಅಂದು–ಆಗ, ದಲ್–ದಿಟವಾಗಿಯೂ, ಎನಗೆ–ನನಗೆ, ಅಬ್ಬೆಯೇ–ತಾಯಿಯೇ, ತೊದಳ್ನುಡಿಯದೆ–ಸುಳ್ಳಾಡದೆ, ಪೋಗು–ಹೋಗು, ಎಂದೊಡೆ–ಎಂದರೆ, ಅದೊಂ ದಬ್ದದೊಳೆ–ಅದೊಂದು ವರ್ಷದಲ್ಲೆ, ಬೃಹಂದಳೆಯಾಗು–ನಪುಂಸಕನಾಗು, ಎಂದು, ಮುನಿದು–ಕೆರಳಿ, ಶಾಪವನಿತ್ತಳ್–ಶಾಪವನ್ನು ಕೊಟ್ಟಳು. ವ್ಯಾಸಭಾರತದಲ್ಲಿ ಶಾಪವನ್ನು ಕೊಟ್ಟವಳು ಊರ್ವಶಿ; ಇಲ್ಲಿ ರಂಭೆ; “ರಂಭೆಯ ಶಾಪಮೊ ತನ್ನ ಪಾಪಮೊ” ಎಂದು ರನ್ನನೂ ಹೇಳುತ್ತಾನೆ.
ವಚನ : ಅಣ್ಣನ ನನ್ನಿಯ ವರ್ಷಾವಧಿಯೊಳಂ–ಅಣ್ಣನ ಸತ್ಯಪ್ರತಿಜ್ಞೆಯ ಅಜ್ಞಾತ ವರ್ಷದ ಅವಧಿಯಲ್ಲಿ; ಶೌಚ–ಶುಚಿತ್ವ; ವಿಕ್ರಾಂತ ತುಂಗನ ತಡೆದುದರ್ಕೆ–ಅರ್ಜುನನು ತಡಮಾಡಿದುದಕ್ಕೆ;
೩೦. ನೆಗೞ್ದ ಪಾರಾಶರಂ–ಪ್ರಸಿದ್ಧನಾದ ವೇದವ್ಯಾಸನು, ಆ ದಿವ್ಯಾಸ್ತ್ರಂಗಳಂ–ಆ ದಿವ್ಯ ಬಾಣಗಳನ್ನು, ಸಾಧಿಸಲೆ–ಸಾಧಿಸಬೇಕೆಂದೇ, ಪೇೞೆ–ಹೇಳಲು, ಮುನ್ನಂ–ಮೊದಲು, ಸಂದಿಂದ್ರಕೀಲಕ್ಕೆ–ಪ್ರಸಿದ್ಧವಾದ ಇಂದ್ರಕೀಲ ಪರ್ವತಕ್ಕೆ, ಪೋದಂ–ಹೋದನು; ಅದೇನಾ ದುದೋ–ಅದೇನಾಯಿತೋ, ಅದನಱಿವಂ–ಅದನ್ನು ತಿಳಿಯೋಣ, ಕಾರ್ಯಸಿದ್ಧಿ ಪ್ರಾದುರ್ ಭಾವಕ್ಕೆ–ಕಾರ್ಯವು ಸಫಲವಾಗುವುದಕ್ಕೆ, ಪಲವು–ಹಲವು, ವಿಘ್ನಂ–ಅಡ್ಡಿಗಳು, ಒಳವು– ಉಂಟು; ಅಱಿಯಲ್–ತಿಳಿಯಲು, ಬರ್ಕುಮೇ–ಬರುವುದೇ, ಬಾರದು–ಬರುವುದಿಲ್ಲ; ಅಲ್ಲಿಂ–ಆ ಇಂದ್ರಕೀಲದಿಂದ, ವಿಕ್ರಾಂತ ತುಂಗಂ–ಅರ್ಜುನ, ಪೋದಂ ಗಡ–ಹೋದನಲ್ಲವೆ? ಅದನಱಿಯಲ್ಕಾಗದು–ಅದನ್ನು ಎಂದರೆ ಎಲ್ಲಿಗೆ ಎಂಬುದನ್ನು ತಿಳಿಯಲಾಗದು; ಇನ್ನೆಲ್ಲಿ ಕಾಣ್ಬಂ–ಇನ್ನೆಲ್ಲಿ ನೋಡೋಣ.
ವಚನ : ಧನದನ ಕೊಳದೊಳಗಣ–ಕುಬೇರನ ಸರೋವರದಲ್ಲಿನ; ಕನಕ ಕಮಲಂಗಳಂ– ಹೊಂದಾವರೆಗಳನ್ನು.
೩೧. ಪ್ರಕಟಿತ ಸಾಹಸಂ–ಪ್ರದರ್ಶಿಸಿದ ಪರಾಕ್ರಮವುಳ್ಳ ಭೀಮನು, ಅಱುವತ್ತು ಕೋಟಿ ಧನದಾನುಚರರಂ–ಅರವತ್ತು ಕೋಟಿ ಕುಬೇರನ ಭಟರನ್ನು, ಅತಿರೌದ್ರ ಭಯಾನಕಮಾಗೆ– ಬಹುಕ್ರೂರವೂ ಭಯಪ್ರದವೂ ಆಗಿರುವಂತೆ, ಕೊಂದು, ಸೌಗಂಧಿಕ–ಸುಗಂಧದಿಂದ ಕೂಡಿದ, ಕಾಂಚನ ಕಮಲ ಹರಣ ಪರಿಣತಂ–ಹೊಂದಾವರೆಗಳನ್ನು ಅಪಹರಿಸುವುದರಲ್ಲಿ ಪ್ರೌಢನು, ಆದಂ–ಆದನು.
ವಚನ : ಸೀಳ್ದು ಸಿಱುಂಬುಳಾಡಿ ಸೀಳಿ ಚೆಲ್ಲಾಪಿಲ್ಲಿ ಮಾಡಿ; ಅಲ್ಲಿಂ ತಳರ್ದು–ಅಲ್ಲಿಂದ ಹೊರಟು; ಬಟ್ಟೆಯ ಕಣ್ಣೊಳ್–ದಾರಿಯ ಎದುರಿಗೆ, ಅಡ್ಡಂಬಿೞ್ದಿರ್ದ–ಅಡ್ಡವಾಗಿ ಬಿದ್ದಿದ್ದ; ವೃದ್ಧವಾನರನಂ–ಮುದಿಕಪಿಯನ್ನು; ಇಲ್ಲಿ ಸೀಱುಂಬುಳಾಡು ಎಂದಿರಬೇಕು; ಸೀಱುಂ ಬುಳ್ ಎಂದು ಸೂಸಾಟಂ; ‘ಬಟ್ಟೆಯ ಕಣ್ಣೊಳ್, ಎಂಬುದು ನುಡಿಗಟ್ಟು; “ಊರಪೊಱ ವೊೞಲ ಪೊಲದೊಳ್ ಬಟ್ಟೆಯ ಕಣ್ಣೊಳ್ ರಾತ್ರಿ ಪ್ರತಿಮೆನಿಂದೊರ್” ಎಂದು ಪ್ರಯೋಗಾಂತರವಿದೆ.
೩೨. ತೊಲಗು ಎನೆ–ತೊಲಗು ಎನ್ನಲು, ಬಟ್ಟೆಯಿಂ–ದಾರಿಯಿಂದ, ತೊಲಗಲಾಱೆನ್– ಹೋಗಲಾರೆನು, ಅಶಕ್ತನೆಂ–ಶಕ್ತಿಯಿಲ್ಲದವನಾಗಿದ್ದೇನೆ, ಆರ್ಪೊಡೆ–ಸಾಧ್ಯವಾದರೆ, ಎನ್ನಂ– ನನ್ನನ್ನು, ಇಂ–ಇನ್ನು, ತೊಲಗಿಸಿ ಪೋಗುನೀಂ–ನೀನು ತೊಲಗಿಸಿ ಎನ್ನಲು, ವೃಕೋದರಂ– ಭೀಮನು, ಒಯ್ಯನೆ–ಮೃದುವಾಗಿ ನಕ್ಕು, ಬಾಲಮಂ–ಬಾಲವನ್ನು, ಸಲೆಮುರಿದು–ಚೆನ್ನಾಗಿ ತಿರಿಚಿ, ಎತ್ತಲಾಟಿಸೆ–ಎತ್ತಲು ಬಯಸಲು, ಧರಿತ್ರಿಗೆ–ನೆಲಕ್ಕೆ, ಕೀಲಿಸಿದಂತುಟಾಗೆ–ಬೆಸ ದಂತಾಗಿರಲು, ದೋರ್ವಲದ–ಬಹುಬಲದ, ಪೊಡರ್ವು–ಚೈತನ್ಯವು, ಕೆಟ್ಟು–ಹಾಳಾಗಿ, ಮರುತ್ಸುತಂ–ಭೀಮನು, ಮರುತ್ಸುತನಂ–ಆಂಜನೇಯನನ್ನು, ನಡೆ ನೋಡಿ–ನಾಟಿಕೊಳ್ಳುವ ಹಾಗೆ ನೋಡಿ,
೩೩. ನೀನೆಮ್ಮಣ್ಣನೆ–ನೀನು ನನ್ನ ಅಣ್ಣನೆ? ವಲಂ–ದಿಟವಾಗಿಯೂ, ವಂಶದ ವಾನರ ನಲ್ಲಯ್–ನಮ್ಮ ಕುಲದ ವಾನರನಲ್ಲವೆ? ಮಹಾಬಲ–ಮಹಾಬಲಶಾಲಿಯೇ, ಏಕೆ, ಈ ನಗದೊಳ್– ಈ ಬೆಟ್ಟದಲ್ಲಿ, ಇರ್ದೆ–ಇರುವೆ, ಪೇೞ್ ಎನೆ–ಹೇಳು ಎನ್ನಲು, ತದ್ವಾನರಂ– ಆ ಮರ್ಕಟವು, ಅೞ್ಕರ್ತು ನೋಡಿ–ಪ್ರೀತಿಸಿ ನೋಡಿ, ಭೀಮನೆಂಬಂ–ಭೀಮನೆಂಬುವನು, ನೀನೇ–ನೀನೆಯೋ?
ವಚನ : ಅಪ್ಪೆನೆಂದೊಡೆ–ಆಗಿರುವೆನು ಎಂದರೆ; ನಿಮ್ಮಣ್ಣನಪ್ಪಣುವನೆನ್–ನಿಮ್ಮಣ್ಣ ನಾದ ಹನುಮಂತನಾಗಿದ್ದೇನೆ; ಪೊಡೆವಟ್ಟ–ನಮಸ್ಕರಿಸಿದ, ಪರಸಿ–ಹರಸಿ.
೩೪. ಎನ್ನಂತಪ್ಪ–ನನ್ನಂಥ, ಒಡವುಟ್ಟಿದರ್–ಸಹೋದರರು, ಇಂ–ಇನ್ನು, ನಿನಗೆ, ಒಳ ರಾಗಲ್–ಉಂಟಾಗಿರಲು, ಅಹಿತರ್–ವೈರಿಗಳು, ನಿನ್ನಂ–ನಿನ್ನನ್ನು, ಇದಿರಾಂಪರೆ–ಎದುರಿಸು ವರೇ, ಪೇೞ್–ಹೇಳು ಪಗೆವರ–ಹಗೆಗಳ, ಬೇರೊಳ್–ಬೇರಿನಲ್ಲಿ, ಬೆನ್ನೀರಂ–ಪೊಯ್ದು, – ಬಿಸಿನೀರನ್ನು ಹೊಯ್ದು, ನಿನಗೆ, ಧರೆಯಂ–ಭೂಮಿಯನ್ನು, ಮಾೞ್ಪೆಂ–ಮಾಡುವೆನು, ನಿನಗೆ ರಾಜ್ಯವನ್ನು ಗೆದ್ದು ಕೊಡುತ್ತೇನೆ ಎಂದು ತಾತ್ಪರ್ಯ.
೩೫. ಬೆಸನಂ–ಕಾರ್ಯವನ್ನು, ಪೂಣ್ದು–ಕೈಕೊಂಡು, ಪ್ರತಿಜ್ಞೆ ಮಾಡಿ, ಕಡಂಗಿ– ಉತ್ಸಾಹಿಸಿ, ಕಡಲಂ–ಸಾಗರವನ್ನು, ಪಾಯ್ದು–ದಾಟಿ, ಮುಂ–ಮೊದಲು, ಪೂಣ್ದರಂ–ಸಿಕ್ಕಿ ಕೊಂಡವರನ್ನು, ಕೊಂದು, ಲಂಕೆಯಂ–ಲಂಕಾನಗರವನ್ನು, ಸಮಂತು–ಚೆನ್ನಾಗಿ, ಆಗಡೆ– ಆಗಲೇ, ಪೊಕ್ಕು–ಹೊಕ್ಕು, ಬನಮಂ–ವನವನ್ನು, ಆಟಂದು–ಮೇಲೆ ಹಾಯ್ದು, ಉರ್ಕಿ– ಉಬ್ಬಿ, ಕಿೞ್ತಿಕ್ಕಿ–ಕಿತ್ತುಹಾಕಿ, ಸೀತೆಗೆ, ಸಂತಸಮಂ–ಸಂತೋಷವನ್ನು, ಮಾಡಿ, ಪೊೞಲಂ– ಲಂಕೆಯನ್ನು, ಸುಟ್ಟು, ಕಾಳಾನಳಂಗಿತ್ತು–ಪ್ರಳಯಾಗ್ನಿಗೆ ಆಹುತಿ ಮಾಡಿ, ಬೇವಸಮಂ– ದುಃಖವನ್ನು, ರಾಮನಿಂ–ರಾಮನಿಂದ, ಉಯ್ದ–ತೆಗೆದು ಹಾಕಿದ, ನೀಂ ಬರೆಗಂ–ನಿನ್ನವರೆಗೂ, ಆ ಕೌರವರ್–ಆ ಕೌರವರ್, ಏನ್ ಗಂಡರೇ–ಏನು ಶೂರರೇ?
೩೬. ಎನಗೆ ದಯೆಗೆಯ್ವುದೊಂದನೆ–ನನಗೆ ನೀನು ಒಂದನ್ನು ಮಾತ್ರ ಕರುಣಿಸುವುದು; ವಿಜಯಂಗೆ–ಅರ್ಜುನನಿಗೆ, ಮೊನೆಯೊಳ್–ಯುದ್ಧದಲ್ಲಿ, ವಿಜಯಮಾಗಿರೆ–ಜಯವಾಗಿ ಇರಲು, ನೀನುಂ–ನೀನೂ, ಆತನ–ಅವನ, ಕೇತನದೊಳ್–ಧ್ವಜದಲ್ಲಿ, ಫಣಿಕೇತನನ– ದುರ್ಯೋಧನನ, ಬಲಕ್ಕೆ–ಸೈನ್ಯಕ್ಕೆ, ಉತ್ಪಾತಕೇತುವಪ್ಪುದೆ–ಅಪಶಕುನದ, ವಿನಾಶದ ಕೇತು ಗ್ರಹವಾಗಿರುವುದೆ, ಸಾಲ್ಗುಂ–ಸಾಕು.
ವಚನ : ಅದೇವಿರಿದು–ಅದೇನು ದೊಡ್ಡದು; ಅಣುವಂ–ಹನುಮಂತನು; ಪಾರುತ್ತಿರ್ ಪನ್ನೆಗಂ–ನಿರೀಕ್ಷಿಸುತ್ತಿರಲು; ಇೞ್ಕುಳಿಗೊಂಡು–ಆಕರ್ಷಿಸಿ, ಎಳೆದುಕೊಂಡು; ಮರೀಚಿ ಗಳಿಂದಂ–ಕಿರಣಗಳಿಂದ; ತದೀಯ–ಅವರ; ಬೞಿಯಂ–ಅನಂತರ;
೩೭. ಮಸಕಂ–ರಭಸ, ಕಾಯ್ಪು–ಕೋಪ, ಜವಂ–ವೇಗ ಇವು, ಜವಂಗಂ–ಯಮನಿಗೂ, ಇದಿರೊಳ್–ಎದುರಿನಲ್ಲಿ, ನೋಡಲ್ಕೆ–ನೋಡುವುದಕ್ಕೆ, ಅಗುರ್ವಾಗೆ–ಭಯಂಕರ ವಾಗಲು, ಮಾಂದಿಸಿಂ–ತಡೆಯಿರಿ. ಈ ವಂದುದು–ಇಗೋ ಬಂತು, ಕೊಂದುದು–ಕೊಂದಿತು, ಎಂದು, ವಿಪ್ರರ್–ಬ್ರಾಹ್ಮಣರು, ಭಯದಿಂ–ಹೆದರಿಕೆಯಿಂದ, ತೆರಳ್ದು–ಗುಂಪಾಗಿ, ಓಡೆ– ಓಡಲು; ತಾಪಸರಂ–ತಪಸ್ವಿಗಳನ್ನು, ಬೆರ್ಚಿಸಿ–ಹೆದರಿಸಿ, ತೂಳ್ದಿ–ತಳ್ಳಿ, ಬೇಳ್ವರಣಿಯಂ– ಅಗ್ನಿಗೆ ಆಹುತಿಯಾಗಿ ಅರ್ಪಿಸುವ ಸಮಿತ್ತುಗಳನ್ನು, ಕೊಂಡು–ತೆಗೆದುಕೊಂಡು, ; ಆಶ್ರಮಕ್ಕೆ, ಇಂತು–ಹೀಗೆ, ಬೇವಸಮಂ–ಸಂಕಟವನ್ನು, ಮತ್ತೇಭವಿಕ್ರೀಡಿತಂ–ಮದಿಸಿದಾನೆಯ ಆಟದ, ಒಂದು ವಿಭವಂ–ಒಂದು ವೈಭವ, ಮಾಡುವುದಾಯ್ತು–ಉಂಟುಮಾಡುವುದಾಯಿತು. ಇಲ್ಲಿ ಬೇಳ್ವರಣಿ=ಬೇಳ್ವ ಅರಣಿ; ಹವಿ ಪ್ರದಾನ ಮಾಡುವ, ಅಗ್ನಿಯನ್ನು ಉತ್ಪತ್ತಿ ಮಾಡುವ ಕಡೆಗೋಲು; ಈ ಕಡೆಗೋಲನ್ನು ಅಗ್ನಿಗೆ ಆಹುತಿಯಾಗಿ ಕೊಡುವುದಿಲ್ಲವಾದ್ದರಿಂದ [ಬೇೞ್ಪ] ಎಂಬ ಪಾಠವಿರಬೇಕು; ಬೇಕಾಗುವ, ಅವಶ್ಯಕವಾದ ಎಂದರ್ಥವಾಗುತ್ತದೆ. ಇಲ್ಲಿ ಮುದ್ರಾ ಲಂಕಾರವಿದೆ.
ವಚನ : ಗಂಧ ಸಿಂಧುರದ–ಮದೋದಕದ ಸೊಗಡನ್ನುಳ್ಳ ಆನೆಯ; ಕೈಗೆ ಪೋದ– ಕೈಯಲ್ಲಿ ಸಿಕ್ಕಿ ಕಳೆದುಹೋದ, ಅರಣಿಯಂ–ಮಂಥನ ಕಾಷ್ಠಗಳನ್ನು; ಇಷ್ಟಿ ವಿಘ್ನಂಗಳಂ– ಯಜ್ಞಕ್ಕೆ ಅಡಚಣೆಗಳನ್ನು; ಕಾಳಕಾಳಸ್ವರೂಪಮಂ–ಪ್ರಳಯ ಕಾಲದ ಯಮನ ಆಕಾರ ವನ್ನು; ಬೞಿಯಂ–ಮಾರ್ಗವನ್ನು; ನಿರ್ವಂದದಿಂ–ನಿರ್ಬಂಧದಿಂದ, ಬಲಾತ್ಕಾರವಾಗಿ; ತಗುಳ್ವುದುಂ–ಅಟ್ಟಿಕೊಂಡು ಹೋಗುತ್ತಲು; ಘರ್ಮಕಿರಣ–ಸೂರ್ಯನಿಂದ; ಕೂಜತ್– ಶಬ್ದ ಮಾಡುತ್ತಿರುವ; ರಜಃಕಷಾಯ–ದೂಳಿನ ಒಗರಿನಿಂದ; ಅಳಿ ಪಟಳ–ದುಂಬಿಗಳ ಸಮೂಹ; ತೀಡುವ–ಬೀಸುವ; ನೀರದೆಸೆಯಂ–ನೀರಿರುವ ದಿಕ್ಕನ್ನು;
೩೮. ಬಕ….ರಮ್ಯಂ: ಬಕ–ಬಕಪಕ್ಷಿ, ಕಲಹಂಸ–ಹಂಸಪಕ್ಷಿ, ಬಲಾಕ–ಬೆಳ್ಳಕ್ಕಿ, ಇವುಗಳ, ಪ್ರಕರ–ಸಮೂಹದ, ಮೃದುಕ್ವಣಿತ–ಮೃದುವಾದ ಶಬ್ದಗಳಿಂದ, ರಮ್ಯಂ–ಸುಂದರವಾದ, ಪರಿವಿಕಸಿತ….ಜಳಂ: ಪರಿವಿಕಸಿತ–ಚೆನ್ನಾಗಿ ಅರಳಿದ, ಕನಕಕುಂಜ–ಹೊಂದಾವರೆಯ, ಕಿಂಜಲ್ಕಪುಂಜ–ಕೇಸರಗಳ ರಾಶಿಯಿಂದ, ಪಿಂಜರಿತ–ಹಳದಿ ಕೆಂಪು ಮಿಶ್ರವಾದ ಬಣ್ಣವ ನ್ನುಳ್ಳ, ಜಳಂ–ನೀರನ್ನುಳ್ಳ, ಕೊಳಂ–ಸರೋವರ, ಇದಿರೊಳ್–ಎದುರಿನಲ್ಲಿ, ತೋಱಿತ್ತು– ಕಾಣಿಸಿತು.
ವಚನ : ಸಾರ್ಚಿ–ಸೇರಿಸಿ, ಅಂಜಲಿ ಪುಟಮಂ–ಬೊಗಸೆಯನ್ನು;
೩೯. ತೋಯಜ ಷಂಡಮನಿದಂ–ಈ ಸರೋವರವನ್ನು, ಆನ್–ನಾನು, ಆಯತಿಯಿಂ– ವೈಭವದಿಂದ, ಕಾವೆಂ–ಕಾಪಾಡುತ್ತಿದ್ದೇನೆ; ಎಲೆ ಕೌಂತೇಯ–ಎಲೆ ಸಹದೇವನೇ, ಎನ್ನ ಮಾತಿಂಗೆ–ನನ್ನ ಮಾತಿಗೆ, ಮಱುಮಾತನಿತ್ತು–ಪ್ರತ್ಯುತ್ತರವನ್ನು ಹೇಳಿ, ಮದೀಯ–ನನ್ನ, ಸರೋವರದ, ತೋಯಮಂ–ನೀರನ್ನು, ಕುಡಿ, ಕೊಂಡುಯ್–ತೆಗೆದುಕೊಂಡು ಹೋಗು.
ವಚನ : ನೀರೞ್ಕೆ–ನೀರಡಿಕೆ; ಪೋಪಿನಂ–ಹೋಗುತ್ತಿರಲು; ಪದ್ಮಪತ್ರೌ ಘಂಗಳಿಂ– ತಾವರೆಯೆಲೆಯ ಸಮೂಹಗಳಿಂದ; ಉಮ್ಮಳಿಸಿ–ವ್ಯಥೆಪಟ್ಟು; ಸಹದೇವನ ಪೋದ– ಸಹದೇವನು ಹೋದ;
೪೦. ತಾನುಂ–ತಾನು ಕೂಡ (ನಕುಲನು ಕೂಡ), ಆನತರಿಪು–ಅಧೀನರಾದ ಶತ್ರು ಗಳುಳ್ಳವನು, ಸರೋಜ ಷಂಡಮಂ–ಕೊಳವನ್ನು, ಪೊಕ್ಕು–ಹೊಕ್ಕು, ದಿವ್ಯ ವಚನಮನದಂ– ಆ ದೇವತಾ ವಾಕ್ಯವನ್ನು, ಅಂತೆ–ಹಾಗೆಯೇ ಎಂದರೆ ಸಹದೇವನ ಹಾಗೆ, ಏನುಂ ಬಗೆಯದೆ– ಏನೂ ಲೆಕ್ಕಿಸದೆ, ಅಜ್ಞಾನತೆಯಿಂ–ಅಜ್ಞಾನದಿಂದ, ಕುಡಿದು, ನಂಜುಗುಡಿದರಂತಿರೆ–ವಿಷ ಪಾನ ಮಾಡಿದವರಂತೆ, ಕೆಡೆದಂ–ಬಿದ್ದನು.
ವಚನ : ಬರವುಮಂ–ಬರುವುದನ್ನು; ಶಂಕಾಕುಳಿತ ಚಿತ್ತನಾಗಿ–ಭಯದಿಂದ ವಿಕಳವಾದ ಮನವುಳ್ಳವನಾಗಿ; ಅಚೇತನರಾಗಿ–ಪ್ರಾಣರಹಿತರಾಗಿ;
೪೧. ಅರಿಭೂಪಾನೀಕ ಭಯಂಕರನುಂ–ಶತ್ರುರಾಜರ ಸೈನ್ಯಕ್ಕೆ ಭಯಕಾರಕನಾದ ಅರ್ಜುನನು ಕೂಡ, ಆ ಕಮಳಾಕರಮಂ–ಆ ಸರೋವರವನ್ನು, ಪೊಕ್ಕು–ಹೊಕ್ಕು, ಆಕಾಶಧ್ವನಿ ಯಂ–ಆಕಾಶ ಭಾಷಿತವನ್ನು, ಉಱದೆ–ಲಕ್ಷ್ಯ ಮಾಡದೆ, ಕುಡಿದಂ ಗಡಂ–ನೀರನ್ನು ಕುಡಿದ ನಲ್ಲವೆ; ಏಕೆಂದಱಿಯೆಂ–ಏಕೆಂದು ತಿಳಿಯೆನು, ಬೞಲ್ದು–ಶಕ್ತಿಗುಂದಿ, ಧರೆಯೊಳ್–ನೆಲದ ಮೇಲೆ, ಜೋಲ್ದಂ–ಜೋತು ಬಿದ್ದನು.
ವಚನ : ಭಗ್ನಮನನಾಗಿ–ಕೆಟ್ಟು ಹೋದ ಮನಸ್ಸುಳ್ಳವನಾಗಿ; ಪುಂಡರೀಕ ಷಂಡೋ ಪಾಂತದೊಳ್–ಸರೋವರದ ಸಮೀಪದಲ್ಲಿ; ಅನುಜರುಮಂ–ತಮ್ಮಂದಿರನ್ನು; ಉಪದ್ರವ ಮಲ್ಲಂ–ಕೇಡಲ್ಲ;
೪೨. ಬಿಡದೆ–ಅವಕಾಶವನ್ನು ಕೊಡದೆ, ಕಡುಕೆಯ್ದ–ತೀವ್ರತೆಯನ್ನು ತೋರಿಸಿದ, ದಿವ್ಯದ–ದೇವತೆಯ, ನುಡಿಗೆ–ಮಾತಿಗೆ, ಕಿವುೞ್ಕೇಳ್ದು–ಕಿವುಡು ಕೇಳಿ, ಎಂದರೆ ಕಿವಿಗೆ ಹಾಕಿ ಕೊಳ್ಳದೆ, ಭೀಮಂ–ಭೀಮನು, ನೀರಂ–ನೀರನ್ನು, ಕುಡಿದು, ಪಿಡಿದ ಗದೆವೆರಸು–ಹಿಡಿದ ಗದೆಸಮೇತವಾಗಿ, ಗಿರಿ–ಬೆಟ್ಟ, ಶಿಖರದೊಡನೆ–ಶಿಖರ ಸಮೇತವಾಗಿ ಕೆಡೆವಂತಾಗಳ್– ಬೀಳುವಂತೆ, ಆಗ, ಭೋಂಕನೆ–ಕೂಡಲೇ, ಕೆಡೆದಂ–ಬಿದ್ದನು.
ವಚನ : ವಾತಾಹತಿಯಿಂ–ಗಾಳಿಯ ಹೊಡೆತದಿಂದ; ಪದದೊಳ್–ಸಮಯದಲ್ಲಿ; ಬೆಸದೊಳ್–ಕಾರ್ಯದಲ್ಲಿ, ಅಪ್ಪಣೆಯಲ್ಲಿ; ಆಭಿಚಾರಮಾಗೆ–ಶೂನ್ಯಮಾಟಗಳಾಗಲು; ಬೇಳ್ವ– ಬಲಿ ಕೊಡುವ, ಬೇಳ್ವೆಯ–ಯಜ್ಞದ; ಉರುಳಿ–ಚೆಂಡು; ಕೃತಾಂತನಂತೆ–ಯಮನ ಹಾಗೆ; ಕತ್ತಿಗೆಯುಂ–ಬೆರಸು–ಕಠಾರಿ ಸಮೇತವಾಗಿ; ಉಗ್ರದೇವತೆ–ಭಯಂಕರ ದೇವತೆ; ಬಾಪ್ಪು–ಬೇಷ್ ಬೞ್ದೆನೆಂದು–ಬದುಕಿದೆ ಎಂದು; ಸಾರ್ವಾಗಳ್–ಹತ್ತಿರಕ್ಕೆ ಬರುವಾಗ;
೪೩. ಎಲೆ ಪಿಱಿತಿನಿ–ಎಲೇ ಮಾಂಸಭಕ್ಷಕಳೇ, ಪಿಶಾಚಿಯೇ, ಪೋ–ಹೋಗು, ಮುಟ್ಟದೆ ತೊಲಗು; ಈ ನಾಲ್ವರ್ಕಳಸುವಂ–ಈ ನಾಲ್ಕು ಜನರ ಪ್ರಾಣಗಳನ್ನು, ಅವರ್ಗಳ–ಅವರ, ಮೆಯ್ಯಿಂ ತೊಲಗಿಸಿ–ಮೈಯಿಂದ ಹೋಗುವಂತೆ ಮಾಡಿ; ಮುನ್ನಮೆ–ಮೊದಲೇ, ಕಾದಿರ್ದ– ಕಾವಲಿದ್ದ; ಅಲಂಘ್ಯಬಲನೆನಿಸಿದೆನಗೆ–ಮೀರಲಾಗದ ಶಕ್ತಿಯುಳ್ಳವನು ಎನಿಸಿದ ನನಗೆ, ನೀನ್–ನೀನು, ಅಗ್ಗಳಮೇ–ಹೆಚ್ಚೇ?
ವಚನ : ಜಾತಿದೇವತೆಯಪ್ಪೊಡೆ–ಶ್ರೇಷ್ಠ ವರ್ಗದ ದೇವತೆಯಾಗಿದ್ದರೆ; ಕೆಯ್ಗೆವಂದರ್– ವಶವಾದರು, ಕೈಗೆ ಸಿಕ್ಕಿದರು; ಆ ಬೆಸಂ–ಆ ಕೆಲಸ;
೪೪. ಕನಕನ ಬೇಳ್ವೆ–ಕನಕನ ಯಜ್ಞ, ಕನಕನಂ–ಕನಕನನ್ನು, ತಗುಳ್ದುದು–ಬೆನ್ನಂಟಿತು, ಎಂಬೊಂದು ಮಾತು–ಎಂಬ ಒಂದು ನಾಣ್ಣುಡಿ, ಧರೆಗೆಸೆಯೆ–ಲೋಕದಲ್ಲಿ ಪ್ರಚುರ ವಾಗಲು, ಸುಯೋಧನ ಪುರೋಹಿತನಪ್ಪ–ದುರ್ಯೋಧನನ ಪುರೋಹಿತನಾದ, ಆ ಕನಕ ಸ್ವಾಮಿಯನೆ–ಆ ಕನಕನನ್ನೇ, ಮುನಿದು–ಕೆರಳಿ, ಕೀರ್ತಿಗೆ–ಕೃತ್ತಿಗೆಯೆಂಬ ದೇವತೆ, ತಿಂದಳ್– ತಿಂದಳು.
ವಚನ : ಕೃತಾಂತನಂದನಂ–ಧರ್ಮರಾಜನು;
೪೫. ಪೋದರಂ–ಹೋದವರನ್ನು, ಒಡಗೊಂಡು ಬರಲ್–ಕೂಡೆ ಕರೆತರಲು, ಪೋದರುಂ–ಹೋದವರು ಕೂಡ, ಆ ಪೋದ ಪೋಗೆ ಪೋದರ್–ಆ ಹೋದ ಹೋಗನ್ನೇ ಹೋದರು; ಎಂದರೆ ಹೋದವರ ಹಿಂದೆಯೇ ಹೊರಟು ಹೋದರು: ತಡೆಯಲ್–ತಡಮಾಡಲು, ಪೋದವರ್–ಹೋದವರು, ಅಲ್ತು–ಅಲ್ಲ; ಎಂದು, ಮನಃಖೇದಂ ಬೆರಸು–ಮನಸ್ಸಿನ ದುಃಖದಿಂದ ಕೂಡಿ, ಅಬ್ಜಾಕರಮಂ–ಸರೋವರವನ್ನು, ಎಯ್ದೆವಂದನ್–ಸಮೀಪಿಸಿದನು.
ವಚನ : ಬಱಸಿಡಿಲ್–ಮಳೆಯಿಲ್ಲದ ಬರಿಸಿಡಿಲು; ಶಾಲತರುಗಳ್–ಸಾಲವೃಕ್ಷಗಳು; ಬೆಕ್ಕಸಂ ಬಟ್ಟು–ಆಶ್ಚರ್ಯವನ್ನು ಹೊಂದಿ.
೪೬. ಆರಿಂದಂ–ಯಾರಿಂದ, ಇದು–ಈ ಸ್ಥಿತಿ, ಇವರ್ಗೆ–ಇವರಿಗೆ, ಆಯ್ತು–ಆಯಿತು; ಎಂದಾರಯ್ವೆಂ–ಎಂದು ವಿಚಾರ ಮಾಡುತ್ತೇನೆ, ಬೞಿಯಂ–ಅನಂತರ, ಆದೊಡೇನಾಯ್ತು– ಆದರೆ ಏನಾಯಿತು; ಎಂದು, ಅಂಭೋರುಹ ರಜಃಪಟಾವೃತವಾರಿಯಂ–ತಾವರೆಯ ಧೂಳೆಂಬ ಬಟ್ಟೆಯಿಂದ ಮುಚ್ಚಿದ ನೀರನ್ನು, ಆ ನೃಪತಿ–ಆ ರಾಜರು, ಕುಡಿಯಲ್–ಕುಡಿಯಲು, ಒಡರಿಸಿ ದಾಗಳ್–ತೊಡಗಿದಾಗ.
೪೭. ಮರುಳಾಗದೆ–ಭ್ರಾಂತನಾಗದೆ, ಎನ್ನ ನುಡಿಗೆ–ನನ್ನ ಮಾತಿಗೆ, ಉತ್ತರಮಂ ಮುನ್ನಿತ್ತು–ಉತ್ತರವನ್ನು ಮೊದಲು ಕೊಟ್ಟು, ಕುಡಿಯೆ–ಕುಡಿಯಲು, ನಿನಗೆ, ಕಜ್ಜಂ– ಕಾರ್ಯವು, ಉತ್ತರಿಸುಗುಂ–ಏಳ್ಗೆಯಾಗುತ್ತದೆ; ಅಂತಲ್ಲದೆ–ಹಾಗಲ್ಲದೆ, ಇವಂದಿರಂತೆ– ಇವರ ಹಾಗೆ, ನೀಂ–ನೀನು, ಉಂತೆ–ವ್ಯರ್ಥವಾಗಿ, ಅರಸಾ–ರಾಜನೇ, ಮೂರ್ಖನಾಗದಿರ್– ದಡ್ಡನಾಗದಿರು.
ವಚನ : ದಿವ್ಯಂ–ದೇವತೆ; ಅದಱ ಬೆಸಗೊಂಡುದರ್ಕೆಲ್ಲಂ–ಅದು ಕೇಳಿದ್ದಕ್ಕೆಲ್ಲ; ಮಱುಮಾತುಗುಡುವುದುಂ–ಉತ್ತರವನ್ನು ಹೇಳುತ್ತಲು;
೪೮. ಕನಕನ ಬೇಳ್ವೆಯಿಂದೊಗೆದ–ಕನಕನ ಬಲಿ ಪ್ರದಾನದಿಂದ ಹುಟ್ಟಿದ, ಕೀರ್ತಿಗೆ ಯಿಂ–ಕೃತ್ತಿಕೆಯಿಂದ, ನಿನಗಪ್ಪಪಾಯಮಂ–ನಿನಗೆ ಆಗುವ ಕೇಡನ್ನು, ನೆನೆದು ಮದೇಭ ರೂಪಮನೆ ತೋಱೆ–ಮದಗಜದ ಆಕಾರವನ್ನೆ ತೋರಿಸಿ, ನಿಜಾಶ್ರಮದಿಂದ, ಅಗಲ್ಚಿ–ನಿನ್ನ ಆಶ್ರಮದಿಂದ ಅಗಲಿಸಿ, ನಿನ್ನನುಜರಂ–ನಿನ್ನ ತಮ್ಮಂದಿರನ್ನು, ಈ ಉಪಾಯದೊಳೆ–ಈ ಉಪಾಯದಲ್ಲೇ, ಕೀರ್ತಿಗೆಯೊಡ್ಡಿಸೆ–ಕೃತ್ತಿಕೆಗೆ ಪ್ರತೀಕಾರ ಮಾಡಿ, ಕಾದೆಂ–ರಕ್ಷಿಸಿದೆನು; ಆಂ ಕೃತಾಂತನೆಂ–ನಾನು ಯಮನಾಗಿದ್ದೇನೆ; ಅಮ್ಮ–ಅಪ್ಪ, ನೀಂ–ನೀನು, ಮಗನಯ್– ಮಗನಾಗಿದ್ದೀಯ, ಇಂ ಪೆಱತೇನ್–ಇನ್ನು ಬೇರೇನು? ನಿನಗುತ್ತರೋತ್ತರಂ–ನಿನಗೆ ಅಭಿವೃದ್ಧಿ ಯಾಗಲಿ.
ವಚನ : ಮಱಕೆಂದಿದರಂ–ಮೈಮರೆತು ನಿದ್ರಿಸಿದವರನ್ನು, ಅರಣಿಯಂ–ಬೆಂಕಿ ಕಡೆ ಯುವ ಕೋಲನ್ನು;
೪೯. ಉಗ್ರವಿರೋಧಿ ಜನಕ್ಕೆ–ಭಯಂಕರರಾದ ಶತ್ರುಜನರಿಗೆ, ಮಿೞ್ತುಗಳ್–ಮೃತ್ಯು ಗಳು, ನೆಱೆವವೊಲ್–ಪೂರ್ಣವಾಗುವಂತೆ, ಪನ್ನೆರೞ್ಬರಿಸಂ–ಹನ್ನೆರಡು ವರ್ಷಗಳು, ನೆಱೆದುವು–ತುಂಬಿದುವು, ಅಱೆದು–ಮರೆಯಾಗಿ, ಇನ್–ಇನ್ನು, ನಮಗೆ, ಅಬ್ದಮನೊಂದಂ– ಒಂದು ವರ್ಷವನ್ನು, ಇರಲಾಗದು–ಇರಲಾಗುವುದಿಲ್ಲ, ಇರ್ದೊಡೆ–ಅಡಗದೆ ಇದ್ದ ಪಕ್ಷ ದಲ್ಲಿ, ಏತಱ ಪಡೆಮಾತೊ–ಏನು ಸುದ್ದಿಯೋ, ಮತ್ತಂ–ತಿರುಗಿಯೂ, ಮನಂಮಱುಗೆ–ಮನಸ್ಸು ದುಃಖಪಡುತ್ತಿರಲು, ಪನ್ನೆರಡಬ್ದಮಂ–ಹನ್ನೆರಡು ವರ್ಷಗಳನ್ನು, ಬನಂಗಳೊಳ್– ಕಾಡುಗಳಲ್ಲಿ, ನುಡಿದ ನನ್ನಿಗೆ–ಕೊಟ್ಟ ಸತ್ಯಭಾಷೆಗಾಗಿ; ಇರವೇೞ್ಪುದು–ಇರಬೇಕಾಗುತ್ತದೆ; ಇದರ್ಕೆ–ಇದಕ್ಕೆ, ಕಜ್ಜಮಂ–ಕಾರ್ಯವನ್ನು, ವೇೞಿಂ–ಹೇಳಿರಿ.
೫೦. ನಮಗೆ, ಇನ್ನುಂ–ಇನ್ನು ಕೂಡ, ಅಪವಾದಂ–ನಿಂದೆ ಅಥವಾ ದೂರು, ಪೆಱ ತೊಂದುಂ–ಬೇರೊಂದು ಇಲ್ಲ, ಪೊಕ್ಕಿರಲ್ಕೆ–ಹೊಕ್ಕು ಇರುವುದಕ್ಕೆ, ಮತ್ಸ್ಯಪುರಂ–ಮತ್ಸ್ಯ ನಗರ, ಇಂಬು–ಆಶ್ರಯ; ಶತ್ರುಗೆ–ನಮ್ಮ ವೈರಿಗೆ, ಮತ್ಸ್ಯಂ–ಮತ್ಸ್ಯ ದೇಶದ ರಾಜ, ಶತ್ರು– ಹಗೆ; ಅದಱಿಂದೆ–ಆದ್ದರಿಂದ, ಅಜ್ಞಾತವಾಸಕ್ಕೆ–ಅಜ್ಞಾತವಾಗಿ ವಾಸಮಾಡುವುದಕ್ಕೆ, ಚಿಂತಿ ಪೊಡೆ–ಆಲೋಚಿಸಿದರೆ, ಇನ್–ಇನ್ನು, ಅನ್ನವು–ಅಂಥವು, ತಾಣಮಿಲ್ಲ–ಎಡೆಯಿಲ್ಲ, ಅದಱಿಂ–ಆದ್ದರಿಂದ, ಉಂತೆ–ಸುಮ್ಮನೆ, ಆರ್ಗಪ್ಪೊಡಂ–ಯಾರಿಗಾದರೂ, ಮಿಕ್ಕ– ಮೀರಿದ, ರೂಪ ಪರಾವರ್ತನದಿಂ–ರೂಪವನ್ನು ಮಾರ್ಪಡಿಸಿಕೊಳ್ಳುವುದರಿಂದ, ವಿರಾಟ ಪುರಮಂ–ವಿರಾಟ ನಗರವನ್ನು, ಪೊಕ್ಕಿರ್ದು–ಹೊಕ್ಕಿದ್ದು, ಅದಂ–ಆ ಒಂದು ವರ್ಷವನ್ನು, ಅಜ್ಞಾತ ವಾಸವನ್ನು, ನೀಗೆಮೇ–ಕಳೆಯಲಾರೆವೇ? “ರೂಪಪರಾವರ್ತನ ವಿದ್ಯೆಯಿಂ ತುರಗ ರೂಪಾದಂ ಚರಂ ಖೇಚರಂ” ಎಂಬುದರಿಂದ ರೂಪಪರಾವರ್ತನವೆಂಬುದೊಂದು ವಿದ್ಯೆ ಇದೆ ಎಂಬುದು ಜೈನಪುರಾಣಗಳಿಂದ ತಿಳಿಯುತ್ತದೆ; ಇಲ್ಲಿ ಜೈನಪುರಾಣ ಪ್ರಭಾವವನ್ನು ನೋಡ ಬಹುದು.
ವಚನ : ನಿಷ್ಠಿತಕಾರ್ಯಮನನುಷ್ಠಿಸೆ–ಮಾಡಬೇಕಾದ ಕೆಲಸವನ್ನು ಮಾಡಲು; ಬಲ್ಲಂದ ದೊಳ್–ತಿಳಿದ ರೀತಿಯಲ್ಲಿ; ಪಾಂಚಾಳಿವೆರಸು–ದ್ರೌಪದೀ ಸಮೇತರಾಗಿ; ಜಗುನೆಯಂ ಪಾಯ್ದು–ಯಮುನಾ ನದಿಯನ್ನು ದಾಟಿ; ಮೂಡಮೊಗದೆ–ಪೂರ್ವಾಭಿಮುಖವಾಗಿ;
೫೧. ಇಂಚೆಯ–ಹಿಂಸೆಯ, ಪಸವಿನ–ಕ್ಷಾಮದ, ಬಱದ–ಬರಗಾಲದ, ಕಳಿಂಚಿನ– ಮೋಸದ (?) ಡಾವರದ–ಕ್ಷೋಭೆಯ, ಬಾಧೆಯಿಲ್ಲದ–ತೊಂದರೆಯಿಲ್ಲದ, ಪದದೊಳ್– ಸಮಯದಲ್ಲಿ, ಮುಂಚದೆ–ಮುಂದಾಗದೆ, ಪಿಂಚದೆ–ಹಿಂದಾಗದೆ ಎಂದರೆ ಸಕಾಲದಲ್ಲಿ, ಬಳೆದು–ವೃದ್ಧಿಯಾಗಿ, ವಿರಿಂಚಿಯ–ಬ್ರಹ್ಮನ, ಕೈಪಿಡಿವೊಲ್–ಕನ್ನಡಿಯಂತೆ, ಆ ನಾಡ– ಆ ದೇಶದ, ಊರ್ಗಳ್–ಊರುಗಳು, ಆದುವು. ಪಸವು ಸಂ ಪ್ರಸಭ–ರಭಸ, ಬಲಾತ್ಕಾರ; ಆದರೆ ಕ್ಷಾಮ ಎಂಬರ್ಥದಲ್ಲಿ ಪ್ರಯೋಗವಿದೆ; ‘ಪನ್ನೆರಡು ವರ್ಷಂಬರೆಗಮೀನಾಡೊಳನಾ ವೃಷ್ಟಿಯಾಗಿ ಮಹಾರೌದ್ರಪಸವಮಕ್ಕುಂ’ ; ‘ಆನಾಡೊಳ್ ಮಾನಸರ್ಮಾನಸರಂ ತಿಂಬಂತುಟಪ್ಪ ಮಹಾಘೋರಂ ಪಸವಾದೊಡೆ’ ; ‘ಬಡಗನಾಡ ಪಸವು ತಿಳಿದುದೆಂಬುದನಾ ನಾಡಿಂದಂ ಬಂದರ್ ಪೇೞೆ.’ ಕಳಿಂಚು: ‘ನಿನ್ನಂತಪ್ಪ ಪುರುಷನಂ ದೊರೆಕೊಳಿಸಿ ಕಳಿಂಚು ಮಾಡಿ ಕಳೆದ ದುರ್ವಿದಗ್ಧವಿಧಾತ್ರಂಗೆ ಮುನಿವೆನಾಂ’ ಎಂದು ಅರ್ಧನೇಮಿ ಪ್ರಯೋಗ (೩– ೨೭ಗ). ಇದರ ಅರ್ಥ ಅನಿರ್ದಿಷ್ಟ,
ವಚನ : ನಾಡಾಡಿಯಲ್ಲದೆ–ಸಾಧಾರಣವಾಗಿಯಲ್ಲದೆ, ಅಸಾಧಾರಣವಾಗಿ,
೫೨. ಧ್ವನದಳಿಕುಳಾಕುಳೀಕೃತವನಂಗಳಿಂದೆ–ಮೊರೆಯುತ್ತಿರುವ ದುಂಬಿಗಳ ಸಮೂಹ ದಿಂದ ಪೀಡಿಸಲ್ಪಟ್ಟ ತೋಟಗಳಿಂದಲೂ, ಎಸೆವ–ಸೊಗಸುವ, ಪದ್ಮಷಂಡಂಗಳ–ತಾವರೆಗಳ ಸಮೂಹಗಳ, ಚೆಲ್ವಿನೊಳಂ–ಸೊಗಸಿನಲ್ಲಿಯೂ, ಕಣ್ಣಂ ಮನಮುಮಂ–ಕಣ್ಣುಗಳನ್ನೂ ಮನಸ್ಸನ್ನೂ, ಅನುವಿಸುವ–ಪ್ರೀತಿಯನ್ನುಂಟುಮಾಡುವ, ವಿರಾಟಪುರಮಂ–ವಿರಾಟ ನಗರವನ್ನು, ಅವರ್ಗಳ್–ಪಾಂಡವರು, ಎಯ್ದಿದರ್–ಸೇರಿದರು.
ವಚನ : ಪಿತೃವನದ–ಶ್ಮಶಾನದ; ಶಮೀವೃಕ್ಷದ ಮೇಲೆ–ಬನ್ನಿ ಮರದ ಮೇಲೆ; ನೇಲ್ಗಟ್ಟಿ– ನೇಲುವ ಹಾಗೆ ಕಟ್ಟಿ; ಅವಱಮೇಲೆ–ಆಯುಧಗಳ ಮೇಲೆ, ಒಟ್ಟಿ–ರಾಶಿ ಹಾಕಿ; ಪರೆದು– ಚೆದರಿ; ಧರಾಮರ ವೇಷದೊಳ್–ಬ್ರಾಹ್ಮಣ ವೇಷದಲ್ಲಿ; ಪೊೞ್ತು–ಹೊತ್ತು; ನೆತ್ತಮ ನಾಡುವಂ–ಪಗಡೆಯಾಡುತ್ತಾನೆ.
೫೩. ಕನವರಿಸೆ–ಕನಸಿನಲ್ಲಿ ಹೇಳಲು, ಎನಗೆ–ನನಗೆ, ನಾಲ್ಕುವೇದಮುಂ–ನಾಲ್ಕು ವೇದ ಗಳೂ, ಮುಖೋದ್ಗತಂ–ಬಾಯಲ್ಲಿಯೇ ಇವೆ; ಅದಲ್ಲದೆ–ಅದು ಅಲ್ಲದೆ, ಎಂದರೆ ಮತ್ತೆ, ನೃಪತಿ–ದೊರೆಯೇ, ಆಱಂಗದ ಮಾತು–ಆರು ವೇದಾಂಗಗಳ ವಿಷಯ ಕೂಡ, ಅನಿತೆ–ಅಷ್ಟೇ; ಗಡ–ಅಲ್ಲವೇ? ನಿನಗೆ, ಆಳಾಗಲ್ಕೆ–ಸೇವೆ ಮಾಡುವುದಕ್ಕೆ, ಬಂದೆಂ–ಬಂದೆನು; ಕಂಕಭಟ್ಟ ನೆನ್–ನಾನು ಕಂಕಭಟ್ಟ, ಎಂಬೆಂ–ಎನ್ನುತ್ತೇನೆ.
ವಚನ : ಭದ್ರಾಕಾರಮುಮಂ–ಮಂಗಳಕರವಾದ ಆಕಾರವನ್ನೂ; ಕರಂ–ವಿಶೇಷವಾಗಿ, ಮನದೆಗೊಂಡು–ಮನಸ್ಸಿನಲ್ಲಿ ಮೆಚ್ಚಿ; ಬೋನವೇಳಿಗೆಯಂ–ಊಟದ ಪೆಟ್ಟಿಗೆಯನ್ನು ಸಟ್ಟಗ ಮುಮಂ–ಸೌಟನ್ನೂ; ನಿನ್ನ ಬಿನ್ನಾಣಮೇನ್–ನಿನ್ನ ವಿದ್ಯೆಯೇನು?
೫೪. ಎನ್ನಟ್ಟ–ನಾನು ಅಡುಗೆ ಮಾಡಿದ, ಅಡುಗೆಯಂ–ಅಡಿಗೆಯನ್ನು, ಉಂಡೊಡೆ– ಊಟ ಮಾಡಿದರೆ, ಬಿನ್ನಮೇನರಸ–ರಾಜನೇ, ಬಿನ್ನಾಣ ಏನು? ನರೆಗಳಾಗವು–ನರೆಕೂದಲು ಗಳಾಗುವುದಿಲ್ಲ, ಎಂದರೆ ಮುಪ್ಪು ಬರುವುದಿಲ್ಲ; ಸವಿಯೊಳ್–ರುಚಿಯಲ್ಲಿ, ನಿನ್ನಂ–ನಿನ್ನನ್ನು, ಮೆಚ್ಚಿಪೆಂ–ಮೆಚ್ಚಿಸುತ್ತೇನೆ, ಎಡಱಿದೊಡೆ–ವಕ್ರ ಬಂದರೆ, ಎನ್ನರೊಳಂ–ಎಂಥವರಲ್ಲೂ, ಮಲ್ಲಂ–ಜಟ್ಟಿಯು; ಒರ್ವ–ಒಬ್ಬ, ವಲ್ಲಲನೆಂಬೆಂ–ವಲ್ಲಲ ಎಂಬ ಹೆಸರಿನವನಾಗಿದ್ದೇನೆ.
ವಚನ : ನಿನ್ನನಾಳ್ವೆಂ–ನಿನ್ನನ್ನು ಆಳಾಗಿಸಿಕೊಳ್ಳುತ್ತೇನೆ; ಬಾಣಸಿನ ಕರಣಕ್ಕೆ–ಅಡಿಗೆ ಮನೆಯ ಕಾರ್ಯಕ್ಕೆ; ನಿರೂಪಣಂಗೆಯ್ದಂ–ಆಜ್ಞೆ ಮಾಡಿದನು; ಅಂಕವಣಿಯುಂ–ಕುದುರೆಯ ರಿಕಾಪನ್ನೂ; ಬಾಳುಂ–ಶಕ್ತಿಯನ್ನೂ, ಬಾರುಂ–ಚರ್ಮದ ಪಟ್ಟಿಯನ್ನೂ ಎಂದರೆ ಲಗಾಮನ್ನೂ, ಚಮ್ಮಟಿಗೆಯುಮಂ–ಚಾವಟಿಗೆಯನ್ನೂ; ಕೀೞಾಳಿಂ–ಕಡಮೆ ದರ್ಜೆಯ ಸೇವಕನಿಂದ; ತಿರ್ದಲುಂ–ಶಿಕ್ಷಿಸಲೂ, ಪಳಗಿಸಲೂ, ಮಾಸಾದಿಯಾಗಿರ್ದಂ–ದೊಡ್ಡ ಅಶ್ವಾರೋಹಿಯಾಗಿ ದ್ದನು, ಮಹಾಸಾದಿ(ಸಂ)>ಮಾಸಾದಿ; ಗೋಮಂಡಳಾಧ್ಯಕ್ಷಂ–ಗೋವಿನ ಹಿಂಡುಗಳ ಮುಖ್ಯಾಧಿಕಾರಿ.
೫೫. ವಿಕ್ರಮದಿಂ–ಪರಾಕ್ರಮದಿಂದ, ಎಳೆಯಂ–ಭೂಮಿಯನ್ನು, ತರಲ್–ತರು ವುದಕ್ಕಾಗಿ, ಮುನ್–ಪೂರ್ವಕಾಲದಲ್ಲಿ, ಮಹಿಧರಂ–ವಿಷ್ಣುವು, ಪಂದಿಯಾದಂತೆ–ವರಾಹಾ ವತಾರವನ್ನು ಮಾಡಿದ ಹಾಗೆ, ಪೋದೆಳೆಯಂ–ಜೂಜಿನಲ್ಲಿ ಹೋದ ರಾಜ್ಯವನ್ನು, ದಾಯಿ ಗರಂ–ದಾಯಾದಿಗಳನ್ನು, ಆದ–ಉಂಟಾದ, ಏವದಿಂ–ಹಗೆತನದಿಂದ, ಪಡಲ್ವಡಿಸಿ–ಕೆದರಿ ಬೀಳಿಸಿಕೊಂಡು–ಆಕ್ರಮಿಸಿಕೊಂಡು, ಆಳಲ್ಕಂ–ಆಳುವುದಕ್ಕೂ, ಮುಳಿಸಿಂ–ಕೋಪದಿಂದ, ರಂಭೆಯ ಕೊಟ್ಟ–ರಂಭೆಯು ಕೊಟ್ಟ, ಶಾಪಮಂ–ಶಾಪವನ್ನು, ನೀಗಲ್ಕಂ–ಕಳೆಯುವುದ ಕ್ಕಾಗಿಯೂ, ಆಗಳ್–ಆಗ, ಆತ್ಮಕಾರ್ಯ ವಶದಿಂ–ಸ್ವಕಾರ್ಯಕ್ಕೆ ಅಧೀನನಾಗಿ, ಮತ್ಸ್ಯನಾ– ವಿರಾಟರಾಜನ, ಶುದ್ಧಾಂತದೊಳ್–ಅಂತಃಪುರದಲ್ಲಿ, ನರಂ–ಅರ್ಜುನನು, ಬೃಹಂದಳೆ ಯಾದಂ–ಬೃಹಂದಳೆಯೆಂಬ ಹೆಸರಿನ ನಪುಂಸಕನಾದನು.
ವಚನ : ಜ್ಯಾಘಾತದೊಳ್–ಹೆದೆಯ ಏಟಿನಿಂದ; ಇಂದ್ರನೀಲಂಗಳಂ–ಇಂದ್ರನೀಲವೆಂಬ ಮಣಿಗಳನ್ನು, ಅಡಸಿದಂತಿರ್ದ–ತೆತ್ತಿಸಿದ ಹಾಗಿದ್ದ; ಕರ್ಪಂ–ಕಪ್ಪನ್ನು; ತೀವೆತೊಟ್ಟ–ತುಂಬುವ ಹಾಗೆ ಧರಿಸಿದ, ಪಲವುಂ ಪಾತ್ರಂಗಳಂ–ಹಲವು ನರ್ತಕಿಯರನ್ನು; ಕಬಂಧ ಪಾತ್ರಂಗಳಂ– ಅಟ್ಟೆಯೆಂಬ ನರ್ತಕರನ್ನು; ಆಡಿಸುವುದಂ–ಕುಣಿಸುವುದನ್ನು; ರೂಪುಗರೆದು–ರೂಪನ್ನು ಮರೆಸಿಕೊಂಡು; ನೀನಾರ್ಗೆ–ನೀನು ಯಾರು? ಏನೆಂಬೆ–ಹೆಸರೇನು?
೫೬. ನವಮೃಗಮದ ಪರಿಮಳಮುಮಂ–ಹೊಸದಾದ ಕಸ್ತುರಿಯ ಕಂಪನ್ನೂ, ಇವು ಮುಸುಳಿಪುವು–ಇವು ಕಂದಿಸುತ್ತವೆ, ಎನಿಪ–ಎನ್ನಿಸಿಕೊಳ್ಳುವ, ವಿವಿಧ ಗಂಧಂಗಳಂ–ನಾನಾ ಬಗೆಯಾದ ಗಂಧಗಳನ್ನು, ಆಂ–ನಾನು, ಅವಯವದೊಳ್–ಶ್ರಮವಿಲ್ಲದೆ, ಸುಲಭವಾಗಿ, ಮಾಡುವ, ಘಟ್ಟಿವಳ್ತಿಯೆಂ–ಸುಗಂಧವನ್ನು ತೇಯುವವಳಾಗಿದ್ದೇನೆ; ದೇವಿ–ರಾಣಿಯೇ, ಗಂಡವಳ್ತಿಯೆನಲ್ಲೆಂ–ಗಂಡನನ್ನುಳ್ಳವಳಾಗಿಲ್ಲದಿದ್ದೇನೆ.
೫೭. ಪೆಸರೊಳ್–ಹೆಸರಿನಲ್ಲಿ, ಸೈರಂಧ್ರಿಯೆಂ–ಸೈರಂಧ್ರಿಯಾಗಿದ್ದೇನೆ; ಅೞಿವೆಸನದ– ಹೀನ ಕಾರ್ಯಗಳ, ದೆಸೆಯನಱಿಯೆಂ–ದಿಕ್ಕನ್ನು ಎಂದರೆ ಗೊಡವೆಯನ್ನು ತಿಳಿಯೆನು, ಎನಗೆ– ನನಗೆ, ಗಂಧರ್ವರ–ಗಂಧರ್ವರೆಂಬ ದೇವತೆಗಳ, ಕಾಪು–ರಕ್ಷಣೆ, ಅಸದಳಮುಂಟು–ವಿಶೇಷ ವಾಗಿ ಇದೆ, ಇರಿಸುವೊಡೆ–ಇರಿಸಿಕೊಳ್ಳುವ ಪಕ್ಷದಲ್ಲಿ, ಆಂ ಬೆಸಕೆಯ್ವೆಂ–ನಾನು ಸೇವೆ ಮಾಡು ತ್ತೇನೆ; ನಿನ್ನ–ನೀನು, ಬೆಸಸಿದಂದದೊಳ್–ಹೇಳಿದ ರೀತಿಯಲ್ಲಿ, ಇರ್ಪೆಂ–ಇರುತ್ತೇನೆ. ಈ ಪದ್ಯದಲ್ಲಿ ಐದು ವಾಕ್ಯಗಳಿವೆ.
ವಚನ : ಆವಗಂ–ಎಲ್ಲ ಕಾಲವೂ, ಅಣುಗೆಯಾಗಿ–ಪ್ರೀತಿಗೆ ಆಸ್ಪದಳಾಗಿ; ಸಿಗ್ಗಾಗಿ– ತಿರಸ್ಕೃತವಾಗಿ, ಸಂಕೋಚಪಟ್ಟವನಾಗಿ; ಪೇ ೞ್ದಾಗಳ್–ನಿಯಮಿಸಿದಾಗ.
೫೮. ಕಲಿ ವಿಷಖರ್ಪರಂ–ಶೂರನಾದ ವಿಷಖರ್ಪರನೆಂಬ ಮಲ್ಲ, ಪರ್ಪರಿಕೆ ಗಿಡದೆ– ಕರ್ಕಶತೆ ಕೆಡದೆ, ಇದಿರಾಂತೊಡೆ–ಎದುರಿಸಿದರೆ, ವಲಲಂ–ಭೀಮನು, ಆಂತು–ಪ್ರತಿಭಟಿಸಿ, ತಳಮಂ–ಅಂಗೈಯನ್ನು, ಮಾರ್ಪೊಸೆದು–ಪ್ರತಿಯಾಗಿ ನೆಲದಲ್ಲಿ ಉಜ್ಜಿ, ತಳ್ತು–ಸೇರಿ, ಕಣ್ತಿರಿ ತರ್ಪಿನೆಗಂ–ಕಣ್ಣುಗಳು ತಿರುಗುವಂತಾಗಲು, ಅವುಂಕಿ–ಒತ್ತಿ, ಸಿಂಹನಾದದಿಂ–ಸಿಂಹ ಗರ್ಜನೆಯಿಂದ, ಆರ್ದಂ–ಕೂಗಿದನು.
ವಚನ : ಒಡವುಟ್ಟಿದಂ–ಸಹೋದರನು; ಇಱಿದೋಡಿಸಿ–ಹೊಡೆದೋಡಿಸಿ.
೫೯. ಇಲ್ಲಿಂದ ಕೀಚಕೋಪಾಖ್ಯಾನ: ತೋಳಮೊತ್ತಮೊದಲೊಳ್–ತೋಳುಗಳ ಮೇಲ್ಭಾಗದಲ್ಲಿ, ಬುಡದಲ್ಲಿ, ಪೊಗರ್ವಟ್ಟು–ಕಾಂತಿಯನ್ನು ಹೊಂದಿ, ಎಸೆವ–ಸೊಗಸಾಗಿ ರುವ, ಒಂದು ನುಣ್ಪು–ಒಂದು ನುಣುಪು, ಸೊಗಯಿಸೆ–ಶೋಭಿಸಲು; ಸಾವಗಿಸುವ–ಸರಿ ಯಾಗಿ, ಹೊದ್ದುಕೊಳ್ಳುವ, ಮೇಲುದಂ–ಮೇಲು ಸೀರೆಯನ್ನು, ಮೊಲೆಗಳ್–ಮೊಲೆಗಳು, ಅಳ್ಳಿಱಿಯುತ್ತಿರೆ–ನಡುಗಿಸುತ್ತಿರಲು; ಘರ್ಮಬಿಂದುಗಳ್–ಬಿಸಿದಾದ ಬಿಂದುಗಳು ಎಂದರೆ ಬೆವರ ಹನಿಗಳು, ಪೊಣ್ಮೆ–ತಲೆದೋರಲು; ಅಲರಂಬುವೋಲ್–ಹೂವಿನ ಬಾಣಗಳಂತೆ, ಪಾಟಲಲೋಲವಿಲೋಚನಂ–ನಸುಗೆಂಪಾದ, ಚಂಚಲವಾದ ಕಣ್ಣುಗಳು, ಎಂದರೆ ನೋಟ, ಎಳಸಿ–ವ್ಯಾಪಿಸಿ, ಮನಂಬುಗೆ–ಮನವನ್ನು ಹೊಗಲು, ಆಕರ್ಷಿಸಲು; ನಳಿತೋಳ–ಕೋಮಲ ವಾದ ತೋಳುಗಳ, ಕೋಳೆಸೆಯೆ–ಹಿಡಿತವು ಸೊಗಸಾಗಲು, ಘಟ್ಟಿಮಗುೞ್ಚುವ–ಗಂಧವನ್ನು ಅರೆಯುವಾಗ ಮೇಲು ಕೆಳಗು ಮಾಡುವ, ಘಟ್ಟಿವಳ್ತಿಯಂ–ಗಂಧ ಅರೆಯುವವಳನ್ನು, ಸೈರಂಧ್ರಿಯನ್ನು;
ವಚನ : ಭೋಂಕನೆ–ಅನಿರೀಕ್ಷಿತವಾಗಿ, ಕಂಡು–ನೋಡಿ; ಯಾಚಕನಂತೆ–ತಿರುಪೆ ಯವನ ಹಾಗೆ; ಕರಮೆ–ವಿಶೇಷವಾಗಿಯೆ, ನಾಣ್ಗೆಟ್ಟು–ನಾಚಿಕೆ ಕೆಟ್ಟು, ಮನಂಗಾಪೞೆದು– ಮನಸ್ಸಿನ ಹತೋಟಿ (ರಕ್ಷಣೆ) ಹಾಳಾಗಿ; ಅಳಿಪಿ–ಆಸೆಪಟ್ಟು;
೬೦. ಮಱಿದುಂಬಿ–ದುಂಬಿಯ ಮರಿಗಳು, ಮುತ್ತುಗಳಂ–ಮುತ್ತುಗಳನ್ನು; ಕಾಱು ವಂತಿರೆ–ಕಕ್ಕುವ ಹಾಗೆ, ಬೆಮರ್–ಬೆವರು, ಕುರುಳ್ವಿಡಿದು–ಮುಂಗುರುಳುಗಳನ್ನು ಅನುಸರಿಸಿ, ಸುರಿಯೆ–ಸುರಿಯಲು; ನಳಿತೋಳ–ಕೋಮಲವಾದ ತೋಳುಗಳ, ಬಳ್ವಳಿಕೆ–ಚೆಲ್ವಿನತಿಶ ಯವು, ಕಣ್ಗೊಳೆ–ಕಣ್ಣಗಳನ್ನು ಸೆಳೆಯಲು; ಘಟ್ಟಿಮಗುೞ್ಚುವ–ಗಂಧ ತೇಯುವ, ಅಂದ ಮಲ್ತು–ಅಂದವಲ್ಲ, ಎನ್ನೆರ್ದೆಯಂ–ನನ್ನ ಎದೆಯನ್ನು, ಅರೆದು, ಮಗುೞ್ಚುವಂದಮೆ ದಲ್– ಕೀಳುಮೇಲು ಮಾಡುವ ರೀತಿಯೇ ದಿಟವಾಗಿಯೂ; ಪೆಱತೇನ್–ಬೇರೇನು? ಈ ಮೃಗೋ ದ್ಭವದ–ಈ ಕಸ್ತೂರಿಯ, ಕಂಪುಮಂ–ಸುವಾಸನೆಯನ್ನೂ, ಈಕೆಯ–ಇವಳ, ಸುಯ್ಯ– ಉಸಿರ್ಗಾಳಿಯ, ಕಂಪುಮಂ–ಸುಗಂಧವನ್ನೂ, ಅದೆಂತು–ಅದು ಹೇಗೆ, ಪರಿಕಿಪೆಂ–ಪರೀಕ್ಷಿಸು ತ್ತೇನೆ, ಪೇೞ್–ಹೇಳು. ಎಂದರೆ ಕಸ್ತೂರಿಯ ಕಂಪಿಗೂ ಉಸಿರಿನ ಕಂಪಿಗೂ ವ್ಯತ್ಯಾಸವನ್ನು ಹೇಗೆ ಕಾಣುವುದು ಎಂದು ತಾತ್ಪರ್ಯ, ವ್ಯತ್ಯಾಸವೇ ಇಲ್ಲವಲ್ಲ!
೬೧. ವಿಲೋಲೇಕ್ಷಣೆಯಾ–ತರಳನೇತ್ರೆಯ, ಕಟಾಕ್ಷ ಈಕ್ಷಣಂ–ಕಡೆಗಣ್ಣಿನ ನೋಟ, ಇದೆ–ಇದೇ, ಮದನಭವನಂ–ಮನ್ಮಥನ ಮನೆಯಾಗಿದೆ; ಇಂತು ಇದೆ–ಹೀಗೆ ಇದೇ, ಮದನಾ ಮೃತಂ–ಕಾಮಾಮೃತವಾಗಿದೆ; ಇದುವೆ–ಇದೇ, ಮದನ ಸಾಯಕಂ–ಕಾಮನ ಬಾಣವಾಗಿದೆ; ಪೋ–ಹೋಗು, ಇದೆ–ಇದೇ, ಮದನ ಮಹೋತ್ಸವ ಪದಂ–ರತ್ಯುತ್ಸವದ ಸ್ಥಾನವಾಗಿದೆ, ಎನಿಸಿದುದು–ಎನ್ನಿಸಿತು.
೬೨. ಮಾಸಿದರೂಪು–ಮಾಸಿರುವ ರೂಪವು, ನೋೞ್ಪೊಡೆ–ನೋಡಿದರೆ, ಅರೆ ಮಾಸಿದ–ಅರ್ಧ ಮಾಸಿದ, ಚಿತ್ರದ ಪೆಣ್ಣ–ಚಿತ್ರದ ಸ್ತ್ರೀಯ, ರೂಪುಮಂ–ರೂಪವನ್ನೂ, ಮಾಸಿಸೆ–ಮಾಸುವಂತೆ ಮಾಡಲು, ನಾಡೆ–ಚೆನ್ನಾಗಿ, ಮಾಸದಿಕೆಯಂ–ಮಾಸದಿರುವಿಕೆಯನ್ನು; ಪಡೆದಪ್ಪುದು–ಪಡೆಯುತ್ತಿದೆ; ಕಂಡ ಕಣ್ಗಳೊಳ್–ನೋಡಿದ ಕಣ್ಣುಗಳಲ್ಲಿ, ಸೂಸುವ ಮಾೞ್ಕೆಯಿಂ–ತುಂಬಿ ತುಳುಕುವ ರೀತಿಯಿಂದ, ಅಂದಂ–ಸೊಗಸು, ಪೊಱಗೆ ಪೊಣ್ಮುವುದು– ಹೊರಕ್ಕೆ ಹೊಮ್ಮುತ್ತದೆ; ಕಾಯ್ದು–ಕೆರಳಿ, ಕೆಯ್ವೀಸುವ–ಕೈಬೀಸಿ ಸಮರ ಸೂಚನೆ ಕೊಡುವ, ಕಾವನ–ಕಾಮನ, ಅಂದಂ–ರೀತಿ, ಅದೆಂತೊ–ಅದು ಹೇಗೊ! ಇವಳ್–ಇವಳು, ಏಂ ಕುಲನಾರಿಯೋ–ಏನು ಕುಲಸ್ತ್ರೀಯೋ, ವಾರನಾರಿಯೋ–ಏನು ವೇಶ್ಯೆಯೋ! ಇಲ್ಲಿ ‘ಮಾಸದಿಕೆ’ ಎಂಬ ಪಾಠ ‘ಮಾಸ [ರಿ] ಕೆ’ ಯಾಗಿರಬಹುದು; ಮಾಧುರ್ಯ ಮಾದರ; ಮಾದರ+ಇಕೆ=ಮಾದರಿಕೆ=ಮಾಸರಿಕೆ.
೬೩. ಆವಳಪ್ಪೊಡಮಕ್ಕೆ–ಯಾವಳಾದರೂ ಆಗಿರಲಿ; ಪೋ–ಹೋಗು, ತಲೆಯಿಂದೆ ಪೋದೊಡಂ–ತಲೆ ಇವತ್ತೇ ಹೋದರೂ, ಇಂದೆ–ಇವತ್ತೇ, ಮಾದೇವಂ–ಮಹಾದೇವನು, ಶಿವನು, ಆರ್ತು–ಸಮರ್ಥನಾಗಿ, ಎಡೆಗೊಂಡೊಡಂ–ನಡುವೆ ಬಂದರೂ, ಇಂದೆ–ಇವತ್ತೇ, ಲಯಂ–ವಿನಾಶವು, ಬರ್ಪೊಡಂ–ಬರುವುದಾದರೂ, ಎನ್ನುರಂ–ನನ್ನ ಎದೆ, ತೀವಿ–ತುಂಬಿ, ತಳ್ತು–ಸೇರಿ, ಇವಳೀ ಕುಚಾಗ್ರಮಂ–ಇವಳ ಈ ಕುಚಗಳ ತುದಿಯನ್ನು, ಅೞ್ಕಱಿಂದ– ಪ್ರೇಮದಿಂದ, ಅಮರ್ದಪ್ಪಿ–ಗಾಢವಾಗಿ ಆಲಿಂಗಿಸಿ, ಪೋಗು–ಹೋಗು, ಆವುಪಾಯದೊಳಾ ದೊಡಂ–ಯಾವ ಉಪಾಯದಿಂದಲಾದರೂ, ಈಕೆಯೊಳ್–ಇವಳಲ್ಲಿ, ನೆರೆದಲ್ಲದೆ– ಕೂಡಿಯಲ್ಲದೆ, ಇರೆಂ–ಇರೆನು.
ವಚನ : ಅನಂಗಮತ್ತ ಮಾತಂಗ ಕೋಳಾಹಳೀ ಕೃತಾಂತರಂಗನಾಗಿ–ಮನ್ಮಥನೆಂಬ ಸೊಕ್ಕಾನೆಯಿಂದ ಗಲಭೆಗೊಳಗಾದ ಮನಸ್ಸುಳ್ಳವನಾಗಿ; ಸೋಲ್ತಕಣ್ಣಱಿದು–ಮೋಹವಶ ವಾದ ಕಣ್ಣನ್ನು ತಿಳಿದು; ಮಚ್ಚುಂ–ಮೆಚ್ಚೂ; ಬೇಟಮಗ್ಗಳಿಸೆ–ಪ್ರೀತಿ ಹೆಚ್ಚಾಗಲು; ವಿಲೇಪನಂ ಗಳಂ–ಸುಗಂಧಗಳನ್ನು; ಉಪರೋಧಕ್ಕೆ–ಒತ್ತಾಯಕ್ಕೆ; ಆಱದೆ–ತಡೆಯಲಸಮರ್ಥಳಾಗಿ, ಪೞುವಗೆಯಂ–ಕಾಡು ಬುದ್ಧಿಯನ್ನು, ಕೆಟ್ಟ ಮನಸ್ಸನ್ನು.
೬೪. ಸ್ಮರನ–ಮನ್ಮಥನ, ಅರಲಂಬು–ಹೂಗಣೆ, ಕೈಬರ್ದುಕಿ ಬರ್ಪವೊಲ್–ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ, ಒಯ್ಯನೆ–ಮೆಲ್ಲನೆ, ಬಂದು, ನಿಂದ, ಸುಂದರಿಯಂ– ಸುಂದರಿಯನ್ನು, ಸಿಂಹಬಳಂ–ಕೀಚಕನು, ಒಱಲ್ದು–ಸ್ನೇಹದಿಂದ ಕೂಡಿ, ಅಂತೆ ಇರು– ಎಲ್ಲಿ ಹಾಗೆಯೇ ಇರು, ಮಾಸಿದೆಯಾದೆ–ಮಾಸಿದವಳಾಗಿರುವೆಯಲ್ಲ, ಮೇಣ್–ಮತ್ತು, ಉಡಲ್ತರಿಪೆನೆ–ಉಟ್ಟುಕೊಳ್ಳುವುದಕ್ಕೆ ವಸ್ತ್ರಗಳನ್ನು, ತರಿಸಲೆ, ತಂಬುಲಂಬಿಡಿ–ಇದೋ ತಾಂಬೂಲವನ್ನು ತೆಗೆದುಕೊ, ಮುನ್ನಂ–ಮೊದಲು, ಮನೋಜ ಶಿಖಾಳಿಗಳ್–ಕಾಮನ ಜ್ವಾಲೆಗಳ ಸಮೂಹಗಳು, ಅೞ್ವೆ–ಸುಡಲು, ಎನ್ನ–ನನ್ನ, ಉರಿವೆರ್ದೆ–ಉರಿವ ಎದೆಯು, ಅಂಬುಜಲೋಲಲೋಚನೇ–ಕಮಲದಂತೆ ವಿಲಾಸವುಳ್ಳ ಕಣ್ಣಿನವಳೇ, ನಿನ್ನಂ ಕಂಡು– ನಿನ್ನನ್ನು ನೋಡಿ, ಇನಿಸು–ಒಂದಿಷ್ಟು, ಆಱಿದುದು–ಶಮನವಾಯಿತು. ಬರ್ದುಕು ಬೞ್ದುಂಕು–ಬಿಡಲ್ಪಡು, “ಪುಲಿಯ ಬಾಯಿಂ ಬರ್ದುಂಕಿದಂ” ಎಂಬಂತೆ.
೬೫. ಪರೆದ ಕುರುಳ್–ಚೆದರಿದ ಮುಂಗುರುಳುಗಳು, ಅಲುಗೆ–ಅಲುಗಾಡಲು, ಘಟ್ಟಿಯಂ–ಗಂಧವನ್ನು, ಅರೆಯುತ್ತುಂ–ತೇಯುತ್ತ, ನಾಣ್ಚಿ–ನಾಚಿ, ಎನ್ನಂ–ನನ್ನನ್ನು, ತೆಗೆದು ನೋೞ್ಪುದುಂ–ಆಕರ್ಷಿಸಿ ನೋಡುತ್ತಲು, ನಿನ್ನ–ನೀನು, ನೋಡಿದ ನೋಟಂ–ನನ್ನನ್ನು ನೋಡಿದ ದೃಷ್ಟಿ, ಸ್ಮರಕುಳಿಕಾಗ್ನಿಯೆ–ಮನ್ಮಥನೆಂಬ ಸರ್ಪದ ವಿಷಾಗ್ನಿಯೆ, ಕೊಂಡಂತಿರೆ– ಸುಟ್ಟಂತೆ, ಕೊಂಡುದು–ಸುಟ್ಟಿತು, ನೋಡ–ನೋಡು.
೬೬. ನಿನ್ನೊಂದು ಕಂದಿದ ಮೆಯ್–ನಿನ್ನ ಮಾಸಿದ ಮೈ, ಎನ್ನಯ ತೋಳೊಳ್–ನನ್ನ ತೋಳುಗಳಲ್ಲಿ, ಒಂದಿ–ಸೇರಿ, ಮದನಾಸ್ತ್ರಂ–ಮನ್ಮಥನ ಬಾಣ, ಕರಸಾಣೆಗಾಣಿಸಿದುದು– ತೀಕ್ಷ್ಣವಾದ ಸಾಣೆಗೆ ಇಡಲ್ಪಟ್ಟಿತು, ಎಂಬಂತಾಗೆ–ಎನ್ನುವ ಹಾಗಾಗಲು, ನೀಂ–ನೀನು, ಸಿರಿಯಂ–ಲಕ್ಷ್ಮಿಯನ್ನು, ನನ್ನ ಐಶ್ವರ್ಯವನ್ನೆಲ್ಲ, ಉಯ್ದು–ತೆಗೆದುಕೊಂಡು ಹೋಗಿ, ತೊೞ್ತಾಳ್ದು–ತೊತ್ತು ಮಾಡಿ ಆಳಿ, ರಾಗದಿಂ–ಸಂತೋಷದಿಂದ, ಎನ್ನೊಳ್–ನನ್ನಲ್ಲಿ, ಸುಕಮಿರ್ಪುದು–ಸುಖವಾಗಿ ಇರುವುದು, ಎನ್ನ–ನನ್ನ, ನುಡಿಯಂ–ಮಾತನ್ನು, ನೀಂ ಕೇಳ್ದುಂ– ನೀನು ಕೇಳಿಯೂ, ಒಂದಂಚೆಯಂ–ಒಂದು ವಸ್ತ್ರವನ್ನು, ಪೊದೆಯೊಂದಂತೆಯಂ–ಹೊದೆವ ಒಂದು ವಸ್ತ್ರವನ್ನು, ಉಟ್ಟ–ಧರಿಸಿದ, ನಿನ್ನಿರವು–ನಿನ್ನ ಸ್ಥಿತಿ, ಅಂಭೋಜ ಪತ್ರೇಕ್ಷಣೇ– ಕಮಲನಯನೆಯೇ, ಇದೇನ್–ಇದೇನು? (ಸಂ) ಖರಶಾಣಾ ಕರಸಾಣೆ.
೬೭. ಬಿಗಿದೊಗೆದ–ಬಿಗಿದುಕೊಂಡು ಚಿಮ್ಮುತ್ತಿರುವ, ನಿನ್ನ ಮೊಲೆಗಳ–ನಿನ್ನ ಕುಚಗಳ, ಮೃಗಮದದ–ಕಸ್ತೂರಿಯ, ಪುಳಿಂಚುಗಳ್–ಗುಳ್ಳೆಗಳು, ಪಗಿಲ್ತಿರಲ್–ಅಂಟಿಕೊಂಡಿರಲು, ಎಡೆಯಾದ–ತೆರಪಾದ, ಅಗಲುರಮಂ–ವಿಶಾಲವಾದ ಎದೆಯನ್ನು, ಎನಗೆ–ನನಗೆ, ಪಡೆದ–ಉಂಟುಮಾಡಿದ, ಅಜಂ–ಬ್ರಹ್ಮನು, ಎಲೆಗೆ–ಎಲೇ, ನಿನ್ನಂ–ನಿನ್ನನ್ನು, ಎನಗೆಯೆ– ನನಗಾಗಿಯೆ, ಪಡೆದಂ–ಸೃಷ್ಟಿಸಿದನು; ಒಗಸುಗಮಲ್ತು–ಅತಿಶಯವಲ್ಲ. ಪುಳಿಂಚು=ಪುಳಿಚು– ಬೊಬ್ಬೆ, ಬೊಕ್ಕೆ, ಗುಳ್ಳೆ: ಕಡುಗಾಯ್ದುಗ್ರಾತ ಪಜ್ವಾಳೆಗೆ ಮಿಗೆ ಪುಳಿಚೇೞಲ್ಕೆ ಬೆಂಬೆಂದು– ಎಂದು ಪ್ರಯೋಗಾಂತರವುಂಟು.
೬೮. ಎನಗೆ–ನನಗೆ, ಅರಸಿಯಾಣೆ–ರಾಣಿಯಾದ ಸುದೇಷ್ಣೆಯ ಆಣೆ; ನಿನ್ನೊಡನೆ– ನಿನ್ನ ಜೊತೆಯಲ್ಲಿ, ಎನಗೆ–ನನಗೆ, ಏಗೆಟ್ಟಪುದು–ಏನು ಕೆಡುತ್ತದೆ, ನಷ್ಟವಾಗುತ್ತದೆ, ಇದು, ಎಂದು, ಱೋಡಾಡಲ್–ಅಪಹಾಸ್ಯ ಮಾಡುವುದಕ್ಕಾಗಿ, ಕೆಮ್ಮನೆ–ಸುಮ್ಮನೆ, ನುಡಿದೊಡೆ– ಹೇಳಿದರೆ, ಕಣ್ಗಂ–ಕಣ್ಣಿಗೂ, ಮನಕ್ಕೆ–ಮನಸ್ಸಿಗೂ, ವಂದಿರ್ದ–ಮೆಚ್ಚಿಕೆಯಾಗಿರುವ, ನಿನ್ನೊಳ್–ನಿನ್ನಲ್ಲಿ, ಎನಗೆ–ನನಗೆ, ಎರಡುಂಟೇ–ಕಪಟವುಂಟೇ, ಸುಳ್ಳು ಇದೆಯೇ.
೬೯. ಬಾಯೞಿದು–ಬಾಯಿ ಸೋಲುವಂತೆ, ಎನಿತೆರೆದೊಡಂ–ಎಷ್ಟು ಬೇಡಿದರೂ, ಹಾ ಎನ್ನೆಯ–ಅಯ್ಯೋ ಎಂದು ಹೇಳೆಯ? ಕರಮೆ ಮಱುಗಿ–ವಿಶೇಷವಾಗಿ ವ್ಯಥೆಪಟ್ಟು, ಮೆಯ್ವಿಡಿದು–ದೇಹ ಸಮೇತನಾಗಿದ್ದು, ಉರಿವ–ಉರಿಯುತ್ತಿರುವ, ಎನ್ನ–ನನ್ನ, ಈ ಎದೆಯಂ–ಈ ಹೃದಯವನ್ನು, ಆಱಿಸಲ್–ಸಮಾಧಾನಪಡಿಸಲು, ನೀಂ–ನೀನು, ಬಾಯೊಳ್–ನಿನ್ನ ಬಾಯಲ್ಲಿ, ತಂಬುಲಮನಪ್ಪೊಡಂ–ತಾಂಬೂಲವನ್ನಾದರೂ, ದಯೆಗೆಯ್ವೋ–ದಯಮಾಡಿ ಕೊಡುವೆಯೋ?
ವಚನ : ಎನಿತಾನುಂ ತೆಱದ–ಎಷ್ಟೋ ಬಗೆಯಾದ; ಲಲ್ಲೆಯಿಂ–ಲಲ್ಲೆಮಾತುಗಳಿಂದ; ಅಳಿಪಂ ತೋಱಿ–ಆಸೆಯನ್ನು ತೋರಿಸಿ; ಬಾಯೞಿದು–ಬಾಯಿ ಸೋಲುವಂತೆ ಹರಟಿ; ತನ್ನ ನುಡಿಗಳ–ತನ್ನ ಮಾತುಗಳ; ಅಳಿಪು–ಅಭಿಲಾಷೆಯು; ಇಳಿವೋಗೆ–ತಿರಸ್ಕೃತವಾಗಲು,
೭೦. ಎನ್ನೊಳ್–ನನ್ನಲ್ಲಿ, ಇಂತಪ್ಪ–ಇಂಥ, ಅಳಿಪಿನ–ದುರಾಶೆಯ, ನುಡಿಯಂ–ಮಾತು ಗಳನ್ನು, ನುಡಿಯಲ್ಬೇಡ–ಹೇಳಬೇಡ; ನಿನ್ನ ಮಾತಿಂಗೆ–ನಿನ್ನ ಮಾತುಗಳಿಗೆ, ಚಿಃ–ಚೀ, ಮೆೞ್ಪಡುವಂತಪ್ಪಾಕೆಯಲ್ಲೆಂ–ಮೋಸ ಹೋಗುವವಳಲ್ಲ ನಾನು; ಬಿಡುಗಡ–ನನ್ನನ್ನು ಬಿಡೋ; ಬಿಡದಂದು–ಬಿಡದಿದ್ದಾಗ, ಎನ್ನ ಗಂಧರ್ವರಿಂದಂ–ನನಗೆ ರಕ್ಷಣೆಯಾಗಿರುವ ಗಂಧರ್ವರಿಂದ, ಮಡಿವಯ್–ಸಾಯುತ್ತೀಯ; ನೀಂ–ನೀನು; ಎಂದೊಡೆ–ಎಂದರೆ, ಅಂತಪ್ಪೊಡೆ–ಹಾಗಾದರೆ, ಬಿಡೆಂ–ಬಿಡೆನು; ಎನಗಂ–ನನಗೆ ಕೂಡ, ಮೇಗುವೇೞ್ದಪ್ಪೆ ಯಲ್ಲ–ಮೋಸದ ಮಾತುಗಳನ್ನು ಹೇಳುತ್ತಿರುವೆಯಲ್ಲ; ಆರ್ಪೊಡೆ–ಶಕ್ತರಾಗಿದ್ದರೆ, ನಿನ್ನಂ ಕಾವ ಗಂಧರ್ವರೆ–ನಿನ್ನನ್ನು ರಕ್ಷಿಸುವ ಗಂಧರ್ವರೇ, ಬಿಡಿಸುಗೆ–ಬಿಡಿಸಲಿ, ಪೋಗು–ಹೋಗು, ಎಂದು, ದುರಾತ್ಮಂ–ದುಷ್ಟನಾದ ಕೀಚಕನು, ಪೊಯ್ದಂ–ಹೊಡೆದನು. ಮೇಗು ಮ್ರೇಕು (ತೆ) ಮೆೞುಕು (ತ)–ಸಾರಿಸು, ಲೇಪಿಸು, ಗಿಲೀಟು ಮಾಡು, ವಂಚಿಸು.
ವಚನ : ಬಱುಬಂ–ಬರಿದಾದವನು, ನಿಸ್ಸಹಾಯನಾದವನು; ಪೊಯಿಲ್ವೆತ್ತಂತೆ–ಏಟು ತಿಂದ ಹಾಗೆ; ಪರಿಭವಾನಲನಿಂ–ಅವಮಾನದ ಅಗ್ನಿಯಿಂದ; ಕಾಯ್ಪಿನೊಳ್–ಕೋಪದಲ್ಲಿ, ಪಿಡುಗಿ–ಸಿಡಿಲಂತೆ ಸಿಡಿದು; ತಳೋದರಿ–ದ್ರೌಪದಿ; ವೃಕೋದರನಲ್ಲಿಗೆ–ಭೀಮನ ಬಳಿಗೆ.
೭೧. ಪೆಱನ–ಬೇರೆಯವನ, ಇತರರ, ಇಕ್ಕುಂಗೂೞೊಳಂ–ಹಾಕುವ ಅನ್ನದಲ್ಲೂ, ಕೀೞಿಲೊಳಂ–ಸೇವಕರಿರುವ ಕೀಳಾದ ಮನೆಯಲ್ಲೂ, ಅಳವಿಗೆಟ್ಟಿರ್ಪ–ಅಂತಸ್ತು ಕೆಟ್ಟಿರುವ, ನಿಮ್ಮಿರ್ಪುದರ್ಕಂ–ನೀವು ಇರುವ ಸ್ಥಿತಿಗೂ, ಮಱುಗುತ್ತಿರ್ಪಳ್ಗೆ ಎನಗೆ–ವ್ಯಥೆಪಡುತ್ತಿರುವ ನನಗೆ, ನೋಡ–ನೋಡು, ಆದ ಅೞಲಂ–ಉಂಟಾದ ದುಃಖವನ್ನು; ಕಣ್ಸೋಲದಿಂ– ಮೋಹದಿಂದ, ಕೀಚಕಂ–ಕೀಚಕನು, ಬಂದು, ಉಱದೆ–ಇರದೆ, ಎನ್ನಂ–ನನ್ನನ್ನು, ಕಾಡಿ– ಹಿಂಸಿಸಿ, ಕೈಗೆಲ್ದು–ಕೈಯಿಂದ ಗೆದ್ದು, ಹೊಡೆದು, ಉಗಿದಂ–ಎಳೆದಾಡಿದನು; ಅವನ, ಅದು, ಒಂದು, ಉರ್ಕಂ–ಕೊಬ್ಬನ್ನು, ಏವೇೞ್ವೆಂ–ಏನೆಂದು ಹೇಳುವೆನು, ಇಂ–ಇನ್ನು, ನೀಂ– ನೀನು, ಅಱಿವಯ್–ಬಲ್ಲೆ; ಪೂಣ್ದ–ಸುತ್ತಿಕೊಂಡಿರುವ, ಎನ್ನದು–ನನ್ನ, ಒಂದಂ ಪರಿಭವನಿದಂ–ಈ ಒಂದು ಅವಮಾನವನ್ನು, ಭೀಮಸೇನಾ–ಭೀಮನೇ, ನೀಂ ನೀಗು– ನೀನು ತೊಲಗಿಸು. (ತ) ಪೂಣ್–ಶೂೞ್ನ್ದುಕೊಳ್ಳುದಲ್, ಬಳಸು, ಸುತ್ತುವರಿ.
ವಚನ : ಏವದೊಳ್–ಕೋಪದಲ್ಲಿ.
೭೨. ಎನಗೆ–ನನಗೆ, ಮುಳಿಸೆಂಬುದು–ಕೋಪವೆನ್ನುವುದು, ಆ ಕೌರವರೊಳೆ–ಆ ಕೌರವರಲ್ಲಿಯೇ, ಪಿರಿದು–ಹಿರಿದು, ಆ ಬಲಿದ ಬಯಕೆಯಂ–ಆ ಬಲಿತ ಅಭಿಲಾಷೆಯನ್ನು, ಮಾದುರದೊಳ್–ಮಹಾಯುದ್ಧದಲ್ಲಿ, ಕಳೆವಂತು–ಕಳೆಯುವ ಹಾಗೆ (ಬಯಕೆ ಹಿಂಗುವಂತೆ); ಅನ್ನೆಗಂ–ಅದುವರೆಗೆ, ಅಬ್ಜದಳಾಕ್ಷೀ–ಕಮಲನೇತ್ರೆಯೇ, ನಿನ್ನೊಂದು ಮುಳಿಸಂ–ನೀನು ಕಾರಣವಾಗಿ ಉಂಟಾಗಿರುವ ಕೋಪವನ್ನು, ಇವನೊಳ್–ಇವನಲ್ಲಿ (ಕೀಚಕನಲ್ಲಿ), ಕಳೆವೆಂ– ಕಳೆಯುತ್ತೇನೆ.
ವಚನ : ಸಂಕೇತ ನಿಕೇತನಂ ಮಾಡಿ–ಸೂಚಿಸಿದ ಮನೆಯನ್ನಾಗಿ ಮಾಡಿ; ನೇಸರ್ಪಡ ಲೊಡಂ–ಸೂರ್ಯ ಮುಳುಗಿದ ಕೂಡಲೇ; ಆ ಪೊೞ್ತಿಂಗೆ–ಆ ಹೊತ್ತಿಗೆ ವರಿಸು–ಬರಿಸು; ಕೞುಪಲ್–ಕಳುಹಿಸಿಕೊಡಲು;
೭೩. ಮಱುದೆವಸಂ–ಮಾರನೆಯ ದಿನ, ಲತಾಲಲಿತೆ–ಲತೆಯಂತೆ ಕೋಮಲವಾದ ದ್ರೌಪದಿ, ಕೀಚಕನಲ್ಲಿಗೆ–ಕೀಚಕನ ಬಳಿಗೆ, ಕಾಮನೊಂದು ಕೈಸೆಱೆಯೆನಿಪ–ಮನ್ಮಥನ ಒಂದು ಬಂದಿಯೆನಿಸುವ, ಅಂಗರಾಗಮಂ–ಲೇಪನವನ್ನು, ಇಳೇಶ್ವರ ವಲ್ಲಭೆ–ವಿರಾಟನ ರಾಣಿ ಸುದೇಷ್ಣೆ, ಅಟ್ಟಲ್–ಕಳಿಸಿಕೊಡಲು, ಉಯ್ದೊಡೆ–ದ್ರೌಪದಿ ತೆಗೆದುಕೊಂಡು ಹೋದರೆ, ಆನ್ ಅಱಿಯದೆ–ನಾನು ತಿಳಿಯದೆ, ನಿನ್ನೆ–ನಿನ್ನಿನ ದಿನ, ನೋಯಿಸಿದೆಂ–ನೋವುಂಟು ಮಾಡಿದೆನು, ಇಂದು–ಈ ದಿನ, ಎನಗೆ–ನನಗೆ, ಎಂಬುದಂ–ಹೇಳುವುದನ್ನು, ಎಂಬುದು– ಹೇಳುವುದು, ಎಂದು, ಕೀಚಕ, ಕಾಲ್ಗೆಱಗಿದೊಡೆ–ಕಾಲಿಗೆ ಬಿದ್ದರೆ, ಒಳ್ಳಿತಾಗೆ–ಒಳ್ಳೆಯ ದಾಗಲು, ನಿನಗೆ, ಇನಿತೊಂದು–ಇಷ್ಟೊಂದು, ಒಲವು–ಪ್ರೀತಿ, ಉಳ್ಳೊಡೆ–ಇರುವ ಪಕ್ಷದಲ್ಲಿ, ಒಲ್ಲೆನೇ–ನಾನು ಒಪ್ಪೆನೇ? ಒಪ್ಪುತ್ತೇನೆ ಎಂದು ಭಾವ.
ವಚನ : ಕುಱುಪುವೇೞ್ದು–ಗುರುತು ಹೇಳಿ, ಸಂಕೇತ ಮಾಡಿ; ತದ್ವೃತ್ತಕಮಂ–ಆ ಸಮಾಚಾರವನ್ನು; ಕಲಿಗಂಟಿಕ್ಕಿ–ವೀರಕಾಸೆಯ ಗಂಟನ್ನು ಹಾಕಿ; ಗಂಡುಡೆಯುಮಂ– ಗಂಡಸಿನ ಉಡುಪನ್ನೂ; ಮೇಲುದಂ–ಮೇಲು ಹೊದಿಕೆಯನ್ನು; ಗುಣಣೆಯ–ನೃತ್ಯ ಶಾಲೆಯ, ನಾಟಕಶಾಲೆಯ. “ಮನಮೊಲ್ದು ತನ್ನ ಗುಣಣೆಯ ಮನೆಯಂ ಗಜಗಮನೆ ಪೊಕ್ಕು” ಎಂದು ಶಾಂತಿನಾಥನ ಪ್ರಯೋಗ. ಗುಣಣೆ ಸಂ. ಗುಣನೀ, ಗುಣನಿಕಾ–ನೃತ್ಯ, ನಾಟ್ಯ.
೭೪. ಸಿಂಗಬಲನೆಂಬ–ಸಿಂಹಬ (=ಕೀಚಕ)ನೆನ್ನುವ, ಸಿಂಗಮಂ–ಸಿಂಹವನ್ನು, ಅಸಿಧೇನು ಕಿರಣಕೇಸರಮಾಲಾಸಂಗತಮಂ–ಕಠಾರಿಯ ಕಿರಣಗಳೆಂಬ ಕೇಸರಗಳ ಮಾಲೆಯಿಂದ ಕೂಡಿರುವುದನ್ನು, ಅಡಸಿ–ಹಿಡಿದು, ನುಂಗಲ್–ನುಂಗುವುದಕ್ಕೆ, ಸಂಗತಬಲಂ–ಶಕ್ತಿ ಯನ್ನುಳ್ಳ ಭೀಮನು, ಒಂದು, ಶರಭಮಿರ್ಪಂತೆ–ಶರಭವೆಂಬ ಮೃಗವಿರುವ ಹಾಗೆ, ಇರ್ದಂ–ಇದ್ದನು.
ವಚನ : ಪಾಣ್ಬಂ–ಜಾರನು.
೭೫. ಅಚ್ಚಿಗದಿಂದೆ–ವ್ಯಥೆಯಿಂದ, ಅೞಲ್ದು–ದುಃಖಿಸಿ, ಇನಂ–ಸೂರ್ಯನು, ಅಡಂಗದ–ಮುಳುಗದ, ಬೇಸಱೊಳ್–ಬೇಸರದಲ್ಲಿ, ಅಂತೆ–ಹಾಗೆಯೇ, ನೀರೊಳಂ– ನೀರಲ್ಲಿಯೂ, ಕಿಚ್ಚಿನೊಳಂ–ಉರಿಯಲ್ಲೂ, ಪೊರಳ್ದು–ಹೊರಳಾಡಿ, ಪಗಲ್–ಹಗಲು, ಅಂದು–ಆಗ, ಇರುಳಾದೊಡೆ–ರಾತ್ರಿಯಾದರೆ, ರಾಜ್ಯಮಾದವೊಲ್–ರಾಜ್ಯ ಬಂದ ಹಾಗೆ, ಪೆರ್ಚಿ–ಹೆಚ್ಚಿ, ಮನಕ್ಕೆ–ಮನಸ್ಸಿಗೆ, ಬಿಚ್ಚತಿಕೆವಂದಿರೆ–ವಿಸ್ತರತೆಯುಂಟಾಗಿರಲು, ನಾಟಕ ಶಾಲೆ ವೊಕ್ಕು–ನೃತ್ಯಶಾಲೆಯನ್ನು ಹೊಕ್ಕು, ವಿದ್ಯುಚ್ಚಪಳಂ–ಮಿಂಚಿನಂತೆ ಚಪಲನಾದ ಕೀಚಕನು, ಮನೋಜಪರಿತಾಪದಿಂ–ಕಾಮ ಸಂತಾಪದಿಂದ, ಭೀಮನಂ–ಭೀಮನನ್ನು, ಓಪಳೆಗೆತ್ತು– ಪ್ರಿಯೆಯೆಂದೇ ಭಾವಿಸಿ,
೭೬. ನುಡಿಯದೆ–ಮಾತಾಡದೆ, ಕೆಮ್ಮನಿರ್ಪ–ಸುಮ್ಮನಿರುವ, ಇರವು–ಸ್ಥಿತಿ, ಇದು, ಆವುದು ಕಾರಣಂ–ಯಾವ ಕಾರಣದಿಂದ; ಈ ಮೊಗಂಗುಡದ–ಈ ಮುಖವನ್ನು ಕೊಡದ, ತೋರಿಸದ, ಇರವು–ಇರುವಿಕೆ, ಆವುದು–ಯಾವುದು; ಇಂತು–ಹೀಗೆ, ಮಾನಸರ್– ಮನುಷ್ಯರು, ಕಣ್ಬಡಿಗರಪ್ಪರೆ–ಮೋಸಗಾರರಾಗುತ್ತಾರೆಯೆ? ಅಪ್ಪರ್–ಆಗುವರು, ಎಂದು, ಮೆೞ್ಪಡೆ ನುಡಿದು–ಗಿಲೀಟು ಮಾತಾಡಿ, ಎಯ್ದೆವಂದು–ಹತ್ತಿರ ಬಂದು, ಮುಸುಕಂ ತೆಗೆದಾಗಡೆ–ಮುಸುಕನ್ನು ತೆಗೆದಾಗಲೇ, ಬಲ್ದಡಿಗಂ–ಬಲು ದಾಂಡಿಗನಾದ ಭೀಮನು, ಮೇಲೆ ವಾಯ್ದು–ಮೇಲೆ ನುಗ್ಗಿ, ಬಲ್ದಡಿಗಂ–ಬಲು ದಾಂಡಿಗನಾದ ಕೀಚಕನನ್ನು, ಅಮುಂಕಿ–ಅಮುಕಿ, ಪಿಡಿದು–ಹಿಡಿದುಕೊಂಡು, ಒರ್ಮೆಯೆ–ಒಂದೇ ಸಲಕ್ಕೆ, ಮಲ್ಲಯುದ್ಧದೊಳ್–ಮಲ್ಲಗಾಳಗ ದಲ್ಲಿ,
ವಚನ : ಪೋರ್ದು–ಹೋರಾಡಿ, ಮಲ್ಲಾಮಲ್ಲಿಯಾಗೆ–ದ್ವಂದ್ವಯುದ್ಧವಾಗಲು, ಪಲವುಂ ಗಾಯಂಗಳೊಳ್–ಹಲವು ತೆರನಾದ ಪಟ್ಟುಗಳಲ್ಲಿ; ಆಯಂದಪ್ಪದೆ–ಶಕ್ತಿಗುಂದದೆ, ಸಂತರ್ಪಿನಂ–ಸಲ್ತರ್ಪಿನಂ, ಸಲ್ಲುತ್ತಿರಲು; ಬಳೆಯ ಪೇಱಂ–ಬಳೆಯ ಹೇರನ್ನು; ಅಗುರ್ವು– ಭಯ; ಪರ್ವೆ–ಹಬ್ಬಲು; ಗುಣಣೆಯ ಕಂಭಂಗಳೊಳಂ–ನೃತ್ಯಶಾಲೆಯ ಕಂಭಗಳಲ್ಲಿಯೂ; ಕೇರ್ಗಳೊಳಂ–ಗೋಡೆಗಳಲ್ಲಿಯೂ; ಆಸ್ಫೋಟಿಸಿ–ಸಿಡಿಯುವಂತೆ ಮಾಡಿ; ತಾಟಿಸಿದಾಗಳ್– ಸಂಘಟ್ಟಿಸಿದಾಗ.
೭೭. ಬಿಸುನೆತ್ತರ್–ಬಿಸಿರಕ್ತ, ನೆಣಂ–ಕೊಬ್ಬು, ಅಡಗು–ಮಾಂಸ, ಎಲ್ವು–ಎಲುಬು, ಸಮಸ್ತಂ–ಎಲ್ಲವೂ, ಸುರಿಯೆ–ಸುರಿಯಲು, ಕೈಗೆ–ಕೈಯಲ್ಲಿ, ತೊವಲುೞಿಯಲ್–ತೊಗಲು ಮಾತ್ರ ಉಳಿಯಲು, ಕೀಚಕನಾ–ಕೀಚಕನ, ತನು–ದೇಹವು, ತೀವಿದ–ತುಂಬಿದ, ಗುಳ್ಳೆಯ– ಉಬ್ಬುವಿಕೆಯನ್ನುಳ್ಳ, ಪಸುಂಬೆಯಂ–ಹಸಿಬೆ ಚೀಲವನ್ನು, ಸೋರ್ಚಿದಂತೆ–ಸೋರಿ ಹೋಗುವ ಹಾಗೆ ಮಾಡಿದಂತೆ, ಅಗುರ್ವಿಸಿದುದು–ಭಯಂಕರವಾಯಿತು.
೭೮. ಆಂ–ನಾನು, ಜಗದೊಳ್–ಲೋಕದಲ್ಲಿ, ಬಲಸ್ಥನೆಂ–ಬಲಶಾಲಿಯಾಗಿದ್ದೇನೆ, ಎನಗೆ–ನನಗೆ, ಇದಿರ್ಚುವರಾರ್–ಪ್ರತಿಭಟಿಸುವರು ಯಾರು, ಎಂದು, ಸೋಲದಿಂ–ಮೋಹ ದಿಂದ, ಕಂಜದಳಾಕ್ಷಿಯಂ–ತಾವರೆ ಕಣ್ಣೆಯನ್ನು, ದ್ರೌಪದಿಯನ್ನು, ಖಳಂ–ದುಷ್ಟನು, ಪಿಡಿದಂ–ಹಿಡಿದನು, ಎಂಬ, ಅೞಲಿಂದಂ–ದುಃಖದಿಂದ, ಅತ್ತಂ ಇತ್ತಂ–ಅತ್ತಲೂ ಇತ್ತಲೂ, ಜವಂ–ಯಮನು, ಒಕ್ಕಲಿಕ್ಕಿದೊಡೆ–ಒಕ್ಕಣೆ ಮಾಡಿದರೆ, ನಾಟಕಶಾಲೆಯೊಳ್–ನೃತ್ಯ ಶಾಲೆಯಲ್ಲಿ, ಸೂಸಿದ–ಚೆಲ್ಲಾಡಿದ, ಖಂಡದ–ಮಾಂಸದ, ಇಂಡೆಗಳ್–ರಾಶಿಗಳು, ರಕ್ತ ಪುಷ್ಪಾಂಜಲಿಗೆಯ್ದ–ಕೆಂಪು ಹೂಗಳನ್ನು ಎರಚಿದ, ಮಾೞ್ಕೆವೊಲ್–ರೀತಿಯ ಹಾಗೆ, ಇರ್ದುವು–ಇದ್ದುವು.
ವಚನ : ಸಂಧಿ ಸಂಧಿಯೊಳ್–ಕೀಲುಕೀಲುಗಳಲ್ಲಿ; ಅಶ್ರಮದೊಳೆ–ಸುಲಭವಾಗಿಯೇ; ಬಾಣಸುಗೆಯ್ದು–ಅಡಿಗೆಯನ್ನು ಮಾಡಿ;
೭೯. ಗಂಧರ್ವ ವನಿತೆಯೆಂ–ನಾನು ಗಂಧರ್ವನ ಹೆಂಡತಿಯಾಗಿದ್ದೇನೆ, ನಿರ್ಬಂಧಂ ಬೇಡ– ಒತ್ತಾಯ ಬೇಡ, ಅಳಿಪೆ–ಆಸೆ ಮಾಡಲು, ಸಾವೆಯೆನೆ–ಸಾಯುವೆ ಎನ್ನಲು, ಮಾಣದೆ–ಬಿಡದೆ, ಕಾಮಾಂಧಂ–ಕಾಮದಿಂದ ಕುರುಡನಾದ, ಕೀಚಕಂ–ಕೀಚಕನು, ಆಟಿಸಿ– ಬಯಸಿ, ಎನಗೆ–ನನಗೆ, ದೂಱಪ್ಪಿನೆಗಂ–ಅಪವಾದ ಉಂಟಾಗುತ್ತಿರಲು, ಗಂಧರ್ವರಿಂ– ಗಂಧರ್ವರಿಂದ; ಅೞಿದಂ–ನಾಶವಾದನು.
ವಚನ : ಗಗ್ಗರಿಗೊಳ್ವ ಸರಮಂ–ದುಃಖದ ಅಸ್ಪಷ್ಟತೆಯಿಂದ ಕೂಡಿದ ಧ್ವನಿಯನ್ನು; ಡಾಮರ ಡಾಕಿನಿಯಿಂದೆ–ಕ್ಷೋಭೆಗೊಳಿಸುವ ಪಿಶಾಚಿಯಿಂದ; ಸಂಸ್ಕರಿಸಲ್ವೇೞ್ಕುಮೆಂದು– ದಹನಾದಿ ಕ್ರಿಯೆಗಳನ್ನು ಮಾಡಬೇಕೆಂದು; ಕಳಕಳಮಂ–ಗದ್ದಲವನ್ನು; ರೂಪುಗರೆದು– ರೂಪನ್ನು ಮರೆಸಿಕೊಂಡು; ಆಸ್ಫಾಲನಂಗೆಯ್ದು–ಅಪ್ಪಳಿಸಿ ತಟ್ಟಿ; ಗಗ್ಗರಿಕೆ ಸಂ. ಗದ್ಗದಿಕಾ– ಅವ್ಯಕ್ತ ಕಥನ.
೮೦. ನಿಮಗಂ–ನಿಮಗೆ ಕೂಡ, ವನಿತಾ ಹೇತುವೆ–ಸ್ತ್ರೀ ನಿಮಿತ್ತವೇ, ಕೇತುವಾಯ್ತು–ಕೇತು ಗ್ರಹವಾಯಿತು; ಗಾಂಧರ್ವರಿಂದೆ–ಗಂಧರ್ವರಿಂದ, ಇಂದು–ಈ ದಿನ, ನಿಮ್ಮ ನಿಷೇಕಂ–ನಿಮ್ಮ ಪ್ರಸ್ತದ ಒಸಗೆಯು ಎಂದರೆ ನಿಮಗೆ ತಕ್ಕಶಾಸ್ತಿಯು ಅಥವಾ ಶಿಕ್ಷೆಯು, ನೆಱೆದತ್ತು–ಪೂರ್ಣ ವಾಯಿತು; ಸತ್ತಿರ್–ಸತ್ತಿರಿ, ಎನುತಂ–ಎನ್ನುತ್ತ, ಪೊಕ್ಕು–ಹೊಕ್ಕು, ನುಗ್ಗಿ, ಕಾಳಾಂಬುದ ಧ್ವನಿಯಿಂ–ಪ್ರಳಯಕಾಲದ ಮೋಡಗಳ ಧ್ವನಿಯಿಂದ, ಆರ್ದು–ಗರ್ಜಿಸಿ, ಬಾೞೆಯ ಚೆಲ್ವನಪ್ಪ ಬನಮಂ–ಬಾಳೆಯ ಸೊಗಸಾದ ತೋಟವನ್ನು, ಕಾಡಾನೆ ಪೊಯ್ದಂತೆ–ಕಾಡಾನೆ ಧ್ವಂಸ ಮಾಡಿದ ಹಾಗೆ, ಪೊಯ್ದು–ಹೊಡೆದು, ಇನಿಸುಂ–ಸ್ವಲ್ಪವೂ, ಮಾಣದೆ–ಬಿಡದೆ, ನೀಚಕೀ ಚಕನಿಕಾಯ ಧ್ವಂಸಮಂ–ನೀಚರಾದ ಕೀಚಕರ ಸಮೂಹದ ವಿನಾಶವನ್ನು, ಮಾಡಿದಂ–ಮಾಡಿ ದನು, ನಿಸೇಕಮಾಡು ಎಂಬುದು ಒಂದು ನುಡಿಗಟ್ಟು; ಹೊಡೆ, ಶಾಸ್ತಿಮಾಡು ಎಂದರ್ಥ.
ವಚನ : ಅಳವಿಗೞಿಯೆ–ಅಳತೆಮೀರಿ, ಕೊರ್ವಿದ–ಕೊಬ್ಬಿದ; ಕೋಪದವ ದಹನ ಜ್ವಾಲಾಸಹಸ್ರಂಗಳಿಂ–ಕೋಪವೆಂಬ ಕಾಳ್ಕಿಚ್ಚಿನ ಸಾವಿರಾರು ಜ್ವಾಲೆಗಳಿಂದ; ಅೞ್ಕಿಮೆೞ್ಕಿ ದಂತೆ–ಹಾಳಾಗಿ ಸಾರಿಸಿದಂತೆ; ಪಡೆಮಾತಂ–ಸಮಾಚಾರವನ್ನು.
೮೧. ಕೀಚಕ ಬಲಂ–ಕೀಚಕರ ಸೈನ್ಯ, ಗಂಧರ್ವರಿಂದೆ–ಗಂಧರ್ವರಿಂದ, ಇಂದು–ಈ ದಿನ, ಪಡಲಿಟ್ಟಂತೆವೊಲಾಯ್ತು–ಚೆಲ್ಲಾಪಿಲ್ಲಿಯಾಯಿತು; ಇಂದಿರುಳ್–ಈ ರಾತ್ರಿ, ಸಂಗಡಮಿೞ್ತುವಾಯ್ತು–ಸಾಮೂಹಿಕ ಮರಣವುಂಟಾಯಿತು, ಏಂ ಗಡ–ಏನು ಅಲ್ಲವೆ? ಪೆಱವೆಣ್ಗೆ–ಪರಸ್ತ್ರೀಗೆ, ಒಲ್ದಂಗೆ–ಒಲಿದವನಿಗೆ, ಏನಾಗದು–ಏನು ತಾನೇ ಆಗುವುದಿಲ್ಲ; ಇಂದು–ಈ ದಿನ, ಮತ್ಸ್ಯನೊಂದು ಬಲಗೆಯ್–ವಿರಾಟನ ಬಲಗೈಯೊಂದು, ಉಡಿ ದತ್ತಾಗದೆ–ಮುರಿದು ಹೋಯಿತಲ್ಲವೆ; ಎಂದು, ಅಕ್ಕಟಾ–ಅಯ್ಯೊ, ಎಂಬುದು–ಎಂಬು ದನ್ನು ಕೂಡ, ನುಡಿಯಲ್ಕೆ–ಹೇಳುವುದಕ್ಕೆ; ಆರ್ತರುಂ–ಸಮರ್ಥರಾದವರು ಕೂಡ, ಇಲ್ಲ, ಪಾರದರದೊಳ್–ಹಾದರದಲ್ಲಿ, ಸತ್ತಂಗೆ–ಸತ್ತವನಿಗಾಗಿ, ಅೞಲ್ವನ್ನರ್–ದುಃಖಿಸು ವಂಥವರು, ಆರ್–ಯಾರು? ಸಂಗಡಮಿೞ್ತು ಸಂ. ಸಂಘಾತ ಮೃತ್ಯು, ಪಾರದರ–ಸಂ. ಪಾರದಾರ.
೮೨. ರಾವಣನುಂ–ರಾವಣನು ಕೂಡ, ಸೀತಾದೇವಿಗೆ, ಸೋಲ್ತು–ಮೋಹಿಸಿ, ಅದಱ ಫಲಮಂ–ಅದರ ಲಾಭವನ್ನು, ಎಯ್ದಿದಂಗಡ–ಪಡೆದನಲ್ಲವೆ? ಇವಂ–ಈ ಕೀಚಕ, ಆ ರಾವಣನಿಂ–ಆ ರಾವಣನಿಗಿಂತ, ಪಿರಿಯನೆ–ದೊಡ್ಡವನೆ? ಪೇೞ್–ಹೇಳು; ಶುಚಿಯಲ್ಲ ದವನ–ಶೌಚಗುಣವಿಲ್ಲದವನ, ಗಂಡುಂ–ಪೌರುಷವೂ, ತೊಂಡುಂ=ತುಂಟತನವೂ, ಏವುದೋ–ಯಾವುದೋ?
ವಚನ : ಗುಜುಗುಜುಗೊಂಡು–ಪಿಸುಪಿಸು ಮಾತಾಡುತ್ತ; ಪಡೆಮಾತನೆ–ಸಮಾಚಾರ ವನ್ನೇ; ಪೇಡಿ ಸತ್ತಂತೆ–ಹೇಡಿ ಸತ್ತ ಹಾಗೆ; ಮೂಗೞ್ಕೆಯನೞ್ತು–ಸದ್ದಿಲ್ಲದ ಅಳುವನ್ನು ಅತ್ತು; ಕೆಮ್ಮನಿರ್ದಳ್–ಸುಮ್ಮನಿದ್ದಳು, ಗೂಢ ಪ್ರಣಿಧಿಗಳ್–ಗೂಢಚಾರರು; ಜಲ ಕ್ಕನಱಿದು–ವಿಶದವಾಗಿ ತಿಳಿದು; ನಾಗಪುರಕ್ಕೆವಂದು–ಹಸ್ತಿನಾವತಿಗೆ ಬಂದು.
೮೩. ಇಲ್ಲಿಂದ ಗೋಗ್ರಹಣ ಪ್ರಸಂಗ: ಗುಡಿಗಂ–ಧ್ವಜಾರೋಹಣಕ್ಕೂ, ಬದ್ದವಣಕ್ಕಂ– ಮಂಗಳವಾದ್ಯಗಳ, ಬಜಾವಣೆಗೂ, –ಅಪ್ಪ–ತಕ್ಕುದಾಗಿರುವ, ಪಡೆ ಮಾತು–ಸುದ್ದಿ! ಏ ಮಾತು–ಏನು ಸುದ್ದಿ! ಇದಂ ಕೇಳ್ದೊಡೆ–ಇದನ್ನು ಕೇಳಿದರೆ, ಈಗಳೇ–ಈಗಲೇ, ಮೆಚ್ಚೀಯ ಲೆವೇೞ್ಪುದು–ಬಹುಮಾನವನ್ನು ಕೂಡಲೇಬೇಕಾಗುತ್ತದೆ; ನಿಮ್ಮಡಿಯೊಳ್–ನಿಮ್ಮ ಪಾದಗಳಲ್ಲಿ, ಎಯ್ದೆ–ಚೆನ್ನಾಗಿ, ಪರಮದ್ರೋಹರ್ಕಳಾಗಿರ್ದು–ಪರಮದ್ರೋಹಿಗಳಾಗಿದ್ದು, ಪೋಗದೆ–ಹೋಗದೆ; ಕಾಡುತಿರ್ದ–ಹಿಂಸಿಸುತ್ತಿದ್ದ, ಸುಭಟರ್ಕಳ್–ಶೂರರಾದ, ನೂರ್ವರುಂ–ನೂರು ಜನರೂ, ಕೀಚಕರ್–ಕೀಚಕನ ತಮ್ಮಂದಿರು, ದೇವರದೊಂದು ಪುಣ್ಯ ಬಲದಿಂದೆ–ಪ್ರಭುಗಳ ಒಂದು ಪುಣ್ಯದ ಬಲದಿಂದ, ಗಂಧರ್ವಯುದ್ಧಾಗ್ರದೊಳ್– ಗಂಧರ್ವರೊಡನೆ ಆದ ಯುದ್ಧಮುಖದಲ್ಲಿ, ಮಡಿದರ್–ಸತ್ತು ಹೋದರು.
ವಚನ : ಮಂಡಲಂ–ದೇಶ; ಗೋಮಂಡಲದಂತೆ–ಹಸುವಿನ ಹಿಂಡಿನ ಹಾಗೆ; ಹೇಳಾ ಸಾಧ್ಯಮಾಗಿ–ಆಟದಲ್ಲಿ ಜಯಿಸುವಷ್ಟು ಸುಲಭಸಾಧ್ಯವಾಗಿ; ಕೈಗೆವರ್ಕುಂ–ಕೈವಶವಾಗು ತ್ತದೆ.
೮೪. ಇದು–ಈ ಸುದ್ದಿ, ದಲ್–ದಿಟವಾಗಿಯೂ, ಚೋದ್ಯಂ–ಆಶ್ಚರ್ಯಕರ, ಅತರ್ಕ್ಯಂ– ತರ್ಕಿಸಲಾಗದ್ದು, ಅದ್ಭುತಂ–ಅದ್ಭುತವಾದದ್ದು, ಅಸಂಭಾವ್ಯಂ–ಎಂದೂ ನಡೆಯಲಾಗದ್ದು, ವಿಚಾರಕ್ಕೆ ಬಾರದುದು–ವಿಚಾರ ಮಾಡುವುದಕ್ಕೆ ಆಗದಿರುವುದು, ಎಂತೆಂದೊಡೆ–ಹೇಗೆಂದರೆ, ಸಂದ ಸಿಂಹಬಲನಂ–ಪ್ರಸಿದ್ಧನಾದ ಕೀಚಕನನ್ನು, ಭೀಮನಲ್ಲದವರ್–ಭೀಮಸೇನನಲ್ಲ ದವರು, ಕೊಲ್ವನ್ನರ್–ಕೊಲ್ಲುವಂಥವರು, ಆರ್–ಯಾರು? ಕೀಚಕ ಭೀಮ ಶಲ್ಯ ಬಲದೇವರ್ಕಳ್–ಕೀಚಕ ಭೀಮ ಶಲ್ಯ ಬಲರಾಮರು, ತೋಳ್ವಲದೊಳ್–ಬಾಹು ಬಲದಲ್ಲಿ, ಸಮಾನರ್ಕಳಪ್ಪುದಱಿಂ–ಸಮಾನವಾಗಿರುವುದರಿಂದ ಈ ವಿಕ್ರಾಂತಮುಂ–ಈ ಪರಾಕ್ರಮವೂ, ಗರ್ವಮುಂ–ಗರ್ವವೂ, ಪೆಱಂಗಂ–ಬೇರೆಯವನಿಗೆ ಕೂಡ, ಅರಿದು–ಅಸಾಧ್ಯ, ಅಪರೂಪ.
ವಚನ : ಆಗಲೆವೇೞ್ಕುಂ–ಆಗಲೇಬೇಕು.
೮೫. ಪರಿಭವದ–ಅಪಮಾನದ, ಒಂದು ತುತ್ತತುದಿ–ಒಂದು ಪರಾಕಾಷ್ಠತೆ, ಕೃಷ್ಣೆಯ– ದ್ರೌಪದಿಯ, ಬನ್ನದೊಳಾಗೆ–ಕೇಡಿನಲ್ಲುಂಟಾಗಲು; ಜೂದಿನೊಳ್–ಜೂಜಿನಲ್ಲಿ, ಪೊಱಸೞಿವಂತೆ–ಪಾರಿವಾಳವು ನಾಶಮಾಡುವಂತೆ, ತಮ್ಮರಸುಗೆಟ್ಟು–ತಮ್ಮ ದೊರೆತನ ಹಾಳಾಗಿ, ಕೞಲ್ದು–ಶಿಥಿಲರಾಗಿ, ಎರ್ದೆಗೆಟ್ಟು–ಧೈರ್ಯ ನೀಗಿ ಹೋಗಿ; ಅರಣ್ಯದೊಳ್– ಕಾಡಿನಲ್ಲಿ, ತಿರಿತರುತಿರ್ದ–ಅಲೆದಾಡುತ್ತಿದ್ದ, ಕಣ್ಬಡಿಗರ್–ಮೋಸಗಾರರು, ಇನ್–ಇನ್ನು, ಮಗುೞ್ದುಂ–ಮತ್ತೆಯೂ, ಬಿಱುತೋಡಿ–ಹೆದರಿ ಓಡಿಹೋಗಿ, ಬೇಡರೊಳ್–ಬೇಡರಲ್ಲಿ, ನೆರೆದಿರಲ್ಲದೆ–ಕೂಡಿ ಇರಬೇಕಲ್ಲದೆ, ಒಡ್ಡಯಿಸಿ–ಒಟ್ಟಾಗಿ, ರಾಜ್ಯದೊಳ್–ತಮ್ಮ ರಾಜ್ಯ ದಲ್ಲಿ, ನೆರೆಯಲ್ಕೆ–ಸೇರುವುದಕ್ಕೆ, ಏಂ ತೀರ್ಗುಮೋ–ಏನು ತೀರುತ್ತದೋ, ಸಾಧ್ಯವಾಗು ತ್ತದೋ? ಈ ಪದ್ಯದಲ್ಲಿ ರೇಫಱಕಾರಗಳ ಮಿಶ್ರ ಪ್ರಾಸವಿದೆ. ಪಾರಿವಾಳವು ವಿನಾಶಕಾರಕ ಪಕ್ಷಿ ಎಂಬ ನಂಬಿಕೆ ಇತ್ತು; “ಭರತಾನ್ವಯರಾಜಭವನ ರಾಜಕಪೋತಂ” ಎಂಬ ರನ್ನನ ಪ್ರಯೋಗವನ್ನು ನೋಡಿ.
ವಚನ : ಅಮರಾಪಗಾನಂದನಂ–ದೇವನದಿಯಾದ ಗಂಗೆಯ ಮಗ, ಭೀಷ್ಮ.
೮೬. ರಸೆಯೊಳ್–ಭೂಮಿಯಲ್ಲಿ, ಕಾಲಾಗ್ನಿರುದ್ರಂ–ಲಯಕಾಲದ ಅಗ್ನಿಯೆಂಬ ರುದ್ರನು, ಜಲಶಯನದೊಳ್–ನೀರಹಾಸಿಗೆಯಲ್ಲಿ, ಅಂಭೋಜನಾಭಂ–ವಿಷ್ಣುವು, ಪೊದಳ್ದ–ವ್ಯಾಪಿಸಿದ, ಆಗಸದಿಂ–ಆಕಾಶದಿಂದ, ಸುತ್ತಿರ್ದ–ಬಳಸಿರುವ, ಅಜಾಂಡೋದರ ದೊಳ್–ಬ್ರಹ್ಮಾಂಡದ ಗರ್ಭದಲ್ಲಿ, ಅಜಂ–ಬ್ರಹ್ಮನು, ಅಡಂಗಿರ್ಪವೊಲ್–ಅಡಗಿರುವ ಹಾಗೆ, ಪಾಂಡವರ್–ಪಾಂಡವರು, ಕಾನನದೊಳ್–ಕಾಡಿನಲ್ಲಿ, ಕಾರಣಕ್ಕೆಂದು–ಒಂದು ಕಾರಣ ಕ್ಕಾಗಿ, ಒಸೆದು–ಒಲಿದು, ಇರ್ದರ್–ಇದ್ದರು, ಅವರ್–ಅವರು, ಇರದೆ–ಕಾಡಿನಲ್ಲಿರದೆ, ನನ್ನಿಯಂ–ಸತ್ಯವನ್ನು, ತಪ್ಪೆಯುಂ–ತಪ್ಪಲೂ, ಸಪ್ತಸಮುದ್ರಂ–ಏಳು ಕಡಲುಗಳು, ಮೇರೆಯಂ–ಎಲ್ಲೆಯನ್ನು, ತಪ್ಪೆಯುಂ–ತಪ್ಪಲೂ, ರಾಜರಾಜಾ–ದುರ್ಯೋಧನನೇ, ಬಿಗುರ್ತು–ಬೆದರಿಸಿ, ಆಂಪವರ್–ಎದುರಿಸುವವರು, ಒಳರೇ–ಇರುವರೇ?
೮೭. ದ್ರೋಣನ ಮಾತು: ಕೃತಶಾಸ್ತ್ರರ್–ಕಲಿತಶಾಸ್ತ್ರವನ್ನುಳ್ಳವರು, ಧೃತಶಸ್ತ್ರರ್– ಆಯುದ್ಗಳನ್ನು ಧರಿಸಿದವರು, ಅಪ್ರತಿಹತಪ್ರಾಗಲ್ಭ್ಯರ್–ಪ್ರತಿಭಟನೆಯಿಲ್ಲದ ಪ್ರೌಢಿಮೆಯುಳ್ಳವರು ಆದ, ಪೃಥಾಸುತರ್–ಪಾಂಡವರು, ಉದ್ಯೋಗಮನೆತ್ತಿಕೊಳ್ವ–ಕಾರ್ಯಾ ರಂಭವನ್ನು ಮಾಡುವ, ದೆವಸಂ–ದಿವಸವು, ಸಾರ್ಚಿತ್ತು–ಹತ್ತಿರಕ್ಕೆ ಬಂತು; ಕಾಲಾವಧಿ ಸ್ಥಿತಿಯುಂ–ಕಾಲದ ಅವಧಿ ಎಂದರೆ ಹನ್ನೆರಡು ವರ್ಷಗಳ ಗಡುವಿನ ನಿಲವು ಕೂಡ, ಬಂದುದು–ಉಂಟಾಯಿತು, ಇದರ್ಕೆ–ಇದಕ್ಕೆ, ಮಾಣ್ದಿರದೆ–ನಿಂದು ಇರದೆ, ಮಂತ್ರಾವಾಸ ದೊಳ್–ಮಂತ್ರಾಲೋಚನೆಯ ಮನೆಯಲ್ಲಿ, ಈಗಡೆ–ಈಗಲೇ, ಮಂತ್ರನಿಶ್ಚಿತನಾಗು–ನಿಶ್ಚಿತ ವಾದ ಆಲೋಚನೆಯುಳ್ಳವನಾಗು; ಕಾದಿದಲ್ಲದೆ–ಯುದ್ಧ ಮಾಡಿಯಲ್ಲದೆ, ಇಳೆಯಂ– ಭೂಮಿಯನ್ನು, ನೀನೆಂತುಂ–ನೀನು ಹೇಗೂ, ಏನ್ ಇತ್ತಪಯ್–ಏನು ಕೊಡುತ್ತೀಯಾ?
೮೮. ಕರ್ಣನ ಮಾತು: ಸಾಮಮಂ–ಸಾಮೋಪಾಯವನ್ನು, ಬಗೆಯದೆ–ಆಲೋಚಿಸದೆ, ಭೇದಮಂ–ಭೇದೋಪಾಯವನ್ನು, ಬಿಸುಟು–ಬಿಟ್ಟು, ಉದಗ್ರದಾನಮಂ–ಶ್ರೇಷ್ಠವಾದ ದಾನೋಪಾಯವನ್ನು, ಒಲ್ಲದೆ–ಒಪ್ಪದೆ, ದಂಡಮಂ–ದಂಡೋಪಾಯವನ್ನು, ನೆಗೞದೆ–ಮಾಡದೆ, ನಿನಗೆ ಮಾಡಿದ–ನಿನಗೆ ದ್ರೋಹ ಮಾಡಿದ, ಅಕೃತ್ಯರಂ–ಅಕೃತಜ್ಞರನ್ನು, ಅಂತು– ಹಾಗೆ, ಮಾಣ್ಬುದು–ಬಿಡುವುದು, ಏ ಬಗೆ–ಏನು ಆಲೋಚನೆ? ಪಗೆ–ದ್ವೇಷವು, ನೀಗೆಯುಂ– ತೊಲಗಲೂ, ಮುಳಿಸು ಪೋಗೆಯುಂ–ಕೋಪವೂ ಪರಿಹಾರವಾಗಲೂ, ಆಯತಿ–ಪರಾ ಕ್ರಮವು, ಪೆರ್ಚೆಯುಂ–ಹೆಚ್ಚಲೂ, ಜಗಂ–ಲೋಕ, ಪೊಗೞೆಯುಂ–ಹೊಗಳಲೂ, ಆಂತರಾತಿ ನೃಪರಂ–ಎದುರಾದ ಶತ್ರುರಾಜರನ್ನು, ಅಹೀಂದ್ರಕೇತನಾ–ದುರ್ಯೋಧನನೇ, ತವೆ– ನಾಶವಾಗುವ ಹಾಗೆ, ಕೊಲ್ವುದು–ಕೊಲ್ಲುವುದು.
ವಚನ : ಮನದೊಳಾದ ಕಜ್ಜಮಂ–ಮನಸ್ಸಿನಲ್ಲಿ ಆಲೋಚಿಸಿದ ಕಾರ್ಯವನ್ನು
೮೯. ಇರ್ದೆಡೆಯಂ–ಪಾಂಡವರಿದ್ದ ಸ್ಥಳವನ್ನು, ಅಱಿಯಲೆವೇೞ್ದುದು–ತಿಳಿಯಲೇ ಬೇಕು, ಅವರಂ–ಅವರನ್ನು, ಇರ್ದೆಡೆಯಿಂ ತೆಗೆದು–ಇದ್ದ ಸ್ಥಳದಿಂದ ತೆಗೆದು, ಆಜಿರಂಗದೊಳ್–ಯುದ್ಧರಂಗದಲ್ಲಿ, ನಿಱಿಸಲೆವೇೞ್ಪುದು–ಸ್ಥಾಪಿಸಲೆಬೇಕು, ಅವರ್– ಅವರು, ಇರ್ಪೆಡೆಯುಂ–ಇರುವ ಸ್ಥಳವೂ, ವಿರಾಟನಿರ್ಪ–ವಿರಾಟರಾಜನಿರುವ, ಅಱಿಕೆಯ ಪಟ್ಟಣಂ–ಪ್ರಸಿದ್ಧವಾದ ಪಟ್ಟಣ; ನಮಗೆ, ಇದೇ ವಿರಿದಪ್ಪುದು–ಏನು ದೊಡ್ಡದಾಗುತ್ತದೆ; ನಾಂ–ನಾವು, ತಳ್ವದೆ–ತಡಮಾಡದೆ, ಎಯ್ದಿ–ಹೋಗಿ, ತುಱುವನೆ–ಗೋವುಗಳನ್ನೇ, ಕೊಳ್ವಂ– ಹಿಡಿಯೋಣ; ಅಂತು–ಹಾಗೆ, ತುಱುಗೊಂಡೊಡೆ–ಗೋವುಗಳನ್ನು ಆಕ್ರಮಿಸಿಕೊಂಡರೆ, ಪಾಂಡವರ್–ಪಾಂಡವರು, ಇರ್ಪ–ಸುಮ್ಮನಿರುವ, ಗಂಡರೇ–ಶೂರರೇ?
ವಚನ : ಪಿರಿದುಂ ಆಗ್ರಹಂ ಬೆರಸು–ಹಿರಿದಾದ ಹಠದೊಡನೆ ಕೂಡಿ; ದಾಯಿಗಂ– ದಾಯಾದಿ; ವೇೞ್ದು–ಪೇೞ್ದು, ನಿಯಮಿಸಿ; ತುಱುವಂ ಕೊಳಿಸಿದಾಗಳ್–ಗೋವುಗಳನ್ನು ಹಿಡಿಸಿದಾಗ.
೯೦. ವಿರಾಟಂ–ವಿರಾಟರಾಜನು, ಆತ್ಮತನೂಜನಂ–ತನ್ನ ಮಗನಾದ, ಉತ್ತರನಂ– ಉತ್ತರನನ್ನು, ಕರೆದು, ಆ ಪೊೞಲ್ಗೆ–ಆ ನಗರಕ್ಕೆ, ಕಾಪಿರಿಸಿ–ರಕ್ಷಣೆಯಾಗಿಟ್ಟು, ಧರಾತಳಂ– ಭೂತಲವೇ, ತಳರ್ವವೊಲ್–ನಡೆಯುವಂತೆ, ನಡೆದಾಗಳೆ–ದಂಡೆತ್ತಿ ನಡೆದಾಗಲೇ, ಪಾಂಡು ಪುತ್ರರಯ್ವರುಂ–ಐದು ಜನ ಪಾಂಡವರೂ, ಇದು–ಈ ಗೋಗ್ರಹಣ, ನಮ್ಮನಾರಯಲೆ– ನಮ್ಮನ್ನು ಕಂಡುಹಿಡಿಯಬೇಕೆಂದೇ, ವೈರಿಯ ಮಾಡಿದ–ಹಗೆ ದುರ್ಯೋಧನನು ಮಾಡಿದ, ಗೊಡ್ಡಂ–ಚೇಷ್ಟೆ, ಇಲ್ಲಿ, ಮಾಣ್ದಿರಲ್–ತಡೆದಿರಲು, ಅಣಂ–ಸ್ವಲ್ಪವೂ, ಆಗ–ಆಗದು; ಪೂಣ್ದವಧಿಯುಂ–ಪ್ರತಿಜ್ಞೆ ಮಾಡಿದ ಗಡುವು ಕೂಡ, ನೆಱೆದತ್ತು–ತುಂಬಿತು, ಕಡಂಗಿ–ಉತ್ಸಾಹ ಪಟ್ಟು, ಕಾದುವಂ–ಯುದ್ಧ ಮಾಡೋಣ.
ವಚನ : ಪೆಱಗಣ ಕಾಪಿಂಗೆ–ಹಿಂದಿನ ರಕ್ಷಣೆಗೆ; ಸೈನ್ಯವೆಲ್ಲ ಹೋದ ಮೇಲೆ ರಾಜಧಾನಿಯ ರಕ್ಷಣೆಗೆ ಹಿಂದುಳಿದ ಸೈನ್ಯ.
೯೧. ಕಡಲ–ಕಡಲಿನ, ಪೊದಳ್ದ–ವ್ಯಾಪಿಸಿದ, ಪೆರ್ದೆರೆಗಳ್–ದೊಡ್ಡ ಅಲೆಗಳು, ಎಯ್ದೆ– ಚೆನ್ನಾಗಿ, ಕುಲಾದ್ರಿಗಳೊಳ್–ಕುಲಪರ್ವತಗಳಲ್ಲಿ, ಪಳಂಚಿ–ತಾಗಿ, ತೂಳ್ದು–ಹಿನ್ನುಗ್ಗಿ, ಮರಲ್ದವೊಲ್–ಮರಳಿದಂತೆ, ಪಾಯಿಸಿದ–ಮುಂದೆ ನುಗ್ಗಿದ, ಉಗ್ರ ರಥಂಗಳ್–ಭಯಂಕರ ವಾದ ರಥಗಳು, ಕೆಡೆಯೆ–ಬೀಳಲು, ಅೞ್ಗಿ–ಹಾಳಾಗಿ, ತಳ್ತಡಿಗಿಡೆ–ಸೇರಿಕೊಂಡಿರುವ ತಳ ಭಾಗವು ನಾಶವಾಗಲು, ಪಾಯ್ದರಾತಿನೃಪರಂ–ನುಗ್ಗಿದ ಶತ್ರುರಾಜರನ್ನು, ತಱಿದು–ಕತ್ತರಿಸಿ, ಇರದೆ–ಬಿಡದೆ, ಆ ಸುಶರ್ಮನಂ–ಆ ಸುಶರ್ಮನನ್ನು, ಆಂತು–ಎದುರಿಸಿ, ಪಿಡಿದು–ಹಿಡಿದು ಕೊಂಡು, ನೆಗೞ್ತೆಯಂ–ಕೀರ್ತಿಯನ್ನು, ಪಡೆದು–ಹೊಂದಿ, ಸಾಹಸದಿಂ–ಪ್ರತಾಪದಿಂದ, ತುಱುವಂ–ಗೋವುಗಳನ್ನು, ಮಗುೞ್ಚಿದರ್–ಹಿಂದಿರುಗಿಸಿದರು.
ವಚನ : ಸಮಸ್ತ ಸಾಧನಂ ಬೆರಸು–ಸಕಲ ಸೈನ್ಯ ಸಮೇತನಾಗಿ;
೯೨. ಉತ್ತರ ಗೋಗ್ರಹಂ–ಉತ್ತರದಿಕ್ಕಿನ ಗೋವುಗಳನ್ನು ಹಿಡಿಯುವುದು, ಪಿರಿದು ಮಾಗ್ರಹಮಂ–ಹಿರಿದಾದ ಕೋಪವನ್ನು, ಮನದೊಳ್–ಮನಸ್ಸಿನಲ್ಲಿ, ತಗುಳ್ಚೆ–ಅಂಟುವ ಹಾಗೆ ಮಾಡಲು, ದಿಗ್ಭಿತ್ತಿವಿಭೇದಿ–ದಿಕ್ಕಿನ ಗೋಡೆಗಳನ್ನು ಭೇದಿಸುವ, ಕದನಾನಕರಾವಂ– ರಣಭೇರಿಗಳ ಶಬ್ದ, ಪೆರ್ಚೆ–ಹೆಚ್ಚಲು, ಚಾರುವೀರ ಭಟಕೋಟಿಗೆ–ಸುಂದರರಾದ ಶೂರಸೈನಿ ಕರನೇಕರಿಗೆ, ಅಗುರ್ವಿನ–ಭಯದ, ಉರ್ವು–ಅತಿಶಯವು, ಪರ್ವುತ್ತಿರೆ–ಹಬ್ಬುತ್ತಿರಲು, ರಾಗರಸಂ–ಸಂತೋಷದ ರಸ, ಪೊದಳ್ದು–ವ್ಯಾಪಿಸಿ, ತುಳ್ಕುತ್ತಿರೆ–ಹೊರಸೂಸುತ್ತಿರಲು, ಬಂದು, ವಿಭು–ಪ್ರಭು ದುರ್ಯೋಧನ, ವಿರಾಟನಾ–ವಿರಾಟರಾಜನ, ಗೋಕುಲಮಂ–ತುರು ಗಳ ಹಿಂಡನ್ನು, ಮುತ್ತಿ–ಆಕ್ರಮಿಸಿ, ಮೊಗೆದಂ–ತುಂಬಿಕೊಂಡನು ಎಂದರೆ ಸೆರೆಹಿಡಿದನು.
೯೩. ಪಸರಿಸಿ–ಹರಡಿ, ಪೊಕ್ಕು–ಹೊಕ್ಕು, ಕೂಕಿಱಿದು–ಮೇಲಕ್ಕೆ ಹಾರಿ, ಕಾದುವ– ಹೋರಾಡುವ, ಬಲ್ಲಣಿಗಳ್–ಶಕ್ತಿಯುಕ್ತವಾದ ಕಾಲಾಳುಗಳ ಸಾಲುಗಳು, ಪಳಂಚೆ– ತಾಗಲು, ಪಾಯಿಸುವ–ಮುನ್ನುಗ್ಗಿಸುವ, ದೞಕ್ಕೆ–ಸೈನ್ಯಕ್ಕೆ, ಅಗುರ್ವೆಸೆಯೆ–ಭಯವುಂಟಾ ಗಲು, ನೂಂಕಿದ–ಮುಂದೆ ತಳ್ಳಿದ, ಬಲ್ಲಣಿಗೆ–ಬಲವಾದ ಕಾಲಾಳಿನ ಸಾಲಿಗೆ, ಎತ್ತಂ– ಎಲ್ಲೆಲ್ಲಿಯೂ, ಎಯ್ದೆ–ಹೋಗುವಂತೆ, ಚೋದಿಸುವ–ಮುಂದೆ ಹಾಯಿಸುವ, ರಥಕ್ಕೆ– ರಥಗಳಿಗೆ, ಪೆಳ್ಪಳಿಸದೆ–ಹೆದರದೆ, ಒರ್ವರಿನೊರ್ವರೆ–ಒಬ್ಬರಿಗಿಂತ ಒಬ್ಬರೇ, ಮಿಕ್ಕು–ಮೀರಿ, ಪಾರ್ದು–ನೋಡಿ, ಸಾರ್ದು–ಸಮೀಪಿಸಿ, ತುಱುಗಾಱರ್–ದನಗಾಹಿಗಳು, ಇಸೆ–ಬಾಣ ಗಳನ್ನು, ಪ್ರಯೋಗಿಸಲು, ಅಂದಿನಿಸು–ಅಂದು ಸ್ವಲ್ಪ, ಅದೊಂದು ಕಾಳಗಂ–ಅದೊಂದು ಯುದ್ಧ, ಬಲ್ವಲನಾದುದು–ಬಲು ಅತಿಶಯವಾಯಿತು. ಕೂಕಿಱಿ ಕೊಂಕು– ಉತ್ಸರ್ಪಣೇ+ಇಱಿ; ಬಲ್ಲಣಿ ಬಲ್ಲಿತ್ತು+ಅಣಿ–ಕಾಲಾಳು, ಸಾಲು ಬಲ್ವಲಂ–ಆಧಿಕ್ಯ, ಅತಿಶಯ; ಗೆಲಲೆನಗೆ ರಿಪುಬಲಂ ಬಲ್ವಲಮಾದೊಡೆ ಸಿಂಹನಾದಮಂ ಮಾೞ್ಪೆಂ (ಪಂಪರಾ. ೯–೯೭); ಭವದೀಯ ಪ್ರಸಾದದಿನೆನಗೆ ಬಲ್ವಲಮಪ್ಪ ಬವರಮಿಲ್ಲ (ಅದೇ ೯–೧೧೪ ಗ) ಪೆಳ್ಪಳಿಸೆ=ಬೆಳ್ಪಳಿಸೆ=ಬೆಬ್ಬಳಿಸೆ–ಭಯ; ಅಂಬಿಕೆ ಬೆರ್ಚಿ ಬೆಳ್ಪಳಿಸೆ (ಶಮದ. ೨೧–೧)
೯೪. ಮಚ್ಚರದಿಂ–ಮಾತ್ಸರ್ಯದಿಂದ, ಒರ್ವರೊರ್ವರಂ–ಒಬ್ಬರೊಬ್ಬರನ್ನು, ಉಚ್ಚಳಿಸಿ–ಹಾರಿಸಿ, ತಗುಳ್ದು–ಅಟ್ಟಿ, ಗೋವರ್–ಗೋಪಾಲರು, ಆರ್ದು–ಗರ್ಜನೆ ಮಾಡಿ, ಇಸೆ–ಬಾಣ ಪ್ರಯೋಗ ಮಾಡಲು, ನಚ್ಚಿನ–ನಂಬಿಕೆಯ, ಕಾಂಭೋಜವಾಜಿಗಳ್– ಕಾಂಭೋಜ ದೇಶದ ಕುದುರೆಗಳು, ಕೆಲವು, ಆಗಳ್–ಆಗ, ಕೀೞಂ–ಬಾಯ ಕಬ್ಬಿಣದ ತುಂಡನ್ನು; ಕರ್ಚಿ–ಕಚ್ಚಿ, ಪುಡಿಯೊಳ್–ಧೂಳಿನಲ್ಲಿ, ಪೊರಳ್ದುವು–ಹೊರಳಿದುವು.
ವಚನ : ಒಡಂಬಟ್ಟಂತೆ–ಒಪ್ಪಿದ ಹಾಗೆ; ಎಡಗಲಿಸಿ–ಮೀರಿ; ಅೞಿಗಾಳೆಗದೊಳ್– ಅಲ್ಪಯುದ್ಧದಲ್ಲಿ, ಹೀನಯುದ್ಧದಲ್ಲಿ.
೯೫. ತುಱು ಪರಿವಾಗಳ್–ಹಸುಗಳು ಓಡುವಾಗ, ಎಮ್ಮಪೆಣನಂ–ನಮ್ಮ ಹೆಣವನ್ನು, ತುೞಿದುಂ ಪರಿಗುಂ–ತುಳಿದೂ ಓಡುತ್ತವೆ, ದಲ್–ದಿಟವಾಗಿಯೂ, ಎಂದು; ಚಿಃ–ಚೀ, ತುಱುಗೊಳೆ–ದನಗಳನ್ನು ಹಿಡಿಯಲು, ಬಾೞೆಮೆಂದು–ನಾವು ಬದುಕುವುದಿಲ್ಲವೆಂದು, ತುಱುಗೋಳೊಳೆ–ಗೋಗ್ರಹಣದಲ್ಲೇ, ಸಾವುದು–ಸಾಯುವುದು, ಸೈಪಿದೆಂದು–ಪುಣ್ಯವಿ ದೆಂದು, ಪಾಯ್ದು–ಹಾಯ್ದು, ಅಱಿಕೆಯ ಗೋವರ್–ಪ್ರಸಿದ್ಧರಾದ ಗೋಪಾಲರು, ಅಣ್ಮಿ– ಪೌರುಷವನ್ನು ತೋರಿಸಿ, ಬರೆ–ಬರಲು, ಘೋೞಯಿಲರ್–ರಾವುತರು, ಪಾಯಿಸಿ– ಕುದುರೆಗಳನ್ನು ನುಗ್ಗಿಸಿ, ತಗಳ್ದು–ಬೆನ್ನಟ್ಟಿ, ತತ್ತಱದಱಿದಿಕ್ಕಿ–ಚೂರಾಗಿ ಕತ್ತರಿಸಿ ಹಾಕಿ, ದೇಗುಲಕೆ–ದೇವಾಲಯಕ್ಕೆ, ಪೆರ್ಮರನಂ–ಹೆಮ್ಮರವನ್ನು, ಕಡಿವಂತೆ–ಕತ್ತರಿಸುವ ಹಾಗೆ, ಮಾಡಿದರ್–ಮಾಡಿದರು, ಹಿಂದಿನ ಕಾಲದಲ್ಲಿ ದೇವಾಲಯಗಳನ್ನು ಮರದಿಂದ ಕಟ್ಟು ತ್ತಿದ್ದರು; ಇದಕ್ಕೆ ದಾರುಕರ್ಮವೆಂದು ಹೆಸರು; ಇದಕ್ಕಾಗಿ ಹೆಮ್ಮರವನ್ನು ಕಡಿದು ಅದನ್ನು ಅಳತೆಗೆ ತಕ್ಕಂತೆ ತುಂಡುತುಂಡಾಗಿ ಮಾಡಬೇಕಾಗಿತ್ತು. ಹಾಗೆ ಗೋವಳರನ್ನು ಕತ್ತರಿಸಿದರು ಎಂದು ಭಾವ.
ವಚನ : ಮನದೊಳಾದೇವಂ–ಮನಸ್ಸಿನಲ್ಲುಂಟಾದ ದ್ವೇಷ, ಕೋಪ; ಪೋಗಿಂಗೆ– ಹೋದುದಕ್ಕೆ;
೯೬. ಪೆಱಗಣ ಕಾಪಂ–ಹಿಂದಿನ ರಕ್ಷಣೆಯನ್ನು ಎಂದರೆ ರಾಜಧಾನಿಯ ರಕ್ಷಣಾ ಭಾರ ವನ್ನು, ಎನ್ನನೆ–ನನ್ನನ್ನೇ, ಪೂಣಿಸಿ–ಮೇಲೇರಿಸಿ, ವಹಿಸಿ, ಮಹೀಪತಿ–ರಾಜ, ಪೋದಂ– ಹೋದನು; ಗಡಂ–ಅಲ್ಲವೇ? ತುಱುಗೊಳೆ–ಗೋಗ್ರಹಣವನ್ನು ಮಾಡಲು, ಮಾಣೆಂ– ನಿಲ್ಲೆನು; ಎನ್ನಿದಿರ್ಗೆ–ನನ್ನ ಎದುರಿಗೆ, ರಾವಣಕೋಟಿಯುಂ–ಕೋಟ್ಯಂತರ ರಾವಣರು, ಆಂತುಮೇಂ–ಪ್ರತಿಭಟಿಸಿದರೇನು, ಗೆಲಲ್ ನೆಱೆಗುಮೆ–ಗೆಲ್ಲಲು ಸಮರ್ಥರಾಗುವರೆ? ಇಂ ಎನಗೆ ಸಾರಥಿಯಪ್ಪನಂ–ಇನ್ನು ನನಗೆ ಸಾರಥಿಯಾಗುವವನನ್ನು, ಈಗಳೆ–ಈಗಲೇ, ತನ್ನಿಂ– ತನ್ನಿರಿ, ಎಂದು, ವಿರಾಟನಂದನಂ–ಉತ್ತರಕುಮಾರನು, ಪೊಚ್ಚಱಿಸೆ–ಸ್ಫುರಣೆಯನ್ನು ತೋರಿ ಸಲು ಎಂದರೆ ವಿಜೃಂಭಿಸಲು, ಅದೆಲ್ಲಮಂ–ಅದೆಲ್ಲವನ್ನೂ, ಆಗಡೆ–ಆಗಲೇ; ವಿಕ್ರಮಾರ್ ಜುನಂ–ಅರ್ಜುನನು; ಕೇಳ್ದು–ಕೇಳಿ, (ತ) ಪೂಣ್–ಮೇಲ್ಕೊಳ್ಳುದಲ್;
ವಚನ : ಆಪೊೞ್ತೆ ಪೊೞ್ತಾಗೆ–ಆ ಹೊತ್ತೆ ಹೊತ್ತಾಗಲು; ಬೞಿಯನಟ್ಟಿ–ದೂತನನ್ನು ಕಳುಹಿಸಿ.
೯೭. ಮತ್ಸ್ಯಸುತನುತ್ತರನಂ–ಮತ್ಸ್ಯರಾಜನ ಮಗನಾದ ಉತ್ತರನಿಗೆ, ಸಾರಥಿ ಮಾಡು– ನನ್ನನ್ನು ಸಾರಥಿಯನ್ನಾಗಿ ಮಾಡು; ತದರಾತಿ ಸೈನ್ಯ ಕೂಪಾರದ–ಆ ಶತ್ರುಸೈನ್ಯವೆಂಬ ಸಮುದ್ರದ, ಪಾರಮಂ–ಆಚೆಯ ತೀರವನ್ನು, ತಡೆಯದೆ–ವಿಳಂಬವಾಗದೆ, ಎಯ್ದುವೆಂ– ಸೇರುತ್ತೇನೆ, ಎಂಬುದುಂ–ಎಂದು ಹೇಳುತ್ತಲು, ಪಂಕೇರುಹವಕ್ತ್ರೇ–ದ್ರೌಪದಿ, ಅಂತೆ, ಬಂದು, ಮತ್ಸ್ಯಸುತನಂ–ಉತ್ತರನಿಗೆ, ನುಡಿದಳ್–ಹೇಳಿದಳು; ನಿನಗೆ, ಆಜಿರಂಗದೊಳ್– ಯುದ್ಧರಂಗದಲ್ಲಿ, ಸಾರಥಿಯಪ್ಪೊಡೆ–ಸಾರಥಿಯಾಗುವುದಾದರೆ, ಶಿಖಂಡಿಯೆ– ಬೃಹಂದಳೆಯೆ, ಅಪ್ಪುದು–ಆಗುತ್ತದೆ; ನಿನ್ನೊರಗೆ–ನಿನ್ನ ಸಮಾನಕ್ಕೆ, ಉಂತೆ–ಸುಮ್ಮನೆ, ಗಂಡ ರಾರ್–ಶೂರರು ಯಾರು? ಉತ್ತರನಂ, ಮತ್ಸ್ಯಸುತನಂ–ಎಂಬೆಡೆಗಳಲ್ಲಿರುವ ದ್ವಿತೀಯಾ ವಿಭಕ್ತಿ ಚತುರ್ಥಿಯ ಅರ್ಥದಲ್ಲಿ ಬಂದಿದೆ.
ವಚನ : ಉತ್ತರೆಯೆನೆ–ಉತ್ತರೆಯನ್ನೇ, ಬೞಿಯನಟ್ಟಿ–ದೂತಿಯನ್ನಾಗಿ ಕಳುಹಿಸಿ.
೯೮. ಸಾರಥಿಯಪ್ಪೊಡೆ–ಸಾರಥಿಯಾಗುವುದಾದರೆ, ಎನಗೀತನೆ–ನನಗೆ ಇವನೇ, ಅಪ್ಪಂ–ಆಗುತ್ತಾನೆ; ಪೋ–ಹೋಗು, ಪೆಱರ್–ಇತರರು, ಏವರ್–ಯಾರು? ಇನ್ ನೆರಂ ಬಾರೆಂ–ಇನ್ನು ಸಹಾಯವನ್ನು ನಿರೀಕ್ಷಿಸೆನು, ಎನುತ್ತೆ–ಎಂದು ಹೇಳುತ್ತ, ತನ್ನ ರಥಮಂ ತರವೇೞ್ದು–ತನ್ನ ರಥವನ್ನು ತರುವಂತೆ ಹೇಳಿ, ಎಯ್ದೆ–ಹೋರಾಡಲು, ಘೋರ ಕಾಂತಾರ ಮಂ–ಭಯಂಕರವಾದ ಅಡವಿಯನ್ನು, ಒಂದು ಬೇಗೆ–ಒಂದು ಕಿಚ್ಚು, ಪರಿವಂತು– ಆವರಿಸುವ ಹಾಗೆ, ಅಂಕದ ಪ್ರಸಿದ್ಧನಾದ, ಬೃಹಂದಳೆ–ಬೃಹಂದಳೆಯು, ಚೋದಿಸೆ–ಪ್ರೇರಿ ಸಲು, ಚೋದ್ಯಮಪ್ಪಿನಂ–ಆಶ್ಚರ್ಯವುಂಟಾಗುತ್ತಿರಲು, ವೈರಿಕಾಂತಾರ ಮನೞ್ವಲ್– ಶತ್ರುಗಳೆಂಬ ಅಡವಿಯನ್ನು ಸುಡಲು, ರಥಂ–ರಥವು, ಪರಿದತ್ತು–ಓಡಿತು, ದೌಡಾಯಿ ಸಿತು.
ವಚನ : ಕಿಱಿದಂತರಂ–ಸ್ವಲ್ಪ ದೂರ, ಪೋಗೆ ವೋಗೆ–ಹೋಗುತ್ತಲು.
೯೯. ಕರಿಘಟೆ–ಆನೆಯ ಸೈನ್ಯ, ನೀಳಮೇಘ ಘಟೆಯಂತೆ–ಕರ್ಮೋಡಗಳ ಸಮೂಹ ದಂತೆ; ತುರಂಗದೞಂ–ಕುದುರೆಯ ಸೈನ್ಯ, ಸಮುದ್ರದೊಳ್–ಕಡಲಿನಲ್ಲಿ, ತರತರದಿಂದೆ–ಸಾಲು ಸಾಲಾಗಿ, ಏೞ್ವ–ಏಳುವ, ತೆರೆಯಂತೆ–ಅಲೆಗಳ ಹಾಗೆ; ರಥಂ–ರಥಗಳು, ಮಹಾ ಮಕರಂ ಗಳಂತೆ–ಮಹಾ ಮೀನುಗಳಂತೆ; ಅಗುರ್ವುರಿ–ಭಯಂಕರವಾದ ಉರಿಯಂತೆ, ವರಿಯು ತ್ತುಮಿರ್ಪ–ಹರಿದುಬರುತ್ತಿರುವ, ಅಣಿ–ಕಾಲಾಳುಸೈನ್ಯ, ಬೃಹದ್ಬಡಬಾನಳದಂತೆ–ದೊಡ್ಡ ಬಡಬಾಗ್ನಿಯ ಹಾಗೆ; ತೋಱೆ–ಕಾಣಲು, ಸುಯೋಧನ ಸೈನ್ಯಸಾಗರಂ–ದುರ್ಯೋಧನನ ಸೇನಾ ಸಮುದ್ರವು, ಉತ್ತರನ ಕಣ್ಗೆ–ಉತ್ತರನ ಕಣ್ಣುಗಳಿಗೆ, ಭೀಕರತರಮಾದುದು–ಅತಿ ಭಯಂಕರವಾಯಿತು.
ವಚನ : ಒತ್ತರಮೊತ್ತಿದಂತೆ–ಒಟ್ಟಿಗೆ, ಒಂದೇ ಸಲ ಆಕ್ರಮಿಸಿದಂತೆ, ಒತ್ತರ ಮೊತ್ತಿ ದಂತೆ ಬೆಱಗಾಗೆ ಕೃಪಾದಿಗಳ್ (ಶಮದ. ೧೮–೫) ಎಂದು ಇನ್ನೊಂದು ಪ್ರಯೋಗ; (ತ) ಒರುತರಂ–ಒಂದೇ ತಡವೆ; ಬೆಗಡುಗೊಂಡು–ಭಯವನ್ನು ಹೊಂದಿ.
೧೦೦. ನೋಡಲ್–ನೋಡುವುದಕ್ಕೆ, ಅಳುಂಬಮೆಂದೊಡೆ–ಅಸಾಧ್ಯವೆಂದರೆ, ಇದಂ– ಈ ಸೈನ್ಯವನ್ನು, ಆಂತು–ಎದುರಿಸಿ, ಇಱಿದಂ–ಘಾತಿಸಿ, ತವಿಪನ್ನರ್–ನಾಶ ಮಾಡುವವರು, ಆರ್–ಯಾರು? ಎಂದು, ವಿರಾಟಸೂನು–ಉತ್ತರನು, ನಾಣೋಡೆ–ನಾಚಿಕೆ ಹೊರಟು ಹೋಗಲು, ರಥದಿಂದಿೞಿದು–ರಥದಿಂದ ಇಳಿದು, ಓಡಿದೊಡೆ–ಓಡಿದರೆ, ಎಯ್ದೆ–ಚೆನ್ನಾಗಿ, ಪೂಣ್ದು–ಪ್ರತಿಜ್ಞೆ ಮಾಡಿ, ಬೆರ್ಚಿ–ಹೆದರಿ, ಓಡೆ–ಓಡಲು, ಕಿರೀಟಿ–ಅರ್ಜುನ, ತನ್ನಂ– ತನ್ನನ್ನು, ಅಱಿಪುತ್ತ–ತಿಳಿಸುತ್ತ, ಶಮೀದ್ರುಮದಲ್ಲಿಗೆ–ಬನ್ನಿಯ ಮರವಿದ್ದಲ್ಲಿಗೆ, ಆತನಂ– ಅವನನ್ನು, ನೀಡಿರದೆ–ತಡಮಾಡದೆ, ಉಯ್ದು–ಕರೆದುಕೊಂಡು ಹೋಗಿ, ಆತನಿಂ–ಅವನಿಂದ, ಅಲ್ಲಿಯ–ಅಲ್ಲಿನ, ಕೈದುವೆಲ್ಲಮಂ–ಆಯುಧಗಳೆಲ್ಲವನ್ನೂ, ನೀಡಿಸಿದಂ–ನೀಡುವಂತೆ ಮಾಡಿದನು, ಉತ್ತರನ ಓಟದಂತೆ ಇಲ್ಲಿಯ ಪದ್ಯಗಳ ಓಟ.
ವಚನ : ಶರಾಸನ–ಬಿಲ್ಲು, ಶರಧಿ–ಬತ್ತಳಿಕೆ, ತನುತ್ರ–ಕವಚ; ಆವಗಂ ಕೊಳ್ವಂತೆ– ಪೂರ್ತಿಯಾಗಿ ತೆಗೆದುಕೊಳ್ಳುವಂತೆ;
೧೦೧. ಪಿಣಿಲಂ–ಹೆರಳನ್ನು, ಬಿಡೆ–ಬಿಚ್ಚಲು, ಕುರುಧ್ವಜಿನಿ–ಕೌರವ ಸೈನ್ಯ, ತೊಟ್ಟನೆ– ಬೇಗನೆ, ಆಶ್ಚರ್ಯದಿಂದ, ಬಾಯನೆ ಬಿಟ್ಟುದು–ಬಾಯನ್ನೇ ತೆರೆಯಿತು, ಅಂದು–ಆಗ, ಗಂಡುಡೆಯುಡೆ–ಪುರುಷನ ಉಡುಪನ್ನು ಧರಿಸಲು, ಗಂಡುಗೆಟ್ಟುದು–ಪೌರುಷವನ್ನು ನೀಗಿಕೊಂಡಿತು; ನೆಗೞ್ತೆಯ–ಪ್ರಸಿದ್ಧವಾದ, ಗಾಂಡಿವಮಂ–ಗಾಂಡೀವವನ್ನು, ತಗುಳ್ದು–ಹಿಡಿದು, ಜೇವೊಡೆಯೆ–ಟಂಕಾರ ಮಾಡಲು, ಸಿಡಿಲ್–ಸಿಡಿಲು, ಸಿಡಿಲ್ದು–ಸಿಡಿಲಿ, ಪೊಡೆವಂತೆ ವೊಲಾಯ್ತು–ಹೊಡೆಯುವ ಹಾಗೆ ಆಯಿತು; ಎನೆ–ಎನ್ನಲು, ರಥಮನೇಱಲೊಡಂ– ರಥವನ್ನು ಹತ್ತಿದ ಕೂಡಲೇ, ಪಡೆಮೆಚ್ಚೆಗಂಡನಾ–ಅರ್ಜುನನ, ಗಂಡಗಾಡಿ–ಪೌರುಷಯುಕ್ತ ವಾದ ಸೌಂದರ್ಯವು, ನೂರ್ಮಡಿ–ನೂರರಷ್ಟು, ಮಿಗಿಲಾದುದು–ಅತಿಶಯವಾಯಿತು.
ವಚನ : ಬರವಿಂಗೆ–ಆಗಮನಕ್ಕೆ, ಅಳ್ಕಿ–ಹೆದರಿ, ಸೊಡರಂತೆ–ದೀಪದ ಹಾಗೆ.
೧೦೨. ನನ್ನಿಗೆ–ಸತ್ಯಕ್ಕಾಗಿ, ಅವಧಿಯ–ಗಡುವಿನ, ಲೆಕ್ಕಮಂ–ಎಣಿಕೆಯನ್ನು, ನೆಱಪಿ– ಪೂರ್ಣಮಾಡಿ, ಮಾಣದೆ–ಬಿಡದೆ, ಕಾದಲೆಂದು–ಯುದ್ಧ ಮಾಡಬೇಕೆಂದು, ಬಂದವ ನಿವನ್–ಬಂದ ಇವನು, ಅರ್ಜುನಂ–ಅರ್ಜುನ; ತೊಡರ್ದು–ಸಿಕ್ಕಿ, ನಿಲ್ಲದೆ–ನಿಂತುಕೊಳ್ಳದೆ, ಗೋನಿವಹವಂ–ಗೋಗಳ ಸಮೂಹವನ್ನು, ನೀಂ–ನೀನು, ಒಳಗೊಂಡು–ಕೂಡಿಕೊಂಡು, ಪೋಗು–ಹೋಗು; ಅಂಗರಾಜ–ಕರ್ಣ, ದ್ರುಪ, ಕುಂಭಭವ–ದ್ರೋಣ, ಪ್ರಮುಖ–ಇವರೇ ಮೊದಲಾದ, ಪ್ರವೀರರೆಂಬ–ಅತಿಶಯ ವೀರರೆನ್ನುವ, ಇವರ್ವೆರಸು–ಇವರೊಡನೆ ಕೂಡಿ, ಈ ಎಡೆಯೊಳ್–ಈ ಸ್ಥಳದಲ್ಲಿ, ಕದನತ್ರಿಣೇತ್ರನಂ–ಅರ್ಜುನನನ್ನು, ಆನ್–ನಾನು, ಇನಿಸಂ– ಸ್ವಲ್ಪ, ಆಂಪೆಂ–ಎದುರಿಸುತ್ತೇನೆ.
ವಚನ : ಆಕುಳಂ ಬೆರಸು–ಗಾಬರಿಯಿಂದ ಕೂಡಿ, ಮುಟ್ಟೆವಂದು–ಹತ್ತಿರಕ್ಕೆ ಬಂದು.
೧೦೩. ಪಗೆ ತೀರ್ಗುಂ–ಹಗೆ ತೀರುತ್ತದೆ, ಬಗೆ ತೀರ್ಗುಂ–ಇಷ್ಟವು ನೆರವೇರುತ್ತದೆ, ಆ ಕುರುಕುಳ ಪ್ರಖ್ಯಾತನಂ–ಆ ಕೌರವ ವಂಶದಲ್ಲಿ ಪ್ರಸಿದ್ಧನಾದ ದುರ್ಯೋಧನನನ್ನು, ಕಾದಿ-ಯುದ್ಧ ಮಾಡಿ, ತೊಟ್ಟಗೆ-ಶೀಘ್ರವಾಗಿ, ಗೋವೃಂದಮಂ-ದನಗಳ ಹಿಂಡನ್ನು, ಆಂ-ನಾನು; ಮಗುೞ್ಚಿದಪೆಂ -ಹಿಂದಿರುಗಿಸುತ್ತೇನೆ, ಎಂದು, ಆರ್ದು-ಗರ್ಜಿಸಿ, ಎಚ್ಚು-ಬಾಣ ಪ್ರಯೋಗ ಮಾಡಿ, ತನ್ನ, ಅಂಕದ.ಹೆಸರನ್ನುಳ್ಳ, ಅಂಬುಗಳೊಳ್.ಬಾಣಗಳಲ್ಲಿ, ಒಂದೊಂದ ಱಲ್-ಒಂದೊಂದರಲ್ಲೂ, ಒಂದು, ಲಕ್ಕಬಲಂ-ಲಕ್ಷ ಸೈನ್ಯ, ಅಂದು-ಆ ದಿನ, ಅೞ್ಕಾಡೆ-ನಾಶವಾಗಲು, ದುರ್ಯೋಧನಂ-ದುರ್ಯೋಧನನು, ಮಿಗೆ ಸೋಲ್ತು-ವಿಶೇಷವಾಗಿ ಸೋತು ಹೋಗಿ, ಓಡೆ-ಪರಾರಿಯಾಗಲು, ವಿದ್ವಿಷ್ಟ ವಿದ್ರಾವಣಂ-ಅರ್ಜುನ, ತುಱುವಂ-ಗೋವುಗಳನ್ನು, ಮಗುೞ್ಚಿದಂ-ಹಿಂದಿರುಗಿಸಿದನು.
೧೦೪. ಅದಟರ–ಶೂರರ, ಚೆನ್ನಪೊಂಗರ–ವೀರರ, ಸಬಂಗಳ–ಹೆಣಗಳ, ತೊೞ್ತುೞಿ ಯೊಳ್–ತುಳಿದಾಟದಲ್ಲಿ, ತೊಡಂಕಿ–ಸಿಕ್ಕಿಕೊಂಡು, ನಿಲ್ಲದೆ–ನಿಂತುಕೊಳ್ಳದೆ, ಪೊಱಮಟ್ಟು– ಹೊರಹೊರಟು, ತಮ್ಮ ಮನದೊಳ್–ತಮ್ಮ ಮನಸ್ಸಿನಲ್ಲಿ, ಮಿಗೆ–ಹೆಚ್ಚಾಗಿ, ಬೆಚ್ಚಿಸಿದಂತೆ– ಹೆದರಿದಂತೆ, ತೋಱುವ–ಕಾಣಿಸುವ, ಅಗ್ಗದ–ತುದಿಯನ್ನುಳ್ಳ, ನಿಡುಗೋಡು–ನೀಳವಾದ ಕೊಂಬುಗಳೂ, ಮೇಡುಂ–ಹಿಣಿಲೂ, ಅಮರುತ್ತುಂ–ಸೇರಿಕೊಳ್ಳುತ್ತ, ಇಱುಂಕಿದ–ಅಮುಕಿದ, ಕೆಚ್ಚಲ್–ಕೆಚ್ಚಲು, ಎತ್ತಂ–ಎಲ್ಲೆಲ್ಲಿಯೂ, ಎತ್ತಿದ–ಎತ್ತಿರುವ, ಕುಡಿವಾಲಂ–ಬಾಲದ ಕೊನೆ ಗಳು, ಅಂದು ಎಸೆಯೆ–ಶೋಭಿಸಲು, ಕರ್ಬಸುಗಳ್–ಕಪ್ಪಾದ ಹಸುಗಳು, ಆಜಿಯೊಳ್– ಯುದ್ಧದಲ್ಲಿ, ಪರಿಗೊಂಡುವು–ಓಡಿದುವು, ಓಟಕಿತ್ತವು.
ವಚನ : ಅರೆದು–ತೇದು, ಸದೆದು–ತದಿಕಿ.
೧೦೫. ಪೞುವೞಿಯಂ–ಕಾಡಿನ ಜಾಡನ್ನು, ತಗುಳ್ದು–ಅನುಸರಿಸಿ, ಅಳುರ್ವ– ವ್ಯಾಪಿಸುವ, ಬೇಗೆವೊಲ್–ಕಿಚ್ಚಿನ ಹಾಗೆ, ಎಚ್ಚ ಶರಾಳಿಗಳ್–ಪ್ರಯೋಗಿಸಿದ ಬಾಣಗಳ ಸಾಲುಗಳು, ಛೞಿಲ್ ಛೞಿಲೆನೆ.ಛಳ ಛಳ ಎಂದು, ಪಾಯೆ.ನುಗ್ಕೃಲು, ಪಾಯ್ವ.ಹರಿಯುವ, ಬಿಸುನೆತ್ತರ-ಬಿಸಿರಕ್ತದ, ಸುಟ್ಟುರೆ.ಸುಂಟರಗಾಳಿ, ಚಾತುರಂಗಮಂ.ಚತುರಂಗ ಸೈನ್ಯವನ್ನು, ಕೞಕುೞಮಾಗೆ-ಅಸ್ತವ್ಯಸ್ತವಾಗಲು, ಪೇೞೆಪೆಸರಿಲ್ಲ-ಹೇಳುವುದಕ್ಕೆ ಹೆಸರಿಲ್ಲ, ಎನೆ-ಎನ್ನಲು, ತೇರನೆಯ್ದೆ-ತೇರನ್ನು ಚೆನ್ನಾಗಿ, ಪಾಯಿಸಿ-ಹರಿಯಿಸಿ, ಅಮ್ಮನ ಗಂಧ ವಾರಣಂ-ಅಪ್ಪನ ಸೊಕ್ಕಾನೆ (ಅರ್ಜುನ), ವೈರಿಬಲಮೆಲ್ಲಮಂ.ಶತ್ರುಸೈನ್ಯವನ್ನೆಲ್ಲ, ತೊತ್ತೞದುೞಿದತ್ತು-ತುಳಿದು ತುಳಿದು ತುಳಿಯಿತು, ಬಿಬಿಕೞಕುೞಮೆಂದು ತಾಣ ಬಾಗುಳತೆಪ್ಪ್, “ಕೞಕೞಮಾಗೆ ಪಂಚಳನ ಬಲ್ವಡೆ, ಪಂಚಳನಶ್ವಸಂಕುಳಂ ಕೞಕುೞಮಾಗೆ” ಎಂದು ರನ್ನನ ಪ್ರಯೋಗ (ಅಜಿಪು.).
೧೦೬. ಕುರುಬಲದೊಳ್.ಕೌರವನ ಸೈನ್ಯದಲ್ಲಿ, ಕರಂ ನೆಗೞ್ದ-ವಿಶೇಷವಾಗಿ ಪ್ರಸಿದ್ದರಾದ, ಬೀರರ-ವೀರರ, ಚೆನ್ನರ-ಚೆಲುವಾಗಿರುವವರ, ಸಂದ-ಹೆಸರುವಾಸಿಯಾದ, ಚೆನ್ನಪೊಂಗರ.ಶೂರರ, ತಲೆ-ತಲೆಗಳು, ತಾೞಪಣ್-ತಾಳೆಯ ಹಣ್ಣು, ಕೆದಱಿದಂತೆ- ಚದರಿರುವಂತೆ, ನಿರಂತರಂ-ಎಡೆಬಿಡದೆ, ಆಜಿರಂಗದೊಳ್-ಯುದ್ಧರಂಗದಲ್ಲಿ, ಪರೆದಿರೆ-ಚೆದರಿರಲು, ಲೋಹಿತಾಂಬುಧಿಯೊಳ್-ರಕ್ತದ ಕಡಲಿನಲ್ಲಿ, ಆನೆಗಳ, ಅಟ್ಟೆಗಳ್-ದೇಹಗಳು, ಆಡೆ-ಆಡಲು, ನೋಡಲ್-ನೋಡಲು, ಅಚ್ಚರಿಯುಂ.ಆಶ್ಚರ್ಯವೂ, ಅಗುರ್ವುಂ-ಭಯವೂ, ಅದ್ಭುತಮುಂ. ಅದ್ಭುತತವೂ, ಕದನತ್ರಿಣೇತ್ರನಾ-ಅರ್ಜುನನ, ರಣಂ-ಕಾಳಗ, ಆಯ್ತು-ಆಯಿತು.
ವಚನ : ಅಂಗರಾಜಂ.ಕರ್ಣ, ರಾಜರಾಜನ ನಡಪಿದುದುಮಂ.ದುರ್ಯೋಧನನು ಸಾಕಿ ಸಲಹಿದ್ದನ್ನೂ, ಬಲ್ಲಾಳನಮುಮಂ.ಪರಾಕ್ರಮವನ್ನೂದ್ ಅರ್ಣವನಿನಾದದಿಂದೆ-ಸಮುದ್ರ ಘೋಷದಿಂದ, ಆರುತ್ತಂ-ಗರ್ಜಿಸುತ್ತದ್
೧೦೭. ಗೋಗ್ರಹಣದಲ್ಲಿಯೆ–ಗೋಗ್ರಹಣ ಪ್ರಸಂಗದಲ್ಲಿಯೇ, ಭಾರತಂ–ಭಾರತ ಯುದ್ಧವು, ಸಮೆದುದು–ಮುಗಿದು ಹೋಯಿತು, ಪೋಗು–ಹೋಗು, ಎಂಬ ಮಾತಂ– ಎನ್ನುವ ಮಾತನ್ನು, ಅಂದು, ಅಮರನರೋರಗರ್–ದೇವತೆಗಳು ಮನುಷ್ಯರು ನಾಗರು ಗಳು, ನುಡಿಯೆ–ಹೇಳಲು, ರೌದ್ರಶರಂಗಳಿಂ–ಭೀಕರ ಬಾಣಗಳಿಂದ, ಎಚ್ಚು–ಪ್ರಯೋಗಿಸಿ, ಯುದ್ಧದೊಳ್–ಕಾಳಗದಲ್ಲಿ, ಸಮಸಮನಾಗಿ–ಸರಿಸಮನಾಗಿ, ಕಾದಿದೊಡೆ–ಹೋರಾಡಿ ದರೆ, ಕರ್ಣನ ವಕ್ಷಮನೆಚ್ಚು–ಎದೆಯನ್ನು ಘಾತಿಸಿ, ಗರ್ವಮಂ–ಅಹಂಕಾರವನ್ನು, ಸಮೆ ಯಿಸಿ–ಸವೆದು ಹೋಗುವ ಹಾಗೆ ಮಾಡಿ, ನರಂ–ಅರ್ಜುನ, ಒಂದೆ ವಿಕರ್ಣದಿಂ–ಒಂದೇ ಬಾಣದಿಂದ, ಅಂಕದ–ಹೆಸರುವಾಸಿಯಾದ, ವಿಕರ್ಣನಂ–ಕರ್ಣನ ಮಗ ವಿಕರ್ಣನನ್ನು, ಕೊಂದಂ–ಕೊಂದನು.
೧೦೮. ತಕ್ಕಿನ–ಯೋಗ್ಯತೆಯನ್ನುಳ್ಳ, ಕುಂಭಸಂಭವ–ದ್ರೋಣ, ನದೀಜ–ಭೀಷ್ಮ, ಕೃಪ ಪ್ರಮುಖ ಪ್ರವೀರರ್–ಕೃಪನೇ ಮುಂತಾದ ಶ್ರೇಷ್ಠವೀರರು, ಎಕ್ಕೆಕ್ಕೆಯಿಂ–ಒಟ್ಟೊಟ್ಟಾಗಿ, ಒರ್ವರೊರ್ವರೆ–ಒಬ್ಬೊಬ್ಬರೆ, ಬೆಗುರ್ತು–ಬೆದರಿಸಿ, ಆಂತು–ಎದುರಿಸಿ, ನಿಶಾತ ಬಾಣ ಜಾಲಕ್ಕೆ–(ಅರ್ಜುನನ) ಹರಿತವಾದ ಬಾಣಗಣಕ್ಕೆ, ಸಿಡಿಲ್ದು–ಸಿಡಿದು ಹೋಗಿ, ಜೋಲ್ದು– ಜೋತುಬಿದ್ದು, ಸೆರಗಂಬಗೆದು–ಅಪಾಯವೆಂದು ಭಾವಿಸಿ, ಒಂದು ಪೊೞ್ತುಂ–ಒಂದು ಹಗಲೂ, ಕದನ ತ್ರಿಣೇತ್ರನಾ–ಅರ್ಜುನನ, ಒಂದಿಕ್ಕಂ–ಒಂದು ಹೊಡೆತವನ್ನೂ, ಇದಿರ್ಚ ಲಾಱದೆ–ಎದುರಿಸಲಸಮರ್ಥರಾಗಿ, ಮನಂಗಲಿಗಳ್–ಮನಸ್ಸಿನಲ್ಲಿಯೇ ಶೂರರಾದವರು, ಓಡಿದರ್–ಓಡಿ ಹೋದರು.
೧೦೯. ಮನದೊಳ್–ಮನಸ್ಸಿನಲ್ಲಿ, ಕರುಣಿಸಿ–ಕರುಣೆಪಟ್ಟು, ಬೀರರಂ–ವೀರರನ್ನು, ಸಂಮೋಹನಾಸ್ತ್ರದಿಂದೆ–ಸಂಮೋಹನವೆಂಬ ಬಾಣದಿಂದ, ಎಚ್ಚು–ಹೊಡೆದು, ಬೀರದ– ಶೌರ್ಯದ, ಶಾಸನಮನೆ–ಶಾಸನವನ್ನೇ, ನಿಱಿಸುವ–ಸ್ಥಾಪಿಸುವ, ಬಗೆಯಿಂದೆ–ಮನಸ್ಸಿನಿಂದ, ಅನಿಬರ–ಅವರೆಲ್ಲರ, ಪೞವಿಗೆಯಂ–ಧ್ವಜಗಳನ್ನು, ಹರಿಗಂ–ಅರ್ಜುನ, ಎೞೆದುಕೊಂಡಂ– ಕಿತ್ತುಕೊಂಡನು.
ವಚನ : ಶಶಿವಿಶದ–ಚಂದ್ರನಂತೆ ಬೆಳ್ಳಗಿರುವ, ಯಶಃಪಟಂಗಳಂ–ಕೀರ್ತಿಯೆಂಬ ವಸ್ತ್ರಗಳನ್ನು, ನನ್ನಿಪಟಂಗೊಳ್ವಂತೆ–ಸತ್ಯದ ಶಾಸನ ಪಟ್ಟವನ್ನು ಸ್ವೀಕರಿಸುವಂತೆ, ಧ್ವಜಪಟಂ ಗಳಂ–ಬಾವುಟಗಳ ಬಟ್ಟೆಗಳನ್ನು; ಗೆಲ್ಲಂಗೊಂಡು–ಜಯವನ್ನು ಪಡೆದು.
೧೧೦. ಸೂಸುವ ಸೇಸೆ–ಚೆಲ್ಲುವ ಮಂತ್ರಾಕ್ಷತೆಗಳು, ಬೀಸುವ, ಚಳಚ್ಚಮರೀರುಹಂ– ಚಲಿಸುತ್ತಿರುವ ಚಾಮರಗಳು, ಎಕ್ಕೆಯಿಂ–ಒಟ್ಟಿಗೆ, ರಣಾಯಾಸಪರಿಶ್ರಮಾಂಬುಲವಮಂ– ಯುದ್ಧಾಯಾಸದಿಂದುಂಟಾದ ಬೆವರು ನೀರಿನ ಕಣಗಳನ್ನು, ತವೆ–ಪೂರ್ತಿಯಾಗುವಂತೆ, ಪೀರೆ–ಹೀರಲು, ಪುರಾಂಗನಾಮುಖಾಬ್ಜಾಸವ ಗಂಧದೊಳ್–ಪುರಸ್ತ್ರೀಯರ ಮುಖ ಕಮಲಗಳ ಮಧುವಿನ ಸುಗಂಧದಲ್ಲಿ, ಬೆರಸಿದೊಂದೆಲರ್–ಬೆರೆತ ಗಾಳಿಯೊಂದು, ಒಯ್ಯನೆ– ಮೆಲ್ಲೆಗೆ, ತೀಡೆ–ಸೋಕಲು, ಗುಣಾರ್ಣವಂ–ಅರ್ಜುನ, ಆ ವಾಸವನಂತೆ–ಆ ಇಂದ್ರನ ಹಾಗೆ, ಮತ್ಸ್ಯಮಹಿಪಾಳಕ ಮಂದಿರಮಂ–ವಿರಾಟರಾಜನ ಅರಮನೆಯನ್ನು, ಪೊಕ್ಕಂ–ಪ್ರವೇಶಿಸಿದನು.
ಅಷ್ಟಮಾಶ್ವಾಸಂ ಸಂಪೂರ್ಣಂ