ಸಪ್ತಮಾಶ್ವಾಸಂ
೧. ಶ್ರೀರಮಣೀರಮಣಂಗೆ–ಐಶ್ವರ್ಯವೆಂಬ ವನಿತೆಗೆ ವಲ್ಲಭನಾದ, ಅರಿನಾರೀ ವೈಧವ್ಯ ದೀಕ್ಷಾದಕ್ಷಂಗೆ–ಶತ್ರು ಸ್ತ್ರೀಯರಿಗೆ ವಿಧವೆಯ ತನದ ದೀಕ್ಷೆಯನ್ನು ಕೊಡಲು ಸಮರ್ಥನಾದ, ಹರಿಗಂಗೆ–ಅರ್ಜುನನಿಗೆ, ಆರೆಣೆ–ಯಾರು ಸಮಾನ? ಅಂಧನರೇಂದ್ರಾ– ಧೃತರಾಷ್ಟ್ರನೇ, ಈಗಡೆ–ಈಗಲೇ, ನಿನ್ನ ಮಗನಂ–ನಿನ್ನ ಮಗನಾದ ದುರ್ಯೋಧನನನ್ನು, ಬಾರಿಸು–ತಡೆ, ನಿವಾರಿಸು.
೨. ತೋಳ್ವಲಂ–ಅರ್ಜುನನ ಬಾಹುಬಲ, ಶರಣ್ಗೆವಂದರಂ–ಶರಣಾಗತರಾದವರನ್ನು, ಕಾದುದು–ರಕ್ಷಿಸಿತು; ಬಲವದರಿನೃಪತಿಗೆ–ಬಲಿಷ್ಠರಾದ ಶತ್ರುರಾಜರಿಗೆ, ಕಾಲಾಗ್ನಿ–ಪ್ರಳಯ ಕಾಲದ ಅಗ್ನಿ, ಆದುದು–ಆಯಿತು; ನೆಲಕ್ಕೆ–ಭೂಮಿಗೆ, ಕಾಪಾದುದು–ರಕ್ಷಣೆಯಾಯಿತು; (ತೋಳ್ವಲಂ) ಈ ದೊರೆತೆನೆ–ಬಾಹುಬಲ ಇಂಥಾದ್ದು ಎನ್ನಲು, ಮರುಳೆ–ದಡ್ಡನೇ, ಹರಿಗನೊಳ್– ಅರ್ಜುನನಲ್ಲಿ, ಪಗೆಗೊಳ್ವಾ–ಹಗೆತನವನ್ನು ಹೊಂದುತ್ತೀಯೋ?
ವಚನ : ಎನಿತಾನುಂತೆಱದೊಳೆ–ಎಷ್ಟೋ ವಿಧವಾಗಿ; ಸಾಱಿಯುಂಕೀಱಿಯುಂ–ಸಾರಿ ಹೇಳಿಯೂ ಆಗ್ರಹದಿಂದ ಹೇಳಿಯೂ; ಜಡಿದು–ಗದರಿಸಿ, ಬಯ್ದು; ಏಗೆಯ್ದುಂ–ಏನು ಮಾಡಿಯೂ; ತಲೆಗವಿಯನಲ್ಲದೆಯುಂ–ತಲೆಗೆ ಮುಸುಕಿಲ್ಲದವನಾದರೂ, ಏವದೊಳ್– ಅಸಮಾಧಾನದಲ್ಲಿ, ತಲೆಗವಿದು–ತಲೆಯನ್ನು ಮುಚ್ಚಿಕೊಂಡು, ಸಿಗ್ಗಂ ಕೊಂಡಾಡಿ– ನಾಚಿಕೆಯನ್ನು ವ್ಯಕ್ತಪಡಿಸಿ, ನೆತ್ತಮನಾಡಿ–ಪಗಡೆಯನ್ನಾಡಿ.
೩. ವ್ಯಾಳ ಗಜಂಗಳಂ–ತೊಂಡಾನೆಗಳನ್ನು, ಅಗ್ಗದ–ಶ್ರೇಷ್ಠರಾದ, ಸೂಳೆಯರ–ದಾಸಿ ಯರ, ಒಕ್ಕಲಂ–ಕುಟುಂಬಗಳನ್ನು, ಅನರ್ಘ್ಯ–ಅತ್ಯಂತ ಬೆಲೆಬಾಳುವ, ವಸ್ತುಗಳಂ–ಪದಾರ್ಥ ಗಳನ್ನು, ಇಳಾಪಾಳಂ–ಧರ್ಮರಾಜನು, ಸೋಲ್ತೊಡೆ–ಸೋತರೆ, ಜೂದಿನ ಕೇಳಿಯಂ– ಜೂಜಿನ ಕ್ರೀಡೆಯನ್ನು, ಆ ಕೇಳಿಯನಿತಱೊಳ್–ಆ ಆಟದಷ್ಟರಲ್ಲಿ, ಮಾಣಿಸಿದರ್– ನಿಲ್ಲಿಸುವ ಹಾಗೆ ಮಾಡಿದರು.
ವಚನ : ಮಾಣದೆ–ಬಿಡದೆ; ರಪಣಮಂ ತೋಱಿಯುಂ–ಆಸ್ತಿಯನ್ನು ತೋರಿಸಿಯೂ; ಒತ್ತೆಯನುಗ್ಗಡಿಸಿಯುಂ–ಒಡ್ಡವನ್ನು (ಪಣವನ್ನು) ಕೂಗಿ ಹೇಳಿಯೂ; ಗೆಲ್ದಿಂಬೞಿವಿ ಯಂ–ಗೆದ್ದ ಮೇಲೆ; ಮುದುಗಣ್ಗಳ್–ಮುದುಕರಾದ ಭೀಷ್ಮನೇ ಮುಂತಾದವರು; ಮಗುೞೆ– ಪುನಃ; ಸಂಕೆಯೊಳಂ–ಅಂಜಿಕೆಯಲ್ಲೂ; ನನ್ನಿಯೊಳಂ–ಸತ್ಯದಲ್ಲೂ; ನೆಲನನೊತ್ತೆ ವಿಡಿಯೆಂ– ರಾಜ್ಯವನ್ನು ಒತ್ತೆಯಾಗಿ ಸ್ವೀಕರಿಸೆನು; ಅಱಿದರಪ್ಪೊಡೆ–ತಿಳಿದವರಾದರೆ; ಒಂದೆ ಪಲಗೆ ಯೊಳ್–ಒಂದೇ ಹಲಗೆಯಲ್ಲಿ; ಗೆಲ್ಲಸೋಲಮಪ್ಪಂತು–ಗೆಲವೂ ಸೋಲೂ ಆಗುವ ಹಾಗೆ; ರಪಣ; ‘ಶಬ್ದವಿಹಾರ’ ದಲ್ಲಿ ನನ್ನ ಲೇಖನವನ್ನು ನೋಡಿ.
೪. ಆ ಪಲಗೆಯುಮಂ–ಆ ಹಲಗೆಯನ್ನೂ, ಸೋಲ್ತು–ಸೋತು, ಮಹೀಪಧರ್ಮ ರಾಜನು, ಚಲದಿಂ–ಹಠದಿಂದ, ಬೞಿಕ್ಕೆ–ಆಮೇಲೆ, ಆ ದ್ರೌಪದಿಯುಮಂ–ಆ ದ್ರೌಪದಿ ಯನ್ನೂ, ಸೋಲ್ತಂ ಗಡಂ–ಸೋತನು, ದಿಟವಾಗಿಯೂ; ಪಾಪದ ಫಳಂ–ಪಾಪದ ಫಲ, ಎಯ್ದೆ ವಂದ–ಹತ್ತಿರಕ್ಕೆ ಬಂದ, ದೆವಸದೊಳ್–ದಿವಸದಲ್ಲಿ, ಆರ್ಗಂ–ಯಾರಿಗಾದರೂ, ಏನೇನಾಗದೊ–ಏನೇನು ತಾನೆ ಆಗುವುದಿಲ್ಲವೋ?
ವಚನ : ಅಜಾತಶತ್ರುವಿನ–ಧರ್ಮರಾಜನ; ಕಸವರಮೆಲ್ಲಂ–ಚಿನ್ನವೆಲ್ಲ, ಐಶ್ವರ್ಯ ವೆಲ್ಲ; ಲಯಮಿಲ್ಲದುದಂ–ಕೇಡಿಲ್ಲದ್ದನ್ನು; ಮೇಗಿಲ್ಲದ–ಉತ್ತಮವಿಲ್ಲದ, ಅತ್ಯತಿಶಯ ವಾದ; ಗೊಡ್ಡಾಟವಾಡಲ್–ತುಂಟಾಟವಾಡಲು; ಲೆಂಕಂ–ಸೇವಕ, ಪೇೞ್ದೊಡಂ– ನಿಯಮಿಸಿದರೆ; ರಜಸ್ವಲೆಯಾಗಿರ್ದೆಂ–ಮುಟ್ಟಾಗಿದ್ದೇನೆ; ಒತ್ತಂಬದಿಂ–ಬಲಾತ್ಕಾರದಿಂದ; ಕಣ್ಗೆಡೆಜಡಿದು–ಕಣ್ಣುಕೆಡುವಂತೆ ಗದರಿಸಿ, ಅಧೀರಳಾಗುವಂತೆ ಮಾಡಿ;
೫. ಅಮರಾಪಗಾಸುತಕೃಪದ್ರೋಣಾದಿಗಳ್–ಭೀಷ್ಮ ಕೃಪ ದೋಣರೇ ಮೊದಲಾ ದವರು, ಮನದೊಳ್ ನೊಂದು–ಮನಸ್ಸಿನಲ್ಲಿ ದುಃಖಿತರಾಗಿ, ಬೇಡವೇಡ–ಬೇಡಬೇಡ; ಎನೆಯುಂ–ಎಂದರೂ, ಮಾಣದೆ–ಬಿಡದೆ, ತೊೞ್ತೆ–ತೊತ್ತೇ, ತೊೞ್ತು ವೆಸಕೆಯ್–ತೊತ್ತಿನ ಕೆಲಸವನ್ನು ಮಾಡು, ನೀಂ–ನೀನು, ಪೋಪೋಗು–ಹೋಗು ಹೋಗು, ಎಂದು, ಎನಿತಾನುಂ ತೆಱದಿಂದೆ–ಎಷ್ಟೋ ವಿಧವಾಗಿ, ಬಯ್ದು–ಬೈದು; ಉಟ್ಟುದುವರಂ–ಉಟ್ಟ ಸೀರೆಯವರೆಗೆ, ಕೆಯ್ದಂದು–ಕೈಯನ್ನು ಹಾಕಿ, ದುಶ್ಶಾಸನಂ–ದುಶ್ಶಾಸನನು; ತನಗಂ–ತನಗೂ, ಮೆಲ್ಲನೆ– ಮೆಲ್ಲಗೆ, ಮೃತ್ಯುಸಾರೆ–ಸಾವು ಸಮೀಪಿಸಲು, ಕೃಷ್ಣೆಯಾ–ದ್ರೌಪದಿಯ, ಧಮ್ಮಿಲ್ಲಮಂ– ತುರುಬನ್ನು, ತೆಗೆದಂ–ಹಿಡಿದೆಳೆದನು.
ವಚನ : ಕೃಷ್ಣಕಬರೀಭಾರಮಂ–ಕಪ್ಪಾದ ಕೂದಲಿನ ರಾಶಿಯನ್ನು; ಮೇಗಿಲ್ಲದೆ– ಕೀೞ್ತನದಿಂದ; ಕೃಷ್ಣೋರಗನಂ–ಕೃಷ್ಣಸರ್ಪವನ್ನು; ಬೆಳ್ಳಾಳಂತೆ–ಅಂಜುಬುರುಕನಂತೆ; ಉಮ್ಮನೆ ಬೆಮರುತ್ತಂ–ಬಿಸಿಬಿಸಿಯಾಗಿ ಬೆವರುತ್ತ; ಕಣ್ಕೆತ್ತಿ–ಕಣ್ಣು ಸಂಜ್ಞೆ ಮಾಡಿ, ಕಣ್ಣನ್ನು ಮಿಟುಕಿಸಿ; ಕಿಱುನಗೆ ನಗುವ–ಸ್ವಲ್ಪ ಸ್ವಲ್ಪ ನಗುವ; ಕೂರದರ–ಪ್ರೀತಿಸದವರ, ಹಗೆಗಳ; ಬಿನ್ನ ವಾದ–ಶೂನ್ಯವಾದ; ನೆತ್ತರ್–ರಕ್ತ.
೬. ಕೋಪದ ಪೆರ್ಚಿನೊಳ್ ನಡುಗುವ–ಕೋಪದ ಹೆಚ್ಚಳದಲ್ಲಿ ನಡುಗುತ್ತಿರುವ, ಊರು ಯುಗಂ–ಎರಡು ತೊಡೆಗಳು; ಕಡುಪಿಂದೆ–ತೀವ್ರತೆಯಿಂದ, ಅರಲ್ವ–ಅರಳುವ, ನಾಸಾ ಪುಟಂ–ಮೂಗಿನ ಹೊಳ್ಳೆಗಳು; ಎಕ್ಕೆಯಿಂ–ಒಟ್ಟಿಗೆ, ಪೊಡರ್ವ–ಸ್ಫುರಿಸುವ, ಚಲಿಸುವ, ಪುರ್ವು–ಹುಬ್ಬುಗಳು; ಪೊದಳ್ದ–ಹರಡಿಕೊಂಡಿರುವ, ಲಯಾಂತಕ ತ್ರಿಶೂಲೋಪಮ– ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವಾದ, ಭೀಷಣ–ಭಯಂಕರವಾದ, ಭ್ರುಕುಟಿ–ಹುಬ್ಬಿನ ಗಂಟು; ಮುನ್ನಮೆ–ಮೊದಲೇ; ರೌದ್ರಗದಾಯುಧಂಬರಂ–ಭಯಂಕರ ಗದಾಯುದ್ಧದವರೆಗೆ, ಪೋಪ–ಹೋಗುವ; ಭೀಮಸೇನನಾ–ಭೀಮನ; ಭೂಜಾರ್ಗಳಂ– ಅಗುಳಿಯಂತಿರುವ ಭುಜಗಳು; ರಿಪುಗಳ ಗ್ರಹಮಾದುದು–ಶತ್ರುವಿನ ಕೊರಳನ್ನು ಹಿಡಿಯು ವುದು ಆಯಿತು.
೭. ನೆಲನಂ ನುಂಗುವ–ನೆಲವನ್ನು ನುಂಗುವ, ಮೇರುವಂ ಪಿಡಿದು ಕೀೞ್ವ–ಮೇರು ಪರ್ವತವನ್ನು ಹಿಡಿದು ಕೀಳುವ, ಆಶಾಗಜೇಂದ್ರಂಗಳಂ–ದಿಕ್ಕಿನಾನೆಗಳನ್ನು, ಚಲದಿಂ ಕಟ್ಟುವ– ಛಲದಿಂದ ಕಟ್ಟಿಹಾಕುವ, ಸಪ್ತ ಸಪ್ತಿಯಂ–ಸೂರ್ಯನನ್ನು, ಇಳಾಭಾಗಕ್ಕೆ ತರ್ಪ–ಭೂಭಾಗಕ್ಕೆ ತರುವ, ಒಂದು ತೋಳ್ವಲಮುಂ–ಒಂದು ತೋಳ್ಬಲವೂ, ಗರ್ವಮುಂ–ಅಹಂಕಾರವೂ, ಉಣ್ಮಿ ಪೊಣ್ಮೆ–ಚಿಮ್ಮಿ ಹೊಮ್ಮಲು, ಮನದೊಳ್–ಮನದಲ್ಲಿ, ಕೋಪಾಗ್ನಿ–ಕೋಪವೆಂಬ ಉರಿ, ಕೆಯ್ಗಣ್ಮಿ–ಮಿತಿಮೀರಿ, ಕಣ್ಮಲರೊಳ್ ಬಂದಿರೆ–ಹೂವಿನಂತಿರುವ ಕಣ್ಣುಗಳಲ್ಲಿ ತಲೆದೋರಿರಲು, ಕಲುಷದಿಂ–ಕದಡಿನಿಂದ, ಗಾಂಡೀವಿ–ಅರ್ಜುನ, ಗಾಂಡೀವಮಂ– ಗಾಂಡೀವವೆಂಬ ಬಿಲ್ಲನ್ನು, ನೋಡಿದಂ–ನೋಡಿದನು.
೮. ಪ್ರಕುಪಿತ ಮೃಗಪತಿಶಿಶುಸನ್ನಿಕಾಶರ್–ವಿಶೇಷವಾಗಿ ಕೆರಳಿದ ಸಿಂಹದ ಮರಿಗಳಿಗೆ ಸಮಾನರಾದ, ಅತಿವಿಕಟ ಭೀಷಣಭ್ರೂಭಂಗರ್–ಅತಿ ವಿಕಾರವೂ ಭಯಂಕರವೂ ಆದ ಹುಬ್ಬುಗಂಟನ್ನುಳ್ಳ, ನಕುಲ ಸಹದೇವರ್–ನಕುಲನೂ ಸಹದೇವನೂ, ಇರ್ವರುಂ–ಇಬ್ಬರೂ, ಅಕಾಲ ಕಾಲಾಗ್ನಿರೂಪಮಂ–ಕಾಲವಲ್ಲದ ಕಾಲದ, ಪ್ರಳಯಕಾಲದ ಅಗ್ನಿಯ ಆಕಾರ ವನ್ನು, ಕೈಕೊಂಡರ್–ಸ್ವೀಕರಿಸಿದರು.
ವಚನ : ಜಳನಿಧಿಗಳಂತೆ–ಸಮುದ್ರಗಳ ಹಾಗೆ; ನನ್ನಿಯ ಕೇಡಂ–ಸತ್ಯದ ವಿನಾಶವನ್ನು; ವಿಕ್ಷೇಪದಿಂ–ಅಲುಗಾಟದಿಂದ;
೯. ಅನಿತೊಂದು–ಅಷ್ಟೊಂದು, ಉರ್ಕಿನೊಳ್–ಉಕ್ಕಾಟದಲ್ಲಿ, ಉರ್ಕ್ಕಿ–ಉಕ್ಕಿ, ಕೌರವ ಖಳರ್–ಕೌರವರೆಂಬ ದುಷ್ಟರು, ಪಾಂಚಾಳ ರಾಜಾತ್ಮಜಾನನ ಪದ್ಮಗ್ಲಪನೈಕ ಕಾರಣ ಪರರ್–ದ್ರೌಪದಿಯ ಮುಖಕಮಲ ಬಾಡುವುದಕ್ಕೆ ಏಕೈಕ ಕಾರಣರಾದವರು, ತಾಮಾಗಿ ಯುಂ–ತಾವಾಗಿಯೂ, ಮತ್ತಂ–ಪುನಃ, ಅಣ್ಣನ ಕಣ್ಸನ್ನೆಗೆ–ಧರ್ಮರಾಜನ ಕಣ್ಣಸಂಕೇತ ವನ್ನು, ಮೀಱಲಣ್ಮದೆ–ಮೀರಲು ಪ್ರಯತ್ನಿಸದೆ, ಪೃಥಾಪುತ್ರರ್–ಪಾಂಡವರು, ಸಮಂತು– ಸಮಾಧಾನವಾಗಿ, ಇರ್ದರ್–ಇದ್ದರು; ಇನಿತೊಂದಾದೊಡಮೇಂ–ಇಷ್ಟೊಂದು ಆದರೂ ಕೂಡ ಏನು, ಮಹಾಪುರುಷರ್–ಮಹಾಪುರುಷರು, ಆಜ್ಞಾಲಂಘನಂಗೆಯ್ವರೇ–ಆಜ್ಞೆಯನ್ನು ಉಲ್ಲಂಘಿಸುತ್ತಾರೆಯೇ?
ವಚನ : ಕೇಶಪಾಶಮಂ–ಕೂದಲು ಮುಡಿಯನ್ನು; ಸಿಗ್ಗು–ನಾಚಿಕೆ; ಅಗ್ಗಳಂ ಪೆರ್ಚೆ– ಅತಿಶಯವಾಗಿ ಹೆಚ್ಚಲು.
೧೦. ಮುಡಿಯಂ ಪಿಡಿದೆೞೆದವನಂ–ತುರುಬು ಹಿಡಿದು ಎಳೆದವನನ್ನು, ಮಡಿಯಿಸಿ– ಸಾಯಿಸಿ, ಮತ್ತೆ, ಅವನ, ಕರುಳ–ಕರುಳಿನ, ಪಿಣಿಲಿಂದೆ–ಜಡೆಯಿಂದ, ಎನ್ನಂ–ನನ್ನನ್ನು, ಮುಡಿಯಿಸುವಿನೆಗಂ–ಮುಡಿಸುವವರೆಗೂ, ಮುಡಿಯಂ–ತುರುಬನ್ನು, ಮುಡಿಯೆಂ ಗಡ– ಕಟ್ಟುವುದಿಲ್ಲ, ದಿಟ; ಕೇಳಿಂ–ಕೇಳಿರಿ, ಈಗಳ್–ಈಗ, ಆಂ–ನಾನು, ನುಡಿನುಡಿದೆಂ–ಪ್ರತಿಜ್ಞೆ ಮಾಡಿದೆನು.
೧೧. ಭೀಮಸೇನನ ಪ್ರತಿಜ್ಞೆ: ಆಱದ ಕೋಪ ಪಾವಕನಿಂ–ಆರಿಹೋಗದ ಕೋಪಾಗ್ನಿ ಯಿಂದ, ಅಣ್ಣನ ನನ್ನಿಯಂ–ಅಣ್ಣನಾದ ಧರ್ಮರಾಜನ ಸತ್ (ವಾಕ್ಯ)ವನ್ನು; ಮೀಱುವೆಂ ಮೀಱೆಂ–ಮೀರುತ್ತೇನೆ, ಮೀರುವುದಿಲ್ಲ, ಎನಿಪ್ಪ–ಎನ್ನಿಸುವ, ಪದದಲ್ಲಿಯೆ–ಸಮಯ ದಲ್ಲಿಯೆ, ನೋಡ–ನೋಡೋ, ದ್ರುಪದರಾಜ ಸುತಾವಚನಂಗಳ್–ದ್ರೌಪದಿಯ ಮಾತು ಗಳು, ಮರುಳ್ಗೆ–ಭೂತಕ್ಕೆ, ಧೂಪಮಂ–ಧೂಪವನ್ನು, ತೋಱಿದ–ತೋರಿಸಿದ; ಮಾೞ್ಕೆಯಿಂ– ರೀತಿಯಿಂದ, ಅಲ್ಲಿ, ಮೈದೋಱೆ–ಅಲ್ಲಿ ವ್ಯಕ್ತವಾಗಲು, ಮರುತ್ಸುತಂ–ಭೀಮಸೇನನು, ಆ ಸಭೆಯೊಳ್–ಆ ಸಭೆಯಲ್ಲಿ, ನವ ಮೇಘನಾದದಿಂ–ಹೊಸ ಮೋಡದ ಗುಡುಗಿನ ಶಬ್ದದಿಂದ, ನುಡಿದಂ–ಪ್ರತಿಜ್ಞೆ ಮಾಡಿದನು.
೧೨. ಮುಳಿಸಿಂದಂ–ಕೋಪದಿಂದ, ನುಡಿದೊಂದು–ನುಡಿ ಒಂದು, ನಿನ್ನ, ನುಡಿ–ಶಪಥ, ಸಲ್ಗೆ–ಸಲ್ಲಲಿ, ಆರ್ ಆಗದೆಂಬರ್–ಆಗದು ಎಂದು ಹೇಳುವವರು ಯಾರು? ಮಹಾಪ್ರಳ ಯೋಲ್ಕೋಪಮ ಮದ್ಗದಾಹತಿಯಿಂ–ಮಹಾ ಪ್ರಲಯಕಾಲದ ಉಲ್ಕೆಗೆ ಸಮಾನವಾದ ನನ್ನ ಗದೆಯ ಏಟಿನಿಂದ, ಅತ್ಯುಗ್ರಾಜಿಯೊಳ್–ಅತಿ ಭಯಂಕರ ಯುದ್ಧದಲ್ಲಿ, ಮುನ್ನ– ಮೊದಲು, ಈ ಖಳ ದುಶ್ಯಾಸನನಂ–ಈ ದುಷ್ಟ ದುಶ್ಯಾಸನನನ್ನು, ಪೊರಳ್ಚಿ–ನೆಲದ ಮೇಲೆ ಹೊರಳಾಡಿಸಿ, ಬಸಿಱಂ ಪೋೞ್ದಿಕ್ಕಿ–ಹೊಟ್ಟೆಯನ್ನು ಹೋಳು ಮಾಡಿ, ಬಂಬಲ್ಗರುಳ್ಗಳಿಂ– ತೆಕ್ಕೆಯಾಗಿರುವ ಕರುಳುಗಳಿಂದ, ಪಂಕೇಜ ಪತ್ರೇಕ್ಷಣೇ–ಕಮಲನೇತ್ರೆಯೇ, ಆನಲ್ತೆ– ನಾನಲ್ಲವೆ, ವಿಳಾಸದಿಂ–ಸೊಗಸಿನಿಂದ, ಮುಡಿಯಿಪೆಂ–ಮುಡಿಯಿಸುತ್ತೇನೆ.
೧೩. ಕುಡಿವೆಂ–ಕುಡಿಯುತ್ತೇನೆ, ದುಶ್ಯಾಸನೋರಸ್ಥಲಮಂ–ದುಶ್ಯಾಸನನ ಎದೆಯ ಪ್ರದೇಶವನ್ನು, ಆಗಲೆ–ಅಗಲವಾಗುವ ಹಾಗೆ, ಪೋೞ್ದು–ಸೀಳಿ, ಆರ್ದು–ಗರ್ಜಿಸಿ, ಕೆನ್ನೆತ್ತರಂ– ಕೆಂಪಾದ ರಕ್ತವನ್ನು; ಪೊಕ್ಕು–ನುಗ್ಗಿ, ಉಡಿವೆಂ–ಮುರಿಯುತ್ತೇನೆ, ಪಿಂಗಾಕ್ಷನ–ದುರ್ಯೋ ಧನನ, ಊರುದ್ವಯಮಂ–ಎರಡು ತೊಡೆಗಳನ್ನು, ಉರು ಗದಾಘಾತದಿಂ–ಶ್ರೇಷ್ಠ ಗದೆಯ ಹೊಡೆತದಿಂದ; ನುಚ್ಚುನೂಱಾಗೊಡೆವೆಂ–ಪುಡಿಪುಡಿಯಾಗುವಂತೆ ಮುರಿಯುತ್ತೇನೆ, ತದ್ರತ್ನ ರಶ್ಮಿಪ್ರಕಟ ಮಕುಟಮಂ–ಆ ರತ್ನಕಾಂತಿಗಳಿಂದ ಪ್ರಕಾಶ ಮಾನವಾದ ಕಿರೀಟವನ್ನು, ಪಂಕಜ ವಕ್ತ್ರೇ–ಕಮಲವದನೆಯೇ, ನಂಬುನಂಬು–ನಂಬಿಕೋ ನಂಬಿಕೋ, ಅಹಿತರಂ ನೋಡಿ–ವೈರಿ ಗಳನ್ನು ನೋಡಿ, ಕಣ್ಣಿಂ–ಕಣ್ಣುಗಳಿಂದ, ಕಿಡಿಯುಂ ಕೆಂಡಂಗಳುಂ ಸೂಸಿದಪುವು–ಕಿಡಿಯೂ ಕೆಂಡಗಳೂ ಸೂಸುತ್ತಿವೆ.
೧೪. ಮುಳಿಸಂ ಮಾಡಿಯುಂ–ಕೋಪವನ್ನುಂಟುಮಾಡಿಯೂ, ಏವಮಂ ಪಡೆದುಂ– ನಮಗೆ ದುಃಖವನ್ನುಂಟುಮಾಡಿಯೂ, ಇನ್ನು–ಇನ್ನು ಕೂಡ, ಈ ಪಂದೆಗಳ್–ಈ ಹೇಡಿ ಗಳು, ಪ್ರಾಣದಿಂದೊಳರ್–ಜೀವಸಹಿತವಾಗಿದ್ದಾರೆ; ಇನ್ನುಂ–ಇನ್ನು ಕೂಡ, ತಲೆ–ತಲೆಗಳು, ಮತ್ತಂ–ಮತ್ತು, ಅಟ್ಟೆಗಳ ಮೇಲಿರ್ದಪ್ಪುವು–ಮುಂಡಗಳ ಮೇಲಿವೆ, ಎಂದಂದೆ ದಲ್– ಎಂದಾಗಲೇ ದಿಟವಾಗಿಯೂ, ಮುಳಿಸಿಲ್ಲ–ಕೋಪವಿಲ್ಲ, ಅಣ್ಣನ ನನ್ನಿಯೆಂಬುದನೆ ಪೇೞ್– ಅಣ್ಣ ಧರ್ಮಜನ ಸತ್ಯವೆಂಬುದನ್ನೇ ಹೇಳು; ಏವೇೞ್ದುಂ–ಏನು ಹೇಳಿಯೂ, ಈ ಕೌರವರ್ ಕಳಂ–ಈ ಕೌರವರನ್ನು, ಉಂತೆ–ಸುಮ್ಮನೆ, ಇನ್ನೆಗಂ–ಇದುವರೆಗೆ, ಉರ್ಚಿ ಮುಕ್ಕದೆ– ಭೇದಿಸಿ ನುಂಗದೆ, ಸಡಿಲ್ದ–ಸಡಿಲನಾದ, ಈ ಭೀಮನೇಂ–ಈ ಭೀಮಸೇನನು ಏನು, ಮಾಣ್ಗುಮೇ– ನಿಲ್ಲುತ್ತಾನೆಯೇ, ಸುಮ್ಮನಾಗುತ್ತಾನೆಯೇ?
ವಚನ : ಆಱೆನುಡಿದು–ಸಮಾಧಾನವಾಗುವಂತೆ ಮಾತಾಡಿ.
೧೫. ಸುರಸಿಂಧು ಪ್ರಿಯಪುತ್ರ–ಭೀಷ್ಮನೇ, ಕೇಳ್–ಕೇಳು, ಕಳಶಜಾ ನೀಂ ಕೇಳ್– ದ್ರೋಣನೇ, ನೀನು ಕೇಳು, ಕೃಪಾ–ಕೃಪನೇ, ಕೇಳ–ಕೇಳು, ಮಂದರದಿಂದೆ–ಮಂದರ ಪರ್ವತ ದಿಂದ, ಅಂಬುಧಿಯಂ–ಸಾಗರವನ್ನು, ಕಲಂಕಿದಸುರ ಪ್ರಧ್ವಂಸಿವೋಲ್–ಕದಡಿದ ರಾಕ್ಷಸ ಶತ್ರುವಾದ ವಿಷ್ಣುವಿನ ಹಾಗೆ, ಬಾಹು ಮಂದರದಿಂ–ನನ್ನ ತೋಳುಗಳೆಂಬ ಮಂದರಪರ್ವತ ದಿಂದ, ವೈರಿಬಲಾಬ್ಧಿ–ವೈರಿಗಳ ಸೈನ್ಯಸಾಗರ, ಘೂರ್ಣಿಸೆ–ಕ್ಷೋಭೆಗೊಂಡು ಶಬ್ದಮಾಡು ತ್ತಿರಲು, ಬಿಗುರ್ತ–ಬೆದರಿದ, ಈ ಕೌರವರ್ ಕೂಡೆ ನೂರ್ವರುಮಂ–ಈ ನೂರು ಮಂದಿ ಕೌರವರನ್ನು ಒಟ್ಟಿಗೇ, ಕೊಲ್ವೆಂ–ಕೊಲ್ಲುತ್ತೇನೆ, ಇದೆನ್ನ ಪೂಣ್ಕೆ–ಇದು ನನ್ನ ಪ್ರತಿಜ್ಞೆ, ನುಡಿದೆಂ–ಶಪಥ ಮಾಡಿದೆನು, ನಿಮ್ಮ ಈ ಸಭಾಮಧ್ಯದೊಳ್–ನಿಮ್ಮ ಈ ಸಭಾ ಮಧ್ಯದಲ್ಲಿ.
ವಚನ : ವಿಳಯಕಾಳಜಳಧರನಿನಾದದಿಂ–ಪ್ರಳಯ ಕಾಲದ ಮೇಘದ ಧ್ವನಿಯಿಂದ; ತಾಟಿಸಿದಂತಾನುಂ–ಸಂಘಟ್ಟಿಸಿದ ಹಾಗೂ; ಮೊೞಗಿದಂತಾನುಂ–ಗುಡುಗಿದ ಹಾಗೂ;
ಇಲ್ಲಿಗೆ ಭೀಮಸೇನನ ಪ್ರತಿಜ್ಞೆ ಮುಗಿಯುತ್ತದೆ. ವ್ಯಾಸಭಾರತದಲ್ಲಿ ಈ ಪ್ರತಿಜ್ಞೆ ಮೂರು ನಾಲ್ಕು ಕಡೆ ಹಂಚಿಹೋಗಿರುವುದರಿಂದ ಪಂಪನಲ್ಲಿ ಕಾಣುವ ತೀವ್ರತೆಯಾಗಲಿ, ಸಾಂದ್ರತೆಯಾಗಲಿ, ನಿರ್ಘೋಷವಾಗಲಿ ಅಲ್ಲಿ ಕಾಣುತ್ತಿಲ್ಲ. ಪಂಪನ ಪದ್ಯಗಳನ್ನು ಹಿಂಡಿದರೆ ಈಗಲೂ ಕೆಂಪು ಕೋಪ ಸುರಿಯುತ್ತದೆ. ಶಬ್ದಗಳು ಸಿಡಿಲ ಚಕ್ಕೆಗಳಂತೆ ಒಂದಾಗಿ ಸೇರಿ ಕಿಡಿಗುಟ್ಟುತ್ತಿವೆ; ಕೋಪವನ್ನು ಅಳೆದು ಸುರಿದು ಮುಗಿಸಲಾರವೆಂಬಂತಿವೆ. ಇಷ್ಟು ಕೋಪ ಬಂದಾಗಲೂ ಭೀಮನು ವಿವೇಕವನ್ನು ಕಳೆದುಕೊಂಡಿಲ್ಲ. ವ್ಯಾಸಭಾರತದಲ್ಲಿ ಭೀಮನ ಕೋಪ ಧರ್ಮರಾಯನ ಮೇಲೂ ಎರಗುತ್ತದೆ. ಜೂಜಾಡಿ ಸೋತು ಇಷ್ಟಕ್ಕೆಲ್ಲ ಮೂಲಕಾರಣ ನಾದ ಧರ್ಮರಾಜನನ್ನೇ ಆ ಕೋಪ ಆವರಿಸಿಕೊಳ್ಳುತ್ತದೆ; ಸಹದೇವ ಅಗ್ನಿಯನ್ನು ತೆಗೆದು ಕೊಂಡು ಬಾ, ಈ ಧರ್ಮಪುತ್ರನ ತೋಳುಗಳನ್ನು ಸುಡುತ್ತೇನೆ (ಅಸ್ಯಾಃ ಕೃತೇ ಮನ್ಯುರಯಂ ತ್ವಯಿ ರಾಜನ್ ನಿಪಾತ್ಯತೇ । ಬಾಹೂ ತೇ ಸಮ್ಪ್ರಧಕ್ಷ್ಯಾಮಿ ಸಹದೇವಾಗ್ನಿಮಾನಯ ॥) ಎಂದು ಭೀಮನ ಆರ್ಭಟ. ಇದು ಆಗದ ಮಾತು; ಪಂಪನಿಗೆ ಅಪ್ರಕೃತ; ಬಿಟ್ಟಿರುವುದು ಭೀಮನಲ್ಲಿ ಇನ್ನೂ ವಿವೇಕವಿದೆಯೆಂಬುದನ್ನು ತೋರಿಸುವುದಾಗಿದೆ.
೧೬. ಭರತ ಯಯಾತಿ ಕುತ್ಸ ಪುರುಕುತ್ಸ ಪುರೂರವರಿಂದಂ–ಭರತ, ಯಯಾತಿ, ಕುತ್ಸ, ಪುರುಕುತ್ಸ, ಪುರೂರವ ಎಂಬ ಈ ರಾಜರ ಪರಂಪರೆಯಿಂದ, ಇನ್ನೆಗಂ–ಇದುವರೆಗೂ, ಪರಿವಿಡಿಯಿಂದೆ–ಕ್ರಮದಿಂದ, ಬಂದ, ಶಶಿವಂಶಮದು–ಆ ಚಂದ್ರವಂಶವು, ಈಗಳ್–ಈಗ, ಇವಂದಿರಿಂದೆ–ಇವರಿಂದ ಎಂದರೆ ಕೌರವ ಪಾಂಡವರಿಂದ, ನಿತ್ತರಿಸುವುದಕ್ಕುಂ–ಮುಂದೆ ಹಾಯ್ದು ಹೋಗುವುದಾಗುತ್ತದೆ ಎಂದರೆ ವೃದ್ಧಿಯಾಗುತ್ತದೆ, ಎಂದೆ–ಎಂಬುದಾಗಿಯೆ, ಬಗೆದಿರ್ದೊಡೆ–ಭಾವಿಸಿದ್ದರೆ, ಕೀಲೊಳೆ–ಕೀಲಿನಲ್ಲಿಯೇ, ಕಿಚ್ಚು ಪುಟ್ಟಿ–ಉರಿ ಹುಟ್ಟಿ, ಭೋರ್ಗರೆದು–ಭೋರೆಂದು ಶಬ್ದ ಮಾಡಿ, ಉರಿದಂತೆ–ಉರಿದ ಹಾಗೆ, ನಿನ್ನ ಮಗನಿಂದುರಿ ದತ್ತು–ನಿನ್ನ ಮಗನಿಂದ ಉರಿದು ಹೋಯಿತು; ಇದನಾರೋ ಬಾರಿಪರ್–ಇದನ್ನು ಯಾರೋ ತಡೆಯುವವರು? ಇಲ್ಲಿರುವ ಉಪಮೆ ರಮ್ಯ ಧ್ವನಿಮಯ.
ವಚನ : ಆನೆಯ ಕೋಡು ಬಾಗದೆಂಬಂತೆ–ಆನೆಯ ಕೋಡು ಬಗ್ಗುವುದಿಲ್ಲವೆಂಬಂತೆ; ಉದ್ವೃತ್ತತೆಯುಮಂ–ದುರುಳತನವನ್ನೂ; ಕೆಯ್ಗೞಿದ–ಕೈಮೀರಿದ, ಮನೆವಾೞ್ತೆಗೆ–ಮನೆಯ ಬದುಕಿಗೆ; ತಾಮುಂತಾಮುಮಱಿವರ್–ತಾವು ತಾವೇ ತಿಳಿದುಕೊಳ್ಳುತ್ತಾರೆ; ಉಪ್ಪಿಕ್ಕಿ ದೊಡೆ ತುಪ್ಪದ ಮೆ [ೞ್ಪ] ಡಿತೆಂಬಂತೆ–ಉಪ್ಪು ಬಡಿಸಿದರೆ ತುಪ್ಪಕ್ಕೆ ಮೋಸವೆನ್ನುವ ಹಾಗೆ; ಕೆಮ್ಮನಿರ್ಪಿರವು–ಸುಮ್ಮನಿರುವ ಸ್ಥಿತಿ; ಪೋಗಿಂಗೆ–ಹೋಗಿಗೆ, ಹೊರಟುಹೋಗುವುದಕ್ಕೆ, ಮೆೞ್ಪಡಿತು ಶಬ್ದ ಚಿಂತನಾರ್ಹ; ಮೆೞ್ಪಡು +ಇತು=ಮೆೞ್ಪಡಿತು; ಇದು ಭಾವನಾಮ; ಮಾಡು, ನೋಡು ಎಂಬ ಧಾತುಗಳಿಗೆ ಇತು ಪ್ರತ್ಯಯ ಸೇರಿ ಮಾಡಿತು, ನೋಡಿತು ಎಂದಾದ ಹಾಗೆ; ಮಾಡಿದುದು, ನೋಡಿದುದು ಎಂಬುವುಗಳಿಗೆ ಮಾಡಿತು, ನೋಡಿತು ಎಂಬ ರೂಪಗಳಾದ ಹಾಗೆ ಮೆೞ್ಪಟ್ಟುದು ಮೆೞ್ಪಡಿತು ಆಗಿದೆಯೆಂದೂ ಹೇಳಬಹುದು.
೧೭. ಏ ದೊರೆಯಂ ಯಮನಂದನಂ–ಧರ್ಮಪುತ್ರನು ಎಂಥವನು! ಅಸಮಾನ ನಾದವನು; ಏ ದೊರೆಯಂ ಭೀಮಸೇನಂ–ಎಂಥವನು ಭೀಮಸೇನ! ಸಾಟಿಯಿಲ್ಲದವನು; ಕಂಜೋದರನ–ಶ್ರೀಕೃಷ್ಣನ, ಮೈದುನಂ–ಮೈದುನನಾದ ಅರ್ಜುನ, ತಾನ್–ತಾನು, ಏ ದೊರೆಯಂ–ಎಂಥವನು; ಅಸದೃಶನಾದವನು; ಅಮಳ್ಗಳ್–ನಕುಲಸಹದೇವರು, ತಾಂ– ತಾವು, ಏ ದೊರೆಯರ್–ಎಂಥವರು, ಅಪ್ರತಿಮರಾದವರು; ಅವರ್ಗಂ–ಅವರಿಗೂ ಕೂಡ, ಈ ಇರವಾಯ್ತೇ–ಈ ಸ್ಥಿತಿಯುಂಟಾಯಿತೇ.
೧೮. ಜೂದಾಡಿ–ಜೂಜಾಡಿ, ಸೋಲ್ತು–ಸೋತು ಹೋಗಿ, ನನ್ನಿಗೆ–ಸತ್ಯಕ್ಕಾಗಿ, ಮೇದಿನಿ ಯಂ ಕೊಟ್ಟು–ರಾಜ್ಯವನ್ನು ಕೊಟ್ಟು, ಪಾಂಡುನಂದನರೀಗಳ್–ಈಗ ಪಾಂಡುಕುಮಾರರು, ಪೋದೊಡಮೇನ್–ಹೊರಟು ಹೋದರೇನು? ನಮ್ಮ ನೃಪತಿಗೆ–ನಮ್ಮ ರಾಜ ದುರ್ಯೋಧನನಿಗೆ, ಅವು–ಜೂಜು ರಾಜ್ಯಾಪಹಾರಗಳು, ತವುದಲೆಯೊಳ್–ಅಂತ್ಯದಲ್ಲಿ, ಕೊನೆಯಲ್ಲಿ, ತಿಣುಕಾಗದೆ–ಕಷ್ಟವಾಗದೆ, ಪೋದಪುದೇ–ಹೋಗುತ್ತದೆಯೇ? ‘ತವು– ಕ್ಷಯೇ’ ಎಂಬ ಧಾತುವಿಗೆ–ದಲೆ ಪ್ರತ್ಯಯ ಸೇರಿ ಭಾವನಾಮವಾಗಿದೆ, ತವುದಲೆಯೆಂದು; ಇದಕ್ಕೆ ಸಹಜವಾಗಿ ನಾಶ ಎಂದರ್ಥವಾದರೂ ಅಂತ್ಯ, ಮುಡಿವು ಎಂಬರ್ಥಗಳೂ ಆಗುತ್ತವೆ; ತವುದಲೆ ತೌದಲೆ; ‘ಬಿತ್ತರಿಸಿದ ಬೀದಿ ವೀದಿಗಳ ತೌದಲೆಗೊಪ್ಪುವ ಮಂಡಪಂ’ ಎಂದು ಜನ್ನನ ಪ್ರಯೋಗ. ‘ತಿಣುಕು–ಅಪಾನವಾಯೌ’ ಎಂದಿದ್ದರೂ ಇಲ್ಲಿ ಅದರ ಲಕ್ಷಣಾರ್ಥ ವನ್ನು ಸ್ವೀಕರಿಸಿದೆ.
೧೯. ಜೂದಿನ ಗೆಲ್ಲದೊಳ್–ಜೂಜಿನ ಗೆಲವಿನಲ್ಲಿ, ಆದ–ತನಗುಂಟಾದ, ಈ ಮೇದಿನಿ ಯಂ ಕಂಡು–ಈ ಭೂಮಿಯನ್ನು ನೋಡಿ, ಕಜ್ಜಮಂ ಕಾಣದೆ–ಮುಂದಾಗುವ ಕಾರ್ಯ ವನ್ನು ತಿಳಿಯದೆ, ದುಜ್ಜೋದನಂ–ದುರ್ಯೋಧನನು, ಅದೇನದೇಂ–ಅದೇನು, ಅದೇನು, ಎಂದರೆ ಅತಿಶಯವಾಗಿ, ಮರುಳಾದನೊ–ಭ್ರಾಂತನಾದನೋ? ಬಡಿ ಗಂಡನಿಲ್ಲ–ಎತ್ತಿದ ಬಡಿಗೆಯನ್ನು ಅವನು ಕಾಣಲಿಲ್ಲ, ಪಾಲನೆ ಕಂಡಂ–ಹಾಲನ್ನು ಮಾತ್ರ ಕಂಡನು.
೨೦. ಎನಿತಾನುಮಂದದಿಂ–ಎಷ್ಟೋ ರೀತಿಯಾಗಿ, ಜೂದನಿಕ್ಕೆಯುಂ–ಜೂಜನ್ನು ಹೂಡಿಯೂ, ದ್ರುಪದಸುತೆಯಂ–ದ್ರೌಪದಿಯನ್ನು, ಎೞೆದುಯ್ಯೆಯುಂ–ಎಳೆದುಕೊಂಡು ಬಂದೂ, ದುಶ್ಶಾಸನನಿಂದಂ–ದುಶ್ಶಾಸನನಿಂದಲೂ, ಶಕುನಿಯೆಂಬ–ಶಕುನಿಯೆಂಬುವ, ಬೆಳ್ಪೊಱಸಿಂದಂ–ಬಿಳಿ ಪಾರಿವಾಳದಿಂದಲೂ, ಇಂತಿನಿತೊಂದಾದುದು–ಹೀಗೆ ಇಷ್ಟೊಂದು (ಆಗಬಾರದ್ದು) ಆಯಿತು. ಪಾರಿವಾಳ=ಪೊಱಸು ಎಂಬ ಹಕ್ಕಿ ಅಪಶಕುನ ಸೂಚಕ, ಅನಿಷ್ಠ ಕಾರಕ. ‘ಶಬ್ದವಿಹಾರ’ ದಲ್ಲಿ ಪೊಱಸು ಎಂಬ ಲೇಖನವನ್ನು ನೋಡಿ.
ವಚನ : ಬಾಹಿಗೆಯಂ–ಬಹಿಃಪ್ರದೇಶವನ್ನು, ಊರ ಹೊರಗನ್ನು; ಮಗುೞಿಮೆಂದೊಡೆ– ಹಿಂದಿರುಗಿ ಎಂದರೆ; ಮನಂಬಂಧಿಸಿದ ಮೋಹದಿಂ–ಮನಸ್ಸನ್ನು ಕಟ್ಟಿದ ಪ್ರೇಮದಿಂದ; ಗೞಗೞನೆ–ಗಳಗಳ ಎಂದು.
೨೧. ಪುಗುವುದರಣ್ಯಂ–(ನೀವು) ಪ್ರವೇಶ ಮಾಡುವುದು ಕಾಡು; ಇರ್ಪಿರವು ಪನ್ನೆರಡಬ್ದಂ– (ಅಲ್ಲಿ) ಇರುವ ಸ್ಥಿತಿ ಹನ್ನೆರಡು ವರ್ಷಗಳು; ಅದಲ್ಲದೆ–ಅದೂ ಅಲ್ಲದೆ, ಅಲ್ಲಿ, ಕೋೞ್ಮಿಗದ–ಕೊಂಬುಳ್ಳ ಪ್ರಾಣಿಗಳ, ವನೇಚರಾಧಿಪರ–ಬೇಡರ ಅರಸುಗಳ, ದಾಯಿ ದರ–ದಾಯಾದಿಗಳ, ಅತ್ತಣಿಂ–ದೆಸೆಯಿಂದ, ಅಪ್ಪ–ಆಗುವ, ಅಪಾಯ ಕೋಟಿಗೆ–ನೂರಾರು ಅಪಾಯಗಳಿಗೆ, ಪವಣಿಲ್ಲ–ಲೆಕ್ಕವಿಲ್ಲ, ಕಲ್ಪಿಗೆಡೆಯಾವುದೊ–ಕಲಿಸುವುದಕ್ಕೆ ಎಂದರೆ ಬುದ್ಧಿಯ ಮಾತನ್ನು ಹೇಳಲು ಏನು ಅವಕಾಶ; ಪಾೞಿಯ ಬಟ್ಟೆದಪ್ಪಿ–ಧರ್ಮ ಮಾರ್ಗ ವನ್ನು ಬಿಟ್ಟು, ಮುಂ–ಮುಂಚೆ, ನೆಗೞ್ದೆಡೆಯಿಲ್ಲ–ನಡೆದ ಕಾಲವಿಲ್ಲ; ಪೋಗು–ಹೋಗು, ಜಯಮಕ್ಕೆ–ಜಯವಾಗಲಿ, ಶುಭಂ, ಮಂಗಳಂ, ನಿಮಗಕ್ಕೆ–ನಿಮಗುಂಟಾಗಲಿ.
ವಚನ : ಕೊಕ್ಕರಿಕ್ಕೆಯಾಗಿಯುಂ–ಅಸಹ್ಯವನ್ನುಂಟು ಮಾಡುವುದಾಗಿಯೂ; ಪಾೞಿಗೆ ಗೆಂಟಾಗಿಯುಂ–ಧರ್ಮಕ್ಕೆ ದೂರವಾಗಿಯುಂ; ನೆಗೞ್ವಮಲ್ಲೆಂ–ಮಾಡುವವರಲ್ಲವಾಗಿದ್ದೇವೆ; ಬಟ್ಟೆಯಂ–ಮಾರ್ಗವನ್ನು, ತಗುಳ್ದು–ಅನುಸರಿಸಿ.
೨೨. ಮಳೆಗಾಲದ ವರ್ಣನೆ: ಮೇಘಕಾಲದೊಳ್–ಮಳೆಗಾಲದಲ್ಲಿ, ದೆಸೆ–ದಿಕ್ಕು, ಪಸುರೇಱಿ–ಹಸುರು ಹತ್ತಿ ಎಂದರೆ ಬೆಳೆದ ಪೈರು ಪಚ್ಚೆಗಳಿಂದ ಹಸುರಾಗಿ, ಪಚ್ಚೆಯೊಳೆ– ಹಸುರುರತ್ನದಲ್ಲಿಯೇ, ಮುಚ್ಚಿ, ಮುಸುಂಕಿದ–ಹೊದಿಸಿದ, ಮಾೞ್ಕೆಯಾದುದು–ರೀತಿ ಯಾಯಿತು; ಆಗಸಂ–ಆಕಾಶವು. ಅಳಿ….ಯಾದುದು; ಅಳಿನೀಲ–ದುಂಬಿಯಂತೆ ಕಪ್ಪಗಿರುವ, ನೀಳಗಳ ಕಂಠ–ಶಿವನ ಕೊರಳಿನಂತೆ ಕರಿದಾಗಿರುವ, ತಮಾಳ–ಹೊಂಗೆಯ ಹಾಗೆ ಕರಿದಾಗಿ ರುವ, ವಿನೀಳ–ಅತಿ ನೀಲಿಬಣ್ಣದ, ನೀರದ ಪ್ರಸರ–ಮೋಡಗಳ ಸಮೂಹದಿಂದ, ವಿಭಾಸಿ ಯಾದುದು–ಪ್ರಕಾಶಿಸುವುದಾಯಿತು; ಸಮೀರಂ–ಗಾಳಿಯು, ಉದಾರ ಕದಂಬ ಕೇತಕೀ ಪ್ರಸರ ರಜಸ್ವರ ಪ್ರಕಟ ಪಾಂಸುಲಂ–ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಬರುತ್ತಿರುವ ಪರಾಗದಿಂದ, ಆದುದು–ಕೂಡಿದು ದಾಯಿತು;
೨೩. ಗಗನಮಂಡಳಂ–ಆಕಾಶ ಪ್ರದೇಶ, ಕರಿಯ ಮುಗಿಲ್ಗಳಿಂ–ಕಪ್ಪು ಮೋಡಗಳಿಂದ, ಒಪ್ಪಿರೆ– ಚೆಲ್ವಾಗಿರಲು; ವನಾಂತರಂ–ಕಾಡಿನ ಒಳಗು, ಸೋಗೆಯಿಂ–ನವಿಲುಗಳಿಂದ, ಎಸೆದೊಪ್ಪೆ–ಸೊಗಸಾಗಿರಲು; ತೋರ್ಪ–ತಲೆದೋರುವ, ಮೊಳೆಯುವ, ಮೊಳೆವುಲ್ಗಳಿನ್– ಮೊಳೆಯುವ ಹುಲ್ಲುಗಳಿಂದ, ಈ ಧರಣೀವಿಭಾಗಂ–ಈ ನೆಲದ ಭಾಗ, ಒಪ್ಪಿರೆ–ಸುಂದರ ವಾಗಿರಲು, ಪೊಸವೇಟಕಾಱರ–ಹೊಸ ಪ್ರಣಯಿಗಳ, ಎರ್ದೆಗಳ್–ಹೃದಯಗಳು, ಪೊಸಕಾರ ಪೊಡರ್ಪುಗಂಡು–ಹೊಸ ಮಳೆಗಾಲದ ವಿಜೃಂಭಣೆಯನ್ನು ನೋಡಿ, ಅದೇಂ ಕರಿತುವು– ಅದೇನು ಕಪ್ಪಗಾದವು, ಅದೇಂ ಕಲಂಕಿದುವು– ಅದೇನು ಕದಡಿದುವು, ಅದೇಂ ಕುೞಿ ಗೊಂಡವು–ಅದೇನು ಗುಣಿಗಳಾದುವು ಎಂದರೆ ಕುಗ್ಗಿದುವು; ಅದೇಂ ಕನಲ್ದುವೋ–ಅದೇನು ಕೆರಳಿದುವೋ! “ಪೊಡರ್–ಸ್ಫುರಣೇ’ –ಇದರ ಭಾವನಾಮ ಪೊಡರ್+ಪು=ಪೊಡರ್ಪು; ಕರಿತುವು ಎಂಬುದನ್ನು ‘ಕರಿ–ದಾಹೇ’ –ಸುಡುವುದು ಎಂಬ ಧಾತುವಿನಿಂದ ಬಂದದ್ದೆಂದು ಭಾವಿಸಿ, ಕರಿಕಾದುವು, ಇದ್ದಿಲಾದುವು ಎಂದೂ ಅರ್ಥ ಮಾಡಬಹುದು.
೨೪. ಭವಲಾಲಾಟ ವಿಲೋಚಾಗ್ನಿಶಿಖಿಯಿಂ–ಈಶ್ವರನ ಹಣೆಗಣ್ಣ ಉರಿಯ ಜ್ವಾಲೆ ಯಿಂದ, ಬೆಂದು–ಸುಟ್ಟು, ಅಳ್ಕಿ–ಸುಸ್ತಾಗಿ, ಮತ್ತಂ–ತಿರುಗಿಯೂ, ಮನೋಭವಂ–ಕಾಮನು, ಎೞ್ಚತ್ತೊಡೆ–ಎಚ್ಚರಗೊಂಡರೆ, ಎಂದರೆ ಪುನರುಜ್ಜೀವಿತನಾದರೆ, ಕಾಮಕಾಂತೆ–ಕಾಮನ ಹೆಂಡತಿ ರತಿ, ಬೞಿಯಂ–ಅನಂತರ, ತನ್ನಿಚ್ಚೆಯಿಂ–ತನ್ನ ಇಷ್ಟಕ್ಕನುಗುಣವಾಗಿ, ಮೆಚ್ಚಿ–ಮೆಚ್ಚಿ ಕೊಂಡು, ನವಿಲಿಂ–ನವಿಲುಗಳಿಂದಲೂ, ಕುಂದಂಗಳಿಂ–ಕುಂದ ಪುಷ್ಪಗಳಿಂದಲೂ, ಇಂದ್ರ ಗೋಪ ವಿಳಾಸಂಗಳಿಂ–ಕೆಂಪು ಮಿಂಚುಹುಳುಗಳ ಲೀಲೆಗಳಿಂದಲೂ, ಆಲಿಕಲ್ಲ ಪರಲಿಂ– ನೀರ್ಗಲ್ಲುಗಳ ಹರಳುಗಳಿಂದಲೂ, ಕಾರೊಳ್–ಮಳೆಗಾಲದಲ್ಲಿ, ಮಹೀಮಂಡಲಂ– ಭೂಮಂಡಲವು, ಬಣ್ಣವುರಂ ತೀವಿದ–ವರ್ಣಪೂರ ಎಂಬ ವಸ್ತ್ರದಿಂದ ಮುಚ್ಚಿದ, ಮಾೞ್ಕೆಯಾಯ್ತು–ತೆರನಾಯಿತು. ಬಣ್ಣವುರ (ಸಂ) ವರ್ಣಪೂರ ಎನ್ನುತ್ತಾನೆ ಕೇಶಿರಾಜ; ಅರ್ಥ ಅನಿರ್ದಿಷ್ಟ; ಬಣ್ಣಬಣ್ಣದ ಜಮಖಾನೆ, ನೆಲಕ್ಕೆ ಹಾಸುವ ಬಟ್ಟೆ ಎಂಬರ್ಥವಿರ ಬಹುದು; ಅಗ್ಗಳನ ಮೂರು ಪ್ರಯೋಗಗಳು ಇಂತಿವೆ(೧) ಹರಿನೀಳ ಸ್ಥಳಿಯೊಳ್ ಬಣ್ಣವುರಂ ಪರಿವೆತ್ತುದು ಬಗೆ ಮರುಳ್ವನ್ನೆವರಂ (೪–೬೩) (೨) ಕಟ್ಟಿದ ಪಲತೆಱದ ಸೂಸಕದ ನೆೞಲ್ ಕುಟ್ಟಿಮ ತಳದೊಳ್ ಪೊಳೆದೊಳೆ ಗಟ್ಟುತ್ತಲ್ಲಲ್ಲಿ ಬಣ್ಣವುರಮಂ ತೀವಲ್ (೬–೪೬); (೩) ಬೆಳ್ಮುಗಿಲ ಮೞೆಯಿದೆನೆ ಬಣ್ಣವುರಂ ಬಳಸಿರ್ದೊಡೆ ಸೊಗಯಿಸಿದುದು ಪಳಿಕಿನ ಪಟ್ಟವಣೆ ವೇದಿಕಾಧಿತ್ಯದೊಳ್ (೬–೫೨); ರುದ್ರಭಟ್ಟನ ಪ್ರಯೋಗ: ಆ ರತ್ನಾಕರಂ ಕೊಡೆ ಬಣ್ಣವುರಂ ತೀವಿದ ಮಾೞ್ಕೆಯಿಂದೆಸೆವಿನಂ ಚೆಲ್ವಾದನಬ್ಜೋದರಂ (೧–೪೯).
೨೫. ಪೊಳೆವಮರೇಂದ್ರ ಗೋಪದ–ಹೊಳೆವ ಕೆಂಪು ಮಿಂಚು ಹುಳುಗಳ, ಪಸುರ್ತೆಳ ವುಲ್ಗಳ–ಹಸುರಾದ ಎಳೆಯ ಹುಲ್ಲುಗಳ, ತಳ್ತ ಕಾರ್ಮುಗಿಲ್ಗಳ–ಸೇರಿಕೊಂಡ ಕರಿಮೋಡ ಗಳ, ಕಿಱುಗೊಂಕುಗೊಂಕಿದ–ಸಣ್ಣ ಸಣ್ಣ ಡೊಂಕುಗಳನ್ನುಳ್ಳ, ಪೊನಲ್ಗಳ–ಪ್ರವಾಹಗಳ, ಕೆಂಪು ಪಸುರ್ಪು ಕರ್ಪು ಬೆಳ್ಪು–ಕೆಂಪು ಹಸುರು ಕಪ್ಪು ಬಿಳಿ ಬಣ್ಣಗಳು, ಶಕ್ರಕಾರ್ಮುಕ ವಿಳಾಸ ಮಂ–ಕಾಮನಬಿಲ್ಲಿನ ಸೊಗಸನ್ನು, ಒಳಕೊಳೆ–ಒಳಕೊಂಡಿರಲು, ಕಾರ್ಮುಕಂ–ಮಳೆಗಾಲದ ಮುಂಭಾಗ, ಕಾಮನ ಕಾರ್ಮುಕದಂತೆ–ಮನ್ಮಥನ ಬಿಲ್ಲಿನಂತೆ ಎಂದರೆ ಕಬ್ಬಿನ ಬಿಲ್ಲಂತೆ, ಎರ್ದೆಗೊಂಡು–ಮನವನ್ನು ಸೂರೆಗೊಂಡು, ಏನ್ ಬೇಟದತ್ತಳಗಮನುಂಟುಮಾಡಿ ದುದೋ–ಪ್ರೇಮದ ಆಧಿಕ್ಯವನ್ನು ಏನು ಉಂಟುಮಾಡಿತೋ! ಅತ್ತಳಗ–ಆಧಿಕ್ಯ, ಅತಿಶಯ; ಮುಖ ಮುಕ;
ವಚನ : ತೊವಲ್ತು–ಚಿಗುರಿ; ಪಸಿಯ–ಹಸಿದಾದ, ನೇತ್ರಮಂ–ಬಟ್ಟೆಯನ್ನು; ಪಚ್ಚ ವಡಿಸಿದಂತೆ–ಹೊದಿಸಿದ ಹಾಗೆ; ಪದ್ಮರಾಗದ–ಕೆಂಪುರತ್ನದ; ಉಪಾಶ್ರಯಂ ಬಡೆದು– ಅವಲಂಬನವನ್ನು ಹೊಂದಿ; ಕಿಸುಗಾಡ–ಕೆಂಪುಮಣ್ಣಿನ ಕಾಡಿನ; ಒನಲಿಸುವಂತೆ–ಕೆರಳಿಸುವ ಹಾಗೆ; ಜರಿವೊನಲ್ಗಳುಂ–ಸರಿಯುವ ಪ್ರವಾಹಗಳು; ಇಲ್ಲಿಗೆ ಮಳೆಗಾಲದ ವರ್ಣನೆ ಮುಗಿ ಯುತ್ತದೆ. ಆ ಕಾಲದ ಪ್ರಕೃತಿಯಲ್ಲಿ ಕಾಣುವ ವಿವಿಧ ವರ್ಣಗಳ ವಿಲಾಸ ಪಂಪನ ಮನವನ್ನು ಮೆಚ್ಚಿಸಿವೆ; ಕೆಂಪು ಬಿಳುಪು ಕಪ್ಪು ನೀಲಿ ಹಸುರುಗಳ ಕಾಲ ಮಳೆಗಾಲ. ಈ ವರ್ಣನೆ ಸ್ವಾನು ಭವದಿಂದ ಬಂದಿದೆ; ಸ್ವಭಾವೋಕ್ತಿ. ಇದರಲ್ಲಿ ಕವಿಯ ಅಚ್ಚರಿ, ಹರ್ಷ, ಸೌಂದರ್ಯದೃಷ್ಟಿಗಳು ನವಿಲುಗರಿಯ ವಿಲಾಸದಿಂದ ರಂಜಿಸುತ್ತಿವೆ.
೨೬. ಕಾಮ್ಯಕವನ ಪ್ರವೇಶ:– ದೆಸೆಗೆತ್ತಂ–ಎಲ್ಲೆಲ್ಲಿಯೂ, ದಿಕ್ಕುದಿಕ್ಕಿಗೆ, ಗಜಱುತ್ತು ಮಿರ್ಪ–ಗರ್ಜಿಸುತ್ತಿರುವ, ಪುಲಿಯಿಂ–ಹುಲಿಗಳಿಂದಲೂ, ನೀಲಾಭ್ರಮಂ–ಕರಿ ಮೋಡವನ್ನು, ದಂತಿಗೆತ್ತು–ಆನೆಯೆಂದು ಭ್ರಮಿಸಿ, ಸಿಡಿಲ್ದು–ಸಿಡಿದು; ಆಗಸಕೆ–ಆಕಾಶಕ್ಕೆ, ಎಯ್ದೆಪಾಯ್ವ– ಮುಟ್ಟುವಂತೆ ನುಗ್ಗುವ, ಪಲವುಂ ಸಿಂಗಂಗಳಿಂ–ಹಲವು ಸಿಂಹಗಳಿಂದಲೂ, ಎತ್ತ– ಎಲ್ಲೆಲ್ಲಿಯೂ, ಅಗುರ್ವಿಸಿ–ಭಯಪಡಿಸಿ, ಪಾಯ್ವ–ಹರಿಯುವ, ಅರ್ವಿಗಳಿಂ–ಬೆಟ್ಟದ ಝರಿಗಳಿಂದಲೂ, ಮದಾಂಧ ವನಗಂಧೇಭಂಗಳಿಂ–ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ, ಕಾಮ್ಯಕವನಂ–ಕಾಮ್ಯಕವೆಂಬ ಅರಣ್ಯ, ಕಣ್ಗಗುರ್ವಿಸೆಯುಂ–ಕಣ್ಣುಗಳಿಗೆ ಭಯವನ್ನುಂಟು ಮಾಡಿಯೂ, ಚಿತ್ತದೊಳ್–ಮನಸ್ಸಿನಲ್ಲಿ, ಅತಿ ಪ್ರೀತಿಯಂ–ಪ್ರೀತಿಯ ಹೆಚ್ಚಳವನ್ನು, ಮಾಡಿತ್ತು–ಮಾಡಿತು. ಅವಿ=(ತ) ಅರುವಿ, (ತು) ಅರ್ಬಿ=(ಹೊಸಗನ್ನಡ) ಅಬ್ಬಿ.
ವಚನ : ತದ್ವನಾಧಿಪತಿಯಪ್ಪ–ಆ ಕಾಡಿಗೊಡೆಯನಾದ; ಪುಗಲೀಯದೆ–ಪ್ರವೇಶಿಸು ವುದಕ್ಕೆ ಬಿಡದೆ.
೨೭. ಕಿಮ್ಮೀರನ ವಧೆ: ಮಸಿಯಂ ಪುಂಜಿಸಿದಂತುಟಪ್ಪ–ಮಸಿಯನ್ನು ರಾಶಿ ಮಾಡಿ ದಂತಿರುವ, ತನು–ಮೈ, ನೀಳಾಂಭೋಧರಂ–ಕರ್ಮೋಡ; ದಾಡೆಗಳ್–ಕೋರೆಹಲ್ಲುಗಳು, ಪೊಸಮಿಂಚು–ಹೊಸದಾದ ಮಿಂಚುಗಳು; ಉಗ್ರವಿಲೋಚನಂ–ಭಯಂಕರವಾದ ಕಣ್ಣುಗಳು, ದಿವಿಜಗೋಪಂ–ಕೆಂಪು ಮಿಂಚುಹುಳುಗಳು: ಕಾರೊ–ಮಳೆಗಾಲವೋ, ಮೇಣ್–ಅಥವಾ, ಕಾಳರಕ್ಕಸನೋ–ಕಪ್ಪಾದ ರಾಕ್ಷಸನೋ, ಪೇೞ್–ಹೇಳು, ಎನೆ–ಎನ್ನಲು, ಬಂದು ತಾಗೆ– ಬಂದು ಸಂಘಟ್ಟಿಸಲು, ಭೀಮ–ಭೀಮನು, ಗದೆಯಂ ಕೊಂಡೆಯ್ದೆ–ಗದೆಯನ್ನು ತೆಗೆದು ಕೊಂಡು ಸಮೀಪಕ್ಕೆ ಹೋಗಿ, ಸಿಡಿಲ್ದು–ಸಿಡಿದು, ಸಿಡಿಲ್ ಪೊಯ್ದವೊಲಾಗೆ–ಸಿಡಿಲು ಹೊಡೆ ದಂತಾಗಲು, ವೀರನಂ–ವೀರನಾದ, ಕಿಮ್ಮೀರನಂ–ಕಿಮ್ಮೀರನನ್ನು, ಇಳೆಯೊಳ್–ನೆಲದ ಮೇಲೆ, ಪೊಯ್ದಂ–ಅಪ್ಪಳಿಸಿದನು.
ವಚನ : ಆಟವಿಕರ–ವನವಾಸಿಗಳ, ಅಟ್ಟಟ್ಟಿಯೊಳಂ–ದೌತ್ಯ ಮುಂತಾದ ಸೇವೆ ಗಳಲ್ಲಿಯೂ; ಮಸುಳಿಸೆ–ಕಂದಿಸಲು;
೨೮. ಪಿರಿಯ ಮರಂಗಳೆ ಮಾಡಮಾಗೆ–ಹಿರಿಯಮರಗಳೇ ಮನೆಯಾಗಲು, ಪೊಳೆವೆಳೆ ದಳಿರ್ಗಳೆ ಸಜ್ಜೆಯಾಗೆ–ಹೊಳೆವ ಎಳೆಯ ಚಿಗುರುಗಳೇ ಹಾಸಿಗೆಯಾಗಲು, ಪಿರಿಯ ಮಡುಗಳೆ ಮಜ್ಜನಮಾಗೆ–ಹಿರಿಯ ಮಡುಗಳೇ ಸ್ನಾನತೀರ್ಥವಾಗಲು, ಪೊಸನಾರೆ ದೇವಾಂಗ ವಸ್ತ್ರಮಾಗೆ– ಹೊಸದಾದ ನಾರುಗಳೇ ರೇಷ್ಮೆಯ ವಸ್ತ್ರಗಳಾಗಲು, ಪರೆದ ತಱಗೆಲೆಯೆ ಪರಿಯಣಮಾಗೆ– ಚೆದರಿದ ಒಣ ಎಲೆಗಳೇ ಊಟದ ತಟ್ಟೆಗಳಾಗಲು, ಪಣ್ಪಲಮೆತ್ತಿದ ಬೋನಮಾಗೆ–ಹಣ್ಣು ಹಂಪಲುಗಳೇ ಬಡಿಸಿದ ಅನ್ನವಾಗಲು, ಪಾಂಡವರಾ–ಪಾಂಡವರ, ಬನದೊಳಿರ್ಪಿರವು– ಕಾಡಿನಲ್ಲಿರುವ ವಾಸ, ಸಿರಿಯ–ಐಶ್ವರ್ಯದ, ಮಹಿಮೆಯಂ–ಮಹತ್ವವನ್ನು, ಮೆಱೆಯಲ್– ಪ್ರಕಟಿಸಲು, ಏನಾರ್ತುದೊ–ಏನು ಸಮರ್ಥವಾಯಿತೋ! ಬೋನ (ಸಂ) ಭೋಜನ.
೨೯. ಪಾಸಱೆ ಸಿಂಹಪೀಠಂ–ಹಾಸುಬಂಡೆಯೆ ಸಿಂಹಾಸನ, ಅಳಿನೀರುತಿ ಮಂಗಳಗೀತಿ– ದುಂಬಿಗಳ ಶಬ್ದ ಮಂಗಳ ಸಂಗೀತ, ಭೂತಳಂಪಾಸು–ನೆಲವು ಹಾಸಿಗೆ, ಮೃಗವ್ರಜಂ– ಪ್ರಾಣಿಗಳ ಗುಂಪು, ಪರಿಜನಂ–ಸೇವಕರು, ಪೊದಱ್–ಹೊದರುಗಳು, ಓಲಗಸಾಲೆ– ಆಸ್ಥಾನಮಂಟಪ, ಮೊಕ್ಕಳಂ ಬೀಸುವ ಗಾಳಿ–ವಿಶೇಷವಾಗಿ ಬೀಸುವ ಗಾಳಿಯು, ಚಾಮರದ ಗಾಳಿಯೆನಲ್–ಚಾಮರದ ಗಾಳಿಯೆನ್ನಲು, ದೊರೆವೆತ್ತು–ಸಮಾನತೆಯನ್ನು ಹೊಂದಿ, ಪಾಂಡುಪುತ್ರರಾ–ಪಾಂಡವರ, ವನವಾಸ ನಿವಾಸಮೆ–ಅರಣ್ಯವಾಸದ ವಸತಿಯೆ, ಏಂ ಸುಖಾ ವಾಸ ನಿಮಿತ್ತಮಾಯ್ತೊ–ಏನು ಸುಖವಸತಿಗೆ ಕಾರಣವಾಯಿತೋ! ಹರ್ಷಕೃತ ‘ನಾಗಾನಂದ ನಾಟಕ’ ದ “ಶಯ್ಯಾಶಾದ್ವಲಮಾಸನಂ….” ಎಂಬ ಪದ್ಯವನ್ನು ಹೋಲಿಸಿ. (ಅಂಕ ೪– ಪದ್ಯ ೨)
ವಚನ : ತಱುಂಬುವಂತಿರ್ದ–ಅಡ್ಡಗಟ್ಟುವ ಹಾಗೆ ಇದ್ದ, ಶಿಖರಿ–ಬೆಟ್ಟ; ಬಳ್ವಳ ಬಳೆದು–ಅತಿಶಯವಾಗಿ ಬೆಳೆದು; ಕಾಡೆರ್ಮೆಯ–ಕಾಡೆಮ್ಮೆಯ; ಮೂಂಕಿಱಿವ–ವಾಸನೆ ನೋಡಲು ಮೂಗನ್ನು ಚಾಚುವ; ಮರವಾಯ್ವ–ಮರಕ್ಕೆ ಡಿಕ್ಕಿ ಹೊಡೆಯುವ, ನುಗ್ಗುವ; ಪಾಂಡವರು ದ್ವೈತವನಕ್ಕೆ ಬರುವರು.
೩೦. ಈ ಬನಂ–ಈ ಕಾಡು, ಆರ್ಗಂ–ಯಾರಿಗೂ, ಪುಗಲಿಲ್ಲ–ಪ್ರವೇಶ ಮಾಡಲಾಗುವು ದಿಲ್ಲ; ನೆಲಸಲ್–ಇರಲು, ಇಂಬು–ಅವಕಾಶ; ಉಡಲ್–ಉಡಲು, ನಾರುಂಟು–ನಾರುಮಡಿ ಇದೆ; ಮೆಲ್ಲೆ–ತಿನ್ನಲು, ಕೊಂಬುಗಳೊಳ್–ಮರದ ರೆಂಬೆಗಳಲ್ಲಿ, ಪಣ್ಪಲಮುಂಟು–ಹಣ್ಣು ಹಂಪಲಿವೆ; ಮೀಯೆ–ಸ್ನಾನಮಾಡಲು, ಕುಡಿಯಲ್–ಕುಡಿಯಲು, ನೀರುಂಟು–ನೀರಿದೆ; ಪದ್ಮಾಕರಾಳಿಗಳೊಳ್–ತಾವರೆಯ ಕೊಳಗಳ ಸಾಲುಗಳಲ್ಲಿ, ತಣ್ಪುಗಳುಂಟು–ತಂಪುಗಳಿವೆ; ಹೇಮಲತಿಕಾ ಕುಂಜಂಗಳೊಳ್–ಹೊಂಬಣ್ಣದ ಬಳ್ಳಿಯ ಹೊದರುಗಳಲ್ಲಿ, ನಮ್ಮ ನನ್ನಿಗೆ– ನಮ್ಮ ಸತ್ಯವಾಕ್ಯಕ್ಕೆ, ಬನ್ನಂ ಬರಲೀಯದೆ–ಭಂಗವುಂಟಾಗದ ಹಾಗೆ, ಈ ಬನದೊಳಿರ್ದು– ಈ ಕಾಡಿನಲ್ಲಿದ್ದು, ಏಂ ಕಾಲಮಂ ಪಾರೆವೇ–ಏನು ಕಾಲವನ್ನು ನಿರೀಕ್ಷಿಸೆವೇ? ನಿರೀಕ್ಷಿಸೋಣ ಎಂದು ಅಭಿಪ್ರಾಯ.
ವಚನ : ಏಕ ಕಾರ್ಯಾಳೋಚನ ಪರರಾಗಿ–ಒಂದೇ ಕಾರ್ಯದ ಆಲೋಚನೆಯಲ್ಲಿ ಆಸಕ್ತರಾಗಿ; ಅದ್ವೈತ ಸಾಹಸರ್–ಎರಡಿಲ್ಲದ ಸಾಹಸಿಗರು; ಛಿದ್ರಿಸಲೆಂದು–ರಹಸ್ಯವನ್ನು ಭೇದಿಸಲೆಂದು; ಮೆಯ್ಗರೆದು–ಮೈಮರಸಿಕೊಂಡು.
೩೧. ಮೃಗಯಾಕ್ರೀಡೆಗೆ–ಬೇಟೆಯ ಆಟಕ್ಕೆ, ಪಾಂಡುರಾಜತನಯರ್–ಪಾಂಡವರು, ಪೋಪನ್ನೆಗಂ–ಹೋಗುತ್ತಿರಲು, ಬಂದು, ತೊಟ್ಟಗೆ–ಬೇಗನೆ, ಪಾಂಚಾಳಿಯನೆತ್ತಿ–ದ್ರೌಪದಿ ಯನ್ನು ಎತ್ತಿಕೊಂಡು, ತನ್ನರಥದೊಳ್–ತನ್ನ ರಥದಲ್ಲಿ, ತಂದಿಟ್ಟುಕೊಂಡು, ಉಯ್ದಂ– (ಸೈಂಧವನು) ತೆಗೆದುಕೊಂಡು ಹೋದನು. ಅನ್ನೆಗಂ–ಅಷ್ಟರಲ್ಲಿ, ಆ ಪಡೆಮಾತುಗೇಳ್ದು– ಆ ಸುದ್ದಿಯನ್ನು ಕೇಳಿ, ಅತಿಬಳರ್ ಭೀಮಾರ್ಜುನರ್–ಅತಿ ಬಲರಾದ ಭೀಮನೂ ಅರ್ಜುನನೂ, ಕಾಯ್ಪು–ಕೋಪವು, ಕೈಮಿಗೆ–ಅಧಿಕವಾಗಲು, ಬೆನ್ನಂಪರಿದು–ಬೆನ್ನಹಿಂದೆ ಓಡಿ, ಎಲವೋ–ಎಲೋ, ಎತ್ತಪೋಪೆ–ಎಲ್ಲಿ ಹೋಗುವೆ, ಪೋ ಪೋಗಲ್–ಹೋಗಬೇಡ, ಹೋಗಬೇಡ, ಎಂದು–ಹೇಳುತ್ತ, ಎಯ್ದಿದರ್–ಸಮೀಪಿಸಿದರು.
ವಚನ : ಗದಾಘಾತ–ಗದೆಯ ಹೊಡೆತ; ಬಾಣಪಾತ–ಬಾಣಗಳು ಎರಗುವಿಕೆ; ಕೋಡಗ ಗಟ್ಟು ಗಟ್ಟಿ–ಕಪಿಯನ್ನು ಕಟ್ಟುವ ಕಟ್ಟಿನಲ್ಲಿ ಕಟ್ಟಿ; ಬಿಲ್ಲ ಕೊಪ್ಪಿನೊಳ್–ಬಿಲ್ಲಿನ ತುದಿಗಳಿಂದ;
೩೨. ಲಾಕ್ಷಾಗೃಹಮಂ–ಅರಗಿನ ಮನೆಯನ್ನು, ಪುಗಿಸಲುಂ–ಹೊಗಿಸುವುದಕ್ಕೂ, ಅಕ್ಷಕ್ರೀಡೆಯೊಳೆ–ಪಗಡೆಯಾಟದಲ್ಲೇ, ಧರಣಿಯಂ–ಭೂಮಿಯನ್ನು, ಕೊಳಲುಂ– ವಶಮಾಡಿಕೊಳ್ಳುವುದಕ್ಕೂ, ಪಿಂಗಾಕ್ಷಂಗೆ–ದುರ್ಯೋಧನನಿಗೆ, ವೇೞ್ದು–ಹೇಳಿ, ಸೈರಿಸದೆ– ಸಹಿಸಿಕೊಳ್ಳಲಾಗದೆ, ಆಕ್ಷೇಪದಿಂ–ತೆಗಳಿಕೆಯಿಂದ, ಕೇಡಿಗತನದಿಂದ, ಎಮ್ಮಂ–ನಮ್ಮನ್ನು, ಇಲ್ಲಿ, ಛಿದ್ರಿಸಬಂದಯ್–ಭೇದಿಸಲು ಬಂದೆಯಾ!
ವಚನ : ಏವಂದಪುದು–ಏನು ಬರುತ್ತದೆ; ಒಂದು ದೆವಸದನುವರದೊಳ್–ಒಂದು ದಿನದ ಯುದ್ಧದಲ್ಲಿ; ಗೆಲ್ವೆನಕ್ಕೆ–ಗೆಲ್ಲುತ್ತೇನೆಂಬುದಾಗಲಿ; ದಾಯಿಗರ–ದಾಯಾದಿಗಳ; ಪಗೆಯಿಱಿಯ ಬಂದರ ಮೂಗನರಿದರೆಂಬಂತೆ–ಹಗೆಯನ್ನು ಕೊಲ್ಲಬಂದವರ ಮೂಗನ್ನು ಕತ್ತರಿಸಿದರೆಂಬಂತೆ;
೩೩. ಭೀಷ್ಮ–ಭೀಷ್ಮನೇ, ಮಿಡುಕದೆ–ಚಲಿಸದೆ, ನೋಡುತಿರು; ಕುಂಭಜ–ದ್ರೋಣನೇ, ಸುರ್ಕ್ಕಿರು–ಮುರುಟಿಕೊಂಡಿರು; ಕರ್ಣ–ಕರ್ಣನೇ, ಮಿಕ್ಕು–ಮೀರಿ, ಮಾರ್ನುಡಿಯದೆ– ಪ್ರತಿ ಹೇಳದೆ, ಮೂಗುವಟ್ಟಿರು–ಮೂಗನಾಗಿರು; ಗುರುಪ್ರಿಯನಂದನ–ಅಶ್ವತ್ಥಾಮನೇ, ಕೂಗಡಂಗದಿರ್ದೊಡೆ–ನಿನ್ನ ಕೂಗು ಅಡಗದೆ ಇದ್ದರೆ, ಬರ್ದುಕಾವುದು–ಬದುಕುವುದೇನ್, ಇರ್–ಇರು; ಪೊಡರ್ದೊಡೆ–ವಿಜೃಂಭಿಸಿದರೆ, ಈಗಡೆ ಕೊಂದಪೆಂ–ಈಗಲೇ ಕೊಲ್ಲುತ್ತೇನೆ; ಎಂದು–ಎಂಬುದಾಗಿ, ಕೂಡೆ–ಕೂಡಲೇ, ಕಣ್ಗಿಡೆ ಜಡಿದು–ಅಧೀರರಾಗುವಂತೆ ಗದರಿಸಿ, ಆ ಖಚರನ್– ಆ ಚಿತ್ರಾಂಗದನೆಂಬ ಗಂಧರ್ವನು, ಪರಮಾಣು ಮಾರ್ಗದಿಂ–ಆಕಾಶ ಮಾರ್ಗ ವಾಗಿ, ಇರ್ವರುಮಂ–ದುರ್ಯೋಧನ ದುಶ್ಶಾಸನರನ್ನು, ಉಯ್ದಂ–ತೆಗೆದುಕೊಂಡು ಹೋದನು.
ವಚನ : ನೆಗೞ್ತೆಯ ಬೀರರೆಲ್ಲಂ–ಪ್ರಸಿದ್ಧರಾದ ಶೂರರೆಲ್ಲ; ಬಡವರ ಪಿತರರಂತೆ– ಬಡವರ ಪಿತೃಗಳಂತೆ; ಮಿಳ್ಮಿಳ ನೋಡುತ್ತಿರೆ–ಮಿಳಮಿಳ ನೋಡುತ್ತಿರಲು, ಮಿಕ್ಕುದುಂಡ ರಂತೆ–ಉಳಿದದ್ದನ್ನು, ಎಂಜಲನ್ನು ತಿಂದವರ ಹಾಗೆ; ಬಿಲ್ಲುಂ ಬೆಱಗುಮಾಗಿರೆ–ಏನು ಮಾಡ ಬೇಕೆಂದು ತೋರದವರಾಗಿರಲು; ಬಾಯೞಿದು–ಬಾಯಿ ಸೋತುಹೋಗುವ ಹಾಗೆ, ಪುಯ್ಯಲಿ ಡುತಂ–ಕೂಗಿಕೊಳ್ಳುತ್ತ, ಆರ್ತಧ್ವನಿಮಾಡುತ್ತ; ಕವಿದು ಪಟ್ಟು–ಎರಗಿ ಬಿದ್ದು.
೩೪. ನೋಂತರ–(ಕೊಲ್ಲಬೇಕೆಂದು) ವ್ರತ ಮಾಡಿದವರ, ಪಗೆವರಂ–ಹಗೆಗಳನ್ನು, ಎೞ್ತಿಱಿದಂತಾಯ್ತು–ಎತ್ತು ಇರಿದ ಹಾಗಾಯಿತು, ಎಂದಿರದೆ–ಎಂದು ಸುಮ್ಮನೆ ಇರದೆ, ಪುರುಷಾಕಾರದ–ಪುರುಷ ಪ್ರಯತ್ನದ, ಪೆಂಪಂ–ಹಿರಿಮೆಯನ್ನು, ಚಿಂತಿಸಿ–ಭಾವಿಸಿ, ಮಹೀಶನಂ–ರಾಜ ದುರ್ಯೋಧನನನ್ನು, ಎಂತಪ್ಪೊಡಂ–ಹೇಗಾದರೂ, ತರಿಸಿ, ಎನಗೆ– ನನಗೆ, ಪುರುಷ ಭಿಕ್ಷಮನಿಕ್ಕಿಂ–ಗಂಡನನ್ನು ಭಿಕ್ಷೆಯಾಗಿ ಕೊಡಿರಿ. ಈ ಪದ್ಯವನ್ನು ಕರ್ಣ ಪಾರ್ಯನ “ಅಂತಕಸುತ ಕರುಣಿಸಿ ಮತ್ಕಾಂತನನೆಂತುಂ ತರಲ್ಕೆವೇೞ್ಪುದು ನೀನಿಂ, ನೋಂತರ ಪಗೆವರನೆತ್ತಿಱಿದಂತಿರದಿರು ಕುರುಕುಳಕ್ಕೆ ಬನ್ನಂ ಬರ್ಕುಂ” ಎಂಬ ಪದ್ಯದೊಡನೆ ಹೋಲಿಸಿ ನೋಡಿ. ಇಲ್ಲಿ ಬರುವ ಗಾದೆಯ ಅಭಿಪ್ರಾಯ ಸ್ಪಷ್ಟತೆಗಾಗಿ, “ನಾವು ಕೊಲುವೆವೆಂಬ ಹಗೆಯು ಮನ್ನಿಗರಿಂ ಸಾವ ಹಡೆದು ಹೋಗುವುದು ದೇವ ಕೇಳತಿಹಿತವೆಮಗಲ್ಲ” ಎಂಬ ಮಂಗರಸನ ಪದ್ಯಭಾಗವನ್ನು ನೋಡಬಹುದು.
ವಚನ : ಪುಯ್ಯಲಿಡುವ–ಹುಯ್ಯಲಿಡುವ, ಅಳುವ; ಪುಯ್ಯಲಂ–ಆರ್ತನಾದವನ್ನು.
೩೫. ಪಿರಿದುಂ ಕಾಯ್ಪಿನೊಳ್–ಹಿರಿದಾದ ಕೋಪದಲ್ಲಿ, ಎಯ್ದೆ–ಚೆನ್ನಾಗಿ, ಕಾಯ್ವ– ಕೋಪಿಸುವ, ಸಮಕಟ್ಟು–ಏರ್ಪಾಡು, ಇಂ–ಇನ್ನು, ದೋಷಮಲ್ತೆ–ದೋಷವಲ್ಲವೆ, ಅಕ್ಕ–ಅಕ್ಕನೇ; ಮಚ್ಚರಮುಂ–ಮತ್ಸರವೂ, ಮೋಘ [ಮೆ] ಡಂಬಡುಂ–ವ್ಯರ್ಥವಾದ ಎಡ ವಟ್ಟುತನವೂ, ಕಲುಷಮುಂ–ವೈರವೂ, ಮುನ್ನುಳ್ಳದು–ಮೊದಲು ಇರುವುವಾಗಿದೆ; ಅಂತೆ ಎತ್ತಿಯುಂ–ಹಾಗೆ ಅವನ್ನು ಈಗ ಎತ್ತಿಕೊಂಡು, ಪೊರೆಯುಂ–ರಕ್ಷಣೆಯೂ, ಪಂಥಮುಂ– ಮಾರ್ಗವೂ, ಇಲ್ಲದಂತೆ–ಇಲ್ಲದಿರುವ ಹಾಗೆ, ಮನದೊಳ್–ಮನಸ್ಸಿನಲ್ಲಿ, ನಿಷ್ಕಾರಣಂ–ಕಾರಣ ವಿಲ್ಲದೆ, ಕಾಯ್ವ [ರೇಂ]–ಕೋಪಿಸುತ್ತಾರೇನು, ಪರಚಿಂತಾಕರ–ಅನ್ಯರಿಗೆ ಚಿಂತೆಯನ್ನುಂಟು ಮಾಡುವವನೇ, ಏಹಿ–ಹೋಗು, ಎಂಬ ನುಡಿಯಂ–ಎಂಬ ಮಾತನ್ನು, ಮುಂ ಕೇಳ್ದೆನಿ ಲ್ಲಾಗದೇ–ನಾನು ಮೊದಲು ಕೇಳಿದವನಾಗಲಿಲ್ಲವೇ? ಎಂದರೆ ಕೇಳಿದ್ದೇನೆ. ಈ ಪದ್ಯದ ಅನ್ವಯ ತಾತ್ಪರ್ಯಗಳು ಕೊಂಚ ಕ್ಲೇಶಕರವಾಗಿವೆ.
ವಚನ : ತನ್ನೊಳೆ ಬಗೆದು–ತನ್ನಲ್ಲಿಯೇ ಭಾವಿಸಿ;
೩೬. ಅದರ್ಕೆ–ಅದಕ್ಕಾಗಿ, ಬಾಷ್ಪಜಲಮಂ–ಕಣ್ಣೀರನ್ನು, ಸುರಿಯಲ್ಬೇಡ–ಸುರಿಸ ಬೇಡ; ನಿನ್ನಾಣ್ಮನಂ ನಿನ್ನೊಳಿಂದಿರದಾಂ ಕೂಡುವೆಂ–ನಿನ್ನ ಗಂಡನನ್ನು ನಿನ್ನೊಡನೆ ಇಂದು ಸೇರಿಸುತ್ತೇನೆ; ಎಮ್ಮೊಳಾದ ಕಲಹಕ್ಕೆ–ನಮ್ಮನಮ್ಮಲ್ಲಿಯೇ ಉಂಟಾದ ಜಗಳಕ್ಕೆ, ಕೇಳ– ಕೇಳು, ಕೌರವರ್ ನೂರ್ವರೆ ದಲ್–ಕೌರವರು ನೂರು ಜನರೇ, ದಿಟ; ಆಮುಂ–ನಾವೂ, ಅಯ್ವರೆ ದಲ್–ಐವರೇ, ನಿಜ; ಮತ್ತೊರ್ವರೊಳ್–ಬೇರೊಬ್ಬರಲ್ಲಿ, ತೊಟ್ಟ–ಸಂಘಟಿಸಿದ, ಸಂಗರರಂಗಕ್ಕೆ–ಯುದ್ಧಭೂಮಿಗೆ, ಜಸಕ್ಕೆ–ಕೀರ್ತಿಗೆ, ಕೂಡುವೆಡೆಯೊಳ್–ಸೇರುವ ಸಂದರ್ಭದಲ್ಲಿ, ಆವ್–ನಾವು, ನೂಱಯ್ವಲ್ಲವೇ–ನೂರಯ್ದು ಜನರಲ್ಲವೇ? ವ್ಯಾಸ ಭಾರತದಲ್ಲಿ “ಪರೈಃ ಪರಿಭವೇ ಪ್ರಾಪ್ತೇ ವಯಂ ಪಂಚೋತ್ತರಂ ಶತಂ । ಪರಸ್ಪರ ವಿರೋಧೇತು ವಯಂ ಪಂಚ ಶತಂ ತು ತೇ ॥” ಎಂದಿರುವ ಶ್ಲೋಕವನ್ನು ನೋಡಬಹುದು; ಇದೇ ಅಭಿಪ್ರಾಯವನ್ನೇ ‘ಕಲುಷದಿನೆಮ್ಮೊಳ್ ಕಲಹಂ ಘಟಿಯಿಸಿದೊಡೆ ನೂರ್ವರವರ್ಗಳಯ್ವರೆ ನಾಮುಂ । ಚಲದಿಂ ಧನ್ಯರೊಳಾದೊಡೆ ಕಲಹಂ ನೂಱಯ್ವರಲ್ಲಮೇ ನಾಮೆಲ್ಲಂ” ಎಂದು ಕರ್ಣಪಾರ್ಯನೂ, “ಧುರದೊಳಗವರು ನೂರ್ವರು ನಾವೈವರು ಪರಬಾಧೆಯಾರಿಗೆಸಗಲು ನಿರುತದಿ ನಾವು ನೂರೈವರದಱಿನಿದ ಪರಿಹರಿಪುದು ಮತವೆಂದು” ಎಂದು ಮಂಗರಸನೂ ಅನುವಾದಿಸಿದ್ದಾರೆ.
ವಚನ : ಪಾೞಿಯ–ಧರ್ಮದ, ಪಸುಗೆಯಂ–ವಿವೇಕವನ್ನು; ಪೂಣ್ದಬೆಸನಂ–ಪ್ರತಿಜ್ಞೆ ಮಾಡಿದ ಕೆಲಸವನ್ನು; ಕರಮಾಸೆವಟ್ಟು–ಬಹು ಆಶೆಯಿಂದ ಕೂಡಿ.
೩೭. ನಿಮ್ಮಣ್ಣನಂ ಸುಯೋಧನನಂ–ನಿಮ್ಮ ಅಣ್ಣನಾದ ದುರ್ಯೋಧನನನ್ನು, ಗಂಧರ್ವರ ಪಡೆ–ಗಂಧರ್ವರ ಸೈನ್ಯ, ಪಿಡಿದುಯ್ದುದು ಗಡ–ಹಿಡಿದುಕೊಂಡು ಹೋಯಿ ತಲ್ಲವೆ? ನಮಗೆ, ಇದಂ–ಇದನ್ನು, ಕಡೆಗಣಿಸಲಾಗ–ಉಪೇಕ್ಷೆ ಮಾಡಲಾಗದು, ಆತನ ಸೆಱೆಯಂ–ಅವನ ಸೆರೆಯನ್ನು, ಬೇಗಂ–ಬೇಗನೆ, ಬಿಡಿಸಿ, ತರ್ಪುದು–ತರುವುದು.
ವಚನ : ಎಲ್ಲಿವೊಕ್ಕೊಡಂ–ಎಲ್ಲಿ ಹೊಕ್ಕರೂ; ತವದೊಣೆಗಳಂ–ಅಕ್ಷಯವಾದ ಬತ್ತಳಿಕೆ ಗಳನ್ನು; ಜೇವೊಡೆದು–ಹೆದೆಯನ್ನು ಮೀಟಿ, ಟಂಕಾರ ಮಾಡಿ; ಗಂಧರ್ವರ ಪೋಪ ಬೞಿಯಂ–ಗಂಧರ್ವರು ಹೋಗುವ ದಾರಿಯನ್ನು; ಜಲಕ್ಕನೆ ಕಂಡು–ವಿಶದವಾಗಿ ನೋಡಿ.
೩೮. ಕೊಳ್ಕೊಳ್–ತಗೋತಗೋ, ಎಂದೆಚ್ಚೊಡೆ–ಎಂದು ಬಾಣಪ್ರಯೋಗ ಮಾಡಿದರೆ, ವಿಳಯೋಳ್ಕದ ತೆಱದಿಂದೆ–ಪ್ರಳಯಕಾಲದ ಉಲ್ಕೆಯ ಹಾಗೆ, ಮುಸುಱಿ–ಮುತ್ತಿ ಕೊಂಡು, ದಿವ್ಯಾಸ್ತ್ರಚಯಂಗಳ್–ದಿವ್ಯವಾದ ಬಾಣಸಮೂಹ, ಕೊಳೆ–ನಾಟಲು, ಗಾಂಧರ್ವ ಬಲಂಗಳ್–ಗಂಧರ್ವ ಸೈನ್ಯಗಳು, ಮಿಟ್ಟೆಗೊಂಡ–ಮಣ್ಣುಹೆಂಟೆ ತಗುಲಿದ, ಚಿಟ್ಟೆಯ ತೆಱದಿಂ–ಚಿಟ್ಟೆಯ ಹುಳುವಿನ ಹಾಗೆ, ಕೆಡೆದುವು–ಬಿದ್ದುವು; ಮಿಟ್ಟೆ ಮೃತ್ತಿಕಾ ಪ್ರಾ ಮಿತ್ತಿಆ, ಮೀಟ್ಟಿ; ಮಟ್ಟಿ, ಮಾಟಿ ಎಂದೂ ಹಿಂದಿಯಲ್ಲುಂಟು.
೩೯. ಎಮ್ಮಂ ಪಿಡಿದೆೞೆವಂದಿನ–ನಮ್ಮನ್ನು ಹಿಡಿದು ಎಳೆಯುವ ಆ ದಿವಸದ, ನಿಮ್ಮದಟು ಗಳ್–ನಿಮ್ಮ ಪರಾಕ್ರಮಗಳು, ಈಗಳ್–ಈಗ, ಎತ್ತವೋದುವೊ–ಎಲ್ಲಿ ಹೋದುವೊ, ಪಿಡಿವಟ್ಟು–ಸೆರೆಯಾಗಿ, ಅಮ್ಮ–ಅಪ್ಪನೇ, ಬೞಲ್ದಿರೆ–ಆಯಾಸಗೊಂಡಿರೇ! ನಿಮ್ಮಳವಂ– ನಿಮ್ಮ ಶಕ್ತಿಯನ್ನು, ಕಂಡಿರೆ–ಕಂಡಿರಾ! ನಿಮಗಂ–ಅಂಥ ನಿಮಗೂ, ಈಗಳ್–ಈಗ, ಈ ಎಡರಾಯ್ತೇ–ಈ ತೊಂದರೆ ಉಂಟಾಯಿತೇ !
ವಚನ : ಸಾಯೆ ಸರಸಂ ನುಡಿದು–ಸಾಯುವಂತೆ ಸರಸವಾಗಿ ಹೇಳಿ; ಒಪ್ಪುಗೊಳ್– ಸ್ವೀಕರಿಸು; ದಾಡೆಗಳೆದ–ಹಲ್ಲುಕಿತ್ತ, ಕುಳಿಕನಂತೆಯುಂ–ಕುಳಿಕ ಎಂಬ ಮಹಾಸರ್ಪದ ಹಾಗೂ; ಗಳಿತ ಗರ್ವನಾಗಿ–ಸೋರಿಹೋದ ಗರ್ವವುಳ್ಳವನಾಗಿ; ನಯಜ್ಞನಾಗಿ–ನೀತಿಯನ್ನು ಬಲ್ಲವನಾಗಿ;
೪೦. ಧರ್ಮರಾಜನ ದೂತನು ತಂದ ಸುದ್ದಿ: ಕಿವಿಗೆ, ಇನಿದುಂ–ರುಚಿಯಾದದ್ದೂ, ನೃಪಂಗೆ–ದುರ್ಯೋಧನನಿಗೆ, ಹಿತಮುಂ–ಹಿತಕರವಾದದ್ದೂ, ನುಡಿ–ಮಾತು, ಎಲ್ಲಿಯುಂ ಇಲ್ಲ–ಎಲ್ಲಿಯೂ ಇಲ್ಲ; ಕೇಳು–ಕೇಳು, ಎನ್ನಕಂಡುದನೆ–ನಾನು ಕಂಡದ್ದನ್ನೇ, ಬಿನ್ನವಿ ಸುವೆಂ–ವಿಜ್ಞಾಪಿಸಿಕೊಳ್ಳುತ್ತೇನೆ; ಜೂದಿನೊಳ್–ಜೂಜಿನಲ್ಲಿ, ಉಕ್ಕೆವದಿಂದೆ–ಮೋಸ ದಿಂದ, ಗೆಲ್ದ–ಗೆದ್ದ, ನಿನ್ನವನಿತಳಂ–ನಿನ್ನ ರಾಜ್ಯಪ್ರದೇಶ, ಕರಾತಳದವೋಲ್–ಅಂಗೈಯಲ್ಲಿರು ವುದರ ಹಾಗೆ, ತನಗಂ–ತನಗೂ, ಬೆಸಕೆಯ್ಯೆ–ಸೇವೆ ಮಾಡಲು, ಧಾರ್ತರಾಷ್ಟ್ರನಾ ಕೆ [ಯ್ತಂ]– ದುರ್ಯೋಧನನ ಗೆಯ್ಮೆಯೂ, ಆ ನವನಯಂ–ಆ ಹೊಸ ರಾಜನೀತಿಯೂ, ಬೃಹಸ್ಪತಿ ಯುಮಂ–ಬೃಹಸ್ಪತಿಯನ್ನೂ, ಗೆಲೆವಂದುದು–ಗೆದ್ದಿತು, ಮೀರಿಸಿತು.
೪೧. ಮೊದಲೊಳ್–ಮೊದಲಲ್ಲಿ, ತಿಣ್ಣಂ–ತೀವ್ರವಾಗಿ, ಅದು, ಒಪ್ಪಿ–ಕೊಡುತ್ತೇವೆ ಎಂದು ಒಪ್ಪಿ, ತಪ್ಪಿದುದಂ–ಕೊಡದೆ ತಪ್ಪಿದುದನ್ನು, ಈಯೆಂದಟ್ಟಿದಂ–ಕೊಡು ಎಂದು ದೂತನೊಡನೆ ಹೇಳಿಕಳಿಸಿದನು; ದಂಡನಟ್ಟದೆ–ಸೈನ್ಯವನ್ನು ಕಳಿಸದೆ, ಸಾಮರ್ಥ್ಯದಿ ನಟ್ಟಿದೋಲೆಗೆ–ಪರಾಕ್ರಮದಿಂದ ಕಳಿಸಿದ ಓಲೆಗೆ, ಮಹಾಪ್ರತ್ಯಂತ ಭೂಪಾಳರ್– ಎಲ್ಲೆಕಟ್ಟುಗಳಲ್ಲಿರುವ ರಾಜರು, ಅಟ್ಟಿದ–ಕಳಿಸಿಕೊಟ್ಟ, ಕಾಳಿಂಗ ಗಜೇಂದ್ರ ದಾನಜಲಧಾರಾ ಸಾರದಿಂ–ಕಳಿಂಗದೇಶದ ಆನೆಗಳ ಮದೋದಕದ ಧಾರೆಗಳ ಮಳೆಯಿಂದ, ಆ ಸುಯೋಧನ ನೃಪದ್ವಾರೋಪಕಂಠಂಗಳೊಳ್–ಆ ದುರ್ಯೋಧನನ ಅರಮನೆಯ ಬಾಗಿಲುಗಳ ಸಮೀಪ ಪ್ರದೇಶಗಳಲ್ಲಿ, ಒಳ್ಗೆಸಱ್–ಒಳ್ಳೆಯ ಕೆಸರು, ಕುಂದಿದುದಿಲ್ಲ–ಕಡಿಮೆಯಾಗಲಿಲ್ಲ. ನೋಡ– ನೋಡು. “ಅನೇಕ ರಾಜನ್ಯರಥಾಶ್ವಸಂಕುಲಂ ತದೀಯಮಾಸ್ಥಾನನಿಕೇತನಾಜಿರಂ । ನಯತ್ಯಯುಗ್ಮಚ, ದಗಂಧಿರಾರ್ದ್ರತಾಂಭೃಶಂ ನೃಪೋಪಾಯನದಂತಿನಾಂ ಮದಃ (ಕಿರಾತಾರ್ ಜುನೀಯ ೧–೧೬) ಎಂಬ ಪದ್ಯದೊಡನೆ ಇದನ್ನು ಹೋಲಿಸಿ.
೪೨. ಈ ಪದ್ಯ ಸರಿಯಾಗಿ ಅರ್ಥವಾಗುವುದಿಲ್ಲ: ರಿಪು–ವೈರಿ, ಕುಸಿದಂ–ಕುಗ್ಗಿದನು, ವಿಜಯದೆ–ಗೆಲುವಿನಿಂದ, ನಿದ್ರಿಸಿದ್ದಂ–ನಿದ್ದೆಹೋದನು; ಎಂದಿನಂದಮಂ ಕಂಡು–ಎಂದೂ ಇದ್ದ ರೀತಿಯನ್ನು ನೋಡಿ, ತಪ್ಪಿದಂ–ತಪ್ಪಿ ನಡೆದನು; ಆಳ್ವೆಸಕೆ–ಅಧೀನತೆಗೆ, ಅಗಿಯೆ– ಹೆದರಲು, ನುಡಿದಂ–ಹೇಳಿದನು; ಅವನಾಬೀಡಿನೊಳ್–ಆ ದುರ್ಯೋಧನನ ಪಾಳೆಯದಲ್ಲಿ, ಪಿಸುಣಂ–ಚಾಡಿ ಮಾತನ್ನು, ಅಣಂ ಕೇಳ್ದನಿಲ್ಲಂ–ಸ್ವಲ್ಪವನ್ನೂ ನಾನು ಕೇಳಲಿಲ್ಲ.
೪೩. ನೆಗೞ್ದ–ಪ್ರಸಿದ್ಧವಾದ, ಅರಿಗನ ಸಾಹಸಂ–ಅರ್ಜುನನ ಪರಾಕ್ರಮ, ಒರ್ಮೆ ಗೊರ್ಮೆ–ಒಂದೊಂದು ಸಲ, ಕೆಲದವರ ಮಾತಿನೊಳ್–ಮಗ್ಗುಲಲ್ಲಿರುವವರ ಮಾತಿನಲ್ಲಿ, ತನ್ನ, ಮನಂಬುಗೆ–ಮನವನ್ನು ಹೊಗಲು, ಮಂತ್ರಪದಕ್ಕೆ–ಮಂತ್ರಾಕ್ಷರಕ್ಕೆ, ಉರಗಂ–ಸರ್ಪ, ಸುಗಿವಂತೆವೊಲ್–ಹೆದರುವ ಹಾಗೆ, ಅಗಿದು ಸುಗಿದು–ಹೆದರಿ ಹೆದರಿ, ತಲೆಗರೆದಿರ್ಪಂ– ತಲೆಮರೆಸಿಕೊಂಡಿದ್ದಾನೆ. “ಕಥಾಪ್ರಸಂಗೇನ ಜನೈರುದಾಹೃತಾದನ ಸ್ಮೃತಾಖಂಡಲ ಸೂನುವಿ ಕ್ರಮಃ । ತವಾಭಿಧಾನಾತ್ಕ್ವಥತೇ ನತಾನನಃ ಸದುಸ್ಸಹನ್ಮಂತ್ರಪದಾದಿವೋರಗಃ (ಕಿರಾತಾರ್ಜುನೀಯ ೧–೨೪) ಎಂಬುದರೊಡನೆ ಹೋಲಿಸಿರಿ.
೪೪. ಅಱಿವು–ನನ್ನ ತಿಳಿವಳಿಕೆ, ನಾನು ತಂದಿರುವ ಸುದ್ದಿ, ಇಂತು–ಹೀಗೆ; ರಾಜಕಾರ್ಯದ –ರಾಜ ವ್ಯವಹಾರದ, ತೆಱಂ–ರೀತಿ, ಎನಗೆ ಅಱಿವಂತು–ನನಗೆ ತಿಳಿಯುವ ಹಾಗೆ, ಮೊಗ್ಗೆ– ಸಾಧ್ಯವೆ? ದೇವರ ಮುಂದೆ–ಪ್ರಭುಗಳ ಎದುರಿಗೆ, ಆಂ–ನಾನು, ಪಿರಿದು ಗೞಪಲ್–ಹೆಚ್ಚಾಗಿ ಹರಟಲು, ಅಱಿಯೆಂ–ತಿಳಿಯೆನು; ಅಹಿತಂ–ಶತ್ರು, ಮಱಸೊಂದಿದನಲ್ಲಂ–ವಿಸ್ಮೃತನಾದ ವನಲ್ಲ, ಎೞ್ಚತ್ತಿರ್ದಂ–ಎಚ್ಚರಿಕೆಯಿಂದ ಇದ್ದಾನೆ. ಮಱೆ+ಸುಂದು=ಮಱಸುಂದು > ಮಱಸೊಂದು–ಮೈಮರೆದು ಮಲಗು.
ವಚನ : ಕಿರಾತದೂತಂ–ಬೇಡರವನಾದ ದೂತ; ಯಜ್ಞಸೇನ ತನೂಜೆ–ದ್ರೌಪದಿ.
೪೫. ನುಡಿವೊಡೆ–ಹೇಳುವ ಪಕ್ಷದಲ್ಲಿ, ರಾಜಕಾರ್ಯ ನಯಮೆತ್ತ–ರಾಜಕಾರ್ಯದ ರೀತಿಯೆಲ್ಲಿ, ಅಬಲಾಜನದ–ಸ್ತ್ರೀಯರ, ಬುದ್ಧಿಯೆತ್ತ–ಬುದ್ಧಿಯೆಲ್ಲಿ? ಉಡುಪತಿ ವಂಶ– ಚಂದ್ರವಂಶದವನಾದ ಧರ್ಮರಾಜನೇ, ನೋಡುವೊಡೆ–ನೋಡಿದರೆ, ಇದೊಂದು–ಇದು ಒಂದು, ಅಘಟಂ–ಅಸಾಂಗತ್ಯ; ಬಗೆವಾಗಳ್–ಆಲೋಚನೆ ಮಾಡಿದಾಗ, ಎಂತು ಕೇಳ್– ಹೇಗೆ ಕೇಳು; ನುಡಿಯದೆ–ಮಾತಾಡದೆ, ಕೆಮ್ಮಗಿರ್ದೊಡಂ–ಸುಮ್ಮನಿದ್ದರೂ, ಇರಲ್ಕೆ– ಇರುವುದಕ್ಕೆ, ಅಣಮೀಯದೆ–ಸ್ವಲ್ಪವೂ ಅವಕಾಶವನ್ನು ಕೊಡದೆ, ನಿಮ್ಮೊಳ್–ನಿಮ್ಮಲ್ಲಿ, ಎನ್ನುಮಂ–ನನ್ನನ್ನು ಕೂಡ, ಕುರುಕುಳರ್ಕಳ–ಆ ಕೌರವರು, ಗೆಯ್ದ–ಮಾಡಿದ, ಅಪರಾಧ ಕೋಟಿಗಳ್–ಅನೇಕ ಅಪರಾಧಗಳು, ನುಡಿಯಿಸಿದಪ್ಪುವು–ಮಾತಾಡಿಸುತ್ತಿವೆ.
೪೬. ಆವಡವಿಗಳೊಳ್–ಯಾವ ಕಾಡುಗಳಲ್ಲಿ, ಪಣ್ಪಲಂ–ಹಣ್ಣು ಹಂಪಲುಗಳು, ಆವಗಂ–ಯಾವಾಗಲೂ, ಎಂದರೆ ಸಮೃದ್ಧವಾಗಿ, ಒಳವು–ಇವೆಯೋ, ಅಲ್ಲಿಗೆ, ಅಱಸಿ– ಹುಡುಕಿಕೊಂಡು, ಪರಿಪರಿದು–ಓಡಿ ಓಡಿ, ಕರಂ–ವಿಶೇಷವಾಗಿ, ತಾವಡಿಗೊಳ್ವ–ಅಲೆದಾಡುವ, ಈ ಭೀಮನ, ಬೇವಸಮಿದು–ಈ ಪ್ರಯಾಸ, ಸಂಕಷ್ಟ, ನಿನ್ನ ಮನಮಂ–ನಿನ್ನ ಮನಸ್ಸನ್ನು, ಒನಲಿಸಿತಿಲ್ಲಾ–ಕೆರಳುವಂತೆ ಮಾಡಲಿಲ್ಲವೇ? ತಾವಡಿ=(ತ) ತಾವಡಿ–ಪ್ರಯಾಣ, ಪೋರ್.
೪೭. ಪೋಗಿ–ಹೋಗಿ, ಸುಪರ್ವ ಪರ್ವತದ–ದೇವತೆಗಳ ಬೆಟ್ಟದ, ಮೇರುಪರ್ವತದ, ಕಾಂಚನ ರೇಣುಗಳಂ–ಚಿನ್ನದ ಕಣಗಳನ್ನು, ಪರಾಕ್ರಮೋದ್ಯೋಗದಿಂ–ಶೂರಕಾರ್ಯ ಗಳಿಂದ, ಎತ್ತಿ ತಂದು–ಎತ್ತಿಕೊಂಡು ತಂದು, ನಿನಗಿತ್ತ–ನಿನಗೆ ಕೊಟ್ಟ, ಅದಟಂ–ಶೂರನಾದ ಅರ್ಜುನನು, ಬಡಪಟ್ಟು–ಬಡವಾಗಿ, ಬೆಟ್ಟದೊಳ್–ಬೆಟ್ಟದಲ್ಲಿ, ಪೋಗಿತೊೞಲ್ದು– ಹೋಗಿ ಸುತ್ತಾಡಿ, ನಾರ್ಗಳಂ–ನಾರುಗಳನ್ನು, ಉಡಲ್ ತರುತಿರ್ದು–ಉಟ್ಟುಕೊಳ್ಳುವುದಕ್ಕಾಗಿ ತರುತ್ತಾ ಇದ್ದು, ಸಂಚಿತ ಶೌರ್ಯಧನಂ–ಒಟ್ಟು ಪರಾಕ್ರಮವೇ ಧನವಾಗಿರುವ, ಧನಂಜಯಂ– ಅರ್ಜುನ, ಆಗಳೆ–ಆಗಲೇ, ಎಲೆ–ಎಲೇ, ನಿನಗೆ ಕೋಪಮಂ–ಕೋಪವನ್ನು, ಮಾಡ ಲಾರ್ತನಿಲ್ಲ–ಮಾಡಲು ಶಕ್ಯನಾಗಲಿಲ್ಲವೆ?
೪೮. ಕಾಯಕ್ಲೇಶದಿಂ–ದೇಹಾಯಾಸದಿಂದ, ಅಡವಿಯ–ಕಾಡಿನ, ಕಾಯಂಪಣ್ಣುಮಂ– ಕಾಯನ್ನೂ ಹಣ್ಣನ್ನೂ, ಉದಿರ್ಪಿ–ಉದಿರಿಸಿ, ತಿಂದು, ಅಗಲದೆ–ಅಲುಗಾಡದೆ, ಬಿಡದೆ, ನಿಂದ–ನಿಂತುಕೊಂಡಿರುವ, ಈ ಯಮಳರ್–ಈ ನಕುಲಸಹದೇವರು, ಆವತೆಱದಿಂ–ಯಾವ ರೀತಿಯಿಂದಲೂ, ನನ್ನಿಕಾಱನ–ಸತ್ಯವಂತನಾದ, ನಿನ್ನ, ಮನಮಂ–ಮನವನ್ನು, ನೋಯಿಸ ರಯ್–ನೋಯಿಸಲಿಲ್ಲವೇ?
೪೯. ಆ ದುಶ್ಶಾಸನನಿಂದೆ– ಆ ದುಶ್ಶಾಸನನಿಂದ, ಎನಗಾದ–ನನಗುಂಟಾದ, ಪರಾಭವ ಮಂ–ಅವಮಾನವನ್ನು, ಏನುಮಂ ಬಗೆಯದೊಡೆ–ಏನನ್ನೂ ಲೆಕ್ಕಿಸದಿದ್ದರೆ, ಇಂತು–ಹೀಗೆ, ತೊವಲ್ನಾರುಂ–ತೊಗಲು ನಾರುಗಳು, ಆದರಮೆ–ಆದರಕ್ಕೆ ಪಾತ್ರವಾಯಿತೆ? ಅನಾದರದೇಂ– ಈ ಅನಾಸಕ್ತಿ, ಅನಾದರ, ಏನು? ನಿನ್ನ ಮನಕ್ಕೆ–ನಿನ್ನ ಮನಸ್ಸಿಗೆ, ಚಿಂತೆಯುಮಿಲ್ಲಾ–ಚಿಂತೆ ಕೂಡ ಇಲ್ಲವೇ?
೫೦. ಎಮ್ಮಯ್ವರ–ನಾವು ಐದು ಜನರ, ಬೇವಸಮಂ–ಕಷ್ಟವನ್ನು, ನೀಂ–ನೀನು, ಮನದೊಳ್–ಮನಸ್ಸಿನಲ್ಲಿ, ನೆನೆಯೆಯಪ್ಪೊಡಂ–ನೆನೆಯುವುದಿಲ್ಲವಾದ ಪಕ್ಷದಲ್ಲಿ, ಮರುಳೆ–ಮರುಳನೆ, ನೀಂ–ನೀನು, ನಿನ್ನಿರವಂ–ನಿನ್ನ ಸ್ಥಿತಿಯಂ, ಬಗೆಯದೆ–ಲೆಕ್ಕಿಸದೆ, ಅಂತು–ಹಾಗೂ, ಘುಮ್ಮೆಂಬಡವಿಯೊಳಡಂಗಿ–ಘುಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು, ಚಿಂತಿಸುತಿರ್ಪಾ–ಯೋಚನೆ ಮಾಡುತ್ತಿರುವೆಯೋ?
೫೧. ಶಮಮನೆಕೆಯ್ಕೊಳ್ವೊಡೆ–ಶಾಂತಿಯನ್ನೇ ಸ್ವೀಕರಿಸುವ ಪಕ್ಷದಲ್ಲಿ, ಬಿಲ್ಲು ಮಂಬುಮಂ–ಬಿಲ್ಲುಬಾಣಗಳನ್ನು, ಬಿಸುಟು–ಬಿಸಾಡಿ, ತಪಕೆನೀಂಬಗೆವೊಡೆ–ತಪಸ್ಸನ್ನು ನೀನು ಬಯಸುವ ಪಕ್ಷದಲ್ಲಿ, ವಿಕ್ರಮಮಂ–ಪ್ರತಾಪವನ್ನು, ಪಗೆಯಂ–ದ್ವೇಷವನ್ನು, ಕಿಡಿಸುವ– ಹಾಳು ಮಾಡುವ, ಶಮದಿಂ–ಶಾಂತಿಯಿಂದ; ಸಿದ್ಧಿ–ಸಿದ್ಧಿಯು, ಮೋಕ್ಷವು, ಮುನಿಗಾಯ್ತು– ಋಷಿಗೆ ಆಯಿತು; ಭೂಪತಿಗಾಯ್ತೇ–ರಾಜನಿಗಾಯಿತೇ?
೫೨. ತಪ್ಪುಮನೆ–ತಪ್ಪನ್ನೇ, ನುಡಿಯೆಂ–ಹೇಳೆನು, ಎಂಬುದಿದು–ಎಂಬ ಈ ಮಾತು, ಒಪ್ಪದು–ಒಪ್ಪುವುದಿಲ್ಲ; ಅಹಿತರ್–ವೈರಿಗಳು, ನಿನಗೆ–ನಿನ್ನ ವಿಷಯದಲ್ಲಿ; ತಪ್ಪಿರ್ದರ್– ತಪ್ಪು ಮಾಡಿದ್ದಾರೆ; ಅವರ್ ತಪ್ಪಿದ ಬೞಿಕ್ಕೆ–ಅವರು ತಪ್ಪು ಮಾಡಿದ ಮೇಲೆ, ತಪ್ಪಿದ– ನೀನು ತಪ್ಪು ಮಾಡಿದ, ತಪ್ಪು–ಸ್ಖಲನವು, ನನ್ನಿಗೆ–ಸತ್ಯಕ್ಕೆ, ಒಪ್ಪಮಲ್ಲದ–ಒಪ್ಪಿಗೆಯಾಗದ, ತಪ್ಪೇ–ಸ್ಖಲನವೇ, ಏಂ ಗಳ–ಏನು, ದಿಟವಾಗಿಯೂ!
ವಚನ : ಬೆಂಬಲಂಬಾಯ್ವಂತೆ–ಬೆಂಬಲವಾಗಿ ಬರುವ ಹಾಗೆ;
೫೩. ದ್ರೌಪದಿ–ದ್ರೌಪದಿಯು, ಪೆಱತಂ ನುಡಿಯದೆ–ಬೇರೇನನ್ನೂ ಹೇಳದೆ, ತಕ್ಕುದನೆ– ಯೋಗ್ಯವಾದುದನ್ನೇ, ನುಡಿದಳ್–ಹೇಳಿದಳು; ಕೇಳಿಮಿಂ ಕೇಳದಿರಿಂ–ಕೇಳಿರಿ ಅಥವಾ ಕೇಳದಿರಿ; ಇಂ ನುಡಿಯಲ್–ಇನ್ನು ಮಾತಾಡಲು, ಎಡೆಯಿಲ್ಲ–ಅವಕಾಶವಿಲ್ಲ; ಅವನಿಪತೀ–ರಾಜ ಧರ್ಮಜನೇ, ಎನ್ನ ಮನದ ಮುಳಿಸು–ನನ್ನ ಮನದ ಕೋಪ, ನಿಮ್ಮಂ–ನಿಮ್ಮನ್ನು, ನುಡಿ ಯಿಸಿದಪುದು–ಮಾತಾಡಿಸುತ್ತಿದೆ. ಎಂದರೆ ನಿಮ್ಮ ವಿಷಯವಾಗಿ ಕಟುವಾಗಿ ಮಾತಾಡಲು ನನ್ನ ಕೋಪ ಪ್ರೇರಿಸುತ್ತಿದೆ.
೫೪. ನಾಲ್ಕುಂ ನೃಪವಿದ್ಯೆಯಂ–ಸಾಮ ದಾನ ದಂಡ ಭೇದಗಳೆಂಬ ನಾಲ್ಕು ರಾಜವಿದ್ಯೆಗಳನ್ನೂ, ಆಡಲ್ ಕಲ್ತುಂ–ಆಡಲು ಕಲಿತುಕೊಂಡೂ, ನೃಪ–ರಾಜನೇ, ನೆಱೆಯೆ–ಪೂರ್ಣ ವಾಗಿ, ಕಲ್ತೆಯಿಲ್ಲಾಗದೆ–ಕಲಿತವನಾಗಲಿಲ್ಲವಲ್ಲವೆ? ನೆಲನಂ–ರಾಜ್ಯವನ್ನು, ಸೋಲಲ್ಕೆ– ಸೋಲುವುದಕ್ಕೆ, ದೊರೆಯೆ–ತಕ್ಕುದೆ, ಉಚಿತವೆ; ಮೆಯ್ಯ–ದೇಹವನ್ನು, ವಲ್ಕಲ ವಸನಕ್ಕೆ– ನಾರು ಮಡಿಗೆ, ಆಂಪುದು–ಒಡ್ಡುವುದು, ಪೆಂಪೇ–ಹಿರಿಮೆಯೇ?
೫೫. ನನ್ನಿಗೆ–ಸತ್ಯಕ್ಕಾಗಿ, ದಾಯಿಗಂಗೆ–ದಾಯಾದಿಗೆ, ಎಳೆಯಂ–ಭೂಮಿಯನ್ನು, ಒಪ್ಪಿಸಿದೆಂ–ಒಪ್ಪಿಸಿ ಬಿಟ್ಟೆನು, ಗಡಿಂ–ಅಲ್ಲವೇನ್ರಿ, ಎಂಬ ಮಾತುಗಳ್–ಎನ್ನುವ ಮಾತುಗಳು, ನಿನ್ನವು–ನಿನ್ನವು, ನೀನು ಹೇಳುವ ಮಾತುಗಳು; ಕೂರದರ್–ಪ್ರೀತಿಸದವರು, ವೈರಿಗಳು, ನೆಲನಂ–ರಾಜ್ಯವನ್ನು, ಒಟ್ಟಜೆಯಿಂ–ಪರಾಕ್ರಮದಿಂದ, ಕೊಳೆ–ಕಿತ್ತು ಕೊಳ್ಳಲು, ಕೊಟ್ಟು– ಒಪ್ಪಿಸಿ, ಮುಟ್ಟುಗೆಟ್ಟು–ಮನೆಯ ಸಲಕರಣೆಗಳನ್ನು ನೀಗಿಕೊಂಡು, ಎಂದರೆ ನಿರುಪಾಯ ನಾಗಿ, ಇನ್ನುಂ–ಇನ್ನೂ, ಅರಣ್ಯದೊಳ್–ಕಾಡಿನಲ್ಲಿ, ಯಮನಂದನಂ–ಧರ್ಮರಾಜನು, ನಮೆದಪಂ–ನವೆಯುತ್ತಿದ್ದಾನೆ, ಎಂಬ, ಬನ್ನಮುಂ–ಅವಮಾನವೂ, ಮುನ್ನಮೆ ಸೋಂಕೆ– ಮೊದಲೇ ನಮ್ಮನ್ನು ಸೋಕಲು, ಎಲ್ಲರ ಪೇೞ್ವಮಾತುಗಳ್–ಎಲ್ಲರು ಹೇಳುವ ಮಾತು ಗಳು, ಕಣ್ಮಲೆವ–ಕಣ್ಣು ಕೆರಳಿಸುವ, ಮಾತುಗಳ್–ಮಾತುಗಳಾಗಿವೆ. ಇಲ್ಲಿ ಒಟ್ಟಜೆ, ಮುಟ್ಟು ಗಿಡು–ಇವಕ್ಕೆ ಕೊಟ್ಟಿರುವ ಅರ್ಥಗಳಿಗೆ ಖಚಿತವಾದ ನೈಘಂಟುಕ ಆಧಾರಗಳಾಗಲಿ ಪ್ರಯೋಗಾಧಾರಗಳಾಗಲಿ ಆವಶ್ಯಕ.
೫೬. ಕೃಷ್ಣೆಯ ಮುಡಿಯಂ ಪಿಡಿದೆೞೆವಲ್ಲಿಯೆ–ದ್ರೌಪದಿಯ ತುರುಬನ್ನು ಹಿಡಿದೆಳೆ ದಾಗಲೆ, ಸಲೆಸಂದ–ಚೆನ್ನಾಗಿ ಪ್ರಸಿದ್ಧವಾದ, ಇರ್ಪತ್ತೊಂದು ತಲೆವರೆಗಂ–ಇಪ್ಪತ್ತೊಂದು ತಲೆಗಳವರೆಗೂ, ನಮಗೆ, ಪರಿಭವಂ–ತಿರಸ್ಕಾರ, ಸೋಲು; ಕೌರವರುಂ–ಕೌರವರು ಕೂಡ, ನಮ್ಮ ಬೀರಮಂ–ನಮ್ಮ ಶೌರ್ಯವನ್ನು, ತಲೆ ಪಿಡಿದರ್–ಸೆರೆ ಹಿಡಿದುಕೊಂಡರು, ತಲೆ ಯಿಂದ ಹಿಡಿದುಕೊಂಡರು. ಇಲ್ಲಿ ‘ಕೃಷ್ಣೆಯ ಮುಡಿಯಂ ಪಿಡಿದೆೞೆವಲ್ಲಿಯೆ’ ಎಂಬ ಪದ್ಯ ಭಾಗ ಪದ್ಯದ ಎರಡು ವಾಕ್ಯಗಳಿಗೂ ದೇಹಲೀದೀಪನ್ಯಾಯದಂತೆ ಅನ್ವಯಿಸುತ್ತದೆ; ಬಾೞ್ದಲೆವಿಡಿ ಎಂಬುದರೊಡನೆ ‘ತಲೆವಿಡಿ’ ಯನ್ನು ಹೋಲಿಸಬಹುದು.
೫೭. ಮಲೆಮಲೆದು–ಅತಿ ಉದ್ಧತನಾಗಿ, ಉರ್ಕಿಸೊರ್ಕಿ–ಉಬ್ಬಿ ಮದವೇರಿ, ಸಭೆ ಯೊಳ್–ಸಭೆಯಲ್ಲಿ, ಕುಲಪಾಂಸುಲಂ–ಕುಲಕ್ಕೆ ದೂಳಾದ ಎಂದರೆ ಕುಲಕಳಂಕನಾದ ದುಶ್ಶಾಸನನು, ಈ ಶಿರೀಷ ಕೋಮಲೆಯ–ಬಾಗೆಯ ಹೂವಿನಂತೆ ಲಲಿತಳಾದ ಈ ದ್ರೌಪದಿಯ, ವಿಲೋಲ ನೀಲಕಬರೀಭರಮಂ–ತೂಗಾಡುತ್ತಿರುವ ಕಪ್ಪಾದ ಕೇಶಪಾಶ ವನ್ನು, ತೆಗೆದಾಗಳ್–ಎಳೆದಾಗ, ಅಲ್ಲಿ ಕೆಯ್ಯಲೆಸದೆದಂತೆ–ಅಲ್ಲಿ ಕೈಯಲ್ಲೇ ಹೊಡೆದ ಹಾಗೆ, ಬೆರಲಚ್ಚುಗಳ್–ಬೆರಳಿನ ಗುರುತುಗಳು, ಪತ್ತಿ–ಅಂಟಿಕೊಂಡು, ಅಚ್ಚಿಱಿದಂತೆ–ಮುದ್ರಿಸಿದ ಹಾಗೆ, ಕೊಂಕುಗಳ್–ಗುಂಗುರುಗಳು, ತಲೆನವಿರೊಂದಿ–ತಲೆ ಕೂದಲನ್ನು ಸೇರಿ, ನಮ್ಮ ಬೀರಮಂ– ನಮ್ಮ ಶೌರ್ಯವನ್ನು, ಮೂದಲಿಸುವಂತೆವೊಲ್–ಹೀಯಾಳಿಸುವ ಹಾಗೆ, ಇರ್ದ್ದುವು–ಇವೆ.
೫೮. ಅಸಿತೇಂದೀವರ ಲೋಲಲೋಚನೆಯಂ–ಕನ್ನೈದಿಲೆಯ ವಿಲಾಸವನ್ನುಳ್ಳ ಕಣ್ಣು ಗಳುಳ್ಳ ದ್ರೌಪದಿಯನ್ನು, ಅಂದು, ಅಂತು, ಆ ಸಭಾಮಧ್ಯದೊಳ್–ಆ ಸಭೆಯ ನಡುವೆ, ಪಸುವಂ ಮೋದುವವೋಲೆ–ಹಸುವನ್ನು ಹೊಡೆದಂತೆ, ಮೋದೆಯುಂ–ಹೊಡೆ ದರೂ, ಅದಂಕಂಡು–ಅದನ್ನು ನೋಡಿ, ಅಂತೆ–ಹಾಗೆಯೇ, ಪಲ್ಗರ್ಚಿ–ಹಲ್ಲನ್ನು ಕಚ್ಚಿಕೊಂಡು, ನಿನ್ನಯ ನನ್ನಿಗೆ–ನಿನ್ನ ಸತ್ಯಕ್ಕಾಗಿ, ಸೈರಿಸಿದೆಂ–ಸಹಿಸಿಕೊಂಡೆನು, ಇನ್ನೆವರಂ–ಇದುವರೆಗೂ; ಆದು…. ಪಾನಮಂ: ಆ ದುಶ್ಯಾಸನ–ಆ ದುಶ್ಯಾಸನನ, ಉರಃಸ್ಥಲ–ಎದೆಯ ಪ್ರದೇಶದ, ಉಷ್ಣ– ಬಿಸಿಯಾದ, ಅಸೃಗ್ಜಲಪಾನಮಂ–ರಕ್ತವೆಂಬ ನೀರಿನ ಕುಡಿತವನ್ನು, ಬಯಸಿ–ಅಪೇಕ್ಷಿಸಿ, ಬಾಯ್ತೇರೈಸೆ–ಬಾಯಿ ತವಕಪಡುತ್ತಿರಲು; ಸೈತಿರ್ಪೆನೇ–ಸುಮ್ಮನೆ ಇರುತ್ತೇನೆಯೇ? ಇಲ್ಲಿ ‘ತೇರೈಸು’ ವಿನ ಅರ್ಥ–ಅನಿರ್ದಿಷ್ಟ, ಚಪ್ಪರಿಸು ಎಂದು ಪಂ.ಭಾ.ಕೋ; ಇದರ ಭಾವ ನಾಮ ತೇರಯ್ಕೆ; “ಅಚ್ಚವಣ್ಪೇಱಿದ ದಾಳಿಂಬಂ ತದುದ್ಯಾನದೊಳೊದವಿಸುಗುಂ ಬಾಯ್ಗೆ ತೇರಯ್ಕೆಯುರ್ವಂ” ಎಂದು ಅಗ್ಗಳನ ಪ್ರಯೋಗ (೧೦–೫೪).
ವಚನ : ತಳರಲ್ ಬಗೆದ–ಹೊರಡಲು ಯೋಚಿಸಿದ; ಮಸಗಿದ–ಕೆರಳಿದ; ಮಾಣಿಸು ವಂತೆ–ನಿಲ್ಲಿಸುವ ಹಾಗೆ;
೫೯. ವ್ಯಾಸನ ಆಗಮನ: ಕನಕ….ವಳಯಂ : ಕನಕ ಪಿಶಂಕ–ಹೊಂಬಣ್ಣ ಕೆಂಪುಕಪ್ಪು ಬೆರಸಿದ ಬಣ್ಣದ, ತುಂಗ–ಎತ್ತರವಾದ, ಜಟಿಕಾವಳಯಂ–ಜಟೆಯ ಸಮೂಹವು, ಕುಡು ಮಿಂಚಿನ–ಕೊಂಕುಮಿಂಚಿನ, ಓಳಿಯಂ–ಸಾಲನ್ನು, ನೆನೆಯಿಸೆ–ನೆನಪಿಗೆ ತಂದುಕೊಡಲು, ನೀಲನೀರದ ತನುಚ, ವಿ–ನೀಲಮೇಘದಂಥ ದೇಹಕಾಂತಿ, ಭಸ್ಮರಜೋವಿಲಿಪ್ತಂ–ವಿಭೂತಿಯ ದೂಳಿನಿಂದ ಬಳಿಯಲ್ಪಟ್ಟದ್ದು, ಅಂಜನಗಿರಿಯಂ–ಕಾಡಿಗೆ ಬೆಟ್ಟವನ್ನು, ಅಂಜನಾದ್ರಿಯನ್ನು, ಶರಜ್ಜಳಧರಂ–ಶರತ್ಕಾಲದ ಮೋಡ, ಕವಿದಂತಿರೆ–ಮುಚ್ಚಿಕೊಂಡಿರುವ ಹಾಗೆ, ಚೆಲ್ವನಾಳ್ದು– ಚೆಲುವನ್ನು ಹೊಂದಿ, ಭೋಂಕನೆ–ಬೇಗನೆ, ನಭದಿಂದಂ–ಆಕಾಶದಿಂದ, ವೃದ್ಧಪರಾಶ ರಾತ್ಮಜಂ–ವೃದ್ಧಪರಾಶರನ ಮಗ ವ್ಯಾಸ, ಅಂದು, ಅಲ್ಲಿಗೆ, ಇೞಿದಂ–ಇಳಿದನು.
ವಚನ : ಪಟ್ಟಕ–ಹಾಸುಮಣೆ; ಲಲಾಟಪಟ್ಟಂ–ಹಣೆಯ ಪ್ರದೇಶವುಳ್ಳವನು; ಕರ್ಚಿ– ತೊಳೆದು; ಉತ್ತಮಾಂಗದೊಳ್–ತಲೆಯಲ್ಲಿ; ತಳಿದುಕೊಂಡಿರ್ದಾಗಳ್–ಚಿಮುಕಿಸಿಕೊಂಡಿ ದ್ದಾಗ; ಸಾಯಸಂಗಳ್ಗೆ–ಶ್ರಮಕಷ್ಟಗಳಿಗೆ; ಮನ್ಯುಮಿಕ್ಕು–ದುಃಖವು ಅತಿಶಯವಾಗಿ; ಕಣ್ಣನೀರಂ ನೆಗಪೆ–ಕಣ್ಣೀರನ್ನು ಸುರಿಸಲು; ಸಾಯಸ (ಸಂ) ಸಹಾಯಾಸ.
೬೦. ಮುನೀಶ್ವರಾ–ಋಷಿಶ್ರೇಷ್ಠನೇ, ಭವಚ್ಚರಣ ಪದ್ಮನಿರೀಕ್ಷಣದಿಂ–ನಿನ್ನ ಪಾದ ಕಮಲಗಳ ದರ್ಶನದಿಂದ, ಈಗಳ್–ಈಗ, ಎಮ್ಮ ವನವಾಸ ಪರಿಶ್ರಮಂ–ನಮ್ಮ ಅರಣ್ಯವಾಸದ ಆಯಾಸ, ನೀಗಿದುದು–ಕಳೆದುಹೋಯಿತು; ಆ ಸಾಗರ ಮೇಖಳಾ ವೃತಧರಿತ್ರಿಯಂ–ಆ ಕಡಲೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಿಯನ್ನು, ಈಗಳ್–ಈಗ, ಆಳ್ದೆವು–ಆಳಿದವರಾದೆವು; ಎಮ್ಮ ಹೃದ್ರೋಗಂ–ನಮ್ಮ ಹೃದಯದ ಬೇನೆ, ಈಗಳ್–ಈಗ, ಅಡಂಗಿತು–ಶಮನವಾಯಿತು; ಈಗಳ್–ಈಗ, ಅನೇಕ ಮಂಗಳ ಪರಂಪರೆಗಳ್–ಅನೇಕವಾದ ಶುಭಗಳ ಪರಂಪರೆಗಳು, ದೊರೆಕೊಂಡುವು–ಉಂಟಾದುವು; ಏನಾಗದೊ ಪೇೞ್–ಏನು ತಾನೇ ಆಗುವುದಿಲ್ಲ, ಹೇಳು.
೬೧. ಆಪತ್ಪಯೋಧಿಯೊಳಗೆ–ಆಪತ್ತುಗಳೆಂಬ ಸಾಗರದಲ್ಲಿ, ಅತ್ಯಾಪತ್ತಿಂದೆ–ಅತಿ ಯಾದ ಅಪಾಯಗಳಿಂದ, ಅೞ್ಕಿಮುೞ್ಕಿ–ಶಕ್ತಿಗುಂದಿ, ಮುಳುಗಿ, ನಮೆವ–ಸವೆದು ಹೋಗುತ್ತಿರುವ, ಎಮಗೆ–ನಮಗೆ, ಪಾಪಹರ–ಪಾಪವನ್ನು ಹೋಗಲಾಡಿಸುವವನೇ, ನೀಮೆ– ನೀವೇ, ಶರಣ್–ಆಶ್ರಯ; ಬಗೆದು–ಆಲೋಚಿಸಿ, ಎಮಗೆ–ನಮಗೆ, ಆಪತ್ಪ್ರತಿಕಾರ ಮಾವುದು–ಆಪತ್ತುಗಳ ನಿವಾರಣೆಯಾವುದೆಂಬುದನ್ನು, ಈಗಳೆ–ಈಗಲೇ, ಬೆಸಸಿಂ–ಅಪ್ಪಣೆ ಮಾಡಿರಿ.
ವಚನ : ಆಮುಂ–ನಾವೂ; ಅಂತೆಂದೆ–ಹಾಗೆಂದೇ, ಬಂದೆವೆಂದು–ಬಂದೆವು ಎಂದು.
೬೨. ಉಂತೆ–ಸುಮ್ಮನೆ, ಸುರರ್ಗೆ–ದೇವತೆಗಳಿಗೆ, ಅಮೃತಮಂ–ಅಮೃತವನ್ನು, ಕಳಾಂತರ ದಿಂದೆ–ಷೋಡಶ ಕಲೆಗಳಿಂದ, ಇತ್ತು–ಕೊಟ್ಟು, ಅಸಿಯನಾದ–ಕೃಶನಾದ, ಚಂದ್ರನ ವೊಲ್–ಚಂದ್ರನಂತೆ, ಭೂಭರಮಂ–ರಾಜ್ಯವನ್ನು, ನನ್ನಿಗೆ–ಸತ್ಯಕ್ಕಾಗಿ, ದಾಯಿಗರ್ಗೆ– ದಾಯಾದಿಗಳಿಗೆ, ಇರದೆ ಇತ್ತು–ಇರದೆ ಕೊಟ್ಟು, ಎಡರೊತ್ತೆ–ವಿಘ್ನಗಳು ಅಮುಕುತ್ತಿರಲು, ಆಕ್ರಮಿಸಲು, ನೀನೆ ಧನ್ಯನಯ್–ನೀನೇ ಧನ್ಯನಾಗಿರುವೆ, ಅಲ್ತೇ–ಅಲ್ಲವೇ?
೬೩. ಕೂಸುತನದೊಳಾದೊಡಂ–ಮಗುವುತನದಿಂದಲಾದರೂ, ನೀಂ ಬೇಱೆಮಗೆ– ನೀನು ನಮಗೆ ಬೇರೆಯೇ, ಸುಯೋಧನನೇಂ ಬೇಱೆಯೆ–ದುರ್ಯೋಧನನು ಏನು ಬೇರೆಯೆ? ಇನ್ನೇನೆಂಬುದೊ–ಇನ್ನೇನನ್ನು ಹೇಳುವುದೋ; ಅಯ್ವರೊಳಂ–ನಿಮ್ಮ ಅಯ್ದು ಜನರಲ್ಲಿ, ಪಂಬಲ್–ನನ್ನ ಹಂಬಲ, ಪಿರಿದು–ಹಿರಿದು; ನಿಮ್ಮೊಳ್–ನಿಮ್ಮಲ್ಲಿ, ಗುಣಪಕ್ಷ ಪಾತಮಪ್ಪುದು–ಗುಣಕ್ಕೆ ಪಕ್ಷಪಾತವಾಗುತ್ತಿದೆ, ಎಂದರೆ ನಿಮ್ಮ ಗುಣಕ್ಕೆ ನನ್ನ ಮೆಚ್ಚಿಗೆ.
ವಚನ : ವರ್ತನಮುಂ–ನಡೆವಳಿಕೆಯೂ, ಮೋಹಮನುಂಟುಮಾಡೆ–ಪ್ರೀತಿಯನ್ನುಂಟು ಮಾಡಲು;
೬೪. ಪನ್ನೆರಡು ವರುಷದವಧಿಯುಂ–ಹನ್ನೆರಡು ವರ್ಷಗಳ ಗಡುವೂ, ಇನ್ ನೆಱೆಯಲ್ ಬಂದುದು–ಇನ್ನು ಪೂರ್ತಿಯಾಗಲು ಬಂತು; ಅಹಿತಂ–ವೈರಿ, ಇಳೆಯಂ– ರಾಜ್ಯವನ್ನು, ಕುಡನ್–ಕೊಡನು; ಕಾಳೆಗಂ–ಯುದ್ಧವು, ಆಸನ್ನಂ–ಸಮೀಪಗತವಾಗಿದೆ; ಪನ್ನಗಕೇತನನ–ಸರ್ಪಧ್ವಜನ, ದುರ್ಯೋಧನನ, ಚಲದ–ಛಲದ, ಕಲಿತನದ– ಪರಾಕ್ರಮದ, ಅಳವಂ–ಪ್ರಮಾಣವನ್ನು, ಅಱಿಯಿರೆ–ನೀವು ತಿಳಿಯಿರಾ?
೬೫. ಪರಶುರಾಮನಂ–ಪರಶುರಾಮನನ್ನು, ಅಂಜಿಸಿದ–ಹೆದರಿಸಿದ, ಬೀರಕ್ಕೆ– ಪ್ರತಾಪಕ್ಕೆ, ಆಗರಮಾದ–ಆಕರವಾದ, ನದೀಜಂ–ಭೀಷ್ಮನು, ಏ ದೊರೆಯಂ–(ಇತರರಿಗೆ) ಸಮಾನನೇ? ಎಂದರೆ ಮೀರಿದವನು ಎಂದರ್ಥ; ಕುಂಭಪ್ರೋದ್ಭವಂ–ದ್ರೋಣನು ಏ ದೊರೆಯಂಗಳ–ಏನು ಸಮಾನನೇ ದಿಟವಾಗಿಯೂ? ಆತನ ಪುತ್ರಂ ಅವನ ಮಗನಾದ ಅಶ್ವತ್ಥಾಮ, ಏ ದೊರೆಯಂ–ಏನು ಸಮಾನನೆ? ಕೃಪಂ–ಕೃಪಾಚಾರ್ಯನು, ಏ ದೊರೆಯಂ– ಏನು ಸಮಾನನೇ? ಅಂತು, ಆ ಪಾೞಿಯೊಳ್–ಕ್ರಮದಲ್ಲಿ, ಧರ್ಮದಲ್ಲಿ, ಅಂಕದ–ಹೆಸರು ವಾಸಿಯಾದ, ಕರ್ಣನ್–ಕರ್ಣನು, ಏ ದೊರೆಯಂ–ಏನು ಸಮಾನನೇ? ಇಂತಿವರ್–ಹೀಗೆ ಇವರು, ಒರ್ಬರಿನೊರ್ಬರ್–ಒಬ್ಬರಿಗಿಂತ ಒಬ್ಬರು, ಗರ್ವಿತರ್–ದರ್ಪಿಷ್ಠರಾದವರು, ಅಗ್ಗಳಂ– ಶ್ರೇಷ್ಠರಾದವರು, ಅಲ್ಲರೇ–ಅಲ್ಲದವರೇ; “ನಭಭಮಂಸಸಲಂಗಮುಮೊಪ್ಪಲ್ ಪೇೞ್ದಪರಾ ಅನವದ್ಯಮಂ.”
೬೬. ಅವರ್ಗಳ–ಆ ಭೀಷ್ಮಾದಿಗಳ, ಮುಳಿಸುಗಳುಂ–ಕೋಪಗಳೂ, ಮುಳಿದು ತುಡುವ– ಮುಳಿದು ಬಿಲ್ಲಿನಲ್ಲಿ ತೊಡುವ, ದಿವ್ಯೇಷುಗಳುಂ–ದಿವ್ಯಾಸ್ತ್ರಗಳೂ, ಪ್ರಳಯದುರಿ–ಪ್ರಳ ಯಾಗ್ನಿ, ಕಾಳಕೂಟದ ಗುಳಿಗೆ–ಕಾಳಕೂಟವೆಂಬ ನಂಜಿನ ಗುಳಿಗೆ, ಪುರಾಂತಕ ಲಲಾಟನೇತ್ರಾ ನಳನ–ಶಿವನ ಹಣೆಗಣ್ಣಿನ ಅಗ್ನಿಯ, ಒಂದಳವಿಗಂ–ಒಂದು ಪ್ರಮಾಣಕ್ಕಿಂತ, ಅಗ್ಗಳಂ– ಅತಿಶಯವಾದದ್ದು,
ವಚನ : ಎಯ್ದಿಸಿ ಬರ್ಪುದು–ತಲುಪಿಸಿ ಬರುವುದು; ಪಯೋಧರಪಥಕ್ಕೆ–ಗಗನ ಮಾರ್ಗಕ್ಕೆ; ಒಗೆದಂ–ನೆಗೆದನು; ಬೆಸಕೇಳ್ವೆಂ–ಅನುಜ್ಞೆಯನ್ನು ಕೇಳುತ್ತೇನೆ.
೬೭. ಮೆಯ್ಸೊಕಮಂ–ದೇಹದ ಸುಖವನ್ನು, ಬಗೆಯದೆ–ಆಲೋಚಿಸದೆ, ಪಗೆವರ– ಹಗೆಗಳ, ಕಡುವೆರ್ಚ್ಚಂ–ಅತಿಶಯವಾದ ಹೆಚ್ಚಳವನ್ನು, ಬಗೆ–ಚಿಂತನೆ ಮಾಡು; ಎನ್ನ ಪೂಣ್ದ ಪೂಣ್ಕೆಯಂ–ನಾನು ಶಪಥ ಮಾಡಿದ ಪ್ರತಿಜ್ಞೆಯನ್ನು, ಬಗೆ–ಚಿಂತಿಸು; ಮುನಿಯ ಮಂತ್ರ ಪದಮಂ–ಋಷಿಯು ಕೊಟ್ಟ ಮಂತ್ರಾಕ್ಷರಗಳನ್ನು, ಬಗೆ–ಭಾವಿಸು; ಪಾರ್ಥಾ– ಅರ್ಜುನನೇ, ನಿನ್ನ ಬಗೆದ–ನೀನು ಚಿಂತಿಸಿದ, ಬಗೆಯೊಳ್–ರೀತಿಯಲ್ಲಿ, ಕೂಡುಗೆ– ಸೇರಲಿ, ಸಿದ್ಧಿಯಾಗಲಿ.
ವಚನ : ಮನದೆಱಕಂ–ಮನಸ್ಸಿನ ಪ್ರೀತಿ; ಪರಿಯೆ–ಓಡಲು;
೬೮. ಬಳ್ವಳ ನೀಳ್ದ–ತುಂಬ ದೀರ್ಘವಾದ, ಕಣ್ಮಲರ–ಹೂವಿನಂತಿರುವ ಕಣ್ಣುಗಳ, ತಳ್ತ– ಸೇರಿದ, ಎಮೆಯಿಂ–ರೆಪ್ಪೆಗಳಿಂದ, ಕರೆಗಣ್ಮಿ–ಉಕ್ಕಿ, ಬೆಳ್ಗಡಲ್ಗಳ್–ಬಿಳಿಯ ಕಾಂತಿ ಯೆಂಬ ಕಡಲುಗಳು, ಪರಿಯಲ್ಕಂ–ಹರಿಯುವುದಕ್ಕೂ, ಆಟಿಸಿದೊಡೆ–ಬಯಸಿದರೆ, ಒಯ್ಯನೆ–ಮೆಲ್ಲಗೆ, ಮಂಗಳ ಭಂಗ ಭೀತಿಯಂ–ಶುಭವು ಹಾಳಾಗುವ ಹೆದರಿಕೆಯನ್ನು, ತಳ್ವದೆ–ತಡಮಾಡದೆ, ಮಾಡೆ–ಮಾಡಲು, ಬಾಷ್ಪಜಳಮಂ ಕಳೆದು–ಕಣ್ಣೀರನ್ನು ಒರಸಿ ತೆಗೆದು, ಅೞ್ಕಱನೀಯೆ–ಚುಂಬನವನ್ನು ಕೊಡಲು, ಸಂಬಳಂಗೊಳ್ವವೊಲ್–ಬುತ್ತಿಯನ್ನು ಕಟ್ಟಿ ತೆಗೆದುಕೊಳ್ಳುವ ಹಾಗೆ, ಆ ತಳೋದರಿಯ–ಆ ಕೃಶಾಂಗಿಯಾದ ದ್ರೌಪದಿಯ, ಚಿತ್ತ ಮಂ–ಮನಸ್ಸನ್ನು, ಅರ್ಜುನಂ–ಅರ್ಜುನನು, ಇೞ್ಕುಳಿಗೊಂಡಂ–ಎಳೆದುಕೊಂಡನು. (ಸಂ) ಶಂಬಲ ಸಂಬಳ; ಬಳ್ವಳ=(ತ)ವಳ್ (ಅತಿಶಯ)+ವಳ್–ವಳ್ವಳ್, ವಳ್ವಳಂ. ಕರೆಯಂ– ದಡವನ್ನು+ಕೞ್ಮು, ಕಣ್ಮು–ತೊಳೆ=ಕರೆಗಣ್ಮು, ಎಂಬುದರಿಂದ ತುಂಬು ಪ್ರವಾಹ ಉಕ್ಕೇರು ವುದು ಎಂದಾಗುತ್ತದೆ.
ವಚನ : ಯಾತ್ರೋದ್ಯುಕ್ತನಾಗಿ–ಯಾತ್ರೆ ಹೊರಡುವ ಕೆಲಸದಲ್ಲಿ ತೊಡಗಿದವನಾಗಿ; ಪೆಗಲನೇಱಿ–ಹೆಗಲನ್ನು ಹತ್ತಿ.
೬೯. ಶರತ್ಕಾಲದ ವರ್ಣನೆ : – ಘನಾಗಮಂ–ಮೇಘಗಳು ಬರುವುದು, ಮೊದಲ್ಗಿಡೆ– ಮೂಲದಲ್ಲಿ ನಿಂತು ಹೋಗಲು, ಶರದಾಗಮಂ–ಶರತ್ಕಾಲದ ಬರವು, ಸಮಸ್ತ ಮಹೀ ವಿಭಾಗಮಂ–ಸಕಲ ಭೂಮಂಡಲವನ್ನು, ನೆಱೆಯೆ ಪರ್ಬೆ–ಪೂರ್ತಿಯಾಗಿ ಹರಡಲು, ಕಡವಿನ ಕಂಪಡಂಗಿದುದು–ಕದಂಬ ಪುಷ್ಪಗಳ ಕಂಪು ಅಡಗಿತು; ಜಾದಿಯ ಕಂಪೊದವಿತ್ತು– ಜಾಜಿ ಹೂವಿನ ಸುಗಂಧವುಂಟಾಯಿತು; ಸೋಗೆಯುರ್ಕು–ನವಿಲಿನ ವಿಜೃಂಭಣೆ, ಉಡುಗಿ ದುದು–ಕುಗ್ಗಿತು, ಅಂಚೆಯುರ್ಕು–ಹಂಸಗಳ ಉಬ್ಬಾಟ, ಪೊಸತಾಯ್ತು–ಹೊಸದಾಯಿತು; ಮುಗಿಲ್ಗಳ ಕರ್ಪು–ಮೋಡಗಳ ಕರಿಬಣ್ಣ, ಪೀನಂ–ವಿಶೇಷವಾಗಿ, ಓಗಡಿಸಿದುದು–ಹಿಂಜರಿದು ಹೋಯಿತು; ಇಂದುಮಂಡಲದ–ಚಂದ್ರಬಿಂಬದ, ಕರ್ಪೆಸೆದತ್ತು–ಕಪ್ಪುಮಚ್ಚೆ ಶೋಭಿಸಿತು; (ಸಂ) ಅಪಕೃಷ್ (ಪ್ರಾ) ಓಕ್ಕಡ್ಢ ಓಗಡ+ಇಸು=ಓಗಡಿಸು.
೭೦. ಅಳಿ–ದುಂಬಿಗಳು, ಬಿರಿದಿರ್ದ–ಅರಳಿದ್ದ, ಜಾದಿಯೊಳೆ–ಜಾಜಿಹೂವಿನಲ್ಲಿಯೆ, ಪಲ್ಮೊರೆಯುತ್ತಿರೆ–ಜೇಂಕರಿಸುತ್ತಿರಲು; ಹಂಸೆ–ಹಂಸಪಕ್ಷಿ, ಪೂತ ಪೂಗೊಳದೊಳೆ–ಹೂವು ಬಿಟ್ಟ ಹೂವಿನ ಕೊಳಗಳಲ್ಲಿಯೇ, ರಾಗಿಸುತ್ತಿರೆ–ನಲಿಯುತ್ತಿರಲು; ಶುಕಾವಳಿ–ಗಿಣಿಗಳ ಸಮೂಹ, ಬಂಧುರ ಗಂಧಶಾಳಿ ಸಂಕುಳದೊಳೆ–ರಮ್ಯವಾದ ಸುಗಂಧದ ಬತ್ತದ ತೆನೆ ಗಳಲ್ಲಿಯೆ, ಪಾಯ್ದುವಾಯ್ದು–ನುಗ್ಗಿನುಗ್ಗಿ, ನಲಿಯುತ್ತಿರೆ–ಸಂತೋಷಪಡುತ್ತಿರಲು, ಸಾರೆ ಚಕೋರಂ–ಸಮೀಪದ ಚಕೋರಪಕ್ಷಿ, ಇಂದುಮಂಡಳಗಳಿತಾಮೃತಾಸವಮಂ–ಚಂದ್ರಬಿಂಬ ದಿಂದ ಸುರಿಯುವ ಅಮೃತವೆಂಬ ಮಧುವನ್ನು, ಉಂಡು, ಉಸಿರುತ್ತಿರೆ–ಶಬ್ದ ಮಾಡುತ್ತಿರಲು, ಶಾರದಂ–ಶರತ್ಕಾಲವು, ಚೆಲ್ವು–ಸುಂದರವಾಗಿದೆ.
೭೧. ಪುಳಿಯೊಳ್–ಹುಳಿನೀರಿನಲ್ಲಿ, ಕರ್ಚಿದ–ತೊಳೆದ, ಬಾಳ–ಕತ್ತಿಯ, ಬಣ್ಣಮನೆ– ನೀಲಿ ಬಣ್ಣವನ್ನೇ, ಪೋಲ್ವ–ಹೋಲುವ, ಆಕಾಶಂ–ಆಕಾಶವು; ಆಕಾಶ ಮಂಡಳಮಂ–ಆಕಾಶ ಪ್ರದೇಶವನ್ನು, ಪರ್ವಿದ ಬೆಳ್ಮುಗಿಲ್–ಹಬ್ಬಿದ ಬಿಳಿ ಮೋಡ; ಮುಗಿಲ ಬೆಳ್ಪು–ಮೋಡಗಳ ಬಿಳುಪು, ಒಳ್ಪೊಕ್ಕು–ಒಳಹೊಕ್ಕು, ತಳ್ಪೊಯ್ಯೆ–ತಟ್ಟಲು, ಬಳ್ವಳ–ಅತಿಶಯವಾಗಿ, ನೀಳ್ದಿರ್ದ– ದೀರ್ಘವಾಗಿರುವ, ದಿಶಾಳಿ–ದಿಕ್ಕುಗಳ ಸಮೂಹ; ಶಾಳಿವನಗಂಧಾಂಧ–ಬತ್ತದ ಗದ್ದೆಯ ಸುಗಂಧದಿಂದ ಸೊಕ್ಕಿದ, ದ್ವಿರೇಫಾಳಿ–ದುಂಬಿಗಳ ಸಮೂಹ; ಕಣ್ಗೊಳಿಸುತ್ತೆ–ಕಣ್ಣನ್ನು ಆಕರ್ಷಿಸುತ್ತ, ಶರದಂ–ಶರತ್ಕಾಲ, ಲೋಕಕ್ಕೆ ಕಣ್ಬರ್ಪಿನಂ–ಲೋಕಕ್ಕೆ ಕಣ್ಣು ಬರುತ್ತಿರಲು, ಒರ್ಮೆಯ–ಕೂಡಲೇ, ಅಂದು–ಆ ದಿವಸ, ಆಗ, ಬಂದುದು–ಬಂತು. ಇಲ್ಲಿ ಮುಕ್ತಪದ ಗ್ರಹಣಾಲಂಕಾರವಿದೆ. “ಪುಳಿಯೊಳ್ ಕರ್ಚಿದ ಬಾಳಬಣ್ಣಂ” ಎಂಬ ಪ್ರತಿಮೆಯನ್ನು ‘ಹರ್ಷಚರಿತೆ’ ಯ ‘ಧೌತಾಸಿನಿಭ ನಭಸಿ’ ಎಂಬುದರೊಡನೆ ಹೋಲಿಸಿ. ಶರತ್ಕಾಲ ವರ್ಣನೆಯ ಈ ಮೂರು ಪದ್ಯಗಳು ನೈಸರ್ಗಿಕ ಸೌಂದರ್ಯದಿಂದ ಹೃದ್ಯವಾಗಿದೆ; ವಿಗ್ರಹವನ್ನು ಮಾಡಿ ಕೊನೆಯಲ್ಲಿ ಅದರ ಕಣ್ಣುಗಳನ್ನು ಬಿಡಿಸಿದಾಗ ಅದು ಸಚೇತನವಾಗುವ ಹಾಗೆ ಶರತ್ಕಾಲ ಲೋಕದ ಕಣ್ಣಾಗಿ ಸಪ್ರಾಣಿಸಿತು.
ವಚನ : ಬರವಿಂಗೆ–ಆಗಮನಕ್ಕೆ; ಉತ್ಕಂಠಿತ ಹೃದಯನಾಗಿ–ವಿಹ್ವಲವಾದ ಮನಸ್ಸುಳ್ಳ ವನಾಗಿ; ನೀರದಂಗಳ್–ಮೋಡಗಳು; ತೆರಳ್ದು–ಹೋಗಿ, ಒಟ್ಟಿ–ರಾಶಿಯಾಗಿ; ನೀಹಾರ ಗಿರಿಯಂ–ಹಿಮವತ್ಪರ್ವತವನ್ನು;
೭೨. ವಿದಳ….ಧವಳಂ :– ವಿದಳತ್–ಬಿರಿಯುತ್ತಿರುವ, ಕುಂದ–ಕುಂದ ಪುಷ್ಪದಂತೆ, ಶಶಾಂಕ–ಚಂದ್ರನಂತೆ, ಶಂಖ–ಶಂಖದಂತೆ, ಧವಳಂ–ಬೆಳ್ಳಗಿರುವ; ಗಂಧೇಭ….ಕಂದರಂ: ಗಂಧೇಭ–ಸೊಕ್ಕಾನೆಗಳ, ದಾನಾಂಬು–ಮದಜಲದಿಂದ, ಪೂರ್ಣ–ತುಂಬಿದ, ದರೀ– ದರಿಗಳಿಂದ ಕೂಡಿದ, ಸುಂದರ–ರಮ್ಯವಾದ, ಕಂದರಂ–ಕಣಿವೆಗಳನ್ನುಳ್ಳ; ಮೃಗ….ಗುಹಂ: ಮೃಗಪತಿ–ಸಿಂಹದ, ಪ್ರಧ್ವಾನ–ಅತಿಶಯವಾದ ನಾದದಿಂದ, ಗರ್ಜತ್–ಗರ್ಜನೆ ಮಾಡುತ್ತಿ ರುವ, ಗುಹಂ–ಗುಹೆಗಳನ್ನುಳ್ಳ, ಮದಿರೋ….ಗೀತಂ: ಮದಿರೋನ್ಮತ್ತ–ಮದ್ಯದಿಂದ ಅಮಲೇರಿದ, ನಿಳಿಂಪ–ದೇವತೆಗಳ, ಕಿಂಪುರುಷ–ಕಿಂಪುರುಷರ, ಕಾಂತಾ–ಸ್ತ್ರೀಯರಿಂದ, ಆರಬ್ಧ–ಆರಂಭಿಸಲ್ಪಟ್ಟಿರುವ, ಸಂಗೀತಂ–ಸಂಗೀತವನ್ನುಳ್ಳ; ಸುರಸಿದ್ಧ ದಂಪತಿ ರತಿ ಶ್ರೀರಮ್ಯ– ದೇವತೆಗಳ ಸಿದ್ಧರ ದಂಪತಿಗಳ ರತಿಕ್ರೀಡೆಯ ಸಿರಿಯಿಂದ ರಮಣೀಯವಾಗಿ ರುವ, ಹೈಮಾಚಳಂ–ಹಿಮವತ್ಪರ್ವತವು, ಒಪ್ಪಿದುದಲ್ತೇ–ಸೊಗಸಾಗಿರುವುದಲ್ಲವೇ?
೭೩. ಲಳಿತೋತ್ಸವ ಧ್ವಜಾಂಶುಕ ವಿಳಸನಮಂ–ಲಲಿತವಾದ ಉತ್ಸವಸೂಚಕ ಬಾವುಟದ ವಸ್ತ್ರದ ವಿಲಾಸವನ್ನು; ಮುಂದೆ–ಎದುರಿಗೆ, ನಿನಗೆ ತೋರ್ಪಂತಿರೆ–ತೋರಿಸುವಂತೆ, ಹಿಮಾಚಳ ಶಿಖರದ ಮೇಲೆ–ಹಿಮವತ್ಪರ್ವತದ ಶಿಖರದ ಮೇಲೆ, ಪಾಯ್ವ–ಹರಿಯುವ, ಗಂಗಾಸ್ರೋತಂ–ಗಂಗೆಯ ಪ್ರವಾಹವು, ಕಣ್ಗೊಳಿಸಿರ್ದುದು–ಕಣ್ಣುಗಳಿಗೆ ಸೊಗಸಾಗಿದೆ, ನೋಡ–ನೋಡು.
ವಚನ : ಮಹೀಧರಮಂ–ಬೆಟ್ಟವನ್ನು;
೭೪. ಕೈಲಾಸದ ವರ್ಣನೆ: ಇದು ಕೈಲಾಸಂ–ಇದು ಕೈಲಾಸಪರ್ವತ! ಭವಾನೀ ಧವನ ನೆಲೆ–ಪಾರ್ವತೀ ರಮಣನ ವಾಸಸ್ಥಾನ. ಇದಱೊಳ್–ಇದರಲ್ಲಿ, ದಕ್ಷಾಧ್ವರ ಧ್ವಂಸಕನ– ದಕ್ಷಯಜ್ಞವನ್ನು ನಾಶ ಮಾಡಿದ ಶಿವನ, ನೊಸಲಕಣ್–ಹಣೆಗಣ್ಣು, ಮನೋಜಾತನಂ– ಮನ್ಮಥನನ್ನು, ಬೂದಿಮಾಡಿತ್ತು–ಬೂದಿ ಮಾಡಿತು; ಆತನೊಳ್–ಆ ಶಿವನಲ್ಲಿ, ತನ್ನ ದೋರ್ಗರ್ವದ–ತನ್ನ ಬಾಹುಬಲದ ಹೆಮ್ಮೆಯ, ಅಗುರ್ವಂ–ಭಯಂಕರತೆಯನ್ನು, ಪ್ರಾಕಟಂ ಮಾಡುವ–ಪ್ರಕಟವಾಗಿ ತೋರಿಸುವ, ಬಗೆಯೊಳ್–ಮನಸ್ಸಿನಲ್ಲಿ, ಇದಂ–ಇದನ್ನು, ಪತ್ತಿ– ಅಂಟಿಕೊಂಡು, ಕಿೞ್ತೊತ್ತಿ–ಕಿತ್ತು ಆಕ್ರಮಿಸಿ, ಪೊತ್ತೆತ್ತಿದೊಡೆ–ಹೊತ್ತು ಮೇಲಕ್ಕೆತ್ತಿದರೆ, ನೀಳಕಂಠಂ–ಶಿವನು, ಮೆಚ್ಚಿ, ಲಂಕಾಧಿಪತಿಗೆ–ರಾವಣನಿಗೆ, ರಾಗದಿಂ–ಸಂತೋಷದಿಂದ, ಬರವಂ– ವರವನ್ನು, ಇತ್ತಂ–ಕೊಟ್ಟನು.
೭೫. ಶಿವ ಪಾರ್ವತಿಯರಿಗೆ ಇನಿಯ ಜಗಳ : ತೊಱೆಯೆಂಬ ಮಾತಂ–ನದಿಯೆಂಬ ಮಾತನ್ನು, ತೊಱೆ–ಬಿಟ್ಟುಬಿಡು, ಅನಿತಿಲ್ಲದೊಡೆ–ಅಷ್ಟಿಲ್ಲದೆ ಹೋದರೆ, ಆಂ–ನಾನು, ತೊಱೆವೆಂ ದಲ್–ನಿಶ್ಚಯವಾಗಿಯೂ ನಿನ್ನನ್ನು ಬಿಡುತ್ತೇನೆ, ಎಂದೊಡೆ–ಎಂದು ಹೇಳಿದರೆ, ಆ ತೊಱೆಯೊಳೆ ಪೋಯ್ತು ಸೂರುಳೆನೆ–ಆ ನದಿಯ ಜೊತೆಯಲ್ಲೇ ಹೋಯಿತು ನಿನ್ನ ಪ್ರತಿಜ್ಞೆ ಎನ್ನಲು, ಸೂರುಳವೇವುವೊ–ಪ್ರತಿಜ್ಞೆಯದೇನೋ, ನಂಬೆನ್–ನಂಬೆನು, ಎಂಬುದುಂ– ಎನ್ನುತ್ತಲು, ಕಱೆಗೊರಲಾತಂ–ನೀಲಕಂಠನಾದ ಶಿವನು, ಆತ್ಮ–ತನ್ನ, ವಿಟತತ್ವಮಂ– ವಿಟವಿದ್ಯೆಯನ್ನು, ಉಂಟೊಡೆತಾಗಿ ಮಾಡಿ–ಹೌದು, ಇದೆಯೆಂಬುದನ್ನಾಗಿ ಮಾಡಿ, ಬಾಂದೊ ಱೆಯನೆ ಪೊತ್ತು–ಆಕಾಶಗಂಗೆಯನ್ನೇ ಧರಿಸಿ, ಗೌರಿಗೆ–ಪಾರ್ವತಿಗಾಗಿ, ಆ ಪ್ರದೇಶದೊಳ್– ಈ ಎಡೆಯಲ್ಲಿ, ಕವಲ್ದೊಱೆಗೆಯ್ಸಿದಂ–ಕವಲಾಗಿ ಒಡೆದ ನದಿಯನ್ನುಂಟು ಮಾಡಿದನು. ಈ ಪದ್ಯ ಸುಂದರವಾದದ್ದು. ಲೋಕಕ್ಕೆ ತಂದೆತಾಯಿಗಳಾದ ಶಿವಪಾರ್ವತಿಯರ ಕಲಹ ಕೇಳಿ ಇಲ್ಲಿದೆ; ಪಾರ್ವತಿಗೆ ಗಂಗೆಯ ಮೇಲೆ ಸವತಿ ಮಾತ್ಸರ್ಯ; ಅವಳನ್ನು ಬಿಡು, ಇಲ್ಲದಿದ್ದರೆ ನಾನು ನಿನ್ನನ್ನು ಬಿಡುತ್ತೇನೆ ಎನ್ನುವಳು; ಆಗ ಶಿವ ನಿನ್ನ ಶಪಥ ಆಗಲೇ ನದಿಯ ಸಮೇತ ಹೊರಟು ಹೋಯಿತು ಎನ್ನಲು ಪಾರ್ವತಿ ನಂಬುವುದಿಲ್ಲ; ಅದಕ್ಕಾಗಿ ಎಂದರೆ ಅವಳನ್ನು ನಂಬಿಸುವುದಕ್ಕಾಗಿ, ದೇವಗಂಗೆಯನ್ನು ಜಟೆಯಲ್ಲೇ ಮರೆಮಾಡಿ ಒಂದೆರಡು ಕವಲು ಹೊಳೆಗಳನ್ನು ಶಿವ ಕೆಳಕ್ಕೆ ಬಿಡುತ್ತಾನೆ. ಅಂಥ ಸ್ಥಳ ಈ ಹಿಮವತ್ಪರ್ವತ. ಉಂಟೊಡೆತು=ಉಂಟು+ಒಡೆತು ಒಡೆಯದು–ಉಳ್ಳದ್ದು.
ವಚನ : ಶೈಲದ–ಬೆಟ್ಟದ, ಎಲ್ಲೆಡೆಗಳುಮಂ–ಎಲ್ಲಾ ಪ್ರದೇಶಗಳನ್ನೂ.
೭೬. ಇಂದ್ರಕೀಲದ ವರ್ಣನೆ : ಸಾಳ….ಭೀಳಮಂ : ಸಾಳ–ತೇಗದಮರ, ತಮಾಳ– ಹೊಂಗೆಯ, ಕಾನನ–ಕಾಡಿನ, ಭರ–ಸಮ್ಮರ್ದದಿಂದ, ಉದ್ಧತ–ಗರ್ವಿಷ್ಠವಾದ, ಸಿಂಧುರ– ಆನೆಗಳ, ಕಂಠ–ಕೊರಳಿನ, ಗರ್ಜನ–ಘೀಳಿಡುವಿಕೆಯಿಂದ, ಆಭೀಳಮಂ–ಭಯಂಕರವಾದ; ಅಂಬ….ದೋಳಮಂ: ಅಂಬರೇಚರ–ಖೇಚರರ, ವಧೂ–ಕಾಂತೆಯರ, ಕರಪಲ್ಲವ– ಚಿಗುರಿನಂತಿರುವ ಕೈಗಳಿಂದ, ಸಂಚಳತ್–ಅಲುಗಾಡುತ್ತಿರುವ, ಲತಾ–ಬಳ್ಳಿಗಳ, ಆಂದೋಳ ಮಂ–ಉಯ್ಯಾಲೆಯನ್ನುಳ್ಳ; ಆಶ್ರಿತಾದ್ರಿನದ ಕೂಳಮಂ–ಆಶ್ರಯಿಸಿದ ಬೆಟ್ಟದ ನದಿಯ ತೀರವನ್ನುಳ್ಳ; ಅತ್ಯ….ತ್ಕೀಳಮಂ: ಅತಿ–ಹೆಚ್ಚಾಗಿ, ಅಧರೀಕೃತ–ಕೀಳುಮಾಡಲ್ಪಟ್ಟ, ಅನ್ಯ–ಇತರ, ಕುತ್ಕೀಳಮಂ–ಬೆಟ್ಟಗಳನ್ನುಳ್ಳ; ಇಂದು….ಲೀಳಮಂ: ಇಂದುಕಾಂತ–ಚಂದ್ರ ಕಾಂತಶಿಲೆಯ, ಸು–ಚೆನ್ನಾಗಿರುವ, ಲೀಳಮಂ–ಲೀಲೆಯನ್ನುಳ್ಳ, ಇಂದ್ರಕೀಳಮಂ–ಇಂದ್ರ ಕೀಲವೆಂಬ ಪರ್ವತವನ್ನು, ಎಯ್ದಿದಂ–ಸೇರಿದನು (ಅರ್ಜುನನು). ಪದ್ಯದ ಬಂಧ ಇಂಪಾಗಿದೆ.
೭೭. ಕಮಳಾಂತರ್ಗತ ಗಂಧಬಂಧು–ಕಮಲದಲ್ಲಿರುವ ಸುಗಂಧಕ್ಕೆ ನಂಟನಾದ ಗಾಳಿ, ನಯದಿಂ–ಮೃದುವಾಗಿ, ಬಂದು, ಅಪ್ಪಿಕೊಳ್ವಂತೆ–ತಬ್ಬಿಕೊಳ್ಳುವ ಹಾಗೆ, ಮನಂಗೊಂಡಿರೆ– ಮನವನ್ನು ಸೆಳೆದಿರಲು, ತೀಡೆ–ಸೋಂಕಲು, ಬೀಸಲು; ಭೃಂಗರುತಿಗಳ್–ದುಂಬಿಗಳನಾದವು, ಮಾಂಗಲ್ಯಗೇಯಂಗಳ–ಮಂಗಳಕರವಾದ ಗೀತೆಗಳ, ಅಂದಮಂ–ಸೊಗಸನ್ನು, ಅಂದು–ಆಗ, ಈಯೆ–ಕೊಡಲು; ಮಡಲ್ತು–ಹಬ್ಬಿ, ಪೂತ ಹೂಬಿಟ್ಟ, ಲತೆಗಳ್–ಬಳ್ಳಿಗಳು, ಕೆಯ್ಗೆಯ್ದು– ಸಿಂಗರಿಸಿಕೊಂಡು, ಅರ್ಘ್ಯಮಂ ಈವಂತೆವೊಲ್–ಕೈನೀರನ್ನು ಕೊಡುವ ಹಾಗೆ, ಪೂನೀಡ [ಲ್]–ಹೂವನ್ನು ಕೊಡಲು, ಅದ್ರಿ–ಬೆಟ್ಟ, ಹರಿಗಂಗೆ–ಅರ್ಜುನನಿಗೆ, ಇಷ್ಟಾರ್ಥ ಸಂಸಿದ್ಧಿಯಂ–ಅಭಿಲಾಷೆಯ ಪೂರೈಕೆಯನ್ನು, ಈವಂತೆ ವೊಲಾದುದು–ಕೊಡುವಂತೆ ಆಯಿತು. ಶ್ರೀಹರ್ಷಕೃತ ನಾಗಾನಂದ ನಾಟಕದ ೧–೧೧ನೆಯ ಪದ್ಯದೊಡನೆ ಹೋಲಿಸಿ.
ವಚನ : ಇಂದ್ರಸುತನಂ–ಅರ್ಜುನನನ್ನು; ಪರಂತಪಂ–ಶತ್ರುಗಳನ್ನು ಸುಡುವವನು.
೭೮. ಕರ್ಪೂರ ಕಾಳಾಗರು ಬಹುಳರಜಂ–ಕರ್ಪೂರದ ಕರಿಯಗರುವಿನ ವಿಶೇಷವಾದ ದೂಳು, ಭಸಿತಂ–ಬೂದಿ; ಕಲ್ಪವೃಕ್ಷ ಪ್ರಸವಂ–ಕಲ್ಪವೃಕ್ಷದಿಂದ ಹುಟ್ಟಿದ್ದು, ವಲ್ಕಲಂ–ನಾರು ಮಡಿ; ಕನಕ ಕಮಳನಾಳೋತ್ಕರಂ–ಹೊಂದಾವರೆಯ ದಂಟಿನ ನೂಲಿನ ಸಮೂಹದ, ಯಜ್ಞೋಪವೀತಂ–ಜನಿವಾರ; ನಿಚ್ಚನಿಚ್ಚಂ–ದಿನದಿನವೂ, ಪೊಸತು–ಹೊಸದು, ಎಂಬಂತಾಗೆ–ಎಂಬ ಹಾಗೆ ಆಗಲು, ಉದ್ಯದ್ಭಕ್ತಿ ಭಾರಾನತ ವನವನಿತಾವೃಂದಂ– ಅತಿಶಯವಾದ ಭಕ್ತಿಯ ಭಾರದಿಂದ ಬಾಗಿದ ಅರಮ್ಯಾಭಿಮಾನಿ ದೇವತಾ ಸ್ತ್ರೀಯರ ಸಮೂಹ, ಪಾರ್ಥಂಗೆ–ಅರ್ಜುನನಿಗೆ, ಒಸೆದು–ಸಂತೋಷಿಸಿ, ತುಡಲುಡಲ್–ತೊಡು ವುದಕ್ಕೂ ಉಡುವುದಕ್ಕೂ, ಪೂಸಲುಂ–ಬಳಿದುಕೊಳ್ಳುವುದಕ್ಕೂ, ಸಾಲ್ವಿನಂ–ಸಾಕಾಗು ತ್ತಿರಲು, ಸಾಧಿಸಿತು–ಒದಗಿಸಿಕೊಟ್ಟಿತು.
೭೯. ಅದಿರದ ಚಿತ್ತಂ–ಸ್ತಿಮಿತವಾದ ಬುದ್ಧಿ, ಅಳ್ಕದ ಮನಂ–ಹೆದರದ, ಬಳಲದ ಮನ; ಬಗೆಗೊಳ್ಳದ–ಮನವನ್ನು ಆಕ್ರಮಿಸದ, ಮೋಹ–ಪ್ರೀತಿ; ಎತ್ತಿಕಟ್ಟಿದ ಜಡೆ–ಎತ್ತಿಕಟ್ಟಿರುವ ಜಟೆ; ತೊಟ್ಟ–ಧರಿಸಿದ, ರತ್ನಕವಚಂ–ರತ್ನಖಚಿತವಾದ ಕವಚ; ಕೊರಲೊಳ್–ಕೊರಳಿ ನಲ್ಲಿ, ಸಲೆ ಕೋದ–ಚೆನ್ನಾಗಿ ಪೋಣಿಸಿದ, ಬಿಲ್–ಬಿಲ್ಲು; ಪ್ರಯತ್ನದೆ–ಕಷ್ಟದಿಂದ, ಬಿಗಿ ದಿರ್ದ–ಕಟ್ಟಿದ, ಎರೞ್ದೊಣೆ–ಎರಡು ಬತ್ತಳಿಕೆಗಳು; ಮಿಸುಪ್ಪ–ಹೊಳೆಯುತ್ತಿರುವ, ಅಸಿ ಖೇಟಕಂ–ಕತ್ತಿ ಗುರಾಣಿಗಳು; ಇಂತಿವು–ಹೀಗೆ ಇವು, ಒಂದುಗುಂದದೆ–ಒಂದೂ ಕಡಮೆ ಯಾಗದೆ, ನಿಲೆ–ನೆಲಸಿರಲು, ನೋೞ್ಪ–ನೋಡುವ, ನೋಟಕರ್ಗೆ–ಪ್ರೇಕ್ಷಕರಿಗೆ, ಅರ್ಜುನಂ– ಅರ್ಜುನನು, ಸೌಮ್ಯಭಯಂಕರನ್–ಸೌಮ್ಯನಾಗಿಯೂ ಭಯಂಕರನಾಗಿಯೂ, ಆದಂ– ಆದನು, ಕಂಡನು.
ವಚನ : ತಪನಪ್ರಭಂ–ಸೂರ್ಯನ ತೇಜಸುಳ್ಳವನು; ತಗುಳ್ದೊಡೆ–ಆರಂಭಿಸಿದರೆ,
೮೦. ಇಂದ್ರ ತನೂಜ ತಪಃ ಪ್ರಭಾವದಿಂ–ಅರ್ಜುನನ ತಪಸ್ಸಿನ ಶಕ್ತಿಯಿಂದ, ತತ್ಕಿ ಶೋರಕೇಸರಿ–ಆ ಸಿಂಹದ ಮರಿಗಳು, ಕರಿಣಿಯ–ಹೆಣ್ಣಾನೆಗಳ, ಸೀಯನಪ್ಪ–ಸಿಹಿಯಾಗಿ ರುವ, ಮೊಲೆವಾಲ್ಗೆ–ಕೆಚ್ಚಲ ಹಾಲಿಗೆ, ತಗುಳ್ದುದು–ಹಿಂದೆ ಹಿಂದೆಯೇ ಹೋದುವು; ಕರಿ ಪೋತಂ–ಆನೆಯ ಮರಿಗಳು ಅವುಂಡುಗರ್ಚಿ–ಕೆಳದುಟಿಯನ್ನು ಕಚ್ಚಿಕೊಂಡು, ಹರಿಪೋತ ಮಂ–ಸಿಂಹದ ಮರಿಗಳನ್ನು, ಬೆದಱುತುಂ–ಬೆದರಿಸುತ್ತ, ಕೇಸರಿಣಿಯ–ಸಿಂಹಿಣಿಯ, ಕೆಚ್ಚ ಲಂ–ಮೊಲೆಗಳನ್ನು, ತುಡುಕುತುಂ–ಹಿಡಿದುಕೊಳ್ಳುತ್ತ, ಪರಿದತ್ತು–ಓಡಿದವು; ಕುರಂಗ ಯೂಧದೊಳ್–ಜಿಂಕೆಗಳ ಹಿಂಡಿನಲ್ಲಿ, ಅಂದು–ಆಗ, ಪೆರ್ಬುಲಿಗಳ್–ಹೆಬ್ಬುಲಿಗಳು, ಬೆರಸಿ ದುವು–ಸೇರಿಕೊಂಡುವು.
ವಚನ : ಕಂದರದೊಳ್–ಕಣಿವೆಯಲ್ಲಿ; ಶಿಖಿಗಳಿಂ–ಅಗ್ನಿಗಳಿಂದ; ಬೆಂದನುಲಿಯಂತೆ– ಸುಟ್ಟ ಹಗ್ಗದಂತೆ; ಏತರ್ಕಂ ಮುಟ್ಟಲ್ಲದೆ–ಯಾವುದಕ್ಕೂ ಬೇಡವಾಗಿದೆ, ಮುಟ್ಟುಗಿಡೆ–ನಿಷ್ಪ್ರ ಯೋಜಕವಾಗಲು; ಹೃತ್ಕಂಪ–ಎದೆಯ ನಡುಕ; ಸಂಕೆಯೊಳ್–ಅಂಜಿಕೆಯಲ್ಲಿ; ತಪೋವಿ ಘಾತಂ–ತಪಸ್ಸಿಗೆ ವಿಘ್ನಗಳನ್ನು; ಮಾಡಿಂ–ಮಾಡಿರಿ; ನೆಚ್ಚಿನಚ್ಚರಸೆಯರುಮಂ–ನಂಬಿಕೆಯ ಅಪ್ಸರ ಸ್ತ್ರೀಯರನ್ನೂ; ಪೇೞ್ದಾಗಳ್–ಆಜ್ಞೆ ಮಾಡಿದಾಗ.
೮೧. ವನರುಹ ಗರ್ಭನೆಂಬವನ–ತಾವರೆಯಲ್ಲಿ ಹುಟ್ಟಿದವನು ಎನ್ನುವವನ ಎಂದರೆ ಬ್ರಹ್ಮನ, ಮುನ್ನಿನ–ಪೂರ್ವಕಾಲದಲ್ಲಿ, ಗೆಯ್ದ–ಮಾಡಿದ, ತಪಂ–ತಪಸ್ಸು, ತಿಲೋತ್ತ ಮಾಂಗನೆಯಿಂ–ತಿಲೋತ್ತಮೆಯೆಂಬ ದೇವಗಣಿಕೆಯಿಂದ, ಅದು, ಅಂತುಟಾದುದು–ಹಾಗೆ ಆಯಿತು, ಎನೆ–ಎನ್ನಲು, ಎಂದರೆ, ಬ್ರಹ್ಮನ ತಪಸ್ಸು ನಷ್ಟವಾಗಿ ಸುತ್ತಲೂ ನರ್ತಿಸುತ್ತಾ ತಿರುಗುತ್ತಿದ್ದ ತಿಲೋತ್ತಮೆಯನ್ನು ನೋಡಲು ನಾಲ್ಕು ಮುಖಗಳನ್ನು ಪಡೆದವನಾದನು ಎನ್ನಲು; ಮತ್ತಿನ–ಉಳಿದ, ಬೂತುತಪಂಗಳ್–ಪ್ರಾಣಿಗಳ ತಪಸ್ಸುಗಳು, ಎಮ್ಮಪುರ್ವಿನ– ನಮ್ಮ ಹುಬ್ಬಿನ, ಕಡೆಯ–ಕೊನೆಯ, ಒಂದು ಜರ್ವಿನೊಳೆ–ಒಂದು ಅಲುಗಾಟದಲ್ಲೇ, ತೀರ್ವುವು–ಮುಗಿದುಹೋಗುತ್ತವೆ, ಅಲ್ಲದೆ, ದೇವ–ಪ್ರಭುವೇ, ಈಗಳ್–ಈಗ, ಮನಸಿ ಜಂ–ಮನ್ಮಥನು, ಬೆಂಬಲಂ–ಪ್ರೋತ್ಸಾಹಕ, ಆಱು ಋತುವುಂ ನೆರವು–ಆರು ಋತುಗಳೂ ಸಹಾಯಕ, ಎಂದೊಡೆ–ಎಂದರೆ, ಸೋಲದಿರ್ಪರಾರ್–ಮೋಹಕ್ಕೆ ಒಳಗಾಗಿ ಸೋಲದಿರು ವವರು ಯಾರು?
ವಚನ : ಪುರಂದರನ–ಇಂದ್ರನ; ಪೂಣ್ದು–ಪ್ರತಿಜ್ಞೆ ಮಾಡಿ; ಅವತರಿಸಿ–ಇಳಿದು; ಪುಳಿನ–ಮರಳು; ಇಡಿದು–ತುಂಬಿ; ಎಡೆಗೊಳೆ–ಅವಕಾಶವನ್ನು ಪಡೆಯಲು; ಅಮರ್ದಿ ನೊಳಂ–ಅಮೃತದಲ್ಲಿಯೂ; ಉಂತೆ–ಸುಮ್ಮನೆ; ಪೊಡರ್ವ–ಸ್ಫುರಿಸುವ; ಪೊಡರ್ಪುಮಂ– ಚಲನೆಯನ್ನೂ; ಬೆಳರ್ವಾಯ್ಗಳಗೆ–ಬಿಳಿದಾದ ಬಾಯಿಗಳಿಗೆ, ತನಿಗೆತ್ತುಮಂ–ಹೊಸದಾದ ಅದಿರಾಟವನ್ನು; ನಿಡಿಯಲರ್ಗಣ್ಗಳ್ಗೆ–ದೀರ್ಘವಾದ ಹೂವಿನಂತಿರುವ ಕಣ್ಣುಗಳಿಗೆ; ಮೞ ಮೞಿಪ–ಕದಡಿದ, (ಕೆಂಪಾದ), ತೊದಳಿಸುವ–ತೊದಲು ನುಡಿವ; ಎಕ್ಕೆಯಿಂ–ಒಂದೇ ಕಾಲ ದಲ್ಲಿ; ನೆಱೆಯೆಕೆಯ್ಗೆಯ್ದು–ಪೂರ್ಣವಾಗಿ ಸಿಂಗರಿಸಿಕೊಂಡು; ಮೞಮೞಿಸಿತೆಂದು ಕಣ್ಕದಡಿದ ಭಾವಂ (ಶಮದ);
೮೨. ಆಱುಂ ಋತುಗಳ ಪೂಗಳುಂ–ಆರು ಋತುಗಳ ಹೂವುಗಳೂ, ಆಱುಂ ಋತು ಗಳ–ಆರು ಋತುಗಳ, ಪೊದಳ್ದ–ವ್ಯಾಪಿಸಿದ, ಚೆಲ್ವುಗಳುಂ–ಸೊಗಸುಗಳೂ; ಅಣಂ ಬೇಱಿಲ್ಲದೆ–ಸ್ವಲ್ಪವೂ ಬೇರೆಬೇರೆಯಾಗಿರದೆ, ಒಂದು ಸೂೞ್–ಒಂದೇ ಬಾರಿಗೆ, ನೆಲದೊಳಂ ಗಗನದೊಳಂ–ನೆಲದಲ್ಲೂ, ಆಕಾಶದಲ್ಲೂ, ಒಡನೊಡನೆ–ಜೊತೆಜೊತೆಯಾಗಿ ಮೆಯ್ದೋ ಱಿದುವು–ಕಾಣಿಸಿಕೊಂಡುವು, ಪ್ರಕಟವಾದುವು.
೮೩. ಮೆಯ್ದೋಱಿದೊಡೆ–ಕಾಣಿಸಿಕೊಂಡರೆ, ಅವಱೊಡನೆಯೆ–ಆ ಋತುಗಳ ಸಮೇತ ವಾಗಿಯೇ, ಮೆಯ್ದೋಱಲ್ ಬಗೆದು–ಕಾಣಿಸಿಕೊಳ್ಳಬೇಕೆಂದು ಭಾವಿಸಿ, ಅನಂಗಜಂಗಮ ಲತೆಗಳ್–ಮನ್ಮಥನ ಸಂಚಾರೀಲತೆಗಳು, ಮೆಯ್ದೋಱುವಂತೆ–ಕಾಣಿಸಿಕೊಳ್ಳುವ ಹಾಗೆ, ಅಮರ ಗಣಿಕೆಯರ್–ಅಪ್ಸರಸ್ತ್ರೀಯರು, ವಂದು–ಬಂದು, ಆಗಳ್–ಆಗ, ಮೆಲ್ಲನೆ– ಮೃದುವಾಗಿ, ಮೆಯ್ದೋಱಿದರ್–ಕಾಣಿಸಿಕೊಂಡರು.
೮೪. ಸಮದಗಜಗಮನೆಯರ್–ಮದಿಸಿದ ಆನೆಯ ನಡಗೆಯುಳ್ಳವರು, ಮುಗಿಲ ಮೇಲೆ–ಮೋಡಗಳ ಮೇಲೆ, ನಡೆಪಾಡುವಾಕೆಗಳ್–ನಡೆದಾಡುವವರು, ಆದ ದೇವಗಣಿಕೆ ಯರು, ಧರಾಗಮನಂ–ಭೂಮಿಗೆ ಬಂದದ್ದು ಅಥವಾ ನೆಲದ ಮೇಲೆ ನಡೆಯುವುದು, ತಮಗೆ, ಪೊಸತಪ್ಪುದಱಿಂ–ಹೊಸದಾಗಿರುವುದರಿಂದ, ಅಮರ್ದಿರೆ–ನೆಲದಲ್ಲಿ ಪಾದಗಳು ಸಿಲುಕಿರಲು, ನಡೆನಡೆದು–ನಡೆದೂ ನಡೆದೂ, ನಡೆಯಲಾಱದೆ–ನಡೆಯಲಸಮರ್ಥರಾಗಿ, ಸುೞಿದರ್– ಸುತ್ತಾಡಿದರು. ನಡೆಪು ನಡೆ+ಪು.
೮೫. ಮುಡಿಯ–ತುರುಬಿನ, ಕುಚಯುಗದ–ಇಮ್ಮೊಲೆಗಳ, ಜಘನದ–ಪಿರ್ರೆಗಳ, ಕಡು ವಿಣ್ಪಿಂ–ಅತಿಶಯವಾದ ಭಾರದಿಂದ, ಮೆಲ್ಲಡಿಗಳ್–ಅವರ ಮೃದುಪಾದಗಳು, ಮಣ ಲೊಳ್–ಮರಳಿನಲ್ಲಿ, ಅೞ್ದುಬರೆ–ಮುಳುಗಲು, ಎಂದರೆ ಹೂಳಿ ಹೋಗಲು, ನಡೆಯದ– ನಡೆಯದಿರುವ, ಬೇವಸಮಂ–ಆಯಾಸವನ್ನು, ತಾಂ–ತಾವು, ನಡೆಯಿಸುವಂತೆ–ಓಡಾಡಿಸುವ ಹಾಗೆ, ಅವರ್ಗಳ್–ಅವರು, ಒಯ್ಯನೊಯ್ಯನೆ–ಮೆಲ್ಲಮೆಲ್ಲಗೆ, ನಡೆದರ್–ನಡೆದರು.
೮೬. ಮುಡಿಯಂ–ತಲೆನವಿರ ಗಂಟನ್ನು, ಸೋಗೆಯೆಗೆತ್ತು–ಹೆಣ್ಣು ನವಿಲೆಂದೇ ಭಾವಿಸಿ, ಸೋಗೆ–ಗಂಡು ನವಿಲು; ನಡೆಯಂ–ನಡಗೆಯನ್ನು, ಪೆಣ್ಣಂಚೆಗೆತ್ತು–ಹೆಣ್ಣು ಹಂಸವೆಂದೇ ಭಾವಿಸಿ, ಅಂಚೆ–ಗಂಡು ಹಂಸ; ಮೇಲ್ನುಡಿಯಂ–ಮೃದುವಾದ ಮಾತನ್ನು, ಕೋಗಿಲೆಗೆತ್ತು– ಹೆಣ್ಣು ಕೋಗಿಲೆಯೆಂದೇ ಭಾವಿಸಿ, ಕೋಗಿಲೆ–ಗಂಡು ಕೋಗಿಲೆ, ಘನೋತ್ತುಂಗ ಸ್ತನದ್ವಂದ್ವ ದಿಟ್ಟೆಡೆಯಂ–ದಪ್ಪವೂ ಎತ್ತರವೂ ಆದ ಅವಳಿ ಮೊಲೆಗಳ ಸಮ್ಮರ್ದವನ್ನು, ಕೋಕಮೆ ಗೆತ್ತು–ಚಕ್ರವಾಕಿಯೆಂದೇ ಭಾವಿಸಿ, ಕೋಕಮ್–ಚಕ್ರವಾಕ; ಅಳಕಾನೀಕಂಗಳಂ–ಮುಂಗುರುಳ ಸಾಲುಗಳನ್ನು, ಸೊರ್ಕಿದಾಱಡಿಗೆತ್ತು–ಸೊಕ್ಕಿದ ಹೆಣ್ಣುದುಂಬಿಯೆಂದೇ ಭಾವಿಸಿ, ಆಱಡಿ– ಗಂಡುದುಂಬಿ; ಸುತ್ತುತುಂಬರೆ–ಆ ಅಪ್ಸರೆಯನ್ನು ಬಳಸಿಕೊಂಡು ಬರಲು, ಆಕೆಗಳ್–ಅವರು, ಬನಂ–ವನವು, ಬರ್ಪಂತೆ–ಬರುವ ಹಾಗೆ, ಬಂದು,
ವಚನ : ನರೇಂದ್ರತಾಪಸನಂ–ರಾಜ ತಪಸ್ವಿಯಾದ ಅರ್ಜುನನನ್ನು; ಸೋಲಿಸಲೆಂದು– ಮೋಹಿಸಲೆಂದು; ತಾಮೆ ಸೋಲ್ತು–ತಾವೇ ಮೋಹಿಸಿ.
೮೭. ಊರ್ವಸಿಯ ನೃತ್ಯ: ಮಗಮಗಿಸುತ್ತುಮಿರ್ಪ–ಗಮಗಮಿಸುತ್ತಿರುವ, ಮೃಗ ನಾಭಿಯ–ಕಸ್ತೂರಿಯ, ನೀರ್ದಳಿವಲ್ಲಿ–ನೀರನ್ನು ಚಿಮುಕಿಸುವಾಗ, ಕಂಪನಾಳ್ದು–ಕಂಪನ್ನು ಹೊಂದಿ, ಉಗುೞ್ದು–ಹೊರಕ್ಕೆ ಸೂಸಿ, ಅಲರುತ್ತಮಿರ್ಪ ಪದದೊಳ್–ಅರಳುತ್ತಿರುವ ಸಮಯದಲ್ಲಿ ತೋರಮಲ್ಲಿಗೆಯ–ದಪ್ಪ ಮಲ್ಲಿಗೆಯ, ತುಱುಂಬು–ತುರುಬು, ರಾಹು, ತವೆ ಚೆನ್ನಾಗಿ, ನುಂಗಿದ, ಚಂದ್ರನಂ–ಚಂದ್ರನನ್ನು, ಒಯ್ಯನೊಯ್ಯನೆ–ಮೆಲ್ಲ ಮೆಲ್ಲಗೆ, ಅಂದು–ಆಗ, ಉಗುೞ್ವವೊಲ್–ಉಗುಳುವ ಹಾಗೆ, ಒಪ್ಪಿರಲ್–ಸೊಗಸಾಗಿರಲು, ಬಲ ದೊಳ್ ಬಲ ಗಡೆಯಲ್ಲಿ, ಉರ್ವಸಿ–ಊರ್ವಸಿಯು, ದೇಸಿಗೆ–ದೇಸಿನೃತ್ಯಕ್ಕಿಂತಲೂ, ದೇಸಿ ಯಾಡಿದಳ್–ಹೆಚ್ಚು ದೇಸಿಯುಳ್ಳ ನೃತ್ಯವನ್ನಾಡಿದಳು. ಇದು ಬಲು ಸೊಗಸಾದ ಪದ್ಯ; ತುರುಬಿನ ಮೇಲೆ ದುಂಡುಮಲ್ಲಿಗೆ ಸರ ಕುಳಿತಿರುವುದು ಚಂದ್ರಗ್ರಹಣ ಸ್ವಲ್ಪ ಸ್ವಲ್ಪವಾಗಿ ಬಿಡುತ್ತ ಬರುವಾಗ ಕಾಣಿಸುವ ಚಂದ್ರನಿಗೆ ಸಮಾನವಾಗಿದೆ. ಚಿತ್ರ ಸುಂದರ.
೮೮. ಮೇನಕೆಯ ಗಾನ: ಪದಕೊರಲ್–ಹದವಾದ ಶಾರೀರ, ಇಂಪಂ–ಇಂಪನ್ನು, ಅಪ್ಪುಕೆಯೆ–ಒಪ್ಪಿಕೊಳ್ಳಲು, ಕೊಂಕು–ವಕ್ರತೆ, ನಯಂ–ನುಣುಪು, ಗಮಕಂಗಳಿಂ–ಗಮಕ ಗಳಿಂದ, ಪೊ [ಡ] ರ್–ಸ್ಫುರಣೆ, ಕೊದಳ್–ಮಧುರವಾದ ಮಾತು, ಎೞೆದಿಕ್ಕಿದಂತೆ–ತಂತಿ ಎಳೆದ ಹಾಗೆ, ಸುತಿಯೊಳ್–ಶ್ರುತಿಯಲ್ಲಿ, ಸಮವಾಗಿರೆ–ಸಮಾನವಾಗಿರಲು, ಜಾಣ ನಾಂತು–ಚಮತ್ಕಾರವನ್ನು ಹೊಂದಿ, ಮೆಚ್ಚಿದ ತೆಱದೆ–ಮೆಚ್ಚಿದ ರೀತಿಯಿಂದ, ಆಸೆವಟ್ಟು– ಬಯಸಿ, ಅಲಸದೆ–ಆಯಾಸಗೊಳ್ಳದೆ, ಎತ್ತಿದವೊಲ್–ರಾಗವನ್ನು ಎತ್ತಿಕೊಂಡ ಹಾಗೆ, ದೊರೆವೆತ್ತು–ಸಮತೆಯನ್ನು ಪಡೆದು, ದೂಱಿದ–ತೆಗಳಿದ, ಆಱಿದ–ಸಮಾಧಾನಗೊಂಡ, ದನಿ–ಸ್ವರ, ಮುಟ್ಟೆ–ಎದೆಯನ್ನು ಮುಟ್ಟಲು, ಸರಸ್ವತಿ ಬಾಯ್ದೆಱೆದಂತೆ–ಸರಸ್ವತಿ ಬಾಯಿ ತೆರೆದ ಹಾಗೆ, ಮೇನಕೆ, ಪಾಡಿದಳ್–ಹಾಡಿದಳು–ಇಲ್ಲಿ ಕೊಂಕು, ನಯ, ಗಮಕ–ಎಂಬ ಸಂಗೀತ ಪರಿಭಾಷೆಯ ಶಬ್ದಗಳಿವೆ; ಅವುಗಳ ಅರ್ಥ ಆ ಶಾಸ್ತ್ರವನ್ನು ನೋಡಿ ತಿಳಿಯಬೇಕು.
೮೯. ನಡು–ಸೊಂಟವು, ನಡುಗಲ್ಕೆ–ನಡುಗಲು, ಪುರ್ವು–ಹುಬ್ಬುಗಳು, ಪೊಡರಲ್ಕೆ– ಕಂಪಿಸಲು, ಕುರುಳ್–ಮುಂಗುರುಳುಗಳು, ಮಿಳಿರಲ್ಕೆ–ಅಲುಗಾಡಲು, ಬಾಯ್–ಬಾಯಿ, ಬೆಡಂಗಿಡಿದು–ಚೆಲುವಿನಿಂದ ತುಂಬಿ, ಎಳಸಲ್–ಬಯಸಲು, ತೆರಳ್ದು–ದುಂಡಾಗಿ, ತುಡುಕಲ್ಕೆ–ಹಿಡಿದುಕೊಳ್ಳುವುದಕ್ಕೆ, ತಗುಳ್ದುದು–ಅಟ್ಟಿ ಬಂತು, ಪಾಡಿದೀನೆವದಿಂ–ಹಾಡಿದ ಈ ನೆಪದಿಂದ, ಈಕೆ–ಇವಳು, ಕೆಂದಂ–ಪ್ರೇಮರತಿಯನ್ನು, ಕನ್ನಡಿಪಳೊ–ಪ್ರತಿಬಿಂಬಿಸು ತ್ತಿದ್ದಾಳೆಯೋ, ಎಂಬಿನೆಗಂ–ಎನ್ನುತ್ತಿರಲು, ದನಿಯಿಂಪು–ಧ್ವನಿಯ ಇಂಪು, ಬೀಣೆಯಂ– ವೀಣೆಯನ್ನು, ಮಿಡಿದವೊಲಾಗೆ–ಮೀಟಿದ ಹಾಗಾಗಲು, ಗಾನದೊಳೊಡಂಬಡೆ–ಸಂಗೀತ ದಲ್ಲಿ ಹುದುವಾಗಿರಲು, ಮೇನಕೆ, ಮುಂದೆ, ಪಾಡಿದಳ್–ಹಾಡಿದಳು.
೯೦. ಒದವಿದ–ಉಂಟಾದ, ಕೆತ್ತ–ಗುತ್ತನಾಗಿರುವ, ಕಂಕಣದ–ಬಳೆಗಳ, ಪುರ್ವಿನ– ಹುಬ್ಬುಗಳ, ಜರ್ವು–ಅದಿರಾಟವು, ಲಯಕ್ಕೆ–ತಾಳದ ಲಯಕ್ಕೆ, ಲಕ್ಕ ಲೆಕ್ಕದ–ಲಕ್ಷ ಸಂಖ್ಯೆಯ, ಗತಿ–ಗತಿಯನ್ನುಳ್ಳ, ನಾಟಕಾಭಿನಯಮಾಯ್ತೆನೆ–ನೃತ್ಯಾಭಿನಯವಾಯಿತೆನ್ನಲು, ಗೇಯದೊಳ್–ಗೀತದಲ್ಲಿ, ಈಕೆ–ಇವಳು, ಸೊರ್ಕನಿಕ್ಕಿದಳ್–ಸೊಕ್ಕುಂಟುಮಾಡುವ ವಸ್ತುವನ್ನು, ಎಂದರೆ ಕಿಣ್ವವನ್ನು ಹಾಕಿದಳು, ಎನೆ–ಎನ್ನಲು, ಕಳ್ಗೆ–ಮದ್ಯಕ್ಕೆ, ಚಕ್ಕಣವೆ ನಿಪ್ಪುದು–ಚಾಕಣವೆನಿಸಿಕೊಳ್ಳುವುದು, ಸಾಗೆನಿಸಲ್ಕೆ–ಸಾಗು(?) ಎನ್ನಿಸಿಕೊಳ್ಳಲು, ಸಾಲ್ವ– ಸಾಕಾಗುವ, ಸಗ್ಗದ–ಸ್ವರ್ಗದ, ಪೊಸದೇಸಿಯ–ಹೊಸದಾದ ದೇಸಿರಾಗಗಳ, ಓಳಿಗಳಂ– ಸಮೂಹಗಳನ್ನು, ಒರ್ವಳ್–ಒಬ್ಬ ಅಪ್ಸರೆ, ಒಱಲ್ದು–ರಾಗಿಸಿ, ನೆಱಲ್ದು–ಸ್ತಿಮಿತಳಾಗಿ, ಪಾಡಿದಳ್–ಹಾಡಿದಳು. ಕೆತ್ತ ಕಿಱು. ವ್ಯವಧಾನೇ–ನಡುವೆ ಬರು, ಮುಚ್ಚು; ಸೊರ್ಕು–ಹೆಂಡ ಹುಳಿಯಾಗಿ ಮದ್ಯಸಾರವಾಗಿಸುವ ಪದಾರ್ಥ, ಕಿಣ್ವ; ಸಾಗು ಇದರ ಅರ್ಥ ಚಿಂತನೀಯ; ಸಾಗು ಎಂದರೆ ಸಾಯುತ್ತದೆ ಎಂಬರ್ಥ; ಹಳಗನ್ನಡದಲ್ಲಿ ಸಾಗುಂ ಎಂದಿರಬೇಕು; ಈ ಅರ್ಥದ ಅನ್ವಯ ಪ್ರಕೃತ ಸಂದರ್ಭಕ್ಕೆ ಆಗಲಾರದು; ‘ಸಾವಗಿಸಲ್ಕೆ’ ಎಂದು ಪಾಠವಿದ್ದಿರ ಬಹುದೆ; ಆಗ ಸರಿಮಾಡು, ಸೈತುಮಾಡು ಎಂಬರ್ಥವಾಗುತ್ತದೆ; ಇಲ್ಲವೆ ಸಾಲ್ಗುಂ (=ಸಾಕು) ಎಂದು ಬಿಡಿಸಬಹುದು.
೯೧. ತಿಲೋತ್ತಮೆಯ ನಾಟ್ಯ: ಆಡದ–ಕುಣಿಯದ, ಮೆಯ್ಗಳಿಲ್ಲ–ದೇಹಗಳಿಲ್ಲ, ನಿಡುಮೆಯ್ಗಳುಂ–ದೀರ್ಘದೇಹಗಳು ಕೂಡ, ಆಡಿದುವು–ಕುಣಿದುವು; ಅಂತೆ–ಹಾಗೆಯೇ, ಮೆಟ್ಟುವಳ್–ಪಾದವಿನ್ಯಾಸಮಾಡಿ ಕುಣಿಯುತ್ತಾಳೆ; ನೋಡಿದರೆಲ್ಲರಂ–ಎಲ್ಲಾ ಪ್ರೇಕ್ಷ ಕರನ್ನೂ, ಪಿಡಿದು–ಹಿಡಿದು, ಮೆಟ್ಟಿದಳ್–ತುಳಿದಳು; ದೇಸಿ–ದೇಸಿನೃತ್ಯ, ಇಟ್ಟಳ ಮಾಯ್ತು–ರಮಣೀಯವಾಯಿತು; ಆರ್ಗಂ–ಯಾರಿಗೂ, ಕೆಯ್ಗೂಡಿದುದಿಲ್ಲಂ–ಕೈವಶ ವಾಗಲಿಲ್ಲ, ಎನೆ–ಎನ್ನಲು, ವಿಸ್ಮಯಮಾಗಿರೆ–ಅಚ್ಚರಿಯಾಗಿರಲು, ತನ್ನ ಮುಂದೆ ಬಂದು, ಆಡಿದಳ್–ನಾಟ್ಯಮಾಡಿದವಳಾದ, ಆ ತಿಳೋತ್ತಮೆಯನ್–ಆ ತಿಲೋತ್ತಮೆಯನ್ನು, ನರೇಂದ್ರ ತಾಪಸಂ–ಅರ್ಜುನನು, ಒಲ್ದನುಮಿಲ್ಲ–ಒಲಿದವನು ಕೂಡ ಆಗಲಿಲ್ಲ.
ನೃತ್ಯಗಾನ ವರ್ಣನೆಯ ಈ ಐದು ಪದ್ಯಗಳು ಪಂಪನ ಸ್ವಾನುಭವದ ಅಭಿವ್ಯಕ್ತಿಯೆಂದು ತೋರುತ್ತದೆ; ಅರಿಕೇಸರಿಯ ಆಸ್ಥಾನದಲ್ಲಿ ನೃತ್ಯ ಗಾನ ಗೋಷ್ಠಿಗಳನ್ನು ಅವನು ಬಹುವಾಗಿ ನೋಡಿದ್ದಿರಬಹುದು.
ವಚನ : ಎಡೆಯಾಡಿಯುಂ–ನಡು ನಡುವೆ ನರ್ತಿಸಿಯೂ; ಮನಂಗೊಳೆ ಪಾಡಿಯುಂ– ಮನವನ್ನು ಅಪಹರಿಸುವ ಹಾಗೆ ಹಾಡಿಯೂ; ತಾಮೆ ಸೋಲ್ತು–ತಾವೇ ಮೋಹಿಸಿ, ಎಯ್ದೆ ವಂದು–ಹತ್ತಿರಕ್ಕೆ ಬಂದು.
೯೨. ಬೂದಿ ಜೆಡೆ ಲಕ್ಕಣಂ–ವಿಭೂತಿಯ ಮತ್ತು ಜಟೆಯ ಲಕ್ಷಣಗಳು, ತಪಕೆ–ತಪಸ್ಸಿಗೆ, ಆದುವು–ಆಗುತ್ತವೆ; ಎರೞ್ದೊಣೆ–ಎರಡು ಬತ್ತಳಿಕೆ, ಶರಾಸನ–ಬಿಲ್ಲು, ಕವಚಂ–ಕವಚವು, ಇವು– ಇವುಗಳು, ಎಂತು–ಹೇಗೆ, ಆದುವೊ–ತಪಸ್ಸಿಗೆ ಆಗುತ್ತವೋ? ನಿನ್ನ ತಪದ ಪಾಂಗು– ನಿನ್ನ ತಪಸ್ಸಿನ ರೀತಿ, ಮುತ್ತುಂಮೆೞಸಂ–ಮುತ್ತುಗಳನ್ನೂ ಮೆಣಸನ್ನೂ, ಕೋದಂತುಟೆ– ಪೋಣಿಸಿದ ಹಾಗೆಯೇ. ಎಂತು ಗಡಾ–ಹೇಗೆ ದಿಟವಾಗಿಯೂ? ತಪಸ್ಸು, ಅದಕ್ಕೆ ವ್ಯತಿರಿಕ್ತ ವಾದ ವೇಷ–ಇವೆರಡೂ ಹೇಗೆ ಹೊಂದಿಕೊಳ್ಳುತ್ತವೆ?
೯೩. ಗಾವಿಲ–ದಡ್ಡನೇ, ಕಡುತಪದಿಂದೆ–ತೀವ್ರ ತಪಸ್ಸಿನಿಂದ, ನಿನ್ನ ಪಡೆಪು–ನಿನ್ನ ಯವೊ–ಮಾತಾಡಬೇಡವೋ! ಸಗ್ಗದಫಲಂ–ಸ್ವರ್ಗದ ಪ್ರಯೋಜನ, ಸುಖಮಲ್ತೆ–ಸುಖ ವಲ್ಲವೇ? ಸುಖಕ್ಕೆ ಒಡಂಬಡದವರ್–ಒಪ್ಪದವರು, ಆರೊ–ಯಾರೋ, ಪೇೞ್–ಹೇಳು; ಪೆಂಡಿರೊಳಗೆ–ಸ್ತ್ರೀಯರಲ್ಲಿ, ಆರ್ಪೆಱರ್–ಇತರರು ಯಾರುಂಟು? ಆಮೆ ದಲ್–ನಾವೇ ಅಲ್ಲವೆ? ಆಮೆ ಬಂದು ಕಾಲ್ವಿಡಿದಪೆವು–ನಾವೇ ಬಂದು ಕಾಲನ್ನು ಹಿಡಿಯುತ್ತಿದ್ದೇವೆ; ಇಂಬುಕೆ ಯ್ವೊಡೆ–ಆಶ್ರಯಿಸಬೇಕಾದರೆ, ಇವು–ನಿನ್ನ ಪಾದಗಳು, ಮೆಲ್ಲಡಿಗಳ್ಗಡ–ಮೃದುವಾದ ಪಾದಗಳಲ್ಲವೆ? ಬೂದಿಯಂ–ಮೈಗೆ ಬಳಿದುಕೊಂಡಿರುವ ಬೂದಿಯನ್ನು, ಕರ್ಚು– ತೊಳೆದುಕೋ.
ಪಡೆಪು ಪಡೆ+ಪು–ಪಡೆಯುವಿಕೆ, ಲಾಭ, ಸಿದ್ಧಿ;
೯೪. ಕೋಕಿಳ….ರವಂ : ಕೋಕಿಳಕುಳ–ಕೋಗಿಲೆಗಳ ಸಮೂಹದ, ಗಳ–ಕೊರಳಿನ, ನಿನದ–ಧ್ವನಿಯಿಂದ, ಆಕುಳ–ವ್ಯಾಪ್ತವಾದ, ರವಂ–ನಾದವು, ಆಗಳುಂ–ಯಾವಾಗಲೂ, ಇಂಪಂ–ಇಂಪನ್ನು, ಪಡೆದುದು–ಪಡೆಯಿತು; ನೋಡ–ನೋಡು, ಈಕೆಗಳ–ಈ ಅಪ್ಸರೆ ಯರ, ಚಳಿತ ಲುಳಿತ ಭ್ರೂಕುಟಿಯೇ–ಅಲುಗಾಡುವ, ಕೊಂಕಾಗಿರುವ ಹುಬ್ಬುಗಳ ತುದಿಗಳೇ, ಪರಮಸುಖದ–ಅತಿಶಯವಾದ ಸುಖದ, ಕೋಟಿಯಂ–ತುತ್ತತುದಿಯನ್ನು, ಈಗುಂ– ಕೊಡುತ್ತದೆ.
ವಚನ : ಅಳಿಪಿನ–ಪ್ರೇಮದ, ಲಲ್ಲೆಯ–ಮುದ್ದಿನ; ಚೆಲ್ಲದ–ಚೆಲ್ಲಾಟದ; ಪುರುಡಿನ– ಸ್ಪರ್ಧೆಯ, ಮುಳಿಸಿನ–ಕೋಪದ, ನೆವದ–ನೆವವನುಳ್ಳ; ಪಡೆಮಾತುಗಳಂ–ಕಂಡು ಕೇಳಿದ ಮಾತುಗಳನ್ನು; ಚಳಿಯಿಸಲಾಱದೆ–ಕದಲಿಸಲಸಮರ್ಥರಾಗಿ; ಅಚ್ಚಿಗಂಗೊಂಡಂತೆ–ವ್ಯಥಿತ ರಾದ ಹಾಗೆ; ಏವಮಂ–ಅಸಮಾಧಾನವನ್ನು, ಕೆಯ್ಕೊಂಡು–ಹೊಂದಿ; ಸೀಂತಂತೆ–ಸೀನು ಬಂದ ಹಾಗೆ; ಧರಾಮರವೇಷದೊಳ್–ಬ್ರಾಹ್ಮಣನ ವೇಷದಲ್ಲಿ.
೯೫. ಶೌರ್ಯಾಭಿಮಾನಕ್ಕೆ–ಪ್ರತಾಪದ ಆತ್ಮಗೌರವಕ್ಕೆ, ಕಣಿಯಂ–ಗಣಿಯಾದ; ಎಡಱಿದ–ವಕ್ರವಾದ, ರಿಪುಸೈನ್ಯಕ್ಕೆ–ಶತ್ರುಸೈನ್ಯಗಳಿಗೆ, ಸಂಗ್ರಾಮದೊಳ್–ಯುದ್ಧದಲ್ಲಿ, ಬಲ್ಕಣಿಯಂ–ಶೂರನಾದ; ಕಲ್ಹಾರ….ವಂಶಕ್ಕೆ; ಕಲ್ಹಾರ–ಕಲ್ಹಾರ ಪುಷ್ಪದಂತೆ, ಸಾರಾಮೃತ ಸಾರವಾದ ಅಮೃತದಂತೆ, ಶಶಿ–ಚಂದ್ರನಂತೆ, ವಿಶದ–ಸ್ವಚ, ವಾದ, ಆತ್ಮೀಯ ವಂಶಕ್ಕೆ– ತನ್ನ ಕುಲಕ್ಕೆ, ಚೂಡಾಮಣಿಯಂ–ತಲೆರತ್ನವಾಗಿರುವ, ತೀವ್ರ ಪ್ರತಾಪ ದ್ಯುಮಣಿಯಂ– ತೀಕ್ಷ್ಣವಾದ ಪ್ರತಾಪದಲ್ಲಿ ಸೂರ್ಯನಂತಿರುವ, ಎರೆದ–ಬೇಡಿದ, ಅರ್ಥಿ ವ್ರಜಂಗಳ್ಗೆ– ಯಾಚಕರ ಸಮೂಹಗಳಿಗೆ, ಚಿಂತಾಮಣಿಯಂ–ಬೇಡಿದ್ದನ್ನೆಲ್ಲ ಕೊಡುವ ಚಿಂತಾರತ್ನದಂತಿ ರುವ, ಸಾಮಂತ ಚೂಡಾಮಣಿಯಂ–ಸಾಮಂತ ರಾಜರಲ್ಲಿ ಶ್ರೇಷ್ಠನಾದ ಅರ್ಜುನನನ್ನು, ಸುರೇಂದ್ರಂ–ಇಂದ್ರನು, ಅಣಿಯರಂ–ವಿಶೇಷವಾಗಿ, ಬಂದು, ಕಂಡಂ–ನೋಡಿದನು. ಬಲ್ಕಣಿ–ಬಲವಾದ ತೊಡಕುಳ್ಳವನು ಎಂದು ಪಂಭಾ.ಕೋ; ಇದಕ್ಕೆ ಶೂರ ಎಂದು ಅರ್ಥೈಸಿ ರಾ. ನರಸಿಂಹಾಚಾರ್ಯರು ಪ್ರಶ್ನಚಿಹ್ನೆ ಹಾಕಿದ್ದಾರೆ (ಶಾಪಮಂ. ೫೨); ಇಲ್ಲಿ ಪ್ರಶ್ನೆ ಅನಾವಶ್ಯಕವೆಂದು ತೋರುತ್ತದೆ; ಬಲ್–ಶಕ್ತಿಗೆ, ಕಣಿ–ಗಣಿ; ಆದ್ದರಿಂದ ಶೂರ; “ಫಣಿರಾಜಂ ಬಾರಿಯಿಟ್ಟಟ್ಟಿ ದೊಡನುದಿನದಿಂ ಬರ್ಪ ಸರ್ಪಂಗಳಂ ಬಲ್ಕಣಿ ತಾರ್ಕ್ಷ್ಯಂ ಭಕ್ಷಿಸುತ್ತುಂ ಮಲಯ ಗಿರಿಯೊಳಿರ್ಪಂ” ಎಂಬ ಪ್ರಯೋಗಾಂತರವುಂಟು; ಕುಮಾರವ್ಯಾಸನು ‘ಬಲು ಕಣಿ’ ಎಂಬ ರೂಪದಲ್ಲಿ ಈ ಶಬ್ದವನ್ನು ಹಲವು ಬಾರಿ ಪ್ರಯೋಗಿಸಿರುವನು “ಬಲುಕಣಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ” (೭–೩–೩೭), ತಮಿಳಿನಲ್ಲಿ ವಲ್=ಬಲ್ ನಾಮಪದ. “ಎಡಱು–ವಕ್ರಭಾವೇ ದಾರಿದ್ರ್ಯೇ ಚ”.
ಸಪ್ತಮಾಶ್ವಾಸಂ ಸಂಪೂರ್ಣಂ