೦೬

ಷಷ್ಠಾಶ್ವಾಸಂ

೧. ಶ್ರೀಗೆ ಫಳಂ ಚಾಗಂ–ಐಶ್ವರ್ಯಕ್ಕೆ ಪ್ರಯೋಜನ ದಾನ; ವಾಕ್ಶ್ರೀಗೆ ಫಳಂ ಸರ್ವಶಾಸ್ತ್ರ ಪರಿಣತಿ–ವಾಗ್ವಿಭೂತಿಗೆ ಪ್ರಯೋಜನ ಸಕಲ ಶಾಸ್ತ್ರಗಳಲ್ಲಿ ಪಾಂಡಿತ್ಯ; ವೀರಶ್ರೀಗೆ ಫಳಂ ಆಯಂ–ಪ್ರತಾಪಕ್ಕೆ ಪ್ರಯೋಜನ ಔಚಿತ್ಯ; ಎಂದಿಂತಾಗಳುಮಱಿದು–ಎಂದು ಇಂತು ಯಾವಾಗಲೂ ತಿಳಿದುಕೊಂಡು, ಪರಾಕ್ರಮಧವಳಂ–ಪರಾಕ್ರಮದಲ್ಲಿ ವೃಷಭನಂತಿರುವ ಅರ್ಜುನನು, ಎಸಗಿದಂ–ಮಾಡಿದನು.

ವಚನ : ಪರಮಂಡಳಿಕರ್–ಶತ್ರುಗಳಾದ ಮಂಡಲಾಧಿಪರು; ಬೆಸಕೆಯ್ಯೆ–ಆಜ್ಞೆಯನ್ನು ಪಾಲಿಸಲು.

೨. ತುಂಗ….ಕೀರ್ತಿ : ತುಂಗ–ಎತ್ತರವಾದ, ತರಂಗ–ಅಲೆಗಳಿಂದ, ಭಂಗುರ–ಚಂಚಲ ವಾದ, ಪಯೋಧಿ–ಕಡಲಿನಿಂದ, ಪರೀತ–ಬಳಸಿದ, ಮಹಾಮಹೀತಳ–ಮಹಾ ಭೂಮಂಡಲ ದಿಂದ, ಆಲಿಂಗಿತ–ತಬ್ಬಿಕೊಳ್ಳಲ್ಪಟ್ಟ, ಕೀರ್ತಿ–ಕೀರ್ತಿಯನ್ನುಳ್ಳ ಅರ್ಜುನ; ಬಡಪಾರ್ವನ ಪುಯ್ಯಲಂ–ಬಡಬ್ರಾಹ್ಮಣನ ಗೋಳನ್ನು, ಒರ್ಮೆ–ಒಂದು ಸಲ, ಕೇಳ್ದು–ಕೇಳಿ, ಕೇಳ್ದ ನಾವಂಗಂ–ಕೇಳಿದ ಯಾವನಿಗೂ, ಅಗುರ್ವು–ಭಯವು, ಪರ್ವೆ–ಹಬ್ಬಲು, ಸೆರಗಿಲ್ಲದೆ ಪೋಗಿ–ಸಹಾಯವಿಲ್ಲದೆ ಹೋಗಿ, ಜವನೊಳ್ತಾಗಿ–ಯಮನನ್ನು ಎದುರಿಸಿ, ಪಾರ್ವರ ಪಿಳ್ಳೆಯ ಪೋದ ಜೀವಮಂ–ಬ್ರಾಹ್ಮಣ ಬಾಲಕನ ಹೋದ ಪ್ರಾಣವನ್ನು, ವಿಕ್ರಮಾರ್ಜುನಂ– ಅರ್ಜುನ, ತಂದಂ ಗಡ–ತಂದನಲ್ಲವೇ?

ವಚನ : ಪಂಚರತ್ನಹಿರಣ್ಮಯಂ–ಐದು ಬಗೆಯ ರತ್ನಗಳಿಂದಲೂ ಚಿನ್ನದಿಂದಲೂ ಮಾಡಲ್ಪಟ್ಟ; ಅಳವಿಯ–ವಿಸ್ತಾರದ; ರಕ್ಕಸಪಡೆಯಿಂ–ರಾಕ್ಷಸ ಸೈನ್ಯದಿಂದ; ನಲ್ಮೆ–ಒಳ್ಳೆಯ ತನವನ್ನು.

೩. ಇದಱಂದಂ–ಈ ಸಭಾಗೃಹದ ಅಂದ, ಬಿಸವಂದಂ–ಆಶ್ಚರ್ಯಕರ; ಒಂದು ತೆಱನಲ್ತು–ಒಂದು ರೀತಿಯಲ್ಲ; ಅದೆಂತೆಂದೊಡೆ–ಅದು ಹೇಗೆಂದರೆ; ಆರಯ್ವೊಡೆ– ವಿಚಾರ ಮಾಡಿದರೆ, ಇದಱೊಳ್–ಇದರಲ್ಲಿ, ದಿವ್ಯಸರೋವರಂಗಳ್–ಶ್ರೇಷ್ಠವಾದ ಸರೋವರಗಳು, ಇದಱೊಳ್–ಇದರಲ್ಲಿ, ಕಲ್ಪಾವನೀಜಂಗಳ್–ಕಲ್ಪವೃಕ್ಷಗಳು, ಇಂತಿದಱೊಳ್–ಹೀಗೆ ಇದರಲ್ಲಿ, ನಾಟಕಶಾಲೆ–ನಾಟಕಮಂದಿರ, ರಯ್ಯಂ–ರಮ್ಯ; ಇದಱೊಳ್–ಇದರಲ್ಲಿ, ದೇವಾಪ್ಸರೋನೃತ್ಯಂ–ದೇವತೆಗಳ ಅಪ್ಸರಸೆಯರ ಕುಣಿತ; ಇಂತಿದಱಂತಾಗಿರೆ–ಹೀಗೆ ಇದರ ಹಾಗಿರಲು, ನೋೞ್ಪೊಡೆ–ನೋಡುವ ಪಕ್ಷದಲ್ಲಿ, ಸಭಾಗೇಹಮಂ–ಸಭಾಭವನವನ್ನು, ಮಾಡಲ್–ನಿರ್ಮಿಸಲು, ಆರುಂ–ಯಾರೂ, ಅಱಿಯರ್–ತಿಳಿಯರು.

ವಚನ : ಮಾರ್ಕೊಳ್ಳದೆ–ಪ್ರತಿಭಟಿಸದೆ; ಕೊಳ್ಳಿಂ–ತೆಗೆದುಕೊಳ್ಳಿರಿ; ತೆರಳ್ದು–ಒಟ್ಟಾಗಿ; ಉರುಳಿಗೊಂಡಂತಿರ್ದ–ಉಂಡೆಯಾಗಿದ್ದ, ಬಾಸಣಿಗೆಗಳೆದು–ಮುಸುಕನ್ನು ತೆಗೆದು. ಬಾಸಣಿಗೆ (ಸಂ)ವಾಸನಿಕ.

೪. ಇದನಿಂದ್ರನಟ್ಟಿದಂ–ಇದನ್ನು ಇಂದ್ರನು ಕಳಿಸಿಕೊಟ್ಟನು, ನಿನಗೆ–ನಿನಗಾಗಿ; ಇದಱ ಪೆಸರ್–ಇದರ ಹೆಸರು, ದೇವದತ್ತಮೆಂಬುದು–ದೇವದತ್ತವೆಂದು! ನಿನಗೆ ಅಭ್ಯುದಯ ಕರಂ–ನಿನಗೆ ಏಳಿಗೆಯನ್ನುಂಟುಮಾಡತಕ್ಕದ್ದು; ಅರಿಗಾ–ಅರ್ಜುನನೇ, ನೋಡು, ಶಂಖಂ– ಶಂಖವು, ರಿಪುಹೃದಯಕವಾಟಪುಟವಿಘಟನಂ–ಶತ್ರುಗಳ ಹೃದಯದ ಬಾಗಿಲುಗಳನ್ನು ಧ್ವಂಸ ಮಾಡುವಂಥದು.

ವಚನ : ತನಗೆ ಕೊಂಡು–ತನಗಾಗಿ ತೆಗೆದುಕೊಂಡು; ಮಡಗಿದೊ–ಇಟ್ಟರೆ.

೫. ಈ ಗದೆ–ಈ ಗದೆಯು, ಅಧಿಕ….ರೌದ್ರಂ: ಅಧಿಕ–ಅತಿಶಯವಾದ, ರಿಪು–ವೈರಿ ಗಳಾದ, ನೃಪತಿ–ರಾಜರ, ಬಳ–ಸೈನ್ಯಗಳ, ನವರುಧಿರ–ಹೊಸದಾದ ರಕ್ತದಿಂದ, ಸ್ಫುರಿತ– ಪ್ರಕಾಶಿಸುವ, ರೌದ್ರಂ–ಭಯಂಕರತೆಯನ್ನುಳ್ಳದ್ದು, ಪೆಸರಿಂ–ಹೆಸರಿನಿಂದ, ರುಧಿರಮುಖಿ, ಎಂಬುದು–ಎನ್ನುವುದು; ಇದಂ, ಅಧಿಕಬಳಸ್ಥಂಗೆ–ಅತ್ಯಂತ ಶಕ್ತಿವಂತನಾದ, ಭೀಮಸೇನಂಗೆ, ಇತ್ತೆಂ,

ವಚನ : ಬೞಿಯಂ–ಅನಂತರ;

೬. ನಾರದಾಗಮನ: ಬೆಳಗುಗಳೆಲ್ಲಂ–ಕಾಂತಿಗಳೆಲ್ಲ, ಒಂದುರುಳಿಯಾಗಿ–ಒಂದು ಗೋಳವಾಗಿ, ನಭಃಸ್ಥಳದಿಂದಂ–ಆಕಾಶದಿಂದ, ಈ ಮಹೀತಳಕಿೞಿತರ್ಪುದು–ಈ ಭೂಮಿಗೆ ಇಳಿದುಬರುತ್ತಿದೆ, ಎಂದು–ಎಂಬುದಾಗಿ, ಮನುಜಾಕೃತಿಯೆಂದು–ಮನುಷ್ಯನ ಆಕಾರ ವೆಂಬು ದಾಗಿ, ಮುನೀಂದ್ರನೆಂದು–ಋಷಿಶ್ರೇಷ್ಠನೆಂಬುದಾಗಿ, ಕಣ್ಗೊಳಿಸಿ–ಕಣ್ಣಿಗೆ ಕಾಣಿಸಲು, ಮುನೀಂದ್ರರೊಳ್–ಋಷಿಶ್ರೇಷ್ಠರಲ್ಲಿಯೂ, ಕಮಲಸಂಭವನಂದನನೆಂದು–ಬ್ರಹ್ಮನ ಮಗ ನಾರದನೆಂದು, ನೋಟಕರ್–ನೋಡುವವರು, ತಳವೆಳಗಾಗೆ–ವ್ಯಾಕುಲಿತರಾಗಲು, ನೀರದ ಮಾರ್ಗದಿಂ–ಆಕಾಶದಿಂದ, ಅಂದು, ನಾರದಂ, ಸಾರೆವರೆ–ಹತ್ತಿರ ಬರಲು.

೭. ಬಳಸಿ–ಸುತ್ತುವರಿದು, ತನ್ನೊಡನೆ, ಒಯ್ಯನೊಯ್ಯನೆ–ಮೆಲ್ಲಮೆಲ್ಲಗೆ, ಬರ್ಪ– ಬರುವ, ದೇವರ–ದೇವತೆಗಳ, ಒಂದು ಗಾವುಳಿಯಂ–ಒಂದು ಸಮೂಹವನ್ನು, ಇನ್ ಇರಿಂ– ಇನ್ನು ಇಲ್ಲಿಯೇ ಇರಿ, ಎಂದು–ಎಂದು ಹೇಳಿ, ತನ್ನನೆ–ತನ್ನನ್ನೇ, ನಿಳ್ಕಿ–ಮೆಟ್ಟುಂಗಾಲಿಟ್ಟು, ನೋೞ್ಪರ–ನೋಡುವವರ, ಕಣ್ಗೆ–ಕಣ್ಣುಗಳಿಗೆ, ಕಣ್ಬೊಳೆಪು–ಕಣ್ಣ ಪ್ರಕಾಶ, ತನ್ನಯ– ತನ್ನ, ಮೆಯ್ಯ–ಮೆಯ್ಯಿನ, ಬೆಳ್ಪಿನೊಳೞ್ದು–ಬಿಳುಪಿನಲ್ಲಿ ಸೇರಿ, ನಿಂದೊಡೆ–ನಿಂತು ಕೊಂಡರೆ, ವಾಳೆಮೀನ್–ಬಾಳೆಮೀನು, ಪೊಳೆಯೆ–ಹೊಳೆಯಲು, ಧಾತ್ರಿಗೆ ವರ್ಪ–ನೆಲಕ್ಕೆ ಬರುವ, ಗಂಗೆವೊಲ್–ಗಂಗಾನದಿಯಂತೆ, ಮುನಿಪುಂಗವಂ–ಋಷಿಶ್ರೇಷ್ಠನು, ಒಪ್ಪಿದಂ–ಸೊಗಸಾದನು.

ಮೇಲಿನ ೬ನೆಯ ಪದ್ಯವನ್ನು ಮಾಘನ ಈ ಕೆಳಗಿನ ಪದ್ಯದೊಡನೆ ಹೋಲಿಸಬಹುದು: (ಶಿಶುಪಾಲವಧಂ ೧–೩)

ಚಯಸ್ತ್ವಿಷಾಮಿತ್ಯವಧಾರಿತಂ ಪುರಾ । ತತಃಶರೀರೀತಿ ವಿಭಾವಿತಾಕೃತಿಂ

ವಿಭುರ್ವಿಭಕ್ತಾವಯವಂ ಪುಮಾ । ನಿತಿ ಕ್ರಮಾದಮುಂ ನಾರದ ಇತ್ಯಬೋಧಿ ಸಃ

೮. ಸರಿಗೆಯೊಳ್–ಚಿನ್ನದ ದಾರದಲ್ಲಿ, ಸಮೆದ–ಮಾಡಿದ, ಅಕ್ಷಮಾಲಿಕೆ–ಜಪಸರ, ಪೊನ್ನ ಮುಂಜಿ–ಚಿನ್ನದ ಉಡಿದಾರ, ತೊಳಪ್ಪ ಭಸ್ಮರಜಸ್ತ್ರಿಪುಂಡ್ರಕಂ–ಹೊಳೆವ ವಿಭೂತಿಯ ಧೂಳಿನ ಮೂರು ಗೆರೆಗಳು; ಪಿಂಗಜಟಾಳಿ–ಪಿಂಗಲಬಣ್ಣದ ಜಟೆಯ ಸಾಲು, ತಾವರೆಯ ಸೂತ್ರ ದೊಳಾದ ಜನ್ನವಿರಂ–ತಾವರೆಯ ನೂಲಿನಿಂದ ಮಾಡಿದ ಜನಿವಾರ, ದುಕೂಲದ–ಕೋವ ಣಂ–ರೇಷ್ಮೆಯ ಕೌಪೀನ, ಇವೆಲ್ಲ, ಕರಂ ಒಡಂಬಡೆ–ವಿಶೇಷವಾಗಿ ಒಪ್ಪಲು, ಆ ತಪಸ್ವಿ–ಆ ಋಷಿ, ನೋಟಕರ್ಕಳಂ–ನೋಡುವವರನ್ನು, ಮರುಳ್ಚಿದಂ–ಮರುಳು ಮಾಡಿದನು, ಆಕರ್ಷಿಸಿದನು. “ಸಮೂಢಕರ್ಪೂರ ಪರಾಗಪಾಣ್ಡುರಮ್, ದಧಾನಮಂಭೋರುಹ ಕೇಸರದ್ಯುತಿರ್ಜಟಾಃ, ಪಿಶಂಗಮೌಂಜೀಯುಜಮರ್ಜುನಚ, ವಿಂ, ಸುವರ್ಣಸೂತ್ರಾ ಕಲಿತಾಧರಾಂಬರಾಂ” ಎಂಬ ಮಾಘನ ವರ್ಣನೆಯೊಡನೆ ಹೋಲಿಸಿ.

೯. ಬಟ್ಟಗೊಡೆ–ದುಂಡಗಿರುವ ಕೊಡೆಯು, ಚಂದ್ರಕಾಂತಿಯಂ–ಚಂದ್ರನ ಪ್ರಕಾಶವನ್ನು, ಅಟ್ಟುಂಬರಿಗೊಳೆ–ಅಟ್ಟಿ ಓಡಿಸಲು, ಪೊದಳ್ದ–ಹರಡಿದ, ಕೃಷ್ಣಾಜಿನಂ–ಜಿಂಕೆಯ ಚರ್ಮ, ಒಂದು, ಇಟ್ಟಳಮೆಸೆಯೆ–ಸೊಗಸಾಗಿ ಹೊಳೆಯಲು, ಗಾಡಿಗಳೊಳ್–ಸೊಗಸುಗಳಲ್ಲಿ, ಎಸೆವ–ಧ್ವನಿ ಮಾಡುವ, ವೀಣಾಕ್ವಣಿತಂ–ವೀಣಾನಾದ, ಬೆಡಂಗಂ–ಬೆಡಗನ್ನು, ಪುಟ್ಟಿಸೆ– ಹುಟ್ಟಿಸಲು.

೧೦. ಬೆರಲೊಳ್–ಬೆರಳುಗಳಲ್ಲಿ, ಬೀಣೆಯ ತಂತಿಗಳ್–ವೀಣೆಯ ತಂತಿಗಳು, ಒರಸಿದ–ಉಜ್ಜಿದ, ಕೆಂಗಡೆಗಳ್–ಕೆಂಪಾದ ಜಡ್ಡುಗಳು, ಅಕ್ಷಮಾಲೆಯೊಳ್–ಜಪಮಾಲೆ ಯಲ್ಲಿ, ಎಸೆಯೆ–ಹೊಳೆಯಲು, ಪೊಸೆಯೆ–ಹೆಣೆದುಕೊಳ್ಳಲು, ಚೆನ್ನತಪಸಿಯ ಕಯ್ಯೊಳ್– ಚೆಲುವ ತಪಸ್ವಿಯ ಕೈಯಲ್ಲಿ, ಮುತ್ತು ಪವಳಂ–ಮುತ್ತುಗಳೂ ಹವಳಗಳೂ, ಬೆರಸಿದ ವೊಲಾಯ್ತು–ಬೆರಸಿದ ಹಾಗಾಯಿತು. ಇದನ್ನು ಮಾಘನ (೧–೯) ಪದ್ಯದೊಡನೆ ಹೋಲಿಸಿ :

ಅಜಸ್ರಮಾಸ್ಫಾಲಿತ ವಲ್ಲಕೀಗುಣ ಕ್ಷತೋಜ್ವಲಾಂಗುಷ್ಠನಖಾಂಶು ಭಿನ್ನಯಾ

ಪುರಃಪ್ರವಾಲೈರಿವ ಪೂರಿತಾರ್ಧಯಾ ವಿಭಾನ್ತಮಕ್ಷಸ್ಫಟಿಕಾಕ್ಷಮಾಲಯಾ ॥

೧೧. ಇವನ್–ನಾರದನು, ಎಳೆಯೊಳ್–ನೆಲದ ಮೇಲೆ, ಅಡಿಯಿಟ್ಟಂ–ಕಾಲಿಟ್ಟನು, ಎಂಬೆಡೆಯೊಳ್–ಎನ್ನುವ ಸಮಯದಲ್ಲಿ, ಅರಸಂ–ರಾಜ, ಪರಿಜನಸಮೇತಂ–ಪರಿವಾರ ಸಮೇತನಾಗಿ, ಇದಿರೆೞ್ದು–ಎದುರಿಗೆ ಎದ್ದು ಹೋಗಿ, ಪೊಡೆವೊಡೆ–ನಮಸ್ಕರಿಸಲು, ತಪಸ್ವಿ– ನಾರದ, ಕೆಯ್ಯಂ ಪಿಡಿದು–ಕೈಯನ್ನು ಹಿಡಿದು, ಎತ್ತಿ–ಮೇಲಕ್ಕೆತ್ತಿ, ಪಲರ್ಮೆ–ಹಲವು ಸಲ, ಪರಕೆಗಳಿಂ–ಹರಕೆಗಳಿಂದ, ಪರಸಿದಂ–ಹರಸಿದನು.

ವಚನ : ಅಬ್ಜಜಪುತ್ರನಂ–ಬ್ರಹ್ಮನ ಮಗನನ್ನು, ನಾರದನನ್ನು; ವೇತ್ರಾಸನದೊಳ್– ಬೆತ್ತದ ಪೀಠದ ಮೇಲೆ, ಸಂಭೃತಶುಭಜಲಂಗಳಿಂದಂ–ಇರಿಸಿದ ನಿರ್ಮಲವಾದ ನೀರುಗಳಿಂದ; ಕರ್ಚಿ–ತೊಳೆದು; ಪವಿತ್ರೀಕೃತ ಮಸ್ತಕರಾಗಿರ್ದು–ಶುಚಿರ್ಭೂತವಾದ ಶಿರವುಳ್ಳವರಾಗಿ; ಕೞ್ಚು ಕರ್ಚು ಕಚ್ಚು–ತೊಳೆ.

೧೨. ಬ್ರಹ್ಮಂ–ಬ್ರಹ್ಮನು, ಜಗಮಂ–ಲೋಕವನ್ನು, ಪಡೆದಂ–ಸೃಷ್ಟಿಸಿದನು; ತಾನ್–ತಾಂ, ಪೆಂಪಂಪಡೆಯಲ್–ಹಿರಿಮೆಯನ್ನು ಹೊಂದಲು, ಆರ್ತನಿಲ್ಲ–ಸಮರ್ಥನಾಗಲಿಲ್ಲ; ನಿಮ್ಮಂ ಪಡೆದಲ್ತೆ–ನಿಮ್ಮನ್ನು ಹಡೆದಲ್ಲವೇ, ಪಡೆದನೆನಿಸಿದ–ಸೃಷ್ಟಿಕರ್ತನೆನ್ನಿಸಿದ, ಕಡು ಪೆಂಪಿನ–ಅತಿಶಯವಾದ ಹಿರಿಮೆಯ, ಪೊಱೆಗೆ–ಹೊರೆಗೆ, ನೀವು, ಮೊದಲಿಗರಾದಿರ್– ಮೊದಲು ವರ್ತಿಸುವವರಾದಿರಿ.

೧೩. ಬಾದೇನ್–ವಾದವೇನು, ಮಾತೇನು, ಮುನಿನಾಥಾ–ನಾರದನೇ, ಭವತ್ಪಾದಪ್ರಕ್ಷಾಳ ನೋದಕಂ–ನಿಮ್ಮ ಪಾದ ತೊಳೆದ ನೀರು, ಮದೀಯ–ನನ್ನ, ಕರ್ಮ….ಮಾಯ್ತು: ಕರ್ಮಫ ಲೋದಿತ–ಕರ್ಮದ ಪರಿಣಾಮವಾಗಿ ಬಂದ, ಸಂತಾಪರೂಪ–ದುಃಖರೂಪವುಳ್ಳ, ಪಾಪಕಳಾಪ–ಪಾಪದ ಸಮೂಹವನ್ನು, ವಿಚೆ, । ದನಕರಂ–ಭೇದಿಸುವುದು, ಆಯ್ತು–ಆಯಿತು.

೧೪. ಬೆಸನ್–ಕೆಲಸಕಾರ್ಯ, ಎನಗೆ–ನನಗೆ, ಆವುದೊ–ಯಾವುದೋ, ಬೆಸನಂ– ಕಾರ್ಯವನ್ನು, ಬೆಸಸಿಂ–ಅಪ್ಪಣೆ ಮಾಡಿರಿ; ಪಿರಿದಕ್ಕೆ–ಅದು ಹಿರಿಯದಾಗಿರಲಿ, ಅದಂ– ಅದನ್ನು, ಗೆಯ್ಯೆ–ಮಾಡಲು, ಸಾರ್ದಿರ್ದೆನ್–ಸಮೀಪವಾಗಿದ್ದೇನೆ; ನಿಮ್ಮಯ ಬರವಂ ಬೆಸಸಿಂ–ನೀವು ಬರುವುದಕ್ಕೆ ಕಾರಣವನ್ನು ಹೇಳಿರಿ, ಪೊಸತಾಗಿರೆ ಬಂದಿರ್–ಹೊಸದಾಗಿ ನೀವು ಬಂದಿದ್ದೀರಿ; ಈಗಳ್–ಈಗ, ಎಲ್ಲಿಂ ಬಂದಿರ್–ಎಲ್ಲಿಂದ ನೀವು ಬಂದಿರಿ. ಈ ಕಂದದಲ್ಲಿ ಐದು ಪುಟ್ಟ ವಾಕ್ಯಗಳಿವೆ; ಇದು ಪಂಪನ ಶೈಲಿಯ ವೈಶಿಷ್ಟ್ಯ.

ವಚನ : ಅಲ್ಲಿಯ ಪಡೆಮಾತಾವುದು–ಅಲ್ಲಿಯ ಸುದ್ದಿಯೇನು?

೧೫. ಧರ್ಮರಾಜನ ಪ್ರಶ್ನೆಗಳು: ದಿವಿಜೇಂದ್ರಂ ಸುಖಮಿರ್ದನೇ–ಇಂದ್ರನು ಸುಖ ವಾಗಿದ್ದಾನೆಯೆ? ದಿತಿಸುತವ್ಯಾಬಾಧೆಗಳ್–ರಾಕ್ಷಸರ ಕಾಟಗಳು, ದೇವರ್ಗಿಲ್ಲವಲಾ–ದೇವತೆ ಗಳಿಗೆ ಇಲ್ಲವಲ್ಲವೆ? ಷೋಡಶರಾಜರಿರ್ಪತೆಱನೇನ್–ಹದಿನಾಱು ಪ್ರಸಿದ್ಧ ರಾಜರು ಇರುವ ರೀತಿ ಏನು? ಎಮ್ಮನ್ವಯಕ್ಷ್ಮಾಪರ್–ನಮ್ಮ ವಂಶದ ರಾಜರು, ಆವವಿಳಾಸಂಗ ಳೊಳ್– ಯಾವ ವೈಭವಗಳಲ್ಲಿ, ಇರ್ಪರ್–ಇದ್ದಾರೆ? ಎಮ್ಮಯ್ಯನೈಶ್ವರ್ಯಂ–ನಮ್ಮ ತಂದೆಯ ಭಾಗ್ಯ, ತಾಂ ಏ ದೊರೆತು–ತಾನು ಯಾವ ಯೊಗ್ಯತೆಯನುಳ್ಳದ್ದು? ಇಂತಿವನೆಲ್ಲಂ–ಹೀಗೆ ಇವನ್ನೆಲ್ಲ, ತಿಳಿವಂತುಟಾಗಿ–ತಿಳಿಯುವ ಹಾಗೆ ಆಗಲು, ಪಂಕೇಜ ಗರ್ಭಾತ್ಮಜಾ–ನಾರ ದನೇ; ಬೆಸಸಿಂ–ಹೇಳಿರಿ.

ವಚನ : ಇಳಾಧರೇಶ್ವರಂ–ರಾಜರಿಗೆ ರಾಜ, ಧರ್ಮರಾಜ; ದೇವಲೋಕದ ಪಡೆ ಮಾತೆಲ್ಲಮಂ–ಸ್ವರ್ಗದ ಸುದ್ದಿಯನ್ನೆಲ್ಲ.

೧೬. ನೀಡಿರದೆ–ತಡವಿಲ್ಲದೆ ಎಂದರೆ ಎಲ್ಲರಿಗಿಂತ ಮುಂಚಿತವಾಗಿ, ಇಂದ್ರನೋಲಗಕೆ ಪೋಗಿಯುಂ–ಇಂದ್ರನ ಸಭೆಗೆ ಹೋಗಿಯೂ, ಆಗಳುಂ–ಆಗ ಕೂಡ, ಅಂತೆ ಪೋಗಿಯುಂ– ಹಾಗೆ ಹೋಗಿಯೂ, ಷೋಡಶರಾಜರಿಂ–ಷೋಡಶರಾಜರಿಗಿಂತ, ಕಡೆಯೊಳ್–ಕೊನೆಯಲ್ಲಿ, ಇರ್ಪುದು–ಇರುವುದು; ಜೀಯಪಸಾದಮೆಂಬುದುಂ–ಜೀಯಾ, ಪ್ರಸಾದ ಎನ್ನುವುದೂ, ನೋಡಿದ ದೃಷ್ಟಿಗೆ–ನೋಡಿದ ನೋಟಕ್ಕೆ, ಅಳ್ಕಿ–ಹೆದರಿ, ಸುಗಿದಿರ್ಪುದುಂ–ಸುಕ್ಕಿ ಇರುವುದೂ, ಆದಮೆ–ವಿಶೇಷವಾಗಿಯೆ, ಮಾನಭಂಗಮಂ–ಮಾನಹಾನಿಯನ್ನು, ಮಾಡೆ–ಮಾಡಲು, ಪಾಂಡುರಾಜನಾ–ಪಾಂಡುವಿನ, ಮನಃಕ್ಷತಕ್ಕೆ–ಮನದ ಗಾಯಕ್ಕೆ, ನೋವಿಗೆ, ಅಳವಿಗಾಣೆವು– ಅಳತೆಯನ್ನು ಕಾಣೆವು, ನೋಡಿರೇ–ನೋಡಿರೋ;

೧೭. ಪರಚಕ್ರಂಗಳಂ–ಶತ್ರುಮಂಡಲಗಳನ್ನು, ಒತ್ತಿಕೊಂಡು–ಆಕ್ರಮಿಸಿಕೊಂಡು, ಅದಟರಂ–ಶೂರರನ್ನು, ಕೊಂದಿಕ್ಕಿ–ಕೊಂದು ಹಾಕಿ, ದಾಯಾದರೆಲ್ಲರುಂ–ದಾಯಾದಿ ಗಳೆಲ್ಲರೂ, ಅಳ್ಕುತ್ತಿರೆ–ಅಂಜುತ್ತಿರಲು, ಸಂದ ಸಾಹಸದ–ಪ್ರಸಿದ್ಧ ಪರಾಕ್ರಮವನ್ನುಳ್ಳ, ನಿಮ್ಮೀ ಅಯ್ವರುಂ–ನಿಮ್ಮೀ ಐದು ಜನರೂ, ಮಕ್ಕಳಾಗಿರೆಯುಂ–ಮಕ್ಕಳಾಗಿದ್ದರೂ, ನಿಚ್ಚಲುಂ– ದಿನವೂ, ಇಂದ್ರನೋಲಗದೊಳ್–ಇಂದ್ರನ ಆಸ್ಥಾನದಲ್ಲಿ, ಆ ಪಾಂಡುರಾಜಂಗೆ–ಆ ಪಾಂಡು ವಿಗೆ, ಅಂತು–ಹಾಗೆ, ನಿರ್ನೆರಂ–ನಿಷ್ಕಾರಣವಾಗಿ, ಅಪ್ಪ ಒಂದು ಅಪಮಾನದಿಂದಂ–ಆಗುವ ಒಂದು ಅವಮಾನದಿಂದ, ಇನಿತೊಂದು–ಇಷ್ಟೊಂದು; ಊನತ್ವಮಪ್ಪಂತುಟೇ–ಕೊರತೆ ಯಾಗುವಂಥದೇ.

ವಚನ : ಆಮುಂ–ನಾವು ಕೂಡ; ಎನ್ನಿರ್ದಿರವಂ–ನಾನಿದ್ದ ಸ್ಥಿತಿಯನ್ನು; ಬೇಳ್ವಂತೆ–ಯಜ್ಞ ಮಾಡುವ ಹಾಗೆ; ಅಱಿಪಲೆಂದೆ ಬಂದೆಂ–ತಿಳಿಸಬೇಕೆಂದೇ ಬಂದೆವು; ಶತಕ್ರತುವಂ–ನೂರು ಯಜ್ಞಗಳನ್ನು; ನಿರ್ವರ್ತಿಸಿ–ಮುಗಿಸಿ; ನಿಚ್ಚಂ–ನಿತ್ಯವೂ; ಒಂದು ಪೊೞ್ತು–ಒಂದು ಹೊತ್ತು; ಮಾೞ್ಪಿರಪ್ಪೊಡೆ–ಮಾಡುವಿರಾದರೆ.

೧೮. ಬಿರುದರನೊತ್ತಿ–ಬಿರುದುಳ್ಳ ರಾಜರನ್ನು ಆಕ್ರಮಿಸಿ, ಬೀರರನಡಂಗಿಸಿ–ಶೂರರನ್ನು ಅಡಗಿಸಿ, ಕೊಂಕಿಗರಂ ಕೞಲ್ಚಿ–ವಕ್ರವಾಗುವವರನ್ನು ಸಡಿಲಿಸಿ, ಚೆನ್ನರನಡಿಗೊತ್ತಿ–ಚೆನ್ನ ಪೊಂಗರನ್ನು ಎಂದರೆ ಪರಾಕ್ರಮಿಗಳನ್ನು ಕೆಳಕ್ಕೆ ಅದುಮಿ, ಮಂಡಳಿಕರಂ–ಸಾಮಂತರನ್ನು, ಬೆಸಕೆಯ್ಸಿ–ಸೇವೆ ಮಾಡಿಸಿ, ಕಱುಂಬರಂ–ಅಸೂಯೆಗಾರರನ್ನು, ನಿರಾಕರಿಸಿ–ಉಪೇಕ್ಷಿಸಿ, ಸಮಸ್ತವಾರಿಧಿಪರೀತಮಹೀತಳದ–ಸಕಲ ಸಾಗರಗಳೂ ಬಳಸಿದ ಭೂಮಂಡಲದ, ಅರ್ಥಮೆಲ್ಲಮಂ–ದ್ರವ್ಯವನ್ನೆಲ್ಲ, ತರಿಸಿ–ಬರಮಾಡಿಕೊಂಡು, ನೆಗೞ್ತೆಯಂ–ಕೀರ್ತಿಯನ್ನು, ನಿಱಿಸಲಾರ್ಪೊಡೆ–ಸ್ಥಾಪಿಸಲು ಸಮರ್ಥರಾಗಿದ್ದರೆ, ರಾಜಸೂಯಮಂ–ರಾಜಸೂಯ ಯಜ್ಞವನ್ನು, ಮಾಡಿರೆ–ಮಾಡಿರೋ, ಇಲ್ಲಿ ಚೆನ್ನರ್ ಎಂಬುದು ಚೆನ್ನಪೊಂಗರ್ ಎಂಬುದರ ಸಂಕ್ಷಿಪ್ತ ರೂಪವಿರಬಹುದು.

ವಚನ : ಅನಿತನೆ ನುಡಿದು ಮಾಣ್ದ–ಅಷ್ಟನ್ನೇ ಹೇಳಿ ನಿಲ್ಲಿಸಿದ;

೧೯. ಅಯ್ಯನ ಮಾತು–ತಂದೆಯ ಮಾತು, ಇಂದ್ರಲೋಕದೊಳಗೆ–ಸ್ವರ್ಗದಲ್ಲಿ, ಒಯ್ಯನೆ–ಮೆಲ್ಲಗೆ, ಬೆಳಗುವುದು–ಬೆಳಗುತ್ತದೆ, ಎನಲ್–ಎನ್ನಲು; ಈ ಧರಾವಳಯ ದೊಳ್–ಈ ಭೂಮಂಡಲದಲ್ಲಿ, ಎಮ್ಮ ಸಾಹಸಂ–ನಮ್ಮ ಶೌರ್ಯ, ಬೆಳಗುವುದು, ಪ್ರಕಾಶ ವಾಗುತ್ತದೆ; ದ್ವಿಜಮುಖ್ಯರ್–ಬ್ರಾಹ್ಮಣಶ್ರೇಷ್ಠರು, ತಣಿವರ್–ತೃಪ್ತಿಪಡುವರು; ಅಗ್ಗಳಿಕೆ– ಹಿರಿಮೆ, ಅಪ್ಪುದು–ಆಗುತ್ತದೆ; ಕೀರ್ತಿ–ಕೀರ್ತಿಯು, ಪೊದಳ್ದು–ವ್ಯಾಪಿಸಿ, ಪರ್ವುವುದು– ಹಬ್ಬುವುದು: ಇವೆಲ್ಲ, ಪುರಾಕೃತ ಪುಣ್ಯದಿಂದೆ–ಹಿಂದೆ ಮಾಡಿದ ಪುಣ್ಯದಿಂದ, ಸಂಗಳಿಸುವುದು– ಸೇರುತ್ತದೆ, ಎಂದೊಡೆ–ಎಂದರೆ, ಈ ಮಖದೊಳ್–ಈ ಯಜ್ಞದಲ್ಲಿ, ಮುನೀಂದ್ರ ನಾಯಕಾ–ನಾರದನೇ, ಏಂ ತೊದಳುಂಟೆ–ಸುಳ್ಳಿರುತ್ತದೆಯೇ? ಏನೂ ಇಲ್ಲ.

ವಚನ : ನಿಲೆನುಡಿದುದರ್ಕೆ–ಸ್ಥಿರವಾಗಿ ನಿಲ್ಲುವಂತೆ ಹೇಳಿದುದಕ್ಕಾಗಿ; ಏವಿರಿದು– ಏನು ಹಿರಿದು, ಏನು ದೊಡ್ಡದು.

೨೦. ಮರುಳಂ–ಮರುಳನು, ಹುಚ್ಚನು, ಪರಪಿನ–ಹರಹಿನ, ವಿಸ್ತಾರವಾದ, ನೀಳದ– ನೀಲಿ ಬಣ್ಣದ, ಕಡೆಯಂ–ಅಂತ್ಯವನ್ನು, ತವೆ ನೋಡಲಾಱದೆ–ಪೂರ್ತಿನೋಡಲಸಮರ್ಥ ನಾಗಿ, ಅಂಬರತಳಮಂ–ಆಕಾಶಪ್ರದೇಶವನ್ನು, ಕರಿದು–ಕಪ್ಪಾದದ್ದು, ಎಂಬಂತಿರೆ–ಎನ್ನುವ ಹಾಗೆ, ನಿನ್ನಂ–ನಿನ್ನನ್ನು, ನರನೆಂಬುದೆ–ಮನುಷ್ಯಮಾತ್ರ ಎಂದು ಹೇಳುವುದೆ? ನಿನ್ನ ಸಾಹಸಕ್ಕೆ– ನಿನ್ನ ಶೌರ್ಯಕ್ಕೆ, ಅದು–ಆ ಯಜ್ಞವನ್ನು ಮಾಡಿಸುವುದು, ಪಿರಿದೇ–ದೊಡ್ಡದೇ.

ವಚನ : ನಾಡೆಯುಂ ಪೊೞ್ತಿರ್ದು–ಬಹಳ ಕಾಲವಿದ್ದು; ಮುಗಿಲಪೊರೆಯೊಳ್– ಮೋಡದ ಪದರದಲ್ಲಿ; ಈ ಪದದೊಳ್–ಈ ಸಮಯದಲ್ಲಿ.

೨೧. ದ್ವಾರವತೀಪುರಕ್ಕೆ–ದ್ವಾರಕಾ ನಗರಿಗೆ, ತಡವಿಲ್ಲದೆ–ತಡವಾಗದೆ, ಚರರಂ– ದೂತರನ್ನು, ಬೇಗಮಟ್ಟಿ–ಬೇಗನೆ ಕಳುಹಿಸಿ, ಪಂಕೇರುಹನಾಭನಂ–ಶ್ರೀಕೃಷ್ಣನನ್ನು, ಬರಿಸಿ– ಬರಮಾಡಿಕೊಂಡು, ಮಜ್ಜನ ಭೋಜನಭೂಷಣಾದಿ–ಸ್ನಾನ ಊಟ ಅಲಂಕಾರ ಮೊದಲಾದ, ಸತ್ಕಾರದೊಳ್–ಉಪಚಾರಗಳಲ್ಲಿ, ಅೞ್ಕಱಂ–ಪ್ರೀತಿಯನ್ನು, ನೆಱೆಯೆ ಮಾಡಿ–ಪೂರ್ಣವಾಗಿ ಮಾಡಿ, ಮುರಾಂತಕ–ಕೃಷ್ಣನೇ, ಪಾಂಡುಭೂಭುಜಂ ಕಾರಣಮಾಗೆ–ಪಾಂಡುರಾಜನು ಕಾರಣ ವಾಗಲು, ನಾರದನ ಪೇೞ್ದ–ನಾರದನು ಹೇಳಿದ, ನೆಗೞ್ತೆಯ–ಪ್ರಸಿದ್ಧಿಯನ್ನುಳ್ಳ, ರಾಜಸೂಯ ಮಂ–ರಾಜಸೂಯ ಯಜ್ಞವನ್ನು;

೨೨. ಬೇಳಲ್ಬಗೆವೊಡೆ–ಮಾಡಲು ಯೋಚಿಸುವ ಪಕ್ಷದಲ್ಲಿ, ಹರಿಯೊಡನೆ– ಕೃಷ್ಣನೊಡನೆ; ಆಳೋಚಿಪಂ–ಆಲೋಚನೆ ಮಾಡೋಣ, ಎಂದು, ಬೞಿಯಂ–ದೂತನನ್ನು, ಅಟ್ಟಿದೆಂ–ಕಳಿಸಿದೆನು; ನೀನ್–ನೀನು, ಎಮ್ಮಂ–ನಮ್ಮನ್ನು, ಪಾಳಿಸುವಯ್–ಕಾಪಾಡು ತ್ತೀಯೆ; ನಿಮ್ಮೊಡನೆ–ನಿಮ್ಮ ಕೂಡೆ, ಆಳೋಚಿಸದೆ–ಆಲೋಚನೆ ಮಾಡದೆ, ನೆಗೞಲ್– ಮಾಡಲು, ನೆರವುಂಟೇ ಏಂ–ಸಹಾಯವಿದೆಯೇ, ಏನು? ಈ ಎರಡು ಪದ್ಯಗಳು ಯುಗ್ಮವೆನ್ನಿಸಿ ಕೊಳ್ಳುತ್ತವೆ. ನಾರದನ ಪೇೞ್ದ ಎಂಬಲ್ಲಿ ಷಷ್ಠಿ ವಿಭಕ್ತಿ ಪ್ರಥಮಾರ್ಥದಲ್ಲಿ ಬಂದಿದೆ.

ವಚನ : ನೆಱೆಯೆ ಕೇಳ್ದು–ಪೂರ್ಣವಾಗಿ ಕೇಳಿ, ಕಜ್ಜದ ಬಿಣ್ಪುಮಂ–ಕಾರ್ಯದ ಭಾರ ವನ್ನು, ಅಸಾಧ್ಯತೆಯನ್ನು; ಶುಂಭದಂಭೋಧರಧ್ವನಿಯಿಂ–ಒಡೆಯುತ್ತಿರುವ ಮೇಘ ಗರ್ಜನೆಯಿಂದ, ಗುಡುಗಿನ ಶಬ್ದದಿಂದ.

೨೩. ಎಂತು–ಹೇಗೆ, ಬಿಗುರ್ತು–ಭಯಪಡಿಸಿ, ಬೀರರನೆ–ಶೂರರನ್ನೇ, ಕೊಂದಪಿರ್– ಕೊಲ್ಲುತ್ತೀರಿ? ಎಂತು–ಹೇಗೆ, ಸಮಸ್ತವಾರ್ಧಿಪರ್ಯಂತ–ಸಕಲ ಸಮುದ್ರಗಳ ಕೊನೆಯ ವರೆಗೆ, ಧರಿತ್ರಿಯಿಂ–ಭೂಮಿಯನ್ನು, ವಶಕೆ–ಅಧೀನಕ್ಕೆ, ತಂದಪಿರ್–ತರುತ್ತೀರಿ? ಎಂತು– ಹೇಗೆ, ಧನಂಗಳಂ–ದ್ರವ್ಯಗಳನ್ನು, ಪ್ರಯೋಗಾಂತರದಿಂದಂ–ಬೇರೆ ಬೇರೆ ಉಪಾಯಗಳಿಂದ, ತೆರಳ್ಚಿದಪಿರ್–ಕೂಡಿ ಹಾಕುತ್ತೀರಿ? ಇದಾದೊಡಂ–ಇದು ಆದರೂ, ರಾಜಸೂಯಾಂತಂ– ರಾಜಸೂಯದ ಕೊನೆಮುಟ್ಟುವುದು, ಎಂತು–ಹೇಗೆ? ಅಪಾಯಶತಂಬರೆ–ನೂರಾರು ಅಪಾಯಗಳು ಬರಲು, ರಾಜಸೂಯಮಂ–ರಾಜಸೂಯ ಯಜ್ಞವನ್ನು, ಎಂತು–ಹೇಗೆ, ಬೇಳ್ದಪಿರ್–ಯಜ್ಞ ಮಾಡುತ್ತೀರಿ?

೨೪. ಗಾಳುಗೊರವಂ–ಆ ಕಪಟಿಯಾದ ಸಂನ್ಯಾಸಿ, ಪಳಾಳಮನೇನೊಂದನಪ್ಪೊಡಂ– ಏನೊಂದಾದರೂ ಪೊಳ್ಳು ಕೆಲಸವನ್ನು, ತಗುಳ್ಚಿ–ಅಂಟಿಸಿ, ಗೞಪಿದೊಡೆ–ಹರಟಿದರೆ, ಆ ಬೇಳುನುಡಿಗೇಳ್ದು–ಆ ಬೇಳುವೆಯ ಎಂದರೆ ಮರುಳು ಮಾಡುವ ಮಾತನ್ನು ಕೇಳಿ, ಕೆಮ್ಮನೆ– ಸುಮ್ಮನೆ, ಬೇಳಲ್–ಯಜ್ಞ ಮಾಡಲು, ನಿಮಗೆ, ಅಂತು–ಹಾಗೆ, ರಾಜಸೂಯಂ–ರಾಜ ಸೂಯವೆಂಬ ಯಜ್ಞವು, ಮೊಗ್ಗೇ–ಸಾಧ್ಯವೇ? ಮೊಗ್ಗು+ಏ (ಪ್ರಶ್ನಾರ್ಥಕ), “ಕಡಲೆಗಳಂ ತಿಂಬ ಮೊಗ್ಗು ಕಲ್ಗಳಲುಂಟೇ?”, “ಏಮ್ಮೊಗ್ಗೆ ಕರ್ಣನಿಂತೀ ನಿಮ್ಮದಿಂಗರಿಱಿಯೆ ಸಾವನೇ”, “ಕಾದಲಿದಿರ್ಚಿ ಕೈದುವಿಡಿಯಲ್ಬಗೆದರ್ಪುದು ಮೊಗ್ಗೆ” –ಇವು ಬೇರೆ ಪ್ರಯೋಗಗಳು.

ವಚನ : ಕಡೆಯೊಳ್–ಅಂತ್ಯದಲ್ಲಿ; ಅೞ್ಗಿಮೞ್ಗಿದಂತಾದರ್–ನಾಶವಾಗಿ ಮಟ್ಟವಾಗಿ ಹೋದಂತಾದರು, ಭಾರಾವತಾರದೊಳ್–ಭಾರವನ್ನು ಇಳಿಸುವುದರಲ್ಲಿ; ಎನಿತಾನುಂ– ಎಷ್ಟೋ, ಘಸಣಿಪೋದುದದು–ಆಯಾಸವಾಯಿತು; ಮೌನಂಗೊಂಡು–ಮಾತಿಲ್ಲದೆ.

೨೫. ಪಯೋನಿಧಿಪರೀತ ಮಹೀತಳಮೆಂಬುದು–ಕಡಲು ಸುತ್ತುವರಿದ ಭೂಮಿ ಎಂಬುದು, ಎನಿತು ಗಡಂ–ಎಷ್ಟು ದಿಟವಾಗಿಯೂ! ಆಂಪ–ಎದುರಿಸುವ, ಬೀರನ–ಶೂರನ, ಪೆಸರಾವುದು–ಹೆಸರು ಯಾವುದು? ಈ ನುಡಿಯಂ–ಈ ಮಾತನ್ನು (ಯಜ್ಞದ), ಈ ಪದದೊಳ್–ಈ ಸಮಯದಲ್ಲಿ, ಪೆಱಗಿಕ್ಕೆ–ಹಿಂದಿಡಲು, ನಾರದಂ–ನಾರದನು, ಮನದೊಳೆ– ಮನಸ್ಸಿನಲ್ಲೆ, ಪೇಸುಗುಂ–ಜುಗುಪ್ಸೆಪಟ್ಟುಕೊಳ್ಳುತ್ತಾನೆ; ಸುರಪನುಂ–ಇಂದ್ರನು ಕೂಡ, ನಗುಗುಂ–ನಗುತ್ತಾನೆ; ಅಯ್ಯನ–ತಂದೆಯ (ಪಾಂಡುವಿನ), ಮುಖಂ–ಮುಖವು, ಕಡು ವಿನ್ನನಕ್ಕುಂ–ಅತಿಶೂನ್ಯವಾಗುತ್ತದೆ; ಸರಸೀರುಹೋದರಾ–ಕೃಷ್ಣನೇ, ಈ ಮಖಮಂ–ಈ ಯಜ್ಞವನ್ನು, ಎಂತು–ಹೇಗೆ, ಉಪೇಕ್ಷಿಸುವುದು–ಅಲಕ್ಷ್ಯ ಮಾಡುವುದು?

೨೬. ಭೀಮಸೇನನ ಮಾತು: ಪನ್ನತರ–ವೀರರ, ನಡುವಂ–ಸೊಂಟವನ್ನು, ಉಡಿಯಲ್ಕೆ– ಮುರಿಯುವುದಕ್ಕೆ, ಎನ್ನ–ನನ್ನ, ಭುಜಾರ್ಗಳಮೆ–ಅಗಳಿಯ ಹಾಗಿರುವ ಭುಜಗಳೆ, ಸಾಲ್ಗುಂ– ಸಮರ್ಥವಾಗುತ್ತವೆ; ಒಸೆ ಮೇಣ್ ಮುನಿ ಮೇಣ್–ಪ್ರೀತಿಸು ಇಲ್ಲವೆ ಕೋಪಿಸಿಕೊಳ್ಳು; ಎನ್ನ ನುಡಿ–ನನ್ನ ಮಾತು, ಟಾಠಡಾಢಣಂ–ಟವರ್ಗಾಕ್ಷರಗಳಂತೆ ನಿಯತ, ಶಾಶ್ವತ; ರಾಜಸೂಯಂ ಬೇಳಲ್–ರಾಜಸೂಯ ಯಜ್ಞವನ್ನು ಮಾಡಲು, ಎನ್ನಂ–ನನ್ನನ್ನು, ಬೆಸಸು ವುದು–ಆಜ್ಞೆ ಮಾಡುವುದು, ಇಲ್ಲಿ ಒಸೆ ಮೇಣ್ ಮುನಿ ಮೇಣ್–ಎಂಬಲ್ಲಿ ಮೇಣ್ ಎಂದು ಎರಡು ಸಲ ಬಂದಿದೆ; ಇದಕ್ಕೆ ಇಲ್ಲವೇ, ಅಥವಾ, ಎಂದರ್ಥ; ಇದೊಂದು ನುಡಿಗಟ್ಟು; ಒಸೆಗೆ ಮೇಣ್ ಮುನಿಗೆ ಮೇಣ್ (ಕರಾಮಾ. ೧–೧೩೪); ಪೞಿಗೆ ಮೇಣ್ ಪೊಗೞ್ಗೆಮೇಣ್ (ಕರಾಮಾ. ೧–೧೩೫). ಟಾಠಡಾಢಣಂ ಎಂಬ ಮಾತು ಪಂಪನ ಕಾಲದ ಜನರು ಆಡುವ ಮಾತಿ ನಲ್ಲಿ ಬಳಕೆಯಲ್ಲಿದ್ದಿರಬಹುದು; ಈ ಶಬ್ದವನ್ನು ಕನ್ನಡಕ್ಕೆ ಪ್ರಕೃತಿಯಾಗಿ ಸ್ವೀಕರಿಸಬಹುದು; ಸಪ್ತವಿಭಕ್ತಿಗಳೂ ಅದಕ್ಕೆ ಸೇರಬಹುದು.

ವಚನ : ಗಜಱಿ–ಗದರಿ, ಕೆರಳಿ; ಅಮಳರುಂ–ಅವಳಿಗಳಾದ ನಕುಲಸಹದೇವರು; ತೆಮಳೆ ನುಡಿದೊಡೆ–ತೆವಳಿ ಹೋಗುವಂತೆ ಎಂದರೆ ಜಾರಿಹೋಗುವಂತೆ ಮಾತನಾಡಿದರೆ; ಅಳುಂಬಂ–ವಿಶೇಷವಾಗಿ; ಭೃತಮಕ್ಕುಂ–ಹೀನವಾಗುತ್ತದೆ; ಬಡಗಣ ತಡಿಯ–ಉತ್ತರ ತೀರದ; ಪಚ್ಚುಕೊಟ್ಟೊಡೆ–ವಿಭಾಗಿಸಿಕೊಟ್ಟರೆ; ಪೋೞುಮಂ ಹೋಳುಗಳನ್ನು; ಇವೇವುವು–ಇವು ಏನು; ಚೋದ್ಯಂಬಟ್ಟು–ಅಚ್ಚರಿಪಟ್ಟು, ಜರಾಸಂಧಂಗಳ್ಕಿ–ಜರಾಸಂಧನಿಗೆ ಹೆದರಿ; ನೀರ್ಗಾದಿಗೆ ಯಾಗೆ–ನೀರಿನ ಕಂದಕವಾಗಲು, ಖಾತಿಕಾ ಗಾದಿಗೆ; ಸೆಱೆಗಳ್–ಸೆರೆಯಲ್ಲಿರುವವರು, ಬಂದಿಗಳು; ಆದೇಶಂ–ಭವಿಷ್ಯವಾಣಿ; ಪೇೞ್ವದೆಂದು–ಹೇಳಿ ನಿಯಮಿಸಬೇಕೆಂದು;

೨೭. ಕಲಿ–ಶೂರನಾದ ಜರಾಸಂಧನು, ಮಾರ್ಕೊಳ್ಳದೆ–ಪ್ರತಿ ಮಾತಾಡದೆ, ಕೊಟ್ಟು– ಧರ್ಮಯುದ್ಧವನ್ನು ಕೊಟ್ಟು, ಮೆಯ್ಯೊಳೆ–ಏಕಾಂಗಿಯಾಗಿ, ಸಿಡಿಲ್ತಾಪಂತೆವೋಲ್– ಸಿಡಿಲು ಎರಗುವ ಹಾಗೆ, ತಾಗೆ–ಎರಗಲು, ಮೆಯ್ಗಲಿ–ಶೂರನಾದ, ಭೀಮಂ–ಭೀಮನು, ಪೆಱಪಿಂಗದೆ–ಹಿಂದಕ್ಕೆ ಸರಿಯದೆ, ಆಂತು–ಎದುರಿಸಿ, ಪಲವುಂ ಬಂಧಂಗಳಿಂ–ಹಲವು ಪಟ್ಟುಗಳಿಂದ, ತಳ್ತು–ಸೇರಿ, ತತ್ಕುಲಶೈಲಂ–ಆ ಕುಲಪರ್ವತ, ಕುಲಶೈಲದೊಳ್– ಕುಲಪರ್ವತದೊಡನೆ, ಕಲುಷದಿಂ–ದ್ವೇಷದಿಂದ, ಪೋರ್ವಂತೆವೊಲ್–ಹೋರಾಡುವ ಹಾಗೆ, ಪೋರ್ದು–ಕಾದಾಡಿ, ನೆಯ್ದಿಲ ಕಾವಂ–ನೈದಿಲೆಯ ದಂಟನ್ನು, ತುದಿಗೆಯ್ದೆ–ತುದಿಯ ವರೆಗೂ ಬರುವಂತೆ, ಸೀಳ್ವ ತೆಱದಿಂ–ಸೀಳುವ ಹಾಗೆ, ಜರಾಸಂಧನಂ–ಜರಾಸಂಧನನ್ನು, ಸೀಳ್ದಂ– ಸೀಳಿದನು.

ವಚನ : ರಾಜ್ಯದೊಳ್ನಿಱಿಸಿ–ರಾಜ್ಯದಲ್ಲಿ ಸ್ಥಾಪಿಸಿ; ಸೆಱೆಗಳುಮಂ–ಬಂದಿಗಳನ್ನೂ, ಮುಂದಿಟ್ಟು–ಮುಂದಿಟ್ಟುಕೊಂಡು.

೨೮. ಜರಾಸಂಧಂ–ಜರಾಸಂಧನು, ಮುನ್ನಂ–ಮೊದಲು, ಮಡಿದೊಡೆ–ಸತ್ತುಹೋದರೆ, ಇಳೆ–ಲೋಕವು, ನಿಷ್ಕಂಟಕಂ–ನಿರ್ಬಾಧವಾಯಿತು, ಅದರ್ಕೆ–ಆದ್ದರಿಂದ, ಇನ್–ಇನ್ನು, ಇರಲ್ವೇಡ–ಇರಬೇಡ; ನಾಲ್ಕುಂದೆಸೆಗೆ–ನಾಲ್ಕು ದಿಕ್ಕುಗಳಿಗೆ, ನಿಮ್ಮನುಜರಂ–ನಿಮ್ಮ ತಮ್ಮಂದಿರನ್ನು, ಬೆಸಸಿಂ–ನೇಮಿಸಿರಿ; ಭರಂಗೆಯ್ವಾಗಳ್–ಕಾರ್ಯಭಾರವನ್ನು ಮಾಡುವಾಗ, ನೀಂ–ನೀನು, ಪೆಸರ್ವೆಸರೊಳ್–ಹೆಸರು ಹೆಸರಿನಲ್ಲಿ ನಾಲ್ವರುಮನ್–ನಾಲ್ಕು ಜನರನ್ನು, ಆದರಂಗೊಂಡು–ಸಾದರದಿಂದ, ಆ ನಾಲ್ಕುಂದೆಸೆಗೆ–ಆ ನಾಲ್ಕು ದಿಕ್ಕುಗಳಿಗೆ, ಬೆಳ್ಕುಱುವಿನಂ– ಭಯವುಂಟಾಗುತ್ತಿರಲು, ಬೆಸಸಿಂ–ನೇಮಿಸಿರಿ. ಒಬ್ಬೊಬ್ಬ ತಮ್ಮನಿಗೆ ಹೆಸರು ಹೇಳಿ ಒಂದೊಂದು ದಿಕ್ಕನ್ನು ಜಯಿಸುವಂತೆ ಅಪ್ಪಣೆ ಮಾಡಿರಿ. ಬೆಳ್ಕು–ಭಯ+ಉಱು–ಹೊಂದು.

ವಚನ : ಇಂದ್ರನ ಮೇಲೆವೇೞ್ವಂತೆ–ಇಂದ್ರನ ಮೇಲೆ ದಂಡೆತ್ತಿ ಹೋಗು ಎಂದು ನಿಯಮಿಸುವಂತೆ; ಅದಿರ್ಪಲ್ವೇೞ್ವಂತೆ–ನಡುಗಿಸಲು ನಿಯಮಿಸುವಂತೆ ಉತ್ತರೋತ್ತರ ಮಾಗಲ್–ಏಳಿಗೆಯುಂಟಾಗಲು;

೨೯. ಅರಿ ನರಪಾಳ ಮೌಳಿ ಮಣಿಯೊಳ್–ಶತ್ರುರಾಜರ ಕಿರೀಟಗಳ ರತ್ನಗಳಲ್ಲಿ, ಶಂಖಚಕ್ರಚಾಮರಹಳಚಿಹ್ನ ಚಿಹ್ನಿತ ಪದಾಕೃತಿ–ಶಂಖ, ಚಕ್ರ, ಚಾಮರ, ನೇಗಿಲು–ಈ ಗುರುತುಗಳಿಂದ ಕೂಡಿದ ಪಾದಗಳ ಆಕಾರವು ಎಂದರೆ ಚಕ್ರವರ್ತಿಯ ಪಾದಗಳು, ನೆಲೆ ಗೊಂಡವು–ಸ್ಥಿರವಾಗಿ ನಿಂತವು, ಎಂದರೆ ಶತ್ರುರಾಜರೆಲ್ಲಾ ಚಕ್ರವರ್ತಿಯ ಪಾದಗಳಿಗೆ ತಲೆ ಬಾಗಿದರು; ಬೀಸುವ ಚಾಮರಾಳಿ–ಬೀಸುವ ಚಾಮರಗಳ ಸಾಲು, ಸುಂದರಿಯರ ಕೈಗಳಿಂ– ಕೈಗಳಿಂದ, ಬರ್ದುಕಿ–ತಪ್ಪಿ, ಬಿೞ್ದುವು–ಬಿದ್ದವು; ನೋಡೆ ನೋಡೆ–ನೋಡು ನೋಡುತ್ತಿರುವ ಹಾಗೆಯೇ, ಬೆಳ್ಗೊಡೆ–ಶ್ವೇತಚ, ತ್ರಿಗಳು, ನಿಂದು–ನಿಂತು, ಉರಿದುವು–ಸುಟ್ಟವು; ವೈರಿನರೇಂದ್ರ ಗೇಹದೊಳ್–ವೈರಿರಾಜರ ಅರಮನೆಗಳಲ್ಲಿ, ಸಾಲಭಂಜಿಕೆಗಳ್–ಬೊಂಬೆಗಳು, ಅೞ್ತುವು– ಅತ್ತವು.

ವಚನ : ವಿಜಯದ ಗುಡಿವಿಡಿಸಿ–ವಿಜಯಸೂಚಕವಾದ ಬಾವುಟವನ್ನು ಹಿಡಿಯಿಸಿ; ಚಾಳಿಸಿ–ಚಲಿಸುವಂತೆ ಮಾಡಿ; ಕಾಪುರುಷರ್ ಮಾಡಿ–ಅಲ್ಪರನ್ನಾಗಿ ಮಾಡಿ; ಅನನೀಕರೆನಿಸಿ– ಸೈನ್ಯರಹಿತರಾದವರು ಎಂದೆನಿಸಿ; ಕೆೞಗಿವಿಗೆಯ್ಯಲೀಯದೆ–ಉದಾಸೀನರಾಗಿರಲು ಬಿಡದೆ; ಆಟಂದು–ಮೇಲೆ ಹಾಯ್ದು; ಸಾಯಕಂಗಳಿಂದೆ–ಬಾಣಗಳಿಂದ; ನಚ್ಚಂ ಕಿಡಿಸಿ–ನಂಬಿಕೆಯನ್ನು ಹೋಗಲಾಡಿಸಿ.

೩೦. ಗ್ರಾಮಂ ಕುಳಂ ರಾಜಕಂ–ಗ್ರಾಮದವರೂ, ಕುಲವ್ಯವಸ್ಥೆಯುಳ್ಳವರೂ, ರಾಜರೂ, ಭಯದಿಂ–ಹೆದರಿಕೆಯಿಂದ, ಬೆರ್ಚಿ–ಬೆದರಿ, ಉಱದಿರ್ಪಂತೆ–ಲಕ್ಷ್ಯ ಮಾಡದಿರುವಂತೆ, ಎಮಗೆ–ನಮಗೆ, ಆವ ಗರ್ವಂ–ಯಾವ ಗರ್ವ? ಎಮ್ಮಂ–ನಮ್ಮನ್ನು, ಇಱಿಯಲ್ವೇಡ– ಘಾತಿಸಬೇಡ; ಎಮ್ಮುಳ್ಳುದಂ–ನಮಗಿರುವುದನ್ನು, ನೆಱೆಕೊಂಡು–ಪೂರ್ಣವಾಗಿ ತೆಗೆದು ಕೊಂಡು, ಎಮ್ಮಯ ಬಾೞ್ವೆಯೊಳ್–ನಮ್ಮ ಬದುಕುಗಳಲ್ಲಿ, ನಿಱಿಸುವಂ–ಸ್ಥಾಪಿಸುವವನು, ನೀಂ–ನೀನು, ಎಂದು, ಕೆಯ್ಸೆಱೆಯಂ–ಕೆಯ್ಗೆ ಸಿಕ್ಕಿದ್ದ ಸೆರೆಯಾಳುಗಳನ್ನು, ತಂದಿತ್ತು–ತಂದು ಕೊಟ್ಟು, ಅಳವಟ್ಟ–ಅಳತೆಗೆ ಒಳಗಾದ, ಸಾರಧನಮಂ–ಸಾರಭೂತವಾದ ದ್ರವ್ಯವನ್ನು, ಕೊಟ್ಟು–ಅರ್ಪಿಸಿ, ಮೂವಿಟ್ಟಿಗಂ ಪೊಣ್ದು–ಮೂರು ಬಗೆಯಾದ ಬಿಟ್ಟಿ ಕೆಲಸಗಳನ್ನು ಮಾಡುತ್ತೇವೆಂದು ಭಾಷೆ ಕೊಟ್ಟು, ಅರಿಗಂಗೆ–ಅರ್ಜುನನಿಗೆ, ಕಾಲ್ಗೆಱಗಿತ್ತು–ಕಾಲಿಗೆ ಬಿದ್ದು ನಮಸ್ಕರಿಸಿತು. ಮೂವಿಟ್ಟಿ ಮೂೞು+ವಿಷ್ಟಿ ಬಿಟ್ಟಿ. ಸೋತರಾಜನು ಗೆದ್ದವನಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಬೇಕಾಗಿದ್ದ ಮೂರು ಬಗೆಯ ವಿಷ್ಟಿಕರ್ಮಗಳು; ಶೋಧನ ಕರ್ಮ; ವಹನಕರ್ಮ, ಅಪನಯನ ಕರ್ಮ–ಎಂಬಿವು ಮೂರು ಬಿಟ್ಟಿಗಳು; ಶೋಧನಕರ್ಮ– ಶಿಬಿರ, ಮಾರ್ಗ, ಸೇತು, ಕೂಪ, ನೀರು–ಇವುಗಳನ್ನು ಶೋಧನೆ ಮಾಡಿ ನೇರ್ಪಡಿಸುವುದು (೨) ಆಯುಧಗಳು, ಯಂತ್ರಗಳು, ಆವರಣಗಳು, ಉಪಕರಣಗಳು ಆಹಾರ ಇವನ್ನು ಗೆದ್ದ ರಾಜನಿಗಾಗಿ ಸಾಗಿಸಿ ಕೊಡುವ ಕೆಲಸ ವಹನಕರ್ಮ (೩) ಯುದ್ಧದಲ್ಲಿ ಗಾಯಗೊಂಡ ವರನ್ನೂ ಸತ್ತವರನ್ನೂ ಅವರು ಆಯುಧ ಕವಚಗಳ ಸಮೇತವಾಗಿ ತರುವುದು ಅಪನಯನ ಕರ್ಮ. “ಶಿಬಿರ ಮಾರ್ಗ ಸೇತುಕೂಪ ತೀರ್ಥಶೋಧನಕರ್ಮ, ಯಂತ್ರಾಯುಧೋಪಕರಣ ಗ್ರಾಸವಹನಂ, ಆಯೋಧನಾಚ್ಚ ಪ್ರಹರಣಾವರ ಪ್ರತಿ ವಿದ್ಧಾಪನಯನಮಿತಿ ವಿಷ್ಟಿ ಕರ್ಮಾಣಿ” (ಕೌಟಿಲೀಯ ಅರ್ಥಶಾಸ್ತ್ರ, ೧೦–೪)

ವಚನ : ಮೈತ್ರಾಸನ ವೃತ್ತಿಯೊಳ್–ಮಿತ್ರರಾಗಿ ಉದಾಸೀನರಾಗಿರುವ ಸ್ಥಿತಿಯಲ್ಲಿ, ನಿಱಿಸಿ–ಸ್ಥಾಪಿಸಿ; ಉದ್ಧತಾ ಪ್ರತಿಮಹಿತರ್ ಮಾಡಿ? ಉಚ್ಚಾಟಿಸಿ–ಓಡಿಸಿ: ಸರ್ವಹರಣ ಗೆಯ್ದು–ಎಲ್ಲವನ್ನು ಕಸಿದುಕೊಂಡು; ಕಸವರಮೆಲ್ಲಮಂ–ಚಿನ್ನವನ್ನೆಲ್ಲ; ಪರ್ವತಾ ರಾಜರಂ–ಬೆಟ್ಟದರಸುಗಳನ್ನು; ತೞ್ಪಲೊಳ್–ತಪ್ಪಲಿನಲ್ಲಿ; ಅಲೆದು–ಪೀಡಿಸಿ, ಕೊರೆದು; ಪೊನ್ನ ಪಾಸಱೆಗಳಂ–ಚಿನ್ನದ ಹಾಸುಬಂಡೆಗಳನ್ನು. ಇಲ್ಲಿ ‘ಮೈತ್ರಾಸನವೃತ್ತಿ’ ಎಂಬುದು ‘ವೈತಸೀವೃತ್ತಿ’ ಎಂದಿರಬಹುದು; “ವೃತ್ತಿಮಾಶ್ರಿತ್ಯ ವೈತಸೀಂ” ಎಂದು ರಘುವಂಶದಲ್ಲಿ ಬರುತ್ತದೆ; ಬಲಿಷ್ಠನಾದ ರಾಜನಿಗೆ ದುರ್ಬಲರಾಜನು ಎರಗಿ ಬಾಗಿ ಬಾಳಬೇಕು; ಹೇಗೆಂದರೆ ವೇತಸವೆಂಬ ಹುಲ್ಲು ತೊರೆಯ ಪ್ರವಾಹ ಬಂದಾಗ ತಲೆಯನ್ನು ಬಾಗಿ ಬದುಕಿಕೊಳ್ಳುತ್ತದೆ; ಮರಗಳಾದರೆ ತೊರೆಯನ್ನು ತಡೆದು ಬಿದ್ದು ಹೋಗುತ್ತವೆ; ಮಲ್ಲಿನಾಥನು “ಬಲೀಯ ಸಾಭಿಯುಕ್ತೋ ದುರ್ಬಲಃ ಸರ್ವತ್ರಾನುಪ್ರಣತೋ ವೇತಸ ಧರ್ಮಮಾತಿಷ್ಠೇತ್” ಎಂದಿದ್ದಾನೆ. (ರಘುವಂಶ ೪–೩೫) “ಇದಿರಾದ ತರುಗಳು ದಿಂಡು ಗೆಡೆವುವು ತೊಱೆಗೆ ಮಣಿದರೆ ಗೇಕು ಬದುಕುವುದು” ಎಂಬ ಕುಮಾರವ್ಯಾಸನ ಮಾತನ್ನು ಇಲ್ಲಿ ನೆನೆಯಬಹುದು. ‘ಉದ್ಧತಾ ಪ್ರತಿಮಹಿತರ್’ –ಎಂಬುದು ತಪ್ಪು ಪಾಠವಿರಬಹುದು; ‘ಉದ್ಧೃತ ಪ್ರತಿ ರೋಪಿತರ್ ಅಥವಾ ಉತ್ಖಾತ ಪ್ರತಿರೋಪಿತರ್’ ಎಂದು ಸರಿಯಾದ ಪಾಠವಿರಬಹುದು, “ಅನಮ್ರಾಣಾಂ ಸಮುದ್ಧರ್ತುಂ” –ಬಾಗದವರನ್ನು ಬೇರು ಸಹಿತ ಕಿತ್ತು, ಉನ್ಮೂಲನ ಮಾಡಿ ಎಂಬರ್ಥದಲ್ಲಿ ‘ರಘುವಂಶ’ ದಲ್ಲಿ ದೊರೆಯುತ್ತದೆ (೪–೩೫). ‘ಉತ್ಖಾತ ಪ್ರತಿರೋಪಿತಾ’ ಎಂಬ ಮಾತು ಅದೇ ಗ್ರಂಥದ (೪–೩೭)ರಲ್ಲಿ ಬರುತ್ತದೆ. ಇಲ್ಲಿ ಉತ್ಖಾತ ಎಂದರೆ ಬೇರುಸಹಿತ ಕಿತ್ತು, ಸಮದ್ಧರ್ತುಂ ಎಂಬುದಕ್ಕೆ ಸಮ; ಪ್ರತಿರೋಪಿತಾಃ ಎಂದರೆ ‘ಪಶ್ಚಾತ್ ಸ್ಥಾಪಿತಾ’ ಎಂದರ್ಥ. ಎಂದರೆ ಬೇರುಸಹಿತ ಕಿತ್ತು ಇನ್ನೊಂದೆಡೆಯಲ್ಲಿ ನಡುವುದು, ಬತ್ತದ ಸಸಿಗಳನ್ನು ಕಿತ್ತು ನಡುವಂತೆ; ಎದುರಾದ ರಾಜರನ್ನು ಅರ್ಜುನ ಅವರವರ ಸ್ವಸ್ಥಾನದಿಂದ ಕಿತ್ತು ಬೇರೆ ಬೇರೆ ಎಡೆಗಳಲ್ಲಿ ಸ್ಥಾಪಿಸಿದನು ಎಂದು ಪ್ರಕೃತಾರ್ಥ.

೩೧. ತತ್ತಟದ–ಆ ಜಂಬೂನದಮೆಂಬ ನದಿಯ ತೀರದ, ಕನಕರೇಣುವಂ–ಚಿನ್ನದ ರೇಣುಗಳನ್ನುಳ್ಳ ಬಂಡೆಗಳನ್ನು, ಆಖಂಡಲ ತನಯಂ–ಅರ್ಜುನನು, ಗಾಂಡೀವದ–ಗಾಂಡೀವ ಧನುಸ್ಸಿನ, ಕೊಪ್ಪುಗಳೊಳ್–ತುದಿಗಳಿಂದ, ಖಂಡಿಸಿ–ಕತ್ತರಿಸಿ, ಅಸುಂಗೊಳೆ–ಸಚೇತನನಾಗಿ, ಅವನ್–ಅವುಗಳನ್ನು, ನಿಶಿತ ಪರಶು ಶರ ಸಮಿತಿಗಳಿಂ–ಹರಿತವಾದ ಕೊಡಲಿ ಬಾಣಗಳ ಸಮೂಹದಿಂದ, ಖಂಡಿಸಿದಂ–ಕತ್ತರಿಸಿದನು.

ವಚನ : ಪಿರಿಯ ಸೆಲೆಗಳುಮಂ–ದೊಡ್ಡ ಶಿಲೆಗಳನ್ನು, ಬಂಡೆಗಳನ್ನು; ಪುಂಜಿಸಿ–ರಾಶಿ ಮಾಡಿ.

೩೨. ಘಟೋತ್ಕಚಂ ಬೆರಸು–ಘಟೋತ್ಕಚನ ಸಮೇತವಾಗಿ, ದಾನವ ಸೇನೆಯಂ– ರಾಕ್ಷಸ ಸೈನ್ಯವನ್ನು, ಬರಿಸಿ–ಬರಮಾಡಿಕೊಂಡು, ಈ ಬಲಂಬೆರಸು–ಈ ಸೈನ್ಯಸಹಿತವಾಗಿ, ನಮ್ಮ ಪುರಕ್ಕೆ–ನಮ್ಮನಗರಿಗೆ, ಪೊತ್ತು ನಡೆ–ಹೊತ್ತುಕೊಂಡು ಹೋಗು, ಎನೆ–ಎನ್ನಲು, ತದ್ಗಿರೀಂದ್ರ ಕಂದರ ಕನಕಾಚಲಂಗಳ್–ಆ ಬೆಟ್ಟದ ಕಣಿವೆಗಳಲ್ಲಿರುವ ಚಿನ್ನದ ಬೆಟ್ಟಗಳು, ಎನಿತುಂಟು–ಎಷ್ಟಿವೆಯೋ, ಅನಿತುಂ–ಅಷ್ಟೂ, ತವೆ–ಮುಗಿದು ಹೋಗಲು, ಹೇಮ ರೇಣು ಗಳ್ವೆರಸು–ಚಿನ್ನದ ಧೂಳಿನ ಸಮೇತವಾಗಿ, ಘಟೋತ್ಕಚ ರೌದ್ರಸಾಧನಂ–ಘಟೋತ್ಕಚನ ಭಯಂಕರವಾದ ಸೈನ್ಯ, ಕಡಂಗಿ–ಉತ್ಸಾಹಿಸಿ, ಪೊತ್ತು–ಹೊತ್ತು, ನಡೆದತ್ತು–ನಡೆಯಿತು.

ವಚನ : ಜಕ್ಕರ್–ಯಕ್ಷರು; ಎಕ್ಕೆಯಿಂ–ಒಟ್ಟಾಗಿ, ಗುಂಪಾಗಿ; ಬಾಯ್ಕೇಳಿಸಿ–ಆಜ್ಞಾಧೀನ ವನ್ನಾಗಿ ಮಾಡಿ; ಅದಿರ್ಪಿಯುಮುದಿರ್ಪಿಯುಂ–ನಡುಗಿಸಿಯೂ ಉದುರಿಸಿಯೂ; ವರುಣಾನಿ–ವರುಣನ ಹೆಂಡತಿ; ಅಯ್ದೆಮಿನುಗು–ಸೌಮಂಗಲ್ಯವನ್ನು ಸೂಚಿಸುವ ತಾಳಿ; ಅಸಿಯರಾಗೆ–ಕೃಶರಾಗಲು; ಕವರ್ದು–ಬಾಚಿ;

೩೩. ತೊಂಡಿನೊಳ್–ದುಷ್ಟತನದಲ್ಲಿ, ಉರ್ಕ್ಕಿ–ಸೊಕ್ಕಿ, ಕೆಟ್ಟ–ಹಾಳಾದ, ದಶಕಂಠನಂ– ರಾವಣನನ್ನು, ಕೊಂಡ–ಹಿಡಿದ, ಪೆರ್ಮರುಳ್–ದೊಡ್ಡ ಭೂತ, ತನ್ನುಮಂ–ತನ್ನನ್ನೂ ಎಂದರೆ ವಿಭೀಷಣನನ್ನೂ, ಕೊಂಡುದೆ–ಹಿಡಿಯಿತೆ? ಬಲಗರ್ವಮಂ–ಸೈನ್ಯದ ಗರ್ವವನ್ನು ಅಥವಾ ಶಕ್ತಿಯ ಗರ್ವವನ್ನು, ನೀಂ–ನೀನು, ಬಿಸುಡು–ಬಿಸಾಡು, ಬಿಡು; ಪಾಯ್ದೊಡೆ– ಹಾಯಿದರೆ, ದಾಟಿದರೆ; ಆ ಸಮುದ್ರಂ–ಆ ಬಳಸಿದ ಕಡಲು, ಏ ಬಂಡಮೋ–ಏನು ಪ್ರಯೋಜನವೋ, ಎಂದು, ನಿಜ ಸಾಯಕದೊಳ್–ತನ್ನ ಬಾಣದಲ್ಲಿ ಬರೆದೆಚ್ಚು–ಬರೆದು ಪ್ರಯೋಗಿಸಿ, ಪರಸೈನ್ಯ ಭೈರವಂ–ಅರ್ಜುನನು, ಲಂಕೆಯ, ವಿಭೀಷಣನಂ–ವಿಭೀಷಣನನ್ನು, ಅವುಂಕಿ–ಒತ್ತಿ, ಕಪ್ಪಮಂ–ಕಪ್ಪಕಾಣಿಕೆಗಳನ್ನು, ಕೊಂಡಂ–ತೆಗೆದುಕೊಂಡನು. ಏಬಂಡಂ; ‘ನ್ಯಾಯಾರ್ಜಿತಮಲ್ಲದೆನಿಪ ಧನಮೇಬಂಡಂ’ ಎಂದು ನಾಗಚಂದ್ರನ ಪ್ರಯೋಗ; ಬಂಡ ಸಂ, ಭಾಂಡ–ಹಣ, ದ್ರವ್ಯ, ಮೂಲಧನ. ಅನ್ಯಾಯದಿಂದ ಬಂದ ಹಣ ಯಾವ ಹಣ ಎಂಬಲ್ಲಿ ತಿರಸ್ಕಾರಾರ್ಥವಿದೆ, ಅದು ಹಣವೇ ಅಲ್ಲ, ಅದು ನಿಷ್ಪ್ರಯೋಜಕ. ಅರ್ಜುನನು ವಿಭೀಷಣ ನಿಗೆ ಬಾಣಲಿಖಿತವನ್ನು ಕಳಿಸಿದ ಇಲ್ಲಿನ ತಂತ್ರ, ಭರತ ಚಕ್ರವರ್ತಿ ಮಾಗಧಾಮರನಿಗೆ ಸಂದೇಶ ಕಳಿಸಿದ್ದನ್ನು ಹೋಲುತ್ತದೆ; ಇಲ್ಲಿ ಜೈನಪುರಾಣದ ಪ್ರಭಾವವಿರಬಹುದು.

೩೪. ಚಾರುತರ–ರಮಣೀಯವಾದ, ಯಜ್ಞ ವಿದ್ಯಾಪಾರಗರ–ಯಜ್ಞವಿದ್ಯೆಯಲ್ಲಿ ಪರಿಣತರಾದವರ, ರವಂಗಳಿಂ–ಧ್ವನಿಗಳಿಂದ, ಸ್ವಧಾಕಾರ–ಸ್ವಧಾ ಎಂಬ ಶಬ್ದದ ಉಚ್ಚಾರಣೆ, ವಷಟ್ಕಾರ–ವಷಟ್ ಎಂಬ ಶಬ್ದೋಚ್ಚಾರಣೆ, ಸ್ವಾಹಾಕಾರ–ಸ್ವಾಹ ಎಂಬ ಶಬ್ದದ ಉಚ್ಚಾರಣೆ, ಓಂಕಾರ–ಓಂ ಎಂಬ ಶಬ್ದದ, ಧ್ವನಿ–ನಾದವು, ನೆಗೞೆ–ಉಂಟಾಗಲು, ಆವುತಿ ಧೂಮಂ– ಹವಿಸ್ಸಿನ ಹೊಗೆಯು, ನೆಗೞ್ದುದು–ಉಂಟಾಯಿತು.

೩೫. ಬಳ [ಸು] ಮುಗಿಲ್ಗಳ್–ಸುತ್ತುವರಿಯುವ ಮೋಡಗಳು, ಕನಕಾಚಳಮಂ–ಮೇರು ಪರ್ವತವನ್ನು, ಬಳಸುವವೊಲ್–ಸುತ್ತಿಕೊಳ್ಳುವ ಹಾಗೆ, ಇಕ್ಕಿದ–ಹಾಕಿದ, ಆಹುತಿಗಳ– ಹವಿಸ್ಸುಗಳ, ಗೊಂದಳದಿಂ–ಗುಂಪಿನಿಂದ, ಒಡನೆ ಒಗೆದ–ಕೂಡಲೇ ಹುಟ್ಟಿದ, ಪೊಗೆಗಳ್– ಹೊಗೆಗಳು, ಆಗಳ್–ಆಗ, ಕನಕ ಯೂಪಮಂ–ಯಾಗದ ಚಿನ್ನದ ಕುಂಭವನ್ನು, ಎಡೆಬಿಡದೆ– ನಿರಂತರವಾಗಿ, ಬಳಸಿದುವು–ಬಳಸಿಕೊಂಡುವು.

೩೬. ಯಾಗದ ಹೊಗೆ ಹಬ್ಬಿತು: ಒಡನೆ–ಕೂಡಲೇ, ದಿಗಂತ ದಂತಿಗಳ–ದಿಕ್ಕಿನ ಆನೆಗಳ, ಕೋಡಮೊದಲ್ಗಳೊಳ್–ದಂತಗಳ ಬುಡಗಳಲ್ಲಿ, ಎಯ್ದೆಪೊಕ್ಕು–ಚೆನ್ನಾಗಿ ಪ್ರವೇಶಿಸಿ, ಸಿಪ್ಪಡಸಿದ–ಚಿಪ್ಪನ್ನು ತೊಡಿಸಿದ, ಮಾೞ್ಕೆಯಾದುದು–ರೀತಿಯಾಯಿತು; ಭಾನುವಳ ಯಂ–ಸೂರ್ಯಬಿಂಬವು, ಕರಂಗಳಡಂಗಿ–ಕಿರಣಗಳು ಮರೆಯಾಗಿ, ಕಿಲುಂಬುಗೊಂಡ– ಕಿಲುಬು ಹತ್ತಿದ, ಕನ್ನಡಿಗೆ, ಎಣೆಯಾಯ್ತು–ಸಮಾನವಾಯಿತು; ದಿವಿಜಾಪಗೆ–ದೇವಗಂಗಾ ನದಿ, ಕೂಡೆ–ಕೂಡಲೆ; ಕರ್ಪಡರ್ದು–ಕಪ್ಪು ಹತ್ತಿ, ಅಗ್ಗದ–ಶ್ರೇಷ್ಠವಾದ, ಅತಿಶಯವಾದ, ಯಾಗದ ಧೂಮದ–ಯಜ್ಞದ ಹೊಗೆಯ, ಏೞ್ಗೆಯೊಳ್–ಏಳುವುದರಲ್ಲಿ, ಯಮುನೆಗೆ– ಯಮುನಾ ನದಿಗೆ, ಎಣೆಯಾದುದು–ಸಮಾನವಾಯಿತು. ಇಲ್ಲಿ ‘ಯಾಗದ ಧೂಮದೇೞ್ಗೆ ಯೊಳ್’ ಎಂಬುದನ್ನು ಎಲ್ಲ ಅಂಶಗಳಿಗೂ ಅನ್ವಯಿಸಿಕೊಳ್ಳಬೇಕು. ಒಂದೇ ಕಾರಣದಿಂದ ಇಲ್ಲಿ ಹಲವು ಕ್ರಿಯೆಗಳಾಗುತ್ತವೆ; ಕಾರಣಾಲಂಕಾರ, “ಕಾರಣಸ್ಯ ಸಕಾರ್ಯಸ್ಯ ವರ್ಣನಂ ಕಾರಣಂ ವಿದುಃ.”

೩೭. ಗಣನಾತೀತಾಜ್ಯಾಹುತಿ ಗಣದಿಂದಂ–ಅಸಂಖ್ಯವಾದ ಆಹುತಿಗಳ ಸಮೂಹದಿಂದ, ಜಾತವೇದನುಂ–ಅಗ್ನಿಯೂ, ತಣಿಯೆ–ತೃಪ್ತಿಪಡಲು, ಬ್ರಾಹ್ಮಣ ಸಮಿತಿ–ಬ್ರಾಹ್ಮಣರ ಸಮೂಹ, ಬೇಳೆ–ಹವಿಸ್ಸನ್ನರ್ಪಿಸಲು, ದೇವರ್ ನೆರೆದು–ದೇವತೆಗಳು ಸೇರಿ, ದಿವ್ಯಹ ವ್ಯಾಮೃತಮಂ–ಶ್ರೇಷ್ಠವಾದ ಹವಿಸ್ಸುಗಳೆಂಬ ಅಮೃತವನ್ನು, ತಣಿಯುಂಡರ್–ತೃಪ್ತಿ ಯಾಗುವಂತೆ ಊಟ ಮಾಡಿದರು.

೩೮. ತ್ರಿದಶೇಂದ್ರಂಗೆ–ಇಂದ್ರನಿಗೆ, ಯುಧಿಷ್ಠಿರಾಧ್ವರದ–ಧರ್ಮರಾಜನು ಮಾಡಿದ ಯಜ್ಞದ, ಮಾಸಾಮರ್ಥ್ಯಮಂ–ಮಹಾ ಸಾಹಸವನ್ನು, ಸೂೞುಸೂೞದೆ–ಕ್ರಮಕ್ರಮವಾಗಿ, ಪೇೞಲ್–ಹೇಳಲು, ಪರಿವಂತೆ–ಮೇಲಕ್ಕೆ ಓಡುವ ಹಾಗೆ, ಪಲವುಂ ಧೂಮಂಗಳ್–ಹಲವು ಹೊಗೆಗಳು, ಪೊಣ್ಮೆ–ಮೇಲಕ್ಕೇರಲು; ಆ ಹೋಮಧೂಮದ–ಆ ಹೋಮದ ಹೊಗೆಯ, ಗಂಧಂ–ಸುವಾಸನೆ, ನಸುಮುಟ್ಟೆ–ಸ್ವಲ್ಪ ಸೋಂಕಲು, ದಿವ್ಯಮಖಮಂ–ಶ್ರೇಷ್ಠ ಯಜ್ಞವನ್ನು, ಕೆಯ್ಕೊಂಡು–ಸ್ವೀಕರಿಸಿ, ಆ ಪಾರಿವ ಜಕ್ಕವಕ್ಕಿಗಳ್–ಆ ಪಾರಿವಾಳ ಚಕ್ರವಾಕ ಪಕ್ಷಿಗಳು, ಸಗ್ಗಕ್ಕೆ–ಸ್ವರ್ಗಕ್ಕೆ, ಪಾಱಿದುವು–ಹಾರಿಹೋದುವು; ಅದೇಂ ಪೆಂಪೋ–ಅದೇನು ಹಿರಿಮೆಯೋ, ಮಹಾಯಜ್ಞದಾ–ಆ ಮಹಾಯಾಗದ!

ವಚನ : ಪುರೋಡಾಶ ಪವಿತ್ರೋದರನುಂ–ಹುರಿದ ಹಿಟ್ಟಿನಿಂದ ಪಾವನವಾದ ಹೊಟ್ಟೆ ಯುಳ್ಳವನೂ; ಸೋಮಪಾನ ಕಷಾಯಿತೋದರನುಂ–ಸೋಮರಸ ಪಾನದಿಂದ ಕದಡಿದ ಹೊಟ್ಟೆಯುಳ್ಳವನೂ;

೩೯. ಒಟ್ಟಿದ ಪೊನ್ನಬೆಟ್ಟುಗಳಂ–ರಾಶಿ ಹಾಕಿದ ಚಿನ್ನದ ಬೆಟ್ಟಗಳನ್ನು, ಈವೆಡೆಗೆ–ದಾನ ಮಾಡುವ ಸಮಯಕ್ಕೆ, ಏವುದೊ ತೂಕಂ–ತೂಕಮಾಡುವುದು ಏನು? ಎನ್ನ, ಕೆಯ್ಗಟ್ಟಳೆ– ನನ್ನ ಕೈಯೇ ಕಟ್ಟಳೆ, ತೂಕ, ಕೊಳ್ಳಿಂ–ತೆಗೆದುಕೊಳ್ಳಿರಿ, ಎಂದು, ಕುಡೆ–ದಾನ ಕೊಡಲು, ಷೋಡಶ ಋತ್ವಿಜರ್ಗೆ–ಹದಿನಾರು ಋತ್ವಿಕ್ಕುಗಳಿಗೆ, ಇತ್ತುದರ್ಕೆ–ಕೊಟ್ಟಿದ್ದಕ್ಕೆ, ವಿಪ್ರಕೋಟಿ– ಕೋಟ್ಯಂತರ ಬ್ರಾಹ್ಮಣರು, ಬಾಯ್ವಿಟ್ಟಿರೆ–ಅಚ್ಚರಿಯಿಂದ ಬಾಯಿಬಿಟ್ಟುಕೊಂಡಿರಲು, ಮಡಗಲ್ಕೆ–ಇಡುವುದಕ್ಕೆ, ಎಡೆಯಿಲ್ಲದೆ–ಸ್ಥಳವಿಲ್ಲದೆ, ಪೊನ್ನರಾಶಿಯಂ–ಚಿನ್ನದ ರಾಶಿ ಯನ್ನು, ಬಟ್ಟನೆ ಬಂದು ಕಾಯೆ–ಸುತ್ತುವರಿದು ಬಂದು ರಕ್ಷಿಸುತ್ತಿರಲು, ಯಮನಂದನಂ– ಧರ್ಮರಾಜನು, ತೊದಳಿಲ್ಲದೆ–ವಂಚನೆಯಿಲ್ಲದೆ, ಏನ್ ಇತ್ತನೋ–ಏನು ದಾನ ಮಾಡಿ ದನೋ!

೪೦. ದಾನಾಂಭಃ ಪೀನ ಗಂಡಸ್ಥಳ ಕರಿನಿಕರಂ–ಮದೋದಕವನ್ನುಳ್ಳ, ದೊಡ್ಡದಾದ ಗಂಡ ಪ್ರದೇಶವನ್ನುಳ್ಳ ಆನೆಗಳ ಸಮೂಹ, ಬಾೞ್ತೆಯೋ–ಪ್ರಯೋಜನವೋ, ನಿಮಗೆ, ಮೆಚ್ಚು ವೇೞ್–ಬಯಸಿದ್ದನ್ನು ಹೇಳು, ಆಜಾನೇಯಾಶ್ವೋತ್ಕರಂ–ಉತ್ತಮವಾದ ಕುದುರೆಗಳ ಸಮೂಹ, ಬಾೞ್ತೆಯೊ–ಪ್ರಯೋಜನವೋ, ಮಣಿನಿಕರಂ ಬಾೞ್ತೆಯೋ–ರತ್ನರಾಶಿ ಪ್ರಯೋಜ ನವೋ, ಪೇೞಿಂ–ಹೇಳಿರಿ, ಎಂದು, ಆ ದೀನಾನಾಥರ್ಗೆ–ಆ ಬಡವರಿಗೂ ನಿರ್ಗತಿಕರಿಗೂ, ವೃದ್ಧ ದ್ವಿಜಮುನಿ ನಿಕರಕ್ಕೆ–ಮುದುಕರಾದ ಬ್ರಾಹ್ಮಣರ ಋಷಿಗಳ ಸಮೂಹಕ್ಕೆ, ಅಂದು– ಆ ದಿನ, ಎಡಱ್ಪೋಪಿನಂ–ಬಡತನವು ಹೋಗುತ್ತಿರಲು, ಕಃ ಕೇನಾರ್ಥೀ–ಯಾರು ಏನನ್ನು ಬೇಡುತ್ತಾನೆ, ಕೋ ದರಿದ್ರಃ–ಯಾರು ಬಡವ, ಎನುತುಂ–ಎಂದು ಹೇಳುತ್ತ, ಅನಿತುಮಂ– ಅಷ್ಟನ್ನೂ, ಧರ್ಮಜಂ–ಧರ್ಮರಾಜನು, ಸೂಱೆಗೊಟ್ಟಂ–ಸೂರೆಯಾಗಿ ಕೊಟ್ಟನು.

ವಚನ : ಧವಳಚ, ತ್ರ–ಬೆಳ್ಗೊಡೆ; ಅಗ್ರಪೂಜೆಗೆ–ಪ್ರಥಮಪೂಜೆಗೆ, ಆರ್ ತಕ್ಕರೆನೆ– ಯಾರು ಯೋಗ್ಯರು ಎನ್ನಲು;

೪೧. ಬಲಿಯಂ ಕಟ್ಟಿದನಾವನ್–ಬಲಿಚಕ್ರವರ್ತಿಯನ್ನು ಕಟ್ಟಿದವನು ಯಾವನೋ, ಈ ಧರಣಿಯಂ–ಈ ಭೂಮಿಯನ್ನು, ವಿಕ್ರಾಂತದಿಂದಂ–ಪರಾಕ್ರಮದಿಂದ, ರಸಾತಲ ದಿಂದೆತ್ತಿದನಾವಂ–ಪಾತಾಳದಿಂದ ಎತ್ತಿ ತಂದವನು ಯಾವನೋ, ಅಂದು–ಹಿಂದೆ, ಪೂರ್ವ ಕಾಲದಲ್ಲಿ, ನರಸಿಂಹಾಕಾರದಿಂ–ನರಸಿಂಹನ ರೂಪದಿಂದ, ದೈತ್ಯನಂ–ರಾಕ್ಷಸನಾದ ಹಿರಣ್ಯ ಕಶಿಪುವನ್ನು, ಚಲದಿಂ–ಹಠದಿಂದ, ಸೀಳ್ದವನಾವನ್–ಸೀಳಿದವನು ಯಾವನೋ, ಅಬ್ಧಿಮಥನ ಪ್ರಾರಂಭದೊಳ್–ಸಮುದ್ರಮಥನ ಕಾರ್ಯದಲ್ಲಿ, ಮಂದರಾಚಳಮಂ–ಮಂದರ ಪರ್ವತ ವನ್ನು, ತಂದವನಾವಂ–ತಂದವನು ಯಾವನೋ, ಆತನೆ–ಆತನೇ, ವಲಂ–ದಿಟವಾಗಿಯೂ, ತಕ್ಕಂ–ಯೋಗ್ಯನು; ಪೆಱರ್ತಕ್ಕರೇ–ಇತರರು ಯೋಗ್ಯರೇ? ಅಲ್ಲ.

ವಚನ : ಮನದೊಳಚ್ಚೊತ್ತಿದಂತೆ–ಮನಸ್ಸಿನಲ್ಲಿದ್ದದ್ದನ್ನೇ ಅಚ್ಚಿಟ್ಟ ಹಾಗೆ; ಮನದ ಗೊಂಡು–ಮನಸ್ಸಿಗೆ ತಂದುಕೊಂಡು, ಒಪ್ಪಿ, ಪುರುಷೋತ್ತಮಂಗೆ–ಶ್ರೀಕೃಷ್ಣನಿಗೆ, ಅರ್ಘ್ಯಮೆತ್ತಿ ದಾಗಳ್– ಅಗ್ರತೀರ್ಥವನ್ನೆತ್ತಿದಾಗ.

೪೨. ಶಿಶುಪಾಲವಧೆಯ ಪ್ರಸಂಗ: ಶಿಶುಪಾಲಂ–ಶಿಶುಪಾಲನು, ಮುಳಿದು–ಕೆರಳಿ, ಆ ಸಭೆಯೊಳಗೆ–ಆ ಸಭೆಯಲ್ಲಿ, ಮಹಾಪ್ರಳಯ ಜಳಧಿ ನಾದದಿಂ–ಮಹಾಪ್ರಳಯ ಕಾಲದ ಸಮುದ್ರಘೋಷದಿಂದ, ಇರದೆ–ಇದ್ದೆಡೆಯಲ್ಲಿ ಇರದೆ, ಉಚ್ಚಳಿಸಿ–ಮೇಲಕ್ಕೆ ನೆಗೆದು, ಧರ್ಮಸುತ–ಧರ್ಮರಾಜನೇ, ಹರಿಗೆತ್ತಿದ–ಕೃಷ್ಣನಿಗೆ ಎತ್ತಿದ, ಅನರ್ಘ್ಯದರ್ಘ್ಯಮಂ– ಅಮೂಲ್ಯವಾದ ಅಗ್ರೋದಕವನ್ನು, ತೆ–ಚಿಃ, ಕಳೆಕಳೆ–ತೆಗೆತೆಗೆ ಎಂದು, ನುಡಿದಂ–ಕರ್ಕಶವಾಗಿ ಮಾತಾಡಿದನು. ಇಲ್ಲಿ ತೆ ಎಂಬ ನಿಪಾತ, ಜುಗುಪ್ಸಾಸೂಚಕ, ನಿವಾರಣಾರ್ಥಕ; “ತುಂಬಿ ಪೀರ್ವವೊಲೇಂ ಪೀರ್ದಪುದೇ ಕಡಂದುಱುತೆ ನವ್ಯಾಮೋದಮಂ ಪೊಗಳೊಳ್” ಎಂದು ರುದ್ರಭಟ್ಟನ ಪ್ರಯೋಗ.

೪೩. ತೀವಿದ ನರೆಯುಂ–ತುಂಬಿರುವ ನರೆಗೂದಲೂ, ಡೊಳ್ಳುಂ–ಬೊಜ್ಜು ಹೊಟ್ಟೆಯೂ, ದೇವವ್ರತನೆನಿಸಿ–ದೇವವ್ರತ ಎಂದು ಕರೆಸಿಕೊಂಡು, ನೆಗೞ್ದ–ನಡೆದುಕೊಂಡ, ಯಶಮುಂ– ಕೀರ್ತಿಯೂ, ಬೆರಸು–ಸಮೇತವಾಗಿ, ಇಂ–ಇನ್ನು, ಹರಿಗೆ–ಕೃಷ್ಣನಿಗೆ, ಅರ್ಘ್ಯಮಂ– ಅರ್ಘ್ಯವನ್ನು, ಈವುದು–ಕೊಡುವುದು, ಎಂದು–ಎಂಬುದಾಗಿ, ಆವನುಂ–ಯಾವನೂ, ಈ ಭೀಷ್ಮನಂತು–ಈ ಭೀಷ್ಮನ ಹಾಗೆ, ನುಡಿದರುಂ–ಹೇಳಿದವರೂ, ಒಳರೇ– ಇದ್ದಾರೆಯೆ?

೪೪. ಕುರುವೃದ್ಧಂ–ಕುರುಗಳಲ್ಲಿ ಹಿರಿಯವನು, ಕುಲವೃದ್ಧಂ–ಕುಲಕ್ಕೆ ಹಿರಿಯನು, ಆದ, ಸರಿತ್ಸುತಂ–ಭೀಷ್ಮನು, ತಕ್ಕನೆಂದು–ಯೋಗ್ಯನೆಂದು, ನಂಬಿದ–ನಂಬಿಕೊಂಡಿರುವ, ಸಭೆಯೊಳ್–ಸಭೆಯಲ್ಲಿ, ದೊರೆಗೆಡಿಸಿ–ಯೋಗ್ಯತೆಯನ್ನು ಕೆಡಿಸಿಕೊಂಡು, ನುಡಿದೊಡೆ– ಹೇಳಿದರೆ, ಏನ್ ಒಲವರಮೆನ್ನದೆ–ಪಕ್ಷಪಾತವೆಂದು ಹೇಳುವುದಿಲ್ಲವೇ ಏನು? ನೀನುಂ– ನೀನು ಕೂಡ (ಧರ್ಮರಾಜನು ಕೂಡ), ಅದನೆ ಕೊಂಡು–ಭೀಷ್ಮನ ಮಾತನ್ನೇ ಒಪ್ಪಿ, ಎಸಗುವುದೇ–ಅದರಂತೆ ಮಾಡುವುದೇ?

೪೫. ಮನದೆ–ಮನಸ್ಸಿನಲ್ಲಿ, ಒಲವರಮುಳ್ಳೊಡೆ–ಪಕ್ಷಪಾತವಿದ್ದರೆ, ಹರಿಗೆ–ಕೃಷ್ಣನಿಗೆ, ಅಗ್ರಪೂಜೆಯಂ–ಮೊದಲ ಪೂಜೆಯನ್ನು, ಮನೆಯೊಳ್–ಮನೆಯಲ್ಲಿ, ಕುಡು–ಕೊಡು; ಯಜ್ಞದೊಳ್–ಯಜ್ಞದಲ್ಲಿ, ಈ ಮನುಜಾಧೀಶ್ವರ ಸಭೆಯೊಳ್–ಈ ನೆರೆದ ರಾಜರ ಸಭೆಯಲ್ಲಿ, ದುರಾತ್ಮನಂ–ದುಷ್ಟನನ್ನು (ಕೃಷ್ಣನನ್ನು), ನೆನೆಯಲುಂ–ನೆನೆದುಕೊಳ್ಳುವುದಕ್ಕೆ ಕೂಡ, ಆಗದು–ಆಗುವುದಿಲ್ಲ; ಬೆಸಗೊಳ್ವಾ–ಅವನನ್ನು ಕೇಳುತ್ತೀಯೋ?

೪೬. ಎಗ್ಗು–ದಡ್ಡತನ, ಅಳವಱಿಯದೆ–ಪ್ರಮಾಣವನ್ನು ತಿಳಿಯದೆ, ಬಳವಳ– ಅತಿಶಯವಾಗಿ, ಬಳೆವಿನೆಗಂ–ಬೆಳೆಯುತ್ತಿರಲು, ಪಚ್ಚಪಸಿಯ ತುಱುಕಾಱಂಗೆ–ಹಸಿಹಸಿ ದನಕಾಯುವವನಿಗೆ, ಅಗ್ಗಳಿಕೆಯನೆ–ಶ್ರೇಷ್ಠತೆಯನ್ನೇ, ಮಾಡಿ–ಉಂಟು ಮಾಡಿ, ನೀನುಂ– ನೀನು ಕೂಡ, ಭೂಪರಿನಿಬರ–ಇಷ್ಟು ಜನ ರಾಜರ, ಕೊರಲೊಳ್–ಕೊರಳಿನಲ್ಲಿ, ಪ [ೞಿ] ಯಂ–ನಿಂದೆಯನ್ನು, ಕಟ್ಟಿದೆಯೋ–ಕಟ್ಟಿದ್ದೀಯೇ. ಈ ಪದ್ಯದಲ್ಲಿ ಕುಳ ೞ ಕಾರ ಪ್ರಾಸ ಬಂದು, ಪ್ರಾಸದ ನಿಯಮ ಸಡಿಲವಾಗಿದೆ; ಇದು ಕ್ವಚಿತ್ತಾದ ಪ್ರಯೋಗವೆಂದು ಭಾವಿಸ ಬೇಕು. ಈ ತೆರನ ಪ್ರಾಸಭಂಗಕ್ಕೆ ಆದಿ ಪು. ೧–೮೪ನ್ನು ನೋಡಿ.

೪೭. ದೇವರನಡಿಗೆಱಗಿಸಿ–ದೇವತೆಗಳನ್ನು ಪಾದಕ್ಕೆ ನಮಸ್ಕರಿಸುವಂತೆ ಮಾಡಿ, ಸಕಳಾವನಿ ತಳದದಟರಂ–ಸಮಸ್ತ ಭೂಮಂಡಲದ ಶೂರರನ್ನು, ಪಡಲ್ವಡಿಸಿದ–ಚೆಲ್ಲಾಪಿಲ್ಲಿಯಾಗಿ ಬೀಳಿಸಿದ, ಶೌರ್ಯಾವಷ್ಟಂಭದೊಳ್–ಪ್ರತಾಪದ ಗರ್ವದಿಂದ, ಆನಿರೆ–ನಾನು ಇರಲು, ಗೋವಳಿಗಂಗೆ–ಗೋಪಾಲನಿಗೆ, ದನಗಾಹಿಗೆ, ಅಗ್ರಪೂಜೆಯಂ–ಪ್ರಥಮ ಪೂಜೆಯನ್ನು, ನೀಂ ಕುಡುವಾ–ನೀನು ಕೊಡುತ್ತೀಯೋ?

೪೮. ಸಮಕಟ್ಟಱಿಯದೆ–ಸರಿಯಾದ ವ್ಯವಸ್ಥೆಯನ್ನು ತಿಳಿಯದೆ, ಹರಿಗೆ–ಕೃಷ್ಣನಿಗೆ, ಅರ್ಘ್ಯಮೆತ್ತಿ–ಅರ್ಘ್ಯ ತೀರ್ಥವನ್ನು ಎತ್ತಿಕೊಂಡು, ನಿಂದಿರ್ದ–ನಿಂತಿದ್ದ, ಯಜ್ಞಮದು– ಆ ಯಜ್ಞ, ಮೊದಲೊಳ್–ಆರಂಭದಲ್ಲಿ, ತಾನಮರ್ದುಂ–ತಾನು ಸರಿಯಾಗಿಯೇ ಸೇರಿ ಕೊಂಡು ಬಂದರೂ, ಈಗ, ಅಮರ್ದಂ–ಅಮೃತವನ್ನು, ತಣಿಯುಂಡು–ತೃಪ್ತಿಯಾಗಿ ಊಟ ಮಾಡಿ, ಗೋಮೂತ್ರದಿಂದೆ–ಗಂಜಳದಿಂದ, ಬಾಯ್ವೂಸಿದವೋಲ್–ಬಾಯಿಗೆ ಬಳಿದ ಹಾಗೆ, ಅಗರ್ದಿರದೆ–ಹೊಂದಿಕೊಂಡು ಇರುವುದಿಲ್ಲವಲ್ಲ?

೪೯. ಕುಡವೇೞ್ವನ–(ಅಗ್ರಪೂಜೆಯನ್ನು) ಕೊಡಲು ಹೇಳುವವನ, ಕುಡುವನ– ಕೊಡುವವನ, ಕುಡೆ–ಕೊಡಲು, ಪಡೆವನ–ಪಡೆಯುವವನ, ಪೆಂಪು–ಹಿರಿಮೆ, ಏಂ ನೆಗೞ್ತೆವಡೆ ಗುಮೊ– ಏನು ಕೀರ್ತಿಯನ್ನು ಪಡೆಯುತ್ತದೊ? ಪೇೞ್ವಂ–ಹೇಳುವವನು, ಕುಡವೇೞ್ಗೆಮ– ಕೊಡುವಂತೆ ಹೇಳಲಿ, ಕುಡುವ–ಕೊಡುವ, ಅಣ್ಣಂ–ಅಣ್ಣನು, ಕುಡುಗೆಮ–ಕೊಡಲಿ, ಕುಡೆ–ಕೊಡಲು, ಕೊಳ್ವ–ಸ್ವೀಕರಿಸುವ, ಕಲಿಯಂ–ಶೂರನನ್ನು, ಅಱಿಯಲ್ಕಕ್ಕುಂ–ತಿಳಿಯು ವುದಾಗುತ್ತದೆ. ಯಾವನು ಸ್ವೀಕರಿಸುತ್ತಾನೋ ಆ ಶೂರನನ್ನು ನೋಡಿಕೊಳ್ಳುತ್ತೇನೆ. ಇಲ್ಲಿ ಅಣ್ಣಂ ಎಂಬುದು ತಿರಸ್ಕಾರಾರ್ಥದಲ್ಲಿ ಬಳಸಿದೆ. ಪೌರುಷಯುಕ್ತವಾದ ಅಚ್ಚದೇಸಿ ಶೈಲಿ.

ವಚನ : ಅನಿತಱೊಳ್–ಅಷ್ಟರಲ್ಲಿ, ಮಾಣದೆ–ಬಿಡದೆ, ಗೀರ್ವಾಣಾರಿ–ಶಿಶುಪಾಲನು, ಅಸುರಾರಿಯಂ–ಶ್ರೀಕೃಷ್ಣನನ್ನು, ಇಂತೆಂದಂ;

೫೦. ಯುಧಿಷ್ಠಿರಂ–ಧರ್ಮರಾಜನು, ಅರ್ಘ್ಯಮನೆತ್ತೆ–ಅಗ್ರ ಪೂಜಾದ್ರವ್ಯಗಳನ್ನು ಎತ್ತಿ ಹಿಡಿಯಲು, (ಅದು) ನಿನಗೆ, ದೊರೆಯಕ್ಕುಮೆ–ನಿನ್ನ ಯೋಗ್ಯತೆಗೆ ಸದೃಶವಾಗುತ್ತದೆಯೆ, ಎಂದರೆ ನೀನು ಅಯೋಗ್ಯ, ನಿನಗೆ ಅರ್ಘ್ಯ ತಕ್ಕುದಲ್ಲ; ಶಂಖದೊಳ್ ಪಾಲೆಱೆದಂತಿರೆ–ಶಂಖ ದಲ್ಲಿ ಹಾಲು ಹೊಯ್ದ ಹಾಗೆ ಎಂದರೆ ಪಾವನವಾಗಿರುವ, ಮಲಿನಮಿಲ್ಲದ–ಕಳಂಕವಿಲ್ಲದ, ಒಳ್ಗುಲದ–ಸತ್ಕುಲದ, ಅರಸುಗಳಿರೆ–ರಾಜರಿರಲು, ನೀನುಂ–(ಅಯೋಗ್ಯನಾದ) ನೀನೂ, ಅಗ್ರಪೂಜೆಯಂ–ಪ್ರಥಮ ಪೂಜೆಯಂ, ಆಂಪಾ–ಸ್ವೀಕರಿಸುತ್ತೀಯೋ!

೫೧. ನಂದಗೋಪಾಲ ಸುತಾ–ನಂದನೆಂ ಬದನಗಾಹಿಯ ಮಗನೇ, ಮನದೊಲವರ ದಿಂದೆ–ಮನಸ್ಸಿನ ಪಕ್ಷಪಾತದಿಂದ, ಈ ಯಮತನಯನ ಕುಡುವಗ್ರಪೂಜೆ–ಈ ಧರ್ಮರಾಜನು ಕೊಡುವ ಅಗ್ರಪೂಜೆಯು, ಮತ್ಸನ್ನಿಧಿಯೊಳ್–ನನ್ನ ಸಮಕ್ಷದಲ್ಲಿ, ನಿನಗೆ, ಅಶನಿಯ–ಸಿಡಿಲಿನ, ಮಿೞ್ತುವ–ಮೃತ್ಯುವಿನ, ನಂಜಿನ–ವಿಷದ, ದೊರೆಯೆಂದು–ಸಮಾನ ವೆಂದು, ಒಣರ–ಭಾವಿಸು. ಒಣರ್=(ತ) ಉಣರ್–ಭಾವಿಸು, ಯೋಚಿಸು.

೫೨. ನಿನಗೆ ಮನೆ ನಂದ ಗೋಪಾಲನ ಮನೆ; ಮನೆವೆಂಡತಿ–ಮನೆಯ ಹೆಂಡತಿ, ತುಱುಗಾರ್ತಿ– ದನಕಾಯುವವಳು; ಪಚ್ಚನೆ ಪಸಿಯ ಗೋವನಯ್–ಹಚ್ಚ ಹಸಿಯ ಗೊಲ್ಲ ನಾಗಿದ್ದೀಯೆ; ಕರಂ–ವಿಶೇಷವಾಗಿ, ಅನಯದೆ–ದುರ್ನೀತಿಯಿಂದ, ನಿನ್ನಳವಿಗೆ–ನಿನ್ನ ಯೋಗ್ಯ ತೆಗೆ, ಶಕ್ತಿಗೆ, ಅಳವನಱಿಯದೆ–ಅಳತೆಯನ್ನು ತಿಳಿಯದೆ, ನೆಗೞ್ದೈ–ಮಾಡಿದ್ದೀಯೆ, ನಡೆದು ಕೊಂಡಿದ್ದೀಯೆ.

೫೩. ಮುರಂ–ಮುರನೆಂಬ ರಾಕ್ಷಸ, ಅಡಸಿ ಪಿಡಿದು–ಮೇಲೆಬಿದ್ದು ಹಿಡಿದು, ಕಟ್ಟಿದ– ಕಟ್ಟಿಹಾಕಿದ, ಪರಿಭವಮಂ–ಅವಮಾನವನ್ನು, ಮಱೆ [ದ]–ಮರೆತೆಯೋ? ನಿನ್ನ ಪೆಡಗ ಯ್ಗಟ್ಟಂ–ನಿನ್ನ ಹಿಂಗಟ್ಟು ಮುರಿಯನ್ನು, ಸರಿತ್ಸುತಂ–ಭೀಷ್ಮ, ಶರದಿಂ–ಬಾಣದಿಂದ, ಬಿಡಿಸಿದ ನಲ್ಲವೆ–ಬಿಡಿಸಿದಾತನಲ್ಲವೆ? ಇನ್ನವು–ಇಂಥವು, ಬನ್ನಂ–ಭಂಗ, ಎಂಬುದು–ಎನ್ನುವುದು, ಒಳವೇ–ಉಂಟೇ?

೫೪. ಎಲವೊ–ಎಲೋ, ದನುಜಾಂತಕನೆಂಬ–ರಾಕ್ಷಸರಿಗೆ ಮೃತ್ಯು ಎನ್ನುವ, ನಿನ್ನನಚ್ಚು ವೋದ–ನಿನ್ನ ನಂಬಿಕೆಗೆ ಪಾತ್ರವಾದ, ಅಂಕಂ–ಹೆಸರು, ಎನ್ನನ್ನಂ–ನನ್ನಂಥವನು, ಮುನ್ನಂ– ಮೊದಲು, ಪುಟ್ಟದೆ–ಹುಟ್ಟದೆ, ನಿನಗೆ, ಸಂದುದು–ಪ್ರಾಪ್ತವಾಯಿತು; ಈ ಪೆಸರ್–ಈ ಹೆಸರು, ಎನ್ನ ಮುಂದೆಯುಂ–ನನ್ನೆದುರಿಗೂ, ಸಂದಪುದೇ–ಸಲ್ಲುತ್ತದೆಯೇ?

೫೫. ಆನಿರ್ದ ಸಭೆಯೊಳ್–ನಾನು ಇದ್ದ ಸಭೆಯಲ್ಲಿ, ಅರ್ಘ್ಯಮನಾನಲ್ಕೆ–ಅಗ್ರಪೂಜೆ ಯನ್ನು ಸ್ವೀಕರಿಸುವುದಕ್ಕೆ; ಆಟಿಸಿದ–ಬಯಸಿದ, ನಿನ್ನ, ಬಿಸುನೆತ್ತರಂ–ಬಿಸಿ ರಕ್ತವನ್ನು, ಇಂತೀನೆರವಿ–ಹೀಗೆ ಈ ಸಭೆ, ನೋಡೆ–ನೋಡುತ್ತಿರಲು, ಕುಡಿಯದೊಡೆ–ಕುಡಿಯದೆ ಇದ್ದರೆ, ಏನೋ, ಶಿಶುಪಾಲನೆಂಬ–ಶಿಶುಪಾಲ ಎನ್ನುವ, ಪೆಸರ್–ಹೆಸರು, ಎಸೆದಪುದೇ– ಶೋಭಿಸುತ್ತದೆಯೇ? ಇಲ್ಲ.

೫೬. ಅಂದು–ಹಿಂದೆ, ಮುಚುಕುಂದನೆಂಬನ–ಮುಚುಕುಂದ ಎಂಬ ರಾಕ್ಷಸನ, ಮಱೆವೊಕ್ಕುದಂ–ಮರೆಹೊಕ್ಕದ್ದನ್ನು, ಮಱೆದ–ಮರೆತೆಯಾ? ನೀಂ–ನೀನು, ಜರಾ ಸಂಧಂಗಂ–ಜರಾಸಂಧನಿಗೂ, ಬಿಱುತು–ಹೆದರಿ, ಓಡಿದುದಂ–ಪಲಾಯನ ಮಾಡಿದ್ದನ್ನು, ಭೂತಳಂ–ಲೋಕ, ಅಱಿಯದೆ–ತಿಳಿಯದೆ, ಎಲವೊ–ಎಲೋ, ನೆನೆ–ನೆನೆದುಕೋ, ಗೋವು ಗಾದುದು–ದನಕಾದದ್ದು, ಪುಸಿಯೇ–ಸುಳ್ಳೇ?

೫೭. ಮೀನಾವೆ ಪಂದಿಯೆಂದು–ಮತ್ಸ್ಯಕೂರ್ಮವರಾಹಗಳ ಅವತಾರವೆಂದು, ಎನಿತಾನುಂ ತೆಱನಾಗಿ–ಎಷ್ಟೋ ಬಗೆಯಾಗಿ, ಡೊಂಬವಿದ್ದೆಯನಾಡಲ್–ಡೊಂಬರ ವಿದ್ಯೆಯನ್ನು ತೋರಿಸುವುದಕ್ಕೆ, ನೀಂ–ನೀನು, ಅಱಿವೆ–ತಿಳಿಯುತ್ತೀಯೆ; ಉಱದೆ–ಇರದೆ, ಇದಿರ್ಚಿದೊಡೆ–ಎದುರಿಸಿದರೆ, ನಿನ್ನಂ–ನಿನ್ನನ್ನು, ಇಲ್ಲಿ, ದೆಸೆವಲಿಗೆಯ್ಯಲ್–ದಿಗ್ಬಲಿಯನ್ನು ಕೊಡಲು, ಆನಱಿವೆಂ–ನಾನು ಬಲ್ಲೆ.

೫೮. ಅಱಿಯದೆ ಇದಂ ಮಾಡಿದೆಂ–ತಿಳಿಯದೆ ಇದನ್ನು ಮಾಡಿದೆ, ಎನ್ನ–ನನ್ನ, ಅಱಿಯಮಿಕೆಗೆ–ತಿಳಿಗೇಡಿತನಕ್ಕೆ, ಸೈರಿಸು–ಸಹಿಸು, ಎಂದು–ಎಂದು ಹೇಳಿ, ನೀನ್–ನೀನು, ಸಭೆಯೊಳ್–ಸಭೆಯಲ್ಲಿ, ಕಾಲ್ಗೆ–ನನ್ನ ಕಾಲುಗಳಿಗೆ, ಎಱಗೆಱಗು–ಬಾಗು, ಬಾಗು, ಕೊಲ್ಲೆನ್– ನಾನು ಕೊಲ್ಲುವುದಿಲ್ಲ, ಎಂದು, ಎರ್ದೆ–ಎದೆ, ತೆಱೆವಿನೆಗಂ–ಬಿರಿಯುತ್ತಿರಲು, ಹರಿಯ– ಕೃಷ್ಣನ, ನೆಱನಂ–ಮರ್ಮಸ್ಥಾನವನ್ನು, ಅಸುರಂ–ರಾಕ್ಷಸ ಶಿಶುಪಾಲ, ನುಡಿದಂ–ಎತ್ತಿ ಆಡಿದನು. ಅಱಿಯಮಿಕೆ ಅಱಿ+ಅಮೆ+ಇಕೆ, ಪ್ರತಿಷೇಧಾರ್ಥದ ಭಾವನಾಮ.

ವಚನ : ಕಾಯ್ಪಿನೊಳ್–ಕೋಪದಲ್ಲಿ, ಪಿಡುಗಿ–ಸಿಡಿಲಂತೆ ಸಿಡಿದು,

೫೯. ಪೊಳೆದುಳ್ಕುವ–ಹೊಳೆದು ಪ್ರಕಾಶಿಸುವ, ಕುಡುದಾಡೆಯ–ವಕ್ರವಾದ ಕೋರೆ ಹಲ್ಲಿನ, ಪೊಳೆಪು–ಕಾಂತಿ, ನೊಸಲ್ಗೆ–ಹಣೆಗೆ, ಅಡರ್ದು–ಏರಿ, ಪೊಡರ್ವ–ನಡುಗುವ, ಪುರ್ವು–ಹುಬ್ಬು, ಎಸೆವಿನಂ–ಶೋಭಿಸುತ್ತಿರಲು, ಅವ್ವಳಿಸುವ–ಮೇಲೆ ನುಗ್ಗುವ, ಮುಳಿಸಿನ– ಕೋಪದ, ದಳ್ಳುರಿಗಳಂ–ಉಜ್ವಲವಾದ ಉರಿಗಳನ್ನು, ಉಗುೞ್ವವೊಲ್–ಕಾರುವ ಹಾಗೆ, ಅಸುರಂ–ರಾಕ್ಷಸ, ಉರಿವ ಪೞಿಗಳಂ–ಉರಿಯುತ್ತಿರುವ ನಿಂದೆಗಳನ್ನು, ಉಗುೞ್ದಂ– ಬಾಯಿಂದ ಹೊರಸೂಸಿದನು.

ವಚನ : ಎವೆ ಮಿಡುಕದೆ–ಕಣ್ಣರೆಪ್ಪೆ ಆಡಿಸದೆ, ಪಂದೆಯಂ ಪಾವಡರ್ದಂತೆ–ಹೇಡಿ ಯನ್ನು ಹಾವು ಹತ್ತಿದಂತೆ, ಎಂದರೆ ಭಯದಿಂದ, ಉಸಿರದಿರೆ ಮಾತಾಡದಿರಲು.

೬೦. ಶ್ರೀಕೃಷ್ಣನ ಮಾತು: ನಿನ್ನಯ ತಾಯ್–ನಿನ್ನ ತಾಯಿ, ಸಾತ್ವತಿಯುಂ–ಸಾತ್ವತಿಯೂ, ನಿನ್ನಂ ತಂದು–ನಿನ್ನನ್ನು ತಂದು, ಎನ್ನ ತೊಡೆಯ ಮೇಲೆ–ನನ್ನ ತೊಡೆಗಳ ಮೇಲೆ, ಇೞಿಪು ವುದುಂ–ಇಳಿಸುತ್ತಲೂ, ಎಂದರೆ ತೊಡೆಯ ಮೇಲೆ ನಿನ್ನನ್ನು ಇಡಲು, ನಿನ್ನ ಲಲಾಟದ– ನಿನ್ನ ಹಣೆಯ, ಕಣ್ಣದು–ಆ ಕಣ್ಣು, ಮುನ್ನಮೆ ಕಿಡೆ–ಮೊದಲೇ ನಷ್ಟವಾಗಲು, ನಿನ್ನ ಮೃತ್ಯು–ನಿನ್ನ ಸಾವು, ಎನ್ನಯ ಕೆಯ್ಯೋಳ್–ನನ್ನ ಕೈಯಲ್ಲಿ.

೬೧. ನೆಱೆದುದಂ–ತುಂಬಿರುವುದನ್ನು ಎಂದರೆ ನಿನ್ನ ಸಾವು ನನ್ನ ಕೈವಶವೆಂಬುದನ್ನು; ಅಱಿದು–ತಿಳಿದು, ಈ ಕಿಱಿಯವಂ–ಈ ಚಿಕ್ಕವನು, ಅಱಿಯದೆ–ತಿಳಿಯದೆ, ಕೆಡೆನುಡಿ ದನಪ್ಪೊಡಂ–ತಿರಸ್ಕರಿಸಿ ಮಾತಾಡಿದರು ಕೂಡ, ಎಂದರೆ ಬೀಳ್ನುಡಿಗಳನ್ನಾಡಿದರೂ, ನೂಱುವರಂ–ನೂರರವರೆಗೆ, ಎಂದರೆ ನೂರು ಬಯ್ಗುಳಗಳಾಗುವವರೆಗೆ; ನೆಱೆ ಸಲಿಸು ವುದು–ಪೂರ್ಣವಾಗಿ ಅವಕಾಶ ಕೊಡುವುದು, ಎಂದುದಂ–ಎಂದು ಹೇಳಿದ್ದನ್ನು, ಆಂ ಮಱೆವೆನೆ–ನಾನು ಮರೆಯುತ್ತೇನೆಯೆ, ಬಯ್–ಬೇಕಾದಷ್ಟು ಬಯ್ಯಿ, ಬಯ್ಯೆ–ಬಯ್ಯಲು, ನೂಱುವರಂ–ನೂರು ಬೈಗುಳಗಳವರೆಗೂ, ಸಲಿಸುವೆಂ–ಸಲ್ಲಿಸುತ್ತೇನೆ.

೬೩. ಎನೆಯೆನೆ–ಎನ್ನಲೆನ್ನಲು, ಎಂದು ಹೇಳುತ್ತಿರಲು; ಬಾಯ್ಗಂ ಬಂದುನಿತುಮಂ– ಬಾಯಿಗೆ ಬಂದಷ್ಟನ್ನೂ, ಅಮರಾರಿ–ರಾಕ್ಷಸ, ಶಿಶುಪಾಲ, ಬಯ್ಯೆ–ಬಯ್ಯಲು, ನೂಱೆಂಬನಿ ತುವರಂ–ನೂರು ಎಂಬಷ್ಟರವರೆಗೂ, ಸೈರಿಸಿ–ಸಹಿಸಿ, ಮನ್ನಿಸಿ–ಕ್ಷಮಿಸಿ, (ಆಮೇಲೆ) ನಸುಕಿನಿಸದೆ–ಸ್ವಲ್ಪ ಕೋಪಿಸಿಕೊಳ್ಳದೆ, ಮಿಗೆಕಿನಿಸಿ–ಅತಿಶಯವಾಗಿ ಕೆರಳಿ, ದಿತಿಜ ಕುಳದವ ದಹನಂ–ದೈತ್ಯಕುಲಕ್ಕೆ ಕಾಡುಗಿಚ್ಚಾದ ಶ್ರೀಕೃಷ್ಣ.

೬೪. ಮುಳಿದು–ಕೋಪಿಸಿ, ತನಗರ್ಘ್ಯಮೆತ್ತಿದ–ತನಗೆ ಅರ್ಘ್ಯಕ್ಕಾಗಿ ಎತ್ತಿದ ತಳಿಗೆ ಯೊಳಿಡೆ–ತಟ್ಟೆಯನ್ನು ಬೀಸಿ ಹೊಡೆಯಲು, ತಿಱಿದ ತೆಱದೆ–ಕತ್ತರಿಸಿದ ರೀತಿಯಿಂದ, ತಲೆ ಪಱಿದು–ತಲೆ ತುಂಡಾಗಿ, ಆಗಳ್–ಆಗ, ತಳಿಗೆಯ ಮೇಲೆ–ತಟ್ಟೆಯ ಮೇಲುಗಡೆ, ಕಳಕಳಿಸಿ–ಕಳಕಳ ಎಂದು ಕೂಗುತ್ತ, ನಗುತುಂ–ನಗುತ್ತ, ಇರ್ದುದು–ಇತ್ತು; ಅಸುರನ– ರಾಕ್ಷಸನ, ಅದಟು–ಪರಾಕ್ರಮ, ಇದೇನಚ್ಚರಿಯೋ–ಇದೇನಾಶ್ಚರ್ಯವೊ!

ವಚನ : ಜವಂ–ಯಮನು; ಶಿರೋಂಬುಜಮಂ–ಕಮಲದಂತಿರುವ ತಲೆಯನ್ನು; ಅೞಲ್ದು–ದುಃಖಿಸಿ; ಎನಿಬರಾನುಂ–ಎಷ್ಟೋ ಜನ.

೬೫. ಅಸುರವೈರಿ–ಶ್ರೀಕೃಷ್ಣ, ಕರಚಕ್ರಮಂ–ಕೈಯ ಚಕ್ರಾಯುಧವನ್ನು, ತಿರಿಪಿ– ತಿರುಗಿಸಿ, ದನುಜರ–ರಾಕ್ಷಸರ, ತಲೆಗಳಂ–ತಲೆಗಳನ್ನು, ಇಡೆ–ಹೊಡೆಯಲು, ಪಱಿದು– ಕತ್ತರಿಸಿ, ಅಂಬರ ತಳಮನೆಯ್ದಿ–ಆಕಾಶ ಪ್ರದೇಶಕ್ಕೆ ಹೋಗಿ, ಮೇಘದ–ಮೋಡಗಳ, ಪೊರೆವೊರೆಯೊಳ್–ಪದರ ಪದರಗಳಲ್ಲಿ, ತೊಡರ್ದು–ಸಿಕ್ಕಿಕೊಂಡು, ತಲೆಗಳ್–ತಲೆಗಳು, ನೆಲಕೆ–ನೆಲಕ್ಕೆ, ಬೀೞವೆ–ಬೀಳುವುದಿಲ್ಲವೆ? ಇಲ್ಲ.

ವಚನ : ಮಹಾಪ್ರಘಟ್ಟ–ದೊಡ್ಡ ಸಮಾರಂಭ; ಅವಭೃಥಸ್ನಾನ–ಯಾಗಾಂತ್ಯದಲ್ಲಿ ಮಾಡುವ ಮಂಗಳಸ್ನಾನ; ನಿರ್ವರ್ತಿಸಿ–ಮುಗಿಸಿ, ವಿಸರ್ಜಿಸಿದಾಗಳ್–ಬೀಳ್ಕೊಟ್ಟಾಗ; ಅಂತಕ ನಂದನನಂ–ಧರ್ಮರಾಜನನ್ನು;

೬೬. ಹಿಮಸೇತು ಪ್ರತಿಬದ್ಧಭೂವಳಯಮಂ–ಹಿಮವತ್ಪರ್ವತ ರಾಮಸೇತುಗಳ ಮೇರೆಕಟ್ಟನ್ನುಳ್ಳ ಭೂಮಂಡಲವನ್ನು, ನಿಷ್ಕಂಟಕ ಮಾಡಿ–ಕಂಟಕರಹಿತವನ್ನಾಗಿ ಮಾಡಿ ಎಂದರೆ ಶತ್ರುಗಳಿಂದ ಅಪಾಯವಿಲ್ಲದಂತೆ ಮಾಡಿ, ವಿಕ್ರಮಮಂ ತೋಱಿ–ಪರಾಕ್ರಮವನ್ನು ಪ್ರದರ್ಶಿಸಿ, ನಿಜಾನುಜರ್–ನಿನ್ನ ತಮ್ಮಂದಿರು, ನೆರಪಿದ–ಕೂಡಿಸಿದ, ಒಂದೈಶ್ವರ್ಯದಿಂ– ಒಂದು ಸಂಪತ್ತಿನಿಂದ, ರಾಜಸೂಯಮಂ–ರಾಜಸೂಯವನ್ನು, ಇಂದು–ಈಗ, ಅಗ್ಗಳದ– ಶ್ರೇಷ್ಠವಾದ, ಅಗ್ಗಳಿಕೆಯ–ಅತಿಶಯತೆಯನ್ನುಳ್ಳ, ಮಖಂ–ಯಜ್ಞ, ತಾಂ–ತಾನು, ಎಂಬಿನಂ– ಎನ್ನುವ ಹಾಗೆ, ನಿನ್ನ ಕೀರ್ತಿ ಮುಖಂ–ನಿನ್ನ ಕೀರ್ತಿ ಮುಂಭಾಗವು, ದಿಗ್ದಂತಿ ದಂತಂಗ ಳೊಳ್–ದಿಕ್ಕಿನಾನೆಗಳ ದಂತಗಳಲ್ಲಿ, ಕೀರ್ತಿಮುಖಂ ಬೊಲ್–(ಪೋಣಿಸಿದ) ಬಳೆಗಳಂತೆ, ಏನೆಸೆದುದೋ–ಏನು ಶೋಭಾಯಮಾನವಾಯಿತೋ? ಕೀರ್ತಿಮುಖ: ಮಂಗಳಪಾತ್ರ ಚೂಡಾಮಣಿ ಎಂಬ ನರ್ತಕಿಯ ಅಲಂಕಾರಗಳನ್ನು ವರ್ಣಿಸುವಾಗ ವೃತ್ತವಿಲಾಸನು “ಮೂಗಿನ ಮೂಗುತಿಯ ತೋರಹಾರದ, ಕೀರ್ತಿಮುಖದ, ತೋಳಬಂದಿಯ ಕಾಲಹಳಚಿ ನುಂಗರದ” ಎಂಬಲ್ಲಿ ಈ ಶಬ್ದವನ್ನು ಬಳಸಿದ್ದಾನೆ. “ಬಳೆಗೋದುದು ಕೀರ್ತಿ ದಿಶಾಕರಿಕಳ ಭಂಗಳ ನಿಗ್ಗವಂಗಳೊಳ್” ಎಂಬ ಜನ್ನನ ಪ್ರಯೋಗವನ್ನು ಶಬ್ದದ ಅರ್ಥದೃಷ್ಟಿಯಿಂದ ನೊಡ ಬಹುದು.

ಇಲ್ಲಿಗೆ ಶಿಶುಪಾಲವಧೆಯ ಪ್ರಸಂಗವು ಮುಗಿಯುತ್ತದೆ. ವ್ಯಾಸಭಾರತದಲ್ಲಿ ಈ ಉಪಾ ಖ್ಯಾನ ಆರು ಅಧ್ಯಾಯಗಳಷ್ಟು ವಿಸ್ತಾರವಾಗಿದೆ. ಪಂಪನು ಇಪ್ಪತ್ತೈದು ಪದ್ಯಗಳಲ್ಲಿ ಇದನ್ನು ನಾಟಕೀಯತೆಯಿಂದ ಸಂಗ್ರಹಿಸಿದ್ದಾನೆ. ಈ ಪ್ರಸಂಗದಲ್ಲಿ ನೇರವಾಗಿ ಸಂಬಂಧವನ್ನುಳ್ಳ ವ್ಯಕ್ತಿಗಳು ಇಬ್ಬರು, ಶಿಶುಪಾಲ ಮತ್ತು ಶ್ರೀಕೃಷ್ಣ. ಪಂಪನು ಅವರನ್ನು ಮುಂದೆ ಬಿಟ್ಟು ಈ ನಾಟಕವನ್ನಾಡಿಸಿದ್ದಾನೆ. ಅಗ್ರಪೂಜೆಗೆ ಶ್ರೀಕೃಷ್ಣನನ್ನೆ ಸೂಚಿಸಿದ ಭೀಷ್ಮ, ಅದರಂತೆ ಒಪ್ಪಿ ಮಾಡಲು ತೊಡಗಿದ ಧರ್ಮರಾಜ ಇವರಿಬ್ಬರನ್ನು ಶಿಶುಪಾಲ ನಿಂದಿಸುವುದು ಅವನ ಸ್ವಭಾವಕ್ಕೆ ತಕ್ಕುದಾಗಿಯೇ ಇದೆ; ಅನಂತರ ಕೃಷ್ಣನ ನಿಂದೆ, ಸ್ವಾತ್ಮಪ್ರಶಂಸೆ. ಕೃಷ್ಣನು ಸ್ವಲ್ಪ ವಾದರೂ ಉದ್ರಿಕ್ತನಾಗದೆ ಸ್ಥಿತಪ್ರಜ್ಞನಂತೆ ಇದ್ದು ಶಿಶುಪಾಲನ ತೆಗಳಿಕೆಗಳನ್ನು ಕೇಳಿ ಸಮಾಧಾನ ಚಿತ್ತದಿಂದ ತನ್ನ ಮಾತನ್ನು ಆರಂಭಿಸುತ್ತಾನೆ. ಆಮೇಲೆ ಕೋಪಬಂದು ಅರ್ಘ್ಯದ ತಟ್ಟೆ ಯಿಂದಲೇ ಶಿಶುಪಾಲನ ಕೊರಳನ್ನು ಕತ್ತರಿಸುತ್ತಾನೆ. ಇಲ್ಲಿ ಒಂದು ಯುದ್ಧವೇ ನಡೆಯು ತ್ತದೆ. ಕೃಷ್ಣ ಚಕ್ರಾಯುಧವನ್ನು ಪ್ರಯೋಗಿಸುತ್ತಾನೆ, ವ್ಯಾಸಭಾರತದಲ್ಲಿ. ಶಿಶುಪಾಲನ ಸಂಹಾರಕ್ಕೆ ಇಷ್ಟೆಲ್ಲ ಗೊಂದಲವೇಕೆ, ತಟ್ಟೆಯೊಂದು ಸಾಕು ಎಂದು ಪಂಪನು ಭಾವಿಸಿದ್ದಾನೆ. ಈ ದೃಶ್ಯದ ಕ್ರಿಯೆಯ ಆರೋಹಣ, ಶಿಖರ, ಅವರೋಹಣಗಳು ಕಲಾಮಯವಾಗಿವೆ; ಪಾತ್ರಗಳ ಗುಣ ಸ್ವಭಾವ ಪ್ರಸ್ಫುಟವಾಗಿ ಚಿತ್ರಿತವಾಗಿದೆ. ಬೇರೊಬ್ಬರ ಮಾತುಗಾರಿಕೆ ನಡುವೆ ಬರುವುದಿಲ್ಲ. ಶೈಲಿ ಮಿತಹಿತವಾಗಿದೆ. ಒಟ್ಟಿನಲ್ಲಿ ಪಂಪನ ಚಿತ್ರಣ ನಾಟಕದ ಒಂದು ದೃಶ್ಯದಂತೆ ರಮಣೀಯವಾಗಿದೆ. ಇಲ್ಲಿ ಅವನ ಎಲ್ಲ ಶಕ್ತಿವಿಶೇಷಗಳನ್ನೂ ಕಾಣಬಹುದು.

ವಚನ : ಮಂದರಧರನಂ–ಶ್ರೀಕೃಷ್ಣನನ್ನು; ಅದೇವಿರಿದು–ಅದೇನು ದೊಡ್ಡದು;

೬೭. ಇಲ್ಲಿಂದ ಮುಂದಕ್ಕೆ ದ್ಯೂತ ಪ್ರಸಂಗವು ಆರಂಭವಾಗುತ್ತದೆ; ಮೇಗಿಲ್ಲದ– ಮೇಲಿಲ್ಲದ ಎಂದರೆ ಉತ್ತಮವಾದದ್ದು ಇಲ್ಲದ, ಬಲ್ಲಾಳ್ತನದ–ಪರಾಕ್ರಮದ, ಆಗರ ಮೆನೆ–ಆಕರವೆನ್ನಲು, ನೆಗೞ್ದ–ಪ್ರಸಿದ್ಧರಾದ, ತತ್ಪೃಥಾಸುತರ–ಆ ಪಾಂಡವರ, ಉದ್ಯೋಗದ– ಕಾರ್ಯದ, ಚಾಗದ–ದಾನದ, ಯಾಗದ–ಯಜ್ಞದ, ಭೋಗದ–ಸುಖದ, ಮೈಮೆಗೆ– ಮಹಿಮೆಗೆ, ಸುಯೋಧನಂ–ದುರ್ಯೋಧನನು, ಬೆಱಗಾದ–ಆಶ್ಚರ್ಯಪಟ್ಟವನಾದನು.

ವಚನ : ಮಂತಣಮಿರ್ದು–ಆಲೋಚಿಸಿ; ಪೆರ್ಚ್ಚಿಂಗೆ–ಹೆಚ್ಚಳಕ್ಕೆ; ಬಸನಂಗಳಂ–ಜೂಜು ಬೇಟೆ ಮುಂತಾದ ಸಪ್ತವ್ಯಸನಗಳನ್ನು; ಸಮಕಟ್ಟುವಂ–ಏರ್ಪಡಿಸೋಣ; ರಾಷ್ಟ್ರವ್ಯಸನ– ರಾಜ್ಯಕ್ಕೆ ಉಂಟಾಗುವ ಪೀಡೆಗಳು; ಬಳವ್ಯಸನ–ಸೈನ್ಯದ ಪಿತೂರಿಗಳು; ಪಾರ್ವೆಮಪ್ಪೊಡೆ– ನೋಡೋಣ ಎನ್ನುವುದಾದರೆ, ಪರಮಂಡಳ ವ್ಯಸನ–ಶತ್ರುದೇಶಗಳಿಂದ ಆಗುವ ಉಪಟಳ; ಕೀಱಿಯುಂ–ಆಗ್ರಹಿಸಿಯೂ; ಛಿದ್ರಿಸುವಮಪ್ಪೊಡೆ–ಭೇದಿಸೋಣವೆಂದರೆ; ಇನ್ನಾವ ಮಾೞ್ಕೆಯೊಳ್–ಇನ್ನಾವ ರೀತಿಯಲ್ಲಿ, ಇನ್ನಾವ ಮಾಟದಲ್ಲಿ.

೬೮. ಬೆಸಸಿದ–ಹೇಳಿದ, ನಿನ್ನ ಮಾತಿನಿತುಂ–ನಿನ್ನ ಮಾತಿಷ್ಟೂ, ಅಂತುಟೆ–ಹಾಗೆಯೇ; ಪಾಂಡುಪುತ್ರರಂ–ಪಾಂಡವರನ್ನು, ಗೆಲ್ಲವು–ಅವು ಗೆಲ್ಲುವುದಿಲ್ಲ; ಬಸನದೊಡಂಬಡಂ– ವ್ಯಸನದ ಒಪ್ಪಿಗೆಯನ್ನು, ಮಱೆದುಂ–ಮರೆತೂ, ಆ ಯಮನಂದನನಲ್ತೆ–ಆ ಧರ್ಮರಾಜ ನಲ್ಲವೆ, ನೆತ್ತದೊಳ್–ಪಗಡೆಯಾಟದಲ್ಲಿ, ಬಸನಿಗಂ–ಆಸಕ್ತಿಯುಳ್ಳವನು; ಆತನಂ– ಅವನನ್ನು, ಬರಿಸಿ–ಬರಮಾಡಿಕೊಂಡು, ನೆತ್ತಮನಾಡಿಸಿ–ಪಗಡೆಯಾಟವನ್ನಾಡುವಂತೆ ಮಾಡಿ, ಈ ವಸುಮತಿಯಂ–ಈ ಭೂಮಿಯನ್ನು, ಗೆಲ್ದುಕೊಳ್ವಂ–ಗೆದ್ದು ತೆಗೆದು ಕೊಳ್ಳೋಣ; ಮನಂಬಸದೆ–ಮನಸ್ಸನ್ನು ವಿಭಾಗಿಸದೆ ಎಂದರೆ ಬೇರೆ ಏನನ್ನೂ ಯೋಚಿಸದೆ, ಫಣೀಂದ್ರ ಕೇತನಾ–ದುರ್ಯೋಧನನೇ, ನೀಂ–ನೀನು, ಬೞಿಯಟ್ಟು–ದೂತರೊಡನೆ ಹೇಳಿ ಕಳುಹಿಸು.

ವಚನ : ನಾೞವಾಸಗೆಗಳಂ–ಕಳ್ಳದಾಳಗಳನ್ನು; ನಾೞ+ಪಾಸಗೆ (ಸಂ) ಪಾಶಕ, ನಾೞನುಡಿ ತುಂಬುಕಳ್ಳನೊಳುಂಟು; ಗೋಷ್ಠಿಯೊಳಿರ್ಪಂ–ಗೋಷ್ಠಿಯಲ್ಲಿರೋಣ; ಪುಲ್ವಗೆಯಂ– ಹೀನ ಚಿಂತನೆಯನ್ನು; ನಿಯತಿಃ ಕೇನಲಂಘ್ಯತೇ–ವಿಧಿಯನ್ನು ಯಾರಿಂದ ಮೀರುವುದಕ್ಕೆ ಆದೀತು; ಸಮಾನ ಪ್ರತಿಪತ್ತಿಯೊಳ್–ಸಮಾನ ಸತ್ಕಾರದಲ್ಲಿ; ತೞ್ಕೈಸಿ–ಅಪ್ಪಿಕೊಂಡು;

೬೯. ಪೃಥಾ ತನೂಜರ–ಪಾಂಡವರ, ಸಭಾಗೃಹದಂದಮಂ–ಸಭಾಮಂದಿರದ ಸೌಂದರ್ಯವನ್ನು, ನೋಡಿ, ಅಂತುಟಪ್ಪುದಂ–ಹಾಗೆಯೇ ಇರುವುದನ್ನು, ಮಾಡಿಪೆನೆಂದು– ಮಾಡಿಸುವೆನೆಂದು, ಸಭಾಲಯಮಂ–ಸಭಾಭವನವನ್ನು, ಮಾಡಿಸಿ, ನಿಜರಾಜ ಲೀಲೆಯೊಳ್ ಕೂಡಿ–ತನ್ನ ರಾಜಲೀಲೆಯಲ್ಲಿ ಸೇರಿ, ಯುಧಿಷ್ಠಿರ ಪ್ರಭುಗೆ–ಧರ್ಮರಾಜನಿಗೆ, ಸುಯೋಧನಂ– ದುರ್ಯೋಧನನು, ತಾನೆ–ತಾನೇ; ಉಯ್ದು–ಕರೆದುಕೊಂಡು ಹೋಗಿ, ತೋಱಿದಂ– ತೋರಿಸಿದನು; ನೋಡಿರೆ–ನೋಡಿರೋ, ಸಿಂಹ ಮಾಡುವರ–ಸಿಂಹದ ವೇಷವನ್ನು ಹಾಕಿ ಕೊಂಡು ಕುಣಿವವರ, ಬಾಲಮನಾಡಿದರ್–ಬಾಲವನ್ನು ಹಿಡಿದುಕೊಂಡು ಕುಣಿದರು, ಎಂಬ ಮಾೞ್ಕೆಯಿಂ–ಎಂಬ ರೀತಿಯಿಂದ, ತೋಱಿದಂ–ತೋರಿದನು. ಬಾಬಯ್ಯನ ಹಬ್ಬದ ಹುಲಿವೇಷದವನ ಬಾಲವನ್ನು ಹಿಡಿದು ಅವನು ಕುಣಿಯುವಂತೆ ಕುಣಿಯುವುದು.

ವಚನ : ಕಂದುಕ ಕ್ರೀಡಾದಿ–ಚೆಂಡಾಟವೇ ಮೊದಲಾದ, ಈಗಿನ ಪೋಲೋ ಆಟ; ಪಿಂಗಾಕ್ಷಂ–ದುರ್ಯೋಧನ; ಅಕ್ಷಕ್ರೀಡೆಯಂ–ಪಗಡೆಯಾಟವನ್ನು; ಪೊಡಲ್ವೇೞ್ದು–ಆಟ ವನ್ನು ಹೂಡುವಂತೆ ಹೇಳಿ; ಪುಸಿಯನೆ–ಸುಳ್ಳಾಗಿಯೆ; ಪೆಱರಂ–ಇತರರನ್ನು;

೭೦. ನೋಡುವುದಱೊಳೇನ್–ಸುಮ್ಮನೆ ನೋಡುತ್ತಿರುವುದರಲ್ಲಿ ಏನು ಪ್ರಯೋಜನ; ತಮ್ಮುತಿರ್ವರುಂ–ತಾವಿಬ್ಬರೂ ಎಂದರೆ ಧರ್ಮರಾಜ ದುರ್ಯೋಧನರೂ, ಅೞ್ತಿಯೊಳ್– ಪ್ರೀತಿಯಲ್ಲಿ, ಆಡುತ್ತಿರಲಾಗ–ಆಡುತ್ತಿರಲಾಗದು! ಎಂದರೆ ಆಡಬಾರದೆ, ಎನೆ–ಎನ್ನಲು, ನಾಮಾಡುವಮೆ–ನಾವಿಬ್ಬರೂ ಆಡೋಣವೆ (ಎಂದು ದುರ್ಯೋಧನ), ಬನ್ನಿಂ–ಬನ್ನಿರಿ; ಎಂಬುದು–ಎನ್ನುತ್ತಲು, ನೆತ್ತಮಂ–ಪಗಡೆಯನ್ನು, ಆಡುವ ಬಗೆ ಬಂದು–ಆಡುವ ಮನ ಸ್ಸುಂಟಾಗಿ, ಧರ್ಮಸುತಂ–ಧರ್ಮರಾಜನು,

೭೧. ಕರೆದೊಡೆ–ಕರೆದರೆ, ಜೂದಿಂಗಂ–ಜೂಜಿಗೂ, ಧುರಭರಕೆ–ಯುದ್ಧ ಕಾರ್ಯಕ್ಕೂ, ಆಖೇಟಕ್ಕೆ–ಬೇಟೆಗೂ, ಭೂಭುಜಂಗೆ–ರಾಜನಾದವನಿಗೆ, ಮೆಯ್ಗರೆದಿರಲ್–ಮೈಮರಸಿ ಕೊಂಡಿರುವುದು, ಆಗದು–ಆಗುವುದಿಲ್ಲ, ತಕ್ಕದ್ದಲ್ಲ; ಎಂದು ಪುರಾತನ ಗುರುವಚನಂ– ಪ್ರಾಚೀನರಾದ ಹಿರಿಯರ ಮಾತು, ತನಗೆ, ನಿಟ್ಟೆ ಪಟ್ಟುದಱಿಂದಂ–ನಿಷ್ಠೆಯಾಗಿ ಬಿಟ್ಟಿದ್ದ ರಿಂದ; “ಆಹೂತೋ ನ ನಿವರ್ತೇತ ದ್ಯೂತಾದಪಿ ರಣಾದಪಿ । ಸ್ಮರನ್ನಿತಿ ಕ್ಷಮಾಪಾಲೋ ಜಾನೀಯಾದಕ್ಷ ಖೇಲನಮ್ ॥”

ವಚನ : ನಾೞವಾಸಗೆಯನಿಕ್ಕಲ್ವೇೞ್ವುದುಂ–ಕಳ್ಳದಾಳಗಳನ್ನು ಹಾಕುವಂತೆ ಹೇಳುತ್ತಲು; ಅರಸಾಳಂತೆ–ರಾಜಭಟನಂತೆ, ಕಣ್ಣಱಿದು–ಕಣ್ಣಿನ ಇಂಗಿತವನ್ನು ತಿಳಿದು; ಮಟ್ಟಮಱಿದಿಕ್ಕುವಾಗಳ್–ಸಮ ಪ್ರದೇಶವನ್ನು ತಿಳಿದು ದಾಳಹಾಕುವಾಗ, ಒಡ್ಡಮಂ– ಪಣವನ್ನು, ಒತ್ತೆಯನ್ನು; ಪೊೞ್ತು ಪೋಗಿಂಗಂ–ಹೊತ್ತುಹೋಗುವುದಕ್ಕೂ, ಅೞ್ತಿಗಂ–ಸ್ನೇಹಕ್ಕೂ; ಪಲಗೆಗೆ–ಹಲಗೆಗೆ, ಪಗಡೆಯಾಟದ ಹಾಸಿನ ಒಂದು ಸಲದ ಹಲಗೆಗೆ; ಸಾಯಿರ– ಸಾವಿರ, ಗದ್ಯಾಣದಪೊನ್ನೇ–ಗದ್ಯಾಣವೆಂಬ ಚಿನ್ನದ ನಾಣ್ಯವೇ, ಸಾಲ್ಗುಂ–ಸಾಕು; ಅಗ್ಗಳಂ ಬೇಡ–ಹೆಚ್ಚು ಬೇಡ; ಒಕ್ಕಲಂ–ಕುಲವನ್ನು; ಪುಡಿಯೊಳ್–ಧೂಳಿನಲ್ಲಿ; ಪಾಸಗೆಯಂ ಪೊರಳ್ಚಿ–ದಾಳಗಳನ್ನು ಹೊರಳಿಸಿ; ನೆತ್ತಮನಱಿಯದವನಂತೆ–ಪಗಡೆಯಾಟವನ್ನು ತಿಳಿಯ ದವನ ಹಾಗೆ; ದಾಯಮನಾಡೆ–ಗರವನ್ನು ಹಾಕಲು; ಮಡಿಮಡಿಗುಱುವುದುಂ–ಬಾರಿಬಾರಿಗೆ ಇರುವುದನ್ನು, ಎಂದರೆ ಇರುವ ಒತ್ತೆಯನ್ನು; ಪತ್ತೆಂಟು ಪಲಗೆಯಂ–ಹತ್ತೆಂಟು ಹಲಗೆಗಳನ್ನು, ಮೆ [ೞ್ಪ] ಡಿಸಲೆಂದೆ–ಮೋಸಮಾಡಬೇಕೆಂದೇ, ಏವಯಿಸಿ–ಅಸಮಾಧಾನ ಪಟ್ಟು, ಕೆರಳಿ; ಇನ್ನೊಡ್ಡಂ–ಇನ್ನೊಂದು ಒತ್ತೆಯನ್ನು, ಕೊಳ್ಳಿಂ–ತೆಗೆದುಕೊಳ್ಳಿರಿ;

೭೨. ಪಲಗೆಗೆ–ಪಗಡೆಯ ಮಣೆಗೆ, ಒಂದು ಸಲಕ್ಕೆ, ಪತ್ತುಸಾಯಿರಮೆ–ಹತ್ತು ಸಾವಿರವೇ ಗದ್ಯಾಣ, ಎಂದಿರದೊಡ್ಡಿ–ಎಂದು ಇರದೆ ಪಣವಾಗಿಟ್ಟು, ತಾಂ–ತಾವು ಎಂದರೆ ಶಕುನಿ ದುರ್ಯೋಧನರು, ಎರೞ್ವಲಗೆಯನಾಡಿ–ಎರಡು ಹಲಗೆಗಳನ್ನಾಡಿ, ಸೋಲ್ತೊಡೆ– ಸೋತರೆ, ಸುಯೋಧನಂ–ದುರ್ಯೋಧನನು, ಏವದೆ–ಅಸಮಾಧಾನದಿಂದ, ಧರ್ಮ ಪುತ್ರನಂ–ಧರ್ಮರಾಜನನ್ನು, ಕುಲಧನ ಸಂಕುಲಂಗಳನೆ–ಕುಲದ ಧನಸಮೂಹಗಳನ್ನೆಲ್ಲ, ತಂದಿಡೆ–ತಂದು ಪಣವಾಗಿ ಒಡ್ಡಲು, ಇಟ್ಟು, ಅವಂ–ಅವುಗಳನ್ನು, ಮುಂದೆ ಭಾರತದೊಳ್– ಮುಂದೆ ನಡೆಯಲಿರುವ ಭಾರತ ಯುದ್ಧದಲ್ಲಿ, ಒಡ್ಡುವುದಂ–ತನ್ನ ವಂಶವನ್ನು ಬಲಿಯಾಗಿ ಒಡ್ಡುವುದನ್ನು, ಕಡುನನ್ನಿ ಮಾೞ್ಪವೋಲ್–ಕಡುದಿಟವನ್ನಾಗಿ ಮಾಡುವಂತೆ, ಆಕುಲಮತಿ– ವ್ಯಾಕುಲಿತ ಮನದವನಾದ ಧರ್ಮರಾಜನು (?), ಸೋಲ್ತಂ–ಸೋತನು.

ಈ ಪದ್ಯದ ಅನ್ವಯದಲ್ಲಿ ತುಂಬ ಕ್ಲೇಶವಿದೆ; ‘ಸುಯೋಧನನೇವದೆ ಧರ್ಮಪುತ್ರನಂ’ ಎಂಬುದರ ಪಾಠ ಕೆಟ್ಟಿರಬಹುದು: ಸುಯೋಧನ [ನೋ] ವದೆ ಧರ್ಮಪುತ್ರನಂ, ಸುಯೋಧನ ನೇವದೆ ಧರ್ಮಪುತ್ರ [ನುಂ] ಎಂದೋ ಏನೋ ಪಾಠವಿರಬಹುದು. ಗದ್ಯಾಣ, ಗದ್ಯಣ ಎಂಬ ಶಬ್ದಗಳು ಲ್ಯಾಟಿನ್ ಭಾಷೆಯಲ್ಲಿನ Gordion ಎಂಬ ಚಿನ್ನದ ನಾಣ್ಯದ ಹೆಸರಿನಿಂದ ಬಂದ ದ್ದೆಂದು ಹೇಳುತ್ತಾರೆ. ರೋಮೀಯರಿಗೂ ಕನ್ನಡಿಗರಿಗೂ ವ್ಯಾಪಾರ ಸಂಬಂಧವಿದ್ದ ಕಾಲದಲ್ಲಿ ಇದು ಬಂದಿರಬೇಕು; ದಿನಾರ, ದ್ರಮ್ಮಗಳು ಗ್ರೀಕ್ ಭಾಷೆಯಲ್ಲಿ ಸಂಸ್ಕೃತದ ಮೂಲಕ ಕನ್ನಡಕ್ಕೆ ಬಂದಿರುವ ಹಾಗೆ. ಈ ಪದ್ಯದ ಕೊನೆಯಲ್ಲಿ ಸೋತವನಾರು ಎಂಬುದನ್ನು ತಿಳಿಯು ವುದೇ ಕಷ್ಟ.

ವಚನ : ಕಾಳಿಂಗಾಂಗ ಸಂಭವಂಗಳಪ್ಪ.ಕಳಿಂಗ, ಅಂಗ ದೇಶಗಳಲ್ಲಿ ಹುಟ್ಟಿದ; ಆಜಾನೇಯ.ಉತ್ತಮ ಜಾತೀಯದ್ ಸೆಱೆಗೆಯ್ದುಂ.ಸೆರೆಹಿಡಿದೂದ್ ವ್ರಣವೈದ್ಯನಂತೆ.ಹುಣ್ಣು ಚಿಕಿತ್ಸೆ ಮಾಡುವ ವೈದ್ಯನಂತೆ, ಕೊಡಸಾರಿಯಂ.ಕೊಡದ ಸಾರಿಯಂ, ಎಂದರೆ ಕೊಡದ ಪಗಡೆಕಾಯನ್ನು, ಕೊಡಸಾರಿ (ನಾರಿ) ಎಂಬ ಮೂಲಿಕೆಯನ್ನುದ್ ಕೞಿವುೞಿವುಮನಱಿದು. ಹೋದದ್ದು ಉಳಿದದ್ದು ಇವನ್ನು ತಿಳಿದೂ, ರಸವಾದಿಯಂತೆ.ಪಾದರಸವನ್ನು ಚಿನ್ನವನ್ನಾಗಿ ಮಾಡುವ ವಿದ್ಯೆಯನ್ನು ಬಲ್ಲವನಂತೆ, ಕಟ್ಟಿಯುಂ.ಪಾದರಸವನ್ನು ಉಂಟೆಮಾಡಿಯೂ; ಅಣುಗಾಳಂತೆ.ಪ್ರೀತಿಯ ಮನುಷ್ಯನಂತೆ, ದಾಯಂ ಬಡೆದುಂ.ಗರಗಳನ್ನು ಹೊಂದಿಯೂ, ದಾಯಭಾಗವನ್ನು ಹೊಂದಿಯೂದ್ ಮೇಳದಂಕದಂತೆ.ಸ್ನೇಹ ಯುದ್ಧದಂತೆದ್ ಸುೞಿಯ ಱಿದುಂ.ಸುಳಿವನ್ನು ತಿಳಿದುಕೊಂಡೂದ್ ಡೊಂಬರ ಕೋಡಗದಂತೆ.ದೊಂಬರ ಕಪಿಯಂತೆ; ಸೆಱೆ-ಪಗಡೆಯಾಟದಲ್ಲಿ ಕಾಯಿಗಳನ್ನು ಹಿಡಿಯುವುದುದ್ “ಸೆಱೆಯುಮೇಱುಂ ನೆತ್ತರ ಮಾಡುವರೊಳ್” ಎಂದು ಕವಿರಾಜ ರಾಜನ ಪ್ರಯೋಗ (ಕ್ರಿ.ಶ. ೯೩೦).

೭೩. ಭಯಮಱಿಯದ–ಅಂಜಿಕೆಯನ್ನು ತಿಳಿಯದ, ಕಲಿಯುಂ–ಶೂರನೂ, ಚಾಗಿಯುಂ–ದಾನಿಯೂ, ಎನಿಸದೆ–ಎನ್ನಿಸಿಕೊಳ್ಳದೆ, ನಾಡೆ–ವಿಶೇಷವಾಗಿ, ಲೋಭಿಯುಂ– ಜಿಪುಣನೂ, ಪಂದೆಯು–ಹೇಡಿಯೂ, ಆಗಿಯೆ–ಆಗಿಯೇ, ಬಾೞ್ವಂಗಲ್ಲದೆ–ಬಾಳುವವನಿ ಗಲ್ಲದೆ, ಸೂಳೆಯಕಣ್–ವೇಶ್ಯೆಯ ಕಣ್ಣೂ, ಪಾಸಗೆಯಂ ಕಣ್ಣುಂ–ದಾಳಗಳ ಕಣ್ಣುಗಳೂ (ಗುರುತು), ಏನುಱುಗುಗುಮೇ–ಏನು ಬಾಗುತ್ತವೆಯೇ? ಇಲ್ಲ. ದಾಳಗಳ ಕಣ್ಣುಗಳಿಗೆ ‘ತಿಲಕಾಕಾರ ಬಿಂದುಗಳು’ ಎಂದು ಕರೆದಿದೆ.

ವಚನ : ಕೆಯ್ಪೆಸರಂ ಬೆರಸು–ಕಹಿಯಾದ ಧ್ವನಿಯೊಡನೆ ಕೂಡಿ; ಒನಲಿಸೆಯುಂ– ಮೂದಲಿಸಿ ಕೆರಳಿಸಿಯೂ; ಕನಲಿಸೆಯುಂ–ಕೋಪವುಂಟಾಗುವ ಹಾಗೆ ಮಾಡಲೂ; ಕಜ್ಜ ಮನೆ–ಕಾರ್ಯವನ್ನೇ.

೭೪. ಸಾಲದೆ ಜೂದು–ಜೂಜು ಸಾಕಾಗಲಿಲ್ಲವೇ? ನಿಮ್ಮೊಳಗಿದೇಂಗಳ–ನಿಮ್ಮಲ್ಲಿಯೇ ನಿಮಗೆ ಇದೇನಿದು? ಮಾಣಿಸಿಂ–ನಿಲ್ಲಿಸಿರಿ; ಎಂದೊಡೆ–ಎಂದು ಹೇಳಿದರೆ, ಅನ್ಯಭೂಪಾಲ ಕಿರೀಟ ತಾಟಿತ ಪದಂ–ಶತ್ರುರಾಜರ ಕಿರೀಟಗಳು ತಗುಲಿದ ಪಾದವುಳ್ಳವನು, ಎಂದರೆ ಅನ್ಯ ರಾಜರನ್ನು ಕಾಲಿಗೆ ಎರಗಿಸಿದವನು, ಯಮನಂದನಂ–ಧರ್ಮರಾಜನು, ಅಜ್ಜ–ತಾತನೇ, ಸೋಲದೊಳ್–ಜೂಜಿನಲ್ಲಿ ಸೋತಿದ್ದರಲ್ಲಿ, ಆದಂ–ವಿಶೇಷವಾಗಿ, ಏವಯಿಸಿದಂ– ನೊಂದಿದ್ದೇನೆ, ನುಡಿಗೆ–ಮಾತಿಗೆ, ಇನ್ನೆಡೆಯಿಲ್ಲ–ಇನ್ನು ಅವಕಾಶವಿಲ್ಲ; ಪೋಗಿಂ–ಹೋಗಿರಿ, ಆತ್ಮಾಲಯಕೆ–ನಿಮ್ಮ ಮನೆಗೆ, ಎಂದೊಡೆ–ಎಂದರೆ, ಏನುಮೆನಲಣ್ಮದೆ–ಏನು ಹೇಳಲೂ ಪ್ರಯತ್ನಿಸದೆ, ಬಾರಿಸಲಣ್ಮದೆ–ತಡೆಯಲು ಪ್ರಯತ್ನಿಸದೆ, ಇರ್ವರುಂ–ಇಬ್ಬರೂ, ಎಂದರೆ ಭೀಷ್ಮ ವಿದುರರು.

೭೫. ನಿನಗೆ, ಮಗಂ–ಮಗನು, ಪುರಾಕೃತದ ಕರ್ಮಮೆ–ಹಿಂದೆ ಮಾಡಿದ ಕರ್ಮವೇ, ಪುಟ್ಟುವವೋಲೆ ಪುಟ್ಟಿ–ಹುಟ್ಟುವ ಹಾಗೆ ಹುಟ್ಟಿ, ನಿಮ್ಮಿನಿಬರುಮಂ–ನಿಮ್ಮ ಇಷ್ಟು ಮಂದಿಯನ್ನೂ, ರಸಾತಳದೊಳ್–ಪಾತಾಳದಲ್ಲಿ, ಅೞ್ದಿದಪಂ–ಅದ್ದುತ್ತಾನೆ, ಪಾಂಡು ನಂದನರೊಳ್–ಪಾಂಡವರಲ್ಲಿ, ಪಗೆ–ಹಗೆತನ, ಪೊಲ್ಲ–ಕೆಟ್ಟದ್ದು; ಅಹೀಂದ್ರಕೇತನನ– ಸರ್ಪಧ್ವಜನ ಎಂದರೆ ದುರ್ಯೋಧನನ, ಜೂದಿನ ಗೆಲ್ಲಂ–ಜೂಜಿನ ಜಯವು, ಅದೆಂತು ಟೆನ್ನ–ಅದು ಹೇಗೆ ಎನ್ನುವೆಯೋ, ನಂಜಿನ ಸವಿಯಂತುಟು–ವಿಷದ ರುಚಿಯ ಹಾಗೆ, ಎಂದೊಡೆ–ಎಂದರೆ, ಇನಿಸು–ಇಷ್ಟು; ಅಂತದೊಳ್–ಕೊನೆಯಲ್ಲಿ, ಅಂತಕನಲ್ಲಿಗೆ–ಮೃತ್ಯು ವಿನ ಬಳಿಗೆ, ಅಟ್ಟುಗುಂ–ಅಟ್ಟುತ್ತದೆ.

೭೬. ಪುರುಡಿಸಿಕೊಂಡೀಗಳ್–ಅಸೂಯೆಯಿಂದ ಕೂಡಿ ಈಗ, ನೀನರಸಿನ ಗರ್ವದೊಳೆ– ನೀನು ರಾಜನೆಂಬ ಗರ್ವದಲ್ಲಿಯೇ, ಬೀಗಿ–ಉಬ್ಬಿ, ಬೆಸೆಯದೆ–ಅಹಂಕಾರ ಪಡದೆ, ಮಗನಂ ಕರೆದು–ಮಗನಾದ ದುರ್ಯೋಧನನನ್ನು ಕರೆದು, ಮುಂಗೆಲ್ದ ವಸ್ತುವಾಹನ ಚಯಮಂ– ಮೊದಲು ಗೆದ್ದಿರುವ ವಸ್ತುವಾಹನಗಳ ಸಮೂಹವನ್ನು, ಯುಧಿಷ್ಠಿರಂಗೆ–ಧರ್ಮರಾಜನಿಗೆ, ಒಪ್ಪಿಸವೇೞ–ಒಪ್ಪಿಸುವಂತೆ ಹೇಳು.

ಪಂಪನ ಈ ದ್ಯೂತಪ್ರಸಂಗವನ್ನು ಕರ್ಣಪಾರ್ಯನು ತನ್ನ ‘ನೇಮಿನಾಥ ಪುರಾಣ’ ದಲ್ಲಿಯೂ (x, ೧೪–೩೫) ಮಂಗರಸನು ತನ್ನ ‘ನೇಮಿ ಜಿನೇಶ ಸಂಗತಿ’ ಯಲ್ಲೂ (xxiv, ೧೪–೩೯) ಅನುಕರಿಸಿದ್ದಾರೆ.

೭೭. ಕದನ ಪ್ರಾರಂಭ ಶೌಂಡಂ–ಯುದ್ಧೋದ್ಯೋಗದಲ್ಲಿ ಅತ್ಯಂತ ಆಸಕ್ತಿಯನ್ನುಳ್ಳ; ರಿಪುನೃಪ ಬಲದಾವಾನಲಂ–ಶತ್ರುಸೈನ್ಯಕ್ಕೆ ಕಾಳ್ಕಿಚ್ಚಾಗಿರುವ; ವೈರಿ….ಗ್ರಾಸಿ: ವೈರಿಭೂಭೃತ್– ಶತ್ರುರಾಜರ, ಮದವತ್–ಮದದಿಂದ ಕೂಡಿದ, ಮಾತಂಗ–ಆನೆಗಳ, ಕುಂಭಸ್ಥಳ–ತಲೆಯ ಪ್ರದೇಶವನ್ನು, ದಳನ–ಸೀಳುವ, ಖರ–ತೀಕ್ಷ್ಣವಾದ ಉಗ್ರ–ಭಯಂಕರವಾದ, ಅಸಿ–ಕತ್ತಿ ಯ ನ್ನುಳ್ಳ; ಪಂಚಾಸ್ಯಧೈರ್ಯಂ–ಸಿಂಹದಂತೆ ಧೈರ್ಯಶಾಲಿಯಾದ; ವಿದಿತ ಪ್ರತ್ಯಕ್ಷಂ– ಇಂದ್ರಿಯಗಳಿಗೆ ಗೋಚರವಾದುದನ್ನೆಲ್ಲ ತಿಳಿದವನಾದ; ಆಶಾ….ದಾನಂ: ಆಶಾಕರಿ– ದಿಕ್ಕಿನಾನೆಗಳ, ನಿಕಟತಟ–ಸಮೀಪ ಪ್ರದೇಶದಲ್ಲಿ, ಶ್ರಾಂತ–ವಿಶ್ರಮಿಸಿಕೊಳ್ಳುತ್ತಿರುವ, ದಾನಂ–ದಾನಗುಣವನ್ನುಳ್ಳ; ವಿಕ್ರಾಂತ ತುಂಗಂ–ಪರಾಕ್ರಮದಲ್ಲಿ ಉನ್ನತವಾದ; ಹರಿಗ ನಿರೆ–ಅರ್ಜುನನಿರಲು, ಭರಂಗೆಯ್ದು–ಜೋರು ಮಾಡಿ, ಇದಿರೊಳ್–ಎದುರಿನಲ್ಲಿ, ಬಿಗುರ್ತು–ಹೆದರಿಸಿ, ಆಂಪ–ಮುಂದಾಗುವ, ಗಂಡಂ–ಶೂರನು, ಆವಂ–ಯಾರು?

ಷಷ್ಠಾಶ್ವಾಸಂ ಸಂಪೂರ್ಣಂ