ಪಂಚಮಾಶ್ವಾಸಂ
೧. ಶ್ರೀ–ಲಕ್ಷ್ಮೀ, ವೀರಶ್ರೀ–ಜಯಲಕ್ಷ್ಮಿ, ಕೀರ್ತಿಶ್ರೀ–ಕೀರ್ತಿಯೆಂಬ ಲಕ್ಷ್ಮಿ, ವಾಕ್ಶ್ರೀ– ವಾಕ್ಕೆಂಬ ಲಕ್ಷ್ಮಿ, ಎಂಬ–ಎನ್ನುವ, ಪೆಂಡಿರ್–ಸ್ತ್ರೀಯರು, ತನ್ನೊಳ್–ತನ್ನಲ್ಲಿ, ಭಾವಿಸಿದ– ಧ್ಯಾನಿಸಲ್ಪಟ್ಟ, ಪೆಂಡಿರ್–ಸ್ತ್ರೀಯರು, ಎನಿಸಿದ–ಎನ್ನಿಸಿಕೊಂಡ, ಸೌಭಾಗ್ಯದ–ಸೌಭಾಗ್ಯ ವನ್ನುಳ್ಳ, ಹರಿಗಂ–ಅರ್ಜುನ, ಎನ್ನನ್–ನನ್ನನ್ನು, ಏನ್–ಏನು, ಒಲ್ದಪನೋ–ಒಲಿಯು ತ್ತಾನೆಯೋ? ಇಂಥ ಅರ್ಜುನನು ತನ್ನನ್ನು ಒಲಿಯುತ್ತಾನೋ ಇಲ್ಲವೋ ಎಂಬ ಸಂದೇಹ ಸುಭದ್ರೆಗೆ.
೨. ಎಂಬ ಬಗೆಯೊಳ್–ಎಂಬ ಮನಸ್ಸಿನಲ್ಲಿ, ಸುಭದ್ರೆ, ಪಲುಂಬಿ–ಹಲುಬಿ, ಹಂಬಲಿಸಿ, ಮನಂ ಬಸದೆ–ಮನಸ್ಸನ್ನು ಇಬ್ಬಗೆಯಾಗಿ ಮಾಡದೆ, ತನುವನ್–ದೇಹವನ್ನು, ಆಱಿಸಲ್– ಸಂತಾಪವನ್ನು ಶಮನ ಮಾಡುವುದಕ್ಕಾಗಿ, ಅಲರಿಂ–ಹೂವಿನಿಂದ, ತುಂಬಿಗಳಿಂ–ದುಂಬಿ ಗಳಿಂದ, ತಣ್ಣೆಲರಿಂ–ತಂಗಾಳಿಯಿಂದ, ತುಂಬಿದ, ತಿಳಿಗೊಳದಿಂ–ತಿಳಿನೀರಿನ ಕೊಳಗಳಿಂದ, ಎಸೆವ–ಪ್ರಕಾಶಿಸುವ, ಬನಮಂ–ಉದ್ಯಾನವನ್ನು, ಪೊಕ್ಕಳ್–ಹೊಕ್ಕಳು.
೩. ತಳತಳಿಸಿ–ತಳತಳ ಎಂದು, ಪೊಳೆವ–ಹೊಳೆಯುವ, ಮಾವಿನ, ತಳಿರ್ಗಳ–ಚಿಗುರು ಗಳ, ಅಶೋಕಗಳ–ಅಶೋಕೆಯ ಚಿಗುರುಗಳ, ಮಿಸುಪ–ಹೊಳೆವ, ಲತೆಗಳ–ಬಳ್ಳಿಗಳ, ನೆಲೆ–ಸ್ಥಳಗಳು, ಎಂದರೆ ಬಳ್ಳಿಮಾಡಗಳು, ಬಳ್ವಳ ಬಳೆದ–ಅತಿಶಯವಾಗಿ ಬೆಳೆದ, ಬೇಟದ–ಪ್ರೇಮದ, ಉರುಳಿಯ–ಉಂಡೆಗಳ, ಬಳಗಂ–ಸಮೂಹ, ಇದು, ಎಂದು, ಎಳೆಯಳ್–ಕೋಮಲೆಯಾದ ಸುಭದ್ರೆ, ಎಳಸಿ–ಬಯಸಿ, ತಳವೆಳಗಾದಳ್–ಭ್ರಾಂತಳಾ ದಳು.
೪. ಕೊಳದ, ತಡಿವಿಡಿದು–ದಡವನ್ನು ಹಿಡಿದು, ಬೆಳೆದ, ಎಳದಳಿರ್ಗಳ–ಎಳೆಯ ಚಿಗುರನ್ನುಳ್ಳ, ಅಶೋಕೆಗಳ–ಅಶೋಕೆಯ ಮರಗಳ, ಲತೆಯ–ಬಳ್ಳಿಯ, ಮನೆಗಳೊಳೆ– ಮನೆಗಳಲ್ಲಿಯೇ, ತೆಱಂಬೊಳೆವ–ತೆರತೆರನಾಗಿ ಹೊಳೆಯುವ, ಅಲರ–ಹೂವಿನ, ಬಸದೆ– ವಶದಿಂದ, ಸುೞಿವಳಿಗಳ–ಸುತ್ತಾಡುವ ದುಂಬಿಗಳ, ಬಳಗದ–ಗುಂಪಿನ, ದನಿಗೆ–ಧ್ವನಿಗೆ, ಕಿನಿಸಿ–ಕೆರಳಿ, ಕಿಂಕಿ [ರಿ] ವೋದಳ್–ಕಿರಿಕಿರಿಯಾದಳು.
೫. ಸುರಯಿಯ–ಸುರಗಿಯ ಹೂವಿನ, ಬಿರಿಮುಗುಳ್ಗಳ–ಬಿರಿದ ಮೊಗ್ಗುಗಳ, ಪೊರೆ ವೊರೆಯೊಳ್–ಹತ್ತಿರ ಹತ್ತಿರ, ಪದರಪದರದಲ್ಲಿ, ಪೊಱೆವೊರಕನಲ್ಲದೆ–ಭಾರದ ವ್ಯಾಪ್ತಿ ಯಿಲ್ಲದೆ, ಅಲ್ಲುಗುವ–ಅಲ್ಲಿ ಸುರಿಯುವ, ರಜಂಬೊರೆದು–ಪುಷ್ಪಪರಾಗದಿಂದ ಲಿಪ್ತವಾಗಿ, ಪರಕಲಿಸಿದ–ಚೆದರಿದ, ಅಳಿಕುಳ ಪರಿಕರಮುಮಂ–ದುಂಬಿಯ ಹಿಂಡೆಂಬ ಪರಿವಾರವನ್ನು ಕೂಡ, ಆತನ ಶಿಖೆಯ–ಮದನಾಗ್ನಿಯ, ಕಿಡಿಗಳೆಗೆತ್ತಳ್–ಕಿಡಿಗಳೆಂದೇ ಭಾವಿಸಿದಳು. ಸುರಗಿಯ ಪರಾಗದಲ್ಲಿ ಹೊರಳಾಡಿದ ದುಂಬಿಗಳು ಕೆಂಪು ಬಣ್ಣವಾಗಿ ಸುಭದ್ರೆಯ ಕಣ್ಣಿಗೆ ಕಾಮದ ಕಿಚ್ಚಿನ ಕಿಡಿಗಳಂತೆ ತೋರುತ್ತಿದ್ದುವು.
ವಚನ : ನನೆಯ–ಹೂವಿನ, ಕೊನೆಯ–ಎಳೆರೆಂಬೆಗಳ, ತಳಿರ–ಚಿಗುರಿನ, ನಿಱಿದಳಿರ– ನಿರಿಯಾಗಿರುವ ಚಿಗುರುಗಳ, ಮುಗುಳ–ಮೊಗ್ಗಿನ, ಬಿರಿಮುಗುಳ–ಬಿರಿದ ಮೊಗ್ಗಿನ, ಮಿಡಿಯ–ಕಾಯಿಯ, ಕಿಱುಮಿಡಿಯ–ಹೀಚುಗಾಯಿನ, ಬಲ್ಮಿಡಿಗಳೊಳ್–ದೊಡ್ಡ ಕಾಯಿ ಗಳಲ್ಲಿ, ಎಱಗಿ–ಭಾರದಿಂದ ಬಾಗಿ, ತುಱುಗಿದ–ಕಿಕ್ಕಿರಿದ, ಬನಮಂ–ವನವನ್ನು; ಪೂತಚೂತಲ ತೆಗಳೊಳ್–ಹೂಬಿಟ್ಟ ಮಾವಿನ ಬಳ್ಳಿಗಳಲ್ಲಿ, ತಳ್ಪೊಯ್ದ–ತಗುಲಿಸಿದ, ಪೊಸಮುತ್ತಿನ– ಹೊಸ ಮುತ್ತಿನ, ಬಾಸಣಿಗೆಯೊಳ್–ಹೊದಿಕೆಯಲ್ಲಿ, ಬಾಸಣಿಸಿದ–ಮುಚ್ಚಿದ, ಬಿರಿಮು ಗುಳ್ಗಳೊಳ್–ಬಿರಿಮೊಗ್ಗುಗಳಲ್ಲಿ, ತುಱುಗಿದ–ಸೇರಿಕೊಂಡ, ಅದಿರ್ಮುತ್ತೆಯ ಸುತ್ತಿನೊಳ್– ಅದಿರ್ಮುತ್ತೆ ಎಂಬ ಹೂವಿನ ಬಳಿಸಿನಲ್ಲಿ, ಉಪಾಶ್ರಯಂ ಬಡೆದ–ಸಹಾಯವನ್ನು ಪಡೆದ, ಸಾಂದ್ರ–ಮಂದವಾದ, ಚಂದ್ರಕಾಂತದ ಶಿಲೆಯಂ–ಚಂದ್ರಕಾಂತದ ಹಾಸುಗಲ್ಲನ್ನು, ಒಳಗು ಮಾಡಿ–ಒಳಗಿಟ್ಟುಕೊಂಡು.
೬. ಒಂದು ಮಾಧವೀ ಮಂಟಪವಿತ್ತು: ಇದಿರೊಳ್–ಎದುರಿನಲ್ಲಿ, ಕಟ್ಟಿದ, ತೋರಣಂ–ತೋರಣವು, ನಿಱಿದಳಿರ್–ನೆರಿಗೆ ನೆರಿಗೆಯಾಗಿರುವ ಚಿಗುರು, ಪೂಗೊಂಚಲ್– ಹೂಗೊಂಚಲು, ಅಂದು, ಎತ್ತಂ–ಎಲ್ಲೆಲ್ಲಿಯೂ, ಎತ್ತಿದ–ಕಟ್ಟಿದ, ಪೂಮಾಲೆ–ಹೂವಿನ ಹಾರಗಳು, ಪರಾಗ….ಭಾಸಂ; ಪರಾಗ–ಹೂದೂಳಿನ, ರಾಗ–ಕೆಂಬಣ್ಣದಿಂದ, ಮುದಿತ– ನೆಲವೇರಿಸಲ್ಪಟ್ಟ, ಆಶಾ–ದಿಕ್ಕುಗಳ, ಭಾಸಂ–ಪ್ರಕಾಶ; ಉದ್ಯ….ಧ್ವನಿ; ಉದ್ಯತ್–ಮೇಲೆ ಏಳುತ್ತಿರುವ, ಮಧು–ಜೇನಿನಿಂದ, ಉನ್ಮದ–ಉನ್ಮತ್ತವಾದ, ಭೃಂಗಧ್ವನಿ–ದುಂಬಿಗಳ ಶಬ್ದ, ಮಂಗಳಧ್ವನಿಯೆನಲ್–ಶುಭ ಸಂಗೀತವೆನ್ನಲು, ಸಾಲ್ವನ್ನೆಗಂ–ಸಾಲುತ್ತಿರಲು, ಆ ಮಾಧವೀ ಮಂಟಪಂ–ಆ ಮಾಧವೀ ಹೂವಿನ ಬಳ್ಳಿಯ ಮಂಟಪವು, ಕಾಮಂಗೆ–ಮನ್ಮಥನಿಗೆ, ವಿವಾಹ ಮಂಟಪಂ–ಮದುವೆಯ ಮಂಟಪವು, ಎನಲ್ಕೆ–ಎಂದು ಹೇಳುವುದಕ್ಕೆ, ತಾನೆ, ತಕ್ಕುದು– ಯೋಗ್ಯವಾದದ್ದು.
ವಚನ : ಕಾಮನ ಡಾಮರಕ್ಕಳ್ಕಿ–ಕಾಮನ ಹಿಂಸೆಗೆ, ಕೋಟಲೆಗೆ ಹೆದರಿ; ವನದುರ್ಗಂ– ಸುತ್ತಲೂ ಕಾಡಿರುವ ಕೋಟೆ; ಕಪ್ಪುರವಳುಕಿನ–ಕರ್ಪೂರದ ಹಳುಕಿನ; ಅಗಲಿತಾಗಿ– ಅಗಲವಾದದ್ದಾಗಿ; ಪೂವಾಸಿ–ಹೂವಿನಂತೆ ಹಾಸಿ; ಮೃಣಾಳನಾಳದೊಳ್–ತಾವರೆ ದಂಟಿ ನಲ್ಲಿ; ಸರಿಗೆಗಂಕಣಂಗಲಂ–ತಂತಿ ಬಳೆಗಳನ್ನು; ಯವಕಳಿಕೆಗಳೊಳ್–ಗೋದುವೆಯ ಮೊಳಕೆಗಳಲ್ಲಿ; ಕಟಿಸೂತ್ರಮುಮಂ–ಉಡೆದಾರವನ್ನೂ, ಸಾರಕರ್ಪೂರದೊಳ್–ಕರ್ಪೂರದ ತಿರುಳಿನಲ್ಲಿ; ಭಾವಿಸಿದ–ಮೇಳಿಸಿದ, ನೂಪುರಮುಮಂ–ಕಾಲ ಕಡಗವನ್ನೂ; ಕರ್ಣಪೂರ– ಕಿವಿಯ ಅಲಂಕಾರ; ಎಳಗಾವಿನ–ಎಳೆಯ ದಂಟಿನ; ಅಸಿಯ–ಸಣ್ಣದಾದ; ಸರಿಗೆಯುಮಂ– ಅಡ್ಡಿಗೆಯನ್ನೂ; ಲಂಬಣಮುಮಂ–ಹಾರವನ್ನೂ, ಕುಳಿರ್ಕೋೞ್ಪ–ಅತ್ಯಂತ ತಂಪಾಗಿರುವ, ತಳ್ಕಿಱಿದು–ಲೇಪಿಸಿ, ಬಳಿದು; ಎಳಮೈಂದ ವಾೞೆಯ–ಎಳೆಯದಾದ ಮಹೇಂದ್ರ ಬಾಳೆಯ, ಬಿಜ್ಜಣಿಗೆಗಳಿಂ–ಬೀಸಣಿಗೆಗಳಿಂದ; ಬಿಸುಪಿನೊಳ್–ಶಾಖದಲ್ಲಿ, ಅನಿತುಮಂ–ಅಷ್ಟು ಶೈತ್ಯೋಪಕರಣಗಳನ್ನೂ, ಗೆಲ್ದು–ಗೆದ್ದು, ಮೀರಿಸಿ.
೭. ಸುಭದ್ರೆಯ ವಿರಹತಾಪದ ವರ್ಣನೆ: ಕೆಂದಳಿರ್ವಾಸು–ಕೆಂಪು ತಳಿರಿನ ಹಾಸಿಗೆ, ಸೆಕದ ತೊವಲ್ಗೆ–ನೀರು ಚಿಮುಕಿಸಿದ ಚಿಗುರಿಗೆ, ಎಣೆಯಾಯ್ತು–ಸಮಾನವಾಯಿತು, ಬೆವರಿನ ಕಾರಣದಿಂದ; ಮೃಣಾಳನಾಳವೊಂದೊಂದು–ಒಂದೊಂದು ತಾವರೆಯ ದಂಟು, ಅ [ಡಿ] ವೊತ್ತಿ–ತಳಹೊತ್ತಿಕೊಂಡು, ಪತ್ತಿದುವು–ಮೈಗೆ ಅಂಟಿಕೊಂಡುವು; ಸೂಸುವ ಶೀತಳವಾರಿ– ಹೊಯ್ಯುವ ತಂಪಾದ ನೀರು, ಮೈಯನೆಯ್ತಂದು–ಮೈಮೇಲೆ ಹರಿದು, ಇರದೆ, ಎತ್ತ– ಎಲ್ಲೆಲ್ಲಿಯೂ, ಬತ್ತಿದುವು–ಒಣಗಿಹೋದುವು; ತಚ, ಶಿಕಾಂತ ಶಿಲಾತಳಂ–ಆ ಚಂದ್ರಕಾಂತ ಶಿಲೆಯ ಹಾಸುಗಲ್ಲು, ಸಿಡಿಲ್ದು–ಸಿಡಿದು, ಅಂದು–ಆಗ, ಒಡೆದತ್ತು–ಒಡೆಯಿತು; ಮೃಗಾಂಕ ವಕ್ತ್ರೆಯಾ–ಚಂದ್ರಮುಖಿಯಾದ ಸುಭದ್ರೆಯ, ಬೇಟದ ಬೆಂಕೆ–ಪ್ರಣಯ ತಾಪವು, ಏಂಬಿಸಿದೊ–ಏನು ಬಿಸಿಯಾದದ್ದೋ!
೮. ಅರಗಿನ ಬೇಟದ–ಅರ್ಜುನನ ಮೇಲಣ ಪ್ರೇಮದ, ಒಂದೆ ಪೊಸಬೇಟದ– ನವೀನಾನುಭವವಾದ ಒಂದೇ ಪ್ರೇಮವೆಂಬ, ಕೇಸುರಿಯಿಂದಂ–ಕೆಂಪು ಉರಿಯಿಂದ, ಎಯ್ದೆ– ಚೆನ್ನಾಗಿ, ದಳ್ಳುರಿ–ದೊಡ್ಡ ಉರಿ, ನೆಗೆದು, ಚಿಮ್ಮಿ, ಅಂದು–ಆಗ, ಕೆಂದಳಿರ ಪಾಸುಗಳಿಂ– ಕೆಂಪು ಚಿಗುರ ಹಾಸಿಗೆಗಳಿಂದಲೂ, ಕುಳಿರ್ವ–ತಂಪಾಗಿರುವ, ಆಲಿನೀರ್ಗಳಿಂ–ಮಂಜಿನ ನೀರು ಗಳಿಂದಲೂ, ಕೆಳದಿಯರ್–ಸಖಿಯರು, ಸೂಸುತುಂ–ಚೆಲ್ಲುತ್ತ, ತುರಿಪದಿಂ–ತ್ವರೆಯಿಂದ, ನದಿಪುತ್ತಿರೆ–ನಂದಿಸುತ್ತಿರಲು, ನೋಡೆ–ನೋಡಲು, ದಾಹಂ–ಉರಿಯು, ಒತ್ತರಿಸಿದುದು– ದಟ್ಟವಾಯಿತು; ಪೊನ್ನ–ಚಿನ್ನದ, ಒಂದು, ಸಲಗೆ–ಸಲಾಕೆಯು, ಇರ್ಪುವೋಲ್–ಇರುವ ಹಾಗೆ, ಸುಭದ್ರೆಯಾ–ಸುಭದ್ರೆಯ, ಮೆಯ್–ಮೈ, ಇರ್ದುದು–ಇತ್ತು. ಕಾಸಿದ ಚಿನ್ನದ ಸಲಾಕೆ ಯಂತೆ ಸುಭದ್ರೆಯ ಮೈ ಇತ್ತು. ಸಲಗೆ (ಸಂ) ಶಲಾಕಾ.
೯. ಮದನದವಾನಲಾರ್ಚಿ–ಕಾಮವೆಂಬ ಕಾಳ್ಕಿಚ್ಚಿನ ಜ್ವಾಲೆ, ತನುವಂ–ಮೈಯನ್ನು, ಸುಡೆ–ಸುಡಲು, ತಳ್ತೆಮೆಯೊಳ್–ಮುಚ್ಚಿದ ರೆಪ್ಪೆಗಳಲ್ಲಿ, ಪಳಂಚಿ–ತಾಗಿ, ಬೀಗಿದ– ಉಬ್ಬಿದ, ಬೆಳರ್ವಾಯೊಳ್–ಬಿಳಿಚಿಕೊಂಡ ತುಟಿಗಳಲ್ಲಿ, ಉಚ್ಚಳಿಸಿ–ಮೇಲಕ್ಕೆ ಚಿಮ್ಮಿ, ತುಂಗ ಕುಚಂಗಳ ಪೊಯ್ಲೊಳ್–ಉನ್ನತ ಸ್ತನಗಳ ಹೊಡೆತದಲ್ಲಿ, ಎತ್ತುಲುಂ–ಎಲ್ಲ ಕಡೆಗೂ, ಕೆದಱಿ–ಚೆದರಿ, ವಳಿತ್ರಯಂಗಳ–ತ್ರಿವಳಿಗಳ, ತೊಡರ್ಪುಗಳೊಳ್–ತೊಡಕುಗಳಲ್ಲಿ, ತೊಡರ್ದು–ಸಿಕ್ಕಿಕೊಂಡು, ಒಯ್ಯನೆ–ಮೆಲ್ಲಗೆ, ವಿಲೋಲ ನೇತ್ರಜಲ ಬಿಂದುಗಳ್–ವಿಶೇಷ ಆಸಕ್ತಿಯನ್ನುಳ್ಳ ಕಣ್ಣುಗಳ ನೀರಿನ ಹನಿಗಳು, ಆಕೆಯ–ಅವಳ, ನಿಮ್ನ ನಾಭಿಯಂ–ಆಳವಾದ ಹೊಕ್ಕಳನ್ನು, ಎಯ್ದಿದುವು–ಸೇರಿದುವು. ಸುಭದ್ರೆಯ ಕಣ್ಣೀರು, ಕಣ್ಣಿನಿಂದ ತುಟಿಗೆ, ತುಟಿ ಯಿಂದ ಎದೆಗೆ, ಎದೆಯಿಂದ ಹೊಟ್ಟೆಗೆ, ಅಲ್ಲಿಂದ ನಾಭಿಗೆ ಹೇಗೆ ಬಂತೆಂಬುದನ್ನು ಇಲ್ಲಿ ನಿರೂಪಿಸಿದೆ; ಈ ಕಣ್ಣೀರಿನ ಆಟ ಚೆಲ್ವು.
೧೦. ನಗೆಮೊಗಮಂ–ನಗುಮುಖವನ್ನು, ಪೊದಳ್ದಲರ್ದ–ಅಗಲವಾಗಿ ಅರಳಿದ, ತಾವರೆಯೆಂಬ–ತಾವರೆಯೆನ್ನುವ, ವಿಮೋಹದಿಂ–ಭ್ರಾಂತಿಯಿಂದ, ಮೊಗಂಬುಗಲೊಡಂ– ಮುಖದ ಮೇಲೆ ಬಂದಕೂಡಲೇ, ಆ ತಳೋದರಿಯ–ಆ ಹಿಡಿನಡುವಿನ ಸುಭದ್ರೆಯ, ಸುಯ್ಗಳ–ಬಿಸಿಯುಸಿರುಗಳ, ಬೆಂಕಿಯೊಳ್–ಶಾಖದಲ್ಲಿ, ಇಚ್ಚೆಗೆಟ್ಟು–ಇಚೆ, ನಷ್ಟವಾಗಿ, ತೊಟ್ಟಗೆ ಕೊಳೆ–ಬೇಗನೆ ಕಾವುಹತ್ತಲು, ಮುಂದೆಬಿೞ್ದು–ಎದುರಿನಲ್ಲಿ ಬಿದ್ದು, ಮಗುೞ್ದು– ತಿರುಗಿ, ಕಣ್ಣನೀರ–ಕಣ್ಣೀರಿನ, ಧಾರೆಯೊಳೆ–ಧಾರೆಯಲ್ಲಿಯೆ, ನಾಂದು–ನನೆದು, ಎಲರ್ಚಿ– ಒರ್ಮೆಯೆ–ಒಂದೇ ಕಾಲದಲ್ಲಿ, ಪಾಱಿದುವು–ಹಾರಿಹೋದುವು.
ವಚನ : ಕಾಯ್ದಪುಡಿಯೊಳಗೆ–ಕಾದ ದೂಳಿನಲ್ಲಿ, ಬಿಸುಟ್ಟ–ಎಸೆದ, ಎಳವಾ [ಳೆ] ಯಂತೆ– ಎಳೆಯ ಮೀನಿನ ಹಾಗೆ, ಸುರತಮಕರಧ್ವಜನೊಳ್–ಅರ್ಜುನನಲ್ಲಿ, ಆದ ಬೇಟದೊಳ್– ಉಂಟಾದ ಪ್ರೀತಿಯಲ್ಲಿ, ಮಮ್ಮಲಮಱುಗುತ್ತಿರ್ದಳ್–ಮಲ ಮಲ ವ್ಯಥೆಪಡುತ್ತಿದ್ದಳು. ಇತ್ತ ಕಡೆ ಅರ್ಜುನನ ಅವಸ್ಥೆ. ಮದನತಾಪಕ್ಕಾಱದೆ–ಮನ್ಮಥ ತಾಪವನ್ನು ತಡೆಯಲಾರದೆ; ಉಮ್ಮಳಿಸಿ–ಮರುಗಿ, ಮಧುಮಥನನ–ಶ್ರೀಕೃಷ್ಣನ, ಕಣ್ಣಂ ಬಂಚಿಸಿ–ಕಣ್ಣಿಗೆ ಮೋಸ ಮಾಡಿ, ಎಂದರೆ ಕಣ್ತಪ್ಪಿಸಿಕೊಂಡು; ವಿಜೃಂಭಮಾಣ….ರಮ್ಯಮಂ: ವಿಜೃಂಭಮಾಣ– ವಿಜೃಂಭಿಸಿರುವ, ನವನಳಿನಪರಿಕರ–ಹೊಸದಾಗಿ ಅರಳಿದ ತಾವರೆಗಳ ಸಾಮಗ್ರಿಗಳಿಂದ, ಆಕೃಷ್ಟ–ಆಕರ್ಷಿತವಾದ, ಮಧುಕರ–ದುಂಬಿಗಳಿಂದ, ರಮಣೀಯ–ರಮ್ಯವಾದ, ಪುಳಿನ ಪರಿಸರ ಪ್ರದೇಶ–ಮರಳಿನ ಸಮೀಪದ ಸ್ಥಳಗಳಲ್ಲಿ, ನಿವೇಶಿತ–ಇಡಲ್ಪಟ್ಟ, ವಿರಹಿಜನನಿ ಚಯನಿಚಿತ–ವಿಯೋಗಿ ಜನರ ಸಮೂಹದಲ್ಲಿ ವ್ಯಾಪ್ತವಾದ, ಮಾನಸ–ಮನಸ್ಸುಳ್ಳ, ಕಾಮಿನೀ–ಕಾಂತೆಯರ, ಗಂಡೂಷ–ಮುಕ್ಕುಳಿಸಿದ, ಸೀಧು–ಮದ್ಯದಿಂದ, ಪುಳಕಿತ– ರೋಮಾಂಚಗೊಂಡ, ವಕುಳಮುಕುಳ–ಬಕುಳದ ಮೊಗ್ಗನ್ನುಳ್ಳ, ವಿದಳಿತ ಮನೋಹರಾ ಶೋಕ–ಬಿರಿದ ಸುಂದರವಾದ ಪುಷ್ಪಗಳನ್ನುಳ್ಳ ಅಶೋಕಯೆಂಬ, ಲತಾರಮಣೀ–ಲತೆ ಯೆಂಬ ಸ್ತ್ರೀಯ, ರಮಣೀಯ–ಸೊಗಸಾದ, ನೂಪುರರವ ರಮ್ಯಮಂ–ಕಾಲ್ಕಡಗಗಳ ಧ್ವನಿಯಿಂದ ರಮ್ಯವಾದ; ಅವಿರಳ….ತಳಮಂ: ಅವಿರಳ–ದಟ್ಟವಾದ, ಕುಸುಮಧೂಳೀ ಧೂಸರ–ಪುಷ್ಪಪರಾಗದಿಂದ ಮಾಸಲು ಬಿಳುಪುಳ್ಳ, ಪುಳಿನ–ಮರಳಿನಿಂದ, ಧವಳಿತ– ಬೆಳ್ಳಗಾದ, ಧರಾತಳಮಂ–ನೆಲವನ್ನುಳ್ಳ; ಉತ್ಫುಲ್ಲ….ವನಮಂ : ಉತ್ಫುಲ್ಲ–ಅರಳಿರುವ, ಪಲ್ಲವ–ಚಿಗುರುಗಳ, ಲೀಲಾಯಮಾನ–ಲೀಲೆಗೊಳಗಾದ, ಮತ್ತ ಕೊಕಿಲೋಲ್ಲಾಸಿತ– ಮದಿಸಿದ ಕೋಗಿಲೆಗಳಿಗೆ ಉಲ್ಲಾಸವನ್ನುಂಟುಮಾಡಲ್ಪಟ್ಟ, ಶೀಕರ–ತುಂತುರು ಮಳೆಯ, ಉದ್ದಾಮ ದುರ್ದಿನ ವನಮಂ–ದೀರ್ಘವಾದ ಮೋಡ ಮುಚ್ಚಿದ ದಿನದಂತಿರುವ ವನವನ್ನು; ಎಯ್ದೆವಂದು–ಸಮೀಪಿಸಿ.
೧೧. ಬಿರಿದಲರೊಳ್–ಬಿರಿದ ಹೂವಿನಲ್ಲಿ, ತೆಱಂಬೊಳೆವ–ತೆರತೆರನಾಗಿ ಹೊಳೆಯುವ, ತುಂಬಿ–ದುಂಬಿಗಳು, ತಳಿರ್ತೆಳ ಮಾವು–ಚಿಗುರಿದ ಎಳೆಯ ಮಾವು, ಮಾವಿನಂಕುರಮನೆ– ಮಾವಿನ ಚಿಗುರನ್ನೆ, ಕರ್ಚಿ–ಕಚ್ಚಿ, ಬಿಚ್ಚ [ಳಿ] ಪ–ವಿಸ್ತಾರವಾಗುವ ಎಂದರೆ ಉಬ್ಬುವ, ಕೋಗಿಲೆ, ಕಂಪಂ–ಸುವಾಸನೆಯನ್ನು, ಅವುಂಕಿ–ಅಮುಕಿ ತೆಗೆದುಕೊಂಡು, ನಿತ್ತರಿಪ–ದಾಟಿ ಬರುವ, ಎಲರ್–ಗಾಳಿ, ಇವು, ಏವುವೋ–ಏನು ಮಾಡುತ್ತವೊ; ಮದೀಯ–ನನ್ನ, ಮನೋಗತ–ಮನಸ್ಸಿನಲ್ಲಿ ತುಂಬಿಕೊಂಡಿರುವ, ಕಾಮರಾಗ–ಮನ್ಮಥನ ಪ್ರೀತಿಯೆಂಬ, ಸಾಗರದ–ಕಡಲಿನ, ಒದವಿಂಗೆ–ಸಮೃದ್ಧಿಗೆ, ಉಕ್ಕುವಿಕೆಗೆ, ನಲ್ಲಳ–ಪ್ರಿಯಳ, ವಿಳೋಕನ ಚಂದ್ರಿಕೆ–ನೋಟವೆಂಬ ಬೆಳುದಿಂಗಳು, ಒಂದೆ–ಒಂದೇ, ಸಾಲದೇ–ಸಾಕಾಗದೇ? ಸಾಕಾಗುತ್ತದೆ.
ವಚನ : ಎಱಗಿ–ಬಾಗಿ, ತುಱುಗಿದ–ಕಿಕ್ಕಿರಿದ; ಅೞ್ಕರ್ತುನೋಡಿ–ಪ್ರೀತಿಸಿ ನೋಡಿ.
೧೨. ಅಲರ್–ಹೂವು, ಅಲರ್ಗಣ್–ಹೂವಿನಂತಿರುವ ಕಣ್ಣು: ಮುಗುಳ್–ಮೊಗ್ಗು, ನಗೆ–ನಗುವು; ಮಡಲ್–ಬಳ್ಳಿಯು, ತೊಡೆ–ತೊಡೆಗಳು; ತುಂಬಿ–ದುಂಬಿಗಳು, ಕುರುಳ್– ಮುಂಗುರುಳುಗಳು; ತಳಂ–ಅಂಗೈ, ತಳಿರ್–ಚಿಗುರು; ಗೊಲೆ–ಗೊಂಚಲು, ಮೊಲೆ–ಸ್ತನ ಗಳು; ಕೆಂಪು–ಸುಭದ್ರೆಯ ಕೆಂಬಣ್ಣವೇ, ಕೆಂಪು–ಬಳ್ಳಿಯ ಕೆಂಬಣ್ಣ; ಸೆಳ್ಳುಗುರ್–ತೆಳುವಾದ ಉಗುರುಗಳು, ಕೊನೆ–ಎಳೆಯ ಕವಲು; ಕುಡಿ–ಬಳ್ಳಿಯ ಕುಡಿಗಳು, ತೋಳ್–ತೋಳುಗಳು; ನಯಂ–ಬಳ್ಳಿಯ ನಯವೇ, ನಯಂ–ಸುಭದ್ರೆಯ ನಯ; ನೆಲೆ–ನೆಲೆಯೇ, ನೆಲೆ–ನೆಲೆಯು, ಭಂಗಿ–ರೀತಿಯೇ, ಭಂಗಿ–ರೀತಿ; ಪದವಣ್–ಹದವಾದ ಹಣ್ಣು, ಬೆಳರ್ವಾಯ್–ಹೊಳೆ ಯುವ ತುಟಿಗಳು; ಪೆಱತಲ್ಲ–ಬೇರೆಯಲ್ಲ, ಇದೆಂತೋ–ಇದು ಹೇಗೋ, ಕೋಮಳಲತೆ– ಲಲಿತವಾದ ಬಳ್ಳಿ, ಪೇೞಿಂ–ಹೇಳಿರಿ; ಎನ್ನಿನಿಯಳಂ–ನನ್ನ ನಲ್ಲಳನ್ನು, ಮಱೆಗೊಂಡುದೋ– ಮರೆಯಾಗಿ ಇಟ್ಟುಕೊಂಡಿದೆಯೋ, ಅಥವಾ, ಸೂಱೆಗೊಂಡುದೋ–ಕೊಳ್ಳೆಹೊಡೆ ದಿದೆಯೋ? ಬಳ್ಳಿಯಲ್ಲಿರುವ ಚೆಲುವಿನ ವಸ್ತುಗಳೆಲ್ಲ ಸುಭದ್ರೆಯಿಂದ ಎರವು ಪಡೆದದ್ದು; ಬಳ್ಳಿಗೆ ಇಷ್ಟೆಲ್ಲ ಎಲ್ಲಿ ಬರಬೇಕು?
ವಚನ : ಕಿಱಿದಾನುಂ ಬೇಗಂ–ಸ್ವಲ್ಪ ಹೊತ್ತು; ಅಱಿಮರುಳಾದಂತೆ–ಭ್ರಾಂತನಾದಂತೆ; ಪೞಿಗಾಳೆಗಂಗಾದಿ–ಎದುರಾಗಿ ಹೋರಾಡಿ; ಬರೆವರೆ–ಬರಲು ಬರಲು; ಬಲ್ಮಿಡಿಯನೆ– ಬಲಿತ ಹೀಚುಗಳನ್ನೇ, ಮಿಟ್ಟೆಯುಮಂ–ಮಣ್ಣಿನ ಗೋಲಿಗಳನ್ನೂ; ಏಸಾಡಿ–ಹೊಡೆದು; (ಸಂ) ಪ್ರತಿ ಪೞಿ; ಮಿಟ್ಟೆ (ಸಂ) ಮೃತ್;
೧೩. ಅಸಿಯಳಂ–ಕೃಶಾಂಗಿಯಾದ ಸುಭದ್ರೆಯನ್ನು, ಒಲ್ಗುಂ–ಪ್ರೀತಿಸುತ್ತಾನೆ, ಒಲ್ಲನ್– ಪ್ರೀತಿಸನು, ಅಣಂ–ಸ್ವಲ್ಪವೂ, ಎನ್ನದೆ–ಹೇಳದೆ, ರೂಪನೆ ನೋಡಿ–ರೂಪವನ್ನೇ ನೋಡಿ, ಕೂಡಲಾಟಿಸಿ–ನೆರೆಯಲು ಬಯಸಿ, ಪರಿದೆಯ್ದಿ–ಓಡಿ ಬಂದು, ಪತ್ತಿದಲರ್ಗಣ್ಗಳಂ–ಅಂಟಿದ ಹೂವಿನಂತಿರುವ ಕಣ್ಣುಗಳನ್ನು, ಏನುಮನೆನ್ನದೆ–ಏನೆಂದೂ ಹೇಳದೆ, ಅಂತು–ಹಾಗೆ, ಉಪೇಕ್ಷಿಸಿ– ಉಪೇಕ್ಷೆ ಮಾಡಿ, ಮನಮೆಲ್ಲಮಂ–ಮನಸ್ಸನ್ನೆಲ್ಲ, ಕವರ್ದಪಂ–ಸೂರೆ ಮಾಡುತ್ತಾನೆ, ತನುವಂ–ಮೈಯನ್ನು, ಬಡಮಾಡಿ–ಬಡಕಲನ್ನಾಗಿ ಮಾಡಿ, ಕಾಡಿ– ಪೀಡಿಸಿ, ದಂಡಿಸಿದಪಂ–ಶಿಕ್ಷಿಸುತ್ತಾನೆ; ಅಂಗಜನ್ಮನ–ಕಾಮನ, ಕವರ್ತೆಯ–ಸೂರೆಯ, ದಂಡದ–ಶಿಕ್ಷೆಯ, ಪಾಂಗು–ರೀತಿ, ಇದು, ಎಂತುಟೋ–ಹೇಗೆಯೋ?
ವಚನ : ಉಪಕಂಠಂಗಳೊಳ್–ಸಮೀಪ ಪ್ರದೇಶಗಳಲ್ಲಿ; ಅನಂಗಶರವಶನಾಗಿ–ಕಾಮ ಬಾಣಗಳಿಗೆ ಅಧೀನನಾಗಿ; ತೊೞಲ್ದು–ಸುತ್ತಾಡಿ.
೧೪. ಉರಿವೆರ್ದೆಯಾಱೆ–ಉರಿಯುತ್ತಿರುವ ಎದೆ ಸಮಾಧಾನಗೊಳ್ಳಲು; ಚಿಂತಿಪ ಮನಂ– ಚಿಂತಿಸುವ ಮನಸ್ಸು, ಗುಡಿಗಟ್ಟೆ–ಧ್ವಜಾರೋಹಣ ಮಾಡಲು ಎಂದರೆ ಒಸಗೆ ಪಡಲು, ಮರಲ್ದು ನೋಡುವ–ತಿರುಗಿ ತಿರುಗಿ ನೋಡುವ, ಅಚ್ಚರಿಯೊಳೆ–ಆಶ್ಚರ್ಯ ದಲ್ಲಿಯೆ, ಬೆಚ್ಚ–ಬೆಸದ, ಕಣ್ಮಲರ್ಗೆ–ಹೂಗಣ್ಣಿಗೆ, ಸಂತಸದಾಗರಮಾಗೆ–ಸಂತೋಷಕ್ಕೆ ಆಕರ ವಾಗಲು, ಬೇಟದೊಳ್–ಬಯಕೆಯಲ್ಲಿ, ಬಿರಿಯುವ–ಬಿರಿದು ಹೋಗುವ, ಒಡಲ್– ಮೈ, ಒಯ್ಯನಂಕುರಿಸೆ–ಮೆಲ್ಲಗೆ ರೋಮಾಂಚಗೊಳ್ಳಲು, ಸೈಪಿನೊಳ್–ನನ್ನ ಪುಣ್ಯದಿಂದ, ಇಂತು–ಹೀಗೆ, ಎನಗೆ–ನನಗೆ, ಈ ವನಾಂತರದೊಳೆ–ಈ ಉದ್ಯಾನದಲ್ಲೇ, ಮದೀಯ ಮನೋರಥ–ನನ್ನ ಇಷ್ಟಾರ್ಥದ, ಜನ್ಮಭೂಮಿಯಂ–ಹುಟ್ಟು ನೆಲವಾದ ಸುಭದ್ರೆಯನ್ನು, ಕಾಣಲಕ್ಕುಮೋ–ಕಾಣುವುದಾಗುತ್ತದೋ?
ವಚನ : ಎಂದು ಬಗೆಯುತ್ತುಂ–ಎಂಬುದಾಗಿ ಚಿಂತಿಸುತ್ತ; ಮೊಗಸಿ–ಮುತ್ತಿ; ಪಡೆಮಾತುಗಳಂ–ಸುದ್ದಿಗಳನ್ನು, ಎಮ್ಮಂದಿಗರ್–ನಮ್ಮಂಥವರು; ಭೋಂಕನೆ–ಬೇಗನೆ, ಇದ್ದಕ್ಕಿದ್ದ ಹಾಗೆ.
೧೫. ಸುಭದ್ರೆ–ಅರ್ಜುನರ ಸಮಾಗಮ; ಪಡಿದೆಱೆವಂದದಿಂದಂ–ಬಾಗಿಲು ತೆರೆದ ರೀತಿ ಯಲ್ಲಿ, ಎರ್ದೆಯುಂ–ಎದೆಯೂ, ತೆಱೆದತ್ತು–ತೆರೆಯಿತು; ಪೊದಳ್ದ–ವ್ಯಾಪಿಸಿದ, ಸಂಕೆಯಿಂ–ಭಯದಿಂದ, ನಡುಕಮುಂ–ನಡುಕವೂ, ಆಗಳ್–ಆಗ, ಉಬ್ಬದಿಗಮಾದುದು– ಅತಿಶಯವಾಯಿತು; ಸಾಧ್ವಸದಿಂ–ಸಡಗರದಿಂದ, ಬೆಮರ್–ಬೆವರು, ಬೆಮರ್ವೆಡೆಗಳಿಂ– ಬೆವರುವೆಡೆಗಳಿಂದ, ಉಣ್ಮಿಪೊಣ್ಮಿದುದು–ಉಕ್ಕಿ ಹೊರಸೂಸಿತು; ಕಣ್–ಕಣ್ಣುಗಳು, ನಡೆನೋಡದೆ–ಸ್ಥಿರ ದೃಷ್ಟಿಯಿಂದ ನೋಡದೆ, ತಪ್ಪು ನೋಡಿ–ತಪ್ಪಾಗಿ ನೋಡಿ, ಜಾರು ನೋಟದಿಂದ ನೋಡಿ, ನಾಣೆಡೆಯೊಳಂ–ನಾಚಿಕೆಯ ಎದೆಗಳಲ್ಲಿ, ಪಡೆಮೆಚ್ಚೆಗಂಡನಂ– ಅರ್ಜುನನನ್ನು, ನೋಡಲೊಡಂ–ನೋಡಿದ ಕೂಡಲೇ, ಆದುದು–ಆದುವು; ‘ಉಬದಿಗಂ’ ಎಂದು ಸರಿಯಾದ ಶಬ್ದರೂಪ, ‘ಉಬ್ಬಡಿಗ’ ವಲ್ಲ; “ಅಲಂಪಿನುಬ್ಬದಿಗಮನಾ ಲತಾಂಗಿಗೆ ನೃಪಂ ಪಡೆದಂ ನವಸಂಪ್ರಯೋಗದೊಳ್” (ಕಾವ್ಯಾಲೋಕನಂ) ಎಂಬಲ್ಲಿ ‘ಉಬ್ಬದಿಗ’ ದ ದಿಕಾರ, ದಕಾರ ಪ್ರಾಸದಲ್ಲಿ ಬಂದಿದೆ.
ವಚನ : ಅನಂಗಾಮೃತಪಯೋಧಿಯೊಳ್–ಮನ್ಮಥನ ಅಮೃತ ಸಾಗರದಲ್ಲಿ; ಆಪಾದ ಮಸ್ತಕಂಬರಂ–ಕಾಲಿನಿಂದ ಹಿಡಿದು ತಲೆಯವರೆಗೆ; ಏೞ್ಗೆವಾಡಿವದ–ಶುಕ್ಲಪಕ್ಷದ ಪಾಡ್ಯದ; ಅಸಿಯಳಂ–ಕೃಶಾಂಗಿಯನ್ನು.
೧೬. ಸರಸಮೃಣಾಳನಾಳವಳಯಂಗಳೊಳ್–ರಸಪೂರ್ಣವಾದ ತಾವರೆಯ ದಂಟಿನ ಕಂಕಣಗಳಲ್ಲಿ, ಉಜ್ವಳವೃತ್ತ ಮೌಕ್ತಿಕಾಭರಣಗಣಂಗಳೊಳ್–ಹೊಳೆವ ದುಂಡು ಮುತ್ತಿ ನೊಡವೆಗಳ ಸಮೂಹದಲ್ಲಿ, ಶಶಿಕರಂಗಳೊಳ್–ಚಂದ್ರಕಿರಣಗಳಲ್ಲಿ, ಆಱದೆ–ಶಮನ ವಾಗದೆ, ಬೇಟದೊಳ್–ಪ್ರೇಮದಲ್ಲಿ, ಕನಲ್ದು–ಕೆರಳಿ, ಉರಿವೆರ್ದೆ–ಉರಿಯುವ ನನ್ನೆದೆ, ನೋಡ–ನೋಡೋ, ನೋಡಲೊಡನೆ–ಸುಭದ್ರೆಯನ್ನು ಕಂಡೊಡನೆ, ಆಱಿದುದು– ಶಮನಿಸಿತು; ಎನ್ನ ನಲ್ಲಳಂ–ನನ್ನ ಪ್ರಿಯಳನ್ನು, ಅಜಂ–ಬ್ರಹ್ಮ, ಅಮರ್ದಿಂದೆ–ಅಮೃತ ದಿಂದ, ತೊಯ್ದು–ನೆನಸಿ, ಕಪ್ಪುರವಳುಕಿಂದೆ–ಕರ್ಪೂರದ ಹಳುಕುಗಳಿಂದ, ಕಡೆದು ಕಂಡರಿಪಂ ವಲಂ–ಕಡೆದು ಕೊರೆದಿರುತ್ತಾನೆಯೋ, ನಿಶ್ಚಯವಾಗಿಯೂ, ಏನು!
೧೭. ವೃತ್ತಕುಚಂಗಳಿಂದುದಿರ್ದ–ಬಟ್ಟಮೊಲೆಗಳಿಂದುದಿರಿದ, ಚಂದನದೊಳ್– ಶ್ರೀಗಂಧದಲ್ಲಿ, ತಳಿರ್ವಾಸು–ಚಿಗುರಿನ ಹಾಸಿಗೆ, ಬೆಳ್ಪನಾಳ್ದತ್ತು–ಬಿಳುಪನ್ನು ಹೊಂದಿತು; ದುಕೂಲದ–ರೇಷ್ಮೆಯ ಬಟ್ಟೆಯ, ಒಂದು ಮಡಿ–ಒಂದು ತೊಳೆದ ವಸ್ತ್ರವು, ಮಾಸಿದ– ಮಾಸಿಹೋದ, ಮಾೞ್ಕೆವೊಲಾಯ್ತು–ರೀತಿಯಂತಾಯಿತು; ಮೆಯ್ಯನಿಕ್ಕುತ್ತಿರೆ–ಮೈಯನ್ನು ಹಾಸಿಗೆಯ ಮೇಲೆ ಚಾಚುತ್ತಿರಲು, ಕೆಂದಳಿರ್ಗಳ್–ಕೆಂಪು ಚಿಗುರುಗಳು, ಅಚ್ಚುಗಳ್– ಮುದ್ರೆಗಳು, ಅಚ್ಚಿಱಿದಂತೆ–ಅಚ್ಚು ಹಾಕಿದ ಹಾಗೆ, ಪತ್ತಿ–ಅಂಟಿಕೊಂಡು, ಕಾಮನ ಚ್ಚೊತ್ತಿದ–ಮನ್ಮಥನು ಮುದ್ರಿಸಿದ, ಬೇಟದಚ್ಚುಗಳ–ಪ್ರೇಮದ ಮುದ್ರೆಗಳ, ಮಾೞ್ಕೆ ಯೊಳ್– ರೀತಿಯಲ್ಲಿ, ಸುಭದ್ರೆಯಾ–ಸುಭದ್ರೆಯ, ಮೆಯ್–ಮೈ, ಇರ್ದುದು–ಇತ್ತು.
ವಚನ : ಎರಡಱಿಯದ–ಕಪಟವಿಲ್ಲದ, ನೈಜವಾದ; ನಲ್ಲಮನಂದೋಱುವುದು– ಒಳ್ಳೆಯ ಮನವನ್ನು ತೋರಿಸುವುದು, ಸಲ್ಗೆದೋಱುವುದುಂ–ಸಲಿಗೆಯನ್ನು ತೋಱಿ ಸುವುದೂ; ಜಡಿದು–ಗದರಿಸಿಕೊಂಡು.
೧೮. ಮದನನ–ಮನ್ಮಥನ, ಕಾಯ್ಪು–ಕೋಪ, ಮಾಣ್ಗೆ–ಹೋಗಲಿ; ಸರಸೀರುಹ ಜನ್ಮನ–ಬ್ರಹ್ಮನ, ಮೆಚ್ಚು–ಇಷ್ಟ, ತೀರ್ಗೆ–ಸಫಲವಾಗಲಿ; ಕೋಳ್ಗುದಿ–ಪ್ರೇಮಾಕ್ರಮಣದ ಕುದಿತ, ಮನದಿಂದಂ–ಮನಸ್ಸಿನಿಂದ, ಇಂದು–ಈ ದಿನ, ಪೊಱಮಾಱುಗೆ–ಹಿಂದೆಗೆಯಲಿ; ಚಂದ್ರಕರಂಗಳ್–ಚಂದ್ರನ ಕಿರಣಗಳು, ಇಂದು, ಎರ್ದೆಗೆ–ಎದೆಗೆ, ತಣ್ಣಿದುವಕ್ಕೆ–ತಂಪಾ ದುವು ಆಗಲಿ; ಕೆಂದಳಿರ ಸೆಜ್ಜೆಯ–ಕೆಂಪು ಚಿಗುರು ಹಾಸಿಕೆಯ, ಜಿಂಜಿಣಿ–ತಾಪವು (?), ಪೋಕೆ–ಹೋಗಲಿ; ನಿನ್ನ ಕೂಟದೊಳ್–ನಿನ್ನ ಸೇರುವಿಕೆಯಲ್ಲಿ, ಮತ್ಸಖಿಗೆ–ನನ್ನ ಗೆಳತಿಗೆ, ಇನಿದಕ್ಕೆ–ಸವಿಯುಂಟಾಗಲಿ; ಗುಣಾರ್ಣವಾ–ಅರ್ಜುನನೇ, ಬೇಱೆ ಪಳಾಳದೊಳೇಂ–ಇತರ ಜಳ್ಳು ಮಾತುಗಳಿಂದ ಏನು ಪ್ರಯೋಜನ? ಜಿಂಜಿಣಿ ಎಂಬುದರ ಅರ್ಥ ಅಜ್ಞಾತವಾಗಿದೆ; ಇದಕ್ಕೆ ಉಷ್ಣತೆ (?) ಎಂಬರ್ಥವನ್ನು ಮಾಡಿದೆ (ಪಂಭಾ. ಕೋ).ಇದಕ್ಕೆ ಆಧಾರ ದೊರೆತಿಲ್ಲ; ‘ತಿಣಿ–ಸಂಛನ್ನೇ’ ಎಂಬ ಧಾತು ಪುನರುಕ್ತವಾಗಿ ತಿಣಿತಿಣಿ=ತಿಂತಿಣಿ ಆಗಿರುವಂತೆ, ಜಿಣಿ ಎಂಬ ಧಾತುವೊಂದಿದ್ದು ಜಿಣಿಜಿಣಿ=ಜಿಂಜಿಣಿ ಎಂಬ ನಾಮಪದವಾಗಿರಬಹುದು. ಪಳಾಳ (ಸಂ) ಪಲಾಲ–ಹುಲ್ಲುಕಡ್ಡಿ.
೧೯. ಸುಭದ್ರೆ ಬದುಕಿರುವುದೇ ನಮ್ಮ ಪುಣ್ಯ ಎಂದು ಅರ್ಜುನನಿಗೆ ಸಖಿ ಚೂತಲತಿಕೆ ಹೇಳುತ್ತಾಳೆ: ಬೆಳಗುವ–ಪ್ರಕಾಶಿಸುವ, ಸಾಂದ್ರಚಂದ್ರ ಕಿರಣಾವಳಿಗಳ ಓಳಿಗಳಿಂದಂ–ದಟ್ಟ ವಾದ ಚಂದ್ರಕಿರಣಗಳ ಸಾಲುಸಾಲುಗಳಿಂದ, ಎತ್ತಂ–ಎಲ್ಲೆಲ್ಲಿಯೂ, ಉಜ್ಜಿಸುವ–ತೊಳ ಗುವ, ಇರುಳ್ಗಳಂ–ರಾತ್ರಿಗಳನ್ನು, ಕಳೆದು–ಕಳೆದೂ, ತಳಿರ್ತೆಳ ಮಾವುಮಂ–ಚಿಗುರಿದ ಎಳೆಯ ಮಾವನ್ನು, ಮನಂಗೊಳೆ–ಮನಸ್ಸು ಮೆಚ್ಚುವಂತೆ, ನಡೆನೋಡಿಯುಂ–ನಟ್ಟ ನೋಟದಿಂದ ನೋಡಿಯೂ, ಇಂದೊಳದ–ಹಿಂದೋಲರಾಗದ, ಇಂಚರಕೆ–ಇನಿದಾದ ಧ್ವನಿಗೆ, ಕಿವಿಯ ನಾಂತುಂ–ಕಿವಿಗೊಟ್ಟೂ, ಅಂತುಮಿಂತುಂ–ಹಾಗೂ ಹೀಗೂ, ಕೋಮಳೆಯ–ಸುಭದ್ರೆಯ, ಅಸು–ಪ್ರಾಣ, ಈ ಯೊಡಲೊಳಿರ್ದುದು–ಈ ದೇಹದಲ್ಲಿದೆ, ಇದು, ಭೂಪತೀ–ರಾಜ ಅರ್ಜುನನೇ, ಎಮ್ಮಯ–ನಮ್ಮ; ಸೈಪು–ಪುಣ್ಯ.
ವಚನ : ಪಡೆಮಾತಂ–ಸುದ್ದಿಯನ್ನು; ಕರ್ಣಪರಂಪರೆಯಿಂ–ಕಿವಿಯಿಂದ ಕಿವಿಗೆ; ಚಕ್ರಿ– ಕೃಷ್ಣನು; ಚಕ್ರಿಕಾವರ್ತಿಯಪ್ಪುದಱಿಂ–ಚಕ್ರದಂತೆ ಸುತ್ತುವ ಶೀಲವುಳ್ಳವನಾದುದರಿಂದ ಅಥವಾ ಕೃತ್ರಿಮೋಪಾಯವುಳ್ಳವನಾದುದರಿಂದ; ನಾಣುಮಂ ನಡುಕಮಂ–ಲಜ್ಜೆಯನ್ನೂ ಭಯವನ್ನೂ; ಪತ್ತುವಿಟ್ಟು–ಬಿಟ್ಟು ಹೋಗುವಂತೆ ಮಾಡಿ.
೨೦. ಶ್ರೀಕೃಷ್ಣನ ಮಾತು: ಬಲದೇವಂ–ಬಲದೇವನು, ಎನ್ನನುಜೆಯಂ–ನನ್ನ ತಂಗಿ ಸುಭದ್ರೆಯನ್ನು, ದುರ್ಯೋಧನಂಗೆ–ದುರ್ಯೋಧನನಿಗೆ, ಕುಡಲಿರ್ಪಂ–ಕೊಡಲು ಇರುವನು, ಎಂದರೆ ಕನ್ಯಾದಾನ ಮಾಡಲು ಇರುವನು; ಆನ್–ನಾನು, ಒಡಂಬಡೆನ್–ಒಪ್ಪೆನು; ನಿನಗೆ– ನಿನಗೆ, ಈವ ಅೞ್ತಿ–ಕನ್ಯಾದಾನ ಮಾಡುವ ಪ್ರೀತಿ, ಆಗಳುಂ–ಯಾವಾಗಲೂ, ದಲ್–ನಿಶ್ಚಯ ವಾಗಿಯೂ, ಪದ್ಮಾಸನಂ–ಬ್ರಹ್ಮನು, ತಾನೆ–ತಾನೇ, ನೇರ್ವಡಿಸಲ್–ಸರಿಮಾಡಲು, ಕೂಡಿ ದಂ–ನಿಮ್ಮಿಬ್ಬರನ್ನು ಒಟ್ಟಿಗೆ ಸೇರಿಸಿದನು; ಇಂ ಇರ್ಪುದು ನಯಮಲ್ತು–ಇನ್ನು ಇರುವುದು ನೀತಿಯಲ್ಲ; ಈ ಪೊೞ್ತೆ–ಈ ಹೊತ್ತೆ, ಪೊೞ್ತಾಗೆ–ಹೊತ್ತಾಗಲು; ನೀಂ–ನೀನು, ಕನ್ನೆಯಂ– ಕನ್ಯೆಯನ್ನು, ಒಡಗೊಂಡು–ಜೊತೆಯಲ್ಲಿಟ್ಟುಕೊಂಡು, ಉಯ್ವುದು–ತೆಗೆದುಕೊಂಡು ಹೋಗುವುದು; ವಿದ್ವಿಷ್ಟ ವಿದ್ರಾವಣಾ–ಅರ್ಜುನನೇ, ತಡೆಯದಿರ್–ತಡಮಾಡಬೇಡ.
ವಚನ : ಪೋಗೆ ವೋಗೆ–ಹೋಗುತ್ತಿರಲು; ಅನುಮತದೊಳ್–ಸಮ್ಮತಿಯಲ್ಲಿ; ಪೆಱಗಂತಗುಳ್ವ–ಬೆನ್ನಟ್ಟಿ ಬರುವ; ಅಂಬುಗಾಣಿಸಲ್–ಬಾಣವನ್ನು ತೋರಿಸಲು ಎಂದರೆ ಬಾಣಪ್ರಯೋಗ ಮಾಡಲು; ನೀನೆ ಸಾಲ್ವೆ–ನೀನೇ ಸಮರ್ಥನಾಗಿರುವೆ; ಮಾಣಿಸಲ್– ತಡೆಯಲು, ನಿಲ್ಲಿಸಲು; ಬಟ್ಟೆಯೊಳ್–ದಾರಿಯಲ್ಲಿ:
೨೧. ಎನ್ನಂ–ನನ್ನನ್ನು, ಉಱದೆ–ಲಕ್ಷಿಸದೆ, ಕುಡಲಿರ್ದ ಕೂಸಂ–ದಾನವಾಗಿ ಕೊಡಲಿ ರುವ ಹೆಣ್ಣನ್ನು, ಒಡಗೊಂಡುಯ್ವಾತನಂ–ಜೊತೆಯಲ್ಲಿ ಕರೆದುಕೊಂಡು ಹೋಗುವವನನ್ನು, ತಾಗಿ–ಎದುರಿಸಿ, ತಳ್ತಿಱಿಯಲ್–ಸೇರಿ ಹೋರಾಡಲು, ಕೋಡಗಗಟ್ಟು ಗಟ್ಟಿತರಲ್– ಕಪಿಯನ್ನು ಕಟ್ಟಿದ ಹಾಗೆ ಕಟ್ಟಿ ತರಲು, ಇನ್ನಾರಾರ್ಪರ್–ಇನ್ನು ಯಾರು ಸಮರ್ಥರಾಗು ತ್ತಾರೆ, ಅಂತಪ್ಪ–ಅಂಥ, ಪೊಚ್ಚಱಸಾಮಂತರೆ–ಪರಾಕ್ರಮವುಳ್ಳ ಸಾಮಂತರೇ, ಪೋಗಿಮೆಂದು– ಹೋಗಿರಿ ಎಂದು, ಪಲರಂ–ಹಲವರನ್ನು, ಪೇೞ್ದೀಗಳ್–ನಿಯಮಿಸಿದಾಗ, ಎಯ್ತಂದರಂ– ಸಮೀಪಿಸಿ ಎದುರಿಸಿದವರನ್ನು, ಅರಿಗನೆಚ್ಚ–ಅರ್ಜುನನು ಪ್ರಯೋಗಿಸಿದ, ಉಗ್ರೇಷು– ಭಯಂಕರವಾದ ಬಾಣಗಳ, ಧಾರಾಜಳಂ–ಧಾರಾಕಾರವಾದ ನೀರು, ತೊಱೆಕೊಳ್ವಂತಿರೆ–ನದಿ ಮೇಲೆ ನುಗ್ಗಿದ ಹಾಗೆ, ಅಂದು–ಆಗ, ಕೊಂಡುವು–ಆಕ್ರಮಿಸಿದುವು.
ವಚನ : ತನ್ನ ಪೇೞ್ದ–ತಾನು ನಿಯಮಿಸಿದ; ತೆರಳಲ್ ಬಗೆದ–ಹೋಗಲೆಳಸಿದ.
೨೨. ಶ್ರೀಕೃಷ್ಣನ ಸಮಾಧಾನ : ಕುಲಮಂ–ಕುಲದ ವಿಷಯವನ್ನು, ಪೇೞ್ವೊಡೆ–ಹೇಳುವ ಪಕ್ಷದಲ್ಲಿ, ಸೋಮವಂಶತಿಲಕಂ–ಚಂದ್ರವಂಶದಲ್ಲಿ ಶ್ರೇಷ್ಠನಾದವನು; ಬಲ್ಲಾಳ್ತನಂ ಬೇೞ್ವೊಡೆ–ಪರಾಕ್ರಮವನ್ನು ಹೇಳುವ ಪಕ್ಷದಲ್ಲಿ, ಉಜ್ವಲ….ವ್ಯೂಹಂ; ಉಜ್ವಲ–ಹೊಳೆ ಯುವ, ತೀವ್ರ–ತೀಕ್ಷ್ಣವಾದ, ಅಸ್ತ್ರ–ಬಾಣಗಳ, ನಿಘಾತದಿಂ ಹೊಡೆತದಿಂದ, ನಿಪಾತಿತ – ಕೆಡವಿದ, ರಿಪೂವ್ಯಹಂ–ಶತ್ರುಸಮೂಹವುಳ್ಳವನು; ಬಲಂಬೇೞೆ–ಶಕ್ತಿಯನ್ನು ಹೇಳಲು, ದೋರ್ವಲದೊಳ್–ಬಾಹುಬಲದಲ್ಲಿ, ನಿನಗಂ–ನಿನಗಿಂತಲೂ, ಬಲಸ್ಥಂ–ಬಲಶಾಲಿಯಾದ ವನು; ಕೂಸಿಂಗೆ–ಸುಭದ್ರೆಗೆ, ಒಡೆಯಂ–ವಲ್ಲಭನು; ಕೊಂಡುಯ್ವುದು–ತೆಗೆದುಕೊಂಡು ಹೋಗುವುದು, ಏಚಲಂ–ಏನು ಛಲ, ಏಂದೋಷಂ–ಏನು ತಪ್ಪು, ಅದರ್ಕೆ–ಅದಕ್ಕಾಗಿ, ನೀಂ–ನೀನು, ಮುಳಿವುದೇ–ಕೋಪಿಸಿಕೊಳ್ಳುವುದೇ? ನೀನ್–ನೀನು, ಪೇೞ್ವೊಡೆ–ನನಗೆ ಹೇಳುವ ಪಕ್ಷದಲ್ಲಿ, ಎಂದರೆ ಅರ್ಜುನನೊಡನೆ ಹೋರಾಡು ಎಂದು ನಿಯಮಿಸಿದ ಪಕ್ಷದಲ್ಲಿ, ಆಂ–ನಾನು, ಸಾಲೆನೇ–ಸಮರ್ಥನಾಗೆನೇ?
ವಚನ : ತಳಿದು–ಚಿಮುಕಿಸಿ : ನದಿಪಿದಂ–ಆರಿಸಿದನು; ಸಹಕಾರ–ಮಾವಿನ ಮರ; ಅನೋಕಹ–ಮರ, ವೃಕ್ಷ; ಮುಹುರ್ಮುಹುರಾಲೋಕನಂಗೆಯ್ಯುತ್ತಂ–ಪುನಃ ಪುನಃ ನೋಡುತ್ತ; ಪೊೞಲಂ ವುಗೆ–ನಗರವನ್ನು ಹೊಗಲು.
೨೩. ಪರಸುವ–ಹರಸುವ, ಪುರಜನದ–ಪಟ್ಟಣಿಗರ, ಒದವಿದ–ಉಂಟಾದ, ಪರಕೆ ಗಳ್–ಆಶೀರ್ವಾದಗಳು, ಅಂಬುಧಿನಿನಾದಮಂ–ಸಮುದ್ರ ಘೋಷವನ್ನು, ಮಿಗೆ–ಮೀರಲು, ತಮ್ಮಯ್ವರುಂ–ತಾವೈದು ಜನರೂ, ಒಡನೆ–ಜೊತೆಯಲ್ಲೆ, ಮೆಱೆದು–ಪ್ರಕಾಶಿಸಿ, ಪರಮಾನು ರಾಗದಿಂ–ಅತಿ ಸಂತೋಷದಿಂದ, ಬಂದು, ಅರಮನೆಯಂ, ಪೊಕ್ಕರ್.
ವಚನ : ತಮ್ಮನಿಬರುಮೇಕಸ್ಥರಾಗಿ–ತಾವೆಲ್ಲ ಒಟ್ಟಾಗಿ,
೨೪. ಎರೆದು–ಬೇಡಿ; ಯಾಚಿಸಿ, ಇಂತು–ಹೀಗೆ, ಅಟ್ಟಲೆವೇೞ್ಪ–ದೂತರನ್ನು ಕಳಿಸ ಬೇಕಾದ, ಕನ್ನೆ–ಕನ್ಯೆಯು, ಎಂದರೆ ಕನ್ಯೆಯನ್ನು ನಮಗೆ ವಿವಾಹದಲ್ಲಿ ದಾನ ಮಾಡಿರಿ ಎಂದು ಯಾಚಿಸಿ ದೂತರ ಮೂಲಕ ಹೇಳಿಕಳಿಸಬೇಕಾದ ಕನ್ಯೆ, ಮರುಳ್ದು–ಮೋಹಿಸಿ, ಬೞಿಯಂ ಬಂದಳ್–ಹಿಂದೆಯೇ ಬಂದಳು; ಅಂಬುಜೋದರಂ–ಕೃಷ್ಣನು, ಇಂತು ಅಟ್ಟಿದಂ–ಹೀಗೆ ಕಳಿಸಿಕೊಟ್ಟನು; ಇಂತು–ಹೀಗೆ, ಸೈಪಿಂಗೆ–ಪುಣ್ಯಕ್ಕೆ, ನೋಂತರ್–ವ್ರತ ಮಾಡಿದವರು, ಒಳರೇ–ಉಂಟೇ? ನಾಮ್–ನಾವು, ಇನ್–ಇನ್ನು ಮೇಲೆ, ಇಳಾಧರನುಂ–ಕೃಷ್ಣನೂ, ಯಾದವ ವಂಶಜರ್ವೆರಸು–ಯದುಕುಲದಲ್ಲಿ ಹುಟ್ಟಿದವರೊಡನೆ ಸೇರಿ, ಬರ್ಪಂತಟ್ಟಿ–ಬರುವ ಹಾಗೆ ದೂತರನ್ನು ಕಳಿಸಿ, ಮನೋಹರಮಪ್ಪಂತು–ರಮಣೀಯವಾಗುವ ಹಾಗೆ, ವಿವಾಹ ಮಂಗಳಮಂ–ವಿವಾಹದ ಒಸಗೆಯನ್ನು, ಮಾೞ್ಪಂ–ಮಾಡೋಣ, ಎಂದು, ಅಂದು, ದೂತ ರಂ–ದೂತರನ್ನು, ಅಟ್ಟಿದರ್–ಕಳಿಸಿಕೊಟ್ಟರು.
ವಚನ : ಕಜ್ಜಮಂ–ಕಾರ್ಯವನ್ನು, ಒಡಂಬಡಿಸಿ–ಒಪ್ಪಿಸಿ; ಪ್ರತಿಪತ್ತಿಗಳಿಂ–ಸತ್ಕಾರಗಳಿಂದ;
೨೫. ಪಸುರ್ವಂದರ್–ಹಸುರವಾಣಿ ಚಪ್ಪರ, ಪಸೆ–ಹಸೆಮಣೆ, ವೇದಪಾರಗರವಂ– ವೇದದಲ್ಲಿ ಪಂಡಿತರಾದವರ ಘೋಷ, ಕಣ್ಬೇಟದ–ಕಣ್ಣಿನ ಪ್ರೀತಿಯ ಎಂದರೆ ಚಕ್ಷು ಪ್ರೀತಿಯ, ಉದ್ದಾನಿಯಂ–ಅತಿಶಯವನ್ನು, ಪಸರಂಗೆಯ್ದವೊಲಪ್ಪ–ಅಂಗಡಿ ಹಾಕಿದ ಹಾಗೆ ಇರುವ, ಪೊಚ್ಚಱ–ಶೂರರಾದ, ಮಹಾಸಾಮಂತ–ಮಹಾಸಾಮಂತ ರಾಜರ, ಸೀಮಂತಿನೀ ಪ್ರಸರಂ–ಸ್ತ್ರೀಯರ ಸಮೂಹ, ಮಂಗಳತೂರ್ಯನಾದಂ–ಮಂಗಳವಾದ್ಯಗಳ ಧ್ವನಿ, ಎಸೆಯುತ್ತಿರ್ಪನ್ನೆಗಂ–ಸೊಗಸಾಗುತ್ತಿರಲು, ಚಕ್ರಿ–ಶ್ರೀಕೃಷ್ಣನು, ರಾಗಿಸಿ–ಸಂತೋಷಪಟ್ಟು, ಗುಣಾರ್ಣವ ಮಹೀಪಾಲಂಗಂ–ಅರ್ಜುನ ಭೂಪತಿಗೂ, ಆ ಕನ್ನೆಯಂ–ಆ ಸುಭದ್ರೆಯನ್ನು, ಕೆಯ್ನೀರೆಱೆದಂ–ದಾನಧಾರೆಯನ್ನು ಹೊಯ್ದನು, ಎಂದರೆ ಮದುವೆ ಮಾಡಿಸಿದನು.
ವಚನ : ಬೇಟಮೆಂಬ–ಪ್ರೀತಿಯೆಂಬ; ಪೊಯ್ನೀರೆಱೆವಂತೆ–ಹೊಯ್ನೀರು ಹಾಕಿದ ಹಾಗೆ; ಬಿಯಮಂ–ವ್ಯಯವನ್ನು, ಮೆಱೆದು–ಪ್ರಕಟಿಸಿ ಎಂದರೆ ಯಥೇಚ, ವಾಗಿ ದ್ರವ್ಯವನ್ನು ಖರ್ಚುಮಾಡಿ.
೨೬. ಕೃಷ್ಣ ತನ್ನ ತಂಗಿಗೆ ಬಳುವಳಿ ಕೊಟ್ಟದ್ದು: ತೊಟ್ಟ ತುಡುಗೆಗಳ್–ತಾನು ಧರಿಸಿದ ಒಡವೆಗಳು, ಓರೊಂದೆ–ಒಂದೊಂದೇ, ಕೌಸ್ತುಭರತ್ನಮಂ–ವಿಷ್ಣುವಿನ ಎದೆಯಲ್ಲಿರುವ ಕೌಸ್ತುಭವೆಂಬ ರತ್ನವನ್ನು, ಮಸುಳಿಸೆ–ಕಾಂತಿಹೀನವಾಗಿ ಮಾಡುತ್ತಿರಲು; ಪಾಲ್ಗಡ ಲೊಳ್–ಕ್ಷೀರಸಮುದ್ರದಲ್ಲಿ, ಪುಟ್ಟಿದ–ಹುಟ್ಟಿದ, ಆನೆಯಂ–ಆನೆಯನ್ನು, ಐರಾವತವನ್ನು, ಆನೆಗಳ್–ಆನೆಗಳು, ಗೆಲೆವರೆ–ಮೀರಿಸಲು; ಕುದುರೆಯಂ–ಉಚ್ಚೈಶ್ರವವನ್ನು, ಕುದುರೆ ಗಳ್–ಕುದುರೆಗಳು, ಕೀೞ್ಮಾಡೆ–ತಿರಸ್ಕರಿಸಲು; ಗಣಿಕೆಯರ್–ಸ್ತ್ರೀಯರು, ತೊಟ್ಟ– ಹೂಡಿದ, ಮದನನ–ಮನ್ಮಥನ, ಪೂಗಣೆಗೆ–ಹೂವಿನ ಬಾಣಕ್ಕೆ, ಎಣೆಯಾಗೆ–ಸಮಾನ ವಾಗಲು; ಗಣಿದಮಂ–ಲೆಕ್ಕವನ್ನು, ಬಗೆಯದೆ–ಎಣಿಸದೆ, ತಂಗೆಗೆ–ತಂಗಿಗೆ, ಬೞಿವೞಿ ಯೆಂದು–ಬಳುವಳಿಯೆಂದು, ಇಂತು, ಪುರುಷೋತ್ತಮಂ–ಶ್ರೀಕೃಷ್ಣ, ಸರ್ವಸ್ವಮೆಲ್ಲಮಂ– ತನ್ನ ಎಲ್ಲ ಐಶ್ವರ್ಯವನ್ನೂ, ಇಂತು–ಹೀಗೆ, ಕೊಟ್ಟಂ–ಕೊಟ್ಟನು, ಇದು ಪಿರಿಯಕ್ಕರ ಎಂಬ ದೇಸಿವೃತ್ತ : ಪ್ರತಿ ಪಾದದಲ್ಲೂ ೧ ಬ್ರಹ್ಮಗಣ, ೫ ವಿಷ್ಣುಗಣಗಳು, ೧ ರುದ್ರಗಣ ಹೀಗೆ ಏಳು ಗಣಗಳಿರುತ್ತವೆ; ವಿಷ್ಣುಗಣಗಳ ಸ್ಥಾನದಲ್ಲಿ ಕೆಲವು ವೇಳೆ ಬ್ರಹ್ಮಗಣ–ಬಂದರೂ ಬರ ಬಹುದು; “ಪದದೊಳೆರಡೆಂಬಸಂಖ್ಯೆಯೊಳಾಱಱೊಳಜಗಣಂ ಸಮವಾಯಮ ಪ್ಪೊಡಕ್ಕುಂ” ಎಂದು ನಾಗವರ್ಮ ಹೇಳಿದ್ದಾನೆ. ಇಲ್ಲಿ ಎರಡು, ಆರು ಎಂಬ ಗಣಸ್ಥಾನಗಳ ನಿರ್ದೇಶವಿದ್ದರೂ ಮಿಕ್ಕ ಸ್ಥಾನಗಳಲ್ಲೂ ಅಜಗಣ ಬರಬಹುದು ಎಂದು ಕವಿ ಪ್ರಯೋಗ ಗಳಿಂದ ಹೇಳಬಹುದಾಗಿದೆ.
ವಚನ : ಇಂಬೞಿಯಂ–ಇನ್ನು ಅನಂತರ, ತರುವಾಯ; ಕೞಿಪಿದಂ–ಕಳುಹಿಸಿ ಕೊಟ್ಟನು.
೨೭. ತಳಿರ್ಗಳ ಪಾಸಿನೊಳ್–ಚಿಗುರುಗಳ ಹಾಸಿಗೆಯಲ್ಲಿ, ಪೊರುಳುತಿರ್ದೞಲಂ– ಹೊರಳುತ್ತಿದ್ದ ಸಂತಾಪವನ್ನು, ಸೋಂಕುಗಳ್–ಪರಸ್ಪರ ಸ್ಪರ್ಶವು, ಕಿಡೆ ಸೋಂಕೆ–ಕೆಡು ವಂತೆ ಮುಟ್ಟಲು; ಬಿಗಿಯಪ್ಪಿದಪ್ಪುಗಳ್–ಬಿಗಿಯಾಗಿ ತಬ್ಬಿಕೊಂಡ ಆಲಿಂಗನಗಳು, ಮೆಯ್ಯಸುಯ್ಯ–ಮೈಯಿನ, ಉಸಿರಿನ, ಪದವೆಂಕೆಗಳಂ–ಹದವಾದ ಉರಿಗಳನ್ನು, ಕಳೆದುವು– ಹೋಗಲಾಡಿಸಿದುವು; ಅೞ್ಕಱನೀವ ಚುಂಬನಂ–ಪ್ರೀತಿಯನ್ನು ಕೊಡುವ ಮುತ್ತುಗಳು, ನಾಣು ಮಂ–ಲಜ್ಜೆಯನ್ನೂ, ಕಿಱಿದುಜಾಣುಮಂ–ಸ್ವಲ್ಪ ಜಾಣತನವನ್ನೂ, ಕಳೆದುವು–ಹೋಗು ವಂತೆ ಮಾಡಿದುವು; ಅವರಿರ್ವರ–ಅವರಿಬ್ಬರ, ಮನ್ಮಥದ್ರವಂ–ಮದನೋದಕ, ಗರ್ವಮಂ– ಉಷ್ಣವನ್ನು, ಕಳೆದುವು–ಹೋಗಲಾಡಿಸಿದುವು.
೨೮. ಅಭಿನವಮದಲೇಖಾಲಾಲಿತಂ–ಹೊಸದಾಗಿ ಕಸ್ತೂರಿಯಿಂದ ಬರೆದ ಮದಲೇಖೆ ಯಿಂದ ಪೋಷಿಸಲ್ಪಟ್ಟ; ವಿಭ್ರಮ ಭ್ರೂರಭಸಗತಿ ವಿಳಾಸಂ–ಸುಂದರವಾದ ಹುಬ್ಬಿನ ವೇಗ ವಾದ ಚಲನೆಯ ವಿಳಾಸವನ್ನುಳ್ಳ; ದೀಪ್ತ ಕಂದರ್ಪದರ್ಪ ಕ್ಷುಭಿತಗಳ ನಿನಾದಂ– ಉದ್ದೀಪನಗೊಂಡ ಕಾಮಗರ್ವದಿಂದ ಕೆರಳಿದ ಕೊರಳ ಉಲಿಯನ್ನುಳ್ಳ; ಪ್ರಸ್ಫುರದ್ಘರ್ಮ ವಾರಿ ಪ್ರಭವಂ–ಹೊಳೆಯುತ್ತಿರುವ ಬೆವರು ನೀರುಗಳನ್ನು ಹುಟ್ಟಿಸುವ, ಕಾಂತಸಂಗಂ– ನಲ್ಲನ ಸಮಾಗಮ, ಆ ಕಾಂತೆಗೆ–ಆ ಸುಭದ್ರೆಗೆ, ಎಸೆದುದು–ಸೊಗಸಾಯಿತು. “ನನಮಯಯ ಗಣಂಗಳ್ ಮಾಲಿನೀವೃತ್ತಮಕ್ಕುಂ.”
ವಚನ : ಸಮಸತ್ವ–ಸಮಾನವಾದ ಶಕ್ತಿ; ಸಮರತ–ಸಮಾನವಾದ ರತಿಕ್ರೀಡೆ.
೨೯. ಒಟ್ಟಜೆಯಿಂ–ಪರಾಕ್ರಮದಿಂದ, ಭಾರತದೊಳ್–ಭಾರತ ಯುದ್ಧದಲ್ಲಿ, ಕಟ್ಟಾಳ್ಗಳಂ–ಅತಿಶೂರರಾದ, ಜಟ್ಟಿಗರಂ–ವೀರರನ್ನು, ಇಱಿದು–ಹೊಡೆದು, ತವಿಸಲ್– ನಾಶಮಾಡಲು, ಪುಟ್ಟಿದನೆಂಬವೊಲ್–ಹುಟ್ಟಿದನೆಂಬಂತೆ, ಅದಟಂ–ಶೂರನಾದ, ಅಭಿಮನ್ಯು, ಕಲಿತನಂ ಪುಟ್ಟುವವೋಲ್–ಪರಾಕ್ರಮವು ಜನ್ಮತಾಳಿದ ಹಾಗೆ, ಪುಟ್ಟಿದಂ–ಹುಟ್ಟಿದನು. ಒಟ್ಟಜೆ ಎಂದರೆ ಸಮೂಹ, ಅತಿಶಯ, ಎಂದು ನಿಘಂಟುಗಳಲ್ಲಿ ಕಾಣುತ್ತವೆ; ಆದರೆ ಕವಿ ಪ್ರಯೋಗಗಳಲ್ಲಿ ಬೇರೆ ಬೇರೆ ಅರ್ಥಛಾಯೆಗಳು ಕಾಣಿಸುತ್ತವೆ. “ತೋಳ್ವಲದ ವೊಡರ್ಪು ಮೊಟ್ಟಜೆಯುಮುನ್ನತಿಯುಂ ಸಲೆ ಕುಂದರಾಜನಾ” (ಶಾಪಮಂ. ೪೦) ಎಂಬಲ್ಲಿ ಪರಾಕ್ರಮ ಎಂದಾಗಬಹುದು; “ಒಟ್ಟಜೆಗೆಟ್ಟು ಲಂಕೆಯ ವಿಭೀಷಣನಿತ್ತ ಕುಬೇರನಳ್ಕಿ ತಂದೊಟ್ಟಿದ ಪೊನ್ನರಾಶಿಗಳನಿತ್ತು” ; “ಒಟ್ಟಜೆಯ ಕಪ್ಪಮನಟ್ಟವುದೆಂದು” ಎಂಬ ರನ್ನನ ಪ್ರಯೋಗ ಗಳಲ್ಲಿ ಬೇರೆ ಅರ್ಥವಿರುವಂತಿದೆ.
ಇಲ್ಲಿಗೆ ಅರ್ಜುನ ಕೃತ ಸುಭದ್ರಾಹರಣ ಪ್ರಸಂಗ ಮುಗಿಯುತ್ತದೆ; ಈ ಕಥಾ ನಿರೂಪಣೆಗೆ ಪಂಪನು ಸುಮಾರು ೧೭೫ ಪದ್ಯಗಳನ್ನೂ ಅಷ್ಟೇ ಗದ್ಯಗಳನ್ನೂ ಬಳಸಿದ್ದಾನೆ. ವ್ಯಾಸಕೃತ ಮಹಾಭಾರತದಲ್ಲಿ ಈ ಉಪಾಖ್ಯಾನ ಸುಮಾರು ೩೦–೪೦ ಶ್ಲೋಕಗಳಲ್ಲಿ ಮುಗಿದು ಹೋಗುತ್ತದೆ. ಎಷ್ಟೋ ಉಪಾಖ್ಯಾನಗಳನ್ನು ಒಂದೆರಡು ಪದ್ಯಗಳಲ್ಲಿಯೇ ಸಂಗ್ರಹಿಸಿ ಮುಂದಕ್ಕೆ ಧಾವಿಸುವ ಪಂಪ ಈ ಅಲ್ಪವಾದ ಸುಭದ್ರಾಹರಣ ಪ್ರಸಂಗಕ್ಕೆ ಏಕೆ ಇಷ್ಟು ಗಮನ ಸಲ್ಲಿಸಿ ವಿಸ್ತರಿಸಿದನು? ಅರಿಕೇಸರಿ ಬರಿ ಶೂರನಲ್ಲ, ಉತ್ತಮ ಶೃಂಗಾರ ನಾಯಕನೂ ಆಗಿದ್ದ ನೆಂಬುದನ್ನು ನಿರೂಪಿಸುವುದು ಕವಿಯ ಉದ್ದೇಶಗಳಲ್ಲಿ ಒಂದಾಗಿರಬಹುದು; ‘ಪ್ರಿಯಗಳ್ಳ’ ಎಂಬ ಅರಿಕೇಸರಿಯ ಬಿರುದಿಗೆ ಸಾರ್ಥಕತೆಯನ್ನು ಕಾಣಿಸಲು ಕವಿ ಹವಣಿಸಿರಬಹುದು. ರಾಷ್ಟ್ರಕೂಟ ಮುಮ್ಮಡಿ ಇಂದ್ರ ರಾಜನ ಮಗಳು ರೇವಕ ನಿರ್ಮಡಿ ಮತ್ತು ಲೋಕಾಂಬಿಕೆ ಯೆಂಬ ಇಬ್ಬರು ಪತ್ನಿಯರು ಅರಿಕೇಸರಿಗಿದ್ದರು. ಅರ್ಜುನ ಸುಭದ್ರಾಹರಣ ಮಾಡಿದಂತೆ ಇವರಲ್ಲಿ ಯಾರನ್ನಾದರೂ ಒಬ್ಬಳನ್ನು ಅರಿಕೇಸರಿ ಅಪಹರಿಸಿಕೊಂಡು ಮದುವೆಯಾಗಿರ ಬಹುದು; ಇಲ್ಲದಿದ್ದರೆ ಇನ್ನಾವಳೋ ಒಬ್ಬಳನ್ನು ಅಪಹರಿಸಿರಬಹುದು. ಈ ಕಾರಣದಿಂದ ಅವನು ಪ್ರಿಯಗಳ್ಳನಾಗಿರಬಹುದು. ಅರಿಕೇಸರಿಯ ಈ ಮಹಾಕಾರ್ಯವನ್ನು ಮೆಚ್ಚಿಕೊಂಡ ಪಂಪ ಈ ಉಪಾಖ್ಯಾನವನ್ನು ದೀರ್ಘವಾಗಿ ಬೆಳಸಿರಬಹುದು. ಏನೇ ವಿಶೇಷ ಕಾರಣ ಗಳಿದ್ದಿರಬಹುದಾದರೂ ಕಥಾರಚನೆಯ ದೃಷ್ಟಿಯಿಂದ, ವ್ಯಾಸಭಾರತವನ್ನು ಸಂಕ್ಷಿಪ್ತಗೊಳಿ ಸುವ ದೃಷ್ಟಿಯಿಂದ, ನೋಡಿದರೆ ಇದು ಮೂಗಿಗಿಂತ ಮೂಗುತಿ ಭಾರವೆಂಬಂತಿದೆ; ಪಂಪನ ಪ್ರಮಾಣ ಪರಿಜ್ಞಾನ ಇಲ್ಲಿ ಅವನನ್ನು ತೊರೆದಿದೆ. ಅವನ ನಿರೂಪಣೆಯಲ್ಲಿ ಸೊಗಸಿಲ್ಲ ವೆಂದಲ್ಲ; ಸೂರ್ಯಾಸ್ತ ಚಂದ್ರೋದಯಗಳ ವರ್ಣನೆ, ಬೆಳುದಿಂಗಳಿನ ಚೆಲ್ವು, ಸುಭದ್ರಾರ್ ಜುನರ ವಿರಹವರ್ಣನೆ, ವೇಶ್ಯಾವಾಟಿಯ ಬಿಡಿ ಬಿಡಿ ಚಿತ್ರಗಳು, ಮಧುಪಾನಗೋಷ್ಠಿ ಅಲ್ಲಿ ಕಾಣುವ ಜನಜೀವನ, ಪಂಪನ ಸೌಂದರ್ಯ ದೃಷ್ಟಿ, ಅವನ ರಸಿಕತೆ–ಇವೆಲ್ಲ ಈ ಕಥಾನಕ ದಲ್ಲಿ ಸ್ವಾರಸ್ಯಕರವಾದ ಅಂಶಗಳು. ಇವು ಚೆನ್ನಾಗಿಲ್ಲವೆಂದು ಹೇಳಲಾಗದು. ಇಲ್ಲಿರುವ ಮುಕ್ತಕಗಳು ಮನೋಹರವಾಗಿವೆ.
೩೦. ವಸಂತಕಾಲದ ವರ್ಣನೆ: ಅಗರುವ–(ಚಳಿಗಾಲದಲ್ಲಿ ಧೂಪಕ್ಕಾಗಿ ಉಪ ಯೋಗಿಸುವ) ಅಗರುವಿನ, ಮೆಚ್ಚು–ಮೆಚ್ಚಿಕೆಯು, ಅಚ್ಚ ಸಿರಿಕಂಡದೊಳ್–ಅಚ್ಚ ಶ್ರೀಗಂಧದ ಲೇಪನದಲ್ಲಿ, ಅಗ್ಗಲಿಸಿತ್ತು–ಅಧಿಕವಾಯಿತು; ಸೂಡುಶಯ್ಯೆಗಳ–ಬೆಚ್ಚನೆಯ ಹಾಸಿಗೆಗಳ, [ಬ] ಕ್ಕೆ–ಬಯಕೆಯು, ಜೊಂಪದಲರ್ವಾಸುಗಳೊಳ್–ಗೊಂಚಲಾಗಿರುವ ಹೂವಿನ ಹಾಸಿಗೆ ಗಳಲ್ಲಿ, ನೆಲಸಿತ್ತು–ನೆಲಸಿತು, ಪೂತಗೊಜ್ಜಗೆಗಳ–ಸೇವಂತಿ ಹೂವುಗಳ, ಸಿಂದುರಂಗಳ– ಸಿಂದುರ ಎಂಬ ಹೂವುಗಳ, ಒಳಗೆ, ಓಗರಗಂಪನೆ ಮಿಶ್ರವಾದ (?) ಸುಗಂಧವನ್ನೇ, ಬೀಱುತಿರ್ಪ–ಚೆಲ್ಲುತ್ತಿರುವ, ಮಲ್ಲಿಗೆಯೊಳ್–ಮಲ್ಲಿಗೆಯಲ್ಲಿ, ಅರಲ್ದ–ಅರಳಿದ, ಸಂಪಗೆ ಯೊಳ್–ಸಂಪಿಗೆ ಹೂವಿನಲ್ಲಿ, ಬಸಂತಮಾಸದೊಳ್–ವಸಂತದ ತಿಂಗಳುಗಳಲ್ಲಿ, ಅಗ್ಗಳಿ ಸಿತ್ತು–ಅತಿಶಯವಾಯಿತು. ಇಲ್ಲಿ ಬಿಯಕ್ಕೆ ಎಂಬ ಪಾಠವನ್ನು [ಬ] ಯಕ್ಕೆ ಎಂದು ತಿದ್ದಿ ಕೊಂಡಿದೆ: ಬಯಕೆ, ಬಯಕ್ಕೆ, ಬಯಂಕೆ–ಎಂದು ಮೂರು ರೂಪಗಳುಂಟು (ಪಂ.ಭಾ. ೧೩–೬; ಅರ್ಧನೇ ೨–೨೫); ಓಗರಗಂಪು ಎಂಬಲ್ಲಿನ ಓಗರಕ್ಕೆ ಅನ್ನ ಎಂದು ಅರ್ಥ ಮಾಡಿ, ಪಕ್ವವಾದ ಎಂದು ಅರ್ಥೈಸಿದೆ (ಪಂ.ಭಾ. ಕೋ). ಇದೇ ಓಗರ ಶಬ್ದ ‘ಓಗರವೂಗಳ ಕಂಪನೆಯ್ದೆ ಪೀರುತ್ತೊಡವಂದುವಿಂದ್ರವನದಿಂ’ ಎಂಬಲ್ಲಿ ಇನ್ನೊಂದು ಸಲ ಪ್ರಯೋಗ ವಾಗಿದೆ (ಪಂ.ಭಾ. ೧೧.೮೧); ‘ಪ್ರಫುಲ್ಲಮಲ್ಲೀನವಪುಷ್ಪದೋಗರದ ಕಂಪುಗಳಾಗರ ಮಾಯ್ತು ಸುಗ್ಗಿಯೊಳ್’ (ಚಂದ್ರಪು ೭–೪೯) ಎಂಬ ಇನ್ನೊಂದು ಪ್ರಯೋಗವಿದೆ. ಪ್ರಾಕೃತದಲ್ಲಿ ಓಗರ, ಒಗ್ಗರ–ಎಂದರೆ ಒಂದು ತೆರನಾದ ಬತ್ತ. ಈ ಅರ್ಥ ಹೊಂದುವುದಿಲ್ಲ. ಬಗೆಬಗೆಯಾದ ಹೂಗಳ ಸಮ್ಮಿಶ್ರವಾದ ಕಂಪು, ಕದಂಬ ಗಂಧ ಎಂದು ಅರ್ಥಮಾಡ ಬಹುದು. ‘ಕದಂಬ ದಂಬುಲ’ ನೋಡಿ. ‘ಅಲರ್ದ ಪೊಸಸಿಂದುರಂಗಳಂ’ ಎಂಬ ಪ್ರಯೋಗ ದಲ್ಲಿ (ಆದಿಪು. ೧೧–೯೦) ಸಿಂದುರ ಎಂಬುದು ಒಂದು ಹೂವೆಂದು ಸ್ಪಷ್ಟವಾಗಿದೆ; ಇದು ‘ಸಿಂಧುವಾರ’ ದ ತದ್ಭವವಿರಬಹುದು.
೩೧. ಮುಂ–ಮೊದಲು, ಮಹಿಯೆಲ್ಲಮಂ–ಭೂಮಿಯನ್ನೆಲ್ಲ, ಶಿಶಿರರಾಜನೆ–ಮಾಗಿಯ ಕಾಲವೆಂಬ ರಾಜನೇ, ಬಿಚ್ಚತಂ–ವಿಸ್ತಾರವಾಗಿ, ಆಳ್ದಂ–ಆಳಿದನು; ಈಗಳ್–ಈಗ, ಆತಂ– ಆತನು, ಮಿಡುಕಲ್ಕೆ–ಅಲುಗಾಡುವುದಕ್ಕೆ, ಸಂಚರಿಸುವುದಕ್ಕೆ, ಸಲ್ಲ–ಸಲ್ಲದು, ಆಗದು; ಇರದೆ, ಪೋಪುದು–ಹೋಗುವುದು, ಅದೇಕೆನೆ–ಅದೇಕೆ ಎನ್ನಲು, ಕಾಮದೇವ–ಮನ್ಮಥನು, ಇತ್ತಂ– ಈ ಭೂಮಿಯನ್ನೆಲ್ಲ ಕೊಟ್ಟನು, ಮಧು–ವಸಂತನು, ಈ ನೆಲನಂ–ಈ ಭೂಮಿಯನ್ನು, ಪೆತ್ತಂ–ಪಡೆದನು, ಇಂತಿದು–ಹೀಗೆ ಇದು, ಪತ್ತಲೆ–ಪತ್ರಿಕೆ, ಓಲೆ, ಎಂದು ಸಾಱುವಂದಂ ಮಿಗೆ–ಸಾರುವ ರೀತಿ ಅಧಿಕವಾಗಲು, ಗಿಳಿವಿಂಡಿನೋಳಿಗಳ್–ಗಿಣಿಯ ಹಿಂಡುಗಳ ಸಾಲು, ಕೆಂದಳಿರಂ–ಕೆಂಪು ಚಿಗುರನ್ನು, ಕರ್ಚಿ–ಕಚ್ಚಿಕೊಂಡು, ಪಾಱಿದುವು–ಹಾರಿದುವು, ಬಿಚ್ಚತ (ಸಂ) ವಿಸ್ತೃತ; ಪತ್ತಳೆ (ಪ್ರಾ) ಪತ್ತಲ (ಸಂ) ಪತ್ರ.
೩೨. ಕೆೞಗಣ ಕೆಂದಳಿರ್–ಕೆಳಗಡೆಯ ಕೆಂಪು ಚಿಗುರು, ಪುದಿದ–ತುಂಬಿದ, ಮೇಗಣ ಪಂದಳಿರ್–ಮೇಲ್ಗಡೆಯ ಹಸುರು ಚಿಗುರು, ಒಂದಿದ ಒಂದು–ಸೇರಿದ ಒಂದು, ಕೆಯ್ಗೞಿದ– ಅತಿಶಯವಾದ, ಪಸುರ್ಪುಮಂ–ಹಸುರು ಬಣ್ಣವನ್ನೂ, ಪೊಳೆವ ಕೆಂಪುಮಂ–ಹೊಳೆವ ಕೆಂಬಣ್ಣವನ್ನೂ, ಆಳ್ದಿರೆ–ಹೊಂದಿರಲು, ಬೇಟದೊಳ್–ಪ್ರೇಮದಲ್ಲಿ, ಕನಲ್ದು–ಕೆರಳಿ, ಉೞಿದ–ಬದುಕಿಕೊಂಡ, ವಿಯೋಗಿಯ–ವಿರಹಿಯ, ಅಳ್ಳೆರ್ದೆಯಂ–ನಡುಗುವ ಎದೆ ಯನ್ನು, ಆಯ್ದು–ಆರಿಸಿಕೊಂಡು, ಅದಂ–ಅದನ್ನು, ಆಟಿಸಲೆಂದೆ–ಬಯಸಲಿ ಎಂದೇ, ಮನ್ಮಥಂ–ಕಾಮನು, ಘೞಿಯಿಸಿ–ಘಟಿಯಿಸಿ, ಸೇರಿಸಿ, ಕೆಂಪುವಾಸಿದವೊಲ್–ಕೆಂಪು ಬಣ್ಣವನ್ನು ಹಾಸಿದ ಹಾಗೆ, ಮಾಮರಗಳ್–ಮಾವಿನ ಮರಗಳು, ಬಸಂತದೊಳ್–ವಸಂತ ಕಾಲದಲ್ಲಿ, ಇರ್ದುವು–ಇದ್ದುವು, ಇಲ್ಲಿ ‘ಆಟಿಸಲೆಂದೆ’ ಎಂಬುದು ಬಹುಶಃ ‘ಆಟರ ಲೆಂದೆ’ ಎಂದಿದ್ದಿರಬಹುದು.
೩೩. ಮಲ್ಲಿಗೆ ಅರಳುವುದು: ಪಸುರ್ಪು–ಮೊಗ್ಗಿನ ಹಸುರುಬಣ್ಣ, ಪರೆಯೆ–ಚೆದರಲು, ಹೋಗಲು, ಬಲ್ಮುಗುಳೊಳ್–ಬಲಿತ ಮೊಗ್ಗಿನಲ್ಲಿ, ಬೆಳ್ಪಡರೆ–ಬಿಳಿದಾಗಲು, ಪೊರೆದೋಱೆ– ಎಸಳ ಪದರಗಳು ತೋರಲು, ತೆಂಬೆರಲ್–ತೆಂಗಾಳಿ, ಪೊರೆವೊರೆಯಂ ಸಡಿಲ್ಚೆ–ಪದರ ಪದರಗಳನ್ನು ಸಡಿಲಿಸಲು, ನಡು–ಮೊಗ್ಗಿನ ಮಧ್ಯಭಾಗ, ಪೊಂಗಿರೆ–ಉಬ್ಬಿರಲು, ಮಲ್ಲಿಗೆಗಳ್–ಮಲ್ಲಿಗೆಗಳು, ಬಸಂತದೊಳ್–ವಸಂತದೊಳ್, ವಸಂತ ಕಾಲದಲ್ಲಿ, ಬಿರಿ ದೊಡೆ–ಅರಳಿದರೆ, ನಲ್ಲರಂ ನೆನೆದ ನಲ್ಲರ–ಪ್ರಿಯರನ್ನು ನೆನೆದುಕೊಂಡ ಪ್ರಿಯರ, ಮೆಲ್ಲೆರ್ದೆಗಳ್–ಮೃದುವಾದ ಎದೆಗಳು, ಬಸಂತದೊಳ್–ವಸಂತ ಮಾಸದಲ್ಲಿ, ಬಿರಿದುವು– ಒಡೆದುವು; ಅದೆಂತೊ–ಅದು ಹೇಗೊ? ಮಲ್ಲಿಗೆಗೆ–ಮಲ್ಲಿಗೆಯ ಬಿರಿತಕ್ಕೆ, ನಲ್ಲರ–ಪ್ರಣಯಿ ಗಳ, ಮೆಲ್ಲೆರ್ದೆ–ಮೃದುವಾದ ಹೃದಯ, ವೇಳೆಗೊಂಡುದೋ–ಸಮಯಪಾಲವನ್ನು ಮಾಡಿತೋ?
ಜೋಳವಾಳಿ, ಲೆಂಕವಾಳಿಗಳಂತೆ ವೇಳೆವಾಳಿ ಎಂಬುದೂ ಉಂಟು. ಪ್ರಭು ಸತ್ತ ಕೂಡಲೇ ತಾನೂ ಸಾಯುವೆನೆಂದು ಪ್ರತಿಜ್ಞೆ ಮಾಡಿದ ಅವನ ಆಪ್ತನು ಸಾಯುವುದು ವೇಳೆವಾಳಿ; ಹಾಗೆಯೇ ಇಲ್ಲಿ ಮಲ್ಲಿಗೆ ಬಿರಿದುದಕ್ಕೆ ಸರಿಯಾಗಿ ಅದೇ ಕಾಲದಲ್ಲೇ ನಲ್ಲರ ಎದೆಗಳು ಬಿರಿದುವು; ಇದು ಸಮಯಪಾಲನೆಯಾಗಿದೆ. ಹೀಗೆಯೇ ತನ್ನ ತಮ್ಮಂದಿರಲ್ಲಿ ಯಾರೊಬ್ಬರು ಸತ್ತರೂ ತಾನು ಸಾಯುವೆನೆಂದು ಧರ್ಮರಾಜ ಪ್ರತಿಜ್ಞೆ ಮಾಡಿರುತ್ತಾನೆ; “ಅನುಜರ್ ನಾಲ್ವರು ಮಂ ಧರ್ಮನಂದನಂ ವೇಳೆಗೊಂಡು ಕಾವಂ” (ಪಂ.ಭಾ. ೧೩–೧೫). ವೇಳೆಯಂ=ಸಮಯ ವನ್ನು+ಕೊಳ್=ವೇಳೆಗೊಳ್.
೩೪. ನನೆಯ–ಹೂವಿನ, ಎಳಗಂಪಂ–ಎಳೆಯ ಕಂಪನ್ನು, ಎತ್ತಿಯುಂ–ಧರಿಸಿಯೂ, ಅಣಂ–ಸ್ವಲ್ಪವೂ ನನೆನಾಱದೆ–ಹೂಗಂಪಿನಿಂದ ಗಮಗಮಿಸದೆ; ಅರಲ್ದ–ಅರಳಿದ, ಅನೇಕ ಕೋಕನದವನಂಗಳೊಳ್–ಅನೇಕ ತಾವರೆಯ ವನಗಳಲ್ಲಿ, ಸುೞಿದು–ಸುತ್ತಾಡಿ, ತಣ್ಣ ಸಮಾಗದೆ–ಶೀತಲವಾಗದೆ; ಕೂಡೆ–ಕೂಡಲೆ, ಬಂದಮಾವಿನ ಪೊಸ ಪೂವಿನೊಳ್–ಫಲಿತ ವಾದ ಮಾವಿನ ಮರದ ಹೊಸ ಹೂಗಳಲ್ಲಿ, ಪೊರೆದು–ಲಿಪ್ತವಾಗಿ, ಪೊಣ್ಮಿದ–ಹೊಮ್ಮಿದ, ತಂಪು–ಸುಗಂಧವು, ಮೊಗಂಗಳಂ–ಮುಖಗಳನ್ನು, ಚಳಿಲ್ಲನೆ–ಚಳಿಲೆಂದು ಎಂದರೆ ತಂಪು ತಂಪಾಗಿ, ಕೊಳೆ–ಆಕ್ರಮಿಸಲು, ಪೊಯ್ಯೆ–ಅಪ್ಪಳಿಸಲು, ವಸಂತ ಮಾಸದೊಳ್, ತೆಂಕಣ ಗಾಳಿ, ತೀಡಿದುದು–ಬೀಸಿತು. ಈ ಪದ್ಯದ ಮೂರನೆಯ ಸಾಲಿನಲ್ಲಿ ಏನೋ ಕ್ಲೇಶವಿದೆ; ‘ಪೊಣ್ಮದೆ’ ಎಂದಿರಬೇಕೆಂದು ತೋರುತ್ತದೆ.
೩೫. ಮುಗುಳ್ವದನಾದ–ಮೊಗ್ಗಿನ ಹದಕ್ಕೆ ಬಂದ, ಸಂಪಗೆ, ಮಡಲ್ತ–ಹಬ್ಬಿದ, ಅದಿರ್ಮುತ್ತೆ–ಅದಿರ್ಮುತ್ತೆ ಎಂಬ ಹೂವು, ಮರಲ್ದರಲ್ದ–ಅರಳಿ ಅರಳಿದ ಮಲ್ಲಿಗೆ, ನನೆಗರ್ಚಿ–ಹೂವನ್ನು ಕಚ್ಚಿ, ಕಾಕಳಿಯೊಳ್–ಇಂಪಾದ ಧ್ವನಿಯಲ್ಲಿ, ಆಣತಿಗೆಯ್ವ–ಆಲಾಪನೆ ಯನ್ನು ಮಾಡುವ, ಮದಾಳಿ–ಸೊಕ್ಕಿದ ದುಂಬಿ, ಪೋ–ಹೋಗು, ಪುಗಿಲ್ ಪುಗಿಲ್–ಹೊಗಿರಿ, ಪ್ರವೇಶಿಸಿರಿ, ಎನುತಿರ್ಪ–ಎನ್ನುತ್ತಿರುವ, ಪಕ್ಕಿ–ಕೋಗಿಲೆ ಹಕ್ಕಿ, ಮನಮಂ ಕವರುತ್ತಿರೆ– ಮನವನ್ನು ಸೂರೆಮಾಡುತ್ತಿರಲು, ಯೋಗಿಗಂ ವಿಯೋಗಿಗಂ–ಋಷಿಗೂ ವಿರಹಿಗೂ, ವಸಂತಕ ಚಕ್ರವರ್ತಿಯಾ–ವಸಂತ ಕಾಲವೆಂಬ ಚಕ್ರವರ್ತಿಯು, ಪೊಕ್ಕ ಪುಗಿಲ್–ಹೊಕ್ಕ ಪ್ರವೇಶವು, ಇಂತು–ಹೀಗೆ, ಅರಿದಾಯ್ತು–ತಾಳಲಸಾಧ್ಯವಾಯಿತು.
ವಚನ : ಒಸಗೆ ವರ್ಪಂತೆ–ಉತ್ಸವ ಬರುವ ಹಾಗೆ; ಅನ್ನವಾಸದೋಲಗದೊಳ್– ಭೋಜನಶಾಲೆಯ ಆಸ್ಥಾನದಲ್ಲಿ, ಸಭೆಯಲ್ಲಿ.
೩೬. ಇಲ್ಲಿಂದ ಬೇಡನ ಆಗಮನ ಮತ್ತು ಮೃಗಯಾ ಕ್ರೀಡೆಯ ವರ್ಣನೆ; ತೊಟ್ಟ– ಧರಿಸಿದ, ಎಕ್ಕವಡಂ–ಎಕ್ಕಡ, ಮರವಿಲ್–ಮರದ ಬಿಲ್ಲು ಅಥವಾ ದೊಡ್ಡ ಬಿಲ್ಲು, ಕಟ್ಟಿದ, ಪಣೆಕಟ್ಟು–ಹಣೆಯ ಕಟ್ಟು, ಬೇಂಟೆವಱೆ–ಬೇಟೆಯ ಡೋಲು, ದೊರೆಯೊಳ್–ಸಮಾನತೆ ಯಲ್ಲಿ, ಒಡಂಬಟ್ಟ–ಒಪ್ಪುತ್ತಿರುವ, ಅಸಿಯ–ತೆಳುವಾದ, ಸುರಗಿ–ಕತ್ತಿ, ದಳಿವದ–ಮೇಲು ಹೊದಿಕೆಯ, ತೊಟ್ಟ–ಧರಿಸಿದ, ಅಂಗಿಗೆ–ಅಂಗಿ, ಇವೆಲ್ಲ, ತನ್ನೊಳಮರೆ–ತನ್ನಲ್ಲಿ ಸೇರಿರಲು, ಬೇಂಟೆಯನೊರ್ವಂ–ಬೇಡರವನೊಬ್ಬನು.
೩೭. ಬಂದು, ಪೊಡೆವಟ್ಟು–ನಮಸ್ಕರಿಸಿ, ಕಂಡು–ನೋಡಿ, ಇಂತೆಂದಂ–ಹೀಗೆಂದನು; ಪೊಲನ್–ಹೊಲಗಳು, ಉಡುಗಿಬಂದವು–ತೆನೆಕಾಳುಗಳನ್ನು ಬಿಡಿಸಿಗುಡಿಸಿಯಾಯಿತು, ಪುಲ್ ಉಡಿದುದು–ಹುಲ್ಲೆಸಳು ಒಡೆಯಿತು; ಕಾಡುಂದಲ್–ಕಾಡು ಕೂಡ ನಿಜ ವಾಗಿಯೂ, ಎಲೆಯಿಕ್ಕಿ–ಎಲೆಬಿಟ್ಟು ಚಿಗುರಿ, ಘಳಿಲನೆ–ಬೇಗನೆ, ನಿಂದುವು–ನಿಂತು ಕೊಂಡುವು, ಎತ್ತಲುಂ–ಎಲ್ಲೆಲ್ಲಿಯೂ, ಈಗಳ್–ಈಗ, ಮೃಗಂಗಳ್–ಪ್ರಾಣಿಗಳು, ತಣಿದುವು–ತೃಪ್ತಿಪಟ್ಟುವು, ಉಡುಗು: “ನಾನಾ ವಿಧ ಧಾನ್ಯಂಗಳಂ ಪದನಱಿದುಡುಗುವ ಕಣಂ ಮಾಡುವ” (ಆದಿಪು. ೬–೭೭ ವ.).
೩೮. ಸುೞಿಯದು ಗಾಳಿ–ಗಾಳಿ ಬೀಸುವುದಿಲ್ಲ; ಮೃಗಂ–ಮೃಗಗಳು, ಕೆಯ್ವೞಿಗಳ– ಹೊಲದ ದಾರಿಗಳಲ್ಲಿರುವ, ಮೇತದೊಳೆ–ಮೇವಿನಲ್ಲಿಯೇ, ತಣಿದಪುವು–ತೃಪ್ತಿಪಡು ತ್ತವೆ; ಪಂದಿಗಳುಂ–ಹಂದಿಗಳು ಕೂಡ, ಆದಂ–ವಿಶೇಷವಾಗಿ, ಪೞನವಿರಿಕ್ಕಿದುವು–ಹಳೆಯ ಕೂದಲುಗಳನ್ನು ಬೀಳಿಸಿಕೊಂಡವು; ಅವನಿಪತೀ–ರಾಜನೇ, ಪೞು–ಕಾಡು, ಪರಿದಾಡಲ್– ಓಡಾಡಲು, ಕರಂ–ಅತಿಶಯವಾಗಿ, ಬೆಡಂಗು–ಸೊಗಸು.
೩೯. ಈ ಪದ್ಯ ಸರಿಯಾಗಿ ಅರ್ಥವಾಗುವಂತಿಲ್ಲ: ಬರವಂ–ಮೃಗಗಳ ಬರವನ್ನೂ, ಕಾಡಂ–ಕಾಡನ್ನೂ ಎಂದರೆ ಕಾಡಿನ ಸ್ವರೂಪವನ್ನೂ, ಬೇಗೆಗೆ–ಬೇಗೆಗೆ (?), ಕರಮಱಿದು– ವಿಶೇಷವಾಗಿ ತಿಳಿದು; ಎರಡುಂ ಮೃಗಂಗಳುಂ–ಎರಡು ಜಿಂಕೆಗಳೂ ತಣ್ಬುೞಿಲೊಳ್– ತಂಪಾದ ಮರಗಳ ತೋಪಿನಲ್ಲಿ, ನೆರೆದು–ಸೇರಿ, ಒಡವಂದವು–ಜೊತೆಗೂಡಿ ಬಂದುವು; ತಪ್ಪದು–ಇದು ತಪ್ಪುವುದಿಲ್ಲ; ಅರಿಕೇಸರಿ–ಅರ್ಜುನನೇ, ಕಂಡು–ನೋಡಿ, ಕೋಳ್ಪಾಂಗಂ– ಮೃಗವು ಸಿಕ್ಕಿಬೀಳುವ ರೀತಿಯನ್ನು, ಮೆಚ್ಚುವಯ್–ಮೆಚ್ಚುತ್ತೀಯೆ.
೪೦. ಈ ಪದ್ಯವೂ ಸರಿಯಾಗಿ ಅರ್ಥವಾಗುವುದಿಲ್ಲ; ಕಾಡೊಡಮೆ–ಕಾಡಿನ ವಸ್ತು, ವೇಳೆ–ಕಾಲ, ಸಲೆ–ಚೆನ್ನಾಗಿ, ಕೆಯ್ಗೂಡಿದುದೆನೆ–ಕೈಗೂಡಿತೆನ್ನಲು, ನೆಲದೊಳಿರ್ದ– ನೆಲದಲ್ಲಿದ್ದ, ನೆಲ್ಲಿಯಕಾಯುಂ–ನೆಲ್ಲಿಕಾಯಿ ಕೂಡ, ನೋಡ–ನೋಡು, ನೆಲಮುಟ್ಟಲ್– ನೆಲವನ್ನು ಸೋಕಲು, ಅೞ್ತಿಯೊಳ್–ಪ್ರೀತಿಯಲ್ಲಿ, ಆಡುವೊಡೆ–ಆಡುವ ಪಕ್ಷದಲ್ಲಿ, ಈ ದೆವಸಂ–ಈ ದಿವಸವು, ಬೇಂಟೆಯ ದಿವಸಂ–ಬೇಟೆಯಾಡುವ ದಿನ, ಅಲ್ತೆ–ಅಲ್ಲವೇ? ಇದರ ತಾತ್ಪರ್ಯವೇನೋ?
ವಚನ : ಬೇಂಟೆ ಜಾಱಲ್ಲದೆ–ಬೇಟೆಯ ವಿಷಯವಾಗಿ ಸುಳ್ಳು ಸಂದೇಹಗಳನ್ನು ಹೇಳು ವುದು ಬೇಟೆಜಾಱು; ಅದಲ್ಲದೆ, ಎಂದರೆ ನಿಜವಾದ ಬೇಟೆಯ ಮಾತುಗಳನ್ನು, ಬಿನ್ನವಿಪೆಂ– ಹೇಳುತ್ತೇನೆ. ‘ಜಾಱು’ ಶಬ್ದಕ್ಕೆ ಸುಳ್ಳು, ಸಂದೇಹ ಎಂಬರ್ಥಗಳಿರಬಹುದೆಂದು ಕೆಳಗಣ ಪ್ರಯೋಗಗಳು ಸೂಚಿಸುತ್ತವೆ; (೧) ಇವು ಪಾದದೊಳ್ ತಳದೊಳ್ ತೋಱೆ ಜಾಱೇಂ…. ಪುಣ್ಯಾಹವಂ ತಾನೆನಿಕ್ಕುಂ (ಲೋಕೋಪಕಾರ ೧೧–೧೪); ನೀಱೆಯರ ಮನಮನೆಱಗಿಸೆ ಜಾಱೇಂ ಜವ್ವನದಿನಮರನೆಸೆದಂ ನಿಸದಂ (ಪಾರ್ಶ್ವಪು. ೫–೧೦೨); ಜಾಱೇಂ ಮುನಿ ಮನಮಂ ಪದಿನಾಱೆಡೆಗೆ ಪಸರಿಸುತ್ತುಮಿರ್ದೊಡಂ ಚಿತ್ರಂ ಮೆಯ್ದೋಱಿತ್ತು (ಅದೇ); ಜಾಱಲ್ತು ಮುಕ್ತಿಪಥಮಂ ತೋಱಲ್ಕಱಿದಪರೆ ಜೈನರಲ್ಲದವರವರಂ ದೂಱಲ್ಕೆವೇಡ” (ಸಮಪ. ೧೪–೧೯).
೪೧. ಇಲ್ಲಿಂದ ಮುಂದಕ್ಕೆ ಮೃಗಯಾ ವಿನೋದಕ್ಕೆ ಸಂಬಂಧಿಸಿದ ಅನೇಕ ಸಾಂಕೇತಿಕ ದೇಸಿ ಶಬ್ದಗಳು ಪ್ರಯೋಗವಾಗಿವೆ; ಅವುಗಳ ಸರಿಯಾದ ಅರ್ಥ ತಿಳಿಯುವಂತಿಲ್ಲ; ಆಡಲ್– ಬೇಟೆಯಾಡುವುದಕ್ಕೆ, ಆಡಿಸಲ್–ಆಡಿಸುವುದಕ್ಕೆ, ಪಾೞಿಯಂ–ಕ್ರಮವನ್ನು, ನಿಱಿಸಲುಂ–ಸ್ಥಾಪಿಸುವುದಕ್ಕೂ, ಪರಿಗೊಳಲ್–ಓಡುವುದಕ್ಕೂ, ತೊವಲಿಕ್ಕಲ್–ಚಿಗುರನ್ನು ಹಾಕುವುದಕ್ಕೂ, ಒಳಗಂಬರಲ್–ಒಳಗೆ ಬರುವುದಕ್ಕೂ, ಕಾಡಬೇಲಿಯಂ–ಕಾಡಿನ ಬೇಲಿ ಯನ್ನು, ಎಲ್ಲೆಯನ್ನು, ಮಾರ್ಕಾಡಂ–ಎದುರುಗಾಡನ್ನು, ಅಱಿಯಲುಂ–ತಿಳಿವುದಕ್ಕೂ, ಮೂಡಿಗೆ–ಬತ್ತಳಿಕೆ, ಕಕ್ಕುಂಬಂ–?, ಸುೞಿಸಿ–ಸುಳಿಯುವಂತೆ ಮಾಡಿ, ಜೊಂಪಂ–?, ಬೀಡು ಬಿಡುವಿಂಬು–ಬೀಡನ್ನು ಬಿಡಲು ತಕ್ಕಸ್ಥಳ, ಅವಕಾಶ; ಕದಳಿ–ಬಾಳೆ, ತೆಂಗಿನ–ತೆಂಗಿನ ಮರ ಗಳು, ತಾಣಂ–ಸ್ಥಳ; ಜಾಣಿಂ–ಚಮತ್ಕಾರದಿಂದ, ನೀರ್ದಾಣಂ–ನೀರಿನ ಎಡೆ, (ಪ್ರಾಣಿ ನೀರು ಕುಡಿಯಲು ಬರುವ ಜಾಗ), ಎಂದೆಡೆಯಱಿದುಂ–ಎಂದು ಜಾಗಗಳನ್ನು ತಿಳಿದುಕೊಂಡೂ, ಮಾಡಲ್ ಮಾಡಿಸಲ್–ಮಾಡುವುದಕ್ಕೂ ಮಾಡಿಸುವುದಕ್ಕೂ, ಪಡೆಮೆಚ್ಚೆ–ಸೈನ್ಯ ಮೆಚ್ಚಲು, ನೀಂ ಬಲ್ಲೆ–ನೀನು ತಿಳಿಯುವೆ, ಹರಿಗ–ಅರ್ಜುನನೇ, ನೀಂ ಮೆಚ್ಚೆ–ನೀನು ಮೆಚ್ಚಲು, ಆನೆಬಲ್ಲೆಂ–ನಾನೇ ತಿಳಿದಿರುವೆನು, ಕೇಳ್–ಕೇಳು.
೪೨. ಮೃಗದ–ಪ್ರಾಣಿಯ, ಒಲವರುಮುಮಂ–ಯಾವುದರಲ್ಲಿ ಅದಕ್ಕೆ ಹೆಚ್ಚು ಪ್ರೀತಿ, ಪಕ್ಷಪಾತ ಎಂಬುದನ್ನೂ, ಅರಸನ ಬಗೆಯುಮಂ–ರಾಜನ ಇಷ್ಟವನ್ನೂ, ಅಱಿದು–ತಿಳಿದು, ಅಲಸದೆ–ಆಯಾಸಪಡದೆ, ಎಳಸದೆ–ಬಯಸದೆ, ಓಲಗಿಸಲ್–ಸೇವೆ ಮಾಡಲು, ನೆಟ್ಟನೆ– ನೇರಾಗಿ, ಬಲ್ಲನುಳ್ಳೊಡೆ–ತಿಳಿದವನಿದ್ದರೆ, ಗುಣಾರ್ಣವ–ಅರ್ಜುನನೇ, ಬೇಂಟೆಕಾಱ ನೋಲಗಕಾಱಂ–ಬೇಟೆಗಾರನೂ, ಸೇವಾಳುವೂ, ಅವನಲ್ತೆ–ಅವನೇ ಅಲ್ಲವೆ? ಹೌದು.
೪೩. ಮೃಗಮಂ–ಪ್ರಾಣಿಯನ್ನು (ಎಂಥ ಪ್ರಾಣಿ ಎಂಬುದನ್ನು), ಗಾಳಿಯಂ–ಕಿಗ್ಗಾಳಿ ಮೇಗಾಳಿಗಳನ್ನು, ಎಂದರೆ ಗಾಳಿ ಬೀಸುವ ದಿಕ್ಕನ್ನು, ಇರ್ಕೆಯಂ–ಪ್ರಾಣಿ ಇರುವೆಡೆಯನ್ನು, ಪಕ್ಕೆಯಂ–ಮಲಗುವ ಎಡೆಯನ್ನು, ಹಕ್ಕೆಯನ್ನು, ಗಣಿದಮಂ–ಸಂಖ್ಯೆಯನ್ನು, ಕಂಡಿಯಂ– ನುಸುಳುವ ಕಂಡಿಗಳನ್ನು, ಮಾರ್ಕಂಡಿಯಂ–ಎದುರುಗಂಡಿಯನ್ನು, ಪುಗಿಲಂ–ಪ್ರಾಣಿಯ ಪ್ರವೇಶವನ್ನು, ಪೋಗಂ–ಹೋಗುವುದನ್ನು, ಬಾರಿಯಂ–?, ಸನ್ನೆಯಂ–ಇಂಥ ಮೃಗಕ್ಕೆ ಇಂಥ ಸಂಜ್ಞೆಯೆಂಬುದನ್ನು, ನೂಱುವ–?, ಅಮರ್ಚುವ–ಸೇರುವ, ನಿಲ್ವೆಡೆಯಂ–ನಿಲ್ಲುವ ಸ್ಥಳವನ್ನು, ಬಗೆಯಂ–ಪ್ರಾಣಿಗಳ ಮನವನ್ನು, ತೆಗೆಯಂ–ಹಿಂಜರಿಯುವುದನ್ನು, ಅಲ್ಲಾಟ ಮಂ–ಅಲುಗಾಡುವಿಕೆಯನ್ನು, ಕಾಟಮಂ–ಹಿಂಸೆಯನ್ನು, ನೋವುಮಂ–ಯಾತನೆಯನ್ನು, ಸಾವುಮಂ–ಸಾವನ್ನು, ಎಲ್ಲಂದದಿಂ–ಎಲ್ಲಾ ರೀತಿಗಳಿಂದ, ಬಗೆದಾಗಳ್–ಭಾವಿಸಿದಾಗ, ಅರಸ ರೊಳೆಲ್ಲಂ–ರಾಜರಲ್ಲೆಲ್ಲ, ನೀಂ ಬಲ್ಲೆ–ನೀನು ತಿಳಿಯುವೆ, ಬೇಂಟೆಕಾಱರೊಳೆಲ್ಲಂ– ಬೇಟೆಗಾರರಲ್ಲೆಲ್ಲ, ಆನೆ ಬಲ್ಲೆಂ–ನಾನೇ ತಿಳಿದಿರುವೆನು, ಕೇಳ್–ಕೇಳು.
ವಚನ : ನೆಲನುಂ–ನೆಲದ ತಗ್ಗುದಿಣ್ಣೆಗಳನ್ನೂ; ಕೈಯುಂ–ಕೈಯನ್ನೂ (ಮುಂಗಾಲುಗಳ ಗುರುತುಗಳನ್ನೂ); ಒಳಗಂ ಬರಲ್–ಒಳಕ್ಕೆ ಹೋಗಲು; ಪೆರ್ವೇಂಟೆಯಂದಂ–ಇದು ಪೆರ್ವೇಂಟೆ (ಹೆಬ್ಬೇಟೆ) ಎಂಬ ಬೇಟೆಯ ರೀತಿ; ದೀಪದ ಬೇಂಟೆಯಂ–ದೀಪಕಮೃಗದ ಆಕರ್ಷಣೆಯನ್ನು ಒಡ್ಡಿಬಂದ ಪ್ರಾಣಿಗಳನ್ನು ಬೇಟೆಯಾಡುವುದು; ಕೞಿವುಂ–ದೂರ ಹೋಗು ವುದು, ಉೞಿವುಂ–ಇರುವುದು; ಕಾಪುಂ–ರಕ್ಷಣೆ; ಮೇಪುಂ–ಮೇವು; ತೋಡುಂಬೀಡುಂ– ಬಾಣ ಸಂಧಾನ, ಬಾಣ ಬಿಡುವುದು; ದೆಸೆ–ದಿಕ್ಕು, ಕೊಸೆಯುಂ–ಮೃಗಗಳು ಕಾಮದಿಂದ ನೆರೆಯುವುದು (“ಕೊಸೆ–ನಿಧುವನೇ”); ಬೆಚ್ಚುಂ–ಭಯಪಡುವುದು; ಪೋಗುಂ ಮೇಗುಂ– ಹೋಗನ್ನೂ ಮೇಗನ್ನೂ; ಕಡಂಗಲುಂ ಕಡಂಗಿಸಲು–ಉತ್ಸಾಹ ಪಡುವುದಕ್ಕೂ, ಉತ್ಸಾಹ ಪಡಿಸುವುದಕ್ಕೂ; ಮೂಱುಕೊಂಬುಮಂ–ಮೂರು ಸಂಕೇತ ಸ್ಥಾನಗಳನ್ನು; ಆಱುನಾ ಣ್ಪೋಗುಮಂ–ಆರು ಬಗೆಯಾದ ಪ್ರಾಣಿ ಕಾಮಕ್ರೀಡೆಗಳನ್ನು; ಮೂಱಿರವು–ಮೂರು ಬಗೆಯ ಸ್ಥಿತಿ; ನಂಬಿದ ಬರವುಮಂ–ಏನೂ ಅಪಾಯವಿಲ್ಲವೆಂದು ಪ್ರಾಣಿ ನಂಬಿ ಬರು ವುದನ್ನು; ನಂಬದ ಬರವು–ಸಂದೇಹದಿಂದ ಬರುವುದು, ಮಲೆಯದುದಂ ಮಲೆಯಿಸಲುಂ– ಕೆರಳದುದನ್ನು ಕೆರಳಿಸಲು; ಎಡೆಯಾಗದ–ನಡುವೆ ಸಿಕ್ಕಿಕೊಳ್ಳದ; ಪಣಮುಡಿದರಂತೆ– ಜೂಜಿನಲ್ಲಿ ಒತ್ತೆ ಸೋತವರ ಹಾಗೆ; ಅಡ್ಡಂ ಮಾಡಲುಂ–ಅಡ್ಡಗಟ್ಟಲೂ; ಕುಮಾರ ಸ್ವಾಮಿಯ–ರಾಜಕುಮಾರ ಪ್ರಭುಗಳ, ಅಥವಾ ಷಣ್ಮುಖನ;
೪೪. ಬರೆದಂತೆ–ಚಿತ್ರಿಸಿದ ಹಾಗೆ, ಬೆನ್ನ ಕರ್ಪು–ಬೆನ್ನಿನ ಕಪ್ಪು ಮಚ್ಚೆ, ಎಸೆದಿರೆ– ಸೊಗಸಾಗಿರಲು, ಸೂಚಮನುರ್ಚಿ–ಹುಲ್ಲಿನ ಊಬುಗಳನ್ನು ಮುರಿದು, ಪುಲ್ಲೆಗೆ–ಹೆಣ್ಣು ಜಿಂಕೆಗೆ, ಆಟಿಸಿ–ಬಯಸಿ, ಮಲೆತರ್ಪ–ಔದ್ಧತ್ಯದಿಂದ ಬರುವ, ಎರಲೆಯ–ಗಂಡು ಜಿಂಕೆಯ, ಸೋಲಮಂ–ಮೋಹವನ್ನು, ಅೞ್ತಿಯೊಳ್–ಪ್ರೀತಿಯಲ್ಲಿ, ನಿಂದು ನೋೞ್ಪುದು–ನಿಂತು ನೋಡುವುದು, ಅರಿಕೇಸರಿ–ಅರ್ಜುನನೇ, ಒಂದು ಅರಸಲ್ತೇ–ಒಂದು ರಾಜ ವಿನೋದ ವಲ್ಲವೇ? ಹೌದೂ. ಮೂವತ್ತೊಂದು ಬಗೆಯಾದ ಬೇಟೆಗಳಲ್ಲಿ ಇದು ‘ಕಾಮಜಾ’ ಎಂಬ ಬೇಟೆ.
೪೫. ಪದಮುಮಂ–ಕಾಲಡಿಯನ್ನೂ, ಇಂಬುಮಂ–ಅದರ ವಿಸ್ತಾರವನ್ನೂ, ಅಣಂ– ಸ್ವಲ್ಪವೂ, ಅಱಿಯದುದು–ತಿಳಿಯದಿರುವುದು, ಅದು, ಏವುದು ಬದ್ದೆ–ಏನು ಪ್ರೌಢಿಮೆ; ಬೆಳ್ಮಿಗಂ–ಅಂಜುವ ಮೃಗ, ಪಜ್ಜೆದಲ್–ಅದರ ಹೆಜ್ಜೆ ನಿಜವಾಗಿಯೂ, ಎಂಬುದಂ ಎರಡು ಮಂ–ಎಂಬ ಎರಡನ್ನೂ, ಅಱಿವಾತನೆ–ತಿಳಿಯುವವನೇ, ಚದುರಂ–ಜಾಣನು; ಚದುರಂಗೆ– ಜಾಣನಿಗೂ ತಿಳಿಯಲಾಗದ, ಬದ್ದೆವಜ್ಜೆಗಳ್–ಪ್ರೌಢಿಮೆಯನ್ನುಳ್ಳ ಹೆಜ್ಜೆ ಗುರುತುಗಳು, ಒಳವೇ–ಉಂಟೇ? ಇಲ್ಲ.
ವಚನ : ಪಂದಿವೇಂಟೆಯ ಮಾತಂ–ಕಾಡುಹಂದಿಯನ್ನು ಬೇಟೆಯಾಡುವ ವಿಷಯ ವನ್ನು;
೪೬. ನೆಲನಂ–ನೆಲವನ್ನು, ನಿಱುಗೆಯಂ–ನಿಂತೆಡೆಯನ್ನು, ನಡೆವೊಂದು ಪದಮುಮಂ– ನಡೆಯುವ ಒಂದು ರೀತಿಯನ್ನು, ಸೋವಳಿ–ಅಟ್ಟುವಿಕೆಯನ್ನು, ಮೇವಳಿ–ಮೇಯುವಿಕೆ ಯನ್ನು, ಬಿಸುವಳಿಯಂ–ಒಟ್ಟಾಗುವಿಕೆಯನ್ನು, ಬಲಮಂ–ಶಕ್ತಿಯನ್ನು, ಶಕುನಮಂ–ಶಕುನ ಸಂಕೇತಗಳನ್ನು, ಒಳ್ಳಿತ್ತುಪಾಯಮಂ–ಒಳ್ಳೆಯ ಉಪಾಯವನ್ನು, ಪಿಡಿವಂದು–ಹಿಡಿಯು ವಾಗ, ಈತನೆ–ಇವನೇ, ವಂದಿ–ಹಂದಿಯು, ಕುರುಡು–ಕುರುಡಾದದ್ದು, ಕುಂಟು–ಕುಂಟಾ ದದ್ದು, ಎಂದು, ಅಲಸದೆ–ತಡವಿಲ್ಲದೆ, ಅಱಿದು–ತಿಳಿದು, ಇಂತು, ಬಲ್ಮೆಗೆ ಬೆರಲೆತ್ತಿ– ಹೀಗೆ ತನ್ನ ತಿಳಿವಿಗೆ ಬೆರಳೆತ್ತಿ, ಕೈವಾರಿಸಿ; ಪಜ್ಜೆಯಂ–ಹೆಜ್ಜೆಯ ಗುರುತುಗಳನ್ನು, ನೆಲೆಗಳಂ– ವಸತಿಗಳನ್ನು, ಕಿಡಲೀಯದೆ–ಕೆಡಲು ಬಿಡದೆ, ಕೆಡಿಸದೆ; ಸಿಲೆಯ ಮೇಲಾದೊಡಂ–ಕಲ್ಲಿನ ಮೇಲೆ ಆದರೂ, ಶಕುನಮಂ ನಿಱಿಪಂತೆ–ಸಂಕೇತವನ್ನು ಸ್ಥಾಪಿಸುವ ಹಾಗೆ, ನೀಂ ಮೆಚ್ಚಲುಂ– ನೀನು ಮೆಚ್ಚುತ್ತಿರಲು, ಪಂದಿಯಂ–ಕಾಡುಹಂದಿಯನ್ನು, ನಿಱಿಸುವೆಂ–ನಿಲ್ಲಿಸುತ್ತೇನೆ. ಇಲ್ಲಿ ಅರ್ಥವಿಶದತೆ ಇಲ್ಲ.
ವಚನ : ಅಸಿಯ ನಡುವುಂ–ತೆಳುವಾದ ಹೊಟ್ಟೆಯೂ; ಅಗಲುರಮುಂ–ಅಗಲವಾದ ಎದೆಯೂ; ತಳ್ತು ಕಟ್ಟಿದ ಕಿವಿಯುಂ–ಸೇರಿಸಿ ಕಟ್ಟಿದ ಕಿವಿಯೂ ಎಂದರೆ ನೇರಾಗಿ ನಿಂತಿರುವ ಕಿವಿಗಳೂ; ಕವಿದ ಪುರ್ಬುಂ–ಕೆಳಕ್ಕೆ ಬಾಗಿದ ಹುಬ್ಬುಗಳೂ; ಜಾತ್ಯಶ್ವದಂತೆ–ಒಳ್ಳೆ ಜಾತಿಯ ಕುದುರೆಯ ಹಾಗೆ; ಕೋಳಿಕಾಳಿಕಾಱನಂತೆ–ವಾಮಾಚಾರದ ಶಾಕ್ತೇಯ ಮತದ ವಂಚಕನಂತೆ (ಕೌಳಿಕ+ಆಳಿಕಾಱ ಎಂದು ಪಾಠವಿರಬಹುದು), ಬೞಿಯಱಿವಿಡಿದು–ಕುಲದ, ಮಾರ್ಗದ, ಜ್ಞಾನವನ್ನು ಹಿಡಿದು; ತುಂಬಿನ ನೀರಂ–ತೂಬಿನ ನೀರನ್ನು; ಕೋಳಂಪಟ್ಟು=ಸುಲಿಗೆಗೆ ಒಳಗಾಗಿ; ಒತ್ತರದಂತೆ–ಒತ್ತರದ (?) ಹಾಗೆ; ಅಳುರ್ವಂತೆ–ಹರಡುವಂತೆ, ಅಳುರ್ದು ಕೊಳವುದು–ಹರಡಿಕೊಳ್ಳುವುದು; ಕಿಱಿವೇಂಟೆಯ ನಾಯ್–ಕಿಱು ಬೇಟೆಯೆಂಬ ಬೇಟೆಯಲ್ಲಿ ಭಾಗವಹಿಸುವ ನಾಯಿ; ಕೊಂಡುಂಜಾಱಿಯುಂ–? ಪರಿಯಿಸಲ್–ಬಿಡುವಂತೆ ಮಾಡಲು; ಬಲ್ಮೆಗಂ–ಶಕ್ತಿಗೂ ಅಥವಾ ಜ್ಞಾನಕ್ಕೂ; ಉೞಿದ ಬೇಂಟೆಯಂ–ಮಿಕ್ಕ ಬೇಟೆಗಳನ್ನು
೪೭. ಪಸಿವು–ಹಸಿವು, ದೊರೆಕೊಳ್ಗುಂ–ಉಂಟಾಗುತ್ತದೆ; ಉಣಿಸುಗಳ್–ಆಹಾರಗಳು, ಇನಿಕೆಯ್ಗುಂ–ರುಚಿಯಾಗುತ್ತವೆ; ಆವಂದದೊಳ್–ಯಾವ ರೀತಿಯಲ್ಲಿ, ಕನಲ್ದು–ಕೆರಳಿ, ಆದಮೆಯ್ಯಂ–ಉಂಟಾದ ಬೊಜ್ಜನ್ನು, ಅಸಿಯನಾಗಿಪುದು–ಕೃಶವಾಗಿಸುತ್ತದೆ; ಉೞಿದು ವಪ್ಪುವು–ಉಳಿದುವೂ ಆಗುತ್ತದೆ; ಮೃಗದಮೆಯ್ಯೊಳ್–ಪ್ರಾಣಿಯ ಮೈಯಲ್ಲಿ, ಬಗೆಗೊಳಲಪ್ಪುದು–ಅವುಗಳ ಮನವನ್ನು ತಿಳಿವುದಾಗುತ್ತದೆ; ನಿಸದಂ–ನಿಶ್ಚಯವಾಗಿಯೂ, ಬಲ್ಲಾಳ–ಶೂರನ, ಬಿಲ್ಬಲ್ಮೆ–ಬಿಲ್ಲಿನ ಪ್ರೌಢಿಮೆ, ಎಸೆವುದು–ಪ್ರಕಾಶಿಸುತ್ತದೆ; ಇಸುತೆ–ಬಾಣ ವನ್ನು ಪ್ರಯೋಗಿಸುತ್ತಾ, ತನ್ನೊಳಂ–ತನ್ನಲ್ಲಿಯೂ, ಲೇಸಪ್ಪುದು–ಒಳ್ಳೆಯದಾಗುತ್ತದೆ; ಬೇಂಟೆಯಂ–ಬೇಟೆಯನ್ನು, ಅಱಿಯದೆ–ತಿಳಿಯದೆ, ಬಸನವೆಂದು–ವ್ಯಸನವೆಂದು, ಏಳಿಸುವರ್–ನಿಂದಿಸುತ್ತಾರೆ; ಬೇಂಟೆಯೆ–ಬೇಟೆಯೇ, ಬಿನದಂಗಳ–ವಿನೋದಗಳ, ಅರಸಲ್ತೇ–ರಾಜನಲ್ಲವೇ? ಎಲ್ಲ ವಿನೋದಗಳಲ್ಲೂ ಮೃಗಯಾವಿನೋದವೇ ಶ್ರೇಷ್ಠ. ಇದನ್ನು ‘ಮೇದಶೆ, । ದ ಕೃಶೋದರಂ’ ಎಂದು ಆರಂಭವಾಗುವ ಕಾಳಿದಾಸನ ಪದ್ಯದೊಡನೆ (ಅಭಿ ಜ್ಞಾನ ಶಾಕುಂತಲ ೨–೪) ಹೋಲಿಸಬಹುದು.
ವಚನ : ಮೃಗವ್ಯಾಯಾಮಕಾರ್ತಿಕೇಯಂ–ಮೃಗಗಳಿಗೆ ಕಸರತ್ತು ಮಾಡಿಸುವುದರಲ್ಲಿ ಷಣ್ಮುಖನಾದವನು, ಅರಿಕೇಸರಿ–ಅರ್ಜುನ; ತೊವಲನಿಕ್ಕು–ಚಿಗುರನ್ನು ಹಾಕು; ಪರಿಯ ತಾಣಕ್ಕೆ–ನುಗ್ಗುವ ಸ್ಥಳಕ್ಕೆ; ಪೆಱಗಣ–ಹಿಂದುಗಡೆಯ, ಉಲಿಪಿಂಗಂ–ಸದ್ದಿಗೂ, ಉಳ್ಳೊ ಳಕ್ಕಂ– ಗದ್ದಲಕ್ಕೂ, ಗೆಂಟಾಗಿ–ದೂರವಾಗಿ; ಬೇಂಟೆಕಾಱನ ಸಮೆದ–ಬೇಟೆಗಾರನು ಮಾಡಿದ; ಗುಣಣೆಯ–ನೃತ್ಯಶಾಲೆಯ; ಬಾಣಸಿನ–ಅಡಿಗೆಯ, ನನೆಯ ಪಂದರುಮಂ–ಹೂವಿನ ಚಪ್ಪರ ವನ್ನೂ; ತಳಿರ ಕಾವಣಂಗಳುಮಂ–ಚಿಗುರಿನ ಹಂದರಗಳನ್ನೂ; ಮಾಡದ ನೆಲೆಯೆ ಚೌಪಳಿಗೆ ಗಳುಮಂ–ಅಂತಸ್ತುಗಳ ಮನೆಯ ತೊಟಿಗಳನ್ನೂ; ಇಂಬಪ್ಪಂತಿರೆ–ಅನುಕೂಲವಾಗುವ ಹಾಗೆ; ಕೌಂಗಿನ–ಅಡಕೆಯ (ಮರದ), ಮೈಂದವಾೞೆಯುಮಂ–ಮಹೇಂದ್ರ ಬಾಳೆಯನ್ನೂ, ತೊವಲ್ವೆರಸು ನಟ್ಟ–ಚಿಗುರಿನ ಸಮೇತವಾಗಿ ನಾಟಿದ; ಬಿಟ್ಟುಳಿಯ–?, ಕಕ್ಕುಂಬ–?, ತೊಡಂಬೆಯ–ಗೊಂಚಲಿನ, ಮೂಡಿಗೆಯ–ಬತ್ತಳಿಕೆಯ, ಕದಳಿಕೆಯ–ಬಾವುಟದ, ಕಾಂಡ ಪಟಂಗಳುಮಂ–ತೆರೆಗಳನ್ನೂ; ಪಡಿಗಳಂ–ಬಾಗಿಲುಗಳನ್ನು, ಅಮರ್ಚಿ–ಸೇರಿಸಿ; ತಿಣ್ಣಮಿರಿಸಿ–ಅಧಿಕ ಸಂಖ್ಯೆಯಲ್ಲಿಟ್ಟು, ನೇಣುಮಂ–ಹಗ್ಗವನ್ನು; ಬೇಂಟೆವಸದನಂಗೊಂಡು– ಬೇಟೆಯ ವೇಷವನ್ನು, ಅಲಂಕಾರವನ್ನು ಮಾಡಿಕೊಂಡು; ಕಂಡಿಯ–ಮೃಗವು ಹೊಗುವ ಹೊರಗೆ ಬರುವ ಸ್ಥಳ; ಪುಗಿಲ ಪುಲ್ಲೆಯ–ಹೊಗುವ ಜಿಂಕೆಯ, ಮೊದಲುರಮುಮಂ– ಎದೆಯ ಮೊದಲ ಭಾಗವನ್ನೂ; ಬಲ್ಮೆಯಂ–ಪ್ರೌಢಿಮೆಯನ್ನು, ಕೌಶಲವನ್ನು.
೪೮. ಮುಂದಣ ಮಿಗಮಂ ಕೞಿಪದೆ–ಮುಂದಿನ ಜಿಂಕೆಯನ್ನು ಸಾಯಿಸದೆ, ಸಂದಿಸಿ– ಸೇರಿಕೊಂಡು, ಬೞಿಗೊಳ್ವ–ಅದರ ಹಿಂದೆ ಹೋಗುವ, ಮಿಗಮುಮಂ–ಜಿಂಕೆಯನ್ನೂ, ಕೞಿಪದೆ–ಸಾಯಿಸದೆ, ತಾನೊಂದು ಅಳವಿದಪ್ಪದೆ–ತಾನು ಒಂದು ಅಳತೆಯನ್ನು ತಪ್ಪದೆ, ಎಚ್ಚು–ಬಾಣಪ್ರಯೋಗ ಮಾಡಿ, ಬಲಿಂದಮನಿಂ–ಶ್ರೀಕೃಷ್ಣನಿಂದ, ಬಿಲ್ಲ ಬಲ್ಮೆಯಂ– ಬಿಲ್ವಿದ್ಯೆಯ ಕೌಶಲವನ್ನು, ಪೊಗೞಿಸಿದಂ–ಹೊಗಳುವ ಹಾಗೆ ಮಾಡಿದನು.
ವಚನ : ಬೆರ್ಚಿ–ಹೆದರಿ; ಪೊಳೆವುಲ್ಲೆಗಳುಂ–ಹೊಳೆಯುವ ಚಿಗರಿಗಳನ್ನು; ಎಯ್ಗಳು ಮಂ–ಮುಳ್ಳು ಹಂದಿಗಳನ್ನೂ; ತಡಂಮೆಟ್ಟಿ–ಉದ್ದವಾದ ಹೆಜ್ಜೆ ಹಾಕಿ; ಕಡವಿನ–ಸಾರಂಗದ; ಮರೆಯ–ಹುಲ್ಲೆಗಳ;
೪೯. ತಮಗೆ–ಸಿಂಹಗಳಿಗೆ, ಆಸುಕರಂಗಡ–ಅತಿ ರಭಸವಲ್ಲವೆ, ಅತಿಭಾಸುರ–ಅತಿ ಪ್ರಕಾಶ ಮಾನವಾದ, ಮೃಗರಾಜ–ಪ್ರಾಣಿಗಳಿಗೆ ರಾಜ, ಎಂಬ, ನಾಮಮುಂ ಗಡಂ–ಹೆಸರೂ ಅಲ್ಲವೆ, ಎಂದು, ಈ ದೋಸಕ್ಕೆ–ಆ ದೋಷಗಳಿಗಾಗಿ, ಮುಳಿದು–ಕೋಪಿಸಿ, ನೆಗೞ್ದರಿಕೇಸರಿ–ಪ್ರಸಿದ್ಧ ನಾದ ಅರಿಕೇಸರಿ, ಕೇಸರಿಗಳನಿತುಮಂ–ಅಷ್ಟು ಸಿಂಹಗಳನ್ನೂ, ತಳ್ತಿಱಿದಂ–ಎದುರಿಸಿ ಹೊಡೆದನು.
೫೦. ಇಱಿದು–ಹೊಡೆದು, ಕೊಂದು, ಅವಱನೆತ್ತರೊಳ್–ಆ ಸಿಂಹಗಳ ರಕ್ತದಲ್ಲಿ, ತನ್ನುರಮಂ–ತನ್ನ ಎದೆಯನ್ನು, ತಳ್ಕಿಱಿದಂ–ಬಳಿದನು, ಲೇಪಿಸಿದನು; ಉರುಗಜಂಗಳಂ– ಶ್ರೇಷ್ಠವಾದ ಆನೆಗಳನ್ನು, ಆಟಂದು–ಮೇಲೆ ಬಿದ್ದು (ಧಾ. ಆಟರ್), ಅಱಸಿ–ಹುಡುಕಿ, ಕೊಲುತಿರ್ಪುವು–ಕೊಲ್ಲುತ್ತಿವೆ, ಎಂಬ, ಈ ಕಱುಪಿನೊಳ್–ಈ ಕೋಪದಲ್ಲಿ, ಅರಿಗಂ ಬರಂ–ಅರಿಕೇಸರಿಯ ಮಟ್ಟಕ್ಕೆ ಬರುವ, ಗಜಪ್ರಿಯರೊಳರೇ–ಆನೆಯಲ್ಲಿ ಪ್ರೀತಿಯುಳ್ಳ ವರುಂಟೇ? ಇಲ್ಲ. ಅರಿಕೇಸರಿಯ ‘ಗಜಪ್ರಿಯ’ ಎಂಬ ಬಿರುದಿನ ಸಾರ್ಥಕ್ಯ.
ವಚನ : ಅನವರತ….ಕಾನನಂ: ಅನವರತ–ಸಂತತವಾದ, ಶರಾಸರ–ಬಾಣಗಳ ಮಳೆಯಿಂದ, ಶೂನ್ಯೀಕೃತ–ಬರಿದಾಗಿ ಮಾಡಲ್ಪಟ್ಟ, ಕಾನನಮಾಗೆ–ಕಾಡನ್ನುಳ್ಳದಾಗಿ, ಎಚ್ಚು–ಹೊಡೆದು; ಮೃಗವ್ಯ ವ್ಯಾಪಾರದಿಂ–ಬೇಟೆಯ ಕಾರ್ಯದಿಂದ, ಬೞಲ್ದು–ಬಳಲಿ;
೫೧. ಒಂದು ಸೋಗೆ ನವಿಲ್–ಗರಿಯ ನವಿಲೊಂದು, ಗಂಡು ನವಿಲೊಂದು, ಕರ್ಕಡೆ ಗಾಸಿಯಾಗಿ–ಕಕ್ಕಡೆ ಎಂಬ ಆಯುಧದ ಏಟಿನಿಂದ ಆಯಾಸಗೊಂಡು, ಜವಮುೞಿದು– ವೇಗವನ್ನು ಬಿಟ್ಟು, ನಿದಾನವಾಗಿ, ಪಾಱುವುದುಂ–ಹಾರುತ್ತಲು, ಇದು–ಈ ನವಿಲು, ಎನ್ನನಲ್ಲಳ–ನನ್ನ ಪ್ರಿಯಳ, ರತಿಶ್ರಮ ವಿಶ್ಲಥ ಕೇಶಪಾಳದೊಳ್–ರತಿಕ್ರೀಡೆಯ ಬಳಲಿಕೆ ಯಿಂದ ಸಡಿಲವಾಗಿ ಬಿಚ್ಚಿಹೋದ ಕುರುಳುಗಳಲ್ಲಿ, ಸವಸವನಾಗಿ ತೋಱಿದಪುದು–ಸರಿ ಸಮಾನವಾಗಿ ತೋರುತ್ತದೆ, ಎಂಬುದೆ ಕಾರಣದಿಂದದಂ–ಎಂಬ ಕಾರಣದಿಂದಲೇ ಅದನ್ನು, ಹಯವಲ್ಗನ ಸಂಚಳ ರತ್ನಕುಂಡಳಂ–ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ, ಗುಣಾರ್ಣವಂ–ಅರ್ಜುನ, ಇಡಲ್–ಹೊಡೆಯಲು, ಒಲ್ದನಿಲ್ಲ–ಒಪ್ಪಿದವ ನಾಗಲಿಲ್ಲ; ಎಂದರೆ ಆ ನವಿಲನ್ನು ತಿರುಗಿ ಹೊಡೆಯಲಿಲ್ಲ. ಇದು ಸುಂದರವಾದ ಪದ್ಯ: “ಅಪಿ ತುರಗ ಸಮೀಪಾದುತ್ಪತಂತಂ ಮಯೂರಂ” ಎಂದು ಆರಂಭವಾಗುವ ಪದ್ಯದೊಡನೆ (ರಘುವಂಶ ೯-೬೭) ಹೋಲಿಸಿ ನೋಡಿರಿ.
ವಚನ : ಯಮುನಾನದೀ ತಟನಿಕಟವರ್ತಿಗಳಾದರ್–ಯಮುನಾನದಿಯ ತೀರಕ್ಕೆ ಸಮೀಪವಿರುವವರಾದರು.
೫೨. ಆ ನದಿ ಅರ್ಜುನನನ್ನು ಸ್ವಾಗತಿಸಿತು : ಸರಳ–ಸರಲವೃಕ್ಷ (ತೇಗದ ಮರ), ತಮಾಳ–ಹೊಂಗೆಮರ, ತಾಳ–ತಾಳೆ, ಹರಿಚಂದನ–ಶ್ರೀಗಂಧದ, ನಂದನ–ತೋಟ, ಇವೇ ಉಳ್ಳ, ಭೂಜರಾಜಿಯಿಂ–ಮರಗಳ ಸಾಲುಗಳಿಂದ, ಸುರಿವಲರೋಳಿ–ಸುರಿಯುವ ಹೂಗಳ ಸಾಲು, ತದ್ವನ ಲತಾಂಗಿಯ–ಆ ವನವೆಂಬ ಸ್ತ್ರೀಯು, ಸೂಸುವ–ಎರಚುವ, ಸೇಸೆಯಾಯ್ತು– ಮಂತ್ರಾಕ್ಷತೆಯಾಯಿತು; ಭೃಂಗರವಂ–ದುಂಬಿಗಳ ನಾದ, ಅದೊಂದು ಮಂಗಳರವಕ್ಕೆ– ಅದೊಂದು ಮಂಗಳವಾದ್ಯಗಳ ಶಬ್ದಕ್ಕೆ, ಎಣೆಯಾಯ್ತು–ಸಮಾನವಾಯಿತು, ಮನೋನು ರಾಗದಿಂ–ಮನದ ಸಂತೋಷದಿಂದ, ಮತ್ತಕಳಹಂಸರವಂ–ಮದಿಸಿದ ಹಂಸಪಕ್ಷಿಗಳ ಶಬ್ದ, ಪಡೆಮೆಚ್ಚೆಗಂಡನಂ–ಅರ್ಜುನನನ್ನು, ಕರೆವವೊಲಾಯ್ತು–ಕರೆಯುವ ಹಾಗೆ ಆಯಿತು.
೫೩. ಒಂದು ತಂಪಾದ ಗಾಳಿ ಬೀಸಿತು: ಯಮುನಾ ನದೀ ತರಂಗಮನಮುಂಕಿ– ಯಮುನಾ ನದಿಯ ಅಲೆಗಳನ್ನು ಅದುಮಿ, ವನಲತೆಯ ಮನೆಗಳಂ ಸೋಂಕಿ–ಕಾಡು ಬಳ್ಳಿಯ ಮನೆಗಳನ್ನು ಮುಟ್ಟಿ, ಬಂದ, ಅದೊಂದು ಮಂದಶ್ವಸನಂ–ಅದೊಂದು ಮಂದ ಮಾರುತ, ವನಭ್ರಮಣ ಪರಿಶ್ರಮಮಂ–ಕಾಡಿನ ಅಲೆದಾಟದಿಂದ ಆದ ಆಯಾಸವನ್ನು, ಮುನ್ನಮೆ–ಮೊದಲೇ, ಕಳೆದುದು–ಹೋಗಲಾಡಿಸಿತು. ಇದು ರಚನೆಯಲ್ಲೂ ಕಲ್ಪನೆ ಯಲ್ಲೂ ಸುಂದರವಾದ ಪದ್ಯ; ‘ಯಮುನಾ ನದೀ ತರಂಗಮಂ’ ಎಂಬಲ್ಲಿನ ದೀರ್ಘಾಕ್ಷರ ಗಳು ಆ ನದಿಯ ವಿಸ್ತಾರವನ್ನೂ ಅಲೆಗಳ ಮಾಲೆಗಳನ್ನೂ ಬಿಂಬಿಸುತ್ತವೆ; ‘ಅಮುಂಕಿ’ ಎಂಬಲ್ಲಿನ ಜಗಣ ಗಾಳಿ ಹೇಗೆ ಅದನ್ನು ಮುಟ್ಟಿ ಅಮುಕಿತು ಎಂಬುದನ್ನು ಧ್ವನಿಸುತ್ತದೆ; ಗಾಳಿ ತಂಪಾಗಲು ಕಾರಣ, ಅಲೆಗಳನ್ನು ಅಮುಕಿದ್ದು, ಬಳ್ಳಿ ಮನೆಗಳನ್ನು ಸೋಕಿದ್ದು; ಮೃದು ಬಂಧ.
ವಚನ : ಕಾಳಿಂದೀ….ಚಾರಿಯುಂ: ಕಾಳಿಂದೀ–ಯಮುನಾ ನದಿಯ, ಜಲ–ನೀರಿನ, ಶಿಶಿರ–ತಂಪಾದ, ಶೀಕರ–ತುಂತುರನ್ನುಳ್ಳ, ವಾರಿ–ನೀರಿನ ಮೇಲೆ, ಚಾರಿಯುಂ–ಸಂಚಾರ ಮಾಡುವುದೂ, ಮೃಗಯಾ….ಹಾರಿಯುಂ: ಮೃಗಯಾ–ಬೇಟೆಯ, ಪರಿಭ್ರಮ–ಅಲೆದಾಟದ, ಶ್ರಮ–ಆಯಾಸದಿಂದ, ಉತ್ಥಿತ–ಹುಟ್ಟಿದ, ಸ್ವೇದಜಲಲವ ಹಾರಿಯುಂ–ಬೆವರು ನೀರಿನ ಕಣಗಳನ್ನು ಹೋಗಲಾಡಿಸುವುದೂ; ತನ್ನ ಬಾಳ ನೀರಂತೆ–ತನ್ನ ಕತ್ತಿಯ ಕಾಂತಿಯಂತೆ; ಕಱಂಗಿ–ಕಪ್ಪಾಗಿ, ಕರ್ಗಿದ–ಕರಿದಾದ; ಕಾಳಾಹಿಮಥನ–ಶ್ರೀಕೃಷ್ಣನ.
೫೪. ತನ್ನೊಳಗಣ–ತನ್ನ ಒಳಗಡೆ ಇದ್ದ, ಪನ್ನಗನಂ–ಕಾಳಿಂಗ ಸರ್ಪವನ್ನು, ಮುನ್– ಪೂರ್ವಕಾಲದಲ್ಲಿ, ನೀನ್–ನೀನು, ಪಿಡಿದು–ಹಿಡಿದು, ಒಗೆಯೆ–ಎಸೆಯಲು, ಕಾಯಲಾಱದೆ– ರಕ್ಷಿಸಲಾರದೆ, ಪಿರಿದುಂ–ಹೆಚ್ಚಾಗಿ, ಬನ್ನದ–ಸೋಲಿನ, ಕರ್ಪು–ಕರಿಬಣ್ಣ, ಹರಗಳ ತಮಾಳ ನೀಳಚ, ವಿಯಿಂ–ಶಿವನ ಕೊರಳಿನಂತೆ, ಹೊಂಗೆಯಂತೆ ಕರಿದು ಕಾಂತಿಯಿಂದ, ತೊಱೆಗೆ–ನದಿಗೆ, ಇನ್ನುಂ–ಇನ್ನೂ ಕೂಡ, ಎಸೆದುದು–ಪ್ರಕಾಶಿಸುತ್ತದೆ.
೫೫. ತಳಿರಿಡಿದು–ಚಿಗುರು ಕಿಕ್ಕಿರಿದು, ಪೂತಲತೆಗಳಂ–ಹೂಬಿಟ್ಟ ಬಳ್ಳಿಗಳನ್ನು, ಒಡನೊಡನೆ–ಕೂಡ ಕೂಡಲೇ, ಎಲರ್–ಗಾಳಿ, ಅಲೆಯೆ–ಪೀಡಿಸಲು, ಬಿಡದೆ–ನಿಲ್ಲದೆ, ಸುರಿವ–ಸುರಿಯುವ, ಅಲರ್ಗಳಂ–ಹೂವುಗಳನ್ನು, ಅಂದು–ಆಗ, ಎಡೆಗುಡದೆ–ಅವಕಾಶ ವನ್ನು ಕೊಡದೆ, ನೂಂಕಿ–ತಳ್ಳಿ, ಇದಱ–ಈ ನದಿಯ, ಬಂಬಲ್ದೆರೆಗಳ್–ಸಾಲಾದ ತೆರೆಗಳು, ಮೆಲ್ಲನೆ–ಮೃದುವಾಗಿ, ತಡಿಯಂ–ದಡವನ್ನು, ಸಾರ್ಚಿದಪುವು–ಸೇರಿಸುತ್ತವೆ. ಇಲ್ಲಿನ ಚಿತ್ರ ತುಂಬ ಮನೋಜ್ಞವಾಗಿದೆ. ಇದರ ಆಧಾರದ ಮೇಲೆ ವರ್ಣಶಿಲ್ಪಿ ಸೊಗಸಾದ ದೃಶ್ಯವನ್ನು ರಚಿಸಬಹುದು. ಈ ಚಿತ್ರ ಪಂಪನಿಗೆ ಬಹು ಪ್ರಿಯವಾದದ್ದು; ಆದಿಪುರಾಣದ (೧–೬೧) ಪದ್ಯವನ್ನು ನೋಡಿ; ಒಂದೇ ದೃಶ್ಯ, ಎರಡರಲ್ಲಿ ಯಾವುದು ಹೆಚ್ಚು ಸುಂದರ?
೫೬. ವಿದಳಿತ ನುತ ಶತಪತ್ರದ–ಅರಳಿದ ಪ್ರಸಿದ್ಧವಾದ ತಾವರೆಯ, ಪುದುವಿನೊಳ್– ಹುದುವಿನಲ್ಲಿ, ಆಶ್ರಯದಲ್ಲಿ, ಇರದೆ, ಅಗಲೆವೋದ–ಅಗಲಿಯೇ ಹೋದ, ಹಂಸನಂ– ಗಂಡು ಹಂಸಪಕ್ಷಿಯನ್ನು, ಅಱಸಲ್–ಹುಡುಕಲು, ಪದೆದು–ರಾಗಿಸಿ, ಎಳಸುವ–ಬಯ ಸುವ, ಪೆಣ್ಣಂಚೆಯ–ಹೆಣ್ಣು ಹಂಸೆಯ, ಪದಕೊರಲ–ಹದವಾದ ಕೊರಳಿನ, ಇಂಚರದ– ಇಂಪಾದ ಧ್ವನಿಯ, ಸರಮೆ–ಸ್ವರವೇ, ಇದಱೊಳ್–ಇದರಲ್ಲಿ, ಕಿವಿಗೆ, ಸವಿ.
೫೭. ಜಲದೇವತೆಗಳ್–ನೀರಿಗೆ ಅಭಿಮಾನದೇವತೆಗಳು, ನಿಱಿವಿಡಿದು–ನೆರಿಗೆಯನ್ನು ಹಿಡಿದು, ಉಡಲ್–ಉಡಲು, ನಿಮಿರ್ಚಿದ–ಬಿಚ್ಚಿದ, ಕುಱುವಡಿಯ–ಚಿಕ್ಕ ಮಡಿ ಬಟ್ಟೆಯ, ತರಂಗದಂತೆ–ಅಲೆಗಳ ಹಾಗೆ, ಬಂಬಲ್ದೆರೆಗಳ್–ಸಾಲಾದ ಅಲೆಗಳು, ನೆಱೆಯಲರ್ದ– ಪೂರ್ಣವಾಗಿ ಅರಳಿದ, ಅಂಭೋರುಹದ–ತಾವರೆಯ, ಅಲರ್ದುಱುಗಲಂ–ಹೂವಿನ ಸಮೂಹವನ್ನು, ಎಸೆಯೆ–ಸೊಗಸಾಗಲು, ಅಲೆದು–ಪೀಡಿಸಿ, ಒಗೆದುವು–ನೆಗೆದುವು.
೫೮. ತರಂಗಚಯಂ–ಅಲೆಗಳ ಸಮೂಹ, ತುರಗಚಯಂಗಳಂತಿರೆ–ಕುದುರೆಗಳ ಸಮೂಹದಂತಿರಲು; ಕಳಹಂಸೆ–ಕೋಮಲವಾದ ಹಂಸಪಕ್ಷಿ, ಚಮರೀರುಹಂಗಳಂತಿರೆ– ಚಾಮರಗಳಂತೆ ಇರಲು; ಬೆಳ್ನೊರೆ–ಬಿಳಿದಾದ ನೊರೆ, ಬೆಳ್ಗೊಡೆಗಳಂತಿರೆ–ಶ್ವೇತಚ, ತ್ರಿಯಂ ತಿರಲು; ಮಱಿದುಂಬಿ–ದುಂಬಿಯ ಮರಿಗಳು, ಗೊಟ್ಟಿಗಾಣರಂತಿರೆ–ಗೋಷ್ಠಿಯಗಾಯಕ ರಂತಿರಲು, ಸಾರಿಕೆ–ಹೆಣ್ಣು ಗಿಣಿಗಳು, ಮೇಳದವರಂತಿರೆ–ಜೊತೆಗಾರರಂತಿರಲು; ಕೊಳನಲ್ಲಿ–ಅಲ್ಲಿ ಕೊಳವು, ರಾಜಗೇಹದಂತಿರೆ–ಅರಮನೆಯ ಹಾಗಿರಲು, ತಾಮರಸಂಗಳ್– ತಾವರೆಗಳು, ತಾಂ ಅರಸರಂತಿರೆ–ತಾವು ರಾಜರಂತೆ, ಒಪ್ಪುಗುಂ–ಸೊಗಸಾಗಿವೆ.
ವಚನ : ಭಾಸ್ಕರ ತನೂಜೆಯಂ–ಸೂರ್ಯನ ಮಗಳು, ಯಮುನಾ ನದಿಯನ್ನು; ಪಿಶಂಗ– ಕಪಿಲವರ್ಣವಾಗಿ ಮಾಡಲ್ಪಟ್ಟ ಎಂದರೆ ಕಪ್ಪು ಕೆಂಪುಗಳ ಮಿಶ್ರವರ್ಣ;
೫೯. ಜಲಕ್ರೀಡೆಗೆ ಅರಸಿಯರು ಬಂದರು: ಒತ್ತಿದ–ಬಳಿದುಕೊಂಡ, ತಳ್ಕು–ಗಂಧವೇ ಮುಂತಾದ ಲೇಪನ, ಎತ್ತಿದ–ಹಿಡಿದುಕೊಂಡ, ತೞೆ–ಛತ್ರಿಗಳು, ಮುತ್ತಿನ ಪೊಸದುಡಿಗೆ– ಮುತ್ತಿನ ಹೊಸ ಒಡವೆಗಳು, ತಳಿರ–ಚಿಗುರನ್ನು ಸಿಕ್ಕಿಸಿಕೊಂಡ, ಸೋರ್ಮುಡಿ–ಜಾರು ಗಂಟು, ಇವೆಲ್ಲ, ಮನಮಂ–ಮನವನ್ನು, ಪತ್ತಿಸಿ–ಅಂಟಿಕೊಂಡು, ಜೊತ್ತಿಸೆ–ಮರುಳು ಮಾಡಲು, ಮದನೋನ್ಮತ್ತೆಯರ್–ಕಾಮದಿಂದ ಮದಿಸಿದ, ಅರೆಬರ್–ಕೆಲವರು, ಅರಸಿ ಯರ್–ರಾಣಿಯರು, ಅವಯವದೆ–ಲೀಲೆಯಿಂದ, ಬಂದರ್–ಬಂದರು. ಇಲ್ಲಿ ‘ಜೊತ್ತಿಸು’ ಎಂಬುದರ ಅರ್ಥ ಚಿಂತನೀಯ; ಕೆಲವು ಪ್ರಯೋಗಗಳು: (೧) ಮತ್ತಿನ ಜೊತ್ತಿಸಿ ಕೊಟ್ಟಸಿತ ವ್ರತಂಗಳಂ (ಸುಕುಮಾ. ೭–೫ ವ.); ತದ್ಭಟರಂ ಮೆಲ್ಲನೆ ಬೇಱೆವೇಱೆ ಬರವೇೞ್ದೆನಿತಾನುಂ ತೆಱದ ಲಲ್ಲೆಯಿಂ ಜೊತ್ತಿಸಿದಳ್ (ಅದೇ ೧೦); ನಾನಾ ಪ್ರಕಾರದ ತತ್ತುಪಣಂಗಳಿಂ ಜೊತ್ತಿಸಿ
ವಶೀಕೃತಂ ಮಾಡಿ (ಅದೇ ೧೩ ವ); ನಂಬಿಯಣ್ಣಂ ಕಡುಗೋಪದಿಂ ನಿಮ್ಮ ಜೊತ್ತಿಗಾ ನಂಜುವನಲ್ಲೆಂ (ತ್ರಿಪುವಿ. ೨–೧೦೪ ವ); ಪುರುಡಂ ಪೋರಟೆವೆತ್ತು ಜೊತ್ತುಂ ಗತಕಂ ಗನ್ನಂ ಕಚಾಕರ್ಷಣಂ (ಅದೇ ೨೪–೧೦೦); ಇಲ್ಲೆಲ್ಲ ನಂಬಿಸು, ಮರುಳುಮಾಡು, ವಂಚಿಸು ಎಂಬರ್ಥಗಳು ಹೊಂದುತ್ತವೆ; ಜೊತ್ತು+ಇಸು; ಗತಕ, ಗನ್ನಂ ಎಂಬುದರ ಜೊತೆಯಲ್ಲಿ ಜೊತ್ತು ಇರುವುದನ್ನು ಗಮನಿಸಿ; ‘ಅವಯವ’ ಕ್ಕೆ ಅಶ್ರಮ, ಸುಲಭ, ಲೀಲಾಜಾಲ ಇತ್ಯಾದಿ ಅರ್ಥವಾಗುತ್ತದೆ; ಇಲ್ಲಿ ಲೀಲೆಯೆಂದು ಗ್ರಹಿಸಿದೆ.
೬೦. ಇದು ಮೃದು ಕಳಹಂಸದ ರವಂ–ಇದು ಮೃದುವಾದ ಹಂಸಪಕ್ಷಿಯ ಶಬ್ದ, ಇದು ನೂಪುರ ನಿನದಂ–ಇದು ಕಾಲ್ಗಡಗಗಳ ಶಬ್ದ: ಇದು ರಥಾಂಗಯುಗಂ–ಇದು ಚಕ್ರವಾಕ ಪಕ್ಷಿಗಳ ಜೋಡಿ, ಇವು ಕುಚಯುಗಂ–ಇವು ಜೋಡಿ ಮೊಲೆಗಳು; ಇದು ಸರಸಿಜಂ–ಇದು ತಾವರೆ, ಇದು ಮೊಗಂ–ಇದು ಮುಖ; ನೆರೆದ ಪೆಂಡಿರತಂಡಂ–ಸೇರಿದ ಸ್ತ್ರೀಯರ ಗುಂಪು, ಎನಿಸಿದುದು–ಎನಿಸಿತ್ತು. ಸ್ತ್ರೀಯರ ಅಂದಿಗೆಯ ರವ ಕುಚ ಮುಖಗಳನ್ನು ಹಂಸರವಕ್ಕೆ ರಥಾಂಗ ಯುಗಕ್ಕೆ ತಾವರೆಗೆ ಹೋಲಿಸುವುದು ರೂಢಿ; ಇಲ್ಲಿಯಾದರೆ ಈ ಉಪಮಾನಗಳಿಗಿಂತ ಉಪಮೇಯಗಳೇ ಸೌಂದರ್ಯದಲ್ಲಿ ಮಿಗಿಲಾಗಿ ಎರಡಕ್ಕೂ ಭೇದವನ್ನು ಸೂಚಿಸುತ್ತಿದ್ದುವು ಎಂದು ಭಾವಿಸಬೇಕು.
ವಚನ : ಸಾಂದಿನ–ಸಾದಿನ, ಗಂಧದ; ಸೌಸವಮಂ–ಪರಿಮಳವನ್ನು; ಕದಡಂ–ಬಗ್ಗಡ ವನ್ನು, ಕೆಸರನ್ನು, ಸಾಂದು=(ತ) ಚಾಂದು–ಶಾಂದು.
೬೧. ಬಾಲೆಯರು ಕೊಳವನ್ನು ಹೊಕ್ಕಾಗ ಬಾಳೆ ಮೀನುಗಳು ಓಡಿದುವು: ನೀಲದ–ನೀಲ ರತ್ನದ, ಬೆಳ್ಳಿಯ, ಗಾಡಿಯುಂ–ಸೌಂದರ್ಯವೂ, ಈ ಲಲಿತಾಂಗಿಯ–ಈ ಕೋಮಲೆಯರ, ಕಣ್ಗೆ–ಕಣ್ಣುಗಳಿಗೆ, ಪೋಲ್ತುಂ–ಹೋಲಿಯೂ, ನಾಂ–ನಾವು, ಕಣ್ಗೇಳಿದವಾಗಿರೆವು–ನೋಡು ವವರ ಕಣ್ಣುಗಳಿಗೆ ಹೀನವಾಗಿರೆವು, ಎಂದು, ಎಳೆವಾಳೆಗಳ್–ಎಳೆಯ ಬಾಳೆ ಮೀನುಗಳು, ಬಾಲೆಯರ್ ಪುಗುವಾಗಳ್–ಬಾಲೆಯರು ಕೊಳವನ್ನು ಹೊಗುವಾಗ, ಓಡಿದುವು. ಇಲ್ಲಿ ಎರಡನೆಯ ಪಂಕ್ತಿಯಲ್ಲಿ ಏನೋ ಪಾಠಕ್ಲೇಶವಿದೆ; ಏಳಿದುವು–ತಿರಸ್ಕಾರಕ್ಕೆ, ಉದಾಸೀನತೆಗೆ, ಗುರಿಯಾದುವು.
೬೨. ಹರಿಗಂ–ಅರ್ಜುನ, ಆದಲೆ–ಅತ್ತಕಡೆ, ನೀರ್–ನೀರು, ಗುಂಡಿತ್ತು ಎಂದು–ಆಳ ಎಂದು, ಈದಲೆಯೊಳೆ–ಇತ್ತ ಕಡೆಯಲ್ಲಿಯೇ, ನಿಂದು–ನಿಂತು, ಸತಿಗೆ–ಕಾಂತೆಗೆ, ಜಾನು ದಘ್ನಂ–ಮೊಳಕಾಲು ಮುಳುಗುವುದು, ಉರೋದಘ್ನಂ–ಎದೆ ಮುಳುಗುವುದು, ಕಂಠ ದಘ್ನಂ–ಕಂಠ ಮುಳುಗುವುದು, ಎಂಬ, ಅಳವಿಗಳಂ–ಅಳತೆಗಳನ್ನು, ಆದರದೆ–ಪ್ರೀತಿ ಯಿಂದ, ತೋಱುತ್ತೆ–ತೋರಿಸುತ್ತ
ವಚನ : ಘಟ್ಟಣೆಯೊಳಂ–ತಾಗುವಿಕೆಯಲ್ಲಿ, ಅಳ್ಳೇಱಿನೊಳ್–ಅಲ್ಪವಾದ ಏಟಿನಲ್ಲಿ; ತಳ್ಳಂಕುಗುಟ್ಟಿ–ತುಳುಕಾಡಿ; ನೀರಾಟಂ–ಜಲಕ್ರೀಡೆ.
೬೩. ಮುಖಾಬ್ಜಮಂ–ಮುಖಕಮಲವನ್ನು, ಪೊಸತಲರ್ದ–ಹೊಸದಾಗಿ ಅರಳಿದ, ಒಂದು ತಾವರೆಯೆಗೆತ್ತು–ಒಂದು ತಾವರೆಯೆಂದೇ ಭಾವಿಸಿ, ಒಂದು, ತುಂಬಿ–ದುಂಬಿಯು, ಚುಂಬಿಸೆ–ಮುತ್ತಿಡಲು, ಸತಿ–ಕಾಂತೆ, ಬೆರ್ಚಿ–ಹೆದರಿ, ಪೆಳ್ಪಳಿಸಿ–ನಡುಗಿ, ನೋೞ್ಪುದುಂ– ನೋಡುತ್ತಲು, ಆಕೆಯ ಕಣ್ಣ ಬೆಳ್ಪುಗಳ್–ಅವಳ ಕಣ್ಣಿನ ಬಿಳುಪುಗಳು, ಪಸರಿಸೆ–ಹಬ್ಬಲು ಕುವಲಯಂಗಳ್–ಬೆಳ್ದಾವರೆಗಳು, ಅರಲ್ದುವೆಗೆತ್ತು–ಅರಳಿವೆಯೆಂದೇ ಭಾವಿಸಿ, ತುಂಬಿ ಗಳ್–ದುಂಬಿಗಳು, ಮತ್ತೆಯುಂ–ತಿರುಗಿಯುಂ, ಮುಸುಱುವುದುಂ–ಮುತ್ತಿಕೊಳ್ಳುತ್ತಲು, ಆಗಳವಳ್–ಆಗ ಅವಳು, ಭಯದಿಂದಂ–ಹೆದರಿಕೆಯಿಂದ, ಗುಣಾರ್ಣವನಂ–ಅರ್ಜುನನನ್ನು, ಅಪ್ಪಿದಳ್–ತಬ್ಬಿಕೊಂಡಳು, ಪೆಳ್ಪಳಿಸು=ಬೆಳ್ಪಳ+ಇಸು; “ಬೆಳ್ಪಳಮೆಂದುಂ ಸಂಚಳಂ.”
೬೪. ಅಸಿಯಳ್–ಕೃಶಾಂಗಿಯು, ಅವುಂಕಿ–ಅಮುಕಿ, ಕೆಂದಳದೊಳ್–ಕೆಂಪಾದ ಅಂಗೈ ಗಳಿಂದ, ಒತ್ತುವ–ಸೂಸುವ, ನೀರ್–ನೀರು, ಮೊಗಮಂ–ಮುಖವನ್ನು, ಪಳಂಚಿ–ತಾಗಲು, ಅಪ್ಪಳಿಸಲು, ಒರ್ವಳ್–ಒಬ್ಬಳು, ಬಂಚಿಸಲ್–ವಂಚಿಸುವುದಕ್ಕಾಗಿ, ತಪ್ಪಿಸಿಕೊಳ್ಳುವುದ ಕ್ಕಾಗಿ, ಇನಿಸಾನುಮಂ–ಒಂದಿಷ್ಟನ್ನು, ಮುೞಗಿದಾಗಡೆ–ಮುಳುಗಿದಾಗಲೇ, ಭೋಂಕನೆ– ಬೇಗನೆ, ಬಂದು, ಬಾಳೆಮೀನ್–ಬಾಳೆಮೀನು, ಮುಸುಱಿ–ಮುತ್ತಿಕೊಂಡು, ನಿರಂತರಂ– ಎಡೆಬಿಡದೆ; ಕರ್ದುಕೆ–ಕೆಚ್ಚಲು, ಸತ್ಕವಿಯೊಳ್–ಸತ್ಕವಿಯಲ್ಲಿ, ಸಮನಾಗಿ–ಸಮಾನವಾಗಿ, ಮಾರ್ಗಮಂ ಪೊಸಯಿಸಿ–ಮಾರ್ಗೀಶೈಲಿಯನ್ನು ಹೊಸದಾಗಿಸಿ, ದೇಸಿಯಂ–ದೇಸಿಶೈಲಿ ಯನ್ನು, ಚೆಲುವನ್ನು, ಅಪೂರ್ವ ರೂಪದಿಂ–ಅಪೂರ್ವವಾದ ರೂಪದಿಂದ, ಪೊಸತು ಮಾಡಿದಳ್–ಹೊಸದನ್ನಾಗಿ ಮಾಡಿದಳು.
೬೫. ಆ ಸಕಳ ಸ್ತ್ರೀ ನಿವಹದ–ಆ ಸಮಸ್ತ ನಾರಿಯರ ಸಮೂಹವು, ಪೂಸಿದ–ಲೇಪಿಸಿ ಕೊಂಡ, ಮೃಗಮದದ–ಕಸ್ತೂರಿಯ, ಮುಡಿಯ ಪೂವಿನ–ತುರುಬಿನ ಹೂಗಳ, ರಜದಿಂ– ದೂಳಿನಿಂದ, ವಾಸಿಸಿದ–ಕಂಪೇರಿದ, ನೀರ–ನೀರಿನ, ಕದಡಿಂದೆ–ಬಗ್ಗಡದಿಂದ, ಆಸವ ದೊಳ್–ಮದ್ಯದಲ್ಲಿ, ಸೊರ್ಕಿ–ಮದಿಸಿ, ಮೀಂಗಳ್–ಮೀನುಗಳು, ಬೆಂಡು ಮಗುೞ್ದುವು– ಬೆಂಡಿನಂತೆ ಹೊಟ್ಟೆ ಮೇಲೆ ಬೆನ್ನು ಕೆಳಗೆ ಆದವು; ಅಸ್ತವ್ಯಸ್ತವಾದುವು; ಹೊರಳಾಡಿದುವು.
೬೬. ಮುಡಿಬಿಡೆ–ತುರಬು ಬಿಚ್ಚಿಹೋಗಲು, ಪರೆದ–ಚದರಿದ, ಎಸೞ್ಗಳ–ಹೂವಿನೆ ಸಳುಗಳ, ಪೊಸದುಡುಗೆಯ–ಹೊಸ ಒಡವೆಗಳ, ಮುತ್ತುಗಳ, ಕುಚದ ಸಿರಿಕಂಡದ–ಎದೆಗಳ ಶ್ರೀಗಂಧದ, ಬೆಳ್ಪು–ಬಿಳಿಯ ಬಣ್ಣ, ಒಡನೊಡನೆ–ಕೂಡೆ ಕೂಡೆ, ಎಸೆದಿರೆ–ಶೋಭಿಸು ತ್ತಿರಲು, ಜಗುನೆಯ ಮಡು–ಯಮುನೆಯ ಮಡು, ಗಂಗೆಯ ಮಡುವಂ–ಗಂಗಾನದಿಯ ಮಡುವನ್ನು, ಇನಿಸಂ–ಸ್ವಲ್ಪ, ಅನುಕರಿಸಿರ್ಕುಂ–ಹೋಲುತ್ತಿದೆ. ಕರಿದಾದ ಯಮುನೆಯ ನೀರು ಬೆಳ್ಳಗಾಯಿತು ಎಂಬ ಭಾವ.
ವಚನ : ನಾಡೆಯುಂ ಪೊೞ್ತು–ಬಹಳ ಹೊತ್ತು; ಬಾಯ್ದೆಱೆಗಳುಂ–ತುಟಿಗಳೂ; ಪಳಂಚಿದ–ತಾಗಿದ, ಅಂಟಿಕೊಂಡ; ಬಣ್ಣಂಗಳುಂ–ಬಣ್ಣ ಬಣ್ಣದ ಸೀರೆಗಳೂ;
೬೭. ಅಂಗಜಂ–ಮನ್ಮಥನು, ತೆಱಪುವಡೆದು–ಅವಕಾಶವನ್ನು ಪಡೆದು, ನೋಟಕರ, ಮನಮಂ–ಮನಸ್ಸನ್ನು; ಕೆಯ್ಸೆಱೆಗೊಳೆ–ಸೆರೆಹಿಡಿಯಲು. ಆಗಳ್–ಆಗ, ಕೊಳದಿಂ–ಕೊಳ ದಿಂದ, ಪೊಱಮಡೆ–ಸ್ತ್ರೀಯರು ಹೊರಗೆ ಬರಲು, ಜಿಗಿಲ್ತು–ಅಂಟಾಗಿ, ಪತ್ತಿದ–ಮೈಗೆ ಸೇರಿಕೊಂಡ, ಕುಱುವಡಿಗಳೆ–ಚಿಕ್ಕ ಮಡಿಬಟ್ಟೆಗಳೆ, ಅವರ, ನಾಣ್ಗಳ ತೆಱಪಂ–ಲಜ್ಜಾಕರ ವಾದ ಎಡೆಗಳನ್ನು, ಮೆಱೆದುವು–ಪ್ರಕಟಿಸಿದುವು.
ವಚನ : ಮಡಿಯ ಭಂಡಾರ–ವಸ್ತ್ರಗಳ ಭಂಡಾರ; ನಿಯೋಗಿಗಳ್–ಉದ್ಯೋಗಿಗಳು; ಪಡಲಿಗೆಗಳೊಳ್–ತಟ್ಟೆಗಳಲ್ಲಿ; ಒಟ್ಟಿದ–ರಾಶಿ ಹಾಕಿದ, ದೇವಾಂಗವಸ್ತ್ರ–ರೇಷ್ಮೆವಸ್ತ್ರ; ಕೆಯ್ಗೆಯ್ದುಂ–ಸಿಂಗರಿಸಿಕೊಂಡೂ, ಆರೋಗಿಸಿ–ಊಟ ಮಾಡಿ; ಕೆಯ್ಗಟ್ಟಿಗೊಂಡು–ಕೈ ಗಂಧ ವನ್ನು ಸ್ವೀಕರಿಸಿ;
೬೮. ಶ್ರೀಕೃಷ್ಣನ ಮಾತು: ಇಲ್ಲಿ–ಈ ಎಡೆಯಲ್ಲಿ, ಸಂದ ಖರಧೇನುಕರಂ–ಪ್ರಸಿದ್ಧರಾದ ಖರಧೇನುಕರೆಂಬ ರಾಕ್ಷಸರನ್ನು, ಮುಳಿಸಿಂದಂ–ಸಿಟ್ಟಿನಿಂದ, ಅವುಂಕಿ–ಒತ್ತಿ, ಕೊಂದೆಂ– ಕೊಂದೆನು; ಕಾಳಿಂದಿಯ–ಯಮುನೆಯ, ಪಾವಂ–ಹಾವನ್ನು, ಪಿಡಿದು–ಹಿಡಿದು, ಈ ಸಿಲೆಯಲ್ಲಿ–ಈ ಬಂಡೆಯ ಮೇಲೆ, ಅಪ್ಪಳಿಸಿದೆಂ–ಹೊಡೆದೆನು; ಮತ್ತಂ–ಮತ್ತು, ಮುನ್ನಂ– ಪೂರ್ವ ಕಾಲದಲ್ಲಿ, ಆಟಂದರಂ–ಮೇಲೆ ಬಿದ್ದ, ಉಗ್ರ ದೈತ್ಯರಂ–ಭಯಂಕರರಾದ ರಾಕ್ಷಸ ರನ್ನು, ಅಳುರ್ಕೆಯಿಂ–ಪರಾಕ್ರಮದಿಂದ, ಇಲ್ಲಿ–ಈ ಎಡೆಯಲ್ಲಿ, ಇಕ್ಕಿದೆಂ–ಕೊಂದೆನು; ಅಂದು–ಆಗ, ಗುಣಾರ್ಣವಂಗೆ–ಅರ್ಜುನನಿಗೆ, ಮಧುಕೈಟಭಹಾರಿ–ಮಧುಕೈಟಭರೆಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣ, ತೊೞಲ್ದು–ಸುತ್ತಾಡಿ, ತೋಱಿದಂ–ತೋರಿಸಿದನು.
ವಚನ : ಅನೂನ ದಾನಿಯ–ಕುಂದಿಲ್ಲದ ದಾನಿಯ; ದಾನದುದ್ದಾನಿಯ–ದಾನದಲ್ಲಿ ಅತ್ಯತಿಶಯವಾದವನ; ಆನಲ್–ತಾಳಲು, ಸ್ವೀಕರಿಸಲು; ಆನಲ್ಲದೆ–ನಾನಲ್ಲದೆ.
೬೯. ಉರಿವುರಿಯನೆ–ಉರಿಯುವ ಉರಿಯನ್ನೇ, ತಲೆನವಿರ್–ತಲೆ ಕೂದಲು, ಅನುಕರಿಸಿರೆ–ಹೋಲಿರಲು, ಸಂತಪ್ತ ಕನಕವರ್ಣಮುಂ–ಕಾಸಿದ ಚಿನ್ನದ ಹೊಂಬಣ್ಣವೂ, ಉರಿಯ, ಒಂದು, ಉರುಳಿವೊಲಿರೆ–ಉಂಡೆಯ ಹಾಗಿರಲು; ಜಠರನಾಳಂ–ಹೊಟ್ಟೆಯ ಉರಿ, ಜಠರಾಗ್ನಿ, ಹಸಿವು, ಉಹಿಯಿನಂ–ಉಹಿಯುತ್ತಿರಲು, ಉರಿಯ ಬಣ್ಣದ–ಕಿಚ್ಚಿನ ಬಣ್ಣದ, ಒರ್ವಂ–ಒಬ್ಬ, ಪಾರ್ವಂ–ಬ್ರಾಹ್ಮಣನು.
ವಚನ : ಅಂತು ವರ್ಪನಂ ಕಂಡು–ಹಾಗೆ ಬರುವವನನ್ನು ನೋಡಿ.
೭೦. ತಪನಿಯಮನಿರತಂ–ತಪಸ್ಸಿನ ನಿಯಮದಲ್ಲಿ ಆಸಕ್ತನಾಗಿರುವ, ಈ ಬರ್ಪ ಪಾರ್ವಂ–ಇಗೋ ಬರುವ ಬ್ರಾಹ್ಮಣನು, ತನಗೆ ಏನೞ್ತಿ ಅದಂ–ತನಗೆ ಏನು ಬೇಕಾ ಗಿದೆಯೋ ಅದನ್ನು, ಬೇಡಿದೊಡೆ–ಬಯಸಿ ಕೇಳಿದರೆ, ಇಂ ಅಪಗತದುರಿತರ್–ಇನ್ನು ಪಾಪರಹಿತರಾದವರು, ಸಂಪೂರ್ಣ ಪುಣ್ಯರ್–ಪೂರ್ಣವಾದ ಪುಣ್ಯವಂತರು; ಆನಲ್ಲದಿಲ್ಲ– ನಾನಲ್ಲದೆ ಇಲ್ಲ; ಪೆಱರೊಳರೇ ಪೇೞ್–ಬೇರೆ ಯಾರಾದರೂ ಉಂಟೋ, ಹೇಳು.
ವಚನ : ಎಂಬನ್ನೆಗಂ–ಎನ್ನುತ್ತಿರಲು; ಎಯ್ದೆವಂದು–ಸಮೀಪಕ್ಕೆ ಬಂದು; ಋಚಂಗಳಂ– ಋಕ್ಕುಗಳನ್ನು, (ವೇದದ ಪದ್ಯಗಳನ್ನು); ಸಿತ ದೂರ್ವಾಂಕುರ–ಬೆಳ್ಳನೆಯ ಗರಿಕೆ ಹುಲ್ಲಿನ ಸಸಿ; ಶೇಷಾಕ್ಷತಂಗಳಂ–ಆಶೀರ್ವಾದದ ಅಕ್ಷತೆಯನ್ನು; ಬಾೞ್ತೆಯಪ್ಪುದಂ–ಪ್ರಯೋಜನ ವಾಗುವುದನ್ನು.
೭೧. ಮಣಿಕನಕಾದಿವಸ್ತುಗಳಂ–ರತ್ನ ಚಿನ್ನ ಮುಂತಾದ ವಸ್ತುಗಳನ್ನು, ಒಂದುಮಂ– ಒಂದನ್ನೂ, ಒಲ್ಲೆನ್–ಬಯಸೆನು; ಅವು ಏವುವು–ಅವು ಏನು ಮಹಾ! ಎನಗೆ–ನನಗೆ, ಆದಂ–ವಿಶೇಷವಾಗಿ, ಇನ್ನುಣಿಸು–ಸವಿಯಾದ ಆಹಾರ, ಅೞ್ತಿ–ಪ್ರೀತಿ; ಪಸಿದು–ಹಸಿದು, ಮೆಯ್–ಮೈ, ಜೊಂಮನೆ ಪೋದಪುದು–ಜೋಮು ಹಿಡಿದ ಹಾಗಾಗಿದೆ; ಎನ್ನ–ನಾನು, ವೇೞ್ಪುದಂ–ಬಯಸಿದ್ದನ್ನು, ತಣಿಯುಣಲ್–ತೃಪ್ತಿಯಾಗುವ ಹಾಗೆ ಉಣ್ಣಲು, ಈ ವೊಡೆ– ಕೊಡುವ ಪಕ್ಷದಲ್ಲಿ, ಈವುದು–ಕೊಡುವುದು; ಎನೆ–ಎನ್ನಲು, ಅದೇವಿರಿದು–ಅದೇನು ದೊಡ್ಡದು, ಇತ್ತೆನ್–ಕೊಟ್ಟೆನು, ಆವುದು–ಯಾವುದು, ಉಣ್ಬ–ಊಟ ಮಾಡುವ, ಉಣಿಸು– ಆಹಾರ, ಎನೆ ಪಾರ್ಥಂ–ಎಂದು ಅರ್ಜುನನು ಹೇಳಲು, ಪೇೞ್ವೆಂ–ಹೇಳುವೆನು, ಎಂಬ ಪದದೊಳ್–ಎಂಬ ಸಮಯದಲ್ಲಿ, ನರಕಾಂತಕಂ–ಶ್ರೀಕೃಷ್ಣನು, ಅಗ್ನಿದೇವನಂ–ಅಗ್ನಿ ದೇವತೆಯನ್ನು
ವಚನ : ಕಾಣಲೊಡಂ–ಕಂಡೊಡನೆಯೇ; ಬಕವೇಷಿ–ಬಕಪಕ್ಷಿಯ ವೇಷವನ್ನುಳ್ಳ ವನು; ಏನಿತ್ತೆ–ಏನು ಕೊಟ್ಟೆ.
೭೨. ಬಡವಂ–ಬಡವನು, ಪಸಿದು–ಹಸಿದು, ಉಣವೇಡಿದಂ–ಉಣ್ಣಲು ಬೇಡಿದನು, ಇತ್ತೆಂ–ನಾನು ಕೊಟ್ಟೆ, ಅದಲ್ಲದೆ, ಇಲ್ಲಿ ಕುಸುರಿಯ ಮಾತುಗಾಣೆಂದಲ್–ಈ ಸಮಯ ದಲ್ಲಿ ಸೂಕ್ಷ್ಮವಾದ ಮಾತನ್ನು ಕಾಣೆನು; ಎನೆ–ಎನ್ನಲು, ಮುರಾಂತಕಂ–ಕೃಷ್ಣನು, ಕೇಳ್ದು– ಕೇಳಿ, ಏಂ ತಗುಳ್ದೆ–ಏನನ್ನು ಅನುಸರಿಸಿದೆ, ಮಾಡಿದೆ, ಈವ ಮಾತಂ–ಕೊಡುವ ಮಾತನ್ನು; ಇನ್ನುಸಿರದಿರ್–ಇನ್ನು ಮಾತಾಡಬೇಡ; ಇವನುಣ್ಬುದು ಖಾಂಡವಂ–ಇವನು ಊಟ ಮಾಡು ವುದು ಖಾಂಡವವನ; ಈತನಗ್ನಿ–ಇವನು ಅಗ್ನಿ ದೇವತೆ, ಮುಂ–ಹಿಂದಿನ ಕಾಲದಲ್ಲಿ, ಇವನ್–ಇವನು, ಇಂತೆ ಪುಸಿದು–ಹೀಗೆಯೇ ಸುಳ್ಳು ಹೇಳಿ, ಆದಿ ನರೇಂದ್ರರೆಲ್ಲರಂ– ಹಿಂದಣ ರಾಜರನ್ನೆಲ್ಲ, ಇಂದ್ರನೊಳ್–ಇಂದ್ರನಲ್ಲಿ, ಪಾಯಿಸಿದಂ–ನುಗ್ಗುವಂತೆ ಮಾಡಿದನು, ಎಂದರೆ ಹೋರಾಡುವಂತೆ ಮಾಡಿದನು.
ವಚನ : ಅಜಮುಖವ್ಯಾಘ್ರಂ–ಮೇಕೆಯ ಮುಖವನ್ನುಳ್ಳ ವ್ಯಾಘ್ರ, ಎಂದರೆ ಕಪಟಿ; ಶ್ವೇತಕೃಷ್ಣಕಾರಕಂ–ಬಿಳಿದನ್ನು ಕರಿದಾಗಿ ಮಾಡುವವನು, ಎಂದರೆ, ಮೋಸಗಾರ; ತನ್ನಂ ಮೂದಲಿಸಿದಂತಾಗೆ–ತನ್ನನ್ನು ನಿಂದಿಸಿದ ಹಾಗಾಗಲು:
೭೩. ಎರೆದನ ಪೆಂಪುವೇೞ್ವೊಡೆ–ಬೇಡಿದವನ ಹಿರಿಮೆಯನ್ನು ಹೇಳುವ ಪಕ್ಷದಲ್ಲಿ; ಅನಲಂ–ಅಗ್ನಿದೇವತೆ; ಪೊಣರ್ವಾತನ–ಹೋರಾಡುವವನ, ಪೆಂಪುವೇೞ್ವೊಡೆ–ಹಿರಿಮೆ ಯನ್ನು ಹೇಳುವುದಾದರೆ, ಆ ಸುರಪತಿ–ಆ ಇಂದ್ರ; ಕೊಟ್ಟ ತಾಣದೆಡೆವೇೞ್ವೊಡಂ–ಕೊಟ್ಟ ಸ್ಥಳವನ್ನು ಹೇಳುವುದಾದರೂ, ಆ ಯಮುನಾನದೀತಟಾಂತರಂ–ಆ ಯಮುನಾ ನದಿಯ ತೀರಪ್ರದೇಶ; ಒಸೆದಿತ್ತನಾನ್–ಸಂತೋಷಿಸಿ ಕೊಟ್ಟವನು ನಾನು, ಎರೆಯೆ ಕೇಳ್ದಂ–ಯಾಚಿಸಿ ಕೇಳಿದನವನು; ಇಳಾಧರ–ಭೂಮಿಯನ್ನು ಧರಿಸಿದ ಶ್ರೀಕೃಷ್ಣನೇ, ನೀನದರ್ಕೆ–ನೀನು ಅದಕ್ಕೆ, ಮಾತೆರಡಣಮಾಡಲಾಗದು–ಎರಡು ಮಾತನ್ನು ಸ್ವಲ್ಪವೂ ಆಡಲಾಗದು; ಇದು ಇಂಥ ಸಂದರ್ಭ, ಸೈಪಿನೊಳಲ್ಲದೆ–ಪುಣ್ಯವಿಶೇಷದಿಂದಲ್ಲದೆ, ಕೂಡಿ ಬರ್ಕುಮೇ–ಒಟ್ಟಾಗಿ ಬರುತ್ತ ದೆಯೇ? ಇಲ್ಲ.
೭೪. ದನುಜಾರೀ–ರಾಕ್ಷಸ ವೈರಿಯಾದ ಶ್ರೀಕೃಷ್ಣನೇ, ದಿವಿಜೇಂದ್ರ ಶಾಶ್ವತ ಗುಣಾ– ದೇವನಾಯಕನಾದ ಇಂದ್ರನಂತೆ ಶಾಶ್ವತವಾದ ಗುಣಗಳನ್ನುಳ್ಳವನೇ, ನಿನ್ನಳ್ಕದೇಂ–ನಿನ್ನ ಅಂಜಿಕೆ ಏನು? ಬೇಡಿದಾನ್–ಯಾಚಿಸಿದವನು, ಅನಲಂ–ಅಗ್ನಿ; ತೀರ್ಥ ಸಮೀಪಂ–ಪುಣ್ಯ ತೀರ್ಥಕ್ಕೆ ಹತ್ತಿರ; ಅಂಬುನಿವಹ ವ್ಯಾಳೋಳ ಕಾಳಿಂದಿಯಾಬನಮುಂ–ನೀರ ರಾಶಿಯಿಂದ ಸಂಚರಿಸುತ್ತಿರುವ ಯಮುನಾ ನದಿಯ ಕಾಡುಗಳು ಕೂಡ, ಕೇಳ್ದುವು–ನನ್ನ ಮಾತನ್ನು ಕೇಳಿವೆ; ಭೂತಮಯ್ದುಂ–ಪಂಚಭೂತಗಳೂ, ಕೊಟ್ಟಿರ್ದುದಾನ್–ನಾನು ಮಾತು ಕೊಟ್ಟಿರು ವುದನ್ನು, ಅಱಿಗುಂ–ತಿಳಿದಿವೆ; ಅಂತಱಿಂ–ಆದ್ದರಿಂದ, ಎನಗೆ–ನನಗೆ, ಇಂ ಮಾಣ್ಪುದು– ಇನ್ನು ಇಲ್ಲವೆನ್ನುವುದು, ಸೂೞೆ–ಸರದಿಯೆ, ಕ್ರಮವೆ? ಅಲ್ಲ. ಇಂದು–ಈಗ, ಆಂ–ನಾನು, ತಳ್ವಿಲ್ಲದೆ–ತಡವಿಲ್ಲದೆ, ಖಾಂಡವಮಂ–ಖಾಂಡವ ವನವನ್ನು, ಊಡುವೆಂ–ಉಣಿಸುತ್ತೇನೆ, ಅಗ್ನಿಗೆ, ಇಲ್ಲಿರುವ ಬೇಡಿದಾನ್, ಕೊಟ್ಟಿರ್ದುದಾನ್–ಎಂಬಿವೆರಡು ಪೂರ್ವದ ಹಳಗನ್ನಡ ಪ್ರಯೋಗಗಳು.
೭೫. ಒತ್ತಿ–ಆಕ್ರಮಿಸಿ, ತಱುಂಬಿ–ಅಡ್ಡಗಟ್ಟಿ, ನಿಂದ–ನಿಂತ, ರಿಪುಭೂಜ ಸಮಾಜದ– ಶತ್ರುಗಳೆಂಬ ಮರಗಳ ಸಮೂಹದ, ಬೇರ್ಗಳಂ–ಬೇರುಗಳನ್ನು, ನಭಕ್ಕೆ–ಆಕಾಶಕ್ಕೆ, ಎತ್ತದೆ, ಬಂದು, ತನ್ನ, ಮಱೆವೊಕ್ಕೊಡೆ–ಶರಣಾಗತರಾದರೆ, ಕಾಯದೆ–ರಕ್ಷಿಸದೆ, ಚಾಗದ–ತ್ಯಾಗದ, ಒಳ್ಪಿನ–ಒಳ್ಳೆಯತನದ, ಅಚ್ಚೊತ್ತದೆ–ಅಚ್ಚನ್ನು ಹಾಕದೆ, ಮಾಣ್ದು–ಬಿಟ್ಟು, ಬಾೞ್ವ– ಬಾಳುವ; ಪುೞುವಾನಸನೆಂಬಂ–ಕೀಟಕ್ಕೆ ಸದೃಶನಾದ ಮನುಷ್ಯನೆಂಬುವನು, ಎಂದರೆ ಮಾನವ ಕೀಟವು, ಅಜಾಂಡಮೆಂಬುದೊಂದು–ಬ್ರಹ್ಮಾಂಡವೆಂಬ ಒಂದು, ಅತ್ತಿಯ ಪಣ್ಣೊಳ್– ಅತ್ತಿಯ ಹಣ್ಣಲ್ಲಿ, ಇರ್ಪ–ಇರುವ, ಪುೞುವಲ್ಲದೆ–ಹುಳುವಲ್ಲದೆ, ಮುರಾಂತಕಾ–ಕೃಷ್ಣನೇ, ಮಾನಸನೇ–ಮನುಷ್ಯನೇ? ಅಲ್ಲ.
ವಚನ : ಮಱುಮಾತಿಂಗೆಡೆಯಿಲ್ಲದಂತೆ–ಪ್ರತಿ ಮಾತಿಗೆ ಎಂದರೆ ಉತ್ತರಕ್ಕೆ ಅವಕಾಶ ವಿಲ್ಲದಿರುವಂತೆ; ಗಂಡವಾತುಮಂ–ಪೌರುಷದ ಮಾತನ್ನು; ನನ್ನಿವಾತುಮಂ–ಸತ್ಯದ ಮಾತನ್ನೂ;
೭೬. ಅರಿಗ–ಅರ್ಜುನನೇ, ಕೇಳ್–ಕೇಳು, ಸಮಕಟ್ಟಿಂಗೆ–ಹೋಲಿಕೆಗೆ, ಒರೆಗೆ– ಸಮಾನಕ್ಕೆ; ಆರುಂ–ಯಾರೂ, ನಿನ್ನೊಳ್–ನಿನ್ನಲ್ಲಿ, ಸಮಂ–ಎಣೆ, ಧಾತ್ರಿಯೊಳ್–ಭೂಮಿ ಯಲ್ಲಿ, ಇಲ್ಲ; ಹಿಮಕೃದ್ಭೂಧರದಂತೆ–ಹಿಮವತ್ಪರ್ವತದ ಹಾಗೆ, ನಿನ್ನ ಗುಣಸಂದೋಹಂ ಗಳಂ–ನಿನ್ನ ಗುಣಗಣಗಳನ್ನು, ಮತ್ತೊರ್ವನೊಳ್–ಇನ್ನೊಬ್ಬನಲ್ಲಿ, ಕಾಣಲಕ್ಕುಮೆ– ಕಾಣಲಾಗುತ್ತದೆಯೆ? ಆಗದು–ಆಗುವುದಿಲ್ಲ; ಅದೆಂತೆನೆ–ಅದು ಹೇಗೆ ಎಂದರೆ, ಸಮ…. ತಿಯನ್; ಸಮಸ್ತ–ಎಲ್ಲ, ಉರ್ವೀಧರ–ಭೂಮಿಯನ್ನು ಧರಿಸಿರುವ, ಅಶೇಷ–ಸಕಲ ವಾದ, ಶೇಷ–ಶೇಷನೆಂಬ, ಮಹಾನಾಗ–ಮಹಾಸರ್ಪದ, ಫಣಾ–ಹೆಡೆಯ, ಮಣಿದ್ಯುತಿ ಯಂ–ರತ್ನದ ಕಾಂತಿಯನ್ನು, ಏಂ ಖದ್ಯೋತದೊಳ್–ಮಿಂಚುಹುಳುವಿನಲ್ಲಿ ಏನು, ಕಾಣ್ಬರೇ–ಕಾಣುತ್ತಾರೆಯೆ?
೭೭. ಮುನಿಯಿಸಿದಂ–ಕೆರಳಿಸಿದವನು, ಕರಂ–ವಿಶೇಷವಾಗಿ; ಪಿರಿಯನಪ್ಪುದು– ದೊಡ್ಡವನಾಗಿರಲಹುದು; ಬೇೞ್ಪನ–ಬೇಡುವವನ, ಬೇೞ್ಪವಸ್ತು–ಬಯಸಿದ ಪದಾರ್ಥ, ಕಾಂಚನ ಗಿರಿಯಿಂದಂ–ಚಿನ್ನದ ಬೆಟ್ಟಕ್ಕಿಂತ, ಮೇರುಪರ್ವತಕ್ಕಿಂತ, ಅಗ್ಗಳಮೆನಿಪ್ಪುದು– ಶ್ರೇಷ್ಠವೆನಿಸಿಕೊಳ್ಳುವುದು; ಅದು, ಆದೊಡಮೇನೋ–ಆದರೆ ತಾನೇ ಏನೋ! ಜೀವಮುಳ್ಳಿ ನಮಿಱಿದು–ಜೀವವಿರುವವರೆಗೂ ಕಾದಾಡಿ, ಅರ್ಥಮುಳ್ಳಿನೆಗಮಿತ್ತು–ಐಶ್ವರ್ಯವಿರುವ ವರೆಗೂ ದಾನ ಮಾಡಿ, ನೆಗೞ್ತೆಯನಾಂಪುದು–ಕೀರ್ತಿಯನ್ನು ಪಡೆಯುವುದು, ಎಂಬ, ಪೆಂಪಿನ–ಹಿರಿಮೆಯ, ಸಮಕಟ್ಟು–ವ್ಯವಸ್ಥೆ, ಕಣ್ಗೆ–ದೃಷ್ಟಿಗೆ ಇದೆ; ಅರಿಕೇಸರಿ, ನಿನ್ನವೊಲ್– ನಿನ್ನ ಹಾಗೆ, ಪೆಱಂ–ಬೇರೆಯವನು, ಆರ್–ಯಾರು, ದೊರೆ–ಸಮಾನ.
ವಚನ : ಕೋಡಿಂಗೆ–ಕೊಡುಗೆಗೆ, ದಾನಕ್ಕೆ; ದಿತಿಜಕುಲ ದಾವಾನಲನುಮಂ–ಶ್ರೀಕೃಷ್ಣ ನನ್ನೂ; ಅನಲಂ–ಅಗ್ನಿ; ಪರಸಿ–ಹರಸಿ; ಮನಃಪವನವೇಗದಿಂ–ಮನೋವೇಗದಿಂದ, ಪವನ ವೇಗದಿಂದ; ಬಯ್ತಿಟ್ಟ–ಬಚ್ಚಿಟ್ಟ; ದಿವ್ಯ ಸಂಭವಂಗಳಪ್ಪ–ಸ್ವರ್ಗದಲ್ಲಿ ಹುಟ್ಟಿದ, ಅತಿ ಶ್ರೇಷ್ಠವಾದ ಹುಟ್ಟನ್ನುಳ್ಳ; ಗಂಡಸ್ಥಮಪ್ಪ–ಕಪೋಲ ಪ್ರದೇಶದಲ್ಲಿರುವ; ತವದೊಣೆ ಗಳುಮಂ–ಅಕ್ಷಯವಾದ ಬತ್ತಳಿಕೆಗಳನ್ನು; ಕೆಯ್ಕೊಳಲ್ವೇೞ್ಕುಂ–ಸ್ವೀಕರಿಸಬೇಕು :
೭೮. ಪಾವಕಂ–ಅಗ್ನಿ, ಅೞ್ವು–ಸುಟ್ಟು, ಖಾಂಡವಮಂ–ಖಾಂಡವ ವನವನ್ನು, ಉಂಡಪಂ–ಉಣ್ಣುತ್ತಾನೆ; ಅರ್ಜುನಂ–ಅರ್ಜುನನು, ಊಡಿದಪಂ–ಉಣಿಸುತ್ತಾನೆ; ಐರಾವತ ವಾಹನಂ–ಇಂದ್ರನು, ನೆಱೆದು–ಸಮರ್ಥನಾಗಿ, ಸಾಧನ ಸಂಯುತಂ–ಸೈನ್ಯ ಸಮೇತ ನಾದವನು, ಆಂಪಂ–ಎದುರಿಸುತ್ತಾನೆ; ಅಲ್ಲಿ–ಆ ಸಂದರ್ಭದಲ್ಲಿ, ನಾನಾ ವಿಧ ಯುದ್ಧ ಮುಂಟು–ನಾನಾ ತೆರನಾದ ಯುದ್ಧಗಳಿವೆ, ಎನುತೆ–ಎನ್ನುತ್ತ, ಶೈಬ್ಯ, ಬಳಾಹಕ, ಮೇಘ ವರ್ಣ, ಸುಗ್ರೀವ–ಎಂಬ ಹೆಸರುಗಳನ್ನುಳ್ಳ, ಹಯಂಗಳಿಂದೆಸೆವುದಂ–ಕುದುರೆಗಳಿಂದ ಶೋಭಿಸುವ, ರಥಮಂ–ರಥವನ್ನು, ಹರಿ–ಕೃಷ್ಣ, ತಾನು–ತಾನು ಕೂಡ, ಏಱಿದಂ– ಹತ್ತಿದನು.
ವಚನ : ಅಂತು ದಾರುಕಂ–ಹಾಗೆ ದಾರುಕನೆಂಬ ಸಾರಥಿ; ಚೋದಿಸಲೊಡಂ–ಮುಂದೆ ಹರಿಸಿದ ಕೂಡಲೇ.
೭೯. ಇರ್ವರ ರಥಚೋದಕರ್–ಇಬ್ಬರ ಸಾರಥಿಗಳು, ಚೋದಿಸುವುದುಂ–ರಥಗಳನ್ನು ಮುಂದೆ ಹರಿಸುತ್ತಲು; ಅವರ, ಎರಡು ರಥದ, ಗಾಳಿಯ, ಕೋಳಿಕೆ–ಆಕ್ರಮಣದಿಂದ, ಆದ ರಜಃಪಟಲಂ–ಉಂಟಾದ ಧೂಳಿನ ಸಮೂಹ, ಕವಿದು–ಮುಸುಕಿ, ದಿವಿಜ ವಧುವಿರ– ದೇವಸ್ತ್ರೀಯರ, ಕಣ್ಣೊಳ್–ಕಣ್ಣಿನಲ್ಲಿ, ಆದಮೆ–ವಿಶೇಷವಾಗಿಯೇ, ತೀವಿದುದು–ತುಂಬಿತು.
ವಚನ : ಅನಿತೆ ನೀಳದೊಳಂ ನೆಱೆದು–ಅಷ್ಟೇ ಉದ್ದದಲ್ಲಿ ತುಂಬಿ, ಆವರಿಸಿ.
೮೦. ಕಕುಭ–ಕೆಂಪುಮತ್ತಿ, ಅಶೋಕ–ಅಶೋಕೆ, ಕದಂಬ, ಲುಂಗ–ಮಾತು ಲುಂಗ, ಲವಲೀಭೂಜ–ಅರನೆಲ್ಲಿಯೆಂಬ ಮರ, ಅರ್ಜುನಾನೋಕಹ–ಬಿಳಿಮತ್ತಿ ಮರದ, ಪ್ರಕರಂ– ಸಮೂಹವನ್ನುಳ್ಳ, ಪುಷ್ಪಿತ….ನಿಕರಂ : ಪುಷ್ಪಿತ–ಹೂಬಿಟ್ಟ. ಹೇಮಪಂಕಜ–ಹೊಂದಾ ವರೆಯ, ರಜಸ್ಸಂಸಕ್ತ–ಧೂಳಿನಲ್ಲಿ ಆಸಕ್ತಿಯನ್ನುಳ್ಳ, ಭೃಂಗಾಂಗನಾನಿಕರಂ–ಹೆಣ್ಣು ದುಂಬಿಗಳ ಸಮೂಹವನ್ನುಳ್ಳ, ಸಾರಸ….ತ್ಕರಂ: ಸಾರಸ–ಬಕದ, ಹಂಸ–ಹಂಸೆಯ, ಕೋಕಿಳ– ಕೋಗಿಲೆಯ, ಕುಳ–ಸಮೂಹದ, ಧ್ವಾನೋತ್ಕರಂ–ಶಬ್ದ ಸಮೂಹವನ್ನುಳ್ಳ, ಆನಂದನಂ– ಆನಂದಕರವಾದ, ನಂದನಂ–ಆ ಖಾಂಡವವನ, ಕರಂ–ವಿಶೇಷವಾಗಿ, ಸಕ್ತನಿಳಿಂಪ ದಂಪತಿ ಗಳಿಂದೆ–ಆಸಕ್ತರಾದ ದೇವದಂಪತಿಗಳಿಂದ, ಚೆಲ್ವನಾಯ್ತು–ಸೊಗಸಾಯಿತು.
ವಚನ : ತೊೞಲ್ದು ತೋಱಿ–ಸುತ್ತಾಡಿ ತೋರಿಸಿ.
೮೧. ಅಳಿಗಳ್–ದುಂಬಿಗಳು, ಅಲರಂ ನೋಯಿಸದೆ–ಹೂವನ್ನು ನೋಯಿಸದೆ, ಒಯ್ಯನೊಯ್ಯನೆ–ಮೆಲ್ಲಮೆಲ್ಲಗೆ, ಬಂಡುಣ್ಬುವು–ಮಕರಂದವನ್ನು ಕುಡಿಯುತ್ತವೆ; ಗಾಳಿ, ಆಟಂದು ಬಂದು–ಮೇಲೆ ನುಗ್ಗಿ ಬಂದು, ಅಲೆಯಲ್ಕೆ–ಬೀಸುವುದಕ್ಕೆ, ಅಣ್ಮದು–ಪ್ರಯತ್ನಿ ಸದು, ಸೂರ್ಯಕಿರಣಾನೀಕಕ್ಕಂ–ಸೂರ್ಯನ ಕಿರಣಗಳ ಸಮೂಹಕ್ಕೂ, ಎಂದಪ್ಪೊಡಂ– ಎಂದಾದರೂ, ಸಲವಿಲ್ಲ–ಪ್ರವೇಶವಿಲ್ಲ; ಉದ್ಧತಸಿದ್ಧಖೇಚರರೆ–ಗರ್ವಿಷ್ಠರಾದ ಸಿದ್ಧರೇ ಖೇಚರರೇ, ತಾಂ–ತಾವು, ಆಳ್ವೇಲಿಯಾಗಿ–ಮಾನವರೇ ಬೇಲಿಯಾಗಿ, ಇಂತು, ನಿಚ್ಚಲುಂ– ನಿತ್ಯವೂ, ಓರಂತೆ ಇರೆ–ಕ್ರಮವಾಗಿ ಇರಲು, ಕಾವರ್–ರಕ್ಷಿಸುತ್ತಾರೆ; ನಂದನಕ್ಕೆ–ಖಾಂಡ ವವನಕ್ಕೆ, ಇಂದ್ರನಾ–ಇಂದ್ರನ, ಕಾಪು–ರಕ್ಷಣೆ, ಈ ದೊರೆತು–ಈ ಪಾಟಿಯಾದದ್ದು, ಸಲವು ಸಲ್+ಅವು; ಈ ದೊರೆತು–ಈ ದೊರೆಯದು. ಸ್ವೀಕೃತ ಪಾಠದಲ್ಲಿ ಆಳ್ವೇರಿ ಎಂದಿದೆ; ಇಲ್ಲಿ ಆಳ್ವೇಲಿ ಎಂಬ ಪಾಠಾಂತರವನ್ನು ಸ್ವೀಕರಿಸಿದೆ; ಬಾೞ್ವೇಲಿ ಎಂಬುದರೊಡನೆ ಹೋಲಿಸಿ; ಆಳ್ವೇರಿ ಶಬ್ದ ಪಂಪನ ಕಾಲದಷ್ಟು ಹಳೆಯದಲ್ಲವೆಂದು ಊಹೆ.
೮೨. ಮಘವಂ–ಇಂದ್ರನು (ಶಚೀ ಸಮೇತನಾಗಿ), ಒರ್ಮೆ–ಒಂದು ಸಲ, ಬನಮಂ– ವನವನ್ನು, ತೊೞಲ್ದು–ಸುತ್ತಾಡಿ, ನೋಡಿ, ಪೂತಚೂತಮಂ–ಹೂವಾದ ಮಾವಿನ ಮರ ವನ್ನು, ನೆರ್ಮ್ಮಿದ–ಒರಗಿಕೊಂಡ, ಆಶ್ರಯಿಸಿದ, ಅಶೋಕ ವಲ್ಲರಿಯ–ಅಶೋಕೆಯ ಬಳ್ಳಿಯ, ಪಲ್ಲವಮೊಂದನೆ–ಒಂದೇ ಚಿಗುರನ್ನು, ಶಚಿ–ಇಂದ್ರನ ರಾಣಿ, ಕೊಯ್ದು–ಬಿಡಿಸಿ, ರಾಗದಿಂ–ನಲವಿನಿಂದ, ಸೋರ್ಮುಡಿಯೊಳ್–ಉದ್ದವಾದ ಜೆಡೆಯಲ್ಲಿ ತಗುಳ್ಚಿದೊಡೆ– ಮುಡಿದುಕೊಂಡರೆ, ಸೂೞನೆ–ಸೂಳ್ ಎಂದು ಶಬ್ದ ಮಾಡುತ್ತ, ಬಾರಿಸಿದಂ–ತಡೆದನು, ದಲ್ ಎಂದೊಡೆ–ನಿಶ್ಚಯವಾಗಿಯೂ ಎಂದರೆ, ಕೂರ್ಮೆಯ ಮಾತು ಮೆಚ್ಚುವನಿತರ್ಕೆ–ಪ್ರೀತಿಯ ಮಾತನ್ನು ಮೆಚ್ಚುವಷ್ಟರಮಟ್ಟಿಗೆ, ಬಳಾರಿ–ಇಂದ್ರನು, ಮುರಾಸುರಾರಿಯೇಂ–ಏನು ಶ್ರೀಕೃಷ್ಣನೇ? ಅಲ್ಲ.
೮೩. ಇಂತಪ್ಪ ಬನಮಂ–ಇಂಥ ವನವನ್ನು, ಇದಂ–ಇದನ್ನು, ಅನಲನಂ–ಅಗ್ನಿಯನ್ನು, ಊಡಲೆಂದು–ಉಣ್ಣಿಸಬೇಕೆಂದು, ಎಂತುಪೊಣ್ದಯ್–ಹೇಗೆ ಪ್ರತಿಜ್ಞೆ ಮಾಡಿದೆ; ಮುಂ– ಮೊದಲು, ಪೂಣ್ದಂತೆ–ಶಪಥ ಮಾಡಿದಂತೆ, ಊಡು–ತಿನ್ನಿಸು; ಶತಶಿರ ಸಂತತಿಯಂ–ಹರಿತ ವಾದ ಬಾಣ ಸಂಘಾತವನ್ನು, ಬಿಲ್ಲೊಳ್–ಬಿಲ್ಲಿನಲ್ಲಿ, ಪೂಡು–ಸಂಧಾನಮಾಡು; ಏಕೆ ನೀಂ ತಡೆದಿರ್ಪಯ್–ಏಕೆ ನೀನು ತಡಮಾಡುತ್ತಿರುವೆ?
೮೪. ಬನದೊಳ್–ಕಾಡಿನಲ್ಲಿ, ಪರಮಾಣುವನಿತು–ಪರಮಾಣುವಷ್ಟು ಸೂಕ್ಷ್ಮವಾದ, ಚರಾಚರಂ–ಜೀವ ಅಜೀವವಸ್ತುಗಳು, ಪೋಗೆ–ತಪ್ಪಿಹೋಗಲು, ಅನಲಂ–ಅಗ್ನಿ, ತಣಿಯಂ– ತೃಪ್ತಿಪಡನು; ಅದರ್ಕೆ–ಅದಕ್ಕೆ, ಆಂ–ನಾನು, ನೆರನಪ್ಪೆಂ–ಸಹಾಯಕನಾಗುತ್ತೇನೆ; ಉಗ್ರ– ಭಯಂಕರರಾದ, ಕಿನ್ನರ ಸುರದನುಜೋರಗರ–ಕಿನ್ನರರು, ದೇವತೆಗಳು, ರಾಕ್ಷಸರು, ನಾಗರು, ಇವರ ಕದನಮೇಂ–ಇವರ ಯುದ್ಧವೇನು, ನಿನಗರಿದೇ–ನಿನಗೆ ಅಸಾಧ್ಯವೇ?
ವಚನ : ನೋಡಿಂ–ನೋಡಿರಿ; ಭುಜಪರಿಘ–ಪರಿಘಾಯುಧದಂತಿರುವ ಭುಜಗಳು; ಕೆಯ್ತೀವಿಕೊಂಡು–ಕೈಯನ್ನು ತುಂಬಿಕೊಂಡು.
೮೫. ಓಡುಗೆ ನಿಮ್ಮ ಮೆಯ್ಯಪಸಿವು–ಓಡಲಿ ನಿಮ್ಮ ಮೈಯಿನ ಹಸಿವು; ಆಂತ ವಿರೋಧಿ ಗಳ್–ಎದುರಿಸಿದ ವೈರಿಗಳು, ಎನ್ನ ಕೆಯ್ಯೊಳ್–ನನ್ನ ಕೈಯಲ್ಲಿ, ಅೞ್ಕಾಡುಗೆ–ನಾಶವಾಗಲಿ; ಕೊಳ್ಳಿಂ–ತೆಗೆದುಕೊಳ್ಳಿರಿ, ಉಣ್ಣಿಂ–ಊಟ ಮಾಡಿರಿ, ಎನೆ–ಎನ್ನಲು, ಅನಲಂ–ಅಗ್ನಿ, ಕೇಳ್ದು– ಕೇಳಿ, ಪರಸುತ್ತುಂ–ಹರಸುತ್ತ, ಆ ಲಯಕ್ರೀಡೆಯೊಳ್–ಆ ಪ್ರಳಯ ಕಾಲದ ಲೀಲೆಯಲ್ಲಿ, ಚರಾಚರಮುಮಂ–ಜೀವಾಜೀವಗಳನ್ನೂ, ಸುಡುವ ಅಂದಿನ ಮೆಯ್ಗಂ–ಸುಡುವ ಅಂದಿನ ರೂಪಕ್ಕೂ, ಅಗ್ಗಳಂ ಮಾಡಿ–ಅತಿಶಯತೆಯನ್ನು ಮಾಡಿ, ತಗುಳ್ದು ನೀಳ್ದು ಬಳೆದು–ಅನುಸರಿಸಿ ನೀಳವಾಗಿ ಬೆಳೆದು, ಅರ್ವಿಸೆ–ಸುಡುವುದಕ್ಕಾಗಿ, ಆವನಾಂತಮಂ–ಆ ಅರಣ್ಯದೊಳಗನ್ನು, ಪರ್ವಿದಂ–ಹಬ್ಬಿದನು.
೮೬. ಫಳ….ನಂದನಕ್ಕೆ: ಫಳಕರ್ಪೂರ–ಫಲಿತಕರ್ಪೂರ, ಲವಂಗ, ಲುಂಗ–ಮಾದಲ, ಲವಲೀ–ಅರನೆಲ್ಲಿ, ಹಿಂತಾಳ–ಹಿಂತಾಳ, ತಾಳೀ–ತಾಳೆ, ತಮಾಳಳತಾ–ಹೊಂಗೆಯ ಬಳ್ಳಿ, ಇವುಗಳಿಂದ, ಸುಂದರ–ಸೊಗಸಾದ, ನಂದನಕ್ಕೆ–ವನಕ್ಕೆ, ಮುಂ–ತನ್ನ ಅರ್ಚಿಗಳ್ ಅಳುರೆ– ಮೊದಲು ತನ್ನ ಜ್ವಾಲೆಗಳು ವ್ಯಾಪಿಸಲು, ಬಂದು–ಮುಂದುವರಿದು ಬಂದು, ಮೊಕ್ಕಳಂ– ವಿಶೇಷವಾಗಿ, ಎತ್ತಂ–ಎಲ್ಲೆಲ್ಲಿಯೂ, ಸುರಿಯುತ್ತುಮಿರ್ಪ–ಸುರಿಯುತ್ತಿರುವ, ರಸಮಂ–ಮರದ ರಸವನ್ನು, ಮನಂಗೊಳೆ–ಮನವನ್ನಾಕರ್ಷಿಸಲು, ಸಪ್ತಾರ್ಚಿ–ಅಗ್ನಿಯು, ಪೊದಳ್ದು– ಹರಡಿ, ನೀಳ್ದು–ದೀರ್ಘವಾಗಿ, ಒಸಗೆಯಿಂದ–ನಲಿವಿನಿಂದ, ಆಪೋಶನಂ ಗೊಳ್ವವೊಲ್– ಆಪೋಶನ ತೆಗೆದುಕೊಳ್ಳುವ ಹಾಗೆ, ಪೀರ್ದುಕೊಂಡಂ–ಹೀರಿಕೊಂಡನು.
೮೭. ನನೆಕೊನೆಯ–ಮೊಗ್ಗಿನ ಟಿಸಲಿನ, ತಳಿರ ಪೂವಿನ–ಚಿಗುರಿನ ಹೂವಿನ, ಬನಮನಿತುಂ–ಆ ವನವೆಲ್ಲ, ಶಿಖೆಗಳಳುರೆ–ಜ್ವಾಲೆಗಳು ವ್ಯಾಪಿಸಲು, ಬೆಂಕೆಯ–ಬೆಂಕಿಯು, ಪೊಯ್ದುರ್ವಿನೊಳೆ–ಹೊಡೆದ ರಭಸದಲ್ಲಿ, ಕೊರಗಿರ್ದ–ಬಾಡಿದ, ಲತೆಗಳ–ಬಳ್ಳಿಗಳ, ಕೊನೆ ಗೊನೆಯನೆ–ಕವಲು ಕವಲುಗಳನ್ನೇ, ದಹನಂ–ಅಗ್ನಿ, ಅಳುರ್ದು–ಸುಟ್ಟು, ಕೊನೆಕೊನೆ ಗೊಂಡಂ–ತುತ್ತತುದಿಯನ್ನು ಆಕ್ರಮಿಸಿದನು.
ವಚನ : ಇಂದ್ರನ ಬೆಸದೊಳ್–ಇಂದ್ರನ ಅಪ್ಪಣೆಯಲ್ಲಿ; ತಾಗೆ–ಸಂಘಟ್ಟಿಸಲು
೮೮. ಉರಿ–ಅಗ್ನಿ, ಬನಮಂ–ವನವನ್ನು, ಕೊಂಡಪುದು–ಸುಡುತ್ತಿದೆ, ಅದಂ ಕಂಡು ಎಂತು ಇರಲಕ್ಕುಂ–ಅದನ್ನು ನೋಡಿ ಹೇಗೆ ಸುಮ್ಮನಿರುವುದು, ಎಂದು, ತಾಗಿದ–ಎದುರಿಸಿದ, ನೆಗೞ್ದೊಳ್ಗಂಡರ–ಪ್ರಸಿದ್ಧರಾದ ಒಳ್ಳೆಯ ಶೂರರ, ಗಂಡೋಡುವಿನಂ–ಪೌರುಷವು ಪಲಾಯನ ಮಾಡುತ್ತಿರಲು, ಗಾಂಡೀವಮುಕ್ತಬಾಣಗಣಂಗಳ್–ಗಾಂಡೀವದಿಂದ ಬಿಡಲ್ಪಟ್ಟ ಬಾಣಗಳ ಸಮೂಹಗಳು, ಕೊಂಡುವು–ನಾಟಿದುವು.
ವಚನ : ಮೊನೆಯಂಬಿನ–ಮೊನಚಾದ ಬಾಣದ, ಅಂಬೇಱಿಂಗೆ–ಬಿಲ್ಲು ಯುದ್ಧಕ್ಕೆ, ಹತವಿಹತ ಕೋಳಾಹಳರಾಗಿ–ಹೊಡೆತ ಮರುಹೊಡೆತಗಳ ಗೊಂದಲವನ್ನುಳ್ಳವರಾಗಿ; ಅಸಿದ್ಧರ್–ಸಿದ್ಧತೆಯಿಲ್ಲದವರು, ಕಾಪುರುಷರಂತೆ–ಅಲ್ಪ ಮನುಷ್ಯರಂತೆ; ಒಂದೊರ್ವರಂ ಮಿಗೆಯೋಡೆಯುಂ–ಒಬ್ಬೊಬ್ಬರನ್ನು ಮೀರಿ ಓಡುತ್ತಿರಲು; ಅಧರರಾಗೆಯುಂ–ತಿರಸ್ಕೃತ ರಾಗಲು; ಪನ್ನತಿಕೆಯಿಂ–ಪರಾಕ್ರಮದಿಂದ; ಆಂತೊಡೆ–ತಾಗಿದರೆ. ಇಲ್ಲಿ ಒಂದೊರ್ವರಂ ಎಂಬುದು ಓರೊರ್ವರಂ ಎಂದಿರಬೇಕು; ಆದರೆ ಇದು ಪಂಪನ ವಿಶಿಷ್ಟ ಪ್ರಯೋಗ; ಹಲವೆಡೆ ಗಳಲ್ಲಿ ಬರುತ್ತದೆ.
೮೯. ನಾಗರ ಖಂಡಂಗಳಂ–ಹಸಿಶುಂಠಿಯ ಚೂರುಗಳನ್ನು, ಆ ನಾಗರಖಂಡದೊಳೆ– ಆ ಸರ್ಪಗಳ ಚೂರುಗಳಲ್ಲೇ, ತೊಡರೆ–ಸಿಕ್ಕಿಕೊಳ್ಳುವಂತೆ, ನರನಿಸುವುದುಂ–ಅರ್ಜುನನು ಬಾಣ ಪ್ರಯೋಗ ಮಾಡುತ್ತಲು, ಆ ನಾಗರಖಂಡಂಗಳುಮಂ–ಆ ಹಸಿ ಶುಂಠಿಯ ಚೂರು ಗಳನ್ನೂ, ಆ ನಾಗರಖಂಡಂಗಳುಮಂ–ಆ ಹಾವುಗಳ ತುಂಡುಗಳನ್ನೂ, ದಹನಂ–ಅಗ್ನಿ, ಅಳುರ್ದುಕೊಂಡಂ–ವ್ಯಾಪಿಸಿ ಸುಟ್ಟನು.
೯೦. ಉನ್ಮದ….ಕುಲಂಗಳ್ : ಉನ್ಮದ–ಸೊಕ್ಕಿದ, ಪರಭೃತ–ಕೋಗಿಲೆ, ಷಟ್ಚರಣ– ದುಂಬಿ, ರಾಜಕೀರ–ಅರಗಿಳಿ, ಇವುಗಳ, ಕುಲಂಗಳ್–ಸಮೂಹಗಳು, ವಿರಹಿಗಳ–ಅಗಲಿದ ಪ್ರೇಮಿಗಳ, ಸುಯ್ಯ–ಬಿಸಿಯುಸಿರಿನ, ಬೆಂಕೆಯೊಳ್–ಬೆಂಕಿಯಲ್ಲಿ, ಇರದೆ–ನಿಲ್ಲದೆ, ಒಣಗಿ ದುವಕ್ಕುಂ–ಒಣಗಿದುವಾಗಿವೆ, ಈಗಳ್–ಈಗ, ಎನಲ್–ಎನ್ನಲು, ಉರಿವುರಿಯಿಂದಂ– ಉರಿಯುವ ಉರಿಯಿಂದ, ಕರಿಮುರಿಕನಾದುವು–ಸೀದು ಸುಕ್ಕಿದುವು.
೯೧. ಉರಿಕೊಳೆ–ಉರಿ ಆಕ್ರಮಿಸಲು, ದೆಸೆಗಾಣದೆ–ದಿಕ್ಕು ಕಾಣದೆ, ದೆಸೆವರಿವಂದು– ದಿಕ್ಕುದಿಕ್ಕಿಗೆ ಓಡಿ, ಕುಜಂಗಳಂ–ಮರಗಳನ್ನು, ಪಡಲ್ವಡಿಸಿ–ಕೆದರಿಬೀಳಿಸಿ, ಭಯಂಬೆರಸು– ಭಯದೊಡನೆ ಕೂಡಿ, ಒಳಱೆ–ಕೂಗಿಕೊಳ್ಳಲು, ಆ ವನಕರಿಶರಭ ಕಿಶೋರಕಂಠ ಗರ್ಜನೆ–ಆ ಕಾಡಾನೆಗಳ, ಶರಭಗಳ ಮರಿಗಳ ಕೊರಳಿನ ಗರ್ಜನೆ; ಆ ಬನದೊಳ್–ಆ ಕಾಡಿನಲ್ಲಿ, ನೆಗೆದುವು–ಚಿಮ್ಮಿ ಹಾರಿದುವು.
೯೨. ಸಂಗತ ಧೂಮಾವಳಿಯಂ–ಸೇರಿಕೊಂಡ ಹೊಗೆಯ ಸಾಲುಗಳನ್ನು, ಇಭಂಗಳೆ ಗೆತ್ತು–ಆನೆಗಳೆಂದೇ ಬಾವಿಸಿ, ಸಿಂಗಂಗಳ್–ಸಿಂಹಗಳು, ಒಳಱಿ–ಕೂಗಿಕೊಂಡು, ಪಾಯ್ದು– ನುಗ್ಗಿ, ಕಣ್ಣಂ–ಕಣ್ಣುಗಳನ್ನು, ಪೊಗೆ–ಹೊಗೆಯು, ಪುಗೆ–ಹೊಗಲು, ಅಳುರೆ–ವ್ಯಾಪಿಸಲು, ಗರ್ಜಿಸಿ–ಗರ್ಜನೆ ಮಾಡಿ, ಲಂಗಿಸಿ–ಹಾರಿ, ಪುಡಪುಡನೆ ಪುೞ್ಗಿ–ಪುಡಪುಡ ಬೆಂದು ಹೋಗಿ, ಪಲವುಂ–ಹಲವು ಸಿಂಹಗಳು, ಸತ್ತುವು–ಸತ್ತು ಹೋದುವು.
ವಚನ : ಲತಾಗೃಹಂಗಳೊಳಂ–ಬಳ್ಳಿ ಮನೆಗಳಲ್ಲಿಯೂ; ಧಾರಾಗೃಹಂಗಳೊಳಂ–ನೀರ ಧಾರೆ ಸುರಿಯುವ ಮನೆಗಳಲ್ಲಿಯೂ;
೯೩. ಕಿರ್ಚು–ಉರಿ, ಒಡನೆ–ಜೊತೆಜೊತೆಯಾಗಿ, ಅಳುರೆ–ಸುಡಲು, ಆ ಪ್ರಾಣವಲ್ಲ ಭರ್–ಆ ಪ್ರಾಣಪ್ರಿಯರು, ಪ್ರೇಮಿಗಳು, ತೋಳಂ ಸಡಿಲಿಸದೆ–ತಬ್ಬಿರುವ ತೋಳುಗಳನ್ನು ಸಡಿಲ ಮಾಡದೆ, ಪ್ರಾಣಮಂ–ಜೀವವನ್ನು, ಅಂದು–ಆಗ, ಒಡಗಳೆದರ್–ಜೊತೆಯಲ್ಲಿ ನೀಗಿ ಕೊಂಡರು; ಓಪರ್–ಪ್ರೇಮಿಗಳು, ಓಪರೊಳ್–ಪ್ರೀತಿಸಿದವರಲ್ಲಿ, ಒಡಸಾಯಲ್–ಸಹ ಮರಣವನ್ನು, ಪಡೆದರ್–ಪಡೆದರು; ಇನ್ನವುಂ–ಇಂಥವು; ಸೈಪು–ಪುಣ್ಯ, ಒಳವೇ–ಉಂಟೇ? ಇಲ್ಲ. ಈ ಪದ್ಯ ಪಂಪನಿಗೆ ತುಂಬ ಮೆಚ್ಚಾದದ್ದು; (ಆದಿ ಪು. ೫–೨೪ ನೋಡಿ.)
ವಚನ : ಕೋಳುಮಂ–ಆಕ್ರಮಣವನ್ನೂ; ಶಿಖಾಕಳಾಪದ–ಜ್ವಾಲೆಗಳ ಸಮೂಹದ; ಕೋಳುಮಂ–ಆಕ್ರಮಣವನ್ನೂ; ಬಂಚಿಸಿ–ವಂಚಿಸಿ; ಬಲೆಪಱಿದ ಕೋಕನಂತೆ–ಬಲೆ ಹರಿದ ಕೋಕಪಕ್ಷಿಯ ಹಾಗೆ; ವನಪಾಲಕಂ–ಕಾಡಿನ ಕಾವಲುಗಾರ; ಕೋಳ್ ಕೊಳ್; ಭಾವ್ ಅನಾಮ.
೯೪. ದೇವ–ಸ್ವಾಮಿಯೆ, ಬಿನ್ನಪಂ–ಬಿನ್ನಹ; ಇಂದು, ಕೃಶಾನು–ಅಗ್ನಿ, ಖಾಂಡವಮಂ– ಖಾಂಡವ ವನವನ್ನು, ತಗುಳ್ದು–ವ್ಯಾಪಿಸಿ, ನಾನಾವಿಧಂ ಸುಡೆ–ನಾನಾ ರೀತಿಯಾಗಿ ಸುಡಲು; ನೋಡಲಾಱದೆ–ನೋಡಲಸಮರ್ಥರಾಗಿ, ತಳ್ತ–ಎದುರಿಸಿದ, ದೇವರ ಕಾಪಿನಾಳ್– ಸ್ವಾಮಿಯವರ ಕಾವಲುಗಾರರು, ದೇವಕಿನ್ನರ ಪನ್ನಗಾವಳಿ–ದೇವತೆಗಳ ಕಿನ್ನರರ ನಾಗರ ಸಮೂಹ, ಮೊಟ್ಟನಪ್ಪಿನಂ–ಮಟ್ಟಸವಾಗುತ್ತಿರಲು, ಎಚ್ಚು–ಬಾಣಪ್ರಯೋಗ ಮಾಡಿ, ಕೊಂದು–ಸಾಯಿಸಿ, ದೇವರಂ–ಪ್ರಭುವಾದ ನಿಮ್ಮನ್ನು, ಏವರ್–ಏನು ಮಾಡುವರು ಎಂದು, ಒರ್ವಂ–ಒಬ್ಬ, ಅಗುರ್ವು–ಭಯವು, ಪರ್ವಿರೆ–ಹಬ್ಬಿರಲು, ಅಱಿದಿರ್ದಂ–ತಿಳಿದಿದ್ದಾನೆ. ಇಲ್ಲಿ ‘ಅಱಿದಿರ್ದಂ’ ಎಂಬುದಕ್ಕೆ “ಉಱದಿರ್ದ” ಎಂಬ ಪಾಠವಿದ್ದಿರಬಹುದು. “ಮಲ್ಲಿ ಕಾಯುತಮಾಲೆಯಪ್ಪುದು ರಂಸ ಜಂಜಭರಂಬರಲ್.”
೯೫. ನೋಟಕ್ಕೆ–ನೋಡುವುದಕ್ಕೆ, ಎರಡು ರಥಮೊಳವು–ಎರಡು ರಥಗಳಿವೆ; ಎರಡ ಱೊಳ್–ಎರಡರಲ್ಲಿ, ಅವನ, ಒಂದು ರಥಮೆ–ಒಂದು ರಥವೇ, ತೋಟಿಗೆ–ಕಾಳಗಕ್ಕೆ, ಪಲವಾಗಿರೆ–ಅನೇಕವಾಗಿರುವಂತೆ, ಪರಿದು–ಹರಿದು, ಓಡಿ, ಕಣ್ಣೊಳಿನ್ನುಂ–ಕಣ್ಣುಗಳಲ್ಲಿ ಇನ್ನು ಕೂಡ, ತಿರಿದಪುದು–ತಿರುಗುತ್ತಿದೆ; ನಮ್ಮ ಬನಮೆನಿತನಿತುಂ–ನಮ್ಮ ವನವು ಎಷ್ಟೋ ಅಷ್ಟೂ, ಉರಿದಪುದು–ಉರಿಯುತ್ತಿದೆ.
ವಚನ : ಪೌಳೋಮೀಪತಿ–ಇಂದ್ರ; ವಿಳಯಕಾಳಾಂಬುದದಂತೆ–ಪ್ರಳಯ ಕಾಲದ ಮೋಡದ ಹಾಗೆ; ಮೊೞಗುಮಂ–ಗುಡುಗನ್ನೂ; ಬೆಸಸಿದಾಗಳ್–ಅಪ್ಪಣೆ ಮಾಡಿದಾಗ; ಕೂಟ ಕೋಟಿಗಳೆ–ಕೋಟ್ಯಂತರ ಶಿಖರಗಳೆ; ಕಿೞ್ತೆೞ್ದು ಬರ್ಪಂತೆ–ಕಿತ್ತೆದ್ದು ಬರುವ ಹಾಗೆ, ಕೞ್ತಲಿಸಿ– ಕತ್ತಲೆ ಮಾಡಿ,
೯೬. ಲೋಕಮಂ–ಲೋಕವನ್ನು, ಈಗಳ್–ಈಗ, ಸಪ್ತಸಾಗರ ಜಲಂಗಳೆ–ಏಳು ಕಡಲ ನೀರುಗಳೆ, ಕವಿದುವು–ಮುಚ್ಚಿಕೊಂಡುವು, ಎಂಬಿನಂ–ಎನ್ನುತ್ತಿರಲು, ಮುಗಿಲ್ಗಳ್– ಮೋಡಗಳು, ಅಲ್ಲಿ, ಕವಿದು–ಮುಚ್ಚಿಕೊಂಡು, ಕಱೆಯುತ್ತಿರೆ–ಮಳೆಯನ್ನು ಸುರಿಸುತ್ತಿ ರಲು, ಪಾವಕಂ–ಅಗ್ನಿ, ಉರ್ಕುಗೆಟ್ಟು–ಶಕ್ತಿ ಕಡಮೆಯಾಗಿ, ಎಂತುವೊ–ಹೇಗೋ, ದಾನಂ– ದಾನವು, ತೊದಳಾಯ್ತು–ಸುಳ್ಳಾಯಿತು, ಎನೆ–ಎನ್ನಲು, ಗುಣಾರ್ಣವಂ–ಅರ್ಜುನನು, ಮಾರುತಬಾಣದೆ–ವಾಯವ್ಯಾಸ್ತ್ರದಿಂದ, ಮೇಘಮಾಲಿಕಾ ನಿವಹಮನೆಚ್ಚು–ಮೇಘಮಾಲೆ ಗಳ ಸಮೂಹವನ್ನು ಹೊಡೆದೋಡಿಸಿ, ಕೂಡೆ–ಕೂಡಲೆ, ಶರಪಂಜರಮಂ–ಬಾಣಗಳ ಪಂಜರವನ್ನು, ಪಡೆದಂ–ಪಡೆದನು, ಉಂಟುಮಾಡಿದನು.
ವಚನ : ಪುಂಖಾನುಪುಂಖಮಾಗೆ–ಬಾಣದ ಗರಿ ಬಾಣದ ಗರಿಯನ್ನು ಸೋಕುವ ಹಾಗೆ, ಪರಂಪರೆಯಾಗಿ; ಎಡೆವಱಿಯದಂತೆ–ನಡುವೆನಿಲ್ಲದ ಹಾಗೆ, ಅನುಸ್ಯೂತವಾಗಿ; ತೋಡುಂಬೀಡುಂ–ತೊಡುವುದೂ, ಬಿಡುವುದೂ; ತುಱುಗಿ–ದಟ್ಟವಾಗಿ; ಮಾಣಿಸೆ– ನಿಲ್ಲಿಸಲು; ತಟ್ಟಿಮೆಡಱಿ–ತಟ್ಟಿ(ದಡ್ಡಿ)ಯನ್ನು ಹೆಣೆದು; ಮಶಕಮಾತ್ರಮಪ್ಪೊಡಂ– ಸೊಳ್ಳೆಯಷ್ಟು ಪ್ರಾಣಿಯಾದರೂ; ಮಿಸುಕಲ್–ಅಲ್ಲಾಡಲು, ಚಲಿಸಲು, ಛಿದ್ರವಿಲ್ಲ ದಂತಾಗೆ–ರಂಧ್ರವಿಲ್ಲದಿರುವ ಹಾಗೆ; ಜೀಮೂತಂಗಳೆಲ್ಲಂ–ಮೇಘಗಳೆಲ್ಲ; ತೆರಳ್ದು–ಚಲಿಸಿ; ಆವಗೆಯ ಕಿಚ್ಚಿನಂತೆ–ಮಡಕೆ ಸುಡುವ ಒಲೆಯ ಕಿಚ್ಚಿನಂತೆ, ಒಳಗೊಳಗಳುರ್ದು–ಒಳ ಗೊಳಗೆ ವ್ಯಾಪಿಸಿ, ಸುಟ್ಟು.
೯೭. ವನಖಗ ವನಮೃಗ ವನತರುವನಚರ ವನವನಜನಿವಹಂ–ಕಾಡುಹಕ್ಕಿ, ಕಾಡುಮೃಗ, ಕಾಡುಮರ, ಕಾಡುಪ್ರಾಣಿಗಳ, ಕಾಡುತಾವರೆಗಳ ಸಮೂಹಗಳು, ಉಳ್ಳನಿತುಂ–ಇರುವಷ್ಟೂ, ಸೀರನಿತುಂ–ಸೀರಿನಷ್ಟಾದರೂ, ಅಣಂ–ಸ್ವಲ್ಪವೂ, ಉೞಿದುದಿಲ್ಲೆಂಬಿನಂ–ಉಳಿಯಲಿಲ್ಲ ವೆನ್ನುತ್ತಿರಲು, ದಹನಂ–ಅಗ್ನಿ, ಅಳುರ್ದು–ವ್ಯಾಪಿಸಿ, ಖಾಂಡವ ವನಮಂ–ಖಾಂಡವವನ ವನ್ನು, ಉಂಡಂ–ಉಂಡನು, ಸೀರು–ಒಂದು ಸಣ್ಣ ಹೇನು.
ವಚನ : ವನಗಹನಮೆಲ್ಲಂ–ಕಾಡೆಲ್ಲ; ವಿಸ್ಮಯಮಾಗೆ–ಆಶ್ಚರ್ಯವಾಗಲು; ಪೊಱ ಮಡಲೀಯದೆ–ಹೊರಹೊರಡಲು ಬಿಡದೆ.
೯೮. ಒಂದು ದೆಸೆಯೊಳ್–ಒಂದು ದಿಕ್ಕಿನಲ್ಲಿ, ತಗುಳ್ವ–ಅಟ್ಟಿಬರುವ, ಮುಕುಂದನ– ಕೃಷ್ಣನ, ಕರಚಕ್ರಂ–ಕೈಯ ಚಕ್ರಾಯುಧ; ಒಂದು ದೆಸೆಯೊಳ್–ಒಂದು ದಿಕ್ಕಿನಲ್ಲಿ, ನರ– ಅರ್ಜುನ, ಎಚ್ಚ–ಪ್ರಯೋಗಿಸಿದ, ಒಂದು, ಶರಂ–ಬಾಣ, ಒಂದು ದೆಸೆಯೊಳ್–ಒಂದು ಕಡೆ, ದಹನಾರ್ಚಿ–ಅಗ್ನಿಯ ಜ್ವಾಲೆ, ಸುತ್ತಿಮುತ್ತುವಪದದೊಳ್–ಸುತ್ತಿಮುತ್ತಿಕೊಳ್ಳುವ ಸಮಯದಲ್ಲಿ.
೯೯. ಅರಿಕೇಸರಿಯೆರಡು ಪದಾಂಬುಜಮುಂ–ಅರಿಕೇಸರಿಯ ಎರಡು ಪಾದಪದ್ಮ ಗಳೂ, ಈಗಳ್–ಈಗ, ಎನಗೆ–ನನಗೆ, ಶರಣಕ್ಕೆ–ಶರಣಾಗತಿಯನ್ನು ನೀಡಲಿ, ಎಂಬುದು ಮಾಗಳ್–ಎನ್ನುತ್ತಲು ಆಗ, ಹರಿಚಕ್ರಂಕೊಳ್ಳದೆ–ಕೃಷ್ಣನ ಚಕ್ರಾಯುಧ ಹೊಡೆಯಲಿಲ್ಲ; ನರಶರಮುರ್ಚದೆ–ಅರ್ಜುನನ ಬಾಣ ಭೇದಿಸಲಿಲ್ಲ; ಅವನಂ–ಅವನನ್ನು, ದಹನಶಿಖೆಗಳ್– ಅಗ್ನಿ ಜ್ವಾಲೆಗಳು, ಅಳುರದೆ–ಸುಡಲಿಲ್ಲ.
ವಚನ : ವನಾಂತರಾಳದೊಳ್–ಕಾಡಿನ ನಡುವೆ; ಬರ್ದುಂಕಿ–ತಪ್ಪಿಸಿಕೊಂಡು; ಎರೞ್ಖಂಡ ಮಪ್ಪಿನಂ–ಎರಡು ತುಂಡಾಗುತ್ತಿರಲು; ಆಖಂಡಳತನಯಂ–ಇಂದ್ರನ ಮಗ, ಅರ್ಜುನ; ನನ್ನಿ ಮಾಡಿ–ನಿಜವಾಗಿಸಿ, ದಿಟವಾಗಿಸಿ.
೧೦೦. ಪಗೆಸಾಱುವುದುಂ–ದ್ವೇಷವನ್ನು ಸಾರಿ ಹೇಳುತ್ತಲು, ಪಗೆಸಾಱಿದ–ವೈರವನ್ನು ಸಾರಿದ, ನಿನ್ನಂ–ನಿನ್ನನ್ನು, ಕೊಲ್ಲೆಂ–ಕೊಲ್ಲೆನು; ಆರ ಮಱೆಯಂ ಪೊಕ್ಕು–ಯಾರಿಗೆ ಶರಣಾಗಿ ಯಾದರೂ, ಪಗೆಯಂ ನೆಱಪು–ಹಗೆಯನ್ನು ತೀರಿಸು; ಎನೆ–ಎನ್ನಲು, ನೆಱಪುವ ಬಗೆಯೊಳೆ– ತೀರಿಸುವ ಮನದಿಂದ, ಕರ್ಣನ ದೊಣೆಯಂ–ಕರ್ಣನ ಬತ್ತಳಿಕೆಯನ್ನು, ಕಡಂಗಿ–ಉತ್ಸಾಹಿಸಿ, ಪೊಕ್ಕಂ–ಪ್ರವೇಶಿಸಿದನು.
ವಚನ : ಲಾವಗೆಗಂ–ಲಾವಗೆಯೆಂಬ ಹಕ್ಕಿಗೂ; ಓದುತ್ತಂ–ಹೇಳುತ್ತ; ತಣ್ಣಿದೆಯಾಗು– ತಂಪಾದವನಾಗು; ಅೞ್ಕಿಮೆೞ್ಕಿದಂತಾದುದಂ–ನಾಶವಾಗಿ ಸಾರಿಸಿದಂತಾಗಲು. “ಅೞ್ಕು– ಜೀರ್ಣೇ”, ಮೆೞ್ಕು=(ತ) ಮೆೞುಕ್ಕು–(ನೆಲ ಮುಂತಾದುವನ್ನು) ಸಾರಿಸು; ಮನೆಯನ್ನು ಸಾರಿಸಿ ಗುಡಿಸಿಬಿಟ್ಟ ಎಂಬ ರೂಢಿಯ ಮಾತಿಗೆ ಮನೆಯನ್ನು ಹಾಳುಮಾಡಿದನು ಎಂಬರ್ಥ ವಿರುವಂತೆ.
೧೦೧. ಎನಗೆ–ನನಗೆ, ಮಗಂ–ಮಗನು, ಎಂದು–ಎಂದು ಹೇಳಿ, ಪಾರ್ಥನಂ–ಅರ್ಜುನ ನನ್ನು, ಪಿಡಿದು–ಹಿಡಿದು, ಕಟ್ಟದೆ, ಮಾಣ್ಬೆನೆ–ಬಿಡುತ್ತೇನೆಯೆ? ಚಕ್ರಿಯಂ–ಕೃಷ್ಣನನ್ನು, ಧರಿತ್ರಿಗೆ–ಲೋಕಕ್ಕೆ, ಗುರುವೆಂದು–ಗುರುವೆಂದು ಹೇಳಿ, ವಜ್ರದೊಳ್–ವಜ್ರಾಯುಧದಲ್ಲಿ, ಉರುಳ್ಚದೆ–ಉರುಳಿಸದೆ, ಕೆಡವದೆ, ಮಾಣ್ಬೆನೆ–ನಿಲ್ಲುತ್ತೇನೆಯೆ? ಬಗೆಯದೆ–ಲಕ್ಷ್ಯ ಮಾಡದೆ, ಕರಂ–ವಿಶೇಷವಾಗಿ, ಗೊಡ್ಡಮಾಡಿದರ್ಗೆ–ಚೇಷ್ಟೆ ಮಾಡಿದವರಿಗೆ, ಈಗಳೆ–ಈಗಲೇ, ತಕ್ಕುದಂ–ತಕ್ಕದ್ದನ್ನು, ಮಾೞ್ಪೆನೆಂದು–ಮಾಡುತ್ತೇನೆಂದು, ಸುರಾಧಿಪಂ–ಇಂದ್ರ, ನಿಜ ವಾಹನಮಂ–ತನ್ನ ವಾಹನವಾದ ಐರಾವತವನ್ನು, ಏಱಿ–ಹತ್ತಿ, ದಿವದಿಂ–ಸ್ವರ್ಗದಿಂದ, ತೊಟ್ಟಗೆ–ಶೀಘ್ರವಾಗಿ, ಪೊಱಮಟ್ಟಂ–ಹೊರಹೊರಟನು.
ವಚನ : ದೇವನಿಕಾಯಂ ಬೆರಸು–ದೇವತೆಗಳ ಸಮೂಹ ಸಮೇತನಾಗಿ; ಪೞುವಗೆ ಯೊಳ್–ದುರ್ಭಾವದಲ್ಲಿ, ಭೈರವಂಬಾಯ್ವಂತೆ–ಭೈರವನು ನುಗ್ಗುವ ಹಾಗೆ; ಸರಸಿಜ ಸಂಭವಂ–ಬ್ರಹ್ಮ; ಮಾರ್ಕೊಂಡು–ಎದುರಿಗೆ ನಿಂತು.
೧೦೨. ಬನಮನೆ–ಖಾಂಡವವನವನ್ನೇ, ಕಾಯಲೆಂದು–ರಕ್ಷಿಸಬೇಕೆಂದು, ಇಱಿವೆಯಪ್ಪೊಡೆ–ಕಾಳಗ ಮಾಡುವ ಪಕ್ಷದಲ್ಲಿ, ಮುನ್ನಮೆ–ಮೊದಲೇ, ಪೋದುದು– ನಾಶವಾಯಿತು; ಅಂದು–ಆಗ, ಪಾರ್ಥನೊಳ್–ಅರ್ಜುನನಲ್ಲಿ, ಎನಗೆ–ನನಗೆ, ಏವಂ– ಅಸಮಾಧಾನ, ಕೋಪ, ಎಂಬ ಬಗೆಯುಳ್ಳೊಡೆ–ಎನ್ನುವ ಎಣಿಕೆಯಿದ್ದರೆ, ನಿನ್ನಯ–ನಿನ್ನ, ಪುತ್ರಂ–ಮಗ; ಅಚ್ಯುತಂಗೆ–ಕೃಷ್ಣನಿಗೆ, ಇನಿಸು–ಇಷ್ಟು, ಎರ್ದೆನೋವೆಯಪ್ಪೊಡೆ–ಎದೆಯಲ್ಲಿ ನೋಯುತ್ತಿರುವುದಾದರೆ, ಅದು ಕೂಡದು–ಅದು ಸಲ್ಲದು, ಮೂವರೊಳ್–ತ್ರಿಮೂರ್ತಿ ಗಳಲ್ಲಿ, ಒರ್ವಂ–ಒಬ್ಬನು; ಎಮ್ಮ–ನಮ್ಮ, ಮಾತಿನಿತೆ–ಮಾತು ಇಷ್ಟೇ, ಗುಣಾರ್ಣವಂಗೆ– ಅರ್ಜುನನಿಗೆ, ಗೆಲ್ಲಮಂ–ಜಯವನ್ನು, ಕುಡು–ಕೊಡು; ಇಂತಿದೆ–ಹೀಗೇ ಇದೇ, ಕಜ್ಜದ–ಕಾರ್ಯದ, ಉಜ್ಜುಗಂ–ಉದ್ಯೋಗ, ಬೇರೆ ಏನಿಲ್ಲ ಎಂದು ಅರ್ಥ. ಈ ಪದ್ಯದಲ್ಲಿ, ಇತರ ಹಲ ವೆಡೆಗಳಲ್ಲಿರುವಂತೆ, ಸಂಕ್ಷಿಪ್ತತೆಯ ಸೌಸವವಿದೆ: ಒಂದು ಸಂದರ್ಭದ ಹುರುಳೇನೆಂದು ಮನಗಂಡ ಪಂಪ ಅಷ್ಟನ್ನು ಮಾತ್ರ ಧ್ವನಿಮಯವಾಗಿ ಹೇಳುತ್ತಾನೆ. ಅದರ ಮೇಲೆ ಮಾತಿಲ್ಲ, ಪರಿಭಾವನೆಗೆ ಎಷ್ಟು ಅವಕಾಶ ಬೇಕಾದರೂ ಇದೆ.
ವಚನ : ಕಮಲಾಸನಂ–ಬ್ರಹ್ಮ; ಆಸೆದೋಱೆ–ಆಶೆಯನ್ನು ತೋರಿಸಿ; ಉಳ್ಳುದನೆ ನುಡಿದೊಡೆ–ಇರುವುದನ್ನು ಇರುವ ಹಾಗೆಯೇ ಹೇಳಲು; ಅಂತೆಗೆಯ್ವೆಂ–ಹಾಗೆ ಮಾಡು ತ್ತೇನೆ.
೧೦೩. ಆತ್ಮತನೂಭವನ–ತನ್ನ ಮಗನಾದ ಅರ್ಜುನನ, ಉತ್ತಮಾಂಗದೊಳ್– ತಲೆಯಲ್ಲಿ, ಸುರಿವರಲ–ಸುರಿಯುವ ಹೂಗಳ, ಒಂದು ಬೆಳ್ಸರಿ–ಒಂದು ಬಿಳಿಯ ಧಾರೆ, ದೊರೆಕೊಳೆ–ಉಂಟಾಗಲು; ಅಲ್ಲಿ–ಆ ಎಡೆಯಲ್ಲಿ, ನಿಲ್ಲದೆ–ಇರದೆ, ಕುಸುಮಂ–ಹೂವು, ಕೆಲವು, ಅಲ್ಲುಗೆ–ಅಲ್ಲಿ ಸುರಿಯಲು; ತಾನೆ–ತಾನೇ, ತನ್ನ, ರತ್ನವಿಸ್ಫುರಿತ–ರತ್ನದಿಂದ ಪ್ರಕಾಶಿಸುತ್ತಿರುವ; ಕಿರೀಟಮಂ–ಕಿರೀಟವನ್ನು, ಕವಿದು–ಅರ್ಜುನನ ತಲೆಯ ಮೇಲೆ ಇಟ್ಟು, ನರಂಗೆ–ಅರ್ಜುನನಿಗೆ, ಕಿರೀಟಿನಾಮಮಂ–ಕಿರೀಟಿ ಎಂಬ ಹೆಸರನ್ನು, ಆಗಳ್–ಆಗ, ಸರಸದಿಂ– ರಸಮಯವಾಗಿ, ಉಚ್ಚರಿಸಿ–ಹೇಳಿ, ಸುರಾಧಿಪಂ–ಇಂದ್ರ, ಸಾಹಸಮಂ–ಅರ್ಜುನನ ಪರಾ ಕ್ರಮವನ್ನು, ಪೊಗೞ್ದಂ–ಹೊಗಳಿದನು.
ವಚನ : ಕಱಂಗಿ ಕೞ್ಗಿದ–ಕಪ್ಪು ಕಪ್ಪಾದ; ವ್ಯಾಘಾತ–ಏಟು, ಹೊಡೆತ; ವಿಕಲ್ಪಮುಂ– ವ್ಯತ್ಯಾಸವು; ವಿಚಿ, ನ್ನಮುಂ–ಭೇದವೂ;
೧೦೪. ಅನಿತಿನಿತೆನ್ನದೆ–ಅಷ್ಟು ಇಷ್ಟು ಎಂದು ಹೇಳದೆ, ಆಂತ ಸುರ ಪನ್ನಗ ಕಿನ್ನರ ಸೈನ್ಯಮೆಲ್ಲಂ–ಎದುರಿಸಿದ ದೇವತೆ ನಾಗಕಿನ್ನರರ ಸೈನ್ಯವೆಲ್ಲ, ಅಂಬಿನಮೊನೆಯೊಳ್–ಬಾಣ ಯುದ್ಧದಲ್ಲಿ, ಪಡಲ್ವಡೆ–ಚೆಲ್ಲಾಪಿಲ್ಲಿಯಾಗಲು, ಲತಾಭವನಂ–ಬಳ್ಳಿಮಾಡ, ಕೃತಕಾ ಚಳಂಗಳ್–ಕೃತಕಪರ್ವತಗಳು, ಎಂಬನಿತುಮವು–ಎಂಬ ಇಷ್ಟೆಲ್ಲ, ಅೞ್ಗಿತೞ್ಗೆ–ನಾಶವಾಗಿ ತಗ್ಗಲು, ನುಡಿಯಂ–ಮಾತನ್ನು, ನುಡಿದಂತೆ–ಹೇಳಿದಂತೆ, ನೆಗೞ್ಚಲ್–ಮಾಡಲು, ಅಂದು– ಆ ದಿವಸ, ಅಮರೇಂದ್ರನಂದನಂ–ಅರ್ಜುನನು, ಅಗ್ನಿದೇವನಂ–ಅಗ್ನಿದೇವತೆಯನ್ನು, ಅಮ ರೇಂದ್ರನಂದನಮಂ–ಇಂದ್ರನ ವನವಾದ ಖಾಂಡವವನವನ್ನು, ಊಡಿದಂ–ಊಟ ಮಾಡಿಸಿದನು.
ವಚನ : ಸ್ವಾಹಾಂಗನಾನಾಥಂ–ಅಗ್ನಿ; ನೀರೋಗನಾಗಿ–ರೋಗವಿಲ್ಲದವನಾಗಿ;
೧೦೫. ಧರ್ಮಜಂ ಬೆರಸು–ಧರ್ಮರಾಜನೊಡನೆ, ತನ್ನೊಡವುಟ್ಟಿದರ್–ತನ್ನ ಸಹೋದರರು, ಎಯ್ದೆ–ಸಮೀಪಿಸಿ, ಇದಿರ್ವರೆ–ಇದಿರ್ಗೊಳ್ಳಲು, ತಳ್ತುಕಟ್ಟಿದ ಗುಡಿ–ಸೇರಿಸಿ ಕಟ್ಟಿದ ಧ್ವಜಗಳು; ರಂಗವಲ್ಲಿಗಳೆ–ರಂಗೋಲಿಗಳೆ, ದಾಂಗುಡಿಯಂತಿರೆ–ಉದ್ದವಾದ ಕುಡಿ ಗಳ ಹಾಗಿರಲು, ಸುದತಿಯರ್–ಸ್ತ್ರೀಯರು, ಸೇಸೆಯಂ–ಅಕ್ಷತೆಯನ್ನು, ಸೂಸೆ–ಚೆಲ್ಲಲು, ಅಂಗನೆಯರ್–ವನಿತೆಯರು, ಚಾಮರಮಂ–ಚಾಮರಗಳನ್ನು, ಇಕ್ಕೆ–ಬೀಸಲು, ಲೋಕಮಂ– ಜಗತ್ತನ್ನು, ನಿಜಕೀರ್ತಿ–ತನ್ನ ಕೀರ್ತಿಯು, ಪುದಿದಿರೆ–ತುಂಬಿರಲು, ಪರಸೈನ್ಯ ಭೈರವಂ– ಅರ್ಜುನ, ನಿಜಮಂದಿರಮಂ–ತನ್ನರಮನೆಯನ್ನು, ಪೊಕ್ಕಂ–ಪ್ರವೇಶ ಮಾಡಿದನು. ದಾವು+ಕುಡಿ=ದಾಂಗುಡಿ.
ಪಂಚಮಾಶ್ವಾಸಂ ಸಂಪೂರ್ಣಂ