ಚತುರ್ಥಾಶ್ವಾಸಂ
೧. ದ್ವಿಷದ್ಬಲ ಪಾರಾವಾರದೊಳ್–ಶತ್ರುಗಳ ಸೈನ್ಯವೆಂಬ ಸಾಗರದಲ್ಲಿ, ಶ್ರೀರಮಣಿಯಂ– ಲಕ್ಷ್ಮೀಲಲನೆಯನ್ನು, ಉದಗ್ರ ಭುಜವಿಜಯ ಮಹಾಮೇರುವಿನೆ–ಅತಿಶಯವಾದ ಬಾಹುಗಳೆಂಬ ಜಯಪ್ರದವಾದ ಮಹಾಮೇರು ಪರ್ವತದಿಂದಲೇ, ಕಡೆದು, ಪಡೆದ– ಹೊಂದಿದ, ಉದಾತ್ತನಾರಾಯಣನಾ–ಅರ್ಜುನನ, ಅಳವು–ಪರಾಕ್ರಮವು, ಆರುಮಂ– ಯಾರನ್ನೂ, ಇಳಿಸಿದುದು–ತಿರಸ್ಕರಿಸಿತು.
ವಚನ : ಚಾಗಕ್ಕೆ ಬೂತುಂ–ದಾನ ತೆಗೆದುಕೊಳ್ಳುವುದಕ್ಕೆ ಯಾವ ಭೂತವೂ (ಪ್ರಾಣಿಯೂ), ಭೋಗಕ್ಕೆ ಪೊೞ್ತುಂ–ಸುಖಪಡುವುದಕ್ಕೆ ಹೊತ್ತೂ, ನೆಱೆಯದೆನಿಸಿ– ಸಾಕಾಗುವುದಿಲ್ಲವೆನಿಸಿ.
೨. ಆಗ, ಚರರ್–ದೂತರ್, ಎಯ್ದಿದರ್–ಹೊರಟರು, ಎಯ್ದಿ ಹಸ್ತಿನಪುರಕ್ಕೆ– ಹಸ್ತಿನಾವತಿಗೆ ಸೇರಿ, ಪಾಂಡವರ್ ತಮ್ಮುತಯ್ವರುಂ–ತಾವು ಐವರಾದ ಪಾಂಡವರು, ದ್ರುಪದಾಧಿರಾಜಪುರದೊಳ್–ದ್ರುಪದ ರಾಜನ ನಗರದಲ್ಲಿ, ಛತ್ರವತಿಯಲ್ಲಿ, ಪಾಂಚಾಳಿ ಯಂ–ದ್ರೌಪದಿಯನ್ನು, ಕೈಕೊಂಡು–ಪರಿಗ್ರಹಿಸಿ, ಇರ್ದ್ದರ್–ಇದ್ದಾರೆ; ಧುರದೊಳ್– ಯುದ್ಧದಲ್ಲಿ, ಕರ್ಣನಂ–ಕರ್ಣನನ್ನು, ಆಂತು–ಎದುರಿಸಿ, ಗೆಲ್ದವನವಂ–ಗೆದ್ದವನವನು, ಸಂದ–ಪ್ರಸಿದ್ಧನಾದ, ಅರ್ಜುನಂ–ಅರ್ಜುನನು; ಸಂಗರದೊಳ್–ಯುದ್ಧದಲ್ಲಿ, ತಳ್ತು–ಸೇರಿ, ಶಲ್ಯನಂ–ಶಲ್ಯನನ್ನು, ಇಕ್ಕಿಗೆಲ್ದದಟಂ–ಹೊಡೆದು ಗೆದ್ದ ಶೂರ, ಭೀಮಂಗಡಂ–ಭೀಮನು, ನಿಜವಾಗಿಯೂ, ಕಾಣಿರೇ–ನೋಡಿರೇ.
ವಚನ : ಬಿಲ್ಲುಂಬೆಱಗುಮಾಗಿ–ಆಶ್ಚರ್ಯ ಭಯಗಳಿಂದ ಸ್ತಂಭೀಭೂತರಾಗಿ; ಇದೊಂದು ನುಡಿಗಟ್ಟು.
೩. ಜತುಗೃಹದೊಳ್–ಅರಗಿನ ಮನೆಯಲ್ಲಿ, ಕಾಯ್ವ–ಸುಡುವ, ಅೞಲ್–ನೋವು, ಉಱೆ–ಉಂಟಾಗಲು, ಅಯ್ವರುಮಂ–ಐದು ಜನರನ್ನೂ, ಮಂತ್ರಬಲದೆ–ಆಲೋಚನಾ ಶಕ್ತಿಯಿಂದ, ಎಂದರೆ ಬುದ್ಧಿಬಲದಿಂದ, ಸುಟ್ಟೊಡಂ–ನಾವು ಸುಟ್ಟರೂ, ದೈವಬಲಮೊಂದೆ– ವಿಧಿಯಬಲವೊಂದೇ, ಕಾದುದು–ಅವರನ್ನು ರಕ್ಷಿಸಿತು; ದೈವಮಂ–ವಿಧಿಯನ್ನು, ಮೀಱಿ– ಉಲ್ಲಂಘಿಸಿ, ಬಾೞಲ್–ಬದುಕಲು, ನೆಱೆವರ್–ಸಮರ್ಥರಾದವರು, ಆರಯ್ಯ–ಯಾರಯ್ಯ, ಯಾರೂ ಇಲ್ಲ. ಅರ್ಥಾಂತರ ನ್ಯಾಸಾಲಂಕಾರ. ಉಱೆ ಉಱು=ಇರು, ಪಡೆ.
ವಚನ : ನಿಶ್ಚಿತ ಮಂತ್ರರಾಗಿ–ನಿರ್ಣಯಿಸಿದ ಆಲೋಚನೆಯುಳ್ಳವರಾಗಿ; ಪೃಥಾತನೂ ಜರಂ–ಪಾಂಡವರನ್ನು; ನಿನ್ನ ಬಲ್ಲ ಮಾೞ್ಕೆಯಿಂ–ನೀನು ತಿಳಿದ ರೀತಿಯಿಂದ; ಒಡಂಗೊಂಡು– ಒಡಗೊಂಡು; ಬರ್ವುದು–ಬರುವುದು.
೪. ಅದು ಪಿರಿದುಂ ಪ್ರಮಾದಂ–ಅದು ಹಿರಿದಾದ ತಪ್ಪು; ಅದುವುಂ–ಅದು ಕೂಡ, ಕುರುರಾಜನಿಂ–ದುರ್ಯೋಧನನಿಂದ, ಆಯ್ತುಪೋಯ್ತು–ಆಯಿತು ಹೋಯಿತು; ಸಂದುದು– ಕಳೆದುಹೋದ, ಅದಂ–ಅದನ್ನು, ಮಱೆಯಲ್ಕೆವೇೞ್ಪುದು–ಮರೆಯಬೇಕು; ಪಾಂಡುರಾಜಂ, ಆಳ್ದುದನ್–ಆಳಿದ, ಎಳೆಯಂ–ಭೂಮಿಯನ್ನು, ಆಳ್ವುದು–ಆಳುವುದು, ತಪ್ಪದೆ–ತಪ್ಪುವುದಿಲ್ಲ, ಮನಂ ಬಸದೆ–ಮನಸ್ಸನ್ನು ವಿಭಾಗಿಸದೆ, ಎಂದರೆ ಒಂದೇ ಮನಸ್ಸಿ ನಿಂದ, ನೀಂ–ನೀವು, ಬರ್ಪುದು–ಹಸ್ತಿನಾವತಿಗೆ ಬರುವುದು, ಎನೆ–ಎನ್ನಲು, ಪೋಪಕಜ್ಜ ಮಂ–ಹೋಗುವ ಕಾರ್ಯವನ್ನು ಎಂದರೆ ಪ್ರಯಾಣ ಮಾಡುವುದನ್ನು, ಅಯ್ವರುಂ– ಐವರೂ, ವಿದುರನೊಳ್–ವಿದುರನಲ್ಲಿ, ಸಮೆದು–ಏರ್ಪಡಿಸಿ, ಆ ದ್ರುಪದಂಗೆ–ಆ ದ್ರುಪದ ನಿಗೆ, ರಾಗದಿಂ–ಸಂತೋಷದಿಂದ, ಪೇೞ್ವುದುಂ–ಹೇಳುತ್ತಲು;
ವಚನ : ಆತನ ಬೞಿವೞಿಗೊಟ್ಟ–ಅವನು ಬಳುವಳಿಯಾಗಿ ಕೊಟ್ಟ; ಕರೇಣು– ಹೆಣ್ಣಾನೆ; ಶಶಿತಾರ ಹಾರ–ಚಂದ್ರನಂತೆ ಹೊಳೆಯುವ ಮುತ್ತಿನಹಾರ; ಕತಿಪಯ–ಕೆಲವು; ಮದಗಜ ಪುರಮಂ–ಹಸ್ತಿನಾವತಿಯನ್ನು, ಎಯ್ದೆವಂದಾಗಳ್–ಹತ್ತಿರಕ್ಕೆ ಬಂದಾಗ, ಸಮೀಪಿಸಿದಾಗ;
೫. ಘನಪಥಮಂ–ಆಕಾಶವನ್ನು, ಪಳಂಚಿ–ತಗುಲಿ, ಅಲೆವ–ಪೀಡಿಸುವ, ಸೌಧಚಯಂ ಗಳಿಂ–ಉಪ್ಪರಿಗೆ ಮನೆಗಳಿಂದ, ಆಡುತಿರ್ಪ–ಅಲ್ಲಾಡುತ್ತಿರುವ, ಕೇತನ ತತಿಯಿಂ–ಬಾವುಟಗಳ ಸಮೂಹಗಳಿಂದ, ಕರೀಂದ್ರಗಳ ಗರ್ಜನೆಯಿಂ–ಶ್ರೇಷ್ಠವಾದ ಆನೆಗಳ ಕೊರಳಿನ ಗರ್ಜನೆ ಯಿಂದ, ಎಂದರೆ ಘೀಂಕಾರದಿಂದ; ಪಟಹಪ್ರಣಾದಮಂ–ತಮ್ಮಟೆಗಳ ಧ್ವನಿಯನ್ನು, ಘನರವಮೆಂದೆ–ಮೋಡದ ಶಬ್ದವೆಂದೇ, ಗುಡುಗೆಂದೇ, ನರ್ತಿಸುವ–ಕುಣಿಯುವ, ಕೇಕಿಗಳಿಂ– ನವಿಲುಗಳಿಂದ; ಕಡುರಯ್ಯಮಪ್ಪ–ಅತ್ಯಂತ ಸುಂದರವಾದ, ಜಿತೇಂದ್ರಪುರಮಂ–ಇಂದ್ರನ ನಗರಿಯನ್ನು ಸೋಲಿಸಿದ, ಹಸ್ತಿನಪುರಮಂ–ಹಸ್ತಿನಾವತಿಯನ್ನು, ಪರಮೇಶ್ವರರ್–ಉತ್ಕೃಷ್ಟ ರಾಜರಾದ, ಚಕ್ರವರ್ತಿಗಳಾದ ಪಾಂಡವರು, ಆಗಳ್–ಆಗ, ಎಯ್ದಿದರ್–ಸೇರಿದರು.
ವಚನ : ಪಂಚಗವ್ಯಂಗಳಿಂ–ಗೋವಿನಿಂದ ಬರುವ ಐದು ವಸ್ತುಗಳಿಂದ (ಹಾಲು, ಮೊಸರು, ಬೆಣ್ಣೆ, ಗಂಜಳ, ಸೆಗಣಿ), ತಳಿಯಿಸಿ–ಚಿಮುಕಿಸುವಂತೆ ಮಾಡಿ; ಗುಡಿಯಂ– ಧ್ವಜವನ್ನು; ತುಱುಗಲುಂ ಬಂಬಲುಮಾಗೆ–ಗುಂಪುಗುಂಪಾಗಲು, ಪ್ರತಿಪತ್ತಿಗಳಿಂದೆ– ಉಪಚಾರಗಳಿಂದ, ಸತ್ಕಾರಗಳಿಂದ; ನಿಬಿಡಾಲಿಂಗನಂ–ಬಿಗಿಯಾದ ಅಪ್ಪು, ಗಾಢಾಲಿಂಗನ; ಸೂೞ್ಸೂೞೊಳೆ–ಬಾರಿಬಾರಿಗೆ; ಬಿರ್ದನಿಕ್ಕಿ–ಔತಣ ಮಾಡಿಸಿ, ಕೂರ್ತುದರ್ಕಂ–ಪ್ರೀತಿಸಿ ದುದಕ್ಕೂ, ಪಚ್ಚುಕೊಟ್ಟು–ವಿಭಾಗಿಸಿಕೊಟ್ಟು, ಹಂಚಿಕೊಟ್ಟು, ಏಗೆಯ್ದುಂ–ಏನು ಮಾಡಿಯೂ;
೬. ಭೀಷ್ಮನ ಕೋಪದ ಮಾತು : ಒಡೆಯರ್–ರಾಜರಾದ ಪಾಂಡವರು, ಅದೇವರ್– ಅದೇನು ಮಾಡಬಲ್ಲರು, ಎಂದು, ನಿನಗೆ, ಪಟ್ಟಮಂ ಇತ್ತೊಡೆ–ರಾಜ್ಯವನ್ನು ಕೊಟ್ಟರೆ, ಉರ್ಕಿದಪ್ಪೆ–ಉಕ್ಕುತ್ತಿದೀಯೆ, ಉಬ್ಬುತ್ತಿದೀಯೆ; ಪೇೞ್–ಹೇಳು; ಪೊಡವಿಗಧೀಶರಂತ ವರ್ಗಳ್–ರಾಜ್ಯಕ್ಕೆ ಹಾಗೆ ಒಡೆಯರು ಅವರು, ಅಯ್ವರುಮಂ–ಐವರನ್ನೂ, ಕ್ರಮದಿಂದೆ ಪಟ್ಟಮಂ ತಡೆಯದೆ ಕಟ್ಟಿ–ಕ್ರಮವಾಗಿ ರಾಜ್ಯಪಟ್ಟವನ್ನು ತಡಮಾಡದೆ ಕಟ್ಟಿ, ಭೂತಳ ಮನಾಳಿಸದಿರ್ದೊಡೆ–ಭೂಮಂಡಲವನ್ನು ಆಳಿಸದೆ ಇದ್ದರೆ, ಅದರ್ಕೆ–ಅದಕ್ಕೆ, ಸೊರ್ಕಿ– ಮದವೇರಿ, ನೀಂ–ನೀನು, ನುಡಿಯದಿರ್ ಅಣ್ಣ–ಮಾತಾಡಬೇಡವೋ ಅಣ್ಣ; ನಿನ್ನ, ನುಡಿಗಾಂ–ಮಾತಿಗೆ ನಾನು, ತಡೆದು–ಅಡ್ಡಿಪಟ್ಟು, ಇರ್ಪೆನೆ–ಇರುತ್ತೇನೆಯೇ, ಸುಯೋಧನಾ–ದುರ್ಯೋಧನನೇ, ಪೇೞ್-ಹೇಳು.
೭. ಕ್ರಮವಱಿದು–ಯಾರು ಮೊದಲು ಯಾರು ಆಮೇಲೆ ಎಂಬ ಕ್ರಮವನ್ನು ತಿಳಿದು; ಎನ್ನ ಕೊಟ್ಟುದನೆ ಕೊಂಡು–ನಾನು ಕೊಟ್ಟದ್ದನ್ನೇ ನೀವು ತೆಗೆದುಕೊಂಡು, ಮನೋಮುದ ದಿಂದೆ–ಮನದ ಸಂತೋಷದಿಂದ, ಅಂತು–ಹಾಗೆ, ಬಾೞ್ವುದು–ಬದುಕುವುದು; ಅವರಿವರೆಲ್ಲರುಂ ಸಮಂ–ಅವರೂ ಇವರೂ ಎಲ್ಲರೂ ಸಮಾನ, ಪಾಂಡವರೂ ಕೌರವರೂ ಒಬ್ಬರು ಹೆಚ್ಚಲ್ಲ, ಒಬ್ಬರು ಕಡಮೆಯಲ್ಲ; ಅದಲ್ಲದೆ–ಅದು ಹಾಗಲ್ಲದೆ, ಮಾರ್ಮಲೆದು– ಪ್ರತಿಯಾಗಿ ಉದ್ಧತತನವನ್ನು ತೋರಿಸಿ, ಉರ್ಕಿ–ಉಕ್ಕಿ, ಭೀಮನೊಳ್–ಭೀಮಸೇನನಲ್ಲಿ, ಸಮರದೆ–ಯುದ್ಧದಲ್ಲಿ, ಗರ್ವದಿಂ–ಜಂಬದಿಂದ, ಗಾವಿಲರ್–ದಡ್ಡರಾದ ನೀವು, ಪೊಣರಲ್–ಯುದ್ಧವಾಡಲು, ಆರ್ಪಿರೆ–ಸಮರ್ಥರಾಗುತ್ತೀರಾ? ಇನ್ನುಂ–ಇನ್ನು ಮುಂದೆ, ಎಲ್ಲರಂ–ಎಲ್ಲರನ್ನೂ, ಯಮಸುತನುಂ–ಧರ್ಮರಾಜನೂ, ಸುರೇಂದ್ರಸುತನುಂ– ಅರ್ಜುನನೂ, ಪೊಸೆದು–ಹೊಸೆದು, ಈಗಳೇ–ಈಗಲೇ, ಮುಕ್ಕಿ–ತಿಂದು, ತೋಱರೇ– ತೋರಿಸುವುದಿಲ್ಲವೇ?
ವಚನ : ಬೆಸಕೆಯ್ಯದುದನೆ–ಮಾಡದಿರುವುದನ್ನೇ, ಬೆಸಕೆಯ್ವರ್–ಮಾಡುತ್ತಾರೆ; ನೆಲನಂ ಪಚ್ಚುಕೊಡುವಾಗಳ್–ಭೂಮಿಯನ್ನು ವಿಭಾಗಮಾಡಿ ಕೊಡುವಾಗ; ಅಡ್ಡಂ ಬರ್ಪ ಗಂಡರಂ–ಅಡ್ಡಿಯಾಗಿ ಬರುವ ಶೂರರನ್ನು; ನೋೞ್ಪೆಂ–ನೋಡುವೆನು; ಬಗ್ಗಿಸಿದೊಡೆ– ಬಯ್ದರೆ, ಗದರಿಸಿಕೊಂಡರೆ; ಅತಿಸಂಭ್ರಮಾಕುಳಿತನಾಗಿ–ಬಹು ತಲ್ಲಣದಿಂದ ವ್ಯಥಿತನಾಗಿ, ನೀಮೆಂದುದನೆಂದು ಬಾೞ್ವೆಂ–ನೀವು ಹೇಳಿದ್ದನ್ನು ಹೇಳಿ ಬದುಕುತ್ತೇನೆ;
೮. ಪಾಂಡುವಿಂ ಬೞಿಯಂ–ಪಾಂಡುರಾಜನ ಅನಂತರ, ಧರಣೀ ನಾರಿಗೆ–ಭೂಮಿ ಯೆಂಬ ಸ್ತ್ರೀಗೆ, ಪೆಱರ್ ಗಂಡರ್–ಬೇರೆ ಒಡೆಯರು, ಆರುಂ–ಯಾರೂ ಇಲ್ಲ; ಅಂತಿರಲ್– ಹಾಗಿರಲು, ಏವಂಬಡೆದಿರ್ದೊಡೆ–ನಿಮ್ಮಲ್ಲಿ ಮಾತ್ಸರ್ಯದಿಂದ ಕೂಡಿ ಇದ್ದರೆ, ಸಪ್ತಾಂಗಂ– ರಾಜ್ಯದ ಸಪ್ತಾಂಗಗಳು, ಅೞ್ದು–ಮುಳುಗಿ ಹೋಗಿ, ಕಿಡುಗುಂ–ನಾಶವಾಗುತ್ತವೆ; ಈ ರಾಜಕಕ್ಕೆ– ಈ ರಾಜ್ಯಕ್ಕೆ, ಅರಸಂ–ರಾಜ, ಧರ್ಮಜನಕ್ಕು–ಧರ್ಮರಾಜನಾಗುತ್ತಾನೆ, ಎಂದು, ನಯದಿಂ–ರಾಜನೀತಿಯಿಂದ, ನಿಶ್ಚೈಸಿ–ನಿರ್ಣಯ ಮಾಡಿ, ಕಲ್ಯಾಣ ಕಾರ್ಯರತರ್– ಮಂಗಳ ಕಾರ್ಯದಲ್ಲಿ ಆಸಕ್ತರಾಗಿರುವವರು, ಆ ಯುಧಿಷ್ಠಿರ ನೃಪಂಗೆ–ಆ ಧರ್ಮರಾಜನಿಗೆ, ಉತ್ಸಾಹದಿಂ–ಪ್ರಯತ್ನದಿಂದ, ಪಟ್ಟಮಂ–ರಾಜ್ಯ ಪಟ್ಟವನ್ನು, ಕಟ್ಟಿದರ್–ಕಟ್ಟಿದರು.
ವಚನ : ಪೂರ್ವಸ್ಥಿತಿಯೊಳ್–ಹಿಂದಿನ ವ್ಯವಸ್ಥೆಯಲ್ಲಿ; ಪಚ್ಚುಕೊಟ್ಟು–ವಿಭಾಗಿಸಿ ಕೊಟ್ಟು; ಪೊಲ್ಲಮಾನಸಂ–ಕೆಟ್ಟ ಮನುಷ್ಯ; ಕಿಸುರುಂ ಕಲಹಮುಂ–ಅಸಹನೆಯೂ, ಜಗಳವೂ; ಅಂತೆಗೆಯ್ವೆಮೆಂದು–ಹಾಗೆ ಮಾಡುತ್ತೇವೆ ಎಂದು.
೯. ಒಡವರ್ಪ–ಒಡನೆ ಬರುವ, ಉಗ್ರಮದೇಭ….ರತ್ನಂಗಳೊಳ್; ಉಗ್ರಮದೇಭ– ಮದಿಸಿದ ಭಯಂಕರವಾದ ಆನೆಗಳು, ವಾಜಿ–ಕುದುರೆಗಳು, ಗಣಿಕಾ–ಸ್ತ್ರೀಯರು, ಅನರ್ಘ–ಬೆಲೆಯಿಲ್ಲದ, ಹೆಚ್ಚು ಬೆಲೆಯುಳ್ಳ, ರತ್ನಂಗಳೊಳ್–ರತ್ನಗಳಲ್ಲಿ, ಲಕ್ಷ್ಮಿ– ಶ್ರೀಯು, ತೊಡರ್ದು–ಸೇರಿಕೊಂಡು, ಒಪ್ಪುತ್ತಿರೆ–ಸೊಗಸಾಗಿರಲು, ದಂತಿ ತುರಗಂ ಶ್ರೀದಿವ್ಯಕಾಂತಾಜನಂ–ಐರಾವತ, ಉಚ್ಚೈಶ್ರವಸ್ಸು ದೇವಸ್ತ್ರೀಯರು, ತೊಡವು–ಆಭರಣಗಳು, ಎಂಬ ಒಂದುಮಂ–ಎನ್ನುವ ವಸ್ತುಗಳಲ್ಲಿ ಒಂದನ್ನೂ, ಆ ಸುರಾಸುರರಿಂ–ಆ ದೇವದಾನವರಿಂದ, ಆ ಗೋವಿಂದನಿಂ–ಆ ವಿಷ್ಣುವಿನಿಂದ, ಮುನ್ನೆ–ಹಿಂದಿನ ಕಾಲದಲ್ಲಿ, ಕೋಳ್ಪಡದ– ಕೊಳ್ಳೆ ಹೊಂದದ, ಅಂಭೋನಿಧಿಯಂತೆ–ಸಾಗರದ ಹಾಗೆ, ಧರ್ಮಜಂ–ಧರ್ಮರಾಜನು, ಬಂದು, ನೆಗೞ್ದಿಂದ್ರಪ್ರಸ್ಥಮಂ–ಪ್ರಸಿದ್ಧವಾದ ಇಂದ್ರಪ್ರಸ್ಥ ನಗರವನ್ನು;
೧೦. ರಗಳೆ: ಎಯ್ದುವುದುಂ–ಸೇರುತ್ತಲೂ; ಅವಿರಳ–ದಟ್ಟವಾದ; ಮಳಯಾನಿಳ– ಮಲಯಮಾರುತ; ಕಂಪುವೇಱೆ–ಕಂಪನ್ನು ಹೊರಲು; ಕಿಱುಮಿಡಿಗಳೊಳ್–ಸಣ್ಣ ಹೀಚು ಗಳಲ್ಲಿ; ಬಳಸು–ಸುತ್ತು; ಅರಿದೆನಿಸಿರೆ–ಅಸಾಧ್ಯವೆನಿಸಿರಲು; ಮಿಳಿರ್ವ ಪತಾಕಾವಳಿ–ಅಲುಗಾ ಡುವ ಬಾವುಟಗಳ ಸಾಲು; ಕೆಂಬೊನ್ನ ಮದಿಲ್ಗಳೊಳಗೆ–ಕೆಂಪು ಚಿನ್ನದಿಂದ ಮಾಡಿದ ಕೋಟೆಯ ಗೋಡೆಗಳೊಳಗೆ; ಕಿಸುಗಲ್ಗಳ–ಕೆಂಗಲ್ಲುಗಳ, ರತ್ನಗಳ; ಕಣಿವೆರಸು–ಗಣಿ ಯಿಂದ ಕೂಡಿ; ನೆೞಲೊಳ್–ನೆರಳಿನಲ್ಲಿ, ಅಲೆಪಿಲ್ಲದೆ–ಅಲೆದಾಟವಿಲ್ಲದೆ; ಏಳಿಪ–ತಿರಸ್ಕರಿ ಸುವ; ಪರಿತಂದು–ಓಡಿಬಂದು; ಒಸಗೆವೆರಸಿ–ಉತ್ಸವದೊಡನೆ ಕೂಡಿ; ಶೇಷಾಕ್ಷತಮಂ– ಮಂತ್ರಾಕ್ಷತೆಯನ್ನು; ಕರುಮಾಡಮಂ–ಬಣ್ಣ ಬಳಿದ ಮನೆಯನ್ನು; ಒಳ್ಮಾಡಂಗಳಂ–ಮನೆಯ ಒಳಭಾಗಗಳನ್ನು; ಅವಯವದಿಂದಮಿತ್ತು–ಸುಲಭವಾಗಿ ಕೊಟ್ಟು; ನಾಲ್ವರ್ಮನುಜ ರೊಳಗೆ–ನಾಲ್ಕು ಜನ ಮನುಷ್ಯರೊಳಗೆ, ಅಥವಾ ನಾಲ್ವರುಂ–ನಾಲ್ಕು ಜನರೂ, ಅನುಜ ರೊಳಗೆ–ತಮ್ಮಂದಿರಲ್ಲಿ, ರಿಪುಬಳತಿಮಿರಭಾನು–ಶತ್ರುಸೈನ್ಯವೆಂಬ ಕತ್ತಲೆಗೆ ಸೂರ್ಯನಾ ದವನು. ಈ ರಗಳೆಯನ್ನು ಮಟ್ಟರಗಳೆ ಎಂದು ಕರೆದಿದೆ; ಕೆಲವು ಹಸ್ತಪ್ರತಿಗಳಲ್ಲಿ ಈ ಹೆಸರು ಲಿಖಿತವಾಗಿರಬಹುದು ವಾಸ್ತವವಾಗಿ ಇದು ಪ್ರಾಕೃತ ಛಂದಸ್ಸಿನಲ್ಲಿ ಪ್ರಸಿದ್ಧವಾಗಿರುವ ಪಜ.ಟಿಕಾ (ಪದ್ದಳಿ) ಎಂಬ ವೃತ್ತ. ಎರಡೆರಡು ಪಂಕ್ತಿಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ಪ್ರತಿ ಪಾದದಲ್ಲೂ ಚತುರ್ಮಾತ್ರೆಯ ನಾಲ್ಕು ಗಣಗಳು ಇರುತ್ತವೆ; ಅಂತ್ಯಗಣ ಜಗಣ ವಾಗಿರಬೇಕು; ಎರಡನೆಯ ಗಣ ಜಗಣವಾಗಿದ್ದರೂ ಇರಬಹುದು. ಇಲ್ಲವೇ ಇನ್ನಾವ ಚತುರ್ಮಾತ್ರಾಗಣವಾದರೂ ಆಗಬಹುದು; ಅಂತ್ಯಪ್ರಾಸವಿರಬೇಕು. ಇದು ಪಜ.ಟಿಕೆಯ ಲಕ್ಷಣ. ಇದು ಈ ರಗಳೆಗೆ ಚೆನ್ನಾಗಿ ಹೊಂದುತ್ತದೆ:
ಲವಣಾ । ಬ್ಧಿಯೆ ಬಳ । ಸಿದುದೆನಿ । ಸು ವಗೞ
ಬಿಳಸೆಸೆ । ದಿರೆ ಕೋಂ । ಟೆಯ ಚೆ । ಲ್ವು ಪೊಗೞ
‘ರಸರಸದ ಬಾವಿ’ ಎಂಬಲ್ಲಿ ಎರಡನೆಯ ಗಣ ‘ದಬಾವಿ’ ಪಜ.ಟಿಕೆಯ ಲಕ್ಷಣದಂತೆ ಜಗಣವಾಗಿರಬಹುದೆಂಬುದನ್ನು ನೋಡಬಹುದು.
ಇಲ್ಲಿ ನಾಲ್ಕನೆಯ ಗಣಗಳು ಪಂಚಕಲವಾಗಿದೆ; ಮೂರನೆಯ ಗಣ ಒಂದು ಪಾದದಲ್ಲಿ ಪಂಚಮಾತ್ರಾತ್ಮಕವಾಗಿದೆ; ಅದನ್ನು ಚತುರ್ಮಾತ್ರಾ ಕಾಲದಲ್ಲಿ ಉಚ್ಚರಿಸಬೇಕು; ಹಾಗೆಯೇ ನಾಲ್ಕನೆಯ ಗಣಗಳನ್ನೂ.
ಎಂಬ ಪಾದದಲ್ಲಿ ೩ನೆಯ ಗಣ ಪಂಚಕಲವಾಗಿ ತೋರುತ್ತದೆ; ಆದರೆ ಅದನ್ನು ಉಚ್ಚರಿಸುವಾಗ ಎರಡನೆಯ ಅಕ್ಷರವನ್ನು ತೇಲಿಸಿ ಹೇಳಬೇಕು. ಪ್ರಾಕೃತ ಛಂದಸ್ಸಿನಲ್ಲಿ ನಿಯತ ಲಕ್ಷಣವುಳ್ಳ ಪಜ.ಟಿಕೆಯನ್ನು ಪಂಪನು ಕನ್ನಡಕ್ಕೆ ತರುವ ಪ್ರಯೋಗವನ್ನು ಇಲ್ಲಿ ಮಾಡಿದ್ದಾನೆ; ಆದರೆ ಅದರಲ್ಲಿ ಮೇಲೆ ಹೇಳಿದ ಕೆಲವು ವ್ಯತ್ಯಾಸಗಳನ್ನು ಮಾಡಿ ಅದು ಶ್ರವಣ ಸುಭಗವಾಗುವುದೋ ಇಲ್ಲವೋ ಎಂಬುದನ್ನು ಪರೀಕ್ಷಿಸಿದ್ದಾನೆ. ಪಜ.ಟಿಕೆಯ ಅಥವಾ ಯಾವ ಛಂದಸ್ಸಾದರೂ ಆಗಲಿ ಅದರ ೧೬ ಪಂಕ್ತಿಗಳು ಒಟ್ಟಿಗೆ ಬಂದರೆ ಅದಕ್ಕೆ ‘ಕಡವಕ’ ಎಂದು ಪ್ರಾಕೃತದಲ್ಲಿ ಹೆಸರು. ಆದರೆ ಕವಿಗಳು ೧೬ ಪಂಕ್ತಿಗಳನ್ನು ಮೀರಿ ಎಷ್ಟು ಪಂಕ್ತಿ ಗಳನ್ನು ಬೇಕಾದರೂ ಪ್ರಯೋಗಿಸಿದ್ದಾರೆ. ಈ ಪಜ.ಟಿಕಾ ವೃತ್ತವೇ ಕಾಲಕ್ರಮದಲ್ಲಿ ಕನ್ನಡದ ‘ಮಂದಾನಿಲ ರಗಳೆ’ ಯಾಗಿ ಪರಿಣಮಿಸಿತು. ‘ರಗಳೆ’ ಎಂಬ ಶಬ್ದವೂ ‘ಕಡವಕ’ ಶಬ್ದದ ರೂಪಾಂತರವಿರಬಹುದು. ಈ ಎಲ್ಲ ವಿಷಯಗಳನ್ನೂ ಛಂದಶ್ಶಾಸ್ತ್ರದಲ್ಲಿ ವಿಷದವಾಗಿ ತಿಳಿಯ ಬಹುದು.
ವಚನ : ಅಜಾತಶತ್ರು–ಶತ್ರುವೇ ಇಲ್ಲದಿರುವ ಧರ್ಮರಾಜನು; ಕರವಾಳ–ಕತ್ತಿಯಿಂದ, ದಂಷ್ಟ್ರಾ–ಕೋರೆಹಲ್ಲುಳ್ಳ, ಆಭೀಳ–ಭಯಂಕರವಾದ, ಭುಜಂಗಮೂರ್ತಿ–ಸರ್ಪಾಕಾರ ವುಳ್ಳವನು; ವಿಶ್ವ ವಿಶ್ವಂಬರಾಧಾರಮಪ್ಪ–ಸಮಸ್ತ ಭೂಮಿಗೂ ಆಧಾರವಾಗಿರುವ; ಇರವಿಂಗೆ– ಸ್ಥಿತಿಗೆ; ಉಮ್ಮಳಿಸಿ–ವ್ಯಥೆಪಟ್ಟು; ದಿಗಂಗನಾ ಮುಖಾವಲೋಕನಂ ಗೆಯ್ಯಲ್–ದಿಕ್ಕು ಗಳೆಂಬ ಸ್ತ್ರೀಯರ ಮುಖವನ್ನು ನೋಡಲು, ಎಂದರೆ ದಿಗಂತಗಳಲ್ಲಿ ಸಂಚಾರ ಮಾಡಲು, ಬಗೆದು–ಯೋಚಿಸಿ.
೧೧. ಸೆಣಸುಳ್ಳ–ಮಾತ್ಸರ್ಯವನ್ನುಳ್ಳ, ಉದ್ವೃತ್ತರಂ–ದುಷ್ಟರನ್ನು, ತಳ್ತು–ಸಂಧಿಸಿ, ಇಱಿಯದೆ–ಹೊಡೆಯದೆ, ಯುದ್ಧಮಾಡದೆ; ಚತುರಂಭೋಧಿ ಪರ್ಯಂತಮಂ–ನಾಲ್ಕು ಸಾಗರಗಳ ಕೊನೆಯವರೆಗೂ, ತಾಂ–ತಾನು, ಪೋಗಿ–ಹೋಗಿ, ಧಾರಿಣಿಯಂ–ಭೂಮಿಯ ರಾಜರನ್ನು, ಬಾಯ್ಕೇಳಿಸದೆ–ಆಜ್ಞೆಗೆ ಅಧೀನರನ್ನಾಗಿ ಮಾಡದೆ; ದಾರುಣ ದೈತ್ಯರ್–ಕ್ರೂರ ರಾದ ರಾಕ್ಷಸರು, ಮುನಿಜನಕ್ಕೆ–ಋಷಿಜನಗಳಿಗೆ, ಇಷ್ಟಿ ವಿಘ್ನಗಳಂ–ಯಜ್ಞಕ್ಕೆ ತೊಂದರೆ ಗಳನ್ನು, ಮಾಡೆ–ಮಾಡಲು, ನೀಡಿಲ್ಲದೆ–ದೀರ್ಘಕಾಲವಿಲ್ಲದೆ, ವಿಳಂಬವಿಲ್ಲದೆ, ಬೇಗನೆ, ಸಲೆ–ಚೆನ್ನಾಗಿ, ಚಲದೆ–ಹಠದಿಂದ, ಆಟಂದು–ಮೇಲೆ ಬಿದ್ದು, ಕೊಂದಿಕ್ಕದೆ–ಕೊಂದು ಹಾಕದೆ; ಒರ್ವಂ–ಒಬ್ಬನು, ಗುಣಮುಂಟು–ತನ್ನಲ್ಲಿ ಗುಣವಿದೆ; ಎಂದು, ಉಂಡು ಪಟ್ಟರ್ಪ ನನ್–ಉಂಡು ಮಲಗಿರುವವನನ್ನು, ಅಣಮೆ–ವಿಶೇವಾಗಿಯೆ, ನಿರುದ್ಯೋಗಿಯಂ– ಕಾರ್ಯವಿಲ್ಲದವನನ್ನು, ಉದ್ಯೋಗಹೀನನನ್ನು, ಭೂಪನೆಂಬರ್–ದೊರೆಯೆಂದು ಹೇಳುತ್ತಾರೊ?
ವಚನ : ವಿಜಿಗೀಷುವೃತ್ತೋದ್ಯುಕ್ತನಾಗಲ್–ಜಯಿಸಲು ಇಚಿ, ಸುವವನ ನಡೆವಳಿಕೆ ಯಲ್ಲಿ ತೊಡಗಿದವನಾಗಿ, ಎಂದರೆ ದಿಗ್ವಿಜಯವನ್ನು ಮಾಡಲು ಮನಸ್ಸುಳ್ಳವನಾಗಿ.
೧೨. ಅರ್ಜುನ ದ್ರೌಪದಿಯನ್ನು ಅವಳು ನಿದ್ರಿಸುತ್ತಿರುವಾಗ ಸದ್ದಿಲ್ಲದೆ ಬೀಳ್ಕೊಳ್ಳು ತ್ತಾನೆ ! ಎನ್ನಪೋಗಂ–ನಾನು ಹೋಗುವುದನ್ನು, ಇನಿಯಳ್ಗೆ–ಪ್ರಿಯಳಾದ ದ್ರೌಪದಿಗೆ, ಅಱಿಪಿದೊಡೆ–ತಿಳಿಸಿದರೆ, ಮನಂ–ಅವಳ ಮನಸ್ಸು, ಮಱುಕಕ್ಕೆ–ದುಃಖಕ್ಕೆ; ನೀಳ್ದಕಣ್– ನೀಳವಾದ ಕಣ್ಣುಗಳು, ಒಱೆದು–ಸ್ರವಿಸಿ, ಜಿನುಗಿ, ಉಗುವ–ಸುರಿಯುವ, ಅಶ್ರುವಾರಿಗೆ– ಕಣ್ಣೀರಿಗೆ; ತೊದಳ್ನುಡಿ–ತೊದಲ ಮಾತು, ಲಲ್ಲೆಗೆ–ಪ್ರೀತಿಯ ಮಾತಿಗೆ, ಪಕ್ಕುಗೊಟ್ಟು– ಪಕ್ಕಾಗಿ, ಗುರಿಯಾಗಿ, ಕಾಲ್ಗೆಱಗಿರೆ–ದ್ರೌಪದಿಯು ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಿರಲು, ಪೋಗು–ಪ್ರಯಾಣವು, ಕೆಟ್ಟಪುದು–ಕೆಟ್ಟು ಹೋಗುತ್ತದೆ. ಕಳತ್ರಂ–ಹೆಂಡತಿ, ಮೋಹಮ ಯಂ–ಮೋಹದಿಂದಾದ, ನಿಗಳಂ–ಸಂಕೋಲೆ, ಎಂದು, ಅಱಿಪದೆ–ಅವಳಿಗೆ ತಿಳಿಸದೆ, ನಟ್ಟಿರುಳ್–ನಡುರಾತ್ರಿ, ಮಱೆದು–ಮೈಮರೆತು ನಿದ್ರಿಸುತ್ತ, ಸಾರ್ಚಿದ–ಹತ್ತಿರವಿಟ್ಟ, ನಲ್ಲಳ ತಳ್ತ ತೋಳ್ಗಳಂ–ಪ್ರಿಯಳ ತಬ್ಬಿದ ತೋಳುಗಳನ್ನು
ವಚನ : ಪತ್ತುವಿಡಿಸಿ–ಕೂಡಿದ್ದನ್ನು ಬಿಡಿಸಿಕೊಂಡು, ಶರನಿಧಿಗಳಂ–ಬತ್ತಳಿಕೆಗಳನ್ನು; ಬಿಗಿದುಕೊಂಡು–ಬೆನ್ನಿಗೆ ಕಟ್ಟಿಕೊಂಡು; ಪ್ರಥಮ ಚಳಿತ ದಕ್ಷಿಣ ಚರಣನಾಗಿ–ಮೊದಲು ಇಟ್ಟ ಬಲಗಾಲಿನ ಹೆಜ್ಜೆಯುಳ್ಳವನಾಗಿ; ಒಳಗನೆ–ಒಳಗಡೆಯೇ.
೧೩. ಆ ಭಗೀರಥಂ–ಪ್ರಸಿದ್ಧನಾದ ಭಗೀರಥನು, ಸಗರರ ಮೇಲೆ–ದಗ್ಧರಾದ ಅರುವತ್ತು ಸಾವಿರ ಜನ ಸಗರಪುತ್ರರೂ ತನ್ನ ಅಜ್ಜರೂ ಆದವರ ಸದ್ಗತಿಗಾಗಿ ಅವರ ಮೇಲೆ, ಗಂಗೆಯಂ– ದೇವಗಂಗೆಯನ್ನು, ಅನಾಕುಳದಿಂ–ಕಷ್ಟವಿಲ್ಲದೆ, ತರಲ್–ತರಲು, ತಪೋನಿಯೋಗ ದೊಳ್–ತಪಸ್ಸಿನ ಕಾರ್ಯದಲ್ಲಿ, ನೆಗೞೆ–ತೊಡಗಿ ಮಾಡಲು, ಅವಂಗೆ–ಅವನಿಗೆ, ಅಮರಾ ಪಗೆ–ಅಮರನದಿ ಗಂಗೆ, ಮೆಚ್ಚಿ, ಗಗನದಿಂ–ಆಕಾಶದಿಂದ, ಪಾಯ್ವುದುಂ–ಹರಿದು ಬರುತ್ತಲು, ಅಂಧಕದ್ವಿಷ ಜಟಾಟವಿಯೊಳ್–ಅಂಧಕಾಸುರನ ವೈರಿಯಾದ ಶಿವನ ಜಟೆಯೆಂಬ ಅರಣ್ಯದಲ್ಲಿ, ಬೞಿಕ–ಅನಂತರ, ಆದ ಶೈಲದೊಳ್–ಎದುರಾದ ಬೆಟ್ಟದಲ್ಲಿ, ಸೊಗಯಿಸೆ– ಸೊಗಸಾಗಲು, ಪಾಯ್ದುದು–ಹರಿಯಿತು; ಇದುವೆ–ಈ ಬೆಟ್ಟವೆ, ಬಂಧುರ ಕೂಟಕುಳಂ– ಸುಂದರವಾದ ಶಿಖರಗಳ ಸಮೂಹವನ್ನುಳ್ಳ, ಹಿಮಾಚಲ–ಹಿಮವತ್ಪರ್ವತವು.
ಈ ಒಂದು ಪದ್ಯದಲ್ಲಿ ಸಗರ ಚಕ್ರವರ್ತಿಯ ಪುತ್ರರಾದ ಅರವತ್ತು ಸಾವಿರ ಜನರ ಕಥೆಯನ್ನೂ, ಶಿವ ಗಂಗಾಧರನಾದ ಕಥೆಯನ್ನೂ, ಹಿಮಾಚಲ ಗಂಗಾಲಂಕೃತವಾದುದನ್ನೂ ಪಂಪ ಧ್ವನಿಮಯ ಸಂಕ್ಷಿಪ್ತತೆಯಿಂದ ನಿರೂಪಿಸಿದ್ದಾನೆ; ಕಥೆ ತಿಳಿದವರಿಗೆ ಈ ಪದ್ಯವನ್ನು ಓದುವಾಗ ಅದರ ವಿವರಗಳೆಲ್ಲ ನೆನಪಿಗೆ ಬಂದು ಹರ್ಷಾನುಭವವಾಗುತ್ತದೆ.
೧೪. ಹಿಮಾಚಲದ ವರ್ಣನೆ : ವಿಲಸತ್ ಕಲ್ಲೋಲನಾದಂ–ಪ್ರಕಾಶಮಾನವಾದ ಅಲೆಗಳ ಧ್ವನಿ, ನೆಗೞ್ದಿರೆ–ಉಂಟಾಗಿರಲು, ನಿಜಕೂಟಾಗ್ರದೊಳ್–ತನ್ನ ಶಿಖರಗಳ ತುದಿಯಲ್ಲಿ, ಪಾಯ್ವ–ಹರಿಯುವ, ಗಂಗಾಜಲದಿಂ–ಗಂಗೆಯ ನೀರಿನಿಂದ, ಮೂರ್ಧಾಭಿ ಷೇಕ್ನೊನ್ನತಿ–ತಲೆಯ ಮೇಲೆ ಆಗುವ ಅಭಿಷೇಕದ ಅತಿಶಯ, ನಿಲೆ–ನೆಲೆಯಾಗಲು; ಚಮರೀ….ಗಳಿಂ : ಚಮರೀ–ಚಮರೀ ಮೃಗಗಳ, ಲೋಲ–ಚಲಿಸುತ್ತಿರುವ, ಲಾಂಗೂಲ– ಬಾಲಗಳ, ಮಾಲಾವಳಿ–ಸಾಲುಗಳ, ವಿಕ್ಷೇಪಂಗಳಿಂ–ಬೀಸುವಿಕೆಗಳಿಂದ, ತಚ್ಚಮರರುಹ– ಆ ಚಾಮರದಿಂದ ಆದ, ಮಹಾಶೋಭೆ–ಮಹಾಸೌಂದರ್ಯವು, ಕೈಗಣ್ಮೆ–ಅಧಿಕವಾಗು ತ್ತಿರಲು, ಅಖಿಳಧರಾರಮ್ಯ–ಸಮಸ್ತ ಭೂಮಿಗೂ ರಮಣೀಯವಾದ, ಹೈಮಾಚಳೇಂದ್ರಂ– ಹಿಮಾಚಲವೆಂಬ ಪರ್ವತವು, ವಿಶ್ವಾಚಲ ಚಕ್ರೇಶತ್ವಮಂ–ಸಮಸ್ತ ಪರ್ವತಗಳಿಗೆ ಚಕ್ರವರ್ತಿಯಾಗಿರುವ ಪದವಿಯನ್ನು, ತಾಳ್ದಿದುದು–ಧರಿಸಿತು.
೧೫. ಗಂಗಾದ್ವಾರದ ವರ್ಣನೆ : ಚಾರು….ಘೋಷದಿಂ: ಚಾರು–ಮನೋಹರವಾದ, ವಿವಿಧ–ಬಗೆಬಗೆಯಾದ, ಅಗ್ನಿಕಾರ್ಯಪ್ರಾರಂಭ–ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದೇ ಮುಂತಾದ ಕೆಲಸಗಳ ಆರಂಭದಲ್ಲಿ ಆದ; ಮಹಾದ್ವಿಜನ್ಮ–ಮಹಾಬ್ರಾಹ್ಮಣರ, ಘೋಷ ದಿಂ–ವೇದಘೋಷಗಳಿಂದ, ಅಂಹೋದೂರಮುಂ–ಪಾಪದಿಂದ ದೂರವಾದದ್ದೂ, ಅವನಿತಳಾಲಂಕಾರಂ–ಭೂಮಿಗೆ ಅಲಂಕಾರವಾದದ್ದೂ, ಸಂಸಾರಸಾರ ಗಂಗಾದ್ವಾರಂ– ಸಂಸಾರದ ಸಾರವಾದ ಗಂಗಾದ್ವಾರವೆಂಬ ಪುಣ್ಯಸ್ಥಲ.
ವಚನ : ಬೇಳ್ವೆಗಳ್ಗೆ–ಯಜ್ಞಗಳಿಗೆ; ಉಪದ್ರವಂಗೆಯ್ದ–ತೊಂದರೆಯನ್ನು ಮಾಡಿದ, ನಿಶಾಟಕೋಟಿಯಂ–ಕೋಟ್ಯಂತರ ರಾಕ್ಷಸರನ್ನು; ಉಚ್ಚಾಟಿಸಿ–ಓಡಿಸಿ; ಪಡೆಮೆಚ್ಚೆಗಂಡನ– ಅರ್ಜುನನ; ಗಂಡಗಾಡಿಯಿಂ–ವೀರಸೌಂದರ್ಯವನ್ನು; ಕಣ್ಬೇಟಂಗೊಂಡು–ನೋಡಿದ ಕೂಡಲೇ ಪ್ರೀತಿವಶಳಾಗಿ, ಚಕ್ಷುಃಪ್ರೀತಿಯುಂಟಾಗಿ.
೧೬. ಇಂದುಸೂರ್ಯರಣಮಿಲ್ಲದೆ–ಚಂದ್ರಸೂರ್ಯರು ಸ್ವಲ್ಪವೂ ಇಲ್ಲದೆ, ಆಗಳುಂ– ಯಾವಾಗಲೂ, ಕೞ್ತಲೆಯೆಂಬುದು–ಕತ್ತಲೆಯೆನ್ನುವುದು ಇಲ್ಲ, ತದ್ಭೋಗಿ ಪ್ರಣಾಮಣಿ ದ್ಯುತಿಯೆ–ಆ ಹಾವುಗಳ ಹೆಡೆಯಲ್ಲಿರುವ ರತ್ನಗಳ ಕಾಂತಿಯೇ, ಕೞ್ತಲೆಯಂ–ಕತ್ತಲೆ ಯನ್ನು, ತಲೆದೋಱಲೀಯದು–ತಲೆತೋರಿಸುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ; ಆ ನಾಗರ–ಆ ಸರ್ಪಗಳ, ನಾಗಕನ್ಯೆಯರ–ನಾಗಸ್ತ್ರೀಯರ, ರೂಪುಗಳ್–ಆಕಾರಗಳು, ಇಟ್ಟಳ ಮಾಗೆ–ಮನೋಹರವಾಗಲು, ಭೋಗಿಗಳ್–ನಾಗರುಗಳು, ಸರ್ಪಗಳು, ಭೋಗಿಗಳ್– ಸುಖಪಡುವವರು, ಎಂಬ–ಎನ್ನುವ, ಅಲ್ಲಿಯ–ಆ ಸರ್ಪಲೋಕದ, ಭೋಗನಾಯಕರ್– ಪ್ರದೇಶಪಾಲಕರು, ಮಂಡಲಪಾಲಕರು, ಭೋಗಿಗಳ್–ಸರ್ಪಗಳು ಅಥವಾ ಸುಖಪಡು ವವರು ಆಗಿದ್ದಾರೆ.
ಇಲ್ಲಿ ಭೋಗ–ಸುಖ, ಐಶ್ವರ್ಯ, ಆಧಿಪತ್ಯ, ಹಾವಿನ ಹೆಡೆ ಎಂಬ ಶಬ್ದದ ಮೇಲೂ, ಭೋಗಿ–ಸುಖಿ, ಸರ್ಪ ಎಂಬ ಶಬ್ದದ ಮೇಲೂ ಪಂಪನು ಆಟವಾಡಿದ್ದಾನೆ; ಸೇನಭೋಗ ಎಂಬಲ್ಲಿನ ಭೋಗ ಪ್ರದೇಶ, ಸ್ಥಳ; ಅದರ ಮೇಲಿನ ಅಧಿಕಾರ, ಎಂಬರ್ಥದಲ್ಲಿರುವುದನ್ನು ಗಮನಿಸಬಹುದು.
ವಚನ : ವಿಳಾಸಗಳಂ–ಸೊಗಸುಗಳನ್ನು; ನಾಗವಿಮಾನಕ್ಕೆ–ಅಂತಃಪುರ ಸ್ತ್ರೀಯರಿರುವ ಉಪ್ಪರಿಗೆಗೆ; ಮನಂಬುಗಿಸುವಂತೆ–ಮನಸ್ಸಿನಲ್ಲಿ ಹೊಗಿಸಿಕೊಳ್ಳುವ ಹಾಗೆ; ಮಜ್ಜ ನಂಬುಗಿಸಿ–ಸ್ನಾನವನ್ನು ಮಾಡಿಸಿ; ರಸರಸಾಯನಂಗಳಂ–ರುಚಿಯುಕ್ತವಾದ ರಸಾಯನಗಳನ್ನು; ಊಡುವಂತೆ–ತಿನ್ನಿಸುವ ಹಾಗೆ;
೧೭. ನಾಗಕನ್ಯೆ ಅರ್ಜುನನನ್ನು ಮೋಹಿಸಿದ್ದು: ನಾಗವಿಭೂಷಣ ಪ್ರತತಿ–ನಾಗರು ಧರಿಸುವ ಆಭರಣಗಳ ಸಮೂಹ, ನಾಗರಖಂಡಂ–ನಾಗರ ಖಂಡವೆಂಬ ಪ್ರದೇಶ, ಅಪೂರ್ವಮಪ್ಪ–ಅಪರೂಪವಾದ, ಪುನ್ನಾಗದ–ಪುನ್ನಾಗವೆಂಬ ಪುಷ್ಪಗಳ, ಬಾಸಿಗಂ– ಹಾರಗಳು; ಬಗೆದ–ಬಯಸಿದ, ಬಣ್ಣದ, ಪುಟ್ಟಿಗೆ–ವಸ್ತ್ರಗಳು, ನಾಗಜಾಲಂ–ನಾಗವಲ್ಲಿ ಎಂದರೆ ವೀಳ್ಯದೆಲೆಯ ಸಮೂಹ, ಎಂದು–ಎಂಬುದಾಗಿ, ಆಗಡೆ–ಆಗಲೇ (ತೋರಿಸುತ್ತ), ನಾಗಲೋಕ ವಿಭವಂಗಳೊಳ್ ಆೞಿಸಿ–ನಾಗಲೋಕದ ವೈಭವಗಳಲ್ಲಿ, ಭೋಗಗಳಲ್ಲಿ ಮುಳುಗಿಸಿ, ನಾಗಶಯ್ಯೆಯೊಳ್–ನಾಗರ ಹಾಸಿಗೆಯಲ್ಲಿ, ನಾಗಿಣಿ–ನಾಗಸ್ತ್ರೀ, ನಾಗಬಂಧ ದೊಳೆ–ನಾಗಬಂಧವೆಂಬ ಒಂದು ಪಟ್ಟಿನಲ್ಲಿ, ತಳ್ತು–ಸೇರಿ, ಗುಣಾರ್ಣವನಂ–ಅರ್ಜುನನನ್ನು, ಮರುಳ್ಚಿದಳ್–ಮರುಳು ಮಾಡಿದಳು. ಇಲ್ಲಿ ಹಲವು ಎಡೆ ಬರುವ ನಾಗಶಬ್ದಕ್ಕೆ ಹಲವು ಅರ್ಥಗಳಿವೆ; ನಾಗ ಎಂದರೆ ಸೀಸ ಅಥವಾ ತವರ ಎಂಬರ್ಥವಿದೆ; ನಾಗವಿಭೂಷಣ ಎಂದರೆ ಸೀಸದ ಅಥವಾ ತವರದ ಒಡವೆ ಎಂದಾಗುತ್ತದೆ; ಆದರೆ ಅದರ ಔಚಿತ್ಯವೇನು ಇಲ್ಲಿ? ನಾಗ–ಹಸಿಶುಂಠಿ; ನಾಗರಖಂಡ ಎಂದರೆ ಹಸಿಯದಾದ ಶುಂಠಿಯ ಚೂರು ಎಂದು ಹೇಳೋಣವೆಂದರೆ ಅದರ ಔಚಿತ್ಯ ಇಲ್ಲಿ ಏನು? ಮತ್ತು ನಾಗರ ಎಂಬಲ್ಲಿನ ಅರ್ ಪ್ರತ್ಯಯ, ಅ ಎಂಬ ಷಷ್ಠೀ ಪ್ರತ್ಯಯ–ಇವು ಏಕೆ? ನಾಗಖಂಡ ಎಂದೇ ಸಾಕಲ್ಲವೆ? ಬಾಸಿಗ=(ತ) ವಾಶಿಕೈ, ಹಾರ; ನಾಗಜಾಲಂ–ನಾಗಗಳ ಬಲೆ ಅಥವಾ ಸಮೂಹ ಎಂದರೆ ಏನರ್ಥ? ನಾಗಬಂಧ– ಹಾವುಗಳು ಹೆಣೆದುಕೊಂಡಿರುವ ಒಂದು ಶಿಲ್ಪರಚನೆಯನ್ನು ಕೆಲವು ದೇವಾಲಯಗಳಲ್ಲಿ ನೋಡಬಹುದು, ಇದು ನಾಗಬಂಧ.
ವಚನ : ಮುದ್ದುವೆರಸಿದ–ಮುದ್ದಿನಿಂದ ಕೂಡಿದ; ಬೞಲ್ಮುಡಿಗಂ–ನೇಲುತ್ತಿರುವ ತುರುಬಿಗೂ; ಇಂಬುವೆರಸಿದ–ರುಚಿಯಿಂದ ಕೂಡಿದ, ಮಧುರವಾದ, ಪುರುಡುವೆರಸಿದ– ಸ್ಪರ್ಧೆಯಿಂದ ಕೂಡಿದ; ಕದ್ದವಣಿ (?) ವೆರಸಿದ–ಕದ್ದವಣಿಯಿಂದ ಕೂಡಿದ, ಸೋಂಕಿಂಗಂ– ಸ್ಪರ್ಶಕ್ಕೂ; ಗಾಡಿವೆರಸಿದ–ಸೌಂದರ್ಯದಿಂದ ಕೂಡಿದ; ಹಾವಕ್ಕಂ–ಶೃಂಗಾರ ಚೇಷ್ಟೆ ಗಳಿಗೂ; ನಾಣ್ವೆರಸಿದ–ಲಜ್ಜೆಯಿಂದ ಕೂಡಿದ; ಒಱಲ್ದುಂ–ಪ್ರೀತಿಸಿಯೂ; ಇಂದ್ರಾಣಿಗಂ– ಶಚೀದೇವಿಗೂ. ಇಲ್ಲಿ ಬರುವ ಕದ್ದವಣಿ ಎಂಬ ಶಬ್ದದ ಪಾಠ ಚಿಂತನೀಯ; “ಎಮೆಯಿಕ್ಕಲ್ ಮಱೆಯಿಸುವಂತೋರೊರ್ವರನೊಡಲೊಳಡಸಿಕೊಳಲ್ ಕಡಂಗಿಸುವ ಕಡ್ಡವಣೆಯುಂ” ಎಂದು ‘ಲೀಲಾವತಿ’ ಯಲ್ಲಿ ಪ್ರಯೋಗವಿದೆ (೧೦–೪೪ಗ); ಇನ್ನೊಂದು ಓಲೆಯ ಪ್ರತಿ ಯಲ್ಲೂ ಇದೇ ಪಾಠವಿದೆ. ಆದ್ದರಿಂದ ‘ಕಡ್ಡವಣೆ’ ಎಂಬ ಪಾಠವನ್ನು ಗ್ರಹಿಸಬಹುದು. ಇದರ ಅರ್ಥವೇನು? (ಪಂ.ಭಾ.) ಕೋಶಕಾರರು ಇದಕ್ಕೆ ‘ರೋಮಾಂಚ’ ಎಂದು ಅರ್ಥ ಹೇಳಿ ಪ್ರಶ್ನೆ ಚಿಹ್ನೆಯನ್ನು ಹಾಕಿದ್ದಾರೆ. (ಸಂ) ಕರ್ಷ (ಪ್ರಾ) ಕಡ್ಡಣ=ಎಳೆತ, ಸೆಳೆತ. ಪ್ರಕೃತ ‘ಕಡ್ಡವಣೆ’ ಈ ಶಬ್ದಕ್ಕೆ ಸಂಬಂಧಿಸಿರಬಹುದು. ಕಡ್ಡವಣೆವೆರಸಿದ ಎಂದರೆ ಹತ್ತಿರಕ್ಕೆ ಎಳೆದುಕೊಳ್ಳುವುದ ರಿಂದ ಕೂಡಿದ ಎಂದಾಗಬಹುದು; “ಬರಸೆಳೆದು ಬಿಗಿಯಪ್ಪಿ” ಎಂಬುದನ್ನು ಹೋಲಿಸಿ ನೋಡಿ.
೧೮. ನಾಗಕನ್ಯೆಗೆ ಮಗ ಹುಟ್ಟಿದ್ದು: ಅಂತಾಫಣಿಕಾಂತೆಗಂ–ಹಾಗೆ ಆ ನಾಗಸ್ತ್ರೀಗೂ, ಅರಿಕಾಂತಾಳಿಕ ಫಳಕ ತಿಳಕಹರಂ–ಶತ್ರುಕಾಂತೆಯರ ಹಣೆಯೆಂಬ ಹಲಗೆಯ ಮೇಲಿರುವ ತಿಲಕವನ್ನು ಹೋಗಲಾಡಿಸುವವನಾದ, ಹರಿಗಂಗಂ–ಅರಿಕೇಸರಿಗೂ, ಅಧಿಕತೇಜೋವಂತಂ–ಅತಿಶಯ ತೇಜಸ್ಸಿನಿಂದ ಕೂಡಿದ, ಇಂದುಮಂಡಳಕಾಂತಂ.ಚಂದ್ರಮಂಡಲದಂತೆ ಸುಂದರನಾಗಿರುವ, ಇಳಾವಂತಂ.ಇಳಾವಂತನೆಂಬ, ತನಯಂ.ಮಗನು
ವಚನ : ಪುಟ್ಟುವುದುಂ–ಹುಟ್ಟುತ್ತಲು; ನಿಕಟವರ್ತಿಗಳಪ್ಪ–ಸಮೀಪದಲ್ಲಿರುವ; ಆತ್ಮೀಯಶಾಸನಾಯತ್ತಂ ಮಾಡುತ್ತಂ–ತನ್ನ ಆಜ್ಞೆಗೆ ಅಧೀನವಾಗಿಸುತ್ತ; ಇಂದು….ನ್ವಿತ ಮುಂ : ಇಂದುಬಿಂಬ–ಚಂದ್ರಬಿಂಬದಿಂದ, ವಿಗಳತ್–ಸುರಿಯುತ್ತಿರುವ, ಅಮೃತಬಿಂದು– ಅಮೃತದ ಹನಿಗಳಿಂದ ಆದ, ದುರ್ದಿನ–ದುರ್ದಿನದಿಂದ, ಆರ್ದ್ರ–ಒದ್ದೆಯಾದ, ಚಂದನ– ಶ್ರೀಗಂಧದಿಂದ, ಅನ್ವಿತಮುಂ–ಕೂಡಿರುವುದೂ; ಅಶಿಶಿರ….ಪಲ್ಲವಮುಂ : ಅಶಿಶಿರಕರ– ಸೂರ್ಯನ, ತುರಗ–ಕುದುರೆಗಳ, ಖುರಶಿಖರ–ಗೊರಸಿನ ತುದಿಯಿಂದ, ನಿಖಂಡಿತ–ಕತ್ತರಿ ಸಲ್ಪಟ್ಟ, ಲವಂಗ ಪಲ್ಲವಮುಂ–ಲವಂಗದ ಬಳ್ಳಿಯ ಚಿಗುರನ್ನುಳ್ಳ; ಐರಾವತ ಕರಲೂನ– ಐರಾವತದ ಸೊಂಡಲಿನಿಂದ ಕತ್ತರಿಸಲ್ಪಟ್ಟ, ಸಲ್ಲಕೀಶಬಳಮುಂ–ಆನೆ ಬೇಲದಿಂದ ವಿವಿಧ ವರ್ಣಗಳುಳ್ಳದ್ದೂ ಆಗಿರುವ; ಉದಯಗಿರಿಯಿಂ–ಉದಯ ಪರ್ವತದಿಂದ; ಏಸಾಡುತ್ತಂ– ಬಾಣಪ್ರಯೋಗ ಮಾಡುತ್ತ; ಚಪಳ….ಭವನಮುಂ: ಚಪಳ–ಚಪಲತೆಯಿಂದ ಕೂಡಿದ, ಕಪಿ ಬಳ–ಕಪಿಗಳ ಸಮೂಹದಿಂದ, ವಿಲುಪ್ತ–ಹಾಳುಮಾಡಲ್ಪಟ್ಟ, ವಿಗಳಿತ–ಶಿಥಿಲವಾಗಿ ರುವ, ಲತಾಭವನಮುಂ–ಬಳ್ಳಿಯ ಮನೆಗಳೂ, ಅಧಿಕ….ಬಂಧುರ; ಅಧಿಕಬಳ–ಅಧಿಕ ಬಲಶಾಲಿಯಾದ, ನಳ–ನಳನ, ಕರತಳಗಳಿತ–ಅಂಗೈಯಿಂದ ಜಾರಿದ, ಕುಳಶೈಳ ಸಹಸ್ರ ಸಂತಾನ–ಸಾವಿರಾರು ಕುಲಪರ್ವತಗಳ ಸಮೂಹದಿಂದ, ಕಳಿತ–ಸೇರಿದ, ಸೇತು–ಸೇತುವೆ ಯಿಂದ, ಬಂಧುರಮುಮಪ್ಪ–ರಮಣೀಯವಾಗಿರುವ; ತಡಿವಿಡಿದು–ದಡವನ್ನು ಅನುಸರಿಸಿ;
೧೯. ರಾಮಸೇತುವನ್ನು ನೋಡಿ ರಾಮಾಯಣದ ಕಥೆಯ ನೆನಪು: ಅಂದು–ಆ ಕಾಲದಲ್ಲಿ, ಇದು–ಈ ಸ್ಥಳ, ಸೀತೆಯೊಳ್ ನೆರೆದು ನಿಂದೆಡೆ–ಸೀತೆಯೊಡನೆ ಜೊತೆಯಾಗಿ ನಿಂತ ಸ್ಥಳ; ತತ್ಖರದೂಷಣರ್ಕಳಂ–ಆ ಖರದೂಷಣರನ್ನು, ಕೊಂದ, ಎಡೆ–ಸ್ಥಳವಿದು; ಪೋಗಿ–ಬೆನ್ನಟ್ಟಿಹೋಗಿ, ಪೊಮ್ಮರೆಯಂ–ಚಿನ್ನದ ಜಿಂಕೆಯನ್ನು, ಎಚ್ಚ–ಎಡೆ ತಪ್ಪದೆ; ಇದು ಅಪ್ಪುದು–ಹೊಡೆದ ಜಾಗ ತಪ್ಪದೆ ಇದು ಆಗಿದೆ; ಎಂದು, ಕಾಯ್ಪಿಂ–ಕೋಪದಿಂದ, ತ್ರಿದಶ ಕಂಟಕನಂ–ದೇವತೆಗಳಿಗೆ ಕಂಟಕನಾಗಿರುವ, ದಶಕಂಠನಂ–ರಾವಣನನ್ನು, ಕೊಲಲೆಂದು– ಕೊಲ್ಲುವುದಕ್ಕಾಗಿ ಎಂದು, ರಾಮನಾದ–ಶ್ರೀರಾಮನಾಗಿ ಅವತಾರ ಮಾಡಿದ, ಅಂದಿನ ಸಾಹಸಂ–ಆ ಕಾಲದ ಪರಾಕ್ರಮ, ಅಕಳಂಕರಾಮನಾ–ಅಕಳಂಕ ರಾಮನೆಂಬ ಬಿರುದುಳ್ಳ ಅರಿಕೇಸರಿಯ (ಅರ್ಜುನ), ಮನದೊಳ್–ಮನಸ್ಸಿನಲ್ಲಿ, ಆವರಿಸಿತ್ತು–ವ್ಯಾಪಿಸಿತು, ತುಂಬಿ ಕೊಂಡಿತು.
ವಚನ : ಶ್ರೀರಾಮನೇ, ಅರಿಕೇಸರಿಯಾಗಿ ಹುಟ್ಟಿರುವನೆಂದು ಕವಿಯ ಭಾವನೆ. ರಾಮಜನ್ಮೋತ್ಪತ್ತಿಯೊಳಾದ–ರಾಮನ ಜನ್ಮದಲ್ಲಿ ಆದ;
೨೦. ಅಗಸ್ತ್ಯ ಋಷಿಯ ಪ್ರಭಾವವರ್ಣನೆ: ತನ್ನಾಜ್ಞೆಯಿಂದೆ–ತನ್ನ ಅಪ್ಪಣೆಯಿಂದ, ವಿಂಧ್ಯಗಿರಿಯುಂ–ವಿಂಧ್ಯಪರ್ವತವೂ, ಬಳೆಯಲ್ಕೆ–ಬೆಳೆಯುವುದಕ್ಕೆ, ಅಣ್ಮಿದುದಿಲ್ಲ– ಪ್ರಯತ್ನಿಸಲಿಲ್ಲ; ಅಂಬುಧಿ–ಸಮುದ್ರ, ಒರ್ಮೆ–ಒಂದು ಸಲ, ಮುಕ್ಕುಳಿಸಲ್ಕೆ–ಬಾಯಿ ಮುಕ್ಕುಳಿಸುವುದಕ್ಕೆ, ಸಾಲ್ದುದಿಲ್ಲ–ಸಾಕಾಗಲಿಲ್ಲ; ಜಗಮಂ–ಲೋಕವನ್ನು, ತಿಂದಿರ್ದ– ನುಂಗಿದ್ದ, ವಾತಾಪಿ–ವಾತಾಪಿ ಎಂಬ ರಾಕ್ಷಸ, ಪೊಕ್ಕು–ಹೊಟ್ಟೆಯೊಳಗೆ ಹೊಕ್ಕು, ಅಳುರ್ವ–ಹರಡುವ, ಆತ್ಮೋದರ ವಹ್ನಿಯಿಂ–ತನ್ನ ಜಠರಾಗ್ನಿಯಿಂದ, ಪೊಱಮಡಲ್–ಹೊರಕ್ಕೆ ಬರಲು, ತಾಂ–ತಾನು, ಆರ್ತನಿಲ್ಲ–ಸಮರ್ಥನಾಗಲಿಲ್ಲ; ಭಾರದಿಂ–ತನ್ನ ಭಾರದಿಂದ, ಎಳೆ– ಭೂಮಿ, ಅೞ್ದುದಿಲ್ಲ–ಮುಳುಗಲಿಲ್ಲ, ಬಡಗು–ಉತ್ತರಕ್ಕೆ, ತೇಂಕಿರ್ದುದು–ತೇಲಿಕೊಂಡು ಹೋಯಿತು, ಎನಲ್–ಎಂದು ಹೇಳಲು, ಅಗಸ್ತ್ಯಂಬರಂ–ಅಗಸ್ತ್ಯನವರೆಗೂ ಬರುವ, ಪೆಂಪು–ಮಹಿಮೆ, ಆರ್ಗೆ–ಯಾರಿಗೆ? ಯಾರಿಗೂ ಇಲ್ಲ.
ವಚನ : ಉಗ್ರಗ್ರಾಹ–ಸ್ವರೂಪದೊಳಿರ್ದ–ಭಯಂಕರವಾದ ಮೊಸಳೆಯ ಆಕಾರ ದಲ್ಲಿದ್ದ; ಅಚ್ಚರಸೆಯರಂ–ಅಪ್ಸರ ಸ್ತ್ರೀಯರನ್ನು; ವಿಶಾಪೆಯರ್ ಮಾಡಿ–ಶಾಪಮುಕ್ತರನ್ನಾಗಿ ಮಾಡಿ.
೨೧. ಮಲಯಪರ್ವತದ ವರ್ಣನೆ: ಇದು, ಮಲಯಾಚಲಂ–ಮಲಯ ಪರ್ವತ! ಮಳಯಜಂ–ಮಲಯಪರ್ವತದಲ್ಲಿ ಹುಟ್ಟಿದ್ದು, ಮಳಯಾನಿಳಂ–ಮಲಯ ಮಾರುತ, ಎಂದು, ಸಿರಿಕಂಡಮುಂ–ಶ್ರೀಗಂಧವೂ, ಪದೆದು–ನಲಿದು, ತೀಡುವ–ಬೀಸುವ, ಗಾಳಿ ಯುಂ–ಗಾಳಿಯೂ, ಪೆಂಪುವೆತ್ತುದು–ಹಿರಿಮೆಯನ್ನು ಪಡೆದುವು; ಪೊಸಸುಗ್ಗಿ–ಹೊಸದಾದ ಸುಗ್ಗಿ, ವಸಂತ, ಇಲ್ಲಿ ಪುಟ್ಟಿ–ಇಲ್ಲಿ ಹುಟ್ಟಿ, ಪೋಗದು–ಎಲ್ಲಿಯೂ ಹೋಗುವುದಿಲ್ಲ! ಇಲ್ಲಿಯ ಕೋಗಿಲೆ–ಇಲ್ಲಿನ ಕೋಗಿಲೆಗಳು, ಮೂಗುವಡದು–ಮೂಕತೆಯನ್ನು ಪಡೆಯುವು ದಿಲ್ಲ, ಎಂದರೆ ಸದಾ ಕೂಗುತ್ತಿರುತ್ತವೆ! ಬಂದ ಮಾವು ಬೀಯದು–ಫಲ ಬಿಟ್ಟ ಮಾವು ಮುಗಿದು ಹೋಗದು! ಇಲ್ಲಿಯ ನಂದನಂಗಳೊಳ್–ಇಲ್ಲಿಯ ನಂದನ ವನಗಳಲ್ಲಿ, ಎಲ್ಲಿ ಯುಂ–ಎಲ್ಲೆಲ್ಲೂ, ಕುಸುಮಾಸ್ತ್ರನ–ಮನ್ಮಥನ, ಆಜ್ಞೆ–ಅಪ್ಪಣೆ, ತವದು–ನಷ್ಟವಾಗದು!
೨೨. ಇದಱ–ಈ ಪರ್ವತದ, ಅಭ್ರಂಕಷಕೂಟ ಕೋಟಿಗಳೊಳ್–ಆಕಾಶವನ್ನು ಮುಟ್ಟುವ ಅನೇಕ ಶಿಖರಗಳಲ್ಲಿ, ಇರ್ದ–ಇದ್ದ, ಅಂಭೋಜ ಷಂಡಂಗಳಂ–ತಾವರೆಗಳ ಸಮೂಹಗಳನ್ನು, ಉಷ್ನಾಂಶುವಿನ–ಸೂರ್ಯನ, ಊರ್ಧ್ವಗಾಂಶುನಿವಹಂ–ಮೇಲಕ್ಕೆ ಹೋಗುವ ಕಿರಣಗಳ ಸಮೂಹ, ಪುದಿದು–ವ್ಯಾಪಿಸಿ, ಮೆಯ್ಯಿಟ್ಟು–ಮೈಯನ್ನು ಇಟ್ಟು, ತಂಗಿ; ಅಲರ್ಚ್ಚುತ್ತುಂ–ಅರಳಿಸುತ್ತ, ಇರ್ಪುದು–ಇದೆ; ಮಾದ್ಯದ್ಗ….ದದಿಂ : ಮಾದ್ಯತ್–ಮದಿ ಸಿದ, ಗಜ–ಆನೆಗಳ, ಗಂಡ–ಗಂಡಸ್ಥಲವೆಂಬ, ಭಿತ್ತಿ–ಗೋಡೆಯ, ಕಷಣ–ಉಜ್ಜುವಿಕೆ ಯಿಂದಾದ, ಪ್ರೋದ್ಭೇದದಿಂ–ಮುರಿತಗಳಿಂದ, ಚಂದನರಸಂ–ಶ್ರೀಗಂಧದ ಮರದ ರಸವು, ಸಾರ್ದುಬಂದು–ಸಮೀಪಿಸಿ, ಇದಿರೊಳ್–ಎದುರುಗಡೆಯಲ್ಲಿ, ಕೆಂಬೊನ್ನಟಂಕಂಗಳೊಳ್– ಕೆಂಪು ಚಿನ್ನವನ್ನುಳ್ಳ, ಲೋಹವನ್ನುಳ್ಳ, ತಪ್ಪಲಿನ ಇಳಿಜಾರು ಪ್ರದೇಶಗಳಲ್ಲಿ, ಇಲ್ಲಿ, ಕೂಡು ವುದು–ಸಂಗಮವಾಗುತ್ತದೆ.
೨೩. ಏಳಾಲತಾಳೀ ಸ್ಥಗಿತಂಗಳ್–ಏಲಕ್ಕಿ ಬಳ್ಳಿಗಳ ಸಮೂಹದಿಂದ ತೆತ್ತಿಸಿದ, ನೆಗೞ್ದ– ಪ್ರಸಿದ್ಧವಾದ, ಈ ಕರ್ಪೂರ ಕಾಳಾಗರು ಮಲಯ ಮಹೀಜಂಗಳ್–ಈ ಕರ್ಪೂರ ಕರಿ ಅಗಿಲು ಗಂಧದ ಮರಗಳು, ಕಣ್ಗೆ ವಂದಿರ್ದುವಂ–ಕಣ್ಣಿಗೆ ಸೊಗಸಾಗಿರುವವನ್ನು, ಇವನೆ ವಲಂ–ಇವನ್ನೇ ಅಲ್ಲವೆ, ಅಂಗಜಂ–ಮನ್ಮಥನು, ಕೊಂಬುಗೊಂಡು–ಸಂಕೇತ ಸ್ಥಾನವನ್ನಾಗಿ ಮಾಡಿಕೊಂಡು, ಮೆಲ್ಲಗೆ–ಮೃದುವಾಗಿ, ಪಾರ್ದು–ನೋಡಿ, ಆರ್ದು–ಗರ್ಜಿಸಿ, ಆಗಳುಂ– ಯಾವಾಗಲೂ, ಕಿನ್ನರ ಯುವತಿ ಮೃಗೀವ್ರಾತಮಂ–ಕಿನ್ನರ ಸ್ತ್ರೀಯರೆಂಬ ಹೆಣ್ಣು ಜಿಂಕೆಗಳ ಸಮೂಹವನ್ನು, ತನ್ನ, ನಲ್ಲಂಬುಗಳಿಂದೆಚ್ಚೆಚ್ಚು–ಒಳ್ಳೆಯ ಬಾಣಗಳಿಂದ ಹೊಡೆದು ಹೊಡೆಗು, ಮೆಚ್ಚಂ.ಅವರ ಇಷ್ಟಾರ್ಥವನ್ನು, ಸಲಿಸುವಂ.ಸಲ್ಲಿಸುತ್ತಾನೆದ್ ಇಂತು.ಹೀಗೆ, ಅದಱಿಂ.ಆ ಕಾರಣದಿಂದ, ಈ ನಗೇಂದ್ರಂ.ಈ ಪರ್ವತರಾಜ, ರಮ್ಯಂ.ರಮಣೀಯ ವಾದದ್ದು.
೨೪. ಸಮದ್ರದರ್ಶನ: ಇದಿರೊಳ್–ಎದುರಿನಲ್ಲಿ, ನಿಂದೊಡೆ–ನಿಂತುಕೊಂಡರೆ, ವಜ್ರಿ– ಇಂದ್ರನು, ಸೈರಿಸಂ–ಸಹಿಸನು, ನೀಂ–ನೀನು, ಇರಲ್ವೇಡ–ಇರಬೇಡ, ಎಮ್ಮೊಳ್–ನಮ್ಮಲ್ಲಿ, ಒಳ್ವೊಕ್ಕು–ಒಳಗೆ ಹೊಕ್ಕು, ನಿಲ್ವುದು–ನಿಲ್ಲುವುದು, ಎಂದು, ಕಡಂಗಿ–ಉತ್ಸಾಹಿಸಿ, ಕಾಲ್ವಿಡಿವವೊಲ್–ಕಾಲನ್ನು ಹಿಡಿಯುವ ಹಾಗೆ, ತನ್ನೂರ್ಮಿಗಳ್–ಸಮುದ್ರದ ಅಲೆಗಳು, ಬಂದುವು–ದಡದಲ್ಲಿರುವ ಬೆಟ್ಟಗಳ ಬಿಗೆ ಬಂದುವು; ಅಂದು–ಆಗ, ಇದಱಿಂ–ಇದರಿಂದ ಎಂದರೆ ಸಮುದ್ರದಿಂದ, ಪೋದ–ಹೋದ, ತಪೋಪಳಂ–? ತಪಸ್ಸೆಂಬ ಕಲ್ಲು (?), ಗಗನಮಂ–ಆಕಾಶವನ್ನು, ಮಾರ್ಪೊಯ್ಯೆ–ಎದುರಾಗಿ ಹೊಡೆಯಲು, ಉತ್ಪ್ರೇಂಖದಸಂಖ್ಯ ಶಂಖಧವಳಂ–ಮೇಲೆ ತೇಲಾಡುತ್ತಿರುವ ಲೆಕ್ಕವಿಲ್ಲದಷ್ಟು ಶಂಖಗಳಿಂದ ಬೆಳ್ಳಗಾಗಿರುವ, ಗಂಭೀರ ನೀರಾಕರಂ–ಗಂಭೀರವಾದ ಸಮುದ್ರವು, ಕಣ್ಗೊಪ್ಪಿ ತೋರ್ಪುದು–ಕಣ್ಣಿಗೆ ಸೊಗಸಾಗಿ ತೋರುವುದು; ಈ ಪದ್ಯದ ಮೂರನೆಯ ಪಾದದ ಪೂರ್ವಭಾಗ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ; ಏನಾದರೂ ಪಾಠ ದೋಷ ಅಲ್ಲಿರಬಹುದು.
೨೫. ಚಳದ….ಜಳಮಂ: ಚಳತ್–ಚಲಿಸುತ್ತಿರುವ, ಅನಿಳ–ಗಾಳಿಯಿಂದ, ಆಹತ– ಹೊಡೆಯಲ್ಪಟ್ಟ, ಕ್ಷುಭಿತ–ಕದಡಿದ, ಭಂಗುರ–ಸ್ಥಿರವಲ್ಲದ, ತುಂಗ–ಎತ್ತರವಾದ, ತರಂಗ ಮಾಳಿಕಾ–ಅಲೆಗಳ ಸಾಲುಗಳ, ವಳನ–ಹೊರಳುವಿಕೆಯಿಂದ, ಸಮುಚ್ಚಳತ್–ಮೇಲಕ್ಕೆ ಚಿಮ್ಮುವ, ಮಣಿಗಣ–ರತ್ನರಾಶಿಗಳಿಂದ, ಆತ್ತ–ಪಡೆದ, ಮರೀಚಿ–ಕಿರಣಗಳೆಂಬ, ಲತಾ ಪ್ರತಾನ ಸಂವಳಯಿತ–ಬಳ್ಳಿಗಳ ಗುಂಪಿನಿಂದ ಬಳಸಲ್ಪಟ್ಟ, ವಿದ್ರುಮ–ಹವಳಗಳ, ದ್ರುಮ– ಮರಗಳ, ವಿಳಾಸ–ಸೊಗಸಿನಿಂದ, ವಿಶೇಷಿತ–ವಿಶಿಷ್ಟವಾಗಿ ಮಾಡಲ್ಪಟ್ಟ, ಬಾಡಬಾನಳ– ಕಡಲಗಿಚ್ಚಿನಿಂದ, ಆವಿಳ–ಬಗ್ಗಡವಾದ, ಜಳಮಂ–ನೀರನ್ನುಳ್ಳ, ಅರ್ಣವಮಂ–ಸಮುದ್ರ ವನ್ನು, ಗುಣಾರ್ಣವಂ–ಅರ್ಜುನನು, ಮನಂಬಯಸಿ–ಮನಸ್ಸಿನಲ್ಲಿ ಇಷ್ಟಪಟ್ಟು, ನೋಡಿದಂ– ನೋಡಿದನು.
ವಚನ : ಅದಭ್ರಾಭ್ರ ವಿಭ್ರಮ ಭ್ರಾಜಿತೋತ್ತುಂಗ ಶೈಲಮಂ: ಅದಭ್ರ–ಅತಿಶಯವಾದ, ಅಭ್ರ–ಮೋಡಗಳ, ವಿಭ್ರಮ–ವಿಲಾಸದಿಂದ, ಭ್ರಾಜಿತ–ಪ್ರಕಾಶಮಾನವಾದ, ಉತ್ತುಂಗ– ಎತ್ತರವಾದ, ಶೈಲಮಂ–ಪರ್ವತವನ್ನು.
೨೬. ವಿನತಾಪುತ್ರನ–ವಿನತೆಯ ಮಗನಾದ ಗರುಡನ, ವಜ್ರತುಂಡ ಹತಿಗಂ– ವಜ್ರದಂತಿರುವ ಕೊಕ್ಕಿನ ಏಟಿಗೂ, ಮೆಯ್ಯಾಂತು–ಮೈಯನ್ನು ಒಡ್ಡಿ, ಕಂಡಂಗಳುಳ್ಳಿನಂ– ಮಾಂಸಖಂಡಗಳಿರುತ್ತಿರಲು, ಅಂಗಂಗಳ–ಅವಯವಗಳನ್ನು, ಒಡ್ಡಿಯೊಡ್ಡಿ–ಚಾಚಿ ಚಾಚಿ, ತನುವಂ–ದೇಹವನ್ನು, ಕೊಟ್ಟು, ಅಂತು–ಹಾಗೆ, ಜೀಮೂತವಾಹನನೆಂಬ–ಜೀಮೂತವಾಹನ ಎನ್ನುವ, ಅಂಕದ ಚಾಗಿ–ಪ್ರಸಿದ್ಧನಾದದಾನಿ, ನಿಚ್ಚಟಿಕೆಯಿಂದೆ–ಮನದ ನಿಶ್ಚಲತ್ವದಿಂದ, ಈ ಶೈಲದೊಳ್–ಈ ಬೆಟ್ಟದಲ್ಲಿ, ಶಂಖಚೂಡನಂ–ಶಂಖಚೂಡನೆಂಬವನನ್ನು, ಆನಂದದೆ– ಸಂತೋಷದಿಂದ, ಕಾದ–ರಕ್ಷಿಸಿದ, ಪೆಂಪು–ಹಿರಿಮೆಯು, ಎಸೆಯೆ–ಪ್ರಕಾಶಿಸಲು, ನಾಗಾನಂದ ಮಂ–ನಾಗರಿಗೆ, ಸರ್ಪಗಳಿಗೆ ಆನಂದವನ್ನು, ಮಾಡಿದಂ–ಮಾಡಿದನು. ಜೀಮೂತವಾಹನನ ಕಥೆ ಹರ್ಷಕವಿ ರಚಿತವಾದ ನಾಗಾನಂದ ನಾಟಕದಲ್ಲಿ ದೊರೆಯುತ್ತದೆ.
ವಚನ : ಅಭಿನವ ಜೀಮೂತವಾಹನಂ–ನೂತನ ಜೀಮೂತವಾಹನ, ಅರ್ಜುನ=ಅರಿಕೇಸರಿ; ಅವನಿ–ಭೂಮಿ, ಪವನ–ವಾಯು, ಗಗನ–ಆಕಾಶ, ದಹನ–ಅಗ್ನಿ, ತರಣಿ– ಸೂರ್ಯ, ಸಲಿಲ–ನೀರು, ತುಹಿನಕರ–ಚಂದ್ರ, ಯಜಮಾನ–ಎಂಬ ಎಂಟು ಮೂರ್ತಿಗಳ ನ್ನುಳ್ಳ ಶಿವನನ್ನು; ತ್ರಿಳೋಕೈಕ ಸಂಗೀತ ಕೀರ್ತಿಯಂ–ಮೂರು ಲೋಕಗಳಿಂದಲೂ ಹಾಡಲ್ಪಟ್ಟ ಕೀರ್ತಿಯನ್ನುಳ್ಳ ಒಬ್ಬನೇ ಒಬ್ಬನನ್ನು (ಶಿವನನ್ನು).
೨೭. ಯಸ್ಯ–ಯಾರ, ಪ್ರಚಂಡ–ಅತಿ ವೇಗವಾದ, ಲಯ–ತಾಳಗತಿಗಳನ್ನುಳ್ಳ, ತಾಂಡವ–ತಾಂಡವನೃತ್ಯದಿಂದ, ಕ್ಷುಭಿತಯಾ–ಕದಡಲ್ಪಟ್ಟಳೋ, ಸದಿಗ್ವಳಯಯಾ– ದಿಙ್ಮಂಡಲಗಳಿಂದ ಕೂಡಿದ, ಸಗಿರಿ–ಪರ್ವತ ಸಮೇತವಾದ, ಮತ್ತು ಸಾಗರದ್ವೀಪಯಾ– ಸಮುದ್ರಗಳಿಂದಲೂ ದ್ವೀಪಗಳಿಂದಲೂ ಕೂಡಿದ, ಭುವಾ–ಭೂಮಿಗೆ, ಕುಲಾಲ–ಕುಂಬಾರನ, ಕರ–ಕೈಯಿಂದ, ನಿರ್ಭರ ಭ್ರಮಿತ–ವೇಗವಾಗಿ ತಿರುಗಿಸಲ್ಪಟ್ಟ, ಲೀಲಾಯಿತಂ–ಲೀಲೆ ಯುಂಟಾಯಿತೋ, ಸರ್ವಜಗತಾಂಪತಿಃ–ಸಮಸ್ತ ಜಗತ್ತಿಗೂ ಒಡೆಯನಾದ, ಗುರುಃ– ಗುರವಾದ, ಗಿರಸುತಾಪತಿ–ಪಾರ್ವತೀರಮಣನಾದ ಶಿವನು, ಸಃ–ಅವನು, ನಃ–ನಮ್ಮನ್ನು, ಪಾತು–ಕಾಪಾಡಲಿ.
ವಚನ : ಬಾಳೇಂದು ಮೌಳಿಯಂ–ಚಂದ್ರಶೇಖರನಾದ ಶಿವನನ್ನು.
೨೮. ಬನವಾಸಿ ದೇಶದ ವರ್ಣನೆ: ಬನವಾಸಿ ದೇಶದೊಳ್–ಬನವಾಸಿಯ ಪ್ರಾಂತ್ಯದಲ್ಲಿ, ಆವ ಬೆಟ್ಟುಗಳೊಳಂ–ಯಾವ ಬೆಟ್ಟಗಳಲ್ಲಿಯೂ, ಯಾವ ನಂದನವನಂಗಳೊಳಂ ಯಾವ ಉದ್ಯಾನವನಗಳಲ್ಲೂ, ನೋೞ್ಪೊಡೆ–ನೋಡುವ ಪಕ್ಷದಲ್ಲಿ, ಸೊಗಯಿಸಿ ಬಂದ ಮಾಮರನೆ–ಸೊಗಸಾಗಿ ಹಣ್ಣುಬಿಟ್ಟ ಮಾವಿನ ಮರಗಳೇ; ತಳ್ತೆಲೆ ವಳ್ಳಿಯೆ–ದಟ್ಟವಾಗಿ ಸೇರಿ ಕೊಂಡಿರುವ ವೀಳ್ಯದ ಬಳ್ಳಿಗಳೇ; ಪೂತ ಜಾತಿ ಸಂಪಗೆಯೆ–ಹೂ ಬಿಟ್ಟ ಉತ್ಕೃಷ್ಟ ಜಾತಿಯ ಸಂಪಗೆಯೇ, ಅಥವಾ ಜಾಜಿ ಸಂಪಗೆಗಳೇ; ಕುಕಿಲ್ವ–ಧ್ವನಿಮಾಡುವ, ಕೋಗಿಲೆಯೆ–ಕೋಗಿಲೆ ಗಳೇ; ಪಾಡುವ ತುಂಬಿಯೆ–ಜೇಂಕರಿಸುವ ದುಂಬಿಗಳೇ; ನಲ್ಲರ–ಒಲಿದವರ, ಒಳ್ಮೊಗಂ– ಒಳಮುಖವು, ನಗೆಮೊಗದೊಳ್–ನಗುವಿನಿಂದ ಕೂಡಿದ ಮುಖದಲ್ಲಿ, ಪಳಂಚಿ–ತಾಗಿ, ಅಲೆಯೆ–ಪೀಡಿಸಲು, ಕೂಡುವ–ಒಡಗೂಡುವ, ನಲ್ಲರೆ–ಪ್ರೇಮಿಗಳೇ.
೨೯. ಚಾಗದ–ದಾನದ, ಭೋಗದ–ಸುಖದ, ಅಕ್ಕರದ–ವಿದ್ಯೆಯ, ಗೇಯದ– ಸಂಗೀತದ, ಗೊಟ್ಟಿಯ–ಗೋಷ್ಠಿಗಳ, ಸಭೆಗಳ, ಅಲಂಪಿನ–ಸಂತೋಷದ, ಇಂಪುಗಳ್ಗೆ– ಇಂಪುಗಳಿಗೆ, ಆಗರಮಾದ–ಆಕರವಾಗಿರುವ, ಮಾನಸರೆ–ಮನುಷ್ಯರೇ, ಮಾನಸರ್– ಮನುಷ್ಯರು; ಅಂತು–ಹಾಗೆ, ಅವರಾಗಿ ಪುಟ್ಟಲ್–ಆ ಮನುಷ್ಯರಾಗಿ ಹುಟ್ಟಲು, ಏನಾಗಿಯು ಮೇನೊ–ಏನಾದರೆ ತಾನೇ, ತೀರ್ದಪುದೆ–ತೀರುತ್ತದೆಯೆ? ಸಾಧ್ಯವಾಗುತ್ತದೆಯೆ? ತೀರದೊಡಂ–ತೀರದಿದ್ದರೂ, ಸಾಧ್ಯವಾಗದಿದ್ದರೂ, ಮಱಿದುಂಬಿಯಾಗಿ–ದುಂಬಿಯ ಮರಿಯಾಗಿ, ಮೇಣ್–ಅಥವಾ, ಕೋಗಿಲೆಯಾಗಿ, ಬನವಾಸಿ ದೇಶದೊಳ್–ಬನವಾಸಿ ದೇಶದ, ನಂದನದೊಳ್–ಉದ್ಯಾನವನಗಳಲ್ಲಿ, ಪುಟ್ಟುವುದು–ಹುಟ್ಟುವುದು,
ಇಲ್ಲಿ ಗೊಟ್ಟಿ (ಸಂ) ಗೋಷ್ಠೀ ಎಂಬುದಕ್ಕೆ ವಿವರಣೆ ಬೇಕಾಗಬಹುದು. ಇದರ ವಿಷಯ ವಾತ್ಸ್ಯಾಯನನ ಕಾಮಸೂತ್ರಗಳಲ್ಲಿ ಪ್ರತಿಪಾದಿತವಾಗಿದೆ (೧–೪–೧ ಇತ್ಯಾದಿ), ಸಮಾನ ಶೀಲ ವಯಸ್ಸು ವಿದ್ಯೆ ಐಶ್ವರ್ಯವುಳ್ಳವರು, ನಾಗರಕರು ಮತ್ತು ಸ್ನೇಹಿತರು. ಆಗಾಗ ಒಬ್ಬರನ್ನೊಬ್ಬರು ಒಂದೆಡೆಯಲ್ಲಿ ಭೇಟಿಯಾಗಿ ಸುಖಸಂಕಥಾಸಲ್ಲಾಪ ಕ್ರೀಡೆಗಳಲ್ಲಿ ತೊಡಗಿ ಹರ್ಷದಿಂದ ಕಾಲಕಳೆಯುವುದು ಗೋಷ್ಠಿ. ಈ ಮಿತ್ರಮೇಳ ಅವರವರ ಸ್ವಭಾವಕ್ಕನುಸಾರವಾಗಿ ವೇಶ್ಯಾಗೃಹದಲ್ಲೋ, ಊರಿನ ಚಾವಡಿಯಲ್ಲೋ ಒಬ್ಬನ ಮನೆಯಲ್ಲೋ ಸೇರಬಹು ದಾಗಿತ್ತು. ಅಲ್ಲಿ ಕಾವ್ಯ ಸಂಗೀತಾದಿ ಕಲಾವಿಷಯಕವಾದ ಚರ್ಚೆ ನಡೆಯುತ್ತಿತ್ತು; ಪರಸ್ಪರ ವಸ್ತ್ರ ಭೂಷಣಗಳನ್ನು ಕೊಡುವುದು ಆದಮೇಲೆ ಗೋಷ್ಠಿ ಮುಕ್ತಾಯವಾಗುತ್ತಿತ್ತು. ಅಲ್ಲಿ ಮಾತಾಡುವಾಗ ಪೂರ್ತಿ ಸಂಸ್ಕೃತ ಭಾಷೆಯನ್ನಾಗಲಿ ದೇಶಭಾಷೆಯನ್ನಾಗಲಿ ಬಳಸಕೂಡದೆಂಬ ವಿಧಿಯಿತ್ತು (ನಾತ್ಯಂತಂ ಸಂಸ್ಕೃತೇ ನೈವ ನಾತ್ಯಂತಂ ದೇಶಭಾಷಯಾ । ಕಥಾ ಗೋಷ್ಠೀಷು ಕಥಯಂಲೋಕೇ ಬಹುಮತೋ ಭವೇತ್ ॥ ಸೂ. ಪು. ೫೦) ಮದ್ಯಪಾನ, ಜೂಜು ಮುಂತಾದ ದುರ್ಗೋಷ್ಠಿಗಳಿಗೆ ಸೇರಬಾರದಾಗಿತ್ತು. (ಯಾಗೋಷ್ಠೀ ಲೋಕ ವಿದ್ವಿಷ್ಟಾ ಯಾ ಚ ಸ್ವೈರವಿ ಸರ್ಪಿಣೀ । ಪರಹಿಂಸಾತ್ಮಿಕಾ ವಾ ಚ ನತಾಮವತರೇದ್ ಬುಧಃ ॥ ೫೧) ಕ್ರೀಡಾಮಾತ್ರ ದೃಷ್ಟಿ ಯುಳ್ಳ ಗೋಷ್ಠಿಗಳಿಗೆ ವಿದ್ವಾಂಸನು ಸೇರಬಹುದಾಗಿತ್ತು. (ಲೋಕ ಚಿತ್ತಾನುವರ್ತಿನ್ಯಾ ಕ್ರೀಡಾಮಾತ್ರೈಕ ಕಾರ್ಯಯಾ । ಗೋಷ್ಠೀ ಸಹ ಚರನ್ವಿದ್ವಾಂ ಲೋಕೇ ಸಿದ್ಧಿಂ ನಿಯಚ, ತಿ). ಇವು ಹೆಚ್ಚು ಕಡಮೆ ಈಗಿನ ಕ್ಲಬ್ಬುಗಳಂತೆ ಇದ್ದಿರಬಹುದು.
೩೦. ಪಂಪನ ದೇಶಪ್ರೇಮ ಭಾವಗೀತೆಯಾಗಿ ಹರಿದಿದೆ ಈ ಪದ್ಯಗಳಲ್ಲಿ: ತೆಂಕಣಗಾಳಿ ಸೋಂಕಿದೊಡಂ–ದಕ್ಷಿಣದ ಗಾಳಿ ಮೈಮುಟ್ಟಿದರೂ, ಒಳ್ನುಡಿಗೇಳ್ದೊಡಂ–ಒಳ್ಳೆಯ ಮಾತನ್ನು ಕೇಳಿದರೂ, ಇಂಪನಾಳ್ದಗೇಯಂ–ಇಂಪಿನಿಂದ ಕೂಡಿದ ಸಂಗೀತವು, ಕಿವಿವೊಕ್ಕೊಡಂ– ಕಿವಿಗೆ ಕೇಳಿಸಿದರೂ, ಬಿರಿದ ಮಲ್ಲಿಗೆಗಂಡೊಡಂ–ಅರಳಿದ ಮಲ್ಲಿಗೆಯನ್ನು ನೋಡಿದರೂ, ಆದ ಕೆಂದು–ಉಂಟಾದ ನಿದ್ದೆ, ಅಲಂಪಂ–ಸುಖವನ್ನು, ಗೆಡೆಗೊಂಡೊಡಂ–ಜೊತೆಗೂಡಿ ದರೂ, ಮಧುಮಹೋತ್ಸವಮಾದೊಡಂ–ವಸಂತ ಕಾಲದ ಮಹೋತ್ಸವ ನಡೆದರೂ, ಏನನೆಂಬೆಂ–ಏನೆಂದು ಹೇಳಬಲ್ಲೆ, ಎನ್ನಮನಂ–ನನ್ನ ಮನವು, ವನವಾಸಿ ದೇಶಮಂ– ಬನವಾಸಿಯ ಪ್ರಾಂತ್ಯವನ್ನು, ಆರಂಕುಸಮಿಟ್ಟೊಡಂ–ಯಾರು ಅಂಕುಶ ಹಾಕಿದರೂ ಎಂದರೆ ತಡೆದರೂ, ನೆನೆವುದು–ನೆನೆದುಕೊಳ್ಳುತ್ತದೆ.
೩೧. ಅಮರ್ದಂ–ಅಮೃತವನ್ನು, ಮುಕ್ಕುಳಿಪಂತುಟಪ್ಪ–ಉಗುಳುವಂತಿರುವ ಎಂದರೆ ಹೀಯಾಳಿಸುವ, ಸುಸಿಲ–ರತಿಕ್ರೀಡೆಯ, ಒಂದು ಇಂಪು–ಒಂದು ಮಾಧುರ್ಯವೂ, ತಗುಳ್ದ– ಬೆನ್ನ ಹಿಂದೆಯೇ ಬರುವ, ಒಂದು ಗೇಯಮು–ಒಂದು ಸಂಗೀತವೂ, ಆದಕ್ಕರ ಗೊಟ್ಟಿ ಯುಂ–ಉಂಟಾದ ವಿದ್ವಾಂಸರ ಮೇಳವೂ, ಚದುರರ–ಚತುರರ, ಒಳ್ವಾತುಂ–ಒಳ್ಳೆಯ ಮಾತೂ, ಕುಳಿರ್ಕೋೞ್ಪ–ಶೀತದಿಂದ ತಣ್ಣಗಿರುವ, ಜೊಂಪಮುಂ–ಹೂಗೊಂಚಲುಗಳೂ, ಏವೇೞ್ಪುದನುಳ್ಳ–ಏನು ಬಯಸುವುದೊ ಅದನ್ನುಳ್ಳ, ಮೆಯ್ಸುಕಮಂ–ದೇಹ ಸೌಖ್ಯವೂ, ಇಂತು ಎನ್ನಂ–ಹೀಗೆ ನನ್ನನ್ನು, ಕರಂ–ವಿಶೇಷವಾಗಿ, ನೋಡಿ, ನಾಡೆ–ಚೆನ್ನಾಗಿ, ಮನಂ ಗೊಂಡಿರೆ–ಮನವನ್ನು ಆಕ್ರಮಿಸಿರಲು, ತೆಂಕನಾಡ–ದಕ್ಷಿಣ ದೇಶವನ್ನು, ಮಱೆಯಲ್ಕೆ– ಮರೆವುದಕ್ಕೆ, ಇನ್ನೇಂ–ಇನ್ನೇನು, ಮನಂಬರ್ಕುಮೇ–ಮನಸ್ಸು ಬರುತ್ತದೆಯೇ? ಇಲ್ಲ. ಸುಸಿಲ್=(ತ) ತುಯಿಲ್–ನಿದ್ದೆ, ರತಿಕ್ರೀಡೆ; ಕನ್ನಡ ಸುಂದು ಶಬ್ದವನ್ನು ನೋಡಿ.
ವಚನ : ನಾಡಾಡಿಯಲ್ಲದೆ–ಸಾಮಾನ್ಯವಲ್ಲದೆ, ಅಸಾಧಾರಣವಾಗಿ; ಉಂಡಿಗೆ ಸಾಧ್ಯಂ ಮಾಡಿ–ತನ್ನ ಹೆಸರಿನ ಮುದ್ರೆ ಅಲ್ಲಿ ಚಲಾವಣೆಯಾಗುವಂತೆ ಮಾಡಿ ಎಂದರೆ ಜಯಿಸಿ, ವಶಪಡಿಸಿಕೊಂಡು;
೩೨. ಅರ್ಜುನನ ಪಶ್ಚಿಮ ದಿಕ್ಕಿನ ಸಂಚಾರ, ದ್ವಾರಾವತೀನಗರಕ್ಕೆ ಆಗಮನ: ಸಾರ ವಸ್ತುಗಳಿಂ–ರಸವತ್ತಾದ ವಸ್ತುಗಳಿಂದ, ನೆಱೆದ–ತುಂಬಿದ; ಅಂಭೋರಾಶಿಯೆ–ಕಡಲೇ, ಕಾದಿಗೆ–ಅಗಳು, ಕಂದಕ; ಕಾವನುಂ–ಅದನ್ನು ರಕ್ಷಿಸುವವನು, ಸೀರಪಾಣಿ–ನೇಗಿಲನ್ನು ಹಿಡಿದಿರುವವನು ಎಂದರೆ ಬಲರಾಮ; ವಿಳಾಸದಿಂ–ಸೊಗಸಿನಿಂದ, ಆಳ್ದಂ–ಆಳುವವನು, ಚಕ್ರಧರಂ–ಚಕ್ರಪಾಣಿ, ಶ್ರೀಕೃಷ್ಣ; ಬಗೆವಂಗೆ–ಆಲೋಚಿಸುವವನಿಗೆ, ಸಂಸಾರ ಸಾರಮಿದು– ಇದು ಸಂಸಾರದ ತಿರುಳು, ಎಂಬುದಂ–ಎನ್ನಿಸಿಕೊಳ್ಳುವುದನ್ನು, ಅಸಂಚ….ಪುರಮಂ : ಅಸಂಚಳ–ಅಲುಗಾಡದಿರುವ, ಕಾಂಚನದ್ವಾರ–ಚಿನ್ನದ ಬಾಗಿಲಿನಿಂದ, ಬಂಧುರ–ಸುಂದರ ವಾದ, ಬಂಧ–ಕಟ್ಟನ್ನುಳ್ಳ, ಗೃಹ–ಮನೆಗಳ, ಉದ್ಯತ್–ಎತ್ತರವಾದ, ದ್ವಾರವತೀಪುರಮಂ– ದ್ವಾರಾವತೀ ನಗರವನ್ನು, ನರಂ–ಅರ್ಜುನನು, ಎಯ್ತಂದಂ–ಸಮೀಪಿಸಿದನು, ಸೇರಿದನು.
ವಚನ : ಬರವಿನ–ಆಗಮನದ, ಸಂತಸದ–ಸಂತೋಷದ, ಒಸಗೆ–ಉತ್ಸವದ, ಪಡೆ ಮಾತಂ–ಸುದ್ದಿಯನ್ನು.
೩೩. ಶ್ರೀಕೃಷ್ಣನಿಗೆ ಶುಭಸೂಚನೆಯಾಗಿ ಅವನ ಬಲಗಣ್ಣೂ ಬಲತೋಳೂ ನಡುಗುತ್ತವೆ; ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ–ಹಲವು ಜನ್ಮಗಳಲ್ಲಿ ನಿನಗಾದ ಸ್ನೇಹಿತ, ಬಂದಪ್ಪಂ– ಬರುತ್ತಾನೆ; ಆತಂಗೆ–ಅವನಿಗೆ, ಇಂ, ನೀಂ, ಬೆಂಬಲಂ–ಸಹಾಯಕ, ನಿನಗೆ–ನಿನಗೆ, ಆತಂ– ಅವನು ಸಹಾಯಕ; ಇಳಾವಿಖ್ಯಾತನಂ–ಲೋಕಪ್ರಸಿದ್ಧನಾದ, ಆತನಂ–ಅವನನ್ನು, ಕೂರ್ತು– ಪ್ರೀತಿಸಿ, ನೋಡಲುಂ–ನೋಡುವುದಕ್ಕೂ, ಅೞ್ಕರ್ತ್ತು–ಒಲಿದು, ಅಮರ್ದು–ಗಾಢವಾಗಿ, ಅಪ್ಪಲುಂ–ಅಪ್ಪಿಕೊಳ್ಳುವುದಕ್ಕೂ, ಇಂದು–ಈ ದಿನ, ಪಡೆವೆ–ಪಡೆಯುತ್ತೀಯೆ, ಎಂಬಂತೆ– ಎನ್ನುವ ಹಾಗೆ, ದಲ್–ನಿಶ್ಚಯವಾಗಿ, ಆ ಬಲಿಬಲ ಪ್ರಧ್ವಂಸಿಗೆ–ಆ ಬಲಿಚಕ್ರವರ್ತಿಯ ಬಲವನ್ನು ನಾಶಮಾಡಿದವನಾದ ಕೃಷ್ಣನಿಗೆ, ಬಲಗಣ್ಣುಂ–ಬಲದ ಕಣ್ಣೂ, ಬಲದೋಳುಂ– ಬಲದ ತೋಳೂ, ಅಂದು–ಆಗ, ಇಟ್ಟಳಂ–ರಮಣೀಯವಾಗಿ, ಕೆತ್ತಿತ್ತು–ಸ್ಪಂದಿಸಿತು, ನಡುಗಿತು.
ವಚನ : ತಮ್ಮ ಅಲಂಪಿನ ಅೞ್ಕಱಿನ ರೂಪನೆ–ತಮ್ಮ ಸಂತೋಷದ, ಪ್ರೀತಿಯ ರೂಪ ವನ್ನೇ; ತೆಗೆದಪ್ಪಿ–ಸೆಳೆದಪ್ಪಿ; ನಿಬಿಡಾಲಿಂಗನಂಗೆಯ್ದು–ಗಾಢವಾದ ಆಲಿಂಗನವನ್ನು ಮಾಡಿ; ಮುಹುರ್ಮುಹುರಾಲೋಕನಂಗೆಯ್ಯುತ್ತುಂ–ಪುನಃ ಪುನಃ ನೋಡುತ್ತಾ; ಮತ್ತವಾರಣ ಗಳಂ–ಮದಿಸಿದ ಆನೆಗಳನ್ನು;
೩೪. ಸುರನರಕಿನ್ನರೋರಗ ನಭಶ್ಚರ ಕಾಂತೆಯರ್–ದೇವತೆಗಳ ನರರ ಕಿನ್ನರರ ಉರಗ ಲೋಕದವರ ಖೇಚರರ ಸ್ತ್ರೀಯರು, ಏವರ್–ಯಾರು ಅವರು, ಎಂದು–ಎಂಬುದಾಗಿ, ಮಾಂಕರಿಸುವ–ತಿರಸ್ಕರಿಸುವ, ಕೆಯ್ತದ–ಮಾಟವನ್ನುಳ್ಳ, ಅಂದದ–ಚೆಲುವಿನ, ಮುರಾರಿಯ ತಂಗೆಯಂ–ಶ್ರೀಕೃಷ್ಣನ ತಂಗಿಯಾದ ಸುಭದ್ರೆಯನ್ನು, ಅಪ್ಪುಕೆಯ್ದು–ಒಪ್ಪಿ, ಚೆಚ್ಚರಂ– ಬೇಗನೆ, ಒಳಪೊಯ್ದು–ಒಳಗೆ ಹಾಕಿಕೊಂಡು, ನೀಂ–ನೀನು, ನಿನಗೆ ಮಾಡುವುದು–ನಿನ್ನವಳ ನ್ನಾಗಿ ಮಾಡಿಕೊಳ್ಳುವುದು, ಎಂದು–ಎಂಬುದಾಗಿ ಅಮರೇಂದ್ರ ಪುತ್ರನಂ–ಅರ್ಜುನನನ್ನು, ಆ ಪುರದ–ಆ ನಗರದ, ವಾತವಿಧೂತ–ಗಾಳಿಯಿಂದ ತೂಗಾಡಿಸಲ್ಪಟ್ಟ, ವಿನೂತ–ಹೊಗಳ ಲ್ಪಟ್ಟ, ಕೇತುಗಳ್–ಬಾವುಟಗಳು, ಕರೆವವೊಲಾದುದು–ಕರೆಯುವಂತೆ ಆಯಿತು.
ವಚನ : ಕೆಂಬೊನ್ನ ತಳಿಗೆಯೊಳ್–ಕೆಂಪು ಚಿನ್ನದ ತಟ್ಟೆಯಲ್ಲಿ; ಬಿಡುಮುತ್ತಿನ– ಬಿಡಿಯಾದ ಮುತ್ತಿನ; ಸೇಸೆಯಂ–ಅಕ್ಷತೆಯನ್ನು, ಬೆರಸು–ಕೂಡಿ;
೩೫. ಈ ಪದ್ಯದ ಅನ್ವಯದಲ್ಲಿ ಸ್ವಲ್ಪ ಕ್ಲೇಶವಿದೆ: ಒದವಿದ–ಉಂಟಾದ, ನೂಲ– ಉಡೆನೂಲಿನ, ಒಡ್ಯಾಣದ, ತೊಂಗಲ–ಕುಚ್ಚುಗಳ, ಉಲಿ–ಶಬ್ದವು; ದೇಸೆಯನಾಂತು– ಚೆಲುವನ್ನು ಹೊಂದಿ, ವಿಳಾಸದಿಂದೆ–ಕ್ರೀಡೆಯಿಂದ, ಇಱುಂಕಿದ–ತೊಡೆಗಳ ನಡುವೆ ಇರಿಕಿ ಕೊಂಡ, ನಿಱಿ–ಸೀರೆಯ ನೆರಿಗೆಗಳು; ಗಂಡರ ಅಳ್ಳೆರ್ದೆಗಳಂ–ಪುರುಷರ ಕೋಮಲವಾದ ಎದೆಗಳನ್ನು, ತುೞಿವೋಜೆಯನುಂಟುಮಾಡುವಂದದೆ–ತುಳಿಯುವ ರೀತಿಯನ್ನು ಉಂಟು ಮಾಡುವ ಹಾಗೆ, ನಿಡುಗಣ್ಗಳೊಳ್–ದೀರ್ಘವಾದ ಕಣ್ಣುಗಳಲ್ಲಿ, ನಡೆ–ನಾಟಿಕೊಳ್ಳಲು, ಮನೋಭವನ–ಮನ್ಮಥನ; ಒಡ್ಡಣದಂತೆ–ಸೈನ್ಯದ ಹಾಗೆ, ತಂಡತಂಡದೆ–ಗುಂಪುಗುಂಪಾಗಿ, ಪರಿತಂದು–ಓಡಿಬಂದು, ಪುರಾಂಗನಾಜನಂ–ನಗರದ ಸ್ತ್ರೀಜನರು, ಅಂದು–ಆಗ, ಸೇಸೆಯಂ– ಅಕ್ಷತೆಯನ್ನು, ಸೂಸಿದುದು–ಚೆಲ್ಲಿತು.
೩೬. ಮಿಳಿರ್ವ–ಅಲುಗಾಡುವ, ಕುರುಳ್ಗಳೊಳ್–ಮುಂಗುರುಳುಗಳಲ್ಲಿ, ಪೊಳೆವ– ಹೊಳೆಯುವ, ಕಣ್ಗಳ–ಕಣ್ಣುಗಳ, ಬೆಳ್ಪು–ಬಿಳಿಬಣ್ಣವು, ಪಳಂಚಿ–ಸಂಘಟ್ಟಿಸಿ, ಚಿನ್ನಪೂ ಗಣೆಗೆ–ಚಿನ್ನದ ಹೂಬಾಣಕ್ಕೆ, ಎಣೆಯಾಗೆ–ಸಮಾನವಾಗಲು; ಪುರ್ವುಂ–ಹುಬ್ಬುಗಳೂ, ಎಮೆಗಳ್–ಕಣ್ಣರೆಪ್ಪೆಗಳೂ, ಬಿಡದೆ–ನಿಲ್ಲದೆ, ಅಳ್ಳಿಱಿದು–ಕಂಪಿಸಿ, ಇಕ್ಷುಚಾಪದೊಳ್– ಕಬ್ಬಿನ ಬಿಲ್ಲಿನಲ್ಲಿ, ಖಳಕುಸುಮಾಸ್ತ್ರಂ–ದುಷ್ಟನಾದ ಮನ್ಮಥನು, ಇಟ್ಟ–ಕಟ್ಟಿದ, ಗೊಣಿ ಯಕ್ಕೆ–ಬಿಲ್ಲಿನ ಹೆದೆಗೆ, ಎಣೆಯಾಗಿರೆ–ಸಮಾನವಾಗಿರಲು; ನಿಳ್ಕಿ ನಿಳ್ಕಿ–ಕಾಲ ಹೆಬ್ಬೆರಳ ಮೇಲೆ ನಿಂತು ನಿಂತು, ಕರಿಯನೇಱಿದನಂ–ಆನೆಯ ಮೇಲೆ ಹತ್ತಿದವನನ್ನು, ಪಡೆಮೆಚ್ಚೆ ಗಂಡನಂ–ಅರ್ಜುನನನ್ನು, ಕೋಮಲೆ–ಸುಂದರಿಯು, ನಡೆ–ನಡುವ ಹಾಗೆ, ನೋಡಿದಳ್– ನೋಡಿದಳು.
ವಚನ : ತ್ವರಿತದಿಂ–ಬೇಗನೆ; ಮೇಖಳಾಕಳಿತ–ಒಡ್ಯಾಣದಿಂದ ಕೂಡಿದ; ರುಚಿರ ಲುಳಿತಾಧರ ಪಲ್ಲವೆ–ಮನೋಹರವಾಗಿ ಬಾಗಿಕೊಂಡಿರುವ ಚಿಗುರಿನಂತಿರುವ ತುಟಿಯಳ್ಳ ವಳು; ದಂಡುಗಳೊಳ್–ಗುಂಪುಗಳಲ್ಲಿ, ಅಂಡುಗೊಂಡು–ಸಮೀಪಕ್ಕೆ ಬಂದು, ಹತ್ತಿರಿದ್ದು.
೩೭. ಕಾಯದೆ–ರಕ್ಷಿಸದೆ (=ಓವದೆ), ಕಾಮಂ–ಮನ್ಮಥನು, ಆರ್ದು–ಗರ್ಜಿಸಿ, ಇಸೆ– ಬಾಣ ಪ್ರಯೋಗ ಮಾಡಲು, ತೊವಲ್ವಿಡಿವಂತೆ–ಚಿಗುರನ್ನು ಹಿಡಿಯುವ ಹಾಗೆ; ತೋರ್ಪಾ ಯೆಲೆ–ತೋರುವ ಆ ವೀಳ್ಯದೆಲೆ, ಎಡಗಯ್ಯೊಳೊಪ್ಪೆ–ಎಡದ ಕೈಯಲ್ಲಿ ಸೊಗಸಾಗಿರಲು; ನೋಟ ಬೇಟದ–ಕಣ್ಬೇಟದ, ಚಕ್ಷುಃ ಪ್ರೀತಿಯ, ಕೊನರ್–ಚಿಗುರು, ತಲೆದೋರ್ಪ ವೊಲ್– ತಲೆ ತೋರಿಸುವ ಹಾಗೆ, ಎಂದರೆ ಮೊಳೆಯುವ ಹಾಗೆ, ಬಾಯೊಳ್–ಬಾಯಲ್ಲಿ, ಇರ್ದಾಯೆಲೆ–ಕಚ್ಚಿದ್ದ ಎಲೆಯು, ಆಗೆ–ಆಗಲು, ಕಣ್ಗೆವಂದು–ಕಣ್ಣಿಗೆ ಸೊಗಸಾಗಿ ಕಂಡು, ಎಸೆಯೆ–ಪ್ರಕಾಶಿಸಲು, ಕಯ್ಯೆಲೆ ಕಯ್ಯೊಳೆ–ಕೈಯಲ್ಲಿದ್ದ ಎಲೆ ಕೈಯಲ್ಲಿಯೇ, ಬಾಯ ತಂಬುಲ–ಬಾಯಿನಲ್ಲಿದ್ದ ವೀಳ್ಯ, ಬಾಯೊಳೆ–ಬಾಯಿಯಲ್ಲಿಯೇ, ತೋಱೆ–ಕಾಣಲು; ಆಸಮರೈಕ ಮೇರುವಂ–ಯುದ್ಧದಲ್ಲಿ ಮೇರುವಿನಂತೆ ಸ್ಥಿರನಾದ ಆ ಅರ್ಜುನನನ್ನು, ಮೈಮಱೆದು–ಮೈಮರೆತು, ನೋಡಿದಳ್–ನೋಡಿದಳು. ದ್ರೌಪದಿಯು ತನ್ನ ಸ್ವಯಂವರದ ಸಮಯದಲ್ಲಿ ರಾಜಸಭೆಯನ್ನು ಹೊಕ್ಕಾಗ ಅವಳ ಸೌಂದರ್ಯವನ್ನು ಕಂಡು ರಾಜರು ಸ್ತಬ್ಧರಾದಾಗ “ಮಡಿಸಿದೆಲೆ ಬೆರಳೊಳಗೆ ಬಾಯೊಳಗಡಸಿದೆರೆ ಬಾಯೊಳಗೆ” ಎಂದಿರುವ ಕುಮಾರವ್ಯಾಸನ ಪದ್ಯವನ್ನು ಇದರೊಡನೆ ಹೋಲಿಸಬಹುದು (೧–೨೩–೬೭).
ವಚನ : ತಿರುವಿಂ–ಹೆದೆಯಿಂದ, ಬರ್ದುಂಕಿಬರ್ಪಲರಂಬು–ತಪ್ಪಿಸಿಕೊಂಡು ಬರುವ ಹೂಗಣೆ.
೩೮. ರೂಪಿನೊಳ್–ರೂಪದಲ್ಲಿ, ಸ್ಮರನಂ–ಮನ್ಮಥನನ್ನು, ವಿಭವದೊಳ್–ವೈಭವ ದಲ್ಲಿ, ಇಂದ್ರನಂ–ಇಂದ್ರನನ್ನು, ಆವ ಗಂಡರುಮಂ–ಯಾವ ಪುರುಷರನ್ನೂ, ಪೋ– ಹೋಗು, ಆನ್–ನಾನು, ಮೆಚ್ಚೆಂ–ಮೆಚ್ಚೆನು; ಕಚ್ಚೆಯೊಳಿಟ್ಟು–ಅವರನ್ನು ನನ್ನ ಕಚ್ಚೆ ಯಲ್ಲಿಟ್ಟು, ಕಟ್ಟುವೆಂ–ಕಟ್ಟಿಬಿಡುತ್ತೇನೆ, ಎನುತ್ತಿರ್ಪಾಕೆ–ಎನ್ನುತ್ತಿರುವ ಒಬ್ಬಳು, ಗಂಧೇ– ರಿಗನಂ: ಗಂಧೇಭ–ಸೊಕ್ಕಾನೆಯ, ಕಂಧರಬಂಧ–ಕೊರಳ ಪಟ್ಟಿಯ ಮೇಲೆ, ಪ್ರವಿಭಾಸಿ ಯಪ್ಪ–ಪ್ರಕಾಶಿಸುತ್ತಿರುವ, ಅರಿಗನಂ–ಅರ್ಜುನನನ್ನು, ಕಾಣುತ್ತೆ–ನೋಡುತ್ತಲು, ಕಣ್ಸೋಲ್ತು–ಕಣ್ಣು ಸೋತು, ಮೋಹಿಸಿ, ಕಾಮರಸಂ–ಸುರತರಸವು, ಭೋಂಕನೆ–ಶೀಘ್ರ ವಾಗಿ, ಸೂಸೆ–ಚೆಲ್ಲಲು, ತಾಳಲ್ ಅರಿದು–ಸೈರಿಸುವುದು ಅಸಾಧ್ಯ, ಎಂದು, ಇರ್ಕಚ್ಚೆಯಂ– ಎರಡು ಕಚ್ಚೆಗಳನ್ನೂ, ಕಟ್ಟಿದಳ್–ಬಿಗಿಯಾಗಿ ಕಟ್ಟಿಕೊಂಡಳು.
ವಚನ : ಬೇಂಟೆಗಾಱಂಗೆ–ಬೇಟೆಗಾರನಿಗೆ; ಮೊನೆಗೆ–ಯುದ್ಧಕ್ಕೆ; ಪೊಣೆ ಪೊಕ್ಕು–ಪ್ರತಿಜ್ಞೆ ಮಾಡಿ ಪ್ರವೇಶಿಸಿ?, ಪಕ್ಕಾಗಿರೆ–ಗುರಿಯಾಗಿರಲು; ಉಪಹಾಸಿತಮಪ್ಪ–ನಗುವಂತಿರುವ, ತಿರಸ್ಕರಿಸುವ ಹಾಗೆ ಇರುವ.
೩೯. ಕೃಷ್ಣನ ಅಂತಃಪುರ ಸ್ತ್ರೀಯರು ಅರ್ಜುನನನ್ನು ಎದುರುಗೊಂಡರು: ಲತೆಗಳ್– ಬಳ್ಳಿಗಳು, ಜಂಗಮರೂಪದಿಂ–ಓಡಾಡುವ ಆಕಾರದಿಂದ, ನೆರೆದುವೋ–ಒಟ್ಟಿಗೆ ಸೇರಿದವೋ, ದಿವ್ಯಾಪ್ಸರೋವೃಂದಂ–ಸ್ವರ್ಗದ ಅಪ್ಸರ ಸ್ತ್ರೀಯರ ಸಮೂಹ, ಇಂದ್ರನ ಶಾಪದಿಂದೆ– ಇಂದ್ರನು ಕೊಟ್ಟ ಶಾಪದಿಂದ, ಕ್ಷಿತಿಗೆ–ಭೂಮಿಗೆ, ಇೞಿದುವೋ–ಇಳಿದು ಬಂತೋ, ಏನ್– ಏನು! ಪೇೞೆಂಬ–ಹೇಳು ಎನ್ನುವ, ಶಂಕಾಂತರಂ–ಬೇರೆ ಬೇರೆ ಸಂದೇಹಗಳು, ಮತಿಗಂ– ಬುದ್ಧಿಗೂ, ಪುಟ್ಟವಿನಂ–ಹುಟ್ಟುತ್ತಿರಲು, ಕೃಷ್ಣನಾ–ಕೃಷ್ಣನ, ಷೋಡಶಸಹಸ್ರಾಂತಃಪುರಂ– ಹದಿನಾರು ಸಾವಿರ ಅಂತಃಪುರ ಸ್ತ್ರೀಯರು, ಇಂದ್ರ ತನೂಜಂಗೆ–ಅರ್ಜುನನಿಗೆ, ಇದಿರ್ವಂದು– ಎದುರುಬಂದು, ಪರಕೆಗಳ್–ಆಶೀರ್ವಾದಗಳು, ಕರಂತಳ್ಪೊಯ್ಯೆ–ವಿಶೇಷವಾಗಿ ತಾಕಾಡುತ್ತಿ ರಲು, ಸೇಸಿಕ್ಕಿತು–ಅಕ್ಷತೆಯನ್ನು ಹಾಕಿತು.
ವಚನ : ಕೆಮ್ಮುಗಿಲ ತೆರೆಯ ಪೊರೆಯೊಳ್–ಕೆಂಪಾದ ಮೋಡವೆಂಬ ತೆರೆಯ ಸಮೀಪ ದಲ್ಲಿ; ಪೊಱಮಡುವ–ಹೊರಕ್ಕೆ ಬರುವ, ವಿದ್ಯಾಧರಿಯಂತೆ–ವಿದ್ಯಾಧರ ಸ್ತ್ರೀಯಂತೆ; ನೆಲೆಯ–ಅಂತಸ್ತಿನ; ಚೌವಳಿಗೆಯ–ತೊಟ್ಟಿಯ.
೪೦. ಬಳಸಿದ–ಸುತ್ತುಗಟ್ಟಿದ, ಗುಜ್ಜುಗಳ್–ಅಂತಃಪುರ ಸೇವಕರಾದ ಕುಬ್ಜರು, ನೆರೆದ– ಸೇರಿದ, ಮೇಳದ ಕನ್ನೆಯರ್–ಒಡನಾಡಿ ಕನ್ಯೆಯರು, ಎತ್ತಮಿಕ್ಕೆ–ಎತ್ತ ಕಡೆಯೂ ಬೀಸಲು, ಸಂಚಳಿಸುವ–ಅಲುಗಾಡುವ, ಚಾಮರಂ–ಚಾಮರಗಳು, ಕನಕ ಪದ್ಮದ–ಹೊಂದಾವರೆಯ, ಸೀಗುರಿ–ಕೊಡೆಗಳು, ತೊಟ್ಟ–ಧರಿಸಿದ, ಮಾಣಿಕಂಗಳ–ರತ್ನಗಳ, ಬೆಳಗು–ಕಾಂತಿಗಳು, ಇಟ್ಟಳಂ–ಚೆಲುವಾಗಿ, ತನಗೆ, ಒಡಂಬಡೆ–ಒಪ್ಪಲು, ದೇಸೆ–ಸೊಗಸು, ವಿಳಾಸಮಂ–ಸೌಂದರ್ಯ ವನ್ನು, ಪುದುಂಗೊಳಿಸೆ–ಹುದುವಾಗಿ ಮಾಡಲು, ಕನ್ನೆ–ಸುಭದ್ರೆ, ನಡೆನೋಡಿ–ನಟ್ಟದೃಷ್ಟಿ ಯಿಂದ ನೋಡಿ, ಮರಲ್ದು.ಅರಳಿ, ಉಬಿಪ್, ಗುಣಾರ್ಣವನೆಂಬನ್.ಅರ್ಜುನ ಎಂಬವನು, ಈತನೇ.ಇವನೇಯೇ?
ವಚನ : ಎಂದು, ತನ್ನ ಮೇಳದಾಕೆಗಳಂ–ತನ್ನ ಸಂಗಡ ಇರುವ ಸಖಿಗಳನ್ನು, ಬೆಸಗೊಂ ಡೊಡೆ–ಕೇಳಿದರೆ; ಪತ್ತಿದ ಕಣ್ಣುಮಂ–ಅಂಟಿಕೊಂಡ ಕಣ್ಣನ್ನೂ ಎಂದರೆ ಅರ್ಜುನನ ಮೇಲೆ ನಟ್ಟನೋಟವನ್ನೂ; ಉೞ್ಗಿದ ಮನಮುಮಂ–ಪ್ರೀತಿಗೊಂಡ ಮನವನ್ನೂ; ಜೋಲ್ದನಾಣು ಮಂ–ಸರಿದುಹೋದ ಲಜ್ಜೆಯನ್ನೂ; ನೇಲ್ದ ಸರಮುಮಂ–ಇಳಿಬಿದ್ದ ಧ್ವನಿಯನ್ನೂ, ಅಗುಂತಿಗಳಂ–ಅತಿಶಯಗಳನ್ನು, ಅಳವಲ್ಲದೆ–ಅಳತೆಯಿಲ್ಲದೆ, ಅಧಿಕವಾಗಿ, ಪೊಗೞೆ– ಹೊಗಳಲು.
೪೧. ಈ ಪದ್ಯಕ್ಕೆ ಅರ್ಥಾನ್ವಯಾದಿಗಳು ವಿಶದವಾಗಿ ತಿಳಿದುಬರುವುದಿಲ್ಲ; ಪಾಠಕ್ಲೇಶ ಗಳೇನಿವೆಯೋ, ಅವೂ ಅಜ್ಞಾತವಾಗಿವೆ; ಒದವಿದ–ಉಂಟಾದ, ತನ್ನ, ಜವ್ವನದ–ಯೌವ್ವನದ, ರೂಪಿನ–ಆಕಾರದ, ಮೆಯ್ಯೊಳೆ–ದೇಹದಲ್ಲಿಯೇ, ತಪ್ಪುದಪ್ಪು ನೋಟದೊಳೆ–ತಪ್ಪು ತಪ್ಪಾದ ನೋಟದಲ್ಲಿಯೇ, ಪೊಡರ್ಪು–ಸ್ಫುರಣೆಯು ಎಂದರೆ (ಮೈಯಲ್ಲಿ) ಕಂಪನವು, ತಪ್ಪು–ಸರಿಯಾದುದಲ್ಲ, ಬಗೆ–ಇಂಗಿತ (ನೋಟದಲ್ಲಿನ), ತಪ್ಪು–ಸರಿಯಾದುದಲ್ಲ; ಮನೋಜನ– ಮನ್ಮಥನ, ಪೂವಿನಂಬು–ಹೂವಿನ ಬಾಣ, ತೀವಿದು–ತುಂಬಿದ, ದೊಣೆ– ಬತ್ತಳಿಕೆ, ತೀವಿ–ತುಂಬಿ, ತನ್ನಂ–ತನ್ನನ್ನು, ಇಸೆ–ಹೊಡೆಯಲು, ಆ ಸತಿ–ಆ ಸುಭದ್ರೆ, ತಪ್ಪದೆ– ಬಿಡದೆ, ತಪ್ಪು ನೋಟದೊಳ್–ಜಾರು ನೋಟದಲ್ಲಿ, ಅಪ್ಪ ನೋಡಿದುದಱಿಂ–ಅಪ್ಪಿಕೊಳ್ಳಲು ನೋಡಿದ್ದರಿಂದ, ಜಾಣನೆ–ಜಾಣತನವನ್ನೆ, ತಪ್ಪದೆ–ಬಿಡದೆ, ತಪ್ಪುದು–ನಾಶಮಾಡಿತು; ಇಲ್ಲಿ ತಪ್ಪುದು ಎಂಬ ಕ್ರಿಯಾಪದ ಗಮನಾರ್ಹ; ತವು–ಕ್ಷಯೇ ಎಂಬ ಧಾತುವಿಗೆ ದದ ಪಾದಿ ಪ್ರತ್ಯಯಗಳು ಪರವಾದಾಗ ಅದರ ಕೊನೆಯ ಅಕ್ಷರಕ್ಕೆ ಎಂದರೆ ವುಗೆ ಪಕಾರಾ ದೇಶವಾಗುತ್ತದೆ (ಶಮದ. ೨೬೧ : ಶಬ್ದಾನು ೪೮೦) ಹೀಗೆ ತವು+ದ=ತಪ್ಪು ಆಗಿ ಅದಕ್ಕೆ ನಪುಂಸಕದ ಏಕವಚನ–ಉದು ಸೇರಿ ತಪ್ಪುದು–ನಾಶಮಾಡಿತು ಎಂಬರ್ಥದ ಕ್ರಿಯಾಪದ ವಾಗುತ್ತದೆ. ಈ ಪದ್ಯದಲ್ಲಿರುವ ಉಳಿದ ‘ತಪ್ಪು’ ಪ್ರಯೋಗಗಳು ‘ತಪ್ಪು–ಸ್ಖಲನೇ’ ಎಂಬ ಧಾತುವಿಗೆ ಸಂಬಂಧಿಸಿದುವು; ಇದು ನಾಮಪದವು ಆಗಬಹುದು. ಅಪ್ಪನೋಡಿ ದುದು=ಅಪ್ಪಲ್–ನೋಡಿದುದು; ಇಲ್ಲಿ ಅಲ್ ಪ್ರತ್ಯಯ ಲೋಪವಾಗಿದೆ. ತರಲ್ವೇೞ್ =ತರವೇೞ್, ಬರಲ್+ಪೇೞ್=ಬರವೇೞ್ ಎಂಬೆಡೆಗಳಲ್ಲಿ ಇರುವಂತೆ.
ವಚನ : ದುಕೂಲದ–ರೇಷ್ಮೆ ಬಟ್ಟೆಯ, ಸಕಳವಟ್ಟೆಯೊಳ್–ಬಣ್ಣ ಬಣ್ಣದ ವಸ್ತ್ರಗಳಲ್ಲಿ, ನಿಮಿರ್ಚಿದಂತಾನುಂ–ಪ್ರಸರಿಸದ ಹಾಗೂ; ಪುದಿದು–ಮುಚ್ಚಿ, ಪುದುಂಗೊಳಿಸಿ ದಂತಾನುಂ–ಹುದುವಾಗಿ ಮಾಡಿದ ಹಾಗೂ; ಅನಂಗಾಮೃತ ವರ್ಷಮಂ–ಕಾಮವೆಂಬ ಅಮೃತದ ಮಳೆಯನ್ನು; ಎಡೆವಱಿಯದ–ನಡುವೆ ಕತ್ತರಿಸಿಹೋಗದ, ಎಂದರೆ ಅವಿಚಿ, ನ್ನ ವಾದ; ಪೊಳಪಿನೊಳ್–ಪ್ರಕಾಶದಲ್ಲಿ; ತಳ್ಪೊಯ್ದು–ಸಂಘಟ್ಟಿಸಿ; ಕುವಳಯದಳನ ಯನೆಯ ನೋಟಂ–ನೆಯ್ದಿಲೆಯಂತೆ ಕಣ್ಣುಳ್ಳವಳ ನೋಟವು.
೪೨. ಈಕೆಗೆ–ಈ ಸುಭದ್ರೆಗಾಗಿ, ನನೆಯಂಬು–ಹೂವಿನ ಬಾಣವು, ಅಂಬನೆ–ಹೂವಿನ ಬಾಣವನ್ನೇ, ಕರ್ಚ್ಚಿ–ಕಚ್ಚಿಕೊಂಡು, ಪಾಱಿದಪುದೋ–ಹಾರಿಬರುತ್ತಿದೆಯೋ ಎಂದರೆ ಪುಂಖಾನುಪುಂಖವಾಗಿ ಹೂಗಣೆಗಳು ಹಾರಿಬರುತ್ತಿವೆಯೋ; ಶೃಂಗಾರ ವಾರಾಸಿ–ಸಿಂಗಾರವೆಂಬ ಸಮುದ್ರವು, ಭೋಂಕನೆ–ಬೇಗನೆ, ಬೆಳ್ಳಂಗೆಡೆದತ್ತೊ–ಪ್ರವಾಹವಾಗಿ ಹರಿಯಿತೋ; ಕಾಮನ–ಮನ್ಮಥನ, ಎಱೆ–ಒಡೆತನವು, ಪ್ರಭುತ್ವವು, ಮೆಯ್ವೆರ್ಚಿತ್ತೋ–ಅಧಿಕ ವಾಯಿತೋ; ಎಂಬಿನೆಗಂ–ಎನ್ನುತ್ತಿರಲು, ಸೋಲಮಂ–ಬೇಟವನ್ನು, ಮೋಹವನ್ನು, ಉಂಟು ಮಾಡೆ– ಉಂಟುಮಾಡಲು, ಆಕರ್ಣಾಂತವಿಶ್ರಾಂತಲೋಚನಂ–ಕಿವಿಯ ಕೊನೆಯವರೆಗೂ ಚಾಚಿ ಕೊಂಡಿರುವ ಕಣ್ಣುಳ್ಳ, ಹರಿಗಂ–ಅರ್ಜುನನು, ಆಲೋಚನ ಗೋಚರಂ ಬರೆಗಂ–ಕಣ್ಣಿಗೆ ಕಾಣಬರುವವರೆಗೂ, ಒಲ್ದು–ಪ್ರೀತಿಸಿ, ಆ ಕನ್ನೆಯಂ–ಆ ಸುಭದ್ರೆಯನ್ನು, ನೋಡಿದಂ.
ಇಲ್ಲಿ ಬೆಳ್ಳಂಗೆಡೆ ಶಬ್ದ ಗಮನಾರ್ಹ; ಬೆಳ್ಳಂ+ಕೆಡೆ; (ತ.ಮ.) ವೆಳ್ಳಂ–ಪ್ರವಾಹ; ನೀರು; (ತು) ಬೊಳ್ಳ–ಪ್ರವಾಹ; (ತೆ) ವೆಲ್ಲಿ, ವೆಲ್ಲುಕ, ವೆಲ್ಲುವ–ಪ್ರವಾಹ. ಎಱೆ–ಪತಿತ್ವೇಚ, ಎಱೆವೆಸಂ, ಎಱೆವಿಟ್ಟ ಮುಂತಾದ ಶಬ್ದಗಳನ್ನು ಪರಿಶೀಲಿಸಬಹುದು.
ವಚನ : ಕಿಸುಗಣ್ಚಿದ–ಕೆಂಪೇರಿದ; ಕಿಸು+ಕಾಣ್ಚು+ದ=ಕಿಸುಗಣ್ಚಿದ; ಒರ್ಮೊದಲೆ– ಕೂಡಲೇ, ಒಟ್ಟಿಗೇ, ಅಳ್ಳಾಟಮಂ–ಅಳ್ಳಾಡುವಿಕೆ, ಚಲನ.
೪೩. ಸೋಲದೊಳ್–ಪ್ರೇಮದಲ್ಲಿ, ಎಯ್ದೆ–ಚೆನ್ನಾಗಿ, ಪೀ [ರ್ವ–ಹೀರುವ, ತೆಱದಿಂದೆ– ರೀತಿಯಿಂದ, ಎಮೆಯಿಕ್ಕದೆ–ರೆಪ್ಪೆ ಹೊಡೆಯದೆ, ನೋೞ್ಪ–ನೋಡುವ, ಕಣ್ಗೆ–ಕಣ್ಣಿಗೆ, ಪೆಱತೊಂದು–ಬೇರೊಂದು ಕಣ್ಣು ಎಂದರೆ ಅರ್ಜುನನ ಕಣ್ಣು, ಪೀಲಿ ವೊಲಾಗೆ–ನವಿಲುಗರಿ ಯ ಕಣ್ಣಿನಂತಾಗಲು, ಬಂದು, ಮನಂಬುಗೆ–ಮನವನ್ನು ಹೋಗಲು, ಕಾವನಂಬು–ಕಾಮನ ಬಾಣ, ಚಿತ್ತದೊಳ್–ಮನಸ್ಸಿನಲ್ಲಿ, ಪತ್ತಿ–ಅಂಟಿಕೊಂಡು, ಕೀಲಿಸೆ–ನಾಟಲು, ಅವಱ– ಆ ಬಾಣಗಳ, ಬಿಣ್ಪಿನೊಳ್–ಭಾರದಲ್ಲಿ, ಒಯ್ಯನೆ–ಮೆಲ್ಲಗೆ, ಜೋಲ್ದವೋಲೆ–ಜೋತು ಬಿದ್ದ ಹಾಗೆ, ಬಾಲೆ–ಸುಭದ್ರೆ, ಲೀಲೆಯಿಂ–ವಿಲಾಸದಿಂದ, ತಾಂಬೂಲ ಕರಂಕವಾಹಿನಿಯ ಮೇಲೆ ಅಡಕೆಲೆಯ ಭರಣಿಯನ್ನು ಧರಿಸಿರುವ ದಾಸಿಯ ಮೇಲೆ, ನೆಱಲ್ದಿರೆ–ಒರಗಿ ಕೊಂಡಿರಲು.
ವಚನ : ನವ….ಕೃತಮಪ್ಪ : ನವ–ಹೊಸದಾದ, ಕಿಸಲಯ–ಚಿಗುರಿನ, ವಂದನ ಮಾಲಾ–ತೋರಣಗಳಿಂದ, ಅಲಂಕೃತಮಪ್ಪ–ಅಲಂಕರಿಸಲ್ಪಟ್ಟಿರುವ, ಸಪ್ತರ್….ಮ್ಯದ: ಸಪ್ತ–ಏಳು, ತಾಳ–ತಾಳೆಮರಗಳಷ್ಟು, ಉತ್ತುಂಗ–ಎತ್ತರವಾದ, ರಮ್ಯ–ರಮಣೀಯ ವಾದ, ಹರ್ಮ್ಯದ–ಉಪ್ಪರಿಗೆಯ; ಮೊಗಸಾಲೆಯೊಳ್–ಮುಖಮಂಟಪದಲ್ಲಿ; ಪೊನ್ನ ಪಡಿಗಂಗಳೊಳ್–ಚಿನ್ನದ ಪೀಕುದಾನಿಗಳಲ್ಲಿ; ಇಕ್ಕಿದ–ಹಾಕಿದ, ಪೞಿಯ–ವಸ್ತುಗಳ; ಕಟ್ಟಿದ, ಚಿನ್ನದ, ಬೊಂದರಿಗೆಯೊಳಂ–ಮತ್ತೆ (ತಿವಾಸಿ, ಲೋಡು)ಗಳಲ್ಲಿಯೂ (?) ಕಿಱಿದುಪೊೞ್ತು–ಸ್ವಲ್ಪ ಹೊತ್ತು; ಅನುಲೇಪನ–ಗಂಧ; ಕುಸುಮದಾಮ–ಹೂವಿನಹಾರ; ಅಪಗತ ಪರಿಶ್ರಮನಂ ಮಾಡಿ–ಕಳೆದು ಹೋದ ಆಯಾಸವುಳ್ಳವನನ್ನಾಗಿ ಮಾಡಿ. ಚಿನ್ನದ ಬೊಂದರಿಗೆ ಎಂದು (ಪಂಪಭಾ. ೯–೨೮ ಗ) ದಲ್ಲಿಯೂ, (೧೪–೨೪)ರಲ್ಲಿ ಬೊಂದರಿಗೆ ಯೆಂದೂ, (ಆದಿಪು. ೧೧–೭೮)ರಲ್ಲಿ ತಳಿರ ಬೊಂದರಿಗೆಯೆಂದೂ, (ಶಾಂತಿಪು. ೩–೫೧ ಗ)ದಲ್ಲಿ ದೇವಾಂಗದ ಬೊಂದರಿಗೆಯೆಂದೂ ಪ್ರಯೋಗಗಳಿವೆ: ‘ಚಿನ್ನದ’ ಕ್ಕೆ ಪ್ರತಿಯಾಗಿ ಬಹುಶಃ ಚೀನ (=ರೇಷ್ಮೆಯ) ಎಂದು ಪಾಠವಿದ್ದಿರಬಹುದು.
೪೪. ಈ ಕಂದಪದ್ಯದ ಅರ್ಥ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈತಂ–ಇವನು (ಅರ್ಜುನ), ಬಿರ್ದಿನನ್–ಅತಿಥಿ, ಈತಂ–ಇವನು, ಭೂತಳಪತಿಯೆನಿಸಿದ–ರಾಜನು ಎನಿಸಿದ, ಅರಿಗಂ–ಅರಿಕೇಸರಿ; ಹರಿ–ಕೃಷ್ಣನು, ಒಡೆಯಂ–ಸ್ವಾಮಿ; ತಾನ್–ತಾನು, ಈತನೇ–ಇವನೇ, ಬಿರ್ದಿನನೆನೆ–ಔತಣಕ್ಕೆ ಬಂದವನು, ನಂಟ ಎನ್ನಲು, ವಿಖ್ಯಾತಂಗೆ–ಪ್ರಸಿದ್ಧನಾದ, ನರಂಗೆ– ಅರ್ಜುನನಿಗೆ, ಅನಂತಂ–ಶ್ರೀಕೃಷ್ಣನು, ಸೆಱಪುಗಯ್ದಂ–ಸತ್ಕಾರ ಮಾಡಿದನು.
ಬಿರ್ದು, ಬಿರ್ದಿನ=(ತ) ವಿರುಂದು, ವಿರುಂದಿನನ್–ಔತಣ, ಅತಿಥಿ; ಸೆಱಪು=(ತ) ಶಿಱಪ್ಪು=ಊಟ, ಉಪಚಾರ.
ವಚನ : ಸೆಱಪುಗೆಯ್ದು–ಉಪಚಾರ ಮಾಡಿ;
೪೫. ಅರಿಗ–ಅರ್ಜುನನೇ, ನಾವಿರ್ವರುಂ–ನಾವಿಬ್ಬರೂ, ನರನಾರಾಯಣರೆನೆ–ನರ, ನಾರಾಯಣ ಎನ್ನಲು, ಆಯತಿಯಿಂದಂ–ಪರಸ್ಪರ ಅವಲಂಬನದಿಂದ, ನೆಗೆೞ್ದಿವು– ಪ್ರಸಿದ್ಧರಾದೆವು, ನಡೆದುಕೊಂಡೆವು; ಇಂತು–ಹೀಗೆ, ಈ ಯುಗದೊಳ್–ಈ ದ್ವಾಪರ ಯುಗ ದಲ್ಲಿ, ಈಗಳ್–ಈಗ, ಆಂ–ನಾನು, ನಾರಾಯಣನೆಂ–ನಾರಾಯಣನಾಗಿದ್ದೇನೆ, ನೀಂ– ನೀನು, ಉದಾತ್ತ ನಾರಾಯಣನಯ್–ಉದಾತ್ತನಾದ ನಾರಾಯಣನಾಗಿರುತ್ತೀಯೆ.
ವಚನ : ಏತಱೊಳಂ–ಯಾವುದರಲ್ಲಿಯೂ; ವಿಕಲ್ಪಮುಂ–ಭೇದವೂ, ವಿಚಿ, ನ್ನಮುಂ– ಅಗಲುವಿಕೆಯೂ;
೪೬. ಇತ್ತ ಕಡೆ ಸೂರ್ಯ ಮುಳುಗುತ್ತಾನೆ : ಮುನ್ನಂ–ಮೊದಲು, ನವನಳಿನೀ ವನಂಗಳ ಪರಾಗ ರಜಂಗಳಂ–ಹೊಸದಾಗಿ ಅರಳಿದ ತಾವರೆಗಳ ತೋಟದ ಹೂನೀರನ್ನೂ, ದೂಳನ್ನೂ, ಉಂಡು–ತಿಂದು, ವಿಯತ್ತಳಭ್ರಮಣವಿಹ್ವಲನಾಗಿ–ಆಕಾಶದಲ್ಲಿ ಸುತ್ತಾಡುವುದರಿಂದ ಅಸ್ಥಿರನಾಗಿ, ಬೞಲ್ದು–ಆಯಾಸಗೊಂಡು, ಕಾಱುವಂತೆವೋಲ್–ಕಕ್ಕುವ ಹಾಗೆ, ಕೆಂಪು– ಸಂಜೆಗೆಂಪು, ಇರೆ–ಇರಲು, ತತ್ಕ….ನಾದವೊಲ್ : ತತ್–ಆ, ಕಮಳ–ತಾವರೆಯ ಬಳ್ಳಿಯ, ಕಾನನ–ವನದ, ಕಂಟಕ–ಮುಳ್ಳಿನಲ್ಲಿ, ಲಗ್ನ–ಸಿಕ್ಕಿಕೊಂಡ, ಪಾದಂ–ಕಿರಣಗಳುಳ್ಳವನು, ಆದವೊಲ್–ಆದ ಹಾಗೆ, ಆತ್ಮಕರಮಂ–ತನ್ನ ಕಿರಣಗಳನ್ನು, ಉಡುಗುತ್ತಂ–ಸಂಕೋಚ ಗೊಳಿಸುತ್ತ, ರವಿ–ಸೂರ್ಯ, ಅಸ್ತಶೈಲಮಂ–ಅಸ್ತಾಚಲವನ್ನು, ಪೊರ್ದಿದಂ–ಸೇರಿದನು.
ವಚನ : ಆ ಪ್ರಸ್ತಾವದೊಳ್–ಆ ಸಮಯದಲ್ಲಿ.
೪೭. ಆ ಸರಸೀಜಬಾಂಧವನ–ಆ ಕಮಲಬಂಧುವಾದ ಸೂರ್ಯನ, ಪಿಂಬಡಿನೊಳ್– ಅನಂತರದಲ್ಲಿ, ಎಂದರೆ ಮುಳುಗಿದ ಮೇಲೆ, ಈ ಸರಸೀರುಹಂಗಳ್–ಈ ಕಮಲಗಳು, ಕಡುವಿನ್ನವಾದುವು–ಬಹಳ ಕ್ರಿಯಾಶೂನ್ಯವಾದವು, ನಿಶ್ಚೇಷ್ಟವಾದುವು; ಈ ಪದದೊಳ್– ಈ ಸಮಯದಲ್ಲಿ, ಅವಂ–ಅವುಗಳನ್ನು, ಬಿಸುಟು–ಬಿಸಾಟು, ಬಿಟ್ಟು, ಎಂತು–ಹೇಗೆ, ಪೋಪೆಂ–ಹೋಗುವೆವು, ಎಂಬ, ಈ ಸಮಕಟ್ಟಿನೊಳ್–ಈ ವ್ಯವಸ್ಥೆಯಲ್ಲಿ, ನೆಲಸಿದಂತೆ– ನಿಂತಂತೆ, ಉತ್ಕೇಸ….ಕಂಗಳೊಳ್: ಉತ್ಕೇಸರಕೋಟಿ–ಮೇಲೆದ್ದ ಅಸಂಖ್ಯಾತ ಕೇಸರಗಳ, ಸಂಕಟ–ಇಕ್ಕಟ್ಟನ್ನುಳ್ಳ, ಕುಶೇಶಯ ಕೋಶ–ತಾವರೆಯ ಕೋಶವೆಂಬ, ಎಂದರೆ ತಾವರೆಯ ಮೊಗ್ಗೆಂಬ, ಕುಟೀರಕಂಗಳೊಳ್–ಗುಡಿಸಿಲುಗಳಲ್ಲಿ, ಷಟ್ಪದಂಗಳ್–ದುಂಬಿಗಳು, ಎಱಗಿರ್ದುವು–ಬಿದ್ದು ಇದ್ದವು. “ಸಂಕೋಚೋದಂಚದುಚ್ಚ ಕೇಸರಕೋಟಿ ಸಂಕಟಕುಶೇಶಯ ಕೋಶಕೋಟರ ಕುಟಿಶಾಯಿನಿ ಷಟ್ಚರಣ ಚಕ್ರೇ” ಎಂಬ (ಹರ್ಷಚರಿತೆ) ಬಾಣನ ವರ್ಣನೆ ಯನ್ನು ಇದರೊಡನೆ ಹೋಲಿಸಬಹುದು.
೪೮. ಚಕ್ರವಾಕಪಕ್ಷಿಗಳ ವಿಯೋಗ: ಚಂಡಮರೀಚಿಗೆ–ಸೂರ್ಯನಿಗೆ, ಅಸ್ತಮಯವಿಲ್ಲ ದುದು–ಮುಳುಗುವಿಕೆಯಿಲ್ಲದುದಾದ, ಒಂದೆಡೆ–ಒಂದು ಪ್ರದೇಶ, ನಿಮ್ಮ ಕೇಳ್ದುದುಂ ಕಂಡುದುಂ–ನೀವು ಕೇಳಿದ್ದೂ ಕಂಡದ್ದೂ, ಉಳ್ಳೊಡೆ–ಇರುವ ಪಕ್ಷದಲ್ಲಿ, ಇಂ ಬೆಸಸಿಂ– ಇನ್ನು ಹೇಳಿರಿ, ಆಂ–ನಾವು, ಇರದೆ–ಬಿಡದೆ, ಅಲ್ಲಿಗೆ–ಆ ಎಡೆಗೆ, ಪೋಪೆವು–ಹೋಗು ತ್ತೇವೆ, ಎಂದು–ಎಂಬುದಾಗಿ, ಪಕ್ಷಿಗಳೆಲ್ಲಮಂ–ಎಲ್ಲಾ ಹಕ್ಕಿಗಳನ್ನೂ, ಮೆಯ್ಗೊಂಡ– ರೂಪಾಂತ, ಒಲವಿಂದೆ–ಪ್ರೀತಿಯಿಂದ, ಅಗಲ್ಕೆಗಣಮಾಱದೆ–ಅಗಲಿಕೆಗೆ ಸ್ವಲ್ಪವೂ ಸಮರ್ಥವಾಗದೆ, ಮರುಳ್ಗೊಂಡವೋಲ್–ಹುಚ್ಚು ಹಿಡಿದ ಹಾಗೆ, ಊಳ್ದು–ಕೂಗಿ, ಕೂಡೆ– ಕೂಡಲೆ, ಬೆಸಗೊಂಡು–ಕೇಳಿ, ಜಕ್ಕವಕ್ಕಿಗಳ್–ಚಕ್ರವಾಕ ಪಕ್ಷಿಗಳು ಬೞಲ್ದುವು–ಆಯಾಸ ಗೊಂಡುವು.
ವಚನ : ಪಚ್ಚುಕೊಂಡು–ವಿಭಾಗಿಸಿಕೊಂಡು, ಹಂಚಿಕೊಂಡು; ಅಸುಂಗೊಂಡು– ಬೇಗನೆ, ಶೀಘ್ರವಾಗಿ; ಬೞಿಯಂ–ಅನಂತರ; ಅಸು (ಸಂ) ಆಶು+ಕೊಳ್=ಅಸುಂಗೊಳ್; ಇಲ್ಲಿ ‘ಅಸುಂಗೊಳ್ ಪ್ರಾಣಾಪಹರಣೇ’ ಎಂಬುದು ಸಂಗತವಾಗುವುದಿಲ್ಲ.
೪೯. ಕತ್ತಲಾಗುವುದು : ದಿತಿಸುತಂ–ರಾಕ್ಷಸನು, ಮುಂ–ಮೊದಲೇ, ಜಗಮೆಲ್ಲಮಂ– ಜಗತ್ತನ್ನೆಲ್ಲ, ಮಸಿಯಿಂದಂ–ಕಾಡಿಗೆಯ ಕಪ್ಪಿನಿಂದ, ಪೊೞ್ದನೋ–ಹೂತುಬಿಟ್ಟನೋ; ಕಾಲ ಮೇಘಸಮೂಹಂ–ಕಪ್ಪು ಮೋಡಗಳ ಮೊತ್ತ, ದೆಸೆಯೆಲ್ಲಮಂ–ಎಲ್ಲಾ ದಿಕ್ಕುಗಳನ್ನೂ, ಕವಿದುದೋ–ಮುಚ್ಚಿಕೊಂಡಿತೋ; ಶಂಭು–ಶಿವನು, ಗಂಧೇಭ ಚರ್ಮಂಗಳಂ–ಸೊಕ್ಕಾನೆಯ ಚರ್ಮವನ್ನು, ಪಸರಂಗೆಯ್ದನೋ–ಬಿಚ್ಚಿ ಹರಡಿದನೋ, ಎಂಬ, ಬಗೆಯಂ–ಚಿಂತನೆ ಯನ್ನು, ತಳ್ಪೊಯ್ದು–ಪ್ರತಿಘಾತಿಸಿ, ಕೞ್ಪೇಱೆ–ಕಪ್ಪು ಬಣ್ಣವು ವೃದ್ಧಿಯಾಗಲು, ಸೂಚಿಸ ಲಾರ್ಗಂ ವಶಮಾಗದಂತು–ಸೂಚಿಸುವುದಕ್ಕೆ ಯಾರಿಗೂ ಶಕ್ಯವಾಗದಿರುವಂತೆ, ಉದ್ಧಾಮ ಭೀಮಂ ತಮಂ–ಅತಿಶಯವಾಗಿ ಭಯಂಕರವಾದ ಕತ್ತಲೆ, ಕವಿದತ್ತು–ಮುಸುಕಿತು.
ವಚನ : ತಾರಾಗಣಂಗಳ್–ನಕ್ಷತ್ರ ಸಮೂಹಗಳು; ದಿಶಾವನಿತೆಯರ–ದಿಕ್ಕೆಂಬ ಸ್ತ್ರೀಯರ; ಮಕುಟಮಾಣಿಕಂಗಳಂತೆ–ಕಿರೀಟದ ರತ್ನಗಳಂತೆ; ಎನಿತು ಬೆಳಗಿಯುಂ–ಎಷ್ಟು ಹೊಳೆದರೂ; ಕೞ್ತಲೆಯಂ–ಕತ್ತಲೆಯನ್ನು; ಅಳೆಯಲಾಱವಾದವು–ಪೀಡಿಸಲಾರದಾದುವು, ಎಂದರೆ ತೊಲಗಿಸಲಸಮರ್ಥವಾದುವು. ಕನಕಪ್ರಾಸಾದ ಪಂಕ್ತಿಗ [ಳ]–ಚಿನ್ನದ ಉಪ್ಪರಿಗೆ ಮನೆಗಳ; ಸೊಡರ್ಗಳಂ–ದೀಪಗಳನ್ನು; ತಮೋರಾಜಕಂ–ಕತ್ತಲೆಯೆಂಬ ರಾಜ; ಬೆಳಗಿನ ಸೆಱೆಯ–ಬೆಳಕೆಂಬ ಬಂದಿಯ; ಬಂಬಲ್ಗಳೆ–ಗುಂಪುಗಳೆ; ವಿಮುಖೀಭೂತಂಗಳಾದುವು– ಮುಖ ತಿರುಗಿಸಿಕೊಂಡುವು ಆದುವು; ತಂಡತಂಡದೆ–ಗುಂಪು ಗುಂಪಾಗಿ; ನೂಪುರಂಗಳ್– ಕಾಲಂದಿಗೆಗಳ; ದೀರ್ಘಿಕಾ–ಕೊಳಗಳ; ತಳವೆಳಗಾದುವು–ಭ್ರಾಂತಿಗೊಂಡುವು; ಪಾರಾವತ– ಪಾರಿವಾಳ; ಅಂತರಾಳ–ಒಳಗಡೆಯ; ಕಟಕ–ತಪ್ಪಲಿನ; ಕುಹರ–ಗವಿಗಳ; ಪರಿಕರ– ಸಹಾಯವನ್ನುಳ್ಳ, ನಿಶಾಕರಂ–ಚಂದ್ರನು; ಹರಿದಳಿತ–ಸಿಂಹದಿಂದ ಸೀಳಲ್ಪಟ್ಟ; ಹರಿಣ ರುಧಿರ ನಿಚಯ–ಜಿಂಕೆಯ ರಕ್ತದ ರಾಶಿಯಿಂದ, ನಿಚಿತವಾದಂತೆ–ತುಂಬಿದಂತೆ, ಲೋಹಿತಾಂಗ ನಾಗೆ–ಕೆಂಪೇರಿದ ದೇಹವುಳ್ಳವನಾಗಲು. ಈ ವಚನದ ಕೊನೆಯ ಮೂರು ಸಾಲುಗಳನ್ನು “ಭಗವತ್ಯುದಯಗಿರಿ ಶಿಖರ ಕಟಕ ಕುಹರ ಗತ ಹರಿ ಖರ ನಖರ ನಿವಹ ಹೇತಿ ನಿಹತ ನಿಜ ಹರಿಣ ಗಳಿತ ರುಧಿರ ನಿಚಯ ನಿಚಿತಮಿವ ಲೋಹಿತಂ ವಪುಃ” ಎಂಬ ಹರ್ಷಚರಿತೆಯ (೧) ಗದ್ಯಭಾಗದೊಡನೆ ಹೋಲಿಸಬಹುದು. ಇದರ ಸಹಾಯದಿಂದ ಪಂಪನ ಪಂಕ್ತಿಗಳ ಪಾಠವನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
೫೦. ಚಂದ್ರೋದಯದ ವರ್ಣನೆ :– ಸಂಜೆಯೊಳ್–ಸಂಜೆಯೆಂಬ ಸ್ತ್ರೀಯಲ್ಲಿ, ನೆರೆದಯ್–ಕೂಡಿದೆ, ಎಂದು, ಕಾಯ್ದು–ಕೋಪಿಸಿ, ಒದೆದೊಡೆ–ಒದ್ದರೆ, ರೋಹಿಣೀ ಚರಣಾಲಕ್ತಕರಾಗಂ–ಚಂದ್ರನ ಹೆಂಡತಿಯಾದ ರೋಹಿಣೀ ನಕ್ಷತ್ರದ ಕಾಲುಗಳಿಗೆ ಬಳಿದ ಅರಗಿನ ಕೆಂಬಣ್ಣ, ಆತ್ಮಾಂಗದೊಳ್–ತನ್ನ ದೇಹದಲ್ಲಿ, ಅಚ್ಚಿಱಿದುದೋ–ಎರಕ ವಾಯಿತೋ, ಏನ್–ಏನು? ಮೇಣ್–ಅಥವಾ, ಕಾಮಿಗಳ್ಗೆ–ಕಾಮಪೀಡಿತರಿಗೆ, ಈವ– ಕೊಡುವ, ರಾಗರಸಂ–ಪ್ರೇಮವರ್ಧನಕಾರಿಯಾದ ರಸವು, ಪೊಣ್ಮಿದುದೋ–ಹೊಮ್ಮಿತೋ, ತಮೋಗಜದ–ಕತ್ತಲೆಯೆಂಬ ಆನೆಯ, ಕೋಡ–ಕೊಂಬಿನ, ದಂತದ, ಏಱಿಂದಂ–ಗಾಯ ದಿಂದ, ಹರಿಣಂ ತಾಂ–ಜಿಂಕೆ ತಾನು, ನೊಂದುದೋ, ಏನ್–ಏನು? ಸುಧಾ ಸೂತಿಯಾ– ಚಂದ್ರನ, ಬಿಂಬಂ–ಮಂಡಲವು, ರಕ್ತರುಚಿಯಿಂ–ಕೆಂಪು ಕಾಂತಿಯಿಂದ, ಎನಿಸಿತ್ತು– ಎನ್ನುವಂತೆ ಇತ್ತು. ಈ ಪದ್ಯದ ಪ್ರಥಮ ಪಂಕ್ತಿಯನ್ನು “ರತಿಕಲಹಕುಪಿತ ರೋಹಿಣೀ ಚರಣಾಲಕ್ತಕ ರಸ ಲಾಂಛಿತಮಿವಾಭಿನವೋದಯ ಲೋಹಿತಂ ರಜನಿಕರ ಮುದಿತಂ” ಎಂಬ ‘ಕಾದಂಬರಿ’ (ಬಾಣ) ಯ ವಾಕ್ಯದೊಡನೆ ಹೋಲಿಸಿ.
ವಚನ : ತನ್ನ ರಾಗಮಂ–ತನ್ನ ಕೆಂಬಣ್ಣವನ್ನು; ರಾಗಿಗಳ್ಗೆ–ಪ್ರೇಮಿಗಳಿಗೆ, ಪಚ್ಚಿ ಕೊಟ್ಟಂತೆ–ಹಂಚಿಕೊಟ್ಟ ಹಾಗೆ, ಪತ್ತುವಿಟ್ಟಾಗಳ್–ಬಿಟ್ಟು ಹೋದಾಗ.
೫೧. ಮುಂ–ಮೊದಲು, ಈಶಂ–ಶಿವನು, ಮುನಿದು–ಕೋಪಿಸಿ, ತವೆ–ಚೆನ್ನಾಗಿ (ನಾಶವಾಗುವಂತೆ) ಸುಟ್ಟು, ಪುನರ್ಜನ್ಮಮಂ–ಮರುಹುಟ್ಟನ್ನು, ನಿನಗೆ, ಇತ್ತಂ–ಕೊಟ್ಟನು, ಎಂದು, ಆ ರತಿ–ಆ ಕಾಮನ ಹೆಂಡತಿಯಾದ ರತಿದೇವಿ, ಪಾಪಮುಂ–ಪಾಪವೂ, ಪಡಣ ಮುಂ–ಪತನವೂ, ಪೋಪಂತೆ–ತೊಲಗುವಂತೆ, ಕಾಮಂಗೆ–ಮನ್ಮಥನಿಗೆ, ಮಜ್ಜನ ಕೆಂದೆತ್ತಿದ–ಸ್ನಾನಕ್ಕೆಂದು ಮೇಲೆತ್ತಿಕೊಂಡ, ಚಂದ್ರಕಾಂತಘಟದೊಳ್–ಚಂದ್ರಕಾಂತ ಶಿಲೆಯ ಕಲಶದಲ್ಲಿ, ಅೞ್ತಿಯಿಂ–ಪ್ರೀತಿಯಿಂದ, ತಂದು, ಪುಷ್ಪವಾಸನೆಗೆ ಎಂದು–ಹೂವಿನ ಕಂಪು ಮಿಶ್ರವಾಗಲಿ ಎಂದು, ಇಕ್ಕಿದ–ಹಾಕಿದ, ನೀಳನೀರರುಹಮಂ–ಕರಿದಾದ ತಾವರೆಯನ್ನು, ಇಂದುವಾ–ಚಂದ್ರನ, ಕೞ್ಪು–ಕಪ್ಪು, ಕರೆ, ಪೋಲ್ತಲ್ತು–ಹೋಲಿತು. ಚಿನ್ನದ ಕೊಡದ ಮೇಲೆ ಕರಿತಾವರೆ ಇಟ್ಟರೆ ಹೇಗೋ ಹಾಗೆ ಚಂದ್ರಬಿಂಬದ ಮಧ್ಯದ ಕರೆ ಕಾಣುತ್ತಿತ್ತು. ಇಲ್ಲಿ “ಪಡಣ”, ಶಬ್ದ ವಿಚಾರಣೀಯ; “ಅದಂ ಕೇಳ್ದು ವಿದೂಷಕನೀಕೆ…. ಹಡಣ ಮೊಣಗಿದ ಹಳೆಯ ಸಿದ್ದಿಗೆಯಂತೆ….ತನ್ನ ದೌರ್ಭಾಗ್ಯಮಂ ಬೇಟದ ಮೇಲೆ ನೆವಮಿಕ್ಕಿದ ಪಳೆಂದರಸನಂ ನಗಿಸಿದಂ” (ಲೀಲಾ ೨–೧೧೭); “ಹಡಣಂ ಪೋದತ್ತು ಕುತ್ತಂ ಕೞಿದುದು, ಶನಿ ಪಂಗಿತ್ತು” (ಸೂಕ್ತಿಸು. ೮–೪೪೫) ಎಂಬ ಎರಡು ಪ್ರಯೋಗಗಳಿವೆ, ಆದರೆ ಅರ್ಥವೇನೋ ಸ್ಪಷ್ಟವಾಗಿಲ್ಲ. (ಸಂ.) ಪತನ ಪ್ರಾ. ಪಡಣ; “ಪತನ” ಕ್ಕೆ ಬೀಳುವುದು, ನರಕ, ಸಾವು ಎಂಬಿ ತ್ಯಾದಿ ಅರ್ಥಗಳು ಇವೆ; ಇದನ್ನೇ ಇಲ್ಲಿ ಆಶ್ರಯಿಸಿದೆ; “ಸ್ತ್ರೀಯರ ಪಾಪಫಲಮಂ ಕೇಳೆಂದಿಂತೆಂದಂ ಗರ್ಭದೊಳಿರ್ದಂದಿನ ದುಃಖಮುಂ ಕನ್ಯಾಕಾಲದೊಳಭಿಮತಲಕ್ಷಣಮಾಗೆ ಪುಟ್ಟಿದ ಮನೆಯೊಳಂ ಕೊಟ್ಟ ಮನೆಯೊಳಂ ದೊಱೆಯ್ದುವುದುಂ, ಬಂಜೆಯಪ್ಪುದುಂ ಬಡತನಮಪ್ಪುದುಂ ಪಡಣಿಗೆಯೆಂದು ಗಂಡನೊಲ್ಲದೆ ಬಿಸುೞ್ವುದುಂ” (ಚಾವುಂಪು. ಸೀತೆಯ ಕಥೆ) ಎಂಬೆಡೆಯಲ್ಲಿ ‘ಪಡಣಿಗೆ’ ಪ್ರಯೋಗವಾಗಿದೆ, ಇದಕ್ಕೆ ಪತಿತಳಾದವಳು, ಕೆಟ್ಟು ಹೋದವಳು ಎಂಬರ್ಥ ಹೊಂದುತ್ತದೆ; ‘ಪತನಿಕಾ’ ಎಂಬ ಶಬ್ದವೊಂದಿದ್ದರೆ ಅದರ ಪ್ರಾಕೃತರೂಪ “ಪಡಣಿಗೆ” ಎಂದಾಗುತ್ತದೆ.
೫೨. ನಭೋಂತರ್ಭೂವಿವಿರಮಂ–ಆಕಾಶದ ಭೂಮಿಯ ನಡುವಣ ಪ್ರದೇಶವನ್ನು, ಅಮರ್ದಿನ ಎಸಕಂ–ಅಮೃತದ ಶೋಭೆ, ಆವರಿಸಿತ್ತೋ–ಆವರಿಸಿಕೊಂಡಿತ್ತೋ, ಎನೆ– ಎನ್ನಲು, ವಿರಹಿಗಳ್–ಅಗಲಿದ ಪ್ರಣಯಿಗಳು, ಓ ಓ ಇದು–ಕಾಪಾಡಿ, ಕಾಪಾಡಿ, ಇದು, ಮದನನ–ಕಾಮನ, ಸೋದನ ದೀವಿಗೆಯೆನೆ–ಹುಡುಕುವುದಕ್ಕಾಗಿ ಬಳಸುವ ದೀಪವೊ ಎನ್ನಲು, ತುಹಿನಕರಂ–ಚಂದ್ರ, ತೊಳಗಿ ಬೆಳಗಿದಂ–ಹೊಳೆದು ಬೆಳಗಿದನು.
ವಚನ : ಅಚ್ಚ ಬೆಳ್ದಿಂಗಳೊಳ್–ಶುಭ್ರವಾದ ಬೆಳುದಿಂಗಳಿನಲ್ಲಿ; ಸುಧಾ ಧವಳಿತ– ಸುಣ್ಣದಿಂದ ಬೆಳ್ಳಗಾಗಿಸಲ್ಪಟ್ಟ; ಸಿರಿಯೋಲಗಂಗೊಟ್ಟು–ಐಶ್ವರ್ಯಮಯವಾದ ಆಸ್ಥಾನ ದಲ್ಲಿದ್ದು;
೫೩. ಆಗಳ್–ಆಗ, ಭೋಗಿ–ಸುಖಿಯಾದ, ಅರ್ಜುನನು, ಅನಂತಂ–ಕೃಷ್ಣನು, ಅನಂತ ಫಣಾಮಣಿಕಿರಣ–ಆದಿಶೇಷನ ಹೆಡೆಯ ರತ್ನದ ಕಾಂತಿ, ಎಸೆಯೆ–ಪ್ರಕಾಶಿಸಲು, ದುಗ್ಧಾರ್ಣವ ದೊಳ್–ಹಾಲ್ಗಡಲಲ್ಲಿ, ರಾಗದಿಂ–ಸಂತೋಷದಿಂದ, ಇರ್ಪಂತೆ–ಇರುವ ಹಾಗೆ, ಕೆಯ್ದೀವಿ ಗೆಗಳ್–ಕೈ ದೀಪಗಳು, ತೞತ್ತೞಿಸಿ–ಪ್ರಕಾಶಿಸಿ, ಬೆಳಗೆ–ಬೆಳಗಲು, ಇರ್ದಂ–ಇದ್ದನು.
೫೪. ಅತ್ತ–ಅತ್ತ ಕಡೆ, ಸುಭದ್ರೆಯುಂ–ಸುಭದ್ರೆಯು ಕೂಡ, ಒಡಲ್ ಉರಿಯುತ್ತಿರೆ– ವಿರಹ ತಾಪದಿಂದ ಮೈಸುಡುತ್ತಿರಲು, ಮರವಟ್ಟು–ಮರದ ಹಾಗೆ ಮಲಗಿ ಎಂದರೆ ನಿಶ್ಚೇಷ್ಟಳಾಗಿ, ವಿಜಯನಿರ್ದತ್ತಲೆ–ಅರ್ಜುನನು ಇದ್ದ ಕಡೆಗೇ, ನೋಡುತ್ತಿರೆ–ನೋಡು ತ್ತಿರಲು, ಆಕೆಯ ರೂಪಂ–ಅವಳ ಆಕಾರವನ್ನು, ಕೆಳದಿಯರ ತಂಡಂ–ಸಖಿಯರ ಸಮೂಹ, ಸುಸಾಳಭಂಜಿಕೆಗೆತ್ತುದು–ಸೊಗಸಾದ ಬೊಂಬೆಯೆಂದು ಭಾವಿಸಿತು.
೫೫. ನಾಣ್–ನಾಚಿಕೆ, ಲಜ್ಜೆ, ಕನ್ನೆತನಂಗೆಯ್ಯಲ್–ಕನ್ಯಾಭಾವವನ್ನು ತೋರಿಸಲು, ಬಗೆಗುಂ–ಎಣಿಸುತ್ತಿದೆ; ಮನಮುಂ–ಮನಸ್ಸು ಕೂಡ, ಮಿಗೆ–ಹೆಚ್ಚಾಗಿ, ಇೞ್ದುವರಿಯಲ್– ಎಳೆದುಕೊಂಡು ಹೋಗಲು, ಬಗೆಗುಂ ಯೋಚಿಸುತ್ತಿದೆ; ತನ್ನಳಿಪಂ–ತನ್ನ ಪ್ರೇಮವನ್ನು, ಕನ್ನಡಿಕುಂ–ಕನ್ನಡಿಸುತ್ತದೆ, ಎಂದರೆ ಪ್ರತಿಫಲಿಸುತ್ತದೆ; ಕನ್ನೆ–ಸುಭದ್ರೆ, ತನ್ನಲೆ–ತನ್ನಲ್ಲಿಯೇ, ತಾಂ–ತಾನು, ಇಂತು–ಹೀಗೆ, ತಳವೆಳಗಾದಳ್–ತಬ್ಬಿಬ್ಬಾದಳು, ಅಸ್ಥಿರಳಾದಳು.
೫೬. ಹರಿಗನ–ಅರ್ಜುನನ, ಪಡೆಮಾತನೆ–ಸುದ್ದಿಯನ್ನೇ, ನುಡಿಯಿಸಿ–ಕೆಳದಿಯರಿಂದ ಮಾತಾಡಿಸಿ, ಕೇಳ್ಗುಂ–ಕೇಳುತ್ತಾಳೆ, ಮಾತು, ತಪ್ಪೊಡಂ–ಮುಗಿದ ಪಕ್ಷದಲ್ಲಿ, ಮತ್ತಂ– ತಿರುಗಿಯೂ, ಅದಂ–ಅದನ್ನೇ, ಮೊದಲಿಂದ–ಆರಂಭದಿಂದ, ನುಡಿಯಿಸುಗುಂ–ಹೇಳಿಸು ತ್ತಾಳೆ; ಆ ನುಡಿ ಪಱಿಪಡೆ–ಆ ಮಾತು ನಿಂತುಹೋಗಲು, ಕೆಳದಿಯರಂ–ಸಖಿಯರನ್ನು, ಮುಳಿದು–ಕೋಪಿಸಿ, ನೋಡುಗುಂ–ನೋಡುತ್ತಾಳೆ. ತಪ್ಪೊಡೆ ತವು+ದ=ತಪ್ಪ+ಒಡೆ; ಪಱಿಪಡು=ಪಱಿ+ಪಡು=ಕತ್ತರಿಸಿ ಬೀಳು, ನಡುವೆ ನಿಲ್ಲು, ಮುಗಿ.
೫೭. ಅಱಿಮರುಳ್–ತಿಳಿವು ಭ್ರಮೆಗೊಳ್ಳುವುದು ಎಂದರೆ ಮನೋವೈಕಲ್ಯವು, ಅಂತುಟೆ–ಹಾಗೆಯೇ; ಸೊರ್ಕಿನ–ಸೊಕ್ಕಿನ, ಮೆಯ್ಮರವಿನ, ತೆಱ [ನಂ] ತುಟೆ–ರೀತಿ ಹಾಗೆಯೇ; ಮನಮೊಱಲ್ವುದು–ಮನಸ್ಸು ಪ್ರೀತಿಸುತ್ತದೆ, ಎರ್ದೆಯುರಿವುದು–ಎದೆ ಉರಿಯುತ್ತದೆ. ಮೆಯ್ ಎಱಗುವುದು–ಮೈ ಬಾಗುತ್ತದೆ, ಪದೆವುದು–ಬಯಸುತ್ತದೆ, ಇದಂ-ಇದನ್ನು, ಅನ್-ನಾನು, ಇದೇಕೆಂದು-ಇದು ಏಕೆ ಎಂದು, ಅಱಿಯೆಂ-ತಿಳಿಯೆನು, ಎಂದು, ಕನ್ನೆ, ತಳವೆಳಗಾದಳ್-ಭ್ರಾಂತಳಾದಳು.
೫೮. ಆನೆಯನೇಱಿ–ಆನೆಯನ್ನು ಹತ್ತಿ, ಸೌಷ್ಠವದೆ–ಸೊಗಸಿನಿಂದ, ಬರ್ಪ–ಬರುವ, ಅರಿಕೇಸರಿಯ–ಅರ್ಜುನನ, ಒಂದು ಗಾಡಿಯ–ಒಂದು ಚೆಲುವಿನ, ಉದ್ದಾನಿ–ಅತಿಶಯವು, ತಗುಳ್ದು–ಬೆನ್ನಟ್ಟಿ, ಕಣ್ಣೊಳೆ ತೊೞಲ್ದು–ಕಣ್ಣಲ್ಲಿಯೇ ಸುತ್ತಾಡಿ, ಎರ್ದೆಯೊಳ್–ಮನಸ್ಸಿ ನಲ್ಲಿ, ತಡಮಾಡೆ–ನಿಧಾನವಾಗಿ ಚಲಿಸಲು, ಬೇಟದ–ಪ್ರೇಮದ, ಉದ್ದಾನಿಯಂ–ಆಧಿಕ್ಯ ವನ್ನು, ಆನೆ–ತಾಳಲು, ಪಡೆಯಲು, ಮನ್ಮಥಮಹೀಭುಜಂ–ಕಾಮನೆಂಬ ರಾಜನು, ಓವದೆ– ರಕ್ಷಿಸದೆ, ನಿರ್ದಾಕ್ಷಿಣ್ಯವಾಗಿ, ತೋಱಿಕೊಟ್ಟ–ತೋರಿಸಿ ಬಿಟ್ಟ ಎಂದರೆ ಛೂ ಬಿಟ್ಟ, ಒಂದು ಆನೆಯೆ–ಒಂದು ಆನೆಯೇ, ತನ್ನಂ–ತನ್ನನ್ನು, ಆನೆಗೊಲೆಗೊಂದಪುದು–ಆನೆಯ ಕೊಲೆ ಯನ್ನು ಕೊಲ್ಲುತ್ತದೆ ಎಂದರೆ ಆನೆಯು ಕೊಲ್ಲುವ ಹಾಗೆ ಕೊಲ್ಲುತ್ತದೆ, ಎಂದು, ಲತಾಂಗಿ– ಸುಭದ್ರೆ, ಬೆರ್ಚಿದಳ್–ಹೆದರಿದಳು, ಇಲ್ಲಿನ ‘ಆನೆಗೊಲೆ ಕೊಲ್’ ಎಂಬ ನುಡಿಗಟ್ಟು ‘ಅಸಗ ವೊಯಿಲ್ವೊಯ್’ ಎಂಬುದಕ್ಕೆ ರಚನೆಯಲ್ಲಿ ಸಮಾನವಾಗಿದೆ.
೫೯. ಮನಂ–ಮನಸ್ಸು, ಆರಾಧಿತ ಹೋಮಭೂಮಿ–ಪೂಜಿಸಲ್ಪಟ್ಟ ಯಜ್ಞಭೂಮಿ; ಕಾಮಾತುರರ್–ಕಾಮಪೀಡಿತರು, ಪಶುಗಳ್–ಬಲಿಯಾದ ಪ್ರಾಣಿಗಳು; ಬಂದ ಮಾವನಿ ತುಂ–ಫಲವಾದ ಮಾವಿನ ಮರಗಳಷ್ಟೂ, ಸ್ಥಾಪಿತ–ನೆಟ್ಟ, ಯೂಪಕೋಟಿ–ಬಲಿಗಂಬಗಳು, ಬಳವತ್–ಬಲದಿಂದ ಕೂಡಿದ, ಕಾಮಾಗ್ನಿ–ಕಾಮವೆಂಬ ಉರಿಯೇ, ಹೋಮಾಗ್ನಿ–ಹೋಮ ಮಾಡುವ ಅಗ್ನಿ, ಚಂದನ ಕರ್ಪೂರ ಮೃಣಾಳನಾಳಮೆ–ಶ್ರೀಗಂಧ, ಕರ್ಪೂರ, ತಾವರೆಯ ದಂಟು–ಇವುಗಳೇ, ಪೊದಳ್ದ–ಹರಡಿದ, ಇಧ್ಮಂಗಳ್–ಸೌದೆಗಳು, ಇಂತಾಗೆ–ಹೀಗಾಗಲು, ತಾನಿನಿತುಂ–ಇಷ್ಟೆಲ್ಲಾ ತಾನು, ಕಾಮನ–ಮನ್ಮಥನ, ಬೇಳ್ವೆಯೆಂದು–ಯಜ್ಞವೆಂಬುದಾಗಿ, ತನ್ವಂಗಿ–ಕೃಶಾಂಗಿಯಾದ ಸುಭದ್ರೆ, ಬೆಳ್ದಿಂಗಳೊಳ್–ಬೆಳುದಿಂಗಳಿನಲ್ಲಿ, ಸುಗಿದಳ್–ಭಯ ಪಟ್ಟಳು.
ವಚನ : ಸ್ತೋಭಂಗೊಂಡ–ತಡೆಯಲ್ಪಟ್ಟ, ಸ್ತಂಭಿತವಾದ; ಗ್ರಹಗೃಹೀತೆಯಾಗಿರೆ– ಗ್ರಹದಿಂದ ಹಿಡಿಯಲ್ಪಟ್ಟವಳಾಗಿರಲು; ಸ್ವೇದ–ಬೆವರು; ವೈವರ್ಣ್ಯ–ಬಣ್ಣ ಮಾಸುವಿಕೆ; ಅನಾಹಾರ–ಆಹಾರವಿಲ್ಲದಿರುವುದು; ಅಶ್ರುಮೋಕ್ಷ–ಕಣ್ಣೀರು ಸುರಿಸುವುದು; ನಾನಾ ವಿಕಾರಂಗಳ್–ನಾನಾ ಬಗೆಯಾದ ವ್ಯತ್ಯಾಸಗಳು, ದಶಾವಸ್ಥೆಗಳು;
೬೦. ಪದೆವೆರ್ದೆ–ಪ್ರೀತಿಸುವ ಹೃದಯ, ಬತ್ತೆ–ಒಣಗಲು, ಕೆತ್ತುವ–ನಡುಗುವ ಅಧರಂ–ತುಟಿ, ದೆಸೆಗೆಟ್ಟ–ಸ್ಥಿತಿ ಕೆಟ್ಟ, ಅಲರ್ಗಣ್ಣ–ಹೂವಿನಂತಿರುವ ಕಣ್ಣಿನ, ನೋಟಂ– ದೃಷ್ಟಿ; ಉಣ್ಮಿದ–ಹೊರಸೂಸಿದ, ಬೆಮರ್–ಬೆವರು; ಓಳಿವಟ್ಟ–ಸಾಲಾಗಿ ಬರುವ, ನಿಡುಸುಯ್–ನಿಟ್ಟುಸಿರು; ತೊದಳಿಂಗೆ–ತೊದಲಿಗೆ, ಎಡೆಗೊಂಡ–ಅವಕಾಶವಿತ್ತ, ಮಾತು; ಕುಂದಿದ–ಕುಗ್ಗಿ ಹೋದ, ಲತಿಕಾಂಗಂ–ಬಳ್ಳಿಮೆಯ್ಯಿ; ಒಂದಿದ–ಉಂಟಾದ, ವಿಕಾರಂ– ದೇಹವಿಕಾರವು, ಅದು, ಈಕೆಯೊಳ್–ಇವಳಲ್ಲಿ, ಆದುದು–ಉಂಟಾಯಿತು; ಇಂತಿದು– ಹೀಗೆ ಇದೆಲ್ಲಾ, ಕುಸುಮಾಸ್ತ್ರನೆಂಬ–ಮನ್ಮಥನೆಂಬ, ಅದಟಂ–ಶೂರನು, ಇಕ್ಕಿದ–ಹಾಕಿದ, ಸೊಕ್ಕಿನ–ಕಾಮೋನ್ಮಾದದ, ಗೊಡ್ಡಮಾಗದೇ–ಚೇಷ್ಟೆಯಾಗಿಲ್ಲವೆ? ಆಗಿದೆ. ಗೊಡ್ (ಪ್ರಾ) ಕುಡ್ಡ, ಕೋಡ್ಡ–ಆಶ್ಚರ್ಯ, ಕುತೂಹಲ.
೬೧. ಕೞಿಯಲರಾದ–ಕಳಿತ ಹೂವಾದ, ಅಜ್ಜಿ ಹೂವಾದ, ಸಂಪಿಗೆಯ ಬಣ್ಣದ ವೋಲೆ–ಸಂಪಿಗೆ ಹೂವಿನ ಬಣ್ಣದ ಹಾಗೆ, ಬೆಳರ್ತ–ಬಿಳುಪಾದ, ಬಣ್ಣದೊಳ್–ಬಣ್ಣದಲ್ಲಿ, ಕಣ್ಗಳ ಮೊದಲ್ಗಳೊಳ್–ಕಣ್ಣುಗಳ ಮುಂಭಾಗದಲ್ಲಿ, ಕೆಂಪು–ಕೆಂಬಣ್ಣ, ಗೞೆಯಿಸೆ– ಉಂಟಾಗಲು, ಒಯ್ಯನೆ–ಮೆಲ್ಲಗೆ, ತೋಱೆ–ತೋರಿಬರಲು, ಮೈಯೊಳೆ–ಮೈಯಲ್ಲಿಯೇ, ಬಾಡಿ–ಬತ್ತಿ, ಪಾಡೞಿದು–ಸ್ಥಿತಿಗೆಟ್ಟು, ಬೞಲ್ದು–ಬಾಗಿ, ಜೋಲ್ದ–ನೇಲುತ್ತಿರುವ, ಇರವು–ಸ್ಥಿತಿ, ಮೆಯ್ವಿಡಿದು–ಮೈಯನ್ನು ಹಿಡಿದು, ಎನ್ನ–ನನ್ನ, ಕಣ್ಗಳೊಳ್–ಕಣ್ಣುಗಳಲ್ಲಿ, ಸುೞಿದುವು–ಸುಳಿದಾಡಿದವು; ತಾಮೆ–ತಾವೇ ಇವೆಲ್ಲ, ಕನ್ನೆಯ–ಕನ್ಯೆಯ, ಕನ್ನೆವೇಟಮಂ– ಕನ್ಯಾ ಪ್ರೀತಿಯನ್ನು, ಪ್ರಥಮ ಪ್ರೀತಿಯನ್ನು, ಕನ್ನಡಿಸಿದಪ್ಪುವು–ಪ್ರತಿಬಿಂಬಿಸುತ್ತಿವೆ.
ವಚನ : ಕುಂಚದಡಪದ ಡವಕೆಯ–ಕುಂಚವನ್ನು ಹಿಡಿಯುವ, ಅಡಕೆಲೆ ಚೀಲವನ್ನು ಹಿಡಿಯುವ, ಪೀಕುದಾನಿಯನ್ನು ಹಿಡಿಯುವ, ಪರಿಚಾರಿಕೆಯರೆಲ್ಲರುಮಂ–ಸೇವಕಿಯ ರನ್ನೆಲ್ಲ, ಕಣ್ಗೆತ್ತಿ–ಕಣ್ಣು ಸಂಜ್ಞೆಯಿಂದ, ಕಣ್ಣನ್ನು ಮಿಟುಕಿಸಿ, ಕಳೆದು–ಕಳಿಸಿಬಿಟ್ಟು.
೬೨. ಈ ಕದಂಪುಗಳ್–ಈ ಕೆನ್ನೆಗಳು, ಮೃಗಪದ ಪತ್ರರೇಖೆಗಳಂ–ಕಸ್ತೂರಿಯಿಂದ ಬರೆದ ಪತ್ರಭಂಗವನ್ನು, ಏಕೆಗೆ–ಏಕೆಲೆ ಅಥವಾ ಏಕೆಯೋ, ತಾಳ್ದಿರದಾದವು–ತಾಳಿಕೊಂಡಿರ ದಂಥವಾದುವು; ಹಾರಮಣಿ ಮಂಜರಿಯಿಲ್ಲದೆ–ಹಾರದ ರತ್ನಖಚಿತವಾದ ಗೊಂಚಲು ಇಲ್ಲದೆ, ಉರ–ಎದೆಯು, ಏಕೆ–ಏತಕ್ಕೆ, ಬಿನ್ನಗಿರ್ದುದು–ಶೂನ್ಯವಾಗಿದೆ, ಬರಿದಾಗಿದೆ; ಹೇಮರಶನಾ ಧ್ವನಿಯಿಲ್ಲದೆ–ಚಿನ್ನದ ಒಡ್ಯಾಣದ ಸದ್ದಿಲ್ಲದೆ, ಈ ಜಗನಂ–ಈ ಸೊಂಟವು, ಏಕೆ–ಏತಕ್ಕೆ, ಮೂಗುವಟ್ಟುದು–ಮೂಕವಾಯಿತು; ಈ ಬಗೆಯೊಳ್–ಈ ರೀತಿಯಲ್ಲಿ, ಪಾದ ಪಂಕಜಂ–ಕಮಲದಂತಿರುವ ಪಾದವು, ಅಲಕ್ತಕದ್ರವದೊಳೊಂದದೆ–ಅರಗಿನ ರಸದಿಂದ ಲಿಪ್ತವಾಗದೆ, ನಿಂದುವು–ನಿಂತವು, ಏಕೆ ಅರಗಿನ ರಸವನ್ನು ಪಾದಗಳಿಗೆ ಬಳಿಯದೆ ಇದೆ. ಪ್ರೇಮ ಪೀಡಿತರಿಗೆ ಯಾವುದೂ ಬೇಕಾಗುವುದಿಲ್ಲ; ಇದಕ್ಕೆ ಅರತಿ ಎಂದು ಕರೆದಿದೆ. ಇಲ್ಲಿ ಬರುವ ಏಕೆಗೆ ಎಂಬ ಶಬ್ದ ಗಮನಾರ್ಹ. ಏಕೆ ಎಂಬುದಿಷ್ಟೆ ಸಾಕು, ಅದಕ್ಕೆ–ಗೆ ಏತಕ್ಕೆ ಸೇರಿದೆ; ಇದು ಯಾವ ಪ್ರತ್ಯಯ? ಈ ಹಿಂದೆ ಬಂದಿರುವ ‘ನೀನಾತನಂ ನೋಡುಗೇ’ ಎಂಬುದನ್ನು ನೋಡ ಬಹುದು; ಇಲ್ಲಿ–ಗೆ ಎಂಬುದು ವಿಜ್ಞಾಪನಾರ್ಥದಲ್ಲಿ ನೋಡು ಎಂಬ ಕ್ರಿಯೆಗೆ ಸೇರಿದೆ (ಶಬ್ದಾನು ೪೬೫); “ಬಂದುದು ಸತ್ಯಮೇಂ ಬನಕೆ ನೀಂ ತರೆ ಬಂದನೇ ಬಂದನೆ ದಿಟಂ ತಂದೆಗೆ ತಂದೆಗೇ ಕೆಳದಿ ಕಾಂತನನೆಂದೆನುತಂಗವಲ್ಲಿಯೊಳ್” (ಕುಸುಮಾವಳಿ, ೧೩–೯೬) ಎಂಬ ಪ್ರಯೋಗದಲ್ಲಿನ ತಂದೆಗೆ ತಂದೆಗೇ ಎಂಬ ರೂಪಗಳು ಚಿಂತನೀಯ; ಇಲ್ಲಿ ತರ್ ಧಾತುವಿನ ಭೂತಕಾಲದ ಮಧ್ಯ ಪುರುಷದ ಏಕವಚನ ಕ್ರಿಯೆ ತಂದಯ್ ತಂದೆ, ಬಂದಿದೆ; ಅದಕ್ಕೆ ಗೆ ಪ್ರತ್ಯಯ ಸೇರಿದೆ, ಪ್ರಶ್ನಾರ್ಥಕದಲ್ಲಿ. ಪ್ರಕೃತ ಏಕೆ ಎಂಬ ಪ್ರಶ್ನಾರ್ಥಕ ಸರ್ವನಾಮಕ್ಕೆ–ಗೆ ಪ್ರತ್ಯಯ ಅನುನಯ, ವಾತ್ಸಲ್ಯಾರ್ಥದಲ್ಲಿ ಸೇರಿದೆಯೆಂದು ಹೇಳಬಹುದು; ಏಕೆಗೆ ಎಂದರೆ ಏಕೆಲೇ, ಏಕಮ್ಮಾ ಎಂಬಂಥ ಅರ್ಥವಿರಬಹುದು. ಹೀಗೆಯೇ “ಎಲೆಗೆ ಕುಂದಬೆ ಪಲದಿವಸ ದಿಂದಂ ನಿನ್ನಂ ಕಂಡೆನಿಲ್ಲ” ಎಂಬಲ್ಲಿನ ಎಲೆಗೆ ಕೂಡ.
೬೩. ಸೋರ್ವ–ಸುರಿಯುತ್ತಿರುವ, ಕದುಷ್ಣವಾರಿಚಯದಿಂ–ನಸುಬಿಸಿಯಾದ ಕಣ್ಣೀರಿ ನಿಂದ, ನಗೆಗಣ್–ನಗೆಯಿಂದ ಕೂಡಿದ ಕಣ್ಣು; ಸುಯ್ಯ–ಉಸಿರಿನ, ಬೆಂಕೆಗಳಿಂ–ಉರಿ ಯಿಂದ, ಉಷ್ಣದಿಂದ, ಬಿಂಬಾಧರಂ–ತೊಂಡೆಯಂತಿರುವ ತುಟಿ; ನಾಡೆ–ವಿಶೇಷವಾಗಿ, ಬೆಡಂಗುಗೆಟ್ಟಿ–ಬೆಡಗನ್ನು ಹೋಗಲಾಡಿಸಿಕೊಂಡಿರುವ, ಇರವು ಇದು–ಸ್ಥಿತಿ ಇದು, ಇಂತು– ಹೀಗೆ, ಮಜ್ಜನಂಬುಗದೆ–ಸ್ನಾನ ಮಾಡದೆ, ಅರೋಗಿಸಲೊಲ್ಲದ–ಊಟ ಮಾಡಲು ಇಷ್ಟಪಡದ, ಇರವು–ಸ್ಥಿತಿ, ಏ ಕಾರಣಂ–ಯಾವ ಕಾರಣದಿಂದ? ನಾಣಳ್ಕು–ಲಜ್ಜೆಯ ಸುಸ್ತು, ಇದೇಂ–ಇದೇನು? ಸರೋಜಾನನೇ–ಸುಭದ್ರೆಯೇ, ಕಾಮನಂಬುಗಳ್–ಕಾಮನ ಬಾಣಗಳು, ಅತ್ತಿತ್ತೆಡೆಯಾಡಿ–ಅಲ್ಲಿ ಇಲ್ಲಿ ನಡುವೆ ಬಂದು, ನಿನ್ನಂ–ನಿನ್ನನ್ನು, ಸೋಂಕವೆ ವಲಂ–ಮುಟ್ಟುತ್ತಿಲ್ಲವೆ ನಿಜವಾಗಿಯೂ?
ವಚನ : ಮುನ್ನಮೆ–ಮೊದಲೇ, ಮುಟ್ಟಿ ನುಡಿಯದೆ–ಇಂಗಿತವನ್ನು ತಿಳಿದು ಮಾತಾಡದೆ; ಪೊಱವೊಱಗದೆ ಬಳಸಿ–ಹೊರ ಹೊರಗೇ, ಮೇಲು ಮೇಲೆಯೇ ಬಳಸಿದ ಮಾತುಗಳನ್ನಾಡಿ; ಶಂಕೆಯಂ–ಸಂದೇಹವನ್ನು, ಭಯವನ್ನು, ಕಿಡಿಸಿ–ಹೋಗುವಂತೆ ಮಾಡಿ.
೬೪. ವನಭೃತ್ಕುಂತಳೆಯಾ–ಮೋಡದಂತೆ ಕಪ್ಪಾದ ಮುಂಗುರುಳುಳ್ಳ, ಶಿರೀಷ ಕುಸುಮಾ ಭಾಂಗಕ್ಕೆ–ಬಾಗೆ ಹೂವಿನ ಬಣ್ಣವನ್ನುಳ್ಳ ಮೈಗೆ, ಕಂದಂ–ಮಾಸುವಿಕೆಯನ್ನು, ಕನತ್ಕನ ಕಾಂಭೋಜ ನಿಭಾನನಕ್ಕೆ–ಹೊಳೆವ ಹೊಂದಾವರೆಗೆ ಸಮಾನವಾದ ಮುಖಕ್ಕೆ, ಪಿರಿದುಂ–ಅಧಿಕ ವಾದ, ದೀನತ್ವಮಂ–ಬಾಡುವಿಕೆಯನ್ನು, ನೀಳ್ದಮಾವಿನ ಪೋೞಂದದ ಕಣ್ಗೆ–ಉದ್ದವಾದ ಮಾವಿನ ಹೋಳಿನಂತಿರುವ ಕಣ್ಣುಗಳಿಗೆ, ಬಾಷ್ಪಜಳಮಂ–ಕಣ್ಣೀರನ್ನು, ಚಿತ್ತಕ್ಕೆ–ಮನಸ್ಸಿಗೆ, ಸಂತಾಪಮಂ–ದುಃಖವನ್ನು, ಆವಂ–ಯಾವನು, ನಿನಗಂ–ನಿನಗೂ, ಮಾಡಿದಂ–ಉಂಟು ಮಾಡಿದನೋ, ಆತನೆ–ಆತನೇ, ಗಂಧೇಭ ವಿದ್ಯಾಧರಂ–ಅರ್ಜುನನು, ವಲಂ–ಅಲ್ಲವೇ, ನಿಶ್ಚಯ ವಾಗಿಯೂ?
ಈ ಪದ್ಯದಲ್ಲೂ ಇದರ ಹಿಂದಿನ ಪದ್ಯಗಳಲ್ಲೂ ಕಾಣುವ ದೇಶೀಯ ಶೈಲಿಯ ಮಾರ್ದವ ಚಿತ್ತಮೋಹಕವಾದುದು. ನೀಳ್ದ ಮಾವಿನ ಪೋೞಂದದ ಕಣ್ಗೆ–ಎಂಬ ಮಾತಂತೂ ನವೀನ ಸೌಂದರ್ಯದಿಂದ ಚೆಲುವಾಗಿದೆ; ತೋತಾಪುರಿ ಮಾವಿನ ಕಾಯಿಯ ಕೆನ್ನೆಯನ್ನು ಉದ್ದಕ್ಕೂ ಸೀಳಿ ತೆಗೆದರೆ ಆ ಹೋಳಿನ ಆಕಾರದಂತೆ ನೀಳ್ದಕಣ್ಣು ಇರುವುದು ವ್ಯಕ್ತವಾಗುತ್ತದೆ.
ವಚನ : ಮನಮನಱಿದು ಮುಟ್ಟಿ ನುಡಿದ–ಇಂಗಿತವನ್ನು ತಿಳಿದು ಮನಮುಟ್ಟುವಂತೆ ಮಾತಾಡಿದ; ಪೆಱತೆನುಮಂ–ಬೇರೆ ಏನನ್ನೂ; ಉಮ್ಮನೆ–ಬಿಸಿಬಿಸಿಯಾಗಿ, ಬೆಮರುತ್ತಂ– ಬೆವರುತ್ತ; ಉಮ್ಮಳಿಕೆವಂದು–ವ್ಯಥೆಯಾಗಿ; ಬೆಚ್ಚನೆ ಸುಯ್ದೊಡೆ–ಬಿಸಿಯುಸಿರು ಬಿಟ್ಟರೆ.
೬೫. ಉಸಿರದಿರೆ–ಹೇಳದಿದ್ದರೆ, ಮನದೊಳ್–ಮನಸ್ಸಿನಲ್ಲಿ ಎಂದರೆ–ಹೇಳಿದರೆ ಮನಸ್ಸಿ ನಲ್ಲಿ ಇಟ್ಟುಕೊಂಡಿದ್ದರೆ, ಮಱುಕಂ–ದುಃಖವು, ಎರ್ದೆಯಂ–ಹೃದಯವನ್ನು, ಪಸರಿಸುಗಂ– ಆವರಿಸುತ್ತದೆ. ಅದಱಿಂ–ಆದ್ದರಿಂದ, ಎನಗೆ–ನನಗೆ, ಇಂತುಟೆ–ಹೀಗೇ ಎಂದು, ಉಸಿರ್– ಹೇಳು; ಉಸಿರ್ದೊಡೆ–ಹೇಳಿದರೆ, ಬಗೆ–ಇಷ್ಟವು, ತೀರ್ಗುಂ–ಸಫಲವಾಗುತ್ತದೆ; ಬಿಸಿಯುಂ– ಬಿಸಿಯಾಗಿಯೂ, ಬೆಟ್ಟಿತ್ತುಂ–ಗಡುಸಾಗಿಯೂ ಇರುವ, ಉಸಿರ್–ಉಸಿರು, ಏಂ–ಏನು, ತೀರ್ದಪುದೇ–ಮುಗಿಯುತ್ತದೆಯೇ? ಎಂದರೆ ದುಃಖಸೂಚಕವಾದ ಬಿಸಿಯುಸಿರೂ ಬಿರುಸುಸಿರೂ ಎಂದಿಗೂ ನಿಲ್ಲುವುದಿಲ್ಲವೆಂದು ತಾತ್ಪರ್ಯ.
೬೬. ಪೇೞೆಂಬುದುಂ–ಹೇಳು ಎನ್ನುತ್ತಲು, ಆಂ–ನಾನು, ನಿನಗೆ, ಎಡೆವೇೞದೆ– ಸಂದರ್ಭವನ್ನು ತಿಳಿಸದೆ, ಪೇೞ್–ಹೇಳು, ಆರ್ಗೆ–ಯಾರಿಗೆ, ಪೇೞ್ವೆನ್–ಹೇಳುವೆನು? ಇಂದಿನ–ಈ ದಿನ, ಬಂದ, ಆ ಕಾೞಾದ–ಆ ಕೆಟ್ಟುದಾದ, ವಾೞ್ತೆಗೊಂಡೊಡೆ–ಸುದ್ದಿಯನ್ನುತಿಳಿದರೆ, ಮನಮುಂ–ಮನಸ್ಸೂ, ಎರ್ದೆಯುಂ–ಅಂತಃಕರಣವೂ, ಪಾೞಾದುದು–ಹಾಳಾ ಯಿತು, ಏನಂ–ಏನನ್ನು, ಪೇೞ್ವೆಂ–ಹೇಳುವೆನು?
೬೭. ಪಾಣ್ಬರಂಕುಸನ–ಪಾಣ್ಬರಂಕುಶ ಎಂಬ ಬಿರದಿದ್ದ ಅರಿಕೇಸರಿಯ ಎಂದರೆ ಅರ್ಜುನನ, ಅಂಕುಸದಾ–ಅಂಕುಶದ, ಪೊಳಪುಂ–ಹೊಳಪೂ, ಅವನ, ಕಣ್ಗಳ–ಕಣ್ಣುಗಳ, ಬೆಳ್ಪುಂ–ಬಿಳಿಯ ಕಾಂತಿಯೂ, ಭೋಂಕನೆ–ಬೇಗನೆ, ಮನಮಂ ಕದಡಿ–ಮನಸ್ಸನ್ನು ಕಲಕಿ, ಕಲಂಕಿದಪುದು–ಕದಡುತ್ತಿದೆ, ಬಿಡದೆ–ಅಷ್ಟಕ್ಕೇ ನಿಲ್ಲದೆ, ಮನಮಂ–ಮನಸ್ಸನ್ನು, ಆದಂ– ವಿಶೇಷವಾಗಿ, ಒನಲಿಸಿದಪುದು–ಕೆರಳಿಸುತ್ತಿದೆ, ಕೆಳದಿ–ಸಖಿಯೇ.
೬೮. ಮನಸಿಜನಂಬು–ಕಾಮನಬಾಣ, ಅರಲ್ದ ಪೊಸಮಲ್ಲಿಗೆ–ಅರಳಿದ ಹೊಸ ಮಲ್ಲಿಗೆ, ತೆಂಕಣ ಗಾಳಿ–ದಕ್ಷಿಣದ ಗಾಳಿ, ಎಂಬಿವು–ಎನ್ನುವ ಇವುಗಳು, ಅನುಬಲದಿಂದಂ–ಪರಸ್ಪರ ಅನುಕೂಲವಾಗಿರುವ ಶಕ್ತಿಯಿಂದ, ಎನ್ನಂ–ನನ್ನನ್ನು, ಅಲೆದಪ್ಪುವು–ಹಿಂಸಿಸುತ್ತಿವೆ; ಅವು– ಅವುಗಳು, ಚಂದ್ರನ ಬಲದಿಂದಂ–ಚಂದ್ರನ ಸಹಾಯದಿಂದ, ಪೆಟ್ಟುವೆರ್ಚಿ–ಗರ್ವಿಸಿ, ಎನ್ನನೆ– ನನ್ನನ್ನೇ, ಅಲೆದಪ್ಪುವು–ಹಿಂಸಿಸುತ್ತಿವೆ; ಅದರ್ಕ್ಕೆ–ಅದಕ್ಕೆ, ಎನಗೆ–ನನಗೆ, ಈಗಳ್–ಈಗ, ಚಂದ್ರನ ಬಲಂ–ಚಂದ್ರಬಲವು, ಒಳ್ಳಿತಾಗಿ–ಒಳ್ಳೆಯದಾಗಿ, ಸಲೆಯಿಲ್ಲದೊಡೆ–ಸರಿಯಾಗಿಲ್ಲ ದಿದ್ದರೆ, ಆವುದುಂ–ಯಾವುದೂ, ಒಳ್ಳಿಕೆಯ್ಗುಮೇ–ಒಳ್ಳೆಯದನ್ನು ಮಾಡುತ್ತದೆಯೇ? ಇಲ್ಲ. ಕಾಮನೊಡನೆ ಚಂದ್ರನು ಸಹಕರಿಸಿ ನನ್ನನ್ನು ಪೀಡಿಸುತ್ತಿರುವುದು ತಪ್ಪಬೇಕಾದರೆ, ನನಗೆ ಚಂದ್ರಬಲ ಬರಬೇಕು ಎಂದು ಇಂಗಿತ.
ವಚನ : ಮಱುಕಮಂ–ಸಂಕಟವನ್ನು; ಕುದಿಪಮುಮಂ–ಕುದಿಯನ್ನೂ; ಬಗೆಯ ಕುಱಿಪಮುಮಂ–ಮನಸ್ಸಿನ ಗುರಿಯನ್ನೂ; ಮನದೊಳೆ ಮಂತಣಮಿರ್ದು–ಮನಸ್ಸಿ ನಲ್ಲಿಯೇ ಆಲೋಚನೆ ಮಾಡಿ; ಬಗೆಯೊಳೆ–ಮನದಲ್ಲಿಯೇ, ಗುಡಿಗಟ್ಟಿ–ಧ್ವಜವನ್ನೇರಿಸಿ, ಎಂದರೆ ಉತ್ಸವವನ್ನು ಹೊಂದಿ, ಸಂತಸಂಬಟ್ಟು–ಸಂತೋಷಪಟ್ಟು.
೬೯. ನನೆಯಂಬಂ–ಹೂವಿನ ಬಾಣವನ್ನು, ತೆಗೆದೆಚ್ಚಂ–ಹೂಡಿ ಪ್ರಯೋಗಿಸಿದವನಾದ, ಅಂಗಜನ–ಮನ್ಮಥನ, ತಪ್ಪು, ಏನಾನುಮಂ–ತಪ್ಪು ಏನಾದರೂ ಅದನ್ನು, ತೋಱೆ–ಕಾಣಿ ಸಲು, ಕಾಣ್ಪನಿತಂ–ಕಾಣುವಷ್ಟನ್ನು, ಮಾಡದೆ, ಪದ್ಮಜಂ–ಬ್ರಹ್ಮನು, ಮದನನಂ– ಮನ್ಮಥನನ್ನೂ, ಬೈದಂತುಟೇ–ಬೈದ ಹಾಗೆಯೇ ಸರಿ, ಈ ಬಿನದಂ–ಈ ವಿನೋದವು, ಬೇಡ, ಕಲ್ಪಿತಂ–ಕಲ್ಪಿತವಾದುದು; ತಪ್ಪಲೆ–ತಪ್ಪಲ್ಲವೆ; ನಿನ್ನೀಮನಂ–ನಿನ್ನ ಈ ಮನಸ್ಸು, ಆತಂಗೆಂದು–ಅವನಿಗೋಸ್ಕರವಾಗಿ; ಪರಿಯದು–ಚಲಿಸದು, ಓಡದು; ನಿನಗೆ, ಆತಂ, ದೊರೆ–ಅವನು ತಕ್ಕವನು, ಸಮಾನ; ಆದಿಪುರುಷಂಗೆ–ಉದಾತ್ತ ನಾರಾಯಣನಾದ ಅರಿಕೇಸರಿಗೆ, ಅರ್ಜುನನಿಗೆ, ನೆಟ್ಟನೆ–ನೇರವಾಗಿ, ನೀಂ–ನೀನು, ನಾಣ್ಚುವಯ್–ನಾಚಿಕೆ ಪಡುತ್ತೀಯ, ಏಕೆ ಅಕ್ಕ–ಅಕ್ಕನೇ ಏತಕ್ಕೆ?
ಈ ಪದ್ಯಕ್ಕೆ ವಿಶದವಾಗಿ ಅನ್ವಯವಾಗುವುದಿಲ್ಲ; ಪಾಠಕ್ಲೇಶಗಳು ಇರಬಹುದು. ‘ಪರಿಯದಾತಂಗೆ’ ಎನ್ನುವುದಕ್ಕೆ ಪ್ರತಿಯಾಗಿ ‘ಪರಿದುದಾತಂಗೆ’ ಇರಬಹುದು.
ವಚನ : ಏನುಮಂ ಬಗೆಯಲ್ವೇಡ–ಏನನ್ನೂ ಚಿಂತಿಸಬೇಡ; ಆಱೆ–ಸಮಾಧಾನ ವಾಗಲು; ಪರೆದಿಂಬೞಿಯಂ–ಚದುರಿದ ಅನಂತರ: ಪವಡಿಸುವ–ಮಲಗುವ, ಮಾಡಕ್ಕೆ– ಮನೆಗೆ; ಪ್ರತಿಪತ್ತಿಗಳಿಂ–ಸತ್ಕಾರಗಳಿಂದ; ವಿಸರ್ಜಿಸಿ–ಬಿಟ್ಟು ಕಳುಹಿಸಿ; ಕಣ್ಣ ಪಾಪೆಯಂತೆ–ಕಣ್ಣಿನ ಗುಡ್ಡಿನಂತೆದ್ತೊೞಲೆ-ಸುತ್ತಾಡಲುದ್ ತಳರ್ಪೆನುತ್ತಂ-ಚಲನೆಯೆನ್ನುತ್ತದ್ ಪೆಳ್ಪಳಿಸಿ-ಭಯಪಟ್ಟು.
೭೦. ಪ್ರಿಯಸತಿಯ–ಪ್ರಿಯಳಾದ ಆ ಸ್ತ್ರೀಯ, ಸುಭದ್ರೆಯ, ಆನನೇಂದು–ಚಂದ್ರ ನಂತಿರುವ ಮುಖವು, ಒಳಂ–ಉಂಟು, ಇದೆ; ಇಂದುವೊಳಂ–ಚಂದ್ರನು ಇದೆ, ಆವುದಂ– ಇವೆರಡರಲ್ಲಿ ಯಾವುದನ್ನು, ಬಿದಿ–ವಿಧಿ, ಬ್ರಹ್ಮನು, ನಯದೊಳೆ–ನಯವಾಗಿ; ನೋಡಿ, ಮುನ್ನಂ–ಮೊದಲು, ಮಾಡಿದಂ–ಮಾಡಿದನು, ಸೃಷ್ಟಿಸಿದನು; ಅಱಿಯಲ್ಕೆ–ತಿಳಿಯುವು ದಕ್ಕೆ, ಅದು, ನಾಡೆ–ಚೆನ್ನಾಗಿ, ಸಂದೆಯಂ–ಸಂದೇಹ, ನೀಳನೀರಜವನಂಗಳ–ಕನ್ನೆಯ್ದಿಲೆಗಳ ತೋಟಗಳ, ಚೆಲ್ವುಗಳೆಂಬುವು–ಸೌಂದರ್ಯವೆನ್ನುವುವು, ಆ ಲತಾಂಗಿಯ–ಆ ಬಳ್ಳಿಮೆಯ್ಯ ಸುಭದ್ರೆಯ, ಕಡೆಗಣ್ಣ–ಕಡೆಗಣ್ಣುಗಳ, ಬೆಳ್ಪಿನ–ಬಿಳುಪಿನ, ಸಿಲ್ಕಿನ–ಸಿಕ್ಕುಗಳಲ್ಲಿ, ಸಿಲ್ಕಿಪ– ಸಿಕ್ಕಿಕೊಂಡ, ಸಿಲ್ಕು ಇವಲ್ಲವೇ–ಸಿಕ್ಕುಗಳು ಇವು ಅಲ್ಲವೇ? ನೀಲಿಯ ಬಣ್ಣದ ನೈದಿಲೆಗಳ ಕರಿಯ ಕಾಂತಿಯೂ ಸುಭದ್ರೆಯ ಕಣ್ಣುಗಳ ಬಿಳಿ ಕಾಂತಿಯೂ ಒಂದರೊಡನೊಂದು ಸಿಕ್ಕಿಕೊಂಡು, ಹೆಣೆದುಕೊಂಡು, ಬಿಡಿಸಲಾಗದ ಸಿಕ್ಕಾಗಿ ಪರಿಣಮಿಸಿತು ಎಂದು ಭಾವ.
೭೧. ಆ ನವಮಾಳಿಕಾಕುಸುಮಕೋಮಳೆ–ಹೊಸದಾದ ಜಾಜಿಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆ, ರಾಗರಸಪ್ರಪೂರ್ಣ ಚಂದ್ರಾನನ ಲಕ್ಷ್ಮಿಯಿಂ–ಪ್ರೀತಿರಸ ದಿಂದ (ಕೆಂಬಣ್ಣದಿಂದ) ತುಂಬಿದ ಮುಖಚಂದ್ರನ ಕಾಂತಿಯಿಂದ, ನಭದೊಳಿರ್ದ–ಆಕಾಶ ದಲ್ಲಿದ್ದ, ಅಮೃತಾಂಶುವಿನ–ಅಮೃತಕಿರಣನ, ಚಂದ್ರನ, ಉದ್ಘಕಾಂತಿ ಸಂತಾನಮಂ–ಶ್ರೇಷ್ಠ ವಾದ ಪ್ರಕಾಶದ ಮೊತ್ತವನ್ನು, ತನಗೆ–ತನಗಾಗಿ, ತನ್ನದಾಗಿ, ಮಾಡಿದಳೆಂದೊಡೆ–ಮಾಡಿ ಕೊಂಡಳು ಎಂದರೆ, ತದ್ಗೃಹಾಂತರೋದ್ಯಾನ ಸರಸ್ಸರೋಜ ರುಚಿ–ಆ ಮನೆಯ ಒಳಗಣ ಉದ್ಯಾನದಲ್ಲಿರುವ ಕೊಳಗಳ ತಾವರೆಯ ಕಾಂತಿ, ಆಕೆಯ–ಅವಳ, ಕೈಯದು–ಕೈಯಲ್ಲಿ ರುವ ವಸ್ತು, ಎನ್ನಿರೇ–ಎಂದು ಹೇಳಿರೇ.
ವಚನ : ಮನಮುಮನೆರ್ದಯುಮಂ–ಮನಸ್ಸನ್ನೂ ಹೃದಯವನ್ನೂ; ಉಱೆ ಸೆಱೆವಿಡಿದಿರ್ದ–ಚೆನ್ನಾಗಿ ಸೆರೆಹಿಡಿದಿರ್ದ;
೭೨. ಕುಸುರಿಯ ರೂಪಂ–ಹೂವಿನಲ್ಲಿರುವ ಕುಸುರಿಯಂತೆ ಕೋಮಲವಾಗಿರುವ ರೂಪ ವನ್ನು, ಎಯ್ದೆ–ಚೆನ್ನಾಗಿ, ಪೊಗೞಲ್ಕೆ–ಹೊಗಳುವುದಕ್ಕೆ, ಅಱಿಯೆಂ–ತಿಳಿಯೆನು, ನಡು– ಸೊಂಟ, ಪುರ್ವು–ಹುಬ್ಬು, ಬಾಸೆ–ಹೊಟ್ಟೆಯ ಮೇಲೆ ನೀಳವಾಗಿ ಇರುವ ಕೂದಲಿನ ಸಾಲು, ಕಣ್ಣೊಸೆಗೆಯನುಂಟುಮಾೞ್ಪಜಘನಂ–ಕಣ್ಣಿಗೆ ಹಬ್ಬವನ್ನುಂಟು ಮಾಡುವ ಪಿರ್ರೆಗಳು, ಬೆಳರ್ವಾಯ್–ಬೆಳ್ಳಗಿರುವ ಬಾಯಿ, ಮೊಲೆಗಳ್–ಮೊಲೆಗಳು, ಕದಂಪು–ಕೆನ್ನೆಗಳು, ಉಗುರ್–ಉಗುರುಗಳು, ಬಸಿಱನೆ–ಹೊಟ್ಟೆಯನ್ನೇ, ನೋಡೆ–ನೋಡಲು, ಮೊಕ್ಕಳಂ– ವಿಶೇಷವಾಗಿ, ಅದಾರ್–ಅದು ಯಾರು, ನಡೆನೋೞ್ಪೊಡಂ–ನಾಟುವಂತೆ, ದೃಷ್ಟಿಸಿ ನೋಡಿ ದರೂ, ಅಂಬುಜಾಕ್ಷಿಯ–ತಾವರೆಯಂತೆ ಕಣ್ಣುಳ್ಳ ಸುಭದ್ರೆಯ, ಮೂಱು ಅಸಿಯವು– ಮೂರು ಅಂಗಗಳು ಕೃಶವಾದುವು; ಮೂಱು ದೊಡ್ಡಿದುವು–ಮೂರು ದಪ್ಪವಾದುವು; ಮೂಱೆಡೆ– ಮೂರು ಪ್ರದೇಶಗಳು, ತೆಳ್ಳಿದುವು–ತೆಳುವಾಗಿರುವುವು.
೭೩. ಮೃಗಶಿಶುನೇತ್ರೆಯ–ಮರಿಹುಲ್ಲೆಯ ಕಣ್ಣುಗಳಂತೆ ಕಣ್ಣುಳ್ಳ ಸುಭದ್ರೆಯ, ನಡುವೆರ್ದೆಯುಗುರ್ಗಳ್–ಸೊಂಟ ಎದೆ ಉಗುರುಗಳು, ಕರಂ ಅಸಿದು–ಬಹು ತೆಳ್ಳಗಿರುವುವು; ಕನಕಕಾಂಚೀನಿನದ ಪ್ರಗಣಿತಂ–ಚಿನ್ನದ ಒಡ್ಯಾಣದ ಸದ್ದಿನ ಕೂಟವು, ಅಗಲ್ದ– ಬಿಟ್ಟುಹೋದ, ಎಂದರೆ ಒಡ್ಯಾಣದ ಸದ್ದಿಲ್ಲದ, ನಲ್ಲಳ–ಪ್ರಿಯೆಯ, ಜಗನಂ–ಜಘನವು, ಎನ್ನೆರ್ದೆಯಂ–ನನ್ನ ಹೃದಯವನ್ನು, ಪೊಕ್ಕು–ಹೊಕ್ಕು, ಎಂತು–ಹೇಗೆ, ಅಳಿಪುವುದೋ– ಪ್ರೀತಿಯನ್ನಾಗಿಸುತ್ತವೆಯೊ?
೭೪. ಅರ್ಜುನನು ಸುಭದ್ರೆಯ ರೂಪವನ್ನು ಧ್ಯಾನಿಸುತ್ತಾ ತನ್ಮಯನಾಗಿ ಆ ಸೌಂದರ್ಯ ವನ್ನು ಸವಿಯುತ್ತ ಮೈಮರೆತಿದ್ದಾನೆ; ಮೊಲೆಗಳ್ ಬಟ್ಟಿದುವಾಗಿ–ಮೊಲೆಗಳು ದುಂಡಾಗಿ, ಕರ್ಗಿದ–ಕಪ್ಪಾದ, ಕುರುಳ್–ಮುಂಗುರುಳುಗಳು, ಕಣ್ಗೆ–ಕಣ್ಣಿನವರೆಗೆ, ಎಯ್ದೆ–ಬರುವಂತೆ, ನೀಳ್ದು–ಉದ್ದವಾಗಿ, ಕೊಂಕಾಗಿ–ವಕ್ರವಾಗಿ, ಅಲರ್ಗಣ್ಗಳ್–ಹೂವಿನಂತಿರುವ ಕಣ್ಣುಗಳು, ಚಪಳಂಗಳಾಗಿ–ಅಸ್ಥಿರಗಳಾಗಿ, ಜಘನಂ–ಪಿರ್ರೆಗಳು, ಕಾಂಚೀಕಳಾಪ ಪ್ರಭೋಜ್ವಲಂ– ಒಡ್ಯಾಣದ ಮುತ್ತಿನೆಳೆಗಳ ಕಾಂತಿಯಿಂದ ಪ್ರಕಾಶಮಾನವೂ, ಉದ್ವೃತ್ತಮುಂ–ಉಬ್ಬಿ ಬೆಳೆದಿರು ವುದೂ, ಆಗಿ; ತಾಂ–ತಾವು, ಅಲೆಗೆ–ನನ್ನನ್ನು ಪೀಡಿಸಲಿ; ಸರೋಜಾಕ್ಷಿಯಾ–ಸುಭದ್ರೆಯ, ಮಧ್ಯಸ್ಥಂಗಳಾಗಿರ್ದುವ [ರ್ಕೆ]–ಮಧ್ಯ ಪ್ರದೇಶದಲ್ಲಿರುವುವಾದ, ತ್ರಿವಳಿಗಳ್ಗೆ–ಬಸಿರ ಮೇಲಣ ಮೂರು ಮಡಿಕೆಗಳಿಗೆ, ಗೆರೆಗಳಿಗೆ, ಕೆನ್ನಂ–ವಿಶೇಷವಾಗಿ, ಎನ್ನಂ–ನನ್ನನ್ನು, ಅಲೆ ಯಲ್–ಪೀಡಿಸಲು, ತಕ್ಕುದೆ–ಯೋಗ್ಯವಾದದ್ದೇ.
ವಚನ : ಕಿಱಿದುಬೇಗಂ–ಸ್ವಲ್ಪ ಹೊತ್ತು; ಅಱೆಮರುಳಂತು–ಭ್ರಮೆಗೊಂಡವನಂತೆ, ಹುಚ್ಚನ ಹಾಗೆ; ಪಲುಂಬಿ–ವ್ಯಥೆಪಟ್ಟು, ಪಂಬಲಿಸಿ–ಬಯಸಿ; ಹಾವ–ಶೃಂಗಾರ ಚೇಷ್ಟೆ; ಭಾವ–ಮನಸ್ಸಿನ ವಿಕಾರ; ವಿಳಾಸ–ಸೊಗಸು; ವಿಭ್ರಮ–ಮನಸ್ಸಿನ ಸಡಗರ; ಕಟಾಕ್ಷ– ಕಡೆಗಣ್ಣ, ಈಕ್ಷಂಗಳ್–ನೋಟಗಳು; ಒನಲಿಸು–ಕೆರಳುವಂತೆ ಮಾಡು; ಕನಲಿಸು–ರೇಗಿಸು; ಅನಂಗ ಮತಂಗಜ–ಮನ್ಮಥನೆಂಬ ಆನೆಯಿಂದ; ಕೋಳಾಹಳೀಕೃತ–ಗದ್ದಲವೆಬ್ಬಿಸಲ್ಪಟ್ಟ, ಅಂತ ರಂಗನಾಗಿ–ಮನಸ್ಸುಳ್ಳವನಾಗಿ.
೭೫. ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲೀ ಕನ್ನೆಯಂ–ಲೋಕವನ್ನೇ ಸೃಷ್ಟಿಸಿದ ಬ್ರಹ್ಮ ಈ ಕನ್ಯೆಯನ್ನು ಸೃಷ್ಟಿಸಲಿಲ್ಲ; ಮಾಡುವಲ್ಲಿಗೆ–ಇವಳನ್ನ ಸೃಷ್ಟಿಸುವಾಗ, ಅಂಗಜನೆಂಬಜಂ– ಮನ್ಮಥನೆಂಬ ಬ್ರಹ್ಮ, ಚಂದ್ರಂ–ಚಂದ್ರ, ಮಳಯಾನಿಳಂ–ಮಲಯಮಾರುತ, ಮಳಯ ಜಂ–ಶ್ರೀಗಂಧ, ನೀರೇಜಂ–ತಾವರೆ, ಇಮ್ಮಾವು–ಸಿಹಿ ಮಾವು, ಮಲ್ಲಿಗೆ, ಎಂದು, ಇಂತಿವಂ– ಹೀಗೆ ಇವುಗಳನ್ನು, ಅೞ್ಕಱೆಂದೆ–ಪ್ರೀತಿಯಿಂದ ಅಮರ್ದಿನೊಳ್–ಅಮೃತದಲ್ಲಿ, [ತನ್ನ] ೞ್ತಯಿಂ–ತನ್ನ ಇಷ್ಟದಿಂದ, ತೊಯ್ದು–ನನೆಯಿಸಿ, ಮೆಲ್ಲಗೆ–ಮೃದುವಾಗಿ, ಈ ಕಾಂತೆಯಂ–ಈ ರಮಣಿಯನ್ನು, ಆ ಕಾಂತಿಯಿಂ–ಆ ಪ್ರಕಾಶದಿಂದ, ಪಡೆದಂ–ಸೃಷ್ಟಿಸಿದನು.
ಈ ಪದ್ಯಕ್ಕೆ ಮೂಲ ಕಾಳಿದಾಸಕೃತ ವಿಕ್ರಮೋರ್ವಶೀಯ ನಾಟಕದ ಪ್ರಥಮಾಂಕದಲ್ಲಿ ಬರುವ ‘ಅಸ್ಯಾಸ್ಸರ್ಗವಿಧೌ ಪ್ರಜಾಪತಿರಭೂತ್’ ಎಂದು ಆರಂಭವಾಗುವ ಪದ್ಯ; ಬೇರೆ ಇನ್ನೊಬ್ಬ ಅಜ್ಞಾತಕವಿ “ಇವಳಂ ಶೃಂಗಾರಸಾರಂ ಕುಸುಮಶರನೆ ಮೇಣ್ ಮಾಡಿದಂ” ಎಂದು ಆರಂಭಿಸುವ ಪದ್ಯದಲ್ಲಿ (ಕಾವ್ಯಾಲೋ. ೪೨) ಇದನ್ನು ಇನ್ನೊಂದು ರೀತಿಯಾಗಿ ಅಳವಡಿಸಿ ಕೊಂಡಿದ್ದಾನೆ. ಈ ಮೂರನ್ನು ಪರಸ್ಪರ ಹೋಲಿಸಿ ನೋಡಬಹುದು. ಯಾವುದು ಹೆಚ್ಚು ಸುಂದರ?
ವಚನ : ಅಂತಲ್ತು–ಹಾಗೆ ಅಲ್ಲದು, ಹಾಗಲ್ಲ; ಅಪ್ಪಂದು–ಸೃಷ್ಟಿಯಾಗುವಂದು; ಆ ಕಾಂತೆಯಂ–ಆ ರಮಣಿಯಂ; ವಿಧಾತ್ರಂ–ಬ್ರಹ್ಮನು; ಕೊಸಗಿನ–ಬೆಟ್ಟದಾವರೆಯ, ಕೇಸರಂಗಳಂ–ಕುಸುರಿಗಳನ್ನು; ಭಾವಿಸಿ–ನೆನೆಯಿಸಿ; ರಸಸಿದ್ಧಮಪ್ಪ–ರಸ ವಿದ್ಯೆಯಿಂದ ಸಿದ್ಧವಾಗಿರುವ; ಪೊನ್ನ–ಚಿನ್ನದ; ಬಾಯ್ದೆಱೆಯುಮಂ–ತುಟಿಯನ್ನೂ; ರಾಜಾವರ್ತದ– ಎಳೆನೀಲದ; ಸೆಳ್ಳುಗುರುಮಂ–ತೆಳುವಾದ ಉಗುರುಗಳನ್ನೂ; ಮರುಳ್ಮಾಡಲೆಂದು– ಮರುಳಾಗಿಸಲೆಂದು; ಪೆಣ್ಮಾಡಿದನಕ್ಕುಂ–ಸ್ತ್ರೀಯನ್ನು ಸೃಷ್ಟಿಸಿದವನಾದನು.
೭೬. ಗಾಡಿ–ಸೌಂದರ್ಯವು, ನೆಱೆ–ಪೂರ್ಣವಾಗಿ, ಕೊಳೆ–ಆಕರ್ಷಿಸಲು, ನೋೞ್ಪ– ನೋಡುವ, ಬಗೆ–ಮನಸ್ಸು, ಬರ್ಪುದುಂ–ಬರುತ್ತಲು, ಆನೆ–ನಾನೆ, ದಲ್–ಅಲ್ಲವೆ, ಅಂದು–ಆಗ, ದಂತಿಯಂ–ಆನೆಯನ್ನು, ನಿಱಿಸಿ–ನಿಲ್ಲಿಸಿ, ಮರಲ್ದು–ತಿರುಗಿ, ನೋಡುವು ದುಂ–ನೋಡುತ್ತಲು, ಆ ಸತಿ–ಆ ಹೆಣ್ಣು, ಎನ್ನುಮಂ–ನನ್ನನ್ನೂ, ಸೋಲದತ್ತ–ಪ್ರೇಮದ ಕಡೆಗೆ, ಮತ್ತೆ ಎಱಗಿ–ತಿರುಗಿ ಬಾಗಿ, ಒಱಲ್ದು–ಪ್ರೇಮದಿಂದ, ಜೋಲ್ದು–ಜೋತುಹೋಗಿ, ಅಳಿಪಿ–ಪ್ರೀತಿಸಿ, ನೋಡಿದಳ್–ನೋಡಿದಳು. ಇಂತು–ಹೀಗೆ, ಎಲೆ–ಎಲವೋ, ಸತ್ತ–ಸತ್ತು ಹೋದ, ಪೊತ್ತ–ಹೊತ್ತುಕೊಂಡ, ಕಣ್ಣಱಿಯದ–ನೋಟದ ಮರ್ಮವನ್ನು ತಿಳಿಯದ, ಬೆಳ್ಳನ್–ಬೆಪ್ಪನು, ಅಲ್ಲೆಂ–ನಾನಲ್ಲ; ಧವಳಾಕ್ಷಿಯ–ಬೆಳ್ಳಗೆ ಹೊಳೆಯುವ ಕಣ್ಣುಳ್ಳ ಸುಭದ್ರೆಯ, ನೋಟದಂದಮಂ–ನೋಟದ ರೀತಿಯನ್ನು, ಅಱಿದೆಂ–ತಿಳಿದೆನು. ಇಲ್ಲಿ ಅರ್ಜುನನು ತನ್ನನ್ನು ತಾನೆ ಜ್ಞಾಪಿಸಿಕೊಳ್ಳುತ್ತಿದ್ದಾನೆ; ಅವಳ ನೋಟದ ಇಂಗಿತವನ್ನು ಅರಿಯ ದಷ್ಟು ಸತ್ತ ವಿವೇಕವುಳ್ಳವನಲ್ಲ, ಹೊತ್ತ ಹೆಣವೂ ಅಲ್ಲ, ರಹಸ್ಯ ತಿಳಿಯದವನೂ ಅಲ್ಲ ಎಂದು.
೭೭. ಓಪಳಾ–ಪ್ರಿಯಳಾದ ಸುಭದ್ರೆಯ, ವಿಳೋಕನಂ–ನೋಟವು, ಕಣ್ಣುಗಳು, ದಳಿತ ಕಮಳಚಾ, ಯಾಟೋಪಂ–ಅರಳಿದ ಕಮಲದ ಬಣ್ಣದ ವೈಭವವನ್ನುಳ್ಳದ್ದು; ಮನೋಜರಸ ಪ್ರಭಾವಳಯ ನಿಳಯಂ–ಪ್ರೇಮರಸದ ಕಾಂತಿವರ್ತುಲಕ್ಕೆ ಮನೆಯಾಗಿದೆ; ಪ್ರೋದ್ಯದ್ಭ್ರೂ ವಿಭ್ರಮಂ–ಎತ್ತರವಾದ ಹುಬ್ಬಿನ ವಿಳಾಸವನ್ನುಳ್ಳದ್ದು, ಮುಕುಳೀಕೃತಂ–ಮೊಗ್ಗಿನ ಆಕಾರ ವುಳ್ಳದ್ದು; ಲಳಿತಮಧುರಂ–ಕೋಮಲವೂ ಮಧುರವೂ ಆದದ್ದು; ಲಜ್ಜಾಲೋಲಂ–ಲಜ್ಜೆ ಯಲ್ಲಿ ಆಸಕ್ತವಾಗಿರುವುದು, ಸ್ಮರಾಕುಳಿತಂ–ಮನ್ಮಥನಿಂದ ಪೀಡಿಸಲ್ಪಟ್ಟದ್ದು; ಮನಂದಳಿತಂ–ಮನಸ್ಸಿನ ಬಿರಿತವನ್ನು ಉಳ್ಳದ್ದು; ಅಪಸನ್ಮುಗ್ಧಂ–ಮುಗ್ಧತೆಯಿಲ್ಲದ್ದು ಎಂದರೆ ಜಾಣಿನಿಂದ ಕೂಡಿದ್ದು; ಸ್ನಿಗ್ಧಂ–ನಯವಾದದ್ದು, ನುಣುಪಾದದ್ದು, ಸ್ನೇಹದಿಂದ ಕೂಡಿದ್ದು.
೭೮. ಸುಭದ್ರೆಯ ಕುಡಿನೋಟದಲ್ಲಿ ಅರ್ಜುನ ಸತ್ವ ತಮೋಗುಣಗಳನ್ನು ಕಾಣುತ್ತಾ ನಂತೆ: ಉಡಮೊಗಮೆಂಬ–ಬಾಗೆಹೂವಿನಂತಿರುವ ಮುಖವೆಂಬ, ತಾವರೆಯ, ನೀಳ್ದೆಸೞೊಳ್– ಉದ್ದವಾದ ಎಸಳಿನಲ್ಲಿ, ಮಱಿದುಂಬಿ–ದುಂಬಿಯ ಮರಿ, ಪಾಯ್ದು–ಹಾದು, ನುಗ್ಗಿ, ಒಡಂಬಡನೊಳಕೊಂಡು–ಒಪ್ಪಿಗೆಯನ್ನು ಪಡೆದು, ಎಂದರೆ ಸರಿಯಾಗಿ ಹೊಂದಿಕೊಂಡು, ಕಣ್ಮಲರಬೆಳ್ಪುಗಳ್–ಹೂವಿನಂತಿರುವ ಕಣ್ಣುಗಳ ಬಿಳಿಯ ಬಣ್ಣಗಳು, ಆಲಿಯ ಕೞ್ಪಿನೊಳ್–ಕಣ್ಣುಗುಡ್ಡೆಗಳ ಕಪ್ಪು ಬಣ್ಣದಲ್ಲಿ, ಪೊದಳ್ದು–ಸೇರಿ, ವ್ಯಾಪಿಸಿ, ಒಡನೆ– ಕೂಡಲೆ, ಒಡನೋಡುವಟ್ಟೆನಗೆ–ಜೊತೆಯಲ್ಲಿಯೇ ನೋಡುಪಟ್ಟ ನನಗೆ, ಎಂದರೆ ನೋಡು ವುದನ್ನು ಪಡೆದ ನನಗೆ, ಸಂತಸಮಂ–ಸಂತೋಷವನ್ನು, ಮಱುಕಕ್ಕೆ–ಸಂತಾಪವನ್ನು, ಮಾಣ್ದೊಡೆ–ಬಿಟ್ಟರೆ, ನಿಂತು ಹೋದರೆ; ಈ ನಡೆಗಿಡೆ–ನಡೆ ನಿಂತುಹೋಗಲು, ಓಪಳಾ– ಪ್ರಿಯಳ, ಕಡೆಗಣ್ಣೊಳೆ–ತುದಿಗಣ್ಣುಗಳಲ್ಲಿಯೇ, ಸತ್ವಮಂ–ಸತ್ವವನ್ನೂ (ಬಿಳುಪು), ತಮಮುಮಂ–ತಮೋಗುಣವನ್ನು (ಕರಿದು ಬಣ್ಣ), ಕಂಡೆನ್–ನೋಡಿದೆನು. ಈ ಪದ್ಯದ ಅರ್ಥ ಅನ್ವಯ ಸ್ಪಷ್ಟವಿಲ್ಲ. ಉಡು ಎಂದರೆ ಶಿರೀಷದ ಹೂ (ತ); ಒಡನೋಡುವಡು– ಎಂಬುದರ ರೂಪ ಹೇಗೆ ಸರಿಯೋ? ಕರ್ಮಣಿ ಪ್ರಯೋಗವಾಗಿದ್ದರೆ ನೋಡೆವಡು ಎಂದಿದ್ದಿರ ಬೇಕು; ಪೇೞೆಪಡು ಮುಂತಾದ ರೂಪಗಳಿದ್ದ ಹಾಗೆ; ಕಣ್ಣ ಬಿಳುಪಿನ ನಡುವೆ ಕರಿಯ ಗುಡ್ಡೆ ಇರುವುದು ತಾವರೆಯ ಉದ್ದವಾದ ಎಸಳಿನ ನಡುವೆ ಮರಿದುಂಬಿ ಇದ್ದ ಹಾಗೆ ಇರುವು ದೆಂದೂ ಆ ಕಣ್ಣಿನ ನೋಟದಲ್ಲಿ ಬಿಳಿ ಕರಿ ಬಣ್ಣಗಳು ಪ್ರಕಟವಾಗಿ ಸತ್ವ ತಮಗಳ ಜೋಡಿ ಯಂತೆ ಇದ್ದುವೆಂದೂ ಪದ್ಯದ ತಾತ್ಪರ್ಯಾರ್ಥವಿರಬಹುದು. ಮಱುಕಕ್ಕೆ ಎಂಬಲ್ಲಿನ ಚತುರ್ಥಿಗೆ ಸಾರ್ಥಕ್ಯವೇನು? ಅದು ದ್ವಿತೀಯಾರ್ಥೇ ಚತುರ್ಥೀ ಇರಬಹುದೆ? ಹಲವು ಕ್ಲೇಶ ಗಳಿವೆ, ಈ ಪದ್ಯದಲ್ಲಿ.
೭೯. ಒದವಿದ–ಉಂಟಾದ, ಬೇಟವಪ್ಪೊಡೆ–ಪ್ರೇಮವಾದರೆ, ಎನಗೆ–ನನಗೆ, ಅತ್ತಳಗಂ–ತಾಳಲು ಅಶಕ್ಯ; ಬಗೆವೇೞ್ವೊಡೆ–ನನ್ನ ಮನಸ್ಸನ್ನು ತಿಳಿಸಬೇಕೆಂದರೆ, ಮೇಳದ– ಜೊತೆಯ, ಕೆಳೆಯರ್ಕಳಿಲ್ಲ–ಗೆಳೆಯರಿಲ್ಲ; ಅವಳುಂ–ಸುಭದ್ರೆಯೂ, ಅಪ್ಪೊಡೆ–ಆದರೆ ಎಂದರೆ ಸುಭದ್ರೆಯಾದರೋ, ಜವ್ವನ ಮತ್ತೆ–ಯೌವನದಿಂದ ಮದಿಸಿದವಳು, ನಾಣಕಾಪು– ಲಜ್ಜೆಯ ಕಾಹು, ಕಾವಲು, ಪಿರಿದು–ಹಿರಿದಾಗಿದೆ; ಓತು–ಪ್ರೀತಿಸಿ, ಮಾತಡಕಲ್–ಮಾತು ಗಳನ್ನು ಅಡಕಲು, ಮಾತಿನ ಮೇಲೆ ಮಾತನ್ನು ಹೇಳಲು, ನೆಟ್ಟನೆ–ನೇರಾಗಿ, ಒಂದಿದ– ಸೇರಿದ (ನಂಬಿಕೆಯ), ದೂದವರಿಲ್ಲ–ಪ್ರೇಮ ಸಂದೇಶವನ್ನು ತರುವ ದೂತರಿಲ್ಲ; ಅಪ್ಪು ದಱಿಂ–ಆದ್ದರಿಂದ, ಇಂದುವಕ್ತ್ರೆಯಾ–ಚಂದ್ರಮುಖಿಯಾದ ಸುಭದ್ರೆಗೆ ಸಂಬಂಧಿಸಿದ, ಎನ್ನೊಲವು–ನನ್ನ ಪ್ರೇಮವು, ಅದಿಂತು–ಅದು ಹೀಗೆ, ಅರಣ್ಯರುದಿತಂ ವಲಂ–ನಿಶ್ಚಯ ವಾಗಿ ಕಾಡಿನಲ್ಲಿ ಅಳುವುದಾಯಿತು. ಎಂದರೆ ನಿಷ್ಪ್ರಯೋಜಕವಾದದ್ದಾಯಿತು.
ವಚನ : ನಲ್ಲಳಂ ನೆನೆದು–ಪ್ರಿಯೆಯನ್ನು ನೆನೆದುಕೊಂಡು; ಕಣ್ಗಾಪನೆ ಕಾದು–ಕಣ್ಣಿನ ಕಾವಲನ್ನೇ ಕಾದು, ಎಂದರೆ ಸುಭದ್ರೆಯು ಎಲ್ಲಿಯಾದರೂ ಅಕಸ್ಮಾತ್ತಾಗಿ ಕಾಣಿಸುವಳೋ ಎಂದು ತೆರೆದ ಕಣ್ಣುಗಳುಳ್ಳವನಾಗಿ; ಚಿಂತಾಸಮುದ್ರಾಂತರ ಪರಿವೃತನಾಗಿ–ಚಿಂತೆಯೆಂಬ ಕಡಲಿನಿಂದ ಬಳಸಿದವನಾಗಿ; ತೊೞಲ್ದುನೋೞ್ಪ ಬಗೆದಂದು–ಸುತ್ತಾಡಿ ನೋಡುವ ಮನಸ್ಸನ್ನು ಮಾಡಿ; ಮೇಳದ–ಜೊತೆಯ; ನಾಗರಿಕ–ಚತುರನಾದ ಪೌರ, ವಿಟ–ಸ್ತ್ರೀಲೋಲ ರಾದ ರಾಜಕುಮಾರನ ಸ್ನೇಹಿತ; ವಿದೂಷಕ–ಹಾಸ್ಯಗಾರ, ಪೀಠಮರ್ದಕ–ಸ್ತ್ರೀಬೇಟೆಯಲ್ಲಿ ರಾಜಕುಮಾರನಿಗೆ ಸಹಾಯ ಮಾಡುವವನು–ಈ ನಾಲ್ವರೂ ರಾಜಕುಮಾರನ ಅಥವಾ ಕಥಾನಾಯಕನ ಸಹಚರಿಗಳು ಎಂದು ಸಂಸ್ಕೃತ ನಾಟಕಗಳಲ್ಲಿ ಚಿತ್ರಿತರಾಗಿದ್ದಾರೆ;
೮೦. ಇಲ್ಲಿಂದ ಮುಂದಕ್ಕೆ ಬೆಳುದಿಂಗಳಲ್ಲಿ ಅರ್ಜುನನ ವೇಶ್ಯಾವಾಟೀ ವಿಹಾರ; ಅಲ್ಲಿ ಕಾಣುವ ಬಗೆಬಗೆಯ ದೃಶ್ಯಗಳ ವರ್ಣನೆ: ಒಂದು ಮಂದಾನಿಲವು ಬೀಸಿತು; ಮೃಗಭೂ– ಕಸ್ತೂರಿಯಿಂದ, ಋದ್ಧ–ವೃದ್ಧಿಹೊಂದುತ್ತಿರುವ, ವಿಳಾಸಿನೀ–ರಮಣಿಯರ, ಕಬರಿಕಾ ಬಂಧಗಳಂ–ತುರುಬಿನ ಕಟ್ಟುಗಳನ್ನು, ಪೊತ್ತು–ಕಂಪನ್ನು ಧರಿಸಿ; ಮಲ್ಲಿಗೆಯೊಳ್ ಭಾವಿಸಿ– ಮಲ್ಲಿಗೆಯ ಸುಗಂಧದಲ್ಲಿ ಮಿಶ್ರಣಮಾಡಿ; ಧೂಪದೊಳ್ ಪೊರೆದು–ಧೂಪದಲ್ಲಿ ವ್ಯಾಪಿಸಿ; ತತ್ಕಾಂತಾರತಿಸ್ವೇದ ಬಿಂದುಗಳೊಳ್–ಆ ಕಾಂತೆಯರ ರತಿಕ್ರೀಡೆಯಿಂದಾದ ಬೆವರು ಹನಿಗಳಲ್ಲಿ, ನಾಂದು–ಒದ್ದೆಯಾಗಿ; ಕುರುಳ್ಗಳೊಳ್ ಸುೞಿದು–ಮುಂಗುರುಳುಗಳಲ್ಲಿ ಸುತ್ತಾಡಿ, ಮುಂದೆ– ಮುಂದುಗಡೆ, ಒಂದಿರ್ದ–ಕೂಡಿ ಇದ್ದ, ಘಂಟೆಗಳ–ಗಂಟೆಗಳ, ಒಂದು, ಇಂಚರದೊಳ್– ಇನಿದಾದ ಶಬ್ದದಲ್ಲಿ, ಪಳಂಚಿ–ತಾಗಿ, ಅಂದೊಂದು–ಅಂದು ಒಂದು, ಮಂದಾನಿಲಂ–ಎಳೆಯ ಗಾಳಿ, ಸುೞಿದತ್ತು–ಸುಳಿದಾಡಿತು. ವೇಶ್ಯೆಯರ ಮನೆಯ ಮುಂದೆ ಗಂಟೆಯನ್ನು ಕಟ್ಟುವ ಪದ್ಧತಿ ಇತ್ತು; “ಅಂತೆನಿಸಿದ ವೇಶ್ಯಾವಾಟನಿಕೇತನ ಪ್ರಾಂತದೊಳ್ ಚಾರುದತ್ತಂ ಬರುತ್ತು ಮದಱ ಶೃಂಗಾರ ವಿವಿಧ ಭಾವಂಗಳಂ ರುದ್ರದತ್ತಾದಿಗಳ್ಗೆ ಪೇೞುತ್ತಂ ಬರೆವರೆ ಪೊನ್ನ ಗಂಟೆವೆರಸೊಪ್ಪುವ ಬಾಗಿಲ್ವಾಡಮಂ ಕಂಡು” (ಕರ್ಣಪಾರ್ಯನ ಪ್ರಯೋಗ) ಎಂಬುದನ್ನು ನೋಡಬಹುದು. ‘ಬಂಧಂಗಳಂ’ ಎಂಬುದು ‘ಗಂಧಂಗಳಂ’ ಎಂದಿರಬಹುದು.
ವಚನ : ಪೂವಿನಂಬುಗಳಂ ಪಣ್ಣಲೆಂದು–ಹೂಬಾಣಗಳನ್ನು ಮಾಡಬೇಕೆಂದು; ಓಜನಸಾಲೆ–ಕಮ್ಮಾರನ ಅಥವಾ ಅಕ್ಕಸಾಲೆಯ ಮನೆ;
೮೧. ಮಾಲೆಗಾತಿಯರ ವರ್ಣನೆ: ಎತ್ತಿದ ತೋಳ–ಮೇಲಕ್ಕೆತ್ತಿದ್ದ ತೋಳುಗಳ, ಮೊತ್ತ ಮೊದಲ್–ಬುಡದ ಭಾಗ, ಅಂಗಜನಂ–ಮನ್ಮಥನನ್ನು, ಪಟವಿದ್ದೆಗೆತ್ತಿದಂತೆ–ಗಾಳಿಪಟ ವನ್ನು ಆಡಿಸುವ ಹಾಗೆ ಆಡಿಸುವುದಕ್ಕೆ, ಎತ್ತಂ–ಎಲ್ಲಿಯೂ, ಅಪೂರ್ವಮಾಗೆ–ಅಪರೂಪ ವಾಗಲು; ಪೊಸವಾಸಿಗಂ–ಹೊಸದಾದ ಹಾರವು, ಅಂಗಜ ಚಕ್ರವರ್ತಿಗೆ–ಮನ್ಮಥನೆಂಬ ಚಕ್ರವರ್ತಿಗೆ, ಎಂದು, ಎತ್ತಿದ, ಮೀನಕೇತನಮಂ–ಮೀನಿನ ಧ್ವಜವನ್ನು, ಒತ್ತರಿಸುತ್ತಿರೆ– ಒಂದು ಕಡೆಗೆ ಸರಿಸುತ್ತಿರಲು ಎಂದರೆ ತಿರಸ್ಕರಿಸುತ್ತಿರಲು; ಚಲ್ಲವಾಡಿ–ಚಲ್ಲಾಟವಾಡಿ, ಪೂವೆತ್ತುವ–ಹೂವಿನ ಹಾರಗಳನ್ನು ಮೇಲೆತ್ತಿ ತೋರಿಸುವ, ಮಾಲೆಗಾರ್ತಿಯರಂ–ಹೂವಾಡ ಗಿತ್ತಿಯರನ್ನು, ಅರಿಕೇಸರಿ–ಅರ್ಜುನ, ನಿಂದು–ನಿಂತು, ನೋಡಿದಂ–ನೋಡಿದನು. ಪಟವಿದ್ದೆ: “ಪಟಮಿದೆ ಸಾಲ್ಗುಮನ್ಯಭವವಲ್ಲಭನಂ ಪಟವಿದ್ಯೆಯೆತ್ತಲುಂ ಜಟಿಮಟಿಕರ್ಕಳಂ ತೊಡರೆ ಸುತ್ತಲುಂ” ಎಂಬ ಪಂಪನ ಪ್ರಯೋಗವಿದೆ (ಆದಿ. ಪು. ೩–೪೫); ಇದು ಪಟವಿದ್ಧ ಎಂಬುದರ ತದ್ಭವವೆಂದು ಹೇಳುವುದು ಸರಿಯಲ್ಲದಿರಬಹುದು, ಪಟವಿದ್ಯೆ ಎಂದೇ ಪ್ರಯೋಗ ದಲ್ಲಿರುವುದರಿಂದ.
ವಚನ : ನಾಡಾಡಿಯಲ್ಲದ–ಸಾಮಾನ್ಯವಲ್ಲದ; ಜೋಡೆಗೆಯ್ತಂಗಳಂ–ಜಾರ ಚೇಷ್ಟೆ ಗಳನ್ನು; ಮನೆಯಾಣ್ಮನಂ–ಮಾಱುವಂದಮಲ್ಲದೆ ಪೂಮಾಱುವಂದಮಲ್ತು–ಮನೆಯ ಗಂಡನನ್ನು ಮಾರುವ ರೀತಿಯಲ್ಲದೆ ಹೂವನ್ನು ಮಾರುವ ರೀತಿಯಲ್ಲ; ಕಣ್ಣೆಮೆಯೆ–ಕಣ್ಣಿನ ರೆಪ್ಪೆಯೆ, ಕಾಂಡಪಟಮಾಗೆ–ತೆರೆಯಾಗಲು; ಬಗೆಯಾಣ್ಮನ–ಮನದೊಡೆಯನ, ಇಚೆ, ಯ ಗಂಡನ; ದೂದವಿ–ದೂತಿ; ಬಗೆದೆಡೆಯನೆಯ್ದಿ–ಇಷ್ಟಬಂದ ಸ್ಥಳಕ್ಕೆ ಹೋಗಿ; ಬಗೆದ ಬಗೆಯಂ ಬಗೆದಂತೆ ತೀರ್ಚಿ–ಬಯಸಿದ ಇಚೆ, ಯನ್ನು ಬಯಸಿದಂತೆ ತೀರಿಸಿ; ಜೋಡೆಯರಂ– ಜಾರೆಯರನ್ನು;
೮೨. ಕುಱುಪಂಪುರ್ವಿನ ಜರ್ವೆ ತೋಱೆ–ಗುರುತನ್ನು ಎಂದರೆ ಸಂಕೇತ ಸ್ಥಾನವನ್ನು ಹುಬ್ಬಿನ ಅಲುಗಾಟವೇ ತೋರಿಸಲು; ಬಗೆಯಂ ಕಣ್ಸನ್ನೆಗಳ್ ಪೇೞೆ–ಮನದ ಅಭಿಲಾಷೆ ಯನ್ನು ಕಣ್ಣಿನ ಸಂಜ್ಞೆಗಳೇ ಹೇಳಲು; ತನ್ನೆಱಕಂ–ತನ್ನ ಮನಕ್ಕೆ, ಕೂಡೆ–ತನ್ನ ಪ್ರೀತಿ ತನ್ನ ಮನಸ್ಸಿಗೆ ಮೆಚ್ಚಿಕೆಯಾಗಲು; ಕೆಲಕಂ–ಮಗ್ಗುಲಲ್ಲಿರುವವರಿಗೂ, ಗಂಡಂಗಂ–ಗಂಡನಿಗೂ, ಒಳ್ಪಂ–ಒಳ್ಳೆಯತನವನ್ನು, ಕರಂ–ವಿಶೇಷವಾಗಿ, ಮೆಱೆವಾ–ಮೆರೆಯುವ, ಪ್ರಕಟಿಸುವ, ಆ ಪ್ರೌಢೆಯೆ–ಆ ಜಾಣೆಯೇ, ಜೋಡೆಯಕ್ಕುಂ–ಜಾರೆಯಾಗುತ್ತಾಳೆ; ಎಡೆಯೊಳ್–ಎಲ್ಲರ ನಡುವೆ, ದೂಂಟಿಂದೆ ದೂಂಟಿಂಗೆ–ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಗೆ, ಪೆರ್ವಱೆ ಯಂ–ದೊಡ್ಡ ಭೇರಿಯನ್ನು, ಪೊಯ್ಸಿ–ಹೊಡೆಯಿಸಿ, ಡಂಗೂರ ಹಾಕಿಸಿ; ಕೆಲಕ್ಕೆ–ಮಗ್ಗುಲಿಗೆ, ನಾಣ್ಚಿ–ನಾಚಿಕೆಪಟ್ಟು, ತಲೆಗುತ್ತಿ–ತಲೆ ತಗ್ಗಿಸಿಕೊಂಡು, ಇರ್ಪಾಕೆ–ಇರುವವಳು, ಏಂ ಜೋಡೆಯೇ–ಏನು ಜಾರೆಯೇ? ಅಲ್ಲ. ಈ ಪದ್ಯದಲ್ಲಿ ಒಂದೇ ಒಂದು ಸಂಸ್ಕೃತ ಶಬ್ದವಿದೆ; ಇದರ ದೇಸಿ ಮನೋಜ್ಞ. “ದೊಂಟು–ಏಕ ಪಾದಗತೌ.”
೮೩. ಎಂಥವಳು ಜಾರಸ್ತ್ರೀಯೆಂಬುದನ್ನು ಇನ್ನೂ ಹೇಳುತ್ತಾನೆ: ಕೂರಿದುವಪ್ಪ– ಹರಿತವಾದ, ತೀಕ್ಷ್ಣವಾದ, ಕಣ್ಮಲರ್ಗಳ್–ಹೂವಿನಂತಿರುವ ಕಣ್ಣುಗಳು, ಅಳ್ಳೆರ್ದೆಯೊಳ್– (ವಿಟನ) ನಡುಗುವ ಎದೆಯಲ್ಲಿ, ತಡಂ ಆಡೆ–ತಡವಾಗಿ ಆಡಲು, ನಿದಾನವಾಗಿ ಚಲಿಸಲು; ಕಣ್–ಕಣ್ಣುಗಳು, ತಾಮೆ–ತಾವೇ, ಪೇರಿಸೆ–ಚಲಿಸುವಂತೆ ಮಾಡಲು, ಪುರ್ವು–ಹುಬ್ಬುಗಳು, ನಾಲಗೆವೊಲಾಗೆ–ನಾಲಗೆಯಂತೆ ಮಾತಾಡುವುದಾಗಲು, ಮನಂಬುಗಿಸಲ್ಕೆ–ಮನಸ್ಸನ್ನು ಹೊಗಿಸುವುದಕ್ಕೆ, ಬಲ್ಲೊಡೆ–ತಿಳಿದಿದ್ದ ಪಕ್ಷದಲ್ಲಿ, ಆ ಜಾರೆಯೆ–ಆ ವೇಶ್ಯೆಯೇ, ಜಾರೆ– ವೇಶ್ಯೆ; ಪಾಱನೆ–ಜಾರತನವನ್ನೇ, ಪಿರಿದುಂ–ವಿಶೇಷವಾಗಿ, ಗೞಪುತ್ತುಮಿರ್ಪಳಂ–ಬಾಯಲ್ಲಿ ಹರಟುತ್ತಾ ಇರುವವಳನ್ನು, ಸಾರಿಕೆಯೆಂಬರಲ್ಲದೆ–ಗಿಣಿ ಎಂದು ಹೇಳುತ್ತಾರಲ್ಲದೆ, ಬುದ್ಧ‡ಯುಳ್ಳವರ್–ವಿವೇಕಿಗಳು, ಅಭಿಸಾರಿಕೆಯೆಂಬರೆ–ಜಾರೆ ಎಂದು ಹೇಳುತ್ತಾರೆಯೆ? ಇಲ್ಲ. ಪೇರಿಸು=ಪೇರ್+ಇಸು; ಪೇರ್ ಎಂಬ ಧಾತುವನ್ನು ಕೇಶಿರಾಜ ಕಾಣಿಸಿಲ್ಲ; ತಮಿಳಿನಲ್ಲಿ ಪೇರ್=ಅಶೈದಲ್, ಚಲಿಸು ಎಂದರ್ಥ.
ವಚನ : ಆ ಪಾಣ್ಬೆಯರ ಗೆಯ್ವಗೆಯ್ತಂಗಳಂ–ಆ ಸೂಳೆಯರು ಮಾಡುವ ಚೇಷ್ಟೆಗಳನ್ನು; ಆಡುವ ಮಿೞ್ತುಗೊಡ್ಡಂಗಳುಮಂ–ಹೇಳುವ ಮೃತ್ಯುವಿನಂಥ ಚೇಷ್ಟೆಯ ಮಾತುಗಳನ್ನು; ‘ಸಾಯೆ ಸರಸಂ ನುಡಿದು’ ಎಂಬುದನ್ನು ಹೋಲಿಸಿ ನೋಡಿ.
೮೪. ಸಂಸಾರದಲ್ಲಿಲ್ಲದಿರುವ ಸವಿ ಜಾರತನದಲ್ಲಿ ಏನೋ ಇರಬೇಕು; ಇಲ್ಲದಿದ್ದರೆ ತಲೆ ಮೂಗನ್ನಾದರೂ ಒತ್ತೆಯಿಟ್ಟು ಜಾರತನವನ್ನು ಏಕೆ ಮಾಡುತ್ತಾರೆ ಜನ? ಅಲರ್ಗ ಣ್ಣೊಳ್–ಹೂವಿನಂಥ ಕಣ್ಣುಗಳಲ್ಲಿ, ಸ್ಮರಂ–ಮನ್ಮಥನು, ಇರ್ದನಕ್ಕುಂ–ಇದ್ದವನಾಗು ತ್ತಾನೆ; ಎಡೆವೋಪ–ಸಂಕೇತಸ್ಥಾನಕ್ಕೆ ಹೋಗುವ, ಆ ಜೋಡೆ–ಆ ಜಾರೆ, ಕಾಮಂಗೆ–ಮನ್ಮಥ ನಿಗೆ, ಕಾದಲೆಯಕ್ಕುಂ–ಪ್ರೀತಿಸಿದವಳಾಗಿದ್ದಾಳೆ; ಪೆಱತೇನೊ–ಬೇರೆ ಏನೋ? ಪಾರದರ ದೊಳ್–ಪರದಾರತ್ವದಲ್ಲಿ, ಹಾದರದಲ್ಲಿ, ಸಂಸಾರಸರ್ವಸ್ವಮಂ–ಸಂಸಾರದ ಸಾರವನ್ನೆಲ್ಲ, ಗೆಲೆವಂದ–ಗೆದ್ದ, ಮೀರಿದ, ಅಲಂಪಿನ–ಸುಖದ, ಇಂಪನಾಳ್ದ–ಇಂಪನ್ನು ಹೊಂದಿದ, ಸವಿಯುಂಟಕ್ಕು–ರುಚಿ ಇರಬೇಕು; ಆವಗಂ–ಯಾವಾಗಲೂ, ಸಮಂತು–ಚೆನ್ನಾಗಿ, ಅವರ್–ಜಾರರು, ತಲೆಯುಂ ಮೂಗುಮನೊತ್ತೆಯಿಟ್ಟು–ತಲೆಯನ್ನೂ ಮೂಗನ್ನೂ ಒತ್ತೆ ಯಿಟ್ಟು, ಉಂತೆ–ಸುಮ್ಮನೆ, ನೆರೆವಂತೆ–ಕೂಡುವ ಹಾಗೆ, ಗಾಂಪರೇ–ದಡ್ಡರೇ! ಅಲ್ಲ. ಹಾದರಿಕೆಗೆ ಹಿಂದಿನ ಕಾಲದಲ್ಲಿ ವಿಧಿಸುತ್ತಿದ್ದ ಶಿಕ್ಷೆ ಗಂಡಸಿಗೆ ತಲೆ ಕತ್ತರಿಸುವುದು, ಹೆಂಗಸಿಗೆ ಮೂಗು ಕತ್ತರಿಸುವುದು. ಕ್ರಿ.ಶ. ೯೯೨ನೆಯ ಒಂದು ಶಾಸನದಲ್ಲಿ (s ii, 77) “ಹರದರಕ್ಕ ನಂಗದೊಳ್ ಪಾರದರಿಗೆಯ ಪಚ್ಚವಂಕೊಂಡು ಪಾದರಿಗೆಯ ಮೂಗನರಿದು ಪಾದರಿಗನಂ ಕೊಲ್ವರು” ಎಂದು ಹೇಳಿದೆ (ಪಂಕ್ತಿ ೩೨–೩೩). ಒತ್ತೆಯಿಡುವ ವಿಷಯವಾಗಿ ಈ ಕೆಳಗಿನ ಪದ್ಯವನ್ನು ನೋಡಬಹುದು (ಕಾವ್ಯಸಾರ, ಪು. ೨೩೪–೨)
“ಕುರುಳಂಕೊಟ್ಟಪಳೆಂಬುದರ್ಕೆ ಕುಱುಪೇನೀ ಚಿನ್ನವೂ ಬೇಡಿದಾ
ಬೆರಲಂ ಕೊಟ್ಟಪಳೆಂಬುದರ್ಕೆ ಕುಱುಪೇನೀವುಂಗುರಂ ಮೀಸಲಾ
ದುರಮಂ ಕೊಟ್ಟಪಳೆಂಬುದರ್ಕೆ ಹೊಣೆ ವೋಗೀ ಹಾರಮೀಗಳ್ ತಳೋ
ದರಿ ಪೇೞೆಂದು ಕಲಾವಿಲಾಸನಿದಿರೊಳ್ ತಂದಿಕ್ಕುವರ್ ದೂತಿಯರ್”
ಹೀಗೆಯೇ ಅರ್ಧನೇಮಿ ಪುರಾಣದಲ್ಲಿ (೫–೨, ವ.) ‘ಆಕೆಗಳ ಕೊಯ್ದಿಕ್ಕಿದ ಕುರುಳ್ಗಳಿಂ ತುಂಬಿಯ ಬಣಂಬೆಯನೊಟ್ಟಿದಂತಾಗೆ, ಕಡಿದಿಕ್ಕಿದ ಬೆರಳ ಕಂಡಿಕೆಗಳಿಂ ಪಸಿಯರಿಸಿನದ ಕೊಂಬನುಡಿದು ಸುಣ್ಣಂ ತೊಡೆದೀಡಾದಂತಾಗೆ, ಕಿೞ್ತಿಕ್ಕಿದ ಕೆಂಬಲ್ಗಳಿಂ ದಾಳಿಂಬದ ಬಿತ್ತಂ ರಾಶಿಗೆಯ್ದಂತಾಗೆ, ಕಿಱುವೆರಲ್ಗಳಿಂ ಕರ್ಚುವ ಮುಖ ಮುಕುರಂಗಳ್ ಚಂದ್ರಮಂಡಲಂ ಪಾವಿನ ಪೆಡೆಯಂ ನುಂಗುವಂತಾಗೆ ಬಯಲ್ದೊಱೆಯನೀಸುವ ಬಾಲೆಯರಿಂ ಸ್ತ್ರೀರಾಜ್ಯಮಂ ಸೂಱೆಗೊಟ್ಟುದಂ ಸುಲಿವಂತಾಗೆ, ಸ್ಮರ ಪರಿತಾಪಕ್ಕೆ ಪಕ್ಕಾಗಿ ಪೊಕ್ಕು ಪೊರಳ್ವ ನರಳ್ವ ನಾರಿಯರ ನೆರವಿಗಳಿಂ” ಎಂದು ಬರುವ ಪಂಕ್ತಿಗಳನ್ನು ನೆನೆಯಬಹುದು.
ವಚನ : ಮನಸಿಜನ ನಡಪಿದ–ಮನ್ಮಥನು ಸಾಕಿದ; ದೀವಗಾಱನ–ಹುಲ್ಲೆ ಮುಂತಾದ ದೀಪಕ ಮೃಗಗಳನ್ನೊಡ್ಡಿ ಹುಲಿ ಮುಂತಾದುವುಗಳನ್ನು ಬೇಟೆಯಾಡುವ ಬೇಟೆಗಾರನ; ಮತ್ತವಾರಣಂಗಳೊಳ್–ಮನೆಯ ಮುಂದಿನ ಕೈಸಾಲೆಗಳಲ್ಲಿ; ಅಳವಿಗೞಿದ–ಅಳತೆ ಯಿಲ್ಲದ, ಪ್ರಮಾಣವಿಲ್ಲದ, ಅತಿ ಅಧಿಕವಾದ, ಪೆಂಡವಾಸದೊಳ್ವೆಂಡಿರಂ–ಸ್ತ್ರೀಯರ ನಿವಾಸದ, ಸೂಳೆಗೇರಿಯ, ಒಳ್ಳೆಯ ಹೆಂಗಸರನ್ನು;
೮೫. ಈಕೆಗಂಡು–ಈಕೆಯನ್ನು ನೋಡಿ, ಮನಸಿಜಂ–ಮನ್ಮಥನು, ರತಿಯಂ–ರತಿದೇವಿ ಯನ್ನು, ಬಿಸುಟಂ–ಬಿಟ್ಟುಬಿಟ್ಟನು; ಹರನ್–ಶಿವನು, ಈಕೆಗಂಡು–ಇವಳನ್ನು ನೋಡಿ, ನೂತನ ಗಿರಿಜಾತೆಯಂ–ಹೊಸ ಹೆಂಡತಿಯಾದ ಪಾರ್ವತಿಯನ್ನು, ತೊಱೆದಂ–ತೊರೆದನು; ನರಕಾಂತಕಂ–ವಿಷ್ಣುವು, ಈಕೆಗಂಡು–ಇವಳನ್ನು ಕಂಡು, ತೊಟ್ಟನೆ–ಇದ್ದಕ್ಕಿದ್ದ ಹಾಗೆಯೇ, ನಿಜಲಕ್ಷ್ಮಿಯಂ–ತನ್ನ ಪತ್ನಿಯಾದ ಲಕ್ಷ್ಮಿಯನ್ನು, ಮಱೆದಂ–ಮರೆತನು; ಎಂಬ ನೆಗೞ್ತೆಯಂ ಎಂಬ–ಹೊಗಳಿಕೆಯನ್ನು, ಅಪ್ಪುಕೆಯ್ದು–ಹೊಂದಿ, ಜವ್ವನದ, ವಿಳಾಸದ, ಅಂದದ, ಅಲ್ಲಿಯಾ– ಆ ವೇಶ್ಯಾವಾಟದ, ಪೆಂಡಿರೆ–ಹೆಣ್ಣುಗಳೇ, ಪೆಂಡಿರ್–ಹೆಣ್ಣುಗಳು; ಸೂಳೆಗೇರಿಯ ಸ್ತ್ರೀಯರ ಚೆಲುವನ್ನು ಇಲ್ಲಿ ಹೊಗಳಿದೆ.
೮೬. ಅಕ್ಕ, ತಿಸರಮಿದಾವುದು–ಈ ಮೂರೆಳೆಯ ಹಾರ ಯಾವುದು? ಧರಣೀಂದ್ರನ ಕೊಟ್ಟುದು–ಧರಣೀಂದ್ರನೆಂಬ ಸರ್ಪರಾಜನು ಕೊಟ್ಟದ್ದು; ಕಣ್ಗೆಸೆವುದು–ಕಣ್ಣಿಗೆ ಸೊಗಸಾಗಿ ರುವ, ವಜ್ರದಾಳಿ–ವಜ್ರದ ತಾಳಿ, ಇದಾವುದು–ಇದು ಯಾವುದು? ಒಲ್ಲದೆ–ನಾನು ಒಪ್ಪದೆ, ಉೞಿದು–ಬಿಟ್ಟು, ಅಟ್ಟಿದೊಡೆ–ಕಳಿಸಿಬಿಟ್ಟರೆ, ಅಂದು–ಆ ದಿವಸ, ಕುಬೇರಂ–ಕುಬೇರನು, ಇತ್ತುದು–ಕೊಟ್ಟುದು; ಎಕ್ಕಸರಂ–ಒಂದೆಳೆಯ ಹಾರ; ಇದಾವುದು–ಇದು ಯಾವುದು? ಆಂ ಮುಳಿಯೆ–ನಾನು ಕೋಪಿಸಿಕೊಳ್ಳಲು, ಕಾಲ್ವಿಡಿದ–ಕಾಲನ್ನು ಹಿಡಿದುಕೊಂಡ, ಇಂದ್ರನ ಕೊಟ್ಟುದಲ್ತೆ–ಇಂದ್ರನು ಕೊಟ್ಟದ್ದಲ್ಲವೆ? ಪೋ ಪುಸಿಯದಿರ್–ಹೋಗು, ಸುಳ್ಳು ಹೇಳಬೇಡ, ಎಂಬ–ಎಂದು ಹೇಳುವ, ಅಲ್ಲಿಯ ಪೆಂಡವಾಸದ–ಅಲ್ಲಿನ ಸೂಳೆಗೇರಿಯ, ಸೂಳೆಯರೆ–ಸೂಳೆಯರೇ, ಸೂಳೆಯರ್–ಸೂಳೆಯರು (ಸಂ.) ಶೂಲಾ ಸೂಳೆ; (ಸಂ) ಏಕಸರಂ ಎಕ್ಕ ಸರ; (ಸಂ) ತ್ರಿಸರಂ ತಿಸರಂ;
೮೭. ಈ ಪದ್ಯದಲ್ಲಿ ರಾಜ ವಿಟರ ವರ್ಣನೆ ಇದೆ: ಸೀಗುರಿ–ಸೀಗುರಿಯೆಂಬ ಕೊಡೆ, ಕಾಪಿನಾ [ಳ್]– ಅಂಗರಕ್ಷಕರು, ಕುಣಿದುಮೆಟ್ಟುವ ಗುಜ್ಜರಿಗೞ್ತೆ–ಕುಣಿದು ಹೆಜ್ಜೆಯಿಡುವ ಗುರ್ಜರ ದೇಶದ ಕತ್ತೆ; ಬೀರಮಂ–ಶೌರ್ಯವನ್ನು, ಚಾಗದ–ದಾನದ, ಪೆಂಪುಮಂ–ಹಿರಿಮೆ ಯನ್ನೂ, ಪೊಗೞ್ವ–ಹೊಗಳುವ, ಸಂಗಡವರ್ಪವರ್–ಜೊತೆಯಲ್ಲಿ ಬರುವವರು, ಒಳ್ಪಿನಿಂದೆ–ಒಳ್ಳೆಯತನದಿಂದ, ಮೆಯ್ಯೋಗಂ–ದೇಹಾಲಂಕರಣವು, ಅಳುಂಬಮಪ್ಪ–ಅತಿಶಯ ವಾದ, ಬಿಯಂ–ವೆಚ್ಚ, ಆಗೆ–ಆಗಿ, ಎರ್ದೆಗಂ ಬರೆ–ಹೃದಯವನ್ನು ಮುಟ್ಟುತ್ತಿರಲು, ಬರ್ಪ– ಬರುವ, ಪಾಂಗು–ರೀತಿ, ಅಗುರ್ವಾಗಿರೆ–ಆಶ್ಚರ್ಯಕರವಾಗಿರಲು, ಅರಬೊಜಂಗರಲೀಲೆ– ರಾಜವಿಟರ ವಿಲಾಸ, ಸುರೇಂದ್ರಲೀಲೆಯಿಂ–ಇಂದ್ರನ ವಿಲಾಸಕ್ಕಿಂತ, ಚೆಲ್ವನಾಯ್ತು–ಸೊಗಸಾ ಯಿತು. ಇಲ್ಲಿ ಕೆಲವು ಪಾಠಸಂದೇಹಗಳಿವೆ: (೧) ಚಾಪಿನಾಣ್–ಎನ್ನುವುದಕ್ಕೆ ಬದಲಾಗಿ ಕಾಪಿನಾ [ಳ್] ಸ್ವೀಕೃತವಾಗಿದೆ (೨) ಗುಜ್ಜರಿಗೞ್ತೆ ಎನ್ನುವುದಕ್ಕೆ ‘ವಜ್ಜರಿಗೞ್ತೆ’ ಎಂದಿದೆ; ಕರಿಯ ಪಿರಿಯ ಮೆಯ್ಯನಿಡಿಯಕಿವಿಯ ಕುಣಿದು ಮೆಟ್ಟುವ ವಜ್ಜರಿಗೞ್ತೆಗಳುಮಂ” ಎಂದು ‘ಆದಿಪುರಾಣ’ ದ ಪ್ರಯೋಗವಿದೆ (೪–೫೪ವ); “ಧಾರಿಣಿ ಮಹಾದೇವಿ ಅಯ್ನೂರ್ವರ ರಸಿಯರ್ಕಳುಂ ಪೆಂಡವಾಸದಗ್ಗಳದ ಸೂಳೆಯರ್ಕಳುಂ ಬೆರಸು, ವೇಸರಿಗೞ್ತಿ–ಗಳುಂ ಪಿಡಿ ಗಳುಂ ಸಿವಿಗೆಗಳುಮನೇಱಿ ಕೊಡೆಗಳುಮಂ ಪಿಡಿಯಿಸಿ ಎಕ್ಕಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ ಬೞಿಯಂ ಕಾಪಿನವರ್ವರೆ” ಎಂದು ‘ವಡ್ಡಾ ರಾಧನೆ’ ಯಲ್ಲಿದೆ (ಪು. ೮೦); ಇವೆಲ್ಲವನ್ನೂ ನೋಡಿದರೆ ವೇಸರಿಗೞ್ತೆ ಎಂಬ ಪಾಠವಿದ್ದಿರ ಬೇಕೆಂದು ತೋರುತ್ತದೆ. (೩) ‘ಒಳ್ಪಿನಿಂದೆ’ ಗೆ ‘ಒೞ್ಗಿನಿಂದೆ’ ಎಂಬ ಪಾಠವಿರಬಹುದು. (೪) ‘ಬಿಯಮಾಗೆರ್ದೆಗಂ’ ಗೆ ‘ಬಿಯಮಾರೆರ್ದೆಗಂ’ ಎಂದಿರಬಹುದು.
ವಚನ : ಕೋಟಿಪೊಂಗೆ ಘಂಟೆಯನಲುಗುವ–ಕೋಟಿ ಹೊನ್ನುಗಳನ್ನು ಕೊಟ್ಟು ಸೂಳೆಯ ಮನೆಯ ಮುಂದಿನ ಗಂಟೆಯನ್ನು ಬಡಿಯುವ; ಕಿಱುಕುಳಬೊಜಂಗರುಮಂ– ಅಲ್ಪರಾದ, ಸಾಮಾನ್ಯರಾದ ವಿಟರನ್ನೂ; ಚಿಕ್ಕ ಪೋರ್ಕುಳಿ ಬೊಜಂಗರುಮಂ–ಚಿಕ್ಕವರಾದ ಕಲಹಶೀಲರಾದ ವಿಟರನ್ನೂ; ಕತ್ತುರಿಬಿಯಮಂ–ಕಸ್ತೂರಿಯ ವೆಚ್ಚವನ್ನು; ಕತ್ತುರಿಯೊಳ್ ಪೊೞ್ದು–ಕಸ್ತೂರಿಯಲ್ಲೇ ಹೂಳಿ ಹೋಗಿ ಎಂದರೆ ಕಸ್ತೂರಿಯ ಸಾಂದ್ರ ಲೇಪನವನ್ನುಳ್ಳ ವರಾಗಿ; ಕತ್ತುರಿಬೊಜಂಗರುಮಂ–ಕಸ್ತೂರಿಯ ವಿಟರನ್ನು; ಬೊಜಂಗರಬಿಯದಳವಿಗೆ– ವಿಟರು ಮಾಡುವ ಹಣವ್ಯಯದ ಪ್ರಮಾಣಕ್ಕೆ, ಇಲ್ಲಿಂದ ಮುಂದೆ ಮಧುಪಾನಗೋಷ್ಠಿಯ ವರ್ಣನೆ: ಕಳ್ಳೊಳಮಮರ್ದಿನೊಳಂ ಪುಟ್ಟಿದ ಪೆಂಡಿರಂತೆ–ಕಳ್ಳಿನಲ್ಲೂ ಅಮೃತದಲ್ಲೂ ಹುಟ್ಟಿದ ಹೆಂಗಸಿನಂತೆ ಎಂದರೆ ಸುರಾದೇವಿಯಂತೆ, ಲಕ್ಷ್ಮೀ ದೇವತೆಯಂತೆ, ಬಳಮರ್ದುಕಾ ಱನ–ಸೈನ್ಯದ ಮದ್ದನ್ನು ಎಂದರೆ ತುಬಾಕಿಯ ಮದ್ದನ್ನು ಮಾಡುವವನು; ಮರ್ದಿನಂತೆ– ಕೋವಿಯ ಮದ್ದಿನಂತೆ; ದಳಂಬಡೆದು–ವೃದ್ಧಿಯಾಗಿ (ದಳವೇಱು ಎಂಬುದರೊಡನೆ ಹೋಲಿಸಿ); ಕಳ್ಗಳಂ–ಮದ್ಯಗಳನ್ನು; ಮಧುಮಂತ್ರದಿಂ–ಮದ್ಯದ ಮಂತ್ರದಿಂದ, ಮಧು ದೇವತೆಗಳನರ್ಚಿಸಿ–ಹೆಂಡದ ಅಭಿಮಾನದೇವತೆಗಳನ್ನು ಪೂಜೆ ಮಾಡಿ; ಕೊಂಚೆ– ಕ್ರೌಂಚಪಕ್ಷಿ; ಅಂಚೆ–ಹಂಸ; ಕುಂತಳಿಕೆ–ಒಂದು ಹಕ್ಕಿ; ಮಾೞ್ಕೆಯ–ಮಾಟದ, ಸಿಪ್ಪುಗಳೊಳ್–ಚಿಪ್ಪುಗಳಲ್ಲಿ, ಮಧುಪಾನ ಪಾತ್ರೆಗಳಲ್ಲಿ; ನೆಲದೊಳೆಱೆದು–ನೆಲಕ್ಕೆ ಹೊಯ್ದು (ಹೆಂಡ ಕುಡಿಯುವ ಮುನ್ನ ಭೂದೇವಿಗೆ ತೃಪ್ತಿಯಾಗಲಿ ಎಂದು ಸ್ವಲ್ಪ ಹೆಂಡವನ್ನು ನೆಲಕ್ಕೆ ಬೀಳಿಸುತ್ತಾರೆ); ತಲೆಯೊಳ್–ತಳಿದು–ತಲೆಗೆ ಚಿಮುಕಿಸಿಕೊಂಡು (ಮಂತ್ರೋದಕದಂತೆ); ಧರ್ಮಗಳ್ಗುಡಿವರ್ಗೆಲ್ಲಂ–ದುಡ್ಡಿಲ್ಲದೆ ಬಿಟ್ಟಿ ಹೆಂಡ ಕುಡಿಯುವವರಿಗೆಲ್ಲ; ಮೀಸಲ್ಗಳ್ಳನ್ –ಮೀಸಲಾಗಿಟ್ಟಿರುವ ಕಳ್ಳನ್ನು; ಕಿಱಿಕಿಱಿದನೆಱೆದು–ಕೊಂಚಕೊಂಚ ಹುಯ್ದು; ಕುಡಿಬಿದಿರ ಕುಡಿಯ–ಬಿದಿರಕಳಿಲೆಯ; ಮಾವಿನ ಮಿಡಿಯ–ಮಾವಿನ ಹೀಚುಗಾಯಿನ; ಮಾರುಡಿನ– ಬಿಲ್ವಪತ್ರೆ ಕಾಯಿಯ ತಿರುಳಿನ, ಮೆಣಸುಗಡಲೆಯ–ಮೆಣಸು (ಕಾರದ) ಕಡಲೆಗಳ, ಪುಡಿ ಯೊಳಡಸಿದ–ಪುಡಿಯಲ್ಲಿ ತುಂಬಿದ, ಅಲ್ಲ [ದ] ಲ್ಲಣಿಗೆಯ–ಹಸಿಶುಂಠಿಯ ಮಿಶ್ರಣ ವನ್ನುಳ್ಳ, ಚಕ್ಕಣಂಗಳಂ–ಮದ್ಯ ಕುಡಿಯುವಾಗ ನಂಜಿಕೊಳ್ಳುವ ಚಾಕಣಗಳನ್ನು; ಸಂಸ್ಕೃತ ದಲ್ಲಿ ಇದನ್ನು ಚಣಕ ಎಂದು ಕರೆದಿದೆ. “ಕತಕಂ ಕುಟಜಂ ಬಿಲ್ವಂ ಕ್ಷಿಪ್ತಂ ಚ ಲವಣೋದಕೇ । ತೈಲ ಪಕ್ವಾಂಶ್ಚಚಣಕಾನ್ ಮರೀಚೇನ ವಿಮಿಶ್ರಿತಾನ್ ॥” ಎಂಬಲ್ಲಿ ಚಣಕವನ್ನು ಮಾಡುವ ಒಂದು ವಿಧಾನವನ್ನು ಹೇಳಿದೆ. ಮದ್ಯವನ್ನು ತಲೆಯ ಮೇಲೆ ತಳಿದುಕೊಳ್ವುದು ಮತ್ತು ನಮಸ್ಕಾರ ಮಾಡುವುದು: “ವಾಮಾನಾಮಿಕಯಾ ಮೂರ್ಧ್ನಿ ಕ್ಷಿಪೇಯುರ್ಮಧು ವಿಪ್ರುಷ । ಪ್ರಣಿಪತ್ಯ ತತೋಽನ್ಯೋನ್ಯಂ ಲಬ್ಧ್ವಾನುಜ್ಞಾಂ ಮುದಾಸುರಾಮ್ ॥ ಮಧುಪಾನ ಮಾಡುವ ಎಡೆಯಲ್ಲಿ ಚಣಕಗಳನ್ನಿಟ್ಟಿರಬೇಕು: “ಏವಮಾದ್ಯುಪದಂಶಾರ್ಥಂ ಪಾನಸ್ಥಾನೇ ನಿವೇಶ ಯೇತ್ ॥ ಪಂಪನು ಇಲ್ಲಿ ‘ಮೂನೂಱಱುವತ್ತು ಜಾತಿಯ’ ಮದ್ಯಗಳಿವೆಯೆಂದು ಹೇಳಿದ್ದಾನೆ; ಅವುಗಳಲ್ಲಿ ಕೆಲವನ್ನು ಈ ಪದ್ಯದಲ್ಲಿ ಕಾಣಬಹುದು:
ಸಿರಿ ಸಿಂಬಿ ತಂಪುಗಂ ಬ । ಬ್ಬರಿ ಗಂಗಾಸಾಗರಂ ಸುರಾಳಂ ಸೋಮಂ
ವರವಾಣಿ ಮಾಳವೋದರಿ । ಮರವಟ್ಟಿಗೆಯೆಂಬ ಕೆಲವು ಪೆಸರಿನ ಕಳ್ಳಂ ॥
(ಧರ್ಮನಾಥ ಪುರಾಣ: ೧೦–೧೨೬)
೮೮. ಮಧು–ಒಂದು ಬಗೆಯ ಮದ್ಯ, ಸೀಧುಂ–ಇನ್ನೊಂದು ಬಗೆಯ ಮದ್ಯ, ಕಟುಸೀಧು–ತೀಕ್ಷ್ಣವಾದ ಒಂದು ಮದ್ಯ, ಪೋ–ಏ ಹೋಗು, ಪುಳಿತ ಕಳ್ಳಲ್ತುಂ–ಹುಳಿ ಹೆಂಡವೂ ಅಲ್ಲ; ಕರಂ–ವಿಶೇಷವಾಗಿ, ಕಯ್ದುಬರ್ಪುದು–ಕಹಿಯಾಗಿರುವುದು; ಮಾರೀಚಿ ತೊಡರ್ಪುಳಿಂದೆ–ಮಾರೀಚಿ ಮತ್ತು ತೊಡರ್ಪುಳ್ ಎಂಬ ಮದ್ಯಗಳಿಗಿಂತ, ಸರದಂ–ಸರದ (ಶರದ)ವೆಂಬ ಮದ್ಯ, ಕಂಪಿಲ್ಲ–ಸುವಾಸನೆಯಿಲ್ಲ, ಸೊಕ್ಕಿಪ್ಪಲಾಱದು–ಸರದವು ಸೊಕ್ಕಿಸ ಲಾರದು; ಚಿಂತಾಮಣಿಗೆ–ಚಿಂತಾಮಣಿಯೆಂಬ ಮದ್ಯಕ್ಕೆ, ದಳಂ–ಅಡಕೆ, ಏವುದಕ್ಕ– ಯಾವುದು ಏತಕ್ಕೆ ಅಕ್ಕ; ಈ ಕಕ್ಕರಕ್ಕೆ–ಈ ಕಕ್ಕರವೆಂಬ ಮದ್ಯಕ್ಕೆ, ಇಲ್ಲ–ಅಡಕೆ ಬೇಕಿಲ್ಲ; ಇಂತುಟಪ್ಪುದು–ಹೀಗಿರುವುದು, ಕಳ್ಳಪ್ಪುದು–ಮದ್ಯವಾಗುತ್ತದೆ, ತಪ್ಪದು–ತಪ್ಪುವುದಿಲ್ಲ ಎಂದು, ಕಾಂತೆಯರ್–ಸ್ತ್ರೀಯರು, ಕಾಮಾಂಗಮಂ–ಕಾಮವನ್ನು ಕೆರಳಿಸುವ ಮದ್ಯವನ್ನು, ಕುಡಿದರ್–ಕುಡಿದರು.
ಮಧು : ಗುಡೇಕ್ಷು ರಸ ಸಂಭೂತಂ ಕಾಲೇನ ವಿಕೃತಿಂಗತಂ
ಧಾತಕೀ ಪುಶ್ಪಸಂಯುಕ್ತಂ ಖಂಡಮಾಮಿಶ್ರಿತಃ ಮಧು ॥
ಸೀಧು : ಈಷದುಷ್ಣೀಕೃತಂ ಶುದ್ಧಂ ರಸಾಲಸ್ಯಾಸವಂ ಘಟೇ
ತ್ರಿರಾತ್ರಮುಷಿತಂ ಮದ್ಯಂ ಸೀಧು ನಾಮ ಮದಾವಹಂ ॥
ಹೀಗೆಯೇ ಕೃಷ್ಣಾಸುರಾ, ದ್ರಾಕ್ಷಾಸವ, ನಾಳಿಕೇರಾಸವ, ಮಧುಕಾಸವ, ಪನಸಾಸವ, ತಾಲಾದಿ ಮದ್ಯ ಇವುಗಳು ವರ್ಣಿತವಾಗಿವೆ. ‘ಮಾನಸೋಲ್ಲಾಸ’ ದ ೧೦ನೆಯ ಅಧ್ಯಾಯದ ಐದನೆಯ ವಿಂಶತಿಯಲ್ಲಿ.
ವಚನ : ಕಕ್ಕರಗೆಯ್ತದಿಂ–ಕಕ್ಕರವೆಂಬ ಮದ್ಯಕಾರ್ಯದಿಂದ ಎಂದರೆ ಅದರ ಸೊಕ್ಕಿ ನಿಂದ; ಪೊಡರ್ವ–ಅಲುಗಾಡುವ; ನಿಡಿಯ–ಉದ್ದವಾದ; ಮೞಮೞಿಪ ರೂಪು–ಕೆರಳಿ ಕೆಂಪಾದ ರೂಪ; ಬೆಳ್ಪನೞಿಯೆ–ಬಿಳಿ ಬಣ್ಣವನ್ನು ಹೋಗಲಾಡಿಸಲು; ಮಾಱುಗೊಂಡಂತೆ– ಪ್ರತಿಯಾಗಿ ತೆಗೆದುಕೊಂಡಂತೆ; ತನಿಗೆತ್ತುವೆರಸು–ಹೊಸ ಅದಿರಾಟವನ್ನು ಹೊಂದಿ; ಬೆಳರ್ವಾಯ್ಗಳೊಳ್–ಬಿಳಿಚಿಕೊಂಡ ಬಾಯಿಗಳಲ್ಲಿ; ಇಲ್ಲಿ “ಮೞಲ್ದುದೆಂದು ಕಣ್ಕದಡಿದ ಭಾವಂ” –ಇದರಿಂದ ಮೞಮೞಿಪ ಶಬ್ದ ಎಂದಿರಬಹುದು; “ನಿಡಿಯಲರ್ಗಣ್ಗಳ್ಗೆ ಮೞಮೞಿಪನೋಟಮುಮಂ” ಎಂದು ಇನ್ನೊಂದು ಪ್ರಯೋಗವಿದೆ (ಪಂಪಭಾ. ೭– ೮೧ವ).
೮೯. ಬೆಳರ್ತ–ಬಿಳಿಚಿಕೊಂಡ, ಬೆಳರ್ವಾಯ್–ತುಟಿಯನ್ನುಳ್ಳ, ಕರಂ ಪೊಳೆವ–ವಿಶೇಷ ವಾಗಿ ಹೊಳೆಯುವ, ಅಪಾಂಗೆ–ಕಡೆಗಣ್ಣುಳ್ಳವಳು, ಕಣ್ಣಿಂದೆ ಅಳುರ್ ತುಳುಂಕೆ, ಕಣ್ಣುಗಳಿಂದ ದೃಷ್ಟಿಯ ವ್ಯಾಪ್ತಿ ಸೂಸಲು; ನಿಡುವುರ್ವುಗಳ್–ನೀಳವಾದ ಹುಬ್ಬುಗಳು, ಪೊಡರೆ–ಅಲುಗಾಡಲು, ಬಾಯ ಕಂಪಿಂಗೆ ಸಾರ್ವಳಿಪ್ರಕರಂ–ಬಾಯಿನ ಸುಗಂಧಕ್ಕೆ ಬರುವ ದುಂಬಿಗಳ ಸಮೂಹವು, ಸೀಗು [ರಿ] ವೊಲಾಗೆ–ಕೊಡೆಯಂತಾಗಲು, ನಾಣ್ಗೆಟ್ಟು–ನಾಚಿಕೆ ಬಿಟ್ಟು, ಜತಿಗೆ ಮೆಟ್ಟುವಳ್–ತಾಳಕ್ಕೆ ಸರಿಯಾಗಿ ಕುಣಿಯುತ್ತಾಳೆ; ನೋೞ್ಪರಂ–ನೋಟಕ ರನ್ನು, ಪಿಡಿದು ಮೆಟ್ಟುವಳ್–ಹಿಡಿದು ತುಳಿಯುತ್ತಾಳೆ.
ವಚನ : ಮದಿರಾ ಮದದೊಳಂ–ಮದ್ಯದ ಅಮಲಿನಲ್ಲಿಯೂ; ಅಳವಿಗೞಿಯೆ– ಮಿತಿಮೀರಿ.
೯೦. ಕಳ್ಳುಸೊಕ್ಕಿನಲ್ಲಿ ಇನ್ನೊಬ್ಬಳು ನರ್ತಿಸುತ್ತಾಳೆ: ಮುಡಿ–ತುರುಬು, ಮಕರ ಧ್ವಜಂ ಬೊಲ್–ಮನ್ಮಥನ ಮೀನಬಾವುಟದಂತೆ, ಬೆಂಬಿಡಿದೊಯ್ಯನೊಯ್ಯನೆ–ಬೆನ್ನ ಮೇಲೆ ಮೆಲ್ಲಮೆಲ್ಲಗೆ, ಎೞಲುತ್ತಿರೆ–ಸಡಿಲಿ ನೇಲುತ್ತಿರಲು, ಉಳ್ಳುಡೆ–ಒಳ ಉಡುಪು, ಕಟಿಸೂತ್ರ ದೊತ್ತಿನೊಳೆ–ಸೊಂಟದ ದಾರದ ಹತ್ತಿರದಲ್ಲೆ, ಜೋಲ್ದಿರೆ–ಸಡಿಲವಾಗಿ ಜೋತು ಬಿದ್ದಿರಲು, ನಾಣ್ ತಲೆದೋಱೆ–ಗುಹ್ಯಾಂಗ ಕಾಣಿಸಲು, ಕೂಡೆ–ಕೂಡಲೇ, ಕೂಕಿಡುವ–ಮೇಲಕ್ಕೆ ನೆಗೆಯುವ, ಕುಕಿಲ್ವ–ಹಕ್ಕಿಯಂತೆ ಕೂಗುವ, ಬಿಕ್ಕುಳಿಪ–ಬಿಕ್ಕಳಿಸುವ, ತೇಗುವ–ತೇಗನ್ನು ಬಿಡುವ, ತನ್ನ ತೊಡಂಕು–ತನ್ನ ತೊಡಕು, ಅದೆಯ್ದೆ–ಅದು ಚೆನ್ನಾಗಿ, ನೂರ್ಮಡಿ–ಮನ ದೊಳ್ ಪಳಂಚಿ ಅಲೆಯೆ–ನೂರು ಬಾರಿ ಮನಸ್ಸಿನಲ್ಲಿ ತಾಕಲಾಡಿ ಪೀಡಿಸುತ್ತಿರಲು, ಡಕ್ಕೆಯೊಳ್–ಢಕ್ಕಾವಾದ್ಯಕ್ಕನುಸಾರವಾಗಿ, ಅೞ್ಕಜವಾಗೆ–ಆಶ್ಚರ್ಯವಾಗುವ ಹಾಗೆ, ಆಡಿದಳ್– ಕುಣಿದಳು.
ವಚನ : ತೊನೆವ–ಅತ್ತಿತ್ತ ಅಳ್ಳಾಡುವ, ತೊನೆಪಂಗಳುಮಂ–ತೂಗಾಟಗಳನ್ನು; ಮರಸರಿಗೆ ವಿಡಿದು–ದೊಡ್ಡ ಚೆಂಬನ್ನುಹಿಡಿದುಕೊಂಡು (?); ಬೂತಾಟಂಗಳುಮಂ–ಭೂತದ ಆಟ ಗಳನ್ನು.
೯೧. ಈ ಪದ್ಯದಲ್ಲಿ ಸ್ವಲ್ಪ ಪಾಠಕ್ಲೇಶಗಳಿವೆ: (೧) ‘ಕಳ್ಗುಡಿವರೆಂಬುದಿ ದಾಗದ’ ಕ್ಕೆ ‘ಕಳ್ಗು ಡಿವರೆಂಬು [ದ ನಾ] ಗದ’ ಎಂದು ತಿದ್ದಿಕೊಂಡಿದೆ. (೨) ‘ಕುಡಿವನು ಮಂತೆ’ ಗೆ ‘ಕುಡಿವ [ರು] ಮಂತೆ’ ಎಂದು ತಿದ್ದಿದೆ: ಕಳ್ಗುಡಿವರ್ ಎಂಬುದಂ–ಹೆಂಡ ಕುಡಿಯುವವರು ಎಂಬ ಮಾತನ್ನು, ನೋಡ–ನೋಡಯ್ಯ, ನುಡಿವರೆ–ಹೇಳುತ್ತಾರೆಯೇ? ಹೇಳಬಾರದು. ಇದು ಆಗದ ಸೂರುಳ್–ನಡೆಯಲಾರದ ಪ್ರತಿಜ್ಞೆ ಇದು; ಕುಡಿವರುಂ–ಹೆಂಡ ಕುಡಿಯುವವರೂ, ಅಂತೆ–ಹಾಗೆ, ಕುಡಿವರ್–ಕುಡುಕರು, ಎಂದೊಡೆ–ಎಂದು ಹೇಳಿದರೆ, ನಾಣ್ಚುವರ್– ಸಂಕೋಚ ಪಟ್ಟುಕೊಳ್ಳುತ್ತಾರೆ, ಅಂತುಟಪ್ಪುದಂ–ಹಾಗಿರುವುದನ್ನು, ಕುಡಿದುಂ–ಕುಡಿದೂ, ಆರ–ಯಾರ, ಎರ್ದೆಯುಮಂ–ಮನಸ್ಸನ್ನೂ, ಸೆಱೆಗೆಯ್ದಪರ್–ಸೆರೆ ಹಿಡಿಯುತ್ತಾರೆ, ಎಂದರೆ ಆಕರ್ಷಿಸುತ್ತಾರೆ; ಎಯ್ದೆ–ಚೆನ್ನಾಗಿ, ದೋಷದೊಳ್–ದುಷ್ಟವಾದ ಚಾಳಿಯಲ್ಲಿ, ತೊಡರ್ವುದುಂ–ಸಿಕ್ಕಿಕೊಳ್ಳುವುದೂ, ಒಂದು, ಉಪಾಶ್ರಯವಿಶೇಷದೊಳ್–ವಿಶೇಷ ಅವಲಂಬನದಲ್ಲಿ, ಎಂದರೆ ನೃತ್ಯಗೀತ ಮುಂತಾದ ಅವಲಂಬನದಲ್ಲಿ, ಒಳ್ಪನೆ–ಒಳ್ಳೆಯ ತನವನ್ನೇ, ತಳ್ವುದು ಆಗದೇ–ಪಡೆಯುವುದು ಆಗುವುದಿಲ್ಲವೇ? ಆಗುತ್ತದೆ. ಇಲ್ಲಿಗೆ ಮಧು ಪಾನ ಕ್ರೀಡೆ ಮುಗಿಯುತ್ತದೆ.
ವಚನ : ಪೞಿಕೆಯ್ದ ನಲ್ಲಳಂ–ನಿಂದಿಸಿದ ಪ್ರಿಯೆಯನ್ನು; ಉೞಿಯಲಾಱದೆ– ಬಿಡಲಾರದೆ; ಸುೞಿಯೆ–ಅವಳ ಮನೆಯ ಮುಂದೆಯೇ ಓಡಾಡುತ್ತಿರಲು.
೯೨. ಬಸನದ–ರತಿಯ ಆಸಕ್ತಿಯ, ಒಡಂಬಡಿಂಗೆ–ಒಡಂಬಡಿಕೆಗೆ, ಅಲಸಿ–ಸಾಕಾಗಿ, ಮಾಣ್ದೊಡಂ–ಅವಳು ಬಿಟ್ಟರೂ, ಇಂತು ಇದನೀವೆನೆಂದನಂ–ಹೀಗೆ ಇದನ್ನು ಕೊಡುತ್ತೇನೆ ಎಂದವನನ್ನು, ಪುಸಿದೊಡಂ–ಸುಳ್ಳು ಹೇಳಿದರೂ ಎಂದರೆ ನಿನಗೆ ಬೇಕಾದುದನ್ನು ಕೊಡುತ್ತೇನೆಂದವನಿಗೆ ಸುಳ್ಳು ಹೇಳಿದರೂ, ಆಸೆದೋಱೆ–ಆಸೆಯನ್ನು ತೋರಿಸಲು, ಬಗೆದೋಱದೊಡಂ–ತನ್ನ ಮನಸ್ಸನ್ನು ಪ್ರಕಟಿಸದಿದ್ದರೂ, ನೆರೆದಿರ್ದೊಡಂ–ಕೂಡಿದ್ದರೂ, ಸಗಾಟಿಸದೊಡಂ–ಪ್ರೇಮವನ್ನು ತೋರಿಸದಿದ್ದರೂ, ಆಯಮುಂ ಚಲಮುಮುಳ್ಳೊಡೆ– ಸಾಮರ್ಥ್ಯವೂ ಚಲವೂ ನಿನಗಿದ್ದ ಪಕ್ಷದಲ್ಲಿ, ಅವಳ್ಗೆ–ಅವಳಿಗೆ, ಪೇಸದೆ–ಜುಗುಪ್ಸೆಪಟ್ಟು ಕೊಳ್ಳದೆ, ಮತ್ತಂ–ತಿರುಗಿಯೂ, ಆಟಿಸುವುದೆ–ಬಯಸುವುದೇ? ಮತ್ತಂ–ಪುನಃ, ಅಂಜು ವುದೆ–ಹೆದರುವುದೇ? ಮತ್ತಂ–ತಿರುಗಿಯೂ, ಅೞಲ್ವುದೆ–ವ್ಯಸನಪಡುವುದೇ? ಮತ್ತಂ– ಮತ್ತೆಯೂ, ಈವುದೆ–ಧನಕನಕಾದಿಗಳನ್ನು ಕೊಡುವುದೇ? ಈ ಪದ್ಯದ ಅನ್ವಯ, ಅರ್ಥ ಸರಿಯಾಗಿ ಆಗುತ್ತಿಲ್ಲ.
ವಚನ : ಎರಡಱಿಯದೊಲ್ದ–ಕಪಟವಿಲ್ಲದೆ ಪ್ರೀತಿಸಿದ, ಏವಮಂ ಮಾಡದೆ– ಅಸಮಾಧಾನವನ್ನುಂಟುಮಾಡದೆ; ಮುಂತಣ್ಗೆ–ಎದುರಿಗೆ; ಕಾಪನಿಟ್ಟು–ಕಾವಲನ್ನಿಟ್ಟು.
೯೩. ಇನಿಯ [ಳ್]–ಪ್ರಿಯಳು, ನೊಯ್ಗು [ಮೆ] ಡಂಬಡಂ ನುಡಿದೊಡೆ: ಎಡಂಬಡಂ– ಎಡವಟ್ಟಾದ ಮಾತನ್ನು, ನುಡಿದೊಡೆ–ಹೇಳಿದರೆ, ನೊಯ್ಗುಂ–ನೊಂದುಕೊಳ್ಳುತ್ತಾಳೆ, ಎಂದು, ಎಂದಪ್ಪೊಡಂ–ಎಂದಾದರೂ, ನಿನ್ನೊಳ್–ನಿನ್ನಲ್ಲಿ, ಎಳ್ಳನಿತುಂ–ಎಳ್ಳಷ್ಟ ನ್ನಾದರೂ, ದೋಷಮಂ–ತಪ್ಪನ್ನು, ಉಂಟುಮಾಡದಿರೆಯುಂ–ಉಂಟುಮಾಡದೆ ಇದ್ದರೂ, ಕಣ್–ನಿನ್ನ ನೋಟ, ಪಿಂತೆ–ಹಿಂದಕ್ಕೆ, ಸಂದಪ್ಪುದು–ಹೋಗುತ್ತದೆ ಎಂದರೆ ನನ್ನನ್ನು ನೀನು ಸರಿಯಾಗಿ ನೋಡುತ್ತಿಲ್ಲ; ಓಪಳೆ–ಪ್ರಿಯಳೆ, ಒಂದನೆ–ಒಂದು ಮಾತನ್ನೇ, ಕೇ [ಳ್]–ಕೇಳು; ಕೂರ್ಮೆ ಗೆಟ್ಟೆನಗೆ–ನಿನ್ನ ಪ್ರೀತಿಯನ್ನು ಕಳೆದುಕೊಂಡ ನನಗೆ; ನೀನ್–ನೀನು, ಏನಾನುಂ–ಏನಾದರೂ, ಒಂದು ಏವಮಂ–ಒಂದು ಅಹಿತವಾದುದನ್ನು, ಮನದೊಳ್–ಮನಸ್ಸಿನಲ್ಲಿ, ಮಾಡಿದೊಡೆ–ಮಾಡಿದರೆ, ಅಂದೆ–ಆ ದಿವಸವೇ, ದೀವಳಿಗೆಯಂ ಮಾನಾಮಿಯಂ–ದೀವಳಿಗೆ ಹಬ್ಬವನ್ನೂ ಮಹಾನವಮಿಯ ಹಬ್ಬವನ್ನೂ, ಮಾಡುವೆಂ–ಮಾಡುತ್ತೇನೆ. ಈ ಪದ್ಯಕ್ಕೆ ಸಮಂಜಸವಾಗಿ ಅರ್ಥ ಆಗುತ್ತಿಲ್ಲ. ಕೆಲವು ಪಾಠ ದೋಷಗಳಿರಬಹುದು; ‘ಒಡಂಬಡು’ ಗೆ ‘ಎಡಂಬಡು’ ಇರಬಹುದು. ‘ಮನಕ್ಕೆಡಂಬಡಂಮಾಡುಗಮೞ್ತಿಯಂ ಮಾಡುಗುಮೇ’ – ಎಂದು ರನ್ನನ ಪ್ರಯೋಗ.
ವಚನ : ಮುಡಿಯ–ತುರುಬಿನ, ಗಾಂಪಿಂಗೆ–ದಡ್ಡತನಕ್ಕೆ.
೯೪. ನಯದೊಳೆ–ನಯವಾಗಿಯೇ, ನೋಡಿ, ನೋಟದೊಳೆ, ಮೇಳಿಸಿ–ಪ್ರೀತಿ ಯುಂಟಾಗುವಂತೆ ಮಾಡಿ, ಮೇಳದೊಳ್–ಒಡನೆ ಇರುವುದರಲ್ಲಿ, ಅಪ್ಪುಕೆಯ್ದು–ಒಪ್ಪಿ, ಗೊಟ್ಟಿ ಯೊಳ್–ಗೋಷ್ಠಿಗಳಲ್ಲಿ, ಒಳಪೊಯ್ದು–ವಶಪಡಿಸಿಕೊಂಡು, ಪತ್ತಿಸುವ–ಅಂಟು ವಂತೆ ಮಾಡುವ ಎಂದರೆ ಮನವನ್ನು ಬೆಸೆಯುವ, ಸೂಳೆಯರ, ಅಂದಮಂ–ರೀತಿಯನ್ನು, ಎಯ್ದೆ ಪೋಲ್ವ–ಚೆನ್ನಾಗಿ ಹೋಲುವ, ಸೂಳೆಯರ, ತುಱುಂಬು–ಮುಡಿ ಗಂಟು, ಸೂಳೆ ಯರ, ಮೆಲ್ನುಡಿ–ಮೃದುವಾದ ಮಾತು, ಸೂಳೆಯರ್, ಇರ್ಪ–ಇರುವ, ಪಾಂಗು–ರೀತಿ, ಸೂಳೆಯರ, ನೆಗೞ್ತೆ–ನಡವಳಿಕೆ, ನಾಡೆ–ವಿಶೇಷವಾಗಿ, ತನಗೆ ಅೞ್ತಿ–ಪ್ರೀತಿಕರವಾದದ್ದು, ದಲ್–ಅಲ್ಲವೆ! ಅಕ್ಕನೆ–ಈ ಅಕ್ಕನೇ, ಸೂಳೆಯಾಗಳೇ–ಸೂಳೆಯಲ್ಲವೆ? ಹೌದು. ಇವಳು ಆಡುವ ಆಟಗಳನ್ನೂ ತುರುಬನ್ನೂ ನೋಡಿದರೆ ಇವಳು ಸೂಳೆಯಾಗಿರಬಹುದೇನೋ ಎನ್ನು ವಂತಿದೆ.
ವಚನ : ಪಂಡಿತಿಕ್ಕೆಗೆ–ಪಾಂಡಿತ್ಯಕ್ಕೆ, ಮುಯ್ವಾಂತುಂ–ಹೆಗಲನ್ನು ಚಪ್ಪರಿಸಿಕೊಂಡು ಎಂದರೆ ತನ್ನನ್ನು ತಾನೇ ಮೆಚ್ಚಿಕೊಂಡು, ವೀಸವನಪ್ಪೊಡಂ–ಒಂದು ವೀಸವನ್ನಾದರೂ; ಎಣ್ಬರೇಱಿದ–ಎಂಟು ಜನ ಹತ್ತಿದ, ಕೞ್ತೆಯಂತೆ–ಕತ್ತೆಯ ಹಾಗೆ; ದೆಸೆದೆಸೆಗೆ ಬೆಸೆವ–ದಿಕ್ಕು ದಿಕ್ಕಿನಲ್ಲೂ ಗರ್ವವನ್ನು ಪ್ರದರ್ಶಿಸುವ, ಪಚ್ಚಪಸಿಯೆಗ್ಗರುಮಂ–ಶುದ್ಧ ಹಸಿದಡ್ಡರನ್ನು.
೯೫. ಇಱಿಯದ–ಯುದ್ಧ ಮಾಡದ, ಬೀರಂ–ಶೌರ್ಯ, ಇಲ್ಲದ ಕುಲಂ–ಇಲ್ಲದಿರುವ ಜಾತಿ, ತಮಗಲ್ಲದ ಚಾಗಂ–ತಮ್ಮಲ್ಲಿಲ್ಲದ ದಾನಗುಣ, ಓದದ–ಹೇಳದ, ಓದು–ಪಠನ, ಅಱಿಯದ–ತಿಳಿಯದ, ವಿದ್ದೆ–ವಿದ್ಯೆ, ಸಲ್ಲದ–ಇಲ್ಲದ, ಚದುರ್–ಜಾಣತನ; ನೆಱೆ–ಚೆನ್ನಾಗಿ, ಕಲ್ಲದ–ಕಲಿಯದ, ಕಲ್ಪಿ–ಕಲಿಕೆ, ವಿದ್ಯೆ, ಕೇಳ–ಕೇಳೋ, ಮಾತಱಿಯದ ಮಾತು–ಮಾತನ್ನು ತಿಳಿಯದ ಮಾತುಗಾರಿಕೆ, ತಮ್ಮ, ಬಱುವಾತುಗಳೊಳ್–ವ್ಯರ್ಥವಾದ ಮಾತುಗಳಲ್ಲಿ, ಪುದಿದು–ತುಂಬಿದ, ಎಗ್ಗರ್–ದಡ್ಡರು, ಎಯ್ದೆ–ಚೆನ್ನಾಗಿ, ಕಣ್ದೆಱೆವಿನಂ–ಕಣ್ಣು ತೆರೆಯು ತ್ತಿರಲು, ಎಂದರೆ ವೃದ್ಧಿಯಾಗುತ್ತಿರಲು, ವೞಿಯದೇಂ–ಬೇರೆ ಮಾರ್ಗವೇನಿದೆ? ಇಲ್ಲಿ; ಎಳೆಯಂ– ಲೋಕವನ್ನು, ಕಿಡಿಸಲ್ಕೆ–ಕೆಡಿಸುವುದಕ್ಕೆ, ಕೆಲರ್–ಕೆಲವರು, ಆರ್–ಯಾರು, ಬಲ್ಲರೋ–ತಿಳಿದಿದ್ದಾರೆಯೋ? ಯಾರೂ ಇಲ್ಲ. ದಡ್ಡರ ಸಂತೆಯಲ್ಲಿ ವಿವೇಕಿಗಳಿಗೆ ಎಡೆ ಯಿಲ್ಲ ಎಂದು ಭಾವ.
ವಚನ : ಗಾೞ್ದೊೞ್ತಿರ್–ತುಂಟ ದಾಸಿಯರು, ಎಗ್ಗ–ದಡ್ಡ, ಗೊಟ್ಟಿಗೆ ವಂದು– ಗೋಷ್ಠಿಗೆ ಬಂದು, ಕಣ್ಣಱಿಯದೆ–ಇತರರ ಇಂಗಿತವನ್ನು ತಿಳಿಯದೆ, ಸೋಂಕೆಯುಂ– ಮುಟ್ಟುತ್ತಲು; ಮನಮಱಿಯದೆ–ಇಷ್ಟವನ್ನು ತಿಳಿಯದೆ, ನುಡಿಯೆಯುಂ–ನುಡಿಯುತ್ತಲೂ; ಆಕೆಗಳ್–ಅವರು, ಆ ತುಂಟ ತೊತ್ತಿರು; ಬಾಸೆಯೊಳ್–ತಮ್ಮ ನುಡಿಗಟ್ಟಿನ ಭಾಷೆಯಲ್ಲಿ, ಇಲ್ಲಿ ಗಾೞ್ದೊೞ್ತಿರ್ ಎಂಬುದು ಗಾಳ್ದೊೞ್ತಿರ್ ಎಂದಿರಬೇಕು; ಗಾಳು ಗೊರವಂ ಎಂಬುದನ್ನು ನೋಡಿ (ಪಂ.ಭಾ. ೬–೨೪).
೯೬. ಭಾವಕನೆಂದೊಡಂ–ರಸಿಕನೆಂದರೂ, ಚದುರನೆಂದೊಡಂ–ಜಾಣನೆಂದರೂ, ಪೆಱರ್ ಆರೊ–ಬೇರೆ ಯಾರಿದ್ದಾರೋ, ನೀನೆ–ನೀನೇ; ನಿನ್ನಾವಗುಣಂಗಳಂ–ನಿನ್ನ ಯಾವ ಗುಣಗಳನ್ನು, ಪೊಗೞ್ದೊಡೆ–ಹೊಗಳಿದರೆ, ಎಲ್ಲವಱಿಂ–ಎಲ್ಲಾ ಗುಣಗಳಿಂದ, ನೆಱೆದು– ತುಂಬಿ, ಎಮ್ಮೊಳ್–ನಮ್ಮಲ್ಲಿ, ಇಂತು–ಹೀಗೆ, ಸದ್ಭಾವದೆ–ಒಳ್ಳೆಯ ಮನಸ್ಸಿನಿಂದ, ಗೊಟ್ಟಿರಲ್–ಗೋಷ್ಠಿಯಲ್ಲಿರಲು, ಬಯಸಿ, ಬಂದೆ! ಅದೀಗಳ್–ಅದೀಗ, ಇದು, ಒಳ್ಳಿತಾಯ್ತು–ಒಳ್ಳೆಯದಾಯಿತು: ನಿನ್ನನ್ನು, ಮಾದೇವರ ಮುಂದಣಾತನೆನಲ್–ಮಹಾದೇವ ನಾದ ಶಿವನ ಮುಂದಿರುವವನು, ಎಂದರೆ ನಂದಿ, ಎತ್ತು ಎಂದು ಹೇಳಲು, ಅಲ್ಲದೆ, ಪೇೞ್– ಹೇಳು, ಪೆಱತೇನನೆಂಬುದೋ–ಬೇರೆ ಏನೆಂದು ಹೇಳುವುದೋ; ನೀನು ಶುದ್ಧ ಎತ್ತು ಎಂದರೆ ದಡ್ಡ ಎಂದು ಹೇಳಬೇಕು.
ವಚನ : ಕೊಱಚಾಡಿ–ಕಡೆಗಣಿಸಿ ಮಾತಾಡಿ; ಉೞಿದ–ಬಿಟ್ಟ, ತೊರೆದ; ಪೊಸಬೇಟ ದಾಣ್ಮನಂ–ಹೊಸ ಪ್ರೇಮದ ಒಡೆಯನನ್ನು, ಪೋಗಲೀಯದೆ–ಹೋಗುವುದಕ್ಕೆ ಬಿಡದೆ, ತನ್ನಳಿಪನೆ ತೋಱಿ–ತನ್ನ ಒಲವನ್ನೇ ತೋರಿಸಿ.
೯೭. ಮನೆಯನಿವಂ–ಇವನು ಮನೆಯ ಯಜಮಾನ; ಮನೋಭವನಿವಂ–ಇವನು ಮನ್ಮಥ; ಪೊಸಸುಗ್ಗಿಯೊಳಾದ–ಹೊಸದಾದ ವಸಂತಕಾಲದಲ್ಲಿ (ಮದುವೆ) ಯಾದ, ಕಿತ್ತನಿವಂ–ಇವನು ಚಿಕ್ಕವನು, ಚಿಕ್ಕ ಹರೆಯದವನು; ಇದು, ನೀನುೞಿದಾಗಳ್–ನೀನು ಬಿಟ್ಟಾಗ, ಎನ್ನನೇನುೞಿಯಲೀಗುಮೆ–ಇದು ನಾನು ಅವನನ್ನು ತೊರೆಯುವುದಕ್ಕೆ ಅವಕಾಶ ಕೊಡುತ್ತದೆಯೆ? ಇಲ್ಲ. ಎಂದು–ಎಂದು ಹೇಳಿಕೊಂಡು, ಪೋಪನಂ–ಹೋಗುವ, ಓಪನಂ–ನಲ್ಲನನ್ನು, ಇರದೆ –ಸುಮ್ಮನಿರದೆ, ಮಿಡುಕಲೀಯದೆ–ಅಲುಗಾಡುವುದಕ್ಕೆ ಕೂಡ ಬೀಡದೆ, ಕಾಲ್ವಿಡಿದೞ್ತು–ಕಾಲು ಹಿಡಿದು ಅತ್ತು, ತೋರಕಣ್ಬನಿಗಳಂ–ಕಣ್ಣೀರ ದೊಡ್ಡ ಹನಿಗಳನ್ನು, ಸಂಕಲೆಯಿಕ್ಕಿದಂತೆ ವೋಲ್–ಸಂಕೋಲೆ ಹಾಕಿದ ಹಾಗೆ, ತರಳ ಲೋಚನೆ–ಚಂಚಲನೇತ್ರೆಯಾದ ಅವಳು, ಇಕ್ಕಿದಳ್–ಸುರಿಸಿದಳು. ಕಿತ್ತನ್ ಕಿಱಿದು+ಅನ್ (ಶಮದ. ೧೯೨).
ವಚನ : ತನ್ನ ಸೂಳೆಯೊಳಾದ, ಬೇಸಱಂ–ಬೇಜಾರನ್ನು; ಕೆಳೆಯಂಗೆ–ಗೆಳೆಯನಿಗೆ.
೯೮. ಮುಳಿಸಱಿದು–ಕೋಪವನ್ನು ತಿಳಿದು, ಎಂದರೆ ಕೋಪಿಸಿಕೊಂಡಿರುವುದನ್ನು ತಿಳಿದು, ಅಂಜಿ–ಹೆದರಿ; ಬಾೞ್ತೆಯಱಿದು–ಪ್ರಯೋಜನವನ್ನು ತಿಳಿದು, ಇತ್ತು–ಹೊನ್ನು ಮುಂತಾದುವನ್ನು ಕೊಟ್ಟು; ಮನಂಗೊಳೆಯುಂ–ಮನವನ್ನು ವಶಮಾಡಿಕೊಂಡರೂ, ಕನಲ್ವುದರ್ಕೆ–ರೇಗುವುದಕ್ಕೆ, ಅಳವಿಯುಂ–ಪ್ರಮಾಣವೂ, ಅಂತುಂ–ಕೊನೆಯೂ, ಇಲ್ಲ. ಕುಂಟಣಿ–ತಲೆಹಿಡುಕಿಯು, ಸನಿಯನ್ನಳೆ–ಶನಿಯಂಥವಳೇ, ಮನೆದೊೞ್ತು–ಮನೆಯ ದಾಸಿ, ಪೋದ ಮಾರಿಯನ್ನಳೆ–ಹೋದ ಮಾರಿದೇವತೆಯಂಥವಳೇ, ನಾದುನಿ–ನಾದಿನಿಯು, ಸೀರ್ಕರಡಿಯನ್ನಳೆ–ಜಗಳದಲ್ಲಿ ಕರಡಿಯಂಥವಳೇ, ಒಲ್ದು ಮೊಲ್ಲದನ್ನಳೆ–ಒಲಿದೂ ಒಲಿಯ ದಂಥವಳೇ, ಗಡ–ಅಲ್ಲವೆ, ಸೂಳೆ, ಎಂದೊಡೆ–ಎಂದರೆ, ತಲೆವೇಸಱನೆಂತು ನೀಗುವೆಂ–ತಲೆ ಬೇಜಾರನ್ನು ಹೇಗೆ ಕಳೆದುಕೊಳ್ಳುವೆನು. ಸೀಱು+ಕರಡಿ=ಸೀರ್ಕರಡಿ; “ಸೀಱು– ದುಷ್ಕಲಹೇ.”
ವಚನ : ಗೆಂಟಿದಂ–ದೂರ ಹೋದನು; ಬೇಟಕಾರ್ತಿ–ನಲ್ಲಳು; ಬಂಚಿಸಿ–ವಂಚಿಸಿ; ಮೋಪಿನಾಕೆಯ–ಕಾದಲೆಯ, ಪ್ರಿಯಳ; ಬೇಟದಾಣ್ಮನಂ–ಪ್ರೀತಿಯ ನಲ್ಲನನ್ನು. ಮೋಪು=(ತ) ಮೋಪ್ಪು–ಪ್ರೇಮ, ಪ್ರೀತಿ.
೯೯. ದೂದವರ–ಪ್ರೇಮಸಂದೇಶವನ್ನು ಒಯ್ಯುವ ದೂತರ, ಕೈಯೊಳೆ– ಕೈಯಲ್ಲಿಯೇ, ಮಾತು–ಹೇಳಿಕಳುಹಿಸಿದ ಮಾತು, ಸಂದೇಶ, ತಪ್ಪುದು–ಹಾಳಾಗುತ್ತದೆ; ಕಾಲ್ವಿಡಿದಟ್ಟಿ–ಕಾಲು ಹಿಡಿದು ಹೇಳಿಕಳುಹಿಸಿ, ನಿಚ್ಚಂ–ನಿತ್ಯವೂ, ಅಚ್ಚಿಗದೊಳ್–ದುಃಖದಲ್ಲಿ, ಅೞ್ತು–ಅತ್ತು, ಕಣ್ಣ ನೀರ್–ಕಣ್ಣೀರು, ತಪ್ಪುವು–ಹಾಳಾಗುತ್ತವೆ, ನಿಷ್ಪ್ರಯೋಜಕವಾಗು ತ್ತವೆ, ಕರಂ–ವಿಶೇಷವಾಗಿ, ಬಿಸುಸುಯ್ಯೆ–ಬಿಸಿಯುಸಿರು ಬಿಡಲು, ಸುಯ್ದಸುಯ್–ಬಿಟ್ಟ ಉಸಿರು, ತಪ್ಪುದು–ನಷ್ಟವಾಗುತ್ತದೆ; ಬೇಟದ ಕಾಟದೊಳ್–ಪ್ರಣಯದ ಹಿಂಸೆಯಿಂದ, ಎನ್ನ–ನನ್ನ, ತನು–ಮೈ, ತಪ್ಪುದು–ಕೃಶವಾಗುತ್ತದೆ; ಇಂತು ಕಂಡುಂ–ಹೀಗೆ ನೋಡಿಯೂ, ಇನ್ನಪ್ಪೊಡಂ–ಇನ್ನಾದರೂ, ಓಪನೆ–ಪ್ರಿಯನೇ, ಎನಗೆ–ನನಗೆ, ಆಸೆವಾತಂ–ಪ್ರೀತಿಯ ಮಾತನ್ನು, ನೀಂ–ನೀನು, ದಯೆಗೆಯ್ಯಲ್–ಕರುಣಿಸಿ ಹೇಳಲು, ಆಗದೇ–ಆಗುವುದಿಲ್ಲವೇ? ತಪ್ಪುದು ತವು+ದ=ತಪ್ಪ+ಉದು; ಹಾಗೆಯೇ ತಪ್ಪ+ಉವು.
ವಚನ : ಕುಂಟಿಣಿಯ–ದೂತಿಯ, ತಲೆಹಿಡುಕಿಯ; ಉಪರೋಧಕ್ಕೆ–ಬಲಾತ್ಕಾರಕ್ಕೆ; ಪಿರಿದೀವ–ಹೆಚ್ಚು ಹೊನ್ನನ್ನು ಕೊಡುವ; ಮುದುಪನಂ–ಮುದುಕನನ್ನು; ಉೞಿಯಲಂಜಿ– ಬಿಡಲು ಹೆದರಿ; ಸಬ್ಬವದಾಕೆಗೆ–ಮೇಳದ ಕೆಳದಿಗೆ.
೧೦೦. ಸೂಳೆಗಾರಿಕೆ ಮಾಡಲು ಹೋದ ಒಬ್ಬ ಮುದುಕನ ವರ್ಣನೆ: ಕೊರೆವೊಡೆ– ಗೊರಕೆ ಹೊಡೆದರೆ, ಬೆಟ್ಟುಗಳ್–ಬೆಟ್ಟಗಳು, ಬಿರಿವುವು–ಬಿರಿಯುತ್ತವೆ; ಉಣ್ಮಿದ–ಸುರಿ ಯುವ, ಲಾಳೆಯ–ಜೊಲ್ಲಿನ, ಲೋಳೆಗಳ್–ಲೋಳಿಗಳು, ಪೊನಲ್ವರಿವುವು–ಪ್ರವಾಹವಾಗಿ ಹರಿಯುತ್ತವೆ; ಕೆಮ್ಮಿ, ಕುಮ್ಮಿದೊಡೆ–ಎದೆ ಕುಟ್ಟಿದರೆ, ತೋಳೊಳೆ–(ಸೂಳೆಯ) ತೋಳಿ ನಲ್ಲಿಯೇ, ಜೀವವಿಯೋಗಮಪ್ಪುದು–ಪ್ರಾಣ ಹೋಗುತ್ತದೆ; ಎಂದು, ಇರದೆ–ಬಿಡದೆ, ಎರ್ದೆಗೆ–ಮನಸ್ಸಿಗೆ, ಅತ್ತಳಗಂ–ವ್ಯಥೆಯು, ಅಪ್ಪುದು–ಆಗುತ್ತದೆ; ಆ ನೆರೆಪಂ–ಆ ನರೆಗೂದಲಿನ ಮುದುಕ, ನೆರೆವಂದು–ನೆರೆಯುವುದಕ್ಕೆ ಬಂದು, ಪೊಂಗಳಂ ಸುರಿವೊಡಂ– ಚಿನ್ನದ ನಾಣ್ಯಗಳನ್ನು ಸುರಿದರೂ, ಆತನ, ಪಲ್ಲಿಲಿವಾಯನಾತಮಂ–ಅವನ ಬೊಚ್ಚು ಬಾಯ ನಾತವನ್ನು, ಆರೊ–ಯಾರೋ, ಸೈರಿಸುವರ್–ಸಹಿಸಿಕೊಳ್ಳುತ್ತಾರೆ. ಇಲ್ಲಿನ ಚಿತ್ರ ವಾಸ್ತವಿ ಕತೆಯಿಂದಲೂ ಜುಗುಪ್ಸಾಭಾವದಿಂದಲೂ ರಮಣೀಯವಾಗಿದೆ. ‘ಅತ್ತಳಗ’ ಕ್ಕೆ ಸಾಮಾನ್ಯವಾಗಿ ಆಧಿಕ್ಯ, ಅತಿಶಯವೆಂಬ ಅರ್ಥವಿದ್ದರೂ, ಇಲ್ಲಿ ವ್ಯಥೆ, ಕಳವಳ ಎಂದರ್ಥ ವಾಗುವಂತೆ ತೋರುತ್ತದೆ.
ವಚನ : ದೂದುವೋಗಿಬಂದ ದೂದವಿಗೆ–ದೌತ್ಯಕ್ಕಾಗಿ ಹೋಗಿ ಬಂದ ಕುಂಟಣಿಗೆ; ಏಗೆಯ್ವ ತೆಱನುಮನಱಿಯದೆ–ಏನು ಮಾಡುವ ರೀತಿಯನ್ನೂ ತಿಳಿಯದೆ; ಪಡೆದು– ಬಯಸಿ, ಪಡೆಮಾತಂ–ಸುದ್ದಿಯನ್ನು; ಬೆಸಗೊಳ್ವಳಂ–ಕೇಳುವವಳನ್ನು.
೧೦೧. ಬಿರಯಿಸಿ–ವಿರಹ ವೇದನೆಯನ್ನು ತಾಳಿ, ಬೇಟದೊಳ್–ಪ್ರೇಮದಲ್ಲಿ, ಬಿರಿವ– ಬಿರಿಯುತ್ತಿರುವ, ನಲ್ಲರ್–ಪ್ರೇಮಿಗಳು, ಅಗಲ್ದು–ಅಗಲಿ, ವಿಯೋಗವನ್ನು ಹೊಂದಿ, ಕನಲ್ದೊನಲ್ದು–ಕೆರಳಿ ಕೋಪಿಸಿ, ನಲ್ಲರ–ಒಲಿದವರ, ದೆಸೆಯಿಂದಂ–ಕಡೆಯಿಂದ, ಅೞ್ತಿವರೆ–ಪ್ರೀತಿಯ ಸುದ್ದಿ ಬರಲು, ಕೋಗಿಲೆಯಕ್ಕೆ–ಕೋಗಿಲೆಯಾಗಲಿ, ಎಲರಕ್ಕೆ–ಗಾಳಿ ಯಾಗಲಿ, ತುಂಬಿಯಕ್ಕೆ–ದುಂಬಿಯಾಗಲಿ, ಅರಗಿಳಿಯಕ್ಕೆ–ಅರಗಿಳಿಯಾಗಲಿ, ಬಂದೊಡಂ– ಬಂದರೂ, ಒಱಲ್ದು–ಒಲಿದು, ಎರ್ದೆಯಾಱುವರೆಂದೊಡೆ–ಮನಸ್ಸಿನಲ್ಲಿ ಸಮಾಧಾನ ಪಡುತ್ತಾರೆ ಎಂದರೆ, ಓತ–ಒಲಿದ, ದೂತರೆ–ಸುದ್ದಿಯಾಳುಗಳೆ, ತರೆ–ತರಲು, ಬಂದ, ಸಬ್ಬವದ ಮಾತುಗಳಂ–ವಿನೋದದ ಮಾತುಗಳನ್ನು, ಗುಡಿಗಟ್ಟಿ–ರೋಮಾಂಚನವನ್ನು ಹೊಂದಿ, ಕೇಳರೇ–ಕೇಳುವುದಿಲ್ಲವೆ? ಕೇಳುತ್ತಾರೆ.
೧೦೨. ಇನಿಯಂ–ಪ್ರಿಯನು, ಮನದೊಳ್–ಮನಸ್ಸಿನಲ್ಲಿ, ಅಲಂಪನಾಳ್ದು–ಸಂತೋಷ ವನ್ನು ಹೊಂದಿ, ಅಟ್ಟಿದ–ಕಳಿಸಿಕೊಟ್ಟ, ದೂದರ–ದೂತರ, ಸೀಯನಪ್ಪ–ಸಿಹಿಯಾಗಿರುವ, ಮಾತಿನ, ರಸದೊಳ್–ರಸದಲ್ಲಿ, ಕೊನರ್ವುದು–ಕವಲೊಡೆಯುವುದು, ತಳಿರ್ವುದು– ಚಿಗುರುವುದು, ಪೂವದು–ಹೂ ಬಿಡುವುದು, ಕಾಯ್ವುದು–ಕಾಯಿ ಬಿಡುವುದು, ಅಂತು– ಹಾಗೆ, ಕಾಯ್ತು–ಕಾಯಿಬಿಟ್ಟು, ಅನಿತಱೊಳ್–ಅಷ್ಟರಲ್ಲೂ, ನಿಂದು–ನಿಂತು, ಮನದೊಳ್– ಮನಸ್ಸಿನಲ್ಲಿ, ತೊದಳಿಲ್ಲದ–ಕಾಪಟ್ಯವಿಲ್ಲದ, ನಲ್ಮೆಯೆಂಬ–ಪ್ರೇಮವೆಂಬ, ನಂದನವನಂ– ಉದ್ಯಾನವು, ಓಪರೊಳ್–ಪ್ರಣಯಿಗಳಲ್ಲಿ, ನೆರೆದೊಡೆ–ಸೇರಿದರೆ, ಅಂತು–ಹಾಗೆ, ರಸಂಬಿಡೆ–ರಸವು ಸುರಿಯುತ್ತಿರಲು, ಪಣ್ತುದು–ಹಣ್ಣಾಯಿತು, ಆಗದೇ–ಆಗುವು ದಿಲ್ಲವೇ? ಆಗುತ್ತದೆ. ಪ್ರೇಮವೆಂಬ ನಂದನವನವು ನಲ್ಲರು ಒಡಗೂಡಿದಾಗ ಹಣ್ಣು ಬಿಟ್ಟಂತಾ ಗುತ್ತದೆ ಎಂಬ ಭಾವ.
೧೦೩. ಅನುವಿಸೆ–ಒತ್ತಾಯ ಮಾಡಿದರೆ, ಬೇಟಕಾಱನ–ಪ್ರೇಮಿಯ, ಒಲವು–ಪ್ರೇಮ, ಇರ್ಮಡಿಯಪ್ಪುದು–ಎರಡುಮಡಿ ಆಗುತ್ತದೆ; ಬಯ್ಯೆ–ಬಯ್ದರೆ, ಬೇಟಕಾಱನ–ಪ್ರೇಮಿಯ, ಬಗೆ–ಮನಸ್ಸು, ನಿಲ್ಲದಿಕ್ಕೆಗೆ–ಅಸ್ಥಿರತೆಗೆ, ಒಳಗಪ್ಪುದು–ಒಳಗಾಗುತ್ತದೆ; ನಿಟ್ಟಿಸೆ– ನೋಡಲು, ಬೇಟ–ಪ್ರೇಮವೂ, ಬೇಟಕಾಱನ–ಪ್ರೇಮಿಯ, ರುಚಿ–ಸವಿಯೂ, ಬಂಬಲುಂತು ಱುಗಲುಂ ಕೊಳುತಿರ್ಪುದು–ಗುಂಪುಗುಂಪಾಗುತ್ತದೆ, ಹೆಚ್ಚು ಹೆಚ್ಚು ಸಾಂದ್ರವಾಗುತ್ತದೆ; ನೂಂಕೆ–ತಳ್ಳಲು, ಬೇಡವೆಂದು ಸರಿಸಲು, ಬೇಟಕಾಱನ–ಪ್ರೇಮಿಯ, ಮನಂ–ಮನಸ್ಸು, ಅಟ್ಟಿ–ಬೆನ್ನಟ್ಟಿ, ಪತ್ತುವುದು–ಏರಿಕೊಳ್ಳುತ್ತದೆ; ಬೇಟವು–ಪ್ರೇಮವು, ಏಂ–ಏನು, ವಿಪರೀತ ವೃತ್ತಿಯೋ–ಅಸ್ತವ್ಯಸ್ತ ಸ್ವಭಾವವುಳ್ಳುದೋ! ಒಂದನ್ನು ಮಾಡಿದರೆ ಅದಕ್ಕೆ ವಿರುದ್ಧವಾದ ಇನ್ನೊಂದು ಆಗುತ್ತದೆ. ಈ ಪದ್ಯದ ಅನ್ವಯಾರ್ಥಗಳು ವಿಶದವಾಗಿಲ್ಲ.
ವಚನ : ಲತೆಗಳಡರ್ಪು–ಬಳ್ಳಿಗಳಿಗೆ ಆಶ್ರಯ; ಇರ್ಪಂತೆ–ಇರುವ ಹಾಗೆ, ಪೊಸಯಿಸೆ– ಹೊಸದು ಮಾಡಿದರೆ, ಪೊಸತಪ್ಪುದು–ಹೊಸದಾಗುತ್ತದೆ.
೧೦೪. ಪ್ರೇಮಿಗಳ ಆಗುಹೋಗುಗಳು ಅವರವರ ದೂತಿಯರ ಕೈಯಲ್ಲಿವೆ; ನಲ್ಲರಿರ್ವರ –ಇಬ್ಬರು ಪ್ರೇಮಿಗಳ, ಒಡಲೊಳಗಿರ್ಪ ಜೀವಂ–ಒಡಲುಗಳಲ್ಲಿರುವ ಪ್ರಾಣವು, ನುಡಿ ಗಳೊಳ್–ದೂತರು ತರುವ ಮಾತುಗಳಲ್ಲಿ, ಆಸೆಯುಂಟೆನಲೊಡಂ–ಆಸೆಯಿದೆ ಎಂದ ಕೂಡಲೇ, ತಳೆದು–ತಾಳಿ, ಅಂತಿರೆ–ಹಾಗಿರಲು, ನಿಲ್ವುದು–ನಿಲ್ಲುತ್ತವೆ; ಆವೆಡೆಯೊಳಂ– ಯಾವ ಎಡೆಯಲ್ಲೂ, ಆಸೆಗಾಣೆನೆನೆ–ಆಸೆಯನ್ನೇ ಕಾಣೆ ಎನ್ನಲು, ತೊಟ್ಟನೆ–ಬೇಗನೆ, ಪೋಪವು–ಹೊರಟುಹೋಗುತ್ತವೆ; ಅದು ಕಾರಣದಿಂದಮೇ–ಆ ಕಾರಣದಿಂದಲೇ, ಪೋಪ–ಹೋಗುವ, ಬರ್ಪ–ಬರುವ, ಒಡಂಬಡಂ–ಒಪ್ಪಂದವನ್ನು, ಒಳಕೊಂಡ– ಹೊಂದಿರುವ, ದೂದವರ–ದೂತಿಯರ, ಕೈಯೊಳೆ–ಕೈಯಲ್ಲೆ, ಕೆಯ್ಯೆಡೆಯಿರ್ಪುದು–ನ್ಯಾಸ ವಾಗಿರುವುದು, ಗಿರವಿ ಇಟ್ಟಿರುವುದು, ಪ್ರೇಮಿಗಳ ಪ್ರಾಣವು, ಆಗದೇ–ಆಗುವುದಿಲ್ಲವೇ? ಆಗಿದೆ.
ವಚನ : ಗರ್ಭೇಶ್ವರಂ–ಆಗರ್ಭ ಶ್ರೀಮಂತ, ಹುಟ್ಟಿನಿಂದಲೇ ಐಶ್ವರ್ಯವುಳ್ಳವನು; ಪೆಱರಾರುಮಂ–ಬೇರೆ ಯಾರನ್ನೂ.
೧೦೫. ಅಪ್ಪಿನ–ಆಲಿಂಗನದ, ಕಾಳಸೆಗೆ–ಗಾಢತ್ವಕ್ಕೆ, ಸಂಮರ್ದಕ್ಕೆ, ಬೆಸುಗೆಗೆ, ಅಡ್ಡಂ– ಅಡ್ಡವಾಗುತ್ತದೆ, ಎಂಬ, ಬೇಸಱಿನೊಳೆ–ಬೇಸರದಿಂದ, ಮಿಱುಗುವ [ತಾ] ರಹಾರಮುಮಂ– ತೊಳಗುವ ಮುತ್ತಿನಹಾರವನ್ನು ಕೂಡ, ಕಟ್ಟಲೊಲ್ಲದೆ–ಕೊರಳಿಗೆ ತೊಡಿಸಲು ಒಪ್ಪದೆ, ಅನಿತೞ್ಕಱನಿೞ್ಕುಳಿಗೊಂಡು–ಅಷ್ಟು ಪ್ರೇಮವನ್ನು (ಮುತ್ತುಗಳನ್ನು) ಸೆಳೆದುಕೊಂಡು, ಅಲಂಪಿನತ್ತೆಱಗಿದ–ಸುಖದ ಕಡೆಗೆ ಬಾಗಿದ, ನಲ್ಲಳ–ಪ್ರಿಯಳ, ಅಳ್ಳೆರ್ದೆಯೊಳ್–ನಡು ಗುವ ಎದೆಯಲ್ಲಿ, ಅಕ್ಕಟ–ಅಯ್ಯೋ, ಬೆಟ್ಟುಗಳುಂ ಬನಂಗಳುಂ ತೊಱೆಗಳುಂ–ಬೆಟ್ಟಗಳೂ, ಕಾಡುಗಳೂ, ನದಿಗಳೂ, ಈಗಳ್–ಈಗ; ಒಡ್ಡೞಿಯದೆ–ರಾಶಿರಾಶಿಯಾಗಿ, ಒಡ್ಡಿಸೆ– ಚಾಚಿಕೊಂಡಿರಲು, ಸೈರಿಸುವಂತುಟಾದುದೇ–ಸಹಿಸುವ ಹಾಗೆ ಆಯಿತೇ? ಪ್ರಿಯಳು ಮುತ್ತಿನಹಾರ ಹಾಕಿಕೊಂಡರೆ ಅದು ಆಲಿಂಗನಕ್ಕೆ ಅಡ್ಡವಾಗಿ ಬರುತ್ತದೆಯೆಂದು ಅದನ್ನು ಹಾಕದೆ ಇದ್ದ ನಾನು, ಬೆಟ್ಟ ಕಾಡು ನದಿಗಳು ಈಗ ಅಡ್ಡವಾಗಿ ಬಂದಿರುವುದನ್ನು ಹೇಗೆ ಸೈರಿಸಲಿ ಎಂದು ಭಾವ. ಮನೋಜ್ಞವಾದ ಪದ್ಯ.
೧೦೬. ಪ್ರೇಯಸಿಯ ಪ್ರಣಯಕೋಪ ತಿಳಿದು ಸಮಾಧಾನವಾಗುವುದರ ನೆನಪು: ಮುನಿಸಿನೊಳ್–ಕೋಪದಲ್ಲಿ, ಆದಂ–ವಿಶೇಷವಾಗಿ, ಏವಯಿಸಿ–ಅಸಮಾಧಾನವನ್ನು ಹೊಂದಿ, ಸೈರಿಸದೆ–ಸಹಿಸದೆ ಆದ, ಅೞಲೊಳ್–ದುಃಖದಲ್ಲಿ, ಕಂಗನೆ ಕನಲುತ್ತುಂ– ಅತಿಯಾಗಿ ಕೋಪಿಸುತ್ತ, ಉಮ್ಮಳಿಸಿ–ವ್ಯಥೆಪಟ್ಟು, ಸೈರಿಸಲಾಱದೆ–ತಾಳಲಾರದೆ, ಮೇಲೆ ವಾಯ್ದು–ಮೇಲೆ ಬಿದ್ದು, ಬಯ್ದು, ಅನುವಿಸಿ–ಬಲಾತ್ಕರಿಸಿ, ಕಾಡಿ, ನೋಡಿ, ತಿಳಿದ–ಸಮಾಧಾ ನವನ್ನು ಪಟ್ಟು, ಅೞ್ಕಱಂ–ಮುತ್ತನ್ನು, ಇೞ್ಕಿಳಿಗೊಂಡ–ಸೆಳೆದುಕೊಂಡ, ಅಲಂಪುಗಳ್– ಸುಖಗಳು; ಎನ್ನೆರ್ದೆಯೊಳ್–ನನ್ನೆದೆಯಲ್ಲಿ, ತರಳಾಯ ತೇಕ್ಷಣೇ–ಚಂಚಲವಾದ ವಿಶಾಲ ವಾದ ನೇತ್ರಗಳನ್ನುಳ್ಳವಳೇ, ಕನಸಿನೊಳಂ–ಕನಸಿನಲ್ಲಿ ಕೂಡ, ಪಳಂಚಿ–ತಾಗಿ, ಅಲೆವುವು– ಪೀಡಿಸುವುವು.
ವಚನ : ಸೈರಿಸಲಾಱದೆ–ಸಹಿಸಲಾಗದೆ; ಮುಳಿಸೊಸಗೆಗಳಂ–ಕೋಪಪ್ರಸಾದಗಳನ್ನು.
೧೦೭. ಕಾದಿ–ಜಗಳವಾಡಿ, ಅನಂತರ, ಬಗೆಗೆಲಲೆಂದು–ಅವಳ ಮನಸ್ಸನ್ನು ಗೆಲ್ಲ ಬೇಕೆಂದು, ಆನ್–ನಾನು, ಪುಸಿನಿದ್ದೆಯೊಳ್–ಹುಸಿನಿದ್ದೆಯಲ್ಲಿ, ಇರೆ–ಇರಲು, ಲಲ್ಲೆಗೆಯ್ದು –ಅವಳು ಬಂದು ಮುದ್ದುಮಾಡಿ, ಲಲ್ಲೆಗೆ ಮಱೆದಿದೊಡೆ–ಆ ಮುದ್ದಾಟಕ್ಕೆ ಮೈಮರೆತವ ನಂತೆ ಇರಲು, ಅೞ್ಕಱಿನೊಳ್–ಪ್ರೇಮದಲ್ಲಿ, ಒಂದಿ–ಕೂಡಿ, ಮೊಗಂ ಮೊಗದತ್ತಸಾರ್ಚಿ– ಮುಖದಲ್ಲಿ ಮುಖವನ್ನು ಸೇರಿಸಿ, ಬೆಚ್ಚಗೆ–ಬಿಸಿಯಾಗಿ ನಿಡುಸುಯ್ದ–ನಿಟ್ಟುಸಿರುಬಿಟ್ಟ, ನಲ್ಲಳ–ಪ್ರಿಯಳ, ಮುಖಾಂಬುಜ ಸೌರಭದೊಳ್–ಮುಖಕಮಲದ ಸುಗಂಧದಲ್ಲಿ, ಪೊದಳ್ದು–ವ್ಯಾಪಿಸಿ, ಕತ್ತುರಿಯ ಕಪ್ಪುರದ–ಕಸ್ತೂರಿ ಮಿಶ್ರವಾದ ಪಚ್ಚಗರ್ಪ್ಪೂರದ, ಒಂದು ಕದಂಬದಂಬುಲಂ–ಒಂದು ಮುದ್ದೆಯಾದ ತಂಬುಲವು, ಏಂ–ಏನು, ಮಗ ಮಗಿಸಿತ್ತೊ–ಗಮಗಮ ಎನ್ನುತ್ತಿತ್ತೊ! ಅತಿ ಸುಂದರವಾದ ಪದ್ಯ; ಇಲ್ಲಿ ಬರುವ ಇಂಥ ಪದ್ಯ ಗಳನ್ನು ನೋಡಿದರೆ ‘ಅಮರುಕಶತಕ’ ದಂಥ ಗ್ರಂಥಗಳ ನೆನಪು ಬರುತ್ತದೆ: ಪಂಪನ ರಸಿಕತೆ ಲೋಕಾನುಭವಗಳು ಈ ಪದ್ಯಗಳಲ್ಲಿ ಅಭಿವ್ಯಕ್ತವಾಗಿವೆ.
ವಚನ : ಹೀಗೆ ನೆನೆಯುತ್ತಿರುವ ವಿರಹಿಗೆ ಅರಿಕೇಸರಿಯ ಸಹಾನುಭೂತಿ: ಪಲುಂಬು ತಿರ್ದನಂ–ಹಲುಬಿಕೊಳ್ಳುತ್ತಿದ್ದವನನ್ನು, ಕಂಡು, ಈತನುಂ–ಇವನೂ, ಎಮ್ಮಂದಿಗನಕ್ಕುಂ– ನನ್ನ ರೀತಿಯವನೇ ಆಗಿದ್ದಾನೆ; ಎನ್ನನಂಟನುಂ ಅಕ್ಕುಂ–ನನ್ನ ನಂಟನೂ ಆಗಿದ್ದಾನೆ.
೧೦೮. ಒಲವಿನೊಳಾದ–ಪ್ರೇಮದಲ್ಲಿ ಉಂಟಾದ ಕಲಹದ, ಕಾಯ್ಪು–ಕೋಪವು, ಮಿಗೆ–ಹೆಚ್ಚಾಗಲು, ಕಾದಲನಂ ಬಿಸುಟು–ಪ್ರಿಯನನ್ನು ತೊರೆದು, ಅಂತೆಪೋಪ–ಹಾಗೆ ಹೋಗುವ, ಕಾದಲಳ್–ಪ್ರಿಯಳು, ಅೞುತುಂ–ಅಳುತ್ತ, ತೆಱಂದಿರಿದು–ಬಗೆಬಗೆಯಾಗಿ ಹಿಂತಿರುಗಿ, ನೋಡಿದ ನೋಟದೊಳ್–ನೋಡಿದ ನೋಟದಲ್ಲಿ, ಎಯ್ದೆತಳ್ತಪೆರ್ಮೊಲೆ– ಚೆನ್ನಾಗಿ ಸೇರಿಕೊಂಡ ದೊಡ್ಡ ಮೊಲೆಗಳು, ಪೊಱಮುಯ್ವು–ಹೆಗಲ ಹಿಂಭಾಗಗಳು, ಬೆನ್– ಬೆನ್ನು, ಇನಿತುಂ–ಇಷ್ಟೂ, ಒರ್ಮೆಯೆ–ಒಂದೇ ಕಾಲದಲ್ಲಿ, ನಾಂಬಿನಂ–ಒದ್ದೆಯಾಗು ತ್ತಿರಲು, ಉಣ್ಮಿಪೊಣ್ಮಿ–ಚಿಮ್ಮಿ ಸೂಸಿ, ಕಣ್ಮಲರ್ಗಳಿಂ–ಹೂವಿನಂತಿರುವ ಕಣ್ಣುಗಳಿಂದ, ಅರಲಂಬುಗಳಂತೆ–ಹೂಗಣೆಗಳ ಹಾಗೆ, ವಿಲೋಚನಾಂಬುಗಳ್–ಕಣ್ಣೀರುಗಳು, ಎಚ್ಚುಪಾ ಯ್ದುವು–ಚಿಮ್ಮಿ ಹರಿದುವು.
ವಚನ : ಕಾಳಾಗರು ಧೂಪ ಧೂಮ ಮಲಿನ–ಕಪ್ಪಾದ ಅಗುರಿನ ಹೊಗೆಯಿಂದ ಮಾಸಿದ; ಶ್ಯಾಮಲಾಲಂಕೃತ–ಶ್ಯಾಮವರ್ಣದಿಂದ ಸಿಂಗಾರವಾದ, ವಿಚಿತ್ರ ಭಿತ್ತಿ–ಸೊಗಸಾದ ಗೋಡೆಗಳಿಂದ, ವಿರಾಜಿತ–ಪ್ರಕಾಶಮಾನವಾದ, ರಮ್ಯಹರ್ಮ್ಯಂಗಳೊಳ್–ರಮಣೀಯ ವಾದ ಉಪ್ಪರಿಗೆಗಳಲ್ಲಿ;
೧೦೯. ಹಲವು ಕಾಲ ಅಗಲಿದ ನಲ್ಲರು ಸೇರುವುದು; ಸಮಸಂದ–ಸಮಾನವಾಗಿ ಬಂದ, ಅೞ್ಕಱ್–ಪ್ರೇಮವು, ಅಲಂಪನೀಯೆ–ಸುಖವನ್ನು ಕೊಡಲು; ಘರ್ಮಾಂಬುವಿಂ, ಬಿಸಿ ಬೆವರಿನಿಂದ, ಶಯನಂ–ಹಾಸಿಗೆಯು, ನಾನೆ–ಒದ್ದೆಯಾಗಲು; ಮುನ್ನಮೆ–ಮೊದಲೇ ನಾಣ್–ಲಜ್ಜೆಯ, ಒೞ್ಕುಡಿವೋಗೆ–ಪ್ರವಾಹವು ನಿಲ್ಲಲು, ಸೂಸುವ–ಚೆಲ್ಲುವ, ಪದಂ– ಸುರತದ್ರವವು, ಗಂಗಾಂಬುವಂ–ಗಂಗೆಯ ನೀರನ್ನು, ಪೋಲೆ–ಹೋಲಲು; ಕಂಠರವಕ್ಕೆ– ಕೊರಲಿನ ಗರಗರಿಕೆಯ ಶಬ್ದಕ್ಕೆ, ತಾಡನರವಂ–ಹೊಡೆತದ ಶಬ್ದ, ಸುರತಧ್ವನಿ, ವಿಭ್ರಮಂ– ಸೊಗಸನ್ನು, ತಂದೀಯೆ–ತಂದುಕೊಡಲು, ತಚ್ಚಯ್ಯೆಯೊಳ್–ಆ ಹಾಸಿಗೆಯಲ್ಲಿ, ಸುರತ ಪ್ರಾರಂಭಕೋಲಾಹಳಂ–ರತಿಕ್ರೀಡೆಯ ಅಬ್ಬರವು, ಸಮಹಸ್ತಂ ಬಿಡಿವಂತುಟಾಯ್ತು– ಸಮಾನ ಪ್ರಮಾಣವುಳ್ಳದ್ದಾಯಿತು. (?)
೧೧೦. ರಾತ್ರಿ ಕಳೆದು ಬೆಳಗಾಗುತ್ತದೆ: ಸೊಡರ್ಗುಡಿ–ದೀಪದ ಕುಡಿಗಳು, ಒಯ್ಯನೆ ಆಗೆ–ಮೆಲ್ಲಗೆ ಉರಿಯುವುದಾಗಲು (ಎಣ್ಣೆ ತೀರುತ್ತ ಬಂದಿರುವುದರಿಂದ). ಪೊಸಮಲ್ಲಿಗೆ– ಹೊಸ ಮಲ್ಲಿಗೆಯು, ಮೆಲ್ಲಗೆ–ಮೃದುವಾಗಿ, ಕಂಪುನಾಱೆ–ಕಂಪಿನಿಂದ ಗಮಗಮಿಸಲು; ತಣ್ಪಿಡಿದೆಲರೂದೆ–ತಂಪಾದ ಗಾಳಿ ಬೀಸಲು; ಗಾವರದ–? ಮೆಲ್ಲುಲಿ–ಮೃದುವಾದ ಶಬ್ದ, ತುಂಬಿಯ ಗಾವರಂಗಳಂ–ದುಂಬಿಗಳ ಧ್ವನಿಯನ್ನು, ಗೆಡೆಗೊಳೆ–ಒಂದುಗೂಡಲು, ಚಂದ್ರಿಕಾಪ್ರಭೆ–ಬೆಳದಿಂಗಳಿನ ಕಾಂತಿ, ಮೊದಲ್ಗಿಡೆ–ಕಡಮೆಯಾಗುತ್ತಿರಲು, ನಾಡೆ– ವಿಶೇಷವಾಗಿ, ವಿತರ್ಕದಿಂ–ಬೆಳಗಾಯಿತೋ ಇಲ್ಲವೋ ಎಂಬ ಚರ್ಚೆಯಿಂದ, ಗುಣಾರ್ಣವಂ– ಅರ್ಜುನನು, ಬೆಳಗಪ್ಪಜಾವಮಂ–ಬೆಳಗಾಗುವ ಹೊತ್ತನ್ನು, ನೆಱೆಯೆ–ಪೂರ್ಣವಾಗಿ, ನಿಟ್ಟಿಸಿ ದಂ–ನೋಡಿದನು.
ವಚನ : ಪವಡಿಸುವ ಮಾಡಕ್ಕೆ–ಮಲಗುವ ಮನೆಗೆ; ನನಸೆಂದು ಬಗೆದು–ದಿಟವೆಂದು ಎಣಿಸಿ; ಮಂಗಳಪಾಠಕರವಂಗಳೊಳ್–ಮಂಗಳವನ್ನು ಹಾಡುವ ಹೊಗಳುಭಟ್ಟರ ಶಬ್ದ ಗಳಲ್ಲಿ.
೧೧೧. ಸೂರ್ಯನು ಉದಯಿಸಿದನು; ಪುದಿದ ತಮಂ–ಕವಿದ ಕತ್ತಲೆ, ಮದೀಯ ಕಿರಣಾಳಿಯನಾನದವೋಲೆ–ನನ್ನ ಕಿರಣಗಳ ಸಮೂಹವನ್ನು ಎದುರಿಸಲಾರದಂತೆ; ನಿನ್ನಂ– ನಿನ್ನನ್ನು, ಆವ ಅದಟರುಂ–ಯಾವ ಶೂರರೂ, ಆನರ್–ಎದುರಿಸರು; ಎನ್ನುದಯಂ– ನನ್ನ ಉದಯವು, ನಿನಗೆ, ಅಭ್ಯುದಯಂ–ಶ್ರೇಯಸ್ಸು, ಎಂದು, ಕನ್ನೆಯಂ–ಸುಭದ್ರೆಯನ್ನು, ಪದೆದು–ಬಯಸಿ, ಒಳಗೊಂಡು ಪೋಗು–ಜೊತೆಯಲ್ಲಿ ಕರೆದುಕೊಂಡು ಹೋಗು, ಇರದಿರ್–ಇಲ್ಲಿರಬೇಡ, ಎಂದು, ಗುಣಾರ್ಣವ ಭೂಭುಜಂಗೆ–ಅರ್ಜುನ ರಾಜನಿಗೆ, ಕಟ್ಟಿದಿರೊಳೆ–ಎದುರಿನಲ್ಲೇ, ಬಟ್ಟೆದೋಱುವ ವೋಲ್–ದಾರಿಯನ್ನು ತೋರಿಸುವ ಹಾಗೆ, ಕಮಲೈಕಬಾಂಧವಂ–ಸೂರ್ಯನು, ಅಂದು, ಒಗೆದಂ–ಮೂಡಿದನು. ಬಟ್ಟೆ (ಸಂ) ವರ್ತ್ಮನ್: “ಪದೆ–ಈಪ್ಸಾಯಾಂ.”
ಚತುರ್ಥಾಶ್ವಾಸಂ ಸಂಪೂರ್ಣಂ