ತೃತೀಯಾಶ್ವಾಸಂ
೧. ಅರ್ಜುನನ ಪ್ರಶಸ್ತಿಯಿಂದ ಆಶ್ವಾಸಾರಂಭ: ಅರಾತಿಬಳಾಸೃಕ್ ತೋಯಧಿಯೊಳ್– ಶತ್ರುಸೈನ್ಯದ ರಕ್ತಸಮುದ್ರದಲ್ಲಿ, ಶ್ರೀಯಂ–ಜಯಲಕ್ಷ್ಮಿಯನ್ನು, ಪಡೆದ ವೀರಂ–ಪಡೆದಂಥ ಶೂರನು; ಉಱದ–ಸೇರದ, ಹೊಂದಿಕೊಳ್ಳದ, ಅರಿಗಳಂ–ಹಗೆಗಳನ್ನು, ಆತ್ಮೀಯ–ತನ್ನ, ಪದಸ್ಫುರಿತ–ಕಾಲಿನಲ್ಲಿ ಹೊಳೆಯುತ್ತಿರುವ, ನಖಚಾ, ಯೆಗಳೊಳ್–ಉಗುರುಗಳ ಕಾಂತಿ ಯಲ್ಲಿ ನಿಱಿಸಿ–ಸ್ಥಾಪಿಸಿ, ನಿಂದ, ಗಂಡಂ–ವೀರನು, ಹರಿಗಂ–ಅರಿಕೇಸರಿಯು(=ಅರ್ಜುನನು). ಅರ್ಜುನನು ಶತ್ರುಗಳ ಸೈನ್ಯವನ್ನು ಧ್ವಂಸಮಾಡಿ ಜಯವನ್ನು ಗಳಿಸಿದನು; ಅವನ ಪಾದ ಗಳಲ್ಲಿ ಹಗೆಗಳೆಲ್ಲ ಶರಣಾದರು ಎಂದು ಭಾವ.
ವಚನ : ಪೊಱವೊೞಲಂ–ಪಟ್ಟಣದ ಹೊರ ಭಾಗವನ್ನು; ಎಯ್ದೆವರ್ಪಾಗಳ್– ಸಮೀಪಿಸುವಾಗ.
೨. ಅವನನ್ನು ಅಲಂಕೃತವಾದ ನಗರ ಎದುರುಗೊಂಡಿತು; ಕತ್ತುರಿಯ ಸಗಣನೀರ್– ಕಸ್ತೂರಿಯನ್ನು ಕದಡಿ ಮಾಡಿದ ಸೆಗಣಿಯ ನೀರು, ಬಿಡು ಮುತ್ತಿನ–ಬಿಡಿಯಾದ ಮುತ್ತುಗಳ, ರಂಗವಲಿ–ರಂಗೋಲಿ; ಮಿಳಿರ್ವ ದುಗುಲದ ಗುಡಿ–ಅಲ್ಲಾಡುವ ರೇಷ್ಮೆ ಧ್ವಜಗಳು; ಸಂಪತ್ತಿನ–ಐಶ್ವರ್ಯದ, ಬಿತ್ತರದೆ–ವಿಸ್ತಾರದಲ್ಲಿ, ಅಧಿಕತೆಯಲ್ಲಿ, ಎತ್ತಿದ ಮುತ್ತಿನ ಮಂಡವಿಗೆ–ಏರಿಸಿದ, ಹಾಕಿದ ಮುತ್ತಿನ ಮಂಟಪಗಳು; ಪೊೞಲ–ನಗರದ, ಮನೆಗಳೊಳ್ ಎಲ್ಲಂ–ಎಲ್ಲ ಮನೆಗಳಲ್ಲಿಯೂ ಇದ್ದುವು.
ವಚನ : ಉತ್ತರಂ ಬಳೆಯೆ–ಅತಿಶಯತೆ ಬೆಳೆಯುತ್ತಿರಲು, ಅಷ್ಟಶೋಭೆಯಂ–ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆ–ಎಂಬ ಎಂಟು ಬಗೆಯ ಅಲಂಕಾರ ಗಳನ್ನು, ಸಂಕೇತದೊಳ್–ಸೂಚನೆಯಲ್ಲಿ; ಸಮೆದಿರ್ದ–ನಿರ್ಮಿಸಿದ; ಗೋರೋಚನಾ– ಗೋರೋಜನ ಎಂಬ ಪದಾರ್ಥ; ಸಿದ್ಧಾರ್ಥ–ಅಕ್ಷತೆ; ದೂರ್ವಾಂಕುರ–ಎಳೆಯ ಗರಿಕೆ ಹುಲ್ಲು; ಮಾತುಳುಂಗ–ಮಾದಲದ ಹಣ್ಣು; ದರ್ಪಣ–ಕನ್ನಡಿ; ಕಳಮಾ–ಬತ್ತ; ಪುರಂಧ್ರಿಯ ರುಂ–ಸ್ತ್ರೀಯರೂ; ಬದ್ದವಣದ–ವರ್ಧಮಾನವೆಂಬ ವಾದ್ಯದ; ಮೆಯ್ಯಿಕ್ಕಿ ಪೊಡೆಮಟ್ಟು– ಸಾಷ್ಟಾಂಗವಾಗಿ ನಮಸ್ಕರಿಸಿ; ಬೆಸದಲ್–ಅಪ್ಪಣೆಯಲ್ಲಿ; ಮಾಡಮಂ–ಮನೆಯನ್ನು;
೩. ಅರಗು ಮೊದಲಾಗೆ–ಅರಗು ಮುಂತಾಗಿ, ಘೃತಂ–ತುಪ್ಪ, ಸಜ್ಜರಸಂ–ರಾಳ ಎಂಬುದರ ರಸ; ಬೆಲ್ಲಂ, ಸಣಂಬೆವೆಂಬವಱಿಂ–ಸಣಬು ಮೊದಲಾದ ಪದಾರ್ಥಗಳಿಂದ, ವಿಸ್ತರಿಸಿ– ವಿಸ್ತಾರವಾಗಿಸಿ, ಸಮೆದ–ಮಾಡಲ್ಪಟ್ಟ; ಇಂದ್ರ ಭವನಮೆ–ಇಂದ್ರನ ಅರಮನೆಯೇ, ಧರೆಗೆ– ಭೂಮಿಗೆ, ಅವತರಿಸಿರ್ದುದು–ಅವತರಿಸಿ, ಇಳಿದು ಬಂದಿತು, ಎನಿಸುವರಗಿನ ಮನೆಯಂ– ಎನ್ನಿಸುವ ಅರಗಿನ ಮನೆಯನ್ನು.
ವಚನ : ಕಿಱಿದಾನುಂ ಬೇಗಂ–ಸ್ವಲ್ಪವಾದರೂ ಹೊತ್ತು, ಇರ್ದು–ಇದ್ದು.
೪. ಇದು ಮನೆಯಂದಮಲ್ತು–ಇದು ಮನೆಯ ರೀತಿ ಅಲ್ಲ, ಇದು ಮನೆಯ ಹಾಗೆ ಕಾಣುವುದಿಲ್ಲ, ಉರಿವ ದಳ್ಳುರಿಯ ಉಗ್ಗಡದಂದಮಾಗಿ–ಉರಿಯುವ ಜ್ವಾಲೆಗಳ ಆಧಿಕ್ಯದ ರೀತಿಯಾಗಿ, ಕಣ್ಗೆ–ಕಣ್ಣಿಗೆ, ತೋಱಿದಪುದು–ತೋರುತ್ತಿದೆ; ಸಜ್ಜರಸದ, ಎಣ್ಣೆಯ, ತುಪ್ಪದ, ಕಂಪಿದೆಲ್ಲಂ–ಎಲ್ಲ ವಾಸನೆಗಳೂ, ಎಂಬುದು–ಎನ್ನುವುದೇ, ಬಗೆದೆಲ್ಲಿ ನೋಡುವೊಡಂ– ಪರೀಕ್ಷಿಸಿ ಎಲ್ಲಿ ನೋಡಿದರೂ ಇವೆ; ಇಟ್ಟಿಗೆ–ಇಟ್ಟಿಗೆ, ಕಲ್–ಕಲ್ಲು, ಮರಂ–ಮರ, ಎಂಬುದಿಲ್ಲ–ಎಂಬುವು ಇಲ್ಲ. ಕೂರದಂ–ಪ್ರೀತಿಸದವನು, ಪಗೆಗೆ–ಹಗೆತನಕ್ಕಾಗಿ, ಇದಂ– ಇದನ್ನು, ಒಡ್ಡಿದಂ–ನಮಗಾಗಿ ಇರಿಸಿದ್ದಾನೆ; ಸಂತಸಮಾಗಿರೆ–ಶತ್ರುವಿಗೆ ಸಂತೋಷ ವಾಗಿರಲು, ಮಾರಿ–ಮಾರಿದೇವತೆ, ಸುಯ್ಗುಮೇ–ನಿಟ್ಟುಸಿರು ಬಿಡುತ್ತದೆಯೇ ಎಂದರೆ ಮಾರಿಗೆ ದುಃಖವೇ? ಇಲ್ಲ. ಎಂದರೆ ವೈರಿಗಳ ಸಂಹಾರ ಸಂತೋಷಗೊಂಡ ಮಾರಿಗೆ ಪ್ರಿಯವಾದ ಔತಣವಾಗುತ್ತದೆ.
ವಚನ : ಅತ್ಯಾದರಃ–ಅತಿಯಾದ ಆದರಣೆಯು, ಸಂಭ್ರಮಂ–ಭಯವನ್ನು, ಉತ್ಪಾದ ಯತಿ–ಹುಟ್ಟಿಸುತ್ತದೆ; ಬೂತು–ಭೂತ; ನಮ್ಮಂ ಮೆೞ್ಪಡಿಸಲೆಂದೆ–ನಮ್ಮನ್ನು ಮೋಸಪಡಿಸ ಬೇಕೆಂದೆ; ಬಟ್ಟೆಗಳಂ ಸೋದಿಸುವಂ–ಮಾರ್ಗಗಳು ಏನಾದರೂ ಇವೆಯೇ ಎಂದು ಹುಡು ಕೋಣ; ನಿಚ್ಚಂ–ದಿನವೂ; ಪೆಱಗಣ ಕಾಪಂ–ಹಿಂದಿನಿಂದಲೇ ನೋಡುತ್ತಿರುವುದು, ಹಿಂದಿನ ಕಾವಲುಗಾರಿಕೆಯನ್ನು; ಕಣ್ಗಾಪಿನಲೆ–ಕಣ್ಣಿನ ಕಾವಲಿನಲ್ಲಿಯೇ, ಕಣ್ಣಿಗೆ ತಪ್ಪಿಸಿಕೊಂಡು ಹೋಗದ ಹಾಗೆ, ಕಾದಿರ್ಪನ್ನೆಗಂ–ಕಾಯುತ್ತಿರುವಾಗ; ವಿಶ್ವಾಸದಾಸಂ–ನಂಬಿಕೆಯ ಸೇವಕ; ಅವಿನ್ನಾಣಂಗಳಂ–ಗುರುತುಗಳನ್ನು (ಸಂ. ಅಭಿಜ್ಞಾನ); ನೀಮೆಂತುಂ ಬಲ್ಲಿರ್–ನೀವು ಹೇಗೂ ಈ ಅರಗಿನ ಮನೆಯ ವಿಷಯವನ್ನು ತಿಳಿದವರಾಗಿದ್ದೀರಿ; ಪೊಱಮಟ್ಟು–ಹೊರಕ್ಕೆ ಬಂದು; ಜತುಗೃಹ ಕವಾಟ ಪುಟ ಸಂಧಿಗಳೊಳ್–ಅರಗಿನ ಮನೆಯ ಬಾಗಿಲುಗಳ ಸಂದು ಗಳಲ್ಲಿ; ಸುರಂಗಮಂ–ಸುರಂಗವನ್ನು, ಕಡಂಗಗಳನ್ನು; ಗಂಗೆಯೊಳ್ ಮೂಡುವಂತಾಗೆ– ಗಂಗಾನದಿಯ ಕೆಳಗೆ ಹೋಗಿ ಆಚೆ ದಡದ ಮೇಲೆ ಬರುವ ಹಾಗೆ; ಛಿದ್ರಿಸುವನೆನಲುಂ– ವಂಚಿಸುತ್ತಾನೆ ಎನ್ನಲು; ಪಾರ್ವರನೂಡುವ ನೆವದೊಳ್–ಬ್ರಾಹ್ಮಣರಿಗೆ ಭೋಜನ ಮಾಡಿಸುವ ನೆಪದಿಂದ; ಬೆಂಡು ಮರಲ್ದು–ಭೋಜನ ಭಾರದಿಂದ ಬೆಂಡಾಗಿಬಿಟ್ಟು; ಮಱಸುಂದಿದರ್–ಮೈಮರೆದು ನಿದ್ರಿಸಿದರು; ಓವರಿಯೊಳ್–ಕೊಠಡಿಯಲ್ಲಿ(ಸಂ. ಅಪವರಕ); ಮಱಕೆಂದಿದಂ–ಮರೆದು ನಿದ್ದೆಮಾಡಿದನು; ಮಱಕೆಂದಿದೋವರಿಯೊಳ್–ಮೈಮರೆದು ಮಲಗಿದ ಕೊಠಡಿಯಲ್ಲಿ; ಕೊಳಿಸಲೊಡಂ–ಹೊತ್ತಿಸಿದ ಕೂಡಲೇ. ಮೆೞ್ಪಡಿಸು ಮೆೞ್ಪಡು+ಇಸು; ಪಂಪ ಭಾ. ೯–೫೮ ನೋಡಿ, (ಮೇಕು–ಇದರ ಅರ್ಥ ಮತ್ತು ನಿಷ್ಪತ್ತಿ ಎಂಬ ಲೇಖನ ನೋಡಿ; ಪ್ರ.ಕ. ೪೫–೧); ಸುರಂಗ–ಇದು ಗ್ರೀಕ್ ಭಾಷೆಯ Syrinks ಎಂಬ ಶಬ್ದದಿಂದ ಬಂದದ್ದೆಂದು ಹೇಳುತ್ತಾರೆ; “ಸುಂದು–ಶಯನೇ” ; ಕೆಂದು–ಮಲಗು; ಕೆಂದಿದ ಮೀನಂ ತಳ್ತಾಡದಿರ್ದ ಮಡುವಂ ಪೋಲ್ತಂ” –ಸುಪ್ತಮೀನಮಿವಹ್ರದಃ; ಸುಂದು ಎಂಬುದಕ್ಕೆ ಇರುವ ಪಾಠಾಂತರ ಲುಂದು ಎಂಬುದಕ್ಕೆ ಮಲಗು ಎಂದರ್ಥ; ಸುಂದು, ಕೆಂದು, ಲುಂದು–ಇವು ಮೂರೂ ಸಮಾನಾರ್ಥಕ.
೫. ಅಡಿಯೊತ್ತದೆ–ತಳಭಾಗ ಹೊತ್ತಿಕೊಳ್ಳದೆ, ಕಿಱಿಕಿಱಿದನೆ ಸುಡದೆ–ಸ್ವಲ್ಪ ಸ್ವಲ್ಪವಾಗಿ ಸುಡದೆ, ಇನಿಸು–ಸ್ವಲ್ಪ, ಅರೆಪೊರೆಕನಾಗದೆಯೆ–ಅರ್ಧವ್ಯಾಪಿಸಿದ್ದಾಗದೆ, ಸಸಿದು–ಬಿಡಿಸಿ, ಎಕ್ಕಿ, ಒಂದಡೆಯೊಳಗೆ–ಒಂದು ಸ್ಥಳದಲ್ಲಿ, ಒಟ್ಟಿರ್ದ–ರಾಶಿ ಹಾಕಿದ, ಅರಳೆಯನ್– ಹತ್ತಿಯನ್ನು, ಒಡನೆ–ಒಟ್ಟಿಗೇ, ಅಳುರ್ವಂತೆ–ವ್ಯಾಪಿಸುವ ಹಾಗೆ, ಅನಲಂ–ಅಗ್ನಿ, ಅರಗಿನ ಮನೆಯಂ–ಅರಗಿನಮನೆಯನ್ನು, ಅಳುರ್ದಂ–ವ್ಯಾಪಿಸಿದನು, ಸುಟ್ಟನು.
೬. ಮೇಲಾದ–ಉತ್ತಮರಾದ, ಪಾಂಡುಸುತರಂ–ಪಾಂಡವರನ್ನು, ಉಪಾಲಂ ಭಂಗೆಯ್ಯುತಿರ್ಪ–ನಿಂದಿಸುತ್ತಿರುವ, ದುರ್ಯೋಧನನಂ, ಲೀಲೆಯೆ–ಲೀಲೆಯಿಂದ, ನುಂಗುವ, ಮೃತ್ಯುವ–ಮೃತ್ಯುದೇವತೆಯ, ನಾಲಗೆ, ಎನೆ, ಉರಿಯನಾಲಗೆ–ಉರಿಯ ಜ್ವಾಲೆಗಳು, ಪಲವುಂ–ಹಲವು, ನೆಗೆದವು–ಮೇಲಕ್ಕೆ ಚಿಮ್ಮಿದುವು.
ವಚನ : ಬಂಬಲ್ಗಳಂ–(ಜ್ವಾಲೆಗಳ) ಗುಂಪುಗಳನ್ನು; ಬಿದಿರ್ದು ಕಳೆದು–ಕೊಡವಿ ಕಳೆದು; ಸುರಂಗದೊಳಗಣಿಂದಮೆ–ಸುರಂಗದ ಒಳಗಿನಿಂದಲೇ.
೭. ಅರಗಿನ ಮನೆಯೊಳ್, ಪಾಂಡವರ್, ಉರಿದು, ಅೞ್ಗಿದರ್–ನಾಶವಾದರು; ಅಕ್ಕಟ, ಅಯ್ಯೋ! ದುರ್ಯೋಧನನೆಂಬ–ದುರ್ಯೋಧನನು ಎನ್ನುವ, ಎರಲೆಯಿಂ–ಜಿಂಕೆ ಯಿಂದ (?); ಎಂದೞುತುಂ–ಎಂದು ಅಳುತ್ತ, ತತ್ಪುರಜನಂ–ಆ ಪಟ್ಟಣದ ಜನರು. ಅೞಲೊದವೆ–ದುಃಖವುಂಟಾಗಿರಲು, ಪರಿದು–ಓಡಿಬಂದು, ಆಗಳ್, ನೋಡಿತ್ತು–ನೋಡಿತು. ಇಲ್ಲಿ ಎರಲೆ ಶಬ್ದಕ್ಕೆ ಅರ್ಥ ಚಿಂತನೀಯ, ನಂಜಿನೆರಳು ಎಂದು ರಾಘವಾಂಕನ ಪ್ರಯೋಗ ವಿದೆ (ಸಿದ್ಧರಾ ೩–೭); ಎರಳ್ಪುಳುಗಳು ಎಂದು ಪಾಲ್ಕುರಿಕೆ ಸೋಮೇಶ್ವರಪುರಾಣದಲ್ಲಿದೆ (೫–೨೮); ಎರಳು ಎಂದರೆ ಒಂದು ಬಗೆಯಾದ ವಿಷದ ಹುಳು ಎಂದಾಗುತ್ತದೆ. ಬಹುಶಃ ಈ ಶಬ್ದವೇ ಈ ಪದ್ಯದಲ್ಲಿ ಇದ್ದಿರಬಹುದು.
ವಚನ : ರೂಪಱಿಯಲಾಗದಂತು–ರೂಪವೇ ತಿಳಿಯಲು ಆಗದ ಹಾಗೆ; ಕರಿಮುರಿಕ ನಾಗಿರ್ದ–ಕರುಕು ಮುರುಕಾಗಿದ್ದ, ಸೀದುಹೋದ;
೮. ಮನದೊಳ್–ಮನಸ್ಸಿನಲ್ಲಿ, ತ್ರೈಭುವನಮಂ–ಮೂರು ಲೋಕಗಳನ್ನು, ಆಳ್ದನಿತುವರಂ–ಆಳುವಷ್ಟರಮಟ್ಟಿಗೆ, ಸಂತಸಂ–ಸಂತೋಷವು, ತನಗೆ, ಪೆರ್ಚಿಯುಂ– ಹೆಚ್ಚಾದರೂ, ಅಂದು–ಆ ದಿನ, ಅಂಧನೃಪಂ–ಧೃತರಾಷ್ಟ್ರನು, ತನ್ನಯ ಜನದೊಳ್–ತನ್ನ ಜನರಲ್ಲಿ, ಕೆಲನಱಿಯೆ–ನೆರೆಹೊರೆಯವರು ತಿಳಿಯುವಂತೆ, ಇನಿಸು–ಒಂದಿಷ್ಟು, ಕೃತಕ ಶೋಕಂಗೆಯ್ದಂ–ಕಪಟ ಶೋಕವನ್ನು ಮಾಡಿದನು.
ವಚನ : ಅವಿರಳಬಾಷ್ಪವಾರಿದುರ್ದಿನ ದೀನಾನನರಾಗಿರೆ–ದಟ್ಟವಾಗಿ ಸುರಿಯುವ ಕಣ್ಣೀರೆಂಬ ದುರ್ದಿನದಿಂದ ದೀನವಾದ ಮುಖವುಳ್ಳವರಾಗಿರಲು, ದುರ್ದಿನಂ–ಮೋಡ ಮುಚ್ಚಿಕೊಂಡು ಸೂರ್ಯ ಕಾಣದಂತಿರುವ ದಿವಸ, ಬೆಸದೊಳ್–ಅಪ್ಪಣೆಯಲ್ಲಿ ಅರ್ಧದಗ್ದಕಳೇವರಂಗಳಂ–ಅರ್ಧ ಸುಟ್ಟ ದೇಹಗಳನ್ನು, ತಾರಾಗಣಂಗಳ್–ನಕ್ಷತ್ರ ರಾಶಿಗಳು, ತೆಂಕಮೊಗದೆ–ದಕ್ಷಿಣದಿಕ್ಕಿನಲ್ಲಿ.
೯. ಭೀಮನು ಉಳಿದ ಪಾಂಡವರೊಡನೆ ಹಿಡಿಂಬವನಕ್ಕೆ ಬರುವುದು. ಕಡಕುಂ–ಚೂರು ಕಲ್ಲುಗಳೂ, ಪೆಟ್ಟೆಯುಂ–ಹೆಂಟೆಗಳೂ, ಮೆಲ್ಲಡಿಗಳಂ–ಮೃದುವಾದ ಪಾದಗಳನ್ನು, ಒತ್ತೆ– ಅಮುಕಲು, ಬಳ್ಕುತ್ತುಂ–ಬಳುಕುತ್ತ, ಅಳ್ಕುತ್ತುಂ–ಹೆದರುತ್ತ, ಓರಡಿಗೆ–ಒಂದು ಹೆಜ್ಜೆಗೆ, ಒರ್ಮೊರ್ಮೆ–ಒಂದೊಂದು ಸಲ, ಕುಳುತ್ತಂ–ಕುಳಿತುಕೊಳ್ಳುತ್ತ, ಏೞುತಿರೆ–ಏಳುತ್ತಿರಲು, ಕಂಡು–(ಭೀಮನು) ನೋಡಿ, ಇಂತಾಗದು–ಹೀಗೆ ಆಗುವುದಿಲ್ಲ, ಏೞಿಮೆಂದು–ಏಳಿರಿ ಎಂದು, ಒಡನೆ ಅಂದು ಅಯ್ವರುಮಂ–ಕೂಡಲೇ ಆಗ ಐವರನ್ನೂ, ನಿಜಾಂಶಯುಗದೊಳ್– ತನ್ನ ಎರಡು ಭುಜಗಳ ಮೇಲೆ; ಪೊತ್ತೆತ್ತಿ ಹೊತ್ತು ಎತ್ತಿಕೊಂಡು, ತಳ್ತೂಳ್ವ–ಸೇರಿ ಒಟ್ಟಿಗೆ ಶಬ್ದ ಮಾಡುವ, ಸೀಱುಡುವಿಂದೆ–ಜೀರುಂಡೆಗಳಿಂದ, ಅದ್ಭುತದಾ–ಆಶ್ಚರ್ಯ ಭಯಂಕರ ವಾದ, ಹಿಡಿಂಬವನಮಂ–ಹಿಡಿಂಬನೆಂಬ ರಾಕ್ಷಸನು ಇದ್ದ ಕಾಡನ್ನು, ಮರುನ್ನಂದನಂ– ಭೀಮಸೇನನು, ಪೊಕ್ಕಂ–ಹೊಕ್ಕನು. ಅಳ್ಕು–ಭಯೇ ಅಶಕ್ತೌಚ ಎಂಬುದರಿಂದ ಅಳ್ಕುತ್ತಂ ಎನ್ನುವುದಕ್ಕೆ ಶಕ್ತಿಗುಂದುತ್ತ ಎಂದು ಅರ್ಥಮಾಡಬಹುದು. ತಡಕುಂ, ಪಿಟ್ಟಿ–ಎಂಬಿವು ಕಡಕುಂ, ಪೆಟ್ಟೆ ಎಂಬಿವಕ್ಕೆ ಅಪಪಾಠಗಳು; ಕಡಕುಂ ಪರಲ್ಗಳುಂ ಮೆಲ್ಲಡಿಗಳನೊತ್ತೆ (ಸುಕುಮಾರ ಚರಿತ್ರೆ (೧೨–೧೮), ‘ಮರಾಠಿ’ –ಖಡ, ಖಡಕ=ಕಲ್ಲು, ಸಣ್ಣ ಹರಳು; ಸೀಱುಡು–ಕರೆದುವು ಸೀಱುಡುಗಳ್ (ಪಂಪರಾ. ೭–೮೬)
೧೦. ಅದು–ಆ ವನವು, ಮದ….ಹಾಸ್ಪದಂ; ಮದದಂತಿ–ಮದ್ದಾನೆಗಳ, ದಂತ–ದಂತ ವೆಂಬ, ಮುಸಲ–ಒನಕೆಯಿಂದ, ಪ್ರವಿಭಗ್ನ–ಮುರಿದುಹೋದ, ಮಹಾಮಹೀರುಹ– ದೊಡ್ಡ ಮರಗಳಿಗೆ, ಆಸ್ಪದಂ–ಆಶ್ರಯ; ಅಡು–ಆ ಕಾಡು, ಸಿಂಹ….ಪ್ರದಂ; ಸಿಂಹನಾದ– ಸಿಂಹದ ಗರ್ಜನೆಯಿಂದ, ಜನಿತ–ಹುಟ್ಟಿದ, ಪ್ರತಿಶಬ್ದ–ಪ್ರತಿಧ್ವನಿಯಿಂದ, ಮಹಾಭಯಾನಕ ಪ್ರದಂ–ಅತಿಶಯವಾದ ಭಯವನ್ನು ಉಂಟುಮಾಡತಕ್ಕದ್ದು; ಅದು, ನಿರ್ಝ….ನಾಳಕಂ; ನಿರ್ಝರ–ಬೆಟ್ಟದ ಝರಿಗಳಿಂದ, ಉಚ್ಚಳಿತ–ಮೇಲಕ್ಕೆದ್ದ, ಶೀಕರ–ತುಂತುರುಗಳಿಂದ, ಶೀತಲ–ತಂಪಾದ, ವಾತ–ಗಾಳಿಯಿಂದ, ನರ್ತಿತ–ಅಲುಗಾಡಿಸಲ್ಪಟ್ಟ, ಕುಣಿಸಲ್ಪಟ್ಟ, ಉನ್ಮದ–ಸೊಕ್ಕಿದ, ಶಬರೀಜನ–ಬೇಡ ಸ್ತ್ರೀಯರ, ಅಳಕಂ–ಮುಂಗುರುಳುಗಳನ್ನುಳ್ಳದ್ದು; ಅದು, ಆಯತ….ನಕಂ, ಆಯತ–ವಿಸ್ತಾರವಾದ, ವೇತ್ರಲತಾ–ಬೆತ್ತದ ಬಳ್ಳಿಗಳ, ವಿತಾನಕಂ– ಮೇಲ್ಕಟ್ಟನುಳ್ಳದ್ದು. ಈ ಪದ್ಯದ ರಚನೆ ಅತ್ಯಂತ ಹೃದ್ಯವಾಗಿದೆ. ಅದು ಎಂಬುದು ಬಂದಿರು ವೆಡೆಗಳಲ್ಲಿ ನಿಂತುಕೊಳ್ಳಲು ಸ್ವಲ್ಪ ಸ್ಥಾನ ಸಿಕ್ಕಿ ದಂತಾಗುತ್ತದೆ, ಅಲ್ಲಿಂದ ಮುಂದೆ ಒಂದೊಂದು ನೆಗೆತವನ್ನು ನೆಗೆದು ಪದ್ಯ ವಿಶ್ರಮ ಸ್ಥಾನವನ್ನು ಮುಟ್ಟುತ್ತದೆ.
ವಚನ : ವನಾಂತರಾಳ–ಕಾಡಿನ ಒಳಗಡೆ; ವಟವಿಟಪಿ–ಆಲದಮರ; ಅಧ್ವಾನ– ಮಾರ್ಗ, ದಾರಿ; ಪರಿಶ್ರಮಶ್ರಾಂತರ್–ಆಯಾಸದಿಂದ ಬಳಲಿದವರು; ಜಾವಮಿರ್ದು– ಕಾವಲಾಗಿದ್ದು; ಪ್ರವಾಸಾಯಾಸಂಗಳ್ಗಂ–ನೆಲೆತಪ್ಪಿ ಬಂದುದಕ್ಕೂ ಆಯಾಸಕ್ಕೂ, ದೆಸೆಗಂ– ಸ್ಥಿತಿಗೂ; ಮನ್ಯು–ದುಃಖವು, ಮಿಕ್ಕು–ಮೀರಿ, ಬರೆ.
೧೧. ಭರತನ ವಂಶದೊಳ್–ಪ್ರಸಿದ್ಧನಾದ ಭರತ ರಾಜನ ವಂಶದಲ್ಲಿ, ನೆಗೞ್ದ ಪಾಂಡುಗೆ– ಪ್ರಸಿದ್ಧನಾದ ಪಾಂಡುರಾಜನಿಗೆ, ಪುಟ್ಟಿಯುಂ–ಹುಟ್ಟಿದರೂ, ಈ ಸಮಸ್ತ ಸಾಗರ ಪರಿವೇಷ್ಟಿ ತಾವನಿಗೆ–ಈ ಎಲ್ಲ ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಮಿಗೆ, ವಲ್ಲಭ [ರಾ] ಗಿಯುಂ–ಒಡೆಯರಾಗಿಯೂ, ಈ ಮ….ಟವಿಯೊಳ್; ಈ ಮಹೋಗ್ರ–ಈ ಮಹಾ ಭಯಂಕರವಾದ; ಕೇಸರಿ–ಸಿಂಹ, ಕರಿ–ಆನೆಗಳ, ಕಂಠಗರ್ಜಿತ–ಕಂಠದ ಗರ್ಜನೆಯುಳ್ಳ, ಮಹಾಟವಿಯೊಳ್–ಮಹಾ ಅರಣ್ಯದಲ್ಲಿ, ಮಱಕೆಂದಿ–ಮೈಮರೆತು ಮಲಗಿ, ನೀಮುಂ– ನೀವು ಕೂಡ, ಈ ಮರದ, ಅಡಿಯೊಳ್–ಕೆಳಗಡೆ, ಶಿವಾಶಿವ ರವಂಗಳಿಂ–ನರಿಗಳ ಅಶುಭವಾದ ಧ್ವನಿಗಳಿಂದ, ಎೞ್ಚಱುವಂತುಟು–ಎಚ್ಚರಗೊಳ್ಳುವ ಹಾಗೆ, ಆದುದೇ–ಆಯಿತೇ?
ವಚನ : ಎಂದು, ನುಡಿಯುತ್ತಿರ್ಪನ್ನೆಗಂ–ಹೇಳಿಕೊಳ್ಳುತ್ತಿರುವಷ್ಟರಲ್ಲಿ, ಕೋಕನದ ಬಾಂಧವಂ–ತಾವರೆಗಳ ಬಂಧು, ಸೂರ್ಯ; ಉದಯಾಚಳ ಶಿಖರ ಶೇಖರನಾದಂ–ಉದಯ ಪರ್ವತದ ತಲೆಗೆ ಬಂದವನಾದನು, ಎಂದರೆ ಸೂರ್ಯೋದಯವಾಯಿತು; ಬರವನಱಿದು– ಬಂದದ್ದನ್ನು ತಿಳಿದು.
೧೨. ನಿಡಿಯರ್–ನೀಳವಾಗಿರುವವರು, ಬಲ್ಲಾಯದ–ಅಧಿಕ ವಿಸ್ತೀರ್ಣದ, ಬಲ್ದಡಿಗರ್–ದೊಡ್ಡ ಧಾಂಡಿಗರು, ಅಯ್ವರ್–ಐದು ಜನರು, ವಂದು–ಬಂದು, ಆಲದ ಕೆೞಗೆ–ಆಲದ ಮರದ ಕೆಳಗೆ, ಇರ್ದ್ದರ್–ಇದ್ದಾರೆ, ನಮ್ಮಯ ಭಕ್ಷದೊಳ್–ನಮ್ಮ ಆಹಾರದಲ್ಲಿ, ಇಂ ತೊಡರ್ದರ್–ಇನ್ನು ಸಿಕ್ಕಿಕೊಂಡರು, ಎಂದರೆ ನಮ್ಮ ಆಹಾರಕ್ಕಾಗಿ ಸಿಕ್ಕಿ ಬಿದ್ದರು; ಅಡು–ಬೇಯಿಸು, ಪಣ್ಣಿಡು–ಸಿದ್ಧ ಮಾಡಿಡು, ಪೋಗು–ಹೋಗು, ನೀನುಂ ಆನುಂ ತಿಂಬಂ–ನೀನೂ ನಾನೂ ತಿನ್ನೋಣ.
೧೩. ಆಗಸದೊಳಗೊಂದು–ಆಕಾಶದಲ್ಲಿ ಒಂದು, ಮಹೀಭಾಗದೊಳ್ ಇನ್ನೊಂದು– ಭೂಮಿಭಾಗದಲ್ಲಿ ಇನ್ನೊಂದು, ದಾಡೆಯಾಗಿರೆ–ದವಡೆಯಾಗಿರಲು ಎಂದರೆ ಅತಿ ಅಗಲ ವಾಗಿ ಬಾಯಿ ತೆರೆದುಕೊಂಡು, ಮನದಿಂ–ಮನಸ್ಸಿಗಿಂತ, ಬೇಗಂ ಬರ್ಪಳ–ವೇಗವಾಗಿ ಬರುವವಳ, ದಿಟ್ಟಿಗಳ್–ಕಣ್ಣುಗಳು, ಆಗಳೆ–ಆಗಲೇ, ಗೆಂಟಱೊಳ್–ದೂರದಲ್ಲಿ, ಮಾರುತಿ ಯಂ–ಭೀಮನನ್ನು, ಪತ್ತಿದುವು–ಅಂಟಿಕೊಂಡವು. ಹಿಡಿಂಬೆ ದೂರದಿಂದಲೇ ಭೀಮನನ್ನು ನೋಡಿ ಅವನಲ್ಲಿ ಮನಸ್ಸುಳ್ಳವಳಾದಳು.
ವಚನ : ಒಂದು ಅಂಬು ವೀಡಿನೆಡೆಯೊಳ್–ಒಂದು ಬಾಣ ಹೋಗುವಷ್ಟು ದೂರದ ಸ್ಥಳದಲ್ಲಿ; ಅಂಬುವೀಡಿಂಗೆ–ಬಾಣ ಪ್ರಯೋಗಕ್ಕೆ; ಕಾಮರೂಪೆ–ಇಷ್ಟಬಂದ ರೂಪವನ್ನು ಧರಿಸುವವಳು, ತನ್ನತ್ತಮೊಗದೆ–ತನ್ನ ಅಭಿಮುಖವಾಗಿಯೇ, ಬರ್ಪಳಂ–ಬರುವವಳನ್ನು
೧೪. ಖೇಚರಿಯೋ–ಆಕಾಶದಲ್ಲಿ ಸಂಚರಿಸುವ ವಿದ್ಯಾಧರ ಸ್ತ್ರೀಯೋ, ಭೂಚರಿಯೋ– ಭೂಮಿಯ ಸ್ತ್ರೀಯೋ, ನಿಶಾಚರಿಯೋ–ರಾಕ್ಷಸಿಯೋ, ರೂಪು–ಸೌಂದರ್ಯವು, ಬಣ್ಣಿ ಸಲ್ಕೆ–ವರ್ಣನೆ ಮಾಡುವುದಕ್ಕೆ, ಆರ್ಗಂ–ಯಾರಿಗೂ, ಅವಾಗ್ಗೋಚರಂ–ಮಾತುಗಳಿಗೆ ನಿಲುಕ ದಂಥದು; ಈ ಕಾನನಮುಂ–ಈ ಅಡವಿಯೂ, ಅಗೋಚರಂ–ವರ್ಣಿಸಲಾಗದ್ದು, ಇವಳ್, ಇಲ್ಲಿಗೆ, ಏಕೆ ಬಂದಳೋ, ಪೇೞಿಂ–ಹೇಳಿರಿ.
ವಚನ : ಎಂಬನ್ನೆಗಂ–ಎಂದು ಹೇಳಿಕೊಳ್ಳುತ್ತಿರುವಷ್ಟರಲ್ಲಿ, ಮದನನ ಕೆಯ್ಯಿಂ ಬರ್ದುಂಕಿದ–ಮನ್ಮಥನ ಕೈಯಿಂದ ತಪ್ಪಿಸಿಕೊಂಡ; ಅರಲಂಬು–ಹೂವಿನ ಬಾಣ, ನೀನಾರ್ಗೆ–ನೀನು ಯಾರು, ಏನೆಂಬೆ–ಏನೆಂದು ಕರೆದುಕೊಳ್ಳುತ್ತೀ ಎಂದರೆ ಹೆಸರೇನು? ಎರಡಱಿಯದೊಲ್ದು–ಕಪಟವಿಲ್ಲದೆ ಪ್ರೀತಿಸಿ, ಎರಡಂ ನುಡಿಯಲಾಗದು–ಎರಡು ಮಾತನ್ನು, ಸುಳ್ಳನ್ನು ಆಡುವುದಾಗದು, ಅಸುರಂ–ರಾಕ್ಷಸನು; ಬೆಸದಿಂ–ಅಪ್ಪಣೆಯಿಂದ, ನಿಮ್ಮಿನಿಬರುಮಂ–ನೀವಿಷ್ಟು ಜನರನ್ನೂ.
೧೫. ಪಿಡಿದು–ಹಿಡಿದು, ಅಡಸಿ ತಿನಲ್–ಬಾಯೊಳಗೆ ತುರುಕಿಕೊಂಡು ತಿನ್ನಲು, ಬಂದಿರ್ದೆಡೆಯೊಳ್–ನಾನು ಬಂದ ಸಮಯದಲ್ಲಿ, ನಿನಗಾಗಿ–ನಿನ್ನ ಮೇಲಣ ಪ್ರೀತಿಗಾಗಿ, ಎನ್ನನೆ–ನನ್ನನ್ನೇ, ಮದನಂ–ಮನ್ಮಥನು, ತಿನೆ–ತಿನ್ನಲು, ಕೇಳ್–ಕೇಳು, ಪಡೆನೋಡಲ್ ಬಂದವರಂ–ಫೌಜನ್ನು ನೋಡಲು ಬಂದವರನ್ನು, ಎಂದರೆ ಬಂದರವ ಕೈಯಲ್ಲಿ, ಗುಡಿವೊಱಿಸಿ ದರ್–ಬಾವುಟವನ್ನು ಹೊರಿಸಿದರು, ಎಂಬುದು–ಎನ್ನುವುದು, ನಿನ್ನೆನ್ನೆಡೆಯೊಳ್–ನಿನ್ನ ನನ್ನ ಸಂಬಂಧದಲ್ಲಿ, ಆಯ್ತು–ಆಯಿತು. ಇಲ್ಲಿಯ ದೇಸಿ ಶೈಲಿ ಚೆಲುವಾಗಿದೆ ‘ಪಡೆನೋಡಲ್ ಬಂದವರಂ ಗುಡಿವೊಱಿಸಿದರ್’ ಎಂಬ ಗಾದೆಯಂತಿರುವ ಮಾತು ಪಂಪನ ಕಾಲದಲ್ಲಿ ಬಳಕೆಯಲ್ಲಿದ್ದಿರಬೇಕು. ಸೈನ್ಯ ಹೋಗುವಾಗ ಅದನ್ನು ನೋಡುವುದಕ್ಕೆ ಬಂದವರ ಕೈಗೆ ಬಾವುಟ ಹೊರಿಸಿ ನಡೆಯಿರಿ ಸೈನ್ಯದೊಡನೆ ಎಂದು ಹೇಳಿದ ಹಾಗಾಯಿತು.
ವಚನ : ಈ ಮಱಲುಂದಿದರ್–ಈ ಮೈಮರೆತು ಮಲಗಿರುವವರು; ಆರ್ಗೆ–ಯಾರು; ಪೆಗಲನೇಱು–ಹೆಗಲನ್ನು ಹತ್ತು;
೧೬. ಅೞಿಪಿದೆ–ಹಾಳು ಮಾಡಿದೆ (?); ಅಂತುಮಲ್ಲದೆ–ಹಾಗೂ ಅಲ್ಲದೆ; ನಿಶಾಚರಿ ಯಯ್–ರಾಕ್ಷಸಿಯಾಗಿದ್ದೀಯೆ; ಈ ಅೞಿನುಡಿ–ಈ ಕೆಟ್ಟ ಮಾತು, ನಿನಗೆ, ಅಪ್ಪುದು ಅಪ್ಪುದು–ಆಗುತ್ತದೆ, ಆಗುತ್ತದೆ, ಎಂದರೆ ತಕ್ಕದ್ದು, ಸರಿಯಾದದ್ದು; ನಿಮ್ಮ ಪಿರಿಯಣ್ಣನೆ ಬರ್ಕೆ–ನಿಮ್ಮ ಹಿರಿಯ ಅಣ್ಣನೇ ಬರಲಿ; ಪಣ್ಣನೆ–ಸ್ವಲ್ಪಮಟ್ಟಿಗೆ, ಮೆಲ್ಲನೆ, ಆತನ, ಒಡ್ಡೞಿಯದ–ಕೆದರಿಹೋಗದ, ಗಂಡವಾತಂ–ಪೌರುಷದ ಮಾತನ್ನು, ನೋೞ್ಪಂ– ನೋಡೋಣ; ಎನುತೆ ಅಂತೆ ಇರೆ–ಎನ್ನುತ್ತ ಹಾಗೆಯೇ ಇರಲು; ತಂಗೆಯ–ತಂಗಿಯು, ಮಾಣ್ದುದರ್ಕೆ–ತಡಮಾಡಿದುದಕ್ಕೆ, ಅವಂ–ಅವನು, ಮೊೞಗಿ–ಗರ್ಜನೆ ಮಾಡಿ, ಸಿಡಿಲ್ದು– ಸಿಡಿದು, ಅದೊಂದು, ಸಿಡಿಲೇೞ್ಗೆಯಿನೆಯ್ತರೆವಂದು–ಸಿಡಿಲಿನ ಒಂದು ಆಧಿಕ್ಯದಿಂದ ಹತ್ತಿರಕ್ಕೆ ಬಂದು; ಅೞಿಪಿದೆ–ಇಲ್ಲಿ ಸ್ವಲ್ಪ ಸಂದೇಹವಿದೆ; ಕೊಟ್ಟಿರುವ ಅರ್ಥವನ್ನು ಇಟ್ಟು ಕೊಂಡರೆ ಏನನ್ನು ಅೞಿಪಿದೆ ಎಂಬ ಪ್ರಶ್ನೆ ಬಂದು ಉತ್ತರ ದೊರೆಯುವಂತಿಲ್ಲ; ಅಳಿಪಿದೆ– ಆಸೆಪಟ್ಟೆ, ಒಲಿದೆ ಎಂಬ ಅರ್ಥ ಒಪ್ಪುವುದಾದರೂ ಕುಳ ೞಕಾರಗಳ ಪ್ರಾಸವುಂಟಾಗುತ್ತದೆ, ಪಂಪನು ಕ್ವಚಿತ್ತಾಗಿ ಕುಳ ಕ್ಷಳ ೞಕಾರಗಳನ್ನು ಪ್ರಾಸದಲ್ಲಿ ಬೆರಸುತ್ತಾನೆ ಎಂದು ಹೇಳಿ(ಪಂಪಭಾ. ೧೧–೩೬, ೯–೧೫; ಆದಿಪು. ೧–೮೪, ೧೩–೬೫) ಸಮಾಧಾನ ಪಡಬಹುದು, ಅೞಿ ಎಂಬ ಧಾತುಗೆ ತಮಿಳಿನಲ್ಲಿ ಉಳ್ಳದೈ ಮಾಱ್ರುದಲ್ ಎಂದರೆ ಆಕಾರ ಬದಲಾಯಿಸಲು ಎಂಬರ್ಥ ವಿದೆ; ಇದು ಇಲ್ಲಿಗೆ ಹೊಂದುತ್ತದೆ; ಪಣ್ಣನೆ ಪಣ್ಣಂ=ಮೆಲ್ಲನೆ ಅಥವಾ ಅರಮೆ, ಕೆಲವು; “ಬೆಟ್ಟವೇಸಗೆಯ ಬಿಸಿಲ್ಗೆ ತೀಡಿದುದು ತಣ್ಣನೆ ಪಣ್ಣನೆ ಪಶ್ಚಿಮಾನಿಲಂ” ಎಂದು ನಾಗಚಂದ್ರನ ಪ್ರಯೋಗ.
ವಚನ : ತಂಡಂಗಳುಂ–ಗುಂಪುಗಳೂ, ರಾಶಿಗಳೂ; ನೀನೊರ್ವಯ್–ನೀನು ಒಬ್ಬನಾಗಿ ದ್ದೀಯ, ಎಂದರೆ ಒಂಟಿಯಾಗಿದ್ದೀಯ: ಈ ಮಱಲುಂದಿದರನ್–ಈ ಮಲಗಿದವರನ್ನು, ಒರ್ಮೆಯೆ–ಒಂದೇ ಸಲಕ್ಕೆ, ಪೊಸೆದು ಮುಕ್ಕುವೆನ್–ಹೊಸೆದು ನುಂಗುತ್ತೇನೆ, ಮಲ್ಲಂತಿಗೆ ಯನಪ್ಪೊಡಂ–ಮಲ್ಲವಸ್ತ್ರವನ್ನಾದರೂ, ಅವಯವದೆ–ಸುಲಭವಾಗಿ, ಶ್ರಮವಿಲ್ಲದೆ, ಮಲ್ಲಂತಿಗೆ ಮಲ್ಲವಸ್ತ್ರಿಕಾ=ಕಾಚ, ನಡುಕಟ್ಟು ಎಂದು ಅರ್ಥೈಸಿದೆ (ಪಂಪಭಾ. ಕೋಶ).
೧೭. ಏಂ ಗಾವಿಲನಯೋ–ಏನು ನೀನು ದಡ್ಡನೋ, ನಿನ್ನಂ ನುಂಗುವುದರ್ಕೆ–ನಿನ್ನನ್ನು ನುಂಗುವುದಕ್ಕೆ, ಇವರಂ ಎತ್ತವೇೞ್ಕುಮೆ–ಇವರನ್ನು ಎಚ್ಚರಿಸಬೇಕೆ? ನೆರಮಂ–ಸಹಾಯ ವನ್ನು, ಸಂಗಳಿಸಲ್ವೇೞ್ಕುಮೆ–ಒದಗಿಸಿಕೊಳ್ಳಬೇಕೆ? ಮಾತಂಗ ವಿರೋಧಿಗೆ–ಆನೆಯ ಶತ್ರುವಿಗೆ ಎಂದರೆ ಸಿಂಹಕ್ಕೆ, ಧರೆಯೊಳ್–ಲೋಕದಲ್ಲಿ, ಕುರಂಗ ಸಂಗರ–ಜಿಂಕೆಯೊಡನೆ ಯುದ್ಧವೇ? ಇಲ್ಲಿ ಕುರಂಗ ಸಂಗರ ಎಂಬಲ್ಲಿ ಪ್ರಕೃತಿಪ್ರಯೋಗವಿದೆ: ಅದು ಪ್ರಥಮಾಂತ್ಯವಾಗಿ ಕುರಂಗ ಸಂಗರಂ ಎಂದಿರಬೇಕು; ಕಾಕುವಿನಿಂದ ಪ್ರಶ್ನಾರ್ಥದ್ಯೋತಕವಾಗುತ್ತದೆ.
ವಚನ : ಆಡಂಬರಂಗೆಯ್ದು–ಅಬ್ಬರಿಸಿ; ತುಂಬುರುಕೊಳ್ಳಿಯಂತೆ–ತೂಬರೆ ಮರದ ಸೌದೆಯ ಕೊಳ್ಳಿಯಂತೆ, ಅಂಬರಂಬರಂ–ಆಕಾಶದವರೆಗೂ; “ತುಂಬುರಕೊಳ್ಳಿಯ ತೆಱದಿನಂಬರಕ್ಕೆ ಸಿಡಿಲ್ದು” ಎಂದು ನಾಗಚಂದ್ರನ ಪ್ರಯೋಗ (ಪಂಪರಾ. ೪–೩೯).
೧೮. ಪಾಸಱೆಯಂ–ಹಾಸುಬಂಡೆಯನ್ನು, ಪೊತ್ತು–ಹೊತ್ತುಕೊಂಡು, ಎತ್ತಿಕೊಂಡು, ಕಡುಪಿನೆ–ತೀವ್ರತೆಯಿಂದ, ಎಯ್ತರೆ–ಹತ್ತಿರಕ್ಕೆ ಬರಲು, ಭೀಮನುಂ–ಭೀಮನು ಕೂಡ, ಮಹೀಜವೊಂದಂ–ಒಂದು ಮರವನ್ನು, ಬೇರೊಡನೆ–ಬೇರುಸಹಿತ, ಒತ್ತಿ ಕಿೞ್ತು– ಬಲವಂತವಾಗಿ ಕಿತ್ತು, ಇಡೆಯುಂ–ಬೀಸುತ್ತಲೂ, ಬಿಡೆ ಪೊಯ್ಯೆಯುಂ–ನಿರ್ದಾಕ್ಷಿಣ್ಯವಾಗಿ ಹೊಡೆಯುತ್ತಲೂ, ಆ ಬನಂ–ಆ ವನವು, ಪಡಲ್ವಡುತಿರೆ–ಚೆಲ್ಲಾಪಿಲ್ಲಿಯಾಗಿ ಬೀಳುತ್ತಿರಲು, ಕಲ್ಲೊಳಂ–ಕಲ್ಲಿನಿಂದಲೂ, ಮರದೊಳಂ–ಮರದಿಂದಲೂ, ಬಡಿದು–ಚಚ್ಚಿ, ಒಯ್ಯನೆ– ಮೆಲ್ಲಗೆ, ಜೋಲ್ದ–ಸೋತು ಜೋತುಬಿದ್ದ, ದೈತ್ಯನಂ ಪಿಡಿದು–ರಾಕ್ಷಸನನ್ನು ಹಿಡಿದು, ಮೃಣಾಳನಾಳಮನೆ ಸೀಳ್ವವೋಲ್–ತಾವರೆಯ ದಂಟನ್ನು ಸೀಳುವ ಹಾಗೆ, ಒರ್ಮೆಯೆ–ಒಂದೇ ಸಲಕ್ಕೆ; ಸೀಳ್ದು–ಸೀಳಿ, ಬೀಸಿದಂ–ಎಸೆದನು. ಯಾವುದಾದರೂ ಉಪಾಖ್ಯಾನದ ಸಾರವೇನೆಂಬು ದನ್ನು ಪಂಪನು ಮನಗಂಡು, ಅಷ್ಟನ್ನು ಮಾತ್ರ, ವಿವರಗಳನ್ನು ಬಿಟ್ಟು ನಿರೂಪಿಸುತ್ತಾನೆ; ಆ ಕಥೆಯನ್ನೆಲ್ಲ ತಿಳಿದಿರುವವರು ವಿವರಗಳನ್ನೆಲ್ಲ ನೆನೆದುಕೊಂಡು ಇವನ ಸಂಗ್ರಹವನ್ನು ಸವಿಯಬೇಕಾಗಿದೆ. ಸಂಗ್ರಹಕಾರನ ಕೌಶಲ್ಯಮಿತಿಯಲ್ಲಿ ಅಮಿತವಾದ ಅರ್ಥಸಂಪತ್ತಿ ಯನ್ನು ತುಂಬುವುದು. ಹಾಗೆ ಮಾಡುವುದರಲ್ಲಿ ಪಂಪನು ಅದ್ವಿತೀಯ. ಹಿಡಿಂಬ ವಧೆಯನ್ನು ಈ ಒಂದೇ ಪದ್ಯದಲ್ಲಿ ನಿರೂಪಿಸಿರುವುದಾದರೂ ಅಲ್ಲಿ ಪಾಠಕರ ಪ್ರತಿಭಾವಿಹಾರಕ್ಕೆ ವಿಶೇಷವಾದ ಅವಕಾಶವಿದೆ. ಅದನ್ನು ಚಿಂತಿಸಿದಷ್ಟೂ ಅದರ ಸೊಗಸು ಹೆಚ್ಚುತ್ತಾ ಹೋಗುತ್ತದೆ.
ವಚನ : ಕಳಕಳಕ್ಕೆ–ಗದ್ದಲಕ್ಕೆ; ಮಱಲುಂದಿದ–ಮರೆದು ನಿದ್ದೆ ಮಾಡುತ್ತಿದ್ದ; ಡಂಬ ಮಿಲ್ಲದೆ–ಕಾಪಟ್ಯವಿಲ್ಲದೆ; ಒಡಂಬಡಂ–ಒಪ್ಪಿಗೆಯನ್ನು, ಒಪ್ಪಂದವನ್ನು, ಕೆಯ್ಕೊಳ್ವುದೆ– ಸ್ವೀಕರಿಸುವುದೇ; ಕಜ್ಜಂ–ಕಾರ್ಯ; ಕಱಂಗಿ–ಕಪ್ಪಾಗಿ; ಕೞ್ತಲಿಸಿದ–ಕತ್ತಲೆಯಾದ, ನೆರಳಾದ; ಮರದುಱುಗಲ–ಮರದ ಗುಂಪಿನ, ತೋಪಿನ; ಸುಧಾಧವಳಿತೋತ್ತುಂಗ ರಮ್ಯಹರ್ ಮ್ಯಂಗಳಂ–ಸುಣ್ಣದಿಂದ ಬೆಳ್ಳಗಾಗಿರುವ ಎತ್ತರವಾದ ಸೊಗಸಾದ ಅರಮನೆಗಳನ್ನು; ಕಾಣ್ಬಿರಪ್ಪೊಡೆ–ಕಾಣುವಿರಾದ ಪಕ್ಷದಲ್ಲಿ; ಮಹಾವಿಭೂತಿಯಿಂ–ಮಹಾವೈಭವದಿಂದ; ಲೇಪನಂಗಳಿಂ–ಬಳಿಯುವ ಗಂಧಗಳಿಂದ; ಪಥಪರಿಶ್ರಮಮೆಲ್ಲಮಂ–ಮಾರ್ಗಾಯಾಸ ವೆಲ್ಲವನ್ನೂ,
೧೯. ಎಲ್ಲಿ ಕೊಳಂ–ಎಲ್ಲಿ ಸರೋವರವೋ, ಎಲ್ಲಿ ತಣ್ಬುೞಿಲ್–ಎಲ್ಲಿ ತಂಪಾದ ತೋಪುಗಳೋ, ಎಲ್ಲಿ ಲತಾಭವನಂ–ಬಳ್ಳಿಮಾಡಗಳು ಎಲ್ಲಿಯೋ, ಎಲ್ಲಿ ಧಾರಾಗೃಹಂ– ಎಲ್ಲಿ ನೀರಧಾರೆ ಸುರಿವ ಮನೆಗಳೋ, ಅಂತು–ಹಾಗೆ, ಅಲ್ಲಿಯೇ–ಆ ಎಡೆಗಳಲ್ಲಿಯೇ, ತೊಡರ್ದು–ಒಟ್ಟಾಗಿ ಸೇರಿ, ಅಲ್ಲಿಯೆ ನಿಂದು–ಅಲ್ಲಿಯೆ ತಂಗಿ, ಅಲ್ಲಿಯೆ–ಅಲ್ಲಿಯೇ; ಆಕೆ– ಆ ಹಿಡಿಂಬೆ, ಮರುದಾತ್ಮಜನೊಳ್–ಭೀಮಸೇನನೊಡನೆ, ರಮಿಯಿಸಿದಳ್–ಕ್ರೀಡಿಸಿದಳು. ಇಲ್ಲಿ ಮಹಾಭಾರತದಲ್ಲಿ ವಿಸ್ತಾರವಾದ ವರ್ಣನೆ ಇದೆ: ಶೈಲಶೃಂಗೇಷು ರಮ್ಯೇಷು ದೇವತಾಯತನೇಷು ಚ । ಮೃಗಪಕ್ಷಿ ವಿಘುಷ್ಟೇಷು ರಮಣೀಯೇಷು ಸರ್ವದಾ ॥ ಸರ್ವರ್ತು ಫಲರಮ್ಯೇಷು ಮಾನಸೇಷು ಸರಸ್ಸು ಚ । ಬಿಭ್ರತೀ ಪರಮಂ ರೂಪಂ ರಮಯಾಮಾಸ ಪಾಂಡವಂ ॥ ಎಂಬೆರಡು ಶ್ಲೋಕಗಳನ್ನು ಮಾದರಿಗಾಗಿ ನೋಡಬಹುದು. ಪಂಪನ ಒಂದು ಕಂದಪದ್ಯ ೯ ಶ್ಲೋಕಗಳ ರಮಣೀಯ ಸಂಗ್ರಹವಾಗಿದೆ.
ಪುೞಿಲ್=(ತ) ಪೊೞಿಲ್–ಉದ್ಯಾನವನ, ವನ; ಇದಕ್ಕೂ (ಸಂ) ಪುಲಿನ ಪುಳಿನ=ಮರಳು ಎಂಬುದಕ್ಕೂ ಸಂಬಂಧವಿಲ್ಲ.
ವಚನ : ಪೊೞಲ್ಗೆ ಮಗುೞ್ದು ಬಂದೊಡೆ–ನಗರಕ್ಕೆ ಹಿಂತಿರುಗಿ ಬಂದರೆ
೨೦. ಕಾರಿರುಳ–ಮಳೆಗಾಲದ ರಾತ್ರಿಯ, ತಿರುಳ–ತಿರುಳಿನ, ಬಣ್ಣಂ–ಬಣ್ಣವು, ಕೂರಿದು ವೆನೆ–ಹರಿತವಾದುವು ಎನ್ನಲು, ತೊಳಪ–ಹೊಳೆವ, ದಾಡೆ–ಕೋರೆಹಲ್ಲುಗಳು, ಮಿಳಿರ್ವುರಿ ಗೇಸಂ–ಅಲುಗಾಡುವ ಉರಿಯಂತಿರುವ ಕೂದಲು; ಪೇರೊಡಲ್–ದೊಡ್ಡ ದೇಹವು, ಇವೆಲ್ಲಾ, ಎಸೆದಿರೆ–ಪ್ರಕಾಶಿಸುತ್ತಿರಲು, ಘಟೋತ್ಕಚನೆಂಬಂ ಮಗಂ–ಘಟೋತ್ಕಚನೆಂಬ ಮಗನು, ಆರುಂ–ಯಾರೂ, ಅಗುರ್ವಿಸೆ–ಭಯಪಡುವಂತೆ, ಪುಟ್ಟಿದಂ–ಹುಟ್ಟಿದನು. ಇಲ್ಲಿ ಕಾರಿರುಳ್ ಶಬ್ದವನ್ನು ಕಾರ್+ಇರುಳ್ ಎಂದು ಬಿಡಿಸಿದೆ, ಇದು ಕರಿದು+ಇರುಳ್ ಎಂದೂ ಆಗಬಹುದು; ಕರಿದು, ಪಿರಿದು ಮುಂತಾದ ಕೆಲವು ಗುಣವಚನಗಳಿಗೆ ಸ್ವರಾದಿ ಶಬ್ದಪರ ವಾಗಿ ಸಮಾಸವಾದಾಗ ಅವುಗಳ ಆದಿಗೆ ದೀರ್ಘ ಬರುತ್ತದೆ, ಕಾರೊಸಡು, ಪೇರೊಡಲ್ ಎಂಬಂತೆ; ಆದ್ದರಿಂದ ಕಾರಿರುಳ–ಕಪ್ಪನೆಯ ರಾತ್ರಿ ಎಂದು ಅರ್ಥವಾಗುತ್ತದೆ; ಕರಿದು +ಇರುಳ್.
ವಚನ : ಈಶ್ವರ ಕಲ್ಪಿತದಿಂ–ದೇವರ ಸೃಷ್ಟಿಯಿಂದ, ಕಲ್ಪನೆಯಿಂದ; ಸದ್ಯಃ ಪ್ರಸೂತಿ– ಕೂಡಲೇ ಹೆರುವುದು;
೨೧. ಪಾಂಡವರು ಏಕಚಕ್ರ ನಗರಕ್ಕೆ ಪ್ರಯಾಣ ಮಾಡಿದ್ದು : ಹಿಡಿಂಬೆಯಂ ಬರಿಸಿ– ಹಿಡಿಂಬೆಯನ್ನು ಬರಮಾಡಿಕೊಂಡು, ಘಟೋತ್ಕಚನಂ–ಘಟೋತ್ಕಚನನ್ನು ಸಾರೆ–ಹತ್ತಿರಕ್ಕೆ, ಕರೆದು, ಇನ್ನೆವರಂ–ಇಲ್ಲಿಯವರೆಗೆ, ಮನೋಮುದಂಬೆರಸು–ಮನಸ್ಸಿನ ಸಂತೋಷದೊಡನೆ ಕೂಡಿ, ಒಸೆದು–ಪ್ರೀತಿಸಿ, ಇರ್ದೆವು–ಇದ್ದೆವು, ಇನ್ ಇರಲಾಗದು–ಇನ್ನು ಮುಂದೆ ಇರುವು ದಾಗದು, ಪೋಪೆಂ–ಹೋಗುತ್ತೇವೆ, ಎಂದೊಡೆ–ಎಂದು ಹೇಳಿದರೆ, ಆದರದೊಳ್– ಆದರದಲ್ಲಿ, ಕೊಟ್ಟ ವಸ್ತುಗಳುಮಂ–ಕೊಟ್ಟ ಪದಾರ್ಥಗಳನ್ನು, ಒಂದುಮಂ–ಒಂದನ್ನೂ, ಒಲ್ಲದೆ–ಒಪ್ಪಿಕೊಳ್ಳದೆ, ಕೂರ್ತು–ಪ್ರೀತಿಸಿ, ಬುದ್ಧಿವೇೞ್ದಿರಿಸಿ–ಬುದ್ಧಿಯ ಮಾತುಗಳನ್ನು ಹೇಳಿ ವಸ್ತುಗಳನ್ನು ಅಲ್ಲಿಯೇ ಇರಿಸಿ, ಸುಖಪ್ರಯಾಣದೊಳೆ–ಸುಖಕರವಾದ ಪ್ರಯಾಣದಲ್ಲಿಯೇ, ಪಾಂಡವರ್, ಏಕಚಕ್ರಮಂ, ಎಯ್ದಿದರ್–ಸೇರಿದರು.
೨೨. ರಗಳೆ : ಕೃತಕಗಿರಿಗಳಿಂ–ಮಾಟದ ಬೆಟ್ಟಗಳಿಂದ; ಬಿರಯಿಯಿಂ–ವಿರಹಿಯಿಂದ; ಕಣ್ಮಲೆಯೆ–ಮನಸ್ಸಿಗೆ ವೇದ್ಯವಾಗಲು, ಪೂತ–ಹೂಬಿಟ್ಟ, ಸುರಯಿಯಿಂ–ಸುರಗಿಯಿಂದ; ಜರಿವೊನಲ್ಗಳಿಂ–ಝರಿಯ ಪ್ರವಾಹಗಳಿಂದ; ಗಂಧಶಾಲಿ–ಸುವಾಸನೆಯ ಬತ್ತ; ಓಳಿಯಿಂ– ಗುಂಪಿನಿಂದ; ಈಂಟುಜಳಧಿ–ಕುಡಿಯುವ ನೀರಿಗೆ ಆಕರವಾದ ಸಮುದ್ರ; ಅಗೞನೀಳ್ಪಿನಂ– ಅಗಳಿನ ಉದ್ದದಿಂದ; ದೇವಗೃಹ–ದೇವಾಲಯ; ಮಱುಗಿ–ಕುದಿದು, ವ್ಯಾಕುಲಗೊಂಡು; ಬಟ್ಟೆಯರ–ದಾರಿಹೋಕರು; ಪಂಚರತುನದೊಳೆ–ಐದು ಬಗೆಯ ರತ್ನಗಳಲ್ಲಿಯೇ, ನೆಱೆದ ಪಸರದಿಂ–ತುಂಬಿದ ಅಂಗಡಿಗಳಿಂದ; ತಿಸರದಿಂ–ಮೂರು ಎಳೆಯ ಹಾರಗಳಿಂದ; ಧನದ ರನ್ನರ್–ಕುಬೇರನಂಥವರು; ಪರದರಿಂ–ವ್ಯಾಪಾರಿಗಳಿಂದ, ಶೆಟ್ಟಿಗಳಿಂದ; ಬಿರುದರಿಂ– ಬಿರುದುಗಳನ್ನುಳ್ಳವರಿಂದ; ಪಂಚರತ್ನ=ಐದು ರತ್ನಗಳು; ಇವು ಯಾವುವು ಎಂಬ ವಿಚಾರ ದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ: (೧) ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ (೨) ಚಿನ್ನ, ಬೆಳ್ಳಿ, ಮುತ್ತು, ರಾಜಾವರ್ತ, ಹವಳ (೩) ಕನಕ, ಹೀರಕ, ನೀಲ, ಪದ್ಮರಾಗ, ಮುತ್ತು. ಇಲ್ಲಿನ ರಗಳೆಯ ಪ್ರತಿಪಾದದಲ್ಲೂ ಮೂರು ಮಾತ್ರೆಯ ೧ ಗಣ, ಐದು ಮಾತ್ರೆಯ ೧ ಗಣ, ತಿರುಗಿ ತ್ರಿಮಾತ್ರಾಗಣ ೧ ಮತ್ತು ಪಂಚಮಾತ್ರಾಗಣ ೧–ಹೀಗೆ ಗಣವಿನ್ಯಾಸವಿದೆ; ಎರಡೆರಡು ಪಾದಗಳಿಗೆ ಅಂತ್ಯಪ್ರಾಸವಿದೆ. ಇದು ಪ್ರತಿ ಪಾದದಲ್ಲೂ ನಾಲ್ಕು–ಚತುಷ್ಕಲ ಗಳನ್ನುಳ್ಳ ಮಂದಾನಿಲರಗಳೆಯ ಇನ್ನೊಂದು ರೂಪ; ೪+೪ ಎಂಬುದನ್ನು ೩+೫ ಎಂದು ಮಾತ್ರಾ ವಿಭಾಗವಿದೆ. ಈ ರಗಳೆಗೆ ಹೆಸರೇನೆಂದು ಎಲ್ಲಿಯೂ ಹೇಳಿಲ್ಲ.
ವಚನ : ತಮ್ಮುತಯ್ವರುಂ–ತಾವೈವರೂ; ಇನ್ನವು ಪೊೞಲ್ಗಳ್–ಇಂಥ ನಗರಗಳು; ಈ ಪಟ್ಟಣಕ್ಕೆ ವಸುಮತಿ, ಪದ್ಮನಗರ, ಏಕಚಕ್ರ, ಬಹುಧಾನ್ಯ–ಎಂದು ಒಂದೊಂದು ಯುಗದಲ್ಲಿ ಒಂದೊಂದು ಹೆಸರು; ಬೋದನ ನಗರವೇ (೧–೧೭) ಬಹುಧಾನ್ಯವೆಂದು ಒಂದು ಅಭಿಪ್ರಾಯವಿದೆ; ಚತುಶ್ಶಾಲೆಯೊಳ್–ಅಂಗಳದಲ್ಲಿ, ತೊಟ್ಟಿಯಲ್ಲಿ; ಬೀಡಂಬಿಟ್ಟು– ತಂಗಿ, ನೆಲಸಿ; ಧರಾಮರವೇಷದಿಂ–ಬ್ರಾಹ್ಮಣರ ವೇಷದಿಂದ.
೨೩. ಸೂರ್ಯ ಮುಳುಗಿ ಸಂಜೆಯಾಯಿತು. ತುಂಬಿದ–ತುಂಬಿರುವ, ರಕ್ತತೆಯಿಂ– ಕೆಂಪು ಬಣ್ಣದಿಂದ (ಪ್ರೀತಿಯಿಂದ), ನಿಜ ಬಿಂಬವು–ತನ್ನ ಬಿಂಬವು, ವಾರುಣಿಯಂ–ವರುಣ ದಿಕ್ಕನ್ನು, ಪಶ್ಚಿಮ ದಿಕ್ಕನ್ನು (ಮದ್ಯವನ್ನು), ಒಸೆದು–ಪ್ರೀತಿಸಿ, ಸೇವಿಸೆ–ಸೇವೆಮಾಡಲು (ಕುಡಿಯಲು), ನಾಣ್ಗೆಟ್ಟಂಬೋಲ್–ನಾಚಿಕೆ ತೊರೆದವನಂತೆ, ತೇಜಂ–ಕಾಂತಿ, ಮಸುಳ್ವಿನಂ– ಕಂದುತ್ತಿರಲು, ಅಂಬರಮಂ–ಆಕಾಶವನ್ನು (ಬಟ್ಟೆಗಳನ್ನು), ಅಂಬುಜಮಿತ್ರಂ–ಸೂರ್ಯನು, ಬಿಸುಟಂ–ಬಿಸಾಡಿದನು. ಪಂಪನು ಬಹು ಅಪೂರ್ವವಾಗಿ ಶ್ಲೇಷಾಲಂಕಾರವನ್ನು ಬಳಸುತ್ತಾನೆ; “ಚಂಚಚ್ಚಂದ್ರಕರಸ್ಪರ್ಶ ಹರ್ಷೋನ್ಮೀಲಿತ ತಾರಕಾ । ಅಹೋ ರಾಗವತೀ ಸಂಧ್ಯಾ ಜಹಾತಿ ಸ್ವಯಮಂಬರಂ” ಎಂಬ ವಾಲ್ಮೀಕಿ ರಾಮಾಯಣ ಶ್ಲೋಕವನ್ನು (೩–೩೦–೪೫) ಈ ಪದ್ಯ ದೊಡನೆ ಹೋಲಿಸಿ ನೋಡಬಹುದು.
ವಚನ : ಬೀಡಿನೊಳಿರ್ದ–ತಂಗಿದ ಮನೆಯಲ್ಲಿದ್ದ; ಕರ್ಣೋಪಾಂತದೊಳ್–ಕಿವಿಯ ಸಮೀಪದಲ್ಲಿ.
೨೪. ಸಾರೆಯೊಳ್–ಹತ್ತಿರದಲ್ಲಿ, ಅೞ್ವ–ಅಳುವ, ಮಹಾದ್ವಿಜನಾರಿಯ–ಮಹಾ ಬ್ರಾಹ್ಮಣನ ಹೆಂಡತಿಯ, ಮಮತಾವಿಪೂರಿತೋರ್ಜಿತರವದಿಂ–ಮಮತೆಯಿಂದ ತುಂಬಿದ ಗಟ್ಟಿಯಾದ ಶಬ್ದದಿಂದ (ಕೂಡಿದ), ಕಾರುಣ್ಯಾಕ್ರಂದನಂ–ಕರುಣೆಯಿಂದ ಕೂಡಿದ ಅಳುವಿನ ಸದ್ದು, ಅನಿವಾರಿತಂ–ಸ್ವಲ್ಪವೂ ತಡೆಯಿಲ್ಲದುದಾಗಿ, ಒರ್ಮೊದಲೆ–ಕೂಡಲೇ, ಬಂದು, ಆಗಳ್–ಆಗ, ತೀಡಿತು–ಮುಟ್ಟಿತು, ಸೋಂಕಿತು.
ವಚನ : ಏನಾನುಮೊಂದು–ಏನಾದರೂ ಒಂದು; ಆಗಲೇವೇೞ್ಕುಂ–ಆಗಲೇಬೇಕು; ಈ ಪುಯ್ಯಲಂ–ಈ ಬೊಬ್ಬೆಯನ್ನು, ಕೂಗನ್ನು; ಆರಯ್ದು–ವಿಚಾರಮಾಡಿ.
೨೫. ಬ್ರಾಹ್ಮಣನ ಮನೆಯಲ್ಲಿನ ದೃಶ್ಯ: ಕುಡಲಾದ ಕೂಸು–ಕನ್ಯಾದಾನ ಮಾಡಿಕೊಳ್ಳು ವುದಕ್ಕೆ ತಕ್ಕ ವಯಸ್ಸಾದ ಮಗಳು, ಅೞೆ–ಅಳುತ್ತಿರಲು; ಧರ್ಮಪತ್ನಿ–ಹೆಂಡತಿ, ನೆಲದೊಳ್–ನೆಲದ ಮೇಲೆ, ಪೊರಳುತ್ತಿರೆ–ಹೊರಳಾಡುತ್ತಿರಲು; ಬಾಯೞಿದು–ಅತ್ತು, ಕೊರಲ್ಗೆ ಪಾಯ್ದು–ಕೊರಳನ್ನು ತಬ್ಬಿಕೊಂಡು, ಪರಿದಾಡುವ–ಓಡಾಡುವ, ಬಾಲಕಂ–ಹುಡುಗನು, ಆದಶೋಕದಿಂ–ಉಂಟಾದ ದುಃಖದಿಂದ, ಗೞಗೞ ಕಣ್ಣನೀರ್ ಸುರಿಯೆ–ಗಳಗಳ ಎಂದು ಕಣ್ಣಿನ ನೀರನ್ನು ಸುರಿಯುತ್ತಿರಲು; ಚಿಂತಿಪ–ಚಿಂತಿಸುತ್ತಿರುವ, ಪಾರ್ವನ–ಬ್ರಾಹ್ಮಣನ, ಶೋಕದ–ದುಃಖದ, ಒಂದು ಪೊಂಪುೞಿಯನೆ–ಒಂದು ಆಧಿಕ್ಯವನ್ನೇ, ನೋಡಿ–ನೋಡಿ, ನಾಡೆ–ಹೆಚ್ಚಾಗಿ, ಕರುಣಂ ತನಗಾಗಿರೆ–ದಯೆಯುಂಟಾಗಿರಲು, ಕೊಂತಿ–ಕುಂತಿಯು, ಚಿಂತೆಯಿಂ–ದುಃಖದಿಂದ.
ಈ ಪದ್ಯದಲ್ಲಿರುವ ‘ಕುಡಲಾದ ಕೂಸು’ ಎಂಬುದು ‘ಕೊಡಗೂಸು’ ಎಂಬುದರ ವಿಗ್ರಹವಾಕ್ಯದಂತೆ ಕಾಣುತ್ತದೆ; ಹಾಗಿದ್ದರೆ ‘ಕುಡುಗೂಸು’ ಎಂಬ ರೂಪವಿರಬೇಕು, ವಾಸ್ತವಿಕ ವಾಗಿ ಇಲ್ಲಿನ ಕೊಡ ಎಂಬುದು ಕೋಮಲವಾದ, ಎಳೆಯ ಎಂಬರ್ಥವುಳ್ಳ ಶಬ್ದ; ತಮಿಳಿನ ಕುೞ, ಕೊೞಂದೈ; ತೆಲುಗಿನ ಕೊಡುಕು, ಕೊಡಮು; ಕನ್ನಡದ ಕೊಣಸು–ಇವೆಲ್ಲ ಒಂದೇ ಮೂಲದಿಂದ ಬಂದಿರುವ ಶಬ್ದಗಳು, ಆದ್ದರಿಂದ ಕೊಡಗೂಸು ಎಂದರೆ ಕೋಮಲವಾದ ಕೂಸು ಎಂದರ್ಥವಾಗಬಹುದು.
ವಚನ : ಎರಡೆಮ್ಮೆವೋರಿಯೊಳ್–ಎರಡು ಕೋಣಗಳಲ್ಲಿ; ಪೂಡಿದ–ಹೂಡಿದ; ಪನ್ನಿರ್ಕಂಡುಗ–ಹನ್ನೆರಡು ಖಂಡುಗ; ಕೂೞುಮಂ–ಅನ್ನವನ್ನೂ, ಪರಿಕರ–ಬಾಡಿಸಿಕೊಳ್ಳುವ ಪದಾರ್ಥಗಳು; ಪಲ್ಲಂ ತಿಂಬಂ–ಸಿಟ್ಟಿನಿಂದ ಹಲ್ಲನ್ನು ಕಡಿಯುತ್ತಾನೆ; ನಾಳಿನ ಬಾರಿ–ನಾಳಿನ ಸರದಿ; ಆಕೆಯಿಂಬೞಿಯಂ–ಅವಳ ಅನಂತರ; ಸಂತತಿಚೆ, । ದಮುಂ ಪಿಂಡಚೆ, । ದಮುಂ– ಸಂತತಿಯು ನಿಂತುಹೋಗುವುದೂ, ಆ ಕಾರಣದಿಂದ ಪಿಂಡಪ್ರದಾನ ಮಾಡುವವರು ಯಾರೂ ಇಲ್ಲದೆ ಹೋಗುವುದೂ;
೨೬. ಕುಂತಿಯ ಸಮಾಧಾನ: ನಿಮ್ಮೀನಾಲ್ವರೊಳ್–ನಿಮ್ಮ ಈ ನಾಲ್ವರಲ್ಲಿ, ಒರ್ವರುಂ– ಒಬ್ಬರೂ, ಇಂ ಮಿಡುಕಲ್ವೇಡ–ಇನ್ನು ನಡುಗಬೇಡಿರಿ, ಹೆದರಬೇಡಿರಿ; ಎನಗೆ ಅಯ್ವರ್ ಮಕ್ಕಳ್ ಒಳರ್–ನನಗೆ ಐದು ಜನ ಗಂಡು ಮಕ್ಕಳಿದ್ದಾರೆ, ತಮ್ಮೊಳಗೆ–ತಮ್ಮಲ್ಲಿಯೇ, ಎಸೆವ–ಶೋಭಿಸುವ, ಅಯ್ದರೊಳಂ–ಐದು ಮಂದಿಯಲ್ಲಿ, ಒರ್ವನಂ–ಒಬ್ಬನನ್ನು, ನಾಂ– ನಾನು, ಮಾಣದೆ–ಬಿಡದೆ, ಬಕನ ಬಾರಿಗೆ–ಬಕಾಸುರನ ಸರದಿಗೆ, ಈವೆಂ–ಕೊಡುತ್ತೇನೆ.
ವಚನ : ಉಸಿರದಿರಂ–ಮಾತಾಡದೆ ಇರಿ; ಸವಕಟ್ಟಂ–ಏರ್ಪಾಡನ್ನು, ಸಿದ್ಧತೆಯನ್ನು; ಉಣಿಸಂ–ಊಟವನ್ನು; ದೊರೆಕೊಳಿಸಿ ಬಂದುದು–ದೊರೆಯುವಂತೆ ಮಾಡಿದ್ದು; ಕರಂ ಒಳ್ಳಿತ್ತಾಯ್ತು–ಬಹಳ ಒಳ್ಳೆಯದಾಯಿತು; ಮತ್ತಿನ–ಉಳಿದ; ಸಯ್ಪಿನಿಂ–ಪುಣ್ಯದಿಂದ; ಪಡೆಮಾತನೆ–ಸುದ್ಧಿಯನ್ನೇ.
೨೭. ಸೂರ್ಯೋದಯ: ತಮೋಬಲಂ–ಕತ್ತಲೆಯ ಸೈನ್ಯ, ಓಡೆ–ಪರಾರಿಯಾಗಲು; ನಿಶಾಚರಬಲಂ–ರಾತ್ರಿಂಚರರ ಎಂದರೆ ರಾಕ್ಷಸಾದಿಗಳ ಸೈನ್ಯವು, ಅಗಿದು–ಹೆದರಿ, ಅಳ್ಳಾಡೆ– ನಡುಗಲು, ರಥಾಂಗಯುಗಂಗಳ್–ಚಕ್ರವಾಕ ಪಕ್ಷಿಯ ಜೋಡಿಗಳು, ಕೂಡೆ–ಸೇರಲು, ಬಗೆ ಕೂಡೆ–ಮನೋರಥವುಂಟಾಗಲು, ಬಕಂಗೆ–ಬಕಾಸುರನಿಗೆ, ಮಿೞ್ತು–ಸಾವು, ಮೂಡು ವತೆಱದಿಂ–ಹುಟ್ಟುವ ರೀತಿಯಿಂದ, ನೇಸಱ್–ಸೂರ್ಯ, ಮೂಡಿದುದು–ಉದಯವಾಯಿತು.
ವಚನ : ಪಾರ್ವಂತಿಯುಂ ಪಾರ್ವನುಂ–ಬ್ರಾಹ್ಮಣಿತಿಯೂ ಬ್ರಾಹ್ಮಣನೂ; ಸೇಸೆಯ ನಿಕ್ಕಿ–ಮಂತ್ರಾಕ್ಷತೆಗಳನ್ನು ಹಾಕಿ.
೨೮. ಅಱೆಯೊಳ್–ಬಂಡೆಯ ಮೇಲೆ, ದಾಡೆಗಳಂ–ಕೋರೆಹಲ್ಲುಗಳನ್ನು, ಇಂಬಿಂ– ಸಾವಕಾಶವಾಗಿ, ತೀಡುತ್ತಂ–ಮಸೆಯುತ್ತ, ತೀವ್ರಮಾಗೆ–ಹರಿತವಾಗಲು, ಬಂಡಿಯ ಬರವಂ– ಬಂಡಿಯು ಬರುವುದನ್ನು, ನೋಡುತ್ತಿರ್ದಾ, ಬಕನಂ–ಬಕನನ್ನು, ನಾಡೆಯೆ ಅಂತರದೆ– ಚೆನ್ನಾಗಿ ದೂರದಲ್ಲಿಯೆ, ನಡುವೆ, ಕಂಡು–ನೋಡಿ, ಭೀಮಂ, ಮುಳಿದಂ–ಮುಳಿದನು.
೨೯. ಕಡೆಗಣ್ಣೊಳೆ–ಕಣ್ಣಿನ ಕಡೆಗಳಿಂದಲೇ, ರಕ್ಕಸನಂ ನಡೆನೋಡಿ–ರಾಕ್ಷಸನನ್ನು ಚೆನ್ನಾಗಿ ನೋಡಿ, ಕೊಲಲ್ಕೆ–ಕೊಲ್ಲುವುದಕ್ಕೆ, ಸತ್ವಮಪ್ಪಂತಿರೆ–ಶಕ್ತಿಯುಂಟಾಗುವ ಹಾಗೆ, ಮುಂ–ಮೊದಲು, ಕೂೞಂ–ಅನ್ನವನ್ನು, ಪೊಡೆವೆಂ–ಹೊಡೆಯುತ್ತೇನೆ ಎಂದರೆ ಊಟ ಹೊಡೆಯುತ್ತೇನೆ, ಬೞಿಯಂ–ಆಮೇಲೆ, ರಕ್ಕಸನಂ–ರಾಕ್ಷಸನನ್ನು, ಪೊಡೆವೆಂ–ತದುಕು ತ್ತೇನೆ ಎಂದು, ಸಾಹಸ ಭೀಮಂ–ಪರಾಕ್ರಮಿಯಾದ ಭೀಮನು.
ವಚನ : ತುತ್ತಿನೊಳೆ–ಕವಳಗಳಲ್ಲಿಯೆ, ಸಮೆಯೆ–ಮುಗಿದು ಹೋಗುವ ಹಾಗೆ, ತುತ್ತುವುದುಂ–ನುಂಗುತ್ತಲೂ, ಪಾಂಗಂ–ರೀತಿಯನ್ನು; ಬಕವೇಷದಿಂ–ಬಕಪಕ್ಷಿಯ ವೇಷ ದಿಂದ; ಪೆಱಗಣದೆಸೆಗೆ–ಹಿಂದುಗಡೆಗೆ; ಓಸರಿಸಿ–ಸರಿದು; ಓಸರಿಸು ಅಪಸರಣ+ಇಸು.
೩೦. ಎರಡುಂ ಕೆಲನುಮಂ–ಎರಡು ಮಗ್ಗುಲುಗಳನ್ನೂ, ಎರಡುಂ ಕರಪರಿಘದಿಂ– ಪರಿಘದಂತಿರುವ ಎರಡೂ ಕೈಗಳಿಂದ, ಅಡಸಿ ಗುರ್ದಿ–ಹಿಡಿದು ಗುದ್ದಿ, ಪೆಱಪಿಂಗುವನಂ– ಹಿಂದಕ್ಕೆ ಸರಿಯುವನನ್ನು, ಮುರಿದಡಸಿಪಿಡಿದು–ತಿರುಗಿ ಗಟ್ಟಿಯಾಗಿ ಹಿಡಿದುಕೊಂಡು, ಘಟ್ಟಿಸಿ–ಅಪ್ಪಳಿಸಿ, ಪಿರಿಯಱೆಯೊಳ್–ದೊಡ್ಡ ಬಂಡೆಯ ಮೇಲೆ; ಭೀಮಂ–ಭೀಮನು, ಅಸಗವೊಯ್ಲಂ–ಅಗಸನ ಏಟಿನಂತಿರುವ ಏಟನ್ನು, ಪೊಯ್ದಂ–ಹೊಡೆದನು.
ವಚನ : ಪೊಡೆಸೆಂಡಂ ಪೊಯ್ದಂತೆ–ಪುಟಚೆಂಡನ್ನು ಹೊಡೆದಹಾಗೆ; ಮೇಗೊಗೆದು– ಮೇಲಕ್ಕೆ ಹಾರಿ, ಸೆಣಸೆ–ಹೋರಾಡಲು.
೩೧. ಬಾರಿಯನಿಟ್ಟು–ಸರದಿಯನ್ನು ಹಾಕಿ, ಕೂಡೆ–ಕೂಡಲೇ, ಪೊೞಲಂ ತವೆ ತಿಂದನಂ– ಪಟ್ಟಣವನ್ನೆಲ್ಲಾ ನಾಶಪಡಿಸಿ ತಿಂದವನನ್ನು, ಆರುಂ–ಯಾರೂ, ಅಣಂ–ಸ್ವಲ್ಪವೂ, ಬಾರಿಸಲ್–ತಡೆಯಲು, ಆರ್ತರಿಲ್ಲ–ಶಕ್ತರಾಗಲಿಲ್ಲ, ಇನ್ ಜವನ ಬಾರಿಯೊಳಿಕ್ಕುವೆಂ– ಇನ್ನು (ಇವನನ್ನು) ಯಮನ ಸರದಿಗೆ ಕೊಡುತ್ತೇನೆ, ಎಂದು, ಪರ್ವೆ–ವಿಶಾಲವಾಗಿ, ಭೋರ್ಭೋರನೆ–ಭೋರ್ಭೋರ್ ಎಂದು ಶಬ್ದವಾಗುತ್ತಿರಲು, ಬೇಗ ಬೇಗನೆ, ಬೀಸೆ– ಬೀಸಲು, ತದ್ವದನಗಹ್ವರದಿಂ–ಆ ರಾಕ್ಷಸನ ಬಾಯೆಂಬ ಗವಿಯಿಂದ, ಬಿಸುನೆತ್ತರುಣ್ಮೆ– ಬಿಸಿಯ ರಕ್ತ ಹೊರಬರಲು, ಅಂಕದ–ಪ್ರಸಿದ್ಧನಾದ, ಬಳಾಧಿಕನಂ–ಅತಿಶಯ ಶಕ್ತಿಯುಳ್ಳ ವನನ್ನು, ಬಕನಂ–ಬಕನನ್ನು, ವೃಕೋದರಂ–ಭೀಮನು, ಭೋರ್ಭೋರೆನೆ–ಶೀಘ್ರವಾಗಿಯೇ, ಕೊಂದಂ–ಕೊಂದನು.
ವಚನ : ತಮ್ಮಾಳ್ದನುಮಂ–ತಮ್ಮ ಸ್ವಾಮಿಯನ್ನೂ; ಆಶಿಶಿರಕಿರಣಂ–ಉಷ್ಣಕಿರಣನು, ಸೂರ್ಯನು; ಅಪರಜಲನಿಧಿ ತಟನಿಕಟವರ್ತಿಯಾದಂ–ಪಶ್ಚಿಮ ಸಮುದ್ರ ಪ್ರದೇಶಕ್ಕೆ ಸಮೀಪದಲ್ಲಿರುವವನಾದನು, ಎಂದರೆ ಸೂರ್ಯನು ಮುಳುಗಿದನು; ವಿಸ್ತೀರ್ಣ ಜೀರ್ಣ ಕರ್ಪಟಾವೃತಕಟಿತಟನುಂ–ಅಗಲವಾಗಿ ಹರಿದುಹೋದ ಬಟ್ಟೆಯಿಂದ ಮುಚ್ಚಿದ ಸೊಂಟ ಪ್ರದೇಶವುಳ್ಳವನೂ ಎಂದರೆ ಹರಕಲು ಬಟ್ಟೆ ಉಟ್ಟುಕೊಂಡಿರುವವನೂ; ಕಣ್ಮುಚ್ಚಲ್– ಮಲಗಲು, ಎಡೆವೇಡೆ–ಸ್ಥಳವನ್ನು ಬೇಡಲು; ಪಟ್ಟಿರ್ದನಂ–ಮಲಗಿದವನನ್ನು; ಪಡೆಮಾತಾ ವುದು–ವೃತ್ತಾಂತವೇನು?
೩೨. ಮನದೊಳ್–ಮನದಲ್ಲಿ, ಕೂರದ–ಪ್ರೀತಿಸದ, ಪಾಂಡುರಾಜಸುತರುಂ–ಪಾಂಡು ರಾಜನ ಮಕ್ಕಳೂ, ಲಾಕ್ಷಾಗೃಹೋಗ್ರಾಗ್ನಿಯಾನನದೊಳ್–ಅರಗಿನ ಮನೆಯ ಭಯಂಕರ ವಾದ ಅಗ್ನಿಯ ಮುಖದಲ್ಲಿ, ಮೞ್ಗಿದರ್–ನಾಶವಾದರು; ಎನ್ನಪುಣ್ಯಂ–ನನ್ನ ಪುಣ್ಯ; ಅ [ರಿ] ಯರ್–ಅಸಾಧ್ಯರಾದವರು, ವೇಮಾಱರ್–ಮೋಸಗಾರರು, ಇನ್ನಾರೊ–ಇನ್ನಾರಿ ದ್ದಾರೆ; ಬೇರನೆ–ಬೇರನ್ನೇ, ಕಿೞ್ತಿಕ್ಕಿದೆಂ–ಕಿತ್ತು ಹಾಕಿದೆನು; ಈಗಳ್–ಈಗ, ಧರೆ–ಭೂಮಿ, ರಾಜ್ಯ, ನಿರ್ದಾಯಾದ್ಯಮಾಯ್ತು–ದಾಯಾದಿಗಳಿಲ್ಲದ್ದಾಯಿತು; ಎಂದು–ಎಂದು, ಆ, ಸುಯೋಧನನ್–ದುರ್ಯೋಧನನು, ಆಳುತ್ತಿರೆ–ರಾಜ್ಯಭಾರ ಮಾಡುತ್ತಿರಲು, ಸಂದಹಸ್ತಿನ ಪುರಂ–ಪ್ರಸಿದ್ಧವಾದ ಹಸ್ತಿನಾವತಿ, ಸಂತಂ–ಯಾವಾಗಲೂ, ಬಸಂತಂ–ವಸಂತವು, ಕರಂ– ನಿಶ್ಚಯವಾಗಿಯೂ, ಮಿಗಿಲಾಗಿಯೂ.
ಈ ಪದ್ಯದಲ್ಲಿ ಬರುವ ‘ಸುತರುಂ’ ಎಂಬಲ್ಲಿನ ಸಮುಚ್ಚಯಕ್ಕೆ ಸಾರ್ಥಕತೆ ಇಲ್ಲ; ಸುತ [ರಾ] ಎಂದು ಪಾಠವಿರಬಹುದು; ಅಱಿಯರ್ ಎಂಬ ಪಾಠ ಸರಿಯೆಂದು ತೋರುವು ದಿಲ್ಲವಾದ್ದರಿಂದ ಅದನ್ನು ‘ಅರಿಯರ್’ ಎಂದು ತಿದ್ದಿದೆ. ಅರ್ಥ, ಅರಿದು+ಅರ್=ಅಸಾಧ್ಯರು; ‘ಅರಿಯರ್ ಪಾಂಡವರವರೊಳ್ ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂಬರ ನುಡಿಯಂ’ ಎಂದು ರನ್ನನ ಪ್ರಯೋಗವಿದೆ (ಗದಾ. ೬೮), ಗೆಲಲ್ಕರಿಯನು ಮೊಂದಿಬಾರದನುಮಂಕದಕರ್ಣನೆ (ಪಂಪಭಾ. ೯–೬೧) ಎಂದೂ ಉಂಟು. ವೇಮಾಱರ್– ಈ ಶಬ್ದದ ಸ್ವರೂಪ ವಿಚಾರದಲ್ಲೂ ಅರ್ಥ ವಿಚಾರದಲ್ಲೂ ಸಂದೇಹವಿದೆ; ವಿಮಾಱು (ತ), ಏಮಾಳಿ (ಮ), ಏಮಾರು (ತೆ) ಎಂಬ ಶಬ್ದವು, ಮೋಸಮಾಡು, ಮೋಸಕ್ಕೆ ಒಳಗಾಗು ಎಂಬರ್ಥದಲ್ಲಿ ದೊರೆಯುತ್ತದೆ. ಇಲ್ಲಿ ಇದೇ ಅರ್ಥವನ್ನು ಇಟ್ಟುಕೊಂಡಿದೆ; ಈ ಶಬ್ದ ‘ವೇಮಾಱು’ ಏಕೆ ಆಯಿತೆಂದು ಹೇಳುವುದು ಕಷ್ಟ. “ಸಂತಂ ಬಸಂತಂ ಕರಂ” ಎಂದು ಮುಗಿಯುವ ಕೆಲವು ಪದ್ಯಗಳು ಶಾಸನಗಳಲ್ಲಿ ಅಲ್ಲಲ್ಲಿ ನಗರವರ್ಣನೆಯಲ್ಲೋ, ದೇಶ ವರ್ಣನೆಯಲ್ಲೋ ದೊರೆಯುತ್ತವೆ: ‘ಮಾಧವಪುರಂ ಸಂತಂ ಬಸಂತಂ ಕರಂ’ ಎಂದು ಕಡೂರು ೧೨೯ನೆಯ ಶಾಸನದಲ್ಲಿದೆ. ‘ಬಲ್ಲಕುಂದೆ ನಡುನಾೞ್ ಸಂತಂ ಬಸಂತಂ ಕರಂ’ ಎನ್ನುತ್ತದೆ ಕುಱಗೋಡಿನ ಶಾಸನ (ಶಾಪಮಂ ೧೮೬); ಇನ್ನೊಂದು ಶಾಸನದಲ್ಲಿ (ಅರಸಿಯಕೆರೆ ೧೧೭) “ಕೆಲ್ಲಂಗೆಱೆಯಂದ್ರಮಿಂದ್ರನಮರಾವತಿಯಂತೆ ಬಸಂತಮಾಗಳುಂ” ಎಂದು ಸ್ವಲ್ಪ ವ್ಯತ್ಯಾಸ ಮಾಡಿ ಹೇಳಿದೆ. ಪಂಪನ ಈ ಪದ್ಯ ಇವೆಲ್ಲಕ್ಕೂ ಪ್ರೇರಕವಾಗಿದ್ದಿರ ಬಹುದು.
ವಚನ : ಅತ್ತಪರಮುಂ–ಗುರಾಣಿಯೂ, ಕಾಳಗವಲಗೆಯೂ; ಅಭೇದ್ಯ ಕವಚಮುಂ– ಭೇದಿಸಲಾಗದ ಕವಚವೂ; ಒಳವು–ಉಂಟು; ಇವೆ, ಎಂದು ಆದೇಶಂ–ಎಂದು ಅಪ್ಪಣೆ, ವಿಧಿ, ನಿಯಮ; ಬುದ್ಧಿಯೊಡೆಯರಾರಾನುಂ–ಬುದ್ಧಿಯುಳ್ಳವರು ಯಾರಾದರೂ; ಸಯಂಬರ ಮಂ–ಸ್ವಯಂವರವನ್ನು; ಬೞಿಯನಟ್ಟಿದೊಡೆ–ದೂತನನ್ನು ಕಳಿಸಿದರೆ; ದೇಶಾಧೀಶ್ವ ರರೆಲ್ಲಂ–ರಾಜರುಗಳೆಲ್ಲ; ವಂದಿರ್ದರ್–ಬಂದಿದ್ದರು.
೩೩. ಗುಣಾರ್ಣವ–ಅರ್ಜುನನೇ, ತಲೆಯೊಳ್ ಸೀರೆಯನಿಕ್ಕಿ–ತಲೆಯ ಮೇಲೆ ಬಟ್ಟೆಯನ್ನು ಮುಸುಕಿಟ್ಟು, ಕೆಮ್ಮನೆ–ಸುಮ್ಮನೆ, ಇನ್ನೆನಿತಂ–ಇನ್ನೆಷ್ಟು ಕಾಲ, ಪೂಣ್ದಿರ್ಪಂ– ಪ್ರತಿಜ್ಞೆ ಮಾಡಿ ಇರೋಣ; ಉಗ್ರಾರಿವಂಶಲತಾವಲ್ಲರಿಗಳ್ಗೆ–ಭಯಂಕರ ಶತ್ರುಗಳೆಂಬ ವಂಶವೆಂಬ ಬಳ್ಳಿಯ ಕುಡಿಗಳಿಗೆ, ದಾವಶಿಖಿವೋಲ್–ಕಾಡುಕಿಚ್ಚಿನ ಹಾಗೆ, ಮೆಯ್ದೋಱಿ– ಮೈಯನ್ನು ತೋರಿಸಿ ಎಂದರೆ, ನಾವು ನಮ್ಮನ್ನು ಪ್ರಕಟಿಸಿಕೊಂಡು, ತದ್ದ್ರೌಪದೀ ಲಲನಾ ವ್ಯಾಜದಿಂ–ಆ ದ್ರೌಪದೀ ಎಂಬ ಸ್ತ್ರೀಯ ನೆಪದಿಂದ, ಈಗಳ್–ಈಗ, ಒಂದೆ ಪೊೞಲೊಳ್ ಸಂದಿರ್ದ–ಒಂದೇ ನಗರದಲ್ಲಿ ಸೇರಿರುವ, ಭಾಸ್ವತ್ಸುಹೃದ್ಬಲಕಂ–ಪ್ರಕಾಶಮಾನವಾದ ಸ್ನೇಹಿತ ಸೈನ್ಯಕ್ಕೂ, ಮಾರ್ವಲಕಂ–ಪ್ರತಿ ಸೈನ್ಯಕ್ಕೂ ಎಂದರೆ ಶತ್ರುಸೈನ್ಯಕ್ಕೂ, ಶರಪ್ರಾಗ ಲ್ಭ್ಯಮಂ–ನಮ್ಮ ಬಾಣ ಪ್ರೌಢಿಮೆಯನ್ನು, ತೋಱುವಂ–ಪ್ರದರ್ಶಿಸೋಣ.
ಚೀರ (ಸಂ)>ಸೀರೆ=ವಸ್ತ್ರ; ಪೂಣ್ಧಾತು ತಮಿಳು ಮಲಯಾಳ ಭಾಷೆಗಳಲ್ಲಿ, ಹಾಕಿ ಕೊಳ್ಳು, ಧರಿಸು ಎಂಬರ್ಥವಿದೆ, ಪೂಣ್ದಿರ್ಪಂ–ವೇಷ ಹಾಕಿಕೊಂಡು ಇರೋಣ ಎಂದು ಅರ್ಥ ವಾಗುತ್ತದೆ; ಇದು ಹೆಚ್ಚು ಉಚಿತ ಪ್ರಕೃತ ಸಂದರ್ಭಕ್ಕೆ.
ವಚನ : ಬಗೆದ ಬಗೆಯೊಳ್–ಆಲೋಚಿಸಿದ ರೀತಿಯಲ್ಲಿ; ಉತ್ತರೋತ್ತರಂ–ಏಳಿಗೆ ಯನ್ನು, ತಿರ್ದುವಿನಂ–ಸೂಚಿಸುತ್ತಿರಲು, ಸರಿಯಾಗಿರಲು; ಯಮುನಾನದೀತಟ ನಿಕಟವರ್ತಿ ಯಪ್ಪ–ಯಮುನಾ ನದಿಯ ತೀರದ ಸಮೀಪದಲ್ಲಿರುವ; ಅಡವಿಯೊಳಗನೆ–ಕಾಡಿನಲ್ಲಿಯೆ; ದಿನಕರ ಬಿಂಬಾಂಬುಜಂ–ಸೂರ್ಯಬಿಂಬವೆಂಬ ಕಮಲವು; ಅಂಬರ ಸರೋವರದಿಂ–ಆಕಾಶ ವೆಂಬ ಸರೋವರದಿಂದ; ಪತ್ತವಿಡುವುದುಂ–ಬಿಟ್ಟುಬಿಡುತ್ತಲು, ತೊಲಗಲು; ಕೞ್ತಲೆಯಗುರ್ ವಾಗೆ–ಕತ್ತಲೆ ಭಯಂಕರವಾಗಲು; ತಮೋಪಶಮನ ನಿಮಿತ್ತಂ–ಕತ್ತಲನ್ನು ಕಡಮೆ ಮಾಡುವುದಕ್ಕಾಗಿ; ಅನಿಬರಿಂ ಮುಂದೆ–ಎಲ್ಲರಿಗಿಂತ ಮುಂಚೆ; ಪಾದಾಭಿಘಾತದೊಳ್– ಕಾಲಿನ ತುಳಿತದಿಂದ; ಉಚ್ಚಳಿಸುವ–ಮೇಲೆ ನೆಗೆಯುವ; ಸಪ್ಪುಳುಮಂ–ಸದ್ದನ್ನು, ಪತಂಗ ದಂತೆ–ಚಿಟ್ಟೆ ಹುಳುವಿನಂತೆ,
೩೪. ಬನಂ–ಈ ಕಾಡು, ಎನ್ನಾಳ್ವ ಬನಂ–ನಾನು ಆಳುವ ಕಾಡು; ಅಸ್ಮದ್ಬಲಂ–ನನ್ನ ಸೈನ್ಯ, ಶಕ್ತಿ, ನಿಶಾಬಲಂ–ರಾತ್ರಿಯ ಸೈನ್ಯ, ಶಕ್ತಿ; ಧೂರ್ತನಯ್–ನೀನು ದುಷ್ಟನಾಗಿರುವೆ; ನಿನಗೆ, ಈ ಪೊೞ್ತಱೊಳ್–ಈ ಹೊತ್ತಿನಲ್ಲಿ, ಇತ್ತ ಬರ್ಪ–ಇಲ್ಲಿಗೆ ಬರುವ, ಅದಟಂ– ಶೌರ್ಯವನ್ನು, ಆರಿತ್ತರ್–ಯಾರು ಕೊಟ್ಟರು; ಎಂದು ಆಂತೊಡೆ–ಎಂದು ಎದುರಿಸಿದರೆ, ಆತನನ್–ಅವನನ್ನು, ಆ ಕೊಳ್ಳಿಯೊಳಿಟ್ಟೊಡೆ–ಆ ಕೊಳ್ಳಿಯಿಂದಲೆ ಹೊಡೆದರೆ, ಅಂತದು– ಹಾಗೆ ಅದು, ಲಯಾಂತೋಗ್ರಾಗ್ನಿಯಂತೆ–ಪ್ರಲಯಕಾಲದ ಭಯಂಕರವಾದ ಉರಿಯಂತೆ, ಅೞ್ವೆ–ಸುಡಲು, ಎನಸುಂ ಮಾಣದೆ–ಎಷ್ಟೂ ತಡಮಾಡದೆ, ಆರೂಢ ಸರ್ವಜ್ಞನಾ– ಅರ್ಜುನನ, ಪದಯುಗಕ್ಕೆ–ಎರಡು ಪಾದಗಳಿಗೆ, ಬಾಗಿದಂ–ನಮಸ್ಕರಿಸಿದನು.
ವಚನ : ತಾಗಿಬಾಗಿದಂತಾಗಿ–ತಗುಲಿಬಗ್ಗಿದಂತೆ, ಅಱುವರುಮಂ–ಆರು ಜನರನ್ನೂ, ಬಿರ್ದನಿಕ್ಕಿ–ಔತಣಮಾಡಿ, ಬಿರ್ದು=(ತ) ವಿರುಂದು, (ತೆ) ವಿಂದು, (ತು) ಪಿನ್ನೆ, (ಮ) ವಿರುನ್ನು–ಔತಣ, ಅತಿಥಿ ಇತ್ಯಾದಿ ಅರ್ಥಗಳು.
೩೫. ಇದು ನಿನ್ನ ಕೊಟ್ಟತಲೆ–ಇದು ನೀನು ಕೊಟ್ಟತಲೆ, ಎಂದರೆ ನನ್ನ ಜೀವವನ್ನು ನೀನು ಉಳಿಸಿದ್ದೀಯೆ; ನಿನಗಿದನಿತ್ತಪೆನೆಂದು–ಇದನ್ನು ನಿನಗೆ ಕೊಡುತ್ತೇನೆಂದು, ನುಡಿಯ ಲಾಗದು–ಹೇಳುವುದಾಗದು, ಮಾರ್ಕೊಳ್ಳದಿರ್–ಎದುರು ಮಾತಾಡಬೇಡ, ಪ್ರತಿಮಾತು ಬೇಡ, ಎಂದು, ಗಿಳಿಯ ಬಣ್ಣದ–ಗಿಣಿಯಂತೆ ಪಚ್ಚೆ ಬಣ್ಣದ, ಕುದುರೆಯನಯ್ನೂಱಂ– ಐನೂರು ಕುದುರೆಗಳನ್ನು, ಅಂಗದಪರ್ಣಂ, ಇತ್ತಂ–ಕೊಟ್ಟನು.
ವಚನ : ಅನ್ನೆಗಮೆಮಗಾಗಿರ್ಕೆ–ನಾವು ಬರುವವರೆಗೂ ನಮಗಾಗಿ ಇವು ನಿನ್ನಲ್ಲಿರಲಿ; ಇರವೇೞ್ದು–ಇರಲು ಹೇಳಿ; ಮಾರ್ತಾಂಡೋದಯಮೆ–ಸೂರ್ಯನ ಉದಯವೇ; ಪಯಣಂ ಬೋಗಿ–ಪ್ರಯಾಣ ಮಾಡಿ.
೩೬. ಪುಣ್ಯನದೀನದನಗರಾ [ರ] ಣ್ಯ ವಿಭೂಷಣೆಯಂ–ಪುಣ್ಯಕರವಾದ ನದಿ, ನದ, ನಗರ, ಅರಣ್ಯಗಳನ್ನು ಆಭರಣವಾಗಿ ಉಳ್ಳ, ಇಳಾಪುಣ್ಯ ಸ್ತ್ರೀಯಂ–ಭೂಮಿಯೆಂಬ ಪುಣ್ಯ ವನಿತೆಯನ್ನು, ಒಲ್ದು ನೋಡುತ್ತು–ಪ್ರೀತಿಪಟ್ಟು ನೋಡುತ್ತ, ಸಂಚಿತಪುಣ್ಯರ್–ಒಟ್ಟಾದ ಪುಣ್ಯವುಳ್ಳ ಪಾಂಡವರು, ಪಾಂಚಾಲದೇಶಮಂ, ಪುಗುತಂದರ್–ಪ್ರವೇಶಿಸಿದರು.
ವಚನ : ತದ್ವಿಷಯ ವಿಳಾಸಿನಿಗೆ–ಆದೇಶವೆಂಬ ಸ್ತ್ರೀಗೆ; ಕನಕಚ, ತ್ರದಂತೆ–ಚಿನ್ನದ ಕೊಡೆಯ ಹಾಗೆ;
೩೭. ಅಲ್ಲಿಯ ನಂದನಗಳ ಸೊಗಸು: ಪಾಡುವ–ಹಾಡುವ, ಜೇಂಕರಿಸುವ, ತುಂಬಿ; ಕೋಡುವ ಪುೞಿಲ್–ತಂಪಾಗಿರುವ ತೋಪುಗಳು; ನಡಪಾಡುವ–ನಡೆದಾಡುವ, ರಾಜಹಂಸೆ– ಶ್ರೇಷ್ಠವಾದ ಹಂಸಪಕ್ಷಿಗಳು; ಬಂದಾಡುವ–ಬಂದು ಮಾತಾಡುವ, ತೊಂಡು ವೆಣ್ಬುರುಳಿ– ತುಂಟು ಹೆಣ್ಣುಗಿಳಿಗಳು; ತೀಡುವ–ಬೀಸುವ, ತೆಂಬೆಲರ್–ತೆಂಕಣಗಾಳಿ; ನಲ್ಲರೊಳ್– ಒಲಿದವರಲ್ಲಿ, ಕೂಡುವ–ಬೆರೆಯುವ, ನಲ್ಲರ್–ಪ್ರಿಯರು, ಇವೆಲ್ಲ, ಆರೆರ್ದೆಗಂ–ಯಾರ ಎದೆಗೂ, ಆರಮನಕ್ಕಂ–ಯಾರ ಮನಸ್ಸಿಗೂ, ಅನಂಗರಾಗಮಂ–ಕಾಮಪ್ರೇಮವನ್ನು, ಮಾಡೆ–ಮಾಡಲು, ಅಲ್ಲಿಯ ನಂದನಾಳಿಗಳ್–ಅಲ್ಲಿನ ತೋಟಗಳ ಸಾಲು, ಅರಿಕೇಸರಿಗೆ ಮನಕ್ಕೆ ವಂದುವು–ಅರಿಕೇಸರಿಯ ಮನಸ್ಸಿಗೆ ಸೊಗಸಾದುವು. ನಡಪು ನಡೆ+ಪು; “ಕೋಡು– ಶೈತ್ಯೇ” ; ತೊಂಡು+ಪೆಣ್+ಪುರುಳಿ=ತೊಂಡುವೆಣ್ಬುರುಳಿ.
೩೮. ಮದಗಜ ಬೃಂಹಿತಧ್ವನಿ–ಮದ್ದಾನೆಗಳ ಘೀಳಿಡುವ ಶಬ್ದ; ತುರಂಗ ಮಹೇಷಿತ ಘೋಷಂ–ಕುದುರೆಗಳ ಕೆನೆದಾಟದ ಶಬ್ದ; ಆದಂ–ವಿಶೇಷವಾಗಿ, ಒರ್ಮೊದಲೆ–ಒಟ್ಟಿಗೇ, ಪಯೋಧಿ ಮಂಥನ ಮಹಾರವಮಂ–ಸಮುದ್ರಮಥನದ ಮಹಾ ಶಬ್ದವನ್ನು, ಗೆಲೆ– ಮೀರಿಸಲು; ತಳ್ತ–ಸೇರಿರುವ, ಬಣ್ಣವಣ್ಣದ–ಬಣ್ಣ ಬಣ್ಣದ, ಗುಡಿ–ಬಾವುಟ, ತೊಂಬೆ– ಕುಚ್ಚು, ಗೊಂಚಲು–ಹೂಗೊಂಚಲು, ಎಲೆಯಿಕ್ಕಿದ–ಚಿಗುರಿದ, ಕಾವಣಂ–ಚಪ್ಪರ, ಇವು, ಎಲ್ಲಿಯುಂ, ಪೊದಳ್ದು–ವ್ಯಾಪಿಸಿ, ಒದವಿರೆ–ಉಂಟಾಗಿರಲು, ಅಖಿಳಾವನಿಪಾಳರ–ಸಮಸ್ತ ರಾಜರುಗಳ, ಬಿಟ್ಟ ಬೀಡುಗಳ್–ತಂಗಿದ ನೆಲೆಗಳು, ಕಣ್ಗೆಕಂಡವು–ಕಣ್ಣಿಗೆ ಕಂಡವು.
ಕಾವಣಂ (ಸಂ) ಕಾಯಮಾನ; ಪೊದಳ್=(ತ) ಪೊದುಳು, (ತು) ಪೊದುಲುನಿ, (ತೆ) ಪೊದಲು.
೩೯. ಈ ತ್ರಿಜಗಂಗಳೊಳ್–ಈ ಮೂರು ಲೋಕಗಳಲ್ಲಿ, ನೆಗೞ್ದ ಪೆಂಡಿರುಮಂ–ಪ್ರಸಿದ್ಧ ರಾದ ಸ್ತ್ರೀಯರನ್ನೂ, ಗೆಲೆವಂದು–(ಸೌಂದರ್ಯದಲ್ಲಿ) ಗೆದ್ದಿರುವ, ಪದ್ಮಿನೀಪತ್ರ ವಿಚಿತ್ರ ನೇತ್ರೆಗೆ–ಕಮಲದ ಎಸಳಿನಂತೆ ಸುಂದರವಾದ ಕಣ್ಣುಳ್ಳ ದ್ರೌಪದಿಗೆ, ಸಯಂಬರದೊಳ್– ಸ್ವಯಂವರದಲ್ಲಿ, ವರನಪ್ಪೆವಾದೊಡೆ–ವರನಾಗುವ ಹಾಗಾದರೆ, ಈ ಧಾತ್ರಿಯಂ–ಈ ಭೂಮಿಯನ್ನು, ಆಳ್ವೆಂ–ಆಳುವೆವು, ಆಮೆ ವಲಂ–ನಾವೇ ನಿಶ್ಚಯವಾಗಿಯೂ, ಎಂದು–ಎಂದು ಕೊಂಡು, ತೆರಳ್ದ–ಒಟ್ಟಾಗಿ ಸೇರಿದ, ಸಮಸ್ತರಾಜಕಚ, ತ್ರದಿಂ–ಎಲ್ಲ ರಾಜರ ಬೆಳ್ಗೊಡೆ ಗಳಿಂದ, ಅಂದು–ಆ ದಿವಸ, ಆಪೊೞಲ್–ಆ ನಗರ, ಛತ್ರವತಿಯೆಂಬ ಅಭಿಧಾನಮಂ– ಛತ್ರವತಿಯೆಂಬ ಹೆಸರನ್ನು, ಆಳ್ದುದು–ಧರಿಸಿತು.
ತೆರಳ್=(ತ) ತಿರಳ್, (ತೆ) ತೆರಲು–ಉಂಡೆಯಾಗು, ಗುಂಪಾಗು.
ವಚನ : ಎಡೆವಡೆಯದ–ಸ್ಥಳವನ್ನು ಪಡೆಯದೆ; ಭಾರ್ಗವ ಪರ್ಣಶಾಲೆಯೊಳ್– ಕುಂಬಾರನ ಗುಡಿಸಿಲಿನಲ್ಲಿ; ಎಡೆಮಾಡಿಕೊಂಡು–ಜಾಗವನ್ನು ಮಾಡಿಕೊಂಡು; ಬ್ರಹ್ಮಸಭೆ ಯೊಳ್–ಬ್ರಾಹ್ಮಣರ ಸಭೆಯಲ್ಲಿ.
೪೦. ನೆರೆದ ಸಮಸ್ತ ರಾಜಕಮಂ–ಸೇರಿದ ಎಲ್ಲಾ ರಾಜರನ್ನೂ, ಆದರದಿಂದೆ–ಆದರ ದಿಂದ, (ದ್ರುಪದನು) ಇದಿರ್ಗೊಂಡು–ಎದುರುಗೊಂಡು, ಸಯಂಬರ ಸಾಲೆಯಂ– ಸ್ವಯಂವರದ ಶಾಲೆಯನ್ನು, ಅನೇಕ ರತ್ನ ರಚಿತಮಾಗೆ ಮಾಡಿಸಿ–ಅನೇಕ ರತ್ನಗಳಿಂದ ರಚಿತ ವಾಗಿರುವಂತೆ ಮಾಡಿಸಿ, ನರೇಶ್ವರರ್ಗೆ–ರಾಜರಿಗೆ, ಇರಲೆಂದು–ವಾಸಮಾಡುವುದಕ್ಕಾಗಿ, ಓಳಿಯಿಂ–ಸಾಲಾಗಿ, ಚೌಪಳಿಗೆಗಳ್ ಪಲವಂ ಸಮೆದು–ಹಲವು ತೊಟ್ಟಿ ಮನೆಗಳನ್ನು ಕಟ್ಟಿಸಿ, ಅಲ್ಲಿ, ರತ್ನದಿಂ ಬೆರಸಿದ–ರತ್ನದಿಂದ ಕೂಡಿದ, ಬಣ್ಣದೊಳ್ ಮೆಱೆಯೆ–ಬಣ್ಣದಲ್ಲಿ ಎಂದರೆ ಕೆಂಪು ಬಣ್ಣದಲ್ಲಿ ಮೆರೆಯುವಂತೆ, ರಂಗಭೂಮಿಯಂ–ರಂಗಸ್ಥಳವನ್ನು, ಕಟ್ಟಿಸಿ, [ಘ] ಟ್ಟಿಸಿ– ಘಟ್ಟನೆಮಾಡಿ, ದಮ್ಮಸು ಮಾಡಿ.
ವಚನ : ಆ ನೆಲೆಯ ಚೌಪಳಿಗೆಗಳೊಳ್–ಆ ಸ್ಥಿರವಾದ ತೊಟ್ಟಿಗಳಲ್ಲಿ; ಪ್ರಾಸಾದದ– ಉಪ್ಪರಿಗೆಗಳ; ಪೞವಿಗೆಗಳಂ–ಪತಾಕೆಗಳನ್ನು; ತುಱುಗಲುಂ ಬಂಬಲುಮಾಗಿ–ಗುಂಪು ಗುಂಪಾಗಿ; ದುಗುಲದ ಗುಡಿಗಳಂ–ರೇಷ್ಮೆಯ ಧ್ವಜಗಳನ್ನು, ಸುಯ್ಯಾಣದ–ಕಸೂತಿ ಕೆಲಸದ, ಚಿನ್ನದ ಪೞಿಗಳಂ–ಜರತಾರಿ ವಸ್ತ್ರಗಳನ್ನು; ಸಕಲವಟ್ಟೆಗಳಂ–ತುಂಡು ಬಟ್ಟೆಯ ಪಟ್ಟಿಗಳನ್ನು, ಮಂಡವಿಗೆಗಳಂ–ಮಂಟಪಗಳನ್ನು; ಎಡೆಯಱಿದು–ತಕ್ಕ ಸ್ಥಲಗಳನ್ನು ತಿಳಿದು; ಬುಂಭುಕಂಗಳುಮಂ–ಕುಚ್ಚುಗಳನ್ನು(?) ಎೞಲೆ ಕಟ್ಟಿಸಿ–ನೇಲುವ ಹಾಗೆ ಕಟ್ಟಿಸಿ; ಪೊಂಗಱಿಗೆ? ನೀಳ್ಪಂ–ಉದ್ದವನ್ನು; ಬೆಳ್ಪು–ಬಿಳಿಯ ಬಣ್ಣ; ಉಪಾಶ್ರಯಂ ಬಡೆದು–ಆಧಾರವನ್ನು ಹೊಂದಿ. ಈ ಗದ್ಯದಲ್ಲಿ ವಿಚಾರಯೋಗ್ಯವಾದ ಕೆಲವು ಅಂಶಗಳಿವೆ (೧) ಸುಯ್ಯಾಣ ಸೂಯಿ ಯಾಣ ಸೂಚೀಯಾನ (ಸಂ). ಚತುಷ್ಷಷ್ಟಿಕಲೆಗಳಲ್ಲಿ ‘ಸೂಚೀವಾ (ಯಾ)ನ ಕರ್ಮಾಣಿ’ ಒಂದೆಂದು ವಾತ್ಸ್ಯಾಯನನ ಕಾಮಸೂತ್ರಗಳಲ್ಲಿ ಹೇಳಿದೆ (೧–೩೧೬). ಸೂಚ್ಯಾಯತ್ಸಂಧಾನ ಕರಣಂ ತತ್ಸೂಚೀವಾನಂ–ಸೂಜಿಯಿಂದ ಮಾಡಲ್ಪಡುವ ಹೊಲಿಗೆ ಮುಂತಾದ ಕಾರ್ಯಗಳು. ಇದರಲ್ಲಿ ಮೂರು ವಿಧ (೧) ಸೀವನ–ಇದು ಕಂಚುಕಾದಿ (ರವಕೆ) ವಸ್ತ್ರಗಳಲ್ಲಿ ಮಾಡುವುದು (೨) ಊತನ–ತ್ರುಟಿತ ವಸ್ತ್ರಗಳಿಗೆ (ಹರಿದ ಬಟ್ಟೆಗಳಿಗೆ) ಮಾಡುವುದು (೨) ವಿರಚನ– ಜಮಖಾನೆ ಮುಂತಾದ ಹಾಸುವ ಬಟ್ಟೆಗಳಿಗೆ ಮಾಡುವುದು (ಕುಥಾಸ್ತರಣಾದೀನಾಂ).(೨) ಸಕಳಪಟ್ಟೆ–ಈ ಶಬ್ದ ಇನ್ನೂ ಕೆಲವು ಕಡೆ ಬರುತ್ತದೆ. ದುಕೂಲದ ಸಕಲವಟ್ಟೆಯೊಳ್ (ಪಂಪಭಾ. ೪–೪೧. ವ); ನಾರಂಗ ಸಕಳವಟ್ಟೆಯ ಪೞಯಿಗೆಗಳ್ (ಪಂಪಭಾ. ೧೧–೧೪೧); ದೇವಾಂಗದ ಸಕಳವಟ್ಟೆಗಳುಮಂ ಮೆಟ್ಟುವೆಡೆಗಳೊಳೆಲ್ಲಂ ಪಾಸಿ (ಆದಿಪು. ೪–೩೪); ಬೊಂಗದ ನಾರಂಗದ ದೇವಾಂಗದ ಪಲತೆಱದ ಸಕಲವಟ್ಟೆಗಳಂ ಗೇಹಾಂಗಣದೊಳ್ ಮೆಟ್ಟುವ ತಾಣಂಗಳೊಳೋರಂತೆ ಪಾಸಿ (ಸುಕುಮಾ. ೧೦–೯೦). ಎಲ್ಲಿಯೂ ಇದರ ಅರ್ಥ ಸ್ಪಷ್ಟವಾಗುವುದಿಲ್ಲ; ಕುಂಭಗಳಿಗೆ ಸುತ್ತಲೂ ಕಟ್ಟುವುದಕ್ಕೂ ನೆಲಕ್ಕೆ ಹಾಸುವುದಕ್ಕೂ ಬಾವುಟ ಗಳಿಗೂ ಸಕಲ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು ಎಂಬಷ್ಟು ಮಾತ್ರ ಈ ಪ್ರಯೋಗ ಗಳಿಂದ ತಿಳಿದುಬರುತ್ತದೆ. ಬಗೆಬಗೆಯ ಬಣ್ಣಗಳ ಬಟ್ಟೆ ಇರಬಹುದು. ಶಕಲ ಸಕಲ ಎನ್ನುವುದಕ್ಕೆ ಕಪ್ಪು ಬಣ್ಣ ಎಂಬರ್ಥವಿದೆ; ನಾರಂಗ ಸಕಳವಟ್ಟೆಯೆಂದರೆ ಕಿತ್ತಳೆಯ ಬಣ್ಣದ ಸಕಲವಟ್ಟೆ ಎಂದಾಗುತ್ತದೆ. ಇದರ ನಿಜವಾದ ಅರ್ಥ ಸಂಶೋಧನೆಗೆ ಯೋಗ್ಯವಸ್ತು. (೩) ಬುಂಭುಕ–ಕುಚ್ಚು, ಗೊಂಚಲು ಎಂದು ಅರ್ಥೈಸಿದೆ. ಆದರೆ ಇದಕ್ಕೆ ಆಧಾರ ಸೂಚಿತವಾಗಿಲ್ಲ, ಮಾಂಗಾಯ ಗೊಂಚಲ್ಗಳುಮಂ ಎಂಬ ಶಬ್ದಗಳ ಸಾಹಚರ್ಯವಿರುವುದರಿಂದ ಮುತ್ತಿನ ಬುಂಭುಕಂಗಳಂ ಎಂದಿರುವುದಕ್ಕೆ ಮುತ್ತಿನ ಕುಚ್ಚುಗಳನ್ನು ಎಂದು ಅರ್ಥ ಮಾಡಲು ಅವಕಾಶ ವಿದೆ. ಬುಂಬುಯ (=ಬುಂಭುಕ) ಎಂಬೊಂದು ಶಬ್ದ ವೃಂದ, ಸಮೂಹ ಎಂಬರ್ಥದಲ್ಲಿ ಪ್ರಾಕೃತದಲ್ಲಿ ಪ್ರಯೋಗವಿದೆ. ಮುತ್ತಿನ ಬುಂಭುಕ–ಎಂದರೆ ಮುತ್ತಿನ ವೃಂದಗಳು, ಸಮೂಹ ಎಂದು ಅರ್ಥಮಾಡಬಹುದು. ಭುಂಭುಕ ಎಂಬೊಂದು ಶಬ್ದ ಹಲವು ಸಲ ಕನ್ನಡ ಕಾವ್ಯ ಗಳಲ್ಲೂ ಶಾಸನಗಳಲ್ಲೂ ಪ್ರಯೋಗವಾಗಿರುವುದು ಕಾಣುತ್ತದೆ. ಪಿರಿದುಂ ಭುಂಭುಕಂ ಸಾಹಸಾಂಕಂ (ಗದಾ. ೧೦–೧೧); ತೊಲಗದ ಗಂಡನಾಂತಿಱಿಯೆ ಭುಂಭುಕ ಮದ್ಭುತ ಮಾದು ದೆತ್ತಲುಂ (ಶಾಪಮಂ ೪೯) ವಿಷಗೀಷು ವೃತ್ತಿಯಂ ನಿಜವಿಜಯಮುಮೀಲೋಕದೊಳಗೆ ಭುಂಭಕಮೆನಿಕುಂ (ಶಾಪಮಂ ೧೩೩); ಸಕಳೋರ್ವೀಸ್ತುತಮಪ್ಪ ಧರ್ಮಮನಿದಂ ಕಾದಂ ಚಿರೈಶ್ವರ್ಯ ಭುಂಭುಕನಕ್ಕುಂ (ಶಾಪಮಂ ೨೨೯); ಮಚ್ಚರಿಪ ವೈರಿಜನ ಭುಂಭುಕಂ (ಚಿತ್ರದುರ್ಗ ೮೨); ಆಶ್ಚರ್ಯಕರವಾದ ಅದ್ಭುತವಾದ ಯಾವುದೋ ಒಂದು ವಸ್ತುವಿರ ಬೇಕೆಂದು ಈ ಭುಂಭುಕಕ್ಕೆ ಅರ್ಥವನ್ನು ಊಹಿಸಬಹುದು. ಪ್ರಕೃತ ಬುಂಭುಕ ಶಬ್ದಕ್ಕೂ ಭುಂಭುಕಕ್ಕೂ ಏನು ಸಂಬಂಧವೋ ತಿಳಿಯದು. ಇದಕ್ಕೆ ಸಂಶೋಧನೆ ಬೇಕು.
೪೧. ತುಱುಗಿದ ಪೂಗೊಂಚಲ–ದಟ್ಟವಾದ ಹೂವಿನ ಗೊಂಚಲುಗಳ, ಕಾಯ್ತು–ಕಾಯಿ ಬಿಟ್ಟು, ಎಱಗಿದ–ಬಗ್ಗಿದ, ಮಾವುಗಳ–ಮಾವಿನ ಮರಗಳ, ಬೆಳೆದ ಕೌಂಗಿನ–ಬೆಳೆದ ಅಡಕೆಯ ಮರದ, ಗೊನೆ–ಕಾಯಿ ಗೊಂಚಲು, ಮಾಡದೊಳ್–ಉಪ್ಪರಿಗೆಯಲ್ಲಿ, ತಳ್ತೆಱಗಿರೆ–ಸೇರಿ ಬಾಗಿರಲು, ಅಲ್ಲಿಯೆ ತಿಱಿದುಕೊಳಲ್ಕೆ–ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳುವುದಕ್ಕೆ, ಇಂಬಿನ ಎಸಕಂ–ಅನುಕೂಲವಾಗಿರುವ ಕೆಲಸ, ಎಂಬಂತೆ ಉಪವನಂ–ಉದ್ಯಾನವು, ಎಸೆ ದುದು–ಪ್ರಕಾಶಿಸಿತು. ಈ ಪದ್ಯದ ಅನ್ವಯದಲ್ಲಿ ಅರ್ಥದಲ್ಲಿ ಸ್ವಲ್ಪ ಕ್ಲೇಶವಿದೆ; ಎಸಗಿ ದುದು ಪವನಂ ಎಂದೊ ಎಸಗಿದುದುಪವನಂ ಎಂದೋ? ಇಂಬಿನ, ಎಸಕಂ–ಬೀಸುವಿಕೆ ಯನ್ನುಳ್ಳ, ಪವನಂ–ಗಾಳಿ, ಎಸೆದುದು ಎಂದೂ ಆಗಬಹುದು.
೪೨. ಪಾಂಚಾಳಮಹೀಪಾಳಂ–ಪಾಂಚಾಲ ದೇಶದ ರಾಜ ದ್ರುಪದನು, ಅಖಿಳ ಭೂಭೃನ್ನಿ ಕರಕ್ಕೆ–ಎಲ್ಲ ರಾಜರ ಸಮೂಹಕ್ಕೆ, ನಾಳೆ ಸಯಂಬರಂ ಎನೆ–ನಾಳೆ ಸ್ವಯಂವರವೆಂದು, ಓಳಿಯೆ–ಸಾಲಾಗಿ, ಕ್ರಮವಾಗಿ, ಸಾಱಿದೊಡೆ–ಸಾರಿಸಿದರೆ, ಡಂಗೂರ ಹೊಡೆಯಿಸಿ ಹೇಳಿಸಿದರೆ, ಘೋಷಿಸಿದರೆ; ಅವನೀಪಾಲರ್–ರಾಜರು, ಕಯ್ಗೆಯ್ಯಲೆಂದು–ಕೈಮಾಡಬೇಕೆಂದು, ತಮ್ಮ ಕೈಶಕ್ತಿಯನ್ನು ತೋರಿಸಬೇಕೆಂದು, ಪಱಿವಱಿಯಾದರ್–ಸಡಗರದಿಂದ ಕೂಡಿದರು (?) ಇಲ್ಲಿ ಪಱಿಮಱಿ–ಎಂಬುದರ ಅರ್ಥದಲ್ಲಿ ಕ್ಲೇಶವಿದೆ; ಇದಕ್ಕೆ ‘ಪೆಗಲಂ ಪತ್ತುವಾಟಂ’ (ಕಶಸಾ. ೫೬೫, ಕವಿಕಂ. ೨೨೭) ‘ಮಿಸುಗುವ ಹಾಱುಗುಪ್ಪೆಯಂ ಪಱಿಮಱಿಯೆನಲ್ಕಕ್ಕುಂ’ (ಕ.ಕೈ. ೭೧); ಪಱಿಮಱಿಯೆನಲು ಹಾರುಗುಪ್ಪೆ (ಶಬ್ದಮಂ. ೫೭) ಎಂಬರ್ಥಗಳಿರುವಂತೆ ತಿಳಿದುಬರುತ್ತದೆ; ಇದು ಒಂದು ಆಟ. ಈ ಅರ್ಥ ಪ್ರಕೃತಕ್ಕೆ ಸುಲಭವಾಗಿ ಹೊಂದಿ ಕೊಳ್ಳದು. ‘ಧುರದೊಳ್ ಪಱಿಮಱಿ ಯಾಡುವ ತೆಱದಿಂದುಱದಿಱಿದರೆಂಬ ನಿಯಮಂ ದೂಷ್ಯಂ’ ಎಂಬ ಪ್ರಯೋಗದಲ್ಲೂ (ಶಮದ. ೨೯–೪) ಪಱಿಮಱಿಯಾಡು ಎಂಬುದಕ್ಕೆ ಪಱಿಮಱಿಯಂ+ಆಡು ಎಂದು ಆಟವೆಂದೇ ಅರ್ಥವಾಗುತ್ತದೆ. ಈ ಆಟಕ್ಕಾಗಿ ಮಕ್ಕಳು ಪಡುವ ಸಡಗರ ಎಂದು ಇಲ್ಲಿ ಲಕ್ಷ್ಯಾರ್ಥವನ್ನು ಸೂಚಿಸಿದೆಯೆಂದು ಭಾವಿಸಬೇಕು.
೪೩. ಪದ್ಯದ ಅರ್ಥ ಸ್ಪಷ್ಟ. ತಂತಮ್ಮ–ತಮ್ಮ ತಮ್ಮ; ವಿಭೂತಿ–ಐಶ್ವರ್ಯ; ಓಳಿಯಿಂ– ಸಾಲಾಗಿ,
೪೪. ಈ ಪದ್ಯದ ಅರ್ಥ ಭಾವಗಳು ಅಸ್ಪಷ್ಟವಾಗಿವೆ, ಕೆಲವು ಪಾಠದೋಷಗಳಿಂದ. ಸಾಸಿರ ಪೊಂಗೆ–ಸಾವಿರ ಹೊನ್ನುಗಳಿಗೆ, ಎ [ಯ್ದ] ದು–ಬರುವುದಿಲ್ಲ ಚಿಃ–ಛೀ, ಕಾಸಟಮೆಂದು– ಹತ್ತಿಯ ಬಟ್ಟೆಯೆಂದು, ಇದರ್ಕಂ–ಇದಕ್ಕೂ, ಲಕ್ಕಗೆಯ್ವುದು–ಲಕ್ಷ ಹೊನ್ನೆಂದು ಮಾಡು ವುದು. ಬೆಲೆಯಾಗಿ, ಸಾವಿರ ಹೊನ್ನು ಕೊಟ್ಟರೂ ಈ ಹತ್ತಿಯ ಬಟ್ಟೆ ಬರುವುದಿಲ್ಲ ಎಂದರೆ, ಅದಕ್ಕೆ ಲಕ್ಷ ಹೊನ್ನಾಗಲಿ, ಕೊಡುತ್ತೇನೆ ಎಂಬ ಭಾವಿರಬಹುದು. ಮಾಸರಂ–ಸುಂದರವಾಗಿ, ಉಡಲೆಂದು–ಉಟ್ಟುಕೊಳ್ಳಲಿ ಎಂದು, ಅಧಿಕ ವಿಳಾಸದಿಂ–ಬಹು ವಿಲಾಸದಿಂದ, ಉಡಲಿಕ್ಕಿ– ಉಡಲು ಕೊಟ್ಟು, ನೆಱೆಯೆ–ಪೂರ್ಣವಾಗಿ, ಬಿಯಮಂ–ವ್ಯಯವನ್ನು, ವೆಚ್ಚವನ್ನು, ಮೆಱೆದಂ–ಮೆರೆದನು, ಪ್ರಕಟಿಸಿದನು.
ಇಲ್ಲಿ ಚಿಂತನೀಯವಾದ ಎರಡು ಶಬ್ದಗಳಿವೆ: (೧) ಕಾಸಟ; ಇದರ ಅರ್ಥವನ್ನು ಸ್ಪಷ್ಟಪಡಿಸುವ ಪ್ರಯೋಗವೊಂದು ನೇಮಿಚಂದ್ರನ ‘ಲೀಲಾವತಿ’ ಯಲ್ಲಿದೆ; ದೇವರ್ಗಂ ದೊರಕೊಳ್ಳದೊಳೀ ವಧು ಕೂರೆಯುಮದೇಕೆ ಪಂಬಲಿಸುವನಾ । ಗೋವಂ ಪೇೞ್ ಪೆಱರಂ ಪ । ಟ್ಟಾವಳಿಯುಟ್ಟುಡೆಯೊಳುಡುವುದೇ ಕಾಸಟಮಂ (೧೪–೪೬); ದೇವತೆಗಳಿಗೂ ದೊರೆಯದ ಈ ಹೆಣ್ಣು ತನ್ನನ್ನು ಪ್ರೀತಿಸಿದರೂ ಕೂಡ ಆ ಗೋವನು (ದಡ್ಡನು) ಇತರ ಹೆಣ್ಣುಗಳಿಗೇಕೆ ಹಂಬಲಿಸುತ್ತಾನೆ; ರೇಷ್ಮೆ ವಸ್ತ್ರವನ್ನುಟ್ಟ ಸೊಂಟದಲ್ಲಿ ಕಾಸಟವನ್ನು ಎಂದರೆ ಹತ್ತಿಯ ಬಟ್ಟೆಯನ್ನು ಉಡುವುದೇ? ಕೆಲವು ಶಾಸನಗಳಲ್ಲಿ ಈ ಶಬ್ದ ಕಾಣುತ್ತದೆ: (೧) ವರದೆಯಿಂ ತೆಂಕ ಪೋಪಭಂಡಕ್ಕೆ ಕಾಸಟದ ಮಳವೆ ಇರ್ಪ್ಪತ್ತರ್ಕ್ಕೊಂದು (E. I. XIX, Six Inscriptions from Kolur and Devageri, B. line 16) ; ಖಾಸಟ ಎಂಬ ರೂಪವೂ ಉಂಟು; ಆ ಎರಡುಂ ಪೊಳೆಗೆ ಬರ್ಪ್ಪಡ್ಡವಟ್ಟಯ ಖಾಸಟದ ಮಳವೆ ಇಪ್ಪತ್ತರ್ ಕ್ಕೊಂದು ಇಪ್ಪತ್ತು ಕಾಸಟದ ಮಳವೆಗೆ ಎಂದರೆ ಹೇರಿಗೆ ಒಂದು ಹೇರನ್ನು ಸುಂಕವಾಗಿ ಕೊಡಬೇಕಾಗಿತ್ತು. ಇಲ್ಲಿ ಕಾಸಟ ಎಂದರೆ ಹತ್ತಿಯ ಬಟ್ಟೆ ಎಂದು ತೋರುತ್ತದೆ. ಕಾಸಟ ಕಪಾಸ್+ಪಟ ಕಾರ್ಪಾಸ ಪ (ಸಂ); ಕಾಪಾಸ್ ಕಾರ್ಪಾಸ ಎಂದರೆ ಹತ್ತಿ, ಪಟ– ಬಟ್ಟೆ. (೨) ಮಾಸರ: ಇದಕ್ಕೆ ಪ್ರಯೋಗಬಾಹುಳ್ಯವಿದೆ; ಮಾಸರಮಾರದನೆಯ್ದೆ ಬಣ್ಣಿಪರ್ (ಶಾಂತಿಪು. ೯–೫೯); ಬೞಿಕ್ಕ ಸೀರೆಯೊಳ್ ಮಾಸರಮಾಗೆ ಸೇವಗೆಯನೊತ್ತಿ (ಲೋಕೋಪ. ೮–೧೨); ಕಡುಮಾಸರಮಾದ ಗುಣಂಗಳೋಳಿಗೊಂಡು (ಪದ್ಯಸಾ II, ೧೯); ದೇವ ರೊಳಾದತಿ ಭಕ್ತಿಹರ್ಷಮಂ ಮಾಸರಮುಂಟುಮಾಡೆ (ಪಂಪರಾ. ೧೦–೧೭೪); ಮಾಸರ ಮಾಯ್ತವಳೊಳೊಗೆದ ಕೊಡಗೂಸುತನಂ (ಚಂದ್ರಪು. ೧–೭೯); ಸೂಸುವನವಪಟವಾಸದ ಚೂರ್ಣಂ । ಮಾಸರವಾದುದು ದಿಕ್ಪರಿಪೂರ್ಣಂ (ಚಂದ್ರಪು. ೪–೬೩ರ); ಮೌಕ್ತಿಕ ಹಾರಮಾವಗಂ ಮಾಸರಮಾಗೆ (ಶಾಂತೀಪು. ೧೫–೪೫); ವನಜವಿಳಾಸಮಂ ವಿವಿಧಾಸನಂಗಳ ವಿವರಣಮಂ ಮೆಯ್ವೆಸದ ಮಾಸರಮಂ (ಕುಸುಮಾ. ೭–೬೩ ಗ); ಮಾಸರಮಸುಗೆಯ ತಳಿರಂ ಸೂಸಿದಳೊರ್ವಳ್ (ಲೀಲಾವ. ೧೩–೮೧); ಮಿಸುಗುವ ದೋರೆವಲ್ ಕರಮೆ ಮಾಸರಮಾದುದು ದೇಸೆಕಾರ್ತಿಯೊಳ್ (ಚಂದ್ರಪು. ೮–೫೧); ಮಾಸರಮಾಗಿರ್ದುವೊಗೆದ ಮೃಗತೃಷ್ಣಿಗಳ್ (ಚಂದ್ರಪು. ೯–೭೧); ಇವಲ್ಲದೆ ಈ ಶಬ್ದದಿಂದ ನಿಷ್ಪನ್ನವಾಗಿರುವ ಮಾಸರಿಕೆ, ಮಾಸರಿಕ್ಕೆ, ಮಾಸರಿಗೆ ಎಂಬುವೂ ದೊರೆಯುತ್ತವೆ. ಪ್ರಯೋಗ ಸಂದರ್ಭಗಳನ್ನು ನೋಡಿದರೆ, ಸುಂದರ, ಸೊಗಸು, ಅತಿಶಯ–ಈ ಅರ್ಥಗಳು ಆಗುವಂತೆ ಊಹಿಸಬಹುದು. ಇದು ಮಹಾಸ್ವರದ ತದ್ಭವವೆಂದು ಗ್ರಹಿಕೆಯಾಗಿದೆ (ಪಂಪರಾ. ಕೋ.); ಆದರೆ ಇದು ಹೊಂದುವುದಿಲ್ಲ; ಮಹಾಶ್ರಯದ ತದ್ಭವವೆಂದು ಕಿಟ್ಟಲ್ ಹೇಳುತ್ತಾರೆ; ಇದೂ ಹೊಂದುವು ದಿಲ್ಲ. ತೆಲುಗಿನಲ್ಲೂ ಮಾಸರಮೈ–ಮಿಶ್ರವಾಗಿ ಎಂಬ ಶಬ್ದವುಂಟು. ಈ ಶಬ್ದಕ್ಕೆ ಅರ್ಥವನ್ನು ನಿರ್ಣೈಸಬೇಕಾದರೆ ಇನ್ನು ಹೆಚ್ಚು ಪರಿಶೋಧನೆ ಬೇಕು. ಸದ್ಯಕ್ಕೆ ಇದನ್ನು ಸಂಸ್ಕೃತದ ಮಾಧುರದಿಂದ ಬಂದಿದೆಯೆಂದು ಭಾವಿಸಬಹುದು; ಮಾಧುರ ಮಾದರ ಮಾಸರ; ತಮಿಳಿ ನಲ್ಲಿ ಮಾದರ್ಮೊೞಿ ಎಂದರೆ ಇಂಪಾದ ಮಾತು, ಸವಿಯಾದ ಮಾತು ಎಂಬರ್ಥವಿದೆ.
ವಚನ : ನೆಱೆಯೆ ಕೆಯ್ಗೆಯ್ಸಿಮೆಂದು–ಪೂರ್ಣವಾಗಿ ಅಲಂಕಾರ ಮಾಡಿಸಿರಿ ಎಂದು; ತಱದ ಗುಱುಗೆಯರಪ್ಪ–(?), ಅಂತಃಪುರಪುರಂಧ್ರಿಯರಂ–ರಾಣೀವಾಸದ ಸ್ತ್ರೀಯರನ್ನು;
೪೫. ಈ ಪೊೞ್ತಿಂಗೆ-ಈ ಹೊತ್ತಿಗೆ, ಈ ರುತುವಿಂಗೆ -ಈ ಋುತುವಿಗೆ, ಈ ಪಸದನಂ -ಈ ಅಲಂಕಾರವು; ಇಂತುಟಪ್ಪ ಮೆಯ್ವಣ್ಣಕ್ಕೆ .ಹೀಗಿರುವ ಮೈಯ ಬಣ್ಣಕ್ಕೆ, ಇಂತೀ ಪೂವಿನೊಳ್ -ಹೀಗೆ ಈ ಹೂವಿನಲ್ಲಿ, ಈ ತುಡುಗೆಯೊಳ್ -ಈ ಒಡವೆಯಲ್ಲಿ, ಈ ಪುಟ್ಟಿಗೆ- ಯೊಳ್.ಈ ಸೀರೆಯಲ್ಲಿ, ಬೆಡಂಗುವಡೆದು .ಚೆಲುವನ್ನು ಪಡೆದು, ಎಸೆದಿರ್ಕುಂ-ಪ್ರಕಾಶಿಸುತ್ತಿದೆ. ಯಾವ ಹೊತ್ತಿಗೆ, ಯಾವ ಋುತುವಿಗೆ, ಯಾವ ಮೈ ಬಣ್ಣಕ್ಕೆ ಯಾವ ಯಾವ ಹೂವುಗಳು, ಒಡವೆಗಳು ಸೀರೆಗಳು ಒಪ್ಪುತ್ತವೋ ಅವುಗಳಿಂದ ಸಿಂಗಾರ ಮಾಡಿದರು ಎಂದು ತಾತ್ಪರ್ಯ.
ವಚನ : ನೆಱೆಯೆ ಪಸದನಂಗೊಳಿಸಿ-ತುಂಬ ಅಲಂಕಾರ ಮಾಡಿ.
೪೬. ಒಡವೆಗಳನ್ನು ತೊಡಿಸುವಾಗ ಅಂತಃಪುರ ಸ್ತ್ರೀಯರು ಆಡಿಕೊಳ್ಳುವ ಮಾತು ತ್ ಹಾರಮಂ .ಹಾರವನ್ನು, ತುಡಿಸದೆ.ಹಾಕದೆ, ಮೊಲೆಯ ಬಿಣ್ಪಿನೊಳಂ .ಮೊಲೆಯ ಭಾರದಲ್ಲೇ, ನಡು ಬಳ್ಕಿದಪ್ಪುದು .ಸೊಂಟವು ಬಳುಕಾಡುತ್ತದೆ, ಎಂದರೆ ಹಾರ ತೊಡಿಸಿದರೆ ಅದರ ಭಾರ ಮೊಲೆಯ ಭಾರದೊಡನೆ ಸೇರಿ ನಡುವು ಇನ್ನೂ ಹೆಚ್ಚಾಗಿ ಬಳುಕುತ್ತದೆ, ತೊಡೆ . ತೊಡೆಗಳು, ನಿತಂಬದ ಬಿಣ್ಪಿನೊಳ್ .ಪಿರ್ರೆಗಳ ಭಾರದಲ್ಲಿ, ಈ ನಡುಗುವುವಲ್ಲವೇ . ಇಗೋ, ನಡುಗುತ್ತಿವೆಯಲ್ಲವೆಲ್ ಏವುದು ಅಕ್ಕ .ಏನು ಅಕ್ಕ, ಕಟಿಸೂತ್ರಮಂ .ಸೊಂಟದ ದಾರವನ್ನು ಎಂದರೆ ಒಡ್ಯಾಣವನ್ನು, ಪೋ ಬಿಡು .ಸುಮ್ಮನೆ ಬಿಟ್ಟು ಬಿಡು, ಏನನ್ನೂ ತೊಡಿಸ ಬೇಡದ್ ತೊಡೆಯ ಬಿಣ್ಪು .ತೊಡೆಗಳ ಭಾರ, ಪದಾಂಬುರುಹಕ್ಕೆ .ಕಮಲದಂತಿರುವ ಪಾದ ಗಳಿಗೆ, ತಿಣ್ಣಂ.ಭಾರವಾಗುತ್ತದೆ, ನೂಪುರಮಂ.ಕಾಲಿನುರುಳಿಯನ್ನು, ಏಂ ತುಡಿಸುವುದಕ್ಕ. ಅಕ್ಕನೇ ಏನು ತೊಡಿಸುವುದು, ಎಂದರೆ ಏನೂ ಬೇಡದ್ ಈ ತೊಡವೇವುದೊ .ಇದು ಯಾವ ಒಡವೆಯೋ, ರೂಪೆ ಸಾಲದೇ.ಸೌಂದರ್ಯವೇ, ಆಕಾರವೇ ಸಾಕಾಗದೇಲ್ ಸಾಕು ಎಂಬ ಭಾವ.
ವಚನ : ಓರೊರ್ವರ್–ಒಬ್ಬರನ್ನೊಬ್ಬರು; ವಕ್ರೋಕ್ತಿಯೊಳೆ–ವ್ಯಂಗ್ಯವಾದ ಮಾತು ಗಳಲ್ಲಿಯೇ, ಸೊಗಸಾದ ಮಾತುಗಳಲ್ಲಿಯೇ; ಮಂಗಳವಸದನಮಿಕ್ಕಿಯುಂ–ಮಂಗಳಾ ಲಂಕಾರವನ್ನು ಮಾಡಿಯೂ; ಪೊಸಮದವಳಿಗೆಯಪ್ಪುದಱಿಂ–ಹೊಸ ಮದವಣಗಿತ್ತಿ ಆಗಿರು ವುದರಿಂದ; ತುಡಿಸಲೆವೇೞ್ಕುಮೆಂದು–ತೊಡಿಸಲೇಬೇಕೆಂಬುದಾಗಿ,
೪೭. ದ್ರೌಪದಿಯಾ ಪಸದನಂ–ದ್ರೌಪದಿಯ ಅಲಂಕಾರವು, ಮದನನ ಬಾಳ್ಮಸೆ ದುದು–ಮನ್ಮಥನ ಕತ್ತಿ ಮಸೆದಂತಾಯಿತು; ಕಾಮನಂಬು–ಮನ್ಮಥನ ಬಾಣ, ಕೂರ್ಮಸೆ ಯಿಟ್ಟುದು–ಹರಿತವಾಗಿ ಸಾಣೆಯಾಯಿತು; ಆ ಕುಸುಮಾಸ್ತ್ರನ–ಆ ಹೂಬಾಣನ ಎಂದರೆ ಮನ್ಮಥನ, ಚಕ್ರಮಿದು–ಈ ಚಕ್ರಾಯುಧ, ಬಾಯ್ಗೂಡಿದುದು–ಹರಿತವಾದ ಅಲಗಿನಿಂದ (ಬಾಯಿಯಿಂದ) ಕೂಡಿದುದಾಯಿತು, ಎಂಬ ಎಸಕಮಂ–ಎಂಬ ಸೊಗಸನ್ನು, ಆಳ್ದತ್ತು–ಪಡೆ ಯಿತು. “ಎಸೆ–ಶೋಭಾಯಾಂ” ಎಂಬುದರ ಭಾವನಾಮ ಎಸಕ.
ವಚನ : ಬಿಡುಮುತ್ತಿನ ಸೇಸೆಯನಿಕ್ಕಿ–ಬಿಡಿಯಾದ ಮುತ್ತುಗಳ ಮಂತ್ರಾಕ್ಷತೆಯನ್ನು ಹಾಕಿ; ಪೊಡೆಮಡಿಸಿ–ಎರಗಿಸಿ, ನಮಸ್ಕರಿಸುವಂತೆ ಮಾಡಿ.
೪೮. ನಿಟ್ಟಿಸೆ–ನೋಡಲು, ಹೋಮಾನಲನೊಳ್–ಹೋಮದ ಅಗ್ನಿಯಲ್ಲಿ, ಪುಟ್ಟಿದ ನಿನಗೆ–ಹುಟ್ಟಿದ ನಿನಗೆ, ಅಕ್ಕ–ಅಕ್ಕನೇ, ಪರಕೆ ಯಾವುದೋ–ಆಶೀರ್ವಾದ ಯಾವುದೋ? ಅಗ್ನಿಸಂಭವೆಯಾಗಿ ಪರಮಪವಿತ್ರಳಾಗಿರುವ ನಿನಗೆ ನಾವು ಮಾಡುವ ಆಶೀರ್ವಾದ ಯಾವುದಿದೆ? ನಿನ್ನಂ ಪುಟ್ಟಿಸಿದ ಬಿದಿ–ನಿನ್ನನ್ನು ಸೃಷ್ಟಿಸಿದ ದೈವ, ನೆಗೞ್ತೆಯ ಜೆಟ್ಟಿಗನೊಳ್–ಪ್ರಸಿದ್ಧ ವೀರನಾದ, ಅರಿಕೇಸರಿಯೊಳ್.ಅರ್ಜುನನಲ್ಲಿ, ಈಗಳ್.ಈಗ, ನೆರಪುಗೆ.ಸೇರಿಸಲಿ, ಕೂಡಿಸಲಿ.
ವಚನ : ಕನತ್ಕನಕ ಖಚಿತಮುಂ–ಹೊಳೆಯುವ ಚಿನ್ನದಿಂದ ಖಚಿತವಾದುದೂ; ಮೌಕ್ತಿಕಸಂಭಮುಂ–ಮುತ್ತಿನ ಕಂಭಗಳನ್ನುಳ್ಳದ್ದೂ; ಸರ್ವತೋಭದ್ರ–ನಾಲ್ಕು ಪಾರ್ಶ್ವ ಗಳಲ್ಲಿಯೂ ಬಾಗಿಲನ್ನುಳ್ಳ ಸರ್ವತೋಭದ್ರಾಕಾರದ; ಸಿವಿಗೆಯ ನೇಱಿಸಿ–ಪಲ್ಲಕ್ಕಿಯನ್ನು ಹತ್ತಿಸಿ; ಕುಂಚದ ಕುಂಚವನ್ನುಳ್ಳ (Brush) ; ಅಡಪದ–ಅಡಕೆಲೆಯ ಚೀಲದ, ಡವಕೆಯ– ಪೀಕುದಾನಿಯ, ವಾರವಿಳಾಸಿನಿಯರ್–ಪರಿವಾರ ಸ್ತ್ರೀಯರು; ತಲೆವರಿದ–ಮುಂದೆ ಹೋಗು ತ್ತಿರುವ, ಓಜೆಯ ಪಿಡಿಯಂ–ರೀತಿಯುಳ್ಳ ಹೆಣ್ಣಾನೆಯನ್ನು, ಪೆಂಡವಾಸದೊಳ್ವೆಂಡಿರ್– ಅಂತಃಪುರದ ಸುಂದರ ಸ್ತ್ರೀಯರು; ತಳ್ತುಪಿಡಿದ–ಎತ್ತಿ ಹಿಡಿದ; ಕನಕಪದ್ಮದ– ಹೊಂದಾವರೆಯ; ಸೀಗುರಿಗಳ–ಒಂದು ವಿಧವಾದ ಛತ್ರಿಗಳ; ನೆೞಲ್–ನೆರಳು; ಎಡೆವಱಿ ಯದೆ–ನಡುವೆ ಭಿನ್ನವಾಗದೆ, ಎಡೆಬಿಡದೆ; ಮಂಡನಾ ಯೋಗಂಗಳೊಳ್–ಅಲಂಕಾರ ವಸ್ತುಗಳ ಜೋಡಣೆಯಲ್ಲಿ, ನೆಱೆಯೆ ಪಣ್ಣಿದ–ಚೆನ್ನಾಗಿ ಮಾಡಿದ ಎಂದರೆ ಅಲಂಕೃತವಾದ, ಮದಾಂಧಗಂಧ ಸಿಂಧುರಂಗಳಂ–ಸೊಕ್ಕಾನೆಗಳನ್ನು; ಧವಳಚ, ತ್ರ–ಬೆಳ್ಗೊಡೆ, ಚಂದ್ರಾದಿತ್ಯ– ಚಂದ್ರಸೂರ್ಯರ ಲಾಂಛನಗಳು; ಪಾಳಿಕೇತನ–ಬಾವುಟಗಳ ಶ್ರೇಣಿಗಳು, ಪೆಱಪೆಱಗನೆ– ಹಿಂದು ಹಿಂದೆಯೇ;
ಸೀಗುರಿ–ನವಿಲುಗರಿಯ ಕಣ್ಣುಗಳಿಂದ ಮಾಡಿದ ರತ್ನಖಚಿತ ಕಲಶ ದಂಡಗಳನ್ನುಳ್ಳ ಛತ್ರಿ, “ಪಿಂಛಚ, ತ್ರಮಿದಂ ಪ್ರಾಹ [ಸ್ಸೂಗು] ರೀತಿ ವಿಚಕ್ಷಣಾಃ” (ಅಭಿಲಷಿತಾರ್ಥ ಚಿಂತಾ ವೀರನಾದ, ಅರಿಕೇಸರಿಯೊಳ್–ಅರ್ಜುನನಲ್ಲಿ, ಈಗಳ್–ಈಗ, ನೆರಪುಗೆ–ಸೇರಿಸಲಿ, ಮಣಿ ೧೮೪೭); ಪಾಳಿಕೇತನ–ಇದು ಅನೇಕ ಧ್ವಜಗಳಿಂದ ಮಾಡಿದ ಒಂದು ವ್ಯೂಹರಚನೆ; ಸ್ರಗ್ವಸ್ತ್ರ ಸಹಸಾನಾಬ್ಜ ಹಂಸಮೀನ ಮೃಗೇಶಿನಾಂ । ವೃಷಭೇಂದ್ರ ಚಕ್ರಾಣಾಂ ಧ್ವಜಾಸ್ಯುಃ ದಶಭೇದತಃ ॥ ಹಾರ, ವಸ್ತ್ರ, ನವಿಲು, ಕಮಲ, ಹಂಸ, ಮೀನು, ಸಿಂಹ, ವೃಷಭ, ಆನೆ, ಚಕ್ರ– ಈ ೧೦ ಲಾಂಛನಗಳನ್ನುಳ್ಳ ಬಾವುಟಗಳ ೧೦ ಸಾಲುಗಳು ನಾಲ್ಕೂ ಕಡೆಗೆ ಚತುರಸ್ರವಾಗಿ ಇರುತ್ತವೆ; ಪ್ರತಿ ಸಾಲಿನಲ್ಲಿಯೂ ಒಂದೊಂದು ಬಗೆಯ ೧೦೦ ಬಾವುಟಗಳಿರುತ್ತವೆ; ಒಂದು ಕಡೆಗೆ ೧೦೮೦ ಬಾವುಟಗಳಿದ್ದ ಹಾಗಾಯಿತು; ಹೀಗೆ ನಾಲ್ಕೂ ಕಡೆಯೂ ೪೩೨೦ ಬಾವುಟ ಗಳು ಒಟ್ಟು ಇರಬೇಕು. ಈ ತೆರನಾದ ಬಾವುಟಗಳ ರಚನೆಗೆ, ಪಾಲಿಧ್ವಜ, ಪಾಲಿಕೇತನ ಎಂದು ಹೆಸರು (I. A. XIV, P104).
೪೯. ಪರೆದು–ಚೆದರಿ, ಉಗುವ–ಸುರಿಯುವ, ಪಂಚರತ್ನದ–ಐದು ಬಗೆಯಾದ ರತ್ನಗಳ, ಪರಲ್ಗಳ್–ಹರಳುಗಳು, ಉದಿರ್ದು–ಉದುರಿ, ಎಸೆಯೆ–ಸೊಗಸಾಗಿರಲು, ಸೌಧದೊಳೆ–ಅರಮನೆಯಲ್ಲೇ, ಕೆದಱಿದ–ಚೆಲ್ಲಿದ, ಕಪ್ಪುರವಳ್ಕುಗಳೆಸೆಯೆ–ಕರ್ಪ್ಪೂರದ ಹಳುಕುಗಳು ಪ್ರಕಾಶಿಸುತ್ತಿರಲು, ಎಸೆವ ಲೀಲೆಯಿಂ–ಶೋಭಿಸುವ ವಿಲಾಸದಿಂದ, ಸಯಂಬರ ಸಾಲೆಯಂ–ಸ್ವಯಂವರ ಗೃಹವನ್ನು, ಪುಗುತಂದಳ್–ಪ್ರವೇಶಿಸಿದಳು.
೫೦. ನುಡಿವುದನೆ–ಹೇಳಬೇಕಾದ್ದನ್ನೇ, ಮಱೆದು–ಮರೆತು, ಕೆಲರ್–ಕೆಲವರು, ಪೆಱತಂ–ಬೇರೆ ಏನನ್ನೋ, ನುಡಿಯೆ–ಹೇಳಲು; ನೋಡದಂತೆ ನೋಡೆ ಕೆಲರ್–ಕೆಲವರು ನೋಡದ ಹಾಗೆ ನೋಡುತ್ತಿರಲು, ಕೆಲರ್–ಕೆಲವರು, ಪಾವಡರ್ದವೊಲಿರೆ–ಹಾವು ಮೇಲೇರಿ ಕೊಂಡಂತೆ ಇರಲು, ಕೆಲರ್–ಕೆಲವರು, ಉದಗ್ರಾವನಿಪರ್–ಶ್ರೇಷ್ಠರಾದ ದೊರೆಗಳು, ಒಯ್ಯನೆ–ಮೆಲ್ಲಗೆ, ತುಡುಗೆಯಂ–ಒಡವೆಗಳನ್ನು, ಓಸರಿಸೆ–ಪಕ್ಕಕ್ಕೆ ಸರಿಸಲು.
೫೧. ಒಡನೆ ನೆರೆದರಸುಮಕ್ಕಳ–ಒಟ್ಟಿಗೆ ಸೇರಿದ ರಾಜಕುಮಾರರ, ನಿಡುಗಣ್ಗಳ– ನೀಳವಾದ ಕಣ್ಣುಗಳ, ಬಳಗಂ–ಸಮೂಹವು, ಎಱಗೆ–ತನ್ನ (ದ್ರೌಪದಿಯ) ಮೇಲೆ ಬೀಳಲು, ತನ್ನಯ ಮೈಯೊಳ್–ತನ್ನ ಮೈಯಲ್ಲಿ, ನಡೆ–ನಾಟಿಕೊಳ್ಳಲು, ಪಲರುಂ ಅಂಬಂ ತುಡೆ–ಹಲವರು ಬಾಣಗಳನ್ನು ಹೂಡಲು, ನಡುವೆ, ಇರ್ದ–ಇದ್ದ, ಒಂದು ಪುಲ್ಲೆಯಿರ್ಪಂತೆ– ಒಂದು ಜಿಂಕೆ ಇದ್ದ ಹಾಗೆ, ಇರ್ದಳ್–ದ್ರೌಪದಿ ಇದ್ದಳು.
೫೨. ಕಿಱಿದು ಬೇಗದಿಂ–ಸ್ವಲ್ಪ ಹೊತ್ತಿನಲ್ಲೇ, ಹರಿಗಂ–ಅರ್ಜುನ, ಅನಿಬರುಮಂ– ಅಷ್ಟು ಜನ ರಾಜರನ್ನೂ, ಮೊನೆಯಂಬುಗಳೊಳೆ–ಮೊನೆಯುಳ್ಳ ಬಾಣಗಳಲ್ಲಿಯೇ, ಪೂಣ್ದಪಂ–ಹೂತುಬಿಡುತ್ತಾನೆ, ಅದರ್ಕೆ–ಅದಕ್ಕಾಗಿ, ಎನಗೆ–ನನಗೆ, ಎಡೆವೇೞ್ಕುಮೆ– ಅವಕಾಶವು ಬೇಕಾಗಿದೆಯೇ, ಎಂಬವೋಲ್–ಎನ್ನುವಂತೆ, ಅತನು–ಮನ್ಮಥನು, ಅನಿಬರು ಮಂ–ಅಷ್ಟು ಮಂದಿ ರಾಜರನ್ನೂ, ನನೆಯಂಬುಗಳಿಂ–ಹೂವಿನ ಬಾಣಗಳಿಂದ, ಪೂಣ್ದಂ– ಹೂತುಬಿಟ್ಟನು.
ವಚನ : ಪೆಱರಱಿಯದಂತು–ಇತರರು ತಿಳಿಯದ ಹಾಗೆ,
೫೩. ಇಳೆಯೊಳ್–ನೆಲದ ಮೇಲೆ, ಉದಗ್ರ….ರಾಜಿ : ಉದಗ್ರ–ಶ್ರೇಷ್ಠರಾದ, ವೀರಭಟ– ವೀರಯೋಧರ, ತುಂಗಮತಂಗಜ–ಎತ್ತರವಾದ ಆನೆಗಳ, ವಾಜಿ–ಕುದುರೆಗಳ, ರಾಜಿ– ಸಮೂಹ; ಚೌಪಳಿಗೆಗಳೊಳ್–ತೊಟ್ಟಿಯ ಉಪ್ಪರಿಗೆಗಳಲ್ಲಿ, ಧರಾಧರ ಧುರಂಧರ– ರಾಜರಲ್ಲಿ ಅಗ್ರೇಸರರಾದ, ಬಂಧುರ–ಸುಂದರರಾದ, ರಾಜಕಂ–ರಾಜರ ಸಮೂಹ; ವಿಯತ್ತಳ ದೊಳ್–ಆಕಾಶ ಪ್ರದೇಶದಲ್ಲಿ, ಅನೇಕ–ಹಲವು, ಕಿಂಪುರುಷ, ಕಿನ್ನರ, ಖೇಚರ, ಸಿದ್ಧ– ಇವರ, ಬೃಂದಂ–ಸಮೂಹವು; ಇವು, ಅವ್ವಳಿಸಿರೆ–ಮೇಲೆ ನುಗ್ಗುವಂತೆ ಗುಂಪಾಗಿರಲು, ಮೂನೆಲೆಯಿಂ–ಮೂರು ಅಂತಸ್ತುಗಳಿಂದ, ಸ್ವಯಂಬರಂ–ಸ್ವಯಂವರ ಸ್ಥಾನವು, ಮೂಱು ಲೋಕಮನೆ–ಮೂರು ಲೋಕಗಳನ್ನೇ, ಪೋಲ್ತುದು–ಹೋಲಿತು.
ವಚನ : ವಿದಿತ ವೃತ್ತಾಂತೆಯಾಗಿ–ಅಲ್ಲಿ ನೆರೆದ ರಾಜರ ವಿಷಯವನ್ನು ಚೆನ್ನಾಗಿ ತಿಳಿದವಳಾಗಿ.
೫೪. ಕನಕೋಚ್ಚಾಸನ ಸಂಸ್ಥಿತಂ–ಚಿನ್ನದ ಎತ್ತರವಾದ ಪೀಠದ ಮೇಲೆ ಕುಳಿತಿರುವ, ನೃಪನವಂ–ಆ ರಾಜನು, ಬೆಂಗೀಶಂ–ವೆಂಗಿ ದೇಶದ ರಾಜ; ಉತ್ತುಂಗ–ಎತ್ತರವಾದ, ಪೀನ– ದಪ್ಪನಾಗಿರುವ, ನಿಜ–ತನ್ನ, ಅಂಸ–ಭುಜಗಳ ಮೇಲ್ಭಾಗಕ್ಕೆ, ಅರ್ಪಿತ–ಸೇರಿಸಿದ, ಲಂಬಹಾರಂ–ನೇತಾಡುವ ಹಾರವನ್ನುಳ್ಳವನು, ಅವನ್–ಅವನು, ಆ ಪಾಂಡ್ಯಂ–ಆ ಪಾಂಡ್ಯ ದೇಶದ ಅರಸು; ಮನಂಗೊಂಡು–ಮನಸ್ಸು ಮೆಚ್ಚಿ, ನಿನ್ನನೆ–ನಿನ್ನನ್ನೇ, ಕಿೞ್ಗಣ್ಣೊಳೆ–ಕೆಳಗಣ್ಣಿ ನಲ್ಲಿಯೇ, ನೋಡುತಿರ್ಪವಂ–ನೋಡುತ್ತಿರುವ, ಅವಂ–ಅವನು, ಚೇರಮ್ಮಂ–ಕೇರಳ ದೇಶದ ಚೇರಮ ರಾಜ; ಆದಿತ್ಯತೇಜಂ–ಸೂರ್ಯನಂತೆ ತೇಜಸ್ಸುಳ್ಳವನು, ಅವಂ–ಅವನು, ಕಳಿಂಗದೇಶದರಸಂ–ಕಳಿಂಗದೇಶದ ರಾಜ, ಪಂಕೇಜ ಪತ್ರೇಕ್ಷಣೇ–ತಾವರೆಯಂತೆ ಕಣ್ಣುಳ್ಳ ದ್ರೌಪದಿಯೇ, ನೋಡು.
ವಚನ : ಪೊಳಪಿನೊಳಂ–ಅತ್ತಿತ್ತ ಚಲಿಸುವಿಕೆಯಲ್ಲಿಯೂ, ಹೊರಳಾಟದಲ್ಲಿಯೂ, ಧವಳಿಸಿದನ್ನವಾಗೆ–ಬಿಳಿದಾದಂಥವುಗಳಾಗಿರಲು, ಸರಂಗಳೊಳಂ–ಶಬ್ದಗಳಲ್ಲಿಯೂ, ಪಾಠಕಾಱರ–ಹೊಗಳುಭಟ್ಟರ; ಇಂಚರಂಗಳೊಳಂ–ಇಂಪಾದ ಸದ್ದುಗಳಲ್ಲೂ, ಅವಷ್ಟಂಭದಿಂ– ಠೀವಿಯಿಂದ, ನೀಡಿ–ಚಾಚಿ.
೫೫. ದುರ್ಯೋಧನನ ಚಿತ್ರ: ಎನ್ನ ಮೆಲ್ಲೆರ್ದೆಯಂ–ನನ್ನ ಮೃದುವಾದ ಹೃದಯ ವನ್ನು, ಅಲರಂಬಿಂದೆ–ಹೂ ಬಾಣದಿಂದ, ಇದು–ಈ ಹೂವು, ಇಂತು–ಹೀಗೆ, ಉರ್ಚಿತ್ತು– ಭೇದಿಸಿತು, ಎಂಬಂತೆ–ಎನ್ನುವ ಹಾಗೆ, ನೆಯ್ದಿಲ–ನೆಯ್ದಿಲೆಯ ಹೂವಿನ, ಕಾವಂ–ಕಾವನ್ನು, ಒಂದಂ–ಒಂದನ್ನು, ತಿರಿಪುತ್ತುಂ–ತಿರುಗಿಸುತ್ತಾ, ಅನಿಬರ್ ತಮ್ಮಂದಿರುಂ–ಅಷ್ಟು ಜನ ತಮ್ಮಂದಿರೂ, ತನ್ನೆರೞ್ಕೆಲದೊಳ್–ತನ್ನ ಎರಡು ಮಗ್ಗುಲುಗಳಲ್ಲಿ, ಬಂದು ಇರೆ–ಬಂದು ಇರಲು, ನೋಡಿ–ನಿನ್ನನ್ನು ನೋಡಿ, ಸೋಲ್ತು–ಸೋತು, ಮೋಹವಶನಾಗಿ, ಆ ಗೇಯಕ್ಕೆ ಸೋಲ್ತಂತೆವೋಲ್–ಆ ಸಂಗೀತಕ್ಕೆ ಸೋತ ಹಾಗೆ, ತಲೆಯಂ ತೂಗುವವಂ–ತಲೆಯನ್ನು ತೂಗಾಡುವವನು, ಸುಯೋಧನ ನೃಪಂ–ದುರ್ಯೋಧನನೆಂಬ ರಾಜ, ನೀಂ, ಆತನಂ, ನೋಡುಗೇ–ನೋಡುವವಳಾಗು, ನೋಡು. ನೋಡುಗೆ ನೋಡು+ಗೆ, ಇಲ್ಲಿ ನೀಂ ನೋಡು ಎಂದಿಷ್ಟಿದ್ದರೂ ಸಾಕು, ವಿಧಿರೂಪವಾಗುತ್ತದೆ; ಗೆ ಎಂಬ ಪ್ರತ್ಯಯ ವಿಜ್ಞಾಪನಾರ್ಥದಲ್ಲಿ ಬಂದಿದೆ. (ಶಬ್ದಾನುಶಾಸನ ಸೂ. ೪೬೫) ನೋಡಿ.
ವಚನ : ಮಿಂಚಂ ತಟ್ಟಿಮೆಡಱಿದಂತೆ–ಮಿಂಚನ್ನು ತಡಿಕೆಯಾಗಿ ಹೆಣೆದ ಹಾಗೆ, ಕಾಲ್ಗಾಪಿನ–ಕಾಲುರಕ್ಷಣೆಯ, ಕಾಲಿನ ಮೇಲೆ ನಡೆಯುವ ಅಂಗರಕ್ಷಕರ, ಕಡಿತಲೆಯ– ಕತ್ತಿಯನ್ನುಳ್ಳ ಪರಿವಾರದ; ಪಣ್ಯಾಂಗನಾಜನದ–ವೇಶ್ಯೆಯರ; ಇಲ್ಲಿ ಮೆಡಱು ಎಂಬ ಧಾತು, ಕೇಶಿರಾಜನ ಧಾತುಪಾಠದಲ್ಲಿಲ್ಲ, ಪ್ರಯೋಗಸಾರದಲ್ಲಿದೆ. ತಮಿಳಿನಲ್ಲಿ ಮಿಡೈ=ಹೆಣೆ ಎಂಬ ಶಬ್ದವಿದೆ. ಬಿಬಿಖಾಂಡವವನಮೆಲ್ಲಮಂ ತಟ್ಟಿ ಮೆಡಱಿಪ್ಪ್ (ಪಂಪಭಾ. ೫.೯೬ ಗ) ಎಂದು ಇನ್ನೊಂದು ಪ್ರಯೋಗವಿದೆ.
೫೬. ಕೃಷ್ಣ ಬಲರಾಮರು ಕುಳಿತಿರುವ ದೃಶ್ಯ: ಆಯತ–ವಿಸ್ತಾರವಾದ, ಯದುವಂಶ– ಯಾದವವಂಶದ, ಕುಲಶ್ರೀಯಂ–ಕುಲಲಕ್ಷ್ಮಿಯನ್ನು, ತೞ್ಕೈಸಿದ–ಆಲಿಂಗಿಸಿದ, ಅದಟರ್– ಶೂರರು, ಅತಿರಥರ್–ಅತಿರಥರಾದವರು, ಅವರು, ಅತ್ಯಾಯತ–ಅತಿ ದೀರ್ಘವಾದ, ಭುಜಪರಿಘರ್–ಪರಿಘದಂತಿರುವ ಭುಜಗಳುಳ್ಳವರು, ನಾರಾಯಣ ಬಲದೇವರೆಂಬರ್– ನಾರಾಯಣನೂ (ಶ್ರೀಕೃಷ್ಣನೂ) ಬಲದೇವನೂ ಎನ್ನುವವರು; ಅಂಬುಜವದನೇ– ದ್ರೌಪದಿಯೇ,
ವಚನ : ಕಿಱಿದಂತರಂ ಪೋಗಿ–ಸ್ವಲ್ಪದೂರ ಹೋಗಿ.
೫೭. ಇಂತು–ಹೀಗೆ, ಇವರ್–ಈ ರಾಜರು; ಇನ್ನರ್–ಇಂಥವರು, ಈ ದೊರೆಯರ್– ಈ ಯೋಗ್ಯತೆಯನ್ನುಳ್ಳವರು, ಎಂದು, ಅಱಿವಂತಿರೆ–ತಿಳಿಯುವ ಹಾಗೆ, ಪೇೞ್ದುವೇೞ್ದು– (ಚೇಟಿಯು) ಹೇಳಿ ಹೇಳಿ, ರಾಜಾಂತರದಿಂದೆ–ಒಬ್ಬ ರಾಜನಿಂದ ಇನ್ನೊಬ್ಬ ರಾಜನ ಬಳಿಗೆ, ರಾಜಸುತೆಯಂ–ದ್ರೌಪದಿಯನ್ನು, ಅಂತು–ಹಾಗೆ, ನಯದಿಂದವಳುಯ್ದಳ್–ನಯವಾಗಿ ಅವಳು ಕರೆದುಕೊಂಡು ಹೋದಳು. ಹೇಗೆಂದರೆ, ಸದ್ಭ್ರಾಂತ….ರೇಖೆ : ಸದ್ಭ್ರಾಂತ–ಚೆನ್ನಾಗಿ ಬೀಸುತ್ತಿರುವ, ಸಮೀರಣ–ಗಾಳಿಯಿಂದ, ಉತ್ಥಿತ–ಮೇಲೆದ್ದ, ವಿಶಾಳ–ಅಗಲವಾದ, ವಿಳೋಳ–ತೂಗಾಡುತ್ತಿರುವ, ತರಂಗ–ಅಲೆಗಳ, ರೇಖೆ–ಸಾಲುಗಳು, ಮಾನಸಹಂಸೆಯಂ– ಮಾನಸ ಸರೋವರದ ಹಂಸಪಕ್ಷಿಯನ್ನು, ಪದ್ಮಾಂತರದಿಂದಂ–ಪದ್ಮದಿಂದ ಪದ್ಮಕ್ಕೆ, ಇಂಬಱಿದು–ಅವಕಾಶವನ್ನು ತಿಳಿದು, ಉಯ್ವಮಾರ್ಗದಿಂ–ಕರೆದುಕೊಂಡು ಹೋಗುವ ರೀತಿಯಿಂದ, ಅವಳ್, ಉಯ್ದಳ್. (ರಘುವಂಶ ೯–೨೬ ಹೋಲಿಸಿ)
ವಚನ : ಮಗುೞೆವರೆ–ಹಿಂದಿರುಗಿ ಬರಲು; ಚಾಪಮನೇಱಿಸಿಯುಂ–ಬಿಲ್ಲಿಗೆ ಹೆದೆ ಯನ್ನು ಹೂಡಿಯೂ, ಅಯ್ದುಶರದೊಳ್–ಐದು ಬಾಣಗಳಲ್ಲಿ, ಜಂತ್ರದಮೀನಂ ಯಂತ್ರದ ಮೀನನ್ನು, ಇಸಲಾರ್ಪೊಡೆ–ಹೊಡೆಯಲು ಸಮರ್ಥರಾದ ಪಕ್ಷದಲ್ಲಿ, ಎಚ್ಚು–ಬಾಣ ಪ್ರಯೋಗ ಮಾಡಿ, ಗೆಲ್ಲಂಗೊಂಡು–ಗೆಲುವನ್ನು ಹೊಂದಿ, ಆಮಾಮೆ–ನಾವು ನಾವೇ, ಎನಿಬರಾನುಂ–ಎಷ್ಟೋ ಜನ.
೫೮. ಏಱಿಪೆಮೆಂದವರ್–ಏರಿಸುತ್ತೇವೆ ಎಂದು ಹೇಳಿದವರು, ನೆಲದಿಂ–ನೆಲದಿಂದ, ಎತ್ತಲುಂ ಆಱದೆ–ಬಿಲ್ಲನ್ನು ಎತ್ತಲು ಕೂಡ ಅಸಮರ್ಥರಾಗಿ, ಬಿೞ್ದು–ಬಿದ್ದು; ನೆತ್ತರಂ– ರಕ್ತವನ್ನು, ಕಾಱಿಯುಂ–ವಾಂತಿ ಮಾಡಿಕೊಂಡೂ, ಎತ್ತಿ ಕೆಯ್ಯುಡಿದುಂ–ಎತ್ತಿ ಕೈಮುರಿದು ಹೋಗಿಯೂ, ಆಗಳೆ ಕಾಲುಡಿದುಂ–ಆಗಲೇ ಕಾಲುಮುರಿದು ಹೋಗಿಯೂ, ಬೞಲ್ದು– ಸುಸ್ತಾಗಿ, ಪಲ್ಲಾಱಿ–ಹಲ್ಲು ಒಣಗಿಹೋಗಿ, ಪೊಡರ್ಪುಗೆಟ್ಟು–ಚೈತನ್ಯ ಕುಂದಿ, ಉಸಿರಲ ಪ್ಪೊಡಮಾಱದೆ–ಮಾತಾಡಲು ಕೂಡ ಶಕ್ಯರಾಗದೆ, ಪೋದೊಡೆ–ಹೊರಟು ಹೋದರೆ, ಆಗಳ್–ಆಗ, ಆನ್ ಏಱಿಪೆನೆಂದು–ನಾನು ಹೆದೆಯನ್ನು ಏರಿಸುತ್ತೇನೆಂದು, ಸುಯೋಧನಂ– ದುರ್ಯೋಧನನು, ಪೊಚ್ಚಱಿಸಿ–ಸತ್ವಯುಕ್ತನಾಗಿ ಬಂದು, ಚಾಪಮಂ–ಬಿಲ್ಲನ್ನು.
ವಚನ : ಮೂಱುಸೂೞ್–ಮೂರು ಬಾರಿ, ಬಲವಂದು–ಪ್ರದಕ್ಷಿಣೆ ಮಾಡಿ, ಪೊಡೆ ವಟ್ಟು– ನಮಸ್ಕರಿಸಿ.
೫೯. ಪಿಡಿದು–ಹಿಡಿದುಕೊಂಡು, ಆರ್ಪಭರದಿಂ–ಶಕ್ಯವಾದಷ್ಟು ವೇಗದಿಂದ, ಎತ್ತಲ್ಕೆ– ಎತ್ತುವುದಕ್ಕೆ, ಒಡರಿಸಿದೊಡೆ–ತೊಡಗಿದರೆ, ನೆಲದಿಂ–ನೆಲದಿಂದ, ಅಣಮೆ–ಕೊಂಚವೂ, ಬಿಲ್ ತಳರದೆ–ಬಿಲ್ಲು ಅಲುಗಾಡದೆ, ನಿಲ್ತೊಡೆ–ನಿಂತು ಬಿಟ್ಟರೆ, ಗುಡುಗುಡುಗಡು ಗೊಳ್ಳೆಂದು–ಗುಡು ಗುಡು ಗುಡು ಗೊಳ್ ಎಂಬುದಾಗ, ಒಡನೆ–ಒಟ್ಟಿಗೇ, ಆರೆ–ಪ್ರೇಕ್ಷಕರು ನಕ್ಕು ಕೂಗಿಕೊಳ್ಳಲು, ಸುಯೋಧನಂ–ದುರ್ಯೋಧನನು, ಕರಂ–ಬಹಳವಾಗಿ, ಸಿಗ್ಗಾದಂ– ನಾಚಿಕೆಪಟ್ಟುಕೊಂಡನು.
ವಚನ : ಆಳ್ದನ–ಸ್ವಾಮಿಯ; ಸಿಗ್ಗಾದ ಮೊಗಮಂ ಕಂಡು–ನಾಚಿಕೆಯಿಂದ ಕುಗ್ಗಿದ ಮುಖವನ್ನು ನೋಡಿ.
೬೦. ಆ ಕಾನೀನಂ–ಆ ಕರ್ಣನು, ಆಂ ಏಱಿಪೆನ್–ನಾನು ಬಿಲ್ಲಿಗೆ ಹೆದೆಯನ್ನು ಏರಿಸುತ್ತೇನೆ, ಎಂದು, ಬಂದು, ಎತ್ತಿ, ಬಿಲ್ಲಂ–ಬಿಲ್ಲನ್ನು, ಏಱಿಸಿ–ಹೆದೆಯನ್ನು ಕಟ್ಟಿ, ತೆಗೆಯಲ್–ಹೆದೆಯನ್ನು ಎಳೆಯಲು, ತಾಂ–ತಾನು, ಆರ್ತನಿಲ್ಲ–ಸಮರ್ಥನಾಗಲಿಲ್ಲ; ತೆಗೆವಂತು–ಹಾಗೆ ಸೆಳೆಯುವಂತೆ, ಆ ನೃಪತಿಗಳ್–ಆ ರಾಜರು, ಅರಿಗನ–ಅರ್ಜುನನ, ಇದಿರೊಳ್–ಎದುರಿನಲ್ಲಿ, ಏಂ ಪುಟ್ಟಿದರೇ–ಹುಟ್ಟಿದವರೇನು? ಅಲ್ಲ.
ವಚನ : ಬಿಲ್ಲುಂ ಬೆಱಗುಮಾಗಿ–ತಳಮಳಗೊಂಡು, ಕಕ್ಕಾಬಿಕ್ಕಿಯಾಗಿ, ಸಿಗ್ಗಾಗಿ– ಸಂಕೋಚಪಟ್ಟುಕೊಂಡು, ಈ ಜನವಡೆಯೊಳ್–ಈ ಜನಸಮೂಹದಲ್ಲಿ; ಆರಾನುಂ– ಯಾರಾದರೂ, ಸಾಱುವುದುಂ–ಘೋಷಿಸುತ್ತಲು.
೬೧. ಅರ್ಜುನ ಬಂದದ್ದು : ಮುಸುಕಿದ–ಮುಚ್ಚಿಕೊಂಡ, ನೀರದಾವಳಿಗಳಂ–ಮೋಡಗಳ ಸಾಲನ್ನು, ಕಿರಣಂಗಳೊಳ್–ಕಿರಣಗಳಲ್ಲಿ, ಒತ್ತಿ–ಅಮುಕಿ, ತೇಜಂ–ಪ್ರಕಾಶವು, ಅರ್ವಿಸುವಿನಂ–ವ್ಯಾಪಿಸುತ್ತಿರಲು, ಆಗಳ್–ಆಗ, ಒರ್ಮ್ಮೊದಲೆ–ಒಟ್ಟಿಗೇ, ಮೂಡುವ– ಹುಟ್ಟುವ, ತಲೆದೋರುವ, ಬಾಳದಿನೇಶ ಬಿಂಬದ–ಬಾಲಸೂರ್ಯ ಮಂಡಲದ, ಒಂದೆಸ ಕದಿಂ–ಒಂದು ಶೋಭೆಯಿಂದ, ಆ ದ್ವಿಜನ್ಮ–ಆ ಬ್ರಾಹ್ಮಣರ, ಸಭೆಯಂ–ಸಭೆಯಿಂದ, ಪೊಱಮಟ್ಟೊಡೆ–ಹೊರಬಂದರೆ, ಆ ಕದನ ತ್ರಿಣೇತ್ರನಾ–ಯುದ್ಧದಲ್ಲಿ ರುದ್ರನಂತಿರುವ ಆ ಅರ್ಜುನನ, ಮಾಸಿದ–ಮಾಸಿಹೋದ, ಅಂದಮುಂ–ರೀತಿಯೂ, ಪಸದನದಂತೆ– ಅಲಂಕಾರದ ಹಾಗೆ, ಕಣ್ಗೆ–ಕಣ್ಣುಗಳಿಗೆ, ಎಸೆದು ಪ್ರಕಾಶಿಸಿ, ತೋಱಿದುದು–ತೋರಿತು.
ವಚನ : ಅರಾತಿಕಾಲಾನಲನಂ–ಅರ್ಜುನನನ್ನು; ಕಡ್ಡುವಂದ–ಗಡ್ಡ ಬಂದ, ದೊಡ್ಡ ರೆಲ್ಲಂ–ವೃದ್ಧರೆಲ್ಲ, ಮುಸುಱಿ–ಮುತ್ತಿಕೊಂಡು.
೬೨. ಸಂಗತ ಸತ್ವರ್–ಸತ್ವದಿಂದ ಕೂಡಿದ, ಸಶಕ್ತರಾದ; ಕುರುರಾಜಂಗಂ ಕರ್ಣಂಗಂ– ದುರ್ಯೋಧನನಿಗೂ ಕರ್ಣನಿಗೂ, ಏಱಿಸಲ್ಕೆ–ಹೆದೆಯೇರಿಸುವುದಕ್ಕೆ, ಅರಿದಂ–ಅಸಾಧ್ಯ ವಾದ, ಇದಂ–ಈ ಬಿಲ್ಲನ್ನು, ತಾಂ ಏಱಿಪಂ ಗಡಂ–ತಾನು ಏರಿಸುವನಲ್ಲವೆ, ಈ ಪಾರ್ವಂಗೆ– ಈ ಹಾರುವನಿಗೆ, ಅಕ್ಕಟ–ಅಯ್ಯೊ, ಒಂದು ಮರುಳ್–ಒಂದು ಭೂತ; ಮೈಯೊಳ್– ಮೈಯಲ್ಲಿ, ಉಂಟಕ್ಕುಂ–ಪ್ರವೇಶವಾಗಿದೆಯಲ್ಲವೆ?
ಇಲ್ಲಿ ‘ಸಂಗತಸತ್ವಂ ಕುರುರಾಜಂಗಂ ಕರ್ಣಂಗಂ’ ಎಂಬುದನ್ನು ಉದಾಹರಿಸಿ ‘ಸಂಗತ ಸತ್ವಂಗೆ ಕುರುರಾಜಂಗೆ ಕರ್ಣಂಗೆ’ ಎಂದು ಅನ್ವಯಿಸಿಕೊಳ್ಳಬೇಕೆಂದು ಶದಮ–ದಲ್ಲಿ ಹೇಳಿದೆ; ಒಂದು ಪ್ರತಿಯಲ್ಲಿ ‘ಸಂಗತಸತ್ವಂ’ ಎಂಬ ಪಾಠ ಕಾಣುತ್ತದೆ. ಆದ್ದರಿಂದ ‘ಸಂಗತ ಸತ್ವಂ’ ಎಂಬ ಪಾಠವಿರಲೂಬಹುದು.
ವಚನ : ಬಾಯ್ಗೆ ವಂದುದನೆ–ಬಾಯಿಗೆ ಬಂದದ್ದನ್ನೇ, ಅವಯವದಿಂ–ಸುಲಭವಾಗಿ, ಶ್ರಮವಿಲ್ಲದೆ; ತನ್ನ ಬಗೆದ ಕಜ್ಜಮಂ–ತಾನು ಎಣಿಸಿದ ಕಾರ್ಯವನ್ನು, ಗೊಲೆಗೊಳಿಸು ವಂತೆ–ತುದಿಮುಟ್ಟಿಸುವಂತೆ (ಬಿಲ್ಲಿನ ತುದಿಗೆ, ಕೊಪ್ಪಿಗೆ, ಸೇರಿಸುವಂತೆ), ಆ ಬಿಲ್ಲ ಗೊಲೆಯನ್ ಏಱಿ ನೂಂಕಿ–ಆ ಬಿಲ್ಲಿನ ತುದಿಯನ್ನು ಮೇಲಕ್ಕೆ ತಳ್ಳಿ.
೬೩. ಅರ್ಜುನ ಬಿಲ್ಲಿಗೆ ಬಾಣವನ್ನು ಹೂಡಿ ಹೊಡೆದದ್ದು: ದೆಸೆ ಕಂಪಂಗೊಳೆ–ದಿಕ್ಕು ಗಳು ನಡುಗುತ್ತಿರಲು, ದಿವ್ಯಶರಮಂ ಕೊಂಡು–ದಿವ್ಯವಾದ ಬಾಣವನ್ನು ತೆಗೆದುಕೊಂಡು, ಕರ್ಣಾದಿಗಳ್–ಕರ್ಣನೇ ಮೊದಲಾದವರು, ಕಂಡು, ಬೆಕ್ಕಸಮಾಗಿರ್ಪಿನಂ–ಅಚ್ಚರಿಪಡು ತ್ತಿರಲು, ಒಂದೆಸೂೞೆ–ಒಂದೇ ಸಲಕ್ಕೆ, ತೆಗೆದು–ಸೆಳೆದು, ಆಕರ್ಣಾಂತಮಂ ತಾಗೆ–ಕಿವಿಯ ಕೊನೆಯನ್ನು ಮುಟ್ಟುತ್ತಿರಲು, ಆರ್ಗೆ–ಯಾರಿಗೆ, ನಿಟ್ಟಿಸಲ್–ನೋಡಲು, ಆರ್ಗೆ– ಯಾರಿಗೆ, ಇಸಲಕ್ಕುಂ–ಪ್ರಯೋಗ ಮಾಡುವುದು ಆಗುತ್ತದೆ, ಎಂಬ–ಎನ್ನುವ, ಎಸಕದ– ಕಾರ್ಯವನ್ನುಳ್ಳ, ಮೀನಂ–ಮೀನನ್ನು, ಸಮಂತು–ಚೆನ್ನಾಗಿ, ಎಚ್ಚು–ಹೊಡೆದು, ವಿದ್ವಿಷ್ಟ ವಿದ್ರಾವಣಂ–ಅರ್ಜುನನು, ದೇವರುಮಂ–ದೇವತೆಗಳನ್ನೂ, ಧನುರ್ಧರರುಮಂ– ಬಿಲ್ಗಾರರನ್ನೂ, ಮೆಚ್ಚಿಸಿದಂ–ಮೆಚ್ಚುವಂತೆ ಮಾಡಿದನು.
ವಚನ : ಮೀನಕೇತನಮಾಗೆಯುಂ–ಮೀನಿನ ಧ್ವಜವಾಗಲು, ಮಕರಧ್ವಜವಾಗಲು; ಸಹಜ ಮನೋಜನಂ–ಅರಿಕೇಸರಿಯನ್ನು (=ಅರ್ಜುನನನ್ನು), ಮನೋಜನೆಂದೆ ಬಗೆದು– ಮನ್ಮಥನೆಂದೇ ಭಾವಿಸಿ.
೬೪. ದ್ರೌಪದಿ ಅರ್ಜುನನಿಗೆ ಸ್ವಯಂವರ ಮಾಲೆಯನ್ನು ಹಾಕಿದಳು : ಕಡೆಗಣ್– ಕುಡಿನೋಟ, ನಡೆ–ಅರ್ಜುನನ ಮೈಯಲ್ಲಿ ನಾಟಿಕೊಳ್ಳಲು, ಮನಂ–ಮನಸ್ಸು, ಬಯಸೆ– ಇಷ್ಟಪಡಲು, ತಳ್ತು–ಸೇರಿಸಿ, ಅಮರ್ದು–ಗಾಢವಾಗಿ, ಅಪ್ಪಲೆ–ಅಪ್ಪಿಕೊಳ್ಳುವುದಕ್ಕೇ, ತೊಳ್ಗಳ್–ತೋಳುಗಳು, ಆಸೆಯೊಳ್–ಆಸೆಯಲ್ಲಿ, ತೊಡರ್ದಿರೆ–ಸಿಲುಕಿಕೊಂಡಿರಲು, ಘರ್ಮಜಲಂ–ಬೆವರಿನ ಬಿಸಿನೀರು, ಪೊಣ್ಮೆ–ಹೊಮ್ಮಲು, ಭಯಂ–ಅಂಜಿಕೆಯು, ಉಣ್ಮೆ– ಹುಟ್ಟಲು, ನಾಣ್–ಲಜ್ಜೆಯು, ಕಿಡೆ–ಹೋಗಲು, ಕೆಡಲು, ಕೆಯ್ತಂ–ಮಾಟಗಳು, ಚೇಷ್ಟೆಗಳು, ವಿಕಾರದೊಳ್–ಅಂಗವಿಕಾರದಲ್ಲಿ, ತೊಡರ್ದಿರೆ–ಸಿಲುಕಿರಲು, ಉಮ್ಮಳಿಪ ಕನ್ನೆಗೆ–ವ್ಯಾಕುಲ ಪಡುವ ದ್ರೌಪದಿಗೆ, ಸುಂದರಮಾಲೆಯೆಂಬ ಚೇಟಿ, ಮಾಲೆಯಂ–ಸ್ವಯಂವರ ಹಾರವನ್ನು, ತಡೆಯದೆ–ತಡಮಾಡದೆ, ನೀಡೆ–ಕೊಡಲು, ಸತಿ–ದ್ರೌಪದಿ, ಮಾಣದೆ–ಬಿಡದೆ, ಗುಣಾರ್ಣ ವನಂ–ಅರ್ಜುನನಿಗೆ, ಮಾಲೆ ಸೂಡಿದಳ್–ಮಾಲೆಯನ್ನು ಮುಡಿಸಿದಳು, ಹಾಕಿದಳು. ವಿವಿಧ ಭಾವಗಳ ತುಮುಲಾಟ ಇಲ್ಲಿ ಚಿತ್ರಿತವಾಗಿದೆ.
ವಚನ : ಬದ್ದವಣದ ಪಱೆಗಳಂ–ಮಂಗಳ ವಾದ್ಯಗಳನ್ನು, ಬದ್ದವಣ ವರ್ಧಮಾನ; ಸುರತ ಮಕರಧ್ವಜನಂ–ಅರಿಕೇಸರಿಯ ಬಿರುದು, ಅರ್ಜುನನನ್ನು; ಸಿವಿಗೆಯನೇಱಿಸಿ– ಪಲ್ಲಕ್ಕಿಯನ್ನು ಹತ್ತಿಸಿ, ಶಿಬಿಕಾ ಸಿವಿಗೆ; ನೆಲಂ ಮೂರಿವಿಟ್ಟಂತೆ ಬರೆ–ನೆಲಂ ಎಂದರೆ ನೆಲವು, ಅಲ್ಲಿನ ಜನಗಳು, ಮೂರಿವಿಟ್ಟು–ಗುಂಪಾಗಿ, ಗುಂಪು ಸೇರಿ; ಅಂತೆಬರೆ–ಹಾಗೆಯೇ ಬರಲು; ಏಗೆಯ್ವಂ ಎನೆ–ಏನು ಮಾಡೋಣ ಎನ್ನಲು; ಇಲ್ಲಿನ ಮೂರಿವಿಡು ಎಂಬುದಕ್ಕೆ ೨–೮೬ ವಚನ ನೋಡಿ. ಮೂರಿ=ಬಾಯಿ; ಮೂರಿವಿಡು–ಬಾಯ್ವಿಡು: ಮಾರಿಯ ಮೂರಿಯ ಮೇಲೆಱಗುವಂದದೆ (ವರ್ಧಮಾನ ಪುರಾಣ–ಆಚಣ್ಣ, ೩–೪೪); ಜನರ್ ಮೂರಿವಿಡುತ್ತುಂ ನಿಂದು (ಅದೇ ೮–೩೪); ಮೂರಿ=ಸಮೂಹ. “ಮಾರಿಯ ಮೂರಿ ರಕ್ಕಸರ ಜಂಗುಳಿ” ಎಂದು ಪ್ರಯೋಗವುಂಟು.
೬೫. ಕರ್ಣನ ಮಾತು : ಜನಮೆಲ್ಲಂ ನೆರೆದು–ಜನರೆಲ್ಲ ಸೇರಿ, ಅಕ್ಕಟ–ಅಯ್ಯೊ, ಅಣ್ಣರಿವರ್–ಈ ಅಣ್ಣಗಳು, ಇಂದೇವಂದರ್–ಇಂದು ಏಕೆ ಬಂದರು, ಏವೋದರ್–ಏಕೆ ಹೋದರು, ಎಂಬಿನಮೇಂ–ಎನ್ನುತ್ತಿರಲು ಏನು, ಪೋಪಮೆ–ಹೋಗೋಣವೆ? ಬೇಡ. ಯಾರೋ ಏನೋ ಏಕೋ ಈ ಅಣ್ಣಗಳೆಲ್ಲ ಬಂದರು, ಹೋದರು ಎಂದು ತಿರಸ್ಕಾರದಿಂದ ಜನ ಆಡಿಕೊಳ್ಳುವಂತೆ ನಾವು ಹೋಗೋಣವೊ? ಎಂದು ತಾತ್ಪರ್ಯ. ನಾಡ–ನಾಡಿನ, ಕೂಟಕುಳಿಗಳ್ಗೆ–ಗುಂಪು ಸೇರುವ ಜನಕ್ಕೆ, ಏದೋಸಂ–ಏನು ದೋಷ? ಏನೂ ಇಲ್ಲ. ನಾವು ಕೂಟಕುಳಿಗಳಲ್ಲವಾದ್ದರಿಂದ ಎಂದರೆ ನೆರವಿಯ ಜನವಲ್ಲದ್ದರಿಂದ, ರಾಜರಾಗಿರುವುದ ರಿಂದ, ಸುಮ್ಮನೆ ಹೋಗುವುದು ನಮಗೆ ದೋಷ ಎಂದು ಭಾವ. ಏಂಬನ್ನಂ–ಏನು ಸೋಲು; ಒಂದನೆ ಕೇಳ್–ಒಂದು ವಿಷಯವನ್ನೇ, ಕೇಳ್–ಗಮನಿಸು; ಆಂತರನಿಕ್ಕಿ–ಎದುರಿಸಿದವರನ್ನು ಹೊಡೆದೋಡಿಸಿ, ಮಿಕ್ಕ–ಕೈಮೀರಿ ಹೋದ, ವಿಜಯ ಶ್ರೀಕಾಂತೆಗಂ–ಜಯಲಕ್ಷ್ಮಿಗೂ, ಕಾಂತೆಗಂ–ದ್ರೌಪದಿಗೂ, ನಿನಗಂ–ನಿನಗೂ, ದೋರ್ಬಲದಿಂದಂ–ನನ್ನ ಬಾಹುಬಲದಿಂದ, ಒಂದೆ ಪಸೆಯೊಳ್–ಒಂದೇ ಹಸೆಮಣೆಯ ಮೇಲೆ, ಪಾಣಿಗ್ರಹಂಗೆಯ್ಯೆನೇ–ವಿವಾಹವನ್ನು ಮಾಡೆನೆ? ಎಂದರೆ ಮಾಡಿಸುತ್ತೇನೆ. ಇಲ್ಲಿ ಅಣ್ಣರ್ ಎಂಬುದನ್ನು ತಿರಸ್ಕಾರಾರ್ಥದಲ್ಲಿ ಬಳಸಿದೆ; “ಅತ್ತಿಮಬ್ಬೆಯ ಕೆಲದೊಳ್ ರಂಜಿಪರೆ ಮೀಸೆವೊತ್ತಣ್ಣಂಗಳ್” ಎಂಬಲ್ಲಿರುವಂತೆ. ಕೂಟ ಕೂಡು+ಕುಳಿ; ಕೂಟವಾಗುವುದೇ, ಗುಂಪಾಗುವುದೇ, ಶೀಲವಾಗಿರುವವನು. ಈ ಪದ್ಯದಲ್ಲಿನ ದೇಸಿಯ ನುಡಿಗಟ್ಟುಗಳು ಆ ಕಾಲದ ಜನರ ಬಾಯಿಮಾತಿನಂತಿವೆ; ಅತಿ ರಮಣೀಯ ಶೈಲಿ.
೬೬. ಶಲ್ಯನ ಮಾತು : ಕನ್ನೆಯಂ–ಕನ್ಯೆಯನ್ನು, ಕುಡುವೊಡೆ–ದಾನವಾಗಿ, ಪಾಣಿಗ್ರಹಣ ವಾಗಿ ಕೊಡುವ ಪಕ್ಷದಲ್ಲಿ, ನಿಸ್ತ್ರಪಂ–ಲಜ್ಜೆಯಿಲ್ಲದೆ, ನಿಸ್ಸಂಕೋಚವಾಗಿ, ಕುಡುವುದು– ಕೊಡುವುದು; ಬೆಸೆಕೋಲಂ–ಹತ್ತಿ ಎಕ್ಕುವ ಬಿಲ್ಲನ್ನು, ಏಱಿಸಿದಂ–ಹೆದೆ ಕಟ್ಟಿದನು, ಎಂದು–ಎಂಬುದಾಗಿ, ಪೇೞ್–ಹೇಳು, ದ್ವಿಜಕುಲಂಗೆ–ಬ್ರಾಹ್ಮಣಕುಲದವನಿಗೆ, ಕುಡುವುದೆ– ಕನ್ಯಾದಾನ ಮಾಡುವುದೆ? ಇದು, ವಿಶ್ವನರೇಂದ್ರವೃಂದದೊಳ್–ಸಮಸ್ತ ರಾಜಸಮೂಹ ದಲ್ಲಿ, ತೊಡರ್ದ–ಸೇರಿಕೊಂಡ, ಪರಾಭವಂ–ಅವಮಾನವು; ಆನ್–ನಾನು, ದ್ರುಪದನಂ– ದ್ರುಪದನನ್ನು, ತಱಿದು–ಕತ್ತರಿಸಿ, ಒಟ್ಟದೆ–ರಾಶಿ ಹಾಕದೆ, ಕಡೆಗಣಿಸಿರ್ದೊಡೆ–ಉಪೇಕ್ಷೆ ಮಾಡಿದರೆ, ಎನ್ನ–ನನ್ನ, ಕಡುಗೊರ್ವಿದ–ಅತಿಶಯವಾಗಿ ಕೊಬ್ಬಿದ, ತೋಳ್ಗಳ–ಬಾಹುಗಳ, ಕೊರ್ವು–ಕೊಬ್ಬು, ಅದೇವುದೊ–ಅದು ಯಾತಕ್ಕೋ? ಬೆಸೆಕೋಲ್ ಬಸೆ–ಕಾರ್ಪಾಸ ಚಾಪೇ+ಕೋಲ್=ಹತ್ತಿಯ ಬಿಲ್ಲಿನ ಕೋಲು, ಕಟ್ಟಿಗೆ. ಅರ್ಜುನನು ಏರಿಸಿದ ಬಿಲ್ಲನ್ನು ಅತಿ ತಿರಸ್ಕಾರವಾಗಿ ಶಲ್ಯ ಹೇಳುತ್ತಾನೆ.
ವಚನ : ಕೆಳರ್ದು–ಕೆರಳಿ, ಕೋಪಿಸಿ; ಉತ್ಸಾಹಿಸಿ–ಪ್ರೇರಿಸಿ; ನೋಡೆ ನೋಡೆ–ನೋಡು ತ್ತಿರುವಾಗಲೇ.
೬೭. ಹಯಂ–ಕುದುರೆಗಳು, ಪಕ್ಕರೆಯಿಕ್ಕಿ–ಜೀನುಗಳನ್ನು ಹಾಕಿಸಿಕೊಂಡು, ಬಂದುವು; ಘಟೆ–ಆನೆಗಳು, ಪಣ್ಣಿದುವು–ಸುಸಜ್ಜಿತವಾದುವು; ಆಯುಧಂಗಳಿಂ–ಆಯುಧಗಳಿಂದ, ರಥಂ–ರಥಗಳು, ತೆಕ್ಕನೆ ತೀವಿ–ಚೆನ್ನಾಗಿ ತುಂಬಿದವಾಗಿ, ಬಂದುವು; ಒಂದು ಅಣಿ–ಒಂದು ಸೈನ್ಯದ ಸಾಲು, ಪುಲಿವಿಂಡುವೊಲ್–ಹುಲಿಯ ಹಿಂಡಿನಂತೆ, ಆದ ಅಳುರ್ಕೆ–ಉಂಟಾದ ವ್ಯಾಪ್ತಿ, ಹರವು, ಕೈಮಿಕ್ಕಿರೆ–ಕೈಮೀರಿರಲು, ಅಳತೆ ಮೀರಿರಲು, ಬಂದುದು; ರಣಾನಕರಾವಂ– ಯುದ್ಧಭೇರಿಗಳ ಆರ್ಭಟ, ಅಳುಂಬಮಾದುದು–ಅತಿಶಯವಾಯಿತು: ಇವರ್ಗೆ–ಇವರಿಗೆ, ಮಿಕ್ಕು–ಮೀರಿ, ಬರ್ದುಂಕುವನ್ನರ್–ಜೀವಿಸುವಂಥವರು, ಆರ್–ಯಾರಿದ್ದಾರೆ, ಎಂಬಿ ನೆಗಂ–ಎನ್ನುತ್ತಿರಲು, ರಾಜಕಂ–ರಾಜರ ಸಮೂಹ, ಮಸಗಿತ್ತು–ವಿಜೃಂಭಿಸಿತು. ರಣಕ್ಕೆ ಸಿದ್ಧತೆ ಎಷ್ಟು ಬೇಗ ನಡೆಯಿತೆಂಬುದನ್ನು ಬಿಡಿವಾಕ್ಯಗಳ ಪದ್ಯದ ದ್ರುತಶೈಲಿಯೇ ತೋರಿಸುತ್ತದೆ.
ವಚನ : ನೆಲಂ ಮೂರಿವಿಟ್ಟಂತೆ–ನೆಲವು (ಜನರು) ಗುಂಪಾದ ಹಾಗೆ, ತಳರ್ದು–ಚಲಿಸಿ, ಹೊರಟು.
೬೮. ಈ ರಾಜರುಗಳ ಸೈನ್ಯವನ್ನು ಸಾಗರಕ್ಕೆ ಹೋಲಿಸಿದೆ : ಮಿಳಿರ್ವ–ಅಲುಗಾಡುವ, ಕೇತನರಾಜಿಗಳ್–ಬಾವುಟಗಳ ಸಾಲುಗಳು, ತೆರೆಗಳ–ಅಲೆಗಳ, ಬಂಬಲಂ–ಸಮೂಹವನ್ನು; ಎತ್ತಿಸಿದ–ಎತ್ತಿದ, ಬೆಳ್ಗೊಡೆಗಳ್–ಬಿಳಿ ಕೊಡೆಗಳು, ಶ್ವೇತಚ, ತ್ರಿಗಳು, ಓಳಿವಟ್ಟ–ಸಾಲಾದ, ಬೆಳ್ನೊರೆಗಳ–ಬಿಳಿನೊರೆಗಳ, ಪಿಂಡಂ–ಸಮೂಹವನ್ನು; ಭಯಂಕರ ಕರಿಗಳ್–ಭೀಕರವಾದ ಆನೆಗಳು, ಮಕರಂಗಳಂ–ಮೊಸಳೆಗಳನ್ನು; ಉಳ್ಕುವ–ಹೊಳೆಯುವ, ಕೈದುಗಳ್–ಆಯುಧ ಗಳು, ತೆಱಂಬೊಳೆವ–ಬಗೆಬಗೆಯಾಗಿ ಹೊಳೆಯುವ, ಮೀಂಗಳಂ–ಮೀನುಗಳನ್ನು, ನಿರಾಕರಿ ಸಿರೆ–ಕಡೆಗಣಿಸಿರಲು, ನರಾಧಿಪ ಸೈನ್ಯಸಾಗರಂ–ರಾಜರ ಸೈನ್ಯವೆಂಬ ಸಾಗರವು, ಮೇರೆದಪ್ಪಿ– ಮೇರೆಯನ್ನು ಮೀರಿ, ಕವಿದತ್ತು–ಮುತ್ತಿಕೊಂಡಿತು.
ವಚನ : ಜಳನಿಧಿಯ–ಸಮುದ್ರದ, ಕಳಕಳಮಂ–ಅಬ್ಬರವನ್ನು, ಘೋಷವನ್ನು; ಪೊೞಲಂ ಪುಗಲೊಲ್ಲದೆ–ಪಟ್ಟಣವನ್ನು ಪ್ರವೇಶಿಸಲು ಇಷ್ಟಪಡದೆ, ಮನುಜ ಮಾಂಧಾತನಂ –ಅರ್ಜುನನನ್ನು (ಇದು ಅರಿಕೇಸರಿಯ ಬಿರುದು).
೬೯. ದ್ರುಪದನ ಮಾತು : ನೀಂ–ನೀನು, ಧನುಮಂ–ಬಿಲ್ಲನ್ನು, ತೆಗೆದು–ಬಾಣ ಹೂಡಿ ಕಿವಿವರೆಗೆ ಸೆಳೆದು, ಮೀನಂ–ಮೀನನ್ನು, ಎಚ್ಚು–ಹೊಡೆದು, ಅಳವಂ–ಪರಾಕ್ರಮವನ್ನು, ಕೈಕೊಂಡುದರ್ಕಂ–ಸ್ವೀಕರಿಸಿದುದಕ್ಕೂ; ಕರಂ–ವಿಶೇಷವಾಗಿ, ಈ ಕನ್ನಿಕೆ–ಈ ದ್ರೌಪದಿ, ನಿನಗೆ, ಸೋಲ್ತುದರ್ಕಂ–ಒಲಿದುದಕ್ಕೂ, ಇನಿತುಂ ರಾಜಕುಲಂ–ಇಷ್ಟು ರಾಜರ ಸಮೂಹ, ಎರ್ದೆಯೊಳ್–ಎದೆಯಲ್ಲಿ, ಕೋಪಾಗ್ನಿ–ಕೋಪವೆಂಬ ಉರಿ, ಕೈಗಣ್ಮೆ–ಅಧಿಕವಾಗಲು, ಬಂದು, ಸಮಸ್ತ ಭರದಿಂ–ಸಮಸ್ತ ಸೈನ್ಯಭಾರದಿಂದ, ಮೇಲೆೞ್ದುದು–ನಮ್ಮ ಮೇಲೆ ದಾಳಿ ಯಿಟ್ಟಿತು, ವಿದ್ವಿಷ್ಟ ವಿದ್ರಾವಣಾ–ಅರ್ಜುನನೇ, ನೀನಲ್ಲದೆ–ನಿನ್ನನ್ನು ಬಿಟ್ಟು, ಕಾವನಾವನೊ– ರಕ್ಷಿಸುವವನು ಯಾವನೋ? ಎನ್ನ ತಲೆಯಂ–ನನ್ನ ತಲೆಯನ್ನು, ಕಾವುದು–ಕಾಪಾಡು ವುದು, ರಕ್ಷಿಸುವುದು.
ವಚನ : ಅರಾತಿಕಾಳಾನಳಂ–ಅರ್ಜುನನು; ಕಾಳೆಗಮಂ ಪೆಱಗಿರ್ದು ನೋಡಿಂ– ಕಾಳಗವನ್ನು ಹಿಂದೆ ಇದ್ದು ನೋಡಿರಿ; ಶರಾಸನಂಗಳಂ–ಬಿಲ್ಲುಗಳನ್ನು; ಪೂಣೆಪುಗುವ– ಪ್ರತಿಜ್ಞೆ ಮಾಡಿ ಪ್ರವೇಶಿಸುವ (?); ಅರಾತಿ ಬಲಮಂ–ಶತ್ರುಸೈನ್ಯವನ್ನು, ಮಾರ್ಕೊಂಡು– ಎದುರಿಸಿ, ತೆಗೆನೆಱೆದು–ಆಕರ್ಣಾಂತವಾಗಿ ಬಾಣವನ್ನು ಸೆಳೆದು, ಇಸೆ–ಪ್ರಯೋಗಿಸಲು.
೭೦. ಸರಳ–ಬಾಣಗಳ, ಪೊದಳ್ದ–ವ್ಯಾಪಿಸಿದ, ಬಲ್ಸರಿಯ–ಬಲವಾದ ಮಳೆಯ, ಕೋಳ್ಗೆ–ಸುರಿತಕ್ಕೆ, ಇರಲಾಱದೆ–ಇರಲು ಅಶಕ್ತರಾಗಿ, ಬಿಲ್–ಬಿಲ್ಲು ಎಂದರೆ ಬಿಲ್ಗಾರರ ಸೈನ್ಯ, ತೆರಳ್ದು–ಹಿಮ್ಮೆಟ್ಟಿ; ದುರ್ಧರ ಹಯಂ–ಎದುರಿಸಲಾಗದ ಕುದುರೆಯ ಸೈನ್ಯ, ಅೞ್ಗಿ– ಹಾಳಾಗಿ; ಸಂದ ಅಣಿ–ಬಂದ ಪದಾತಿಸೈನ್ಯದ ಸಾಲು, ಸಂದಣಿಸಿ–ಒಟ್ಟಾಗಿ, [ಕೋಳ್ಗು] ದಿಗೊಂಡು–ಬಾಣದ ಏಟಿನಿಂದ ವ್ಯಥಿತರಾಗಿ; ಉದಗ್ರ–ಶ್ರೇಷ್ಠವಾದ, ಭೀಕರ–ಭಯಂಕರ ವಾದ, ರಥಂ–ರಥಗಳು, ಅೞ್ಗಿ–ನಾಶವಾಗಿ; ದಂತಿ ಘಟೆಗಳ್–ಬರುವ ಆನೆಯ ಸೈನ್ಯವು, ಪೆಱಗಿಟ್ಟೊಡೆ–ಹಿಂದೆ ಸರಿಯಲು, ಕಟ್ಟೆಗಟ್ಟಿದಂತಿರೆ–ಹಿಂದೆ ಓಡಿಬರುವ ಆನೆಯ ಸಾಲು ಗಳಿಂದ ಏರಿಯನ್ನು ಕಟ್ಟಿದ ಹಾಗಿರಲು, ಅರಾತಿಬಲಂ–ಶತ್ರುಸೈನ್ಯ, ತಳರ್ದತ್ತು–ಸರಿಯಿತು; ಕದನ ತ್ರಿಣೇತ್ರನಂ–ಅರ್ಜುನನನ್ನು, ಆಂಪವರಾರ್–ಎದುರಿಸುವವರಾರು? ಯಾರೂ ಇಲ್ಲ.
ಇಲ್ಲಿ ಕೋಳ್ಗುದಿಗೊಂಡು, ಕೊೞ್ಗುದಿಗೊಂಡು ಎಂದೆರೆಡು ಪಾಠಗಳಿವೆ. ಕೊಳ್– ಹೊಡೆ, ತಗುಲು ಎಂಬ ಧಾತುವಿನ ಭಾವನಾಮ ಕೋಳ್ ಎಂದರೆ ಪೆಟ್ಟು, ಹೊಡೆತ; ಕುದಿ+ಕೊಳ್=ಕುದಿಗೊಳ್ ಎಂದರೆ ಲಕ್ಷ್ಯಾರ್ಥ ನೋವನ್ನು ಪಡೆ. ಆದ್ದರಿಂದ ಈ ಪಾಠ ವನ್ನು ಪರಿಗ್ರಹಿಸಿದೆ. ಕೊೞ್ಗುದಿ ಎಂದರೆ ಅರ್ಥವಾಗುವುದಿಲ್ಲ; ಕೊೞ್ ಎಂದರೆ ಗಟ್ಟಿ ಯಾಗುವುದು, ಕೊಬ್ಬುವುದು, ಮಂದವಾಗುವುದು. ಕೊೞ್ಗೆಸಱ್–ಮಂದವಾದ ಕೆಸರು, ನೋಡಿ; ಇದರಿಂದ ಕುದಿ ಆಗುವುದು ಹೇಗೆ? ಆದ್ದರಿಂದ ಕೊೞ್ಗುದಿ ಎಂಬುದು ತ್ಯಾಜ್ಯ; ಕೋೞ್ಗುದಿ ಎಂದಿರಬಹುದೆ? ಕೋಡುವ–ಶೀತವಾದ+ಕುದಿ ಎಂದರೆ ಅರ್ಥವಿಲ್ಲ. ಆದ್ದರಿಂದ ಅದೂ ಪರಿಗ್ರಾಹ್ಯವಲ್ಲ. ಕೂೞ್ಗದಿ ಎಂದಿದ್ದಿರಬಹುದೆ? ಅನ್ನದ ಕುದಿಯನ್ನು ಹೊಂದಿ; ಅನ್ನ ಕುದಿಯುವಂತೆ ಕುದಿದು, ಮರುಗಿ, ವ್ಯಥೆಪಟ್ಟು ಎಂದಾಗಬಹುದು; ಆದರೆ ಈ ಪಾಠ ಊಹೆ ಮಾತ್ರ.
ವಚನ : ಆರ್ಣವ ನಿನಾದದಿಂದೆ–ಸಮುದ್ರದ ಘೋಷದಿಂದ, ಆರ್ದು–ಗರ್ಜಿಸಿ; ಕಿಱಿದು ಪೊೞ್ತು–ಸ್ವಲ್ಪ ಹೊತ್ತು.
೭೧. ಪಾರ್ವನ ಶರಾಸನ ವಿದ್ಯೆಯಂ–ಹಾರುವಯ್ಯನ ಬಿಲ್ವಿದ್ಯೆಯನ್ನು, ಗೆಲಲ್ಕೆ– ಗೆಲ್ಲುವುದಕ್ಕೆ, ಅರಿದು–ಅಸಾಧ್ಯ, ಎಂದು, ನೊಂದು–ವ್ಯಥೆಪಟ್ಟು, ನಿತ್ತರಿಸದೆ–ನಿಭಾಯಿ ಸದೆ, ಪಾರ್ವನೊಳ್–ಹಾರುವನಲ್ಲಿ, ಕಲಹಂ–ಯುದ್ಧವು, ಆಗದು–ಆಗಬಾರದು, ಚಿಃ–ಛೀ, ಇದು, ದೊರೆಯಲ್ತು–ಯೋಗ್ಯವಲ್ಲ, ಸಮಾನವಲ್ಲ, ಎಂದು, ಭಾಸ್ಕರ ಸುತಂ–ಸೂರ್ಯ ಪುತ್ರ ಕರ್ಣ, ಒಯ್ಯನೆ–ಮೆಲ್ಲಗೆ, ಓಸರಿಸೆ–ಹಿಂದೆ ಸರಿಯಲು; ಮರುತ್ಸುತಂ–ಭೀಮಸೇನನು, ಮದ್ರಮಹೀಶನುಮಂ–ಮದ್ರ ರಾಜನಾದ ಶಲ್ಯನನ್ನೂ, ವಿರಥನೆಮಾಡಿ–ರಥಹೀನನನ್ನಾಗಿ ಮಾಡಿ, ತಳ್ತು–ಹಿಡಿದು, ಮಲ್ಲಯುದ್ಧದೊಳ್–ಮಲ್ಲಗಾಳಗದಲ್ಲಿ, ಒರ್ಮೆಯೆ–ಒಂದೇ ಪಟ್ಟಿಗೆ, ನೆಲಕಿಕ್ಕಿದಂ–ನೆಲಕ್ಕೆ ಬೀಳಿಸಿದನು, ಅಪ್ಪಳಿಸಿದನು.
ವಚನ : ಸುಟ್ಟಿತೋಱಿ–ಬೆರಳಿನಿಂದ ತೋರಿಸಿ; ಅಮೋಘಂ–ನಿಶ್ಚಯವಾಗಿಯೂ; ಮೊಗಂದಿರಿದುದಂ–ಮುಖ ತಿರುಗಿಸಿದ್ದನ್ನು, ಎಂದರೆ ಹಿಮ್ಮೆಟ್ಟಿದ್ದನ್ನು, ಮನಂಗೆಟ್ಟು–ಧೈರ್ಯ ಕೆಟ್ಟು ಹೋಗಿ.
೭೨. ಕರಮೊಸೆದು–ಬಹಳ ಸಂತೋಷಪಟ್ಟು, ಆ ದ್ರುಪದಜೆಯೊಳ್–ಆ ದ್ರೌಪದಿ ಕಾರಣಳಾಗಿ, ನೆರೆದ–ಒಟ್ಟಾಗಿ ಸೇರಿದ, ಒಸಗೆಗೆ–ಸಂತೋಷಕ್ಕೆ, ತಮ್ಮ, ಬೀರಮಂ–ಶೌರ್ಯ ವನ್ನೂ, ಬಿಂಕಮುಮಂ–ಗರ್ವವನ್ನೂ, ತೆಱವುಂ–ತಪ್ಪು ಕಾಣಿಕೆಯೆಂದೂ, ತೆಲ್ಲಂಟಿಯು ಮೆಂದು–ಬಳುವಳಿಯೆಂದೂ, ಈವ ವೋಲ್–ಕೊಡುವ ಹಾಗೆ, ಅರಿಕೇಸರಿಗೆ, ಆಗಳ್– ಆಗ, ಬೆನ್ನಿತ್ತರ್–ಬೆನ್ನು ತೋರಿಸಿದರು, ಪರಾರಿಯಾದರು.
ಇಲ್ಲಿ ರೇಫ ಱಕಾರಗಳಿಗೆ ಪ್ರಾಸವಾಗಿರುವುದನ್ನು ಗಮನಿಸಬಹುದು. “ತೆಲ್ಲಂಟಿ ಯೆಂದು ನಿಬ್ಬಣಂ” –ಮುಯ್ಯಿ. ತೆಱವು ತಿಱು+ವು=ತೆರುವುದು, ಕಪ್ಪ.
ವಚನ : ಬಿಲ್ಲಕೊಪ್ಪಿನ ಮೇಲೆ–ಬಿಲ್ಲಿನ ತುದಿಯ ಮೇಲೆ;
೭೩. ನಿನ್ನಂ–ನಿನ್ನನ್ನೂ, ಉೞುಗಿಸಲುಂ–ಒಲಿಸುವುದಕ್ಕೂ, ಆಜಿಯೊಳ್–ಯುದ್ಧದಲ್ಲಿ, ಎನ್ನಂ–ನನ್ನನ್ನು, ಬೆಂಕೊಂಡು–ಅಟ್ಟಿ, ಕಾದಲುಂ–ಯುದ್ಧ ಮಾಡುವುದಕ್ಕೂ, ಬೀರರ್–ಶೂರರು, ಈಗಳ್–ಈಗ, ಬಂದು, ಬಿನ್ನನೆ ಮೊಗದಿಂ–ಮೌನ ಮುಖದಿಂದ, ಬೆನ್ನಿತ್ತುದಂ–ಪಲಾಯನವಾದುದನ್ನು, ಸರಸಿರುಹಮುಖೀ–ದ್ರೌಪದಿಯೇ, ಇನಿಸು ನೋಡ– ಒಂದಿಷ್ಟು ನೋಡು.
ವಚನ : ಎಂಬನ್ನೆಗಂ–ಎನ್ನುವಷ್ಟರಲ್ಲಿ, ಮಹಾವಿಭೂತಿಯಿಂ–ಮಹಾ ವೈಭವದಿಂದ.
೭೪. ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು. ಪೊೞಲೊಳಗೆ– ನಗರದಲ್ಲಿ, ಕನ್ನಡಿಯ, ಕಂಚಿನ, ತೋರಣದ, ಓಳಿಗಳ್–ಸಾಲುಗಳು, ತಳತ್ತಳಿಸಿ–ತಳತಳಿಸಿ, ಒಪ್ಪೆ–ಸೊಗಸಾಗಲು; ವಿಚಿತ್ರ ಕೇತು ತತಿಗಳ್–ವಿವಿಧವಾದ ಅನೇಕ ಬಾವುಟಗಳ ಸಮೂಹ, ಮಿಳಿರ್ದಾಡೆ–ಅಲುಗಾಡುತ್ತಿರಲು; ಪುರಾಂಗನಾ ಜನಂಗಳ–ನಗರದ ನಾರೀ ಜನಗಳ, ಜಯಜೀಯಮಾನರವಂ–ಜಯ, ಜೀಯ ಎನ್ನುವ ಶಬ್ದವು, ಇಕ್ಕುವ–ಹಾಕುವ, ಸೇಸೆ– ಮಂತ್ರಾಕ್ಷತೆಗಳು, ಮನೋನುರಾಗಮಂ ಬಳಯಿಸೆ–ಮನದ ಸಂತೋಷವನ್ನುಂಟು ಮಾಡಲು, ಪರಸೈನ್ಯಭೈರವಂ–ಅರ್ಜುನ, ಆ ದ್ರುಪದ ಮಂದಿರಮಂ–ಆ ದ್ರುಪದನ ಅರಮನೆಯನ್ನು, ಪೊಕ್ಕಂ–ಹೊಕ್ಕನು.
ವಚನ : ಪಚ್ಚೆಯ–ಪಚ್ಚೆಯಮಣಿಯ; ರಾಜಾವರ್ತದ–ಎಳೆ ಇಂದ್ರನೀಲವೆಂಬ ರತ್ನದ; ಪವಳದ–ಹವಳದ; ಪದ್ಮರಾಗದ–ಕೆಂಪು ರತ್ನದ, ಬೋದಿಗೆಯೊಳಂ–ಕಂಭದ ಮೇಲ್ಭಾಗದಲ್ಲಿಯೂ, ಭದ್ರದೊಳಂ–ಉಪ್ಪರಿಗೆಗಳಲ್ಲಿಯೂ; ಕರ್ಕೇತನದ–ಚಿನ್ನದ, ಜಾಳರಿಗೆಯೊಳಂ–ಜಾಲರಿಯಿಂದ ಕೂಡಿದ ಗವಾಕ್ಷಗಳಲ್ಲಿಯೂ; ಚಿತ್ರಭಿತ್ತಿ–ಚಿತ್ತಾರ ಬರೆದಿರುವ ಗೋಡೆ; ಚಂದ್ರಕಾಂತ–ಚಂದ್ರಕಾಂತವೆಂಬ ಶಿಲೆಯ; ಚಂದ್ರಶಾಲೆಯೊಳಂ– ಮೇಲ್ಮಹಡಿಯಲ್ಲಿಯೂ; ವಿವಾಹಗೇಹಮಂ–ಮದುವೆ ಮನೆಯನ್ನು; ಸಮೆಯಿಸಿ–ಮಾಡಿಸಿ; ಆರ್ದ್ರಮೃತ್ತಿಕಾ ವಿರಚಿತಮಪ್ಪ–ಒದ್ದೆಮಣ್ಣಿನಿಂದ ಮಾಡಿದ; ಚತುರಾಂತರದೊಳ್– ಹಸೆಯ ಜಗುಲಿಯಲ್ಲಿ; ಚೆಂಬೊನ್ನ–ಕೆಂಪು ಛಾಯೆಯ ಚಿನ್ನದ, ಪಟ್ಟವಣೆ–ಪಟ್ಟದ ಮಣೆ; ದುಗುಲದ–ರೇಷ್ಮೆಯ; ಆಜ್ಯಾಹುತಿ–ತುಪ್ಪದ ಹವಿಸ್ಸು; ಹುತವಹ–ಅಗ್ನಿಯ, ಸಮಕ್ಷ ದೊಳ್–ಎದುರಿನಲ್ಲಿ, ಕೆಯ್ನೀರೆಱೆದು–ದಾನದ ನೀರನ್ನು ಹೊಯ್ದು; ಪಾಣಿಗ್ರಹಣಂಗೆಯ್ಸೆ– ವಧೂವರರು ಕೈಕೈಹಿಡಿಯುವಂತೆ ಮಾಡಲು.
೭೫. ಅರ್ಜುನ ದ್ರೌಪದಿಯರ ಪರಸ್ಪರ ಪಾಣಿಗ್ರಹಣ ಹೇಗಿದ್ದಿತೆಂದು ವರ್ಣನೆ: ಮಂಜಿ ನೊಳ್–ಹಿಮದಲ್ಲಿ, ತುಱುಗಿ–ತುಂಬಿ, ಇಡಿದರೆ–ದಟ್ಟವಾಗಿರಲು, ತೆಂಕಣ ಗಾಳಿಯೊಳ್– ದಕ್ಷಿಣ ದಿಕ್ಕಿನ ಗಾಳಿಯಲ್ಲಿ, ಆದ–ಉಂಟಾದ, ಸೋಂಕಿನೊಳ್–ಸ್ಪರ್ಶದಲ್ಲಿ, ನಡುಗುವ ಶೋಕ ವಲ್ಲರಿಯ ಪಲ್ಲವದೊಳ್–ನಡುಗುವ ಅಶೋಕದ ಲತೆ ಚಿಗುರಿನಲ್ಲಿ, ನವಚೂತ ಪಲ್ಲವಂ–ಹೊಸ ಮಾವಿನ ಚಿಗುರು, ತೊಡರ್ದವೊಲ್–ಸೇರಿಕೊಂಡ ಹಾಗೆ, ಘರ್ಮಜಲ ದಿಂ–ಬೆವರು ನೀರಿನಿಂದ, ನಡುಪ–ನಡುಗುವ, ಆಕೆಯ–ಆ ದ್ರೌಪದಿಯ, ಪಾಣಿಪಲ್ಲವಂ ಬಿಡಿದು–ಚಿಗುರಂತಿರುವ ಕೈಗಳನ್ನು ಹಿಡಿದುಕೊಂಡು, ಗುಣಾರ್ಣವನ–ಅರ್ಜುನನ, ಒಪ್ಪುವ– ಸೊಗಸಾಗಿರುವ, ಪಾಣಿಪಲ್ಲವಂ–ಚಿಗುರ್ಗೈಗಳು, ಬೆಡಂಗನಾಳ್ದುದು–ಚೆಲುವನ್ನು ಪಡೆಯಿತು.
ಇಲ್ಲಿ ದ್ರೌಪದಿಯ ಅಂಗೈಗಳೇ ಅಶೋಕದ ಚಿಗುರು; ಅದು ಬೆವರು ಹನಿಗಳಿಂದ ತುಂಬಿ ಲಜ್ಜೆಯಿಂದ ನಡುಗುತ್ತಿದೆ. ಅರ್ಜುನನ ಅಂಗೈ ಮಾವಿನ ಚಿಗುರು; ಈ ಚಿಗುರು ಆ ಚಿಗುರನ್ನು ಹಿಡಿದುಕೊಂಡಂತೆ ಕೈಕೈ ಹಿಡಿಕೆ ಇತ್ತು. ಇಲ್ಲಿ ದ್ರೌಪದಿಯ ಭಯ, ಸಂಕೋಚ, ಲಜ್ಜೆ, ಸೌಂದರ್ಯ, ಕೋಮಲತೆ ಮುಂತಾದ ಭಾವಗಳೆಲ್ಲ ಧ್ವನಿತವಾಗಿ ಪದ್ಯ ಅತ್ಯಂತ ಸುಂದರ ವಾಗಿದೆ. (ಕಮಲಾ. ೧೧–೧೪೨, ೧೪೩. ನೋಡಿ.)
ವಚನ : ಕಿಱುಕುಣಿಕೆಗಳಂ–ಕಿರುಬೆರಳುಗಳನ್ನು; ಬೇಳ್ವೆಯ ಕೊಂಡದ–ಹೋಮ ಮಾಡುವ ಅಗ್ನಿಕುಂಡದ; ಮೊದಲ್ಗೆ–ಮೊದಲಿಗೆ, ಅಗ್ರಭಾಗಕ್ಕೆ; ಕನಕಗಿರಿಯಂ–ಮೇರು ಪರ್ವತವನ್ನು, ಬಲಗೊಳ್ವ–ಪ್ರದಕ್ಷಿಣೆ ಮಾಡುವ; ಪತಂಗದಂಪತಿಯಂತೆ–ಸೂರ್ಯ ಮತ್ತು ಅವನ ಹೆಂಡತಿಯ ಹಾಗೆ; ಸಪ್ತಾರ್ಚಿಯಂ–ಅಗ್ನಿಯನ್ನು; ಮೂಱುಸೂೞ್–ಮೂರು ಸಲ, ಬಲವಂದು–ಪ್ರದಕ್ಷಿಣೆ ಬಂದು; ಪೆೞ್ದೋಜೆಯೊಳ್–ಹೇಳಿದ ಕ್ರಮದಲ್ಲಿ; ಲಾಜೆಯಂ– ಬತ್ತದ ಅರಳನ್ನು;
೭೬. ಹಾಕಿದ ಅರಳಿನಿಂದ ಹೊರಟ ಹೊಗೆ ದ್ರೌಪದಿಯ ಸಿಂಗರವನ್ನು ಹೆಚ್ಚಿಸಿತು : ಅದಱ–ಆ ಅರಳಿನ, ಪೊದಳ್ದು ನೀಳ್ದಪೊಗೆಯಂ–ವ್ಯಾಪಿಸಿ ಉದ್ದವಾದ ಹೊಗೆಯನ್ನು, ಲುಳಿತಾಳಕೆ–ಸುರುಳಿಗೂದಲಿನ ಆ ದ್ರೌಪದಿ, ತನ್ನ ವಕ್ತ್ರ ಪದ್ಮದಿಂ–ತನ್ನ ಮುಖ ಕಮಲ ದಿಂದ, ಒಸೆದು–ಸಂತೋಷಿಸಿ, ಆಂತೊಡೆ–ತಾಳಿಕೊಂಡರೆ, ಆಕೆಯ, ಕಪೋಲದೊಳ್– ಕೆನ್ನೆಗಳಲ್ಲಿ, ಆ ನವಧೂಮಲೇಖೆ–ಆ ಹೊಸ ಹೊಗೆಯ ಗೆರೆ, ಚೆಲ್ವಿದಿರ್ಗೊಳೆ–ಚೆಲುವು ಎದುರಾಗಿರಲು, ಗಾಡಿವೆತ್ತು–ಸೊಗಸನ್ನು ಹೊಂದಿ, ಅಡರ್ದು–ಮೇಲೇರಿ, ಕತ್ತುರಿ ಯೊಳ್– ಕಸ್ತೂರಿಯಲ್ಲಿ, ಮದವಟ್ಟೆಯಂ–ಪ್ರೀತಿಯ ಆಧಿಕ್ಯವನ್ನು ತೋರಿಸಲು ಕೆನ್ನೆಯ ಮೇಲೆ ಬರೆದ ರೇಖೆಗಳನ್ನು; ತೆಗೆದಂತೆ=ಬರೆದ ಹಾಗೆ, ಕದನ ತ್ರೀಣೆತ್ರನಾ–ಅರ್ಜುನನ, ಕಣ್ಗೆ– ಕಣ್ಣುಗಳಿಗೆ, ಎಸೆದು–ಸೊಗಸಾಗಿ, ತೋಱಿದುದು–ತೋರಿತು. ಮದವಟ್ಟೆ– “ಅಭಿನವ ಮದಲೇಖಾಲಾಲಿತಂ” ಎಂಬಲ್ಲಿನ ಮದಲೇಖೆ ಆಗಿರಬೇಕು (ಪಂಪಭಾ. ೫–೨೮); ಮದವಟ್ಟೆಯೊಳೊಡಂಬಟ್ಟ ವಿಪುಲ ಕಪೋಲತಲ ಲಿಖಿತ ವಿಚಿತ್ರ ಪತ್ರಲೇಖೆಯುಂ(ಆದಿಪು. ೪–೪೧ ಗ); ಮದ+ಪಟ್ಟೆ–ಕಾಮದ ಸೊಕ್ಕನ್ನು ತೋರಿಸುವ ಪಟ್ಟೆಯಾಕಾರದಗೆರೆ.
ವಚನ : ಓದುವ ಋಚೆಗಳುಂ–ಹೇಳುವ, ಪಠಿಸುವ, ಋಕ್ಕುಗಳೂ (ವೇದದ ಸೂಕ್ತಗಳು); ಪರಕೆ–ಆಶೀರ್ವಾದ.
೭೭. ಪರಿಜೆಯನಂಟು–? ಕೆನ್ನೆಗಳಂ–ಕೆನ್ನೆಗಳನ್ನು, ಒಯ್ಯನೆ–ಮೆಲ್ಲಗೆ, ನೀವುವ– ಸವರುವ, ಚಿನ್ನ ಪೂವನೋಸರಿಸುವ–ಚಿನ್ನದ ಹೂವನ್ನು ಒಂದು ಕಡೆಗೆ ಓರೆ ಮಾಡುವ, ಹಾರಮಂ–ಹಾರವನ್ನು, ಪಿಡಿದು–ಹಿಡಿದು, ನೋಡುವ, ಕಟ್ಟಿದ, ನೂಲ–ನೂಲಿನ, ತೊಂಗ ಲಂ–ಕುಚ್ಚನ್ನು, ತಿರಿಪುವ–ತಿರುಗಿಸುವ, ಕೆಯ್ತದ–ಚೇಷ್ಟೆಗಳ, ಕೆಲಸಗಳ, ಒಂದು ನೆವದಿಂ– ಒಂದು ನೆಪದಿಂದ, ಲಲಿತಾಂಗಿಯ–ಕೋಮಲದೇಹಿಯಾದ ದ್ರೌಪದಿಯ, ಶಂಕೆಯಂ ಸಂದೇಹವನ್ನೂ, ಭಯಂಬೆರಸಿದ ನಾಣುಮಂ–ಭಯಸಹಿತವಾದ ಲಜ್ಜೆಯನ್ನೂ, ಕ್ರಮದೆ– ಕ್ರಮವಾಗಿ, ಗುಣಾರ್ಣವಾ–ಅರ್ಜುನನೇ, ಪಿಂಗಿಸು–ಹೋಗುವಂತೆ ಮಾಡು, ಬೇಸಱದಿರ್– ಬೇಜಾರುಪಡದೆ ಇರು. ಎಂದು ದ್ರೌಪದಿಯ ದಾಸಿಯರು ಅರ್ಜುನನಿಗೆ ಹೇಳುತ್ತಾರೆ.
ಇಲ್ಲಿ ಪರಿಜೆಯನಂಟು ಎಂಬ ಪದಗಳಿಗೆ ಅರ್ಥವಾಗುವುದಿಲ್ಲ. ಪರಿಜೆ ಇರಬೇಕೋ ಪರಿಚೆ ಇರಬೇಕೋ? ಎರಡಕ್ಕೂ ಅರ್ಥ ದುರವಗಾಹವಾಗಿರುವುದರಿಂದ ನಿರ್ಣಯಿಸ ಲಾಗದು. ಪರಿಜು ಎಂದರೆ ಆಕಾರ, ರೂಪ ಎಂಬರ್ಥವಿದೆ. ಅದೇ ಶಬ್ದ ಇಲ್ಲಿರಬಹುದೆ? “ತೀವಿದ ಕೊಗ್ಗಿಯ ಕತ್ತುರಿಯುಂ, ಕತ್ತುರಿಯೊಳ್ ಅಂಟಪರಿಚೆಯುಂ, ಪರಿಚೆಯೊಳ್ ಪರಿಚಯಂ ಬಡೆದ ಮದವಟ್ಟೆಯುಂ….ಎಸೆಯೆ ಕೈಗೆಯ್ದಾಗಳ್” (ಆದಿಪು. ೪–೪೧ ಗ) ಎಂಬಲ್ಲಿ ಪರಿಚೆ ಶಬ್ದಪ್ರಯೋಗವಿದೆ. ಇದಕ್ಕೆ ಅರ್ಥ ಅಜ್ಞಾತವಿದೆ; ‘ಪರಿಚೆ’ ಎಂದು ಸರಿ ಯಾದ ಪಾಠವಿರಬಹುದು.
ವಚನ : ಕೆಲದೊಳಿರ್ದ–ಪಕ್ಕದಲ್ಲಿದ್ದ; ದಂಡುಱುಂಬೆಗಳ್–ಚೇಷ್ಟೆಯ ದಾಸಿಯರು, ತುಂಟದಾಸಿಗಳು, ಗಯ್ಯಾಳಿಗಳು; ದಡ್ರುಂಚೆಯೆಂದು ಸಿತಗೆ (ಶಮದ). ಇಲ್ಲಿ ದಡ್ರುಂಚೆ ಯೆಂಬುದು, ದುಂದುಱುಂಬೆ ಅಥವಾ ದಂಡುಱುಂಬೆ ಎಂಬುದರ ಅಪಪಾಠವಿರಬಹುದು.
೭೮. ಕಾಂತೆ–ದ್ರೌಪದಿ, ಪೊದಳ್ದ–ಆವರಿಸಿದ, ನಾಣ ಭರದಿಂದೆ–ನಾಚಿಕೆಯ ಭಾರದಿಂದ, ಅಧರೀಕೃತಚಂದ್ರಬಿಂಬ ಸತ್ಕಾಂತಿಯಂ–ಕಡೆಗಣಿಸಲ್ಪಟ್ಟ ಚಂದ್ರಮಂಡಲದ ಸುಕಾಂತಿ ಯನ್ನುಳ್ಳ, ಆನನಾಂಬುಜಮಂ–ಮುಖಕಮಲವನ್ನು, ಒಯ್ಯನೆ–ಮೆಲ್ಲಗೆ, ಬಾಗಿರೆ– ಬಗ್ಗಿಸಿರಲು, ಅಣುಗೆಯರ್–ಪ್ರೀತಿಗೆ ಆಸ್ಪದರಾದವರು, ಪ್ರೀತಿಯುಳ್ಳವರು, ಕಾದಲಂಗೆ– ಪ್ರಿಯನಾದ ಅರ್ಜುನನಿಗೆ, ಸಯ್ತೆ–ನೇರಾಗಿಯೇ ಸರಿಯಾಗಿಯೇ, ನಾಣ್ಚದೆ–ನಾಚಿಕೆಪಡದೆ, ಅಂತೆ ಇರು–ಹಾಗೆಯೇ ಇರು ಎಂದು, ಪಿಡಿದು, ಅೞ್ಕಱೊಳೆತ್ತಿ–ಪ್ರೀತಿಯಿಂದ ಬಾಗಿದ ಕೊರಳನ್ನು ಮೇಲೆತ್ತಿ, ಬುದ್ಧಿವೇೞ್ದಂತೆ–ಬುದ್ಧಿಯ ಮಾತನ್ನು ಹೇಳಿದ ಹಾಗೆ, ಆಕೆಯ, ಹಾರ–ಹಾರದ, ಮರೀಚಿ ಮಾಲೆಗಳ್–ಕಿರಣದ ಸಾಲುಗಳು, ಕದಂಪಿನೊಳ್ ಪೊಳೆದುವು– ಕೆನ್ನೆಗಳಲ್ಲಿ ತೊಳಗಿದುವು. ಇಲ್ಲಿ ದ್ರೌಪದಿಯ ಕೆನ್ನೆಯ ಮೇಲೆ ಪ್ರತಿಫಲಿಸಿದ್ದ ಹಾರದ ಕಿರಣ ಗಳನ್ನು ಅಣುಗೆಯರಿಗೆ ಹೋಲಿಸಿ ಬುದ್ಧಿ ಮಾತುಗಳನ್ನು ಅವು ತಿಳಿಸುತ್ತಿರುವಂತೆ ವರ್ಣಿಸಿರು ವುದು ಮನೋಜ್ಞವಾಗಿದೆ.
ವಚನ : ಮಂಗಳದೊಸಗೆಯೊಳ್–ಮಂಗಳಕರವಾದ ಉತ್ಸವದಲ್ಲಿ; ಮಂಗಳ ಪಾಠಕರ್– ಸ್ವಸ್ತಿವಾಚನ ಮಾಡುವವರು.
೭೯. ಇಂದ್ರಾನೋಕಹಂ–ಇಂದ್ರನ ಮರ ಕಲ್ಪವೃಕ್ಷ, ಒಪ್ಪುವ ಇಂದ್ರ ತುರಗಂ– ಸೊಗಸಾಗಿರುವ ಇಂದ್ರನ ಕುದುರೆ, ಉಚ್ಚೈಶ್ರವಸ್ಸು, ಸಂದಿಂದ್ರಗೇಹಂ–ಪ್ರಸಿದ್ಧವಾದ ಇಂದ್ರನ ಅರಮನೆ, ಸುಧರ್ಮ ಎಂಬ ಸಭಾಗೃಹವು, ಪೊದಳ್ದ–ವ್ಯಾಪಿಸಿದ, ಹಿರಿದಾದ ಇಂದ್ರಾನೇಕಪಂ– ಇಂದ್ರನ ಆನೆ, ಐರಾವತವು, ಒಪ್ಪುವ, ಇಂದ್ರನ, ಅಖಿಳೇಂದ್ರೈಶ್ವರ್ಯಂ–ಇಂದ್ರನ ಎಲ್ಲ ಸಂಪತ್ತು, ಇಂದ್ರಾಣಿ–ಇಂದ್ರನ ಹೆಂಡತಿ ಶಚೀದೇವಿ, ಸಂದ, ಇಂದ್ರಾನರ್ಘ್ಯ ವಿಭೂಷಣಂ ಗಳ್–ಇಂದ್ರನ ಬೆಲೆಯಿಲ್ಲದ ಅಲಂಕಾರಗಳು, ಅರಿ ಭೂಪಾಳಾವಳೀ ದುಸ್ತಮಶ್ಚಂದ್ರಂಗೆ– ಶತ್ರುರಾಜರ ಸಮೂಹವೆಂಬ ಕತ್ತಲೆಗೆ ಚಂದ್ರನಾಗಿರುವ, ಅರಿಗಂಗೆ–ಅರ್ಜುನನಿಗೆ, ಮಂಗಳಮಹಾಶ್ರೀಯಂ–ಶುಭದಾಯಕವಾದ ಮಹಾ ಐಶ್ವರ್ಯವನ್ನೂ, ಜಯಶ್ರೀಯು ಮಂ–ಜಯಲಕ್ಷ್ಮಿಯನ್ನೂ ಈಗೆ–ಕೊಡಲಿ.
ವಚನ : ಎತ್ತಿದ ಬೋನದೊಳ್–ಬಡಿಸಿದ ಭೋಜನದಲ್ಲಿ; ಕಲ್ಯಾಣಾಮೃತಾಹಾರಮಂ– ಮಂಗಳಕರವಾದ ಅಮೃತದಂತಿರುವ ಆಹಾರವನ್ನು; ಆರೋಗಿಸಿ–ಊಟ ಮಾಡಿ; ಬೞಿಯಂ– ಅನಂತರ; ಯಕ್ಷಕರ್ದಮದ–ಕರ್ಪೂರ, ಅಗರು, ಕಸ್ತೂರಿ, ಶ್ರೀಗಂಧ, ಕೇಸರಿ ಇವನ್ನು ಸಮನಾಗಿ ಹಾಕಿ ತೆಯ್ದ ಲೇಪನದ; ಕೆಯ್ಗಟ್ಟಿಯೊಳ್–ಗಂಧದುಂಡೆಯಲ್ಲಿ, ಕೈಯಂ– ಕೈಯನ್ನು, ತಿಮಿರ್ದು–ಬಳಿದುಕೊಂಡು, ತಂಬುಲಮಂಕೊಂಡು–ತಾಂಬೂಲವನ್ನು ಹಾಕಿ ಕೊಂಡು.
೮೦. ಕವಿ, ಗಮಕಿ–ಕಾವ್ಯಪಾಠಕ, ವಾದಿ–ವಾದಮಾಡುವವನು, ವಾಗ್ಮಿ–ಭಾಷಣ ಪ್ರವೀಣ, ಈ, ಪ್ರವರರ–ಈ ಶ್ರೇಷ್ಠರಾದವರ, ಪಂಡಿತರ–ವಿದ್ವಾಂಸರ, ನೆಗೞ್ದ–ಪ್ರಸಿದ್ಧ ರಾದ, ಮಾತಱಿವರ–ಮಾತುಬಲ್ಲವರ, ಸಬ್ಬವದವರ–ವಿನೋದಗಾರರ, ಒಡನೆ–ಜೊತೆ ಯಲ್ಲಿ, ಅಂತು–ಹಾಗೆ, ಹರಿಗಂ–ಅರ್ಜುನನು, ಆಗಳ್–ಆಗ, ಅನ್ನವಾಸದ–ಭೋಜನ ಗೃಹದ, ಓಲಗದೊಳ್–ಸಭೆಯಲ್ಲಿ, ಇರ್ದಂ–ಇದ್ದನು. ಓಲಗ (ಸಂ) ಅವಲೋಕ (ನ).
ವಚನ : ಆ ಪ್ರಸ್ತಾವದೊಳ್–ಆ ಸಮಯದಲ್ಲಿ.
೮೧. ಸೂರ್ಯ ಮುಳುಗಿದ, ಚಂದ್ರ ಹುಟ್ಟಿದ : ಬೇಸಱೆ–ಜನ ಬೇಜಾರು ಪಡುವ ಹಾಗೆ, ಲೋಕಮಂ–ಲೋಕವನ್ನು, ತಗುಳ್ದು–ಬೆನ್ನಂಟಿ, ಸುಟ್ಟೞಲಿಂದೆ–ಸುಟ್ಟ ವ್ಯಥೆಯಿಂದ, ಖರಾಂಶು–ಸೂರ್ಯನು, ನಾರಕಾವಾಸದೊಳ್–ನರಕವಾಸದಲ್ಲಿ, ಆೞ್ವವೋಲ್–ಮುಳುಗುವ ಹಾಗೆ, ಅಪರ ವಾರ್ಧಿಯೊಳ್–ಪಶ್ಚಿಮ ಸಮುದ್ರದಲ್ಲಿ, ಆೞ್ವುದುಂ–ಮುಳುಗುತ್ತಲು, ಇತ್ತ–ಇತ್ತಕಡೆ, ವಂದ–ಬಂದ, ಸಂಧ್ಯಾಸಮಯಾತ್ತರಕ್ತರುಚಿ–ಸಂಜೆಗಾಲದಲ್ಲಿ ಉಂಟಾದ ಕೆಂಪು ಕಾಂತಿ, ಪಿಂಗೆ–ಹಿಂಜರಿಯಲು, ಬೞಿಕ್ಕ–ಅನಂತರ, ಹಿಮಾಂಶು ಮಂಡಲಂ–ಚಂದ್ರ ಮಂಡಲವು, [ಪೞಂ] ಗಾಸಿನ–ಹಳೆಯ ಚೊಕ್ಕ ಚಿನ್ನದ ಕಾಸಿನ, ಪೊನ್ನ–ಚಿನ್ನದ [ಘಂ] ಟೆಯ ವೊಲ್–ಗಂಟೆಯ ಹಾಗೆ, ಕಣ್ಗೆ–ನೋಟಕ್ಕೆ ಇರ್ದುದು–ಇತ್ತು.
ಇಲ್ಲಿರುವ ‘ಪದಂಗಾಸಿನ ಪೊನ್ನಪುಂಜಿಯವೊಲ್’ ಎಂಬ ಪಾಠದಲ್ಲಿ ಕೆಲವು ತಿದ್ದು ಗಳನ್ನು ಮಾಡಿಕೊಂಡಿದೆ. ಪೞಂಗಾಸು ಎಂಬುದು ಒಂದು ನಾಣ್ಯ; ಅದು ಚೊಕ್ಕ ಚಿನ್ನದಿಂದ ಆದ ಹಳೆಯ ಕಾಲದ ನಾಣ್ಯ. ‘ಪುಂಜಿ’ ಎಂಬುದು ‘ಘಂಟೆ’ ಎಂಬುದರ ಅಪಪಾಠ. ಪದಂಗಾಸಿನ–ಹದವಾದ ಕಾಸಿನ, ಪುಂಜಿ=ಪುಂಜ, ರಾಶಿ ಎಂದರೆ ಅರ್ಥವಿಶದತೆಯಿಲ್ಲ. “ಪೞಂಗಾಸಿನ ಪೊನ್ನಗಂಟೆಯವೊಲೊಪ್ಪಿದುದುದ್ಗತ ಭಾನುಮಂಡಲಂ” ಎಂಬ ರನ್ನನ ಪ್ರಯೋಗವನ್ನು ನೋಡಿ (ಅಜಿಪು. ೬–೨೦) ‘ಪೞಂಗಾಸು’ ಎಂಬ ಲೇಖನವನ್ನು ನೋಡಿ (ಪ್ರ. ಕ. ೪೨–೨).
ವಚನ : ಉದಾರ ಮಹೇಶ್ವರನ–ಅರ್ಜುನನ; ಆತೋದ್ಯಂಗಳೊಳ್–ವಾದ್ಯಗಳಲ್ಲಿ; ಪರೆಯಲ್ವೇೞ್ದು–ಚೆದರುವಂತೆ ಹೇಳಿ; ಮಾಡಂಗಳಂ–ಮನೆಗಳನ್ನು; ಬೀಡುವೇೞ್ದು– ಬೀಡಾಗಿ ನಿಯಮಿಸಿ; ಸೆಜ್ಜೆಗೆ–ಹಾಸಿಗೆಗೆ; ಬಿಜಯಂಗೆಯ್ಯಿಂ–ಹೊರಡಿರಿ, ದಯಮಾಡಿಸಿರಿ; ಕಳನೇಱುವಂತೆ–ಯುದ್ಧರಂಗವನ್ನು ಪ್ರವೇಶಿಸುವಂತೆ; ಸಜ್ಜೆಯನೇಱಿ–ಹಾಸಿಗೆಯ ಮೇಲೆ ಕುಳಿತು; ಸೆಡೆದಿರ್ದ–ಸಂಕೋಚಗೊಂಡಿದ್ದ; ನಲ್ಲಳಂ–ಪ್ರಿಯಳನ್ನು.
೮೨. ಅರ್ಜುನ ದ್ರೌಪದಿಯನ್ನು ಒಲಿಸಿಕೊಂಡದ್ದು : ನೋಟದೊಳ್–ನೋಡುವಿಕೆ ಯಲ್ಲಿ, ಅೞ್ಕಱಂ ಪಡೆದು–ಪ್ರೀತಿಯನ್ನು ಗಳಿಸಿ, ಮೆಲ್ನುಡಿಯೊಳ್–ಮೃದುವಾದ ಮಾತಿನಲ್ಲಿ, ಬಗೆವೊಕ್ಕು–ಮನಸ್ಸನ್ನು ಹೊಕ್ಕು, ಜಾಣೊಳ್–ಜಾಣತನದಿಂದ, ಅಳ್ಳಾಟ ಮನೆಲ್ಲಮಂ–ನಡುಕವೆಲ್ಲವನ್ನೂ, ಕಿಡಿಸಿ–ಹೋಗಲಾಡಿಸಿ, ಸೋಂಕಿನೊಳ್–ಸ್ಪರ್ಶದಲ್ಲಿ, ಒಯ್ಯನೆ– ಮೆಲ್ಲಗೆ, ಮೆಯ್ವೊಣರ್ಚಿ–ಮೈಗೆ ಮೈ ಸೇರಿಸಿ, ಬಾಯ್ಗೂಟದೊಳ್–ತುಟಿಗಳ ಸೇರುವಿಕೆಯಲ್ಲಿ, ಅೞ್ಕಱಂ ಪಡೆದು–ಮುತ್ತನ್ನು ಹೊಂದಿ, ಕೂಟದೊಳ್–ಸೇರುವಣೆ ಯಲ್ಲಿ, ಉಣ್ಮಿದ–ಹುಟ್ಟಿದ, ಬೆಚ್ಚ ತೞ್ಕೆಯೊಳ್–ಬೆಸುಗೆಯಾದ ಆಲಿಂಗನದಲ್ಲಿ, ಕೂಟಸುಖಂಗಳಂ–ಒಡಗೂಡುವ ಸುಖಗಳನ್ನು, ಪಡೆದಂ–ಪಡೆದನು; ಬದ್ದೆದಲ್ಲೞಂ– ಅರ್ಜುನನು, ಏಂ ಚದುರಂ ಗಳ–ಏನು ಚದುರನೋ, ಏನು ಚಮತ್ಕಾರವುಳ್ಳವನೋ! ಇಲ್ಲಿ ಅೞ್ಕಱಂ ಪಡೆ ಎಂಬುದಕ್ಕೆ ಅೞ್ಕಜಂ ಬಡೆದು ಎಂಬ ಸ್ವೀಕೃತ ಪಾಠವಿದೆ; ಅೞ್ಕಜಂ ಎಂದರೆ ಅಸೂಯೆ, ಕರುಬು; ಇದು ಹೊಂದುವುದಿಲ್ಲ; ಅೞ್ಕಱ್ ಎಂಬುದನ್ನು ಪ್ರೇಮ ಸೂಚಕವಾದ ಮುತ್ತು ಎಂಬರ್ಥದಲ್ಲಿ ಪಂಪ ಬಳಸುತ್ತಾನೆ (ಪಂಪಭಾ. ೭–೬೮).
೮೩. ಆ ಶಯ್ಯಾಗೃಹದ ದೀಪದಕುಡಿಗಳು ಅಲ್ಲಾಡುತ್ತಿದ್ದುವು : ಏಕೆ? ಬೇಡಿಸುವ– ಬಯಸುವ, ಅಪ್ಪುಗಳ್ಗೆ–ಆಲಿಂಗನಗಳಿಗೆ, ಲಲ್ಲೆಯ–ಪ್ರೀತಿಯ, ಮೆಲ್ನುಡಿಗಳ್ಗೆ–ಮೃದುವಾದ ಮಾತುಗಳಿಗೆ, ಕೂಡೆ–ಕೂಡಲೆ, ನಾಣೂಡಿದ–ನಾಚಿಕೆಯಿಂದ ಲಿಪ್ತವಾದ, ಕೆಂದುಗಳ್ಗೆ– ಮಲಗಾಟಕ್ಕೆ, ಬಗೆಗೊಂಡು–(ದೀಪಗಳ) ಮನಸ್ಸು ಒಪ್ಪಿ, ತಲೆದೂಗುವಂತೆವೋಲ್–ತಲೆ ಯನ್ನು ತೂಗುವ ಹಾಗೆ, ನಾಡೆ–ನೋಡಲು, ಪೊದಳ್ದು–ವ್ಯಾಪಿಸಿ. ನೀಳ್ದ–ಉದ್ದವಾದ, ಅವರ–ಆ ದ್ರೌಪದಿ ಅರ್ಜುನರ, ಸುಯ್ಗಳ–ಉಸಿರಾಟಗಳ, ಗಾಳಿಯೊಳ್–ಗಾಳಿಯಲ್ಲಿ, ತತ್ಸುರತ ಮಂದಿರದ–ಆ ಶಯ್ಯಾಗೃಹದ, ಉಜ್ವಳ–ಪ್ರಕಾಶಮಾನವಾದ, ದೀಪಿಕಾಂಕುರಂ– ದೀಪಗಳ ಕುಡಿಗಳು, ಒಯ್ಯನೆ–ಮೆಲ್ಲಗೆ, ಅಳ್ಳಾಡುವುದಾಯ್ತು–ಅಲುಗಾಡುವುದಾಯಿತು. ನಾಣ್+ಊಡು=ನಾಣೂಡು; “ಜಾದಿನೊಳೂಡಿದವೆರಡು ವಸ್ತ್ರಮೊಳವು” (ವಡ್ಡಾ ೧೯೯).
ವಚನ : ಕಾಮನ ಜಾಗರದಂತೆ–ಮನ್ಮಥನ ಜಾಗರಣೆಯಂತೆ; ಕೆಂದಿನೊಳೆ–ಸುರತ ಕ್ರೀಡೆಯಲ್ಲೇ;
೮೪. ಸೂರ್ಯನು ಉದಯವಾದನು : ನಿನಗೆ–ನಿನಗೆ (ಸೂರ್ಯನಿಗೆ), ಇನಿಸಪ್ಪೊಡಂ– ಒಂದು ಸ್ವಲ್ಪವಾದರೂ, ಮನದೊಳ್–ಮನಸ್ಸಿನಲ್ಲಿ, ಓವದ–ಪ್ರೀತಿಸದ, ಕೞ್ತಲೆಯೆಂಬ– ಕತ್ತಲೆಯೆನ್ನುವ, ಪಾಪಕರ್ಮನ–ಪಾಪಿಯ, ಮಱಿಗಳ್–ಮರಿಗಳು (ಇವು), ಕರಂ–ವಿಶೇಷ ವಾಗಿ, ಪಲವುಮಂ–ಇಂಥ ಹಲವು ಮರಿಗಳನ್ನು ಸೆಱೆಗೆಯ್ದೆವು–ಸೆರೆಹಿಡಿದು ಕೊಂಡೆವು, ಇವು ಎಂದು–ಇಗೋ ಇವು ಎಂಬುದಾಗಿ, ತಮ್ಮ ನಣ್ಪಿನೊಳ್–ತಮ್ಮ ಪ್ರೇಮದಿಂದ, ಅವಂ– ಆ ಮರಿದುಂಬಿಗಳನ್ನು, ಒಪ್ಪಿಪಂತೆ–ಒಪ್ಪಿಸಿಕೊಡುವ ಹಾಗೆ, ಮುಗಳೊಳ್–(ತಾವರೆಯ) ಮೊಗ್ಗಿನಲ್ಲಿ, ಮಱಸುಂದಿದ ತುಂಬಿ–ಮರೆದು ನಿದ್ರಿಸಿದ ದುಂಬಿಗಳು, ಪಾಱೆ–ಹಾರಿ ಹೋಗಲು, ಕೋಕನದ ಕುಲಂಗಳ್–ತಾವರೆಯ ಸಮೂಹಗಳು, ಉಳ್ಳಲರ್ದುವು–ಚೆನ್ನಾಗಿ ಅರಳಿದುವು, ಎಂಬಿನಂ–ಎನ್ನುತ್ತಿರಲು, ದಿವಾಕರಂ–ಸೂರ್ಯನು, ಅಂದು, ಒಗೆದಂ– ಹುಟ್ಟಿದನು. ಈ ಉತ್ಪ್ರೇಕ್ಷೆ ರಮ್ಯವಾಗಿದೆ.
ವಚನ : ಮಾರ್ತಾಂಡನುಂ–ಸೂರ್ಯನೂ, ಪ್ರಚಂಡಮಾರ್ತಾಂಡನುಂ–ಅರ್ಜುನನೂ; ಉದಿತೋದಿತರಾಗೆ–ಏಳಿಗೆಯನ್ನು ಪಡೆಯಲು.
೮೫. ಕಚಭಾರಾಳಸಗಾಮಿನೀ ಪರಿವೃತಂ–ಕೂದಲಿನ ಭಾರದಿಂದ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಬಳಸಿದವನಾದ; ಗಂಗಾ….ಕಣಂ : ಗಂಗಾ–ಗಂಗೆಯ, ತರಂಗ– ಅಲೆಗಳನ್ನು, ಉಪಮಾನ–ಹೋಲುವ, ಚಳತ್–ಚಲಿಸುತ್ತಿರುವ, ಚಾಮರ–ಚಾಮರಗಳ, ವಾತ–ಗಾಳಿಯಿಂದ, ಪೀತ–ಕುಡಿಯಲ್ಪಟ್ಟ, ನಿಜ–ತನ್ನ, ಘರ್ಮ–ಬೆವರಿನ, ಅಂಭಃಕಣಂ– ನೀರಹನಿಗಳುಳ್ಳ; ದ್ರೌಪದೀ….ಸ್ಥಳಂ : ದ್ರೌಪದೀ–ದ್ರೌಪದಿಯ, ಕುಚ ಕುಂಭ–ಕುಂಭ ದಂತಿರುವ ಮೊಲೆಗಳಿಗೆ, ಅರ್ಪಿತ–ಕೂಡಿಸಿದ, ಕುಂಕುಮದ್ರವ–ಕುಂಕುಮದ ನೀರಿನಿಂದ, ವಿಲುಪ್ತ–ಬಳಿದಿರುವ, ಉರಃಸ್ಥಳಂ–ಎದೆಯ ಪ್ರದೇಶವುಳ್ಳ, ವಿದ್ವಿಷ್ಟ ವಿದ್ರಾವಣಂ– ಅರ್ಜುನನು, ಕೀರ್ತಿ–ಯಶಸ್ಸು, ಚತುರ್ವಾರ್ಧಿಯಂ–ನಾಲ್ಕು ಸಾಗರಗಳನ್ನು, ದಾಂಟೆ– ದಾಟಲು, ಅಂದು–ಆ ದಿನ, ಸುಖದಿಂ–ಸುಖದಿಂದ, ಇರ್ದಂ–ಇದ್ದನು.
ತೃತೀಯಾಶ್ವಾಸಂ ಸಂಪೂರ್ಣಂ