೦೧

ಪ್ರಥಮಾಶ್ವಾಸಂ

೧. ಶ್ರೀಯಂ—ಜಯಲಕ್ಷ್ಮಿಯನ್ನು (ಲಕ್ಷ್ಮಿಯನ್ನು), ಅರಾತಿ-ಶತ್ರುಗಳ, ಸಾಧನ-ಸೈನ್ಯ ವೆಂಬ, ಪಯೋನಿಧಿಯೊಳ್—ಸಮುದ್ರದಲ್ಲಿ, ಪಡೆದುಂ—ಹೊಂದಿಯೂ, ಧರಿತ್ರಿಯಂ— ಭೂಮಿಯನ್ನು, ಜೀಯೆನೆ—ಜೀಯ ಎಂದು, ಬೇಡಿಕೊಳ್ಳದೆ—ಯಾಚಿಸಿಕೊಳ್ಳದೆ, ಸ್ವೀಕರಿ ಸದೆ; ವಿರೋಧಿ ನರೇಂದ್ರರಂ—ಶತ್ರು ರಾಜರನ್ನು, ಒತ್ತಿ—ಅಮುಕಿ, ಕೊಂಡುಂ—ತೆಗೆದು ಕೊಂಡೂ, ಆತ್ಮೀಯ—ತನ್ನ, ಸುಪುಷ್ಪ [ಪಟ್ಟ] ಮಂ—ಒಳ್ಳೆಯದಾದ ಪುಷ್ಪಪಟ್ಟವೆಂಬ ಕಿರೀಟವನ್ನು, ಒಡಂಬಡೆ—ಒಪ್ಪುವಂತೆ, ತಾಳ್ದಿಯುಂ—ಧರಿಸಿಯೂ, ಇಂತು—ಹೀಗೆ, ಉದಾತ್ತ ನಾರಾಯಣನಾದ—ಉದಾತ್ತ ನಾರಾಯಣನೆಂಬ ಬಿರುದನ್ನುಳ್ಳ, ದೇವಂ—ಸ್ವಾಮಿಯಾದ, ಅರಿಕೇಸರಿ—ಅರಿಕೇಸರಿ ಎಂಬ ರಾಜನು, ಶತ್ರುಗಳಿಗೆ ಸಿಂಹವಾದವನು; ಎಮಗೆ—ನಮಗೆ, ಸೌಖ್ಯಕೋಟಿಯಂ—ಸುಖದ ಪರಾಕಾಷ್ಠೆಯನ್ನು, ಕೋಟ್ಯಂತರ ಸೌಖ್ಯಗಳನ್ನು, ಈಗೆ— ಕೊಡಲಿ. ‘ಸುಪುಷ್ಪವೃಷ್ಟಿಯಂ’ ಇಲ್ಲಿ ಪಾಠ ಕ್ಲೇಶವಿದೆ. ಇದು ಸುಪುಷ್ಪ [ಪಟ್ಟ] ಮಂ ಎಂದಿರಬೇಕು.

ಈ ಪದ್ಯದಲ್ಲಿ ಕವಿ ತನ್ನ ಪೋಷಕನಾದ ಅರಿಕೇಸರಿರಾಜನನ್ನೂ ನಾರಾಯಣನನ್ನೂ ಒಟ್ಟಿಗೆ ಸ್ತುತಿಮಾಡಿ ತನ್ನ ದೊರೆ ದೇವನಾದ ನಾರಾಯಣನಿಗಿಂತ ಉತ್ತಮನೆಂದು ಹೇಳಿ ದ್ದಾನೆ. ಶತ್ರುಸೈನ್ಯಮಥನದಿಂದ ಅರಿಕೇಸರಿ ಜಯಲಕ್ಷ್ಮಿಯನ್ನು ಪಡೆದನು, ನಾರಾಯಣ ನಾದರೆ ದೇವದಾನವರು ಸೇರಿ ಸಮುದ್ರಮಥನ ಮಾಡಿದಾಗ ಹುಟ್ಟಿ ಬಂದ ಲಕ್ಷ್ಮಿಯನ್ನು ಏನೂ ಕಷ್ಟವಿಲ್ಲದೆ ಸ್ವೀಕರಿಸಿದನು; ಅರಿಕೇಸರಿ ವೈರಿಗಳನ್ನು ಮೆಟ್ಟಿ ಭೂಮಿಯನ್ನು ತೆಗೆದು ಕೊಂಡನು, ನಾರಾಯಣನಾದರೆ ವಾಮನ ರೂಪದಲ್ಲಿ ಬಲಿಚಕ್ರವರ್ತಿಯಿಂದ ನೆಲವನ್ನು ಬೇಡಿ ಪಡೆದನು; ಅರಿಕೇಸರಿ ತನಗೇ ಮೀಸಲಾಗಿದ್ದ ಸುಪುಷ್ಪಪಟ್ಟವೆಂಬ ಕಿರೀಟವನ್ನು ಧರಿಸಿ ದ್ದರೆ ನಾರಾಯಣನು ಬರಿ ಪುಷ್ಪಪಟ್ಟವನ್ನು ತಾಳಿದನು. ಆದ್ದರಿಂದ ಅರಿಕೇಸರಿ ನಾರಾಯಣ ನಿಗಿಂತ ಉದಾತ್ತನಾದವನು.

ಇಲ್ಲಿ ಕಾಣುವ ಪುಷ್ಪಪಟ್ಟವೆಂಬ ಶಬ್ದ ಶಿಲ್ಪಶಾಸ್ತ್ರಕ್ಕೆ ಸೇರಿದ್ದು. ರಾಜರೂ ದೇವತೆಗಳೂ ಧರಿಸುವ ಶಿರೋವೇಷ್ಟನಗಳಲ್ಲಿ ಜಟಾ, ಮೌಳಿ, ಕಿರೀಟ, ಕರಂಡ, ಶಿರಸ್ತ್ರಕ, ಕುಂಡಲ, ಕೇಶಬಂಧ, ಧಮ್ಮಿಲ್ಲ, ಅಲಕ, ಚೂಡ, ಮುಕುಟ, ಪಟ್ಟ—ಎಂಬ ಹನ್ನೆರಡು ವಿಧಾನಗಳಿವೆ. ಇವುಗಳಲ್ಲಿ ಪಟ್ಟವೆಂಬುದು ಪತ್ರಪಟ್ಟ, ರತ್ನಪಟ್ಟ, ಪುಷ್ಪಪಟ್ಟ ಎಂದು ಮೂರು ಬಗೆ ಯಾಗಿದೆ. ಪಟ್ಟಭಾಜ್ ವರ್ಗದ ರಾಜನು ಈ ಕಿರೀಟಗಳನ್ನು ಧರಿಸುವ ಅಧಿಕಾರವನ್ನು ಹೊಂದಿದ್ದನು. ಅರಿಕೇಸರಿ ರಾಷ್ಟ್ರಕೂಟರ ಸಾಮಂತ ರಾಜನಾಗಿದ್ದರೂ ಪುಷ್ಪಪಟ್ಟ ಧಾರಣೆ ಯನ್ನು ಮಾಡಿಕೊಂಡು ಪಟ್ಟಾಭಿಷಿಕ್ತನಾಗುವ ಅಂತಸ್ತಿಗೆ ಸೇರಿದ್ದನು. ಇತರರಂತೆ ಅವನು ಬರಿ ಸಾಮಂತನಾಗಿರಲಿಲ್ಲ ಎಂಬುದು ಸೂಚಿತವಾಗಿದೆ. ಅರಿಕೇಸರಿ ಎಂಬ ಶಬ್ದದಲ್ಲೂ ನರಸಿಂಹಾವತಾರದ ಸೂಚನೆಯಿದೆ. ದೇವತಾ ವಿಗ್ರಹಗಳಿಗೆ ಪುಷ್ಪಪಟ್ಟವೆಂಬ ಕಿರೀಟವನ್ನು ಶಿಲ್ಪಿಗಳು ಕೆತ್ತುತ್ತಿದ್ದರು.

೨. ಇಲ್ಲಿ ಈಶ್ವರನನ್ನೂ ಅರಿಕೇಸರಿಯನ್ನೂ ಒಟ್ಟಿಗೆ ಸ್ತೋತ್ರ ಮಾಡಿ ಅರಿಕೇಸರಿ ಉದಾರ ಮಹೇಶ್ವರನೆಂಬುದನ್ನು ಪ್ರತಿಪಾದಿಸಿದ್ದಾನೆ ಕವಿ. ಮುಳಿಸು—(ಅರಿಕೇಸರಿಯ) ಕೋಪ, ಲಲಾಟನೇತ್ರ ಶಿಖಿ—(ಶಿವನ) ಹಣೆಗಣ್ಣಿನ ಉರಿ; ಮೆಚ್ಚೆ—ಮೆಚ್ಚಿಕೆಯ, ವಿನೂತ ರಸ ಪ್ರಸಾದಂ—ಹೊಗಳಿಕೆಗೆ ಈಡಾದ ಆನಂದದ ಕೊಡುಗೆ; ಉಜ್ವಲ ಜಸಂ—ಕಾಂತಿಯುಕ್ತವಾದ ಕೀರ್ತಿ, ಅಂಗಸಂಗತ ಲಸದ್ಭಸಿತಂ—ದೇಹದಲ್ಲಿ ಸೇರಿಕೊಂಡಿರುವ ಪ್ರಕಾಶಮಾನವಾದ ಭಸ್ಮ; ಪ್ರಭುಶಕ್ತಿ—ರಾಜನ ಶಕ್ತಿತ್ರಯಗಳಲ್ಲಿ ಒಂದಾದ ಪ್ರಭುತ್ವ ಶಕ್ತಿ, ಶಕ್ತಿ—ಶಕ್ತಿ ದೇವತೆ; ನಿರ್ಮಳ ಮಣಿಭೂಷಣಂ—ಶುಭ್ರವಾದ ರತ್ನಾಭರಣ, ಫಣಿ ವಿಭೂಷಣಂ—ಸರ್ಪಾಭರಣವು, ಆಗೆ—ಆಗಿರಲು, ನೆಗೞ್ತೆಯಂ—ಕೀರ್ತಿಯನ್ನು, ಪುದುಂಗೊಳಿಸಿದಂ—ತನ್ನಲ್ಲಿ ಸೇರಿಸಿಕೊಂಡ ವನು, ಈಶ್ವರಂ—ಶಿವನು (ಮತ್ತು) ನೆಗೞ್ದ—ಪ್ರಸಿದ್ಧನಾದ, ಉದಾರಮಹೇಶ್ವರಂ—ಉದಾರ ಮಹೇಶ್ವರನೆಂಬ ಬಿರುದಿದ್ದ ಅರಿಕೇಸರಿ; (ಇಂಥ ಶಿವನೂ ಅರಿಕೇಸರಿಯೂ) ಭೋಗಮಂ— ಸುಖವನ್ನು, ಈಗೆ—ಕೊಡಲಿ.

ಇಲ್ಲಿ ವಿನೂತ ರಸಪ್ರಸಾದಕ್ಕೆ ಪ್ರತಿಯಾಗಿ ವಿನೂತ ವರಪ್ರಸಾದವೆಂದಿರುವ ಪಾಠ ಹೆಚ್ಚು ಉಚಿತ.

೩. ಸೂರ್ಯನನ್ನು ಸ್ತುತಿಸುವ ನೆವದಲ್ಲಿ ಅರಿಕೇಸರಿಗಿದ್ದ ಪ್ರಚಂಡ ಮಾರ್ತಂಡನೆಂಬ ಬಿರುದನ್ನು ಈ ಪದ್ಯ ವರ್ಣಿಸುತ್ತದೆ. ಚಂಡ–ತೀಕ್ಷ್ಣರಾದ, ವಿರೋಧಿ–ಶತ್ರುಗಳ, ಸಾಧನ– ಸೈನ್ಯವೆಂಬ, ತಮಸ್ತಮಂ–ದಟ್ಟವಾದ ಕತ್ತಲೆ, ಓಡೆ–ಓಡಿಹೋಗಲು, ವಿಶಿಷ್ಟ–ವಿಶೇಷ ಗುಣಗಳಿಂದ ಕೂಡಿದ, ಪದ್ಮಿನೀ ಷಂಡಂ–ತಾವರೆಗಳ ಸಮೂಹ ಅಥವಾ (ಅರಿಕೇಸರಿಯ ಪರವಾಗಿ) ಪದ್ಮಿನೀ ಜಾತಿಯ ಸ್ತ್ರೀಯರ ಸಮೂಹವು, ಅರಲ್ದು–ಅರಳಿ, ರಾಗದಿಂ– ಸಂತೋಷ ದಿಂದ, ಒಱಲ್ದಿರೆ–ಪ್ರೀತಿಸಿ ಇರಲು; ಯಾಚಕ ಭೃಂಗಕೋಟಿ–ತಿರುಕರೆಂಬ ದುಂಬಿಗಳ ಸಮೂಹ, ಕೈಕೊಂಡು–ಒಪ್ಪಿ, ನಿರಂತರಂ–ಎಡೆಬಿಡದೆ, ತಗುಳ್ದು–ಹಿಂಬಾಲಿಸಿ, ಕೀರ್ತಿಸೆ–ಹೊಗಳಲು, ಮಿಕ್ಕು–ಮೀರಿ, ಎಸೆವ–ಪ್ರಕಾಶಿಸುವ, ಪ್ರಚಂಡ ಮಾರ್ತಾಂಡಂ– ಅತಿ ತೀಕ್ಷ್ಣನಾದ ಸೂರ್ಯನು, ಪ್ರಚಂಡ ಮಾರ್ತಾಂಡನೆಂಬ ಬಿರುದಿದ್ದ ಅರಿಕೇಸರಿ, ನಿಜವಾಙ್ಮರೀಚಿಯಿಂ–ತನ್ನ ಮಾತೆಂಬ ಕಿರಣದಿಂದ, ಎನ್ನ ಹೃದಯಾಂಬುಜಮಂ–ನನ್ನ ಹೃದಯ ಕಮಲವನ್ನು, ಅಲರ್ಚುಗೆ–ಅರಳಿಸಲಿ.

ಇಲ್ಲಿ ‘ತಮಸ್ತಮ’ ಕ್ಕೆ ಸೂಚಿತವಾದ ಪಾಠ ‘ತಮಶ್ಚಯ’ (ಪ) ಎಂದರೆ ಕತ್ತಲೆಯ ಮೊತ್ತ; ತಮಸ್ತತಿ–ಎಂದೂ ಇರಬಹುದು. ‘ಪರಿದರ್ಬಿಸಿ ಪರ್ಬಿದ ದುಸ್ತಮಸ್ತಮೋನ್ಮದ ಕರಿಯೂಥಮಂ ಪೆಳಱೆ ಪೋೞೆ’ ಎಂಬ ಪ್ರಯೋಗಾಂತರವೂ ಉಂಟು, ತಮಸ್ತಮಕ್ಕೆ (ಕಾವ್ಯಾವ. ೯೦೨).

೪. ಅರಿಕೇಸರಿಯನ್ನೂ ಮನ್ಮಥನನ್ನೂ ಈ ಪದ್ಯದಲ್ಲಿ ಒಟ್ಟಿಗೆ ಕೀರ್ತಿಸಿ ಅರಿಕೇಸರಿ ಕಾಮನನ್ನು ಮೀರಿಸಿದವನೆಂಬುದು ವರ್ಣಿತವಾಗಿದೆ. ಸಹಜದ–ಜೊತೆಯಲ್ಲೇ ಹುಟ್ಟಿ ಬಂದ, ಸ್ವಾಭಾವಿಕವಾದ; ಚೆಲ್ವಿನೊಳ್–ಚೆಲುವಿನಲ್ಲಿ; ರತಿಯ ಸೋಲದ ಕೇಳಿಕೆಯೊಳ್ –ರತಿದೇವಿಯ ಅಥವಾ ಸಂಭೋಗದ ಒಲುಮೆಯ ಕ್ರೀಡೆಯಲ್ಲಿ; ಪೊದಳ್ದು–ವ್ಯಾಪಿಸಿ, ಸನ್ನಹಿತವೆನಿಪ್ಪ–ಚೆನ್ನಾಗಿ ಅಲಂಕೃತವೆನಿಸಿರುವ, ಅಪೂರ್ವ–ಅಪರೂಪವಾದ, ಅರಿದಾದ; ಶುಭಲಕ್ಷಣ ದೇಹದೊಳ್–ಮಂಗಳಕರವಾದ ಲಕ್ಷಣಗಳಿಂದ ಕೂಡಿದ ಮೈಯಲ್ಲಿ, ಒಳ್ಪನಾಳ್ದು–ಒಳ್ಳೆಯತನವನ್ನು ಎಂದರೆ ಸೊಗಸನ್ನು ಹೊಂದಿ; ಸಂದಹಿಕಟಕ ಪ್ರಸಾದದೆ– ಪ್ರಸಿದ್ಧನಾದ ಶಿವನ ಕರುಣೆಯಿಂದ, ಮನೋಜನುಮಂ–ಮನ್ಮಥನನ್ನು ಕೂಡ, ಗೆಲೆವಂದ– ಗೆಲ್ಲಲು ಬಂದವನಾದ, ಸೋಲಿಸಿದವನಾದ; ಸಹಜ ಮನೋಜನೋಜಂ–ಸ್ವಾಭಾವಿಕವಾದ ಮನ್ಮಥನಿಗೆ ಆಚಾರ್ಯನಾದ ಅರಿಕೇಸರಿ, ಆಗಳುಂ–ಯಾವಾಗಲೂ, ವಿಚಿತ್ರರತೋತ್ಸ ವಂಗಳಂ–ರಮಣೀಯವಾದ ಬಗೆ ಬಗೆಯಾದ ಸುರತೋತ್ಸವಗಳನ್ನು, ಎಮಗೆ–ನಮಗೆ, ಈಗೆ–ಕೊಡಲಿ. ಮನ್ಮಥ ಶರೀರ ರಹಿತ, ಅರಿಕೇಸರಿ ಶುಭ ಶರೀರವುಳ್ಳವನು; ಮನ್ಮಥ ಶಿವನ ಕೋಪಕ್ಕೆ ಪಾತ್ರನಾದ, ಅರಿಕೇಸರಿ ಅವನ ಪ್ರಸಾದಕ್ಕೆ ಪಾತ್ರನಾದ; ಚೆಲುವಿನಲ್ಲೂ ರತಿ ಕೇಳಿಯಲ್ಲೂ ಅರಿಕೇಸರಿ ಒಳ್ಪನ್ನು ಹೊಂದಿದ್ದಾನೆ. ಆದ್ದರಿಂದ ಅವನು ಮನ್ಮಥನಿಗೆ ಗುರು, ಆಚಾರ್ಯ, ಎಂದರೆ ಅವನನ್ನು ಮೀರಿಸಿದವನು, ಅವನಿಗೆ ಕಲಿಸಿಕೊಡುವವನು. “ಸೋಲ್–ಪರಾಜಯೇ” ಎಂಬ ಧಾತುವಿನ ಭಾವನಾಮ ಸೋಲ ಎಂದರೆ ಸೋತುಹೋಗು ವುದು, ವಶವಾಗುವುದು, (ಒಲುಮೆಗೆ) ಸಿಕ್ಕುವುದು; ಕಣ್ಸೋಲ ಎಂದರೆ ಚಕ್ಷುಃಪ್ರೀತಿ, ಕಣ್ಬೇಟ; ಇಲ್ಲಿ ಸೋಲ ಶಬ್ದವನ್ನು ನೋಡಬಹುದು; “ಕಣ್ಸೋಲ್ತನೆನಲೊಲ್ದಪಾಂಗು.” ; ಉಪಾಧ್ಯಾಯ> ಒವಜ.> ಒವಜ> ಓಜ.

೫. ಈ ಪದ್ಯದಲ್ಲಿ ಸರಸ್ವತಿ ಅರಿಕೇಸರಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ ಎಂದು ಪ್ರಾರ್ಥಿಸಿದೆ, ವಾಙ್ಮಯದ ಸ್ವರೂಪವನ್ನು ತಿಳಿಸಿದೆ, ಅದಕ್ಕೆ ತಾಯಿಯಾದ ಸರಸ್ವತಿಯ ಸ್ಮರಣೆಯಿದೆ. ಕ್ಷಯಮಣಮಿಲ್ಲ–ವಾಙ್ಮಯಕ್ಕೆ ಸ್ವಲ್ಪವಾದರೂ ವಿನಾಶವಿಲ್ಲ; ಕೇಳ್ದು ಕಡೆಗಂಡವನಾವನುಮಿಲ್ಲೆನಲ್–ಕೇಳಿ ಅದರ ಕೊನೆಯನ್ನು ಎಂದರೆ ಪಾರವನ್ನು ತಿಳಿದವನು ಯಾವನೂ ಇಲ್ಲವೆನ್ನಲು; ತದಕ್ಷಯ ನಿಧಿತಾನೆ–ತನಗೆ ತಾನೇ ಅಕ್ಷಯವಾದ ನಿಧಿಯಾಗಿದೆ; ತನ್ನನೊಸೆದೋಲಗಿಪಂಗೆ–ತನ್ನನ್ನು ಪ್ರೀತಿಸಿ ಸೇವಿಸುವವನಿಗೆ, ಅರಿದಿಲ್ಲೆನಿಪ್ಪ–ಅಸಾಧ್ಯ ವಾದುದು ಯಾವುದೂ ಇಲ್ಲವೆನ್ನಿಸುವ, ವಾಙ್ಮಯಮನಿತರ್ಕಂ–ಎಲ್ಲ ಸಾಹಿತ್ಯಕ್ಕೂ, ಅಂಬಿಕೆ–ತಾಯಿಯಾದ ಸರಸ್ವತಿ, ಮನ್ಮುಖ ಪದ್ಮರಂಗದೇೞ್ಗೆಯನೆಡೆಗೊಂಡು–ನನ್ನ ಕಮಲದಂತಿರುವ ಮುಖವೆಂಬ ರಂಗಸ್ಥಳದ ಏಳಿಗೆಯನ್ನು ಒಳಕೊಂಡು, ಅರಿಗಂಗೆ– ಅರಿಕೇಸರಿಗೆ, ವಿಶುದ್ಧ ಬುದ್ಧಿಯಂ–ನಿರ್ಮಲವಾದ ಬುದ್ಧಿಯನ್ನು ಕೊಂಡುಕೊನೆದು– ಹರ್ಷಿಸಿ, ಸಂತೋಷವನ್ನು ಹೊಂದಿ, ಹೊಗಳಿ; ಈಗೆ–ಕೊಡಲಿ. ಎಲ್ಲ ಸಭಾಸದರೆದುರಿನಲ್ಲಿ ಕವಿ ತನ್ನ ಪೋಷಕನಾದ ರಾಜನಿಗೆ ಒಳ್ಳೆಯ ಬುದ್ಧಿಯುಂಟಾಗಲಿ ಎಂದು ಪ್ರಾರ್ಥಿಸುವು ದನ್ನು ನೋಡಿದರೆ ಆತನಿಗೆ ತನ್ನ ದೊರೆಯಲ್ಲಿದ್ದ ಸ್ನೇಹ ವಿಶ್ವಾಸಗಳೂ ಸಲಿಗೆಯೂ ದಿಟ್ಟ ತನವೂ ತಿಳಿಯುತ್ತವೆ.

೬. ದುರ್ಗಾದೇವಿಯನ್ನು ಈ ಪದ್ಯದಲ್ಲಿ ಕವಿ ಸ್ತೋತ್ರಮಾಡಿದ್ದಾನೆ. ತಿಸುಳದೊಳು ಚ್ಚಳಿಪ್ಪ–ತ್ರಿಶೂಲದಲ್ಲಿ ಮೇಲಕ್ಕೆ ಚಿಮ್ಮುವ, ಪೊಸನೆತ್ತರೆ–ಹೊಸದಾದ ರಕ್ತವೆ, ಕೆಂದಳಿ ರಾಗೆ–ಕೆಂಪು ಚಿಗುರಾಗಲು, ಕಣ್ಗೆ–ಕಣ್ಣುಗಳಿಗೆ, ಅಗುರ್ವಿಸುವಿನಂ–ಭಯವನ್ನುಂಟು ಮಾಡುತ್ತಿರಲು, ಒಕ್ಕು–ಹೊರಕ್ಕೆ ಸುರಿದು, ನೇಲ್ವ–ನೇತಾಡುವ, ಕರುಳೋಳಿಯೆ– ಕರುಳುಗಳ ಸಾಲೆ, ಬಾಲಮೃಣಾಳಮಾಗೆ–ಎಳೆಯ ತಾವರೆದಂಟಾಗಲು, ಮಿಕ್ಕಸುರರ– ಹದ್ದು ಮೀರಿದ ರಾಕ್ಷಸರ, ಮೈಯೊಳಾದ–ದೇಹದಲ್ಲಿ ಉಂಟಾದ, ವಿರಹಾಗ್ನಿಯಂ– ವಿರಹವೆಂಬ ಎಂದರೆ ಅಗಲಿಕೆಯೆಂಬ ಅಗ್ನಿಯನ್ನು, ಆಱಿಸುತೆ–ನಂದಿಸುತ್ತ, ಇಂತೆ– ಹೀಗೆಯೇ, ತನ್ನ ಕೂರಸಿಯೊಳ್–ತನ್ನ ಹರಿತವಾದ ಕತ್ತಿಯಲ್ಲಿ, ಅಡುರ್ತು–ಸಮೀಪಿಸಿ, ಮೇಲೆ ಬಿದ್ದು, ಕೊಂದಸಿಯಳ್–ಕೊಂದ ಕೃಶಾಂಗಿಯಾದ, ದುರ್ಗಿ, ಪಡೆಮೆಚ್ಚೆಗಂಡನಾ– ಪಡೆಮೆಚ್ಚೆಗಂಡ ಎಂಬ ಬಿರುದಿದ್ದ ಅರಿಕೇಸರಿಯ, ಅಸಿಯೊಳ್–ಕತ್ತಿಯಲ್ಲಿ, ಇರ್ಕೆ–ನೆಲಸಿ ಇರಲಿ.

ಕಾಮಸಂತಾಪವನ್ನು ಶಮನಗೊಳಿಸುವುದಕ್ಕಾಗಿ ಚಿಗುರನ್ನೂ ತಾವರೆಯ ದಂಟನ್ನೂ ವಿರಹಿಗಳು ಉಪಯೋಗಿಸುವುದು ಪದ್ಧತಿ. ಇಲ್ಲಿ ಆದಿಶಕ್ತಿಸ್ವರೂಪಳಾದ ಕಾಳಿಯನ್ನು, ತ್ರಿಪುರಸುಂದರಿಯನ್ನು ಮೋಹಿಸಿ ಬಂದ ಶುಂಭನಿಶುಂಭಾದಿ ಉದ್ಧತ ರಾಕ್ಷಸರ ವಿರಹಾಗ್ನಿ ಯನ್ನು ಆರಿಸಲು ಅವರ ಬಿಸಿನೆತ್ತರನ್ನೂ ಕರುಳಮಾಲೆಯನ್ನೂ ಬಳಸಿತೆಂದು ಹೇಳಿದೆ. ಕೊನೆಗೆ ಕಾಳಿ ಅವರನ್ನು ಸಂಹರಿಸಿದಳು. ಆ ದೇವತೆ ಅರಿಕೇಸರಿಯ ಕತ್ತಿಯಲ್ಲಿ ನೆಲಸಿರಲಿ ಎಂದು ಕವಿಯ ಆಶಯ. ಅಡುರ್ತು ಧಾ. ಅಡುಱು=ಅಡ್+ಉಱು–ಹತ್ತಿರ ಇರು; ಸಮೀಪವಾಗಿರು; ಪಡೆಮೆಚ್ಚೆಗಂಡ–ಸೈನ್ಯವು ಮೆಚ್ಚುವ ಶೂರ.

೭. ಇಲ್ಲಿ ವಿನಾಯಕನ ಸ್ತುತಿಯಿದೆ. ಅರಿಕೇಸರಿ ತನಗಿಂತಲೂ ಉತ್ತಮನೆಂದು ವಿನಾಯಕ ಅವನನ್ನು ಮೆಚ್ಚಿದನಂತೆ. ಎನ್ನದಾನಂ–ನನ್ನ ಮದದ ನೀರು, ಇದಾಗಳುಂ–ಇದು ಯಾವಾಗಲೂ, ಮಧುಪಾಶ್ರಯಂ–ದುಂಬಿಗಳಿಗೆ ಅವಲಂಬನವಾದದ್ದು, ಧರೆಗೆ– ಲೋಕಕ್ಕೆ, ಅವ್ಯವಚಿ, ನ್ನ–ಸಂತತವಾದ, ದಾನಂ–ಅರಿಕೇಸರಿ ಮಾಡುವ ದಾನಗಳು, ಇದಾ ಗಳುಂ–ಇದು ಯಾವಾಗಲೂ, ವಿಬುಧಾಶ್ರಯಂ–ಪಂಡಿತರಿಗೆ ಅವಲಂಬನವಾದದ್ದು, ಈ ಪತಿ–ಈ ರಾಜನಾದ ಅರಿಕೇಸರಿ, ಎನ್ನಂ–ನನ್ನನ್ನು, ನಿಜೋನ್ನತಿಯಿಂದಂ–ತನ್ನ ಹಿರಿಮೆ ಯಿಂದ, ಗೆಲೆವಂದಂ–ಗೆದ್ದನು ಎಂದು ಮೆಚ್ಚಿ, ವಿನಾಯಕಂ–ಗಜಾನನನು, ಗುಣಾರ್ಣವ ಭೂಪನಾ–ಗುಣಾರ್ಣವನೆಂಬ ಬಿರುದಿದ್ದ ಅರಿಕೇಸರಿ ರಾಜನ, ಕಬ್ಬಮಂ–ಅವನ ಪ್ರಶಂಸಾರೂಪವಾದ ಈ ಕಾವ್ಯವನ್ನು, ನಯದಿಂ ತಾಂ ನಿಮಿರ್ಚುಗೆ–ತಾನು ನಯವಾಗಿ ನೇರವಾಗಿ ವಿಸ್ತರಿಸಲಿ “ನಿಮಿರ್ಚು–ಪ್ರಸಾರಣೇ” ; ಗೆಲೆವರ್–ಗೆಲ್ಲಲು ಬಾ ಎಂದರೆ ಗೆಲ್ಲು.

೮. ಕಾವ್ಯ ಬಂಧವು ಹೇಗಿರಬೇಕೆಂಬುದನ್ನು ಕವಿ ಈ ಪದ್ಯದಲ್ಲಿ ಹೇಳುತ್ತಾನೆ. ಬಗೆ ಪೊಸತಪ್ಪುದು–ಆಲೋಚನೆ ಅಥವಾ ಚಿಂತನೆ ಹೊಸದಾಗಿರಬೇಕು; ಆಗಿ–ಹಾಗೆ ಹೊಸದಾಗಿ, ಮೃದು ಬಂಧದೊಳೊಂದುವುದು–ಮೃದುವಾದ ಶಬ್ದಗಳ ಜೋಡಣೆಯಲ್ಲಿ ಸೇರುವುದು; ಒಂದಿ–ಹಾಗೆ ಸೇರಿ, ದೇಸಿಯೊಳ್–ದೇಸಿ ಶೈಲಿಯಲ್ಲಿ ಎಂದರೆ ಅಚ್ಚಗನ್ನಡ ಶೈಲಿಯಲ್ಲಿ, ಪುಗುವುದು–ಪ್ರವೇಶಿಸಬೇಕು, ಪೊಕ್ಕು–ಹಾಗೆ ಪ್ರವೇಶಿಸಿ, ಮಾರ್ಗದೊಳೆ–ಮಾರ್ಗೀ ಶೈಲಿ ಯಲ್ಲಿಯೆ ಎಂದರೆ ಸಂಸ್ಕೃತ ಶೈಲಿಯಲ್ಲಿಯೇ, ತಳ್ವುದು–ಸೇರಿ ಹೊಂದಿಕೊಳ್ಳಬೇಕು, ತಳ್ತೊಡೆ–ಹೀಗೆ ಸೇರಿದರೆ, ಕಾವ್ಯಬಂಧಂ–ಕಾವ್ಯರಚನೆ, ಸುಗ್ಗಿಯೊಳ್–ಸುಗ್ಗಿಯ ಕಾಲದಲ್ಲಿ, ವಸಂತ ಸಮಯದಲ್ಲಿ; ಎಳಮಾವು–ಎಳೆಯ ಮಾವಿನ ಮರವು, ಕೆಂದಳಿರ ಪೂವಿನ ಬಿಣ್ಪೊಱೆಯಿಂ–ಕೆಂಪಾದ ಚಿಗುರಿನ ಹೂವಿನ ಬಲು ಭಾರದಿಂದ, ಬೞಲ್ದು– ಜೋತುಬಿದ್ದು, ತುಂಬಿಗಳಿನೆ ತುಂಬಿ–ದುಂಬಿಗಳಿಂದ ಆವೃತವಾಗಿ, ಕೋಗಿಲೆಯೆ ಬಗ್ಗಿಸೆ– ಕೋಗಿಲೆಯೇ ಕೂಗುತ್ತಿರಲು, ಒಪ್ಪುವಂತೆವೋಲ್–ಸೊಗಸಾಗಿ ಕಾಣುವ ಹಾಗೆ, ಒಪ್ಪುಗಂ–ಶೋಭಿಸುತ್ತದೆ. ಕಾವ್ಯ ಬಂಧವು ದೇಶೀಮಾರ್ಗೀಶೈಲಿಗಳ ಹುದುವಾದ ಸಂಮಿಶ್ರಣವಾಗಿದ್ದರೆ ಚೆಲುವೆಂದು ಕವಿಯ ಆಶಯ. ಇಂಥ ಶೈಲಿಗೆ ಈ ಪದ್ಯವೇ ನಿದರ್ಶನ. ತಳ್ವದು<ಧಾ. ತಳ್–ಧರಿಸು, ಹೊಂದು; “ಶ್ರೀ ತಳ್ತುರದೊಳ್ ಕೌಸ್ತುಭ ಜಾತದ್ಯುತಿ ಬಳಸಿ ಕಾಂಡಪಟದಂತಿರೆ” —ಇದು ಅನ್ಯಪ್ರಯೋಗ (ಕವಿರಾ. ೧–೧).

೯. ತನ್ನ ಪೋಷಕನಿಗೆ ಎಂಥ ಕಾವ್ಯವನ್ನು ಅರ್ಪಿಸಬೇಕೆಂಬುದನ್ನು ಕವಿ ವರ್ಣಿಸುತ್ತಾನೆ. ಆ ಸಕಳಾರ್ಥಸಂಯುತಂ–ಪ್ರಸಿದ್ಧವಾದ ಎಲ್ಲಾ ಅರ್ಥಗಳಿಂದ ಕೂಡಿದ, ಅಳಂಕೃತಿಯುಕ್ತಂ –ಅಲಂಕಾರಗಳಿಂದ ಸೇರಿರುವ, ಉದಾತ್ತವೃತ್ತಿ ವಿನ್ಯಾಸಂ–ಉನ್ನತವಾದ ವೃತ್ತಿಗಳ ಇರವಿ ನಿಂದ ಕೂಡಿದ, ಅನೇಕ ಲಕ್ಷಣ ಗುಣ ಪ್ರಭವಂ–ಅನೇಕ ಕಾವ್ಯಲಕ್ಷಣ ಗುಣಗಳಿಗೆ ಜನ್ಮ ಸ್ಥಾನವಾಗಿ ಇರುವ, ಮೃದುಪಾದಮಾದ–ಮೃದುವಾದ ಪದ್ಯ ಪಾದಗಳನ್ನುಳ್ಳ, ವಾಕ್ ಶ್ರೀ ಸುಭಗಂ–ವಾಕ್ಸಂಪತ್ತಿಯಿಂದ ಸುಂದರವಾದ, ಕಳಾಕಳಿತಮೆಂಬ–ಕಲಾನ್ವಿತವೆನಿಸಿಕೊಳ್ಳುವ, ನೆಗೞ್ತೆಯನಾಳ್ದ–ಪ್ರಸಿದ್ಧಿಯನ್ನು ಪಡೆದಿರುವ, ಕಬ್ಬಮಂ–ಕಾವ್ಯವನ್ನೂ, ಕೂಸುಮಂ– ಹೆಣ್ಣು ಮಗುವನ್ನೂ, ಅರಿಕೇಸರಿಗೆ, ಈವುದು–ಅರ್ಪಿಸುವುದು, ಅಲ್ಲದ–ಅರಿಕೇಸರಿಯಲ್ಲದ, ವಸ್ತುಗೀವುದೆ–ವಸ್ತುವಿಗೆ ಎಂದರೆ ವ್ಯಕ್ತಿಗೆ, ಈವುದೇ—ಕೊಡುವುದೇ? ಎಂದರೆ ಕೊಡ ಬಾರದು. ಅರಿಕೇಸರಿಯಂಥ ಉದಾತ್ತ ವ್ಯಕ್ತಿಗೆ ಉತ್ತಮ ಕಾವ್ಯವನ್ನೂ ಉತ್ತಮ ಕನ್ಯೆ ಯನ್ನೂ ಅರ್ಪಿಸಬೇಕು. ಇಲ್ಲಿ ಕಾವ್ಯವನ್ನು ಕನ್ನಿಕೆಗೆ ಹೋಲಿಸಿದೆ. ಇವೆರಡರ ದೃಷ್ಟಿಗಳಿಂದ ಈ ಪದ್ಯಕ್ಕೆ ಅರ್ಥವಿಸಬೇಕು. ಕನ್ನಿಕೆಯ ಪರವಾಗಿ: ಅರ್ಥ–ಐಶ್ವರ್ಯ; ವೃತ್ತಿ– ನಡವಳಿಕೆ; ಪಾದ–ಕಾಲು, ಚರಣ; ಉಳಿದ ವಿಶೇಷಣಗಳೂ ಹೀಗೆಯೆ. ವೃತ್ತಿ–ಕಾವ್ಯದ ದೃಷ್ಟಿಯಿಂದ ಅಭಿಧಾ, ಲಕ್ಷಣಾ, ವ್ಯಂಜನಾ ಎಂಬ ಮೂರು ಶಬ್ದ ಶಕ್ತಿಗಳಾಗಬಹುದು; ಅಥವಾ ಕೈಶಿಕೀ, ಭಾರತೀ, ಸಾತ್ವತೀ, ಆರಭಟೀ—ಎಂಬ ನಾಲ್ಕು ವೃತ್ತಿಗಳಾಗಬಹುದು. ಇವು ಬೇರೆ ಬೇರೆ ಶೈಲಿಗಳು: ಶೃಂಗಾರೇ ಕೈಶಿಕೀ ವೀರೇ ಸಾತ್ವತ್ಯಾರಭಟೀ ಪುನಃ । ರಸೇ ರೌದ್ರೇ ಚ ಬೀಭತ್ಸೇ ವೃತ್ತಿಃ ಸರ್ವತ್ರ ಭಾರತೀ ॥ ಚತಸ್ರೋ ವೃತ್ತಯೋಃ ಪ್ರೋಕ್ತಾಃ ಸರ್ವ ನಾಟ್ಯಸ್ಯ ಮಾತೃಕಾ: । ಕಬ್ಬಮಂ ಕೂಸುಮಂ ಎಂಬಲ್ಲಿ ಉಂ ಎಂಬ ಸಮುಚ್ಚಯವನ್ನು ಮೊದಲ ಪದಕ್ಕೆ ಅಧ್ಯಾಹಾರ ಮಾಡಿಕೊಳ್ಳಬೇಕು; ಕಬ್ಬಮುಮಂ ಕೂಸುಮಂ ಎಂದಾಗುತ್ತದೆ. ಈ ಪದ್ಯ ಕನ್ನಿಕೆಯಂತೆ ರಮಣೀಯವಾಗಿದೆ.

೧೦. ಕವಿ ತನಗಿದ್ದ ಕವಿತಾಗುಣಾರ್ಣವ ಎಂಬ ಬಿರುದನ್ನೂ ತನ್ನ ಪೋಷಕನಿಗಿದ್ದ ಗುಣಾರ್ಣವ ಎಂಬ ಬಿರುದನ್ನೂ ಸಮರ್ಥಿಸಿಕೊಳ್ಳುತ್ತಾನೆ. ಕವಿಗಳ–ಹೆಸರಿಗೆ ಮಾತ್ರ ಕವಿ ಎನ್ನಿಸಿಕೊಂಡವರ, ನಾಮಧಾರಕ ನರಾಧಿಪರ–ರಾಜ ಎಂಬ ಬರಿ ಹೆಸರನ್ನು ಹೊತ್ತವರ, ಓಳಿಯೊಳ್–ಸಾಲಿನಲ್ಲಿ, ಈತನ್–ಇವನು, ಒಳ್ಳಿದಂ ಕವಿ–ಉತ್ಕೃಷ್ಟನಾದ ಕವಿ, ನೃಪ ನೀತಂ–ಈ ರಾಜ, ಒಳ್ಳಿದನೆನಲ್–ಉತ್ತಮನು ಎಂದು ಹೇಳುವುದು, ದೊರೆಯಲ್ತು– ಯೋಗ್ಯವಲ್ಲ; ನೆಗೞ್ತೆವೆತ್ತ–ಪ್ರಸಿದ್ಧರಾದ, ಸತ್ಕವಿಗಳ–ಒಳ್ಳೆಯ ಕವಿಗಳ, ಮತ್ತು, ಷೋಡಶಾವನಿಪರ–ಕೀರ್ತಿಶಾಲಿಗಳಾದ ಮರುತ ಸುಹೋತ್ರ ಮುಂತಾದ ಹದಿನಾರು ಮಹಾರಾಜರ, ಓಳಿಯೊಳಂ–ಸಾಲಿನಲ್ಲಿಯೂ, ಕವಿತಾಗುಣಾರ್ಣವಂ–ಕಾವ್ಯಗುಣಗಳಿಗೆ ಕಡಲಾದ ಪಂಪನು, ಕವಿತೆಯೊಳಗ್ಗಳಂ–ಕಾವ್ಯರಚನೆಯಲ್ಲಿ ಶ್ರೇಷ್ಠನಾದವನು; ಈ ಗುಣಾರ್ಣ ವಂ–ಗುಣಗಳಿಗೆ ಸಮುದ್ರನಾದ ಈ ಅರಿಕೇಸರಿ, ಗುಣದೊಳ್–ಸದ್ಗುಣಗಳಲ್ಲಿ, ಎಲ್ಲಿಯುಂ–ಯಾವೆಡೆಯಲ್ಲೂ, ಅಗ್ಗಳಂ–ಶ್ರೇಷ್ಠನಾದವನು. ಕವಿಗಳ ಪಟ್ಟಿಯಲ್ಲಿ ಇವನು ಒಳ್ಳೆಯ ಕವಿ ಎಂದರೆ ಏನು ಬಂತು; ಹಾಗೆಯೇ ರಾಜರ ಪಟ್ಟಿಯಲ್ಲಿ ಇವನು ಒಳ್ಳೆಯವನು ಎನಿಸಿಕೊಂಡರೆ ಏನು? ಸತ್ಕವಿಗಳ ಪರಂಪರೆಯಲ್ಲೂ ಇವನು ಉತ್ತಮ, ಷೋಡಶ ರಾಜರ ಶ್ರೇಣಿಯಲ್ಲೂ ಇವನು ಶ್ರೇಷ್ಠ ಎನಿಸಿಕೊಂಡರೆ ಅದಕ್ಕಿಂತ ಮಿಗಿಲಾದದ್ದು ಏನಿದೆ ! ಇದು ಕವಿಯ ಆಶಯ. ಇಲ್ಲಿ ‘ನಾಮಧಾರಕ’ ಎಂಬ ಶಬ್ದ ‘ಕವಿಗಳ’ ಮತ್ತು ‘ನರಾಧಿಪರ’ ನಡುವೆ ದೇಹಲೀ ದೀಪ ನ್ಯಾಯದಂತೆ ಬಂದಿದೆ; ಎರಡಕ್ಕೂ ಅನ್ವಯಿಸುತ್ತದೆ.

೧೧. ತನ್ನ ಕಾವ್ಯರಚನೆಗೆ ಕಾರಣವನ್ನು ಕವಿ ಈ ಪದ್ಯದಲ್ಲಿ ನಿರೂಪಿಸುತ್ತಾನೆ. ಕತೆ ಪಿರಿದಾದೊಡಂ–ಕತೆಯು ಹಿರಿದಾಗಿದ್ದರೂ, ಕತೆಯ ಮೆಯ್ ಕಿಡಲೀಯದೆ–ಕತೆಯ ವಸ್ತು ವಿನ್ಯಾಸವು ನಷ್ಟವಾಗದಂತೆ, ಮುಂ–ಮೊದಲು ಎಂದರೆ ಕಳೆದ ಕಾಲದಲ್ಲಿ, ಸಮಸ್ತ ಭಾರತ ಮಂ–ಸಮಗ್ರವಾದ ಭಾರತ ಕಥೆಯನ್ನು, ಅಪೂರ್ವಮಾಗೆ–ಹಿಂದಿಲ್ಲ ಮುಂದಿನ್ನಿಲ್ಲ ಎಂಬಂತೆ, ಸಲೆ–ಚೆನ್ನಾಗಿ; ಪೇೞ್ದ ಕವೀಶ್ವರರಿಲ್ಲ–ಹೇಳಿದ ಕವಿ ಶ್ರೇಷ್ಠರು ಯಾರೂ ಇಲ್ಲ; ವರ್ಣಕಂ ಕತೆಯೊಳೊಡಂಬಡಂ ಪಡೆಯೆ–ವರ್ಣನೆಯ ಅಂಶಗಳು ಎಂದರೆ ಅಷ್ಟಾದಶ ವರ್ಣನೆಗಳು ಕಥಾಂಶಗಳೊಡನೆ ಹುದುವಾಗಿ ಬರುವಂತೆ, ಪೇೞ್ವೊಡೆ–ಹೇಳುವುದಾದರೆ, ಪಂಪನೆ ಪೇೞ್ಗುಂ–ಪಂಪನೇ ಹೇಳಲು ಶಕ್ತನು, ಎಂದು, ಪಂಡಿತರೆ, ತಗುಳ್ದು–ಮೇಲಿಂದ ಮೇಲೆ, ಅನುಸ್ಯೂತವಾಗಿ; ಬಿಚ್ಚಳಿಸೆ–ವಿಸ್ತರಿಸಲು ಎಂದರೆ ವಿಸ್ತಾರವಾಗಿ ಹೊಗಳಲು, ಈ ಪ್ರಬಂಧಮಂ–ಈ ಶ್ರೇಷ್ಠಕಾವ್ಯವನ್ನು, ಪೇೞಲೊಡರ್ಚಿದೆಂ–ಹೇಳಲು ತೊಡಗಿದೆನು. ಮಹಾ ಭಾರತದ ಕಥೆಯು ವಿಸ್ತಾರವಾಗಿದ್ದರೂ ಯಾವ ಕಥಾಂಶವೂ ಬಿಟ್ಟುಹೋಗದಂತೆ ಅದನ್ನು ಸಂಕ್ಷೇಪಿಸಿ ಮಹಾಕಾವ್ಯಾಂಗಗಳಾದ ಅಷ್ಟಾದಶ ವರ್ಣನೆಗಳನ್ನು ಅದರಲ್ಲಿ ಒಂದುಗೂಡಿಸಿ ಕಾವ್ಯರಚನೆ ಮಾಡುತ್ತೇನೆಂದು ಕವಿಯ ಪ್ರತಿಜ್ಞೆ. ಇದಕ್ಕೆ ಪಂಡಿತರ ಪ್ರೋತ್ಸಾಹ ಆತನಿಗೆ ದೊರೆಯಿತು. ‘ಸಮಸ್ತ ಭಾರತ’ ಎಂಬ ಪದ ಚಿಂತನೀಯ. ಸಂಪೂರ್ಣವಾದ ಭಾರತ ಕಥೆ ಎಂದು ಇದರ ಸಾಮಾನ್ಯಾರ್ಥವಾಗಿದ್ದರೂ ಕೆಲವರು ವಿದ್ವಾಂಸರು ಕವಿ ತನ್ನ ಸಮಕಾಲಿಕ ಐತಿಹಾಸಿಕ ಸಂಗತಿಗಳನ್ನು ಪ್ರಾಚೀನ ಕಥೆಯೊಳಕ್ಕೆ ಸಮಾವೇಶಗೊಳಿಸಿರುವುದರಿಂದ ಇದನ್ನು ‘ಸಮಸ್ತ ಭಾರತ’ ವೆಂದು ಕರೆದಿದ್ದಾನೆಂದು ಅಭಿಪ್ರಾಯಪಡುತ್ತಾರೆ.

೧೨. ಲಲಿತಪದಂ–ಸುಂದರವಾದ ಶಬ್ದಗಳು, ಪ್ರಸನ್ನ ಕವಿತಾಗುಣಂ–ನಿರ್ಮಲವಾದ ಕಾವ್ಯಗುಣಗಳು, ಇಲ್ಲದೆ, ಪೂಣ್ದುಪೇೞ್ದ–ಪ್ರತಿಜ್ಞೆ ಮಾಡಿ ಹೇಳಿದ ಎಂದರೆ ಹಠತೊಟ್ಟು ರಚಿಸಿದ, ಬೆಳ್ಗಳ ಕೃತಿಬಂಧ [ಮೇಂ]–ಅಜ್ಞರ ಕಾವ್ಯರಚನೆಯೇನು? ಅದು, ಬರೆಪಕಾಱರ –ಲಿಪಿಕಾರರ, ಕೈಗಳ ಕೇಡು–ಕೈಗಳಿಗೆ ಹಾನಿ, ನುಣ್ಣನಪ್ಪಳಕದ ಕೇಡು–ನಯವಾಗಿರುವ ಬರಿಯೋಲೆಗಳಿಗೆ ಹಾನಿ, ಪೇೞಿಸಿದೊಡೆ–ಹೇಳಿಸಿದರೆ, ಓದಿಸಿದರೆ, ಅರ್ಥದ ಕೇಡು– ಅರ್ಥಕ್ಕೆ ಹಾನಿ, ಎನೆ–ಎನ್ನಲು, ಪೇೞ್ದು–ಕಾವ್ಯವನ್ನು ಹೇಳಿ, ಬೀಗಿ–ಉಬ್ಬಿ, ಪೊಟ್ಟಳಿಸಿ– ಗರ್ವಿಸಿ, ನೆಗೞ್ತೆಗೆ–ಕೀರ್ತಿಗೆ, ಆಟಿಸುವ–ಬಯಸುವ, ದುಷ್ಕವಿಯುಂ–ಕ್ಷುದ್ರಕವಿಯೂ, ಕವಿಯೆಂಬ ಲೆಕ್ಕಮೇ–ಕವಿಯೆಂದು ಗಣನೀಯನೇ? ಅಲ್ಲವೆಂದು ಅರ್ಥ. ಸಂಪ್ರದಾಯಾನು ಸಾರವಾಗಿ ಕವಿ ಈ ಪದ್ಯದಲ್ಲಿ ದುಷ್ಕವಿಗಳನ್ನು ತೆಗಳಿದ್ದಾನೆ. ಅಳಕ ಅಲೇಖ=ಬರೆಯ ದಿರುವ ಪತ್ರ, ಓಲೆಗರಿ; ಪೊಟ್ಟಳಿಸು– “ಇದಿರ್ಚುವ ಬೀರರನಾಂಪೆವೆಂದು ಪೊಟ್ಟಳಿಸುವ ಬೀರರಂ ನೆಱೆಯೆ ಕಾಣೆಮೆ.” (ಆತಕೂರ್ ಶಾಸನ, ೧೬ನೆಯ ಸಾಲು); “ವನಿತಾನೀಕದ ಮುಂದೆ ಪೊಟ್ಟಳಿಸಿ” (ಚಿತ್ರದುರ್ಗ ೩೪).

೧೩. ಕವಿ ಸ್ವಾಹಂಕಾರ ಖಂಡನೆಯನ್ನು ಈ ಪದ್ಯದಲ್ಲಿ ಮಾಡಿಕೊಂಡಿದ್ದಾನೆ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ಧಿಯಂ–ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯ ವೆಂಬ ಅಮೃತಸಾಗರವನ್ನು, ಈಸುವೆನ್–ಈಜುತ್ತೇನೆ, ಆದರೆ, ಕವಿವ್ಯಾಸನೆನ್ ಎಂಬ– ನಾನು ಕವಿವ್ಯಾಸ ಎಂಬ, ಗರ್ವಮೆನಗಿಲ್ಲ–ಅಹಂಕಾರ ನನಗಿಲ್ಲ; ಗುಣಾರ್ಣವನೊಳ್ಪು– ಅರಿಕೇಸರಿಯ ಒಳ್ಳೆಯತನ ಎಂದರೆ ಸಜ್ಜನತ್ವವು, ಮನ್ಮನೋವಾಸಮನೆಯ್ದೆ–ನನ್ನ ಮನೋಮಂದಿರವನ್ನು ಹೊಗಲು, ಪೇೞ್ದಪೆನ್–ಕಾವ್ಯವನ್ನು ಹೇಳುತ್ತೇನೆ, ಅದಲ್ಲದೆ– ಅದಲ್ಲದಿರಲು, ಗರ್ವಮೆ ದೋಷಂ–ಅಹಂಕಾರವೇ ಕಳಂಕವಾಗುತ್ತದೆ, ಅೞ್ತಿಗಂ– ಪ್ರೀತಿಗೂ, ದೋಷಮೆ–ದೋಷವುಂಟೆ, ಎಂದರೆ ಅರಿಕೇಸರಿಯ ಮೇಲಣ ನನ್ನ ಪ್ರೀತಿ ಕಾವ್ಯವನ್ನು ಹೇಳಿಸಿದೆ, ಇದು ದೋಷವಲ್ಲ ಎಂದು; ಕಾಣೆಂ–ನಾನು ಕಾಣೆ, ಎನ್ನಱಿವ ಮಾೞ್ಕೆಯೆ–ನನಗೆ ತಿಳಿದ ರೀತಿಯಿಂದ, ಪೇೞ್ವೆಂ–ಹೇಳುತ್ತೇನೆ, ಇದಾವ ದೋಷಮೋ– ಇದು ಯಾವ ದೋಷವೊ? ಎಂದರೆ ಇದು ಯಾವ ದೋಷವೂ ಆಗಿಲ್ಲ ಎಂದರ್ಥ. ಇಲ್ಲಿ ‘ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ’ ಎಂಬ ಮಾತು ಗಮನಾರ್ಹ. ಮೇಲಿನ ಅರ್ಥ ಅದರ ಸಹಜವಾದ ತಾತ್ಪರ್ಯ. ಆದರೆ ಪಂಪನಿಗಿಂತ ಹಿಂದೆ ಇದ್ದ ಕವಿಯೊಬ್ಬ ಒಂದು ಭಾರತವನ್ನು ಬರೆದು ತನ್ನನ್ನು ಕವಿವ್ಯಾಸನೆಂದೇ ಕರೆದುಕೊಂಡಿದ್ದನೆಂದೂ ಅಂಥ ಗರ್ವ ನನಗಿಲ್ಲ ಎಂದು ಪಂಪನು ಹೇಳಿದ್ದಾನೆಂದೂ ರಾ. ನರಸಿಂಹಾಚಾರ್ಯರ ಅಭಿಪ್ರಾಯ. ಮಹಾಭಾರತ ಕಥೆಗೆ ಸಂಬಂಧಪಟ್ಟ ಅನೇಕ ಪದ್ಯಗಳು, ಪಂಪ ಭಾರತದಲ್ಲಿಲ್ಲದಿರುವುವು, ನಾಗವರ್ಮನ ಕಾವ್ಯಾವ ಲೋಕನದಲ್ಲಿ ಉದಾಹೃತವಾಗಿರುವುದು ಈ ಅಭಿಪ್ರಾಯಕ್ಕೆ ಪೋಷಕವೆಂದು ಹೇಳ ಬಹುದು.

೧೪. ಅರಿಕೇಸರಿಯನ್ನು ಅರ್ಜುನನೊಡನೆ ಹೋಲಿಸಿ ಅಥವಾ ಸಮೀಕರಿಸಿ ಅವನ ಪ್ರಶಸ್ತಿಯನ್ನು ವರ್ಣಿಸಬೇಕೆಂಬ ಪ್ರೀತಿ ತನಗುಂಟಾಯಿತೆಂದು ಕವಿ ಈ ಪದ್ಯದಲ್ಲಿ ತಿಳಿಸು ತ್ತಾನೆ. ವಿಪುಲಯಶೋವಿತಾನ ಗುಣಮಿಲ್ಲದನಂ–ವಿಸ್ತಾರವಾದ ಕೀರ್ತಿರಾಶಿಯೆಂಬ ಗುಣ ವಿಲ್ಲದವನನ್ನು, ಪ್ರಭು ಮಾಡಿ–ನಾಯಕನನ್ನಾಗಿ ಮಾಡಿ, ಪೂರ್ವ ಭೂಮಿಪರ ಪದಂಗಳಂ ಪುಗಿಸಿ–ಪ್ರಾಚೀನ ರಾಜರ ಪದವಿಗಳನ್ನು ಆರೋಪಿಸಿ, [ಪೋಲಿಪರ್]– ಹೋಲಿಸುತ್ತಾರೆ, (ಕೆಲವರು ಕವಿಗಳು); ಈತಂ–ಈ ಅರಿಕೇಸರಿ (ಹಾಗಲ್ಲ), ಉದಾತ್ತ ಪೂರ್ವಭೂಮಿ ಪರುಮಂ–ಉನ್ನತರಾದ ಹಿಂದಿನ ರಾಜರನ್ನು ಕೂಡ, ಒಳ್ಪಿನೊಳ್–ಒಳ್ಳೆಯತನದಲ್ಲಿ, ತಗುಳೆವಂದೊಡೆ–ಅಟ್ಟಿಸಿಕೊಂಡು ಹೋದರೆ, ಎಂದರೆ ಅವರನ್ನು ಸೋಲಿಸಿದರೆ, ಈ ಕಥೆ ಯೊಳ್ ತಗುಳ್ಚಿ–ಈ ಮಹಾಭಾರತ ಕಥೆಯಲ್ಲಿ ಆತನನ್ನು ಸೇರಿಸಿ, ಗುಣಾರ್ಣವ ಭೂಭುಜನಂ –ಗುಣಾರ್ಣವನಾದ ಅರಿಕೇಸರಿ ರಾಜನನ್ನು, ಕಿರೀಟಿಯೊಳ್–ಅರ್ಜುನನಲ್ಲಿ, ಪೋಲಿಪೊಡೆ– ಹೋಲಿಸುವ ಪಕ್ಷದಲ್ಲಿ, ಎನಗೆ–ನನಗೆ, ಅೞ್ತಿಯಾದುದು–ಇಷ್ಟವಾಯಿತು. ಇಲ್ಲಿ ಕವಿ ತನ್ನ ರಾಜ ಅರಿಕೇಸರಿಯಲ್ಲಿ ಹಿಂದಿನ ದೊರೆಗಳಲ್ಲಿಲ್ಲದಿದ್ದ ಗುಣಗಣಗಳನ್ನು ಕಂಡು ಅವನನ್ನು ಅರ್ಜುನನೊಡನೆ ಏಕೀಕರಿಸಿ ಭಾರತ ಕಥೆಯನ್ನು ನಿರೂಪಿಸಲು ಸ್ನೇಹ ಪ್ರೀತಿ ಗಳಿಂದ ತೊಡಗಿದ್ದಾನೆ. ಇಲ್ಲಿ ಪೋಲಿಪೊಡೆ ಎಂಬುದಕ್ಕೆ ಸೂಚಿತ ಪಾ (ಪ) [ಪೋಲಿಪರ್] ಎಂಬುದನ್ನು ಸ್ವೀಕರಿಸಿದೆ.

೧೫. ಇಲ್ಲಿಂದ ಮುಂದಕ್ಕೆ ಕವಿ ತನಗೆ ಆಶ್ರಯದಾತನೂ ಸ್ನೇಹಿತನೂ ಆಗಿದ್ದ ಅರಿಕೇಸರಿಯ ವಂಶವೃತ್ತಾಂತವನ್ನು ವಿಸ್ತಾರವಾಗಿ ವರ್ಣಿಸುತ್ತಾನೆ. ಈ ಮನೆತನದ ರಾಜರನ್ನು ವೇಮುಲವಾಡದ ಚಾಲುಕ್ಯರೆಂದು ಇತಿಹಾಸಜ್ಞರು ಕರೆಯುತ್ತಾರೆ. ಈಗಿನ ಹೈದರಾಬಾದ್ ರಾಜ್ಯದ ಕರೀಂ ನಗರಜಿಲ್ಲೆಯಲ್ಲಿ ವೇ(ಲೇ)ಮುಲವಾಡ ಎಂಬ ಗ್ರಾಮವಿದೆ; ಇದಕ್ಕೆ ಸುತ್ತಮುತ್ತಲ ಪ್ರದೇಶಕ್ಕೆ ಸಪಾದಲಕ್ಷ ಕ್ಷಿತಿ ಎಂಬ ಹೆಸರಿತ್ತು; ಬೋಧನ ಎಂಬ ನಗರ ಈ ವಂಶದ ರಾಜರಿಗೆ ಮುಖ್ಯ ಪಟ್ಟಣವಾಗಿತ್ತು. ಈ ವೇಮುಲವಾಡ ಚಾಲುಕ್ಯರಿಗೂ ಬಾದಾಮಿಯ ಪಶ್ಚಿಮ ಚಾಲುಕ್ಯ ಮನೆತನಕ್ಕೂ (ಕ್ರಿ.ಶ. ೫೫೦–೭೫೭) ಯಾವ ಸಂಬಂಧ ವಿತ್ತೋ ತಿಳಿಯದು. ಅರಿಕೇಸರಿಯ ಪೂರ್ವಜರೆಲ್ಲ ರಾಷ್ಟ್ರಕೂಟ ವಂಶದ ರಾಜರ (ಕ್ರಿ.ಶ. ಸು. ೭೫೩–೯೭೩) ಸಾಮಂತರಾಜರಾಗಿದ್ದರು. ಇವರ ಮೊದಲಿಗ ಒಂದನೆಯ ಯುದ್ಧಮಲ್ಲ. ಶ್ರೀಮತ್ ಚಳುಕ್ಯವಂಶವ್ಯೋಮಾಮೃತಕಿರಣಂ–ಸಂಪದ್ಯುಕ್ತವಾದ ಚಾಲುಕ್ಯವೆಂಬ ಆಕಾಶಕ್ಕೆ ಚಂದ್ರನು, ಎನಿಪ–ಎನಿಸಿಕೊಳ್ಳುವ, ಕಾಂತಿಯನೊಳಕೊಂಡು–ತೇಜಸ್ಸನ್ನು ಹೊಂದಿ, ಆತ್ಮವಂಶ ಶಿಖಾಮಣಿ–ತನ್ನ ಕುಲಕ್ಕೆ ಚೂಡಾರತ್ನನಾದ, ಯುದ್ಧಮಲ್ಲಂ–ಯುದ್ಧಮಲ್ಲ ನೆಂಬವನು, ಈ ಮಹಿಯೊಳ್–ಈ ಲೋಕದಲ್ಲಿ, ಜಸಮೆಸೆಯೆ–ಕೀರ್ತಿ ಪ್ರಕಾಶಿಸುತ್ತಿರಲು, ನೆಗೞ್ದಂ–ಪ್ರಸಿದ್ಧನಾದನು.

೧೬. ಆತಂ–ಅವನು, ನಿಜ ಭುಜ ವಿಜಯ ಖ್ಯಾತಿಯನಾಳ್ದು–ತನ್ನ ಬಾಹುಗಳ ಜಯದ ಕೀರ್ತಿಯನ್ನು ಹೊಂದಿ, ಅಧಿಕ ಬಲಂ–ಅಧಿಕ ಶಕ್ತಿವಂತನೂ, ಅವನಿಪತಿವ್ರಾತ–ರಾಜರ ಸಮೂಹದ, ಮಣಿ ಮಕುಟ ಕಿರಣದ್ಯೋತಿತ ಪಾದಂ–ರತ್ನಖಚಿತವಾದ ಕಿರೀಟಗಳ ಕಾಂತಿ ಯಿಂದ ಬೆಳಗಿಸಲ್ಪಟ್ಟ ಪಾದವುಳ್ಳವನೂ ಆಗಿದ್ದು, ಸಪಾದಲಕ್ಷ ಕ್ಷಿತಿ–ಸಪಾದಲಕ್ಷವೆಂಬ ಭೂಪ್ರದೇಶವನ್ನು, ಆಳ್ದಂ–ಪರಿಪಾಲಿಸಿದನು.

೧೭. ಆ ನೃಪತಿ–ಆ ರಾಜನು, ನಿಚ್ಚಲುಂ–ಪ್ರತಿದಿನವೂ, ದೀರ್ಘಿಕೆಗಳಂ–ಬಾವಿಗಳನ್ನು, ಎಣ್ಣೆಯೊಳೆ ತೀವಿ–ಎಣ್ಣೆಯಿಂದ ತುಂಬಿ, ಅಯ್ನೂಱೂನೆಯಂ–ಐದುನೂರು ಆನೆಗಳನ್ನು, ಬೋದನದೊಳ್–ಬೋದನವೆಂಬ ತನ್ನ ರಾಜಧಾನಿಯಲ್ಲಿ, ಅವಗಾಹಮಿರಿಸುವಂ– ಮುಳುಗಿಸಿ ಮಜ್ಜನ ಮಾಡಿಸುತ್ತಾನೆ, ಆತನ, ಸಿರಿಯುದ್ದಾನಿಯಂ–ಐಶ್ವರ್ಯಾತಿಶಯವನ್ನು, ಏನಂ ಪೇೞ್ವುದೋ–ಏನೆಂದು ಹೊಗಳುವುದೋ ಎಂದರೆ ಹೊಗಳಲು ಅಸಾಧ್ಯವೆಂದು ತಾತ್ಪರ್ಯ. ೧೬ನೆಯ ಪದ್ಯವನ್ನೂ, ಈ ಪದ್ಯವನ್ನೂ ಕೆಳಗೆ ಕಾಣಿಸಿರುವ ವೇಮುಲವಾಡದ ಶಿಲಾ ಶಾಸನದ ಪದ್ಯಗಳೊಡನೆ ಹೋಲಿಸಬಹುದು : “ಯುದ್ಧಮಲ್ಲೋ ನಾಮಾ ರಾಜಾ ಬಭೂವ ॥ ಸೇಯಂ ಕಿಳಾಶಾಸದನನ್ಯ ಶಾಸ್ಯಾಂ ಸಪಾದಲಕ್ಷ ಕ್ಷಿತಿಮಕ್ಷತಾಜ್ಞಃ । ಸಮಸ್ತ ರಾಜೇಂದ್ರ ಕಿರೀಟ ಕೋಟಿ ಮಾಣಿಕ್ಯ ರಶ್ಮಿ ಪ್ರಕರಾರ್ಚಿತಾಂಘ್ರಿಃ ॥ ಯಃ ಪೋದನೇ ಸೌಧ ಮಯೀ ಗಜಾನಾಂ ವಿಧಾಯ ವಾಪೀಮಪಿ ತೈಲಪೂರೈಃ । ಸ ಸರ್ವಸೇಕಂ ಸತತಂ ವಿತೇನೇ ಚಾಸ್ರೈಃ ಕುಚಾನಾಮರಿ ಸುಂದರೀಣಾಂ ॥

೧೮. ಈ ಪದ್ಯದಿಂದ ೨೧ರ ಪೂರ್ತಿ ಒಂದನೆಯ ಯುದ್ಧಮಲ್ಲನ ಮಗನಾದ ಒಂದನೆಯ ಅರಿಕೇಸರಿಯ ಪ್ರಶಸ್ತಿ ಇದೆ. ಶ್ರೀಪತಿಗೆ.ಐಶ್ವರ್ಯಕ್ಕೆ ಒಡೆಯನಾದ, ಯುದ್ಧಮಲ್ಲ ಮಹೀಪತಿಗೆ.ಯುದ್ಧಮಲ್ಲನೆಂಬ ರಾಜನಿಗೆ, ನೆಗೞ್ತೆ ಪುಟ್ಟೆ.ಕೀರ್ತಿ ಹುಟ್ಟಲು, ಅಖಿಲಕ್ಷ್ಮಾ ಪಾಲ ಮೌಳಿ ಮಣಿ ಕಿರಣಾ ಪಾಳಿತ ನಖಮಯೂಖ ರಂಜಿತ ಚರಣಂ.ಸಮಸ್ತ ರಾಜರ ಕಿರೀಟ ರತ್ನಗಳ ಕಾಂತಿಯಿಂದ ಪೋಷಿತವಾದ ಕಾಲುಗುರುಗಳ ಕಿರಣಗಳಿಂದ ಬೆಳಗುವ ಪಾದವುಳ್ಳವನು ಆದ,

೧೯. ಅರಿಕೇಸರಿಯೆಂಬ–ಅರಿಕೇಸರಿಯೆಂಬಾತನು, ಸುಂದರಾಂಗಂ–ಸೊಗಸಾದ ದೇಹ ವುಳ್ಳವನು, ಪುಟ್ಟಿದಂ–ಹುಟ್ಟಿದನು. ನೃಪತಿ–ಆ ಅರಿಕೇಸರಿ, ಪಡಿವಡೆಗೆ–ಎದುರಿಸಿದ ಸೈನ್ಯಕ್ಕೆ, ಉರ್ಚಿದ ಕರವಾಳನೆ ತೋಱಿ–ಒರೆಯಿಂದ ಕಿತ್ತ ಕತ್ತಿಯನ್ನೇ ತೋರಿಸಿ, ಅತ್ಯಂತ ವಸ್ತುವಂ– ಅತಿಶಯವಾದ ಬೆಲೆ ಬಾಳುವ ವಸ್ತುಗಳನ್ನು, ಮದಕರಿಯಂ–ಸೊಕ್ಕಾನೆಗಳನ್ನು, ಹರಿಯಂ– ಕುದುರೆಗಳನ್ನು, ಗೆಲ್ಲಂಗೊಂಡಂ–ವಿಜಯದ ಲಾಭವಾಗಿ ಗಳಿಸಿದನು.

೨೦. ಅರಿಕೇಸರಿ, ನಿರುಪಮದೇವನ ರಾಜ್ಯದೊಳ್–ನಿರುಪಮನೆಂಬ ರಾಷ್ಟ್ರಕೂಟ ರಾಜನ ರಾಜ್ಯದಲ್ಲಿ ಎಂದರೆ ಆಳಿಕೆಯಲ್ಲಿ, ವೆಂಗಿ ವಿಷಯಮಂ–ವೆಂಗಿ ಮಂಡಲವೆಂಬ ದೇಶವನ್ನು, ತ್ರಿಕಳಿಂಗಂ ಬೆರಸು–ಮೂರು ಕಳಿಂಗ ದೇಶಗಳ ಸಮೇತವಾಗಿ, ಒತ್ತಿಕೊಂಡು –ಬಲದಿಂದ ಗೆದ್ದು, ಗರ್ವದೆ–ಠೀವಿಯಿಂದ, ಅಖಿಳ ದಿಗ್ಭತ್ತಿಗಳೊಳ್–ಎಲ್ಲಾ ದಿಕ್ಪ್ರದೇಶ ಗಳಲ್ಲೂ, ಪೆಸರಂ ಬರೆಯಿಸಿದಂ–ತನ್ನ ಹೆಸರನ್ನು ಬರೆಸಿದನು. ಇಲ್ಲಿ ಹೇಳಿರುವ ನಿರುಪಮ ದೇವನು ಧ್ರುವಧಾರಾವರ್ಷನೆಂಬ ರಾಜ (ಕ್ರಿ.ಶ. ೭೮೦). ಇವನಿಗೆ ಶ್ರೀವಲ್ಲಭ ಮುಂತಾದ ಬಿರುದುಗಳಿದ್ದುವು. ಇವನಿಗಾಗಿ ಅರಿಕೇಸರಿ ಮಾಡಿದ ವಿಜಯಗಳನ್ನು ಇಲ್ಲಿ ಹೇಳಿದೆ. ಈ ವಿಷಯ ಪರಭಣಿ ಶಾಸನದಲ್ಲೂ ಉಕ್ತವಾಗಿದೆ.

೨೧. ಕ್ಷತ್ರಂ–ಕ್ಷತ್ರಿಯಗುಣಗಳಾದ ಶೌರ್ಯಪ್ರತಾಪಾದಿಗಳು, ತೇಜೋಗುಣಂ– ತೇಜಸ್ಸೆಂಬ ಗುಣವು, ಆ ಕ್ಷತ್ರಿಯರೊಳ್–ಆ ಕ್ಷತ್ರಿಯ ಕುಲದಲ್ಲಿ, ನೆಲಸಿ ನಿಂದುದು–ಸ್ಥಿರ ವಾಗಿ ನಿಂತಿರುವುದು, ಅರಿಕೇಸರಿಯಾ ಎಸಗಿದೆಸಕಂ–ಅರಿಕೇಸರಿ ಮಾಡಿದ ಕಾರ್ಯಗಳು, ಈ ತ್ರಿಜಗದೊಳ್–ಈ ಮೂರು ಲೋಕಗಳಲ್ಲಿ, ಆ ನೆಗೞ್ದಾದಿ ಕ್ಷತ್ರಿಯರೊಳಂ–ಆ ಪ್ರಸಿದ್ಧ ರಾದ ಪುರಾತನ ಕ್ಷತ್ರಿಯರಲ್ಲೂ, ಇಲ್ಲ, ಎಂದು, ಎನಿಸಿದುದು–ಎನ್ನಿಸಿತು.

೨೨. ಈ ಅರಿಕೇಸರಿಗೆ ಇಬ್ಬರು ಪುತ್ರರಾದರು. ಅರಿಕೇಸರಿಗೆ, ಆತ್ಮಜರ್–ಪುತ್ರರು, ಅರಿನರಪಶಿರೋದಳನ ಪರಿಣತೋಗ್ರಾಸಿಭಯಂಕರಕರರ್–ಶತ್ರುರಾಜರ ತಲೆಯನ್ನು ಸೀಳುವುದರಲ್ಲಿ ಸಮರ್ಥವಾದ ತೀವ್ರವಾದ ಕತ್ತಿಯಿಂದ ಭಯಂಕರವಾದ ಬಾಹುಗಳುಳ್ಳ ವರು; ಆ ಯಿರ್ವರೊಳ್–ಆ ಇಬ್ಬರಲ್ಲಿ, ಆರ್ ದೊರೆಯೆನೆ–ಯಾರು ಸಮಾನರು ಎನ್ನಲು, ನರಸಿಂಹ ಭದ್ರದೇವರ್–ನರಸಿಂಹ ಭದ್ರದೇವರು, ನೆಗೞ್ದರ್–ಪ್ರಸಿದ್ಧರಾದರು.

೨೩. ಅವರೊಳ್–ಆ ಇಬ್ಬರಲ್ಲಿ, ನರಸಿಂಗಂಗೆ–ನರಸಿಂಹನಿಗೆ, ಅತಿ ಧವಳಯಶಂ– ತುಂಬ ನಿರ್ಮಳವಾದ ಕೀರ್ತಿಯನ್ನುಳ್ಳ, ಯುದ್ಧಮಲ್ಲಂ–ಇಮ್ಮಡಿ ಯುದ್ಧಮಲ್ಲನು, ಅಗ್ರಸುತಂ–ಹಿರಿಯ ಮಗ, ತದ್ಭುವನ ಪ್ರದೀಪನಾಗಿರ್ದ–ಆ ಲೋಕಕ್ಕೆಲ್ಲ ಜ್ಯೋತಿ ಯಾಗಿದ್ದ, ಅವಾರ್ಯ ವೀರ್ಯಂಗೆ–ಅಪ್ರತಿಮಪ್ರತಾಪಿ ಯುದ್ಧಮಲ್ಲನಿಗೆ, ಬದ್ದೆಗಂ– ಬದ್ದೆಗನು ಎಂದರೆ ಭದ್ರದೇವನು, ಪಿರಿಯಮಗಂ–ಹಿರಿಯ ಮಗನು.

೨೪. ಪುಟ್ಟಿದೊಡೆ–ಹುಟ್ಟಿದರೆ, ಆತನೊಳ್–ಅವನಲ್ಲಿ, ಅಱಿವು ಒಡವುಟ್ಟಿದುದು –ಜ್ಞಾನವು ಜೊತೆಯಲ್ಲಿ ಹುಟ್ಟಿತು, ಅಱಿವಿಂಗೆ–ಆ ಜ್ಞಾನಕ್ಕೆ, ಪೆಂಪು–ಹಿರಿಮೆ, ಪೆಂಪಿ ನೊಳ್–ಆ ಹಿರಿಮೆಯಲ್ಲಿ, ಆಯಂ–ಆಯವು ಎಂದರೆ ದ್ರವ್ಯಲಾಭಾದಿಗಳು ಹುಟ್ಟಿದುವು, ಕಟ್ಟಾಯದೊಳ್–ಆ ತೀವ್ರ ಲಾಭದಲ್ಲಿ, ಅಳವು–ಪರಾಕ್ರಮ, ಅಳವಿನೊಳ್–ಆ ಪರಾಕ್ರಮ ದಲ್ಲಿ, ಒಟ್ಟಜೆ–ಅತಿಶಯತ್ವವು, ಪುಟ್ಟಿದುದು–ಹುಟ್ಟಿತು, ಬದ್ದೆಗನಂ–ಭದ್ರದೇವನನ್ನು, ಪೋಲ್ವರಾರ್–ಹೋಲುವವರು ಯಾರು? ಯಾರೂ ಇಲ್ಲ ಎಂದು ಭಾವ. ಇಲ್ಲಿ ಆಯ, ಒಟ್ಟಜೆ–ಎಂಬೆರಡು ಶಬ್ದಗಳಿಗೂ ಕೆಲವರು ಸಾಮರ್ಥ್ಯ, ಪರಾಕ್ರಮ ಎಂದು ಅರ್ಥೈಸುತ್ತಾರೆ.

೨೫. ಈತಂ–ಈ ಭದ್ರದೇವನು; ಬಲ್ವರಿಕೆಯೊಳ್–ಬಲವಾದ ದಾಳಿಯಲ್ಲಿ, ಅರಿನೃಪರ– ಶತ್ರುರಾಜರು, ಪಡಲ್ವಡೆ–ಚೆದರಿ ಹೋಗುವಂತೆ, ತಳ್ತಿಱಿದು–ತಾಗಿ ಹೊಯ್ದಾಡಿ, ರಣ ದೊಳ್–ಯುದ್ಧದಲ್ಲಿ, ವಿಕ್ರಮಮಂ–ಶೌರ್ಯವನ್ನು, ಸೊಲ್ವಿನಂ– ಎಲ್ಲರೂ ಮಾತಾಡಿ ಕೊಳ್ಳುತ್ತಿರಲು, ನಾಲ್ವತ್ತೆರಡಱಿಕೆಗಾಳೆಗಂಗಳೊಳ್–ನಲವತ್ತೆರಡು ಪ್ರಸಿದ್ಧವಾದ ಯುದ್ಧ ಗಳಲ್ಲಿ, ಆವರ್ಜಿಸಿದಂ–ಸಂಪಾದಿಸಿದನು. ಭದ್ರದೇವನು ನಲವತ್ತೆರಡು ಪ್ರಸಿದ್ಧ ಸಮರ ಗಳಲ್ಲಿ ತನ್ನ ಪ್ರತಾಪವನ್ನು ಮೆರೆದನು; ಎಲ್ಲೆಲ್ಲಿಯೂ ಆ ಮಾತೇ ಮಾತು. ಅರಿನೃಪರ ಎಂಬಲ್ಲಿ ಪ್ರಥಮಾರ್ಥದಲ್ಲಿ ಷಷ್ಠಿ ಬಂದಿದೆ. ಬಲ್ವರಿಕೆ=ಬಲ್ಲಿತ್ತು +ಪರಿಕೆ; ಪರಿ ಎಂದರೆ ಸೈನ್ಯ ಸಮೇತವಾಗಿ ದಾಳಿಯಿಡು, ಪರಿಕೆ=ದಾಳಿ, “ಜವಂಗಿಡಿಸಲಾ ಜವನಂ ಪರಿಯಿಟ್ಟು ಮುತ್ತಿದಂ” (ಪಂಪರಾ ೧೦–೧೬೨) ಎಂಬ ಪ್ರಯೋಗದಲ್ಲಿರುವ ಪರಿಯಿಡು ಎಂಬುದನ್ನು ನೋಡಿ; ಇದಕ್ಕೆ ಸೈನ್ಯಸಮೇತವಾಗಿ ದಾಳಿಯಿಡು ಎಂದರ್ಥ.

೨೬. ವನಧಿಪರೀತ ಭೂತಳದೊಳ್–ಸಮುದ್ರದಿಂದ ಸುತ್ತುವರಿದ ಈ ಭೂ ಪ್ರದೇಶ ದಲ್ಲಿ, ಈತನೆ–ಇವನೊಬ್ಬನೇ, ಸೋಲದ ಗಂಡನೆಂಬ–ಯಾರಿಗೂ ಸೋತು ಹೋಗದ ವೀರನೆಂಬ, ಪೆಂಪಿನ–ಹಿರಿದಾದ, ಪೆಸರಂ–ಖ್ಯಾತಿಯನ್ನು, ನಿಮಿರ್ಚಿದುದುಮಲ್ಲದೆ– ವಿಸ್ತರಿಸಿದುದೂ ಅಲ್ಲದೆ, ವಿಕ್ರಮದಿಂದೆ ನಿಂದು–ಪರಾಕ್ರಮದಿಂದ ಎದುರಿಸಿ ನಿಂತು, ಅಗುರ್ವೆನಲ್–ಭಯವೆನ್ನುವ ಹಾಗೆ, ಆಂತರಂ–ಎದುರಾದವರನ್ನು, ಇಱೆದು–ಹೊಯ್ದಾಡಿ, ಭೀಮನಂ–ಭೀಮನೆಂಬ ರಾಜನನ್ನು, ನೀರೊಳೊತ್ತಿ–ನೀರಿನಲ್ಲಿ ಒತ್ತಿ, ಮೊಸಳೆಯಂ– ಮೊಸಳೆಯನ್ನು, ಪಿಡಿವಂತಿರೆ–ಹಿಡಿಯುವ ಹಾಗೆ, ಅತಿಗರ್ವದಿಂ–ಬಹುದರ್ಪದಿಂದ, ಪಿಡಿಯೆ–ಹಿಡಿಯಲು, ಮೆಯ್ಗಲಿ–ಶೂರನಾದ, ಬದ್ದೆಗನನ್ನನ್–ಭದ್ರದೇವನಂಥವನು, ಆವನೋ–ಯಾವನೋ? ಅವನಂಥವನು ಯಾರೂ ಇಲ್ಲ ಎಂದರ್ಥ. ಇಲ್ಲಿ ಆಂತರಂ ಎಂದು ಇರುವುದನ್ನು ಆಂತ [ನಂ] ಎಂದು ತಿದ್ದಿಕೊಂಡರೆ ಅದು ಭೀಮನಿಗೆ ವಿಶೇಷಣವಾಗಿ ಅರ್ಥಸೌಲಭ್ಯವುಂಟಾಗುತ್ತದೆ. ಇಲ್ಲಿ ಹೇಳಿರುವ ಒಂದನೆಯ ಭೀಮ ವೆಂಗಿ ದೇಶದ ಚಾಲುಕ್ಯ ಮನೆತನಕ್ಕೆ ಸೇರಿದವನು; ಇವನು ಕ್ರಿ.ಶ. ೮೯೨ರಲ್ಲಿ ಪಟ್ಟಾಭಿಷಿಕ್ತನಾದನು.

೨೭. ಮುಗಿಲಂ ಮುಟ್ಟಿದ ಪೆಂಪು–ಮೋಡವನ್ನು ಮುಟ್ಟಿದ ಎಂದರೆ ಅತಿ ಉನ್ನತವಾದ ಹಿರಿಮೆ, ಪೆಂಪನೊಳಕೊಂಡುದ್ಯೋಗಂ–ಆ ಹಿರಿಮೆಯಲ್ಲಿ ಸೇರಿದ ಕಾರ್ಯಕಲಾಪ, ಉದ್ಯೋಗದೊಳ್ ತೊಡರ್ದಾಜ್ಞಾಫಲಂ–ಆ ರಾಜಕಾರ್ಯದಲ್ಲಿ ಸೇರಿಕೊಂಡ ತನ್ನ ಆಜ್ಞೆಯ ಪ್ರಯೋಜನ, ಆಜ್ಞೆಯೊಳ್ ತೊಡರ್ದಗುರ್ವು–ಆ ಆಜ್ಞೆಯಲ್ಲಿ ಮಿಶ್ರವಾದ ಒಂದು ಭಯ, ಒಂದೊಂದೊಂದಗುರ್ವಿಂದೆ–ಒಂದೊಂದು ರೀತಿಯ ಭಯದಿಂದ, ಅಗುರ್ವುಗೊಳುತ್ತಿರ್ಪರಿ ಮಂಡಳಂ–ಭಯಪಡುತ್ತಿರುವ ಶತ್ರು ಸಮೂಹ, ಇವುಗಳೆಲ್ಲ, ಜಸಕ್ಕಡರ್ಪಪ್ಪನ್ನೆಗಂ– ಕೀರ್ತಿಗೆ ಆಶ್ರಯವಾಗುತ್ತಿರಲು, ಬದ್ದೆಗಂ–ಭದ್ರದೇವನು, ಈ ಜಗ ದೊಳ್–ಈ ಲೋಕ ದಲ್ಲಿ, ಸಂದನ್–ಪ್ರಸಿದ್ಧನಾದನು; ಅನ್ನನಾವನ್–ಅಂಥವನು ಯಾವನಿದ್ದಾನೆ? ಆತನು, ಭ್ರೂಕೋಟಿಯಿಂ–ಹುಬ್ಬಿನ ತುದಿಯಿಂದ ಎಂದರೆ ಹುಬ್ಬಿನ ಜರ್ಬಿನಿಂದ, ಕೋಟಿಯಂ– ಕೋಟ್ಯಂತರ ಸೈನ್ಯವನ್ನು, ಇೞಿಕುಂ–ಇಳಿಸಿಬಿಡುತ್ತಾನೆ, ಅಥವಾ ಇಳಿಕುಂ–ತಿರಸ್ಕರಿಸುತ್ತಾನೆ.

೨೮. ಆತನ, ಭಂಡಾರದೊಳ್–ದ್ರವ್ಯಕೋಶದಲ್ಲಿ, ಮೇರುವಪೊನ್–ಮೇರು ಪರ್ವತದ ಚಿನ್ನ, ಕಲ್ಪಾಂಘ್ರಿಪದಾರವೆ–ಕಲ್ಪವೃಕ್ಷದ ತೋಟ, ರಸದೊಱವು–ಸಿದ್ಧರಸದ ಊಟೆ, ಪರುಸವೇದಿಯ ಕಣಿ–ಸೋಂಕಿದ್ದನ್ನೆಲ್ಲ ಚಿನ್ನವಾಗಿಸುವ ಸ್ಪರ್ಶ ಶಿಲೆಯ ಗಣಿ, ಇವು, ಉಂಟೆನೆ–ಇವೆ ಎನ್ನಲು, ಆತನು, ಕುಡುವನಿವಾರಿತದಾನಕ್ಕೆ–ಕೊಡುವ ನಿರಂತರ ದಾನಕ್ಕೆ, ಬದ್ದೆಗನಂ–ಭದ್ರದೇವನನ್ನು, ಪೋಲ್ವರಾರ್–ಹೋಲುವವರು ಯಾರು? ಯಾರೂ ಇಲ್ಲ.

೨೯. ಈ ಪದ್ಯದಲ್ಲಿಯೂ ಬದ್ದೆಗನ ದಾನದ ಹಿರಿಮೆಯನ್ನು ವರ್ಣಿಸಿದೆ; ಅದರಲ್ಲಿ ಅನೇಕ ಪಾಠಕ್ಲೇಶಗಳಿರುವುದರಿಂದ ಅದರ ಅರ್ಥ ಸರಿಯಾಗಿ ಆಗುವುದಿಲ್ಲ. ಕೊನೆಯ ಪಂಕ್ತಿ: ಅರಿಯವೆಂದಿವು–ಅಪೂರ್ವ ವಸ್ತುಗಳಾದ ಇವು, ಭದ್ರದೇವನ ಚಾಗದೊಳ್–ಭದ್ರ ದೇವನು ಮಾಡುವ ದಾನಗಳಲ್ಲಿ, ಪೊಱಗಾದುವೇ–ಹೊರಗಾದುವೇ. ಆದುವು ಎಂಬ ಭಾವ. ಈ ಅಪೂರ್ವ ವಸ್ತುಗಳು ಯಾವುವು? ಸುರಭಿ–ಕಾಮಧೇನು, ಬೇಡಿದವರಿಗೆ ಬೇಡಿದ್ದನ್ನೆಲ್ಲ ಕೊಡುತ್ತೇನೆಂದು ಹೇಳುವ ಆ ದೇವತೆಯ, ಗೋಸಣೆ–ಕೂಗು, ಸಾರಿ ಹೇಳುವುದು; ಮಾಣ್ದುದು–ನಿಂತುಹೋಯಿತು. ಎಂದರೆ ಬದ್ದೆಗನ ದಾನ ಕಾಮಧೇನುವನ್ನು ಕೂಡ ಮೀರಿಸಿತು, ಇಲ್ಲಿ ‘ಗೋಸನೆ’ ಎಂದಿರುವ ಪಾಠಾಂತರ ಸ್ವೀಕರಣಯೋಗ್ಯ; ಉಳಿದವಸ್ತು ಗಳ ಸ್ವರೂಪ ಖಚಿತವಾಗಿ ತಿಳಿಯುವುದಿಲ್ಲ. ಖರಕರ–ಸೂರ್ಯ; ದೇವವಾರಣ–ಇಂದ್ರನ ಆನೆ, ಐರಾವತ, ಏೞೆಯುಂಟವು–ಅವು ಏಳೇ ಇವೆ. ಎಂದರೆ ಏನೋ? ಆ ಹರಿ–ಆ ಕುದುರೆ ಗಳು, ಎಂದರೆ ಸೂರ್ಯನ ಸಪ್ತಾಶ್ವಗಳು. ಪದ್ಯದ ತಾತ್ಪರ್ಯ ತಿಳಿಯುವಂತಿಲ್ಲ.

೩೦. ಆ ಬದ್ದೆಗನ ಮಗ ಮೂರನೆಯ ಯುದ್ಧಮಲ್ಲ; ಅವನ ಮಗ ನರಸಿಂಹ. ಆ ಬದ್ದೆಗಂಗೆ–ಆ ಭದ್ರದೇವನಿಗೆ, ವೈರಿತಮೋಬಲ ದಶಶತಕರಂ–ಶತ್ರುಗಳೆಂಬ ಕತ್ತಲೆಗೆ ಸೂರ್ಯನಾದ, ವಿರಾಜಿತ ವಿಜಯ ಶ್ರೀ ಬಾಹು–ಪ್ರಕಾಶಮಾನಳಾದ ಜಯಲಕ್ಷ್ಮಿಯಿಂದ ಕೂಡಿದ ತೋಳುಗಳುಳ್ಳವನು ಆದ, ಯುದ್ಧಮಲ್ಲಂ–ಯುದ್ಧಮಲ್ಲನು, ಇಳಾ ಬಹುವಿಧ ರಕ್ಷಣ ಪ್ರವೀಣ ಕೃಪಾಣಂ–ಲೋಕವನ್ನು ಹಲವು ವಿಧವಾಗಿ ಕಾಪಾಡುವುದರಲ್ಲಿ ಸಮರ್ಥ ವಾದ ಖಡ್ಗವುಳ್ಳವನು.

೩೧. ಆತ್ಮಭವಂ–ಮಗನು, ಆ ನರಾಧಿಪನಾತ್ಮಜಂ–ಆ ರಾಜ ಯುದ್ಧಮಲ್ಲನ ಮಗ, ಆ ನಹುಷ ಪೃಥು ಭಗೀರಥ ನಳಮಾಹಾತ್ಮರಂ–ಪ್ರಸಿದ್ಧರಾದ ನಹುಷ, ಪೃಥು, ಭಗೀರಥ, ನಳ–ಎಂಬ ಮಹಾತ್ಮರನ್ನು, ಇಳಿಸಿ–ಕಡೆಗಣಿಸಿ, ನೆಗೞ್ದ–ಪ್ರಸಿದ್ಧನಾದ, ಮಹಾತ್ಮಂ–ಮಹಿಮೆ ಯುಳ್ಳವನೂ, ಅಱಿವಿನೊಳ್–ಜ್ಞಾನದಲ್ಲಿ, ಪರಮಾತ್ಮಂ–ಪರಬ್ರಹ್ಮನೂ ಆದ, ನರಸಿಂಹಂ–ನರಸಿಂಹನೆಂಬಾತನು. ಈ ಎರಡು ಪದ್ಯಗಳಿಗೆ ಯುಗ್ಮವೆಂದು ಹೆಸರು.

೩೨. ಪಾೞಿಯೆಡೆಗೆ–ಧರ್ಮ ಕ್ರಮಗಳ ಸಂದರ್ಭಕ್ಕೆ, ಗುರುವಚಾನಾಂ ಕುಶಮಂ– ಹಿರಿಯರ ಆಜ್ಞೆಯೆಂಬ ಅಂಕುಶವನ್ನು, ಭದ್ರಾಂಕುಶನಾ–ಭದ್ರ ಜಾತಿಯ ಆನೆಗೆ ಅಂಕುಶ ಸ್ವರೂಪನಾಗಿರುವ ನರಸಿಂಹನ, ಅಱಿವು–ತಿಳಿವು ಅಥವಾ ವಿವೇಕವು, ಮಾಂಕರಿಸದು– ಉಪೇಕ್ಷೆ ಮಾಡುವುದಿಲ್ಲ, ಪೊಣರ್ದರಿ ಬಲಮಂ–ಹೋರಾಡಿದ ಶತ್ರು ಸೈನ್ಯವನ್ನು, ಕಿಂಕೊೞೆ ಮಾೞ್ಪೆಡೆಗೆ–ಕಿಂಕೊಳೆ ಮಾಡುವ ಸಮಯಕ್ಕೆ, ಭದ್ರಾಂಕುಶನಾ–ನರಸಿಂಹನ, ಮುನಿಸು–ಕೋಪವು, ನಿರಂಕುಶಮೆನಿಸಿದುದು–ಅಡ್ಡಿ ತಡೆಯಿಲ್ಲದ್ದು ಅಥವಾ ಸ್ವತಂತ್ರ ವಾದದ್ದು ಎಂದೆನಿಸಿಕೊಂಡಿತು. ಗುರು ಜನರ ನ್ಯಾಯವಾದ ಮಾತುಗಳನ್ನು ನರಸಿಂಹನ ವಿವೇಕವು ಉಲ್ಲಂಘಿಸುತ್ತಿರಲಿಲ್ಲ; ಅವನ ಕೋಪ ಶತ್ರುಸೈನ್ಯವನ್ನು ಧ್ವಂಸ ಮಾಡುವಾಗ ಯಾವ ಅಂಕೆಗೂ ಸಿಕ್ಕುತ್ತಿರಲಿಲ್ಲವೆಂದು ತಾತ್ಪರ್ಯ. ಇಲ್ಲಿ ಕಿಂಕೊೞೆ ಎಂಬ ಶಬ್ದದ ಅರ್ಥ. ನಿಷ್ಪತ್ತಿ ಗಳು ಚಿಂತನೀಯ. ಇದು ಸಂಸ್ಕೃತದ ಕಿಂಕೃತಿ ಶಬ್ದದಿಂದ ಬಂದಿದೆಯೆಂದೂ ಅರ್ಥ ಹಿಂಸೆ, ತೊಂದರೆ, ಸಂಕಟ ಎಂದೂ ಹೇಳಿದೆ (ಪಂಪ ಭಾರತದ ನಿಘಂಟು). ಈ ಶಬ್ದದಲ್ಲಿ ೞಕಾರವಿರಬೇಕೋ, ಳಕಾರವಿರಬೇಕೋ? ಹಸ್ತಪ್ರತಿಗಳಲ್ಲಿ ೞಕಾರವಿರುವುದು ಸಂದೇಹಾಸ್ಪದ; ಅಲ್ಲಿ ಳಕಾರವನ್ನೇ ಬರೆದಿರಬೇಕು; ಕಿಂಕೊಳೆ, ಕಿಂಕೊೞೆ—ಇವೆರಡರಲ್ಲಿ ಯಾವುದು ಸರಿ? ಇದು ಒಂದೇ ಶಬ್ದವೊ, ಸಮಾಸವೊ? ಸಮಾಸವಾಗಿದ್ದರೆ ಕೀೞ್+ಕೊಳೆ ಎಂದಿರಬಹುದೆ? ಅದು ಕಿೞ್ಕೊಳೆ> ಕಿರ್ಕೊಳೆ> ಕಿಕ್ಕೊಳೆ> ಕಿಂಕೊಳೆ ಎಂದು ವಿಕಾಸಗೊಂಡು ಕಿಂಕೊಳೆ ಆಗಿರ ಬಹುದೆ? ಕೊಳೆ ಎಂಬುದು ಕೊಲೆ ಎನ್ನುವುದರ ಅಪಲಿಖಿತವೇ? ಕೀೞ್ ಕೊಲೆ–ಅತಿ ಹೇಯ ವಾದ ಕೊಲೆ ಎಂಬರ್ಥದ ಶಬ್ದ ಇಲ್ಲಿ ಇದ್ದಿರಬಹುದೆ? ವಿಷಯ ನಿರ್ಣಯ ಸುಲಭವಲ್ಲ.

೩೩. ನರಸಿಂಹನು ಮಾಡಿದ ಲಾಟದೇಶ ವಿಜಯವನ್ನು ಇಲ್ಲಿ ಹೇಳಿದೆ. ತಱಿಸಂದು– ನಿಶ್ಚಯಿಸಿ, ಪಟ್ಟುಹಿಡಿದು, ಲಾೞರೊಳ್–ಲಾಟದೇಶದವರಲ್ಲಿ (ದಕ್ಷಿಣ ಗುಜರಾತಿನಲ್ಲಿ), ತಳ್ತು–ತಾಗಿ, ಇಱಿದ–ಹೊಯ್ದ, ಏಱಂ ಪೇೞೆ–ಯುದ್ಧದ ವಿಷಯವನ್ನು ಹೇಳಲು, ಕೇಳ್ದು –ಕೇಳಿ, ಮಂಡಲಮಿನ್ನುಂ–ಆ ಲಾಟದೇಶವಿನ್ನೂ ಕೂಡ, ತಿಱು ನೀರಿಕ್ಕುವುದು– ತರ್ಪಣೋ ದಕವನ್ನು ಕೊಡುತ್ತಿದೆ, ಎನಿಸದ–ಎನ್ನಿಸಿಕೊಂಡ, ತಱಿಸಲವಿನ–ಸ್ಥಿರ ಸಂಕಲ್ಪದ, ಚಲದ– ಹಠದ, ಬಲದ–ಶಕ್ತಿಯ, ಕಲಿ–ಶೂರನು, ನರಸಿಂಹಂ–ನರಸಿಂಹನು ಆಗಿದ್ದಾನೆ. ನರಸಿಂಹನು ಎಂದೋ ಮಾಡಿದ ಲಾಟ ವಿಜಯದ ಕಥೆಯನ್ನು ಹೇಳಿದಾಗ ಕೇಳಿದ ಆ ದೇಶದ ಜನ ಇನ್ನೂ ಕೂಡ ಆ ಯುದ್ಧದಲ್ಲಿ ಸತ್ತವರಿಗೆ ಎಳ್ಳು ನೀರನ್ನು ಬಿಡುತ್ತಿದ್ದಾರೆ ಎಂದರೆ ಆತನ ಪರಾಕ್ರಮ ವೆಂಥದಿರಬೇಕು; ಇಲ್ಲಿ ಏಱು=ಯುದ್ಧ; ಮೂಱುಕೊಡೆ ಅಣ್ನಿಯರ್ ಪಿಙ್ಜನೂರಾ ಏಱಿನುಳ್ಳೆಱಿದು ಬಿೞ್ದಾರ್, ನಾಗತರಾಸರಾ ಮನೆ ಮಗವು ಬಾಗೆ ಊರುಳ್ ಬಲ್ಲಹನ್ ಏಱಿನುಳ್ಳೆಱಿದು ವಿೞ್ದನ್, ಬಾಗೆವೂರೇಱಿನುಳ್ಳೆಱಿದು ವಿೞ್ದಾರ್–ಇವು ಪ್ರಯೋಗಾಂತರ ಗಳು (ತುಮಕೂರು ೮೬, ೯೫, ೯೯ನೆಯ ಶಾಸನಗಳು). ತಿಱುನೀರ್=ತಿಱುವ+ನೀರ್ ಎಂದರೆ ತೆರುವ ನೀರು, ಸತ್ತವರಿಗಾಗಿ ತರ್ಪಣ ಕೊಡುವ ನೀರು.

೩೪. ನರಸಿಂಗಂ–ನರಸಿಂಹನು, ಸಿಂಗಂ ಮಸಗಿದವೊಲ್–ಸಿಂಹವು ಕೆರಳಿದಂತೆ, ತಳ್ತಿಱಿಯೆ–ತಾಗಿ ಯುದ್ಧಮಾಡಲು, ನೆಗೆದ ನೆತ್ತರ್–ಮೇಲಕ್ಕೆ ಚಿಮ್ಮಿದ ರಕ್ತವು, ನಭ ದೊಳ್–ಆಕಾಶದಲ್ಲಿ, ಕೆಂಗುಡಿ–ಕೆಂಪಾದ ಬಾವುಟಗಳು, ಕವಿದಂತೆ–ಮುಚ್ಚಿಕೊಂಡಂತೆ ಎಂದರೆ ಕಿಕ್ಕಿರಿದಂತೆ, ಆದುದು–ಆಯಿತು, ಸಕಲ ಲೋಕಾಶ್ರಯನಾ—ಎಲ್ಲ ಜನರಿಗೂ ಆಶ್ರಯಸ್ಥಾನನಾದ ನರಸಿಂಹನ, ಇದೇಂ ಗರ್ವದ ಪೆಂಪೊ–ಇದೇನು ಅವನ ಗಂಡಗರ್ವದ, ಪರಾಕ್ರಮದ ಹಿರಿಮೆಯೋ! ಇಲ್ಲಿ ನೆಗೆದ (ಪ) ಪಾಠವನ್ನು ಅಂಗೀಕರಿಸಿದೆ.

೩೫. ಏೞುಂ ಮಾೞಮುಮಂ–ಸಪ್ತಮಾಲವಗಳನ್ನು ಎಂದರೆ ಮಾಲವ ದೇಶದ ಏಳು ಭಾಗಗಳನ್ನು, ಪಾಱೇೞೆ–ಮೇಲಕ್ಕೆ ಹಾರಿ ಹೋಗುವಂತೆ, ತಗುಳ್ದು–ಬೆನ್ನಟ್ಟಿ, ನರಗಂ– ನರಸಿಂಹನು, ಉರಿಪಿದೊಡೆ–ಸುಟ್ಟರೆ, ಕರಿಂಕೇೞಿಸಿದ–ಕರಿಕಾಗಿ, ಇದ್ದಲಾಗಿ ಮಾಡಿದ, ಆತನ, ತೇಜದ ಬೀೞಲಂ–ಅವನ ತೇಜಸ್ಸಿನ ಬಿಳಲುಗಳನ್ನು, ಒಗೆದುರಿವುರಿಗಳ್–ಉಂಟಾದ ಉರಿಯ ಜ್ವಾಲೆಗಳು, ಅನುಕರಿಪುವಾದುವು–ಹೋಲುವಂಥವಾದುವು. ನರಸಿಂಹನು ಮಾಲವವನ್ನು ಸುಟ್ಟ ಅಗ್ನಿಜ್ವಾಲೆ ಅವನ ತೇಜಸ್ಸಿನ ಬಿಳಲುಗಳಂತೆ ಕಾಣುತ್ತಿದ್ದವು.

೩೬. ವಿಜಯಾರಂಭಪುರಸ್ಸರ ವಿಜಯಗಜಂಗಳನೆ ಪಿಡಿದು–ದಿಗ್ವಿಜಯದ ಕಾರ್ಯ ದಲ್ಲಿ ಸೈನ್ಯದ ಮುಂಗಡೆಯಲ್ಲಿರುವ ಜಯಸೂಚಕವಾದ ಆನೆಗಳನ್ನು ಅನುಸರಿಸಿ, ಘೂರ್ಜರ ರಾಜಧ್ವಜಿನಿಯಂ–ಗುಜ್ಜರ ದೇಶದ ರಾಜನ ಸೈನ್ಯವನ್ನು, ಇಱಿದೋಡಿಸಿ–ಹೊಡೆದೋಡಿಸಿ, ಭುಜ ವಿಜಯದೆ–ಬಾಹುಬಲದಿಂದಾದ ಗೆಲವಿನಿಂದ, ನರಸಿಂಹಂ, ವಿಜಯನುಮಂ– ಅರ್ಜುನನನ್ನು ಕೂಡ, ಇಳಿಸಿದಂ–ಅವಮಾನಿಸಿದನು ಎಂದರೆ ಮೀರಿಸಿದನು. ಇಲ್ಲಿ ಹೇಳಿರುವ ಗುಜ್ಜರ ರಾಜ ಕಾನ್ಯಕುಬ್ಜದ ಮಹೀಪಾಲನು.

೩೭. ಮಹಿಪಾಲಂ–ಮಹಿಪಾಲನೆಂಬ ರಾಜನು, ಸಿಡಿಲವೊಲೆಱಗುವ–ಸಿಡಿಲಿನಂತೆ ಮೇಲೆ ಬೀಳುವ, ನರಗನ–ನರಸಿಂಹನ, ಪಡೆಗೆ–ಸೈನ್ಯಕ್ಕೆ, ಅಗಿದು–ಹೆದರಿ, ಉಮ್ಮಳದಿಂ– ವ್ಯಾಕುಲತೆಯಿಂದ, ಉಂಡೆಡೆಯೊಳುಣ್ಣದೆಯುಂ–ಊಟ ಮಾಡಿದೆಡೆಯಲ್ಲಿ ತಿರುಗಿ ಊಟ ಮಾಡದೆಯೂ, ಕೆಡೆದೆಡೆಯೊಳ್ ಕೆಡೆಯದೆ–ಮಲಗಿದೆಡೆಯಲ್ಲಿ ತಿರುಗಿ ಮಲಗದೆಯೂ, ನಿಂದೆಡೆಯೊಳ್ ನಿಲ್ಲದೆಯುಂ–ನಿಂತೆಡೆಯಲ್ಲಿ ತಿರುಗಿ ನಿಲ್ಲದೆಯೂ, ಓಡಿದಂ–ಪಲಾಯನ ಮಾಡಿದನು. ಇದೇ ವಿಷಯವನ್ನು ವೇಮುಲವಾಡ ಶಾಸನ ಹೇಳುತ್ತದೆ: “ಪ್ರತ್ಯುದ್ಗತಾಂ ಗೂರ್ಜರ ರಾಜಸೇನಾಂ ನಿರ್ಜಿತ್ಯ ರಾಜಾ ಸ್ವಯಮೇಕ ಏವ”, ನರಸಿಂಹನು ತನ್ನ ಅಧಿರಾಜ ನಾದ ರಾಷ್ಟ್ರಕೂಟ ಮುಮ್ಮಡಿ ಇಂದ್ರನ ನೇತೃತ್ವದಲ್ಲಿ ಮಹೋದಯ ನಗರವನ್ನು ಎಂದರೆ ಕಾನ್ಯಕುಬ್ಜವನ್ನು ಮುತ್ತಿಗೆ ಹಾಕಿ ಅಲ್ಲಿನ ರಾಜ ಮಹಿಪಾಲನನ್ನು ಓಡಿಸಿದನೆಂದು ಚರಿತ್ರೆ ಕಾರರು ಹೇಳುತ್ತಾರೆ; ಇದು ಕ್ರಿ.ಶ. ೯೧೪ರಿಂದ ಈಚೆಗೆ ನಡೆದಿರುವಂತೆ ಹೇಳಬಹುದು.

೩೮. ಇಷ್ಟೇ ಅಲ್ಲದೆ ನರಸಿಂಹನು, ಗಂಗಾವಾರ್ಧಿಯೊಳ್–ಗಂಗಾನದಿಯಲ್ಲಿ, ಆತ್ಮ ತುರಂಗಮುಮಂ–ತನ್ನ ಕುದುರೆಯನ್ನು, ಮಿಸಿಸಿ–ಮಜ್ಜನ ಮಾಡಿಸಿ, ನೆಗೞ್ದ–ಪ್ರಸಿದ್ಧ ವಾದ, ಡಾಳಪ್ರಿಯನೊಳ್–ಡಾಳಪ್ರಿಯನಲ್ಲಿ?, ಸಂಗತಗುಣಂ–ಗುಣಯುಕ್ತನಾದ ಅವನು, ಅಸಿಲತೆಯನ್ನು–ತನ್ನ ಲತೆಯಂತಿರುವ ಖಡ್ಗವನ್ನು, ಭುಜವಿಜಯಗರ್ವದಿಂ–ತೋಳ್ಗೆಲವಿನ ಗರ್ವದಿಂದ, ಅಸುಂಗೊಳೆ–ಪ್ರಾಣಾಪಹರಣ ಮಾಡುವುದಕ್ಕಾಗಿ, ಸ್ಥಾಪಿಸಿದಂ–ನಿಲ್ಲಿಸಿದನು ಅಥವಾ ನಾಟಿದನು, ನೆಲದಲ್ಲಿ. ಇಲ್ಲಿ ‘ಡಾಳಪ್ರಿಯನೊಳ್’ ಅಪಪಾಠವೆಂದು ತೋರುತ್ತದೆ, ಡಾಳಪ್ರಿಯಂ–ಎಂದರೆ ಪ್ರಕಾಶದಲ್ಲಿ ಪ್ರೀತಿಯುಳ್ಳವನು; ಇಲ್ಲಿ ಇದು ಅಸಂಗತವಾಗಿದೆ. ವೇಮುಲವಾಡದ ಶಾಸನದಲ್ಲಿ ‘ಕಾಳಪ್ರಿಯೇ ರಾಜಕದಂಬಕಸ್ಯಸ್ತಂಭೇ ಸ್ವಶೌರ್ಯಂ ವಿಲಿಲೇಖ ಶೈಳೇ” ಎಂದಿದೆ. ನರಸಿಂಹನು ತನ್ನ ಪ್ರತಾಪವನ್ನು ಕಂಬದ ಮೇಲೆ ಕೊರೆಯಿಸಿ ಆ ಕಂಬವನ್ನು ಕಾಳಪ್ರಿಯದಲ್ಲಿ ಸ್ಥಾಪಿಸಿದನು ಎಂದು ಇದರ ಅಭಿಪ್ರಾಯ. ಉಜ್ಜಯನಿ ಯಲ್ಲಿರುವ ಮಹಾಕಾಲೇಶ್ವರನ ದೇವಾಲಯ ಈ ಕಾಳಪ್ರಿಯವೆಂದು ಡಾ ॥ ಭಂಡಾರಕರ್ ರವರ ಅಭಿಪ್ರಾಯ. ಪ್ರಕೃತ ಪದ್ಯದಲ್ಲಿ ಡಾಳಪ್ರಿಯನೊಳ್ ಎಂಬುದಕ್ಕೆ ಪ್ರತಿಯಾಗಿ ‘ಕಾಳ ಪ್ರಿಯದೊಳ್’ ಎಂದಿರಬಹುದು. “ಅಸುಂಗೊಳ್ ಪ್ರಾಣಾಪಹರಣೇ.”

೩೯. ಆ ನರಸಿಂಹ ಮಹೀಶ ಮನೋನಯನಪ್ರಿಯೆ–ಆ ನರಸಿಂಹ ಭೂಪಾಲನ ಮನಸ್ಸಿಗೂ ಕಣ್ಣಿಗೂ ಪ್ರಿಯಳಾದ, ವಿಳೋಳನೀಳಾಳಕೆ–ಚಂಚಲವಾದ ಕರಿಯ ಮುಂಗುರುಳುಳ್ಳವಳು, ಚಂದ್ರಾನನೆ–ಚಂದ್ರನಂತೆ ಮುಖವುಳ್ಳವಳು ಆದ, ಜಾಕವ್ವೆದಲ್–ಜಾಕವ್ವೆಯಲ್ಲವೆ, ಹೌದು, ನಿಜವಾಗಿಯೂ; ಕುಲದೊಳಂ–ಕುಲದಲ್ಲಿಯೂ, ಶೀಲದೊಳಂ–ನಡತೆಯಲ್ಲಿಯೂ, ಆ ಜಾನಕಿಗೆ–ಆ ಸೀತಾದೇವಿಗಿಂತ, ಅಗ್ಗಳಮೆ–ಅತಿಶಯಳಾದವಳೇ ಆಕೆ.

೪೦. ಆ ಜಾಕವ್ವೆಯ ಸೌಂದರ್ಯದ ವರ್ಣನೆ. ಪೊಸತಲರ್ದ–ಹೊಸದಾಗಿ ಅರಳಿದ, ಬಿಳಿಯ ತಾವರೆಯ, ಎಸೞ್ಗಳ–ಎಸಳುಗಳ, ನಡುವಿರ್ಪ–ನಡುವೆ ನೆಲಸಿರುವ, ಸಿರಿಯುಂ– ಲಕ್ಷ್ಮಿಯು ಕೂಡ, ಆಕೆಯ ಕೆಲದೊಳ್–ಆಕೆಯ ಮಗ್ಗುಲಲ್ಲಿ, ನಸು ಮಸುಳ್ದು–ಸ್ವಲ್ಪ ಕಾಂತಿಹೀನವಾಗಿ, ತೋರ್ಪಳೆನೆ–ತೋರುತ್ತಾಳೆ ಎನ್ನಲು, ಜಾಕವ್ವೆಗೆ, ಪೋಲಿಸುವೊಡೆ– ಹೋಲಿಸುವುದಾದರೆ, ಉೞಿದ ಪೆಂಡಿರ್–ಮಿಕ್ಕ ಸ್ತ್ರೀಯರು, ದೊರೆಯೇ–ಸಮಾನರೇ? ಅಲ್ಲ.

೪೧. ಆ ಜಾಕವ್ವೆಗಂ–ಆ ಜಾಕವ್ವೆಗೂ, ವಸುಧಾಜಯ ಸದ್ವಲ್ಲಭಂಗಂ–ಭೂಮಿಯನ್ನೆಲ್ಲ ಗೆದ್ದಿರುವ ಆ ಒಳ್ಳೆಯ ರಾಜ ನರಸಿಂಹನಿಗೂ, ತೇಜೋಗ್ನಿಮಗ್ನರಿಪು ನೃಪಶಲಭಂ–ತನ್ನ ತೇಜಸ್ಸೆಂಬ ಅಗ್ನಿಯಲ್ಲಿ ಮುಳುಗಿದ ಶತ್ರುನೃಪರೆಂಬ ಪತಂಗಗಳನ್ನುಳ್ಳ, ಅತಿವಿಶದ್ ಅಯಶೋರಾಜಿತಂ–ಅತಿ ನಿರ್ಮಲವಾದ ಕೀರ್ತಿಯಿಂದ ಬೆಳಗುತ್ತಿರುವವನೂ ಆದ, ಅರಿಕೇಸರಿ ರಾಜಂ–ಇಮ್ಮಡಿ ಅರಿಕೇಸರಿ ಎಂಬ ದೊರೆ.

೪೨. ಮಗನಾದಂ–ಮಗನಾಗಿ ಹುಟ್ಟಿದನು; ಆಗಿ–ಹಾಗೆ ಹುಟ್ಟಿ, ಚಾಗದ ನೆಗೞ್ತೆ ಯೊಳ್–ದಾನ ಮಾಡುವ ಕಾರ್ಯದಲ್ಲಿ, ಬೀರದೇೞ್ಗೆಯೊಳ್–ಪ್ರತಾಪೋನ್ನತಿಯಲ್ಲಿ, ನೆಗೞೆ–ಪ್ರಸಿದ್ಧನಾಗಲು, ಮಗಂ ಮಗನೆನೆ–ಮಗನೆಂದರೆ ಇವನೇ ಮಗನು ಎಂದೆಲ್ಲರೂ ಹೇಳುವ ಹಾಗೆ, ಪುಟ್ಟಲೊಡಂ–ಹುಟ್ಟಿದ ಕೂಡಲೆ, ಭುವನ ಭುವನಂ–ಈ ಲೋಕವೆಂಬ ಮಂದಿರ, ಅರಿಕೇಸರಿಯೊಳ್–ಅರಿಕೇಸರಿ ಕಾರಣವಾಗಿ, ಕೋೞ್ಮೊಗಗೊಂಡುದು–ಕೊಂಬು ಮೂಡಿದ ಮುಖವುಳ್ಳದ್ದಾಯಿತು, ಎಂದರೆ ಅದಕ್ಕೆ ಅಸಾಧಾರಣವಾದ ಪೆಂಪು ಉಂಟಾ ಯಿತು.

೪೩. ಅರಿಕೇಸರಿಗೆ ಗಜಪ್ರಿಯ ಎಂದರೆ ಆನೆಗಳಲ್ಲಿ ಆಸಕ್ತಿಯುಳ್ಳವನು, ಎಂಬ ಬಿರುದಿತ್ತು; ಅದು ಅವನು ತೊಟ್ಟಿಲ ಕೂಸಾಗಿದ್ದ ಕಾಲದಲ್ಲಿ ಅವನೊಡನೆ ಬೆಳೆದು ಬಂದಿತ್ತು. ಮದದ ನೀರೊಳೆ–ಆನೆಯ ಮದದ ನೀರಿನಲ್ಲಿಯೆ, ಲೋಕವಾರ್ತೆಗೆ–ಲೋಕದ ಪ್ರಯೋಜನಕ್ಕಾಗಿ, ಎಂದರೆ ಲೋಕರೂಢಿಯಂತೆ, ಬೆಚ್ಚುನೀರ್ದಳಿದು–ಬೆಚ್ಚು ನೀರನ್ನು ಚಿಮುಕಿಸಿ, ಆಗಳಾ ಮದಗಜಾಂಕುಶದಿಂದೆ–ಆಗ ಆ ಮದ್ದಾನೆಯ ಅಂಕುಶದಿಂದ, ನಾಭಿ ಯಂ–ಹೊಕ್ಕುಳ ಬಳ್ಳಿಯನ್ನು, ಪೆರ್ಚಿಸಿ–ಕತ್ತರಿಸಿ, ವಿಸ್ತರಿಸಿ, ಮದದಂತಿ ದಂತದೊಳೆ– ಸೊಕ್ಕಾನೆಯ ದಂತದಿಂದಲೇ, ಕಟ್ಟಿದ–ಮಾಡಿ ಕಟ್ಟಿದ, ತೊಟ್ಟಿಲಂ–ತೊಟ್ಟಿಲನ್ನು, ನಯದಿಂದಂ–ಮೃದುವಾಗಿ, ಏಱಿಸೆ–ಹತ್ತಿಸಲು, ಬಾಳ ಕಾಲದೊಳೆ–ಕೂಸಾಗಿದ್ದ ಕಾಲ ದಲ್ಲೇ, ತೊಟ್ಟಿಲಿಗಂ– ತೊಟ್ಟಿಲಿನಲ್ಲಿದ್ದ ಅರಿಕೇಸರಿ ಬಾಲಕನು, ಗಜಪ್ರಿಯನಪ್ಪುದಂ– ಆನೆಗಳಲ್ಲಿ ಆಸಕ್ತಿಯುಳ್ಳವನೆಂಬುದನ್ನು, ಸಲೆ ತೋಱಿದಂ–ಚೆನ್ನಾಗಿ ತೋರಿಸಿದನು. ಮಗು ಹುಟ್ಟಿದ ಕೂಡಲೇ ಅದು ಅಳಲೆಂದು ಅದರ ಮೇಲೆ ತಣ್ಣೀರನ್ನು ಚಿಮುಕಿಸುವುದು ಲೋಕ ರೂಢಿ; ಅದಕ್ಕೆ ಬೆಚ್ಚು ನೀರೆಂದು ಹೆಸರು; ಇಲ್ಲಿ ಆನೆಯ ಮದೋದಕವೇ ಅರಿಕೇಸರಿ ಬಾಲಕ ನಿಗೆ ಬೆಚ್ಚು ನೀರಾಯಿತು. ನಾಭಿಯ ಬಳ್ಳಿಯನ್ನು ಆನೆಯ ಅಂಕುಶದಿಂದ ಕತ್ತರಿಸಲಾಯಿತು. ಆನೆಯ ದಂತದಿಂದ ಮಾಡಿದ ತೊಟ್ಟಿಲನ್ನು ಕಟ್ಟಲಾಯಿತು. ಹೀಗೆ ಅರಿಕೇಸರಿಗೆ ಆನೆಯ ಸಂಬಂಧ ಕೂಸುತನದಿಂದ ಉಂಟಾಗಿ ಅವನು ಗಜಪ್ರಿಯನಾಗಿ ಬೆಳೆದು ಬಂದನು.

೪೪. ರುಂದ್ರಾಂಬೋಧಿಪರೀತ ಮಹೀಂದ್ರರ್–ವಿಸ್ತಾರವಾದ ಕಡಲು ಬಳಸಿರುವ ಈ ಭೂಮಿಗೆ ರಾಜರು, ಇನ್ನರ್–ಇಂಥವರು, ಅರಿಕೇಸರಿಯಂಥವರು, ಅದಾರ್–ಅದು ಯಾರಿ ದ್ದಾರೆ? ಯಾರೂ ಇಲ್ಲ. ಈ ನರೇಂದ್ರಂ–ಈ ದೊರೆ ಅರಿಕೇಸರಿ, ಸಾಕ್ಷಾದಿಂದ್ರಂ ತಾನೆನೆ– ಪ್ರತ್ಯಕ್ಷನಾದ ಇಂದ್ರನೇ ತಾನು ಎಂಬಂತೆ, ಸಲೆ ನೆಗೞ್ದು–ಚೆನ್ನಾಗಿ ಪ್ರಸಿದ್ದನಾಗಿ, ಇಂದ್ರೇಂದ್ರನ–ಇಂದ್ರರಾಜನ, ತೋಳೆ–ತೋಳುಗಳೆ, ತೊಟ್ಟಿಲಾಗಿರೆ, ಬಳೆದಂ–ಬೆಳೆದನು, ವರ್ಧಿಸಿದನು. ರಾಷ್ಟ್ರಕೂಟರಾಜರಲ್ಲಿ ಇಂದ್ರರಾಜನೆಂಬವನೊಬ್ಬನು; ಅವನ ಆಳಿಕೆಯ ಕಾಲ ಕ್ರಿ.ಶ. ೯೧೨–೯೧೭; ಇವನನ್ನು ಮುಮ್ಮಡಿ ಇಂದ್ರ ಎಂದು ಕರೆಯುತ್ತಾರೆ. ಇವನ ರಕ್ಷಣೆಯಲ್ಲಿ, ಪೋಷಣೆಯಲ್ಲಿ ಈ ಇಮ್ಮಡಿ ಅರಿಕೇಸರಿ ಬೆಳೆದು ದೊಡ್ಡವನಾದನು.

೪೫. ಅಮಿತಮತಿ ಗುಣದಿಂ–ತುಂಬ ಬುದ್ಧಿವಂತಿಕೆಯೆಂಬ ಗುಣದಿಂದ ಅರಿಕೇಸರಿ, ಅತಿ ವಿಕ್ರಮಗುಣದಿಂ–ಅತಿಪರಾಕ್ರಮಗುಣದಿಂದ, ಶಾಸ್ತ್ರಪಾರಮುಂ–ಶಾಸ್ತ್ರಗಳ ಆಚೆಯ ತೀರವೂ, ರಿಪುಬಳಪಾರಮುಂ–ಶತ್ರುಸೈನ್ಯದ ಆಚೆಯ ದಡವೂ, ಒಡನೆ–ಜೊತೆಯಾಗಿಯೇ, ಸಂದುವು–ಲಭ್ಯವಾದುವು, ಎನಿಸಿದಂ–ಎನಿಸಿಕೊಂಡನು, ಅಮೇಯ ಭುಜಶಾಲಿ–ಅಳತೆಗ ಸಾಧ್ಯವಾದ ಭುಜಬಲವುಳ್ಳ, ಮನುಜಮಾರ್ತಾಂಡನೃಪಂ–ಮನುಷ್ಯರಲ್ಲಿ ಸೂರ್ಯನಂತಿರುವ ಈ ರಾಜನು. ಎಂದರೆ ತನ್ನ ಬುದ್ಧಿಬಲದಿಂದಲೂ ಬಾಹುಬಲದಿಂದಲೂ ಶಾಸ್ತ್ರವನ್ನೂ ಶಸ್ತ್ರವಿದ್ಯೆಯನ್ನೂ ಒಟ್ಟಿಗೇ ಕಲಿತನು.

೪೬. ಉಡೆವಣಿ ಪಱಿಯದ ಮುನ್ನಮೆ–ಸೊಂಟಕ್ಕೆ ಕಟ್ಟಿರುವ ಅರಳೆಲೆ ಮುಂತಾದ ಒಡವೆಯನ್ನು ಕತ್ತರಿಸದ ಎಂದರೆ ತೆಗೆದು ಹಾಕುವುದಕ್ಕಿಂತ ಮುಂಚಿನಿಂದಲೂ, ತೊಡಗಿ– ಆರಂಭವಾಗಿ, ಚಲಂ–ಛಲವು, ನೆಗೞೆ–ಉಂಟಾಗಲು, ರಿಪುಬಲಂಗಳನೆ ಪಡಲ್ವಡಿಸಿ–ಶತ್ರು ಸೈನ್ಯಗಳನ್ನೆ ಚೆಲ್ಲಾಪಿಲ್ಲಿ ಮಾಡಿ, ಪರಬಳದ ನೆತ್ತರ ಕಡಲೊಳಗಣ–ಶತ್ರುಸೈನ್ಯದ ರಕ್ತದ ಕಡಲಿನಲ್ಲಿರುವ, ಜಿಗುಳೆ–ಜಿಗಣೆಯು, ಬಳೆವ ತೆಱದೆ–ಬೆಳೆಯುವ ರೀತಿಯಿಂದ, ಬಳೆದಂ– ವೃದ್ಧಿಯಾದನು.

೪೭. ಮೇಲೆೞ್ದಬಲಂ–ಮೇಲೆ ದಂಡೆತ್ತಿ ಬಂದ ಸೈನ್ಯ, ಕೋಟಿಗೆ ಮೇಲಪ್ಪೊಡಂ– ಒಂದು ಕೋಟಿಗೆ ಮೀರಿದ್ದಾದರೂ, ಅನ್ಯವನಿತೆ–ಪರಸ್ತ್ರೀಯು, ನೆಗೞ್ದೂರ್ವಶಿಗಂ–ಪ್ರಸಿದ್ಧ ರೂಪವತಿಯಾದ ಊರ್ವಶಿಗೂ, ಮೇಲಪ್ಪೊಡಂ–ಮೀರಿದವಳಾಗಿದ್ದರೂ, ಅಕ್ಕೆ–ಆಗಲಿ, ಆಗಿರಲಿ; ಎಂದುಂ–ಯಾವಾಗಲೂ; ಪರಬಲಾಬ್ಧಿಗಂ–ಪರಸೈನ್ಯಕ್ಕೂ, ಪರವಧುಗಂ–ಪರ ಸ್ತ್ರೀಗೂ, ಕಣ್–ಕಣ್ಣು, ಸೋಲದು–ಸೋತುಹೋಗದು, ಮೋಹಗೊಳ್ಳದು. ಸೋಲ್– ಮೋಹಗೊಳ್ಳು ಎಂಬರ್ಥದಲ್ಲಿ ಪ್ರಯೋಗವಾಗಿದೆ: “ಸೋಲದೆ ಪರವನಿತೆಗೆ ಕಣ್ ಸೋಲದು ಮೊಲೆವಾಲನೂಡಿ ನಡಪಿದತಾಯಿಂ ಮೇಲೆನೆ ಬಗೆಗುಂ ನೋಡಿರೆ ಸೋಲದು ಚಿತ್ತಂ ಪರಾಂಗನಾಪುತ್ರಕನಾ” (III ಕೃಷ್ಣನ ಜೂರ ಪ್ರಶಸ್ತಿ).

೪೮. ಪ್ರಿಯಗಳ್ಳಂ–ಪ್ರಿಯಗಳ್ಳ ಎಂಬ ಬಿರುದಿದ್ದ ಅರಿಕೇಸರಿ, ಧುರದೊಳ್–ಯುದ್ಧದಲ್ಲಿ, ಮೂಱುಂ ಲೋಕಂ–ಮೂರು ಲೋಕಗಳೂ, ನೆರೆದಿರೆಯುಂ–ಒಟ್ಟಾಗಿ ಸೇರಿದ್ದರೂ, ಬೀರದ–ಪರಾಕ್ರಮದ, ಅಂತರಕ್ಕೆ–ವ್ಯಾಪ್ತಿಗೆ, ಕಿಱಿದು ಎಂದು ಚಿಂತಿಪಂ–ಅಲ್ಪವೆಂದು ವ್ಯಾಕುಲಿತನಾಗುತ್ತಾನೆ; ಹಾಗೆಯೇ, ಕುಡುವ ಪೊೞ್ತಱೊಳ್–ದಾನ ಮಾಡುವ ಹೊತ್ತಿನಲ್ಲಿ, ಮೇರುವೆ ಮುಂದಿರೆಯುಂ–ಚಿನ್ನದ ಬೆಟ್ಟವಾದ ಮೇರು ಪರ್ವತವೆ ತನ್ನೆದುರಿಗಿದ್ದರೂ, ಬಿಯದ–ವ್ಯಯದ ಎಂದರೆ ಖರ್ಚು ಮಾಡುವ, ಅಂತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯ ಗಳ್ಳಂ.

೪೯. ಪ್ರಶಸ್ತಿ ಕ್ರಮದೊಳ್–ಬಿರುದಾವಳಿಗಳನ್ನು ಹೇಳುವ ಕ್ರಮದಲ್ಲಿ, ಸ್ವಸ್ತಿ ಸಮಧಿಗತ ಪಂಚಮಹಾ ಶಬ್ದ ಮಹಾ ಸಾಮಂತರ್–ಶುಭವಾಗಲಿ, ಸಂಪಾದಿಸಲ್ಪಟ್ಟ ಪಂಚ ಮಹಾ ಶಬ್ದಗಳನ್ನುಳ್ಳ ಮಹಾ ಸಾಮಂತರಾಜರು, ಸಮನೆನಿಸುವರ್–ಅರಿಕೇಸರಿಯೊಡನೆ ಸಮಾನ ರೆಂದೆನಿಸಿಕೊಳ್ಳುತ್ತಾರೆ; ಗುಣದೊಳ್–ಗುಣದಲ್ಲಿ, ಸಾಮಂತರ್, ಸಮನೆನಿಪರೆ–ಸಮಾನ ರಾಗುತ್ತಾರೆಯೆ? ಇಲ್ಲ. ಪಂ ಮಹಾಶಬ್ದ=ಶೃಂಗ, ತಮ್ಮಟೆ, ಶಂಖ, ಭೇರಿ, ಜಯಘಂಟೆ.

೫೦. ಚಾಗದ ಕಂಬಮಂ ನಿಱಿಸಿ–ದಾನದ ಶಿಲಾಸ್ತಂಭವನ್ನು ಸ್ಥಾಪಿಸಿ, ಬೀರದ ಶಾಸನಮಂ ನೆಗೞ್ಚಿ–ಪ್ರತಾಪಸೂಚಕವಾದ ಶಾಸನಗಳನ್ನು ಮಾಡಿಸಿ, ಕೋಳ್ಪೋಗದ ಮಂಡಲಂಗಳನೆ ಕೊಂಡು–ವಶವಾಗದ ರಾಜ್ಯಗಳನ್ನು ವಶಪಡಿಸಿಕೊಂಡು, ಜಗತ್ರಿತಯಂಗಳೊಳ್–ಮೂರು ಲೋಕಗಳಲ್ಲಿ, ಜಸಕ್ಕಾಗರಮಾದ–ಕೀರ್ತಿಗೆ ಮನೆಯಾದ, ಬದ್ದೆಗನಿಂ–ಭದ್ರದೇವನಿ ಗಿಂತಲೂ, ಆ ನರಸಿಂಹನಿಂ–ಆ ನರಸಿಂಹನಿಗಿಂತಲೂ, ಅತ್ತ–ಆಚೆಗೆ, ಪೊದಳ್ದ ಚಾಗ ದೊಳಂ–ವ್ಯಾಪಿಸಿದ ದಾನದಲ್ಲಿಯೂ, ಒಂದಿದ ಬೀರದೊಳಂ–ಕೂಡಿದ ಶೌರ್ಯದಲ್ಲೂ, ಗುಣಾರ್ಣವಂ–ಅರಿಕೇಸರಿಯು, ನಾಲ್ವೆರಲ್ ಮೇಗು–ನಾಲ್ಕು ಬೆರಳುಗಳಷ್ಟು ಉನ್ನತವಾಗಿ ದ್ದಾನೆ. ಅರಿಕೇಸರಿ ತನ್ನ ದಾನಗುಣದಿಂದಲೂ ಪ್ರತಾಪದಿಂದಲೂ ಭದ್ರದೇವ ನರಸಿಂಹ ನನ್ನು ಮೀರಿಸಿದ್ದಾನೆ. ಕೊಳ್ ಎಂಬುದರ ಭಾವನಾಮ ಕೋಳ್.

೫೧. ಎನೆಸಂದುಂ–ಎನ್ನಲು ಪ್ರಸಿದ್ಧನಾಗಿ, ವೀರವೈರಿಕ್ಷಿತಿಪ ಗಜಘಟಾಟೋಪ ಕುಂಭ ಸ್ಥಲೀ ಭೇದನಂ–ಆ ಶತ್ರುರಾಜರ ಆನೆಗಳ ಸೈನ್ಯದ ಠೀವಿಯಿಂದ ಕೂಡಿದ ಕುಂಭಸ್ಥಳಗಳನ್ನು ಸೀಳುವವನಾದ, ಉಗ್ರೋದ್ಘಾಸಿ ಭಾಸ್ವದ್ಭುಜ ಪರಿಘನಂ–ಭಯಂಕರವೂ ಶ್ರೇಷ್ಠವೂ ಆದ ಕತ್ತಿಯಿಂದ ಪ್ರಕಾಶಮಾನವಾದ ತೋಳೆಂಬ ಪರಿಘಾಯುಧವುಳ್ಳ, ಆರೂಢ ಸರ್ವಜ್ಞನಂ– ಆರೂಢ ಸರ್ವಜ್ಞ ಎಂಬ ಬಿರುದುಳ್ಳ, ವೈರಿನರೇಂದ್ರೋದ್ದಾಮ ದರ್ಪೋದ್ದಳನನನೆ–ವೈರಿ ರಾಜರ ಅತಿಶಯವಾದ ಗರ್ವವನ್ನು ಭೇದಿಸುವವನಾಗಿರುವ ಅರಿಕೇಸರಿಯನ್ನೇ, ಕಥಾ ನಾಯಕಂ ಮಾಡಿ–ಕತೆಗೆ ನಾಯಕನನ್ನಾಗಿ ಮಾಡಿ, ಸಂದ–ಪ್ರಸಿದ್ಧನಾದ, ಅರ್ಜುನನೊಳ್ ಪೋಲ್ವ–ಅರ್ಜುನನೊಡನೆ ಹೋಲುವ, ಈ ಕಥಾಭಿತ್ತಿಯಂ–ಈ ಕಥಾ ಚಿತ್ರವನ್ನು, ಪೇೞಲೆಂದು–ನಿರೂಪಿಸಬೇಕೆಂದು, ಎತ್ತಿಕೊಂಡೆಂ–ಪ್ರಾರಂಭಿಸಿದೆನು. ಪರಿಘ–ಕಬ್ಬಿಣದ ಒನಕೆ.

ಇದುವರೆಗೆ ಹೇಳಿರುವ ಅರಿಕೇಸರಿಯ ವಂಶವೃಕ್ಷವನ್ನು ಕೆಳಗೆ ಕಾಣಿಸಿದೆ :

ಇಲ್ಲಿ ಕೊಟ್ಟಿರುವ ಆಳಿಕೆಯ ಕಾಲಗಳು ಸುಮಾರಾಗಿ ಊಹಿಸಲ್ಪಟ್ಟಿವೆ. ಖಚಿತವಾಗಿ ತಿಳಿದುಬರುವ ಕಾಲಗಳನ್ನು ಕೆಲವರಿಗೆ ಕಾಣಿಸಿದೆ. ಈ ವಂಶವೃಕ್ಷವನ್ನು ಕೊಟ್ಟಿರುವವರು ಇತಿಹಾಸಜ್ಞರಾದ ಶ್ರೀಮಾನ್ ಎನ್. ಲಕ್ಷ್ಮೀನಾರಾಯಣರಾಯರು, ಎಂ.ಎ., XLV, p. 212–228)

೫೧. ಎಅಏ ಅದೆಂತೆನೆ.ಅದು ಹೇಗೆನ್ನಲು, ಸಮುನ್ಮಿಷತ್.ಪ್ರಕಾಶಿಸುತ್ತಿರುವ, ವಿವಿಧ ರತ್ನಮಾಲಾ.ಬಗೆಬಗೆಯಾದ ರತ್ನಗಳ, ಪ್ರಭಾಭಿದ್.ಕಾಂತಿಯಿಂದ ಭೇದಿಸಲ್ಪಟ್ಟ, ಅರುಣ ಜಳ.ಕೆಂಪಾದ ನೀರಿನಿಂದ, ಆವಿಳ.ಕದಡಲ್ಪಟ್ಟ, ವಿಳೋಳ.ಏಳುತ್ತ ಬೀಳುತ್ತಿರುವ, ವೀಚೀರಯ ಪ್ರದಾರಿತ.ಅಲೆಗಳ ವೇಗದಿಂದ ಸೀಳಲ್ಪಟ್ಟ, ಕುಳಾಚಳ.ಕುಲಪರ್ವತಗಳಿಂದ ಕೂಡಿದ, ಉದಧಿ.ಸಮುದ್ರದಿಂದ, ಪರೀತಮಾಗಿರ್ದ.ಬಳಸಲ್ಪಟ್ಟದ್ ಜಂಬುದೀವಿಯೊಳಗೆ. ಜಂಬೂದ್ವೀಪದಲ್ಲಿ, ಕುರುಜಾಂಗಣಂ ನಾಮದಿಂ.ಕುರುಜಾಂಗಣವೆಂಬ ಹೆಸರಿದ್ದ, ನಾಡು.ದೇಶ, ಉಂಟು. ಅಂತಾ ಕುರುಜಾಂಗಣ ವಿಷಯದೊಳ್, ಹಾಗೆ ಆ ಕುರುಜಾಂಗಣ ದೇಶದಲ್ಲಿ.

೫೨. ಇಲ್ಲಿಂದ ಮುಂದಕ್ಕೆ ೫೭ರ ಪದ್ಯ ಪೂರ್ತಿಯಾಗಿ ದೇಶವರ್ಣನೆತ್ ಜಲಜಲನೆ.ಜಲಜಲ ಎಂದು, ಒೞ್ಕುತಿರ್ಪ.ಪ್ರವಾಹವಾಗಿ ಹರಿಯುವ, ಪರಿಕಾಲ್.ಹರಿಯುವ ನೀರ ಕಾಲುವೆಗಳುದ್ ಪರಿಕಾಲೊಳ್.ಆ ಕಾಲುವೆಗಳಲ್ಲಿ ಅಳುರ್ಕೆಗೊಂಡ.ವ್ಯಾಪಿಸಿರುವ, ತುಂಬಿ ರುವ, ನೆಯ್ದಿಲಪೊಸವೂ.ನೆಯ್ದಿಲೆಯ ಹೊಸದಾದ ಹೂವುದ್ ಪೊದಳ್ದ ಪೊಸ ನೆಯ್ದಿಲ. ಹರಡಿಕೊಂಡಿರುವ ಹೊಸದಾದ ನೈದಿಲೆ ಹೂವಿನ, ಕಂಪನೆ.ಸುಗಂಧವನ್ನೆ, ಬೀಱಿ. ಸೂಸಾಡಿ, ಕಾಯ್ತ.ಕಾಯಿ ಬಿಟ್ಟಿರುವ ಎಂದರೆ ಫಲ ಬಿಟ್ಟಿರುವ, ಕೆಂಗೊಲೆಯೊಳೆ.ಕೆಂಪು ಗೊಂಚಲಿನಲ್ಲಿಯೆ, ಜೋಲ್ವ.ಜೋತುಬಿದ್ದಿರುವ, ಶಾಲಿ.ಬತ್ತದ್ ನವ ಶಾಲಿಗೆ.ಈ ಹೊಸ ದಾದ ನೆಲ್ಲಿಗೆ, ಪಾಯ್ವ-ನುಗ್ಗಿಬರುವ, ಶುಕಾಳಿ.ಗಿಣಿಗಳ ಸಾಲುದ್ ತೋಱೆ.ಕಾಣಲು, ಕೆಯ್ವೊಲಗಳಿನೊಪ್ಪಿ.ಗದ್ದೆಗಳಿಂದ ರಮಣೀಯವಾಗಿ, ತೋಱಿ.ಕಂಡು, ಸಿರಿ.ಲಕ್ಷ್ಮಿ, ಆ ವಿಷಯಾಂತರಾಳಮಂ.ಆ ದೇಶದ ಹರವನ್ನು, ನೋಡುಗುಂ.ನೋಡುತ್ತಾಳೆ. ಈ ಪದ್ಯದಲ್ಲಿ ಮುಕ್ತ ಪದಗ್ರಹಣವೆಂಬ ಅಲಂಕಾರವಿದೆ. ವರ್ಣನೆ ವಾಸ್ತವಿಕವಾಗಿ ಸೊಗಸಾಗಿದೆ. ಇದು ಕುರುಜಾಂಗಣದ ವರ್ಣನೆ ಎಂದು ಹೇಳಿದ್ದರೂ ಇದು ಕವಿಯ ನಾಡಿನ, ಕನ್ನಡನಾಡಿನ, ರಮ್ಯವಾದ ಚಿತ್ರ.

೫೩. ಬೆಳೆದು ಒಱಗಿರ್ದ ಕೆಯ್ವೊಲನೆ.ಬೆಳೆದು ತೆನೆಯ ಭಾರದಿಂದ ಬಾಗಿರುವ ಗದ್ದೆಗಳೇ, ಕೆಯ್ವೊಲನಂ.ಗದ್ದೆಗಳನ್ನು, ಬಳಸಿರ್ದ.ಸುತ್ತುವರಿದಿದ್ದ, ಪೂತ ಪೂಗೊಳಗಳೆ.ಹೂವು ಬಿಟ್ಟ ಕೊಳಗಳೇ, ಪೂತ ಪೂಗೊಳಂಗಳಂ ಬಳಸಿರ್ದ.ಹೂವು ಬಿಟ್ಟಿರುವ ಹೂವಿನ ಕೊಳ ಗಳನ್ನು ಬಳಸಿದ್ದ, ವಿಚಿತ್ರನಂದನಾವಳಿಗಳೆ.ಬಗೆಬಗೆಯಾದ ತೋಟದ ಸಾಲುಗಳೇ, ನಂದನಾವಳಿಗಳಂ ಬಳಸಿರ್ದ.ಈ ತೋಟಗಳನ್ನು ಬಳಸಿದ್ದ, ಮದಾಳಿ ಸಂಕುಲಂಗಳೆ. ಸೊಕ್ಕಿದ ದುಂಬಿಯ ಸಮೂಹಗಳೇ, ವಿಷಯಾಂಗನಾ.ದೇಶವೆಂಬ ಸ್ತ್ರೀಯಲುಳಿತ.ಕೊಂಕಾದ, ಕುಂತಲದಂತೆವೊಲೊಪ್ಪಿ, ಮುಂಗುರುಳಿನ ಹಾಗೆ ಸೊಗಸಾಗಿ, ತೋಱುಗುಂ.ಕಾಣುತ್ತದೆ. ಹೂವು, ಹಣ್ಣು, ಬತ್ತ, ಗಿಳಿ, ತುಂಬಿ, ಕಂಪು, ತೋಟ, ಕೊಳ, ಇವುಗಳಿಂದ ತುಂಬಿದೆ ಕನ್ನಡ ನಾಡು.

೫೪. ಲಲಿತವಿಚಿತ್ರ ಪತ್ರಫಲಪುಷ್ಪಯುತಾಟವಿ.ಸುಂದರವಾದ ನಾನಾ ಬಗೆಯಾದ ಎಲೆ ಹಣ್ಣು ಹೂವುಗಳಿಂದ ಕೂಡಿದ ಕಾಡು, ಸೊರ್ಕಿದಾನೆಯಂ ಬೆಳೆವುದು.ಮದದಾನೆಯನ್ನು ಬೆಳೆಸುತ್ತದೆ ದೇವಮಾತೃಕವೆನಿಪ್ಪ ಪೊಲಂ.ಮಳೆಯಿಂದಲೇ ಬೆಳೆಯುವ ಹೊಲ, ನವಗಂಧ ಶಾಲಿಯಂ ಬೆಳೆವುದು.ಹೊಸ ಸುಗಂಧದಿಂದ ಕೂಡಿ.ಬತ್ತವನ್ನು ಬೆಳೆಯುತ್ತದೆ ರಮ್ಯ ನಂದನವನಾಳಿ.ರಮಣೀಯವಾದ ತೋಟಗಳ ಸಾಲು, ವಿಯೋಗಿ ಜನಕ್ಕೆ.ಪರಸ್ಪರ ಅಗಲಿರುವ ಪ್ರಣಯಿಗಳಿಗೆ, ಬೇಟಮಂದ.ಪ್ರೀತಿಯನ್ನು, ಬಳೆವುದು.ಬೆಳಸುತ್ತದೆದ್ ಆ ವಿಷಯಾಂತರಾಳದೊಳ್.ಆ ನಾಡಿನ ಒಳಭಾಗದಲ್ಲಿ, ನಾಡಕಾಡ ಬೆಳಸು.ನಾಡಿನಲ್ಲಿಯೂ ಕಾಡಿನಲ್ಲಿಯೂ ಬೆಳೆಯುವ ಬೆಳಸು, ಇಂಬೆಳಸು.ಇನಿದಾದ ಎಂದರೆ ಮಧುರವಾದ ಬೆಳಸು. ಇಲ್ಲಿ ಕವಿಯ ಆಶ್ಚರ್ಯ, ಸಂತೋಷ, ಸೌಂದರ್ಯ ದೃಷ್ಟಿಗಳು ಅಭಿವ್ಯಕ್ತವಾಗಿವೆ. ದೇವತೆಗಳು ಸುರಿಸುವ ಮಳೆಯಿಂದಲೇ ಬೆಳೆವ ಭೂಮಿ ದೇವಮಾತೃಕದ್ ನದೀ ನೀರಿನಿಂದ ಬೆಳೆಯುವ ಭೂಮಿ ನದೀಮಾತೃಕ.

೫೫. ಆವಲರುಂ ಪಣ್ಣು–ಯಾವ ಹೂವೂ ಹಣ್ಣು, ಬೀತು–ಮುಗಿದುಹೋಗಿ ಎಂದರೆ ಅದರ ಕಾಲದಲ್ಲಿ ಅದು ಇರುತ್ತದೆ, ಆಮೇಲೆ ಇಲ್ಲವಾಗುತ್ತದೆ, ಇಂಥವು, ಓವವು ಗಡ– ಜನರನ್ನು ಕಾಪಾಡಲಾರವಲ್ಲವೆ? ಅಲ್ಲಿ ಮಲ್ಲಿಗೆಗಳುಂ ಮಾವುಗಳುಂ–ಅಲ್ಲಿ ಮಲ್ಲಿಗೆ ಮಾವು ಗಳು ಕೂಡ, ಬೀಯವು–ಮುಗಿದುಹೋಗವು, ಎಂದರೆ ಎಲ್ಲಾ ಕಾಲದಲ್ಲೂ ಇರುತ್ತವೆ; ಎಂದೊಡೆ–ಎಂದರೆ, ಇನ್ ಪೆಱತು–ಇನ್ನು ಬೇರೆಯಾದ, ಸಂಸಾರಸಾರಸರ್ವಸ್ವಫಲಂ– ಸಂಸಾರಸಾರಸರ್ವಸ್ವವಾಗಿರುವ ಹಣ್ಣು ಬೇರೇನಿದೆ. ಕವಿಗೆ ಮಾವಿನಲ್ಲಿ ಮಲ್ಲಿಗೆಯಲ್ಲಿ ಇರುವ ಪ್ರೀತಿ ಅತಿಶಯವಾದದ್ದು; ಅವೆರಡಿದ್ದರೆ ಬೇರೆ ಸಂಸಾರ ಭೋಗಗಳೇಕೆ?

೫೬. ಆ ನಾಡಿನ ಕಬ್ಬು ಹೂವು ಹಣ್ಣುಗಳ ಸೊಗಸನ್ನು ಏನೆಂದು ಹೇಳುವುದು. ತನಿಗರ್ವು –ಹೊಸದಾದ ಕಬ್ಬು, ಮಿಡಿದೊಡೆ–ಬೆರಳಿನಿಂದ ಹೊಡೆದರೆ, ರಸಂ ಬಿಡುವುವು–ರಸವನ್ನು ಸುರಿಸುತ್ತವೆ; ತುಂಬಿಗಳ್–ದುಂಬಿಗಳು, ಬಿರಿದೊಂದು ಮುಗುಳ ಕಂಪಿನೊಳೆ– ಅರಳಿದ ಒಂದು ಮೊಗ್ಗಿನ ಸುಗಂಧದಲ್ಲಿಯೇ, ಮೊಗಂಗಿಡುವುವು–ಮುಖ ಕೆಡಿಸಿಕೊಳ್ಳುವುವು, ಎಂದರೆ ಸಾಕು ಸಾಕು ಎಂದು ಅಸಹ್ಯಪಡುವುವು; ಗಿಳಿಗಳ್–ಗಿಣಿಗಳು, ಕುಡಿದೊಂದು ಪಣ್ಣರಸದೊಳೆ–ಕುಡಿದ ಒಂದು ಹಣ್ಣಿನ ರಸದಿಂದಲೇ, ಅೞ್ಕಮೆವಡುವುವು–ಅಜೀರ್ಣ ವನ್ನು ಪಡೆಯುತ್ತವೆ. ಕಬ್ಬು ಹೂ ಹಣ್ಣು ಎಷ್ಟು ರಸವತ್ತಾಗಿರಬೇಕು!

೫೭. ಸುತ್ತಲುಂ–ಎಲ್ಲೆಲ್ಲೂ, ಸುತ್ತಿಱಿದ–ಬಳಸಿರುವ, ರಸದ ತೊಱೆಗಳೆ–ಸಿದ್ಧರಸದ ನದಿಗಳೇ, ಮುತ್ತಿನ ಮಾಣಿಕದ ಪಲವುಮಾಗರಮೆ–ಮುತ್ತುರತ್ನಗಳಿಂದ ಮಾಡಿದ ಹಲವು ಮನೆಗಳೇ, ಮದೋನ್ಮತ್ತ ಮದಕರಿವನಂಗಳೆ–ಮದದಿಂದ ಸೊಕ್ಕಿದ ಆನೆಗಳನ್ನುಳ್ಳ ಕಾಡು ಗಳೇ, ಆ ನೆಲದ ಸಿರಿಯನೇನಂ ಪೊಗೞ್ವೆಂ–ಆ ನೆಲದ ಸಂಪತ್ತನ್ನು ಏನೆಂದು ತಾನೆ ಹೊಗಳು ವೆನು !

ವಚನ : ರಾಜಧ್ರಾಜಧಾನಿ–ಪ್ರಕಾಶಮಾನವಾದ ರಾಜಧಾನಿ; ಇಲ್ಲಿ ಬಾಣಭಟ್ಟನು ಮಾಡಿರುವ ವರ್ಣನೆಯಿಂದ ಪಂಪ ಪ್ರಭಾವಿತನಾಗಿದ್ದಾನೆ.

೫೮. ರಗಳೆ : ಪೊಱವೊೞಲ–ಪಟ್ಟಣದ ಹೊರಭಾಗದ; ಫಲಪ್ರಕೀರ್ಣ–ಹಣ್ಣುಗಳಿಂದ ಕಿಕ್ಕಿರಿದ; ನನೆ–ಹೂವು; ಕೊನೆ–ಕುಡಿ; ನಿಕುಂಜದಿಂ–ಬಳ್ಳಿ ಮಾಡದಿಂದ; ಪ್ರಸೂನ–ಹೂವಿನ; ಆಕಾಶವೇ ಕತ್ತರಿಸಿ ಕೆಳಗೆ ಬಿತ್ತೊ ಎಂಬಂತಿರುವ ಕೆರೆಗಳಿಂದ; ಕುಕಿಲ್ವ–ಶಬ್ದ ಮಾಡುವ; ಸುರಯಿಯರಲ–ಸುರಗಿಯ ಹೂವಿನ; ಮೊಗಸಿದ–ಮುತ್ತಿಕೊಂಡ; ತೊದಲ್ವ–ತೊದಲು ಮಾತಾಡುವ; ತುರಂಗಮಂಗಳಿಂ–ಕುದುರೆಗಳಿಂದ; ಉದಗ್ರ–ಎತ್ತರವಾದ; ಕನಕಶಾಳದಿಂ– ಚಿನ್ನದ ಕೋಟೆ ಗೋಡೆಯಿಂದ; ದೇವಕುಲ–ದೇವಸ್ಥಾನ; ಮಿಳಿರ್ವ–ಅಲುಗಾಡುವ; ಸದಾನಿ ಕೇತನಂಗಳಿಂ–ದಾನ ಮಾಡುವವರ ಮನೆಗಳಿಂದ, ಧನದ–ಕುಬೇರ, ಬಚ್ಚರ– ವೈಶ್ಯರ; ಆಪಣಂಗಳಿಂ–ಅಂಗಡಿಗಳಿಂದ; ಕಾವಣಂಗಳಿಂ–ಚಪ್ಪರಗಳಿಂದ; ವಿಟಜನಕ್ಕೆ ತೊಡರ್ವ ಚಾರಿ.ವಿಟಜನರು ಸಿಕ್ಕಿಕೊಳ್ಳುವ ಸಂಕೋಲೆ; ವಿದಗ್ಧ-ಬಲ್ಲವ; ಗುಣಣೆ -ನೃತ್ಯ ಶಾಲೆ; ಬಳ್ಳವಳ್ಳಿ -ಆಧಿಕ್ಯ, ಅತಿಶಯ; ನೀಡದಿಂ -ಗೂಡಿನಿಂದ; ಹಾಸಿಗೆಯಿಂದ.

ಇದೊಂದು ತೆರನಾದ ರಗಳೆ; ನಿಷ್ಕೃಷ್ಟವಾದ ಹೆಸರು ಏನೂ ಇಲ್ಲ; ಮೊದಲನೆಯ ಪಾದದಲ್ಲಿ ಮೂರು ಮಾತ್ರೆಗಳ ಏಳು ಗಣಗಳೂ ಒಂದು ಗುರುವೂ, ಎರಡನೆಯ ಪಾದದಲ್ಲಿ ಒಂದು ಜಗಣವೂರಡು ಮೂರು ಮಾತ್ರೆಗಳ ಗಣಗಳೂ ಮುಕ್ತಾಯಕ್ಕೆ ಒಂದು ಗುರುವೂ ಬರುತ್ತವೆ; ಇಂಥ ರಗಳೆಯೊಂದು ಕುಮುದೇಂದು ರಾಮಾಯಣದ ೪ನೆಯ ಸಂಧಿಯಲ್ಲಿ ದೊರೆಯುತ್ತದೆ; ಉತ್ಸಾಹ ರಗಳೆ ಎಂದು ಅದರ ಸಂಪಾದಕರು ಇದಕ್ಕೆ ಹೆಸರಿಸಿದ್ದಾರೆ.

ವಚನ: ವಿಧಾತ್ರಂ–ಬ್ರಹ್ಮನು; ತೆರಳ್ಚಿದಂತೆ–ರಾಶಿ ಮಾಡಿದಂತೆ, ಹಾರಮಾಗಿರ್ದ– ರಮಣೀಯವಾಗಿದ್ದ; ಅವಳಂಬನವಾಗೆ–ಆಶ್ರಯಸ್ಥಾನವಾಗಲು;

೫೯. ಜಳರುಹನಾಭನ–ವಿಷ್ಣುವಿನ, ನಾಭಿಯ ಜಳಬುದ್ಬುದದೊಳಗೆ–ಹೊಕ್ಕುಳ ನೀರಿನ ಗುಳ್ಳೆಯಲ್ಲಿ, ಸುರಭಿ ಪರಿಮಳಮಿಳಿತೋಲ್ಲುಳಿತಾಳಿಜಲಜಂ–ಸುಗಂಧದಿಂದ ಕೂಡಿದ, ದುಂಬಿಗಳಿಂದ ಚಲಿಸುತ್ತಿರುವ ಕಮಲವು, ಆಯ್ತು–ಆಯಿತು, ಹುಟ್ಟಿತು; ಆ ಜಲಜದೊಳ್, ಹಿರಣ್ಯಗರ್ಭಂ–ಬ್ರಹ್ಮಂ, ಒಗೆದಂ–ಹುಟ್ಟಿದನು.

೬೦. ಕಮಲೋದ್ಭವನ–ಬ್ರಹ್ಮನ, ಅಮಳಿನ ಹೃತ್ಕಮಲದೊಳ್–ನಿರ್ಮಲವಾದ ಹೃದಯವೆಂಬ ಕಮಲದಲ್ಲಿ, ಸುರೇಂದ್ರಧಾರಕರ್–ಶ್ರೇಷ್ಠವಾದ ನೀರಿನ ಕಮಂಡಲವನ್ನು ಹಿಡಿದುಕೊಂಡ, ವಾಗಮಳರ್–ನಿರ್ಮಲವಾಕ್ಕುಳ್ಳವರಾದ, ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ ಮತ್ತು ಕ್ರತು–ಎಂಬಿವರು, ಒಗೆದರ್–ಹುಟ್ಟಿದರು; ನೆಗೞ್ದಿರ್ದರ್– ಪ್ರಸಿದ್ಧರಾಗಿದ್ದರು. ಬ್ರಹ್ಮನ ಮಾನಸಪುತ್ರರು ಆರು ಜನ. ಈ ಪದ್ಯದಲ್ಲಿ ಪಾಠಕ್ಲೇಶವಿದೆ. ಇಲ್ಲಿ–ಸುರೇಂದ್ರಧಾರಕರ್ ಎಂಬುದಕ್ಕೆ ಕೊಟ್ಟಿರುವ ಅರ್ಥ ಸಂಶಯಾಸ್ಪದ.

ವಚನ : ಅವ್ಯವಚಿ, ನ್ನಮಾಗಿ–ಎಡೆಬಿಡದೆ, ನಿರಂತರವಾಗಿ, ನಡುವೆ ನಿಂತು ಹೋಗದೆ.

೬೧. ಭುವನತ್ರಯ ಸಂಗೀತ ಕೀರ್ತಿ–ಮೂರು ಲೋಕದಲ್ಲೂ ಹಾಡಲ್ಪಟ್ಟ ಕೀರ್ತಿಯುಳ್ಳ ವನು; ಸೋಮಂ–ಚಂದ್ರ; ಪ್ರೋದ್ದಾಮ–ಅತಿ ಅತಿಶಯವಾದ; ಲಲಾಮಂ–ಹಣೆಯ ಆಭರಣನಾದವನು, ಶ್ರೇಷ್ಠನಾದವನು.

೬೨. ಆ ಸೋಮವಂಶಜರ್ ಪಲರ್–ಆ ಚಂದ್ರವಂಶದಲ್ಲಿ ಹುಟ್ಟಿದ ಹಲವರು, ಆಸು ಕರಂ ಬೆರಸು–ತೀವ್ರತ್ವದೊಡನೆ ಕೂಡಿ, ನೆಗೞ್ದ ಜಸದಿಂ–ಉಂಟಾದ ಕೀರ್ತಿಯಿಂದ, ಜಗ ಮಂ, ಬಾಸಣಿಸಿ–ಮುಚ್ಚಿ, ಪೋದೊಡೆ–ಮರಣವನ್ನು ಹೊಂದಿದರೆ; ದೌಷ್ಯಂತಿ–ದುಷ್ಯಂತನ ಮಗನಾದ. ಇಲ್ಲಿ ಆಸುಕರಂ ಎಂಬುದರ ಅರ್ಥ ಚಿಂತನೀಯ. ಇದಕ್ಕೆ ಅತಿಶಯ ಎಂದರ್ಥ ವನ್ನು ಕೊಟ್ಟಿದೆ (ಪಂಪಭಾ.ನಿ.) ಸಂಸ್ಕೃತದ ಆಶು=ಶೀಘ್ರ, ತ್ವರಿತ ಎಂಬುದು ಪ್ರಾಕೃತದಲ್ಲಿ ಆಸು ಆಗುತ್ತದೆ; ಆಸುಕಾರ ಎಂಬೊಂದು ಶಬ್ದ ಪ್ರಾಕೃತದಲ್ಲುಂಟು; ಅದಕ್ಕೆ ಹಿಂಸೆ, ಹೊಡೆ ಯುವುದು, ಮರಣ ಕಾರಣ ಎಂಬರ್ಥಗಳಿವೆ; ಇವು ಪ್ರಕೃತ ಸಂದರ್ಭಕ್ಕೆ ಹೊಂದುವುದಿಲ್ಲ. “ಕೇಸುರಿಸೂಸೆ ತನ್ನ ಮೊಗದಿಂ ಕಿಡಿ ಬೀೞ್ತರೆತನ್ನ ಕಣ್ಗಳಿಂದಾಸುರಮಾಗೆ ದಾಡೆಗಳೊಡಲ್ ಬಳೆದಂಬರಮಂ ತಱುಂಬೆ ತನ್ನಾಸುಕರಂ ಕರಂ ದೆಸೆಗಮರ್ವಿಸೆ” ಎಂಬ ನಾಗಚಂದ್ರನ ಪ್ರಯೋಗದಲ್ಲಿ (ಪಂಪ. ರಾ. ೧೧–೧೦೭) ಆಸುಕರಂ ಎಂಬುದು ಭಯಂಕರ ಕಾರ್ಯ ನಿರ್ದೇಶಕವೆಂದು ತೋರುತ್ತದೆದ್ ತೀವ್ರತ್ವ, ರಭಸ, ಪ್ರತಾಪ ಇತ್ಯಾದಿ ಅರ್ಥವಾಗಬಹುದು

೬೩. ಚಾರು ಚರಿತ್ರಂ–ಮನೋಹರವಾದ ನಡತೆಯುಳ್ಳವನು; ಅಮರ್ದೆಸೆಯೆ–ಸೇರಿ ಪ್ರಕಾಶಿಸಲು;

೬೪. ಅನೇಕಾಧ್ವರಭರನಿರತಂ–ಅನೇಕ ಯಜ್ಞ ಕಾರ್ಯಗಳಲ್ಲಿ ಆಸಕ್ತನಾದವನು; ಕೞಿಯೆ–ಸಾಯಲು; ಪಲರಾದರಿಸಿದ–ಹಲವರು ಪ್ರೀತಿಸಿದ.

೬೫. ಪ್ರತಿಮನಿಗೆ ಶಂತನು, ಬಾಹ್ಲಿಕ, ವಿನೂತ, ದೇವಾಪಿ–ಎಂದು ನಾಲ್ವರು ಮಕ್ಕಳು; ಇವರೆಲ್ಲ ಪರಬಳ ಪ್ರಭೇದನ ಶೌರ್ಯರ್–ಶತ್ರುರಾಜರನ್ನು ಮುರಿಯುವುದರಲ್ಲೂ ಶೂರರು.

ವಚನ : ಪ್ರತಾಪ ಪ್ರಸರ ಪ್ರಕಟಪಟುವಾಗಿ–ಪ್ರತಾಪದ ವಿಶಾಲತೆಯನ್ನು ಪ್ರಕಟಿಸುವು ದರಲ್ಲಿ ಸಮರ್ಥನಾಗಿ.

೬೬. ಕಂತುಶರಭವನಂ–ಮನ್ಮಥನ ಬಾಣಕ್ಕೆ ಮನೆಯಾದ, ಎಂದರೆ ಬತ್ತಳಿಕೆಯಾದ ಅಪ್ರತಿಮನು, ಪ್ರಿಯಕಾಂತಾಭ್ರೂವಿಭ್ರಮಗ್ರಹಾಗ್ರಹವಶದಿಂ–ಪ್ರಿಯರಾದ ಸ್ತ್ರೀಯರ, ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶವಾಗಿ, ಭ್ರಾಂತಿಸದೆ–ಸಂಸಾರದಲ್ಲಿ ಭ್ರಮೆಗೊಳ್ಳದೆ, ಉಪಶಾಂತಮನಂ–ಸಮಾಧಾನಚಿತ್ತನಾಗಿ, ಸಮಸ್ತ ರಾಜ್ಯಶ್ರೀಯಂ, ಶಂತನುಗಿತ್ತಂ.

೬೭. ಶಂತನುವಿಗೂ ಗಂಗಾದೇವಿಗೂ ಎಂಟನೆಯ ವಸು ವಸಿಷ್ಠನ ಶಾಪದಿಂದ ಭೀಷ್ಮ ನಾಗಿ ಹುಟ್ಟಿದನು. ನಿರ್ಜಿತ ಕಂತುವೆನಲ್ಕೆ–ರೂಪಿನಲ್ಲಿ ಮನ್ಮಥನನ್ನು ಮೀರಿಸಿದವನೆನ್ನಲು.

ವಚನ : ಭುವನಭವನಕ್ಕೆಲ್ಲಂ–ಲೋಕವೆಂಬ ಮಂದಿರಕ್ಕೆಲ್ಲ; ಆಯಮುಮಳವು ಮಣ್ಮುಂ–ಐಶ್ವರ್ಯವೂ ಶಕ್ತಿಯೂ ಪ್ರತಾಪವೂ; ನೆಱೆಯೆನೆಱೆಯೆ–ತುಂಬಿಕೊಳ್ಳುತ್ತಿರಲು.

೬೮. ಸಾಲಪ್ರಾಂಶು–ಸಾಲವೃಕ್ಷದಂತೆ ಎತ್ತರವುಳ್ಳ, ವಿಶಾಲಲೋಲನಯನಂ–ಅಗಲ ವಾಗಿ ವಿಲಾಸದಿಂದ ಕೂಡಿರುವ ಕಣ್ಣುಳ್ಳ, ಪ್ರೋದ್ಯತ್ ವೃಷಸ್ಕಂಧಂ–ಎತ್ತರವಾದ ಗೂಳಿಯ ಹೆಗಲನ್ನುಳ್ಳ, ಉನ್ಮೀಲತ್ಪಂಕಜವಕ್ತ್ರಂ–ಅರಳುತ್ತಿರುವ ಕಮಲದಂತೆ ಮುಖವುಳ್ಳ, ಆಯತ ಸಮಗ್ರೋರಸ್ಥಳಂ–ವಿಸ್ತಾರವಾದ ತುಂಬಿದ ಎದೆಯ ಪ್ರದೇಶವುಳ್ಳ, ದೀರ್ಘ ಬಾಹಾ ಲಂಬಂ–ಉದ್ದವಾದ ತೋಳುಗಳಿಗೆ ಆಶ್ರಯನಾದ, ಭುಜವೀರ್ಯ ವಿಕ್ರಮಯುತಂ– ಬಾಹುಗಳ ಶೌರ್ಯ ಪ್ರತಾಪಗಳನ್ನುಳ್ಳ, ಗಂಗಾತ್ಮಜನ್ಮಂ–ಭೀಷ್ಮನು, ಜಯಲಕ್ಷ್ಮೀ ಲೋಲಂ–ವಿಜಯವೆಂಬ ಲಕ್ಷ್ಮಿಯಲ್ಲಿ ಆಸಕ್ತನಾಗಿರುವವನು, ಜಮದಗ್ನಿ ರಾಮಮುನಿ ಯೊಳ್–ಪರಶುರಾಮನಲ್ಲಿ, ಧನುರ್ವಿದ್ಯೆಯಂ–ಬಿಲ್ವಿದ್ಯೆಯನ್ನು, ಧನುರ್ವೇದವನ್ನು, ಕಲ್ತಂ–ಕಲಿತುಕೊಂಡನು. ಯೌವನದ ಆರಂಭದೆಸೆಯಲ್ಲಿ ಮೈದೋರುವ ಭವ್ಯ ಸುಂದರ ಮೂರ್ತಿಯ ವರ್ಣನೆ ಇಲ್ಲಿದೆ. ಇದಕ್ಕೆ ಮೂಲ ರಘುವಂಶದ “ವ್ಯೂಢೋರಸ್ಕೋವೃಷ ಸ್ಕಂಧಃ ಶಾಲಪ್ರಾಂಶುರ್ಮಹಾಭುಜಃ” (೧–೧೩) ಎಂಬ ಪದ್ಯಭಾಗವಾಗಿದ್ದರೂ ಪಂಪನು ತಾನು ಸ್ವೀಕರಿಸಿರುವುದನ್ನು ರಮಣೀಯತರವಾಗಿ ಬಳಸಿಕೊಂಡಿದ್ದಾನೆ.

ವಚನ : ಅಂತು ಕಲ್ತು–ಹಾಗೆ ಕಲಿತು; ಮುನ್ನಮೆ–ಮೊದಲೇ, ಚಾಪವಿದ್ಯೆಯೊಳ್– ಬಿಲ್ವಿದ್ಯೆಯಲ್ಲಿ, ಆರಿಂದಮೀತನೆ–ಎಲ್ಲರಿಗಿಂತಲೂ ಇವನೇ, ಭಾರ್ಗವನೆನಿಸಿದ–ಉತ್ತಮ ಬಿಲ್ಗಾರನೆನಿಸಿಕೊಂಡ, ಭಾರ್ಗವಂಗೆ–ಪರಶುರಾಮನಿಗೆ, ತಾನೆ–ತಾನೇ, ಭಾರ್ಗವನಾಗಿ– ಗುರುವಾಗಿ; ಯುವರಾಜ ಕಂಠಿಕಾ–ಯುವರಾಜ ಪದವಿಗೆ ಲಾಂಛನವಾದ ಕೊರಳ ಹಾರದಿಂದ, ಪರಿಕಲಿತ–ಸೇರಿದ, ಕಂಠಲುಂಠನುಮಾಗಿ–ಕೊರಳ ಅಲುಗಾಟವನ್ನುಳ್ಳವನಾಗಿ; ಪ್ರಮಾಣ–ದೀರ್ಘವನ್ನೂ ಗಾತ್ರವನ್ನೂ ಉಳ್ಳ, ನಿಜಭುಜ ದಂಡಿತಾರಾತಿ ಮಂಡಲನುಮಾಗಿ– ತನ್ನ ಬಾಹುಗಳಿಂದ ಶಿಕ್ಷಿಸಲ್ಪಟ್ಟ ಶತ್ರು ಸಮೂಹವುಳ್ಳವನಾಗಿ; ಕಣ್ಬೇಟಂಗೊಂಡು–ಚಕ್ಷುಃ ಪ್ರೀತಿಯನ್ನು ಹೊಂದಿ, ನೋಡಿದ ಕೂಡಲೆ ಮೋಹವಶನಾಗಿ; ಬರಲ್ ಪಡೆಯದೆ–ಸಮೀಪಿ ಸಲು ಅವಕಾಶವನ್ನು ಹೊಂದದೆ; ಇಂದ್ರಿಯಕ್ಷರಣೆ–ರೇತಸ್ಸಿನ ಸ್ಖಲನೆ; ಕದಳೀಪತ್ರದೊಳ್– ಬಾಳೆಯ ಎಲೆಯಲ್ಲಿ; ಪುದಿದು–ಮುಚ್ಚಿ; ತನ್ನನಡಪಿದ–ತಾನು ಸಾಕಿದ; ಓಪಳಲ್ಲಿಗೆ– ಪ್ರಿಯಳಾದವಳಲ್ಲಿಗೆ; ಎಡೆಗೊಂಡು–ನಡುವೆ ಆಕ್ರಮಿಸಿ, ಮೇಲೆ ಬಿದ್ದು; ಜಗುನೆಯಂ ಪಾಯ್ವಾಗಳ್–ಯಮುನಾ ನದಿಯನ್ನು ದಾಟುವಾಗ; ಉಗಿಬಗಿಮಾಡಿದಾಗಳ್–ಉಗುರಿ ನಿಂದ ಪರಚಿ ಗಾಯಗೊಳಿಸಿದಾಗ; ಬರ್ದುಂಕಿ–ಜಾರಿ, ತಪ್ಪಿಸಿಕೊಂಡು; ಬಾಳೆಮೀನ್– ಬಾಳೆಯೆಂಬ ಮೀನು, ಕನ್ಯೆಯಾಗಿರುವ ಮೀನು; ತಾಳ್ದಿದೊಡೆ–ತಾಳಿದರೆ, ಧರಿಸಿದರೆ; ಜಾಲಗಾಱಂ–ಬೆಸ್ತರವನು; ಜಾಲದೊಳ್–ಬಲೆಯಲ್ಲಿ; ವಿದಾರಿಸಿ–ಸೀಳಿ; ನೋೞ್ಪನ್ನೆಗಂ– ನೋಡುವಷ್ಟರಲ್ಲಿ; ಬಾಳೆಯ– ಮೀನಿನ; ಬಾಳೆಯಂ–ಹೆಣ್ಣುಮಗುವನ್ನು; ನಡಪಿ–ಸಾಕಿ ಸಲಹಿ; ತೊಱೆಯ ತಡಿಯೊಳ್– ನದಿಯ ತೀರದಲ್ಲಿ; ದಡಮಂ–ದೋಣಿಯನ್ನು; ಅನಿಬರ ಬಿಣ್ಪುಮಪ್ಪೆಂ–ಅಷ್ಟು ಜನರ ಭಾರವನ್ನುಳ್ಳವನಾಗುತ್ತೇನೆ; ಅಂತೆಗೆಯ್ವೆನೆಂದು–ಹಾಗೆಯೇ ಮಾಡುತ್ತೇನೆಂದು; ಅೞ್ಕರ್ತು–ಪ್ರೀತಿಸಿ. ಇಲ್ಲಿ ಮೂರನೆಯ ಭಾರ್ಗವ ಶಬ್ದಕ್ಕೆ ಅಸುರಗುರು, ಶುಕ್ರ ಎಂಬರ್ಥವಿದೆ; ಅದನ್ನು ಗುರು ಎಂಬ ಸಾಮಾನ್ಯಾರ್ಥದಲ್ಲಿ ಸ್ವೀಕರಿಸಿದೆ.

೬೯. ಮುನೀಂದ್ರ–ಋಷಿಶ್ರೇಷ್ಠನು, ಮನದೊಳ್ ಸೋಲ್ತು–ಮನಸ್ಸಿನಲ್ಲಿ ಸೋತು, ಮೋಹಿಸಿ, ಆಕೆಯೊಡಲ–ಅವಳ ಮೈಯ, ಈ ದುರ್ಗಂಧವೋಪಂತೆ–ಈ ದುರ್ನಾತವು ಹೋಗುವ ಹಾಗೆ, ಯೋಜನಗಂಧಿತ್ವಮನಿತ್ತು–ಸುತ್ತ ಒಂದು ಯೋಜನದವರೆಗೂ ವ್ಯಾಪಿ ಸುವ ಸುವಾಸನೆಯನ್ನು ಕೊಟ್ಟು, ಮಂಜಂ–ಮಂಜನ್ನು, ಕಾವಳವನ್ನು, ಕಾಂಡಪಟದಂತೆ ಇರ್ಪನ್ನೆಗಂ–ತೆರೆಯ ಹಾಗೆ ಇರುತ್ತಿರುವಂತೆ ಮಾಡಿ, ಅಲಂಪು–ಸಂತೋಷವು, ಅೞ್ಕಱನೀಯೆ –ಪ್ರೀತಿಯನ್ನುಂಟುಮಾಡಲು, ಕೂಡುವೆಡೆಯೊಳ್–ಬೆರಸುವ ಎಂದರೆ ಸಮಾಗಮದ ಸಮಯದಲ್ಲಿ, ಜ್ಞಾನಸ್ವರೂಪಂ–ಜ್ಞಾನದ ಆಕಾರವೇ ಆಗಿರುವ, ಮಹಾಮುನಿಪಂ–ಮಹಾ ಋಷಿಯು, ಪುಟ್ಟಿದಂ–ಹುಟ್ಟಿದನು, ಅಂತು–ಹಾಗೆ, ದಿವ್ಯಮುನಿಗಳ್ಗೆ–ಶ್ರೇಷ್ಠರಾದ ಋಷಿ ಗಳಿಗೆ, ಏಗೆಯ್ದೊಡಂ–ಏನು ಮಾಡಿದರೂ, ತೀರದೇ–ಸಾಕಾಗುವುದಿಲ್ಲವೇ? ಎಂದರೆ ಏನು ಮಾಡಿದರೂ ತಡೆಯುತ್ತದೆ, ಪರವಾ ಇಲ್ಲ. ಅರ್ಥಾಂತರನ್ಯಾಸಾಲಂಕಾರ. ಇಲ್ಲಿ ಒಂದು ಆಖ್ಯಾನವನ್ನೇ ಒಂದು ಪದ್ಯದಲ್ಲಿ ಸಂಕ್ಷೇಪಿಸಿದೆ, ಶೈಲಿಯ ವೇಗವನ್ನು ಇಲ್ಲಿ ಕಾಣಬಹುದು.

ವಚನ : ನೀಲಾಂಬುದಶ್ಯಾಮನುಂ–ನೀಲಮೇಘದಂತೆ ಕರಿದಾದವನೂ; ಕನಕ ಪಿಂಗಳ ಜಟಾಬಂಧಕಳಾಪನುಂ–ಹಳದಿ ಕೆಂಪು ಮಿಶ್ರ ಬಣ್ಣದ ಜಟೆಯ ಸಮೂಹವುಳ್ಳವನೂ; ದಂಡ ಕಪಾಳ ಹಸ್ತನುಂ–ಕೈಯಲ್ಲಿ ಯೋಗದಂಡ ಭಿಕ್ಷಾಪಾತ್ರೆಯನ್ನುಳ್ಳವನೂ; ಕೃಷ್ಣ ಮೃಗತ್ವಕ್ಪರಿ ಧಾನನೂ–ಕಪ್ಪು ಜಿಂಕೆಯ ಚರ್ಮದ ಹೊದಿಕೆಯುಳ್ಳವನೂ; ವ್ಯಾಸಭಟ್ಟಾರಕಂ –ಪೂಜ್ಯ ನಾದ ವ್ಯಾಸಋಷಿಯು; ಪುಟ್ಟುವುದುಂ–ಹುಟ್ಟುತ್ತಲು; ಆತನೊಡಗೊಂಡು– ಅವನನ್ನು ಜೊತೆ ಯಲ್ಲಿ ಕರೆದುಕೊಂಡು.

೭೦. ಒರ್ಮೆ–ಒಂದು ಸಲ, ಶಂತನು, ಮೃಗಯಾವ್ಯಾಜದಿಂ–ಬೇಟೆಯ ನೆಪದಿಂದ, ತೊೞಲ್ತರ್ಪಂ–ಸುತ್ತಾಡಿ ಬರುತ್ತಿರುವವನು, ಮೃಗಶಾಬಾಕ್ಷಿಯ–ಮರಿ ಜಿಂಕೆಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಧಿಯ, ಕಂಪುತಟ್ಟಿ–ಸುಗಂಧವು ಅಪ್ಪಳಿಸಲು, ಮಧುಪಂಬೋಲ್– ದುಂಬಿಯ ಹಾಗೆ, ಸೋಲ್ತು–ಸೋತು ಹೋಗಿ, ಪ್ರೀತಿಸಿ; ಕಂಡು, ಒಲ್ದು–ರಾಗಿಸಿ, ನಲ್ಮೆಗೆ ದಿಬ್ಯಂ ಬಿಡಿವಂತೆವೋಲ್–ಪ್ರೀತಿಯನ್ನು ಪ್ರಮಾಣಿಸುವುದಕ್ಕಾಗಿ ದಿವ್ಯವನ್ನು ಹಿಡಿಯು ವಂತೆ, ಪಿಡಿದು–ಅವಳ ಕೈಯನ್ನು ಹಿಡಿದುಕೊಂಡು, ನೀಂ ಬಾ ಪೋಪಂ–ನೀನು ಬಾ ಹೋಗೋಣ, ಎಂದಂಗೆ–ಎಂದು ಹೇಳಿದವನಿಗೆ, ಮೆಲ್ಲಗೆ–ಮೃದುವಾಗಿ, ತತ್ಕನ್ಯಕೆ–ಆ ಕನ್ನೆ, ನಾಣ್ಚಿ–ನಾಚಿ, ನೀಂ ಬೇಡುವೊಡೆ–ನೀವು ನನ್ನನ್ನು ಬಯಸುವ ಪಕ್ಷದಲ್ಲಿ, ಎಮ್ಮಯ್ಯನಂ–ನಮ್ಮ ತಂದೆಯನ್ನು, ಬೇಡಿರೇ–ಕೇಳಿರಿ, ಪ್ರಾರ್ಥಿಸಿಕೊಳ್ಳಿಸಿ, ಯಾಚಿಸಿರಿ. ದಿಬ್ಯ–ಪ್ರಮಾಣಗಳಲ್ಲಿ ಮಾನುಷಪ್ರಮಾಣ, ದಿವ್ಯಪ್ರಮಾಣ ಎಂದೆರಡು ವಿಧ; ಮಾನುಷ ಪ್ರಮಾಣವಿಲ್ಲದಿರುವಾಗ ದಿವ್ಯಪ್ರಮಾಣವು ಉಪಯೋಗವಾಗುತ್ತದೆ; ಇದು ತುಲಾ, ಅಗ್ನಿ, ಆಪ (ನೀರು), ವಿಷ, ಕೋಶ–ಎಂದೈದು ವಿಧವೆಂದು ನಾರದ ಯಾಜ್ಞವಲ್ಕ್ಯರ ಮತ; ಘಟ, ಅಗ್ನಿ, ಉದಕ, ವಿಷ, ಕೋಶ, ತಂಡುಲ, ತಪ್ತಮಾಷಕ, ಫಾಲ, ಧರ್ಮಜ ಎಂದು ಒಂಬತ್ತು ವಿಧಗಳೆಂದು ಬೃಹಸ್ಪತಿಯ ಮತ, ನನ್ನ ಪ್ರೇಮಕ್ಕೆ ಸಾಕ್ಷಿಯಾಗಿ, ಅದಕ್ಕೆ ಪ್ರಮಾಣವಾಗಿ ನಿನ್ನ ಕೈಯೆಂಬ ದಿವ್ಯವನ್ನು ಹಿಡಿಯುತ್ತೇನೆ ಎಂದು ಶಂತನುವಿನ ಮಾತು. ವೇಗವಾದಗತಿ, ಪಾತ್ರಗಳ ಮನೋಧರ್ಮ, ಪ್ರೇಮೋನ್ಮಾದ, ಲಜ್ಜೆ, ಒಲವು, ತಂದೆಯಲ್ಲಿ ವಿಧೇಯತೆ— ಇವೇ ಮುಂತಾದವುಗಳಿಂದ ಈ ಪದ್ಯ ಅತಿ ರಮಣೀಯವಾಗಿದೆ; ಎಷ್ಟು ಚರ್ವಣ ಮಾಡಿದರೂ ಇದರ ಸೊಗಸು ಮುಗಿಯುವಂತಿಲ್ಲ.

ವಚನ : ಪೊೞಲ್ಗೆ–ನಗರಕ್ಕೆ; ಮಗುೞ್ದುವಂದು–ಹಿಂದಿರುಗಿ ಬಂದು; ಕೂಸಂ ಬೇಡೆ– ಕನ್ಯೆಯನ್ನು ಮದುವೆ ಮಾಡಿಕೊಡಬೇಕೆಂದು ಪ್ರಾರ್ಥಿಸಲು; ಪೆರ್ಗಡೆಗಳಂ–ಹೆಗ್ಗಡೆಗಳನ್ನು, ಮುಖ್ಯಸ್ಥರನ್ನು ಕ್ರಮ ಕ್ರಮಾರ್ಹನುಂ–ಕ್ರಮವಾಗಿ ಬರುವ ಹಕ್ಕುದಾರಿಕೆಗೆ ತಕ್ಕವನೂ; ಕುಡೆವು–ಕೊಡೆವು; ಕುಡುವೆಂ–ಕೊಡುತ್ತೇವೆ.

೭೧. ಕ್ರಮಮಂ–ಪರಂಪರಾಗತ ಪದವಿಯನ್ನು, ವಿಕ್ರಮದಿಂದೆ–ಪರಾಕ್ರಮದಿಂದ, ತಾಳ್ದುವ–ತಾಳುವ, ಮಗಂ ಗಾಂಗೇಯನಿರ್ದಂತೆ–ಮಗನಾದ ಭೀಷ್ಮನಿರುವಾಗ, ನೋಡ– ನೋಡೋ, ಮರುಳ್–ಮರುಳಾದ ಶಂತನು, ತನ್ನದೊಂದು ಸವಿಗಂ ಸೋಲಕ್ಕಂ–ತನ್ನ ಒಂದು ರುಚಿಗೂ ಮೋಹಕ್ಕೂ ಒಳಗಾಗಿ, ನಿಜಕ್ರಮಮಂ–ಸಹಜವಾದ ಕ್ರಮ ಪದವಿ ಯನ್ನು, ತನ್ನಯ ಬೇಟದಾಕೆಯ ಮಗಂಗೆ–ತಾನು ಕಾಮಿಸಿದವಳ ಮಗನಿಗೆ, ಇತ್ತಂ– ಕೊಟ್ಟನು, ಎಂಬೊಂದಪಖ್ಯಾತಿ–ಎಂಬ ಒಂದು ದುಷ್ಕೀರ್ತಿ, ಲೋಕಮನಾವರ್ತಿಸೆ– ಲೋಕವನ್ನು ಆವರಿಸಲು, ಬೞ್ದೊಡೆ–ಬಾಳಿದರೆ, ಎನ್ನ ಕುಲಮುಂ–ನನ್ನ ವಂಶದ ಯಶಸ್ಸೂ, ತಕ್ಕೂರ್ಮೆಯುಂ–ಅತಿಶಯವಾದ ಯೋಗ್ಯತೆಯೂ, ಮಾಸದೇ–ಮಾಸುವುದಿಲ್ಲವೆ? ಮಾಸುತ್ತದೆ ಎಂದು ತಾತ್ಪರ್ಯ. ಇಲ್ಲಿ ತಕ್ಕೂರ್ಮೆ ಎಂಬುದು ಸರಿಯಾದ ಪಾಠ; ತಕ್ಕೂಮೆ =ತಕ್ಕು+ಊರ್ಮೆ; ತಕ್ಕು=ಯೋಗ್ಯತೆ, ಊರ್ಮೆ–ಅತಿಶಯ, ಆಧಿಕ್ಯ; ಊಱು+ಮೆ (ತಮಿಳು ಊಱು=ಅಧಿಕವಾಗು); ಊರ್ಮೆ ಶಬ್ದವನ್ನು ಪಂಪನೇ ‘ವಿಳಾಸದು (ದೂ)ರ್ಮೆಗಳೊಳು’ (ಪಂಪಭಾ. ೧–೧೦೬) ಎಂಬಲ್ಲಿ ಬಳಸಿದ್ದಾನೆ; ‘ಊರ್ಮೆ ಚೋಗಬ್ಬೆಯ ವಂಶದೊಳ್’ ಎಂದು ತಳಂಗೆರೆ ಶಾಸನದಲ್ಲಿಯೂ, “ಊರ್ಮೆಯ ಕುಲವನಿತೆ ಮುಖ್ಯಮಾತೆಯೆ ಪೂಜ್ಯಂ” ಎಂದು ಚಂದ್ರರಾಜನ ಮದನತಿಲಕದಲ್ಲಿಯೂ ಪ್ರಯೋಗವಾಗಿದೆ (೮–೫). ಈ ಪದ್ಯದಲ್ಲಿ ಶಂತನುವಿನ ಆಳವಾದ ಧರ್ಮಸಂಕಟ ಚಿತ್ರಣ ಮನೋಜ್ಞವಾಗಿದೆ.

ವಚನ : ನಾಣ್ಗಾಪನೆ–ಲಜ್ಜೆಸಂಕೋಚಗಳನ್ನು ತೋರ್ಪಡಿಸಿಕೊಳ್ಳದೆ ಅವನ್ನು ರಕ್ಷಿಸಿ ಕೊಳ್ಳುವುದನ್ನೇ; ಬಗೆದು–ಯೋಚಿಸಿ; ಪರಿತಾಪಿತ ಶರೀರನುಮಾಗಿ–ಸಂತಾಪವೇರಿದ ಮೈಯುಳ್ಳವನಾಗಿ; ಕರಂಗಿ–ಕರಗಿ, ಎರ್ದೆಗಿಡೆ–ಚಿತ್ತಸ್ಥಿರತೆಯನ್ನು ಕಳೆದುಕೊಳ್ಳಲು, ಗಾಂಗೇಯನಱಿದು–ಭೀಷ್ಮನು ತಿಳಿದುಕೊಂಡು.

೭೨. ಎನ್ನಯದೂಸಱಿಂ–ನನ್ನ ಕಾರಣದಿಂದ, ನೃಪತಿ–ರಾಜಶಂತನು, ಬೇಡಿದುದಂ– ಯೋಜನಗಂಧಿಯ (ಸತ್ಯವತಿಯ) ತಂದೆ ದಾಶರಾಜನು ಬಯಸಿದ್ದನ್ನು, ಕೊಡಲೊಲ್ಲದೆ– ಕೊಡಲು ಇಷ್ಟವಿಲ್ಲದೆ, ಅಂಗಜೋತ್ಪನ್ನ ವಿಮೋಹದಿಂದೆ–ಮನ್ಮಥನಿಂದ ಉಂಟಾದ ವ್ಯಾಮೋಹದಿಂದ, ಅೞಿದಪಂ–ಸಾಯುತ್ತಿದ್ದಾನೆ, ಪತಿ ಸತ್ತೊಡೆ–ನನ್ನ ಒಡೆಯನು ಸತ್ತರೆ, ಸತ್ತಪಾಪಂ–ಅವನು ಸತ್ತುದಕ್ಕೆ ಕಾರಣವಾದ ನನ್ನ ಪಾಪ, ಎನ್ನಂ–ನನ್ನನ್ನು, ನರಕಂಗಳೊಳ್– ನರಕಗಳಲ್ಲಿ, ತಡೆಯದೆ–ತಡಮಾಡದೆ, ಅೞ್ದುಗುಂ–ಮುಳುಗಿಸುತ್ತದೆ, ಏವುದು ರಾಜ್ಯ ಲಕ್ಷ್ಮಿ–ಈ ರಾಜ್ಯಲಕ್ಷ್ಮಿ ಯಾವುದು, ಏನು ಪ್ರಯೋಜನ; ಪೋ–ಹೋಗು, ತನ್ನಯ ತಂದೆ ಯೆಂದುದನೆ ಕೊಟ್ಟು–ತನ್ನ ತಂದೆ ಹೇಳಿದ್ದನ್ನೇ ದಾಸರಾಜನಿಗೆ ಕೊಟ್ಟು, ಇಂದೆ–ಈ ಹೊತ್ತೇ, ವಿವಾಹಮಂ ಮಾಡುವೆಂ–ಮದುವೆಯನ್ನು ಮಾಡುತ್ತೇನೆ. ಇಲ್ಲಿ ಭೀಷ್ಮನ ಪಿತೃಭಕ್ತಿಯೂ ಸ್ವಂತ ವಿಷಯವಾಗಿ ವಿರಕ್ತಿಯೂ ಅಭಿವ್ಯಕ್ತವಾಗಿವೆ.

ವಚನ : ಆತನ ಮನದ ತೊಡರ್ಪಂ–ಅವನ (ದಾಶರಾಜನ) ಮನಸ್ಸಿನಲ್ಲಿರುವ ತೊಡಕನ್ನು, ಸಿಕ್ಕನ್ನು; ಪಿಂಗೆ–ಹಿಂಜರಿಯುವ ಹಾಗೆ, ಹೋಗುವ ಹಾಗೆ;

೭೩. ನೀಡಿರದೆ–ವಿಳಂಬವಿಲ್ಲದೆ, ತಡವಿಲ್ಲದೆ, ಈ ನಿಜ ತನೂಜೆಯಂ–ಈ ನಿನ್ನ ಮಗಳನ್ನು, ಈವುದು–ಶಂತನುಗೆ ಕೊಡುವುದು; ಈ ವಧುಗಾದ ಪುತ್ರರೊಳ್–ಈ ಕನ್ಯೆಗೆ ಹುಟ್ಟಿದ ಮಕ್ಕಳಲ್ಲಿ, ರಾಜ್ಯಲಕ್ಷ್ಮಿ–ರಾಜ್ಯವೆಂಬ ಲಕ್ಷ್ಮಿ, ಕೂಡುಗೆ–ಸೇರಲಿ; ಅದು–ಆ ರಾಜ್ಯಲಕ್ಷ್ಮಿ, ಅಂತು–ಹಾಗೆ, ಎನಗೆ–ನನಗೆ, ಮೊಱೆಯಲ್ತು–ಸಂಬಂಧವಲ್ಲ; ಪೆಂಡಿರೆಂಬ ರೊಳ್–ಹೆಂಗಸು ಎನ್ನಿಸಿಕೊಂಡವರಲ್ಲಿ, ಇಂದು ಮೊದಲಾಗಿರೆ—ಈ ದಿನದಿಂದ ಹಿಡಿದು, ಕೂಡುವ ನಲ್ಲೆಂ–ಸೇರುವವನಲ್ಲ; ನಿಕ್ಕುವಂ–ನಿಶ್ಚಯ, ಎಂದು–ಎಂದು ಪ್ರತಿಜ್ಞೆ ಮಾಡಿ, ರಾಗದಿಂ–ಸಂತೋಷದಿಂದ, ನದೀಸುತಂ–ಭೀಷ್ಮನು, ಸತ್ಯವತಿಯಂ ಸತಿಯಂ–ಸತ್ಯವತಿ ಯೆಂಬ ಸಾಧ್ವಿಯನ್ನು, ಉಯ್ದು–ಕರೆದುಕೊಂಡು ಹೋಗಿ, ಪತಿಯೊಳ್–ತನ್ನ ತಂದೆಯೂ ರಾಜನೂ ಆದ ಶಂತನುವಿನಲ್ಲಿ, ಕೂಡಿದಂ–ವಿವಾಹ ಮಾಡಿದನು. “ಮೊಱೆಯೆಂಬುದು ಬಾಂಧವರೊಳ್” ಎಂದು ಶಾಸನ ಪ್ರಯೋಗವಿದೆ (ಸೊರಬ ೧೭೯). ಇಲ್ಲಿ ಭೀಷ್ಮನ ದೃಢನಿಶ್ಚಯವೂ ತಂದೆಯ ಮನಃಪ್ರೀಣನೋತ್ಸುಕತೆಯೂ ತ್ವರಿತ ಕಾರ್ಯಾಚರಣೆಯೂ ಸೊಗಸಾಗಿ ಬಂದಿವೆ; ದೇಸಿಯ ನುಡಿಗಟ್ಟು ಚೆಲುವಾಗಿದೆ.

ವಚನ : ಅನ್ಯೋನ್ಯಾಸಕ್ತಚಿತ್ತರಾಗಿ–ಪರಸ್ಪರ ಪ್ರೀತಿಯುಳ್ಳಮನದವರಾಗಿ; ಬೇಟದ ಕಂದಲ್ಗಳಂತೆ–ಪ್ರೀತಿಯ ಮೊಳಕೆಗಳ ಅಥವಾ ಟಿಸಲುಗಳ ಹಾಗೆ; ಮುನ್ನೆ ತನ್ನ ನುಡಿದ ನುಡಿವಳಿಯೆಂಬ–ಮೊದಲೇ ತಾನು ಪ್ರತಿಜ್ಞೆ ಮಾಡಿದ ಭಾಷೆಯೆಂಬ; ಪ್ರಾಸಾದಕ್ಕಧಿಷ್ಠಾ ನಂಗಟ್ಟುವಂತೆ–ಅರಮನೆಗೆ ತಳಪಾಯಕಟ್ಟುವಂತೆ; ಪೊಣರ್ಚಿ–ಸೇರಿಸಿ, ಸಮಕಟ್ಟಿ; ಕಳಂ ಬೇೞ್ದು–ಕಣವನ್ನಾಗಿ ಮಾಡಿ, ಯುದ್ಧರಂಗವನ್ನಾಗಿ ಗೊತ್ತು ಮಾಡಿ; ಧರಾಭಾರಧುರಂಧರನಂ ಮಾಡಿ-ಭೂಭಾರವನ್ನು ಹೊರಲು ಸಮರ್ಥನನ್ನಾಗಿ ಮಾಡಿ

೭೪. ಸಕಲ ಕ್ಷತ್ರಿಯಮೋಹದಿಂ–ಎಲ್ಲ ಕ್ಷತ್ರಿಯರಿಗೂ ಸಹಜವಾಗಿರುವ ಆಸೆಯಿಂದ, ನಿಜಭುಜ ಪ್ರಾರಂಭದಿಂ–ತನ್ನ ಬಾಹುಬಲವನ್ನು ಪ್ರದರ್ಶಿಸುವ ಕಾರ್ಯದಿಂದ, ವೋಗಿ– ದಂಡೆತ್ತಿಹೋಗಿ, ಕಾ [ಶಿ] ರಾಜಸುತರೊಳ್–ಕಾಶಿಯ ರಾಜನ ಮಕ್ಕಳಲ್ಲಿ, ಕೆಲರ್ ನೊಂದೊಡೆ –ಕೆಲವರು ನೋವು ತಿನ್ನುವ ಹಾಗೆ, ತನ್ನಂಕದೊಂದುಗ್ರಸಾಯಕದಿಂ–ತನ್ನ ಹೆಸರನ್ನುಳ್ಳ ಒಂದು ಭಯಂಕರ ಬಾಣದಿಂದ, ನಾಯಕರಂ–ಸೇನಾನಾಯಕರನ್ನು, ಪಡಲ್ವಡಿಸುತುಂ– ಚೆದರಿಸುತ್ತ, ತಾಂ–ತಾನು, ಅಂಬೆ ಅಂಬಿಕೆ ಅಂಬಾಲೆಯರೆಂಬ, ಬಾಲೆಯರಂ–ವಧುಗಳನ್ನು ಅಂದು ತಂದು–ಅಂದು ಅಪಹರಿಸಿಕೊಂಡು ಬಂದನು; ಏಂ ಭೀಷ್ಮಂ ಯಶೋ ಭಾಗಿಯೇ– ಭೀಷ್ಮನು ಏನು ಕೀರ್ತಿ ಭಾಜನನೋ! ಆಶ್ಚರ್ಯ ಮೆಚ್ಚಿಕೆಗಳ ಸೂಚಕ ಈ ಮಾತು. ಇಲ್ಲಿ ‘ಕಾ [ಶಿ] ರಾಜ’ ಎಂಬ ಪಾಠಾಂತರವನ್ನು ಗ್ರಹಿಸಿದೆ.

ವಚನ : ಪಾಣಿಗ್ರಹಣಂ ಗೆಯ್ವಾಗಳ್–ಕೈಹಿಡಿಸಿ ಮದುವೆಮಾಡುವಾಗ; ಎಲ್ಲರಿಂ ಪಿರಿ ಯಾಕೆ—ಎಲ್ಲರಿಗಿಂತ ಹಿರಿಯಳು; ಪೆಱರನ್–ಇತರರನ್ನು; ಒಲ್ಲೆನ್–ಒಪ್ಪೆನು; ಮತ್ತಿ ನಿರ್ವರುಮಂ–ಉಳಿದ ಇಬ್ಬರನ್ನೂ; ಅಂಬೆಯನಿಂತೆಂದಂ–ಅಂಬೆಯನ್ನು ಕುರಿತು ಹೀಗೆಂದನು.

೭೫. ಅತ್ತ–ಅತ್ತ ಕಡೆ, ಸುರೇಶ್ವರಾವಸಥಂ–ಇಂದ್ರನು ವಾಸಿಸುವ ಸ್ಥಾನವಾದ ಸ್ವರ್ಗ ಲೋಕ, ಇತ್ತ–ಇತ್ತ ಕಡೆ, ಮಹೀತಳಂ–ಭೂಲೋಕ, ಉತ್ತ–ಇವೆರಡರ ನಡುವೆ ಇರುವ, ಪನ್ನಗೋದಾತ್ತ ಸಮಸ್ತ ಲೋಕಂ–ಪಾತಾಳವೇ ಮೊದಲಾದ ಎಲ್ಲ ಲೋಕಗಳೂ, ಅಱಿ ವಂತಿರೆ–ತಿಳಿಯುವ ಹಾಗೆ, ಪೂಣ್ದ–ಪ್ರತಿಜ್ಞೆ ಮಾಡಿದ, ಎನಗೆ–ನನಗೆ, ಅಂಗಜೋತ್ಪತ್ತಿ– ಕಾಮನಿಂದಾದ, ಸುಖಕ್ಕೆ, ಸೋಲಲ್–ಸೋಲುವುದಕ್ಕೆ, ಆಗದು; ಪುರುಷ ವ್ರತಂ–ಬ್ರಹ್ಮ ಚರ್ಯವ್ರತವು, ಅಱಿಗುಂ–ನಷ್ಟವಾಗುತ್ತದೆ; ಈಗಳ್–ಈಗ, ಅಬ್ಬೆಯೆಂದು–ತಾಯಿ ಯೆಂದು ಕರೆದು, ಆ ಮೇಲೆ, ಅತ್ತಿಗೆಯೆಂಬ ಮಾತಂ–ಪ್ರೀತಿಸಿದವಳು, ನಲ್ಲಳು ಎಂಬ ಮಾತನ್ನು, ಪಂಕಜಾನನೇ–ತಾವರೆ ಮೊಗದವಳೇ, ಎನಗೆ–ನನಗೆ, ಎನಲ್–ಹೇಳಲು, ಅಕ್ಕುಮೋ–ಆಗುತ್ತದೊ? ಆಗುವುದಿಲ್ಲ ಎಂದು ಭಾವ. ಅೞ್ತಿಗೆ ಅರ್ತಿಗೆ ಅತ್ತಿಗೆ=ಪ್ರೀತಿಗೆ ಪಾತ್ರಳಾದವಳು, ನಲ್ಲೆ.

ವಚನ : ಅವಸರಮಂ–ಅವಕಾಶವನ್ನು, ಪಸರಮಂ–ಸಲಿಗೆಯನ್ನು, ಪಡೆಯದೆ– ಹೊಂದದೆ; ಕಿಱಿಯಂದು–ಚಿಕ್ಕತನದಂದು; ಉಂಗುರವಿಟ್ಟ–ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ; ಕೈಕೊಳವೇೞ್ಕುಂ–ಮದುವೆಯಾಗಿ ಸ್ವೀಕರಿಸಬೇಕು. ಪಸರಕ್ಕೆ ಪ್ರಯೋಗ: “ಇವಂದಿರ್ಗೆ ಪಸರಂಗೊಟ್ಟೆನಪ್ಪೊಡೆ ಮುನ್ನಿನಂತುರ್ಕಿ ಕಿಡುವರ್” (ವಡ್ಡಾರಾ, ಪು. ೩)

೭೬. ಬಂಡಣದೊಳ್–ಯುದ್ಧದಲ್ಲಿ, ಎನ್ನನ್–ನನ್ನನ್ನು, ಓಡಿಸಿ–ಓಡುವಂತೆ ಮಾಡಿ, ನಿನ್ನಂ–ನಿನ್ನನ್ನು, ಆ ಸರಿತ್ಸುತಂ–ಆ ಭೀಷ್ಮನು, ಕೊಂಡುಯ್ದಂ–ಅಪಹರಿಸಿಕೊಂಡು ಹೋದನು; ಅದಱಿಂ–ಆ ಕಾರಣದಿಂದ, ಆನುಂ–ನಾನು ಕೂಡ, ಪೆಂಡತಿಯೆನಾದೆಂ–ಹೆಂಗಸಾಗಿದ್ದೇನೆ; ಅಬಲೇ–ಎಲೇ ಹೆಣ್ಣೇ, ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರ್–ಹೆಂಗಸರು ಹೆಂಗಸ ರಲ್ಲಿ ಅದು ಹೇಗೆ ಕೂಡುವರು? ಕೂಡುವುದಿಲ್ಲವೆಂದು ಅಭಿಪ್ರಾಯ. ಬಂಡಣ ಭಂಡನ (ಸಂ), ಪ್ರಾ. ಭಂಡಣ=ಕಲಹ. ಈ ಪದ್ಯ ಧ್ವನಿಮಯವಾಗಿದೆ; ಚಿಂತಿಸಿದಷ್ಟೂ ಅರ್ಥ ಒಸರುತ್ತದೆ. ಇಲ್ಲಿನ ಪ್ರಶ್ನೆಗೆ ಮಾರುತ್ತರವನ್ನು ಹೇಳಲಾಗುವುದಿಲ್ಲ, ಮೌನವೊಂದೇ ಉತ್ತರ.

ವಚನ : ಪರಿಭವದೊಳ್–ಸೋಲಿನಲ್ಲಿ, ಅವಮಾನದಲ್ಲಿ; ಸಿಗ್ಗಂ–ನಾಚಿಕೆಯನ್ನು; ಸಾಲ್ವಿನಂ–ಸಾಕಾಗುವಷ್ಟು; ಒಡಂಬಡಿಸಲಾಱದೆ–ಒಪ್ಪಿಸಲಸಮರ್ಥಳಾಗಿ; ದೆವಸಮುಂ– ದಿವಸಗಳೂ; ಜವ್ವನಮುಂ–ಯೌವನವೂ; ಕಿಡಲೀಯದೆ–ಹಾಳಾಗುವುದಕ್ಕೆ ಅವಕಾಶವನ್ನು ಕೊಡದೆ; ಪಾಣಿಗ್ರಹಣಂ ಗೆಯ್ವಂತು–ವಿವಾಹವಾಗುವಂತೆ; ಮಾಡಲಾಱದೊಡೆ–ಮಾಡಲ ಶಕ್ಯವಾದ ಪಕ್ಷದಲ್ಲಿ; ಕಿಚ್ಚಂದಯೆಗೆಯ್ವುದು–ಅಗ್ನಿಪ್ರವೇಶಕ್ಕೆ ಕಿಚ್ಚನ್ನು ಕರುಣಿಸುವುದು; ಅಂಬೆ ಕಣ್ಣ ನೀರಂತುಂಬೆ: ಈ ಅನಿರೀಕ್ಷಿತ ಅನುಪ್ರಾಸ ಮನೋಜ್ಞ.

೭೭. ನಯಮಂ ನಂಬುವೊಡೆ–ನೀತಿಯನ್ನು ನಂಬುವುದಾದರೆ, ಎನ್ನಪೇೞ್ದ ಸತಿಯಂ– ನಾನು ಹೇಳಿದ ಹೆಣ್ಣನ್ನು, ಕೈಕೊಂಡಂ–ಮದುವೆಯಲ್ಲಿ ಸ್ವೀಕರಿಸಿದವನಾಗುತ್ತಾನೆ; ಅಂತಲ್ಲ– ಹಾಗಲ್ಲದೆ, ಮೇಣ್–ಅಥವಾ, ದುರ್ಣಯಮಂ–ದುರ್ನೀತಿಯನ್ನು, ನಚ್ಚುವೊಡೆ–ನಂಬಿದ ಪಕ್ಷದಲ್ಲಿ, ಎನ್ನನುಗ್ರರಣದೊಳ್–ನನ್ನನ್ನು ಭಯಂಕರ ಯುದ್ಧದಲ್ಲಿ, ಮೀಱಿ–ಎಲ್ಲೆ ಮೀರಿ, ಮಾರ್ಕೊಂಡಂ–ಎದುರಿಸಿದವನಾಗುತ್ತಾನೆ; ಆರಯೆ–ವಿಚಾರ ಮಾಡಿದರೆ, ಕಜ್ಜಂ– ಕಾರ್ಯ, ಪೆಱತು ಇಲ್ಲಂ–ಬೇರೆ ಇಲ್ಲ; ಶಂತನು ಸುತಂಗೆ–ಭೀಷ್ಮನಿಗೆ; ಎನ್ನಂ ಕರಂ ನಂಬಿದ –ನನ್ನನ್ನು ವಿಶೇಷವಾಗಿ ನಂಬಿದ, ಅಂಬೆಯೊಳ್–ಅಂಬೆಯಲ್ಲಿ, ಎನ್ನ ಅಂಬೆವಲಂ–ನನ್ನ ಬಾಣವೇ ನಿಶ್ಚಯವಾಗಿಯೂ; ವಿವಾಹ ವಿಧಿಯಂ–ಮದುವೆಯ ಕಾರ್ಯವನ್ನು, ಮಾೞ್ಪೆಂ– ಮಾಡುತ್ತೇನೆ; ಪೆಱರ್ ಮಾೞ್ಪರೇ–ಇತರರು ಮಾಡುವರೇ? ಇಲ್ಲ. ಇಲ್ಲಿ ಅಲ್ಲದೆ ಎಂಬುದಕ್ಕೆ ಅಲ್ಲ ಆದೇಶ; ಅಂಬೆಗೆ ಮದುವೆ ಮಾಡಿಸುವ ವಿಷಯಕ್ಕೆ ನನ್ನ ಬಾಣವೇ ಸಾಕು, ಬೇರೇನೂ ಬೇಡ ಎಂದು ತಾತ್ಪರ್ಯ; ಭೀಷ್ಮನಿಗೆ ಬೇರೆ ಕೆಲಸವಿಲ್ಲ; ಅಂಬೆಯನ್ನು ಮದುವೆ ಆಗಬೇಕು, ಇಲ್ಲದಿದ್ದರೆ ನನ್ನೊಡನೆ ಯುದ್ಧ ಮಾಡಬೇಕು.

ವಚನ : ಎಂದು–ಎಂದು ಹೇಳಿ, ನಾಗಪುರಕ್ಕೆವರ್ಪ–ಹಸ್ತಿನಾವತಿಗೆ ಬರುವ; ಬರವಂ– ಆಗಮನವನ್ನು; ಇದಿರ್ವಂದು–ಎದುರಾಗಿ ಬಂದು, ಎದುರುಗೊಂಡು: ಕನಕ ರಜತಪಾತ್ರಂ ಗಳೊಳ್–ಚಿನ್ನದ ಬೆಳ್ಳಿಯ ಪಾತ್ರೆಗಳಲ್ಲಿ; ಅರ್ಘ್ಯಮಂ–ಕೈತೊಳೆಯುವ ನೀರನ್ನು; ಪೊಡೆ ಮಟ್ಟು–ನಮಸ್ಕರಿಸಿ: ಪೊಡೆ+ಮಡು=ಹೊಟ್ಟೆಯನ್ನು ನೆಲಕ್ಕೆ ಸೇರಿಸುವುದು, ಸಾಷ್ಟಾಂಗ ನಮಸ್ಕಾರ ಮಾಡು; ಹೀಗೆಯೇ ತಲೆಮಡು ಮುಂತಾದ ಶಬ್ದಗಳಿವೆ.

೭೮. ಬೆಸನೇನ್–ಕೆಲಸವೇನು, ಅಪ್ಪಣೆಯೇನು; ಎಂದೊಡೆ–ಎಂದು ಕೇಳಿದರೆ, ಪೇೞ್ವೆನ್–ಆಜ್ಞಾಪಿಸುತ್ತೇನೆ, ಎನ್ನ ಬೆಸನಂ–ನನ್ನ ಅಪ್ಪಣೆಯನ್ನು, ಕೈಕೊಳ್–ಒಪ್ಪು; ಈ ಕನ್ನೆಯಂ–ಈ ಮದುವಳಿಗೆಯನ್ನು, ಪಸುರ್ವಂದರ್–ಹಸುರುವಾಣಿಯ ಚಪ್ಪರ, ಪಸೆ– ಹಸೆಮಣೆ, ಎಂಬಿವಂ–ಎಂಬಿವುಗಳನ್ನು, ಸಮೆದು–ಮಾಡಿಸಿ, ನೀಂ ಕೈಕೊಳ್–ನೀನು ಪರಿ ಗ್ರಹಿಸು; ಕೈಕೊಳಲ್ಕಾಗದು–ಪರಿಗ್ರಹಿಸಲಾಗುವುದಿಲ್ಲ, ಎಂಬ ಎಸಕಂ–ಎಂಬ ಕಾರ್ಯ, ನಿಶ್ಚಯ, ಚಿತ್ತದೊಳುಳ್ಳೊಡೆ–ಮನದಲ್ಲಿ ಇದ್ದ ಪಕ್ಷದಲ್ಲಿ, ಈಗಳ್–ಈಗ, ಇವರ್ ಎನ್ನಾಚಾರ್ಯರ್–ಇವರು ನನ್ನ ಗುರುಗಳು, ಎಂದು, ಓವದೆ–ಭಕ್ತಿಯನ್ನು ತೋರಿಸದೆ, ಏರ್ವೆಸನಂ–ಯುದ್ಧೋದ್ಯೋಗವನ್ನು, ಮಾಣದೆ–ಬಿಡದೆ, ಕೈದುಗೊಳ್–ಶಸ್ತ್ರವನ್ನು ಹಿಡಿ; ಮೆಚ್ಚಿತ್ತೆನ್–ನೀನು ಮೆಚ್ಚಿದ್ದನ್ನು ಕೊಟ್ಟಿದ್ದೇನೆ, ಏನೆಂದಪಯ್–ಏನು ಹೇಳುವೆ? ಈ ಪದ್ಯದಲ್ಲಿ ಪರಶುರಾಮನ ಅಧಿಕಾರವಾಣಿ, ಅವನ ದರ್ಪ, ಸ್ವಪ್ರತಾಪದಲ್ಲಿ ನಂಬಿಕೆ, ಶಿಷ್ಯನ ವಿಧೇಯತೆಯಲ್ಲಿ ವಿಶ್ವಾಸ, ಅಂಬೆಯ ವಿಷಯವಾಗಿ ಪರಿತಾಪ, ಮದುವೆ ಶೀಘ್ರ ವಾಗಿ ನಡೆಯಲೆಂಬ ಉತ್ಸುಕತೆ, ಶಿಷ್ಯನು ತನ್ನ ಮಾತನ್ನು ನಡೆಸುತ್ತಾನೋ ಇಲ್ಲವೋ ಎಂಬ ಸಂದೇಹ ಮುಂತಾದ ಭಾವ ತುಮುಲ ಒಟ್ಟಿಗೆ ಸೇರಿಕೊಂಡಿವೆ; ಚಿಕ್ಕ ವಾಕ್ಯಗಳು ಕ್ರಿಯಾ ವೇಗವನ್ನು ಪ್ರತಿಬಿಂಬಿಸುತ್ತವೆ. ಎಸಗು–ಉದ್ಯೋಗಾರಂಭೇ ಎಂಬುದರ ಭಾವನಾಮ ಎಸಕ. ದೇಸಿಶೈಲಿಯ ಸೊಗಸು ಆನಂದದಾಯಕ.

ವಚನ : ವೀರಶ್ರೀಯುಂ ಕೀರ್ತಿಶ್ರೀಯುಮಲ್ಲದೆ–ಜಯಲಕ್ಷ್ಮಿಯೂ ಯಶೋ ಲಕ್ಷ್ಮಿಯೂ ಅಲ್ಲದೆ; ಉೞಿದ ಪೆಂಡಿರ್–ಉಳಿದ ಸ್ತ್ರೀಯರು; ಮೊಱೆಯಲ್ಲ–ಸಂಬಂಧ ವಲ್ಲ; ಏಕೆ ಆಗ್ರಹಂ ಗೆಯ್ವಿರ್–ಏಕೆ ಒತ್ತಾಯ ಮಾಡುತ್ತೀರಿ? ಎಂತುಂ ಎಮ್ಮೊಳ್ ಕಾದಲ್ವೇೞ್ಪುದು –ಹೇಗೂ ನಮ್ಮಲ್ಲಿ ಯುದ್ಧ ಮಾಡುವುದು.

೭೯. ಇರ್ವರುಂ–ಇಬ್ಬರೂ, ಕೆಳರ್ದು–ಕೆರಳಿ, ಅಂದು–ಆಗ, ಉಗ್ರರಣಾಗ್ರಹ ಪ್ರಣಯದಿಂದ–ಭಯಂಕರವಾದ ಯುದ್ಧಾಪೇಕ್ಷೆಯ ಪ್ರೀತಿಯಿಂದ, ಕುರುಕ್ಷೇತ್ರಮಂ, ಕಳವೇೞ್ದು–ಯುದ್ಧರಂಗವನ್ನಾಗಿ ಮಾಡಿಕೊಂಡು, ಐಂದ್ರವಾರುಣದೆ–ಇಂದ್ರಾಸ್ತ್ರ ವರುಣಾಸ್ತ್ರಗಳಿಂದ, ವಾಯವ್ಯಾದಿ ದಿವ್ಯಾಸ್ತ್ರ ಸಂಕುಳದಿಂದೆ–ವಾಯವ್ಯಾಸ್ತ್ರವೇ ಮೊದಲಾದ ದಿವ್ಯಬಾಣಗಳ ಸಮೂಹದಿಂದ, ಒರ್ವರನೊರ್ವರೆಚ್ಚು–ಒಬ್ಬರನ್ನೊಬ್ಬರು ಬಾಣ ಪ್ರಯೋಗ ಮಾಡಿ ಘಾತಿಸಿ, ಬ್ರಹ್ಮಂ–ಬ್ರಹ್ಮನು, ನಿಜ ಪೀಠಾಂಭೋಜದಿಂ–ತನ್ನ ಪೀಠವಾದ ಕಮಲ ದಿಂದ, ಉಚ್ಚಳಿಪನ್ನಂ–ಮೇಲಕ್ಕೆ ಹಾರುತ್ತಿರಲು, ಈ ತ್ರೈಲೋಕ್ಯದೊಳ್–ಈ ಮೂರು ಲೋಕಗಳಲ್ಲಿ, ಪಿರಿದೊಂದು ಸಂಕಟಮಂ–ಹಿರಿದಾದ ಸಂಕಷ್ಟವನ್ನು, ಮಾಡಿದರ್–ಉಂಟು ಮಾಡಿದರು.

೮೦. ವಿಕ್ರಾಂತಂ–ಪರಾಕ್ರಮವು, ಅತರ್ಕ್ಯಂ–ಚರ್ಚೆಗೆ ಮೀರಿದ್ದು ಎಂದರೆ ನಿರ್ಣೀತ ವಾದದ್ದು; ಭುಜಬಲಂ–ಬಾಹುಬಲವು; ಅಸಾಮಾನ್ಯಂ–ಅಸಾಧಾರಣವಾದದ್ದು; ಪ್ರತಾಪಂ–ಶೌರ್ಯವು, ಅಧಿಕಂ–ಅತಿಶಯವಾದದ್ದು; ಪೋಗು–ಹೋಗೋ, ಈತಂಗೆಣೆಯೆ ದಿವಿಜರ್–ದೇವತೆಗಳು ಈತನಿಗೆ (ಭೀಷ್ಮನಿಗೆ) ಸಾಟಿಯೇ? ಅಲ್ಲ. ವಾಯುಪಥದೊಳ್– ಆಕಾಶದಲ್ಲಿ, ಶಿತಾಸ್ತ್ರಂಗಳ್–ಹರಿತವಾದ ಬಾಣಗಳು, ಪೊಂಕಂಗಿಡಿಸೆ–ಉಕ್ಕಾಟವನ್ನು ಕೆಡಿಸಲು, ಭಾರ್ಗವಂ –ಪರಶುರಾಮನು, ಸುಗಿದಂ–ಹೆದರಿದನು. ಇದೇಂ–ಇದೇನು! ಪ್ರತಿಜ್ಞಾಗಾಂಗೇಯಂಗೆ–ಪ್ರತಿಜ್ಞಾ ಭೀಷ್ಮನಿಗೆ, ಅದಿರದೆ–ನಡುಗದೆ, ಹೆದರದೆ, ಇದಿರ್ ನಿಲ್ವನ್ನರ್ ಒಳರೇ– ಎದುರಾಗಿ ನಿಲ್ಲುವಂಥವರು ಉಂಟೇ? ಇಲ್ಲವೆಂಬ ಅಭಿಪ್ರಾಯ. ಪೊಂಗು–ಸ್ಫುಟನೇ ಎಂಬುದರ ಭಾವನಾಮ ಪೊಂಕ. ಪ್ರತಿಜ್ಞಾ ಗಾಂಗೇಯಂ ಎಂಬುದು ಅರಿಕೇಸರಿಯ ಬಿರುದು.

ವಚನ : ಬಸವೞಿದು–ಆಯಾಸಗೊಂಡು; ಉಸಿರಲಪ್ಪೊಡಮಾಱದೆ–ಮಾತಾಡುವು ದಕ್ಕೂ ಅಸಮರ್ಥನಾಗಿ; ದಂಡುರುಂಬೆ–ತುಂಟೆಯು, ದಿಟ್ಟೆಯು; ವಧಾರ್ಥಮಾಗಿ–ಸಾವಿಗೆ ಕಾರಣವಾಗಿ; ಪುಟ್ಟುವೆನಕ್ಕೆ–ಹುಟ್ಟುವೆನು, ಆಗಲಿ; ಅಗ್ನಿ ಶರೀರೆಯಾಗಿ–ಕಿಚ್ಚಿಗರ್ಪಿಸಿದ ದೇಹವುಳ್ಳವಳಾಗಿ, ಅಗ್ನಿಪ್ರವೇಶಮಾಡಿ; ಅವಾರ್ಯವೀರ್ಯನುಮಾಗಿ–ತಡೆಯಲಾಗದ ಪ್ರತಾಪವುಳ್ಳವನಾಗಿ; ರಾಜಯಕ್ಷ್ಮ–ಕ್ಷಯರೋಗ; ಆತ್ಮಜವಿಗತಜೀವಿಯಾಗಿ–ಮಕ್ಕಳಿಲ್ಲದವನಾಗಿ; ದಹ್ಯಮಾನ–ಸುಡಲ್ಪಟ್ಟ; ಮಾನಸರ್ಕಳಾಗಿ–ಮನಸ್ಸುಳ್ಳವರಾಗಿ, ನಷ್ಟರಾಜ ಮಾದುದರ್ಕೆ–ರಾಜನೇ ಇಲ್ಲದಂತಾದುದಕ್ಕೆ; ಮಮ್ಮಲಂಮಱುಗಿ–ಮಲಮಲ ವ್ಯಥೆ ಪಟ್ಟು;

೮೧. ಧರಿತ್ರಿ–ಲೋಕವು, ಮಗನ್ ಎಂಬಂತು–ಮಗ ಎಂದರೆ ಇವನೇ ಮಗ ಎನ್ನುವ ಹಾಗೆ, ನಿನ್ನನುಜರಂ–ನಿನ್ನ ತಮ್ಮಂದಿರನ್ನು, ಕೈಕೊಂಡು–ಸ್ವೀಕರಿಸಿ, ಮುಂಪೂಣ್ದನನ್ನಿಗೆ– ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ, ಬನ್ನಂಬರಲೀಯದೆ–ಕೇಡು ಬಾರದ ಹಾಗೆ, ಆರ್ತು– ಸಮರ್ಥನಾಗಿ, ಎಸಗಿದ–ಕಾರ್ಯವನ್ನು ಮಾಡಿದ, ಈ ವಿಖ್ಯಾತಿಯುಂ ಕೀರ್ತಿಯುಂ–ಈ ನೆಗಳ್ತೆಯೂ ಯಶಸ್ಸೂ, ಮುಗಿಲಂ ಮುಟ್ಟಿದುದಲ್ತೆ–ಮೋಡವನ್ನು ಮುಟ್ಟಿತಲ್ಲವೆ, ಎಂದರೆ ಅತ್ಯುನ್ನತವಾಯಿತಲ್ಲವೆ? ನಮ್ಮ ಕುಲದೊಳ್–ನಮ್ಮ ವಂಶದಲ್ಲಿ, ಮಕ್ಕಳ್ ಪೆಱರ್– ಬೇರೆ ಮಕ್ಕಳೆ! ನೀನೆ ಜಟ್ಟಿಗನಯ್–ನೀನೇ ಶೂರನಾಗಿದ್ದೀಯ, ಮುನ್ನಿನ–ಮೊದಲಿನ, ಒರಂಟುವೇಡ–ಒರಟುತನ ಬೇಡ, ಮಗನೇ, ಧರಾಭಾರಮಂ ಕೈಕೊಳ್–ರಾಜ್ಯಭಾರವನ್ನು ಒಪ್ಪಿಕೋ. ಮಕ್ಕಳಂ+ಪೆಱರ್=ಮಕ್ಕಳ್ಪೆಱರ್ ಎಂದು ಕ್ರಿಯಾಸಮಾಸವಾಗಬಹುದು. ಆದರೆ ಕಾಕುವಿನ ಸಹಾಯದಿಂದ ಬೇರೆ ಮಕ್ಕಳೇಕೆ! ಎಂಬರ್ಥವಾಗುತ್ತದೆ. ಇಲ್ಲಿ ಸತ್ಯ ವತಿಯ ಮಾತಿನಲ್ಲಿ ಮೂಡಿರುವ ದೀನತೆ ಮಾರ್ದವ ವಾತ್ಸಲ್ಯಗಳು ಮಿಗಿಲಾಗಿವೆ.

ವಚನ : ಇನಿತಂ–ಇಷ್ಟನ್ನು; ಕೈಯೊಡ್ಡಿ–ಕೈಚಾಚಿ; ಅಮರಾಪಗಾನಂದನಂ– ಭೀಷ್ಮನು.

೮೨. ರಾಜ್ಯಂ ಕಿಡುಗುಮೆ–ರಾಜ್ಯವು ಕೆಟ್ಟೇ ಕೆಡುತ್ತದೆ ಎಂದರೆ ಅಶಾಶ್ವತ, ರಾಜ್ಯದ ತೊಡರ್ಪು–ರಾಜ್ಯದ ತೊಡಕು, ಬಂಧನ, ಕಟ್ಟು; ಏವಾೞ್ತೆ–ಏನು ಪ್ರಯೋಜನ, ಎಂದರೆ ಈ ನಶ್ವರವಾದ ರಾಜ್ಯದ ತೊಡರಿನಿಂದ ನನಗೇನು ಪ್ರಯೋಜನ; ಬಾೞ್ತೆ–ಬದುಕು, ನನ್ನಿಯ ನುಡಿಯಂ–ಸತ್ಯದ ಮಾತನ್ನು, ಪ್ರತಿಜ್ಞೆಯನ್ನು, ಕಿಡಿನೆಗೞೆ–ಹಾಳಾಗುವಂತೆ ನಡೆದರೆ, ನಾನುಂ–ನಾನು ಕೂಡ, ಎರಡಂ ನುಡಿದೊಡೆ–ಎರಡು ಮಾತನ್ನಾಡಿದರೆ, ಎಂದರೆ ಸುಳ್ಳಾಡಿ ದರೆ, ಹರಿಹರ ಹಿರಣ್ಯಗರ್ಭರ್–ವಿಷ್ಣು ಶಿವ ಬ್ರಹ್ಮರು, ತ್ರಿಮೂರ್ತಿಗಳು, ನಗರೇ–ಪರಿಹಾಸ ಮಾಡುವುದಿಲ್ಲವೇ? ಮಾಡುತ್ತಾರೆ ಎಂಬರ್ಥ. “ಬಾೞ್ತೆಯೆಂದು ಪ್ರಯೋಜನಂ” ; ಬಾೞ್+ತೆ=ಬಾೞ್ತೆ (ಭಾವನಾಮ), ಜೀವನ, ಬದುಕು.

೮೩. ಹಿಮಕರಂ–ಚಂದ್ರನು, ಆತ್ಮಶೀತ ರುಚಿಯಂ–ತನ್ನ ತಂಪಾದ ಕಾಂತಿಯನ್ನು, ದಿನನಾಯಕನುಷ್ಣದೀಧಿತಿ ಕ್ರಮಮಂ–ಸೂರ್ಯನು ತನ್ನ ಬಿಸಿಕಿರಣಗಳ ಶಕ್ತಿಯನ್ನು; ಅಗಾಧವಾರಿಧಿಯೆ–ಅಳೆಯಲಾಗದ ಆಳವುಳ್ಳ ಸಮುದ್ರವೇ, ಗುಣ್ಪಂ–ತನ್ನ ಆಳವನ್ನು; ಇಳಾವಧು–ಭೂಮಿಯೆಂಬ ಸ್ತ್ರೀಯು; ತನ್ನ ತಿಣ್ಪಂ–ತನ್ನ ಭಾರವನ್ನು; ಉತ್ತಮಕುಲ ಶೈಲಂ– ಶ್ರೇಷ್ಠವಾದ ಕುಲಪರ್ವತಗಳು, ಉನ್ನತಿಯಂ–ತಮ್ಮ ಎತ್ತರವನ್ನು, ಏಳಿದವಾಗೆ– ತಿರಸ್ಕಾರಕ್ಕೆ ಗುರಿಯಾಗುವಂತೆ, ಬಿಸುೞ್ಪೊಡಂ–ಬಿಸಾಡುವ ಪಕ್ಷದಲ್ಲಿ, ಬಿಸುೞ್ಕೆಮ–ಬಿಸುಡಲಿ; ಮದೀಯ ಪುರುಷವ್ರತಮೊಂದುಮಂ–ನನ್ನ ಬ್ರಹ್ಮಚರ್ಯವ್ರತವೊಂದನ್ನು, ಅಂಬಿಕೇ– ತಾಯೇ, ಈಗಳ್–ಈಗ, ಬಿಸುಡೆಂ–ನಾನು ಬಿಡುವುದಿಲ್ಲ, ತೊರೆಯುವುದಿಲ್ಲ.

ವಚನ : ಏಗೆಯ್ದುಂ ತಪ್ಪಿದನಿಲ್ಲ–ಏನು ಮಾಡಿದರೂ ತಪ್ಪಿದವನಾಗಲಿಲ್ಲ.

೮೪. ರಂಗತ್ತರಂಗ ವಾರ್ಧಿ ಚಯಂಗಳ್–ನರ್ತಿಸುವ ಅಲೆಗಳುಳ್ಳ ಕಡಲುಗಳ ಸಮೂಹ, ತಂತಮ್ಮ ಮೇರೆಯಂ ದಾಂಟುವೊಡಂ–ತಮ್ಮ ತಮ್ಮ ಎಲ್ಲೆಯನ್ನು ಮೀರುವುದಾದರೂ, ಗಾಂಗೇಯನುಂ–ಭೀಷ್ಮನೂ, ಪ್ರತಿಜ್ಞಾಗಾಂಗೇಯನುಂ– ಅರಿಕೇಸರಿಯೂ, ಒರ್ಮ್ಮೆ ನುಡಿದುದಂ–ಒಂದು ಬಾರಿ ಮಾಡಿದ ಭಾಷೆಯನ್ನು, ತಪ್ಪುವರೇ–ತಪ್ಪು ತ್ತಾರೆಯೇ? ಇಲ್ಲ.

ವಚನ : ಏಗೆಯ್ದುಂ ಒಡಂಬಡಿಸಲಾಱದೆ–ಏನು ಮಾಡಿಯೂ ಒಪ್ಪಿಸಲಸಮರ್ಥಳಾಗಿ; ಏಗೆಯ್ವುದೇನಂ ತೀರ್ಚುವುದು–ಏನು ಮಾಡುವುದು, ಏನನ್ನು ತೀರಿಸುವುದು; ತಗುಳ್ದು– ಆರಂಭವಾಗಿ; ಅವ್ಯವಚಿ, ನ್ನಮಾಗಿ–ನಡುವೆ ನಿಲ್ಲದೆ, ನಿರಂತರವಾಗಿ; ಎಡೆವಱೆದು–ನಡುವೆ, ಹರಿದು ಹೋಗಿ; ಕತ್ತರಿಸಿ ಹೋಗಿ; ಅಂತೆಗೆಯ್ವೆನೆಂದು–ಹಾಗೆಯೇ ಮಾಡುತ್ತೇನೆಂದು.

೮೫. ತ್ರಿದಶನರಾಸುರೋರಗಗಣ ಪ್ರಭು–ದೇವತೆಗಳು, ನರರು, ರಾಕ್ಷಸರು, ಸರ್ಪ ಲೋಕದವರು, ಗಣಪ್ರಭು–ಈ ಗುಂಪುಗಳಿಗೆಲ್ಲಾ ಪ್ರಭುವಾದವನು, ನಿಶ್ಚಿತ ತತ್ವಯೋಗಿ– ನಿರ್ಣೀತವಾದ ತತ್ವವನ್ನು ತಿಳಿದ ಯೋಗಿಯು, ಯೋಗದ ಬಲಂ–ಯೋಗಶಕ್ತಿಯು, ಉಣ್ಮಿ ಪೊಣ್ಮಿನಿಲೆ–ಹುಟ್ಟಿ ಪ್ರಕಟವಾಗಿ ಸ್ಥಿರವಾಗಿ ನಿಲ್ಲಲು, ಪುತ್ರವರಾರ್ಥಿಗಳಾಗಿ–ಮಗನು ಬೇಕೆಂಬ ವರವನ್ನು ಬೇಡುವವರಾಗಿ, ತನ್ನ ಕಟ್ಟಿದಿರೊಳೆ–ಹತ್ತಿರ ತನ್ನೆದುರಿನಲ್ಲೇ, ನಿಂದರಂ– ನಿಂತವರನ್ನು, ನಯದೆ ನೋಡೆ–ಮೃದುವಾಗಿ ನೋಡಲು, ಆ ಮುನೀಂದ್ರನ ದಿವ್ಯದೃಷ್ಟಿ ಮಂತ್ರ ದೊಳೆ–ಆ ಋಷಿಶ್ರೇಷ್ಠನ ದಿವ್ಯವಾದ ನೋಟವೆಂಬ ಮಂತ್ರದಿಂದಲೇ, ಆ ಸತಿಯ ರಿರ್ವರೊಳಂ–ಆ ಇಬ್ಬರು ಸ್ತ್ರೀಯರಲ್ಲೂ, ನವಗರ್ಭ ವಿಭ್ರಮಂ–ಹೊಸದಾದ ಬಸಿರಿನ ಚೆಲ್ವು, ಪೊದಳ್ದುದು–ವ್ಯಾಪಿಸಿತು. ಎಂದರೆ ಆ ಇಬ್ಬರೂ ಗರ್ಭಧಾರಣೆ ಮಾಡಿದರು.

ವಚನ : ಪೋಗಲಲಸಿ– ಹೋಗುವುದಕ್ಕೆ ಆಯಾಸಪಟ್ಟು; ಸೂೞಾಯ್ತೆಯಂ– ಪರಿಚಾರಿಕೆ ಯನ್ನು; ತನ್ನವೊಲೆ–ತನ್ನಂತೆಯೇ; ಕೈಗೆಯ್ದು–ಸಿಂಗರಿಸಿ; ಬರವಂ–ವರವನ್ನು; ವರದನಾಗಿ– ವರವನ್ನು ಕೊಡುವವನಾಗಿ; ಜಾತ್ಯಂಧನಕ್ಕುಂ–ಹುಟ್ಟು ಕುರುಡನಾಗುತ್ತಾನೆ; ಮೊಗಮಂ– ಮುಖವನ್ನು; ಪಾಂಡುರಂಮಾಡಿದಳ್–ಬೆಳ್ಳಗಾಗಿಸಿಕೊಂಡಳು; ಭದ್ರಲಕ್ಷಣ–ಮಂಗಳಕರ ವಾದ ಲಕ್ಷಣಗಳಿಂದ; ದರಹಸಿತವದನಾರವಿಂದೆಯಾಗಿ–ಅರೆನಗುತ್ತಿರುವ ಮುಖಕಮಲ ವುಳ್ಳವಳಾಗಿ; ಇಲ್ಲಿ ಸೂೞಾಯ್ತೆ ಎಂಬುದಕ್ಕೆ ಪಾಠಾಂತರ ‘ಸೂಳೆ’ ಎಂದಿದೆ; ಇದಕ್ಕೆ ದಾಸಿ ಎಂದರ್ಥ; ಈ ಪಾಠ ಗ್ರಾಹ್ಯ; ಇತರ ಪ್ರಯೋಗಗಳು: ಪರಮೇಶ್ವರ ಭಟಾರರಾ ಪ್ರಾಣವಲ್ಲಭೆ ವಿನಾ ಪೊಟಿಗಳೆನ್ವೊರ್ ಸೂಳೆಯರ್; ಲೋಕ ಮಹಾದೇವಿಯರ ದೇಗುಲದ ಸೂಳೆ ಗೋಯಿನ್ದ ಪೊಡ್ಡಿ; ಅಂಬಿಕೆಗೆ ಧೃತರಾಷ್ಟ್ರನುಂ ಅಂಬಾಲಿಕೆಗೆ ಪಾಂಡುರಾಜನುಂ ಅವರ ಸೂಳೆಯಪ್ಪಾಕೆಗೆ ವಿದುರನುಮೆಂಬ ಮೂವರ್ ತನೂಜರಾದರ್. (ಗದಾ. ೫. ೪೪ ಗ)

೮೬. ಆ ಮೂವರುಂ–ಆ ಮೂವರು ಸ್ತ್ರೀಯರೂ, ವರಂಬಡೆದ ಸಂತಸಂ–ವರವನ್ನು ಪಡೆದ ಸಂತೋಷವು, ಮನದೊಳ್–ಮನಸ್ಸಿನಲ್ಲಿ, ಆಗಲ್–ಆಗಲು, ಒಂದುತ್ತರೋತ್ತರಂ –ಒಂದು ಸಂತತವಾದ ಅತಿಶಯವು, ಬೆಳೆವ ಮಾೞ್ಕೆಯಿಂ–ಬೆಳೆಯುವ ರೀತಿಯಿಂದ, ಬಳೆವ ಗರ್ಭಮಂ–ಬೆಳೆಯುತ್ತಿರುವ ಗರ್ಭವನ್ನು, ತಾಳ್ದಿ–ಧರಿಸಿ, ಆದರಂ ಬೆರಸು–ಆದರದಿಂದ ಕೂಡಿದವರಾಗಿ, ಧೃತರಾಷ್ಟ್ರ ವಿಖ್ಯಾತ ಪಾಂಡುರಾಜ ವಿದುರರ್ಕಳಂ ಮೂವರಂ–ಧೃತರಾಷ್ಟ್ರ, ಕೀರ್ತಿವಂತನಾದ ಪಾಂಡುರಾಜ, ವಿದುರ ಎಂಬ ಈ ಮೂವರನ್ನು, ಕ್ರಮದೆ–ಕ್ರಮದಿಂದ, ಅಂದು ಪೆತ್ತರ್–ಅಂದು ಹೆತ್ತರು.

೮೭. ಆ ವಿವಿಧ ಲಕ್ಷಣಂಗಳೊಳ್–ಪ್ರಸಿದ್ಧವಾದ ಬಗೆಬಗೆಯ ರಾಜಲಕ್ಷಣಗಳಲ್ಲಿ, ಆವರಿಸಿದ–ವ್ಯಾಪಿಸಿದ, ಕುಲದ ಬಲದಚಲದಳವಿಗಳೊಳ್–ವಂಶದ ಶಕ್ತಿಯ ಛಲದ ಪ್ರಮಾಣ ಗಳಲ್ಲಿ, ಆ ಮೂವರುಮಂ–ಆ ಮೂರು ಮಕ್ಕಳನ್ನೂ, ಆದಿಪುರುಷರ್ ಮೂವರುಂ –ಬ್ರಹ್ಮ ವಿಷ್ಣು ರುದ್ರರೆಂಬ ಆದಿಪುರುಷರು ಮೂವರೂ, ತ್ರಿಮೂರ್ತಿಗಳೂ, ಎನಲಲ್ಲದೆ– ಎನ್ನುವು ದಲ್ಲದೆ, ಅತ್ತ ಮತ್ತೇನೆಂಬರ್–ಅತ್ತ ಬೇರೇನೆಂದು ಹೇಳುತ್ತಾರೆ. ಎಂದರೆ ಆ ಮೂರು ಮಕ್ಕಳು ಆದಿಪುರುಷರಂತೆ ಇದ್ದರು ಎಂದು ತಾತ್ಪರ್ಯ.

ವಚನ : ಜಾತಕರ್ಮ–ಹುಟ್ಟಿದಾಗ ಮಾಡುವ ಸಂಸ್ಕಾರ; ನಾಮಕರಣ –ಹೆಸರಿಡುವುದು; ಅನ್ನಪ್ರಾಶನ–ಅನ್ನವನ್ನು ಊಡುವುದು; ಚೌಲ–ಕೂದಲು ಬಿಡಿಸುವುದು; ಉಪನಯನ– ಮುಂಜಿ; ಇವೇ ಮೊದಲಾದ, ಷೋಡಶಕ್ರಿಯೆಗಳಂ–ಹದಿನಾರು ಕರ್ಮಗಳನ್ನು; ಮುಂತಿಟ್ಟು –ಪ್ರಧಾನವಾಗಿ ಇಟ್ಟುಮಾಡಿ; ಶಕುನಿಯೊಡವುಟ್ಟಿದಳಂ–ಶಕುನಿಯ ಸಹೋದರಿಯನ್ನು.

೮೮. ಮತ್ತೆ, ಇತ್ತ–ಇತ್ತ ಕಡೆ, ನೆಗೞ್ತೆಯ–ಪ್ರಸಿದ್ಧನಾದ, ಪುರುಷೋತ್ತಮನ–ಶ್ರೀಕೃಷ್ಣನ, ಪಿತಾಮಹಂಗೆ–ತಾತನಾದ, ಶೂರಂಗೆ–ಶೂರನೆಂಬ ಯದುವಂಶದ ರಾಜನಿಗೆ, ಮಗಳ್– ಮಗಳು, ಕುಂತಿ. ಮತ್ತಗಜಗಮನೆ–ಮದ್ದಾನೆಯಂತೆ ನಡಿಗೆಯುಳ್ಳವಳು, ಯದುವಂಶೋ ತ್ತಮೆ–ಯದುವಂಶದಲ್ಲಿ ಶ್ರೇಷ್ಠಳು, ಎನೆ–ಎನ್ನಲು, ಕುಂತಿ ಭೋಜನ ಮನೆಯೊಳ್–ಕುಂತಿ ಭೋಜನ ಮನೆಯಲ್ಲಿ,

೮೯. ಬಳೆಯುತ್ತಿರ್ಪನ್ನೆಗಂ–ಬೆಳೆಯುತ್ತಿರುವಷ್ಟರಲ್ಲಿ, ಆ ನಳಿನಾಸ್ಯೆಯ–ಕಮಲಮುಖಿ ಯಾದ ಆ ಕುಂತಿಯು, ಗೆಯ್ದದೊಂದು–ಮಾಡಿದ ಅದೊಂದು, ಶುಶ್ರೂಷೆ–ಉಪಚಾರವು, ಮನಂಗೊಳೆ–ಮನವನ್ನು ಮೆಚ್ಚಿಸಲು, ದುರ್ವಾಸಂ–ದುರ್ವಾಸನೆಂಬ ಋಷಿ, ವಿಳಸಿತ ಮಂತ್ರಾಕ್ಷರಂಗಳಂ–ಪ್ರಕಾಶಮಾನವಾದ ಅಯ್ದು ಮಂತ್ರಾಕ್ಷರಗಳನ್ನು, ದಯೆಯಿಂದಂ –ಕರುಣೆಯಿಂದ, ಕೊಟ್ಟಂ–ಕೊಟ್ಟನು.

ವಚನ : ಅಂತುಕೊಟ್ಟು–ಹಾಗೆಕೊಟ್ಟು; ಆಹ್ವಾನಂಗೆಯ್ದು–ಉಚ್ಚರಿಸಿ ಕರೆದು, ನಿನ್ನ ಬಗೆಗೆ ಬಂದ–ನಿನ್ನ ಮನಸ್ಸಿಗೆ ಬಂದ; ಪೋಲ್ವೆಯ ಮಕ್ಕಳಂ–ಹೋಲಿಕೆಯ ಮಕ್ಕಳನ್ನು; ಬೆಸಸಿದೊಡೆ–ಹೇಳಿದರೆ.

೯೦. ಈ ಮುನಿಯ ವರದ ಮಹಿಮೆಯಂ–ಈ ಋಷಿಯ ವರದ ಮಹಿಮೆಯನ್ನು, ಎನ್ನಿಚ್ಚೆಯೊಳ್–ನನಗೆ ಇಷ್ಟವಾದ ರೀತಿಯಲ್ಲಿ, ಪುಚ್ಚವಣಂ ನೋಡುವೆಂ–ಪರೀಕ್ಷೆ ಮಾಡಿ ನೋಡುತ್ತೇನೆ, ಎನುತೆ–ಎನ್ನುತ್ತ, ಶಫರೋಚ್ಚಳಿತತರತ್ತರಂಗೆಗೆ–ಮೀನುಗಳಿಂದ ಚಿಮ್ಮಿಸ ಲ್ಪಟ್ಟು ಅಡ್ಡವಾಗಿ ಹಾಯುತ್ತಿರುವ ಅಲೆಗಳನ್ನುಳ್ಳ, ಗಂಗೆಗೆ–ಗಂಗಾ ನದಿಗೆ, ಅಂದು–ಆಗ, ಉಚ್ಚಸ್ತನಿ–ಉಚ್ಚವಾದ ಸ್ತನಗಳನ್ನುಳ್ಳವಳು, ಒರ್ವಳೆ–ಒಬ್ಬಳೇ, ಬಂದಳ್–ಬಂದಳು.

೯೧. ಬಂದು, ಸುರನದಿಯ ನೀರೊಳ್ ಮಿಂದು–ಗಂಗಾನದಿಯ ನೀರಿನಲ್ಲಿ ಸ್ನಾನಮಾಡಿ, ಇನನಂ ನೋಡಿ–ಸೂರ್ಯನನ್ನು ನೋಡಿ, ನಿನ್ನ ದೊರೆಯನೆ–ನಿನಗೆ ಸಾಟಿಯಾಗಿರುವವನೇ, ಮಗನಕ್ಕೆ–ಮಗನಾಗಲಿ, ಎಂದು, ಆಹ್ವಾನಂಗೆಯ್ಯಲೊಡಂ–ಆಹ್ವಾನ ಮಾಡಿದಕೂಡಲೇ, ದಲ್–ನಿಜವಾಗಿಯೂ ದಶಶತಕಿರಣಂ–ಸಹಸ್ರ ಕಿರಣನಾದ ಸೂರ್ಯನು, ಅಂದು, ಧರೆಗಿೞಿದಂ–ಭೂಮಿಗೆ ಅವತರಿಸಿದನು.

ವಚನ : ನಭೋಭಾಗದಿಂ–ಆಕಾಶ ಪ್ರದೇಶದಿಂದ, ಅರವಿಂದ ಬಾಂಧವನಂ–ಸೂರ್ಯ ನನ್ನು.

೯೨. ಕೊಡಗೂಸುತನದ ಭಯದಿಂ–ತಾನಿನ್ನೂ ಕುಮಾರಿ, ಕನ್ಯೆ ಎಂಬ ಹೆದರಿಕೆಯಿಂದ, ನಡುಗುವ, ಕನ್ನಿಕೆಯ–ಹುಡುಗಿಯ, ಬೆಮರನೀರ್ಗಳ ಪೊನಲ್–ಬೆವರಿನ ನೀರಿನ ಪ್ರವಾಹ, ಒೞ್ಕುಡಿಯಲ್–ತುಂಬಿ ಹರಿದು; ಒಡಗೂಡೆ–ಕೂಡೆ ಸೇರಲು, ಗಂಗೆಯ ಮಡು–ಗಂಗಾ ನದಿಯ ಮಡು, ಕರೆಗಣ್ಮಿದುದು–ಎರಡು ದಡಗಳನ್ನೂ ತೀಡಿಕೊಂಡು ಹರಿಯಿತು; ನಾಣ ಪೆಂಪೇಂ ಪಿರಿದೋ–ನಾಚಿಕೆಯ ಆಧಿಕ್ಯ ಎಷ್ಟು ದೊಡ್ಡದೋ ! ಬಹು ಗಾಢವಾದ ನಾಚಿಕೆಯಿಂದ ಆ ಕನ್ನಿಕೆ ಬೆವರಿದಳು; ಆ ಬೆವರಿನ ನೀರು ಗಂಗಾಪ್ರವಾಹವನ್ನು ಕೊಬ್ಬಿಸಿ ಅದರ ಮಡು ವನ್ನು ತುಂಬುವಂತೆ ಆಯಿತು. ಕೊಡಗೂಸು=ಕೊಡ+ಕೂಸು, ಕೋಮಲವಾದ, ಎಳೆಯ ಪ್ರಾಯದ, ಹೆಣ್ಣು; ಕರೆಗಣ್ಮು=ಕರೆಯಂ+ತೀರವನ್ನು, ಪಾತ್ರದ ಅಂಚುಗಳನ್ನು+ ಕಣ್ಮು ಕೞ್ಮು– ತುಂಬು (ತಮಿಳು : ಕೞಮು–ತುಂಬು, ಮೀರು).

ವಚನ : ಕಿಡೆನುಡಿದು–ಕೆಡುವಂತೆ, ಹೊರಟುಹೋಗುವ ಹಾಗೆ ಮಾತಾಡಿ.

೯೩. ತರುಣಿ–ಕನ್ನೆಯೇ, ಬರಿಸಿದ ಕಾರಣಂ–ನನ್ನನ್ನು ಬರಮಾಡಿಕೊಂಡ ಕಾರಣ, ಆವುದೋ–ಯಾವುದೊ? ಮುನೀಶ್ವರನ ಮಂತ್ರಂ–ಆ ಋಷಿಶ್ರೇಷ್ಠನು ಕೊಟ್ಟ ಮಂತ್ರ, ಏ ದೊರೆಯೆಂದು–ಎಂಥಾದ್ದು ಎಂಬುದನ್ನು ಪರೀಕ್ಷಿಸುವುದಕ್ಕಾಗಿ; ಆಂ ಮರುಳಿಯೆನ್– ನಾನು ತಿಳಿಯದವಳು, ಭ್ರಮೆಗೊಂಡವಳು ಆಗಿದ್ದೇನೆ, ಅಱಿದು ಮಱಿಯದೆ–ತಿಳಿದೂ ತಿಳಿಯದೆ, ಬರಿಸಿದೆನ್–ಬರಮಾಡಿಕೊಂಡೆನು; ಇನ್ನೇೞಿಂ–ಇನ್ನು ಏಳಿರಿ, ಎದ್ದು ಹೋಗಿರಿ, ಎಂದೊಡೆ– ಎಂದು ಹೇಳಿದರೆ, ಪೋಗಲ್–ಹೋಗುವುದಕ್ಕೆ,

೯೪. ಮುಂಬೇಡಿದ ವರಮಂ–ಮೊದಲು ಬೇಡಿದ ವರವನ್ನು, ಕುಡದೆ–ಕೊಡದೆ, ಅಂಬುಜ ಮುಖಿ–ಕಮಲಮುಖಿಯೇ, ಆಗದು–ಆಗುವುದಿಲ್ಲ; ಎನ್ನದೊರೆಯಂ–ನನಗೆ ಸಮಾನ ನಾದ, ಪುತ್ರಂ–ಮಗನು, ನಿನಗಕ್ಕೆ–ನಿನಗೆ ಆಗಲಿ, ಎಂಬುದುಂ–ಎನ್ನುತ್ತಲು, ಒದವಿದ ಗರ್ಭದೊಳ್–ಉಂಟಾದ ಗರ್ಭದಲ್ಲಿ, ಅಂಬುಜಮಿತ್ರನನೆ–ಸೂರ್ಯನನ್ನೇ, ಪೋಲ್ವ ಮಗಂ–ಹೋಲುವ ಮಗನು, ಒಗೆತಂದಂ–ಹುಟ್ಟಿ ಬಂದನು, ಈ ಎರಡು ಪದ್ಯಗಳನ್ನೂ ಒಟ್ಟಿಗೆ ಅರ್ಥೈಸಬೇಕು: ಪದ್ಯದಿಂದ ಪದ್ಯಕ್ಕೆ ಹರಿಯುತ್ತ ಗದ್ಯಕ್ಕೆ ನುಸುಳುತ್ತ ಪಂಪನ ಕಥಾನಿರೂಪಣೆಯ ರೀತಿ ವೇಗಗಾಮಿಯಾಗಿದೆ.

೯೫. ಒಡವುಟ್ಟಿದ ಮಣಿಕುಂಡಲಂ–ಜೊತೆಯಲ್ಲಿಯೇ ಹುಟ್ಟಿದ ರತ್ನಖಚಿತ ಕುಂಡಲವೂ, ಒಡವುಟ್ಟಿದ ಸಹಜ ಕವಚಂ–ಜೊತೆಯಲ್ಲೇ ಹುಟ್ಟಿಬಂದ ಸ್ವಾಭಾವಿಕವಾದ ಕವಚ (ಅಂಗಿ)ವೂ, ತನ್ನೊಳ್–ತನ್ನಲ್ಲಿ, ಅಮರ್ದಿರೆ–ಸೇರಿಕೊಂಡಿರಲು, ತೊಡರ್ದಿರೆಯುಂ– ತೊಡರಿಕೊಂಡಿರಲೂ, ಬಂದು–ಆ ಮಗನು ಹೊರಕ್ಕೆ ಬಂದು, ಆಕೆಯ–ಆ ಕುಂತಿಯ, ನಡುಕ ಮಂ–ನಡುಗುವುದನ್ನು, ಒಡರಿಸಿದನು–ಉಂಟುಮಾಡಿದನು. ಆಗಳಾ ಬಾಲಿಕೆಯಾ [ಯುಂ] –ಆಗ ಆ ತರುಣಿಯೂ.

ವಚನ : ಅಂತು ನಡನಡ ನಡುಗಿ–ಹಾಗೆ ನಡನಡೆಂದು ನಡುಗಿ, ಜಲದೇವತೆಗಳಪ್ಪೊಡಂ –ನೀರಿನಲ್ಲಿ ನೆಲಸಿರುವ ದೇವತೆಗಳಾದರು ಕೂಡ, ಮನಂಗಾಣ್ಬರ್–ತನ್ನ ಮನಸ್ಸನ್ನು ತಿಳಿದು ಕೊಳ್ಳುತ್ತಾರೆ; ನಿಧಾನಮನೀಡಾಡುವಂತೆ–ನಿಧಿಯನ್ನು ಬಿಸಾಡುವ ಹಾಗೆ; ಮುೞುಗಲೀ ಯದೆ–ಮುಳುಗುವುದಕ್ಕೆ ಬಿಡದೆ; ತನ್ನ ತೆರೆಗಳೆಂಬ–ತನ್ನ ಅಲೆಗಳೆಂಬ; ನಳಿ ತೋಳ್ಗಳಿಂ– ಕೋಮಲವಾದ ತೋಳುಗಳಿಂದ; ಒಯ್ಯನೆ–ಮೆಲ್ಲಗೆ, ತೞ್ಕೈಸಿತರೆ–ಅಪ್ಪಿ ಕೊಂಡು ತರಲು; ಸೂತನೆಂಬವಂ–ಬೆಸ್ತನೆನ್ನಿಸಿಕೊಳ್ಳುವವನು; ಕಂಡು–ಮಗುವನ್ನು ನೋಡಿ.

೯೬. ಬಾಳದಿನೇಶಬಿಂಬದ–ಎಳೆಯ ಸೂರ್ಯಮಂಡಲದ, ನೆೞಲ್–ಪ್ರತಿಬಿಂಬ, ಜಲದೊಳ್–ನೀರಿನಲ್ಲಿ, ನೆಲಸಿತ್ತೊ–ನೆಲಸಿತೋ; ಮೇಣ್–ಅಥವಾ, ಫಣೀಂದ್ರಾ ಲಯ ದಿಂದಂ–ನಾಗರಾಜನ ಮನೆಯಿಂದ ಎಂದರೆ ಪಾತಾಳಲೋಕದಿಂದ, ಉರ್ಚಿದ–ಭೇದಿಸಿ ಕೊಂಡು ಬಂದ, ಫಣಾಮಣಿ–ಹೆಡೆಯ ಮಣಿಗಳ, ಮಂಗಳ ರಶ್ಮಿಯೋ–ಮಂಗಳಕರವಾದ ಕಿರಣವೋ; ಕರಂ–ವಿಶೇಷವಾಗಿ, ಎನ್ನೆರ್ದೆಯಂ–ನನ್ನ ಮನವನ್ನು, ಮೇಳಿಸಿದಪ್ಪುದು– ಪ್ರೀತಿಸುವುದಾಗಿದೆ, ಎಂದು, ನೀರೊಳ್–ಗಂಗೆಯ ನೀರಿನಲ್ಲಿ, ಬೊದಿಲ್ಲೆನೆ–ಬೊದಿಲ್ ಎಂದು ಶಬ್ದವಾಗುವ ಹಾಗೆ, ಪಾಯ್ದುಂ–ಹಾರಿಬಿದ್ದು, ಆದಂ ಆದರದೆ–ಅತಿಶಯ ಪ್ರೇಮ ದಿಂದ, ಆ ಬಾಳನಂ–ಆ ಬಾಲಕನನ್ನು, ಕಂಡು–ನೋಡಿ, ನಿಧಿಗಂಡನಂತೆವೋಲ್– ನಿಧಿಯನ್ನು ನೋಡಿದವನಂತೆ, ಒಸೆದಂ–ಸಂತೋಷಪಟ್ಟನು. ಇದ್ದಕ್ಕಿದ್ದಂತೆ ನಿಧಿಯನ್ನು ಕಂಡ ಮನುಷ್ಯನಲ್ಲಿ ಮೂಡುವ ಸಂತೋಷ ಸಂಭ್ರಮ ಆಶ್ಚರ್ಯಾದಿ ಭಾವಗಳು ಈ ಪದ್ಯದಲ್ಲಿ ರೂಪುಗೊಂಡಿವೆ.

ವಚನ : ಮನಂಗೊಂಡು–ಮನದಲ್ಲಿ ಮೆಚ್ಚಿ; ನಲ್ಲಳ ಸೋಂಕಿಲೊಳ್–ಮಡದಿಯ ಉಡಿಯಲ್ಲಿ; ರಾಗಿಸಿ–ಸಂತೋಷಿಸಿ; ಸುತನ ಸೂತಕಮಂ ಕೊಂಡಾಡೆ–ಮಗನು ಹುಟ್ಟಿದ್ದ ಕ್ಕಾಗಿ ಮೈಲಿಗೆಯನ್ನು ಆಚರಿಸಲು.

೯೭. ಅಗುೞ್ದಿರಲ್–ಅಗೆದಿರಲು, ತೋಡಿರಲು, ಆ ಕುೞಿಯೊಳ್–ಆ ಗುಣಿಯಲ್ಲಿ, ತೊಟ್ಟಗೆ–ಬೇಗನೆ, ನಿಧಿಗಂಡಂತೆ–ನಿಧಿಯನ್ನು ನೋಡಿದ ಹಾಗೆ, ಆ ಮಗನಂದಂ–ಆ ಮಗನ ಚೆಲ್ವು, ವಸುಧೆಗೆ–ಭೂಮಿಗೆ, ಅಸದಳಮಾಯ್ತು–ಅತಿಶಯವಾಯಿತು, ಎಂದು, ಲೋಗರ್– ಲೋಕದ ಜನ, ಬಗೆದಿರೆ–ಭಾವಿಸಿರಲು, ವಸುಷೇಣನೆಂಬ–ವಸುಷೇಣ ಎನ್ನುವ, ಪೆಸರ್– ಹೆಸರು, ಆಗಳ್ ಆಯ್ತು–ಆಗ ಉಂಟಾಯಿತು.

೯೮. ಅಂತು–ಹಾಗೆ, ವಸುಷೇಣಂ–ವಸುಷೇಣನು, ಆ ಲೋಕಾಂತಂಬರಂ–ಆ ಲೋಕದ ಕೊನೆಯ ಎಲ್ಲೆಯವರೆಗೂ; ಅಳವಿಬಳೆಯೆ–ಪರಾಕ್ರಮವು ಬೆಳೆಯುತ್ತಿರಲು, ಬಳೆದ ಎಸಕಂ– ಬೆಳೆದ ರೀತಿ, ಅದು ಓರಂತೆ–ಅದು ಕ್ರಮವಾಗಿ, ಜನಂಗಳ–ಜನಗಳ, ಕರ್ಣೋಪಾಂತ ದೊಳ್–ಕಿವಿಗಳ ಸಮೀಪದಲ್ಲಿ, ಒಗೆದು–ಹುಟ್ಟಿ, ಎಸೆಯೆ–ಪ್ರಕಾಶಿಸಲು, ಕರ್ಣನೆಂಬನು ಮಾದಂ–ಕರ್ಣ ಎಂಬ ಹೆಸರುಳ್ಳವನೂ ಆದನು.

ವಚನ : ಶಸ್ತ್ರಶಾಸ್ತ್ರ ವಿದ್ಯೆಯೊಳ್–ಶಸ್ತ್ರವಿದ್ಯೆಯಲ್ಲೂ ಶಾಸ್ತ್ರವಿದ್ಯೆಯಲ್ಲೂ; ಯೌವನಾ ರಂಭದೊಳ್–ಪ್ರಾಯದ ಮೊದಲ ಭಾಗದಲ್ಲಿ.

೯೯. ಬಿಲ್ಲಜೇವೊಡೆಯೆ–ಕರ್ಣನ ಬಿಲ್ಲಿನ ಟಂಕಾರವೇ, ವೈರಿನರೇಂದ್ರರಂ–ಶತ್ರುರಾಜ ರನ್ನು, ಪೊಡೆದುದು–ಹೊಡೆಯಿತು, ಅಪ್ಪಳಿಸಿತು; ನಿರಂತರಂ–ಎಡೆಬಿಡದೆ, ಕಡಿಕಡಿದಿತ್ತ– ಕತ್ತರಿಸಿ ಕತ್ತರಿಸಿ ದಾನಮಾಡಿದ, ಪೊ [ನ್ನೆ]–ಚಿನ್ನವೇ, ಬುಧಮಾಗಧ ವಂದಿಜನಕ್ಕೆ–ವಿದ್ವಾಂಸ ರಿಗೆ, ಕೀರ್ತಿಸುವವರಿಗೆ, ಹೊಗಳುಭಟ್ಟರಿಗೆ, ಕೊಟ್ಟ ಕೊಡೆ–ಕೊಟ್ಟ ದಾನವೇ, ಆದ ಎಡ [ಱಂ]–ಬಂದ ಬಡತನವನ್ನು, ಸಿಡಿಲ್ವೊಡೆದವೊಲ್–ಸಿಡಿಲು ಹೊಡೆದ ಹಾಗೆ, ಅಟ್ಟಿ ಮುಟ್ಟಿ–ಅಟ್ಟಿಸಿಕೊಂಡು ಹೋಗಿ ಸೋಕಿ; ಕಡಿದಿಕ್ಕಿದುದು–ಕಡಿದು ಹಾಕಿತು; ಎಡಱದೆ– ವಕ್ರವಾಗದೆ, ಬೇಡಿಂ–ಯಾಚಿಸಿರಿ, ಓಡಿಂ–ಓಡಿರಿ, ಎಂಬುದು, ಕರ್ಣನಾ–ಕರ್ಣನ, ಚಾಗದ–ದಾನದ, ಬೀರದ.ಶೌರ್ಯದ, ಮಾತು.ಮಾತಾಗಿದೆ, ಇದು, ಎಡಱು.ವಕ್ರಭಾವೇ, ದಾರಿದ್ರ್ಯೇಚ.ವಕ್ರವಾಗುವಿಕೆ, ಬಡತನದ್ ಕೊಡು ಎಂಬುದರ ಭಾವನಾಮ ಕೋಡು

ವಚನ : ಪೊಗೞ್ತೆಯಂ ನೆಗೆೞ್ತೆಯುಮಂ–ಕೊಂಡಾಟವನ್ನೂ ಕೀರ್ತಿಯನ್ನೂ; ಇಂತಲ್ಲದೆ –ಹೀಗಲ್ಲದೆ, ಈ ರೀತಿಯಿಂದಲ್ಲದೆ;

೧೦೦. ಬೇಡಿದೊಡೆ–ಯಾರಾದರೂ ಬಯಸಿ ಯಾಚಿಸಿದರೆ, ಕರ್ಣಂ–ಕರ್ಣನು, ಬಲದ ಬರಿಯುಮಂ–ಬಲಭಾಗದ ಪಕ್ಕೆಯನ್ನು ಕೂಡ, ಉಗಿದು–ಕತ್ತರಿಸಿ, ಈಡಾಡುಗುಂ– ದಾನವಾಗಿ ಎಸೆಯುತ್ತಾನೆ, ಎಂದು–ಎಂದು ಭಾವಿಸಿ, ಆಗಳೆ–ಆಗಲೇ, ಕೈಗೂಡಿದ–ಕೈಗೆ ಕೂಡಿದ ಎಂದರೆ ಸಿದ್ಧವಾದ, ವಟುವಾಕೃತಿಯೊಳೆ–ಬ್ರಹ್ಮಚಾರಿಯ ರೂಪಿನಲ್ಲಿಯೇ, ಆ ಸಹಜ ಕವಚಮಂ ಕುಂಡಳಮಂ–ಕರ್ಣನೊಡನೆಯೇ ಹುಟ್ಟಿ ಬಂದ ಕವಚವನ್ನೂ, ಕುಂಡಲ ವನ್ನೂ, ಇಂದ್ರನು, ಬೇಡಿದಂ–ಎರೆದನು, ಯಾಚಿಸಿದನು.

೧೦೧. ಬೇಡಿದುದಂ–ಬೇಡಿದ್ದನ್ನು, ಅರಿದುಕೊಳ್–ಕತ್ತರಿಸಿಕೊ, ಎನೆ–ಎಂದು ಕರ್ಣ, ಹೇಳಲು, ಬೇಡಿದುದಂ–ಬೇಡಿದ್ದನ್ನು, ಎನಗೆ–ನನಗೆ, ಮುಟ್ಟಲಾಗದು–ಕೊಡುವುದಕ್ಕೆ ಮುಂಚೆಯೇ ಮುಟ್ಟಬಾರದು, ಎನೆ–ಎಂದು ಇಂದ್ರ ಹೇಳಲು, ಅಲ್ಲಾಡದೆ–ಸ್ವಲ್ಪವೂ ಅಲುಗಾಡದೆ ಎಂದರೆ ಮನಸ್ಸಿನ ಸ್ಥಿರತೆಯನ್ನು ನೀಗಿಕೊಳ್ಳದೆ, ನೆಗೞ್ದು–ಕಾರ್ಯತಃ ಮಾಡಿ, ಕೊಳ್–ತೆಗೆದುಕೊ, ಎಂದು–ಎಂದು ಹೇಳಿ, ರಾಧೇಯಂ–ಕರ್ಣನು, ಕವಚಮಂ ಅರಿದು– ಕವಚವನ್ನು ಕತ್ತರಿಸಿ, ಇಂದ್ರಂಗೆ–ಇಂದ್ರನಿಗೆ, ಈಡಾಡಿದಂ–ದಾನವಾಗಿ ಎಸೆದನು ಎಂದರೆ ಕೊಟ್ಟನು. ಇಲ್ಲಿ ಕರ್ಣನ ದಾನಗುಣದ ಅತಿಶಯತೆ ವ್ಯಕ್ತವಾಗುತ್ತದೆ.

೧೦೨. ಎಂದುಂ–ಎಂದಾದರೂ, ಪೋಗು ಎಂದನೆ–ಮುಂದಕ್ಕೆ ಹೋಗು ಎಂದು ಹೇಳಿದನೆ? ಮಾಣೆಂದನೆ–ನಿಲ್ಲು ತಡೆ ಎಂದು ಹೇಳಿದನೆ? ಪೆಱತೊಂದನೀವೆನೆಂದನೆ– ಬೇಡಿದ್ದನ್ನು ಬಿಟ್ಟು ಇನ್ನೊಂದನ್ನು ಕೊಡುತ್ತೇನೆ ಎಂದು ಹೇಳಿದನೆ? ನೊಂದು ಅಃ ಎಂದನೆ– ಕತ್ತರಿಸುವಾಗ ನೋವಾಗಿ ಅಃ ಎಂದು ಕೂಗಿಕೊಂಡನೆ? ಇಲ್ಲವೇ ಕೊಡಬೇಕಲ್ಲ ಎಂದು ವ್ಯಥೆಪಟ್ಟುಕೊಂಡು ಅಃ ಎಂದು ಹೇಳಿದನೆ? ಸೆರಗಿಲ್ಲದೆ–ಭಯವಿಲ್ಲದೆ, ಪಿಡಿಯೆಂದಂ– ತೆಗೆದುಕೊ ಎಂದನು, ರವಿತನಯಂ–ಕರ್ಣನು, ಏಂ ಕಲಿಯೋ–ಏನು ಶೂರನೋ ! ಏಂ ಚಾಗಿಯೋ–ಎಂಥ ದಾನಿಯೋ! ಕರ್ಣನ ತ್ಯಾಗದ ಪರಾಕಾಷ್ಠೆಯನ್ನು ಈ ಪದ್ಯ ಚಿತ್ರಿಸುತ್ತದೆ.

ವಚನ : ನೆತ್ತರ್ ಪನಪನ ಪರಿಯೆ–ರಕ್ತವು ಪನಪನ ಎಂದು ಹರಿಯಲು; ತಿದಿಯುಗಿ ವಂತುಗಿದು–ಚರ್ಮದ ಚೀಲವನ್ನು ಸೀಳುವಂತೆ ಸೀಳಿ; ಕಲಿತನಕ್ಕೆ–ಶೌರ್ಯಕ್ಕೆ.

೧೦೩. ಸುರ ದನುಜ ಭುಜಗ ವಿದ್ಯಾಧರ ನರರ, ಸಂಕುಲದೊಳ್–ಸಮೂಹದಲ್ಲಿ, ಆರನಾದೊಡಮೇನೋ–ಯಾರನ್ನಾದರೆ ತಾನೇ ಏನು, ಇದು–ಈ ಶಕ್ತಿ, ಧುರದೊಳ್– ಯುದ್ಧದಲ್ಲಿ, ವಿರೋಧಿಯಂ–ಹಗೆಯನ್ನು, ಗರಮುಟ್ಟೆ ಕೊಲ್ಗುಂ–ಗ್ರಹವು ತಾಗುವ ಹಾಗೆ ಕೊಲ್ಲುತ್ತದೆ, ಎಂದು, ಶಕ್ತಿಯನಿತ್ತಂ–ಶಕ್ತಿ ಆಯುಧವನ್ನು ಕೊಟ್ಟನು. ಇಲ್ಲಿ ಗರಮುಟ್ಟೆ ಶಬ್ದದ ಅರ್ಥ ವಿಚಾರಣೀಯ : ಗರ ಗ್ರಹ; ಮುಟ್ಟೆ ಎಂಬುದು ಸೀಮಾವಾಚಕ ಶಬ್ದವೆಂದು ಪರಿಗಣಿಸಿದರೆ, ಗ್ರಹಗಳವರೆಗೂ ಎಂದಾಗಬಹುದು (ಶಮದ. ೨೫೯–೩) ನೋಡಿ.

ವಚನ : ರೇಣುಕಾನಂದನನಲ್ಲಿಗೆ–ಪರಶುರಾಮನ ಬಳಿಗೆ.

೧೦೪. ಉಗ್ರ ಪರಶುಪಾಟಿತ ರಿಪುವಂಶಾರಾಮನಂ–ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವುಳ್ಳ, ಆ ರಾಮನಂ–ಆ ಪರಶುರಾಮನನ್ನು, ಗುರು ಶುಶ್ರೂಷೆಯೊಳ್–ಗುರುಸೇವೆಯಲ್ಲಿ, ಗುರುಸೇವೆ ಮಾಡುವುದರಿಂದ, ಕೂರಿಸೆ–ಆದರ ವುಂಟಾಗುವ ಹಾಗೆ ಮಾಡಲು, ವೈಕರ್ತನನಾ–ಕರ್ಣನ, ಬಲ್ಮೆ–ಪ್ರೌಢಿಮೆ, ಇಷುವಿದ್ಯಾ ಪಾರಗನೆನಿಸಿದುದು–ಧನುರ್ವೇದ ವಿದ್ಯೆಯಲ್ಲಿ ಪಾರಂಗತನಾದವನೆಂದೆನ್ನಿಸಿತು. ತನ್ನ ಕರ್ಣ ಕುಂಡಲಗಳನ್ನೂ ಕವಚವನ್ನೂ ಕತ್ತರಿಸಿಕೊಟ್ಟದ್ದರಿಂದ ಕರ್ಣನಿಗೆ ವೈಕರ್ತನ ಎಂಬ ಹೆಸರು ಬಂತಂತೆ: ಪ್ರಾಙ್ನಾಮ ತಸ್ಯ ಕಥಿತಂ ವಸುಷೇಣ ಇತಿಕ್ಷಿತೌ । ಕರ್ಣೋ ವೈಕರ್ತನಶ್ಚೈವ ಕರ್ಮಣಾ ತೇನ ಸೋಽಭವತ್ ॥ (ಮಹಾಭಾ. : ೧–೧೧೦–೩೧)

ವಚನ : ಮಱೆದೊಱಗಿದ–ಮೈಮರೆತು ಮಲಗಿದ; ಆ ಪ್ರಸ್ತಾವದೊಳ್–ಆ ಸಮಯ ದಲ್ಲಿ; ವಜ್ರಕೀಟಂಗಳ್–ಅಲರ್ಕ ಎಂಬ ಹುಳು; ಕೊಡಂತಿಯೊಳ್–ಕೊಡತಿಯಲ್ಲಿ; ಬೆಟ್ಟ ದಂತೆ–ಹೊಡೆದ ಹಾಗೆ; ಅತ್ತಮಿತ್ತಮುರ್ಚಿಪೋಗೆಯುಂ–ಆ ಕಡೆ ಈ ಕಡೆ ಭೇದಿಸಿಕೊಂಡು ಹೋಗಲು; ನಿದ್ರಾಭಿಘಾತಂ–ನಿದ್ದೆಗೆ ಭಂಗ, ನಾಶ; ತಲೆಯನುಗುರಿಸುತ್ತುಮಿರೆ–ತನ್ನ ತಲೆ ಯನ್ನು ಉಗುರಿನಿಂದ ಕೆರೆದುಕೊಳ್ಳುತ್ತಿರಲು.

೧೦೫. ಅತಿ ವಿಶದ ವಿಶಾಲೋರುಕ್ಷತದಿಂದೆ–ಅತಿ ಸ್ಪಷ್ಟವಾದ ಅಗಲವಾದ ತೊಡೆಯ ಗಾಯದಿಂದ, ಒಱೆದು–ಜಿನುಗಿ, ಸುರಿದು, ಉತ್ಥಿತಂ–ಅಧಿಕವಾಗುತ್ತಿರುವ, ಆ ವಂದಸ್ರಮಿಶ್ರ ಗಂಧಂ–ಅಗೋ ಬಂದ ರಕ್ತದಿಂದ ಮಿಶ್ರವಾದ ನಾತವು, ಅನಿತು–ಅಷ್ಟು, ಜೆಡೆಯುಮಂ –ಜಟೆಯನ್ನೂ, ನಾಂದಿ–ಒದ್ದೆ ಮಾಡಿ, ಮುನಿಯಂ–ಋಷಿಯನ್ನು, ಮನಃಕ್ಷತದೊಡನೆ– ಮನದ ಗಾಯದೊಡನೆ, ಖಾತಿಯೊಡನೆ, ಎೞ್ಚಱಿಸಿದುದು–ಎಚ್ಚರವಾಗುವ ಹಾಗೆ ಮಾಡಿತು. ಪರಶುರಾಮನು ರಕ್ತದಿಂದ ತೊಯ್ದು ಎಚ್ಚರಗೊಂಡನಲ್ಲದೆ ಅವನ ಕೋಪವೂ ಎಚ್ಚರವಾಯಿ ತೆಂದು ತಾತ್ಪರ್ಯ.

ವಚನ : ನೆತ್ತರಪೊನಲೊಳ್–ರಕ್ತಪ್ರವಾಹದಲ್ಲಿ; ನಾಂದು ನನೆದ–ಚೆನ್ನಾಗಿ ಒದ್ದೆಯಾದ, ತಳ್ಪೊಯ್ದ–ತಟ್ಟುವ, ಜಡೆಯುಮಂ–ಜಟೆಯನ್ನೂ; ಅವಸಾನ ಕಾಲದೊಳ್–ಸಾವಿನ ಸಮಯದಲ್ಲಿ; ಬೆಸಕೆಯ್ಯದಿರ್ಕೆ–ಕೆಲಸವನ್ನು ಮಾಡದಿರಲಿ; ಮಗುೞ್ದು ಬಂದು– ಹಿಂದಿರುಗಿ ಬಂದು, ಸೂತನ ಮನೆಯೊಳ್–ಸಾರಥಿಯ ಮನೆಯಲ್ಲಿ; ಇರ್ಪ್ಪನ್ನೆಗಂ–ಇರುತ್ತಿರಲು.

೧೦೬. ಸೊಗಯಿಪ–ಸೊಗಸಾಗಿರುವ, ತಮ್ಮ, ಜವ್ವನದ–ಪ್ರಾಯದ, ತಮ್ಮ, ವಿಭೂತಿಯ–ಐಶ್ವರ್ಯದ, ತಮ್ಮ ತಮ್ಮ ಚೆಲ್ವುಗಳ–ತಂತಮ್ಮ ಚೆಲುವಿಕೆಗಳ, ವಿಲಾಸದ– ಶೃಂಗಾರ ಚೇಷ್ಟೆಗಳ, [ಊ] ರ್ಮೆ ಗಳೊಳ್–ಅತಿಶಯತೆಯಲ್ಲಿ, ಆವು–ನಾವು, ಎವಗೆ–ನಮಗೆ, ಆಗಿಪೆವು–ಕುಂತಿಯನ್ನು ವಶಮಾಡಿಕೊಳ್ಳುತ್ತೇವೆ, ಎಂದು ಬಂದ–ಎಂಬುದಾಗಿ ಬಂದಿರುವ ಚೆನ್ನಿಗರುಮಂ–ಸೊಗಸುಗಾರರನ್ನೂ, ಆಸೆಕಾಱರುಮಂ–ಕಾಮುಕರನ್ನೂ, ಒಲ್ಲದೆ– ಬಯಸದೆ, ಒಪ್ಪದೆ, ಕುಂತಿ–ಕುಂತಿದೇವಿಯು, ಚೆಲ್ವಿಡಿದಿರ್ದರೂಪು–ಸೊಗಸು ತುಂಬಿ ಕೊಂಡಿದ್ದ ರೂಪ (ಪಾಂಡುವಿನ), ದೃಷ್ಟಿಗೆ ವರೆ–ತನ್ನ ಕಣ್ಣಿಗೆ ಸಮ್ಮತವಾಗಲು, ಮನಂಬುಗೆ– ಮನವನ್ನು ಹೊಗಲು, ಪಾಂಡುರಾಜನನೆ–ಪಾಂಡುರಾಜನಿಗೇ, ಮಾಲೆಸೂಡಿದಳ್–ಮಾಲೆ ಯನ್ನು ಮುಡಿಸಿದಳು, ಎಂದರೆ ಸ್ವಯಂವರದಲ್ಲಿ ವರಣಮಾಲೆಯನ್ನು ಹಾಕಿದಳು. ಕುಂತಿಯ ಸ್ವಯಂವರದ ಒಂದು ಉಪಾಖ್ಯಾನವನ್ನೇ ಈ ಒಂದು ಪದ್ಯದಲ್ಲಿ ಭಟ್ಟಿ ಇಳಿಸಿದಂತೆ ಇದೆ; ಚಪ್ಪರಿಸಿದಷ್ಟೂ ರುಚಿಯಾಗಿ ಧ್ವನಿಮಯವಾಗಿದೆ.

ವಚನ : ಅಪ್ಪುಕೆಯ್ದ ಕುಂತಿಯೊಡನೆ–ಪಾಂಡುರಾಜನನ್ನು ಆರಿಸಿಕೊಂಡ, ಒಪ್ಪಿ ಕೊಂಡ, ಕುಂತಿಯ ಜೊತೆಯಲ್ಲಿ; ಶಲ್ಯನೊಡವುಟ್ಟಿದ–ಶಲ್ಯರಾಜನ ಸಹೋದರಿಯಾದ; ಒಂದೆ ಪಸೆಯ ಮೇಲೆ–ಒಂದೇ ಹಸೆಮಣೆಯ ಮೇಲೆ; ವಿಧಾತ್ರಂ ಮುಂಡಾಡುವಂತೆ–ಬ್ರಹ್ಮನು ಮುದ್ದಾಡುವಂತೆ;

೧೦೭. ತಳಿರ್ಗಳಸಂ–ಮಾವಿನ ಚಿಗುರನ್ನು ಇಟ್ಟ ಕಲಶ, ಮುಕುಂದರವಂ–ಒಂದು ಬಗೆಯ ತಮಟೆಯ ಧ್ವನಿ, ಎತ್ತಿದ ಮುತ್ತಿನ ಮಂಟಪಂ–ಎತ್ತರವಾಗಿ ಕಟ್ಟಿದ ಮುತ್ತಿನಿಂದ ಮಾಡಿದ ಮಂಟಪ, ಮನಂಗೊಳಿಪ ವಿತಾನ ಪಂಕ್ತಿ–ಮನವನ್ನು ಸೆಳೆಯುವ ಮೇಲ್ಕಟ್ಟುಗಳ ಸಾಲು, ಪಸುರ್ವಂದಲೊಳ್–ಹಸುರು ಚಪ್ಪರದಲ್ಲಿ, ಒಲ್ದು ಎಡೆಯಾಡುವ–ಪ್ರೀತಿಯಿಂದ ನಡುವೆ ಓಡಾಡುವ, ಅಯ್ದೆಯರ್–ಸುಮಂಗಲಿಗಳ, ಬಳಸಿದ ವೇದಪಾರಗರ–ಸುತ್ತು ಗಟ್ಟಿದ ವೇದವಿದರಾದವರ, ಸಂದಣಿ–ಸಮೂಹಗಳು, ಎಂಬಿವಱಿಂ–ಎಂಬ ಇವುಗಳಿಂದ, ಪಾಂಡುರಾಜನಾ–ಪಾಂಡುವಿನ, ಕುಂತಿಮಾದ್ರಿಗಳೊಳ್–ಕುಂತಿಮಾದ್ರಿಯರಲ್ಲಿ, ಆದ, ವಿವಾಹಮಂಗಳಮದು–ಆ ಮದುವೆಯ ಮಂಗಳಕಾರ್ಯವು, ಅಚ್ಚರಿಯಾದುದು– ಆಶ್ಚರ್ಯಕರವಾಯಿತು. ಪಸುರ್ವಂದಲ್=ಪಸುರ್+ಪಂದಲ್ (ಪಂದರ್, ಹಂದರ).

೧೦೮. ಈ ಪದ್ಯಕ್ಕೆ ಅರ್ಥ ಹೇಳುವ ಮೊದಲು ಅಲ್ಲಿರುವ ಒಂದು ಪಾಠ ಕ್ಲೇಶವನ್ನು ಗಮನಿಸಬೇಕು. ಇದರ ಮೂರನೆಯ ಪಾದದಲ್ಲಿ ‘ನಕ್ಕರ ವದ್ದಿ’ ಎಂಬ ಪಾಠ ಸ್ವೀಕೃತ ವಾಗಿದೆ, ಪಾಠಾಂತರಗಳು; ನಕ್ಕರೆವದ್ದಿ (ಖ), ನೆರ್ಕ್ಕೊರೆವೊದ್ದಿ (ಘ). ಪಂಪನನ್ನು ಅನುಕರಿಸುವ ಶಾಂತಿನಾಥ ಕವಿ ತನ್ನ ‘ಸುಕುಮಾರ ಚರಿತೆ’ ಯಲ್ಲಿ ನಾಗಶ್ರೀಯ ಸೌಂದರ್ಯವನ್ನು ವರ್ಣಿಸುವಾಗ

ಪರಡು ನಿಗೂಢಂ ಲಲಿತ ಲತಾಂಗಿಯ

ವರಜಂಘಾಯುಗಳಂಗಳ ಭಂಗಿಯ

ನಱಿಯಂ ಪೊಗೞಲ್ ನೆಕ್ಕೊರವಟ್ಟೆಯ

ತೆಱನೆನಲಲ್ಲದೆ ಬಣ್ಣಿಪ ಬಟ್ಟೆಯ

ಎಂದು ಬರೆದಿದ್ದಾನೆ (೫–೫೧). ಇಲ್ಲಿ ‘ನೆಕ್ಕೊರವಟ್ಟೆ’ ಎಂಬ ಶಬ್ದವಿದೆ. ಇದಕ್ಕೆ ಆ ಗ್ರಂಥ ದಲ್ಲಿ ಪಾಠಾಂತರಗಳೇನೂ ಇಲ್ಲ. (ಘ)ದ ಪಾಠ ಇದಕ್ಕೆ ತುಂಬ ಸಮೀಪವರ್ತಿಯಾಗಿದೆ; ಸರಿಯಾದ ಪಾಠ ‘ನೆರ್ಕೊರವಟ್ಟೆ’ ಎಂದಿರಬೇಕು. ಇದಕ್ಕೆ ಪೋಷಕವಾಗಿದೆ ಈ ಕೆಳಗಿನ ಪದ್ಯ (ಕರ್ಣಾಟಕ ಶಬ್ದಸಾರಂ, ಪುಟ ೨೯, ಅಡಿ ಟಿಪ್ಪಣಿ)

ಉಕ್ಕೆವಮೀಕೆಯ ಕಿಱುದೊಡೆ

ಗಕ್ಕುಮಿದೆಂದಜ್ಜುಮಾಗಿ ನಣ್ಪಂ ಬಿಣ್ಪಂ

ಮೊಕ್ಕಳಮೇವುದು ಮರಲೊಳ್

ನೆಕ್ಕೊರೆಗಳಪೊಟ್ಟಿ ಪೊಟ್ಟಿಯಾದಸುವಿನ್ನಂ ॥

ಇದರ ಸಹಾಯದಿಂದ, ‘ನೆರ್ಕೊರೆ ವಟ್ಟೆ’ ಯನ್ನು ನೆರ್ಕೊರೆ+ಪಟ್ಟೆ ಎಂದು ಬಿಡಿಸ ಬಹುದೆಂದು ತೋರುತ್ತದೆ. ಇದರ ಅರ್ಥವೇನೋ? ಅನ್ವೇಷಣಾರ್ಹ.

ತುಱುಗೆಮೆ–ದಟ್ಟವಾದ ಕೂದಲುಳ್ಳ ಕಣ್ಣುರೆಪ್ಪೆ, ನೀಳ್ದಪುರ್ವು–ಉದ್ದವಾಗಿರುವ ಹುಬ್ಬು, ನಿಡುಗಣ್–ದೀರ್ಘವಾಗಿರುವ ಕಣ್ಣು, ಪೊಱೆಯಲ್ಲದೆ–ಭಾರವಿಲ್ಲದೆ ಇರುವ, ಹಗುರವಾದ, ಬಟ್ಟಿತಪ್ಪ–ದುಂಡಾದ, ಬಾಯ್ದೆಱೆ–ತುಟಿ, ತನುರೇಖೆಗೊಂಡ ಕೊರಲ್– ಸೂಕ್ಷ್ಮವಾದ ಗೆರೆಗಳಿರುವ ಕೊರಳು, ಒಡ್ಡಿದ ಪೆರ್ಮೊಲೆ–ಚಾಚಿಕೊಂಡಿರುವ ದಪ್ಪ ಮೊಲೆ, ತೆಳ್ವಸಿಱ್–ತೆಳುವಾದ ಬಸಿರು, ಕರಂ ನೆಱೆದನಿತಂಬಂ–ವಿಶೇಷವಾಗಿ ತುಂಬಿಕೊಂಡಿರುವ ಪಿರ್ರೆ, ಇಂಬುವಡೆದೊಳ್ದೊಡೆ–ಹೊಂದಿಕೊಂಡಿರುವ ಒಳತೊಡೆ, ಕಿಱುದೊಡೆ–ಚಿಕ್ಕ ತೊಡೆ, ನೆರ್ಕೊರೆವಟ್ಟೆ–?, ತಾನೆ ಪೋ–ತಾನೇ ಹೋಗು, ಎಂದು ಧಾತ್ರಿ–ಲೋಕವು, ಪೊಗೞ್ಗುಂ– ಹೊಗಳುತ್ತದೆ; ಕುಂತಿಮಾದ್ರಿಗಳ್ ಪೊಗೞ್ವನ್ನರೆ–ಕುಂತಿಮಾದ್ರಿಗಳು ಹೊಗಳಿಕೆಗೆ ಯೋಗ್ಯ ರಾದಂಥವರೇ ಸರಿ.

ವಚನ : ಆಕೆಗಳಿರ್ವರುಂ–ಅವರಿಬ್ಬರೂ, ಎರಡುಂಕೆಲದೊಳಿರೆ–ಎರಡು ಪಕ್ಕಗಳಲ್ಲೂ ಇರಲು; ಕಲ್ಪಲತೆಗಳೆರಡಱ ನಡುವಣ–ಕಲ್ಪವಲ್ಲಿಯ ಎರಡರ ನಡುವೆ, ಕಲ್ಪವಕ್ಷ ದಂತಿರ್ದ– ಕಲ್ಪತರುವಿನ ಹಾಗೆ ಇದ್ದ; ಅಂಗಹೀನನೆಂದು–ಊನಾಂಗನೆಂದು, ಕಣ್ಣಿಲ್ಲದವನೆಂದು; ಪಟ್ಟಬಂಧದೊಸಗೆಯಂ–ಪಟ್ಟಾಭಿಷೇಕೋತ್ಸವವನ್ನು; ನೆಲನನಾಳಿಸೆ–ರಾಜ್ಯವನ್ನು ಆಳುವಂತೆ ಮಾಡಲು.

೧೦೯. ಈ ಪದ್ಯದಲ್ಲಿ ಪಾಂಡುರಾಜನ ರಾಜತೇಜಸ್ಸಿನ ದಳ್ಳುರಿಯ ವರ್ಣನೆ ಇದೆ. ಮೀಱುವೆವು–ಮೀರುತ್ತೇವೆ, ಎಂಬ–ಎನ್ನುವ, ಮಾಂಡಳಿಕರ್–ಸಾಮಂತರಾಜರು, ಈಯದರ್ ಎಂಬ ಅದಟರ್–ಕಪ್ಪಕಾಣಿಕೆಗಳನ್ನು ಕೊಡದವರು ಎಂಬ ಶೂರರು, ವಯಲ್ಗೆ–ಕಾಳಗದ ಬಯಲಿಗೆ, ಮೆಯ್ದೋಱುವೆವು–ಮೆಯ್ಯನ್ನೇ ತೋಱಿಸುತ್ತೇವೆ ಎಂದರೆ ಅಲ್ಲಿ ನಿನ್ನನ್ನು ಎದುರಿಸುತ್ತೇವೆ ಎಂಬ, ಪೂಣಿಗರ್–ಪರಾಕ್ರಮಿಗಳು, ಇವರೆಲ್ಲ, ಕುನುಂಗಿ–ಕುಗ್ಗಿ, ಸಿಡಿಲ್ದು– ಸಿಡಿದು, ಜೋಲ್ದು–ಕೆಳಕ್ಕೆ ಜೋತುಬಿದ್ದು, ಕಾಯ್ಪಾಱೆ–ಕೋಪವು ಆರಿಹೋಗಲು, ಪಾಂಡು ರಾಜನಾ–ಪಾಂಡುವಿನ, ತೇಜದ ದಳ್ಳುರಿ–ತೇಜಸ್ಸೆಂಬ ಪ್ರಜ್ವಲಿಸುವ ಅಗ್ನಿ, ನಭಕ್ಕೆ ಪಾಱಿ ದುದು–ಆಕಾಶಕ್ಕೆ ಚಿಮ್ಮಿತು, ಗಂಡರ-ಶೂರರ, ನೆತ್ತಿಯೊಳೊತ್ತಿ–ಹಣೆಯಲ್ಲಿ ಅಮುಕಿ, ತಾಗಿ, ಬಾಳನಿನ್ನೂಱುಗುಮೆಂದೊಡೆ–ಕತ್ತಿಯನ್ನು ಇನ್ನು ನಾಟುತ್ತದೆ ಎಂದರೆ, ಏಂ ಪಿರಿದೋ – ಏನು ಹಿರಿದೋ ಏನು ಮಹತ್ವವುಳ್ಳುದೋ ! ಈ ಪದ್ಯದೊಡನೆ ಕೆಳಗಿನ ಶಾಸನ ಪದ್ಯವನ್ನು ಹೋಲಿಸಿರಿ (ದಾವಣಗೆರೆ ೩೨).

ಮೀಱುವೆವೆಂಬ ಮಂಡಳಿಕರಿಲ್ಲದಟಿಂದೆ ಬಯಲ್ಗೆ ವಂದು ಮೆ

ಯ್ದೋಱುವೆವೆಂಬ ವಿಕ್ರಮಿಗಳಿಲ್ಲ ಕುನುಂಗಿ ಕೞಲ್ದೞಲ್ದು ಕಾ

ಯ್ಪಾಱಿ ಪೊಡರ್ಪುಗೆಟ್ಟು ಬೆಸಕೆಯ್ವವರಲ್ಲದೆ ಮಿಕ್ಕ ತನ್ನ ಕಾ

ಯ್ಪೇಱಿದ ತೇಜದಿಂ ವಿಜಯ ಪಾಂಡ್ಯ ಮಹೀಪನಿದೇಂ ಪ್ರತಾಪಿಯೋ ॥

೧೧೦. ಸಮುದ್ರ ಮುದ್ರಿತ ಧರಾಚಕ್ರಂ–ಕಡಲಿಂದ ಸುತ್ತುಗಟ್ಟಲ್ಪಟ್ಟ ಭೂಮಂಡಲವು, ಸಮಂತು–ಚೆನ್ನಾಗಿ, ಬೆಸಕೆಯ್ದತ್ತು–ಸೇವಾಕಾರ್ಯವನ್ನು ಮಾಡಿತು, ಆಜ್ಞೆಯನ್ನು ಪಾಲಿಸಿತು; ಪ್ರತಾಪಕ್ಕೆ ಅಗುರ್ವಿಸಿ–ವೀರತನಕ್ಕೆ ಹೆದರಿ, ದಿಶಾಚಕ್ರಂ–ದಿಙ್ಮಂಡಲವು, ಎಂದರೆ ದಿಕ್ಕು ದಿಕ್ಕುಗಳಲ್ಲಿರುವ ರಾಜರು, ಸಮಂತು–ಚೆನ್ನಾಗಿ, ಗೋೞುಂಡೆ ಗೊಳುತ್ತು ಮಿರ್ದುದು– ಅಳುವೆಂಬ ಉಂಡೆಯನ್ನು ನುಂಗುತ್ತಿತ್ತು ಎಂದರೆ ಹೆದರಿ ಚೆನ್ನಾಗಿ ಗೋಳಿಡುತ್ತಿದ್ದರು; ಪೊದಳ್ದ ಆಜ್ಞೆಗಂ ಪೆಸರ್ಗಂ–ವ್ಯಾಪಿಸಿದ ಅವನ ಅಪ್ಪಣೆಗೂ ಕೀರ್ತಿಗೂ, ವಿಯಚ್ಚಕ್ರಂ –ಆಕಾಶ ಮಂಡಲ, ಸಮಂತು–ಚೆನ್ನಾಗಿ, ಮುನ್ನಮೆ–ಮೊದಲೇ, ಗೂಡುಗೊಂಡುದು–ಗೂಡಾಗಿ ಪರಿಣ ಮಿಸಿತು, ಎಂಬಿನಂ–ಎನ್ನುತ್ತಿರಲು, ಜಸಂ–ಪಾಂಡುವಿನ ಕೀರ್ತಿ, ಆ ಪಾಂಡುರಮಾದುದು– ಮೇಲಿಂದ ಕೆಳಕ್ಕೆ ಪೂರ್ಣವಾಗಿ ಬೆಳ್ಳಗಾಯಿತು, ಎಂದರೆ ಸಮಸ್ತ ಲೋಕ ಗ ಳ್ಲ್ಲೂ ಅವ್ನ್ಧವಳ ಕೀರ್ತಿ ಹರಡಿತು. ನೃಪರೊಳ್–ರಾಜರಲ್ಲಿ, ಆ ಪಾಂಡು ರಾಜಂಬರಂ–ಆ ರಾಜನಾದ ಪಾಂಡುವಿನವರೆಗೂ ಬರುವವರು, ಆರ್–ಯಾರು? ಎಂದರೆ ಪಾಂಡುವಿನ ಸಮಾನ ಬೇರೆ ರಾಜರಿಲ್ಲ.

ವಚನ : ಅವನತ ವೈರಿ ಭೂ ಭೃತ್ಸಮಾಜನುಂ–ನಮಸ್ಕರಿಸಿದ ಶತ್ರುರಾಜರ ಸಮೂಹ ವುಳ್ಳವನೂ; ನೆಗೞುತ್ತಿರ್ದು–ಮಾಡುತ್ತಿದ್ದು ! ತೋಪಿನ ಬೇಂಟೆಯ ನಾಡಲ್–ತೋಹಿನ ಬೆ । ಟೆಯೆಂಬ ಬೇಟೆಯನ್ನು ಆಡಲು; ಅೞ್ತಿಯಿಂ–ಆಸಕ್ತಿಯಿಂದ.

೧೧೧. ಕಿಂದಮನೆಂಬ ಋಷಿ ತಾನು ಜಿಂಕೆಯಾಗಿ ತನ್ನ ಹೆಂಡತಿಯನ್ನೂ ಜಿಂಕೆಯಾಗಿಸಿ ಅವಳೊಡನೆ ಕ್ರೀಡಿಸುತ್ತ ಇದ್ದನು; ಇವನ ವರ್ಣನೆ ಮತ್ತು ಇವನಿಂದ ಪಾಂಡುಗೆ ಬಂದ ಶಾಪದ ವಿಷಯ ಈ ಪದ್ಯದಲ್ಲಿದೆ: ಇನಿಯಳಂ–ತನ್ನ ನಲ್ಲಳನ್ನು, ಅೞ್ತಿಯಿಂದೆ–ಪ್ರೀತಿ ಯಿಂದ, ಮೃಗಿಮಾಡಿ–ಹೆಣ್ಣು ಜಿಂಕೆಯನ್ನಾಗಿ ಮಾಡಿ, ಮನೋಜ ಸುಖಕ್ಕೆ ಸೋಲ್ತು–ಕಾಮ ಸುಖಕ್ಕಾಗಿ ಮೋಹಿಸಿ, ಅಲಂಪಿನೆ–ಸಂತೋಷದಿಂದಲೇ, ನೆರೆಯಲ್ಕೆ–ಕೂಡಲು, ದಿವ್ಯ ಮುನಿ ಯುಂ–ಶ್ರೇಷ್ಠಮುನಿಯಾದ ಕಿಂದಮನೂ, ಮೃಗಮಾಗಿ–ಗಂಡು ಜಿಂಕೆಯಾಗಿ, ಮರಲ್ದು– ಅರಳಿ, ಉಬ್ಬಿ, ಕೊಡೆ–ಸಂಯೋಗ ಮಾಡಲು, (ಪಾಂಡು) ಮೆಲ್ಲನೆ ಮೃಗಮೆಂದು ಸಾರ್ದು– ಸದ್ದಿಲ್ಲದೆ ಜಿಂಕೆಯೆಂದು ಹತ್ತಿರ ಬಂದು, ನೆಱನಂ ನಡೆನೋಡಿ–ಮರ್ಮಸ್ಥಾನವನ್ನು ಗುರಿಯಿಟ್ಟು ನೋಡಿ, ನರೇಂದ್ರಂ–ಪಾಂಡುರಾಜನು, ಭೋಂಕನೆ–ಬೇಗನೆ, ಮೃಗಚಾರಿ ಯಂ–ಜಿಂಕೆಯಾಗಿ ಸಂಚರಿಸುತ್ತಿದ್ದ ಋಷಿಯನ್ನು, ಎಚ್ಚು–ಬಾಣ ಪ್ರಯೋಗ ಮಾಡಿ, ತನಗೆ, ಅದೊಂದು ಮಾರಿಯಂ–ಅದೊಂದು ಮೃತ್ಯುವನ್ನು, ತಂದಂ–ತಂದುಕೊಂಡನು. ಈ ಪದ್ಯ ಒಂದು ಇಡಿ ಉಪಾಖ್ಯಾನದ ರಸವತ್ತಾದ ಸಂಕ್ಷೇಪವಾಗಿದೆ; ಇದನ್ನು ಪರಿಭಾವಿಸಿದಾಗ ಆ ಇಡಿಯ ಕಥೆ ತನ್ನ ವಿಸ್ತಾರ ವೈವಿಧ್ಯಗಳಲ್ಲಿ ಹೇಗಿದ್ದಿರಬಹುದೆಂದು ಚಿಂತನಾಶಕ್ತಿಗೆ ಅಳವಡುವುದಾಗಿದೆ: ಆನಂದದಾಯಕವಾಗಿದೆ.

ವಚನ : ಪ್ರಳಯದುಳ್ಕಮುಳ್ಕುವಂತೆ–ಪ್ರಳಯ ಕಾಲದ ಉಲ್ಕೆ ಪ್ರಕಾಶಿಸುವ ಹಾಗೆ; ತನ್ನೆಚ್ಚಂಬು–ತಾನು ಹೊಡೆದ ಬಾಣ; ಉಳ್ಕೆ–ಹೊಳೆಯಲು; ಪೇೞಿಂ ಎನ್ನನಾವನೆಚ್ಚಂ– ಹೇಳಿರಿ, ನನ್ನನ್ನು ಹೊಡೆದವನಾವನು; ಮುನಿದ ಸರಮಂ–ಕೋಪಗೊಂಡ ಧ್ವನಿಯನ್ನು; ಬಿಲ್ಲುಮಂಬುಮನ್ ಈಡಾಡಿ–ಬಿಲ್ಲನ್ನೂ ಬಾಣವನ್ನೂ ಎಸೆದು;

೧೧೨. ರತಕ್ಕೆ–ಸಂಭೋಗಕ್ಕೆ, ಸನ್ನತದಿಂ–ಬಾಗುವಿಕೆಯಿಂದ, ವಶದಿಂದ, ಎಳಸಿ– ಬಯಸಿ, ನಲ್ಲಳೊಳ್–ನಲ್ಲಳಲ್ಲಿ, ಓತೊಡಗೂಡಿದೆನ್ನಂ–ಪ್ರೀತಿಸಿ ನೆರೆದ ನನ್ನನ್ನು, ಇಂತು– ಹೀಗೆ, ಅನ್ನೆಯಂ ಎಚ್ಚುದರ್ಕೆ–ಅನ್ಯಾಯದಿಂದ ಹೊಡೆದುದಕ್ಕೆ, ಪೆಱತು–ಬೇರೆ, ದಂಡಂ– ದಂಡವು, ಶಿಕ್ಷೆಯು, ಪರಿಹಾರವು, ಇಲ್ಲ; ಏಕೆಂದರೆ, ನೀನ್–ನೀನು, ನಲ್ಲಳೊಳ್–ನಲ್ಲೆ ಯಲ್ಲಿ, ಒಱಲ್ದು–ಪ್ರೀತಿಸಿ, ನಡೆ ನೋಡಿಯುಂ–ಚೆನ್ನಾಗಿ ನೋಡಿಯೂ, ಬಯಸಿ ಕೂಡಿಯುಂ– ಇಷ್ಟ ಪಟ್ಟು ನೆರೆದೂ, ಆಗಡೆ–ಆಗಲೆ, ಸಾವೆಯಾಗಿ–ಸಾಯುವೆಯಾಗಿ; ಇನ್ ಪೋಗು ಎನೆ–ಇನ್ನು ಹೋಗು ಎನ್ನಲು, ಆ ಮಹೀಶ್ವರಂ–ಆ ಪಾಂಡುರಾಜನು, ರೌದ್ರಶಾಪ ಪರಿತಾಪ ವಿಳಾಪದೊಳ್–ಭಯಂಕರವಾದ ಶಾಪದಿಂದಾದ ಸಂಕಟದ ರೋದನದಿಂದ.

ವಚನ : ಎನ್ನಗೆಯ್ದ–ನಾನು ಮಾಡಿದ, ಕಾಮಾಕ್ರಾಂತಕ್ಕೆ–ಕಾಮಕ್ರೀಡಾ ವಿಘ್ನಕ್ಕೆ, ಕಾಮಕೃತಂ–ಸ್ವೇಚಾ, ಚಾರದಿಂದಾದದ್ದು, ಏಂ ಪಿರಿದಲ್ತು–ಏನೂ ದೊಡ್ಡದಲ್ಲ.

೧೧೩. ಎತ್ತ ವನಂ–ಎಲ್ಲಿ ಕಾಡು, ಎತ್ತ ಮೃಗಯಾವೃತ್ತಕ–ಎಲ್ಲಿ ಈ ಬೇಟೆಯ ಕಾರ್ಯ, ಈ ತಪಸಿಯೆತ್ತ–ಈ ಋಷಿ ಎಲ್ಲಿ, ಎತ್ತಮೃಗಂ–ಎಲ್ಲಿ ಜಿಂಕೆ, ಎಂದು–ಎಂಬುದಾಗಿ, ಎಂತು–ಹೇಗೆ, ಆನೆತ್ತೆಚ್ಚೆನ್–ನಾನು ಎಲ್ಲಿ ಬಾಣಪ್ರಯೋಗ ಮಾಡಿದೆನು, ಆತ್ಮಕರ್ಮಾ ಯತ್ತಂ–ಇದೆಲ್ಲ ಸ್ವಕೀಯ ಕರ್ಮಕ್ಕೆ ಅಧೀನವಾದದ್ದು, ಪೆಱತಲ್ತು–ಬೇರೆಯಲ್ಲ, ಎಲ್ಲಂ ಅಘಟಿತ ಘಟಿತಂ–ಎಲ್ಲವೂ ಒಂದಕ್ಕೊಂದಕ್ಕೆ ಸಂಬಂಧವಿಲ್ಲದ ಸೇರುವೆ. ಎಲ್ಲಿಯ ಕಾಡು, ಎಲ್ಲಿಯ ಬೇಟೆ, ಎಲ್ಲಿಯ ಋಷಿ, ಎಲ್ಲಿಯ ಜಿಂಕೆ, ಹೇಗೆ ಎಲ್ಲಿ ನನ್ನ ಬಾಣ ಪ್ರಯೋಗ; ಒಂದೊಂದಕ್ಕೂ ಸಂಬಂಧವಿಲ್ಲವಲ್ಲ; ಇದೆಲ್ಲ ಪ್ರಾಚೀನ ಕರ್ಮ ವಲ್ಲವೆ? ಹೌದು, ಬೇರೇನೂ ಇರಲಾರದು–ಎಂದು ತಾತ್ಪರ್ಯಾರ್ಥ.

ವಚನ : ಪೊೞಲ್ಗೆ ಮಗುೞ್ದು–ಪಟ್ಟಣಕ್ಕೆ ಹಿಂದಿರುಗಿ; ದೀನಾನಾಥ ಜನಂಗಳ್ಗೆ–ದೀನರೂ ಅನಾಥರೂ ಆದ ಜನರಿಗೆ;

೧೧೪. ಸಂಸಾರಂ–ಸಂಸಾರವು ಎಂದರೆ ಲೋಕಜೀವನವು, ಅನಂಗಜಂಗಮ ಲತಾಲಲಿ ತಾಂಗಿಯರಿಂದಂ–ಮನ್ಮಥನ ನಡೆದಾಡುವ ಬಳ್ಳಿಗಳಂತೆ ಇರುವ ಸುಂದರಾಂಗಿಯರಿಂದ, ಸಾರಂ ಅಲ್ತೆ–ರಸವತ್ತಾದುದಲ್ಲವೆ? ಹೌದು; ತನ್ಮುನಿಶಾಪದಿಂದಂ–ಆ ಋಷಿಯ ಶಾಪ ದಿಂದ, ಅದಿನ್ನೆನಗೆ–ಅದು ಇನ್ನು ನನಗೆ, ತಪ್ಪುದು–ನಾಶವಾಯಿತು, ವನವಾಸದೊಳಿರ್ಪೆಂ– ಅರಣ್ಯವಾಸದಲ್ಲಿರುತ್ತೇನೆ; ಇದರ್ಕೆ–ಇದಕ್ಕೆ, ಆರು–ಯಾರೂ, ವಕ್ರಿಸದಿರಿಂ–ಅಡ್ಡಿ ಮಾಡ ಬೇಡಿರಿ, ಎಂದು–ಹೇಳಿ, ದುರ್ವಾರ ಪರಾಕ್ರಮಂ–ನಿವಾರಿಸಲಶಕ್ಯವಾದ ಪ್ರತಾಪವುಳ್ಳ ಪಾಂಡುರಾಜನು, ತಳರೆ–ಹೊರಡಲು, ಕುಂತಿಮಾದ್ರಿಯರ್, ಬಾರಿಸಿ ವಾರಿಸಿ–ಬೇಡ ಬೇಡ ವೆಂದು ತಡೆದು ತಡೆದು.

ವಚನ : ಬೆನ್ನ ಬೆನ್ನನೆ ವರೆ–ಬೆನ್ನು ಹಿಂದೆಯೇ ಬರಲು, ಬಿನ್ನಬಿನ್ನನೆ ಪೋಗಿ–ಮಾತ ನಾಡದೆ ಮೌನದಿಂದ ಹೋಗಿ.

೧೧೫. ತುಂಗ….ಭಂಗಮಂ: ತುಂಗ–ಎತ್ತರವಾದ, ವನ್ಯಮತಂಗಜ–ಕಾಡಾನೆಯ, ದಂತಾಘಾತ–ದಂತದ ಏಟಿನಿಂದ, ನಿಪಾತಿತ–ಉರುಳಿಸಲ್ಪಟ್ಟ, ಸಲ್ಲಕೀ ಭಂಗಮಂ–ಮುರಿದ ಆನೆಬೇಲದ ಮರಗಳನ್ನುಳ್ಳ; ಮಣಿ….ತುಂಗಮಂ: ಮಣಿ–ರತ್ನಗಳ, ಮೌಕ್ತಿಕ–ಮುತ್ತುಗಳ, ನೀಳ–ನೀಲವಾದ, ಸ್ಥೂಲ–ತೋರವಾದ, ಶಿಲಾ–ಬಂಡೆಗಳಿಂದ, ಪ್ರವಿಭಾಸಿತ–ಪ್ರಕಾಶ ಮಾನವಾದ, ಉತ್ತುಂಗಮಂ–ಎತ್ತರವನ್ನುಳ್ಳ; ಮುನಿ….ತಾಂಗಮಂ: ಮುನಿಮುಖ್ಯ–ಋಷಿ ಶ್ರೇಷ್ಠರ, ಮುಖಾಂಭೋಜೋದರ–ಕಮಲದಂತಿರುವ ಮುಖಗಳ ಒಳಗಿನಿಂದ, ನಿರ್ಗತ–ಹೊರ ಹೊರಟ, ಮಂತ್ರ–ಮಂತ್ರಗಳಿಂದ, ಪೂತ–ಪವಿತ್ರವಾದ, ಅಂಗಮಂ–ದೇಹವನ್ನುಳ್ಳ, ಮೈಯನ್ನುಳ್ಳ, ಉದ್ಯಚ್ಛೃಂಗಮಂ–ಎತ್ತರವಾದ ಕೋಡುಗಳನ್ನುಳ್ಳ, ಶತಶೃಂಗಮಂ–ಶತಶೃಂಗ ವೆಂಬ ಪರ್ವತವನ್ನು, ನೃಪಂ–ರಾಜ, ಎಯ್ದಿದಂ–ಸೇರಿದನು. ಪಾಂಡುರಾಜ ಶತಶೃಂಗ ಪರ್ವತಕ್ಕೆ ಬಂದನು.

ವಚನ : ಉಪಕಂಠಂಗಳೊಳ್–ತಪ್ಪಲು ಪ್ರದೇಶಗಳಲ್ಲಿ; ತಾಪಸ ಕನ್ನೆಯರ್–ಋಷಿ ಕುಮಾರಿಯರು; ನಡಪಿದ–ಸಾಕಿ ಬೆಳಸಿದ; ತುಱುಗಿ–ಗುಂಪಾಗಿ, ಪಣ್ತೆಱಗಿದ–ಹಣ್ಣು ಬಿಟ್ಟು ಬಾಗಿದ; ಪುಗಿಲ್ ಪುಗಿಲ್ ಎಂದು–ಪ್ರವೇಶ, ಪ್ರವೇಶ ಎಂದು; ಬಗ್ಗಿಸುವ–ಕೂಗುವ; ಪದುಮರಾಗದ ಬಣ್ಣದ–ಪದ್ಮರಾಗವೆಂಬ ರತ್ನದ ಬಣ್ಣವನ್ನುಳ್ಳ; ತೊರೆದ–ಸ್ರವಿಸಿದ; ಕೂಂಕಿ–ನೆಗೆದು; ಕಿಶೋರಕೇಸರಿಗಳಂ–ಮರಿಸಿಂಹಗಳನ್ನು; ಕರಿಕಳಭಂಗಳುಮಂ–ಆನೆಮರಿ ಗಳನ್ನೂ; ಪಳುವಂಗಳಿಂದೆ–ಕಾಡುಗಳಿಂದ (ಇಲ್ಲಿ ಪೞುಗಳಿಂದೆ ಎಂಬ ಪಾಠವಿರಬಹುದು); ತರುಣ ಹರಿಣಂಗಳುಮಂ–ಎಳೆಯ ಜಿಂಕೆಗಳನ್ನೂ; ಮುತ್ತ–ಮುದಿಯಾದ; ಎಱಕೆಯ–ರೆಕ್ಕೆಯ; ನಂದಲೀಯದೆ–ಆರಿ ಹೋಗಲು ಬಿಡದೆ; ದಾಳಿವೂಗೊಯ್ವೊಡನೆ ವರ್ಷ–ದಾಳಿ ಹೂವನ್ನು ಕೊಯ್ಯವ, ಒಡನೆ–ಬರುವ; ಗೋಳಾಂಗೂಳಂಗಳುಮಂ–ಕಪಿಗಳನ್ನೂ; ತಪಃಪ್ರಭಾವಕ್ಕೆ– ತಪಸ್ಸಿನ ಶಕ್ತಿಗೆ; ಚೋದ್ಯಂಬಟ್ಟು–ಆಶ್ಚರ್ಯವನ್ನು ಹೊಂದಿ.

೧೧೬. ಅಲ್ಲಿನ ಮರಗಳು ಕೂಡ ಆ ಋಷಿಗಳಿಂದ ವಿನಯವನ್ನು ಕಲಿತುಕೊಂಡುವು. ಮಱಿದುಂಬಿಗಳು–ದುಂಬಿಯ ಮರಿಗಳು, ವಿನಯದಿಂ–ನಯದಿಂದ, ವಿಶ್ವಾಸದಿಂದ, ಇತ್ತ ಬನ್ನಿಂ ಇರಿಂ–ಇತ್ತ ಕಡೆ ಬನ್ನಿರಿ, ಇಲ್ಲಿಯೇ ಇರಿ, ಎಂಬವೋಲ್–ಎನ್ನುವ ಹಾಗೆ, ಇಂಚರ ದಿಂದಂ–ಇಂಪಾದ ಧ್ವನಿಯಿಂದ, ಒಯ್ಯನೊಯ್ಯನೆ–ಮೃದುವಾಗಿ, ಮೆಲ್ಲ ಮೆಲ್ಲಗೆ, ಮೊರೆವುವು–ಮೊರೆಯುತ್ತವೆ; ಮರಂ–ಮರಗಳು, ತಳ್ತ ಪೂವಿನ ಪೊಸಗೊಂಚಲಿಂ– ಧರಿಸಿದ ಹೂವಿನ ಹೊಸಗೊಂಚಲುಗಳ ಭಾರದಿಂದ, ಅೞ್ಕಱೊಳಳೊಲ್ದೆಱಪಂತೆ–ಪ್ರೀತಿ ಯಿಂದ ಒಲಿದು ಬಾಗುವ ಹಾಗೆ, ಏನ್ ಎಸೆದಿರ್ದುವೋ–ಏನು ಸೊಗಸಾದುವೋ ! ಈ ನಗೇಂದ್ರದ– ಈ ಶ್ರೇಷ್ಠವಾದ ಬೆಟ್ಟದ, ಶಾಖಿಗಳುಂ–ಮರಗಳು ಕೂಡ, ಈ ತಪೋಧನರ– ಈ ತಪಸ್ವಿಗಳ, ಕೈಯೊಳೆ–ಕೈಯಿಂದಲೇ, ವಿನಯಮಂ–ನಮ್ರತೆಯನ್ನು, ಕಲ್ತವಾಗದೇ– ಕಲಿತು ವಾಗಲಿಲಲ್ಲವೇ? ಕಲಿತುವು ಎಂದರ್ಥ.

ವಚನ : ಪಾವನಂ–ಪವಿತ್ರ, ಪೆರ್ಚಿಸಿ–ಹೆಚ್ಚಿಸಿ, ಬೆರ್ಚಿಸಿ–ಹೆದರಿಸಿ, ಪುತ್ರಾರ್ಥಿನಿ ಯಾಗಲ್–ಮಕ್ಕಳನ್ನು ಬಯಸುವವಳಾಗಿ.

೧೧೭. ಎನ್ನಯ ನಿಷ್ಫಲ ಪುಷ್ಪದರ್ಶನಂ–ನನ್ನ ಪ್ರಯೋಜನವಿಲ್ಲದ ಮುಟ್ಟು, ರಜಸ್ವ ಲೆತನ; ವಿಸಸನದೊಳ್–ಯುದ್ಧದಲ್ಲಿ, ವಿರೋಧಿನೃಪರಂ–ಶತ್ರುರಾಜರಂ, ತಱಿದೊಟ್ಟ ಲುಂ–ಕತ್ತರಿಸಿ ರಾಶಿಮಾಡಲೂ, ಅರ್ಥಿಗೆ–ಬೇಡುವವನಿಗೆ, ಅರ್ಥಮಂ–ಐಶ್ವರ್ಯವನ್ನು, ಕಸವಿನ–ಕಸದ, ಲೆಕ್ಕಮೆಂದು–ಲೆಕ್ಕವೆಂದು, ಸಮಾನವೆಂದು, ಕುಡಲುಂ–ದಾನಮಾಡಲೂ, ವಿಪುಳಾಯತಿಯಂ–ಅತಿಶಯವಾದ ಶಕ್ತಿಯನ್ನು, ದಿಗಂತದೊಳ್–ದಿಕ್ಕುಗಳ ಕೊನೆಗೆಲ್ಲ, ಪಸರಿಸಲುಂ–ಹರಡಿಸಲೂ, ಕರಂ–ವಿಶೇಷವಾಗಿ, ನೆಱೆವ–ಸಮರ್ಥರಾದ, ಮಕ್ಕಳಂ, ಈಯದೆ–ಕೊಡದೆ, ನೋಡೆ–ನೋಡಲು, ನಾಡೆ–ವಿಶೇಷವಾಗಿ, ಇಕ್ಷುಪುಷ್ಪದವೊಲ್– ಕಬ್ಬಿನ ಹೂವಂತೆ, ಸೂಲಂಗಿಯಂತೆ, ನೋಯಿಸಿದಪ್ಪುದು–ನೋಯಿಸುತ್ತದೆ. ಕುಂತಿ ತಿಂಗಳು ತಿಂಗಳಿಗೆ ರಜಸ್ವಲೆಯಾಗುತ್ತಿದ್ದುದರಿಂದ ಅವಳಿಗೆ ಮಕ್ಕಳಾಗದೆ ವ್ಯಥೆಯನ್ನುಂಟುಮಾಡಿತು; ಅವಳು ಪುಷ್ಪವತಿಯಾಗಿದ್ದರೂ ಫಲವತಿಯಾಗಲಿಲ್ಲ, ಕಬ್ಬಿನ ಹೂವು ಹೇಗೆ ಕಾಯಾಗುವು ದಿಲ್ಲವೋ ಹಾಗೆ. ಇಲ್ಲಿರುವ ‘ಇಕ್ಷುಪುಷ್ಪದವೊಲ್’ ಎಂಬ ಉಪಮೆ, ಬಾಣನ “ತಥಾ ಸಂಭುಜ್ಯಮಾನಮಪಿ ನಿಷ್ಫಲಂ ಪುಷ್ಪದರ್ಶನಂ ಶರವಣಮಿವಾಂತಃಪುರಮಭವತ್” (ಕಾದಂಬರೀ) ಎಂಬುದನ್ನು ನೆನಪಿಗೆ ತರುತ್ತದೆ. ಇಲ್ಲಿ ಜೊಂಡಾದರೆ ಪಂಪನಲ್ಲಿ ಕಬ್ಬು.

ವಚನ : ಚಿಂತಾಕ್ರಾಂತೆಯಾಗಿರ್ದ–ದುಃಖಕ್ಕೆ ವಶವಾಗಿದ್ದ; ಏಕಾಂತದೊಳ್–ರಹಸ್ಯ ದಲ್ಲಿ.

೧೧೮. ಚಿಂತೆಯಿದೇನೊ–ಇದೇನು ಚಿಂತೆ ಕುಂತಿ! ಸಂತತಿಗೆ–ಕುಲಕ್ಕೆ, ವಂಶಕ್ಕೆ, ನೆಟ್ಟನೆ– ನೇರಾಗಿ, ಮಕ್ಕಳೆ ಬಾರ್ತೆಯಪ್ಪೊಡೆ–ಮಕ್ಕಳೇ ಪ್ರಯೋಜನವಾದರೆ, ಇನ್ನಿಂತಿರವೇಡ– ಇನ್ನು ಹೀಗೆ ಇರಬೇಡ, ನೀಂ, ನಿಜಾತ್ಯಂತ ಪತಿವ್ರತಾಗುಣದಿಂ–ನಿನ್ನ ಅತಿಶಯವಾದ ಪಾತಿ ವ್ರತ್ಯಗುಣದಿಂದ, ದಿವ್ಯಮುನಿ ಪುಂಗವರಂ–ಅತಿ ಶ್ರೇಷ್ಠರಾದ ಋಷಿಗಳನ್ನು, ಬಗೆದೀರ್ಪಿನಂ– ಮನಸ್ಸು ತೃಪ್ತಿಯಾಗುತ್ತಿರಲು, ಅರ್ಚಿಸಿ–ಪೂಜೆಮಾಡಿ, ಮೆಚ್ಚಿಸು–ಮೆಚ್ಚುವಂತೆ ಮಾಡು, ದಿಗಂತ ವಿಶ್ರಾಂತ ಯಶರ್ಕಳಂ–ದಿಗಂತದವರೆಗೂ ಹಬ್ಬಿದ ಕೀರ್ತಿಯುಳ್ಳ ಮಕ್ಕಳನ್ನು, ತಳೋದರೀ ನೀಂ ಪಡೆ–ಕುಂತಿಯೇ ನೀನು ಹೊಂದು.

ವಚನ : ಕನ್ನಿಕೆಯಾ ಕಾಲದೊಳ್–ಕನ್ನಿಕೆಯಾಗಿದ್ದ ಕಾಲದಲ್ಲಿ; ಇಲ್ಲಿ ಷಷ್ಠಿ ದೀರ್ಘ ಬಂದಿದೆ, ಅಥವಾ ಪೂರ್ವದ ಹಳಗನ್ನಡದ ಷಷ್ಠಿವಿಭಕ್ತಿ–ಆ ಇಲ್ಲಿದೆ; ನಿಚ್ಚಕ್ಕಂ–ಪ್ರತಿ ದಿನವೂ; ಬೆಸಕೆಯ್ವುದರ್ಕಂ–ಸೇವೆ ಮಾಡುವುದಕ್ಕೂ; ದೊರಕೊಂಡುದು–ಲಭ್ಯವಾಯಿತು, ದೊರೆಯಿತು; ಅಮೋಘವಾಕ್ಯಂ–ವ್ಯರ್ಥವಲ್ಲದ ಮಾತು; ದಳಿಂಬಮನುಟ್ಟು–ದಣಿಬ ವನ್ನುಟ್ಟು, ಶುಭ್ರ ವಸ್ತ್ರಧಾರಿಯಾಗಿ; ತೊಡಿಗೆಗಳಂ–ಆಭರಣಗಳನ್ನು.

೧೧೯. ಜ್ಞಾನದಿಂ ಇರ್ದು–ಜ್ಞಾನದಿಂದಿದ್ದು, ನಿಟ್ಟಿಪೊಡೆ–ನೋಡಿದರೆ, ದಿವ್ಯ ಮುನೀಂದ್ರನ ಕೊಟ್ಟ ಮಂತ್ರಸಂತಾನಮಂ–ಆ ಶ್ರೇಷ್ಠ ಮುನೀಶ್ವರನು ಕೊಟ್ಟ ಮಂತ್ರ ಸಮೂಹವನ್ನು, ಓದಿಯೋದಿ–ಹೇಳಿಹೇಳಿ, ಪಠಿಸಿ, ಅದ್ಭುತ ತೇಜನಂ–ಅದ್ಭುತವಾದ ತೇಜಸ್ಸನ್ನುಳ್ಳ, ಯಮರಾಜನಂ, ಜಾನದಿಂ–ಧ್ಯಾನದಿಂದ, ಸರೋಜಾನನೆ–ಕುಂತಿಯು, ಬರಿಸೆ–ಬರುವಂತೆ ಮಾಡಲು, ಯಮಂಬಂದು, ಬೆಸನಾವುದು–ಏನು ಕಾರ್ಯ, ಆತ್ಮಾನು ಗತಾರ್ಥಮಾವುದು–ನಿನ್ನ ಮನದಲ್ಲಿರುವ ಅಭಿಲಾಷೆ ಯಾವುದು, ಎಂದೊಡೆ–ಎಂದು ಹೇಳಿದರೆ, ನಿನ್ನನೆ, ಪೋಲ್ವ ಪುತ್ರನಂ. ಎನಗೆ, ಈವುದು.

ವಚನ : ಎಂಬುದುಂ–ಎನ್ನುತ್ತಲು; ತಥಾಸ್ತುವೆಂದು–ಹಾಗೆಯೇ ಆಗಲಿ ಎಂದು; ತನ್ನ, ಅಂಶಮಂ–ಭಾಗವನ್ನು, ಅವತರಿಸಿ–ಇಳಿಸಿಟ್ಟು; ಅಂತರ್ಧಾನಕ್ಕೆ ಸಂದಂ–ಮಾಯವಾದನು, ಮರೆಯಾದನು; ಅನ್ನೆಗಂ ಆ ಕಾಂತೆಗೆ–ಅಷ್ಟರಲ್ಲಿ ಆ ಕುಂತಿಗೆ,

೧೨೦. ಮುಖೇಂದುವ ಬೆಳ್ಪು–ಚಂದ್ರನಂತಿರುವ ಮುಖದ ಬಿಳಿ ಬಣ್ಣ, ಹಿಮಧವಳಾತ ಪತ್ರಮನೆ–ಹಿಮದಂತೆ ಬೆಳ್ಳಗಿರುವ ಕೊಡೆಯನ್ನೆ, ಪೋಲೆ–ಹೋಲಲು; ಕುಚಂಗಳ ತೋರ್ಪು–ಕುಚಗಳ ಗಾತ್ರವು, ಪೂರ್ಣ ಕುಂಭಮನೆ–ಪೂರ್ಣಕುಂಭವನ್ನೆ, ನಿರಂತರಂ ಗೆಲೆ– ನಿರವಕಾಶದಿಂದ ಗೆಲ್ಲಲು; ಪುರ್ವಿನ ಪೊಡರ್ಪು–ಹುಬ್ಬಿನ ಅಲುಗಾಟವು, ಪತಾಕೆಯ– ಬಾವುಟದ, ಒಂದು ವಿಭ್ರಮಮನೆ–ಒಂದು ವಿಲಾಸವನ್ನೆ, ಪೋಲೆ–ಹೋಲಲು, ಗರ್ಭ ಚಿಹ್ನಮೆ–ಗರ್ಭದ ಲಕ್ಷಣಗಳೇ, ಗರ್ಭದ–ಬಸಿಱಿನ, ಅರ್ಭಕನ–ಮಗುವಿನ, ಮುಂದಣ ರಾಜ್ಯ ಚಿಹ್ನಮಂ–ಮುಂದಾಗುವ ರಾಜ್ಯಲಕ್ಷಣಗಳನ್ನು, ಅವಳ್ಗೆ–ಅವಳಿಗೆ, ಒಳಕೊಂಡುದು– ಒಳಕೊಂಡಿದ್ದಾದುದು. ಧವಳಾತಪತ್ರ, ಪೂರ್ಣ ಕುಂಭ, ಪತಾಕೆ–ಇವು ರಾಜ್ಯಚಿಹ್ನೆಗಳು; ಇವು ಗರ್ಭವತಿಯ ಚಿಹ್ನೆಗಳೂ ಆಗಿದ್ದುವು ಎಂದು ಪದ್ಯ ಹೇಳುತ್ತದೆ. ತೋರ್ಪು=ತೋರ+ಪು; ತೋರ ಥೋರ (ಪ್ರಾ) < ಸ್ಥೂಲ (ಸಂ); ಪೊಡರ್ಪು=ಪೊಡರ್ ಸ್ಫುರಣೇ+ ಪು.

ವಚನ : ಗರ್ಭಭಾರಮುಂ–ಗರ್ಭದ ತೂಕವೂ, ಅನುರಾಗಮುಂ–ಸಂತೋಷವೂ; ಮನೋರಥಂಗಳುಂ–ಅಭಿಲಾಷೆಗಳೂ; ನೆಱೆಯೆ–ತುಂಬಲು.

೧೨೧. ವನನಿಧಿಯಿಂ–ಸಮುದ್ರದಿಂದ, ಚಂದ್ರಂ–ಚಂದ್ರನು, ವಿನತೋದರ ದಿಂ–ವಿನತೆಯ ಗರ್ಭದಿಂದ, ಗರುತ್ಮಂ–ಗರುಡನು, ಉದಯಾಚಳದಿಂ–ಉದಯ ಪರ್ವತ ದಿಂದ, ದಿನಪಂ–ಸೂರ್ಯನು, ಒಗೆವಂತೆ–ಹುಟ್ಟುವ ಹಾಗೆ, ಅನಿವಾರ್ಯ ಸುತೇಜನೆನಿಪಂ– ತಡೆಯಲಸಾಧ್ಯವಾದ ತೇಜಸ್ಸುಳ್ಳವನು ಎನ್ನಿಸಿಕೊಂಡ, ಇನಜನ–ಯಮನ, ತನಯಂ– ಮಗ, ಪುಟ್ಟಿದಂ–ಹುಟ್ಟಿದನು. ವಿನತೆ–ದಕ್ಷನ ಹೆಣ್ಣುಮಕ್ಕಳಲ್ಲಿ ಒಬ್ಬಳು; ಕಶ್ಯಪನ ಹೆಂಡತಿ; ಅರುಣ, ಗರುಡ ಎಂಬ ಮಕ್ಕಳನ್ನು ಪಡೆದಳು. ಇನಜ–ಸೂರ್ಯನ ಮಗ, ಯಮ.

೧೨೨. ಪುಟ್ಟುವುದುಂ–ಆ ಮಗನು ಹುಟ್ಟುತ್ತಲೂ, ಈತನೊಳೆ–ಇವನಲ್ಲೇ, ಧರ್ಮ ಮುಂ–ಧರ್ಮವೂ, ಒಡವುಟ್ಟಿದುದು-ಜೊತೆಯಲ್ಲಿಯೇ ಹುಟ್ಟಿತು; ಧರ್ಮನಂಶದೊಳ್– ಯಮನ ಅಂಶದಲ್ಲಿ, ಈತಂ–ಇವನು, ಪುಟ್ಟಿದನೆಂದು–ಹುಟ್ಟಿದನು ಎಂದು, ಆ ಶಿಶುಗೆ– ಮಗುವಿಗೆ, ಮುನಿಸಮಿತಿ–ಋಷಿಗಳ ಸಮಾಜ, ಪೆಸರಂ–ಹೆಸರನ್ನು, ಧರ್ಮಸುತನೆನೆ– ಧರ್ಮಸುತನೆಂದೇ, ಇಟ್ಟುದು–ಇಟ್ಟಿತು.

ವಚನ : ಪರಕೆಯಂಕೊಟ್ಟು–ಆಶೀರ್ವಾದ ಮಾಡಿ.

೧೨೩. ಸಂತಸದಿನಿರ್ದು–ಸಂತೋಷದಿಂದಿದ್ದು, ಈ ದೊರೆಯರ್–ಇವರಿಗೆ ಸಮಾನ ರಾದವರು, ಇಂಥವರು, ಇನ್ನು ಆಗದೊಡೆ–ಇನ್ನೂ ಹುಟ್ಟದೆ ಇದ್ದರೆ, ಎಂತುಂ–ಹೇಗೂ, ಸಂತಸಮೆನಗಿಲ್ಲೆಂದು–ಸಂತೋಷವು ನನಗಿಲ್ಲವೆಂದು, ಸುತಭ್ರಾಂತೆ–ಮಕ್ಕಳ ಭ್ರಮೆ ಯುಳ್ಳ, ಆ ಕಾಂತೆ–ಆ ಕುಂತಿಯು, ಮುನ್ನಿನಂತೆ ವೋಲ್ ಇರ್ದಳ್–ಮೊದಲಿನ ಹಾಗೆಯೇ ಇದ್ದಳು. ಎಂದರೆ ಇನ್ನೂ ಮಕ್ಕಳಾಗಬೇಕೆಂಬ ಬಯಕೆಯಲ್ಲಿದ್ದಳು.

೧೨೪. ಮಂತ್ರಾಕ್ಷರನಿಯಮದಿಂ–ಮಂತ್ರಾಕ್ಷರ ಜಪದ ವ್ರತದಿಂದ, ಅಭಿಮಂತ್ರಿಸಿ –ಆಹ್ವಾನ ಮಾಡಿ, ಬರಿಸಿದೊಡೆ–ಬರಮಾಡಿಕೊಂಡರೆ, ವಾಯುದೇವಂ–ವಾಯು ದೇವತೆಯು, ಬಂದು, ಏಂ ಮಂತ್ರಂ ಪೇೞೆನೆ–ಏನು ಆಲೋಚನೆ, ಹೇಳು, ಎನ್ನಲು; ರಿಪುತಂತ್ರ ಕ್ಷಯಕರ ನೆನಿಪ–ವೈರಿ ಸೈನ್ಯವನ್ನು ನಾಶಮಾಡುವವನು ಎನ್ನಿಸಿಕೊಳ್ಳುವ, ಹಿತನಂ–ಹಿತನಾದ, ಸುತನಂ– ಮಗನನ್ನು, ಕುಡು–ಕೊಡು.

ವಚನ : ಅದೇವಿರಿದು–ಅದೇನು ದೊಡ್ಡದು; ವಿಯತ್ತಳಕ್ಕೊಗೆದೊಡೆ–ಆಕಾಶಕ್ಕೆ ನೆಗೆದರೆ; ಗರ್ಭಸರೋವರದೊಳಗೆ–ಗರ್ಭವೆಂಬ ಸರೋವರದಲ್ಲಿ.

೧೨೫. ತ್ರಿವಳಿಗಳುಂ–ಹೊಟ್ಟೆಯ ಮೇಲಣ ಮೂರು ಮಡಿಕೆಗಳೂ, ವಿರೋಧಿ ನೃಪರುತ್ಸವಮುಂ–ವಿರೋಧಿ ರಾಜರ ವೈಭವವೂ, ಕಿಡೆವಂದುವು–ಕೆಡಲು ಬಂದುವು, ನಾಶ ವಾದುವು; ಆನನೇಂದುವ–ಕುಂತಿಯ ಮುಖಚಂದ್ರನ, ಕಡುವೆಳ್ಪು–ಅತಿಯಾದ ಬಿಳುಪು, ಕೂಸಿನ–ಗರ್ಭಸ್ಥವಾದ ಮಗುವಿನ, ನೆಗೞ್ತೆಯ–ಕೀರ್ತಿಯ, ಬೆಳ್ಪುವೋಲ್–ಬಿಳಿಯ ಬಣ್ಣ ದಂತೆ, ಆಯ್ತು–ಆಯಿತು; ಮುನ್ನೆ ಬಳ್ಕುವ ನಡು–ಮೊದಲೇ ತೆಳ್ಳಗಿದ್ದು ಬಳುಕುತ್ತಿದ್ದ ನಡುವು, ತೋರ್ಪ–ಸ್ಥೂಲವಾದ, ಮೆಯ್ಯಂ–ಮೈಯನ್ನು, ಒಳಕೊಂಡುದು–ಪಡೆಯಿತು; ಆಕೆಯಾ–ಅವಳ, ಚೂಚುಕಂ–ಮೊಲೆಯ ತೊಟ್ಟು, ಪೊಂಗೊಡನಂ–ಚಿನ್ನದ ಕಲಶವನ್ನು, ತಮಾಲಪಲ್ಲವದೊಳೆ–ಹೊಂಗೆಯ ಚಿಗುರಿನಲ್ಲಿಯೇ, ಮುಚ್ಚಿದಂದದೊಳೆ–ಮುಚ್ಚಿ ದಂತೆಯೆ, ಕರ್ಪಂ–ಕಪ್ಪು ಬಣ್ಣವನ್ನು, ಆಂತುದು–ತಾಳಿತು. ಕುಂತಿಯ ಗರ್ಭ ಚಿಹ್ನೆಗಳ ವರ್ಣನೆ ಈ ಪದ್ಯ. ಇಲ್ಲಿರುವ “ಪೊಂಗೊಡನಂ ತಮಾಲಪಲ್ಲವದೊಳೆ ಮುಚ್ಚಿದಂದ ದೊಳೆ ಚೂಚುಕಮಾಂತುದು ಕರ್ಪನಾಕೆಯಾ” ಎಂಬ ಮಾತು “ತಮಾಲ ಪಲ್ಲವ ಲಾಂಛಿತ ಮುಖ ಯೋರಿವ ಕನಕ ಕಲಶಯೋಃ ಸಕೃದಿವಾಲಿಖಿತ ಕೃಷ್ಣಾಗರು ಪಂಕ ಪತ್ರಲತಯೋಃ ಶ್ಯಾಮಾಯಮಾನಚೂಚುಕಯೋಃ” ಎಂಬ ಬಾಣಭಟ್ಟನ ವರ್ಣನೆಯನ್ನು ನೆನಪಿಗೆ ತರುತ್ತದೆ.

೧೨೬. ಆ ಸುದತಿಯ–ಆ ಚೆಲುವಾದ ದಂತ ಪಂಕ್ತಿಯನ್ನುಳ್ಳ ಕುಂತಿಯ, ಮೃದುಪದ ವಿನ್ಯಾಸಮುಮಂ–ಮೃದುವಾಗಿ ಹೆಜ್ಜೆಯಿಡುವುದನ್ನು ಕೂಡ, ಶೇಷಂ ಆನಲಾಱದೆ–ಆದಿ ಶೇಷನು ತಾಳಿಕೊಳ್ಳಲಾರದೆ, ಬೇಸಱಿಂ–ಬೇಜಾರಿನಿಂದ, ಸುಯ್ದಂ–ನಿಟ್ಟುಸಿರಿಟ್ಟನು, ಎಂದೊಡೆ–ಎಂದರೆ, ಗರ್ಭದ ಕೂಸಿನ–ಗರ್ಭದಲ್ಲಿರುವ ಮಗುವು, ಬಳೆದ, ಅಳವಿಯ ಅಳವಂ–ಬೆಳೆದ ಅಳತೆಯ ಪ್ರಮಾಣವನ್ನು, ಅಳೆವರುಂ–ಅಳೆಯುವವರೂ, ಒಳರೇ– ಇದ್ದಾರೆಯೆ? ಇಲ್ಲ.

ವಚನ : ಅರಾತಿಗಳ್ಗೆ–ಶತ್ರುಗಳಿಗೆ, ಅಂತಕಾಲಂ–ಕೊನೆಗಾಲವು, ದೊರೆಕೊಳ್ವಂತೆ– ಉಂಟಾಗುವ ಹಾಗೆ, ಪ್ರಸೂತಿಕಾಲಂ–ಹೆರಿಗೆಯ ಸಮಯವು.

೧೨೭. ಗಣಕಂ–ಲೆಕ್ಕಿಗನು, ಜೋಯಿಸನು, ಶುಭತಿಥಿ, ಶುಭನಕ್ಷತ್ರ, ಶುಭವಾರ, ಶುಭಮುಹೂರ್ತ ಎಂದು, ಎನೆ–ಹೇಳಲು, ಇಳಾಪ್ರಭು–ಲೋಕಕ್ಕೆ ರಾಜನಾದ, ದಳಿತ ಶತ್ರು ಗೋತ್ರಂ ಪುತ್ರಂ–ಸೀಳಲ್ಪಟ್ಟ ಶತ್ರುಕುಲವನ್ನುಳ್ಳ ಮಗನು, ಉದಿತ ಕಾಯಪ್ರಭೆಯೊಗೆ ದಿರೆ–ಹುಟ್ಟಿದ ದೇಹಕಾಂತಿಯು ಹರಡಿರಲು, ಒಗೆದಂ–ಹುಟ್ಟಿದನು.

೧೨೮. ಈ ಕೂಸಿನಂದಂ–ಈ ಮಗುವಿನ ರೀತಿ, ಭೀಮಂ ಭಯಂಕರಂ–ಭಯಂಕರ, ಭಯಂಕರ; ಪೆಱತೇ ಮಾತು–ಬೇರೆ ಮಾತೇನು, ಮುನಿಜನಂ–ಋಷಿಗಳು, ಈತನ ಪೆಸರುಂ– ಇವನ ಹೆಸರು ಕೂಡ, ಭೀಮನೆ ಪೋಗೆನೆ–ಭೀಮನೇ ಹೋಗು ಎನ್ನಲು, ಈ ಮಾೞ್ಕೆಯಿಂ– ಈ ರೀತಿಯಿಂದ, ಶಿಶುಗೆ–ಮಗುವಿಗೆ, ಅನ್ವರ್ಥಂ ಪೆಸರ್–ಅರ್ಥಾನುಸಾರಿಯಾದ ಹೆಸರು, ಆಯ್ತು–ಆಯಿತು.

ವಚನ : ಸಂತಸದಂತಮನೆಯ್ದಿ–ಸಂತೋಷದ ತುತ್ತ ತುದಿಯನ್ನು ಹೊಂದಿ; ತಡೆದುದರ್ಕ್ಕೆ–ತಡವಾದುದಕ್ಕೆ, ಕಿನಿಸಿ–ಕೋಪಗೊಂಡು, ಕಿರಿಕಿರಿವೋಗಿ–ಕಿರಿಕಿರಿಯಾಗಿ,

೧೨೯. ಸಂತತಿಗೆ–ವಂಶಕ್ಕೆ, ಪಿರಿಯ ಮಕ್ಕಳಂ–ಹಿರಿಯರಾದ ಮಕ್ಕಳನ್ನು, ಜ್ಯೇಷ್ಠಪುತ್ರ ರನ್ನು, ಆಂ–ನಾನು, ತಡೆಯದೆ–ತಡಮಾಡದೆ, ಬೇಗನೆ, ಪಡೆವೆನೆಂದೊಡೆ– ಪಡೆಯುತ್ತೇ ನೆಂದರೆ, ಎನ್ನಿಂ ಮುನ್ನಂ–ನನಗಿಂತ ಮುಂಚಿತವಾಗಿ, ಕುಂತಿಯೆ ಪಡೆದಳ್–ಕುಂತಿಯೇ ಹಡೆದಳು, ಗರ್ಭದ ಚಿಂತೆಯದು ಇನ್ನೇವುದು–ಇನ್ನಾವುದು ಈ ಗರ್ಭದ ಚಿಂತೆ, ಎಂದು, ಬಸಿಱಂ–ಹೊಟ್ಟೆಯನ್ನು, ಪೊಸೆದಳ್–ಹೊಸೆದು ಕಿವುಚಿದಳು, ಇಲ್ಲಿ ಗಾಂಧಾರಿಯ ಹುರುಡಿನ ಭಾವ ಪ್ರಕಟವಾಗಿದೆ; ಅವಳಿಗಾಗುವ ಮಕ್ಕಳೂ ಅಂಥವರೇ ಎಂಬ ಸೂಚನೆ ಬರುತ್ತದೆ.

೧೩೦. ಪೊಸದೊಡೆ–ಹೊಸೆದರೆ, ಪಾಲ್ಗಡಲಂ–ಹಾಲಿನ ಕಡಲನ್ನು, ಕ್ಷೀರ ಸಮುದ್ರ ವನ್ನು, ಮಗೞ್ದು–ನಲಿದು, ಸಂತೋಷಿಸಿ, ಅಸುರರ್–ರಾಕ್ಷಸರು, ಪೊಸೆದಲ್ಲಿ–ಕಡೆದ ಸಮಯದಲ್ಲಿ, ಕಾಳಕೂಟಾಂಕುರಂ–ಕಾಳಕೂಟವೆಂಬ ವಿಷದ ಮೊಳಕೆ, ಅಂದು–ಆಗ, ಅಸ ದಳಂ–ಅತಿಶಯವಾಗಿ, ಒಗೆವಂತೆ–ಹುಟ್ಟುವ ಹಾಗೆ, ಬಸಿಱಿಂ–ಗರ್ಭದಿಂದ, ನೂಱೊಂದು ಪಿಂಡಂ–ನೂರ ಒಂದು ಭ್ರೂಣಗಳು, ಅರುಣಾಕೀರ್ಣಂ–ರಕ್ತದಿಂದ ತುಂಬಿದುವು, ಒಗೆದುವು– ಹುಟ್ಟಿದುವು. ಈ ಹುಟ್ಟಿದ ನೂರೊಂದು ಪಿಂಡಗಳು ಕಾಳ ಕೂಟದ ಅಂಕುರಗಳು ಎಂದಿರು ವುದು ಧ್ವನಿಪೂರ್ಣ.

ವಚನ : ಕಿನಿಸಿ ಕಿರ್ಚ್ಚೆೞ್ದು–ಕೋಪಗೊಂಡು ಬೆಂಕಿಯಾಗಿ, ಪೊಱಗೆ–ಹೊರಗೆ, ಬಗ್ಗಿಸಿ– ಗದರಿಸಿ,

೧೩೧. ನಿನ್ನ ಸಂತತಿಗೆ–ನಿನ್ನ ಕುಲಕ್ಕೆ, ಒಂದೆ ಗರ್ಭದೊಳೆ–ಒಂದೇ ಬಸಿರಿನಲ್ಲಿ, ನೂರ್ವರ್–ನೂರು ಜನ, ಉದಗ್ರ–ಶ್ರೇಷ್ಠರಾದ, ಸುತರ್ಕಳ್–ಗಂಡುಮಕ್ಕಳು, ಒದವುಗೆ– ಉಂಟಾಗಲಿ, ಎನೆ–ಎನ್ನಲು, ಕೆಮ್ಮನೆ–ವ್ಯರ್ಥವಾಗಿ, ಇಂತು, ಪೊಸೆದಿಕ್ಕಿದೆ–ಹೊಸೆದು ಹಾಳು ಮಾಡಿದೆ, ಪೊಲ್ಲದುಗೆಯ್ದೆ–ಕೇಡನ್ನು ಮಾಡಿದೆ, ಎಂದು, ಮಾಣದೆ–ಬಿಡದೆ, ಮುನಿ– ಋಷಿ, ನೂಱು ಪಿಂಡಮುಮಂ–ನೂರು ಭ್ರೂಣಗಳನ್ನೂ, ಆಗಳೆ–ಆಗಲೇ, ತೀವಿದ– ತುಂಬಿದ, ಕಮ್ಮನಪ್ಪ–ಮಗಮಗಿಸುವ, ತುಪ್ಪದ ಕೊಡದೊಳ್–ತುಪ್ಪದ ಕೊಡದಲ್ಲಿ, ಮಡಗಿಟ್ಟೊಡೆ–ಸುರಕ್ಷಿತವಾಗಿ ಇಟ್ಟರೆ, ಸೃಷ್ಟಿಗೆ ಚೋದ್ಯಮಪ್ಪಿನಂ–ಸಮಸ್ತ ಲೋಕಕ್ಕೂ ಆಶ್ಚರ್ಯವುಂಟಾಗುತ್ತಿರಲು.

ವಚನ : ಅಂತು, ನೂರ್ವರೊಳ್–ನೂರು ಜನರಲ್ಲಿ, ಒರ್ವ–ಒಬ್ಬ, ಅಗುರ್ಬು– ಭಯವು, ಪರ್ಬಿ–ಹಬ್ಬಿ, ಪರಕಲಿಸೆ–ಹರಡಲು, ಸಂಪೂರ್ಣ ವಯಸ್ಕನಾಗಿ–ತುಂಬಿದ ಪ್ರಾಯವುಳ್ಳವನಾಗಿ, ಘೃತಘಟವಿಘಟನುಮಾಗಿ–ತುಪ್ಪದ ಕೊಡವನ್ನು ಭೇದಿಸಿದವನಾಗಿ, ಪುಟ್ಟುವುದುಂ–ಹುಟ್ಟುತ್ತಲು.

೧೩೨. ಈ ಪದ್ಯದಲ್ಲಿ ದುರ್ಯೋಧನನ ಜನನ ಸಮಯದಲ್ಲಿ ಆದ ಅಪಶಕುನಗಳ ವರ್ಣನೆ ಇದೆ. ಪ್ರತಿಮೆಗಳ್–ಅರಮನೆಯಲ್ಲಿ ಸ್ಥಾಪಿಸಿದ ವಿಗ್ರಹಗಳು, ಅೞ್ತುವು–ಅತ್ತುವು, ಧಾತ್ರಿ–ಭೂಮಿ, ಅತಿರಭಸದೆ–ಬಹು ತೀವ್ರವಾಗಿ, ಮೊೞಗಿದುದು–ಗುಡುಗಿತು, ದೆಸೆಗಳ್– ದಿಕ್ಕುಗಳು, ಉರಿದುವು–ಉರಿಹತ್ತಿಕೊಂಡುವು, ಭೂತ ಪ್ರತತಿಗಳ್–ಪಿಶಾಚಿಗಳ ಸಮೂಹ, ಆಡಿದುವು–ಕುಣಿದುವು, ಅತಿ ರಮ್ಯಸ್ಥಾನದೊಳ್–ಅತಿ ರಮಣೀಯವಾದ ಎಡೆಗಳಲ್ಲಿ, ಶಿವಾನಿವಹಂಗಳ್–ನರಿಗಳ ಸಮೂಹ, ಒಳಱಿದುವು–ಕೂಗಿಕೊಂಡುವು.

ವಚನ : ಅಂತೊಗೆದ–ಹಾಗೆ ಉತ್ಪನ್ನವಾದ, ಅನೇಕೋತ್ಪಾತಂಗಳಂ–ಅನೇಕ ದುರ್ನಿ ಮಿತ್ತಗಳನ್ನು, ಮುಂದಱಿವ–ಮುಂದಾಗುವುದನ್ನು ತಿಳಿವ, ಭವಿಷ್ಯಜ್ಞಾನಿಯಾದ, ಚದುರ ವಿದುರಂ–ನಿಪುಣನಾದ ವಿದುರನು.

೧೩೩. ಈತನೆ–ಇವನೇ, ನಮ್ಮ ಕುಲಕ್ಕಂ ಕೇತು–ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ, ದಲ್–ನಿಜವಾಗಿಯೂ; ಆನಱಿವೆನ್–ನಾನು ಬಲ್ಲೆನು, ಅಲ್ಲದಂದು–ಅಲ್ಲ ದಾಗ, ಇನಿತು ಉತ್ಪಾತಂ–ಇಷ್ಟು ದುರ್ನಿಮಿತ್ತಗಳು, ಏಕೆ ತೋರ್ಪುವು–ಏಕೆ ತೋರುವುವು, ಬಿಸುಡುವುದು–ಇವನನ್ನು ಆಚೆಗೆ ಎಸೆಯುವುದು, ಈತನ ಪೆಱಗುೞಿದ ಸುತರೆ–ಇವನ ಅನಂತರ ಉಳಿದುಕೊಂಡ ಮಕ್ಕಳೆ, ಸಂತತಿಗೆ ಅಪ್ಪರ್–ಕುಲಕ್ಕೆ ಆಗುವರು, ಎಂದರೆ ವಂಶ ವಿಸ್ತಾರಕರಾಗುವರು.

ವಚನ : ಎಂದೊಡಂ–ಎಂದು ಹೇಳಿದರೂ; ಏಗೆಯ್ದುಂ–ಏನು ಮಾಡಿಯೂ; ಒಡಂಬಡ ದಿರ್ದೊಡೆ–ಒಪ್ಪದಿದ್ದರೆ; ಉತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ–ಉತ್ಪಾತ ಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಮಾಡುವ ಕರ್ಮಗಳನ್ನು; ಬದ್ದವಣಮಂ ಬಾಜಿಸಿ–ಮಂಗಳ ವಾದ್ಯಗಳನ್ನು ಮೊಳಗಿಸಿ; ಪರಕೆಯಂ–ಆಶೀರ್ವಾದವನ್ನು; ಬದ್ದವಣ ವರ್ಧಮಾನ (ಸಂ).

೧೩೪. ಇತ್ತ ಕಡೆ ಅರ್ಜುನನನ್ನು ಪಡೆದ ವೃತ್ತಾಂತದ ವರ್ಣನೆ ಆರಂಭವಾಗುತ್ತದೆ. ಅರ್ಜುನ (=ಅರಿಕೇಸರಿ) ಕಥಾನಾಯಕನಾಗಿರುವುದರಿಂದ ಅವನ ಜನ್ಮಕ್ಕೆ ಪ್ರಧಾನತೆ ಸಂದಿದೆ. ಸುಕಮಿರ್ಪನ್ನೆಗಂ–ಧೃತರಾಷ್ಟ್ರಾದಿಗಳು ಸುಖವಾಗಿ ಇರುತ್ತಿರಲು, ಇತ್ತ–ಈ ಕಡೆ ಶತಶೃಂಗ ಪರ್ವತದಲ್ಲಿ, ಇನ್ನೊರ್ವನಂ–ಇನ್ನೊಬ್ಬನನ್ನು, ದಿವ್ಯಬಾಲಕನಂ–ಶ್ರೇಷ್ಠನಾದ ಹುಡುಗನನ್ನು, ಉಗ್ರ….ಬಾಣನಂ; ಉಗ್ರ–ಭಯಂಕರವಾದ, ವೈರಿ ಮದವನ್ಮಾತಂಗ– ಶತ್ರುಗಳೆಂಬ ಸೊಕ್ಕಾನೆಗಳ, ಕುಂಭ–ಕುಂಭಸ್ಥಳದ, ಆರ್ದ್ರ–ರಕ್ತದಿಂದ ಒದ್ದೆಯಾದ, ಮೌಕ್ತಿಕ–ಮುತ್ತುಗಳು, ಲಗ್ನ–ಅಂಟಿಕೊಂಡಿರುವ, ಉಜ್ವಲ–ಪ್ರಕಾಶಮಾನವಾದ, ಬಾಣನಂ–ಬಾಣವನ್ನುಳ್ಳವನನ್ನು, ಪ್ರವಿಲ……ವೀಣನಂ: ಪ್ರವಿಲಸತ್–ಪ್ರಕಾಶಮಾನರಾದ, ಗೀರ್ವಾಣ–ದೇವತೆಗಳಿಂದ, ದಾತವ್ಯ–ಕೊಡಲ್ಪಡುವ, ಸಾಯಕ–ಬಾಣಗಳ, ಸಂಪೂರ್ಣ– ಪೂರ್ಣವಾದ, ಕಳಾ–ವಿದ್ಯೆಯಲ್ಲಿ, ಪ್ರವೀಣನಂ–ನಿಸ್ಸೀಮನಾದವನನ್ನು, ಇಳಾ….ಣನಂ; ಇಳಾಭಾರಾ–ಭೂಭಾರವನ್ನು ಎಂದರೆ ರಾಜ್ಯಭಾರವನ್ನು ಹೊರಲು, ಕ್ಷಮ–ಸಾಮರ್ಥ್ಯದ, ಅಕ್ಷೂಣನಂ–ಕೊರತೆಯಿಲ್ಲದವನನ್ನು, ಎಂದರೆ ಶಕ್ತಿಯ ಆಧಿಕ್ಯವುಳ್ಳವನನ್ನು.

ವಚನ : ಅಮೋಘಂ–ವ್ಯರ್ಥವಿಲ್ಲದೆ; ಉದ್ಯೋಗಮಂ–ಕಾರ್ಯವನ್ನು; ಎತ್ತಿ ಕೊಂಡು–ಆರಂಭಿಸಿ.

೧೩೫. ಒರ್ಮೆ–ಒಂದು ಸಲ, ದಿವ್ಯಮುನಿಗೆ–ಶ್ರೇಷ್ಠ ಋಷಿಗಳಿಗೆ, ಎಱಗಿಯುಂ– ನಮಸ್ಕರಿಸಿಯೂ, ಒರ್ಮೆ–ಒಮ್ಮೆ, ಆರ್ತುಂ–ಸಮರ್ಥರಾಗಿ, ಉಪವಾಸಮನಿರ್ದುಂ – ಉಪವಾಸ ಮಾಡಿಯೂ, ಒರ್ಮೆ–ಒಂದು ಬಾರಿ, ಅಱಿಕೆಯ ಪೂಗಳಂ–ಹೆಸರಾಂತ, ಉತ್ತಮ ವಾದ ಹೂಗಳನ್ನು, ಕೊಯ್ದು–ಬಿಡಿಸಿ, ಶಿವನನರ್ಚಿಸಿಯುಂ–ಶಿವನನ್ನು ಪೂಜಿಸಿಯೂ, ಓದಱಿವರ–ಶಾಸ್ತ್ರವನ್ನು ಬಲ್ಲವರು, ಪೇೞ್ದ–ಹೇಳಿದ, ನೋಂಪಿಗಳಂ–ವ್ರತಗಳನ್ನು, ಬಿಡದೆ ನೋಂತು–ನಡುವೆ ಬಿಡದೆ ವ್ರತವನ್ನು ಮಾಡಿಯೂ, ಒರ್ಮೆ ಪಲರ್ಮೆಯುಂ– ಒಂದು ಸಲ ಹಲವು ಸಲವೂ, ಇಂತು–ಹೀಗೆ, ತಮ್ಮ ಮೆಯ್ಮಱೆವಿನಂ–ತಮ್ಮ ಮೈ ಮರೆಯುವ ಹಾಗೆ, ಇರ್ವರುಂ–ಇಬ್ಬರೂ, ನಮೆದರ್–ನಮೆದುಹೋದರು; ಏನ್ ಅವರ್ಗೆ ಆದುದೊ ಪುತ್ರ ದೋಹಳಂ–ಏನು ಅವರಿಗೆ ಆಯಿತೋ ಮಕ್ಕಳ ಬಯಕೆ !

೧೩೬. ಅಲಸದೆ–ಆಯಾಸಗೊಳ್ಳದೆ, ಮಾಡಿ–ಆಚರಿಸಿ, ಬೇಸಱದೆ–ಬೇಜಾರು ಪಡದೆ, ಸಾಲ್ಗುಮೆನ್ನದೆ–ಇದು ಸಾಕು ಎಂದು ಹೇಳದೆ, ಮೆಯ್ಸೊಗಕ್ಕೆ ಪಂಬಲಿಸದೆ–ದೇಹದ ಸುಖಕ್ಕಾಗಿ ಬಾಯ್ಬಿಡದೆ, ನಿದ್ದೆಗೆಟ್ಟು–ನಿದ್ದೆ ಕೆಟ್ಟು, ನಿಡುಜಾಗರದೊಳ್–ದೀರ್ಘ ಜಾಗರಣೆ ಯಲ್ಲಿ, ತೊಡರ್ದು–ಸೇರಿಕೊಂಡು, ಏಕಪಾದದೊಳ್ ಬಲಿದು–ಒಂದೇ ಕಾಲ ಮೇಲೆ ನಿಂತುಕೊಂಡು, ಉಪವಾಸದೊಳ್ ನಮೆದು–ಉಪವಾಸದಲ್ಲಿ ನವೆದುಹೋಗಿ, ನೋಂಪಿ ಗಳೊಳ್–ವ್ರತಗಳಲ್ಲಿ, ನಿಯಮಕ್ರಮಂಗಳಂ–ನಿಯಮಗಳನ್ನೂ ಕ್ರಮಗಳನ್ನೂ, ಸಲಿಸಿ ದರ್–ಸಲ್ಲಿಸಿದರು, ಎಂದರೆ ತಪ್ಪದೆ ಪಾಲಿಸಿದರು; ಇಂತು–ಹೀಗೆ, ನೋನದೆ–ವ್ರತ ಮಾಡದೆ, ಗುಣಾರ್ಣವನಂ–ಗುಣಸಮುದ್ರನಾದ ಅರ್ಜುನನನ್ನು (=ಅರಿಕೇಸರಿಯನ್ನು), ಪಡೆಯಲ್ಕೆ– ಪಡೆಯುವುದಕ್ಕೆ, ತೀರ್ಗುಮೇ–ಶಕ್ಯವಾಗುತ್ತದೆಯೇ? ಇಲ್ಲ.

ವಚನ : ಅಗಣ್ಯ ಪುಣ್ಯ ತೀರ್ಥಂಗಳಂ ಮಿಂದು–ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿ. ದಳಿಂಬಮನುಟ್ಟು–ಮಡಿವಸ್ತ್ರವನ್ನುಟ್ಟುಕೊಂಡು, ದರ್ಭಶಯನದೊಳಿರ್ದು –ದರ್ಭೆಯ ಹಾಸಿನ ಮೇಲೆ ಇದ್ದು.

೧೩೭. ಕುಂತಿ ಶ್ವೇತವಸನಧಾರಿಣಿಯಾದ ವರ್ಣನೆ; ಸುಲಿಪಲ್–ಉಜ್ಜಿದ ಹಲ್ಲು, ಮಿಂಚಿನಗೊಂಚಲ್–ಮಿಂಚಿನ ಗೊಂಚಲು; ಉಟ್ಟದುಗುಲಂ–ಉಟ್ಟ ರೇಷ್ಮೆಯ ವಸ್ತ್ರ, ಗಂಗಾನದೀ ಫೇನಂ–ಗಂಗಾನದಿಯ ಬೆಳ್ನೊರೆ; ತರತ್ತರಳ ತಾರೋದಾರ ಭಾ ಭಾರಂ–ಅಲು ಗಾಡುತ್ತಿರುವ ಮುತ್ತಿನ ಹಾರದ ವಿಶಾಲವಾದ ಕಾಂತಿಯ ಪ್ರಸರವು; ಅಂಗಲತಾಲಾಲಿತ ಸಾಂದ್ರ ಚಂದನರಸಂ–ಲತೆಯಂತಿರುವ ಅಂಗಗಳಲ್ಲಿ ಬಳಿದ ಮಂದವಾದ ಶ್ರೀಗಂಧದ ರಸ, ಇವೆಲ್ಲ, ಬೆಳ್ದಿಂಗಳೆಂಬ–ಬೆಳುದಿಂಗಳು ಎನ್ನುವ, ಪಂಬಲ ಬಂಬಲ್ಗೆಡೆಯಾಗೆ–ಹಂಬಲಿಕೆಯ ಮಾತುಗಳ ಸಮುದಾಯಕ್ಕೆ ಅವಕಾಶವಾಗಲು, ಆ ಕಾಂತೆಯಾ–ಆ ಕುಂತಿಯ, ಬೆಳ್ವಸದನಂ– ಬಿಳಿ ಬಣ್ಣದ ಅಲಂಕಾರವು, ಕಣ್ಗೊಪ್ಪಿತು–ಕಣ್ಣಿಗೆ ಸೊಗಸಾಯಿತು.

ವಚನ : ಕೀರ್ತಿ ಶ್ರೀಯಂ ವಾಕ್ ಶ್ರೀಯುಮಂ–ಕೀರ್ತಿ ಎಂಬ ಲಕ್ಷ್ಮಿಯನ್ನೂ ವಾಕ್ಕಿನ ಲಕ್ಷ್ಮಿಯನ್ನೂ, ಅನುಕರಿಸಿ–ಅನುಕರಣ ಮಾಡಿ, ಹೋಲಿ; ಕೀರ್ತಿಯು ಬೆಳ್ಳಗಿರುತ್ತದೆ; ಸರಸ್ವತಿಯೂ ಬಿಳುಪೇ. “ಸರ್ವಶುಕ್ಲಾಸರಸ್ವತೀ.”

೧೩೮. ಕುಂತಿ ಇಂದ್ರನನ್ನು ಆಹ್ವಾನಿಸಿದ್ದು: ನೆನೆದ ಮನಂ ಪೆಱಗುೞಿದತ್ತೆನೆ– ಇಂದ್ರ ನನ್ನು ಧ್ಯಾನಿಸಿದ ಮನಸ್ಸು ಹಿಂದುಳಿಯಿತು ಎನ್ನಲು, ಎಂದರೆ ಕುಂತಿಯ ಧ್ಯಾನ ಮುಗಿ ಯುವುದಕ್ಕಿಂತ ಮುಂಚಿತವಾಗಿಯೇ, ಮನೋವೇಗವನ್ನು ಮೀರಿ, ಬೆಳಗುವ–ಹೊಳೆಯುವ, ರತ್ನ ದೀಪ್ತಿ–ರತ್ನಗಳ ಪ್ರಕಾಶ, ಸುರಧನು–ಇಂದ್ರನಬಿಲ್ಲು, ಕಾಮನಬಿಲ್ಲು, ನೆಗೆದತ್ತು ಎನೆ–ನೆಗೆಯಿತು ಎನ್ನಲು, ಕಣ್ಗಳ ಬಳಗಂ–ಕಣ್ಣುಗಳ ಸಮೂಹ, ಸಾವಿರ ಕಣ್ಣುಗಳು, ನೆಯ್ದಿಲ್ಗೊಳಂ ಅಲರ್ದತ್ತೆನೆ–ನೆಯ್ದಿಲೆಯ ಕೊಳ ಅರಳಿತು ಎನ್ನಲು, ಆಗಳ್–ಆಗ, ಇಂದ್ರಂ, ಬಂದಂ. ಸಾವಿರ ಕಣ್ಣುಗಳನ್ನೂ ಅರಳಿಸಿಕೊಂಡು ಮನೋವೇಗವನ್ನು ಮೀರಿ ಇಂದ್ರನು ಬಂದ; ಅವನ ಕಿರೀಟರತ್ನಗಳ ಕಾಂತಿ ಕಾಮನಬಿಲ್ಲನ್ನು ರಚಿಸಿತು.

೧೩೯. ಬೆಸನೇನ್–ಏನು ಕಾರ್ಯ, ಏಗೆಯ್ವುದೊ–ಏನು ಮಾಡುವುದೋ, ನಿನಗೆ, ಒಸೆದು–ಪ್ರೀತಿಸಿ, ಏನಂ ಕುಡುವುದು–ಏನನ್ನು ಕೊಡಬೇಕು, ಎಂದೊಡೆ ಎಂದಳ್–ಎಂದರೆ ಹೇಳಿದಳು, ಮಘವಾ–ಇಂದ್ರನೇ ಮಕ್ಕಳ್ ಒಸಗೆಯಂ–ಮಕ್ಕಳ ಒಂದು ನಲಿವನ್ನು, ನಿನ್ನೆಸಕದ–ನಿನ್ನ ಪ್ರತಾಪದ, ಮಸಕಮನೆ–ಆಧಿಕ್ಯವನ್ನೇ, ಪೋಲ್ವ–ಹೋಲುವ, ಮಗನಂ– ಮಗನನ್ನು, ಈವುದು–ಕೊಡುವುದು. ಈ ಪದ್ಯದ ಎರಡನೆಯ ಪಾದಾಂತ್ಯದಲ್ಲಿ ಬರುವ ‘ಮಕ್ಕಳ್’ ಎಂಬುದು ಗಮನಾರ್ಹ; ಇದನ್ನು ಷಷ್ಠ್ಯರ್ಥದಲ್ಲಿ ಪ್ರಥಮಾ ಪ್ರಯೋಗವೆಂದು ಭಾವಿಸಿರಬಹುದು, ಆದರೂ ಛಂದಸ್ಸಿನ ದೃಷ್ಟಿಯಿಂದ ಒಂದು ಮಾತ್ರೆ ಕಡಮೆಯಾಗುತ್ತದೆ; ಷಷ್ಠೀ ದೀರ್ಘವನ್ನಿಟ್ಟು ಮಕ್ಕಳಾ ಎಂದರೆ ಒಂದು ಮಾತ್ರೆ ಅಧಿಕವಾಗುತ್ತದೆ; ‘ಮಕ್ಕಳ್ಳೊಸ ಗೆಯಂ’ ಎಂದು ತಿದ್ದಿದರೆ ಛಂದಸ್ಸು ಸರಿಯಾಗುತ್ತದೆ; ಆದರೆ ವ್ಯಾಕರಣ ಸರಿಯಾಗುವು ದಿಲ್ಲ (ಶಮದ. ಸೂ. ೭೯). ಮಕ್ಕಳ್ ಎಂಬುದು ಅನೇಕಾಕ್ಷರ ಯುಕ್ತವಾಗಿರುವುದರಿಂದ ಅದಕ್ಕೆ ಸ್ವರ ಪರವಾದಾಗ ಳಕಾರಕ್ಕೆ ದ್ವಿರ್ಭಾವವಿಲ್ಲ. ಇದೊಂದು ಸಣ್ಣ ಸಮಸ್ಯೆ. ಆದರೆ ಪದ್ಯದ ದ್ರುತಗತಿಯಲ್ಲಿ ಇದು ಅಂತರ್ಹಿತವಾಗುತ್ತದೆ.

ವಚನ : ಬಗೆದ ಬಗೆಯೊಳೊಡಂಬಡುವಂತೆ–ಚಿಂತಿಸಿದ ರೀತಿಯಲ್ಲಿ ಒಪ್ಪುವ ಹಾಗೆ; ಬಿಣ್ಪುಮಂ–ಭಾರವನ್ನೂ; ತಿಣ್ಪುಮಂ–ತೂಕವನ್ನೂ, ಅಗುಂತಿಯುಮಂ–ಅತಿಶಯತೆ ಯನ್ನೂ; ಬಲ್ಲಾಳ್ತನ–ಶೌರ್ಯ, ಪರಾಕ್ರಮ; ಶುಕ್ತಿಕಾಪುಟೋದರದೊಳ್–ಮುತ್ತಿನ ಚಿಪ್ಪಿನ ಒಳಗಡೆ; ಮುಕ್ತಾಫಲೋದಬಿಂದು–ಮುತ್ತು ಎಂಬ ನೀರಿನ ಹನಿ; ಸಂಕ್ರಮಿಸಿ– ಬೆರಸಿ;

೧೪೦. ಕುಂತಿ ಕಂಡ ಕನಸುಗಳ ವರ್ಣನೆ: ಏೞುಮಂಬುಧಿಯುಮಂ–ಸಪ್ತ ಸಮುದ್ರ ಗಳನ್ನೂ, ಕುಡಿವುದಂ–ಕುಡಿಯುವುದನ್ನು, ಕುಲಶೈಲ ಕುಳಂಗಳಂ–ಏಳು ಕುಲಪರ್ವತಗಳನ್ನು, ತಗುಳ್ದು–ಅನುಸರಿಸಿ, ಅಡರ್ವುದಂ–ಹತ್ತುವುದನ್ನು, ಒಂದು ಬಾಳರವಿ–ಒಂದು ಎಳೆಯ ಸೂರ್ಯ, ತನ್ನಯ ಸೋಗಿಲಮೇಗೆ–ತನ್ನ ಮಡಿಲ ಮೇಲೆ, ರಾಗದಿಂ–ಸಂತೋಷದಿಂದ, ಪೊಡರ್ವುದಂ–ಅಲುಗಾಡುವುದನ್ನು ಎಂದರೆ ಹೊರಳುವುದನ್ನು, ಅಂತೆ–ಹಾಗೆಯೇ, ದಿಕ್ಕರಿಗಳ್–ದಿಗ್ದಂತಿಗಳು, ಅಂಬುಜ ಪತ್ರಪುಟಾಂಬುವಿಂ–ತಾವರೆಯ ಎಸಳಿಂದ ಮಾಡಿದ ದೊನ್ನೆಯ ನೀರಿನಿಂದ, ಬೆಡಂಗಡಸಿರೆ–ಸೊಗಸು ತುಂಬಿರಲು, ಮಜ್ಜನಂಬುಗಿಪುದಂ–ಸ್ನಾನ ಮಾಡಿಸುವುದನ್ನು, ನಿಶಾಂತದೊಳ್–ರಾತ್ರಿ ಕಡೆಗಾಣುವ ಸಮಯದಲ್ಲಿ, ಸತಿ–ಕುಂತಿ, ಕಂಡು ಒಸೆದಳ್–ನೋಡಿ ನಲಿದಳು.

ವಚನ : ಓದುವ–ಹೇಳುವ, ಪಠಿಸುವ; ವೇದನಿನಾದದಿಂ–ವೇದಘೋಷದಿಂದ; ವಿಗತ–ಹೊರಟು ಹೋದ: ಅಱಿಪಿದೊಡೆ–ಕನಸುಗಳನ್ನು ತಿಳಿಸಿದರೆ:

೧೪೧. ಕನಸಿನ ಫಲಗಳನ್ನು ಈ ಪದ್ಯ ನಿರೂಪಿಸುತ್ತದೆ: ಏೞುಮಬ್ಧಿಗಳಂ–ಏಳು ಸಮುದ್ರ ಗಳನ್ನು, ಕುಡಿವುದಱಿಂದಂ–ಕುಡಿಯುವುದರಿಂದ, ಅಬ್ಧಿಪರೀತಮಹೀಶನಂ–ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನು, ತಗುಳ್ದು–ಅನುಸರಿಸಿ, ಅಡರ್ವುದಱಿಂ–ಹತ್ತುವುದರಿಂದ, ಎಂದರೆ ಕುಲಪರ್ವತಗಳನ್ನು ಹತ್ತುವುದರಿಂದ, ಕುಲಾದ್ರಿ ಪರಿವೇಷ್ಟಿತನಂ–ಕುಲ ಪರ್ವತ ಗಳಿಂದ ಸುತ್ತುವರಿಯಲ್ಪಟ್ಟವನನ್ನು, ತರುಣಾರ್ಕಂ–ಬಾಲ ಸೂರ್ಯನು, ಅೞ್ಕಱಿಂ– ಪ್ರೀತಿ ಯಿಂದ, ಪೊಡರ್ವುದಱಿಂದಂ–ಹೊರಳಾಡುವುದರಿಂದ, ಎಂದುಂ ಉದಿತೋದಿತನಂ– ಯಾವಾಗಲೂ ಉಚ್ಛ್ರಾರಯ ಸ್ಥಿತಿಯುಳ್ಳವನನ್ನು, ದಿಗಿಭಂಗಳೆಂಟುಂ–ಎಂಟು ದಿಗ್ದಂತಿಗಳೂ, ಒಳ್ಪೊಡರಿಸಿ–ಮಂಗಳವನ್ನುಂಟುಮಾಡಿ, ಮಜ್ಜನಂಬುಗಿಸೆ–ಸ್ನಾನ ಮಾಡಿಸಲು, ಕಂಡುದಱಿಂ– ಕಂಡದ್ದರಿಂದ, ಕಮಲಾಭಿರಾಮನಂ–ಕಮಲದಂತೆ ಸುಂದರನಾದವನನ್ನು.

ವಚನ : ಕುಚಚೂಚುಕಂ–ಮೊಲೆಯ ತೊಟ್ಟು; ಕಂದಿದುವು–ಕಪ್ಪಾದುವು; ಬಾಸೆಗಳುಂ– ಹೊಕ್ಕುಳಿಂದ ಎದೆಯವರೆಗೆ ನೇರಾಗಿರುವ ಕೂದಲಿನ ಸಾಲುಗಳೂ; ಬಾೞ್ವಾಸೆಗಳುಂ– ಬಾಳುವ ಆಸೆಗಳೂ, ಅಸಿಯವಾದವು–ಕೃಶವಾದುವು; ಕ್ಷಯಿಸಿದುವು; ಅಲಸಿಕೆಯಂ–ಆಲಸ್ಯ ವನ್ನು;

೧೪೨. ಕುಂತಿಯ ಬಯಕೆಗಳನ್ನು ಈ ಪದ್ಯ ಹೇಳುತ್ತದೆ : ಉರ್ಚಿದ ಬಾಳೊಳ್–ಒರೆ ಯಿಂದ ಹೊರಗೆಳೆದ ಕತ್ತಿಯಲ್ಲಿ, ಆತ್ಮ ಮುಖಬಿಂಬಮಂ–ತನ್ನ ಮುಖಮಂಡಲವನ್ನು, ಅೞ್ತಿಯೆ ನೋಡಲುಂ–ಪ್ರೀತಿಯಿಂದ ನೋಡುವುದಕ್ಕೂ, ಮನಂ ಪೆರ್ಚ್ಚಿ–ಮನಸ್ಸು ಉಬ್ಬಿ, ಧನುರ್ಲತಾಗುಣನಿನಾದಮಂ–ಬಿಲ್ಲಿನ ಲತೆಯಂತಿರುವ ಹಗ್ಗದ ಟಂಕಾರವನ್ನು, ಆಲಿಸಿ ಕೇಳಲುಂ–ಮನವಿಟ್ಟು ಕೇಳುವುದಕ್ಕೂ, ಮನಂ ಬೆರ್ಚದೆ–ಮನದಲ್ಲಿ ಹೆದರದೆ, ಸಿಂಹ ಪೋತಕಮಂ–ಸಿಂಹದ ಮರಿಯನ್ನು, ಓವಲುಂ–ಸಾಕಿ ಸಲಹಲೂ, ಆಕೆಯದೋಹಳಂ– ಅವಳ ಬಸಿರಿಬಯಕೆ, ಆ ಗುಣಾರ್ಣವನ–ಆ ಅರ್ಜುನನ (=ಅರಿಕೇಸರಿಯ), ಮುಂದಣ ಬೀರಮಂ–ಮುಂದುಂಟಾಗುವ ಪ್ರತಾಪವನ್ನು, ಅಂದೆ–ಆಗಲೇ, ತೋರ್ಪವೋಲ್– ತೋರಿಸುವ ಹಾಗೆ, ಕರಂ ಪೆರ್ಚಿದುದು–ವಿಶೇಷವಾಗಿ ಅಧಿಕವಾಯಿತು.

ವಚನ : ಮತ್ತಂ–ಮತ್ತೂ; ಮೀಯಲುಂ–ಸ್ನಾನ ಮಾಡಲೂ; ವೇಳಾವನ–ಸಮುದ್ರದ ಅಂಚಿನಲ್ಲಿರುವ ಕಾಡು; ಲತಾಗೃಹೋದರ–ಲತಾಗೃಹದ ಒಳಭಾಗದ; ಪುಳಿನಸ್ಥಳ ಪರಿಸರ ಪ್ರದೇಶದೊಳ್–ಮರಳಿರುವ ಠಾವಿನ ಸುತ್ತಣ ಪ್ರದೇಶದಲ್ಲಿ; ತೊೞಲಲುಂ–ತಿರುಗಾಡಲೂ, ಅೞ್ತಿಯಾಗೆ–ಆಶೆಯಾಗಲು.

೧೪೩. ಬಳೆದ ನಿತಂಬದೆ–ಬೆಳೆದ ಸೊಂಟದಡಿಯ ಹಿಂಭಾಗದಲ್ಲಿ, ಕಾಂಚೀಕಳಾ ಪಮಂ–ಒಡ್ಯಾಣವೆಂಬ ಆಭರಣವನ್ನು, ಕಟ್ಟಲ್–ಕಟ್ಟಲು, ಅಣಮೆ–ಸ್ವಲ್ಪವಾದರೂ, ನೆಱೆಯದು–ಶಕ್ಯವಾಗದು. ಇದು, ಎಂದು, ಅಗ್ಗಳಿಸಿ–ಅಧಿಕವಾಗಿ, ಕುಳಿಕೆಗಳಿನೇಂ–ನೂಲಿನ ಕುಣಿಕೆಗಳಿಂದ ಏನು, ಕಣ್ಗೊಳಿಸಿತೋ–ಕಣ್ಣಿಗೆ ಸೊಗಸಾಯಿತೋ, ಸುಭಗೆಯಾದ ಸುದತಿಯ ಗರ್ಭಂ–ಸೌಭಾಗ್ಯಶಾಲಿನಿಯಾದ ಆ ಸ್ತ್ರೀಯ ಬಸಿರು; ಕುಂತಿಯ ಗರ್ಭ ಬೆಳೆಯುತ್ತ ಬೆಳೆ ಯುತ್ತ ಒಡ್ಯಾಣ ಮುಂತಾದ ಒಡವೆಗಳನ್ನು ತೊಡಿಸಲು ಅಶಕ್ಯವಾಗುವಷ್ಟು ಹಿರಿದಾಗಿ ಪರಿಣಮಿಸಿತು.

ವಚನ : ತೆಕ್ಕನೆ ತೀವಿದ ಮೆಯ್ಯೊಳ್–ಪೂರ್ಣವಾಗಿ ತುಂಬಿಕೊಂಡ ಮೆಯ್ಯಲ್ಲಿ; ಅಲರ್ದ ಸಂಪಗೆಯಲರಂತೆ–ಅರಳಿದ ಸಂಪಿಗೆಯ ಹೂವಿನಂತೆ; ಬೆಳರ್ತ–ಬೆಳ್ಳಗಾದ; ಸೊಗಯಿಸಿ –ಶೋಭಿಸಿ.

೧೪೪. ತುಡುಗೆಗಳೊಳ್–ಒಡವೆಗಳಲ್ಲಿ, ಸರಿಗೆಯುಮಂ–ತೆಳ್ಳಗಿರುವ ತಂತಿಯನ್ನು ಕೂಡ (ಒಂದೆಳೆ ಸರ), ಕಡುವಿಣ್ಣಿತ್ತೆನಿಸಿ–ಅಧಿಕ ಭಾರವುಳ್ಳದ್ದು ಎನ್ನಿಸಿ, ನಡೆದುಂ– ಓಡಾಡಿಯೂ, ಓರಡಿಯಂ–ಒಂದು ಹೆಜ್ಜೆಯನ್ನಾದರೂ, ಅಣಂ–ಕೊಂಚವೂ, ನಡೆಯಲುಂ ಆಱದೆ–ನಡೆಯಲಸಮರ್ಥಳಾಗಿ, ಕೆಮ್ಮನೆ–ಸುಮ್ಮನೆ, ಬಿಡದೆ ಆರಯ್ವನಿತುಮಾಗೆ ಮರಳಿ ನೋಡುವ ಹಾಗಾಗಲು, ಗರ್ಭಂ, ಬಳೆದುದು–ಬೆಳೆಯಿತು.

ವಚನ : ಷಡ್ವರ್ಗ ಸಿದ್ಧಿಯನ್ನುಂಟುಮಾಡೆ–ಲಗ್ನ, ಹೋರೆ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ, ತ್ರಿಂಶಾಂಶ—ಇವು ಷಡ್ವರ್ಗಗಳು; ಇವುಗಳ ಸಿದ್ಧಿ ಪ್ರಾಪ್ತಿಸಲು;

೧೪೫. ಭರತಕುಲ ಗಗನ ದಿನಕರಂ–ಭರತವಂಶವೆಂಬ ಆಕಾಶಕ್ಕೆ ಸೂರ್ಯನಾಗಿರುವ, ಅರಾತಿ ಕುಳಕಮಳ ಹಿಮಕರಂ–ಶತ್ರುಗಳ ವಂಶವೆಂಬ ತಾವರೆಗೆ ಶೀತಕಿರಣನಾಗಿರುವ, ಶಿಶು–ಮಗುವು, ತೇಜೋವಿರಚನೆಯುಂ–ತೇಜಸ್ಸಿನ ರಚನೆಯೂ, ಕಾಂತಿಯುಂ–ಪ್ರಕಾಶವೂ, ಆವರಿಸಿರೆ–ವ್ಯಾಪಿಸಿರಲು, ಗರ್ಭೋದಯಾದ್ರಿಯಿಂದುದಯಿಸಿದಂ–ಗರ್ಭವೆಂಬ ಉದಯ ಪರ್ವತದಲ್ಲಿ ಹುಟ್ಟಿದನು. ಬಾಲಸೂರ್ಯನಂತೆ ಪ್ರಭಾಮಯನಾಗಿ ಅರ್ಜುನ ಹುಟ್ಟಿದನು.

೧೪೬. ಉದಯಿಸುವುದುಂ–ಹುಟ್ಟುತ್ತಲು, ಅಮೃತಾಂಶುವಿನ–ಚಂದ್ರನ, ಉದಯ ದೊಳ್–ಹುಟ್ಟಿನಲ್ಲಿ, ಅಂಭೋಧಿವೇಲೆ–ಸಮುದ್ರದ ಕರೆ, ಭೋರ್ಗರೆವವೊಲ್– ಭೋರೆಂದು ಶಬ್ದ ಮಾಡುವ ಹಾಗೆ, ಘನಪಥದೊಳ್–ಮೋಡಗಳ ಮಾರ್ಗದಲ್ಲಿ, ಆಕಾಶದಲ್ಲಿ, ತ್ರಿದಶ ಕರಾಹತಿಯಿಂ–ದೇವತೆಗಳ ಕೈ ಹೊಡೆತದಿಂದ, ಸುರದುಂದುಭಿಗಳ್–ದೇವಲೋಕದ ಭೇರಿಗಳು, ಒಡನೆ–ಕೂಡಲೇ, ಒರ್ಮೊದಲ್–ಒಟ್ಟಿಗೇ, ಎಸೆದುವು–ಶಬ್ದ ಮಾಡಿದವು. ಎಸೆ=ಇಶೈ (ತಮಿಳು) ಶಬ್ದಮಾಡು; ಒರ್ಮೊದಲ್–ಒಟ್ಟಿಗೇ, ಜೊತೆಜೊತೆಯಾಗಿ (Simultaneously).

ವಚನ : ಪರಸುವ–ಹರಸುವ, ಧ್ವನಿಗಳುಂಬೆರಸು–ಧ್ವನಿಗಳ ಸಮೇತವಾಗಿ; ಬೆರಸು ಎಂಬುದರ ಹಿಂದೆ ಪ್ರಥಮಾವಿಭಕ್ತಿ ಯಾವಾಗಲೂ ಬರುತ್ತದೆ; ಮುಸುಱಿಕೊಂಡು–ಮುತ್ತಿ ಕೊಂಡು.

೧೪೭. ದೇವರ ಪಱೆಗಳ ರವದೊಳ್–ದೇವತೆಗಳ ಹರೆಗಳ (ಭೇರಿಗಳ) ಶಬ್ದದಲ್ಲಿ, ದೇವರ ಸುರಿವರಲ–ದೇವತೆಗಳು ಸುರಿಸುವ ಪುಷ್ಪಗಳ, ಸರಿಯ ಬೆಳ್ಸರಿಯೊಳ್–ಮಳೆಯ ಬಿಳಿಯಧಾರೆಯಲ್ಲಿ, ದೇವವಿಮಾನಾವಳಿಯೊಳ್–ದೇವತೆಗಳ ವಿಮಾನಗಳ ಪಂಕ್ತಿಗಳಲ್ಲಿ, ಒರ್ಮೊದಲೆ–ಒಟ್ಟಿಗೇ, ಗಗನಮುಂ–ಆಕಾಶವೂ, ಧರೆ ಮಧ್ಯಂ–ಭೂಮಿಯ ಮಧ್ಯಭಾಗವೂ, ತೀವಿದುವು–ತುಂಬಿದುವು. ನೆಲಬಾನುಗಳು ವಾದ್ಯರವಗಳಿಂದಲೂ ಪುಷ್ಪವೃಷ್ಟಿಯಿಂದಲೂ ವಿಮಾನಪಂಕ್ತಿಗಳಿಂದಲೂ ತುಂಬಿಹೋದುವು, ಇದನ್ನು ದುರ್ಯೋಧನನ ಜನನವಾದಾಗ ಉಂಟಾದ ಉತ್ಪಾತಗಳಿಗೆ ಹೋಲಿಸಿ ನೋಡಬಹುದು.

ವಚನ : ಮೂವತ್ತು ಮೂದೇವರುಂ–ಮೂವತ್ತುಮೂವರು ದೇವತೆಗಳೂ, ವೈಮಾನಿಕ ದೇವರುಂ–ವೈಮಾನಿಕರೆಂಬ ದೇವತೆಗಳೂ (ಇಲ್ಲಿ ಜೈನ ಪರಿಭಾಷೆ ಇದೆ. ಭವನವಾಸಿನಃ, ವ್ಯಂತರಾಃ, ಜ್ಯೋತಿಷ್ಕಾಃ, ವೈಮಾನಿಕಾಃ—ಎಂದು ದೇವತೆಗಳಲ್ಲಿ ನಾಲ್ಕು ವರ್ಗ); ಜನ್ಮೋತ್ಸವಂ ಮಾಡಿ–ಜನ್ಮದ ಉತ್ಸವವನ್ನು ಮಾಡಿ, (ತೀರ್ಥಂಕರನಿಗೆ ಆಗುವ ಜನ್ಮೋತ್ಸವದ ನೆನಪು ಇಲ್ಲಿದೆ).

೧೪೮. ಆ ಬ್ರಹ್ಮಂ–ಸೃಷ್ಟಿಕರ್ತನಾದ ಬ್ರಹ್ಮನು, ನೋಡುವಂ–ಕೂಸನ್ನು ನೋಡುತ್ತಾನೆ (ಎಷ್ಟು ನೋಡಿದರೂ ತೃಪ್ತಿಯಾಗದು); ಅಮರೇಂದ್ರಂ–ಇಂದ್ರನು, ಮುಂಡಾಡುವಂ– ಮುದ್ದಾಡುತ್ತಾನೆ (ಅರ್ಜುನನು ತನ್ನ ಮಗನಲ್ಲವೆ?) ಇಂದ್ರನ, ಅಚ್ಚರಸೆಯರ್–ಅಪ್ಸರ ಸ್ತ್ರೀಯರು, ಎೞ್ದಾಡುವರ್–ಎದ್ದು ನರ್ತನ ಮಾಡುತ್ತಾರೆ. ಎಂದೊಡೆ–ಎಂದು ಹೇಳಿದರೆ, ಗುಣಾರ್ಣವನ–ಅರಿಕೇಸರಿಯ (=ಅರ್ಜುನನ), ಜನ್ಮದಿನದ ಬೆಡಂಗಂ–ಹುಟ್ಟಿದ ದಿನದ ಸೊಗಸನ್ನು, ಪೊಗೞಲ್ಕೆವೇಡ–ಹೊಗಳಬೇಡವೊ? ಹೊಗಳಲೇಬೇಕು.

ವಚನ : ಪಿರಿದುಮೊಸಗೆಯಂ ಮಾಡಿ–ಹಿರಿದಾದ ಉತ್ಸವವನ್ನು ಮಾಡಿ; ನಿಮಿತ್ತಂ ಗಳಪ್ಪ–ಕಾರಣಗಳಾದ; ನಾಮಂಗಳೊಳ್–ಹೆಸರುಗಳಲ್ಲಿ; ಕದನತ್ರಿಣೇತ್ರಂ–ಯುದ್ಧದಲ್ಲಿ ಮುಕ್ಕಣ್ಣನಂತಿರುವವನು; ರುದ್ರನಂತಿರುವವನು; ಮನುಜಮಾಂಧಾತಂ–ಮನುಷ್ಯರಲ್ಲಿ ಮಾಂಧಾತರಾಜನಂತೆ ಇರುವವನು; ಶೌಚಾಂಜನೇಯಂ–ಶುಚಿತ್ವದಲ್ಲಿ ಹನುಮಂತನಂತಿರು ವವನು; ಪ್ರತ್ಯಕ್ಷ ಜೀಮೂತವಾಹನಂ–ಕಣ್ಣಿಗೆ ಗೋಚರನಾದ ದಾನಶೀಲನಾದ ವಿದ್ಯಾಧರ ಚಕ್ರವರ್ತಿ ಜೀಮೂತ ವಾಹನನಂತಿರುವವನು; ವಿದ್ವಿಷ್ಟ ವಿದ್ರಾವಣಂ–ಶತ್ರುಗಳು ಪಲಾಯನ ಮಾಡುವಂತೆ ಮಾಡುವವನು, ಮನುನಿದಾನಂ–ಮನುವಿನಂತೆ ಆದಿಕಾರಣನಾದವನು; ಗಜಗಮರಾಜಪುತ್ರಂ ಅಥವಾ ಗಜಗಮನ ರಾಜಪುತ್ರಂ (ಇಲ್ಲಿ ಪಾಠ ಕೆಟ್ಟಿದೆ)– ಗ [ಜಾ] ಗಮರಾಜಪುತ್ರಂ–ಹಸ್ತಿಶಾಸ್ತ್ರದಲ್ಲಿ ರಾಜಪುತ್ರನಂತಿರುವವನು (ರಾಜಪುತ್ರನೆಂಬೊಬ್ಬ ಹಸ್ತಿ ಶಾಸ್ತ್ರಕಾರನಿದ್ದಿರಬಹುದು), ಇಲ್ಲವೇ [ಅಂ] ಗ [ಜಾ] ಗಮ ರಾಜಪುತ್ರಂ–ಕಾಮಶಾಸ್ತ್ರವನ್ನು ಬರೆದ ರಾಜಪುತ್ರನೆಂಬ ಕವಿಯಂಥವನು; ಇರುವ ಹಾಗೆ ಅರ್ಥ ಮಾಡುವುದು ಕಷ್ಟ. ಆರೂಢ ಸರ್ವಜ್ಞಂ–ಅಶ್ವಾರೋಹಣ ವಿದ್ಯೆಯಲ್ಲಿ ಎಲ್ಲವನ್ನೂ ತಿಳಿದವನು; ಪಲ್ಲವಂ– ಚಿಗುರು; ಕರ್ಣಪೂರಂ–ಕಿವಿಯ ಒಡವೆ; ಲಾಟೀಲಲಾಮಂ–ಲಾಟದೇಶ ಸ್ತ್ರೀಯರ ಹಣೆಯ ಆಭರಣ; ಮಱುವಕ್ಕ ದಲ್ಲೞಂ–ಶತ್ರುಸೈನ್ಯವನ್ನು ಭಯಪಡಿಸುವವನು; ನೋಡುತ್ತೆ ಗೆಲ್ವಂ–ನೋಡುತ್ತಲೇ ಗೆಲ್ಲುವವನು; ಪಾಣ್ಬರಂಕುಸಂ–ಜಾರರಿಗೆ ಅಂಕುಶಪ್ರಾಯನಾದವನು; ಅಮ್ಮನ ಗಂಧವಾರಣಂ–ತಂದೆಯ ಮದ್ದಾನೆ; ಪಡೆಮೆಚ್ಚೆ ಗಂಡಂ–ಸೈನ್ಯ ಮೆಚ್ಚುವ ಹಾಗೆ ಶೂರನಾದವನು; ಪ್ರಿಯಗಳ್ಳಂ–ಪ್ರಿಯಳನ್ನು ಅಪಹರಿಸಿದವನು, ಅರ್ಜುನ ಸುಭದ್ರೆಯನ್ನು ಅಪಹರಿಸಿದಂತೆ. ಇಲ್ಲಿ ಹೇಳಿರುವುವೆಲ್ಲ ಅರಿಕೇಸರಿಯ ಬಿರುದುಗಳು; ಅವು ಅರ್ಜುನನಿಗೂ ಅನ್ವಯವಾಗುತ್ತವೆ. ಈ ಬಿರುದುಗಳಲ್ಲಿ ಹಲವು ವೇಮುಲವಾಡ II ಅರಿಕೇಸರಿಯ ಶಿಲಾಶಾಸನದಲ್ಲಿ ದೊರೆಯುತ್ತವೆ. ಅಷ್ಟೋತ್ತರ ಶತನಾಮಂಗಳನಿಟ್ಟು–೧೦೮ ಹೆಸರುಗಳನ್ನಿಟ್ಟು.

೧೪೯. ಅರಿಕೇಸರಿ–ಅರಿಕೇಸರಿಯೇ (ಅರ್ಜುನನೇ), ಸಪ್ತ….ತಳಮಂ; ಏಳು–ಕಡಲು ಗಳಿಂದ ಅಂಕಿತ ಮಾಡಲ್ಪಟ್ಟ ಭೂಮಂಡಲವನ್ನು, ಬೆಸಕೆಯ್ಸು–ಆಜ್ಞಾಧೀನವನ್ನಾಗಿ ಮಾಡು; ಮೀಱಿದ–ಉಲ್ಲಂಘಿಸಿದ, ಉದ್ವೃತ್ತ–ಗರ್ವಿಷ್ಠರಾದ, ವಿರೋಧಿ ಸಾಧನಮಂ– ವೈರಿಗಳ ಸೈನ್ಯವನ್ನು, ಆಹವದೊಳ್–ಯುದ್ಧದಲ್ಲಿ, ತಱಿದೊಟ್ಟು–ಕತ್ತರಿಸಿ ರಾಶಿಮಾಡು; ವಿಶ್ವದಿಗ್ವ್ಯಾಪ್ತಯಶೋವಿಲಾಸಿನಿಗೆ–ಸಮಸ್ತ ದಿಕ್ಕುಗಳಲ್ಲೂ ಆವರಿಸಿಕೊಂಡಿರುವ ಕೀರ್ತಿ ಯೆಂಬ ಸ್ತ್ರೀಗೆ, ವಲ್ಲಭನಾಗು–ಪತಿಯಾಗು; ಸುಖವ್ಯಾಪ್ತಿಗೆ–ಭೋಗೋಪಭೋಗಗಳ ವಿಸ್ತಾರಕ್ಕೆ, ನಿರಂತರಂ–ಎಡೆಬಿಡದೆ, ಲೋಕ ಮುಳ್ಳಿನಂ–ಲೋಕವಿರುವವರೆಗೂ, ನೀನೆ– ನೀನೇ, ಮೊತ್ತ ಮೊದಲಾಗು–ಮುಖ್ಯ ಆಕರವಾಗು, ಕವಿ ಅರಿಕೇಸರಿಯನ್ನು ಹರಸುತ್ತಿದ್ದಾನೆ. ಅರ್ಜುನ ವ್ಯಾಜದಿಂದ ಅರಿಕೇಸರಿಯ ಪ್ರಶಸ್ತಿ ಪದ್ಯದಿಂದ ಈ ಆಶ್ವಾಸ ಮುಗಿಯುತ್ತದೆ.

ಕವಿ ಪ್ರಶಸ್ತಿ; ಇದು ವಿವಿಧ ವಿಬುಧ ಜನವಿನುತ–ಅನೇಕ ದೇವತೆಗಳಿಂದ ಸ್ತುತಿ ಮಾಡಲ್ಪಟ್ಟ, ಜಿನ ಪದಾಂಭೋಜ–ಜಿನನ ಪಾದಕಮಲಗಳ, ವರಪ್ರಸಾದೋತ್ಪನ್ನ– ವರ ಪ್ರಸಾದದಿಂದ ಹುಟ್ಟಿದ, ಪ್ರಸನ್ನ ಗಂಭೀರ ವಚನ ರಚನ–ತಿಳಿಯಾದುದೂ ಗಂಭೀರವಾದದೂ ಆದ ಮಾತುಗಳ ರಚನೆಯಲ್ಲಿ, ಚತುರ–ಚಾತುರ್ಯವನ್ನುಳ್ಳ, ಕವಿತಾ ಗುಣಾರ್ಣವ ವಿರಚಿತ ಮಪ್ಪ–ಕಾವ್ಯಗುಣಕ್ಕೆ ಸಮುದ್ರದಂತಿರುವ ಪಂಪನಿಂದ ರಚಿತವಾದ, ವಿಕ್ರಮಾರ್ಜುನ ವಿಜಯದೊಳ್–ವಿಕ್ರಮಾರ್ಜುನ ವಿಜಯವೆಂಬ ಕಾವ್ಯದಲ್ಲಿ, ಪ್ರಥಮಾಶ್ವಾಸಂ– ಒಂದನೆಯ ಆಶ್ವಾಸವು.

ಶ್ರೀಮತ್ಕರಿಗಿರಿವಾಸ ಪ್ರಹ್ಲಾದ ಪರಿಪಾಲಕ

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗಳ ಚರಣದಾಸನಪ್ಪ ದೊಡ್ಡಬೆಲೆ

ಲಕ್ಷ್ಮೀನರಸಿಂಹಾಚಾರ್ಯನಿಂ ರಚಿತವಾದ

ಪಂಪಭಾರತ ದೀಪಿಕಾಖ್ಯ ವ್ಯಾಖ್ಯೆಯೊಳ್ ಪ್ರಥಮಾಶ್ವಾಸಂ.