೦೦

ಮುನ್ನುಡಿ

ಮೊದಲನೆಯ ಮುದ್ರಣ

ಕನ್ನಡ ಭಾಷೆ ಸಾಹಿತ್ಯಗಳ ಸರ್ವತೋಮುಖವಾದ ಬೆಳವಣಿಗೆಯನ್ನು ಸಾಧಿಸುವ ದೃಷ್ಟಿ ಯಿಂದ 1966 ರ ಕೊನೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಪ್ರಾರಂಭವಾಯಿತು. ಈಗ್ಗೆ ಹತ್ತು ಹನ್ನೆರಡು ವರ್ಷಗಳಿಗೆ ಹಿಂದೆ ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ರೂಪು ಗೊಂಡಿದ್ದ ಯೋಜನೆಗಳೆಲ್ಲ ಡಾ ॥ ಶ್ರೀಮಾಲಿಯವರ ನೇತೃತ್ವದಲ್ಲಿ ಸಾಕಾರಗೊಳ್ಳತೊಡಗಿ ದುದಕ್ಕೆ ಕನ್ನಡ ಅಧ್ಯಯನ ಸಂಸ್ಥೆ ಸಾಕ್ಷಿಯಾಗಿದೆ. ಈಗ ಪ್ರೊಫೆಸರ್ ಜವರೇಗೌಡರು ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವುದರಿಂದ ಈ ಸಂಸ್ಥೆಯ ಚಟುವಟಿಕೆಗಳು ತೀವ್ರತರವಾಗಿ ಬೆಳೆಯುವುವೆಂದು ನಿರೀಕ್ಷಿಸಬಹುದಾಗಿದೆ. ಕನ್ನಡ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನ ವಿಭಾಗ, ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಶಿಕ್ಷಣ, ಕನ್ನಡೇತ ರರಿಗಾಗಿ ಕನ್ನಡ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಶಿಕ್ಷಣ, ಇವುಗಳ ಜೊತೆಗೆ ಇಂದು ಸಂಸ್ಥೆಯಲ್ಲಿ ಐದು ಪ್ರಮುಖ ವಿಭಾಗಗಳಿವೆ : (1) ಸಂಪಾದನಾ ವಿಭಾಗ, (2) ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗ, (3) ಜಾನಪದ ವಿಭಾಗ, (4) ಕನ್ನಡ ವಿಶ್ವಕೋಶ ವಿಭಾಗ ಮತ್ತು (5) ಹರಿದಾಸ ಸಾಹಿತ್ಯ ಸಂಪಾದನ ಮತ್ತು ಸಂಶೋಧನ ವಿಭಾಗ. ಸಂಸ್ಥೆಯ ಬಹು ಮುಖವಾದ ಚಟುವಟಿಕೆಗಳ ಪ್ರತೀಕವಾಗಿವೆ ಈ ವಿಭಾಗಗಳು.

ವಿಶ್ವವಿದ್ಯಾನಿಲಯದ ಎಲ್ಲ ಹಂತಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಬಳಸಬೇಕೆಂಬ ನೀತಿಗನುಗುಣವಾಗಿ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗವನ್ನು ಸ್ಥಾಪಿಸ ಲಾಗಿದೆ. ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಗೆ ಸಂಬಂಧಪಟ್ಟ ಪಠ್ಯಪುಸ್ತಕಗಳನ್ನು ಮತ್ತು ಸಂದರ್ಭ ಗ್ರಂಥಗಳನ್ನು ಹೊರತರುವುದೇ ಈ ವಿಭಾಗದ ಮುಖ್ಯ ಉದ್ದೇಶ. ಮೂರು ರೀತಿಯಲ್ಲಿ ಈ ಕಾರ್ಯವನ್ನು ನೆರವೇರಿಸಬೇಕೆಂದು ಯೋಚಿಸಲಾಗಿದೆ : (1) ಸಮರ್ಥ ಲೇಖಕರಿಂದ ಗ್ರಂಥಗಳನ್ನು ಬರೆಸುವುದು. (2) ಪ್ರಸಿದ್ಧ ಆಕರ, ಸಂದರ್ಭ ಗ್ರಂಥಗಳನ್ನು ತಜ್ಞರಿಂದ ಭಾಷಾಂತರಿಸುವುದು ಮತ್ತು (3) ಸಂಸ್ಥೆಯ ಕಾರ್ಯಕರ್ತರೇ ಸಾಧ್ಯವಾದಷ್ಟು ಗ್ರಂಥಗಳನ್ನು ಭಾಷಾಂತರಿಸುವುದು. ಈಗಾಗಲೇ ವಿವಿಧ ವಿಷಯಗಳಿಗೆ ಸಂಬಂಧಿಸಿದ 52 ಗ್ರಂಥಗಳು ಹೊರಬಂದಿವೆ. ಈ ವರ್ಷದ ಒಳಗಾಗಿ ಸುಮಾರು 25 ಗ್ರಂಥಗಳು ಹೊರ ಬರುವ ನಿರೀಕ್ಷೆಯಿದೆ. ವೈಜ್ಞಾನಿಕ ಗ್ರಂಥಗಳ ರಚನೆಯಲ್ಲಿ ಎದುರಿಸಬಹುದಾದ ಸಮಸ್ಯೆ ಗಳನ್ನು ಪರಿಹರಿಸುವತ್ತಲೂ ಗಮನ ಕೊಡಲಾಗಿದೆ. ತಜ್ಞ ವಿದ್ವಾಂಸರು ಒಂದುಗೂಡಿ ‘ಪಾರಿಭಾಷಿಕ ಕೋಶ’ ಗಳನ್ನು ತಯಾರಿಸುತ್ತಿದ್ದಾರೆ. ಈಗಾಗಲೇ ‘ಮನೋವಿಜ್ಞಾನ ಕೋಶ’ ಹೊರ ಬಂದಿದೆ. ‘ಭಾಷಾ ವಿಜ್ಞಾನ ಕೋಶ’ ಅಚ್ಚಿನ ಮನೆಗೆ ಹೋಗಲಿದೆ. ಇಂಥ ಇನ್ನೂ ಒಂಭತ್ತು ಕೋಶಗಳು ಸಿದ್ಧವಾಗುತ್ತಿವೆ. ಈ ಎಲ್ಲ ಯೋಜನೆ, ನೆರವು ಮತ್ತು ಪ್ರೋತ್ಸಾಹ ಗಳಿಂದಾಗಿ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಸುಮಾರು 250 ಗ್ರಂಥಗಳನ್ನು ಹೊರತರಬಹುದೆಂಬ ನಂಬಿಕೆಯಿದೆ. ಇವುಗಳ ಜೊತೆಗೆ ಸ್ನಾತಕಪೂರ್ವ, ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಿಗೆ ಅಗತ್ಯವಾದ ಭಾಷಾ ಪಠ್ಯಪುಸ್ತಕಗಳನ್ನು ಹೊರತರಲಾಗುತ್ತಿದೆ. ಸಂಕಲಿತ, ಸಂಪಾದಿತ ಪಠ್ಯಗ್ರಂಥಗಳು ಈ ವರ್ಗಕ್ಕೆ ಸೇರುತ್ತವೆ. ಈ ಕಾರ್ಯದಲ್ಲಿ ‘ಸಂಪಾದನಾ ವಿಭಾಗ’ ನಮಗೆ ನೆರವಾಗುತ್ತಿದೆ.

ಸಂದರ್ಭ ಗ್ರಂಥಗಳು, ಆಕರ ಗ್ರಂಥಗಳು ಪಠ್ಯಪುಸ್ತಕಗಳಿಗೆ ಪೂರಕವಾಗಿ, ಪ್ರೇರಕ ವಾಗಿ, ಪೋಷಕವಾಗಿ, ಇರುವಂಥವು; ಬೆನ್ನೆಲುಬಾಗಿ ಇರುವಂಥವು. ಪಠ್ಯಪುಸ್ತಕಗಳ ವಿಷಯ ಸಂಪತ್ತಿಗೆ ನಿರೂಪಿತ ವಿಚಾರಗಳ ನಿರ್ದುಷ್ಟತೆ, ನಿಖರತೆ ಮತ್ತು ಪ್ರಾಮಾಣಿಕತೆಗೆ ಅವು ಒರೆಗಲ್ಲಾಗಿರುತ್ತವೆ. ಶಾಖೋಪಶಾಖೆಗಳಾಗಿ ಒಡೆದು ನಿಲ್ಲುವ ಹೆಮ್ಮರಕ್ಕೆ ತಾಯಿಬೇರು ಹೇಗೋ ಜ್ಞಾನಕ್ಷೇತ್ರಕ್ಕೆ ಆಕರ ಗ್ರಂಥಗಳೂ, ಸಂದರ್ಭ ಗ್ರಂಥಗಳೂ ಹಾಗೆ. ಪಠ್ಯಪುಸ್ತಕ ಗಳು ಅಲ್ಪಾಯುಗಳು. ಹೊಸ ಹೊಸ ಸಂಶೋಧನೆಗಳ ಬೆಳಕಿನಲ್ಲಿ, ವಿಚಾರಗಳ ಮತ್ತು ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಆಗಿಂದಾಗ್ಗೆ ಅವುಗಳನ್ನು ಪರಿಷ್ಕರಿಸಬೇಕಾಗುತ್ತದೆ, ಪುನರ್ ರಚಿಸಬೇಕಾಗುತ್ತದೆ, ಹೊಸ ಹೊಸ ಅಂಶಗಳನ್ನು ಸೇರಿಸಬೇಕಾಗುತ್ತದೆ, ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಸಂದರ್ಭ ಗ್ರಂಥಗಳು ಮತ್ತು ಆಕರ ಗ್ರಂಥಗಳು ಈ ಎಲ್ಲ ಪ್ರಕ್ರಿಯೆ ಗಳಿಗೆ ಸಂಪೂರ್ಣವಾಗಿ ಹೊರತಲ್ಲವಾದರೂ ಅವುಗಳು ಸಾರುವ ಸತ್ಯಗಳು, ತತ್ವಗಳು, ಸೂತ್ರಗಳು ಬಹುಮಟ್ಟಿಗೆ ದೇಶಕಾಲಗಳ ಉಪಹತಿಯನ್ನು ಮೀರಿ ನಿಲ್ಲುತ್ತವೆ. ಹೀಗಾಗಿ ಅವು ಸಾರ್ವಕಾಲಿಕ, ಸಾರ್ವದೇಶಿಕವಾಗಿ ಪರಿಣಮಿಸುತ್ತವೆ ಅಥವಾ ಅಲ್ಪ ಸ್ವಲ್ಪ ಬದಲಾವಣೆ ಗಳೊಂದಿಗೆ ಇತರ ದೇಶಕಾಲಗಳಿಗೆ ಅನ್ವಯವಾಗುವ ವೈಶಿಷ್ಟ್ಯವನ್ನು ಪಡೆದುಕೊಂಡಿರು ತ್ತವೆ. ಆಕರ ಗ್ರಂಥಗಳು, ಸಂದರ್ಭ ಗ್ರಂಥಗಳು ಆಯಾ ಕ್ಷೇತ್ರದಲ್ಲಿನ ಪ್ರಾಜ್ಞ ವಿದ್ವಾಂಸರ ಆಲೋಚನಾ ಶಕ್ತಿ, ಜ್ಞಾನಾನ್ವೇಷಣೆ ಮತ್ತು ವಿಚಾರವಂತಿಕೆಗೆ ಸಾಕ್ಷಿಯಾಗಿರುತ್ತವೆ. ಆದ್ದರಿಂದ ಪಠ್ಯಪುಸ್ತಕಗಳ ಜೊತೆಗೆ ಅಮೂಲ್ಯವಾದ ಆಕರ ಗ್ರಂಥಗಳ, ಸಂದರ್ಭ ಗ್ರಂಥ ಗಳ ಸಂಪತ್ತನ್ನೂ ಹೆಚ್ಚಿಸಿಕೊಂಡು ಹೋಗಬೇಕಾದ್ದು ಅಗತ್ಯ, ಅನಿವಾರ್ಯ.

ಆಕರ ಗ್ರಂಥಗಳು, ಸಂದರ್ಭ ಗ್ರಂಥಗಳು ಭಾಷೆಯ ಶಕ್ತಿಗೂ ಒರೆಗಲ್ಲಾಗುತ್ತವೆ. ಸೀಮಿತ ವಾದಷ್ಟು ಅಥವಾ ಆವಶ್ಯಕವಾದಷ್ಟು ಪಾರಿಭಾಷಿಕ ಪದ ಸಂಗ್ರಹವನ್ನು ಬಳಸಿ ಪಠ್ಯಪುಸ್ತಕ ಗಳನ್ನು ರಚಿಸಬಹುದು; ಆವಶ್ಯಕವೆಂದು ಕಂಡುಬಂದಲ್ಲಿ ವಿವರಣೆಗಳನ್ನು ನೀಡಬಹುದು, ವಿಚಾರಗಳನ್ನು ಲಂಬಿಸಬಹುದು, ಉದಾಹರಣೆಗಳ ಮೂಲಕ ವಿಶದಪಡಿಸಬಹುದು. ಆದರೆ ವಿಚಾರ, ವಿವರಣೆ ಮತ್ತು ವಿಶದೀಕರಣಗಳ ದೃಷ್ಟಿಯಿಂದ ಹಿತಮಿತವಾಗಿ, ಸ್ಪಷ್ಟ ವಾಗಿ, ನಿರ್ದುಷ್ಟವಾಗಿ ನಿಖರವಾಗಿ ವಿಚಾರಗಳನ್ನು ವ್ಯಕ್ತಪಡಿಸುವಾಗ ಭಾಷೆ ಪರೀಕ್ಷೆಗೊಳ ಗಾಗುತ್ತದೆ. ಅದರ ಸುಪ್ತ ಶಕ್ತಿಗಳು ಹೊರಹೊಮ್ಮುತ್ತವೆ, ಸಿಡಿದೇಳುತ್ತವೆ, ಕಿಡಿಗೆದರು ತ್ತವೆ, ಭಾಷೆಯ ಸಂಪತ್ತು ಸಮೃದ್ಧವಾಗುತ್ತದೆ. ಭಾಷೆ ಎಲ್ಲ ಬಗೆಯ ವಿಚಾರಾಭಿವ್ಯಕ್ತಿಗೂ ಸಮರ್ಥ ವಾಹಕವಾಗುತ್ತದೆ.

ಯಾವುದೇ ಭಾಷೆಯಲ್ಲಿನ ಮಾನವಿಕ ಅಥವಾ ವೈಜ್ಞಾನಿಕ ಸಾಹಿತ್ಯ ನಿರಂತರವಾಗಿ ಭಾಷಾಂತರಗಳನ್ನು ಅವಲಂಬಿಸಿಕೊಂಡಿರುವುದು ಸಾಧ್ಯವಿಲ್ಲ. ಗ್ರಂಥ ಅಚ್ಚಾಗಿ ಹೊರ ಬರುವ ಹೊತ್ತಿಗಾಗಲೇ ನೂತನ ವಿಚಾರಗಳು ಹೊರಬಂದು ಗ್ರಂಥ ಹಳೆಯದಾಗಿ ಬಿಡುವಂತಹ ಸಂದರ್ಭಗಳಿರುವಾಗ (ಇಂಗ್ಲಿಷಿನಂಥ ಭಾಷೆಯಲ್ಲೂ ಕೂಡ) ಅಂಥ ಗ್ರಂಥ ಭಾಷಾಂತರವಾಗಿ ಹೊರಬೀಳುವ ಹೊತ್ತಿಗೆ ಮತ್ತಷ್ಟು ಹಳೆಯದಾಗಿ ಬಿಟ್ಟಿರುತ್ತದೆ. ಹೀಗಾಗಿ ಹೊಸ ಹೊಸ ಮೌಲಿಕ ಅಥವಾ ಸ್ವತಂತ್ರ ಗ್ರಂಥಗಳನ್ನು ರಚಿಸಬೇಕಾಗುತ್ತದೆ. ಇಲ್ಲವಾದರೆ ಈ ಪ್ರಗತಿಪಥದಲ್ಲಿ ಹೆಗಲೆಣೆಯಾಗಿ ನಡೆಯಲಾರದೆ ಆ ಭಾಷೆ ಮತ್ತು ಆ ಭಾಷೆಯ ನ್ನಾಡುವ ಜನ ಹಿಂದೆ ಬೀಳುತ್ತಾರೆ. ಮೇಲಾಗಿ ಒಂದು ಭಾಷೆಯಲ್ಲಿ ರಚಿತವಾಗುವ ಸ್ವತಂತ್ರ ಗ್ರಂಥಗಳ ಸಂಖ್ಯೆ ಆಯಾ ಜನತೆಯ ಸಂಶೋಧನಾಸಕ್ತಿ, ವಿನೂತನ ವಿಚಾರಗ್ರಹಣ ಸಾಮರ್ಥ್ಯ, ಬುದ್ಧಿ ಪ್ರಖರತೆ ಮತ್ತು ಪ್ರತಿಭೆಯ ಸಂಕೇತವಾಗಿರುತ್ತದೆ. ಕಾಲದೊಡನೆ ಸರಿ ಜೋಡಿಯಾಗಿ ಸಾಗಬೇಕಾದ್ದು ಅಪೇಕ್ಷಣೀಯ, ಅನಿವಾರ್ಯ.

ಈ ದೃಷ್ಟಿಯಿಂದ ಸ್ವತಂತ್ರ ಗ್ರಂಥಗಳ ರಚನೆ ವಿಶೇಷ ಪ್ರೋತ್ಸಾಹಕ್ಕೆ ಅರ್ಹವಾಗಿದೆ. ಈ ಅಂಶವನ್ನು ಗಮನಿಸಿ ವಿಶ್ವವಿದ್ಯಾನಿಲಯ ಬಹುಮಾನ ಯೋಜನೆಯೊಂದನ್ನು ಜಾರಿಗೆ ತಂದಿತು. ಈ ಯೋಜನೆಯ ಅಂಗವಾಗಿ ಮೊದಲ ಹಂತದಲ್ಲಿ ಮಾನವಿಕಗಳಲ್ಲಿ ಮನೋ ವಿಜ್ಞಾನಕ್ಕೂ, ವಿಜ್ಞಾನಗಳಲ್ಲಿ ಭೌತವಿಜ್ಞಾನ ಮತ್ತು ರಸಾಯನ ವಿಜ್ಞಾನಗಳಿಗೂ ಬಹುಮಾನ ಯೋಜನೆಯನ್ನು ಜಾರಿಗೆ ಕೊಡಲಾಗಿತ್ತು. ಈ ವರ್ಷ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಅರ್ಥ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳನ್ನು ಈ ಯೋಜನೆಗೆ ಒಳಪಡಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಈ ಯೋಜನೆಯನ್ನು ಇತರ ವಿಭಾಗಗಳಿಗೂ ವಿಸ್ತರಿಸಲಾಗು ತ್ತದೆ.

ಪ್ರತಿಭೆಯಲ್ಲಿ ವಿದ್ವತ್ತಿನಲ್ಲಿ ಸಂಶೋಧನಾನುರಕ್ತಿಯಲ್ಲಿ ಆಧುನಿಕ ವಿಚಾರಶೀಲತೆ ಯಲ್ಲಿ ಯಾರಿಗೂ ಕಡಿಮೆ ಇಲ್ಲದ ನಮ್ಮ ಅಧ್ಯಾಪಕವರ್ಗ ವಿನಯಸಂಪತ್ತನ್ನು ಸಮೃದ್ಧ ಗೊಳಿಸಿಕೊಂಡಿರುವುದರ ಜೊತೆಗೆ ಕನ್ನಡ ಭಾಷೆಯ ಜಾಯಮಾನಕ್ಕೆ ಅನುಗುಣವಾದ ನಿರೂಪಣ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕಾಗಿದೆ. ವಿಚಾರ ಪರಿಪ್ಲುತವಾಗಿರುವ ಅನೇಕ ಗ್ರಂಥಗಳು ಭಾಷೆಯ ದೃಷ್ಟಿಯಿಂದ ಕುಂಟುತ್ತವೆಂಬುದು ಲೇಖಕರ ಮತ್ತು ಓದುಗರ ಅಭಿಪ್ರಾಯವಾಗಿದೆ. ಕನ್ನಡ ಭಾಷೆಯ ಬಳಕೆಯ ವಿಚಾರದಲ್ಲಿ ‘ಬೇಸಿಗೆ ಶಿಬಿರ’ ವೊಂದನ್ನು ಏರ್ಪಡಿಸಲಾಗಿತ್ತು. ಈ ಬಗೆಯ ಲೇಖನ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುವುದು, ಕೆಲವಾದರೂ ಮಾರ್ಗದರ್ಶಿ ಸೂತ್ರಗಳನ್ನು ಕಂಡುಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿತ್ತು. ಮೊದಲ ಶಿಬಿರದಲ್ಲಿ 17 ಮಂದಿ ವಿಜ್ಞಾನ ಪಠ್ಯಪುಸ್ತಕ ಬರಹಗಾರರು ಒಂದುಗೂಡಿ ಕನ್ನಡದಲ್ಲಿ ವಿಜ್ಞಾನ ಪಠ್ಯಪುಸ್ತಕ ರಚನೆ ಮತ್ತು ಬೋಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿದರು. ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕಂಡು ಕೊಂಡರು. ಶಿಬಿರದ ಕಾರ್ಯಕಲಾಪಗಳನ್ನು ಇಷ್ಟರಲ್ಲಿಯೇ ಪುಸ್ತಕ ರೂಪದಲ್ಲಿ ಹೊರ ತರುವ ಯೋಜನೆ ಇದೆ. ಈ ಶಿಬಿರದಲ್ಲಿ ಗಳಿಸಿದ ಅನುಭವ ಮತ್ತು ಪ್ರತಿಫಲಗಳ ಆಧಾರದ ಮೇಲೆ ಆ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ. ಈ ಎಲ್ಲ ಪ್ರೇರಣೆ ಪ್ರೋತ್ಸಾಹಗಳ ಫಲವಾಗಿ ಕನ್ನಡದಲ್ಲಿ ಸ್ವತಂತ್ರ ಗ್ರಂಥಗಳ ಉತ್ತಮ ಫಸಲು ಮೂಡಿ ಬರುವುದೆಂದು ನಂಬಿದ್ದೇವೆ.

ಪ್ರೊ ॥ ಡಿ. ಎಲ್. ನರಸಿಂಹಾಚಾರ್ ಅವರ “ಪಂಪ ಭಾರತ ದೀಪಿಕೆ” ಕನ್ನಡ ಅಧ್ಯಯನ ಸಂಸ್ಥೆಯ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದಾಗುತ್ತದೆ ಎಂದು ನಂಬಿದ್ದೇನೆ. ಅವರ ಅನೇಕ ವರ್ಷಗಳ ಅಧ್ಯಯನ, ಸಂಶೋಧನಗಳ ಪಾಂಡಿತ್ಯಪೂರ್ಣಫಲ ಈ ವ್ಯಾಖ್ಯಾನ ಗ್ರಂಥದ ರೂಪದಲ್ಲಿ ನಮಗೆ ಇಂದು ಲಭ್ಯವಾಗಿದೆ. ಇಂಥ ವಿದ್ವತ್ ಸಾಹಸ ವಿರಳವಾಗುತ್ತಿರುವ ಈ ದಿನಗಳಲ್ಲಿ ವ್ಯಾಖ್ಯಾನ ಗ್ರಂಥಗಳ ಪ್ರಾಚೀನ ಪರಂಪರೆಯನ್ನು ಸಮರ್ಥ ರೀತಿಯಲ್ಲಿ ಮುಂದುವರಿಸಿರುವ ಕೀರ್ತಿಯೂ ಅವರದಾಗಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಸಂಶೋಧನ ಪ್ರಾಧ್ಯಾಪಕರಾಗಿದ್ದ ಅವಧಿಯಲ್ಲಿ ಅವರು ರಚಿಸಿದ ಗ್ರಂಥ ಇದು. ಇದನ್ನು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಕಟಿಸುವ ಅವಕಾಶ ಕೊಟ್ಟಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈ ಗ್ರಂಥವನ್ನು ಆದಷ್ಟು ಬೇಗ, ಹಾಗೂ ಸುಂದರವಾಗಿ ಅಚ್ಚಿಸಿಕೊಟ್ಟಿರುವ ವಿಶ್ವವಿದ್ಯಾನಿಲಯದ ಮುದ್ರಣಾಲಯದ ಡೆಪ್ಯುಟಿ ಡೈರೆಕ್ಟರ್ ಶ್ರೀ ಎಚ್. ನರಸಣ್ಣ ಅವರಿಗೂ ನನ್ನ ವಂದನೆಗಳು ಸಲ್ಲಬೇಕು.

ಹಾ. ಮಾ. ನಾಯಕ

ನಿರ್ದೇಶಕ

ಕನ್ನಡ ಅಧ್ಯಯನ ಸಂಸ್ಥೆ

ಮೈಸೂರು

೨೦-೪-೧೯೭೧

‌ಅರಿಕೆ

ಮೊದಲನೆಯ ಮುದ್ರಣ

‘ಪಂಪಭಾರತ’ ವೆಂದು ಪ್ರಸಿದ್ಧವಾಗಿರುವ ‘ವಿಕ್ರಮಾರ್ಜುನ ವಿಜಯ’ ವೆಂಬ ಮಹಾಕಾವ್ಯಕ್ಕೆ ವ್ಯಾಖ್ಯಾನವೊಂದನ್ನು ಬರೆಯಬೇಕೆಂಬ ಅಭಿಲಾಷೆ ನನಗೆ ಬಹು ಕಾಲದಿಂದ ಇತ್ತು. ಕೆಲವರು ಮಿತ್ರರೂ ಇಂಥ ಟೀಕೆಯೊಂದರ ಆವಶ್ಯಕತೆಯನ್ನು ತಿಳಿಸಿ ಅದನ್ನು ಬರೆಯ ಬೇಕೆಂದು ಒತ್ತಾಯಪಡಿಸುತ್ತಿದ್ದರು. ಬಿ.ಎ. (ಆನರ್ಸ್), ಎಂ.ಎ., ತರಗತಿಗಳ ಪ್ರೌಢ ಕನ್ನಡ ವಿದ್ಯಾರ್ಥಿಗಳಿಗೆ ಈ ಕಾವ್ಯವನ್ನು ಭಾಗಶಃ ಆಗಾಗ ಪಾಠವನ್ನು ಹೇಳಿ ಇಡೀ ಗ್ರಂಥವನ್ನು ಚೆನ್ನಾಗಿ ಅಧ್ಯಯನ ಮಾಡಬೇಕಾಯಿತು. ಇದಿರಾದ ತೊಡಕುಗಳನ್ನೂ ಸಮಸ್ಯೆಗಳನ್ನೂ ಯಥಾಮತಿಯಾಗಿ ಪರಿಹಾರ ಮಾಡಿಕೊಳ್ಳುವ ಪ್ರಯತ್ನ ಇಲ್ಲಿಯವರೆಗೂ ನಡೆದಿದೆ ಯಾದರೂ ವ್ಯಾಖ್ಯಾನವನ್ನು ಮಾತ್ರ ಬರೆಯುವುದಾಗಿರಲಿಲ್ಲ. ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗದವರು ೧೯೬೮-೬೯ನೆಯ ವರ್ಷದಲ್ಲಿ ನನಗೆ ನೀಡಿದ ನೆರವಿ ನಿಂದಲೂ ಪ್ರೋತ್ಸಾಹದಿಂದಲೂ ಈ ಟೀಕೆಯನ್ನು ಬರೆಯುವ ಕೆಲಸ ನೆರವೇರಿತು. ಇದಕ್ಕಾಗಿ ಆ ಆಯೋಗಕ್ಕೆ ನನ್ನ ತುಂಬು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಸಹಾಯ ನನಗೆ ಬರಲು ಮುಖ್ಯ ಕಾರಣರಾದ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ ॥ ಶ್ರೀಮಾಲಿ ಅವರಿಗೆ ನಾನು ತುಂಬ ಋಣಿಯಾಗಿದ್ದೇನೆ. ಅವರ ಉಪಕಾರವನ್ನು ನಾನು ಸ್ಮರಿಸಿಕೊಳ್ಳು ತ್ತೇನೆ.

ವ್ಯಾಖ್ಯಾನವನ್ನು ಬರೆದಾದ ಮೇಲೆ ಅದನ್ನು ಮುದ್ರಿಸುವ ಸಮಸ್ಯೆ ತಲೆದೋರಿತು. ಆಗ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಶ್ರೀಮಾನ್ ಪ್ರೊ ॥ ಡಿ. ಜವರೇಗೌಡರು ಆ ಸಂಸ್ಥೆಯ ವತಿಯಲ್ಲಿ ಈ ಟೀಕೆಯನ್ನು ಮುದ್ರಿಸಿ ಪ್ರಕಟಿಸುವ ಭರವಸೆಯನ್ನು ನೀಡಿ ಮುದ್ರಣದ ಕಾರ್ಯವನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯ ಪದವಿಯನ್ನು ಅವರು ಅಂಗೀಕರಿಸಿದ ಅನಂತರವೂ ಈ ಟೀಕೆಯ ಮುದ್ರಣಕಾರ್ಯ ವಿಷಯ ದಲ್ಲಿ ಅವರು ಆಸಕ್ತಿಯನ್ನು ಬಿಡಲಿಲ್ಲ. ಈ ಪ್ರೋತ್ಸಾಹಕ್ಕಾಗಿ ಅವರಿಗೆ ನನ್ನ ಹಾರ್ದಿಕ ವಂದನೆ ಗಳನ್ನು ಅರ್ಪಿಸುತ್ತೇನೆ. ಅವರ ಅನಂತರ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಬಂದಿರುವ ಡಾ ॥ ಹಾ. ಮಾ. ನಾಯಕ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

‘ಪಂಪ ಭಾರತ ದೀಪಿಕೆ’ ಎಂಬ ಈ ವ್ಯಾಖ್ಯಾನದ ವಿಷಯವಾಗಿ ನಾನು ಹೆಚ್ಚಾಗಿ ಹೇಳ ಬೇಕಾಗಿರುವುದು ಏನೂ ಇಲ್ಲ. ಬಲ್ಲವರಿಗೆ ಇಲ್ಲಿ ಬೆರಗೇನೂ ಇಲ್ಲ. ಈ ಕಾವ್ಯವನ್ನು ಅಭ್ಯಾಸ ಮಾಡುವ ಪ್ರೌಢ ವಿದ್ಯಾರ್ಥಿಗಳಿಗೂ ಇತರರಿಗೂ ಈ ಟೀಕೆಯಿಂದ ಸಾಕಷ್ಟು ಸಹಾಯವಾಗುವುದೆಂದು ನಾನು ನಂಬಿದ್ದೇನೆ. ಸಾಕಷ್ಟು ವಿಸ್ತಾರವಾಗಿ ಪ್ರತಿಪದಾರ್ಥ ಸಹಿತ ವಾಗಿ ಈ ಟೀಕೆ ರಚಿತವಾಗಿದೆ. ವ್ಯಾಕರಣ, ಛಂದಸ್ಸು, ಪೂರ್ವಕಥಾವೃತ್ತಾಂತ, ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು—ಮುಂತಾದ ಅನೇಕ ವಿಷಯಗಳು ಈ ಟೀಕೆಯಲ್ಲಿ ನಿರೂಪಿತ ವಾಗಿವೆ. ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ; ನನ್ನದೇ ಸರಿಯೆಂಬ ಹಠವೇನೂ ಇಲ್ಲ. ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಾಳವಾಗಿ ಬಳಸಿದ್ದೇನೆ. ತಿಳಿಯದ ಅಂಶಗಳಿಗೂ ಇದೇ ಚಿಹ್ನೆಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಗಳನ್ನು ತೆಗೆದುಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ; ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿದು ಹೊಸ ಆಧಾರಗಳು ತಲೆದೋರುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಾಗಬಹುದು. ಇವನ್ನೆಲ್ಲ ಸಹಾನುಭೂತಿಯಿಂದ ನೋಡಬೇಕೆಂದು ನನ್ನ ನಮ್ರತೆಯ ವಿನಂತಿ.

ದಿವಂಗತ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಸಂಪಾದಿತವಾಗಿ ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ೧೯೩೧ರಲ್ಲಿ ಪ್ರಕಟವಾದ ‘ಪಂಪಭಾರತ’ ದ ಪಾಠವನ್ನು ಇಲ್ಲಿ ಅನುಸರಿಸಿದೆ. ಈ ಗ್ರಂಥದ ಮೊದಲನೆಯ ಭಾಗವು (ಆಶ್ವಾಸ ೧-೮) ಬೆಳ್ಳಾವೆ ವೆಂಕಟ ನಾರಾಯಣಪ್ಪನವರಿಂದ ಮತ್ತೆ ಪರಿಷ್ಕೃತವಾಗಿ ೧೯೩೫ನೆಯ ಇಸವಿಯಲ್ಲಿ ಪರಿಷತ್ತಿನ ಮೂಲಕ ಪ್ರಕಟವಾಯಿತು. ಇಲ್ಲಿ ಅವಲಂಬಿಸಿರುವ ಪಾಠ, ಈ ಎಂಟು ಆಶ್ವಾಸಗಳಿಗೆ ಸೇರಿದ್ದು, ಈ ಪರಿಷ್ಕೃತ ಮುದ್ರಣದ್ದು. ನನಗೆ ಸರಿಯೆಂದು ತೋರಿಬಂದ ಎಡೆಗಳಲ್ಲಿ, ಅಡಿಟಿಪ್ಪಣಿಗಳಲ್ಲಿ ಕಾಣಿಸಿರುವ ಪಾಠಾಂತರಗಳನ್ನು ಪರಿಗ್ರಹಿಸಿದ್ದೇನೆ; ಸ್ವೀಕೃತ ಪಾಠಗಳನ್ನು ಬಿಟ್ಟಿದ್ದೇನೆ. ಕೆಲವೆಡೆ ನನ್ನಿಂದ ನಿಯೋಜಿತವಾಗಿರುವ ಪಾಠಗಳನ್ನು ಚೌಕಕಂಸ ಚಿಹ್ನೆಗಳಲ್ಲಿ ಅಳವಡಿಸಿದೆ. ಪಾಠ ಸಮಸ್ಯೆಗಳನ್ನು ಕೆಲವೆಡೆಗಳಲ್ಲಿ ಚರ್ಚೆ ಮಾಡಿದೆ. ಇವನ್ನೆಲ್ಲ ಸಾಮಾನ್ಯ ವಾಚಕರು ಗಮನಿಸಬೇಕಾಗಿಲ್ಲ.

ಈ ಟೀಕೆಯ ಜೊತೆಗೆ ಮೂಲಕಾವ್ಯ ಪಾಠವನ್ನೂ ಮುದ್ರಿಸಿದರೆ ಹೆಚ್ಚು ಅನುಕೂಲ ವಾಗುವುದೆಂದು ಕೆಲವರು ಸ್ನೇಹಿತರು ಹೇಳಿದರು. ಇದು ನಿಜವೇ ಆದರೂ ಮೂಲಕಾವ್ಯ ವನ್ನು ಇಲ್ಲಿ ಮುದ್ರಿಸುವುದರಿಂದ ಗ್ರಂಥದ ಬೆಲೆ ಇಮ್ಮಡಿ ಮೂವಡಿಯಾಗಿ ಹೆಚ್ಚಬೇಕಾಗು ತ್ತದೆ; ಕೊಳ್ಳುವವರಿಗೆ ಕಷ್ಟವಾಗುತ್ತದೆ. ಬೆಳ್ಳಾವೆ ವೆಂಕಟ ನಾರಾಯಣಪ್ಪನವರಿಂದ ಸಂಪಾದಿತ ವಾದ ‘ಪಂಪಭಾರತ’ ದ ಪುನರ್ಮುದ್ರಣವನ್ನು ಎರಡು ಭಾಗಗಳಾಗಿ ಮೈಸೂರು ವಿಶ್ವವಿದ್ಯಾ ನಿಲಯವು ಮುದ್ರಿಸಿ ಪ್ರಕಟಿಸಿರುವುದರಿಂದ ಆ ಗ್ರಂಥದ ಪ್ರತಿಗಳು ಬೇಕಾದವರಿಗೆ ಸುಲಭ ವಾಗಿ ದೊರೆಯುವಂತಾಗಿದೆ. ಈ ಕಾರಣಗಳಿಂದ ಇಲ್ಲಿ ಮೂಲಗ್ರಂಥದ ಪಾಠವನ್ನು ಸೇರಿಸಿಲ್ಲ.

ಈ ಗ್ರಂಥದ ಮುದ್ರಣದ ಕಾರ್ಯವನ್ನು ಆದಷ್ಟು ಕ್ಷಿಪ್ರತೆಯಿಂದ ಮಾಡಿಸಿದವರು ಮೈಸೂರು ವಿಶ್ವವಿದ್ಯಾನಿಲಯದ ಮುದ್ರಣಾಲಯಾಧಿಕಾರಿಗಳಾಗಿರುವ ಶ್ರೀಮಾನ್ ಎಚ್. ನರಸಣ್ಣ, ಎಂ. ಎ. ಅವರು. ನನ್ನ ತೊಡಕು ತಡೆಗಳನ್ನು ಸಹಿಸಿಕೊಂಡು ಅಚ್ಚಿನ ಕೆಲಸವನ್ನು ನೆರವೇರಿಸಿರುವ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥ ಅಚ್ಚಾಗುತ್ತಿರು ವಾಗ ಅದರ ಕರಡಚ್ಚುಗಳ ಪರಿಶೀಲನೆಯಲ್ಲಿ ನನಗಿಂತ ಹೆಚ್ಚಾಗಿ ದುಡಿದಿರುವವರು ನನ್ನ ಕಿರಿಯ ಸ್ನೇಹಿತರಾಗಿರುವ ಶ್ರೀಮಾನ್ ಎಚ್. ಎಸ್. ಹರಿಶಂಕರ್, ಎಂ.ಎ. ಅವರು; ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಸಾಲದು. ಅವರ ಆಸಕ್ತಿ ಒತ್ತಾಯಗಳಿಂದ ಅಚ್ಚಿನ ಕೆಲಸ ವೇಗವಾಗಿ ನಡೆಯುವಂತಾಯಿತು. ಮುಖ್ಯವಾಗಿ ಅವರು ನನ್ನ ಶ್ರಮವನ್ನು ಬಲುಮಟ್ಟಿಗೆ ಕಡಿಮೆ ಮಾಡಿದ್ದಾರೆ. ಈ ಗ್ರಂಥಕ್ಕೆ ಒಂದು ಶಬ್ದಸೂಚಿಯನ್ನು ಸಿದ್ಧಪಡಿಸಿ ಕೊಟ್ಟವರು ನನ್ನ ತರುಣ ಮಿತ್ರರಾದ ಶ್ರೀಮಾನ್ ಜಿ. ಜಿ. ಮಂಜುನಾಥ, ಎಂ.ಎ. ಅವರು. ತಮಗೆ ಬಿಡುವಾಗಿದ್ದ ಸಮಯದಲ್ಲಿ ಶ್ರಮವಹಿಸಿ ಈ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಈ ಉಪಕಾರಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಅಚ್ಚಿನ ತಪ್ಪುಗಳೂ ಇತರ ಬಗೆಯ ಸ್ಖಾಲಿತ್ಯಗಳೂ ಈ ಗ್ರಂಥದಲ್ಲಿ ಸಾಕಷ್ಟು ಉಳಿದು ಕೊಂಡಿರುವ ಸಂಭವವಿದೆ. ವಾಚಕರು ಇವನ್ನು ತಿದ್ದಿಕೊಂಡು ಉಪಕರಿಸುವರೆಂದು ನಂಬಿ ದ್ದೇನೆ.

ಡಿ. ಎಲ್. ನರಸಿಂಹಾಚಾರ್

ಮೈಸೂರು

29-3-1971

ಶ್ರೀ

ಪಂಪ ಭಾರತ ದೀಪಿಕೆ