೦೦೦ ಸೂ ರಣವ ...{Loading}...
ಸೂ. ರಣವ ಶೋಧಿಸಲೆಂದು ಕಳನೊಳು
ಹೆಣನ ತುಳಿತುಳಿದರಸೆ ಕುರುಧಾ
ರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ಯುದ್ಧಭೂಮಿಯಲ್ಲಿ ಗಾಂಧಾರಿ ಯುದ್ಧ ರಂಗದಲ್ಲಿ ಹೆಣಗಳನ್ನು ತುಳಿಯುತ್ತಾ ತನ್ನ ಮಕ್ಕಳನ್ನು ಹುಡುಕಲೆಂದು ಹೊರಟು ಕುರುಧಾರಿಣೀಪತಿಯಾದ ದುರ್ಯೋಧನನನ್ನು ಕಂಡು ತೀವ್ರವಾಗಿ ಶೋಕಿಸಿದಳು.
ಪದಾರ್ಥ (ಕ.ಗ.ಪ)
ಶೋಧಿಸು-ಹುಡುಕು, ಕಳ-ಯುದ್ಧಭೂಮಿ, ಅರಸೆ-ಹುಡುಕಲು, ಕುರುಧಾರುಣಿಯ ಪತಿ-ಕುರುಭೂಮಿಗೆ ಒಡೆಯ, ದುರ್ಯೋಧನ, ಮರುಗು-ದುಃಖಿಸು.
ಮೂಲ ...{Loading}...
ಸೂ. ರಣವ ಶೋಧಿಸಲೆಂದು ಕಳನೊಳು
ಹೆಣನ ತುಳಿತುಳಿದರಸೆ ಕುರುಧಾ
ರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು. ಕೃಷ್ಣನನ್ನು ನಯದಿಂದ ಕರೆದು ಗಾಂಧಾರಿಯು ತನ್ನ ಮನಸ್ಸಿನೊಳಗೆ ಸುಡುತ್ತಿರುವ ದುಃಖ ತೀವ್ರವಾಗಲು ಮಾತನಾಡಿದಳು. ಏಳು ತಂದೆ ಕೃಷ್ಣ. ಯುದ್ಧವೆಂಬ ಸರ್ಪದ ವಿಷದಿಂದ ಸುಟ್ಟು ಹೋಗಿರುವ ರಾಜವರ್ಗದವರನ್ನು ತೋರಿಸು ಎಂದು ಕೈಮುಗಿದು ಅವಳು ಹೇಳಿದಳು.
ಪದಾರ್ಥ (ಕ.ಗ.ಪ)
ಲೋಲಲೋಚನೆ-ಚಂಚಲವಾದ ಕಣ್ಣುಳ್ಳವಳು, ಹೆಂಗಸು (ಇಲ್ಲಿ ಗಾಂಧಾರಿ), ಅಂತಃಸ್ತಾಪಶಿಖಿ-ಒಳಗೇ ಸುಡುತ್ತಿರುವ ದುಃಖ , ಜಡಿಯೆ-ಪ್ರಜ್ವಲಿಸಲು, ಹೆಚ್ಚಾಗಲು, ಕದನವ್ಯಾಳವಿಷ ನಿರ್ದಗ್ಧ-ಯುದ್ಧವೆಂಬ ಸರ್ಪದ ವಿಷದಿಂದ ಸುಟ್ಟು ಹೋದ, ಧರಣೀಪಾಲವರ್ಗ-ರಾಜರ ಸಮೂಹ, ತರಳೆ-ಹೆಂಗಸು, ಮಹಿಳೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು ॥1॥
೦೦೨ ನಿನ್ನ ಲೀಲೆಯ ...{Loading}...
ನಿನ್ನ ಲೀಲೆಯ ಬೆಳೆಸಿರಿಯ ಸಂ
ಪನ್ನ ಮಾಯಾರಚನೆಯಿದು ನಿ
ರ್ಭಿನ್ನಭಾರತನಿಚಿತ ಬಹಳಾಕ್ಷೋಹಿಣೀ ದಳವ
ತನ್ನೊಡನೆ ಹಗೆಬೆಳೆದ ಶೌರ್ಯವಿ
ಪನ್ನರನು ತೋರೈ ಜನಾರ್ದನ
ಮನ್ನಿಸೆಂದಳು ನಯನಜಲವನು ಮಿಡಿದು ಗಾಂಧಾರಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಲೀಲಾ ವಿನೋದದ ಬೆಳೆಯ ಸಂಪತ್ತಿನ ಉತ್ತಮವಾದ ಮಾಯಾರಚನೆಯಿದು. ಅಭಿನ್ನವಾದ ಭಾರತವಂಶದಲ್ಲಿ ಸಂಗ್ರಹವಾದ ಬಹು ಅಕ್ಷೋಹಿಣೀ ಸೈನ್ಯವು ನಾಶವಾಯಿತು. ನಿನ್ನೊಡನೆ ವೈರವನ್ನು ಕಟ್ಟಿಕೊಂಡ ಶೌರ್ಯಸಂಪನ್ನರನ್ನು ತೋರಿಸು ಕೃಷ್ಣ, ನನ್ನನ್ನು ಕ್ಷಮಿಸು- ಎಂದು ಕಣ್ಣೀರನ್ನು ಬೆರಳಿನಲ್ಲಿ ಮಿಡಿದು ಗಾಂಧಾರಿ ಹೇಳಿದಳು.
ಪದಾರ್ಥ (ಕ.ಗ.ಪ)
ಬೆಳೆಸಿರಿ-ಬೆಳೆಯ ಸಂಪತ್ತು, ಸಂಪನ್ನ-ಉತ್ತಮವಾದ, ಮಾಯಾರಚನೆ-ಮಾಯೆಯಿಂದ ಸೃಷ್ಟಿಯಾದುದು, ನಿರ್ಭಿನ್ನ-ಭಿನ್ನವಾಗದ, ಏಕವಾಗಿದ್ದ, ಭಾರತ-ಭಾರತವಂಶ, ನಿಚಿತ-ಸಂಗ್ರಹವಾದ, ಸೇರಿದ, ಬಹಳಾ ಕ್ಷೋಹಿಣೀ(ಬಹಳ+ಅಕ್ಷೋಹಿಣಿ) ಅನೇಕ ಅಕ್ಷೋಹಿಣಿಗಳ, ಹಗೆಬೆಳೆದ-ವೈರತ್ವ ಬೆಳೆದ, ಶೌರ್ಯವಿಪನ್ನ-ಶೌರ್ಯಸಂಪನ್ನ, ಮನ್ನಿಸು-ಕ್ಷಮಿಸು, ನಯನಜಲ-ಕಣ್ಣೀರು.
ಮೂಲ ...{Loading}...
ನಿನ್ನ ಲೀಲೆಯ ಬೆಳೆಸಿರಿಯ ಸಂ
ಪನ್ನ ಮಾಯಾರಚನೆಯಿದು ನಿ
ರ್ಭಿನ್ನಭಾರತನಿಚಿತ ಬಹಳಾಕ್ಷೋಹಿಣೀ ದಳವ
ತನ್ನೊಡನೆ ಹಗೆಬೆಳೆದ ಶೌರ್ಯವಿ
ಪನ್ನರನು ತೋರೈ ಜನಾರ್ದನ
ಮನ್ನಿಸೆಂದಳು ನಯನಜಲವನು ಮಿಡಿದು ಗಾಂಧಾರಿ ॥2॥
೦೦೩ ತಾಯೆ ಬಾ ...{Loading}...
ತಾಯೆ ಬಾ ಗಾಂಧಾರಿ ಮನದಲಿ
ನೋಯದಿರು ಪೌರಾಣಜನ್ಮದ
ದಾಯಭಾಗದ ಭೋಗ ಭಂಗಿಸಲಳುಕಲೇಕಿನ್ನು
ಸಾಯಲಾಗದೆ ಸುಭಟರಸುಗಳು
ಬೀಯವೇ ಬ್ರಹ್ಮಾದಿಗಳಿಗಿದು
ದಾಯವೀ ಸಂಸಾರವೆಂದನು ನಗುತ ಮುರವೈರಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯೆ ಬಾ, ಗಾಂಧಾರಿ ಮನಸ್ಸಿನಲ್ಲಿ ನೋಯಬೇಡ. ಪೂರ್ವಜನ್ಮಗಳ (ಪಾಪಪುಣ್ಯಗಳ) ಭಾಗದ ಭೋಗವು ಈಗಿನ ಜನ್ಮದಲ್ಲಿ ಉಪದ್ರವ ಕೊಟ್ಟರೆ ಅದಕ್ಕೆ ಇನ್ನು ಏಕೆ ಅಳುಕಬೇಕು (ಹುಟ್ಟಿದ ಮೇಲೆ) ಸಾಯಲಾಗದೇ ಬದುಕಿರಲು ಸಾಧ್ಯವೇ. ಶ್ರೇಷ್ಠರಾದ ವೀರರ ಪ್ರಾಣಗಳು ಕಳೆದು ಹೋಗವೇ. ಬ್ರಹ್ಮಾದಿಗಳಿಗೆ ಸಹ ಈ ಸಂಸಾರದ ಸುಖದುಃಖಗಳು ಅನುಭವಕ್ಕೆ ಬರುವುವುಗಳೇ ಆಗಿವೆ. ಎಂದು ಕೃಷ್ಣ ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ಪೌರಾಣಜನ್ಮ-ಹಿಂದಿನ ಜನ್ಮಗಳು, ಹಳೆಯ ಜನ್ಮಗಳು, ದಾಯಭಾಗ-ಪ್ರಾಚೀನ ಕರ್ಮದ ಫಲ ಭೋಗ-ಅನುಭವಿಸಲ್ಪಡುವುದು, ಭಂಗಿಸು-ತೊಂದರೆ ಕೊಡು, ಅಸುಗಳು-ಪ್ರಾಣಗಳು, ಬೀಯ-ವ್ಯಯ, ವೆಚ್ಚವಾಗು, ನಾಶವಾಗು, ದಾಯ-ಪಾಲಿಗೆ ಬಂದದ್ದು, ಮುರವೈರಿ-ಕೃಷ್ಣ.
ಮೂಲ ...{Loading}...
ತಾಯೆ ಬಾ ಗಾಂಧಾರಿ ಮನದಲಿ
ನೋಯದಿರು ಪೌರಾಣಜನ್ಮದ
ದಾಯಭಾಗದ ಭೋಗ ಭಂಗಿಸಲಳುಕಲೇಕಿನ್ನು
ಸಾಯಲಾಗದೆ ಸುಭಟರಸುಗಳು
ಬೀಯವೇ ಬ್ರಹ್ಮಾದಿಗಳಿಗಿದು
ದಾಯವೀ ಸಂಸಾರವೆಂದನು ನಗುತ ಮುರವೈರಿ ॥3॥
೦೦೪ ಎನ್ದು ಕೈಗೊಟ್ಟಬಲೆಯನು ...{Loading}...
ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳಿ ಕೃಷ್ಣನು ಗಾಂಧಾರಿಯನ್ನು ಕೈಹಿಡಿದುಕೊಂಡು ಯುದ್ಧ ಭೂಮಿಗೆ ಕರೆತಂದ. ಅವರ ಹಿಂದೆ ಹದಿನೆಂಟು ಅಕ್ಷೋಹಿಣಿಯ ಸೈನಿಕರ ಪತ್ನಿಯರು ಬರುತ್ತಿರಲು ಮುಂದೆ ಹೆಣಗಳನ್ನು ತಿನ್ನುವ ಭೂತಭೇತಾಳಗಳು ಪಕ್ಷಿ, ಮೃಗಗಳ ಸಮೂಹ ಹೋಗುತ್ತಿತ್ತು. ಭೂತ, ಪೂತನಿಯರ ಸಮೂಹ ಕೆದರಿತು. ಇವರು ಭಯಂಕರವಾದ ರಣರಂಗವನ್ನು ಹೊಕ್ಕರು.
ಪದಾರ್ಥ (ಕ.ಗ.ಪ)
ಕೈಗೊಟ್ಟು-(ಕೈ+ಕೊಟ್ಟು) ಕೈಹಿಡಿದು, ಅಷ್ಟಾದಶಾಕ್ಷೋಹಿಣಿಯ ನಾರಿಯರು-ಹದಿನೆಂಟು ಅಕ್ಷೋಹಿಣಿಯ ಸೈನಿಕರ ಹೆಂಡತಿಯರು, ಹೆಣದಿನಿಹಿ-ಹೆಣಗಳನ್ನು ತಿನ್ನುವವುಗಳು, ನಾಯಿ, ನರಿ, ಭೂತ, ಭೇತಾಳ, ಶಾಕಿನಿ ಇತ್ಯಾದಿಗಳು, ಖಗ-ಹಾರುವ ಪಕ್ಷಿಗಳು, ಮೃಗ-ಪ್ರಾಣಿಗಳು, ಚೆಲ್ಲಿತು-ಹೊರಟಿತು, ಪೂತನಿÉೂಂದು ಬಗೆಯ ರಾಕ್ಷಸಿ, ಕೆದರಿತು-ಹರಡಿತು.
ಮೂಲ ...{Loading}...
ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ ॥4॥
೦೦೫ ಸೂಸಿತಬಲಾವೃನ್ದ ಕೆದರಿದ ...{Loading}...
ಸೂಸಿತಬಲಾವೃಂದ ಕೆದರಿದ
ಕೇಶಪಾಶದ ತೆಳುವಸುರ ನಿ
ಟ್ಟಾಸುರದ ಹೊಯ್ಲುಗಳ ಲೋಚನವಾರಿಧಾರೆಗಳ
ಆಸುರಾಕ್ರಂದನದ ಶೋಕಾ
ವೇಶ ಬಹಳದ ಬಾಲೆಯರು ಪ್ರಾ
ಣೇಶ ಮೈದೋರೆನುತ ಹೊಕ್ಕರಸಿದರು ಕಳನೊಳಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಿಳೆಯರ ಸಮೂಹವು ತುಂಬಿಹೋಯಿತು. ಕೆದರಿದ ತಲೆಗೂದಲುಗಳ, ತೆಳುಹೊಟ್ಟೆಗಳನ್ನು ದುಃಖದಿಂದ ಬಡಿದುಕೊಳ್ಳುವ, ಕಣ್ಣೀರಿನ ಪ್ರವಾಹಗಳ, ದುಃಖದಿಂದ ರೋಧಿಸುವ, ಬಹಳ ಶೋಕಾವೇಶದ ಹೆಂಗಸರು, ಪ್ರಾಣೇಶನೇ ಮೈದೋರು ಎನ್ನುತ್ತಾ ಯುದ್ಧಭೂಮಿಯೊಳಕ್ಕೆ ಪ್ರವೇಶಿಸಿ ಹುಡುಕಿದರು.
ಪದಾರ್ಥ (ಕ.ಗ.ಪ)
ಸೂಸಿತು-ತುಂಬಿತು, ಕೇಶಪಾಶ-ತಲೆಗೂದಲು (ಜಡೆಗೊಂಡ ಕೂದಲು) ನಿಟ್ಟಾಸುರ-ತೀವ್ರದುಃಖ, ಹೊಯ್ಲು-ಹೊಡೆತ, ಬಡಿತ, ಲೋಚನವಾರಿಧಾರೆ-ಕಣ್ಣೀರಿನ ಪ್ರವಾಹ, ಆಸುರಾಕ್ರಂದನ-ಶೋಕದಿಂದ ರೋಧಿಸುವ ಶಬ್ಧ, ಮೈದೋರು-ಕಾಣಿಸಿಕೊ.
ಮೂಲ ...{Loading}...
ಸೂಸಿತಬಲಾವೃಂದ ಕೆದರಿದ
ಕೇಶಪಾಶದ ತೆಳುವಸುರ ನಿ
ಟ್ಟಾಸುರದ ಹೊಯ್ಲುಗಳ ಲೋಚನವಾರಿಧಾರೆಗಳ
ಆಸುರಾಕ್ರಂದನದ ಶೋಕಾ
ವೇಶ ಬಹಳದ ಬಾಲೆಯರು ಪ್ರಾ
ಣೇಶ ಮೈದೋರೆನುತ ಹೊಕ್ಕರಸಿದರು ಕಳನೊಳಗೆ ॥5॥
೦೦೬ ಹರಿದರಗಲಕೆ ನಾರಿಯರು ...{Loading}...
ಹರಿದರಗಲಕೆ ನಾರಿಯರು ಕುರು
ಧರಣಿಯಲಿ ತಂತಮ್ಮ ಪತಿಗಳ
ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲ್ಲಿ
ಶಿರವ ಮುಂಡಾಡಿದರು ಹೆಣನಲಿ
ಹೊರಳಿದರು ವಿವಿಧ ಪ್ರಳಾಪದ
ಪರಿಠವವನೆಂತರಿದರೋ ವರ್ಣಿಸುವಡರಿದೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಭೂಮಿಯ ಉದ್ದಗಲಕ್ಕೂ ಮಹಿಳೆಯರು ಓಡಾಡಿದರು. ತಮ್ಮತಮ್ಮ ಗಂಡಂದಿರನ್ನು ಅಲ್ಲಲ್ಲಿ ಆನೆಗಳಲ್ಲಿ, ಕುದುರೆಗಳಲ್ಲಿ, ರಥಗಳಲ್ಲಿ, ಕಂಡರು. ಅವರ ಶಿರಗಳನ್ನು ಮುದ್ದಾಡಿದರು. ಹೆಣದ ಮೇಲೆ ಹೊರಳಾಡಿದರು. ವಿವಿಧ ರೀತಿಯಲ್ಲಿ ಶೋಕದಿಂದ ಪ್ರಲಾಪಿಸುವುದನ್ನು ಹೇಗೆ ಕಲಿತರೋ ವರ್ಣಿಸಲು ಸಾಧ್ಯವಿಲ್ಲವೆಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಹರಿದರು-ಓಡಾಡಿದರು, ಅಗಲಕ್ಕೆ-ಉದ್ದಗಲಗಳಲ್ಲಿ, ಕುರುಧರಣಿಯಲಿ-ಕುರುಕ್ಷೇತ್ರದಲ್ಲಿ, ಮುಂಡಾಡಿದರು-ಮುದ್ದಾಡಿದರು, ಪ್ರಳಾಪ-ಅಳುವುದು, ಪರುಠವ-ವಿವರ, ಕ್ರಮ, ರೀತಿ
ಮೂಲ ...{Loading}...
ಹರಿದರಗಲಕೆ ನಾರಿಯರು ಕುರು
ಧರಣಿಯಲಿ ತಂತಮ್ಮ ಪತಿಗಳ
ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲ್ಲಿ
ಶಿರವ ಮುಂಡಾಡಿದರು ಹೆಣನಲಿ
ಹೊರಳಿದರು ವಿವಿಧ ಪ್ರಳಾಪದ
ಪರಿಠವವನೆಂತರಿದರೋ ವರ್ಣಿಸುವಡರಿದೆಂದ ॥6॥
೦೦೭ ನಡೆದಳಾ ಗಾನ್ಧಾರಿ ...{Loading}...
ನಡೆದಳಾ ಗಾಂಧಾರಿ ಶೋಕದ
ಕಡಲೊಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ಡೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗಾಂಧಾರಿಯು ಶೋಕಸಾಗರದಲ್ಲಿ ಮುಳುಗುತ್ತ ಏಳುತ್ತ ನಡೆದಳು. ರಕ್ತದ ಪ್ರವಾಹದಲ್ಲಿ ಪಾದಗಳನ್ನು ಮತ್ತು ಮಂಡಿಯವರೆಗೆ ಮುಳುಗಿದ ಕಾಲುಗಳನ್ನು ಕೊಡಹುತ್ತ ನಡೆಯುವಾಗ ಶವಗಳ ಮೇಲೆ ಊರಿದ ಕಾಲು ಮಾಂಸದಲ್ಲಿ ಸಿಕ್ಕಿಕೊಂಡರೆ ಕೂಡಲೇ ಕೃಷ್ಣ ಅವಳನ್ನು ಮೇಲಕ್ಕೆತ್ತುತ್ತಾನೆ. ನರಗಳು ಕಾಲಿಗೆ ತೊಡರಿಕೊಂಡರೆ ಅವುಗಳನ್ನು ಬಿಡಿಸಿಕೊಳ್ಳುತ್ತಾ ಗಾಂಧಾರಿ ಹೆಣಗಳ ಮಧ್ಯದಲ್ಲಿ ಹೋಗುತ್ತಿದ್ದಳು.
ಪದಾರ್ಥ (ಕ.ಗ.ಪ)
ಅಂಘ್ರಿಯ ಕೊಡಹುತ-ಪಾದಗಳನ್ನು ಜಾಡಿಸುತ್ತ, ಅರುಣಾಂಬು-ಕೆಂಪು ನೀರು, ರಕ್ತ, ಹೊನಲು-ಪ್ರವಾಹ, ಜಾನುದಘ್ನ-ಮಂಡಿಯವರೆಗೆ, ಮೊಳಕಾಲವರೆಗೆ, ಅಡಗು-ಮಾಂಸ, ಸಿಲುಕಿದಡೆ-ಸಿಕ್ಕಿಕೊಂಡರೆ, ನೆಗಹು-ಎತ್ತು, ನರವಿನ ತೊಡಕು-ನರಗಳ ಸಿಕ್ಕು.
ಮೂಲ ...{Loading}...
ನಡೆದಳಾ ಗಾಂಧಾರಿ ಶೋಕದ
ಕಡಲೊಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ಡೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ ॥7॥
೦೦೮ ಇತ್ತ ನೋಡೈ ...{Loading}...
ಇತ್ತ ನೋಡೈ ದೇವಕೀಸುತ
ಮತ್ತಗಜ ಕಂಧರದೊಳಾ ಭಗ
ದತ್ತನನು ಕಂಡಾತನರಸಿಯರೈದೆ ಮೊಗವೆತ್ತಿ
ಸುತ್ತಬರುತೈದಾರೆ ದಂತಿಯ
ಹತ್ತಲರಿಯದೆ ನೂರುಮಡಿ ಶೋ
ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಕೀಸುತನಾದ ಕೃಷ್ಣನೇ, ಈ ಕಡೆ ನೋಡು. ಮದಿಸಿದ ಆನೆಯ ಕುತ್ತಿಗೆಯ ಮೇಲಿರುವ ಆ ಭಗದತ್ತನನ್ನು ಕಂಡು ಅವನ ಹೆಂಡತಿಯರು ಮುಖಗಳನ್ನು ಮೇಲೆತ್ತಿಕೊಂಡು ನೋಡುತ್ತಾ ಸುತ್ತಿ ಬರುತ್ತಿದ್ದಾರೆ, ಆ ಮಹಿಳಾ ಸಮೂಹವು ಆನೆಯನ್ನು ಹತ್ತಲು ಸಾಧ್ಯವಾಗದೆ ನೂರು ಮಡಿ ಶೋಕದಿಂದಿದೆ - ಶಿವಶಿವ ಎನ್ನುತ್ತ ಗಾಂಧಾರಿ ಶೋಕಿಸಿದಳು.
ಪದಾರ್ಥ (ಕ.ಗ.ಪ)
ಮತ್ತಗಜ-ಮದಿಸಿದ ಆನೆ, (ಸುಪ್ರತೀಕಗಜ) ಕಂಧರ-ಕತ್ತು, ಕುತ್ತಿಗೆ, ದಂತಿ-ದಂತವುಳ್ಳದ್ದು ಆನೆ, ಶೋಕೋತ್ತರ-ಹೆಚ್ಚಾದ ಶೋಕ, ಮರುಗು-ಶೋಕಿಸು
ಟಿಪ್ಪನೀ (ಕ.ಗ.ಪ)
- ‘ಸುಪ್ರತೀಕ’ವೆಂಬುದು ಭಗದತ್ತನ ಆನೆಯ ಹೆಸರು. ಇದರ ಅಲಂಕಾರ, ಯುದ್ಧವರ್ಣನೆ, ನಡವಳಿಕೆ, ಮರಣ ಮುಂತಾದ ವಿವರಗಳಿಗೆ ದ್ರೋಣ ಪರ್ವದ 3ನೆಯ ಸಂಧಿಯನ್ನು ನೋಡಬಹುದು. ಅಲ್ಲಿ ಭಗದತ್ತ ಆನೆಯ ಮೇಲಿನಿಂದ ಭೂಮಿಗೆ ಬಿದ್ದುದನ್ನು ಕವಿ ಚಿತ್ರಿಸಿ, ಇಲ್ಲಿ ‘ಆನೆಯ ಮೇಲಿರುವ ಭಗದತ್ತನ ಶವ’ - ವೆಂದು ಹೇಳಿದ್ದಾನೆ.
ಮೂಲ ...{Loading}...
ಇತ್ತ ನೋಡೈ ದೇವಕೀಸುತ
ಮತ್ತಗಜ ಕಂಧರದೊಳಾ ಭಗ
ದತ್ತನನು ಕಂಡಾತನರಸಿಯರೈದೆ ಮೊಗವೆತ್ತಿ
ಸುತ್ತಬರುತೈದಾರೆ ದಂತಿಯ
ಹತ್ತಲರಿಯದೆ ನೂರುಮಡಿ ಶೋ
ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ ॥8॥
೦೦೯ ದೇವ ನೋಡಾ ...{Loading}...
ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ, ಶೋಕಾಗ್ನಿಯಿಂದ ಬೇಯುತ್ತಿರುವ ಕಾಂಭೋಜರಾಜನ ಅರಸಿಯರನ್ನು ನೋಡು. ಅವರು ಈ ಸ್ಥಿತಿಗೆ ಬರಲು ಯಾವ ವ್ರತವನ್ನು ಹಿಡಿದಿದ್ದರೋ ಶಿವಶಿವ ಮಹಾದೇವ. ಅಲ್ಲಿ ತೊರುತ್ತಿರುವವನು ಯಾರು. ಅವನು ನಿಮ್ಮವರಾದ ಪಾಂಡವರ ಮಾವನಾದ ಪಾಂಚಾಲರಾಯನೇ? ಹೆಂಡಿರು ತಮ್ಮ ಗಂಡಂದಿರ ಶವಗಳ ಮೇಲೆ ಹೊರಳಿ ಜೀವಬಿಡುತ್ತಿದ್ದಾರೆ.
ಪದಾರ್ಥ (ಕ.ಗ.ಪ)
ಶೋಕವಹ್ನಿ-ದುಃಖದ ಬೆಂಕಿ, ಡಾವರ-ಬಿಸಿ, ಬೇಗೆ, ನೋಂಪಿ-ವ್ರತ, ನೋಂತರೊ-ವ್ರತಹಿಡಿದರೋ, ಜೀವದಲಿ ಜಾರಿದರು- ಜೀವವನ್ನು ಬಿಟ್ಟರು, ತನಿಹೊರಳಿ-ಹೆಚ್ಚಾಗಿ ಹೊರಳುತ್ತಾ.
ಟಿಪ್ಪನೀ (ಕ.ಗ.ಪ)
ಕಾಂಭೋಜನರಸಿಯರು-ಕಾಂಭೋಜರಾಜನಾದ ಸುದಕ್ಷಿಣನ ಹೆಂಡತಿಯರು. ಈತನನ್ನು ಮಹಾಭಾರತ ಯುದ್ಧದಲ್ಲಿ ಅರ್ಜುನ ಕೊಂದ.
ಮೂಲ ...{Loading}...
ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ ॥9॥
೦೧೦ ಅದೆ ವಿರಾಟನ ...{Loading}...
ಅದೆ ವಿರಾಟನ ಸತಿಯರೀಚೆಯ
ಲದೆ ಘಟೋತ್ಕಚನಂಗನೆಯರಾ
ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕೆಯರ
ಒದರಿ ಪಾಂಡ್ಯನ ಹೆಂಡಿರಾಚೆಯ
ಲದೆ ಸುಸೋಮಕ ಸೃಂಜಯಾದ್ಯರ
ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ನಿಮ್ಮ ಸೈನ್ಯದ(ಪಾಂಡವರ ಸೈನ್ಯದಲ್ಲಿ) ವಿರಾಟರಾಜನ ಹೆಂಡತಿಯರು ಅಲ್ಲಿದ್ದಾರೆ. ಈಚೆಯಲ್ಲಿ ಘಟೋತ್ಕಚನ ಪತ್ನಿಯರಿದ್ದಾರೆ. ಪಂಚಕೇಕೆಯರ ಪತ್ನಿಯರ ಶೋಕವನ್ನು ನೋಡು. ಶೋಕಿಸುತ್ತಿರುವ ಪಾಂಡ್ಯರಾಜನ ಪತ್ನಿಯರು ಆಚೆಯಲ್ಲಿದ್ದಾರೆ. ಸುಸೋಮಕ, ಸೃಂಜಯಾದಿಗಳ ಪತ್ನಿಯರು ಒರಲುತ್ತಿದ್ದಾರೆ - ಎಂದು ಗಾಂಧಾರಿ ಹೇಳಿದಳು.
ಪದಾರ್ಥ (ಕ.ಗ.ಪ)
ಅದೆ-ಇದೆ, ಇವೆ, ಇದ್ದಾರೆ (ಗ್ರಾಮ್ಯ ಪ್ರಯೋಗ) ಈಚೆಯಲದೆ-ಈ ಭಾಗದಲ್ಲಿದ್ದಾರೆ, ಸುದತಿಯರು-ಹೆಂಡಿರು, ಮಹಿಳೆಯರು, ಒದರಿ-ಗೋಳಿಡುತ್ತಾ, ಆಚೆಯಲದೆ- ಆ ಭಾಗದಲ್ಲಿ ಇದ್ದಾರೆ, ವಧುಗಳು-ಹೆಂಡತಿಯರು, ಒರಲುತ್ತದೆ-ಗೋಳಿಡುತ್ತಿದ್ದಾರೆ, ಮುರಾಂತಕ-ಕೃಷ್ಣ, ಮುರಾರಿ
ಟಿಪ್ಪನೀ (ಕ.ಗ.ಪ)
- ಪಂಚಕೇಕೆಯರು-ಕೇಕಯವೆಂಬುದು ಶತದ್ರೂ ನದಿಗೂ ವಿಪಾಶಾ ನದಿಗೂ ನಡುವಿನ ದೇಶ. ಈ ದೇಶದ ಅರಸಿರಿಗೂ ಈ ಹೆಸರು ಸಲ್ಲುತ್ತದೆ. (ಪುರಾಣನಾಮ ಚೂಡಾಮಣಿ) 2)ಪಾಂಡ್ಯ-ದ್ರವಿಡದೇಶದ ‘ಪ್ರವೀರ’ನೆಂಬ ಅರಸನಿಗೆ ಪಾಂಡ್ಯನೆಂಬ ಹೆಸರಿದೆ. ಅರ್ಜುನನ ಹೆಂಡತಿ ಚಿತ್ರಾಂಗದೆ ಇವನ ಮಗಳು. ಇವಳ ಮಗ ಬಭ್ರುವಾಹನ. ಪಾಂಡ್ಯರಾಜನು ಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ಹೋರಾಡಿ 17ನೆಯ ದಿನ ಅಶ್ವತ್ಥಾಮನಿಂದ ಹತನಾದ. 3)ಸುಸೋಮಕ-ಚಂದ್ರವಂಶದ ಪಾಂಚಾಲ ರಾಜನಾದ ಸಹದೇವನ ಮಗ. ಇವನಿಗೆ ನೂರು ಮಂದಿ ಮಕ್ಕಳು. (ಪುರಾಣನಾಮ ಚೂಡಾಮಣಿ 4)ಸೃಂಜಯರು-ಶಲ್ಯಪರ್ವದ 3ನೆಯ ಸಂಧಿಯ 23ನೆಯ ಪದ್ಯದ ಟಿಪ್ಪಣಿಯನ್ನು ನೋಡಿ.
ಮೂಲ ...{Loading}...
ಅದೆ ವಿರಾಟನ ಸತಿಯರೀಚೆಯ
ಲದೆ ಘಟೋತ್ಕಚನಂಗನೆಯರಾ
ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕೆಯರ
ಒದರಿ ಪಾಂಡ್ಯನ ಹೆಂಡಿರಾಚೆಯ
ಲದೆ ಸುಸೋಮಕ ಸೃಂಜಯಾದ್ಯರ
ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ ॥10॥
೦೧೧ ಸುಖಿ ಕಣಾ ...{Loading}...
ಸುಖಿ ಕಣಾ ಭೂರಿಶ್ರವನವರ
ಸಖಿಯರದೆ ಪಾಡಳಿದು ನಿಮ್ಮಯ
ಸಖನ ಗೆಲಿಸಿದಿರಿವನ ಮುರಿದಿರಿ ರಾಧೆಯಾತ್ಮಜನ
ನಿಖಿಳ ಯಾಚಕಜನ ಸಹಿತ ತ
ತ್ಸಖಿಯರಳುತದೆ ಕರ್ಣ ಮರಣದೊ
ಳಖಿಳಜಗ ನೀನೊಬ್ಬ ತಪ್ಪಿಸಿ ಮರುಗಿತಿಂದಿನಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂರಿಶ್ರವ ಸುಖಿಯಾದ (ಯುದ್ಧದಲ್ಲಿ ಮಡಿದದ್ದರಿಂದ) ಆದರೆ ಅವನ ಮಹಿಳೆಯರು ತಮ್ಮ ಮುಖ ಲಕ್ಷಣಗಳನ್ನು ಕಳೆದುಕೊಂಡು ಅಲ್ಲಿದ್ದಾರೆ. ನಿಮ್ಮ ಸ್ನೇಹಿತನಾದ ಅರ್ಜುನನನ್ನು ಗೆಲ್ಲಿಸಿದಿರಿ. ರಾಧಾತನುಜ ಕರ್ಣನನ್ನು ಕೊಲ್ಲಿಸಿದಿರಿ. ಬೇಡುವ ಜನರ ಸಹಿತವಾಗಿ ಕರ್ಣನ ಮಹಿಳೆಯರು ಅಳುತ್ತಿದ್ದಾರೆ. ನಿನ್ನೊಬ್ಬನನ್ನು ಹೊರತುಪಡಿಸಿ ಕರ್ಣನ ಮರಣದಲ್ಲಿ ಸಂಪೂರ್ಣ ಜಗತ್ತೇ ಈ ದಿನ ಮರುಗುತ್ತಿದೆ - ಎಂದು ಗಾಂಧಾರಿ ಕೃಷ್ಣನಿಗೆ ಹೇಳಿದಳು.
ಪದಾರ್ಥ (ಕ.ಗ.ಪ)
ಪಾಡಳಿದು-ಅಂದಗೆಟ್ಟು, ರೂಹುಗೆಟ್ಟು, ಸಖ-ಸ್ನೇಹಿತ, ಮುರಿದಿರಿ-ಕೊಂದಿರಿ, ನಾಶಮಾಡಿದಿರಿ, ರಾಧೆಯಾತ್ಮಜ-ರಾಧೆಯ ಮಗ, ಕರ್ಣ, ನಿಖಿಳ-ಎಲ್ಲ, ಯಾಚಕಜನ-ಬೇಡುವ ಜನ, ನೀನೊಬ್ಬತಪ್ಪಿಸಿ-ನಿನ್ನೊಬ್ಬನನ್ನು ಉಳಿದು.
ಟಿಪ್ಪನೀ (ಕ.ಗ.ಪ)
- ಭೂರಿಶ್ರವ-ಚಂದ್ರವಂಶದ ಸೋಮದತ್ತನ ಮಗ. ಭಾರತ ಯುದ್ಧದಲ್ಲಿ ದುರ್ಯೋಧನನ ಪರ ಹೋರಾಡಿದ. ಸಾತ್ಯಕಿಯ ಕೊರಳನ್ನು ಕಡಿಯಲು ಕೈಯೆತ್ತಿದಾಗ ಅರ್ಜುನ ಇವನ ತೋಳನ್ನು ಕಡಿದ. ಬಳಿಕ ಯುದ್ಧಭೂಮಿಯಲ್ಲಿಯೇ ಪ್ರಾಯೋಪವೇಶ ಮಾಡಿ ಕುಳಿತಿದ್ದಾಗ ಸಾತ್ಯಕಿ ಇವನ ತಲೆಯನ್ನು ಕತ್ತರಿಸಿದ. ದ್ರೋಣಪರ್ವದ 14ನೆಯ ಸಂಧಿಯ ಪದ್ಯ 1 ರಿಂದ 24ನ್ನು ನೋಡಬಹುದು.
ಮೂಲ ...{Loading}...
ಸುಖಿ ಕಣಾ ಭೂರಿಶ್ರವನವರ
ಸಖಿಯರದೆ ಪಾಡಳಿದು ನಿಮ್ಮಯ
ಸಖನ ಗೆಲಿಸಿದಿರಿವನ ಮುರಿದಿರಿ ರಾಧೆಯಾತ್ಮಜನ
ನಿಖಿಳ ಯಾಚಕಜನ ಸಹಿತ ತ
ತ್ಸಖಿಯರಳುತದೆ ಕರ್ಣ ಮರಣದೊ
ಳಖಿಳಜಗ ನೀನೊಬ್ಬ ತಪ್ಪಿಸಿ ಮರುಗಿತಿಂದಿನಲಿ ॥11॥
೦೧೨ ಭಾನುದತ್ತನ ಮೇಲೆ ...{Loading}...
ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಯಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ಭಾನುದತ್ತನ ಶವದ ಮೇಲೆ ಹೊರಳುತ್ತಿರುವ ಹೆಂಗಸರನ್ನು ನೋಡು. ದುಶ್ಶಾಸನನೇ ಮೊದಲಾದ ನನ್ನ ಮಕ್ಕಳನ್ನು ನೋಡು ಈ ಕಡೆಯಲ್ಲಿದ್ದಾರೆ. ನನ್ನ ಸೊಸೆಯಂದಿರಿಗಾದ ನಷ್ಟವನ್ನು ಏನೆಂದು ಹೇಳಲಿ. ಮಾದ್ರೇಶನಾದ ಶಲ್ಯನ ಹೆಂಡಂದಿರು ಏನು ಅಧರ್ಮವನ್ನು ಆಲೋಚಿಸಿದ್ದರು - ಎಂದು ಗಾಂಧಾರಿ ದುಃಖಿಸಿದಳು.
ಪದಾರ್ಥ (ಕ.ಗ.ಪ)
ಮಾನಿನಿಯರು-ಮಹಿಳೆಯರು, ಹೆಂಡಿರು, ಮತ್ಸೂನುಗಳ-ನನ್ನ ಮಕ್ಕಳನ್ನು,
ಟಿಪ್ಪನೀ (ಕ.ಗ.ಪ)
- ಭಾನುದತ್ತ-ಗಾಂಧಾರ ರಾಜನಾದ ಸುಬಲನ ಮಗ. ಶಕುನಿಯ ಸಹೋದರ. ಹದಿನಾಲ್ಕನೆಯ ದಿನದ ರಾತ್ರಿ ಯುದ್ಧದಲ್ಲಿ ಭೀಮನಿಂದ ಮಡಿದ.
ಮೂಲ ...{Loading}...
ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಯಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ ॥12॥
೦೧೩ ತನ್ದೆ ನೋಡೈ ...{Loading}...
ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಯಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ಕೃಷ್ಣ, ನನ್ನ ನೂರು ಜನ ಮಕ್ಕಳಿಗೆ ಕಿರಿಯಳಾದ ಇಂದುಮುಖಿಯಾದ ದುಶ್ಶಳೆಯನ್ನು ಆ ಸೈಂಧವನ ಪತ್ನಿಯನ್ನು ನೋಡು. ಅಂದು ಗುರುದ್ರೋಣಾಚಾರ್ಯರು ಅನೇಕ ರೀತಿಯ ವ್ಯೂಹಗಳನ್ನು ರಚಿಸಿ, ನನ್ನ ಅಳಿಯನನ್ನು ಕಾಪಾಡಲು ನಿಂತಿದ್ದರೂ ಸಹ ಹುಸಿರಾತ್ರಿಯಲ್ಲಿ ಅವನನ್ನು ನೀನು ಕೊಂದೆಯಲ್ಲಾ - ಎಂದು ಗಾಂಧಾರಿ ಹೇಳಿದಳು.
ಪದಾರ್ಥ (ಕ.ಗ.ಪ)
ನಂದನರು-ಮಕ್ಕಳು, ಕಿರಿಯಳು-ಚಿಕ್ಕವಳು,
ಮೂಲ ...{Loading}...
ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಯಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ ॥13॥
೦೧೪ ಕ್ಷೇಮಧೂರ್ತಿಯನಾ ಕಳಿಙ್ಗನ ...{Loading}...
ಕ್ಷೇಮಧೂರ್ತಿಯನಾ ಕಳಿಂಗನ
ಸೋಮದತ್ತನ ಚಿತ್ರಸೇನನ
ಭೀಮವೈರಿಯಲಂಬುಸನ ಕಿಮ್ಮೀರನಂದನನ
ಭೌಮಸುತನ ಸುಶರ್ಮಕನ ಸು
ತ್ರಾಮರಿಪುಗಳ ಭೂರಿಬಲದ ಸ
ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷೇಮಧೂರ್ತಿ, ಕಳಿಂಗ, ಸೋಮದತ್ತ, ಚಿತ್ರಸೇನ, ಭೀಮನ ಶತ್ರುವಾದ ಅಲಂಬುಸ, ಕಿಮ್ಮೀರನ ಮಗ ಭೌಮನ ಮಗ, ಸುಶರ್ಮ, ಇಂದ್ರಶತ್ರುಗಳಾದ ರಾಕ್ಷಸರು, ದೊಡ್ಡ ಸೈನ್ಯದ ತಮ್ಮ ಹೆಸರುಗಳನ್ನು ಸಾರ್ಥಕ ಮಾಡಿಕೊಂಡವರು ಇವರೆಲ್ಲರ ಪತ್ನಿಯರು ತಮ್ಮ ತಮ್ಮ ಗಂಡಂದಿರ ಶವಗಳ ಮೇಲೆ ಹೊರಳುತ್ತಿದ್ದಾರೆ.
ಪದಾರ್ಥ (ಕ.ಗ.ಪ)
ಸುತ್ರಾಮ ರಿಪುಗಳು-ದೇವೇಂದ್ರನ ವ್ಶೆರಿಗಳು, ರಾಕ್ಷಸರು, ಭೂರಿಬಲ-ಅಧಿಕವಾದ ಸೈನ್ಯ, ಸನಾಮರು-ಸಾರ್ಥಕವಾದ ಹೆಸರುಳ್ಳವರು, ಹೆಸರುಗಳನ್ನು ಸಾರ್ಥಕಗೊಳಿಸಿಕೊಂಡವರು
ಟಿಪ್ಪನೀ (ಕ.ಗ.ಪ)
- ಕ್ಷೇಮಧೂರ್ತಿ-ಸಾಲ್ವರಾಜನ ಮಂತ್ರಿ ಮತ್ತು ಸೇನಾಪತಿ. ಭಾರತ ಯುದ್ಧದಲ್ಲಿ ದುರ್ಯೋಧನನ ಪರ ಯುದ್ಧ ಮಾಡಿ ಮಡಿದ. (ಪುರಾಣನಾಮ ಚೂಡಾಮಣಿ)
- ಕಳಿಂಗ-ಭಾನುಮಂತನೆಂಬ ಕಳಿಂಗರಾಜ. ಇವನ ಮಗಳಾದ ಭಾನುಮತಿ ದುರ್ಯೋಧನನ ಪತ್ನಿ. ಇವನು ಭಾರತ ಯುದ್ಧದಲ್ಲಿ ಹೋರಾಡಿ ಭೀಮನಿಂದ ಮಡಿದ.
- ಸೋಮದತ್ತ-ಬಾಹ್ಲೀಕ ರಾಜನಮಗ. ಭೂರಿಶ್ರವನ ತಂದೆ. ಭಾರತ ಯುದ್ಧದಲ್ಲಿ ದುರ್ಯೋಧನನ ಪರ ಹೋರಾಡಿ ಸಾತ್ಯಕಿಯಿಂದ ಮರಣಹೊಂದಿದ
4)ಚಿತ್ರಸೇನ-ಅಭೀಸಾರ ದೇಶದ ರಾಜ 16ನೆಯ ದಿನದ ಯುದ್ಧದಲ್ಲಿ ಸಹದೇವನ ಮಗ ಶ್ರುತಕರ್ಮನಿಂದ ಹತನಾದ. 5)ಅಲಂಬುಸ-ಒಬ್ಬ ಅರಸು. ಮಹಾಭಾರತ ಯುದ್ಧಲ್ಲಿ ದುರ್ಯೋಧನನ ಪರ ಹೋರಾಡಿ ಸಾತ್ಯಕಿಯಿಂದ ಮಡಿದ
6)ಕಿಮ್ಮೀರನಂದನ-ಕಿಮ್ಮೀರನೆಂಬ ರಾಕ್ಷಸನ ಮಗ. ಕಿಮ್ಮೀರನು ಬಕಾಸುರನ ತಮ್ಮ. ಭೀಮ ಇವನನ್ನು ಕೊಂದ. ಕಿಮ್ಮೀರನ ಮಗನು ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಪರ ಹೊರಾಡಿ ಮಡಿದ.
7)ಭೌಮಸುತ-ನರಕಾಸುರನ ಮಗ, ಭಗದತ್ತ
8)ಸುಶರ್ಮಕ-ತ್ರಿಗರ್ತ ದೇಶದ ರಾಜ . ದುರ್ಯೋಧನನ ಆಪ್ತ ಮಿತ್ರ. ಭಾರತಯುದ್ಧದಲ್ಲಿ ಅರ್ಜುನನಿಂದ ಮಡಿದ
ಮೂಲ ...{Loading}...
ಕ್ಷೇಮಧೂರ್ತಿಯನಾ ಕಳಿಂಗನ
ಸೋಮದತ್ತನ ಚಿತ್ರಸೇನನ
ಭೀಮವೈರಿಯಲಂಬುಸನ ಕಿಮ್ಮೀರನಂದನನ
ಭೌಮಸುತನ ಸುಶರ್ಮಕನ ಸು
ತ್ರಾಮರಿಪುಗಳ ಭೂರಿಬಲದ ಸ
ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ ॥14॥
೦೧೫ ಎನುತ ಬರೆಬರೆ ...{Loading}...
ಎನುತ ಬರೆಬರೆ ಮುಂದೆ ಕಂಡಳು
ತನುಜನನು ಭೀಮನ ಗದಾ ಘ
ಟ್ಟನದ ಘಾಯದ ಮೆಯ್ಯ ಖಂಡಿಸಿದೂರುಮಂಡಲದ
ನನೆದ ಹುಡಿಮಗ್ಗುಲಿನ ರಕುತದ
ಹೊನಲ ಹೊಲಸಿದ ಘೂಕಕಾಕ
ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ ಬರುತ್ತಿರಲು, ಭೀಮನ ಗದೆಯ ಹೊಡೆತದಿಂದಾದ ಘಾಯಗೊಂಡ ಶರೀರದ, ಮತ್ತು ಮುರಿದ ತೊಡೆಗಳ, ಶರೀರದ ಒಂದು ಭಾಗದಲ್ಲಿ ಧೂಳಿನಿಂದ ಮೆತ್ತಿದ್ದ ದೇಹದ, ಹೊಲಸಿನ,ರಕ್ತದ ಪ್ರವಾಹದ ಗೂಬೆ ಕಾಗೆಗಳ ಭಯಂಕರ ಧ್ವನಿಯ ನಡುವೆ ಇದ್ದ ಕೌರವೇಶ್ವರನಾದ ದುರ್ಯೋಧನನ ಶವವನ್ನು ಗಾಂಧಾರಿಯು ಕಂಡಳು.
ಪದಾರ್ಥ (ಕ.ಗ.ಪ)
ಬರೆಬರೆ-ಬರುತ್ತಿರಲು, ತನುಜ-ಮಗ, ಗದಾಘಟ್ಟನ-ಗದೆಯ ಹೊಡೆತ, ಖಂಡಿಸಿದ-ಖಂಡಿತವಾದ, ತುಂಡಾದ, ಊರುಮಂಡಲ-ತೊಡೆಗಳ ಪ್ರದೇಶ, ನನೆದ-ಮೆತ್ತಿದ, ಹುಡಿ-ಧೂಳು, ಮಣ್ಣಿನ ಹುಡಿ, ಮಗ್ಗುಲು-ದೇಹದ ಪಾಶ್ರ್ವ, ಘೂಕ-ಗೂಬೆ, ಕಾಕ-ಕಾಗೆ, ಸನ್ನಿಧಾನ-ಉಪಸ್ಥಿತಿ, ಇರುವಿಕೆ,
ಪಾಠಾನ್ತರ (ಕ.ಗ.ಪ)
ಹೊಲಸಿದ - ಹೊಲಸಿನ
ಎಂಬ ಪಾಠವನ್ನು ಮೈ.ವಿ.ವಿ. ಪ್ರಕಟಿಸಿರುವ ಶಲ್ಯ-ಗದಾಪರ್ವ ಇಲ್ಲಿ ಸೂಚಿಸಿದೆ.
ಮೂಲ ...{Loading}...
ಎನುತ ಬರೆಬರೆ ಮುಂದೆ ಕಂಡಳು
ತನುಜನನು ಭೀಮನ ಗದಾ ಘ
ಟ್ಟನದ ಘಾಯದ ಮೆಯ್ಯ ಖಂಡಿಸಿದೂರುಮಂಡಲದ
ನನೆದ ಹುಡಿಮಗ್ಗುಲಿನ ರಕುತದ
ಹೊನಲ ಹೊಲಸಿದ ಘೂಕಕಾಕ
ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ ॥15॥
೦೧೬ ಇತ್ತ ನೋಡೈ ...{Loading}...
ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೊತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತಕಾಶಿನಿಯರುಗಳೀಗಳು
ಸುತ್ತಮುತ್ತಿತು ಘೂಕ ವಾಯಸ ಜಂಬುಕವ್ರಾತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಈ ಕಡೆ , ನನ್ನ ಮತ್ತದಂತಿಯನ್ನು, ಚಂದ್ರವಂಶದ ರಾಜೋತ್ತಮನನ್ನು ಹನ್ನೊಂದು ಅಕ್ಷೋಹಿಣಿಯ ಸೈನ್ಯದ ಒಡೆಯನನ್ನು ನೋಡು., ಹತ್ತಿರದಲ್ಲಿ ನಿಂತು ಸೇವೆ ಮಾಡುತ್ತಿದ್ದ ಸುಂದರ ಯುವತಿಯರಿರುತ್ತಿದ್ದ ಸ್ಥಳದಲ್ಲಿ ಈಗ ಸುತ್ತಲೂ ಗೂಬೆ, ಕಾಗೆ, ನರಿಗಳ ಗುಂಪು ಇದೆ.
ಪದಾರ್ಥ (ಕ.ಗ.ಪ)
ಮತ್ತದಂತಿ-ಮದಿಸಿದ ಆನೆ, ಪ್ರೀತಿಯಿಂದ ಮಕ್ಕಳನ್ನು ಸಂಬೋಧಿಸುವ ಕ್ರಮ, ಇಂದುಕುಲ-ಚಂದ್ರವಂಶ, ಹತ್ತೆ-ಸಮೀಪ, ಹತ್ತಿರ, ಓಲಗಿಸು-ಸೇವೆಮಾಡು, ಮತ್ತಕಾಶಿನಿ-ಮೋಹವನ್ನುಂಟು ಮಾಡುವವರು.
ಘೂಕ-ಗೂಬೆ, ವಾಯಸ-ಕಾಗೆ, ಜಂಬುಕ-ನರಿ, ವ್ರಾತ-ಗುಂಪು, ಸಮೂಹ
ಮೂಲ ...{Loading}...
ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೊತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತಕಾಶಿನಿಯರುಗಳೀಗಳು
ಸುತ್ತಮುತ್ತಿತು ಘೂಕ ವಾಯಸ ಜಂಬುಕವ್ರಾತ ॥16॥
೦೧೭ ಎನುತ ಬಿದ್ದಳು ...{Loading}...
ಎನುತ ಬಿದ್ದಳು ಮೂರ್ಛೆಯಲಿ ಮಾ
ನಿನಿಯನೆತ್ತಿದನಸುರರಿಪು ನೃಪ
ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು
ಜನಪತಿಯ ಮುಕ್ಕುರುಕಿದರು ತ
ಜ್ಜನಿತ ಶೋಕಾದ್ಭುತದ ಹಾ ಹಾ
ಧ್ವನಿಯು ಥಟ್ಟನೆ ಘಟ್ಟಿಸಿತು ಬ್ರಹ್ಮಾಂಡಮಂಡಲವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ ಗಾಂಧಾರಿ ಮೂರ್ಛಿತಳಾಗಿ ಬಿದ್ದಳು. ಕೃಷ್ಣ ಅವಳನ್ನು ಮೇಲೆತ್ತಿದ. ರಾಜ ಮಹಿಳೆಯರಾದ ಭಾನುಮತಿ ಮೊದಲಾದವರು ದುರ್ಯೋಧನನ ಹೆಣವನ್ನು ಮುತ್ತಿಕೊಂಡರು. ಅಲ್ಲಿ ಹುಟ್ಟಿದ ಶೋಕದ ಆಕ್ರಂದನ ಧ್ವನಿ ಕೂಡಲೇ ಬ್ರಹ್ಮಾಂಡ ಮಂಡಲವನ್ನು ತಾಗಿತು.
ಪದಾರ್ಥ (ಕ.ಗ.ಪ)
ಮಾನಿನಿ-ಮಹಿಳೆ, ನೃಪವನಿತೆಯರು-ರಾಜರ ಮಡದಿಯರು, ಮುಕ್ಕರುಕು-ಮುತ್ತಿಕೊಳ್ಳು, ತಜ್ಜನಿತ-ಅಲ್ಲಿ ಹುಟ್ಟಿದ, ಥಟ್ಟನೆ-ಕೂಡಲೇ, ಘಟ್ಟಿಸು-ತಾಗು, ಹೊಡೆ, ಬ್ರಹ್ಮಾಂಡಮಂಡಲ-ಬ್ರಹ್ಮನಿಂದ ನಿರ್ಮಿತವಾದ ಲೋಕಗಳು.
ಮೂಲ ...{Loading}...
ಎನುತ ಬಿದ್ದಳು ಮೂರ್ಛೆಯಲಿ ಮಾ
ನಿನಿಯನೆತ್ತಿದನಸುರರಿಪು ನೃಪ
ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು
ಜನಪತಿಯ ಮುಕ್ಕುರುಕಿದರು ತ
ಜ್ಜನಿತ ಶೋಕಾದ್ಭುತದ ಹಾ ಹಾ
ಧ್ವನಿಯು ಥಟ್ಟನೆ ಘಟ್ಟಿಸಿತು ಬ್ರಹ್ಮಾಂಡಮಂಡಲವ ॥17॥
೦೧೮ ಜನಪ ಕೇಳೀಚೆಯಲಿ ...{Loading}...
ಜನಪ ಕೇಳೀಚೆಯಲಿ ಕುಂತೀ
ವನಿತೆ ಕರ್ಣನ ಮೇಲೆ ಹೊರಳಿದ
ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
ನಿನಗೆ ಧರ್ಮಸುತಾದಿ ಭೂಮಿಪ
ರನುಜರೈ ಮಾಯಾವಿ ಮಧುಸೂ
ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ಕಡೆಯಲ್ಲಿ ಕುಂತಿಯೂ ಕರ್ಣನ ಶವದ ಮೇಲೆ ಬಿದ್ದು, ಸೂರ್ಯಪುತ್ರನೇ, ಹಾಕರ್ಣ, ಹಾ ಹಾ ಕರ್ಣ, ಹಾಯೆನ್ನುತ್ತ ಹೊರಳಿದಳು. ನಿನಗೆ ಧರ್ಮರಾಯನೇ ಮೊದಲಾದವರು ತಮ್ಮಂದಿರು. ಮಾಯಾವಿಯಾದ ಕೃಷ್ಣನೇ ಸತ್ಯವನ್ನು ಮರೆಮಾಚಿ ನಿನ್ನನ್ನು ಕೊಂದನು. ಅಯ್ಯೋ - ಎಂದು ಕುಂತಿ ಒರಲಿದಳು.
ಪದಾರ್ಥ (ಕ.ಗ.ಪ)
ಇನತನುಜ-ಸೂರ್ಯನಮಗ ಕರ್ಣ, ಮರೆಯಿಸಿ-ಮರೆಮಾಚಿ,
ಮೂಲ ...{Loading}...
ಜನಪ ಕೇಳೀಚೆಯಲಿ ಕುಂತೀ
ವನಿತೆ ಕರ್ಣನ ಮೇಲೆ ಹೊರಳಿದ
ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
ನಿನಗೆ ಧರ್ಮಸುತಾದಿ ಭೂಮಿಪ
ರನುಜರೈ ಮಾಯಾವಿ ಮಧುಸೂ
ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ ॥18॥
೦೧೯ ಅರಿದನನ್ತಕಸೂನು ಮುರಹರ ...{Loading}...
ಅರಿದನಂತಕಸೂನು ಮುರಹರ
ನಿರಿದನೇ ನಾವಿನ್ನು ಕರ್ಣಗೆ
ಕಿರಿಯರೈ ಲೇಸಾಯ್ತು ಗುರುಜನ ಬಂಧುಜನಹನನ
ಉರುವ ಶಶಿವಂಶದ ಮಹಾನೃಪ
ರೆರಗಿದರೆ ಪಾತಕಕೆ ಮುನ್ನೆ
ಚ್ಚರಿಸದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಈ ವಿಚಾರವನ್ನು ತಿಳಿದ. ಕೃಷ್ಣನೇ ಕೊಂದನೇ. ನಾವು ಕರ್ಣನಿಗೆ ತಮ್ಮಂದಿರೇ. ಗುರುಗಳ ಕೊಲೆ ಬಂಧುಜನಗಳ ಕೊಲೆ ಒಳ್ಳೆಯದಾಯಿತು (ಹತಾಶೆಯ ನುಡಿಗಳು) ಶ್ರೇಷ್ಠವಾದ ಕುರುವಂಶದ ಮಹಾರಾಜರುಗಳು ಪಾಪಕ್ಕೆ ಪಕ್ಕಾದರೇ. ಮೊದಲು ನಮಗೆ ಈ ವಿಚಾರವನ್ನು ತಿಳಿಸದೆ ತಾಯಿಯಾದ ಕುಂತಿ ಹಾಳುಮಾಡಿದಳೆಂದು ಧರ್ಮರಾಯ ದುಃಖಿಸಿದ.
ಪದಾರ್ಥ (ಕ.ಗ.ಪ)
ಅರಿದ-ತಿಳಿದ, ಅಂತಕಸೂನು-ಯಮನಮಗ, ಧರ್ಮರಾಯ, ಹನನ-ವಿನಾಶ, ಕೊಲೆ, ಉರುವ-ಶ್ರೇಷ್ಠವಾದ, ಎರಗು-ಬೀಳು, ಪಕ್ಕಾಗು, ಕೆಡಿಸಿದಳು-ಹಾಳು ಮಾಡಿದಳು
ಮೂಲ ...{Loading}...
ಅರಿದನಂತಕಸೂನು ಮುರಹರ
ನಿರಿದನೇ ನಾವಿನ್ನು ಕರ್ಣಗೆ
ಕಿರಿಯರೈ ಲೇಸಾಯ್ತು ಗುರುಜನ ಬಂಧುಜನಹನನ
ಉರುವ ಶಶಿವಂಶದ ಮಹಾನೃಪ
ರೆರಗಿದರೆ ಪಾತಕಕೆ ಮುನ್ನೆ
ಚ್ಚರಿಸದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ ॥19॥
೦೨೦ ಹೋಗಲಿನ್ನಾ ಕ್ಷತ್ರಧರ್ಮ ...{Loading}...
ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುವ್ರ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ್ಯನಿ
ಯೋಗವಿವೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಗಲಿ ಇನ್ನು ಆ ಕ್ಷತ್ರಿಯ ಧರ್ಮವನ್ನು ಬಿಟ್ಟು ಯುದ್ಧಮಾಡಿದೆವು ಎಂಬುದನ್ನೂ ಕೆಟ್ಟ ಘಟನೆಗಳ ಸರಮಾಲೆಯ ಬಗೆಗಿನ ಚಿಂತೆಯನ್ನೂ ನೀಗಿ ಕಳೆ - ಎಂದು ಕೃಷ್ಣ ಹೇಳುತ್ತಾ ಬಂದು ಧರ್ಮಜನನ್ನು ಸಮಾಧಾನಪಡಿಸಿದ. ಮುಂದೆ ಇವರುಗಳ ಸಂಸ್ಕಾರ ಕಾರ್ಯಗಳ ಜವಾಬ್ದಾರಿಗಳಿವೆ. ಸರಾಗದಿಂದ ಅವುಗಳನ್ನು ನಿರ್ವಹಿಸಿಯೆಂದು ಧರ್ಮರಾಯನಿಗೆ ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಕ್ಷತ್ರಧರ್ಮತ್ಯಾಗ-ಕ್ಷತ್ರಿಯ ಧರ್ಮವನ್ನು ಬಿಟ್ಟವೆಂಬ ಧರ್ಮಜನ ಚಿಂತೆ., ದುವ್ರ್ಯಸನ ಪ್ರಪಂಚ-ಕೆಟ್ಟ ಘಟನೆಗಳ ಸರಮಾಲೆ., ನೀಗಿಕಳೆ-ಕಳೆದು ಬಿಸಾಡು, ಮನ್ನಿಸಿದ-ಸಮಾಧಾನ ಮಾಡಿದ, ಮೇಗಿವರ-(ಮೇಗೆ+ಇವರ) ಇನ್ನು ಮೇಲೆ, ನಿಯೋಗ-ಕೆಲಸ, ಭಾರಂಕ-ಹೊಣೆ, ಜವಾಬ್ದಾರಿ, ಸರಾಗದಲಿ-ತೊಂದರೆಯಿಲ್ಲದೆ, ಆಯಾಸವಿಲ್ಲದೆ, ಸಂತೈಸಿ-ಆಗು ಮಾಡಿ, ನಿರ್ವಹಿಸಿ
ಮೂಲ ...{Loading}...
ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುವ್ರ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ್ಯನಿ
ಯೋಗವಿವೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ ॥20॥
೦೨೧ ವ್ಯಾಸ ನಾರದ ...{Loading}...
ವ್ಯಾಸ ನಾರದ ವಿದುರ ಸಾತ್ಯಕಿ
ಕೇಶವನು ದಾರುಕ ಯುಯುತ್ಸು ಮ
ಹೀಶ ಮೊದಲಾದನಿಬರರಸರ ಸಾರಥಿವ್ರಾತ
ಆ ಸಚಿವರಾ ಹಸ್ತಿನಾಪುರ
ದಾ ಸಮಸ್ತಪ್ರಕೃತಿಜನ ಸಂ
ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸ, ನಾರದ, ವಿದುರ, ಸಾತ್ಯಕಿ, ಕೃಷ್ಣ, ದಾರುಕ, ಯುಯುತ್ಸು, ಧರ್ಮರಾಯ ಮೊದಲಾವರೆಲ್ಲರೂ ಮತ್ತು ಆ ರಾಜರ ಸಾರಥಿಗಳು, ಆ ಸಚಿವರುಗಳು, ಹಸ್ತಿನಾಪುರದ ಎಲ್ಲ ಜನತೆ ಸೇರಿ, ಮರಣ ಹೊಂದಿದ ರಾಜರುಗಳಿಗೆ ಸಂಸ್ಕಾರ ವಿಧಿಗಳನ್ನು ನಿರ್ವಹಿಸಿದರು.
ಪದಾರ್ಥ (ಕ.ಗ.ಪ)
ದಾರುಕ-ಕೃಷ್ಣನ ಸಾರಥಿ, ಅನಿಬರ-ಎಲ್ಲರ, ಸಾರಥಿವ್ರಾತ-ಸಾರಥಿಗಳ ಸಮೂಹ, ಸಮಸ್ತಪ್ರಕೃತಿಜನ-ಎಲ್ಲ ಜನಸಾಮಾನ್ಯರು, ಸಂತೈಸು-ನಿರ್ವಹಿಸು, ಹತಮಹೀಶರು-ಮರಣ ಹೊಂದಿದ ರಾಜರು.
ಟಿಪ್ಪನೀ (ಕ.ಗ.ಪ)
ಶ್ರೀಕೃಷ್ಣನು ‘ಪಾರ್ಥಸಾರಥಿ’ಯಾದರೆ ದಾರುಕನು ಶ್ರೀಕೃಷ್ಣನ ಸಾರಥಿ. ಸಾರಥಿತನ ಎನ್ನುವುದ ಇವರ ಕುಟುಂಬದ ರಕ್ತದಲ್ಲಿದ್ದಂತೆ ಕಾಣುತ್ತದೆ. ಈತ ಕೃಷ್ಣನಿಗೆ ಸಾರಥಿಯಾಗಿದ್ದರೆ, ಇವನ ತಮ್ಮನು ಸಾತ್ಕಿಗೆ ಸಾರಥಿಯಾಗಿದ್ದ. ದಾರುಕನ ಮಗನಿಗೆ ದಾರಕಿ ಎಂದು ಹೆಸರು. ದಾರುಕಿಯು ಶ್ರೀಕೃಷ್ಣ ಮಗನಾದ ಪ್ರದ್ಯುಮ್ನನಿಗೆ ಸಾರಥಿಯಾಗಿದ್ದನೆಂದು ಹೇಳಲಾಗಿದೆ.
ದಾರುಕನ ರಥಚೋದನ ಪ್ರೌಢಿ ಮತ್ತು ಪ್ರಯಾಣೋತ್ಸಾಹ ಅನೇಕ ಕಡೆ ಶ್ಲಾಘಿಸಲ್ಪಟಿವೆ. ವಿರಾಟ ಪರ್ವದಲ್ಲಿ ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನನು ಶ್ರೀಕೃಷ್ಣನಿಗೆ ದಾರುಕನು ಸಾರಥಿಯಾದಂತೆ ತಾನು ಉತ್ತರನಿಗೆ ಸಾರಥಿಯಾಗುತ್ತೇನೆ ಎಂದು ಹೇಳುವುದರ ಮೂಲಕ ದಾರುಕನಿಗೆ ಗೌರವ ಸಲ್ಲಿಸಿದ್ಧಾನೆ. ಸಾಮಾನ್ಯವಾಗಿ ಶ್ರೀಕೃಷ್ಣ ಬಹುಸಂಚಾರಿ. ತುಂಬ ದೀರ್ಘಪ್ರಯಾಣ ಅವನಿಗೆ ರೂಢಿಯಾಗಿತ್ತು. ಆಗೆಲ್ಲ ಅವರ ರಥವನ್ನು ನಡೆಸುತ್ತಿದ್ದವನೆಂದರೆ ದಾರುಕನೇ. ಕೃಷ್ಣನಿಗೆ ಆಯಸವೇ ಆಗದಂತೆ ಚಾಕಚಕ್ಯದಿಂದ ರಥ ನಡೆಸುವುದರಲ್ಲಿ ದಾರುಕನು ಸಿದ್ಧಹಸ್ತನಾಗಿದ್ದ.
ಶ್ರೀಕೃಷ್ಣನು ಸೌಭನಗರದ ಸಾಲ್ವರಾಜನ ಮೇಲೆ ದಂಡೆತ್ತಿ ಹೋದದ್ದು ಸರಿಯಷ್ಟೆ. ಆಗ ಅವನ ಸಾರಥಿಯಾಗಿದ್ದ ದಾರುಕನು ಬರಿಯ ರಥಚಲಕನಾಗಿ ಉಳಿಯದೆ ಕಳೆಗುಂದಿದಾಗೆಲ್ಲ ಕೃಷ್ಣನನ್ನು ಹುರಿದುಂಬಿಸಿ ಸಾಲ್ವನನ್ನು ಕೊಲ್ಲುವಂತೆ ಪ್ರೇರಿಸುತ್ತಿದ್ದನೆಂಬ ಸಮಗತಿ ಉದ್ಯೋಗಪರ್ವದ 22ನೆಯ ಅಧ್ಯಾಯದಲ್ಲಿ ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಸಾಲ್ವನ ಬಾಣಗಳು ದಾರುಕನ ಮೇಲೂ ಬಿದ್ದು ತುಂಬ ಗಾಯವಾಗಿದ್ದರೂ ಲೆಕ್ಕಿಸದೆ ಕೃಷ್ಣನ್ನು ಉತ್ಸಾಹಗೊಳಿಸುತ್ತಿದ್ದನೆಂದು ವನಪರ್ವದಲ್ಲಿ ಹೇಳಲಾಗಿದೆ.
ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನೇ ಅರ್ಜುನನಿಗೆ ಸಾರಥಿಯಾಗಿದ್ದರೂ ಅವನ ರಥಮಾತ್ರ ಸದಾ ಯುದ್ಧಭೂಮಿಯಲ್ಲೇ ಸದಾ ಇರುತ್ತಿದ್ದ. ದ್ರೋಣಪರ್ವದಲ್ಲಿ ಒಮ್ಮೆ ಶ್ರೀಕೃಷ್ಣನು ಶಂಖವನ್ನು ಊದಿದ ಕೂಡಲೇ ಸಂಕೇತವನ್ನು ಅರಿತ ದಾರುಕನು ತನ್ನ ಸಜ್ಜುಗೊಳಿಸಿದ ರಥವನ್ನು ಯುದ್ಧಭೂಮಿಯಲ್ಲಿ ಶ್ರೀಕೃಷ್ಣನ ಮುಂದೆ ತಂದು ನಿಲ್ಲಿಸಿದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಸಾತ್ಯಕಿಯು ಈ ರಥವನ್ನು ಬಳಸಿದಾಗ ದಾರುಕನೇ ಸಾರಥಿಯಾಗಿರುತ್ತಿದ್ದ. ಸಾತ್ಯಕಿ ಕರ್ಣರಿಗೆ ಘೋರ ಯುದ್ಧವಾಗುತ್ತಿದಾಗ ಸಾತ್ಯಕಿಯ ರಥವನ್ನು ದಾರುಕನು ಚಾಕಚಕ್ಯದಿಂದ ನಡೆಸುತ್ತಿದ್ದನೆಂದು ಮಹಾಭಾರತ ಹೇಳುತ್ತದೆ ದಾರುಕನು ಕೇವಲ ಸಾರಥಿಯಾಗಿರಲಿಲ್ಲ. ಯಾದವ ಕುಟುಂಬದ ಆಪ್ತಮಿತ್ರನೂ ಆಗಿದ್ದ. ದ್ವಾರಕಿಯಲ್ಲಿ ಯಾದವೀ ಕಲಹ ಆರಂಭವಾಗಿ ಯಾದವರು ತಮ್ಮತಮ್ಮಲ್ಲೇ ಹೊಡೆದಾಡಿಕೊಂಡು ಸತ್ತರಷ್ಟೆ ಅದಕ್ಕೂ ಮುನ್ನ ಕೃಷ್ಣಬಲರಾಮರು ದೇಹವನ್ನು ತ್ಯಜಿಸಿದ್ದರು. ರಾಜ್ಯವು ಅನಾಯಕವಾಯಿತು. ಆಗ ದಾರುಕನು ಹಸ್ತಿನಾವತಿಗೆ ರಥಸಮೇತನಾಗಿ ಬಂದು ಧರ್ಮರಾಯನಿಗೆ ನಡೆದ ಘಟನೆಗಳನ್ನೆಲ್ಲ ವಿವರಿಸಿದ. ಅಷ್ಟೇ ಅಲ್ಲದೆ ಆಗಲಿರುವ ಅನಾಹುತಗಳನ್ನು ತಪ್ಪಿಸಲು ಅರ್ಜುನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೋದನೆಂದು ಮಹಾಭಾಋತ ಹೇಳುತ್ತದೆ. ಶ್ರೀಕೃಷ್ಣನ ಮರಣಾನಂತರವೂ ಅವನ ಕುಟುಂಬ ಮತ್ತು ರಾಜ್ಯದ ಬಗೆಗೆ ಈತನಿಗೆ ಎಂಥ ಕಳಕಳಿ ಇತ್ತೆಂಬುದು ಸ್ಪಷ್ಟವಾಗುತ್ತದೆ.
ವೃತ್ತಿಪರ ಸಾರಥಿಗಳಿಗೆ ಯುದ್ಧಭೂಮಿಯಾಚೆಗೆ ಅಂಥ ಹೆಸರಿರುವುದಿಲ್ಲ. ಆದರೆ ಶ್ರೀಕೃಷ್ಣ ಸಾರಥಿಯಾದ ದಾರುಕನ ಹೆಸರು ಇಂದಿಗೂ ಲೋಕಪ್ರಿಯವಾಗಿದೆ.
ಮೂಲ ...{Loading}...
ವ್ಯಾಸ ನಾರದ ವಿದುರ ಸಾತ್ಯಕಿ
ಕೇಶವನು ದಾರುಕ ಯುಯುತ್ಸು ಮ
ಹೀಶ ಮೊದಲಾದನಿಬರರಸರ ಸಾರಥಿವ್ರಾತ
ಆ ಸಚಿವರಾ ಹಸ್ತಿನಾಪುರ
ದಾ ಸಮಸ್ತಪ್ರಕೃತಿಜನ ಸಂ
ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ ॥21॥
೦೨೨ ಕುರುಪತಿಯ ರವಿಸುತನ ...{Loading}...
ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಯಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ, ಕರ್ಣ, ಶಲ್ಯ, ದುಶ್ಶಾಸನ, ವಿಕರ್ಣಾದಿಗಳು, ಜಯದ್ರಥ, ಬಾಹ್ಲಿಕ, ಭಗದತ್ತ, ಲಕ್ಷಣ, ದ್ರೋಣ, ಪಾಂಚಾಲರಾಜ, ಮತ್ಸ್ಯರಾಜನಾದ ವಿರಾಟ, ಕುಂತೀಭೋಜ ಮುಂತಾದ ಮುಖ್ಯರಾಜರನ್ನು ವಿಧಿಪೂರ್ವಕವಾಗಿ ಆಹಿತಾಗ್ನಿಯಲ್ಲಿ ದಹಿಸಿದರು.
ಪದಾರ್ಥ (ಕ.ಗ.ಪ)
ಆಹಿತಾಗ್ನಿ-ಅಹಿತಾಗ್ನಿ, ಅಪರಕರ್ಮದಲ್ಲಿ ಉಪಯೋಗಿಸುವ ಬೆಂಕಿ
ಟಿಪ್ಪನೀ (ಕ.ಗ.ಪ)
- ವಿಕರ್ಣ-ದುರ್ಯೋಧನನ ಒಬ್ಬ ತಮ್ಮ. ದ್ರೌಪದೀ ವಸ್ತ್ರಾಪಹರಣವನ್ನು ವಿರೋಧಿಸಿದ ಏಕೈಕ ಕೌರವ.
- ಲಕ್ಷಣ-ದುರ್ಯೋಧನನ ಮಗ, ಲಕ್ಷಣ ಕುಮಾರನೆಂಬುದೂ ಇವನ ಹೆಸರೇ.
ಮೂಲ ...{Loading}...
ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಯಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ ॥22॥
೦೨೩ ಕಳನ ಚೌಕದ ...{Loading}...
ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಾಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಸ್ಕಾರಭೂಮಿಯ ಚೌಕಪ್ರದೇಶದ ಸುತ್ತಲೂ ಮರದ ಕೊರಡುಗಳನ್ನು ಜೋಡಿಸಿ ಅಗ್ನಿಯನ್ನು ಸ್ಪರ್ಶಿಸಿದರು. ಅನೇಕ ಅಕ್ಷೋಹಿಣಿ ಸಂಖ್ಯೆಯ ಸೈನಿಕರನ್ನು ದಹನ ಮಾಡಿದರು. ನಂತರ ಹಸ್ತಿನಪುರದ ಗಡಿ ಪ್ರದೇಶಕ್ಕೆ (ಗಂಗಾತೀರಕ್ಕೆ) ಬಂದರು. ಸಮಸ್ತ ಮಹಿಳೆಯರ ಸಹಿತ ಧರ್ಮರಾಜ ನದಿಯಲ್ಲಿ ಮಿಂದನು.
ಪದಾರ್ಥ (ಕ.ಗ.ಪ)
ಕಳ-ಕಣ, ಸಮತಟ್ಟು ಮಾಡಿದ ಪ್ರದೇಶ, ಚೌಕ-ಚೌಕಾಕಾರದ ಸ್ಥಳ, ಒಟ್ಟಿಸಿ-ಜೋಡಿಸಿ, ತಳಿ-ಮರದ ಕೊರಡು, ಬಹಳಾಗ್ನಿ-ಹೆಚ್ಚು ಅಗ್ನಿ, ಕೈಕೊಳಿಸು-ಸೇರಿಸು, ಜೋಡಿಸು, ಹಚ್ಚು, ದಹಿಸು-ಸುಡು, ಬಹಳಾಕ್ಷೋಹಿಣೀಭಟರ-ಅನೇಕ ಅಕ್ಷೋಹಿಣಿಗಳ ಯೋಧರ, ಸೀಮಾಸ್ಥಳ-ಗಡಿಪ್ರದೇಶ, ನಿಖಿಳ-ಎಲ್ಲ, ಕಾಂತಾವಳಿ-ಮಹಿಳಾ ಸಮೂಹ, ಗಂಗಾವಗಹನ-ಗಂಗಾನದಿಯಲ್ಲಿ ಮುಳುಗುವುದು.
ಮೂಲ ...{Loading}...
ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಾಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ ॥23॥
೦೨೪ ಆ ನದಿಯ ...{Loading}...
ಆ ನದಿಯ ತೀರದಲಿ ತಿಂಗಳು
ಮಾನನಿಧಿ ತತ್ಪ್ರೇತರಿಗೆ ಜಲ
ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ
ಭೂನುತನು ಮಾಡಿದನು ಬಂದುದು
ಜಾನಪದಜನವೈದೆ ಕುಂತೀ
ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ನದಿಯ ದಡದಲ್ಲಿ ಒಂದು ತಿಂಗಳು, ಧರ್ಮರಾಯನು ಮರಣ ಹೊಂದಿದವರ ಪ್ರೇತಗಳಿಗೆ ಜಲಾಂಜಲಿಯನ್ನು ಮತ್ತು ಶಾಸ್ತ್ರಗಳಲ್ಲಿ ವಿಧಿಸಿರುವಂತೆ ಎಲ್ಲ ರೀತಿಯ ಕರ್ಮಗಳನ್ನು ಸಾಂಗವಾಗಿ ಮಾಡಿದನು. ಆ ನಂತರ ರಾಜ್ಯದ ವಿವಿಧ ಭಾಗಗಳ ಪ್ರಜೆಗಳು ಧರ್ಮರಾಯನ ದರ್ಶನವನ್ನು ಪಡೆದು ಕಾಣಿಕೆ ನೀಡಿದರು.
ಪದಾರ್ಥ (ಕ.ಗ.ಪ)
ತತ್ಪ್ರೇತರಿಗೆ-ಮರಣಹೊಂದಿವರ ಆ ಪ್ರೇತಗಳಿಗೆ, ಜಲದಾನ-ಜಲಾಂಜಲಿ, ಸತ್ತವರಿಗೆ ನೀಡುವ ಜಲದಾನ, ವಿಧಿವಿಹಿತ-ಶಾಸ್ತ್ರಗಳು ವಿಧಿಸಿರುವಂತಹ, ಪ್ರಪಂಚಿತ-ವಿಸ್ತಾರವಾಗಿ,ಸಾಂಗವಾಗಿ, ಸಂಸ್ಕೃತಿ-ಮಾಡಬೇಕಾದ ಕೆಲಸಗಳು, ಭೂನುತ-ರಾಜ, ಜಾನಪದಜನ-ರಾಜ್ಯದ ವಿವಿಧ ಪ್ರದೇಶಗಳ ಜನ, ಕುಂತೀಸೂನು-ಕುಂತಿಯ ಮಗ, ಧರ್ಮಜ
ಮೂಲ ...{Loading}...
ಆ ನದಿಯ ತೀರದಲಿ ತಿಂಗಳು
ಮಾನನಿಧಿ ತತ್ಪ್ರೇತರಿಗೆ ಜಲ
ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ
ಭೂನುತನು ಮಾಡಿದನು ಬಂದುದು
ಜಾನಪದಜನವೈದೆ ಕುಂತೀ
ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ ॥24॥
೦೨೫ ತಿಳುಹಿ ರಾಯನ ...{Loading}...
ತಿಳುಹಿ ರಾಯನ ಹೃದಯಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನಿಗೆ ತಿಳುವಳಿಕೆಯನ್ನು ಹೇಳಿ ಅವನ ಹೃದಯದಲ್ಲಿ ಕೂಡಿಕೊಂಡು ಬಂದಿದ್ದ ಕಲುಷವನ್ನು ನಿವಾರಿಸಿ, ಧೃತರಾಷ್ಟ್ರನ ಹೆಚ್ಚಿದ ಮನೋವ್ಯಥೆಯನ್ನು ತಗ್ಗಿಸಿ ರಾಜಮಹಿಳೆಯರ ದುಃಖವನ್ನು ನಿವಾರಿಸಿ, ಯದುಕುಲ ತಿಲಕನಾದ ಗದುಗಿನ ವೀರನಾರಾಯಣನು (ಕೃಷ್ಣ) ಎಲ್ಲರನ್ನೂ ಹಸ್ತಿನಾವತಿಯ ಅರಮನೆಯನ್ನು ಪ್ರವೇಶಿಸುವಂತೆ ಮಾಡಿದ.
ಪದಾರ್ಥ (ಕ.ಗ.ಪ)
ತಿಳುಹಿ-ತಿಳುವಳಿಕೆ ಹೇಳಿ, ಬುದ್ದಿಹೇಳಿ, ಹೃದಯಸಂಚಿತ-ಹೃದಯದಲ್ಲಿ ಶೇಖರಗೊಂಡಿದ್ದ, ಕಲುಷ-ಮಾಲಿನ್ಯ, ತಪ್ಪುಮಾಡಿದ ಭಾವ, ಗತಾಕ್ಷ-ಕಣ್ಣಿಲ್ಲದವನು, ಧೃತರಾಷ್ಟ್ರ, ಬಲಿದ-ಹೆಚ್ಚಾದ, ಚಿತ್ತವ್ಯಥೆ-ಮನಸ್ಸಿನಶೋಕ, ಆರಿಸಿ-ಪರಿಹರಿಸಿ, ನೃಪವಧೂಜನ-ರಾಜಮಹಿಳೆಯರು, ಅಳಲು-ದುಃಖ, ನೃಪನಿಳಯ-ರಾಜಭವನ, ಅರಮನೆ, ಹೊಗಿಸಿದನು-ಪ್ರವೇಶ ಮಾಡಿಸಿದನು.
ಟಿಪ್ಪನೀ (ಕ.ಗ.ಪ)
ಈ ಸಂಧಿಯಲ್ಲಿ ಪ್ರಸ್ತಾಪಿತವಾಗಿರುವ ಎಲ್ಲ ವಿಚಾರಗಳು ಮೂಲಭಾರತದ ‘ಸ್ತ್ರೀಪರ್ವವೆಂಬ’ 11ನೆಯ ಪರ್ವದಲ್ಲಿ ವಿಸ್ತಾರವಾಗಿ ಬಂದಿವೆ. ಇದನ್ನು ತಿಮ್ಮಣ್ಣ ಕವಿಯು ಕನ್ನಡದಲ್ಲಿ ರಚಿಸಿದ್ದು, “ಕನ್ನಡ ಭಾರತ” ಗ್ರಂಥದಲ್ಲಿ ನೋಡಬಹುದು.
ಮೂಲ ...{Loading}...
ತಿಳುಹಿ ರಾಯನ ಹೃದಯಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ ॥25॥