೦೦೦ ಸೂ ರಾಯಕಟಕವನಿರಿದ ...{Loading}...
ಸೂ. ರಾಯಕಟಕವನಿರಿದ ಗುರುಸುತ
ನಾಯುಧದ ವಿಗ್ರಹದೊಳಗೆ ಹರಿ
ಕಾಯಿದನು ಕೃಪೆಯಿಂದಲಭಿಮನ್ಯುವಿನ ನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ಧರ್ಮರಾಯನ ಪರಿವಾರವನ್ನು ಇರಿದ ಅಶ್ವತ್ಥಾಮನ ವಿಶಿಷ್ಟ ಆಯುಧದ ಯುದ್ಧದಲ್ಲಿ, ಕೃಷ್ಣನು ಕೃಪೆಯಿಂದ ಅಭಿಮನ್ಯುವಿನ ಮಗನನ್ನು ಕಾಪಾಡಿದ.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ಪರಿವಾರ, ದರ್ಭೆ- ಹುಲ್ಲುಕಡ್ಡಿ, ವಿಗ್ರಹ-ಯುದ್ದ, ಅಭಿಮನ್ಯುವಿನ ನಂದನ-ಪರೀಕ್ಷಿತ.
ಮೂಲ ...{Loading}...
ಸೂ. ರಾಯಕಟಕವನಿರಿದ ಗುರುಸುತ
ನಾಯುಧದ ವಿಗ್ರಹದೊಳಗೆ ಹರಿ
ಕಾಯಿದನು ಕೃಪೆಯಿಂದಲಭಿಮನ್ಯುವಿನ ನಂದನನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲಗೀರ್ವಾಣೀ ಕದಂಬ
ಸ್ಥೂಲವಕ್ಷನು ಬಂದು ಕಂಡನು ಭೋಜಗೌತಮರ
ಲೀಲೆಯಲಿ ರಥವೇರಿ ಕುರುಭೂ
ಪಾಲನಲ್ಲಿಗೆ ಬಂದರುಬ್ಬಿನ
ಮೇಲುಮದದ ಜಯಪ್ರಚಂಡರು ಕಂಡರವನಿಪನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜನೇ ಕೇಳು, ಶತ್ರು ಸಮೂಹವನ್ನು ದೇವತಾಸ್ತ್ರೀ ಸಮೂಹದ ವಿಶಾಲವಾದ ವಕ್ಷಸ್ಥಳದಲ್ಲಿ ಸೇರಿಸಿದ (ಸಂಹರಿಸಿದ) ಅಶ್ವತ್ಥಾಮನು ಬಂದು ಕೃತವರ್ಮ ಮತ್ತು ಕೃಪನನ್ನು ಕಂಡ. ಉತ್ಸಾಹದಿಂದ ಉಬ್ಬಿ ಹೋಗಿದ್ದ ಮದಿಸಿದ ಜಯ ಪ್ರಚಂಡರುಗಳು (ಅಶ್ವತ್ಥಾಮ. ಕೃಪ, ಕೃತವರ್ಮ) ಸಂತೋಷದಿಂದ ರಥವನ್ನು ಹತ್ತಿ ಕುರುಭೂಪಾಲನಾದ ದುರ್ಯೋಧನನಲ್ಲಿಗೆ ಬಂದು ಅವನನ್ನು ಕಂಡರು.
ಪದಾರ್ಥ (ಕ.ಗ.ಪ)
ರಿಪುಜಾಲ-ಶತ್ರುಗಳ ಗುಂಪು, ಗೀರ್ವಾಣಿ-ದೇವತಾಸ್ತ್ರೀ, ಕದಂಬ-ಸಮೂಹ, ಸ್ಥೂಲವಕ್ಷ-ಹಿರಿದಾದ ಎದೆಯುಳ್ಳ, ಭೋಜ-ಕೃತವರ್ಮ, ಗೌತಮ-ಕೃಪಾಚಾರ್ಯ, ಉಬ್ಬಿನ-ವಿಸ್ತರಿಸಿದ, ಮೇಲುಮದ-ಮೇಲುನೋಟಕ್ಕೆ ಮದಿಸಿದವರಂತೆ ಕಾಣುವ, ಹಿರಿದಾದ ಮದವುಳ್ಳ, ಜಯಪ್ರಚಂಡರು-ಜಯವನ್ನು ಗಳಿಸಿದ ಪ್ರಚಂಡರು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲಗೀರ್ವಾಣೀ ಕದಂಬ
ಸ್ಥೂಲವಕ್ಷನು ಬಂದು ಕಂಡನು ಭೋಜಗೌತಮರ
ಲೀಲೆಯಲಿ ರಥವೇರಿ ಕುರುಭೂ
ಪಾಲನಲ್ಲಿಗೆ ಬಂದರುಬ್ಬಿನ
ಮೇಲುಮದದ ಜಯಪ್ರಚಂಡರು ಕಂಡರವನಿಪನ ॥1॥
೦೦೨ ಬಲಿದ ಮರವೆಯ ...{Loading}...
ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನೂಧ್ರ್ವ
ಸ್ಖಲಿತ ದೀರ್ಘಶ್ವಾಸನಿದ್ದನು ಕೌರವರ ರಾಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚಜ್ಞಾನೇಂದ್ರಿಯಗಳಲ್ಲೂ ತೀವ್ರವಾದ ಮರವಿನಿಂದಾದ ಕಳವಳದ, ಪಂಚೇಂದ್ರಿಯಗಳಲ್ಲಿ ಪರಿಚಲಿಸುವಲ್ಲಿ ಶಿಥಿಲವಾದ - ಸುಗಮ ಸಂಚಾರವಿಲ್ಲದ - ತಡೆತಡೆದು ಬರುವ ಮೂಲಾಧಾರ ವಾಯುವಿನ, ವೇದನೆಯಿಂದ ಭಾರವಾದ, ವಿಹ್ವಲಿತವಾದ, ಕಂಠಪ್ರದೇಶದಲ್ಲಿ ಸಿಕ್ಕಿಕೊಂಡಿರುವ ಪ್ರಾಣವುಳ್ಳವನಾದ, ಮೇಲು ಮೇಲೆ ಹತ್ತಿಬರುವ, ನಿಂತುಬರುವ ದೀರ್ಘಶ್ವಾಸವನ್ನು ಬಿಡುತ್ತಿರುವ ಕೌರವರಾಯನು ಅಲ್ಲಿ ಇದ್ದನು.
ಪದಾರ್ಥ (ಕ.ಗ.ಪ)
ಬಲಿದ-ಗಟ್ಟಿಗೊಂಡ, ತೀವ್ರವಾದ, ಮರವೆ-ಮರೆವು, ಕರಣವೃತ್ತಿ-ಪಂಚಜ್ಞಾನೇಂದ್ರಿಯಗಳ ಕೆಲಸ, ಪರಿಚಲನಸಂಚ-ಚಲನೆಯಲ್ಲಿ ಭಾರವಾದ, ದಟ್ಟೈಸಿದ, ಶಿಥಿಲ-ಸಡಿಲಾದ, ತಡೆದುತಡೆದು ಬರುವ, ಮೂಲಾಧಾರ ಎಲ್ಲಕ್ಕೂ ಮೂಲವಾದ ನಾಭಿಯಿಂದ ಕೆಳಭಾಗದಲ್ಲಿರುವ ದೇಹದೊಳಗಿರುವ ಆರು ಚಕ್ರಗಳಲ್ಲಿ ಮೊದಲನೆಯದು, ಮೂಲಾಧಾರ ಮಾರುತ-ಮೂಲಾಧಾರ ಚಕ್ರದಿಂದ ಚಲನೆಯನ್ನು ಪ್ರಾರಂಭಿಸುವ ವಾಯು, ಅಲಘುತರ-ಭಾರವಾದ, ಪರಿವೇದನೆ-ಹೆಚ್ಚಾದ ನೋವು, ವಿಹ್ವಳಿತ-ವ್ಯಾಕುಲಗೊಂಡ, ಕಂಠಗತಾತ್ಮ-ಕಂಠಪ್ರದೇಶದಲ್ಲಿ ಸಿಕ್ಕಿಕೊಂಡಿರುವ ಪ್ರಾಣ, ಊಧ್ರ್ವ-ಹತ್ತಿಬರುತ್ತಿರುವ, ಸ್ಖಲಿತ-ಗಟ್ಟಿಯಲ್ಲದ, ದೃಢವಲ್ಲದ, ದೀರ್ಘಶ್ವಾಸ-ನೀಳವಾದ ಉಸಿರು, ನಿಟ್ಟುಸಿರು.
ಮೂಲ ...{Loading}...
ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನೂಧ್ರ್ವ
ಸ್ಖಲಿತ ದೀರ್ಘಶ್ವಾಸನಿದ್ದನು ಕೌರವರ ರಾಯ ॥2॥
೦೦೩ ಕಣ್ಡು ಕಮ್ಬನಿದುಮ್ಬಿದರು ...{Loading}...
ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡ ಕೇಸರಿಯಿರವಿದೇ ಮಝ ಪೂತು ವಿಧಿಯೆನುತ
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಈ ಸ್ಥಿತಿಯನ್ನು ಕಂಡು ಕೃಪಾಶ್ವತ್ಥಾಮ ಕೃತವರ್ಮರು ಕಣ್ಣೀರು ತುಂಬಿಕೊಂಡರು. ಭೂಮಂಡಲಕ್ಕೆ ಒಡೆಯನಾದವನೇ, ಶತ್ರುವೆಂಬ ಮದಿಸಿದ ಆನೆಗೆ ಸಿಂಹದಂತಿರುವವನ ಸ್ಥಿತಿಯಿದೇ ಅಯ್ಯೋ ವಿಧಿಯೇ ಎನ್ನುತ್ತಾ, ಗಂಡುಗಲಿಯೇ ಎಚ್ಚರವಾಗು, ಶತ್ರುಸೈನ್ಯಕ್ಕೆ ಯಮನಂತಿರುವವನೇ ಎಚ್ಚರಾಗು, ಕುರುವಂಶಕ್ಕೆ ಸೂರ್ಯನಂತಿರುವವನೇ ಎಚ್ಚರಾಗು - ಎನ್ನುತ್ತಾ ರಾಜನನ್ನು ಎಚ್ಚರಿಸಿದರು.
ಪದಾರ್ಥ (ಕ.ಗ.ಪ)
ಕಂಬನಿ-ಕಣ್ಣೀರು, ಭೂಮಂಡಲಾಧಿಪ-ಭೂಮಂಡಲಕ್ಕೆ ಒಡೆಯ, ಚಕ್ರವರ್ತಿ, ವೈರಿಮದವೇತಂಡ-ವೈರಿಯೆಂಬ ಮದಿಸಿದ ಆನೆ, ಕೇಸರಿ-ಸಿಂಹ, ಇರವು-ಸ್ಥಿತಿ, ಅವಧಾನ-ಎಚ್ಚರ, ಎಚ್ಚರಾಗು, ದಂಡಧರ-ಯಮ. (ಕಾಲದಂಡವನ್ನು ಹಿಡಿದಿರುವವನು) ಚಂಡಕರ-ಸೂರ್ಯ
ಮೂಲ ...{Loading}...
ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡ ಕೇಸರಿಯಿರವಿದೇ ಮಝ ಪೂತು ವಿಧಿಯೆನುತ
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ ॥3॥
೦೦೪ ಕೆದರಿದುದು ಕುಡಿನೋಟ ...{Loading}...
ಕೆದರಿದುದು ಕುಡಿನೋಟ ಕರಣದ
ಕದಡು ಹರೆದುದು ಇಂದ್ರಿಯಾವಳಿ
ತುದಿಗೊಳಿಸಿದುದು ಪವನ ನಟಿಸಿತು ನಾಭಿಪರಿಯಂತ
ವದನವನು ನಸು ನೆಗಹಿ ನೃಪ ನುಡಿ
ಸಿದನಿದಾರಸ್ಮತ್ಪುರೋಭಾ
ಗದಲಿ ಸೇವಾಮಧುರವಚನವಿಳಾಸಪರರೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ಣಿನ ದೃಷ್ಟಿ ಹರಡಿತು, ಇಂದ್ರಿಯಗಳ ಕೆಸರು ಹರಿಯಿತು, ಇಂದ್ರಿಯಗಳು ತೀಕ್ಷ್ಣವಾದುವು. ವಾಯುವು ನಾಭಿಯವರೆಗೂ ಪ್ರವೇಶಿಸಿ ಕುಣಿಯಿತು. ಮುಖವನ್ನು ಸ್ವಲ್ಪ ಎತ್ತಿ ದುರ್ಯೋಧನನು, ನನ್ನ ಮುಂಭಾಗದಲ್ಲಿ ನನಗೆ ಸೇವೆ ಮಾಡಲು ಮಧುರ ವಚನಗಳನ್ನಾಡುತ್ತಿರುವವರು ಇದಾರು - ಎಂದನು.
ಪದಾರ್ಥ (ಕ.ಗ.ಪ)
ಕೆದರು-ಹರಡು, ವಿಸ್ತರಿಸು, ಕದಡು-ಕಲ್ಮಶ , ಕೆಸರು, ಹರೆದುದು-ಹರಿದುಹೋಯಿತು, ನಾಶವಾಯಿತು, ಇಂದ್ರಿಯಾವಳಿ-ಇಂದ್ರಿಯಗಳೆಲ್ಲವೂ, ತುದಿಗೊಳಿಸು-ಹರಿತವಾಗಿಸು, ತೀಕ್ಷ್ಣವಾಗಿಸು, ಪವನ-ವಾಯು, ಗಾಳಿ, ನಾಭಿ ಪರಿಯಂತ-ಹೊಕ್ಕಳಿನವರೆಗೆ, ವದನ-ಮುಖ, ನೆಗಹಿ-ಎತ್ತಿ, ಅಸ್ಮತ್-ನನ್ನ, ಪುರೋಭಾಗ-ಎದುರುಭಾಗ, ಮಧುರವಚನ-ಸಿಹಿಯಾದ ಮಾತುಗಳು, ಆಪ್ಯಾಯಮಾನವಾದ ಮಾತುಗಳು, ವಿಳಾಸಪರರು-ಸಂತೋಷವನ್ನು ಹೊಂದಿರುವರು
ಮೂಲ ...{Loading}...
ಕೆದರಿದುದು ಕುಡಿನೋಟ ಕರಣದ
ಕದಡು ಹರೆದುದು ಇಂದ್ರಿಯಾವಳಿ
ತುದಿಗೊಳಿಸಿದುದು ಪವನ ನಟಿಸಿತು ನಾಭಿಪರಿಯಂತ
ವದನವನು ನಸು ನೆಗಹಿ ನೃಪ ನುಡಿ
ಸಿದನಿದಾರಸ್ಮತ್ಪುರೋಭಾ
ಗದಲಿ ಸೇವಾಮಧುರವಚನವಿಳಾಸಪರರೆಂದ ॥4॥
೦೦೫ ನಾವು ನಿಮ್ಮವರೆಮ್ಮ ...{Loading}...
ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ನಿಮ್ಮವರು, ನಮ್ಮ ತಂದೆಯಾದ ದ್ರೋಣಾಚಾರ್ಯರ ಭಾವನಾದ ಕೃಪ; ಕೃತವರ್ಮನಿವನು, ಒಡೆಯರು ರಾತ್ರಿಯ ರಾಜಕಾರ್ಯವನ್ನು ಕೇಳಬೇಕು ಎಂದು ದುರ್ಯೋಧನನಿಗೆ ಹೇಳಿ ನಂತರ ಕೃಪನಿಗೆ ಮಾವ ನೀವು ಯುದ್ಧದ ಸಂಗತಿಯನ್ನು ಹೇಳಬೇಕು. ನಾವು ಸ್ವಪ್ರಶಂಸೆ ಮಾಡಿಕೊಳ್ಳುವವರಲ್ಲ - ಎಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಬೊಪ್ಪ-ತಂದೆ, ದೇವರು-ಒಡೆಯರು, ರಜನಿ-ರಾತ್ರಿ, ಬಿನ್ನಹಮಾಡು-ಹೇಳು, ವಿವರಿಸು, ಆತ್ಮಸ್ತಾವಕರು-ತಮ್ಮನ್ನು ತಾವು ಹೊಗಳಿಕೊಳ್ಳುವವರು, ಸ್ವಪ್ರಶಂಸಕರು.
ಮೂಲ ...{Loading}...
ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು ॥5॥
೦೦೬ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ದ್ರುಪದನ
ಸೂನು ಪಂಚದ್ರೌಪದೇಯರ
ಹಾನಿಯನು ಸೃಂಜಯ ಶಿಖಂಡಿ ಪ್ರಮುಖರುಪಹತಿಯ
ವೈನತೇಯನ ಲಳಿಯಲಹಿಕುಲ
ವಾನುವುದೆ ಪಾಂಚಾಲಕದಳೀ
ಕಾನನವ ನಿನ್ನಾನೆ ಸವರಿತು ಹೇಳಲೇನೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದನ ಮಗನಾದ ಧೃಷ್ಟದ್ಯುಮ್ನ ಮತ್ತು ದ್ರೌಪದಿಯ ಐದು ಜನ ಮಕ್ಕಳ ವಿನಾಶವನ್ನು, ಸೃಂಜಯ ಶಿಖಂಡಿ ಮುಂತಾದ ಪ್ರಮುಖರ ಕೇಡನ್ನು ಏನು ಹೇಳಲಿ ಒಡೆಯಾ. ಗರುಡನ ರಭಸವನ್ನು ಸರ್ಪಕುಲವು ಎದುರಿಸಿ ಬದುಕುವುದೆ. ಪಾಂಚಾಲವಂಶವೆಂಬ ಬಾಳೆಯ ತೋಟವನ್ನು ನಿನ್ನ ನೆಚ್ಚಿನ ಆನೆ (ಅಶ್ವತ್ಥಾಮ) ಸವರಿಹಾಕಿತು - ಎಂದು ಕೃಪ ಹೇಳಿದ.
ಪದಾರ್ಥ (ಕ.ಗ.ಪ)
ದ್ರುಪದನಸೂನು-ದ್ರುಪದನಮಗ, ಧೃಷ್ಟದ್ಯುಮ್ನ, ಪಂಚದ್ರೌಪದೇಯರು-ಪಾಂಡವರಿಗೆ ದ್ರೌಪದಿಯಲ್ಲಿ ಹುಟ್ಟಿದ ಐದುಜನ ಮಕ್ಕಳು, ಹಾನಿ-ನಾಶ, ಉಪಹತಿ-ಕೇಡು, ವಿನಾಶ, ವೈನತೇಯ-ವಿನುತೆಯ ಮಗ, ಗರುಡ, ಲಳಿ-ರಭಸ, ಅಹಿಕುಲ-ಸರ್ಪಗಳ ವಂಶ, ಆನು-ಎದುರಿಸು, ಪಾಂಚಾಲ ಕದಳೀಕಾನನ-ಪಾಂಚಾಲವಂಶವೆಂಬ ಬಾಳೆಯ ತೋಟ, ಸವರು-ನಾಶಮಾಡು.
ಮೂಲ ...{Loading}...
ಏನನೆಂಬೆನು ಜೀಯ ದ್ರುಪದನ
ಸೂನು ಪಂಚದ್ರೌಪದೇಯರ
ಹಾನಿಯನು ಸೃಂಜಯ ಶಿಖಂಡಿ ಪ್ರಮುಖರುಪಹತಿಯ
ವೈನತೇಯನ ಲಳಿಯಲಹಿಕುಲ
ವಾನುವುದೆ ಪಾಂಚಾಲಕದಳೀ
ಕಾನನವ ನಿನ್ನಾನೆ ಸವರಿತು ಹೇಳಲೇನೆಂದ ॥6॥
೦೦೭ ದೈವಕೃಪೆಜವನಿಕೆಯ ಮರೆಗೊಂ ...{Loading}...
ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವಕೃಪೆಯ ತೆರೆಯನ್ನು ಮರೆಮಾಡಿಕೊಂಡು ಪಾಂಡವರೈವರು ಬದುಕಿ ಉಳಿದರು. ಸಾತ್ಯಕಿ ಕೃಷ್ಣನ ಒಡಹುಟ್ಟಿದವವನಲ್ಲವೇ ಹಾಗಾಗಿ ಶಿಬಿರದಲ್ಲಿ ಅವನಿರಲಿಲ್ಲ. ದೈವಬಲವು ನಿರ್ದೈವಬಲವನ್ನು ನಾಶಮಾಡುವುದಕ್ಕಿರುವುದು. ದೈವವು ಹಿಡಿದ ಛಲದ ಹೆಚ್ಚುಗಾರಿಕೆ ಇಷ್ಟೇ ಕೇಳು ದುರ್ಯೋಧನ - ಎಂದ.
ಪದಾರ್ಥ (ಕ.ಗ.ಪ)
ಜವನಿಕೆ-ಯವನಿಕಾ(ಸಂ)ತೆರೆ, ಮರೆಗೊಂಡು-ಮರೆಮಾಡಿಕೊಂಡು, ಇನಿತಕ್ಕೆ-ಇಷ್ಟಕ್ಕೆ, ನಿಶ್ಶೇಷ-ಸಂಪೂರ್ಣನಾಶ, ಬಾಕಿ ಇಲ್ಲದಂತೆ ನಾಶ, ವಾಸಿ-ಹೆಚ್ಚುಗಾರಿಕೆ
ಟಿಪ್ಪನೀ (ಕ.ಗ.ಪ)
1)“ಸಾತ್ಯಕಿ ದೈವದೊಡಹುಟ್ಟಿದನಲೇ……” ಸಾತ್ಯಕಿಯು ಯದುವಂಶದ ಶಿನಿರಾಜನ ಮಗನಾದ ಸತ್ಯಕನ ಮಗ. ಇವನಿಗೆ ಯುಯುಧಾನವೆಂಬ ಹೆಸರಿದೆ. ಯದುವಂಶದಲ್ಲಿ ಹುಟ್ಟಿದುದರಿಂದ ಕೃಷ್ಣನ ತಮ್ಮನಾಗುತ್ತಾನೆ.
ಮೂಲ ...{Loading}...
ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ ॥7॥
೦೦೮ ಎಲೆ ಕೃಪಾಚಾರಿಯ ...{Loading}...
ಎಲೆ ಕೃಪಾಚಾರಿಯ ವಿರೋಧಿಗ
ಳುಳಿದರೈವರು ಬಲ್ಲೆನದನಸ
ದಳದ ಕೃಪೆಯಲಿ ಬಸಿದು ಬೀಳುವನವರಿಗಸುರಾರಿ
ಅಳಿದುದೇ ನಿಶ್ಶೇಷ ಪಾಂಡವ
ದಳ ಕುಮಾರರು ಸಹಿತವಿನ್ನ
ಗ್ಗಳೆಯನಶ್ವತ್ಥಾಮನಹನೆಂದನು ಮಹೀಪಾಲ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಕೃಪಾಚಾರ್ಯ! ಶತ್ರುಗಳಾದ ಐದೂ ಜನ ಪಾಂಡವರು ಉಳಿದುಕೊಂಡರು. ಅದನ್ನು ಬಲ್ಲೆ. ಅವರಿಗೆ ಕೃಷ್ಣನು ಅಸಮಾನವಾದ ಕೃಪೆಯಿಂದ ಬಸಿದು ಬೀಳುತ್ತಾನೆ. ಪಾಂಡವರ ಸೈನ್ಯವು, ಅವರ ಮಕ್ಕಳು ಸಹಿತ ನಿಶ್ಶೇಶವಾಗಿ ನಾಶವಾಯಿತೇ; ಇನ್ನು ಅಶ್ವತ್ಥಾಮನು ಶ್ರೇಷ್ಠನಾಗುತ್ತಾನೆಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಅಸದಳ-ಸಮಾನವಿಲ್ಲದ, ಅಸಮಾನ, ಬಸಿದುಬೀಳು-ಸಾರಸರ್ವಸ್ವವನ್ನೂ ಹನಿಗೂಡಿಸಿ ತೊಟ್ಟಿಕ್ಕುವುದು, ಅಳಿ-ನಾಶ, ನಿಶ್ಶೇಷ-ಶೇಷ ಉಳಿಯದೆ, ಸಂಪೂರ್ಣವಾಗಿ, ಅಗ್ಗಳೆಯ-ಶ್ರೇಷ್ಠನಾದ
ಮೂಲ ...{Loading}...
ಎಲೆ ಕೃಪಾಚಾರಿಯ ವಿರೋಧಿಗ
ಳುಳಿದರೈವರು ಬಲ್ಲೆನದನಸ
ದಳದ ಕೃಪೆಯಲಿ ಬಸಿದು ಬೀಳುವನವರಿಗಸುರಾರಿ
ಅಳಿದುದೇ ನಿಶ್ಶೇಷ ಪಾಂಡವ
ದಳ ಕುಮಾರರು ಸಹಿತವಿನ್ನ
ಗ್ಗಳೆಯನಶ್ವತ್ಥಾಮನಹನೆಂದನು ಮಹೀಪಾಲ ॥8॥
೦೦೯ ಏನನೊದಗಿದ ನಮಗೆ ...{Loading}...
ಏನನೊದಗಿದ ನಮಗೆ ಗಂಗಾ
ಸೂನು ಭಾರದ್ವಾಜ ನಮಗೊಲಿ
ದೇನ ಮಾಡಿದ ನಮ್ಮ ಥಟ್ಟಿನ ಭದ್ರಗಜವೆಂಬ
ಮಾನನಿಧಿ ರಾಧಾತನುಜನಿಂ
ದೇನು ಹರಿದುದು ಹರಿಬವನು ಗುರು
ಸೂನುವೇ ಮರಳಿಚಿದನೆಂದನು ಕೌರವರರಾಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ನಮಗೆ ಯಾವ ಕಷ್ಟಕ್ಕೆ ಒದಗಿಬಂದ; ದ್ರೋಣ ನಮ್ಮ ಮೇಲೆ ಪ್ರೀತಿಯನ್ನು ತೋರಿಸಿ ಏನು ಸಹಾಯ ಮಾಡಿದ. ನಮ್ಮ ಸೈನ್ಯದ ಶ್ರೇಷ್ಠವಾದ ಆನೆಯೆಂಬ ರಾಧೆಯ ಮಗ ಕರ್ಣನಿಂದ ಏನು ಹರಿದುದು. ನಮ್ಮ ಕೆಲಸವನ್ನು ಅಶ್ವತ್ಥಾಮನೇ ತೀರಿಸಿದನೆಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಥಟ್ಟು-ಸೈನ್ಯ, ಭದ್ರಗಜ-ಮಂಗಳಕರವಾದ ಆನೆ, ಶ್ರೇಷ್ಠವಾದ ಆನೆ (ಇಲ್ಲಿ ಕರ್ಣ), ಮಾನನಿಧಿ-ಮಾನಧನ, ರಾಧಾತನುಜ-ರಾಧೆಯಮಗ, ಕರ್ಣ, ಏನು ಹರಿದುದು-ಯಾವ ಕೆಲಸ ಸಾಧಿತವಾಯಿತು, ಏನು ಮಾಡಲು ಸಾಧ್ಯವಾಯಿತು, ಹರಿಬ-ಕೆಲಸ, ಮರಳಿಚು-ಹಿಂದಿರುಗಿಸು.
ಮೂಲ ...{Loading}...
ಏನನೊದಗಿದ ನಮಗೆ ಗಂಗಾ
ಸೂನು ಭಾರದ್ವಾಜ ನಮಗೊಲಿ
ದೇನ ಮಾಡಿದ ನಮ್ಮ ಥಟ್ಟಿನ ಭದ್ರಗಜವೆಂಬ
ಮಾನನಿಧಿ ರಾಧಾತನುಜನಿಂ
ದೇನು ಹರಿದುದು ಹರಿಬವನು ಗುರು
ಸೂನುವೇ ಮರಳಿಚಿದನೆಂದನು ಕೌರವರರಾಯ ॥9॥
೦೧೦ ಹರಿಬ ಬನ್ದುದೆ ...{Loading}...
ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೆಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಕೆಲಸ ಪೂರ್ಣವಾಯಿತೇ, ಪಾಂಡವರು ಉಳಿದಿರಲಿ, ಆ ಮಾತು ಸಾಕು, ಅದಂತಿರಲಿ ನೀವು ಹಸ್ತಿನಾವತಿಗೆ ದಯ ಮಾಡಿಸಿ, ನಿಮ್ಮ ದೇಹದ ಚೈತನ್ಯ ಹೇಗುಂಟೋ. ಪ್ರಾಣವೊಂದುಳಿದರೆ, ಪಾಂಡವರ ಶಿರಗಳನ್ನು ಸಿಂಹಾಸನದಿಂದ ನೂಕುತ್ತೇನೆ(ಪ್ರಾಣ ತೆಗೆಯುತ್ತೇನೆ) - ಎಂದು ಅಶ್ವತ್ಥಾಮ ದುರ್ಯೋಧನನಿಗೆ ಕೈಮುಗಿದು ಹೇಳಿದ.
ಪದಾರ್ಥ (ಕ.ಗ.ಪ)
ಹರಿಬ-ಕರ್ತವ್ಯ, ನಿಮ್ಮಡಿ-ನಿಮ್ಮ ಪಾದಗಳು ‘ನೀವು’ ಎಂಬುದನ್ನು ಗೌರವವಾಗಿ ಹೇಳುವ ಕ್ರಮ, ಬಿಜಯಂಗೈಯಿ-ದಯಮಾಡಿಸಿ, ಚೈತನ್ಯಗತಿ-ದೇಹದಲ್ಲಿನ ಶಕ್ತಿ, ಹರಣ-ಪ್ರಾಣ(ಸಂ.) ಕೇವಣಿಸು-ನೂಕು, ತಳ್ಳು, ಕೇಸರಿಯ ಪೀಠ-ಸಿಂಹಾಸನ
ಮೂಲ ...{Loading}...
ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೆಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು ॥10॥
೦೧೧ ಸಾಕದನ್ತಿರಲಿನ್ನು ವೈರಿ ...{Loading}...
ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾಗೌಧ್ರ್ವದೈಹಿಕವ
ಆಳೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಸಾಕು, ಅದು ಹಾಗಿರಲಿ, ವ್ಶೆರಿಗಳ ಸ್ವಭಾವಗಳನ್ನು ತಿಳಿಯುವಲ್ಲಿ ವಿವೇಕವನ್ನು ಕಳೆದುಕೊಂಡಿದ್ದೇವೆ. ನಾವೂ ಸೇರಿದಂತೆ ಮೃತರ ಕರ್ಮಾಂತರಗಳು ಮೊದಲಾದುವನ್ನು ನಿರ್ವಹಿಸಲು ಶಕ್ತರಾದವರಿಗೆ (ಪಾಂಡವರಿಗೆ?) ತಿಳಿಸಿ. ಅಧಿಕ ಪುಣ್ಯವಂತರಾದ ಗಾಂಧಾರಿ ಧೃತರಾಷ್ಟ್ರರುಗಳಿಗೆ ತಿಳಿಸಿ, ಅವರುಗಳನ್ನು ಶೋಕರಹಿತರನ್ನಾಗಿ ಮಾಡಿ.
ಪದಾರ್ಥ (ಕ.ಗ.ಪ)
ವ್ಯಾಕರಣ ಪಾಂಡಿತ್ಯ-ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿಯುವ ಬುದ್ಧಿವಂತಿಕೆ, ವಿವೇಕಶೂನ್ಯ-ವಿವೇಕವಿಲ್ಲದ, ಅವಿವೇಕಿಗಳಾದ, ಔರ್ಧ್ವದೈಹಿಕ-ಮೇಲುಲೋಕಕ್ಕೆ ಕಳಿಸುವ ಕರ್ಮಾಂತರಗಳು, ದೇಹ ಸಂಸ್ಕಾರಗಳು, ಆಕೆವಾಳರು-ಶಕ್ತರಾದವರು, ಅಸ್ತೋಕಪುಣ್ಯರು-ಹೆಚ್ಚಿನ ಪುಣ್ಯವಂತರು, ವಿಗಳಿತಶೋಕ-ನಾಶವಾದ ಶೋಕ, ಕಳೆದ ಶೋಕ.
ಮೂಲ ...{Loading}...
ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾಗೌಧ್ರ್ವದೈಹಿಕವ
ಆಳೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ ॥11॥
೦೧೨ ಎನುತ ಕಣ್ ...{Loading}...
ಎನುತ ಕಣ್ ಮುಚ್ಚಿದನು ಜೀವಾ
ತ್ಮನು ಜವಾಯಿಲತನದಲೊಡೆಹಾ
ಯ್ದನು ಸುನಾಸಾಲಂಬಿತಶ್ವಾಸದ ಸಮಾಪ್ತಿಯಲಿ
ಜನಪ ಮರೆದೊರಗಿದನಲಾ ಹಾ
ಯೆನುತ ವದನಾಂಜುಳಿಪುಟದ ತಾ
ಡನದಲಿವರಳಲಿದರು ಕುರುರಾಜಾವಸಾನದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ ದುರ್ಯೋಧನ ಕಣ್ಣುಮುಚ್ಚಿದನು. ದೀರ್ಘಶ್ವಾಸದೊಂದಿಗೆ ಜೀವಾತ್ಮನು ಅದರೊಂದಿಗೇ ವೇಗವಾಗಿ ಹಾಯ್ದುಹೋದ. ರಾಜ ಮೃತನಾಗಿ ಒರಗಿದನಲ್ಲಾ, ಹಾ! ಎನ್ನುತ್ತಾ ತಮ್ಮ ಕೈಗಳಿಂದ ಹಣೆಯನ್ನು ಚಚ್ಚಿಕೊಳ್ಳುತ್ತಾ ಇವರು ಕುರುರಾಜನ ಅವಸಾನದಲ್ಲಿ ದುಃಖಿಸಿದರು.
ಪದಾರ್ಥ (ಕ.ಗ.ಪ)
ಜೀವಾತ್ಮ-ದೇಹದಲ್ಲಿರುವ ಪ್ರಾಣವಾಯು, ಮನುಷ್ಯನ ಆತ್ಮ, ಜವಾಯಿಲತನ-ವೇಗ (ಜವ-ವೇಗ), ಒಡೆಹಾಯಿದನು-ಉಸಿರಿನ ಜೊತೆಗೇ ಹಾರಿದನು, ಸುನಾಸಾಲಂಬಿತ-ದೀರ್ಘವಾದ ಉಸಿರು, ಶ್ವಾಸ-ಉಸಿರು, ಸಮಾಪ್ತಿ-ಮುಕ್ತಾಯ, ಮುಗಿತ, ವದನಾಂಜಳಿಪುಟದ ತಾಡನ-ಎರಡೂ ಕೈಗಳಿಂದ ಹಣೆಯನ್ನು ಹೊಡೆದುಕೊಳ್ಳುವುದು, ಅಳಲು-ದುಃಖಿಸು, ಅವಸಾನ-ಸಾವು, ಅಂತ್ಯ.
ಮೂಲ ...{Loading}...
ಎನುತ ಕಣ್ ಮುಚ್ಚಿದನು ಜೀವಾ
ತ್ಮನು ಜವಾಯಿಲತನದಲೊಡೆಹಾ
ಯ್ದನು ಸುನಾಸಾಲಂಬಿತಶ್ವಾಸದ ಸಮಾಪ್ತಿಯಲಿ
ಜನಪ ಮರೆದೊರಗಿದನಲಾ ಹಾ
ಯೆನುತ ವದನಾಂಜುಳಿಪುಟದ ತಾ
ಡನದಲಿವರಳಲಿದರು ಕುರುರಾಜಾವಸಾನದಲಿ ॥12॥
೦೧೩ ತಿರುಗಿದರು ಕೈದುವ ...{Loading}...
ತಿರುಗಿದರು ಕೈದುವ ಬಿಸುಟು ಮೂ
ವರು ಮಹಾರಥರಂಧತಿಮಿರಕೆ
ತರಣಿಕಿರಣದ ಧಾಳಿ ಹರಿದುದು ಕೂಡೆ ದೆಸೆದೆಸೆಗೆ
ಅರಸನುಪ್ಪವಡಿಸಿ ಮುರಾರಿಯ
ಸಿರಿಮೊಗವ ನೋಡಿದನು ತಮ್ಮಂ
ದಿರು ಸಹಿತ ಹೊರವಂಟನಾ ಕುರುಪತಿಯ ಪಾಳೆಯವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂವರು ಮಹಾರಥರಾದ ಅಶ್ವತ್ಥಾಮ,ಕೃಪ,ಕೃತವರ್ಮರು ತಮ್ಮ ಆಯುಧಗಳನ್ನು ಎಸೆದು ಹಿಂದಿರುಗಿದರು. ಕಾರ್ಗತ್ತಲಿನ ಮೇಲಣ ಸೂರ್ಯಕಿರಣದ ಧಾಳಿಯಿಂದ ಬೆಳಕು ದಿಕ್ಕುದಿಕ್ಕಿನಲ್ಲೂ ಹರಡಿತು. ಧರ್ಮರಾಯನು ಎದ್ದು ಕೃಷ್ಣನ ಮುಖವನ್ನು ನೋಡಿದನು. ತಮ್ಮಂದಿರ ಸಹಿತ ದುರ್ಯೋಧನನ ಪಾಳಯದಿಂದ ಹೊರಹೊರಟ.
ಪದಾರ್ಥ (ಕ.ಗ.ಪ)
ಕೈದು-ಆಯುಧ, ಅಂಧತಿಮಿರ-ಕುರುಡುಗತ್ತಲೆ, ತರಣಿ ಕಿರಣದ ಧಾಳಿ-ಸೂರ್ಯನ ಬೆಳಕಿನ ಧಾಳಿ, ದೆಸೆದೆಸೆಗೆ-ದಿಕ್ಕುದಿಕ್ಕಿಗೆ, ಉಪ್ಪವಡಿಸು-ಏಳು
ಮೂಲ ...{Loading}...
ತಿರುಗಿದರು ಕೈದುವ ಬಿಸುಟು ಮೂ
ವರು ಮಹಾರಥರಂಧತಿಮಿರಕೆ
ತರಣಿಕಿರಣದ ಧಾಳಿ ಹರಿದುದು ಕೂಡೆ ದೆಸೆದೆಸೆಗೆ
ಅರಸನುಪ್ಪವಡಿಸಿ ಮುರಾರಿಯ
ಸಿರಿಮೊಗವ ನೋಡಿದನು ತಮ್ಮಂ
ದಿರು ಸಹಿತ ಹೊರವಂಟನಾ ಕುರುಪತಿಯ ಪಾಳೆಯವ ॥13॥
೦೧೪ ಪಾಳೆಯದಲಿ ಕುಮಾರರನು ...{Loading}...
ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಳೆಯದಲ್ಲಿ ತಮ್ಮ ಮಕ್ಕಳನ್ನು ಮತ್ತು ದ್ರೌಪದಿಯ ಸಹೋದರರಾದ ಪಾಂಚಾಲರನ್ನು ನೋಡೋಣವೆನ್ನುತ್ತ ಧರ್ಮರಾಯನು ಬರುತ್ತಿರಲು, ಯುವತಿಯರ ಗುಂಪು ಎದುರು ಬಂದಿತು - ಗಟ್ಟಿ ಧ್ವನಿಯಲ್ಲಿ ಅಳುತ್ತಾ, ತೆಳುಹೊಟ್ಟೆಗಳನ್ನು ಕೈನಿಂದ ಬಡಿದುಕೊಳ್ಳುತ್ತಾ ಜೊತೆಯ ಮಹಿಳೆಯರ ಹಾಹಾರವದ ಮೇಳದಲ್ಲಿ (ಕೂಗಾಟದಲ್ಲಿ) ದ್ರೌಪದಿ ಅಲ್ಲಿಗೆ ಬಂದಳು.
ಪದಾರ್ಥ (ಕ.ಗ.ಪ)
ಯುವತಿನಿಕುರುಂಬ-ಮಹಿಳೆಯರ ಗುಂಪು, ಸೂಳುವೊಯ್ಲು-ಗಟ್ಟಿಯಾಗಿ ಕೂಗು, ಗಟ್ಟಿಧ್ವನಿ ಮಾಡು, ತೆಳುವಸಿರು-ತೆಳುವಾದ ಬಸಿರು, ತೆಳುಹೊಟ್ಟೆ, ಕರತಾಳ-ಕರತಾಡನ, ಕೈಗಳಲ್ಲಿ ಹೊಡೆದುಕೊಳ್ಳುವುದು, ಹಾಹಾವಿರಾವ-ಹಾಹಾಕಾರ, ಮೇಳವ-ಗುಂಪು
ಮೂಲ ...{Loading}...
ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ ॥14॥
೦೧೫ ಏನಿದೇನದುಭುತವೆನುತ ದು ...{Loading}...
ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏನಿದೇನದ್ಭುತ’ ಎನ್ನುತ್ತ ದುಃಖದಿಂದ ಓಡಿಬಂದು ಧರ್ಮರಾಯ ದ್ರೌಪದಿಯ ಕೈಗಳನ್ನು ಹಿಡಿದ. ತನ್ನ ಧೋತ್ರದ ಸೆರಗಿನಿಂದ ಅವಳ ಕಣ್ಣೀರನ್ನು ಒರೆಸಿದ. ಹಾನಿಯೇನಾಯ್ತು ಎಂದು ಕೇಳಲು, ನನ್ನ ಮಕ್ಕಳು ಮತ್ತು ತಮ್ಮಂದಿರು ಮಡಿದರು ಎಂದು ಹೇಳಲು, ಅಶ್ವತ್ಥಾಮ ಮಾಡಿದ ಕೋಲಾಹಲವನ್ನು ಭೀಮ ಕೇಳಿದ.
ಪದಾರ್ಥ (ಕ.ಗ.ಪ)
ಅದುಭುತ-ಅದ್ಭುತ, ವಿಶೇಷ ಸಂಗತಿ, ದುಮ್ಮಾನ-ದುಃಖ, ಹರಿತಂದು-ಓಡಿಬಂದು, ಮಾನಿನಿ-ಹೆಂಡತಿ, ಕಂಬನಿ- ಕಣ್ಣೀರು(ಕಣ್+ಪನಿ), ಸೂನುಗಳು-ಮಕ್ಕಳು, ಅನುಜರು-ತಮ್ಮಂದಿರು, ಕೋಳಾಹಳ-ಕೋಲಾಹಲ, ಭೀಕರಕೃತ್ಯ.
ಮೂಲ ...{Loading}...
ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ ॥15॥
೦೧೬ ಸುತರ ತಲೆಯೈದಕ್ಕೆ ...{Loading}...
ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವ್ಯತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿರಥನ ಬಳಿಸಲಿಸಿದರು ನೃಪ ಹರಿ ಧನಂಜಯರು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16 ನಿನ್ನ ಮಕ್ಕಳೈವರ ಶೋಕಕ್ಕೆ ಅಶ್ವತ್ಥಾಮನ ತಲೆಯೇ ಹೊಣೆ, ಸತಿಯೇ ದುಃಖವನ್ನು ಬಿಡು - ಎನ್ನುತ್ತಾ ಭೀಮ ವೇಗವಾಗಿ ರಥವನ್ನು ಬಿಟ್ಟ. ಈ ಸಂದರ್ಭವು ಆಪತ್ತನ್ನು ತರುವಂತಹುದು. ವಾಯುಪುತ್ರನಿಗೆ ಈ ಯುದ್ಧ ಸಾಧ್ಯವಾಗುವುದಿಲ್ಲ ನಡೆಯೆಂದು ಧರ್ಮರಾಯ, ಕೃಷ್ಣ ಮತ್ತು ಅರ್ಜುನರು ಅತಿರಥನಾದ ಭೀಮನನ್ನು ಸೇರಿಕೊಂಡರು.
ಪದಾರ್ಥ (ಕ.ಗ.ಪ)
ಹೊಣೆ-ಜವಾಬ್ದಾರಿ (ಇಲ್ಲಿ ‘ಸೇಡು’ ಎಂಬರ್ಥ) ಸೂಠಿ-ವೇಗ, ವ್ಯತಿಕರ-ಸಂದರ್ಭ, ಅವಗಡ-ಆಪತ್ತು, ಸಮೀರಸುತ-ವಾಯುವಿನ ಮಗ, ಭೀಮ, ಹರಿಯದು-ಕೈಲಾಗದು, ಸಾಧ್ಯವಾಗದು, ಬವರ-ಯುದ್ಧ, ಬಳಿಸಲಿಸು-ಸಮೀಪಿಸು, ಧನಂಜಯ-ಅರ್ಜುನ
ಮೂಲ ...{Loading}...
ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವ್ಯತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿರಥನ ಬಳಿಸಲಿಸಿದರು ನೃಪ ಹರಿ ಧನಂಜಯರು ॥16॥
೦೧೭ ನಿಲ್ಲು ಗುರುಸುತ ...{Loading}...
ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಲ್ಲು ಅಶ್ವತ್ಥಾಮ. ನಿನ್ನ ಶೌರ್ಯದ ಸ್ಪರ್ಧೆ ನಮ್ಮೊಂದಿಗೆ ನಡೆಯುತ್ತದೆಯೆ. ಹುಲು ಮನುಷ್ಯರಿಗೆ ಯಮನಲ್ಲಿ ಸರಸವೇ. ದ್ರೌಪದಿಯ ಐದು ಜನ ಮಕ್ಕಳನ್ನು ಹಿಂತಿರುಗಿಸು. ನೀನು ಶಸ್ತ್ರವಿದ್ಯೆಯ ಗುರುವಾದರೆ (ಅವನ ಮಗನಾದರೆ) ನಮಗೇನು. ದ್ರೌಪದಿಯ ಕಣ್ಣೀರು ನಿನ್ನ ತಾಯಿಯಾದ ಕೃಪೆಯಲ್ಲಿ ಹೆಚ್ಚಾಗಿ ಹರಿಯಬೇಕು ಎಂದು ಭೀಮ ಮೂದಲಿಸಿದ.
ಪದಾರ್ಥ (ಕ.ಗ.ಪ)
ಶೌರ್ಯಪಣ-ಶೌರ್ಯಪ್ರತಿಜ್ಞೆ, ಶೌರ್ಯದ ಸ್ಪರ್ಧೆ, ಹುಲು ಜೀವರು-ಕ್ಷುದ್ರವ್ಯಕ್ತಿಗಳು, ಜವ-ಯಮ, ಮೇಳ-ಸರಸ, ಜೊತೆ, ಉಗುಳು-ಹೊರಹಾಕು, ಪಂಚದ್ರೌಪದೇಯರು-ದ್ರೌಪದಿಯ ಐದುಜನ ಮಕ್ಕಳು, ಅಕ್ಷಿಜಲ-ಕಣ್ಣೀರು, ಕೃಪೆ-ಅಶ್ವತ್ಥಾಮನ ತಾಯಿ, ಲಂಬಿಸು-ವಿಸ್ತರಿಸು, ಹೆಚ್ಚಾಗು
ಮೂಲ ...{Loading}...
ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ ॥17॥
೦೧೮ ಎಲವೊ ಶರಸನ್ನ್ಯಾಸವನು ...{Loading}...
ಎಲವೊ ಶರಸಂನ್ಯಾಸವನು ಕುರು
ತಿಲಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿ ಕಾರ್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ ಭೀಮ, ನಾನು ಶರಸನ್ಯಾಸವನ್ನು (ಶಸ್ತ್ರತ್ಯಾಗವನ್ನು) ದುರ್ಯೋಧನನ ಮರಣವಾದಾಗ ಮಾಡಿದೆ. ನೀನು ಕೋಪಗೊಂಡರೆ ಫಲವೇನು. ನನ್ನ ಸ್ವಾಮಿಕಾರ್ಯಕ್ಕೋಸ್ಕರ ನಾನು ನಿನ್ನವರ ತಲೆಗಳನ್ನು ಹೊಡೆದು ಹಾಕಿದ್ದೇನೆ. ನೀವು ಹೆದರಿ ಯುದ್ಧದಲ್ಲಿ ಅಡಗಿ ಕುಳಿತು ಜೀವವನ್ನು ಉಳಿಸಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನು ಕೊಲ್ಲುತ್ತಿದ್ದೆ - ಎಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಶರಸನ್ಯಾಸ-ಆಯುಧಗಳನ್ನು ಹಿಡಿಯದಿರುವ ವ್ರತ, ಕುರುತಿಲಕ-ದುರ್ಯೋಧನ, ಅವಸಾನ-ಅಂತ್ಯ. ಮರಣ, ಅಳಲು- ಶೋಕ, ಕೋಪ
ಮೂಲ ...{Loading}...
ಎಲವೊ ಶರಸಂನ್ಯಾಸವನು ಕುರು
ತಿಲಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿ ಕಾರ್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ ॥18॥
೦೧೯ ಮರುಳಲಾ ಗುರುಸುತ ...{Loading}...
ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ ನೀನು ಮರುಳಲ್ಲವೆ! ಧರ್ಮರಾಯನು ಎದುರಿಗೆ ಇರಲು ಪಾಂಡವರನ್ನು ನಾಶಮಾಡುತ್ತೀಯಾ! ಸಿಂಹದ ಕಾವಲಿನಲ್ಲಿ ಬಡನರಿಯ ತೊಂದರೆ ಹೆಚ್ಚಾಯಿತು. ಅಹಂಕಾರದಿಂದ ಬೊಬ್ಬೆಹಾಕಲು ಇದು ದುರ್ಯೋಧನನ ಆಸ್ಥಾನವಲ್ಲ. ಯುದ್ಧದ ಅಂತಃಸ್ಸತ್ವ ನಿನಗೆ ಸುಲಭವಾಗಿ ದೊರಕುವುದೇ - ಎಂದು ಕೃಷ್ಣ ಅಶ್ವತ್ಥಾಮನನ್ನುದ್ದೇಶಿಸಿ ಹೇಳಿದ.
ಪದಾರ್ಥ (ಕ.ಗ.ಪ)
ವಿಭಾಡಿಸು-ನಾಶಮಾಡು, ಮೃಗೇಂದ್ರ-ಸಿಂಹ, ಗರವಟಿಗೆ-ಕಾವಲು, ಸೃಗಾಲ-ನರಿ, ಆಹವಾಂತಸ್ಸರಣೆ-ಯುದ್ಧದ ಒಳಸತ್ವ, ಒಳಮರ್ಮ
ಮೂಲ ...{Loading}...
ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ ॥19॥
೦೨೦ ಕಾಯಬಲ್ಲೈ ಪಾಣ್ಡವರನು ...{Loading}...
ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯದಲಿ ನಿನ್ನವರು ಹೊಗುವರೆ ಹಸ್ತಿನಾಪುರವ
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಪಾಂಡವರನ್ನು ಕಾಯಲು ಸಮರ್ಥನಾಗಿದ್ದೀಯೋ. ನಾವು ನಿರಾಯುಧರೆಂದು, ನಿನ್ನ ಪಾಂಡವರು ಯಾವುದೇ ತೊಂದರೆಯಿಲ್ಲದೆ ಹಸ್ತಿನಾಪುರವನ್ನು ಹೊಗುತ್ತಾರೆಯೆ. ಈ ಬಾಣವನ್ನು ನಾಶಮಾಡು, ನೀನು ಪಾಂಡವರಾಯಜೀವಿಯಲ್ಲವೇ, ಎನ್ನುತ್ತಾ ಅಶ್ವತ್ಥಾಮ ಕೃಷ್ಣನನ್ನು ಅಪಹಾಸ್ಯಮಾಡಿ ಹುಲ್ಲುಕಡ್ಡಿಯಿಂದ ಹೊಡೆದ.
ಪದಾರ್ಥ (ಕ.ಗ.ಪ)
ನಿರ್ದಾಯ-ಯಾವುದೇ ತೊಂದರೆಯಿಲ್ಲದೆ, ಹೊಗು-ಪ್ರವೇಶಿಸು, ಸಾಯಕ-ಬಾಣ, ಚಕ್ರಾಯುಧನ-ಕೃಷ್ಣನ(ಚಕ್ರವನ್ನು ಆಯುಧವನ್ನಾಗುಳ್ಳವ) ಬೋಳೈಸಿ-ಸಮಾಧಾನಪಡಿಸಿ (ಇಲ್ಲಿ, ‘ಅಪಹಾಸ್ಯಮಾಡಿ) ತೃಣ-ಹುಲ್ಲುಗರಿಕೆ, ಇಟ್ಟ-ಹೊಡೆದ.
ಮೂಲ ...{Loading}...
ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯದಲಿ ನಿನ್ನವರು ಹೊಗುವರೆ ಹಸ್ತಿನಾಪುರವ
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ ॥20॥
೦೨೧ ಆ ಮಹಾಮನ್ತ್ರಾಭಿಮನ್ತ್ರಿತ ...{Loading}...
ಆ ಮಹಾಮಂತ್ರಾಭಿಮಂತ್ರಿತ
ಭೀಮವಿಕ್ರಮತೃಣವನಶ್ವ
ತ್ಥಾಮನಿಡೆ ಲೋಕತ್ರಯಕ್ಷೋಭಪ್ರಭಂಜನವ
ವ್ಯೋಮಕೇಶಲಲಾಟ ವಿಶ್ರುತ
ಧೂಮಕೇತುಶಿಖಾವಿಸಂಸ್ಥುಳ
ಧೂಮಚುಂಬಿತ ಖಚರಚಯ ಭೂರಿಸಿತು ರಿಪುನೃಪರ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾಮಂತ್ರದಿಂದ ಮಂತ್ರಿಸಲ್ಪಟ್ಟ, ಮೂರು ಲೋಕಗಳಲ್ಲೂ ಕ್ಷೋಭೆಯನ್ನುಂಟುಮಾಡುವ, ವಿನಾಶಕಾರಕವಾದ ಭಯಂಕರ ಶಕ್ತಿಯ ಆ ತೃಣವನ್ನು ಅಶ್ವತ್ಥಾಮ ಪ್ರಯೋಗಿಸಲು ವ್ಯೋಮಕೇಶನಾದ ಶಿವನ ಹಣೆಯ ಕಣ್ಣಿನ ಅಗ್ನಿಯಿಂದ ಮತ್ತು ಧೂಮಕೇತುವಿನ ಅಗ್ನಿಯಿಂದ ಹೊರಟ ಧೂಮದಿಂದ ಮುಚ್ಚಲ್ಪಟ್ಟ ಬಾಣವು ಶತ್ರುರಾಜರನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಅಭಿಮಂತ್ರಿತ-ಮಂತ್ರಿಸಲ್ಪಟ್ಟ, ಭೀಮವಿಕ್ರಮ-ಭಯಂಕರ ಪರಾಕ್ರಮ, ತೃಣ-ಹುಲ್ಲುಕಡ್ಡಿ, ದರ್ಭೆ, ಇಡೆ-ಹೊಡೆಯಲು, ಪ್ರಯೋಗಿಸಲು, ಲೋಕತ್ರಯ-ಸ್ವರ್ಗ, ಮತ್ರ್ಯ, ಪಾತಾಳಗಳೆಂಬ ಮೂರು ಲೋಕಗಳು, ಕ್ಷೋಭ- ಕ್ಷೋಭೆಯನ್ನುಂಟುಮಾಡುವ, ಗಾಬರಿಯುಂಟುಮಾಡುವ, ಪ್ರಭಂಜನ-ನಾಶಮಾಡುವ, ವ್ಯೋಮಕೇಶ-ಶಿವ, ಲಲಾಟ-ಹಣೆ (ಹಣೆಯಲ್ಲಿನ ಕಣ್ಣು), ಶಿಖಾ-ಅಗ್ನಿ, ವಿಸಂಸ್ಥುಳ-ಇರುವ, ನೆಲಸಿದ, ಧೂಮಚುಂಬಿತ-ಹೊಗೆತಾಗಿದ, ಹೊಗೆಯಿಂದ ಮುಚ್ಚಲ್ಪಟ್ಟ, ಖಚರಚಯ-ಬಾಣಗಳ ಸಮೂಹ (ಆಕಾಶದಲ್ಲಿ ಹಾರುವ ಬಾಣ) ಭೂರಿಸಿತು-ಆವರಿಸಿತು.
ಮೂಲ ...{Loading}...
ಆ ಮಹಾಮಂತ್ರಾಭಿಮಂತ್ರಿತ
ಭೀಮವಿಕ್ರಮತೃಣವನಶ್ವ
ತ್ಥಾಮನಿಡೆ ಲೋಕತ್ರಯಕ್ಷೋಭಪ್ರಭಂಜನವ
ವ್ಯೋಮಕೇಶಲಲಾಟ ವಿಶ್ರುತ
ಧೂಮಕೇತುಶಿಖಾವಿಸಂಸ್ಥುಳ
ಧೂಮಚುಂಬಿತ ಖಚರಚಯ ಭೂರಿಸಿತು ರಿಪುನೃಪರ ॥21॥
೦೨೨ ಅವನಿಪತಿ ಕೇಳೈ ...{Loading}...
ಅವನಿಪತಿ ಕೇಳೈ ಮಹಾವೈ
ಷ್ಣವದ ಸತ್ರಾಣವನು ಗುರುಸಂ
ಭವನ ಮಂತ್ರದ ಪಾಡಿ ನಡಪಾಡಿಸಿತು ಪಾಂಡವರ
ತವಕದಲಿ ತೃಣಬಾಣವಭಿಮ
ನ್ಯುವಿನ ರಾಣೀವಾಸದುದರೋ
ದ್ಭವದ ಗರ್ಭಕೆ ಮುರಿದು ಹರಿದುದು ಸೂಕ್ಷ್ಮರೂಪದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾವೈಷ್ಣವಾಸ್ತ್ರದ ಶಕ್ತಿಯನ್ನು ಧೃತರಾಷ್ಟ್ರನೇ ಕೇಳು. ಅಶ್ವತ್ಥಾಮನ ಮಂತ್ರದ ಶಕ್ತಿ ಪಾಂಡವರನ್ನು ಓಡಾಡಿಸಿತು. ಆತುರದಿಂದ ತೃಣಬಾಣವು ಅಭಿಮನ್ಯುವಿನ ಪತ್ನಿಯಾದ ಗರ್ಭಿಣಿ ಉತ್ತರೆಯ ಗರ್ಭದೊಳಕ್ಕೆ ಪ್ರವೇಶಿಸಿ ಸೂಕ್ಷ್ಮರೂಪದಲ್ಲಿ ಮುಂದುವರಿಯಿತು.
ಪದಾರ್ಥ (ಕ.ಗ.ಪ)
ವೈಷ್ಣವ-ವಿಷ್ಣುವಿಗೆ ಸಂಬಂಧಿಸಿದ, ವೈಷ್ಣವಾಸ್ತ್ರ, ಸತ್ರಾಣ-ಅಧಿಕಶಕ್ತಿ, ಪಾಡಿ-ಶಕ್ತಿ(?) ನಡಪಾಡು-ನಡೆದಾಡು, ಓಡಾಡು, ತವಕ-ಆತುರ, ವೇಗ, ತೃಣಬಾಣ-ಹುಲ್ಲಿನ ಬಾಣ, ರಾಣೀವಾಸ-ರಾಜನಪತ್ನಿ, ರಾಣಿ, ಉದರೋದ್ಭವದ-ಗರ್ಭಿಣಿಯಾದ, ಮುರಿದು-ತಿರುಗಿ, ಹರಿದುದು-ಪ್ರವೇಶಿಸಿತು.
ಮೂಲ ...{Loading}...
ಅವನಿಪತಿ ಕೇಳೈ ಮಹಾವೈ
ಷ್ಣವದ ಸತ್ರಾಣವನು ಗುರುಸಂ
ಭವನ ಮಂತ್ರದ ಪಾಡಿ ನಡಪಾಡಿಸಿತು ಪಾಂಡವರ
ತವಕದಲಿ ತೃಣಬಾಣವಭಿಮ
ನ್ಯುವಿನ ರಾಣೀವಾಸದುದರೋ
ದ್ಭವದ ಗರ್ಭಕೆ ಮುರಿದು ಹರಿದುದು ಸೂಕ್ಷ್ಮರೂಪದಲಿ ॥22॥
೦೨೩ ಜಗವ ಹೂಡುವ ...{Loading}...
ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತನ್ನು ಪ್ರಾರಂಭಿಸುವ ಮತ್ತು ಹದಿನಾಲ್ಕು ಲೋಕಗಳ ಜೀವರನ್ನು ಊಟಹಾಕಿ ರಕ್ಷಿಸುವ, ಜಗತ್ತನ್ನು ಆಂತರಿಕ ಸ್ವಭಾವದಿಂದ ಗಟ್ಟಿಗೊಳಿಸುವ ತ್ರಿಗುಣಗಳ ಸೊಗಡು ಮುಸುಕಿನೊಳಗೆ ತನ್ನ ಸಹಸ್ರಸಂಖ್ಯೆಯ ಹರಿತವಾದ ಹಲ್ಲುಗಳು ಸೇರಿಕೊಂಡಿದೆಯೋ ಎಂಬಂತೆ ಮಹಾಸುದರ್ಶನ ಚಕ್ರವು ಬಿಗಿಗೊಂಡು ಉತ್ತರೆಯ ಗರ್ಭದ ಸುತ್ತಲೂ ಬೇಲಿಯನ್ನು ನಿರ್ಮಿಸಿತು.
ಪದಾರ್ಥ (ಕ.ಗ.ಪ)
ಹೂಡು-ಪ್ರಾರಂಭಿಸು, ನಿರ್ಮಿಸು, ಮೇಣ್-ಮತ್ತು, ಚತುರ್ದಶಭುವನ-ಹದಿನಾಲ್ಕು ಲೋಕಗಳು (ಭೂ, ಭುವರ್, ಸ್ವರ್, ಮಹರ್, ಜನ, ತಪೋ, ಸತ್ಯ ಎಂಬ ಏಳು ಲೋಕಗಳು ಮತ್ತು ಅತಲ, ವಿತಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಲ - ಎಂಬ ಏಳು ಪಾತಾಲಗಳು, ಹೀಗೆ ಒಟ್ಟು ಹದಿನಾಲ್ಕು ಲೋಕಗಳು) ಜೀವರು-ಜೀವವನ್ನುಳ್ಳವರು, ಊಡು-ಕುಡಿಸು, ಉಣಿಸು-ತಿನ್ನಿಸು, ಅಂತರ್ಭಾವದಲ್ಲಿ-ಸಹಜಸ್ವಭಾವದಲ್ಲಿ, ಬಲಿಸು-ಗಟ್ಟಿಗೊಳಿಸು, ಗುಣತ್ರಯ-ಸತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳು, ಸೊಗಡು-ಗಾಢವಾದ ವಾಸನೆ, ಸಹಸ್ರಧಾರೆ-ಸಾವಿರ ಅಲಗು (ಸಾವಿರ ಹಲ್ಲುಗಳ ಹರಿತ) ಝಗೆ-ಮೈಮುಚ್ಚುವ ಅಂಗಿ, ನಿಲುವಂಗಿ, ವೇಢೆ-ಸುತ್ತುವರಿಯುವ, ಬೇಲಿ
ಟಿಪ್ಪನೀ (ಕ.ಗ.ಪ)
ಉತ್ತರೆ - ಸುಂದರಿಯೂ, ಬಾಲಕಿಯೂ ಆದ ಉತ್ತರೆ ವಿರಾಟರಾಯನ ಮಗಳು. ಉತ್ತರನ ತಂಗಿ ಅಭಿಮನ್ಯುವಿನ ಹೆಂಡತಿ ಮತ್ತು ಪರೀಕ್ಷಿತನ ತಾಯಿ ವಿರಾಟಪರ್ವದಿಂದ ಮತ್ತು ಮುಂದೆ ಹಲವಾರು ಪರ್ವಗಳಲ್ಲಿ ಈಕೆಯೆ ಪ್ರಸಕ್ತಿಯಿದೆ.
ಮೂಲ ...{Loading}...
ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ ॥23॥
೦೨೪ ಸೆಳೆದುಕೊಣ್ಡನು ಮಿತ್ತುವಿನ ...{Loading}...
ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಕುಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಮೃತ್ಯುವಿನ ಗಂಟಲಿನೊಳಗಿನಿಂದ ಮಾರ್ಕಂಡೇಯನನ್ನು ಸೆಳೆದುಕೊಂಡ (ಬದುಕಿಸಿದ). ಯುದ್ಧದಲ್ಲಿ ಭಗದತ್ತನ ಶಕ್ತ್ಯಾಯುಧದಿಂದ ಮತ್ತು ಅಶ್ವತ್ಥಾಮನ ನಾರಾಯಣಾಸ್ತ್ರದಿಂದ ಅರ್ಜುನನ್ನು ಬದುಕಿಸಿದ. ಅಶ್ವತ್ಥಾಮ ಪ್ರಯೋಗಿಸಿದ ಈ ದರ್ಭಾಸ್ತ್ರದಿಂದ ಚಂದ್ರವಂಶದ ದೊರೆಯ ಮೊಳಕೆಯನ್ನು ಕರುಣೆಯಿಂದ ಕಾಯಿದ.
ಪದಾರ್ಥ (ಕ.ಗ.ಪ)
ಸೆಳೆದುಕೊಂಡ-ಎಳೆದುಕೊಂಡ, ಬಿಡಿಸಿಕೊಂಡ, ಮಿತ್ತು-ಮೃತ್ಯು(ಸಂ), ಕಳುಪಿದ-ಕಳಿಸಿದ, ಪ್ರಯೋಗಿಸಿದ, ಕುಶಿಕಾಸ್ತ್ರ- ದರ್ಭಾಸ್ತ್ರ, ಹುಲ್ಲಿನ ಬಾಣ, ಶಶಿಕುಲ-ಚಂದ್ರವಂಶ (ಪಾಂಡವ-ಕೌರವರು ಈ ವಂಶಕ್ಕೆ ಸೇರಿದವರು) ರಾಜಾಂಕುರ-ರಾಜವಂಶದ ಕುಡಿ (ಮೊಳಕೆ)
ಟಿಪ್ಪನೀ (ಕ.ಗ.ಪ)
- ಮಾರ್ಕಂಡೇಯ-ಮೃಕಂಡು ಮುನಿಯ ಮಗ, ಶಿವನಿಂದ ವರಪಡೆದವ. ಶಿವಭಕ್ತಿಯಿಂದ ಮೃತ್ಯುವನ್ನು ಗೆದ್ದವ. ಮೃತ್ಯುವಿನ ಗಂಟಲಿನಿಂದ ಮಾರ್ಕಂಡೇಯನನ್ನು ಬಿಡಿಸಿಕೊಂಡವನು ಶಿವ; ಆದರೆ ಇಲ್ಲಿ ವಿಷ್ಣುವು ಹಾಗೆ ಮಾಡಿದನೆಂಬಂತೆ ಪ್ರಸ್ತಾಪವಾಗಿದೆ. ಹರಿ-ಹರರಿಬ್ಬರೂ ಒಂದೇ ಎಂಬ ಭಾವದಿಂದ ಕುಮಾರವ್ಯಾಸ ಹಾಗೆ ಪ್ರಸ್ತಾಪಿಸಿರಬಹುದು.
- ಭಗದತ್ತಾಂಕುಶ-ಭಗದತ್ತನು ತನ್ನ ಶಕ್ತ್ಯಾಯುಧವನ್ನು ಪ್ರಯೋಗಿಸಿ, ಅರ್ಜುನನ್ನು ಸಂಹರಿಸಲು ಯತ್ನಿಸಿದಾಗ ಕೃಷ್ಣ ತನ್ನ ಎದೆಯೊಡ್ಡಿ ಅದನ್ನು ನಿವಾರಿಸಿದ. ದ್ರೋಣಪರ್ವದ 3ನೆಯ ಸಂಧಿಯ 55ನೆಯ ಪದ್ಯದಿಂದ 73ರವರೆಗಿನ ಪದ್ಯಗಳಲ್ಲಿ ಈ ಬಗ್ಗೆ ವಿವರಗಳಿವೆ.
- ನಾರಾಯಣಾಸ್ತ್ರ-ದ್ರೋಣ ಮರಣದ ಸಂಗತಿಯನ್ನು ತಿಳಿದ ಅವನ ಮಗ ಅಶ್ವತ್ಥಾಮ, ಪಾಂಡವರನ್ನು ಕೊಲ್ಲಲು ಈ ಆಸ್ತ್ರವನ್ನು ಉಪಯೋಗಿಸಿದ. ಆದರೆ ಕೃಷ್ಣನ ಸೂಚನೆಯಂತೆ ತಮ್ಮತಮ್ಮ ಆಯುಧಗಳನ್ನು ಕೆಳಗೆ ಹಾಕಿ ಪಾಂಡವರು ಅಪಾಯದಿಂದ ಪಾರಾದರು. ದ್ರೋಣಪರ್ವದ 19ನೆಯ ಸಂಧಿಯ 13ನೆಯ ಪದ್ಯದಿಂದ 52ನೆಯ ಪದ್ಯದವರೆಗೆ ಈ ಬಗ್ಗೆ ವಿವರಗಳಿವೆ.
ಮೂಲ ...{Loading}...
ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಕುಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ ॥24॥
೦೨೫ ತೀರಿತೈ ಕುಶಿಕಾಸ್ತ್ರಘಾತಿ ...{Loading}...
ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದರ್ಭಾಸ್ತ್ರವು ಮುಗಿಯಿತು, ಕೃಷ್ಣ ಅಶ್ವತ್ಥಾಮರು ಒಬ್ಬರೊಬ್ಬರನ್ನು ವೀರಾವೇಶದ ಶಪಥ ಪ್ರತಿಜ್ಞೆಗಳಿಂದ, ಮೇಲುಕೀಳುಗಳ ಮಾತಿನಿಂದ, ರೋಷಭರಿತವಾಗಿ ಶಪಿಸಿದರು. ದ್ರೌಪದಿಯ ಮನಸ್ಸಿನ ಅಗ್ನಿಯನ್ನು ನಿವಾರಿಸಲು ಇವನೇ ಜಲವೆಂದು, ದ್ರೋಣಾಚಾರ್ಯನ ಮಗನಾದ ಅಶ್ವತ್ಥಾಮನನ್ನು ಭೀಮಾರ್ಜುನರು ಹಿಡಿದರು.
ಪದಾರ್ಥ (ಕ.ಗ.ಪ)
ತೀರಿತು-ಮುಗಿಯಿತು, ಶಕ್ತಿನಾಶವಾಯಿತು, ವೀರಪಣ-ವೀರಾವೇಶದ ಮಾತು, ವಾಸಿ-ಮೇಲು ಕೀಳು, ನಾರಿ-ಹೆಂಗಸು (ಇಲ್ಲಿ ದ್ರೌಪದಿ) ಅಂತಸ್ತಾಪವಹ್ನಿ-ಮನಸ್ಸಿನ ಕೋಪ ತಾಪದ ಬೆಂಕಿ, ನಿವಾರಣ-ಪರಿಹಾರ, ಆಚಾರಿಯನ ನಂದನ-ದ್ರೋಣಾಚಾರ್ಯನಮಗ, ಅಶ್ವತ್ಥಾಮ
ಮೂಲ ...{Loading}...
ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು ॥25॥
೦೨೬ ಬನ್ದಳಾ ದ್ರೌಪದಿಯಹಹ ...{Loading}...
ಬಂದಳಾ ದ್ರೌಪದಿಯಹಹ ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ
ಕೊಂದುಕೂಗದೆ ಕೃಪೆಯನಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಅಲ್ಲಿಗೆ ಬಂದಳು. ಅಹಹಾ! ಗುರುಸುತನನ್ನು ಕೊಲ್ಲಬಾರದು, ಅಯ್ಯೋ! ನನ್ನ ಈ ಮಕ್ಕಳ ಮರಣದ ಮಹಾದುಃಖ (ಇವನ ಸಾವಿನಲ್ಲಿ ಪರಿಹಾರವಾಗುವುದೇ) ಅದರಂತೆ ಇವನ ಸಾವು ಇವನ ತಾಯಿಯಾದ ಕೃಪೆಯನ್ನು ಕೊಂದು ಅಟ್ಟಹಾಸಗೈಯುವುದಿಲ್ಲವೇ. ನಾವು ಅಬಲೆಯರೆಲ್ಲರೂ ಸಮಸುಖದುಃಖಿಗಳು. ಸಾಕು ಬಿಡಿ ಎಂದು ಭೀಮಾರ್ಜುನರನ್ನು ದ್ರೌಪದಿ ಬಿಡಿಸಿದಳು.
ಪದಾರ್ಥ (ಕ.ಗ.ಪ)
ಕೊಂದುಕೂಗು-ಕೊಂದು ಅಟ್ಟಹಾಸಮಾಡು, ಕೃಪೆ-ಅಶ್ವತ್ಥಾಮನ ತಾಯಿ, ಅಬಲಾವೃಂದ-ಅಶಕ್ತರಾದ ಮಹಿಳೆಯರ ಗುಂಪು.
ಟಿಪ್ಪನೀ (ಕ.ಗ.ಪ)
ಈ ಸಂಗತಿ ಭಾರತದಲ್ಲಿಲ್ಲ. ಆದರೆ ಭಾಗವತದಲ್ಲಿ ಇದು ಬರುತ್ತದೆ.
ಮೂಲ ...{Loading}...
ಬಂದಳಾ ದ್ರೌಪದಿಯಹಹ ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ
ಕೊಂದುಕೂಗದೆ ಕೃಪೆಯನಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ ॥26॥
೦೨೭ ತಲೆಯ ಕೊಮ್ಬವಗಡದ ...{Loading}...
ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿವರ ಸಾಹಸ
ವಳುಕಿಸದೆ ಮೂಜಗವ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನ ತಲೆಯನ್ನು ತೆಗೆಯುತ್ತೇನೆಂಬ ಆಪತ್ತಿನ ಪ್ರತಿಜ್ಞೆಯನ್ನು ನಡೆಸಲೆಂದು ಆ ಅಶ್ವತ್ಥಾಮನ ತಲೆಯಲ್ಲಿ ಹೊಳೆಯುತ್ತಿದ್ದ ಮಣಿಯನ್ನು ಸೇಡಿನಿಂದ ಕಿತ್ತುಕೊಂಡು ಅಶ್ವತ್ಥಾಮನ ಮೇಲೆ ಗೆಲುವನ್ನು ಸಾಧಿಸಿ ಪಾಂಡವರು ಹಿಂದಿರುಗಿದರು. ಯದುಕುಲತಿಲಕನಾದ ಗದುಗಿನ ವೀರನಾರಾಯಣನ ಕರುಣೆಯಿಂದ ಪಾಂಡವರ ಸಾಹಸವು ಮೂರು ಲೋಕಗಳನ್ನೂ ಹೆದರಿಸಲಾರದೆ!
ಪದಾರ್ಥ (ಕ.ಗ.ಪ)
ತಲೆಯ ಕೊಂಬ-ತಲೆಯನ್ನು ತೆಗೆದುಕೊಳ್ಳುವ, ತಲೆಯನ್ನು ಕಡಿಯುವ, ಅವಗಡ-ಆಪತ್ತು, ಸಲಿಸು-ನಡೆಸು, ನೆರವೇರಿಸು, ಮುಕುಟ-ಶಿರಸ್ಸು, ತಲೆ, ಮಾಣಿಕ-ಮಾಣಿಕ್ಯ(ಸಂ)
ಮೂಲ ...{Loading}...
ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿವರ ಸಾಹಸ
ವಳುಕಿಸದೆ ಮೂಜಗವ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ ॥27॥