೦೯

೦೦೦ ಸೂ ರಾಯಪರಬಲ ...{Loading}...

ಸೂ. ರಾಯಪರಬಲ ಮದನಹರ ರಿಪು
ರಾಯಕುರವರರು ಸಹಿತ ಪಾಂಡವ
ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲ ವಟಕುಜವಿರಲು ಕಂಡರು ನಿಲಿಸಿದರು ರಥವ ॥1॥

೦೦೨ ನಿಲುವೆವಿಲ್ಲಿ ...{Loading}...

ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ ॥2॥

೦೦೩ ಒಳಗೆ ತೊಳಲಿಕೆಯುಕ್ಕಡಕೆ ...{Loading}...

ಒಳಗೆ ತೊಳಲಿಕೆಯುಕ್ಕಡಕೆ ಕಳ
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ ॥3॥

೦೦೪ ಕುಸಿದು ಜೊಮ್ಮಿನ ...{Loading}...

ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ರಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ ॥4॥

೦೦೫ ಭಾಗ ಬೀತುದು ...{Loading}...

ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್‍ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ ॥5॥

೦೦೬ ಇದು ಮದೀಯ ...{Loading}...

ಇದು ಮದೀಯ ಮನೋರಥದ ಸೌ
ಹೃದದವೊಲು ಸಂಕಲ್ಪಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾಡಿಸಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು ॥6॥

೦೦೭ ಏನು ಗುರುಸುತ ...{Loading}...

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳಗಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಯೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ ॥7॥

೦೦೮ ಲೇಸಲೈ ಕೃತವರ್ಮ ...{Loading}...

ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡು ಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ ॥8॥

೦೦೯ ಕ್ರತುಹರನ ಸಮಜೋಳಿ ...{Loading}...

ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತvಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ ॥9॥

೦೧೦ ಇರಿಸನಿಲ್ಲಿ ಮುರಾರಿ ...{Loading}...

ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ ॥10॥

೦೧೧ ಮರಹಿನಲಿ ಮುಡುಹುವುದು ...{Loading}...

ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ ॥11॥

೦೧೨ ತಪ್ಪದಾಚಾರಿಯನ ನುಡಿ ...{Loading}...

ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ ॥12॥

೦೧೩ ಆದಡಿರಿ ನೀವಿಬ್ಬರಿಲ್ಲಿ ...{Loading}...

ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದರೆಮಗೇನೆನುತ ಬಂದರು ಪಾಳೆಯದ ಹೊರಗೆ ॥13॥

೦೧೪ ಮುರಿದು ಕೋಟೆಯನೊನ್ದು ...{Loading}...

ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು
ತರವಳರ ತೊಳಲಿಕೆಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು ॥14॥

೦೧೫ ಎರಡು ಬಾಗಿಲ ...{Loading}...

ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ ॥15॥

೦೧೬ ಎರಡು ಬಾಗಿಲೊಳಿವರನಿಬ್ಬರ ...{Loading}...

ಎರಡು ಬಾಗಿಲೊಳಿವರನಿಬ್ಬರ
ನಿರಿಸಿ ಚಾಪವ ಮಿಡಿದು ಬಾಣವ
ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ
ಅರಸ ಕೇಳದುಭುತವನಾ ನಡು
ವಿರುಳು ನೃಪವೀಥಿಯಲಿ ನಿಂದುದು
ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ ॥16॥

೦೧೭ ನಿಟಿಲನಯನದ ಜಡಿವ ...{Loading}...

ನಿಟಿಲನಯನದ ಜಡಿವ ಜೂಟದ
ಜಟೆಯ ಫೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ ॥17॥

೦೧೮ ಬೆಚ್ಚಿದನೆ ಭಾರಣೆಯ ...{Loading}...

ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದಾರೇಳುನೂರೈನೂರು ಸಾವಿರವ
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ ॥18॥

೦೧೯ ಉಗಿದು ಮನ್ತ್ರಾಸ್ತ್ರವನು ...{Loading}...

ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾದಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ ॥19॥

೦೨೦ ಕಾಕಮುಖದ ಮಯೂರ ...{Loading}...

ಕಾಕಮುಖದ ಮಯೂರ ಟಿಟ್ಟಿಭ
ಕೋಕವದನದ ಹಂಸ ಕಂಕ ಬ
ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ
ಘೂಕಮುಖದ ಸೃಗಾಲ ಶಾರ್ದೂ
ಲಾಕೃತಿಯ ಬಹುವಿಧದ ರೂಪದ
ನೇಕ ಭೂತವ್ರಾತ ನೆರೆದುದು ಭೂಪ ಕೇಳ್ ಎಂದ ॥20॥

೦೨೧ ಇದು ವಿರೂಪಾಕ್ಷನ ...{Loading}...

ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ ॥21॥

೦೨೨ ಸೆರೆನರಙ್ಗಳ ದರ್ಭೆ ...{Loading}...

ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ ॥22॥

೦೨೩ ಮೆಚ್ಚಿದನು ಮದನಾರಿ ...{Loading}...

ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚುಜಡೆಗಳ ಜಹ್ನುಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚುಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ ॥23॥

೦೨೪ ಸಾರಥಿಗಳೊಳಗೆನಿಸಿದನು ಭೂ ...{Loading}...

ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ ॥24॥

೦೨೫ ಎನೆ ಪುರಾರಿಯ ...{Loading}...

ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವವನಂಘೈಸಿದನು ರಜನಿಯಲಿ ॥25॥

೦೨೬ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ರಾಜಬೀದಿಯೊ
ಳುರವಣಿಸಿ ಗುರುಸೂನು ರಥದಲಿ
ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ
ಇರರು ಪಾಂಡವರಿಲ್ಲಿ ಮೇಣವ
ರಿರಲಿ ಬಳಿಕಾರೈವೆನಯ್ಯನ
ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ ॥26॥

೦೨೭ ಎನ್ದು ರಾಯನ ...{Loading}...

ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ ॥27॥

೦೨೮ ತೊಳತೊಳಗುವಿಕ್ಕೆಲದ ದೀಪದ ...{Loading}...

ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ ॥28॥

೦೨೯ ಘಳಿಲನೆದ್ದನಿದಾರು ನಿದ್ರೆಯ ...{Loading}...

ಘಳಿಲನೆದ್ದನಿದಾರು ನಿದ್ರೆಯ
ನಳಿದವನ ತಿವಿಯೆನುತ ಮುಂದಣ
ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ
ನಿಲವ ಕಂಡನಡಾಯುಧವ ತಾ
ಹಲಗೆಯಾವೆಡೆಯೆಂಬವನ ಮುಂ
ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ ॥29॥

೦೩೦ ಉಗಿದು ಬಿಲ್ಲಿನ ...{Loading}...

ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ ॥30॥

೦೩೧ ಅಕಟ ಗುರುಹತ್ಯಾ ...{Loading}...

ಅಕಟ ಗುರುಹತ್ಯಾ ಮಹಾಪಾ
ತಕಿಯೆ ನಿನಗೇ ಸ್ವರ್ಗ ದೇವ
ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ
ಕ್ರಕಚ ಕುಂಭೀಪಾಕಮುಖ ನಾ
ರಕದೊಳರಮನೆ ನಿನಗೆ ಕೌಕ್ಷೇ
ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ ॥31॥

೦೩೨ ಉರಲ ಹತ್ತಿಸಿ ...{Loading}...

ಉರಲ ಹತ್ತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತಮೌಂಜಸ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ ॥32॥

೦೩೩ ಗಜಬಜವಿದೇನೆನುತ ನಿದ್ರೆಯ ...{Loading}...

ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ ॥33॥

೦೩೪ ಇದು ಯುಧಿಷ್ಠಿರ ...{Loading}...

ಇದು ಯುಧಿಷ್ಠಿರ ರಾಜಗೃಹವೆಂ
ದೊದೆದು ಕದವನು ಕಾಹಿನವರನು
ಸದೆದು ಹೊಕ್ಕನು ಸಜ್ಜೆಯಲಿ ಧರ್ಮಜನ ನಂದನನ
ಒದೆದಡೆದ್ದನು ಸುರಗಿಯಲಿ ಕಾ
ದಿದನು ಖಡುಗವ ಜಡಿದು ನಿಮಿಷಾ
ರ್ಧದಲಿ ತಲೆಯನು ನೆಗಹಿ ಪ್ರತಿವಿಂಧ್ಯಕನನಸುಗಳೆದ ॥34॥

೦೩೫ ಜನಪ ಕೇಳೈ ...{Loading}...

ಜನಪ ಕೇಳೈ ಬಳಿಕ ಸುತಸೋ
ಮನನು ಶ್ರುತಕೀರ್ತಿಯ ಶತಾನೀ
ಕನನು ಶ್ರುತವರ್ಮನನು ತರಿದನು ದ್ರೌಪದೀಸುತರ
ಜನಪರೈವರ ತಲೆಗಳೆಂದೇ
ಕನಕರಥದೊಳಗಿರಿಸಿ ಹೊಕ್ಕನು
ಮನೆಮನೆಗಳಲಿ ಸವರಿದನು ಸೋಮಪ್ರಬದ್ಧಕರ ॥35॥

೦೩೬ ಸೀಳ ಬಡಿದನು ...{Loading}...

ಸೀಳ ಬಡಿದನು ಸಮರಥರ ಪಾಂ
ಚಾಳ ರಾವುತರನು ಮಹಾರಥ
ಜಾಲವನು ಜೋದರನು ಭಾರಿಯ ಪಾರಕವ್ರಜದ
ಸಾಲ ಹೊಯ್ದನು ಹುಯ್ಯಲಿಗೆ ಹೊಗು
ವಾಳ ತರಿದನು ಖಡ್ಗಮುಷ್ಟಿಯ
ಕಾಲಭೈರವ ಬೀದಿವರಿದನು ಕೇರಿಕೇರಿಯಲಿ ॥36॥

೦೩೭ ಎಲೆಲೆ ಕವಿ ...{Loading}...

ಎಲೆಲೆ ಕವಿ ಕಳ್ಳೇರುಕಾರನ
ತಲೆಯ ಹೊಯ್‍ಹೊಯ್ಯೆನುತ ನಿದ್ರಾ
ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ
ಕೆಲಕೆಲಬರರೆ ನಿದ್ರೆಗಳ ಕಳ
ವಳಿಗರೊರೆಗಳ ಕೊಂಡಡಾಯ್ದವ
ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ ॥37॥

೦೩೮ ಗಜವ ಹಲ್ಲಣಿಸಿದರು ...{Loading}...

ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೇನುತ ಗಾಲಿಗೆ ಬಿಗಿದು ಕುದುರೆಗಳ
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ ॥38॥

೦೩೯ ಲಾಯದಲಿ ಹೊಕ್ಕಿರಿದು ...{Loading}...

ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ ॥39॥

೦೪೦ ದೊರೆಗಳೇನಾದರೊ ಯುಧಿಷ್ಠಿರ ...{Loading}...

ದೊರೆಗಳೇನಾದರೊ ಯುಧಿಷ್ಠಿರ
ನರ ವೃಕೋದರ ನಕುಲ ಸಹದೇ
ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ
ಹರನ ಖತಿಯೋ ಲಯಕೃತಾಂತನ
ವಿರಸಕೃತಿಯೋ ಸರ್ವದಳಸಂ
ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ ॥40॥

೦೪೧ ಉಳಿದುದೇಳಕ್ಷೋಹಿಣೀದಳ ದೊಳಗೆ ...{Loading}...

ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನಂಬೆನು ಜನಪ ಕೇಳ್ ಎಂದ ॥41॥

೦೪೨ ಕೂಡೆ ಕಟ್ಟಿತು ...{Loading}...

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮಮ್ಮಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ ॥42॥

೦೪೩ ಬಸಿವ ರಕುತದಡಾಯುಧದ ...{Loading}...

ಬಸಿವ ರಕುತದಡಾಯುಧದ ನೆಣ
ವಸೆಯ ತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ ॥43॥

೦೪೪ ಹೇಳಿದನು ಸೃಞ್ಜಯವಧೆಯ ...{Loading}...

ಹೇಳಿದನು ಸೃಂಜಯವಧೆಯ ಪಾಂ
ಚಾಲ ರಾಜಕುಮಾರವರ್ಗದ
ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ
ಪಾಳೆಯದೊಳರಸಿದೆನು ಪಾಂಡುನೃ
ಪಾಲತನುಜರನವರು ಕೆಡುವರೆ
ಮೇಲುಗಾಹಿನ ವೀರನಾರಾಯಣನ ಕರುಣದಲಿ ॥44॥

+೦೯ ...{Loading}...