೦೮

೦೦೦ ಸೂ ಕೆಡೆದ ...{Loading}...

ಸೂ. ಕೆಡೆದ ಕೌರವನೃಪನ ನೇಮವ
ಪಡೆದು ಕೃಪ ಕೃತವರ್ಮ ಗುರುಸುತ
ರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ

೦೦೧ ಕೇಳು ಧೃತರಾಷ್ಟ್ರಾವನೀಶ ...{Loading}...

ಕೇಳು ಧೃತರಾಷ್ಟ್ರಾವನೀಶ ಕ
ರಾಳ ಲೋಹಗದಾಭಿಹತಿಗೆ ನೃ
ಪಾಲ ಬಿದ್ದನು ಭಾರತದ ದುಸ್ಸಂಗ ಭಂಗದಲಿ
ಮೇಲೆ ಚಾರಣ ಸೂತ ಮಾಗಧ
ಜಾಲ ಹೊಗಳಿತು ಗರುವ ಕುರುಭೂ
ಪಾಲ ಗಂಡಿಗನಕಟೆನುತ ಕೊಂಡಾಡಿತಮರಗಣ ॥1॥

೦೦೨ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಮಹಿಯಲಿ
ಮಾನನಿಧಿ ಮಲಗಿದನಲೈ ತವ
ಸೂನು ರುಧಿರದ ತಿಲಕವಾದನಲೈ ಧರಾಂಗನೆಗೆ
ಭಾನುಮತಿ ವೈಧವ್ಯವಿಧಿಗಿ
ನ್ನೇನ ನೋಂತಳೊ ರಾಜರವಿಯವ
ಸಾನಸಮಯದೊಳಾದುದದ್ಭುತವರಸ ಕೇಳ್ ಎಂದ ॥2॥

೦೦೩ ನಡುಗಿತಿಳೆ ನಿರ್ಘಾತದಲಿ ...{Loading}...

ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದವು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ ॥3॥

೦೦೪ ಬೀಸಿದುದು ಬಿರುಗಾಳಿ ...{Loading}...

ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ ॥4॥

೦೦೫ ಒರೆ ಸಹಿತ ...{Loading}...

ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣ್ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳ್ ಎಂದ ॥5॥

೦೦೬ ದ್ರುಪದತನುಜ ಶಿಖಣ್ಡಿ ...{Loading}...

ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುಧಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು
ಅಪದಶಾವಿರ್ಭೂತಚೇತಃ
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ ॥6॥

೦೦೭ ಅವನಿಪತಿ ಕೇಳೀಚೆಯಲಿ ...{Loading}...

ಅವನಿಪತಿ ಕೇಳೀಚೆಯಲಿ ಕೌ
ರವನ ಹೊರೆಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ ॥7॥

೦೦೮ ಊರ ಬೇಡಿದಡೈದ ...{Loading}...

ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರ ಸಮ್ಮಿತವ
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ ॥8॥

೦೦೯ ಎತ್ತಿ ಕಳೆದೈ ...{Loading}...

ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ ॥9॥

೦೧೦ ಕೃತ್ರಿಮವ ನಿರ್ಮಿಸಿದ ...{Loading}...

ಕೃತ್ರಿಮವ ನಿರ್ಮಿಸಿದ ಫಲ ಕೈ
ವರ್ತಿಸಿತೆ ನೀವರಗುಮನೆಯಲಿ
ಹೊತ್ತಿಸಿದ ಫಲ ಬಂದುದೇ ವ್ಯವಧಾನವಾದುದಲೆ
ಬಿತ್ತಿದಿರಿ ವಿಷಬೀಜವನು ನೆರೆ
ದತ್ತ ಫಲ ಕೈಸಾರ್ದುದಾದಡೆ
ಕೆತ್ತು ಕೊಂಡಿರಲೇಕೆ ನುಡಿ ತನ್ನಾಣೆ ನುಡಿಯೆಂದ ॥10॥

೦೧೧ ಸನ್ದುದೇ ನೀ ...{Loading}...

ಸಂದುದೇ ನೀ ಮೆಚ್ಚೆ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಹೇಳೆಂದ ॥11॥

೦೧೨ ರಾಯನಾಸ್ಥಾನದಲಿ ಖೂಳರ ...{Loading}...

ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯಿಯಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ ॥12॥

೦೧೩ ಹಳುವದಲಿ ನಾನಾ ...{Loading}...

ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯನು ಮಕುಟದಲಿ
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ ॥13॥

೦೧೪ ಹಿನ್ದಣಪರಾಧವನು ಲೆಕ್ಕಿಸು ...{Loading}...

ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೈ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದುಮುಖಿಯನು ಬೂತುಗೆಡೆದುದ
ಕೊಂದು ಘಾಯವ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ ॥14॥

೦೧೫ ಉಚಿತವೆನ್ದರು ಕೆಲರು ...{Loading}...

ಉಚಿತವೆಂದರು ಕೆಲರು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ ॥15॥

೦೧೬ ಭೀಮ ಹಾ ...{Loading}...

ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ ॥16॥

೦೧೭ ಗುಣನಿಧಿಯನೇಕಾದಶಾಕ್ಷೋ ...{Loading}...

ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ ॥17॥

೦೧೮ ಅನುಜರಳಿದುದು ನೂರು ...{Loading}...

ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ ॥18॥

೦೧೯ ಆವ ಮೋರೆಯೊಳಪ್ಪದೇವರ ...{Loading}...

ಆವ ಮೋರೆಯೊಳಪ್ಪದೇವರ
ನಾವು ನೋಡುವೆವವ್ವೆಯರ ಸಂ
ಭಾವಿಸುವೆವಾವಂಗದಲಿ ಗಾಂಧಾರಿ ಕಡುಗೋಪಿ
ದೇವಿಯರುಗಳ ಶೋಕವಹ್ನಿಯ
ನಾವ ವಿಧದಲಿ ನಿಲಿಸುವೆವು ಕಾಂ
ತಾವಳಿಗಳೇನೆಂದು ಬಯ್ಯರು ಭೀಮ ಹೇಳೆಂದ ॥19॥

೦೨೦ ಅಳಲಿದತಿಭಙ್ಗಿಸಲು ಪರಮಂ ...{Loading}...

ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳಾಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ ॥20॥

೦೨೧ ಸೈರಿಸೆಮ್ಮಪರಾಧವನು ಕುರು ...{Loading}...

ಸೈರಿಸೆಮ್ಮಪರಾಧವನು ಕುರು
ವೀರ ಸಂಚಿತಪಾಪಕರ್ಮವಿ
ಕಾರವಿದು ಭೋಗಾದಿ ನಿನಗೆಂದರಸ ದುಗುಡದಲಿ
ನೀರೊರೆವ ಕಣ್ಣುಗಳನೊರಸುತ
ಸೀರೆಯಲಿ ಗದಗದಿತ ಗಳದಲಿ
ಸಾರಹೃದಯ ಮಹೀಶನದ್ದನು ಖೇದಪಂಕದಲಿ ॥21॥

೦೨೨ ಕಣ್ಡನೀವ್ಯತಿಕರವನರಸನ ...{Loading}...

ಕಂಡನೀವ್ಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನು ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ ವೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ ॥22॥

೦೨೩ ಎಲವೆಲವೊ ಪಾಣ್ಡವರಿರಾ ...{Loading}...

ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ ॥23॥

೦೨೪ ನೀವು ಮಾಡಿದ ...{Loading}...

ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಥಿತರಲೇ ಧರ್ಮೈಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ ॥24॥

೦೨೫ ಎನ್ದು ನೇಗಿಲ ...{Loading}...

ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು ॥25॥

೦೨೬ ಬಿಲ್ಲ ಮಿಡಿದನು ...{Loading}...

ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಗಾದನು ರಣೋತ್ಸವವಾಯ್ತು ಯಮಳರಿಗೆ
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ ॥26॥

೦೨೭ ಹಲಧರನ ಖತಿ ...{Loading}...

ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು ॥27॥

೦೨೮ ಹಲಧರನ ಮಸಕವನು ...{Loading}...

ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ ॥28॥

೦೨೯ ಚಿತ್ತವಿಸಿರೇ ಬರಿಯ ...{Loading}...

ಚಿತ್ತವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ ॥29॥

೦೩೦ ಏನ ತಿಳುಹುವೆ ...{Loading}...

ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂನು ನುಡಿಯನೆ ಸಮಯವನು ಶಾಸ್ತ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ ॥30॥

೦೩೧ ಅದರಿನೀ ಕೌರವನ ...{Loading}...

ಅದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವೆ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ ॥31॥

೦೩೨ ಹರಿದು ಹಿಡಿದನು ...{Loading}...

ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ ॥32॥

೦೩೩ ಎಣಿಸಬಹುದೇ ನಿಮ್ಮ ...{Loading}...

ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಪಂಚಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ ॥33॥

೦೩೪ ಆ ಪತಿವ್ರತೆ ...{Loading}...

ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ ॥34॥

೦೩೫ ಎನ್ದು ರಾಮನ ...{Loading}...

ಎಂದು ರಾಮನ ಮನವ ನಯನುಡಿ
ಯಿಂದ ತಿಳುಹಿದನೈಸಲೇ ಬಳಿ
ಕಂದು ದುಗುಡದಲವರು ನಡೆದರು ದ್ವಾರಕಾಪುರಿಗೆ
ಬಂದ ಕಂಟಕ ಬಳಿಚಿತೇ ಸಾ
ಕೆಂದು ಹರಿ ಕುರುಪತಿಯ ಹೊರೆಗೈ
ತಂದು ಬೋಳೈಸಿದನು ಭೀಮಾರ್ಜುನ ಯುಧಿಷ್ಠಿರರ ॥35॥

೦೩೬ ಈಸುದಿನ ಪರಿಯನ್ತ ...{Loading}...

ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ ॥36॥

೦೩೭ ಅರಸ ತಲೆಗುತ್ತಿದನು ...{Loading}...

ಅರಸ ತಲೆಗುತ್ತಿದನು ದೃಗು ಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ ॥37॥

೦೩೮ ಆರ ಬಸುರಲಿ ...{Loading}...

ಆರ ಬಸುರಲಿ ಬಂದು ಮೊಲೆಯುಂ
ಡಾರ ಮಡಲಲಿ ಬೆಳೆದು ಬಳಿಕಿನೊ
ಳಾರ ಹೆಂಡಿರ ಕೊಂಡು ಕರು ತುರುಗಾದು ಕಳವಿನಲಿ
ವೀರ ದೈತ್ಯನ ಸದೆಬಡಿದು ಕುರು
ವೀರವಂಶದ ರಾಯರೆಮ್ಮೊಳು
ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನೆಂದ ॥38॥

೦೩೯ ಬಣಗುಗಳು ಭೀಮಾರ್ಜುನರು ...{Loading}...

ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ ॥39॥

೦೪೦ ಪಾಪ ನಿನಗೀ ...{Loading}...

ಪಾಪ ನಿನಗೀ ಗೋತ್ರವಧೆಯ ವಿ
ಳಾಪ ನಿನ್ನನು ತಾಗಲೀ ಸ
ರ್ವಾಪರಾಧವು ನಿನ್ನದೀ ಕೌರವರ ಪಾಂಡವರ
ಕೋಪವನು ಕೊನರಿಸುವ ನೃಪರನು
ತಾಪವನು ತೂಳುವ ಕುಬುದ್ಧಿ
ವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ ॥40॥

೦೪೧ ರಣಮುಖದೊಳೀ ಕ್ಷತ್ರಧರ್ಮದ ...{Loading}...

ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆಣಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳ್ ಎಂದ ॥41॥

೦೪೨ ಮತ್ತೆ ಹೂವಿನ ...{Loading}...

ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಳವನಳ್ಳಿರಿದುದಾ ಸ್ತುತಿಪಾಠಕರ ರಭಸ ॥42॥

೦೪೩ ಗರುವ ಸುಭಟರು ...{Loading}...

ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ ॥43॥

೦೪೪ ನಡೆಯಿ ಪಞ್ಚದ್ರೌಪದೇಯರ ...{Loading}...

ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು
ತಡೆಯಿದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ ॥44॥

೦೪೫ ಬೀಳುಕೊಣ್ಡುದು ಸಕಲಬಲ ...{Loading}...

ಬೀಳುಕೊಂಡುದು ಸಕಲಬಲ ಪಾಂ
ಚಾಲ ಪಂಚದ್ರೌಪದೇಯರು
ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ
ಏಳಿ ನಾವೀ ಕೌರವೇಂದ್ರನ
ಪಾಳೆಯವ ನೋಡುವೆವೆನುತ ವನ
ಮಾಲಿ ರಥವೇರಿದನಿವರು ತಂತಮ್ಮ ರಥವೇರೆ ॥45॥

೦೪೬ ನರ ಯುಧಿಷ್ಠರ ...{Loading}...

ನರ ಯುಧಿಷ್ಠರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು ॥46॥

೦೪೭ ಸೂತನಿಳಿದನು ಮುನ್ನ ...{Loading}...

ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ ॥47॥

೦೪೮ ಇಳಿ ರಥವನೆಲೆ ...{Loading}...

ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತನವನು ಬಳಿಕ ತೋರುವೆ ರಥವನಿಳಿಯೆಂದ ॥48॥

೦೪೯ ಬಳಿಕ ಫಲುಗುಣ ...{Loading}...

ಬಳಿಕ ಫಲುಗುಣ ರಥದ ಮೇಲಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ ॥49॥

೦೫೦ ಧ್ವಜದ ಹಲಗೆಯನೊದೆದು ...{Loading}...

ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವ ರಥಾಂಗ ರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ ॥50॥

೦೫೧ ಹರಿಯಿದೇನಾಕಸ್ಮಿಕದ ದ ...{Loading}...

ಹರಿಯಿದೇನಾಕಸ್ಮಿಕದ ದ
ಳ್ಳುರಿಯೊಳದ್ದುದು ತೇರು ನಮಗೀ
ಯುರಿಯ ಭಯ ಭಾರಿಸಿತಿದೇನು ನಿಮಿತ್ತವಿದಕೆನಲು
ಉರಿವುದಂದೇ ತೇರು ಕರ್ಣನ
ಗುರು ನದೀನಂದನನ ದೈವಿಕ
ಶರಹತಿಯೊಳೆಮ್ಮಿಂದ ನಿಂದುದು ಪಾರ್ಥ ಕೇಳ್ ಎಂದ ॥51॥

೦೫೨ ನಾವಿಳಿದ ಬಳಿಕೀ ...{Loading}...

ನಾವಿಳಿದ ಬಳಿಕೀ ರಥದೊಳಿರ
ಲಾವ ಹದನೋ ನಿನಗೆ ಕಂಡೈ
ದೈವಿಕಾಸ್ತ್ರದ ಮಹಿಮೆಗಳನೆನೆ ಪಾರ್ಥ ತಲೆವಾಗಿ
ನೀವು ಬಲ್ಲಿರಿ ದೇವ ನೀ ಮಾ
ಯಾವಿ ಮಾಯಾಪಾಶಬದ್ಧರು
ನಾವು ಬಲ್ಲೆವೆ ನಿಮ್ಮನೆಂದೆರಗಿದನು ಚರಣದಲಿ ॥52॥

೦೫೩ ಧರಣಿಪತಿ ಕೇಳೀಚೆಯಲಿ ...{Loading}...

ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದರು ನಿಜರಥವ ॥53॥

೦೫೪ ಭರದಲಿವರು ನೃಪಾಲನಡಗಿದ ...{Loading}...

ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ
ತ್ವರಿತದಲಿ ಶೌಚಾಚಮನ ವಿ
ಸ್ತರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ ॥54॥

೦೫೫ ಬಳಸಿ ಜಮ್ಬುಕ ...{Loading}...

ಬಳಸಿ ಜಂಬುಕ ಘೂಕ ಕಾಕಾ
ವಳಿಗಳೆದ್ದವು ಮೇಲುವಾಯ್ದ
ವ್ವಳಿಸಲಮ್ಮದೆ ಗಾಢತರ ಗರ್ಜನೆಗೆ ಕುರುಪತಿಯ
ಕಳಕಳವಿದೆತ್ತಣದೆನುತ ಕಳ
ವಳಿಸಿ ಬಂದು ಮಹಾರಥರು ನೃಪ
ತಿಲಕನಿರವನು ಕಂಡು ಧೊಪ್ಪನೆ ಕೆಡದರವನಿಯಲಿ ॥55॥

೦೫೬ ಉಡಿದ ತೊಡೆಗಳ ...{Loading}...

ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು ॥56॥

೦೫೭ ಒರಲಿದರು ಧರೆ ...{Loading}...

ಒರಲಿದರು ಧರೆ ಬಿರಿಯೆ ಹುಡಿಯಲಿ
ಹೊರಳಿದರು ಬಾಯ್ಗಳನು ಹೊಯ್ ಹೊ
ಯ್ದರಿಚಿ ಕೆಡೆದರು ಕುಂದಿದರು ಕಾತರಿಸಿ ಕಳವಳಿಸಿ
ಮರುಗಿದರು ಮನಗುಂದಿದರು ಮೈ
ಮರೆದರದ್ದರು ಶೋಕಜಲಧಿಯೊ
ಳರಲುಗೊಂಡರು ತಳ್ಳಬಾರಿದರವರು ನಿಮಿಷದಲಿ ॥57॥

೦೫೮ ಹದುಳಿಸಿರೆ ಸಾಕೇಳಿ ...{Loading}...

ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ॥58॥

೦೫೯ ಶೋಕವಡಗಿದುದವರಿಗನ್ತ ...{Loading}...

ಶೋಕವಡಗಿದುದವರಿಗಂತ
ವ್ರ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಳನು ತಹೆನೆಂದನಾ ದ್ರೌಣಿ ॥59॥

೦೬೦ ಅಕಟ ಮರುಳೇ ...{Loading}...

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ ॥60॥

೦೬೧ ಹರಿಹರಬ್ರಹ್ಮಾದಿದೇವರು ...{Loading}...

ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪಕೃತವರ್ಮಕರು ಹ
ತ್ತಿರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ ॥61॥

೦೬೨ ಆಗಲಾ ಪಾಣ್ಡವರ ...{Loading}...

ಆಗಲಾ ಪಾಂಡವರ ವಧೇ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣ ಬುದ್ಧಿಮೃಗ
ಈಗಳೀ ನಿರ್ಬಂಧವಚನವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರರಾಯ ॥62॥

೦೬೩ ವರ ಚಮೂಪತಿ ...{Loading}...

ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ ॥63॥

೦೬೪ ಇವರು ಬನ್ದರು ...{Loading}...

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವನಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ ॥64॥

+೦೮ ...{Loading}...